Saturday, March 7, 2026
Home Blog Page 386

ಲಕ್ಷ್ಮೀಶ ಅಮ್ಮಣ್ಣಾಯ – ಮದ್ದಳೆಯ ‘ಶುದ್ಧಹಸ್ತ’ (Lakshmisha Ammannaya)

ಮಾತಿಗೆ ಕುಳಿತರೆ ಬಹಳಷ್ಟೂ ಮಾತನಾಡುವ ಶ್ರೀ ಲಕ್ಷ್ಮೀಶ ಅಮ್ಮಣ್ಣಾಯರು ಮದ್ದಳೆಯ ನುಡಿತದಲ್ಲೂ  ನಿಪುಣರು. ತಾನು ಸ್ವತಃ  ಪ್ರಚಾರಪ್ರಿಯರಲ್ಲ. ತಮ್ಮ ಬಗ್ಗೆ ತಾವೇ ಹೇಳಿಕೊಳ್ಳುವುದಿಲ್ಲ. ಆದರೆ ಅವರ ಮದ್ದಳೆಯ ನುಡಿತ ಅವರ ಬಗ್ಗೆ ಎಲ್ಲವನ್ನೂ ನಮಗೆ ತಿಳಿಸಿಕೊಡುತ್ತದೆ. ಕೆಲವೊಮ್ಮೆ ಜನಪ್ರಿಯತೆ ಮತ್ತು ಶ್ರೇಷ್ಠತೆಗಳು ಪರಸ್ಪರ ಸಂಬಂಧವಿರದ ಶಬ್ದಗಳ ಹಾಗೆ ಗೋಚರಿಸುತ್ತವೆ. ಶ್ರೇಷ್ಠರೆಲ್ಲಾ ಜನಪ್ರಿಯರಲ್ಲ. ಜನಪ್ರಿಯರೆಲ್ಲ ಶ್ರೇಷ್ಠರಾಗಿಯೂ ಇಲ್ಲ. ಅಮ್ಮಣ್ಣಾಯರು ತಮ್ಮ  ಕಲಾಜೀವನದಲ್ಲಿ 22 ವರ್ಷಗಳನ್ನು ಮೇಳದ ತಿರುಗಾಟಗಳಲ್ಲಿಯೂ  ಆಮೇಲೆ ವಿಶೇಷ ಅಭಿಮಾನದಿಂದ ಕರೆದಲ್ಲಿಗೆ ಹವ್ಯಾಸೀ ಕಲಾವಿದನಾಗಿಯೂ  ಭಾಗವಹಿಸಿದ್ದಾರೆ. ಎಡನೀರು ಮೇಳದಲ್ಲಿ ಹೆಚ್ಚಾಗಿ ಅತಿಥಿ ಕಲಾವಿದನಾಗಿ ಭಾಗವಹಿಸಿದ್ದಾರೆ. ಅವರಿಗೆ ಕೃಷಿಭೂಮಿ ಸಾಕಷ್ಟಿದೆ. ಕೃಷಿ ಕೆಲಸಗಳಲ್ಲಿ ಹಾಗೂ ಹವ್ಯಾಸೀ ಕಲಾವಿದನಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಲಕ್ಷ್ಮೀಶ ಅಮ್ಮಣ್ಣಾಯರು ಯಕ್ಷಗಾನದ ಹಿಮ್ಮೇಳ ಕಲಿತ ಕಥೆಯೇ ಆಸಕ್ತಿದಾಯಕ ಮತ್ತು ರೋಚಕವಾಗಿದೆ. ಅವರ  ಮೂಲ ತರವಾಡು ಮನೆಯಲ್ಲಿ ಯಕ್ಷಗಾನದ ವೇಷಭೂಷಣಗಳು ಮತ್ತು  ಯಕ್ಷಗಾನದ ರಂಗಸ್ಥಳದ ಪರಿಕರಗಳಾದ ಪರದೆ, ನಾಟಕದ ಪರದೆ ಮತ್ತು ಹಿಮ್ಮೇಳದ ವಾದನಗಳೆಲ್ಲಾ ಇದ್ದುವು. ಇವರ ತಂದೆಯವರಾದ ವಿಷ್ಣು ಅಮ್ಮಣ್ಣಾಯರು ಉತ್ತಮ ಭಾಗವತ ಮತ್ತು ಅರ್ಥಧಾರಿಯಾಗಿದ್ದರು. ಅವರ ಮನೆಯಲ್ಲಿ  ಪ್ರತಿದಿನವೂ ಸಂಗೀತದ ಸಮಾರಾಧನೆಯೇ ನಡೆಯುತ್ತಿತ್ತಂತೆ.  ಇವರ ದೊಡ್ಡಪ್ಪನ ಮಗ ಪುರುಷೋತ್ತಮ ಅಮ್ಮಣ್ಣಾಯ ಮತ್ತು ಚಿಕ್ಕಪ್ಪನ ಮಗ ದಿನೇಶ ಅಮ್ಮಣ್ಣಾಯ ಹಾಗೂ ಲಕ್ಷ್ಮೀಶ ಅಮ್ಮಣ್ಣಾಯರು ಒಟ್ಟು ಸೇರಿದರೆ ಮತ್ತೆ ಕೇಳುವುದೇ ಬೇಡ. ದಿನಾಲೂ ಯಕ್ಷೋತ್ಸವ.  ಚಿಕ್ಕಂದಿನಲ್ಲಿ  ಲಕ್ಷ್ಮೀಶ ಅಮ್ಮಣ್ಣಾಯರಿಗೆ ಯಕ್ಷಗಾನದ ಆಸಕ್ತಿಯಿರಲಿಲ್ಲ.  ಬ್ಯಾನರ್ ಬರೆಯುವುದೇ ಮೊದಲಾದ ಚಿತ್ರಕಲೆ(painting)ಯಲ್ಲಿ ಅತೀವ ಉತ್ಸಾಹ, ಶ್ರದ್ಧೆಗಳಿದ್ದುವು.  ಸುತ್ತಮುತ್ತಲಿನ ಜನರೆಲ್ಲರೂ ಬ್ಯಾನರ್ ಬರೆಯುವ ಕೆಲಸಗಳನ್ನು ಮಾಡಿಕೊಡಬೇಕೆಂದು ದುಂಬಾಲು ಬೀಳುತ್ತಿದ್ದರು. ಇದರಿಂದಾಗಿ ಯಕ್ಷಗಾನ ಕಲಿಯುವುದನ್ನು ಸಂಪೂರ್ಣವಾಗಿ ನಿಲ್ಲಿಸಿದರು.  ಭಾಗವತಿಕೆ ಕಲಿಸಬೇಕೆಂದು ತಂದೆಯವರ ಇಚ್ಛೆಯಾಗಿತ್ತು. ಆದರೆ ಇವರಿಗೆ ಪದ್ಯ ಹೇಳಲು ಬರಲಿಲ್ಲ.  ಸಹೋದರ ಸಂಬಂಧಿ ದಿನೇಶ ಅಮ್ಮಣ್ಣಾಯರು ಕಲಿತು ಪರಿಣತಿಯನ್ನೂ ಸಾಧಿಸಿದರು.  ಆ ನಂತರ ಅಮ್ಮಣ್ಣಾಯರ ತಂದೆಯವರು ಭಾಗವತಿಕೆ ಕಲಿಸುವ ಸಾಹಸವನ್ನು ಕೈಬಿಟ್ಟು ಚೆಂಡೆ-ಮದ್ದಳೆ ಕಲಿಸಲು ಆರಂಭಿಸಿದರು.  15 ದಿನಗಳ ಅವಧಿಯ ಕ್ಲಾಸು ಮಾಡಿದರೂ ಅಷ್ಟಾಗಿ ಬಾರಿಸಲು ಬರಲೇ ಇಲ್ಲ. ವಿಷ್ಣು ಅಮ್ಮಣ್ಣಾಯರು ಮಗನ ಮೇಲಿನ ಕೋಪದಿಂದ  ಚೆಂಡೆ-ಮದ್ದಳೆಯನ್ನು ಅಟ್ಟಕ್ಕೆ ಹಾಕಿದರು. ಕಾರಣವಿಷ್ಟೇ.  ಲಕ್ಷ್ಮೀಶ ಅಮ್ಮಣ್ಣಾಯರ  ದೊಡ್ಡ ಅಣ್ಣ ಮೋಹನ್ ಅಮ್ಮಣ್ಣಾಯ ಮೃದಂಗ ವಿದ್ವಾನ್ ಇನ್ನೊಬ್ಬ ರಘುರಾಮ ಅಮ್ಮಣ್ಣಾಯ ವಯೋಲಿನ್, ವೋಕಲ್ ವಿದ್ವಾನ್. ಇವನಿಗೆ ಮಾತ್ರ  ಸಂಗೀತ ಸಿದ್ಧಿಸುವುದಿಲ್ಲವೋ ಎಂಬ ಆತಂಕದಿಂದ ಅವರು ಹಾಗೆ ಮಾಡಿದ್ದಿರಬಹುದು. ಆಮೇಲೆ  ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಹಿಮ್ಮೇಳ ತರಗತಿಗೆ ಸೇರಿದರು. ಒಂದು ದಿನ ಲಕ್ಷ್ಮೀಶ ಅಮ್ಮಣ್ಣಾಯರು ಮದ್ದಳೆ ಬಾರಿಸುತ್ತಿದ್ದುದನ್ನು ಧರ್ಮಸ್ಥಳ ಕೇಂದ್ರದಲ್ಲಿ ಗಮನಿಸಿದ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ಅವರನ್ನು ಧರ್ಮಸ್ಥಳ ಮೇಳಕ್ಕೆ ಸೇರಿಸಿದರು. ಮುಂದಿನದ್ದು ಇತಿಹಾಸ. ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಪ್ರೋತ್ಸಾಹ ಮತ್ತು ಕಲಿಸುವಿಕೆ, ಕಡತೋಕ ಮಂಜುನಾಥ ಭಾಗವತರ ಒಡನಾಟ ಮಾರ್ಗದರ್ಶನಗಳಿಂದ ಲಕ್ಷ್ಮೀಶ ಅಮ್ಮಣ್ಣಾಯರು ಬಹುಬೇಗ ಪ್ರಸಿದ್ಧಿಯ ಪಥದತ್ತ ಮುನ್ನಡೆದರು.  ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು  ಮೇಳಕ್ಕೆ ಸೇರಿದ ಎರಡನೇ ವರ್ಷದಲ್ಲೇ ಪೀಠಿಕೆ ಬಾರಿಸಲು ಅವಕಾಶ ನೀಡಿದರು. ಲಕ್ಷ್ಮೀಶ ಅಮ್ಮಣ್ಣಾಯರು ಚೆಂಡೆ ಬಾರಿಸುವ ಸಂದರ್ಭಗಳಲ್ಲೆಲ್ಲಾ ಸ್ವತಃ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ಮದ್ದಳೆ ಬಾರಿಸಲು ಕುಳಿತು ಹುರಿದುಂಬಿಸುತ್ತಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ಬಲ್ಪದಲ್ಲಿದ್ದ ಅವರ ಜಾಗ ಮಾರಾಟವಾಗುವ ಸಂದರ್ಭದಲ್ಲಿ  ಕೃಷಿಯನ್ನು ನೋಡಿಕೊಳ್ಳಬೇಕಾದ ಕಾರಣದಿಂದ ಲಕ್ಷ್ಮೀಶ ಅಮ್ಮಣ್ಣಾಯರು ಧರ್ಮಸ್ಥಳ ಮೇಳವನ್ನು ಬಿಡಬೇಕಾಗಿ ಬಂತು. ಆದರೂ ಆಮೇಲೆ ವಿವಿಧ ಮೇಳಗಳಲ್ಲಿ ತಿರುಗಾಟ ಮಾಡಿದ್ದರು. 

1958ರಲ್ಲಿ ಸುಳ್ಯ ತಾಲೂಕಿನ ಪಂಜದ ಸಮೀಪ ಬಲ್ಪ ಗ್ರಾಮದ ಮೂಡ್ನೂರು ಮನೆಯಲ್ಲಿ ಹುಟ್ಟಿದ  ಲಕ್ಷ್ಮೀಶ ಅಮ್ಮಣ್ಣಾಯರು ಮದ್ದಳೆಗಾರನಾಗಿ ಧರ್ಮಸ್ಥಳ ಮೇಳದಲ್ಲಿ 4 ವರ್ಷಗಳು, ಮಂಗಳಾದೇವಿ ಮತ್ತು ಬಪ್ಪನಾಡು ಮೇಳಗಳಲ್ಲಿ ತಲಾ 2 ವರ್ಷಗಳು, ಪುತ್ತೂರು, ಅರುವ, ಕರ್ನಾಟಕ ಮೇಳಗಳಲ್ಲಿ ತಲಾ 1 ವರ್ಷ, ಕುಂಬ್ಳೆ ಮೇಳದಲ್ಲಿ 4 ವರ್ಷ, ಕದ್ರಿ ಮೇಳದಲ್ಲಿ ಸುಮಾರು 7 ವರ್ಷಗಳ ಕಾಲ ತಿರುಗಾಟ ನಡೆಸಿದ್ದಾರೆ. ಯಕ್ಷಗಾನದಲ್ಲಿ ಗುರುಗಳು ಶ್ರೀ ಮುಂಡ್ರುಪ್ಪಾಡಿ ಶ್ರೀಧರ ರಾವ್ ಮತ್ತು ತಂದೆಯವರಾದ ಶ್ರೀ ವಿಷ್ಣು ಅಮ್ಮಣ್ಣಾಯರು. ಲಕ್ಷ್ಮೀಶ ಅಮ್ಮಣ್ಣಾಯರ ತಂದೆ  ಶ್ರೀ ವಿಷ್ಣು ಅಮ್ಮಣ್ಣಾಯ ತಾಯಿ  ಶ್ರೀಮತಿ ಲಕ್ಷ್ಮೀ, ಪತ್ನಿ ಶ್ರೀಮತಿ ಗೀತಾ ಎಲ್. ಅಮ್ಮಣ್ಣಾಯ, ಮಗಳು ವಿಭಾರಾಣಿ(ಬರಹಗಾರ್ತಿ, ಸಾಹಿತಿ), ಅಳಿಯ ಕೃಷ್ಣಪ್ರಕಾಶ ಉಳಿತ್ತಾಯ(ಖ್ಯಾತ ಯುವ ಮದ್ದಳೆಗಾರ, ಕರ್ನಾಟಕ ಬ್ಯಾಂಕ್ ಅಧಿಕಾರಿ, ಸೃಜನಶೀಲ ಸಾಹಿತಿ ), ಮಗ ಗುರುಮೂರ್ತಿ, ಸೊಸೆ  ಅನುಷ್ಕಾ (ಸಂಗೀತ ಪ್ರವೀಣೆ) ಮಗಳು ಶುಭಾರಾಣಿ, ಅಳಿಯ ಕಾರ್ತಿಕೇಯ. 

