Monday, January 20, 2025
Home Blog Page 363

ವಸಂತ ಗೌಡ ಕಾಯರ್ತಡ್ಕ (ಯಕ್ಷದೀಪ – ಕಲಾವಿದರ ಮಾಹಿತಿ) Vasantha Gowda Kayarthadka

ಹೆಸರು:   ವಸಂತ ಗೌಡ ಕಾಯರ್ತಡ್ಕ   
ಪತ್ನಿ:  ಶ್ರೀಮತಿ ಗೀತ  
ಜನನ:   1962ನೇ ಇಸವಿ ಸೆಪ್ಟಂಬರ್ 1ನೇ ತಾರೀಕು    
ಜನನ ಸ್ಥಳ:    ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ ಕಾಯರ್ತಡ್ಕ     
ತಂದೆ ತಾಯಿ:  ತಂದೆ ಶ್ರೀ  ಬಿರ್ಮಣ್ಣ ಗೌಡ . ತಾಯಿ ಶ್ರೀಮತಿ  ಬೊಮ್ಮಿ ಅಮ್ಮ ವಿದ್ಯಾಭ್ಯಾಸ: ಕಾಯರ್ತಡ್ಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವರೆಗೆ   ಯಕ್ಷಗಾನ ಗುರುಗಳು:  ಶ್ರೀ ಪಡ್ರೆ ಚಂದು   ರಂಗಮಾಹಿತಿ: ಆ ಕಾಲದ ಪ್ರಸಿಧ್ಧ ವೇಷಧಾರಿಗಳಿಂದ 
ಅನುಭವ: 46 ವರ್ಷಕ್ಕೂ ಮೇಲ್ಪಟ್ಟು ಮೇಳದ ತಿರುಗಾಟ (ಧರ್ಮಸ್ಥಳ ಮೇಳವೊಂದರಲ್ಲೇ 46 ವರ್ಷಗಳ ತಿರುಗಾಟ. 1974ನೇ ಇಸವಿ ತನ್ನ 12ನೇ ವರ್ಷದಲ್ಲಿ ಶ್ರೀ ಧರ್ಮಸ್ಥಳ ಲಲಿತ ಕಲಾಕೇಂದ್ರ ಸೇರಿ ಶ್ರೀ ಪಡ್ರೆ ಚಂದು ಅವರಿಂದ ಯಕ್ಷಗಾನ ನಾಟ್ಯ ಕಲಿತು ಅದೇ ವರ್ಷ ಶ್ರೀ ಧರ್ಮಸ್ಥಳ ಮೇಳಕ್ಕೆ ಬಾಲಕಲಾವಿದನಾಗಿ ಸೇರಿದರು) ಕುಟುಂಬ :  ಪತ್ನಿ ಶ್ರೀಮತಿ ಗೀತ ಮತ್ತು ಮೂವರು ಗಂಡು ಮಕ್ಕಳ (ರವಿ, ಪುನೀತ್, ದಯಾನಂದ) ಸಂತೃಪ್ತ ಕುಟುಂಬ ಇವರದು. 

ವಸಂತ ಗೌಡ ಅವರ ಮನಮೆಚ್ಚಿದ ಹಾಗೂ ಅವರಿಗೆ ಹೆಸರು ತಂದುಕೊಟ್ಟ ಪಾತ್ರಗಳು:   ಆರಂಭದಲ್ಲಿ  ಬಾಲಲೀಲೆಯ ಶ್ರೀಕೃಷ್ಣ, ಪ್ರಹ್ಲಾದ, ಬಾಲಚ್ಯವನ, ಮಾರ್ಕಂಡೇಯ, ಲೋಹಿತಾಶ್ವ, ಷಣ್ಮುಖ ಮೊದಲಾದ ಪಾತ್ರಗಳನ್ನು ಮಾಡುತ್ತಿದ್ದರು. ಮಾತುಗಾರಿಕೆಯನ್ನೂ ಚೆನ್ನಾಗಿ ಅಭ್ಯಸಿಸಿ, ಬಭ್ರುವಾಹನ, ಅಭಿಮನ್ಯು, ಚಂಡ ಮುಂಡರು, ಲಕ್ಷ್ಮಣ, ವಿಷ್ಣು, ಶ್ರೀರಾಮ, ಬ್ರಹ್ಮ, ಅಶ್ವತ್ಥಾಮನೇ ಮೊದಲಾದ ಪುಂಡು ವೇಷಗಳನ್ನು ಮಾಡುತ್ತಾ ಸಮರ್ಥ ಪುಂಡುವೇಷಧಾರಿಯಾದರು. ಹಾಸ್ಯಗಾರರ ಅನುಪಸ್ಥಿತಿಯಲ್ಲಿ ಹಾಸ್ಯ ಪಾತ್ರಗಳನ್ನೂ ಮಾಡುತ್ತಾರೆ. ನಾರದ ಮತ್ತು ಬಾಹುಕನ ಪಾತ್ರವನ್ನೂ ಮಾಡಿದ ಖ್ಯಾತಿ  ಇವರಿಗಿದೆ.  ಸ್ತ್ರೀವೇಷ, ಪುಂಡುವೇಷ, ಎದುರುವೇಷ, ಪೀಠಿಕೆ ವೇಷ, ಹಾಸ್ಯ ಪಾತ್ರಗಳೇ ಮೊದಲಾದ ಯಾವುದೇ ಪಾತ್ರಗಳನ್ನೂ ಅಭಿನಯಿಸುವ ವಸಂತ ಗೌಡರಂತಹಾ ಅನುಭವಿ ಕಲಾವಿದರು ಕಾಣಸಿಗುವುದು ಅಪರೂಪ. ವಿಶೇಷತೆ: ಎಲ್ಲ ಪ್ರಸಂಗಗಳ ರಂಗನಡೆಯನ್ನು ಬಲ್ಲರು. ಇವರು ಮೇಳವೊಂದಕ್ಕೆ ಮಾತ್ರವಲ್ಲದೆ ಯಕ್ಷಗಾನ ರಂಗಕ್ಕೆ ಓರ್ವ ಸಂಪನ್ಮೂಲ ವ್ಯಕ್ತಿ. ಮಿತಭಾಷಿ. ಪ್ರಚಾರ, ವೇದಿಕೆಗಳಿಂದ ದೂರ ಇರಲು ಇಷ್ಟಪಡುತ್ತಾರೆ. 

