Monday, February 24, 2025
Home Blog Page 369

ಯಕ್ಷರಂಗದ ನವರಸ ನಾಯಕ ಪುಳಿಂಚ – ಶ್ರೀ ಪುಳಿಂಚ ರಾಮಯ್ಯ ಶೆಟ್ಟರು 

ಶ್ರೀ ಪುಳಿಂಚ ರಾಮಯ್ಯ ಶೆಟ್ಟರು ಯಕ್ಷಗಾನ ಕಲೆಯ ನವರಸ ನಾಯಕನೆಂದೇ ಪ್ರಸಿದ್ಧರು. ಅವರಿಂದು ನಮ್ಮ ಜತೆ ಇಲ್ಲ. ಆದರೂ ಅಲೌಕಿಕ ಲೋಕದಲ್ಲಿ ನೆಲೆಯಾಗಿ ನಮ್ಮನ್ನು ಅನುಗ್ರಹಿಸುತ್ತಿದ್ದಾರೆ. ಯಾವುದೇ ಕೊರತೆಯಾಗದಂತೆ ಯಕ್ಷಗಾನ ಕಲೆಯು ಬೆಳಗಲಿ. ಪ್ರದರ್ಶನಗಳು ನಿರಂತರವಾಗಿ ನಡೆಯುತ್ತಾ ರಂಜಿಸಲಿ ಎಂದು ಅಲ್ಲಿಂದಲೇ ಹಾರೈಸುತ್ತಿರಬಹುದು. ಅವರ ಕಾಯವು ಅಳಿದರೂ ಗಳಿಸಿದ ಕೀರ್ತಿಯು ಉಳಿದಿದೆ. ಯಕ್ಷಕಲಾ ಲೋಕದಲ್ಲಿ ಅಪ್ರತಿಮ ಸಾಧಕರಾಗಿ ಮೆರೆದ ಕಾರಣದಿಂದ ಅವರು ಜನಮಾನಸದಲ್ಲಿ ಶಾಶ್ವತರಾಗಿ ಉಳಿಯುತ್ತಾರೆ. ಯಕ್ಷಗಾನವು ಒಂದು ಗಂಡುಕಲೆ. ಶ್ರೇಷ್ಠ ಕಲೆ ಎಂಬ ಅರ್ಥದಲ್ಲಿ ಗಂಡು ಕಲೆ ಎಂದು ಪ್ರಸಿದ್ಧವಾಗಿರಬೇಕು.

ಎಲ್ಲಾ ಕಲಾ ಪ್ರಾಕಾರಗಳಲ್ಲಿಯೂ ನಮಗೆ ಗೌರವವಿದೆ. ಎಲ್ಲವೂ ನಮ್ಮ ಹೆಮ್ಮೆಯ ದೇಶ ಭಾರತದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲೆಗಳು. ಆದರೂ ಯಕ್ಷಗಾನಕ್ಕೆ ಯಕ್ಷಗಾನವೇ ಸಾಟಿ. ಅದು ನಮ್ಮ ನಾಡಿನ ಕಲೆ ಎಂಬುದು ನಮಗೆಲ್ಲಾ ಹೆಮ್ಮೆಯ ವಿಚಾರ. ಬಹಳ ಕಾಲದ ಹಿಂದೆ ಯಕ್ಷಗಾನವು ಹೇಗಿತ್ತು? ನಾವು ಪ್ರತ್ಯಕ್ಷದರ್ಶಿಗಳಲ್ಲ. ಆದರೂ ಹಿರಿಯರಿಂದ ಕೇಳಿ ತಿಳಿದಿರುತ್ತೇವೆ. ವಾಹನ, ಸೌಕರ್ಯ ಸರಿಯಾದ ರಸ್ತೆಗಳಿಲ್ಲದ ಕಾಲ. ಪ್ರಚಾರಕ್ಕೆ ಮಾಧ್ಯಮಗಳೂ ಕಡಿಮೆ. ಹಿರಿಯ ಕಲಾವಿದರೆಲ್ಲಾ ಕಾಲ್ನಡಿಗೆಯಲ್ಲೇ ಸಾಗಿ ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸಿದರು. ಸರಂಜಾಮುಗಳನ್ನು ಹೊತ್ತುಕೊಂಡೇ ಸಾಗಿದರು. ಯಕ್ಷಗಾನ ಕಲೆಯ ಉಳಿವಿಗೆ ಹಿರಿಯ ಕಲಾವಿದರ, ಸಂಘಟಕರ, ಕಲಾಭಿಮಾನಿಗಳ ಕೊಡುಗೆಯನ್ನು ನಾವು ಯಾವತ್ತೂ ಸ್ಮರಿಸಲೇ ಬೇಕು. ಅವರ ತ್ಯಾಗದ ಪರಿಣಾಮವನ್ನೇ ನಾವಿಂದು ಅನುಭವಿಸುತ್ತಿದ್ದೇವೆ. ಅವರೆಲ್ಲರೂ ಪ್ರಾತಃಸ್ಮರಣೀಯರು.

ಕಲಾವಿದನಾಗಬೇಕೆಂದು ಬಯಸುವವರಿಗೆ ಯಕ್ಷಗಾನದಲ್ಲಿ ಆಯ್ಕೆಗೆ ಅವಕಾಶಗಳಿವೆ. ಭಾಗವತನಾಗಬೇಕೆಂದೂ, ಮದ್ದಳೆಗಾರನಾಗಬೇಕೆಂದೂ, ಸ್ತ್ರೀ ಪಾತ್ರಧಾರಿಯಾಗಬೇಕೆಂದೂ, ಹಾಸ್ಯಗಾರನಾಗಬೇಕೆಂದೂ, ಪುಂಡುವೇಷಧಾರಿಯಾಗಬೇಕೆಂದೂ….. .. ಹೀಗೆ ಒಬ್ಬೊಬ್ಬರಿಗೆ ಒಂದೊಂದು ಆಸೆಗಳು. ಆದರೂ ತೆಂಕು ತಿಟ್ಟಿನ ಯಕ್ಷಗಾನದಲ್ಲಿ ಬಾಲಗೋಪಾಲ, ಪೂರ್ವರಂಗದ ಇನ್ನಿತರ ವೇಷಗಳನ್ನು ನಿರ್ವಹಿಸಿ, ಸ್ತ್ರೀ ವೇಷ, ಪುಂಡು ವೇಷ,  ಪೀಠಿಕೆ ವೇಷ, ಎದುರು ವೇಷ, ಬಣ್ಣದ ವೇಷಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದವನೇ ಹಾಸ್ಯಗಾರನಾಗುತ್ತಾನೆ ಎಂಬುದನ್ನು ಕೇಳಿ ತಿಳಿದಿರುವೆ.  ಕಲಿಕಾ ಕೇಂದ್ರಗಳಿಲ್ಲದ ಕಾಲ ಅದು. ಮೇಳಕ್ಕೆ ಬಂದೇ ಹಿರಿಯ ಕಲಾವಿದರಿಂದ ಕೇಳಿ, ಅವರ ವೇಷಗಳನ್ನು ನೋಡಿಯೇ ಕಲಿಯಬೇಕಾಗಿತ್ತು. ಸಮರ್ಥ ಹಾಸ್ಯಗಾರನಾಗಲು ಹೊಂದಿರಬೇಕಾದ  ಅರ್ಹತೆಗಳೇನು ಎಂಬುದನ್ನು ನಮಗೆ ಈ ವಿಚಾರಗಳಿಂದ ತಿಳಿಯಬಹುದು. ಅವನಿಗೆ ಯಕ್ಷಗಾನದ ಎಲ್ಲಾ ವಿಚಾರಗಳೂ ತಿಳಿದಿರಬೇಕೆಂಬುದನ್ನು ಇದರಿಂದ ನಾವು ಅರ್ಥಮಾಡಿಕೊಳ್ಳಬಹುದು.

ಹೀಗೆಯೇ ಹಂತ ಹಂತವಾಗಿ ಪ್ರತಿಯೊಂದು ಹಂತವನ್ನು ಅರ್ಹತೆಯನ್ನು ಹೊಂದಿ ಯಶಸ್ವಿಯಾಗಿ ದಾಟಿ ಹಾಸ್ಯಗಾರರಾದವರು ಶ್ರೀ ಪುಳಿಂಚ ರಾಮಯ್ಯ ಶೆಟ್ಟರು. ಉಳಿದ ಎಲ್ಲಾ ತೆರನಾದ ಪಾತ್ರಗಳಲ್ಲೂ ಪಕ್ವರಾಗಿಯೇ ಇವರು ಹಾಸ್ಯಪಾತ್ರಗಳತ್ತ ಮನಮಾಡಿದವರು. ಹಾಸ್ಯಗಾರರಾಗಿ ಸುಲಲಿತವಾಗಿ ಅಭಿನಯಿಸಲು ಪುಳಿಂಚ ರಾಮಯ್ಯ ಶೆಟ್ಟರಿಗೆ ಈ ಅನುಭವಗಳೇ ಅನುಕೂಲತೆಯನ್ನು ಒದಗಿಸಿಕೊಟ್ಟಿತು ಎಂದರೆ ತಪ್ಪಾಗಲಾರದು. ಶ್ರೀ ಪುಳಿಂಚ ರಾಮಯ್ಯ ಶೆಟ್ಟರೊಂದಿಗೆ ವೇಷ ಮಾಡುವ ಭಾಗ್ಯವು ನನಗೆ ಸಿಕ್ಕಿಲ್ಲ. ಆದರೆ ಅವರ ವೇಷಗಳನ್ನು ನೋಡಿದ್ದೇನೆ. ಅವರ ಬಗೆಗೆ ಹಿರಿಯರು ಆಡುವ ಮೆಚ್ಚು ನುಡಿಗಳನ್ನು ಕೇಳಿದ್ದೇನೆ. ಧ್ವನಿಸುರುಳಿಗಳಲ್ಲಿ ಅವರ ಸಂಭಾಷಣೆಗಳನ್ನು ಕೇಳಿದ್ದೇನೆ. ಅವರ ಬಗೆಗೆ ಮಹನೀಯರುಗಳು ಬರೆದ ಲೇಖನಗಳನ್ನೂ ಓದಿರುತ್ತೇನೆ. ಈ ಎಲ್ಲಾ ವಿಚಾರಗಳ ಆಧಾರದಲ್ಲೇ ಬರೆಯಲು ಪ್ರಯತ್ನಿಸುತ್ತೇನೆ ಅಷ್ಟೇ. ಅವರ ಪುಂಡುವೇಷಗಳನ್ನು ನೋಡಲು ಅವಕಾಶವಾಗಿಲ್ಲ. ಆದರೆ ಬಣ್ಣದ ವೇಷ, ಹಾಸ್ಯ ಮತ್ತು ಹಾಸ್ಯಕ್ಕೆ ಸಂಬಂಧಿಸಿದ ಸ್ತ್ರೀ ಪಾತ್ರಗಳನ್ನು ನೋಡಿದ್ದೆ. ಪಾತ್ರವನ್ನು ತನಗೆ ಬೇಕಾದಂತೆ ಬಾಗಿಸದೆ, ತಾನು ಪಾತ್ರಕ್ಕೆ ಬೇಕಾದಂತೆ ಬಾಗಿ ಅಭಿನಯಿಸುತ್ತಿದ್ದರು.

