ನಮ್ಮ ಹೆಮ್ಮೆಯ ಭಾರತ ದೇಶದಲ್ಲಿರುವ ಎಲ್ಲಾ ಕಲೆಗಳ ಮೇಲೂ ನಮಗೆ ಗೌರವವಿದೆ. ಆ ಕಲೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಎಲ್ಲಾ ಕಲಾವಿದರನ್ನೂ ನಾವು ಪ್ರೀತಿಸುತ್ತೇವೆ. ಕಲಾವಿದರೆಲ್ಲಾ ಕಲಾಮಾತೆಯ ಸೇವಕರು. ಕಲೆಯು ನಮ್ಮದು, ಕಲಾವಿದರೂ ನಮ್ಮವರೆಂಬ ಸಂತೋಷ ಎಲ್ಲರಲ್ಲೂ ಇರುತ್ತದೆ.
ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿದರನ್ನು ಹೊಂದಿರುವ ಕಲಾಪ್ರಾಕಾರವೇ ಯಕ್ಷಗಾನ. ನಮ್ಮ ಮಣ್ಣಿನ ಕಲೆ, ಗಂಡುಕಲೆ. ಅದು ಹಿಮ್ಮೇಳ ಕಲಾವಿದರಿರಬಹುದು, ವೇಷಧಾರಿಗಳಿರಬಹುದು. ವೃತ್ತಿಕಲಾವಿದರೂ ಇದ್ದಾರೆ. ಯಕ್ಷಗಾನವನ್ನು ಹವ್ಯಾಸಿಯಾಗಿ ಸ್ವೀಕರಿಸಿದವರೂ ಇದ್ದಾರೆ. ಹವ್ಯಾಸಿಯಾಗಿದ್ದು ಮತ್ತೆ ಯಕ್ಷಗಾನವನ್ನು ವೃತ್ತಿಯಾಗಿ ಸ್ವೀಕರಿಸಿದವರನ್ನೂ, ವೃತ್ತಿ ಕಲಾವಿದರಾಗಿದ್ದು ಮತ್ತೆ ಅದನ್ನು ಹವ್ಯಾಸವಾಗಿ ಇರಿಸಿಕೊಂಡವರನ್ನೂ ನಾವು ಕಾಣಬಹುದು.
ಆದರೆ ಒಂದಂತೂ ಸತ್ಯ. ಕಾಸರಗೋಡು, ದಕ್ಷಿಣ ಕನ್ನಡ, ಉತ್ತರ ಕನ್ನಡ ಪ್ರದೇಶಗಳ ಜನರಿಗೆ ಯಕ್ಷಗಾನವನ್ನು ಬಿಟ್ಟು ಬದುಕಲು ಸಾಧ್ಯವೇ ಇಲ್ಲ. ಆ ಬದುಕು ಅಪೂರ್ಣವೆಂದೇ ಭಾವಿಸುತ್ತಾರೆ. ಕಲಾವಿದನಾಗುವ ಭಾಗ್ಯ ದೊರಕದಿದ್ದರೂ ಪ್ರದರ್ಶನಗಳನ್ನು ನೋಡಿ ಆದರೂ ಸಂತೋಷಪಡುತ್ತಾರೆ. ಕಲಾವಿದನಾಗುವ ಅವಕಾಶ ಎಲ್ಲರಿಗೂ ದೊರಕದು. ಕೆಲವರು ಅವಕಾಶ ಸಿಕ್ಕಿದರೂ ಹೊಳೆದು ಕಾಣಿಸಿಕೊಳ್ಳಲಾರರು. ಸಿಕ್ಕಿದರೂ ದಕ್ಕಲಾರದು ಹೋಯಿತು ಎಂಬಂತೆ.
ಶ್ರೀ ಕುಮಾರ ಸುಬ್ರಹ್ಮಣ್ಯ ವಳಕ್ಕುಂಜ ಅವರು ವೃತ್ತಿಕಲಾವಿದರಾಗಿದ್ದು ಪ್ರಸ್ತುತ ಯಕ್ಷಗಾನವನ್ನು ಹವ್ಯಾಸವಾಗಿ ಸ್ವೀಕರಿಸಿದ್ದಾರೆ. ಹಾಗೆಂದು ಈಗಲೂ ಮೇಳಗಳ ರಂಗಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅದು ಅನಿವಾರ್ಯಕ್ಕೆ. ಆಪದ್ಬಾಂಧವನಾಗಿ. ಇವರು ತೆಂಕುತಿಟ್ಟಿನ ಹಿರಿಯ ಮದ್ದಳೆಗಾರರು. ವಳಕ್ಕುಂಜ ಕುಮಾರಣ್ಣ ಅವರು ಯಕ್ಷಗಾನ ಕಲಾತಪಸ್ವಿ, ಯಕ್ಷಗಾನ ಗುರುಕುಲದ ರೂವಾರಿ ಕೀರಿಕ್ಕಾಡು ಮಾಸ್ತರ್ ಶ್ರೀ ವಿಷ್ಣು ಭಟ್ಟರ ಮೊಮ್ಮಗ (ಮಗಳ ಮಗ) ಶ್ರೀ ಕುಮಾರ ಸುಬ್ರಹ್ಮಣ್ಯ ಭಟ್ ವಳಕ್ಕುಂಜ ಅವರು 1960 ಮೇ 13ರಂದು ಪುತ್ತೂರು ತಾಲೂಕಿನ ಪೆರ್ಲಂಪಾಡಿಯಲ್ಲಿ ಜನಿಸಿದರು.
1943ರಲ್ಲಿ ಕುಮಾರಣ್ಣ ಅವರ ತಂದೆ ಶ್ರೀ ನಾರಾಯಣ ಭಟ್ಟರು ವಳಕ್ಕುಂಜದಿಂದ ಪೆರ್ಲಂಪಾಡಿಗೆ ಬಂದು ನೆಲೆಸಿದ್ದರು. ತಾಯಿ ಶ್ರೀಮತಿ ಭುವನಮಾತಾ (ಕೀರಿಕ್ಕಾಡು ಮಾಸ್ತರರ ಹಿರಿಯ ಪುತ್ರಿ). ಕುಮಾರಣ್ಣನ ದೊಡ್ಡಪ್ಪ ವಳಕ್ಕುಂಜ ವೆಂಕಟ್ರಮಣ ಭಟ್ ಅರ್ಥಧಾರಿಯೂ, ಮದ್ದಳೆವಾದಕರೂ ಆಗಿದ್ದರು. ಅಲ್ಲದೆ ಚೆಂಡೆ ಮದ್ದಳೆ ತಯಾರಿಕೆಯಲ್ಲೂ ಪಳಗಿದ್ದರು. ಇವರು ಕೀರಿಕ್ಕಾಡು ಮಾಸ್ತರರ ಒಡನಾಡಿಯಾಗಿದ್ದರು. ಹಾಗಾಗಿ ಯಕ್ಷಗಾನವು ರಕ್ತವಾಗಿ ತಂದೆಯ ಕಡೆಯಿಂದಲೂ ತಾಯಿಯ ಕಡೆಯಿಂದಲೂ ಬಂದಿತ್ತು. ಪೆರ್ಲಂಪಾಡಿ ಶಾಲೆಯಲ್ಲಿ ಮೂರನೇ ತರಗತಿ ವರೆಗೆ ಓದಿ ಹೈಸ್ಕೂಲ್ ವಿಧ್ಯಾಭ್ಯಾಸವನ್ನು ಪೆರ್ನಾಜೆ ಸೀತಾರಾಘವ ಪ್ರೌಢ ಶಾಲೆಯಲ್ಲಿ ಪೂರೈಸಿದ್ದರು.
ಅಜ್ಜನ ಮನೆಯಲ್ಲಿದ್ದು ಅವರ ಆಶ್ರಯದಲ್ಲೇ ಶಾಲೆಗೆ ಹೋಗಿದ್ದರು. ಶಾಲಾ ವಿದ್ಯಾರ್ಥಿಯಾಗಿರುವಾಗಲೇ ಯಕ್ಷಗಾನ ಕಲಾವಿದನಾಗಬೇಕೆಂಬ ಆಸೆಯಿತ್ತು. ವೇಷ ಮಾಡಬೇಕೆಂಬ ಆಸೆಯೇ ಬಲವಾಗಿತ್ತು. ಆ ಕಾಲದ ಒಳ್ಳೆಯ ಕಲಾವಿದರಾಗಿದ್ದ ಟಪ್ಪಾಲುಕಟ್ಟೆ ಕೃಷ್ಣ ಭಟ್ ಅವರಿಂದ ನಾಟ್ಯ ಕಲಿತು 7ನೇ ತರಗತಿಯಲ್ಲಿರುವಾಗ ಪೆರ್ನಾಜೆ ಶಾಲಾ ವಾರ್ಷಿಕೋತ್ಸವದ ಪ್ರದರ್ಶನ, ಪಂಚವಟಿ ಪ್ರಸಂಗದಲ್ಲಿ ಕೇಶಾವರೀ ಕಿರೀಟ ಧರಿಸಿ ಖರಾಸುರನಾಗಿ ರಂಗವೇರಿದ್ದರು. ಇವರಿಗೆ ಜತೆಯಾಗಿದ್ದವರು ಸಣ್ಣ ಸೋದರ ಮಾವ ಕೃಷ್ಣ ಮುರಾರಿ ಮತ್ತು ದೊಡ್ಡ ಮಾವನ ಮಗ ವಿಷ್ಣು ಕೀರ್ತಿ. ಇವರೆಲ್ಲಾ ಸಮಾನವಯಸ್ಕರಾಗಿದ್ದರು. ಒಡನಾಡಿಗಳಾಗಿದ್ದು ಯಕ್ಷಗಾನ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು.
ಶಾಲೆಯಲ್ಲಿ ಮಕ್ಕಳ ತಂಡವೂ ಸಿದ್ಧವಾಗಿತ್ತು. ದಕ್ಷಿಣ ಕನ್ನಡದ ಹಲವು ಭಾಗಗಳಲ್ಲಿ ಈ ತಂಡವು ಪ್ರದರ್ಶನಗಳನ್ನೂ ನೀಡಿತ್ತು. ಶೂರಪದ್ಮ, ತಾರಕ, ಮಕರಾಕ್ಷ, ಕಾರ್ತವೀರ್ಯ, ಇಂದ್ರಜಿತು ಮೊದಲಾದ ವೇಷಗಳನ್ನು ಮಾಡುವ ಅವಕಾಶ ಸಿಕ್ಕಿತ್ತು. ಹಲವು ಶಾಲೆಗಳಲ್ಲಿ ಈ ತಂಡದ ತಾಳಮದ್ದಲೆಯೂ ನಡೆದಿತ್ತು. ಅಜ್ಜ ಕೀರಿಕ್ಕಾಡು ಮಾಸ್ತರರು ಹರಿಕತೆ ಮಾಡುವ ಕ್ರಮವನ್ನೂ ಇವರಿಗೆ ಕಲಿಸಿದ್ದರು. ಎಳವೆಯಲ್ಲೇ ಇವರಿಗೆ ತಾಂತ್ರಿಕ ವಿಚಾರಗಳಲ್ಲಿ ತುಂಬಾ ಆಸಕ್ತಿ. ರೇಡಿಯೋ, ಪಂಪ್, ಸೈಕಲ್ ಮೊದಲಾದ ತಾಂತ್ರಿಕ ಉಪಕರಣಗಳ ದುರಸ್ತಿ ಕಾರ್ಯವನ್ನು ಚೆನ್ನಾಗಿ ಮಾಡುತ್ತಿದ್ದರು. ಹಾಗಾಗಿ ಹಿರಿಯರು ಇವರನ್ನು ಐಟಿಐ ತರಬೇತಿಗೆ ಕಳುಹಿಸುವ ಯೋಚನೆ ಮಾಡಿದ್ದರು. ಚೆಂಡೆ ಮದ್ದಳೆ ಕಲಿಯಬೇಕೆಂಬ ಆಸೆಯೂ ಇತ್ತು.
ಅದೇ ಕಾಲಕ್ಕೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ಬನಾರಿಯಲ್ಲಿ ಹಿಮ್ಮೇಳ ತರಗತಿ ಆರಂಭಿಸಿದ್ದರು. ಮಾಂಬಾಡಿಯವರು ಮೊತ್ತ ಮೊದಲು ಕ್ಲಾಸ್ ಆರಂಭಿಸಿದ್ದು ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ವತಿಯಿಂದ. ಐಟಿಐ ಗೆ ಸೇರುವ ಯೋಚನೆಯನ್ನು ಬಿಟ್ಟು ಕುಮಾರ ಸುಬ್ರಹ್ಮಣ್ಯ ಕಲಾ ಬದುಕನ್ನೇ ಆಯ್ಕೆ ಮಾಡಿಕೊಂಡಿದ್ದರು. ಇದು ಇವರ ಜೀವನದ ಮುಖ್ಯ ತಿರುವು. ತಂದೆ ವಳಕ್ಕುಂಜ ನಾರಾಯಣ ಭಟ್ಟರು ಮದ್ದಳೆವಾದಕರೂ, ಅರ್ಥಧಾರಿಯೂ ಆಗಿದ್ದು ಬನಾರಿ ತಂಡದ ಮಂಗಳೂರು ಆಕಾಶವಾಣಿ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು. ಆದರೆ ಯಕ್ಷಗಾನವನ್ನು ಮುಂದುವರಿಸಲಾಗಲಿಲ್ಲ ಎಂಬ ನೋವನ್ನು ಹೊಂದಿದ್ದರು. ಮಗನನ್ನು ಯಕ್ಷಗಾನಕ್ಕೆ ಕಳುಹಿಸಿವ ಮೂಲಕ ಆ ನೋವನ್ನು ಮರೆತಿದ್ದರು.
