ಯುಕೋ ಬ್ಯಾಂಕ್ ಮಂಗಳೂರು ಶಾಖೆಯಲ್ಲಿ ಉದ್ಯೋಗಿಯಾಗಿದ್ದು ಸ್ವಯಂ ನಿವೃತ್ತಿ ಹೊಂದಿದ್ದ, ಹವ್ಯಾಸಿ ಯಕ್ಷಗಾನ ಅರ್ಥಧಾರಿ ಮತ್ತು ಸಂಘಟಕ ಪಿ.ಕೆ.ನಾಯ್ಕ ಶಿರೋಳ್ತಳಿಕೆ (64 ವ.) ಅಲ್ಪ ಕಾಲದ ಅಸೌಖ್ಯದಿಂದ ಮೇ. 18 ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ನರ ಸಂಬಂಧಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಕೋವಿಡ್ ಪೊಸಿಟಿವ್ ಬಂದಿತ್ತು. ಮೂಲತಃ ನೆಲ್ಯಾಡಿ ಬಳಿ ಆಲಂತಾಯ ಗ್ರಾಮದ ಶಿರೋಳ್ತಳಿಕೆಯಲ್ಲಿ ನೆಲೆಸಿದ್ದ ಕೃಷ್ಣಪ್ಪ ನಾಯ್ಕರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಹವ್ಯಾಸಿ ಯಕ್ಷಗಾನ ಕಲಾವಿದರಾಗಿದ್ದ ಪಿ.ಕೆ.ನಾಯ್ಕರ ಅಕಾಲಿಕ ನಿಧನಕ್ಕೆ ‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ಸಂತಾಪ ವ್ಯಕ್ತಪಡಿಸಿದೆ. ‘ಮಂಗಳೂರು ಗೊಲ್ಲರಕೇರಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಯಕ್ಷಗಾನ ಸಂಘದಲ್ಲಿ ಸ್ವಂತ ಆಸಕ್ತಿಯಿಂದ ಅರ್ಥಗಾರಿಕೆಯನ್ನು ಆರಂಭಿಸಿದ್ದ ಪಿ.ಕೆ.ನಾಯ್ಕರು ಮುಂದೆ ಹವ್ಯಾಸಿಗಳ ಆಟ – ಕೂಟಗಳಲ್ಲಿ ಕಲಾವಿದರಾಗಿ ಪಾಲ್ಗೊಂಡಿದ್ದರು. ತಮ್ಮ ಊರಲ್ಲೂ ಯಕ್ಷಗಾನ ಕಾರ್ಯಕ್ರಮಗಳನ್ನು ಸಂಘಟಿಸಿ ಹಲವು ಹಿರಿಯ ಕಲಾವಿದರ ಸಂಪರ್ಕ ಗಳಿಸಿಕೊಂಡರು. 2017 ರಲ್ಲಿ ಯಕ್ಷಾಂಗಣದ ತಾಳಮದ್ದಳೆ ಸಪ್ತಾಹದಲ್ಲಿಯೂ ಭಾಗವಹಿಸಿದ್ದ ಅವರು ಆಕಾಶವಾಣಿ ತಾಳಮದ್ದಳೆ ಕಾರ್ಯಕ್ರಮಗಳಲ್ಲಿ ತಮ್ಮೊಂದಿಗೆ ಜತೆಗಿದ್ದರು’ ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದ್ದಾರೆ.
ಯಕ್ಷಗಾನದ ಪ್ರಸಂಗಕ್ಕೆ ಪ್ರಸಂಗದ ಪಠ್ಯವೇ (ಪ್ರಸಂಗ ಪುಸ್ತಕ) ಪ್ರಧಾನವಾಗಿದೆ. ಹಾಗೂ ಪ್ರಸಂಗವನ್ನು ರಚಿಸಿದ ಕವಿಗೆ ಮಹತ್ತರವಾದ ಸ್ಥಾನವಿದೆ. ಇದನ್ನು ಪ್ರತಿಯೊಬ್ಬ ಕಲಾವಿದನೂ ಹಾಗೂ ಕಲಾಪೋಷಕರು, ಕಲಾರಸಿಕರೂ ಅರಿತಿರಲೇಬೇಕು.
ಯಾಕೆಂದರೆ ಒಂದು ಪ್ರಸಂಗದ ಪ್ರದರ್ಶನದ ಗೆಲುವಿನ ಹಿಂದೆ ಭಾಗವತರು, ಹಿಮ್ಮೇಳದವರು, ಹಾಗೂ ಎಲ್ಲಾ ಕಲಾವಿದರ ಶ್ರಮ ಇದ್ದಹಾಗೆ ಪ್ರಸಂಗವನ್ನು ರಚಿಸಿದ ಕವಿಯ ಶ್ರಮವೂ ಇರುತ್ತದೆ. ಪ್ರಸಂಗದ ಹಾಗೂ ಕವಿಯ *ಆಶಯ* ವನ್ನು ಮೀರಿ ಕಲಾವಿದ ಹೋಗುವಂತಿಲ್ಲ ಹೋಗಬಾರದು. ಕಲಾವಿದನಾದವನು ಪ್ರಸಂಗಕ್ಕೆ ಹಾಗೂ ಕವಿಗೆ *ನಿಷ್ಠ* ನಾಗಿ ಇದ್ದರೆ ಒಳ್ಳೆಯದು. ಇಂತಹ *ಕವಿ ನಿಷ್ಠೆ* ಹಾಗೂ *ಪ್ರಸಂಗ ನಿಷ್ಠೆ* ಯನ್ನು ತನ್ನಲ್ಲಿ ಮೈಗೂಡಿಸಿಕೊಂಡು ರಂಗ ವನ್ನಾಳಿದ ಹಲವು ಮಂದಿ ಕಲಾವಿದರು ಇದ್ದಾರೆ, ಅಂಥವರಲ್ಲಿ *ಯಕ್ಷರಂಗದ ಬೀಷ್ಮ ಅಜಾತಶತ್ರು* ಇತ್ಯಾದಿ ನೆಗಳ್ತೆಗೆ ಪಾತ್ರರಾದ ತೆಂಕುತಿಟ್ಟು ಯಕ್ಷಗಾನದ ಶ್ರೇಷ್ಠ ಭಾಗವತ *ಶ್ರೀ ಬಲಿಪ ನಾರಾಯಣ ಭಾಗವತರು* ಅಗ್ರಗಣ್ಯರಾಗಿದ್ದಾರೆ.
