Saturday, March 14, 2026
Home Blog Page 93

ಅಂಬಿಕಾ ಪದವಿಪೂರ್ವ ವಿದ್ಯಾಲಯದ ಮೂವರು ವಿದ್ಯಾರ್ಥಿಗಳು ಎನ್‌ಡಿಎ ತೇರ್ಗಡೆ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ಮೂರು ಮಂದಿ ವಿದ್ಯಾರ್ಥಿಗಳು 2023ರ ಎನ್‌ಡಿಎ – 1 (ನ್ಯಾಶನಲ್ ಡಿಫೆನ್ಸ್ ಅಕಾಡೆಮಿ- 1) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಬೆಂಗಳೂರಿನ ಖುಷಿಕರ ಬಿ.ಎಸ್ ಹಾಗೂ ಉದಯಕಲಾ ಎನ್.ಎಲ್ ದಂಪತಿ ಪುತ್ರ ಪ್ರಜ್ವಲ್ ಬಿ.ಕೆ, ಕಡಬದ ಕೃಷ್ಣ ಮೂರ್ತಿ ಕೆ ಹಾಗೂ ಅನುಪಮ ದಂಪತಿ ಪುತ್ರ ಶ್ರೀಶ ಶರ್ಮ ಕೆ ಹಾಗೂ ಪುರುಷರಕಟ್ಟೆಯ ಚರಣ್ ಕುಮಾರ್ ಹಾಗೂ ಮಾಲತಿ ದಂಪತಿ ಪುತ್ರ ಶ್ಯಮಂತ್ ಕುಮಾರ್ ಸಿ.ಕೆ ಎನ್‌ಡಿಎ ಮೊದಲ ಹಂತದ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ.


ಯುಪಿಎಸ್‌ಇಯು ವರ್ಷಕ್ಕೆ ಎರಡು ಬಾರಿ ಎನ್‌ಡಿಎ ಪರೀಕ್ಷೆ ನಡೆಸುತ್ತಿದ್ದು, ಎಪ್ರಿಲ್ ತಿಂಗಳಲ್ಲಿ ಮೊದಲ ಪರೀಕ್ಷೆ ನಡೆದಿತ್ತು. ದೇಶಾದ್ಯಂತ ಸುಮಾರು ಐದು ಲಕ್ಷ ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅಷ್ಟು ಮಂದಿ ವಿದ್ಯಾರ್ಥಿಗಳಲ್ಲಿ ಕೇವಲ ಎಂಟು ಸಾವಿರ ಮಂದಿ ವಿದ್ಯಾರ್ಥಿಗಳಷ್ಟೇ ಎಸ್‌ಎಸ್‌ಬಿ (ಸರ್ವಿಸ್ ಸೆಲೆಕ್ಷನ್ ಬೋರ್ಡ್) ನಡೆಸುವ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ.

ಸಂದರ್ಶನದಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳು ಮುಂದೆ ಸೈನಿಕ ದಳ, ನೌಕಾದಳ ಅಥವ ವಾಯುದಳದಲ್ಲಿ ಮುಂದಿನ ಶಿಕ್ಷಣವನ್ನು ಪಡೆಯಲಿದ್ದು ನಂತರ ಭಾರತೀಯ ಸೇನೆಯಲ್ಲಿ ನಿಯುಕ್ತಿ ಹೊಂದಲಿದ್ದಾರೆ.


ಅಂಬಿಕಾ ಪದವಿಪೂರ್ವ ವಿದ್ಯಾಲಯವು ಎನ್‌ಡಿಎ ಪರೀಕ್ಷೆಗಾಗಿ ವಿಶೇಷ ಕೋಚಿಂಗ್ ತರಗತಿಗಳನ್ನು ನಡೆಸುತ್ತಿದ್ದು, ಭಾರತೀಯ ಸೇನೆಯಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸುವ ಉತ್ಸಾಹ ಇರುವ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವೆನಿಸಿದೆ.

ಪ್ರತಿವರ್ಷವೂ ಇಲ್ಲಿನ ವಿದ್ಯಾರ್ಥಿಗಳು ಎನ್‌ಡಿಎ ಪರೀಕ್ಷೆಯಲ್ಲಿ ಸಾಧನೆ ತೋರುತ್ತಿದ್ದಾರೆ. ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಪದವಿಪೂರ್ವ ಶಿಕ್ಷಣ ಪಡೆಯುವುದರೊಂದಿಗೆ ಎನ್‌ಡಿಎ ಪರೀಕ್ಷೆಗೂ ತರಬೇತಿ ಲಭ್ಯವಾಗುತ್ತಿರುವುದು ಹೆತ್ತವರ ಸಂತಸಕ್ಕೂ ಕಾರಣವೆನಿಸಿದೆ.

ಅಂಬಲಪಾಡಿ ಯಕ್ಷಗಾನ ಶಿಬಿರ ಸಮಾರೋಪ

ಉಡುಪಿ ಅಂಬಲಪಾಡಿಯ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಅಂಬಲಪಾಡಿಯ ಕಂಬ್ಳಕಟ್ಟದಲ್ಲಿರುವ ಸಂಸ್ಥೆಯ ಜನಾರ್ದನ ಮಂಟಪದಲ್ಲಿ ಹತ್ತು ದಿನಗಳ ಪರ್ಯಂತ ನಡೆಸಿದ ‘ಯಕ್ಷಗಾನ ಶಿಬಿರ’ ಇಂದು (04-05-2023) ಸಮಾಪನಗೊಂಡಿತು.

ಶಿಬಿರದಲ್ಲಿ 56 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಎಲ್ಲರಿಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು.ಸಂಸ್ಥೆಯ ಅಧ್ಯಕ್ಷ ಕೆ.ಅಜಿತ್‌ಕುಮಾರ್ ಸ್ವಾಗತಿಸಿದರು. ನಿಕಟಪೂರ್ವಅಧ್ಯಕ್ಷ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ಎಸ್. ವಿ.ಭಟ್, ಜತೆಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಪ್ರಮಾಣಪತ್ರ ವಿತರಿಸಿದರು. ಸಂಸ್ಥೆಯ ಉಪಾಧ್ಯಕ್ಷ ಕೆ.ಜೆ. ಗಣೇಶ್, ಕೆ. ಜೆ. ಕೃಷ್ಣ, ಗೋವಿಂದ ಭಂಡಾರಿ ಉಪಸ್ಥಿತರಿದ್ದರು. ಶಿಬಿರದ ನಿರ್ದೇಶಕರಾದ ಕೋಟ ನರಸಿಂಹ ತುಂಗರನ್ನುಶಾಲು ಹೊದಿಸಿ ಗೌರವಿಸಲಾಯಿತು.