ಸೋದರ ಮಾವಂದಿರ ಆಶೀರ್ವಾದ, ಪ್ರೋತ್ಸಾಹವೂ ಸಿಕ್ಕಿತ್ತು. ಅಜ್ಜನ ಮನೆಯಿಂದಲೇ ಶಾಲೆಗೆ ಹೋದದ್ದು. ಯಕ್ಷಗಾನ ಕಲಿಕೆಗೂ ಅಜ್ಜನ ಮನೆಯಿಂದಲೇ ಅನುಕೂಲವಾಗಿತ್ತು. ವಿಶ್ವವಿನೋದ ಬನಾರಿಯವರಂತೂ ಅಳಿಯನ ಜತೆಗೇ ಇದ್ದು ಹಿಮ್ಮೇಳ ಕಲಿಕೆಗೆ ಸಹಕರಿಸಿದ್ದರು. ಮುಂದಿನ ವರ್ಷ ಪೆರ್ಲಂಪಾಡಿಯಲ್ಲಿ ಮಾಂಬಾಡಿಯವರು ತರಬೇತಿ ಆರಂಭಿಸಿದ್ದರು. ಅಲ್ಲಿಯೂ ಕಲಿಕೆ. ಪೆರ್ಲಂಪಾಡಿಯಿಂದ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರ ಜತೆ ಮಾತನಾಡುತ್ತಾ, ನಡೆಯುತ್ತಾ ಗುಡ್ಡಡ್ಕ ಮನೆಗೆ (ಮಾಸ್ತರರು ವಾಸವಿದ್ದ ಮನೆ). ಅಲ್ಲಿ ಬಾಯಾರಿಕೆ ಕುಡಿದು ಮತ್ತೆ ತರಬೇತಿ. ಹೀಗೆ ಸಾಗಿತ್ತು ಗುರುಶಿಷ್ಯರ ಒಡನಾಟ.
ಮಾವ ಮತ್ತು ಅಳಿಯ ಇಬ್ಬರೂ ಮಾಂಬಾಡಿಯಯವರ ಮೊದಲ ಶಿಷ್ಯಂದಿರು ಎಂದು ಹೇಳಿದರೂ ತಪ್ಪಾಗಲಾರದು (ವಿಶ್ವವಿನೋದ ಬನಾರಿ ಮತ್ತು ಕುಮಾರ ಸುಬ್ರಹ್ಮಣ್ಯ ವಳಕ್ಕುಂಜ). ವೇಷ ಮಾಡುವುದನ್ನು ಬಿಟ್ಟು ಹಿಮ್ಮೇಳದತ್ತ ಗಮನ. ಪ್ರದರ್ಶನಗಳಲ್ಲಿ ಚೆಂಡೆ ಮದ್ದಳೆ ನುಡಿಸಲಾರಂಭಿಸಿ ಬೆಳೆಯುತ್ತಾ ಸಾಗಿದ್ದರು. ಮೇಳದ ತಿರುಗಾಟ ಬೇಕೆಂದಿಲ್ಲ. ನೀನು ಕ್ಲಾಸ್ ಮಾಡು ಎಂದು ಗುರುಗಳಾದ ಮಾಂಬಾಡಿಯವರು ಸಲಹೆ ನೀಡಿದ್ದರಂತೆ. ಕುಮಾರಣ್ಣನ ಮೊದಲ ತಿರುಗಾಟ ಕೂಡ್ಲು ಮೇಳದಲ್ಲಿ. ಕುಬಣೂರು ಶ್ರೀಧರ ರಾಯರ ನೇತೃತ್ವ, ಅಗರಿ ಶ್ರೀನಿವಾಸ ಭಾಗವತರು, ಗುರುಗಳಾದ ಮಾಂಬಾಡಿ, ತಲೆಂಗಳ ಗೋಪಾಲಕೃಷ್ಣ ಭಟ್ಟರು ಜತೆಗಿದ್ದರು.
ಮುಂದಿನ ವರ್ಷ ಕಟೀಲು 2ನೇ ಮೇಳ ಆರಂಭವಾದ ವರ್ಷ. ಪೆರುವಾಯಿ ನಾರಾಯಣ ಭಟ್ ಮತ್ತು ವೆಂಕಟರಾಮ ಭಟ್ ಸುಳ್ಯ ಇವರ ಹೇಳಿಕೆಯಂತೆ ಕಟೀಲು ಮೇಳಕ್ಕೆ. ಆಗ ಪೆರುವಾಯಿ ನಾರಾಯಣ ಭಟ್ಟರು ಮತ್ತು ಇವರು ಮಾತ್ರ ಹಿಮ್ಮೇಳಕ್ಕೆ. ಬಲಿಪರ ಜತೆ ತಿರುಗಾಟ. ಬೆಳಗಿನ ವರೆಗೆ ಇವರಿಬ್ಬರೇ ಬಾರಿಸಬೇಕಾಗಿತ್ತು. ಮುಂದಿನ ವರ್ಷ ಶೇಣಿ ಸುಬ್ರಹ್ಮಣ್ಯ ಭಟ್ಟರೂ ಬಂದಿದ್ದರು. ಯಜಮಾನರ ಅಪ್ಪಣೆ ಮೇರೆಗೆ ಅಪರೂಪಕ್ಕೆ ಒಂದನೇ ಮೇಳದಲ್ಲೂ ಕಲಾಸೇವೆ. ಇರಾ ಭಾಗವತರೊಂದಿಗೆ ಕಸುಬಿಗೂ ಅವಕಾಶವಾಗಿತ್ತು.
ಕರ್ನಾಟಕ ಮೇಳವು ಮೇ ತಿಂಗಳ ಆರಂಭಕ್ಕೆ ವರ್ಷದ ತಿರುಗಾಟ ನಿಲ್ಲಿಸಿದ ಮೇಲೆ ಶ್ರೀ ದಾಮೋದರ ಮಂಡೆಚ್ಚರು ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುವುದಕ್ಕೆ ಬರುತ್ತಿದ್ದರು. ನೀನು ಕೀರಿಕ್ಕಾಡು ಅಜ್ಜನ ಪುಳ್ಳಿ (ಮೊಮ್ಮಗ). ಬಾ ಎಂದು ಕರೆದು ಅವರ ಭಾಗವತಿಕೆಗೆ ಮದ್ದಳೆ ಬಾರಿಸಲು ಅವಕಾಶವಿತ್ತಿದ್ದರು. ಬಲಿಪರು, ಪೆರುವಾಯಿ ನಾರಾಯಣ ಭಟ್, ಅಳಿಕೆ ರಾಮಯ್ಯ ರೈ, ಬಣ್ಣದ ಮಾಲಿಂಗ, ಪಡ್ರೆ ಚಂದು, ಅಜೆಕಾರು ರಾಜೇವ ಶೆಟ್ಟಿ, ಕೊಳ್ಯೂರು ನಾರಾಯಣ ಭಟ್ಟ, ನೆಡ್ಲೆ ಗುರಿಕಾರ ನಾರಾಯಣ ಭಟ್ ಮೊದಲಾದವರ ಒಡನಾಟ ಕಟೀಲು ಮೇಳದಲ್ಲಿ ದೊರಕಿತ್ತು. ಮನೆ ಸಮಸ್ಯೆಯಿಂದಾಗಿ 1984ರಲ್ಲಿ ಮೇಳದ ತಿರುಗಾಟವನ್ನು ನಿಲ್ಲಿಸಬೇಕಾಗಿ ಬಂದಿತ್ತು.
ಮೇಳದ ತಿರುಗಾಟ ನಿಲ್ಲಿಸಿ ಮನೆವಾರ್ತೆಯನ್ನು ನೋಡಿಕೊಳ್ಳುತ್ತಿದ್ದಾಗ ವಳಕ್ಕುಂಜ ಕುಮಾರ ಸುಬ್ರಹ್ಮಣ್ಯ ಭಟ್ಟರಿಗೆ ಗುರುಗಳಾದ ಮಾಂಬಾಡಿಯವರ ಸಲಹೆಯು ನೆನಪಾಗಿತ್ತು. ಮೇಳದ ತಿರುಗಾಟವೇ ಆಗಬೇಕೆಂದಿಲ್ಲ. ಕಲಾಸಕ್ತರಿಗೆ ತರಬೇತಿ ನೀಡು. ಕಲಾವಿದರನ್ನು ಸಿದ್ಧಗೊಳಿಸುವುದೂ ಕಲಾಮಾತೆಯ ಸೇವೆ ಎಂಬ ಮಾತನ್ನು ಮಾಂಬಾಡಿಯವರು ಆಗಾಗ ಹೇಳುತ್ತಿದ್ದರಂತೆ. ಕಾಯರತ್ತೋಡಿ ಭುವನೇಶ್ವರೀ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಕೋಡ್ಲ ಗಣಪತಿ ಭಟ್ಟರ ನೇತೃತ್ವದಲ್ಲಿ ತರಬೇತಿ ನಡೆಯುತ್ತಿತ್ತು. ಮೊದಲು ಅಲ್ಲಿ ಮಾಂಬಾಡಿಯವರು ಮತ್ತು ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು ಹಿಮ್ಮೇಳ ತರಗತಿಗಳನ್ನು ನಡೆಸುತ್ತಿದ್ದರು. ಮಾಂಬಾಡಿಯವರ ಸಲಹೆಯಂತೆ ವಳಕ್ಕುಂಜ ಕುಮಾರಣ್ಣ ಅಲ್ಲಿ ಕಲಿಕಾಸಕ್ತರಿಗೆ ಹಿಮ್ಮೇಳ ತರಬೇತಿಯನ್ನು ಮೊತ್ತಮೊದಲು ಆರಂಭಿಸಿದ್ದರು.
ಬಳಿಕ ಸುಳ್ಯ ಮತ್ತು ಪುತ್ತೂರಿನ ಹಲವೆಡೆ ತರಗತಿಗಳನ್ನು ಆರಂಭಿಸಿದ್ದರು. ಈ ಸಂದರ್ಭಗಳಲ್ಲಿ ಯಕ್ಷಗಾನ ಪ್ರದರ್ಶನಗಳಲ್ಲೂ ಭಾಗವಹಿಸುತ್ತಿದ್ದರು. ಈ ಸಮಯದಲ್ಲಿ ತೆಂಕಬೈಲು ಶಾಸ್ತ್ರಿಗಳ ಮತ್ತು ದಾಸರಬೈಲು ಚನಿಯ ನಾಯ್ಕರ ಭಾಗವತಿಕೆಗೆ ಚೆಂಡೆ ಮದ್ದಳೆ ಬಾರಿಸುವ ಅವಕಾಶಗಳು ಸಿಕ್ಕಿತ್ತು. 1985ರಲ್ಲಿ ಪೆರ್ಲಂಪಾಡಿಯ ಸ್ಥಳವನ್ನು ವಿಕ್ರಯಿಸಿ ಮಡಿಕೇರಿಯ ಮದೆನಾಡು ಎಂಬಲ್ಲಿ ವಾಸ್ತವ್ಯ. ಮಡಿಕೇರಿ, ಕಲ್ಲುಗುಂಡಿ ಮೊದಲಾದೆಡೆ ತರಬೇತಿಯನ್ನು ನೀಡಿದರು. ಕಲ್ಲುಗುಂಡಿಯಲ್ಲಿ ಪ್ರತಿವಾರವೂ ತಾಳಮದ್ದಳೆ ನಡೆಯುತ್ತಿತ್ತು. ಸುಬ್ರಾಯ ಸಂಪಾಜೆ, ರಾಧಾಕೃಷ್ಣ ಕಲ್ಚಾರ್, ಜಬ್ಬಾರ್ ಸಮೋ, ಪುತ್ತೂರು ರಮೇಶ ಭಟ್, ಗೋಪಾಲಕೃಷ್ಣ ಮಡಿಕೇರಿ, ಹಮೀದ್ ಕೊಯನಾಡು ಮೊದಲಾದವರ ಒಡನಾಟ, ಗೆಳೆತನವೂ ಒದಗಿತ್ತು.
