Monday, August 31, 2026
Home Blog Page 197

8ನೆಯ ತರಗತಿಯ ವಿದ್ಯಾರ್ಥಿಯ ಕಾಲು ಮುರಿತ, ಪ್ರಾಂಶುಪಾಲರು ಥಳಿಸಿದ ಆರೋಪ – ತನಿಖೆಗೆ ಆದೇಶ 

0

8ನೆಯ ತರಗತಿಯ ವಿದ್ಯಾರ್ಥಿಯ ಕಾಲು ಮುರಿತ, ಪ್ರಾಂಶುಪಾಲರು ಥಳಿಸಿದ ಆರೋಪ – ತನಿಖೆಗೆ ಆದೇಶ 

8ನೇ ತರಗತಿಯಲ್ಲಿ ಓದುತ್ತಿರುವ ತಮ್ಮ ಮಗುವಿಗೆ ಥಳಿಸಿದ್ದಾರೆ ಎಂದು ಕುಟುಂಬವೊಂದು ಆರೋಪಿಸಿದೆ.

ಉತ್ತರ ಪ್ರದೇಶದ ಜೈ ಜವಾನ್ ಜೈ ಕಿಸಾನ್ ಇಂಟರ್ ಕಾಲೇಜಿನ ಪ್ರಾಂಶುಪಾಲರು 8ನೇ ತರಗತಿಯಲ್ಲಿ ಓದುತ್ತಿರುವ ತಮ್ಮ ಮಗುವಿಗೆ ಥಳಿಸಿದ್ದಾರೆ ಎಂದು ಆ ಕುಟುಂಬ ಹೇಳಿದ್ದು ನ್ಯಾಯ ಒದಗಿಸುವಂತೆ ದೂರು ನೀಡಿದೆ.

ಮಗುವಿಗೆ ಮುರಿತಗಳಿವೆ; ವೈದ್ಯಕೀಯ ವರದಿಗಳೂ ಇದನ್ನೇ ಸೂಚಿಸುತ್ತವೆ. ನಾನು 2 ದಿನಗಳಲ್ಲಿ ಈ ವಿಷಯವನ್ನು ತನಿಖೆ ಮಾಡಲು SDM, CO ಮತ್ತು DRS ತಂಡವನ್ನು ರಚಿಸುತ್ತಿದ್ದೇನೆ ಎಂದು ಶಾಮ್ಲಿ ಜಿಲ್ಲಾಧಿಕಾರಿ ಜಸ್ಜಿತ್ ಕೌರ್ ಹೇಳಿಕೆ ನೀಡಿದ್ದಾರೆ.

“ಸುದರ್ಶನ ವಿಜಯ” ಯಕ್ಷಗಾನ ಪ್ರದರ್ಶನ – ಬೆಂಗಳೂರಿನ ಯಕ್ಷದೇಗುಲದ ಕಾರ್ಯಕ್ರಮ

ಕಳೆದ 40 ವರ್ಷದಿಂದ ಸದಾಚಟುವಟಿಕೆಯಿಂದಿರುವ ಕೆ. ಮೋಹನ್ ನಿರ್ದೇಶನದ ಬೆಂಗಳೂರಿನ ಯಕ್ಷದೇಗುಲ ತಂಡದವರ ಈ ವರ್ಷದ ಗಣೇಶೋತ್ಸವ ಕಾರ್ಯಕ್ರಮ ದಿನಾಂಕ 02-09-2022ರಂದು ಸಂಜೆ 7:00ಕ್ಕೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನ, ಬೈಂದೂರು ಇಲ್ಲಿ “ಕೃಷ್ಣಾರ್ಜುನ” ಯಕ್ಷಗಾನ ಪ್ರದರ್ಶನ ನಡೆಯಿತು.

ದಿನಾಂಕ 04-09-2022ರಂದು ಬೆಂಗಳೂರಿನ ಜೆ.ಪಿ. ನಗರದ ಶ್ರೇಯಸ್ ಕಾಲನಿಯಲ್ಲಿ ಶ್ರೀ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಸಂಜೆ 6:00ಕ್ಕೆ “ಸುದರ್ಶನ ವಿಜಯ” ಯಕ್ಷಗಾನ ಪ್ರದರ್ಶನ ನಡೆಯಿತು.

ಕೋಟ ಸುದರ್ಶನ ಉರಾಳರ ಸಂಯೋಜನೆಯಲ್ಲಿ ಕಲಾವಿದರಾಗಿ ಸುಜಯೀಂದ್ರ ಹಂದೆ ಎಚ್, ಲಂಬೋದರ ಹೆಗಡೆ, ಶಿವಾನಂದ ಕೋಟ, ಉದಯ ಕಡಬಾಳ, ರಾಘವೇಂದ್ರ ಹೆಗಡೆ, ಮಂಜುನಾಥ ನಾವುಡ,  ಸ್ಫೂರ್ತಿ ಭಟ್, ತಮ್ಮಣ್ಣ ಗಾಂವ್ಕರ್, ರಾಮಕೃಷ್ಣ ಭಟ್, ಆದಿತ್ಯ ಹೆಗಡೆ, ಗಣೇಶ ಉಪ್ಪುಂದ, ವಿಜಯ ಬೀಜನಮಕ್ಕಿ, ಉದಯ ಬೋವಿ, ಗೋವಿಂದ, ನವೀನ್‌ ಕೋಟ, ರಾಜು ಪೂಜಾರಿ ಇನ್ನಿತರರು ಭಾಗವಹಿಸಿದರು.

ಅಂಬಿಕಾ ಮಹಾವಿದ್ಯಾಲಯದಲ್ಲಿ ಸ್ಪೋಕನ್ ಇಂಗ್ಲಿಷ್ ತರಗತಿಗಳಿಗೆ ಚಾಲನೆ – ಭಾಷಾ ಸಂರಚನೆಯ ಕ್ರಮವನ್ನು ಅರಿಯಬೇಕು : ಶಕುಂತಲಾ ನಾಯಕ್

0

ಪುತ್ತೂರು: ಪ್ರತಿಯೊಂದು ಭಾಷೆಗೂ ಅದರದ್ದೇ ಆದ ರಚನೆ ಇರುತ್ತದೆ. ಆ ಸಂರಚನೆಯ ಕ್ರಮವನ್ನು ಅರಿತಾಗ ಭಾಷಾ ಕಲಿಕೆ ಸುಲಭಸಾಧ್ಯವೆನಿಸುತ್ತದೆ. ಗ್ರಾಮಾಂತರ ಭಾಗದ ಮಕ್ಕಳು ಇಂಗ್ಲಿಷ್ ಭಾಷಾ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು. ತನ್ಮೂಲಕ ಉತ್ಕೃಷ್ಟ ವಿದ್ಯಾರ್ಥಿಗಳಾಗಿ ಹೊರಹೊಮ್ಮಬೇಕು ಎಂದು ಪುತ್ತೂರಿನ ನಿವೃತ್ತ ಮುಖ್ಯ ಶಿಕ್ಷಕಿ ಶಕುಂತಲಾ ನಾಯಕ್ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ಇಂಗ್ಲಿಷ್ ವಿಭಾಗದ ಆಶ್ರಯದಲ್ಲಿ ಆಯೋಜಿಸಲಾದ ಸ್ಪೋಕನ್ ಇಂಗ್ಲಿಷ್ ತರಗತಿಗಳನ್ನು ಉದ್ಘಾಟಿಸಿ ಬುಧವಾರ ಮಾತನಾಡಿದರು.


ಇಂಗ್ಲಿಷ್ ಭಾಷೆಯನ್ನು ಕಲಿಯಬಯಸುವವರು ಇಂಗ್ಲಿಷ್‌ನಲ್ಲಿ ಆಲೋಚಿಸುವುದನ್ನು ರೂಢಿಸಿಕೊಳ್ಳಬೇಕು. ಕನ್ನಡದಲ್ಲಿ ಆಲೋಚಿಸಿ, ಇಂಗ್ಲಿಷ್‌ಗೆ ಅನುವಾದಿಸಿ ಮಾತನಾಡುವುದರಿಂದ ಭಾಷೆಯನ್ನು ಕರತಲಾಮಲಕಗೊಳಿಸುವುದು ಕಷ್ಟ. ಕ್ಲಿಷ್ಟ ಎನಿಸಿದರೂ ಇಂಗ್ಲಿಷ್‌ನಲ್ಲಿ ವ್ಯವಹರಿಸುವುದನ್ನು ಬೆಳೆಸಿಕೊಳ್ಳಬೇಕು. ಆಗ ಭಾಷೆಯ ಹಿಡಿತ ತನ್ನಿಂತಾನಾಗಿ ಒಡಮೂಡುವುದಕ್ಕೆ ಸಾಧ್ಯ ಎಂದು ಅಬಿಪ್ರಾಯಪಟ್ಟರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಭಾಷೆ ಅತ್ಯಂತ ಅಗತ್ಯವಾದ ವಿಚಾರ. ಔದ್ಯೋಗಿಕ ಕ್ಷೇತ್ರಕ್ಕಂತೂ ಇಂಗ್ಲಿಷ್ ಭಾಷೆಯ ಅಗತ್ಯ ತುಂಬಾ ಇದೆ. ಕಾಲೇಜು ಶಿಕ್ಷಣದ ಜತೆಜತೆಗೆ ಇಂಗ್ಲಿಷ್ ಕಲಿಕಾ ಪ್ರಕ್ರಿಯೆಗೆ ತಮ್ಮನ್ನು ತಾವು ಒಡ್ಡಿಕೊಂಡರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಶೈಕ್ಷಣಿಕ ಲಾಭ ದೊರಕುವುದಕ್ಕೆ ಸಾಧ್ಯ ಎಂದು ನುಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಇಂಗ್ಲಿಷ್ ಸಂಸ್ಕೃತಿ ನಮಗೆ ಬೇಕಾಗಿಲ್ಲ ಆದರೆ ಭಾಷೆಯ ಅಗತ್ಯವಿದೆ. ಭಾರತೀಯತೆಯನ್ನು ಜಗತ್ತಿನಾದ್ಯಂತ ಪಸರಿಸುವುದಕ್ಕೆ ಮಾಧ್ಯಮವಾಗಿ ಇಂಗ್ಲಿಷ್ ಭಾಷೆಯನ್ನು ಬಳಸಿಕೊಳ್ಳಬೇಕು. ಹಾಗೆಂದು ಭಾಷೆಯನ್ನೂ ಭಾರತೀಯ ನೆಲೆಗಟ್ಟಿನಲ್ಲಿ ಬಳಸುವ ಸಾಧ್ಯತೆಯ ಬಗೆಗೆ ಆಲೋಚಿಸಬೇಕು. ಮಿಸ್ಟರ್, ಮಿಸ್ ಬಳಕೆಯ ಬದಲಾಗಿ ಶ್ರೀ, ಶ್ರೀಮತಿ ಬಳಕೆಯನ್ನು ಇಂಗ್ಲಿಷ್‌ನಲ್ಲೂ ಚಾಲ್ತಿಗೆ ತರಬೇಕಿದೆ ಎಂದರು.


