ಕಾರ್ಕಳ: ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ನಂದಳಿಕೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯೊಬ್ಬರು ಬೈಕ್ ಡಿಕ್ಕಿ ಹೊಡೆದು ಸಾವಿಗೀಡಾಗಿದ್ದಾರೆ.
ಮೃತ ವಿದ್ಯಾರ್ಥಿನಿಯನ್ನು ಪ್ರಣಮ್ಯ ಶೆಟ್ಟಿ (14) ಎಂದು ಗುರುತಿಸಲಾಗಿದೆ. ಹತ್ತನೇ ತರಗತಿಯ ವಿದ್ಯಾರ್ಥಿನಿಯಾದ ಈಕೆ ಸ್ಥಳೀಯ ಲಕ್ಷ್ಮಿ ಜನಾರ್ದನ ದೇವಸ್ಥಾನಕ್ಕೆ ದರ್ಶನ ಪಡೆಯಲು ಮನೆಯಿಂದ ಹೊರಟಿದ್ದಳು. ರಸ್ತೆಯಲ್ಲಿ ಸ್ವಲ್ಪ ಮುಂದೆ ಸಾಗುತ್ತಿದ್ದಂತೆ ಈ ಘಟನೆ ಸಂಭವಿಸಿದೆ.
ಬೈಕ್ ಸವಾರನ ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ. ಅಪಘಾತ ಸಂಭವಿಸಿದ ಸಮಯದಲ್ಲಿ ವೇಳೆ ಬೈಕ್ ಸವಾರ ರಸ್ತೆಯಿಂದ ತೀವ್ರ ಎಡಕ್ಕೆ ಪಲ್ಟಿಯಾಗಿ ಪ್ರಣಮ್ಯ ಅವರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾರೆ.
ಪ್ರಣಮ್ಯ ಅವರನ್ನು ತಕ್ಷಣ ಕಾರ್ಕಳದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ತಲೆಗೆ ತೀವ್ರ ಸ್ವರೂಪದ ಗಾಯವಾಗಿದ್ದುದರಿಂದ ರಕ್ಷಿಸಲಾಗಲಿಲ್ಲ.
ಪ್ರತಿದಿನ ಸಂಜೆ ಪ್ರಣಮ್ಯ ವಾಡಿಕೆಯಂತೆ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಳು. ಅವಳು ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಳು. ಘಟನೆ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿ ನಾಯಕರ ಆಯ್ಕೆ
ಶಾಲಾ ಜೀವನದಲ್ಲಿಯೇ ಮಕ್ಕಳಿಗೆ ಚುನಾವಣಾ ಅರಿವು ಮೂಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿ ಚುನಾವಣೆಯ ಮೂಲಕ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿ ನಾಯಕರ ಆಯ್ಕೆ ಪ್ರಕ್ರಿಯೆ ನಡೆಯಿತು.
ಪ್ರೌಢ ಶಾಲಾ ವಿಭಾಗದಲ್ಲಿ ವಿದ್ಯಾರ್ಥಿ ನಾಯಕನಾಗಿ 10ನೇ ತರಗತಿಯ ಆಕಾಶ್ ಪ್ರಭು (ಎಂ ಗುರುಪ್ರಸಾದ್ ಪ್ರಭು ಮತ್ತು ಶ್ರೀಮತಿ ಅಶ್ವಿನಿ ಪ್ರಭು ದಂಪತಿಗಳ ಪುತ್ರ) ಹಾಗೂ ಉಪನಾಯಕಿಯಾಗಿ 9 ನೇ ತರಗತಿಯ ಕುಮಾರಿ ಸುಪ್ರಜಾ ರಾವ್ (ಶ್ರೀ ಪ್ರಶಾಂತ್ ರಾವ್ ಮತ್ತು ಶ್ರೀಮತಿ ಸುಮನಾ ಕೆ ದಂಪತಿಗಳ ಪುತ್ರಿ) ಆಯ್ಕೆಯಾದರು.
ಪ್ರಾಥಮಿಕ ಶಾಲಾ ವಿಭಾಗದಲ್ಲಿ ವಿದ್ಯಾರ್ಥಿ ನಾಯಕನಾಗಿ 7ನೇ ತರಗತಿಯ ಸಾಕ್ಷಿನ್ ಆರ್ ರೈ (ಶ್ರೀ ರವೀಂದ್ರನಾಥ್ ರೈ ಮತ್ತು ಶ್ರೀಮತಿ ಜ್ಯೋತಿಲಕ್ಷ್ಮಿ ಜಿ ದಂಪತಿಗಳ ಪುತ್ರ) ಹಾಗೂ ಉಪನಾಯಕನಾಗಿ 6 ನೇ ತರಗತಿಯ ಸ್ಕಂದನ್ ಎಸ್ ( ಶ್ರೀ ನಾಗರಾಜ್ ಎಸ್ ಮತ್ತು ಶ್ರೀಮತಿ ಲಿಖಿತಾ ಪಿ ದಂಪತಿಗಳ ಪುತ್ರ) ಆಯ್ಕೆಯಾದರು.