ಯಾಕೆಂದರೆ…. ಕವಿಯು ಪ್ರಸಂಗದಲ್ಲಿ ಬರೆದ ಸಾಲುಗಳನ್ನು ಮಾತ್ರ ಭಾಗವತ ನಾದವನು ಹಾಡಬೇಕು ಎಂಬ ನಿಯಮ ಹಿಂದೆ ಇತ್ತಂತೆ.ಅದರಂತೆ ಬಲಿಪರು ಕೂಡ ಪ್ರಸಂಗ ಸಾಹಿತ್ಯದಲ್ಲಿ ಇದ್ದಂತಹ ಸಾಲುಗಳನ್ನೇ ಹೇಳುತ್ತಾರೆ ಹೊರತು ಬೇರೆ ಸ್ವಂತ ವಾಕ್ಯಗಳನ್ನು ಅಥವಾ ಬದಲಿ ಶಬ್ದಗಳನ್ನು ಹೇಳುವುದಿಲ್ಲ. ಉದಾಹರಣೆಗೆ: ದೇವ ಲಾಲಿಪುದೀಗ ಬಿಡದೊಂದು ಯೋಜನ….ಎಂಬ ಪದ ಹೇಳಿ ಪುನಃ ದೇವ ಎನ್ನುವ ಬದಲು ಕೃಷ್ಣಾ….. ಎಂದು ಸೇರಿಸಿ ಆಲಾಪನೆ ಗೈಯುವುದು. ಲಾಲಿಪುದೆಲೆ ತಾಯೆ ಎನ್ನ ಬಿನ್ನಪವನು…. ಎಂಬ ಪದದಲ್ಲಿ ಕೊನೆಗೆ ಅಮ್ಮ, ಜನನಿ ಇತ್ಯಾದಿ ಶಬ್ದಗಳನ್ನು ಭಾಗವತನಾದವ ಸೇರಿಸಿ ಹಾಡುವುದನ್ನು ನೋಡುತ್ತೇವೆ. ಈ ವಿಚಾರವಾಗಿ ಒಮ್ಮೆ ಬಲಿಪ ರಲ್ಲಿ ಕೇಳಿದಾಗ ಅವರು ಹೇಳಿದ ಮಾತು ಹೀಗಿದೆ. “ಭಾಗವತನಾದವ ಪ್ರಸಂಗ ಸಾಹಿತ್ಯದಲ್ಲಿ ಕವಿ ಬರೆದ ಸಾಲುಗಳನ್ನು ಮಾತ್ರವೇ ತಾಳಕ್ಕೆ ಮಾತ್ರೆಗೆ ಸರಿಯಾಗಿ ಹೇಳಬೇಕು, ಹೊರತು ತನಗೆ ಇಷ್ಟ ಬಂದ ಬದಲಿ ಶಬ್ದಗಳನ್ನು ಸೇರಿಸಿಕೊಂಡು ಹಾಡಬಾರದು, ನಮಗೆ ಇಷ್ಟ ಬಂದಂತೆ ಸಾಹಿತ್ಯಗಳನ್ನು ಬದಲಿಸಿ ಹಾಡುವುದಾದರೆ ಅಲ್ಲಿ ಕವಿ ಬರೆದದ್ದು ಯಾಕೆ? ಬರೆದ ಕವಿಗೆ ಬೇರೆ ಶಬ್ದಗಳು ಗೊತ್ತಿಲ್ಲದೆ ಬರೆದದ್ದೋ? ಭಾಗವತನಿಗೆ ಕವಿಯನ್ನು ಮೀರಿಹೋಗುವ ಸ್ವಾತಂತ್ರ್ಯ ಇಲ್ಲ.ನೀವು ಸಿನಿಮಾದ ಹಾಡುಗಳನ್ನು ನೋಡಿ ಇಲ್ಲದಿದ್ದರೆ ಶಾಸ್ತ್ರೀಯ ಸಂಗೀತದಲ್ಲಿ ಬರುವ ಪದ್ಯಗಳನ್ನು ಕೇಳಿ,ಅಲ್ಲಿ ಕವಿ ಬರೆದ ಸಾಲುಗಳನ್ನು ಮಾತ್ರವೇ ಹಾಡುಗಾರರು ಹಾಡುತ್ತಾರೆ ವಿನಃ ಇವರ ಸ್ವಂತದ್ದನ್ನು ಸೇರಿಸಿ ಹಾಡುವುದಿಲ್ಲ.(ಲಂಬೋದರ ಲಕುಮಿಕರ ಎಂಬ ಹಾಡಿನಲ್ಲಿ ಲಂಬೋದರ ಎಂದು ಹೇಳಿ ಪುನಃ ಗಣೇಶ, ಗಜಮುಖ, ಎಂದು ಸಂಗೀತದವರು ಹೇಳುವುದಿಲ್ಲ ತಾನೇ?) ಹಾಗೆಯೇ ಭಾಗವತ ಪ್ರಸಂಗದಲ್ಲಿ ಕವಿ ಬರೆದದ್ದನ್ನು ಬಿಟ್ಟು ಬೇರೆ ಹಾಡಿದರೆ ಅದು ಕವಿಗೆ ಮಾಡಿದ ಅಪಚಾರವಾಗುತ್ತದೆ.” ಬಲಿಪರ ಈ ಮಾತುಗಳು ಭಾಗವತನಾದವನು ಕವಿಗೆ ಎಷ್ಟು ಗೌರವವನ್ನು ಕೊಡಬೇಕು, ನಿಷ್ಠನಾಗಿರಬೇಕು ಎಂಬುದಕ್ಕೆ ಉದಾಹರಣೆಯಾಗಿದೆ.