ವಿದ್ಯಾರ್ಥಿನಿಯರಾದ ಮಹಿಮಾ ಹೆಗಡೆ ಹಾಗೂ ಅಂಕಿತ ಪ್ರಾರ್ಥಿಸಿದರು. ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಸ್ವಾಗತಿಸಿದರು. ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ ವಂದಿಸಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಗಣೇಶ ಪ್ರಸಾದ್ ಎ ಕಾರ್ಯಕ್ರಮ ನಿರ್ವಹಿಸಿದರು.

ಓಣಂ ಆಚರಣೆಯಲ್ಲಿ ವಿದ್ಯಾರ್ಥಿಗಳು ನಿರ್ಮಿಸಿದ ಬೃಹತ್ ಪೂಕಳಂ

0

ಪುತ್ತೂರು: ಕೇರಳದ ಅತ್ಯಂತ ಹಳೆಯ ಹಾಗೂ ಸಾಂಪ್ರದಾಯಿಕ ಹಬ್ಬವಾದ ಓಣಂ ಈಗ ಶ್ರದ್ದೆ ಭಕ್ತಿಯಿಂದ ವಿಶ್ವದೆಲ್ಲೆಡೆ ಆಚರಿಸಲ್ಪಡುತ್ತಿದ್ದು ಇದೊಂದು ಕೇರಳಿಗರ ಪ್ರೀತಿಯ ಹಬ್ಬ ಎಂದು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ಹೇಳಿದರು.


ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯ ರಿಂಗ್  ಎಂಡ್ ಟೆಕ್ನಾಲಜಿಯಯಲ್ಲಿ ನಡೆದ ಓಣಂ ಆಚರಣೆಯಲ್ಲಿ ವಿದ್ಯಾರ್ಥಿಗಳು ನಿರ್ಮಿಸಿದ ಬೃಹತ್ ಪೂಕಳಂನ ಮುಂಭಾಗದಲ್ಲಿ ದೀಪ ಬೆಳಗಿಸಿ ಮಾತಾಡಿದರು. ಮಹಾಬಲಿಯು ಪ್ರತಿವರ್ಷವೂ ಓಣಂ ಸಂದರ್ಭದಲ್ಲಿ ಭೂಮಿಗೆ ಮರಳಿ ಬಂದು ಜನರ ಕಷ್ಟಗಳನ್ನು ನಿವಾರಿಸುತ್ತಾನೆ ಎನ್ನುವ ನಂಬಿಕೆ ಇದೆ.

ಇದರಿಂದಾಗಿ ಈ ಹಬ್ಬವು ಅತ್ಯಂತ ಮಹತ್ವದ್ದಾಗಿದೆ. ವಿಷ್ಣುವಿನ ವಾಮನ ಅವತಾರದ ಐತಿಹ್ಯವನ್ನೂ ಇದು ತಿಳಿಸುತ್ತದೆ ಎಂದರು. ಓಣಂ ಎಲ್ಲರಿಗೂ ಶುಭವನ್ನು ತರಲಿ ಎಂದು ಹಾರೈಸಿದರು.


ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್ ಅನೇಕತೆಯಲ್ಲಿ ಏಕತೆಯನ್ನು ಸಾರುವ ಇಂತಹ ಹಬ್ಬಗಳು ಎಲ್ಲೆಡೆಯೂ ಆಚರಿಸುವಂತಾಗಬೇಕು ಎಂದು ಶುಭ ಹಾರೈಸಿದರು.


ಓಣಂ ಹಬ್ಬದ ಹಿನ್ನೆಲೆಯನ್ನು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಪ್ರಸ್ತುತಪಡಿಸಿದರು. ಕೇರಳದ ಸಾಂಪ್ರದಾಯಿಕ ನೃತ್ಯ ತಿರುವತ್ತಿರ ಕಳಿಯನ್ನು ವಿದ್ಯಾರ್ಥಿನಿಯರು ಅಭಿನಯಿಸಿದರು.


ವಿದ್ಯಾರ್ಥಿಗಳಾದ ಸಿಬಿನ್ ರವೀಂದ್ರ ಸ್ವಾಗತಿಸಿ, ವರುಣ್ ವಂದಿಸಿದರು. ವಿಶ್ಮಿತಾ ಮತ್ತು ಭಾವನಾ ಕಾರ್ಯಕ್ರಮ ನಿರ್ವಹಿಸಿದರು.

ಬಡಗುತಿಟ್ಟಿನ ಯುವ ಭಾಗವತ – ಶ್ರೀ ಪ್ರಸನ್ನ ಭಟ್ ಬಾಳ್ಕಲ್ 

ಶ್ರೀ ಪ್ರಸನ್ನ ಭಟ್ ಬಾಳ್ಕಲ್  ಅವರು  ಬಡಗುತಿಟ್ಟಿನ ಯುವ ಭಾಗವತರು. ಬಡಗು ತಿಟ್ಟಿನ ಹೆಚ್ಚಿನ ಎಲ್ಲಾ ಮೇಳಗಳಲ್ಲೂ ಆಹ್ವಾನಿತ ಭಾಗವತರಾಗಿ ವ್ಯವಸಾಯ ಮಾಡಿದ ಕಲಾವಿದರಿವರು. 1998-99ರಲ್ಲಿ ಮೇಳದ ವ್ಯವಸಾಯ ಆರಂಭಿಸಿದರೂ ಯಕ್ಷಗಾನ ಭಾಗವತಿಕೆಯಲ್ಲಿ ಇವರು ಇಪ್ಪತ್ತಾರು ವರ್ಷಗಳ ಅನುಭವಿ. ಕಳೆದ ನಾಲ್ಕು ವರ್ಷಗಳಿಂದ ಪೆರ್ಡೂರು ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಯಕ್ಷಗಾನ ಕ್ಷೇತ್ರದಲ್ಲಿ  ಭಾಗವತನಾಗಿ ತಮ್ಮ ಹಾಡುಗಾರಿಕೆಯಿಂದ ಕಲಾಭಿಮಾನಿಗಳನ್ನು ರಂಜಿಸುತ್ತಿದ್ದಾರೆ. 

ನಗುಮೊಗದ ಯುವ ಭಾಗವತ  ಶ್ರೀ ಪ್ರಸನ್ನ ಭಟ್ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಂಪ್ಲಿ ಗ್ರಾಮದ ಬಾಳ್ಕಲ್. 1977ನೇ ಇಸವಿ ಫೆಬ್ರವರಿ 25ರಂದು ಶ್ರೀ ಪದ್ಮನಾಭ ಭಟ್ ಬಾಳ್ಕಲ್ ಮತ್ತು ಶ್ರೀಮತಿ ಪಾರ್ವತಿ ಭಟ್ ದಂಪತಿಗಳ ಪುತ್ರನಾಗಿ ಜನನ. ಪ್ರಸನ್ನ ಭಟ್ ಅವರ ತಂದೆ ಶ್ರೀ ಪದ್ಮನಾಭ ಭಟ್ಟರು ಯಕ್ಷಗಾನ ಕಲಾವಿದನಾಗಿ ಮೇಳದ ತಿರುಗಾಟ ನಡೆಸಿದ ಅನುಭವಿ. ಸ್ತ್ರೀ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಇವರು ತಾಳಮದ್ದಳೆ ಅರ್ಥಧಾರಿಯೂ ಆಗಿದ್ದರು. ಶ್ರೀ ಶೇಣಿ ಗೋಪಾಲಕೃಷ್ಣ ಭಟ್ ಮತ್ತು ತೆಕ್ಕಟ್ಟೆ ಶ್ರೀ ಆನಂದ ಮಾಸ್ತರರ ಜತೆ ಅರ್ಥ ಹೇಳಿದವರು. ಕೆಲಸಮಯ (1989-90) ಸಾಲಿಗ್ರಾಮ ಮೇಳದ ಮ್ಯಾನೇಜರ್ ಆಗಿಯೂ ಕೆಲಸ ಮಾಡಿದ್ದರು.

ಅಜ್ಜ (ತಾಯಿಯ ತಂದೆ) ಶ್ರೀ ಸುಬ್ರಾಯ ಹೆಗಡೆಯವರು ಸಮಾಜ ಸೇವಕರಾಗಿ, ಸಹಕಾರೀ ಧುರೀಣರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಯಕ್ಷಗಾನ ಸಂಘಟಕರಾಗಿ ಪ್ರಸಿದ್ಧರು. ಅವರು ಶ್ರೀ ರಾಜರಾಜೇಶ್ವರೀ ಕೃಪಾಪೋಷಿತ ಯಕ್ಷಗಾನ ಮಂಡಳಿಯನ್ನು ಹುಟ್ಟುಹಾಕಿ ಮುನ್ನಡೆಸಿದ್ದರು. ಈ ಮೇಳದಲ್ಲಿ ಮೂರೂರು ಶ್ರೀ ದೇವರು ಹೆಗಡೆ, ಕೊಳಗಿ ಶ್ರೀ ಅನಂತ ಹೆಗಡೆ, ಮೊದಲಾದವರು ವ್ಯವಸಾಯ ಮಾಡಿದ್ದರು.