ಸಭಾಪತಿಯಾಗಿ ಕು. ವರ್ಣಾ.ಕೆ, ಪ್ರತಿಪಕ್ಷ ನಾಯಕರಾಗಿ ಸಾರ್ಥಕ್, ಗೃಹ ಸಚಿವರಾಗಿ ಯಶಸ್, ಶಮನ್ ; ಶಿಕ್ಷಣ ಸಚಿವರಾಗಿ ಲಿಕೀತನ್, ಗಣೇಶ್ ಪಟೇಲ್; ಹಣಕಾಸು ಸಚಿವರಾಗಿ ವಿಕಾಸ್, ಚಂದನ್ ;
ಆರೋಗ್ಯ ಸಚಿವರಾಗಿ ನಿಖಿಲ್, ದೈವಿಕ್ ; ಕ್ರೀಡಾ ಸಚಿವರಾಗಿ ಮನ್ವಿತ್, ಚಿಂತನಾ ; ಸಾಂಸ್ಕೃತಿಕ ಸಚಿವರಾಗಿ ಕೃತಿ, ಅಭಿನವ್ ; ನೀರಾವರಿ ಸಚಿವರಾಗಿ ನಂದಕಿಶೋರ್, ಅಭಿಷೇಕ್ ; ಆಹಾರ ಸಚಿವರಾಗಿ ಶಾನ್ವಿ, ಆರಾಧನ್ ; ಪ್ರಸಾರಖಾತೆ ಸಚಿವರಾಗಿ ಚಿನ್ಮಯಿ, ಅವನಿ. ಎಸ್. ರೈ ; ದಾಖಲೆ ನಿರ್ವಾಹಕರಾಗಿ ದೇಶಿಕ್ ಆಯ್ಕೆಯಾದರು.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಇವರ ಮಾರ್ಗದರ್ಶನದಲ್ಲಿ ಸಹಶಿಕ್ಷಕರಾದ ಶ್ರೀ ಭಾಸ್ಕರ ಗೌಡ ಮತ್ತು ಶ್ರೀ ರಾಧಾಕೃಷ್ಣ ರೈ ಇವರ ನೇತೃತ್ವದಲ್ಲಿ 5ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತದಾನ ಪ್ರಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಶಾಲಾ ಶಿಕ್ಷಕ ವೃಂದ ಮತಗಟ್ಟೆ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು.
ತಾಳಮದ್ದಲೆ ಪುರಾಣ ಕತೆಯನ್ನು ಜನಸಾಮಾನ್ಯರಿಗೆ ತಲಪಿಸುವ ಅಪೂರ್ವ ಮಾಧ್ಯಮ – ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ.
ಯಕ್ಷಗಾನ ನಮ್ಮ ನಾಡಿನ ಪರಿಪೂರ್ಣ ಕಲಾಪ್ರಕಾರ. ತಾಳಮದ್ದಲೆ ಏಕಕಾಲದಲ್ಲಿ ಪುರಾಣದ ಕತೆಯನ್ನು ಜನ ಸಾಮಾನ್ಯರಿಗೆ ತಲಪಿಸುತ್ತಾ, ವ್ಯಾಖ್ಯಾನಿಸುತ್ತಾ, ಮುರಿದು ಕಟ್ಟುತ್ತಾ ಬಂದಿದೆ. ಅನೇಕ ವಿದ್ವಾಂಸರು ಇದನ್ನು ಶತಮಾನಗಳಿಂದ ಮಾಡುತ್ತಾ ಬಂದಿದ್ದಾರೆ. ಪ್ರಸ್ತುತ ಸಂಘರ್ಷದ ಸಂದರ್ಭದಲ್ಲಿ ಇದರ ಕೊಡುಗೆ ಅತ್ಯಂತ ಮಹತ್ವದ್ದು ಎಂದು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ಅವರು ಉಡುಪಿಯ ಯಕ್ಷಗಾನ ಕಲಾರಂಗವು ಜೂನ್ 23, 2024 ಭಾನುವಾರದಂದು ಸಂಸ್ಥೆಯ ಐವೈಸಿ ಸಭಾಭವನದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನುಗ್ರಹ ಸಂದೇಶ ನೀಡುತ್ತಿದ್ದರು.
ತಲಾ 20,000/- ನಗದು ಮತ್ತು ಪ್ರಶಸ್ತಿ ಪತ್ರಗಳನ್ನೊಳಗೊಂಡಿರುವ ಮಟ್ಟಿ ಮುರಲೀಧರ ರಾವ್ ಸ್ಮರಣಾರ್ಥ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಯನ್ನು ಜಬ್ಬಾರ್ ಸಮೊ ಅವರಿಗೂ, ಪೆರ್ಲ ಕೃಷ್ಣ ಭಟ್ ಸ್ಮರಣಾರ್ಥ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಯನ್ನು ಸೇರಾಜೆ ಸೀತಾರಾಮ ಭಟ್ ಅವರಿಗೂ ಪ್ರದಾನ ಮಾಡಲಾಯಿತು.
