ಎಸ್. ಪಿ. ಬಾಲಸುಬ್ರಹ್ಮಣ್ಯಂ ಸರಳತೆಗೆ ಮತ್ತು ಅವರು ಹಿರಿಯರನ್ನು ಗೌರವಿಸುವ ರೀತಿಯನ್ನು ಮಾತಿನಲ್ಲಿ, ಬರಹದಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಅವರು ಎಲ್ಲದಕ್ಕೂ ನಮಗೆ ಆದರ್ಶ ಮತ್ತು ಪೂಜನೀಯ ವ್ಯಕ್ತಿ. ಹಿರಿಯ ಗಾಯಕರಾದ ಕೆ.ಜೆ. ಯೇಸುದಾಸ್ ಬಗ್ಗೆ ಅವರ ಭಕ್ತಿ ಭಾವಗಳು ಅನುಕರಣೀಯ.
‘ಮನಸಿಜ ಪಿತ ನೀನು’ – ಯಕ್ಷಗಾನ ವೀಡಿಯೊ
ಮಧುಸೂದನ ಅಲೆವೂರಾಯರ ಯು ಟ್ಯೂಬ್ ಚಾನೆಲ್ ನ ಈ ವಿಡಿಯೋ ಬಹಳವಾಗಿ ಇಷ್ಟವಾಗುತ್ತದೆ. ಯಾಕೆಂದರೆ ಬಲಿಪರ ಸುಂದರ ಪದ್ಯಕ್ಕೆ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಮದ್ದಳೆಯ ಕೈಚಳಕದ ಜೊತೆ ಸೇರಿದಾಗ ಅದೊಂದು ಅಪೂರ್ವ ಅನುಭವ.
ನಾಸಾಚ್ಛೇದ – ಸುರತ್ಕಲ್ಲಿನಲ್ಲಿ ತಾಳಮದ್ದಳೆ
ಮಂಗಳೂರಿನ ಸುರತ್ಕಲ್ ಸಮೀಪದ ತಡಂಬೈಲ್ ಎಂಬಲ್ಲಿ ನಾಸಾಚ್ಛೇದ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ತಡಂಬೈಲ್ ಶ್ರೀ ವಾಸುದೇವ ರಾವ್ ಅವರ ಮನೆಯಲ್ಲಿ ದಿನಾಂಕ 28.09.2020 ನೇ ಸೋಮವಾರದಂದು ಅಪರಾಹ್ನ 2.30 ಘಂಟೆಗೆ ಸರಿಯಾಗಿ ತಾಳಮದ್ದಳೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಪ್ರಖ್ಯಾತ ಭಾಗವತ ಶ್ರೀ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು ಅಸ್ತಂಗತ
ಯಕ್ಷಗಾನ ರಂಗದ ಹಿರಿಯ ಕಲಾವಿದ ಭಾಗವತಿಕೆಯಲ್ಲಿ ತನ್ನದೇ ವಿಶಿಷ್ಟ ಶೈಲಿಯಿಂದ ಜನಮಾನಸದಲ್ಲಿ ಅದ್ವಿತೀಯ ಸ್ಥಾನವನ್ನು ಗಳಿಸಿಕೊಂಡಿದ್ದ ತೆಂಕುತಿಟ್ಟಿನ ಪ್ರಸಿದ್ಧ ಭಾಗವತರಾದ ಶ್ರೀ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು ನಿಧನ ಹೊಂದಿದ್ದಾರೆ. ಯಕ್ಷಗಾನದ ಹೆಚ್ಚಿನೆಲ್ಲಾ ಪದ್ಯಗಳನ್ನು ಕಂಠಪಾಠದಿಂದ ಪುಸ್ತಕ ನೋಡದೆ ಆಟ ಆಡಿಸಬಲ್ಲವರಾಗಿದ್ದ ಶಾಸ್ತ್ರಿಗಳು ಇಂದು ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು.

ಅಗರಿ ಶೈಲಿಯಲ್ಲಿ ಸಮರ್ಥವಾಗಿ ಹಾಡಬಲ್ಲವರಲ್ಲಿ ಮೊದಲನೆಯ ಸಾಲಿನಲ್ಲಿದ್ದ ತೆಂಕಬೈಲು ಶಾಸ್ತ್ರಿಗಳು ಧರ್ಮಸ್ಥಳ ಲಲಿತ ಕಲಾ ಕೇಂದ್ರದಲ್ಲಿ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದರು. ಕೆಲವು ಪ್ರಸಂಗಗಳು ವರ್ಷದಲ್ಲಿ ಒಂದು ಬಾರಿಯೂ ಪ್ರದರ್ಶನ ಕಾಣದೆ ಇರಬಹುದು. ಆದುದರಿಂದ ಪದ್ಯಗಳು ಭಾಗವತನೊಬ್ಬನಿಗೆ ಕಂಠಪಾಠವಾಗಿದೆ ಎಂದರೆ ಅದು ಅವರ ಅದ್ಭುತ ಸಾಧನೆಯೇ ಸರಿ. ಕೆಲವು ದಶಕಗಳ ಕಾಲ ಮೇಳದ ತಿರುಗಾಟ ಮಾಡಿದ ಭಾಗವತರಿಗೆ ಪದ್ಯ ಬಾಯಿಪಾಠ ಬರುವುದು