ಬಳಿಕ ವಿದ್ಯಾರ್ಥಿಗಳಿಂದ ಪೂರ್ವರಂಗದ ಪ್ರಾತ್ಯಕ್ಷಿಕೆ ಜರಗಿತು. ಮೇ 6ರಿಂದ ವಿದ್ಯಾರ್ಥಿಗಳಿಗೆ ಬಣ್ಣಗಾರಿಕೆ ಕಮ್ಮಟ ಜರಗಲಿದೆ ಎಂದು ಅಧ್ಯಕ್ಷರು ತಿಳಿಸಿದರು.

ರಾಘವೇಂದ್ರ ಪಾಟೀಲ 72ರ ಅಭಿನಂದನ ಮತ್ತು ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ ಪ್ರದಾನ ಸಮಾರಂಭ – ಯುವ ಮನಸ್ಸುಗಳು ಸಾಮಾಜಿಕ ಋಣವನ್ನು ತೀರಿಸುವ ಕಾರ್ಯ ಶ್ಲಾಘನೀಯ: ಡಾ. ಎಚ್. ಎಸ್. ವೆಂಕಟೇಶ ಮೂರ್ತಿ

ಕನ್ನಡದ ಬಹು ಮುಖ್ಯ ಕಥೆಗಾರರಾದ ರಾಘವೇಂದ್ರ ಪಾಟೀಲರ ಹೆಸರಿನಲ್ಲಿ ಕಥಾ ಪ್ರಶಸ್ತಿ ನೀಡುವ ಮೂಲಕ ಯುವ ಮನಸ್ಸುಗಳು ಸಾಮಾಜಿಕ ಋಣವನ್ನು ತೀರಿಸುವ ಉತ್ತಮ ಕಾರ್ಯವನ್ನು ಮಾಡುತ್ತಿವೆ. ಪಾಟೀಲರ ಬದುಕಿನ ಆದರ್ಶ ಮತ್ತು ಸಾಹಿತ್ಯಕ ಧೋರಣೆಗಳನ್ನು ಅನುಸರಿಸುವುದರೊಂದಿಗೆ ಯೋಗ್ಯ ಬರಹಗಾರರನ್ನು ಆಯ್ದು ಪ್ರಶಸ್ತಿಯನ್ನು ನೀಡುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಕನ್ನಡದ ಮಹತ್ವದ ಕವಿ ಡಾ. ಎಚ್. ಎಸ್. ವೆಂಕಟೇಶ ಮೂರ್ತಿ ಹೇಳಿದರು. 

ಉತ್ತರ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾದ ಧಾರವಾಡದ ರಂಗಾಯಣದಲ್ಲಿ ರಾಘವೇಂದ್ರ ಪಾಟೀಲ 72ರ ಅಭಿನಂದನ ಮತ್ತು ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ, ಲಾಬಿ, ಸ್ವಜನ ಪಕ್ಷಪಾತಗಳಿಗೆ ಒಳಗಾಗದೆ, ಪಾರದರ್ಶಕ ನೀತಿಯ ಮೂಲಕ ಸತ್ಪಾತ್ರರಿಗಷ್ಟೇ ಯೋಗ್ಯತೆಯನ್ನು ಕಲ್ಪಿಸುವ ಇಂಥ ಯೋಜನೆಗಳು ಭವಿಷ್ಯದಲ್ಲಿ ಯಶಸ್ಸು ಕಾಣಲಿ ಎಂದು ಅವರು ಅಭಿಪ್ರಾಯ ಪಟ್ಟರು.

ಖ್ಯಾತ ಕಾದಂಬರಿಕಾರ ಎಂ. ಆರ್. ದತ್ತಾತ್ರಿಯವರು ರಾಘವೇಂದ್ರ ಪಾಟೀಲರ ‘ಗೈರ ಸಮಜೂತಿ’ ಕಾದಂಬರಿಯ ಕುರಿತು ಮಾತನಾಡಿದರು.

ಯುವ ವಿಮರ್ಶಕ ಮತ್ತು ಸಾಹಿತ್ಯ ವೇದಿಕೆಯ ಸಂಚಾಲಕರಾದ ಶ್ರೀ ವಿಕಾಸ ಹೊಸಮನಿಯವರು ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆ ಮತ್ತು ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿಯ ಕುರಿತು ಮಾತನಾಡಿ, ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ ಮತ್ತು ಎಕ್ಕುಂಡಿ ಜನ್ಮಶತಮಾನೋತ್ಸವ ಕಾವ್ಯ ಪ್ರಶಸ್ತಿಯ ಕುರಿತು ಮಾಹಿತಿಗಳನ್ನು ನೀಡಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಖ್ಯಾತ ಸಾಹಿತಿ ಪ್ರೊ. ಮಲ್ಲಿಕಾರ್ಜುನ ಹಿರೇಮಠರು ಸಾಹಿತ್ಯ ವೇದಿಕೆಯ ಕಾರ್ಯ ಚಟುವಟಿಕೆಗಳು ಮತ್ತು ಪಾಟೀಲರ ಕುರಿತು ವಿಚಾರಗಳನ್ನು ಹಂಚಿಕೊಂಡರು. 

72 ವಸಂತಗಳನ್ನು ಪೂರೈಸಿದ ಕನ್ನಡದ ಶ್ರೇಷ್ಠ ಕಥೆಗಾರ ರಾಘವೇಂದ್ರ ಪಾಟೀಲರನ್ನು ಸನ್ಮಾನಿಸಿ ಗೌರವಿಸಲಾಯಿತು. 

