ಬೆಂಗಳೂರಿನ ಹೆಸರಾಂತ ತಂಡವಾದ ಯಕ್ಷಕಲಾ ಅಕಾಡೆಮಿಯು ಇದೀಗ ಯಕ್ಷಗಾನ ಉತ್ಸವವನ್ನು ಹಮ್ಮಿಕೊಂಡಿದೆ. ಇದೇ ತಿಂಗಳ 15 ರ ಸಂಜೆ 6.30 ಕ್ಕೆ ಗುಂಡ್ಮಿ ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ನಡೆಯಲಿದೆ.
ಅಂದು ಮುಖ್ಯ ಅಭ್ಯಾಗತರಾಗಿ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮನ್ನಣೆ ಗಳಿಸಿದ ನಟ ಗೋಪಾಲಕೃಷ್ಣ ನಾಯರಿ ಹಾಗೂ ವೃತ್ತಿಯಲ್ಲಿ ವೈದ್ಯರಾದರೂ ಕೂಡಾ, ಸಾಹಿತ್ಯದಲ್ಲಿ ಅಭಿರುಚಿಯನ್ನು ಹೊಂದಿ, ಕಲಾಕ್ಷೇತ್ರದಲ್ಲಿ ಸಾಕಷ್ಟು ಪಳಗಿರುವ ಬೆಂಗಳೂರಿನ ಶೇಖರ್ ಹಾಸ್ಪಿಟಲಿನ ಸಂಸ್ಥಾಪಕ ನಿರ್ದೇಶಕರಾಗಿರುವ ಡಾ. ಪಿ.ವಿ.ಐತಾಳರು, ಹಾಗೂ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಸಕ್ರಿಯ ಕಾರ್ಯದರ್ಶಿಯೂ , ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯರೂ ಆದ ಶ್ರೀ ರಾಜಶೇಖರ್ ಹೆಬ್ಬಾರ್ ಅವರು ಪಾಲುಗೊಳ್ಳಲಿದ್ದಾರೆ.
ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನ ಕಾರ್ಯ ಪ್ರಗತಿಯಲ್ಲಿದ್ದು ಆಬಗೆಗೆ ಅವಲೋಕನಾ ಸಭೆ ಇತ್ತೀಚೆಗೆ ಸಿರಿಬಾಗಿಲಿನಲ್ಲಿ ಜರಗಿತು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ರಾಮಕೃಷ್ಣ ಮಯ್ಯ ಸಿರಿಬಾಗಿಲು ಅಧ್ಯಕ್ಷತೆ ವಹಿಸಿ ಸಭೆಗೆ ಭವನ ನಿರ್ಮಾಣ ಕಾಮಗಾರಿಯ ಪ್ರಗತಿ ಮಾಹಿತಿ ನೀಡಿದರು. ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಭವ್ಯ ಮಂದಿರ ನಿರ್ಮಾಣ ಕಾರ್ಯದಲ್ಲಿ ಆರ್ಥಿಕವಾಗಿ ನಾಡಿನ ದೇಶವಿದೇಶಗಳ ಯಕ್ಷಗಾನ ಅಭಿಮಾನಿಗಳು ಕಲಾಸೇವಕರು ಕೈ ಜೋಡಿಸಬೇಕು ಎಂದು ವಿನಂತಿಸಿಕೊಂಡರು.
ಸಭೆಯಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನ ನಿರ್ಮಾಣ ಯೋಜನೆ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಹಿತೈಷಿಗಳಾಗಿರುವ ಲಕ್ಷ್ಮೀನಾರಾಯಣ ಕಾವು ಮಠ, ಯೋಗೀಶ ರಾವ್ ಚಿಗುರುಪಾದೆ, ರಾಜಾರಾಮ ರಾವ್ ಮೀಯಪದವು, ಸತೀಶ ಅಡಪ ಸಂಕಬೈಲು, ಶಿವರಾಮ ಕಾಸರಗೋಡು, ಜಗದೀಶ್ ಕೂಡ್ಲು, ಜಯರಾಮ ಕಾರಂತ ದೇಶಮಂಗಲ, ತಿಮ್ಮಪ್ಪ ಮಜಲು, ವಿಷ್ಣು ಶ್ಯಾನುಭೋಗ್ ಕೂಡ್ಲು, ಚಂದ್ರಶೇಖರ ಹೊಳ್ಳ ಕುದ್ರೆಪ್ಪಾಡಿ, ಜಯರಾಮ ರೈ ಸಿರಿಬಾಗಿಲು, ಸುಮನ್ ರಾಜ್ ನೀಲಂಗಳ, ರಾಧಾಕೃಷ್ಣ ಭಟ್ ಕೊಂಗೊಟ್ಟು, ಸುಮಿತ್ರಾ ಆರ್ ಮಯ್ಯ, ಯಸ್ ಯನ್ ರಾಮ ಶೆಟ್ಟಿ ನಿವೃತ್ತ ಅಧ್ಯಾಪಕ, ಸದಾಶಿವ ಭಟ್ ಎದ್ರುಕಳ, ವೆಂಕಟರಮಣ ಹೊಳ್ಳ ಸಿರಿಬಾಗಿಲು, ಶ್ರೀಮತಿ ಉಮಾ ಭಟ್ ಕೋಂಗೋಟ್ಟು ಮೊದಲಾದ ಗಣ್ಯರು ಭಾಗವಹಿಸಿದ್ದರು.
ಕೋವಿಡ್ ನ ಉಪಟಳದಿಂದ ನಿಂತ ನೀರಾಗಿದ್ದ ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಕಲಾವಿದರ ಬದುಕು ಮತ್ತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವ ವಾತಾವರಣ ರೂಪುಗೊಳ್ಳುತ್ತಿರುವುದರ ಮೂಲಕ ನಿಧಾನವಾಗಿ ಚೇತರಿಕೊಳ್ಳುತ್ತಾ ಸಾಗಿದೆ. ಕಲಾಕದಂಬ ಆರ್ಟ್ ಸೆಂಟರ್ ನಿರಂತರ ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಸಂಸ್ಥೆ. ಕೋವಿಡ್ ನ ಪ್ರಭಾವ ಕಡಿಮೆಯಾಗುತ್ತಿರುವ ಈ ಸಂಧರ್ಭದಲ್ಲಿ ಮತ್ತೆ ಸಾಂಸ್ಕೃತಿಕ ಲೋಕದತ್ತ ಪಯಣ ಬೆಳೆಸುತ್ತಿದೆ.
ಪ್ರಸಿದ್ದ ಯಕ್ಷಗಾನ, ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರಾದ ಡಾ. ರಾಧಾಕೃಷ್ಣ ಉರಾಳರ ನಿರ್ದೇಶಕತ್ವದ ಕಲಾಕದಂಬ ಆರ್ಟ್ ಸೆಂಟರ್ ಸಂಸ್ಥೆಯು ಕೊಮ್ಮಘಟ್ಟದ ಓಂ ಯೋಗಧಾಮ ಟ್ರಸ್ಟ್ ನ ಸಹಯೋಗದೊಂದಿಗೆ ಸಮತ್ವಂ ಯೋಗ ಮತ್ತು ಕಲಾಶಾಲೆಯ ಸಭಾಂಗಣದಲ್ಲಿ ದಿನಾಂಕ 17-01-2021 ರ ಸಂಜೆ 5 ಘಂಟೆಗೆ ನಡೆಯಲಿರುವ ಸಂಕ್ರಾಂತಿ ಕಲೋತ್ಸವದಲ್ಲಿ ಕಲಾಕದಂಬ ಆರ್ಟ್ ಸೆಂಟರ್ ನ ಕಲಾ ವಿದ್ಯಾರ್ಥಿಗಳಿಂದ ದಕ್ಷ ಯಜ್ಞ ಎಂಬ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸಲಿದೆ.
