Sunday, February 23, 2025
Home Blog Page 378

ಚಂದನ್ ಶೆಟ್ಟಿ, ಹೊಸ ಪ್ರಯೋಗ ಮತ್ತು ಯಕ್ಷಗಾನ

ಇತ್ತೀಚಿಗೆ ಅಂದರೆ ಒಂದೆರಡು ದಿನಗಳ ಹಿಂದೆ ಹೊಸ ಪ್ರಯೋಗಕ್ಕೆ ಮೊದಲು ಎಚ್ಚರ ಎಂದು ಬರೆದಿದ್ದೆ. ಈಗ ಮತ್ತೊಮ್ಮೆ ಅದೇ ವಿಷಯದ ಬಗ್ಗೆ ಬರೆಯಬೇಕಾಗಿದೆ. ಈಗಾಗಲೇ ‘ಕೋಲು ಮಂಡೆ’ ಹಾಡಿನ ವಿವಾದ ಇನ್ನೂ ತಣ್ಣಗಾಗಿಲ್ಲ. ಧಾರ್ಮಿಕ ಪುರುಷರ, ನಮ್ಮ ನಾಡಿನ ಶ್ರೀಮಂತ ಜಾನಪದ ಪುಣ್ಯ ಪುರುಷರ ಹಾಡುಗಳನ್ನು ಕೂಡ ರಿಮಿಕ್ಸ್ ಮಾಡಿ ರಾಪ್ ಹಾಡುಗಳನ್ನಾಗಿ ಪರಿವರ್ತಿಸಿ ಆ ಮೂಲಕ ಜನಪ್ರಿಯತೆ ಪಡೆಯುವ ಹುಚ್ಚು ಕೆಲವರಿಗಿದೆ. ಚಂದನ್ ಶೆಟ್ಟಿಯವರ ಪ್ರಕರಣವು ರಾಜ್ಯಾದ್ಯಂತ ಮಾತ್ರವಲ್ಲ ಪ್ರಪಂಚದಾದ್ಯಂತ ವಿವಾದದ ಅಲೆಯನ್ನೇ ಎಬ್ಬಿಸಿತು. ನಮ್ಮ ಪುರಾಣದ ಅಥವಾ ಪೂರ್ವ ಪರಂಪರೆಯ ವ್ಯಕ್ತಿತ್ವವನ್ನು ಚಿತ್ರಿಸುವಾಗ ಅವರ ಘನತೆಗೆ ಕುಂದುಂಟಾದರೆ ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಸತ್ಯವನ್ನು ಈ ಪ್ರಕರಣದಿಂದ ನಾವು ತಿಳಿಯಬೇಕು. ಆ ಹಾಡಿನ ಪಾತ್ರಗಳ ವೇಷಭೂಷಣಗಳು ಹೇಗಿರಬೇಕು ಎಂಬುದರ ಯೋಚನೆಯನ್ನೂ ಮಾಡದೇ ಒಟ್ಟಾರೆ ಈಗಿನ ಯುವಜನಾಂಗವನ್ನು ಆಕರ್ಷಿಸಲು ಈ ರೀತಿಯ ಪ್ರಯೋಗಕ್ಕೆ ಮುಂದಾದದ್ದು ವಿಪರ್ಯಾಸ. ಅಷ್ಟು ಒಳ್ಳೆಯ ಸುಮಧುರವಾದ ಜಾನಪದ ಹಾಡಿಗೆ ಕೋಲು ಮಂಡೆ ರಾಪ್ ಎಂಬ ಹೆಸರು ಕೊಟ್ಟು ಹಾಡಿನ ಮೂಲ ಸೌಂದರ್ಯವನ್ನೇ ಕೆಡಿಸಿಬಿಟ್ಟರೆ ಏನಾದೀತು? ಇದರಿಂದ ಜಾನಪದ ಅಭಿಮಾನಿಗಳು ಕೆರಳಿದರು. ಪ್ರತಿಭಟನೆಯ ವಾಸನೆ ಸಿಕ್ಕಿದಾಗ ಆ ಹಾಡನ್ನು ಚಂದನ್ ಶೆಟ್ಟಿ ಯು ಟ್ಯೂಬ್ ನಿಂದ ಅಳಿಸಿ ಹಾಕಬೇಕಾಯಿತು. ಮಾತ್ರವಲ್ಲ ಜಾನಪದ ಅಭಿಮಾನಿಗಳ ಕ್ಷಮೆಯನ್ನೂ ಕೇಳಬೇಕಾಯಿತು. ಈ ರೀತಿಯ ಹೊಸ ದೃಷ್ಟಿಕೋನದ ಪ್ರಯೋಗ ಎಲ್ಲಾ ರಂಗದಲ್ಲೂ ಇದೆ. ಸಾಹಿತ್ಯ ಕ್ಷೇತ್ರ ಈ ಚಾಳಿಯಲ್ಲಿ ಮುಂಚೂಣಿಯಲ್ಲಿದೆ. ಸಿನಿಮಾ, ಸಂಗೀತ, ನಾಟ್ಯಕ್ಷೇತ್ರ, ಎಲ್ಲಾ ರಂಗಕಲೆಗಳು ಹೀಗೆ ಎಲ್ಲದರಲ್ಲೂ ಕೆಲವು ಅಸಂಬದ್ಧ ಪ್ರಯೋಗಗಳೇ ನಡೆಯುತ್ತವೆ. ಯಕ್ಷಗಾನ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. 