ಪಾತ್ರ ನಿರ್ವಹಣೆಯಲ್ಲಿ ಭಾವನೆಗಳು ತುಂಬಿ ತುಳುಕುತ್ತಿತ್ತು. ಪಾತ್ರದ ಸ್ವಭಾವಕ್ಕೆ ಒಂದಿನಿತೂ ಕೊರತೆಯಾಗದಂತೆ, ಪಾತ್ರೋಚಿತವಾಗಿ ಅಭಿನಯಿಸುವ ಕಲೆಯು ಪುಳಿಂಚ ರಾಮಯ್ಯ ಶೆಟ್ಟರಿಗೆ ಕರಗತವಾಗಿತ್ತು. ಪಾತ್ರಕ್ಕೆ ಬೇಕಾದಂತೆ ತನ್ನ ಸ್ವರದಲ್ಲೂ ವೈವಿಧ್ಯತೆಯನ್ನು ತೋರುತ್ತಿದ್ದರು. ಹಾಸ್ಯದ ಪಾತ್ರಗಳಲ್ಲಿ ಅವರು ಸಂಭಾಷಣೆಯನ್ನು ಹೇಳುವ ಶೈಲಿ, ಅವರ ಸ್ವರ ಕೇಳಿದಾಗಲೇ ನಗು ತನ್ನಿಂದ ತಾನೇ ಸ್ಪುರಿಸುತ್ತಿತ್ತು. ಕೇವಲ ಕ್ಯಾಸೆಟ್ ಕೇಳಿದಾಗಲೇ ಈ ಅನುಭವ. ಅವರ ಅಭಿನಯವನ್ನು ನೋಡಿದರೆ? ಅದೊಂದು ರಸಪಾಕವೇ ಆಗಿಬಿಡುತ್ತಿತ್ತು. ಈ ವಿಚಾರದಲ್ಲಿ ಘನ ಹಾಸ್ಯಗಾರರಾದ ರಸಿಕರತ್ನ ವಿಟ್ಲ ಗೋಪಾಲಕೃಷ್ಣ ಜೋಯಿಸರ ನೆನಪಾಗದೆ ಇರದು ನಮಗೆ. ಯಕ್ಷಗಾನದ ನವರಸ ನಾಯಕ ಶ್ರೀ ಪುಳಿಂಚ ರಾಮಯ್ಯ ಶೆಟ್ಟರು ವಿಟ್ಲ ಸಮೀಪದ ಕೇಪು ಗ್ರಾಮದಲ್ಲಿ ಜನಿಸಿದವರು. ಇವರು ಬೆಜ್ಜದಗುತ್ತು ಮನೆತನದವರು. 1939ರಲ್ಲಿ ಶ್ರೀ ಬಂಟಪ್ಪ ಶೆಟ್ಟಿ ಮತ್ತು ಶ್ರೀಮತಿ ಉಂಞಕ್ಕೆ ದಂಪತಿಗಳ ಮಗನಾಗಿ ಜನನ. ವಿಟ್ಲ ಸಮೀಪದ  ಎರುಂಬು ಶಾಲೆಯಲ್ಲಿ 6ನೇ ತರಗತಿ ವರೆಗೆ ಓದಿದ್ದರು. ಹಿರಿಯರೊಂದಿಗೆ ತೆರಳಿ ಪುಣಚದಲ್ಲಿ (ಪುಳಿಂಚ) ನೆಲೆಸಿದ ಕಾರಣ ಪುಳಿಂಚ ರಾಮಯ್ಯ ಶೆಟ್ಟರೆಂದೇ ಕರೆಸಿಕೊಂಡರು. ಎರುಂಬು ಶಾಲಾ ವಿದ್ಯಾರ್ಥಿಯಾಗಿದ್ದಾಗ ಅಧ್ಯಾಪಕರಾದ ಶ್ರೀ ಮರಿಯಯ್ಯ ಬಲ್ಲಾಳರಿಂದ ನಾಟಕ ಅಭಿನಯವನ್ನು ಕಲಿತಿದ್ದರು. ಕೆಲ ಸಮಯ ಕುರಿಯ ಮನೆಯಲ್ಲೇ ಇದ್ದು ಕುರಿಯ ಶಾಸ್ತ್ರಿಗಳಿಂದ ಯಕ್ಷಗಾನ ಹೆಜ್ಜೆಗಾರಿಕೆ ಕಲಿತಿದ್ದರು.

ಪುಳಿಂಚ ಅವರು ಕಲಿತು ಮೇಳ ಸೇರಿದರು ಅನ್ನುವುದಕ್ಕಿಂತ ಮೇಳಕ್ಕೆ ಸೇರಿ ಕಲಿತರು ಎಂದು ಹೇಳುವುದೇ ಸರಿ. ‘ಕಲಿತು ಮೇಳಕ್ಕೆ ಬರುವುದಕ್ಕಿಂತ ಮೇಳಕ್ಕೆ ಬಂದು ಕಲಿತರೇ ಚಂದ’ ಎಂಬ ನೆಡ್ಲೆ ನರಸಿಂಹ ಭಟ್ಟರ ಮಾತುಗಳು ಈ ಸಂದರ್ಭದಲ್ಲಿ ನೆನಪಾಗುತ್ತದೆ. ತನ್ನ ಹದಿನಾಲ್ಕನೆಯ ವಯಸ್ಸಿನಲ್ಲಿ ಶ್ರೀ ಧರ್ಮಸ್ಥಳ ಮೇಳಕ್ಕೆ ಬಾಲ ಕಲಾವಿದನಾಗಿ ಸೇರಿದ್ದರು. ಕಲಿಕೆಯಲ್ಲಿ ಕ್ಷಿಪ್ರ ಬೆಳವಣಿಗೆಯನ್ನು ಹೊಂದಿ ಅಲ್ಲಿ ಪುಂಡುವೇಷಗಳನ್ನು ನಿರ್ವಹಿಸುವ ಮಟ್ಟಕ್ಕೆ ತಲುಪಿದ್ದರು. ಅಳಿಕೆ ಶ್ರೀ ಮೋನು ಶೆಟ್ಟರು ಮತ್ತು ಅಳಿಕೆ ರಾಮಯ್ಯ ಶೆಟ್ಟರಿಂದಲೂ ಪುಳಿಂಚ ಅವರು ನಾಟ್ಯ ಕಲಿತಿದ್ದರು. ಶ್ರೀ ಧರ್ಮಸ್ಥಳ ಮೇಳದ ಬಳಿಕ ಬಣ್ಣದ ವೇಷಗಾರಿಕೆಯನ್ನು ಅಭ್ಯಸಿಸಿದ್ದು ಬಣ್ಣದ ಮಹಾಲಿಂಗನವರಿಂದ. ಹಲವು ಮೇಳಗಳಲ್ಲಿ ತಿರುಗಾಟ ನಡೆಸಿದ್ದರು. ಕೂಡ್ಲು ಮೇಳದಲ್ಲಿ ಶ್ರೀ ಪುಳಿಂಚ ರಾಮಯ್ಯ ಶೆಟ್ಟರು ಹೊಳೆದು ಕಾಣಿಸಿಕೊಡ್ಡಿದ್ದರು. ಬಣ್ಣದ ವೇಷಧಾರಿಯಾಗಿ ಅಭಿನಯಿಸಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಜತೆಗೆ ಹಂತ ಹಂತವಾಗಿ ಮೇಲೇರಿ ಬಂದ ಕಾರಣ  ಎಲ್ಲಾ ರೀತಿಯ ಪಾತ್ರಗಳನ್ನೂ ನಿರ್ವಹಿಸುವ ಕಲೆಯು ಸಿದ್ಧಿಸಿತ್ತು. ಬಳಿಕ ಸುಮಾರು ಇಪ್ಪತ್ತು ವರ್ಷಗಳ ಕಾಲ ಕಲ್ಲಾಡಿ ವಿಠಲ ಶೆಟ್ಟರ ಸಂಚಾಲಕತ್ವದ ಕರ್ನಾಟಕ ಮೇಳದಲ್ಲಿ ವ್ಯವಸಾಯ. ತುಳು ಪ್ರಸಂಗಗಳಲ್ಲಿ ಇವರ ಅನೇಕ  ಪಾತ್ರಗಳನ್ನೂ ನೋಡಿ ಆನಂದಿಸಲು  ಪ್ರೇಕ್ಷಕರು ಮುಗಿ ಬೀಳುತ್ತಿದ್ದರು.