ಶಾರದಾ ವಿದ್ಯಾ ಸಂಸ್ಥೆಗಳ ಸಂಸ್ಥಾಪಕರಾದ ಡಾ. ಎಂ. ಬಿ. ಪುರಾಣ ಕರು ಅಧ್ಯಕ್ಷತೆ ವಹಿಸಿದ್ದರು. ವಿದ್ವಾನ್ ಪಂಜ ಭಾಸ್ಕರ ಭಟ್, ಡಾ. ಆದರ್ಶ ಹೆಬ್ಬಾರ್, ಶ್ರೀಮತಿ ರಜನಿ ಹೆಬ್ಬಾರ್ ಅಭ್ಯಾಗತರಾಗಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷರುಗಳಾದ ಎಸ್. ವಿ. ಭಟ್, ಪಿ. ಕಿಶನ್ ಹೆಗ್ಡೆ, ವಿ. ಜಿ. ಶೆಟ್ಟಿ ಉಪಸ್ಥಿತರಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು, ನಾರಾಯಣ ಎಂ. ಹೆಗಡೆ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಎಚ್. ಎನ್. ಶೃಂಗೇಶ್ವರ ವಂದಿಸಿದರು.
ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಪ್ರಶಸ್ತಿ ಪ್ರದಾನದ ಅನಂತರ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಸೀತಾಪಹಾರ’ ತಾಳಮದ್ದಲೆ ಪ್ರಸ್ತುತಗೊಂಡಿತು.
ಜುಲೈ 1ರಿಂದ ಜುಲೈ 7ರ ವರೆಗೆ ಪುತ್ತೂರಿನಲ್ಲಿ ಅಮೋಘ ತಾಳಮದ್ದಳೆ ಸಪ್ತಾಹ ಜರಗಲಿದೆ.
ಪುತ್ತೂರಿನ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಶ್ರೀ ಸುಕೃತೀಂದ್ರ ಕಲಾ ಮಂದಿರದಲ್ಲಿ ದಿನಾಂಕ 01.07.2024ರಿಂದ 07.07.2024ರ ವರೆಗೆ ಯಕ್ಷಗಾನ ಕಲಾರಸಿಕರಿಗೆ ಅಮೋಘ ತಾಳಮದ್ದಳೆಗಳ ರಸದೌತಣ ಸಿಗಲಿದೆ.
ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಆಶ್ರಯದಲ್ಲಿ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ ಇವರು ಪ್ರಸ್ತುತಪಡಿಸುವ, ಭಾಗವತ ಪದ್ಯಾಣ ಗಣಪತಿ ಭಟ್ ಸಂಸ್ಮರಣೆ, ಕುರಿಯ ಮತ್ತು ಪದ್ಯಾಣ ಪ್ರಶಸ್ತಿ ಪ್ರದಾನ ಮತ್ತು ಏಳು ದಿನಗಳಲ್ಲಿ ತಾಳಮದ್ದಳೆ ಕೂಟ ನಡೆಯಲಿದೆ.
ಈ ಬಾರಿಯ ಪದ್ಯಾಣ ಪ್ರಶಸ್ತಿಯನ್ನು ಭಾಗವತರಾದ ಕುರಿಯ ಗಣಪತಿ ಶಾಸ್ತ್ರಿಗಳಿಗೆ ಮತ್ತು ಕುರಿಯ ಪ್ರಶಸ್ತಿಯನ್ನು ಹಿಮ್ಮೇಳ ಕಲಾವಿದರಾದ ಶ್ರೀ ಸೀತಾರಾಮ ತೋಳ್ಪಾಡಿತ್ತಾಯರಿಗೆ ನೀಡಲಾಗುತ್ತದೆ.
ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಇವರು ಶ್ರೀ ಸತ್ಯಸಾಯಿ ಸೇವಾ ಸಮಿತಿ, ಪೆರ್ಲ ಇವರ ಸಹಭಾಗಿತ್ವದಲ್ಲಿ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರವನ್ನು ಆಯೋಜಿಸಿದ್ದಾರೆ.
ದಿನಾಂಕ 07.07.2024ನೇ ಆದಿತ್ಯವಾರದಂದು ಮಧ್ಯಾಹ್ನ ಘಂಟೆ 2.30 ರಿಂದ ಸಂಜೆ ಘಂಟೆ 5.30ರ ವರೆಗೆ ಈ ಶಿಬಿರ ಸಿರಿಬಾಗಿಲಿನಲ್ಲಿರುವ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ.
ಆಸಕ್ತರು ಇದರ ಪೂರ್ಣ ಪ್ರಯೋಜನ ಪಡೆದುಕೊಳ್ಳುವಂತೆ ಸಂಘಟಕರು ಮನವಿ ಮಾಡಿದ್ದಾರೆ.
ರೆಸಾರ್ಟ್‌ನಲ್ಲಿ ರೆಸಾರ್ಟ್‌ನಲ್ಲಿ ಆಯುರ್ವೇದ ಮಸಾಜ್ ವೇಳೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿದ್ದಾರೆ ಎಂದು ವಿದೇಶಿ ಮಹಿಳೆ ದೂರು ನೀಡಿದ್ದಾರೆ
ವಿದೇಶೀ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ರೆಸಾರ್ಟ್ ಉದ್ಯೋಗಿಯ ವಿರುದ್ಧ ದೂರು ದಾಖಲಾಗಿದೆ. ವಯನಾಡಿನ ತಿರುನೆಲ್ಲಿಯ ರೆಸಾರ್ಟ್‌ನಲ್ಲಿ ಈ ಘಟನೆ ನಡೆದಿದೆ.
