Saturday, March 14, 2026
Home Blog Page 302

‘ಕೋಳ್ಯೂರು ವೈಭವ’ ಉದ್ಘಾಟನೆ

ಯಕ್ಷಗಾನದ ಶ್ರೇಷ್ಠ ಕಲಾಸಾಧಕರಾದ ಕೋಳ್ಯೂರಿಗೆ ತೊಂಭತ್ತು ತುಂಬಿದ ಶುಭಾವಸರದಲ್ಲಿ ಉಡುಪಿಯ ಯಕ್ಷಗಾನ ಕಲಾರಂಗ ಆಯೋಜಿಸಿದ್ದ ಕೋಳ್ಯೂರು ವೈಭವದ ಉದ್ಘಾಟನಾ ಸಮಾರಂಭ 14-10-2021ರಂದು ಶ್ರೀಕ್ಷೇತ್ರ ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ಸಂಪನ್ನಗೊಂಡಿತು.

ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಒಂದು ತಿಂಗಳ ಪರ್ಯಂತ ನಡೆಯಲಿರುವ ಕಾರ್ಯಕ್ರಮಗಳ ಮತ್ತು ಕೋಳ್ಯೂರರ ಕುರಿತು ಸಮಗ್ರ ಪರಿಚಯ ಒಳಗೊಂಡಿರುವ ‘ಕ್ವೀನ್ ಆಫ್ ಯಕ್ಷಗಾನ’ ಜಾಲತಾಣವನ್ನು ಉದ್ಘಾಟಿಸಿದರು. ನಾವು ಎಲ್ಲವನ್ನೂ ಸರಕಾರದಿಂದ ನಿರೀಕ್ಷಿಸುವುದು ಸರಿಯಲ್ಲ. ಕಲೆ, ಕಲಾವಿದರ ಕ್ಷೇಮ ಚಿಂತನೆಯು ಸೇರಿದಂತೆ ಯಕ್ಷಗಾನ ಕಲಾರಂಗ ಮಾಡುತ್ತಿರುವ ಸಮಾಜಮುಖಿ ಕಾರ್ಯಗಳು ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.

ರಂಗದ ಮೇಲೆ ರಾಣಿಯಾಗಿ ಮೆರೆದ ಕೋಳ್ಯೂರರು ನಿಜ ಬದುಕಿನಲ್ಲಿ ನಿಗರ್ವಿಯಾಗಿ ಎಲ್ಲರೊಂದಿಗೆ ಆತ್ಮೀಯತೆಯಿಂದಿರುವುದು ಅನುಕರಣೀಯವಾದ ನಡವಳಿಕೆ. ಎಲ್ಲ ಪ್ರತಿಕೂಲಗಳ ನಡುವೆ ಏಳು ದಶಕಗಳ ಕಾಲ ನಿರಂತರವಾಗಿ ಯಕ್ಷಗಾನ ಕ್ಷೇತ್ರದಲ್ಲಿ ಕಲಾಸೇವೆ ಮಾಡುತ್ತಾ ಬಂದ ಕೊಳ್ಯೂರರ ಕಲಾತಪಸ್ಸು ಈಗಿನ ಕಲಾವಿದರಿಗೆ ಅನುಸರಣೀಯವಾದುದಾಗಿದೆ. ವೆಬ್‌ಸೈಟ್ ನಿರ್ಮಾಣದ ಮೂಲಕ ಅವರ ಕಲಾಸಾಧನೆ ಶಾಶ್ವತವಾಗಿ ಉಳಿಯುವಂತಾದುದು ಸ್ತುತ್ಯರ್ಹ ಕಾರ್ಯ ಎಂದು ನುಡಿದು, ಶ್ರೀ ಮಂಜುನಾಥ ಸ್ವಾಮಿಯ ಕೃಪೆ ಇರಲೆಂದು ಶುಭ ಹಾರೈಸಿದರು.