ಜತೆಗೆ ಪುರಾಣ ಪ್ರಸಂಗಗಳಲ್ಲೂ ಪ್ರೇಕ್ಷಕರನ್ನು ರಂಜಿಸಿದರು. ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ಮಾನಿಷಾದ ಕರ್ನಾಟಕ ಮೇಳದಲ್ಲಿ ಜಯಭೇರಿ ಬಾರಿಸಿದ ಪ್ರಸಂಗ. ಮಿಜಾರು ಅಣ್ಣಪ್ಪನವರ ವಿಕ್ಷಿಪ್ತನ (ಗುರು) ಪಾತ್ರ. ಶಿಷ್ಯನಾಗಿ ಪುಳಿಂಚದವರು ಅಮೋಘ ಅಭಿನಯ, ಮಾತುಗಳಿಂದ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿ ಮತ್ತೆ ಚೌಕಿಯಲ್ಲಿ ಬಣ್ಣದ ವೇಷಕ್ಕೆ ಸಿದ್ಧರಾಗುತ್ತಿದ್ದರು! ಬೆಳಗಿನ ಹೊತ್ತು ಲವಣಾಸುರನಾಗಿ ಅಬ್ಬರಿಸುತ್ತಿದ್ದರು. ಅನೇಕ ಪ್ರಸಂಗಗಳಲ್ಲಿ ಮಿಜಾರು-ಪುಳಿಂಚ ಜೊತೆಗಾರಿಕೆಯು ಕರ್ನಾಟಕ ಮೇಳದಲ್ಲಿ ಹಾಸ್ಯದ ಹೊನಲನ್ನೇ ಹರಿಸಿತ್ತು. ಅರುವ ಕೊರಗಪ್ಪ ಶೆಟ್ಟಿ-ಪುಳಿಂಚ ಜೋಡಿಯೂ ಕರ್ನಾಟಕ ಮೇಳದ ಪ್ರದರ್ಶನಗಳ ಗೆಲುವಿಗೆ ಕಾರಣವಾಗಿತ್ತು. ಶ್ರೀ ದಾಮೋದರ ಮಂಡೆಚ್ಚ, ಶ್ರೀ ದಿನೇಶ ಅಮ್ಮಣ್ಣಾಯರ ಭಾಗವತಿಕೆ ಮತ್ತು ಖ್ಯಾತ ಕಲಾವಿದರ ತಂಡವಾಗಿ ಕರ್ನಾಟಕ ಮೇಳದ ಟೆಂಟು ದಿನಾ ಹೌಸ್ ಫುಲ್ ಆಗಿರುತ್ತಿತ್ತು. ಎಲ್ಲ ರೀತಿಯ ಪುಂಡುವೇಷ, ಪೀಠಿಕೆ ವೇಷ, ಎದುರು ವೇಷ, ನಾಟಕೀಯ ವೇಷ, ಬಣ್ಣದ ವೇಷಗಳಲ್ಲಿ ವಿಜೃಂಭಿಸಿಯೇ ಇವರು ಹಾಸ್ಯಗಾರರಾದುದು. 1960-1970ರ ದಶಕದಲ್ಲಿ ಮಳೆಗಾಲದಲ್ಲಿ ತಂಡವನ್ನು ಕಟ್ಟಿ ದೇಶದ ನಾನಾ ಕಡೆ ಪ್ರದರ್ಶನಗಳನ್ನು ನಡೆಸಿ ಪುಳಿಂಚ ರಾಮಯ್ಯ ಶೆಟ್ಟರು ಉತ್ತಮ ಸಂಘಟಕರಾಗಿಯೂ ಕಾಣಿಸಿಕೊಂಡರು.

ಹಲವು ಪ್ರಸಂಗಗಳನ್ನೂ ಬರೆದ ಪುಳಿಂಚ ಅವರು ಸಾಹಿತ್ಯಾಸಕ್ತರೂ ಆಗಿದ್ದರು. ಅಲ್ಲದೆ ಅನೇಕ ಹಾಸ್ಯ ಪ್ರಸಂಗಗಳನ್ನೂ ರಚಿಸಿ ಧ್ವನಿಸುರುಳಿಗಳಾಗಿ ಹೊರತಂದಿದ್ದರು. ಯಕ್ಷಗಾನ ಪೂರ್ವರಂಗವನ್ನೂ ಪುಳಿಂಚ ಶ್ರೀ ರಾಮಯ್ಯ ಶೆಟ್ಟರು ಸಂಪೂರ್ಣ ತಿಳಿದಿದ್ದರೆಂದೂ, ಮುಖವರ್ಣಿಕೆಯನ್ನು ಸರಿಯಾಗಿ ಮಾಡಿ ಬಣ್ಣದ ವೇಷಗಳಲ್ಲಿ ರಂಗಪ್ರವೇಶ ಮಾಡುತ್ತಿದ್ದರೆಂದೂ, ಹೆಣ್ಣು ಬಣ್ಣಕ್ಕೆ ಸಂಬಂಧಿಸಿದ ವೇಷಗಳು ಬಲು ಸೊಗಸೆಂದೂ ಹಿರಿಯ ಕಲಾವಿದರೂ ಕಲಾಭಿಮಾನಿಗಳೂ ಹೇಳುತ್ತಾರೆ. ಹಿರಿಯ ಕಲಾವಿದರನ್ನು ಗೌರವಿಸುವ, ಕಿರಿಯ ಕಲಾವಿದರನ್ನು ಅತ್ಯಂತ ಪ್ರೀತಿಸುವ ಸಹೃದಯಿಯಾಗಿ ಅಜಾತಶತ್ರು ಎನಿಸಿಕೊಂಡಿದ್ದರೆಂದೂ ಹಲವರು ಹೇಳುವುದನ್ನು ನಾನು ಕೇಳಿದ್ದೇನೆ.

ಸಮರ್ಥ ಹಿಮ್ಮೇಳ ಅಲ್ಲದೆ ಶ್ರೀ ರಾಮದಾಸ ಸಾಮಗ, ಬೋಳಾರ ನಾರಾಯಣ ಶೆಟ್ಟಿ, ಅಳಿಕೆ ರಾಮಯ್ಯ ರೈ, ಮೂಡುಬಿದಿರೆ ಕೃಷ್ಣ ರಾವ್ ಶ್ರೀ ಕೊಳ್ಯೂರು ರಾಮಚಂದ್ರ ರಾವ್, ಮಿಜಾರು ಅಣ್ಣಪ್ಪ, ಗುಂಪೆ ರಾಮಯ್ಯ ರೈ , ಅರುವ ಕೊರಗಪ್ಪ ಶೆಟ್ಟಿ, ಅಳಿಕೆ ಲಕ್ಷ್ಮಣ ಶೆಟ್ಟಿ, ಪುಂಡರೀಕಾಕ್ಷ ಉಪಾಧ್ಯಾಯ,ಬೆಳ್ಳಾರೆ ವಿಶ್ವನಾಥ ರೈ , ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ(2 ವರ್ಷಗಳು), ಸಂಜಯ ಕುಮಾರ್ (ಕೆಲವರ ಹೆಸರು ಬಿಟ್ಟು ಹೋಗಿರಲೂ ಬಹುದು) ಮೊದಲಾದ ಶ್ರೇಷ್ಠ ಕಲಾವಿದರಿದ್ದ ತಂಡ ಕರ್ನಾಟಕ ಮೇಳ. ಎಲ್ಲರ ನಡುವೆ ಶ್ರೀ ಪುಳಿಂಚ ರಾಮಯ್ಯ ಶೆಟ್ಟರು ಹೊಳೆದು ಕಾಣಿಸಿಕೊಂಡಿದ್ದರು. ಇದು ಇವರ ಸಹಕಲಾವಿದರೆಲ್ಲರಿಗೂ ಹೆಮ್ಮೆ ಪಡುವಂತಹ ವಿಚಾರವು. ಕೆ. ಅನಂತರಾಮ ಬಂಗಾಡಿಯವರು ರಚಿಸಿದ ಕಾಡಮಲ್ಲಿಗೆ ಪ್ರಸಂಗದ ಸಿದ್ದು ಪಾತ್ರ ಪುಳಿಂಚರಿಗೆ ಅಪಾರ ಪ್ರಸಿದ್ಧಿಯನ್ನು ನೀಡಿತ್ತು. ಅಲ್ಲದೆ ಬಂಗಾಡಿಯವರ ಪಟ್ಟದ ಪದ್ಮಲೆ ಪ್ರಸಂಗದ ಕೋಡಿಮೂಲೆ ಮಾಚು, ಗೋಣ ತಂಕರೆ ಪ್ರಸಂಗದ ಸಣ್ಣಕ್ಕೆ, ಸಿರಿಕೃಷ್ಣ ಚಂದ ಪಾಲಿಯ ನಕುಲೆ, ಬೊಳ್ಳಿ ಗಿಂಡೆಯ ಡೊಂಬ ಮೊದಲಾದ ಪಾತ್ರಗಳೂ ಇವರಿಗೆ ಪ್ರಸಿದ್ಧಿಯನ್ನು ನೀಡಿತ್ತು. ಅಲ್ಲದೆ ಕುಕ್ಕುಮುಡಿ ಸೋಂಪ, ಚಂದಗೋಪ, ಗೋಪಿಕೆ, ಮಲ್ಲಯ್ಯ ಬುದ್ಯಂತ ಮೊದಲಾದ ಪಾತ್ರಗಳಲ್ಲೂ ಮಿಂಚಿದರು. ಶ್ರೀ ರಾಮದಾಸ ಸಾಮಗರೊಂದಿಗೆ ರಂಗದಲ್ಲಿ ಮಿಜಾರು ಮತ್ತು ಪುಳಿಂಚ ರಾಮಯ್ಯ ಶೆಟ್ಟರದು ಪೋಷಕ ಪಾತ್ರಧಾರಿಗಳಾಗಿ ಅಮೋಘ ಅಭಿನಯವೆಂದೂ, ಅರುವ-ಪುಳಿಂಚ ಜತೆಗಾರಿಕೆಯು ಪ್ರೇಕ್ಷಕರಿಗೆ ರಸದೌತಣವನ್ನೇ ನೀಡುತ್ತಿತ್ತೆಂದೂ ಪ್ರತ್ಯಕ್ಷದರ್ಶಿಗಳು ಈಗಲೂ ಹೇಳುತ್ತಾರೆ. ಪುಳಿಂಚ ರಾಮಯ್ಯ ಶೆಟ್ಟರ ಸಾಧನೆಗೆ ಅನೇಕ ಪ್ರಶಸ್ತಿಗಳೂ ಸನ್ಮಾನಗಳೂ ಒಲಿದು ಬಂದಿವೆ.

