ಹಿರಿಯ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆಯ ಅರ್ಥಗಾರಿಕೆ ಕಮ್ಮಟ
ದಿನಾಂಕ 16.06.2024 ನೇ ಆದಿತ್ಯವಾರ ಹಿರಿಯ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆಯ ಅರ್ಥಗಾರಿಕೆ ಕಮ್ಮಟ ಕಾರ್ಯಕ್ರಮ ಜರಗಲಿದೆ.
ಪೆರಿಯಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಸಭಾಂಗಣದಲ್ಲಿ ದಿನಾಂಕ 16.04.2024ರ ಆದಿತ್ಯವಾರದಂದು ಅಪರಾಹ್ನ 2 ಘಂಟೆಯಿಂದ ಹಿರಿಯ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆಯ ಅರ್ಥಗಾರಿಕೆ ಕಮ್ಮಟ ಕಾರ್ಯಾಗಾರ ನಡೆಯಲಿದೆ.
ಯಕ್ಷಶಿಕ್ಷಣ ಟ್ರಸ್ಟ್( ರಿ) ಉಡುಪಿ ಕಳೆದ 17 ವರ್ಷಗಳಿಂದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡುತ್ತಿದ್ದು, ಈ ವರ್ಷ ಶಾಸಕರಾದ ಗುರುರಾಜ ಗಂಟಿಹೊಳೆಯವರ ಅಪೇಕ್ಷೆಯಂತೆ ಬೈಂದೂರು ವಿಧಾನಸಭಾ ವ್ಯಾಪ್ತಿಯ 11 ಶಾಲೆಗಳು ಸೇರಿ ಒಟ್ಟೂ 91 ಶಾಲೆಗಳಲ್ಲಿ ಯಕ್ಷಶಿಕ್ಷಣ ನಡೆಸಲು ಯೋಜಿಸಿದೆ.
ಈ ಪ್ರಯುಕ್ತ ಯಕ್ಷಗಾನ ಗುರುಗಳ ಸಮಾಲೋಚನಾ ಸಭೆ 12.06.2024 ರಂದು ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದ ಹೊರಾಂಗಣದಲ್ಲಿ ಜರಗಿತು.
ಉಡುಪಿ ಕ್ಷೇತ್ರದ ಶಾಸಕ, ಟ್ರಸ್ಟ್ ನ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಮಾತನಾಡಿ, ಯಕ್ಷಶಿಕ್ಷಣ ಟ್ರಸ್ಟ್ ಕಾರ್ಯನಿರ್ವಹಣೆಯಲ್ಲಿ ಕಲಾರಂಗದ ಕಾರ್ಯಕರ್ತರ ದುಡಿಮೆ ದೊಡ್ಡದು, ನಾವೆಲ್ಲ ಒಟ್ಟಾಗಿ ಈ ಮಹಾಭಿಯನವನ್ನು ಯಶಸ್ವಿಯಾಗಿಸೋಣ ಎಂದರು.
ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ ಶೆಟ್ಟಿ ಮಾತನಾಡಿ ಮಕ್ಕಳಿಗೆ ಸಂಸ್ಕಾರ ನೀಡುವ ಈ ಕಲಾಪ್ರಕಾರ ಉಳಿಸಿ ಬೆಳೆಸುವಲ್ಲಿ ಯಕ್ಷ ಗುರುಗಳ ಕೊಡುಗೆ ಮಹತ್ತ್ವದ್ದು ಎಂದು ಅಭಿಪ್ರಾಯ ಪಟ್ಟರು.