ಲೇಖನ: ಮನಮೋಹನ್ ವಿ.ಎಸ್.  

‘ಯಕ್ಷಗಾನ ಕವಿ – ಕಾವ್ಯ ವಿಹಾರ’ (ಡಾ. ಕಬ್ಬಿನಾಲೆ ವಸಂತ ಭಾರದ್ವಾಜ) Dr. Kabbinale Vasantha Bharadwaja

ಯಕ್ಷಗಾನ ಕವಿ – ಕಾವ್ಯ ವಿಹಾರ ಎಂಬ ಈ ಕೃತಿಯು ಪ್ರಕಟವಾಗಿ ಓದುಗರ ಸೇರಿದ್ದು 2010ರಲ್ಲಿ. ಈ ಕೃತಿಯ ಲೇಖಕರು ಕನ್ನಡ ಸಾಹಿತ್ಯ ಲೋಕದ ವಿದ್ವಾಂಸ, ಸಂಶೋಧಕ, ಕಲಾವಿದ, ಅಷ್ಟಾವಧಾನಿ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಅವರು. ಪ್ರಕಾಶಕರು ಯಕ್ಷಗಾನ ಕೇಂದ್ರ, ಯಕ್ಷ ಗುರುಕುಲ ಶಿಕ್ಷಣ ಟ್ರಸ್ಟ್,  ಎಂಬ ಸಂಸ್ಥೆ. ಪ್ರಕಾಶಕರ ಮಾತು ಎಂಬ ಬರಹದಡಿಯಲ್ಲಿ ಪ್ರೊ| ಹೆರಂಜೆ ಕೃಷ್ಣ ಭಟ್ಟರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸಹಕರಿಸಿದ ಮಹನೀಯರುಗಳಿಗೆ ಕೃತಜ್ಞತೆಗಳನ್ನು  ಸಲ್ಲಿಸಿದ್ದಾರೆ. ಲೇಖಕ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಅವರು ತಮ್ಮ ‘ಲೇಖಕನ ಮಾತು’ ಬರಹದಡಿಯಲ್ಲಿ  ಅನಿಸಿಕೆಗಳನ್ನು ಅಕ್ಷರರೂಪಕ್ಕಿಳಿಸಿರುತ್ತಾರೆ. ಈ ಕೃತಿಗೆ ಮುನ್ನುಡಿಯನ್ನು ಬರೆದವರು ವಿದ್ವಾಂಸರೂ  ಪ್ರಾಧ್ಯಾಪಕರೂ ಆದ ಶ್ರೀ ಪಾದೇಕಲ್ಲು ವಿಷ್ಣು ಭಟ್ಟರು. ‘ಯಕ್ಷಗಾನ ಕವಿ – ಕಾವ್ಯ ವಿಹಾರ’ ಎಂಬ ಈ ಹೊತ್ತಗೆಯು ಪ್ರಾಚೀನ ಕವಿಗಳು ಮತ್ತು ಆಧುನಿಕ ಕವಿಗಳು  ಎಂಬ ಎರಡು ವಿಭಾಗಗಳಿಂದ ಕೂಡಿದೆ. ಮೊದಲ ವಿಭಾಗ ಪ್ರಾಚೀನ ಕವಿಗಳು. ಈ ಭಾಗದಲ್ಲಿ ಯಕ್ಷಗಾನ ಪ್ರಸಂಗಕರ್ತರಾದ ವಿಷ್ಣು ವಾರಂಬಳ್ಳಿ, ಕುಂಬಳೆಯ ಪಾರ್ತಿಸುಬ್ಬ, ಪಾಂಡೇಶ್ವರ ವೆಂಕಟ, ಹಳೆಮಕ್ಕಿ ರಾಮ, ನಗಿರೆ ಸುಬ್ರಹ್ಮಣ್ಯ, ನಿತ್ಯಾನಂದ ಅವಧೂತ, ಧ್ವಜಪುರದ ನಾಗಪ್ಪಯ್ಯ, ದೇವಿದಾಸ, ಹಟ್ಟಿಯಂಗಡಿ ರಾಮ ಭಟ್ಟ, ಮತ್ತು ಮುದ್ದಣ ಎಂಬ ಹತ್ತು ಮಂದಿಗಳ ಬಗೆಗೆ ಮತ್ತು ಅವರು ಬರೆದ ಪ್ರಸಂಗಗಳ ಬಗೆಗೆ ಮಾಹಿತಿಗಳನ್ನು ನೀಡಲಾಗಿದೆ. ಭಾಗ ಎರಡು ಆಧುನಿಕ ಕವಿಗಳು. ಇಲ್ಲಿ ಹಲಸಿನ ಹಳ್ಳಿ ನರಸಿಂಹ ಶಾಸ್ತ್ರಿ, ಸೀತಾನದಿ ಗಣಪಯ್ಯ ಶೆಟ್ಟಿ, ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟ, ಅಗರಿ ಶ್ರೀನಿವಾಸ ಭಾಗವತ, ಬೆಳಸಲಿಗೆ ಗಣಪತಿ ಹೆಗಡೆ, ಅಮೃತ ಸೋಮೇಶ್ವರ, ಕಂದಾವರ ರಘುರಾಮ ಶೆಟ್ಟಿ, ಹೊಸ್ತೋಟ ಮಂಜುನಾಥ ಭಾಗವತ, ಕೆ.ಎಂ.ರಾಘವ ನಂಬಿಯಾರ್ ಮತ್ತು ಶ್ರೀಧರ ಡಿ.ಎಸ್. ಎಂಬ ಹತ್ತು ಮಂದಿ ಪ್ರಸಂಗಕರ್ತರ ಬಗೆಗೆ, ಅವರು ಬರೆದ ಪ್ರಸಂಗಗಳ ಬಗೆಗೆ ಮಾಹಿತಿಗಳನ್ನು ನೀಡಲಾಗಿದೆ. ಪುಸ್ತಕದ ಹೊರ ಆವರಣದ ಬರಹದಲ್ಲಿ ಶ್ರೀ ಪಾದೇಕಲ್ಲು ವಿಷ್ಣು ಭಟ್ಟರು ಲೇಖಕ ಡಾ. ಕಬ್ಬಿನಾಲೆ ವಸಂತ ಭಾರದ್ವಾಜರ ಈ ಪುಸ್ತಕದ ವಿಶೇಷತೆ ಮತ್ತು ಮಹತ್ವವನ್ನು ತಿಳಿಸಿರುತ್ತಾರೆ.