ಕಷ್ಟಸಾಧ್ಯವಾದ ಈ ಕಾಲದಲ್ಲಿಯೂ ತನ್ನ ವೃತ್ತಿಜೀವನದ ಆರಂಭದ ದಿನಗಳಲ್ಲಿಯೂ ಪದ್ಯವನ್ನು ಕಂಠಪಾಠ ಮಾಡಿಯೇ ರಂಗವೇರುತ್ತಿದ್ದ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು ಒಂದು ಅಚ್ಚರಿಯಾಗಿ ಕಾಣುತ್ತಾರೆ. ಹಾಗೆ ನೋಡಿದರೆ ಖ್ಯಾತ ಭಾಗವತ ಶ್ರೀ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು ಭಾಗವತಿಕೆಯ ಶೈಲಿಯಲ್ಲಿಯೂ ಇತರರಿಗಿಂತ ಭಿನ್ನವೇ. ಯಾರನ್ನೂ ಅನುಕರಿಸದೆ ತನ್ನತನವನ್ನು ರಂಗದಲ್ಲಿ ಮೆರೆದವರು. ಅಪೂರ್ವವಾದ ಶಾರೀರ, ಸ್ವರಗಳ ಏರಿಳಿತಗಳಿಂದ ಪ್ರೇಕ್ಷಕರನ್ನು ಆರಂಭದಲ್ಲಿಯೇ ಹಿಡಿದಿಟ್ಟುಕೊಳ್ಳುತ್ತಾರೆ. ಏನೋ ಒಂದು ವಿಶಿಷ್ಟ ಆಕರ್ಷಣೆಯಿದೆ ಆ ಸ್ವರಭಾರದಲ್ಲಿ. ಮೊದಲ ಪದ್ಯದಿಂದಲೇ ಪ್ರೇಕ್ಷಕರ ಮನಸ್ಸನ್ನು ಆಕ್ರಮಿಸಿಬಿಡುತ್ತಾರೆ. ಮೊದಲ ಓವರಿನಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸುವ ಆಟಗಾರನ ಹಾಗೆ ನಮ್ಮ ಭಾಗವತರೂ ಕೂಡಾ. ಶಾಸ್ತ್ರಿಗಳದು ವಿಶಿಷ್ಟ ಶೈಲಿ. ಆದರದು ಜನಪ್ರಿಯ. ಜನಮಾನಸದಲ್ಲಿ ನಿಂದ ಸ್ವರಮಾಧುರ್ಯ. ಘಂಟೆಗೆ ಬಡಿದ ಶಬ್ದದ ಹಾಗೆ ಮನಸಿನ ಅಂಗಳದಲ್ಲಿ ಮಾರ್ದನಿಸುತ್ತದೆ. ಒಮ್ಮೆ ಕೇಳಿದರೆ ಮತ್ತೊಮ್ಮೆ ಕೇಳಬೇಕೆನ್ನುವ ಮತ್ತೊಮ್ಮೆ ಕೇಳಿದರೆ ಮಗದೊಮ್ಮೆ ಆಲಿಸಬೇಕೆನ್ನುವ ಮಧುರ ನಿನಾದ. ಅವರ ಸ್ವರದ ಇಂಪಿಗೆ ಮಾರುಹೋದ ಯಕ್ಷಗಾನದ ಪ್ರಜ್ಞಾವಂತ ಪ್ರೇಕ್ಷಕರು ಹೀಗಂದುಕೊಂಡರೆ ಅದರಲ್ಲಿ ಉತ್ಪ್ರೇಕ್ಷೆಯೇನೂ ಇರಲಾರದು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ತಾಲೂಕಿನ ಕರೋಪಾಡಿಯಲ್ಲಿ, ತೆಂಕಬೈಲು ಕೃಷ್ಣ ಶಾಸ್ತ್ರಿ ಮತ್ತು ಸಾವಿತ್ರಿಯಮ್ಮ ದಂಪತಿಗೆ ಮಗನಾಗಿ ಜನಿಸಿದ್ದು 1944ರಲ್ಲಿ . ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದ್ದರಿಂದ ವೇದಾಧ್ಯಯನವನ್ನೂ ಕೈಗೊಂಡರು. ವಿದ್ಯಾಭ್ಯಾಸ 8ನೇ ತರಗತಿಗೆ ಅನಿವಾರ್ಯವಾಗಿ ಮೊಟಕುಗೊಂಡರೂ ಆಮೇಲೆ ವೇದ ಮತ್ತು ಕಲೆಯ ಕಲಿಕೆಯಲ್ಲಿ ತೊಡಗಿಸಿಕೊಂಡರು. ಕಲಾವಿದರಿದ್ದ ಹಾಗೂ ಕಲೆಯ ಹಿನ್ನೆಲೆ, ವಾಸನೆಗಳಿದ್ದ ಮನೆತನದಲ್ಲಿ ಹುಟ್ಟಿದುದು ಶಾಸ್ತ್ರಿಗಳಿಗೆ ಕಲಾವಿದನಾಗಿ ಬೆಳೆಯಲು ಧನಾತ್ಮಕ ವಾತಾವರಣವನ್ನು ನಿರ್ಮಿಸಿಕೊಟ್ಟಿತ್ತು. ಈ ಅನುಕೂಲತೆಗಳನ್ನು ಸಮರ್ಥವಾಗಿ ಉಪಯೋಗಿಸಿಕೊಂಡ ಅವರು ಯಕ್ಷಗಾನ ಕಲೆಯಲ್ಲಿ ಹಾಗೂ ಅದರ ಕಲಿಕೆಯಲ್ಲಿ ತನ್ನನ್ನುತಾನು ಆಳವಾಗಿ ತೊಡಗಿಸಿಕೊಂಡರು. ಇವರಿಗೆ ಶಾಸ್ತ್ರೀಯ ಸಂಗೀತದ ಪಾಠ ಬಜಕ್ಕಳ ಗಣಪತಿ ಭಟ್ಟರಿಂದ ಆಗಿತ್ತು. ಆಮೇಲೆ ಮಾಂಬಾಡಿ ನಾರಾಯಣ ಭಾಗವತರಿಂದ ಭಾಗವತಿಕೆಯನ್ನು ಅಭ್ಯಾಸ ಮಾಡಿದ್ದರು. ಜೊತೆ ಜೊತೆಯಲ್ಲಿ ವೇದಾಧ್ಯಯನವನ್ನೂ ಮಾಡಿದ್ದರಿಂದ ಶಾಸ್ತ್ರಿಗಳು ಪೌರೋಹಿತ್ಯ ವೃತ್ತಿಯಲ್ಲಿಯೂ ಅರೆಕಾಲಿಕವಾಗಿ ತೊಡಗಿಸಿಕೊಂಡಿದ್ದರು. ಮೊದಲಿಗೆ ಕೈರಂಗಳ ಗೋಪಾಲಕೃಷ್ಣ ಯಕ್ಷಗಾನ ಮಂಡಳಿಯಲ್ಲಿ ಭಾಗವತಿಕೆಯ ಸ್ಥಾನಕ್ಕೇರಿದ ಶಾಸ್ತ್ರಿಗಳು ಹಂತ ಹಂತವಾಗಿ ಬೆಳೆದು ಆ ಸ್ಥಾನಕ್ಕೊಬ್ಬ ಸಮರ್ಥ ಸ್ಥಾನಾರ್ಥಿಯಾಗಿ ಬೆಳೆದರು. ವಿವಿಧ ಮೇಳಗಳಲ್ಲಿ ವೃತ್ತಿಪರನಾಗಿ ತಿರುಗಾಟವನ್ನು ಮಾಡುತ್ತಾ ಅದರ ಜೊತೆಯಲ್ಲಿಯೇ ಪೌರೋಹಿತ್ಯವನ್ನು ಮಾಡುತ್ತಿದ್ದವರು ಮೇಳ ಬಿಟ್ಟ ನಂತರದ ದಿನಗಳಲ್ಲಿ ಹವ್ಯಾಸಿ ಭಾಗವತನಾಗಿದ್ದುದರ ಜೊತೆಗೆ ಪರೋಹಿತ ವೃತ್ತಿಯನ್ನೂ ಮುಂದುವರಿಸಿದ್ದರು. ಶಾಸ್ತ್ರಿಗಳು ತನ್ನ ಸೋದರ ಮಾವ ನಾರಾಯಣ ಭಟ್ಟರಿಂದ ಮೊದಲು ಮದ್ದಳೆಯ ಅಭ್ಯಾಸವನ್ನು ಮಾಡಿದ್ದರೂ ಆಮೇಲೆ ಭಾಗವತಿಕೆ ಕಲಿಯುವುದಕ್ಕೆ ಮನ ಮಾಡಿದರು. ಹಲವಾರು ಮೇಳಗಳ ತಿರುಗಾಟಗಳನ್ನು ಮಾಡಿದ ಶಾಸ್ತ್ರಿಯವರು ಪೌರಾಣಿಕ ಪ್ರಸಂಗಗಳನ್ನು ಆಡಿಸುವುದರಲ್ಲಿ ಸಿದ್ಧಹಸ್ತರಾಗಿದ್ದರು. ಇರಾ, ಮಲ್ಲ, ಕುಂಟಾರು, ಬಪ್ಪನಾಡು, ಮಧೂರು, ಮೊದಲಾದ ಮೇಳಗಳಲ್ಲಿ ತಿರುಗಾಟ ನಡೆಸಿದ ಇವರು ವೃತ್ತಿಪರ ಭಾಗವತರಾಗಿ ಸುಮಾರು 20 ವರ್ಷ ತಿರುಗಾಟ ನಡೆಸಿದ್ದರು. ಶಾಸ್ತ್ರಿಗಳು ಯಕ್ಷಗಾನ ಹಿಮ್ಮೇಳದ ಸರ್ವ ಅಂಗಗಳನ್ನೂ ಬಲ್ಲವರು. ಉತ್ತಮ ಚೆಂಡೆ ಮತ್ತು ಮದ್ದಳೆವಾದಕರೂ ಹೌದು. ಹಲವಾರು ಕಡೆ ಭಾಗವತಿಕೆಯ ತರಗತಿಗಳನ್ನು ಮಾಡಿ ಹಲವಾರು ಶಿಷ್ಯಂದಿರನ್ನು ಸಂಪಾದಿಸಿದ್ದಾರೆ. ಯಾವುದೇ ಪ್ರಸಂಗವನ್ನು ಆಡಿಸುವುದಾದರೂ ತಿರುಮಲೇಶ್ವರ ಶಾಸ್ತ್ರಿಗಳು ಪದ್ಯವನ್ನು ಕಂಠಪಾಠ ಮಾಡಿಯೇ ಭಾಗವತಿಕೆಗೆ ಸಿದ್ಧರಾಗುತ್ತಿದ್ದರು. ಇದು ಶಾಸ್ತ್ರಿಗಳ ವಿಶೇಷತೆ. ಹಾಗೂ ಎಲ್ಲಾ ಭಾಗವತರಲ್ಲಿಯೂ ಇರಬೇಕಾದ ಲಕ್ಷಣ. 76 ವರ್ಷ ಕಾಲ ಬದುಕಿದ ಶಾಸ್ತ್ರಿಗಳಿಗೆ 54 ವರ್ಷಗಳ ಯಕ್ಷಗಾನ ಕಲಾ ವ್ಯವಸಾಯ ಮಾಡಿದ ಅನುಭವವಿತ್ತು. ಮಾತ್ರವಲ್ಲದೆ ಮೇಳದಲ್ಲಿ ಸುಮಾರು 20ಕ್ಕೂ ಹೆಚ್ಚು ವರ್ಷಗಳ ಕಾಲ ತಿರುಗಾಟ ಮಾಡಿದ್ದರು. ಆಮೇಲೆ ಮೇಳದ ತಿರುಗಾಟದಿಂದ ವಿಮುಖರಾಗಿ ಹವ್ಯಾಸೀ ಕಲಾವಿದರಾಗಿ ತನ್ನ ತಿರುಗಾಟವನ್ನು ಮುಂದುವರಿಸಿದ್ದರು. ಜೊತೆಗೆ ಪೌರೋಹಿತ್ಯ ವೃತ್ತಿಯನ್ನೂ ಕಸುಬಾಗಿಸಿಕೊಂಡಿದ್ದರು. ಯಾವುದೇ ಪೌರಾಣಿಕ ಪ್ರಸಂಗಗಳನ್ನು ಸುಲಭವಾಗಿ ಪ್ರದರ್ಶನಕ್ಕೆ ಒಗ್ಗುವಂತೆ ಮಾಡಬಲ್ಲ ಶಾಸ್ತ್ರಿಗಳು ಯಕ್ಷಗಾನ ರಂಗಕ್ಕೆ ಸಂಪನ್ಮೂಲ ವ್ಯಕ್ತಿಯಾಗಿದ್ದವರು.