ಯಕ್ಷಗಾನದಲ್ಲಿ ಏನು ಬೇಕಾದರೂ ತುರುಕಿ, ಯಾವ ಪ್ರಸಂಗ ಆಡಿದರೂ ಆಕ್ಷೇಪವಿಲ್ಲ. ಯಾಕೆಂದರೆ ಈಗಾಗಲೇ ಹಲವಾರು ಕಾಲ್ಪನಿಕ ಪ್ರಸಂಗಗಳ ಪ್ರದರ್ಶನ ನಡೆದಿದೆ. ಪುರಾಣ ಪ್ರಸಂಗಗಳನ್ನು ಮಾತ್ರ ಆಡಬೇಕೆಂದು ಎಲ್ಲಿಯೂ ನಿಯಮವಿಲ್ಲ. ಆದರೆ ಪುರಾಣ ಪ್ರಸಂಗಗಳನ್ನು ಆಡುವಾಗ ಮಾತ್ರ ಸರಿಯಾಗಿ ಪ್ರದರ್ಶಿಸಿ. ಆ ಕತೆಯೊಳಗೆ ಏನೇನನ್ನೋ ತುರುಕಲು ಹೋಗುವುದು ಅಕ್ಷಮ್ಯ. ಕತೆಯೊಳಗೆ ಇಲ್ಲದ ಪಾತ್ರದ ಚಿಂತನೆಗಳನ್ನು ಕಲಾವಿದನ ಸ್ವ ಚಿಂತನೆಯೊಂದಿಗೆ ಕಿಸೆಯಿಂದ ತೆಗೆದ ಮಾತಿನ ಮುತ್ತುಗಳನ್ನು ರಂಗದಲ್ಲಿ ಉದುರಿಸುವುದು ನಮ್ಮ ಪುರಾಣಗಳಿಗೆ ಮಾಡುವ ಅವಮಾನ. ಕೆಲವರಿಗೆ ಯೋಚನೆಗಳ ನಾಗಾಲೋಟವೇ ಉಂಟಾಗುತ್ತದೆ. ಹೊಸತು ಏನಾದರೂ ಕೊಡಬೇಕೆಂಬ ತುಡಿತ.  ಇರಲಿ. ಅದು ಒಳ್ಳೆಯದೇ. ಆದರೆ ನವನಾವೀನ್ಯ ಪ್ರಯೋಗಗಳ ಆತುರದಲ್ಲಿ ಅಬದ್ಧಗಳನ್ನು ಸೃಷ್ಟಿಸಿದರೆ ಅದು ಆಕ್ಷೇಪ ಮತ್ತು  ಪ್ರತಿಭಟನೆಗಳಿಗೆ ಕಾರಣವಾದೀತು. ಈಗ ಎಲ್ಲವೂ ಹಾಳಾಗಿದೆ ಎಂದು ವಿಮರ್ಶಕರು ಬೊಬ್ಬೆ ಹೊಡೆಯುವುದರಲ್ಲಿ ಏನೂ ಆಶ್ಚರ್ಯವಿಲ್ಲ. ನಿಜವಾಗಿಯೂ ಅವರ ಕಾಳಜಿ ಮೆಚ್ಚಬೇಕಾದ್ದೇ. ಈಗ ಎಲ್ಲರಿಗೂ ಹೇಗಾದರೂ ಸರಿ. ತಾನು ಎಲ್ಲರಿಗಿಂತ ಭಿನ್ನ ಎಂದು ಗುರುತಿಸಿಕೊಳ್ಳುವ ಚಪಲ. ಇದು ಎಲ್ಲ ರಂಗವನ್ನೂ ಕಾಡುವ ಭೂತ. ಸಿನಿಮಾ ರಂಗ ಇಂತಹಾ ಹಲವಾರು ಪ್ರಯೋಗಗಳನ್ನು ಕಂಡಿದೆ. ಹಾಗೆಯೆ ಪ್ರತಿಭಟನೆ ವಿರೋಧಗಳನ್ನೂ ಎದುರಿಸಬೇಕಾಗಿ ಬಂದಿದೆ. ನ್ಯಾಯಾಲಯದ ಮೆಟ್ಟಿಲು ಹತ್ತಿ ಇಳಿಯಬೇಕಾದ ಪರಿಸ್ಥಿತಿ ಬರುವ ಮುನ್ನವೇ ಯೋಚನೆ ಮಾಡಬೇಕಾದ್ದು ಬುದ್ಧಿವಂತನ ಲಕ್ಷಣ. ಈಗ ನೀವು ಯಾವುದೇ ಪುರಾಣಗಳನ್ನೂ ನಿಮಗೆ ಬೇಕಾದಂತೆ ಬದಲಿಸಿ ರಂಗ ಪ್ರಯೋಗ ಮಾಡಬಹುದು ಎಂದು ಭಾವಿಸಿದರೆ ಅದು ನಿಮ್ಮ ಮೂರ್ಖತನವಲ್ಲದೆ ಮತ್ತೇನು? ಇತ್ತೀಚೆಗಿನ ಚಂದನ್ ಶೆಟ್ಟಿಯ ಉದಾಹರಣೆ ನಮ್ಮ ಕಣ್ಣ ಮುಂದಿದೆ. ನಮ್ಮದೇ ಧರ್ಮ ನಾವು ಏನು ಬೇಕಾದರೂ ಮಾಡಬಹುದು. ಪುರಾಣ ಪುಣ್ಯ ಕತೆಗಳನ್ನು ತಿರುಚಿ ನಮಗೆ ಬೇಕಾದಂತೆ ಬರೆಯಬಹುದು ಎಂದು ಲೇಖಕರೂ ತಿಳಿದುಕೊಂಡಂತಿದೆ. ಬರಹಗಾರರು ಸ್ವಾತಂತ್ರ್ಯದ ಎಲ್ಲೆಮೀರಿ ಏನು ಬೇಕಾದರೂ ಬರೆಯಬಹುದು ಎಂದು ತಿಳಿದುಕೊಂಡಂತಿದೆ. ಹಲವಾರು ಎಡಚ ಬರಹಗಾರರು ಏನೇನೆಲ್ಲಾ ತಮಗೆ ತೋಚಿದಂತೆ ಬರೆದು ಹಾಕುತ್ತಿದ್ದಾರೆ. ಅದನ್ನು, ಅಂತಹ ಪಾತ್ರಚಿತ್ರಣಗಳನ್ನು ನಾವು ರಂಗದಲ್ಲಿ ಪ್ರದರ್ಶನ ನೀಡಲು ಕಾತರಿಸುತ್ತಿದ್ದೇವೆ. ಆದರೆ ಇತರ ಯಾವುದೇ ಧರ್ಮಗಳು ಹಾಗೆ ಪುರಾಣ ಗ್ರಂಥಗಳನ್ನು ತಿರುಚಲು ಯಾರಿಗೂ ಸ್ವಾತಂತ್ರ್ಯವನ್ನು ಕೊಟ್ಟಿಲ್ಲ. ಧರ್ಮಗಳನ್ನು, ಧರ್ಮಗ್ರಂಥಗಳಿಗೆ ಚ್ಯುತಿ ತರುವಂತಹ ಬರಹಗಳಿಗೆ ಅಲ್ಲಿ ನಿಷೇಧವಿದೆ. ಧರ್ಮಗ್ರಂಥಗಳ ವಿರುದ್ಧ  ಏನೂ ಬರೆಯುವ ಹಾಗಿಲ್ಲ. ಆ ಧರ್ಮಗಳಿಗೆ ಹೊರಗಿನವರು ಬರೆಯುವ ಮಾತನ್ನು ಬಿಡೋಣ. ಆಯಾಯಾ ಧರ್ಮಕ್ಕೆ ಒಳಪಟ್ಟವರೇ ಆ ಸಾಹಸಕ್ಕೆ ಮುಂದಾಗುವುದಿಲ್ಲ. ಅವರಿಗೆ ಧರ್ಮಶ್ರದ್ಧೆಯೂ ಇದೆ ಅದರ ಜೊತೆಗೆ ಮತಾಂಧತೆಯೂ ಇರಬಹುದೇನೋ. ಯಾಕೆಂದರೆ ಅವೆರಡೂ ಬೇರೆ ಬೇರೆಯಾದ ಸಂಗತಿಗಳು. ಮೊನ್ನೆಯ ಬೆಂಗಳೂರು ಘಟನೆಯು ಇದಕ್ಕೆ ಒಂದು ಉದಾಹರಣೆ.

ಆದರೆ ಮಹಾಭಾರತ, ರಾಮಾಯಣಗಳನ್ನು ಯಾರು ಬೇಕಾದರೂ ತಿರುಚಿ ಬರೆಯಬಹುದು. ಇಲ್ಲಿ ಸ್ವಲ್ಪ ಹೆಚ್ಚಿನ ಸ್ವಾತಂತ್ರ್ಯ ಕಂಡುಬರುತ್ತದೆ. ಅದು ಹೃದಯವೈಶಾಲ್ಯತೆಯೋ ಅಥವಾ ಧರ್ಮದ ಬಗೆಗಿನ ಅಸಡ್ಡೆಯೋ ಎಂದು ಅರ್ಥ ಆಗುವುದಿಲ್ಲ. ನಮ್ಮಲ್ಲಿ ಕೆಲವು ಬರಹಗಾರರಿಗೆ ಅಥವಾ ಕಲಾವಿದರಿಗೆ ಪುರಾಣ ಪಾತ್ರಗಳ ಬಗ್ಗೆ ವಿಪರೀತ ಮೋಹ ಬಂದುಬಿಡುತ್ತದೆ!!! ಅದಕ್ಕೆ ನೋಡಿ ವಿಪರೀತ ಪಾತ್ರಚಿತ್ರಣಗಳಿಗೆ ಮನಮಾಡುತ್ತಿದ್ದಾರೆ.ಪುರಾಣಗಳಲ್ಲಿ ಇಲ್ಲ ಸಲ್ಲದ್ದನ್ನೆಲ್ಲಾ ತಮ್ಮದೇ ದೃಷ್ಟಿಕೋನದಿಂದ ಚಿತ್ರಿಸಿ ಬರೆಯುತ್ತಿದ್ದಾರೆ. ದ್ರೌಪದಿಯ ಬಗ್ಗೆ ಯಾರೋ ಏನನ್ನೂ ಬರೆದ ಹಾಗೆ ಓದಿದ ನೆನಪಾಗುತ್ತದೆ. ದ್ರೌಪದಿಗೆ ಮನದ ಅಂತರಾಳದಲ್ಲಿ ಯಾರದೋ ಮೇಲೆ ಪ್ರೇಮವಿತ್ತು ಎನ್ನುವುದನ್ನು ಆತ ತನ್ನದೇ ಆದ ದೃಷ್ಟಿಕೋನದಲ್ಲಿ ಊಹಿಸಿ ಬರೆದಿದ್ದ. ಕುಂತಿಯ ಮನದ ಅಂತರಾಳವನ್ನು ಬರೆದರು. ಸೀತೆ ಯೋಚಿಸದ್ದನ್ನೆಲ್ಲಾ ಕತೆಯಾಗಿ ಬರೆದರು. ಕರ್ಣನ ಯೋಚನೆಗಳ ಬಗ್ಗೆ, ಭಾನುಮತಿಯ ಗುಪ್ತ ಆಲೋಚನೆಗಳ ಬಗ್ಗೆ ಹೀಗೆ ಹೊಸ ಹೊಸ ಭಾವಗಳನ್ನು ಚಿತ್ರಿಸಿದರು. ಅಂಬೆಯ ಹೊಸ ಹೊಸ ಯೋಚನೆಗಳು, ತುಮುಲಗಳನ್ನೆಲ್ಲಾ ಪ್ರಕಟಪಡಿಸಿದರು.  

