ಇಂದು 22.10.2020ರಂದು ಸಂಜೆ 5.30 ಘಂಟೆಗೆ ಸರಿಯಾಗಿ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿಯವರು ಪ್ರಸ್ತುತಪಡಿಸುವ ಬಡಗು ತಿಟ್ಟು ಯಕ್ಷಗಾನದ ಅಂಗವಾದ ‘ಹೂವಿನ ಕೋಲು’ ಪ್ರದರ್ಶನ ನಡೆಯಲಿದೆ.
ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಸಂಯೋಜಿಸಿದ ‘ಜಾಂಬವತಿ ಕಲ್ಯಾಣ’ ಪ್ರಸಂಗವನ್ನು ಐರೋಡಿ ರಾಜಶೇಖರ ಹೆಬ್ಬಾರ ಅವರು ನಿರ್ದೇಶಿಸಲಿದ್ದಾರೆ. ಭಾಗವತರಾಗಿ ನೀಲಾವರ ಕೇಶವ ಆಚಾರ್ ಮತ್ತು ಮದ್ದಳೆಯಲ್ಲಿ ರಾಘವೇಂದ್ರ ಹೆಗಡೆ ಭಾಗವಹಿಸಲಿದ್ದಾರೆ. ಜಾಂಬವನಾಗಿ ಸೃಜನ್ ಗುಂಡ್ಮಿ, ಕೃಷ್ಣನಾಗಿ ಸಚಿನ್ ಆಚಾರಿ, ಜಾಂಬವತಿಯಾಗಿ ವಿಭವನ್ ಹೇರ್ಳೆ ಭಾಗಹಿಸುತ್ತಾರೆ. ನಶಿಸಿಹೋಗುತ್ತಿರುವ ಈ ಕಲಾಪ್ರಕಾರವನ್ನು ಉಳಿಸುವಲ್ಲಿ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಈ ಪ್ರಯತ್ನ ಸ್ತುತ್ಯರ್ಹ. ನೇರ ಪ್ರಸಾರದ ಲಿಂಕ್ ಕೆಳಗಡೆ ಇದೆ. ಸಂಜೆ 5.30ಕ್ಕೆ ಲಿಂಕ್ ಕ್ಲಿಕ್ ಮಾಡಿ.
“ಯಕ್ಷಗಾನದ ಪೂರ್ವಸ್ಥಿತಿ ಹೇಗಿತ್ತು? (ಪದ್ಧತಿ) ಇದು ಯಾವ ಕಾಲದಲ್ಲಿ ಆರಂಭವಾಯಿತು? ಯಾರಿಂದ? ಇತ್ಯಾದಿ ಒಬ್ಬೊಬ್ಬರ ಅಭಿಪ್ರಾಯ ಒಂದೊಂದು ತರ. ನಿಶ್ಚಿತವಾಗಿ ಇದಮಿತ್ತಂ ಎಂದು ಹೇಳುವುದಕ್ಕೆ ತಕ್ಕ ಪುರಾವೆಗಳು ಎಲ್ಲಿಯೂ ಸಿಗುವುದಿಲ್ಲ. ಯಕ್ಷಗಾನ ರಂಗದ ನಮ್ಮ ಕಾಲದ ಸಕಲ ಆಯಾಮಗಳಲ್ಲೂ ನುರಿತ, ಆ ಕುರಿತು ಆಗ ಅಧಿಕಾರವಾಣಿಯಿಂದ ನುಡಿಯುವವರು ಎಂದು ನಾವು ಗೌರವ ಕೊಡುತ್ತಿದ್ದ – ಯಕ್ಷಗಾನ ಭಾಸ್ಕರ ‘ಕವಿಭೂಷಣ’ ಕೆ.ಪಿ. ವೆಂಕಪ್ಪ ಶೆಟ್ಟರು ಈ ಕಲೆಯ ಉಗಮವನ್ನು ರಾಮಾಯಣದ ಪೂರ್ವಕಾಲಕ್ಕೂ ಪೂರ್ವಕ್ಕೆ ಒಯ್ದಿದ್ದಾರೆ. ಪೂರ್ವಕಾಲದಲ್ಲಿ ಕನಕಲಂಕೆಯನ್ನಾಳುತ್ತಿದ್ದ ಧನಾಧಿಪ ಕುಬೇರನನ್ನು ಸೋಲಿಸಿ ಅಲ್ಲಿಂದ ಹೊರಹಾಕಿ ರಾವಣನು ಲಂಕೆಯನ್ನು ವಶಮಾಡಿಕೊಂಡನಂತೆ. ಅಲ್ಲಿಂದ ಓಡಿದ ಯಕ್ಷರು ನಮ್ಮತ್ತ ಬಂದು ಅಳಕಾವತಿಗೆ ಹೋಗುವ ದಾರಿಯಲ್ಲಿ ಪ್ರಯಾಣದ ಆಯಾಸ, ಪ್ರಯಾಸ, ಬೇಸರ ಕಳೆಯಲು ಆಡಿ ಅಭಿನಯಿಸಿದ ಕಲೆಯೇ ಯಕ್ಷಗಾನ. ಇಂದು ಆಯಾ ಪ್ರಾಂತೀಯರ ಅಭಿರುಚಿಗೆ ತಕ್ಕಂತೆ, ಅವರ ಸಂಸ್ಕೃತಿಗೆ ಸರಿಯಾಗಿ, ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ರೂಪದಿಂದ ಪ್ರಕಾಶಕ್ಕೆ ಬಂತೆಂದು ಹೇಳಬಹುದು. ಇನ್ನೊಂದು ಕಥೆ ಭಾಗವತದ್ದು. ವಜ್ರನಾಭನ ಮಗಳು ಪ್ರಭಾವತಿಯನ್ನು ಮದುವೆಯಾಗಲು ಮನ್ಮಥನು ಯಾದವರೊಂದಿಗೆ ಹೋಗಿ ಯಕ್ಷಗಾನ ಆಟವನ್ನು ಆಡಿ ಪ್ರಭಾವತಿಯನ್ನು ಮದುವೆಯಾದನೆಂಬ ಕಥಾ ಪ್ರಸಂಗದಲ್ಲಿ ನಾನೇ ಮನ್ಮಥನಾಗಿ ಅಭಿನಯಿಸಿದ್ದೇನೆ. ಹೇಗಿದ್ದರೂ ಯಕ್ಷಗಾನ ಕಲೆ ಕೆಲವು ಶತಮಾನಗಳಿಗೆ ಪೂರ್ವದಲ್ಲೇ ಇಲ್ಲಿ ಬೆಳಕನ್ನು ಕಂಡ ಕಲೆಯೆಂದು ನನ್ನ ದೃಢ ನಂಬುಗೆ”.
(ಶ್ರೀ ಶೇಣಿ ಗೋಪಾಲಕೃಷ್ಣ ಭಟ್ – ಉಳಿಯ ಶ್ರೀ ಧನ್ವಂತರಿ ಯಕ್ಷಗಾನ ಕಲಾ ಸಂಘದ ರಜತ ಮಹೋತ್ಸವ ಸ್ಮರಣ ಸಂಚಿಕೆ “ಸುಧಾ ಕಲಶ” ದಲ್ಲಿ- 1988)
“ದೇವ, ದಾನವ ಮಾನವಾದಿ ವೇಷ ವಿಧಾನಗಳಲ್ಲಿ ಯಕ್ಷಗಾನಿಗಳು ಅನುಸರಿಸಿ ಬಂದ ರೀತಿ ಅದ್ಭುತ ರಮ್ಯವಾದುದು. ಪ್ರಪಂಚದ ಯಾವ ಕಲಾವಿದನಿಗೂ ಹೊಳೆಯದ ವರ್ಣ ವಿಭಜನೆ, ವೇಷ ಭೂಷಣಗಳ ಕಲ್ಪನೆ ಇಲ್ಲಿದೆ. ಇದನ್ನು ಮರೆತು ಗಣಪತಿಯ ಕಲ್ಪನೆಯಲ್ಲಿ ಕಪಿಯನ್ನು ಸೃಷ್ಟಿಸುವ ಸಾಹಸವು ಅಸಹನೀಯವೂ ಅಸಹ್ಯವೂ ಆಗಬಹುದು. ಸುಧಾರಣೆಯೆಂದರೆ ಬುಡವನ್ನು ಕತ್ತರಿಸದೆ, ಅಗತ್ಯವಿಲ್ಲದ ಶಾಖೆಯನ್ನು ಮಾತ್ರ ಕತ್ತರಿಸುವುದೆಂಬ ಕರ್ಷಕ ಬುದ್ಧಿಯಿದ್ದರೆ ಮಾತ್ರ ಕಲೆಯನ್ನು ಆಕರ್ಷಕವಾಗಿ ಉಳಿಸಿ ಬೆಳೆಸಬಹುದೆಂದು ಕಲಾವಿದರೂ ಕಲಾಭಿಮಾನಿಗಳೂ ನಂಬಿಕೆಯುಳ್ಳವರಾಗಬೇಕು. ನಾಟ್ಯಾಭಿನಯಾದಿ ಚಲನೆಗಳಲ್ಲಿ ಪಾತ್ರಾಭಿವ್ಯಕ್ತಿಯೇ ಮುಖ್ಯವಾಗಿರಬೇಕಲ್ಲದೆ, ಪದಾಭಿನಯವೋ, ಪದ್ಯಾಭಿನಯವೋ ಪ್ರಧಾನವಲ್ಲ. ಪಾತ್ರಾಭಿನಯವೇ ಸ್ಥಾಯಿಯಲ್ಲದೆ ಸಂಚಾರೀಭಾವಗಳಲ್ಲಿ – ಮುಖ್ಯಾಂಶಕ್ಕೆ ಧಕ್ಕೆಯಾಗುವ ಯಾವ ಅಂಶಗಳನ್ನೂ ಗಮನಿಸಬಾರದು. ರಾವಣನ ರೋಷಾವೇಷಕ್ಕೂ ರಾಮನದಕ್ಕೂ ಏಕತಾನತೆ ಸಲ್ಲದು. ಎಲ್ಲಾ ಪಾತ್ರಗಳಿಗೂ ಈ ನಿರ್ಣಯವು ಬಾಧಕವಾಗಿರಬೇಕು. ಯಕ್ಷಗಾನ ನಾಟ್ಯವನ್ನು ಬಲ್ಲವರಿಗೆ ಇದು ಅರ್ಥವಾಗುವ ವಿಷಯವಾಗಿದೆ. ಈ ಸಾಮರಸ್ಯದಿಂದಲೇ ಯಕ್ಷಗಾನವು ತನ್ನತನವನ್ನು ಉಳಿಸಿಕೊಂಡು ಸಂತುಷ್ಟವಾಗಿದೆ. ಹಾಗಾಗಿ ಈ ಕಲೆಗೆ ಈ ಕಲೆಯೇ ಉಪಮೆಯಾಗಿದೆ”.
ಇತ್ತೀಚೆಗೆ ನಿಧನರಾದ ಶತಾಯುಷಿ ಹಿರಿಯಡಕ ಗೋಪಾಲ ರಾವ್ ಮತ್ತು ಹಿರಿಯ ಕಲಾವಿದ ಲಕ್ಷ್ಮಣ್ ಕಾಂಚನ್ ಇವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಅಕ್ಟೋಬರ್ 20, 2020ರಂದು ಯಕ್ಷಗಾನ ಕಲಾರಂಗದ ಕಚೇರಿಯಲ್ಲಿ ಜರಗಿತು.
ಯಕ್ಷಗಾನ ಕಲಾರಂಗ ಉಡುಪಿ ಮತ್ತು ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿ ಅಂಬಲಪಾಡಿ ಜಂಟಿಯಾಗಿ ಈ ಸಭೆ ಆಯೋಜಿಸಿದ್ದವು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಉಪಾಧ್ಯಕ್ಷ ವಿ.ಜಿ. ಶೆಟ್ಟಿ, ಮತ್ತು ಎರಡು ಸಂಸ್ಥೆಗಳ ಪದಾಧಿಕಾರಿಗಳು ಪುಷ್ಪನಮನ ಸಲ್ಲಿಸಿದರು. ಕಲಾರಂಗದ ಉಪಾಧ್ಯಕ್ಷ ಎಸ್. ವಿ ಭಟ್, ಪ್ರೊ. ಎಂ.ಎಲ್ ಸಾಮಗ, ವಿಜಯ್ ಕುಮಾರ್ ಮುದ್ರಾಡಿ, ಕೆ. ಅಜಿತ್ ಕುಮಾರ್, ಮರವಂತೆ ಪ್ರಕಾಶ್ ಪಡಿಯಾರ್, ರಾಮಾಂಜಿ ನುಡಿನಮನ ಸಲ್ಲಿಸಿದರು.
ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿಯ ಅಧ್ಯಕ್ಷ ಹಾಗೂ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಕಲಾ ಮಂಡಳಿಯ ಬೆಳವಣಿಗೆಯಲ್ಲಿ ಹಿರಿಯಡಕ ಗೋಪಾಲ ರಾಯರ ಕೊಡುಗೆ ಹಾಗೂ ಸಂಸ್ಥೆ ಅವರನ್ನು ಗೌರವಿಸಿದ್ದನ್ನು ಸ್ಮರಿಸಿಕೊಂಡರು. ಈರ್ವರು ಕಲಾವಿದರಿಗೂ ಸಂಸ್ಥೆ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ನೀಡಿದ್ದನ್ನು ನೆನಪಿಸಿಕೊಂಡರು.
ಅಂಬಲಪಾಡಿ ಯಕ್ಷಗಾನ ಮಂಡಳಿಯ ಕಾರ್ಯದರ್ಶಿ ಕೆ.ಜೆ ಕೃಷ್ಣ ವಂದಿಸಿದರು. ಸಭೆಯ ಆರಂಭದಲ್ಲಿ ಕೆ.ಜೆ ಗಣೇಶ ಮತ್ತು ಅನಂತ ಪದ್ಮನಾಭ ಭಟ್ ಯಕ್ಷಗಾನ ಹಾಡಿನ ಮೂಲಕ ಅಗಲಿದ ಚೇತನಗಳಿಗೆ ಗಾನ ನಮನ ಸಲ್ಲಿಸಿದರು. ಕೆ.ಜೆ ಸುಧೀಂದ್ರ ಮದ್ದಲೆವಾದನದಲ್ಲಿ ಸಹಕರಿಸಿದರು.
ಯಕ್ಷಗಾನದ ಟೆಂಟ್ ಮೇಳಗಳು ವಿಜೃಂಭಿಸುತ್ತಿದ್ದ ಕಾಲ. ಕಲೆಕ್ಷನ್ ಆಗಬೇಕಾದರೆ ಪ್ರೇಕ್ಷಕರನ್ನು ಆಕರ್ಷಿಸಲೇ ಬೇಕು. ಕರಪತ್ರ, ರಸೀದಿಗಳ ಸಹಿತ ಮನೆ ಮನೆಗೆ ತೆರಳುವುದು ಪ್ರಚಾರದ ಒಂದು ದಾರಿ. ಬ್ಯಾನರ್ ಕಟ್ಟಿ ನೇತಾಡಿಸುವುದು ಒಂದು ದಾರಿ. ಮತ್ತೊಂದು ದಾರಿಯೂ ಆರಂಭವಾಗಿತ್ತು. ಪ್ರದರ್ಶನದ ದಿನ ಬೆಳಗಿನಿಂದ ಆರಂಭಿಸಿ ಸಂಜೆಯ ತನಕ ಜೀಪು, ಕಾರುಗಳಿಗೆ ಧ್ವನಿವರ್ಧಕ ಅಳವಡಿಸಿ ಒಳಗೊಬ್ಬ ಕುಳಿತು ಆಟದ ವಿವರಣೆಯನ್ನು ಆಕರ್ಷಣೀಯವಾಗಿ ಮೈಕ್ ಹಿಡಿದು ವಿವರಿಸುತ್ತಾ ಸಾಗುವುದು. ಜನರನ್ನು ಕಂಡಾಗ ಕರಪತ್ರವನ್ನೂ ಹೊರಕ್ಕೆಸೆಯುತ್ತಿದ್ದರು.
ಕೆಲವೊಂದು ಕಡೆ ಈಗಲೂ ಈ ಕ್ರಮ ಚಾಲ್ತಿಯಲ್ಲಿದೆ. ಕಲಾಭಿಮಾನಿಗಳನ್ನು ರಾತ್ರಿಯ ಪ್ರದರ್ಶನಕ್ಕೆ ಸೆಳೆಯಲು ತನ್ನ ಮಾತಿನ ಮೋಡಿಯಿಂದ ಪರಮಾವಧಿ ಪ್ರಯತ್ನಿಸುತ್ತಾನೆ ಮೈಕ್ ಹಿಡಿದವ. ಅದೂ ಒಂದು ಕಲೆಯೇ ಹೌದು. ಭಾಗವತರ ಹಾಡನ್ನೂ ಚೆಂಡೆ ಬಾರಿಸುವವರ ಕೈಚಳಕವನ್ನೂ, ಹಾಸ್ಯಗಾರರನ್ನೂ, ಮಾತಿನ ಮಲ್ಲರಾದ ಕಲಾವಿದರನ್ನೂ ತನ್ನದೇ ಆದ ಶೈಲಿಯಲ್ಲಿ ಆತ ಹೊಗಳುತ್ತಾ ಇರುವಾಗ ವಾಹನವು ಮುಂದೆ ಸಾಗುತ್ತದೆ. “ಕಲಾಭಿಮಾನಿಗಳೇ, ಕಲಾರಸಿಕರೇ, ಕಲಾಬಂಧುಗಳೇ , ನಿಂತಿರುವ ನಿಪುಣರೇ, ಕುಳಿತಿರುವ ಕುಶಲಿಗರೇ, ಅತ್ತ ಇತ್ತ ಚಲಿಸುತ್ತಿರುವ ನಾಗರಿಕರೇ, ಇದು ಆಟದ ಪ್ರಚಾರ. ಒಂದೇ ಒಂದು ಆಟ, ನಿನ್ನೆ ನಡೆದಿಲ್ಲ. ನಾಳೆ ನಡೆಯುವುದಿಲ್ಲ. ಇಂದು ಮಾತ್ರ ಅವಕಾಶ. ಮರೆಯದಿರಿ. ಮರೆತು ನಿರಾಶರಾಗದಿರಿ…” ಹೀಗೆ ಮುಂದುವರಿಯುತ್ತದೆ. ಸ್ತ್ರೀ ವೇಷಗಳ ಬಗೆಗೆ ಆತ ಹೀಗೊಂದು ಮಾತನ್ನು ಹೇಳುತ್ತಾನೆ. ‘ಗಂಡಾಗಿ ಹುಟ್ಟಿ ಹೆಣ್ಣಾಗಿ ನರ್ತಿಸುವ ………..’ ಇವರ ವೇಷವನ್ನು ನೋಡಲು ಮರೆಯದಿರಿ. ‘ಹೆಣ್ಣನ್ನೂ ನಾಚುವಂತೆ ಅಭಿನಯಿಸುವ ” ಎಂದೂ ಹೇಳುತ್ತಾರೆ. ಮನಸೂರೆಗೊಳ್ಳುವಂತಹ ಅವರ ವಿವರಣೆಯನ್ನು ಕೇಳಿಯೇ ಆಟ ನೋಡಲು ತೀರ್ಮಾನಿಸುತ್ತಾರೆ.
