ಈಗಿನ ಆಧುನಿಕ ಯುಗದಲ್ಲಿ ಜನರನ್ನು ಮರುಳು ಮಾಡೋದು ಅಷ್ಟು ಸುಲಭವಲ್ಲ. ಈಗಿನ ಜನರು ಬುದ್ಧಿವಂತರಿದ್ದ ಕಾರಣ ಅವರನ್ನು ಆಕರ್ಷಿಸಲು ಮೊದಲಿನಷ್ಟು ಸುಲಭವಲ್ಲ ಎಂದು ಸಮೀಕ್ಷೆಗಳಿಂದ ತಿಳಿದುಬಂದಿದೆ.
ಇದು ಜಾಹೀರಾತುಗಳ ಯುಗವೆಂದೇ ಪರಿಗಣಿತವಾಗಿದೆ. ವ್ಯಾಪಾರಿಗಳು ಅಥವಾ ಉದ್ದಿಮೆದಾರರು ಜನರನ್ನು ಆಕರ್ಷಿಸಲು ಬಹಳಷ್ಟು ಪಾಡು ಪಡಬೇಕಾಗುತ್ತದೆ. ಹೇರಳವಾದ ಜಾಹೀರಾತುಗಳು ನಮಗೆ ಕಾಣಸಿಗುತ್ತವೆ. ಅದು ವಾರ್ತಾ ಮಾಧ್ಯಮಗಳಲ್ಲಿ ಆಗಿರಬಹುದು ಅಥವಾ ದೃಶ್ಯಮಾಧ್ಯಮಗಳಲ್ಲೂ ಆಗಿರಬಹುದು. ಒಂದು ನಿಮಿಷ ಕಾರ್ಯಕ್ರಮವನ್ನು ನೀಡಿ ಎರಡು ನಿಮಿಷ ಜಾಹೀರಾತು ಕೊಡುವುದೇ ಕಂಡುಬರುತ್ತದೆ. ಹೇಗೆ ಬೇಕಾದರೂ ಸರಿ, ಜನರನ್ನು ಆಕರ್ಷಣೆ ಮಾಡುವುದು ಈಗ ಮುಖ್ಯ ಉದ್ದೇಶವಾಗಿರುತ್ತದೆ.
ಜಾಹೀರಾತುಗಳ ವಿಷಯ ಬಂದಾಗ ನಾವು ವಿಭಿನ್ನವಾದ ಜಾಹೀರಾತುಗಳನ್ನು ವೀಕ್ಷಿಸಬಹುದು ಅಥವಾ ಓದಬಹುದು. ಯಾವುದೇ ಮಾಧ್ಯಮಗಳಲ್ಲಿ ಆಗಿರಲಿ ಸತ್ಯದ ತಲೆಯ ಮೇಲೆ ಹೊಡೆದಂತೆ ಎಂಬ ಮಾತಿನಂತೆ ಕೆಲವು ಜಾಹೀರಾತುಗಳು ನಮಗೆ ಕಾಣಸಿಗುತ್ತವೆ. ಜಾಹೀರಾತುಗಳು ಕೆಲವೊಮ್ಮೆ ಮುಖ್ಯ ಕಾರ್ಯಕ್ರಮಗಳಿಗಿಂತಲೂ ಆಕರ್ಷಕವಾಗಿರುತ್ತದೆ. ಕಾರ್ಯಕ್ರಮಗಳನ್ನು ನೋಡುವ ಬದಲು ಜಾಹೀರಾತುಗಳನ್ನೇ ನೋಡುವ ಹಲವಾರು ಮಂದಿ ನಮಗೆ ಕಾಣಸಿಗುತ್ತಾರೆ.
ಇಂತಹ ಹತ್ತು ಹಲವು ಜಾಹೀರಾತುಗಳ ನಡುವೆ ಉಚಿತ ಜಾಹೀರಾತುಗಳು ನಮ್ಮ ಗಮನಸೆಳೆಯುತ್ತವೆ. ಮೊದಲಿಂದಲೂ ಜನರಿಗೆ ಯಾವುದಾದರೂ ಒಂದು ವಸ್ತು ಉಚಿತ ಸಿಗುತ್ತದೆ ಎನ್ನುವುದರಲ್ಲಿ ಬಹಳವಾದ ಆಸಕ್ತಿ. ವಸ್ತುವಿನ ಗುಣಮಟ್ಟ ಹೇಗೇ ಇರಲಿ ಒಬ್ಬ ವ್ಯಾಪಾರಿ ನಿಮಗೆ ಉಚಿತ ಕೊಡುತ್ತಾನೆ ಎಂದರೆ ಅದು ನಿಜವಾದ ಒಂದು ಆಕರ್ಷಣೆ ಎಂದೇ ಜನ ಭಾವಿಸುತ್ತಾರೆ. ಆದ್ದರಿಂದ ಒಂದಕ್ಕೊಂದು ಫ್ರೀ (ಒಂದಕ್ಕೆ ಒಂದು ಉಚಿತ) ಎನ್ನುವುದರಲ್ಲಿ, ಮೊದಲಿನ ಒಂದರಲ್ಲಿ ಉಚಿತದ ಬೆಲೆಯು ಕೂಡಾ ಅಡಗಿರುತ್ತದೆ ಎಂದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಆದ್ದರಿಂದ ಎಲ್ಲರೂ ಉಚಿತದ ಬೆನ್ನುಬೀಳುತ್ತಾರೆ. ಈ ಉಚಿತದ ಆಕರ್ಷಣೆ ಇತ್ತೀಚೆಗೆ ಹಲವಾರು ವರ್ಷಗಳಿಂದ ನಡೆದು ಬಂದದ್ದು. ಒಂದಕ್ಕೆ ಒಂದು ಉಚಿತ. ಇದು ಕೆಲವು ಕಂಪನಿಗಳ ಕೆಲವು ವ್ಯಾಪಾರಿಗಳ ಧ್ಯೇಯವಾಕ್ಯದಂತೆ ರಾರಾಜಿಸುತ್ತಿದೆ. ಆದ್ದರಿಂದ ಉಚಿತವನ್ನು ನಂಬಿಹೋಗುವ ಜನರು ಬೇರೇನನ್ನೂ ಯೋಚಿಸುವುದಿಲ್ಲ.