ನೆದರ್ಲ್ಯಾಂಡ್ ಮೂಲದ ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಯನಾಡ್‌ಗೆ ಭೇಟಿ ನೀಡಲು ಬಂದಿದ್ದ 25 ವರ್ಷದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ. ಮಸಾಜ್ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸುವಂತೆ ಬಲವಂತಪಡಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಯಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದ್ದರೂ ದೂರಿನಲ್ಲಿ ನಮೂದಿಸಿರುವ ಮಾಹಿತಿ ಪೂರ್ಣವಾಗದ ಕಾರಣ ಪ್ರಕರಣವನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಹಿಳೆ ಡಿಸೆಂಬರ್ ಮೊದಲ ವಾರದಲ್ಲಿ ಆನ್‌ಲೈನ್ ಬುಕಿಂಗ್ ಮೂಲಕ ತಿರುನೆಲ್ಲಿಯ ರೆಸಾರ್ಟ್‌ಗೆ ತಲುಪಿದ್ದರು. ನೆದರ್ಲೆಂಡ್ಸ್‌ಗೆ ಮರಳಿದ ಬಳಿಕ ಆಕೆ ಎಡಿಜಿಪಿಗೆ ಇ-ಮೇಲ್ ಮೂಲಕ ದೂರು ಕಳುಹಿಸಿದ್ದಳು.
ಜೂನ್ 14 ರಂದು ದೂರು ದಾಖಲಿಸಲಾಗಿದೆ. ಭಾರತದಲ್ಲಿ ದೂರು ಸಲ್ಲಿಸುವ ವಿಧಾನಗಳು ತಿಳಿದಿಲ್ಲದ ಕಾರಣ ದೂರು ನೀಡಲು ವಿಳಂಬವಾಗಿದೆ ಎಂದು ಮಹಿಳೆ ಹೇಳಿದ್ದಾರೆ. ದೂರು ಸ್ವೀಕರಿಸಿ ವಾರ ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಲು ಮುಂದಾಗಿವೆ.
ಭಾರತದ ಮಾಜಿ ವೇಗಿ ಡೇವಿಡ್ ಜಾನ್ಸನ್ ಅವರು ಇಲ್ಲಿನ ನಾಲ್ಕನೇ ಮಹಡಿಯ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಿಂದ ಬಿದ್ದು ಗುರುವಾರ ಸಾವನ್ನಪ್ಪಿದ್ದಾರೆ ಮತ್ತು ಇದು ಆತ್ಮಹತ್ಯೆಯೇ ಎಂದು ಕಂಡುಹಿಡಿಯಲು ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತಕ್ಕಾಗಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಿರುವ ಜಾನ್ಸನ್ 52 ವರ್ಷ ವಯಸ್ಸಿನವರಾಗಿದ್ದರು ಮತ್ತು ಅವರ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ “52 ವರ್ಷದ ಡೇವಿಡ್ ಜೂಡ್ ಜಾನ್ಸನ್ ಕೊತ್ತನೂರಿನ ಕನಕ ಶ್ರೀ ಲೇಔಟ್‌ನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಿಂದ ಬಿದ್ದಿದ್ದಾರೆ ಎಂದು ನಂಬಲಾಗಿದೆ.
ಯುಡಿಆರ್ (ಅಸ್ವಾಭಾವಿಕ ಸಾವಿನ ವರದಿ ) ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ರಾಜ್ಯ ಪೊಲೀಸರ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮೃತದೇಹವನ್ನು ಶಂಪುರ ಮುಖ್ಯರಸ್ತೆಯಲ್ಲಿರುವ ಅಂಬೇಡ್ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಗಿದೆ.
ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಜಾನ್ಸನ್ ಕಳೆದ ವಾರ ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲಾಗಿದ್ದರು, ಸ್ವಲ್ಪ ಸಮಯದವರೆಗೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು.
“ಅವರ ಕುಟುಂಬದ ಯಾವುದೇ ಸದಸ್ಯರು ಯಾವುದೇ ಅನುಮಾನವನ್ನು ವ್ಯಕ್ತಪಡಿಸಿಲ್ಲ. ಇದು ‘ಸ್ವಯಂ ಪತನ’ ಮತ್ತು ಘಟನೆಗೆ ಯಾವುದೇ ಪ್ರತ್ಯಕ್ಷದರ್ಶಿಗಳಿಲ್ಲ. ಆತ್ಮಹತ್ಯೆಯ ಟಿಪ್ಪಣಿಯೂ ಇರಲಿಲ್ಲ,” ಎಂದು ಪೊಲೀಸರು ತಿಳಿಸಿದ್ದಾರೆ, ಆದಾಗ್ಯೂ ತನಿಖೆ ನಡೆಸಲಾಗುತ್ತಿದೆ.
ಜಾನ್ಸನ್ ನಗರದ ಡಿ-ಅಡಿಕ್ಷನ್ ಸೆಂಟರ್‌ಗೆ ಭೇಟಿ ನೀಡುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನಂತರ ಮಾಹಿತಿ ನೀಡಿದ್ದಾರೆ.