ಕನ್ನಡದ ಖ್ಯಾತ ಕವಿಗಳಾದ ಡಾ. ಎಚ್. ಎಸ್. ವೆಂಕಟೇಶಮೂರ್ತಿಯವರು ಮಹಾಂತೇಶ ನವಲಕಲ್ಲ ಮತ್ತು ಶ್ರೀಲೋಲ ಸೋಮಯಾಜಿಯವರಿಗೆ 2022ನೇ ಸಾಲಿನ ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿಯನ್ನು, ಪ್ರೊ. ರಾಘವೇಂದ್ರ ಪಾಟೀಲರು ವಾಸುದೇವ ನಾಡಿಗ್ ಮತ್ತು ಡಾ. ರತ್ನಾಕರ ಕುನುಗೋಡು ಅವರಿಗೆ ಎಕ್ಕುಂಡಿ ಜನ್ಮಶತಮಾನೋತ್ಸವ ಕಾವ್ಯ ಪ್ರಶಸ್ತಿಯನ್ನು ಪ್ರದಾನ ಮಾಡಿದರು. 

ಈ ಸಮಾರಂಭದಲ್ಲಿ ರಾಘವೇಂದ್ರ ಪಾಟೀಲರು ಸ್ವತಃ ತಾವೇ ಇಂಗ್ಲಿಷಿಗೆ ಅನುವಾದಿಸಿದ ‘ದೇಸಗತಿ’ ಕಥಾಸಂಕಲನದ ಇಂಗ್ಲಿಷ್ ಅನುವಾದ ‘In the Domain of White Herons’ ಕೃತಿಯನ್ನು ಖ್ಯಾತ ವಿಮರ್ಶಕ ಡಾ. ಎಂ. ಜಿ. ಹೆಗಡೆಯವರು ಬಿಡುಗಡೆಗೊಳಿಸಿದರು. ತಮ್ಮ ಕಥೆಗಳನ್ನು ತಾವೇ ಅನುವಾದ ಮಾಡುವ ಸವಾಲನ್ನು ಸ್ವೀಕರಿಸಿದ ಪಾಟೀಲರು ಅದರಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದ್ದಾರೆ. ಇಂಗ್ಲಿಷ್ ಅನುವಾದದ ಮೂಲಕ ಅವರ ಕತೆಗಳು ಇನ್ನಷ್ಟು ಅರ್ಥ ವಿಸ್ತಾರಗಳನ್ನು ಪಡೆದಿವೆ ಎಂದು ಅವರು ನುಡಿದರು. 

ರಾಘವೇಂದ್ರ ಪಾಟೀಲರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ದೊರಕಿಸಿ ಕೊಟ್ಟ ‘ತೇರು’ ಕಾದಂಬರಿಯನ್ನು ಹಿಂದಿಗೆ ಭಾಷಾಂತರಿಸಿದ ಹಿರಿಯ ಅನುವಾದಕಿ ಪ್ರೊ ಮಾಲತಿ ಆದವಾನಿಯವರ ಹಿಂದಿ ಅವತರಣಿಕೆ ‘ರಥ್’ ಅನ್ನು ಎಚ್. ಎಸ್. ವೆಂಕಟೇಶಮೂರ್ತಿಯವರು ಬಿಡುಗಡೆಗೊಳಿಸಿದರು.  

ಕನ್ನಡದ ಪ್ರತಿಷ್ಠಿತ ಕಥಾ ಪ್ರಶಸ್ತಿ ನೀಡುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ವೇದಿಕೆಯ ಮಹಾಪೋಷಕ ಡಾ. ಬಿ. ಸಿ. ಪ್ರಭಾಕರ, ಸಂಚಾಲಕ ವಿಕಾಸ ಹೊಸಮನಿ, ಎಂ. ಆರ್. ದತ್ತಾತ್ರಿ, ಸಂಕೇತ ಪಾಟೀಲ ಮತ್ತು ಡಾ. ಸುಭಾಷ್ ಪಟ್ಟಾಜೆಯವರನ್ನು ಎಚ್. ಎಸ್. ವೆಂಕಟೇಶ ಮೂರ್ತಿಯವರು ಅಭಿನಂದಿಸಿದರು. 

ರಾಘವೇಂದ್ರ ಪಾಟೀಲರ ‘ಮಾಯಿಯ ಮುಖಗಳು’ ಕಥಾಸಂಕಲನಕ್ಕೆ 25 ವರ್ಷ ಮತ್ತು ‘ತೇರು’ ಕಾದಂಬರಿಗೆ 20 ವರ್ಷ ತುಂಬಿದ ಸವಿನೆನಪಿಗೆ ಶ್ರೀ ಆನಂದ ಝಂಜರವಾಡ ಮತ್ತು ಬಸು ಬೇವಿನಗಿಡದ ಆ ಕೃತಿಗಳ ಕುರಿತು ಮಾತನಾಡಿದರು. 

ಮಹದೇವ ಹಡಪದ ತಂಡದವರು ಪ್ರಸ್ತುತ ಪಡಿಸಿದ ಪಾಟೀಲರ ‘ಮತ್ತೊಬ್ಬ ಮಾಯಿ’    ನಾಟಕ ನೆರೆದವರನ್ನು ಮಂತ್ರಮುಗ್ಧಗೊಳಿಸಿತು.

ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯೆ ಮೀನಾ ಮೈಸೂರು ಸ್ವಾಗತಿಸಿದರು. ಹನುಮಂತ ಕಾಖಂಡಕಿ ಕಾರ್ಯಕ್ರಮವನ್ನು ನಿರೂಪಿಸಿದರು. 

ಇಡೀ ದಿನ ಅದ್ದೂರಿಯಾಗಿ ನಡೆದ ರಾಘವೇಂದ್ರ ಪಾಟೀಲ 72ರ ಅಭಿನಂದನ ಮತ್ತು ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸಾಹಿತ್ಯಪ್ರಿಯರು ಕಿಕ್ಕಿರಿದು ನೆರೆದು ಸಮಾರಂಭವನ್ನು ಯಶಸ್ವಿಗೊಳಿಸಿದರು.

ಇಂದು ಯಕ್ಷಗಾನ – ಪಂಚ ಕಲ್ಯಾಣ

ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಇಂದು (03-05-2023) ಸಾಯಂಕಾಲ 5.30 ಕ್ಕೆ ಸರಿಯಾಗಿ ಅತ್ತೂರುಗುತ್ತು ಕುಟುಂಬಿಕರ ಬಾಬ್ತು ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯವರು ಪಂಚ ಕಲ್ಯಾಣ ( ಕನಕಲೇಖಾ ಕಲ್ಯಾಣ. ಕಲ್ಪಸುಂದರಿ ಕಲ್ಯಾಣ. ಪಾರ್ವತಿ ಕಲ್ಯಾಣ. ಜಾಂಬವತೀ ಕಲ್ಯಾಣ. ಕಲ್ಕಿ ಕಲ್ಯಾಣ) ಎಂಬ ಕಥಾನಕವನ್ನು ಆಡಿ ತೋರಿಸಲಿದ್ದಾರೆ.