2000ನೇ ಇಸವಿಯಲ್ಲಿ ಯಕ್ಷಗಾನ ಕ್ಷೇತ್ರದಿಂದ ಅವರು ಸ್ವಯಂ ನಿವೃತ್ತರಾಗಿದ್ದರು. ಕಲ್ಲಡ್ಕದ ಸಮೀಪ ಬಾಳ್ತಿಲ ಎಂಬಲ್ಲಿ ಅನೇಕ ವರ್ಷಗಳಿಂದ ವಾಸವಾಗಿದ್ದ ಪುಳಿಂಚ ರಾಮಯ್ಯ ಶೆಟ್ಟರು 2002ನೇ ಇಸವಿ ಜುಲೈ ತಿಂಗಳಲ್ಲಿ ನಮ್ಮನ್ನಗಲಿ ಅವ್ಯಕ್ತ ಪ್ರಪಂಚವನ್ನು ಸೇರಿಕೊಂಡಿದ್ದರು. ಪುಳಿಂಚ ಶ್ರೀಧರ ಶೆಟ್ಟರು ಮಂಗಳೂರಿನ ಯುವ, ಖ್ಯಾತ ನ್ಯಾಯವಾದಿಗಳು. ಶ್ರೀಯುತರು ಪುಳಿಂಚ ರಾಮಯ್ಯ ಶೆಟ್ಟರ ಪುತ್ರರು. ತಮ್ಮ ತೀರ್ಥರೂಪರ ಹೆಸರಿನಲ್ಲಿ ‘ಪುಳಿಂಚ ಸೇವಾ ಪ್ರತಿಷ್ಠಾನ’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಕರ್ಮಪುತ್ರರೆನಿಸಿಕೊಂಡಿದ್ದಾರೆ. 2016ರಲ್ಲಿ ಪುಳಿಂಚ- ಸ್ಮೃತಿ, ಕೃತಿ’ ಯನ್ನು ಈ ಪ್ರತಿಷ್ಠಾನದಡಿ ಹೊರತಂದಿದ್ದರು. 

ಪುಳಿಂಚ- ಸ್ಮೃತಿ, ಕೃತಿ’ ಸಂಸ್ಮರಣಾ ಗ್ರಂಥವು ಪ್ರಕಟವಾಗುವ ಮೊದಲೇ ಮೇಳದಲ್ಲಿ ಪುಳಿಂಚರ ಒಡನಾಡಿಯಾಗಿದ್ದ ಅರುವ ಕೊರಗಪ್ಪ ಶೆಟ್ಟರನ್ನು ಗೌರವಿಸಿ ಸನ್ಮಾನಿಸಿದ್ದರು. ಅಲ್ಲದೆ ಪ್ರತಿ ವರ್ಷವೂ ವಿವಿಧ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳನ್ನೂ, ಸಾಧಕರನ್ನು ಗುರುತಿಸಿ ಗೌರವಿಸುವುದು, ಯಕ್ಷಗಾನ ಪ್ರದರ್ಶನ ಮೊದಲಾದ ಕಾರ್ಯಕ್ರಮಗಳನ್ನು ಪ್ರತಿಷ್ಠಾನದಡಿ ನಡೆಸುತ್ತಿದ್ದಾರೆ. ಪುಳಿಂಚ ಪ್ರಶಸ್ತಿಯನ್ನು ಮೊದಲು ಸ್ವೀಕರಿಸಿದವರು  ಶ್ರೀ ಅರುವ ಕೊರಗಪ್ಪ ಶೆಟ್ಟರು.(2013) ಬಳಿಕ ಮಿಜಾರು ಅಣ್ಣಪ್ಪ ಹಾಸ್ಯಗಾರ, ಕೊಳ್ಯೂರು ರಾಮಚಂದ್ರ ರಾವ್, ಕುಂಬಳೆ ಸುಂದರ ರಾವ್, ಅನಂತರಾಮ ಬಂಗಾಡಿ, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಕೆ.ಎಚ್. ದಾಸಪ್ಪ ರೈ ಪುಳಿಂಚ ಪ್ರಶಸ್ತಿಗೆ ಭಾಜನರಾಗಿರುತ್ತಾರೆ.

ಪುಳಿಂಚ ಸೇವಾರತ್ನ ಪುರಸ್ಕಾರವನ್ನು ಪಡೆದವರು ಶ್ರೀ ಕೇಪು ಗೌಡ, ನಿವೃತ್ತ ಪೊಲೀಸ್ ಅಧಿಕಾರಿ, ಮತ್ತು ದೈವನರ್ತಕರಾದ ಪದ್ಮ ಪಂಬದ ಅವರುಗಳು. ಪುಳಿಂಚ ಸೇವಾ ಪ್ರತಿಷ್ಠಾನ ಮತ್ತು ಶ್ರೀ ಪುಳಿಂಚ ಶ್ರೀಧರ ಶೆಟ್ಟರಿಂದ ಯಕ್ಷಗಾನ ಕಲಾಸೇವೆಯು ನಿರಂತರವಾಗಿ ನಡೆಯುತ್ತಿರಲಿ. ಕಲಾಮಾತೆಯ ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು. 

ಲೇಖಕ: ರವಿಶಂಕರ್ ವಳಕ್ಕುಂಜ

ಬೀಸು ಕಂಸಾಳೆ – ಕರ್ನಾಟಕದ ವಿಶಿಷ್ಟ  ಜಾನಪದ ಕಲೆ Beesu Kamsale, Popular Folk dance of Karnataka (ಭಾರತದ ಕಲಾವೈವಿಧ್ಯತೆ – ಭಾಗ 2)

ಕಂಸಾಳೆ ಎಂಬುದು ಒಂದು ತಾಳವಾದ್ಯದ ಹೆಸರು. ಆದರೆ ಅದುವೇ ಒಂದು ಜಾನಪದ ಕಲೆಯ ಹೆಸರಾಯಿತು. ಈ ಮನಮೋಹಕ ಕಲಾಪ್ರಾಕಾರದಲ್ಲಿ ಬಳಸುವ ಕಂಸಾಳೆ ಎನ್ನುವ ಈ ತಾಳವೇ ಇದರಲ್ಲಿ ಪ್ರಮುಖವಾದುದು.

ಈ ತಾಳವು ಕಂಚಿನ ಲೋಹದಿಂದ ತಯಾರಿಸಿದ ಗಟ್ಟಿಯಾದ ತಾಳವಾದುದರಿಂದ ಇದಕ್ಕೆ ಕಂಸಾಳೆ ಎಂದು ಹೆಸರು ಬಂತು ಎಂದು ಹೇಳಲಾಗುತ್ತಿದೆ. ಈ ಹೆಸರು ಹೇಗೆ ಬಂತು ಎನ್ನುವುದಕ್ಕೆ ಬೇರೆ ಬೇರೆ ವಾದಗಳಿವೆ. ಅದೇನೇ ಇರಲಿ. ಈ ಕಂಸಾಳೆ ಎಂಬ ವಿಶಿಷ್ಟ ಅಚ್ಚರಿಯ ಕಲೆಯಲ್ಲಿ ಎರಡು ವಿಧಗಳಿವೆ. ಕುಳಿತು ಹಾಡುವ ಕಂಸಾಳೆ ಮತ್ತು ಬೀಸು ಕಂಸಾಳೆ ಎಂಬ ಎರಡು ವಿಧ. 