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ 

ಹರಿನಾರಾಯಣ ಭಟ್ ಎಡನೀರು ಅವರೊಂದಿಗೆ ಮಾತುಕತೆ – ಮಾತಿನ ಮಂಟಪದಲ್ಲಿ

ಕರ್ನಾಟಕ ಯಕ್ಷಗಾನ ಅಕಾಡೆಮಿ ಸಂಯೋಜಿಸಿದ ಪ್ರತಿದಿನದ ಕಾರ್ಯಕ್ರಮವಾದ ಯಕ್ಷಗಾನ  ಕಲಾವಿದರೊಂದಿಗೆ ಮಾತುಕತೆಯ ಮಾತಿನ ಮಂಟಪದ  45ನೇ  ಕಾರ್ಯಕ್ರಮದಲ್ಲಿ ಇಂದು ಅಂದರೆ ಅಕ್ಟೋಬರ್ 12ರಂದು ಸೋಮವಾರ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಶ್ರೀ ಹರಿನಾರಾಯಣ ಭಟ್ ಎಡನೀರು ಅವರೊಂದಿಗೆ ಮಾತುಕತೆ ನಡೆಯಲಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರೂ, ಯಕ್ಷಗಾನ ಕಲಾವಿದೆಯೂ ಉಪನ್ಯಾಸಕರೂ ಆದ ಶ್ರೀಮತಿ ಆರತಿ ಪಟ್ರಮೆಯವರು ಕಾರ್ಯಕ್ರಮವನ್ನು ಸಂಯೋಜಿಸಿ ಮಾತುಕತೆಯನ್ನು ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮ ಫೇಸ್ಬುಕ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ. 2020ನೇ ಅಕ್ಟೋಬರ್ ೧೨ ಮಂಗಳವಾರ ಸಂಜೆ ಘಂಟೆ 6.30ರಿಂದ  7.30ರ ವರೆಗೆ ಈ ಕಾರ್ಯಕ್ರಮ ಮೂಡಿಬರಲಿದೆ.  ಮಾತಿನ ಮಂಟಪ  ಕಾರ್ಯಕ್ರಮದಲ್ಲಿ ಪ್ರತಿದಿನ ಬೇರೆ ಬೇರೆ ಯಕ್ಷಗಾನ ಕಲಾವಿದರೊಂದಿಗೆ ಮಾತುಕತೆ ನಡೆಯಲಿದೆ. 

