Friday, August 28, 2026
Home Blog Page 385

ನೂತನ ಮೇಳಕ್ಕೆ ಪಟ್ಲ ಸತೀಶ್ ಶೆಟ್ಟಿಯವರ ನೇತೃತ್ವ

ಖ್ಯಾತ ಭಾಗವತ ಪಟ್ಲ ಸತೀಶ್‌ ಶೆಟ್ಟಿ ಅವರ ನೇತೃತ್ವದಲ್ಲಿ ಹೊಸ ಮೇಳವೊಂದು ತಿರುಗಾಟಕ್ಕ ಹೊರಡಲು ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳು ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಹಲವು ದಿನಗಳಿಂದಲೂ ಈ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದು ಈಗ ಆ ಬಗ್ಗೆ ಹೇಳಿಕೆ ನೀಡಲಾಗಿದೆ. ವಾಸ್ತವವಾಗಿ ಪಟ್ಲ ಸತೀಶ್ ಶೆಟ್ಟಿಯವರು  ಮೇಳವನ್ನು ಪ್ರಾಂಭಿಸುವ ಬಗ್ಗೆ ವರುಷದ ಹಿಂದಿನಿಂದಲೇ ಅವರ ಅಭಿಮಾನಿಗಳಲ್ಲಿ ನಿರೀಕ್ಷೆಗಳಿದ್ದುವು. ಎಲ್ಲರ ನಿರೀಕ್ಷೆ, ಹಾರೈಕೆಗಳೂ ಈಗ ನಿಜವಾಗಿವೆ.   ಈ ನೂತನ ಮೇಳ  ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಹೆಸರಿನಲ್ಲಿ ತಿರುಗಾಟಕ್ಕೆ ಹೊರಡಲಿದೆ. ಮೇಳ ದೇವಸ್ಥಾನದ ಹೆಸರಿನಲ್ಲಿ ತಿರುಗಾಟಕ್ಕೆ ಹೊರಡುವುದಾದರೂ ಕಲಾವಿದರ ಯಾದಿಯ ಅಂತಿಮಗೊಳಿಸುವಿಕೆ ಮೊದಲಾದ ಕೆಲವು ಆಡಳಿತಾತ್ಮಕ ವಿಚಾರಗಳನ್ನು ಪಟ್ಲ ಸತೀಶ್ ಶೆಟ್ಟಿಯವರೇ ನಿರ್ವಹಸಬಹುದು ಎಂದು ಹೇಳಲಾಗುತ್ತಿದೆ. 

ಆದರೆ ಪಟ್ಲ ಸತೀಶ ಶೆಟ್ಟಿಯವರ ಹೇಳಿಕೆಯ ಪ್ರಕಾರ ದೇವಸ್ಥಾನದ ಆಡಳಿತ ಮಂಡಳಿಯು ಕೇವಲ ಭಾಗವತಿಕೆಯ ಸ್ಥಾನಕ್ಕೆ ಸಂಬಂಧಪಟ್ಟಂತೆ ಮಾತ್ರ ಅವರಲ್ಲಿ ಮಾತುಕತೆಯನ್ನು ನಡೆಸಿದೆ. ಮತ್ತು ಇದನ್ನು ಪಟ್ಲ ಸತೀಶರು ದೃಢೀಕರಿಸಿದ್ದಾರೆ. 

ಕಳೆದ ಮೂರು ವರ್ಷಗಳ ಹಿಂದಿನಿಂದಲೇ ಮೇಳ ಆರಂಭಿಸುವ ಬಗ್ಗೆ ಮಾತುಕತೆ ನಡೆಯುತ್ತಿತ್ತು. ಪಟ್ಲ ಸತೀಶ ಶೆಟ್ಟಿಯವರನ್ನು ಭಾಗವತರನ್ನಾಗಿ ಮಾಡುವ ನಿರ್ಧಾರದಿಂದ ಈ ಸುದ್ದಿ ಮುನ್ನೆಲೆಗೆ ಬಂದಿದೆ ಎಂದು  ದೇವಸ್ಥಾನದ ಆಡಳಿತ ಸಮಿತಿ ಹೇಳುತ್ತಿದೆ. 

ಆದರೂ ಭಾಗವತಿಕೆಯ ಸ್ಥಾನದಲ್ಲಿದ್ದರೂ ಕೆಲವೊಂದು ಮಹತ್ವದ ನಿರ್ಧಾರಗಳು ಪಟ್ಲರದ್ದೇ ಎಂದು ಹೇಳಲಾಗುತ್ತಿದೆ. ಕಲಾವಿದರ ಆಯ್ಕೆಯೇ ಮೊದಲಾದ ಮಹತ್ವದ ವಿಚಾರಗಳನ್ನು ದೇವಸ್ಥಾನದ ಆಡಳಿತ ಮಂಡಳಿಯು ಸತೀಶ್ ಶೆಟ್ಟಿಯವರ ನಿರ್ಧಾರ ಮತ್ತು ಅಧಿಕಾರದ ವಿವೇಚನೆಗೆ ಬಿಡಬಹುದು. ಅದೂ ಅಲ್ಲದೆ ಸುಮಾರು 20 ಮಂದಿ ಕಲಾವಿದರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಈ ನೂತನ ಮೇಳ ಕಾಲಮಿತಿಯಲ್ಲಿ ಪ್ರದರ್ಶನ ನೀಡುವುದರಿಂದ ( ಸಂಜೆ 6ರಿಂದ ರಾತ್ರಿ 10) ಬಪ್ಪನಾಡು ಮೇಳದ ಕೆಲವು ಕಲಾವಿದರೂ ಈ ಹೊಸ ಮೇಳದ ಪ್ರದರ್ಶನದಲ್ಲಿ ಭಾಗವಹಿಸಬಹುದು ಎಂದು ಹೇಳಲಾಗುತ್ತಿದೆ. ಅದೂ ಅಲ್ಲದೆ ಈ ನೂತನ ಮೇಳ ದೇವಿ ಮಹಾತ್ಮೆ ಪ್ರಸಂಗಕ್ಕೆ ಅನುಗುಣವಾದ ಕಲಾವಿದರನ್ನೇ ಆಯ್ಕೆ ಮಾಡಲು ಸಿದ್ಧತೆ ನಡೆಸಿದಂತೆ ಕಾಣುತ್ತದೆ. ಹಿಮ್ಮೇಳ ಕಲಾವಿದರು ಸೇರಿದಂತೆ ಅಂದಿನಿಂದಲೂ ಪಟ್ಲರ ಜೊತೆಯಲ್ಲಿದ್ದ ಕಲಾವಿದರು ಮತ್ತೆ ಪಟ್ಲರ ಜೊತೆಯೇ ಹೊಸ ಮೇಳವನ್ನು ಸೇರಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಚಂಡ, ಮುಂಡ, ಮಹಿಷಾಸುರ ಹಾಗೂ ದೇವಿಯ ಪಾತ್ರಗಳಿಗೆ ಇತರ ಮೇಳಗಳಲ್ಲಿದ್ದ ಕಲಾವಿದರು ನೂತನ ಮೇಳಕ್ಕೆ ಸೇರುವ ನಿರೀಕ್ಷೆಗಳಿವೆ. ರಕ್ತಬೀಜನ ಪಾತ್ರಕ್ಕೆ ಬಪ್ಪನಾಡು ಮೇಳದ ಕಲಾವಿದರೋರ್ವರ ಹೆಸರು ಕೇಳಿಬರುತ್ತಾ ಉಂಟು. 