ಇದಕ್ಕೆ ಪ್ರಾಚೀನ ಕಾಲದಲ್ಲಿ ಹುಲಿ ಹೆಜ್ಜೆ ಕುಣಿತ ಎಂದು ಕರೆಯುತ್ತಿದ್ದರು. ಶಿವ ಮತ್ತು ಶಿವಶರಣರ ಕಥೆಯನ್ನು ಪದ್ಯ ಹಾಗೂ ಗದ್ಯ ರೂಪದಲ್ಲಿ ಹಾಡುತ್ತಾ ತಾಳ ಮತ್ತು ನೃತ್ಯದ ಜೊತೆಗೆ ಪ್ರಸ್ತುತಪಡಿಸುವುದೇ ಬೀಸು ಕಂಸಾಳೆಯ ವಿಶೇಷತೆ. ಮಲೆ  ಮಹದೇಶ್ವರನ ಭಕ್ತರು ಮಲೆ ಮಹದೇಶ್ವರನ ಬೆಟ್ಟಕ್ಕೆ ಅರಣ್ಯ ಮಾರ್ಗವಾಗಿ ದುರ್ಗಮ ಹಾದಿಗಳಲ್ಲಿ ಸಂಚರಿಸಬೇಕಾಗಿತ್ತು.

ಆಗ ಕ್ರೂರ ಪ್ರಾಣಿಗಳ ಮೇಲಿನ ಭಯದಿಂದ ದೊಡ್ಡ ದೊಡ್ಡ ಬೀಸು ಹೆಜ್ಜೆಗಳನ್ನು ಹಾಕುತ್ತಾ ಕಂಚಿನ ತಾಳವನ್ನು ಬಡಿಯುತ್ತಾ ಮಹದೇಶ್ವರನ ಮಹಿಮೆಯನ್ನು ಹಾಡುತ್ತಾ ಸಾಗುತ್ತಿದ್ದರಂತೆ. ಕಂಸಾಳೆ ಕಲಾವಿದರಿಗೆ ಮಹದೇಶ್ವರನ ಮಹಿಮೆ ಹಾಗೂ ಕತೆಗಳು ಕಂಠಪಾಠ. ಬೀಸು ಕಂಸಾಳೆಯಲ್ಲಿ ತಾಳಕ್ಕೆ ಉದ್ದವಾದ ದಾರವನ್ನು ಕಟ್ಟಿರುತ್ತಾರೆ.

ಈ ದಾರವನ್ನು ಹಿಡಿದು ಬೀಸುತ್ತಾ ತಾಳ ಹಾಕುತ್ತಾ ನೃತ್ಯ ಮಾಡುವ ದೃಶ್ಯ ರೋಮಾಂಚನ ಉಂಟುಮಾಡುತ್ತದೆ. ತಾಳ ತಪ್ಪದೆ ನೃತ್ಯದ ಹೆಜ್ಜೆಯೂ ತಪ್ಪದಂತೆ ವಿಧ ವಿಧವಾದ ಕಸರತ್ತುಗಳನ್ನು ಮಾಡುತ್ತಾ ನೀಡುವ ಪ್ರದರ್ಶನವನ್ನು ನೋಡಿದಷ್ಟೂ ಸಾಕೆನಿಸುವುದಿಲ್ಲ. 

ಕಲ್ಯಾಣ ಪ್ರಸಂಗಗಳು – ಶ್ರೀ ಮನ್ಮಧ್ವಸಿದ್ಧಾಂತ ಗ್ರಂಥಾಲಯ, ಉಡುಪಿ 

ಶೀರ್ಷಿಕೆಯೇ ಸೂಚಿಸುವಂತೆ  ಕೃತಿಯು ಕಲ್ಯಾಣ ಪ್ರಸಂಗಗಳನ್ನು ಒಳಗೊಂಡ ಸಂಪುಟವು. ಹಟ್ಟಿಯಂಗಡಿ ರಾಮ ಭಟ್ಟ ವಿರಚಿತ ಸುಭದ್ರಾ ಕಲ್ಯಾಣ, ದೇವಿದಾಸ ವಿರಚಿತ ಗಿರಿಜಾ ಕಲ್ಯಾಣ, ಚೋರಾಡಿ ವೆಂಕಟರಮಣ ಭಟ್ಟ ವಿರಚಿತ ಜಾಂಬವತಿ ಕಲ್ಯಾಣ ಮತ್ತು ಹಟ್ಟಿಯಂಗಡಿ ರಾಮ ಭಟ್ಟ  ವಿರಚಿತ ರತಿಕಲ್ಯಾಣ ಎಂಬ ನಾಲ್ಕು ಪ್ರಸಂಗಗಳು ಈ ಪುಸ್ತಕದಲ್ಲಿವೆ. ಇದು ಪ್ರಕಟವಾದುದು 2004ನೇ ಇಸವಿಯಲ್ಲಿ. ಪ್ರಕಾಶಕರು ಶ್ರೀ ಮನ್ಮಧ್ವಸಿದ್ಧಾಂತ ಗ್ರಂಥಾಲಯ, ಉಡುಪಿ. ಸದ್ರಿ ಸಂಸ್ಥೆಯ ಮೊದಲ ಯಕ್ಷಗಾನ ಪ್ರಸಂಗ ಸಂಪುಟವಿದು. ಸಂಕಲನ ಮತ್ತು ಪ್ರಸ್ತಾವನೆ ವಿದ್ವಾಂಸರಾದ ಡಾ. ಪಾದೇಕಲ್ಲು ವಿಷ್ಣು ಭಟ್ಟರಿಂದ. ಪ್ರಸ್ತಾವನೆ ಎಂಬ ಶೀರ್ಷಿಕೆಯಡಿ ತಮ್ಮಲೇಖನದಲ್ಲಿ ಡಾ. ಪಾದೇಕಲ್ಲು ವಿಷ್ಣು ಭಟ್ಟರು ಸಂಪುಟದಲ್ಲಿರುವ ಕಲ್ಯಾಣ ಪ್ರಸಂಗಗಳ ಕಥಾಸರವನ್ನೂ ಪ್ರಸಂಗಗಳನ್ನು ಬರೆದ ಕವಿಗಳ ಪರಿಚಯವನ್ನೂ ನೀಡಿರುತ್ತಾರೆ. ಅಲ್ಲದೆ ಉಡುಪಿಯ ಶ್ರೀ ಮನ್ಮಧ್ವಸಿದ್ಧಾಂತ ಗ್ರಂಥಾಲಯದ ಯಕ್ಷಗಾನ ಸಂಬಂಧೀ ಸತ್ಕಾರ್ಯಗಳನ್ನು ತಿಳಿಸಿ ಶ್ಲಾಘಿಸಿದ್ದಾರೆ. ಕಲ್ಯಾಣ ಪ್ರಸಂಗಗಳು ಎಂಬ ಈ ಸಂಪುಟವು ಅಧ್ಯಯನಾಕಾಂಕ್ಷಿಗಳಿಗೆ, ಯಕ್ಷಗಾನ ಪ್ರಿಯರಿಗೆ ಅನುಕೂಲವಾದೀತು ಮತ್ತು ಜನತೆ ಈ ಪುಸ್ತಕವನ್ನು ಮೆಚ್ಚಿಕೊಳ್ಳುತ್ತಾರೆ ಎಂಬ ವಿಚಾರವನ್ನು ಡಾ. ಪಾದೇಕಲ್ಲು ವಿಷ್ಣು ಭಟ್ಟರು ಕಾರಣ ಸಹಿತವಾಗಿ ಸೂಚಿಸಿರುತ್ತಾರೆ. ಕಲಾವಿದರಿಗೆ ಈ ಸಂಪುಟವು ಅನುಕೂಲವಾಗಿದೆ ಎಂಬುದು ಕಲಾವಿದನಾಗಿ ನನ್ನ ಅನುಭವದ ಅನಿಸಿಕೆ.   

ಯಕ್ಷಗಾನ ಕಲಾರಂಗ (ರಿ.) ಉಡುಪಿ 45ನೇ ವಾರ್ಷಿಕ ಮಹಾಸಭೆ

ಯಕ್ಷಗಾನ ಕಲಾರಂಗದ 45ನೇ ವಾರ್ಷಿಕ ಮಹಾಸಭೆ ಕೆ.ಗಣೇಶ್ ರಾವ್ ರವರ ಅಧ್ಯಕ್ಷೆಯಲ್ಲಿ ಶ್ರೀ ರಾಮವಿಠಲ ಸಭಾಭವನದಲ್ಲಿ ಸೆಪ್ಟೆಂಬರ್ 26, 2020ರಂದು ಜರಗಿತು. ರಾಜೇಶ್ ನಾವುಡರ ಪ್ರಾರ್ಥನೆಯೊಂದಿಗೆ ಆರಂಭವಾದ ಸಭೆಯಲ್ಲಿ ವರದಿ ವರ್ಷದ ಅಗಲಿದ ವ್ಯಕ್ತಿಗಳಿಗೆ ಉಪಾಧ್ಯಕ್ಷರಾದ ಎಸ್.ವಿ ಭಟ್ ರವರು ನುಡಿನಮನ ಸಲ್ಲಿಸಿದರು. ಕೆ. ಗಣೇಶ್ ರಾವ್ ಸ್ವಾಗತಿಸಿದರು. ಜತೆಕಾರ್ಯದರ್ಶಿ ನಾರಾಯಣ ಎಂ.ಹೆಗಡೆ ಗತ ಸಭೆಯ ವರದಿಯನ್ನೂ, ಕಾರ್ಯದರ್ಶಿ ಮುರಲಿ ಕಡೆಕಾರ್ ವಾರ್ಷಿಕ ವರದಿಯನ್ನು ಹಾಗೂ ಕೋಶಾಧಿಕಾರಿ ಕೆ. ಮನೋಹರ್ ಮತ್ತು ಪ್ರೊ. ಕೆ ಸದಾಶಿವರಾವ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಕೆ. ರಾಜಾರಾಮ ಶೆಟ್ಟರನ್ನು ಲೆಕ್ಕಪರಿಶೋಧಕರಾಗಿ ಆರಿಸಲಾಯಿತು. ಬಳಿಕ 25 ಜನ ಕಾರ್ಯಕಾರೀ ಸಮಿತಿ ಸದಸ್ಯರನ್ನು ಹಾಗೂ ಆಹ್ವಾನಿಸರನ್ನು ಆಯ್ಕೆಮಾಡಲಾಯಿತು. ಕೆ. ಗಣೇಶ್ ರಾವ್ ಅಧ್ಯಕ್ಷೀಯ ಮಾತುಗಳನ್ನಾಡಿದ ಬಳಿಕ ಜತೆಕಾರ್ಯದರ್ಶಿ ಎಚ್.ಎನ್. ಶೃಂಗೇಶ್ವರ ಧನ್ಯವಾದ ಸಮರ್ಪಿಸಿದರು.

