ನಮ್ಮ ಕರಾವಳಿಯ ಗಂಡು ಕಲೆ ಯಕ್ಷಗಾನ. ಯಕ್ಷಗಾನ ರಂಗದಲ್ಲಿ ಅನೇಕ ಯುವ ಕಲಾವಿದರು ನಮಗೆ ನೋಡಲು ಸಿಗುತ್ತಾರೆ ಅದರಲ್ಲಿ ಒಬ್ಬರು ಯುವ ಚಂಡೆ ಮದ್ದಳೆ ವಾದಕರು ಶ್ರವಣ್ ಕುಮಾರ್ ಕೊಳಂಬೆ. ಚಿಕ್ಕ ವಯಸ್ಸಿನಲ್ಲಿ ಯಕ್ಷಗಾನಕ್ಕೆ ಮನಸೋತು ಯಕ್ಷರಂಗಕ್ಕೆ ಅನೇಕ ಯುವ ಕಲಾವಿದರನ್ನು ಕೊಟ್ಟ ಯಕ್ಷರಂಗದ ಗುರು ಹರಿನಾರಾಯಣ ಬೈಪಾಡಿತ್ತಾಯ ಇವರಿಂದ ಚೆಂಡೆ ಹಾಗೂ ಮದ್ದಳೆ ಅಭ್ಯಾಸ ಮಾಡಿರುತ್ತಾರೆ.
ದಿನಾಂಕ 07.09.1989 ಸೆಪ್ಟೆಂಬರನಲ್ಲಿ ಇವರ ಜನನ. ತಂದೆ ದಿವಂಗತ ಪ್ರಭಾಕರ್ ರಾವ್ ಕೊಳಂಬೆ ಹಾಗೂ ತಾಯಿ ರಾಜೇಶ್ವರಿ ಪಿ. ಇವರ ತಂದೆ ಸ್ವತಃ ತಲಕಳ ದೇವಸ್ಥಾನದ ಹಾಗೂ ಮೇಳದ ಪೂಜೆಯವರು ಆಗಿದ್ದರು. ಅಲ್ಲದೆ ಕೊಳಂಬೆ ಪೋಸ್ಟ್ ನ ಪೋಸ್ಟ್ ಮಾಸ್ಟರ್ ಕೂಡ ಆಗಿದ್ದರು. ಇವರು ಕೂಡ ಭಾಗವತಿಗೆ , ಚೆಂಡೆ , ಮದ್ದಳೆ ನುಡಿಸುತ್ತಿದ್ದರು ಹಾಗೂ ಯಕ್ಷಗಾನದಲ್ಲಿ ವೇಷ ಕೂಡ ಮಾಡುತ್ತಿದ್ದರು. ಹೀಗೆ ಇವರ ಮನೆಯೇ ಒಂದು ಯಕ್ಷಗಾನದ ಪರಿಸರ.
ಆಟೋಮೊಬೈಲ್ ಡಿಪ್ಲೋಮಾ ಪದವಿಯನ್ನು ಪಡೆದಿರುವ ಇವರು ಮಂಗಳೂರಿನಲ್ಲಿ ಯುನೈಟೆಡ್ ಟೊಯೊಟಾ ಕಂಪೆನಿಯಲ್ಲಿ ಅಸಿಸ್ಟೆಂಟ್ ಮನೇಜರ್ ವೃತ್ತಿಯಲ್ಲಿ ಇದ್ದಾರೆ. ಇದರ ಜೊತೆಗೆ ಪೆನ್ಸಿಲ್ ಡ್ರಾಯಿಂಗ್ ನಲ್ಲಿ ಪರಿಣತರು. ಉತ್ತಮ ಹಾಡುಗಾರರು ಆದ ಇವರು ನಕ್ಷತ್ರ ಲೋಕ ಯೂಟ್ಯೂಬ್ ಚಾನೆಲ್ ನಲ್ಲಿ ನಡೆಯುವ ಕರಾವಳಿ ಗಾನ ಕೋಗಿಲೆ Season 1 ಇದರ ತೀರ್ಪುಗಾರರೂ ಆಗಿದ್ದರೆ. ರಾಜ್ಯದ ಹಲವಾರು ಕಡೆ ಹಲವಾರು ಕಾರ್ಯಕ್ರಮದಲ್ಲಿ ನಿರೂಪಣೆಯನ್ನು ಮಾಡಿರುವ ಇವರು ಒಂದು ಉತ್ತಮ ನಿರೂಪಕರು ಕೂಡ. ಹೀಗೆ ಇವರು ಒಬ್ಬರು ಬಹುಮುಖ ಪ್ರತಿಭೆ. ಇಷ್ಟೆಲ್ಲಾ ಇದ್ದರೂ ಶ್ರವಣ್ ಕುಮಾರ್ ಕೊಳಂಬೆಯವರಲ್ಲಿ ನಿಮಗೆ ಏನು ತುಂಬಾ ಇಷ್ಟ ಅಂತ ಕೇಳಿದ್ರೆ ಯಕ್ಷಗಾನ ಹಾಗೂ ಚೆಂಡೆ ಮದ್ದಳೆ ವಾದನ ಅಂತ ಹೇಳುತ್ತಾರೆ.
12.12.2018 ರಲ್ಲಿ ವಿದುಷಿ ರೂಪಶ್ರೀ ಇವರನ್ನು ವಿವಾಹ ಆಗಿ ಸುಂದರ ಸಂಸಾರ ನಡೆಸುತ್ತಿದ್ದಾರೆ. ಇವರ ಶ್ರೀಮತಿ ಶಾಸ್ತ್ರೀಯ ಸಂಗೀತದಲ್ಲಿ ಅನೇಕ ಸಾಧನೆಯನ್ನ ಮಾಡಿದ್ದು ಅನೇಕ ಟಿವಿ ಚಾನೆಲ್ ಗಳಲ್ಲಿ ಇವರ ಸಂಗೀತ ಕಾರ್ಯಕ್ರಮಗಳು ಪ್ರಸಾರವಾಗಿವೆ , ರಾಜ್ಯದ ಹಲವಾರು ಕಡೆ ಸಂಗೀತ ಕಾರ್ಯಕ್ರಗಳನ್ನು ನೀಡಿದ ಇವರಿಗೆ ಹಲವಾರು ಪ್ರಶಸ್ತಿಗಳು ದೊರೆತಿರುತ್ತದೆ, ಅಲ್ಲದೆ ಬಜ್ಪೆಯಲ್ಲಿ ಶಾಸ್ತ್ರೀಯ ಸಂಗೀತದ ತರಗತಿಯನ್ನು ಮಾಡುತ್ತ ಸಂಗೀತ ಕಲಿಯುವ ಸಾಕಷ್ಟು ವಿದ್ಯಾರ್ಥಿಗಳಿಗೆ ದಾರಿದೀಪವಾಗಿ ಇದ್ದಾರೆ. ಅಲ್ಲದೆ *ರೂಪಾಶ್ರವಣ್* ಕೊಳಂಬೆ ಎಂಬ ಆರ್ಕೆಸ್ಟ್ರಾ ತಂಡವನ್ನು ಕೂಡ ನಡೆಸುತ್ತಾ ಇದಾರೆ. ಶ್ರೀಯುತ ಶ್ರವಣ್ ಕುಮಾರ್ ಕೊಳಂಬೆ ಇವರ ಯಕ್ಷಗಾನ ಹಾಗೂ ಸಂಗೀತ ಕ್ಷತ್ರದಲ್ಲಿ ಇನಷ್ಟು ಸಾಧನೆ ಮಾಡಲಿ ಎಂದು ದೇವರಲ್ಲಿ ಪ್ರಾರ್ಥನೆ.
ವಾರ್ಧಕ : ಧರಣಿಯಂ ಪಾರ್ಥಿವರ್ ಸೋತಮೇಲರಿಗಳಂ ಧುರದೊಳಂ ಜೈಸಿಕೊಂಬುದು ಧರ್ಮಮೆಂದಾತ ಗರುಹೆನುತಲಾಪ್ತರೊಡನಾಲೋಚಿಸುತ ಹರಿಯ ತನ್ನೊಳಗೆ ಮಾಳ್ಪಮನದಿ | (22ರ ಪೂರ್ವಾರ್ಧ) ಪ್ರಸಂಗ ಪದ್ಯಗಳ ಆಧಾರದಿಂದ; ಧರ್ಮರಾಯನು ದ್ರುಪದ ಪುರೋಹಿತನನ್ನು ಹಸ್ತಿನಾವತಿಗೆ ಸಂಧಿಗಾಗಿ ಕಳುಹಿಸುತ್ತಾನೆ. ಕೃಷ್ಣನು ‘ವಿವೇಕಿಯೋರ್ವನನಟ್ಟಿ’ ಎಂದಷ್ಟೇ ಹೇಳಿದ್ದಾನೆ. ಹಸ್ತಿನಾವತಿಗೆ ಹೋದಂತಹ ದ್ರುಪದ ಪುರೋಹಿತರಿಗೆ ದುರ್ಯೋಧನನು ‘‘ಅರಿಗಳಂ ಧುರದೊಳಂ ಜೈಸಿಕೊಂಬುದು ಧರ್ಮವೆಂದಾತಗರುಹು’’ ಎಂದು ಹೇಳಿದ್ದಾನೆ. ದ್ರುಪದ ಪುರೋಹಿತನು ಹಿಂದಿರುಗಿ ಬಂದು ಧರ್ಮರಾಯನಲ್ಲಿ ದುರ್ಯೋಧನನ ಮಾತುಗಳನ್ನು ತಿಳಿಸಿದನೇ? ‘ಅರುಹು’ ಎಂಬುದಾಗಿ ವಾಚಕವಿರುವುದರಿಂದ ತಿಳಿಸಿರಬಹುದೆಂದು ಊಹಿಸಬಹುದು; ಆದರೆ ಪ್ರಸಂಗದಲ್ಲಿ ದ್ರುಪದ ಪುರೋಹಿತ ಹಿಂದಿರುಗಿ ಬಂದನೆಂದೂ; ತಿಳಿಸಿದನೆಂಬುದಕ್ಕೆ ಆಧಾರ ಸಾಲದು.
ನಮ್ಮ ಕೆಲವು ಯಕ್ಷಗಾನ ಕಲಾವಿದರು ಪ್ರಸಂಗಕ್ಕೆ ಅರ್ಥೈಸುವಾಗ ದ್ರುಪದ ಪುರೋಹಿತರೆಂದರೆ ‘ಶತಾನಂದ’ರೆಂದು ಹೇಳುತ್ತಲೇ ಬಂದಿದ್ದಾರೆ. ಇದಕ್ಕೆ ಎಲ್ಲಿದೆ ಆಧಾರ? ದೇರಾಜೆ ಸೀತಾರಾಮಯ್ಯನವರ ‘‘ಶ್ರೀಮನ್ಮಹಾಭಾರತ ಕಥಾಮೃತಂ’’ ಗದ್ಯಕಾವ್ಯದಲ್ಲಿ ‘ದ್ರುಪದ ರಾಜನು ಒಳ್ಳೆಯ ಮುಹೂರ್ತ ನೋಡಿ ತನ್ನ ಪುರೋಹಿತರಾದ ಶತಾನಂದರನ್ನು ಏಕಾಂತವಾಗಿ ಕರೆಸಿಕೊಂಡು ಧೃತರಾಷ್ಟ್ರನಲ್ಲಿಗೆ ಹೋಗಿ ಧರ್ಮಯುಕ್ತವಾದ ಹಿತವಾದಗಳನ್ನು ಹೇಳಿ, ಅವರ ಎಲ್ಲ ಪ್ರಮುಖ ವೀರರನ್ನು ದುರ್ಯೋಧನನ ಮಾರ್ಗದಿಂದ ತಿರುಗಿಸಬೇಕು ಎಂದು ಬರೆದಿದ್ದಾರೆ. (ಪುಟ 441-442) ದೇರಾಜೆಯವರು ಮತ್ತು ಮುಂದೆ ಹೋಗಿ ಶತಾನಂದರಲ್ಲಿ; ಅಲ್ಲಿದ್ದು ಬೇಹುಗಾರಿಕೆ ಮಾಡುವಂತೆ ಸೂಚಿಸಿದ್ದಾರೆ. (ಪ್ರಸಂಗದಲ್ಲಿ ದ್ರುಪದ ಪುರೋಹಿತರು ಹಿಂದಿರುಗಿ ಬಂದ ಸೂಚನೆ ಲಭಿಸದಿರುವುದಕ್ಕೆ ದೇರಾಜೆಯವರ ಸಮಾಧಾನ) ದೇರಾಜೆಯವರು ಬರೆದಿರುವ ಕೆಲವು ಅಂಶಗಳಿಗೆ ವ್ಯಾಸಭಾರತದ ಉದ್ಯೋಗಪರ್ವದ ಆರನೆಯ ಅಧ್ಯಾಯ ಆಧಾರ.