ಪ್ರಸನ್ನ ಭಟ್ಟರ ತಂದೆ ಶ್ರೀ ಪದ್ಮನಾಭ ಭಟ್ಟರು ಈ ಮೇಳದಲ್ಲಿ ಸಕ್ರಿಯರಾಗಿದ್ದರು. ಪ್ರಸನ್ನ ಭಟ್ಟರ  ಇಬ್ಬರು ಸೋದರ ಮಾವಂದಿರೂ ಯಕ್ಷಗಾನ  ಕಲಾವಿದರು. ಶ್ರೀ ರಾಮಕೃಷ್ಣ ಹೆಗಡೆ ಮಳಿಗೆಮನೆ ಅವರು ವೇಷಧಾರಿಯಾಗಿ ಪ್ರಾಚಾರ್ಯ ಭಾಗವತ ಶ್ರೀ ನಾರ್ಣಪ್ಪ ಉಪ್ಪೂರರೊಂದಿಗೆ ವ್ಯವಸಾಯ ಮಾಡಿದವರು. ಇನ್ನೋರ್ವ ಸೋದರ ಮಾವ ಶ್ರೀ ಗಜಾನನ ಹೆಗಡೆ ಮಳಿಗೆಮನೆ ಹವ್ಯಾಸೀ ಭಾಗವತರು. 

ಶ್ರೀ ಪ್ರಸನ್ನ ಭಟ್ ಅವರು ಸ್ನಾತಕೋತ್ತರ ಪದವೀಧರರು. ಏಳನೇ ತರಗತಿ ವರೆಗೆ ಓದಿದ್ದು ತುಂಬೆಬೀಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಹತ್ತನೇ ತರಗತಿ ವರೆಗೆ ಮಂಚಿಕೇರಿ ಶ್ರೀ ರಾಜರಾಜೇಶ್ವರೀ ಶಾಲೆಯಲ್ಲಿ. ಬಳಿಕ ಇಡಗುಂಜಿ ಶ್ರೀ ಮಹಾಗಣಪತಿ ದೇವಳದ ಸಂಸ್ಕೃತ ಮತ್ತು ವೇದಪಾಠಶಾಲೆಯಲ್ಲಿ ಓದಿದ್ದರು. ಇಲ್ಲಿ ಸಂಸ್ಕೃತದಲ್ಲಿ ‘ಪ್ರಥಮ’ ಮತ್ತು ‘ಕಾವ್ಯ’ ಎಂಬ ವಿಚಾರವನ್ನೂ ಮಂತ್ರವನ್ನೂ ಕಲಿತಿದ್ದರು. ಬಳಿಕ ಉಡುಪಿಯ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತ ಎಂ. ಎ  (ಸಾಹಿತ್ಯ ಮತ್ತು ಜ್ಯೋತಿಷ್ಯ ಪೂರ್ವ ವಿದ್ವತ್) ಓದಿದ್ದರು.

ಇವರಿಗೆ ಎಳವೆಯಲ್ಲೇ ಯಕ್ಷಗಾನಾಸಕ್ತಿ ಇತ್ತು. ತಾಯಿಯ ಕಡೆಯಿಂದಲೂ ತಂದೆಯ ಕಡೆಯಿಂದಲೂ ಯಕ್ಷಗಾನವು ರಕ್ತಗತವಾಗಿಯೇ ಬಂದಿತ್ತು. ತಾಯಿ ಶ್ರೀಮತಿ ಪಾರ್ವತಿ ಭಟ್ ಭಜನೆ ಮೊದಲಾದ ಹಾಡುಗಳನ್ನು ಅಂದವಾಗಿ ಹೇಳುತ್ತಿದ್ದರು. ತಂದೆ ತಾಯಿಯರ ಜತೆ ಪ್ರಸನ್ನ ಭಟ್ಟರು ಯಕ್ಷಗಾನ ಪ್ರದರ್ಶನಗಳನ್ನು ನೋಡುತ್ತಿದ್ದರು. ಖ್ಯಾತ ಕಲಾವಿದ ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆ ಅವರ ಜತೆ ಬಂಧುತ್ವವು ಬೆಸೆದ ಮೇಲೆಯಂತೂ ಯಕ್ಷಗಾನಾಸಕ್ತಿಯು ಹೆಚ್ಚಾಗಿತ್ತು.

ಯಕ್ಷಗಾನ ನೋಡುವ ಆಸೆಯು ಕಲಿಯುವ ಆಸೆಯಾಗಿ ಬದಲಾಗಿತ್ತು. ತಾನೂ ಕಲಾವಿದನಾಗಬೇಕೆಂಬ ಆಸೆಯು ಹುಟ್ಟಿಕೊಂಡಿತ್ತು. ಯಕ್ಷಗಾನದ ಹಾಡುಗಳನ್ನು ಕೇಳುತ್ತಾ ಕುಣಿಯುವ ಹವ್ಯಾಸವೂ ಇತ್ತು. ಎಲ್ಲಾ ಭಾಗವತರ ಶೈಲಿಯಲ್ಲಿಯೂ ಹಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದರು. (ಮಿಮಿಕ್ರಿ) ಬಾವನಾದ ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆಯವರು ಭಾಗವತಿಕೆಯನ್ನು ಸರಿಯಾಗಿ ಅಭ್ಯಸಿಸಲು ಸಲಹೆ ನೀಡಿದ್ದರು. ಮೊದಲ ಪಾಠ ಅವರಿಂದಲೇ ಆಗಿತ್ತು. ಅವರಿಂದ ತಾಳ ಮತ್ತು ಮಟ್ಟುಗಳನ್ನು ಪ್ರಸನ್ನ ಭಟ್ಟರು ಕಲಿತಿದ್ದರು. 

ಶ್ರೀ ಪ್ರಸನ್ನ ಭಟ್ ಅವರು ಉಡುಪಿ ಸಂಸ್ಕೃತ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ  ಹೆಚ್ಚಿನ ಕಲಿಕೆಗೆ ಅವಕಾಶವಾಗಿತ್ತು. ಉಡುಪಿ ಯಕ್ಷಗಾನ ಕೇಂದ್ರವನ್ನು ಸೇರಿ ಶ್ರೀ ಗೋಪಾಲ ವಿಠ್ಠಲ ಪಾಟೀಲರಿಂದ ಭಾಗವತಿಕೆಯನ್ನು ಕಲಿತರು. ಶ್ರೀ ನೀಲಾವರ ಲಕ್ಷ್ಮೀನಾರಾಯಣಯ್ಯ ಅವರಿಂದಲೂ ಕಲಿಕೆಗೆ ಅವಕಾಶವಾಗಿತ್ತು. ಉಡುಪಿ ಯಕ್ಷಗಾನ ಕೇಂದ್ರದಲ್ಲಿ ನಿರಂತರ ಎರಡು ವರ್ಷಗಳ ತರಬೇತಿ. ಉಡುಪಿ ಸಂಸ್ಕೃತ ಕಾಲೇಜಿನ ಪ್ರದರ್ಶನ. ಪ್ರಸಂಗ ‘ಸತ್ಯಸೇನ ವಧಃ'(ಸಂಸ್ಕೃತದಲ್ಲಿ) ದಲ್ಲಿ ಪ್ರಸನ್ನ ಭಟ್ ಅವರು ಭಾಗವತರಾಗಿ ರಂಗಪ್ರವೇಶ ಮಾಡಿದ್ದರು. ಅಂದು ಪ್ರೇಕ್ಷಕರ ಸಾಲಿನಲ್ಲಿದ್ದ ಪೂಜ್ಯ ಪೇಜಾವರ ಶ್ರೀಗಳವರು ಮೆಚ್ಚಿ ಪ್ರಸನ್ನ ಭಟ್ಟರಿಗೆ ತಾಳವನ್ನು ನೀಡಿ ಆಶೀರ್ವದಿಸಿದ್ದರು.

ಬಳಿಕ ಅನೇಕ ಪ್ರದರ್ಶನಗಳಲ್ಲಿ ಭಾಗವತನಾಗಿ ಕಾಣಿಸಿಕೊಂಡಿದ್ದರು. ಶೃಂಗೇರಿಯ ಸಂಸ್ಕೃತ ವಿದ್ಯಾಲಯದ ಸದ್ವಿದ್ಯಾ ಸಂಜೀವಿನೀ ಸವೇದ ಪಾಠಶಾಲೆಯ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಸಂಸ್ಕೃತ ಭಾಷೆಯಲ್ಲಿ ಪ್ರದರ್ಶನ ನೀಡಿದ್ದರು. 2007ರಲ್ಲಿ ಶೃಂಗೇರಿ ಕಾಲೇಜಿನ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿ ಅವರಿಂದ ದಿಲ್ಲಿ ಸಂಸ್ಕೃತ ಭವನದಲ್ಲಿ ಸುಧನ್ವ ಮೋಕ್ಷ ಪ್ರದರ್ಶನವನ್ನು ನಡೆಸಿದ್ದರು. 

ಶ್ರೀ ಪ್ರಸನ್ನ ಭಟ್ ಬಾಳ್ಕಲ್ ಅವರ ಮೊದಲ ತಿರುಗಾಟ ಸಾಲಿಗ್ರಾಮ ಮೇಳದಲ್ಲಿ. (1998-99) 1999-2000ನೇ ಸಾಲಿನಲ್ಲಿ ಸಾಲಿಗ್ರಾಮ ಮೇಳದಲ್ಲಿ ಸುಮಾರು ಐವತ್ತು ಪ್ರದರ್ಶನಗಳಲ್ಲಿ ಭಾಗಿಯಾಗಿದ್ದರು. (ಬದಲಿ ಭಾಗವತನಾಗಿ) ಆಗ ಕೊಳಗಿ ಶ್ರೀ ಕೇಶವ ಹೆಗಡೆ ಮತ್ತು ಶ್ರೀ ಸತ್ಯನಾರಾಯಣ ಪುಣಿಂಚತ್ತಾಯರು ಸಾಲಿಗ್ರಾಮ ಮೇಳದ ಭಾಗವತರಾಗಿದ್ದರು. ಬಳಿಕ, ಮಂದರ್ತಿ, ಸೌಕೂರು, ಕಮಲಶಿಲೆ, ಹಿರಿಯಡಕ, ಹಾಲಾಡಿ ಮೊದಲಾದ ಮೇಳಗಳಲ್ಲಿ ಆಹ್ವಾನಿತ ಭಾಗವತನಾಗಿ ವ್ಯವಸಾಯ. ಬಡಗಿನ ಬಹುತೇಕ ಹೆಚ್ಚಿನ ಎಲ್ಲಾ ಮೇಳಗಳಲ್ಲಿ ಭಾಗವತನಾಗಿ ಇವರು ಕಾಣಿಸಿಕೊಂಡಿದ್ದಾರೆ.