ಇದು ಇಂದು ನಿನ್ನೆಯ ವಿಷಯವಾಯಿತು. ಪುರಾಣ ಕಾಲದಿಂದ ಮೊದಲ್ಗೊಂಡು ಈ ಭಿನ್ನತೆ ಬದಲಾವಣೆಗಳು ಆಗುತ್ತಲೇ ಇವೆ ಎಂಬುದನ್ನೂ ಒಪ್ಪಿಕೊಳ್ಳಬೇಕು. ಆದರೆ ಆಗಿನ ಬದಲಾವಣೆಗಳು ಧರ್ಮಕ್ಕೆ ಚ್ಯುತಿಯಾಗುವಂತೆ ಅವಹೇಳನಕಾರಿಯಾಗಿ ಇರಲಿಲ್ಲ ಎಂಬುದೂ ಸತ್ಯ, ವಾಲ್ಮೀಕಿ ರಾಮಾಯಣಕ್ಕೂ ತೊರವೆ ರಾಮಾಯಣಕ್ಕೂ ಅಲ್ಪಸ್ವಲ್ಪ ವ್ಯತ್ಯಾಸಗಳು. ಇನ್ನೂ ಕೆಲವು ಕವಿಗಳು ಬರೆದ ರಾಮಾಯಣಕ್ಕೂ ಮೂಲ ರಾಮಾಯಣಕ್ಕೂ ಏನೋ ವ್ಯತ್ಯಾಸ, ಭಿನ್ನತೆಗಳು. ವ್ಯಾಸ ಭಾರತ, ಕುಮಾರವ್ಯಾಸ ಭಾರತದಲ್ಲೂ ಕಾಣುವ ವ್ಯತ್ಯಾಸಗಳಿವೆ. ಪಂಪನಂತೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ತನಗೆ ಆಶ್ರಯ ಕೊಟ್ಟ ದೊರೆಯನ್ನೇ ಅರ್ಜುನನಿಗೆ ಹೋಲಿಸಿ ಬರೆದಿದ್ದಾನೆ. ಮಾತ್ರವಲ್ಲದೆ ತನ್ನ ಕಾವ್ಯಕ್ಕೆ ವಿಕ್ರಮಾರ್ಜುನ ವಿಜಯವೆಂದೇ ಹೆಸರಿಸಿದ್ದಾನೆ. ಆದರೆ ಒಂದಂತೂ ಸತ್ಯ. ಧರ್ಮಶ್ರದ್ದೆಯವರು ಹೆಚ್ಚಾಗುತ್ತಿರುವ ಈ ಕಾಲದಲ್ಲಿ ಬದಲಾವಣೆ ಹೊಸತನ ಎಂದು ಪುರಾಣ ಪಾತ್ರಗಳನ್ನು ಅವಹೇಳಕಾರಿಯಾಗಿ ಚಿತ್ರಿಸುತ್ತಿರುವವರು ಸಾವಿರ ಬಾರಿ ಯೋಚಿಸಿ ಮುಂದಡಿಯಿಡಬೇಕಾದುದು ಇಂದಿನ ಅನಿವಾರ್ಯತೆ. ಅದನ್ನು ಬಿಟ್ಟು ಆನೆ ನಡೆದದ್ದೇ ದಾರಿ ಎಂಬಂತೆ ಮುಂದೆ ಸಾಗಿದರೆ ದೊಡ್ಡ ಕಂದಕಕ್ಕೆ ಬಿದ್ದ ಆನೆಯ ಗತಿಯಾದೀತು. 

ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣ ಪ್ರಸಂಗ ಮಾಲಿಕೆ 

ಶೀರ್ಷಿಕೆಯೇ ಸೂಚಿಸುವಂತೆ ದಿ। ಅಗರಿ ಶ್ರೀನಿವಾಸ ಭಾಗವತರು ರಚಿಸಿದ ಪ್ರಸಂಗಗಳ ಸಂಪುಟ. ಭಾಗವತರಾಗಿ ಪ್ರಸಂಗಕರ್ತರಾಗಿ ಶ್ರೇಷ್ಠ ನಿರ್ದೇಶಕರಾಗಿ ಯಕ್ಷಗಾನಕ್ಕೆ ಅಗರಿಯವರ ಕೊಡುಗೆಯು ಅನುಪಮವಾದುದು. ಶ್ರೀಯುತರ ಜೀವಿತಾವಧಿ 1906-1997 ಅವರು ರಚಿಸಿದ ಪ್ರಸಂಗಗಳ, ಪದ್ಯಗಳ ಸೌಂದರ್ಯವು ವರ್ಣನಾತೀತವೆಂದು ಕಲಾವಿದರೂ ಕಲಾಭಿಮಾನಿಗಳೂ ಹೇಳುತ್ತಾರೆ. ಸತತ ಸಾಧನೆಯಿಂದಲೇ ಸರಸ್ವತಿ ದೇವಿಯ ಅನುಗ್ರಹವು ಸಿದ್ಧಿಸಿತ್ತು. ಆಶು ಕವಿತ್ವವನ್ನು ಸಿದ್ಧಿಸಿದ ಮೇರು ವ್ಯಕ್ತಿತ್ವವನ್ನು ಹೊಂದಿ ಅನೇಕ ಅತ್ಯುತ್ತಮ ಪ್ರಸಂಗಗಳನ್ನು ರಚಿಸಿ ಕಲಾಮಾತೆಯ ಮಡಿಲಿಗೆ ಅರ್ಪಿಸಿದ್ದರು. ಯಕ್ಷಗಾನದ ಸಮರ್ಥ ನಿರ್ದೇಶಕರಾಗಿ ಅಗರಿ ಶೈಲಿಯನ್ನು ಹುಟ್ಟುಹಾಕಿ ಬೆಳಗಿಸಿದ ಅಗರಿ ಶ್ರೀನಿವಾಸ ಭಾಗವತರು ರಚಿಸಿದ ಹದಿನಾರು ಪ್ರಸಂಗಗಳು ಈ ಪುಸ್ತಕದಲ್ಲಿವೆ. ದೇವಿ ಮಹಾತ್ಮೆ , ಬ್ರಹ್ಮ ಕಪಾಲ, ಬಪ್ಪನಾಡು ಕ್ಷೇತ್ರ ಮಹಾತ್ಮೆ , ವೆಂಕಟೇಶ ಮಹಾತ್ಮೆ, ಭಸ್ಮಾಸುರ ಮೋಹಿನಿ, ಸುಂದೋಪಸುಂದರ ಕಾಳಗ, ಮಹಾದೇವಿ ಲಲಿತೋಪಾಖ್ಯಾನ, ಶಿವಲೀಲಾರ್ಪಣ, ಅಂಧಕಾಸುರ ವಧೆ, ಪ್ರಭಾವತಿ ಪರಿಣಯ, ಧನಾಗುಪ್ತಾ ಮಹಾಬಲಿ, ಭಗವಾನ್ ಏಸುಕ್ರಿಸ್ತ, ನಾರಾಯಣ ಗುರು ಮಹಾತ್ಮೆ, ಭರತೇಶ ವೈಭವ, ಶ್ರೀ ದೇವಿ ಭ್ರಮರಾಂಬಿಕಾ ವಿಲಾಸ , ಸಿರಿ ಮಹಾತ್ಮೆ ಎಂಬ ಪ್ರಸಂಗಗಳು ಈ ಸಂಪುಟದಲ್ಲಿವೆ.