*ಪ್ರಸಂಗದ ಆಶಯ*…. ಕೆಲವೊಮ್ಮೆ ಕಲಾವಿದರು ರಂಗದಲ್ಲಿ ಪ್ರಸಂಗದ ಹಾಗೂ ಕವಿಯ ಆಶಯಕ್ಕೆ ವಿರುದ್ಧವಾಗಿ ಅರ್ಥವನ್ನು ಹೇಳುತ್ತಾರೆ.ಕಲಾವಿದನಾದವನು ತನ್ನ ಪ್ರತಿಭೆಯಿಂದ ಅಥವಾ ವಿದ್ವತ್ತಿನಿಂದ ಅರ್ಥಗಾರಿಕೆಯನ್ನು ವಿಸ್ತಾರಗೊಳಿಸಬಹುದು ಆದರೆ ಪ್ರಸಂಗದ ಆಶಯಕ್ಕೆ ಚ್ಯುತಿ ಬಾರದಂತೆ ವರ್ತಿಸಬೇಕಾಗುತ್ತದೆ. ಎಷ್ಟೋಬಾರಿ ಬಲಿಪರು ಹೇಳಿದ್ದು ಇದೆ “ಅರ್ಥ ಬಹಳ ಚಂದವಾಗಿ ತುಂಬಾ ಮಾತಾಡಿದ್ದಾರೆ ಒಳ್ಳೆಯ ವಿಷಯ ಇತ್ತು ಆದರೆ ಕವಿ ಬರೆದ ಪದದ ಅರ್ಥ ಮಾತ್ರ ಬರಲಿಲ್ಲ” ಎಂದರೆ ಕಲಾವಿದನಾದವನು ಪ್ರಸಂಗದ ಪದದಲ್ಲಿ ಅಡಕವಾಗಿರುವ ಅರ್ಥವನ್ನು ಹೇಳದಿದ್ದರೆ ಅವರು ಸಹಿಸುತ್ತಿರಲಿಲ್ಲ.
ಒಟ್ಟಿನಲ್ಲಿ ಹೇಳುವುದಾದರೆ ಯಕ್ಷಗಾನ ರಂಗದಲ್ಲಿ ಕಲಾವಿದನಾದವನು ಪ್ರಸಂಗದ ಪಠ್ಯಕ್ಕೆ ಹಾಗೂ ಪ್ರಸಂಗವನ್ನು ರಚಿಸಿದ ಕವಿಗೆ ನಿಷ್ಠನಾಗಿರಬೇಕು ಎಂಬುದು ತಾತ್ಪರ್ಯ. ಅಂತಹ *ಕವಿ ನಿಷ್ಠ ಪ್ರಸಂಗ ನಿಷ್ಠ ಭಾಗವತ ಶ್ರೇಷ್ಠ* ನಮ್ಮ ಬಲಿಪಜ್ಜ.
ಬಲಿಪ ಭಾಗವತರ ಇಂತಹ ಅನೇಕ ವಿಚಾರಗಳು ಯಕ್ಷಗಾನ ರಂಗದಲ್ಲಿ ಮುಂದೆ ಕಾಣಿಸಿಕೊಳ್ಳಲಿರುವ ಯುವಕಲಾವಿದರಿಗೆ ಹಾಗೂ ವ್ಯವಸಾಯ ಮಾಡುತ್ತಿರುವ ಎಲ್ಲಾ ಕಲಾವಿದರಿಗೂ ದಾರಿದೀವಿಗೆಯಾಗಲಿ….
ಪ್ರಪಂಚವನ್ನು ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾದ ಎರಡನೇ ಅಲೆ ತೀವ್ರವಾಗಿ ಹರಡುತ್ತಿದ್ದು ಜನಜೀವನವನ್ನು ಕಂಗೆಡಿಸಿದೆ. ಈ ಸೋಂಕಿನಿಂದ ಪಾರಾಗಲು ಮುನ್ನೆಚ್ಚರಿಕೆಯ ಸಂದೇಶಗಳು ವಿವಿಧ ಮಾಧ್ಯಮಗಳಲ್ಲಿ ನಿರಂತರ ಹರಿದಾಡುತ್ತಿವೆ. ಇದಕ್ಕೆ ಯಕ್ಷಗಾನವೂ ಹೊರತಾಗಿಲ್ಲ. ಈ ಹಿಂದೆ ಘೋರ ಮಾರಕ, ಗುನ್ಯಾಸುರ ವಧೆ, ಸಾವಯವ ವಿಜಯ ಮೊದಲಾದ ಜನಜಾಗೃತಿ ಯಕ್ಷಗಾನಗಳನ್ನು ನೀಡಿದ ಕಲಾವಿದರ ತಂಡ ಇದೀಗ ಕೋವಿಡ್-19 ‘ಕೊರೊನಾ’ ಸಾಂಕ್ರಾಮಿಕ ರೋಗದ ವಿರುದ್ಧ ಜಾಗೃತಿ ಸಂದೇಶ ನೀಡುವ ವಿಶೇಷ ಯಕ್ಷಗಾನ ತಾಳಮದ್ದಳೆಯೊಂದನ್ನು ಲಾಕ್ ಡೌನ್ ಅವಧಿಯಲ್ಲಿ ಮತ್ತೊಮ್ಮೆ ಸಾಮಾಜಿಕ ಜಾಲದ ಮೂಲಕ ಪ್ರಸಾರ ಮಾಡುತ್ತಿದೆ.