ಇಂದಿನ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಸಂದೇಶಗಳು ಹೇರಳವಾಗಿ ಕಾಣಸಿಗುತ್ತದೆ. ಈ ಸಂದೇಶವನ್ನು ಹತ್ತು ಜನರಿಗೆ ಹಂಚಿದಾಗ ನಿಮಗೆ ಇಂತಿಷ್ಟು ಉಚಿತವಾಗಿ ಇಂಟರ್ನೆಟ್ (ಅಂತರ್ಜಾಲ) ಡಾಟಾ ಫ್ರೀ ಎಂದೂ, ಇಷ್ಟು ಜಿಬಿ ಡಾಟ ಫ್ರೀ ಎಂದೂ ನಿಮಗೆ ಸಂದೇಶಗಳು ಬರುತ್ತದೆ. ಅಥವಾ ಇದನ್ನ ಇಂತಿಷ್ಟು ಜನರಿಗೆ ಹಂಚಿದಾಗ ಒಂದು ಸಂದೇಶಕ್ಕೆ ಹತ್ತು ಪೈಸೆಯಂತೆ ಎಂಬ ನಿಖರವಲ್ಲದ, ಸುಳ್ಳಾದ ಸಂದೇಶಗಳ ಹೇರಳವಾಗಿ ಬರುತ್ತವೆ. ಯಾರೋ ಒಂದು ವಿಕೃತಮನಸ್ಕರು ಇಂತಹ ಸಂದೇಶಗಳನ್ನು ಹರಿಯಬಿಟ್ಟು ಚಂದ ನೋಡುತ್ತಾ ಇರುತ್ತಾರೆ. ಇದನ್ನು ನಂಬಿದವ ಮೂರ್ಖ ಎಂದು ಹೇಳದೆ ವಿಧಿಯಿಲ್ಲ.
ದಿನವೂ ಬೆಳಿಗ್ಗೆ ಪೇಪರ್ ಹಾಕುವ ಹುಡುಗ ಹೇಳಿದ ವಿಷಯ ಏನೆಂದರೆ- ಸಾಧಾರಣವಾಗಿ ಕೆಲವೊಂದು ಹೊಸ ವಾರ್ತಾ ಪತ್ರಿಕೆಗಳು ಪ್ರಾರಂಭವಾಗುವಾಗ ಒಂದು ವಾರದಿಂದ ಹದಿನೈದು ದಿನಗಳವರೆಗೆ ಉಚಿತವಾಗಿ ಕೆಲವು ಪ್ರದೇಶಗಳಲ್ಲಿ ಮನೆಮನೆಗೆ ಪೇಪರ್ ಹಾಕಲು ಆದೇಶ ಮಾಡಿರುತ್ತಾರೆ. ಆದರೆ ಈ ಒಂದು ತಿಂಗಳ ಅವಧಿ ಅಥವಾ ಹದಿನೈದು ದಿನಗಳ ಅವಧಿ ಮುಗಿದ ನಂತರ ಪುನಃ ಪ್ರತಿನಿಧಿಗಳು ಹೋದಾಗ “ನೀವು ಹದಿನೈದು ದಿನಗಳ ಉಚಿತ ಕೊಟ್ಟಿದ್ದೀರಿ. ಇನ್ನೂ ಹದಿನೈದು ದಿನಗಳು ಮುಂದುವರಿಸಬಹುದಿತ್ತಲ್ಲ” ಎಂಬ ಉಚಿತ ಸಲಹೆ ಗಳು ಕೆಲವರಿಂದ ಬಂದದ್ದು ಉಂಟಂತೆ. ಸಾಧಾರಣವಾಗಿ ಒಂದು ಪತ್ರಿಕೆಯ ಮುದ್ರಣ ವೆಚ್ಚ ಅದರ ಮುಖಬೆಲೆಗಿಂತ ಹೆಚ್ಚಿರುತ್ತದೆ. ಮುದ್ರಣ ವೆಚ್ಚ ಮತ್ತು ಅದರ ಇತರ ಖರ್ಚುಗಳು, ಸಂಬಳ ಹಾಗೂ ಎಲ್ಲಾ ಖರ್ಚುಗಳು ಸೇರಿದಾಗ ಅದರ ಮುಖಬೆಲೆಗಿಂತ ಜಾಸ್ತಿ ಹೆಚ್ಚಾಗಿರುತ್ತದೆ. ಆದರೆ ಪತ್ರಿಕೆಗಳ ಮಾಲೀಕರು ಈ ನಷ್ಟವನ್ನು ಜಾಹೀರಾತುಗಳಲ್ಲಿ ತುಂಬಿಕೊಳ್ಳುತ್ತಾರೆ. ಸಾಮಾನ್ಯ ಜನರಲ್ಲಿ ಇಂತಹ ತಿಳುವಳಿಕೆಗಳು ಕಡಿಮೆ ಇರುತ್ತದೆ. ಅವರು ಉಚಿತ ಕೊಡುತ್ತಾರೆ ಎಂದು ಸಂತೋಷಗೊಳ್ಳುತ್ತಾರೆ, ಉಚಿತ ಕೊಡುವುದನ್ನು ನಿಲ್ಲಿಸಿದರು ಎಂದಾಗ ಬೇಸರಪಟ್ಟುಕೊಳ್ಳುತ್ತಾರೆ. ಅವರಿಗೆ ಇದರ ಪೂರ್ವಾಪರಗಳು, ಹಿನ್ನೆಲೆಗಳು ಏನು ತಿಳಿದಿರುವುದಿಲ್ಲ. ಆದ್ದರಿಂದ ಇದಕ್ಕೆ ಅವರನ್ನು ದೂರುವುದು ಅಷ್ಟು ಸಮಂಜಸ ಎನಿಸುವುದಿಲ್ಲ.
ಅಲ್ಲದೆ ಕೆಲವೊಂದು ಬಾರಿ ಅನಿವಾರ್ಯ ಸಂದರ್ಭಗಳು ಎದುರಾಗುತ್ತವೆ. ಯಾಕೆಂದರೆ ಹೇಗೆ ಸಾಹಿತಿಗಳು ಅಥವಾ ಲೇಖಕರು ಶ್ರೀಮಂತರಲ್ಲವೋ ಹಾಗೆಯೇ ಓದುಗರು ಕೂಡ ಶ್ರೀಮಂತರಾಗಿರುವುದಿಲ್ಲ. ಸಾಹಿತ್ಯಾಸಕ್ತರಿಗೆ ಓದಬೇಕೆಂದು ಆಸೆ ಇರುತ್ತದೆ. ಆದರೆ ಬೆಲೆ ಜಾಸ್ತಿ ಎಂದೆನಿಸಿದಾಗ ಪುಸ್ತಕಗಳನ್ನು ಖರೀದಿಸುವ ಶಕ್ತಿ, ಆರ್ಥಿಕ ದೃಢತೆ ಎಲ್ಲರಲ್ಲಿಯೂ ಇರುವುದಿಲ್ಲ. ಹೇಳಲು ಸುಲಭವಾಗಿ ಹೇಳಬಹುದು “ಖರೀದಿಸಿ ಓದಿ, ಕೊಂಡು ಓದಿ” ಎಂಬುದಾಗಿ. ಆದರೆ ನಾವು ಓದುಗನ ಶಕ್ತಿಯನ್ನು ಪರಿಗಣಿಸಬೇಕಾಗುತ್ತದೆ. ಗ್ರಂಥಾಲಯಗಳಲ್ಲಿಯೂ ಹೋಗಿ ಓದುತ್ತಾರೆ. ಅವರಿಗೆಲ್ಲ ಕೆಲವೊಮ್ಮೆ ನೀವು ಉಚಿತವಾಗಿ ಕೊಟ್ಟರೆ ಬಹಳ ಸಂತೋಷವಾಗುತ್ತದೆ. ಹಾಗೆಂದವರು ಉಚಿತವಾಗಿ ನಿಮ್ಮಲ್ಲಿ ಕೇಳುವುದಿಲ್ಲ. ಆದರೂ ಕೆಲವೊಮ್ಮೆ ಅವರ ಇಚ್ಛೆ ಅರಿತು ಅದನ್ನು ನೀಡಿದರೆ ಅವರು ಬಹಳ ಖುಷಿಪಟ್ಟುಕೊಳ್ಳುತ್ತಾರೆ. ಇಂತಹ ಸಂದರ್ಭಗಳು ವಿರಳ. ಆದರೂ ಇದೆಲ್ಲವೂ ಆಗಾಗ ಲೇಖಕನಿಗೆ ಎದುರಾಗುವ ಸಂದರ್ಭಗಳಾಗಿವೆ.
