Sunday, January 19, 2025
Home Blog Page 373

ಭೋಜರಾಜ್ ವಾಮಂಜೂರು – ಬಹುಮುಖ ಪ್ರತಿಭೆಗಳ ಆಗರ

ಭೋಜರಾಜ್ ವಾಮಂಜೂರು ಎಂಬ ಹೆಸರನ್ನು ಕೇಳದ ಕಲಾಭಿಮಾನಿಗಳು ಇರಲಿಕ್ಕಿಲ್ಲ. ಅವರೊಂದು ಕಲಾಸಾಗರದ ಅನರ್ಘ್ಯ ರತ್ನ. ಮಂಗಳೂರು ಸಮೀಪದ ವಾಮಂಜೂರಿನಲ್ಲಿ ಜನಿಸಿದ ಬಾಲಕನೊಬ್ಬ ಆರನೆಯ ತರಗತಿಗೆ ತನ್ನ ವಿದ್ಯಾಭ್ಯಾಸವನ್ನು ಕೊನೆಗೊಳಿಸಿ ಆಮೇಲೆ ಯಕ್ಷಗಾನ ಮತ್ತು  ನಾಟಕ ಲೋಕವನ್ನು ಪ್ರವೇಶಿಸಿ ಯಶಸ್ವಿ ನಟನೆನ್ನಿಸಿಕೊಂಡದ್ದು ಈಗ ಇತಿಹಾಸ. ಪ್ರಾರಂಭದಲ್ಲಿ ಅವರು ಯಕ್ಷಗಾನದ ಬಗ್ಗೆ ಆಸಕ್ತಿ ತೋರಿದರೂ ಆಮೇಲೆ ಪೂರ್ಣಕಾಲಿಕ ನಟನಾಗಿ ತುಳು ರಂಗಭೂಮಿಯಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡರು.

ದೇವದಾಸ್ ಕಾಪಿಕಾಡ್ ಅವರ ಚಾಪರ್ಕ ತಂಡದ ಖಾಯಂ ಸದಸ್ಯನಾಗಿ ಕಳೆದ 25  ವರ್ಷಗಳಿಂದಲೂ ಹೆಚ್ಚು ಕಾಲ ಕಾಪಿಕಾಡ್ ಜೊತೆಯಲ್ಲಿಯೇ ಹೆಜ್ಜೆ ಹಾಕುತ್ತಿದ್ದಾರೆ. ನಾಟಕ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ ನಂತರ ಅವರು ತುಳು ರಜತ ಪರದೆಯತ್ತ ಮುಖ ಮಾಡಿದರು. ತುಳು ಸಿನಿಮಾ ಕ್ಷೇತ್ರ ಅವರನ್ನು ಕೈ ಬೀಸಿ ಕರೆಯಿತು.

ಹಲವಾರು ತುಳು ಸಿನಿಮಾಗಳಲ್ಲಿ ನಟಿಸಿ ಯಶಸ್ವೀ ಸಿನಿಮಾ ನಟನೆನ್ನಿಸಿಕೊಂಡರು. ಆದರೂ ಭೋಜರಾಜ್ ವಾಮಂಜೂರು ತಾನು ಮೊದಲು ಹೆಜ್ಜೆಯೂರಲು ಪ್ರಯತ್ನಿಸಿದ ಯಕ್ಷಗಾನ ಕ್ಷೇತ್ರವನ್ನು ಮರೆಯಲಿಲ್ಲ. ಆಗಾಗ ಯಕ್ಷಗಾನದಲ್ಲಿಯೂ ಅತಿಥಿ ನಟನಾಗಿ ಅದರಲ್ಲೂ ಹಾಸ್ಯ ಪಾತ್ರಗಳನ್ನೂ ಮಾಡುತ್ತಾ ತಮ್ಮ ಬಹುಮುಖ ಕಲಾಪ್ರೌಢಿಮೆಗೆ ಸಾಕ್ಷಿಯಾದರು. ಭೋಜರಾಜ್ ವಾಮಂಜೂರು ಒಬ್ಬ ಉತ್ತಮ ಹಾಡುಗಾರನೂ ಹೌದು. ಅದರಲ್ಲೂ ಡಾ. ರಾಜಕುಮಾರ್ ಅವರು ಹಾಡಿದ ಹಾಡುಗಳನ್ನು ಅವರದೇ ಧ್ವನಿಯಲ್ಲಿ ಇಂಪಾಗಿ ಹಾಡುತ್ತಾರೆ.

ಹೀಗೆ ನಾಟಕದಲ್ಲಿ ಯಶಸ್ವೀ ನಟನಾಗಿಯೂ, ಸಿನಿಮಾ ನಟನಾಗಿಯೂ, ಯಕ್ಷಗಾನ ಕಲಾವಿದನಾಗಿಯೂ ಜೊತೆಗೆ ಗಾಯಕನಾಗಿಯೂ ಗುರುತಿಸಿಕೊಂಡಿರುವ ಭೋಜರಾಜ್ ವಾಮಂಜೂರು ಒಬ್ಬ ಬಹುಮುಖ ಪ್ರತಿಭಾವಂತ ಕಲಾವಿದ. ಅವರು ಯಕ್ಷಗಾನದಲ್ಲಿ ಮಾಡಿದ ವಿಜಯನ ಪಾತ್ರದ ವೀಡಿಯೊ ನೋಡಿ. ಇದು ಕೆ. ಆರ್.ಕೆ ಭಟ್ ಚಿತ್ರಮೂಲ ಅವರ ಯು ಟ್ಯೂಬ್ ಚಾನೆಲ್ ವೀಡಿಯೋ. 

ಕೋಲ್ಮಿಂಚು – ಕಣ್ಣಿಮನೆ ಗಣಪತಿ ಭಟ್ ಮಾಸದ ನೆನಪು 

‘ಕೋಲ್ಮಿಂಚು’ ಎಂಬ ಈ ಹೊತ್ತಗೆಯು ಬಡಗುತಿಟ್ಟಿನ ಖ್ಯಾತ ಕಲಾವಿದರಾಗಿ ಮೆರೆದ ದಿ। ಕಣ್ಣಿಮನೆ ಗಣಪತಿ ಭಟ್ಟರಿಗೆ ಅವರ ಮಿತ್ರರೂ ಕಲಾಭಿಮಾನಿಗಳೂ ಅರ್ಪಿಸಿದ ಅಕ್ಷರ ರೂಪದ ನುಡಿನಮನಗಳೆಂದು ನನ್ನ ಅನಿಸಿಕೆ. ಕಣ್ಣಿಮನೆಯವರ ಕುಣಿತ ಮತ್ತು ಅಭಿನಯ ಚಾತುರ್ಯಗಳು ಯುವ ಪೀಳಿಗೆಯನ್ನು ಬಹು ಬೇಗನೆ ಯಕ್ಷಗಾನ ಪ್ರದರ್ಶನಗಳತ್ತ ಸೆಳೆಯಲು ಕಾರಣವಾದದ್ದಂತೂ ಸತ್ಯ. ಚಿಟ್ಟಾಣಿಯವರಂತೆ ಇವರೂ ತನ್ನ ಕಲಾಪ್ರೌಢಿಮೆಯ ಮೋಡಿಯನ್ನು ಬೀರಿ ಪ್ರೇಕ್ಷಕರ ಮನಸೂರೆಗೊಂಡಿದ್ದರು. ಈ ಕೃತಿಯ ಶೀರ್ಷಿಕೆಯೇ ಸೂಚಿಸುವಂತೆ ಇವರು ನಿಜವಾಗಿಯೂ ರಂಗಸ್ಥಳದ ಕೋಲ್ಮಿಂಚೇ ಆಗಿದ್ದರು. ಪಾದರಸದಂತಹ ಚುರುಕುತನ, ಅದ್ಭುತವಾದ ಗ್ರಹಣಶಕ್ತಿಗಳೆಂಬ ಗುಣಗಳಿಂದ ಇವರು ಕ್ಷಿಪ್ರಾತಿಕ್ಷಿಪ್ರ ಕಲಾವಿದನಾಗಿ ಬೆಳೆದು ಖ್ಯಾತರಾಗಿದ್ದರು. 1969 ಜುಲೈ 1ರಂದು ಶ್ರೀ ಮಂಜುನಾಥ ಭಟ್ಟ  ಮತ್ತು ಶ್ರೀಮತಿ ಸರಸ್ವತಿ ದಂಪತಿಗಳ ಮಗನಾಗಿ ಹೊನ್ನಾವರ ತಾಲೂಕು ಮುಗ್ವಾ ಗ್ರಾಮದ ಕಣ್ಣಿಮನೆ ಎಂಬಲ್ಲಿ ಇವರ ಜನನ. ಓದಿದ್ದು ಹತ್ತನೇ ತರಗತಿ ವರೆಗೆ. ಮನೆಯವರಾರೂ ಕಲಾವಿದರಲ್ಲದಿದ್ದರೂ ಬಾಲ್ಯದಲ್ಲಿ ಪ್ರದರ್ಶನಗಳನ್ನು ನೋಡಿಯೇ ಯಕ್ಷಗಾನಾಸಕ್ತರಾಗಿದ್ದರು. ಕಲಾಕ್ಷೇತ್ರದಲ್ಲಿ ಇವರದು ಕ್ಷಿಪ್ರ ಬೆಳವಣಿಗೆ. ಆಸಕ್ತಿ, ಅಧ್ಯಯನ, ಸಾಧನೆಗಳೇ ಇದಕ್ಕೆ ಕಾರಣ. ತಮ್ಮ ವಿಶಿಷ್ಟವಾದ ಕುಣಿತ ಮತ್ತು ಅಭಿನಯಗಳಿಂದ ‘ಕಣ್ಣಿ ಶೈಲಿ’ಗೆ ಕಾರಣರಾದರು. ಕಿರಿಯ ವಯಸ್ಸಿನ ಅತ್ಯಲ್ಪ ಅವಧಿಯಲ್ಲಿ ಅಪಾರ ಅಭಿಮಾನಿಗಳನ್ನೂ ಜನಪ್ರಿಯತೆಯನ್ನೂ ಗಳಿಸಿದ ಕಲಾವಿದರುಗಳಲ್ಲಿ ಕಣ್ಣಿಮನೆ ಗಣಪತಿ ಭಟ್ಟರೂ ಒಬ್ಬರು. ನಾಟ್ಯ ಮತ್ತು ಅಭಿನಯ ಸಾಮರ್ಥ್ಯಗಳಿಂದ ಕಲಾಭಿಮಾನಿಗಳ ಮನಸೂರೆಗೊಂಡು ಮೆರೆದ ಶ್ರೀಯುತರು 2016 ಫೆಬ್ರವರಿ 18ರಂದು ತನ್ನ ನಲುವತ್ತೇಳನೆಯ ವಯಸ್ಸಿನಲ್ಲಿ ಅಲೌಕಿಕ ಪ್ರಪಂಚವನ್ನು ಸೇರಿಕೊಂಡಿದ್ದರು. ಕಲಾಭಿಮಾನಿಗಳು ಕಣ್ಣಿಮನೆಯವರು ಇನ್ನಿಲ್ಲ ಎಂದು ತಿಳಿದು ಕಣ್ಣೀರು ಸುರಿಸಿದ್ದರು. ನೆರೆಯವರಿಂದ, ಮಿತ್ರರಿಂದ ಗಪ್ಪಣ್ಣ, ಗುಂಡಣ್ಣ ಎಂದೇ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಶ್ರೀ ಕಣ್ಣಿಮನೆಯವರ ಕಾಯವು ಅಳಿದರೂ ಗಳಿಸಿದ ಕೀರ್ತಿಯು ಉಳಿದಿದೆ. ಕಲಾಭಿಮಾನಿಗಳಿಗೆ ಅವರ ನೆನಪು ಯಾವತ್ತೂ ಮಾಸದು.

‘ಕೋಲ್ಮಿಂಚು’ ಎಂಬ ಈ ಪುಸ್ತಕವು ಪ್ರಕಟವಾದದ್ದು 2017ರಲ್ಲಿ. ಪ್ರಕಾಶಕರು ಸುಬ್ರಾಯ ಗಣೇಶ ಹೆಗಡೆ ಮತ್ತಿಗಾರ. ಯಮುನಾ ಪ್ರಕಾಶನ, ಸಂಪಗೋಡ, ಉತ್ತರ ಕನ್ನಡ ಜಿಲ್ಲೆ. ಸಂಪಾದಕರು ಶ್ರೀ ನಾಗರಾಜ ಮತ್ತಿಗಾರ. ‘ಸ್ಮರಣೆಯ ಧಾಖಲಾತಿ’ ಎಂಬ ಶೀರ್ಷಿಕೆಯಡಿ ಇವರ ಲೇಖನವಿದೆ. ‘ಯಕ್ಷಗಾನದ ಏಕಲವ್ಯ’ ಎಂಬ ಶೀರ್ಷಿಕೆಯಡಿ ಹಿರಿಯ ಭಾಗವತರಾದ ಕಪ್ಪೆಕೆರೆ ಸುಬ್ರಾಯ ಹೆಗಡೆಯವರು ಮುನ್ನುಡಿಯನ್ನು ಬರೆದಿದ್ದಾರೆ. ಕಷ್ಟ ಮುಚ್ಚಿಟ್ಟು ನಗು ಹಂಚಿದವರು ಎಂಬ ತಲೆಬರಹದಡಿ ಕಣ್ಣಿಮನೆಯವರ ಪತ್ನಿ ಶ್ರೀಮತಿ ಲಲಿತಾ ಗಣಪತಿ ಭಟ್ ಅವರ ಲೇಖನವಿದೆ. ಪ್ರಕಾಶಕರಾದ ಶ್ರೀ ಸುಬ್ರಾಯ ಗಣೇಶ ಹೆಗಡೆ ಅವರು ತಮ್ಮ ಅನಿಸಿಕೆಗಳನ್ನು ಅಕ್ಷರ ರೂಪಕ್ಕಿಳಿಸಿದ್ದಾರೆ. ಬಳಿಕ ‘ಪುಟ ತೆರೆದಂತೆ’ , ‘ಚೌಕಿಮನೆ’, ‘ರಂಗಸ್ಥಳ’, ‘ಪ್ರೇಕ್ಷಕ’ ಎಂಬ ವಿಭಾಗಗಳಲ್ಲಿ ಮೂವತ್ತೈದು ಮಂದಿ ಮಹನೀಯರುಗಳ ಲೇಖನವಿದ್ದು ಕಣ್ಣಿಮನೆಯವರ ಬಗೆಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಲೇಖನಗಳನ್ನು ಬರೆದವರು ನಾಗರಾಜ ಮತ್ತಿಗಾರ, ಅಜಿತ್ ಕುಮಾರ್ ಹೆಗ್ಡೆ ಶಾನಾಡಿ, ಡಾ. ಶ್ರೀಪಾದ ಶೆಟ್ಟಿ ಹೊನ್ನಾವರ, ಶ್ರೀಪಾದ ಹೆಗಡೆ ಹಡಿನಬಾಳ, ನಾರಾಯಣ ಯಾಜಿ ಸಾಲೇಬೈಲು, ರಮೇಶ ಭಂಡಾರಿ, ವಿ. ಉಮಾಕಾಂತ ಭಟ್ಟ, ಗಣಪತಿ ಹೆಗಡೆ ತೋಟಿಮನೆ, ಗೋಪಾಲ ಗ. ಹೆಗಡೆ, ಮಂಜುನಾಥ ಭಾಗವತ ಹೊಸ್ತೋಟ, ಗೋಡೆ ನಾರಾಯಣ ಹೆಗಡೆ, ಕೃಷ್ಣಯಾಜಿ ಬಳ್ಕೂರು, ಭಾಸ್ಕರ ಜೋಶಿ ಶಿರಳಗಿ, ಸುಬ್ರಹ್ಮಣ್ಯ ಧಾರೇಶ್ವರ, ಕೊಂಡದಕುಳಿ ರಾಮಚಂದ್ರ ಹೆಗಡೆ, ಸುಬ್ರಹ್ಮಣ್ಯ ಯಲಗುಪ್ಪ, ಎಂ. ಎ. ನಾಯ್ಕ ಮಂದರ್ತಿ, ವಿದ್ವಾನ್ ಗಣಪತಿ ಭಟ್ಟ, ಎಂ. ಕೆ. ರಮೇಶ ಆಚಾರ್ಯ, ನೀಲ್ಕೋಡು ಶಂಕರ ಹೆಗಡೆ, ಸುರೇಶ್ ಶೆಟ್ಟಿ, ರಾಘವೇಂದ್ರ ಮಯ್ಯ, ಜಲವಳ್ಳಿ ವಿದ್ಯಾಧರ ರಾವ್, ರಾಜಶೇಖರ ಹೆಬ್ಬಾರ್, ಮನೋಜ್ ಕುಮಾರ ಭಟ್, ಸೂರ್ಯ ಭಟ್ ಸಣ್ಣ ಗದ್ದೆ, ಗಣಪತಿ ಹೆಗಡೆ ಕಪ್ಪೆಕೆರೆ, ಬಿ. ಲಕ್ಷ್ಮೀನಾರಾಯಣ, ವಿ. ಮಂಜುನಾಥ ತೋಳ್ಗರಗದ್ದೆ, ಶಶಿಧರ ಹೆಗಡೆ ನಂದಿಕಲ್, ಕುಮಾರ ಭಟ್ ಸಾಗರ, ಪವನಕುಮಾರ ಉಪಾಧ್ಯ, ಗಜಾನನ ಈಶ್ವರ ಹೆಗಡೆ, ಜಿ. ಯೋಗೀಶ ಸಾಗರ, ಸುಧಾಕಿರಣ್ ಅಧಿಕಶ್ರೇಣಿ ಇವರುಗಳು. ಕೊನೆಯಲ್ಲಿ ‘ಭಾವಪಟ’ ವಿಭಾಗದಲ್ಲಿ ಬಣ್ಣದ ಛಾಯಾಚಿತ್ರಗಳ ಸಂಗ್ರಹವನ್ನೂ ನೀಡಲಾಗಿದೆ. ಲೇಖನಗಳ ಜೊತೆಗೆ ಕಣ್ಣಿಮನೆಯವರ ಕಪ್ಪು ಬಿಳುಪಿನ ಛಾಯಾಚಿತ್ರಗಳನ್ನೂ ನೀಡಿರುತ್ತಾರೆ. ಪುಸ್ತಕದ ಹೊರ ಆವರಣದಲ್ಲಿ ಖ್ಯಾತ ಹಿರಿಯ ಕಲಾವಿದರಾದ ಚಿಟ್ಟಾಣಿ ಶ್ರೀ ರಾಮಚಂದ್ರ ಹೆಗಡೆಯವರು ಕಣ್ಣಿಮನೆಯವರ ಬಗೆಗೆ ಬರೆದ ‘ಮಿಂಚಿನ ಪ್ರವೇಶದ ಸರದಾರ’ ಎಂಬ ಲೇಖನವಿದೆ.