ಯಕ್ಷಗಾನಂ ವಿಶ್ವಗಾನಂ – ಸ್ಮರಣ ಸಂಚಿಕೆ (ಗಾನ ಸೌರಭ ಯಕ್ಷಗಾನ ಶಾಲೆ (ನೊಂ), ಬೆಂಗಳೂರು)

‘ಯಕ್ಷಗಾನಂ ವಿಶ್ವಗಾನಂ’ ಎಂಬ ಹೊತ್ತಗೆಯು ಬೆಂಗಳೂರಿನ ಗಾನ ಸೌರಭ ಯಕ್ಷಗಾನ ಶಾಲೆ (ನೊಂ) ಎಂಬ ಸಂಸ್ಥೆಯ ದಶಮಾನೋತ್ಸವ ಸಂಚಿಕೆಯಾಗಿ ಪ್ರಕಟವಾಗಿತ್ತು. ಈ ಸಂಚಿಕೆಯು ಓದುಗರ ಕೈ ಸೇರಿದ್ದು 2014ರಲ್ಲಿ. ಗಾನ ಸೌರಭ ಯಕ್ಷಗಾನ ಶಾಲೆಯ ನಿರ್ದೇಶಕರು ಖ್ಯಾತ ಸ್ತ್ರೀ ಪಾತ್ರಧಾರಿಯಾದ ಶ್ರೀ ಬೇಗಾರು ಶಿವಕುಮಾರ್ ಅವರು. ಉಭಯ ತಿಟ್ಟುಗಳ ಅನುಭವಿ. ಶ್ರೀ ಧರ್ಮಸ್ಥಳ ಮೇಳದ ಸ್ತ್ರೀ ಪಾತ್ರಧಾರಿಯಾಗಿ ತಮ್ಮ ಅತ್ಯುತ್ತಮವಾದ ನಾಟ್ಯ, ಭಾವನಾತ್ಮಕವಾದ ಅಭಿನಯ ಮತ್ತು ಮಾತುಗಾರಿಕೆಯಿಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದ ಕಲಾವಿದರಿವರು. ಯಕ್ಷಗಾನದ ವೃತ್ತಿಜೀವನಕ್ಕೆ ಸ್ವಯಂ ನಿವೃತ್ತಿಯನ್ನು ಘೋಷಿಸಿ, ಸಿಲಿಕಾನ್ ಸಿಟಿಯನ್ನು ಸೇರಿಕೊಂಡರೂ, ಯಕ್ಷಗಾನದ ನಂಟನ್ನು ಬಿಡದೆ, ಆ ಶ್ರೇಷ್ಠ ಕಲೆಯ ಸಂಬಂಧವಿರಿಸಿಕೊಂಡೇ ತೊಡಗಿಸಿಕೊಂಡಿರುವುದು ಅಭಿನಂದನೀಯ ವಿಚಾರವು. ಬೆಂಗಳೂರಿನ ಗಾನ ಸೌರಭ ಶಾಲೆಯ ರೂವಾರಿ ಇವರು. ಪ್ರದರ್ಶನಗಳಲ್ಲಿ ಅತಿಥಿ ಕಲಾವಿದರಾಗಿ ಭಾಗವಹಿಸುವುದರ ಜತೆಗೆ, ಸದ್ರಿ ಸಂಸ್ಥೆಯ ನಿರ್ದೇಶಕರಾಗಿ, ಗುರುವಾಗಿ ಕಲಿಕಾಸಕ್ತರಿಗೆ ತಾನು ಕಲಿತ ವಿದ್ಯೆಯನ್ನು ಹೇಳಿಕೊಡುತ್ತಿದ್ದಾರೆ. ಬೆಂಗಳೂರಿನಂತಹ ನಗರಗಳಲ್ಲಿ ಕಲಾ ಸಂಸ್ಥೆಯನ್ನು ಕಟ್ಟಿ ಬೆಳೆಸಿ ಮುನ್ನಡೆಸುವುದು ಅಷ್ಟು ಸುಲಭವಲ್ಲ. ಅದೊಂದು ಸಾಧನೆಯೇ ಹೌದು. ಕಲಿಕಾಸಕ್ತರಿಗೆ ತರಬೇತಿ, ಪ್ರದರ್ಶನ, ಸಾಧಕರನ್ನು ಗುರುತಿಸಿ ಗೌರವಿಸುವುದು, ಪ್ರಶಸ್ತಿ ಪ್ರಧಾನ ಮೊದಲಾದ ಯಕ್ಷಗಾನ ಕಲಾ ಸಂಬಂಧೀ ಚಟುವಟಿಕೆಗಳಲ್ಲಿ ಶ್ರೀಯುತರು ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.