ಯಕ್ಷಗಾನ ಕಲಾರಂಗದ, ಪಡಾರು ನರಸಿಂಗ ಶಾಸ್ತ್ರಿ ಪ್ರಶಸ್ತಿ, ಗಡಿನಾಡ ಉತ್ಸವ ಪ್ರಶಸ್ತಿ, ಪಟ್ಟಾಜೆ ಪ್ರಶಸ್ತಿ, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ದಿವಾಣ ಪ್ರಶಸ್ತಿ, ಕುರಿಯ ವಿಠಲ ಶಾಸ್ತ್ರಿ ಪ್ರಶಸ್ತಿ, ಸಂಪಾಜೆ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಪ್ರಶಸ್ತಿ, ಸೂಡ ಸುಬ್ರಹ್ಮಣ್ಯ ಯಕ್ಷ ಕಲಾಭಾರತಿಯ ತುಳುನಾಡ ಸಿರಿ ಪ್ರಶಸ್ತಿ, ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನದ ಸನ್ಮಾನ ಹೀಗೆ ಹಲವಾರು ಸನ್ಮಾನ ಪ್ರಶಸ್ತಿಗಳು ಶಾಸ್ತ್ರಿಗಳನ್ನು ಅರಸಿ ಬಂದಿವೆ. ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು ತಮ್ಮ ಪತ್ನಿ, ಪುತ್ರ ಯಕ್ಷಗಾನ ಭಾಗವತ ತೆಂಕಬೈಲು ಮುರಳಿಕೃಷ್ಣ ಶಾಸ್ತ್ರೀ, ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಮಗ ಮುರಳಿಕೃಷ್ಣ ಶಾಸ್ತ್ರಿಯವರು ಉತ್ತಮ ಭಾಗವತರು ಹಾಗೂ ತಂದೆಯಂತೆ ಕಲಾಸಾಮರ್ಥ್ಯವಿರುವ ಭಾಗವತರು. ಅವರ ಕುಟುಂಬಕ್ಕೆ ಹಾಗೂ ಸಮಸ್ತ ಯಕ್ಷಗಾನ ಕಲಾಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಆ ಭಗವಂತನು ದಯಪಾಲಿಸಲಿ.
ಭಾಗವತ ಹಂಸ – ಶ್ರೀ ಪುತ್ತಿಗೆ ರಘುರಾಮ ಹೊಳ್ಳ
ತೆಂಕುತಿಟ್ಟಿನ ಖ್ಯಾತ, ಅಗ್ರಮಾನ್ಯ ಭಾಗವತರುಗಳಲ್ಲಿ ಪುತ್ತಿಗೆ ಶ್ರೀ ರಘುರಾಮ ಹೊಳ್ಳರೂ ಒಬ್ಬರು. ಪದವೀಧರರಾದ ಇವರು ಯಕ್ಷಗಾನ ಪ್ರಪಂಚದಲ್ಲೂ ಉನ್ನತ ಪದವಿಯನ್ನು ಹೊಂದಿ ಕಲಾಭಿಮಾನಿಗಳನ್ನು ರಂಜಿಸುತ್ತಿರುವುದು ಸಂತೋಷದ ವಿಚಾರ. ಪುತ್ತಿಗೆ ರಘುರಾಮ ಹೊಳ್ಳರ ತೀರ್ಥರೂಪರು ಪುತ್ತಿಗೆ ಶ್ರೀ ರಾಮಕೃಷ್ಣ ಜೋಯಿಸರು ಶ್ರೀ ಧರ್ಮಸ್ಥಳ ಮೇಳವನ್ನು ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳ ನಿರ್ದೇಶನದಲ್ಲಿ ನಾಲ್ಕು ವರ್ಷಗಳ ಕಾಲ ನಡೆಸಿದವರು. ತೀರ್ಥರೂಪರು ಮುನ್ನಡೆಸಿದ ಪ್ರಸಿದ್ಧ ಮೇಳದಲ್ಲಿ ಪ್ರಧಾನ ಭಾಗವತರಾಗಿ ವ್ಯವಸಾಯ ಮಾಡುವ ಅವಕಾಶವು ದೊರೆತ ಪುತ್ತಿಗೆ ರಘುರಾಮ ಹೊಳ್ಳರು ನಿಜಕ್ಕೂ ಭಾಗ್ಯವಂತರು.
ಕದ್ರಿ ಮೇಳದಲ್ಲಿ ಶ್ರೀ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರ ಒಡನಾಟ, ಶ್ರೀ ಧರ್ಮಸ್ಥಳ ಮೇಳದಲ್ಲಿ ಕಡತೋಕ ಮಂಜುನಾಥ ಭಾಗವತರ, ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಹಾಗೂ ಹಿರಿಯ ಕಲಾವಿದರ ಒಡನಾಟವು ನನಗೆ ಬೆಳೆದು ಕಾಣಿಸಿಕೊಳ್ಳಲು ಅವಕಾಶವಾಗಿತ್ತು ಎಂಬ ವಿಚಾರವನ್ನು ಶ್ರೀ ಹೊಳ್ಳರು ಪ್ರಾಮಾಣಿಕರಾಗಿ ಒಪ್ಪಿಕೊಳ್ಳುತ್ತಾರೆ. ಯಕ್ಷ ಭಾಗವತ ಹಂಸ ಶ್ರೀ ಪುತ್ತಿಗೆ ರಘುರಾಮ ಹೊಳ್ಳರ ಹುಟ್ಟೂರಿನ ಬಗೆಗೆ ಕಲಾಭಿಮಾನಿಗಳು ಪ್ರಶ್ನಿಸುವುದುಂಟು. ಒಂದೇ ಹೆಸರಿನ ಊರುಗಳು ಹಲವು ಇದ್ದಾಗ ಆಗುವ, ಹುಟ್ಟಿಕೊಳ್ಳುವ ಸಂಶಯ ಇದು. ಕಾಸರಗೋಡು ಪ್ರದೇಶದ ಕುಂಬಳೆ ಸಮೀಪದ ಪುತ್ತಿಗೆಯೇ ಭಾಗವತರ ಹಿರಿಯರೆಲ್ಲಾ ವಾಸಿಸಿದ್ದ ಊರು. ಇವರು ಜ್ಯೋತಿಷ್ಯ ಮನೆತನದವರು. ಶ್ರೀ ರಘುರಾಮ ಹೊಳ್ಳರ ತೀರ್ಥರೂಪರು ತೆಂಕುತಿಟ್ಟಿನ ಖ್ಯಾತ ಭಾಗವತರು. ಪುತ್ತಿಗೆ ಜೋಯಿಸರೆಂದೇ ಅವರನ್ನು ಕಲಾಭಿಮಾನಿಗಳು ಗುರುತಿಸಿದ್ದರು. ಶ್ರೀಯುತರ ಮನೆ ಪುತ್ತಿಗೆಯಲ್ಲಿದ್ದುದು.