ತಾಳಮದ್ದಳೆ ಮುಗಿದ ಮೇಲೆ ವಿಮರ್ಶೆಯೂ ನಡೆಯುತ್ತಿತ್ತು. ಶ್ರುತಿಬದ್ಧವಾಗಿ ಮಾತನಾಡುವ ಕಲಿಕೆಗೆ ಕುಮಾರಣ್ಣ ಅವರು ಕಲಾವಿದರಿಗೆ ಸಹಕಾರಿಯಾಗಿದ್ದರು. ಶ್ರೀಯುತರು ಸಾಹಸೀ ಮನೋವೃತ್ತಿ ಉಳ್ಳವರು. ಮದೆನಾಡಿನಲ್ಲಿ ಅತಿವೃಷ್ಟಿಯಾಗಿ ಪ್ರವಾಹಕ್ಕೆ ಸಿಲುಕಿದ ಮಗುವನ್ನು ನೀರಿಗೆ ಹಾರಿ ರಕ್ಷಿಸಿದ್ದು ಮಾತ್ರವಲ್ಲ ಪ್ರಥಮ ಚಿಕಿತ್ಸೆಯನ್ನೂ ನೀಡಿ ಬದುಕಿಸಿದ್ದರು. ಅಂದು ಬೆಳಿಗ್ಗೆ ಅವರು ಬನಾರಿಗೆ ಹೋಗುವವರಿದ್ದರೂ ಮಳೆಯ ಕಾರಣದಿಂದ ಪತ್ನಿಯ ಬೇಡಿಕೆಯಂತೆ ಮನೆಯಲ್ಲಿಯೇ ಉಳಿದಿದ್ದರು. ಊಟ ಮಾಡುತ್ತಿದ್ದಾಗ ಎಲ್ಲರೂ ಬೊಬ್ಬಿಡುವುದನ್ನು ಕೇಳಿದ್ದರು. ಪತ್ನಿಯಿಂದ ವಿಚಾರ ತಿಳಿದ ಕುಮಾರಣ್ಣ ನೀರಿಗೆ ಧುಮುಕಿ ಬಾಲೆಯನ್ನು ರಕ್ಷಿಸಿದ್ದರು. ‘ಗಂಡಸು ಸಾಧನೆಯನ್ನು ಮಾಡುವಲ್ಲಿ ಹೆಣ್ಣು ಪ್ರೇರಕ ಶಕ್ತಿಯಾಗಿ ಇರುತ್ತಾಳೆ ಎಂಬಂತೆ ಕುಮಾರಣ್ಣನ ಈ ಸಾಹಸಕ್ಕೆ ಅವರ ಪತ್ನಿಯೂ ಕಾರಣರಾಗಿದ್ದರು.
ಈ ವಿಚಾರವಾಗಿ ತುಂಬಾ ಕಡೆ ಸನ್ಮಾನವೂ ಆಗಿತ್ತು. ಕೊಡಗು ಆಡಳಿತವು ‘ಶೌರ್ಯ ಪ್ರಶಸ್ತಿ’ಯನ್ನು ನೀಡಿ ಗೌರವಿಸಿತ್ತು. ಈ ಸಾಹಸದ ಬಗ್ಗೆ ಖ್ಯಾತ ತಾಳಮದ್ದಳೆ ಅರ್ಥಧಾರಿ ಜಬ್ಬಾರ್ ಸಮೋ ಅವರು ಪತ್ರಿಕೆಯಲ್ಲಿ ಲೇಖನವೊಂದನ್ನು ಬರೆದಿದ್ದರು. ಕಲ್ಲುಗುಂಡಿ ಕೊಯನಾಡು ಎಂಬಲ್ಲಿ ತರಬೇತಿ ನೀಡುವ ಸಂದರ್ಭ, ವ್ಯಕ್ತಿಯೊಬ್ಬರು ತರಬೇತಿ ಆರಂಭದಿಂದ ತೊಡಗಿ ಕೊನೆಯ ತನಕವೂ ನೋಡಿ ಹೋಗುತ್ತಿದ್ದರು. ಯಾಕೆಂದು ಕುಮಾರಣ್ಣನಿಗೆ ಗೊತ್ತಿರಲಿಲ್ಲ. ಆದರೆ ಅವರಲ್ಲಿದ್ದ ಯಕ್ಷಗಾನಾಸಕ್ತಿಯನ್ನು ಗಮನಿಸಿದ್ದರು. ನಾಲ್ಕು ದಿನ ಕಳೆದು ಕರೆದು ಮಾತನಾಡಿಸಿದ್ದರು. ಆ ವ್ಯಕ್ತಿ ಬೇರಾರೂ ಅಲ್ಲ. ಅವರೇ ಶ್ರೀ ಜಬ್ಬಾರ್ ಸಮೊ.
ಮಾತನಾಡುತ್ತಾ ಇದ್ದಂತೆ ರಾಮಾಯಣ, ಮಹಾಭಾರತ, ಶಿವಪುರಾಣದ ವಿಚಾರಧಾರೆಗಳನ್ನು ಜಬ್ಬಾರ್ ಅವರು ಅರಗಿಸಿಕೊಂಡಿದ್ದರೆಂಬುದನ್ನು ತಿಳಿದಿದ್ದರು. ಹಿಮ್ಮೇಳ ಕಲಿಯುತ್ತೀರಾ ಎಂದು ಕೇಳಿದಾಗ ‘ನನಗೆ ಅರ್ಥಗಾರಿಕೆಯಲ್ಲಿ ಒಲವು’ ಎಂದಿದ್ದರಂತೆ. ಪ್ರೋತ್ಸಾಹಿಸಿ ಸಣ್ಣ ಮಟ್ಟಿಗೆ ನಾಟ್ಯವನ್ನೂ ಹೇಳಿಕೊಟ್ಟರಂತೆ. ಜಬ್ಬಾರ್ ಸಮೊ ಅವರು ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಕುಮಾರಣ್ಣ ಕಾರಣರಾದರು. ‘ನಾನು ನಿಮಿತ್ತ ಮಾತ್ರ, ಜಬ್ಬಾರ್ ಅವರು ಸ್ವಯಂ ಪ್ರತಿಭಾವಂತರು’ ಇದು ಕುಮಾರಣ್ಣನ ಅಭಿಪ್ರಾಯ.
1995ರಲ್ಲಿ ಮದೆನಾಡಿನಿಂದ ಬಂದು ಪಂಜ ಸಮೀಪ ವಾಸ್ತವ್ಯ. ಸುಳ್ಯ, ಸುಬ್ರಹ್ಮಣ್ಯ, ಬೆಳ್ಳಾರೆ, ಬನಾರಿ ಮೊದಲಾದ ಕಡೆಗಳಲ್ಲಿ ತರಬೇತಿ ನೋಡುವುದರ ಜತೆ ಕೃಷಿ ನಿರ್ವಹಣೆ ಮತ್ತು ಪ್ರದರ್ಶನಗಳಲ್ಲಿ ಭಾಗವಹಿಸುತ್ತಾ ಬಂದರು. ಅನಿವಾರ್ಯ ಸಂದರ್ಭಗಳಲ್ಲಿ ಕಟೀಲು ಮೇಳದ ಪ್ರದರ್ಶನಗಳಲ್ಲಿ ಈಗಲೂ ಭಾಗವಹಿಸುತ್ತಾರೆ. ಅವರ ಅನೇಕ ಶಿಷ್ಯರು ಇಂದು ಹಿಮ್ಮೇಳ ಕಲಾವಿದರಾಗಿ ಬೆಳೆಯುತ್ತಿದ್ದಾರೆ. ನಾಲ್ಕೈದು ವರ್ಷಗಳಿಂದ ಭಾಗವತ ಶ್ರೀ ಕಡಬ ರಾಮಚಂದ್ರ ರೈಗಳ ಜತೆ ಬಾಚಕೆರೆ ಮೇಳದ ಖಾಯಂ ಕಲಾವಿದರಾಗಿದ್ದಾರೆ. ಕೊಲ್ಲಂಗಾನ ಕ್ಷೇತ್ರದ ಪ್ರದರ್ಶನಗಳಿಗೂ ಖಾಯಂ ಕಲಾವಿದ. ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಗಣಧಿರಾಜ ಉಪಾಧ್ಯಾಯರಿಗೆ ಇವರಲ್ಲಿ ವಿಶೇಷ ಪ್ರೀತಿ.
ಕಡತೋಕ ಮಂಜುನಾಥ ಭಾಗವತರನ್ನುಳಿದು ಎಲ್ಲಾ ಹಿರಿಯ ಕಿರಿಯ ಭಾಗವತರುಗಳೊಂದಿಗೆ ಕಲಾ ಸೇವೆ. ಕಡತೋಕರ ಹಾಡಿಗೆ ಚೆಂಡೆ ಮದ್ದಳೆ ನುಡಿಸಲು ಅವಕಾಶ ಸಿಕ್ಕಿರಲಿಲ್ಲ ಎಂಬ ಒಂದು ನೋವಿದೆ ಕುಮಾರಣ್ಣನಿಗೆ. ಪುರಾಣ ಮತ್ತು ತುಳು ಪ್ರಸಂಗಗಳ ಹಾಡಿಗೆ ನುಡಿಸಾಣಿಕೆಯ ವೈವಿಧ್ಯವನ್ನು ಕಂಡುಕೊಂಡು ಮೆರೆದವರು ಕುಮಾರಣ್ಣ. ಕಟೀಲು ಮೇಳದ ತಿರುಗಾಟವನ್ನು ಬಿಟ್ಟ ಮೇಲೆ (1984ರಲ್ಲಿ) ಬಳ್ಳಂಬೆಟ್ಟು ಶೀನಪ್ಪ ಭಂಡಾರಿಗಳ ಆದಿ ಸುಬ್ರಹ್ಮಣ್ಯ ಮೇಳದಲ್ಲೂ ವ್ಯವಸಾಯ ಮಾಡಿದ್ದರು. ದೆಹಲಿಯ ಮಕ್ಕಳ ತಂಡದ ಸದಸ್ಯರು ಹಿಂದಿ ಭಾಷೆಯಲ್ಲಿ ‘ಚಿತ್ರ ಪಟಲ ರಾಮಾಯಣ’ ಎಂಬ ಪ್ರದರ್ಶನಗಳನ್ನು ಅನೇಕ ಕಡೆ ಸಂಯೋಜಿಸಿದ್ದರು.(ದೆಹಲಿ, ಮುಂಬೈ) ಇದು ತೆಂಕು ಬಡಗಿನ ಕೂಡಾಟವಾಗಿತ್ತು. ಈ ತಂಡದ ಸದಸ್ಯರಾಗಿಯೂ ಪಾಲುಗೊಂಡಿದ್ದರು.
ನೆಹರೂ ಯುವ ಕೇಂದ್ರ ಮಂಗಳೂರು ತಂಡದ ಮದ್ದಳೆಗಾರರಾಗಿ ಮಿಜೋರಾಂ, ಗೌಹಾಟಿ, ಬೆಂಗಳೂರು, ಕೇರಳದ ವಿವಿದೆಡೆಗಳಲ್ಲಿ ನಡೆದ ಪ್ರದರ್ಶನಗಳಲ್ಲೂ ಸಕ್ರಿಯರಾಗಿದ್ದರು. 1991 ಜೂ 2ರಂದು ಸುಲೋಚನಾ ಅವರ ಜತೆ ವಿವಾಹ.(ಅಡೂರು ಮಣಿಯೂರು ಶ್ರೀ ಗಣಪತಿ ಭಟ್ ಮತ್ತು ದೇವಕೀ ದಂಪತಿಗಳ ಪುತ್ರಿ) ಕಲಾ ಬದುಕಿಗೆ ಸಹೋದರರಾದ ಶ್ರೀ ಗೋಪಾಲಕೃಷ್ಣ, ಶ್ರೀ ಶ್ರೀಪತಿ, ಶ್ರೀ ವಿಘ್ನೇಶ್, ಸಹೋದರಿಯರಾದ ಸುಮಂಗಲಾ ಮತ್ತು ಯಶೋದಾ ಇವರ ಸಹಕಾರವೂ ಸಿಕ್ಕಿತ್ತು. ವಳಕ್ಕುಂಜ ಕುಮಾರ ಸುಬ್ರಹ್ಮಣ್ಯ ಭಟ್ಟರಿಗೆ ಅಜ್ಜ ಕೀರಿಕ್ಕಾಡು ಮಾಸ್ತರರ ಮತ್ತು ಸೋದರ ಮಾವಂದಿರ ಪ್ರೋತ್ಸಾಹ ಸದಾ ಸಿಕ್ಕಿತ್ತು. ‘ಅಜ್ಜನ ಮನೆಯಲ್ಲಿ ಅನ್ನವುಂಡು ಬೆಳೆದೆ. ಯಕ್ಷಗಾನ ಕಲಾವಿದನಾಗಲು ಅನುಕೂಲಗಳನ್ನು ನೀಡಿ ಹುರಿದುಂಬಿಸಿದ್ದರು’. ಎಂದು ಕುಮಾರಣ್ಣ ಸದಾ ಹೇಳುತ್ತಾರೆ.
ಮಕ್ಕಳ ತಂಡದ ಮೇಲೆ ಇವರಿಗೆ ವಿಶೇಷ ಪ್ರೀತಿ. ಭವಿಷ್ಯದ ಕಲಾವಿದರೆಂಬ ಕಾಳಜಿಯಿಂದ ಮಕ್ಕಳ ತಂಡವನ್ನು ಪ್ರೋತ್ಸಾಹಿಸುತ್ತಾರೆ. ಕಟೀಲು ಮೇಳದ ತಿರುಗಾಟ ನಿಲ್ಲಿಸಿದ ನಂತರ ಕಾಂಚನ ರಾಮ ಭಟ್ಟರಿಂದ ಶಾಸ್ತ್ರೀಯ ಸಂಗೀತದ ಮೃದಂಗವನ್ನೂ ಅಭ್ಯಸಿಸಿದ್ದರು. ಮದೆನಾಡಿನಲ್ಲಿರುವಾಗ ಶಶಿಧರ ಕೋಟೆ ಅವರ ಹಾಡು ಮತ್ತು ಸೀತಾ ಹೆಬ್ಬಾರ್ ಅವರ ಭರತನಾಟ್ಯಕ್ಕೆ ಮೃದಂಗವಾದಕರಾಗಿಯೂ ಒದಗಿದ್ದರು. ಹಿರಿಯ ಮದ್ದಳೆಗಾರ ಶ್ರೀ ಪದ್ಯಾಣ ಪರಮೇಶ್ವರ ಭಟ್ಟರ ಒಡನಾಟವೂ ಸಿಕ್ಕಿತ್ತು. ಪದ್ಯಾಣ ಗಣಪತಿ ಭಟ್ಟರು ಮಳೆಗಾಲದ ಕಾರ್ಯಕ್ರಮಗಳಲ್ಲಿ ಅವಕಾಶವಿತ್ತು ಪ್ರೋತ್ಸಾಹಿಸಿದ್ದರು.