ಕಲಾಭಿಮಾನಿಗಳ ಸಹಕಾರವನ್ನು ಬಯಸುವ…

ಅತ್ತೂರು ಗುತ್ತು ಕುಟುಂಬಿಕರು.

ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ಶಂಕರ ಜಯಂತಿ ಆಚರಣೆ – ಶಂಕರಾಚಾರ್ಯರು ಜಗತ್ತಿನ ಮೊದಲ ತತ್ವಜ್ಞಾನಿ: ವಿದ್ವಾನ್ ಕೇಶವ ಭಟ್ ಕೇಕಣಾಜೆ

ಪುತ್ತೂರು: ಕೇರಳದ ಕಾಲಡಿಯಲ್ಲಿ ಹುಟ್ಟಿದ ಶಂಕರಾಚಾರ್ಯರು ಸಮಾಜದಲ್ಲಿ ತುಂಬಿದ್ದ ಕರಾಳತೆಯನ್ನು ಮಟ್ಟಹಾಕಲು ಪಣತೊಟ್ಟರು. ಸಮಗ್ರ ಭಾರತವನ್ನು ಅದ್ವೈತ ತತ್ವದಡಿಯಲ್ಲಿ ಒಂದುಗೂಡಿಸಿದರು. ಅವರು ವೈದಿಕ ಸಂಸ್ಕೃತಿಯ ಮೂಲಕ ವೇದಗಳನ್ನು ಹಾಗೂ ಧರ್ಮವನ್ನು ಸಂರಕ್ಷಿಸಿದ ಪರಿ ಅದ್ಭುತವಾದುದು ಎಂದು ವಿದ್ವಾಂಸ ವಿದ್ವಾನ್ ಕೇಶವ ಭಟ್ಟ ಕೇಕಣಾಜೆ ಹೇಳಿದರು.


ಅವರು ನಗರದ ನಟ್ಟೋಜ ಪೌಂಢೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ಐಕ್ಯೂಎಸಿ ಹಾಗೂ ತತ್ವಶಾಸ್ತ್ರ ವಿಭಾಗದ ಆಶ್ರಯದಲ್ಲಿ ಸೋಮವಾರದಂದು ಆಚರಿಸಲಾದ ಶಂಕರ ಜಯಂತಿ ಹಾಗೂ ವಿಶ್ವ ತತ್ವಜ್ಞಾನಿಗಳ ದಿನಾಚರಣೆಯ ಪ್ರಯುಕ್ತ ವಿಶೇಷ ಉಪನ್ಯಾಸ ನೀಡಿದರು.


ಶಂಕರಾಚಾರ್ಯರು ಹಲವಾರು ಭಾಷ್ಯಗಳನ್ನು ರಚಿಸಿದ್ದಾರೆ. ಅವರ ಭಾಷ್ಯಗಳು ಸುಲಲಿತವಾದ ಭಾಷೆಯಿಂದ ಕೂಡಿವೆ. ಜತೆಗೆ ಜೀವನಕ್ಕೆ ಅಗತ್ಯವಾದ ಮೌಲ್ಯಗಳನ್ನು ತಿಳಿಸುತ್ತವೆ. ಶಂಕರಾಚಾರ್ಯರು ತಮ್ಮ ವ್ಯಕ್ತಿತ್ವ ಹಾಗೂ ಸಾಧನೆಯಿಂದಾಗಿ ಇಂದು ಸಮಾಜದಲ್ಲಿ ಪೂಜಿಸಲ್ಪಡುತ್ತಿದ್ದಾರೆ ಎಂದರಲ್ಲದೆ ಶಂಕರಾಚಾರ್ಯರು ವಿಶ್ವದ ಮೊದಲ ತತ್ವಜ್ಞಾನಿಗಳು. ತದನಂತರ ಬಂದ ಎಲ್ಲಾ ತತ್ವಜ್ಞಾನಿಗಳು ಶಂಕರಾಚಾರ್ಯರು ನಡೆದ ಹಾದಿಯನ್ನು ಅನುಕರಿಸಿದ್ದಾರೆ ಎಂದರು.


ನಮ್ಮ ಅಂತಃ ಸತ್ವದ ಪರಿಚಯವಾಗಬೇಕಾದರೆ ನಮ್ಮನ್ನು ನಾವು ಅರ್ಥೈಸಿಕೊಳ್ಳಬೇಕು. ದೇಶ, ಸಂಸ್ಕೃತಿ, ಸಂಸ್ಕಾರಗಳ ಅರಿವು ಮೂಡಬೇಕು. ಇತಿಹಾಸದ ಬಗ್ಗೆ ಅಧ್ಯಯನ ಮಾಡಬೇಕು. ಮಾತ್ರವಲ್ಲದೆ, ಆದರ್ಶ ಪುರುಷರ ನಡೆ ನಮ್ಮ ಜೀವನದ ಬದಲಾವಣೆಗೆ ಪ್ರೇರಣೆಯಾಗಬೇಕು. ಅವರ ನುಡಿಗಳು ಜೀವನದಲ್ಲೊಂದು ಹೊಸ ಸ್ಪೂರ್ತಿಯನ್ನು ತುಂಬಬೇಕು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಶಂಕರಾಚಾರ್ಯರು ಚಿಕ್ಕ ವಯಸ್ಸಿನಲ್ಲಿಯೇ ಸಾಧನಾ ಶಿಖರವನ್ನು ಏರಿದ್ದಾರೆ. ವಿಶ್ವವೇ ಅನುಕರಿಸುವಂತೆ ಬದುಕಿದ್ದಾರೆ. ಇಂದಿನ ಸಮಾಜವುಜಾತಿ, ಧರ್ಮಗಳ ನಡುವೆ ಸಿಲುಕಿ ಛಿದ್ರವಾಗಿದೆ. ಇಂತಹ ವಿಚ್ಛಿದ್ರ ಸಮಾಜವನ್ನು ಒಂದೇ ಸೂತ್ರದಡಿಯಲ್ಲಿ ಜೋಡಿಸಲು ಶಂಕರಾಚಾರ್ಯರು ಮತ್ತೊಮ್ಮೆ ಅವತರಿಸಬೇಕಾಗಿದೆ ಎಂದರು.


ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿನಿ ಚೈತನ್ಯಾ ಪ್ರಾರ್ಥಿಸಿ, ವಿದ್ಯಾರ್ಥಿನಿಯರಾದ ಮಹಿಮಾ, ಅಂಕಿತ, ಪಂಚಮಿ ಶಂಕರಾಚಾರ್ಯ ವಿರಚಿತ ಸೋತ್ರವನ್ನು ಹಾಡಿದರು.

ಕಾಲೇಜಿನ ಪ್ರಾಚಾರ್ಯ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿದರು. ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಗಿರೀಶ್ ಭಟ್ ವಂದಿಸಿ, ತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ ಕಾರ್ಯಕ್ರಮ ನಿರ್ವಹಿಸಿದರು.

‘ಆಜಾದ್ ಕಿ ಅಮೃತ ಮಹೋತ್ಸವ್’ ಶಿಕ್ಷಕರಿಗಾಗಿ ಕಾರ್ಯಾಗಾರ – ರಾಷ್ಟ್ರ ಜಾಗೃತಿಯ ತಾಳಮದ್ದಳೆ ‘ಕ್ರಾಂತಿ ಕಹಳೆ’

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರ ‘ಡಯಟ್’ನಲ್ಲಿ  ಇತ್ತೀಚೆಗೆ ‘ಆಜಾದಿ ಕಾ ಅಮೃತ್ ಮಹೋತ್ಸವ್’ ಅಂಗವಾಗಿ ಶಿಕ್ಷಕರಿಗಾಗಿ ಒಂದು ದಿನದ ಕಾರ್ಯಾಗಾರ ಜರಗಿತು. ಈ ಸಂದರ್ಭ ಉತ್ತರ ವಲಯದ ಶಿಕ್ಷಕರಿಂದ ರಾಷ್ಟ್ರ ಜಾಗೃತಿಯ ಯಕ್ಷಗಾನ ತಾಳಮದ್ದಳೆ ‘ಕ್ರಾಂತಿ ಕಹಳೆ’ ನಡೆಯಿತು.

ಈ ಪ್ರಸಂಗದ ಪರಿಕಲ್ಪನೆ ಮತ್ತು ಕಥಾ ಸಂಯೋಜನೆ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರದು. ಭಾರತ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಹೋರಾಟದ ಘಟನೆಗಳನ್ನು ಆಧರಿಸಿದ ಯಕ್ಷಗಾನದ ಹಾಡುಗಳ ರಚನೆ ಡಾ.ದಿನಕರ ಎಸ್.ಪಚ್ಚನಾಡಿಯವರದು.

ತಾಳಮದ್ದಳೆ ಕಲಾವಿದರು:

           ಸುಮಾರು 1 ಗಂಟೆ 10 ನಿಮಿಷದ ಅವಧಿಯ ‘ಕ್ರಾಂತಿ ಕಹಳೆ’ ಯಕ್ಷಗಾನ ತಾಳಮದ್ದಳೆಯ ಹಿಮ್ಮೇಳದಲ್ಲಿ ಹರೀಶ್ ಶೆಟ್ಟಿ ಸೂಡ ಅವರ ಭಾಗವತಿಕೆ, ಚೆಂಡೆ – ಮದ್ದಳೆಯಲ್ಲಿ ಸ್ಕಂದ ಕೊನ್ನಾರ್ ಮತ್ತು ಲಕ್ಷ್ಮೀನಾರಾಯಣ ಹೊಳ್ಳ ಭಾಗವಹಿಸಿದ್ದರು.

        ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ಉತ್ತರ ವಲಯದ ಶಿಕ್ಷಕರಾದ ನಾಗರಾಜ ಖಾರ್ವಿ (ಅಬ್ಬಕ್ಕ ರಾಣಿ), ಕೃಪಾ (ತಿಮ್ಮಣ್ಣ ನಾಯಕ ಮತ್ತು ದಿವಾನ್ ಪೂರ್ಣಯ್ಯ), ಪ್ರಮೀಳಾ (ಪೊರ್ಚುಗೀಸ್ ಕುಟಿನ್ನೊ), ಚಿತ್ರಶ್ರೀ ಕೆ.ಎಸ್. (ಝಾನ್ಸಿರಾಣಿ), ವಿನೋದಾ ಅಮೀನ್ (ನಾನಾಸಾಹೇಬ್), ಹರಿಪ್ರಸಾದ್ ಶೆಟ್ಟಿ  (ಲಾರ್ಡ್ ಕಾರ್ನವಾಲಿಸ್, ಹ್ಯೂರೋಜ ಮತ್ತು ಆಂಗ್ಲಾಧಿಕಾರಿ), ವಸಂತ ಪಾಲನ್ (ಟಿಪ್ಪು ಮತ್ತು ಲಾಲಾ ಲಜಪತರಾಯ್), ಗೀತಾ ಎಸ್. (ಬಾಲ ಗಂಗಾಧರ ತಿಲಕ್), ಪ್ರೇಮನಾಥ್ ಮರ್ಣೆ (ಭಗತ್ ಸಿಂಗ್), ವೀಣಾ (ಚಂದ್ರಶೇಖರ ಆಜಾದ್), ಹಾಗೂ ವಿದ್ಯಾವತಿಯಾಗಿ ತಂಡದ ನಿರ್ದೇಶಕಿ ಡಾ. ಮಂಜುಳಾ ಶೆಟ್ಟಿ  ಪಾತ್ರವಹಿಸಿದ್ದರು.

ಸ್ವಾತಂತ್ರ್ಯ ವೀರರ ಅಧ್ಯಯನ:        

           ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರ ಬಗ್ಗೆ ಅಧ್ಯಯನ ಮಾಡಿ ಅವರ ಹೋರಾಟದ ಕಥೆಯನ್ನು ಹೊರತರುವುದೇ ಮುಖ್ಯ ಉದ್ದೇಶವಾಗಿದ್ದ ಕಾರ್ಯಾಗಾರಕ್ಕೆ ಮುಖ್ಯ ಅತಿಥಿಗಳಾಗಿ ಡಿಡಿಪಿಐ ದಯಾನಂದ ನಾಯಕ್ , ಯಕ್ಷಗಾನ ವಿದ್ವಾಂಸ ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಯುವ ಲೇಖಕ ಅನಿಂದಿತ್ ಗೌಡ ಉಪಸ್ಥಿತರಿದ್ಡರು.