“ಒಂದು ಕಾಲದಲ್ಲಿ ಮೈಕ್ ವ್ಯವಸ್ಥೆ ಹೇಗಿತ್ತು ಅಂದರೆ, ಇಡೀ ರಂಗಸ್ಥಳದಲ್ಲಿ ಎರಡೇ ಮೈಕ್ ಇತ್ತು. ಒಂದು ಮೈಕ್ ಭಾಗವತರಿಗಿಂತ ಸ್ವಲ್ಪ ದೂರವೇ ಇತ್ತು. ಈಗಿನ ಹಾಗೆ ಭಾಗವತರ ಮುಖದ ಸಮೀಪ ಇರಲಿಲ್ಲ. ಆಗ ಭಾಗವತರ ಪದ್ಯ, ಚೆಂಡೆ, ಮದ್ದಳೆಗಳ ಸಮನ್ವಯವು ನಾದದಲ್ಲಿ ಪ್ರತಿಫಲಿಸಿ ಸುಂದರವಾಗಿ ಮೂಡುತ್ತಿದ್ದುವು. ಯಾವಾಗ ಮೈಕ್ ಭಾಗವತರ ಮುಖದ ಸಮೀಪಕ್ಕೆ ಬಂತೋ ಆಗ ಮದ್ದಳೆಯ ನಾದವೂ ಅನಿವಾರ್ಯವಾಗಿ ಏರಿಕೆಯನ್ನು ಬಯಸಿತು. ಮದ್ದಳೆಗೆ ಮೈಕ್ ಇಡುವುದರಲ್ಲಿ ಒಂದು ನಿಪುಣತೆಯಿದೆ. ಮದ್ದಳೆಯ ಎರಡೂ ಬದಿಗೆ ಮೈಕ್ ಇಡಬೇಕು. ಬಲಕ್ಕೆ ಇಡುವ ಮೈಕ್‍ನ ಶಬ್ದಕ್ಕಿಂತ ಎಡಕ್ಕೆ ಇಡುವ ಮೈಕ್‍ನ Volume ಕಡಿಮೆ ಇಡಬೇಕು. ಸುಮಾರು ಅರ್ಧದಷ್ಟು ಕಡಿಮೆ. ಹಾಗೂ ಮೈಕ್‍ನ್ನು ಮದ್ದಳೆಗಿಂತ ಎಷ್ಟು ದೂರದಲ್ಲಿ ಇಡಬೇಕು ಎಂದು ಮದ್ದಳೆಗಾರನಿಗೆ ತಿಳಿದಿರಬೇಕು. ಈ ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳದಿದ್ದರೆ ಮದ್ದಳೆಯ ನಾದವೇ ಅತಿಯಾಗಿ ಕೇಳಿಸಿ ಚೆಂಡೆಯ ತೀವ್ರತೆ ಕಡಿಮೆಯಾದೆಂತೆನಿಸುತ್ತದೆ. ಧ್ವನಿವರ್ಧಕಗಳನ್ನು ಉಪಯೋಗಿಸಲು ಹಿಮ್ಮೇಳದವರಿಗೆ ಗೊತ್ತಿರಬೇಕು. ಇದಕ್ಕೇ ಹೇಳುವುದು ಸಮನ್ವಯತೆ ಬೇಕು ಅಂತ. ಇದನ್ನೆಲ್ಲಾ ನೋಡುವಾಗ ಈ ರೀತಿಯ ವ್ಯವಸ್ಥೆಗಳನ್ನು ನಿರ್ಧರಿಸಲು ಸರಿಯಾದ ಒಬ್ಬ ರಂಗತಂತ್ರಜ್ಞ, ನಿರ್ದೇಶಕ ಬೇಕಾಗುತ್ತದೆ. ಅವರ ಮಾತೇ ಅಂತಿಮವಾಗಿರಬೇಕು”. ಎಂದು ಶ್ರೀ ಲಕ್ಷ್ಮೀಶ ಅಮ್ಮಣ್ಣಾಯರು ಹೇಳುತ್ತಾರೆ. 

ಹೇಮಸ್ವಾತಿ ಕುರಿಯಾಜೆ ಮತ್ತು ದೇವಿಕಾ ಕುರಿಯಾಜೆ ವಿದ್ಯಾರ್ಜನೆಯ ಜೊತೆ ಕಲಾಸೇವೆ (Hemaswathi Kuriyaje and Devika Kuriyaje)

ಯಕ್ಷಗಾನವು ಶ್ರೇಷ್ಠ ಕಲೆ ಎಂಬ ಅರ್ಥದಲ್ಲಿ ಗಂಡುಕಲೆ ಎಂದು ಪ್ರಸಿದ್ಧವಾಗಿದೆ. ಹೆಣ್ಣು ಮಕ್ಕಳೂ ಗಂಡು ಕಲೆಯಲ್ಲಿ ತೊಡಗಿಸಿಕೊಂಡು ಕಲಾಸೇವೆಯನ್ನು ಮಾಡುತ್ತಿದ್ದಾರೆ. ರಂಗವೇರಿ ಅಭಿನಯಿಸುತ್ತಿದ್ದಾರೆ. ಬಾಲಕಲಾವಿದ ಕಲಾವಿದೆಯರನ್ನು ವೃತ್ತಿಕಲಾವಿದರಿಗೆ ಹೋಲಿಸುವುದು ಸರಿಯಲ್ಲ. ಆದರೂ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕಾದದ್ದು ಧರ್ಮ. ವಿದ್ಯಾರ್ಜನೆಯ ಜೊತೆ ಕಲಾಸೇವೆಯನ್ನು ಮಾಡುತ್ತಾ ಹೊಳೆದು ಕಾಣಿಸಿಕೊಳ್ಳುತ್ತಿರುವ ಬಾಲಕ ಬಾಲಕಿಯರನ್ನು ನಾವು ಪ್ರೋತ್ಸಾಹಿಸೋಣ. ನಮ್ಮೆಲ್ಲರ ಪ್ರೋತ್ಸಾಹ ಉತ್ತೇಜನವು ಇನ್ನಷ್ಟು ಕಲಾಸೇವೆಯನ್ನು ಮಾಡುವಲ್ಲಿ ಅವರಿಗೆ ಟಾನಿಕ್ ಆಗಿ ಪರಿಣಮಿಸಲಿ. ಮೊದಲೆಲ್ಲಾ ಬಾಲಕಿಯರ ಕಲಾಕಲಿಕೆ ಸಂಗೀತಕ್ಕೆ ಮಾತ್ರ ಸೀಮಿತವಾಗಿತ್ತು. ಇಂದು ಹಾಗಿಲ್ಲ. ನಮ್ಮ ಎಲ್ಲಾ ಕಲಾ ಪ್ರಾಕಾರ ಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಯಕ್ಷಗಾನದಲ್ಲೂ ಕೂಡಾ. ಅಂತಹ ಅನೇಕ ವಿದ್ಯಾರ್ಥಿನಿಯರ ಸಾಲಿನಲ್ಲಿ ಕು| ಹೇಮಸ್ವಾತಿ ಕುರಿಯಾಜೆ ಮತ್ತು ಈಕೆಯ ಸಹೋದರಿ ಕು| ದೇವಿಕಾ ಕುರಿಯಾಜೆ ಸೇರಿಕೊಳ್ಳುತ್ತಾರೆ.
ಕುರಿಯಾಜೆ ಸಹೋದರಿಯರು ಶ್ರೀ ಉದಯಶಂಕರ ಕುರಿಯಾಜೆ ಮತ್ತು ಶ್ರೀಮತಿ ವಸಂತಿಲಕ್ಷ್ಮಿ ದಂಪತಿಗಳ ಪುತ್ರಿಯರು. ಸುಳ್ಯ ತಾಲೂಕು ಕೊಡಿಯಾಲ ಗ್ರಾಮದ ಕುರಿಯಾಜೆ ಮನೆ. ಹೇಮಸ್ವಾತಿಯ ಜನ್ಮ ದಿನಾಂಕ 15.05.2003. ಬೆಳ್ಳಾರೆ ಪದವಿಪೂರ್ವ ಕಾಲೇಜಿನಲ್ಲಿ ಮತ್ತು ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಳು. ಕು| ದೇವಿಕಾ ಜನಿಸಿದ್ದು 2004 ಡಿಸೆಂಬರ್ 11ರಂದು. ಬೆಳ್ಳಾರೆ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮತ್ತು ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಳು. ಇಬ್ಬರೂ ಈಗ ಕಾಲೇಜು ಶಿಕ್ಷಣ ಪಡೆಯುತ್ತಿದ್ದಾರೆ. ಇವರಿಬ್ಬರೂ ಯಕ್ಷಗಾನ ನಾಟ್ಯ ಕಲಿತದ್ದು ಅಧ್ಯಾಪಕ, ಕಲಾವಿದ ಹಾಗು ಯಕ್ಷರಂಗ ಬೆಳ್ಳಾರೆಯ ಸಂಚಾಲಕ ಶ್ರೀ ವಾಸುದೇವ ರೈಗಳಿಂದ. ಸಂಗೀತ ಹೇಳಿಕೊಟ್ಟ ಗುರುಗಳು ಶ್ರೀಮತಿ ಸುಮತಿ ಬೆಳ್ಳಾರೆ, ಶ್ರೀಮತಿ ಮಾಲಿನಿ ಮತ್ತು ಶ್ರೀಮತಿ ವೀಣಾ ರಾಘವೇಂದ್ರ (ಗಾನಸರಸ್ವತಿ ಕಲಾಶಾಲೆ, ನೆಹರು ನಗರ, ಪುತ್ತೂರು) ಶ್ರೀಮತಿ ಯೋಗೀಶ್ವರೀ ಜಯಪ್ರಕಾಶ್ ಇವರಿಂದ ಭಾರತನಾಟ್ಯವನ್ನೂ ಕಲಿಯುತ್ತಿದ್ದಾರೆ.

ಕು| ಹೇಮಸ್ವಾತಿಯು ಮೊದಲು ರಂಗವೇರಿದ್ದು ಅಭಿಮನ್ಯು ಕಾಳಗದ ದ್ರೋಣನಾಗಿ. ಯಕ್ಷರಂಗ, ಬೆಳ್ಳಾರೆ ತಂಡದ ಸದಸ್ಯೆಯಾಗಿ ಸ್ಪರ್ಧೆ ಹಾಗೂ ಇನ್ನಿತರ ಪ್ರದರ್ಶನಗಳಲ್ಲಿ ಭಾಗವಹಿಸಿರುತ್ತಾಳೆ. ಜಾಂಬವತೀ ಕಲ್ಯಾಣ ಪ್ರಸಂಗದ ಶ್ರೀಕೃಷ್ಣನಾಗಿ 25ಕ್ಕೂ ಹೆಚ್ಚು ಬಾರಿ, ರಾಮಾಂಜನೇಯ ಪ್ರಸಂಗದ ಹನುಮಂತನಾಗಿ 13 ಬಾರಿ, ಕೃಷ್ಣಲೀಲೆ- ಕಂಸ ವಧೆಯ ಕೃಷ್ಣನಾಗಿ, ಕುಶಲವರ ಕಾಳಗದ ಕುಶನಾಗಿ ರಂಗವೇರಿದ್ದಾಳೆ. ಸಂಪಾಜೆ ಕಲ್ಲುಗುಂಡಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಯಕ್ಷರಂಗ ತಂಡದಲ್ಲಿದ್ದು ಇಂದ್ರಜಿತು ಕಾಳಗದ ಲಕ್ಷ್ಮಣನಾಗಿ ಅಲ್ಲದೆ ಕಲಾವಿದ, ಉದ್ಯಮಿ ಸಂಘಟಕ ಶ್ರೀ ಬೆಳ್ಳಾರೆ ರಾಮ ಜೋಯಿಸರ ಸಂಯೋಜನೆಯ ಮಡಿಕೇರಿ ಸಿದ್ಧಾಪುರದಲ್ಲಿ ನಡೆದ ಪ್ರದರ್ಶನದಲ್ಲೂ ಲಕ್ಷ್ಮಣನಾಗಿ ಅಭಿನಯಿ ಸಿದ್ದಳು.

