Wednesday, January 22, 2025
Home Blog Page 352

ಮಲ್ಪೆ ವಾಸುದೇವ ಸಾಮಗರಿಗೆ ಯಕ್ಷಾಂಗಣದ ನುಡಿ ನಮನ

”ಎಂ.ಆರ್. ವಾಸುದೇವ ಸಾಮಗರು ಯಕ್ಷಗಾನ ಆಟ – ಕೂಟಗಳ ಅತ್ಯದ್ಭುತ ಕಲಾಕಾರ. ಅವರು ತಮ್ಮ ಅಪಾರ ಕಲ್ಪನಾ ಸಾಮರ್ಥ್ಯದಿಂದ ಚಿತ್ರಿಸಿದ ಯಾವತ್ತೂ ಪಾತ್ರಗಳು ಇತರರ ಅಳವಿಗೆ ನಿಲುಕದ್ದು. ವಾ.ಸಾಮಗರಿಗೆ  ಅವರೇ ಸಾಟಿ.  ಅವರ ಸ್ಥಾನವನ್ನು ತುಂಬಬಲ್ಲ ವಿಕ್ಷಿಪ್ತ ಪ್ರತಿಭೆಗಳು ಬೇರೆಡೆ ಇಲ್ಲ ಎನ್ನಬಹುದು. ಯಕ್ಷರಂಗದಲ್ಲಿ ಬಹುದೊಡ್ಡ ನಿರ್ವಾತವನ್ನು ನಿರ್ಮಿಸಿ ಅವರು ನಿರ್ಗಮಿಸಿದ್ದಾರೆ” ಎಂದು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಹಾಗೂ ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.       

ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆಯು ಇತ್ತೀಚೆಗೆ ನಿಧನರಾದ ಪ್ರಸಿದ್ಧ ಯಕ್ಷಗಾನ ಕಲಾವಿದ ಮಲ್ಪೆ ವಾಸುದೇವ ಸಾಮಗರ ಸ್ಮರಣಾರ್ಥ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿನಮನ ಸಲ್ಲಿಸಿ ಮಾತನಾಡಿದರು.

ಇದನ್ನೂ ಓದಿ: ಚೌಕಿಗೆ ಬಂದವಳು ರಂಗಸ್ಥಳದಲ್ಲೂ ಕಾಡಿದಳು…

‘ತೆಂಕು – ಬಡಗು ಉಭಯ ತಿಟ್ಟುಗಳ ಅಸಾಮಾನ್ಯ ವೇಷಧಾರಿಯಾಗಿ, ವಿಶಿಷ್ಟ ಶೈಲಿಯ ಅರ್ಥಧಾರಿಯಾಗಿ, ಹಲವು ಪ್ರಸಂಗಗಳ ಸಂಗ್ರಾಹಕರಾಗಿ ಮತ್ತು ಸಂಯಮಮ್ ಸಂಚಾರಿ ತಾಳಮದ್ದಳೆ ಮೇಳದ ಸಂಘಟಕರಾಗಿ ವಾಸುದೇವ ಸಾಮಗರು ಕಲಾಭಿಮಾನಿಗಳ ಮನಸ್ಸಿನಲ್ಲಿ ಸ್ಥಿರವಾಗಿ ಉಳಿಯುತ್ತಾರೆ’ ಎಂದು ಅವರು ನುಡಿದರು.

ಯಕ್ಷಗಾನ ಸಂಘಟಕ ಮತ್ತು ಉದ್ಯಮಿ ಕರುಣಾಕರ ಶೆಟ್ಟಿ ಪಣಿಯೂರು ಅವರು ಮಾತನಾಡಿ ದಿ.ಕಾಳಿಂಗ ನಾವಡ ಮತ್ತು ವಾಸುದೇವ ಸಾಮಗರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿ ಶ್ರದ್ಧಾಂಜಲಿ ಸಮರ್ಪಿಸಿದರು. ಯಕ್ಷಾಂಗಣದ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಸಂತಾಪಸೂಚಕ ಠರಾವು ಮಂಡಿಸಿದರು.     ಇದನ್ನೂ ಓದಿ: ಮತ್ತೆ ಮರುಕಳಿಸೀತೇ ಮೂರಾಟದ ವೈಭವಗಳು?         

ಕೋಶಾಧಿಕಾರಿ ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ, ಉಪಾಧ್ಯಕ್ಷ ಸುಂದರ ಶೆಟ್ಟಿ ಬೆಟ್ಟಂಪಾಡಿ, ಕಾರ್ಯದರ್ಶಿಗಳಾದ ಕೆ.ಲಕ್ಷ್ಮೀನಾರಾಯಣ ರೈ ಹರೇಕಳ ಮತ್ತು ಉಮೇಶ ಆಚಾರ್ಯ ಗೇರುಕಟ್ಟೆ ಮೌನ ಪ್ರಾರ್ಥನೆ ಸಲ್ಲಿಸಿ ಅಗಲಿದ ಯಕ್ಷ ಚೇತನಕ್ಕೆ ಸದ್ಗತಿ ಕೋರಿದರು.

ರಾಜ್ಯೋತ್ಸವ ಕಲಾ ಸಂಭ್ರಮ: ನಗರದ ಕದ್ರಿಕಂಬಳ ಗ್ರಹ ಕಚೇರಿಯಲ್ಲಿ ಜರಗಿದ ಯಕ್ಷಾಂಗಣ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆಯನ್ನು ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ವಹಿಸಿದ್ದರು. ಕಳೆದ ಎಂಟು ವರ್ಷಗಳಿಂದ ಯಕ್ಷಾಂಗಣ ಆಯೋಜಿಸುತ್ತಿದ್ದ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮದ ‘ಯಕ್ಷಗಾನ ತಾಳಮದ್ದಲೆ ಸಪ್ತಾಹ’ ವನ್ನು ಈ ಬಾರಿ ಕೋವಿಡ್ – 19 ಹಿನ್ನೆಲೆಯಲ್ಲಿ ರದ್ದುಪಡಿಸಿದ್ದು, ಸರಕಾರದ ನಿಯಮಾವಳಿಗೊಳಪಟ್ಟು ಒಂದು ದಿನದ ಸಾಂಕೇತಿಕ ಕಲಾ ಕಾರ್ಯಕ್ರಮವನ್ನು ನಡೆಸುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು.   

   

ಇದೇ ನವೆಂಬರ್ 29ರಂದು ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನೂತನ ಸಭಾಂಗಣದಲ್ಲಿ ಜರಗುವ ‘ರಾಜ್ಯೋತ್ಸವ ಕಲಾ ಸಂಭ್ರಮ – 2020’ ಕಾರ್ಯಕ್ರಮದಲ್ಲಿ ಯಕ್ಷಾಂಗಣ ವಾರ್ಷಿಕ ಪ್ರಶಸ್ತಿ ಪ್ರದಾನ ಮತ್ತು  ‘ಶ್ರೀಕೃಷ್ಣ ತಂತ್ರ’ ಯಕ್ಷಗಾನ  ತಾಳಮದ್ದಳೆಯನ್ನು ನಡೆಸಲು ತೀರ್ಮಾನ ಕೈಗೊಳ್ಳಲಾಯಿತು.

ಇದನ್ನೂ ಓದಿ: ಮತ್ತೆ ಮರುಕಳಿಸೀತೇ ಮೂರಾಟದ ವೈಭವಗಳು? 

ಕೊಲ್ಲಂಗಾನದಲ್ಲಿ ಬಣ್ಣದ ವೇಷದ ಕಮ್ಮಟ ಮತ್ತು ದಾಖಲೀಕರಣ

ನಿನ್ನೆ ದಿನಾಂಕ 09. 11. 2020 ಸೋಮವಾರದಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದೊಂದಿಗೆ ಮತ್ತು ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಇವರ ಸಹಕಾರದೊದಿಗೆ ಕೊಲ್ಲಂಗಾನ ಶ್ರೀ ದುರ್ಗಾ ಪರಮೇಶ್ವರಿ ಸನ್ನಿಧಿ, ಶ್ರೀನಿಲಯದಲ್ಲಿ, ಕೊಲ್ಲಂಗಾನ ಮೇಳದ ಸಹಕಾರದೊಂದಿಗೆ ತೆಂಕುತಿಟ್ಟು ಯಕ್ಷಗಾನದ  ಬಣ್ಣದ ವೇಷದ ಕಮ್ಮಟವನ್ನು ಏರ್ಪಡಿಸಿತ್ತು.

ಈ ಕಮ್ಮಟವು ತೆಂಕುತಿಟ್ಟು ಬಣ್ಣದ ವೇಷದ ಮಾದರಿಗಳನ್ನು ದಾಖಲೀಕರಣಗೊಳಿಸುವ ಮತ್ತು ಅದನ್ನು ಮುಂದಿನ ಪೀಳಿಗೆಗೆ ಸಮರ್ಥವಾಗಿ ದಾಟಿಸಿ ಪರಿಚಯಿಸುವ ನಿಟ್ಟಿನಲ್ಲಿ ಮಹತ್ವವನ್ನು ಪಡೆದಿತ್ತು.

ಬಹಳ ಪರಿಣಾಮಕಾರಿಯಾಗಿ ಮತ್ತು ಮನೋಜ್ಞವಾಗಿ ಮೂಡಿಬಂದ ಈ ಬಣ್ಣದ ವೇಷದ ಕಮ್ಮಟದಲ್ಲಿ ತೆಂಕುತಿಟ್ಟಿನ ವಿವಿಧ ಬಣ್ಣದ ವೇಷದ ವೇಷಗಾರಿಕೆ, ಬಣ್ಣಗಾರಿಕೆ ಮತ್ತು ನೃತ್ಯ ಪ್ರಾತ್ಯಕ್ಷಿಕೆ ಮತ್ತು ವಿವರಣೆಗಳನ್ನು ನೀಡಲಾಯಿತು.

ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು,  ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಪಧಾಧಿಕಾರಿಗಳು,  ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿಯ ಪ್ರತಿನಿಧಿಗಳು, ಕೊಲ್ಲಂಗಾನ ಮೇಳದ ಸಂಚಾಲಕರು ಮತ್ತು ತೆಂಕುತಿಟ್ಟು ಯಕ್ಷಗಾನ ಮತ್ತು ತಾಳಮದ್ದಳೆಯ ಪ್ರಸಿದ್ಧ ಕಲಾವಿದರು ಉಪಸ್ಥಿತರಿದ್ದರು 

ಯಾವ ಪಾತ್ರವನ್ನಾದರೂ ಮಾಡಬಲ್ಲ ಪ್ರಜ್ವಲ್ ಕುಮಾರ್ ಗುರುವಾಯನಕೆರೆ

ಪೂರ್ವರಂಗದಿಂದ ತೊಡಗಿ ಹಂತ ಹಂತವಾಗಿ ಎಲ್ಲಾ ವೇಷಗಳನ್ನು  ಮಾಡಿದವನು ಯಾವ ಪಾತ್ರವನ್ನು ನೀಡಿದರೂ ನಿರ್ವಹಿಸಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತಾನೆ. ಆದರೂ ತನ್ನ ವೃತ್ತಿಯಲ್ಲಿ ಸ್ಥಾನದ ಸ್ಥಿರತೆಯನ್ನು ಕಾಪಿಟ್ಟುಕೊಳ್ಳುವಲ್ಲಿ ತೊಡಕುಂಟಾದೀತೆಂಬ ಭಯದಿಂದ ಕೆಲವು ಕಲಾವಿದರು ಎಲ್ಲಾ ವೇಷಗಳನ್ನು ಮಾಡಲು ಹಿಂಜರಿಯುತ್ತಾರೆ.  ಕೆಲವೊಮ್ಮೆ ಯಾವುದೇ ವೇಷಗಳನ್ನು ಮಾಡಲು ಸಿದ್ಧರಾಗಿ ಆಪದ್ಭಾಂಧವರೆನಿಸಿಕೊಳ್ಳುವ  ಕಲಾವಿದರು ಯಕ್ಷಗಾನಕ್ಕೆ ಅನಿವಾರ್ಯ. ಭಾಗವತರಿಗಿರುವ ಒತ್ತಡವನ್ನು ಇಂತಹ ಕಲಾವಿದರು ಹಗುರಗೊಳಿಸುತ್ತಾರೆ.  ಅಂತಹ ಕಲಾವಿದರಲ್ಲೊಬ್ಬರು ಪ್ರಜ್ವಲ್ ಕುಮಾರ್ ಗುರುವಾಯನಕೆರೆ. 

ಬೇಬಿ ಶೆಟ್ಟಿ ಮತ್ತು ಸಂಪಾವತೀ ದಂಪತಿಗಳ ಪುತ್ರನಾಗಿ  ಬೆಳ್ತಂಗಡಿ ತಾಲೂಕು ಗುರುವಾಯನಕೆರೆಯಲ್ಲಿ   ಪ್ರಜ್ವಲ್ ಕುಮಾರ್ ಅವರು ಜನಿಸಿದರು. ಗುರುವಾಯನಕೆರೆ ಸರಕಾರೀ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ  ಮಾಡಿದರೂ ಮನೆಯಲ್ಲಿ ಕಡುಬಡತನವಿದ್ದುದರಿಂದ ಓದನ್ನು ನಿಲ್ಲಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದರು. ಶ್ರೀ ಧರ್ಮಸ್ಥಳ ಲಲಿತ ಕಲಾ ಕೇಂದ್ರಕ್ಕೆ ಸೇರಿ ಯಕ್ಷಗಾನ ನಾಟ್ಯವನ್ನು ಅಭ್ಯಸಿಸಿ, ಶ್ರೀ ಧರ್ಮಸ್ಥಳ ಮೇಳಕ್ಕೆ ಸೇರಿದರು. 

ಮೊದಲ ವರುಷ ಬಾಲಗೋಪಾಲನಾಗಿ ಮತ್ತು ಪ್ರಸಂಗಗಳಲ್ಲಿ ಬರುವ ಇನ್ನಿತರ ವೇಷಗಳನ್ನು ನಿರ್ವಹಿಸಿದರು.  ಆಮೇಲೆ ಮುಂದಿನ ವರ್ಷಗಳಲ್ಲಿ ಮುಖ್ಯ ಸ್ತ್ರೀ ವೇಷ.  ಅಲ್ಲದೆ ನಿರಂತರ 5 ವರ್ಷಗಳ ಕಾಲ ಲಲಿತ ಕಲಾ ಕೇಂದ್ರಕ್ಕೆ ಹೋಗಿ ಅಭ್ಯಾಸಿಗಳ ಜತೆ ಕುಣಿಯುವುದರ ಜತೆಗೆ ಹೇಳಿಕೊಡುವ ಕೆಲಸವನ್ನೂ ಮಾಡುತ್ತಿದ್ದರು. ಇದರ ಪರಿಣಾಮವನ್ನು ಅವರು ಅನುಭವಿಸಿದ್ದಾರೆ. ತಾಳಜ್ಞಾನ, ಲಯಸಿದ್ಧಿ ಇರುವ ಕಲಾವಿದನೆನಿಸಿಕೊಂಡುದು ಈ ಕಾರಣದಿಂದಲೇ ಆಗಿರಬೇಕು.  5 ವರ್ಷಗಳ ಧರ್ಮಸ್ಥಳ ಮೇಳದ ತಿರುಗಾಟದ ನಂತರ ಕಲ್ಲಾಡಿ ಶ್ರೀ ವಿಠಲ ಶೆಟ್ಟರ ಸಂಚಾಲಕತ್ವದ ಕಟೀಲು ಮೇಳಕ್ಕೆ ಸೇರಿದ್ದರು.  ‘ರಂಗನಾಯಕ’ ಖ್ಯಾತಿಯ ಕುರಿಯ ಶ್ರೀ ಗಣಪತಿ ಶಾಸ್ತ್ರಿಗಳ ಭಾಗವತಿಕೆಯಡಿ ಕಟೀಲು ಮೇಳದಲ್ಲಿ 1 ವರ್ಷ.

ಫೋಟೋ: ಅನಿಲ್ ಎಸ್. ಕರ್ಕೇರ 

ಬಳಿಕ ಕುಂಟಾರು ರವೀಶ ತಂತ್ರಿಗಳ ನೇತೃತ್ವದ ಕುಂಟಾರು ಮೇಳದಲ್ಲಿ 2 ವರ್ಷ. ಈ ಸಂದರ್ಭದಲ್ಲಿ ಅನೇಕ ತುಳು ಪ್ರಸಂಗಗಳಲ್ಲಿ ವೇಷ ಮಾಡಿದ್ದರು.  ಬಳಿಕ ‘ರಂಗದರಾಜ’ ಶ್ರೀ ರಾಧಾಕೃಷ್ಣ ನಾವಡರು ಪ್ರಜ್ವಲ್ ಅವರನ್ನು ಎಡನೀರು ಶ್ರೀಗಳ ಬಳಿಗೆ ಕರೆದುಕೊಂಡು ಹೋಗಿದ್ದರು. ಎಡನೀರು ಮೇಳದಲ್ಲಿ ಪ್ರಜ್ವಲ್ ಅವರು 2 ವರ್ಷ ತಿರುಗಾಟ ನಡೆಸಿದ್ದರು. ತದನಂತರ 12 ವರ್ಷಗಳ ಕಾಲ ಹೊಸನಗರ ಮೇಳದಲ್ಲಿ. ಮತ್ತೆ 1 ವರ್ಷ ಎಡನೀರು ಮೇಳ. ಪ್ರಸ್ತುತ 3 ವರ್ಷಗಳಿಂದ ಹನುಮಗಿರಿ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. 

ಹಾಸ್ಯಪಾತ್ರಗಳನ್ನೂ ಚೆನ್ನಾಗಿ ಮಾಡಬಲ್ಲ ಪ್ರಜ್ವಲ್ ಅವರು ಧರ್ಮಸ್ಥಳ ಮೇಳದಲ್ಲಿ ಹಾಸ್ಯರತ್ನ ನಯನಕುಮಾರರು ಚೆನ್ನಾಗಿ ಹೇಳಿಕೊಡುತ್ತಿದ್ದರು. ಅಲ್ಲದೆ ಎಲ್ಲಾ ಕಲಾವಿದರಿಂದ ಉತ್ತೇಜನ ಸಿಕ್ಕಿದೆ ಎನ್ನುತ್ತಾರೆ. ‘ಬೆಳೆಯ ಸಿರಿಯನ್ನು ಮೊಳಕೆಯಲ್ಲೇ ಕಾಣಬಹುದು’ ಎಂಬಂತೆ ಧರ್ಮಸ್ಥಳ ಮೇಳದಲ್ಲಿ ಬಾಲಕಲಾವಿದನಾಗಿದ್ದಾಗಲೇ ಇವರ ಪ್ರತಿಭೆಯನ್ನು ಎಲ್ಲರೂ ಗುರುತಿಸಿದ್ದರು. ನಂತರ ತಿರುಗಾಟ ನಡೆಸಿದ ಎಲ್ಲಾ ಮೇಳಗಳಲ್ಲೂ (ಕಟೀಲು, ಎಡನೀರು, ಕುಂಟಾರು, ಹೊಸನಗರ, ಹನುಮಗಿರಿ ಮೇಳ) ಒಳ್ಳೆಯ ಅವಕಾಶಗಳೂ ಸಿಕ್ಕಿತ್ತು.