ಈ ಪೈಕಿ ಹೆಚ್ಚಿನ ಪ್ರಸಂಗಗಳಲ್ಲೂ ವೇಷ  ಅವಕಾಶವೂ ನನಗೆ ಲಭಿಸಿದ್ದು ಸಂತಸ ತಂದಿದೆ. ವಿಶೇಷವೇನೆಂದರೆ ಈ ಸಂಪುಟದಲ್ಲಿರುವ ಹೆಚ್ಚಿನ ಪ್ರಸಂಗಗಳೂ ಪ್ರಸ್ತುತ ಚಾಲ್ತಿಯಲ್ಲಿವೆ.  ದೇವಿ ಮಹಾತ್ಮೆ , ಬ್ರಹ್ಮಕಪಾಲ, ಬಪ್ಪನಾಡು ಕ್ಷೇತ್ರ ಮಹಾತ್ಮೆ , ವೆಂಕಟೇಶ ಮಹಾತ್ಮೆ(ಶ್ರೀನಿವಾಸ ಕಲ್ಯಾಣ), ಭಸ್ಮಾಸುರ ಮೋಹಿನಿ, ಸುಂದೋಪಸುಂದರ ಕಾಳಗ,  ಮಹಾದೇವಿ ಲಲಿತೋಪಾಖ್ಯಾನ ಪ್ರಸಂಗಗಳು ತಿರುಗಾಟದುದ್ದಕ್ಕೂ ಮೇಳಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಪ್ರಸಂಗಗಳು ಒಂದೇ ಪುಸ್ತಕದಲ್ಲಿ ಅಚ್ಚಾಗಿ ಸಿಕ್ಕಿದ್ದು ನಮ್ಮೆಲ್ಲರ ಭಾಗ್ಯವೆಂದೇ ಹೇಳಬೇಕು. ಅದೂ ಅತ್ಯುತ್ತಮ ಚಾಲ್ತಿ ಪ್ರಸಂಗಗಳು. ಈ ಪ್ರಸಂಗ ಮಾಲಿಕೆಯು ಮುದ್ರಿಸಲ್ಪಟ್ಟದ್ದು 2007ರಲ್ಲಿ. ಬದುಕಿರುತ್ತಿದ್ದರೆ ಅವರು ನೂರಾ ಒಂದನೆಯ ವರುಷದಲ್ಲಿರುತ್ತಿದ್ದರು. ಆದರೂ ಶತಮಾನೋತ್ಸವದ ಅಂತ್ಯಕ್ಕೆ ಹೀಗೊಂದು ಪ್ರಸಂಗ ಸಂಪುಟವು ಅಚ್ಚಾದುದು ಅತ್ಯಂತ ಸಂತಸದ ಸಂಗತಿ. ಇದು ಮುನ್ನೂರ ಇಪ್ಪತ್ತನಾಲ್ಕು ಪುಟಗಳನ್ನೂ ಹೊಂದಿರುವ ಪುಸ್ತಕ. ಇದರ ಪ್ರಕಾಶಕರು ಮುಂಬೈಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಮಹಾರಾಷ್ಟ್ರ ಘಟಕ.  ಮುಂಬೈಯಲ್ಲಿ ಅತ್ಯುತ್ತಮ ಸಂಘಟಕರೂ ಕಲಾಭಿಮಾನಿಗಳೂ ಎಲ್ಲರಿಗೂ ಪ್ರಿಯರೂ ಆಗಿದ್ದ ಶ್ರೀ ಎಚ್.ಬಿ. ಎಲ್. ರಾಯರು ಇದರ ಮುಖ್ಯ ಸಂಪಾದಕರಾಗಿದ್ದರು. ಶ್ರೀ ಪಿ. ಶ್ರೀನಿವಾಸ ಭಟ್ ಕಟೀಲು ಇದರ ಸಂಪಾದಕರು. ಅಗರಿ ಶ್ರೀನಿವಾಸ ರಾಯರ ಈ ಪ್ರಸಂಗ ಸಂಪುಟವು ಅಗರಿಯವರ ಕುರಿತು, ಅಗರಿಯವರ ಲೇಖನಗಳು, ಅಗರಿ ಶ್ರೀನಿವಾಸ ಭಾಗವತರು ರಚಿಸಿದ ಪ್ರಸಂಗಗಳು ಎಂಬ ವಿಭಾಗಗಳನ್ನು ಒಳಗೊಂಡಿದೆ. ಆರಂಭದಲ್ಲಿ ಪ್ರಧಾನ ಸಂಪಾದಕ  ಶ್ರೀ ಎಚ್.ಬಿ. ಎಲ್. ರಾಯರ ಮಾತುಗಳು, ಸಂಪಾದಕ  ಪಿ. ಶ್ರೀನಿವಾಸ ಭಟ್ ಅವರ ಅನಿಸಿಕೆಗಳನ್ನು ಸವಿವರವಾಗಿ ನಮಗೆ ಓದಬಹುದು. ಬಳಿಕ ಶ್ರೀ ಅಗರಿ ರಘುರಾಮ ಭಾಗವತರು ತಮ್ಮ ತೀರ್ಥರೂಪರ ಬಗೆಗೆ ಬರೆದ ‘ನನ್ನ ತಂದೆಯವರನ್ನು ನಾನು ಕಂಡಂತೆ’ ಎಂಬ ಲೇಖನವೂ ಮಗಳು ಜಯಂತಿ ರಾವ್ ಅವರು ಬರೆದ ಅಗರಿ ಶ್ರೀನಿವಾಸ ಭಾಗವತರು ಎಂಬ ಲೇಖನಗಳೂ ಇವೆ. ಬಳಿಕ ‘ಅಗರಿಯವರ ಕುರಿತು’ ಎಂಬ ತಲೆಬರಹದಡಿಯಲ್ಲಿ ವಿದ್ವಾನ್ ಸುರತ್ಕಲ್ ಸುಬ್ಬರಾವ್ , ಮಲ್ಪೆ ಶಂಕರನಾರಾಯಣ ಸಾಮಗ, ಶೇಣಿ ಗೋಪಾಲಕೃಷ್ಣ ಭಟ್, ದಾಮೋದರ ಮಂಡೆಚ್ಚರು, ನೆಡ್ಲೆ ನರಸಿಂಹ ಭಟ್ಟರು, ಕಡತೋಕ ಮಂಜುನಾಥ ಭಾಗವತ, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಶಿಮಂತೂರು ನಾರಾಯಣ ಶೆಟ್ಟಿ, ವಿದ್ವಾನ್ ಕೆ. ವೆಂಕಟರಾಯಾಚಾರ್ಯ , ಕೆ. ಎಂ. ರಾಘವ ನಂಬಿಯಾರ್, ವಿಟ್ಲ ಗೋಪಾಲಕೃಷ್ಣ ಜೋಶಿ, ಕೆರೆಮನೆ ಮಹಾಬಲ ಹೆಗಡೆಯವರ ಅನಿಸಿಕೆಗಳು ಅಕ್ಷರರೂಪಕ್ಕಿಳಿದಿದೆ. ಅದನ್ನು ಓದಿ ಆಸ್ವಾದಿಸುತ್ತಾ ಸಂತೋಷವನ್ನು ಹೊಂದಲೇ ಬೇಕು. ಮುಂದಿನ ವಿಭಾಗ ಅಗರಿಯವರ ಲೇಖನಗಳು. ಈ ವಿಭಾಗದಲ್ಲಿ ಅಗರಿಯವರು ಬರೆದ ನಾಲ್ಕು ಲೇಖನಗಳಿವೆ. ಅವರು ಅತ್ಯುತ್ತಮ ಬರಹಗಾರರಾಗಿದ್ದರೆಂದು ಈ ಲೇಖನಗಳಿಂದ ತಿಳಿಯುತ್ತದೆ.   ಅಳಕೆ ರಾಮಯ್ಯ ರೈ, ಬಲಿಪ ನಾರಾಯಣ ಭಾಗವತ, ದಿ। ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯ, ಮುಳಿಯ ಮಹಾಬಲ ಭಟ್ಟ , ಇವರುಗಳು ಅಗರಿಯವರ ಬಗೆಗೆ ಆಡಿದ ನುಡಿಮುತ್ತುಗಳನ್ನೂ ಮುದ್ರಿಸಲಾಗಿದೆ. ಮುಂದಿನ ವಿಭಾಗದಲ್ಲಿ ಅಗರಿಯವರ ಸಂದರ್ಶನವಿದೆ. ವಿದ್ವಾನ್ ರಾಮಚಂದ್ರ ಉಚ್ಚಿಲರು ಅಗರಿ ಶ್ರೀನಿವಾಸ ಭಾಗವತರನ್ನು ಸಂದರ್ಶಿಸಿ ಬರೆದ ಲೇಖನವು ಸವಿವರವಾಗಿ ಇದೆ. ಇದು “ಪುಟ್ಟ ಕಬಿಗ ಅಗರಿ ಶ್ರೀನಿವಾಸ ರಾವ್” ಎಂಬ ಶೀರ್ಷಿಕೆಯಡಿಯಲ್ಲಿ ಇದೆ. ಪ್ರಸಿದ್ಧ ಸ್ತ್ರೀ ಪಾತ್ರಧಾರಿ ಕೊಳ್ಯೂರು ರಾಮಚಂದ್ರ ರಾಯರು ಅಗರಿಯವರು ತನಗೆ ಕಲಿಕಾ ಹಂತದಲ್ಲಿ ನೀಡಿದ ಹಿತವಚನವನ್ನು ನೆನಪಿಸಿ ಅವರನ್ನು ಗೌರವಿಸಿದ್ದಾರೆ. ಮುಂದೆ ಅಗರಿ ಶ್ರೀನಿವಾಸ ರಾಯರು ರಚಿಸಿದ ಹದಿನಾರು ಪ್ರಸಂಗಗಳು. ಈ ಸಂಪುಟದ ಕೊನೆಯಲ್ಲಿ ಅಗರಿ ಶ್ರೀನಿವಾಸ ಭಾಗವತರ ಕೆಲವು ರಚನೆಗಳು ಎಂಬ ವಿಭಾಗದಲ್ಲಿ ಆರು ಹಾಡುಗಳನ್ನು ಗಮನಿಸಬಹುದು. ಕಲಾವಿದರಿಗೆ, ಯಕ್ಷಗಾನ ಪ್ರಿಯರಿಗೆ ಇದು ಒಂದು ಬಹು ಉಪಯೋಗೀ ಪುಸ್ತಕ. 

ಲೇಖನ: ರವಿಶಂಕರ ವಳಕ್ಕುಂಜ 

ಮಾನಸಿ ಸುಧೀರ್ – ಮನಸೆಳೆಯುವ ಅಭಿನಯದ ಜೊತೆ ಭಾವಗಾನ 

ಮಾನಸಿ ಸುಧೀರ್ .. ಹೌದು. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೀಕ್ಷಣೆ ಮತ್ತು ಮೆಚ್ಚುಗೆಯನ್ನು ಪಡೆಯುತ್ತಿರುವ ವಿಡಿಯೋಗಳಲ್ಲಿ ಮಾನಸಿ ಸುಧೀರ್ ಅವರ ಹಾಡುಗಳು ಕೂಡಾ ಒಂದು. ಅವರ ಏನೀ ಅದ್ಭುತವೇ ಎಂಬ ಹಾಡು ಭಾರೀ ಮೆಚ್ಚುಗೆಯನ್ನು ಪಡೆಯುವುದರ ಜೊತೆಗೆ ವೀಕ್ಷಕರ ಸಂಖ್ಯೆಯಲ್ಲಿಯೂ ಕೂಡಾ ಜನಪ್ರಿಯತೆಯನ್ನು ಸಾಧಿಸಿತು.