ಕೃಷ್ಣೋಪದೇಶದ ಹಿನ್ನೆಲೆ: ಮಹಾಭಾರತ ಯುದ್ಧದಲ್ಲಿ ದ್ರೋಣ ವಧೆಯಾದ ಬಳಿಕ ಕುಪಿತನಾದ ಗುರುಪುತ್ರ ಅಶ್ವತ್ಥಾಮ ಪಾಂಡವ ಸೇನೆಯ ಮೇಲೆ ಮಾರಣಾಂತಿಕ ನಾರಾಯಣಾಸ್ತ್ರವನ್ನು ಪ್ರಯೋಗ ಮಾಡುತ್ತಾನೆ. ಅದನ್ನು ಪ್ರತಿಭಟಿಸಲು ಸಿದ್ಧನಾದ ಭೀಮಸೇನನನ್ನು ತಡೆದ ಶ್ರೀಕೃಷ್ಣ ‘ಪ್ರಕೃತಿಯ ಎದುರಿನಲ್ಲಿ ಮಾನವನ ಶಕ್ತಿ ಕ್ಷುಲ್ಲಕ. ಅದಕ್ಕೆ ಶರಣಾಗುವುದೇ ಪರಿಹಾರ’ ಎಂದು ಉಪದೇಶಿಸುತ್ತಾನೆ. ಅವನ ಮುನ್ನೆಚ್ಚರಿಕೆಯಂತೆ ಪಾಂಡವರು ಆ ಮಹಾಸ್ತ್ರಕ್ಕೆ ಶರಣಾಗಿ ಜೀವ ಉಳಿಸಿಕೊಳ್ಳುತ್ತಾರೆ.
ಈ ಘಟನೆಯನ್ನಾಧರಿಸಿ ಪ್ರಸಕ್ತ ಸನ್ನಿವೇಶಕ್ಕೆ ತಕ್ಕಂತೆ *’ನಾರಾಯಣಾಸ್ತ್ರ – ಕೊರೊನಾಸ್ತ್ರ’* ಎಂಬ ಜನಜಾಗೃತಿಯ ಯಕ್ಷಗಾನ ಪ್ರಸಂಗವನ್ನು ಹೆಣೆಯಲಾಗಿದೆ. ಇದರಲ್ಲಿ ಸುಶ್ರುತನೆಂಬ ವೈದ್ಯ ಪಂಡಿತನ ಮೂಲಕ ಶ್ರೀಕೃಷ್ಣನ ಮಾದರಿಯಲ್ಲಿ ಮನುಕುಲಕ್ಕೆ ಕೋವಿಡ್ ವಿಮುಕ್ತಿಯ ಮುಂಜಾಗ್ರತಾ ಕ್ರಮಗಳನ್ನು ನಿರೂಪಿಸಲಾಗಿದೆ. ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಕಥಾ ಸಂಯೋಜನೆಗೆ ಡಾ.ದಿನಕರ ಎಸ್. ಪಚ್ಚನಾಡಿ ಹಾಡುಗಳನ್ನು ರಚಿಸಿದ್ದಾರೆ. ಕಾರ್ಯಕ್ರಮದ ನಿರ್ಮಾಣದಲ್ಲಿ ಸಹಕರಿಸಿದವರು ಪೊಸಕುರಲ್ ಸುದ್ದಿ ಮಾಧ್ಯಮದ ವಿದ್ಯಾಧರ ಶೆಟ್ಟಿ.
ಪ್ರಸಿದ್ಧ ಕಲಾವಿದರ ಸಮ್ಮಿಲನ: ಕೊರೋನಾ ಜಾಗೃತಿಯ ಈ ಯಕ್ಷಗಾನ ತಾಳಮದ್ದಳೆಯಲ್ಲಿ ಹಿರಿಯ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ, ಲೇಖಕ – ಅರ್ಥದಾರಿ ಭಾಸ್ಕರ ರೈ ಕುಕ್ಕುವಳ್ಳಿ, ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಪ್ರಮುಖ ಪಾತ್ರವಹಿಸಿದ್ದಾರೆ. ಅಲ್ಲದೆ ಡಾ.ದಿನಕರ ಎಸ್. ಪಚ್ಚನಾಡಿ, ಸದಾಶಿವ ಆಳ್ವ ತಲಪಾಡಿ, ವಿದ್ಯಾಧರ ಶೆಟ್ಟಿ, ಪ್ರಶಾಂತ ಸಿ.ಕೆ. ಅವರೂ ಅರ್ಥಧಾರಿಗಳಾಗಿದ್ದಾರೆ. ಹಿಮ್ಮೇಳದಲ್ಲಿ ಭಾಗವತರಾಗಿ ದೇವಿಪ್ರಸಾದ ಆಳ್ವ ತಲಪಾಡಿ ಹಾಗೂ ಚಂಡೆ-ಮದ್ದಳೆಯಲ್ಲಿ ರೋಹಿತ್ ಉಚ್ಚಿಲ್ ಮತ್ತು ರಾಜೇಶ್ ಜೆಪ್ಪು ಕುಡುಪಾಡಿ ಸಹಕರಿಸಿದ್ದಾರೆ. ಚಿತ್ರೀಕರಣ ಶಿವಶಂಕರ್ ಮತ್ತು ಧನುಶ್ ಪೊಸಕುರಲ್ ಅವರದು.