ಆರ್.ಕೆ.ಭಟ್ ಕೊಂಗೋಟ್ ಮತ್ತು ಉಮಾ ಆರ್.ಕೆ.ಭಟ್ ದಂಪತಿಗಳ ನಿಸ್ವಾರ್ಥ ಕಲಾಸೇವೆ (ಕಲೆ ಬೆಳಗಿಸಿದ ಕ್ಯಾಮೆರಾ ಫ್ಲ್ಯಾಷ್ – ಭಾಗ 1)

ಯಾವುದೇ ಒಂದು ಕಲೆಯು ಬೆಳೆದು ಬರಬೇಕಾದರೆ ಅದನ್ನು ಉಳಿಸಿ ಬೆಳೆಸುವ ಕೈಗಳು ಸಾವಿರಾರು ಇರಬೇಕಾಗುತ್ತದೆ. ಅದು ಪರೋಕ್ಷವಾಗಿಯೂ ಇರಬಹುದು. ಇನ್ನು ಕೆಲವು ಪ್ರತ್ಯಕ್ಷವಾಗಿಯೂ ಇರಬಹುದು. ಉತ್ಸಾಹ, ಆಸಕ್ತಿ, ಪ್ರೋತ್ಸಾಹ, ಪೋಷಕತ್ವ, ಪ್ರಾಯೋಜಕತ್ವ, ಸಂಘಟನೆ, ಅಧ್ಯಯನ, ಪ್ರಸಾರ, ವೀಕ್ಷಣೆ, ಭಾಗವಹಿಸುವಿಕೆ, ಅನುದಾನ, ಸಂಶೋಧನೆ ಮೊದಲಾದುವುಗಳೆಲ್ಲಾ ಒಂದು ಕಲೆಯ ಬೆಳವಣಿಗೆಯಲ್ಲಿ ಪಾಲು ಪಡೆಯುವ ಪ್ರಮುಖ ಅಂಶಗಳು.

ಇದನ್ನೂ ಓದಿ: ಸುಣ್ಣಂಬಳ ವಿಶ್ವೇಶ್ವರ ಭಟ್ – ಮಿತಭಾಷಿಯ ಸಹೃದಯತೆ (ಶೇಣಿ, ಸುಣ್ಣಂಬಳ ತಾಳಮದ್ದಳೆ ವೀಡಿಯೋ)  

ಅದರಂತೆ ಕಲೆಯ ಪ್ರಸರಣ ಎಂಬುದು ಇಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಯಾವುದೇ ಕಲೆಯ ಪ್ರಸಿದ್ಧಿಯು ಹೆಚ್ಚಾಗಿ ಪ್ರಚಾರ ಮತ್ತು ಪ್ರಸರಣವನ್ನು ಅವಲಂಬಲಿಸಿದೆ. ಪ್ರಚಾರಕ್ಕಾಗಿ ಮತ್ತು ಸುದ್ದಿ ಪ್ರಸಾರಣಕ್ಕಾಗಿ ನಾವು ಪತ್ರಿಕೆಗಳನ್ನು ಅವಲಂಬಿಸಿದರೆ ದೃಶ್ಯ ಮತ್ತು ಧ್ವನಿಮುದ್ರಣದ ಪ್ರಸಾರಕ್ಕಾಗಿ ದೃಶ್ಯಮಾಧ್ಯಮಗಳಾದ ಟಿವಿ ಚಾನೆಲ್ ಗಳು, ಆಕಾಶವಾಣಿಗಳನ್ನು ಅವಲಂಬಿಸುತ್ತೇವೆ.

(ಇದನ್ನೂ ಓದಿ: ಮತ್ತೆ ಮರುಕಳಿಸೀತೇ ಮೂರಾಟದ ವೈಭವಗಳು? )

ಆದರೆ ಇತ್ತೀಚಿಗೆ ಕೆಲವು ವರ್ಷಗಳಿಂದ ಸಾಮಾಜಿಕ ಜಾಲ ತಾಣಗಳು ಈ ದೆಸೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾ ಇದೆ. ಸುದ್ದಿ ಪ್ರಸಾರದ ಜೊತೆಗೆ ಆಡಿಯೋ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿವೆ. ಯಕ್ಷಗಾನವೂ ಸೇರಿದಂತೆ ಹಲವಾರು ಕಲೆಗಳ ಪ್ರದರ್ಶನದ ಸಂಪೂರ್ಣ ಪ್ರದರ್ಶನಗಳು ಯು ಟ್ಯೂಬ್, ಫೇಸ್ಬುಕ್ ಮೊದಲಾದ ಜಾಲತಾಣಗಳಲ್ಲಿ ನೋಡಲು ನಮಗೆ ಸಿಗುತ್ತವೆ.

ದೇಶ ವಿದೇಶಗಳಲ್ಲಿ ನೆಲೆಸಿದ್ದರೂ ಭಾರತೀಯ ನೆಲದಲ್ಲಿ ಪ್ರದರ್ಶನಗೊಳ್ಳುತ್ತಿರುವ ಕಲೆಯ ಕಂಪನ್ನು ಆಸ್ವಾದಿಸಬಹುದು.(ಕೊರೋನಾ ಬಾಧಿತ ಈ ಕಾಲಘಟ್ಟದಲ್ಲಿಯಂತೂ ನೇರ ಪ್ರಸಾರಗಳದ್ದೇ ಕಾರುಬಾರು) ಈ ರೀತಿ ಯಕ್ಷಗಾನದ ಪ್ರದರ್ಶನಗಳು ನಡೆಯುವಲ್ಲಿಗೆ ಹೋಗಿ ದೃಶ್ಯಾವಳಿಗಳಲ್ಲಿ ಸೆರೆ ಹಿಡಿದು ತಮ್ಮ ಯು ಟ್ಯೂಬ್ ಚಾನೆಲ್ ಗಳಲ್ಲಿ ಪ್ರಸಾರ ಮಾಡುತ್ತಾ ಕಲೆಯ ಕಂಪನ್ನು ಪ್ರಸಾರ ಮಾಡಿ ತನ್ಮೂಲಕ ಈ ಕಲೆಯ ಬೆಳೆವಣಿಗೆಗೆ ಕಾರಣರಾದ ಹಲವು ಮಂದಿ ನಮ್ಮೊಡನೆ ಇಂದು ಇದ್ದಾರೆ. ಅವರಲ್ಲಿ ಕೋಂಗೋಟ್ ಶ್ರೀ ರಾಧಾಕೃಷ್ಣ ಭಟ್ ಅವರದು ಒಂದು ಪ್ರಮುಖವಾದ ಹೆಸರು.

ಹೆಚ್ಚಾಗಿ ಯಕ್ಷಗಾನ ನಡೆಯುವ ಸ್ಥಳಗಳಿಗೆ ಹೋಗಿ ದೃಶ್ಯಗಳನ್ನು ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದು ಅದನ್ನು ಯು ಟ್ಯೂಬ್ ಚಾನೆಲ್ ಗೆ ಅಪ್ಲೋಡ್ ಮಾಡಿ ತನ್ನ ಕಲಾ ಪ್ರಸರಣದ ಕಾಯಕವನ್ನು ನಿಸ್ವಾರ್ಥತೆಯಿಂದ ನಡೆಸುತ್ತಾ ಇದ್ದಾರೆ. ರಾಧಾಕೃಷ್ಣ ಭಟ್ ಅವರಿಗೆ ಯಕ್ಷಗಾನ ಕಲೆಯ ಮೇಲೆ ಇನ್ನಿಲ್ಲದ ಪ್ರೀತಿ ಅವರ ಹಿರಿಯರಲ್ಲಿ ಯಕ್ಷಗಾನ ಆಸಕ್ತಿಯೂ ಇತ್ತು ಎನ್ನುವುದನ್ನು ಅವರು ಹೇಳುತ್ತಿದ್ದರು. ಅಲ್ಲದೆ ಮೂಲ ಮನೆಯಲ್ಲಿ ಹಿಮ್ಮೇಳದ ವಾದನಗಳು ಇದ್ದುವು.

(ಇದನ್ನೂ ಓದಿ: ಚೌಕಿಗೆ ಬಂದವಳು ರಂಗಸ್ಥಳದಲ್ಲೂ ಕಾಡಿದಳು…)

ಆದುದರಿಂದ ತಲೆಮಾರಿನ ಹಿಂದೆ ಅವರ ಕುಟುಂಬದಲ್ಲಿಯೂ ಕಲೆಯ ಆಸಕ್ತಿಯುಳ್ಳವರಿದ್ದರು ಎಂದು ತಿಳಿಯಬಹುದು. ರಾಧಾಕೃಷ್ಣ ಭಟ್ಟರ KRK Bhat Chitramoola ಎಂಬ ಯು ಟ್ಯೂಬ್ ಚಾನೆಲ್ ಇದೆ. ಅದರಲ್ಲಿ ಸುಮಾರು 4,900ಕ್ಕೂ ಮಿಕ್ಕಿ ವೀಡಿಯೋಗಳನ್ನು ಅಪ್ಲೋಡ್ ಮಾಡಲಾಗಿದೆ. ಅವರ ಚಾನೆಲನ್ನು Subscribe ಅದವರ ಸಂಖ್ಯೆ ಸುಮಾರು 83,000ಕ್ಕೆ ಸಮೀಪ. ಅತಿ ಹೆಚ್ಚು ಯಕ್ಷಗಾನ ವೀಡಿಯೊಗಳನ್ನೇ ಇದರಲ್ಲಿ ಅಪ್ಲೋಡ್ ಮಾಡಿದ್ದಾರೆ.ಈ ಚಾನೆಲ್ ನ ವೀಡಿಯೋ ಒಂದನ್ನು ಕೆಳಗೆ ಕೊಡಲಾಗಿದೆ. 

 

ಇವರ ಪತ್ನಿ ಶ್ರೀಮತಿ ಉಮಾ ಆರ್. ಕೆ. ಭಟ್ ಕೂಡಾ ಕಲಾಸಕ್ತೆ. ಮತ್ತು ಯಕ್ಷಗಾನ ಕಲೆಯ ವಾತಾವರಣದ ನಡುವೆಯೇ ಬೆಳೆದವರು. ಅವರು ಕೂಡಾ ಹೆಚ್ಚಾಗಿ ಯಕ್ಷಗಾನ ಪ್ರದರ್ಶನಗಳಿಗೆ ಪತಿಯ ಜೊತೆಯಲ್ಲಿಯೇ ಹೋಗುತ್ತಾರೆ. ದಂಪತಿಗಳೀರ್ವರೂ ಜೊತೆಯಾಗಿಯೇ ಯಕ್ಷಗಾನ ಪ್ರದರ್ಶನಗಳನ್ನು ಆಸ್ವಾದಿಸುತ್ತಾರೆ. ಮಾತ್ರವಲ್ಲದೆ  ಶ್ರೀಮತಿ ಉಮಾ ಆರ್. ಕೆ. ಭಟ್ ಕೂಡಾ ವಿಡಿಯೋ ಚಿತ್ರೀಕರಣದಲ್ಲಿ ಸಿದ್ಧಹಸ್ತರು ಮತ್ತು ಛಾಯಾಗ್ರಹಣದಲ್ಲಿಯೂ ಪರಿಣತಿಯನ್ನು ಪಡೆದಿದ್ದಾರೆ.

ಇವರ ಹೆಸರಿನಲ್ಲಿಯೂ ಒಂದು ಯು ಟ್ಯೂಬ್ ಚಾನೆಲ್ ಇದೆ. ಈ ಚಾನೆಲ್ Uma RK Bhat Chitramoola ಎಂಬ ಹೆಸರಿನಲ್ಲಿ ಸುಮಾರು 60,000ಕ್ಕೂ ಮಿಕ್ಕಿ Subscribers ನ್ನು ಹೊಂದಿದೆ. ಈ ವರೆಗೆ ಸುಮಾರು 3,830 ಕ್ಕೂ ಹೆಚ್ಚು ವೀಡಿಯೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಈ ಚಾನೆಲ್ ನ ವೀಡಿಯೋ ಒಂದನ್ನು ಕೆಳಗೆ ಕೊಡಲಾಗಿದೆ. 

ದಂಪತಿಗಳ ಯಕ್ಷಗಾನಾಸಕ್ತಿಯನ್ನು ಮೆಚ್ಚಲೇ ಬೇಕು. ಈ ಮೂಲಕ ಅವರು ಯಕ್ಷಗಾನ ಕಲೆಯ ಪ್ರಚಾರ ಮತ್ತು ಪ್ರಸಾರವನ್ನು ಒಂದು ಹವ್ಯಾಸವಾಗಿಯೂ ಒಂದು ಸೇವೆಯಾಗಿಯೂ ಮಾಡುತ್ತಿದ್ದಾರೆ. ಈ ಯು ಟ್ಯೂಬ್ ವೀಡಿಯೋಗಳಿಂದ ಸ್ವಲ್ಪ ಮಟ್ಟಿನ ಆದಾಯ ಬರುವುದು ನಿಜವಾದರೂ ಅಷ್ಟೇ ಖರ್ಚುವೆಚ್ಚಗಳಿವೆ ಎಂದು ರಾಧಾಕೃಷ್ಣ ಭಟ್ಟರು ಹೇಳುತ್ತಾರೆ. ಸ್ವಂತ ಖರ್ಚಿನಲ್ಲಿ ಯಕ್ಷಗಾನ ನಡೆಯುವ ಊರುಗಳಿಗೆ ಸ್ವಂತ ವಾಹನದಲ್ಲಿ ತೆರಳಬೇಕು. ಪ್ರಯಾಣದ ಖರ್ಚು ಮತ್ತು ಇತರ ಖರ್ಚುಗಳನ್ನು ಲೆಕ್ಕ ಹಾಕುವಾಗ ಆದಾಯಕ್ಕಿಂತ ಖರ್ಚಿನ ತಕ್ಕಡಿಯೇ ಕೆಳಗೆ ನಿಲ್ಲುತ್ತದೆ ಎಂಬುದು ಅವರ ಅಭಿಪ್ರಾಯ. ಅದೂ ಅಲ್ಲದೆ ಚಾನೆಲ್ ಪ್ರಾರಂಭಿಸಿದ ಒಂದೆರಡು ವರ್ಷಗಳ ವರೆಗೆ ಹೆಚ್ಚು ಕಡಿಮೆ ಶೂನ್ಯ ಆದಾಯವೇ ಇರುತ್ತದೆ. 

