Tuesday, January 21, 2025
Home Blog Page 362

ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ – ಸಂಕ್ಷಿಪ್ತ ಮಾಹಿತಿ (A Breif Information about Siddakatte Sadashiva Shettigar)

ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ – ಸಂಕ್ಷಿಪ್ತ ಮಾಹಿತಿ  ಹೆಸರು: ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್   
ಪತ್ನಿ: ಶ್ರೀಮತಿ  ಕಲಾವತಿ  ಜನನ:  1965 ಡಿಸೆಂಬರ್ 17ರಂದು  ಜನನ ಸ್ಥಳ: ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದ ಸಿದ್ಧಕಟ್ಟೆ.   

ತಂದೆ ತಾಯಿ:  ತಂದೆ ಶ್ರೀ ಬಾಬು ಶೆಟ್ಟಿಗಾರ್. ತಾಯಿ ಶ್ರೀಮತಿ ಗಿರಿಯಮ್ಮ ವಿದ್ಯಾಭ್ಯಾಸ: ಸಿದ್ಧಕಟ್ಟೆ ಸೈಂಟ್ ಮೆಟ್ರಿಕ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. 6ನೇ ತರಗತಿಯ ವರೆಗೆ.  ಯಕ್ಷಗಾನ ಗುರುಗಳು:  ರೆಂಜಾಳ ರಾಮಕೃಷ್ಣ ರಾವ್ , ಬಣ್ಣದ ಮಹಾಲಿಂಗ  ರಂಗಮಾಹಿತಿ ಮತ್ತು ಹೆಚ್ಚಿನ ಕಲಿಕೆ : ಇರಾ ಗೋಪಾಲಕೃಷ್ಣ ಭಾಗವತ, ಸುಣ್ಣಂಬಳ ವಿಶ್ವೇಶ್ವರ ಭಟ್, ಬೆಳ್ಳಾರೆ ಮಂಜುನಾಥ ಭಟ್ ಮತ್ತು ಹಿರಿಯ ಕಲಾವಿದರಿಂದ. 
ಅನುಭವ:  2 ವರ್ಷ ಕಟೀಲು 2ನೇ ಮೇಳದಲ್ಲಿ ನೇಪಥ್ಯ ಕಲಾವಿದನಾಗಿ ತಿರುಗಾಟ, ಕಟೀಲು 1ನೇ ಮೇಳದಲ್ಲಿ 8 ವರ್ಷಗಳ ಕಾಲ ಬಣ್ಣದ ವೇಷಧಾರಿಯಾಗಿ  ತಿರುಗಾಟ, ಆಮೇಲೆ 13 ವರ್ಷಗಳ ಕಾಲ ಧರ್ಮಸ್ಥಳ ಮೇಳದಲ್ಲಿ ಬಣ್ಣದ ವೇಷಧಾರಿಯಾಗಿ ತಿರುಗಾಟ. ನಂತರದ ಈ ಹದಿಮೂರು ವರ್ಷಗಳಲ್ಲಿ ಹೊಸನಗರ, ಎಡನೀರು ಮತ್ತು ಹನುಮಗಿರಿ ಮೇಳಗಳಲ್ಲಿ (೨೦೨೦ರ ವರೆಗೆ)

ಗುರುಗಳಾಗಿ : ತಮ್ಮ ಶಿಷ್ಯಂದಿರಾದ ಸತೀಶ ನೈನಾಡು, ಶಬರೀಶ ಮಾನ್ಯ, ಮನೀಷ್ ಪಾಟಾಳಿ, ಮಧುರಾಜ್ ಪಾಟಾಳಿ, ಸುಬ್ರಹ್ಮಣ್ಯ ಭಟ್ ಬದಿಯಡ್ಕ, ಸಚಿನ್ ಪಾಟಾಳಿ, ಶ್ರೀಶ ಮಣಿಲ, ರಂಜಿತ್ ಗೋಳಿಯಡ್ಕ ಮೊದಲಾದವರಿಗೆ ಸದಾಶಿವ ಶೆಟ್ಟಿಗಾರರು ವಿದ್ಯಾದಾನ ಮಾಡಿದ್ದಾರೆ. 

ಒಟ್ಟು ಕಲಾಸೇವೆ: ಯಕ್ಷಗಾನ ಕ್ಷೇತ್ರದಲ್ಲಿ 36ಕ್ಕೂ ಹೆಚ್ಚಿನ ವರ್ಷಗಳ ಕಾಲ ವ್ಯವಸಾಯ ಮಕ್ಕಳು ಮತ್ತು ಕುಟುಂಬ :  ಸದಾಶಿವ ಶೆಟ್ಟಿಗಾರ್ ದಂಪತಿಗಳಿಗೆ ಮೂವರು ಮಕ್ಕಳು (ಎರಡು ಗಂಡು ಮತ್ತು 1 ಹೆಣ್ಣು). ಹಿರಿಯ ಪುತ್ರ ದಿಲೀಪ್ ಕುಮಾರ್ ಮತ್ತು ಕಿರಿಯ ಪುತ್ರ ಪದ್ಮನಾಭ ಇಬ್ಬರೂ ಉದ್ಯೋಗಿಗಳು. ಪುತ್ರಿ ಕವಿತಾ ವಿವಾಹಿತೆ. ಅಳಿಯ ಶ್ರೀ ಯಶವಂತ ಉದ್ಯೋಗಿ.  ಮೊಮ್ಮಗ ಹರ್ಧಿಕ್‍. 

ಪ್ರಶಸ್ತಿ/ಅಭಿನಂದನೆ/ಸನ್ಮಾನಗಳು: ಪೇಜಾವರ ಶ್ರೀಗಳ ಜನುಮದಿನದ ಶ್ರೀರಾಮ ವಿಠಲ ಪ್ರಶಸ್ತಿ, ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ, ಕೀಲಾರು ಗೋಪಾಲಕೃಷ್ಣಯ್ಯ ಪ್ರಶಸ್ತಿ, ಅರಸಂಕಲ ಪ್ರಶಸ್ತಿಗಳನ್ನು ಪಡೆದುದಲ್ಲದೆ ಹರೇಕಳ ಪಾವೂರು, ಬಿ. ಸಿ. ರೋಡಿನಲ್ಲಿ ಅಲ್ಲದೆ  ಇನ್ನೂ ಅನೇಕ ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ.  ಹೊರನಾಡುಗಳಲ್ಲಿ ಕಲಾಸೇವೆ: ಆಂಧ್ರಪ್ರದೇಶ, ತಮಿಳುನಾಡು, ದೆಹಲಿ, ಅಯೋಧ್ಯೆ, ಕಾಶಿ, ಕೋಲ್ಕತ್ತಾ, ಕೇರಳ, ಹರಿದ್ವಾರ ಮೊದಲಾದೆಡೆ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿ ಕಲಾಸೇವೆ ಮಾಡಿದ್ದಾರೆ.  ಪ್ರಸ್ತುತ ವಾಸ: ಪತ್ನಿ ಶ್ರೀಮತಿ ಕಲಾವತಿ ಮತ್ತು ಪುತ್ರರೊಂದಿಗೆ ಪ್ರಸ್ತುತ ಸಿದ್ಧಕಟ್ಟೆಯಲ್ಲಿ ವಾಸವಾಗಿದ್ದಾರೆ. 