‘ರಂಗವಿಹಾರ’ದಲ್ಲಿ ಪ್ರಸಾರ: ಮಂಗಳೂರಿನ ಪ್ರಾದೇಶಿಕ ಸುದ್ದಿವಾಹಿನಿ ‘ನಮ್ಮಕುಡ್ಲ’ ಪ್ರತಿ ಆದಿತ್ಯವಾರ ಪ್ರಸ್ತುತ ಪಡಿಸುವ ‘ರಂಗ ವಿಹಾರ’ ಕರಾವಳಿಯ ಸಾಂಸ್ಕೃತಿಕ ಜಗತ್ತಿನ ಅನಾವರಣ ಕಾರ್ಯಕ್ರಮದ 13 ನೇ ಅಂಕವಾಗಿ ಈ ‘ನಾರಾಯಣಾಸ್ತ್ರ- ಕೊರೋನಾಸ್ತ್ರ’ ಯಕ್ಷಗಾನ ತಾಳಮದ್ದಳೆ 2 ಭಾಗಗಳಲ್ಲಿ ಪ್ರಸಾರವಾಗುವುದು. ಮೊದಲ ಭಾಗ ಮೇ 15, 2021 ರಂದು ಶನಿವಾರ ಸಂಜೆ ಗಂಟೆ 4.00 ಕ್ಕೆ ಪ್ರಸಾರವಾಗುವುದು. ದ್ವಿತೀಯ ಭಾಗ ಮರುದಿನ ಮೇ 16, 2021 ರಂದು ಆದಿತ್ಯವಾರ ಸಾಯಂಕಾಲ ಗಂ.6.00 ಕ್ಕೆ ಪ್ರಸಾರ ವಾಗುವುದು. ಹೊರನಾಡು ಮತ್ತು ವಿದೇಶಗಳಲ್ಲಿರುವ ಕಲಾಸಕ್ತರು ವೆಬ್ ಸೈಟ್ ಮತ್ತು ಫೇಸ್ ಬುಕ್ ಮೂಲಕವೂ ಕಾರ್ಯಕ್ರಮ ವೀಕ್ಷಿಸಬಹುದೆಂದು ಪ್ರಕಟಣೆ ತಿಳಿಸಿದೆ.
ಉದ್ಯೋಗಿಯಾಗಿದ್ದುಕೊಂಡು ಯಕ್ಷಗಾನವನ್ನು ಹವ್ಯಾಸವಾಗಿ ಸ್ವೀಕರಿಸಿದವರಲ್ಲಿ ಶ್ರೀ ಸತೀಶ ಪುಣಿಂಚತ್ತಾಯರೂ ಒಬ್ಬರು. ಇವರು ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯ ಅಧ್ಯಾಪಕರು. ತೆಂಕು-ಬಡಗಿನ ಸವ್ಯಸಾಚಿ ಭಾಗವತ ಶ್ರೀ ಸತ್ಯನಾರಾಯಣ ಪುಣಿಂಚತ್ತಾಯರ ಅಣ್ಣ. ಸತೀಶ ಪುಣಿಂಚತ್ತಾಯರು ಹವ್ಯಾಸಿ ಭಾಗವತರಾಗಿ ಗುರುತಿಸಿಕೊಂಡ ಸರಳ ಸಜ್ಜನ ಯಕ್ಷಗಾನ ಕಲಾವಿದ.
ಶ್ರೀ ಸತ್ಯನಾರಾಯಣ ಪುಣಿಂಚತ್ತಾಯರು ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಪೆರ್ಲ ಸಮೀಪದ ಪಡ್ರೆ ಎಂಬಲ್ಲಿ 1970ನೇ ಇಸವಿ ಮೇ 16ರಂದು ಶ್ರೀ ಗಣಪತಿ ಪುಣಿಂಚತ್ತಾಯ ಮತ್ತು ಶ್ರೀಮತಿ ಗೀತಾ ದಂಪತಿಗಳ ಮಗನಾಗಿ ಜನಿಸಿದರು. ಪೆರ್ಲ ಸತ್ಯನಾರಾಯಣ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ ವರೆಗೆ ಓದಿ ಆಳಿಕೆಯಲ್ಲಿ ಪದವಿಪೂರ್ವ ಶಿಕ್ಷಣವನ್ನು ಪಡೆದಿದ್ದರು. ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಪದವೀಧರನಾಗಿ ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನು (ಎಂ.ಎ ) ಪಡೆದರು. ಮೈಸೂರಿನಲ್ಲಿ ಬಿಎಡ್ ಶಿಕ್ಷಣವನ್ನೂ ಪೂರೈಸಿದರು.
1994ರಲ್ಲಿ ಪೆರ್ಲ ಪೆರ್ಲ ಸತ್ಯನಾರಾಯಣ ಎಲ್.ಪಿ ಶಾಲೆಗೆ ಅಧ್ಯಾಪಕರಾಗಿ ಸೇರಿದ್ದರು. ಪ್ರಸ್ತುತ ಇವರು ಪ್ರೌಢಶಾಲಾ ಅಧ್ಯಾಪಕ. ಇವರಿಗೆ ಬಾಲ್ಯದಲ್ಲೇ ಯಕ್ಷಗಾನಾಸಕ್ತಿ ಇತ್ತು. ತಂದೆ ಶ್ರೀ ಗಣಪತಿ ಪುಣಿಂಚತ್ತಾಯರು ತಾಳಮದ್ದಳೆ ಅರ್ಥಧಾರಿಯಾಗಿದ್ದರು. ಇವರೂ, ಇವರ ಕಿರಿಯ ಸಹೋದರ ಸತ್ಯನಾರಾಯಣ ಪುಣಿಂಚತ್ತಾಯರೂ ತಂದೆಯ ಜತೆ ತಾಳಮದ್ದಲೆಗೆ ಹೋಗುತ್ತಿದ್ದರು. ಆಗ ಬಲಿಪ ಭಾಗವತರು ಆ ಪರಿಸರದಲ್ಲಿ ನಡೆಯುತ್ತಿದ್ದ ಆಟಕೂಟಗಳಲ್ಲಿ ಭಾಗವಹಿಸುತ್ತಿದ್ದರು. (ಬಲಿಪರ ಹುಟ್ಟೂರು) ಧರ್ಮಸ್ಥಳ ಮೇಳದ ಮದ್ದಳೆಗಾರರಾದ ಶೇಣಿ ಸುಬ್ರಹ್ಮಣ್ಯ ಭಟ್ಟರು ಒತ್ತಾಯ ಮಾಡಿ ಪ್ರದರ್ಶನಗಳಿಗೆ ಕರೆದೊಯ್ಯುತ್ತಿದ್ದರಂತೆ. ಊಟ ಮಾಡಿ ತಾಳಮದ್ದಳೆ ಕೇಳುವುದು, ಆಯಾಸವಾದಾಗ ನಿದ್ದೆ ಮಾಡುವುದು. ಹೀಗೆ ಸಾಗಿತ್ತು ಬಾಲ್ಯದ ಬದುಕು.