ಗಾನ ಸೌರಭ ಕಲಾ ಶಾಲೆಯ ದಶಮಾನೋತ್ಸವ ಸ್ಮರಣ ಸಂಚಿಕೆ ‘ಯಕ್ಷಗಾನಂ ವಿಶ್ವಗಾನಂ’ ಇದರ ಸಂಪಾದಕರು ಡಾ| ಆನಂದರಾಮ ಉಪಾಧ್ಯ ಅವರು. ಮೊದಲಾಗಿ ಗಾನ ಸೌರಭ ಯಕ್ಷಗಾನ ಶಾಲೆ ದಶಮಾನೋತ್ಸವ ಸಮಿತಿಯ, ಕಲಾಪೋಷಕ ಪ್ರಶಸ್ತಿ, ಪುರಸ್ಕೃತರ, ‘ಗಾನಸೌರಭ’ ಪ್ರಶಸ್ತಿ ಪುರಸ್ಕೃತರ ಗಾನಸೌರಭ ಅಭಿನಂದಿತರ  ಚಿತ್ರಗಳನ್ನು ನೀಡಲಾಗಿದೆ. ಬಳಿಕ ಸಂಸ್ಥೆಯ ವಿದ್ಯಾರ್ಥಿಗಳ ಭಾವಚಿತ್ರಗಳನ್ನೂ, ಟ್ರಸ್ಟಿಗಳ ಭಾವಚಿತ್ರಗಳನ್ನೂ ನೀಡಲಾಗಿದೆ. ಡಾ. ಆನಂದರಾಮ ಉಪಾಧ್ಯ ಅವರ ಸಂಪಾದಕೀಯ ಬರಹದೊಂದಿಗೆ ಈ ಸ್ಮರಣ ಸಂಚಿಕೆಯು ಮೂರು ವಿಭಾಗಗಳಲ್ಲಿ ಕಾಣಿಸಿಕೊಂಡಿದೆ. ಮೊದಲ ವಿಭಾಗದಲ್ಲಿ ಡಾ. ಪಿ. ದಯಾನಂದ ಪೈ, ಶ್ರೀ ರಮೇಶ್ಚಂದ್ರ ಹೆಬ್ರಿ, ನಾಗರಾಜ ಶೇರೆಗಾರ್, ಪಿ.ಆರ್. ನಾಯಕ್, ಬೇಗಾರ್ ಶಿವಕುಮಾರ್, ಗೋಪಾಲಕೃಷ್ಣ (ಸಂಗ್ರಹಿತ ಲೇಖನ) ಪ್ರಭಾಕರ ಆಚಾರ್ಯ(ಸಂಗ್ರಹ), ಸಂತೋಷ್ ಭಟ್, ಸೌರಭ್ ಕುಮಾರ್ (ಸಂಗ್ರಹ) ಇವರ ಲೇಖನಗಳನ್ನು ನೀಡಲಾಗಿದೆ. ಭಾಗ ಎರಡರಲ್ಲಿ ಡಾ. ಶಿಮಂತೂರು ನಾರಾಯಣ ಶೆಟ್ಟಿ, ಡಾ. ಕೆ.ಎಂ. ರಾಘವ ನಂಬಿಯಾರ್, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್, ಕಡತೋಕಾ ಗೋಪಾಲಕೃಷ್ಣ ಭಾಗವತ, ಹೊಸ್ತೋಟ ಮಂಜುನಾಥ ಭಾಗವತ, ತಾರಾನಾಥ ವರ್ಕಾಡಿ, ಪ್ರಸಾದ್ ಮೊಗೆಬೆಟ್ಟು, ಶಾಂತಾರಾಮ ಪ್ರಭು, ರಮೇಶ್ ಬೇಗಾರು, ಧನಂಜಯ ನೆಲ್ಯಾಡಿ, ರಾಜಗೋಪಾಲ ಕನ್ಯಾನ, ಡಾ| ಈಶ್ವರ್, ಡಾ| ಪುರುಷೋತ್ತಮ ಬಿಳಿಮಲೆ ಇವರುಗಳ ಲೇಖನಗಳಿವೆ. ಭಾಗ ಮೂರರಲ್ಲಿ ಛಾಯಾಚಿತ್ರಗಳನ್ನು ನೀಡಲಾಗಿದೆ. ಬೆಂಗಳೂರಿನ ಬೆಂಗಳೂರಿನ ‘ಗಾನ ಸೌರಭ ಕಲಾ ಶಾಲೆ’ ಎಂಬ ಕಲಾ ಸಂಸ್ಥೆಗೆ, ನಿರ್ದೇಶಕ ಶ್ರೀ ಬೇಗಾರು ಶಿವಕುಮಾರ್ ಅವರಿಗೆ ಅಭಿನಂದನೆಗಳು. ಯಕ್ಷಗಾನ ಕಲಾ ಸೇವೆ ನಿರಂತರವಾಗಿ ನಡೆಯಲಿ. ಕಲಾ ಮಾತೆಯ ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು.

ಲೇಖಕ: ರವಿಶಂಕರ್ ವಳಕ್ಕುಂಜ 

‘ಜಡಭರತ’ ಯಕ್ಷಗಾನ ಪ್ರದರ್ಶನ ಈ ರಾತ್ರಿ Live – 8.30ಕ್ಕೆ 

ನಮ್ಮ ನಡುವೆ ಇರುವ ಹಾಗೂ ಆಕಸ್ಮಿಕವಾಗಿ ಹುಟ್ಟುವ ವಿಶೇಷ ಚೇತನ ಮಕ್ಕಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು “ಜಡಭರತ” ಎಂಬ ಯಕ್ಷಗಾನ ಪ್ರದರ್ಶನವೊಂದನ್ನು ಆಯೋಜಿಸಲಾಗಿದೆ. ಅಮರ ಸೌಂದರ್ಯ ಫೌಂಡೇಶನ್ ಬೆಂಗಳೂರು ಇವರ ಸಹಕಾರದೊಂದಿಗೆ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಈ ವಿಶಿಷ್ಟ ರೀತಿಯ ಯಕ್ಷಗಾನ ಪ್ರದರ್ಶನವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದ ಯು ಟ್ಯೂಬ್ ಲಿಂಕ್ ಈ ಕೆಳಗಡೆ ಕೊಡಲಾಗಿದೆ.