ಯಕ್ಷಗಾನದ ಓದುಗರು, ಯಕ್ಷಗಾನ ಪತ್ರಿಕೆಗಳನ್ನು ಅಥವಾ ಯಕ್ಷಗಾನವನ್ನು ಆಸ್ವಾದಿಸುವವರು ಬಹಳ ಸುಸಂಪನ್ನರು ಎನ್ನದೇ ಸಂತೋಷವಾಗುತ್ತದೆ. ಯಾಕೆಂದರೆ ಅನುಭವಗಳೇ ಅದಕ್ಕೆ ಸಾಕ್ಷಿ. ಯಕ್ಷಗಾನ ಪತ್ರಿಕೆಗಳ ಪ್ರಸರಣ ಸಂಖ್ಯೆ ಉಳಿದ ಪತ್ರಿಕೆಗಳಿಂದ ತುಂಬ ಕಡಿಮೆ ಇರುತ್ತದೆ ಎಂದು ಎಲ್ಲರಿಗೂ ತಿಳಿದ ವಿಚಾರ. ಎಲ್ಲರೂ ಹೇಳುವಾಗ ದೊಡ್ಡ ದೊಡ್ಡ ಸಂಖ್ಯೆಗಳನ್ನು ಹೇಳಬಹುದು. ಆದರೆ ಪ್ರಜ್ಞಾವಂತ ಜನರಿಗೆ ಅದರ, ಆ ಹೇಳಿಕೆಯ ಆಳ ಅಗಲದ ಅರಿವಿರುತ್ತದೆ.
ಯಕ್ಷಗಾನದ ನಿಜವಾದ ಅಭಿಮಾನಿಗಳು, ಯಕ್ಷಗಾನದ ಆಸಕ್ತಿಯುಳ್ಳ ಜನರೂ, ಯಕ್ಷಗಾನ ಪತ್ರಿಕೆಗಳ ಓದುಗರೂ ಬಹಳ ಪ್ರಜ್ಞಾವಂತರು. ಪತ್ರಿಕೆಯ ಬಗ್ಗೆ ಹೇಳುವುದಾದರೆ ಬಹಳಷ್ಟು ಸಿಹಿ ಅನುಭವಗಳೇ ಆಗಿವೆ. ಎದುರಿಗೆ ಸಿಕ್ಕಿದಾಗ ಮಹನೀಯರೊಬ್ಬರು ಪ್ರೀತಿಯಿಂದ ಗದರಿಸಿದ್ದೂ ಇತ್ತು. ಒಬ್ಬರಿಗೆ ನಿರಂತರ ಪತ್ರಿಕೆಯನ್ನು ಕಳುಹಿಸುತ್ತಾ ಇದ್ದೆವು. ಆದರೆ ಅವರಲ್ಲಿ ಚಂದಾ ಹಣದ ಬಗ್ಗೆ ಪ್ರಸ್ತಾಪ ಮಾಡಿರಲಿಲ್ಲ. ಅವರು ಒಂದು ದಿನ ಸಿಕ್ಕಾಗ “ಯಾಕೆ ಪತ್ರಿಕೆ ಮಾತ್ರ ಕಳುಹಿಸುತ್ತಿದ್ದೀರಿ, ಕಳಿಸಿದ ಬಗ್ಗೆ ಚಂದಾ ಹಣ ಕೇಳುವುದಿಲ್ಲ? ನಾವು ನೂರೆಂಟು ವ್ಯವಹಾರಗಳಲ್ಲಿ ನಿರತರಾಗಿರುತ್ತೇವೆ. ನಮಗೆ ಅದು ನೆನಪಿರೋದಿಲ್ಲ. ನೀವಾದರೂ ಕೇಳಬಾರದೆ, ಪತ್ರಿಕೆ ಸುಮ್ಮನೆ ಬರುತ್ತದೆಯೇ” ಎಂದು ಪ್ರೀತಿಯಿಂದ ಗದರಿಸಿ ಹಣವನ್ನು ನಮ್ಮ ಕೈಗಿಟ್ಟಿದ್ದರು.
ಉಚಿತ ಪುರಾಣ
ಅರ್ಥಗರ್ಭಿತ ಜಗತ್ತು
ದೈನಂದಿನ ಚಟುವಟಿಕೆ, ಉದ್ಯೋಗದಿಂದ ಬೇಸತ್ತು ಅಥವಾ ಅದರಿಂದ ಸ್ವಲ್ಪಮಟ್ಟಿಗೆ ಬದಲಾವಣೆ ಬಯಸಿ ಜನರು ಕಲೆ, ಕ್ರೀಡೆ, ಇತ್ಯಾದಿಗಳತ್ತ ಆಕರ್ಷಿತರಾಗುವುದು ಅಥವಾ ಅದರಲ್ಲಿ ಭಾಗವಹಿಸುವುದು ಹಿಂದಿನಿಂದಲೂ ನಡೆದು ಬಂದ ಸಹಜ ಪ್ರಕ್ರಿಯೆ. ತಾನು ಸಾರ್ವಜನಿಕವಾಗಿ ಗುರುತಿಸಿಕೊಳ್ಳಬೇಕು ಅಥವಾ ಜನರು ತನ್ನನ್ನು ಗುರುತಿಸಿ ಗೌರವಿಸಬೇಕು ಎಂಬ ಮನೋಭಾವ ಪ್ರತಿಯೊಬ್ಬನಲ್ಲೂ ಇದೆ. ಆದರೆ ಈ ಹಂಬಲ ಅತಿರೇಕಕ್ಕೆ ಹೋದರೆ ಅಪಾಯಕಾರಿ. ಆದರೆ ಈ ಹುಚ್ಚು ಕೆಲವೊಮ್ಮೆ ನಿಯಂತ್ರಿಸಲಾಗದ ಮಟ್ಟಕ್ಕೆ ಬಂದುಬಿಡುತ್ತದೆ. ಆಗ ‘ನಾನೇ’ ಎಂಬ ಅಹಂಭಾವ ತಲೆಗಡರಿಬಿಡುತ್ತದೆ. ಆಮೇಲೆ ಅದರಿಂದ ಆ ವಿಷವರ್ತುಲದಿಂದ ಹೊರಬರಲಾರದ ಸ್ಥಿತಿ ಬಂದುಬಿಡುತ್ತದೆ.ಕೆಲವರಿಗೆ ಜನಪ್ರಿಯತೆಯ ಹುಚ್ಚು. ಇನ್ನು ಕೆಲವರಿಗೆ ಹಣ ಸಂಪಾದಿಸುವ ಹವ್ಯಾಸ. ಈ ಎರಡರಲ್ಲೂ ಬಹುಬೇಗನೆ ಯಶಸ್ಸು ಸಾಧಿಸಬೇಕಾದರೆ ಬದಲಾವಣೆ ಎಂಬ ಅಡ್ಡದಾರಿ ಹಿಡಿಯಬೇಕಾಗುತ್ತದೆ. ಆದ್ದರಿಂದ ಹಲವರು ತಾನು ಮಾಡುತ್ತಿರುವ ಕಾರ್ಯಕ್ಕೆ ಬದಲಾವಣೆ ಎಂಬ ಹಣೆಪಟ್ಟಿ ಕಟ್ಟಿ ಜನಪ್ರಿಯತೆ ಗಳಿಸಿ ಅದರಲ್ಲಿ ಅರ್ಥವನ್ನು ಹುಡುಕುತ್ತಾರೆ!