ಬಳಿಕ ಅವರು ಬೋವಿಕ್ಕಾನ ಎಂಬಲ್ಲಿ ನೆಲೆಸಿದ್ದರು. ಇದು ಕಾಸರಗೋಡು ಮತ್ತು ಮುಳ್ಳೇರಿಯಗಳ ಮಧ್ಯೆ ಸಿಗುವ ಸ್ಥಳ. ಪುತಿಗೆ ರಾಮಕೃಷ್ಣ ಜೋಯಿಸ ಮತ್ತು ಲಕ್ಷ್ಮಿ ಅಮ್ಮ ದಂಪತಿಗಳ ಪುತ್ರನಾಗಿ ರಘುರಾಮ ಹೊಳ್ಳರು ಈ ಲೋಕದ ಬೆಳಕನ್ನು ಕಂಡವರು. ಪ್ರಾಥಮಿಕ ವಿದ್ಯಾಭ್ಯಾಸ ಬೋವಿಕ್ಕಾನ ಶಾಲೆಯಲ್ಲಿ. ಹೈಸ್ಕೂಲ್ ವಿದ್ಯಾಭ್ಯಾಸ ಎಡನೀರು ಸ್ವಾಮೀಜಿಸ್ ಹೈಸ್ಕೂಲಿನಲ್ಲಿ. ಎಳವೆಯಲ್ಲಿ ಶ್ರೀ ಹೊಳ್ಳರು ಕರ್ನಾಟಕ ಶಾಸ್ತ್ರೀಯ ಸಂಗೀತಾಸಕ್ತರಾಗಿದ್ದರು. ಶ್ರೀಕೃಷ್ಣ ಶರ್ಮ ಎಂಬವರಿಂದ ಸಂಗೀತ ಕಲಿತಿದ್ದರು. ಮುಂದುವರಿಸಲು ಅನಾನುಕೂಲವಾದರೂ ಯಕ್ಷಗಾನ ಭಾಗವತಿಕೆಗೆ ಇದರಿಂದ ಅನುಕೂಲವಾಗಿತ್ತು. ಬಾಲ್ಯದಲ್ಲಿ ಇವರು ಮೊದಲು ಕಲಿತುದು ಮದ್ದಳೆಗಾರಿಕೆಯನ್ನು.
ಮವ್ವಾರು ಕಿಟ್ಟಣ್ಣ ಭಾಗವತರು ಇವರ ಬೋವಿಕ್ಕಾನ ಮನೆಗೆ ಬಂದು ರಘುರಾಮ ಹೊಳ್ಳರ ಅಣ್ಣಂದಿರಾದ ಶ್ರೀ ಚಂದ್ರಶೇಖರ ಹೊಳ್ಳರಿಗೆ ಭಾಗವತಿಕೆಯನ್ನೂ ಶ್ರೀ ವಾಸುದೇವ ಹೊಳ್ಳರಿಗೆ ಚೆಂಡೆ, ಮದ್ದಳೆ ವಾದನವನ್ನೂ ಕಲಿಸುತ್ತಿದ್ದರು. ಮವ್ವಾರು ಕಿಟ್ಟಣ್ಣ ಭಾಗವತರಿಂದ ರಘುರಾಮ ಹೊಳ್ಳರು ಅಣ್ಣನ ಜತೆಯಲ್ಲಿಯೇ ಚೆಂಡೆ ಮದ್ದಳೆಗಾರಿಕೆಯನ್ನು ಅಭ್ಯಸಿಸಿದ್ದರು.
ಅಣ್ಣ ಚಂದ್ರಶೇಖರ ಹೊಳ್ಳರಿಗೆ ಕಿಟ್ಟಣ್ಣ ಭಾಗವತರು ಪಾಠ ಮಾಡುವುದನ್ನು ನೋಡಿ, ಕೇಳಿಯೇ ಭಾಗವತಿಕೆಯನ್ನು ಮನನ ಮಾಡಿಕೊಂಡಿದ್ದರು. ಭಾಗವತಿಕೆಯನ್ನು ಪ್ರತ್ಯಕ್ಷವಾಗಿ ಯಾರಿಂದಲೂ ಕಲಿತವರಲ್ಲ. ಆದರೂ ಯಕ್ಷಗಾನದ ಹಿಮ್ಮೇಳದ ಸರ್ವಾಂಗಗಳನ್ನೂ ತಿಳಿದು, ತೊಡಗಿಸಿಕೊಂಡು ಶ್ರೇಷ್ಠ ಭಾಗವತರಾಗಿ ಕಾಣಿಸಿಕೊಂಡದ್ದು ಒಂದು ಸಾಧನೆಯೇ ಹೌದು. ಆಸಕ್ತಿ, ಆಳವಾದ ಅಧ್ಯಯನ, ಅರ್ಪಣಾ ಭಾವಗಳೆಂಬ ಕ್ರಿಯೆಗಳು ಈ ಸಾಧನೆಯೊಳಗೆ ಅಡಗಿವೆ ಎಂಬುದಂತೂ ಸತ್ಯ. ಮಗನು ಯಕ್ಷಗಾನದ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳದೆ, ಶಿಕ್ಷಣವನ್ನು ಮುಂದುವರಿಸಿ, ಉನ್ನತ ಹುದ್ದೆಗೇರಬೇಕೆಂಬುದು ಪುತ್ತಿಗೆ ಶ್ರೀ ರಾಮಕೃಷ್ಣ ಜೋಯಿಸರ ಬಯಕೆಯಾಗಿತ್ತು. ಮಕ್ಕಳನ್ನು ಆದಷ್ಟು ಯಕ್ಷಗಾನದಿಂದ ದೂರವಿಡಲು ಪ್ರಯತ್ನಿಸುತ್ತಿದ್ದರಂತೆ. ಮಕ್ಕಳು ಕಷ್ಟ ಬರುವುದು ಬೇಡ ಎಂಬ ಸದುದ್ದೇಶವೇ ಇದಕ್ಕೆ ಕಾರಣವು. ಹಾಗಾಗಿಯೇ ಪಿಯುಸಿ ವಿದ್ಯಾರ್ಜನೆಗೆ ರಘುರಾಮ ಹೊಳ್ಳರನ್ನು ಧಾರವಾಡದ ಕಾಲೇಜಿಗೆ ಕಳುಹಿಸಿದ್ದರು.