ಶ್ರೀಕ್ಷೇತ್ರದ ವತಿಯಿಂದ ಕೋಳ್ಯೂರಿಗೆ ಶಾಲು ಸ್ಮರಣಿಕೆ ನೀಡಿ ಗೌರವಿಸಿದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಉಪಾಧ್ಯಕ್ಷರಾದ ಪಿ.ಕಿಶನ್ ಹೆಗ್ಡೆ ಹಾಗೂ ವಿ.ಜಿ.ಶೆಟ್ಟಿ ಹೆಗ್ಗಡೆಯವರಿಗೆ ಫಲಪುಷ್ಪ ಸಮರ್ಪಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದ ಕಾರ್ಯಕ್ರಮದ ಕೊನೆಗೆ ಜತೆಕಾರ್ಯದರ್ಶಿ ಪ್ರೊ.ನಾರಾಯಣ ಎಂ. ಹೆಗಡೆ ವಂದನಾರ್ಪಣೆಗೈದರು.

ಸಮಾರಂಭದಲ್ಲಿ ಕೋಳ್ಯೂರರ ಪತ್ನಿ ಶ್ರೀಮತಿ ಭಾಗೀರಥಿ ರಾವ್, ಶಾಂತಿವನ ಟ್ರಸ್ಟ್ನ ಕಾರ್ಯದರ್ಶಿ ಸೀತಾರಾಮ ತೋಳ್ಪಡಿತ್ತಾಯ, ಕಲಾವಿದ ಚಂದ್ರಶೇಖರ ಧರ್ಮಸ್ಥಳ, ಯಕ್ಷಗಾನ ಕಲಾರಂಗದ ಸದಸ್ಯರುಗಳಾದ ಅನಂತರಾಜ ಉಪಾಧ್ಯ, ಪೃಥ್ವಿರಾಜ ಕವತ್ತಾರ್, ಎಚ್.ಎನ್. ಶೃಂಗೇಶ್ವರ, ಕಿಶೋರ್ ಸಿ. ಉದ್ಯಾವರ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜನೆಯನ್ನು ಕೊಳ್ಯೂರರ ಸುಪುತ್ರ ಕೆ. ಶ್ರೀಧರ ರಾವ್ ಹಾಗೂ ಮೊಮ್ಮಗ ನಟರಾಜ್ ಗೋಪಾಡಿ ಮಾಡಿದರು.

ಶಿವಭಕ್ತ ವೀರಮಣಿ – ತಾಳಮದ್ದಳೆ ಕಾರ್ಯಕ್ರಮ

ಶ್ರೀ ಕಾಳಿಕಾಂಬಾ ದೇವಸ್ಥಾನ, ಕೊಲಕಾಡಿಯಲ್ಲಿ ದಿನಾಂಕ 16.10.2021ನೇ ಶನಿವಾರ ಅಪರಾಹ್ನ ಘಂಟೆ 4ಕ್ಕೆ ಸರಿಯಾಗಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ‘ಶಿವಭಕ್ತ ವೀರಮಣಿ ಎಂಬ ಯಕ್ಷಗಾನ ತಾಳಮದ್ದಳೆ ಕೂಟ ನಡೆಯಲಿರುವುದು. ವಿವರಗಳಿಗಾಗಿ ಮೇಲಿನ ಕರಪತ್ರವನ್ನು ನೋಡಿ. 