ತಾನು ಮಾಡುತ್ತಿರುವ ಕೆಲಸಕ್ಕೆ `ಅರ್ಥ’ವನ್ನು ಹುಡುಕುತ್ತಾ ನಿಜವಾದ ಉದ್ದೇಶವನ್ನು ಮರೆತುಬಿಡುತ್ತಾರೆ. ಪರೋಕ್ಷವಾಗಿ ತಾನು ಮಾಡುತ್ತಿರುವ ಉದ್ಯೋಗದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಲು ವಿಫಲರಾಗುತ್ತಾರೆ.
ರಾಜಕೀಯ, ಶಿಕ್ಷಣ, ಮಾಧ್ಯಮ ಕಲೆ, ಕ್ರೀಡೆ, ಸಾರ್ವಜನಿಕ ಸೇವೆ ಹೀಗೆ ಹತ್ತು ಹಲವಾರು ರಂಗಗಳು ಈಗ ವ್ಯವಹಾರಮಯವಾಗಿದೆ. ಹಾಗೂ ವ್ಯಾಪಾರೀಕರಣಗೊಂಡಿವೆ. ಕೆಲವು ರಾಜಕೀಯ ಮುಂದಾಳುಗಳು ತಾವು ಜನರಿಂದ ಆರಿಸಿ ಬರಲು ಮಾಡಿದ ಖರ್ಚು-ವೆಚ್ಚಗಳನ್ನು ಭರಿಸಲು ಅಡ್ಡದಾರಿಯನ್ನು ಹಿಡಿಯುತ್ತಾರೆ. ಹಾಗೂ ಹಣದ ಸಂಪಾದನೆಯಲ್ಲಿರುವ ಸಿಹಿರುಚಿಯನ್ನು ಅನುಭವಿಸಿ ಮತ್ತು ಮತ್ತೂ ಹಣವನ್ನು ಅಕ್ರಮವಾಗಿ ಸಂಪಾದಿಸಲು ತೊಡಗುತ್ತಾರೆ.ಕೆಲವು ಶಿಕ್ಷಣ ಸಂಸ್ಥೆಗಳು ಲಕ್ಷ ಲಕ್ಷ ಶುಲ್ಕಗಳನ್ನು ವಸೂಲು ಮಾಡಿ ಹಣವನ್ನು ಗುಡ್ಡೆಹಾಕುತ್ತಿರುವುದು ಯಾರಿಗೂ ತಿಳಿಯದ ವಿಷಯವೇನಲ್ಲ. ಸಾರ್ವಜನಿಕ ಸೇವೆಗಳು, ಸರಕಾರಿ ಕಛೇರಿಗಳು, ಆಸ್ಪತ್ರೆಗಳು, ಎಲ್ಲವೂ ಈಗ ಕೇವಲ ಹಣ ಸಂಪಾದನೆಯ ಮಾರ್ಗವಾಗಿ ಪರಿವರ್ತಿತಗೊಂಡಿವೆ.ಹಾಗೆಂದು ಎಲ್ಲರೂ ಈ ರೀತಿ ಇರಬೇಕೆಂದೇನಿಲ್ಲ. ಹಣ ಸಂಪಾದನೆಯೂ ಇರಬೇಕು. ಸೇವೆಯ ಗುಣಮಟ್ಟವೂ ಸಮಾನಾಂತರವಾಗಿರಬೇಕು.
ಅಂತಹಾ ಕೆಲವು ಗುಣಾಗ್ರಣಿಗಳೂ ಇದ್ದಾರೆ. ರಾಜಕೀಯದಲ್ಲೂ ವ್ಯಾಪಾರ, ಕ್ರೀಡೆಯಲ್ಲೂ ವ್ಯಾಪಾರ, ಶಿಕ್ಷಣದಲ್ಲೂ ವ್ಯಾಪಾರ, ಸರಕಾರಿ ಮತ್ತು ಸಾರ್ವಜನಿಕ ಕಛೇರಿಗಳಲ್ಲೂ ವ್ಯಾಪಾರ- ಹೀಗೆ ಎಲ್ಲೆಂದರಲ್ಲೂ ವ್ಯಾಪಾರದ ಅರ್ಥ’ವನ್ನೇ ಕಾಣುವ ನಾವು ಯಾವುದರಲ್ಲೂ ನಿಜಾರ್ಥವನ್ನು ಕಾಣುವುದೇ ಇಲ್ಲ. ಇದು ಇಂದಿನ ಶೋಚನೀಯ ಪರಿಸ್ಥಿತಿ.ಎಲ್ಲ ರಂಗಕ್ಕೂ ಹಿಡಿದ ಪಿಡುಗು ಇಂದು ಕಲಾರಂಗಕ್ಕೂ ಹಿಡಿದಿದೆ. ಇದು ಒಮ್ಮೆ ಹಿಡಿದರೆ ಬಿಡುವ ಗ್ರಹಣವಲ್ಲ. ಪ್ರಜ್ಞಾವಂತ ಪ್ರೇಕ್ಷಕ ಈ ಗ್ರಹಣಕ್ಕೆ ಮೋಕ್ಷ ಯಾವಾಗ ಎಂದು ಕಾಯುತ್ತಿದ್ದಾನೆ. ನಾವೇ ತೋಡಿಕೊಂಡ ಗುಂಡಿಗೆ ನಾವೇ ಬೀಳುತ್ತಿದ್ದೇವೆ ಅಷ್ಟೆ.