ಆದರೂ ಪದವಿ ಶಿಕ್ಷಣಕ್ಕೆ ಮಂಗಳೂರಿಗೇ ಬರಬೇಕಾಯಿತು. ಬಹುಶಃ ಕಲಾಮಾತೆಯ ಸಂಕಲ್ಪವೇ ಹಾಗಿರಬೇಕು. ಶ್ರೇಷ್ಠ ಭಾಗವತನಾಗಿ ನನ್ನ ಸೇವೆಯನ್ನು ಮಾಡು ಎಂಬ ಆಕೆಯ ಅವ್ಯಕ್ತ ಆದೇಶವೇ ಇದಕ್ಕೆ ಕಾರಣವಿರಬಹುದು. ಮಂಗಳೂರಿಗೆ ಬಂದ ಮೇಲೆ ಮತ್ತೆ ಯಕ್ಷಗಾನದ ನಂಟು ಬೆಳೆಯಿತು. ಪ್ರದರ್ಶನಗಳನ್ನು ನೋಡುತ್ತಾ ಹಿರಿಯ ಭಾಗವತರುಗಳು ಆಟ ಆಡಿಸುವ ಕ್ರಮಗಳನ್ನು ನೋಡುತ್ತಾ ಅವನ್ನು ಗ್ರಹಿಸಿಕೊಂಡಿದ್ದರು. ಎಳವೆಯಲ್ಲೇ ತೀರ್ಥರೂಪರೊಂದಿಗೆ ಅವರ ಪದ್ಯಕ್ಕೆ ಮದ್ದಳೆಗಾರನಾಗಿ ಸಹಕರಿಸಿದ್ದೂ ಇದೆ.
ಇದರಿಂದ ಅನುಕೂಲವೇ ಆಗಿತ್ತು. ಪದವಿ ಶಿಕ್ಷಣವನ್ನು ಪೂರೈಸಿದರೂ ಆ ಕಾಲದಲ್ಲಿ ಉದ್ಯೋಗ ಸಿಗುವುದು ಅಷ್ಟು ಸುಲಭವಾಗಿರಲಿಲ್ಲ. ಆದುದರಿಂದ ಯಕ್ಷಗಾನ ಕ್ಷೇತ್ರದಲ್ಲಿಯೇ ತೊಡಗಿಸಿಕೊಳ್ಳುವ ನಿರ್ಧಾರ ಮಾಡಿದ್ದರು. ಜತೆಯಲ್ಲಿ ಕಲಾಸಕ್ತಿಯೂ ತೀವ್ರವಾಗಿ ಇತ್ತು ಅನ್ನಬಹುದು. ಮೇಳಕ್ಕೆ ಸೇರಿದರೂ ಶ್ರೀ ರಘುರಾಮ ಹೊಳ್ಳರು ‘ಯಕ್ಷಗಾನ ಬೇಡ, ಬೇರೇನಾದರೂ ಉದ್ಯೋಗ ಮಾಡೋಣ’ ಎಂಬ ತೀರ್ಮಾನಕ್ಕೂ ಬಂದಿದ್ದರು. ಕೆಲ ವರ್ಷಗಳ ಕಾಲ ಮಂಗಳೂರಿನ ಪ್ರಸಿದ್ಧ ಶ್ರೀ ಗಣೇಶ ಪ್ರಸಾದ್ ಉಪಾಹಾರ ಗೃಹ, ವಸತಿ ಗೃಹದಲ್ಲಿ ಉದ್ಯೋಗ ಮಾಡಿದ್ದರು. ಆದರೆ ಕಲಾಮಾತೆಯ ಸಂಕಲ್ಪವು ಹುಸಿಯಾಗುವುದುಂಟೇ? ಆಗದು.
ಯಕ್ಷಗಾನ ಎಂಬ ಗಂಡು ಕಲೆಯು ಶ್ರೀ ರಘುರಾಮ ಹೊಳ್ಳರನ್ನು ಕೈಬೀಸಿ ಕರೆಯುತ್ತಿತ್ತು. ಕದ್ರಿ ಮೇಳದ ತಿರುಗಾಟದಲ್ಲಿ ಗೆಜ್ಜೆದ ಪೂಜೆ ಪ್ರಸಂಗದ ಹಾಡುಗಳು ಶ್ರೀ ರಘುರಾಮ ಹೊಳ್ಳರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿತ್ತು. ಅಲ್ಲದೆ ಹಲವಾರು ತುಳು, ಪುರಾಣ ಪ್ರಸಂಗಗಳಲ್ಲಿ ಇವರ ಹಾಡುಗಾರಿಕೆಯನ್ನು ಕಲಾಭಿಮಾನಿಗಳು ಮೆಚ್ಚಿಕೊಂಡರು. ಕದ್ರಿ ಮೇಳದ ಬಳಿಕ ಶ್ರೀ ಧರ್ಮಸ್ಥಳ ಮೇಳದಲ್ಲಿ ನಿರಂತರವಾಗಿ ಕಳೆದ 29 ವರ್ಷಗಳಿಂದ ವ್ಯವಸಾಯ ಮಾಡಿದ್ದರು. ಮೊದಲು ಕಡತೋಕಾ ಶ್ರೀ ಮಂಜುನಾಥ ಭಾಗವತರ ಜತೆ ತಿರುಗಾಟ.
ಅವರ ನಿವೃತ್ತಿಯ ನಂತರ ಮುಖ್ಯ ಭಾಗವತರಾಗಿ ಅನೇಕ ವರ್ಷಗಳಿಂದ ಕಲಾಸೇವೆಯನ್ನು ಮಾಡಿದ್ದರು. ಪುರಾಣ ಪ್ರಸಂಗಗಳ ಮಾಹಿತಿ, ನಡೆಗಳ ಕುರಿತಾಗಿ ಹೀಗೆಂದೇ ಹೇಳಬಲ್ಲವರು ಶ್ರೀ ರಘುರಾಮ ಹೊಳ್ಳರು. ಪ್ರದರ್ಶನಗಳನ್ನು ಯಶಸ್ವಿಯಾಗಿ ರಂಜಿಸುವಂತೆ ಮಾಡುವ ಕುಶಲಗಾರಿಕೆಯೂ ಸಿದ್ಧಿಸಿದ ಭಾಗವತರಿವರು. ವೇಷಧಾರಿಯ ಸಾಮರ್ಥ್ಯವನ್ನು ಅಳೆದು ತೂಗಿ ಅವನ ಪ್ರತಿಭೆಯನ್ನು ಪರಿಪೂರ್ಣವಾಗಿ ತನ್ನ ಹಾಡುಗಾರಿಕೆಯಿಂದ ಹೊರಗೆಡಹಬಲ್ಲರು.