ಈ ಒಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾಮೋಹಳ್ಳಿಯ ಶ್ರೀ ಸಿದ್ಧಾ ಆರೂಢ ಮಿಷನ್ ಆಶ್ರಮದ ಡಾ.ಶ್ರೀ ಆರೂಢಭಾರತೀ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ನೀಲಮ್ಮ, ಕರಬ ಪ್ರತಿಷ್ಟಾನದ ದೇವರಾಜ ಕರಬ ಹಾಗೂ ಓಂ ಯೋಗಧಾಮ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀಮತಿ ಸ್ವಪ್ನ ಪ್ರದೀಪ್ ಆಗಮಿಸಲಿದ್ದಾರೆ.
ಕಾರ್ಯಕ್ರಮದ ನಿರ್ವಹಣೆಯನ್ನು ಮುರಳೀಧರ ನಾವಡ, ನಿತ್ಯಾನಂದ ನಾಯಕ್ ಹಾಗೂ ವಿಶ್ವನಾಥ ಉರಾಳ ನಿಭಾಯಿಸಲಿದ್ದಾರೆ. ಸರಕಾರದ ಕೋವಿಡ್ ಕುರಿತಾಗಿನ ನಿಯಮಗಳನ್ನು ಪಾಲಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದರ ಮೂಲಕ ಕಾರ್ಯಕ್ರಮಗಳನ್ನು ನಡೆಸಲಿದ್ದು ಸೀಮಿತ ಜನರಿಗೆ ಮಾತ್ರ ಪ್ರವೇಶವಿರುತ್ತದೆ.
ಈ ಒಂದು ಯಕ್ಷಗಾನ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿಸುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ- 9886066732, 9448510582
ಜಾಗತಿಕ ಬಂಟ ಪ್ರತಿಷ್ಠಾನವು ಡಾ.ಡಿ.ಕೆ.ಚೌಟ ದತ್ತಿನಿಧಿ ವತಿಯಿಂದ ಹಿರಿಯ ಯಕ್ಷಗಾನ ಕಲಾವಿದರಿಗೆ ನೀಡುವ ವಾರ್ಷಿಕ ಪ್ರಶಸ್ತಿಗೆ 2020 – 21 ನೇ ಸಾಲಿನಲ್ಲಿ ಬಡಗು ತಿಟ್ಟಿನ ಪ್ರಸಿದ್ಧ ಸ್ತ್ರೀ ವೇಷಧಾರಿ ರಾಜೀವ ಶೆಟ್ಟಿ ಹೊಸಂಗಡಿ ಆಯ್ಕೆಯಾಗಿದ್ದಾರೆ.
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ , ಪಂಚ ಮೇಳಗಳ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ ಮತ್ತು ವಿಶ್ರಾಂತ ಪ್ರಾಚಾರ್ಯ ಪ್ರೊ. ಜಿ.ಆರ್. ರೈ ಅವರನ್ನೊಳಗೊಂಡ ಆಯ್ಕೆ ಸಮಿತಿ ರಾಜೀವ ಶೆಟ್ಟರ ಹೆಸರನ್ನು ಪ್ರಶಸ್ತಿಗೆ ಪರಿಗಣಿಸಿದೆ. ಬಡಗುತಿಟ್ಟಿನ ಹೆಸರಾಂತ ಕಮಲಶಿಲೆ, ಪೆರ್ಡೂರು, ಅಮೃತೇಶ್ವರಿ, ಸೌಕೂರು, ಬಚ್ಚಗಾರು, ಸಾಲಿಗ್ರಾಮ ಮತ್ತು ಮಂದರ್ತಿ ಮೇಳಗಳಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿದ 60ರ ಹರೆಯದ ರಾಜೀವ ಶೆಟ್ಟಿ ಕುಂದಾಪುರ ತಾಲೂಕಿನ ಹೊಸಂಗಡಿ ಕೆಳಬಾಗಿ ಮನೆಯಲ್ಲಿ ಕುಟುಂಬದೊಂದಿಗೆ ನೆಲೆಸಿದ್ದಾರೆ.