ಮುರಲಿ ಕಡೆಕಾರ್ ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷರಾಗಿ ಪುನರಾಯ್ಕೆ


ಅಂಬಲಪಾಡಿಯ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಮಂಡಳಿಯ 62ನೇ ವಾರ್ಷಿಕ ಮಹಾಸಭೆ ಮುರಲಿ ಕಡೆಕಾರ್ ಅಧ್ಯಕ್ಷತೆಯಲ್ಲಿ ಸೆಪ್ಟಂಬರ್ 27, 2020ರಂದು ಜರಗಿತು. ಪ್ರಕಾಶ್ ಹೆಬ್ಬಾರ್ ಗತಸಭೆ ವರದಿ ಮಂಡಿಸಿದರು. ಕೆ.ಜೆ. ಕೃಷ್ಣ ವಾರ್ಷಿಕ ವರದಿ ಮಂಡಿಸಿದರು. ಎ. ನಟರಾಜ ಉಪಾಧ್ಯರು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಸಿ.ಎ ಗಣೇಶ್ ಹೆಬ್ಬಾರ್ ಅವರನ್ನು ಲೆಕ್ಕಪರಿಶೋಧಕರಾಗಿ ನಿಯುಕ್ತಿಗೊಳಿಸಲಾಯಿತು. 2020-21ನೇ ಸಾಲಿಗೆ ಈ ಕೆಳಗಿನ ಆಡಳಿತ ಮಂಡಳಿಯನ್ನು ಆರಿಸಲಾಯಿತು.
ಅಧ್ಯಕ್ಷ : ಮುರಲಿ ಕಡೆಕಾರ್, ಉಪಾಧ್ಯಕ್ಷ : ಕೆ. ಅಜಿತ್ ಕುಮಾರ್, ಕಾರ್ಯದರ್ಶಿ : ಕೆ.ಜೆ ಕೃಷ್ಣ, ಜತೆಕಾರ್ಯದರ್ಶಿ : ಪ್ರಕಾಶ್ ಹೆಬ್ಬಾರ್, ಕೋಶಾಧಿಕಾರಿ : ಎ. ನಟರಾಜ ಉಪಾಧ್ಯ, ಸದಸ್ಯರು : ಕೆ.ಜೆ ಗಣೇಶ್, ಡಾ. ಗಣಪತಿ ಭಟ್, ಪ್ರವೀಣ್ ಉಪಾಧ್ಯ, ನಾರಾಯಣ ಎಂ. ಹೆಗಡೆ, ಮಂಜುನಾಥ ತೆಂಕಿಲ್ಲಾಯ, ಜಯ.ಕೆ, ಮಾಧವ ಕೆ., ರಮೇಶ ಸಾಲಿಯಾನ್, ಕೆ.ಜೆ ಸುಧೀಂದ್ರ, ವಸಂತ ಪಾಲನ್
ಸಲಹಾ ಸಮಿತಿ : ಎಸ್.ವಿ ಭಟ್, ಶ್ರೀರಮಣ ಆಚಾರ್ಯ, ವಿಜಯ್ ಕುಮಾರ್, ವಿಠಲ ಗಾಣಿಗ, ವಿದ್ಯಾಪ್ರಸಾದ್, ಜಗದೀಶ, ಅರವಿಂದ ಆಚಾರ್ಯ, ಪ್ರಶಾಂತ್ ಕೆ.ಎಸ್, ಸುನೀಲ್, ನಚಿಕೇತ
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಮುರಲಿ ಕಡೆಕಾರ್ ಮಾತನಾಡಿ ಸಂಸ್ಥೆಯ ನೂತನ ಕಟ್ಟಡ ಇನ್ನು ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಮುಂದೆ ಅದರಲ್ಲಿ ನಿರಂತರ ಕಲಾ ಚಟುವಟಿಕೆಗಳನ್ನು ನಡೆಸುವ ಹೊಣೆಗಾರಿಕೆ ನಮ್ಮೆಲ್ಲರಿಗಿದೆ ಎಂದು ನುಡಿದರು. ಕಾರ್ಯದರ್ಶಿ ಕೆ.ಜೆ ಕೃಷ್ಣ ಧನ್ಯವಾದ ಸಮರ್ಪಿಸಿದರು.

ಯಕ್ಷಗಾನ ಕಲಾರಂಗದ ಅಧ್ಯಕ್ಷರಾಗಿ ಎಂ. ಗಂಗಾಧರ ರಾವ್ ಆಯ್ಕೆ

ಉಡುಪಿಯ ಹಿರಿಯ ಸಾಂಸ್ಕೃತಿಕ ಸಂಘಟನೆ ಯಕ್ಷಗಾನ ಕಲಾರಂಗದ 45ನೇ ಮಹಾಸಭೆಯಲ್ಲಿ ಆಯ್ಕೆಯಾದ ಕಾರ್ಯಕಾರಿ ಸಮಿತಿಯು ಸೆಪ್ಟಂಬರ್ 28, 2020ರಂದು ಸಭೆ ನಡೆಸಿ ಎಂ. ಗಂಗಾಧರ್ ರಾವ್ ಇವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿತು. 2020-21ನೇ ಸಾಲಿಗೆ ಆಯ್ಕೆಗೊಂಡ ಪದಾಧಿಕಾರಿಗಳು.
ಉಪಾಧ್ಯಕ್ಷರು : ಎಸ್.ವಿ.ಭಟ್, ಪಿ.ಕಿಶನ್ ಹೆಗ್ಡೆ, ವಿ.ಜಿ.ಶೆಟ್ಟಿ, ಕಾರ್ಯದರ್ಶಿ: ಮುರಲಿ ಕಡೆಕಾರ್, ಜತೆಕಾರ್ಯದರ್ಶಿಗಳು : ನಾರಾಯಣ ಎಂ.ಹೆಗಡೆ, ಎಚ್.ಎನ್. ಶೃಂಗೇಶ್ವರ, ಕೋಶಾಧಿಕಾರಿ : ಮನೋಹರ ಕೆ., ಸದಸ್ಯರು : ಕೆ. ಗಣೇಶ್ ರಾವ್, ತಲ್ಲೂರು ಶಿವರಾಮ ಶೆಟ್ಟಿ, ಬಿ.ನಾರಾಯಣ, ಪ್ರೊ. ಕೆ. ಸದಾಶಿವ ರಾವ್, ಪ್ರೊ.ಎಂ.ಎಲ್.ಸಾಮಗ, ಗಣರಾಜ್ ಭಟ್, ಭುವನಪ್ರಸಾದ್ ಹೆಗ್ಡೆ, ಕೆ.ಎಸ್ ಸುಬ್ರಹ್ಮಣ್ಯ ಬಾಸ್ರಿ, ಅನಂತರಾಜ ಉಪಾಧ್ಯ, ಎಚ್.ಎನ್.ವೆಂಕಟೇಶ್, ವಿಜಯ್ ಕುಮಾರ್ ಮುದ್ರಾಡಿ, ಎ. ನಟರಾಜ ಉಪಾಧ್ಯ, ಕೆ. ಅಜಿತ್ ಕುಮಾರ್, ವಿದ್ಯಾಪ್ರಸಾದ್, ಅಶೋಕ್ ಎಂ, ದಿನೇಶ್ ಪಿ. ಪೂಜಾರಿ, ರಾಜೇಶ್ ನಾವಡ,
ಆಹ್ವಾನಿತರು : ಕೆ. ಗೋಪಾಲ, ರಮೇಶ್ ರಾವ್, ಗಣೇಶ್ ಬ್ರಹ್ಮಾವರ, ಪೃಥ್ವಿರಾಜ್ ಕವತ್ತಾರ್, ಕೆ. ಆನಂದ ಶೆಟ್ಟಿ, ನಾಗರಾಜ ಹೆಗಡೆ, ರಾಜೀವಿ, ಸಂತೋಷ್ ಕುಮಾರ್ ಶೆಟ್ಟಿ, ಕೃಷ್ಣಮೂರ್ತಿ ಭಟ್ ಪುತ್ತೂರು, ಡಾ. ಶೈಲಜಾ, ಕಿಶೋರ್. ಸಿ. ಉದ್ಯಾವರ, ಪ್ರಸಾದ್ ರಾವ್ ಪುತ್ತೂರು, ಸುದರ್ಶನ ಬಾಯರಿ, ಗಣೇಶ್ ರಾವ್ ಎಲ್ಲೂರು, ರಮಾನಾಥ ಶ್ಯಾನುಭಾಗ.