ಉಡುಪುಮೂಲೆ ಮೊದಲಾದೆಡೆ ನಡೆದ ಪ್ರದರ್ಶನಗಳಲ್ಲಿ ಪುತ್ತಿಗೆ ರಘುರಾಮ ಹೊಳ್ಳರೂ ಶ್ರೀ ದಿನೇಶ ಅಮ್ಮಣ್ಣಾಯರೂ ಅವಕಾಶವಿತ್ತು ಸಹಕರಿಸಿದ್ದರು. ಸತ್ಯಮೂರ್ತಿ ದೇರಾಜೆ ಮತ್ತು ಮನೆಯವರ ನೇತೃತ್ವದ ಕಾರ್ಯಕ್ರಮಗಳಲ್ಲೂ ಇವರು ಸಕ್ರಿಯರು. ಹಳೇ ಕ್ರಮದ ವಾದನವೇ ಇವರಿಗೆ ಇಷ್ಟ. “ಈಗ ವೇಗದ ಲಯದಲ್ಲೇ ಪ್ರಸಂಗ ಆರಂಭವಾಗುವುದನ್ನು ನಾವು ಕಾಣಬಹುದು. ಹಾಗಾದಾಗ ಪ್ರಸಂಗವು ಗೆಲ್ಲದೇ ಸೋಲುತ್ತದೆ. ಕಾಲನಿರ್ಣಯದಂತೆ, ಅದಕ್ಕೊಪ್ಪುವ ಲಯದಲ್ಲಿ ಸಾಗಿದರೆ ಮಾತ್ರ ಪ್ರದರ್ಶನವು ರಂಜಿಸುತ್ತದೆ. ಆ ವಿಚಾರದಲ್ಲಿ ಯಾರೂ ರಾಜಿ ಮಾಡಿಕೊಳ್ಳಬಾರದು. ವೇಷಧಾರಿಗೆ ಬೇಕಾದಂತೆ ಇಲ್ಲದಿದ್ದರೆ, ಹೊಸತನಕ್ಕೆ ಹೊಂದಿಕೊಳ್ಳದಿದ್ದರೆ ಕಾರ್ಯಕ್ರಮಕ್ಕೆ ಹೇಳಿಕೆ ಇಲ್ಲ ಅನ್ನೋದು ಅಷ್ಟೇ ಸತ್ಯ” ಕುಮಾರಣ್ಣನವರ ಈ ಮಾತುಗಳಲ್ಲಿ ನೋವಿದೆ, ಅಸಮಾಧಾನವಿದೆ.
ಕುಮಾರ ಸುಬ್ರಹ್ಮಣ್ಯ ಅವರ ಸಹೋದರಿ ಶ್ರೀಮತಿ ಸುಮಂಗಲಾ ಅವರ ಪುತ್ರ ಗಿರೀಶ್ವರನೂ ವೇಷಧಾರಿ. ಸಹೋದರಿ ಶ್ರೀಮತಿ ಯಶೋದಾ ಅವರ ಪುತ್ರ ಚೈತನ್ಯ ಇವರಿಂದಲೇ ಯಕ್ಷಗಾನ ಹಿಮ್ಮೇಳ ಕಲಿತಿದ್ದಾನೆ. ಉಳಿದ ಕಲಾ ಪ್ರಕಾರಗಳ ವಾದನ ಕ್ರಮವನ್ನು ಅಭ್ಯಸಿಸಿ, ಅದನ್ನು ವೃತ್ತಿಯಾಗಿ ಸ್ವೀಕರಿಸಿ ತೊಡಗಿಸಿಕೊಂಡಿದ್ದಾರೆ. ಸುಮಾರು 25ಕ್ಕೂ ಮಿಕ್ಕಿ ಸನ್ಮಾನಗಳನ್ನೂ ಸ್ವೀಕರಿಸಿರುವ ಕುಮಾರಣ್ಣ ವೃತ್ತಿಯಲ್ಲಿಯೂ ಸಾಂಸಾರಿಕವಾಗಿಯೂ ತೃಪ್ತರು. ಕುಮಾರಣ್ಣ, ಸುಲೋಚನಾ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರಿ ಭುವನಜ್ಯೋತಿ ಸ್ನಾತಕೋತ್ತರ ಪದವೀಧರೆ. (ಎಂ.ಕಾಮ್) ವಿವಾಹಿತೆ. ಅಳಿಯ ಶ್ರೀ ಕೀರ್ತಿಶಂಕರ್ ಉದ್ಯೋಗಿ. ಪುತ್ರ ಶ್ರೀಶ ಮಂಗಳೂರು ಅಡ್ಯಾರಿನ ಶ್ರೀನಿವಾಸ ಕಾಲೇಜಿನಲ್ಲಿ ಎಂ.ಬಿ.ಎ ಓದುತ್ತಿದ್ದಾರೆ. ಇವರು ಹಿಮ್ಮೇಳ ಕಲಿತು ಆಟಕೂಟಗಳಲ್ಲಿ ಭಾಗವಹಿಸುತ್ತಿದ್ದಾರೆ.
ನಗುಮೊಗದ ಹಿರಿಯ ಮದ್ದಳೆಗಾರ ಶ್ರೀ ಕುಮಾರ ಸುಬ್ರಹ್ಮಣ್ಯ ವಳಕ್ಕುಂಜ ಸರಳ, ಸಜ್ಜನ, ವಿನಯವಂತರು. ಇವರಿಂದ ಇನ್ನಷ್ಟು ಕಲಾಸೇವೆಯು ನಡೆಯಲಿ. ನಿರಂತರ ಹಿಮ್ಮೇಳ ತರಬೇತಿಯನ್ನು ನೀಡುತ್ತಾ ಅನೇಕ ಕಲಾವಿದರನ್ನು ಕಲಾಮಾತೆಯ ಮಡಿಲಿಗಿಕ್ಕುವ ಭಾಗ್ಯವು ಒದಗಲಿ, ಶ್ರೀ ದೇವರು ಸಕಲ ಭಾಗ್ಯಗಳನ್ನೂ ಕರುಣಿಸಲಿ ಎಂಬ ಹಾರೈಕೆಗಳು.
ಯಕ್ಷ ಶಾಲ್ಮಲಾ (ರಿ) ಆಯೋಜಿಸುವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಪ್ರಾಯೋಜಕತ್ವದ ಏಳು ದಿನಗಳ ತಾಳಮದ್ದಳೆ ಕಾರ್ಯಕ್ರಮವಾದ “ಶ್ರೀ ರಾಮಾನುಭವ” ಎಂಬ ಸರಣಿ ತಾಳಮದ್ದಳೆ ಸಪ್ತಾಹ ಮುಂಡಿಗೇಸರ ಎಂಬಲ್ಲಿರುವ ಶ್ರೀ ಗಣಪತಿ ದೇವಸ್ಥಾನದಲ್ಲಿ ನಡೆಯಲಿದೆ.
ಈ ತಾಳಮದ್ದಳೆ ಸಪ್ತಾಹದಲ್ಲಿ ಪ್ರದರ್ಶನ ಮತ್ತು ದಾಖಲೀಕರಣ ಎರಡನ್ನೂ ಮಾಡಲಾಗುತ್ತಿದೆ. ದಿನಾಂಕ ಡಿಸೆಂಬರ್ 6ರಿಂದ ಡಿಸೆಂಬರ್ 12ರ ವರೆಗೆ ಈ ಕಾರ್ಯಕ್ರಮವು ಪ್ರತಿದಿನ ಸಂಜೆ 4-30ರಿಂದ ನಡೆಯಲಿದೆ. ಕಾರ್ಯಕ್ರಮವು ಸರಕಾರದ ಕೋವಿಡ್19ರ ನೀತಿ ನಿಯಮಾವಳಿಗಳನ್ನನುಸರಿಸಿ ನಡೆಯುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.
ಈ ಏಳೂ ದಿನಗಳ ತಾಳಮದ್ದಳೆ ಪ್ರಸಂಗಗಳಲ್ಲಿ ವಿದ್ವಾನ್ ಉಮಾಕಾಂತ ಭಟ್ಟ ಕೆರೇಕೈಯವರು ಪ್ರತಿದಿನವೂ ಶ್ರೀರಾಮನ ಪಾತ್ರವನ್ನು ವಹಿಸುತ್ತಿರುವುದು ಈ ಸಪ್ತಾಹದ ವಿಶೇಷತೆಯಾಗಿದೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಈ ವರ್ಷದ ಅಂದರೆ 2020-21ನೇ ಸಾಲಿನ ತಿರುಗಾಟವು ದಿನಾಂಕ 09-12-2020, ಬುಧವಾರ ಶ್ರೀ ಕ್ಷೇತ್ರ ಕಟೀಲಿನಲ್ಲಿ ಆರಂಭವಾಗಲಿದೆ.
ಆ ದಿನ ಕಟೀಲಿನ ಆರೂ ಮೇಳಗಳು ಸೇವೆಯಾಟದ ಪ್ರದರ್ಶನ ನೀಡುವ ಮೂಲಕ ಈ ವರ್ಷದ ತಿರುಗಾಟಕ್ಕೆ ಚಾಲನೆ ನೀಡಲಿವೆ. ಈ ವಿಷಯವನ್ನು ದೇವಸ್ಥಾನದ ಆಡಳಿತ ವೃಂದ ಮತ್ತು ಮೇಳಗಳ ಆಡಳಿತ ಸಮಿತಿಯು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋವಿಡ್-19ರ ಸರಕಾರದ ನಿಯಮಾವಳಿಗಳಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಅನಿವಾರ್ಯತೆಗೆ ನಾವಿಂದು ಸಿಲುಕಿದ್ದೇವೆ. ನಾವು ಮಾತ್ರವಲ್ಲ. ಇಡೀ ಪ್ರಪಂಚವೇ ಅಂತಹದೊಂದು ಸಂದಿಗ್ಧ ಪರಿಸ್ಥಿತಿಯ ಒತ್ತಡದ ಕೈಗೊಂಬೆಯಾಗಿದೆ. ಪ್ರಪಂಚವೇ ಈ ಕಾಲಘಟ್ಟದ ಬದಲಾಗುತ್ತಿರುವ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಿರುವುದು ಮಾತ್ರವಲ್ಲ, ಅದಕ್ಕೆ ಹೊಂದಿಕೊಳ್ಳುತ್ತಾ ಇದೆ. ಜನರು ನಿಧಾನವಾಗಿ ಕೋವಿಡ್ ಜೊತೆಗೆ ಬದುಕುವುದು ಹೇಗೆ ಎಂಬುವುದನ್ನು ಕಲಿತುಕೊಳ್ಳುತ್ತಾ ಇದ್ದಾರೆ.
ಮದುವೆ, ಸಭೆ, ಸಮಾರಂಭಗಳನ್ನು ನೀತಿ ನಿಯಮಗಳನ್ನು ಅನುಸರಿಸಿ ನಡೆಸಬೇಕಾದ ಪರಿಸ್ಥಿತಿಯಿದೆ. ಸಾಂಸ್ಕೃತಿಕ ಸಮಾರಂಭಗಳು ಪ್ರೇಕ್ಷಕರಿಲ್ಲದೆ ಸೊರಗಿವೆ. ಆದರೆ ಯಾವುದೇ ಸಮಸ್ಯೆಗಳಿಗೆ ಪರಿಹಾರಗಳು ಇದ್ದೆ ಇರುತ್ತವೆ. ಅದರಂತೆ ಎಲ್ಲಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟಕರು ಈಗ ಹೊಸದೊಂದು ಉಪಾಯವನ್ನು ಕಂಡುಕೊಂಡಿದ್ದಾರೆ. ಕೊರೋನಾ ಹರಡುವಿಕೆಯ ಆರಂಭದ ತೀವ್ರತೆಯ ನಡುವೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮುಖ್ಯಮಂತ್ರಿಗಳ, ಕೇಂದ್ರ ಸಚಿವರ, ಅಧಿಕಾರಿಗಳ ಜೊತೆಗೆಲ್ಲಾ ನಡೆಸಿದ ಆನ್ಲೈನ್ ಸಂವಾದಗಳ ಪ್ರೇರಣೆಯೋ ಎಂಬಂತೆ ಪ್ರತಿಯೊಂದು ಕಾರ್ಯಕ್ರಮಗಳು ನೇರ ಪ್ರಸಾರದ ರೂಪದಲ್ಲಿ ಕಾಣಿಸಿಕೊಳ್ಳತೊಡಗಿದುವು.
ಅದರಂತೆ ಮುಂದಿನ ದಿನಗಳಲ್ಲಿ ವಿವಾಹ ಸಮಾರಂಭ, ಸಭೆ ಸಮಾರಂಭಗಳನ್ನೆಲ್ಲಾ ನೇರ ಪ್ರಸಾರದ ರೂಪದಲ್ಲಿ ನೋಡುವ ಅವಕಾಶಗಳು ಆಸಕ್ತರಿಗೆ ಒದಗಿ ಬಂತು. ನಿಧಾನವಾಗಿ ಈ ನೇರ ಪ್ರಸಾರದ ಸೌಲಭ್ಯ, ಸೌಭಾಗ್ಯಗಳು ಕಲಾ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ವಿಸ್ತರಣೆಯಾಗತೊಡಗಿತು.