“ಅವರು ತಮ್ಮ ಅಪಾರ್ಟ್‌ಮೆಂಟ್ ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದಿದ್ದಾರೆ ಎಂದು ನಮಗೆ ತಿಳಿಸಲಾಯಿತು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು” ಎಂದು ಕೆಎಸ್‌ಸಿಎ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.
ಜಾನ್ಸನ್ ಸ್ವಲ್ಪ ಸ್ಲಿಂಗ್ ಆಕ್ಷನ್‌ನಿಂದ ತನ್ನ ವೇಗಕ್ಕೆ ಹೆಸರುವಾಸಿಯಾಗಿದ್ದರು, 33 ಪಂದ್ಯಗಳಿಂದ 125 ಪ್ರಥಮ ದರ್ಜೆ ವಿಕೆಟ್ ಮತ್ತು 41 ಲಿಸ್ಟ್ ಎ ಸ್ಕೇಲ್‌ಪ್‌ಗಳನ್ನು ಪಡೆದರು. ರಣಜಿ ಟ್ರೋಫಿಯಲ್ಲಿ ಕೇರಳದ ವಿರುದ್ಧ 152ಕ್ಕೆ 10 ವಿಕೆಟ್‌ಗಳನ್ನು ಗಳಿಸಿದ್ದು, ದೇಶೀಯ ಸರ್ಕ್ಯೂಟ್‌ನಲ್ಲಿ ಅವರ ಅತ್ಯುತ್ತಮ ಪ್ರಯತ್ನವಾಗಿತ್ತು ಮತ್ತು ಇದು ಅವರನ್ನು ರಾಷ್ಟ್ರೀಯ ತಂಡಕ್ಕೆ ತಂದಿತು.
ಅವರ ಅವಿಭಾಜ್ಯ ಅವಧಿಯಲ್ಲಿ, ಎರಡು ಟೆಸ್ಟ್‌ಗಳು ಮತ್ತು 39 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಜಾನ್ಸನ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್ ಮತ್ತು ದೊಡ್ಡ ಗಣೇಶ್ ಅವರನ್ನೂ ಒಳಗೊಂಡಿರುವ ಅಸಾಧಾರಣ ಕರ್ನಾಟಕ ಬೌಲಿಂಗ್ ಘಟಕದ ಸದಸ್ಯರಾಗಿದ್ದರು.
“ವಾಸ್ತವವಾಗಿ, ರಾಹುಲ್ ದ್ರಾವಿಡ್ ಸೇರಿದಂತೆ ರಾಜ್ಯದ ಆರು ಸದಸ್ಯರು ಒಂದೇ ಸಮಯದಲ್ಲಿ ಭಾರತ ತಂಡದಲ್ಲಿದ್ದರು. ಬೇರೆ ಯಾವುದೇ ರಾಜ್ಯವು ಈ ಸಾಧನೆಯನ್ನು ಮಾಡಿದೆ ಎಂದು ನನಗೆ ಅನುಮಾನವಿದೆ” ಎಂದು ದೊಡ್ಡ ಗಣೇಶ್ ಹೇಳಿದರು. ಲೆಜೆಂಡರಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ತಮ್ಮ ಒಂದು ಕಾಲದ ಸಹ ಆಟಗಾರನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ದುಃಖತಪ್ತ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.
ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2022-23 ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿಯು ಪ್ರಕಟಗೊಂಡಿದ್ದು, ಯಕ್ಷಮಂಗಳ ಪ್ರಶಸ್ತಿಗೆ ಮಕ್ಕಳ ಮೇಳ ಸಾಲಿಗ್ರಾಮದ ಸಂಚಾಲಕರು, ಹಿರಿಯ ಯಕ್ಷಗಾನ ಕಲಾವಿದ, ಸಂಘಟಕ ಶ್ರೀಧರ ಹಂದೆ ಹಾಗೂ ತೆಂಕು ಮತ್ತು ಬಡಗುತಿಟ್ಟಿನ ಹಿರಿಯ ಸ್ತ್ರೀವೇಷ ಕಲಾವಿದ ಎಂ.ಕೆ.ರಮೇಶ್ ಆಚಾರ್ಯ ಅವರು ಆಯ್ಕೆಯಾಗಿದ್ದಾರೆ.
ಯಕ್ಷಮಂಗಳ ಕೃತಿ ಪ್ರಶಸ್ತಿಗೆ ರಾಧಾಕೃಷ್ಣ ಕಲ್ಚಾರ್ ಅವರ ‘ಪೀಠಿಕಾ ಪ್ರಕರಣ’ ಕೃತಿಯು ಆಯ್ಕೆಯಾಗಿದೆ. ಯಕ್ಷಮಂಗಳ ಪ್ರಶಸ್ತಿಯು 25,000 ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ಸನ್ಮಾನಗಳನ್ನೊಳಗೊಂಡಿದೆ. ಯಕ್ಷಮಂಗಳ ಕೃತಿ ಪ್ರಶಸ್ತಿಯು 10,000 ನಗದು, ಪ್ರಶಸ್ತಿ, ಸ್ಮರಣಿಕೆಗಳನ್ನು ಒಳಗೊಂಡಿದೆ.