ಆದರೂ ಅವರು ಕಲಾಸಕ್ತಿಯಿಂದ ಈ ಕಾಯಕವನ್ನು ಮುಂದುವರಿಸುತ್ತಿದ್ದಾರೆ. ಇಂದು ದೇಶ ವಿದೇಶಗಳಲ್ಲಿ ಈ ಎರಡು ಚಾನೆಲ್ ಗಳಿಗೆ ಲಕ್ಷಾಂತರ ವೀಕ್ಷಕರಿದ್ದಾರೆ. ಈ ಸಾಧನೆಯನ್ನು ಮಾಡಬೇಕಾದರೆ ಇದರ ಹಿಂದೆ ದಂಪತಿಗಳ ಅಪಾರ ಪರಿಶ್ರಮ ಮತ್ತು ತಮ್ಮ ಅಮೂಲ್ಯವಾದ ಸಮಯದ ವ್ಯಯ ಅಡಗಿದೆ. ತಮ್ಮ ನಿಸ್ವಾರ್ಥ ಕಾಯಕದ ಪರಿಶ್ರಮಕ್ಕೋಸ್ಕರ ದಂಪತಿಗಳೀರ್ವರನ್ನೂ ಹಲವಾರು ಕಡೆ ಸನ್ಮಾನಿಸಿ ಗೌರವಿಸಲಾಗಿದೆ.

ನಂದಿನಿ ರಾವ್ ಗುಜಾರ್ – ಸಂಗೀತ ಲೋಕದ ತಾರೆ

ನಂದಿನಿ ರಾವ್ ಗುಜಾರ್ ಗಾಯನ ಲೋಕದಲ್ಲಿ ಒಂದು ಅಪೂರ್ವ  ಪ್ರತಿಭೆ. ಇಂದು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಬಹಳಷ್ಟು ಹೆಸರು ಮಾಡಿದ ಸಂಗೀತಗಾರ್ತಿಯರಲ್ಲಿ ನಂದಿನಿ ಕೂಡಾ ಒಬ್ಬರು. ತನ್ನ 12ನೆಯ ವಯಸ್ಸಿನಲ್ಲಿಯೇ ಹಾಡಲು ಪ್ರಾರಂಭಿಸಿದ ನಂದಿನಿ ಇಂದು ವಿಶ್ವಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಅವರ ಹಾಡುಗಾರಿಕೆಗೆ ವಿದೇಶಗಳಲ್ಲೂ ಬಹಳಷ್ಟು ಬೇಡಿಕೆ ಇದೆ.

ಅವರು ಹಾಡಲು ತೊಡಗಿ ಈ ವರೆಗೆ ಸಾಗಿ ಬಂದ ಇಪ್ಪತ್ತು ವರ್ಷಗಳಲ್ಲಿ ಅಮೋಘವಾದುದನ್ನೇ ಸಾಧಿಸಿದ್ದಾರೆ. ಕರ್ನಾಟಕದ ಈ ಹುಡುಗಿ ಬೆಳೆದ ಪರಿ ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. ಇದು ವರೆಗೆ ಸುಮಾರು 1500 ಸಂಗೀತ ಕಚೇರಿಗಳನ್ನು ನಡೆಸಿಕೊಟ್ಟಿದ್ದಾರೆ. ಅಮೆರಿಕಾ, ಕೆನೆಡಾ,  ಇಂಗ್ಲೆಂಡ್, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ದೇಶಗಳಲ್ಲಿ ಹಲವಾರು ಸಂಗೀತ ಕಚೇರಿಗಳನ್ನು ನಡೆಸಿ ಅಲ್ಲಿಯೂ ಜನಪ್ರಿಯತೆಯನ್ನು ಪಡೆದಿದ್ದಾರೆ.

ಹಲವಾರು ಕನ್ನಡ ಚಾನೆಲ್ ಗಳಲ್ಲಿಯೂ ಪ್ರದರ್ಶನ ಮತ್ತು ಲೈವ್ ಷೋಗಳನ್ನೂ ನೀಡಿರುವ ನಂದಿನಿ ರಾವ್ ಅವರ ಸುಮಾರು 100ಕ್ಕೂ ಹೆಚ್ಚು ಸಿಡಿ ಗಳು ಧ್ವನಿಮುದ್ರಣಗೊಂಡಿವೆ. ತುಂಬಾ ಬೇಡಿಕೆಯಿರುವ ಹೊಸ ತಲೆಮಾರಿನ ಕಲಾವಿದೆ. ಸಾಕಷ್ಟು ಕನ್ನಡ ಹಾಡುಗಳನ್ನು ಹಾಡಿದ್ದಾರೆ. 

ಅವರ ಹಾಡನ್ನು ಕೇಳಿದರೆ ಮತ್ತೆ ಮತ್ತೆ ಕೇಳುವಂತೆ ಕೇಳುಗರ ಮನಸ್ಸನ್ನು ಮೋಡಿ ಮಾಡುತ್ತಾರೆ. ಕಚೇರಿ ನೋಡಿದರೆ ಮತ್ತೆ ಹೋಗುವಂತೆ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತಾರೆ. ಅವರ ‘ರಾಮ ಮಂತ್ರವ ಜಪಿಸೋ’ ಎಂಬ ಒಂದು ಹಾಡು ಅವರದೇ ಯು ಟ್ಯೂಬ್ ಚಾನೆಲ್ ನಲ್ಲಿ ನೋಡಿ. ಲಿಂಕ್ ಕೊಡಲಾಗಿದೆ. 

ನಂದಿನಿ ರಾವ್ ಗುಜಾರ್ ಅವರ ‘ರಾಮ ಮಂತ್ರವ ಜಪಿಸೋ’ ಎಂಬ ಒಂದು ಹಾಡು

ವಾಸುದೇವ ಸಾಮಗ – ಎದೆಯೊಳಗಿನ ಮಾತು

“ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ”  ಪ್ರತಿಯೊಂದು ಯಕ್ಷಗಾನ ಪ್ರದರ್ಶನಗಳಲ್ಲಿ ಯಾವನಾದರೂ ಒಬ್ಬ ಪಾತ್ರಧಾರಿಯ ಬಾಯಿಯಿಂದ ಈ ಮಾತಿನ ಮುತ್ತುಗಳನ್ನು ಕೇಳಿಯೇ ಇರುತ್ತೇವೆ. ಬಹಳಷ್ಟು ವ್ಯಾಪಕವಾದ ಅರ್ಥಗಳನ್ನು ಕೊಡುವ ಇಂತಹ ಮಾತುಗಳು ಬಹಳಷ್ಟು ವ್ಯಕ್ತಿಗಳಿಗೆ ಅನ್ವಯವಾಗುತ್ತವೆ. ಈ ಮಾತು ಯಕ್ಷಗಾನ ಕಲಾವಿದರಾದ ಶ್ರೀ ಮಲ್ಪೆ ವಾಸುದೇವ ಸಾಮಗರಿಗೆ ಅನ್ವಯವಾಗುತ್ತವೆಯೇನೋ ಎಂದು ನನಗೊಮ್ಮೆ ಅನ್ನಿಸಿದ್ದು ನಿಜ. ಹಾಗೆಂದು ನಾನೇನೂ ಅವರಲ್ಲಿ ಕಠಿಣತೆಯನ್ನು ಆರೋಪಿಸುವುದಿಲ್ಲ.

ಅಂತಹ ಒರಟು ಸ್ವಭಾವ ಅವರಲ್ಲಿ ಕಂಡೂ ಇಲ್ಲ. ನನಗವರು ಹೂವಿನಷ್ಟೇ ಮೃದುವಾಗಿ ಕಾಣಿಸುತ್ತಾರೆ. ಆದರೆ ಕೆಲವೊಮ್ಮೆ ಅವರಾಡುವ ನೇರ ಮಾತುಗಳಿಂದ ಅವರಲ್ಲಿ ಇಲ್ಲದ ಕಠಿಣತೆಯನ್ನು ಗುರುತಿಸಿ ಅಪಾರ್ಥ ಮಾಡಿಕೊಂಡವರೂ ಇರಬಹುದು. ಆದರೆ ವಾಸುದೇವ ಸಾಮಗರು ಒಬ್ಬ ಹೃದಯವಂತ. ಇನ್ನೊಬ್ಬರ ಕಷ್ಟಗಳನ್ನು ಕಂಡು ಮರುಗುವ, ಕರಗುವ ಸ್ನೇಹಜೀವಿ.

ಅವರೊಬ್ಬ ಶ್ರೇಷ್ಠ ಅರ್ಥಶಾಸ್ತ್ರಜ್ಞ ಇರಬಹುದು ಎಂದು ಭಾವಿಸುವೆ. ಅರ್ಥಶಾಸ್ತ್ರಜ್ಞರೆಲ್ಲಾ ಆರ್ಥಿಕವಾಗಿ ಸದೃಢವಾಗಿರಬೇಕೆಂದೇನೂ ಇಲ್ಲ.  ಆರ್ಥಿಕ ಲೆಕ್ಕಾಚಾರಗಳನ್ನು ಮಾಡದೇ ಇರುತ್ತಿದ್ದರೆ ಈಗ ಕಾರ್ಯಕ್ರಮವೊಂದಕ್ಕೆ ಸಾವಿರಗಳ ಲೆಕ್ಕದಲ್ಲಿ ಕೋರಿಕೆ ಸಲ್ಲಿಸುವ ವ್ಯಕ್ತಿಗಳಿರುವಾಗ ಅತಿ ಕಡಿಮೆ ವೆಚ್ಚದಲ್ಲಿ ಕಾರ್ಯಕ್ರಮ ನಡೆಸಿಕೊಡುವ ‘ಸಂಯಮಂ’ ತಾಳಮದ್ದಳೆ ತಂಡವನ್ನು ಹುಟ್ಟುಹಾಕುವ ಅವಶ್ಯಕತೆ ಅವರಿಗೆ ಇರುತ್ತಿರಲಿಲ್ಲ. ವರುಷಕ್ಕೊಮ್ಮೆ ಬಡ ಕಲಾವಿದರನ್ನು ಹುಡುಕಿ ಅವರಿಗೆ ಸನ್ಮಾನ ಮಾಡಿ ಜೊತೆಗೆ ತಮ್ಮ ಕೈಲಾದಷ್ಟು ಸನ್ಮಾನ ನಿಧಿಯನ್ನೂ ಅರ್ಪಿಸುತ್ತಿದ್ದಾರೆ. ವರ್ಷಕ್ಕೆ ಸುಮಾರು 40000 ರೊಪಾಯಿಗಳಷ್ಟು ವಿವಿಧ ಸಂಘ ಸಂಸ್ಥೆಗಳಿಗೆ ದಾನವನ್ನೂ ಮಾಡಿದ್ದಾರೆ. ಎಲ್ಲಿಯೂ ಯಾರೂ ಗುರುತಿಸದೆ ಅವಗಣಿಸಲ್ಪಟ್ಟ ಉತ್ತಮ ಕಲಾವಿದರನ್ನೇ ಗುರುತಿಸಿ ಹುಡುಕಿ ಸನ್ಮಾನ ಮಾಡುತ್ತಿರುವುದು ಸಾಮಗರ ವೈಶಿಷ್ಟ್ಯ. ಇಂದು ಯಕ್ಷಗಾನವೆನ್ನುವುದು ಅದು ಕೇವಲ ಒಂದು ವೈಭವದ ಕಲೆಯಾಗಿ ಉಳಿದಿಲ್ಲ.

ಸಂಪಾದನೆಯ  ಜೊತೆಗೆ ಅದೂ ಒಂದು ಉದ್ಯಮವಾಗಿ ಬದಲಾಗುತ್ತಿರುವುದು ವಿಪರ್ಯಾಸ ಎಂದು ವಾಸುದೇವ ಸಾಮಗರು ಖೇದ ವ್ಯಕ್ತಪಡಿಸುತ್ತಾರೆ. ಜೀವನದಲ್ಲಿ ಬರಬಹುದಾದ ಕಷ್ಟಕರವಾದ ಸನ್ನಿವೇಶಗಳನ್ನು ಊಹಿಸಿ ಅವುಗಳನ್ನು ನಿಭಾಯಿಸಲೋಸುಗ ಸಾಮಗರು ಒಂದಕ್ಕಿಂದ ಹೆಚ್ಚು ವಿಭಾಗಗಳಲ್ಲಿ ಪರಿಣತಿಯನ್ನು ಗಳಿಸಿಕೊಂಡಿದ್ದರು. ಒಬ್ಬ ಉತ್ತಮ ತಾರಾ ಮೌಲ್ಯದ ಕಲಾವಿದನಾಗಿದ್ದುದರ ಜೊತೆಗೆ ಅವರು ನುರಿತ ಚಾಲಕನೂ ಹೌದು. ವಿದ್ಯುತ್ ಸಂಬಂಧೀ ಕೆಲಸಗಾರನೂ ಹೌದು (ಎಲೆಕ್ಟ್ರೀಷಿಯನ್). ವೇಷಧಾರಿಯಾಗಿಯೂ ಒತ್ತು ಮದ್ದಳೆಗಾರನಾಗಿಯೂ ತನ್ನ ಪಾತ್ರವನ್ನು ನಿರ್ವಹಿಸಿದ್ದಾರೆ. ತಾನು, ತನ್ನ ವೇಷ. ತನ್ನ ಪೆಟ್ಟಿಗೆ, ತನ್ನ ಅಭಿಮಾನಿಗಳು ಎಂಬ ಮನೋಭಾವ ಹೊಂದಿದವರ ನಡುವೆ ವಾಸುದೇವ ಸಾಮಗರಂತಹ ವ್ಯಕ್ತಿಗಳು ಕಾಣಲು ಸಿಗುವುದು ಅಪರೂಪ.