ಈಚೆಗೆ ಯಕ್ಷಗಾನದ ಹಿರಿಯ ವಿದ್ವಾಂಸರೂ ಕಲಾಹಿತೈಷಿಗಳೂ ಆದ ಹಿರಿಯರೊಬ್ಬರು ಮಾತಾಡುತ್ತಾ ಈ ರೀತಿ ಹೇಳಿದರು. “ನಮಗೀಗ ಆತ್ಮವಿಮರ್ಶೆ ಮಾಡಿಕೊಳ್ಳುವ ಕಾಲ ಬಂದಿದೆ. ಯಕ್ಷಗಾನದಂತಹಾ ಪಾವಿತ್ರ್ಯತೆ ಹೊಂದಿದ ಕಲೆಯನ್ನು ವಿರೂಪಗೊಳಿಸಿ ಪ್ರದರ್ಶಿಸುವ ಪರಿಪಾಠವನ್ನು ಹೊರಗಿನವರಿಗೆ ತೋರಿಸಿಕೊಟ್ಟದ್ದು ಯಾರು? ನಾವೇ ಎಂಬುದರಲ್ಲಿ ಸಂದೇಹವಿದೆಯೇ? ದೀರ್ಘಾವಧಿಯ ಪ್ರದರ್ಶನಗಳಿಗೆ ಕತ್ತರಿ ಹಾಕಲಾಗಿದೆ. ಸಿನಿಮಾ ಹಾಡುಗಳು ಯಕ್ಷಗಾನದ ಜೊತೆಗೆ ಸಮ್ಮಿಳಿತಗೊಂಡಿವೆ. ಭಾವಗೀತೆಗಳೂ ಇವೆ. ಮುಮ್ಮೇಳ ಹಿಮ್ಮೇಳ ಎಲ್ಲ ವಿಭಾಗಗಳಲ್ಲೂ ವಿವಿಧ ರೀತಿಯ ಸರ್ಕಸ್‍ಗಳನ್ನು ನಾವು ಮಾಡುತ್ತಿದ್ದೇವೆ. ಬ್ಯಾಂಡ್, ವಾದ್ಯ, ವಾಲಗಗಳ ಸದ್ದು ಅಬ್ಬರಿಸತೊಡಗಿವೆ. ಸುಡುಮದ್ದುಗಳು ಸದ್ದುಮಾಡುತ್ತಿವೆ. ಸಿನಿಮಾ ಕತೆಗಳು ಯಕ್ಷಗಾನ ವೇದಿಕೆಯಲ್ಲಿ ರಾರಾಜಿಸತೊಡಗಿವೆ. ವಿವಿಧ ಸಿನಿಮಾ ನಟರ ಶೈಲಿಯ ಅನುಕರಣೆಯ ಹೆಜ್ಜೆಗಳ ನಡುವೆ ಯಕ್ಷಗಾನದ ನೈಜ ನಾಟ್ಯ ಮಾಯವಾಗಿದೆ.
ಹಲವು ಬಗೆಯ ವಿಚಿತ್ರ ರಾಗಾಲಾಪನೆಗಳ ಜೊತೆಗೆ ಚಿತ್ರ-ವಿಚಿತ್ರ ಭಂಗಿಯ ಕುಣಿತ ನಾಟ್ಯಗಳ ಭಾವಭಂಗಿಗಳು ರಂಗಪ್ರವೇಶ ಮಾಡಿವೆ. ರಾಗ ತಾಳ ನಾಟ್ಯಗಳು ಅತಿಯೆನ್ನಿಸುವಷ್ಟು ದೀರ್ಘವಾಗಿ ಸಂಭಾಷಣೆಯ ಅವಧಿ ತೀರಾ ಕುಂಠಿತವಾಗಿದೆ. ನೈಜ ಯಕ್ಷಗಾನ, ಪರಂಪರೆ ತಿಳಿದ ಕಲಾವಿದರಿದ್ದರೂ ಅದನ್ನು ಮುಂದಿನ ಪೀಳಿಗೆಗೆ ದಾಟಿಸುವ ಸಮರ್ಥ ಗುರುಗಳಿಲ್ಲ. ಇವೆಲ್ಲದರ ನಡುವೆ ಪ್ರಜ್ಞಾವಂತ ಪ್ರೇಕ್ಷಕ ಕಳೆದುಹೋಗುತ್ತಿದ್ದಾನೆ.’’ ಎಂದು ಹೇಳುತ್ತಾ ವಿಷಾದದ ನಿಟ್ಟುಸಿರುಬಿಟ್ಟರು. ಯಾಕೋ ಅವರ ಮಾತುಗಳೆಲ್ಲ ಆಗಾಗ ಮನಸ್ಸನ್ನು ಕಾಡುತ್ತಿದೆ.
ರಾಧಾ ಬಾರೇ…. ನಿನ್ನ ಪ್ರತಿರೂಪ ತೋರಿಸುವೆ ಇಲ್ಲಿ …
ಮಂಜುಳಾ ಸುಬ್ರಹ್ಮಣ್ಯ … ಒಬ್ಬಳು ಬಹುಮುಖ ಪ್ರತಿಭಾವಂತೆ ಹಾಗೂ ಭರತನಾಟ್ಯ ಕಲಾವಿದೆ. ಕನ್ನಡ ಎಂ.ಎ ಪದವೀಧರೆ, ದೂರದರ್ಶನದ ಬಿ ಗ್ರೇಡ್ ಕಲಾವಿದೆ(ಭರತನಾಟ್ಯ), ಆಕಾಶವಾಣಿ ಬಿ ಗ್ರೇಡ್ ಕಲಾವಿದೆ(ನಾಟಕ), ಕಳರಿ ಪಯಟ್ಟು ನಿಷ್ಣಾತೆ, ಹಲವಾರು ಲೇಖನಗಳನ್ನು ಬರೆದು ಪ್ರಕಟಿಸಿದ ಲೇಖಕಿ, ಆಕಾಶವಾಣಿ ಕಾರ್ಯಕ್ರಮ ನಿರೂಪಕಿ, ಭರತನಾಟ್ಯ ನೃತ್ಯ ಶಿಕ್ಷಕಿ, ಸದಾ ಹೊಸತನ್ನು ಅರಸುವ ಅನ್ವೇಷಕಿ ಹೀಗೆ ಒಬ್ಬೊಬ್ಬರಿಗೆ ಒಂದೊಂದು ತೆರನಾಗಿ ಮಂಜುಳಾ ಕಾಣಿಸಬಹುದು. ಆದರೆ ನನಗಿಲ್ಲಿ ರಾಧೆಯಾಗಿ ಕಂಡಳು.