ಜಾನಪದ ವಿದ್ವಾಂಸರಾದ ಡಾ.ಕೆ.ಚಿನ್ನಪ್ಪ ಗೌಡ ಅವರ ನೇತೃತ್ವದಲ್ಲಿ ಪ್ರೊ.ಪಾದೆಕಲ್ಲು ವಿಷ್ಣುಭಟ್ , ಯಕ್ಷಗಾನ ಸಂಘಟಕರ ಮುರಲೀ ಕಡೇಕಾರ್ ಹಾಗೂ ಕೇಂದ್ರದ ನಿರ್ದೇಶಕರಾದ ಡಾ.ಧನಂಜಯ ಕುಂಬ್ಳೆ ಅವರನ್ನು ಒಳಗೊಂಡಿರುವ ಆಯ್ಕೆ ಸಮಿತಿಯ ಸಭೆಯಲ್ಲಿ ಈ ಹೆಸರುಗಳನ್ನು ಸರ್ವಾನುಮತದಿಂದ ಶಿಫಾರಸು ಮಾಡಲಾಯಿತು.
ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಯಕ್ಷಮಂಗಳ ಪ್ರಶಸ್ತಿ ಪ್ರದಾನ ಮಾಡಲಾಗುವುದು ಮಂಗಳೂರು ವಿವಿ ಕುಲಸಚಿವ ರಾಜು ಮೊಗವೀರ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿ ವಿಜೇತರ ಪರಿಚಯ
ಶ್ರೀಧರ ಹಂದೆ: ಬಡಗುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ಹಿರಿಯ ಕಲಾವಿದರಾಗಿ, ಯಕ್ಷಗಾನ ಸಂಘಟಕರಾಗಿ ಗುರುತಿಸಿರುವ ಶ್ರೀಧರ ಹಂದೆಯವರು ಮಕ್ಕಳ ಯಕ್ಷಗಾನ ಮೇಳವೆಂಬ ಪರಿಕಲ್ಪನೆಯನ್ನು ಮೊಟ್ಟ ಮೊದಲ ಬಾರಿ ಸಾಕಾರಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಉಪನ್ಯಾಸಕರಾಗಿ, ಮುಖ್ಯೋಪಧ್ಯಾಯರಾಗಿ ಸೇವೆ ಸಲ್ಲಿಸಿದ ಇವರು 1991ರಲ್ಲಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮರವರಿಂದ ಅತ್ಯುತ್ತಮ ಶಿಕ್ಷಕ ರಾಷ್ಟ್ರಪತಿಯನ್ನು ಪಡೆದಿರುತ್ತಾರೆ. ಮಕ್ಕಳಿಗೆ ಯಕ್ಷಕಲೆಯನ್ನು ಶಾಸ್ತ್ರೀಯವಾಗಿ ತರಬೇತಿ ನೀಡಿದ್ದಾರೆ. ಭಾರತ ಮಾತ್ರವಲ್ಲ ಅಮೇರಿಕಾ, ಬೆಹರೈನ್, ಲಂಡನ್, ಮೆಂಚೆಸ್ಟರ್ ಮುಂತಾದೆಡೆ ಪ್ರದರ್ಶನ ನೀಡುವ ಮೂಲಕ ಯಕ್ಷಗಾನವನ್ನು ವಿಶ್ವವ್ಯಾಪಿಗೊಳಿಸಲು ಶ್ರಮಿಸಿದವರು.
ಕಳೆದ 43 ವರ್ಷಗಳಲ್ಲಿ 2000ಕ್ಕೂ ಮಿಕ್ಕಿ ಮಕ್ಕಳ ಯಕ್ಷ ಪ್ರದರ್ಶನ ನೀಡಿದ ಕೀರ್ತಿ ಇವರದ್ದು. ಯಕ್ಷಗಾನ ಭಾಗವತ, ಗಮಕಿ, ಕವಿ, ನಟ-ನಿರ್ದೆಶಕ, ನಾಟಕಕಾರ, ಸಂಘಟಕನಾಗಿಯೂ ಗುರುತಿಸಿಕೊಂಡಿರುವ ಇವರು ಯಕ್ಷಗಾನ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ.
ಎಂ.ಕೆ.ರಮೇಶ್ ಆಚಾರ್ಯ:
ತೆಂಕು ಹಾಗೂ ಬಡಗುತಿಟ್ಟು ಯಕ್ಷಗಾನ ರಂಗದ ಸರ್ವ ಸಮರ್ಥ ಸ್ತ್ರೀವೇಷ ಕಲಾವಿದರಾಗಿರುವ ಎಂ.ಕೆ.ರಮೇಶ್ ಆಚಾರ್ಯ ಅವರು ಯಕ್ಷಗಾನ ತಾಳಮದ್ದಳೆಯ ಅರ್ಥಧಾರಿ, ಯಕ್ಷಗುರು, ಪ್ರಸಂಗಕರ್ತರಾಗಿಯೂ ಗುರುತಿಸಿದ್ದಾರೆ.