ದಿ. ಎಂ.ಎಂ.ಹೆಗಡೆ, ಭಾಗವತ ನಾರಣಪ್ಪ ಉಪ್ಪೂರು, ಜಿ.ಆರ್. ಕಾಳಿಂಗ ನಾವಡ, ಚಿಟ್ಟಾಣಿ ರಾಮಚಂದ್ರ ಹೆಗಡೆ , ಎಂ.ಎ.ನಾಯ್ಕ, ಕೋಟ ವೈಕುಂಠ, ವಾಸುದೇವ ಸಾಮಗ, ರಾಮ ನಾಯಿರಿ, ಅರಾಟೆ ಮಂಜುನಾಥ, ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ, ಮುಖ್ಯಪ್ರಾಣ ಕಿನ್ನಿಗೋಳಿ ಮುಂತಾದ ಹಿರಿಯರ ಒಡನಾಟದಲ್ಲಿ ನಾಲ್ಕು ದಶಕಗಳಿಗಿಂತಲೂ ಹೆಚ್ಚಿನ ಯಕ್ಷಗಾನ ರಂಗಾನುಭವ ಅವರದು.
ಪ್ರಮೀಳೆ, ಚಿತ್ರಾಂಗದೆ, ಪ್ರಭಾವತಿ, ದ್ರೌಪದಿ, ಸುಭದ್ರೆ, ದಾಕ್ಷಾಯಿಣಿ, ಮೀನಾಕ್ಷಿ, ಸತ್ಯಭಾಮೆ, ಮೇನಕೆ, ಶಶಿಪ್ರಭೆ, ಅಂಬೆ, ಯೋಜನಗಂಧಿ ಇತ್ಯಾದಿ ಪೌರಾಣಿಕ ಪಾತ್ರಗಳಲ್ಲದೆ ಹೊಸ ಪ್ರಸಂಗಗಳ ನಾಗಶ್ರೀ, ಚಿತ್ರಾವತಿ, ರತಿ ರೇಖಾ, ಕಾಮಿನಿ, ಶುಭದ ಮುಂತಾದ ಪ್ರಧಾನ ಸ್ತ್ರೀಪಾತ್ರಗಳಲ್ಲಿ ಅವರು ಖ್ಯಾತಿ ಪಡೆದಿದ್ದಾರೆ. ರಾಮ, ಕೃಷ್ಣ , ಶಿವ, ಮನ್ಮಥ ಮೊದಲಾದ ಪುರುಷ ಪಾತ್ರಗಳಲ್ಲೂ ಹೆಸರು ಗಳಿಸಿದ್ದಾರೆ.
ಜ. 23 ಪ್ರಶಸ್ತಿ ಪ್ರದಾನ: ಡಿ.ಕೆ. ಚೌಟ ದತ್ತಿನಿಧಿ ಪ್ರಶಸ್ತಿಯು ರೂ 20,000 ನಗದು ಮತ್ತು ಪ್ರಶಸ್ತಿ ಫಲಕವನ್ನೊಳಗೊಂಡಿದೆ. ಜನವರಿ 23, 2021 ರಂದು ಮಂಗಳೂರಿನ ಮೋತಿಮಹಲ್ ಸಭಾಂಗಣದಲ್ಲಿ ಜರಗುವ ಜಾಗತಿಕ ಬಂಟ ಫೌಂಡೇಶನ್ ಟ್ರಸ್ಟ್ ನ 24 ನೇ ವಾರ್ಷಿಕ ಸಮಾವೇಶದಲ್ಲಿ ಟ್ರಸ್ಟ್ ಅಧ್ಯಕ್ಷ ಡಾ. ಎ.ಜೆ. ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡುವರೆಂದು ಪ್ರತಿಷ್ಠಾನದ ಕಾರ್ಯದರ್ಶಿ ವೈ.ಸುಧೀರ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಎಲ್ಲಾ ವೃತ್ತಿ ಕಲಾವಿದರ ವಿಳಾಸ ಹಾಗೂ ದೂರವಾಣಿ ಸಂಖ್ಯೆಗಳನ್ನು ಹೊಂದಿದ ಯಕ್ಷನಿಧಿ ಡೈರಿ- 2021ನ್ನು ಇಂದು (11-01-2021)ಯಕ್ಷಗಾನ ಕಲಾರಂಗದ ಕಛೇರಿಯಲ್ಲಿ ಖ್ಯಾತ ಕೂಚುಪುಡಿ ನೃತ್ಯ ಹಾಗೂ ಕಿರುತೆರೆ ಕಲಾವಿದೆ ಶ್ರೀಮತಿ ವೈಜಯಂತಿ ಕಾಶಿಯವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್, ಕೋಶಾಧಿಕಾರಿ ಮನೋಹರ ಕೆ. ಹಾಗೂ ವೈಜಯಂತಿ ಕಾಶಿಯವರ ಪುತ್ರಿ ಪ್ರತೀಕ್ಷಾ ಕಾಶಿ ಮತ್ತು ಈರ್ವರು ಶಿಷ್ಯೆಯರು ಉಪಸ್ಥಿತರಿದ್ದರು. ಸಂಸ್ಥೆಯ ಚಟುವಟಿಕೆಗಳನ್ನು ಅವಲೋಕಿಸಿದ ವೈಜಯಂತಿ ಕಾಶಿಯವರು ಇಂತಹ ಸಂಸ್ಥೆಯನ್ನು ತಾನು ಈ ತನಕ ನೋಡಿದ್ದಿಲ್ಲಾ, ಈ ಸಂಸ್ಥೆ ಉಳಿದವರಿಗೆ ಮಾದರಿ ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು.
ಬಡಗುತಿಟ್ಟಿನ ಪ್ರಸಿದ್ಧ ಕಲಾವಿದ ಸುಬ್ರಾಯ ಭಟ್ ಗುಂಡಿಬೈಲ್ ನಿನ್ನೆ(08-01-2021) ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು.ಅವರಿಗೆ 71 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿಯನ್ನು ಅಗಲಿದ್ದಾರೆ.
ಗುಂಡುಬಾಳ, ಇಡಗುಂಜಿ, ಕೊಳಗಿಬೀಸ್, ಅಮೃತೇಶ್ವರೀ, ಸಾಲಿಗ್ರಾಮ, ಬಚ್ಚಗಾರು ಮತ್ತು ಶಿರಸಿ ಮೇಳಗಳಲ್ಲಿ ಐದು ದಶಕಗಳ ಕಾಲ ಕಲಾಸೇವೆಗೈದಿದ್ದರು. ಬಬ್ರುವಾಹನ, ಅತಿಕಾಯ, ಇಂದ್ರಜಿತು, ಸುಗ್ರೀವ ಹೀಗೆ ಅನೇಕ ಪೌರಾಣಿಕ ಪಾತ್ರಗಳನ್ನು ರಂಗದಲ್ಲಿ ಮೆರೆಸಿದ್ದರು.ಯಕ್ಷಗಾನ ಗುರುಗಳಾಗಿ, ಪ್ರಸಂಗಕರ್ತರಾಗಿ, ಅರ್ಥಧಾರಿಯಾಗಿಯೂ ಈ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ.
ಅನೇಕ ಪ್ರಶಸ್ತಿಗಳಿಂದ ಪುರಸ್ಕೃತರಾದ ಇವರಿಗೆ ಉಡುಪಿಯ ಯಕ್ಷಗಾನ ಕಲಾರಂಗ 2016ರಲ್ಲಿ ಶಿರಿಯಾರ ಮಂಜುನಾಥ ನಾಯ್ಕ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಸಸ್ತಿ’ ನೀಡಿ ಗೌರವಿಸಿತ್ತು. ಅವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಮ್.ಗಂಗಾಧರ ರಾವ್ ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.