          ಸಿ.ಸಿ.ಆರ್.ಟಿ.ಯ ಈ ಡಿ.ಡಿ.ಆರ್. ಕಾರ್ಯಾಗಾರವನ್ನು ದೆಹಲಿಯಿಂದ ಆಗಮಿಸಿದ ಸಿ.ಸಿ.ಆರ್.ಟಿ.ಯ ಉಪ ನಿರ್ದೇಶಕ ರಾಹುಲ್ ಉದ್ಘಾಟಿಸಿದರು. ಕಾರ್ಯಾಗಾರದಲ್ಲಿ ಒಟ್ಟು 98 ಮಂದಿ ಶಿಕ್ಷಕರು ಮತ್ತು ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಂಡಿದ್ದರು.

ಡಯಟ್ ನ ಪ್ರಾಚಾರ್ಯೆ ರಾಜಲಕ್ಷ್ಮಿ ಸ್ವಾಗತಿಸಿ, ದೆಹಲಿಯ  ವಿಮಲ್ ಧನ್ಯವಾದ ಸಮರ್ಪಿಸಿದರು. ಕಾರ್ಯಾಗಾರದ ಸಂಯೋಜಕಿ ಜಿಲ್ಲಾ ಸಂಪನ್ಮೂಲ ವ್ಯಕ್ತಿ ವಿಲ್ಮಾ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.

ಗುರುವಪ್ಪ ಬಾಯಾರು, ಜಗದೀಶ ನಲ್ಕ ಕುಟುಂಬಕ್ಕೆ ಯಕ್ಷಗಾನ ಕಲಾರಂಗದಿಂದ ಸಾಂತ್ವನ ನಿಧಿ

ಡಿಸೆಂಬರ್ 22, 2022ರಂದು ಕಟೀಲಿನ ಸರಸ್ವತಿ ಸದನದಲ್ಲಿ ತ್ರಿಜನ್ಮ ಮೋಕ್ಷದ ಶಿಶುಪಾಲನ ವೇಷದಲ್ಲಿರುವಾಗಲೇ ಇಹಲೋಕ ಯಾತ್ರೆ ಮುಗಿಸಿದ ಕಲಾವಿದ, ಪ್ರಸಂಗಕರ್ತ ಗುರುವಪ್ಪ ಬಾಯಾರು ಹಾಗೂ ಇತ್ತೀಚೆಗೆ ಅಗಲಿದ ಸಸಿಹಿತ್ಲು ಮೇಳದ ಯುವ ಕಲಾವಿದ ಜಗದೀಶ ನಲ್ಕ ಇವರ ಕುಟುಂಬಕ್ಕೆ ಉಡುಪಿಯ ಯಕ್ಷಗಾನ ಕಲಾರಂಗದಿಂದ ಸಾಂತ್ವನ ನಿಧಿಯಾಗಿ ಅನುಕ್ರಮವಾಗಿ ರೂ. 50,000 ಮತ್ತು ರೂ.75,000 ನೀಡಲಾಯಿತು.

ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಕರ್ಣಾಟಕ ಬ್ಯಾಂಕಿನ ನಿವೃತ್ತ ಆಡಳಿತಾಧಿಕಾರಿ ಮಹಾಬಲೇಶ್ವರ ಎಂ. ಎಸ್. ಮತ್ತು ಮಾಹೆಯ ಸಹಕುಲಾಧಿಪತಿಗಳಾದ ಡಾ.ಎಚ್.ಎಸ್. ಬಲ್ಲಾಳ್ ಕಲಾವಿದರ ಪತ್ನಿಯರಿಗೆ ಚೆಕ್ಕನ್ನು ಹಸ್ತಾಂತರಿಸಿ ಸಂಸ್ಥೆ ಕಷ್ಟದಲ್ಲಿರುವ ಕಲಾವಿದರ ಕುಟುಂಬಕ್ಕೆ ನೆರವು ನೀಡುತ್ತಿರುವುದು ಮಾನವೀಯ ಕಳಕಳಿಯ ಕೆಲಸಕ್ಕೆ ಉದಾಹರಣೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಉಪಸ್ಥಿತರಿದ್ದರು.

ಪರಾರಿಗುತ್ತು ಬಾಲಕೃಷ್ಣ ಶೆಟ್ಟಿ ಸಂಸ್ಮರಣೆ, ಪ್ರಶಸ್ತಿ ಪ್ರದಾನ – ಕಲೆ ಕಲಾವಿದರದು ಅವಿನಾಭಾವ ಸಂಬಂಧ: ಭಾಸ್ಕರ ರೈ ಕುಕ್ಕುವಳ್ಳಿ

ಮಂಗಳೂರು: ‘ಕಲೆಯಿಂದಾಗಿ ಕಲಾವಿದನಿಗೆ ಬದುಕು; ಕಲಾವಿದನಿಂದ ಕಲೆಗೆ ಬೆಳಕು. ಆದ್ದರಿಂದ ಕಲೆ ಮತ್ತು ಕಲಾವಿದರ ನಡುವೆ ಅವಿನಾಭಾವ ಸಂಬಂಧವಿದೆ’ ಎಂದು ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಹಾಗೂ ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.

ಬಂಟ್ವಾಳ ತಾಲೂಕು ಪರಾರಿ ಗುತ್ತು ಮನೆವಠಾರದಲ್ಲಿ ಜರಗಿದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಬಯಲಾಟ ಸಂದರ್ಭ ಏರ್ಪಡಿಸಲಾದ ಪರಾರಿಗುತ್ತು ಬಾಲಕೃಷ್ಣ ಶೆಟ್ಟಿ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. 