ತನ್ನ ಸ್ವಯಂ ಪ್ರತಿಭೆ ಮತ್ತು ಸಿಕ್ಕ ಅವಕಾಶಗಳನ್ನು ಚೆನ್ನಾಗಿಯೇ ಬಳಸಿಕೊಂಡು ಬೆಳೆದ ಕಲಾವಿದ ಪ್ರಜ್ವಲ್ ಕುಮಾರ್.  ಪ್ರತ್ಯುತ್ಪನ್ನಮತಿಯಾದ ಇವರು ವಿಷಯಗಳನ್ನು ಬಲುಬೇಗನೇ ಗ್ರಹಿಸಬಲ್ಲರು. ಪ್ರಸಂಗಜ್ಞಾನ, ರಂಗನಡೆ, ಪಾತ್ರದ ಸ್ವಭಾವ ಇವುಗಳನ್ನು ಅರಿತು ವೇಷಗಳನ್ನು ನಿರ್ವಹಿಸಬಲ್ಲ ಸಮರ್ಥ ಮಾತುಗಾರಿಕೆಯೂ ಶುದ್ಧ ಮತ್ತು ಬಲುಚೊಕ್ಕ. ಎಲ್ಲಾ ವೇಷಗಳಿಗೂ ಬೇಕಾದಂತಹ ಆಳಂಗ ಹೊಂದಿರುವುದು ಮತ್ತೊಂದು ಪ್ಲಸ್ ಪಾಯಿಂಟ್. ಬಣ್ಣದ ವೇಷಗಳನ್ನೂ ಚೆನ್ನಾಗಿ ನಿರ್ವಹಿಸುತ್ತಾರೆ.  ಮಾತುಗಾರಿಕೆಯಲ್ಲಿ ಪ್ರಭುತ್ವ ಹೊಂದಿರುವುದರಿಂದ ಮತ್ತು ಪಾತ್ರದ ಸ್ವಭಾವವರಿತು ಅಭಿನಯಿಸಬಲ್ಲ ಸಾಮರ್ಥ್ಯ ಇರುವುದರಿಂದ ಧರ್ಮರಾಯ ಮೊದಲಾದ ಒಡ್ಡೋಲಗ ವೇಷಗಳನ್ನೂ, ನಾರದ, ಅಕ್ರೂರ ಮೊದಲಾದ ಸಾತ್ವಿಕ ಪಾತ್ರಗಳನ್ನೂ ಕೊರತೆಯಾಗದಂತೆ ತುಂಬುತ್ತಾರೆ.

ಫೋಟೋ: ಅನಿಲ್ ಎಸ್. ಕರ್ಕೇರ 

ಕಳೆದ ಮೂರ್ನಾಲ್ಕು ವರ್ಷಗಳಿಂದ ತಾಳಮದ್ದಳೆ ವೇದಿಕೆಯಲ್ಲೂ ಅಪರೂಪಕ್ಕೆ ಕಾಣಿಸಿಕೊಂಡಿದ್ದಾರೆ. ಪ್ರತಿಭೆ ಮತ್ತು ಸಾಮರ್ಥ್ಯ ಇವೆರಡೂ ಸರಿಯಾದ ದಿಕ್ಕಿನಲ್ಲಿಯೇ ಸಾಗಿದರೆ ಇವರೊಬ್ಬ ಗ್ರೇಟ್ ಆಲೌರೌಂಡರ್ ಕಲಾವಿದರಾಗಿ ಮೆರೆಯಲಿದ್ದಾರೆ ಎಂಬುದರಲ್ಲಿ ಸಂಶಯವೇ ಇಲ್ಲ.  “ಯಕ್ಷಗಾನವೆಂಬ ಶ್ರೇಷ್ಠ ಕಲೆಯ ಒಂದು ಅಂಗವಾಗಿ ಅಭಿನಯಿಸಲು ಸಿಕ್ಕಿದ್ದು ನನ್ನ ಭಾಗ್ಯ. ಈ ವಿಚಾರದಲ್ಲಿ ನನಗೆ ಸಂತೋಷವಿದೆ. ನಾನು ಕಲಾವಿದನಾಗುತ್ತೇನೆ ಎಂದಾಗ ಪ್ರೋತ್ಸಾಹಿಸಿದವಳು ನನ್ನ ಅಕ್ಕ. ಕಲಾವಿದನಾಗಲು ನನಗೆ ಅವಳೇ ಪ್ರೇರಕ ಶಕ್ತಿ. ವಿವಾಹಿತೆಯಾಗಿ ದೂರದ ಬಹ್ರೈನ್‍ನಲ್ಲಿ ಉದ್ಯೋಗಿಯಾಗಿದ್ದರೂ ಅವಳು ಸದಾ ಪ್ರೋತ್ಸಾಹಿಸುತ್ತಾಳೆ” ಎಂದು ಪ್ರಜ್ವಲ್ ಹೇಳುತ್ತಾರೆ. 

ಪ್ರಜ್ವಲ್ ಅವರು ಒಟ್ಟು 23 ವರ್ಷಗಳ ಕಾಲ ತಿರುಗಾಟ ನಡೆಸಿದ ಅನುಭವಿ. ಎಲ್ಲಾ ರೀತಿಯ ಪಾತ್ರಗಳನ್ನೂ ಮಾಡಬಲ್ಲ ಪ್ರತಿಭಾನ್ವಿತ ಕಲಾವಿದ.  “ಪೆರ್ಲ ಜಗನ್ನಾಥ ಶೆಟ್ಟರು ಮತ್ತು ಪ್ರಜ್ವಲ್ ಇದ್ದರೆ ಯಾವ ಪ್ರಸಂಗವನ್ನಾದರೂ ಆಡಬಹುದು’’. ಖ್ಯಾತ ಕಲಾವಿದ ಉಜಿರೆ ಅಶೋಕ ಭಟ್ಟರ ಮಾತುಗಳು ಇವರ ಪ್ರತಿಭೆಗೆ ಸಿಕ್ಕ ಪುರಸ್ಕಾರ.  ಯಕ್ಷಗಾನ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲೇಬೇಕು. ಆ ನಿಟ್ಟಿನಲ್ಲಿ ಪ್ರಜ್ವಲ್ ಅವರೂ ಯೋಚಿಸಬೇಕು. ಭವಿಷ್ಯದಲ್ಲಿ ತಾನೊಬ್ಬ Star ಕಲಾವಿದನಾಗುವ ಎಲ್ಲ ಸಾಧ್ಯತೆಗಳೂ ತೆರೆದೇ ಇರುವಾಗ ಅನ್ಯ ಯೋಚನೆಗಳ ಅಗತ್ಯವೇ ಇಲ್ಲ. ಗುರಿಯತ್ತ ಸಾಗುವಲ್ಲಿ ತೊಡಗಿಸಿಕೊಳ್ಳಬೇಕು.   ಪ್ರಜ್ವಲ್ ಅವರು ಪ್ರಸ್ತುತ ತನ್ನ ತಾಯಿ ಮತ್ತು ಸೊಸೆ   ಕು| ಕುಶಿ (೬ನೇ ತರಗತಿ) ಅವರೊಂದಿಗೆ ಗುರುವಾಯನಕೆರೆಯಲ್ಲಿ ನೆಲೆಸಿರುತ್ತಾರೆ. 

ಲೇಖಕ: ರವಿಶಂಕರ್ ವಳಕ್ಕುಂಜ  

ಕಲಾವಿದ, ಸಂಚಾಲಕ ನಿಡ್ಲೆ ಗೋವಿಂದ ಭಟ್ (Nidle Govinda Bhat)

ನಿಡ್ಲೆ ಗೋವಿಂದ ಭಟ್ 1958 ಅಕ್ಟೋಬರ್ 2ರಂದು ಈಶ್ವರ ಭಟ್ಟ ಮತ್ತು ಶಂಕರಿ ದಂಪತಿಗಳ ಪುತ್ರರಾಗಿ ನಿಡ್ಲೆಯಲ್ಲಿ ಜನಿಸಿದರು.  ತನ್ನ ವಿದ್ಯಾಭ್ಯಾಸವನ್ನು ಏಳನೆಯ ತರಗತಿಗೆ ಮೊಟಕುಗೊಳಿಸಿ ಯಕ್ಷಗಾನ ಕಲೆಯತ್ತ ಆಕರ್ಷಿತರಾದರು. 1971ರಲ್ಲಿ ಧರ್ಮಸ್ಥಳ ಯಕ್ಷಗಾನ ಕೇಂದ್ರ ಪ್ರಥಮ ವರ್ಷದ ವಿದ್ಯಾರ್ಥಿಯಾಗಿ ಯಕ್ಷಗಾನದ ಶಿಕ್ಷಣ ಪಡೆದರು.

ಆಗ ಕೇಂದ್ರದಲ್ಲಿ ನಾಟ್ಯ ಶಿಕ್ಷಕರಾಗಿದ್ದ ಶ್ರೀ ಕುರಿಯ ವಿಠಲ ಶಾಸ್ತ್ರಿ ಮತ್ತು ಶ್ರೀ ಪಡ್ರೆ ಚಂದುರವರಿಂದ ಯಕ್ಷಗಾನ ನಾಟ್ಯವನ್ನು ಕಲಿತರು.  ಅವರೀರ್ವರ ಗರಡಿಯಲ್ಲಿ ಪಳಗಿದ ನಿಡ್ಲೆ ಗೋವಿಂದ ಭಟ್ ಮುಂದೆ ಯಕ್ಷಗಾನ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆಯಾಗಿ ಪರಿಗಣಿಸಲ್ಪಟ್ಟರು.   ಯಕ್ಷಗಾನ ಕಲಿಕೆಯ ನಂತರ ವೇಣೂರು ಮೇಳದಲ್ಲಿ ಸುಮಾರು 12 ವರ್ಷಗಳ ಕಾಲ ತಿರುಗಾಟ ನಡೆಸಿದರು.  ಕೋಡಂಗಿ ವೇಷಧಾರಿಯಾಗಿ ರಂಗ ಪ್ರವೇಶಿಸಿದ ಗೋವಿಂದ ಭಟ್ಟರು ಮುಂದಕ್ಕೆ ನಿತ್ಯವೇಷಗಳನ್ನು ಮಾಡಿ ಬಳಿಕ ಸುಬ್ರಹ್ಮಣ್ಯ, ಕರ್ನಾಟಕ, ಪುತ್ತೂರು, ಗೀತಾಂಬಿಕಾ ಯಕ್ಷಗಾನ ಮಂಡಳಿ, ಮುಂಬಯಿ, ಬಪ್ಪನಾಡು ಮೇಳಗಳಲ್ಲಿ ಕೂಡಾ ಕಲಾವಿದನಾಗಿ ತಿರುಗಾಟ ನಡೆಸಿದ್ದರು. 