ಅವರ ಬಗ್ಗೆ ಕೆಲವು ದಿನಗಳ ನಂತರ ವಿಸ್ತೃತವಾಗಿ ಬರೆಯುವೆ. ಈಗ ಅವರ ರಾಧೆಯ ಬಗ್ಗೆ ಮಾತ್ರ ಹೇಳುವೆ. ಕೆಲವು ದಿನಗಳ ಹಿಂದೆ ಮಂಜುಳಾಳ ರಾಧೆ ಎನ್ನುವ ಏಕ ವ್ಯಕ್ತಿ ಪ್ರದರ್ಶನದ ವಿಡಿಯೋ ತುಣುಕೊಂದನ್ನು ನೋಡಿದೆ. ಬಹಳ ಇಷ್ಟವಾಯಿತು. ಅದನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳೋಣ ಎಂದು ಅನಿಸಿತು. ನಾನು ಇಲ್ಲಿ ಅದನ್ನು ಶಬ್ದಗಳಲ್ಲಿ ವಿವರಿಸಹೊರಟರೆ ರಸಭಂಗವಾದೀತು. ರಾಧೆಯ ಹೃದಯದ ಧ್ವನಿ ಕೇಳಿಸದೇ ಹೋದೀತು. ಮೂಲ ಕಥೆಯ ಜಾಡನ್ನು ಕೆದಕಲು ಹೋಗದೆ ಇದನ್ನು ವೀಕ್ಷಿಸಿ. ಭರತನಾಟ್ಯದಲ್ಲಿ ರಾಧೆಯ ತುಡಿತ ಮಿಡಿತಗಳನ್ನು ಹೇಗೆ ಅಭಿವ್ಯಕ್ತಿಗೊಳಿಸಿದ್ದಾರೆ ಎಂಬುದನ್ನು ಈ ವಿಡಿಯೋ ನೋಡಿದಾಗ ತಿಳಿಯಬಹುದು. ರಂಗದ ಈ ರಾಧೆಯ ಯಶಸ್ಸಿಗೆ ರಂಗದ ಹಿಂದಿನ ಹಲವು ಕಲಾವಿದರು ಕಾರಣ ಎಂದು ಮಂಜುಳಾ ನಿರ್ವಂಚನೆಯಿಂದ ಹೇಳಿಕೊಳ್ಳುತ್ತಾರೆ. ಅಭಿನಂದನೆಗಳು ರಾಧೆ (ಮಂಜುಳಾ)…
ಚತುರ್ಭುಜನಾದ ಪ್ರಜ್ವಲ್ ಕುಮಾರ್ ಗುರುವಾಯನಕೆರೆ
ತನ್ನ ವಿಶಿಷ್ಟ ಶೈಲಿಯ ಮಾತುಗಾರಿಕೆಯಿಂದ ಮತ್ತು ನೃತ್ಯಗಳಿಂದ ಮನೆ ಮಾತಾಗಿರುವ ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಗೃಹಸ್ಥಾಶ್ರಮಕ್ಕೆ ಕಾಲಿರಿಸಿದ್ದಾರೆ. ಅವರು ಇಂದು ಮಮತಾ ಅವರನ್ನು ವಿವಾಹವಾದರು. ಯಾವುದೇ ಪಾತ್ರಗಳನ್ನು ರಂಗದಲ್ಲಿ ಸುಲಲಿತವಾಗಿ ನಿರ್ವಹಿಸಬಲ್ಲ ಹೆಗ್ಗಳಿಕೆ ಇವರಿಗಿತ್ತು.
ಧರ್ಮಸ್ಥಳ ಮೇಳದಲ್ಲಿ ಮೊದಲ ವರುಷ ಬಾಲಗೋಪಾಲನಾಗಿ ಮತ್ತು ಪ್ರಸಂಗಗಳಲ್ಲಿ ಬರುವ ಇನ್ನಿತರ ವೇಷಗಳನ್ನು ಮಾಡುತ್ತಾ ನಿರಂತರ 5 ವರ್ಷಗಳ ಕಾಲ ಲಲಿತ ಕಲಾ ಕೇಂದ್ರಕ್ಕೆ ಹೋಗಿ ಅಭ್ಯಾಸಿಗಳ ಜತೆ ಕುಣಿಯುವುದರ ಜತೆಗೆ ಹೇಳಿಕೊಡುತ್ತಿದ್ದರು. ಕಟೀಲು ಮೇಳದಲ್ಲಿ 1 ವರ್ಷ. ಬಳಿಕ ಕುಂಟಾರು ಮೇಳದಲ್ಲಿ 2 ವರ್ಷ. ಎಡನೀರು ಮೇಳದಲ್ಲಿ ಪ್ರಜ್ವಲ್ ಅವರು 2 ವರ್ಷ, ನಂತರ 12 ವರ್ಷಗಳ ಕಾಲ ಹೊಸನಗರ ಮೇಳದಲ್ಲಿ. ಮತ್ತೆ 1 ವರ್ಷ ಎಡನೀರು ಮೇಳ. ಪ್ರಸ್ತುತ 3 ವರ್ಷಗಳಿಂದ ಹನುಮಗಿರಿ ಮೇಳದಲ್ಲಿ ಕೆಲಸ ಮಾಡುತ್ತಿದ್ದಾರೆ.
ಸ್ವರ ಸಾಮ್ರಾಜ್ಯದ ಒಡೆಯ – ಎಸ್. ಪಿ. ಬಾಲಸುಬ್ರಹ್ಮಣ್ಯಂ ಹಾಡುಗಳ ನೋಡಲೇಬೇಕಾದ ವೀಡಿಯೊ
ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ಹೆಸರು ಕೇಳದವರಿಲ್ಲ. ಸಂಗೀತ ಎಲ್ಲಿಯ ವರೆಗೆ ಇರುತ್ತದೋ ಅಲ್ಲಿಯ ವರೆಗೆ ಎಸ್. ಪಿ.ಬಿ. ಹೆಸರು ಇದ್ದೇ ಇರುತ್ತದೆ. ಅವರೊಬ್ಬ ಗಾಯನ ಲೋಕದ ಜೀವಂತ ದಂತಕತೆ. ಅವರು ಭಾರತದ ಹೆಚ್ಚಿನ ಎಲ್ಲ ಭಾಷೆಗಳಲ್ಲಿ ಹಾಡಿ ಹಾಡುಗಳ ಸಂಖ್ಯೆಯಲ್ಲಿ ದಾಖಲೆಯನ್ನು ನಿರ್ಮಿಸಿದ್ದರೂ ಹಾಡುಗಳ ಸಂಖ್ಯೆಗಿಂತಲೂ ಅವರ ಮಧುರ ಸ್ವರದ ಇಂಪುಗಳ ಕಂಪನ್ನು ಹೊರಸೂಸುವ ಕಂಠಕ್ಕೆ ಶರಣುಹೋಗದ ಸಂಗೀತ ಪ್ರೇಮಿಯಿಲ್ಲ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರು ಎಸ್. ಜಾನಕಿ ಜೊತೆಯಲ್ಲಿ ಹಾಡಿದ ಅಪೂರ್ವ ಹಾಡುಗಳ ಸಂಗ್ರಹ ಸರಿಗಮ ಸೌತ್ ಯು ಟ್ಯೂಬ್ ಚಾನೆಲ್ ನವರ ವೀಡಿಯೋದಲ್ಲಿದೆ. ಈ ವೀಡಿಯೋದ ಲಿಂಕ್ ಕೆಳಗಡೆ ಇದೆ.