ಸವೆಯದ ದಾರಿ – ಆತ್ಮವೃತ್ತಾಂತ (ಡಾ. ರಮಾನಂದ ಬನಾರಿ) (Dr. Ramananda Bnari)

‘ಸವೆಯದ ದಾರಿ’ ಎಂಬ ಈ ಕೃತಿಯು ಜನಪ್ರಿಯ ವೈದ್ಯ, ಸಾಹಿತಿ, ಲೇಖಕ, ತಾಳಮದ್ದಳೆ ಅರ್ಥಧಾರಿ, ಡಾ. ರಮಾನಂದ ಬನಾರಿಯವರ ಆತ್ಮವೃತ್ತಾಂತವು. ಇದು ಪ್ರಕಟವಾಗಿ ಕೈ ಸೇರಿದ್ದು 2017ರಲ್ಲಿ. ಮಂಜೇಶ್ವರದಲ್ಲಿ ಖ್ಯಾತ ವೈದ್ಯರಾಗಿರುವ ಡಾ. ರಮಾನಂದ ಬನಾರಿಯವರು ಯಕ್ಷ ಗುರುಕುಲದ ರೂವಾರಿ, ಪ್ರಸಂಗಕರ್ತ, ಖ್ಯಾತ ಕಲಾವಿದರಾದ ದಿ| ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಸುಪುತ್ರರು. 1940ರಲ್ಲಿ ಕೀರಿಕ್ಕಾಡಿನಲ್ಲಿ ಜನನ. ಕಲ್ಲಿಕೋಟೆ ವಿಶ್ವವಿದ್ಯಾನಿಲಯದಲ್ಲಿ ಎಂ.ಬಿ.ಬಿ.ಎಸ್ ಪದವಿಯನ್ನು ಪೂರೈಸಿ ವೈದ್ಯಕೀಯ ವೃತ್ತಿಯನ್ನು ಆರಂಭಿಸಿದ್ದರು. ಕೀರಿಕ್ಕಾಡು ಮನೆಯವರು ಎಂದ ಬಳಿಕ ಸಾಹಿತ್ಯಾಸಕ್ತರು, ಕಲಾಸಕ್ತರು ಎಂದು ಬೇರೆ ಹೇಳಬೇಕಾದುದಿಲ್ಲ. ಸಮಾಜಸೇವೆಯೊಂದಿಗೆ ಲೇಖಕರಾಗಿ, ಕನ್ನಡ ಸಾಹಿತ್ಯ ಸೇವೆಯನ್ನೂ ತಾಳಮದ್ದಳೆ ಅರ್ಥಧಾರಿಯಾಗಿ ಕಲಾಮಾತೆಯ ಸೇವೆಯನ್ನೂ ಮಾಡುತ್ತಾ ಬರುತ್ತಿದ್ದಾರೆ.

ಬನಾರಿಯಲ್ಲಿ ಕೀರಿಕ್ಕಾಡು ಮಾಸ್ತರರಿಂದ ಸ್ಥಾಪಿಸಲ್ಪಟ್ಟ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘದ ಕಲಾ ಚಟುವಟಿಕೆಗಳಲ್ಲಿ ಶ್ರೀಯುತರು ಸಕ್ರಿಯರು. ಅಣ್ಣ ಶ್ರೀ ವನಮಾಲಾ ಕೇಶವ ಭಟ್ಟರ ಜತೆಗೂಡಿ ಸಂಘದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿರುತ್ತಾರೆ. ಡಾ. ರಮಾನಂದ ಬನಾರಿ ಅವರ ಆತ್ಮವೃತ್ತಾಂತ ‘ಸವೆಯದ ದಾರಿ’ ಇದರ ಪ್ರಕಾಶಕರು ತಾರಾ ಪ್ರಿಂಟರ್ಸ್ ಮೈಸೂರು. ತಮ್ಮ ಬದುಕಿಗೆ ಪೋಷಕಾಂಶಗಳನ್ನಿತ್ತು ಪ್ರೋತ್ಸಾಹಿಸಿದ ವ್ಯಕ್ತ ಮತ್ತು ಅವ್ಯಕ್ತ ಹೆಸರುಗಳಿಗೆ ಈ ಪುಸ್ತಕವನ್ನು ಡಾ. ರಮಾನಂದ ಬನಾರಿ ಅವರು ಅರ್ಪಿಸಿರುತ್ತಾರೆ. ಮೊದಲಿಗೆ ಎಡನೀರು ಮಠಾಧೀಶರ ಶುಭ ನುಡಿಗಳನ್ನು ನೀಡಲಾಗಿದೆ. ನಾಡೋಜ ಪ್ರೊ| ಹಂಪ  ನಾಗರಾಜಯ್ಯ ಅವರು ‘ಸುಶೋಭಿತ ಆತ್ಮಕಥನ’ಎಂಬ ಶೀರ್ಷಿಕೆಯಡಿ ಮುನ್ನುಡಿ ಲೇಖನವನ್ನು ಬರೆದಿರುತ್ತಾರೆ. ಡಾ. ರಮಾನಂದ ಬನಾರಿ ಅವರು ‘ನನ್ನ ನುಡಿ’ ಎಂಬ ಬರಹದಲ್ಲಿ ತಮ್ಮ ಅನಿಸಿಕೆಗಳನ್ನು ತಿಳಿಸಿರುತ್ತಾರೆ.

ಈ ಆತ್ಮವೃತ್ತಾಂತದಲ್ಲಿ ಮೊದಲ ಪರ್ವ, ಕುಟುಂಬ ಪರ್ವ, ಸಾಹಿತ್ಯ ಪರ್ವ, ಕಲಾ ಪರ್ವ, ಸಂಕೀರ್ಣ ಪರ್ವ ಎಂಬ ಐದು ವಿಭಾಗಗಳಿವೆ. ಬಳಿಕ ಅನುಬಂಧ ಎಂಬ ವಿಭಾಗವಿದ್ದು, ಅದರಲ್ಲಿ ಡಾ. ರಮಾನಂದ ಬನಾರಿ ಅವರ ಬದುಕು-ಬರಹದ ಬಗೆಗೆ ತಿಳಿಸಲಾಗಿದೆ. ಅಲ್ಲದೆ ಶ್ರೀ ಟಿ. ಎ. ಎನ್. ಖಂಡಿಗೆ ಅವರು ಬರೆದ ‘ತಿಳಿ ನೀರಿನಲ್ಲಿ ತೇಲಿ ಬಂದ ಬನಾರಿ ನಾವೆ’ ಎಂಬ ಲೇಖನವನ್ನೂ ನೀಡಲಾಗಿದೆ. ಸುಮಾರು ನಲುವತ್ತರಷ್ಟು ಛಾಯಾಚಿತ್ರಗಳನ್ನೂ ಈ ಹೊತ್ತಗೆಯಲ್ಲಿ ನೀಡಲಾಗಿದೆ. ಪುಸ್ತಕದ ಹೊರ ಆವರಣದಲ್ಲಿ ಡಾ. ರಮಾನಂದ ಬನಾರಿಯವರ ಆತ್ಮೀಯರಾದ ವಿದ್ವಾಂಸರೂ ವಿಮರ್ಶಕರೂ ಆದ ಡಾ. ಬಿ. ಎ. ವಿವೇಕ ರೈ ಅವರ ಲೇಖನವನ್ನೂ ನೀಡಲಾಗಿದೆ. ಡಾ. ರಮಾನಂದ ಬನಾರಿ ಅವರಿಗೆ, ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘ ಎಂಬ ಸಂಸ್ಥೆಗೆ ಶುಭಾಶಯಗಳು. ಸಾಹಿತ್ಯ, ಕಲಾ ಸೇವೆಗಳು ನಿರಂತರವಾಗಿ ನಡೆಯುತ್ತಿರಲಿ ಎಂಬ ಹಾರೈಕೆಗಳು. 