ಅಂದು ರಂಗದ ರಾಜ ಶ್ರೀ ರಾಧಾಕೃಷ್ಣ ನಾವುಡರು ಇಂದ್ರಜಿತುವಾಗಿಯೂ ಕಟೀಲು ಮೇಳದ ಸ್ತ್ರೀಪಾತ್ರಧಾರಿ ಮಹೇಶ್ ಸಾಣೂರು ಅವರು ಶ್ರೀರಾಮನ ಪಾತ್ರವನ್ನೂ ನಿರ್ವಹಿಸಿದ್ದರು. ಬೆಳ್ಳಾರೆಯಲ್ಲಿ ಹಿರಣ್ಯಾಕ್ಷನ ಪಾತ್ರವನ್ನು ಮಾಡಿದಾಗ ಈಕೆಯ ತಂಗಿ ದೇವಿಕಾ ಕುರಿಯಾಜೆ ಭೂದೇವಿ ಪಾತ್ರ ವಹಿಸಿದ್ದಳು. ಖ್ಯಾತ ಭಾಗವತರಾದ ಪದ್ಯಾಣ ಗಣಪತಿ ಭಟ್ಟರು ಇವರ ಬಂಧುಗಳು. ಉದಯಶಂಕರ ಕುರಿಯಾಜೆಯವರು ಬಾಯಾರು ಸೌದಿಮೂಲೆಯವರು. (ಪದ್ಯಾಣ ಮನೆತನ) ಪದ್ಯಾಣ ಗಣಪತಿ ಭಟ್ಟರ ಮನೆಗೆ ಹೋಗಿ ಹೇಮಸ್ವಾತಿಯು ಭಾಗವತಿಕೆಯನ್ನು ಕಲಿಯುತ್ತಿದ್ದಾಳೆ. ರಂಗದಲ್ಲಿ ಪೂರ್ವರಂಗದ ಪದ್ಯಗಳನ್ನು ಹಾಡಿರುತ್ತಾಳೆ.ಈಗ ತಾಳಮದ್ದಳೆ ಕೂಟಗಳಲ್ಲೂ, ಯಕ್ಷಗಾನ ಪ್ರದರ್ಶನಗಳಲ್ಲೂ ಹಾಡುತ್ತಾಳೆ. ಭರತನಾಟ್ಯ ಸೀನಿಯರ್ ಕಲಿಯುತ್ತಿದ್ದು ಗುರು ಶ್ರೀಮತಿ ಯೋಗೀಶ್ವರೀ ಜಯಪ್ರಕಾಶ್‍ರ ವೈಷ್ಣವಿ ನಾಟ್ಯಾಲಯ, ಪುತ್ತೂರು ತಂಡದಲ್ಲಿದ್ದು ಪುತ್ತೂರು ಜಾತ್ರೋತ್ಸವ, ಉಡುಪಿ ರಾಜಾಂಗಣ, ಬೆಳ್ಳಾರೆ ಅಜಪಿಲ ಮಹಾಲಿಂಗೇಶ್ವರ ದೇವಸ್ಥಾನದ ಪ್ರದರ್ಶನಗಳಲ್ಲಿ ಹಾಗೂ ಅನೇಕ ಕಡೆ ತ್ರಿಕಾಲ ಪೂಜೆಯ ಅಷ್ಟಾವಧಾನ ಕಾರ್ಯಕ್ರಮಗಳಲ್ಲೂ ನೃತ್ಯ ಪ್ರದರ್ಶನ ನೀಡಿರುತ್ತಾಳೆ.


ಕಿರಿಯವಳು ದೇವಿಕಾ ಕುರಿಯಾಜೆ ಜೂನಿಯರ್ ಗ್ರೇಡ್ ಸಂಗೀತ ಉತ್ತೀರ್ಣಳಾಗಿದ್ದು ಭರತನಾಟ್ಯದಲ್ಲೂ ಜೂನಿಯರ್ ಪೂರೈಸಿ ಸೀನಿಯರ್ ಕಲಿಯುತ್ತಿದ್ದಾಳೆ. ಅಕ್ಕನ ಜೊತೆಯಲ್ಲಿ ಪುತ್ತೂರು, ಉಡುಪಿ, ಬೆಳ್ಳಾರೆ ಈಶ್ವರಮಂಗಲ ಮೊದಲಾದೆಡೆ ಭಾಗವಹಿಸಿರುತ್ತಾಳೆ. ಯಕ್ಷಗಾನ ವೇಷ ಮೊದಲು ನಿರ್ವಹಿಸಿದ್ದು ಕೋಟೆ ಸುಬ್ರಹ್ಮಣ್ಯ ಸ್ವಾಮಿ ದೇವಳದಲ್ಲಿ ರಾಮಾಂಜನೇಯ ಪ್ರಸಂಗದ ಸೀತೆಯಾಗಿ. ಜಾಂಬವತಿ ಕಲ್ಯಾಣದ ಬಲರಾಮ, ಕುಶಲವರ ಕಾಳಗದ ಶ್ರೀರಾಮ, ಲಕ್ಷ್ಮಣ, ಹಿರಣ್ಯಾಕ್ಷ ವಧೆಯ ಭೂದೇವಿ (2 ಬಾರಿ), ಆರು ಬಾರಿ ಮಾಯಾ ಪೂತನಿಯ ಪಾತ್ರವನ್ನು ನಿರ್ವಹಿಸಿದ್ದಾಳೆ.


“ಭರತನಾಟ್ಯ ಕಲಿತದ್ದು ಯಕ್ಷಗಾನಕ್ಕೂ, ಯಕ್ಷಗಾನ ನಾಟ್ಯ ಕಲಿತದ್ದು ಭರತನಾಟ್ಯ ಕಲಿಕೆಗೂ ಅನುಕೂಲವಾಯಿತು. ನಾವಿನ್ನೂ ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಕಲಾಸೇವೆಯನ್ನೂ ಮಾಡುತ್ತಿದ್ದೇವೆ. ಮನೆಯವರ, ಶಾಲಾ ಶಿಕ್ಷಕರ, ಕಲಾವಿದ್ಯೆಗಳನ್ನು ಹೇಳಿಕೊಡುತ್ತಿರುವ ಗುರುಗಳ ಆಶೀರ್ವಾದದಿಂದ ಇದು ಸಾಧ್ಯವಾಯಿತು” ಎಂದು ಕುರಿಯಾಜೆ ಸಹೋದರಿಯರು ಹೇಳುತ್ತಾರೆ. ಹೇಮಸ್ವಾತಿಯು ವಿಜ್ಞಾನ ವಸ್ತುಪ್ರದರ್ಶನದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಹಾಗೂ ದೇವಿಕಾ ಶಾಲಾ ತಂಡದ ರಾಜ್ಯಮಟ್ಟದ ನಾಟಕ ಪ್ರದರ್ಶನಗಳಲ್ಲೂ ಭಾಗವಹಿಸಿರುತ್ತಾರೆ. ಕು| ಹೇಮಸ್ವಾತಿಯು ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಪ್ರತಿಭಾ ಕಾರಂಜಿ ಸೀನಿಯರ್ ವಿಭಾಗದ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದಿರುತ್ತಾಳೆ. ಬಾಲ ಕಲಾವಿದೆಯರೀರ್ವರಿಗೂ ಶುಭಾಶಯಗಳು. ಉನ್ನತ ವ್ಯಾಸಂಗವು ಚೆನ್ನಾಗಿ ನಡೆಯಲಿ. ಉಜ್ವಲ ಭವಿಷ್ಯವು ದೊರಕಲಿ. ಬಾಳು ಹಸನಾಗಲಿ.

ಲೇಖಕ: ರವಿಶಂಕರ್ ವಳಕ್ಕುಂಜ 

ಶ್ರೀ ಮಿಜಾರು ತಿಮ್ಮಪ್ಪ ಹಾಸ್ಯಗಾರ – ಪುರಾಣ ಮತ್ತು ತುಳು ಪ್ರಸಂಗಗಳಲ್ಲಿ ರಂಜಿಸುವ ಹಾಸ್ಯಗಾರ (Sri Mijaru Thimmappa Hasyagara)

ನವರಸಗಳಲ್ಲಿ ಒಂದು ಹಾಸ್ಯ. ಪ್ರತಿಯೊಂದು ರಸಗಳೂ ಉತ್ಪತ್ತಿ ಸ್ಥಾನ, ಸಂಕೇತಿಸುವ ಬಣ್ಣ, ಅಭಿಮಾನೀ ದೇವತೆ, ಸ್ಥಾಯೀ ಭಾವ, ವಿರುದ್ಧ ರಸ ಎಂಬ ಐದು ವಿಚಾರಗಳನ್ನು ಒಳಗೊಂಡಿರುತ್ತದೆ. ವಿಕಾರ ವೇಷಗಳು, ಕುಣಿತ, ವಿಕಟ ನಗು, ಸಂಭಾಷಣೆಗಳು ಹಾಸ್ಯ ರಸದ ಉತ್ಪತ್ತಿಗೆ ಕಾರಣವಾಗುತ್ತದೆ. ಸಂಕೇತಿಸುವ ಬಣ್ಣ ಬಿಳಿ. ಗಣಪತಿಯೇ ದೇವರು. ಸ್ಥಾಯೀ ಭಾವ ನಗು. ಯಕ್ಷಗಾನದಲ್ಲಿ ಹಾಸ್ಯ ರಸಕ್ಕೂ ಹಾಸ್ಯಗಾರನಿಗೂ ವಿಶೇಷ ಸ್ಥಾನವಿದೆ. ಗೌರವವಿದೆ. ಮೊದಲಿನ ಕಾಲದಲ್ಲಿ ಎಲ್ಲಾ ವೇಷಗಳನ್ನು ಮಾಡುತ್ತಾ ಹಂತ ಹಂತವಾಗಿ ಸಾಗಿ ಬಂದವನೇ ಹಾಸ್ಯಗಾರನಾಗುತ್ತಾನೆ. ಹಾಸ್ಯಗಾರನು ಅನುಭವಿಯಾದುದರಿಂದ ಕಲಿಕಾಸಕ್ತರು ಮಾಹಿತಿಗಳನ್ನು ಅವರಲ್ಲಿಯೇ ಕೇಳಿ ರಂಗವೇರುವುದು ಮೊದಲಿನಿಂದಲೂ ಬಂದ ರೀತಿಯಾಗಿತ್ತು. ವನಪಾಲಕ, ಬಾಗಿಲ ದೂತ ಮೊದಲಾದ ವೇಷಗಳಲ್ಲಿ ಸಭಿಕರನ್ನು ನಗಿಸಿದಲ್ಲಿಗೆ ಕಲಾವಿದ ಹಾಸ್ಯಗಾರ ಎನಿಸಿಕೊಳ್ಳಲಾರ. ಪುರಾಣ ಪ್ರಸಂಗಗಳ ನಾರದ, ಅಕ್ರೂರ, ಸಂಜಯ, ಪ್ರಾತಿಕಾಮಿ, ಬಾಹುಕ, ಕಟ್ಟು ಹಾಸ್ಯಗಳಿಗೆ ಸಂಬಂಧಿಸಿದ ಪಾತ್ರಗಳನ್ನೂ ನಿರ್ವಹಿಸುವಾಗ ಹಾಸ್ಯಗಾರನೆಷ್ಟು ಪ್ರಬುದ್ಧನೆಂದು ಗುರುತಿಸಬಹುದು. ಪುರಾಣದ ಹೆಚ್ಚಿನ ಎಲ್ಲಾ ಪ್ರಸಂಗಗಳಲ್ಲಿ ನಾರದನ ಪಾತ್ರ ಇರುತ್ತದೆ. ಅಧ್ಯಯನಶೀಲನಲ್ಲದಿದ್ದರೆ ಎಲ್ಲಾ ಪ್ರಸಂಗದ ನಾರದನಾಗಿ ಅಭಿನಯಿಸಲು ಸಾಧ್ಯವೇ ಇಲ್ಲ. ಹಾಸ್ಯಗಾರರು ನಿರ್ವಹಿಸುವ ಪಾತ್ರಗಳು ಪ್ರಸಂಗವನ್ನು ಮುನ್ನಡೆಸಲು ಸಹಕಾರಿಯಾಗುವಂತಿರಬೇಕು. ಜತೆ ವೇಷಗಳನ್ನು ಗೆಲ್ಲಿಸುವಂತಿರಬೇಕು. ಕೊಲ್ಲುವಂತಿರಬಾರದು. ಒಂದೇ ರಾತ್ರಿಯಲ್ಲಿ ಒಂದೇ ಪ್ರಸಂಗದಲ್ಲಿ ಬಾಗಿಲ ದೂತನಾಗಿ, ವನಪಾಲಕನಾಗಿ, ರಾಕ್ಷಸದೂತನಾಗಿ, ನಾರದನಂತಹ ಸಾತ್ವಿಕ, ಭಾವನಾತ್ಮಕ ಪಾತ್ರಗಳಲ್ಲಿ (ಅಕ್ರೂರ, ಬಾಹುಕ, ಸಂಜಯ ಮೊದಲಾದವು) ಅಭಿನಯಿಸಬೇಕಾಗುತ್ತದೆ. ಇದು ಅಷ್ಟು ಸುಲಭವಲ್ಲ. ಮಂಥರೆ, ಚಂದ್ರಾವಳಿ ವಿಲಾಸದ ಅತ್ತೆ, ಚಿತ್ರಾಕ್ಷಿ ಕಲ್ಯಾಣ, ಮನ್ಮಥೋಪಾಖ್ಯಾನ ಮೊದಲಾದ ಪ್ರಸಂಗಗಳ ಮುದುಕಿ ಪಾತ್ರಗಳ ಬಗ್ಗೆ ಹೇಳುವುದಾದರೆ ಎಲ್ಲಾ ವಿಭಿನ್ನ ಸ್ವಭಾವದ ಪಾತ್ರಗಳು. ಬಣ್ಣದ ಮನೆಯಲ್ಲಿ ಮೇಕಪ್ ಮಾಡಿ ಸೀರೆ ಉಟ್ಟು ಸಿದ್ಧರಾಗಬಹುದು. ಆದರೆ ರಂಗವೇರಿ ಅಭಿನಯಿಸುವುದು, ಪಾತ್ರಗಳಿಗೆ ನ್ಯಾಯ ಒದಗಿಸಿ ಕೊಡುವುದು ಅತ್ಯಂತ ಕಷ್ಟ. ನೋಡಿ ಕಲಿತ, ಕೇಳಿ ತಿಳಿದ ಮಾಡಿ ಅನುಭವವುಳ್ಳ ಹಾಸ್ಯಗಾರರು ಮಾತ್ರ ಈ ವೇಷಗಳನ್ನು ನಿರ್ವಹಿಸಿ ಗೆಲ್ಲಬಲ್ಲರು. ನಡೆಯಿಂದಲೂ ನುಡಿಯಿಂದಲೂ ಆತ ಚುರುಕಾಗಿರಬೇಕು. ಪ್ರತ್ಯುತ್ಪನ್ನಮತಿಯಾಗಿರಬೇಕು. ನೇಪಥ್ಯದಲ್ಲಿ ಕ್ಷಿಪ್ರಾತಿಕ್ಷಿಪ್ರವಾಗಿ ಸಿದ್ಧವಾಗುವ ಕಲೆಯೂ ಕರಗತವಾಗಿರಬೇಕು. ಹಿರಿಯ ಅನೇಕ ಹಾಸ್ಯಗಾರರು ಹೀಗೆ ಪ್ರಸಿದ್ಧರಾದರು. ಕೆಲವರು ಪುರಾಣ ಪ್ರಸಂಗಗಳಲ್ಲಿ ರಂಜಿಸಿದರು. ಕೆಲವರು ತುಳು ಪ್ರಸಂಗಗಳಲ್ಲಿ ಮಿಂಚಿದರು. ಪುರಾಣ ಮತ್ತು ತುಳು ಪ್ರಸಂಗಗಳಲ್ಲಿ ಸರಿಸಮನಾಗಿ ಪ್ರಸಿದ್ಧಿಯನ್ನೂ ಪಡೆದವರಿದ್ದಾರೆ. ಪ್ರಸ್ತುತ ಪುರಾಣ ಮತ್ತು ತುಳು ಪ್ರಸಂಗಗಳಲ್ಲಿ ಅಭಿನಯಿಸಿ ಹೆಸರು ಗಳಿಸಿದವರು ಶ್ರೀ ತಿಮ್ಮಪ್ಪ ಹಾಸ್ಯಗಾರರು. ತಿಮ್ಮಪ್ಪ ಹಾಸ್ಯಗಾರರು ತೆಂಕು ತಿಟ್ಟಿನ ಅನುಭವೀ ಹಾಸ್ಯಗಾರರಲ್ಲೊಬ್ಬರು. ಕಳೆದ 38 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.