ಹೌದು. ಹಿಂದಿನ ಕಾಲದಲ್ಲಿ ಗಂಡಸರು ಮಾತ್ರ ಯಕ್ಷಗಾನದಲ್ಲಿ ವೇಷ ಮಾಡುತ್ತಿದ್ದರು. ಅದಕ್ಕೆ ಕಾರಣಗಳೂ ಇವೆ. ಆದರೆ ಈಗ ಹಾಗಲ್ಲ. ಹಗಲೂ ಪ್ರದರ್ಶನಗಳು. ಮಹಿಳಾ ತಂಡಗಳು ಕಲಾಸೇವೆಯನ್ನು ಮಾಡುತ್ತಿವೆ. ಅನೇಕ ಮಹಿಳೆಯರು ಯಕ್ಷಗಾನ ಕಲಾವಿದೆಯರಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಒಂದಂತೂ ಸತ್ಯ. ಪುರುಷರು ಸ್ತ್ರೀ ವೇಷ ಮಾಡುವುದೂ ಸ್ತ್ರೀಯರು ಪುರುಷ ವೇಷಗಳನ್ನು ನಿರ್ವಹಿಸುವುದೂ ಅಷ್ಟು ಸುಲಭವಲ್ಲ. ಸಾಧನೆ ಬೇಕು. ಹೆಣ್ಣು ಪುರುಷ ವೇಷ ಮಾಡಿದರೆ ಪ್ರಸಂಗದ ಕೊನೆಯ ತನಕ ತಾನು ಪುರುಷನಂತೇ ವ್ಯವಹರಿಸುವುದು, ಪುರುಷನು ಹೆಣ್ಣಿನ ವೇಷ ಧರಿಸಿದರೆ ಕೊನೆ ತನಕವೂ ಸ್ತ್ರೀಯಂತೆ ರಂಗದೊಳಗೆ ಕಾಣಿಸಿಕೊಳ್ಳುವುದು ಎಂದರೆ ಸಣ್ಣ ವಿಚಾರವೇ? ಆ ಕಲೆ ಗೊತ್ತಿರದಿದ್ದರೆ, ಗೊತ್ತಿದ್ದೂ ರಂಗದೊಳಗೆ ಎಚ್ಚರ ತಪ್ಪಿದರೆ ಪಾತ್ರವೂ, ಪ್ರದರ್ಶನವೂ ಕೆಟ್ಟು ಹೋದಂತೆಯೇ. ಹೀಗೆ ಗಂಡಾಗಿ ಹುಟ್ಟಿ ಹೆಣ್ಣಾಗಿ ರಂಗದೊಳಗೆ ಮೆರೆದ ಸ್ತ್ರೀ ಪಾತ್ರಧಾರಿಗಳು ಅನೇಕರು. ಪಾತಾಳ ವೆಂಕಟ್ರಮಣ ಭಟ್, ಕೊಳ್ಯೂರು ರಾಮಚಂದ್ರ ರಾವ್, ಕೊಕ್ಕಡ ಈಶ್ವರ ಭಟ್, ಎಂ.ಕೆ. ರಮೇಶಾಚಾರ್ಯ, ಸಂಜಯಕುಮಾರ್ ಮೊದಲಾದ ಹಿರಿಯ ಕಲಾವಿದರು ತೆಂಕಿನಲ್ಲಿ ಪ್ರಸಿದ್ಧರು. ಪೈವಳಿಕೆ ಐತಪ್ಪ, ಮಂಕುಡೆ ಸಂಜೀವ ಶೆಟ್ರು, ಅಪ್ರತಿಮ ಸ್ತ್ರೀವೇಷಧಾರಿಗಳಾಗಿದ್ದರಂತೆ. ಶ್ರೀ ಕೆದಿಲ ಜಯರಾಮ ಭಟ್ಟರು ಪ್ರಸ್ತುತ ತಿರುಗಾಟ ನಡೆಸುತ್ತಿರುವ ಅನುಭವೀ ಸ್ತ್ರೀ ವೇಷಧಾರಿಗಳಲ್ಲೊಬ್ಬರು.
ಶ್ರೀ ಕೆದಿಲ ಜಯರಾಮ ಭಟ್ಟರ ಮೂಲ ಮನೆ ಇರುವುದು ಪುತ್ತೂರು ತಾಲೂಕಿನ ಈಶ್ವರಮಂಗಲ ಸಮೀಪದ ಹೊಸಂಗಡಿ ಎಂಬಲ್ಲಿ. ಶ್ರೀಯುತರು 1964 ಏಪ್ರಿಲ್ 4ರಂದು ಪುತ್ತೂರು ಬೀರಮಲೆ ಎಂಬಲ್ಲಿ ಈ ಲೋಕದ ಬೆಳಕನ್ನು ಕಂಡವರು. ತಂದೆ ಶಂಕರನಾರಾಯಣ ಭಟ್, ತಾಯಿ ಲಕ್ಷ್ಮಿ ಅಮ್ಮ. ಹಿರಿಯರೆಲ್ಲರೂ ಕೃಷಿಕರು. ಜಯರಾಮ ಭಟ್ಟರು ಓದಿದ್ದು ಎಸ್.ಎಸ್.ಎಲ್.ಸಿ. ಪುತ್ತೂರು ದರ್ಬೆಯ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ. ಪಿಯುಸಿ 1 ವರ್ಷ ಓದಿ ಅನಿವಾರ್ಯವಾಗಿ ಓದು ನಿಲ್ಲಿಸಬೇಕಾಯಿತು. ವಿದ್ಯಾರ್ಥಿಯಾಗಿದ್ದಾಗ ಯಕ್ಷಗಾನಾಸಕ್ತಿ ಇರಲಿಲ್ಲ. ನಾಟಕದತ್ತ ಒಲವನ್ನು ಹೊಂದಿದ್ದರು. ಶಾಲಾ ಪ್ರದರ್ಶನಗಳ ಸೀನ್ ಸೀನರಿ ನಾಟಕಗಳಲ್ಲಿ ಅಭಿನಯಿಸಿದ್ದರು. ಕನ್ನಡದಲ್ಲಿ ಪುರಾಣ ಮತ್ತು ಸಾಮಾಜಿಕ ನಾಟಕಗಳಲ್ಲಿ ಮತ್ತು ಕುಂಕುಮ, ಬಯ್ಯಮಲ್ಲಿಗೆ ಮೊದಲಾದ ತುಳು ನಾಟಕಗಳಲ್ಲೂ ಅಭಿನಯಿಸಿದ್ದರು. ಯಕ್ಷಗಾನ ಕಲಾವಿದನಾಗಬೇಕೆಂಬ ಬಯಕೆಯೂ ಇರಲಿಲ್ಲ. ಯಕ್ಷಗಾನ ಕಲಾವಿದನಾಗುತ್ತೇನೆಂಬ ಕಲ್ಪನೆಯೂ ಇರಲಿಲ್ಲ. ವಿಚಿತ್ರ ಸನ್ನಿವೇಶವೊಂದು ಇವರು ಯಕ್ಷಗಾನ ಸೇರಲು ವೇದಿಕೆಯಾಗಿತ್ತು.