ತಮ್ಮ ಕಲಾಜೀವನದಲ್ಲಿ ಸ್ತ್ರೀಪಾತ್ರಗಳನ್ನು ಹೊರತುಪಡಿಸಿ ಹೆಚ್ಚಿನೆಲ್ಲಾ ಪಾತ್ರಗಳನ್ನು ನಿರ್ವಹಿಸಿದ ಕೀರ್ತಿ ಶ್ರೀಯುತ ನಿಡ್ಲೆಯವರಿಗೆ ಸಲ್ಲುತ್ತದೆ. ಅವರ ಶರೀರ, ಶಾರೀರಗಳು ಸ್ತ್ರೀಪಾತ್ರಕ್ಕೆ ಹೊಂದುವುದಿಲ್ಲವೆಂದು ತಾನು ಸ್ತ್ರೀಪಾತ್ರವನ್ನು ಇಷ್ಟಪಡುತ್ತಿರಲಿಲ್ಲವೆಂದು ಗೋವಿಂದ ಭಟ್ಟರು ಹೇಳುತ್ತಾರೆ. ಆ ನಂತರ ಧರ್ಮಸ್ಥಳ ಮೇಳವೊಂದರಲ್ಲೇ ಸುದೀರ್ಘ ಸಮಯದ ಕಾಲ ತಿರುಗಾಟ ನಡೆಸಿ ಮೇಳದಿಂದ ಸ್ವಯಂ ನಿವೃತ್ತಿ ಬಯಸಿ ಕೃಷಿ ಹಾಗೂ ಯಕ್ಷಗಾನ ಎರಡನ್ನೂ ಸಮನ್ವಯತೆಯಿಂದ ಮುಂದುವರಿಸಿಕೊಂಡು ಹೋಗುತ್ತಾ ಇದ್ದಾರೆ. 

ಪ್ರಮುಖ ಪಾತ್ರಧಾರಿಯಾಗಿ ಗುರುತಿಸಲ್ಪಟ್ಟು ಸುಮಾರು 23 ವರ್ಷಗಳಷ್ಟು ಕಾಲ ಧರ್ಮಸ್ಥಳ ಮೇಳವೊಂದರಲ್ಲೇ ಕಲಾಸೇವೆ ಮಾಡಿದ್ದರು.  ಇಂದ್ರಜಿತು, ದಕ್ಷ, ವಿಶ್ವಾಮಿತ್ರ,  ಕೌಂಡ್ಲಿಕ, ರಾವಣ, ಕೌರವ, ಕಂಸ, ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆಯ ಮುಸಲ್ಮಾನ ವ್ಯಾಪಾರಿ, ಕರ್ಣ ಮೊದಲಾದ ಪಾತ್ರಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ಪ್ರಸಿದ್ಧಿಯಾದರು.  ಇಂತಹ ವೇಷಗಳಲ್ಲಿ ಹೆಸರು ಮಾಡಿದರೂ ನಿಡ್ಲೆಯವರು ನಿರ್ವಹಿಸದ ಪಾತ್ರಗಳಿಲ್ಲ. ಮಹಿಷಾಸುರನೇ ಮೊದಲಾದ ಹಲವಾರು ಬಣ್ಣದ ವೇಷಗಳಲ್ಲೂ  ವಲಲ ಭೀಮ, ಘಟೋತ್ಕಜ ಪಾತ್ರಗಳಲ್ಲೂ ಮಿಂಚಿದವರು.  ಅವರು ಎಲ್ಲ ಬಗೆಯ ಪಾತ್ರಗಳಿಗೂ ಸೈ ಎನ್ನುವವರು. 

ಜಾಹೀರಾತು

ಪ್ರಚಾರಪ್ರಿಯರಾಗದೆ ತನ್ನ ಕೆಲಸ ತಾನು ಮಾಡಿಕೊಂಡು ಹೋಗುವ ಕಲಾವಿದ. ಆದರೂ  ಹಲವಾರು ಸಂಘ-ಸಂಸ್ಥೆಗಳು ಅವರನ್ನು ಗುರುತಿಸಿ ಸನ್ಮಾನ, ಪ್ರಶಸ್ತಿಗಳನ್ನೂ ನೀಡಿ ಗೌರವಿಸಿದೆ. ಮಳೆಗಾಲದಲ್ಲಿ ಪರವೂರುಗಳಲ್ಲಿ ತಿರುಗಾಟ ನಡೆಸುತ್ತಿದ್ದ ತನ್ನದೇ ಪ್ರವಾಸೀ ತಂಡವಾದ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ’ಯನ್ನು ಸ್ಥಾಪಿಸಿದ್ದರು. ಇಷ್ಟರವರೆಗೆ ಸುಮಾರು 33 ವರ್ಷಗಳ ಕಾಲ ಮಳೆಗಾಲದ ತಿರುಗಾಟವನ್ನೂ ಅವರ ಈ ಯಕ್ಷಗಾನ ಮಂಡಳಿಯು ಯಶಸ್ವಿಯಾಗಿ ಪೂರೈಸಿತ್ತು.

ಮಂಡಳಿ ಪ್ರಾರಂಭಿಸಿದ ವರ್ಷದಲ್ಲಿ ಕೇವಲ 15 ಆಟಗಳು ಮಾತ್ರ ಸಿಕ್ಕಿತ್ತು. ಆಮೇಲೆ ಹೆಚ್ಚಾಗುತ್ತಾ ಹೋಗಿ ಬೆಳೆಯುತ್ತಾ ಬೆಳೆಯುತ್ತಾ ತನ್ನ ಕಾರ್ಯ ವ್ಯಾಪ್ತಿ ವಿಸ್ತಾರಗೊಳಿಸಿ ಮಳೆಗಾಲದ ಅವಧಿಯಲ್ಲಿ 122 ಯಕ್ಷಗಾನ ಪ್ರದರ್ಶನಗಳನ್ನು ಮಾಡಿದ್ದು ನಿಡ್ಲೆಯವರ ಯಕ್ಷಗಾನ ಮಂಡಳಿಯ ಸಾಧನೆ. ಮೈಸೂರು, ಬೆಂಗಳೂರು, ಚೆನ್ನೈ, ಕೊಯಂಬತ್ತೂರು, ಹೈದರಾಬಾದ್, ಮಂತ್ರಾಲಯ, ವಿಜಯವಾಡ, ವಿಶಾಖಪಟ್ಟಣ, ಕಲ್ಕತ್ತಾ, ಬೀದರ್, ಗುಲ್ಬರ್ಗಾ, ಹಂಪೆ ಕನ್ನಡ ವಿ.ವಿ., ಹಾವೇರಿ ಗೊಟಗೋಡಿ ಜನಪದ ವಿ.ವಿ., ಪೂನಾ, ಬಾಗಲಕೋಟೆ, ಅಥಣಿ, ನೀಲೇಶ್ವರ, ಶ್ರೀಶೈಲಂ ಮೊದಲಾದ ಕಡೆಗಳಲ್ಲಿ ನಿಡ್ಲೆ ಗೋವಿಂದ ಭಟ್ಟರ ತಂಡವು ಯಶಸ್ವೀ ಪ್ರದರ್ಶನಗಳನ್ನು ನೀಡಿತ್ತು.

ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ನಿಡ್ಲೆ ಈ ಸಂಸ್ಥೆಗೆ 34ರ ಹರೆಯ. ಮೇಳದ ತಿರುಗಾಟವನ್ನು ಮುಗಿಸಿದ ನಂತರ ಮಳೆಗಾಲದಲ್ಲಿ ಕೆಲಸವಿಲ್ಲದೆ ಇರುತ್ತಿದ್ದ ಅನೇಕ ಕಲಾವಿದರಿದ್ದರು. ಅದೂ ಅಲ್ಲದೆ ತನ್ನ ಆರ್ಥಿಕ ಪರಿಸ್ಥಿತಿಯೂ ಆಗ ಅಷ್ಟೇನೂ ಉತ್ತಮವಾಗಿರಲಿಲ್ಲ ಎಂದು ಗೋವಿಂದ ಭಟ್ಟರು ಹೇಳುತ್ತಾರೆ. ಆ ಸಂದರ್ಭದಲ್ಲಿ ಅವರಿಗೆ ಆಲೋಚನೆಯೊಂದು ಹೊಳೆಯಿತು. ಮನದಲ್ಲಿ ರೂಪುರೇಷೆ ಸಿದ್ಧವಾಯಿತು. ಯೋಚಿಸಿದ ಕೆಲಸಕ್ಕೆ ಸಹೋದರ ಶ್ರೀ ನಾರಾಯಣ ಭಟ್ಟರ ಸಹಕಾರವೂ ಸಿಕ್ಕಿತು. ಆ ಆಲೋಚನೆಗಳ ಕಾರ್ಯರೂಪವೋ ಎಂಬಂತೆ ‘ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ’ಯು ಜನ್ಮ ತಾಳಿತು.

ಮೊದಲೇ ಹೇಳಿದಂತೆ ಪ್ರಥಮ ವರ್ಷದಲ್ಲಿ ಕೇವಲ 15 ಆಟಗಳು ನಿಗದಿಯಾದುವು (ಅದರಲ್ಲಿ ಕೆಲವು ರದ್ದಾಗಿವೆ). ಆಮೇಲೆ ಬೆಳೆಯುತ್ತಾ ಹೋಗಿ ವರ್ಷಕ್ಕೆ 125 ಆಟಗಳಷ್ಟು ನಿಗದಿಯಾದದ್ದೂ ಇದೆ ಎಂದು ನಿಡ್ಲೆಯವರು ಹೇಳುತ್ತಾರೆ. ಪ್ರಯತ್ನಪಟ್ಟರೆ ಇನ್ನೂ ಹೆಚ್ಚು ಆಟಗಳನ್ನು ಪ್ರದರ್ಶಿಸಲು ಸಾಧ್ಯವಿದೆ ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ. ಆದರೆ ಮನೆಯ, ಕೃಷಿಯ ಕೆಲಸಗಳಿಂದಾಗಿ ಆ ಕಡೆಗೂ ಗಮನ ಕೊಡಬೇಕಾಗುತ್ತದೆಯಂತೆ. ಹೆಚ್ಚಿನೆಲ್ಲಾ ಹಿರಿಯ, ಕಿರಿಯ ಕಲಾವಿದರು ನಿಡ್ಲೆಯವರ ತಂಡದಲ್ಲಿ ತಿರುಗಾಟ ನಡೆಸಿದ್ದಾರೆ. 