ಅಂತೂ ಪ್ರದರ್ಶನಗಳಿಲ್ಲದೆ ಸೊರಗಿದ್ದ ಯಕ್ಷರಂಗಕ್ಕೆ ಈ ನೂತನ ಮೇಳದ ಪರಿಕಲ್ಪನೆ ಒಂದು ಸಿಹಿ ಸುದ್ದಿಯ ಟಾನಿಕ್ ಆಗಿ ಪರಿಣಮಿಸಿದೆ. ಹತ್ತಿಪ್ಪತ್ತು ಮಂದಿ ಹೆಚ್ಚಿನ ಕಲಾವಿದರಿಗೆ ಉದ್ಯೋಗ ದೊರಕಿದಂತಾಗಲಿದೆ. 

ನೂರೈವತ್ತು ನಲ್ನುಡಿಗಳು – ಎಂ.ಆರ್.ವಾಸುದೇವ ಸಾಮಗ (M.R Vasudeva Samaga)

‘ ನೂರೈವತ್ತು ನಲ್ನುಡಿಗಳು’ ಎಂಬ ಕೃತಿಯನ್ನು ಬರೆದವರು ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದ, ಖ್ಯಾತ ತಾಳಮದ್ದಳೆ ಅರ್ಥಧಾರಿ, ಸಾಮಗ ಮನೆತನದ ಶ್ರೀ  ಎಂ.ಆರ್.ವಾಸುದೇವ ಸಾಮಗರು. ಇದು ದ್ವಿತೀಯ ಮುದ್ರಣ(2009). 1981ರಲ್ಲಿ ಮೊದಲೊಮ್ಮೆ ಪ್ರಕಟವಾಗಿ ಪುಸ್ತಕಗಳೆಲ್ಲವೂ ಓದುಗರ ಕೈ ಸೇರಿತ್ತು. ಶ್ರೀ ಮಲ್ಪೆ ವಾಸುದೇವ ಸಾಮಗರ ಜನ್ಮ ಷಷ್ಟ್ಯಬ್ದದ ಶುಭ ಸಂದರ್ಭದಲ್ಲಿ ಈ ಕೃತಿಯು ಪ್ರಕಟವಾಗಿದೆ. ಈ ವಿಚಾರಗಳನ್ನು ತಮ್ಮ ಮುನ್ನುಡಿ ಲೇಖನದಲ್ಲಿ ಶ್ರೀ ವಾಸುದೇವ ಸಾಮಗರ ಪುತ್ರ, ಕಲಾವಿದ ಶ್ರೀ ಮಲ್ಪೆ ಪ್ರದೀಪ ವಿ. ಸಾಮಗ ಅವರು ತಿಳಿಸಿರುತ್ತಾರೆ.

ಮೊದಲ ಮುದ್ರಣಕ್ಕೆ ಶ್ರೀಮಲ್ಪೆ ವಾಸುದೇವ ಸಾಮಗರು ಬರೆದ ಮುನ್ನುಡಿ ಲೇಖನವನ್ನೂ ಇಲ್ಲಿ ನೀಡಲಾಗಿದೆ. ಈ ಕೃತಿಯ ಪ್ರಕಾಶಕರು ಸಂಯಮಂ ಪ್ರಕಾಶನ, ಮಣೂರು. ಲೇಖಕ ಶ್ರೀ ಮಲ್ಪೆ ವಾಸುದೇವ ಸಾಮಗರು ಈ ಹೊತ್ತಗೆಯಲ್ಲಿ ನೂರೈವತ್ತು ಸಂಸ್ಕೃತ ಸುಭಾಷಿತಗಳ  ಪದ್ಯಾನುವಾದವನ್ನು ನೀಡಿರುತ್ತಾರೆ. ಮೊದಲ ಮುದ್ರಣದ ಪುಸ್ತಕವು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಿ. ವೀರೇಂದ್ರ ಹೆಗಡೆಯವರ ಸೂಚನೆಯಂತೆ ಧರ್ಮಸ್ಥಳದ ದೀಪೋತ್ಸವದ ಶುಭಾವಸರದಲ್ಲಿ ನಡೆದ ಸರ್ವಧರ್ಮ ಸಮ್ಮೇಳನ, ಸಾಹಿತ್ಯ ಸಮ್ಮೇಳನಗಳೆಡೆಯಲ್ಲಿ ಬಿಡುಗಡೆಯಾಗಿತ್ತು.

ಈ ವಿಚಾರವನ್ನು ಮೊದಲ ಮುದ್ರಣದ ಮುನ್ನುಡಿ ಲೇಖನದಲ್ಲಿ ಶ್ರೀ ಮಲ್ಪೆ ವಾಸುದೇವ ಸಾಮಗರು ತಿಳಿಸಿರುತ್ತಾರೆ. ಪುಸ್ತಕದ ಹೊರ ಆವರಣದಲ್ಲಿ ಶ್ರೀ ಅಮೃತ ಸೋಮೇಶ್ವರ, ಶ್ರೀ ಕಡತೋಕಾ ಮಂಜುನಾಥ ಭಾಗವತ, ಶ್ರೀ ಪ್ರಭಾಕರ. ಎಸ್. ಇವರುಗಳ ಶುಭ ಸಂದೇಶಗಳನ್ನು ನೀಡಲಾಗಿದೆ. ಇದು ಅತ್ಯಂತ ಉಪಯೋಗೀ ಸಂಗ್ರಹಯೋಗ್ಯ ಪುಸ್ತಕವು.