ಹಿರಿಯ ಟ್ರಸ್ಟಿ ಎಸ್. ವಿ. ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಗುರುಗಳಿಗೆ ಉಪಯುಕ್ತ ಮಾಹಿತಿ ನೀಡಿದರು. ಕೋಶಾಧಿಕಾರಿ ಎಚ್. ಎನ್ ಶೃಂಗೇಶ್ವರ, ಟ್ರಸ್ಟಿಗಳಾದ ವಿ. ಜಿ. ಶೆಟ್ಟಿ, ನಾರಾಯಣ ಎಂ. ಹೆಗಡೆ, ಮೀನಾಲಕ್ಷಣ ಅಡ್ಯಂತಾಯ, ಗಣೇಶ್ ಬ್ರಹ್ಮಾವರ, ನಾಗರಾಜ ಹೆಗಡೆ ಉಪಸ್ಥಿತರಿದ್ದರು.
40 ಕಲಾವಿದರು ಗುರುಗಳಾಗಿ ಸೇವೆ ಸಲ್ಲಿಸಲಿರುವರು. ಗುರುಗಳಿಗೆ ಶಾಲೆಗಳನ್ನು ಹಂಚಿಕೆಮಾಡಿ ಅಗತ್ಯ ಸೂಚನೆ ನೀಡಲಾಯಿತು.
ಬಡಗುತಿಟ್ಟಿನ ಬಣ್ಣದ ವೇಷ ಹಾಗೂ ಮುಂಡಾಸು ವೇಷಕ್ಕೆ ಖ್ಯಾತಿಹೊಂದಿದ ಪೇತ್ರಿ ಮಾಧವ ನಾಯ್ಕ (84 ವರ್ಷ) ಪೇತ್ರಿಯ ಸ್ವಗೃದಲ್ಲಿ ಇಂದು (05.06.2024) ನಿಧನರಾದರು.
ಮಾರಣಕಟ್ಟೆ, ಮಂದಾರ್ತಿ, ಪೆರ್ಡೂರು, ಸಾಲಿಗ್ರಾಮ, ಅಮೃತೇಶ್ವರೀ, ಕೊಲ್ಲೂರು ಹಾಗೂ ಮುಲ್ಕಿ ಮೇಳಗಳಲ್ಲಿ 23 ವರ್ಷಗಳ ಕಾಲ ಮತ್ತು ಡಾ. ಶಿವರಾಮ ಕಾರಂತರ ನೇತೃತ್ವದ ಯಕ್ಷರಂಗದಲ್ಲಿ 30 ವರ್ಷಗಳ ಕಾಲ ವೇಷಧಾರಿಯಾಗಿ ಕಲಾ ಪ್ರತಿಭೆಯನ್ನು ಮೆರೆದಿದ್ದರು.
ಯಕ್ಷರಂಗದ ಪ್ರಮುಖ ವೇಷಧಾರಿಯಾಗಿ ವಿವಿಧ ದೇಶಗಳನ್ನು ಸಂಚರಿಸಿದ್ದರು. ಬಣ್ಣದ ವೇಷಕ್ಕೆ ವಿಶೇಷ ಕೊಡುಗೆಯನ್ನು ನೀಡಿದ ಮಾಧವ ನಾಯ್ಕರು ರಾವಣ, ಘಟೋತ್ಕಚ, ಹಿಡಿಂಬಾಸುರ, ತಾರಾಕಾಸುರ, ಶೂರ್ಪನಖೆ, ಹಿಡಿಂಬೆ, ಲಂಕಿಣ , ವೃತ್ರಜ್ವಾಲೆ ಹೀಗೆ ಗಂಡು ಬಣ್ಣ ಮತ್ತು ಹೆಣ್ಣು ಬಣ್ಣ ಎರಡರಲ್ಲೂ ನೈಪುಣ್ಯತೆ ಹೊಂದಿದ್ದರು.