ಫೋಟೋ: ಮಧುಸೂದನ ಅಲೆವೂರಾಯ 

ಪ್ರಸ್ತುತ ಧರ್ಮಸ್ಥಳ ಸಮೀಪ ನಿಡ್ಲೆಯಲ್ಲಿ ವಾಸವಾಗಿರುವ ಗೋವಿಂದ ಭಟ್ಟರದು ಕೃಷಿಕ ಕುಟುಂಬ. ಚಿಕ್ಕ ಸಂಸಾರ, ಚೊಕ್ಕ ಸಂಸಾರ. ಮಗ ಈಶ್ವರಚಂದ್ರ ನಿಡ್ಲೆ ಮತ್ತು ಮಗಳು ವಿದ್ಯಾಶಂಕರಿ. ಪತ್ನಿ ವಸಂತಿ ಪತಿಯ ಕಾರ್ಯಗಳಿಗೆ ಸಹಕಾರಿಯಾಗಿ ಸಂಸಾರ ತೂಗಿಸುವ ಆದರ್ಶ ಗೃಹಿಣಿ. 

ಲೇಖನ: ಮನಮೋಹನ್ ವಿ.ಎಸ್

ಮತ್ತೆ ಮರುಕಳಿಸೀತೇ ಮೂರಾಟದ ವೈಭವಗಳು? 

2015ರಲ್ಲಿ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಸಂಪಾಜೆ ಯಕ್ಷೋತ್ಸವದ ಕಿರೀಟಕ್ಕೆ ರಜತ ಸಂಭ್ರಮದ ಗರಿ. ಆ ಹೆಮ್ಮೆಯ ರಜತ ಮಹೋತ್ಸವದ ಸಂಭ್ರಮದ ಪ್ರಯುಕ್ತ ಅಪೂರ್ವವೂ ಅವರ್ಣನೀಯವೂ ಆದ ಪ್ರದರ್ಶನವೊಂದನ್ನು ಸಂಯೋಜಿಸಿ ಆಯೋಜಿಸಿದ್ದು ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಹೆಗ್ಗಳಿಕೆಯೆಂದೇ ಹೇಳಬಹುದು.

ಅದುವೇ ಅಪೂರ್ವ ಸ್ಪರ್ಧೆಯ ಮೂರಾಟ. ಬಹುಶಃ ಜೋಡಾಟವನ್ನೂ ನೋಡದ ಯಕ್ಷಗಾನದ ಅಭಿಮಾನಿಗಳು ನಮ್ಮ ನಡುವೆ ಇರಬಹುದು. ಆದರೆ ಮೂರು ರಂಗಸ್ಥಳಗಳಲ್ಲಿ ಒಂದೇ ಪ್ರಸಂಗವನ್ನು ಪ್ರದರ್ಶಿಸುವ ಅತೀ ಅಪರೂಪದ ‘ಮೂರಾಟ’ವನ್ನು ಈ ಮೊದಲು ಕಂಡವರು ಯಾರಾದರೂ ಇರಬಹುದೋ ಅಥವಾ ಮೊದಲು ಕಂಡ ಹಿರಿಯರು ಈಗ ನಮ್ಮ ನಡುವೆ ಇದ್ದಾರೆಯೇ ಅಥವಾ ಇಲ್ಲವೋ ಎಂದು ಗೊತ್ತಿಲ್ಲ.

ನೋಡದವರಿಗಂತೂ 07. 11. 2015ರ ಶನಿವಾರ ನಡೆದ ಈ ಪ್ರದರ್ಶನ ಅಂತಹಾ ಅಪೂರ್ವ ಕ್ಷಣಗಳನ್ನು ಕಂಡು ಆನಂದಿಸುವ ಸುಯೋಗ ಒದಗಿ ಬಂದದ್ದಂತೂ ಸುಳ್ಳಲ್ಲ. ಮೂರೂ ರಂಗಸ್ಥಳಗಳನ್ನು ತುಂಬಾ ವ್ಯವಸ್ಥಿತವಾಗಿ ವಿನ್ಯಾಸಗೊಳಿಸಿ ಸಿದ್ಧಪಡಿಸಲಾಗಿತ್ತು. ಸಭೆಯಲ್ಲಿ ಬಂದು ರಂಗವೇರುವ ಪಾತ್ರಗಳಿಗಾಗಿ ರಂಗಸ್ಥಳದ ಎದುರು ಸಭೆಯ ಮಧ್ಯೆ ಮೂರು ಅಗಲವಾದ ದಾರಿಗಳನ್ನು (ಮಾರ್ಗ) ಬಿಡಲಾಗಿತ್ತು. ಸಾಧಾರಣವಾಗಿ ಜೋಡಾಟಗಳಲ್ಲಿ ಯಕ್ಷಗಾನದ ನೈಜ ಆಸ್ವಾಧನೆಗೆ ಭಂಗವಾಗುತ್ತಿದ್ದರೂ ಮೂರಾಟದ ಅಪರೂಪದ ಪ್ರಯೋಗವನ್ನು ಪ್ರೇಕ್ಷಕರು ಬಹಳಷ್ಟು ಆಸ್ವಾದಿಸಿ ಆನಂದಿಸಿದರು. ಅದಕ್ಕೆ ಅಂದು ಸಂಪಾಜೆಯ ವಠಾರದಲ್ಲಿ ಕಿಕ್ಕಿರಿದು ತುಂಬಿ ತುಳುಕುತ್ತಿದ್ದ ಜನಸಂದಣಿಯೇ ಸಾಕ್ಷಿ. 

‘ದೇವಿ ಮಹಾತ್ಮೆ’ ಪ್ರಸಂಗವು ಮೂರಾಟಕ್ಕೆ ಹೇಳಿ ಮಾಡಿಸಿದ ಪ್ರಸಂಗವಾದ್ದರಿಂದಲೋ ಅಥವಾ ಈ ಪ್ರಸಂಗದ ಬಗ್ಗೆ ಹೆಚ್ಚಿನ ಪ್ರೇಕ್ಷಕರು ತಿಳಿದವರಾದ್ದರಿಂದಲೋ ಏನೋ ಸದ್ದುಗಳ ನಡುವೆಯೂ ಪ್ರೇಕ್ಷಕರು ಯಕ್ಷಗಾನವನ್ನು ಆಸ್ವಾದಿಸಿದ ರೀತಿ ಗಮನಾರ್ಹವಾಗಿತ್ತು. ಮೂರು ರಂಗಸ್ಥಳಕ್ಕೆ ಸಂಬಂಧಿಸಿದಂತೆ ಮೂರು ಪ್ರತ್ಯೇಕ ಚೌಕಿಗಳ ವ್ಯವಸ್ಥೆ, ರಂಗಸ್ಥಳದ ಹಿಂಭಾಗದಲ್ಲಿ ವೇಷ ಧರಿಸಿದ ನಂತರ ಕಲಾವಿದರಿಗೆ  ಕುಳಿತುಕೊಳ್ಳುವ ವ್ಯವಸ್ಥೆ ಹಾಗೂ ಒಟ್ಟು ವ್ಯವಸ್ಥೆಯಲ್ಲಿ ಪ್ರತಿಷ್ಠಾನದ ಕಾಳಜಿ ಎದ್ದು ಕಾಣುತ್ತಿತ್ತು.

ಸಂಪಾಜೆ ಯಕ್ಷೋತ್ಸವದ ರಜತ ಸಂಭ್ರಮದ ಪ್ರಯುಕ್ತ ನಡೆದ ಮೂರಾಟವು ಹಲವು ಅತ್ಯಪೂರ್ವ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ಇಂತಹಾ ಪ್ರದರ್ಶನಗಳನ್ನು ಸಂಘಟಿಸುವುದು ಅತಿ ಕಷ್ಟಕರ. ಅದೂ ಇಂತಹಾ ಅತ್ಯದ್ಭುತ ವ್ಯವಸ್ಥೆ, ಅನುಕೂಲಗಳನ್ನು ಕಲ್ಪಿಸುತ್ತಾ ಕಷ್ಟದ ಕೆಲಸಗಳನ್ನು ಅತಿ ಸುಲಭವಾಗಿ ನಿರ್ವಹಿಸುವುದು ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದಿಂದ ಮಾತ್ರ ಸಾಧ್ಯ. ಮೂರೂ ರಂಗಸ್ಥಳಗಳಲ್ಲಿ ಮಧು ಕೈಟಭರು ಸಭೆಯಿಂದ ಪ್ರವೇಶಿಸಿದ್ದು, ವಿದ್ಯುನ್ಮಾಲಿಯ ಮದುವೆಯ ಸಂದರ್ಭದಲ್ಲಿ ಸಭೆಯಲ್ಲಿ ಸಂಚರಿಸಿದ್ದು, ಮಹಿಸಾಸುರ, ಚಂಡ-ಮುಂಡರು ಸಭೆಯಿಂದ ಆಗಮಿಸಿದ್ದು ಗಮನಾರ್ಹವಾಗಿತ್ತು. ಒಟ್ಟಾರೆ ಯಕ್ಷಗಾನದ ಇತಿಹಾಸದಲ್ಲಿ ದಾಖಲಾಗಬಹುದಾದ ಈ ಮೂರಾಟದ ಪ್ರದರ್ಶನವು ಚರಿತ್ರೆಯನ್ನೇ ಸೃಷ್ಟಿಸುವುದರ ಜೊತೆಗೆ ಪ್ರತಿಯೊಬ್ಬ ಪ್ರೇಕ್ಷಕರೂ ಈ ಎಲ್ಲಾ ಕ್ಷಣಗಳನ್ನು ಅನುಭವಿಸಿ ಆನಂದಿಸಿದರು.