ಯಕ್ಷಗಾನವೂ ಹಿಂದೆ ಬೀಳಲಿಲ್ಲ. ಅಲ್ಲಲ್ಲಿ ನಡೆದ ಯಕ್ಷಗಾನ ತಾಳಮದ್ದಳೆ, ಗಾನ ವೈಭವ, ಯಕ್ಷಗಾನ ಪ್ರದರ್ಶನಗಳು ನೇರ ಪ್ರಸಾರದಲ್ಲಿ ಕಾಣಿಸಿಕೊಂಡು ಕಲಾಪ್ರೇಮಿಗಳು ಮನೆಯಲ್ಲಿಯೇ ಕುಳಿತು ನೋಡುವಂತಾಯಿತು. ಫೇಸ್ಬುಕ್, ಯೂಟ್ಯೂಬ್, ಕೆಲವು ಸ್ಥಳೀಯ ಟಿವಿ ವಾಹಿನಿಗಳು ಯಕ್ಷಗಾನ ಕಾರ್ಯಕ್ರಮ, ಪ್ರದರ್ಶನಗಳನ್ನು ನೇರ ಪ್ರಸಾರ ಮಾಡುವಲ್ಲಿ ಸಂಘಟಕರ ಜೊತೆ ಕೈ ಜೋಡಿಸಿದುವು.
ಈಗ ಹೆಚ್ಚಿನೆಲ್ಲಾ ಯಕ್ಷಗಾನ ಪ್ರದರ್ಶನಗಳು ನೇರಪ್ರಸಾರದಲ್ಲಿ ಪ್ರೇಕ್ಷಕರಿಗೆ ನೋಡಲು ಲಭ್ಯವಾಗುತ್ತಿವೆ. ಯಕ್ಷಗಾನ ಆರಂಭವಾಗುತ್ತಿದ್ದಂತೆ ಈ ನೇರಪ್ರಸಾರದ ಅನುಕೂಲತೆಗಳೂ ಆರಂಭವಾಗಿವೆ. ಯಕ್ಷಗಾನವನ್ನು ಆರಂಭಿಸುವ ಮುನ್ನ ಅಂದರೆ ಮೇಳಗಳು ತಿರುಗಾಟಕ್ಕೆ ಹೋರಡಬೇಕಾದರೆ ಸರಕಾರವು ಕೆಲವು ಕಠಿಣ ನಿಯಮಗಳನ್ನು ನಿರ್ದೇಶಿಸಿತ್ತು. ಅದರಂತೆ ಈಗ ಮೇಳಗಳು ಕೂಡಾ ನೇರ ಪ್ರಸಾರವನ್ನು ಮಾಡುವ ಕಾಯಕವನ್ನು ಆರಂಭಿಸಿದೆ.
ಇದರಿಂದ ಮೇಳದ ಸಂಚಾಲಕರು ಹಾಗೂ ಸಂಘಟಕರು ಯಕ್ಷಗಾನದ ಅಭಿಮಾನಿಗಳಿಗೆ ಮನೆಯಲ್ಲಿಯೇ ಉತ್ಕೃಷ್ಟ ಪ್ರದರ್ಶನವನ್ನು ಆಸ್ವಾದಿಸುವ ಅವಕಾಶ ಮತ್ತು ಸೌಭಾಗ್ಯವನ್ನು ಒದಗಿಸಿ ಕೊಟ್ಟಿದ್ದಾರೆ. ಒಂದೆರಡು ತಿಂಗಳುಗಳ ಹಿಂದೆ ನಡೆದ ಯಕ್ಷಗಾನ ಕಾರ್ಯಕ್ರಮಗಳ ನೇರ ಪ್ರಸಾರಗಳಿಂದ ಆರಂಭವಾದ ಈ ನೇರ ಪ್ರಸಾರದ ಅನುಕೂಲತೆಯು ಈಗ ಮೇಳಗಳಿಗೂ ವಿಸ್ತರಿಸಿದೆ.
ಶ್ರೀ ಧರ್ಮಸ್ಥಳ ಮೇಳದಿಂದ ಆರಂಭವಾದ ಈ ನೇರ ಪ್ರಸಾರದ ಯಕ್ಷಗಾನಗಳನ್ನು ಪಾವಂಜೆ ಹಾಗೂ ಇತರ ಮೇಳಗಳೂ ಅನುಸರಿಸುತ್ತಿವೆ. ಈ ತಿಂಗಳಿನಲ್ಲಿ ಅಂದರೆ ಡಿಸೆಂಬರಿನಲ್ಲಿ ಆರಂಭವಾಗಲಿರುವ ಕಟೀಲು ಮೇಳದ ಆಟಗಳಲ್ಲಿಯೂ ಈ ನೇರ ಪ್ರಸಾರದ ಸೌಲಭ್ಯ ಇದೆಯೋ ಎಂದು ಕಾದು ನೋಡಬೇಕಷ್ಟೆ. ಆದರೆ ಈ ನೇರಪ್ರಸಾರದ ಜನಪ್ರಿಯತೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಧರ್ಮಸ್ಥಳ ಮೇಳದ ಯಕ್ಷಗಾನ ಪ್ರದರ್ಶನಗಳೇ ಸಾಕ್ಷಿ.
ಕೆಲವೊಂದು ಪ್ರದರ್ಶನಗಳನ್ನು ಲಕ್ಷ ಸಂಖ್ಯೆಯಲ್ಲಿ ಜನರು ವೀಕ್ಷಣೆ ಮಾಡಿದ್ದಾರೆ. ಪಾವಂಜೆ ಮೇಳವೂ ಹೆಚ್ಚಿನ ವೀಕ್ಷಕರನ್ನು ಹೊಂದಿದೆ. ಇಂತಹಾ ನೇರಪ್ರಸಾರದ ಸೌಲಭ್ಯವು ಜನರಿಗೆ ಮನೆಯಲ್ಲಿಯೇ ಕುಳಿತು ಯಕ್ಷಗಾನವನ್ನು ಆಸ್ವಾದಿಸುವ ಅನುಕೂಲವನ್ನು ಸೃಷ್ಟಿಸಿದೆ. ಆದರೆ ಮೊದಲು ಆರಂಭವಾದ ಮೇಳಗಳ ವೀಕ್ಷಣೆಯ ಸಂಖ್ಯೆ ಇದೇ ರೀತಿ ಮುಂದುವರಿಯಬಹುದು ಎಂದು ಹೇಳಲು ಅಸಾಧ್ಯ.
ಯಾಕೆಂದರೆ ಇನ್ನು ಆರಂಭವಾಗಲಿರುವ ಹಲವಾರು ಮೇಳಗಳ ಯಕ್ಷಗಾನ ಪ್ರದರ್ಶನಗಳಲ್ಲಿಯೂ ನೇರ ಪ್ರಸಾರದ ತಂತ್ರಗಾರಿಕೆಯನ್ನು ಅನುಸರಿಸಿದರೆ ಆಗ ವೀಕ್ಷಕರು ಪ್ರಸಂಗದ ಆಯ್ಕೆ ಮಾಡಿ ತಮ್ಮ ಮೆಚ್ಚಿನ ಪ್ರಸಂಗದ ಪ್ರದರ್ಶನಗಳನ್ನೋ ಅಥವಾ ತಮ್ಮ ಮೆಚ್ಚಿನ ಕಲಾವಿದರಿರುವ ಪ್ರದರ್ಶನಗಳನ್ನೋ ವೀಕ್ಷಿಸುವ ಆಯ್ಕೆ ಮಾಡಿಕೊಳ್ಳಬಹುದು. ಅಥವಾ ಎಲ್ಲವನ್ನೂ ಸ್ವಲ್ಪ ಸ್ವಲ್ಪ ನೋಡಬಹುದು. ಆದರೆ ನೇರ ಪ್ರಸಾರದ ವೀಕ್ಷಣೆಯಲ್ಲಿ ರಂಗಸ್ಥಳದ ಎದುರು ಕುಳಿತು ನೋಡಿದ ರಸಾಸ್ವಾದನೆ, ಅನುಭೂತಿಗಳು ಉಂಟಾಗುವುದಿಲ್ಲ ಎಂದು ಹಲವಾರು ಯಕ್ಷಗಾನ ಪ್ರೇಮಿಗಳು ಹೇಳುತ್ತಾರೆ.
ಅದೇನೇ ಇರಲಿ, ಈ ನೇರ ಪ್ರಸಾರದ ಸೌಲಭ್ಯವನ್ನು ನೀಡುವ ತಂತ್ರಗಾರಿಕೆಯನ್ನು ಈ ತಿರುಗಾಟದಲ್ಲಿ ಮುಂದುವರಿಸಿಕೊಂಡು ಹೋಗಬಹುದು. ಅಥವಾ ಇದು ಜನಪ್ರಿಯತೆಯನ್ನು ಪಡೆದರೆ ಇನ್ನು ಮುಂದಿನ ತಿರುಗಾಟಗಳಲ್ಲಿಯೂ ಅದನ್ನು ಅಳವಡಿಸಿಕೊಳ್ಳಬಹುದು. ಆದರೆ ಇದರಿಂದ ಯಕ್ಷಗಾನ ಪ್ರದರ್ಶನಗಳಿಗೆ ಭವಿಷ್ಯದಲ್ಲಿ ಪ್ರೇಕ್ಷಕರ ನೇರ ಹಾಜರಾತಿಯ ಕೊರತೆ ಕಾಣಬಹುದೆ ಎಂಬ ಪ್ರಶ್ನೆಯು ಕಾಡುತ್ತಿದೆ. ಈ ಪ್ರಶ್ನೆಗೆ ಕಾಲವೇ ಉತ್ತರ ಹೇಳಲಿದೆ.
ಮೊದಲೆಲ್ಲಾ ಯಕ್ಷಗಾನ ಪ್ರದರ್ಶನಗಳು ಕಾಸರಗೋಡು, ದ.ಕ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಾತ್ರ ನಡೆಯುತ್ತಿತ್ತು. ಈಗ ಹಾಗಲ್ಲ. ದೇಶ-ವಿದೇಶಗಳಲ್ಲಿರುವ ಜನರು ಈ ಗಂಡು ಕಲೆಯತ್ತ ಆಕರ್ಷಿತರಾಗಿದ್ದಾರೆ. ಮಾತ್ರವಲ್ಲ, ಪ್ರದರ್ಶನಗಳನ್ನು ಏರ್ಪಡಿಸುತ್ತಿದ್ದಾರೆ. ನಮ್ಮ ಹೆಮ್ಮೆಯ ಕಲೆಯಾದ ಯಕ್ಷಗಾನ ಪ್ರದರ್ಶನಗಳ ವ್ಯಾಪ್ತಿ ವಿಸ್ತರಣೆಯಾದುದು ಅಭಿಮಾನ ಪಡಬೇಕಾದ ವಿಚಾರ.
ಸಂಘಟಕರು ಪ್ರದರ್ಶನಗಳನ್ನು ಏರ್ಪಡಿಸುವುದರ ಜತೆಗೆ ಹಿರಿಯ, ಅರ್ಹ ಕಲಾವಿದರುಗಳನ್ನು ಗುರುತಿಸಿ ಗೌರವಿಸುವ ಸತ್ಕಾರ್ಯವನ್ನು ಮಾಡುತ್ತಿದ್ದಾರೆ. ಹೊರರಾಜ್ಯಗಳಲ್ಲೂ ವಿದೇಶಗಳಲ್ಲೂ ಈ ಪ್ರಕ್ರಿಯೆಯು ನಡೆಯುತ್ತಾ ಇರುವುದನ್ನು ನಾವು ಗಮನಿಸಬಹುದು. ಕಲಾಸೇವೆಯ ಜತೆ ಕಲಾವಿದರನ್ನು ಸನ್ಮಾನಿಸುವ ನಿರ್ಣಯ. ಯಕ್ಷಗಾನ ಸಂಘಟಕರ ಈ ಸತ್ಕಾರ್ಯವನ್ನು ನಾವು ಪ್ರೋತ್ಸಾಹಿಸೋಣ. ಅವರನ್ನು ಅಭಿನಂದಿಸೋಣ.
ಅನೇಕ ವರ್ಷಗಳ ಕಾಲ ಯಕ್ಷಗಾನಕ್ಕಾಗಿ ಬದುಕನ್ನು ಸವೆಸಿ ಪ್ರಾಮಾಣಿಕವಾಗಿ ಕಲಾ ಸೇವೆಯನ್ನು ಮಾಡಿದ ಕಲಾವಿದರುಗಳಿಗೆ ತಾವು ಸನ್ಮಾನಕ್ಕೆ, ಪ್ರಶಸ್ತಿಗೆ ಆಯ್ಕೆಯಾದಾಗ ಆನಂದವಾಗುವುದು ಸಹಜ. ಈ ಸನ್ಮಾನ ಪ್ರಶಸ್ತಿಗಳು ಕಲಾವಿದರ ಹೊಣೆಗಾರಿಕೆಯನ್ನು ಹೆಚ್ಚಿಸಿ ಇನ್ನಷ್ಟು ಕಲಾಸೇವೆಯನ್ನು ಮಾಡಲು ಉತ್ತೇಜನವನ್ನು ಕೊಡಲಿ ಎಂದು ಆಶಿಸೋಣ. ಕಲಾಪೋಷಕರಾಗಿ ಕಾಣಿಸಿಕೊಂಡವರು ಸರ್ಪಂಗಳ ಶ್ರೀ ಸುಬ್ರಹ್ಮಣ್ಯ ಭಟ್ಟರು. ಉಡುಪಿಯಲ್ಲಿ ಭಾರತೀಯ ಜೀವ ವಿಮಾ ಉದ್ಯೋಗಿಯಾಗಿದ್ದ ಇವರು ಕಲಾಪೋಷಕರೆಂದು ಖ್ಯಾತರಾದರು. ಉಡುಪಿಯಲ್ಲಿ ತೆಂಕುತಿಟ್ಟಿನ ಪ್ರದರ್ಶನಗಳಿಗೆ ಕಾರಣರಾದುದಲ್ಲದೆ ಯಕ್ಷಗಾನ ಕಲಾರಂಗ (ರಿ) ಉಡುಪಿ ಸಂಸ್ಥೆಯಲ್ಲಿ ಸಕ್ರಿಯರಾಗಿದ್ದರು.