ಈ ಏನೀ ಅದ್ಭುತವೇ ಎಂಬ ಹಾಡನ್ನು ಬರೆದವರು ಪ್ರಸಿದ್ಧ ಕವಿ ಬಿ. ಆರ್ . ಲಕ್ಷ್ಮಣ ರಾವ್. ಸಂಗೀತ ಸಂಯೋಜಿಸಿದವರು ಶ್ರೀ ಗುರುರಾಜ ಮಾರ್ಪಳ್ಳಿ. ಇಲ್ಲಿ ಮಾನಸಿ ಸುಧೀರ್  ಅವರ ಕಂಠದ ಇಂಪಿಗಿಂತಲೂ ಅಭಿನಯವೂ ಮುಖದ ಭಾವನೆಗಳೂ ಹೆಚ್ಚು ಇಷ್ಟವಾಗುತ್ತವೆ. ಆ ಮೂಲಕ ಅವರು ತಾನೊಬ್ಬ ಉತ್ತಮ ನಟಿ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಎಲ್ಲಾ ಹಾಡುಗಳಲ್ಲಿಯೂ ಅವರ ಅಭಿನಯವೇ ಗಮನ ಸೆಳೆಯುತ್ತದೆ.

ಭರತನಾಟ್ಯ ಪ್ರದರ್ಶನ ಮತ್ತು ಅವರು ತಮ್ಮ ಪತಿ ಸುಧೀರ್ ರಾವ್ ಕೊಡವೂರು ಅವರೊಂದಿಗೆ ನೃತ್ಯನಿಕೇತನ ಎಂಬ ಭರತನಾಟ್ಯ ಶಾಲೆಯನ್ನು ನಡೆಸುವ ನಿಬಿಡ ಕಾರ್ಯಗಳ ನಡುವೆ ಅವರ ಉಪನ್ಯಾಸಕ ವೃತ್ತಿಯೂ ಅವರು ಮೊದಲು ಕಲಿತಿದ್ದ ಸಂಗೀತವನ್ನು ಮರೆಮಾಡಿತು. ಆದರೆ ಕೊರೋನಾ ಲಾಕ್ ಡೌನ್ ಅವರ ಭರತನಾಟ್ಯ ಶಾಲೆಯ ತರಗತಿಗಳಿಗೆ ತಡೆಯುಂಟುಮಾಡಿದ್ದರಿಂದ ಅವರೊಳಗಿದ್ದ ಸಂಗೀತ ಜಾಗೃತಗೊಂಡಿತು.

ಒಂದೊಂದೇ ಅದ್ಭುತವಾದ ವೀಡಿಯೋಗಳು ಯು ಟ್ಯೂಬ್  ಚಾನೆಲ್ ನಲ್ಲಿ ಅಪ್ಲೋಡ್ ಆಗತೊಡಗಿದವು. ಲಕ್ಷ ಸಂಖ್ಯೆಯ ವೀಕ್ಷಕರನ್ನೂ ತಲುಪಿತು. ಮಾನಸಿ ಸುಧೀರ್ ಕಿರುತೆರೆ ನಟಿಯೂ ಹೌದು. ಕೆಲವು ಪೌರಾಣಿಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅವರ ಒಂದು ಹಾಡು ಅವರದೇ ಚಾನೆಲ್ ನಲ್ಲಿ ನೋಡಿ. 

ನಿಜವಲ್ಲದ ಅವ್ಯವಹಾರದ ಆರೋಪ – ಯಕ್ಷಗಾನ ಕಲಾವಿದರಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ 

ಕೊರೋನಾ ಬಾಧಿಸುವಿಕೆಯಿಂದ ಉಂಟಾದ ಲಾಕ್ ಡೌನ್ ಸಮಯದಲ್ಲಿ ಆದಾಯವಿಲ್ಲದೆ ಸಂಕಷ್ಟಕ್ಕೀಡಾಗಿದ್ದ ಯಕ್ಷಗಾನ ಕಲಾವಿದರಿಗೆ ಸರಕಾರ ಬಿಡುಗಡೆ ಮಾಡಿದ ಪರಿಹಾರ ಧನದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ನಿಜವಲ್ಲ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ| ಎಂ.ಎ. ಹೆಗಡೆ ಹೇಳಿದ್ದಾರೆ. ನಿಗದಿಪಡಿಸಿದ ಅರ್ಹತೆಯ ಆಧಾರದ ಮೇಲೆ ಪರಿಹಾರದ ಸಹಾಯಧನ ಬಿಡುಗಡೆ ಆಗಿದೆ. ಆದರೆ ಸೂಕ್ತ ಮಾಹಿತಿಯ ಕೊರತೆಯಿಂದಾಗಿ ಕೆಲವು ಕಲಾವಿದರು ಈ ಸೌಲಭ್ಯದಿಂದ ವಂಚಿತರಾಗಿರುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ನಿಗದಿಪಡಿಸಿದ ಅರ್ಹತೆಯ ಆಧಾರದ ಮೇಲೆ ಸಹಾಯಧನ ಸ್ವೀಕರಿಸಿದ ಕಲಾವಿದರಲ್ಲಿ ಆರ್ಥಿಕವಾಗಿ ಸಬಲರಾದವರೂ ಇರಬಹುದು. ಆದರೆ ಅವರಿಗೂ ಅರ್ಹತೆಯಿಂದಲೇ ಸಹಾಯಧನ ನೀಡಲಾಗಿದೆ. ಸಹಾಯಧನದಿಂದ ವಂಚಿತರಾದ ಕಲಾವಿದರು ಸೂಕ್ತ ಧಾಖಲೆ ಸಲ್ಲಿಸಿದರೆ ಅವರಿಗೂ ಪರಿಹಾರ ಧನ ನೀಡಲಾಗುವುದು ಎಂದು ಅವರು ಹೇಳಿದರು. ಯಕ್ಷಗಾನ ಕಲಾವಿದರ ವಲಯದಲ್ಲಿ ಎಲ್ಲಾ ಜಿಲ್ಲೆಗಳ ಕಲಾವಿದರಿಗೂ ಪರಿಹಾರ ಧನ ನೀಡಲಾಗಿದೆ. ಜಿಲ್ಲೆಗಳ ಆಧಾರದಲ್ಲಿ ತಾರತಮ್ಯ ಮಾಡಿಲ್ಲ. ಈಗಾಗಲೇ ಒಟ್ಟು 2000 ಕ್ಕೂ ಹೆಚ್ಚು ಕಲಾವಿದರು ಅರ್ಜಿ ಸಲ್ಲಿಸಿದ್ದರೂ ಸೂಕ್ತ ಧಾಖಲೆ ಮಾಹಿತಿಗಳ ಆಧಾರದ ಮೇಲೆ 1507 ಜನರಿಗೆ 30 ಲಕ್ಷಕ್ಕೂ ಹೆಚ್ಚು ಮೊತ್ತದ  ಪರಿಹಾರಧನ ವಿತರಿಸಲಾಗಿದೆ. ಇನ್ನೂ ಹಲವಾರು ಮಂದಿಗೆ ಅರ್ಜಿಯಲ್ಲಿ ಉಂಟಾದ ದೋಷದಿಂದ ಮತ್ತು ಮಾಹಿತಿಯ ಕೊರತೆಯಿಂದ ಪರಿಹಾರ ಧನ ದೊರಕಿಲ್ಲ ಎಂಬ ದೂರುಗಳು ಗಮನಕ್ಕೆ ಬಂದಿವೆ. ಅಂತಹ ಕಲಾವಿದರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಅವಕಾಶ ಸೆಪ್ಟೆಂಬರ್ 15 ರ ವರೆಗೆ ಇರುವುದೆಂದು ಶ್ರೀ ಹೆಗಡೆ ತಿಳಿಸಿದರು. ವಂಚಿತ ಕಲಾವಿದರು ಈ ದಿನಾಂಕದೊಳಗೆ ಸೂಕ್ತ ದಾಖಲೆಗಳೊಂದಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಿದರೆ ಸಹಾಯಧನ ಕೊಡಿಸಲು ನೆರವಾಗುತ್ತೇವೆ ಎಂದು ಶ್ರೀ ಎಂ.ಎ. ಹೆಗಡೆ ತಿಳಿಸಿದರು. 