ಶಿಷ್ಯೆ : ಪರಿವೃತೋ ವಿದ್ವಾನ್ ನೀತಿಶಾಸ್ತ್ರಾರ್ಥ ಕೋವಿದಃ ಪಾಂಡವನಾಂ ಹಿತಾರ್ಥಾಯ ಕೌರವಾನ್ ಪ್ರತಿಜನ್ಮಿವಾನ್ (6-19) ವ್ಯಾಸಭಾರತದಲ್ಲಿ ಮುಂದುವರಿದು ಇಪ್ಪತ್ತನೆಯ ಅಧ್ಯಾಯದಲ್ಲಿ ‘‘ದ್ರುಪದ ಪುರೋಹಿತಸ್ಯ ಕೌರವ ಸಭಾಯಾಂ ಭಾಷಣಮ್’’ ಎಂಬುದಾಗಿ ಇಪ್ಪತ್ತೊಂದು ಶ್ಲೋಕ ಛಂದಸ್ಸಿನಲ್ಲಿ ಅವನ ಮಾತುಗಳಿವೆ. ಅನಂತರ ಇಪ್ಪತ್ತೊಂದನೆಯ ಅಧ್ಯಾಯದಲ್ಲಿ ದ್ರುಪದ ಪುರೋಹಿತನ ಮಾತುಗಳನ್ನೊಪ್ಪಿದ ಭೀಷ್ಮರ ಮಾತುಗಳಿವೆ. ವ್ಯಾಸರಲ್ಲಿ ‘ದ್ರುಪದ ಪುರೋಹಿತ’ ಎಂಬ ವಾಚಕವಿದೆಯೇ ವಿನಾ ನಾಮನಿರ್ದೇಶವಿಲ್ಲ. ಮಹಾಭಾರತದ ಕತೆಗೆ ಸಂಬಂಧಿಸಿದ ಯಕ್ಷಗಾನದ ಹೆಚ್ಚಿನ ಪ್ರಸಂಗಗಳಿಗೆ ಕುಮಾರವ್ಯಾಸನ (ಕಾಲ ಸು. 1430) ‘ಕರ್ಣಾಟ ಭಾರತ ಕಥಾಮಂಜರಿ’ಯೇ ಮೂಲ ಆಕರ. ದ್ರುಪದ ಪುರೋಹಿತನ ನಾಮನಿರ್ದೇಶ ಕುಮಾರವ್ಯಾಸನಲ್ಲಿ ಇದೆಯೇ? ಹಸ್ತಿನಾವತಿಗೆ ರಾಯಭಾರಿಯಾಗಿ ಯಾರು ಯಾರನ್ನು ಕಳುಹಿಸಿದರು?
ಬಳಿಕ ಸುಮುಹೂರ್ತದಲಿ ಮತ್ಸ್ಯನ ಹೊಳಲ ಹೊರವಂಟುತ್ತರ ದಿಶಾ ವಳಯದಲಿ ರಚಿಸಿದರುಪಪ್ಲವ್ಯಾಖ್ಯಪುರವರವ ನೆಲನಗಲದಲಿ ಕಟ್ಟಿಕೇರಿಯ ನಳವಡಿಸಿದರು ನಿಖಿಳ ನೃಪರಿಗೆ ಬಳಿಯನಟ್ಟಿದನುತ್ತರೋತ್ತರವಾದುದಿವರುದಯ (ವಿ. ಪ. 10-44) ಅಭಿಮನ್ಯು-ಉತ್ತರೆಯರ ವಿವಾಹ ಕಾರ್ಯ ಇಲ್ಲಿ ನಡೆಯಿತು. ಮದುವೆಗೋಸುಗ ಬಂದೆವಾವಿ ನ್ನದರ ಮೇಲಣ ರಾಜಕಾರ್ಯದ ಹದನವಟ್ಟುವುದರುಹುವುದು ಬಹೆವಾವುಕರೆಸಿದಡೆ (ವಿ. ಪ. 10-12ರ ಪೂರ್ವಾರ್ಧ)
ಕಳುಹುವುದು ಶಿಷ್ಟರನು ಧರಣೀ ತಳವ ಬೇಡಿಸುವಲ್ಲಿ ಸಾಮವ ಬಳಸುವುದು ಭೀಷ್ಮಾದಿಗಳ ಕಟ್ಟುವುದು ವಿನಯದಲಿ ತಿಳಿವುದಾತನ ನೆಲೆಯಲ್ಲಿಂ ಬಳಿಕ ನಯವಿಲ್ಲೆಂದಡಾಹವ ದೊಳಗೆ ಕೈದೋರುವುದು ಮತವೆಂದನು ಮುರಧ್ವಂಸಿ (ಉ. ಪ. 1-5) ಕೂತುಕೊಂಡಿಹುದಿವದ ಮಕ್ಕಳ ನೋಡಲಾಗದು ಹೆಚ್ಚು ಕುಂದನು ನಾಡಬೇಡಲು ಬುದ್ಧಿವಂತರನಲ್ಲಿಗಟ್ಟುವುದು ಕೂಡೆ ಶೋಧಿಸಿ ಸೆಜ್ಜೆಯಲಿ ಮೈ ಗೂಡಿಯಾರೋಗಣೆಗಳಲಿ ಕೈ ಮಾಡಿ, ಬೆರಸಿಹುದೆಂದು ದ್ರುಪದ ವಿರಾಟರಿಗೆ ನುಡಿದ (ಉ. ಪ. 1-13)
ಹಸ್ತಿನಾವತಿಗೆ ‘ಕಳುಹುವುದು ಶಿಷ್ಟರನು’ ಅಥವಾ ‘‘ನಾಡಬೇಡಲು ಬುದ್ಧುವಂತರನಲ್ಲಿಗಟ್ಟುವುದು’’ ಎಂದು ಕೃಷ್ಣನ ಮಾತು; ದ್ರುಪದ ಪುರೋಹಿತನನ್ನು ಕಳುಹಿಸಬೇಕೆಂದು ಸ್ಪಷ್ಟವಾಗಿ ಹೇಳಿಲ್ಲ. ಎಂದು ಕಳುಹಿಸಿಕೊಂಡು ನಾರೀ ವೃಂದ ಯದುಕುಲಸಹಿತ ದೇವ ಮು ಕುಂದ ಬಿಜಯಂಗೈದು ಹೊಕ್ಕನು ದ್ವಾರಕಾಪುರವ ಒಂದು ದಿನದಾ ಲೋಚನೆಯ ನೆಲೆ ಯಿಂದ ಕರೆದು ಪುರೋಹಿತನ ನಲ ವಿಂದ ಕಳುಹಿದ ದ್ರುಪದನಾ ಕೌರವನ ಪಟ್ಟಣಕೆ (ಉ. ಪ. 1-14) ಕುಮಾರವ್ಯಾಸನ ಪ್ರಕಾರ ದ್ರುಪದನೇ ತನ್ನ ಪುರೋಹಿತನನ್ನು ಕೌರವನ ಪಟ್ಟಣಕ್ಕೆ ಕಳುಹಿಸಿದ್ದು; ಯಕ್ಷಗಾನ ಪ್ರಸಂಗದಂತೆ ಧರ್ಮರಾಯನು ದ್ರುಪದ ಪುರೋಹಿತನನ್ನು ಹಸ್ತಿನಾವತಿಗೆ ಹೋಗುವಂತೆ ಹೇಳಿದುದು. ಯಾರೇ ಕಳುಹಿಸಿದರೂ; ಕಳುಹಿಸಿದವನ ಹೆಸರನ್ನು ಸೂಚಿಸಿಲ್ಲ. ಹಸ್ತಿನಾವತಿಗೆ ಬಂದ ಪುರೋಹಿತನು-
ದ್ರುಪದ ರಾಜಪುರೋಹಿತನು ಕುರು ನೃಪನವಿತ್ತಲು ಬಂದು ಕಂಡನು ವಿಪುಳಮತಿ ಮಾತಾಡಿದನು ನಿಜ ರಾಜಕಾರಿಯವ ಕೃಪಣತನದಲಿ ಕೌರವನು ಗುರು ಕೃಪನ ಭೀಷ್ಮನ ಮತವನೊಲ್ಲದೆ ಚೌಪಳ ಕರ್ಣನ ಕೂಡೆ ನಿಶ್ಚೈಸಿದನು ಕಾಳಗವ (ಉ. ಪ. 2-31) ಕುಮಾರವ್ಯಾಸನ ಈ ಮಾತುಗಳಿಂದ ಕೌರವನ ಯುದ್ಧವನ್ನು ನಿಶ್ಚಯಿಸಿ ದ್ರುಪದ ಪುರೋಹಿತನಲ್ಲಿ ಹೇಳಿದನೆಂದು ತಿಳಿಯಬಹುದು. ಪುರೋಹಿತನು ಉಪಪ್ಲವ್ಯಕ್ಕೆ ಹಿಂದಿರುಗಿದನೆಂದು ಊಹಿಸಬಹುದು; ಆಧಾರ ಸಾಲದು.
ದ್ರುಪದ ಪುರೋಹಿತನ ಹೆಸರೇನು? ಗದುಗು ಭಾರತದ ಪ್ರಕಾರ; ಪಾಂಚಾಲೆಯ ವಿವಾಹದ ಅನಂತರ ಪಾಂಡವರು ವಧೂಸಮೇತರಾಗಿ ತಾವು ವಾಸ್ತವ್ಯವಿದ್ದ ಕುಂಭಕಾರನ ಮಂದಿರಕ್ಕೆ ಬಂದು ತಾಯಿ; ಕುಂತಿಯನ್ನು ಕಾಣುತ್ತಾರೆ. ಅಂದು ರಾತ್ರಿ ಅವರು ಪರಸ್ಪರ ವಿವಾಹ-ಯುದ್ಧದ ಕುರಿತು ಮಾತನಾಡುತ್ತಿರುತ್ತಾರೆ. ಇತ್ತ ದ್ರುಪದ ನಂದಿನಿಯ ಸಹೋದರನಾದ ಧೃಷ್ಟದ್ಯುಮ್ನನಿಗೆ ತನ್ನ ಸಹೋದರಿಯನ್ನು ಮದುವೆಯಾದವನು ಕ್ಷತ್ರಿಯನೋ; ವಿಪ್ರನೋ ಎಂಬ ಸಂದೇಹ ಬರುತ್ತದೆ. ಅದನ್ನು ಪರೀಕ್ಷಿಸುವುದಕ್ಕಾಗಿ ಆ ದಿನ ರಾತ್ರಿ ಅವನು ಪುರೋಹಿತನೊಡಗೂಡಿ ಕುಲಾಲ ಭವನದ ಹೊರಭಾಗದಲ್ಲಿದ್ದು ಅವರ ಮಾತುಗಳನ್ನು ಕೇಳುತ್ತಿರುತ್ತಾನೆ-
ಶ್ರೀ ಕಾರ್ತಿಕೇಯ ಕಲಾನಿಲಯ, ಕೋಟೂರು ಇದರ ಪ್ರಾರಂಭ ಕಾಲದಿಂದಲೂ ವೇಷಧಾರಿ ಹಾಗೂ ಹಿಮ್ಮೇಳವಾದಕರಾಗಿದ್ದವರು ಬಳ್ಳಮೂಲೆ ಈಶ್ವರ ಭಟ್ಟರು. ಅಂದಿನ ಪ್ರಸಿದ್ಧ ಕಲಾವಿದ ಹೊಸಹಿತ್ತಿಲು ಮಹಾಲಿಂಗ ಭಟ್ಟರಿಂದ ಯಕ್ಷಗಾನದ ಹೆಜ್ಜೆಯನ್ನೂ, ಪ್ರಸಿದ್ಧ ಹಿಮ್ಮೇಳ ವಾದಕರಾಗಿದ್ದ ಪುಂಡಿಕಾಯಿ ಕೃಷ್ಣ ಭಟ್ಟರಿಂದ ಹಿಮ್ಮೇಳವಾದನವನ್ನೂ ಅಭ್ಯಾಸ ಮಾಡಿ ಹಿರಿಯ ಯಕ್ಷಗಾನ ಕಲಾವಿದ, ನಿವೃತ್ತ ಅಧ್ಯಾಪಕರಾದ (ಚಿಕ್ಕಪ್ಪ) ಅಡ್ಕ ಗೋಪಾಲಕೃಷ್ಣ ಭಟ್ಟರ ನಿರ್ದೇಶನ ಹಾಗೂ ನೇತೃತ್ವದಲ್ಲಿ ಕೆಲವು ವರ್ಷಗಳ ಕಾಲ ವೇಷಧಾರಿಯಾಗಿಯೂ, ಶಾಲಾ ದಿನಗಳಿಂದ ಹಿಡಿದು 40-42 ವರ್ಷಗಳ ಕಾಲ ಹಿಮ್ಮೇಳ ವಾದಕರಾಗಿಯೂ ಮಿಂಚಿದ ಈಶ್ವರ ಭಟ್ಟರು ಕಾಸರಗೋಡಿನಿಂದ ತೊಡಗಿ ತಿರುವನಂತಪುರದ ವರೆಗೂ ಕಲಾನಿಲಯದ ಸದಸ್ಯರಿಂದ ಕನ್ನಡ ಹಾಗೂ ಮಲೆಯಾಳ ಭಾಷೆಗಳಲ್ಲಿ ಯಕ್ಷಗಾನ ಕಾರ್ಯಕ್ರಮಗಳು ನಡೆಯುತ್ತಿದ್ದಂತಹ ಸಂದರ್ಭಗಳಲ್ಲಿ ಎಲ್ಲಾ ಕಾರ್ಯಕ್ರಮಗಳಿಗೂ ಹಿಮ್ಮೇಳವಾದಕರಾಗಿ ಭಾಗವಹಿಸಿದ ಹೆಮ್ಮೆಯ ಕಲಾವಿದರಾಗಿದ್ದರು.
ಐದು ವರ್ಷಗಳ ಹಿಂದೆ ಸಮಾನಮನಸ್ಕ ಗೆಳೆಯರ ಜೊತೆ ಸೇರಿ ‘ಯಕ್ಷತೂಣೀರ ಸಂಪ್ರತಿಷ್ಠಾನ (ರಿ.), ಕೋಟೂರು’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಅದರ ಸ್ಥಾಪಕಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಮುಂದೆ ಇದೇ ಸಂಸ್ಥೆಯ ನೇತೃತ್ವದಲ್ಲಿ ಯಕ್ಷಗಾನ ಕಲಾವಿದರಾಗಿದ್ದ ಪೆರಡಂಜಿ ದಿ. ಗೋಪಾಲಕೃಷ್ಣ ಭಟ್ಟರ ಹಾಗೂ ಕಲಾಪೋಷಕರಾದ ವೇಣುಗೋಪಾಲ ತತ್ವಮಸಿ ಇವರ ಸಹಕಾರದಿಂದ ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಪ್ರಾರಂಭಗೊಂಡ ‘ಯಕ್ಷಬಳಗ ಮುಳಿಯಾರು’ ಇದರ ಬಾಲಕಲಾವಿದರಿಗೆ ಪ್ರಾರಂಭದಿಂದಲೂ ಅಡ್ಕ ಕೃಷ್ಣ ಭಟ್ಟರ ಜೊತೆಗೂಡಿ ನಾಟ್ಯತರಬೇತಿ ನೀಡುತ್ತಾ ಬಂದಿದ್ದರು. ಯಕ್ಷತೂಣೀರ ಹಾಗೂ ಯಕ್ಷಬಳಗದ ಎಲ್ಲಾ ಕಾರ್ಯಕ್ರಮಗಳಲ್ಲೂ ನಿರ್ದೇಶನದ ಜೊತೆ ಹಿಮ್ಮೇಳದಲ್ಲಿಯೂ ಕಾಣಿಸಿಕೊಂಡಿದ್ದರು. ಯಕ್ಷತೂಣೀರ ಸಂಪ್ರತಿಷ್ಠಾನದ ದಶಮಾನೋತ್ಸವ ಆಚರಣೆಯು ಇವರ ಕಲಾಜೀವನದ ಬಲುದೊಡ್ಡ ಆಸೆಯಾಗಿತ್ತು; ಆದರೆ ವಿಧಿಯ ಆಟ ಬೇರೆಯೇ ಆಗಿತ್ತು.
ಸುಮಾರು ಹತ್ತು ವರ್ಷಗಳ ಕಾಲ ಕೇರಳದ ಹಲವಾರು ಶಾಲೆಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಯಕ್ಷಗಾನದ ಹೆಜ್ಜೆಗಳನ್ನು ಕಲಿಸಿ, ಅವರನ್ನು ಕೇರಳ ಶಾಲಾ ಯುವಜನೋತ್ಸವದ ಯಕ್ಷಗಾನ ಸ್ಪರ್ಧೆಗಳ ವೇದಿಕೆಗಳಲ್ಲಿ ಭಾಗವಹಿಸುವಂತೆ ಮಾಡಿ ಬಹುಮಾನವನ್ನು ಪಡೆಯುವಂತೆ ಮಾಡಿದ ಸಮರ್ಥ ಯಕ್ಷಗಾನ ನಿರ್ದೇಶಕರೂ, ಕೆಲವು ಸ್ಪರ್ಧೆಗಳಿಗೆ ತೀರ್ಪುಗಾರರೂ ಆಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ ಶ್ರೀ ಕಾರ್ತಿಕೇಯ ಕಲಾನಿಲಯದ ಸದಸ್ಯರನ್ನೊಡಗೂಡಿಕೊಂಡು ಕೇರಳದ ‘ಕಲಾಮಂಡಲಂ’ ಸಹಿತ ಹಲವೆಡೆ ಮಲೆಯಾಳ ಯಕ್ಷಗಾನ ಪ್ರದರ್ಶನಗಳನ್ನೂ ಸಂಘಟಿಸಿದ ಸಂಘಟಕರಾಗಿಯೂ ತಮ್ಮೊಳಗೆ ಅಡಗಿದ್ದ ಪ್ರತಿಭೆಯನ್ನು ತೋರ್ಪಡಿಸಿದ್ದರು.
ಮಂಗಳೂರು, ತ್ರಿಶ್ಶೂರು, ಕಲ್ಲಿಕೋಟೆ, ಕಣ್ಣೂರು ಮುಂತಾದ ಆಕಾಶವಾಣಿ ಕೇಂದ್ರಗಳ ಯಕ್ಷಗಾನ ಕಾರ್ಯಕ್ರಮಗಳಲ್ಲಿ ಮಾತ್ರವಲ್ಲದೆ ಬೆಂಗಳೂರು ದೂರದರ್ಶನದಲ್ಲಿ ಪ್ರಸಾರವಾದ ದಿ. ಉಪ್ಪಳ ಕೃಷ್ಣ ಮಾಸ್ತರರ ಯಕ್ಷಗಾನ ತಂಡಕ್ಕೆ ಹಿಮ್ಮೇಳವಾದಕರಾಗಿ ತಮ್ಮ ಕಲಾನೈಪುಣ್ಯವನ್ನು ಹೊರಹೊಮ್ಮಿಸಿದ್ದರು. ಅಲ್ಲದೆ ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಬೊಂಬೆಯಾಟ ಸಂಘದ ಕಾರ್ಯಕ್ರಮಗಳಿಗೂ ಹಿಮ್ಮೇಳವಾದನದಲ್ಲಿ ಸಹಕಾರವನ್ನು ನೀಡಿದ್ದರು. ‘ನಿಲಾವರಿಯಾದೆ’ ಎಂಬ ಮಲೆಯಾಳಂ ಸಿನಿಮಾದಲ್ಲೂ ಹಿಮ್ಮೇಳ ವಾದಕರಾಗಿಯೇ ಕಾಣಿಸಿಕೊಂಡಿದ್ದರು. ಸಹೋದರ ಗೋವಿಂದ ಬಳ್ಳಮೂಲೆಯವರ ನೇತೃತ್ವದಲ್ಲಿ ‘ವರ್ಣ ಧ್ವನಿಸುರುಳಿ’ಯ ಮೂಲಕ ಬಿಡುಗಡೆಗೊಂಡ ಕೆಲವು ಹವ್ಯಕ ಹಾಗೂ ಕನ್ನಡ ಭಾಷೆಗಳ ಯಕ್ಷಗಾನ ಕ್ಯಾಸೆಟ್‍ಗಳಲ್ಲಿ ಯಕ್ಷಗಾನದ ‘ಭೀಷ್ಮಾಚಾರ್ಯ’ ದಿ. ಶೇಣಿ ಗೋಪಾಲಕೃಷ್ಣ ಭಟ್ಟರನ್ನೊಳಗೊಂಡ ತಂಡದಲ್ಲಿ ಹಿಮ್ಮೇಳದಲ್ಲಿ ಭಾಗವಹಿಸಿದ್ದರು.
ಯಕ್ಷಗಾನದ ಧ್ರುವತಾರೆಗಳೆಂದೇ ಪರಿಗಣಿಸಲ್ಪಟ್ಟ ಬಣ್ಣದ ವೇಷಧಾರಿಗಳಾದ ದಿ. ಬಣ್ಣದ (ಗಾಂಧಿ) ಮಾಲಿಂಗ, ದಿ. ಚಂದ್ರಗಿರಿ ಅಂಬು ಮುಂತಾದ ಧೀಮಂತ ಕಲಾವಿದರ ನಾಟ್ಯ, ಅಭಿನಯಕ್ಕೆ ಚೆಂಡೆಯ ಸಾಥಿ ನೀಡಿ ಆ ಹಿರಿಯರಿಂದ ‘ಮಾಣಿ ಅಡ್ಡಿಯಿಲ್ಲೆ’ ಎಂದು ಹೊಗಳಿಸಿಕೊಳ್ಳುವುದು ಸಾಮಾನ್ಯವೇ! ರಾಧಾಕೃಷ್ಣ ನಾವಡ ಮಧೂರು, ಸುಬ್ರಾಯ ಹೊಳ್ಳ ಕಾಸರಗೋಡು, ಮಾನ್ಯ ಸಂತೋಷ್ ಕುಮಾರರಂತಹ ಚುರುಕಿನ ವೇಷಧಾರಿಗಳಿಂದಲೂ ‘ಈಶ್ವರ ಭಟ್ರ ಕೈ ಒಳ್ಳೆದುಂಟು’ ಎಂದು ಮೆಚ್ಚುಗೆ ಪಡೆದವರು. ಪ್ರಸಿದ್ಧ ವೇಷಧಾರಿಗಳಾದ ನಿಡ್ಲೆ ಗೋವಿಂದ ಭಟ್, ತಂತ್ರಿ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ, ಉಬರಡ್ಕ ಉಮೇಶ ಶೆಟ್ಟಿ, ಭಾಗಮಂಡಲ ಮಹಾಬಲೇಶ್ವರ ಭಟ್, ಸಬ್ಬಣಕೋಡಿ ರಾಮ ಭಟ್ ಮೊದಲಾದವರ ಹೆಜ್ಜೆಗಳಿಗೆ ಚೆಂಡೆಯನ್ನು ನುಡಿಸಿದ ಅನುಭವ ಈಶ್ವರ ಭಟ್ಟರದ್ದು. ತೆರೆಮರೆಯಲ್ಲಿದ್ದ ಅನೇಕ ವೃತ್ತಿಪರ ಹಾಗೂ ಹವ್ಯಾಸೀ ಕಲಾವಿದರಿಗೆ ತನ್ನ ನೇತೃತ್ವದಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಪ್ರಮುಖ ಪಾತ್ರಗಳನ್ನು ನೀಡಿ ತಮ್ಮ ಪ್ರತಿಭೆಗಳನ್ನು ತೋರ್ಪಡಿಸುವ ಅವಕಾಶ ಒದಗಿಸಿದ ಕೀರ್ತಿ ಇವರದ್ದು.
ಯಕ್ಷಗಾನ ಕಲಾವಿದ ಹಾಗೂ ನಿವೃತ್ತ ಅಧ್ಯಾಪಕರಾದ ಚಂದ್ರಶೇಖರ ಭಟ್ ಆದೂರು ಇವರ ನೇತೃತ್ವದಲ್ಲಿದ್ದ ಆದೂರು ಶ್ರೀ ಪಂಚಲಿಂಗೇಶ್ವರ ಯಕ್ಷಗಾನ ಕಲಾಸಂಘದ ಹಿಮ್ಮೇಳವಾದಕರಾಗಿ, ಯಕ್ಷಗಾನ ಕಲಾವಿದ ಹಾಗೂ ನಿವೃತ್ತ ಅಧ್ಯಾಪಕರಾದ ಯಂ. ಸುಬ್ರಹ್ಮಣ್ಯ ಭಟ್ (ಮಾವ) ಇವರಿಂದ ರೂಪೀಕರಣಗೊಂಡ ಪುಂಡೂರು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ಹಿಮ್ಮೇಳವಾದಕರಾಗಿ, ಪ್ರಶಸ್ತ ಕಲಾವಿದ ದಿ. ಉಪ್ಪಳ ಕೃಷ್ಣ ಮಾಸ್ತರ್ ಅವರ ನಿರ್ದೇಶನದಲ್ಲಿ ಹುಟ್ಟಿಕೊಂಡ ಮಹಿಳಾ ಯಕ್ಷಗಾನ ತಂಡಗಳ ಖಾಯಂ ಹಿಮ್ಮೇಳವಾದಕರಾಗಿಯೂ ಕೇರಳ ಮೊದಲ್ಗೊಂಡು ತಮಿಳುನಾಡು, ಕರ್ನಾಟಕಗಳಲ್ಲೂ ಭಾಗವಹಿಸಿದ ಕೀರ್ತಿ ಇವರದು. ಈಗ ಬೆಂಗಳೂರಿನಲ್ಲಿ ವಾಸವಾಗಿದ್ದು ಅಲ್ಲಿ ಹಲವಾರು ಯಕ್ಷಗಾನ ಕಾರ್ಯಕ್ರಮಗಳಲ್ಲಿ ಮದ್ದಳೆವಾದಕರಾಗಿ ಭಾಗವಹಿಸುತ್ತಿರುವ ಗಿರೀಶ್ ಪರಂಗೋಡು (ಭಾವ) ಇವರ ಶಿಷ್ಯನಾಗಿದ್ದಾರೆ.
ಹಲವು ವರ್ಷಗಳ ಹಿಂದೆಯೇ ಎಡನೀರು ಮಠಾಧೀಶರಾದ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಸ್ವರಮಾಧುರ್ಯಕ್ಕೆ ಚೆಂಡೆಯ ನಾದ ನುಡಿಸುವ ಸುಯೋಗವೂ ಇವರಿಗೆ ಲಭಿಸಿತ್ತು. ಶ್ರೀ ಕುಪ್ಪಂಗಾನ ಗೋಪಾಲಕೃಷ್ಣ ಭಟ್ಟ, ಶ್ರೀ ಸತೀಶ ಪುಣಿಚಿತ್ತಾಯ ಪೆರ್ಲ, ಶ್ರೀ ತೆಂಕಬೈಲು ಮುರಳೀಕೃಷ್ಣ ಶಾಸ್ತ್ರಿ, ಶ್ರೀ ಮನೋಹರ ಬಲ್ಲಾಳ್ ಅಡ್ವಳ, ತಲ್ಪಣಾಜೆ ಸಹೋದರರಾದ ಶ್ರೀ ಶಿವಶಂಕರ ಭಟ್ಟ, ಶ್ರೀ ವೆಂಕಟ್ರಮಣ ಭಟ್ಟರ ಮೆಚ್ಚಿನ ಹಿಮ್ಮೇಳ ಸಾಥಿ-ಈಶ್ವರ ಭಟ್ಟರಾಗಿದ್ದರು. ಹಿಂದಿನ ಪ್ರಸಿದ್ಧ ಭಾಗವತರುಗಳಾಗಿದ್ದ ದಿ. ದಾಸರಬೈಲು ಚನಿಯ ನಾಯ್ಕರಿಂದ ತೊಡಗಿ ವರ್ತಮಾನ ಕಾಲದ ಪ್ರಸಿದ್ಧ ವೃತ್ತಿಪರ ಭಾಗವತರುಗಳಾದ ಶ್ರೀ ಬಲಿಪ ನಾರಾಯಣ ಭಾಗವತರು, ಶ್ರೀ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ, ಶ್ರೀ ಪುತ್ತಿಗೆ ರಘುರಾಮ ಹೊಳ್ಳ, ಶ್ರೀ ಪದ್ಯಾಣ ಗಣಪತಿ ಭಟ್, ಶ್ರೀ ಪುಂಡಿಕಾೈ ಗೋಪಾಲಕೃಷ್ಣ ಭಟ್, ಶ್ರೀ ರಾಮಕೃಷ್ಣ ಮಯ್ಯ ಸಿರಿಬಾಗಿಲು ಮೊದಲಾದವರು ಕೂಡಾ ಈಶ್ವರ ಭಟ್ಟರನ್ನು ಮೆಚ್ಚಿದವರೇ.
ಅದೇ ರೀತಿಯಲ್ಲಿ ‘ಯಕ್ಷಭಾರತಿ ನೀರ್ಚಾಲು’, ಇವರ ತಂಡದೊಂದಿಗೆ ಕಾಸರಗೋಡು ಸುತ್ತಮುತ್ತಲ್ಲದೆ ಕರ್ನಾಟಕದಲ್ಲೂ ಯಕ್ಷಗಾನ ಕೂಟಗಳಿಗೆ ಚೆಂಡೆವಾದಕರಾಗಿ ಭಾಗವಹಿಸಿದ್ದರು. ‘ಬೊಡ್ಡಜ್ಜ ಯಕ್ಷಗಾನ ಸಂಘ, ಮಧೂರು’ ಇತ್ಯಾದಿ ಹತ್ತು ಹಲವು ಯಕ್ಷಗಾನ ಸಂಘ – ಸಂಸ್ಥೆಗಳ ಆಟ-ಕೂಟಗಳಿಗೆ ಹಿಮ್ಮೇಳವಾದಕರಾಗಿ ಸಹಕರಿಸಿರುವ ಶ್ರೀಯುತರು ಎರಡು ವರ್ಷಗಳ ಹಿಂದೆ ಕೊಲ್ಲಂಗಾನ ಶ್ರೀ ನಿಲಯ ಶ್ರೀ ದುರ್ಗಾ ಪರಮೇಶ್ವರಿ ಸನ್ನಿಧಿಯಿಂದ ನೀಡಲಾಗುವ ‘ಪಟ್ಟಾಜೆ ಪ್ರಶಸ್ತಿ’ಗೂ (ಪ್ರಸಿದ್ಧ ಯಕ್ಷಗಾನ ಅರ್ಥಧಾರಿ ದಿ. ಪಟ್ಟಾಜೆ ವೆಂಕಟ್ರಮಣ ಭಟ್ಟರ ಸ್ಮರಣಾರ್ಥ) ಪಾತ್ರರಾಗಿದ್ದರು.
ಇವರ ಕಲಾಪರವಾದ ಎಲ್ಲಾ ಚಟುವಟಿಕೆ ಗಳಿಗೂ ಬೆನ್ನೆಲುಬಾಗಿ ನಿಂತು ನಿರಂತರ ಪ್ರೋತ್ಸಾಹವನ್ನು ನೀಡಿದವರು ಇವರ ಧರ್ಮಪತ್ನಿ ಶ್ರೀಮತಿ ರಾಜೇಶ್ವರಿ ಈಶ್ವರ ಭಟ್. ದಿ. ಬಳ್ಳಮೂಲೆ ಕೇಶವ ಭಟ್ ಹಾಗೂ ದಿ. ದೇವಕಿ ಅಮ್ಮ ದಂಪತಿಗಳ ದ್ವಿತೀಯ ಸುಪುತ್ರರಾಗಿ ತಾ. 28-11-1961ರಲ್ಲಿ ಜನಿಸಿದ ಈಶ್ವರ ಭಟ್ಟರು ಒಂದು ವರ್ಷದ ಹಿಂದೆ ಕೋಟೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಮ್ಮನ್ನಗಲಿ ವಿಧಿವಶ ರಾದುದು ನಂಬಲಸದಳ ಹಾಗೂ ಅಸಹನೀಯ. ು
ಲೇಖಕ: ಕೃಷ್ಣ ಭಟ್ ಅಡ್ಕ ಹಿಮ್ಮೇಳವಾದಕ, ಯಕ್ಷಗಾನ ಕಲಾವಿದ ನಿವೃತ್ತ ಅಧ್ಯಾಪಕ, ಯಕ್ಷತೂಣೀರ ಸಂಪ್ರತಿಷ್ಠಾನ (ರಿ.), ಕೋಟೂರು
ಕುಮಾರವ್ಯಾಸ ಭಾರತ ಮತ್ತು ಯಕ್ಷಗಾನ ಪ್ರಸಂಗ ‘ದ್ರೌಪದೀ ಸ್ವಯಂವರ’ದ ಇನ್ನೆರಡು ಪದ್ಯಗಳನ್ನು ಗಮನಿಸಿ. ಕುಮಾರವ್ಯಾಸ ಭಾರತ: ಕೊಂದು ದನುಜನ ಪೆಣನ ಬಂಡಿಯ ಹಿಂದೆ ಬಂಧಿಸಿ ಪುರದ ಬಾಹೆಗೆ ತಂದು ಬಿಟ್ಟನು ತನತನಗೆ ಜನ ಜಾಲ ಜೋಡಿಯಲಿ ಬಂದು ಕಂಡುದು ಹೆಣನ ಭೂಸುರ ರಿಂದು ಧನ್ಯರು ವಿಪ್ರಜಾತಿಗೆ ಸಂದುದಿನ್ನಗ್ಗಳಿಕೆ ಯೆಂದುದು ನೆರೆದ ಪೌರಜನ
ಯಕ್ಷಗಾನ ಪ್ರಸಂಗ ‘ದ್ರೌಪದೀ ಸ್ವಯಂವರ’: ಮಡುಹಿ ದೈತ್ಯನ ಹೆಣನ ಬಂಡಿಯ | ಕಡೆಗೆ ಬಂಧಿಸಿ ತಂದು ಬಿಸುಟಿದ | ನೊಡನೆ ಪುರಬಾಹೆಯಲಿ ಜನತತಿಯ್ಯದೆ ಬೆರಗಾಗಿ || ಎಡೆಬಿಡದೆ ನಡೆತಂದು ಕಾಣುತ | ಪೊಡವಿಯಮರರು ಧನ್ಯ ನಿನ್ನನು | ಪಡೆದ ತಾಯಿ ಕೃತಾರ್ಥೆಯೆಂದರು ಭೀಮಸೇನನೊಳು|| ಈ ಎರಡು ಪದ್ಯಗಳ ಪೂರ್ವಾರ್ಧಗಳಲ್ಲಿ ಸಾಹಿತ್ಯದ ಆಂಶಿಕ ಹೋಲಿಕೆಯಿರುವುದನ್ನು ಗಮನಿಸಬಹುದು. ಇದು ಮೇಲೆ ಹೇಳಿದಂತೆ ಸಹಜವಾಗಿ ಬಂದಿರುವ ಹೋಲಿಕೆಯಾಗಿರಬಹುದು ಎಂದೆನಿಸುತ್ತದೆ.
ಕುಮಾರವ್ಯಾಸ ಭಾರತದ ಕಾವ್ಯ ಸೌಂದರ್ಯದಲ್ಲಿ ಶೃಂಗಾರ ರಸದ ಮುಖ್ಯ ವರ್ಣನೆಯ ಭಾಗ ಇರುವುದು ಆದಿಪರ್ವದ ದ್ರೌಪದೀ ಸ್ವಯಂವರದ ಸಂದರ್ಭದಲ್ಲಿ. ದ್ರೌಪದಿಯ ಸೌಂದರ್ಯ ಹಾಗೂ ಅವಳು ಶೃಂಗರಿಸಿಕೊಳ್ಳುವ ರೀತಿಯ ಅತಿ ಸುಂದರವಾದ ವರ್ಣನೆ ಈ ಭಾಗದಲ್ಲಿದೆ. ದ್ರೌಪದೀ ಸ್ವಯಂವರದ ಸಂದರ್ಭದಲ್ಲಿ ರಾಜಾಧಿರಾಜರುಗಳಿಗೆ ಪಣವಾಗಿದ್ದ ಮತ್ಸ್ಯಯಂತ್ರವನ್ನು ಭೇದಿಸುವಲ್ಲಿ ಮಾಗಧ, ಶಿಶುಪಾಲ, ಮಾದ್ರೇಶ, ಕರ್ಣಾದಿಗಳು ಸೋತ ನಂತರ ಬಲರಾಮನು ಧನುವನ್ನು ಮುರಿದು ಮತ್ಸ್ಯಯಂತ್ರವನ್ನು ಭೇದಿಸುವನೆಂದು ಅತ್ಯುತ್ಸಾಹದಿಂದ ಮುಂದೆ ಬರುವ ಸಂದರ್ಭ ಕುಮಾರವ್ಯಾಸ ಭಾರತದಲ್ಲಿ ಹೀಗೆ ವರ್ಣಿಸಲಾಗಿದೆ. ಕೃತಕ ಧನುವನು ಮುರಿದು ದ್ರುಪದನ | ಸುತೆಯ ಮುಂದಲೆವಿಡಿದು ತಹೆನು | ದ್ಭುತನಲಾ ಪಾಂಚಾಲನೆನು ತಿಳಿದನು ವರಾಸನವ ||
ಅದೇ ಸಂದರ್ಭ, ಯಕ್ಷಗಾನ ಪ್ರಸಂಗದ ಪ್ರತಿಯಲ್ಲಿ ಏಕತಾಳದಲ್ಲಿ ಹೀಗೆ ಪ್ರಸ್ತುತಿಪಡಿಸಲಾಗಿದೆ. ಕೃತಕದ ಚಾಪವ ಮುರಿದು | ನೃಪ | ಸುತೆಯನು ಮುಂದಲೆವಿಡಿದು ಖತಿಯಿಂದೆಳೆತಹೆನೀಗ | ಲೆ | ನ್ನುತ ನೀಲಾಂಬರನಾಗ || ಮುಂದೆ ಇದೇ ಸಂದರ್ಭದ ಮುಂದುವರಿದ ಭಾಗದಲ್ಲಿ ಭೂಪಾಲರೆಲ್ಲರು ಧನುವ ಹೆದೆಯೇರಿಸಿ ಮತ್ಸ್ಯಯಂತ್ರವನ್ನು ಭೇದಿಸಲಾಗದೆ ಹಿಮ್ಮೆಟ್ಟುತ್ತಾರೆ. ಆಗ ಭೋಜನ, ದಕ್ಷಿಣಾದಿಗಳಿಗಾಗಿ ಬಂದ ವಿಪ್ರಸಂಕುಲವನ್ನು ಉದ್ದೇಶಿಸಿ ಧೃಷ್ಟದ್ಯುಮ್ನ ಸ್ವಯಂವರದ ಪಣವನ್ನು ಗೆಲ್ಲುವಲ್ಲಿ ಬ್ರಾಹ್ಮಣರೂ ಪ್ರಯತ್ನಿಸಬಹುದು ಎಂದು ಡಂಗುರ ಸಾರಿಸುತ್ತಾನೆ. ಆಗ ಬ್ರಾಹ್ಮಣರ ವೇಷದಲ್ಲಿ ಸಭೆಯಲ್ಲಿದ್ದ ಪಾಂಡವರಲ್ಲಿ ಮಧ್ಯಮನಾದ ಅರ್ಜುನನು ಧರ್ಮಜನ ಸೂಚನೆಯಂತೆ ಮೇಲೇಳುತ್ತಾನೆ. ಆಗ ವಿಪ್ರಸಂಕುಲವು ಆತನನ್ನು ವಿಧವಿಧವಾಗಿ ಕುಚೋದ್ಯದಿಂದ ಮಾತನಾಡಿಸುತ್ತಾರೆ. ಕುಮಾರವ್ಯಾಸ ಭಾರತದಲ್ಲಿ,
ಏನು ಸಿದ್ಧಿಯುಪಾಧ್ಯರೆದ್ದಿರಿ ದೇನು ಧನುವಿಂಗಲ್ಲವೇ ತಾ | ನೇನು ಮನದಂಘವಣೆ ಬಯಸಿದಿರೇ ನಿತಂಬಿನಿಯ || ವೈನತೇಯನ ವಿಂಗಡಿಸಿದ ವಷ | ವೇನು ಸದರವೊ ಹಾವಡಿಗರಿಗಿ | ದೇನು ನಿಮ್ಮುತ್ಸಾಹವೆಂದುದು ಧೂರ್ತ ವಟುನಿಕರ || ಎಂದು ವರ್ಣಿಸಲ್ಪಟ್ಟಿರುವ ಸಂದರ್ಭವು ಯಕ್ಷಗಾನ ಪ್ರಸಂಗದಲ್ಲಿ ಭಾಮಿನಿಯ ಬದಲು ಅಷ್ಟತಾಳದಲ್ಲಿ ಹೇಳಲ್ಪಟ್ಟಿದೆ. ಅದು ಹೀಗೆ:
ಏನು ಸಿದ್ಧಿವುಪಾಧ್ಯರೆದ್ದಿರಿ ಮಝು | ಹೀನ ಧನುವಿಂಗಲ್ಲದೇ ತಾ | ನೇನು ಮನದಂಗವಣಿಯೊ | ಮಾನಿನೀಮಣಿಯನು ಬಯಸಿದಿರೆ ಮ | ಹಾನುಭಾವರು ತಾವಸಾಧ್ಯವ | ದೇನು ತಮಗೀ ಜಗದೊಳು || ಮೇಲಿನ ಎರಡೂ ಪದ್ಯಗಳನ್ನು ಗಮನಿಸಿದಾಗ ಕುಮಾರವ್ಯಾಸ ಹಾಗೂ ಯಕ್ಷಗಾನ ಪ್ರಸಂಗಕರ್ತರ ರಚನೆಗಳು ಅತೀವ ಸಾಮ್ಯತೆಯಿಂದ ಕೂಡಿದೆ ಎಂದು ನಿಸ್ಸಂಶಯವಾಗಿ ಹೇಳಬಹುದು. ಕನ್ನಡ ಸಾರಸ್ವತ ಲೋಕಕ್ಕೆ ಮಾತ್ರವಲ್ಲದೆ ಯಕ್ಷಗಾನ ಸಾಹಿತ್ಯಕ್ಕೂ ಕುಮಾರವ್ಯಾಸನ ಕೊಡುಗೆ ಅನನ್ಯವಾದದ್ದು. ಅಂತಹ ಸುಂದರ ಸುಲಲಿತವಾದ ಕೃತಿ ಅನ್ಯಾದೃಶ. ಮುಂದಿನ ಪದ್ಯ ಕುಮಾರವ್ಯಾಸ ಭಾರತದಲ್ಲಿ ಮದುವೆ ಬೇಕೇ ಶ್ರೋತ್ರೀಯ ಸ್ತೋ | ವಂದಲಿ ಕನ್ಯಾರ್ಥಿಗಳು ನಾವೆಂ | ಬುದು ನಿಜಾನ್ವಯ ವಿದ್ಯೆಯಲಿ ಕೊಡುವುದು ಪರೀಕ್ಷೆಗಳ | ಮದುವೆಯಹುದಿದು ಸೌಖ್ಯ ಪುಣ್ಯ | ಪ್ರದವು ಭೂದೇವರಿಗೆ ನೀ ನೆನೆ | ದುದು ಭಗೀರಥ ಯತ್ನವೆಂಬುದು ಭೂಸುರವ್ರಾತ ||
ಎಂದು ಇದೆ. ಇದೇ ಪದ್ಯ ಯಕ್ಷಗಾನ ಪ್ರಸಂಗದಲ್ಲಿ ಮೊದಲಿನಂತೆಯೇ ಅಷ್ಟತಾಳದಲ್ಲಿ, ಮದುವೆ ಬೇಕನೆ ಶ್ರೋತ್ರಿಯ ವಿಪ್ರವ | ರ್ಗದಲಿ ಕನ್ಯಾರ್ಥಿಗಳು ನಾವೆಂ | ದೊದಗಿರುವ ಕುಲವಿದ್ಯದಿ | ಹೆದರದೀವುದು ನೀವು ಪರೀಕ್ಷೆಯ | ನಿದು ಸುಖವು ನಿಮಗಲ್ಲದಿನ್ನಿರಿ | ತಿದು ಭಗೀರಥ ಯತ್ನವು || ಎಂದು ರಚಿಸಲ್ಪಟ್ಟಿದೆ. ಇಲ್ಲಿ ಕೂಡಾ ಹೋಲಿಕೆಗಳನ್ನು ಗಮನಿಸಬಹುದು. ಈ ಪಣ ಬ್ರಾಹ್ಮಣರಿಗೆ ಉಚಿತವಾದದ್ದಲ್ಲ ಎಂದು ಬ್ರಹ್ಮಸಭೆಯಲ್ಲಿ ತಾವು ತಾವೇ ಮಾತನಾಡುವ ಸನ್ನಿವೇಶಗಳನ್ನು ಕುಮಾರವ್ಯಾಸ ಕುತೂಹಲಕಾರಿಯಾಗಿ ತನ್ನ ಮುಂದಿನ ಪದ್ಯದಲ್ಲಿ ಚಿತ್ರಿಸುತ್ತಾನೆ.
ಕೆಲರು ಹೋಗದಿರೆಂದು ಜರೆದರು | ಕೆಲರು ತಾನೇ ಬಲ್ಲೆನೆಂದರು | ಕೆಲರು ನುಡಿದರು ವಿಪ್ರಸಭೆಗಪಹಾಸ್ಯವಹುದೆಂದು || ಕೆಲರು ತಪ್ಪೇನೆಂದು ಕಳೆದರು ಕೆಲರು ಭದ್ರಾಕಾರನೀತಂ ಗಳಕುವುದು ಧನು ಭಾಗ್ಯಮುಖನೆಂದುದು ಬುಧಸ್ತೋಮ || ದ್ರೌಪದೀ ಸ್ವಯಂವರ ಪ್ರಸಂಗ ಪುಸ್ತಕವೊಂದರಲ್ಲಿ ಇದೇ ಪದ್ಯವು ವಾರ್ಧಕ ಷಟ್ಪದಿಯಲ್ಲಿದೆ. ಕೆಲರೆಂದರೆಲವೊ ಹೋಗದಿರೆನುತ ಮೇಣು ಕೆಲ | ರೊಲಿದು ತಾನೇ ಬಲ್ಲೆನೆಂದರದರೊಳ್ ಕೆಲರು | ಸಲೆ ವಿಪ್ರಕುಲಕಾದುದವಮಾನವೆಂದರ್ ಕೆಲರ್ ತಪ್ಪೇನೆಂದರು || ಕೆಲರು ಭದ್ರಾಂಗನುರು ಭಾಗ್ಯಮುಖನೀತ ನಿಂ | ಗಳುಕುವುದು ಧನುವೆಂದು ಪೇಳುತಿಹ ಬ್ರಹ್ಮಸಭೆ | ಯೊಳು ಮೆಲ್ಲ ಮೆಲ್ಲನೈತರುತಿರ್ದನೇನೆಂಬೆನಾ ಸವ್ಯಸಾಚಿಯಂದು || ಮೇಲಿನ ಎರಡೂ ಪದ್ಯಗಳೂ ಷಟ್ಪದಿಗಳಲ್ಲಿವೆ. ಕುಮಾರವ್ಯಾಸನದು ಭಾಮಿನಿಯೆಂದು ಎಲ್ಲರಿಗೂ ತಿಳಿದಿರುವ ವಿಚಾರವಾದರೆ ಯಕ್ಷಗಾನದ ಪದ್ಯ ವಾರ್ಧಕ ಷಟ್ಪದಿಯಲ್ಲಿದೆ.
ರಂಗಭೂಮಿ ಕಲೆಗಳಾದ ನಾಟಕ, ಚಿತ್ರರಂಗ ಮತ್ತು ಯಕ್ಷರಂಗದಲ್ಲಿ ಅಭಿನಯಿಸಿ, ಮಿಂಚುವ ಕಲಾವಿದರು ಪ್ರೇಕ್ಷಕರ ಮನದಾಳದಲ್ಲಿ ಅಚ್ಚಳಿಯದೆ ಉಳಿಯುತ್ತಾರೆ. ದೈನಂದಿನ ಜೀವನದಲ್ಲಿ ನೊಂದು, ಬೆಂದು ಮುದುಡಿದ ಜೀವಕ್ಕೆ ಒಂದಿಷ್ಟು ಸಂತೋಷದ ಸನ್ನಿವೇಶಗಳು ದೊರೆತಾಗ ‘‘ಹಾಲು ಜೇನು ಸವಿದಂತೆ’’, ಅದರಲ್ಲೂ ಹಾಸ್ಯ ಸನ್ನಿವೇಶಗಳನ್ನು ರಂಗದಲ್ಲಿ ಮೂಡಿಸಿ, ಜನರ ಮನಃಶುದ್ಧಿಗೊಳಿಸುವವನೇ ನಿಜವಾದ ಮನೋವೈದ್ಯ! ಯಕ್ಷರಂಗಕ್ಕೇ ಬರೋಣ. ಇಲ್ಲಿ ಕಲಾವಿದ ನೊಬ್ಬ ತಲೆಗೊಂದು ದೊಡ್ಡ ಮುಂಡಾಸು, ಉದ್ದ ನಾಮ, ದಪ್ಪ ಮೀಸೆ, ಕಿವಿಗೆ ದೊಡ್ಡ ಓಲೆ (ಚಕ್ಕುಲಿ), ಉದ್ದ ಕೋಲು ಮತ್ತು ದೊಡ್ಡ ಹೊಟ್ಟೆ, ವೇಷಧರಿಸಿ, ರಂಗಪ್ರವೇಶಿಸಿ, ಹಾಸ್ಯನಗೆ ಬೀರುತ್ತಾ, ‘‘ಆಲಿಸಬೇಕು ಜೀಯಾ… ಲಾಲಿಸ ಬೇಕು…’’ ಎಂದು ಹಿಮ್ಮೇಳಕ್ಕೆ ಲಯಬದ್ಧವಾಗಿ ನರ್ತಿಸಿ, ಹಾಸ್ಯದ ಮಾತುಗಳನ್ನಾಡಿದಾಗ, ಹಾಸ್ಯ ಕಲಾವಿದ ತಾನೂ ನಗದೆ, ಪ್ರೇಕ್ಷಕರನ್ನು ನಕ್ಕುನಗಿಸಿ ನೀಡಿದ ಹಾಸ್ಯ ಸನ್ನಿವೇಶಗಳು ಹಾಗೂ ನಲ್ವತ್ತು ವರ್ಷಗಳ ಹಿಂದಿನ ಕಲಾಬದುಕಿನ ಒಂದು ಅವಲೋಕನ, ಏಳು-ಬೀಳಿನ ದಾರಿಯಲ್ಲಿ ಕಾಲ್ನಡಿಗೆಯಲ್ಲಿ ಸಾಗಿ ಕಲಾಸೇವೆ ಗೈದ ಕಲಾವಿದ, ಈಗ ವಿಶ್ರಾಂತ ಜೀವನ ನಡೆಸುತ್ತಿರುವ ‘‘ಕರ್ನಾಟಕ ಸರಕಾರದ 2013ನೇ ಸಾಲಿನ ರಾಜ್ಯ ಪ್ರಶಸ್ತಿ ಮತ್ತು ಕರ್ನಾಟಕ ಸರಕಾರದ ಮಾನ್ಯ ಕಾರ್ಮಿಕ ಸಚಿವರಾಗಿದ್ದ ಕೆ. ಅಮರನಾಥ ಶೆಟ್ಟಿ ಇವರಿಂದ ‘‘ಹಾಸ್ಯರಸಾಬ್ಧಿಭರತಪೂರ್ಣಚಂದ್ರ’’ ಬಿರುದು ಸ್ವೀಕರಿಸಿದ ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರರು ಕಟೀಲು ಮೇಳದಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ವೃತ್ತಿಜೀವನ ನಡೆಸಿ ಪ್ರಸ್ತುತ ಕೃಷ್ಣಾಪುರದಲ್ಲಿ ತನ್ನ ಮಗಳು-ಅಳಿಯನ ಜೊತೆ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಈ ಕಲಾವಿದರನ್ನು ಸಂದರ್ಶಿಸಿ, ಅವರತ್ತ ಪ್ರಶ್ನೆಗಳನ್ನೆಸೆದು, ಆಯ್ದವು ಗಳನ್ನು ಓದುಗರ ಮುಂದಿಟ್ಟಿದ್ದೇನೆ. ಪ್ರಶ್ನೆ : ಮೇಳದ ಯಜಮಾನರು ಮತ್ತು ಭಾಗವತರ ನಂತರದ ಪ್ರಥಮ ಸ್ಥಾನ ಹಾಸ್ಯ ಕಲಾವಿದರಿಗಿದೆ ಎನ್ನುತ್ತಾರೆ, ಇದರ ಮಹತ್ತ್ವವೇನು?
ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರರು : ಹಾಸ್ಯಗಾರನಿಗೆ ವಿಧಾನ ಸಭಾಧ್ಯಕ್ಷರ ಸ್ಥಾನಮಾನದಷ್ಟು ಪ್ರಾಮುಖ್ಯತೆ ಗೌರವವಿದೆ. ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದು. ಕೇವಲ ಹಾಸ್ಯ ಪಾತ್ರಕ್ಕೇ ಸೀಮಿತವಾಗಿರದೆ, ಎಲ್ಲಾ ಪಾತ್ರಗಳ ರಂಗನಿರ್ವಹಣೆಗೆ ತಯಾರಿರಬೇಕು. ‘‘ಸಕಲ ಕಲಾ ಪಾಂಡಿತ್ಯ, ಪ್ರೌಢಿಮೆ ಇರಬೇಕು. ಒಂದು ವೇಳೆ ಯಾರಾದರೂ ಕಲಾವಿದರು ಬಾರದೇ ಇದ್ದ ಪಕ್ಷದಲ್ಲಿ ಆತನ ಪಾತ್ರ ಮಾಡುವ ಸಾಮರ್ಥ್ಯ ಹಾಸ್ಯ ಕಲಾವಿದನಿಗಿರಬೇಕು. ಸಹಕಲಾವಿದರು ಎದುರು-ಬದುರು ಕುಳಿತು ಬಣ್ಣಗಾರಿಕೆ ಮಾಡುವುದಾದರೆ, ಹಾಸ್ಯ ಕಲಾವಿದ ದೇವರ (ಚೌಕಿ) ಎದುರಿಗೇ ನೇರವಾಗಿ ಕುಳಿತು ಬಣ್ಣಗಾರಿಕೆ ಮಾಡುತ್ತಾನೆ. ಯಕ್ಷಗಾನದ ಪ್ರಾರಂಭದಿಂದ ಮಂಗಲದವರೇಗೆ ಏಳೆಂಟು ಪಾತ್ರಗಳನ್ನು ನಿರ್ವಹಿಸುವವನೇ ಹಾಸ್ಯಗಾರ!
ಪ್ರಶ್ನೆ: ನಿಮ್ಮ ಹಾಸ್ಯಪಾತ್ರಗಳ ಆಯ್ಕೆಯ ಸಂಕಲ್ಪ? ನಾ. ಹಾ : ಎಳೆಯ ವಯಸ್ಸಿನಲ್ಲಿ ನಿರ್ವಹಿಸಿದ ಪ್ರಹ್ಲಾದ, ಮಾರ್ಕಾಂಡೇಯಾ, ರೋಹಿತಾಶ್ವ, ಮನ್ಮಥ ಮುಂತಾದ ಪಗಡಿವೇಷಗಳು- ದೇವಿ ಮಹಾತ್ಮೆಯ ಚಂಡ ಹಾಗೂ ಮುಂಡಾಸುರ ಪಾತ್ರಗಳು- ಬ್ರಹ್ಮ, ಬೃಹಸ್ಪತಿ, ಶುಕ್ರಾಚಾರ್ಯರಂತಹ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸುವ ಸಂದರ್ಭಗಳು ಇದ್ದರೂ ಹಾಸ್ಯ ಪ್ರಧಾನ ಪಾತ್ರಗಳಾದ- ಬಾಹುಕ, ಪಾಪಣ್ಣ, ಮಕರಂದ, ಬೈರಾಗಿ ಇತ್ಯಾದಿ ಪಾತ್ರಗಳು ಬಹಳ ಮನಮೆಚ್ಚುವ ಜನಪ್ರಿಯತೆಯ ಶಿಖರವನ್ನು ತಲುಪಿದ್ದುದರಿಂದ, ಅಂತಹ ಪಾತ್ರಲೋಲುಪತೆ ಮತ್ತು ಭಾವಪರವಶತೆಯ ಲೋಕಕ್ಕೆ ಕೊಂಡೊಯ್ದ ಪರಿಣಾಮ ಅಂತಹ ಪಾತ್ರನಿಷ್ಠೆ ಆರಂಭವಾಯಿತು.
ಪ್ರಶ್ನೆ : ನಿಮ್ಮ ಯಕ್ಷಕಲಿಕಾ ಗುರುಗಳು ಯಾರು? ಮತ್ತು ಯಾವ ಪಾತ್ರಗಳನ್ನು ನಿರ್ವಹಿಸಿದ್ದೀರಿ? ನಾ. ಹಾ : ಪ್ರಾಥಮಿಕ- ಪೂಜ್ಯ ತೀರ್ಥರೂಪರು. ಗುರುಗಳಾಗಿ ದಿ| ಕುರಿಯ ವಿಠಲ ಶಾಸ್ತ್ರಿಗಳು. ದಿ| ಬಣ್ಣದ ಕುಟ್ಯಪ್ಪು. ದಿ| ಕುಂಞಬು ಹಾಸ್ಯ ಗಾರರು ಹಾಗೂ ಪೂಜ್ಯ ಜ್ಯೇಷ್ಠ ಸಹೋದರರು. ಅಲ್ಲದೆ ಕಾವು ಶ್ರೀಕಣ್ಣ, ಮಂಕುಡೆ ಸಂಜೀವ ಶೆಟ್ರು, ಗುಡ್ಡಪ್ಪ ಗೌಡರು, ಬಣ್ಣದ ಮಾಲಿಂಗ, ಪಡ್ರೆ ಚಂದು, ಪುತ್ತೂರು ನಾರಾಯಣ ಹೆಗಡೆ, ಉರ್ವ ಅಂಬು, ಬೋಳಾರ ನಾರಾಯಣ ಶೆಟ್ರು, ವೇದಮೂರ್ತಿ ವೆಂಕಟ್ರಮಣ ಭಟ್, ಪುತ್ತೂರು ಕೃಷ್ಣ ಭಟ್, ಕುಂಞರಾಮ ಮಣಿಯಾಣಿ, ದಿ| ಮಲ್ಪೆ ಶಂಕರನಾರಾಯಣ ಸಾಮಗರು, ದಿ| ಮಲ್ಪೆ ರಾಮದಾಸ ಸಾಮಗರು ಮುಂತಾದ ದಿಗ್ಗಜ ಯಕ್ಷತಾರೆಗಳೊಡನೆ ಪ್ರಾಮುಖ್ಯ ಪಾತ್ರ ನಿರ್ವಹಿಸಿರುತ್ತೇನೆ.
‘‘ಜನರ ಮಾನಸಿಕ ವಿಕಲ್ಪಗಳಿಗೆ ಹಾಸ್ಯಗಳು ಔಷಧಿಯಾಗಬಲ್ಲುದು ಮತ್ತು ಸೂಕ್ತ ಚಿಕಿತ್ಸೆ ಯಾಗಬಲ್ಲುದು’’ ಎಂಬ ಅಂಶಗಳೇ ನನ್ನ ಹಾಸ್ಯ ಪಾತ್ರಗಳ ಆಯ್ಕೆಯ ಸೂತ್ರವಾಗಿತ್ತು ಮತ್ತು ಯಕ್ಷಗಾನಪ್ರೇಮಿಗಳಿಗೆ ಹಾಸ್ಯದ ಔತಣ ಬಡಿಸುವುದು ನನ್ನ ಕರ್ತವ್ಯವೆಂದು ತಿಳಿದಿರುವೆ. ಹಲವಾರು ಪ್ರಸಿದ್ಧ ಪೌರಾಣಿಕ ಕಥಾಪ್ರಸಂಗಗಳಲ್ಲಿ ಬರುವ ವಿವಿಧ ಹಾಸ್ಯಪಾತ್ರಗಳಲ್ಲಿ ಪಾತ್ರ ನಿರ್ವಹಣೆ- ವಿಶೇಷವಾಗಿ ಪಾಪಣ್ಣ ವಿಜಯದ ಹಾಸ್ಯಪಾತ್ರ, ಶ್ರೀಕೃಷ್ಣ ವಿಜಯದ- ಮಕರಂದ, ಬಪ್ಪನಾಡು ಕ್ಷೇತ್ರ ಮಹಾತ್ಮ್ಯೆ- ಮುಸ್ಲಿಂ ಸಹೋದರನ ಪಾತ್ರ, ನಳದಮಯಂತಿ- ಬಾಹುಕ, ದಕ್ಷಾಧ್ವರದ- ಬ್ರಾಹ್ಮಣ, ದೇವಿಮಹಾತ್ಮ್ಯೆ- ದೂತ ಇತರ ಪ್ರಸಂಗಗಳಲ್ಲಿ- ನಾರದ, ಗೋಪಾಲಕರ ಪಾತ್ರ- ಇತ್ಯಾದಿ ನಿರ್ವಹಿಸಿರುತ್ತೇನೆ.
ಪ್ರಶ್ನೆ: ನಿಮ್ಮ ಯಕ್ಷಗಾನ ವ್ಯವಸಾಯದ ವಿವರ? ನಾ. ಹಾ. : ಯಕ್ಷಗಾನ ಯಾತ್ರೆಯ ಆರು ದಶಕಗಳಲ್ಲಿ- ಸುಮಾರು ನಾಲ್ಕು ದಶಕಗಳಷ್ಟು ಕಾಲ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿ ದಶಾವತಾರ ಮೇಳದಲ್ಲಿ ಅವಿರತ ಸೇವೆ. ಪ್ರಥಮ ರಂಗಪ್ರವೇಶ ಕೂಡ್ಲು ಶ್ರೀ ಗೋಪಾಲಕೃಷ್ಣ ಮೇಳದಲ್ಲಿ. ಮುಂದೆ ಕ್ರಮವಾಗಿ- ಮೂಲ್ಕಿ ಮೇಳ, ಮುಚ್ಚೂರು, ಧರ್ಮಸ್ಥಳ, ಇರಾ ಶ್ರೀ ಸೋಮನಾಥೇಶ್ವರ ಮೇಳ, ಆದಿ ಸುಬ್ರಹ್ಮಣ್ಯ ಮೇಳ, ಸಾಲಿಗ್ರಾಮ ಶ್ರೀ ಗುರುನರಸಿಂಹ ಮೇಳ, ಸುಂಕದಕಟ್ಟೆ ಅಂಬಿಕಾ ಅನ್ನಪೂರ್ಣೇಶ್ವರಿ ಮೇಳ- ಈ ಮೇಳಗಳಲ್ಲಿ ಸಂಕ್ಷಿಪ್ತ ಅವಧಿಯ ಸೇವೆ ಸಲ್ಲಿಸಿರುತ್ತೇನೆ.
ಪ್ರಶ್ನೆ: ನಿಮ್ಮ ಕಲಾಪ್ರೌಢಿಮೆಗೆ ಸಂದ ಪ್ರಶಸ್ತಿ/ ಸನ್ಮಾನಗಳೇನು? ನಾ. ಹಾ.: 1) ಬೋಳೂರು ದೋಗ್ರ ಪೂಜಾರಿ ಸ್ಮಾರಕ ಪ್ರಶಸ್ತಿ – 1992; 2) ಆಸ್ರಣ್ಣ ಪ್ರಶಸ್ತಿ – 2002; 3) ಯಕ್ಷಗಾನ ಕಲಾರಂಗ ಪ್ರಶಸ್ತಿ – 2009; 4) ಕರ್ನಾಟಕ ಸರ್ಕಾರದ 2013ನೇ ಸಾಲಿನ ರಾಜ್ಯ ಪ್ರಶಸ್ತಿ. ಅಲ್ಲದೆ ಪ್ರಮುಖವಾಗಿ ಸನ್ಮಾನಗಳು- ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ಯಕ್ಷಗಾನ ಬಯಲಾಟ ಸೇವಾ ಸಮಿತಿ, ಕೃಷ್ಣಾಪುರ, ಬೊಳ್ಳಾಜೆ; ಶಕ್ತಿನಗರ ವೀರಾಂಜನೇಯ ಸ್ವಾಮೀ; ಬಿಕರ್ನಕಟ್ಟೆ- ಶ್ರೀ ಬ್ರಾಹ್ಮರೀ ಯಕ್ಷಗಾನ ಮಂಡಳಿ; ಕಟೀಲು ಯಕ್ಷಗಾನ ಕಲಾಮಂಡಳಿ, ಪಣಂಬೂರು; ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ, ಕುರುಡುಪದವು; ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ; ಮಲ್ಲ ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿ, ಕಾಸರಗೋಡು; ದೆಹಲಿ ಕರ್ನಾಟಕ ಸಂಘ (ರಿ.), ನವದೆಹಲಿ; ಯಕ್ಷಕಲಾರಂಗ (ರಿ.), ಉಡುಪಿ; ಹೊರನಾಡು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರೀ ದೇವಾಲಯ; ದೇವಾಡಿಗರ ಸಂಘ, ದುಬಾೈ; ಶಿಕ್ಷಕ-ರಕ್ಷಕರ ಬಳಗ, ಬೇಲಾಡಿ; ಕಾಂತಾವರ ಮುಂತಾದ ಹತ್ತು ಹಲವಾರು ಸಂಘ-ಸಂಸ್ಥೆ ಗಳಿಂದ ಪುರಸ್ಕಾರ, ಸನ್ಮಾನಗಳು ದೊರೆತಿವೆ.
ಪ್ರಶ್ನೆ : ನೀವು ಆರು ದಶಕಗಳಷ್ಟು ಕಾಲ ಕಲಾಸೇವೆಗೈದು ವಿಶೇಷ ಪಾಂಡಿತ್ಯ ಮತ್ತು ಅನುಭವಗಳನ್ನು ಪಡೆದಿದ್ದೀರಿ. ಆ ಹಿಂದಿನ ಕಲಾಬದುಕಿಗೂ ಇಂದಿನ ಕಲಾಬದುಕಿಗೂ ನಿಮ್ಮ ಅಭಿಪ್ರಾಯವೇನು? ನಾ. ಹಾ.: ಅಜಗಜಾಂತರ. ಆ ಕಾಲದ ಕಷ್ಟದ ಬದುಕು ನಮ್ಮ ಮಕ್ಕಳಿಗೂ ಬೇಡ. ನನ್ನ ವಿರೋಧಿಗಳಿಗೂ ಬೇಡವೇ ಬೇಡ. ಆಟ ಆಡುವ ಸ್ಥಳಗಳಲ್ಲಿ ಸರಿಯಾಗಿ ವಿಶ್ರಾಂತಿ ಪಡೆಯಲು ಸ್ಥಳಾವಕಾಶವಿಲ್ಲದಿದ್ದುದರಿಂದ ಸ್ಮಶಾನದಲ್ಲಿ ಮಲಗಿದ್ದೂ ಇದೆ. ಮಲಗಿ ಏನೋ ಭಯವಾಗಿ ಎದ್ದುಬಿದ್ದು ಓಡಿದ್ದೂ ಇದೆ. ಮಧ್ಯಾಹ್ನದ ಊಟದ ವ್ಯವಸ್ಥೆಗಳೂ ಸರಿಯಾಗಿ ಇರುತ್ತಿರಲಿಲ್ಲ. ಆಟ ನಡೆಯುವ ಸ್ಥಳಕ್ಕೆ ಏಳೆಂಟು ಮೈಲುಗಳ ಕಾಲ್ನಡಿಗೆ, ಗುಡ್ಡದಾರಿಗಳು, ನಮ್ಮದು ಆಗಿನ ಸಾಹಸದ ಕಲಾಬದುಕು. ಮೇಳದಲ್ಲಿ ಅಡುಗೆಯವರ ಅವಸ್ಥೆ ಹೇಳಿ ಪ್ರಯೋಜನವಿಲ್ಲ. ಪಾತ್ರೆಪಗಡಿಗಳನ್ನು ಒಂದು ಬಿದಿರಿನ ಗಳೆ(ಕೋಲು)ಗೆ ಕಟ್ಟಿ, ಭುಜದಲ್ಲಿಟ್ಟು ಕೊಂಡು ಕಾಲ್ನಡಿಗೆಯ ಪಯಣ! ಬೇಕೇ ಈ ಬಣ್ಣದ ಬದುಕು ಎಂದೆನಿಸುತ್ತಿತ್ತು. ಆಗ ಆಟಕ್ಕೂ ಸೇವಾದಾರರು ಕಡಿಮೆ. ಈಗಿನ ಕಲಾಬದುಕು ಸ್ವರ್ಗ. ಆದರೂ ಯಾರಿಗೂ ತಾಳ್ಮೆ ಇಲ್ಲ. ಈಗ ಕಲೆ, ಸಂಸ್ಕೃತಿ, ಸಂಸ್ಕಾರ ಎಲ್ಲವೂ ಕಡಿಮೆಯೆ! ಎಲ್ಲಾ ವ್ಯಾಪಾರ ಮಯವಾಗಿದೆ, ಭಕ್ತಿಗೆ ಬೆಲೆ ಇಲ್ಲ, ಹಣಕ್ಕೆ ಮಾತ್ರ ಬೆಲೆ ಎಂಬಂತಾಗಿದೆ.
ಪ್ರಶ್ನೆ: ಈ ಕಾಲದಲ್ಲಿ ‘ಕಾಲಮಿತಿ’ ಯಕ್ಷಗಾನದ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಾ. ಹಾ: ಈ ಪ್ರಶ್ನೆ ನನ್ನಲ್ಲಿ ಹಲವರು ಕೇಳಿದ್ದಿದೆ. ದಯವಿಟ್ಟು ನಾನು ಏನೂ ಹೇಳಲಾರೆ. ಇರಲಿ, ನನಗೀಗ 80 ವರ್ಷ, ಸುಧಾರಣೆ ತರಲು ನನ್ನಿಂದ ಸಾಧ್ಯವೆ? ‘‘ಕಾಲಾಯ ತಸ್ಮಯೇ ನಮಃ’’. ಶನಿದೇವರ ಪೂಜೆ, ಸತ್ಯನಾರಾಯಣ ದೇವರ ಪೂಜೆ ಇಂತಹ ಪೂಜೆಗಳಿಗೆ ಒಂದು ಧಾರ್ಮಿಕ ಪೂಜಾ ವಿಧಿವಿಧಾನಗಳಿದ್ದು, ಪ್ರಸಾದ ವಿತರಣೆಯಾಗುತ್ತದೆ. ಯಕ್ಷಗಾನಕ್ಕೂ ಒಂದು ಪರಂಪರೆ ಇದೆ. ಪ್ರಾತಃಕಾಲದಲ್ಲಿ ಕಥಾಪ್ರಸಂಗಕ್ಕೆ ಮಂಗಲ ಹಾಡಿ, ಸೇವಾದಾರರಿಗೆ, ಚೌಕಿ ಪೂಜೆಯ ನಂತರ ಪ್ರಸಾದ ವಿತರಣೆಯಾಗುತ್ತದೆ. ‘ಕಾಲಮಿತಿ’ ಹರಕೆಯ ಸೇವಾಟಕ್ಕೆ ಖಂಡಿತ ಸರಿಯಲ್ಲ. ಯಾರೂ ನಿದ್ದೆಗೆಡಲು ತಯಾರಿಲ್ಲ. ‘‘ಸುಖವನ್ನೇ ಬಯಸುವವ ಯಾವಾಗಲೂ ಕಷ್ಟಪಡಲಿಚ್ಛಿಸಲಾರ. ಆದರೆ, ಕಷ್ಟಪಟ್ಟವ ಕಷ್ಟಸುಖಗಳನ್ನು ಸಮಾನವಾಗಿ ಸ್ವೀಕರಿಸುವನು.’’
ಪ್ರಶ್ನೆ: ನಿಮ್ಮ ಆಗಿನ ಕಾಲದ ಸಂಬಳ / ಗೌರವಧನ ಎಷ್ಟಿತ್ತು? ನಾ. ಹಾ: ‘ನಾವು ಸಂಬಳ ತಿಂದು ಬದುಕಿದವರಲ್ಲ, ಕೆಲಸಕ್ಕಾಗಿ ಬದುಕಿದವರು’. ಆಗ ಐದು ದಿನಕ್ಕೆ ಮೂರು ರೂಪಾೈ ಸಂಬಳ. ಕೆಲವು ಸಮಯದ ನಂತರ ಮೂರು ದಿನಕ್ಕೆ 300 ರೂಪಾೈ ಸಿಗುತ್ತಿತ್ತು. ಮೇಳ ಬಿಡುವ ಸಮಯಕ್ಕೆ ಆರು ತಿಂಗಳಿಗೆ ರೂಪಾೈ 25,000/- ಪಡೆದಿದ್ದೇನೆ.
ಎಂಬತ್ತರ ಇಳಿವಯಸ್ಸಿನ ಈ ಯಕ್ಷಕಲಾ ಭೀಷ್ಮಾಚಾರ್ಯರು ದಿನಾಂಕ 17-12-2016 ರಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ಬಯಲಾಟ ಸೇವಾ ಸಮಿತಿ, ಕೃಷ್ಣಾಪುರ- ಇದರ 50ನೇ ವರ್ಷದ ಸುವರ್ಣ ಮಹೋತ್ಸವ ಸೇವಾಟದಲ್ಲಿ ‘ಸುಗ್ರೀವ’ನಾಗಿ ಕಲಾಪಾಂಡಿತ್ಯ ಮೆರೆದಿದ್ದಾರೆ. ಕೇವಲ 3,000 ರೂಪಾೈ ಗೌರವಧನ ಸ್ವೀಕರಿಸುತ್ತಾ ಜೀವನ ನಿರ್ವಹಿಸುವ ಈ ಹಿರಿಯ ಕಲಾವಿದರನ್ನು ಸಂಘ-ಸಂಸ್ಥೆಗಳು ಪುರಸ್ಕರಿಸಿದರೆ ಅವರ ಕಲಾಪಾಂಡಿತ್ಯವನ್ನು ಇನ್ನಷ್ಟು ಗೌರವಿಸಿದಂತಾಗುತ್ತದೆ. ಹುಟ್ಟಿದ ಊರು : ನೆಲ್ಲಿಕಟ್ಟೆ, ಕಾಸರಗೋಡು ತಾಲೂಕು, ಕೇರಳ ರಾಜ್ಯ ತಂದೆ : ದಿ| ಕೃಷ್ಣ ಚೆಟ್ಟಿಯಾರ್; ತಾಯಿ : ದಿ| ಮಾನು ಪ್ರಾಥಮಿಕ ವಿದ್ಯಾಭ್ಯಾಸ : ಎರ್ಪೆಕಟ್ಟೆ, ಕಲ್ಲಕಟ್ಟೆ ಶಾಲೆ ಹೈಸ್ಕೂಲ್ ವಿದ್ಯಾಭ್ಯಾಸ : ನವಜೀವನ ಪ್ರೌಢಶಾಲೆ, ಪೆರಡಾಲ ಮತ್ತು ಎಡನೀರು ಪ್ರೌಢಶಾಲೆ, ಕಾಸರಗೋಡು ವಿದ್ಯಾಭ್ಯಾಸ : ಎಂಟನೇ ತರಗತಿ.
ಕುಕ್ಕಿಕಟ್ಟೆಯ ನಿವಾಸಿ ಶ್ರೀಕಲಾ ವಾಣಿಜ್ಯ ಸಂಕೀರ್ಣದ ಮಾಲಕರಾದ ಸುರೇಶ್ (50 ವರ್ಷ) 22-06-2021ರಂದು ನಿಧನರಾದರು. ‘ಭ್ರಮರ’ ಕಾಂಟೀನ್ ನಡೆಸುತ್ತಾ ಪಾರಂಪರಿಕ ತಿಂಡಿ-ತಿನಿಸುಗಳನ್ನು ಮಾಡುವಲ್ಲಿ ವಿಶೇಷ ಪ್ರಾವೀಣ್ಯತೆಯನ್ನು ಹೊಂದಿದ್ದರು. ಕಳೆದ ನಾಲ್ಕು ವರ್ಷಗಳಿಂದ ಸ್ವಂತ ವೇಷಭೂಷಣ ಸಹಿತ ‘ಶ್ರೀಕಲಾ ಸಂಗಮ ಯಕ್ಷಗಾನ ಮಕ್ಕಳ ಮೇಳ’ವನ್ನು ಸ್ಥಾಪಿಸಿ ಎಳೆಯ ಮಕ್ಕಳಲ್ಲಿ ಯಕ್ಷಗಾನಾಸಕ್ತಿ ಮೂಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.
ಯಕ್ಷಗಾನ ಕಲೆಯನ್ನುಅತೀವ ಪ್ರೀತಿಸುತ್ತಿದ್ದ ಇವರು ಪ್ರತಿವರ್ಷ ವಿಶೇಷ ರೀತಿಯಲ್ಲಿ ಮೇಳದ ಯಕ್ಷಗಾನವನ್ನುಆಯೋಜಿಸುತ್ತಾ, ಅಂದು ಹಲವಾರು ಅಶಕ್ತರಿಗೆ, ಕಲಾವಿದರಿಗೆ, ಸಂಘ ಸಂಸ್ಥೆಗಳಿಗೆ, ಯಕ್ಷಗಾನ ಮಂಡಳಿಗಳಿಗೆಆರ್ಥಿಕ ನೆರವನ್ನು ನೀಡಿ ಪ್ರೋತ್ಸಾಹಿಸುತ್ತಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಬಂಧುಗಳನ್ನು ಅಗಲಿದ್ದಾರೆ. ಯಕ್ಷಗಾನ ಕಲಾರಂಗ (ರಿ.) ಉಡುಪಿ ಇದರ ಆಜೀವ ಸದಸ್ಯರಾಗಿದ್ದ ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.
ಕುಮಾರವ್ಯಾಸನ ಭಾಮಿನಿಯ ಸೌಂದರ್ಯಕ್ಕೆ ಯಾರಾದರೂ ತಲೆದೂಗಲೇಬೇಕು. ಈ ಕಾವ್ಯ ಸೌಂದರ್ಯಕ್ಕೆ ಮನಸೋತೇ ಪ್ರಸಂಗಕರ್ತೃ ಇದನ್ನು ಹಾಗೆಯೇ ಬಳಸಿಕೊಳ್ಳಲು ನಿರ್ಧರಿಸಿರಬಹುದು ಎಂದು ತೋರುತ್ತದೆ. ಯಕ್ಷಗಾನ ಪ್ರಸಂಗಗಳಲ್ಲಿಯೂ ಕೂಡಾ ನಾವು ಕೆಲವು ಪ್ರಬೇಧಗಳನ್ನು ಗುರುತಿಸಬಹುದು. ಕೃತಿಕಾರನ ಕಾವ್ಯ ಸೃಷ್ಟಿಯ ಮನೋಭಿಲಾಷೆಗೆ ತಕ್ಕಂತೆ ರಚನಕಾರರು ಕೆಲವು ಸಂದರ್ಭಗಳನ್ನು ಮೊಟಕುಗೊಳಿಸಿರುತ್ತಾರೆ ಅಥವಾ ದೀರ್ಘಗೊಳಿಸಿರುತ್ತಾರೆ. ಯಕ್ಷಗಾನ ಪ್ರಸಂಗಗಳಲ್ಲಿ ಒಂದೇ ಪ್ರಸಂಗದ ಬೇರೆ ಬೇರೆ ಪ್ರಸಂಗಕರ್ತರ ಭಿನ್ನ ಪ್ರತಿಗಳನ್ನು ನಾವು ಕಾಣಬಹುದು.
ಕೆಲವೊಮ್ಮೆ ನಿರ್ದಿಷ್ಟ ಕವಿಯ ಒಂದು ಪ್ರತಿಯಲ್ಲಿದ್ದ ಕೆಲವು ಪದ್ಯಗಳು ಇನ್ನೊಂದು ಕವಿಯ ಅದೇ ಪ್ರಸಂಗದ ಪ್ರತಿಯಲ್ಲಿರದೆ ಬೇರೆ ಹೊಸತಾದ ಪದ್ಯಗಳನ್ನು ತನ್ನ ಮನೋಭಿವ್ಯಕ್ತಿಗೆ ತಕ್ಕಂತೆ ಹೊಸೆದಿರುವುದನ್ನು ಗಮನಿಸಬಹುದು. ಇದು ಕವಿ ಸ್ವಾತಂತ್ರ್ಯ. ಒಟ್ಟಾರೆ ಮೂಲ ಕಥೆಗೆ ಭಂಗ ಬರದಿದ್ದರೆ ಅಯಿತು. ಸಾಹಿತ್ಯ ಮತ್ತು ಪದ್ಯಗಳು ಅದು ಕವಿಯ ಸ್ವಾತಂತ್ರ್ಯ. ಹಾಗೆಂದು ಕಥೆಯನ್ನು ತಿರುಚಲು ಹೋಗಬಾರದು. ನಾವು ನಮ್ಮ ಹಿಂದಿನ ತಲೆಮಾರಿನ ಹಲವಾರು ಹಿರಿಯರು ಹೇಳುವುದನ್ನು ಕೇಳಿದ್ದೇವೆ. ಆಶುಕವಿಗಳಾಗಿದ್ದ ಕೆಲವು ಭಾಗವತರು ರಂಗದಲ್ಲೇ ಪದ್ಯಗಳನ್ನು ಹೊಸೆದು ಹಾಡುತ್ತಿದ್ದರಂತೆ. ಹಿರಿಯ ಅಗರಿ ಭಾಗವತರು ಇದರಲ್ಲಿ ಅಗ್ರಗಣ್ಯರೆಂದು ಕೇಳಿದ್ದೇವೆ. ಕಡತೋಕಾ ಮಂಜುನಾಥ ಭಾಗವತರು ಹಾಗೂ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಕೂಡಾ ಆಶುಕವಿತ್ವವನ್ನು ಮೈಗೂಡಿಸಿಕೊಂಡ ಪ್ರತಿಭಾವಂತರು.