ಏನಾದರೂ ಹೆಚ್ಚು ಕಡಿಮೆ ಅವರ ಬಗ್ಗೆ ಒಂದೆರಡು ಶಬ್ದ ತಪ್ಪಿ ಹೇಳಿದರೆ ಅಥವಾ ಬರೆದರೆ ಎಂದೂ ಅಪಾರ್ಥ ಮಾಡಿಕೊಳ್ಳದ ವಾಸುದೇವ  ಸಾಮಗರಂತಹಾ ಹೃದಯವಂತರು ಮನಸ್ಸಿಗೆ ಹೆಚ್ಚು ಇಷ್ಟವಾಗುತ್ತಾರೆ. ಸಾಮಗರು ಸತ್ಯವನ್ನಾಡುವುದರಲ್ಲಿ ಯಾವುದೇ ಹಿಂಜರಿಕೆಯನ್ನು ತೋರ್ಪಡಿಸುವುದಿಲ್ಲ. ಕಾಗದದಲ್ಲಿ ಬರೆದು ತಂದು ಹರಿಕಥೆ ಪ್ರದರ್ಶನ ಮಾಡುವವರಿಗೆ  ಕೊಡುವ ಸಂಭಾವನೆಗೂ ಸಾಮಗರು ಪರಿಶ್ರಮದಿಂದ  ಮಾಡುತ್ತಿದ್ದ ಹರಿಕಥೆಗೆ ಕೊಡುತ್ತಿದ್ದ ಸಂಭಾವನೆಗೂ ದೊಡ್ಡ ಅಂತರದ ತಾರತಮ್ಯವಿದ್ದುದನ್ನು ಅವರೊಮ್ಮೆ ಉಲ್ಲೇಖಿಸಿದ್ದರು. ಆದುದರಿಂದ ಈ ಕ್ಷೇತ್ರದಲ್ಲಿ ತರತಮ, ಭೇಧಭಾವಗಳನ್ನು ಕಂಡು ರೋಸಿಹೋಗಿ ಅವರು ಹರಿಕಥೆ ಮಾಡುವುದನ್ನೇ ಬಿಟ್ಟುಬಿಟ್ಟಿದ್ದರು. ಯಕ್ಷಗಾನ ಕ್ಷೇತ್ರದಲ್ಲಿ ಎಂದೂ ಡಿಮ್ಯಾಂಡ್ ಮಾಡದ ಸಾಮಗರು ಇಷ್ಟೇ ಕೊಡಿ ಎಂದು ಎಲ್ಲಿಯೂ ಕೇಳುವ ಅಭ್ಯಾಸವನ್ನು ಇಟ್ಟುಕೊಂಡವರಲ್ಲ. ಸಂಘಟಕರು ಚಂದಾ ಎತ್ತಿ ಕಷ್ಟಪಟ್ಟು ನಡೆಸುವ ಕಾರ್ಯಕ್ರಮಗಳಲ್ಲಿಯೂ ತಮಗೆ ಇಷ್ಟೇ ಕೊಡಿ ಎಂದು ಹೇಳುವ ಕಲಾವಿದರನ್ನೂ ತಾವು ಬಯಸಿದಷ್ಟು ಸಿಗಲಾರದು ಎಂದು ಮುಂಚಿತವಾಗಿಯೇ ತಿಳಿದು ಸಮಯಕ್ಕೆ ಗೈರು ಹಾಜರಾಗಿ ಕೈ ಕೊಡುವ ಕಲಾವಿದರನ್ನೂ ವಾಸುದೇವ ಸಾಮಗರು ಎಂದೂ ಇಷ್ಟಪಡುವುದಿಲ್ಲ. 

ಕರೆದು ಕರೆದು ವಾರಕ್ಕೆರಡು ಸನ್ಮಾನ ಮಾಡಿಸಿಕೊಳ್ಳುವ ಗಡಣಗಳ ನಡುವೆ ವಾಸುದೇವ ಸಾಮಗರು ಪ್ರತ್ಯೇಕವಾಗಿ ಕಾಣುತ್ತಾರೆ. ಅವರಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಬಂದಿತ್ತು. ಆ ಪ್ರಶಸ್ತಿ ಬಂದದ್ದಕ್ಕೆ ಒಂದೆರಡು ಅಭಿನಂದನೆ ಸನ್ಮಾನ ಬಿಟ್ಟರೆ ಮತ್ತೇನೂ ಇಲ್ಲ. ಸಣ್ಣ ಪುಟ್ಟ ಸನ್ಮಾನಗಳು ಒಂದೆರಡು ಇರಬಹುದು . ಏನೇ ಆಗಲಿ. ಈಗ ವಾಸುದೇವ ಸಾಮಗರಿಗೆ ಆರ್ಥಿಕ ಸಂಕಷ್ಟ ಇರಲಿಕ್ಕಿಲ್ಲ. ಮಗ ಪ್ರದೀಪ ವಿ. ಸಾಮಗರೂ ಜೀವನದಲ್ಲಿ ಉನ್ನತ ನೆಲೆಯನ್ನು ಕಂಡುಕೊಂಡಿದ್ದಾರೆ. ಅದೂ ಅಲ್ಲದೆ ಸಂಯಮಂ ತಂಡ ಕಟ್ಟಿದ ಮೇಲೆ ತನ್ನ ಆರ್ಥಿಕ ಸಂಕಷ್ಟ ತುಂಬಾ ಕಡಿಮೆಯಾಗಿದೆ ಎಂದು ಅವರೇ ಹೇಳಿಕೊಂಡಿದ್ದಾರೆ. 


ಕೊನೆಗೆ ಸಾಮಗರ ಒಂದು ಗುಣವನ್ನು ಹೇಳದಿದ್ದರೆ ಈ ಲೇಖನ ಅಪೂರ್ಣವಾದೀತು. ತಾವು ಎಷ್ಟೇ ಆರ್ಥಿಕವಾಗಿ ಅನಾನುಕೂಲತೆಯಲ್ಲಿದ್ದರೂ ಕೈಯೆತ್ತಿ ಕೊಡುವುದರಲ್ಲಿ ಅವರು ಧಾರಾಳಿ. ಏನನ್ನೂ ಬಯಸದೆ ಅವರಲ್ಲಿಗೆ ಸ್ನೇಹಪರರಾಗಿ ಹೋಗಿದ್ದರೂ ಅವರು ಮಾತ್ರ ಸುಮ್ಮನೆ ಕಳುಹಿಸುವವರಲ್ಲ. ಬರುತ್ತೇನೆ ಎಂದು ಹೊರಡಲು ಎದ್ದು ನಿಂತಾಗ ಒಳಹೋದ ಸಾಮಗರ ಕೈ ಕಪಾಟಿನ ಒಳಗೆಲ್ಲಾ ತಡಕಾಡುತ್ತದೆ. ಹಾಗೆ ತಡಕಾಡಿದಾಗ ಅವರ ಕೈಗೆ ಶಾಲುಗಳು ಸಿಗುತ್ತವೆ. ಅದನ್ನು ತಂದು ನಮ್ಮ ಭುಜಕ್ಕೆ ಜೋತು ಹಾಕುತ್ತಾರೆ. ಆ ಶಾಲಿನ ಜೊತೆಗೆ ಸಾಮಗರ ಹೃದಯವಂತಿಕೆಯೂ ಮುಗ್ಧತೆಯೂ ಮರೆಯಲಾಗುವುದಿಲ್ಲ. ಆ ಮನಸ್ಸನ್ನು ಕೂಡಾ. 

ಶ್ರೀ ತಾರಾನಾಥ ವರ್ಕಾಡಿ – ಬಹುಮುಖ ಪ್ರತಿಭೆಯ ಸಾಧಕ

ಶ್ರೀ ತಾರಾನಾಥ ವರ್ಕಾಡಿ ಅವರು ಯಕ್ಷಗಾನ ರಂಗದ ಹಿರಿಯ ಕಲಾವಿದರಲ್ಲೊಬ್ಬರು. ತೆಂಕುತಿಟ್ಟಿನ ಶ್ರೇಷ್ಠ ಪುಂಡು ವೇಷಧಾರಿಗಳು.  ನಾಟ್ಯ ಮತ್ತು ಮಾತುಗಾರಿಕೆಗಳೆಂಬ ಎರಡು ವಿಭಾಗಗಳಲ್ಲೂ ಪರಿಣತಿಯನ್ನೂ ಪಕ್ವತೆಯನ್ನೂ ಹೊಂದಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದ ಕಲಾವಿದರಿವರು. ಇವರದು ಬಹುಮುಖ ಪ್ರತಿಭೆ. ವೇಷಗಳನ್ನು ನಿರ್ವಹಿಸುವುದರ ಜೊತೆಗೆ ತಾಳಮದ್ದಳೆಗಳಲ್ಲಿ ಅರ್ಥಧಾರಿಯಾಗಿಯೂ ಕಾಣಿಸಿಕೊಳ್ಳುತ್ತಾರೆ. ಅತ್ಯುತ್ತಮ ಬರಹಗಾರರೂ ಹೌದು. ಪತ್ರಿಕೋದ್ಯಮಿಯಾಗಿಯೂ ನಮಗೆಲ್ಲಾ ಪರಿಚಿತರು. ಯಕ್ಷಗಾನ ಶಿಕ್ಷಕರಾಗಿಯೂ ಗುರುತಿಸುವಂತಹ ಸಾಧನೆ ಮಾಡಿದ್ದಾರೆ. ಪ್ರಸಂಗ ರಚನಾಕಾರರಾಗಿಯೂ ಯಶಸ್ವಿಯಾಗಿದ್ದಾರೆ. ಸಂಪಾದಕರಾಗಿ ಅನೇಕ ವರ್ಷಗಳಿಂದ ‘ಬಲ್ಲಿರೇನಯ್ಯ’ ಮಾಸಪತ್ರಿಕೆಯನ್ನೂ ನಡೆಸುತ್ತಿದ್ದಾರೆ. ಶ್ರೀ ತಾರಾನಾಥ ಅವರ ಹುಟ್ಟೂರು ವರ್ಕಾಡಿ. ಇದು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಹೊಸಂಗಡಿಗೆ ಸಮೀಪದ ಊರು. ಪಂಡಿತ್ ವಿ. ಎ. ಬಲ್ಯಾಯ ಮತ್ತು ಕಮಲಾಕ್ಷಿ ದಂಪತಿಗಳಿಗೆ ಮಗನಾಗಿ ೧೯೬೩ ಜೂನ್ ಒಂದರಂದು ಜನನ. ತಾರಾನಾಥರ ತೀರ್ಥರೂಪರು ಸಮಾಜಸೇವಕರಾಗಿ ಪ್ರಸಿದ್ದರು. ಮಗನು ಆಯುರ್ವೇದ ವೈದ್ಯನಾಗಬೇಕೆಂದು ಬಯಸಿದವರು. ಎಳವೆಯಲ್ಲಿಯೇ ಅವರನ್ನು ಕಳೆದುಕೊಂಡರೂ ತಾಯಿ ಕಮಲಾಕ್ಷಿ ಅಮ್ಮನವರು ಸ್ವಾಭಿಮಾನಕ್ಕೆ, ಮನೆತನದ ಗೌರವಕ್ಕೆ ಕೊರತೆಯಾಗದಂತೆ ಬಡತನದಲ್ಲೇ ಮಕ್ಕಳನ್ನು ಬೆಳೆಸಿದ್ದರು. ಆಗ ಹೆಚ್ಚಿನ ವಿದ್ಯಾರ್ಜನೆಗೂ ಅವಕಾಶವಿರಲಿಲ್ಲ. ಆದರೂ ತಾರಾನಾಥರು ಎಳವೆಯಲ್ಲಿಯೇ ಕಲಾಸಕ್ತರಾಗಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತಕಲಾ ಕೇಂದ್ರದಲ್ಲಿ ಶ್ರೀ ಕೆ. ಗೋವಿಂದ ಭಟ್ ಮತ್ತು ಶ್ರೀ ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಕಲಿತಿದ್ದರು. ತಾನು ಕಲಿತ ಸದ್ರಿ ಸಂಸ್ಥೆಯಲ್ಲಿಯೇ ಶಿಕ್ಷಕನಾಗಿ ಕಲಿಕಾಸಕ್ತರಿಗೆ ತರಬೇತಿ ನೀಡಲು ಅವಕಾಶ ದೊರೆತ ತಾರಾನಾಥರು ನಿಜಕ್ಕೂ ಭಾಗ್ಯವಂತರು. ಇವರಿಂದ ಹೆಜ್ಜೆಗಾರಿಕೆ ಕಲಿತ ಅನೇಕರು ಇಂದು ವಿವಿಧ ಮೇಳಗಳಲ್ಲಿ ಕಲಾವಿದರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಲಲಿತಕಲಾ ಕೇಂದ್ರದಲ್ಲಿ ತರಬೇತಿಯನ್ನು ಮುಗಿಸಿದ ಬಳಿಕ ಸುಂಕದಕಟ್ಟೆ, ಕದ್ರಿ, ನಂದಾವರ, ಅರುವ, ಬಪ್ಪನಾಡು ಮೇಳಗಳಲ್ಲಿ ತಿರುಗಾಟವನ್ನು ನಡೆಸಿದ್ದರು. ಬಳಿಕ ಅನೇಕ ವರ್ಷಗಳ ಕಾಲ ಶ್ರೀ ಧರ್ಮಸ್ಥಳ ಮೇಳದಲ್ಲಿ ಕಲಾಸೇವೆಯನ್ನು ಮಾಡಿ ಕೆಲವು ವರ್ಷಗಳ ಹಿಂದೆ ತಿರುಗಾಟದಿಂದ ಸ್ವಯಂ ನಿವೃತ್ತಿಯನ್ನು ಹೊಂದಿದ್ದರು. ಮೇಳದ ತಿರುಗಾಟವನ್ನು ನಿಲ್ಲಿಸಿದರೂ ಕಲಾಸೇವೆಯನ್ನು ಮುಂದುವರಿಸಿ ಕಲಾಭಿಮಾನಿಗಳನ್ನು ರಂಜಿಸಿತ್ತಿದ್ದಾರೆ. ನಾನು ಶಾಲಾ ವಿದ್ಯಾರ್ಥಿಯಾಗಿರುವಾಗಲೇ ಶ್ರೀ ತಾರಾನಾಥರ ವೇಷಗಳನ್ನು ನೋಡುತ್ತಿದ್ದೆ. ಅವರ ಹಿತ ಮಿತವಾದ ನಾಟ್ಯ ಮಾತುಗಾರಿಕೆಯು ಸಂತೋಷವನ್ನು ಕೊಡುತ್ತಿತ್ತು. ಮಾತುಗಾರಿಕೆಗೆ ಸಂಬಂಧಿಸಿದ ಸಾತ್ವಿಕ ಪಾತ್ರಗಳನ್ನು ನಿರ್ವಹಿಸುವ ಕಲೆಯು ಇವರಿಗೆ ಒಲಿದಿತ್ತು. ವಿಷ್ಣು,ಬ್ರಹ್ಮ, ಶ್ರೀರಾಮ,ಶ್ರೀಕೃಷ್ಣ, ಈಶ್ವರ ಮೊದಲಾದ ಪಾತ್ರಗಳಲ್ಲಿ ಅಭಿನಯಿಸಿದಾಗ ಪ್ರೇಕ್ಷಕರು ಇವರನ್ನು ಗುರುತಿಸಿ ಮೆಚ್ಚಿಕೊಂಡಿದ್ದರು. ಆರಂಭದ ತಿರುಗಾಟಗಳಲ್ಲಿ ತುಳು ಪ್ರಸಂಗಗಳಲ್ಲಿ ಅಭಿನಯಿಸಿದ್ದರು. ಬಳಿಕ ಸತತ ಅಧ್ಯಯನಶೀಲರಾಗಿ ಪುರಾಣ ಪ್ರಸಂಗಗಳ ನಡೆಯನ್ನು ಅಭ್ಯಸಿಸಿ ತಿಳಿದುಕೊಂಡಿದ್ದರು. 