ಶ್ರೀಯುತರು ಮಂಗಳೂರು ತಾಲೂಕಿನ ಬಡಗ ಎಡಪದವು ಗ್ರಾಮದ ಮಿಜಾರು ಎಂಬಲ್ಲಿ 1963ನೇ ಇಸವಿ ಶ್ರೀ ಹೊನ್ನಯ್ಯ ಶೆಟ್ಟಿಗಾರ್ ಮತ್ತು ಶ್ರೀಮತಿ ಸೀತಮ್ಮ ದಂಪತಿಗಳ ಮಗನಾಗಿ ಜನಿಸಿದರು. ಓದಿದ್ದು ಎಸ್.ಎಸ್.ಎಲ್.ಸಿ ವರೆಗೆ. 4ನೇ ತರಗತಿ ವರೆಗೆ ಮಿಜಾರು ದಡ್ಡಿ ಶಾಲೆಯಲ್ಲಿ, 5 – 7ರ ವರೆಗೆ ಮಿಜಾರು ಶಾಲೆಯಲ್ಲಿ ಮತ್ತು 8ರಿಂದ 10ರ ವರೆಗೆ ಎಡಪದವಿನ ಶ್ರೀ ವಿವೇಕಾನಂದ ಪ್ರೌಢ ಶಾಲೆಯಲ್ಲಿ ವಿದ್ಯಾಭಾಸ ಮಾಡಿದ್ದರು. ಮನೆಯವರಾರೂ ಯಕ್ಷಗಾನ ಕಲಾವಿದರಲ್ಲದಿದ್ದರೂ ಕಲಾಸಕ್ತರಾಗಿದ್ದರು. ತಿಮ್ಮಪ್ಪನವರ ತೀರ್ಥರೂಪರು ಹೊನ್ನಯ್ಯ ಶೆಟ್ಟಿಗಾರರು ಶನಿಕಥೆ ವಾಚನ ಮಾಡುತ್ತಿದ್ದರು. ತಿಮ್ಮಪ್ಪ ಅವರಿಗೆ ಬಾಲ್ಯದಲ್ಲಿಯೇ ಯಕ್ಷಗಾನಾಸಕ್ತಿಯಿತ್ತು. ಊರಲ್ಲಿ ನಡೆಯುತ್ತಿದ್ದ ಪ್ರದರ್ಶನಗಳನ್ನು ತಪ್ಪದೆ ನೋಡುತ್ತಿದ್ದರು. ತಾನೂ ಕಲಾವಿದನಾಗಬೇಕೆಂದು ನಿರ್ಧರಿಸುವಷ್ಟು ಯಕ್ಷಗಾನ ಕಲೆಯು ಇವರನ್ನು ಆಕರ್ಷಿಸಿತ್ತು. ಖ್ಯಾತ ಕಲಾವಿದ ಮುಚ್ಚೂರು ಹರೀಶ ಶೆಟ್ಟಿಗಾರರಿಂದ ಹೆಜ್ಜೆಗಾರಿಕೆಯನ್ನು ಅಭ್ಯಸಿಸಿದರು. ಸರಳ ಸಾತ್ವಿಕ ಸ್ವಭಾವದ ಹರೀಶ್ ಶೆಟ್ಟಿಗಾರರು ಸಂಭಾಷಣೆಗಳನ್ನು ಉತ್ತಮವಾಗಿ ವಿದ್ಯಾರ್ಥಿಗಳಿಗೆ ಬರೆದು ಕೊಡುತ್ತಿದ್ದರು ಎಂಬುದನ್ನು ಅವರಿಂದ ಕಲಿತ ವಿದ್ಯಾರ್ಥಿಗಳೂ ಅವರನ್ನು ಹತ್ತಿರದಿಂದ ಬಲ್ಲವರೂ ಹೇಳುತ್ತಾರೆ. ಶಾಲಾ ವಿದ್ಯಾರ್ಥಿಯಾಗಿದ್ದಾಗ ಮುಚ್ಚೂರು ದೇವಸ್ಥಾನದಲ್ಲಿ ನಡೆದ ಪ್ರದರ್ಶನ ‘ಕಚ ದೇವಯಾನಿ’ ಪ್ರಸಂಗದಲ್ಲಿ ನಾರದನಾಗಿ ಮಿಜಾರು ತಿಮ್ಮಪ್ಪ ಅವರು ರಂಗವೇರಿದರು.  ಎಸ್.ಎಸ್.ಎಲ್.ಸಿ ಆದ ನಂತರ ಯಕ್ಷಗಾನವನ್ನು ವೃತ್ತಿಯಾಗಿ ಸ್ವೀಕರಿಸುವ ನಿರ್ಣಯವನ್ನು ಮಾಡಿದ್ದರು. ಶಾಲಾ ವಿದ್ಯಾರ್ಥಿಯಾಗಿದ್ದಾಗ ತಿಮ್ಮಪ್ಪ ಅವರು ನಾಟಕಗಳಲ್ಲಿ ಅಭಿನಯಿಸಿದ್ದರು.  ಮಿಜಾರು ತಿಮ್ಮಪ್ಪ ಹಾಸ್ಯಗಾರರ ಮೊದಲ ತಿರುಗಾಟ ಶ್ರೀಧರ ಭಂಡಾರಿಯವರ ಸಂಚಾಲಕತ್ವದ ಪುತ್ತೂರು ಮೇಳದಲ್ಲಿ. ಖ್ಯಾತ ಹಾಸ್ಯಗಾರ ಬಂಟ್ವಾಳ ಜಯರಾಮ ಆಚಾರ್ಯರ ಜತೆ ಸಹ ವಿದೂಷಕನಾಗಿ. (1981-82) ಈ ಮೇಳದಲ್ಲಿ 3 ವರ್ಷಗಳ ತಿರುಗಾಟ. ಬಳಿಕ ಅರುವ ಶ್ರೀ ನಾರಾಯಣ ಶೆಟ್ಟರ ಸಂಚಾಲಕತ್ವದ ಅಳದಂಗಡಿ ಮೇಳದಲ್ಲಿ 2 ವರ್ಷ ಕಲಾಸೇವೆ. ನಂತರ ಶ್ರೀ ನಾರಾಯಣ ಕಮ್ತಿಯವರ ಯಾಜಮಾನ್ಯದ ಬಪ್ಪನಾಡು ಮೇಳಕ್ಕೆ. ಈ ಸಂದರ್ಭ ‘ಧರ್ಮದೈವ ಕೊಡಮಣಿತ್ತಾಯ’ ತುಳು ಪ್ರಸಂಗದ ಮುದುಕಿಯ ವೇಷ ಇವರಿಗೆ ಪ್ರಸಿದ್ಧಿಯನ್ನು ನೀಡಿತ್ತು. ಬಪ್ಪನಾಡು ಕ್ಷೇತ್ರ ಮಹಾತ್ಮೆ ಪ್ರಸಂಗದ ಎಲ್ಲಾ ಹಾಸ್ಯ ಪಾತ್ರಗಳನ್ನು ನಿರ್ವಹಿಸಿದ್ದರು. ಪುರಾಣ ಮತ್ತು ತುಳು ಸಾಮಾಜಿಕ ಪ್ರಸಂಗಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗುತ್ತಾ ಅನುಭವಗಳನ್ನು ಗಳಿಸಿ ಪಕ್ವರಾಗತೊಡಗಿದರು. ಬಪ್ಪನಾಡು ಮೇಳದಲ್ಲಿ ಎರಡು ತಿರುಗಾಟ. ಇವರ ಪ್ರತಿಭಾ ಪ್ರಧರ್ಶನವನ್ನು ನೋಡಿದ ಕರ್ನಾಟಕ ಮೇಳದ ಸಂಚಾಲಕರಾದ ಕಲ್ಲಾಡಿ ದೇವಿಪ್ರಸಾದ ಶೆಟ್ಟರು (ಪ್ರಸ್ತುತ ಕಟೀಲು ಆರೂ ಮೇಳಗಳ ಸಂಚಾಲಕರು) ಮೇಳಕ್ಕೆ ಬರಲು ಆಹ್ವಾನಿಸಿದ್ದರು. ಮುಂದಿನ ವರ್ಷ ಕರ್ನಾಟಕ ಮೇಳದಲ್ಲಿ ತಿರುಗಾಟ. ಅದೂ ಹೆಸರಾಂತ ಹಾಸ್ಯ ಕಲಾವಿದ ಮಿಜಾರು ಅಣ್ಣಪ್ಪನವರ ಜತೆ. ಕರ್ನಾಟಕ ಮೇಳವು ಪ್ರಸಿದ್ಧ ಕಲಾವಿದರ ಶ್ರೇಷ್ಠ ತಂಡವಾಗಿತ್ತು. ಮಿಜಾರು ಅಣ್ಣಪ್ಪ ಅವರೊಂದಿಗೆ ಅನೇಕ ಜತೆ ವೇಷಗಳಲ್ಲಿ ತಿಮ್ಮಪ್ಪನವರು ಕಾಣಿಸಿಕೊಂಡಿದ್ದರು. ಮಿಜಾರು ಅಣ್ಣಪ್ಪರು ಆಶೀರ್ವದಿಸಿ ಸಹಕಾರ, ಪ್ರೋತ್ಸಾಹಗಳನ್ನು ನೀಡಿದ್ದರು ಎನ್ನುವ ಮೂಲಕ ಅವರಿಗೆ ತಿಮ್ಮಪ್ಪ ಅವರು ಗೌರವವನ್ನು ಸಲ್ಲಿಸುತ್ತಾರೆ.