         ‌‌’ಹಿರಿಯರನ್ನು ಗೌರವಿಸುವುದು ಮತ್ತು ಕಲೆಯನ್ನು ಆರಾಧಿಸುವುದು ಇವೆರಡೂ ಪವಿತ್ರ ಕಾರ್ಯಗಳು’ ಎಂದವರು ಬಯಲಾಟದ ಸೇವಾದಾರರನ್ನು ಅಭಿನಂದಿಸಿದರು. ಪೊಳಲಿ ಶ್ರೀ ರಾಮಕೃಷ್ಣ ತಪೋವನ ಆಶ್ರಮದ ಸ್ವಾಮಿ ವಿವೇಕಾ ಚೈತನ್ಯಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಶಂಕರ ಶೆಟ್ಟಿ ಮುಂಡಡ್ಕ ಗುತ್ತು ಮತ್ತು ರಾಮಕೃಷ್ಣ ಆಳ್ವ ಪೊನ್ನೋಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಂಸ್ಮರಣೆ – ಪ್ರಶಸ್ತಿ ಪ್ರದಾನ:

       ಮಂಗಳೂರು ಕೆನರಾ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಜಿ. ಶಂಕರ ಶೆಟ್ಟಿ ಗುಂಡಿಲಗುತ್ತು ದಿ. ಬಾಲಕೃಷ್ಣ ಶೆಟ್ಟರ ಕುರಿತು ಸಂಸ್ಮರಣಾ ಭಾಷಣ ಮಾಡಿದರು. ಹಿರಿಯ ವೈದಿಕ ವಿದ್ವಾಂಸ ಹಾಗೂ ಕೊಳಕೆ ದೇವಳದ ಪ್ರಧಾನ ಅರ್ಚಕ ಮಹಾಬಲೇಶ್ವರ ಮಯ್ಯ ಮತ್ತು ಕಟೀಲು 2ನೇ ಮೇಳದ ಪ್ರಬಂಧಕ ಹಾಗೂ ಹಿರಿಯ ಯಕ್ಷಗಾನ ಕಲಾವಿದ ಶ್ರೀಧರ ಪಂಜಾಜೆಯವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.

      ಬಯಲಾಟದ ಸೇವಾ ಕರ್ತರಾದ ದಿವಾಕರ ಶೆಟ್ಟಿ ಪರಾರಿ ಗುತ್ತು ಸ್ವಾಗತಿಸಿದರು. ಪಿ. ಕಿಶೋರ್ ಭಂಡಾರಿ ಬೆಳ್ಳೂರು ಸನ್ಮಾನ ಪತ್ರ ವಾಚಿಸಿ, ಕಾರ್ಯಕ್ರಮ ನಿರೂಪಿಸಿದರು. ಶಂಕರ್ ಶೆಟ್ಟಿ ಪರಾರಿಗುತ್ತು ವಂದಿಸಿದರು. ಕಟೀಲು ಮೇಳದ ಕಲಾವಿದರಿಂದ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಜರಗಿತು

ತಾಳಾಭ್ಯಾಸ ಶಿಬಿರವನ್ನು ಚಂಡೆ ನುಡಿಸಿ ಉದ್ಘಾಟನೆ

ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ಕೋಟದ ಹಂದೆ ಮಹಾ ಗಣಪತಿ ದೇವಸ್ಥಾನದಲ್ಲಿ ಇದೇ ಎಪ್ರಿಲ್ 30 ರಿಂದ 6 ರವರೆಗೆ ಬೇಸಗೆ ಶಿಬಿರದ ಪ್ರಯುಕ್ತ ಒಂದು ವಾರಗಳ ಕಾಲ ನರಸಿಂಹ ಸೋಮಯಾಜಿ ಹಂದಟ್ಟು, ಶ್ರೀ ವಿಶ್ವ ವಿನಾಯಕ ವಿವಿಧೋದ್ದೇಶ ಸಹಕಾಎ ಸಂಘ (ರಿ) ಕೋಟ, ಹಂದಟ್ಟು ಹಾಲು ಉತ್ಪಾದಕರ ಮಹಿಳಾ ಸಂಘ, ಕಾಮಧೇನು ವಿವಿಧೊದ್ದೇಶ ಸಹಕಾರಿ ಸಂಘ ಹಂದ್ಟಟು, ರಂಗ ಸಂಪದ ಕೋಟ, ಸಾಲಿಗ್ರಾಮ ಮಕ್ಕಳ ಮೇಳ, ಯಶಸ್ವಿ ಕಲಾವೃಂದ ತೆಕ್ಕಟ್ಟೆ ಮತ್ತು ವ್ಯವಸ್ಥಪನಾ ಸಮಿತಿ ಹಂದೆ ದೇವಸ್ಥಾನದದೊ0ದಿಗೆ ಜ0ಟಿಯಾಗಿ ಆಯೋಜಿಸಿದ ಯಕ್ಷಗಾನ ನೃತ್ಯ, ಭಾಗವತಿಕೆ, ಪದ್ಯದೊಂದಿಗೆ ತಾಳಾಭ್ಯಾಸ ಶಿಬಿರವನ್ನು ಚಂಡೆ ನುಡಿಸಿ ಸುಜಯೀಂದ್ರ ಹಂದೆಯವರು ಉದ್ಘಾಟಿಸಿದರು.

ಯಕ್ಷಾಂಗಣ ಟ್ರಸ್ಟ್ ನ ಸಂಘಟನಾ ಕಾರ್ಯದರ್ಶಿ ಸುದರ್ಶನ ಉರಾಳರು ಅಧ್ಯಕ್ಷತೆ ವಹಿಸಿದ್ದರು. ಕೋಟ ಹಂದೆ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರೂ, ಮುಕ್ತೇಸರರು ಆದ ಅಮರ ಹಂದೆ ಶುಭಾಶಂಸನೆಗೈದರು. ಯಕ್ಷಗುರು ಲ0ಬೋದರ ಹೆಗಡೆ ಉಪಸ್ಥಿತರಿದ್ದರು.
ರಂಗ ಸಂಪದದ ಕೋಟ ರಾಘವೇ0ದ್ರ ತು0ಗ ಸ್ವಾಗತಿಸಿ, ಯಶಸ್ವೀ ಕಲಾವೃಂದದ ವೆಂಕಟೇಶ ವೈದ್ಯ ವಂದಿಸಿದರು.

ಸಾಲಿಗ್ರಾಮ ಮಕ್ಕಳ ಮೇಳದ ಸುಹಾಸ ಕರಬ ಕಾರ್ಯಕ್ರಮ ನಿರ್ವಹಿಸಿದರು. ಸುದರ್ಶನ ಉರಾಳ, ಸುಜಯೀಂದ್ರ ಹಂದೆ, ಲಂಬೋದರ ಹೆಗಡೆ, ಸುಹಾಸ ಕರಬ ಶಿಬಿರದ ಗುರುಗಳಾಗಿ, ಸುದೀಪ ಉರಾಳ, ಮನೋಜ್‌ ಆಚಾರ್, ಶಶಾಂಕ್, ಸ್ಕಂದ ಉರಾಳ ಹಿಮ್ಮೇಳವಾದಕರಾಗಿ ಸಹಕರಿಸಿದರು.