ಹಾಗಾದರೆ ಈ ಮೂರಾಟ ಎಂಬುದು ಸಂಪಾಜೆಯಲ್ಲೇ ಪ್ರಥಮ ಬಾರಿಗೆ ನಡೆದಿತ್ತೇ? ಇದು ಪ್ರಥಮ ಪ್ರಯೋಗವೇ? ಎಂಬ ಪ್ರಶ್ನೆಗಳಿಗೆ ‘ಅಲ್ಲ’ ಎಂಬುದೇ ಉತ್ತರ. ಇದು ಮೂರಾಟದ ಪ್ರಥಮ ಪ್ರಯೋಗವಲ್ಲ. ಈ ಹಿಂದೆಯೂ ಮೂರಾಟದ ಪ್ರಯೋಗ ಆಗಿತ್ತು ಎನ್ನುವುದನ್ನು ನಾವು ಕೇಳಿದ್ದೇವೆ. ಮನೆಯಲ್ಲಿ ಹಿರಿಯರೂ, ವಯೋವೃದ್ಧರೂ ಈ ಬಗ್ಗೆ ಸ್ವಾರಸ್ಯಕರವಾಗಿ ವಿವರಿಸುವುದನ್ನು ಕೇಳಿದ್ದೇವೆ. ನಾವು ಅದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗದಿದ್ದರೂ ಹಲವರಿಗೆ ಹಿಂದೆ ನಡೆದ ಮೂರಾಟದ ಬಗ್ಗೆ ಕೇಳಿ ಗೊತ್ತಿರಬಹುದು.

ಬಹಳ ವರ್ಷಗಳ ಹಿಂದೆ ಕೂಡ್ಲು ಮೇಳ,  ಧರ್ಮಸ್ಥಳ ಮೇಳ ಮತ್ತು ಕುಂಡಾವು ಮೇಳಗಳು ಬೆಳ್ತಂಗಡಿಯಲ್ಲಿ ಇಂತಹಾ ಒಂದು ಜೋಡಾಟವನ್ನು ಪ್ರದರ್ಶಿಸಿದ್ದುವಂತೆ. ಅದು ಮೂರು ಮೇಳಗಳ ನಡುವಿನ ಸ್ಪರ್ಧೆಯ ಆಟವಾದರೂ ಆಗೆಲ್ಲಾ ಇದನ್ನು ಜೋಡಾಟವೆಂದೇ ಕೆರೆಯುತ್ತಿದರು. ಮೂರಾಟ ಎಂಬ ಹೆಸರು ಆಗ ಬಳಕೆಯಲ್ಲಿ ಇದ್ದಿರಲಿಲ್ಲ ಎಂದು ಕಾಣುತ್ತದೆ. ಆಗೆಲ್ಲಾ ಜೋಡಾಟಗಳೆಂದರೆ ಅದೊಂದು ಯುದ್ಧ ಗೆಲ್ಲುವ ಸ್ಪರ್ಧೆಯಂತೆಯೇ ಎಂದು ಕಲಾವಿದರು, ಸಂಘಟಕರು, ಮೇಳಗಳ ಸಂಚಾಲಕರು ಮತ್ತು ಮೇಳಗಳ ಅಭಿಮಾನೀ ಪ್ರೇಕ್ಷಕರು ತಿಳಿದುಕೊಳ್ಳುತ್ತಿದ್ದರಂತೆ.

ಆಗ ಅತಿಕಾಯ, ಇಂದ್ರಜಿತು, ಮೈರಾವಣ ಕಾಳಗ ಎಂಬ ಪ್ರಸಂಗವನ್ನು ಮೂರು ರಂಗಸ್ಥಳಗಳಲ್ಲಿ ಬೆಳ್ತಂಗಡಿಯ ಜೋಡಾಟದಲ್ಲಿ ಪ್ರದರ್ಶಿಸಿದ್ದರಂತೆ. ಅದಕ್ಕಿಂತ ಹಿಂದೆಯೂ ಇಂತಹಾ ಮೂರಾಟಗಳು ಜೋಡಾಟ ಎಂಬ ಹೆಸರಿನಲ್ಲಿ ಪ್ರದರ್ಶನ ಆಗಿರಲೂ ಬಹುದು. ಅದರ ಬಗ್ಗೆ ತಿಳಿದವರು ತಮ್ಮ ಅನಿಸಿಕೆಗಳನ್ನು ಹೇಳಿದರೆ ಸ್ವಾಗತ.

ಆದರೆ ಇನ್ನು ಮುಂದಕ್ಕೆ ಇಂತಹಾ ವೈಭವದ ಮೂರಾಟದ ಪ್ರದರ್ಶನಗಳು ನಡೆಯಬಹುದೇ? ಸಂಪಾಜೆಯ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನವು ಮಾಡಿದ ಸಾಹಸವನ್ನು ಬೇರೆ ಯಾರಾದರೂ ಪುನರಾವರ್ತಿಸಲು ಯತ್ನಿಸಬಹುದೇ? ಎಂಬ ಎಲ್ಲಾ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕಷ್ಟೆ. 

ಲೇಖನ: ಮನಮೋಹನ್ ವಿ.ಎಸ್. 

ಕಡಬ ಸಂಸ್ಮರಣಾ ಪ್ರಶಸ್ತಿ 2020 – ಹರಿನಾರಾಯಣ ಬೈಪಾಡಿತ್ತಾಯ ಅವರಿಗೆ

ಕಡಬ ನಾರಾಯಣ ಆಚಾರ್ಯರದು ತೆಂಕುತಿಟ್ಟಿನ ಹಿಮ್ಮೇಳದ ಒಂದು ಪ್ರಖ್ಯಾತ ಹೆಸರು. ಸುಮಾರು 30ಕ್ಕೂ ಹೆಚ್ಚು ವರ್ಷಗಳ ಕಾಲ ಖ್ಯಾತ ಮದ್ದಳೆಗಾರರಾಗಿ ಯಕ್ಷಗಾನ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಗಳನ್ನು ಸಲ್ಲಿಸಿದವರು.

ಅವರು ಅಸ್ತಂಗತರಾದ ನಂತರ ಅವರ ಸ್ಥಾನವನ್ನು ಸಮರ್ಥವಾಗಿ ತುಂಬಿದವರು ಅವರ ಸುಪುತ್ರರಾದ ಕಡಬ ವಿನಯ ಆಚಾರ್ಯ. ಆದರೆ ವಿಧಿಲಿಖಿತವನ್ನು ತಪ್ಪಿಸುವವರಾರು? ಕಡಬ ವಿನಯ ಆಚಾರ್ಯರೂ ಯಕ್ಷರಂಗದ ಮದ್ದಳೆಗಾರರಾಗಿ ಸುಮಾರು 15 ವರ್ಷಗಳ ಕಾಲ ಸೇವೆ ಸಲ್ಲಿಸಿ ತಮ್ಮ ಪ್ರಸಿದ್ಧಿಯ ಉತ್ತುಂಗದಲ್ಲಿರುವಾಗಲೇ ಸಣ್ಣ ವಯಸ್ಸಿನಲ್ಲಿಯೇ ಈ ಲೋಕದ ಯಾತ್ರೆಯನ್ನು ಮುಗಿಸಿದರು.

ಡಬ ನಾರಾಯಣ ಆಚಾರ್ಯ ಮತ್ತು ಕಡಬ ವಿನಯ ಆಚಾರ್ಯರು ಯಕ್ಷಗಾನಕ್ಕೆ ಸಲ್ಲಿಸಿದ ಅಪೂರ್ವ ಸೇವೆಯನ್ನು ಮತ್ತು ಗಳಿಸಿದ ಕೀರ್ತಿಯನ್ನು ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಇವರಿಬ್ಬರ ಸ್ಮರಣಾರ್ಥ ಪ್ರತಿ ವರ್ಷವೂ ಯಕ್ಷಗಾನ ಕ್ಷೇತ್ರದಲ್ಲಿ ಅಪೂರ್ವ ಸಾಧನೆಯನ್ನು ಮಾಡಿದ ಕಲಾವಿದರನ್ನು ಗುರುತಿಸಿ ಅವರನ್ನು ಪ್ರಶಸ್ತಿಯ ಮೂಲಕ ಗೌರವಿಸಲಾಗುವುದೆಂದು ಕಡಬ ಸಂಸ್ಮರಣಾ ಸಮಿತಿಯು ತಿಳಿಸಿದೆ.

ಜಾಹೀರಾತು 

ಈ ಬಾರಿಯ ಕಡಬ ಸಂಸ್ಮರಣಾ ಪ್ರಶಸ್ತಿಯನ್ನು ಖ್ಯಾತ ಹಿರಿಯ ಮದ್ದಳೆಗಾರರಾದ ಹರಿನಾರಾಯಣ ಬೈಪಾಡಿತ್ತಾಯ ಅವರಿಗೆ ನೀಡಿ ಗೌರವಿಸಲಾಗುವುದು. ಕಡಬ ಸಂಸ್ಮರಣಾ ಸಮಿತಿಯ ಪ್ರಥಮ ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ 06.12.2020ರ ಆದಿತ್ಯವಾರ ಅಪರಾಹ್ನ ಸಮಯ 2.30ರಿಂದ ಸಂಜೆ ಘಂಟೆ 5.30ರ ವರೆಗೆ ನಡೆಯಲಿದೆ.

ಈ ಕಾರ್ಯಕ್ರಮ ಅಂತರ್ಜಾಲದ ಯೂಟ್ಯೂಬ್ ಚಾನೆಲ್ ಗಳಲ್ಲಿ ನೇರ ಪ್ರಸಾರಕ್ಕೆ ಲಭ್ಯವಿದೆ ಎಂದು ಸಂಘಟಕರು ತಿಳಿಸಿದ್ದಾರೆ. 

ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ವಾಸುದೇವ ಸಾಮಗರಿಗೆ ಶ್ರದ್ಧಾಂಜಲಿ 

ಅಗಲಿದ ಯಕ್ಷಗಾನ ಕಲಾವಿದ , ಸಂಘಟಕ, ಖ್ಯಾತ ಅರ್ಥಧಾರಿ, ಸಂಯಮಂ ತಂಡದ ರೂವಾರಿ ಮಲ್ಪೆ ವಾಸುದೇವ ಸಾಮಗರಿಗೆ ಐರೋಡಿಯ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

ಈ ಶ್ರದ್ಧಾಂಜಲಿ ಕಾರ್ಯಕ್ರಮ  ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿ  ಕಲಾಕೇಂದ್ರದ ಸದಾನಂದ ರಂಗಮಂಟಪದಲ್ಲಿ ಜರಗಿತು. 

ಕಾಯ೯ದಶಿ೯ ಐರೋಡಿ ರಾಜಶೇಖರ ಹೆಬ್ಬಾರ,ಉಡುಪಿಯ ಎಸ್.ವಿ.ಭಟ್ಟ್, ಕೋಟೇಶ್ವರದ ಗೋಪಾಲಕೃಷ್ಪ ಶೆಟ್ಟಿ ಮುಂತಾದವರು ನುಡಿನಮನ ಸಲ್ಲಿಸಿದರು.

ಚೌಕಿಗೆ ಬಂದವಳು ರಂಗಸ್ಥಳದಲ್ಲೂ ಕಾಡಿದಳು…

ಕೈಗೊಂದಿಷ್ಟು ಬಿಳಿಯ ಬಣ್ಣದ ಹುಡಿ, ಅದಕ್ಕೆ ಸ್ವಲ್ಪ ಎಣ್ಣೆಯನ್ನು ಬೆರೆಸಿ ಹಿತವಾಗಿ ಕಲಸತೊಡಗಿದ ಯೋಗಾನಾಂದ. ಅದಕ್ಕೆ ಮಿತವಾಗಿ ಹಳದಿ, ಕೆಂಪು ಬಣ್ಣಗಳನ್ನೂ ಮಿಶ್ರ ಮಾಡಿ ನಿಧಾನವಾಗಿ ಅಂಗೈಯಲ್ಲಿ ತಿಕ್ಕತೊಡಗಿದ.  ಕೈ ಕೆಲಸ ಮಾಡುತ್ತಿದ್ದರೂ ಮನದಲ್ಲಿ ನೂರೆಂಟು ಯೋಚನೆಗಳು. ಹುಚ್ಚು ಕುದುರೆಯಂತಿದ್ದ ಮನದ ಕಲ್ಪನೆಯ ವಿಹಾರಗಳಿಗೆ ಕಡಿವಾಣ ಹಾಕುವ ಯತ್ನದಲ್ಲಿ ಯಶಸ್ವಿಯಾಗಲಾರದೆ ಹೋದ.

 
    ಮತ್ತೆ ಮತ್ತೆ ಅದೇ ಅಲೋಚನೆ. ಕಾಡುವ ನೆನಪುಗಳು. ಮನಸ್ಸಿನಲ್ಲಿಯ ನಾಗಾಲೋಟದ ತುಡಿತ, ಮಿಡಿತಗಳಿಗೆ ಕೊನೆಯಿಲ್ಲವೇನೋ… “ಈ ಬಣ್ಣಗಳು ಒಂದನ್ನೊಂದು ಸೇರುವಂತೆ ಎರಡು ಹೃದಯಗಳು, ಮನಸುಗಳು ಬೆಸೆಯುವಂತಿದ್ದರೆ…” ಎಂದುಕೊಂಡ ಯೋಗಾನಂದ ಮನಸ್ಸಿನಲ್ಲಿಯೇ. ತಕ್ಷಣವೇ ತನ್ನ ಆಲೋಚನೆಗೆ ತಾನೆ ನಗುತ್ತಾ ಕನ್ನಡಿಯನ್ನು ತನ್ನೆದುರಿಗೆ ಸರಿಯಾದ ಕೋನದಲ್ಲಿ ಇರಿಸಿಕೊಂಡ. 
ಕೈಯಲ್ಲಿದ್ದ ಬಣ್ಣಗಳ ಮಿಶ್ರಣವನ್ನು ಎರಡೂ ಕೈಗಳಿಗೆ ಸಮವಾಗಿ ಮೆತ್ತಿ ಮುಖದ ತುಂಬೆಲ್ಲಾ ಮೆತ್ತತೊಡಗಿದ. ಕೈಗಳಲ್ಲಿದ್ದ ಬಣ್ಣದ ಚಿತ್ತಾರ ಮುಖದ ಮೇಲೇರಿತ್ತು.

ಮುಖವನ್ನು ನೋಡುತ್ತಿದ್ದಂತೆ ಆತನಿಗೆ ಯಾಕೋ ಹಿಂದಿನ ದಿನದ ಸಂಜೆಯ ನೆನಪು ಕಾಡತೊಡಗಿತು. ಆಗಸದಂಚಿನಲ್ಲಿ ರವಿಯ ನಿರ್ಗಮನದ ವೇಳೆಯ ಚಿತ್ತಾರದ ವರ್ಣಾಲಂಕಾರ. ತನ್ನ ಮುಖದ ಬಣ್ಣವೂ ಅದೇ ರೀತಿಯಿದೆಯೆಂದು ಭಾವಿಸಿದ. ಏನೋ ಆ ದಿನದ ನೆನಪಾದೊಡನೆ ಆತನು ತನ್ನ ನಸುನಗೆಯನ್ನು ತಡೆದುಕೊಳ್ಳದಾದ. ಪಕ್ಕನೆ ತಾನಿರುವ ಜಾಗದ ನೆನಪಾಗಿ ನಗೆಯನ್ನು ಬಲವಂತವಾಗಿ ತಡೆದುಕೊಂಡ. ಮೆಲ್ಲಗೆ ಸುತ್ತಲೂ ನೋಡಿದ. ಎಲ್ಲರೂ ತಮ್ಮ ತಮ್ಮ ಕಾರ್ಯಗಳಲ್ಲಿ ಮಗ್ನರಾಗಿದ್ದರು.

 
ಕಲಾವಿದರೆಲ್ಲರು ಚೌಕಿಗೆ ಇನ್ನೂ ಬಂದಿರಲಿಲ್ಲ. ಕೆಲವರು ಯೋಗಾನಂದನಂತೆಯೇ ಬಣ್ಣ ಹಚ್ಚುವುದರಲ್ಲಿಯೇ ನಿರತರಾಗಿದ್ದರು. ಇನ್ನುಳಿದ ಕಲಾವಿದರಲ್ಲಿ ಕೆಲವರು ವೇಷಭೂಷಣಗಳನ್ನು ಕಟ್ಟಿಕೊಳ್ಳುತ್ತಿದ್ದರು. ಚೌಕಿ ಮನೆಯ ಸಹಾಯಕರು ಅವರಿಗೆ ಆ ಕಾರ್ಯದಲ್ಲಿ ನೆರವಾಗುತ್ತಿದ್ದರು. ಒಂದೆರಡು ಜನರು ವೀಳ್ಯ ಹಾಕುವುದರಲ್ಲಿಯೋ ಮಿಕ್ಕುಳಿದವರಲ್ಲಿ ಕೆಲವರು ತಮ್ಮ ಅಭಿಮಾನೀ ವರ್ಗದವರಲ್ಲಿಯೋ, ಸ್ನೇಹಿತ ಬಂಧುವರ್ಗದಲ್ಲಿಯೋ ಸಲ್ಲಾಪದಲ್ಲಿ ಮಗ್ನರಾಗಿದ್ದರು. ಆದ್ದರಿಂದ ತನ್ನ ಭಾವನೆಗಳನ್ನು ಯಾರೂ ಗಮನಿಸಿರಲಿಕ್ಕಿಲ್ಲ ಎಂದು ಸಮಾಧಾನಪಟ್ಟುಕೊಂಡ. 


ಯೋಗಾನಂದ ಕನ್ನಡಿಯಲ್ಲೊಮ್ಮೆ ತನ್ನ ಮುಖವನ್ನು ಸೂಕ್ಷ್ಮವಾಗಿ ಗಮನಿಸಿದ. ಯಾಕೋ ಬಣ್ಣಗಳ ಮಿಶ್ರಣ ಪರಿಪೂರ್ಣವಾಗಿಲ್ಲ ಎಂದೆನಿಸಿತು. ಏನೋ ಎಂದು ಕೊರತೆ ಅವನ ಸೂಕ್ಷ್ಮ ದೃಷ್ಟಿಗೆ ಗೋಚರಿಸಿತು. ಬಣ್ಣಗಳೂ ಮನಸಿನಂತೆಯೇ ಇರಬಹುದೇ ಎಂದು ಅಲೋಚಿಸಿದ. “ಹೂಂ.. ಇರಲಿ..” ಎಂದುಕೊಂಡು ಕಾಡಿಗೆಯನ್ನು ಸಣ್ಣ ಕಡ್ಡಿಯಿಂದ ತೆಗೆದು ಹೆಬ್ಬೆರೆಳಿನ ಬುಡದ ಸಮೀಪ ಸಂಗ್ರಹಿಸಿ ನಿಧಾನವಾಗಿ ಹುಬ್ಬಿನ ಚಿತ್ರವನ್ನು ಬರೆಯತೊಡಗಿದ. 
ಅಷ್ಟರಲ್ಲಿ ಚೌಕಿಪೂಜೆ ಪ್ರಾರಂಭವಾಯಿತು. ಎಲ್ಲರೂ ಎದ್ದು ನಿಂತುಕೊಂಡರು. ಯೋಗಾನಂದ ಕೂಡಾ. “ಗಜಮುಖದವಗೆ ಗಣಪಗೆ… “ ಭಾಗವತರು ಗಣಪತಿಯ ಸ್ತುತಿಯ ಪದ್ಯವನ್ನು ಹಾಡುತ್ತಿದ್ದರು. ಪರಮ ದೈವಭಕ್ತನಾದ ಆತನಿಗೆ ಇಂದೇಕೋ ಚೌಕಿಪೂಜೆಯ ಸಮಯದಲ್ಲಿಯೂ ಮನಸ್ಸು ಸ್ಥಿಮಿತದಲ್ಲಿರಲಿಲ್ಲ. ಏಕಾಗ್ರತೆಯಿಲ್ಲದ ಮನಸ್ಸು ದೇವರ ಪೂಜೆಯ ಮೇಲಿರದೆ ಬೇರೆಲ್ಲಿಯೋ ಓಡಾಡುತ್ತಿತ್ತು.