ಶ್ರೀ ತಾರಾನಾಥರು ಕಲಾವಿದನಾಗಿ ಮೇಳದ ತಿರುಗಾಟವನ್ನು ಮಾಡುತ್ತಿರುವಾಗ ಸಾಹಿತ್ಯ ಕ್ಷೇತ್ರದತ್ತ ಒಲವನ್ನು ತೋರಿದ್ದರು. ಲೇಖಕರಾಗಿಯೂ ಕಾಣಿಸಿಕೊಂಡರು. ಪ್ರತಿಯೊಂದು ನದಿಗಳ ಬಗೆಗೆ ಇವರು ಬರೆದ ಲೇಖನಗಳನ್ನೂ ಉದಯವಾಣಿ ಪತ್ರಿಕೆಯ ಸಾಪ್ತಾಹಿಕ ಸಂಪದದಲ್ಲಿ ಸಂಪಾದಕ ಶ್ರೀ ಪೃಥ್ವಿರಾಜ್ ಕವತ್ತಾರ್ ಅವರು ಪ್ರಕಟಿಸಿದ್ದರು. ತಾರಾನಾಥರು ಬರೆದ ಕಲಾಸಂಬಂಧೀ ಲೇಖನಗಳು ದಿನ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದು ನಮಗೆ ಅವುಗಳನ್ನು ಓದಲು ಅವಕಾಶವಾಗುತ್ತಿತ್ತು. ಲೇಖನಗಳನ್ನು ಬರೆಯುತ್ತಾ ಪ್ರಸಂಗ ರಚನಾ ಮತ್ತು ಕೃತಿ ರಚನಾ ಕಾಯಕದಲ್ಲೂ ತೊಡಗಿಸಿಕೊಂಡಿದ್ದರು. ಪ್ರಸಂಗ ರಚನಾ ರೀತಿಯನ್ನು ಡಾ. ಶಿಮಂತೂರು ನಾರಾಯಣ ಶೆಟ್ಟಿಯವರಿಂದಲೂ ಅರ್ಥಗಾರಿಕೆಯನ್ನು ಶ್ರೀ ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯರಿಂದಲೂ ಅಭ್ಯಸಿಸಿದ್ದು ಅನುಕೂಲವೇ ಆಗಿತ್ತು. ಪತ್ರಿಕೆಗಳಲ್ಲಿ ವಿಮರ್ಶಾ ಲೇಖನಗಳು, ಕಥೆ, ಕವನಗಳನ್ನೂ ಬರೆದರು. ಪ್ರಬಂಧ ರಚನೆ, ಜ್ಯೋತಿಷ್ಯ, ಆಯುರ್ವೇದ, ವಾಸ್ತುಶಾಸ್ತ್ರ ಮೊದಲಾದ ವಿಚಾರಗಳು ಶ್ರೀ ತಾರಾನಾಥರ ಹವ್ಯಾಸಗಳು. ಯಕ್ಷಗಾನ ಛಂದಸ್ಸು ವಿದ್ವಾಂಸ  ಡಾ. ಶಿಮಂತೂರು ನಾರಾಯಣ ಶೆಟ್ಟಿಯವರ ಬದುಕು, ಬರಹದ ಬಗ್ಗೆ ತಾರಾನಾಥರು ಬರೆದ ಅಭಿನವ ನಾಗವರ್ಮ, ಪುರಾಣ ಲೋಕದ ಬಾಲರು, ಕಬ್ಬಿನ ಕೋಲು, ಒಂದೊಂದು ನದಿಗೂ ಒಂದೊಂದು ಕತೆ ಎಂಬ ಕೃತಿಗಳು ಪ್ರಕಟವಾಗಿವೆ. ಇವರು ರಚಿಸಿದ ಕನ್ನಡ ಪೌರಾಣಿಕ ಪ್ರಸಂಗಗಳು ಆಸ್ತೀಕ ಪರ್ವ, ಗೋಕರ್ಣ, ಶ್ರೀ ದೇವಶಿಲ್ಪಿ ವಿಶ್ವಕರ್ಮ (ಪ್ರಕಟಿತ), ಶಿಲ್ಪ ಕೌಶಲ (ಅರ್ಥ ಸಹಿತ ಪ್ರಕಟಿತ), ಶ್ರೀರಾಮ ಕಾರುಣ್ಯ, ಮಹಾಋಷಿ ಅಗಸ್ತ್ಯ, ಅಷ್ಟಲಕ್ಷ್ಮೀ, ಸಾರ್ವಭೌಮ ಸ್ವರೋಚಿ ಮೊದಲಾದುವುಗಳು. 

ಕನ್ನಡ ಕಾಲ್ಪನಿಕ ಪ್ರಸಂಗಗಳು – ಪುಷ್ಯ ಪೂರ್ಣಿಮಾ (ಪ್ರಕಟಿತ), ಶ್ವೇತ ಪಂಚಕ, ಶ್ವೇತಾಕ್ಷ ಮಾಲಾ ಮತ್ತು ರಚಿಸಿದ ತುಳು ಪೌರಾಣಿಕ ಪ್ರಸಂಗಗಳು ದೇವೆರೆಗ್ ಅರ್ಪಣೆ (ಪ್ರಕಟಿತ), ಗೋಕರ್ಣೆ. ತುಳು ಕಾಲ್ಪನಿಕ ಪ್ರಸಂಗಗಳು – ಪರಕೆದ ಪಿಂಗಾರ, ಪೂಜೆದ ತುಳಸಿ, ಮಸಣದ ತುಳಸಿ, ಕುಂಕುಮದ ಪರಕೆ. ತುಳು ಪಾಡ್ದನ ಆಧಾರಿತ ಪ್ರಸಂಗಗಳು – ಬ್ರಹ್ಮ ಬೈದ್ಯೆರ್, ಬ್ರಹ್ಮ ಮೊಗೇರೆರ್, ಜಾಗೆದ ಪಂಜುರ್ಲಿ, ರುದ್ರ ಗುಳಿಗೆ, ಅಗೋಳಿ ಮಂಜಣ್ಣೆ, ಮೈಮದ ಮೈಸಂದಾಯೆ, ಮಣ್ಣುದ ಮೋಕೆ. ಅಲ್ಲದೆ ಶ್ರೀ ಒಡಿಯೂರು ಕ್ಷೇತ್ರ ಮಹಾತ್ಮೆ ಮತ್ತು ಶ್ರೀ ಅಯ್ಯ ಜಗದ್ಗುರು ಮಹಾತ್ಮೆ ಎಂಬ ಕ್ಷೇತ್ರ ಪುರಾಣ ಪ್ರಸಂಗಗಳನ್ನೂ ಬರೆದಿರುತ್ತಾರೆ. ಅನೇಕ ಪ್ರಸಂಗಗಳ ಆಡಿಯೋ ಮತ್ತು ವೀಡಿಯೋ ಸಿಡಿಗಳ ನಿರ್ಮಾಣವನ್ನೂ ಮಾಡಿರುತ್ತಾರೆ. ರುರು (ಪೌರಾಣಿಕ ನಾಟಕ), ಮೊಗ್ಗಿನ ಜೇನು (ಕವನ ಸಂಕಲನ), ಎಂಬ ಪುಸ್ತಕಗಳನ್ನೂ ಬರೆದ ಶ್ರೀ ತಾರಾನಾಥರು ಕನ್ನಡ ಸಾಹಿತ್ಯ ಲೋಕಕ್ಕೆ ಗುರುತಿಸುವಂತಹಾ ಕೊಡುಗೆಯನ್ನು ಸಲ್ಲಿಸಿದ್ದಾರೆ. ಪ್ರಸ್ತುತ ಪತ್ನಿ ಡಾ| ಪ್ರೇಮಲತಾ ಮತ್ತು ಪುತ್ರಿ ಕು| ಆಜ್ಞಾ ಸೋಹಮ್ ಜತೆ ಬೆಳ್ಮಣ್ಣು ಶ್ರೀ ದುರ್ಗಾ ನಿವಾಸದಲ್ಲಿ ವಾಸ. ಪತ್ನಿ ಶ್ರೀಮತಿ ಪ್ರೇಮಲತಾ ವೃತ್ತಿಯಲ್ಲಿ ವೈದ್ಯೆ. ಪತಿಯ ಸಾಧನೆಗೆ ಸಹಕಾರಿಯಾಗಿ ಉತ್ಸಾಹವನ್ನು ತುಂಬುತ್ತಾರೆ. ಪುತ್ರಿ  ಕು| ಆಜ್ಞಾ ಸೋಹಮ್ ಪ್ರತಿಭಾವಂತೆ ವಿದ್ಯಾರ್ಥಿನಿ. ಕಲಾವಿದೆಯೂ ಲೇಖಕಿಯೂ ಆಗಿ ಬೆಳೆಯುತ್ತಿದ್ದಾರೆ. ಛಲದ ಬದುಕನ್ನು ನಡೆಸಿ ಸಾಧಕರಾಗಿ ಕಾಣಿಸಿಕೊಂಡ ಶ್ರೀ ತಾರಾನಾಥ ವರ್ಕಾಡಿ ಅವರಿಗೆ ಶ್ರೀ ದೇವರು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ. 

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

ವಾಲ್ಮೀಕಿರಾಮಾಯಣಕೋಶ – ಅನುವಾದ: ಮೂಡಂಬೈಲು ಸಿ. ಗೋಪಾಲಕೃಷ್ಣ ಶಾಸ್ತ್ರಿ (ಹಿಂದಿ ಮೂಲ: ಪಂಡಿತ ರಾಮಕುಮಾರ ರಾಯ್)

ವಾಲ್ಮೀಕಿರಾಮಾಯಣಕೋಶ ಎಂಬ ಈ ಕೃತಿಯನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದವರು ಖ್ಯಾತ ತಾಳಮದ್ದಳೆ ಅರ್ಥಧಾರಿಗಳೂ, ವಿದ್ವಾಂಸರೂ, ನಮಗೆಲ್ಲಾ ಹಿರಿಯರೂ ಆದ  ಮೂಡಂಬೈಲು ಶ್ರೀ ಗೋಪಾಲಕೃಷ್ಣ ಶಾಸ್ತ್ರಿಗಳು. ಈ ಪುಸ್ತಕದ ಮೂಲಪ್ರತಿಯು ಹಿಂದಿ ಭಾಷೆಯಲ್ಲಿದ್ದು ಅದನ್ನು ಬರೆದವರು ಶ್ರೀ  ಪಂಡಿತ ರಾಮಕುಮಾರ ರಾಯ್ ಅವರು. ಕನ್ನಡ ಸಾಹಿತ್ಯ ಲೋಕಕ್ಕೆ ಇದು ಒಂದು ಅತ್ಯುತ್ತಮ ಕೊಡುಗೆ. ಒಳ್ಳೆಯ ಮಾಹಿತಿಗಳನ್ನು ನೀಡುವ ಪುಸ್ತಕ. ವಾಲ್ಮೀಕಿ ರಾಮಾಯಣದಲ್ಲಿ ಬರುವ ಪಾತ್ರಗಳ ಪರಿಚಯವನ್ನು ನೀಡಲಾಗಿದ್ದು, ಅತ್ಯಂತ ಸವಿವರವಾಗಿದೆ. ಸುಮಾರು ಸಾವಿರಕ್ಕೆ ಹತ್ತಿರದ ಪಾತ್ರಗಳ ಪರಿಚಯವನ್ನು ಕೊಡಲಾಗಿದ್ದು ಇದು 2014ನೇ ಇಸವಿಯಲ್ಲಿ ಮುದ್ರಿತವಾಗಿತ್ತು. ಈ ಕೃತಿಯು ಒಟ್ಟು 448 ಪುಟಗಳನ್ನು ಹೊಂದಿದೆ.  ಇದರ ಪ್ರಕಾಶಕರು ‘ಯಕ್ಷ ಗುರುಕುಲ ಶಿಕ್ಷಣ ಟ್ರಸ್ಟ್ ‘ ಉಡುಪಿ. ಪ್ರಕಾಶಕರ ಮಾತು ಎಂಬ ಶೀರ್ಷಿಕೆಯಡಿಯಲ್ಲಿ ಶ್ರೀ ಹೇರಂಜೆ ಕೃಷ್ಣ ಭಟ್ಟರು ಸರ್ವ ರೀತಿಯ ಸಹಕಾರವನ್ನು ನೀಡಿದ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ (ರಿ) ಸಂಪಾಜೆ ಸಂಸ್ಥೆಗೂ, ಪುಸ್ತಕ ಉತ್ತಮ ರೀತಿಯಲ್ಲಿ ಹೊರಬರಲು ಶ್ರಮಿಸಿದ ಡಾ. ಪಾದೆಕಲ್ಲು ವಿಷ್ಣು ಭಟ್ಟರಿಗೂ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಗ್ರಂಥವನ್ನು ಪರಿಶೀಲಿಸಿ ಪ್ರೋತ್ಸಾಹಿಸಿದ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರಿಗೆ, ಮುನ್ನುಡಿ ಬರೆದ ಪ್ರೊ| ಮಲ್ಲೇಪುರಂ ಜಿ. ವೆಂಕಟೇಶ ಅವರಿಗೆ ಗೌರವಪೂರ್ವಕ ನಮನಗಳನ್ನು ಸಲ್ಲಿಸಿದ್ದಾರೆ. ‘ನಿವೇದನ’ ಎಂಬ ಶೀರ್ಷಿಕೆಯಡಿ ಶ್ರೀ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳು ಅನಿಸಿಕೆಗಳನ್ನು ಅಕ್ಷರರೂಪಕ್ಕಿಳಿಸಿದ್ದಾರೆ. ಹಿಂದಿ ಮೂಲ ಪ್ರತಿಯಲ್ಲಿ ಲೇಖಕ  ಪಂಡಿತ ರಾಮಕುಮಾರ ರಾಯ್ ಅವರು ಬರೆದ ಪ್ರಾಕ್ಕಥನ ಎಂಬ ಲೇಖನವನ್ನು ಕನ್ನಡಕ್ಕೆ ಅನುವಾದಿಸಿ ಕೊಡಲಾಗಿದೆ. ಕೊನೆಗೆ ‘ಪರಿಶಿಷ್ಟ’ ಎಂಬ ವಿಭಾಗವಿದ್ದು ಪರಿಶಿಷ್ಟ ಒಂದರಲ್ಲಿ ವಾಲ್ಮೀಕಿ ರಾಮಾಯಣದಲ್ಲಿ ಸಿಗುವ ಪಶು ಪಕ್ಷಿಗಳ ಹೆಸರುಗಳನ್ನೂ ನೀಡಲಾಗಿದೆ. ಪರಿಶಿಷ್ಟ ಎರಡರಲ್ಲಿ ವಾಲ್ಮೀಕಿ ರಾಮಾಯಣದಲ್ಲಿ ಸಿಗುವ ಮರಗಿಡಗಳ ಹೆಸರುಗಳನ್ನೂ ನೀಡಲಾಗಿದೆ. ಈ ವಿಚಾರಕ್ಕೆ ಖ್ಯಾತ ಸಸ್ಯ ಶಾಸ್ತ್ರಜ್ಞರಾದ ಡಾ. ಕೆ. ಗೋಪಾಲಕೃಷ್ಣ ಭಟ್ ಮತ್ತು ಡಾ. ಶ್ರೀ ವೆಂಕಟ್ರಮಣ ಗೌಡ ಅವರುಗಳು ಕಾರಣರು ಎಂಬುದನ್ನು ಹೇರಂಜೆ ಕೃಷ್ಣ ಭಟ್ಟರು ಪ್ರಕಾಶಕರ ಮಾತು ಲೇಖನದಡಿಯಲ್ಲಿ ತಿಳಿಸಿರುತ್ತಾರೆ. ಪರಿಶಿಷ್ಟ ಮೂರರಲ್ಲಿ ವಾಲ್ಮೀಕಿ ರಾಮಾಯಣದಲ್ಲಿ ಸಿಗುವ ಅಸ್ತ್ರ ಶಸ್ತ್ರಗಳ ಹೆಸರುಗಳನ್ನು ನೀಡಲಾಗಿದ್ದು ಇದೊಂದು ಶ್ರೇಷ್ಠ ಪುಸ್ತಕ. 

ಲೇಖನ:ರವಿಶಂಕರ್ ವಳಕ್ಕುಂಜ  

ಯಕ್ಷೋಲ್ಲಾಸ 2020 – ಕಾಂತಾವರ

ಕಾಂತಾವರದ ಯಕ್ಷದೇಗುಲದ ಹದಿನೆಂಟನೆಯ ಯಕ್ಷೋಲ್ಲಾಸದ ಉದ್ಘಾಟನಾ ಸಮಾರಂಭವನ್ನು  ಸಾಣೂರಿನ ವೇ. ಮೂ. ಶ್ರೀರಾಮ ಭಟ್ಟರು ಉದ್ಘಾಟಿಸಿದರು. 