ಪುತ್ತೂರಿನ ಬೀರಮಲೆಯ ಇವರ ಮನೆಯ ಪಕ್ಕ ವಾಸ್ತವ್ಯವಿದ್ದ ಕುಟುಂಬದ ಸುರೇಶ ಹೆಗಡೆ ಎಂಬ ವಿದ್ಯಾರ್ಥಿ ಯಕ್ಷಗಾನಾಸಕ್ತ. ನಾಟ್ಯ ಕಲಿಯಲೆಂದು ಅವರು ಧರ್ಮಸ್ಥಳ ಲಲಿತ ಕಲಾ ಕೇಂದ್ರಕ್ಕೆ ತೆರಳುವಾಗ ಜಯರಾಮ ಭಟ್ಟರೂ ಹೋಗಿದ್ದರು. ಸಂದರ್ಶನಕ್ಕಾಗಿ ಅಲ್ಲ. ಧರ್ಮಸ್ಥಳ ಶ್ರೀ ಮಂಜುನಾಥನ ದರ್ಶನಕ್ಕೆ. ಸುರೇಶ ಹೆಗಡೆ ಭಾಗವತಿಕೆ ಕಲಿಯುವ ಆಸೆಯಿಂದ ಹೋಗಿದ್ದರು. ಮಾತ್ರವಲ್ಲ ಸಂದರ್ಶನದಲ್ಲಿ ಆಯ್ಕೆಯಾಗಿದ್ದರು. ಇವರ ಜತೆಗೆ ಜಯರಾಮ ಭಟ್ಟರ ಸಂದರ್ಶನವೂ ನಡೆದಿತ್ತು. ಸಂದರ್ಶಕರು ಕುಣಿಯಲು ಹೇಳಿದಾಗ ಪ್ರವೇಶದ ಕ್ರಮವನ್ನು ಚೆನ್ನಾಗಿ ಮಾಡಿ ತೋರಿಸಿದ್ದರು. ಯೋಗಾ ಯೋಗ ಎಂದರೆ ಇದು. ನಟರಾಜನಿಗೆ ನಮಿಸಲು ಹೋದವರು ನಾಟ್ಯ ಕಲಿಯುವಂತಾಗಿತ್ತು. ಮಂಜುನಾಥನ ಮತ್ತು ಕಲಾಮಾತೆಯ ಸಂಕಲ್ಪವು ಜಯರಾಮ ಭಟ್ಟರು ಯಕ್ಷಗಾನ ಕಲಾವಿದರೇ ಆಗಬೇಕೆಂದಿತ್ತು. ಕೇಂದ್ರದಲ್ಲಿ ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ನಾಟ್ಯಾಭ್ಯಾಸ ಆರಂಭ. ಕಲಿಕಾ ಕೇಂದ್ರದಲ್ಲಿ ಪದ್ಮನಾಭ ಉಪಾಧ್ಯಾಯ, ಜಗದಾಭಿರಾಮ ಸ್ವಾಮಿ ಪಡುಬಿದ್ರಿ ಇವರ ಸಹಪಾಠಿಗಳಾಗಿದ್ದರು. ಆಗ ನೆಡ್ಲೆ ನರಸಿಂಹ ಭಟ್ಟರು ಹಿಮ್ಮೇಳಕ್ಕೆ ಗುರುಗಳಾಗಿದ್ದರು.
ಕೇಂದ್ರದ ವಿದ್ಯಾರ್ಥಿಗಳಿಂದ ನಡೆದ ಪ್ರದರ್ಶನದಲ್ಲಿ ದಾಕ್ಷಾಯಿಣಿ ಪಾತ್ರವನ್ನು ಮಾಡಿದ್ದರು. ನಾಟ್ಯ ಕಲಿತ ನಂತರ ಕಟೀಲು ಮೇಳಕ್ಕೆ ಸೇರುವ ನಿರ್ಣಯ ಮಾಡಿದಾಗ ನೆಡ್ಲೆ ನರಸಿಂಹ ಭಟ್ಟರು ಟೆಂಟ್ ಮೇಳಕ್ಕೆ ಸೇರು ಎಂದಿದ್ದರಂತೆ. ಕೆದಿಲ ಜಯರಾಮ ಭಟ್ಟರು ತಿರುಗಾಟ ಆರಂಭಿಸಿದ್ದು ಅರುವ ಮೇಳದಲ್ಲಿ. ಅರುವ ನಾರಾಯಣ ಶೆಟ್ಟರ ಸಂಚಾಲಕತ್ವ. 2ನೇ ಸ್ತ್ರೀ ವೇಷಧಾರಿಯಾಗಿ ಆಗ ನೆಡ್ಲೆ ಉಮೇಶ ಹೆಬ್ಬಾರರು 1ನೇ ಸ್ತ್ರೀ ವೇಷಧಾರಿಯಾಗಿದ್ದರು. ಮುಂದಿನ ವರ್ಷ ಬಪ್ಪನಾಡು ಮೇಳಕ್ಕೆ. 1 ತಿಂಗಳ ತಿರುಗಾಟ ನಡೆಸಿ ಅನಿವಾರ್ಯ ಕಾರಣದಿಂದ ಮನೆಗೆ ತೆರಳಿದ್ದರು. ಅದೇ ವರುಷ ಮತ್ತೆ ಅರುವ ಮೇಳದಲ್ಲಿ ವ್ಯವಸಾಯ. ಮುಂದಿನ ವರ್ಷ ಕಲ್ಲಾಡಿ ದೇವಿಪ್ರಸಾದ್ ಶೆಟ್ಟರ ಸಂಚಾಲಕತ್ವದ ಕರ್ನಾಟಕ ಮೇಳಕ್ಕೆ. 1 ವರ್ಷ ತಿರುಗಾಟ. ಮಧೂರು ಮೇಳ ಆರಂಭವಾದ ವರ್ಷ ಸದ್ರಿ ಮೇಳಕ್ಕೆ ಸೇರಿ 2 ವರ್ಷಗಳ ವ್ಯವಸಾಯ. ಕದ್ರಿ ಮೇಳವನ್ನು ಶ್ರೀ ಡಿ. ಮನೋಹರ ಕುಮಾರರು ವಹಿಸಿಕೊಂಡ ವರ್ಷ ಸದ್ರಿ ಮೇಳದಲ್ಲಿ ಕಲಾಸೇವೆ. ಮುಂದಿನ 2 ವರ್ಷಗಳ ಕಾಲ ಬಡಗಿನ ಮಂದಾರ್ತಿ ಮೇಳಕ್ಕೆ. ಬಡಗಿನ ನಾಟ್ಯ, ತಿರುಗಾಟದ ಅನುಭವ ಇದ್ದಿರಲಿಲ್ಲ. ಆದರೂ ಮೇಳದಲ್ಲಿದ್ದುಕೊಂಡೇ ಅಭ್ಯಸಿಸಿದ್ದರು. ಪುರಾಣ ಪ್ರಸಂಗಗಳ ಅನುಭವವೂ ಆಗಿತ್ತು ಮಂದಾರ್ತಿ ಮೇಳದಲ್ಲಿ.
ಮುಂದಿನ ವರ್ಷ ಕಸ್ತೂರಿ ಪೈಗಳ ಸುರತ್ಕಲ್ ಮೇಳದಲ್ಲಿ ಕಲಾ ಸೇವೆ. ಸ್ತ್ರೀ ಪಾತ್ರಕ್ಕೆ ನನಗೆ ಎಂ.ಕೆ. ರಮೇಶಾಚಾರ್ಯರೇ ಆದರ್ಶ. ಅವರು ಹೇಳಿ ಕೊಟ್ಟಿದ್ದಾರೆ. ಅವರ ವೇಷ ನೋಡಿ ಕಲಿತೆ. ಮಾತುಗಾರಿಕೆಯನ್ನೂ ಹೇಳಿ ಕೊಟ್ಟಿದ್ದಾರೆ ಎಂದು ಜಯರಾಮ ಭಟ್ಟರು ಅವರನ್ನು ಗೌರವಿಸುತ್ತಾರೆ. ಎಂ.ಕೆ ಅವರ ದಮಯಂತಿಗೆ ಚೈದ್ಯರಾಣಿಯಾಗಿ ಜಯರಾಮ ಭಟ್ಟರು ಅಭಿನಯಿಸಿದ ವೀಡಿಯೊ ಈಗಲೂ ಇದೆ. ಎಂ.ಕೆ ಅವರು ಅವಕಾಶಗಳನ್ನು ನೀಡಿ ಪ್ರೋತ್ಸಾಹಿಸಿದ್ದರಂತೆ. ಈ ಹೊತ್ತಿಗೆ ಕೆದಿಲ ಜಯರಾಮ ಭಟ್ಟರು ಸ್ತ್ರೀ ಪಾತ್ರಧಾರಿಯಾಗಿ ಗುರುತಿಸಲ್ಪಟ್ಟು ಖ್ಯಾತರಾಗಿದ್ದರು. ದೈವದತ್ತವಾದ ರೂಪ ಮತ್ತು ಸಾಧನೆಯಿಂದ ಸಿದ್ಧಿಸಿದ ನಾಟ್ಯ ಇವೆರಡೂ ಅವರಿಗೆ ಪ್ಲಸ್ ಪಾಯಿಂಟ್ ಆಗಿದ್ದುವು. ಶೃಂಗಾರ ಮತ್ತು ಕರುಣ ರಸಗಳಲ್ಲಿ ಅತ್ಯುತ್ತಮವಾದ ಅಭಿನಯ ಇವರದು. ಆ ಕಾರಣದಿಂದಲೇ ಪೆರ್ಡೂರು ಮೇಳಕ್ಕೆ ಕರೆ ಬಂದಿತ್ತು. ಭಾಗವತ ಸುಬ್ರಹ್ಮಣ್ಯ ಧಾರೇಶ್ವರರು ಪ್ರತಿಭೆಯನ್ನು ಗುರುತಿಸಿ ಅವಕಾಶವಿತ್ತಿದ್ದರು. ಅವರ ಗರಡಿಯಲ್ಲಿ ವೇಷಗಳು ಕ್ಲಿಕ್ ಆದುವು. ಧಾರೇಶ್ವರರ ಬಗೆಗೆ ಜಯರಾಮ ಭಟ್ಟರು ಅಭಿಮಾನವನ್ನೂ ಪ್ರಕಟಿಸುತ್ತಾರೆ.