ಪುಚ್ಚೆಕೆರೆ ಕೃಷ್ಣ ಭಟ್ಟ (ಜೀವನ-ಸಾಧನೆ)

‘ಪುಚ್ಚೆಕೆರೆ ಕೃಷ್ಣ ಭಟ್ಟ.  ಜೀವನ-ಸಾಧನೆ’ ಎಂಬ ಈ ಕೃತಿಯು ಲೋಕಾರ್ಪಣೆಗೊಂಡು ಓದುಗರ ಕೈ ಸೇರಿದ್ದು 2017ರಲ್ಲಿ. ಈ ಹೊತ್ತಗೆಯ ಪ್ರಕಾಶಕರು ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ (ರಿ) ಉಜಿರೆ ಎಂಬ ಸಂಸ್ಥೆಯು. ಸಂಪಾದಕರು ಖ್ಯಾತ ತಾಳಮದ್ದಳೆ ಅರ್ಥಧಾರಿ, ವೇಷಧಾರಿ, ಯಕ್ಷಗಾನ ಸಂಘಟಕ, ಶ್ರೀ ಉಜಿರೆ ಎನ್. ಅಶೋಕ ಭಟ್ಟರು. ಕಟೀಲು ಶಾಲೆಯ ಮುಖ್ಯೋಪಾಧ್ಯಾಯರಾಗಿ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳ ಸಂಘಟಕರಾಗಿ ಯಕ್ಷಗಾನ ಕಲಾಪ್ರಿಯರಾಗಿ ಶ್ರೀಯುತರು ಸರ್ವರಿಗೂ ಪ್ರಿಯರಾಗಿದ್ದವರು. ಸರಳ, ಸಜ್ಜನ, ಸಹೃದಯೀ ವ್ಯಕ್ತಿತ್ವವನ್ನು ಹೊಂದಿ ಅಜಾತಶತ್ರು ಎನಿಸಿಕೊಂಡಿದ್ದರು. ಶ್ರೀಯುತರ ಕುರಿತಾಗಿ ಹಿಂದೊಂದು ಲೇಖನವನ್ನು ಬರೆಯುವ ಅವಕಾಶವಾಗಿತ್ತು. ಅವರ ಕುರಿತಾದ ಈ ಪುಸ್ತಕದ ಬಗ್ಗೆ ಬರೆಯಲೂ ಸಂತೋಷಪಡುತ್ತೇನೆ.  ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ (ರಿ) ಉಜಿರೆ ಎಂಬ ಸಂಸ್ಥೆಯ ಸಂಚಾಲಕರೂ, ಈ ಪುಸ್ತಕದ ಸಂಪಾದಕರೂ ಆದ ಶ್ರೀ ಉಜಿರೆ ಎನ್. ಅಶೋಕ ಭಟ್ಟರು ‘ಅರಿಕೆ-ನೆನವರಿಕೆ’ ಎಂಬ ಬರಹದಲ್ಲಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿ ಸಹಕರಿಸಿದ ಎಲ್ಲರನ್ನೂ ನೆನಪಿಸಿರುತ್ತಾರೆ. ಬಳಿಕ ಇಪ್ಪತ್ತಾರು ಮಂದಿ ಮಹನೀಯರುಗಳ ಲೇಖನಗಳನ್ನು ನೀಡಲಾಗಿದೆ. ಲೇಖನಗಳನ್ನು ಬರೆದವರು ಡಾ. ಎಂ. ಪ್ರಭಾಕರ ಜೋಶಿ, ಕೆ. ಲಕ್ಷ್ಮೀನಾರಾಯಣ ಅಸ್ರಣ್ಣ, ದೂಮಣ್ಣ ರೈ ಪಿ. ಮಂಚಿ, ಉಜಿರೆ ಅಶೋಕ ಭಟ್, ಗಣಪತಿ ಭಟ್ ಬೆತ್ತಸರವು, ವೈ. ಗೋಪಾಲ ಶೆಟ್ಟಿ ಕಟೀಲು, ಕುರಿಯ ಗಣಪತಿ ಶಾಸ್ತ್ರಿ, ಕೆ. ಗೋವಿಂದ ಭಟ್ಟ, ಭುವನಾಭಿರಾಮ ಉಡುಪ, ನಾ. ಕಾರಂತ ಪೆರಾಜೆ, ಸೇರಾಜೆ ಸೀತಾರಾಮ ಭಟ್ಟ, ವಾಸುದೇವ ಶೆಣೈ ಕಟೀಲು, ಸುಣ್ಣಂಬಳ ವಿಶ್ವೇಶ್ವರ ಭಟ್, ವಾಟೆಪಡ್ಪು ವಿಷ್ಣು ಶರ್ಮ, ರೆಂಜಾಳ ರಾಮಕೃಷ್ಣ ರಾವ್, ಬೆಳ್ಳಾರೆ ಮಂಜುನಾಥ ಭಟ್, ಪು. ಗುರುಪ್ರಸಾದ್ ಭಟ್ ಕಟೀಲು, ಎನ್. ಸವಿತಾ ಕೃಷ್ಣ ಭಟ್ ಕೋಕಳ, ಶ್ರೀಮತಿ ಅನಿತಾ ನರೇಶ್ ಮಂಚಿ, ಪಿ.ಕೆ. ವೆಂಕಟ್ರಮಣ ಭಟ್, ಶ್ರೀಕೃಷ್ಣ ಭಟ್ ಮಾದಕಟ್ಟೆ, ವಿದುಷಿ ಶ್ರೀಮತಿ ಪಾರ್ವತಿ ಭಟ್, ಶ್ರೀಮತಿ ವಸಂತಲಕ್ಷ್ಮಿ, ಶ್ರೀಮತಿ ಅನುರಾಧ, ವಿ. ಮಹೇಶ್ ಕುಮಾರ್ ಕನ್ಯಾನ, ದೀಪ್ತಿ ಪಟಿಕ್ಕಲ್ಲು ಇವರುಗಳು. ವಿದ್ವಾಂಸರಾದ ಪುಚ್ಚೆಕೆರೆ ಕೃಷ್ಣ ಭಟ್ಟರ ಬಗ್ಗೆ ಬರೆದ ಲೇಖನಗಳನ್ನು ನೀಡಲಾಗಿದೆ. ಬಳಿಕ ಪುಚ್ಚೆಕೆರೆ ಕೃಷ್ಣ ಭಟ್ಟರ ಬಗ್ಗೆ ಈ ಹಿಂದೆ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ನಾಲ್ಕು ಬರಹಗಳನ್ನು ನೀಡಲಾಗಿದೆ. ಬರೆದವರು ಡಾ. ರಾಧಾಕೃಷ್ಣ ಭಟ್ ಪೆರ್ಲ, ಎಲ್. ಎನ್. ಭಟ್ ಮಳಿ, ಪದ್ಮನಾಭ ಕಟೀಲು, ದುಬೈ, ಡಾ. ಎಂ. ಪ್ರಭಾಕರ ಜೋಶಿ. ಬಳಿಕ  ಪುಚ್ಚೆಕೆರೆ ಶ್ರೀ ಕೃಷ್ಣ ಭಟ್ಟರು ಪಡೆದ ಪ್ರಶಸ್ತಿ, ಸನ್ಮಾನ, ಪುರಸ್ಕಾರ, ಗೌರವಾರ್ಪಣೆ, ಅಭಿನಂದನೆಗಳ ವಿವರಗಳನ್ನೂ ನೀಡಿರುತ್ತಾರೆ. ಈ ಪುಸ್ತಕದಲ್ಲಿ ಸುಮಾರು ಹದಿನೈದು ಛಾಯಾಚಿತ್ರಗಳನ್ನು ನೀಡಲಾಗಿದ್ದು ಹೊರ ಆವರಣದಲ್ಲಿ ವಿದ್ವಾನ್ ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯರು  ಪುಚ್ಚೆಕೆರೆ ಕೃಷ್ಣ ಭಟ್ಟರ ಬಗೆಗೆ ಆಡಿದ ನಲ್ನುಡಿಗಳನ್ನು ನೀಡಲಾಗಿದೆ. ಪುಚ್ಚೆಕೆರೆ ಕೃಷ್ಣ ಭಟ್ಟ ಶ್ರೇಷ್ಠ ವ್ಯಕ್ತಿತ್ವ, ಉತ್ತಮ ಪುಸ್ತಕ. ಇದು ಅವರಿಗೆ ಅರ್ಪಿಸಿದ ಗೌರವವೇ ಹೌದು. 

ಲೇಖಕ: ರವಿಶಂಕರ್ ವಳಕ್ಕುಂಜ 

ಡಾ. ಶಿವರಾಮ ಕಾರಂತ ಸಂಸ್ಮರಣ ಯಕ್ಷಗಾನ ಪ್ರಸಂಗ ಮಾಲಿಕೆ – ಕಿರಿಯ ಬಲಿಪ ನಾರಾಯಣ ಭಾಗವತರ ಕೃತಿಗಳು