2015-16ನೇ ಸಾಲಿನಲ್ಲಿ ನೀಲಾವರ ಮೇಳದಲ್ಲಿ ಶ್ರೀ ಸುಬ್ರಹ್ಮಣ್ಯ ಧಾರೇಶ್ವರರ ಜತೆ ವ್ಯವಸಾಯ ಮಾಡಿದ್ದರು. 2017-18 ಮತ್ತು 2018-19 ನೇ ಸಾಲಿನಲ್ಲಿ ಜಲವಳ್ಳಿ ಶ್ರೀ ವಿದ್ಯಾಧರ ರಾವ್ ಅವರ ಜಲವಳ್ಳಿ ಮೇಳದಲ್ಲಿ ವ್ಯವಸಾಯ. ಕಳೆದ ನಾಲ್ಕು ವರ್ಷಗಳಿಂದ ಪೆರ್ಡೂರು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. (2019ರಿಂದ ತೊಡಗಿ) ಶ್ರೀ ಪ್ರಸನ್ನ ಭಟ್ಟರು ತಮ್ಮ ಬಾವ ನೆಂಟನಾದ ಶ್ರೀ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರ ಸಂಚಾಲಕತ್ವದ ಶ್ರೀ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ (ರಿ) ಕುಂಭಾಶಿ ಈ ತಂಡದ ಪ್ರದರ್ಶನಗಳಲ್ಲಿ ಕಳೆದ ಹದಿನೆಂಟು ವರ್ಷಗಳಿಂದ ಭಾಗವಹಿಸುತ್ತಿದ್ದಾರೆ. ಈ ತಂಡದ ಮುಖ್ಯ ಭಾಗವತನಾಗಿದ್ದ ವಿದ್ವಾನ್ ಶ್ರೀ ಗಣಪತಿ ಭಟ್ಟರ ಜತೆ ಸಹ ಭಾಗವತನಾಗಿ ಕಾಣಿಸಿಕೊಂಡಿದ್ದರು. ಅವರ ಒಡನಾಟವು ಕಲಿಕೆಗೆ ಅವಕಾಶವಾಗಿತ್ತು. ಶ್ರೀ ಪ್ರಸನ್ನ ಭಟ್ಟರು ವಿದ್ವಾನ್ ಶ್ರೀ ಗಣಪತಿ ಭಟ್ಟರ ಹಾಡುಗಾರಿಕೆಯಿಂದ ಪ್ರಭಾವಿತರಾಗಿದ್ದರು.

ವೃತ್ತಿ ಜೀವನದುದ್ದಕ್ಕೂ ಚಿಟ್ಟಾಣಿ ರಾಮಚಂದ್ರ ಹೆಗಡೆ, ಬಳ್ಕೂರು ಕೃಷ್ಣಯಾಜಿ, ಕೊಂಡದಕುಳಿ ರಾಮಚಂದ್ರ ಹೆಗಡೆ, ವಿದ್ಯಾಧರ ಜಲವಳ್ಳಿ, ತೋಟಿಮನೆ ಗಣಪತಿ ಹೆಗಡೆ, ಕಣ್ಣಿಮನೆ ಗಣಪತಿ ಭಟ್, ಮೂರೂರು ರಮೇಶ ಭಂಡಾರಿ, ಥಂಡಿಮನೆ ಶ್ರೀಪಾದ ಭಟ್, ನೀಲ್ಕೋಡು ಶಂಕರ ಹೆಗಡೆ, ಸುಬ್ರಹ್ಮಣ್ಯ ಚಿಟ್ಟಾಣಿ ಮೊದಲಾದ ಹಿರಿಯ ಕಲಾವಿದರ ಒಡನಾಟವು ದೊರೆತಿತ್ತು. 

ಶ್ರೀ ಪ್ರಸನ್ನ ಭಟ್ ಬಾಳ್ಕಲ್ ಅವರು ಶತಾವಧಾನಿ ಡಾ. ಆರ್. ಗಣೇಶ್ ಅವರ ಪರಿಕಲ್ಪನೆಯ, ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆ ಮತ್ತು ಮಂಟಪ ಶ್ರೀ ಪ್ರಭಾಕರ ಉಪಾಧ್ಯರ ಯುಗಳ ಯಕ್ಷಗಾನ ”ವಿಜಯ ವಿಲಾಸ” ಎಂಬ ಪ್ರದರ್ಶನದಲ್ಲಿ ವಿದ್ವಾನ್ ಶ್ರೀ ಗಣಪತಿ ಭಟ್ಟರ ಜತೆ ಭಾಗವತನಾಗಿ ಭಾಗವಹಿಸಿದ್ದರು. ಅವರಿಗೆ ಇದು ಒಂದು ವಿಶೇಷ ಅನುಭವವಾಗಿತ್ತು.  ಶ್ರೀ ಪ್ರಸನ್ನ ಭಟ್ ಅವರು 2012ರಲ್ಲಿ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನದ  ಸಿಂಗಾಪೂರ್ ನಲ್ಲಿ ನಡೆದ ಪ್ರದರ್ಶನಗಳಲ್ಲೂ ಭಾಗವಹಿಸಿದ್ದರು.

ಮುಂಬೈ, ಬೆಂಗಳೂರು ಮೊದಲಾದ ನಗರಗಳಲ್ಲಿ ನಡೆದ ಪ್ರದರ್ಶನಗಳಲ್ಲೂ ತಮ್ಮ ಹಾಡುಗಾರಿಕೆಯಿಂದ ಯಕ್ಷಗಾನ ಕಲಾಭಿಮಾನಿಗಳನ್ನು ರಂಜಿಸಿದ್ದಾರೆ. ಹಲವು ಸಂಘ ಸಂಸ್ಥೆಗಳಿಂದ ಸನ್ಮಾನಿತರೂ ಆಗಿದ್ದಾರೆ. ಪ್ರಸ್ತುತ ಇವರು ಕಿರಿಮಂಜೇಶ್ವರದಲ್ಲಿ ಸ್ವಂತ ಸ್ಥಳ ಮತ್ತು ಮನೆಯನ್ನು ಹೊಂದಿ ತಾಯಿ ಮತ್ತು ಪತ್ನಿಯೊಂದಿಗೆ ವಾಸಿಸುತ್ತಿದ್ದಾರೆ. ಬಡಗು ತಿಟ್ಟಿನ ಯುವ ಭಾಗವತ  ಶ್ರೀ ಪ್ರಸನ್ನ ಭಟ್ ಬಾಳ್ಕಲ್  ಅವರಿಗೆ ಶ್ರೀ ದೇವರು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ. ಭಾಗವತರಾಗಿ ವ್ಯವಸಾಯವನ್ನು ಮಾಡುವಲ್ಲಿ ಕಲಾಮಾತೆಯ ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು. 

ಶ್ರೀ ಪ್ರಸನ್ನ ಭಟ್ ಬಾಳ್ಕಲ್. ಮೊಬೈಲ್: 8762783763

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

ಉಪ್ಪಿನಂಗಡಿ ರೋಟರಿ ಕ್ಲಬ್ : ಶಿಕ್ಷಕರ ದಿನಾಚರಣೆ

0

ಉಪ್ಪಿನಂಗಡಿ ರೋಟರಿ ಕ್ಲಬ್ ಸಭಾಂಗಣದಲ್ಲಿ ಶಿಕ್ಷಕ ದಿನಾಚರಣೆಯ ನಿಮಿತ್ತ ರಾಷ್ಟ್ರಪ್ರಶಸ್ತಿ ಪುರಸ್ಕೃತ ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪಪ್ರಾಂಶುಪಾಲ ರೋ.P H F ದಿವಾಕರ ಆಚಾರ್ಯ ಗೇರುಕಟ್ಟೆ, ಮಾಣಿ ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲಾ ಆಡಳಿತಾಧಿಕಾರಿ ಉಪ್ಪಿನಂಗಡಿ ರೋಟರಿ ಕ್ಲಬ್ಬಿನ ಮಾಜಿ ಅಧ್ಯಕ್ಷ ರವೀಂದ್ರ ದರ್ಬೆ, ಉಪ್ಪಿನಂಗಡಿ ಮಾದರಿ ಶಾಲಾ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ವಂದನಾ ಮತ್ತು ಇಂದ್ರಪ್ರಸ್ಥ ವಿದ್ಯಾಲಯದ ಶಿಕ್ಷಕಿ ಶ್ರೀಮತಿ ಆಶಾಲತಾ ನಾಯಕ್ ಇವರನ್ನು ಗೌರವಿಸಲಾಯಿತು.

ರೋಟರಿ ಅಧ್ಯಕ್ಷ ಜಗದೀಶ್ ನಾಯಕ್, ಕಾರ್ಯದರ್ಶಿ ಗಿರಿಧರ ನಾಯಕ್, ಮಾಜಿ ಅಧ್ಯಕ್ಷರಾದ ಅಜೀಜ್ ಬಸ್ತಿ ಕಾರ್, ವಿಜಯಕುಮಾರ್ ಕಲ್ಲಳಿಕೆ, ನಿವೃತ್ತ ಬಿಎಸ್ಎಫ್ ಕಮಾಂಡೆಂಟ್  ರೋ. ಡಿ. ಸಿ .ಚಂದಪ್ಪ ಮೂಲ್ಯ, ಅಬೂಬಕ್ಕರ್ ಪುತ್ತ, ಇಸ್ಮಾಯಿಲ್  ಇಕ್ಬಾಲ್, ನಿಕಟ ಪೂರ್ವ ಕಾರ್ಯದರ್ಶಿ ನವೀನ್  ಬ್ರಾಗ್ಸ್, ಸ್ವರ್ಣೇಶ ಗಾಣಿಗ, ಮತ್ತು  ಕ್ಲಬ್ಬಿನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಸನ್ಮಾನಿತರಾದ ನಾಲ್ವರು ಶಿಕ್ಷಕರು ಶಿಕ್ಷಕ ದಿನಾಚರಣೆಯ ಮಹತ್ವದ ಬಗ್ಗೆ ಮಾತನಾಡಿ ಗುರುವೃಂದದ ಮೇಲಿನ ಪ್ರೀತಿ ವಿಶ್ವಾಸಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.

ರೋಟರಿ ಕ್ಲಬ್ಬಿನ ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಯೂನಿಕ್ ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷ ಜಗದೀಶ್ ನಾಯಕ್ ಸ್ವಾಗತಿಸಿ ಕಾರ್ಯದರ್ಶಿ ಗಿರಿಧರ್ ನಾಯಕ್ ವಂದಿಸಿದರು.

ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ – NIA ಅಧಿಸೂಚನೆ ಪತ್ರಿಕಾ ಪ್ರಕಟಣೆ ಬಿಡುಗಡೆ – ಹತ್ಯೆಗೆ ಪಿಎಫ್ಐ ನಂಟು ಬಹಿರಂಗ

0

ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ ಗೆ ಸಂಬಂಧಿಸಿದಂತೆ ಎನ್‌ಐಎ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಹಲವು ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ. ಈ ಸಂಬಂಧ ಇಂದು ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಅದರ ವಿವರ ಕೆಳಗಿದೆ.

ಇಂದು (06.09.2022), ಮೈಸೂರು, ಕೊಡಗು ಮತ್ತು ದಕ್ಷಿಣದ ಮೂವತ್ಮೂರು (33) ಸ್ಥಳಗಳಲ್ಲಿ NIA ಶೋಧ ನಡೆಸಿತು. ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಕರ್ನಾಟಕದ ಕನ್ನಡ ಜಿಲ್ಲೆಯ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಆರಂಭದಲ್ಲಿ ಪ್ರಕರಣ ದಾಖಲಾಗಿತ್ತು. ಅದನ್ನು ಎನ್‌ಐಎ ಗೆ ವರ್ಗಾಯಿಸಲಾಗಿತ್ತು.

ಆರೋಪಿಗಳೆಲ್ಲರೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಸಕ್ರಿಯ ಸದಸ್ಯರಾಗಿದ್ದಾರೆ ಎಂದು ತನಿಖೆಗಳು ಬಹಿರಂಗಪಡಿಸಿವೆ. ಪ್ರವೀಣ್ ನೆಟ್ಟಾರು ಹತ್ಯೆಯ ಮೂಲಕ ಸಮಾಜದ ಒಂದು ವಿಭಾಗದ ಜನರನ್ನು ಭಯೋತ್ಪಾದನೆಗೆ ಒಳಪಡಿಸುವ ದೊಡ್ಡ ಪಿತೂರಿಯ ಭಾಗವಾಗಿ ಯೋಜಿಸಿ ನಡೆಸಿದ್ದರು.

ಆ ಮೂಲಕ ಒಂದು ವರ್ಗದ ಜನರಲ್ಲಿ ಭಯವನ್ನು ಹುಟ್ಟಿಸುವುದು ಅವರ ಮುಖ್ಯ ಉದ್ದೇಶ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ.

ಆರೋಪಿಗಳು ಮತ್ತು ಶಂಕಿತರ ಆವರಣದಲ್ಲಿ ಇಂದು ನಡೆಸಿದ ಶೋಧಗಳಲ್ಲಿ, ಡಿಜಿಟಲ್ ಸಾಧನಗಳು, ಬಳಸಿದ ಮದ್ದುಗುಂಡುಗಳು, ಸುಧಾರಿತ ಶಸ್ತ್ರಾಸ್ತ್ರಗಳು, ನಗದು, ದೋಷಾರೋಪಣೆಯ ದಾಖಲೆಗಳು, ಕರಪತ್ರಗಳು ಮತ್ತು ಸಾಹಿತ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಹೆಚ್ಚಿನ ತನಿಖೆಗಳು ಪ್ರಗತಿಯಲ್ಲಿವೆ.

ಶಿಕ್ಷಕರ ದಿನಾಚರಣೆ

0

ಪುತ್ತೂರು: ಸಮಾಜವು ಶಿಕ್ಷಕನಿಂದ ಬಹಳವಾಗಿ ನಿರೀಕ್ಷಿಸುತ್ತದೆ ಆ ನಿರೀಕ್ಷೆಗಳನ್ನು ಹುಸಿಗೊಳಿಸದೆ ಶಿಕ್ಷಕನು ಸಮಾಜಕ್ಕೆ ಬೆಳಕು ನೀಡುವ ಆದರ್ಶ ವ್ಯಕ್ತಿತ್ವವಾಗಬೇಕು ಎಂದು ಸುಳ್ಯದ ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಹಾಗೂ ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ನಿರ್ದೇಶಕಿ ಡಾ.ಯಶೋದಾ ರಾಮಚಂದ್ರ ಹೇಳಿದರು.


ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ವಿಭಾಗ ಮತ್ತು ನವದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತಿನ ಆಶ್ರಯದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಮಾತಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಒಂದಲ್ಲ ಒಂದು ವಿಷಯದ ಜ್ಞಾನ ಹುದುಗಿರುತ್ತದೆ ಅದನ್ನು ಹೊರಗೆಡಹುವ ಕ್ರಿಯಾಶಕ್ತಿ ಅಧ್ಯಾಪಕನಲ್ಲಿರಬೇಕು. ಅಧ್ಯಾಪನ ಮಾತ್ರವಲ್ಲದೆ ವ್ಯಕ್ತಿತ್ವ ನಿರ್ಮಾಣವೂ ಅವನ ಧ್ಯೇಯವಾಗಬೇಕು ಎಂದರು. ಮೆಖಾಲೆ ಶಿಕ್ಷಣ ಪದ್ದತಿಯ ಫಲವನ್ನು ನಾವೆಲ್ಲರೂ ಅನುಭವಿಸುವಂತಾಗಿದೆ. ಸಾಮರ್ಥ್ಯ ಇದ್ದರೂ ಸೌಜನ್ಯ ಇಲ್ಲದ ವಿದ್ಯಾರ್ಥಿಗಳನ್ನು ನಾವು ಕಾಣುವಂತಾಗಿದೆ ಎಂದರು. ಶಿಕ್ಷಕನ ಬಗೆಗಿನ ಬದಲಾದ ಸಾಮಾಜಿಕ ದೃಷ್ಟಿಕೋನ ಮತ್ತು ಶಿಕ್ಷಣ ಕ್ಷೇತ್ರಕ್ಕೆ ರಾಜಕೀಯದ ಪ್ರವೇಶದಿಂದಾಗಿ ಶಿಕ್ಷಕನಿಗೆ ಯಾವುದೇ ಪ್ರಾಶಸ್ತ್ಯವಿಲ್ಲದಂತಾಗುತ್ತಿರುವುದು ದುರಂತ ಎಂದು ಅಭಿಪ್ರಾಯ ಪಟ್ಟರು.


ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ಮನುಜೇಶ್.ಬಿ.ಜೆ, ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥ ಪ್ರೊ. ಕೃಷ್ಣಮೋಹನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ವಿಷಯವಾರು ಉತ್ತಮ ಫಲಿತಾಂಶವನ್ನು ದಾಖಲಿಸಿದ ಉಪನ್ಯಾಸಕರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು, ಹಾರು ಬೂದಿಯಿಂದ ಕಾಂಕ್ರೀಟ್ ಬೀಮ್‌ಗಳ ತಯಾರಿಕೆಯ ಬಗ್ಗೆ ಪೇಟೆಂಟ್ ಪಡೆದಿರುವ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ. ಸುರೇಖ ಅವರನ್ನು ಸನ್ಮಾನಿಸಲಾಯಿತು.

ಕೆಎಸ್‌ಸಿಎಸ್‌ಟಿ ಪ್ರಾಜೆಕ್ಟ್ ಪ್ರದರ್ಶನದಲ್ಲಿ ರಾಜ್ಯಮಟ್ಟದ ಉತ್ತಮ ಪ್ರಾಜೆಕ್ಟ್ ಪ್ರಶಸ್ತಿಗಳಿಸಿದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಿದ ಎಂಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕಿಯರಾದ ಪ್ರೊ. ಜೀವಿತ ಹಾಗೂ ಪ್ರೊ. ರೇಶ್ಮಾ ಪೈ ಅವರನ್ನು ಗೌರವಿಸಲಾಯಿತು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಮಟ್ಟದ ಅಂತರ್ಕಾಲೇಜು ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದ ಕಾಲೇಜಿನ ತಂಡಕ್ಕೆ ಮಾರ್ಗದರ್ಶನವನ್ನು ನೀಡಿದ್ದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಅವರನ್ನು ಸನ್ಮಾನಿಸಲಾಯಿತು.


ವಿದ್ಯಾರ್ಥಿಗಳಾದ ವಿಶ್ಮಿತಾ.ಕೆ.ಶೆಟ್ಟಿ ಸ್ವಾಗತಿಸಿ, ಸಂತೃಪ್ತಿ.ಎಸ್ ವಂದಿಸಿದರು. ವರುಣ್ ಕಾರ್ಯಕ್ರಮ ನಿರ್ವಹಿಸಿದರು.

ಬಿಜೆಪಿ ನಾಯಕ, ಅರಣ್ಯ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ಹೃದಯಾಘಾತದಿಂದ ನಿಧನ

0

ಉತ್ತರ ಕರ್ನಾಟಕಕ್ಕೆ ರಾಜ್ಯ ರಚನೆಯ ಕನಸು ಕಂಡಿದ್ದ ಬಿಜೆಪಿ ನಾಯಕ, ಅರಣ್ಯ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ ಮಂಗಳವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.

61 ವರ್ಷದ ಕತ್ತಿ ಅವರನ್ನು ಡಾಲರ್ಸ್ ಕಾಲೋನಿ ನಿವಾಸಿಯಿಂದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು.

ಮೂಲಗಳ ಪ್ರಕಾರ, ಕತ್ತಿ ಅವರು ಇಲ್ಲಿನ ಡಾಲರ್ಸ್ ಕಾಲೋನಿ ನಿವಾಸದ ಸ್ನಾನಗೃಹದಲ್ಲಿ ಕುಸಿದು ಬಿದ್ದು ಆಸ್ಪತ್ರೆಗೆ ಸಾಗಿಸಲಾಯಿತು. ವೈದ್ಯರ ಪ್ರಕಾರ ಉಮೇಶ ಕತ್ತಿಯವರನ್ನು ಆಸ್ಪತ್ರೆಗೆ ಕರೆತರುವಾಗ ನಾಡಿಮಿಡಿತ ಇರಲಿಲ್ಲ ಎಂದು ರಾಜ್ಯ ಕಂದಾಯ ಸಚಿವ ಆರ್.ಅಶೋಕ ಹೇಳಿದ್ದಾರೆ.