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ

ಖ್ಯಾತ ಕೂಚುಪುಡಿ ನೃತ್ಯ ಕಲಾವಿದೆ ಪದ್ಮಶ್ರೀ ಪುರಸ್ಕೃತೆ ಶೋಭಾ ನಾಯ್ಡು ಅಸ್ತಂಗತ (Koochupudi Dancer Shobha Naidu No more)

ಖ್ಯಾತ ಕೂಚುಪುಡಿ ನೃತ್ಯ ಕಲಾವಿದೆ ಶೋಭಾ ನಾಯ್ಡು ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ. ಕಳೆದ ಕೆಲವು ದಿನಗಳಿಂದ ಆಸ್ಪತ್ರಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಅಸ್ತಂಗತರಾದರು.

ಅದ್ಭುತ ಕೂಚುಪುಡಿ ನೃತ್ಯ ಕಲಾವಿದೆಯಾಗಿದ್ದ ಅವರು ತನ್ನ ಪ್ರತಿಭಾ ಕೌಶಲಕ್ಕಾಗಿ 2001ರಲ್ಲಿ ಕೇಂದ್ರ ಸರಕಾರದಿಂದ ಪದ್ಮಶ್ರೀ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದರು. 1962ರಲ್ಲಿ ಜನಿಸಿದ್ದ ಶೋಭಾ ನಾಯ್ಡು 1991ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗೂ ಭಾಜನರಾಗಿದ್ದರು.

ಚೆನ್ನೈಯಲ್ಲಿರುವ ಶ್ರೀ ಕೃಷ್ಣ ಗಾನ ಸಭಾವು ಅವರಿಗೆ “ನೃತ್ಯ ಚೂಡಾಮಣಿ” ಎಂಬ ಬಿರುದನ್ನೂ ನೀಡಿ ಗೌರವಿಸಿತ್ತು. ಸುಮಾರು 40 ವರ್ಷಗಳ ಇತಿಹಾಸ ಹೊಂದಿರುವ ಹೈದರಾಬಾದ್ ನಲ್ಲಿರುವ ಕೂಚುಪುಡಿ ಕಲಾ ಅಕಾಡೆಮಿಯ ಪ್ರಾಂಶುಪಾಲೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀಮತಿ ಶೋಭಾ ನಾಯ್ಡು ಸುಮಾರು 1500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೂಚುಪುಡಿ ತರಬೇತಿ ನೀಡಿದ್ದರು.

ಚೆಂಡೆ ಮದ್ದಲೆಗಳ ನಡುವೆ – ಮದ್ದಳೆಗಾರ ಬಿ. ಗೋಪಾಲಕೃಷ್ಣ ಕುರುಪ್ ಅವರ ಆತ್ಮಕಥನ (B. Gopalakrishna Kurup)

‘ಚೆಂಡೆ ಮದ್ದಲೆಗಳ ನಡುವೆ’ ಎಂಬ ಈ ಕೃತಿಯು ಮದ್ದಳೆಗಾರ, ಯಕ್ಷಗಾನ ಹಿಮ್ಮೇಳದ ಗುರು ಶ್ರೀ  ಬಿ. ಗೋಪಾಲಕೃಷ್ಣ ಕುರುಪ್ ಅವರ ಆತ್ಮ ಕಥನವಾಗಿ ಪ್ರಕಟವಾಗಿತ್ತು. ಇದು ಓದುಗರ ಕೈ ಸೇರಿದ್ದು 2004ರಲ್ಲಿ. ಪ್ರಕಾಶಕರು ಕಾಂತಾವರ ಕನ್ನಡ ಸಂಘ. “ತಮ್ಮ ನಿಡುಗಾಲದ ಬನ್ನ ಬವಣೆಯ ಜೀವನದ ಹಿನ್ನೆಲೆಯನ್ನು ಕಲಾವಿದನ ಕಣ್ಣಿನಿಂದ ಅವರು ಚಿತ್ರಿಸಿದ ಅವರ ಆತ್ಮಕತೆ ‘ಚೆಂಡೆ ಮದ್ದಲೆಗಳ ನಡುವೆ’ ಅಪರೂಪದ ಜೀವನ ದೃಷ್ಟಿಯಿಂದ, ಶ್ರದ್ಧೆ ಮತ್ತು ಸಾಹಸಗಳಿಂದ ರೋಪುಗೊಂಡ ಕಲಾವಿದನೊಬ್ಬನ ಬದುಕನ್ನು ಹೃದ್ಯವಾಗಿ ಅನಾವರಣಗೊಳಿಸುವ ಕೃತಿಯಾಗಿದೆ”. ಡಾ. ನಾ. ಮೊಗಸಾಲೆಯವರು ಈ ಆತ್ಮಕಥನದ ಬಗೆಗೆ ವ್ಯಕ್ತಪಡಿಸಿದ ಅನಿಸಿಕೆಯಿದು. ಇದು ಒಟ್ಟು ನೂರಾ ಐವತ್ತೆಂಟು ಪುಟಗಳನ್ನು ಹೊಂದಿದ ಪುಸ್ತಕವು.

ಮೊದಲಾಗಿ ಕನ್ನಡ ಸಂಘ ಕಾಂತಾವರ ಈ ಸಂಸ್ಥೆಯ ಪರಿಚಯ ಲೇಖನವನ್ನು ನೀಡಲಾಗಿದೆ. ಬಳಿಕ ‘ಲೇಖಕನ ಮಾತು’ ಎಂಬ ಶೀರ್ಷಿಕೆಯಡಿ ಶ್ರೀ ಗೋಪಾಲಕೃಷ್ಣ ಕುರುಪ್ ಅವರು ಅನಿಸಿಕೆಗಳನ್ನು ವ್ಯಕ್ತಪಡಿಸಿ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿರುತ್ತಾರೆ. ಅಲ್ಲದೆ ಈ ಕೃತಿಯನ್ನು ತಮ್ಮ ತಂದೆ ತಾಯಿಯರಿಗೆ ಅರ್ಪಿಸಿರುತ್ತಾರೆ. ಡಾ| ಸತ್ಯನಾರಾಯಣ ಮೈಸೂರು ಮತ್ತು ಹರಿದಾಸ ಮಲ್ಪೆ ರಾಮದಾಸ ಸಾಮಗರ ಸಂದೇಶಗಳನ್ನೂ ನೀಡಿರುತ್ತಾರೆ.