ಇವರಿಗೆ ಕರ್ನಾಟಕ ರಾಜ್ಯೋತ್ಸವ, ಯಕ್ಷಗಾನ ಅಕಾಡೆಮಿ, ಯಕ್ಷಗಾನ ಕಲಾರಂಗದ ಹೀಗೆ ಹಲವು ಪ್ರಶಸ್ತಿಗಳು ಸಂದಿವೆ. ಕಳೆದ ವಾರ ಮಂದಾರ್ತಿ ಮೇಳದ ಸೇವೆಯಾಟದ ದಿನ 1 ಲಕ್ಷ ಮೊತ್ತದ ಪ್ರತಿಷ್ಠಿತ ಹಾರಾಡಿ ರಾಮಗಾಣಿಗ ಪ್ರಶಸ್ತಿ ಪ್ರಾಪ್ತಿಯಾಗಿತ್ತು.
ಪತ್ನಿ, ಓರ್ವ ಪುತ್ರಿ, ಐವರು ಪುತ್ರರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.
ಸೇರಾಜೆ ಸೀತಾರಾಮ ಮತ್ತು ಜಬ್ಬಾರ ಸಮೊ ಅವರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ.
ಉಡುಪಿ ಯಕ್ಷಗಾನ ಕಲಾರಂಗವು ಸಹೃದಯಿ ಕಲಾ ಪೋಷಕ ಮಟ್ಟಿ ಮುರಲೀಧರ ರಾವ್ ಮತ್ತು ಅರ್ಥಧಾರಿ, ಪಂಡಿತ ಪೆರ್ಲ ಕೃಷ್ಣ ಭಟ್ ನೆನಪಿನಲ್ಲಿ ನೀಡುವ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಗೆ
ಅನುಕ್ರಮವಾಗಿ ಅರ್ಥಧಾರಿ, ಹವ್ಯಾಸಿ ವೇಷಧಾರಿ ಜಬ್ಬಾರ ಸಮೊ ಹಾಗೂ ಅರ್ಥಧಾರಿ, ಹವ್ಯಾಸಿ ಕಲಾವಿದ, ಪ್ರಸಂಗಕರ್ತ, ಪ್ರವಚನಕಾರ ಸೇರಾಜೆ ಸೀತಾರಾಮ ಭಟ್ಟ ಆಯ್ಕೆಯಾಗಿದ್ದಾರೆ.
ಇದೇ ಜೂನ್ 23, ಭಾನುವಾರದಂದು ಅಪರಾಹ್ನ 3.00 ಗಂಟೆಗೆ ಸಂಸ್ಥೆಯ ನೂತನ ಕಟ್ಟಡ ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್‌ಮೆಂಟ್, ಟ್ರೈನಿಂಗ್ ಅಂಡ್ ರಿಸರ್ಚ್ ಸೆಂಟರ್‌ನಲ್ಲಿ ಪ್ರಶಸ್ತಿ ಪ್ರದಾನ ಮತ್ತು ತಾಳಮದ್ದಲೆ ಜರಗಲಿದೆ ಎಂಬುವುದಾಗಿ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿಯು ರೂ. 20,000/- ನಗದು ಪುರಸ್ಕಾರ ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿರುತ್ತದೆ.
ಯಕ್ಷಗಾನ ಕಲೆಯ ಎಲ್ಲಾ ಅಂಗಗಳನ್ನು ಹೊಂದಿರುವ ಪರಿಪೂರ್ಣ ಕಲಾ ಪ್ರಕಾರ. ಅದನ್ನು ಪ್ರಸ್ತುತ ಪಡಿಸುವ ಕಲಾವಿದರು ಸಮಾಜಕ್ಕೆ ಪುರಾಣದ ಸಂದೇಶವನ್ನು ತಿಳಿಸುವ ಶ್ರೇಷ್ಠ ವಿದ್ವಾಂಸರು, ಯಕ್ಷಗಾನ ಕಲಾರಂಗ ಮಾಡುತ್ತಿರುವ ಸಮಾಜಮುಖಿ ಕೆಲಸ ಅನನ್ಯ ಮತ್ತು ಅಗಾಧ ಎಂಬುದಾಗಿ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮೇ 31ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಯಕ್ಷಗಾನ ಕಲಾರಂಗ ಆಯೋಜಿಸಿದ 25ನೇ ವರ್ಷದ ಕಲಾವಿದರ ಸಮಾರಂಭದಲ್ಲಿ ಅನುಗ್ರಹ ಸಂದೇಶ ನೀಡುತ್ತಾ ನುಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷರೂ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ನಿಯುಕ್ತಿಗೊಂಡ ಡಾ. ತಲ್ಲೂರು ಶಿವರಾಮ ಶೆಟ್ಟಿಯವರನ್ನು ಸ್ವಾಮೀಜಿಯವರು ಸ್ಮರಣಿಕೆ, ಶಾಲು, ಅಭಿನಂದನಾ ಪತ್ರ ನೀಡಿ ಹರಸಿದರು.