16 ವರ್ಷಗಳ ಕಾಲ ಸದ್ರಿ ಮೇಳದಲ್ಲಿ ವ್ಯವಸಾಯ. ಬಳಿಕ ಕುಂಟಾರು ಮೇಳದಲ್ಲಿ 2 ವರ್ಷಗಳು, ಮತ್ತೆ ಕಟೀಲು ಮೇಳದಲ್ಲಿ 2 ವರ್ಷಗಳು, ಎಡನೀರು ಮೇಳದಲ್ಲಿ 2 ವರ್ಷಗಳು, ಸುಂಕದಕಟ್ಟೆ ಮೇಳದಲ್ಲಿ 13 ವರ್ಷಗಳು, ಮತ್ತು 1 ವರ್ಷ ಮಂಗಳಾದೇವಿ ಮೇಳದಲ್ಲಿ ತಿರುಗಾಟ ನಡೆಸಿದ್ದರು. ಪುರಾಣ ಪ್ರಸಂಗದ ಎಲ್ಲಾ ಹಾಸ್ಯ ಪಾತ್ರಗಳನ್ನೂ ಕೊರತೆಯಿಲ್ಲದೆ ತುಂಬಬಲ್ಲ ಸಾಮರ್ಥ್ಯ ಇವರಿಗಿದೆ. ಕೋಟಿ ಚೆನ್ನಯ, ದೇವ ಪೂಂಜ ಪ್ರತಾಪ, ಕೋರ್ದಬ್ಬು ಬಾರಗ, ಕಾಡಮಲ್ಲಿಗೆ ಮೊದಲಾದ ತುಳು ಪ್ರಸಂಗಗಳ ವಿವಿಧ ಪಾತ್ರಗಳೂ ಮಿಜಾರು ತಿಮ್ಮಪ್ಪ ಅವರಿಗೆ ಒಳ್ಳೆಯ ಹೆಸರನ್ನು ತಂದು ಕೊಟ್ಟಿತ್ತು. ತನ್ನದೇ ಶೈಲಿಯ ನಾಟ್ಯ ಮತ್ತು ಮಾತುಗಾರಿಕೆಯಿಂದ ಇವರು ಪ್ರೇಕ್ಷಕರನ್ನು ಬಹು ಬೇಗನೆ ಆಕರ್ಷಿಸುತ್ತಾರೆ. ಮಿಜಾರಿನಲ್ಲಿ ಕಳೆದ ವರ್ಷ ಕಟ್ಟಿಸಿದ ಮನೆಯಲ್ಲಿ ಪತ್ನಿ ಶ್ರೀಮತಿ ಜಯಶ್ರೀ ಇವರೊಂದಿಗೆ ವಾಸ. ಮಿಜಾರು ತಿಮ್ಮಪ್ಪ ಹಾಸ್ಯಗಾರರಿಂದ ಇನ್ನಷ್ಟು ಕಲಾಸೇವೆಯು ನಡೆಯಲಿ. ಅರೋಗ್ಯ, ಸಕಲ ಭಾಗ್ಯಗಳನ್ನು ಕಲಾಮಾತೆಯು ನೀಡಲಿ. ಅವರ ಮನೋಕಾಮನೆಗಳನ್ನೆಲ್ಲಾ ಶ್ರೀ ದೇವರು ಅನುಗ್ರಹಿಸಲಿ. ಕಲಾಭಿಮಾನಿಗಳೆಲ್ಲರ ಪರವಾಗಿ ಶುಭಹಾರೈಕೆಗಳು.

ಲೇಖಕ: ರವಿಶಂಕರ್ ವಳಕ್ಕುಂಜ  ಫೋಟೋ: ಕೋಂಗೋಟ್ ರಾಧಾಕೃಷ್ಣ ಭಟ್ 

ಪ್ರಖ್ಯಾತ ಮದ್ದಲೆಗಾರ ಹಾಗೂ ಗುರು ಕುಮಾರ ಸುಬ್ರಹ್ಮಣ್ಯ ವಳಕ್ಕುಂಜ ಅವರಿಗೆ ಮಾತೃವಿಯೋಗ

ದಿ| ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಪುತ್ರಿ ಹಾಗೂ ದಿ| ವಳಕ್ಕುಂಜ ನಾರಾಯಣ ಭಟ್ಟರ ಪತ್ನಿ ಶ್ರೀಮತಿ ಭುವನಮಾತ ಅವರು ಇಂದು ನಿಧನರಾಗಿದ್ದಾರೆ. ಮೃತ ಭುವನಮಾತ ಅವರ ಪುತ್ರ ಈಗಾಗಲೇ ಯಕ್ಷಗಾನ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದಂತಹ ಪ್ರಖ್ಯಾತ ಹಿಮ್ಮೇಳ ಕಲಾವಿದ, ಮದ್ದಳೆಗಾರ ಹಾಗೂ ಗುರು ಕುಮಾರ ಸುಬ್ರಹ್ಮಣ್ಯ ವಳಕ್ಕುಂಜ. ಮಕ್ಕಳು, ಅಳಿಯ, ಸೊಸೆಯಂದಿರು, ಮೊಮ್ಮಕ್ಕಳು ಸಹಿತ ಅಪಾರ ಬಂಧುವರ್ಗ ಮತ್ತು ಸ್ನೇಹಿತರನ್ನು ಅಗಲಿದ ಮೃತರ ಆತ್ಮಕ್ಕೆ ಸದ್ಗತಿ ದೊರಕಲಿ ಮತ್ತು ಅವರ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ಸರ್ವರಿಗೂ ಆ ಭಗವಂತನು ನೀಡಲಿ. 

ರಾಮ್ ನರೇಶ್ ಮಂಚಿ – ಮುಂಚಿನಿಂದಲೂ ಕಲಾಸೇವೆ (ಕಲೆ ಬೆಳಗಿಸಿದ ಕ್ಯಾಮೆರಾ ಫ್ಲ್ಯಾಶ್ – ಭಾಗ 3) Ram Naresh Manchi

ಕಲೆಯ ಅಥವಾ ಸುದ್ದಿಯ ವರದಿ ಮತ್ತು ಪ್ರಸಾರದಲ್ಲಿ ವರದಿಗಾರನಷ್ಟೇ ಪಾಲು ಛಾಯಾಗ್ರಾಹಕನಿಗೂ ಇರುತ್ತದೆ. ಆದುದರಿಂದ ಒಂದು ಕಲೆಯನ್ನು ಪ್ರಸಿದ್ಧಗೊಳಿಸುವಲ್ಲಿ ಒಂದು ಒಳ್ಳೆಯ ಕ್ಯಾಮೆರಾದ ಜೊತೆಗೆ ಒಂದು ಉತ್ತಮ ಕೈಯೂ ಪಾಲು ಪಡೆಯುತ್ತದೆ. ಆದುದರಿಂದ ಕ್ಯಾಮೆರಾ ಹಿಡಿದವನ ಚಾಕಚಕ್ಯತೆಯೂ ಇಲ್ಲಿ ಮುಖ್ಯವಾಗುತ್ತದೆ. ಯಾವ ಕೋನದಲ್ಲಿ ಫೋಟೋ ತೆಗೆದರೆ ಚೆನ್ನ ಎಂಬುದು ಮತ್ತು ಎಷ್ಟು ಅಂತರದಿಂದ ವೀಡಿಯೋ ದೃಶ್ಯಾವಳಿಗಳ ಚಿತ್ರೀಕರಣ ನಡೆಸಿದರೆ ಒಳ್ಳೆಯದು ಎಂದು ಒಬ್ಬ ಪ್ರಜ್ಞಾವಂತ ಛಾಯಾಗ್ರಾಹಕನಿಗೆ ತಿಳಿದಿರಬೇಕು. ಅಂತಹ ಛಾಯಾಗ್ರಾಹಕರಲ್ಲಿ ಶ್ರೀ ರಾಮ್ ನರೇಶ್ ಮಂಚಿ ಕೂಡ ಒಬ್ಬರು. ಅದರಲ್ಲೂ ಯಕ್ಷಗಾನದ ಬಹಳಷ್ಟು ಛಾಯಾಚಿತ್ರಗಳು ಮತ್ತು ದೃಶ್ಯಾವಳಿಗಳನ್ನು ಚಿತ್ರೀಕರಿಸಿ ಕಲಾಭಿಮಾನಿಗಳಿಗೆ ದೊರಕುವಂತೆ ಮಾಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಓದಿದ್ದು ಕಾನೂನು. ವೃತ್ತಿಯಿಂದ ಕೃಷಿಕ. ಹವ್ಯಾಸ ಛಾಯಾಗ್ರಹಣ. ಆಸಕ್ತಿಯ ಕೈಗಳಲ್ಲಿ ರಾರಾಜಿಸಿದ್ದು ಕ್ಯಾಮೆರಾ. ಇವರದ್ದು ಕೂಡ ಯಕ್ಷರಂಗದಲ್ಲಿ ನಿಸ್ವಾರ್ಥ ಸೇವೆ. ಛಾಯಾಗ್ರಹಣವನ್ನು ಹವ್ಯಾಸವಾಗಿ ಮಾಡಿಕೊಂಡು ಕ್ಯಾಮೆರಾ ಕೈಗೆತ್ತಿಕೊಂಡ ಇವರ ಆಸಕ್ತಿ ಹೆಚ್ಚಾಗಿ ಯಕ್ಷಗಾನ ಎಂದು ಕಂಡರೂ ಇತರ ವಿಭಾಗಗಳಲ್ಲಿಯೂ ಇವರಿಗೆ ಸಮಾನಾಸಕ್ತಿಯಿದೆ. ನೃತ್ಯಕಲೆ, ಪರಿಸರದ ಬಗ್ಗೆ ಮಾಡಿದ ವೀಡಿಯೊ ಚಿತ್ರೀಕರಣ, ಫೋಟೋಗಳು ಇವರಲ್ಲಿ ಹೇರಳ ಸಂಖ್ಯೆಯಲ್ಲಿವೆ. ಇವರ ಹೆಸರಿನಲ್ಲಿ Ram Naresh Manchi ಎಂಬ ಯು ಟ್ಯೂಬ್ ಚಾನೆಲ್ ಇದೆ. ಈ ಚಾನೆಲ್ ನಲ್ಲಿ ಸುಮಾರು 1700 ವೀಡಿಯೋಗಳಿವೆ. ಹೆಚ್ಚಿನ ಸಂಖ್ಯೆಯಲ್ಲಿ ಯಕ್ಷಗಾನದ ವೀಡಿಯೋಗಳನ್ನು ಕಾಣಬಹುದು. ಇವರ ಎಷ್ಟು ಛಾಯಾಗ್ರಣಗಳನ್ನು ಎಷ್ಟೋ ಮಾಧ್ಯಮಗಳು ಬಳಸಿಕೊಂಡಿವೆ. ಕಲಾರಂಗದಲ್ಲಿ ರಾಮ್ ನರೇಶ್ ಮಂಚಿಯವರದು ನಿಸ್ವಾರ್ಥ ಸೇವೆ. ರಾಮ್ ನರೇಶ್ ಮಂಚಿ ಅವರು ಬಂಟ್ವಾಳ ತಾಲೂಕಿನ ಸಾಲೆತ್ತೂರು ಮಂಚಿಯಲ್ಲಿ ತಮ್ಮ ತಂದೆ, ತಾಯಿ, ಪತ್ನಿ, ಮಗ, ಸೊಸೆಯರೊಂದಿಗೆ ವಾಸವಾಗಿದ್ದಾರೆ. ಇವರ ಪತ್ನಿ ಅನಿತಾ ನರೇಶ್ ಮಂಚಿ ಉತ್ತಮ ಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ. ಇವರ ಕಥೆ, ಲೇಖನಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಮಗ ಚೇತನ್ ಮತ್ತು ಸೊಸೆ ಸ್ವಾತಿ. ಚೇತನ್ ಮಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿ.  ರಾಮ್ ನರೇಶ್ ಮಂಚಿಯವರ ಯು ಟ್ಯೂಬ್ ವೀಡಿಯೋ ಲಿಂಕ್ ಒಂದನ್ನು ಕೆಳಗೆ ಕೊಡಲಾಗಿದೆ. ಎಲ್ಲರೂ ನೋಡಲೇಬೇಕಾದ ವೀಡಿಯೋ.  

ನಿಜಗುಣ ಶಿವಯೋಗಿ (ಡಪ್ಪಿನಾಟ-ಸಣ್ಣಾಟ) – ಶಿವಾನಂದ ಕವಿ ವಿರಚಿತ ಕನ್ನಡ ಬಯಲಾಟ (Nijaguna Shivayogi – Sannata, Dappinata)

‘ಶಿವಾನಂದ ಕವಿ ವಿರಚಿತ ಕನ್ನಡ ಬಯಲಾಟ, ನಿಜಗುಣ ಶಿವಯೋಗಿ (ಡಪ್ಪಿನಾಟ-ಸಣ್ಣಾಟ)’ ಈ ಕೃತಿಯು ಪ್ರಕಟವಾದುದು 2017ನೇ ಇಸವಿಯಲ್ಲಿ. ಇದರ ಪ್ರಕಾಶಕರು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ. ಸಿ.ಕೆ. ನಾವಲಗಿ ಅವರು ಈ ಪುಸ್ತಕದ ಸಂಪಾದಕರು. ಇದು ಒಟ್ಟು ನೂರಾ ಎಂಬತ್ತೈದು ಪುಟಗಳಿಂದ ಕೂಡಿದೆ.