ಜೊತೆಗೆ ಯಕ್ಷಗಾನದ ನಾಟ್ಯಾಭ್ಯಾಸ  ಮಾಡಿ ನೂರಾರು ವೇಷಗಳನ್ನು ಮಾಡುತ್ತಾ  ಬಾಲ ಕಲಾವಿದರಾಗಿ ಬೆಳೆದಿರುವ , ಹತ್ತನೇ ಮತ್ತು ಪಿ ಯು ಸಿಯಲ್ಲಿ ಮೊನ್ನೆ ನಡೆದ ಶೈಕ್ಷಣಿಕ ಪರೀಕ್ಷೆಯಲ್ಲಿ  ಅತ್ಯಧಿಕ ಅಂಕಗಳಿಸಿದ ಒಂಬತ್ತು ವಿದ್ಯಾರ್ಥಿಗಳಿಗೆ ಅತಿಥಿಗಳ ಸಮ್ಮುಖ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಗ್ರಾಮದ ಪಂಚಾಯತ್ ಪಿ ಡಿ ಓ ರಮೇಶ್ ಎಸ್, ಜಿ.ಪಂ ಸದಸ್ಯರಾದ ಶ್ರೀಮತಿ ದಿವ್ಯಶ್ರೀ ಜಿ. ಅಮೀನ್, ತಾ.ಪಂ ಸದಸ್ಯ ಪ್ರವೀಣ್ ಕೋಟ್ಯಾನ್,  ಗೋವಾ ಉದ್ಯಮಿ ಬೇಲಾಡಿ ಅಶೋಕಾನಂದ ಶೆಟ್ಟಿ , ಕಾರ್ಕಳದ ವಿಜಯ ಶೆಟ್ಟಿ, , ಬಾರಡಿ ಪ್ರಕಾಶ್ ಆರ್. ಪೂಜಾರಿ ,  ಪ್ರಾಂಶುಪಾಲ ಬೇಬಿ ಕೆ ಈಶ್ವರಮಂಗಲ ,  ಅಧ್ಯಾಪಕ ಶಿವಸುಭ್ರಮಣ್ಯ ಭಟ್,   ಬೆಳುವಾಯಿ ಕೆನರಾ ಬ್ಯಾಂಕಿನ  ಮುಖ್ಯ ಪ್ರಬಂದಕ ಮನೋಹರ ನಾಯಕ್  , ಪಂ. ಮಾಜಿ ಅದ್ಯಕ್ಷರಾದ ಜಯ ಎಸ್ ಕೋಟ್ಯಾನ್, ರಾಜೇಶ್ ಕೋಟ್ಯಾನ್ ಬೆಳುವಾಯಿಯ ಎಂ ದೇವಾನಂದ ಭಟ್ಟರು ಹಾಗೂ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಾದ್ಯಕ್ಷ ಮಹಾವೀರ ಪಾಂಡಿಯವರು ಕಾರ್ಯಕ್ರಮ ನಿರ್ವಹಿಸಿ ಧನ್ಯವಾದವಿತ್ತರು. ನಂತರ ಕಲಾವಿದ ಗಣೇಶ ಶೆಟ್ಟಿಯವರ ಪರಿಕಲ್ಪನೆಯಲ್ಲಿ ಸಂಯೋಜಿಸಿದ ಮಹಾಭಾರತದೊಳಗಣ “ಯುಗಧರ್ಮ” ಯಕ್ಷಗಾನ ಕಾರ್ಕಳ ತಾಲೂಕಿನ ವೃತ್ತಿ ನಿರತ ಕಲಾವಿದರಿಂದ  ಜಾಲತಾಣದ ಮೂಲಕ ನೇರ ಪ್ರಸಾರದಲ್ಲಿ ಆಡಿತೋರಿಸಲಾಯಿತು.

ಕೀರಿಕ್ಕಾಡು ವಿಷ್ಣು ಭಟ್ಟ ಸಂಸ್ಮರಣ ಯಕ್ಷಗಾನ ಪ್ರಸಂಗ ಮಾಲಿಕೆ

ಶೀರ್ಷಿಕೆಯೇ ಸೂಚಿಸುವಂತೆ ಈ ಪುಸ್ತಕವು ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರು ರಚಿಸಿದ ಪ್ರಸಂಗಗಳ ಸಂಪುಟ. ಶ್ರೀಯುತರು ಬರೆದ ಪ್ರಸಂಗಗಳಲ್ಲಿ ಐದನ್ನು ಆಯ್ದು ಈ ಹೊತ್ತಗೆಯಲ್ಲಿ ಮುದ್ರಿಸಲಾಗಿದೆ. ಪ್ರಸ್ತುತ ಕೇರಳ ರಾಜ್ಯದಲ್ಲಿರುವ ಕಾಸರಗೋಡು ತಾಲೂಕಿನ ಕುಂಬ್ಡಾಜೆ ಗ್ರಾಮದ ಕೀರಿಕ್ಕಾಡು ಎಂಬ ಹಳ್ಳಿಯಲ್ಲಿ ಜನನ. ಅಧ್ಯಾಪಕರಾಗಿ ವಿದ್ಯಾರ್ಥಿಗಳಿಗೆ ವಿದ್ಯಾದಾನ. ಬಳಿಕ ದೇಲಂಪಾಡಿ ಸಮೀಪದ ಗುಡ್ಡಡ್ಕದಲ್ಲಿ ವಾಸ. ಕಲಾವಿದರಾಗಿ,ಲೇಖಕರಾಗಿ, ಪ್ರಸಂಗಕರ್ತರಾಗಿ ಯಕ್ಷಗಾನ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರವಾದುದು. ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘದ ಸ್ಥಾಪಕರಾಗಿ ಅನೇಕ ಶಿಷ್ಯಂದಿರನ್ನು ಸಿದ್ಧಗೊಳಿಸಿ ನಿರಂತರ ಯಕ್ಷಗಾನ ಚಟುವಟಿಕೆಗಳನ್ನು ನಡೆಸಿದ ಮಹಾನುಭಾವರಿವರು. ಶ್ರೀಯುತರ ಬಗೆಗೆ ಹಿಂದೊಂದು ಲೇಖನವನ್ನು ಬರೆದಿದ್ದೆ. ಅವರು ರಚಿಸಿದ ಅನೇಕ ಪ್ರಸಂಗಗಳಲ್ಲಿ ವೇಷಗಳನ್ನು ಮಾಡುವ ಅವಕಾಶಗಳೂ ಸಿಕ್ಕಿತ್ತು. ಅದನ್ನು ಭಾಗ್ಯವೆಂದು ಭಾವಿಸುತ್ತೇನೆ.  

‘ಕೀರಿಕ್ಕಾಡು ವಿಷ್ಣು ಭಟ್ಟ ಸಂಸ್ಮರಣ ಯಕ್ಷಗಾನ ಪ್ರಸಂಗ ಮಾಲಿಕೆ’ ಎಂಬ ಈ ಸಂಪುಟವು ೧೯೯೮ನೇ ಇಸವಿ ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಕಟಗೊಂಡಿತ್ತು. ಇದರ ಪ್ರಕಾಶಕರು ಪದವೀಧರ ಯಕ್ಷಗಾನ ಸಮಿತಿ (ರಿ) ಮುಂಬೈ ಎಂಬ ಸಂಸ್ಥೆ. ಅನೇಕ ಯಕ್ಷಗಾನ ಪ್ರಸಂಗಗಳ ಸಂಪುಟಗಳನ್ನು ಪ್ರಕಾಶಿಸಿದ ಹಿರಿಮೆ ಈ ಸಂಸ್ಥೆಗಿದೆ. ಮುಂಬಯಿಯ ಯಕ್ಷಗಾನ ಕಲಾ ಸಂಘಟಕ ಶ್ರೀ ಎಚ್.ಬಿ.ಎಲ್. ರಾವ್ ಅವರು ಇದರ ಸಂಪಾದಕರು. ಮುನ್ನುಡಿಯನ್ನು ಬರೆದವರು ಕಾಸರಗೋಡಿನ ಶ್ರೇಷ್ಠ ಸಾಹಿತಿ ಶ್ರೀ ವೆಂಕಟರಾಜ ಪುಣಿಚಿತ್ತಾಯರು. ತಮ್ಮ ಮುನ್ನುಡಿ ಬರಹದಲ್ಲಿ ಶ್ರೀಯುತರು ಕೀರಿಕ್ಕಾಡು ಮಾಸ್ತರರ ಬಗೆಗೆ, ಅವರ ಪ್ರಸಂಗ ರಚನಾ ಕೌಶಲದ ಬಗೆಗೆ ತಮ್ಮ ಅನಿಸಿಕೆಗಳ ನ್ನು ವ್ಯಕ್ತಪಡಿಸಿದ್ದಾರೆ. ಅರಿಕೆ ಎಂಬ ಶೀರ್ಷಿಕೆಯಡಿ ಕೀರಿಕ್ಕಾಡು ಮಾಸ್ತರರ ಪುತ್ರರಾದ ಡಾ. ರಮಾನಂದ ಬನಾರಿ ಅವರು ತಮ್ಮ ಮನದಾಳದ ಮಾತುಗಳನ್ನು ಅಕ್ಷರ ರೂಪಕ್ಕಿಳಿಸಿದ್ದಾರೆ. ಪುಸ್ತಕದ ಹೊರ ಆವರಣದ ಪುಟದಲ್ಲಿ ಶ್ರೀ  ವೆಂಕಟರಾಜ ಪುಣಿಚಿತ್ತಾಯರ ಮುನ್ನುಡಿ ಬರಹದ ಮುಖ್ಯ ಅಂಶಗಳನ್ನು ನೀಡಲಾಗಿದೆ. ಈ ಸಂಪುಟದಲ್ಲಿ ಜರಾಸಂಧ ಪರಾಭವ, ಭ್ರಮರಕುಂತಳೆ ಕಲ್ಯಾಣ, ಮೃಗಾವತೀ ಪರಿಣಯ, ಸುಲೋಚನಾ ಸ್ವಯಂವರ, ವೀರ ಅಭಿಮನ್ಯು ಎಂಬ ಐದು ಪ್ರಸಂಗಗಳಿವೆ. ಪ್ರತಿಯೊಂದು ಪ್ರಸಂಗದಲ್ಲಿ ಬರುವ ಪಾತ್ರಗಳನ್ನೂ ನಮೂದಿಸಿರುತ್ತಾರೆ. ಈ ಪ್ರಸಂಗ ಸಂಪುಟವು ಕಲಾಕ್ಷೇತ್ರಕ್ಕೊಂದು ಉತ್ತಮ ಕೊಡುಗೆ. 

ಲೇಖನ: ರವಿಶಂಕರ ವಳಕ್ಕುಂಜ 

ಕೊಳ್ತಿಗೆ ಶ್ರೀ ನಾರಾಯಣ ಗೌಡ – ಪುರಾಣ ಮತ್ತು ತುಳು ಪ್ರಸಂಗಗಳ ಅನುಭವಿ 


ಕೊಳ್ತಿಗೆ ಶ್ರೀ ನಾರಾಯಣ ಗೌಡ ಅವರು ತೆಂಕುತಿಟ್ಟಿನ ಹಿರಿಯ ಕಲಾವಿದರು. ಕಳೆದ ಐವತ್ತಾರು ವರ್ಷಗಳಿಂದ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಪುರಾಣ ಮತ್ತು ತುಳು ಪ್ರಸಂಗಗಳಲ್ಲಿ ಪಾತ್ರಗಳನ್ನು ನಿರ್ವಹಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಿರೀಟ ವೇಷ ಮತ್ತು ನಾಟಕೀಯ ವೇಷಗಳಲ್ಲಿ ಇವರ ನಿರ್ವಹಣೆಯನ್ನು ಕಲಾಭಿಮಾನಿಗಳು ಗುರುತಿಸಿ ಗೌರವಿಸಿದ್ದಾರೆ. ಆಳಂಗ, ಸ್ವರಭಾರ, ಪಾತ್ರದ ಸ್ವಭಾವವನ್ನು ಅರಿತು ಅಭಿನಯಿಸುವ ಸಾಮರ್ಥ್ಯ, ಕನ್ನಡ ಮತ್ತು ತುಳು ಭಾಷೆಗಳ ಮೇಲಿರುವ ಹಿಡಿತ, ಅಧ್ಯಯನ, ಇವೆಲ್ಲವೂ ಕೊಳ್ತಿಗೆ ನಾರಾಯಣ ಗೌಡರನ್ನು ಒಬ್ಬ ಉತ್ತಮ ಕಲಾವಿದನನ್ನಾಗಿ ರೂಪಿಸಿತು. ಹಿರಿಯ ಶ್ರೇಷ್ಠ ಕಲಾವಿದರ ಒಡನಾಟವೂ ಇವರಿಗೆ ಸಿಕ್ಕಿತ್ತು. ಇವರು ಪುರಾಣ ಪ್ರಸಂಗಗಳಲ್ಲದೆ, ತುಳು ಸಾಮಾಜಿಕ, ಕಾಲ್ಪನಿಕ ಪ್ರಸಂಗಗಳಲ್ಲಿ ಅಭಿನಯಿಸಿದ ಅನುಭವೀ ಕಲಾವಿದರು. ಪೀಠಿಕೆ ವೇಷಗಳನ್ನೂ ಸೊಗಸಾಗಿ ಮಾಡಬಲ್ಲರು.


ಎದುರು ವೇಷಗಳನ್ನೂ ಮಾಡಬಲ್ಲರು. ಮಾತುಗಾರಿಕೆ ಮತ್ತು ನಾಟ್ಯಗಳೆಂಬ ಉಭಯ ವಿಭಾಗಗಳಲ್ಲೂ ಹಿಡಿತವನ್ನು ಹೊಂದಿದ ಕಲಾವಿದರಿವರು. ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ನಾಯಕ ಮತ್ತು ಪ್ರತಿನಾಯಕನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಯಾರನ್ನೂ ಅನುಕರಿಸದೆ, ನೋಡಿ, ಕೇಳಿ ತಿಳಿದು, ಪುರಾಣ ಮತ್ತು ತುಳು ಪ್ರಸಂಗಗಳ ಸವ್ಯಸಾಚಿ ಕೊಳ್ತಿಗೆ ಶ್ರೀ ನಾರಾಯಣ ಗೌಡರು ಪ್ರತಿಭಾ ಸಾಮರ್ಥ್ಯದಿಂದ ತನ್ನದೇ ಶೈಲಿಯಲ್ಲಿ ವೇಷಗಳನ್ನು ಚಿತ್ರಿಸುತ್ತಾರೆ. ಮೊದಲು ಪಾತ್ರದ ಸ್ವಭಾವವನ್ನು ಅರಿತು, ಸಿದ್ಧತೆಯೊಂದಿಗೆ ಅಭಿನಯಿಸುವ ರೂಢಿಯನ್ನು ಎಳವೆಯಿಂದಲೇ ಮಾಡಿಕೊಂಡು ಬಂದವರು. ಆದುದರಿಂದಲೇ ಕೊಳ್ತಿಗೆಯವರು ನಿರ್ವಹಿಸುವ ಪ್ರತಿಯೊಂದು ಪಾತ್ರಗಳೂ ರಂಗದಲ್ಲಿ ಸೋಲದೆ ಗೆಲ್ಲುತ್ತವೆ.

ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದ ಶ್ರೀ ನಾರಾಯಣ ಗೌಡರ ಹುಟ್ಟೂರು ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲೂಕಿನ ಪೆರ್ಲಂಪಾಡಿ ಸಮೀಪದ ಕೊಳ್ತಿಗೆ. 1947ನೇ ಇಸವಿ ಜುಲೈ 18ರಂದು ಜನನ. ತಂದೆ ಕೊಳ್ತಿಗೆ ಶ್ರೀ ತಿಮ್ಮಪ್ಪ ಗೌಡ. ತಾಯಿ ಶ್ರೀಮತಿ ಕಮಲ. ಇವರದು ಕೃಷಿ ಕುಟುಂಬ. ತಿಮ್ಮಪ್ಪ ಗೌಡರು ಕಲಾವಿದರಲ್ಲದಿದ್ದರೂ ಯಕ್ಷಗಾನಾಸಕ್ತರಾಗಿದ್ದರು. ಪ್ರದರ್ಶನಗಳನ್ನು ನೋಡುವ ಹವ್ಯಾಸವಿತ್ತು. ಅಲ್ಲದೆ ಮನೆಯಲ್ಲಿ ನವರಾತ್ರಿಯ ಎಲ್ಲಾ ದಿನಗಳಲ್ಲಿ ಶ್ರೀ ದೇವಿಯನ್ನು ಆರಾಧಿಸಿ, ಕೊನೆಯ ದಿನ ರಾತ್ರೆಯಿಂದ ಬೆಳಗಿನ ತನಕವೂ ತಾಳಮದ್ದಳೆ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದರು. ಅರ್ಥಧಾರಿಗಳು ಕೇವಲ ಮಾತಿನ ಮೂಲಕವೇ ಪಾತ್ರಗಳನ್ನು ಚಿತ್ರಿಸುವ ರೀತಿಯನ್ನು ನಾರಾಯಣ ಗೌಡರು ಕುತೂಹಲದಿಂದ ನೋಡುತ್ತಿದ್ದರು.