ಸುಬ್ರಹ್ಮಣ್ಯ ಬೈಪಡಿತ್ತಾಯರು ಬರೆದ ಆಗಸದ ಬೆಳಕು ಪುಸ್ತಕವನ್ನು ಶ್ರೀಪಾದರು ಲೋಕಾರ್ಪಣೆಗೊಳಿಸಿದರು. ಇತ್ತೀಚೆಗೆ ನಿಧನರಾದ ಪುತ್ತೂರು ಗಂಗಾಧರ ಜೋಗಿಯವರ ಧರ್ಮಪತ್ನಿಗೆ ಸಾಂತ್ವನ ನಿಧಿಯನ್ನು ನೀಡಲಾಯಿತು.
21 ಜನ ಕಲಾವಿದರಿಗೆ ತಲಾ ಹತ್ತು ಸಾವಿರದಂತೆ ಗೃಹ ನಿರ್ಮಾಣದ ಉಡುಗೊರೆ ಹಾಗೂ 7 ಮಂದಿ ಕಲಾವಿದರಿಗೆ ವೈದ್ಯಕೀಯ ನೆರವು ವಿತರಿಸಲಾಯಿ. ಇದೇ ಸಂದರ್ಭದಲ್ಲಿ ವೃತ್ತಿಮೇಳದ ಕಲಾವಿದರಿಗೆ ತಮ್ಮ ಹೋಟೆಲ್‌ನಲ್ಲಿ ಉಚಿತವಾಗಿ ಉಪಹಾರ ನೀಡಿ ಪ್ರೋತ್ಸಾಹಿಸುತ್ತಾ ಬಂದ ಆಗುಂಬೆಯ ಗುರುರಾಜ ಅಡಿಗ ಮತ್ತು ಕೊಕ್ಕರ್ಣೆಯ ಕೆ. ಎಸ್. ಶ್ರೀನಿವಾಸ ನಾಯಕ್ ಇವರನ್ನು ಶ್ರೀಪಾದರು ಗೌರವಿಸಿದರು.
ವೇದಿಕೆಯಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಡಾ. ಎಂ. ಪ್ರಭಾಕರ ಜೋಶಿ, ಆನಂದ ಸಿ. ಕುಂದರ್, ಪಿ. ಪುರುಷೋತ್ತಮ ಶೆಟ್ಟಿ, ಬೆಳ್ವೆ ಗಣೇಶ್ ಕಿಣಿ , ಸುರೇಶ್ ನಾಯಕ್ ಕುಯಿಲಾಡಿ, ಸಿಎ ಗಣೇಶ್ ಕಾಂಚನ್, ಹರಿಯಪ್ಪ ಕೋಟ್ಯಾನ್ ಅಭ್ಯಾಗತರಾಗಿ ಭಾಗವಹಿಸಿದ್ದರು.
ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಎಚ್. ಎನ್. ಶೃಂಗೇಶ್ವರ ಸಹಕರಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.