ಶ್ರೀಯುತರು ಅವ್ಯಕ್ತ ಲೋಕವನ್ನು ಸೇರಿಕೊಂಡ ಮೇಲೆ ಇವರ ಪತ್ನಿ ಶ್ರೀಮತಿ ನಳಿನಿ ಸುಬ್ರಹ್ಮಣ್ಯ ಭಟ್ ನತ್ತು ಮಕ್ಕಳು ‘ಸರ್ಪಂಗಳ ಯಕ್ಷೋತ್ಸವ’ ಕಾರ್ಯಕ್ರಮದಡಿ ಸರ್ಪಂಗಳ ಪ್ರಶಸ್ತಿಯನ್ನು ಕಳೆದ ಏಳು ವರ್ಷಗಳಿಂದ ಹಿರಿಯ ಕಲಾವಿದರಿಗೆ ನೀಡಿ ಗೌರವಿಸುತ್ತಾ ಬಂದಿರುತ್ತಾರೆ. ಕಳೆದ ವರುಷ (2019) ಸರ್ಪಂಗಳ ಪ್ರಶಸ್ತಿಗೆ ಭಾಜನರಾದವರು ಕಟೀಲು ಮೇಳದ ಹಿರಿಯ ಸ್ತ್ರೀ ವೇಷಧಾರಿ ಶ್ರೀ ಸಂಜೀವ ಬಳೆಗಾರ, ಶಂಕರನಾರಾಯಣ.
ಬಡಗಿನವರಾದ (ಕುಂದಾಪುರ) ಇವರು ತೆಂಕಿನ ಕಟೀಲು ಮೇಳದ ಕಲಾವಿದರಾಗಿ ಮಿಂಚಿದವರು. ಕಲೆಗಿರುವ ಆಕರ್ಷಣೆಯೆಂದರೆ ಹಾಗೆ. ಪ್ರದೇಶ, ಜಾತಿ, ಭಾಷೆ ಕಲಾವಿದನಾಗಲು ತೊಡಕಾಗುವುದಿಲ್ಲ. ಸಾಧನೆಯೊಂದೇ ಬೇಕಾದುದು. ಹೊರರಾಜ್ಯದವರೂ, ವಿದೇಶಿಗರೂ ಈ ಸರ್ವಾಂಗ ಸುಂದರ ಕಲೆಯತ್ತ ಆಕರ್ಷಿತರಾಗಿ ಅಧ್ಯಯನವನ್ನು ನಡೆಸುತ್ತಿರುವುದು ನಮಗೆಲ್ಲಾ ಹೆಮ್ಮೆಯ ವಿಚಾರ. ಸರ್ಪಂಗಳ ಪ್ರಶಸ್ತಿ ವಿಜೇತರಾದ ಶ್ರೀ ಸಂಜೀವ ಬಳೆಗಾರರನ್ನು ನಾವೆಲ್ಲಾ ಅಭಿನಂದಿಸೋಣ.
ಶ್ರೀ ಸಂಜೀವ ಬಳೆಗಾರರು ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಶಂಕರನಾರಾಯಣ ಗ್ರಾಮದ ಕುಳ್ಳಂಜೆಯಲ್ಲಿ 1948ನೇ ಇಸವಿಯಲ್ಲಿ ಜನಿಸಿದರು. ತಂದೆ ಶ್ರೀ ಗೋವಿಂದ ಬಳೆಗಾರ. ತಾಯಿ ಸೀತಮ್ಮ. ಓದಿದ್ದು 8ನೇ ತರಗತಿ ವರೆಗೆ. ಶಂಕರನಾರಾಯಣ ಶಾಲೆಯಲ್ಲಿ. ಮನೆಯಲ್ಲಿ ಯಾರೂ ಯಕ್ಷಗಾನ ಕಲಾವಿದರಲ್ಲದಿದ್ದರೂ ಕಲಾಸಕ್ತರಾಗಿದ್ದರು. ಸಂಜೀವ ಬಳೆಗಾರರ ಅಣ್ಣ ಗೋಪಾಲಕೃಷ್ಣ ಎಂಬವರು (ದೊಡ್ಡಮ್ಮನ ಮಗ) ಪೆರ್ಡೂರು ಮೇಳದ ಕಲಾವಿದರಾಗಿದ್ದರು. ಸ್ತ್ರೀ ವೇಷಗಳನ್ನು ನಿರ್ವಹಿಸುತ್ತಿದ್ದರು. ಸಂಜೀವ ಬಳೆಗಾರರಿಗೆ ಬಾಲ್ಯದಲ್ಲಿಯೇ ಯಕ್ಷಗಾನಾಸಕ್ತಿ ಇತ್ತು. ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಆಟ ನೋಡುತ್ತಾ ಬೆಳೆದವರು.
ಅಣ್ಣ ಗೋಪಾಲಕೃಷ್ಣ ಅವರ ಪ್ರೋತ್ಸಾಹದಿಂದಲೇ ಆಸಕ್ತಿ ಹೆಚ್ಚಿತು. ಯಕ್ಷಗಾನ ಸೇರುವಂತಾಯಿತು ಎಂಬುದು ಸಂಜೀವ ಬಳೆಗಾರರ ಅಭಿಪ್ರಾಯ. ಶಾಲೆ ಬಿಟ್ಟ ನಂತರ ತೀರ್ಥಹಳ್ಳಿಯ ಶ್ರೀನಿವಾಸ ಪ್ರಿಂಟಿಂಗ್ ಪ್ರೆಸ್ಸಿನಲ್ಲಿ ಉದ್ಯೋಗಕ್ಕೆ ಸೇರಿದ್ದರು. ಅಲ್ಲಿ ಕಂಪೋಸಿಂಗ್ ಕೆಲಸವನ್ನು 2 ವರ್ಷ ಮಾಡಿದ್ದರು. ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದನಾಗುವ ಸಂಜೀವ ಬಳೆಗಾರರ ಆಸೆಯೂ ಕೈಗೂಡುವ ಅವಕಾಶ ಬಂದಿತ್ತು. ತೀರ್ಥಹಳ್ಳಿಯ ಮಂಗಳಗಾರ್ ಎಂಬಲ್ಲಿ ಖ್ಯಾತ ಸ್ತ್ರೀ ಪಾತ್ರಧಾರಿ ಶ್ರೀ ಎಂ.ಕೆ ರಮೇಶ ಆಚಾರ್ಯರು ವಾಸ್ತವ್ಯವಿದ್ದರು. ಅವರಿಂದಲೇ ನಾಟ್ಯವನ್ನು ಅಭ್ಯಸಿಸಿ ಮೇಳದ ತಿರುಗಾಟ ನಡೆಸುವ ಮನ ಮಾಡಿದರು.
ಮೊದಲ ತಿರುಗಾಟ ಕೊಲ್ಲೂರು ಮೇಳದಲ್ಲಿ 1 ವರ್ಷ. ಮುಂದಿನ ತಿರುಗಾಟ ಪ್ರಸಿದ್ಧ ಕೆರೆಮನೆ ಇಡಗುಂಜಿ ಮೇಳದಲ್ಲಿ. ಆಗ ಖ್ಯಾತ ಕಲಾವಿದ ಕೆರೆಮನೆ ಶಿವರಾಮ ಹೆಗಡೆಯವರು ಮೇಳವನ್ನು ನಡೆಸುತ್ತಿದ್ದರು. 2 ವರ್ಷಗಳ ಕಾಲ ತಿರುಗಾಟ. ಶಿವರಾಮ ಹೆಗಡೆಯವರ ಜತೆ ವೇಷ ಮಾಡುವ ಭಾಗ್ಯವೂ ಒದಗಿತ್ತು ಸಂಜೀವ ಬಳೆಗಾರರಿಗೆ. ನಂತರ 6 ವರ್ಷಗಳ ಕಾಲ ತೆಂಕಿನ ಸುರತ್ಕಲ್ ಮೇಳದಲ್ಲಿ ವ್ಯವಸಾಯ. ಅಗರಿ ರಘುರಾಮ ಭಾಗವತರು, ಶೇಣಿ, ತೆಕ್ಕಟ್ಟೆ ಎಂ.ಕೆ ಮೊದಲಾದ ಶ್ರೇಷ್ಠರ ಒಡನಾಟ ಸಿಕ್ಕಿದ ಪರಿಣಾಮ ನೆಲೆಯಲು ಅನುಕೂಲವಾಗಿತ್ತು. ಕಳೆದ 31 ವರ್ಷಗಳಿಂದ ಕಟೀಲು ಮೇಳದಲ್ಲಿ ಕಲಾಸೇವೆ ಮಾಡುತ್ತಿದ್ದಾರೆ.
ಕುರಿಯ ಗಣಪತಿ ಶಾಸ್ತ್ರಿ, ಪದ್ಯಾಣ ಶಂಕರನಾರಾಯಣ ಭಟ್, ಗುಡ್ಡಪ್ಪ ಗೌಡ ಮೊದಲಾದವರ ಜತೆ ತಿರುಗಾಟ. ಎಲ್ಲಾ ತರದ ಸ್ತ್ರೀ ವೇಷಗಳನ್ನೂ ನಿರ್ವಹಿಸಿದವರು ಸಂಜೀವ ಬಳೆಗಾರರು. ಚಂದ್ರಮತಿ, ದಮಯಂತಿ, ದಾಕ್ಷಾಯಣಿ ಅಲ್ಲದೆ ಶೃಂಗಾರಕ್ಕೆ ಸಂಬಂಧಿಸಿದ ವೇಷಗಳು, ಕಸೆ ಸ್ತ್ರೀ ವೇಷಗಳನ್ನೂ ಮಾಡಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು. ಕುರಿಯ ಗಣಪತಿ ಶಾಸ್ತ್ರಿಗಳ ನಿರ್ದೇಶನದಲ್ಲಿ ದೇವಿ ಮಹಾತ್ಮೆ ಪ್ರಸಂಗದ ‘ಶ್ರೀದೇವಿ’ಯಾಗಿ 2 ವರ್ಷ ಅಭಿನಯಿಸಿದ್ದರು. ಭಾವನಾತ್ಮಕ ಪಾತ್ರಗಳೆಂದರೆ ಸಂಜೀವಣ್ಣನಿಗೆ ಬಲು ಪ್ರೀತಿ. ಮೈಮರೆತು ಅಭಿನಯಿಸಿ ವಿದ್ವಾಂಸರ ಮೆಚ್ಚುಗೆಗೆ ಪಾತ್ರರಾಗಲು ಭಾವನಾತ್ಮಕ ಸಾತ್ವಿಕ ಪಾತ್ರಗಳಲ್ಲಿ ಅನುಕೂಲತೆಗಳಿವೆ ಎಂಬುದು ಸಂಜೀವ ಬಳೆಗಾರರ ಅನುಭವದ ಮಾತುಗಳು.
ಕಟೀಲು ಮೇಳದಲ್ಲಿ ಗುಡ್ಡಪ್ಪ ಗೌಡ ಮತ್ತು ಸಂಜೀವ ಬಳೆಗಾರರದ್ದು ಅಪೂರ್ವ, ಖ್ಯಾತ ಜೋಡಿ. ಜತೆ ವೇಷಗಳಲ್ಲಿ ಇವರಿಬ್ಬರೂ ಮೆರೆದಿದ್ದರು. ಕಟೀಲು ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ ಗುಡ್ಡಪ್ಪ ಗೌಡರ ಅರುಣಾಸುರನಿಗೆ ಯಶೋಮತಿಯಾಗಿ ಸಂಜೀವ ಬಳೆಗಾರರು ಎಲ್ಲರೂ ಮೆಚ್ಚುವಂತೆ ಅಭಿನಯಿಸಿದ್ದರು. ಅದನ್ನು ಪ್ರೇಕ್ಷಕರು ಈಗಲೂ ಹೇಳಿ ನೆನಪಿಸುತ್ತಾರೆ. ಆ ಪಾತ್ರದಿಂದಾಗಿ ಸಂಜೀವ ಬಳೆಗಾರರು ‘ಯಶೋಮತಿ ಸಂಜೀವಣ್ಣ’ ಎಂದೇ ಖ್ಯಾತರಾದರು. ಹೀಗೆ ಸಂಜೀವ ಬಳೆಗಾರರು ಯಕ್ಷಗಾನ ವೃತ್ತಿ ಕಲಾವಿದನಾಗಿ 45ಕ್ಕೂ ಮಿಕ್ಕಿದ ವಸಂತಗಳನ್ನು ಕಂಡಿದ್ದಾರೆ. ಅನೇಕ ಸಂಘ ಸಂಸ್ಥೆಗಳು, ಕಲಾಪೋಷಕರು ಇವರನ್ನು ಗುರುತಿಸಿ ಗೌರವಿಸಿದ್ದಾರೆ. ಶ್ರೀಯುತರು ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ ಪಡೆದುದಲ್ಲದೆ ಯಕ್ಷಗಾನ ಕಲಾರಂಗ (ರಿ) ಉಡುಪಿ ಸಂಸ್ಥೆಯಿಂದಲೂ ಸನ್ಮಾನಿತರಾಗಿರುತ್ತಾರೆ.