ಮದ್ದಳೆಗಾರ, ಯಕ್ಷಗಾನ ಹಿಮ್ಮೇಳದ ಶ್ರೇಷ್ಠ ಗುರು ಶ್ರೀ ಗೋಪಾಲಕೃಷ್ಣ ಕುರುಪ್ ಅವರ ಆತ್ಮಕಥನ ‘ಚೆಂಡೆ ಮದ್ದಳೆಗಳ ನಡುವೆ’ ಎಂಬ ಈ ಹೊತ್ತಗೆಯನ್ನು ಮುದದಿಂದ ನಿನ್ನ, ನಿರೀಕ್ಷೆಯ ನೆರಳಲ್ಲಿ, ಗುರು ತೋರಿದ ದಾರಿ, ದುಡಿಮೆಯ ಬೆಟ್ಟದಲ್ಲಿ, ಯಕ್ಷಗಾನ ಮೇಳಕ್ಕೆ ಪ್ರವೇಶ, ಸ್ತ್ರೀ ವೇಷದ ಸೆಟ್ಟು, ತಿರುಗಾಟ, ಬೋಧಕನಾಗಿ ನಾನು, ಧರ್ಮಸ್ಥಳ ಮೇಳದಲ್ಲಿ, ಬರ್ಗುಳಕ್ಕೆ ಭೇಟಿ, ಹೊಂಗನಸು ನನಸಾಯಿತು, ಮನೆ ಕಟ್ಟಿ ನೋಡು, ಆಘಾತ-ಪರಿಹಾರ, ಸಂಗಾತಿಯ ಸಂಚಾರ, ಆಟದೊಳಗಿನ ಆಟ, ಮೊದಲ ಸನ್ಮಾನದ ಹಾದಿ, ನಡೆದಿದೆ ಬದುಕು, ಮುಂಬೈ ಹಿಮ್ಮೇಳ, ಮತ್ತೊಂದು ಮನೆ, ಸುತ್ತ ಮುತ್ತ, ಸೋಲು ಗೆಲುವಿನ ಉಯ್ಯಾಲೆ, ಭಾಗವತ ಎಂಬ ವಿಚಾರಗಳಡಿ ಕಟ್ಟಿ ಅನಾವರಣಗೊಳಿಸಲಾಗಿದೆ.

ತಮ್ಮ ಬಾಲ್ಯದ ಬದುಕು, ಯಕ್ಷಗಾನ ಕಲಿಕೆ, ವೃತ್ತಿ ಜೀವನ, ವೈಯುಕ್ತಿಕ ಬದುಕು, ಸಹಕಲಾವಿದರ ಒಡನಾಟ, ಹಿಂದಿನ ಕಾಲದ ಪ್ರದರ್ಶನಗಳು ಮೊದಲಾದ ವಿಚಾರಗಳ ಬಗ್ಗೆ ಶ್ರೀ ಗೋಪಾಲಕೃಷ್ಣ ಕುರುಪ್ ಅವರು ತನ್ನ ಈ ಆತ್ಮಕಥನದಲ್ಲಿ ಸರಳವಾಗಿ ಮನಮುಟ್ಟುವಂತೆ ವಿವರಿಸಿರುತ್ತಾರೆ. ಬಳಿಕ ಸುಮಾರು ಇಪ್ಪತ್ತೆಂಟು ಕಪ್ಪು ಬಿಳುಪಿನ ಛಾಯಾಚಿತ್ರಗಳನ್ನು ನೀಡಲಾಗಿದೆ. ನೂರಾ ಮೂವತ್ತೊಂಬತ್ತು ಪುಟಗಳಿಂದ ಕೂಡಿದ ಈ ಆತ್ಮಕಥನದ ಹೊರ ಆವರಣದಲ್ಲಿ ಡಾ| ನಾ. ಮೊಗಸಾಲೆ ಅವರು ಗೋಪಾಲಕೃಷ್ಣ ಕುರುಪ್ ಅವರ ಬಗೆಗೆ ಬರೆದ ಲೇಖನವನ್ನು ನೀಡಲಾಗಿದೆ. 

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ 

ಅತ್ಯಾಕರ್ಷಕ ಭಾಂಗ್ರಾ ನೃತ್ಯ ವೀಡಿಯೊ (Bhangra Dance Video)

ಪಂಜಾಬ್ ಎಂದ ಕೂಡಲೇ ನಮಗೆ ನೆನಪಾಗುವುದು ಅಲ್ಲಿಯ ನೀರಿನ ಸೆಲೆ ಬತ್ತದ ಕೃಷಿಭೂಮಿ ಮತ್ತು ಅಲ್ಲಿಯ ಚಳಿಗಾಲ ಮತ್ತು ಸೆಖೆಗಾಲ.

ಹಾಗೆಯೇ ಪಂಜಾಬ್ ಎಂದ ಕೂಡಲೇ ಎಲ್ಲರಿಗೂ ನೆನಪಾಗುವುದು ಎಲ್ಲಿಯ ವಿಶಿಷ್ಟ ಶೈಲಿಯ ನೃತ್ಯ ಪ್ರಾಕಾರ. ಹೌದು. ಅದುವೇ ಎಲ್ಲರ ಅಚ್ಚುಮೆಚ್ಚಿನ ಭಾಂಗ್ರಾ ನೃತ್ಯ.  ವೀಡಿಯೊ ನೋಡಿ. 