ಕನ್ನಡದಲ್ಲಂತೂ ಅವರು ಹಾಡಿದ ಅಸಂಖ್ಯಾತ ಮಧುರ ಹಾಡುಗಳು ಇಂದು ಎಲ್ಲರ ಬಾಯಿಯಲ್ಲೂ ಗುಣುಗುಟ್ಟುತ್ತಾ ಇರುತ್ತವೆ. ಅವರೆಂದರೆ ಜೀವವನ್ನೇ ಬಿಡುವ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಅಂತಹಾ ಸಂಗೀತ ಸಾಮ್ರಾಜ್ಯದ ಅನಭಿಷಿಕ್ತ ದೊರೆ ಇಂದು ಕೊರೊನದಿಂದ ಅಸೌಖ್ಯಪೀಡಿತರಾಗಿ ಆಸ್ಪತ್ರೆ ಸೇರಿದ್ದಾರೆ. ಸುಮಾರು ದಿನಗಳಿಂದಲೂ ವೆಂಟಿಲೇಟರ್ ಅಳವಡಿಕೆಯೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದ ಅವರ ಪರಿಸ್ಥಿತಿ ಒಮ್ಮೆ ಗಂಭೀರ ಹಾಗೂ ಚಿಂತಾಜನಕ ಸ್ಥಿತಿಗೆ ತಲುಪಿತ್ತು. ಆದರೆ ಆಶಾದಾಯಕ ಹಾಗೂ ಸಂತೋಷದ ಸುದ್ದಿಗಾಗಿ ಜನರೆಲ್ಲರೂ ಪ್ರತಿಕ್ಷಣವೂ ಪ್ರಾರ್ಥಿಸುತ್ತಿದ್ದಾರೆ.
ಹೌದು. ಎಸ್. ಪಿ. ಬಾಲಸುಬ್ರಹ್ಮಣ್ಯಂ ಕೊರೋನಾ ಪರೀಕ್ಷೆಯಲ್ಲಿ ಗೆದ್ದು ಬರಲಿ. ಶೀಘ್ರವೇ ಅವರು ಚೇತರಿಸಿಕೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸಲಿ. ಮತ್ತೆ ಸಂಗೀತ ಪ್ರೇಮಿಗಳು ಅವರು ಹಾಡುವುದನ್ನು ಶೀಘ್ರವಾಗಿ ಕಾಣುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥನೆ.
ಯಕ್ಷಗಾನದಲ್ಲಿ ಪಲಾಂಡು ಪರಿಮಳ … ಏನಿದು ಚೋದ್ಯ?
ಸಾಧಾರಣವಾಗಿ ಪಲಾಂಡು ಎನ್ನುವ ಶಬ್ದದ ಅರ್ಥ ಹಲವಾರು ಜನರಿಗೆ ತಿಳಿದಿರಲಾರದು. ನೀರುಳ್ಳಿಗೆ ಇನ್ನೊಂದು ಹೆಸರೇ ಪಲಾಂಡು ಎಂಬುದಾಗಿ. ಈ ಪಲಾಂಡು ಶಬ್ದ ಯಕ್ಷಗಾನದಲ್ಲಿ ಹೇಗೆ ಬಂತು? ರಂಗಸ್ಥಳದಲ್ಲಿ ನೀರುಳ್ಳಿಯ ಪರಿಮಳ ಹೇಗೆ ಪಸರಿಸಿತು ಎಂಬುದೇ ಈಗ ಯಕ್ಷಪ್ರಶ್ನೆ ? ಆದರೆ ಇಂತಹ ಯಕ್ಷಪ್ರಶ್ನೆಗಳಿಗೆ ಸಮರ್ಥವಾದ ಉತ್ತರಗಳು ಗಡಿನಾಡು ಕಾಸರಗೋಡಿನ ಸಿರಿಬಾಗಿಲು ಶ್ರೀ ವೆಂಕಪ್ಪಯ್ಯ ಸ್ಮಾರಕ ಪ್ರತಿಷ್ಠಾನದ ಬಳಿ ಇವೆ ಎಂದರೆ ಅದು ಅತಿಶಯೋಕ್ತಿ ಆಗಲಾರದು. ರಂಗಸ್ಥಳಕ್ಕೆ ಪಲಾಂಡುವನ್ನು ಪರಿಚಯಿಸುವಲ್ಲಿ ಸಿರಿಬಾಗಿಲು ಪ್ರತಿಷ್ಠಾನದ ರೂವಾರಿ ಭಾಗವತರಾದ ಸಿರಿಬಾಗಿಲು ರಾಮಕೃಷ್ಣ ಮಯ್ಯರ ಉತ್ಸಾಹ ಮೆಚ್ಚುವಂತಹುದು.
ಹಾಗೆ ನೋಡಿದರೆ ‘ಪಲಾಂಡು ಚರಿತ್ರೆ’ ಎಂಬ ಈ ಪ್ರಸಂಗ ರಚಿಸಲ್ಪಟ್ಟದ್ದು ಸುಮಾರು 120 ವರ್ಷಗಳ ಹಿಂದೆ ಎಂದು ಹೇಳುತ್ತಾರೆ. ಪ್ರಸಂಗ ಕರ್ತೃ ಆ ಕಾಲದ ಖ್ಯಾತ ಸಾಹಿತಿ ಕೆರೋಡಿ ಸುಬ್ಬ ರಾವ್. ಶತಮಾನದಷ್ಟು ಹಿಂದಿನ ಕೃತಿಯನ್ನು ರಂಗಕ್ಕಿಳಿಸಿದ ಸಂಬಂಧಪಟ್ಟವರ ಸಾಹಸವನ್ನು ಮೆಚ್ಚಲೇ ಬೇಕು.
ಪ್ರಸಂಗದ ಹೆಸರೇ ಸೂಚಿಸುವಂತೆ ಇದು ಕೇವಲ ನೀರುಳ್ಳಿಯ ಕತೆಯಲ್ಲ!!! ಭೂಮಿಯ ಮೇಲೆ ಬೆಳೆಯುವ ಹಣ್ಣು, ತರಕಾರಿಗಳು ಹಾಗೂ ಭೂಮಿಯ ಒಳಗೆ ಮಣ್ಣಿನಡಿಯಲ್ಲಿ ಬೆಳೆಯುವ ಗೆಡ್ಡೆ ಗೆಣಸು ತರಕಾರಿಗಳ ನಡುವೆ ತಾವೇ ಶ್ರೇಷ್ಠರೆಂಬ ಅಹಂಭಾವ ಮೊಳೆತು ಹೆಮ್ಮರವಾಗುತ್ತದೆ. ಅದು ವಾಗ್ಯುದ್ಧ, ಸಮರಕ್ಕೆ ಹೇತುವಾಗುತ್ತದೆ. ಆದರೆ ಇದು ಇವರ ಕತೆಯಲ್ಲ. ಕತೆಯ ಗೂಡಾರ್ಥ , ಮೂಲಾರ್ಥ ಇನ್ನೂ ಒಳ ಹೊಕ್ಕು ನೋಡಿದಾಗ ಅರಿವಾಗುತ್ತದೆ ಪ್ರಪಂಚದಲ್ಲಿ ಶ್ರೇಷ್ಠ ನಿಕೃಷ್ಠರೆಂಬ ಬೇಧಭಾವ ಮೊದಲಿನಿಂದಲೂ ಇದೆ. ಶ್ರೀಮಂತ ಮತ್ತು ಬಡವ, ಪಂಡಿತ ಮತ್ತು ಪಾಮರ, ಆಳುವವರು ಮತ್ತು ಸಾಮಾನ್ಯ ಜನರು ಇವರೆಲ್ಲಾ ಈ ಪ್ರಸಂಗದ ಹಾಗೂ ಕವಿಯ ಆಶಯದಲ್ಲಿ ಒಳಗೊಳ್ಳುತ್ತಾರೆ. ವೃಥಾ ಮೇಲಾಟಗಳಲ್ಲಿ ತೊಡಗದೆ ಪರಸ್ಪರ ಸಹಕಾರದಿಂದ ಬಾಳುವೆ ಮಾಡಬೇಕೆಂಬುದನ್ನು ಕಥೆ ಸೂಚಿಸುತ್ತದೆ.