ಲೇಖಕ: ರವಿಶಂಕರ್ ವಳಕ್ಕುಂಜ 

ಯಕ್ಷಗಾನವಲ್ಲದ ಯಕ್ಷಗಾನ ಪ್ರದರ್ಶನಗಳು – ಕೆಲವು ವೀಡಿಯೋಗಳು

ಮೊದಲಾಗಿಯೇ ಹೇಳಿಬಿಡುತ್ತೇನೆ. ಟೀಕೆ ಮಾಡುವುದು ಇಲ್ಲಿ ಉದ್ದೇಶವಲ್ಲ. ಈಗ ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳನ್ನು ಹೇಳುವುದು ಮಾತ್ರ ಉದ್ದೇಶ. ಅದರ ಬಗ್ಗೆ ನಿರ್ಣಯಿಸುವುದು ಆಸಕ್ತರಿಗೆ ಬಿಟ್ಟ ವಿಚಾರ. ನಾವು ಆಗಾಗ ಟಿವಿ ಚಾನೆಲುಗಳಲ್ಲಿ ಯಕ್ಷಗಾನದ ವೇಷಗಳನ್ನು ಧರಿಸಿ ಹುಚ್ಚು ಹುಚ್ಚಾಗಿ ಕರ್ಣಕಠೋರವಾದ ಸಿನಿಮಾ ಪದ್ಯಗಳಿಗೋ ಅಥವಾ ಪಾಶ್ಚತ್ಯ ಸಂಗೀತಕ್ಕೋ ನೃತ್ಯ ಮಾಡುವುದನ್ನು ಕಾಣುತ್ತೇವೆ ಅಥವಾ ಈ ಹಿಂದೆ ಕಂಡಿದ್ದೇವೆ. ಆಗೆಲ್ಲಾ ಬಹಳಷ್ಟು ಸಮಯಗಳಲ್ಲಿ ಆಕ್ಷೇಪ ಪ್ರತಿಭಟನೆಗಳಿಂದಾಗಿ ಟಿವಿ ಚಾನೆಲ್ ಕಾರ್ಯಕ್ರಮ ನಿರ್ಮಾಪಕರು ಕ್ಷಮೆ ಕೇಳಿದ ಪ್ರಕರಣಗಳೂ ಇದ್ದುವು.

ಆದರೆ ಎಷ್ಟೋ ಬಾರಿ ಇತರರಿಂದ ಕ್ಷಮೆ ಕೇಳಿಸುವ ನಾವು ನಾವೇ ಇಂತಹ ತಪ್ಪುಗಳನ್ನು ಹಲವಾರು ಬಾರಿ ಮಾಡುತ್ತೇವೆ. ಕೆಲವೊಂದು ಹಾಡುಗಳಿಗೆ ಯಕ್ಷಗಾನದ ವೇಷಭೂಷಣಗಳನ್ನು ಧರಿಸಿ ಮೈ ಕುಲುಕಿಸುತ್ತಾ ಚಿತ್ರ ವಿಚಿತ್ರ ಭಂಗಿಗಳಲ್ಲಿ ನೃತ್ಯ ಮಾಡುತ್ತೇವೆ.

ಪಾಶ್ಚಾತ್ಯ ಸಂಗೀತದ ಶೈಲಿಯ ಹಾಡಿನ ನೃತ್ಯಕ್ಕೂ ವೇಷಭೂಷಣಗಳು ಯಕ್ಷಗಾನದ್ದೇ ಆಗಬೇಕು. ಕೆಲವೊಂದು ಕಾಲೇಜು ವಾರ್ಷಿಕೋತ್ಸವಗಳಲ್ಲಿ ಇಂತಹಾ ನೃತ್ಯಪ್ರದರ್ಶನಗಳು ವಿದ್ಯಾರ್ಥಿಗಳಿಂದ ನಡೆಯುತ್ತವೆ. ಬೆಳೆಯುತ್ತಿರುವ ಮಕ್ಕಳಿಗೆ ಯಾವುದು  ಸರಿ ಮತ್ತು ಯಾವುದು ತಪ್ಪು ಎಂಬ ಮಾಹಿತಿಯ ಕೊರತೆಯಿರುವುದು ನಿಜ. ಅವರನ್ನು ಆಕ್ಷೇಪಿಸುವುದೂ ಅಷ್ಟು ಸಮಂಜಸವಾಗಲಾರದು. ಆದರೆ ಅವರಿಗೆ ಇಂತಹ ನೃತ್ಯಗಳಿಗೆ ನಿರ್ದೇಶನ ಮಾಡುವವರು ಯಾರು ಎಂಬುದೇ ಆಶ್ಚರ್ಯ!!! 

ಇಡಗುಂಜಿ ಮೇಳ – ಡಾ. ರಾಮಕೃಷ್ಣ ಜೋಶಿ (Idagunji Mela – Dr. Ramakrishna Joshi)

‘ಇಡಗುಂಜಿ ಮೇಳ’ ಈ ಕೃತಿಯು ಇಡಗುಂಜಿ ಮೇಳ  ಮೇಳದ ಕಲಾವಿದರ ಮಹತ್ಸಾಧನೆಗಳನ್ನು ಒಳಗೊಂಡು ಶ್ರೀ ರಾಮಕೃಷ್ಣ ಜೋಶಿ ಅವರು ಬರೆದ ಮಹಾಪ್ರಬಂಧವಾಗಿ ಪ್ರಕಟವಾಗಿತ್ತು. ಇದು ಓದುಗರ ಕೈ ಸೇರಿದ್ದು 1998ರಲ್ಲಿ. ಈ ಮಹಾ ಪ್ರಬಂಧದ ಪ್ರಕಾಶಕರು ಚಿಂತನ ಪ್ರಕಾಶನ, ಹೆಬ್ಬಾಳ, ಮೈಸೂರು. ಇದು ಒಟ್ಟು ಇನ್ನೂರ ಮೂವತ್ತೈದು ಪುಟಗಳಿಂದ ಕೂಡಿದೆ. ಮುನ್ನುಡಿಯನ್ನು ಬರೆದವರು ಡಾ.ಎಂ. ಪ್ರಭಾಕರ ಜೋಷಿಯವರು.

ಈ ಪ್ರಬಂಧದ ರೂವಾರಿ ಡಾ. ರಾಮಕೃಷ್ಣ ಜೋಶಿಯವರು ‘ನಿಮ್ಮೊಡನೆ’ ಎಂಬ ಶೀರ್ಷಿಕೆಯ  ತಮ್ಮ ಬರಹದಲ್ಲಿ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸಹಕರಿಸಿದ ಸರ್ವರನ್ನೂ ನೆನಪಿಸಿಕೊಂಡಿರುತ್ತಾರೆ. ಈ ಮಹಾಪ್ರಬಂಧವನ್ನು ಯಕ್ಷಗಾನದ ಬೆಳವು, ಉಳಿವಿಗೆ ಗಂಧದಂತೆ ಜೀವ ತೇಯ್ದ ಅಗಣಿತ ಅಜ್ಞಾತ ಕಲಾವಿದರುಗಳಿಗೆ ಗೌರವಪೂರ್ವಕ ಅರ್ಪಿಸಿರುತ್ತಾರೆ. ಈ ಕೃತಿಯು ಪೂರ್ವ ವೃತ್ತ, ಮೇಳ ನಡೆದುಬಂದ ದಾರಿ, ಕಲಾವಿದರ ಸಾಧನೆ -ಸಿದ್ಧಿ, ಯಕ್ಷಗಾನ ಕಲೆಗೆ ಇಡಗುಂಜಿ ಮೇಳದ ಕೊಡುಗೆಗಳು, ಇಂದಿನ ಸ್ಥಿತಿ-ಗತಿ ಎಂಬ ಐದು ವಿಭಾಗಗಳಿಂದ ಕೂಡಿದೆ.