ಸಂಭಾಷಣೆಗಳನ್ನು ಗಮನವಿಟ್ಟು ಕೇಳುತ್ತಿದ್ದರು. ಆಗಲೇ ಇವರು ಕಲೆಯತ್ತ ಆಕರ್ಷಿತರಾಗಿದ್ದರು. ಆದರೆ ಮಕ್ಕಳು ಯಕ್ಷಗಾನ ಕಲಾವಿದರಾಗುವುದು ತಿಮ್ಮಪ್ಪ ಗೌಡರಿಗೆ ಇಷ್ಟವಿರಲಿಲ್ಲ. ಆ ವಿಚಾರದಲ್ಲಿ ಆಕ್ಷೇಪಿಸುತ್ತಿದ್ದರು. ಹಾಗೆಂದು ಯಕ್ಷಗಾನವನ್ನು ಅತೀವವಾಗಿ ಪ್ರೀತಿಸುತ್ತಿದ್ದರು. ಮನೆಯವರ ಸಮ್ಮತಿಯಿಲ್ಲದಿದ್ದರೂ, ಕೊಳ್ತಿಗೆ ನಾರಾಯಣ ಗೌಡರು ಬದುಕಿಗಾಗಿ ಯಕ್ಷಗಾನವನ್ನೇ ಆಯ್ಕೆ ಮಾಡಿದ್ದರು. ಸಮಾಜವು, ಅವರನ್ನು ಯಕ್ಷಗಾನ ಕಲಾವಿದ ಎಂದೇ ಗುರುತಿಸಿತು. ಗೌರವಿಸಿತು. ಬಹುಷಃ ಕಲಾಮಾತೆಯ ನಿರ್ಣಯವೇ ಇದಕ್ಕೆ ಕಾರಣವಿರಬೇಕು. ಕೊಳ್ತಿಗೆ ಶ್ರೀ ನಾರಾಯಣ ಗೌಡ ಅವರು ಓದಿದ್ದು 7ನೇ ತರಗತಿಯ ವರೇಗೆ. ನೆಟ್ಟಾರು ಶಾಲೆಯಲ್ಲಿ.

ನೆಟ್ಟಾರು ಪರಿಸರದಲ್ಲಿ ಕೂಡ್ಲು ಮೇಳ ಮತ್ತು ಬಳ್ಳಂಬೆಟ್ಟು ಮೇಳಗಳ ಪ್ರದರ್ಶನಗಳು ನಡೆಯುತ್ತಿತ್ತು. ಅದನ್ನು ಬೆಳಗಿನ ವರೆಗೂ ನೋಡುತ್ತಿದ್ದರು. 6ನೇ ತರಗತಿಯ ವಿದ್ಯಾರ್ಥಿಯಾಗಿರುವಾಗ ಯಕ್ಷಗಾನದಲ್ಲಿ ಮೊದಲ ಬಾರಿಗೆ ವೇಷ ಮಾಡುವ ಅವಕಾಶ ಒದಗಿ ಬಂದಿತ್ತು. ಶಾಲಾ ವಾರ್ಷಿಕೋತ್ಸವದ ಸಂದರ್ಭ. ಅಧ್ಯಾಪಕರಾದ ಗಿಲ್ಕಿಂಜ ಶ್ರೀ ರಾಮಕೃಷ್ಣ ಭಟ್ಟರು ಶಾಲಾ ಮಕ್ಕಳಿಂದಲೇ ಪ್ರದರ್ಶನ ನಡೆಯಬೇಕೆಂದು ನಿರ್ಣಯಿಸಿದ್ದರು. ಅವರು ಕಲಾಸಕ್ತರಾಗಿ ಭಾಗವತಿಕೆಯನ್ನೂ ಮಾಡುತ್ತಿದ್ದರು. ಮಕ್ಕಳ ತಂಡದ ಪ್ರದರ್ಶನಕ್ಕೆ ತರಬೇತಿಯನ್ನು ನೀಡಲು, ಕರ್ನಾಟಕ ಮೇಳದ ತರುಣ ಕಲಾವಿದರಾಗಿದ್ದ ಬೆಳ್ಳಾರೆ ವಿಶ್ವನಾಥ ರೈಗಳನ್ನು ಕರೆಸಿಕೊಂಡಿದ್ದರು. ಬೆಳ್ಳಾರೆಯವರ ನಟನಾ ಸಾಮರ್ಥ್ಯದ ಅರಿವಿದ್ದ ಅಧ್ಯಾಪಕರು ತರಬೇತಿಗೆ ಅವರನ್ನೇ ಆಯ್ಕೆ ಮಾಡಿದ್ದರು.

ಕೇವಲ ಎರಡು ತಿಂಗಳ ತರಬೇತಿ. ‘ಮಾಗಧ ವಧೆ’ ಪ್ರಸಂಗ. ಅಧ್ಯಾಪಕ ಗಿಲ್ಕಿಂಜ ಶ್ರೀ ರಾಮಕೃಷ್ಣ ಭಟ್ಟರು ಮತ್ತು ಶ್ರೀ ಬೆಳ್ಳಾರೆ ವಿಶ್ವನಾಥ ರೈಗಳು ಬಾಲಕನಾದ ಕೊಳ್ತಿಗೆಯವರಿಗೆ ಮಾಗಧನ ಪಾತ್ರವನ್ನು ನೀಡಿದ್ದರು. ಜರಾಸಂಧನಾಗಿ ರಂಗಪ್ರವೇಶ. ಅವರ ನಿರ್ವಹಣೆಗೆ ಪ್ರೇಕ್ಷಕರಿಂದ ಪ್ರಶಂಸೆಯೂ ಸಿಕ್ಕಿತ್ತು. ಈ ಕಾರಣದಿಂದಲೇ ಕಲಾಸಕ್ತಿಯೂ ಕೆರಳಿತು. ‘‘ಯಕ್ಷಗಾನ ನಾಟ್ಯದ ವಿಚಾರದಲ್ಲಿ ಬೆಳ್ಳಾರೆ ವಿಶ್ವನಾಥ ರೈಗಳಿಂದ ಎರಡು ತಿಂಗಳು ಕಲಿತುದೇ ತನ್ನ ಕಲಾ ಬದುಕಿಗೆ ಮೂಲ ಬಂಡವಾಳ’’ ಎಂದು ಕೊಳ್ತಿಗೆಯವರು ಹೇಳುತ್ತಾರೆ. ಶಾಲಾ ಕಲಿಕೆಯತ್ತ ಗಮನವೂ ಕಡಿಮೆಯಾಗಿತ್ತು. ಕಾರಣ ಯಕ್ಷಗಾನ ಎಂಬ ಶ್ರೇಷ್ಠ ಕಲೆಯ ಸೆಳೆತ. ಮನೆಯವರ ಒತ್ತಾಯಕ್ಕೆ 7ನೇ ತರಗತಿ ಮುಗಿಸಿದ್ದರು. ಬೆಳ್ಳಾರೆ ಶಾಲೆಯಲ್ಲಿ 8ನೇ ತರಗತಿಯಲ್ಲಿ ಮೂರು ತಿಂಗಳು ಓದಿ, ಅಧ್ಯಾಪಕರಿಗೆ, ಮನೆಯವರಿಗೆ ಹೇಳದೆಯೇ, ಉಟ್ಟ ಬಟ್ಟೆಯಲ್ಲಿಯೇ ತೆರಳಿದ್ದರು. ನಾಲ್ಕು ತಿಂಗಳ ಕಾಲ ದೂರದ ನೆಂಟರ ಮನೆಯಲ್ಲಿಯೇ ಉಳಿದಿದ್ದರು.

ಈ ಸಂದರ್ಭಗಳಲ್ಲಿ ಬಳ್ಳಂಬೆಟ್ಟು ಮೇಳದ ಯಕ್ಷಗಾನ ಪ್ರದರ್ಶನಗಳನ್ನು ನೋಡುತ್ತಿದ್ದರು. ಮನೆಯವರು ಇವರನ್ನು ಹುಡುಕುತ್ತಿದ್ದರು. ಮೇಳದ ತಿರುಗಾಟವನ್ನು ಮಾಡಿ ಕಲಾವಿದನಾಗಿಯೇ ಬದುಕುವ ದೃಢ ನಿರ್ಣಯವನ್ನು ಕೊಳ್ತಿಗೆಯವರು ಕೈಗೊಂಡಿದ್ದರು. ಕೊಳ್ತಿಗೆ ನಾರಾಯಣ ಗೌಡರ ಮೊದಲ ತಿರುಗಾಟ ಬಳ್ಳಂಬೆಟ್ಟು ಮೇಳದಲ್ಲಿ. 1961ರ ಸುಮಾರಿಗೆ ಇರಬಹುದು. ಮೇಳದ ಸಂಚಾಲಕತ್ವ ಬಳ್ಳಂಬೆಟ್ಟು ಶೀನಪ್ಪ ಭಂಡಾರಿಗಳದ್ದು. ಮೇಳದ ನೇಪಥ್ಯದ ಕೆಲಸದ ಜತೆಗೆ ಸಣ್ಣಪುಟ್ಟ ವೇಷಗಳನ್ನು ಮಾಡುತ್ತಿದ್ದರು. ದಿನಪತ್ರಿಕೆ ಮತ್ತು ಪುಸ್ತಕಗಳನ್ನು ಓದುವ ಹವ್ಯಾಸವೂ ಇತ್ತು. ‘‘ಯಕ್ಷಗಾನ ಕಲಾವಿದನಿಗೆ ಓದು, ಕಲಿಕೆ ಅತ್ಯಗತ್ಯ. ಭಾಷಾಶುದ್ಧಿ ಮತ್ತು ಉತ್ತಮ ವಿಚಾರಗಳ ಸಂಗ್ರಹಕ್ಕೆ ಇದರಿಂದ ಅನುಕೂಲವಾಗುತ್ತದೆ. ಪಾತ್ರಗಳನ್ನು ನಿರ್ವಹಿಸುವಲ್ಲಿ ಉಚ್ಛಾರ ದೋಷವಿರಬಾರದು.’’ ಕೊಳ್ತಿಗೆಯವರ ಈ ಮಾತುಗಳಲ್ಲಿ ಕಲಿಕಾಸಕ್ತರಿಗೆ ಸಂದೇಶವಿದೆ.

ತಮ್ಮ ಕೆಲಸವಾದ ಮೇಲೆ ನಿದ್ದೆ ಮಾಡದೆ ಹಿರಿಯ ಕಲಾವಿದರ ವೇಷಗಳನ್ನು ನೋಡುತ್ತಿದ್ದರು. ಆದಕಾರಣ 2ನೇ ವರ್ಷವೇ ಪೋಷಕ ಪಾತ್ರಗಳನ್ನು ಮಾಡುವಷ್ಟು ಬೆಳೆಯುವ ಹಾಗಾಗಿತ್ತು. ಕಿರೀಟ ವೇಷಗಳತ್ತ ಒಲವು ಮೂಡಿತ್ತು. ಬಳ್ಳಂಬೆಟ್ಟು ಮೇಳದಲ್ಲಿ ಮೂರು ವರ್ಷಗಳ ತಿರುಗಾಟ. ಬಳಿಕ ಶೀನಪ್ಪ ಭಂಡಾರಿಗಳು ಆದಿ ಸುಬ್ರಹ್ಮಣ್ಯ ಮೇಳದ ಸಂಚಾಲಕರಾದಾಗ ಸದ್ರಿ ಮೇಳದಲ್ಲಿ ಹತ್ತು ವರ್ಷಗಳ ತಿರುಗಾಟ. ಈ ಸಮಯಗಳಲ್ಲಿ ಅವಕಾಶಗಳೂ ಸಿಕ್ಕಿತ್ತು. ಕಲಾವಿದನಾಗಿ ಬೆಳೆಯಲು ಕೊಳ್ತಿಗೆಯವರಿಗೆ ಇದರಿಂದ ಅನುಕೂಲವಾಗಿತ್ತು. ‘‘ಆಗ ಕಲಾವಿದರ ಸಂಖ್ಯೆಯೂ ಕಡಿಮೆಯಿತ್ತು. ಪ್ರತಿಯೊಬ್ಬ ಕಲಾವಿದನೂ ಬೆಳಗಿನ ವರೇಗೆ ವೇಷಗಳನ್ನು ಮಾಡಬೇಕಾಗಿತ್ತು. ಪ್ರದರ್ಶನದ ಗೆಲುವಿಗಾಗಿ ಹಿರಿಯ ಕಲಾವಿದರು ಕಿರಿಯರಿಗೆ ಹೇಳಿಕೊಟ್ಟು ವೇಷ ಮಾಡಿಸುತ್ತಿದ್ದರು.

ಶೀನಪ್ಪ ಭಂಡಾರಿಗಳ ನೇತೃತ್ವದ ಆದಿ ಸುಬ್ರಹ್ಮಣ್ಯ ಮೇಳವು ಕಲಾವಿದರನ್ನು ಸಿದ್ದಗೊಳಿಸುವ ಕಾರ್ಖಾನೆಯಾಗಿತ್ತು’’. ಇದು ಕೊಳ್ತಿಗೆಯವರು ಅನುಭವಿಸಿ ಆಡುವ ಮಾತುಗಳು. ಆರಂಭದ ವರ್ಷಗಳಲ್ಲಿ ಕಳಿಯೂರು ಶ್ರೀ ನಾರಾಯಣ ಆಚಾರ್ಯ ಭಾಗವತರಾಗಿದ್ದರು. ನಂತರದ ವರ್ಷಗಳಲ್ಲಿ ಅಗರಿ ಶ್ರೀನಿವಾಸ ಭಾಗವತರ ಒಡನಾಟವೂ ದೊರೆತಿತ್ತು. ಉಜಿರೆ ಸುಂದರ ರೈ, ತೊಕ್ಕೊಟ್ಟು ಲೋಕಯ್ಯ, ಪುತ್ರಕಳ ತಿಮ್ಮಪ್ಪ ರೈ, ಬಂಗ ಭಂಡಾರಿ ಮೊದಲಾದ ಕಲಾವಿದರ ಒಡನಾಟವೂ ಸಿಕ್ಕಿತ್ತು. ಪೀಠಿಕೆ ವೇಷಧಾರಿಯಾಗಿ ಆಗಲೇ ಕೊಳ್ತಿಗೆಯವರು ಗುರುತಿಸಿಕೊಂಡಿದ್ದರು. ಪಾಂಡವಾಶ್ವಮೇಧ ಪ್ರಸಂಗದಲ್ಲಿ ಅರ್ಜುನನ ಪಾತ್ರವನ್ನು ಬೆಳಗಿನ ವರೆಗೂ ಒಬ್ಬನೇ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದರು.


ಅರ್ಜುನ, ದೇವೇಂದ್ರ, ಶತ್ರುಘ್ನ, ಮಕರಾಕ್ಷ ಮೊದಲಾದ ಪಾತ್ರಗಳನ್ನು ಮಾಡಿದರು. ಯಕ್ಷಗಾನಕ್ಕೆ ತುಳು ಪ್ರಸಂಗಗಳು ಪ್ರವೇಶಿಸಿದ ಸಮಯ ಅದು. ಕೋಟಿ-ಚೆನ್ನಯ ಮತ್ತು ಸಿರಿಮಹಾತ್ಮೆ ಎಂಬ ಎರಡು ಪ್ರಸಂಗಗಳು. ಕೋಟಿ-ಚೆನ್ನಯ ಪ್ರಸಂಗದಲ್ಲಿ ಮಂಜು ಪೆರ್ಗಡೆ ಮತ್ತು ಕೇಮರ ಬಲ್ಲಾಳ ಪಾತ್ರಗಳನ್ನೂ, ಸಿರಿಮಹಾತ್ಮೆ ಪ್ರಸಂಗದಲ್ಲಿ ಭೈರವನ ಪಾತ್ರವನ್ನೂ ನಿರ್ವಹಿಸುವ ಅವಕಾಶವಾಗಿತ್ತು. ಮತ್ತೆ 5 ವರ್ಷಗಳ ಕಾಲ ಕೊಳ್ತಿಗೆಯವರು ಕುಂಬಳೆ ಸೇಸಪ್ಪ ಅವರ ನಾಯಕತ್ವದ ಅಮ್ಟಾಡಿ ಮೇಳದಲ್ಲಿ ತಿರುಗಾಟ.