ಆಗ ಕನ್ನಡ ಸಿನೆಮಾ ರಂಗದಲ್ಲಿ ತನ್ನ ರೂಪ ಮತ್ತು ಪ್ರತಿಭೆಯಿಂದ ಮಿಂಚುತ್ತಿದ್ದ ನಟಿ ಮಾಲಾಶ್ರೀ. ತನ್ನ ರೂಪ, ನಾಟ್ಯಗಳಿಂದ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದ ಜಯರಾಮ ಭಟ್ಟರು ‘ಯಕ್ಷರಂಗದ ಮಾಲಾಶ್ರೀ’ ಎಂದೇ ಕರೆಸಿಕೊಂಡರು. ಕರಪತ್ರಗಳಲ್ಲೂ ಸ್ತ್ರೀ ಪಾತ್ರದಲ್ಲಿ ಯಕ್ಷರಂಗದ ಮಾಲಾಶ್ರೀ ಕೆದಿಲ ಜಯರಾಮ ಭಟ್ ಎಂದೇ ಮುದ್ರಿತವಾಗುತ್ತಿತ್ತು. ವೈ. ಕರುಣಾಕರ ಶೆಟ್ರ ಪೆರ್ಡೂರು ಮೇಳದಲ್ಲಿ 3 ತಿರುಗಾಟ. ವಸಂತ ಭಾರ್ಗವಿ, ಪವಿತ್ರ ಪದ್ಮಿನಿ, ಪಟ್ಟಾಭಿಷೇಕ(ಕೈಕೇಯಿ), ಕೀಚಕ ವಧೆ (ಸೈರಂಧ್ರಿ) ಚಂದ್ರಾವಳೀ ವಿಲಾಸ (ಚಂದ್ರಾವಳಿ), ಭಸ್ಮಾಸುರ ಮೋಹಿನಿ(ಮೋಹಿನಿ), ವಿಶ್ವಾಮಿತ್ರ ಮೇನಕೆ, ಮೊದಲಾದ ಪ್ರಸಂಗಗಳು ಹೆಸರನ್ನು ತಂದು ಕೊಟ್ಟಿತ್ತು. ಬಳಿಕ 1 ವರ್ಷ ಕಿಶನ್ ಹೆಗ್ಡೆಯವರ ಮಂಗಳಾದೇವಿ ಮೇಳಕ್ಕೆ. ಮುಂದಿನ ವರ್ಷ ಒಂದು ತಿಂಗಳ ತಿರುಗಾಟ ಕಳೆದಾಗ ಕಿಶನ್ ಹೆಗ್ಡೆಯವರು ಜಯರಾಮ ಭಟ್ಟರನ್ನು ಸಾಲಿಗ್ರಾಮ ಮೇಳಕ್ಕೆ ಕಳುಹಿಸಿದ್ದರು. 3 ವರ್ಷ ಸಾಲಿಗ್ರಾಮ ಮೇಳದಲ್ಲಿ ಕಲಾಸೇವೆ. ನಂತರ 3 ವರ್ಷ ಧರ್ಮಸ್ಥಳ ಮೇಳದಲ್ಲಿ ವ್ಯವಸಾಯ. ಬಳಿಕ ಗೋಳಿಗರಡಿ ಟೆಂಟಿನ ಮೇಳ ಆರಂಭವಾದ ವರ್ಷ 1 ತಿರುಗಾಟ. ಪುನಃ ಸಾಲಿಗ್ರಾಮ ಮೇಳದಲ್ಲಿ 1 ತಿರುಗಾಟ. ಮರಳಿ ಧರ್ಮಸ್ಥಳ ಮೇಳದಲ್ಲಿ 8 ವರ್ಷಗಳ ಕಲಾಸೇವೆ. ಬಳಿಕ ಎಡನೀರು ಉಭಯ ಮೇಳಗಳಲ್ಲಿ ತಲಾ ಒಂದು ತಿರುಗಾಟ. 2018 – 19ರಲ್ಲಿ ಸುಂಕದಕಟ್ಟೆ ಮೇಳದಲ್ಲಿ. ಹೀಗೆ ಒಟ್ಟು ವಿವಿಧ ಮೇಳಗಳಲ್ಲಿ 33 ವರ್ಷಗಳ ವ್ಯವಸಾಯ ಕೆದಿಲ ಶ್ರೀ ಜಯರಾಮ ಭಟ್ಟರದು.
ವೃತ್ತಿ ಕಲಾವಿದನಾಗಿ ತಿರುಗಾಟ ಆರಂಭಿಸಿದ ಕೆಲವು ವರ್ಷಗಳ ನಂತರ ಕೆದಿಲದಲ್ಲಿ ವಾಸಿಸುತ್ತಿದ್ದ ಕಾರಣ ಕೆದಿಲ ಜಯರಾಮ ಭಟ್ ಎಂದೇ ಕರೆಸಿಕೊಂಡರು. ಅನೇಕ ವರ್ಷಗಳ ಕಾಲ ಕೆದಿಲದಲ್ಲಿ ವಾಸ್ತವ್ಯ ಹೂಡಿದ್ದರು. ಪ್ರಸ್ತುತ ಕೆಲವು ವರ್ಷಗಳಿಂದ ಪತ್ನಿ ಪುತ್ರನ ಜತೆ ಬಂಟ್ವಾಳ ತಾಲೂಕು ಪೆರಾಜೆ ಗ್ರಾಮದ ನೇರಳಕಟ್ಟೆ ಸಮೀಪದ ಕೇಪುಳಕೆರೆ ಎಂಬಲ್ಲಿ ವಾಸಿಸುತ್ತಿದ್ದಾರೆ. ಮಳೆಗಾಲದಲ್ಲಿ ಪುತ್ತೂರು ಶ್ರೀಧರ ಭಂಡಾರಿಯವರ ಶ್ರೀ ಮಹಾಲಿಂಗೇಶ್ವರ ಪ್ರವಾಸೀ ಯಕ್ಷಗಾನ ಮಂಡಳಿ ಪುತ್ತೂರು ಮತ್ತು ನಿಡ್ಲೆ ಗೋವಿಂದ ಭಟ್ಟರ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ ಈ ಉಭಯ ತಂಡಗಳ ಕಲಾವಿದನಾಗಿ ಪ್ರದರ್ಶನಗಳಲ್ಲಿ ಭಾಗವಹಿಸಿರುತ್ತಾರೆ. ಮಳೆಗಾಲದಲ್ಲಿ ಬಡಗಿನ ತಂಡದ ಪ್ರದರ್ಶನಗಳಲ್ಲೂ ಭಾಗವಹಿಸಿರುತ್ತಾರೆ. ತೆಂಕು ಮತ್ತು ಬಡಗಿನ ಪ್ರದರ್ಶನಗಳಲ್ಲೂ, ಪುರಾಣ, ಕನ್ನಡ ಸಾಮಾಜಿಕ, ತುಳು ಪ್ರಸಂಗಗಳಲ್ಲಿ ಸ್ತ್ರೀ ಪತ್ರಗಳನ್ನು ನಿರ್ವಹಿಸಿದ ಅನುಭವೀ ಕಲಾವಿದ ಕೆದಿಲ ಜಯರಾಮ ಭಟ್ಟರು.
ಶ್ರೀಯುತರ ಪತ್ನಿ ಶ್ರೀಮತಿ ವಾಣಿ. ಕೆದಿಲ ಜಯರಾಮ ಭಟ್, ವಾಣಿ ದಂಪತಿಗಳಿಗೆ ಓರ್ವ ಪುತ್ರ. ಹೆಸರು ಮಾ| ಕ್ಷಮಿತ್. ಪುತ್ತೂರು ತೆಂಕಿಲ ವಿವೇಕಾನಂದ ಶಾಲೆಯ ವಿದ್ಯಾರ್ಥಿ. ಮಾ| ಕ್ಷಮಿತ್ ಗೆ ಉಜ್ವಲವಾದ ಭವಿಷ್ಯವು ಸಿದ್ಧಿಸಲಿ. ಕೆದಿಲ ಜಯರಾಮ ಭಟ್ಟರು ಇನ್ನಷ್ಟು ವರ್ಷ ಕಾಲ ಸ್ತ್ರೀ ಪಾತ್ರಧಾರಿಯಾಗಿ ಮೆರೆಯಲಿ. ಕಲಾಮಾತೆಯು ಸಕಲ ಭಾಗ್ಯಗಳನ್ನೂ ಇವರಿಗೆ ಅನುಗ್ರಹಿಸಲಿ ಎಂಬ ಹಾರೈಕೆಗಳು.