ಸಾಂಪ್ರದಾಯಿಕ ನೆಲೆಯಲ್ಲಿಯೇ ಪೌರಾಣಿಕ ಪಾತ್ರಗಳನ್ನು ಯಕ್ಷಗಾನ ರಂಗಭೂಮಿಯಲ್ಲಿ ಪ್ರದರ್ಶಿಸುವ. ಎಂ.ಕೆ.ಆಚಾರ್ಯ ಅವರು ಸ್ತ್ರೀಪಾತ್ರಕೊಪ್ಪುವ ರೂಪ, ಮಧುರ ಕಂಠ, ಆಂಗಿಕ ಲಾಲಿತ್ಯ, ಪ್ರಗಲ್ಭ ಪಾಂಡಿತ್ಯ, ಸಶಕ್ತ ರಂಗನಡೆಯೊಂದಿಗೆ ಸ್ತ್ರೀಪಾತ್ರಧಾರಿಯಾಗಿ ಜನಮೆಚ್ಚುಗೆ ಗಳಿಸಿದ್ದರು.
ಮಂದಾರ್ತಿ, ಧರ್ಮಸ್ಥಳ, ಸುರತ್ಕಲ್, ಸಾಲಿಗ್ರಾಮ, ಸೌಕೂರು, ಪೆರ್ಡೂರು, ಮಂಗಳಾದೇವಿ ಮೇಳಗಳಲ್ಲಿ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಇವರ ಚಂದ್ರಮತಿ, ದ್ರೌಪದಿ, ರುಕ್ಮಿಣಿ, ಶಾಂತಲೆ, ಸೀತೆ, ಮೇನಕೆ, ಸೈರೇಂದ್ರಿ ಮೊದಲಾದ ಸ್ತ್ರೀಪಾತ್ರಗಳು ಕಲಾರಸಿಕರ ಮನೆಗೆದ್ದಿವೆ. ಉತ್ತಮ ಅರ್ಥಧಾರಿಯಾಗಿ, ಪ್ರಸಂಗಕರ್ತರಾಗಿಯೂ ಗುರುತಿಸಿಕೊಂಡಿರುವ ಇವರು ಅನೇಕ ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣವನ್ನೂ ನೀಡಿ ಯಕ್ಷಗಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಕಲಾವಿದರಾಗಿದ್ದಾರೆ.
‘ಪೀಠಿಕಾ ಪ್ರಕರಣ’ ಗ್ರಂಥ:
ಖ್ಯಾತ ಅರ್ಥಧಾರಿ ಹಾಗೂ ಲೇಖಕರಾಗಿರುವ ರಾಧಾಕೃಷ್ಣ ಕಲ್ಚಾರ್ ಅವರು ಈಗಾಗಲೇ ಪರಕಾಯ ಪ್ರವೇಶ, ಉಲಿಯ ಉಯ್ಯಾಲೆ, ಅರ್ಥಾಲೋಕ ಮೊದಲಾದ ಕೃತಿಗಳ ಮೂಲಕ ಪ್ರಸಿದ್ಧರಾಗಿದ್ದು ‘ಪೀಠಿಕಾ ಪ್ರಕರಣ’ ಇವರ ಇತ್ತೀಚೆಗಿನ ಒಂದು ಅಪೂರ್ವ ಕೃತಿಯಾಗಿದೆ.
ಇದರಲ್ಲಿ ಮೂವತ್ತೆಂಟು ಪ್ರಸಂಗಗಲ್ಲಿ ಬರುವ ಆಯ್ದ ನೂರನಲ್ವತ್ತು ಪಾತ್ರಗಳ ಈ ಪೀಠಿಕೆ ಯಕ್ಷಗಾನ ಅರ್ಥಧಾರಿಗಳಿಗೆ ಮತ್ತು ವೇಷಧಾರಿಗಳಿಗೆ ಕೈ ದೀವಿಗೆಯಾಗಿದೆ. ಯಕ್ಷಗಾನ ಅರ್ಥಗಾರಿಕೆಯ ಮೌಲಿಕ ಸಂಗತಿಗಳನ್ನು, ವಿಶಿಷ್ಟ ಶಕ್ತಿ ಸಾಮರ್ಥ್ಯವನ್ನು ಕಲ್ಚಾರ್ ಅವರು ಈ ಪೀಠಿಕೆಗಳಲ್ಲಿ ನಿರೂಪಿಸಿದ್ದಾರೆ.
‘ಕೂಡುಮನೆ’ (ಕಿರು ಕಾದಂಬರಿ) ಎಂಬ ಈ ಕೃತಿಯು ಮೊದಲು ಪ್ರಕಟಗೊಂಡು ಓದುಗರ ಕೈ ಸೇರಿದ್ದು 1994ರಲ್ಲಿ. 2023ರಲ್ಲಿ ಈ ಪುಸ್ತಕವು ಮರು ಮುದ್ರಣಗೊಂಡು ಸಾಹಿತ್ಯಾಸಕ್ತರಿಗೆ ದೊರಕಿದೆ ಎಂಬುದು ಸಂತೋಷದ ವಿಚಾರ.
ನಿವೃತ್ತ ಉಪಾನ್ಯಾಸಕರೂ ಲೇಖಕರೂ, ತಾಳಮದ್ದಳೆ ಕ್ಷೇತ್ರದ ಹಿರಿಯ ಅರ್ಥಧಾರಿಗಳೂ ಆಗಿರುವ ಶ್ರೀ ರಾಧಾಕೃಷ್ಣ ಕಲ್ಚಾರ್ ಅವರು ಬರೆದ ಹೊತ್ತಗೆಯಿದು. ಕೂಡುಮನೆ ಎಂಬ ಈ ಕಿರು ಕಾದಂಬರಿಯು ಇಪ್ಪತ್ತೆಂಟು ವರ್ಷಗಳ ಹಿಂದೆ ಅನಂತ ಪ್ರಕಾಶ ಸಂಸ್ಥೆಯು ರಾಜ್ಯಮಟ್ಟದಲ್ಲಿ ಏರ್ಪಡಿಸಿದ ಕಾದಂಬರಿ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗಳಿಸಿತ್ತು.
ಮೊದಲ ಮುದ್ರಣದ ಪ್ರತಿಗಳೆಲ್ಲಾ ಬಹುಬೇಗನೆ ಓದುಗರ ಕೈಸೇರಿತ್ತು. ಸಾಹಿತ್ಯಾಸಕ್ತರ ಅಪೇಕ್ಷೆಯಂತೆ ಈಗ ಮರು ಮುದ್ರಣಗೊಂಡಿದೆ. ‘ವಿಜ್ಞಾಪನೆ’ ಎಂಬ ಶೀರ್ಷಿಕೆಯಡಿಯಲ್ಲಿ ಲೇಖಕ ಶ್ರೀ ರಾಧಾಕೃಷ್ಣ ಕಲ್ಚಾರ್ ಇವರು ತಮ್ಮ ಅನಿಸಿಕೆಗಳನ್ನು ತಿಳಿಸಿರುತ್ತಾರೆ.
‘ಕೂಡುಮನೆ’ಲಿ ನಾಂದಿ’ ಎಂಬ ಶೀರ್ಷಿಕೆಯಡಿಯಲ್ಲಿ ಶ್ರೀ ಮುರಳೀಧರ ಉಪಾಧ್ಯ ಹಿರಿಯಡಕ ಅವರು ಮುನ್ನುಡಿಯನ್ನು ಬರೆದಿರುತ್ತಾರೆ. ಪ್ರಕಾಶಕ ಶ್ರೀ ಸಚ್ಚಿದಾನಂದ ಉಡುಪರು ತಮ್ಮ ಅನಿಸಿಕೆಗಳನ್ನು ತಿಳಿಸಿರುತ್ತಾರೆ.
ಇದು ಒಟ್ಟು ಎಪ್ಪತ್ತು ಪುಟಗಳನ್ನು ಹೊಂದಿದ ಕೃತಿ. ಈ ಪುಸ್ತಕದ ಮುದ್ರಕರು ಅನಂತ ಪ್ರಕಾಶ ಮುದ್ರಣಾಲಯ ಕಿನ್ನಿಗೋಳಿ. ಬೆಲೆ ರೂಪಾಯಿ ಎಪ್ಪತ್ತು ಮಾತ್ರ. ಮುಖಪುಟ ವಿನ್ಯಾಸಕರು ಶ್ರೀ ದಿನೇಶ ಹೊಳ್ಳ ಮಂಗಳೂರು. ಈ ಕೃತಿಯು ಐದು ಅಧ್ಯಾಯವನ್ನು ಒಳಗೊಂಡಿದೆ. ಲೇಖಾಕರಿಗೆ ಯಕ್ಷದೀಪ ವತಿಯಿಂದ ಅಭಿನಂದನೆಗಳು.
ಶ್ರೀ ರಾಧಾಕೃಷ್ಣ ಕಲ್ಚಾರ್ ಅವರ ಇತರ ಕೃತಿಗಳು.
೧. ಅವರವರ ದಾರಿ ಮತ್ತು ಇತರ ಕಥೆಗಳು (ಕಥಾ ಸಂಕಲನ)
೨. ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ (ವ್ಯಕ್ತಿ ಚಿತ್ರ)
೩. ಪರಕಾಯ ಪ್ರವೇಶ (ಪುರಾಣ ಪಾತ್ರ ಕಥನ)
೪. ಪರಕಾಯ ಪ್ರವೇಶ – ಭಾಗ ೨
೫. ಆ ಲೋಚನ (ಅಂಕಣ ಲೇಖನಗಳು)
೬. ಅರ್ಥಾಲೋಕ (ತಾಳಮದ್ದಳೆಯೆಂಬ ರಂಗಭೂಮಿಯ ಕುರಿತು)
೭. ಉಲಿಯ ಉಯ್ಯಾಲೆ (ತಾಳಮದ್ದಳೆಯ ಅನುಭವ ಕಥನ)
೮. ಪೀಠಿಕಾ ಪ್ರಕರಣ (ಪುರಾಣ ಪಾತ್ರಗಳ ಆತ್ಮನಿವೇದನೆ)
೯. ತಲ್ಲಣಿಸದಿರು ಮನವೆ (ನೆಮ್ಮದಿಯ ಓದಿಗಾಗಿ ಲೇಖನಗಳು)
ರಾಧಾಕೃಷ್ಣ ಕಲ್ಚಾರ್ , ‘ನಿವೇಶ’, 4/27, ಶಿವಾಜಿನಗರ, ಅಂಚೆ ವಿಟ್ಲ, – 54143, ಬಂಟ್ವಾಳ ತಾಲೂಕು, ದ.ಕ, ಮೊಬೈಲ್ : 9449086653