‘ವಿಭೀಷಣ ನೀತಿ’ ಯಕ್ಷಗಾನ ತಾಳಮದ್ದಲೆ ಲೈವ್ .. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇವರು ಪ್ರಸ್ತುತಪಡಿಸುವ ದಿನಾಂಕ 11.10.2020 ಭಾನುವಾರ ಸಂಜೆ 5.00 ರಿಂದ ಯಕ್ಷಗಾನ ತಾಳಮದ್ದಲೆ ವಿಭೀಷಣ ನೀತಿ.. ಯಕ್ಷಗಾನ ತಾಳಮದ್ದಲೆ ಲೈವ್ ಕಾರ್ಯಕ್ರಮ. ಲಿಂಕ್ ಕೆಳಗಿದೆ 

ಯಕ್ಷ ನಟ ಸಾರ್ವಭೌಮ – ಕುರಿಯ ವಿಠಲ ಶಾಸ್ತ್ರಿ (ಸಂ – ಕೆ.ಪಿ. ರಾಜಗೋಪಾಲ ಕನ್ಯಾನ)

‘ಯಕ್ಷ ನಟ ಸಾರ್ವಭೌಮ’ ಎಂಬ ಪುಸ್ತಕವು ಶ್ರೀ ಕುರಿಯ ವಿಠಲ ಶಾಸ್ತ್ರಿಗಳು ಬರೆದಿರುವ ಲೇಖನಗಳ ಒಂದು ಅಮೂಲ್ಯ ಸಂಗ್ರಹವು. ಈ ಹೊತ್ತಗೆಯು 2005ರಲ್ಲಿ ಪ್ರಕಟವಾಗಿತ್ತು. ಸಂಪಾದಕರು ಶ್ರೀ ಕೆ.ಪಿ. ರಾಜಗೋಪಾಲ ಕನ್ಯಾನ ಅವರು. ಪ್ರಕಾಶಕರು ಉಷಾ ಎಂಟರ್ಪ್ರೈಸೆಸ್, ಬೆಂಗಳೂರು. ಈ ಕೃತಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಮಾತೃಶ್ರೀ ರತ್ನಮ್ಮನವರಿಗೆ ಗೌರವದಿಂದ ಅರ್ಪಿಸಲಾಗಿದೆ. ಇದು ಸುಮಾರು ಇನ್ನೂರು ಪುಟಗಳುಳ್ಳ ಪುಸ್ತಕ. ಮೊದಲಾಗಿ ಸಂಪಾದಕ ಶ್ರೀ ಕೆ.ಪಿ. ರಾಜಗೋಪಾಲ ಕನ್ಯಾನ ಅವರ ಪರಿಚಯ ಲೇಖನವನ್ನೂ, ಅವರ ಕಥಾ ಸಂಯೋಜನೆಯಲ್ಲಿ ಈ ವರೆಗೆ ತಯಾರಾದ ಯಕ್ಷಗಾನ ಪ್ರಸಂಗಗಳ ವಿವರಗಳನ್ನೂ ನೀಡಲಾಗಿದೆ. ಈ ಪುಸ್ತಕವು ಯಕ್ಷ ನಟ ಸಾರ್ವಭೌಮ, ಕುರಿಯ ವಿಠಲ ಶಾಸ್ತ್ರಿ ವಿರಚಿತ ಲೇಖನಗಳು, ಕುರಿಯ ವಿಠಲ ಶಾಸ್ತ್ರಿಯವರನ್ನು ಕುರಿತಾಗಿ ಬರೆದ ಕವಿತೆಗಳು, ವಿವಿಧ ಕೃತಿಗಳಲ್ಲಿ ವಿಠಲ ಶಾಸ್ತ್ರಿಗಳ ಆಕೃತಿ ಎಂಬ ನಾಲ್ಕು ವಿಭಾಗಗಳಿಂದ ಕೂಡಿದೆ. ಮೊದಲ ವಿಭಾಗದಲ್ಲಿ ಶಾಸ್ತ್ರಿಗಳ ಬಗ್ಗೆ ವಿದ್ವಾನ್ ತಾಳ್ತಜೆ ಕೃಷ್ಣ ಭಟ್ಟ, ಪಂಜಳ ಇವರು ಬರೆದ ಲೇಖನವಿದೆ. ಎರಡನೆಯ ವಿಭಾಗದಲ್ಲಿ ಕುರಿಯ ವಿಠಲ ಶಾಸ್ತ್ರಿಗಳು ಬರೆದ ಏಳು ಲೇಖನಗಳಿವೆ. ಮೂರನೆಯ ವಿಭಾಗದಲ್ಲಿ ವಿದ್ವಾನ್ ತಾಳ್ತಜೆ ಕೃಷ್ಣ ಭಟ್ಟ, ಸೊಡಂಕೂರು ತಿರುಮಲೇಶ್ವರ ಭಟ್ಟ ವಿದ್ವಾನ್, ಅಮೃತ ಸೋಮೇಶ್ವರ, ಪ್ರೊ| ಟಿ. ಕೇಶವ ಭಟ್ಟ ಇವರುಗಳು ಶ್ರೀ ಶಾಸ್ತ್ರಿಗಳ ಬಗೆಗೆ ವಿವಿಧ ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ ಪ್ರಕಟಿತವಾದ ಕಿರು ಲೇಖನಗಳನ್ನು ನೀಡಲಾಗಿದೆ. ಬಳಿಕ ಸುಮಾರು ಮೂವತ್ತರಷ್ಟು ಕಪ್ಪು ಬಿಳುಪಿನ ಛಾಯಾ ಚಿತ್ರಗಳನ್ನು ನೀಡಲಾಗಿದೆ. ಶ್ರೀ ಕೆ.ಪಿ. ರಾಜಗೋಪಾಲ ಕನ್ಯಾನ ಅವರ ಈ ಸಂಗ್ರಹವು ಕುರಿಯ ವಿಠಲ ಶಾಸ್ತ್ರಿಗಳ ಬಗೆಗಿನ ಹೊತ್ತಗೆಯಾಗಿ ಕಾಣಿಸಿಕೊಂಡಿದ್ದು, ಇದು ಒಂದು ಅತ್ಯುತ್ತಮ ಪ್ರಯತ್ನ. ಅಭಿನಂದನೆಗಳು.  