ನೂತನ ಮೇಳಕ್ಕೆ ಪಟ್ಲ ಸತೀಶ್ ಶೆಟ್ಟಿಯವರ ನೇತೃತ್ವ

ಖ್ಯಾತ ಭಾಗವತ ಪಟ್ಲ ಸತೀಶ್‌ ಶೆಟ್ಟಿ ಅವರ ನೇತೃತ್ವದಲ್ಲಿ ಹೊಸ ಮೇಳವೊಂದು ತಿರುಗಾಟಕ್ಕ ಹೊರಡಲು ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳು ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಹಲವು ದಿನಗಳಿಂದಲೂ ಈ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದು ಈಗ ಆ ಬಗ್ಗೆ ಹೇಳಿಕೆ ನೀಡಲಾಗಿದೆ. ವಾಸ್ತವವಾಗಿ ಪಟ್ಲ ಸತೀಶ್ ಶೆಟ್ಟಿಯವರು  ಮೇಳವನ್ನು ಪ್ರಾಂಭಿಸುವ ಬಗ್ಗೆ ವರುಷದ ಹಿಂದಿನಿಂದಲೇ ಅವರ ಅಭಿಮಾನಿಗಳಲ್ಲಿ ನಿರೀಕ್ಷೆಗಳಿದ್ದುವು. ಎಲ್ಲರ ನಿರೀಕ್ಷೆ, ಹಾರೈಕೆಗಳೂ ಈಗ ನಿಜವಾಗಿವೆ.   ಈ ನೂತನ ಮೇಳ  ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಹೆಸರಿನಲ್ಲಿ ತಿರುಗಾಟಕ್ಕೆ ಹೊರಡಲಿದೆ. ಮೇಳ ದೇವಸ್ಥಾನದ ಹೆಸರಿನಲ್ಲಿ ತಿರುಗಾಟಕ್ಕೆ ಹೊರಡುವುದಾದರೂ ಕಲಾವಿದರ ಯಾದಿಯ ಅಂತಿಮಗೊಳಿಸುವಿಕೆ ಮೊದಲಾದ ಕೆಲವು ಆಡಳಿತಾತ್ಮಕ ವಿಚಾರಗಳನ್ನು ಪಟ್ಲ ಸತೀಶ್ ಶೆಟ್ಟಿಯವರೇ ನಿರ್ವಹಸಬಹುದು ಎಂದು ಹೇಳಲಾಗುತ್ತಿದೆ. 

ಆದರೆ ಪಟ್ಲ ಸತೀಶ ಶೆಟ್ಟಿಯವರ ಹೇಳಿಕೆಯ ಪ್ರಕಾರ ದೇವಸ್ಥಾನದ ಆಡಳಿತ ಮಂಡಳಿಯು ಕೇವಲ ಭಾಗವತಿಕೆಯ ಸ್ಥಾನಕ್ಕೆ ಸಂಬಂಧಪಟ್ಟಂತೆ ಮಾತ್ರ ಅವರಲ್ಲಿ ಮಾತುಕತೆಯನ್ನು ನಡೆಸಿದೆ. ಮತ್ತು ಇದನ್ನು ಪಟ್ಲ ಸತೀಶರು ದೃಢೀಕರಿಸಿದ್ದಾರೆ. 

ಕಳೆದ ಮೂರು ವರ್ಷಗಳ ಹಿಂದಿನಿಂದಲೇ ಮೇಳ ಆರಂಭಿಸುವ ಬಗ್ಗೆ ಮಾತುಕತೆ ನಡೆಯುತ್ತಿತ್ತು. ಪಟ್ಲ ಸತೀಶ ಶೆಟ್ಟಿಯವರನ್ನು ಭಾಗವತರನ್ನಾಗಿ ಮಾಡುವ ನಿರ್ಧಾರದಿಂದ ಈ ಸುದ್ದಿ ಮುನ್ನೆಲೆಗೆ ಬಂದಿದೆ ಎಂದು  ದೇವಸ್ಥಾನದ ಆಡಳಿತ ಸಮಿತಿ ಹೇಳುತ್ತಿದೆ. 

ಆದರೂ ಭಾಗವತಿಕೆಯ ಸ್ಥಾನದಲ್ಲಿದ್ದರೂ ಕೆಲವೊಂದು ಮಹತ್ವದ ನಿರ್ಧಾರಗಳು ಪಟ್ಲರದ್ದೇ ಎಂದು ಹೇಳಲಾಗುತ್ತಿದೆ. ಕಲಾವಿದರ ಆಯ್ಕೆಯೇ ಮೊದಲಾದ ಮಹತ್ವದ ವಿಚಾರಗಳನ್ನು ದೇವಸ್ಥಾನದ ಆಡಳಿತ ಮಂಡಳಿಯು ಸತೀಶ್ ಶೆಟ್ಟಿಯವರ ನಿರ್ಧಾರ ಮತ್ತು ಅಧಿಕಾರದ ವಿವೇಚನೆಗೆ ಬಿಡಬಹುದು. ಅದೂ ಅಲ್ಲದೆ ಸುಮಾರು 20 ಮಂದಿ ಕಲಾವಿದರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಈ ನೂತನ ಮೇಳ ಕಾಲಮಿತಿಯಲ್ಲಿ ಪ್ರದರ್ಶನ ನೀಡುವುದರಿಂದ ( ಸಂಜೆ 6ರಿಂದ ರಾತ್ರಿ 10) ಬಪ್ಪನಾಡು ಮೇಳದ ಕೆಲವು ಕಲಾವಿದರೂ ಈ ಹೊಸ ಮೇಳದ ಪ್ರದರ್ಶನದಲ್ಲಿ ಭಾಗವಹಿಸಬಹುದು ಎಂದು ಹೇಳಲಾಗುತ್ತಿದೆ. ಅದೂ ಅಲ್ಲದೆ ಈ ನೂತನ ಮೇಳ ದೇವಿ ಮಹಾತ್ಮೆ ಪ್ರಸಂಗಕ್ಕೆ ಅನುಗುಣವಾದ ಕಲಾವಿದರನ್ನೇ ಆಯ್ಕೆ ಮಾಡಲು ಸಿದ್ಧತೆ ನಡೆಸಿದಂತೆ ಕಾಣುತ್ತದೆ. ಹಿಮ್ಮೇಳ ಕಲಾವಿದರು ಸೇರಿದಂತೆ ಅಂದಿನಿಂದಲೂ ಪಟ್ಲರ ಜೊತೆಯಲ್ಲಿದ್ದ ಕಲಾವಿದರು ಮತ್ತೆ ಪಟ್ಲರ ಜೊತೆಯೇ ಹೊಸ ಮೇಳವನ್ನು ಸೇರಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಚಂಡ, ಮುಂಡ, ಮಹಿಷಾಸುರ ಹಾಗೂ ದೇವಿಯ ಪಾತ್ರಗಳಿಗೆ ಇತರ ಮೇಳಗಳಲ್ಲಿದ್ದ ಕಲಾವಿದರು ನೂತನ ಮೇಳಕ್ಕೆ ಸೇರುವ ನಿರೀಕ್ಷೆಗಳಿವೆ. ರಕ್ತಬೀಜನ ಪಾತ್ರಕ್ಕೆ ಬಪ್ಪನಾಡು ಮೇಳದ ಕಲಾವಿದರೋರ್ವರ ಹೆಸರು ಕೇಳಿಬರುತ್ತಾ ಉಂಟು. 

ಅಂತೂ ಪ್ರದರ್ಶನಗಳಿಲ್ಲದೆ ಸೊರಗಿದ್ದ ಯಕ್ಷರಂಗಕ್ಕೆ ಈ ನೂತನ ಮೇಳದ ಪರಿಕಲ್ಪನೆ ಒಂದು ಸಿಹಿ ಸುದ್ದಿಯ ಟಾನಿಕ್ ಆಗಿ ಪರಿಣಮಿಸಿದೆ. ಹತ್ತಿಪ್ಪತ್ತು ಮಂದಿ ಹೆಚ್ಚಿನ ಕಲಾವಿದರಿಗೆ ಉದ್ಯೋಗ ದೊರಕಿದಂತಾಗಲಿದೆ. 