ಮೇಲೆ ಹೇಳಿದಂತೆ ಪ್ರಸಂಗದ ವಿವಿಧ ಪ್ರತಿಗಳ ಪ್ರಸ್ತಾಪ ಯಾಕೆ ಬಂತೆಂದರೆ ಕೆಲವೊಂದು ಕೃತಿಕಾರರು ಕುಮಾರವ್ಯಾಸನನ್ನು ಹೆಚ್ಚಾಗಿ ಹಚ್ಚಿಕೊಂಡಂತೆ ಕಂಡರೂ ಮಿಕ್ಕುಳಿದವರು ಬೇಕಾದಲ್ಲಿ ಅಲ್ಲಲ್ಲಿ ಆತನಿಂದ ಪ್ರಭಾವಿತರಾಗಿರುವುದು ಕಂಡುಬರುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ನಾರಣಪ್ಪನ ಭಾಮಿನಿಯ ಸಾಹಿತ್ಯವನ್ನು ಭಾಮಿನಿಯಾಗಿ ಉಪಯೋಗಿಸದೆ ಇತರ ತಾಳಗಳ ಪದ್ಯಗಳಾಗಿ ಪಡಿಮೂಡಿಸಿದ್ದೂ ಆತನ ಪ್ರಭಾವಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ಆದರೂ ಭಾಮಿನಿಗೆ ಭಾಮಿನಿಯೇ ಸಾಟಿ. ಕೆಲವು ಭಾಗವತರಂತೂ ಭಾಮಿನಿಯನ್ನು ಹಾಡಲು ಬಹಳಷ್ಟು ಇಷ್ಟಪಡುತ್ತಾರೆ. ತಮ್ಮೆಲ್ಲಾ ಗಾನಪ್ರತಿಭೆಯನ್ನು, ಆಲಾಪನೆಯನ್ನು ಪ್ರದರ್ಶಿಸಲು ಭಾಮಿನಿಯು ಒಂದು ಮಾಧ್ಯಮವೆಂದು ಭಾವಿಸುವವರೂ ಇರಬಹುದು. ಆದರೆ ಆಲಾಪನೆಯ ಗುಂಗಿನಲ್ಲಿ, ಅದರಲ್ಲೇ ತಲ್ಲೀನನಾಗಿರುವ ಹಾಡುಗಾರ ರಂಗದಲ್ಲಿ ಸುಮ್ಮನೆ ನಿಂತಿರುವ ಪಾತ್ರಧಾರಿಯ ಅವಸ್ಥೆಯನ್ನು ಗಣನೆಗೆ ತೆಗೆದುಕೊಂಡಿರುವುದಿಲ್ಲ ಎಂಬ ವಾದವೂ ಇದೆ. ಅದೇನೇ ಇರಲಿ. ಆ ವಿಷಯ ಇಲ್ಲಿ ಅಪ್ರಸ್ತುತ.
ಪ್ರಸಂಗಕರ್ತರ ಕೃತಿಗಳು ಮತ್ತು ಭಿನ್ನ ಸ್ವರೂಪದ ಪ್ರತಿಗಳಿದ್ದರೂ ಎಲ್ಲಾ ಪ್ರಸಂಗಕಾರರಲ್ಲಿಯೂ ಪ್ರಭಾವ ಬೀರಿದ ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿಯ ಆದಿಪರ್ವದ ಪದ್ಯವೊಂದು ಹೀಗಿದೆ. ಸಾಕಲಾರೆನು ಮಗನನಾತನ ನೂಕುವೆನು ನಿಮ್ಮಸುರನೂಟಕೆ ಸಾಕು ತನಗುಳಿದವರೆನಲ್ ದ್ವಿಜನದಕೆ ಬೆರಗಾಗಿ ಸಾಕಲಾರದೆ ಮಗನನುರಿಯಲಿ ನೂಕಿದವರುಂಟೇ ಮಹಾಸತಿ ಯಾಕೆವಾಳತನಕ್ಕೆ ನಮಿಸಿದೆನೆನುತ ಕೈಮುಗಿದ
ಅರಗಿನ ಮನೆಯಿಂದ ಪಾರಾಗಿ ಘೋರ ಕಾನನದಲ್ಲಿ ಹಿಡಿಂಬೆಯ ಪ್ರಕರಣದ ನಂತರ ಪಾಂಡವರು ಕುಂತಿ ಸಮೇತರಾಗಿ ಏಕಚಕ್ರ ಎಂಬ ನಗರದಲ್ಲಿ ಬ್ರಾಹ್ಮಣ ವೇಷಧಾರಿಗಳಾಗಿ ವಿಪ್ರನೊಬ್ಬನ ಮನೆಯಲ್ಲಿ ಆಶ್ರಯ ಪಡೆದು ಭಿಕ್ಷಾಟನೆ ವೃತ್ತಿಯಿಂದ ಜೀವಿಸುತ್ತಿದ್ದರು. ಬಕಾಸುರನ ಉಪಟಳದಿಂದ ವ್ಯಾಕುಲಚಿತ್ತದಿಂದ ಶೋಕಸಾಗರದಲ್ಲಿ ಬೊಬ್ಬಿರಿಯುತ್ತಿದ್ದ ನೆರೆಮನೆಯ ಬ್ರಾಹ್ಮಣ ಕುಟುಂಬದವರನ್ನು ಸಮಾಧಾನಪಡಿಸುತ್ತಾ ಕುಂತಿದೇವಿಯು ಬಕಾಸುರನೆಡೆಗೆ ತನ್ನ ಮಗನನ್ನು ಕಳುಹಿಸುವೆನೆಂದು ಮೇಲಿನ ಮಾತನ್ನು ನುಡಿಯುವ ಸಂದರ್ಭದ ಪದ್ಯವಿದು.
ಇದೇ ಸಂದರ್ಭ ‘ದ್ರೌಪದೀ ಸ್ವಯಂವರ’ ಯಕ್ಷಗಾನ ಪ್ರಸಂಗದಲ್ಲಿ ಹೀಗೆ ಬಂದಿದೆ. ಅದೂ ಭಾಮಿನಿಯಲ್ಲಿದೆ. “ಸಾಕಲಾರೆನು ಮಗನನೊಬ್ಬನ | ಸಾಕು ತನಗುಳಿದವರು ನಾಳೆಗೆ | ನೂಕಿ ಕಳೆದಪೆನವನನೆಂದಾ ಕುಂತಿ ಪೇಳಲ್ಕೆ || ಲೋಕದೊಳಗಿನ್ನೆಂತು ನಿರ್ದಯ | ದಾಕೆರಿಹರೋ ಶಿವ ಶಿವೇಸು ಮ | ಹಾ ಕಠಿನ ಮನವಿವಳದೆನುತಿಂತೆಂದನಾ ವಿಪ್ರ || ಈ ಸಂದರ್ಭದಲ್ಲಿ ಕುಮಾರವ್ಯಾಸ ಭಾರತದ ಪದ್ಯದ ಸಾಹಿತ್ಯದ ಭಾಗಶಃ ‘ದ್ರೌಪದೀ ಸ್ವಯಂವರ’ ಯಕ್ಷಗಾನ ಪ್ರಸಂಗದ ಪದ್ಯದಲ್ಲಿಯೂ ಬಂದಿದೆ. ಆದರೆ ಸ್ವಲ್ಪ ಭಾಗ ಅಷ್ಟೇ.
ಈಲ್ಲಿ ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಮೇಲಿನ ಪದ್ಯವು ಸಂಪೂರ್ಣ ಕುಮಾರವ್ಯಾಸನ ಸಾಹಿತ್ಯದ ಪ್ರಭಾವ ಎಂದು ಹೇಳಲಾಗದು. ಸ್ವಲ್ಪ ಹೋಲಿಕೆಯಿದೆ ಅಷ್ಟೇ. ಯಾಕೆಂದರೆ ಎಷ್ಟೋ ಸಂದರ್ಭಗಳಲ್ಲಿ ಇಬ್ಬರು ಒಂದೇ ತೆರನಾದ ಆಲೋಚನಾ ಲಹರಿಗಳಿರುವ ಕವಿಗಳಿರುತ್ತಾರೆ. ಕಾಕತಾಳೀಯವಾಗಿ ಅವರಿಬ್ಬರ ಕೃತಿಗಳೂ, ರಚನೆಗಳೂ ಒಂದನ್ನೊಂದು ಹೋಲುತ್ತಿದ್ದರೆ ಅದು ಮತ್ತೊಬ್ಬರ ಪ್ರಭಾವವೇ ಆಗಿರಬೇಕೆಂದೇನಿಲ್ಲ. ಅವರಿಬ್ಬರ ಕಾವ್ಯ ಶೈಲಿ ಒಂದೇ ತೆರನಾಗಿದೆ ಅಥವಾ ಅಕಾರಣವಾಗಿ ಹೋಲಿಕೆ ಉಂಟಾಗಿದೆ ಎಂದು ತಿಳಿದುಕೊಳ್ಳಬೇಕು. ಈ ಪದ್ಯಗಳನ್ನು ಹೋಲಿಸುವುದಾದರೆ ಒಂದನೇ ಸಾಲು ಬಹುತೇಕ ಒಂದೇ ರೀತಿಯದಾಗಿದೆ. ಕುಮಾರವ್ಯಾಸ ಭಾರತದ ಎರಡನೆಯ ಸಾಲು ಯಕ್ಷಗಾನ ಪ್ರಸಂಗದ ಮೂರನೆಯ ಸಾಲಿನಲ್ಲಿದೆ. ಅಲ್ಲಿನ ಮೂರನೆಯ ಸಾಲು ಇಲ್ಲಿಯ ಎರಡನೆಯ ಸಾಲಿನಲ್ಲಿದೆ. ಬಹುತೇಕ ಅಲ್ಲ ಭಾಗಶಃ ಬಂದಿದೆ.
ಆದಿಪರ್ವದ ಇದೇ ಸಂದರ್ಭದ ಇನ್ನೊಂದು ಭಾಮಿನಿ ಹೀಗಿದೆ.
ನಳನಳಿಪ ಬಹುವಿಧದ ಭಕ್ಷ್ಯಾ ವಳಿಯ ಹೆಡಗೆಗಳೋರಣಿಸಿ ಮಂ ಡಳಿಸಿ ಕೂಡಿದ ಹಾಲು ತುಪ್ಪದ ಹಲವು ಹರವಿಗಳ ಬಳಸಿ ಮುಚ್ಚಿದ ವಿವಿಧ ಶಾಖಾ ವಳಿಯ ಬೋನದ ಬಿಗಿದ ಕುನಿಕಿಲ ಕಳವೆಯಕ್ಕಿಯ ಕೂಳರಾಶಿಯ ಬಂಡಿ ಜೋಡಿಸಿತು.
ಈ ಪದ್ಯದಲ್ಲಿ ಬಕಾಸುರನಿಗಾಗಿ ಬಂಡಿಯಲ್ಲಿ ವಿವಿಧ ಬಗೆಯ ಆಹಾರಗಳನ್ನು ಜೋಡಿಸಿದ ದೃಶ್ಯವನ್ನು ಕುಂತಿಯು ಕಂಡ ಸಂದರ್ಭದ ವರ್ಣನೆಯಿದೆ. ಇಲ್ಲಿ ಬಗೆಬಗೆಯ ಭಕ್ಷ್ಯಗಳೇ ಕಣ್ಣೆದುರು ಕಂಡಂತಾಗಿ ಓದುಗರ ಬಾಯಲ್ಲಿ ನೀರೂರಿಸುವುದರಲ್ಲಿ ಸಫಲನಾಗುತ್ತಾನೆ ಕುಮಾರವ್ಯಾಸ. ಇನ್ನು ಯಕ್ಷಗಾನ ಪ್ರಸಂಗ ‘ದ್ರೌಪದೀ ಸ್ವಯಂವರ’ದ ಪ್ರತಿಯೊಂದರಲ್ಲಿ ಈ ಸಂದರ್ಭದ ವರ್ಣನೆ ಈ ರೀತಿ ಕಾಣಿಸುತ್ತದೆ. ಆದರೆ ಅದು ವಾರ್ಧಕ ಷಟ್ಪದಿಯಲ್ಲಿದೆ. ನಳನಳಿಪ ವಿವಿಧ ಭಕ್ಷ್ಯಾವಳಿಯ ಹೆಡಿಗೆಗಳ | ಬಳಸಿ ತುಂಬಿದ ತುಪ್ಪ ಪಾಲ್ಮೊಸರ ಹರವಿಗಳ | ಕಳವೆಯಕ್ಕಿಯ ಕೂಳ ರಾಶಿಗಳ ಮುಚ್ಚಿರ್ದ ವಿವಿಧ ಶಾಕದ ರಚನೆಯ || ಚೆಲುವೆಸೆವ ಭಂಡಿಯೊಳ್ ಕಂಡು ಸಂತೋಷದಿಂ | ಬಳಿಕಲಾ ಕುಂತಿ ಪವನಾತ್ಮಜನ ಪೊರೆಗೈದಿ | ಸಲೆ ಸಕಲ ಸನ್ನಾಹವಾದುದೈ ಕಂದ ಕೇಳೆನುತ ಬಳಿಕಿಂತೆಂದಳು ||
ವಿಭಿನ್ನ ಷಟ್ಪದಿಗಳಲ್ಲಿ ರಚಿಸಲ್ಪಟ್ಟಿದ್ದರೂ ವರ್ಣನೆ, ಸಾಹಿತ್ಯ, ಕಾವ್ಯ ಸೌಂದರ್ಯದಲ್ಲಿ ಬಹುತೇಕ ಸಾಮ್ಯತೆಯನ್ನು ಮೇಲಿನ ಪದ್ಯಗಳೆರಡರಲ್ಲಿ ನಾವು ಗುರುತಿಸಬಹುದು. ಈ ಯಕ್ಷಗಾನ ಪ್ರಸಂಗದ ಪದ್ಯ ರಚನೆಯ ಸಂದರ್ಭದಲ್ಲಿ, ಇಬ್ಬರು ಕೃತಿ ರಚನೆಕಾರರಲ್ಲಿರುವ ಸಾಮ್ಯತೆ, ಮೊದಲಿನ ಕವಿಯ ಸಾಹಿತ್ಯದ ಪ್ರಭಾವ, ಇವೆರಡೂ ಕೆಲಸ ಮಾಡಿರಬಹುದೆಂದು ತೋರುತ್ತಿದೆ.
ಕುರಿಯ ಪ್ರತಿಷ್ಠಾನದ ಯಕ್ಷಾವತರಣದಲ್ಲಿ ಕುಮಾರಿ ರಂಜಿತಾ ಎಲ್ಲೂರು ಮತ್ತು ಕುಮಾರಿ ವಿಂದ್ಯಾ ಆಚಾರ್ಯ ಉಡುಪಿ ಯಕ್ಷನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದ ವೀಡಿಯೊ ಲಿಂಕ್ ಇಲ್ಲಿದೆ.