ಚೆಂಡೆ, ಮದ್ದಳೆ, ಶ್ರುತಿಯ ನಿನಾದವನ್ನು ಕೇಳಿಯೇ ಬೆಳೆದವರು. ಹಾಗಾಗಿ ತಾಳ, ಲಯ, ಶೃತಿಜ್ಞಾನವು ಉಂಟಾಗಿತ್ತು. ಭಾಗವತಿಕೆಯನ್ನು ಸರಿಯಾಗಿ ಅಭ್ಯಸಿಸುವ ಮೊದಲೇ ಅನಿವಾರ್ಯವಾಗಿ ಆಟಕ್ಕೆ ಪದ್ಯ ಹೇಳುವ ಸಂದರ್ಭವೇರ್ಪಟ್ಟಿತ್ತು. ಪೆರ್ಲ ಶಾಲಾ ಮಕ್ಕಳ ಯಕ್ಷಗಾನ ಸ್ಪರ್ಧೆ. ಅತಿಕಾಯ ಮೋಕ್ಷ ಪ್ರಸಂಗ. ಭಯವಾಗಿತ್ತು ಇವರುಗೆ. ಆದರೆ ಅನಿವಾರ್ಯ. ಒತ್ತಾಯಕ್ಕೆ ಕಟ್ಟುಬಿದ್ದು ಪದ್ಯ ಹೇಳಿದ್ದರು. ಅಂದೇ ಸಭಾಕಂಪನ ದೂರವಾಗಿತ್ತು.
ಇವರು ಭಾಗವತಿಕೆ ಕಲಿತುದು ಕೋಟೆ ಶ್ರೀ ನಾರಾಯಣ ಭಟ್ಟರಿಂದ. ತಮ್ಮ ಸತ್ಯನಾರಾಯಣ ಪುಣಿಂಚತ್ತಾಯರೂ ಜತೆಯಾಗಿ ಕಲಿತುದು. ಇದಕ್ಕೆ ಪೂರಕವಾಗಿ ಶ್ರೀ ಪದ್ಮನಾಭ ಆಚಾರ್ಯ ಸ್ವರ್ಗ ಮತ್ತು ಶ್ರೀ ನರಸಿಂಹ ಹೇರಳ ಪುತ್ತೂರು ಇವರಿಂದ ಶಾಸ್ತ್ರೀಯ ಸಂಗೀತ ಕಲಿಕೆ. ಸೀನಿಯರ್ ವರೆಗೆ ಪಾಠ. ಅಕ್ಕ ವತ್ಸಲಾ ಪುಣಿಂಚತ್ತಾಯಯರೂ ಕಲಿತಿದ್ದರು. ವತ್ಸಲಾ ವಿದ್ವತ್ ವರೆಗೆ ಕಲಿತಿದ್ದರು. ಅಕ್ಕ ವತ್ಸಲಾ ವಿವಾಹಿತೆ. ಶ್ರೀ ರಾಮಚಂದ್ರ ಬಡಿಕಿಲ್ಲಾಯರ ಪತ್ನಿ.
ಕಲಿಯುತ್ತಾ ಇರುವಾಗಲೇ ಆಟಕೂಟಗಳಿಗೆ ಪದ್ಯ ಹೇಳುವ ಅವಕಾಶಗಳೂ ಸಿಕ್ಕಿತ್ತು. “ಪೆರ್ಲ ಅಯ್ಯಪ್ಪ ಮಂದಿರದ ಆಟ. ಶ್ರೇಷ್ಠ ಕಲಾವಿದರ ಕೂಡುವಿಕೆ. ಭಾಗವತರು ಬಂದಿರಲಿಲ್ಲ. ಅಂದು ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ಚೆಂಡೆಗೆ. ಭಾಗವತರು ಬರುವ ವರೆಗೆ ಪದ್ಯ ಹೇಳಲು ಸೂಚನೆ ಬಂದಿತ್ತು. ನಾನು ಒಪ್ಪಲಿಲ್ಲ. ಹೆದರಿ ಕಂಗಾಲಾಗಿದ್ದೆ. ಚಿಪ್ಪಾರು ಮದ್ದಳೆಗಾರರು ಧೈರ್ಯ ತುಂಬಿದರು. ಪದ್ಯ ಹೇಳು ಎಂದು ಹೇಳಿದರು. ಅವರು ನನ್ನನ್ನು ಮುನ್ನಡೆಸಿದರು. ನಾಲ್ಕೈದು ಪದ್ಯ ಹೇಳಿದಾಗ ಭಾಗವತರು ಬಂದಿದ್ದರು. ಅವರನ್ನು ಕಂಡಾಗ ಬೆಟ್ಟವನ್ನು ತಲೆಯಿಂದ ಇಳಿಸಿದ ಅನುಭವವಾಯಿತು”. ಅಂದಿನ ದಿನವನ್ನು ಹೀಗೆ ನೆನಪಿಸುತ್ತಾರೆ ಶ್ರೀ ಸತೀಶ ಪುಣಿಂಚತ್ತಾಯರು.