ಲೇಖಕ: ರವಿಶಂಕರ್ ವಳಕ್ಕುಂಜ 

ವಾಚಿಕ – ‘ತಾಳಮದ್ದಳೆ ಅಧ್ಯಯನ – ಲೇಖನ ಸಂಚಯ’

‘ವಾಚಿಕ’ ಎಂಬ ಶೀರ್ಷಿಕೆಯ ಈ ಕೃತಿಯು ತಾಳಮದ್ದಳೆ ಅಧ್ಯಯನ-ಲೇಖನ ಸಂಚಯವಾಗಿ ಓದುಗರ ಕೈ ಸೇರಿದೆ. ಇದು ಮುದ್ರಣಗೊಂಡು ಪ್ರಕಟವಾದುದು 2009ರಲ್ಲಿ. ಅತ್ಯುತ್ತಮ ಸಂಗ್ರಹಯೋಗ್ಯ ಮಾಹಿತಿಗಳನ್ನೊದಗಿಸುವ ಕೃತಿಯು. ವಾಚಿಕ ಎಂಬ ಈ ಹೊತ್ತಗೆಯ ಸಂಪಾದಕರು ವಿದ್ವಾಂಸರುಗಳಾದ ಡಾ. ಪಾದೇಕಲ್ಲು ವಿಷ್ಣು ಭಟ್ಟರು ಮತ್ತು ಡಾ. ಎಂ. ಪ್ರಭಾಕರ ಜೋಷಿ ಅವರುಗಳು. ಪ್ರಕಾಶಕರು ಕಲಾವಿದರೆಲ್ಲರ ಹೆಮ್ಮೆಯ ಕಲಾವಿದರ ಕ್ಷೇಮಕ್ಕಾಗಿ ಮೊತ್ತಮೊದಲು ಸ್ಥಾಪಿಸಲ್ಪಟ್ಟ ಸಂಸ್ಥೆಯಾದ ಯಕ್ಷಗಾನ ಕಲಾರಂಗ (ರಿ) ಉಡುಪಿ. ಸದ್ರಿ ಸಂಸ್ಥೆಯ ತಾಳಮದ್ದಳೆ ದಶಮಾನ ಸಂಭ್ರಮದಲ್ಲಿ ಈ ಕೃತಿಯು ಲೋಕಾರ್ಪಣೆಗೊಂಡಿತ್ತು. ಪುಸ್ತಕವೊಂದನ್ನು ಪ್ರಕಟಿಸುವ ಮೂಲಕ ದಶಮಾನೋತ್ಸವವನ್ನು ಅರ್ಥಪೂರ್ಣಗೊಳಿಸಬೇಕೆಂದು ಡಾ. ಎಂ. ಪ್ರಭಾಕರ ಜೋಷಿಯವರು ಸೂಚಿಸಿದರೆಂದೂ ಸಂಪಾದಕತ್ವದ ಹೊಣೆ ಹೊತ್ತು ಶ್ರೀಯುತರೂ ಡಾ. ಪಾದೇಕಲ್ಲು ವಿಷ್ಣು ಭಟ್ಟರೂ ಈ ಯೋಜನೆಯನ್ನು ಯಶಸ್ವಿಗೊಳಿಸಿದರೆಂದೂ ಪ್ರಕಾಶಕರು ತಮ್ಮ ಲೇಖನದಲ್ಲಿ ತಿಳಿಸಿರುತ್ತಾರೆ. ತಾಳಮದ್ದಳೆ ಕ್ಷೇತ್ರದ ಕಲಿಕಾಸಕ್ತರಿಗೆ ಖಂಡಿತಾ ಇದು ಒಂದು ಕೈಪಿಡಿಯಾಗಿ ಸಹಕರಿಸುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.