ಚೆಂಡೆಯ ಮೆಲುನುಡಿ – ಇದು ತೆಂಕುತಿಟ್ಟಿನ ಖ್ಯಾತ ಮದ್ದಳೆಗಾರರೂ ಹಿಮ್ಮೇಳ ಗುರುಗಳೂ ಆಗಿದ್ದ ನೆಡ್ಲೆ ಶ್ರೀ ನರಸಿಂಹ ಭಟ್ಟರ ಆತ್ಮಕಥನವು. ಪ್ರಾಧ್ಯಾಪಕ ಲೇಖಕ, ಕಲಾವಿದ, ತಾಳಮದ್ದಳೆ ಅರ್ಥಧಾರಿ ಶ್ರೀ ಸರ್ಪಂಗಳ ಈಶ್ವರ ಭಟ್ಟರ ನಿರೂಪಣೆಯಲ್ಲಿ ಈ ಕೃತಿಯು ಸಿದ್ಧವಾಗಿತ್ತು. ಪ್ರಕಾಶಕರು – ನೆಡ್ಲೆ ನರಸಿಂಹ ಭಟ್ಟ ಯಕ್ಷಗಾನ ಪ್ರ್ರತಿಷ್ಠಾನ – ಯೆಯ್ಯಾಡಿ ಮಂಗಳೂರು.
ಈ ಆತ್ಮಕಥನವು 2003ರಲ್ಲಿ ಪ್ರಕಟವಾಗಿತ್ತು. ಮುನ್ನುಡಿಯನ್ನು ಬರೆದವರು ವಿದ್ವಾಂಸ, ವಿಮರ್ಶಕ, ಖ್ಯಾತ ಅರ್ಥಧಾರಿಗಳೂ ಆದ ಡಾ. ಎಂ. ಪ್ರಭಾಕರ ಜೋಶಿ ಅವರು. ನಿರೂಪಕ ಶ್ರೀ ಸರ್ಪಂಗಳ ಈಶ್ವರ ಭಟ್ಟರು ‘ಬರೆದವನ ಬಿನ್ನಹ’ ಎಂಬ ಶೀರ್ಷಿಕೆಯಡಿ ಲೇಖನವನ್ನು ಬರೆದಿರುತ್ತಾರೆ. ವಿಚಾರಗಳನ್ನು ಸಂಗ್ರಹಿಸಿ, ಮತ್ತೆ ನಿರೂಪಿಸಿ, ಪುಸ್ತಕದ ರೂಪಕ್ಕೆ ತರುವುದು ಅಷ್ಟು ಸುಲಭದ ಕೆಲಸವಲ್ಲ. ಅದೊಂದು ಸಾಧನೆಯೇ ಹೌದು. ನಿರೂಪಕರಾದ ಸರ್ಪಂಗಳ ಈಶ್ವರ ಭಟ್ಟರು ಅಭಿನಂದನೀಯರು. ನೆಡ್ಲೆ ನರಸಿಂಹ ಭಟ್ಟ ಯಕ್ಷಗಾನ ಪ್ರತಿಷ್ಠಾನದ ಸಂಚಾಲಕ ಶ್ರೀ ನೆಡ್ಲೆ ರಾಮ ಭಟ್ಟರು ‘ಪ್ರಕಾಶನದ ಕುರಿತು’ ಎಂಬ ಬರಹದಲ್ಲಿ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.
ಈ ಆತ್ಮಕಥನವನ್ನು ಹಗಲು ನಿದ್ದೆ, ನೆಡ್ಲೆಯ ನೆಲೆ, ಟಮ್ಕಿಯಿಂದ ಮದ್ದಳೆಗೆ, ಮಕ್ಕಳ ರಾಜ್ಯ, ಮನೆಯಲ್ಲೇ ಸಂಪಾದನೆ, ಶಾಲೆಯ ಆಸೆ ಕಮರಿತು, ಸಂಗೀತ ಕಲಿತದ್ದು, ಭಾಗವತನಾಗುವ ಬಯಕೆ, ಮದ್ದಳೆಗಾರನಾದದ್ದು, ದೂರವಾದ ಸೈಕಲು, ಮೊದಲ ತಿರುಗಾಟ, ಕಲಿಕೆಯೇ ಆಟವಾಯಿತು, ನಿರ್ಣಯದ ನಡೆ, ಮೇಳದ ಕಸುಬೇ ಕಾಯಮ್ಮಾಯಿತು, ನೇವಸ ಅಟ್ಟಿದ ಆಡಿನ ಹಾಲು, ನೆಡ್ಲೆಯಿಂದ ನೆಕ್ಕರೆಕಾಡಿಗೆ, ಎರಡು ಹೊರೆ, ಜೋಡು ಸಾಟಿ ಯಾರಿಗೆ?, ಮತ್ತೆ ನೆಕ್ಕರೆಕಾಡಿಗೆ, ನಿಯಮ ನಿಷ್ಠೆಗೆ ಚ್ಯುತಿ ಇಲ್ಲ, ಹುಲಿಯ ಹೆದರಿಕೆ, ಮದುವೆಯ ಅನುಬಂಧ, ಎಲ್ಲ್ಲಿ ಋಣವಿತ್ತೋ ಬಲ್ಲವರಾರು!, ಆಪದ್ಬಂಧುವಾದ ಚೆಂಡೆ, ಮೇಳ: ಹೊಸ ಬದುಕು!, ಬಸ್ಸಿನ ಸುಖ, ಇತಿ-ಮಿತಿ, ಕಲೆಯೆಂದರೆ ನಿರಂತರ ಕಲಿಕೆ, ಬಲಿಪರ ಬಲಿಪತನ, ಚೆಂಡೆಯೇ ಇಲ್ಲದ ಜೋಡಾಟ, ತಾಸುದ್ದದ ಪೀಠಿಕೆ, ಚೆಂಡೆ ಮದ್ದಳೆಯ ಕೆಲಸ, ಅಬ್ರಾಂಗಾಯಿ ಕೋಲು, ಆಟದ ಟೂರುಗಳು, ನನ್ನ ಶಿಷ್ಯರು, ಹಳತು-ಹೊಸತು, ಖಚಿತತೆ ಬೇಕು, ಸೋಲಿಸಿ ಏನಾಗಬೇಕು?, ನಾನೇ ಮಾಡಿದ ಭಾಗವತ, ವೇಷವೂ ಮಾಡಿದ್ದೇನೆ, ಗಣಪತಿಗೆ ಪಾಯಸ, ಹುಲಿ ಹಿಡಿದ ದನ, ವಿಠಲ ಶಾಸ್ತ್ರಿಗಳ ತಾಂಡವ, ಭಾವ-ಭಾವ, ದುರ್ಗೆಯ ದಯೆ, ನಾನು ಕಟೀಲಿನವನು, ಭ್ರಾಮರೀ ಯಕ್ಷಗಾನ ಮಂಡಳಿ, ನನ್ನ ಯಜಮಾನರು, ಬಹುಜನ ಭಾಗವತರು, ಉಪಕಾರ ಸ್ಮರಣೆ ಎಂಬ ವಿಚಾರಗಳಡಿಯಲ್ಲಿ ಶ್ರೀ ಸರ್ಪಂಗಳ ಈಶ್ವರ ಭಟ್ಟರು ಸುಂದರವಾಗಿ, ಸರಳವಾಗಿ ನಿರೂಪಿಸಿ ಓದುಗರಿಗೆ ನೀಡಿರುತ್ತಾರೆ. ಕೊನೆಯಲ್ಲಿ ಅನುಬಂಧಗಳು ಎಂಬ ಭಾಗವಿದ್ದು ಇಲ್ಲಿ – ಚೆಂಡೆಯ ಗುರಿಕಾರ ನೆಡ್ಲೆ ನರಸಿಂಹ ಭಟ್ಟರು ಎಂಬ ಲೇಖನವನ್ನೂ, ನೆಡ್ಲೆಯವರು ಬರೆದ ಮೂರು ಲೇಖನಗಳನ್ನೂ ನೀಡಲಾಗಿದೆ. ಅಲ್ಲದೆ ಶ್ರೀಯುತರಿಗೆ ಸಂದ ಪ್ರಶಸ್ತಿಗಳು – ಸನ್ಮಾನಗಳ ವಿವರಗಳಿವೆ.
ಯಕ್ಷಗಾನ ರಂಗಕ್ಕೆ ಒಳ್ಳೆಯ ಸುದ್ದಿ. ಕಲಾಸಕ್ತರಿಗೆ ಮಾತ್ರವಲ್ಲ. ಕಲಾವಿದರಿಗೂ ಕೂಡಾ. ಇಷ್ಟು ಸಮಯದಿಂದ ಕೆಲಸವಿಲ್ಲದೇ ಕಷ್ಟಪಡುತ್ತಿದ್ದ ಹಲವಾರು ಕಲಾವಿದರ ಮನೆಯಲ್ಲಿ, ಮನಸಿನಲ್ಲಿ ಸಂತೋಷ ಮನೆ ಮಾಡಬಹುದು. ನವೆಂಬರ್ ನಲ್ಲಿ ಯಕ್ಷಗಾನ ಆರಂಭ ಮಾಡಲು ಯಾವುದೇ ತೊಡಕುಗಳಿಲ್ಲ ಎಂಬ ಸುದ್ದಿ ಸರಕಾರದ ಕಡೆಯಿಂದ ಬಂದಿದೆ. ಜಿಲ್ಲಾ ಉಸ್ತುವಾರಿ ಮತ್ತು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರೇ ಸ್ಪಷ್ಟಪಡಿಸಿದಂತೆ ಕೆಲವೊಂದು ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸಿ ಯಕ್ಷಗಾನ ಪ್ರಾರಂಭವಾಗುವುದಕ್ಕೆ ಯಾವುದೇ ಅಡ್ಡಿ ಆತಂಕಗಳಿಲ್ಲ ಎಂದು ತಿಳಿಸಲಾಗಿತ್ತು.