ಪರಂಪರೆಯ ಜೊತೆಗೆ ಪರಂಪರೆಯ ಮೇರೆಯನ್ನು ಮೀರದ ಹೊಸತನದಿಂದ ತನ್ನ ಹಾಡುಗಾರಿಕೆಯಲ್ಲಿ ಕಲಾಭಿಮಾನಿಗಳ ಮನಸೂರೆಗೊಳ್ಳುತ್ತಿದ್ದಾರೆ. ಶ್ರೀಯುತರ ಭಾಗವತಿಕೆಯ ಬಗೆಗೆ ಎಲ್ಲರಿಗೂ ತಿಳಿದಿದೆ. ಸಮಷ್ಟಿ ಕಲೆ. ತನ್ನೊಬ್ಬನ ಪ್ರದರ್ಶನ ಚೆನ್ನಾದರೆ ಸಾಲದು. ಒಟ್ಟು ಪ್ರದರ್ಶನವು ಗೆಲ್ಲಬೇಕು. ರಂಜಿಸಬೇಕು. ಗಾಯನ, ವಾದನ, ಅಭಿನಯ ಇವುಗಳೊಳಗೆ ಸಮನ್ವಯತೆ ಇದ್ದರೆ ಮಾತ್ರ ಪ್ರದರ್ಶನವು ರಂಜಿಸುತ್ತದೆ. ಎಲ್ಲರ ಮನೋಧರ್ಮವು ಒಂದೇ ಆಗಿರಬೇಕು. ಪೂರ್ವಸಿದ್ಧತೆ ಸಮಾಲೋಚನೆಗಳಿಂದಲೇ ಇದನ್ನು ಸಾಧಿಸಬೇಕು. ಯಕ್ಷಗಾನಕ್ಕೆ ಭಾಗವತನೇ ನಿರ್ದೇಶಕ ಹೌದು. ಆದರೆ ಪ್ರದರ್ಶನವು ರಂಜಿಸಿದಾಗ ಮಾತ್ರ ಈ ಮಾತಿಗೆ ಮೌಲ್ಯವು ಬರುತ್ತದೆ. ನಿರ್ದೇಶಕನ ಪ್ರಯತ್ನವು ಪ್ರದರ್ಶನದ ಯಶಸ್ವಿಗೆ ಒಂದು ಪ್ರಮುಖ ಕೊಡುಗೆಯಾಗಲೇ ಬೇಕು.
ಎಲ್ಲಾ ಕಲಾವಿದರನ್ನೂ ಒಂದು ತಂಡವಾಗಿ ಮುನ್ನಡೆಸುವ ಗುಣವೂ ಭಾಗವತನಿಗಿರಬೇಕು. ಎಂಬುದು ಶ್ರೀ ರಘುರಾಮ ಹೊಳ್ಳರ ಅಭಿಪ್ರಾಯ. ಭಾಗವತನಾಗಿ ಕಾಣಿಸಿಕೊಳ್ಳಬೇಕಾದರೆ ಕಠಿಣ ಪರಿಶ್ರಮವನ್ನು ಪಡಬೇಕು. ನಿರಂತರ ಅಧ್ಯಯನಾಸಕ್ತನಾಗಿರಬೇಕು. ಗೊತ್ತಿಲ್ಲದ ವಿಚಾರಗಳನ್ನು ತಿಳಿದವರಿಂದ ಕೇಳಿ ತಿಳಿದು ಅದನ್ನು ಅಳವಡಿಸಿಕೊಳ್ಳುವ ಗುಣವನ್ನು ಹೊಂದಿರಬೇಕು. ಉತ್ತಮ ನಿರ್ವಹಣೆಯನ್ನು ನೀಡಲು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಇದು ಕಲಿಕಾಸಕ್ತರಿಗೆ ಶ್ರೀ ರಘುರಾಮ ಹೊಳ್ಳರು ನೀಡುವ ಸಲಹೆಗಳು. ದೇಶ ವಿದೇಶಗಳಲ್ಲಿ ನಡೆದ ಪ್ರದರ್ಶನಗಳಲ್ಲಿ ಶ್ರೀ ರಘುರಾಮ ಹೊಳ್ಳರು ತಮ್ಮ ಯಕ್ಷಗಾನ ಹಾಡುಗಾರಿಕೆಯಿಂದ ಕಲಾಭಿಮಾನಿಗಳ ಪ್ರೀತಿ, ಗೌರವಗಳನ್ನು ಸಂಪಾದಿಸಿದ್ದಾರೆ. ವೃತ್ತಿಜೀವನದಲ್ಲೂ ಕೌಟುಂಬಿಕವಾಗಿಯೂ ಇವರು ಸಂತೃಪ್ತರು.
ಪತ್ನಿ ಶ್ರೀಮತಿ ವಾಣಿ. ರಘುರಾಮ ಹೊಳ್ಳ ದಂಪತಿಗಳಿಗೆ ಈರ್ವರು ಪುತ್ರಿಯರು. ವಿದ್ಯಾವಂತೆಯರು. ಹಿರಿಯ ಪುತ್ರಿ ಶ್ರೀಲಕ್ಷ್ಮಿ (ಎಂಸಿ.ಎ) ವಿವಾಹಿತೆ. ಕಿರಿಯ ಪುತ್ರಿ ಶ್ರೀವಿದ್ಯಾ (ಬಿ.ಇ) ಉದ್ಯೋಗಿ. ಪುತ್ತಿಗೆ ಶ್ರೀ ರಘುರಾಮ ಹೊಳ್ಳರ ಅಕ್ಕಂದಿರ ಮಕ್ಕಳಾದ ಶ್ರೀ ರಾಮಕೃಷ್ಣ ಮಯ್ಯ ಸಿರಿಬಾಗಿಲು ಮತ್ತು ಶ್ರೀ ಗೋಪಾಲಕೃಷ್ಣ ನಾವಡ ಬಾಯಾರು ಇವರುಗಳು ಖ್ಯಾತ ಭಾಗವತರುಗಳಾಗಿ ಕಲಾಭಿಮಾನಿಗಳೆಲ್ಲರಿಗೂ ಪರಿಚಿತರು. ಯಕ್ಷ ಭಾಗವತಹಂಸ ಶ್ರೀ ಪುತ್ತಿಗೆ ರಘುರಾಮ ಹೊಳ್ಳರಿಗೆ ಸಕಲ ಭಾಗ್ಯಗಳನ್ನೂ ಕಲಾಮಾತೆಯು ಅನುಗ್ರಹಿಸಲಿ ಎಂಬ ಹಾರೈಕೆಗಳು.