ಮೊದಲ ವಿಭಾಗದಲ್ಲಿ ಯಕ್ಷಗಾನ ಮತ್ತು ಉತ್ತರ ಕನ್ನಡ ತಿಟ್ಟು ಎಂಬ ಬರಹಗಳಿವೆ. ಎರಡನೇ ವಿಭಾಗದಲ್ಲಿ ಮೇಳದ  ಹುಟ್ಟು, ಪ್ರಾರಂಭದ ಇಪ್ಪತ್ತೈದು ವರ್ಷಗಳು, ಮೇಳದ ಸಂಚಾರ ಸ್ಥಗಿತವಾದಾಗ, ಮೇಳದ ಪುನಸ್ಸಂಘಟನೆ, ಎಂಬ ವಿಚಾರಗಳ ಬಗ್ಗೆ ವಿವರಗಳನ್ನು ನೀಡಿರುತ್ತಾರೆ. ಮೂರನೆಯ ವಿಭಾಗದಲ್ಲಿ ಕೆರೆಮನೆ ಘರಾಣೆ, ಹಿಮ್ಮೇಳ, ಪುರುಷ ವೇಷಧಾರಿಗಳು, ಸ್ತ್ರೀ  ವೇಷಧಾರಿಗಳು, ಹಾಸ್ಯಗಾರರು ಮತ್ತು ಬಣ್ಣದ ವೇಷದವರು, ಅತಿಥಿ ಕಲಾವಿದರು, ಮ್ಯಾನೇಜರರು, ಯಕ್ಷಗಾನದ ಕವಿ ಎಂಬ ಬರಹಗಳಿವೆ.

ಮುಂದಿನ ವಿಭಾಗದಲ್ಲಿ ಮೇಳದ ಕೊಡುಗೆಗಳು, ಕೆರೆಮನೆ ಬಂಧುಗಳ ಕೊಡುಗೆಗೆಳು, ಇತರ ಕಲಾವಿದರ ಕೊಡುಗೆಗಳು ಎಂಬ ವಿಚಾರಗಳ ಬಗೆಗೆ ಮಾಹಿತಿಗಳಿವೆ. ಕೊನೆಯ ವಿಭಾಗದಲ್ಲಿ ಇಂದಿನ ಸ್ಥಿತಿ ಗತಿಗಳ ವಿವರಣೆಯನ್ನು ನೀಡಿರುತ್ತಾರೆ. ಹೊರ ಆವರಣದಲ್ಲಿ ಕೆರೆಮನೆ ಶ್ರೀ ಶಂಭು ಹೆಗಡೆಯವರ ಅನಿಸಿಕೆಗಳನ್ನು ಲೇಖನ ರೂಪದಲ್ಲಿ ನೀಡಲಾಗಿದೆ. 

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ 

ಪಾತಾಳ ವೆಂಕಟ್ರಮಣ ಭಟ್ – ಸಂಕ್ಷಿಪ್ತ ಮಾಹಿತಿ (Pathala Venkatramana Bhat)

ಹೆಸರು:   ಪಾತಾಳ ವೆಂಕಟ್ರಮಣ ಭಟ್  
ಪತ್ನಿ: ಶ್ರೀಮತಿ   ಪರಮೇಶ್ವರಿ ಅಮ್ಮ  ವಿವಾಹ: 1960
ಜನನ:  1933 ನವಂಬರ್ 16ರಂದು ಜನನ ಸ್ಥಳ:   ಪುತ್ತೂರಿನ ಸಮೀಪದ ಬೈಪದವು ಎಂಬಲ್ಲಿ ತಂದೆ-ತಾಯಿಗೆ ಒಬ್ಬನೇ ಮಗನಾಗಿ    ತಂದೆ ತಾಯಿ:  ತಂದೆ ಶ್ರೀ ರಾಮ ಭಟ್ಟ. ತಾಯಿ ಶ್ರೀಮತಿ ಹೇಮಾವತಿ
 ಯಕ್ಷಗಾನ ಗುರುಗಳು:   ಪುತ್ತೂರು ಕೃಷ್ಣ ಭಟ್ಟರು ಕಾಂಚನ ಮೇಳದಿಂದ ಸೌಕೂರು ಮೇಳವನ್ನು ಸೇರಿದ ಪಾತಾಳ ವೆಂಕಟ್ರಮಣ ಭಟ್ಟರಿಗೆ ಬಡಗುತಿಟ್ಟಿನ ನಂಟು ಬೆಳೆಯಿತು. ಸೌಕೂರು ಮೇಳದ ಸ್ತ್ರೀ ವೇಷಧಾರಿ ಉಳ್ತೂರು ಸೀತಾರಾಮರವರಿಂದ ಬಡಗಿನ ನಾಟ್ಯದ ಹೆಜ್ಜೆಗಳನ್ನೂ ಕಲಿತರು. ಪುನಃ ತೆಂಕಿನ ಮೇಳಕ್ಕೆ  ಬಂದಾಗ ಪೆರುವೋಡಿ ನಾರಾಯಣ ಭಟ್ಟರಿಂದ ನಾಟ್ಯಗಾರಿಕೆಯ ಕಲಿಕೆಯನ್ನು ಪೂರ್ಣಗೊಳಿಸಿದರು. ಅಲ್ಲದೆ ಕಡಾರು ನಾರಾಯಣ ಭಟ್ ಹಾಗೂ ಅಳಿಕೆ ರಾಮಯ್ಯ ರೈಗಳಿಂದಲೂ ಹೆಚ್ಚಿನ ನಾಟ್ಯಾಭ್ಯಾಸವನ್ನು ಮಾಡಿದರು.   ರಂಗಮಾಹಿತಿ ಮತ್ತು ಹೆಚ್ಚಿನ ಕಲಿಕೆ : ಆ ಕಾಲದ ಪ್ರಸಿಧ್ಧ ವೇಷಧಾರಿಗಳಿಂದ 
ಅನುಭವ:  ಕಾಂಚನ ಮೇಳ, ಸೌಕೂರು ಮೇಳ,  1954ರಲ್ಲಿ ಮೂಲ್ಕಿ ಮೇಳಕ್ಕೆ, 1963ರಲ್ಲಿ ಧರ್ಮಸ್ಥಳ ಮೇಳಕ್ಕೆ ಸೇರಿದರು. ಧರ್ಮಸ್ಥಳ ಮೇಳದ ತಿರುಗಾಟವು ಪಾತಾಳ ವೆಂಕಟ್ರಮಣ ಭಟ್ಟರ ಕಲಾ ಜೀವನದ ಸುವರ್ಣಯುಗ ಎಂದೇ ಹೇಳಬಹುದು. 
 ಮಕ್ಕಳು:   ಇಬ್ಬರು ಗಂಡು ಮಕ್ಕಳು, ನಾಲ್ವರು ಹೆಣ್ಣು ಮಕ್ಕಳು, ಹಿರಿಯ ಮಗ ಶ್ರೀ ಅಂಬಾಪ್ರಸಾದ ಪಾತಾಳ ಯಕ್ಷರಂಗದ ಪ್ರಸಿದ್ಧ ಸ್ತ್ರೀ ವೇಷಧಾರಿ. ಪ್ರಶಸ್ತಿ/ಅಭಿನಂದನೆ/ಸನ್ಮಾನಗಳು: ಹಲವಾರು ಸನ್ಮಾನ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿವೆ.  ಅದರಲ್ಲಿ ಕರ್ನಾಟಕ ಜಾನಪದ ಅಕಾಡೆಮಿ  ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ,  ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಗಾನ ಕಲಾರಂಗ ಪ್ರಶಸ್ತಿ, ವಿಟ್ಲ ಗೋಪಾಲಕೃಷ್ಣ ಭಟ್ ಪ್ರತಿಷ್ಟಾನ ಪ್ರಶಸ್ತಿ, ವಿದ್ಯಾಮಾನ್ಯ ಪ್ರಶಸ್ತಿ, ಯಕ್ಷ ಕಲಾನಿಧಿ ಪ್ರಶಸ್ತಿ, ಅಗರಿ ಪ್ರಶಸ್ತಿ, ಡೋಗ್ರಾ ಪೂಜಾರಿ ಪ್ರಶಸ್ತಿಗಳು ಸೇರಿವೆ.  ಮತ್ತು ಅನೇಕ ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. 