ಸೂರಿಕುಮೇರು ಗೋವಿಂದ ಭಟ್ಟರ ಅಭಿನಂದನ ಗ್ರಂಥ – ಸವ್ಯಸಾಚಿ 

ಸವ್ಯಸಾಚಿ ಎಂಬ ಈ ಪುಸ್ತಕವು ತೆಂಕುತಿಟ್ಟಿನ ಖ್ಯಾತ ಕಲಾವಿದ ಸೂರಿಕುಮೇರು ಗೋವಿಂದ ಭಟ್ಟರ ಅಭಿನಂದನ ಗ್ರಂಥ. ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ (ರಿ ) ಸಂಪಾಜೆ, ಕಲ್ಲುಗುಂಡಿ ಎಂಬ ಪ್ರತಿಷ್ಠಿತ ಸಂಸ್ಥೆಯೇ ಈ ಗ್ರಂಥದ ಪ್ರಕಾಶಕರು. ಶ್ರೀ ಕೆ. ಗೋವಿಂದ ಭಟ್ಟರ ಬಗೆಗೆ ಕಲಾಭಿಮಾನಿಗಳೆಲ್ಲರಿಗೂ ತಿಳಿದೇ ಇದೆ. ಯಕ್ಷಗಾನ ದಶಾವತಾರಿ ಎಂದು ಕರೆಸಿಕೊಂಡರು. ರಾಷ್ಟ್ರಪ್ರಶಸ್ತಿ ವಿಜೇತರೂ ಹೌದು. ಕಲಾವಿದನಾಗಿ ಇವರೊಬ್ಬ ಮಹಾ ಸಾಧಕ. ಅಲ್ಲದೆ ಮಣಿಮೇಖಲೆ, ರತ್ನಕಂಕಣ, ಮೂರೂವರೆ ವಜ್ರಗಳು ಮೊದಲಾದ ಪ್ರಸಂಗಗಳನ್ನೂ ರಚಿಸಿ ಯಶಸ್ವಿಯಾಗಿದ್ದಾರೆ. ಕುರಿಯ ಶ್ರೀ ವಿಠಲ ಶಾಸ್ತ್ರಿಗಳ ಶಿಷ್ಯನಾಗಿ ಹರಿದಾಸ ಶ್ರೀ ಮಲ್ಪೆ ರಾಮದಾಸ ಸಾಮಗ ಮೊದಲಾದವರ ಪ್ರಭಾವ ಮತ್ತು ಮಾರ್ಗದರ್ಶನಗಳಿಂದ ಹಂತ ಹಂತವಾಗಿ ಬೆಳೆದೇ ಶ್ರೀಯುತರು ಖ್ಯಾತರಾಗಿದ್ದಾರೆ. ಬದುಕಿಗಾಗಿ ಯಕ್ಷಗಾನವನ್ನೇ ಆಯ್ಕೆ ಮಾಡಿಕೊಂಡು ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಮೂಲ್ಕಿ, ಸುರತ್ಕಲ್, ಕುಂಡಾವು ಮೇಳಗಳಲ್ಲಿ ಪ್ರಾರಂಭದ ತಿರುಗಾಟಗಳು. ಪ್ರಸ್ತುತ ಧರ್ಮಸ್ಥಳ ಮೇಳದಲ್ಲಿ ದೀರ್ಘಕಾಲದಿಂದ ವ್ಯವಸಾಯ ಮಾಡುತ್ತಿದ್ದಾರೆ. ಶ್ರೀಯುತರ ಬಗೆಗೆ ಬರೆಯುವ ಅವಕಾಶ ಸಿಗುವುದು ಒಂದು ಭಾಗ್ಯವೆಂದು ಭಾವಿಸುತ್ತೇನೆ.

ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಾದ ಗೋವಿಂದ ಭಟ್ಟರನ್ನು ಅಭಿನಂದನ ಗ್ರಂಥಾವರಣದೊಂದಿಗೆ ಅಭಿನಂದಿಸಬೇಕೆಂಬುದು  ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಆಶಯವಾಗಿತ್ತು. ಅದಕ್ಕನುಗುಣವಾಗಿ ಸವ್ಯಸಾಚಿ ಎಂಬ ಅಭಿನಂದನ ಗ್ರಂಥವು ಮುದ್ರಿಸಲ್ಪಟ್ಟಿತ್ತು. 2015 ನವೆಂಬರ್ ತಿಂಗಳಿನಲ್ಲಿ ಸಂಪಾಜೆ ಯಕ್ಷೋತ್ಸವದ ರಜತ ಮಹೋತ್ಸವದ ಶುಭಾವಸರದಲ್ಲಿ ಪ್ರತಿಷ್ಠಾನವು ಸವ್ಯಸಾಚಿ ಎಂಬ ಅಭಿನಂದನ ಗ್ರಂಥವಾರಣವನ್ನು ಮಾಡಿ ಶ್ರೀ ಕೆ. ಗೋವಿಂದ ಭಟ್ಟರನ್ನು ಅಭಿನಂದಿಸಿದ್ದು ಸಂತೋಷದ ವಿಚಾರ. ಸವ್ಯಸಾಚಿ ಎಂಬ ಗ್ರಂಥದ ಸಂಪಾದಕರು ಶ್ರೀ ಹಿರಣ್ಯ ವೆಂಕಟೇಶ್ವರ ಭಟ್ಟರು. ಈ ಪುಸ್ತಕವು ಒಟ್ಟು 306 ಪುಟಗಳಿಂದ ಕೂಡಿದೆ. ಸಂಪಾಜೆ ಯಕ್ಷೋತ್ಸವದ ರೂವಾರಿ ಶ್ರೀ ಟಿ. ಶ್ಯಾಮ್ ಭಟ್, ಪ್ರೊ। ಅಮೃತ ಸೋಮೇಶ್ವರ, ಶ್ರೀ ಕುಂಬಳೆ ಸುಂದರ ರಾವ್, ಡಾ| ಎಂ. ಪ್ರಭಾಕರ ಜೋಶಿ, ಪ್ರೊ| ಟಿ. ಶ್ರೀಕೃಷ್ಣ ಭಟ್, ಶ್ರೀ ಬರೆ ಕೇಶವ ಭಟ್, ಡಾ| ಕಬ್ಬಿನಾಲೆ ವಸಂತ ಭಾರದ್ವಾಜ, ಸುಣ್ಣಂಬಳ ವಿಶ್ವೇಶ್ವರ ಭಟ್, ಡಾ| ಬಿ. ಪ್ರಭಾಕರ ಶಿಶಿಲ, ಕೃಷ್ಣ ಪ್ರಕಾಶ ಬಳ್ಳಂಬೆಟ್ಟು, ಬಿ. ಭುಜಬಲಿ ಧರ್ಮಸ್ಥಳ, ಅನಿತಾ ನರೇಶ್ ಮಂಚಿ, ಪದ್ಯಾಣ ಗಣಪತಿ ಭಟ್, ಪುತ್ತಿಗೆ ರಘುರಾಮ ಹೊಳ್ಳ, ವಾಸುದೇವ ರಂಗಾ ಭಟ್, ಪ್ರೊ| ಎಂ. ಎಲ್. ಸಾಮಗ, ಡಾ| ಎಂ. ಪ್ರಭಾಕರ ಜೋಶಿ, ಉಡುಪುಮೂಲೆ ರಘುರಾಮ ಭಟ್, ಶೇಣಿ ವೇಣುಗೋಪಾಲ,ಶೇಣಿ ಮುರಳಿ, ಪದ್ಯಾಣ ಶಂಕರನಾರಾಯಣ ಭಟ್, ನಾ. ಕಾರಂತ ಪೆರಾಜೆ, ಶ್ರೀಮತಿ ಕೆ. ಸಾವಿತ್ರಿ ಅಮ್ಮ, ಕೆ. ಗೋವಿಂದ ಭಟ್, ಡಾ. ಪಾದೆಕಲ್ಲು ವಿಷ್ಣು ಭಟ್, ಅನುಪಮಾ ರಾಘವೇಂದ್ರ ಇವರುಗಳ ಲೇಖನಗಳಿವೆ. ಬಳಿಕ ‘ಅನುಭಂದಗಳು’ ಶೀರ್ಷಿಕೆಯಡಿ ಗೋವಿಂದ ಭಟ್ಟರ ಸಂಕ್ಷಿಪ್ತ ಜೀವನ ವಿವರಗಳು, ಪ್ರಸಂಗದಲ್ಲಿ ವಹಿಸಿದ ಪಾತ್ರಗಳು, ಪ್ರಶಸ್ತಿ, ಅಭಿನಂದನೆ, ಸನ್ಮಾನ, ಪುರಸ್ಕಾರ ಗೌರವಾರ್ಪಣೆಗಳ ಬಗೆಗೆ ಮಾಹಿತಿಗಳಿವೆ. ಭಾಗ ಎರಡು ತಲೆಬರಹದಡಿ ‘ಯಕ್ಷಗಾನ ಚಿಂತನೆ’ ಎಂಬ ಗೋವಿಂದ ಭಟ್ಟರ ಯಕ್ಷಗಾನದ ಬಗೆಗೆ ಸುದೀರ್ಘ ಲೇಖನವೂ ಇದೆ. ಅಲ್ಲದೆ ಮೂವತ್ತಾರು ಪುಟಗಳಲ್ಲಿ ಸುಮಾರು ಎಂಬತ್ತಕ್ಕೂ ಹೆಚ್ಚಿನ ಬಣ್ಣದ ಮತ್ತು ಕಪ್ಪು ಬಿಳುಪಿನ ಚಿತ್ರಗಳಿವೆ. ಗೋವಿಂದ ವೈಭವ ಕಾರ್ಯಕ್ರಮದ ಸಂದರ್ಭದಲ್ಲಿ ತೆಗೆದ ಚಿತ್ರಗಳನ್ನೂ ಇದು ಒಳಗೊಂಡಿದೆ. ಸಂಗ್ರಹಯೋಗ್ಯವಾದುದು. ಖ್ಯಾತ ಕಲಾವಿದರ ಬಗೆಗಿನ ಅತ್ಯುತ್ತಮ ಪುಸ್ತಕ. 