ನೂರೈವತ್ತು ನಲ್ನುಡಿಗಳು – ಎಂ.ಆರ್.ವಾಸುದೇವ ಸಾಮಗ (M.R Vasudeva Samaga)

‘ ನೂರೈವತ್ತು ನಲ್ನುಡಿಗಳು’ ಎಂಬ ಕೃತಿಯನ್ನು ಬರೆದವರು ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದ, ಖ್ಯಾತ ತಾಳಮದ್ದಳೆ ಅರ್ಥಧಾರಿ, ಸಾಮಗ ಮನೆತನದ ಶ್ರೀ  ಎಂ.ಆರ್.ವಾಸುದೇವ ಸಾಮಗರು. ಇದು ದ್ವಿತೀಯ ಮುದ್ರಣ(2009). 1981ರಲ್ಲಿ ಮೊದಲೊಮ್ಮೆ ಪ್ರಕಟವಾಗಿ ಪುಸ್ತಕಗಳೆಲ್ಲವೂ ಓದುಗರ ಕೈ ಸೇರಿತ್ತು. ಶ್ರೀ ಮಲ್ಪೆ ವಾಸುದೇವ ಸಾಮಗರ ಜನ್ಮ ಷಷ್ಟ್ಯಬ್ದದ ಶುಭ ಸಂದರ್ಭದಲ್ಲಿ ಈ ಕೃತಿಯು ಪ್ರಕಟವಾಗಿದೆ. ಈ ವಿಚಾರಗಳನ್ನು ತಮ್ಮ ಮುನ್ನುಡಿ ಲೇಖನದಲ್ಲಿ ಶ್ರೀ ವಾಸುದೇವ ಸಾಮಗರ ಪುತ್ರ, ಕಲಾವಿದ ಶ್ರೀ ಮಲ್ಪೆ ಪ್ರದೀಪ ವಿ. ಸಾಮಗ ಅವರು ತಿಳಿಸಿರುತ್ತಾರೆ.

ಮೊದಲ ಮುದ್ರಣಕ್ಕೆ ಶ್ರೀಮಲ್ಪೆ ವಾಸುದೇವ ಸಾಮಗರು ಬರೆದ ಮುನ್ನುಡಿ ಲೇಖನವನ್ನೂ ಇಲ್ಲಿ ನೀಡಲಾಗಿದೆ. ಈ ಕೃತಿಯ ಪ್ರಕಾಶಕರು ಸಂಯಮಂ ಪ್ರಕಾಶನ, ಮಣೂರು. ಲೇಖಕ ಶ್ರೀ ಮಲ್ಪೆ ವಾಸುದೇವ ಸಾಮಗರು ಈ ಹೊತ್ತಗೆಯಲ್ಲಿ ನೂರೈವತ್ತು ಸಂಸ್ಕೃತ ಸುಭಾಷಿತಗಳ  ಪದ್ಯಾನುವಾದವನ್ನು ನೀಡಿರುತ್ತಾರೆ. ಮೊದಲ ಮುದ್ರಣದ ಪುಸ್ತಕವು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಿ. ವೀರೇಂದ್ರ ಹೆಗಡೆಯವರ ಸೂಚನೆಯಂತೆ ಧರ್ಮಸ್ಥಳದ ದೀಪೋತ್ಸವದ ಶುಭಾವಸರದಲ್ಲಿ ನಡೆದ ಸರ್ವಧರ್ಮ ಸಮ್ಮೇಳನ, ಸಾಹಿತ್ಯ ಸಮ್ಮೇಳನಗಳೆಡೆಯಲ್ಲಿ ಬಿಡುಗಡೆಯಾಗಿತ್ತು.

ಈ ವಿಚಾರವನ್ನು ಮೊದಲ ಮುದ್ರಣದ ಮುನ್ನುಡಿ ಲೇಖನದಲ್ಲಿ ಶ್ರೀ ಮಲ್ಪೆ ವಾಸುದೇವ ಸಾಮಗರು ತಿಳಿಸಿರುತ್ತಾರೆ. ಪುಸ್ತಕದ ಹೊರ ಆವರಣದಲ್ಲಿ ಶ್ರೀ ಅಮೃತ ಸೋಮೇಶ್ವರ, ಶ್ರೀ ಕಡತೋಕಾ ಮಂಜುನಾಥ ಭಾಗವತ, ಶ್ರೀ ಪ್ರಭಾಕರ. ಎಸ್. ಇವರುಗಳ ಶುಭ ಸಂದೇಶಗಳನ್ನು ನೀಡಲಾಗಿದೆ. ಇದು ಅತ್ಯಂತ ಉಪಯೋಗೀ ಸಂಗ್ರಹಯೋಗ್ಯ ಪುಸ್ತಕವು.

ಲೇಖಕ: ರವಿಶಂಕರ್ ವಳಕ್ಕುಂಜ 

ಯಕ್ಷಗಾನವಲ್ಲದ ಯಕ್ಷಗಾನ ಪ್ರದರ್ಶನಗಳು – ಕೆಲವು ವೀಡಿಯೋಗಳು

ಮೊದಲಾಗಿಯೇ ಹೇಳಿಬಿಡುತ್ತೇನೆ. ಟೀಕೆ ಮಾಡುವುದು ಇಲ್ಲಿ ಉದ್ದೇಶವಲ್ಲ. ಈಗ ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳನ್ನು ಹೇಳುವುದು ಮಾತ್ರ ಉದ್ದೇಶ. ಅದರ ಬಗ್ಗೆ ನಿರ್ಣಯಿಸುವುದು ಆಸಕ್ತರಿಗೆ ಬಿಟ್ಟ ವಿಚಾರ. ನಾವು ಆಗಾಗ ಟಿವಿ ಚಾನೆಲುಗಳಲ್ಲಿ ಯಕ್ಷಗಾನದ ವೇಷಗಳನ್ನು ಧರಿಸಿ ಹುಚ್ಚು ಹುಚ್ಚಾಗಿ ಕರ್ಣಕಠೋರವಾದ ಸಿನಿಮಾ ಪದ್ಯಗಳಿಗೋ ಅಥವಾ ಪಾಶ್ಚತ್ಯ ಸಂಗೀತಕ್ಕೋ ನೃತ್ಯ ಮಾಡುವುದನ್ನು ಕಾಣುತ್ತೇವೆ ಅಥವಾ ಈ ಹಿಂದೆ ಕಂಡಿದ್ದೇವೆ. ಆಗೆಲ್ಲಾ ಬಹಳಷ್ಟು ಸಮಯಗಳಲ್ಲಿ ಆಕ್ಷೇಪ ಪ್ರತಿಭಟನೆಗಳಿಂದಾಗಿ ಟಿವಿ ಚಾನೆಲ್ ಕಾರ್ಯಕ್ರಮ ನಿರ್ಮಾಪಕರು ಕ್ಷಮೆ ಕೇಳಿದ ಪ್ರಕರಣಗಳೂ ಇದ್ದುವು.