ವಸಂತ ಗೌಡ ಕಾಯರ್ತಡ್ಕ (ಯಕ್ಷದೀಪ – ಕಲಾವಿದರ ಮಾಹಿತಿ) Vasantha Gowda Kayarthadka

ಹೆಸರು:   ವಸಂತ ಗೌಡ ಕಾಯರ್ತಡ್ಕ   
ಪತ್ನಿ:  ಶ್ರೀಮತಿ ಗೀತ  
ಜನನ:   1962ನೇ ಇಸವಿ ಸೆಪ್ಟಂಬರ್ 1ನೇ ತಾರೀಕು    
ಜನನ ಸ್ಥಳ:    ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ ಕಾಯರ್ತಡ್ಕ     
ತಂದೆ ತಾಯಿ:  ತಂದೆ ಶ್ರೀ  ಬಿರ್ಮಣ್ಣ ಗೌಡ . ತಾಯಿ ಶ್ರೀಮತಿ  ಬೊಮ್ಮಿ ಅಮ್ಮ ವಿದ್ಯಾಭ್ಯಾಸ: ಕಾಯರ್ತಡ್ಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವರೆಗೆ   ಯಕ್ಷಗಾನ ಗುರುಗಳು:  ಶ್ರೀ ಪಡ್ರೆ ಚಂದು   ರಂಗಮಾಹಿತಿ: ಆ ಕಾಲದ ಪ್ರಸಿಧ್ಧ ವೇಷಧಾರಿಗಳಿಂದ 
ಅನುಭವ: 46 ವರ್ಷಕ್ಕೂ ಮೇಲ್ಪಟ್ಟು ಮೇಳದ ತಿರುಗಾಟ (ಧರ್ಮಸ್ಥಳ ಮೇಳವೊಂದರಲ್ಲೇ 46 ವರ್ಷಗಳ ತಿರುಗಾಟ. 1974ನೇ ಇಸವಿ ತನ್ನ 12ನೇ ವರ್ಷದಲ್ಲಿ ಶ್ರೀ ಧರ್ಮಸ್ಥಳ ಲಲಿತ ಕಲಾಕೇಂದ್ರ ಸೇರಿ ಶ್ರೀ ಪಡ್ರೆ ಚಂದು ಅವರಿಂದ ಯಕ್ಷಗಾನ ನಾಟ್ಯ ಕಲಿತು ಅದೇ ವರ್ಷ ಶ್ರೀ ಧರ್ಮಸ್ಥಳ ಮೇಳಕ್ಕೆ ಬಾಲಕಲಾವಿದನಾಗಿ ಸೇರಿದರು) ಕುಟುಂಬ :  ಪತ್ನಿ ಶ್ರೀಮತಿ ಗೀತ ಮತ್ತು ಮೂವರು ಗಂಡು ಮಕ್ಕಳ (ರವಿ, ಪುನೀತ್, ದಯಾನಂದ) ಸಂತೃಪ್ತ ಕುಟುಂಬ ಇವರದು. 

ವಸಂತ ಗೌಡ ಅವರ ಮನಮೆಚ್ಚಿದ ಹಾಗೂ ಅವರಿಗೆ ಹೆಸರು ತಂದುಕೊಟ್ಟ ಪಾತ್ರಗಳು:   ಆರಂಭದಲ್ಲಿ  ಬಾಲಲೀಲೆಯ ಶ್ರೀಕೃಷ್ಣ, ಪ್ರಹ್ಲಾದ, ಬಾಲಚ್ಯವನ, ಮಾರ್ಕಂಡೇಯ, ಲೋಹಿತಾಶ್ವ, ಷಣ್ಮುಖ ಮೊದಲಾದ ಪಾತ್ರಗಳನ್ನು ಮಾಡುತ್ತಿದ್ದರು. ಮಾತುಗಾರಿಕೆಯನ್ನೂ ಚೆನ್ನಾಗಿ ಅಭ್ಯಸಿಸಿ, ಬಭ್ರುವಾಹನ, ಅಭಿಮನ್ಯು, ಚಂಡ ಮುಂಡರು, ಲಕ್ಷ್ಮಣ, ವಿಷ್ಣು, ಶ್ರೀರಾಮ, ಬ್ರಹ್ಮ, ಅಶ್ವತ್ಥಾಮನೇ ಮೊದಲಾದ ಪುಂಡು ವೇಷಗಳನ್ನು ಮಾಡುತ್ತಾ ಸಮರ್ಥ ಪುಂಡುವೇಷಧಾರಿಯಾದರು. ಹಾಸ್ಯಗಾರರ ಅನುಪಸ್ಥಿತಿಯಲ್ಲಿ ಹಾಸ್ಯ ಪಾತ್ರಗಳನ್ನೂ ಮಾಡುತ್ತಾರೆ. ನಾರದ ಮತ್ತು ಬಾಹುಕನ ಪಾತ್ರವನ್ನೂ ಮಾಡಿದ ಖ್ಯಾತಿ  ಇವರಿಗಿದೆ.  ಸ್ತ್ರೀವೇಷ, ಪುಂಡುವೇಷ, ಎದುರುವೇಷ, ಪೀಠಿಕೆ ವೇಷ, ಹಾಸ್ಯ ಪಾತ್ರಗಳೇ ಮೊದಲಾದ ಯಾವುದೇ ಪಾತ್ರಗಳನ್ನೂ ಅಭಿನಯಿಸುವ ವಸಂತ ಗೌಡರಂತಹಾ ಅನುಭವಿ ಕಲಾವಿದರು ಕಾಣಸಿಗುವುದು ಅಪರೂಪ. ವಿಶೇಷತೆ: ಎಲ್ಲ ಪ್ರಸಂಗಗಳ ರಂಗನಡೆಯನ್ನು ಬಲ್ಲರು. ಇವರು ಮೇಳವೊಂದಕ್ಕೆ ಮಾತ್ರವಲ್ಲದೆ ಯಕ್ಷಗಾನ ರಂಗಕ್ಕೆ ಓರ್ವ ಸಂಪನ್ಮೂಲ ವ್ಯಕ್ತಿ. ಮಿತಭಾಷಿ. ಪ್ರಚಾರ, ವೇದಿಕೆಗಳಿಂದ ದೂರ ಇರಲು ಇಷ್ಟಪಡುತ್ತಾರೆ. 