ಪೂರ್ವಾಹ್ನ 10.00 ಗಂಟೆಗೆ ಶ್ರೀ ಮಠದ ದಿವಾನರಾದ ಶ್ರೀ ನಾಗರಾಜ ಅಚಾರ್ಯ ಸಮಾವೇಶವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. 9.00ರಿಂದ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ತಜ್ಞ ವೈದ್ಯರಿಂದ ಉಚಿತ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆ ನಡೆಯಿತು. 10.30ರಿಂದ ಕಲ್ಲೇಶ್ವರ ಸ್ವಾಮಿ ಯಕ್ಷಗಾನ ಮಂಡಳಿ ತಿಪಟೂರು ಇವರಿಂದ ಮೂಡಲಪಾಯ ಯಕ್ಷಗಾನ ದಕ್ಷಯಜ್ಞ ಪ್ರದರ್ಶನಗೊಂಡಿತು.
ಮಧ್ಯಾಹ್ನ 12.00ರಿಂದ ಯೂಟ್ಯೂಬ್ ದಾಖಲೀಕರಣ / ನೇರ ಪ್ರಸಾರ ಪೂರಕವೇ? ಮಾರಕವೇ? ಎಂಬ ವಿಷಯದ ಕುರಿತು 12 ಜನ ಕಲಾವಿದರು ತಮ್ಮ ಅನುಭವವನ್ನು ಹಂಚಿಕೊAಡರು. ಡಾ. ಪ್ರದೀಪ್ ವಿ. ಸಾಮಗ ಈ ಗೋಷ್ಠಿಯ ಸಮನ್ವಯಕಾರರಾಗಿದ್ದರು.
ಸಮಾವೇಶದಲ್ಲಿ ಭಾಗವಹಿಸಿದ ವೃತ್ತಿ ಮೇಳದ ಸುಮಾರು 700 ಕಲಾವಿರಿಗೆ ಉಡುಗೊರೆ, ಸಂಸ್ಥೆಯ ಸುವರ್ಣ ವರ್ಷ ಹಾಗೂ ಯಕ್ಷನಿಧಿಯ ರಜತ ವರ್ಷದ ಸವಿ ನೆನಪಿಗೆ ವಿಶೇಷವಾಗಿ ತಯಾರಿಸಿದ ಸಿಹಿ ಪೊಟ್ಟಣ ವಿತರಿಸಲಾಯಿತು.
ಉಡುಪಿ : ವೃತ್ತಿನಿರತ ಯಕ್ಷಗಾನ ಕಲಾವಿದರ ಕ್ಷೇಮಾಭಿವೃದ್ಧಿಗಾಗಿ 25 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ಯಕ್ಷಗಾನ ಕಲಾರಂಗದ ಅಂಗಸಂಸ್ಥೆಯಾದ ಯಕ್ಷನಿಧಿಯ ವಾರ್ಷಿಕ ಮಹಾಸಭೆ ಮೇ 31, 2024 ಶುಕ್ರವಾರದಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರಗಲಿದೆ.
ಪೂರ್ವಾಹ್ನ 10.00 ಗಂಟೆಗೆ ಪರ್ಯಾಯ ಪುತ್ತಿಗೆ ಮಠದ ದಿವಾನರಾದ ಶ್ರೀ ನಾಗರಾಜ ಆಚಾರ್ಯರು ಸಮಾವೇಶವನ್ನು ಉದ್ಘಾಟಿಸಲಿದ್ದು, ಅಭ್ಯಾಗತರಾಗಿ ಭಾಗವತ ಶ್ರೀ ಕಲ್ಮನೆ ನಂಜಪ್ಪ ಅವರು ಭಾಗವಹಿಸಲಿದ್ದಾರೆ.