ಆದರೆ ಎಷ್ಟೋ ಬಾರಿ ಇತರರಿಂದ ಕ್ಷಮೆ ಕೇಳಿಸುವ ನಾವು ನಾವೇ ಇಂತಹ ತಪ್ಪುಗಳನ್ನು ಹಲವಾರು ಬಾರಿ ಮಾಡುತ್ತೇವೆ. ಕೆಲವೊಂದು ಹಾಡುಗಳಿಗೆ ಯಕ್ಷಗಾನದ ವೇಷಭೂಷಣಗಳನ್ನು ಧರಿಸಿ ಮೈ ಕುಲುಕಿಸುತ್ತಾ ಚಿತ್ರ ವಿಚಿತ್ರ ಭಂಗಿಗಳಲ್ಲಿ ನೃತ್ಯ ಮಾಡುತ್ತೇವೆ.

ಪಾಶ್ಚಾತ್ಯ ಸಂಗೀತದ ಶೈಲಿಯ ಹಾಡಿನ ನೃತ್ಯಕ್ಕೂ ವೇಷಭೂಷಣಗಳು ಯಕ್ಷಗಾನದ್ದೇ ಆಗಬೇಕು. ಕೆಲವೊಂದು ಕಾಲೇಜು ವಾರ್ಷಿಕೋತ್ಸವಗಳಲ್ಲಿ ಇಂತಹಾ ನೃತ್ಯಪ್ರದರ್ಶನಗಳು ವಿದ್ಯಾರ್ಥಿಗಳಿಂದ ನಡೆಯುತ್ತವೆ. ಬೆಳೆಯುತ್ತಿರುವ ಮಕ್ಕಳಿಗೆ ಯಾವುದು  ಸರಿ ಮತ್ತು ಯಾವುದು ತಪ್ಪು ಎಂಬ ಮಾಹಿತಿಯ ಕೊರತೆಯಿರುವುದು ನಿಜ. ಅವರನ್ನು ಆಕ್ಷೇಪಿಸುವುದೂ ಅಷ್ಟು ಸಮಂಜಸವಾಗಲಾರದು. ಆದರೆ ಅವರಿಗೆ ಇಂತಹ ನೃತ್ಯಗಳಿಗೆ ನಿರ್ದೇಶನ ಮಾಡುವವರು ಯಾರು ಎಂಬುದೇ ಆಶ್ಚರ್ಯ!!! 

ಇಡಗುಂಜಿ ಮೇಳ – ಡಾ. ರಾಮಕೃಷ್ಣ ಜೋಶಿ (Idagunji Mela – Dr. Ramakrishna Joshi)

‘ಇಡಗುಂಜಿ ಮೇಳ’ ಈ ಕೃತಿಯು ಇಡಗುಂಜಿ ಮೇಳ  ಮೇಳದ ಕಲಾವಿದರ ಮಹತ್ಸಾಧನೆಗಳನ್ನು ಒಳಗೊಂಡು ಶ್ರೀ ರಾಮಕೃಷ್ಣ ಜೋಶಿ ಅವರು ಬರೆದ ಮಹಾಪ್ರಬಂಧವಾಗಿ ಪ್ರಕಟವಾಗಿತ್ತು. ಇದು ಓದುಗರ ಕೈ ಸೇರಿದ್ದು 1998ರಲ್ಲಿ. ಈ ಮಹಾ ಪ್ರಬಂಧದ ಪ್ರಕಾಶಕರು ಚಿಂತನ ಪ್ರಕಾಶನ, ಹೆಬ್ಬಾಳ, ಮೈಸೂರು. ಇದು ಒಟ್ಟು ಇನ್ನೂರ ಮೂವತ್ತೈದು ಪುಟಗಳಿಂದ ಕೂಡಿದೆ. ಮುನ್ನುಡಿಯನ್ನು ಬರೆದವರು ಡಾ.ಎಂ. ಪ್ರಭಾಕರ ಜೋಷಿಯವರು.

ಈ ಪ್ರಬಂಧದ ರೂವಾರಿ ಡಾ. ರಾಮಕೃಷ್ಣ ಜೋಶಿಯವರು ‘ನಿಮ್ಮೊಡನೆ’ ಎಂಬ ಶೀರ್ಷಿಕೆಯ  ತಮ್ಮ ಬರಹದಲ್ಲಿ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸಹಕರಿಸಿದ ಸರ್ವರನ್ನೂ ನೆನಪಿಸಿಕೊಂಡಿರುತ್ತಾರೆ. ಈ ಮಹಾಪ್ರಬಂಧವನ್ನು ಯಕ್ಷಗಾನದ ಬೆಳವು, ಉಳಿವಿಗೆ ಗಂಧದಂತೆ ಜೀವ ತೇಯ್ದ ಅಗಣಿತ ಅಜ್ಞಾತ ಕಲಾವಿದರುಗಳಿಗೆ ಗೌರವಪೂರ್ವಕ ಅರ್ಪಿಸಿರುತ್ತಾರೆ. ಈ ಕೃತಿಯು ಪೂರ್ವ ವೃತ್ತ, ಮೇಳ ನಡೆದುಬಂದ ದಾರಿ, ಕಲಾವಿದರ ಸಾಧನೆ -ಸಿದ್ಧಿ, ಯಕ್ಷಗಾನ ಕಲೆಗೆ ಇಡಗುಂಜಿ ಮೇಳದ ಕೊಡುಗೆಗಳು, ಇಂದಿನ ಸ್ಥಿತಿ-ಗತಿ ಎಂಬ ಐದು ವಿಭಾಗಗಳಿಂದ ಕೂಡಿದೆ.

ಮೊದಲ ವಿಭಾಗದಲ್ಲಿ ಯಕ್ಷಗಾನ ಮತ್ತು ಉತ್ತರ ಕನ್ನಡ ತಿಟ್ಟು ಎಂಬ ಬರಹಗಳಿವೆ. ಎರಡನೇ ವಿಭಾಗದಲ್ಲಿ ಮೇಳದ  ಹುಟ್ಟು, ಪ್ರಾರಂಭದ ಇಪ್ಪತ್ತೈದು ವರ್ಷಗಳು, ಮೇಳದ ಸಂಚಾರ ಸ್ಥಗಿತವಾದಾಗ, ಮೇಳದ ಪುನಸ್ಸಂಘಟನೆ, ಎಂಬ ವಿಚಾರಗಳ ಬಗ್ಗೆ ವಿವರಗಳನ್ನು ನೀಡಿರುತ್ತಾರೆ. ಮೂರನೆಯ ವಿಭಾಗದಲ್ಲಿ ಕೆರೆಮನೆ ಘರಾಣೆ, ಹಿಮ್ಮೇಳ, ಪುರುಷ ವೇಷಧಾರಿಗಳು, ಸ್ತ್ರೀ  ವೇಷಧಾರಿಗಳು, ಹಾಸ್ಯಗಾರರು ಮತ್ತು ಬಣ್ಣದ ವೇಷದವರು, ಅತಿಥಿ ಕಲಾವಿದರು, ಮ್ಯಾನೇಜರರು, ಯಕ್ಷಗಾನದ ಕವಿ ಎಂಬ ಬರಹಗಳಿವೆ.