ಸಾಮಾನ್ಯ 1990-91ರಲ್ಲಿ ಶ್ರೀ ಸಬ್ಬಣಕೋಡಿ ರಾಮ ಭಟ್ಟರು ಪಡ್ರೆಗೆ ಬಂದಾಗ ವಾಸ್ತವ್ಯ ಹೂಡಿದ್ದರು. ಅವರಿಂದ ಸಹಕಾರವೂ ಸಿಕ್ಕಿತ್ತು. ಅವರಿಂದ ಯಕ್ಷಗಾನ ಪಾಠಗಳನ್ನೂ ಕಲಿತಿದ್ದರು. “ಅಂದಿನಿಂದ ಇಂದಿನವರೆಗೆ ಶ್ರೀ ಸಬ್ಬಣಕೋಡಿ ರಾಮ ಭಟ್ಟರು ಆತ್ಮೀಯರಾಗಿ ಬಂಧುವಿನಂತೆ ಸಹಕರಿಸಿದ್ದಾರೆ” ಎಂಬುದು ಪುಣಿಂಚತ್ತಾಯರು ಅಭಿಪ್ರಾಯ. ಕಾರ್ಯಕ್ರಮ ಕಡಿಮೆಯಿದ್ದ ಕಾಲ. ಪ್ರತಿಭಾ ಪ್ರಕಟಣೆಗೆ ವೇದಿಕೆ ಬೇಕೆಂಬ ನೆಲೆಯಲ್ಲಿ ಮೇಳ ಮಾಡುವ ಯೋಚನೆಯನ್ನೂ ಮಾಡಿದ್ದರು. ಶ್ರೀ ಸತೀಶ ಪುಣಿಂಚತ್ತಾಯರಿಗೆ ಮೇಳ ನಡೆಸುವಂತೆ ಸೂಚನೆ ನೀಡಿದ್ದು ಮದ್ಲೆಗಾರ ಶ್ರೀ ಬಾಲಕೃಷ್ಣ ಕಾಟುಕುಕ್ಕೆ. ಕೊಲ್ಲಂಗಾನ ಮೇಳವನ್ನು ನಡೆಸುವ ನಿರ್ಧಾರ. ಆ ಕಾಲದಲ್ಲಿ ಕೊಲ್ಲಂಗಾನ ಕ್ಷೇತ್ರದಲ್ಲಿ ಶ್ರೀ ಅನಂತಪದ್ಮನಾಭ ಉಪಾಧ್ಯಾಯರ ಮಾರ್ಗದರ್ಶನದಲ್ಲಿ ತಾಳಮದ್ದಳೆಗಳು ನಡೆಯುತ್ತಿತ್ತು.
ಪ್ರಸ್ತುತ ಶ್ರೀ ಕ್ಷೇತ್ರ ಕೊಲ್ಲಂಗಾನದ ಬ್ರಹ್ಮಶ್ರೀ ತಂತ್ರಿ ಗಣಧಿರಾಜ ಉಪಾಧ್ಯಾಯರು ಕಲಾ ಸಂಬಂಧಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ತಂತ್ರಿಗಳ ನಿರ್ದೇಶನದಂತೆ 1998ರಲ್ಲಿ ಕೊಲ್ಲಂಗಾನ ಮೇಳ ಆರಂಭ. ಪುತ್ತೂರು ಶೀನಪ್ಪ ಭಂಡಾರಿಗಳ ವೇಷಭೂಷಣ. ಅನಿವಾರ್ಯವಾದರೆ ಕಂಬನೆಡುವುದು, ರಂಗಸ್ಥಳ ಹಾಕುವುದು, ಭಾಗವತಿಕೆ ಹೀಗೆ ಎಲ್ಲಾ ಕೆಲಸಗಳ ಅನುಭವ. ಸರ್ವ ಹೊಣೆಯನ್ನೂ ಹೊತ್ತು ಮೇಳ ನಡೆಸಿದರು. ಇಷ್ಟೆಲ್ಲಾ ಮಾಡಿದ್ದು ಕೊಲ್ಲಂಗಾನ ಯಕ್ಷಪ್ರೇಮಿಗಳ ಸಹಕಾರದಿಂದ. ಕೊಲ್ಲಂಗಾನ ಶ್ರೀ ಕ್ಷೇತ್ರದ ಭಕ್ತರು – ಉಪಾಧ್ಯಾಯರ ನಿರ್ದೇಶನದಲ್ಲಿ ಮುನ್ನಡೆಯುವ ಕಲಾಸೇವಕರೇ ಕೊಲ್ಲಂಗಾನ ಯಕ್ಷಪ್ರೇಮಿಗಳು. ಕಾರ್ಯಕ್ರಮಗಳು ಹೆಚ್ಚಾಗಿ ಮೇಳಕ್ಕೆ ಒಳ್ಳೆಯ ಹೆಸರೂ ಬಂದಿತ್ತು.
ಶ್ರೀ ಸತೀಶ ಪುಣಿಂಚತ್ತಾಯರು 1999ರಲ್ಲಿ ಮಧುರಾ ಅವರನ್ನು ವಿವಾಹವಾಗಿ ಗೃಹಸ್ಥಾಶ್ರಮಿಯಾದರು. ಸಾಂಸಾರಿಕ ಹೊಣೆಯಿದ್ದುದರಿಂದ ಮೇಳ ಬಿಡಬೇಕಾಯಿತು. ಆ ಸಮಯ ಶ್ರೀ ಗಣಾಧಿರಾಜ ಉಪಾಧ್ಯಾಯರು ಕೊಲ್ಲಂಗಾನ ಮೇಳದ ಹೊಣೆ ಹೊತ್ತು ಮುನ್ನಡೆಸಿದ್ದು ಇವರಿಗೆ ಅನುಕೂಲವೇ ಆಗಿತ್ತು. ಬಳಿಯೇ 8 ವರ್ಷ ಊರ ಪರವೂರಲ್ಲಿ ನಡೆಯುವ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು. ನಂತರ ಬಪ್ಪನಾಡು ಮೇಳಕ್ಕೆ. ಶಾಲೆಯ ರಜಾದಿನಗಳಲ್ಲಿ ಮಾತ್ರ ವ್ಯವಸಾಯ. ಒಳ್ಳೆಯ ಅವಕಾಶಗಳೂ ಸಿಕ್ಕಿತ್ತು. ಸಂಚಾಲಕರು ಮತ್ತು ವ್ಯವಸ್ಥಾಪಕರ ಸಹಕಾರ. ಅರುವ ಕೊರಗಪ್ಪ ಶೆಟ್ಟಿ, ಮಧೂರು ರಾಧಾಕೃಷ್ಣ ನಾವಡ, ಕಟೀಲು ಭಾಸ್ಕರ ಭಟ್, ಚಂದ್ರಶೇಖರ ಕಕ್ಕೆಪದವು, ನೆಕ್ಕರೆಮೂಲೆ ಗಣೇಶ ಭಟ್ ಮೊದಲಾದವರ ಒಡನಾಟವೂ ಸಿಕ್ಕಿತ್ತು.
ಮರುವರ್ಷ ಶ್ರೀ ಗಣಾಧಿರಾಜ ಉಪಾಧ್ಯಾಯರ ಮತ್ತು ಮ್ಯಾನೇಜರ್ ಮಹೇಶ ಮುಳಿಯಾರು ಅವರ ಕರೆಯಂತೆ ಮತ್ತೆ ಕೊಲ್ಲಂಗಾನ ಮೇಳಕ್ಕೆ. 4 ವರುಷಗಳಿಂದ ಕೊಲ್ಲಂಗಾನ ಮೇಳದ ಕಲಾಸೇವೆ ಮುಗಿಸಿ ಮಂಗಳಾದೇವಿ ಮೇಳದಲ್ಲೂ ಅವಕಾಶ ಸಿಕ್ಕಿತ್ತು. ಗೆಳೆಯ ಶ್ರೀ ಸುಬ್ರಹ್ಮಣ್ಯ ಶಗ್ರಿತ್ತಾಯ ಅವರ ಮೂಲಕ ಈ ಅವಕಾಶ ಸಿಕ್ಕಿತ್ತು. ಮೇಳದ ಯಜಮಾನರ ಮತ್ತು ಸರ್ವಕಲಾವಿದರ ಸಹಕಾರವೂ ಸಿಕ್ಕಿತ್ತು.
ಮಳೆಗಾಲದಲ್ಲಿ ಮಕ್ಕಳನ್ನೂ ಹಳ್ಳಿಗರನ್ನೂ ಯಕ್ಷಗಾನದತ್ತ ಆಕರ್ಷಿಸಲು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಶೇಣಿ ಗೋಪಾಲಕೃಷ್ಣ ಭಟ್ಟರ ಮೊಮ್ಮಗ ಶೇಣಿ ವೇಣುಗೋಪಾಲ ಭಟ್ ಇವರ ಜತೆಗೂಡಿ :ಶೇಣಿ ರಂಗಜಂಗಮ ಟ್ರಸ್ಟ್ (ರಿ) ಎಂಬ ಸಂಸ್ಥೆಯಡಿ ಊರಿನ ಪ್ರತಿಭಾನ್ವಿತ ಕಲಾವಿದರನ್ನು ಸೇರಿಸಿ ತಾಳಮದ್ದಳೆ ಕೂಟಗಳನ್ನು ಏರ್ಪಡಿಸಲು ತೊಡಗಿದರು. ಕಳೆದ 5 ವರ್ಷಗಳಿಂದ ನೂರಕ್ಕೂ ಮಿಕ್ಕಿ ತಾಳಮದ್ದಳೆ ಕಾರ್ಯಕ್ರಮಗಳು ನಡೆದಿವೆ. ಇದನ್ನು ನಿರಂತರ ಮುಂದುವರಿಸುವ ಯೋಜನೆ ಇವರದು.
ಸತೀಶ ಪುಣಿಂಚತ್ತಾಯರು ಯಕ್ಷಗಾನ ಭಾಗವತನೊಬ್ಬ ಡಾಕ್ಟರೇಟ್ ಪದವಿ ಪಡೆದ ಅಪರೂಪದ ಸಾಧನೆ ಮಾಡಿದ್ದಾರೆ. ತೆಂಕು ಮತ್ತು ಬಡಗು ತಿಟ್ಟು ಭಾಗವತಿಕೆಗಳ ಬಗ್ಗೆ ತೌಲನಿಕ ಅಧ್ಯಯನ ನಡೆಸಿ ಸಂಶೋಧನಾ ಪ್ರಬಂಧ ಮಂಡಿಸಿ ಕಣ್ಣೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಶ್ರೀ ಸತೀಶ ಪುಣಿಂಚತ್ತಾಯ ಮತ್ತು ಮಧುರಾ ದಂಪತಿಗಳ ಪುತ್ರ ಮಾ| ಸಮೃದ್ಧ ಪುಣಿಂಚತ್ತಾಯ. ಪೆರ್ಲ ಶಾಲೆಯ ಆರನೇ ತರಗತಿ ವಿದ್ಯಾರ್ಥಿ. ಯಕ್ಷಗಾನ ಭಾಗವತಿಕೆ ಅಭ್ಯಾಸ ಮಾಡಿ ಕೊಲ್ಲಂಗಾನ ಮೇಳದಲ್ಲಿ ಚಕ್ರತಾಳ ಬಾರಿಸುತ್ತಾನೆ. ಮಾ| ಸಮೃದ್ಧ ಪುಣಿಂಚತ್ತಾಯನಿಗೆ ಉಜ್ವಲ ಭವಿಷ್ಯವನ್ನು ನಾವೆಲ್ಲರೂ ಹಾರೈಸೋಣ. ಅಧ್ಯಾಪಕ, ಭಾಗವತ ಶ್ರೀ ಸತೀಶ ಪುಣಿಂಚತ್ತಾಯರಿಗೆ ಕಲಾಮಾತೆಯ ಸೇವೆಯನ್ನು ನಿರಂತರವಾಗಿ ಮಾಡುವ ಅವಕಾಶಗಳನ್ನು ಶ್ರೀ ದೇವರು ಅನುಗ್ರಹಿಸಲಿ ಎಂಬ ಹಾರೈಕೆಗಳು.