ಹಿಮ್ಮೇಳ ಕಲಾವಿದರಾದ ಶ್ರೀ ಎ. ಪಿ. ಪಾಠಕ್ ಅವರೊಂದಿಗೆ ಮಾತುಕತೆ – ಮಾತಿನ ಮಂಟಪದಲ್ಲಿ

ಕರ್ನಾಟಕ ಯಕ್ಷಗಾನ ಅಕಾಡೆಮಿ ಸಂಯೋಜಿಸಿದ ಪ್ರತಿದಿನದ ಕಾರ್ಯಕ್ರಮವಾದ ಯಕ್ಷಗಾನ  ಕಲಾವಿದರೊಂದಿಗೆ ಮಾತುಕತೆಯ ಮಾತಿನ ಮಂಟಪದ  5ನೇ  ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ 2 ರಂದು  ಪ್ರಸಿದ್ಧ ಯಕ್ಷಗಾನ ಹಿಮ್ಮೇಳ ಕಲಾವಿದರಾದ ಶ್ರೀ ಎ. ಪಿ. ಪಾಠಕ್ ಅವರೊಂದಿಗೆ ಮಾತುಕತೆ ನಡೆಯಲಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರೂ, ಯಕ್ಷಗಾನ ಕಲಾವಿದೆಯೂ ಉಪನ್ಯಾಸಕರೂ ಆದ ಶ್ರೀಮತಿ ಆರತಿ ಪಟ್ರಮೆಯವರು ಕಾರ್ಯಕ್ರಮವನ್ನು ಸಂಯೋಜಿಸಿ ಮಾತುಕತೆಯನ್ನು ನಡೆಸಿಕೊಡಲಿದ್ದಾರೆ.

ಈ ಕಾರ್ಯಕ್ರಮ ಫೇಸ್ಬುಕ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ. 2020ನೇ ಸೆಪ್ಟೆಂಬರ್ 02 ಬುಧವಾರ ಸಂಜೆ ಘಂಟೆ 6.30ರಿಂದ  7.30ರ ವರೆಗೆ ಈ ಕಾರ್ಯಕ್ರಮ ಮೂಡಿಬರಲಿದೆ.  ಮಾತಿನ ಮಂಟಪ  ಕಾರ್ಯಕ್ರಮದಲ್ಲಿ ಪ್ರತಿದಿನ ಬೇರೆ ಬೇರೆ ಯಕ್ಷಗಾನ ಕಲಾವಿದರೊಂದಿಗೆ ಮಾತುಕತೆ ನಡೆಯಲಿದೆ. 

ಮುರಾರಿ ಕಡಂಬಳಿತ್ತಾಯರ ಮದುವೆಯ ದಿನ ಗಾನವೈಭವ – ಮಧುಸೂದನ ಅಲೆವೂರಾಯರ ವೀಡಿಯೊ ನೋಡಿ 

ಕಟೀಲು ಮೇಳದ ಖ್ಯಾತ ಮದ್ದಳೆಗಾರರಾದ ಶ್ರೀ ಮುರಾರಿ ಕಡಂಬಳಿತ್ತಾಯರ ವಿವಾಹ ಸಮಾರಂಭ ಇತ್ತೀಚಿಗೆ ನಡೆಯಿತು. ಅವರ ಮದುವೆಯ ದಿನ ಸಹಜವಾಗಿಯೇ ಯಕ್ಷಗಾನ ಕಲಾವಿದರಲ್ಲಿ ಹಲವರು ಆಗಮಿಸಿದ್ದರು. ಇಷ್ಟು ಜನ ಕಲಾವಿದರೆಲ್ಲಾ ಒಂದೆಡೆಯಲ್ಲಿ ಸೇರಿದರೆ ಮತ್ತೆ ಕೇಳುವುದೇನು? ಕೂಡಲೇ ಅಲ್ಲಿ ದಿಢೀರ್ ಗಾನವೈಭವದ ರಸಪಾಕದ ಔತಣ ಸಿದ್ಧವಾಯಿತು. ಈ ಗಾನವೈಭವದ ವೀಡಿಯೋ ಚಿತ್ರೀಕರಣ ಮಾಡಿದ ಮಧುಸೂದನ ಅಲೆವೂರಾಯರು ಯು ಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿಯೇ ಬಿಟ್ಟರು. ಅಲೆವೂರಾಯರ ಈ ವಿಡಿಯೋದ ಲಿಂಕ್ ಕೆಳಗೆ ಕೊಡಲಾಗಿದೆ. ನೋಡಿ ಆನಂದಿಸಿ. 

ಮುರಾರಿ ಕಡಂಬಳಿತ್ತಾಯರ ಮದುವೆಯ ದಿನದ ಗಾನವೈಭವ

ಶ್ರೀ ಚಂದ್ರಶೇಖರ ಧರ್ಮಸ್ಥಳರೊಂದಿಗೆ ಮಾತುಕತೆ – ಮಾತಿನ ಮಂಟಪದಲ್ಲಿ

ಕರ್ನಾಟಕ ಯಕ್ಷಗಾನ ಅಕಾಡೆಮಿ ಸಂಯೋಜಿಸಿದ ಪ್ರತಿದಿನದ ಕಾರ್ಯಕ್ರಮವಾದ ಯಕ್ಷಗಾನ  ಕಲಾವಿದರೊಂದಿಗೆ ಮಾತುಕತೆಯ ಮಾತಿನ ಮಂಟಪದ  4ನೇ  ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ 1 ರಂದು  ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಶ್ರೀ ಚಂದ್ರಶೇಖರ ಧರ್ಮಸ್ಥಳರೊಂದಿಗೆ ಮಾತುಕತೆ ನಡೆಯಲಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರೂ, ಯಕ್ಷಗಾನ ಕಲಾವಿದೆಯೂ ಉಪನ್ಯಾಸಕರೂ ಆದ ಶ್ರೀಮತಿ ಆರತಿ ಪಟ್ರಮೆಯವರು ಕಾರ್ಯಕ್ರಮವನ್ನು ಸಂಯೋಜಿಸಿ ಮಾತುಕತೆಯನ್ನು ನಡೆಸಿಕೊಡಲಿದ್ದಾರೆ.

ಈ ಕಾರ್ಯಕ್ರಮ ಫೇಸ್ಬುಕ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ. 2020ನೇ ಸೆಪ್ಟೆಂಬರ್ 01 ಮಂಗಳವಾರ ಸಂಜೆ ಘಂಟೆ 6.30ರಿಂದ  7.30ರ ವರೆಗೆ ಈ ಕಾರ್ಯಕ್ರಮ ಮೂಡಿಬರಲಿದೆ.  ಈ ಕಾರ್ಯಕ್ರಮದಲ್ಲಿ ಪ್ರತಿದಿನ ಬೇರೆ ಬೇರೆ ಯಕ್ಷಗಾನ ಕಲಾವಿದರೊಂದಿಗೆ ಮಾತುಕತೆ ನಡೆಯಲಿದೆ. 