ಆದರೆ ಅದರಂತೆ ಯಕ್ಷಗಾನ ಪ್ರದರ್ಶನಗಳನ್ನು ನೀಡುವ ನಿಟ್ಟಿನಲ್ಲಿ ಮೇಳಗಳು ತಿರುಗಾಟಕ್ಕೆ ಹೊರಟರೆ ಯಾವೆಲ್ಲಾ ಮಾನದಂಡಗಳ ಮೂಲಕ ಎಚ್ಚರಿಕೆ ವಹಿಸಬೇಕು? ಅಥವಾ ಪ್ರದರ್ಶನಗಳಿಂದ ಉಂಟಾಗುವ ಪರಿಣಾಮಗಳನ್ನು ಹೇಗೆ ಎದುರಿಸಬೇಕು? ಇವುಗಳೇ ಯಕ್ಷಗಾನ ಮೇಳಗಳ ಸಂಚಾಲಕರು ಮತ್ತು ಆಟ ಆಡಿಸುವವರ ಮುಂದಿರುವ ದೊಡ್ಡ ಸವಾಲು.
1. ಕೋವಿದ್ 19 ಮಾನದಂಡದ ಪ್ರಕಾರ ಸರಕಾರದ ಕೆಲವು ನಿರ್ದೇಶನಗಳನ್ನು ಅನುಸರಿಸಿ ಪ್ರದರ್ಶನ ಏರ್ಪಡಿಸಬೇಕಾಗುತ್ತದೆ. ಆಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ನಿಯಮವನ್ನು ಪಾಲಿಸಬೇಕಾಗುತ್ತದೆ. ಪ್ರೇಕ್ಷಕರ ಆಸನಗಳನ್ನು ನಿಗದಿತ ಅಂತರದಲ್ಲಿ ದೂರ ದೂರ ಇರಿಸಬೇಕಾಗುತ್ತದೆ. ಒಂದು ಪ್ರದರ್ಶನಕ್ಕೆ 200 ಜನಕ್ಕಿಂತ ಹೆಚ್ಚು ಸೇರಬಾರದು ಎಂಬ ನಿಯಮವಿದ್ದರೆ ಒಂದು ವೇಳೆ ಕೆಲವು ಅಪರೂಪದ ಪ್ರಸಂಗಗಳಿಗೆ 200ಕ್ಕಿಂತ ಹೆಚ್ಚು ಜನ ಸೇರಿದರೆ ಆಗ ಏನು ಮಾಡುವುದು ಎಂಬ ಪ್ರಶ್ನೆ ನಮ್ಮ ಮುಂದೆ ಬರುತ್ತದೆ. ಬಂದ ಜನರನ್ನು ವಾಪಾಸ್ ಕಳುಹಿಸುವುದೇ? ಹಾಗಾದರೆ ಯಕ್ಷಗಾನ ಪ್ರದರ್ಶನ ನಡೆಯುವಲ್ಲಿ ಪೊಲೀಸ್ ವ್ಯವಸ್ಥೆ ಮಾಡಬೇಕಾಗಿ ಬರಬಹುದೇ? ಎಂಬೆಲ್ಲ ಪ್ರಶ್ನೆಗಳು ಮೂಡುವುದು ಸಹಜ.
2. ಮೇಲಿನ ವಿಷಯಕ್ಕೆ ವ್ಯತಿರಿಕ್ತವಾದ ಅಭಿಪ್ರಾಯವೂ ಕೇಳಿ ಬರುತ್ತಿದೆ. ಅದೇನೆಂದರೆ ಜನರಲ್ಲಿಯೂ ಕೋವಿಡ್ ಸಂಬಂಧಿತ ಜಾಗೃತಿ, ಕಳಕಳಿಗಳು ಮೂಡುತ್ತಿರುವುದರಿಂದ ಖಂಡಿತಾ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಇರಲಾರರು ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿ ಕೇಳಿ ಬರುತ್ತಾ ಉಂಟು. ಇದು ಧನಾತ್ಮಕವಾದ ವಿಚಾರ. ಪ್ರೇಕ್ಷಕರೇ ತಮ್ಮೊಳಗೆ ಮಿತಿಯನ್ನು ಹಾಕಿಕೊಂಡರೆ ಅದಕ್ಕಿಂತ ಮಿಗಿಲಾದ ವಿಚಾರವೇನಿದೆ?
3. ಟಿಕೆಟ್ ಪ್ರದರ್ಶನಗಳ ಮೇಳಗಳಿಗೆ ಈ ಕಾಲ ಸಂತೋಷದಾಯಕವಲ್ಲ. ಟಿಕೆಟ್ ಆಟಗಳಲ್ಲಿ ಪ್ರೇಕ್ಷಕರ ಹಾಜರಾತಿ ಕಡಿಮೆ ಇರಬಹುದು. ಟಿಕೆಟ್ ಆಧಾರಿತ ಪ್ರದರ್ಶನಗಳು ಆರಂಭವಾಗುವುದು ಸಂಶಯ.
4. ಚೌಕಿಯಲ್ಲಿಯೂ ಕಲಾವಿದರು ಮತ್ತು ನೇಪಥ್ಯ ಕಲಾವಿದರು ಬಹಳಷ್ಟು ಎಚ್ಚರದಿಂದಿರಬೇಕಾದದ್ದು ಅನಿವಾರ್ಯ. ಕಲಾವಿದರು ಕೂಡ ಸ್ವಯಂ ನಿರ್ಬಂಧ ಹೇರಬೇಕಾದ ಪರಿಸ್ಥಿತಿ ಇದೆ. ಯಾಕೆಂದರೆ ಕಲಾವಿದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲೇ ಬೇಕಾಗುತ್ತದೆ. ಈಗಾಗಲೇ ಸರಕಾರ ಸೂಚಿಸಿದಂತೆ ಮೇಳ ಹೊರಡುವ ಮೊದಲು ಮತ್ತು ತಿರುಗಾಟ ಆರಂಭವಾದ ನಂತರ ಪ್ರತಿ ವಾರಕ್ಕೊಮ್ಮೆ ಕೊರೋನಾ ಪರೀಕ್ಷೆ ಕಡ್ಡಾಯ ಎಂದು ತಿಳಿಸಲಾಗಿದೆ. ಪರೀಕ್ಷೆ ಉಚಿತವಾಗಿಯೇ ಇದ್ದರೂ ಕೊರೋನಾ ಭಾದಿಸದಂತೆ ಕಲಾವಿದರು ಅತೀವ ಎಚ್ಚರಿಕೆಯಿಂದ ಇರಬೇಕಾಗುತ್ತದೆ.
5. ಕಲಾವಿದರಿಗೆ ಸಾಮಾಜಿಕ ಅಂತರದ ನಿಯಮವನ್ನು ಪಾಲಿಸಲು ಚೌಕಿಯಲ್ಲಿ ಕಷ್ಟಸಾಧ್ಯ. ಯಾಕೆಂದರೆ ವೇಷ ಧರಿಸಲು ಇನ್ನೊಬ್ಬರ ಅವಲಂಬನ ಅಗತ್ಯ. ಮಾತ್ರವಲ್ಲದೇ ಅಗತ್ಯ ವಿಚಾರಗಳನ್ನು, ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಒಟ್ಟಾಗಿ ಸೇರಲೇ ಬೇಕಾಗುತ್ತದೆ. ಅದೂ ಅಲ್ಲದೆ ಆಟ ಮುಗಿದ ನಂತರ ಮನೆಗೆ ಪ್ರಯಾಣಿಸುವ ವ್ಯವಸ್ಥೆಯ ಬಗ್ಗೆಯೂ ಅನುಮಾನಗಳು ಉದ್ಭವಿಸುತ್ತವೆ. ಸ್ವಂತ ವಾಹನಗಳಿರುವ ಕಲಾವಿದರಿಗೆ ಅಷ್ಟಾಗಿ ಸಮಸ್ಯೆ ಇಲ್ಲ. ಆದರೆ ಎಷ್ಟೋ ಕಲಾವಿದರು ಬಸ್ಸಿನಲ್ಲಿಯೇ ಪ್ರಯಾಣಿಸುವುದು ಕಾಣುತ್ತೇವೆ. ಈ ವಿಚಾರದ ಬಗ್ಗೆ ಮೇಳದ ಸಂಚಾಲಕರು ಮತ್ತು ಕಲಾವಿದರು ಒಟ್ಟಾಗಿ ಕುಳಿತು ಸಮಾಲೋಚಿಸಬೇಕು. ವಾಹನ ಇರುವ ಕಲಾವಿದರು ಮತ್ತೊಬ್ಬ ಸಹಕಲಾವಿದನನ್ನು ಡ್ರಾಪ್ ಮಾಡಬೇಕಾಗಬಹುದು.(ಈಗಾಗಲೇ ಹೀಗೆ ಡ್ರಾಪ್ ಮಾಡುವ ಕ್ರಮ ಚಾಲ್ತಿಯಲ್ಲಿದೆ) ಅಥವಾ 50 ವರ್ಷಗಳಷ್ಟು ಹಿಂದೆ ಇದ್ದ ಕ್ರಮದಂತೆ ಮೇಳದ ಬಿಡಾರಗಳಲ್ಲಿಯೇ ವಾರಗಳ ಕಾಲ ಉಳಿಯಬೇಕಾಗಿ ಬರಬಹುದು.