ಲೇಖನ: ಮನಮೋಹನ್ ವಿ.ಎಸ್.  

‘ಯಕ್ಷಗಾನ ಕವಿ – ಕಾವ್ಯ ವಿಹಾರ’ (ಡಾ. ಕಬ್ಬಿನಾಲೆ ವಸಂತ ಭಾರದ್ವಾಜ) Dr. Kabbinale Vasantha Bharadwaja

ಯಕ್ಷಗಾನ ಕವಿ – ಕಾವ್ಯ ವಿಹಾರ ಎಂಬ ಈ ಕೃತಿಯು ಪ್ರಕಟವಾಗಿ ಓದುಗರ ಸೇರಿದ್ದು 2010ರಲ್ಲಿ. ಈ ಕೃತಿಯ ಲೇಖಕರು ಕನ್ನಡ ಸಾಹಿತ್ಯ ಲೋಕದ ವಿದ್ವಾಂಸ, ಸಂಶೋಧಕ, ಕಲಾವಿದ, ಅಷ್ಟಾವಧಾನಿ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಅವರು. ಪ್ರಕಾಶಕರು ಯಕ್ಷಗಾನ ಕೇಂದ್ರ, ಯಕ್ಷ ಗುರುಕುಲ ಶಿಕ್ಷಣ ಟ್ರಸ್ಟ್,  ಎಂಬ ಸಂಸ್ಥೆ. ಪ್ರಕಾಶಕರ ಮಾತು ಎಂಬ ಬರಹದಡಿಯಲ್ಲಿ ಪ್ರೊ| ಹೆರಂಜೆ ಕೃಷ್ಣ ಭಟ್ಟರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸಹಕರಿಸಿದ ಮಹನೀಯರುಗಳಿಗೆ ಕೃತಜ್ಞತೆಗಳನ್ನು  ಸಲ್ಲಿಸಿದ್ದಾರೆ. ಲೇಖಕ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಅವರು ತಮ್ಮ ‘ಲೇಖಕನ ಮಾತು’ ಬರಹದಡಿಯಲ್ಲಿ  ಅನಿಸಿಕೆಗಳನ್ನು ಅಕ್ಷರರೂಪಕ್ಕಿಳಿಸಿರುತ್ತಾರೆ. ಈ ಕೃತಿಗೆ ಮುನ್ನುಡಿಯನ್ನು ಬರೆದವರು ವಿದ್ವಾಂಸರೂ  ಪ್ರಾಧ್ಯಾಪಕರೂ ಆದ ಶ್ರೀ ಪಾದೇಕಲ್ಲು ವಿಷ್ಣು ಭಟ್ಟರು. ‘ಯಕ್ಷಗಾನ ಕವಿ – ಕಾವ್ಯ ವಿಹಾರ’ ಎಂಬ ಈ ಹೊತ್ತಗೆಯು ಪ್ರಾಚೀನ ಕವಿಗಳು ಮತ್ತು ಆಧುನಿಕ ಕವಿಗಳು  ಎಂಬ ಎರಡು ವಿಭಾಗಗಳಿಂದ ಕೂಡಿದೆ. ಮೊದಲ ವಿಭಾಗ ಪ್ರಾಚೀನ ಕವಿಗಳು. ಈ ಭಾಗದಲ್ಲಿ ಯಕ್ಷಗಾನ ಪ್ರಸಂಗಕರ್ತರಾದ ವಿಷ್ಣು ವಾರಂಬಳ್ಳಿ, ಕುಂಬಳೆಯ ಪಾರ್ತಿಸುಬ್ಬ, ಪಾಂಡೇಶ್ವರ ವೆಂಕಟ, ಹಳೆಮಕ್ಕಿ ರಾಮ, ನಗಿರೆ ಸುಬ್ರಹ್ಮಣ್ಯ, ನಿತ್ಯಾನಂದ ಅವಧೂತ, ಧ್ವಜಪುರದ ನಾಗಪ್ಪಯ್ಯ, ದೇವಿದಾಸ, ಹಟ್ಟಿಯಂಗಡಿ ರಾಮ ಭಟ್ಟ, ಮತ್ತು ಮುದ್ದಣ ಎಂಬ ಹತ್ತು ಮಂದಿಗಳ ಬಗೆಗೆ ಮತ್ತು ಅವರು ಬರೆದ ಪ್ರಸಂಗಗಳ ಬಗೆಗೆ ಮಾಹಿತಿಗಳನ್ನು ನೀಡಲಾಗಿದೆ. ಭಾಗ ಎರಡು ಆಧುನಿಕ ಕವಿಗಳು. ಇಲ್ಲಿ ಹಲಸಿನ ಹಳ್ಳಿ ನರಸಿಂಹ ಶಾಸ್ತ್ರಿ, ಸೀತಾನದಿ ಗಣಪಯ್ಯ ಶೆಟ್ಟಿ, ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟ, ಅಗರಿ ಶ್ರೀನಿವಾಸ ಭಾಗವತ, ಬೆಳಸಲಿಗೆ ಗಣಪತಿ ಹೆಗಡೆ, ಅಮೃತ ಸೋಮೇಶ್ವರ, ಕಂದಾವರ ರಘುರಾಮ ಶೆಟ್ಟಿ, ಹೊಸ್ತೋಟ ಮಂಜುನಾಥ ಭಾಗವತ, ಕೆ.ಎಂ.ರಾಘವ ನಂಬಿಯಾರ್ ಮತ್ತು ಶ್ರೀಧರ ಡಿ.ಎಸ್. ಎಂಬ ಹತ್ತು ಮಂದಿ ಪ್ರಸಂಗಕರ್ತರ ಬಗೆಗೆ, ಅವರು ಬರೆದ ಪ್ರಸಂಗಗಳ ಬಗೆಗೆ ಮಾಹಿತಿಗಳನ್ನು ನೀಡಲಾಗಿದೆ. ಪುಸ್ತಕದ ಹೊರ ಆವರಣದ ಬರಹದಲ್ಲಿ ಶ್ರೀ ಪಾದೇಕಲ್ಲು ವಿಷ್ಣು ಭಟ್ಟರು ಲೇಖಕ ಡಾ. ಕಬ್ಬಿನಾಲೆ ವಸಂತ ಭಾರದ್ವಾಜರ ಈ ಪುಸ್ತಕದ ವಿಶೇಷತೆ ಮತ್ತು ಮಹತ್ವವನ್ನು ತಿಳಿಸಿರುತ್ತಾರೆ.