ಕತ್ತಿಯವರ ನಿಧನದಿಂದ ಬಿಜೆಪಿ ಹಾಗೂ ಬೆಳಗಾವಿ ಜಿಲ್ಲೆಗೆ ಅಪಾರ ನಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.

“ನನ್ನ ಆಪ್ತ ಸಹೋದ್ಯೋಗಿ ಕರ್ನಾಟಕ ಅರಣ್ಯ ಸಚಿವ ಉಮೇಶ್ ಕತ್ತಿ ಅವರ ಅಕಾಲಿಕ ನಿಧನದಿಂದ ತೀವ್ರ ದುಃಖವಾಗಿದೆ. ಅವರ ನಿಧನದಿಂದ ರಾಜ್ಯವು ಒಬ್ಬ ನುರಿತ ರಾಜತಾಂತ್ರಿಕ, ಕ್ರಿಯಾಶೀಲ ನಾಯಕ ಮತ್ತು ನಿಷ್ಠಾವಂತ ಸಾರ್ವಜನಿಕ ಸೇವಕನನ್ನು ಕಳೆದುಕೊಂಡಿದೆ” ಎಂದು ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ. ಮುಖ್ಯಮಂತ್ರಿಗಳು ಆಸ್ಪತ್ರೆಗೆ ತೆರಳುತ್ತಿದ್ದಾರೆ.

ಅನುಭವೀ ಕಲಾವಿದ – ಶ್ರೀ ಗಣೇಶ್ ಮೂಲ್ಯ ಚಂದ್ರಮಂಡಲ 

ಶ್ರೀ ಗಣೇಶ್ ಮೂಲ್ಯ ಚಂದ್ರಮಂಡಲ ಅವರು ಕಟೀಲು ಮೇಳದ ಅನುಭವೀ ಕಲಾವಿದರಲ್ಲೊಬ್ಬರು. ಕಳೆದ ಹನ್ನೆರಡು ವರ್ಷಗಳಿಂದ ಕಟೀಲು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಶಾಲಾ ಬಾಲಕನಾಗಿದ್ದಾಗಲೇ ನಾಟ್ಯ ಕಲಿತು ವೇಷ ಮಾಡಲು ತೊಡಗಿದ್ದ ಇವರು ಯಕ್ಷಗಾನ ಕ್ಷೇತ್ರದಲ್ಲಿ ಅನುಭವೀ ಕಲಾವಿದರು. ಪ್ರಸ್ತುತ ಕಿರೀಟ ವೇಷ ಮತ್ತು ನಾಟಕೀಯ ವೇಷಗಳನ್ನು ಮಾಡುತ್ತಾ ಕಲಾಭಿಮಾನಿಗಳಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

ಶ್ರೀ ಗಣೇಶ್ ಮೂಲ್ಯ ಅವರ ಹುಟ್ಟೂರು ಮಂಗಳೂರು ತಾಲೂಕಿನ ಮೆನ್ನಬೆಟ್ಟು ಗ್ರಾಮದ ಕೊಡೆತ್ತೂರು. ಸುಮಾರು 500 ವರ್ಷಗಳ ಇತಿಹಾಸವುಳ್ಳ ಇವರ ಮನೆ ಚಂದ್ರಮಂಡಲ ಮನೆ ಎಂದೇ ಕರೆಸಿಕೊಂಡಿದೆ. 1967 ನೇ ಇಸವಿ ಜುಲೈ 7ರಂದು ಶ್ರೀ ಕೋಟಿ ಮೂಲ್ಯ ಮತ್ತು ಶ್ರೀಮತಿ ಕಮಲ ದಂಪತಿಗಳ ಮಗನಾಗಿ ಜನನ. ( 7 ಮಂದಿ ಮಕ್ಕಳಲ್ಲಿ ಹಿರಿಯರು) ಶ್ರೀ ಗಣೇಶ್ ಅವರ ತಮ್ಮಂದಿರಲ್ಲಿ ಶ್ರೀ ಧನಂಜಯ ಕಿನ್ನಿಗೋಳಿ ಅವರು ಹಿಮ್ಮೇಳ ಕಲಿತು ಮದ್ದಳೆ ನುಡಿಸುತ್ತಾರೆ. ಇವರು ಬಹರೈನ್ ನಲ್ಲಿ ಉದ್ಯೋಗಿ. ಶ್ರೀ ಶಂಭುಕುಮಾರ್ ಕಟೀಲು ಮೇಳದ ಕಲಾವಿದರಾಗಿದ್ದರು. ಶ್ರೀ ವಿಕ್ರಮ ಕೃಷಿಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಶ್ರೀ ಗಣೇಶ್ ಚಂದ್ರಮಂಡಲ ಅವರು ಓದಿದ್ದು ಪಿಯುಸಿ ವರೆಗೆ. ಕಿನ್ನಿಗೋಳಿ ಸಂತ ಮೇರೀಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವರೆಗೆ. ಬಳಿಕ ಹೈಸ್ಕೂಲ್ ಮತ್ತು ಪಿಯುಸಿ ಓದಿದ್ದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ವಿದ್ಯಾಸಂಸ್ಥೆಯಲ್ಲಿ. ಎಳವೆಯಲ್ಲೇ ಇವರು ಯಕ್ಷಗಾನ ಕಲಾಸಕ್ತರಾಗಿದ್ದರು. ಪ್ರಾಥಮಿಕ ಶಾಲಾ ವಿದ್ಯಾರ್ಥಿಯಾಗಿದ್ದಾಗ ನೋಡಿದ ಪ್ರದರ್ಶನಗಳನ್ನೂ ವೇಷಗಳನ್ನೂ ಈಗಲೂ ನೆನಪಿಸಿ ವರ್ಣಿಸುತ್ತಾರೆ.

ಕದ್ರಿ ವಿಷ್ಣು, ಬಣ್ಣದ ಕುಟ್ಯಪ್ಪು, ಪಡ್ರೆ ಚಂದು, ಕೇದಗಡಿ ಗುಡ್ಡಪ್ಪ ಗೌಡ, ಅರುವ ನಾರಾಯಣ ,ಶೆಟ್ಟಿ, ಸಂಪಾಜೆ ಶೀನಪ್ಪ ರೈ ಮೊದಲಾದವರು ಪಾತ್ರಗಳನ್ನು ನಿರ್ವಹಿಸುವ ರೀತಿಯು ಇವರನ್ನು ಆಕರ್ಷಿಸಿತ್ತು. ಅರುವ ಕೊರಗಪ್ಪ ರೈಗಳು ತುಳು ಪ್ರಸಂಗಗಳಲ್ಲಿ ಖಳನಾಯಕನಾಗಿ ಅಭಿನಯಿಸುವ ರೀತಿಗೆ ಮನಸೋತಿದ್ದರು. ಮಂಜೇಶ್ವರ ಜನಾರ್ದನ ಜೋಗಿ ಅವರ ತುಳು ಪ್ರಸಂಗಗಳಲ್ಲಿ ಕೋಟಿ, ದೇವಪೂಂಜ ಮೊದಲಾದ ಪಾತ್ರಗಳನ್ನು ನೋಡಿ ಸಂತೋಷಗೊಂಡಿದ್ದರು. ತಾನೂ ಕಲಾವಿದನಾಗಬೇಕೆಂಬ ಬಯಕೆಯೂ ಚಿಗುರೊಡೆದಿತ್ತು. ಹಿರಿಯ ಕಲಾವಿದರ ವೇಷಗಳನ್ನು ನೋಡಿಯೇ ಕುಣಿಯಲು ಅಭ್ಯಾಸ ಮಾಡಿದ್ದರು.

ಇವರ ವೇಷ ಮಾಡುವ ಆಸೆಗೆ ವೇದಿಕೆಯಾಗಿ ಒದಗಿದ್ದು ಕಿನ್ನಿಗೋಳಿಯ ಸರ್ವೋದಯ ಯುವಕ ಸಂಘದ ಪ್ರದರ್ಶನ. ಮದವೂರ ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ ಗಣಪತಿಯ ಗಣಗಳಲ್ಲಿ ಒಬ್ಬನಾಗಿ ರಂಗಪ್ರವೇಶ ಮಾಡಿದ್ದರು. ಬಳಿಕ ಕೊಡೆತ್ತೂರು ದೇವಸ್ಯ ಮಠದ ಶ್ರೀ ವೇದವ್ಯಾಸ ಉಡುಪರು ನಾಟ್ಯ ಕಲಿಯಲು ಸಲಹೆ ನೀಡಿದ್ದರು. ಕಟೀಲು ಶಾಲಾ ಅಧ್ಯಾಪಕ, ವಿದ್ವಾಂಸ, ಕಲಾವಿದ, ತಾಳಮದ್ದಳೆ ಅರ್ಥಧಾರಿ ಕೊರ್ಗಿ ಶ್ರೀ ವೆಂಕಟೇಶ ಉಪಾಧ್ಯಾಯರಿಂದ ನಾಟ್ಯ ಕಲಿಕೆ. ಕಟೀಲು ಶಾಲಾ ಪ್ರದರ್ಶನ, ಸುಧನ್ವ ಮೋಕ್ಷ ಪ್ರಸಂಗದಲ್ಲಿ ಸುಧನ್ವನಾಗಿ ವೇಷ ಮಾಡುವ ಅವಕಾಶ ಸಿಕ್ಕಿತ್ತು. ಬಳಿಕ ಶಾಲಾ ಪ್ರದರ್ಶನ, ಸಂಘ ಸಂಸ್ಥೆಗಳ ಪ್ರದರ್ಶನಗಳಲ್ಲೂ ವೇಷ ಮಾಡುತ್ತಿದ್ದರು.