ಈ ಕೃತಿಯು ತೆಂಕುತಿಟ್ಟಿನ ಹಿರಿಯ ಶ್ರೇಷ್ಠ ಭಾಗವತರಾದ  ಕಿರಿಯ ಬಲಿಪ ನಾರಾಯಣ ಭಾಗವತರು ರಚಿಸಿರುವ ಐದು ಯಕ್ಷಗಾನ ಪ್ರಸಂಗಗಳನ್ನು ಒಳಗೊಂಡ ಸಂಪುಟವು. ಡಾ. ಶಿವರಾಮ ಕಾರಂತ  ಸಂಸ್ಮರಣ ಯಕ್ಷಗಾನ ಪ್ರಸಂಗ ಮಾಲಿಕೆಯಾಗಿ ಈ ಸಂಪುಟವು ಪ್ರಕಟವಾಗಿರುವುದು ಸಂತೋಷದ ವಿಚಾರ. ಇದು ಯಕ್ಷಗಾನಕ್ಕೆ ಅನುಪಮ ಕೊಡುಗೆಗಳನ್ನು ನೀಡಿದ, ಮೇರು ವ್ಯಕ್ತಿತ್ವವನ್ನು ಹೊಂದಿದ ಡಾ. ಶಿವರಾಮ ಕಾರಂತರಿಗೆ ಸಲ್ಲಿಸಿದ ಗೌರವವೇ ಹೌದು. ಈ ಪ್ರಸಂಗ ಮಾಲಿಕೆಯ ಪ್ರಕಾಶಕರು ಪದವೀಧರ ಯಕ್ಷಗಾನ ಸಮಿತಿ ಮುಂಬಯಿ. ಸಂಪಾದಕರು ಶ್ರೀ ಎಚ್. ಬಿ. ಎಲ್. ರಾವ್ ಅವರು. ಸಹಕಾರವನ್ನು ನೀಡಿದವರು ಶ್ರೀ ಪು. ಶ್ರೀನಿವಾಸ ಭಟ್, ಕಟೀಲು ಮತ್ತು ಶ್ರೀ ಕೊಡೆತ್ತೂರು ಭುವನಾಭಿರಾಮ ಉಡುಪ ಅವರುಗಳು. ಮುನ್ನುಡಿಯನ್ನು ಬರೆದವರು ವಿದ್ವಾಂಸರಾದ ಡಾ. ಎಂ. ಪ್ರಭಾಕರ ಜೋಶಿ ಅವರು. ಅತ್ಯುತ್ತಮ ಪ್ರಸಂಗಗಳನ್ನು ಹೊಂದಿದ ಒಳ್ಳೆಯ ಸಂಪುಟವನ್ನು ಹೊರತರಲು ಕಾರಣರಾದವರನ್ನು ಡಾ. ಪ್ರಭಾಕರ ಜೋಶಿ ಅವರು ತಮ್ಮ ಮುನ್ನುಡಿ ಲೇಖನದಲ್ಲಿ ಅಭಿನಂದಿಸಿ ಶುಭ ಹಾರೈಸಿದ್ದಾರೆ. ಸಂಗ್ರಾಹಕರು ಸಹಕರಿಸಿದ ಮಹನೀಯರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಈ ಪ್ರಸಂಗ ಮಾಲಿಕೆಯು ಪ್ರಕಟವಾದುದು 1998ರಲ್ಲಿ ಈ ಸಂಪುಟದಲ್ಲಿ  ಕಿರಿಯ ಬಲಿಪ ನಾರಾಯಣ ಭಾಗವತರು ಬರೆದ ಅಮೃತಾಪಹರಣಂ (ಗರುಡೋದ್ಭವ), ಕಂತುಕಾವತೀ ಕಲ್ಯಾಣ (ಧರ್ಮಗುಪ್ತ ವಿಜಯ ), ನವಗ್ರಹ ಮಹಾತ್ಮೆ, ದೇವಾಂಗ ಮದನಿಕೆ (ಕಾಳಿಂದಿ ವಿವಾಹ), ಮತ್ಸ್ಯಾವತಾರ ಕೇತಕೀ ಶಾಪ ಎಂಬ ಐದು ಪ್ರಸಂಗಗಳಿವೆ. ಜತೆಗೆ ಪ್ರಸಂಗದಲ್ಲಿ ಪಾತ್ರಗಳ ವಿವರಗಳನ್ನೂ ನೀಡಲಾಗಿದೆ. ಇದು ಸುಮಾರು ನೂರಾ ಎಪ್ಪತ್ತು ಪುಟಗಳಿಂದ ಕೂಡಿದ ಪ್ರಸಂಗ ಸಂಪುಟ. ಪದವೀಧರ ಯಕ್ಷಗಾನ ಸಮಿತಿ, ಮುಂಬಯಿ ಈ ಸಂಸ್ಥೆಯು ಪ್ರಕಟಿಸಿದ ಹದಿನೈದನೇ ಪ್ರಸಂಗ ಸಂಪುಟವಿದು. ಎಲ್ಲವೂ ಚಾಲ್ತಿಯಲ್ಲಿರುವ ಪ್ರಸಂಗಗಳು.

ಲೇಖಕ: ರವಿಶಂಕರ ವಳಕ್ಕುಂಜ 

ಹಗಲು ವೇಷ – ಕರ್ನಾಟಕದ ವಿಶಿಷ್ಟ  ಜಾನಪದ ಕಲೆ Hagalu Vesha, Folk Art of Karnataka (ಭಾರತದ ಕಲಾವೈವಿಧ್ಯತೆ – ಭಾಗ 1)

‘ಹಗಲು ವೇಷ’ ಎಂಬುದು ಕರ್ನಾಟಕದ ಒಂದು ವಿಶಿಷ್ಟ ಜಾನಪದ ಕಲೆ. ಇದು ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿಯೂ ‘ಪಗತಿ ವೇಷಂ’ ಎಂಬ ಹೆಸರಿನಲ್ಲಿಯೂ ಪ್ರದರ್ಶಿಸಲ್ಪಡುತ್ತದೆ. ಇದು ಹೆಚ್ಚಾಗಿ ಒಂದು ಪ್ರವಾಸಿ ಕಲಾವಿದರ ತಂಡವಾಗಿದ್ದು ಅಲ್ಲಲ್ಲಿ ತೆರೆದ ಸ್ಥಳಗಳಲ್ಲಿ ಪ್ರದರ್ಶನ ನೀಡುತ್ತಾರೆ. ಯಾವುದೇ ರಂಗಸಜ್ಜಿಕೆಯಿಲ್ಲದೆ ನೆಲದ ಮೇಲೆ ಪ್ರದರ್ಶನಗಳನ್ನು ನೀಡುತ್ತಾರೆ. ಹೆಸರೇ ಸೂಚಿಸುವಂತೆ ಇದು ಹಗಲಿನಲ್ಲಿ ಪ್ರದಶನಗೊಳ್ಳುವ ಕಲೆ. ಪೌರಾಣಿಕ ಕಥೆಗಳನ್ನೇ ಹೆಚ್ಚಾಗಿ ಪ್ರದರ್ಶನಕ್ಕೆ ಅಳವಡಿಸುವುದರಿಂದ ಅದಕ್ಕೆ ಬೇಕಾದ ಪರಿಕರಗಳಾದ ಬಣ್ಣಗಾರಿಕೆ, ವೇಷಭೂಷಣಗಳು, ಆಯುಧಗಳು ಎಲ್ಲವನ್ನೂ ಈ ‘ಹಗಲು ವೇಷ’ ಎಂಬ ಕಲೆಯಲ್ಲಿ ಸಮರ್ಥವಾಗಿ ಬಳಸಿಕೊಳ್ಳಲಾಗುತ್ತದೆ. ಈ ಕಲೆಯಲ್ಲಿ ಯಾವುದೇ ಬರೆದು ಸಿದ್ಧಪಡಿಸಿದ ಪಾಠಾಕ್ಷರಗಳಿರುವುದಿಲ್ಲ. ಹಾಡುಗಾರನು ಹಾರ್ಮೋನಿಯಂ ಜೊತೆಗೆ ಹಾಡಿದ ಹಾಡಿಗೆ ತಬಲಾ ಸಾಥ್ ಇರುತ್ತದೆ. ಕಲಾವಿದರ ತಂಡವು ಸ್ಥಳದಿಂದ ಸ್ಥಳಕ್ಕೆ ತೆರಳುತ್ತಾ ಆಯಾ ಪ್ರದೇಶಗಳಲ್ಲಿ ತಮ್ಮ ಡೇರೆಯ ಬಿಡಾರಗಳನ್ನು ನಿರ್ಮಿಸಿ ಪ್ರದರ್ಶನಗಳನ್ನು ನೀಡುತ್ತಾರೆ. ಕೆಲವೊಮ್ಮೆ ಪೌರಾಣಿಕ ಕಥೆಗಳಲ್ಲದೆ ದೈನಂದಿನ ಜೀನಕ್ಕೆ ಸಂಬಂಧಪಟ್ಟ ಸಾಮಾಜಿಕ ಕತೆಗಳನ್ನೂ ಇತಿಹಾಸದ ಕತೆಗಳನ್ನೂ ಪ್ರದರ್ಶಿಸಲಾಗುತ್ತದೆ. ಪುರುಷರೇ ಕಲಾವಿದರಾಗಿ ಪಾತ್ರಗಳನ್ನು ನಿರ್ವಹಿಸುವ ಪರಂಪರೆಯು ಈ ಜಾನಪದ ಕಲೆಗಿತ್ತು. ಮೊದಲೆಲ್ಲಾ ಸ್ತ್ರೀ ಪಾತ್ರಗಳನ್ನೂ ಪುರುಷರೇ ನಿರ್ವಹಿಸುತ್ತಿದ್ದರು. ಇದೊಂದು  ಆಕರ್ಷಕವೂ ರಂಜನೀಯವೂ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲೆಯೂ ಆಗಿದೆ. 

ಎಸ್. ಪಿ. ಬಾಲಸುಬ್ರಹ್ಮಣ್ಯಂ ಅಗಲಿಕೆಗೆ ದುಃಖಿಸಿದ ಎಸ್. ಜಾನಕಿ  

ಎಸ್. ಪಿ. ಬಾಲಸುಬ್ರಹ್ಮಣ್ಯಂ ಮತ್ತು ತಮ್ಮ ಒಡನಾಟದ ಬಗ್ಗೆ ಜನಪ್ರಿಯ ಗಾಯಕಿ ಎಸ್. ಜಾನಕಿ ಭಾವನಾತ್ಮಕವಾಗಿ ಮಾತನಾಡಿದರು.