ಮೊದಲಾಗಿ ‘ಕಲಾರಂಗ ಮತ್ತು ತಾಳಮದ್ದಳೆ ಸಪ್ತಾಹ’ ಎಂಬ ಶೀರ್ಷಿಕೆಯಡಿಯ ಲೇಖನದಲ್ಲಿ ಪ್ರೊ|ಎಂ. ನಾರಾಯಣ ಹೆಗಡೆಯವರು ಯಕ್ಷಗಾನ ಕಲಾರಂಗ ಸಂಸ್ಥೆಯ ಹುಟ್ಟು, ಬೆಳವಣಿಗೆ, ಕೈಗೊಂಡ ಯೋಜನೆ, ಕಾರ್ಯಚಟುವಟಿಕೆಗಳ ವಿವರಗಳನ್ನು ನೀಡಿರುತ್ತಾರೆ. ಡಾ. ಪಾದೇಕಲ್ಲು ವಿಷ್ಣು ಭಟ್ಟರು ಮತ್ತು ಡಾ. ಎಂ. ಪ್ರಭಾಕರ ಜೋಷಿ  ಅವರು ‘ಸಂಪಾದಕೀಯ ಲೇಖನವನ್ನು ಬರೆದಿರುತ್ತಾರೆ. ಈ ಕೃತಿಯು ಲೇಖನ ಸಂಚಯ, ಸಂವಾದ ಸಾಂಚ್ಯಾ, ಅಭಿಪ್ರಾಯ ಸಂಚಯ, ವಿಮರ್ಶಾ ಸಂಚಯ, ಎಂಬ ನಾಲ್ಕು ವಿಭಾಗಗಳಿಂದಲೂ ಅನುಬಂಧಗಳು ಎಂಬ ಪೂರಕ ವಿಭಾಗದಿಂದಲೂ ಕೂಡಿದೆ. ಮೊದಲ ವಿಭಾಗದಲ್ಲಿ ಇಪ್ಪತ್ತೊಂಬತ್ತು ಲೇಖನಗಳಿವೆ. ಎರಡನೆಯ ವಿಭಾಗದಲ್ಲಿ ಇಪ್ಪತ್ತೊಂದು ಲೇಖನಗಳಿವೆ. ಮೂರನೆಯ ವಿಭಾಗದಲ್ಲಿ ವಿವಿಧ ವಿದ್ವಾಂಸರ ಅಭಿಪ್ರಾಯಗಳನ್ನು ನೀಡಲಾಗಿದೆ. ನಾಲ್ಕನೆಯ ವಿಭಾಗದಲ್ಲಿ ಏಳು ಲೇಖನಗಳನ್ನು ನೀಡಲಾಗಿದೆ. ಪೂರಕ ವಿಭಾಗದಲ್ಲಿ ಮೂರು ಲೇಖನಗಳನ್ನೂ ಎಲ್ಲಾ ಲೇಖಕರ ವಿಳಾಸಗಳನ್ನೂ ನೀಡಲಾಗಿದೆ. 

ಲೇಖಕ: ರವಿಶಂಕರ್ ವಳಕ್ಕುಂಜ

ಮಾತಂಗ ಕನ್ಯೆ, ಶ್ರೀರಾಮ ದರ್ಶನ – ಪೊಳಲಿಯಲ್ಲಿ ಅಪೂರ್ವ ಯಕ್ಷಗಾನ ಪ್ರದರ್ಶನ 

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ರಾಜಾಂಗಣದಲ್ಲಿ 17.10.2020 ಶನಿವಾರದಂದು ಸಂಜೆ ಘಂಟೆ 6ರಿಂದ ರಾತ್ರಿ ಘಂಟೆ 2ರ ವರೆಗೆ  ‘ಮಾತಂಗ ಕನ್ಯೆ – ಶ್ರೀರಾಮ ದರ್ಶನ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಪ್ರಸಿದ್ಧ ಕಲಾವಿದರು ಈ ಪ್ರದರ್ಶನದಲ್ಲಿ ಭಾಗವಹಿಸಲಿರುವರು. 

ಅಮೃತ ಸೋಮೇಶ್ವರ ಅವರಿಗೆ ಬಾಲವನ ಪ್ರಶಸ್ತಿ – 2020

ಡಾ. ಶಿವರಾಮ ಕಾರಂತರ ಜನ್ಮದಿನಾಚರಣೆ ಪ್ರಯುಕ್ತ ನೀಡಲಾಗುವ ಡಾ. ಶಿವರಾಮ ಕಾರಂತ ಬಾಲವನ ಪ್ರಶಸ್ತಿ – 2020 ನ್ನು ಈ ಬಾರಿ ಖ್ಯಾತ ಜಾನಪದ ಹಾಗೂ ಯಕ್ಷಗಾನ ವಿದ್ವಾಂಸ, ಪ್ರಸಂಗಕರ್ತ, ಸಾಹಿತಿ, ನಿವೃತ್ತ ಉಪನ್ಯಾಸಕರಾದ ಪ್ರೊ| ಅಮೃತ ಸೋಮೇಶ್ವರ ಅವರಿಗೆ ಕೋಟೆಕಾರಿನಲ್ಲಿರುವ ಅವರ ಮನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ  ಕೋಟ ಶ್ರೀನಿವಾಸ ಪೂಜಾರಿಯವರು ನೀಡಿ ಗೌರವಿಸಿದರು. 

ಪ್ರೊ| ಅಮೃತ ಸೋಮೇಶ್ವರ