ಸಂಸಾರಿಕವಾಗಿಯೂ ತೃಪ್ತರಿವರು. ಪತ್ನಿ ಸೀತಾ ಅವರು ಪತಿಯ ಕಲಾಸೇವೆಗೆ ಸದಾ ಸಹಕರಿಸಿ ಪ್ರೋತ್ಸಾಹಿಸಿದವರು. ಸಂಜೀವ ಬಳೆಗಾರ ಮತ್ತು ಸೀತಾ ದಂಪತಿಗಳಿಗೆ ಮೂವರು ಮಕ್ಕಳು. (2 ಹೆಣ್ಣು ಮತ್ತು 1 ಗಂಡು) ಜ್ಯೇಷ್ಠ ಪುತ್ರಿ ಶಾಂತಾ ವಿವಾಹಿತೆ. ಪುತ್ರ ಸುರೇಶ ಉದ್ಯಮಿ. ಫ್ಯಾನ್ಸಿ ಸ್ಟೋರ್ಸ್ ನಡೆಸುತ್ತಿದ್ದಾರೆ. ಕಿರಿಯ ಪುತ್ರಿ ಮಮತಾ ವಿವಾಹಿತೆ. ಶಂಕರಣರಾಯಣದಲ್ಲಿ ಫ್ಯಾನ್ಸಿ ಸ್ಟೋರ್ಸ್ ನಡೆಸುತ್ತಿದ್ದಾರೆ. ಸರ್ಪಂಗಳ ಪ್ರಶಸ್ತಿ ವಿಜೇತರಾದ ಶ್ರೀ ಸಂಜೀವ ಬಳೆಗಾರರಿಗೆ ಇನ್ನಷ್ಟು ಪ್ರಶಸ್ತಿಗಳು ಬರಲಿ. ಇನ್ನಷ್ಟು ಕಲಾಸೇವೆಯನ್ನು ಮಾಡುವಲ್ಲಿ ಅವರಿಗೆ ಶ್ರೀ ದೇವರ ಅನುಗ್ರಹವಿರಲಿ ಎಂಬ ಹಾರೈಕೆಗಳು.
ಮಂಗಳೂರು ತಾಲೂಕಿನ ಮಂಜನಾಡಿ ಎಂಬ ಪುಟ್ಟ ಗ್ರಾಮ. ಆ ಊರಿನ ಯುವಕನೊಬ್ಬ ಕಣ್ಣುಗಳ ತುಂಬ ಕನಸುಗಳನ್ನು ಹೊತ್ತು ಮುಂಬೈ ಮಹಾನಗರದತ್ತ ಪ್ರಯಾಣ ಬೆಳೆಸಿದ. ತನ್ನ ಕಲ್ಪನೆಯ ಮಹಾನಗರದಲ್ಲಿ ಕೊನೆಗೂ ಕೆಲಸವನ್ನು ಗಿಟ್ಟಿಸಿದ. ಉದ್ಯೋಗದೊಂದಿಗೇ ತನ್ನ ವಿದ್ಯಾರ್ಥಿ ದೆಸೆಯಿಂದಲೇ ಅಂಟಿಸಿಕೊಂಡಿದ್ದ ಗೀಳು ಯಕ್ಷಗಾನವನ್ನು ಮರೆಯಲಿಲ್ಲ. ಕೆಲಸದ ಜೊತೆಗೆ ಹವ್ಯಾಸೀ ಕಲಾಸೇವೆಯ ನಂಟು ಬೆಳೆಯುತ್ತಾ ಹೋಯಿತು.
ಕೆಲಸ ಮಾಡುತ್ತಿರುವ ಸಂಸ್ಥೆಯ ಮುಖ್ಯಸ್ಥರೊಂದಿಗಿನ ವೈಯಕ್ತಿಕ ಭಿನ್ನಾಭಿಪ್ರಾಯವು ಅವನನ್ನು ಉದ್ಯೋಗಕ್ಕೆ ರಾಜೀನಾಮೆ ನೀಡುವಂತೆ ಮಾಡಿತು. ಮುಂಬೈಯಿಂದ ಹಿಂದುರುಗಿದ ಯುವಕ ಬಂದು ಪುತ್ತೂರು ಮೇಳವನ್ನು ಸೇರಿದ ನಂತರ ಇಂದಿನವರೆಗೆ ಯಕ್ಷ ಕಲಾಮಾತೆಯ ಸೇವೆಯನ್ನು ಗೈಯುತ್ತಾ ಬಂದಿದ್ದಾರೆ. ಅವರೇ ಬೊಟ್ಟಿಕೆರೆ ಪುರುಷೋತ್ತಮ ಪೂಂಜ.
ಮಂಗಳೂರು ತಾಲೂಕು ಮಂಜನಾಡಿ ಗ್ರಾಮದ ಬೊಟ್ಟಿಕೆರೆ ಎಂಬಲ್ಲಿ ಶ್ರೀ ತ್ಯಾಂಪಣ್ಣ ಪೂಂಜ. ಶ್ರೀಮತಿ ಜಲಜಾ ದಂಪತಿಗಳ ಸುಪುತ್ರನಾಗಿ ಜನಿಸಿದ ಪುರುಷೋತ್ತಮ ಪೂಂಜರ ಯಕ್ಷಗುರುಗಳು ಆನೆಗುಂಡಿ ಗಣಪತಿ ಭಟ್ಟರು. ಪೂಂಜರು ಐದನೇ ತರಗತಿಯ ವರೆಗೆ ಅಸೈಗೋಳಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಶಾಲೆಯ ಶಿಕ್ಷಕರಿಗೆ ಯಕ್ಷಗಾನದ ಬಗ್ಗೆ ವಿಶೇಷ ಒಲವಿತ್ತು. ಪೂಜರಿಗೂ ಅದರ ಬಗ್ಗೆ ಕುತೂಹಲವಿತ್ತು. ನಂತರ ಕೈರಂಗಳ ಸಮೀಪದ ಶಾಲೆಯಲ್ಲಿ ಕಲಿಯುತ್ತಿರುವಾಗ ಅಲ್ಲಿ ಯಕ್ಷಗಾನ ಸಂಘವೇ ಇತ್ತು. ಇವರ ಅಣ್ಣ ಶ್ರೀ ಸೀತಾರಾಮ ಪೂಂಜರು ಅಲ್ಲೇ ಶಿಕ್ಷಕರಾಗಿದ್ದರು. ಅವರು ಯಕ್ಷಗಾನದ ಭಾಗವತಿಕೆ ಅಭ್ಯಾಸ ಮಾಡುತ್ತಿದ್ದರು. ಬಾಲ್ಯ ಸಹಜ ಕುತೂಹಲದಿಂದ ಪುರುಷೋತ್ತಮ ಪೂಂಜರು ಅವರು ಅಭ್ಯಾಸ ಮಾಡುತ್ತಿದ್ದ ಪುಸ್ತಕಗಳನ್ನು ಬಿಡಿಸಿ ನೋಡುತ್ತಿದ್ದರು.
ಶಾಲೆಯ ವಾರ್ಷಿಕೋತ್ಸವದ ದಿನ ಪೆರ್ಲ ಕೃಷ್ಣ ಭಟ್ಟರು ಬರೆದ “ತಾಳ ಮದ್ದಳೆ” ಎಂಬ ಪ್ರಹಸನವನ್ನು ಶಿಕ್ಷಕರಿಗೋಸ್ಕರ ಏರ್ಪಡಿಸಿದರು. ಅದರಲ್ಲಿ ಭಾಗವತರ ಪಾತ್ರವನ್ನು ಮಾಡಲು ಶಿಕ್ಷಕರಲ್ಲಿ ಯಾರೂ ಸಿಕ್ಕದ ಕಾರಣ ಭಜನೆ ಹಾಡಿ ಅಭ್ಯಾಸವಿದ್ದ ಬೊಟ್ಟಿಕೆರೆಯವರನ್ನು ಆಯ್ಕೆ ಮಾಡಿದರು. ಆ ಪಾತ್ರವು ಮೂರು ನಾಲ್ಕು ಪದ್ಯ ಹಾಡಬೇಕಾಗಿತ್ತು. ಅದಕ್ಕೆ ಬೇಕಾದ ತಾಳ, ಮಟ್ಟುಗಳನ್ನು ಅವರಿಗೆ ಕಲಿಸಲಾಯಿತು. ಅವರು ಆ ಪಾತ್ರವನ್ನು ನಿರ್ವಹಿಸಿದೆ. ಹಾಗೆ ಹುಟ್ಟಿದ ಯಕ್ಷಗಾನದ ನಂಟು ಇಂದಿನ ವರೆಗೆ ಬಿಡಲಿಲ್ಲ.
ಮುಮ್ಮೇಳದಲ್ಲಿ ಕಲಾವಿದನಾಗಿ ಕೂಡಾ ನಿರ್ವಹಿಸುತ್ತಿದ್ದ ಪೂಂಜರು ಹೆಚ್ಚಾಗಿ ಕೃಷ್ಣ, ರಾಮ ಹಾಗೂ ಇದೇ ತರಹದ ಪಾತ್ರಗಳನ್ನು ಮಾಡುತ್ತಿದ್ದರು. ಕೀರೀಟ ವೇಷಗಳಾದ ಕರ್ಣ, ಕೌರವ, ಅತಿಕಾಯ ಇತ್ಯಾದಿಗಳನ್ನು ಕೂಡಾ ನಿರ್ವಹಿಸಿದ್ದರು. ಯಕ್ಷಗಾನದಲ್ಲಿ ಚಿಕ್ಕಂದಿನಲ್ಲೇ ಆಸಕ್ತಿ ಇದ್ದುದರಿಂದ ಅವಕಾಶ ಸಿಕ್ಕಾಗಲೆಲ್ಲಾ ಆ ಕಲೆಯ ಒಂದೊಂದೇ ಅಂಗಗಳನ್ನೇ ಕಲಿಯುತ್ತಾ ಬಂದರು. ಸಿಕ್ಕ ಅವಕಾಶಗಳನ್ನೆಲ್ಲಾ ಉಪಯೋಗಿಸಿಕೊಂಡರು. ಯಕ್ಷಗಾನದ ಎಲ್ಲಾ ಅಂಗಗಳಲ್ಲೂ ಪರಿಪೂರ್ಣ ಅಲ್ಲದಿದ್ದರೂ ಒಂದಷ್ಟು ತಿಳುವಳಿಕೆ ಪಡೆಯುತ್ತಾ ಬಂದರು. ಆ ನಂತರ ಯಕ್ಷಗಾನದ ಆಕರ್ಷಣೆ ದೂರವಾಗಲಿಲ್ಲ.
ಕಾಲೇಜು ಕಲಿಯುವ ದಿನಗಳಲ್ಲಿ ಹವ್ಯಾಸಿ ಕಲಾವಿದನಾಗಿ ಕೈರಂಗಳ ಗೋಪಾಲಕೃಷ್ಣ ಯಕ್ಷಗಾನ ಸಂಘದ ಕಾರ್ಯಕ್ರಮದಲ್ಲಿ ಪಾಲುಗೊಳ್ಳುತ್ತಿದ್ದರು. ಈ ಸಂಘದ ವೇಷ ಭೂಷಣಗಳನ್ನು ಯಕ್ಷಗಾನ ನಡೆಯುವಲ್ಲಿಗೆ ಕೊಂಡು ಹೋಗಬೇಕಿತ್ತು. ಜೊತೆಗೆ ಪೂಂಜರೂ ಹೋಗುತ್ತಿದ್ದರು. ಮೇಕಪ್ ಕೂಡಾ ಮಾಡುತ್ತಿದ್ದರು. ಅಲ್ಲಿ ಹೋದ ನಂತರ ಅವಕಾಶ ಸಿಕ್ಕಿದಾಗ ಪ್ರದರ್ಶನದಲ್ಲಿ ಭಾಗವಹಿಸುತ್ತಿದ್ದರು. ಹಿಮ್ಮೇಳ ಅಥವಾ ವೇಷಧಾರಿಯಾಗಿ ಪರಿ ಪೂರ್ಣ ಅಲ್ಲದಿದ್ದರೂ ಯಕ್ಷಗಾನದ ಎಲ್ಲ ಅಂಗಗಳಲ್ಲಿಯೂ ಕೈಯಾಡಿಸುವ ಅವಕಾಶ ಲಭ್ಯವಾಯಿತು.