ಲಕ್ಷ್ಮೀಶ ಅಮ್ಮಣ್ಣಾಯರ ‘ರಂಗಾಂತರಂಗ’ ಪುಸ್ತಕ ಬಿಡುಗಡೆ

ಖ್ಯಾತ ಯಕ್ಷಗಾನ ಮದ್ದಳೆಗಾರ ಲಕ್ಷ್ಮೀಶ ಅಮ್ಮಣ್ಣಾಯರ ಕುರಿತಾದ ಪುಸ್ತಕ ‘ರಂಗಾಂತರಂಗ’ ನಾಳೆ 15.10.2021, ಶುಕ್ರವಾರ ಮಧ್ಯಾಹ್ನ 12 ಘಂಟೆಗೆ ಶ್ರೀ ಎಡನೀರು ಮಠದಲ್ಲಿ ಬಿಡುಗಡೆಗೊಳ್ಳಲಿದೆ. ಯುವ ಲೇಖಕ ಹಾಗೂ ಪತ್ರಕರ್ತ ಲಕ್ಷ್ಮೀ ಮಚ್ಚಿನರ ಲೇಖನಿಯಲ್ಲಿ ಮೂಡಿಬಂದ ಈ ಕೃತಿಯಲ್ಲಿ ಮದ್ದಳೆಗಾರರಾದ ಲಕ್ಷ್ಮೀಶ ಅಮ್ಮಣ್ಣಾಯರ ಕಲಾಜೀವನದ ಬಗ್ಗೆ ಬೆಳಕು ಚೆಲ್ಲುವ ಸಂಪೂರ್ಣ ವಿವರಗಳಿವೆ. ವಿವರಗಳನ್ನು ಮೇಲಿನ ಚಿತ್ರದಲ್ಲಿ ನೋಡಬಹುದು. 

ಶ್ರೀಕೃಷ್ಣ ಪಾರಿಜಾತ, ನರಕಾಸುರ ಮೋಕ್ಷ – ಯಕ್ಷಗಾನ ಪ್ರದರ್ಶನ

0

ನವರಾತ್ರಿ ಪೂಜಾ ಮಹೋತ್ಸವದ ಪ್ರಯುಕ್ತ  ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ  ಇಂದು  (14.10.2017) ರಾತ್ರಿ ಘಂಟೆ 9ರಿಂದ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ‘ಶ್ರೀಕೃಷ್ಣ ಪಾರಿಜಾತ, ನರಕಾಸುರ ಮೋಕ್ಷ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. 

ಭರತಾಗಮನ – ಇಂದು (14.10.2017) ತಾಳಮದ್ದಳೆ

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಪ್ರಸ್ತುತಪಡಿಸುವ, ನವರಾತ್ರಿ ಪೂಜಾ ಮಹೋತ್ಸವದ ಪ್ರಯುಕ್ತ ಶ್ರೀನಿಲಯ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿ, ಕೊಲ್ಲಂಗಾನದಲ್ಲಿ ಇಂದು  (14.10.2017) ಸಂಜೆ ಘಂಟೆ 6ರಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ‘ಭರತಾಗಮನ’ ಎಂಬ ತಾಳಮದ್ದಳೆ ಕೂಟ ನಡೆಯಲಿದೆ. 

ದಕ್ಷಯಜ್ಞ – ಯಕ್ಷಗಾನ ಪ್ರದರ್ಶನ

ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಿಂದ ಕರ್ನಾಟಕ ಮಹಿಳಾ ಯಕ್ಷಗಾನ (ರಿ) ಇವರು ನವರಾತ್ರಿಯ ಪ್ರಯುಕ್ತ ಆಯೋಜಿಸಿದ ‘ದಕ್ಷಯಜ್ಞ’ ಎಂಬ ಯಕ್ಷಗಾನ ಪ್ರದರ್ಶನ ದಿನಾಂಕ 14.10.2021ರ ಗುರುವಾರ ಸಂಜೆ 6 ಘಂಟೆಗೆ ಬೆಂಗಳೂರು ಗಿರಿನಗರದ ಶ್ರೀ ರಾಮಾಶ್ರಮದಲ್ಲಿ ನಡೆಯಲಿದೆ. 