ಪ್ರಸಂಗವನ್ನು ಪದ್ಯ ಮತ್ತು ಸಂಭಾಷಣೆಗಳ ಸಹಿತ ನೀಡಲಾಗಿದೆ. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷರಾಗಿದ್ದ ನಾಡೋಜ ಬೆಳಗಲ್ಲು ವೀರಣ್ಣ ಅವರು ‘ಅಧ್ಯಕ್ಷರ ಮಾತು’ ಎಂಬ ಶೀರ್ಷಿಕೆಯಡಿ ಲೇಖನವನ್ನು ಬರೆದಿರುತ್ತಾರೆ. ಅವರು ತಮ್ಮ ಬರಹದಲ್ಲಿ ದೊಡ್ಡಾಟ, ಸಣ್ಣಾಟಗಳೆಂದರೇನು? ಅದು ಯಾವ ಭಾಗದಲ್ಲಿ ಪ್ರಚಲಿತವಾಗಿದೆ, ಕಲಾವಿದರು ಧರಿಸುವ ವೇಷಭೂಷಣಗಳು, ಕುಣಿತ ಮೊದಲಾದ ವಿಚಾರಗಳ ಬಗ್ಗೆ ತಿಳಿಸಿರುತ್ತಾರೆ. ಅಲ್ಲದೆ ಉತ್ತರ ಕರ್ನಾಟಕದ ಕಲಾಪ್ರದರ್ಶನಗಳ ಬಗ್ಗೆಯೂ ಮಾಹಿತಿಗಳನ್ನು ನೀಡಿರುತ್ತಾರೆ.

ನಿಜಗುಣ ಶಿವಯೋಗಿ ಎಂಬ ಬಯಲಾಟ ಪ್ರಸಂಗವನ್ನು ಬರೆದವರು ಶ್ರೀ ಯಲ್ಲಪ್ಪ ಮಾಸ್ತರರು. ಅವರು ‘ಶಿವಾನಂದ’ ಎಂಬ ಕಾವ್ಯನಾಮವನ್ನು ಹೊಂದಿದ್ದು ‘ನಿಜಗುಣ ಶಿವಯೋಗಿ’ ಎಂಬುದು ಉತ್ತರ ಕರ್ನಾಟಕದಲ್ಲಿ ಜನಜನಿತವಾದ ಡಪ್ಪಿನಾಟ ಎಂಬುದನ್ನೂ ಲೇಖನದಲ್ಲಿ ತಿಳಿಸಿದ್ದಾರೆ. ಈ ಕೃತಿಯಲ್ಲಿ ಅಕಾಡೆಮಿಯ ರಿಜಿಸ್ಟ್ರಾರರಾದ ಎಸ್.ಎಚ್.ಶಿವರುದ್ರಪ್ಪ ಅವರು ‘ಪ್ರಕಾಶಕರ ಮಾತು’ಎಂಬ ಶೀರ್ಷಿಕೆಯಡಿಯಲ್ಲಿ ಲೇಖನವನ್ನು ಬರೆದಿರುತ್ತಾರೆ.

ಸಂಪಾದನ ಡಾ. ಸಿ.ಕೆ.ನಾವಲಗಿ ಅವರಿಂದ. ಶ್ರೀಯುತರು ‘ಪ್ರಸ್ತಾವನೆ’ ಎಂಬ ಶೀರ್ಷಿಕೆಯಡಿ ಲೇಖನವನ್ನು ಬರೆದಿದ್ದಾರೆ. ಅವರು ತಮ್ಮ ಬರಹದಲ್ಲಿ ದೊಡ್ಡಾಟ, ಸಣ್ಣಾಟ ಅಲ್ಲದೆ ಉತ್ತರ ಕರ್ನಾಟಕದ ಕಲಾ ಪ್ರಕಾರಗಳ ಬಗೆಗೆ ಸವಿವರವಾಗಿ ತಿಳಿಸಿರುತ್ತಾರೆ. ಅಲ್ಲದೆ ‘ನಿಜಗುಣ ಶಿವಯೋಗಿ’ ಕಥಾನಕದ ಕವಿ ಶ್ರೀ ಯಲ್ಲಪ್ಪ ಮಾಸ್ತರರ ಬಗ್ಗೆ ಸವಿವರವಾಗಿ ತಿಳಿಸಿರುತ್ತಾರೆ. ಯಲ್ಲಪ್ಪ ಮಾಸ್ತರರ ಎಲ್ಲಾ ಬಯಲಾಟ ಕೃತಿಗಳೂ ‘ಶಿವಾನಂದ’ ಕಾವ್ಯನಾಮದಿಂದಲೇ ಬರೆಯಲ್ಪಟ್ಟಿವೆ. ಸಿದ್ದೇಶ್ವರನು ಕವಿಯ ಇಷ್ಟದೇವರಾಗಿದ್ದ ಎಂಬ ವಿಚಾರವನ್ನೂ ತಿಳಿಸಿದ್ದಾರೆ.

ಬಳಿಕ ಕೃತಿಪರಿಚಯವನ್ನೂ, ಕಥೆಯಲ್ಲಿ ಬರುವ ಪಾತ್ರಗಳ ವಿಶೇಷತೆಯನ್ನೂ ಡಾ.ಸಿ.ಕೆ. ನಾವಲಗಿ ಅವರು ತಮ್ಮ ಬರಹದಲ್ಲಿ ತಿಳಿಸಿದ್ದಾರೆ. ಶಿವಾನಂದ ಕವಿಯ ವಂಶಾವಳಿಯನ್ನು ಈ ಪುಸ್ತಕದಲ್ಲಿ ನೀಡಲಾಗಿದೆ.

ಕನ್ನಡ ನಾಡಿನ ಖರೆ ಜನಪದ ವಿದ್ವಾಂಸರ ಮತ್ತು ಖರೆ ಜನಪದ ಕಲಾವಿದರ ದಿವ್ಯ ಸ್ಮರಣೆಗೆ ಈ ಕೃತಿಯನ್ನು ಅರ್ಪಿಸಲಾಗಿದೆ. ನಿಜಗುಣ ಶಿವಯೋಗಿ ಎಂಬ ಈ ಕಥಾನಕವು ನಿಜಗುಣಿಯ ಪ್ರವೇಶ, ದೂತೆಯ ಪ್ರವೇಶ, ಶಂಭುಲಿಂಗನ ಪ್ರವೇಶ,ಪ್ರೇಮಲಾ ಪ್ರವೇಶ,ಬೀಸು ಪ್ರವೇಶ, ಕುರುಡಿ ಮುದುಕಿಯ ಪ್ರವೇಶ, ಭೂತ ಪ್ರವೇಶ ಎಂಬ ಏಳು ಹಂತಗಳಲ್ಲಿದೆ.

ಲೇಖನ: ರವಿಶಂಕರ್ ವಳಕ್ಕುಂಜ 

ಬಲಿಪ ನಾರಾಯಣ ಭಾಗವತರ ಮುಕುಟಕ್ಕೆ  ‘ಯಕ್ಷ ಜನಾರ್ದನ ಪ್ರಶಸ್ತಿ’ಯ ಗರಿ (‘Yaksha Janardana Award’ to Balipa Narayana Bhagavatha)

ತೆಂಕುತಿಟ್ಟು ಯಕ್ಷಗಾನದ ಬಲಿಪ ಪರಂಪರೆಯ ಮೇರು ಭಾಗವತ ಶ್ರೀ ಬಲಿಪ ನಾರಾಯಣ ಭಾಗವತರಿಗೆ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವರ ಸನ್ನಿಧಿಯಲ್ಲಿ ಉಜಿರೆಯ ಯಕ್ಷಜನ ಸಭಾ ವತಿಯಿಂದ ಮೊದಲ ‘ಯಕ್ಷ ಜನಾರ್ದನ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗಿದೆ. ಇಂದಿನಿಂದ ಅಂದರೆ ದಿನಾಂಕ ೦೨. ೧೦. ೨೦೨೦ ರ ಶುಕ್ರವಾರದಿಂದ ನಡೆಯುತ್ತಿರುವ ಮೂರು ದಿನದ ತಾಳಮದ್ದಳೆ ‘ಯಕ್ಷೋತ್ಸವ’ದ  ಮೊದಲ ದಿನವಾದ ಇಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಬಲಿಪ ಭಾಗವತರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ತಮ್ಮ ವೃತ್ತಿಬದುಕಿನಲ್ಲಿ ಹಲವಾರು ಪ್ರಶಸ್ತಿ ಸನ್ಮಾನಗಳನ್ನು ಪಡೆದ ಬಲಿಪ ನಾರಾಯಣ ಭಾಗವತರು ಈ ಚೊಚ್ಚಲ ‘ಯಕ್ಷ ಜನಾರ್ದನ ಪ್ರಶಸ್ತಿ’ಯನ್ನೂ ತಮ್ಮ ಮುಡಿಗೇರಿಸಿಕೊಂಡರು. ಉಜಿರೆಯ ಯಕ್ಷಜನ ಸಭಾದ ಗೌರವಾಧ್ಯಕ್ಷ ಶ್ರೀ ಶ್ರೀ ಶರತ್ ಪಡುವೆಟ್ನಾಯ, ಅಧ್ಯಕ್ಷ ಡಾ.ದಯಾಕರ್, ಉಪಾಧ್ಯಕ್ಷರಾದ ಭುಜಬಲಿ, ಕಾರ್ಯದರ್ಶಿ ಬಿ.ವಿ.ರಾವ್ ಮೊದಲಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. 

ತಾಳಮದ್ದಳೆ ಅರ್ಥಧಾರಿ, ಮಾಂತ್ರಿಕ ಶಿರೋಮಣಿ ಶ್ರೀ ಉಡುಪುಮೂಲೆ ಗೋಪಾಲಕೃಷ್ಣ ಭಟ್ ಇನ್ನಿಲ್ಲ (Udupumoole Gopalakrishna Bhat)

ಮಾಂತ್ರಿಕ ಶಿರೋಮಣಿ,  ತಾಳಮದ್ದಳೆ ಅರ್ಥಧಾರಿ ಶ್ರೀ ಉಡುಪುಮೂಲೆ ಗೋಪಾಲಕೃಷ್ಣ ಭಟ್ ಅವರು  ನಿಧನರಾಗಿದ್ದಾರೆ. ಅವರು ಇಂದು ಅಪರಾಹ್ನ ನಮ್ಮನ್ನಗಲಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ತಾಳಮದ್ದಳೆ ಕ್ಷೇತ್ರದಲ್ಲಿ ಅವರಿಗೆ ಒಳ್ಳೆಯ ಹೆಸರಿತ್ತು. ದೊಡ್ಡ ದೊಡ್ಡ ಕೂಟಗಳಲ್ಲಿಯೂ ತನ್ನ ವಾಕ್ಚಾತುರ್ಯದ ಸುಧೆಯನ್ನು ಉಣಿಸಿದವರು. ಈ ಕ್ಷೇತ್ರದಲ್ಲಿ ಅವರೊಬ್ಬ ಪ್ರಬುದ್ಧ ಅರ್ಥಧಾರಿ. ವಿದುರ, ಶಲ್ಯ, ಅಕ್ರೂರ, ವಿಭೀಷಣ ಮುಂತಾದ ಪಾತ್ರಗಳ ಒಳನೋಟಗಳನ್ನು ಚಿತ್ರಿಸುವಲ್ಲಿ ಎತ್ತಿದ ಕೈ. ಪ್ರಮುಖ ಕೂಟಗಳಲ್ಲಿ ಪ್ರಧಾನ  ಪಾತ್ರಗಳಲ್ಲಿಯೂ ಎಷ್ಟೋ ಬಾರಿ ಕಾಣಿಸಿಕೊಂಡಿದ್ದರು.   ಹವ್ಯಕ ಮನೆತನದ ಸಂಪ್ರದಾಯಸ್ಥ ಕುಟುಂಬಲ್ಲಿ ಜನಿಸಿದ್ದ ಉಡುಪುಮೂಲೆ ಗೋಪಾಲಕೃಷ್ಣ ಭಟ್ಟರ ವೃತ್ತಿ ಮಂತ್ರವಾದವೇ ಆಗಿದ್ದರೂ ಸಾಹಿತ್ಯ, ಸಂಗೀತ, ನೃತ್ಯ, ಯಕ್ಷಗಾನಗಳು ಅವರ ಸಮಾನಾಸಕ್ತಿಗಳೇ ಆಗಿದ್ದುವು. ಕೊಡೆಂಕಿರಿ ರಾಮ ಭಟ್ಟ ಮತ್ತು ಶ್ರೀಮತಿ ಸರಸ್ವತಿ ಅಮ್ಮ ಇವರ ಮೂವರು ಮಕ್ಕಳಲ್ಲಿ ಹಿರಿಯ ಮಗನಾಗಿ 1944 ನವೆಂಬರ್ 26ರಂದು ಜನಿಸಿದ ಉಡುಪುಮೂಲೆ ಅವರು ತಮ್ಮ ಶಾಲಾ ಶಿಕ್ಷಣವನ್ನು ಎಡನೀರಿನ ಸ್ವಾಮೀಜೀಸ್ ಹೈಸ್ಕೂಲಿನಲ್ಲಿ ಪೂರ್ತಿಗೊಳಿಸಿದರು. ಪದವಿ ಪಡೆದ ನಂತರ ಕೆಲವು ಖಾಸಗಿ ಶಾಲೆಗಳಲ್ಲಿ ತಾತ್ಕಾಲಿಕವಾಗಿ ಅಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದರು. ಅವರು ಕೆಲಸಮಯ ಭರತನಾಟ್ಯ ಮತ್ತು ಶಾಸ್ತ್ರೀಯ ಸಂಗೀತವನ್ನೂಕಲಿತಿದ್ದರೂ ಮತ್ತೆ ಮಂತ್ರವಾದದ ವೃತ್ತಿಯತ್ತ ವಾಲಿದ್ದರು.   ಪರಂಪರೆಯಿಂದ ಬಂದ ಮಂತ್ರವಾದದ ವೃತ್ತಿ ಅವರ ಕೈ ಬಿಡಲಿಲ್ಲ. ಅದರಲ್ಲಿ ಅಪೂರ್ವ ಯಶಸ್ಸನ್ನು ಸಾಧಿಸಿದರು. ಹೆಚ್ಚಿನ ಸಾಧನೆಯನ್ನು ಮಾಡಿ ಪ್ರಸಿದ್ಧಿಯನ್ನು ಪಡೆದರು. ಎಷ್ಟೋ ವಾಸಿಯಾಗದ ಖಾಯಿಲೆಗಳನ್ನು ಗುಣಪಡಿಸಿದ ಕೀರ್ತಿಯು ಅವರಿಗೆ ಸಲ್ಲಬೇಕು. ನೆರೆಯ ರಾಜ್ಯಗಳಿಂದಲೂ ಜನರು ಅವರನ್ನು ಹುಡುಕಿಕೊಂಡು ಬಂದು ಅವರಲ್ಲಿ ಚಿಕಿತ್ಸೆಯನ್ನು ಪಡೆದು ಗುಣಮುಖರಾಗಿ ಹಿಂತಿರುಗಿದ್ದಾರೆ. ಎಷ್ಟೋ ಮಾನಸಿಕ ಖಾಯಿಲೆಗಳನ್ನೂ ಗುಣಪಡಿಸಿದ್ದಾರೆ. ಅವರ ಪುತ್ರ ಶ್ರೀ ರಾಘವೇಂದ್ರ ಅವರು ತಮ್ಮ ತಂದೆಯ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.  