ಕೊಳ್ತಿಗೆಯವರು ಬಳಿಕ ಕಲಾಸೇವೆ ಮಾಡಿದ್ದು ಕೊಲ್ಲೂರು ಮೇಳದಲ್ಲಿ. ಶ್ರೇಷ್ಠ ಕಲಾವಿದರನ್ನು ಹೊಂದಿದ ತಂಡವದು. ಅಗರಿ ಶ್ರೀನಿವಾಸ ರಾಯರು ಭಾಗವತರಾಗಿದ್ದರು. ಮಲ್ಪೆ ಶ್ರೀ ಶಂಕರನಾರಾಯಣ ಸಾಮಗರು, ವೇಷಧಾರಿ ಪೆರುವಡಿ ನಾರಾಯಣ ಭಟ್ಟ, ಕ್ರಿಶ್ಚನ್ ಬಾಬು ಮೊದಲಾದ ಕಲಾವಿದರಿಂದ ಪ್ರದರ್ಶನಗಳು ರಂಜಿಸುತ್ತಿತ್ತು. ಈ ಮೇಳದಲ್ಲಿ ಪೀಠಿಕೆ ಮತ್ತು ಎದುರು ವೇಷಗಳನ್ನು ಮಾಡಿ
ಕೊಳ್ತಿಗೆಯವರು ಕಾಣಿಸಿಕೊಂಡರು. ಅಲ್ಲದೆ ಅನಿವಾರ್ಯಕ್ಕೆ ಅಭಿಮನ್ಯು, ಪರಶುರಾಮ, ಜಮದಗ್ನಿ ಮೊದಲಾದ ಪುಂಡುವೇಷಗಳನ್ನೂ ಮಾಡಿದ್ದಾರೆ. ಆದರೆ ಕಿರೀಟ ವೇಷಗಳತ್ತಲೇ ಇವರ ಆಸಕ್ತಿ. ರಾಣಿ ಚಿತ್ರಾಂಗದೆ ಪ್ರಸಂಗದಲ್ಲಿ ಕ್ರಿಶ್ಚನ್ ಬಾಬು ಅವರ ಬಭ್ರುವಾಹನ ಮತ್ತು ಕೊಳ್ತಿಗೆಯವರ ಅರ್ಜುನ. ಅನೇಕ ಪ್ರಸಂಗಗಳಲ್ಲಿ ಕೊಳ್ತಿಗೆ-ಕ್ರಿಶ್ಚನ್ ಬಾಬು ಜತೆಯನ್ನು ಜನರು ಗುರುತಿಸುವಂತಾಗಿತ್ತು.

ಆಗ ನಾಟಕೀಯ ವೇಷಗಳು ಯಕ್ಷಗಾನ ಕ್ಷೇತ್ರಕ್ಕೆ ಬಂದು ರಂಜಿಸುತ್ತಿದ್ದ ಕಾಲ. ಕೊಳ್ತಿಗೆಯವರೂ ಅಂತಹ ವೇಷಗಳತ್ತ ಆಕರ್ಷಿತರಾಗಿದ್ದರು. ವೇಷ ಕಟ್ಟುವುದರಿಂದ ತೊಡಗಿ, ಪಾತ್ರನಿರ್ವಹಣೆಯ ವರೆಗೆ, ಆ ವಿಚಾರದಲ್ಲಿ ಅನುಭವಗಳನ್ನು ಗಳಿಸಿ ಕಂಸ, ಕಂಹಾಸುರ, ಹಿರಣ್ಯಕಶ್ಯಪ, ಭಸ್ಮಾಸುರ, ರಾವಣ ಮೊದಲಾದ ವೇಷಗಳನ್ನು ಮಾಡಿದರು. ಅತಿಕಾಯ, ತಾಮ್ರಧ್ವಜ, ಇಂದ್ರಜಿತು, ಶಿಶುಪಾಲ ಮೊದಲಾದ ಕಿರೀಟ ವೇಷಗಳನ್ನೂ ಮಾಡಿದರು. ಅಗರಿ ಭಾಗವತರ ಸಮರ್ಥ ನಿರ್ದೇಶನವೂ ಕೊಳ್ತಿಗೆ ಅವರಿಗೆ ಸಿಕ್ಕಿತ್ತು. ಪ್ರತಿ ವೇಷಕ್ಕೂ ಮಲ್ಪೆ ಶಂಕರನಾರಾಯಣ ಸಾಮಗರು ಸಂಭಾಷಣೆಗಳನ್ನು ಹೇಳಿಕೊಡುವುದರ ಜತೆಗೆ, ತಪ್ಪಿದರೆ ತಿದ್ದಿ ಮುನ್ನಡೆಸಿದ್ದರು.

‘‘ದೊಡ್ಡ ಸಾಮಗರು ಕೇಳಿದವರಿಗೆ ಪ್ರೀತಿಯಿಂದ ಹೇಳಿಕೊಡುತ್ತಾರೆ. ಕಲಿಕಾಸಕ್ತ ಕಲಾವಿದರನ್ನು ಪ್ರೀತಿಸುತ್ತಾರೆ. ಸಂತೆಯಲ್ಲಿ ಭಗವದ್ಗೀತೆ ಓದಬಾರದು. ಅಯೋಗ್ಯರಲ್ಲಿ ಸಂಭಾಷಿಸಬಾರದು. ಗಂಧ ಮಾರುವವನ ಜತೆ ಹೊಡೆದಾಡಿದರೂ ಗೊಬ್ಬರ ಮಾರುವವನನ್ನು ಅಪ್ಪಬಾರದು ಎಂಬ ಮಾತುಗಳನ್ನು ಹೇಳುತ್ತಿದ್ದರು ಮತ್ತು ತಮ್ಮ ಬದುಕಿನಲ್ಲೂ ಅದನ್ನು ಅಳವಡಿಸಿಕೊಂಡಿದ್ದರು. ಅವರ ಒಡನಾಟವು ಮರೆಯಲಾಗದ ಅನುಭವ. ಅವರಿಂದಾಗಿ ನಾನು ತಪ್ಪುಗಳನ್ನು ತಿದ್ದಿಕೊಂಡು ಸ್ವಲ್ಪವಾದರೂ ಕಲಿತೆ. ಸಾಗರವು ಜಲನಿಧಿ ಎಂದೇ ಪ್ರಸಿದ್ಧ. ನಾವು ಕೊಂಡುಹೋದ ಪಾತ್ರೆಯ ಅಳತೆಯಷ್ಟೇ ನೀರು ನಮಗೆ ದೊರೆಯುತ್ತದೆ.’’ ಇದು ದೊಡ್ಡ ಸಾಮಗರಿಗೆ ಕೊಳ್ತಿಗೆಯವರು ಅರ್ಪಿಸುವ ನುಡಿನಮನಗಳು.

ಕೊಲ್ಲೂರು ಮೇಳ ತಿರುಗಾಟ ನಿಲ್ಲಿಸಿದ ಬಳಿಕ ಕಲ್ಲಾಡಿ ಶ್ರೀ ವಿಠಲ ಶೆಟ್ಟರ ಕರ್ನಾಟಕ ಮೇಳದಲ್ಲಿ 2 ವರ್ಷಗಳ ತಿರುಗಾಟ. ಬಳಿಕ ಕದ್ರಿ, ಬಪ್ಪನಾಡು, ಪೆರ್ಡೂರು ಮತ್ತು ಉಪ್ಪಳ ಮೇಳಗಳಲ್ಲಿ ಕಲಾಸೇವೆ. ಮತ್ತೆ ಕಲ್ಲಾಡಿ ಶ್ರೀ ದೇವೀಪ್ರಸಾದ ಶೆಟ್ಟರ ಕರ್ನಾಟಕ ಮೇಳದಲ್ಲಿ ತಿರುಗಾಟ. ಈ ಸಂದರ್ಭದಲ್ಲಿ ಮಾನಿಷಾದ ಪ್ರಸಂಗದ ಶತ್ರುಘ್ನನ ಪಾತ್ರ ಕೊಳ್ತಿಗೆಯವರಿಗೆ ಒಳ್ಳೆಯ ಹೆಸರನ್ನು ನೀಡಿತ್ತು. 1982ರಲ್ಲಿ ಪೆರ್ಲಂಪಾಡಿ ಆನಡ್ಕದ ಶ್ರೀ ಪೆರ್ಗಡೆ ಗೌಡ ಮತ್ತು ಅಕ್ಕಯ್ಯ ದಂಪತಿಗಳ ಪುತ್ರಿ ದೇವಕಿ ಅವರ ಜತೆ ವಿವಾಹ.

ಸುಮಾರು ಮೂವತ್ತೇಳು ವರ್ಷಗಳಿಂದ ಬೆಳ್ತಂಗಡಿ ತಾಲೂಕಿನಲ್ಲಿ ವಾಸಿಸುತ್ತಿದ್ದಾರೆ. ಕೊಳ್ತಿಗೆಯವರು ತಾವು ಕಲಾವಿದನಾಗಿ ಬೆಳೆದು ಬಂದ ದಾರಿಯನ್ನು ಆಗಾಗ ನೆನಪಿಸುತ್ತಾರೆ. ಪೆರ್ಲಂಪಾಡಿಯಲ್ಲಿ ನಡೆದ ದಕ್ಷಯಜ್ಞ ಪ್ರಸಂಗ. ಇವರದು ವೀರಭದ್ರನ ಪಾತ್ರ. ನಿನಗದನ್ನು ನಿರ್ವಹಿಸಲು ಸಾಧ್ಯವಾಗದು. ನಿನಗೆ ಅಲ್ಲಿಯವರೆಗೆ ಬೆಳೆಯಲು ಸಾಧ್ಯವಿಲ್ಲ ಎಂದು ಹೇಳಿ ಕೆಲವರು ಉತ್ಸಾಹ ಭಂಗವೆಸಗಿದ್ದರು. ಇವನನ್ನು ನಮ್ಮವನೆಂದು ಹೇಳಲು ನಾಚಿಕೆಯಾಗುತ್ತದೆ ಎಂದು ಹೇಳಿದವರೂ ಇದ್ದರಂತೆ. ‘‘ಈ ಕೆರಳಿಕೆಯ ಟೀಕೆಗಳು ನನಗೆ ಕಲಿಯುವುದಕ್ಕೆ ಪ್ರೇರಣೆಯನ್ನು ನೀಡಿತು. ಕಲಾಭಿಮಾನಿಗಳು ಗುರುತಿಸಿದ್ದಾರೆ ಎಂಬ ಸಮಾಧಾನವಿದೆ.’’ ಇದು ಕೊಳ್ತಿಗೆಯವರ ಅಂತರಂಗದ ಮಾತುಗಳು.

ಕಲಾಬದುಕಿನಲ್ಲಿ ಹಿರಿಯ ಮತ್ತು ಕಿರಿಯ ಕಲಾವಿದರು ಸೇರಿ ಸುಮಾರು 300ಕ್ಕಿಂತಲೂ ಹೆಚ್ಚು ಕಲಾವಿದರುಗಳು ಕೊಳ್ತಿಗೆಯವರಿಗೆ ಒಡನಾಡಿಗಳಾಗಿ ಒದಗಿದ್ದಾರೆ. ಹಿರಣ್ಯಕಶ್ಯಪ, ರಕ್ತಬೀಜ, ರಾವಣ, ಅತಿಕಾಯ, ಇಂದ್ರಜಿತು, ಕಂಡಾಸುರ, ಕಂಸ, ವಾಲಿ, ಕರ್ಣ, ಅರ್ಜುನ, ಶತ್ರುಘ್ನ, ದಾರಿಕಾಸುರ, ಕಾರ್ತವೀರ್ಯ, ಜಮದಗ್ನಿ, ಕೌರವ, ಭೀಮ, ಭೀಷ್ಮ, ಸಾಲ್ವ, ಶಕುನಿ, ಬಪ್ಪಬ್ಯಾರಿ ಮೊದಲಾದ ಪುರಾಣ ಪ್ರಸಂಗಗಳ ಪಾತ್ರಗಳು, ಬಿರುಮಾಳ್ವ, ಕೊಡ್ಸರಾಳ್ವ, ಬುದ್ಧಿವಂತ, ಕೋಟಿ-ಚೆನ್ನಯ, ಚಂದುಗಿಡಿ, ಬಲಾಂಡಿ, ಭೈರವರಸ, ಬಬ್ಬು ಮೊದಲಾದ ತುಳು ಪ್ರಸಂಗಗಳ ಪಾತ್ರಗಳಲ್ಲಿ ಅಭಿನಯಿಸಿ ಕಾಣಿಸಿಕೊಂಡರು. ಅಲ್ಲದೆ ಕೊಳ್ತಿಗೆಯವರು ಮಂಗಳೂರು ಆಕಾಶವಾಣಿಯ ‘ಎ ಗ್ರೇಡ್’ ಗ್ರೂಪಿನ ಕಲಾವಿದ. ‘ಯಕ್ಷಪಯಣ’ ಎಂಬ ಆತ್ಮಕಥನವನ್ನೂ ಬರೆದಿರುತ್ತಾರೆ.

ತಾಳಮದ್ದಳೆಯಲ್ಲೂ ಭಾಗವಹಿಸುತ್ತಾರೆ. ಧಾರ್ಮಿಕ ಪ್ರವಚನ ಮತ್ತು ಭಾಷಣವನ್ನೂ ಹವ್ಯಾಸವಾಗಿರಿಸಿಕೊಂಡಿದ್ದಾರೆ. ಸುಮಾರು ನೂರರ ಹತ್ತಿರ ಆಡಿಯೋ ಕ್ಯಾಸೆಟ್ ಮತ್ತು ಎಪ್ಪತ್ತರಷ್ಟು ವೀಡಿಯೋ ಕ್ಯಾಸೆಟ್‍ಗಳಲ್ಲಿ ಕಲಾವಿದನಾಗಿ ಭಾಗವಹಿಸಿದ್ದಾರೆ. ಸುಮಾರು ಇಪ್ಪತ್ತನಾಲ್ಕು ಪ್ರಶಸ್ತಿಗಳನ್ನು ಪಡೆದುದಲ್ಲದೆ ಇನ್ನೂರಕ್ಕೂ ಮಿಕ್ಕಿದ ಸನ್ಮಾನಗಳನ್ನೂ ಪಡೆದುಕೊಂಡಿದ್ದಾರೆ.

ಕಲಾಬದುಕಿನುದ್ದಕ್ಕೂ ಪತ್ನಿಮಕ್ಕಳ ಸಹಕಾರವಿತ್ತು. ಕೊಳ್ತಿಗೆ ನಾರಾಯಣ ಗೌಡ ಮತ್ತು ದೇವಕಿ ದಂಪತಿಗಳಿಗೆ ಮೂವರು ಮಕ್ಕಳು. ಹಿರಿಯ ಪುತ್ರ ಜಗದೀಪ್ ಡಿಪ್ಲೊಮಾ ಇಂಜಿನಿಯರ್. ಅರಬ್ ದೇಶದ ರಿಯಾದ್‍ನಲ್ಲಿ ಉದ್ಯೋಗಿ. ವಿವಾಹಿತ. ಪತ್ನಿ ಶ್ರೀಮತಿ ಮಮತಾ ಜಗದೀಪ್ ಇನ್ಫೋಸಿಸ್ ಉದ್ಯೋಗಸ್ಥೆ. ಕಿರಿಯ ಪುತ್ರ ಜಯದೀಪ್ ಮೈಸೂರಿನ CAVA ದಲ್ಲಿ ಕಲಿತು (BFA) ಬೆಂಗಳೂರಿನಲ್ಲಿ ಉದ್ಯೋಗಿ. ಪುತ್ರಿ ದೀಪ್ತಿ ವಿವಾಹಿತೆ. ಇವರ ಪತಿ ಅಜೇಯಪ್ರಭು ಸ್ವಂತ ಉದ್ದಿಮೆಯನ್ನು ನಡೆಸುತ್ತಿದ್ದಾರೆ.

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