ಅನುಭವಿ ಕಲಾವಿದ ಶ್ರೀ ಮೋಹನ ಶೆಟ್ಟಿ ಬಾಯಾರು

ಯಕ್ಷಗಾನವು ಶ್ರೇಷ್ಠ ಕಲೆ ಎಂಬ ಅರ್ಥದಲ್ಲಿ ‘ಗಂಡುಕಲೆ’ ಎಂದೇ ಪ್ರಸಿದ್ಧವಾಗಿದೆ. ಕಾಸರಗೋಡು, ,ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಲೆನಾಡ ಪ್ರದೇಶದಲ್ಲಿ ವಾಸಿಸುವ ಜನರಿಗೆ ಯಕ್ಷಗಾನದಿಂದ ದೂರವಾಗಿ ಬದುಕಲು ಸಾಧ್ಯವಿಲ್ಲ. ಈ  ಅನುಪಮವಾದ ಕಲೆಯ ಹೊರತಾದ ಬದುಕನ್ನು ಈ ಪ್ರದೇಶದ ಜನರಿಗೆ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಜೀವನವು ಯಕ್ಷಗಾನ ಕಲೆಯೊಂದಿಗೆ ಜತೆಯಾಗಿ ಮುನ್ನಡೆಯುತ್ತದೆ.

ಎಲ್ಲಾ ಮನೆಗಳಲ್ಲೂ ಕಲಾವಿದರೋ, ಕಲಾಭಿಮಾನಿಗಳೋ ಇದ್ದೇ ಇರುತ್ತಾರೆ. ಇದು ನಮ್ಮ ಊರಿನ ಕಲೆ. ನಾವು ಈ ಶ್ರೇಷ್ಠ ಕಲೆಯ ಒಂದು ಅಂಗವಾಗಿ ಇದ್ದೇವೆ ಎಂದು ಹೆಮ್ಮೆಯಿಂದ, ಸಂತಸದಿಂದ ಹೇಳಿಕೊಳ್ಳುತ್ತಾರೆ. ಯಕ್ಷಗಾನ ಕಲಾವಿದನಾಗಬೇಕೆಂದು ಆಸೆ ಇರುವವರಿಗೆ ಅವರವರ ಅಭಿರುಚಿಗೆ ತಕ್ಕಂತೆ ಆಯ್ಕೆಗೆ ಅವಕಾಶಗಳಿವೆ. ಜೇನು, ಮೊಸರು, ಬೆಲ್ಲ, ಸಕ್ಕರೆ, ದ್ರಾಕ್ಷಿ ಮೊದಲಾದ ವಸ್ತುಗಳೆಲ್ಲಾ ಸವಿಯಾಗಿಯೇ ಇರುತ್ತದೆ. ಎಲ್ಲರೂ ಎಲ್ಲವನ್ನೂ ಇಷ್ಟ ಪಡಲಾರರು. ಯಾರ ಮನಸ್ಸಿಗೆ ಯಾವುದು ಮೆಚ್ಚುಗೆಯೋ ಅದೇ ಅವನಿಗೆ ಸವಿಯಾಗಿರುತ್ತದೆ.

ರಂಗವೇರುವ ಅಭ್ಯಾಸಿಗಳಿಗೆ ಭಾಗವತನಾಗಬೇಕು, ಮದ್ದಳೆಗಾರನಾಗಬೇಕು, ಪುಂಡುವೇಷಧಾರಿಯಾಗಬೇಕು, ಸ್ತ್ರೀ ಪಾತ್ರಧಾರಿಯಾಗಬೇಕು ಹೀಗೆಂಬ ಗುರಿಯಿರುತ್ತದೆ. ಬೇಕಾದಂತೆ ಆಯ್ಕೆ ಮಾಡಿಕೊಂಡು ಮುಂದುವರಿಯುತ್ತಾರೆ. ಹೀಗೆ ತೊಡಗಿಸಿಕೊಂಡು ಅನುಭವಗಳಿಂದ ಪಕ್ವರಾದ ಹಿರಿಯ ಕಲಾವಿದರಲ್ಲಿ ಒಬ್ಬರು ಶ್ರೀ ಮೋಹನ ಶೆಟ್ಟಿ ಬಾಯಾರು. ಇವರು ಪ್ರಸ್ತುತ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ಕಲಾ ಸೇವೆಯನ್ನು ಮಾಡುತ್ತಿದ್ದಾರೆ. 