ಉಡುಪುಮೂಲೆ ಗೋಪಾಲಕೃಷ್ಣ ಭಟ್ ತನ್ನ ವೃತ್ತಿಯೊಂದಿಗೆ ಪ್ರವೃತ್ತಿಗಳನ್ನೂ ಬಿಡಲಿಲ್ಲ. ಯಕ್ಷಗಾನದ ತಾಳಮದ್ದಳೆ ರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡುದು ಮಾತ್ರವಲ್ಲದೆ ತನ್ನ ನಿವಾಸದಲ್ಲಿಯೇ ಯಕ್ಷಗಾನ ಸಂಘದ ಮೂಲಕ ಅನೇಕ ಆಸಕ್ತರನ್ನು ತರಬೇತಿ ನೀಡಿ ತಾಳಮದ್ದಳೆ ಅರ್ಥಧಾರಿಗಳಾಗಿ ತಯಾರು ಮಾಡಿದ್ದಾರೆ. ಎಡನೀರು ಸ್ವಾಮೀಜಿಗಳಿಗೆ ಪ್ರಿಯ ಶಿಷ್ಯರಾಗಿ ಅವರ ಪ್ರೀತಿಗೆ ಪಾತ್ರರಾಗಿದ್ದ ಉಡುಪುಮೂಲೆಯವರು ಎಡನೀರು ಮಠದ ತಾಳಮದ್ದಳೆಗಳಲ್ಲಿ ಹೆಚ್ಚಾಗಿ ತಪ್ಪದೆ ಭಾಗವಹಿಸುತ್ತಿದ್ದರು. ಸಾಹಿತಿಯಾಗಿ ಅನೇಕ ಲೇಖನಗಳನ್ನು ಬರೆದಿದ್ದ  ಉಡುಪುಮೂಲೆ ಗೋಪಾಲಕೃಷ್ಣ ಭಟ್ ಯಕ್ಷಗಾನ, ನಾಟಕಗಳ ನಿರ್ದೇಶನವನ್ನೂ ಮಾಡುತ್ತಿದ್ದರು. ಹೀಗೆ ಸಮಾಜಮುಖಿಯಾಗಿ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಅವರ ಅಗಲಿಕೆಯು ಕನ್ನಡ ನಾಡಿನ ಕಲಾ, ಸಾರಸ್ವತ ಲೋಕಕ್ಕೆ ಮಾತ್ರವಲ್ಲ ಭಾಷೆ, ಜಾತಿಗಳ ಭೇದವಿಲ್ಲದೆ ಅವರ ನೂರಾರು ಅಭಿಮಾನಿಗಳಿಗೂ ಅತೀವ ನೋವು ತಂದಿದೆ. ಭಗವಂತನು ಅವರ ಆತ್ಮಕ್ಕೆ ಸದ್ಗತಿಯನ್ನು ನೀಡಲಿ ಮತ್ತು ಎಲ್ಲರಿಗೂ ಅವರ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನುನೀಡಲಿ ಎಂದು ಕಳಕಳಿಯ ಪ್ರಾರ್ಥನೆ. 

ಯಕ್ಷಗಾನ ಪೀಠಿಕಾ ಸೌರಭ – ಕೋಲ್ಯಾರು ರಾಜು ಶೆಟ್ಟಿ

ಶ್ರೀ ಕೋಲ್ಯಾರು ರಾಜು ಶೆಟ್ಟರು ಬರೆದ ‘ ಯಕ್ಷಗಾನ ಪೀಠಿಕಾ ಸೌರಭ’ ಎಂಬ ಈ ಹೊತ್ತಗೆಯು ಪ್ರಕಟವಾಗಿ ಓದುಗರ ಕೈ ಸೇರಿದ್ದು ೧೯೯೬ರಲ್ಲಿ.  ಕೋಲ್ಯಾರು ರಾಜು ಶೆಟ್ಟರು ಉದ್ಯಮಿಯಾಗಿ ಮುಂಬಯಿ ನಗರದಲ್ಲಿ ನೆಲೆಸಿದರೂ ಹುಟ್ಟೂರಿನ ಮತ್ತು ನಮ್ಮ ಹೆಮ್ಮೆಯ ಕಲೆ ಯಕ್ಷಗಾನದ ನಂಟನ್ನು ಬಿಟ್ಟವರಲ್ಲ. ಕಲಾವಿದರಾಗಿ, ತಾಳಮದ್ದಳೆ ಅರ್ಥಧಾರಿಯಾಗಿ, ಸಂಘಟಕರಾಗಿ ಹೀಗೆ ಯಕ್ಷಗಾನ ಕಲೆಯ ಸಂಬಂಧವಿರಿಸಿಕೊಂಡೇ ಬೆಳೆದವರು. ಮನೆಯವರೆಲ್ಲರೂ ಕಲಾಸಕ್ತರಾಗಿದ್ದುದು ಎಳವೆಯಲ್ಲಿ ತಾನೂ ಪ್ರದರ್ಶನಗಳನ್ನು ನೋಡುತ್ತಾ ಯಕ್ಷಗಾನ ಕಲೆಯತ್ತ ಆಕರ್ಷಿತರಾದುದು ಇದಕ್ಕೆ ಕಾರಣವಾಗಿರಬಹುದು. ಶ್ರೀಯುತರು ಉತ್ತಮ ಬರಹಗಾರರೂ ಹೌದು. ಕನ್ನಡ ಸಾಹಿತ್ಯಾಸಕ್ತರಾಗಿ ಕೋಲ್ಯಾರು ರಾಜು ಶೆಟ್ಟರು ಬರೆದ ಲೇಖನಗಳನ್ನು ನಾವೂ ಓದಿರುತ್ತೇವೆ. ಯಕ್ಷಗಾನ ಪೀಠಿಕಾ ಸೌರಭ ಎಂಬ ಕಿರು ಕೃತಿಯಲ್ಲಿ ಒಟ್ಟು ಎಂಭತ್ತಾರು ಪಾತ್ರಗಳ ಪೀಠಿಕಾ ಅರ್ಥಗಾರಿಕೆಯನ್ನು ಶ್ರೀ ಕೋಲ್ಯಾರು ರಾಜು ಶೆಟ್ಟರು ನೀಡಿರುತ್ತಾರೆ. ಇವುಗಳಲ್ಲಿ ಹೆಚ್ಚಿನವು ಸ್ವಯಂ ರಚಿತವಾದವುಗಳು. ಕೆಲವು ಪಾತ್ರಗಳ ಪೀಠಿಕೆಗಳನ್ನು ಕೆಲವು ಹಿರಿಯ ಕಲಾವಿದರ ಪೀಠಿಕೆ ಅರ್ಥಗಾರಿಕೆಯನ್ನು ಕೇಳಿ ನೆನಪಿನ ಆಧಾರದಿಂದ ಯಥಾವತ್ತಾಗಿ ನೀಡಿರುತ್ತಾರೆ. ಈ ವಿಚಾರವನ್ನು ‘ನನ್ನ ನುಡಿ’ ಎಂಬ ಲೇಖನದಲ್ಲಿ ಅವರು ತಿಳಿಸಿರುತ್ತಾರೆ. ಯಕ್ಷಗಾನವನ್ನು ಅತೀವವಾಗಿ ಪ್ರೀತಿಸುತ್ತಿದ್ದ ತಮ್ಮ ಮಾತೋಶ್ರೀ ಮೇಲ್ ಕೋಲ್ಯಾರು ಪಡುಮನೆ ದಿ| ಅಬ್ಬಕ್ಕ ಶೆಡ್ತಿಯವರನ್ನು ಈ ಪುಸ್ತಕದಲ್ಲಿ  ಕೋಲ್ಯಾರು ರಾಜು ಶೆಟ್ಟರು ನೆನಪಿಸಿದ್ದಾರೆ. ಅಲ್ಲದೆ ಸಹಕರಿಸಿದ ಎಲ್ಲಾ ಮಹನೀಯರುಗಳನ್ನೂ ನೆನಪಿಸಿಕೊಂಡಿದ್ದಾರೆ.

ಯಾವುದೇ ಒಂದು ಯೋಜನೆಯು ಚೆನ್ನಾಗಿ ನಡೆಯಬೇಕಾದರೆ ಅದರ ಆರಂಭವು ಚೆನ್ನಾಗಿಯೇ ಇರಬೇಕು ಎಂಬ ಮಾತಿದೆ. ಮನೆಯು ಸುಂದರವಾಗಿ ನಿರ್ಮಾಣವಾಗಬೇಕಾದರೆ ಪಂಚಾಂಗವು ಸುದೃಢವಾಗಿರಬೇಕು. ಯಕ್ಷಗಾನ ಪ್ರದರ್ಶನಕ್ಕೆ ಪೀಠಿಕೆ ವೇಷವು ಪಂಚಾಂಗವಿದ್ದಂತೆ ಎಂದು ಹೇಳಿದರೆ ತಪ್ಪಾಗಲಾರದೆಂದು ಭಾವಿಸುತ್ತೇನೆ. ಪ್ರಸಂಗದ ಮೊದಲ ವೇಷವೇ ಪೀಠಿಕೆ ವೇಷವು. ಮೊದಲ ವೇಷವೇ ಸೋತರೆ ಪ್ರಸಂಗವು ಸೋಲುತ್ತದೆ ಎಂದರ್ಥ ಅಲ್ಲ. ಆದರೆ ಪ್ರದರ್ಶನವನ್ನು ಮತ್ತೆ ಗೆಲ್ಲಿಸಲು ಹಿಮ್ಮೇಳ, ಮುಮ್ಮೇಳ ಕಲಾವಿದರು ಮತ್ತೆ ಶ್ರಮಪಡಬೇಕಾಗುತ್ತದೆ. ಹಾಗಾಗಿ ಪೀಠಿಕೆ ವೇಷಗಳು ಗೆದ್ದರೆ ಇಡೀ ಪ್ರದರ್ಶನವು ಯಶಸ್ವಿಯಾಗಲು ಅನುಕೂಲವಾಗುತ್ತದೆ. ಪಾತ್ರದ ಸ್ವಭಾವಕ್ಕನುಗುಣವಾಗಿ, ಸಮಯದ ಮಿತಿಯೊಳಗೆ ಬಹಳ ಅಂದವಾಗಿ ಅಚ್ಚುಕಟ್ಟಾಗಿ ಪೀಠಿಕೆ ವೇಷದ ಮಾತುಗಾರಿಕೆ ಇದ್ದರೆ ಬಲು ಸೊಗಸು.  ಆದುದರಿಂದ ಶ್ರೀ ಕೋಲ್ಯಾರು ರಾಜು ಶೆಟ್ಟರು ಬರೆದ ಈ ಯಕ್ಷಗಾನ ಪೀಠಿಕಾ ಸೌರಭ ಎಂಬ ಪುಸ್ತಕವು ಕಲಾಕ್ಷೇತ್ರಕ್ಕೆ ಒಂದು ಒಳ್ಳೆಯ ಕೊಡುಗೆಯಾಗಿದೆ. ಕಲಾಭ್ಯಾಸಿಗಳು ಇದರ ಉಪಯೋಗವನ್ನು  ಪಡೆದುಕೊಂಡಿರುತ್ತಾರೆ ಎಂಬ ವಿಚಾರವು ಸಂತೋಷವನ್ನು ಕೊಡುತ್ತದೆ. ಇದು ಒಟ್ಟು ನೂರು ಪುಟಗಳುಳ್ಳ ಪುಸ್ತಕ. ಇದನ್ನು ಪೆರ್ಮುದೆ ನೇಮು ಶೆಟ್ಟಿ, ಜಾರಿಗೆಕಟ್ಟೆ ಇವರಿಗೆ ಅರ್ಪಿಸಲಾಗಿದೆ. ಖ್ಯಾತ ಯಕ್ಷಗಾನ ಸಂಘಟಕ ಶ್ರೀ ಎಚ್.ಬಿ.ಎಲ್.ರಾವ್ ಅವರು  ಮುನ್ನುಡಿ ಲೇಖನವನ್ನು ಬರೆದಿರುತ್ತಾರೆ. ಶ್ರೀ ಶಿವರಾಮ್ ಜಿ ಶೆಟ್ಟಿ ಅವರು ಬರೆದ ಲೇಖನ ರೂಪದ ಶುಭಾಶಯ ಸಂದೇಶವನ್ನು ನೀಡಲಾಗಿದ್ದು ಪುಸ್ತಕದ ಕೊನೆಯಲ್ಲಿ  ಕೋಲ್ಯಾರು ರಾಜು ಶೆಟ್ಟರು ಬರೆದ ‘ಕಾಲಗರ್ಭಕ್ಕೆ ಸೇರಿದ ಶಕಪುರುಷ – ಗುಂಡ್ಮಿ ಕಾಳಿಂಗ ನಾವಡ’ ಎಂಬ ಲೇಖನವನ್ನು ನೀಡಲಾಗಿದೆ. ಪುಸ್ತಕದ ಹೊರ ಆವರಣದಲ್ಲಿ ಬಡಗು ತಿಟ್ಟಿನ ಖ್ಯಾತ ಕಲಾವಿದ ನಗರ ಜಗನ್ನಾಥ ಶೆಟ್ಟರ ಲೇಖನವಿದೆ. 