ಎಸ್ಸೆಸ್ಸೆಲ್ಸಿ ಓದುತ್ತಿರುವಾಗ ಖ್ಯಾತ ಕಲಾವಿದ ಕಟೀಲು ಶ್ರೀನಿವಾಸ ರಾಯರ (ಕಟೀಲು ಶೀನಯ್ಯ) ನಿರ್ದೇಶನ, ಸಹಕಾರದಿಂದ ಅತಿಕಾಯನಾಗಿ ಅಭಿನಯಿಸಿದರು. ಅವರು ಕೆಲವು ಪ್ರಸಂಗಗಳ ನಡೆಗಳನ್ನೂ ಗಣೇಶ ಅವರಿಗೆ ಹೇಳಿಕೊಟ್ಟಿದ್ದರು. ಶಾಲಾ ರಜಾ ದಿನಗಳಲ್ಲಿ ಅವರ ಜತೆ ತೆರಳಿ ಸುಂಕದಕಟ್ಟೆ ಮೇಳದಲ್ಲೂ ವೇಷ ಮಾಡುತ್ತಾ ಬೆಳೆದರು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯಾಗಿದ್ದಾಗ ಶ್ರೀ ಕೊರ್ಗಿ ಅವರ ನಿರ್ದೇಶನದಲ್ಲಿ ಅರುಣಾಸುರನಾಗಿಯೂ ಅಭಿನಯಿಸಿದ್ದರು. ಮೇಳಕ್ಕೆ ಸೇರುವ ಮೊದಲೇ ಹಿರಿಯರ ನಿರ್ದೇಶನದಲ್ಲಿ ರುಕ್ಮಾಂಗದ, ಇಂದ್ರಜಿತು, ಶಿಶುಪಾಲ ಮೊದಲಾದ ಪಾತ್ರಗಳನ್ನೂ ಮಾಡುವ ಅವಕಾಶವಾಗಿತ್ತು.

ಶ್ರೀ ವಿಜಯ ಶೆಟ್ಟಿ ಮುಂಡ್ಕೂರು ಅವರ ನೇತೃತ್ವದ ತಲಕಳ ಟೆಂಟ್ ಮೇಳದಲ್ಲೂ ವೇಷ ಮಾಡಿದರು. ಮೇಳದ ತಿರುಗಾಟ ನಡೆಸುವ ಆಸೆ, ಅವಕಾಶಗಳಿದ್ದರೂ ಅದಕ್ಕೆ ಅನುಕೂಲವಾದ ವಾತಾವರಣವಿರಲಿಲ್ಲ. ತಾನು ಬಹುವಾಗಿ ಪ್ರೀತಿಸಿದ ಯಕ್ಷಗಾನ ಕಲೆಯಿಂದ ದೂರವಾಗಿ ಬದುಕುವ ಪರಿಸ್ಥಿತಿಯು ನಿರ್ಮಾಣವಾಗಿತ್ತು. ಮನೆಯಲ್ಲಿ ಬಡತನ. ಮನೆಯ ಹಿರಿಮಗನಾಗಿ ಹೊಣೆಗಾರಿಕೆಯೂ ಇತ್ತು. ಜೀವನೋಪಾಯಕ್ಕಾಗಿ ಉದ್ಯೋಗವನ್ನರಸಿ ಮುಂಬಯಿಗೆ ತೆರಳಿದರು. 

ಶ್ರೀ ಗಣೇಶ್ ಚಂದ್ರಮಂಡಲ ಅವರು 1998ರಿಂದ 2008ರ ವರೆಗೆ ಮುಂಬಯಿಯ ಹಲವೆಡೆ ಹೋಟೆಲ್ ಕ್ಯಾಶಿಯರ್ ಆಗಿ ದುಡಿದಿದ್ದರು. ಇವರ ಯಕ್ಷಗಾನ ಕಲಾಸಕ್ತಿಗೆ, ಕಲಾಸೇವೆಗೆ ಮುಂಬಯಿಯಲ್ಲೂ ವೇದಿಕೆ ದೊರೆತಿತ್ತು. ಮುಂಬಯಿ ಬಿಲ್ಲವ ಸಂಘದ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯ ಖಾಯಂ ಕಲಾವಿದನಾಗಿ ವೇಷ ಮಾಡುವ ಅವಕಾಶವು ಸಿಕ್ಕಿತ್ತು. ಅಸಾಲ್ಪದ ಗೀತಾಂಬಿಕಾ ಯಕ್ಷಗಾನ ಮಂಡಳಿ ಮತ್ತು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ ಪ್ರದರ್ಶನಗಳಲ್ಲೂ ಭಾಗವಹಿಸಿದರು. ಇಲ್ಲಿ ಅನೇಕ ಪುರಾಣ ಮತ್ತು ತುಳು ಪ್ರಸಂಗಗಳಲ್ಲಿ ವೇಷ ಮಾಡುತ್ತಾ ಸಾಗಿದರು.

ಊರಿನಿಂದ ಮೇಳಗಳು ಮುಂಬಯಿಗೆ ಬಂದಾಗ ಅವರ ಜತೆಯೂ ವೇಷ ಮಾಡಲು ಅವಕಾಶವಾಗಿತ್ತು. ಮುಂಬಯಿ ಬಿಲ್ಲವ ಸಂಘದ ಶ್ರೀ ಜಯ ಪಿ.ಸುವರ್ಣ ಮತ್ತು ಆಡಳಿತ ಮಂಡಳಿಯವರು ಶ್ರೀ ಗಣೇಶ್ ಅವರಿಗೆ ಸಹಕಾರ ನೀಡಿ ಪ್ರೋತ್ಸಾಹಿಸಿದ್ದರು. ಶ್ರೀ ಚಂದ್ರಹಾಸ ಅಮೀನ್, ಮಾಧವ ಅಮೀನ್, ಸಿ.ಟಿ ಸಾಲ್ಯಾನ್, ಕೂಸಪ್ಪನವರು, ಆನಂದ ಶೆಟ್ಟಿ ಐಕಳ, ಮನೋಜ್ ಕುಮಾರ್ ಅಸಾಲ್ಪ, ಶ್ರೀ ಗಣೇಶ್ ಶೆಟ್ಟಿ ಕಟೀಲು, ಪದ್ಮನಾಭ ಕಟೀಲು, ಪ್ರಕಾಶ್ ಪಣಿಯೂರು, ವಾಸು ಮಾರ್ನಾಡ್, ರಾಮಚಂದ್ರ, ನಾಗೇಶ್ ಪೊಳಲಿ, ಕಟೀಲು ಸದಾನಂದ, ಸಂತೋಷ್ ಕುಮಾರ್ ಮೊದಲಾದವರ ಸಹಕಾರವು ಗಣೇಶರಿಗೆ ದೊರೆತಿತ್ತು. ಅಲ್ಲಿನ ಸರ್ವಕಲಾವಿದರೂ ಸಹಕರಿಸಿದ್ದರು.

ಯಕ್ಷಗಾನ ವೇಷ ಮಾಡಲು ಅವಕಾಶವಾಗಿದ್ದರೂ, ವ್ಯವಹಾರದಲ್ಲಿ ಗಣೇಶ್ ಅವರು ಸೋತುಹೋಗಿದ್ದರು. ವ್ಯವಹಾರದಲ್ಲಿ ಸೋತು ಕೈಸುಟ್ಟುಕೊಳ್ಳುವಂತಾಗಿತ್ತು. ಆದರೂ ಮುಂಬಯಿಯಲ್ಲಿ ನೆಲೆಸಿದ್ದ ಊರ ಹಲವು ಮಹನೀಯರು ಇವರಿಗೆ ಸಹಾಯವನ್ನಿತ್ತು ಆಧರಿಸಿದ್ದರು. 2008ನೇ ಇಸವಿ ಮುಂಬಯಿ ನಗರಕ್ಕೆ ವಿದಾಯ ಹೇಳಿ ಊರಿಗೆ ಮರಳಿದ್ದರು. ಊರಿಗೆ ಬಂದವರೇ ಕಟೀಲು ಮಾತೆಗೆ ನಮಿಸಿ ಮಾಲೆ ಹಾಕಿ ವ್ರತಧಾರಿಯಾಗಿ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿ ಬಂದಿದ್ದರು. ಬಳಿಕ ಮೇಳದ ತಿರುಗಾಟದತ್ತ ಗಮನಹರಿಸಿದರು. 

2008ರಲ್ಲಿ ಗಣೇಶ ಚಂದ್ರಮಂಡಲ ಅವರು ಇಂದ್ರ ಜೈನ್ ಅವರ ಸಂಚಾಲಕತ್ವದ ಬಪ್ಪನಾಡು ಮೇಳಕ್ಕೆ ಸೇರಿದರು. ಅಲ್ಲಿ ಮೂರು ವರ್ಷಗಳ ಕಾಲ ತುಳು ಮತ್ತು ಪುರಾಣ ಪ್ರಸಂಗಗಳಲ್ಲಿ ಕಾಣಿಸಿಕೊಂಡರು. ಸದ್ರಿ ಮೇಳದಲ್ಲಿ ಮೂರು ವರ್ಷ ವ್ಯವಸಾಯ. 2011ರಲ್ಲಿ ಮುಂಡಾಜೆ ಸದಾಶಿವ ಶೆಟ್ಟರ ಕೇಳಿಕೆಯಂತೆ ಕಲ್ಲಾಡಿ ಶ್ರೀ ದೇವಿಪ್ರಸಾದ ಶೆಟ್ಟರ ಅಪ್ಪಣೆಯಂತೆ ಕಟೀಲು ಮೇಳಕ್ಕೆ ಸೇರಿ ಕಳೆದ ಹನ್ನೆರಡು ವರ್ಷಗಳಿಂದ ವ್ಯವಸಾಯ ಮಾಡುತ್ತಿದ್ದಾರೆ. ಕಟೀಲು ಮೂರನೆಯ ಮೇಳದಲ್ಲಿ 2 ವರ್ಷ, ನಾಲ್ಕನೆಯ ಮೇಳದಲ್ಲಿ 7 ವರ್ಷ, 6ನೇ ಮೇಳದಲ್ಲಿ ಒಂದು ವರ್ಷ ವ್ಯವಸಾಯ. ಕಳೆದ ವರ್ಷ 2ನೇ ಮೇಳದಲ್ಲಿ ವ್ಯವಸಾಯ ಮಾಡಿದ್ದರು. ಈ ಸಂದರ್ಭದಲ್ಲಿ ಅನೇಕ ಹಿರಿಯ ಕಿರಿಯ ಕಲಾವಿದರ ಒಡನಾಟವೂ ಸಹಕಾರವೂ ಸಿಕ್ಕಿತ್ತು.