ಲೇಖನ: ರವಿಶಂಕರ್ ವಳಕ್ಕುಂಜ
ಶ್ರೀಮತಿ ರೋಹಿಣಿ ಉದಯ್ – ಶ್ರೀ ದೇವಿ ನೃತ್ಯಾರಾಧನಾ ಕಲಾ ಕೇಂದ್ರ, ಪುತ್ತೂರು
ಶ್ರೀಮತಿ ರೋಹಿಣಿ ಉದಯ್ ಭರತನಾಟ್ಯ ಪ್ರಿಯರಿಗೆಲ್ಲಾ ಪರಿಚಿತ ಹೆಸರು. ತನ್ನ 14ನೇ ವಯಸ್ಸಿನಲ್ಲಿ ಭರತನಾಟ್ಯದ ನೃತ್ಯಾಭ್ಯಾಸಕ್ಕೆ ಆರಂಭಿಸಿದ ರೋಹಿಣಿ ಮಂಗಳೂರಿನ ಸನಾತನ ನಾಟ್ಯಾಲಯದ ನೃತ್ಯಗುರುಗಳಾದ ವಿದುಷಿ ಶ್ರೀಮತಿ ಶಾರದಾಮಣಿ ಶೇಖರ್ ಅವರ ಸಮರ್ಥ ಮಾರ್ಗದರ್ಶನದಿಂದಲೂ ನಂತರ ವಿದುಷಿ ಡಾ. ಶ್ರೀಮತಿ ಶೋಭಿತಾ ಸತೀಶ್ ರಾವ್ ಹಾಗೂ ವಿದ್ವಾನ್ ದೀಪಕ್ ಕುಮಾರ್ ರವರಲ್ಲಿ ಹೆಚ್ಚಿನ ನೃತ್ಯಾಭ್ಯಾಸವನ್ನು ಪಡೆದುಕೊಂಡರು. ಆಮೇಲೆ ಬೆಂಗಳೂರಿನ ಸುಕೃತಿ ನಾಟ್ಯಾಲಯದ ನಿರ್ದೇಶಕಿ ಶ್ರೀಮತಿ ಹೇಮ ಪಂಚಮುಖಿಯವರಲ್ಲಿ ಇನ್ನೂಹೆಚ್ಚಿನ ವಿಶೇಷ ಅಭ್ಯಾಸಕ್ಕಾಗಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾರೆ. ಶ್ರೀಮತಿ ರೋಹಿಣಿ ಉದಯ್ ಅವರು ಪುತ್ತೂರಿನಲ್ಲಿ ಶ್ರೀ ದೇವಿ ನೃತ್ಯಾರಾಧನಾ ಕಲಾ ಕೇಂದ್ರ , ಪುತ್ತೂರು ಇದರ ಸ್ಥಾಪಕಿ. ಈ ನೃತ್ಯ ಕೇಂದ್ರದ ಮುಖಾಂತರ ನೂರಾರು ವಿದ್ಯಾರ್ಥಿಗಳಿಗೆ ಭರತನಾಟ್ಯ ಅಭ್ಯಾಸವನ್ನು ಮಾಡಿಸಿರುತ್ತಾರೆ.

ಈ ಕಲಾಕೇಂದ್ರವು ಹಲವಾರು ಭರತನಾಟ್ಯದ ಪ್ರತಿಭೆಗಳನ್ನು ಬೆಳಕಿಗೆ ತಂದಿದೆ. ಈ ದಿಸೆಯಲ್ಲಿ ಕಲಾ ಕೇಂದ್ರದ ನೃತ್ಯ ಗುರು ರೋಹಿಣಿ ಉದಯ್ ಅವರ ಪ್ರಯತ್ನ ಶ್ಲಾಘನೀಯವಾದುದು. ರೋಹಿಣಿ ಉದಯ್ ಭರತನಾಟ್ಯದ ಸಾಧನೆಗಾಗಿ ಎಚ್.ಆರ್.ಸಿ. ಯಿಂದ ಅಭಿನಂದಿತರಾಗಿದ್ದಾರೆ. 2015ನೇ ಸಾಲಿನ ಸುಮ ಸೌರಭ ಪ್ರಶಸ್ತಿಯೂ ಇವರಿಗೆ ದೊರಕಿದೆ. ಇವರೂ ಇವರ ಶಿಷ್ಯರೂ ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿರುತ್ತಾರೆ.

ನೃತ್ಯ ಪ್ರದರ್ಶನ ಮತ್ತು ನೃತ್ಯ ಶಿಕ್ಷಣ ನೀಡುತ್ತಿರುವುದರ ಜೊತೆಗೆ ರೋಹಿಣಿ ಉದಯ್ ಅವರ ಶ್ರೀ ದೇವಿ ನೃತ್ಯಾರಾಧನಾ ಕಲಾ ಕೇಂದ್ರವು ಹಲವಾರು ಸಮಾಜಮುಖಿ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದೆ. ಶ್ರೀಮತಿ ರೋಹಿಣಿ ಉದಯ್ ಅವರು ಪ್ರಖ್ಯಾತ ಯಕ್ಷಗಾನ ಹಾಸ್ಯ ಕಲಾವಿದರಾದ ದಿ| ನಯನಕುಮಾರ್ ಅವರ ಪುತ್ರರಾದ ಶ್ರೀ ಉದಯ್ ಅವರ ಪತ್ನಿ.