ಪ್ರಸಂಗದ ಅಂತ್ಯ ಮಾತ್ರ ತುಂಬಾ ರೋಚಕವಾಗಿದೆ. ಅದನ್ನು ನೀವು SV Vision ಅವರ ಯು ಟ್ಯೂಬ್ ಚಾನೆಲ್ ನಲ್ಲಿ ನೋಡಬಹುದು. ಇದು ನೇರಪ್ರಸಾರಗೊಂಡ ಯಕ್ಷಗಾನ ಪ್ರದರ್ಶನ. ಸಂಚಾರ ನಿರ್ಬಂಧ ಇರುವ ಕಾರಣದಿಂದ ಗಡಿನಾಡಿನ ಕಲಾವಿದರನ್ನು ಮಾತ್ರ ಸೇರಿಸಿ ಪ್ರದರ್ಶಿಸಿದ ಯಕ್ಷಗಾನ ಪ್ರದರ್ಶನ. ಗಡಿನಾಡಿನ ಯಕ್ಷಗಾನ ಕಲಾವಿದರನ್ನು ಒಟ್ಟು ಸೇರಿಸಿ ಈ ಸಂಕಷ್ಟ ಕಾಲದಲ್ಲಿ ಅವರನ್ನು ಪ್ರೋತ್ಸಾಹಿಸಿದ ರಾಮಕೃಷ್ಣ ಮಯ್ಯರ ಪ್ರಯತ್ನ ಸ್ತುತ್ಯರ್ಹ. ಕಾಸರಗೋಡು ಜಿಲ್ಲೆಯ ಕಲಾವಿದರ ಪಟ್ಟಿಯನ್ನು ನೋಡುವಾಗ ಒಂದು ಅತ್ಯುತ್ತಮ ವೃತ್ತಿಪರ ಮೇಳವನ್ನು ಹೊರಡಿಸುವಷ್ಟು ಕಲಾವಿದರ ಗಡಣವೇ ಅಲ್ಲಿದೆ.
ಕೈರಂಗಳ ದೇವಸ್ಥಾನದಲ್ಲಿ ಯಕ್ಷಗಾನ ನಾಟ್ಯ ವೈಭವ
ಕೈರಂಗಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ದಿನಾಂಕ 28.08.2020 ಶುಕ್ರವಾರದಂದು ಮಧ್ಯಾಹ್ನ 2 ಘಂಟೆಯಿಂದ ಯಕ್ಷಗಾನ ನಾಟ್ಯ ವೈಭವ ಜರಗಲಿದೆ. ಈ ಕಾರ್ಯಕ್ರಮ ಯು ಟ್ಯೂಬ್ ಮತ್ತು ಫೇಸಬುಕ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ.
ನೇರಪ್ರಸಾರದಲ್ಲಿ ಭರತಾಗಮನ
ವಾಟ್ಸಾಪ್ ಯಕ್ಷಗಾನ ಗುಂಪುಗಳು ಸೇರಿ ಆಯೋಜಿಸುತ್ತಿರುವ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದ ನೇರ ಪ್ರಸಾರ 05.09.2020ರಂದು ನಡೆಯಲಿದೆ. ನಾಲ್ಕು ಯಕ್ಷಗಾನ ವಾಟ್ಸಾಪ್ ಗುಂಪುಗಳು ಸೇರಿಕೊಂಡು ಕರ್ನಾಟಕ ಸಾಂಸ್ಕೃತಿಕ ಪ್ರತಿಷ್ಠಾನ, ಬೆಂಗಳೂರು ಇದರ ಸಹಯೋಗದೊಂದಿಗೆ ‘ಭರತಾಗಮನ’ ಎಂಬ ಪ್ರಸಂಗವನ್ನು ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ತಾಳಮದ್ದಳೆಯ ರೂಪದಲ್ಲಿ ಪ್ರಸ್ತುತಪಡಿಸಲಿದೆ.
ಸೆಪ್ಟೆಂಬರ್ 5, ಶನಿವಾರ ಸಂಜೆ ಘನತೆ 6ರಿಂದ ಘಂಟೆ 9ರ ವರೆಗೆ ನಡೆಯಲಿರುವ ಈ ತಾಳಮದ್ದಳೆಯು ವಿವಿಧ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಯೂಟ್ಯೂಬ್ ಮತ್ತು ಕಹಳೆ ನ್ಯೂಸ್ ಚಾನೆಲ್ ಗಳಲ್ಲಿ ನೇರಪ್ರಸಾರದಲ್ಲಿ ಪ್ರದರ್ಶನಗೊಳ್ಳಲಿದೆ.
ಯಕ್ಷ ಮಿತ್ರರು ಬಾಯಾರು, ಯಕ್ಷ ಭಾಗವತ ಹಂಸ, ಬಲ್ಲಿರೇನಯ್ಯ ಯಕ್ಷಕೂಟ, ಭ್ರಾಮರೀ ಯಕ್ಷಮಿತ್ರರು ಈ ನಾಲ್ಕು ವಾಟ್ಸಾಪ್ ಗುಂಪುಗಳು ಕರ್ನಾಟಕ ಸಾಂಸ್ಕೃತಿಕ ಪ್ರತಿಷ್ಠಾನ, ಬೆಂಗಳೂರು ಇದರ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿದೆ.
ಆಕಾಶವಾಣಿಯಲ್ಲಿ ಯಕ್ಷಕವಿ ದೇವಿದಾಸ
ಆಕಾಶವಾಣಿ ಮಂಗಳೂರು ಪ್ರಸ್ತುತಪಡಿಸುವ ಜನಪ್ರಿಯ ಯಕ್ಷಾಂತರಂಗದ 65ನೆಯ ಸರಣಿಯಲ್ಲಿ ನಾಳೆ ಅಂದರೆ ದಿನಾಂಕ 23.08.2020 ನೇ ಭಾನುವಾರ ಬೆಳಿಗ್ಗೆ 9.10 ಘಂಟೆಗೆ ಯಕ್ಷಕವಿ ದೇವಿದಾಸ ಎಂಬ ವಿಷಯದ ಬಗ್ಗೆ ಕಾರ್ಯಕ್ರಮವಿರುತ್ತದೆ. ಈ ಕಾರ್ಯಕ್ರಮಕ್ಕೆ ಬರಹದ ಮೆರುಗನ್ನು ನೀಡಿದವರು ಖ್ಯಾತ ಯಕ್ಷಗಾನ ಕಲಾವಿದರೂ ಉಪನ್ಯಾಸಕರೂ ಆದ ಶ್ರೀ ಗಣರಾಜ ಕುಂಬ್ಳೆಯವರು.