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ 

ಹರಿನಾರಾಯಣ ಭಟ್ ಎಡನೀರು ಅವರೊಂದಿಗೆ ಮಾತುಕತೆ – ಮಾತಿನ ಮಂಟಪದಲ್ಲಿ

ಕರ್ನಾಟಕ ಯಕ್ಷಗಾನ ಅಕಾಡೆಮಿ ಸಂಯೋಜಿಸಿದ ಪ್ರತಿದಿನದ ಕಾರ್ಯಕ್ರಮವಾದ ಯಕ್ಷಗಾನ  ಕಲಾವಿದರೊಂದಿಗೆ ಮಾತುಕತೆಯ ಮಾತಿನ ಮಂಟಪದ  45ನೇ  ಕಾರ್ಯಕ್ರಮದಲ್ಲಿ ಇಂದು ಅಂದರೆ ಅಕ್ಟೋಬರ್ 12ರಂದು ಸೋಮವಾರ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಶ್ರೀ ಹರಿನಾರಾಯಣ ಭಟ್ ಎಡನೀರು ಅವರೊಂದಿಗೆ ಮಾತುಕತೆ ನಡೆಯಲಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರೂ, ಯಕ್ಷಗಾನ ಕಲಾವಿದೆಯೂ ಉಪನ್ಯಾಸಕರೂ ಆದ ಶ್ರೀಮತಿ ಆರತಿ ಪಟ್ರಮೆಯವರು ಕಾರ್ಯಕ್ರಮವನ್ನು ಸಂಯೋಜಿಸಿ ಮಾತುಕತೆಯನ್ನು ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮ ಫೇಸ್ಬುಕ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ. 2020ನೇ ಅಕ್ಟೋಬರ್ ೧೨ ಮಂಗಳವಾರ ಸಂಜೆ ಘಂಟೆ 6.30ರಿಂದ  7.30ರ ವರೆಗೆ ಈ ಕಾರ್ಯಕ್ರಮ ಮೂಡಿಬರಲಿದೆ.  ಮಾತಿನ ಮಂಟಪ  ಕಾರ್ಯಕ್ರಮದಲ್ಲಿ ಪ್ರತಿದಿನ ಬೇರೆ ಬೇರೆ ಯಕ್ಷಗಾನ ಕಲಾವಿದರೊಂದಿಗೆ ಮಾತುಕತೆ ನಡೆಯಲಿದೆ. 

ಯಕ್ಷಗಾನಂ ವಿಶ್ವಗಾನಂ – ಸ್ಮರಣ ಸಂಚಿಕೆ (ಗಾನ ಸೌರಭ ಯಕ್ಷಗಾನ ಶಾಲೆ (ನೊಂ), ಬೆಂಗಳೂರು)

‘ಯಕ್ಷಗಾನಂ ವಿಶ್ವಗಾನಂ’ ಎಂಬ ಹೊತ್ತಗೆಯು ಬೆಂಗಳೂರಿನ ಗಾನ ಸೌರಭ ಯಕ್ಷಗಾನ ಶಾಲೆ (ನೊಂ) ಎಂಬ ಸಂಸ್ಥೆಯ ದಶಮಾನೋತ್ಸವ ಸಂಚಿಕೆಯಾಗಿ ಪ್ರಕಟವಾಗಿತ್ತು. ಈ ಸಂಚಿಕೆಯು ಓದುಗರ ಕೈ ಸೇರಿದ್ದು 2014ರಲ್ಲಿ. ಗಾನ ಸೌರಭ ಯಕ್ಷಗಾನ ಶಾಲೆಯ ನಿರ್ದೇಶಕರು ಖ್ಯಾತ ಸ್ತ್ರೀ ಪಾತ್ರಧಾರಿಯಾದ ಶ್ರೀ ಬೇಗಾರು ಶಿವಕುಮಾರ್ ಅವರು. ಉಭಯ ತಿಟ್ಟುಗಳ ಅನುಭವಿ. ಶ್ರೀ ಧರ್ಮಸ್ಥಳ ಮೇಳದ ಸ್ತ್ರೀ ಪಾತ್ರಧಾರಿಯಾಗಿ ತಮ್ಮ ಅತ್ಯುತ್ತಮವಾದ ನಾಟ್ಯ, ಭಾವನಾತ್ಮಕವಾದ ಅಭಿನಯ ಮತ್ತು ಮಾತುಗಾರಿಕೆಯಿಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದ ಕಲಾವಿದರಿವರು. ಯಕ್ಷಗಾನದ ವೃತ್ತಿಜೀವನಕ್ಕೆ ಸ್ವಯಂ ನಿವೃತ್ತಿಯನ್ನು ಘೋಷಿಸಿ, ಸಿಲಿಕಾನ್ ಸಿಟಿಯನ್ನು ಸೇರಿಕೊಂಡರೂ, ಯಕ್ಷಗಾನದ ನಂಟನ್ನು ಬಿಡದೆ, ಆ ಶ್ರೇಷ್ಠ ಕಲೆಯ ಸಂಬಂಧವಿರಿಸಿಕೊಂಡೇ ತೊಡಗಿಸಿಕೊಂಡಿರುವುದು ಅಭಿನಂದನೀಯ ವಿಚಾರವು. ಬೆಂಗಳೂರಿನ ಗಾನ ಸೌರಭ ಶಾಲೆಯ ರೂವಾರಿ ಇವರು. ಪ್ರದರ್ಶನಗಳಲ್ಲಿ ಅತಿಥಿ ಕಲಾವಿದರಾಗಿ ಭಾಗವಹಿಸುವುದರ ಜತೆಗೆ, ಸದ್ರಿ ಸಂಸ್ಥೆಯ ನಿರ್ದೇಶಕರಾಗಿ, ಗುರುವಾಗಿ ಕಲಿಕಾಸಕ್ತರಿಗೆ ತಾನು ಕಲಿತ ವಿದ್ಯೆಯನ್ನು ಹೇಳಿಕೊಡುತ್ತಿದ್ದಾರೆ. ಬೆಂಗಳೂರಿನಂತಹ ನಗರಗಳಲ್ಲಿ ಕಲಾ ಸಂಸ್ಥೆಯನ್ನು ಕಟ್ಟಿ ಬೆಳೆಸಿ ಮುನ್ನಡೆಸುವುದು ಅಷ್ಟು ಸುಲಭವಲ್ಲ. ಅದೊಂದು ಸಾಧನೆಯೇ ಹೌದು. ಕಲಿಕಾಸಕ್ತರಿಗೆ ತರಬೇತಿ, ಪ್ರದರ್ಶನ, ಸಾಧಕರನ್ನು ಗುರುತಿಸಿ ಗೌರವಿಸುವುದು, ಪ್ರಶಸ್ತಿ ಪ್ರಧಾನ ಮೊದಲಾದ ಯಕ್ಷಗಾನ ಕಲಾ ಸಂಬಂಧೀ ಚಟುವಟಿಕೆಗಳಲ್ಲಿ ಶ್ರೀಯುತರು ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.