ಇವರು ಕೃಷಿಯಲ್ಲೂ ಆಸಕ್ತರು. ಮಳೆಗಾಲದಲ್ಲಿ ಭತ್ತದ ಕೃಷಿ, ಜತೆಗೆ ಸ್ವಂತ ತ್ರಿಚಕ್ರ ವಾಹನವನ್ನೂ (ರಿಕ್ಷಾ) ನಡೆಸುತ್ತಿದ್ದಾರೆ. ಶ್ರೀ ಗಣೇಶ್ ಯಕ್ಷಗಾನ ಕಲಾವಿದನಾಗಿ ಐದು ಬಾರಿ ವಿದೇಶಯಾತ್ರೆಯನ್ನು ಕೈಗೊಂಡಿದ್ದಾರೆ. ಮೊಟ್ಟಮೊದಲು 2000ನೇ ಇಸವಿಯಲ್ಲಿ ಬಹರೈನ್ ಕನ್ನಡ ಸಂಘದವರು ಆಯೋಜಿಸಿದ ಪ್ರದರ್ಶನದಲ್ಲಿ. ಆ ಬಳಿಕ 2002ನೇ ಇಸವಿಯಲ್ಲಿ ಬಹರೈನ್ ನಲ್ಲಿ ನಡೆದ ಪ್ರದರ್ಶನ, 2006ರಲ್ಲಿ ಬಹರೈನ್ ಬಿಲ್ಲವ ಸಂಘದವರು ಆಯೋಜಿಸಿದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು. 2009ರಲ್ಲಿ ಬಹರೈನ್ ನಲ್ಲಿ ತಾನೇ ನಿರ್ದೇಶಿಸಿದ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಮತ್ತೊಮ್ಮೆ ಬಹರೈನ್ ನಲ್ಲಿ ಯಕ್ಷ ತುಳುವರ ಕೂಟದವರು ಆಯೋಜಿಸಿದ ಕಾಡಮಲ್ಲಿಗೆ ಪ್ರಸಂಗದಲ್ಲಿ ಶ್ರೀ ಪಟ್ಲ ಸತೀಶ್ ಶೆಟ್ಟರ ತಂಡದ ಸದಸ್ಯನಾಗಿ ಭಾಗಿಯಾದರು.

2009ರಲ್ಲಿ ಮೂಡಬಿದಿರೆ ಆಳ್ವಾಸ್ ಕಾಲೇಜಿನ ಯಕ್ಷೋತ್ಸವದಲ್ಲಿ ಕಿರೀಟ ವೇಷಗಾರಿಕೆಯಲ್ಲಿ ಪ್ರಥಮ ಬಹುಮಾನ ಅಲ್ಲದೆ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಿತರೂ ಆಗಿದ್ದಾರೆ. 2014ರಲ್ಲಿ ಮುಂಬಯಿ ಬಿಲ್ಲವರ ಅಸೋಸಿಯೇಷನ್ ಸಂಯೋಜನೆಯ ಕಾರ್ಯಕ್ರಮದಲ್ಲಿ ಸಂಸ್ಥೆಯ ಗೌರವಾಧ್ಯಕ್ಷರಾದ ಶ್ರೀ ಜಯ ಪಿ.ಸುವರ್ಣ ಅವರ ಮಾತೃಶ್ರೀಯವರ ಸ್ಮರಣಾರ್ಥ ನೀಡುವ ‘ಯಕ್ಷ ಕಲಾ ಪ್ರಶಸ್ತಿ’ ಯನ್ನು ಶ್ರೀ ಗಣೇಶ್ ಚಂದ್ರಮಂಡಲ ಅವರಿಗೆ ನೀಡಿ ಗೌರವಿಸಲಾಗಿತ್ತು. 

ಶ್ರೀ ಗಣೇಶ್ ಮೂಲ್ಯ ಚಂದ್ರಮಂಡಲ ಅವರು ಕಟೀಲು ಶ್ರೀನಿವಾಸ್ ರಾವ್ ವೇದಿಕೆಯ ‘ಯಕ್ಷಜ್ಯೋತಿ’ ಸಂಸ್ಥೆಯಲ್ಲೂ ಸಕ್ರಿಯರು. ಕಟೀಲು ಶ್ರೀನಿವಾಸ ರಾಯರ ಪುತ್ರ ಶ್ರೀ ದೇವಿಪ್ರಸಾದ ಉಲ್ಲಂಜೆ ಅವರ ನೇತೃತ್ವದ ಸಂಸ್ಥೆಯಿದು. ಕಳೆದ ಎರಡು ವರ್ಷಗಳಿಂದ ಈ ಸಂಸ್ಥೆಯು ಕಲಾ ಚಟಿವಟಿಕೆಯಲ್ಲಿ ನಿರತವಾಗಿದೆ. ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ ಮಕ್ಕಳು ನಿರಂತರ ಚಟುವಟಿಕೆಯಿಂದ ಕ್ರಿಯಾಶೀಲರಾಗಿರಲು ವಿವಿಧ ಕಲಾ ಕಾರ್ಯಕ್ರಮಗಳನ್ನು ನಡೆಸಿದೆ. ಸರಕಾರದ ನಿಯಮಕ್ಕೆ ಭಂಗ ಬಾರದಂತೆ ಕಲಾ ಚಟುವಟಿಕೆಯು ಸಾಗಿತ್ತು.

ಈ ವರೆಗೆ ಒಟ್ಟು ಹದಿನೆಂಟು ತಾಳಮದ್ದಲೆಗಳನ್ನು ನಡೆಸಲಾಗಿ ಪರಿಸರದ ಮಕ್ಕಳು ಕ್ರಿಯಾಶೀಲರಾಗಲು ಕಾರಣರಾದರು. ಇದಕ್ಕೆ ಭಾಗವತರಾಗಿ ಪುಂಡಿಕಾಯಿ ಗೋಪಾಲಕೃಷ್ಣ ಭಟ್ಟರು ಸಹಕರಿಸಿದ್ದರು. ಮುಂದೆ ಕಟೀಲು ಶ್ರೀನಿವಾಸ ರಾವ್ ಸಂಸ್ಮರಣಾ ಪ್ರಶಸ್ತಿಯನ್ನು ಸಾಧಕರಿಗೆ ನೀಡುವ ಯೋಜನೆಯೂ ಈ ಸಂಸ್ಥೆಗಿದೆ. ಹೀಗೆ ಸಂಘಟನೆಯಲ್ಲೂ ತೊಡಗಿಸಿಕೊಂಡಿರುವ ಶ್ರೀ ಗಣೇಶ್ ಅವರು ಕಲಾವಿದನಾಗಿಯೂ ಸಾಂಸಾರಿಕವಾಗಿಯೂ ತೃಪ್ತರು.

ಇವರ ಪತ್ನಿ ಶ್ರೀಮತಿ ಭಾನುಮತಿ. (2002ರಲ್ಲಿ ವಿವಾಹ) ಗಣೇಶ್ ಚಂದ್ರಮಂಡಲ, ಭಾನುಮತಿ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರಿ ಕುಮಾರಿ ಸೃಷ್ಟಿ. ಕಟೀಲು ಶಿಕ್ಷಣ ಸಂಸ್ಥೆಯಲ್ಲಿ ಪಿಯುಸಿ ಶಿಕ್ಷಣ ಪೂರೈಸಿ ಪ್ರಸ್ತುತ ಸುರತ್ಕಲ್ ಗೋವಿಂದದಾಸ ಕಾಲೇಜಿನಲ್ಲಿ ಬಿ.ಸಿ.ಎ  ಶಿಕ್ಷಣವನ್ನು  ಪಡೆಯುತ್ತಿದ್ದಾರೆ. ರಾಜೇಶ್ ಕಟೀಲು ಅವರಿಂದ ನಾಟ್ಯ ಕಲಿತು ವೇಷ ಮಾಡುತ್ತಾರೆ. ಶ್ರೀ ದುರ್ಗಾ ಮಕ್ಕಳ ಮೇಳದ ಕಲಾವಿದೆ. ಈಗ ಭಾಗವತಿಕೆಯನ್ನೂ ಅಭ್ಯಾಸ ಮಾಡುತ್ತಿದ್ದಾಳೆ. ಪುತ್ರ ಮಾ| ಸೃಜನ್. ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿ. ರಾಜೇಶ್ ಅವರಿಂದ ನಾಟ್ಯ ಕಲಿತು ವೇಷ ಮಾಡುತ್ತಿದ್ದಾನೆ. ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಕಲಾವಿದ. ಯಕ್ಷಗಾನ ಹಿಮ್ಮೇಳವನ್ನು ಕಲಿಯುತ್ತಿದ್ದಾನೆ. (ಚೆಂಡೆ, ಮದ್ದಳೆ)

ಕುಮಾರಿ ಸೃಷ್ಟಿ ಮತ್ತು ಮಾಸ್ಟರ್ ಸೃಜನ್ ಅವರು ವಿದ್ವಾಂಸ, ತಾಳಮದ್ದಳೆಯ ಹಿರಿಯ ಅರ್ಥಧಾರಿ ಸರ್ಪಂಗಳ ಶ್ರೀ ಈಶ್ವರ ಭಟ್ ಅವರಿಂದ ಅರ್ಥಗಾರಿಕೆಯನ್ನೂ ಅಭ್ಯಾಸ ಮಾಡುತ್ತಿದ್ದಾರೆ. ಕಿನ್ನಿಗೋಳಿ ಅನುಗ್ರಹ ಯೋಗ ಕೇಂದ್ರದ ಶ್ರೀಮತಿ ಕಾಂಚನಾ ಗಣೇಶ್ ಅವರಿಂದ ಯೋಗ ತರಬೇತಿಯನ್ನೂ ಪಡೆಯುತ್ತಿದ್ದಾರೆ. ಮಕ್ಕಳಿಗೆ ಯಕ್ಷಗಾನ ಕಲಿಯಲು ಕಟೀಲು ಶಾಲೆಯ ದೈಹಿಕ ಶಿಕ್ಷಕ ಕೃಷ್ಣ ಕುಲಾಲ್ ಅವರ ಪ್ರೋತ್ಸಾಹವೂ ಇದೆ. ಇವರು ಶ್ರೀ ಗಣೇಶ್ ಚಂದ್ರಮಂಡಲ ಅವರ ಬಂಧುಗಳು. ಮಕ್ಕಳಿಗೆ ಉಜ್ವಲವಾದ ಭವಿಷ್ಯವು ಸಿದ್ಧಿಸಲಿ. ಶ್ರೀ ಗಣೇಶ್ ಮೂಲ್ಯ ಚಂದ್ರಮಂಡಲ ಅವರಿಂದ ಕಲಾಸೇವೆಯು ನಿರಂತರವಾಗಿ ನಡೆಯಲಿ ಎಂಬ ಹಾರೈಕೆಗಳು. 

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