ಮುಂದಿನ ವಿಭಾಗದಲ್ಲಿ ಮೇಳದ ಕೊಡುಗೆಗಳು, ಕೆರೆಮನೆ ಬಂಧುಗಳ ಕೊಡುಗೆಗೆಳು, ಇತರ ಕಲಾವಿದರ ಕೊಡುಗೆಗಳು ಎಂಬ ವಿಚಾರಗಳ ಬಗೆಗೆ ಮಾಹಿತಿಗಳಿವೆ. ಕೊನೆಯ ವಿಭಾಗದಲ್ಲಿ ಇಂದಿನ ಸ್ಥಿತಿ ಗತಿಗಳ ವಿವರಣೆಯನ್ನು ನೀಡಿರುತ್ತಾರೆ. ಹೊರ ಆವರಣದಲ್ಲಿ ಕೆರೆಮನೆ ಶ್ರೀ ಶಂಭು ಹೆಗಡೆಯವರ ಅನಿಸಿಕೆಗಳನ್ನು ಲೇಖನ ರೂಪದಲ್ಲಿ ನೀಡಲಾಗಿದೆ. 

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ 

ಪಾತಾಳ ವೆಂಕಟ್ರಮಣ ಭಟ್ – ಸಂಕ್ಷಿಪ್ತ ಮಾಹಿತಿ (Pathala Venkatramana Bhat)

ಹೆಸರು:   ಪಾತಾಳ ವೆಂಕಟ್ರಮಣ ಭಟ್  
ಪತ್ನಿ: ಶ್ರೀಮತಿ   ಪರಮೇಶ್ವರಿ ಅಮ್ಮ  ವಿವಾಹ: 1960
ಜನನ:  1933 ನವಂಬರ್ 16ರಂದು ಜನನ ಸ್ಥಳ:   ಪುತ್ತೂರಿನ ಸಮೀಪದ ಬೈಪದವು ಎಂಬಲ್ಲಿ ತಂದೆ-ತಾಯಿಗೆ ಒಬ್ಬನೇ ಮಗನಾಗಿ    ತಂದೆ ತಾಯಿ:  ತಂದೆ ಶ್ರೀ ರಾಮ ಭಟ್ಟ. ತಾಯಿ ಶ್ರೀಮತಿ ಹೇಮಾವತಿ
 ಯಕ್ಷಗಾನ ಗುರುಗಳು:   ಪುತ್ತೂರು ಕೃಷ್ಣ ಭಟ್ಟರು ಕಾಂಚನ ಮೇಳದಿಂದ ಸೌಕೂರು ಮೇಳವನ್ನು ಸೇರಿದ ಪಾತಾಳ ವೆಂಕಟ್ರಮಣ ಭಟ್ಟರಿಗೆ ಬಡಗುತಿಟ್ಟಿನ ನಂಟು ಬೆಳೆಯಿತು. ಸೌಕೂರು ಮೇಳದ ಸ್ತ್ರೀ ವೇಷಧಾರಿ ಉಳ್ತೂರು ಸೀತಾರಾಮರವರಿಂದ ಬಡಗಿನ ನಾಟ್ಯದ ಹೆಜ್ಜೆಗಳನ್ನೂ ಕಲಿತರು. ಪುನಃ ತೆಂಕಿನ ಮೇಳಕ್ಕೆ  ಬಂದಾಗ ಪೆರುವೋಡಿ ನಾರಾಯಣ ಭಟ್ಟರಿಂದ ನಾಟ್ಯಗಾರಿಕೆಯ ಕಲಿಕೆಯನ್ನು ಪೂರ್ಣಗೊಳಿಸಿದರು. ಅಲ್ಲದೆ ಕಡಾರು ನಾರಾಯಣ ಭಟ್ ಹಾಗೂ ಅಳಿಕೆ ರಾಮಯ್ಯ ರೈಗಳಿಂದಲೂ ಹೆಚ್ಚಿನ ನಾಟ್ಯಾಭ್ಯಾಸವನ್ನು ಮಾಡಿದರು.   ರಂಗಮಾಹಿತಿ ಮತ್ತು ಹೆಚ್ಚಿನ ಕಲಿಕೆ : ಆ ಕಾಲದ ಪ್ರಸಿಧ್ಧ ವೇಷಧಾರಿಗಳಿಂದ 
ಅನುಭವ:  ಕಾಂಚನ ಮೇಳ, ಸೌಕೂರು ಮೇಳ,  1954ರಲ್ಲಿ ಮೂಲ್ಕಿ ಮೇಳಕ್ಕೆ, 1963ರಲ್ಲಿ ಧರ್ಮಸ್ಥಳ ಮೇಳಕ್ಕೆ ಸೇರಿದರು. ಧರ್ಮಸ್ಥಳ ಮೇಳದ ತಿರುಗಾಟವು ಪಾತಾಳ ವೆಂಕಟ್ರಮಣ ಭಟ್ಟರ ಕಲಾ ಜೀವನದ ಸುವರ್ಣಯುಗ ಎಂದೇ ಹೇಳಬಹುದು. 
 ಮಕ್ಕಳು:   ಇಬ್ಬರು ಗಂಡು ಮಕ್ಕಳು, ನಾಲ್ವರು ಹೆಣ್ಣು ಮಕ್ಕಳು, ಹಿರಿಯ ಮಗ ಶ್ರೀ ಅಂಬಾಪ್ರಸಾದ ಪಾತಾಳ ಯಕ್ಷರಂಗದ ಪ್ರಸಿದ್ಧ ಸ್ತ್ರೀ ವೇಷಧಾರಿ. ಪ್ರಶಸ್ತಿ/ಅಭಿನಂದನೆ/ಸನ್ಮಾನಗಳು: ಹಲವಾರು ಸನ್ಮಾನ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿವೆ.  ಅದರಲ್ಲಿ ಕರ್ನಾಟಕ ಜಾನಪದ ಅಕಾಡೆಮಿ  ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ,  ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಗಾನ ಕಲಾರಂಗ ಪ್ರಶಸ್ತಿ, ವಿಟ್ಲ ಗೋಪಾಲಕೃಷ್ಣ ಭಟ್ ಪ್ರತಿಷ್ಟಾನ ಪ್ರಶಸ್ತಿ, ವಿದ್ಯಾಮಾನ್ಯ ಪ್ರಶಸ್ತಿ, ಯಕ್ಷ ಕಲಾನಿಧಿ ಪ್ರಶಸ್ತಿ, ಅಗರಿ ಪ್ರಶಸ್ತಿ, ಡೋಗ್ರಾ ಪೂಜಾರಿ ಪ್ರಶಸ್ತಿಗಳು ಸೇರಿವೆ.  ಮತ್ತು ಅನೇಕ ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ.