Tuesday, January 28, 2025
Home Blog Page 333

ಬಣ್ಣದ ವೇಷಧಾರಿಯಾಗಿ ತೆಂಕು ಮತ್ತು ಬಡಗು ತಿಟ್ಟುಗಳ  ಅನುಭವಿ ಕಲಾವಿದ – ಶ್ರೀ ಶಿವರಾಮ ಶೆಟ್ಟಿ ಜೋಗಿಮಕ್ಕಿ

ವೃತ್ತಿಕಲಾವಿದರಾಗಿ, ಹವ್ಯಾಸಿಗಳಾಗಿ ಅನೇಕ ಕಲಾವಿದರಿಂದು ಯಕ್ಷಗಾನದಲ್ಲಿ ಗುರುತಿಸಿಕೊಂಡಿದ್ದಾರೆ. ಸಾಧನೆಯ ಮೂಲಕ ಹಲವರು ಪ್ರಸಿದ್ಧಿಯನ್ನು ಪಡೆದಿದ್ದಾರೆ. ಹಲವರು ತೆರೆಮರೆಯ ಕಾಯಿಯಾಗಿ ಉಳಿದುಕೊಂಡಿದ್ದಾರೆ. ಪ್ರಸಿದ್ಧಿ, ಪ್ರತಿಫಲ ದೇವರು ನೀಡಬೇಕು. ನಾನು ಕರ್ತವ್ಯವನ್ನಷ್ಟೇ ಮಾಡುತ್ತಿದ್ದೇನೆ ಎಂದು ಭಾವಿಸಿ ವ್ಯವಹರಿಸುವ ಕಲಾವಿದರನೇಕರು. ಹೀಗೆ ಭಾವಿಸಿಕೊಂಡು ಕಲಾಸೇವೆಯನ್ನು ಮಾಡುತ್ತಿರುವವರಲ್ಲಿ ಶ್ರೀ ಶಿವರಾಮ ಶೆಟ್ಟರೂ ಒಬ್ಬರು. ಇವರು ಕಟೀಲು ಮೇಳದ ಕಲಾವಿದ.

ಶ್ರೀ ಶಿವರಾಮ ಶೆಟ್ಟರ ಕುಟುಂಬಿಕರ ಮೂಲಮನೆ ಕಟೀಲು ಸಮೀಪದ ದೊಡ್ಡಿಕಟ್ಟೆ. 500 ವರ್ಷಗಳ ಹಿಂದೆ ಇಲ್ಲಿಂದ ಘಟ್ಟಪ್ರದೇಶಕ್ಕೆ ವಲಸೆ ಹೋಗಿದ್ದರಂತೆ. ಹಾಗಾಗಿ ಕಟೀಲು ಮೇಳದ ತಿರುಗಾಟದಲ್ಲಿ ನನಗೆ ನೆಮ್ಮದಿಯಿದೆ ಎಂಬುದು ಶಿವರಾಮ ಶೆಟ್ರ ಅಭಿಪ್ರಾಯ.                   

ಶ್ರೀ ಶಿವರಾಮ ಶೆಟ್ಟಿ ಜೋಗಿಮಕ್ಕಿ ಇವರು ಪ್ರಸ್ತುತ ಕಟೀಲು ಮೇಳದ ಕಲಾವಿದ. ಇವರು ಬಣ್ಣದ ವೇಷಧಾರಿ. ಇವರು ತಿಮ್ಮಪ್ಪ ಶೆಟ್ಟಿ, ಕಾವೇರಿ ದಂಪತಿಗಳಿಗೆ ಮಗನಾಗಿ ಹೊಸನಗರ ತಾಲೂಕು ನಾಗರಕೊಡಿಗೆ ಎಂಬಲ್ಲಿ ಜನಿಸಿದರು. (01-01-1952) ಎಳವೆಯಲ್ಲಿ ತಾಯಿಯನ್ನು ಕಳೆದುಕೊಂಡ ಶಿವರಾಮ ಶೆಟ್ರು ತಂದೆಯ ಆಸರೆಯಲ್ಲಿ ಬೆಳೆದವರು. ತಂದೆ ಮತ್ತು ತಮ್ಮ (ಶೇಖರ ಶೆಟ್ಟಿ)ನ ಜತೆ ಕೂಲಿಕೆಲಸವನ್ನು ಮಾಡುತ್ತಾ ಜೀವನ ಸಾಗಿಸಿದವರು.

ಹುಟ್ಟೂರು ನಾಗರಕೊಡಿಗೆಯನ್ನು ಬಿಟ್ಟು ಹಲವೂರುಗಳಲ್ಲಿ ಕೂಲಿನಾಲಿ ಮಾಡಿ ಬದುಕಿದ ಶಿವರಾಮ ಶೆಟ್ರಿಗೆ 20ನೇ ವಯಸ್ಸಿನಲ್ಲಿ ಯಕ್ಷಗಾನ ಕಲಾವಿದನಾಗಬೇಕೆಂಬ ಆಸೆ ಮೂಡಿತಂತೆ. ಮರಳಿ ನಾಗರಕೊಡಿಗೆಗೆ ಬಂದು ನಾಟ್ಯವನ್ನು ಕಲಿತರು. ನಾಗರಕೊಡಿಗೆ ಮೇಳದಲ್ಲಿ 2 ವರ್ಷ ತಿರುಗಾಟ. ಕೋಡಂಗಿ, ಬಾಲಗೋಪಾಲರ ವೇಷಗಳನ್ನು ಮಾಡುವಾಗ ಮೇಳದ ಯಜಮಾನರಾದ ಶ್ರೀ ರಾಮಕೃಷ್ಣಯ್ಯನವರು, ‘ನೀನು ಕಲಾವಿದನಾಗಲು ನಾಲಾಯಕ್’ ಎಂದು ಗದರಿಸಿದ್ದರಂತೆ.

‘ಅದು ಒಳಿತೇ ಆಯಿತು. ನನಗದು ಪಾಠ. ನಾನು ಛಲದಿಂದ ಕಲಿತೆ. ಅವರೇ ನನಗೆ ಪ್ರೇರಕರು. ನಾನು ಕಲಾವಿದನಾದುದನ್ನು ನೋಡಿ, ಗದರಿಸಿದ ಅವರೇ ಸಂತೋಷದಿಂದ ಅಭಿನಂದಿಸಿದ್ದಾರೆ’ ಎಂದು ಶಿವರಾಮ ಶೆಟ್ರು ಅಂದಿನ ದಿನಗಳನ್ನು ನೆನಪಿಸುತ್ತಾರೆ. 1974ರಲ್ಲಿ ಶಿವರಾಮ ಶೆಟ್ರು ಪೆರ್ಡೂರು ಮೇಳಕ್ಕೆ ಸೇರಿದರು. ಆ ಸಮಯದಲ್ಲಿ ಶಿವರಾಮ ಶೆಟ್ರ ತಂದೆಯವರೂ ತೀರಿಕೊಂಡರು. ಪೆರ್ಡೂರಿನಲ್ಲಿ 3 ತಿರುಗಾಟ ಅನಂತರ ಗೋಳಿಗರಡಿ ಮೇಳದಲ್ಲಿ 1 ತಿರುಗಾಟ ಮಾಡಿದ ಇವರು ಮತ್ತೆ ಕಮಲಶಿಲೆ ಮೇಳದಲ್ಲಿ ಬಣ್ಣದ ವೇಷಧಾರಿಯಾಗಿ ಕಲಾಸೇವೆಯನ್ನು ಮಾಡಿದರು.

ಆಮೇಲೆ 1 ವರ್ಷ ಸಾಲಿಗ್ರಾಮ ಮೇಳದಲ್ಲಿ. ಅಲ್ಲಿಂದ 8 ವರ್ಷಗಳ ಕಾಲ ಕಟೀಲು ಮೇಳದಲ್ಲಿ. ಅನಂತರ ಬಡಗಿನ ಬಗ್ಪಾಡಿ ಮಂದಾರ್ತಿ ಅಮೃತೇಶ್ವರೀ ಮೇಳಗಳಲ್ಲಿ ದುಡಿದು ಕೆಲವು ವರ್ಷಗಳಿಂದ ಯಕ್ಷಗಾನದಿಂದ ಅನಿವಾರ್ಯ ಕಾರಣಗಳಿಂದ ದೂರ ಉಳಿದರು. ಜೀವನೋಪಾಯಕ್ಕಾಗಿ ಅಡಿಕೆ ತೋಟದಲ್ಲಿ ಔಷಧಿ ಸಿಂಪಡಿಸುವ, ಗೊನೆ ತೆಗೆಯುವ ಕೆಲಸವನ್ನೂ ಕೆಲವು ವರ್ಷಗಳ ಕಾಲ ಮಾಡಿದ್ದರು. ಅಡಿಕೆ ಮರದಿಂದ (ಕೊನೆ ತೆಗೆಯುವಾಗ) ಬಿದ್ದು ಕೈಗೆ ತಾಗಿದ ಕಾರಣ ಮರ ಏರಲು ಆಗದೆ ಆ ಕೆಲಸವನ್ನೂ ಬಿಡಬೇಕಾಯಿತು.

ಎಳವೆಯಲ್ಲೆ ತನಗಿಷ್ಟವಾದ ಯಕ್ಷಗಾನವನ್ನೇ ಅವಲಂಬಿಸಿದರು ಶಿವರಾಮ ಶೆಟ್ರು. ಪ್ರಸ್ತುತ ಕೆಲವು ವರ್ಷಗಳಿಂದ ಕಟೀಲು ಮೇಳದಲ್ಲಿ ಬಣ್ಣದ ವೇಷಧಾರಿಯಾಗಿ ವ್ಯವಸಾಯ ಮಾಡುತ್ತಿದ್ದಾರೆ. ಪತ್ನಿ ಮತ್ತು ಮಕ್ಕಳೊಂದಿಗೆ ಪ್ರಸ್ತುತ ನರಸಿಂಹರಾಜಪುರ ತಾಲೂಕು ಜೋಗಿಮಕ್ಕಿಯಲ್ಲಿ ವಾಸಿಸುತ್ತಿದ್ದಾರೆ.

ಲೇಖಕ:  ರವಿಶಂಕರ್ ವಳಕ್ಕುಂಜ

ವಿದುಷಿ ಕು| ಚಂದನ ಪ್ರಿಯಾ ಕಟೀಲು – ಭರತನಾಟ್ಯದಲ್ಲಿ ಅತ್ಯುನ್ನತ ಸಾಧನೆ

ವಿದುಷಿ ಕು| ಚಂದನ ಪ್ರಿಯಾ ಕಟೀಲು ಅವರು ಇತ್ತೀಚಿಗೆ ನಡೆದ ಭರತನಾಟ್ಯ ಪ್ರಾಕಾರದ ಅಂತಿಮ ವಿದ್ವತ್ ಪರೀಕ್ಷೆಯಲ್ಲಿ  ಶೇಕಡಾ 84 ಅಂಕಗಳನ್ನು ಗಳಿಸುವುದರೊಂದಿಗೆ ಉತ್ಕೃಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಆ ಮೂಲಕ ವಿದುಷಿ ಪದವಿಯನ್ನು ಪಡೆದ ಈ ದುಂಡು ಮೊಗದ ಚೆಲುವೆ ಚಂದನ ಪ್ರಿಯಾ ತನ್ನ 9ನೇ ವಯಸ್ಸಿನಲ್ಲಿಯೇ ಭರತನಾಟ್ಯ ಅಭ್ಯಾಸವನ್ನು ವಿದುಷಿ ಗೀತಾ ಸರಳಾಯರಲ್ಲಿ ಆರಂಭಿಸಿದ್ದರು. ಭರತನಾಟ್ಯ ಜೂನಿಯರ್ ಪರೀಕ್ಷೆಯನ್ನು ಎದುರಿಸಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯನ್ನು ಹೊಂದಿ ಮುಂದಿನ ಶಿಕ್ಷಣವನ್ನು (ಭರತನಾಟ್ಯ ಸೀನಿಯರ್) ‘ನಾಟ್ಯನಿಲಯಂ ಮಂಜೇಶ್ವರ’ ಇದರ ಸ್ಥಾಪಕರಾದ ವಿದ್ವಾನ್ ಬಾಲಕೃಷ್ಣ ಮಂಜೇಶ್ವರ ಇವರಲ್ಲಿ ಪಡೆದುಕೊಂಡರು.

ಕು ಚಂದನ ಪ್ರಿಯಾ ಅವರು ತನ್ನ ಗುರುಗಳೊಂದಿಗೆ ಸುಮಾರು 500ಕ್ಕೂ ಮಿಕ್ಕಿ ಕಾರ್ಯಕ್ರಮಗಳನ್ನು ನಾಡಿನ ಎಲ್ಲೆಡೆ ನೀಡಿದ್ದಾರೆ. ತನ್ನ ಸಾಧನೆಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿಯ ಕೃಪೆ, ಗುರುಗಳ ಆಶೀರ್ವಾದ ಮತ್ತು ತಂದೆ ತಾಯಿಯವರ ನಿರಂತರ ಪ್ರೋತ್ಸಾಹವೇ ಕಾರಣವೆಂದು ಹೇಳುವ ಕು| ಚಂದನ, ಕಟೀಲಿನ ವೈದ್ಯ ದಂಪತಿಗಳಾದ ಡಾ| ಶಶಿಕುಮಾರ್ ಮತ್ತು ಡಾ| ಗೀತಾ ಅವರ ಪುತ್ರಿ. ಕು| ಚಂದನ ಪ್ರಿಯಾ ಪ್ರಸ್ತುತ ಮಂಗಳೂರಿನ ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ವ್ಯಾಸಂಗ ಮಾಡುತ್ತಿದ್ದಾರೆ. 

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇಂದು (28.01.2021) ‘ಶಲ್ಯ ಸಾರಥ್ಯ’ ತಾಳಮದ್ದಳೆ 

ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಗಂಗೋತ್ರಿ ಯಕ್ಷಗಾನ ಅಧ್ಯಯನ ಕೇಂದ್ರವು ಸಂಯೋಜಿಸಿದ ಸರಣಿ ತಾಳಮದ್ದಳೆ ಕಾರ್ಯಕ್ರಮದ ಉದ್ಘಾಟನೆಯು ಇಂದು ಅಂದರೆ 28.01.2021ನೇ ಗುರುವಾರ ಮಂಗಳ ಗಂಗೋತ್ರಿಯ ಯಕ್ಷಗಾನ ಕಲಾಕೇಂದ್ರದಲ್ಲಿ ಸಂಜೆ 3.30 ಘಂಟೆಗೆ ನೆರವೇರಲಿದೆ.

ಉದ್ಘಾಟನಾ ಕಾರ್ಯಕ್ರಮದ ನಂತರ “ಶಲ್ಯ ಸಾರಥ್ಯ’ ಎಂಬ ತಾಳಮದ್ದಳೆ ಕೂಟವು ನಡೆಯಲಿರುವುದು. ಪ್ರಸಿದ್ಧ ಕಲಾವಿದರು ಭಾಗವಹಿಸಲಿದ್ದಾರೆ ಎಂದು ವಿಶ್ವವಿದ್ಯಾನಿಲಯದ ಪ್ರಕಟಣೆ ತಿಳಿಸಿದೆ. 

ಕುಂದಾಪುರದಲ್ಲಿ ಇಂದು(28.01.2021) ‘ಶ್ರೀ ಕೃಷ್ಣ ಪರಂಧಾಮ’ ತಾಳಮದ್ದಳೆ

ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ನೇತೃತ್ವದಲ್ಲಿ, ಕಲಾಕ್ಷೇತ್ರ ಕುಂದಾಪುರ ಮತ್ತು ರೋಟರಿ ಕ್ಲಬ್ ಸಹಯೋಗದೊಂದಿಗೆ ಕಲಾಮಂದಿರ, ಬೋರ್ಡ್ ಹೈಸ್ಕೂಲ್, ಕುಂದಾಪುರದಲ್ಲಿ  ನಡೆಯುತ್ತಿರುವ ಈ ಯಕ್ಷಗಾನ ತಾಳಮದ್ದಳೆ ಸಪ್ತಾಹದಲ್ಲಿ ಇಂದು  ‘ಶ್ರೀ ಕೃಷ್ಣ ಪರಂಧಾಮ’ ಎಂಬ ಪ್ರಸಂಗದ ತಾಳಮದ್ದಳೆ ನಡೆಯಲಿದೆ. ತಾಳಮದ್ದಳೆಯ ನೇರಪ್ರಸಾರ ಕಲಾಕ್ಷೇತ್ರ ಕುಂದಾಪುರದ ಫೇಸ್ಬುಕ್ ಮತ್ತು ಯೂ ಟ್ಯೂಬ್ ಚಾನೆಲಿನಲ್ಲಿ ಲಭ್ಯವಿದೆ ಎಂದು ಸಂಘಟಕರು ತಿಳಿಸಿದ್ದಾರೆ. 

ನೇರಪ್ರಸಾರದ ಲಿಂಕ್ ಕೆಳಗಡೆ ಇದೆ. 

ಮೇಳಗಳ ಇಂದಿನ (28.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (28.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಉಜಿರೆ ರಥಬೀದಿ – ಮಾನಿಷಾದ, ಗಿರಿಜಾ ಕಲ್ಯಾಣ 
ಕಟೀಲು ಒಂದನೇ ಮೇಳಲಕ್ಷ್ಮೀಕೃಪಾ, ಅಳದಂಗಡಿ 
ಕಟೀಲು ಎರಡನೇ ಮೇಳ ಕಟೀಲು ಕ್ಷೇತ್ರದಲ್ಲಿ 
ಕಟೀಲು ಮೂರನೇ ಮೇಳಮಾಡರಮನೆ, ಕಿಲೆಂಜೂರು, ನಡುಗೋಡು ವಯಾ ಕಿನ್ನಿಗೋಳಿ 
ಕಟೀಲು ನಾಲ್ಕನೇ ಮೇಳ ಪೂಂಜಾಲಕಟ್ಟೆ ಬಂಗ್ಲೆ ಮೈದಾನ 
ಕಟೀಲು ಐದನೇ ಮೇಳ ಗೊನೆಮಜಲು, ಕೊಯಿಲ ವಯಾ ಉಪ್ಪಿನಂಗಡಿ 
ಕಟೀಲು ಆರನೇ ಮೇಳಸೆಟ್ಟಿಬೊಟ್ಟು ನಡುಮನೆ, ಪರ್ಕಳ , ಉಡುಪಿ 

ಮಂದಾರ್ತಿ ಒಂದನೇ ಮೇಳ ಹಂಚಿನಮನೆ, ತಾರಿಕಟ್ಟೆ, ಬೆಳ್ವೆ 
ಮಂದಾರ್ತಿ ಎರಡನೇ ಮೇಳ ಗುರುಮಹಿಮ, ಯಾಳಹಕ್ಲು, ವಡ್ಡರ್ಸೆ 
ಮಂದಾರ್ತಿ ಮೂರನೇ ಮೇಳ ಕೆಂದಾಳಬೈಲು, ತೀರ್ಥಳ್ಳಿ 
ಮಂದಾರ್ತಿ ನಾಲ್ಕನೇ ಮೇಳ ಹೊನಕಲ್, ಬೆಳ್ವೆ 
ಮಂದಾರ್ತಿ ಐದನೇ ಮೇಳ ಗಜಗೇರಿ, ಉಬ್ಬೂರು, ಗುತ್ತಿಯೆಡಹಳ್ಳಿ 
ಶ್ರೀ ಹನುಮಗಿರಿ ಮೇಳ ಕಿನ್ನಿಕಂಬಳ ಶ್ರೀ ರಾಧಾಕೃಷ್ಣ ಭಜನಾ ಮಂದಿರದ ವಠಾರ – ಶುಕ್ರ ನಂದನೆ 
ಶ್ರೀ ಸಾಲಿಗ್ರಾಮ ಮೇಳಮೂಡಬಿದ್ರೆ ಸ್ವರಾಜ್ಯ ಮೈದಾನ – ಬಿಚ್ಚುಗತ್ತಿ ಭರಮಣ್ಣ 
ಶ್ರೀ ಸುಂಕದಕಟ್ಟೆ ಮೇಳ ಉಳಾಯಿಬೆಟ್ಟು, ಕಾಂತಾರಬೆಟ್ಟು – ಶ್ರೀ ದೇವಿ ಮಹಾತ್ಮೆ  
ಶ್ರೀ ದೇಂತಡ್ಕ ಮೇಳಶ್ರೀ ರಾಮಕುಂಜೇಶ್ವರ ದೇವಸ್ಥಾನ, ರಾಮಕುಂಜ – ಕಾರ್ನಿಕದ ಸ್ವಾಮಿ ಕೊರಗಜ್ಜ 

ಶ್ರೀ ಮಾರಣಕಟ್ಟೆ ಮೇಳ ‘ಎ’ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ,ಶಂಕ್ರಪ್ಪನಕೊಡ್ಲು 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಕೊಂಜಾಡಿ, ಮೇಲ್ಮನೆ, ಅಲ್ಬಾಡಿ, ಆರ್ಡಿ 
ಶ್ರೀ ಪಾವಂಜೆ ಮೇಳ ಹೆಬ್ರಿ – ತ್ರಿಜನ್ಮ ಮೋಕ್ಷ 
ಶ್ರೀ ಹಟ್ಟಿಯಂಗಡಿ ಮೇಳಮೂಡೂರು ಹೈಗುಳಿ ದೇವಸ್ಥಾನ ಯಳಜಿತ್ ಕಾಂಬ್ಳಿ  
ಕಮಲಶಿಲೆ ಮೇಳ ‘ಎ’ಅಯ್ಯಪ್ಪನಜೆಡ್ಡು ಹೊಸಂಗಡಿ 
ಕಮಲಶಿಲೆ ಮೇಳ ‘ಬಿ’ಸಂಪೆಕಟ್ಟೆ 
ಶ್ರೀ ಬಪ್ಪನಾಡು ಮೇಳಶ್ರೀ ಮಾರಿಕಾಂಬಾ ದೇವಸ್ಥಾನ, ಅಂಡಿಜೆ, ಕಿಲಾರ – ಬಂಗಾರ್ ಬಾಲೆ 

ಶ್ರೀ ಅಮೃತೇಶ್ವರೀ ಮೇಳಶಿರಿಯಾರ ಕೊಡ್ಲಬೈಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರ – ಜ್ವಾಲಾಮುಖಿ 
ಶ್ರೀ ಬೋಳಂಬಳ್ಳಿ ಮೇಳ ಭಾರತಿಪುರ ಬನಶಂಕರಿ ದೇವಾಲಯ – ಭಾರತೀಪುರ ಶ್ರೀ ಬನಶಂಕರಿ ಕ್ಷೇತ್ರ ಮಹಾತ್ಮೆ
ಶ್ರೀ ಸೌಕೂರು ಮೇಳಕೋಣಿಹರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಸಿಂಧೂರ ಸಿಂಚನ
ಶ್ರೀ ಹಾಲಾಡಿ ಮೇಳತಟ್ಟೊಟ್ಟು ಗುಡಿಮನೆ – ನಾಗಮಂಡಲ 
ಶ್ರೀ ಬೆಂಕಿನಾಥೇಶ್ವರ ಮೇಳ  ಕಂದಾವರ ಸಟ್ಟಾಡಿ ರೈಲ್ವೇ ಸ್ಟೇಷನ್ ಹತ್ತಿರ – ಮಹಿಮೆದ ಮಂತ್ರದೇವತೆ 
ಶ್ರೀ ಮಡಾಮಕ್ಕಿ ಮೇಳನೇರಳಕಟ್ಟೆ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನ  – ರಾಜವಂಶ ಗುಳಿಗ 
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಕೊರ್ಗಿ – ಅಬ್ಬರದ ಹ್ಯಾಗುಳಿ 
ಶ್ರೀ ಹಿರಿಯಡಕ ಮೇಳಹೊಸ್ಮಾರು ಗಣೇಶ್ ಕಾಂಪ್ಲೆಕ್ಸ್ – ಪವಿತ್ರ ಫಲ್ಗುಣಿ 
ಶ್ರೀ ಶನೀಶ್ವರ ಮೇಳ ಕೆರಾಡಿ ಬೀಡಿನಮನೆ ಮಲಯಾಳಿ ಬೊಬ್ಬರ್ಯ ದೇವಸ್ಥಾನ 
ಶ್ರೀ ಸಿಗಂದೂರು ಮೇಳಚಂದಣ ಸೋಮಲಿಂಗೇಶ್ವರ ದೇವಸ್ಥಾನ 
ಶ್ರೀ ನೀಲಾವರ ಮೇಳ ಶ್ರೀ ಕಾಂಚಿಕಾ ದುರ್ಗಾಪರಮೇಶ್ವರೀ ದೇವಸ್ಥಾನ ಬಾಡಾ, ಬೈಂದೂರು – ನೀಲಾವರ ಕ್ಷೇತ್ರ ಮಹಾತ್ಮೆ 
ಶ್ರೀ ಮೇಗರವಳ್ಳಿ ಮೇಳ ಗೌರಿಗದ್ದೆ ಶ್ರೀ ಕ್ಷೇತ್ರ ಸ್ವರ್ಣ ಪೀಠಿಕಾಪುರ ದತ್ತಾಶ್ರಮ – ಪೌರಾಣಿಕ ಪ್ರಸಂಗ 

ಗಣರಾಜ್ಯೋತ್ಸವ‌ದಂದು ಯಕ್ಷ ಕಲಾ ಅಕಾಡೆಮಿಯ ‘ಶ್ರೀರಾಮ ಪಟ್ಟಾಭಿಷೇಕ’ ತಾಳಮದ್ದಳೆ‌

ದೇಶದ 72ನೇ ಗಣರಾಜ್ಯೋತ್ಸವ‌ದಂದು ದೇಶವೇ ಸಂಭ್ರಮಿಸುತ್ತಿರುವ  ಸಂದರ್ಭದಲ್ಲಿ ಯಕ್ಷ ಕಲಾ ಅಕಾಡೆಮಿಯ ಕಲಾವಿದರು, “ಶ್ರೀ‌ರಾಮ ಪಟ್ಟಾಭಿಷೇಕ ” ಎನ್ನುವ ತಾಳಮದ್ದಳೆ‌ಯನ್ನು ನಡೆಸಿಕೊಟ್ಟರು. ಕರುಣಾರಸ ಪೂರಿತ ಕಥಾ ಹಂದರವುಳ್ಳ  ” ಶ್ರೀ‌ರಾಮ ಪಟ್ಟಾಭಿಷೇಕ ” ಕಥಾವಸ್ತು‌ವನ್ನು ಯಕ್ಷ ಕಲಾ ಅಕಾಡೆಮಿಯ ಯುವ ಕಲಾವಿದರು ಮನೋಜ್ಞ‌ವಾಗಿ  ತಾಳಮದ್ದಳೆ‌ಯ ರೂಪದಲ್ಲಿ ಪ್ರಸ್ತುತ‌ಪಡಿಸಿದರು.

ಸೂರ್ಯ ವಂಶದ ಹೆಗ್ಗಳಿಕೆಯೊಂದಿಗೆ, ರಾಮ ಪಟ್ಟಾಭಿಷೇಕದ ಅನಿವಾರ್ಯತೆಯನ್ನೂ , ಕೈಕೇಯಿ‌ಯಲ್ಲಿ ಪ್ರಲಾಪಿಸುವ, ಮಗ ರಾಮನಲ್ಲಿ ಸಣ್ಣ‌ವನಾದ ನೀನು ಕಾನನಕ್ಕೆ ತೆರಳಬೇಡವೆಂದಂಗಲಾಚುವ ದಶರಥನ ಪಾತ್ರ‌ದಲ್ಲಿ , ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ  ರವಿ ಮಡೋಡಿಯವರು ತಮ್ಮ ಸಾಹಿತ್ಯ ಪ್ರೌಢಿಮೆಯನ್ನೂ , ಭಾವ ಪರವಶತೆಯನ್ನೂ ಪ್ರದರ್ಶಿಸಿದ‌ರು. ಮುಗ್ಧತೆಯಿಂದ, ಕ್ರೌರ್ಯದ‌ತ್ತ ಹೊರಳುವ ಕೈಕೇಯಿ‌ಯ ಪಾತ್ರ‌ದಲ್ಲಿ ಮನೋಜ್ ಭಟ್, ತಮ್ಮ ಮಾತಿನ ವರಸೆಯಲ್ಲಿ ತಮ್ಮ ಕಲಾನುಭವವನ್ನು ಪ್ರಸ್ತುತ‌ಪಡಿಸಿದರು. 

ತನ್ನ ಮಾತಿನ ಮೋಡಿಯಲ್ಲಿಯೇ ಕುಟಿಲ ತಂತ್ರದ ಬಲೆಯನ್ನು ಹೆಣೆದು, ತನ್ನ ಆ ಬಲೆಗೆ ” ಬಾಲೆ ಕೇಳ್ ಪೂ ಮಾಲೆ ” ಎನ್ನುತ್ತಲೇ ಸಾಮ್ರಾಜ್ಞಿ ಕೈಕೇಯಿ‌ಯನ್ನೂ , ಅವಳ ಮೂಲಕ ಚಕ್ರವರ್ತಿ‌ಯನ್ನೂ, ಅಯೋಧ್ಯೆ‌ಯ ಸಮಸ್ತ ಪರಿಜನರನ್ನೂ  ತನ್ನ ಬಲೆಗೆ ಕೆಡಹಿ, ರಾಮನ ಪಟ್ಟಾಭಿಷೇಕ‌ವನ್ನ ತಪ್ಪಿಸಿ, ಕಾಡಿಗೆ ಹೋಗುವಂತೆ ಮಾತಿನ ಮೋಡಿಯ ಮಂಥರೆಯಾಗಿ ಯುವ ಅರ್ಥಧಾರಿ, ವೃತ್ತಿಯಲ್ಲಿ ಎನಿಮೇಷನ್ ಇಂಜಿನಿಯರ್ ಆಗಿರುವ ಆದಿತ್ಯ ಉಡುಪ ನೀಡಿದರು. ಭರತನೂ ರಾಜ್ಯ‌ವಾಳಲು ಸಮರ್ಥವಾಗಿ‌ರುವುದಲ್ಲದೇ, ಕಾಡಿಗೆ ತಾನು ಹೋಗಬೇಕಾಗಿರುವ ಅನಿವಾರ್ಯತೆ‌ಯನ್ನು ರಾಮನಾಗಿ ಪ್ರತಿ‌ಪಾದಿಸಿದವರು ಯುವಕ‌ನೇ ಆಗಿದ್ದರೂ, ಹಿರಿಯ ಅನುಭವವುಳ್ಳ ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ಶಶಾಂಕ್ ಎಂ. ಕಾಶಿ .   

ಅಣ್ಣನ ಮಾತನ್ನು ಪಾಲಿಸುವ, ಚಿಕ್ಕಮ್ಮನ ಮಾತಿನಿಂದಾಗಿ ಕ್ರೋಧ‌ಗೊಳ್ಳುವ ಲಕ್ಷ್ಮಣನಾಗಿ , ಸುಹಾಸ ಕರಬ  (ಇಂಜಿನಿಯರಿಂಗ್ ವಿದ್ಯಾರ್ಥಿ)   ಮಾತಿನಲ್ಲಿಯೂ ತಮ್ಮ ಪ್ರಬುದ್ಧತೆಯನ್ನು ತೋರಿಸಿ‌ದರು. ಸೌಮ್ಯ‌ತೆ, ಮುಗ್ಧತೆ ಮೂರ್ತಿ‌ವೆತ್ತ ಸೀತೆ‌ , ತನ್ನ‌ನ್ನು ನೀ ಅಗಲಿ ಪೋದರೆ ವಿಷವನುಣ್ಣುತ್ತೇನೆಂದಾಗ, ಸೀತೆಯ ಪಾತ್ರದಲ್ಲಿ ತಲ್ಲೀನರಾಗಿದ್ದ ಪ್ರದೀಪ ಮಧ್ಯಸ್ಥ (ಮೆಕ್ಯಾನಿಕಲ್ ಇಂಜಿನಿಯರ್)ರ ಕಣ್ಣಾಲಿಗಳು ತೇವಗೊಂಡದ್ದು ಸುಳ್ಳಲ್ಲ.  ವಸಿಷ್ಠನಾಗಿ ಸಂಸ್ಕೃತ ಭೂಯಿಷ್ಠ ಮಾತನ್ನಾಡಿದ ಆದಿತ್ಯ ಹೊಳ್ಳ (ಮೆಕ್ಯಾನಿಕಲ್ ಇಂಜಿನಿಯರ್) ಸುಮಿತ್ರೆಯಾಗಿ , ಲಕ್ಷ್ಮಣ ನಲ್ಲಿ, ಸೀತೆಯಲ್ಲಿ ನನ್ನನ್ನು ಕಾಣು, ಅಣ್ಣ ರಾಮನಲ್ಲಿ ತಂದೆ ದಶರಥ ಭೂಪತಿಯ‌ನ್ನು ಕಾಣು ಎನ್ನುವ ಮಾತು ಹೃದ್ಯವಾಗಿತ್ತು.   

ಸಮರ್ಥವಾದ ಹಿಮ್ಮೇಳದಲ್ಲಿ, ಭಾಗವತಿಕೆ‌ಯಲ್ಲಿ ಚಿತ್ಕಲಾ ಕೆ. ತುಂಗ ಸಂಪ್ರದಾಯ ಬದ್ಧ ನಾಟಿ ರಾಗದಿಂದ ಕಾರ್ಯಕ್ರಮ ಆರಂಭಿಸಿ, ಮಧ್ಯಮಾವತಿ, ಭೈರವಿ, ಕಾಂಬೋಧಿ, ಕಲ್ಯಾಣಿ, ಹಿಂದೋಳ, ಮೋಹನ, ಸಾವೇರಿ ಮುಂತಾದ ರಾಗಗಳ ಬಳಕೆ ಸಂದರ್ಭೋಚಿತವಾಗಿಯೂ, ರಸಸ್ಯಂದಿಯೂ ಆಗಿತ್ತು. ಮದ್ದಳೆಯ‌ಲ್ಲಿ ಹೇಮಂತ್ ಮತ್ತೋಡ್ ಹಾಗೂ ರಾಘು ಶರ್ಮಾರವರು ತಮ್ಮ ಕೈಚಳಕ‌ವನ್ನು ತೋರಿಸಿ‌ದರು. ಕಾರ್ಯಕ್ರಮ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ, ಗುರು ಕೃಷ್ಣಮೂರ್ತಿ ತುಂಗರ ನಿರ್ದೇಶನದಲ್ಲಿ ಔಚಿತ್ಯ ಪೂರ್ಣ‌ವಾಗಿ ಮೂಡಿಬಂದಿತು

ತನ್ನದೇ ಶೈಲಿಯಿಂದ ಹಾಸ್ಯ ಪಾತ್ರಗಳಿಗೆ ಮೆರುಗು ನೀಡಿದ ಹಾಸ್ಯ ವಿಶಾರದ – ಶ್ರೀ ಬಂಟ್ವಾಳ ಜಯರಾಮ ಆಚಾರ್ಯ 

ಪ್ರತಿಯೊಂದು ಪ್ರಸಂಗದಲ್ಲೂ ಬೇರೆ ಬೇರೆ ಸ್ವಭಾವದ ವೇಷಗಳನ್ನು ಹಾಸ್ಯಗಾರನು ನಿರ್ವಹಿಸಲೇಬೇಕು. ಇದು ಅಷ್ಟೊಂದು ಸುಲಭವಲ್ಲ. ಪಾತ್ರದ ಸ್ವಭಾವ, ಪ್ರಸಂಗಜ್ಞಾನವನ್ನು ತಿಳಿದವನಿಗೆ ಮಾತ್ರ ಸಾಧ್ಯ. ಆಲಸಿಯಾಗದೆ ದೈಹಿಕವಾಗಿಯೂ, ಮಾನಸಿಕವಾಗಿಯೂ ಚುರುಕಾಗಿದ್ದವನಿಗೆ ಮಾತ್ರ ಸಾಧ್ಯ. ವೇಗವಾಗಿ, ವೈವಿಧ್ಯಮಯವಾಗಿ, ಪಾತ್ರೋಚಿತವಾಗಿ ಬಣ್ಣ ಹಾಕಿ, ವೇಷ ಮಾಡಿಕೊಂಡು ರಂಗಪ್ರವೇಶ ಮಾಡುವ ಕಲೆಯೂ ಅವನಿಗೆ ಕರಗತವಾಗಿರಬೇಕು. ಹೀಗೆ ಸದಾ ಅಧ್ಯಯನಶೀಲರಾಗಿ, ಕಲಾಸೇವೆಯನ್ನು ಮಾಡುತ್ತಾ ಹಾಸ್ಯಗಾರರಾಗಿ ರಂಜಿಸಿದವರು ಅನೇಕರು. ಅವರಲ್ಲೊಬ್ಬರು ಶ್ರೀ ಬಂಟ್ವಾಳ ಜಯರಾಮ ಆಚಾರ್ಯರು.

ಹಾಸ್ಯಗಾರ ಶ್ರೀ ಬಂಟ್ವಾಳ ಜಯರಾಮ ಆಚಾರ್ಯರು ಪ್ರಸ್ತುತ ಶ್ರೀ ಹನುಮಗಿರಿ ಮೇಳದ ಕಲಾವಿದರು. ಸರಳ, ಸಜ್ಜನ, ನಿಗರ್ವಿ, ವಿನಯವಂತ ಹಾಸ್ಯಗಾರರು. ಇವರು ಜನಿಸಿದ್ದು 12-10-1957ರಂದು. ತಂದೆ ಬಂಟ್ವಾಳ ಗಣಪತಿ ಆಚಾರ್ಯ, ತಾಯಿ ಶ್ರೀಮತಿ ಭವಾನಿ ಅಮ್ಮ. ಗಣಪತಿ ಆಚಾರ್ಯರು ತನ್ನ ಕುಲವೃತ್ತಿಯಾದ ಚಿನ್ನದ ಕೆಲಸ ಮಾಡುವುದು ಮಾತ್ರವಲ್ಲದೆ ಆ ಕಾಲದ ಉತ್ತಮ ಕಲಾವಿದರಾಗಿದ್ದರು. ಹಾಸ್ಯಗಾರರಾಗಿ ಕಲಾಸೇವೆಯನ್ನು ಮಾಡುತ್ತಿದ್ದವರು. ಬಳ್ಳಂಬೆಟ್ಟು, ಹೆರ್ಗ, ಅಮ್ಟಾಡಿ, ಸೊರ್ನಾಡು ಮೇಳಗಳಲ್ಲಿ ತಿರುಗಾಟ ನಡೆಸಿದ್ದರು.

ವಿದೂಷಕ ಜಯರಾಮ ಆಚಾರ್ಯರು ಕಲಿತದ್ದು ಬಂಟ್ವಾಳ ಸರಕಾರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (ಬೋರ್ಡ್ ಶಾಲೆ). ಶಾಲಾ ದಿನಗಳಲ್ಲಿ ತೀರ್ಥರೂಪರಿಂದ ತನ್ನ ಕುಲಕಸುಬನ್ನು ಅಭ್ಯಾಸ ಮಾಡಿದ್ದರು. ಎಳವೆಯಲ್ಲೇ ಇವರಿಗೆ ಯಕ್ಷಗಾನಾಸಕ್ತಿ. ಬಂಟ್ವಾಳ ಆಸುಪಾಸಿನಲ್ಲಿ ನಡೆಯುತ್ತಿದ್ದ ಆಟ ತಾಳಮದ್ದಳೆ ಪ್ರದರ್ಶನಗಳನ್ನು ತಪ್ಪದೆ ನೋಡುತ್ತಿದ್ದರು.

ತಂದೆಯವರ ಜತೆಯೂ ಯಕ್ಷಗಾನ ಪ್ರದರ್ಶನಗಳಿಗೆ ಹೋಗುತ್ತಿದ್ದರು. ತಂದೆಯವರ ಜತೆಯಾಗಿಯೇ ಅಮ್ಟಾಡಿ, ಸೊರ್ನಾಡು ಮೇಳಗಳಲ್ಲಿ ತಿರುಗಾಟವನ್ನು ನಡೆಸಿ ವೇಷವನ್ನೂ ಮಾಡಿದರು.

ಹೀಗೆ ಯಕ್ಷಗಾನ ಪ್ರದರ್ಶನಗಳನ್ನು ಶ್ರದ್ಧೆಯಿಂದ ನೋಡಿದ ಪರಿಣಾಮದಿಂದ ನಾನಿಂದು ಕಲಾವಿದನಾದೆ. ಪ್ರಸಂಗ ಮಾಹಿತಿ, ವೇಷಗಳ ಸ್ವಭಾವವೇನು ಎಂಬುದನ್ನು ತಿಳಿಯಲು ನನಗೆ ಅನುಕೂಲವಾಯಿತು ಎಂದು ಜಯರಾಮ ಆಚಾರ್ಯರು ಹೇಳುತ್ತಾ ತನ್ನ ಬಾಲ್ಯದ ದಿನಗಳನ್ನು ನೆನಪಿಸುತ್ತಾರೆ. ಶಾಸ್ತ್ರೀಯವಾಗಿ ನಾಟ್ಯಾಭ್ಯಾಸ ಮಾಡುವ ಮೊದಲೇ ಬಂಟ್ವಾಳ ಜಯರಾಮ ಆಚಾರ್ಯರು ಅಮ್ಟಾಡಿ, ಸೊರ್ನಾಡು, ಸುಂಕದಕಟ್ಟೆ, ಕಟೀಲು ಮೇಳಗಳಲ್ಲಿ 4 ತಿರುಗಾಟ ನಡೆಸಿದ್ದರು! ಇದು ಇವರ ಪ್ರತಿಭೆಗೆ ಸಾಕ್ಷಿ.

1974-75ನೇ ಸಾಲಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಸಲ್ಪಡುತ್ತಿದ್ದ `ಲಲಿತ ಕಲಾ ಕೇಂದ್ರ’ದಲ್ಲಿ ನಾಟ್ಯಾರ್ಜನೆಗಾಗಿ ಸೇರಿಕೊಂಡರು. ಅಲ್ಲಿ ಗುರುಗಳಾಗಿದ್ದವರು ಖ್ಯಾತ ಕಲಾವಿದರೂ, ಅನೇಕ ಶಿಷ್ಯಂದಿರನ್ನು ಸಿದ್ಧಗೊಳಿಸಿದ ಕೀರ್ತಿಗೆ ಪಾತ್ರರೂ ಆದ ಶ್ರೀ ಪಡ್ರೆ ಚಂದು.

ಸದ್ಯ ಖ್ಯಾತ ಕಲಾವಿದರಾದ ಕರ್ಗಲ್ಲು ವಿಶ್ವೇಶ್ವರ ಭಟ್, ಸಬ್ಬಣಕೋಡಿ ಕೃಷ್ಣ ಭಟ್, ಸಬ್ಬಣಕೋಡಿ ರಾಮ ಭಟ್, ವಸಂತ ಗೌಡ ಕಾಯರ್ತಡ್ಕ, ವೇಣೂರು ಸದಾಶಿವ ಕುಲಾಲ್, ಹಳುವಳ್ಳಿ ಗಣೇಶ ಭಟ್, ಕೆ. ಎಂ. ಕೃಷ್ಣ (ಬಣ್ಣದ ಮಹಾಲಿಂಗಜ್ಜನವರ ಮಗ) ಮೊದಲಾದವರು ಧರ್ಮಸ್ಥಳ ಲಲಿತ ಕಲಾಕೇಂದ್ರದಲ್ಲಿ ಬಂಟ್ವಾಳ ಜಯರಾಮ ಆಚಾರ್ಯರ ಸಹಪಾಠಿಗಳಾಗಿದ್ದರು

ಶ್ರೀ ಧರ್ಮಸ್ಥಳ ಲಲಿತ ಕಲಾ ಕೇಂದ್ರದಲ್ಲಿ ನಾಟ್ಯ ಕಲಿತ ಜಯರಾಮ ಆಚಾರ್ಯರು ಅದೇ ವರ್ಷ ಕಟೀಲು ಮೇಳಕ್ಕೆ ಕಲಾವಿದನಾಗಿ ಸೇರಿಕೊಂಡರು. ಬಲಿಪ ನಾರಾಯಣ ಭಾಗವತರು ಭಾಗವತರಾಗಿದ್ದ ಮೇಳದಲ್ಲಿ 4 ವರ್ಷಗಳ ಕಾಲ ತಿರುಗಾಟ ನಡೆಸಿದರು. ಕೋಡಂಗಿ, ಬಾಲ ಗೋಪಾಲರ ವೇಷಗಳನ್ನು ಪೂರ್ವರಂಗದಲ್ಲಿ ನಿರ್ವಹಿಸುತ್ತಾ, ಪ್ರಸಂಗದಲ್ಲೂ ಸಣ್ಣಪುಟ್ಟ ವೇಷಗಳನ್ನು ಮಾಡುತ್ತಾ, ನಿದ್ದೆ ಮಾಡದೆ ಪ್ರದರ್ಶನಗಳನ್ನು ನೋಡುತ್ತಾ ಹಂತ ಹಂತವಾಗಿ ಬೆಳೆದು ಈಗ ಉತ್ತಮ ಹಾಸ್ಯಗಾರರಾಗಿ ಹೆಸರು ಗಳಿಸಿದ್ದಾರೆ. ಕಟೀಲು ಮೇಳದಲ್ಲಿ 4 ವರ್ಷ ತಿರುಗಾಟ ನಡೆಸಿದ

ನಂತರ ಡಾ. ಶ್ರೀಧರ ಭಂಡಾರಿಯವರ ಸಂಚಾಲಕತ್ವದ ಪುತ್ತೂರು ಮೇಳದಲ್ಲಿ ತಿರುಗಾಟ. ಅಲ್ಲಿ ಶ್ರೇಷ್ಠ ಹಾಸ್ಯಗಾರರಾಗಿದ್ದ ವೀರಕಂಭ ತಿಮ್ಮಪ್ಪ ಕುಲಾಲರ ಒಡನಾಟವೂ ಇವರಿಗೆ ಸಿಕ್ಕಿತ್ತು. ಅವರ ಜತೆ ಹಾಸ್ಯಗಾರನಾಗಿಯೂ, ಮತ್ತೆ ಪ್ರಧಾನ ಹಾಸ್ಯಗಾರನಾಗಿಯೂ ಕಲಾಸೇವೆಯನ್ನು ನಡೆಸಿದರು. ನಂತರ ಸುಂಕದಕಟ್ಟೆ ಮೇಳದಲ್ಲಿ ಸುಜನ ಸುಳ್ಳ (ಖ್ಯಾತ ಹಾಸ್ಯಗಾರರು) ಅವರ ಜತೆ ಒಂದು ವರುಷ ತಿರುಗಾಟ ನಡೆಸಿದರು. ತರುವಾಯ ಮತ್ತೆ ಕಟೀಲು ಮೇಳದಲ್ಲಿ ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರರ ಜತೆಯಲ್ಲಿ ಕಲಾಸೇವೆಯನ್ನು ಮಾಡಿದರು.

ಮುಂದಿನ 5 ವರ್ಷಗಳ ಕಾಲ ಮತ್ತೆ ಪುತ್ತೂರು ಮೇಳದಲ್ಲಿ ಹಾಸ್ಯಗಾರನಾಗಿ ಕಲಾಸೇವೆಯನ್ನು ಮಾಡಿದ ಬಂಟ್ವಾಳ ಜಯರಾಮ ಆಚಾರ್ಯರು ಮತ್ತು ಕರ್ನೂರು ಕೊರಗಪ್ಪ ರೈಗಳ ಸಂಚಾಲಕತ್ವದ ಕದ್ರಿ ಮೇಳವನ್ನು ಸೇರಿಕೊಂಡರು. ಅಲ್ಲಿ ಇವರಿಗೆ ಕೋಳ್ಯೂರು ರಾಮಚಂದ್ರ ರಾವ್, ಕ್ರಿಶ್ಚನ್ ಬಾಬು, ಡಿ. ಮನೋಹರ ಕುಮಾರ್, ಮೂಡುಬಿದಿರೆ ಮಾಧವ ಶೆಟ್ರು, ಕುಡ್ತಡ್ಕ ಬಾಬು, ಸರಪಾಡಿ ಅಶೋಕ ಶೆಟ್ರು ಮೊದಲಾದವರ ಜತೆ ರಂಗದಲ್ಲಿ ಅಭಿನಯಿಸುವ ಅವಕಾಶ ಬಂತು. ನಂತರ ಕುಂಬಳೆ ಮೇಳದಲ್ಲಿ ತಿರುಗಾಟ. ಕುಂಬಳೆ ದಾಸಪ್ಪ ರೈಗಳ ನೇತೃತ್ವ. ಹರಿದಾಸ ಶ್ರೀ ರಾಮದಾಸ ಸಾಮಗ, ಪೆರುವಾಯಿ ನಾರಾಯಣ ಶೆಟ್ಟಿ, ಅರುವ ನಾರಾಯಣ ಶೆಟ್ಟಿ ಮೊದಲಾದವರೊಂದಿಗೆ ಅಭಿನಯಿಸುವ ಅವಕಾಶ.

ನಂತರ ಬಂಟ್ವಾಳ ಜಯರಾಮ ಆಚಾರ್ಯರು ಕಲಾಸೇವೆಯನ್ನು ಮಾಡಿದ್ದು ಸುರತ್ಕಲ್ಲು ಮೇಳದಲ್ಲಿ (2 ವರ್ಷ). ಅಗರಿ ರಘುರಾಮ ಭಾಗವತ, ಪದ್ಯಾಣ ಗಣಪತಿ ಭಟ್, ತೆಕ್ಕಟ್ಟೆ ಆನಂದ ಮಾಸ್ತರ್, ಕೊಕ್ಕಡ ಈಶ್ವರ ಭಟ್, ಶಿವರಾಮ ಜೋಗಿ ಮೊದಲಾದವರ ಜತೆ. ತದನಂತರ ಖ್ಯಾತ ಕಲಾವಿದರಾದ ಶ್ರೀ ಡಿ. ಮನೋಹರ ಕುಮಾರರ ಸಂಚಾಲಕತ್ವದ ಕದ್ರಿ ಮೇಳದಲ್ಲಿ 11 ವರುಷಗಳ ತಿರುಗಾಟ. ದಿನೇಶ ಅಮ್ಮಣ್ಣಾಯರ ಭಾಗವತಿಕೆ. ಅರುವ ಕೊರಗಪ್ಪ ಶೆಟ್ರು, ಪುಳಿಂಚ ರಾಮಯ್ಯ ಶೆಟ್ರು, ಮನೋಹರ ಕುಮಾರರೊಂದಿಗೆ ಹಾಸ್ಯಗಾರರಾಗಿ ಕಲಾಸೇವೆ.

ಬಳಿಕ ಕಲ್ಲಾಡಿ ವಿಠಲ ಶೆಟ್ಟರ ಸಂಚಾಲಕತ್ವದ, ಶ್ರೀ ಕುರಿಯ ಗಣಪತಿ ಶಾಸ್ತ್ರಿಗಳು ಭಾಗವತರಾಗಿದ್ದ ಕಟೀಲು 3ನೇ ಮೇಳದಲ್ಲಿ ಬಂಟ್ವಾಳ ಜಯರಾಮ ಆಚಾರ್ಯರು ಹಾಸ್ಯಗಾರರಾಗಿ ರಂಜಿಸಿದರು. ಮತ್ತೆ 2 ವರುಷಗಳ ಕಾಲ ಎಡನೀರು ಮೇಳ, 9 ವರ್ಷಗಳ ಕಾಲ ಹೊಸನಗರ ಮೇಳ, ಪ್ರಸ್ತುತ 2017ರಿಂದ ಹನುಮಗಿರಿ ಮೇಳದಲ್ಲಿ. ಹೀಗೆ, 50 ವರುಷಗಳ ಕಲಾಸೇವೆ ಹಾಸ್ಯಗಾರ ಬಂಟ್ವಾಳ ಜಯರಾಮ ಆಚಾರ್ಯರದ್ದು. ಕಲಾಪೋಷಕ, `ಸಂಪಾಜೆ ಯಕ್ಷೋತ್ಸವ’ದ ರೂವಾರಿ ಶ್ರೀ ಟಿ. ಶ್ಯಾಮ ಭಟ್ಟರನ್ನೂ, ಎಲ್ಲಾ ಕಲಾಪೋಷಕರನ್ನೂ, ಕಲಾಭಿಮಾನಿಗಳನ್ನೂ ಗೌರವಿಸುವ ಬಂಟ್ವಾಳ ಹಾಸ್ಯಗಾರರು ಕಲಾವಿದನಾಗಿ ನಾನು ಅತ್ಯಂತ ತೃಪ್ತನಿದ್ದೇನೆ ಎಂದು ಹೇಳುತ್ತಾರೆ.

ಯಕ್ಷಗಾನ ಬಯಲಾಟ ಅಕಾಡೆಮಿಯಿಂದ ಗೌರವ ಪ್ರಶಸ್ತಿ ಪಡೆದ ಶ್ರೀಯುತರನ್ನು ಅನೇಕ ಸಂಘ-ಸಂಸ್ಥೆಗಳು ಸನ್ಮಾನಿಸಿವೆ. ಇವರ ಪತ್ನಿ ಶ್ಯಾಮಲಾ ಸಂತುಷ್ಟ ಗೃಹಿಣಿಯಾಗಿ ಮನೆಯನ್ನು ನಡೆಸುತ್ತಿದ್ದಾರೆ. ಬಂಟ್ವಾಳ ಜಯರಾಮ ಆಚಾರ್ಯ ದಂಪತಿಗಳಿಗೆ ಇಬ್ಬರು ಮಕ್ಕಳು. ಹಿರಿಯಾಕೆ ಕು| ವರ್ಷಾ. ಶಿವಮೊಗ್ಗದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾಳೆ. ಕಿರಿಯವ ವರುಣ್ ಮಂಗಳೂರು ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನಲ್ಲಿ (KPT) ಇಂಜಿನಿಯರಿಂಗ್ ಡಿಪ್ಲೊಮಾ ವಿದ್ಯಾರ್ಥಿ.

ಲೇಖಕ: ರವಿಶಂಕರ್ ವಳಕ್ಕುಂಜ 

ಮೇಳಗಳ ಇಂದಿನ (27.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (27.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಮಾಧವನಗರ ನೇತ್ರಾವತಿ ರೈಸ್ ಮಿಲ್ ಆವರಣ (ಸುರತ್ಕಲ್ ಹತ್ತಿರ) – ಕಚ ದೇವಯಾನಿ – ರತಿ ಕಲ್ಯಾಣ 
ಕಟೀಲು ಒಂದನೇ ಮೇಳಕಟೀಲು ಕ್ಷೇತ್ರದಲ್ಲಿ 
ಕಟೀಲು ಎರಡನೇ ಮೇಳ ಗುರುಬೆಟ್ಟು ಹೌಸ್, ಮೆನ್ನಬೆಟ್ಟು, ಕಿನ್ನಿಗೋಳಿ 
ಕಟೀಲು ಮೂರನೇ ಮೇಳನಂದನ ಹೌಸ್, ಕಲ್ಲಮುಂಡ್ಕೂರು 
ಕಟೀಲು ನಾಲ್ಕನೇ ಮೇಳ ಶ್ರೀರಾಮ ಭಜನಾ ಮಂದಿರದ ಬಳಿ, ಕಿನ್ನಿಗೋಳಿ 
ಕಟೀಲು ಐದನೇ ಮೇಳ ಕಡ್ಪಲಗುರಿ ಮನೆ, ಅಶ್ವತ್ಥಪುರ 
ಕಟೀಲು ಆರನೇ ಮೇಳಕಾಮತ್ ಕ್ಯಾಶ್ಯೂ ಕಂಪೆನಿ ಬಳಿ, ಸುಂಕದಕಟ್ಟೆ, ಬಜಪೆ 

ಮಂದಾರ್ತಿ ಒಂದನೇ ಮೇಳ ಕೇಳಪೇಟೆ ಕೊಕ್ಕರ್ಣೆ 
ಮಂದಾರ್ತಿ ಎರಡನೇ ಮೇಳ ಕಾಸ್ ಗೋಡುಮಕ್ಕಿ, ಆರ್ಡಿ, ಅಲ್ಬಾಡಿ 
ಮಂದಾರ್ತಿ ಮೂರನೇ ಮೇಳ ಗುಡ್ಡೆಕೇರಿ, ತೀರ್ಥಳ್ಳಿ 
ಮಂದಾರ್ತಿ ನಾಲ್ಕನೇ ಮೇಳ ಬಿಕ್ರಿಮನೆ, ಕೋಡಿ, ಕುಂದಾಪುರ 
ಮಂದಾರ್ತಿ ಐದನೇ ಮೇಳ ಚಿಲುಮೆಜೆಡ್ಡು, ಸಿರಿಕೆರೆ, ಆಯನೂರು 
ಶ್ರೀ ಹನುಮಗಿರಿ ಮೇಳ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಕೊಂಪದವು – ಶ್ರೀ ರಾಮ ಕಾರುಣ್ಯ 
ಶ್ರೀ ಸಾಲಿಗ್ರಾಮ ಮೇಳಕಾರ್ಕಳ ಗಾಂಧಿ ಮೈದಾನ – ಬಿಚ್ಚುಗತ್ತಿ ಭರಮಣ್ಣ 
ಶ್ರೀ ಪೆರ್ಡೂರು ಮೇಳಆರೂರು – ಶಪ್ತ ಭಾಮಿನಿ 

ಶ್ರೀ ಸುಂಕದಕಟ್ಟೆ ಮೇಳ ಪೊರ್ಕೋಡಿ ನಾರಾಯಣ ಗುರು ನಗರ ಕಾಣದಗುಡ್ಡೆ – ಕೋಟಿ ಚೆನ್ನಯ
ಶ್ರೀ ಮಾರಣಕಟ್ಟೆ ಮೇಳ ‘ಎ’ಕಪ್ಪೆಕೆರೆಮನೆ, ಕಟ್ಟಿಮಕ್ಕಿ ಹರ್ಕೂರು 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಕುಂಟುಮಾವು ಸೆಳ್ಕೋಡು  ಜಡ್ಕಲ್ 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಕಾಳಿಕಾಂಬಾ ದೇವಸ್ಥಾನ, ಕಟ್ಕೆರೆ, ಕಾಳಾವರ 
ಶ್ರೀ ಪಾವಂಜೆ ಮೇಳ ಮಾರಿಗುಡಿ ದೇವಸ್ಥಾನ, ಎಣ್ಣೆಹೊಳೆ – ತ್ರಿಜನ್ಮ ಮೋಕ್ಷ 
ಶ್ರೀ ಹಟ್ಟಿಯಂಗಡಿ ಮೇಳಮೂಡೂರು ಹೈಗುಳಿ ದೇವಸ್ಥಾನ, ಕಟ್ಟಿನಮಕ್ಕಿ 
ಕಮಲಶಿಲೆ ಮೇಳ ‘ಎ’ಕೊಡ್ಜನಗಡಿ, ಹಳ್ಳಿಹೊಳೆ – ಕೂಡಾಟ
ಕಮಲಶಿಲೆ ಮೇಳ ‘ಬಿ’ಕೊಡ್ಜನಗಡಿ, ಹಳ್ಳಿಹೊಳೆ – ಕೂಡಾಟ
ಶ್ರೀ ಅಮೃತೇಶ್ವರೀ ಮೇಳಶ್ರೀ ಕ್ಷೇತ್ರದಲ್ಲಿ 
ಶ್ರೀ ಬೋಳಂಬಳ್ಳಿ ಮೇಳ ಅಂಪಾರು
ಶ್ರೀ ಸೌಕೂರು ಮೇಳಬಳ್ಕೂರು ಶ್ರೀ ನಂದಿಕೇಶ್ವರ ದೇವಸ್ಥಾನ – ನೂತನ ಪ್ರಸಂಗ 
ಶ್ರೀ ಹಾಲಾಡಿ ಮೇಳನೀರ್ಜೆಡ್ಡು, ಹೆಗ್ಗುಂಜೆ – ಶ್ರೀ ಹಾಲಾಡಿ ಕ್ಷೇತ್ರ ಮಹಾತ್ಮೆ 
ಶ್ರೀ ಬೆಂಕಿನಾಥೇಶ್ವರ ಮೇಳ  ಹೆಮ್ಮಾಡಿ ಜಂಕ್ಷನ್ – ಸತ್ಯೊದ ಸ್ವಾಮಿ ಕೊರಗಜ್ಜ 
ಶ್ರೀ ಮಡಾಮಕ್ಕಿ ಮೇಳಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ರಾಜವಂಶ ಗುಳಿಗ 
ಶ್ರೀ ಕ್ಷೇತ್ರ ಗೋಳಿಗರಡಿ ಮೇಳತಲ್ಲೂರು ಶ್ರೀ ಮಹಾಕಾಳಿ ದೇವಸ್ಥಾನ, ಕೋಟಿ ಚೆನ್ನಯ ಗರಡಿ – ಅಬ್ಬರದ ಹ್ಯಾಗುಳಿ 
ಶ್ರೀ ಹಿರಿಯಡಕ ಮೇಳಹೆಬ್ರಿ ಬಂಗಾರಗುಡ್ಡೆ – ಪವಿತ್ರ ಫಲ್ಗುಣಿ 
ಶ್ರೀ ಶನೀಶ್ವರ ಮೇಳ ವಂಡ್ಸೆ 
ಶ್ರೀ ಸಿಗಂದೂರು ಮೇಳಗಂಟಿಹೊಳೆ ಮರ್ಲುಚಿಕ್ಕು ದೇವಸ್ಥಾನ 
ಶ್ರೀ ನೀಲಾವರ ಮೇಳ ಶ್ರೀ ರಾಮ ಭಜನಾ ಮಂದಿರ, ಗಂಗಾಬೈಲು,ಕೊಡೇರಿ
ಶ್ರೀ ಮೇಗರವಳ್ಳಿ ಮೇಳ ಮೇಗರವಳ್ಳಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿ – ದೇವರ ಸೇವೆಯಾಟ 

ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಕಲಾ ಸಂಘದ ವಾರ್ಷಿಕೋತ್ಸವ

ದೆಹಲಿ ಕನ್ನಡಿಗ, ತುಳುವೆರ್ ಪತ್ರಿಕೆಗಳ ಸಂಪಾದಕ ಬಾ. ಸಾಮಗ ಅವರು ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಕಲಾ ಸಂಘ ಜ.23 ರಂದು ಉಡುಪಿ ಕೆಳಾರ್ಕಳಬೆಟ್ಟಿನಲ್ಲಿ ಏರ್ಪಡಿಸಿದ 13ನೇ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಂಘದ ಗೌರವಾಧ್ಯಕ್ಷ ದಯಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗುರು ಬಡಾನಿಡಿಯೂರು ಕೇಶವ ರಾವ್ ಅವರನ್ನು ಸನ್ಮಾನಿಸಲಾಯಿತು.

ಉದ್ಯಮಿ ಆನಂದ ಎಂ. ಅಮೀನ್ ಸಾಮಾಜಿಕ ಸೇವಾ ಕಾರ್ಯಕರ್ತ ಮಂಜುನಾಥ ಹೆಬ್ಬಾರ್, ದೇವಸ್ಥಾನದ ಅಧ್ಯಕ್ಷ ಸದಾನಂದ ನಾಯ್ಕ್, ಸಂಘದ ಅಧ್ಯಕ್ಷ ಶೇಷರಾಜ ರಾವ್ ಶುಭ ಹಾರೈಸಿದರು. ಉದ್ಯಮಿ ಕೆ. ಅನಂತ ಸಾಮಗ, ಸಂಘಟಕ ಎಸ್. ಜಯರಾಮಯ್ಯ, ವೇಷದಾರಿ ಎಂ.ಕೆ. ಸುಕುಮಾರ ಶೆಟ್ಟಿ ಉಪಸ್ಥಿತರಿದ್ದರು. ರವಿನಂದನ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಅಭಿಮನ್ಯು ಕಾಳಗ, ಸೈಂಧವ ವಧೆ, ರತಿ ಕಲ್ಯಾಣ ಪ್ರಸಂಗಗಳ ಪ್ರದರ್ಶನ ನಡೆಯಿತು.

ಸಾವಿರದಾಚೆಯ ಗಿರಕಿಗಳು – ಚಂದ್ರಶೇಖರ ಧರ್ಮಸ್ಥಳ ಮತ್ತು ದಿವಾಕರ ರೈ ಸಂಪಾಜೆ 

ಈ ತಲೆಬರಹ ಓದುವಾಗಲೇ ಇಲ್ಲಿ ಯಾವ ವಿಷಯದ ಬಗೆಗೆ ಬರೆದಿರಬಹುದು ಎಂಬುದನ್ನು ಎಲ್ಲರೂ ನಿಖರವಾಗಿ ಊಹಿಸಬಹುದು. 2014ನೇ ಇಸವಿಯಲ್ಲಿ ನಡೆದ ಕಲ್ಲುಗುಂಡಿ ಸಂಪಾಜೆ ಯಕ್ಷೋತ್ಸವವು ಒಂದು ಅಭೂತಪೂರ್ವ ಘಟನೆಗೆ ಸಾಕ್ಷಿಯಾಯಿತು.

ಪ್ರತಿ ವರ್ಷದಂತೆ ನಡೆಯುವ ಯಕ್ಷೋತ್ಸವ ಆ ಬಾರಿ ನಿಗದಿಯಾದದ್ದು 01. 11. 2014ರಂದು. ಅಪರಾಹ್ನ 2 ಘಂಟೆಗೆ ಸಂಪನ್ನಗೊಂಡ ಆ ದಿನದ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಪೇಜಾವರ, ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಎಡನೀರು, ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸುಬ್ರಹಣ್ಯ ಇವರ ಘನ ಉಪಸ್ಥಿತಿಯಿತ್ತು. ಸಭಾ ಕಾರ್ಯಕ್ರಮದ ನಂತರ 5 ಘಂಟೆಯಿಂದ ಯಕ್ಷಗಾನ ಬಯಲಾಟ ಆರಂಭವಾಗಿತ್ತು. ಆ ಬಾರಿಯ ಯಕ್ಷೋತ್ಸವದಲ್ಲಿ ಆಡಲಾದ ಪ್ರಸಂಗಗಳು ನಾಲ್ಕು. ಶಿವಕಾರುಣ್ಯ, ಭೀಷ್ಮ ಪ್ರತಿಜ್ಞೆ, ವಂಶವಾಹಿನಿ ಮತ್ತು ಅಮೃತಕಲಶ ಎಂಬ ಪ್ರಸಂಗಗಳಲ್ಲಿ ಮೊದಲೆರಡು ಪ್ರಸಂಗಗಳು ಮುಗಿದ ನಂತರ ಸುಮಾರು ಮಧ್ಯರಾತ್ರಿಯ ಸಮಯದಲ್ಲಿ ವಂಶವಾಹಿನಿ ಪ್ರಸಂಗದ ಪ್ರದರ್ಶನ ಆರಂಭವಾಯಿತು.

ಈ ಪ್ರಸಂಗದ ಮುಖ್ಯ ಪಾತ್ರಗಳಾದ ಸುದರ್ಶನ ಮತ್ತು ಶತ್ರುಜಿತನ ಯುದ್ಧದ ಭಾಗದ ಸನ್ನಿವೇಶದಲ್ಲಿ ಅದ್ಭುತವೊಂದು ನಡೆದುಹೋಯಿತು. ಯಕ್ಷೋತ್ಸವ 01. 11. 2014 ರಂದು ಆಗಿದ್ದರೂ ಈ ದೃಶ್ಯ ರಂಗದಲ್ಲಿ ಬರುವಾಗ 02. 11. 2014ರ ಬೆಳಗಿನ ಜಾವದ ಸಮಯವಾಗಿತ್ತು. ಒಬ್ಬನೇ ರಾಜನ ಇಬ್ಬರು ಮಡದಿಯರ ಮಕ್ಕಳ ನಡುವೆ ನಡೆದ ಕಲಹದಲ್ಲಿ ಪಾತ್ರಧಾರಿಗಳಾಗಿ ಶ್ರೀ ಚಂದ್ರಶೇಖರ ಧರ್ಮಸ್ಥಳ (ಶತ್ರುಜಿತ) ಮತ್ತು ಶ್ರೀ ದಿವಾಕರ ರೈ ಸಂಪಾಜೆ (ಸುದರ್ಶನ) ಇವರುಗಳು ಭಾಗವಹಿಸಿದ್ದರು. ವೈಯುಕ್ತಿಕವಾಗಿ ಇಬ್ಬರು ಕಲಾವಿದರೂ ಸ್ನೇಹಿತರಾದರೂ ಆ ದಿನ ವೇದಿಕೆಯಲ್ಲಿ ಪಾತ್ರೋಚಿತ ಸನ್ನಿವೇಶ ಮತ್ತು ಕಥಾ ಸಾರದಂತೆ ಶತ್ರುಗಳಾಗಿದ್ದರು!