5. ಪ್ರತಿ ವಾರದ ಕೊರೋನಾ ಪರೀಕ್ಷೆಯಲ್ಲಿ ಕಲಾವಿದರಿಗಾರಿಗೂ ಕೊರೋನಾ ಬಾಧಿಸುವುದು ಬೇಡ ಎಂದು ದೇವರಲ್ಲಿ ಕಳಕಳಿಯ ಪ್ರಾರ್ಥನೆ. ಆದರೆ ಪರಿಸ್ಥಿತಿ ಕೈಮೀರಿ ಕೋವಿಡ್ ಪರೀಕ್ಷೆಯಲ್ಲಿ ಪೊಸಿಟಿವ್ ಬಂತು ಎಂದಾದರೆ ಮುಂದಿನ ಕ್ರಮ ಏನು ಎಂಬ ಪ್ರಶ್ನೆಯೂ ಮೂಡುತ್ತದೆ. ಆಗ ಮೇಳದ ಪ್ರದರ್ಶನಗಳನ್ನೇ ಕೆಲವು ದಿನಗಳ ಮಟ್ಟಿಗೆ ನಿಲ್ಲಿಸಬೇಕೇ ಬೇಡವೇ ಎಂಬ ಪ್ರಶ್ನೆಯೂ ನಮ್ಮ ಮುಂದೆ ಬರುತ್ತದೆ.
ಆದುದರಿಂದ ಮೇಳಗಳನ್ನು ಆರಂಭಿಸುವುದು ಎಷ್ಟು ಮುಖ್ಯವೋ ಕಲಾವಿದರ ಮೇಲಿನ ಕಾಳಜಿಯೂ ಅಷ್ಟೇ ಮುಖ್ಯವಾಗುತ್ತದೆ. ಇಲ್ಲದಿದ್ದರೆ ಮೇಳದ ತಿರುಗಾಟ ಆರಂಭಿಸಿದ ಮುಖ್ಯ ಉದ್ದೇಶಗಳಿಗೇ ಕೊಡಲಿ ಏಟು ಬೀಳುತ್ತದೆ. ತಿರುಗಾಟ ಆರಂಭಿಸಿದ ಮೇಳಗಳು ಅರ್ಧದಲ್ಲಿ ಆಗಾಗ ಕೆಲವು ದಿನಗಳ ಮಟ್ಟಿಗೆ ತಿರುಗಾಟ ನಿಲ್ಲಿಸುವ ಪರಿಸ್ಥಿತಿ ಬರಬಾರದು ಎನ್ನುವುದೇ ನಮ್ಮ ಸಧಭಿರುಚಿಯ ಆಶಯ.
ಹೋಟೆಲ್ ಉದ್ಯೋಗಿಯಾಗಿ ಬಳಿಕ ಮಾಬುಕಳ ಮೂಡು ಗಣಪತಿ ದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿ ಸೇವೆಗೈದ ಗುಂಡ್ಮಿ ವೆಂಕಟರಮಣ ನಾವುಡ (88ವರ್ಷ) ಇವರು 18-10-2020ರಂದು ನಿಧನರಾದರು. ಯಕ್ಷಗಾನ ಪ್ರಿಯರಾಗಿದ್ದ ಇವರು ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಪತ್ನಿಯನ್ನು ಅಗಲಿದ್ದಾರೆ. ಇವರ ಪುತ್ರ ರಾಜೇಶ್ ನಾವುಡ ಯಕ್ಷಗಾನ ಕಲಾರಂಗದ ಸಕ್ರೀಯ ಸದಸ್ಯರಾಗಿದ್ದು, ಮಾಹೆಯಲ್ಲಿ ಫಿಸಿಯೋಥೆರಪಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಾಳೆ 20-10-2020 ರಂದು ಮಂಗಳವಾರ ಸಂಜೆ 5.30 ಗಂಟೆಗೆ ಉಡುಪಿ ಯಕ್ಷಗಾನ ಕಲಾರಂಗದ ಕಛೇರಿಯಲ್ಲಿ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿ (ರಿ.),ಅಂಬಲಪಾಡಿ ಇದರ ಸಹಯೋಗದೊಂದಿಗೆ ನಮ್ಮನ್ನಗಲಿದ ಗುರು ಹಿರಿಯಡ್ಕ ಗೋಪಾಲ ರಾಯರಿಗೆ ನುಡಿನಮನ ಕಾರ್ಯಕ್ರಮ ಆಯೋಜಿಸಲಾಗಿದೆ. ಅವರ ಶಿಷ್ಯರಿಗೆ ಮತ್ತು ಅಭಿಮಾನಿಗಳಿಗೆ ಸ್ವಾಗತ ಎಂಬುದಾಗಿ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಡಗುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಲಕ್ಷ್ಮಣ ಕಾಂಚನ್ ಇಂದು(19-10-2020) ನಿಧನ ಹೊಂದಿದರು.ಅವರಿಗೆ 70 ವರ್ಷ ವಯಸ್ಸಾಗಿತ್ತು.ಉಡುಪಿ ಜಿಲ್ಲೆಯ ಮಣೂರಿನವರಾದ ಇವರು ತಮ್ಮ 15ನೇ ವಯಸ್ಸಿಗೆ ಅಮೃತೇಶ್ವರೀ ಮೇಳದಲ್ಲಿ ಕಲಾವಿದರಾಗಿ ಸೇರಿಕೊಂಡು ವೃತ್ತಿ ಬದುಕು ಆರಂಭಿಸಿದರು.
ಸಾಲಿಗ್ರಾಮ, ಕಮಲಶಿಲೆ, ಸೌಕೂರು, ಗೋಳಿಗರಡಿ, ಕಳವಾಡಿ, ಪೆರ್ಡೂರು, ಹಾಲಾಡಿ, ಮಡಾಮಕ್ಕಿ ಬಗ್ವಾಡಿಮೇಗರವಳ್ಳಿ ಮೇಳಗಳಲ್ಲಿ ತಿರುಗಾಟ ನಡೆಸಿದ್ದರು.ಒಟ್ಟು ಸುದೀರ್ಘ 51 ವರ್ಷಗಳ ಕಲಾಸೇವೆಗೈದ ಹಿರಿಮೆಗೆ ಪಾತ್ರರು. ಕಳೆದ 25 ವರ್ಷಗಳಿಂದ ಮಳೆಗಾಲದಲ್ಲಿ ಅಮೃತೇಶ್ವರೀ ಪ್ರವಾಸಿ ಯಕ್ಷಗಾನ ಮಂಡಳಿಯ ಖಾಯಂ ಕಲಾವಿದರಾಗಿ ಕರ್ನಾಟಕ ಮತ್ತು ಹೊರಾಜ್ಯಗಳಲ್ಲಿ ಕಲಾಪ್ರದರ್ಶನ ನೀಡಿದ್ದಾರೆ. ಪೌರಾಣಿಕ ಪ್ರಸಂಗಗಳಲ್ಲಿ ಲವ-ಕುಶ, ಜಮದಗ್ನಿ, ಅರ್ಜುನ, ವೀರಮಣಿ, ಜಾಂಬವ, ಕೃಷ್ಣ, ಕಮಲಭೂಪ, ಕೌಂಡ್ಲಿಕ, ಸಾಲ್ವನ ಪಾತ್ರಗಳು ಕಲಾರಸಿಕರ ಮೆಚ್ಚುಗೆಗೆ ಪಾತ್ರವಾಗಿದ್ದವು. ಯಕ್ಷಗಾನ ಕಲಾರಂಗವು ಮೂರು ವರ್ಷಗಳ ಹಿಂದೆ ‘ಯಕ್ಷಗಾನಕಲಾರಂಗ ಪ್ರಶಸ್ತಿ’ ನೀಡಿ ಗೌರವಿಸಿತ್ತು.ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಇವರಿಗೆ ಸಂಸ್ಥೆ ಐದು ತಿಂಗಳ ಹಿಂದೆ 25000/- ನೆರವು ನೀಡಿರುವುದನ್ನು ಸ್ಮರಿಸಿಕೊಂಡ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಲಕ್ಷ್ಮಣ್ ಕಾಂಚನ್‍ರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಇವರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.