ಶ್ರೀ ಮೋಹನ ಶೆಟ್ಟಿ ಬಾಯಾರು ಅವರು ತೆಂಕುತಿಟ್ಟಿನ ಖ್ಯಾತ ಸ್ತ್ರೀ ಪಾತ್ರಧಾರಿಯಾಗಿ ಮೆರೆದ ಪೈವಳಿಕೆ ಶ್ರೀ ಐತಪ್ಪ ಶೆಟ್ಟರ ಪುತ್ರ. ಪೈವಳಿಕೆ ಶ್ರೀ ಐತಪ್ಪ ಶೆಟ್ಟಿ ಮತ್ತು ಶ್ರೀಮತಿ ಕಲ್ಯಾಣಿ ಶೆಡ್ತಿ ದಂಪತಿಗಳ ಮಗನಾಗಿ 1963 ಜನವರಿ 20ರಂದು ಬಾಯಾರು ಸಮೀಪದ ಕುಳ್ಯಾರು ಎಂಬಲ್ಲಿ ಜನನ. ಐತಪ್ಪ ಶೆಟ್ಟಿ ಮತ್ತು ಕಲ್ಯಾಣಿ ದಂಪತಿಗಳಿಗೆ ಹತ್ತು ಮಂದಿ ಮಕ್ಕಳು (ಆರು ಗಂಡು ಮತ್ತು ನಾಲ್ಕು ಹೆಣ್ಣು ಮಕ್ಕಳು) ಗಂಡು ಮಕ್ಕಳಲ್ಲಿ ಮೋಹನ ಶೆಟ್ಟರು ನಾಲ್ಕನೆಯವರು.

ಓದಿದ್ದು 5ನೇ ತರಗತಿ ವರೆಗೆ. ಮನೆ ಸಮೀಪದ ಬಾಯಾರು ಹೆದ್ದಾರಿ ಶಾಲೆಯಲ್ಲಿ. ಬಾಲ್ಯದಲ್ಲಿಯೇ ಯಕ್ಷಗಾನ ಕಲೆಯು ಇವರನ್ನು ಆಕರ್ಷಿಸಿತ್ತು. ಅಣ್ಣ ಶ್ರೀ ರಘುನಾಥ ಶೆಟ್ಟಿ ಬಾಯಾರು ಇವರಿಂದ ಯಕ್ಷಗಾನ ಹೆಜ್ಜೆಗಾರಿಕೆ ಕಲಿತರು. ತನ್ನ ಹನ್ನೆರಡನೆಯ ವರ್ಷದಲ್ಲಿ ಕುಶಲವ ಪ್ರಸಂಗದಲ್ಲಿ ಕುಶನಾಗಿ ರಂಗಪ್ರವೇಶ. ಕುರಿಯ ಶ್ರೀ ಗಣಪತಿ ಶಾಸ್ತ್ರಿಗಳ ನಿರ್ದೇಶನ, ಭಾಗವತಿಕೆಯ ಮಕ್ಕಳ ಪ್ರದರ್ಶನದಲ್ಲಿ ಮೊದಲ ವೇಷ.

ಓದು ಮುಂದುವರಿಸಲಾಗದೆ ಕೆಲ ಸಮಯ ಮನೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಬಳಿಕ ಯಕ್ಷಗಾನವನ್ನೂ ವೃತ್ತಿಯಾಗಿ ಸ್ವೀಕರಿಸಿದ್ದರು. ಬಾಯಾರು ಶ್ರೀ ಮೋಹನ ಶೆಟ್ಟರು ಮೊದಲ ತಿರುಗಾಟ ಆರಂಭಿಸಿದ್ದು ಕಲ್ಲಾಡಿ ಶ್ರೀ ವಿಠಲ ಶೆಟ್ಟಿ ಅವರ ಸಂಚಾಲಕತ್ವದ ಕರ್ನಾಟಕ ಮೇಳದಲ್ಲಿ. 1978-79ರಲ್ಲಿ ಪೂರ್ವರಂಗದಲ್ಲಿ ಬಾಲಗೋಪಾಲನಾಗಿ. ಪೂರ್ವರಂಗದ ಬಳಿಕ ಪ್ರಸಂಗದಲ್ಲಿ ತನ್ನ ಪಾಲಿಗೆ ಬಂದ ಪಾತ್ರಗಳನ್ನು ನಿರ್ವಹಿಸುತ್ತಾ ಸಾಗಿದ್ದರು.