ಯುದ್ಧದ ಸನ್ನಿವೇಶದಲ್ಲಿ ಅಲ್ಲಿ ನೆರೆದಿದ್ದ ಅಸಂಖ್ಯಾತ ಪ್ರೇಕ್ಷಕರೆದುರು ಇಬ್ಬರಿಗೂ ಎಲ್ಲಿಲ್ಲದ ಹುರುಪು ಬಂದಿರಬೇಕು. ನಾಟ್ಯದ ವರಸೆ ವೈವಿಧ್ಯಗಳು ಇನ್ನಿಲ್ಲದಂತೆ ಮೂಡಿಬಂದುವು. ಇಬ್ಬರಿಗೂ ಸ್ಪರ್ಧೆಯ ಮನೋಭಾವ ಮೂಡತೊಡಗಿತು. ದಿಗಿಣಗಳು ರಂಗಸ್ಥಳದಲ್ಲಿ ದೂಳೆಬ್ಬಿಸಿದುವು. ಯುದ್ಧದ ಕೊನೆಯ ಸನ್ನಿವೇಶದಲ್ಲಂತೂ ಪ್ರೇಕ್ಷಕರು ಉಸಿರು ಬಿಗಿಹಿಡಿವ ಗಂಭೀರವಾದ ಪರಿಸ್ಥಿತಿ ನಿರ್ಮಾಣವಾಯಿತು ಎಂದರೆ ಅದು ಅತಿಶಯೋಕ್ತಿಯಾಗಲಾರದು. ಯುದ್ಧದ ಕೊನೆಯ ಹಂತಕ್ಕೆ ಬಂದಾಗ ಒಂದು ಪದ್ಯಕ್ಕೆ ಇಬ್ಬರೂ ಸುಮಾರು ತಲಾ 50ರಷ್ಟು ದಿಗಿಣಗಳನ್ನು ಹಾರಿ ಗಿರಕಿ ತಿರುಗಲು ಸುರುಮಾಡಿದರು.

ಇಬ್ಬರಲ್ಲಿ ಒಬ್ಬರು ಗಿರಕಿ ತಿರುಗಲು ಪ್ರಾರಂಭಿಸಿದರು ಎಂದು ಊಹಿಸಿದರೆ ಅದು ತಪ್ಪು. ಬದಲಾಗಿ ಇಬ್ಬರೂ ಜೊತೆಯಾಗಿ ತಿರುಗಲು(ಗಿರಕಿ) ತೊಡಗಿದರು. ಹಾಗೆ ಪ್ರಾರಂಭಗೊಂಡ ಸುತ್ತು ತಿರುಗುವಿಕೆ ನಿಮಿಷ ಪೂರ್ತಿಯಾದರೂ ನಿಲ್ಲಲಿಲ್ಲ. ಅಂದು ಇಬ್ಬರಲ್ಲೂ ಯಾಕೋ ಸ್ಪರ್ಧಾ ಮನೋಭಾವ ಅಧಿಕವಾಗಿದ್ದಂತೆ ತೋರಿತು. ‘ನೀ ಬಿಟ್ಟರೂ ನಾ ಬಿಡೆ’ ಎಂಬ ಛಲವೋ ಅಥವಾ ಸ್ಪರ್ಧೆಯೋ ಎಂಬುದನ್ನು ತಿಳಿಯದಂತೆ ತೊಡಗಿದ ಈ ಸ್ಪರ್ಧೆ ನಿಮಿಷ ಹತ್ತಾದರೂ ನಿಲ್ಲುವ ಲಕ್ಷಣಗಳು ಗೋಚರಿಸಲಿಲ್ಲ. ಹತ್ತು ನಿಮಿಷಗಳ ನಂತರ ಮುಗಿಲು ಮುಟ್ಟಿದ ಪ್ರೇಕ್ಷಕರ ಸಿಳ್ಳೆ, ಚಪ್ಪಾಳೆಗಳ ಸದ್ದುಗಳ ನಡುವೆ ಚೆಂಡೆ ಮದ್ದಲೆಗಳ ನಿನಾದಗಳು ಅಡಗಿ ಹೋದಂತೆ ಭಾಸವಾಯಿತು. ಆದರೂ ಅವರ ತಿರುಗುವಿಕೆಯ ನಾಟ್ಯ ನಿಲ್ಲಲಿಲ್ಲ.

ಮತ್ತೂ ಮತ್ತೂ ಮುಂದುವರಿಯುತ್ತಾ 15 ನಿಮಿಷಗಳ ವರೆಗೆ ತಲುಪಿತು. ಪ್ರೇಕ್ಷಕರಾಗಿದ್ದವರಿಗೆ ಸಿಳ್ಳು, ಕೇಕೆ, ಚಪ್ಪಾಳೆ ಹೊಡೆದು ಆಯಾಸವಾದಂತೆ ಅನಿಸತೊಡಗಿತು. ಆದರೆ ರಂಗದಲ್ಲಿದ್ದ ಕುಣಿಯುತ್ತಿದ್ದ ಈರ್ವರಿಗೂ ಆಯಾಸವಾದಂತೆ ಕಾಣಿಸಲಿಲ್ಲ. ಚೆಂಡೆಯ  ಬದಲಾದುದು ಮಾತ್ರವಲ್ಲ, ಹೆಚ್ಚಾಯಿತು. ಒಂದು ಚೆಂಡೆಯ ಬದಲು ಇಬ್ಬರು ವಾದಕರಿಂದ ಎರಡು ಚೆಂಡೆಗಳ ವಾದನ. ಆದರೂ ಶತ್ರುಜಿತ, ಸುದರ್ಶನರ ಗಿರಕಿ ನಿಲ್ಲಲಿಲ್ಲ. ಚೆಂಡೆವಾದಕರ ಸಂಖ್ಯೆ ಮೂರಕ್ಕೇರಿತು. ಆದರೂ ಏನೂ ವ್ಯತ್ಯಾಸವಾಗಲಿಲ್ಲ. ಚಂದ್ರಶೇಖರ ಧರ್ಮಸ್ಥಳ ಮತ್ತು  ದಿವಾಕರ ರೈ ಸಂಪಾಜೆ ಇನ್ನೂ ತಿರುಗುತ್ತಲೇ ಇದ್ದರು. ನೋಡುತ್ತಿದ್ದ ಸಾವಿರಾರು ಪ್ರೇಕ್ಷಕರಿಗೆ ತಲೆ ತಿರುಗಿದ ಅನುಭವವಾದರೂ ಕಲಾವಿದರಿಗೇನೂ ಆಗಲಿಲ್ಲ. 

ಯಾಕೋ ಏನೋ ಇದು ವಿಷಮಕ್ಕೆ ತಲುಪುವ ಮೊದಲೇ ಸಂಘಟಕರ, ಹಿರಿಯರ ಸೂಚನೆ ಭಾಗವತರಿಗೆ ಸಿಕ್ಕಿರಬಹುದು. ಭಾಗವತರಿಂದ ಮುಂದಿನ ಪದ್ಯಕ್ಕೆ ಎತ್ತುಗಡೆಯೂ ಆಯಿತು. ಆದರೆ ಅಷ್ಟರಲ್ಲಾಗಲೇ ಅತ್ಯಪೂರ್ವ ದಾಖಲೆಯೊಂದು ಸೃಷ್ಟಿಯಾಗಿಬಿಟ್ಟಿತ್ತು. ಇಬ್ಬರು ಕಲಾವಿದರೂ ಸಾವಿರಕ್ಕೂ ಮಿಕ್ಕಿದ ಗಿರಕಿಗಳನ್ನು (1000 ಸುತ್ತು) ಪೂರೈಸಿಯಾಗಿತ್ತು. ಗೌರವಪೂರ್ವಕವಾಗಿ ಅಲ್ಲಿ ತುಂಬಿ ತುಳುಕುತ್ತಿದ್ದ ಪ್ರೇಕ್ಷಕರ ಗಡಣವೇ ಎದ್ದು ನಿಂತು ಚಪ್ಪಾಳೆ ತಟ್ಟಿ ಅಭಿನಂದಿಸಿ ಕಲಾವಿದರನ್ನು ಪ್ರೋತ್ಸಾಹಿಸಿತು.

ಇದೊಂದು ಅತ್ಯಪೂರ್ವ ಅನುಭವ. ಸಂಪಾಜೆಯ ಯಕ್ಷೋತ್ಸವಗಳ ಇತಿಹಾಸದಲ್ಲಿ ದಾಖಲೆಯಾಗಿ ಉಳಿದುಬಿಡುತ್ತದೆ. ಸಂಪಾಜೆ ಯಕ್ಷೋತ್ಸವದಲ್ಲಿ ಮಾತ್ರವಲ್ಲದೆ ಈ ವರೆಗಿನ ಯಕ್ಷಗಾನದ ಸಮಗ್ರ ಇತಿಹಾಸದ ಪುಟಗಳನ್ನು ತೆರೆದು ನೋಡಿದರೂ ನಮಗೆ ಇಂತಹದೊಂದು ಘಟನೆ ಉಲ್ಲೇಖವಾದುದು ಕಂಡು ಬರುವುದಿಲ್ಲ. ಶ್ರೀ ರಾಧಾಕೃಷ್ಣ ಭಟ್, ಕೋಂಗೋಟ್ ಅವರು ಈ ವಿಡಿಯೋವನ್ನು ಯು ಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಅದನ್ನು ಮತ್ತೆ ಮತ್ತೆ ನೋಡುವಾಗಲೂ ಉಸಿರು ಬಿಗಿ ಹಿಡಿದು ನೋಡುವ ಸನ್ನಿವೇಶ ಎದುರಾಗುತ್ತದೆ. 

ಈ ಪ್ರದರ್ಶನದ ಬಗ್ಗೆ ಎರಡಭಿಪ್ರಾಯಗಳಿರಬಹುದು. ಕಲಾವಿದರ ಆರೋಗ್ಯ ದೃಷ್ಟಿಯಿಂದಲೂ ಆಕ್ಷೇಪ ಅಥವಾ ಯಕ್ಷಗಾನದ ಸಾಂಪ್ರದಾಯಿಕತೆಗೆ ಪೂರಕವಾಗಿಲ್ಲ ಎಂಬ ವಾದ ಇವೆರಡೂ ಇರಬಹುದು. ಅವುಗಳೇನೇ ಇರಲಿ. ಕಲಾವಿದರೀರ್ವರೂ ಕಾಲು ನೋವಿನ ಸಮಸ್ಯೆ ಕಾಡುತ್ತಿದ್ದರೂ ಈ ಅದ್ಭುತ ಸಾಧನೆಯನ್ನು ಮಾಡಿದ್ದಾರೆ. ಇದು ಯಕ್ಷಗಾನ ಪ್ರೇಮಿಗಳು ಸದಾಕಾಲ ನೆನಪಿಡುವಂತೆ ಮಾಡಿದ ಪ್ರದರ್ಶನ ಎಂಬುದರಲ್ಲಿ ಎರಡು ಮಾತಿಲ್ಲ.