ಬಲಿಪರ ಜಯಲಕ್ಷ್ಮಿ- ಬಲಿಪ ನಾರಾಯಣ ಭಾಗವತರ ಪ್ರಸಂಗಗಳು

ಕಿರಿಯ ಬಲಿಪ ನಾರಾಯಣ ಭಾಗವತರು ತೆಂಕುತಿಟ್ಟು ಯಕ್ಷಗಾನದ ಅಗ್ರಮಾನ್ಯ ಭಾಗವತರು. ಪ್ರಸಂಗಕರ್ತರೂ ಹೌದು. ‘ಬಲಿಪರಿಗೆ ಬಲಿಪರೇ ಸಾಟಿ’ ಎಂದು ಕಲಾಭಿಮಾನಿಗಳು ಆಡುವುದನ್ನು ನಾವು ಕೇಳಿದ್ದೇವೆ. ಹಿರಿಯ ಬಲಿಪ ನಾರಾಯಣ ಭಾಗವತರ ಮೊಮ್ಮಗನಾಗಿ ಯಕ್ಷಗಾನವು ಇವರಿಗೆ ರಕ್ತಗತವಾಗಿಯೇ ಒಲಿದಿತ್ತು. ಭಾಗವತರಾಗಿ, ಪ್ರಸಂಗಕರ್ತರಾಗಿ ಯಕ್ಷಗಾನ ಕ್ಷೇತ್ರದಲ್ಲಿ ಸಾಧಕರಾಗಿ ಕಾಣಿಸಿಕೊಂಡವರು. ಸುದೀರ್ಘ ಕಾಲ ಶ್ರೀ ಕಟೀಲು ಮೇಳದಲ್ಲಿ ತಿರುಗಾಟ ನಡೆಸಿ ಪ್ರಸ್ತುತ ನಿವೃತ್ತಿ ಜೀವನವನ್ನು ನಡೆಸುತ್ತಿದ್ದಾರೆ. ಇವರ ಪುತ್ರರಾದ ಶ್ರೀ ಶಿವಶಂಕರ ಬಲಿಪ ಮತ್ತು ಶ್ರೀ ಪ್ರಸಾದ ಬಲಿಪ ಇವರುಗಳೂ ಪ್ರಸ್ತುತ ಒಳ್ಳೆಯ ಹೆಸರನ್ನು ಗಳಿಸಿರುತ್ತಾರೆ. ಭಾಗವತರಾಗಿ ಕಲಾಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಕಿರಿಯ ಬಲಿಪ ನಾರಾಯಣ ಭಾಗವತರು ಬರೆದ ಹದಿನಾರು ಪ್ರಸಂಗಗಳ ಸಂಪುಟವೇ ‘ಬಲಿಪರ ಜಯಲಕ್ಷ್ಮಿ’ಎಂಬ ಪುಸ್ತಕ. ಜಯಲಕ್ಷ್ಮಿ ಎಂದು ಇವರ ಧರ್ಮಪತ್ನಿಯ ಹೆಸರು.  ಇವರು ಬರೆದ ಅನೇಕ ಪ್ರಸಂಗಗಳು ಈ ಹಿಂದೆ ಪ್ರಕಟವಾಗಿತ್ತು. ಮುದ್ರಿತವಾಗದೆ ಉಳಿದ ಪ್ರಸಂಗಗಳನ್ನು ಆಯ್ಕೆ ಮಾಡಿ ಸಂಪುಟವಾಗಿ ಹೊರ ತಂದದ್ದು ಶ್ಲಾಘನೀಯ ಕಾರ್ಯ. ಪ್ರಸಂಗಗಳು ಕಲಾಭಿಮಾನಿಗಳ ಕಲಾವಿದರ ಕೈ ಸೇರುವಂತಾಯಿತು. ಈ ಪುಸ್ತಕದ ಪ್ರಕಾಶಕರು ಶ್ರೀ ಪಟ್ಲ ಸತೀಶ ಶೆಟ್ಟಿಯವರ ಸಾರಥ್ಯದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಎಂಬ ಸಂಸ್ಥೆ. ಡಾ. ನಾಗವೇಣಿ ಮಂಚಿ ಈ ಪುಸ್ತಕದ ಸಂಪಾದಕಿ. ಇದು ಆರುನೂರ ಅರುವತ್ತಕ್ಕೂ ಹೆಚ್ಚು ಪುಟಗಳನ್ನೂ ಹೊಂದಿದ ಪ್ರಸಂಗ ಸಂಪುಟ. ೨೦೧೭ನೇ ಇಸವಿಯಲ್ಲಿ ಅಡ್ಯಾರು ಗಾರ್ಡನ್ ನ ಪಟ್ಲ ಯಕ್ಷೋತ್ಸವ ಸಂದರ್ಭದಲ್ಲಿ ಇದು ಓದುಗರ ಕೈ ಸೇರಿತ್ತು. ಮುನ್ನುಡಿಯನ್ನು ಬರೆದವರು ಭಾಗವತರೂ ಪ್ರಸಂಗಕರ್ತರೂ ಆದ ಶ್ರೀ ಬೊಟ್ಟಿಕೆರೆ ಪುರೋಷೋತ್ತಮ ಪೂಂಜರು. ಬಲಿಪ ನಾರಾಯಣ ಭಾಗವತರು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.  ಯಕ್ಷಧ್ರುವ ಪಟ್ಲ ಫೌಂಡೇಶನ್ ನ  ಶ್ರೀ ಪಟ್ಲ ಸತೀಶ ಶೆಟ್ಟಿಯವರು ಪ್ರಕಾಶಕರಾಗಿ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಸಂಪಾದಕಿ  ಡಾ. ನಾಗವೇಣಿ ಮಂಚಿ ಅವರು ಈ ಪ್ರಸಂಗಗುಚ್ಛ ಹೊರತರಲು ಪ್ರೇರೇಪಿಸಿದ, ಸಹಕರಿಸಿದ ಹಿರಿಯರನ್ನೂ ಒಡನಾಡಿಗಳನ್ನೂ ನೆನಪಿಸಿ ಕೃತಜ್ಞತೆಗಳನ್ನು ಸಲ್ಲಿಸಿರುತ್ತಾರೆ. ಧ್ರುವಚರಿತ್ರೆ, ಚಿತ್ರವಿಚಿತ್ರ ಕಾಳಗ,ಶ್ರೀಕೃಷ್ಣ ರಾಯಭಾರ, ಹಿರಣ್ಯಮಣಿ ಕಾಳಗ, ಗರುಡ ಘರ್ವಭಂಗ, ಮಯೂರೇಕ ವಿಜಯ, ಪ್ರತಾಪನ ಸಾಹಸ, ಚಂದ್ರಸೇನ ಚರಿತ್ರೆ, ನಮುಚಿಯ  ಪ್ರತಾಪ, ಸತಿ ಅನಸೂಯ, ಸುದರ್ಶನೋಪಾಖ್ಯಾನ (ಚಂದ್ರಕಲಾ ಸ್ವಯಂವರ), ಸುಂದೋಪಸುಂದರ ಕಾಳಗ ಮತ್ತು ಮಾಯಾವಿ ವಧೆ, ಕರಂಧಮ ಚರಿತ್ರೆ ಮತ್ತು ಮರುತ್ತ ಯಾಗ, ತುಲಸಿ ಮಾಲತಿ ಧಾತ್ರಿ, ವಜ್ರಬಾಹು ಕಾಳಗ, ಕಲ್ಕ್ಯಾವತಾರ ಎಂಬ ಹದಿನಾರು ಪ್ರಸಂಗಗಳು ಈ ಪುಸ್ತಕದಲ್ಲಿವೆ. ಕಥಾಸಾರಾಂಶವನ್ನೂ ಕಥೆಯಲ್ಲಿ ಬರುವ ಪಾತ್ರ ಪರಿಚಯವನ್ನೂ ನೀಡಿದ್ದು ತುಂಬಾ ಅನುಕೂಲವಾದೀತು. ಬಳಿಕ ಬಲಿಪರ ಕುಟುಂಬದ ಕಪ್ಪು ಬಿಳುಪಿನ  ಒಂದು ಸುಂದರ ಚಿತ್ರವನ್ನೂ ಬಲಿಪರ ವಂಶಾವಳಿಯನ್ನೂ ನೀಡಿದ್ದಾರೆ. ಬಲಿಪ ಭಾಗವತರ ಪ್ರಕಟಿತ ಯಕ್ಷಗಾನ ಪ್ರಸಂಗಗಳ ಪಟ್ಟಿಯನ್ನೂ ಒದಗಿಸಿದ್ದಾರೆ. ಈ ಪುಸ್ತಕ ಕಲಾಕ್ಷೇತ್ರಕ್ಕೊಂದು ಉತ್ತಮ ಕೊಡುಗೆ. 

ಲೇಖನ: ರವಿಶಂಕರ್ ವಳಕ್ಕುಂಜ 

ಕಲಾವಿದ ವಾದಿರಾಜ ಕಲ್ಲೂರಾಯರಿಗೆ ಈ ಸಾಲಿನ ಸಾಧನಾ ಪ್ರಶಸ್ತಿ 

ಈ ವರ್ಷದ ಸಾಧನಾ ಪ್ರಶಸ್ತಿಗೆ ಉಪನ್ಯಾಸಕ, ಖ್ಯಾತ ಯಕ್ಷಗಾನ ಕಲಾವಿದ ಶ್ರೀ ವಾದಿರಾಜ ಕಲ್ಲೂರಾಯರು ಆಯ್ಕೆಯಾಗಿದ್ದಾರೆ. ಸಾಧನಾ ರಂಗಸಂಸ್ಥೆಯು ಪ್ರತಿವರ್ಷವೂ ಕ್ರಿಯಾಶೀಲ ಉಪನ್ಯಾಸಕರಿಗೆ ಕೊಡಮಾಡುವ ಈ ಪ್ರಶಸ್ತಿಯ ಗರಿ ಈ ಸಾಲಿನಲ್ಲಿ ಅಂದರೆ 2020ರಲ್ಲಿ ವಾದಿರಾಜ ಕಲ್ಲೂರಾಯರ ಮುಡಿಗೇರಲಿದೆ. ಶ್ರೀ ವಾದಿರಾಜ ಕಲ್ಲೂರಾಯರು ಉಪನ್ಯಾಸಕನಾಗಿ ಗುರುತಿಸಿಕೊಂಡುದು ಮಾತ್ರವಲ್ಲದೆ ಯಕ್ಷಗಾನ ಕಲಾವಿದನಾಗಿಯೂ ಹಾಗೂ ಇನ್ನಿತರ ಹತ್ತು ಹಲವು ಸಮಾಜಮುಖೀ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಅವರು ವಾಮಂಜೂರಿನ ಸಂತ ರೇಮಂಡ್ಸ್ ಕಾಲೇಜಿನ ಕನ್ನಡ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಕಟೀಲು ಮೇಳದಲ್ಲಿ ಕಲಾ ವ್ಯವಸಾಯವನ್ನೂ ಮಾಡುತ್ತಿದ್ದಾರೆ.