ಕರ್ನಾಟಕ ಮೇಳವು ಹೆಸರಾಂತ ಕಲಾವಿದರ ಗಡಣವಾಗಿತ್ತು. ಪ್ರದರ್ಶನಗಳನ್ನು ನೋಡುತ್ತಾ ಸತತವಾಗಿ ಅಭ್ಯಾಸ ಮಾಡುತ್ತಾ ಬೆಳೆದರು. ಪುಂಡು ವೇಷಧಾರಿಯಾಗಿ ಭಡ್ತಿಯೂ ದೊರಕಿತ್ತು. ಕರ್ನಾಟಕ ಮೇಳದಲ್ಲಿ ಹದಿನೈದು ವರ್ಷಗಳ ಕಲಾಸೇವೆ. ಬಳಿಕ ಮೇಳದ ತಿರುಗಾಟವನ್ನು ನಿಲ್ಲಿಸಿ ಮುಂಬೈಗೆ ತೆರಳಿದ್ದರು. ಮಹಾನಗರ ಮುಂಬೈಯಲ್ಲಿ ಆರು ವರ್ಷಗಳ ಕಾಲ ಉದ್ಯೋಗ ಮಾಡಿ ಊರಿಗೆ ಮರಳಿದ್ದರು.

ಶ್ರೀ ಮೋಹನ ಶೆಟ್ಟಿ ಬಾಯಾರು

ಮತ್ತೆ ಯಕ್ಷಗಾನ ಕ್ಷೇತ್ರಕ್ಕೆ. ಬಳಿಕ ಹನ್ನೊಂದು ವರ್ಷಗಳ ಕಾಲ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ಮೇಳದಲ್ಲಿ ವ್ಯವಸಾಯ. ಪುಂಡು ವೇಷ ಮತ್ತು ಕಿರೀಟ ವೇಷಗಳಲ್ಲಿ ಕಾಣಿಸಿಕೊಂಡಿದ್ದರು. ಶ್ರೀಕೃಷ್ಣ, ಭಾರ್ಗವ, ಲಕ್ಷ್ಮಣ, ಬಬ್ರುವಾಹನ,ಅಯ್ಯಪ್ಪ, ಅಭಿಮನ್ಯು, ಚಂಡಮುಂಡರು, ಅಶ್ವತ್ಥಾಮ,ಷಣ್ಮುಖ ಮೊದಲಾದ ಪಾತ್ರಗಳು ಇವರಿಗೆ ಒಳ್ಳೆಯ ಹೆಸರನ್ನು ನೀಡಿದುವು. ಜತೆಗೆ ಕಿರೀಟ ವೇಷಗಳ ನಿರ್ವಹಣೆಯನ್ನೂ ಪ್ರೇಕ್ಷಕರು ಮೆಚ್ಚಿಕೊಂಡಿದ್ದರು.

ಶ್ರೀ ಮೋಹನ ಶೆಟ್ಟರು ಕಳೆದ ಒಂಭತ್ತು ವರ್ಷಗಳಿಂದ ಕಲ್ಲಾಡಿ ಶ್ರೀ ದೇವಿಪ್ರಸಾದ ಶೆಟ್ಟರ ಸಂಚಾಲಕತ್ವದ ಕಟೀಲು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಪೀಠಿಕೆ ವೇಷಧಾರಿಯಾಗಿ ಕಟೀಲು ಮೇಳ ಸೇರಿದ ಇವರು ಈಗ ಎದುರು ವೇಷಗಳನ್ನೂ ಮಾಡುತ್ತಿದ್ದಾರೆ. ಇವರು ಯಕ್ಷಗಾನ ವೇಷಭೂಷಣ ತಯಾರಿಕಾ ಕಲೆಯನ್ನೂ ಬಲ್ಲವರು.

ಕಲ್ಲಾಡಿ ಶ್ರೀ ದೇವಿಪ್ರಸಾದ ಶೆಟ್ಟರ ಸಲಹೆಯಂತೆ ಅಣ್ಣ ಶ್ರೀ ಬಾಯಾರು ರಘುನಾಥ ಶೆಟ್ಟರೊಂದಿಗೆ ಕಟೀಲು ಮೇಳದ ವೇಷಭೂಷಣ ತಯಾರಿಕೆಯಡಿ ಕಳೆದ ಹದಿಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಕಲಾಬದುಕಿನುದ್ದಕ್ಕೂ ಸಹಕರಿಸಿದ ಸಹಕಲಾವಿದರ, ಕಲ್ಲಾಡಿ ಮನೆಯ ಗೌರವಾನ್ವಿತ ಯಜಮಾನರುಗಳ, ಕಟೀಲು ಶ್ರೀ ಆಸ್ರಣ್ಣ ಬಂಧುಗಳ, ಪ್ರೀತಿಸುವ ಕಲಾಭಿಮಾನಿಗಳ ಸಹಕಾರವನ್ನು ಶ್ರೀ ಮೋಹನ ಶೆಟ್ಟಿ ಸದಾ ನೆನಪಿಸುತ್ತಾರೆ.

ಬಾಯಾರು ಮೋಹನ ಶೆಟ್ಟರ ಪತ್ನಿ ಶ್ರೀಮತಿ ಶೋಭಾ. ೨೦೦೦ನೇ ಇಸವಿಯಲ್ಲಿ ವಿವಾಹ. ಶ್ರೀ ಬಾಯಾರು ಮೋಹನ ಶೆಟ್ಟಿ, ಶೋಭಾ ದಂಪತಿಗಳಿಗೆ ಮೂವರು ಪುತ್ರಿಯರು. ಹಿರಿಯ ಪುತ್ರಿ ಕು| ರಕ್ಷಿತಾ. ಪದವಿ ಅಂತಿಮ ವರ್ಷದ ವಿದ್ಯಾರ್ಥಿನಿ. ದ್ವಿತೀಯ ಪುತ್ರಿ ಕು| ನಿಶ್ಮಿತಾ. ಪದವಿ ಪ್ರಥಮ ವರ್ಷದ ವಿದ್ಯಾರ್ಥಿನಿ. ತೃತೀಯ ಪುತ್ರಿ ಕು| ಲಿಖಿತಾ. ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿನಿ. ಬಾಯಾರು ಶ್ರೀ ಮೋಹನ ಶೆಟ್ಟರು ಪುರಾಣ ಮತ್ತು ತುಳು ಪ್ರಸಂಗಗಳಲ್ಲಿ ಸಮಾನವಾಗಿ ರಂಜಿಸಿದ ಹಿರಿಯ ಕಲಾವಿದರು. ಅವರಿಂದ ಕಲಾಸೇವೆಯು ನಿರಂತರವಾಗಿ ನಡೆಯಲಿ. ಮಕ್ಕಳಿಗೆ ಉಜ್ವಲವಾದ ಭವಿಷ್ಯವು ಸಿದ್ಧಿಸಲಿ. ಶ್ರೀ ದೇವರು ಸಕಲ ಭಾಗ್ಯಗಳನ್ನೂ ಕರುಣಿಸಿ ರಕ್ಷಿಸಲಿ ಎಂಬ ಹಾರೈಕೆಗಳು. 

ಲೇಖಕ: ರವಿಶಂಕರ್ ವಳಕ್ಕುಂಜ 

 

ಯಕ್ಷಗಾನ ನಾಟ್ಯ ಮತ್ತು ಹಿಮ್ಮೇಳ ತರಗತಿ ಆರಂಭ

ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ಯಕ್ಷಗಾನ ನಾಟ್ಯ ಹಾಗೂ ಹಿಮ್ಮೇಳ ತರಗತಿಗಳು 15.10.2021ರಂದು ಪುನರಾರಂಭಗೊಳ್ಳಲಿದೆ. ಕಲಿಕಾಸಕ್ತರು ಇದರ ಪ್ರಯೋಜನ ಪಡೆದುಕೊಳ್ಳಬಹುದೆಂದು ಸಂಘಟಕರು ತಿಳಿಸಿದ್ದಾರೆ. 

ಪದ್ಯಾಣ ಗಣಪತಿ ಭಟ್ – ಶ್ರದ್ಧಾಂಜಲಿ ಗೀತೆ

ಶ್ರದ್ಧಾಂಜಲಿ ಗೀತೆ (ಭಾಮಿನಿ ಷಟ್ಪದಿ)
ಭಾಗವತ ಕುಲತಿಲಕ ಜನಮನ | ಸಾಗರದಿ ಪದ್ಯಾಣ ಮನೆತನ | ವಾಗಿ ನೆಲೆಸಿದೆ ಯಕ್ಷಗಾನಾಂಬಿಕೆಯ ಪದತಳದಿ || ಮಾಗಿದತ್ಯನುಭಾವಿ ಗಣಪತಿ | ರಾಗ ಋಷಿವರ ಯಕ್ಷ ಗುಣಪತಿ | ತ್ಯಾಗ ಗಣಮಣಿಗರ್ಪಣೆಯು ಶ್ರದ್ಧಾಂಜಲಿಯ ಗೀತೆ || ೧ ||

ಯಕ್ಷರಂಗಸ್ಥಳವ ಅವಿರತ | ರಕ್ಷಿಸುತ ಪೂಜಿಸುತ ಮೆರೆಸಿದ | ದಕ್ಷ ಪ್ರತಿಭಾ ಪ್ರಭೆಯು ಶ್ರೀ ಪದ್ಯಾಣ ಗಣಪಣ್ಣ || ಲಕ್ಷಣಾನ್ವಿತ ಯಕ್ಷಸಂಪದ | ಲಕ್ಷ್ಮಿನಾರಾಯಣನ ಪದದೊಳು | ಐಕ್ಯವಾದುದು ಕೀರ್ತಿ ನಾದವನುಳಿಸಿ ಜಗದೊಳಗೆ || ೨ ||

ಬ್ರಹ್ಮ ಬರೆದಾಯುಷ್ಯ ತಿದ್ದುವ | ಕರ್ಮಭೂಮಿಯ ವೈದ್ಯನಾರವ | ನಿರ್ಮಲಾಂತಃಕರಣ ಜೀವಿತದವಧಿಗಳಿವಿಲ್ಲ || ಧರ್ಮಕರ್ಮದಿ ಯಕ್ಷಗಾನವ | ನಿರ್ಮಲದಿ ಪೋಷಿಸಿದ ಭಗವತ | ತಮ್ಮನಾತ್ಮಕೆ ಶಾಂತಿ ನೆಮ್ಮದಿ ಕರುಣಿಸಲಿ ಹರಿಯು || ೩ ||

ಪಾಡಿರುವ ಪದ ಪದ್ಯ ಮನದೊಳ | ಗಾಡಿ ಕುಣಿಕುಣಿದಾಡಿಸುತ್ತಿದೆ | ಗಾಢ ಹೃದಯಸ್ಪರ್ಶಿ ಬಂಧವು ಕಳಚದೆಂದಿಗದು || ಕೂಡಿರಲಿ ಮುನಿಪುರದ ಶ್ರೀಹರಿ | ನಾಡ ಸಂಸ್ಕೃತಿ ಯಕ್ಷಗಾನವ | ತೀಡಿ ತಿದ್ದುತ ಬೆಳಗಿಸಲಿ ಸ್ಥಿರವಾಗಿ ಧರೆಯೊಳಗೆ || ೪ ||

ಕವಿ: ವಿಶ್ವವಿನೋದ ಬನಾರಿ

ವಿಶ್ವವಿನೋದ ಬನಾರಿ
13-10-2021