ಲೇಖಕ: ರವಿಶಂಕರ್ ವಳಕ್ಕುಂಜ  

ಯಕ್ಷಗಾನ ಶಿಕ್ಷಣ ಶಾಲೆಗಳು ಮತ್ತು ಗುರುಗಳು (ಭಾಗ – 3) ಧರ್ಮಸ್ಥಳ ಲಲಿತ ಕಲಾ ಕೇಂದ್ರ Dharmasthala Lalitha kala kendra

ಧರ್ಮಸ್ಥಳ ಲಲಿತ ಕಲಾ ಕೇಂದ್ರ (ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಕಲಾ ಸಂಘ):

ತೆಂಕುತಿಟ್ಟು ಯಕ್ಷಗಾನ ಕಲಿಕೆಗೂ ಸೂಕ್ತ ವ್ಯವಸ್ಥೆಗಳಿಲ್ಲದುದನ್ನು ಮನಗಂಡ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗಡೆಯವರು ತಮ್ಮ ತೀರ್ಥರೂಪರೂ ಹಿಂದಿನ ಧರ್ಮಾಧಿಕಾರಿಗಳೂ ಆದ ಶ್ರೀ ರತ್ನವರ್ಮ ಹೆಗಡೆಯವರ ಆಶಯದಂತೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಯಕ್ಷಗಾನಕ್ಕೊಂದು ಶಾಸ್ತ್ರೀಯ ಕಲಿಕಾ ಕೇಂದ್ರವನ್ನು ಒದಗಿಸುವ ಮಹತ್ತರವಾದ ಧೃಷ್ಟಿಯನ್ನಿರಿಸಿಕೊಂಡು 1972ರಲ್ಲಿ ‘ಲಲಿತ ಕಲಾ ಕೇಂದ್ರ’ವನ್ನು ಸ್ಥಾಪಿಸಿದರು. ಮೊದಲು ಮೇಳಕ್ಕೆ ಸೇರಿ ‘ಕೋಡಂಗಿ ವೇಷ’ಗಳನ್ನು ಮಾಡಿ ಹೆಜ್ಜೆ ಹೆಜ್ಜೆಗೂ ನಾಟ್ಯ ಕಲಿಯುತ್ತಾ ಔನ್ನತ್ಯವನ್ನು ಸಾಧಿಸುವುದು ಆಗಿನ ರಂಗ ಪದ್ಧತಿಯಾಗಿತ್ತು. ಈ ಅಲಿಖಿತ ನಿಯಮವನ್ನು ಸರಳೀಕರಿಸಲು ಪೂಜ್ಯ ಹೆಗಡೆಯವರು ತೆಂಕುತಿಟ್ಟಿಗೆ ಒಂದು ತರಬೇತಿ ಕೇಂದ್ರದ ಅವಶ್ಯಕತೆಯನ್ನು ಮನಗಂಡರು. ಮಳೆಗಾಲದ ಆರು ತಿಂಗಳುಗಳಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹಿಮ್ಮೇಳ ಮತ್ತು ಮುಮ್ಮೇಳಗಳನ್ನು ಕಲಿಸುವ ಯೋಜನೆ ಸಿದ್ಧವಾಯಿತು. ಮೊದಲ ವರ್ಷದ ಮುಮ್ಮೇಳ ಗುರುಗಳಾಗಿ ತೆಂಕುತಿಟ್ಟಿನ ಅದ್ವಿತೀಯ ಕಲಾವಿದರಾಗಿದ್ದ ಕುರಿಯ ವಿಠಲ ಶಾಸ್ತ್ರಿಗಳೂ ಹಿಮ್ಮೇಳಕ್ಕೆ ಮಾಂಬಾಡಿ ನಾರಾಯಣ ಭಾಗವತರೂ ಸಿದ್ಧರಾದರು.

ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಕಲಾ ಸಂಘ ಅಥವಾ ಲಲಿತ ಕಲಾ ಕೇಂದ್ರದಲ್ಲಿ ಯಶಸ್ವಿಯಾಗಿ ತರಬೇತಿ ಮುಗಿಸಿದ ಅನೇಕರು ಇಂದು ತೆಂಕುತಿಟ್ಟಿನಲ್ಲಿ ಅಗ್ರಗಣ್ಯ ಕಲಾವಿದರಾಗಿ ಮೆರೆಯುತ್ತಿದ್ದಾರೆ. ಆ ಕಾಲದಲ್ಲಿ ಒಂದು ಅತ್ಯುತ್ತಮ ತರಬೇತಿ ಕೇಂದ್ರವೆಂದು ಹೆಸರು ಗಳಿಸಿದ್ದ ಈ ಕೇಂದ್ರವು ಶಿಸ್ತಿನ ಶಿಕ್ಷಣಕ್ಕೆ ಹೆಸರುವಾಸಿಯಾಗಿತ್ತು. ಇಲ್ಲಿ ಗುರುಗಳಾಗಿದ್ದ ಪ್ರಸಿದ್ಧ ಕಲಾವಿದರಾದ ಕುರಿಯ ವಿಠಲ ಶಾಸ್ತ್ರಿ, ಮಾಂಬಾಡಿ ನಾರಾಯಣ ಭಾಗವತ, ಮಾಣಂಗಾಯಿ ಕೃಷ್ಣ ಭಟ್, ಕುಂಡಂಕುಳಿ ರಾಮಕೃಷ್ಣ ಮದ್ದಳೆಗಾರ, ಪಡ್ರೆ ಚಂದು, ನೆಡ್ಲೆ ನರಸಿಂಹ ಭಟ್, ಅಳಿಕೆ ರಾಮಯ್ಯ ರೈ, ಕೆ. ಗೋವಿಂದ ಭಟ್, ಕರ್ಗಲ್ಲು ವಿಶ್ವೇಶ್ವರ ಭಟ್, ಗೋಪಾಲಕೃಷ್ಣ ಕುರುಪ್, ಹರಿನಾರಾಯಣ ಬೈಪಾಡಿತ್ತಾಯ, ಲೀಲಾವತಿ ಬೈಪಾಡಿತ್ತಾಯ, ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ, ಪದ್ಮನಾಭ ಉಪಾಧ್ಯಾಯ, ತಾರಾನಾಥ ಬಲ್ಯಾಯ, ದಿವಾಣ ಶಿವಶಂಕರ ಭಟ್ ಮೊದಲಾದವರು ತಮ್ಮ ಶ್ರಮವನ್ನು ಧಾರೆಯೆರೆದು ಅನೇಕ ಕಲಾವಿದರನ್ನು ತಯಾರು ಮಾಡಿದ್ದರು. 

ಶ್ರೀ ಹರ್ಷೇಂದ್ರ ಕುಮಾರ್

ಈ ಎಲ್ಲಾ ಶ್ರಮದ ಹಿಂದೆ ಪೂಜ್ಯ ಶ್ರೀ ವೀರೇಂದ್ರ ಹೆಗಡೆಯವರ ಮತ್ತು ಶ್ರೀ ಹರ್ಷೇಂದ್ರ ಕುಮಾರ್ ಅವರ ನಿರಂತರ ಬೆಂಬಲ ಪ್ರೋತ್ಸಾಹಗಳಿದ್ದುವು. ಪೂಜ್ಯ ಹೆಗಡೆಯವರೂ ಶ್ರೀ ಹರ್ಷೇಂದ್ರ ಕುಮಾರ್ ಅವರೂ ಆಗಾಗ ಈ ಲಲಿತ ಕಲಾ ಕೇಂದ್ರಕ್ಕೆ ಭೇಟಿಕೊಟ್ಟು ವಿದ್ಯಾರ್ಥಿಗಳ ಕಲಿಯುವಿಕೆಯನ್ನು ನಿರಂತರ ಪರಿಶೀಲಿಸುತ್ತಿದ್ದರು. ನೆಡ್ಲೆ ನರಸಿಂಹ ಭಟ್, ಕೆ. ಗೋವಿಂದ ಭಟ್, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ ಅವರು ಜೊತೆಯಾಗಿ ವಿದ್ಯಾರ್ಥಿಗಳಿಗೆ ಕಲಿಸಲು ಪಠ್ಯಕ್ರಮವೊಂದನ್ನು ಸಿದ್ಧಪಡಿಸಿದರು. ಈ ಪಠ್ಯಕ್ರಮದ ಆಧಾರದಲ್ಲಿ ಲಲಿತ ಕಲಾ ಕೇಂದ್ರದಲ್ಲಿ ತೆಂಕುತಿಟ್ಟಿನ ಹಿಮ್ಮೇಳ ಮುಮ್ಮೇಳಗಳ ಶಿಕ್ಷಣ ಮುಂದುವರಿಯಿತು. ಹೀಗೆ ಒಂದು ಹಂತದಲ್ಲಿ ಏರುಗತಿಯಲ್ಲಿ ಸಾಗುತ್ತಿದ್ದ ಲಲಿತ ಕಲಾ ಕೇಂದ್ರಕ್ಕೆ ಕೆಲವು ವರ್ಷಗಳ ಹಿಂದೆ ಕಲಿಯುವ ಆಸಕ್ತ ವಿದ್ಯಾರ್ಥಿಗಳ ಕೊರತೆಯುಂಟಾಯಿತು. ಆ ಕಾಲದಲ್ಲಿ ಯಕ್ಷಗಾನದಿಂದ ಬರುವ ಆದಾಯ ಮತ್ತು ಜೀವನ ನಿರ್ವಹಣೆಯ ಮಟ್ಟವನ್ನು ಲೆಕ್ಕಹಾಕಿ ಹೆತ್ತವರು ತಮ್ಮ ಮಕ್ಕಳನ್ನು ಯಕ್ಷಗಾನ ಕಲಿಯುವುದಕ್ಕೆ ಪ್ರೇರಿಪಿಸದೆ ಇದ್ದುದೇ ಇದಕ್ಕೆ ಕಾರಣವಿರಬಹುದು. ಇದರ ಜೊತೆಗೆ ಹಲವಾರು ಯಕ್ಷಗಾನ ಕಲಾವಿದರು ಅಲ್ಲಲ್ಲಿ ತಮ್ಮ ತಮ್ಮ ಪ್ರದೇಶಗಳಲ್ಲಿ ಯಕ್ಷಗಾನ ತರಗತಿಗಳನ್ನು ಆರಂಭಿಸಿದ್ದೂ ಇನ್ನೊಂದು ಕಾರಣವಿರಬಹುದು. ಕಲಾಸಕ್ತರ ಕೊರತೆಯಿಂದ ಲಲಿತ ಕಲಾ ಕೇಂದ್ರದಲ್ಲಿ ಯಕ್ಷಗಾನ ಶಿಕ್ಷಣ ಮತ್ತು ತರಬೇತಿ ಮುಂದುವರಿಯದೆ ಇದ್ದುದು ತೆಂಕುತಿಟ್ಟು ಯಕ್ಷಗಾನಕ್ಕೆ ಆದ ಒಂದು ದೊಡ್ಡ ನಷ್ಟವೆಂದೇ ಹೇಳಬಹುದು. (ಮುಂದಿನ ಸಂಚಿಕೆ ಭಾಗ – 4ರಲ್ಲಿ ಮುಂದುವರಿಯುವುದು)

ಲೇಖನ: ಮನಮೋಹನ್ ವಿ.ಎಸ್.