ವರದಿ-
ಸುದರ್ಶನ ಉರಾಳ ಹಂದಟ್ಟು ಕೋಟ.
9448547237

ಮಕ್ಕಳ ಪ್ರತಿಭೆಯ ಪ್ರದರ್ಶನಕ್ಕೊಂದು ವೇದಿಕೆ ಕಲಾವಿಕಸನ ಶಿಬಿರ

ಕಳೆದ 12 ವರ್ಷಗಳಿಂದ ಮಕ್ಕಳ ಸುಪ್ತ ಪ್ರತಿಭೆಯನ್ನು ಗುರುತಿಸಿ ಅವರಲ್ಲಿ ಅಂತಸ್ಥವಾಗಿರುವ ಕಲಾವಿದನನ್ನು ಪ್ರಚೋದಿಸಿ ಹೊರ ಹೊಮ್ಮಿಸುವ ಹಾಗೂ ಕಲೆಗೆ ಒತ್ತು ಕೊಡುವ ದಿಸೆಯಲ್ಲಿ ಉತ್ತರಹಳ್ಳಿ ಸಮೀಪದ ಚಿಕ್ಕಲ್ಲಸಂದ್ರದ ಕೆ.ಎಸ್.ಆರ್.ಟಿ.ಸಿ.ಲೇಔಟ್ ಶ್ರೀ ಸಿದ್ಧಿ ಗಣಪತಿ ದೇವಾಲಯದ ಮನೋರಂಜಿನಿ ಸಭಾಂಗಣದಲ್ಲಿ ನಡೆಸಿಕೊಂಡು ಬರುತ್ತಿರುವ “ಕಲಾವಿಕಸನ ಶಿಬಿರ” ನಿನ್ನೆ ಸಮಾರೋಪಗೊಂಡಿತು.


ಕೇವಲ ಒಂದೋ ಎರಡೋ ಚಟುವಟಿಕೆಗಳಿಗೆ ಸೀಮಿತ ಗೊಂಡಿರದೆ ಯಕ್ಷಗಾನ, ನಾಟಕ, ಜಾನಪದ, ಹಾಡು ನೃತ್ಯ, ಕರಾಟೆ, ಯೋಗ ಚಿತ್ರಕಲೆ, ಮಣ್ಣಿನ ಕರಕುಶಲತೆ ಹೀಗೆ ವೈವಿಧ್ಯಮಯ ರಚನಾತ್ಮಕ ವಿಷಯಗಳಿಗೆ ಮಕ್ಕಳಲ್ಲಿ ಮುಖಾಮುಖಿಯಾಗಿಸುವ ರೀತಿಯಲ್ಲಿ ಪ್ರತೀ ಭಾರಿಯೂ ನಾವು ಶಿಬಿರವನ್ನು ವಿನ್ಯಾಸ ಮಾಡುತ್ತಿರುವುದಾಗಿ ಯಕ್ಷಗಾನ ನಿರ್ದೇಶಕರು ಹಾಗೂ ಕಲಾಕದಂಬದ ನಿರ್ದೇಶಕರಾದ ಡಾ. ರಾಧಾಕೃಷ್ಣ ಉರಾಳ ತಿಳಿಸಿದರು.


ಶಿಬಿರ ನಿರ್ದೇಶಕರಾದ ಮುರಳೀಧರ ನಾವಡರ ಅವರಿಂದ ಕಲಿತ ಹಾಡು, ಕೇವಲ ಮೂರೇ ವಾರಗಳಲ್ಲಿ ಕಲಿತ ಗಣೇಶ ಜನ್ಮಯಕ್ಷಗಾನ (ಸಹ ನಿರ್ದೇಶನ: ಅದಿತಿ ಉರಾಳ, ನಿತ್ಯ ಗೌಡ), ಕಿಂದರಿ ಜೋಗಿನಾಟಕ, ಪಲ್ಲವಿ, ರಮೇಶ್ ಅವರಿಂದ ಕಲಿತ ನೃತ್ಯ, ಸುರೇಶ್‌ರ ಮಾರ್ಗದರ್ಶನ ಕರಾಟೆ, ಭಕ್ತಿಗೀತೆ, ಭಾವಗೀತೆ, ದೇಶಭಕ್ತಿ ಗೀತೆ, ವಚನಗಳ ಗಾಯನ, ಕರಾಟೆ, ಚಿತ್ರಕಲೆ, ಹೀಗೆ ವೈವಿಧ್ಯಮಯವಾದ ಸುಮಾರು 150 ನಿಮಿಷಗಳ ಪ್ರದರ್ಶನವನ್ನು ಮಕ್ಕಳು ನೀಡಿದರು.

ವಿಶ್ವನಾಥ ಉರಾಳ, ಪೂಜಾ ಆಚಾರ್ಯ, ಗುರುರಾಜ್, ರಮೇಶ್, ಸೃಜನ, ಡಿಪಿನ್, ಜ್ಞಾನೇಂದ್ರ, ತೇಜಸ್, ರಜತ್, ಪ್ರದೀಪ್ ಮೊದಲಾದವರು ನೇಪಥ್ಯ ನೆರವು ನೀಡಿದರು.


ಕೇವಲ ಬೇಸಿಗೆಯ ಶಿಬಿರವಾಗಷ್ಟೆ ಉಳಿಯದೆ ಈ ಕಲೆಯ ನಿರಂತರ ಕಲಿಯುವಿಕೆಗೆ ವಾರಾಂತ್ಯದ ತರಗತಿಗಳನ್ನು ಸಂಸ್ಥೆಯು ಮಾಡಿಕೊಂಡು ಬರುತ್ತಿರುವುದು ಮಕ್ಕಳ ಕಲಾ ಕಲಿಕೆಯ ನಿರಂತರತೆಗೆ ಒಂದು ಅವಕಾಶ ಒದಗಿಸಿದಂತಾಗಿದೆ.


ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಕಲಾಕದಂಬ ಅರ್ಟ್ ಸೆಂಟರ್, 9448510582 ,9886066732,8310482075