ಅಪರಾಹ್ನ 2.30 ಗಂಟೆಗೆ ಪರ್ಯಾಯ ಮಠಾಧೀಶರುಗಳಾದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಶ್ರೀ ಶ್ರೀ ಸುಶೀಂದ್ರತೀರ್ಥ ಶ್ರೀಪಾದರುಗಳ ದಿವ್ಯೋಪಸ್ಥಿತಿಯಲ್ಲಿ, ನಾಡೋಜ ಡಾ. ಜಿ. ಶಂಕರ್ ಅಧ್ಯಕ್ಷತೆಯಲ್ಲಿ ಸಭಾಕಲಾಪ ನಡೆಯಲಿದೆ.
ಮುಖ್ಯ ಅಭ್ಯಾಗತರಾಗಿ ಶಾಸಕರುಗಳಾದ ಯಶಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಸಾಮಾಜಿಕ ಧುರೀಣರಾದ ಆನಂದ ಸಿ. ಕುಂದರ್, ಪಿ. ಪುರುಷೋತ್ತಮ ಶೆಟ್ಟಿ, ಕೃಷ್ಣಪ್ರಸಾದ್ ಅಡ್ಯಂತಾಯ, ಬೆಳ್ವೆ ಗಣೇಶ್ ಕಿಣಿ , ಕುಯಿಲಾಡಿ ಸುರೇಶ್ ನಾಯಕ್, ಸಿಎ ಗಣೇಶ್ ಕಾಂಚನ್, ಹರಿಯಪ್ಪ ಕೋಟ್ಯಾನ್, ಹಾಗೂ ಆನಂದ ಪಿ. ಸುವರ್ಣ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಗೃಹನಿರ್ಮಾಣ ಉಡುಗೊರೆ, ವೈದ್ಯಕೀಯ ನೆರವು, ಸಾಂತ್ವನ ನಿಧಿ ಹಾಗೂ ಉಡುಗೊರೆಯನ್ನು ಕಲಾವಿದರಿಗೆ ವಿತರಿಸಲಾಗುವುದು. ಪೂವಾಹ್ನ 9.00 ರಿಂದ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ತಜ್ಞವೈದ್ಯರಿಂದ ಕಲಾವಿದರ ಆರೋಗ್ಯ ತಪಾಸಣೆ ನಡೆಯಲಿದೆ.
ಪೂರ್ವಾಹ್ನ 10.30ಕ್ಕೆ ತುಮಕೂರು ಜಿಲ್ಲೆಯ ಶ್ರೀ ಕಲ್ಲೇಶ್ವರ ಸ್ವಾಮಿ ಯಕ್ಷಗಾನ ಮಂಡಳಿಯ ಕಲಾವಿದರಿಂದ ಮೂಡಲಪಾಯ ಯಕ್ಷಗಾನ ‘ಶ್ರೀದೇವಿ ಮಹಾತ್ಮೈ’ ಯಕ್ಷಗಾನ ಪ್ರಸ್ತುತಗೊಳ್ಳಲಿದೆ.
ಅಪರಾಹ್ನ 12.00 ಗಂಟೆಗೆ ಯೂಟ್ಯೂಬ್ ದಾಖಲೀಕರಣ / ನೇರ ಪ್ರಸಾರ ಒಳಿತು – ಕೆಡುಕುಗಳ ಬಗ್ಗೆ ಕಲಾವಿದರಿಂದ ಸಂವಾದ ಜರಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತೆಂಕು ಮತ್ತು ಬಡಗು ತಿಟ್ಟುಗಳ ಮೇಳಗಳಲ್ಲಿ 47 ವರ್ಷಗಳ ತಿರುಗಾಟ ಮಾಡಿದ ಅಪೂರ್ವ ಸ್ತ್ರೀ ವೇಷದಾರಿ ಅಂಬಾಪ್ರಸಾದ್ ಪಾತಾಳ ಇವರಿಗೆ 60ರ ಅಭಿನಂದನ ಕಾರ್ಯಕ್ರಮವು ಪಾತಾಳ ಪೂರ್ಣ ಶ್ರೀ ನಿಲಯದಲ್ಲಿ ಜರಗಿತು.
ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ವತಿಯಿಂದ ಮಾಜಿ ತಾಲೂಕು ಪಂಚಾಯತ್ ಸದಸ್ಯ ಉಮೇಶ ಶೆಣೈ ಮತ್ತು ಗುರಿಕಾರ ಸತ್ಯನಾರಾಯಣ ಭಟ್ ಆರ್ಲ, ನಿವೃತ್ತ ಮುಖ್ಯ ಗುರುಗಳಾದ ಬಿ. ಸುಬ್ರಹ್ಮಣ್ಯರಾವ್ ಇವರು ಪಾತಾಳ ಅಂಬಾಪ್ರಸಾದ್ ಮತ್ತು ಶ್ರೀಮತಿ ಜಯಂತಿ ಪ್ರಸಾದ್ ಪಾತಾಳ ಇವರನ್ನು ಸನ್ಮಾನಿಸಿದರು.
ದಿವಾಕರ ಆಚಾರ್ಯ ಗೇರುಕಟ್ಟೆ ಅಭಿನಂದನ ನುಡಿಗಳನ್ನಾಡಿದರು.
ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಅಧ್ಯಕ್ಷರಾದ ದಿವಾಕರ ಆಚಾರ್ಯರನ್ನು ಪಾತಾಳ ಅಂಬಾ ಪ್ರಸಾದರು ಗೌರವಿಸಿ ಶ್ರೀಕಾಳಿಕಾಂಬ ಯಕ್ಷಗಾನ ಸಂಘಕ್ಕೆ ಆರ್ಥಿಕ ನೆರವನ್ನು ಹಸ್ತಾಂತರಿಸಿದರು.
ಆರಂಭದಲ್ಲಿ ಜರಗಿದ ಶಾಂಭವಿ ವಿಲಾಸ ತಾಳಮದ್ದಳೆಯನ್ನು ನಿವೃತ್ತ ಉಪನ್ಯಾಸಕ ಮಹಾಲಿಂಗೇಶ್ವರ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಹಿರಿಯ ಕಲಾವಿದ ಪಾತಾಳ ವೆಂಕಟರಮಣ ಭಟ್ ಉಪಸ್ಥಿತರಿದ್ದರು. ಭಾಗವಹಿಸಿದ ಕಲಾವಿದರನ್ನು ಪಾತಾಳ ಅಂಬಾ ಪ್ರಸಾದ್ ಸ್ಮರಣಿಕೆಯೊಂದಿಗೆ ಗೌರವಿಸಿದರು.
ಉಡಪಿಯ ಯಕ್ಷಗಾನ ಕಲಾರಂಗ ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಸ್ಮರಣೆಯಲ್ಲಿ ನೀಡುವ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಗೆ ಹಿರಿಯ ಯಕ್ಷಗಾನ ಕಲಾವಿದ, ವಿದ್ವಾಂಸ ಗುರುರಾಜ ಮಾರ್ಪಳ್ಳಿ ಆಯ್ಕೆಯಾಗಿದ್ದಾರೆ.
ಮಾರ್ಪಳ್ಳಿಯವರು ಯಕ್ಷಗಾನವಲ್ಲದೆ ನಾಟಕ, ಸಿನೇಮಾ, ಸಂಗೀತಾ, ಶಿಲ್ಪ, ಸಾಹಿತ್ಯ ಹೀಗೆ ಕಲೆಯ ಬಹು ಆಯಾಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಬಹುಮುಖೀ ಕಲಾಸಾಧಕರಾಗಿದ್ದಾರೆ.
ಪ್ರಶಸ್ತಿಯು ಪ್ರಶಸ್ತಿ ಪರಿಕರ ಸಹಿತ ರೂ. 40000/- ನಗದು ಪುರಸ್ಕಾರ ಒಳಗೊಂಡಿದೆ.