ಪದವಿ ಶಿಕ್ಷಣ ಪಡೆಯುತ್ತಿರುವಾಗ ಕಾಲೇಜಿನ ಯಕ್ಷಗಾನ ಕಾರ್ಯಕ್ರಮಗಳಲ್ಲಿ ಹಾಗೂ ಹವ್ಯಾಸಿ ಸಂಘಗಳಲ್ಲಿ ಒಬ್ಬ ಕಲಾವಿದನಾಗಿ ರೂಪುಗೊಂಡ ಪೂಂಜರು ಆಗ ಹೆಚ್ಚಾಗಿ ವೇಷಧಾರಿಯಾಗಿದ್ದರೂ ಪರಿಸ್ಥಿತಿ ಬಂದೊದಗಿದಾಗ ಭಾಗವತಿಕೆ, ಹಾಗೂ ಹಿಮ್ಮೇಳವಾದನ ಕೂಡಾ ಮಾಡುತ್ತಿದ್ದರು. ಕೆಲವೊಮ್ಮೆ ಪ್ರಧಾನ ಭಾಗವತರು ಏರುಸ್ತಾಯಿಯಲ್ಲಿ ಹಾಡುತ್ತಿರುವಾಗ ಸ್ವರ ಬಿದ್ದು ಹೋಗುವ ಸಂದರ್ಭದಲೆಲ್ಲಾ ಪೂಂಜರು ವೇಷ ಕಳಚಿ ಭಾಗವತಿಕೆ ಮಾಡಿದ್ದುಂಟು.
ಮುಂದೆ ಉದ್ಯೋಗದ ನಿಮಿತ್ತ ಮುಂಬೈಗೆ ತೆರಳಿದರು. ಅಲ್ಲಿ ಕೂಡಾ ಯಕ್ಷಗಾನದ ನಂಟು ಮುಂದುವರೆಯಿತು. ಹಲವು ಯಕ್ಷಗಾನ ಮಂಡಳಿಗಳಿರುವ ಮುಂಬೈಯಲ್ಲಿ ಗೀತಾಂಬಿಕಾ ಮಂಡಳಿಯಲ್ಲಿ 7 ವರ್ಷ ಸದಸ್ಯನಾಗಿ, ವೇಷಧಾರಿಯಾಗಿ, ಭಾಗವತನಾಗಿ ಕೆಲಸ ಮಾಡಿದರು. ಈ ಎಲ್ಲಾ ಅನುಭವಗಳು ಮೇಳದ ಕಲಾವಿದನಾಗಲು ಮಾರ್ಗಸೂಚಿಯಾಯಿತು. ಅದೇ ಸಂದರ್ಭದಲ್ಲಿ ಕೆಲಸ ಮಾಡುತ್ತಿರುವ ಕಂಪೆನಿಯಲ್ಲಿ ಭಡ್ತಿ ವಿಷಯದಲ್ಲಿ ವ್ಯವಸ್ಥಾಪಕರೊಡನೆ ವಾಗ್ವಾದವಾಯಿತು. ಅದರಿಂದ ಬೇಸರಿಸಿ ಕೆಲಸಕ್ಕೆ ರಾಜೀನಾಮೆ ನೀಡಿ ಊರಿಗೆ ಮರಳಿದರು. ಆ ಮೇಲೆ ಪುತ್ತೂರು ಮೇಳದಲ್ಲಿ ಭಾಗವತನಾಗಿ ಸೇರಿದ ಆ ವರ್ಷವೇ ಅವರು ಬರೆದ ‘ಪಟ್ಟದ ಕತ್ತಿ’ ಎಂಬ ಪ್ರಸಂಗವನ್ನು ಮೇಳಕ್ಕೆ ಕೊಟ್ಟರು. ಹಾಗೆ ಪ್ರಾರಂಭವಾದ ಮೇಳದ ಬದುಕು ಇಂದಿನವರೆಗೂ ಮುಂದುವರೆಸಿಕೊಂಡು ಬಂದಿದ್ದಾರೆ.
“ತುಂಬಾ ಚೆನ್ನಾಗಿ ಹಾಡುವವರಿದ್ದಾರೆ. ಬೇರೇನೂ ವಿಷಯ ಗೊತ್ತಿಲ್ಲದವರೂ ಇದ್ದಾರೆ. ಭಾಗವತರಿಗೆ ಯಕ್ಷಗಾನದ ಸಮಗ್ರವಾದ ವಿಷಯ ಗೊತ್ತಿರಬೇಕು. ಮೂಲಭೂತ ವಿಷಯಗಳಾದ ರಾಗ, ತಾಳ, ಲಯ ಮಾತ್ರ ಗೊತ್ತಿದ್ದರೆ ಸಾಲದು. ಸಾಹಿತ್ಯ ಯಕ್ಷಗಾನಕ್ಕೆ ಸಂಬಂಧಿಸಿದ ಸಮಗ್ರ ವಿಷಯಗಳನ್ನು ತಿಳಿದಿರಬೇಕು. ಹೆಜ್ಜೆಗಾರಿಕೆ, ಹಿಮ್ಮೇಳದ ಚೆಂಡೆ, ಮದ್ದಳೆ ಬಗ್ಗೆಯೂ ಗೊತ್ತಿರಬೇಕು. ಮಾತ್ರವಲ್ಲ ವೇಷಧಾರಿಯ ಬಣ್ಣಗಾರಿಕೆಯ ಬಗ್ಗೆಯೂ ಜ್ಞಾನ ಮತ್ತು ಕಾಳಜಿಯನ್ನು ತೋರಿಸುವವರಾಗಿರಬೇಕು. ಇಂತಹಾ ಯಕ್ಷಗಾನದ ಸಮಗ್ರ ವಿಷಯಗಳ ಬಗ್ಗೆಯೂ ಅಧ್ಯಯನ ಕೈಗೊಂಡು ಅದರಲ್ಲಿ ಪರಿಪೂರ್ಣತೆಯನ್ನು ಸಾಧಿಸುವವರೇ ಪರಿಪೂರ್ಣ ಭಾಗವತ ಎಂದು ಕರೆಸಿಕೊಳ್ಳುತ್ತಾರೆ. ಸ್ವರ ಚೆನ್ನಾಗಿದ್ದು, ತಾಳ, ಲಯ ಹಿಡಿತ ಸಿಕ್ಕಿದಾಗ ನಾನು ಭಾಗವತನಾದೆ ಎಂದು ತಿಳಿದುಕೊಳ್ಳಬಾರದು” ಎನ್ನುತ್ತಾರೆ ಬೊಟ್ಟಿಕೆರೆ ಪುರುಷೋತ್ತಮ ಪೂಂಜ.
“ಮೇಳದ ಬಿಡಾರದಲ್ಲ್ಲಿ ಉಳಿದುಕೊಳ್ಳುವಾಗ ಕೆಲವು ಸಮಸ್ಯೆಗಳು ಬರುತ್ತಿರುತ್ತವೆ. ಕುಡಿಯುವ ನೀರು ಬದಲಾಗುತ್ತಲೇ ಇರುವಾಗ ಕೆಲವೊಮ್ಮೆ ಸ್ವರಗಳು ಬೀಳುತ್ತಿತ್ತು. ಇದರಿಂದ ನಾನು ಪ್ರತಿದಿನವೂ ಮನೆಯಿಂದ ಕ್ಯಾಂಪ್, ಕ್ಯಾಂಪ್‍ನಿಂದ ಮನೆ ಹೀಗೆ ಪ್ರಯಾಣಿಸುತ್ತಿದ್ದೆ. ಸಮಯದ ಅಭಾವವಿದ್ದರೂ ಹಾಗೂ ಪ್ರಯಾಣ ಕಷ್ಟವಿದ್ದರೂ ನೆಮ್ಮದಿ ಇರುತ್ತಿತ್ತು. ಹೆಚ್ಚಾಗಿ ನನ್ನ ಬರವಣಿಗೆ ಎಲ್ಲಾ ಮೇಳದ ತಿರುಗಾಟದ ಅವಧಿಯಲ್ಲಿ ಇರಲಿಲ್ಲ. ಕೊನೆಯ ಸೇವೆಯಾಟದ ನಂತರ ನನ್ನ ಬರವಣಿಗೆ ಸಾಗುತಿತ್ತು. ಅನಿವಾರ್ಯ ಸಂದರ್ಭಗಳಲ್ಲಿ ಮೇಳದ ತಿರುಗಾಟದಲ್ಲಿ ಬರೆದದ್ದೂ ಉಂಟು. ‘ಮನ್ಮಥೋಪಖ್ಯಾನ’ ಹಾಗೂ ‘ಸತಿ ಉಲೂಪಿ’ ಎಂಬ ಪ್ರಸಂಗಗಳನ್ನು ತಿರುಗಾಟದ ಸಮಯದಲ್ಲಿ ಬರೆದಿದ್ದೆ. ನಿದ್ರೆಯ ಅಭಾವದಿಂದ ಅವುಗಳನ್ನು ಬರೆಯಲು ಸ್ವಲ್ಪ ಕಷ್ಟವಾಗಿತ್ತು. ಸ್ವಲ್ಪ ಬಿಡುವೇನಾದರೂ ಸಿಕ್ಕಿದರೆ, ಓದುವ ಹವ್ಯಾಸವಿದೆ. ವರ್ತಮಾನ ಪತ್ರಿಕೆಗಳನ್ನೋದುವುದು, ಬರೆಯುವ ಹವ್ಯಾಸ, ಕ್ರಿಕೆಟ್ ಮ್ಯಾಚ್ ನೋಡುವುದು,ಸಂಗೀತ ಕೇಳುವುದು ಮೊದಾದ ಹವ್ಯಾಸಗಳು ಕೂಡಾ ಇವೆ. ನನ್ನ ಕಾಲೇಜಿನ ದಿನಗಳಲ್ಲಿ ಕ್ರೀಡಾ ಪಟುವಾಗಿದ್ದೆ, ಕಾಲೇಜಿನ ವಾಲಿಬಾಲ್ ತಂಡದ ನಾಯಕನಾಗಿದ್ದೆ” ಎಂದು ಬೊಟ್ಟಿಕೆರೆಯವರು ನುಡಿಯುತ್ತಾರೆ.
ಯಕ್ಷಗಾನ ಕ್ಷೇತ್ರದಲ್ಲಿ ಅವರ ಅನುಭವ ಈ ರೀತಿ ಇದೆ. ಉಪ್ಪಳ ಭಗವತಿ ಮೇಳ-ಒಂದು ವರ್ಷ ಮುಂಬಯಿ ಗೀತಾಂಬಿಕಾ ಮಂಡಳಿ-ಏಳು ವರ್ಷ, ಪುತ್ತೂರು ಮೇಳ – ಎರಡು ವರ್ಷ, ಕರ್ನಾಟಕ ಮೇಳ – ಐದು ವರ್ಷ, ಕಟೀಲು ಮೇಳ – ಇಪ್ಪತ್ತೆಂಟು ವರ್ಷಗಳಿಂದ. ಬರೆದ ಪೌರಾಣಿಕ ಯಕ್ಷಗಾನ ಪ್ರಸಂಗಗಳು: ಕನ್ನಡ ಪೌರಾಣಿಕ: ವಧುವೈಶಾಲಿನಿ, ಉಭಯಕುಲ ಬಿಲ್ಲೋಜ, ನಳಿನಾಕ್ಷನಂದಿನಿ, ಮಾನಿಷಾದ ಕ್ಷಾತ್ರ ಮೇಧ, ರಾಜಾದ್ರುಪದ, ಮಾತಂಗಕನ್ಯೆ, ಮನ್ಮಥೋಪಖ್ಯಾನ, ಗಂಡುಗಲಿ ಘಟೋತ್ಕಚ, ಪಾಂಚಜನ್ಯ, ಕಾರ್ತಿಕೇಯ ಕಲ್ಯಾಣ, ಗಾಂಗೇಯ, ಕಲಿಕೀಚಕ, ರುದ್ರಪಾದ, ಸತಿ ವಿಲೂಪಿ, ಬೋಪದೇವೋಪಾಖ್ಯಾನ, ದತ್ತಸಂಭವ ಇತ್ಯಾದಿ. ಕನ್ನಡ ಕಾಲ್ಪನಿಕ ಪ್ರಸಂಗಗಳು : ಮೇಘ ಮಯೂರಿ, ಸ್ವರ್ಣನೂಪುರ, ಅಮೃತವರ್ಷಣಿ, ಮೇಘ ಮಾಣಿಕ್ಯ. ತುಳು ಕಾಲ್ಪನಿಕ ಪ್ರಸಂಗಗಳು : ಪಟ್ಟದಕತ್ತಿ, ಬಂಗಾರ್ದಗೆಜ್ಜೆ, ದಳವಾಯಿ ಮುದ್ದಣ್ಣೆ, ನಲಿಕೆದ ನಾಗಿ, ಸ್ವರ್ಣ ಕೇದಗೆ, ಗರುಡ ಕೇಂಜವೆ. ನೃತ್ಯ ರೂಪಕಗಳು : ಅಂಧಕ ನಿದಾನ, ಭುವನಾಭಿರಾಮ (ಕನ್ನಡ), ಜೇವು ಕೇದಗೆ (ತುಳು). ಮಕ್ಕಳ ನಾಟಕ : ಹಿತ್ತಾಳೆ ಕಿವಿ. ಇತ್ತೀಚಿಗೆ ಪ್ರಕಟವಾದ ಪ್ರಸಂಗ ಪುಸ್ತಕಗಳು: ‘ಅಂಬುರುಹ ಲವ’ ಮತ್ತು ‘ಅಂಬುರುಹ ಕುಶ’ ತಾಳ ಲಯ ಪರಿಪಕ್ವತೆಗೆ ಇನ್ನೊಂದು ಹೆಸರಾದ ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಪತ್ನಿ ಶೋಭಾ, ಮಕ್ಕಳು ಜೀವಿತೇಶ ಮತ್ತು ಪರೀಕ್ಷಿತ.