ಗಾನ ಸೌರಭ ಕಲಾ ಶಾಲೆಯ ದಶಮಾನೋತ್ಸವ ಸ್ಮರಣ ಸಂಚಿಕೆ ‘ಯಕ್ಷಗಾನಂ ವಿಶ್ವಗಾನಂ’ ಇದರ ಸಂಪಾದಕರು ಡಾ| ಆನಂದರಾಮ ಉಪಾಧ್ಯ ಅವರು. ಮೊದಲಾಗಿ ಗಾನ ಸೌರಭ ಯಕ್ಷಗಾನ ಶಾಲೆ ದಶಮಾನೋತ್ಸವ ಸಮಿತಿಯ, ಕಲಾಪೋಷಕ ಪ್ರಶಸ್ತಿ, ಪುರಸ್ಕೃತರ, ‘ಗಾನಸೌರಭ’ ಪ್ರಶಸ್ತಿ ಪುರಸ್ಕೃತರ ಗಾನಸೌರಭ ಅಭಿನಂದಿತರ  ಚಿತ್ರಗಳನ್ನು ನೀಡಲಾಗಿದೆ. ಬಳಿಕ ಸಂಸ್ಥೆಯ ವಿದ್ಯಾರ್ಥಿಗಳ ಭಾವಚಿತ್ರಗಳನ್ನೂ, ಟ್ರಸ್ಟಿಗಳ ಭಾವಚಿತ್ರಗಳನ್ನೂ ನೀಡಲಾಗಿದೆ. ಡಾ. ಆನಂದರಾಮ ಉಪಾಧ್ಯ ಅವರ ಸಂಪಾದಕೀಯ ಬರಹದೊಂದಿಗೆ ಈ ಸ್ಮರಣ ಸಂಚಿಕೆಯು ಮೂರು ವಿಭಾಗಗಳಲ್ಲಿ ಕಾಣಿಸಿಕೊಂಡಿದೆ. ಮೊದಲ ವಿಭಾಗದಲ್ಲಿ ಡಾ. ಪಿ. ದಯಾನಂದ ಪೈ, ಶ್ರೀ ರಮೇಶ್ಚಂದ್ರ ಹೆಬ್ರಿ, ನಾಗರಾಜ ಶೇರೆಗಾರ್, ಪಿ.ಆರ್. ನಾಯಕ್, ಬೇಗಾರ್ ಶಿವಕುಮಾರ್, ಗೋಪಾಲಕೃಷ್ಣ (ಸಂಗ್ರಹಿತ ಲೇಖನ) ಪ್ರಭಾಕರ ಆಚಾರ್ಯ(ಸಂಗ್ರಹ), ಸಂತೋಷ್ ಭಟ್, ಸೌರಭ್ ಕುಮಾರ್ (ಸಂಗ್ರಹ) ಇವರ ಲೇಖನಗಳನ್ನು ನೀಡಲಾಗಿದೆ. ಭಾಗ ಎರಡರಲ್ಲಿ ಡಾ. ಶಿಮಂತೂರು ನಾರಾಯಣ ಶೆಟ್ಟಿ, ಡಾ. ಕೆ.ಎಂ. ರಾಘವ ನಂಬಿಯಾರ್, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್, ಕಡತೋಕಾ ಗೋಪಾಲಕೃಷ್ಣ ಭಾಗವತ, ಹೊಸ್ತೋಟ ಮಂಜುನಾಥ ಭಾಗವತ, ತಾರಾನಾಥ ವರ್ಕಾಡಿ, ಪ್ರಸಾದ್ ಮೊಗೆಬೆಟ್ಟು, ಶಾಂತಾರಾಮ ಪ್ರಭು, ರಮೇಶ್ ಬೇಗಾರು, ಧನಂಜಯ ನೆಲ್ಯಾಡಿ, ರಾಜಗೋಪಾಲ ಕನ್ಯಾನ, ಡಾ| ಈಶ್ವರ್, ಡಾ| ಪುರುಷೋತ್ತಮ ಬಿಳಿಮಲೆ ಇವರುಗಳ ಲೇಖನಗಳಿವೆ. ಭಾಗ ಮೂರರಲ್ಲಿ ಛಾಯಾಚಿತ್ರಗಳನ್ನು ನೀಡಲಾಗಿದೆ. ಬೆಂಗಳೂರಿನ ಬೆಂಗಳೂರಿನ ‘ಗಾನ ಸೌರಭ ಕಲಾ ಶಾಲೆ’ ಎಂಬ ಕಲಾ ಸಂಸ್ಥೆಗೆ, ನಿರ್ದೇಶಕ ಶ್ರೀ ಬೇಗಾರು ಶಿವಕುಮಾರ್ ಅವರಿಗೆ ಅಭಿನಂದನೆಗಳು. ಯಕ್ಷಗಾನ ಕಲಾ ಸೇವೆ ನಿರಂತರವಾಗಿ ನಡೆಯಲಿ. ಕಲಾ ಮಾತೆಯ ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು.

ಲೇಖಕ: ರವಿಶಂಕರ್ ವಳಕ್ಕುಂಜ 

‘ಜಡಭರತ’ ಯಕ್ಷಗಾನ ಪ್ರದರ್ಶನ ಈ ರಾತ್ರಿ Live – 8.30ಕ್ಕೆ 

ನಮ್ಮ ನಡುವೆ ಇರುವ ಹಾಗೂ ಆಕಸ್ಮಿಕವಾಗಿ ಹುಟ್ಟುವ ವಿಶೇಷ ಚೇತನ ಮಕ್ಕಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು “ಜಡಭರತ” ಎಂಬ ಯಕ್ಷಗಾನ ಪ್ರದರ್ಶನವೊಂದನ್ನು ಆಯೋಜಿಸಲಾಗಿದೆ. ಅಮರ ಸೌಂದರ್ಯ ಫೌಂಡೇಶನ್ ಬೆಂಗಳೂರು ಇವರ ಸಹಕಾರದೊಂದಿಗೆ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಈ ವಿಶಿಷ್ಟ ರೀತಿಯ ಯಕ್ಷಗಾನ ಪ್ರದರ್ಶನವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದ ಯು ಟ್ಯೂಬ್ ಲಿಂಕ್ ಈ ಕೆಳಗಡೆ ಕೊಡಲಾಗಿದೆ.