ಪ್ರಶಸ್ತಿ ಪ್ರದಾನ ಸಮಾರಂಭ ಮೇ 19 ಭಾನುವಾರ ಸಂಜೆ 5 ಗಂಟೆಗೆ ಯಕ್ಷಗಾನ ಕಲಾರಂಗದ ನೂತನ ಕಟ್ಟಡದ ಐವೈಸಿ ಸಭಾಂಗಣದಲ್ಲಿ ಪ್ರಶಸ್ತಿ ಸ್ಥಾಪಕ ತಲ್ಲೂರು ಫ್ಯಾಮಿಲಿ ಟ್ರಸ್ಟ್ ನ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರ ಉಪಸ್ಥಿತಿಯಲ್ಲಿ ಅತಿಥಿ ಗಣ್ಯರ ಸಮಕ್ಷ ಜರಗಲಿದೆಯೆಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ 50ನೇ ವರ್ಷಾಚರಣೆಯ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ ‘ದ್ಯೂತ ಪ್ರಕರಣ’ ತಾಳಮದ್ದಳೆಯು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಜರಗಿತು.
ಭಾಗವತರಾಗಿ ಪದ್ಮನಾಭ ಕುಲಾಲ್ ಇಳಂತಿಲ, ಶ್ರೀಮತಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಬಿ. ಸುರೇಶ್ ರಾವ್ ಹಿಮ್ಮೇಳದಲ್ಲಿ ದಿವಾಕರ ಆಚಾರ್ಯ ನೇರೆಂಕಿ, ಶ್ರೀಪತಿ ಭಟ್ ಉಪ್ಪಿನಂಗಡಿ, ಗುರುಮೂರ್ತಿ ಅಮ್ಮಣ್ಣಾಯ
ಅರ್ಥಧಾರಿಗಳಾಗಿ ಜಯರಾಮ ಬಲ್ಯ ( ಕೌರವ) ಮಹಾಲಿಂಗೇಶ್ವರ ಭಟ್ ಪೆರಿಯಡ್ಕ( ಕರ್ಣ )ಸತೀಶ್ ಆಚಾರ್ಯ ಮಾಣಿ (ಶಕುನಿ) ಶ್ರೀಮತಿ ಶ್ರುತಿ ವಿಸ್ಮಿತ(ವಿದುರ )ಶ್ರೀಧರ ಎಸ್.ಪಿ ಮಂಗಳೂರು (ಧರ್ಮರಾಯ)ದಿವಾಕರ ಆಚಾರ್ಯ ಗೇರುಕಟ್ಟೆ (ಧೃತರಾಷ್ಟ್ರ ಮತ್ತು ಭೀಮ) ಭಾಗವಹಿಸಿದ್ದರು.
ಗಣೇಶ್ ಆಚಾರ್ಯ. ಕೆ ಬೆಂಗಳೂರು ಕಾರ್ಯಕ್ರಮದ ಪ್ರಾಯೋಜಕರಾಗಿದ್ದರು
ನುಡಿನಮನ: ಇತ್ತೀಚೆಗೆ ನಿಧನರಾದ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಮತ್ತು ವೇಷಧಾರಿ ಗಂಗಾಧರ ಪುತ್ತೂರು ಇವರಿಗೆ ಸತೀಶ್ ಆಚಾರ್ಯ ಮಾಣಿ ಮತ್ತು ಮಹಾಲಿಂಗೇಶ್ವರ ಭಟ್ ಪೆರಿಯಡ್ಕ ನುಡಿ ನಮನ ಸಲ್ಲಿಸಿದರು.
ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯದರ್ಶಿ ಶ್ರೀಪತಿ ಭಟ್ ಉಪ್ಪಿನಂಗಡಿ ,ಜಯರಾಮ ಬಲ್ಯ, ದಿವಾಕರ ಆಚಾರ್ಯ ನೇರೆಂಕಿ ಮತ್ತು ಸಂಘದ ಕಲಾವಿದರು ಉಪಸ್ಥಿತರಿದ್ದರು.