ಚೌಕಿಪೂಜೆ ಮುಗಿದ ನಂತರ ಮತ್ತೆ ತನ್ನ ಮುಖವರ್ಣಿಕೆಯ ಚಿತ್ರವನ್ನು ಬರೆಯತೊಡಗಿದ ಆತ. ಅವನದು ಪ್ರಧಾನ ಸ್ತ್ರೀ ಪಾತ್ರವಾದುದರಿಂದ ಬಹಳ ಶ್ರದ್ಧೆಯಿಂದ ಶೃಂಗರಿಸುತ್ತಿದ್ದ. ಅದರಲ್ಲೂ ಸ್ತ್ರೀ ಪಾತ್ರದ ಮೇಕಪ್ ಅಂದರೆ ಕೇಳಬೇಕೆ ? ಸ್ತ್ರೀಯರ ರೂಪದ ಬೆಡಗು ಬಿನ್ನಾಣಗಳನ್ನು ಬರಿಯ ಭಾವನೆಯಲ್ಲಿ ತೋರಿಸಿದರೆ ಸಾಕಾಗುತ್ತಿರಲಿಲ್ಲ. ಅಲಂಕಾರದಲ್ಲಿಯೂ ವಿಶೇಷ ಆಸ್ಥೆಯನ್ನು ವಹಿಸಬೇಕಾಗುತ್ತಿತ್ತು. ಆದ್ದರಿಂದ ತನ್ನ ಮನಸಿನ ತುಮುಲಗಳಿಗೆ ಕಡಿವಾಣ ಹಾಕಿ ಹುಬ್ಬಿನ ಚಿತ್ರವನ್ನು ಬರೆಯತೊಡಗಿದ.

ಕವಿಗಳು ಕಾವ್ಯಮಯವಾಗಿ ಹೆಣ್ಣನ್ನು ವರ್ಣಿಸುವಾಗ ಹುಬ್ಬನ್ನು ಕಾಮನಬಿಲ್ಲಿಗೆ ಹೋಲಿಸುತ್ತಾರೆ. ತಾನು ಬರೆದ ಹುಬ್ಬು ಕಾಮನಬಿಲ್ಲಿನ ಹಾಗಿತ್ತು ಎಂದು ಅವಳೊಮ್ಮೆ ಹೇಳಿದ್ದು ಆತನಿಗೆ ನೆನಪಾಗಿ ಮುಖದಲ್ಲಿ ಅತೀವ ಸಂತಸದ ಕ್ಷಣವೊಂದು ಮಿಂಚಿ ಮರೆಯಾಯಿತು. ಆದರೂ ಅವಳ ಹುಬ್ಬಿನಂತೆ ತಾನು ಹುಬ್ಬಿನ ಚಿತ್ರವನ್ನು ಬರೆಯಲಾರೆ ಎಂದು ಭಾವಿಸಿದ.  ಹುಬ್ಬಿನ ಚಿತ್ರದ ತಲ್ಲೀನತೆಯಲ್ಲಿರುವಾಗ ಕಾಡುತ್ತಿರುವ ಬೆಂಬಿಡದ ಆಲೋಚನೆಗಳು ಆತನ ಕಾರ್ಯದಲ್ಲಿ ಭಗ್ನವನ್ನುಂಟುಮಾಡಿತು. ಬರೆದ ಹುಬ್ಬಿನ ಚಿತ್ರ ಕಾಮನಬಿಲ್ಲಿನ ಬದಲು ವಕ್ರರೇಖೆಯಾಯಿತು. ಅದನ್ನು ಪಕ್ಕದಲ್ಲಿದ್ದ ಹಳೆಯ ವಸ್ತ್ರದ ತುಂಡಿನಿಂದ ಒರೆಸಿ ಪುನಃ ಕಾಮನಬಿಲ್ಲಿನ ಚಿತ್ರದ ತಯಾರಿಯಲ್ಲಿ ತೊಡಗಿದ. 


ರಂಗಸ್ಥಳದಲ್ಲಿ ಪೂರ್ವರಂಗದ ಪದ್ಯಗಳು ಚೌಕಿಯಲ್ಲಿರುವವರ ಕಿವಿಗೆ ಅಪ್ಪಳಿಸುತ್ತಿದ್ದುವು. ಪೀಠಿಕೆ ವೇಷಧಾರಿಗಳು ಲಗುಬಗನೆ ತಮ್ಮ ಬಣ್ಣಗಾರಿಕೆ, ಉಡುಪು, ವೇಷಗಳನ್ನು ಕಟ್ಟುವುದರಲ್ಲಿ ನಿರತರಾಗಿದ್ದರು. ಯೋಗಾನಂದನದು ಪೀಠಿಕೆ ಒಡ್ಡೋಲಗದ ನಂತರದ ಪಾತ್ರವಾದ್ದರಿಂದ ಆತನೇನೂ ಅವಸರಿಸುವುದಕ್ಕೆ ಹೋಗಲಿಲ್ಲ. ಅವಸರಿಸುವುದಕ್ಕೆ ಉಕ್ಕಿ ಹರಿಯುತ್ತಿರುವ ಅಲೋಚನೆಗಳು ಬಿಡಲೂ ಇಲ್ಲ. 
ಅಂತೂ ಇಂತೂ ಹುಬ್ಬಿನ ಚಿತ್ರ ಪೂರ್ತಿಯಾಯಿತು. ಚಿತ್ರ ಪೂರ್ಣ ತೃಪ್ತಿ ತಂದಿರದಿದ್ದರೂ ಮತ್ತೆ ಅದನ್ನು ತಿದ್ದುವುದಕ್ಕೆ ಮನಮಾಡಲಿಲ್ಲ ಆತ.

(ಸಾಂದರ್ಭಿಕ  ಚಿತ್ರದಲ್ಲಿ ಅಕ್ಷಯ್ ಕುಮಾರ್ ಮಾರ್ನಾಡ್, ಫೋಟೋ: ರಾಮ್ ನರೇಶ್ ಮಂಚಿ)

ಮುಖದ ಮೇಕಪ್‍ನ ಅಂತಿಮ ಘಟ್ಟಕ್ಕೆ ತಲುಪಿದ. ಕಡುಗೆಂಪು ಬಣ್ಣವನ್ನು ತುಟಿಗೆ ಹಚ್ಚಲು ತಯಾರಿ ನಡೆಸಿದ. ಅದಕ್ಕಿಂತ ಮೊದಲು ಹುಡುಗಿಯರ ತುಟಿಗಳ ಆಕಾರವನ್ನು ರೇಖೆಯಲ್ಲಿ ಮೂಡಿಸಿದ. ಬಣ್ಣಗಳ ಕಂಪು ತುಟಿಗಳ ಕೆಂಪಿನಲ್ಲಿ ಪಸರತೊಡಗಿತು. ಅಷ್ಟರಲ್ಲಿ ಭಾಗವತರು “ ಚಿಕ್ಕ ಪ್ರಾಯದ ಬಾಲೆ ಚದುರೆ ನಿನ್ನಂಗವ ಒರೆಯಲೇನೆ… “ ಎಂದು ಹಾಡತೊಡಗಿದರು. ತನ್ನನ್ನೇ ಉದ್ದೇಶಿಸಿ ವ್ಯಂಗ್ಯವಾಗಿ ಭಾಗವತರು ಹಾಡುತ್ತಿರಬಹುದು ಎಂದು ಆಲೋಚಿಸಿ, ಛೇ.. ತಾನೇಕೆ ಇಂದು ಏನೇನೋ ಅಂದುಕೊಳ್ಳುತ್ತಿದ್ದೇನೆ ಎಂದು ತನ್ನನ್ನು ತಾನೇ ಶಪಿಸಿಕೊಂಡ. 


ಆದರೂ ನೆನಪುಗಳ ಸರಮಾಲೆ ಹಿಂಬಾಲಿಸುವುದನ್ನು ಬಿಡಲಿಲ್ಲ. “ಅವಳು ಇಂದಾದರೂ ಬಂದಿರಬಹುದೆ ? ಎಂದಿನಂತೆ ಇಂದೂ ಕೂಡಾ ಮುಂದಿನ ಸಾಲಿನಲ್ಲೇ ಕುಳಿತುಕೊಂಡಿರಬಹುದೆ ? “ ಎಂದು ಆಲೋಚಿಸಿದ. ಬಹುಶಃ ಬಂದಿರಲಿಕ್ಕಿಲ್ಲ. ಬಂದರೆ ಚೌಕಿಗೆ ಬರದಿರುವಳೇ? ಬಂದು ತನ್ನ ವೇಷದ ಪೆಟ್ಟಿಗೆಯಲ್ಲಿ ಕುಳಿತು ನಿರರ್ಗಳವಾಗಿ ಹರಟದಿರುವಳೇ? ಖಂಡಿತಾ ಬಂದಿರಲಿಕ್ಕಿಲ್ಲ. ನಿನ್ನೆ ಕೂಡಾ ಬಂದಿರಲಿಲ್ಲ. ಅವಳ ಮುನಿಸನ್ನು ತಣಿಸುವ ಬಗೆ ಹೇಗೆ ? ಜೀವಕ್ಕೆ ಜೀವದಂತಿರುವ ಅವಳ ಮುನಿಸನ್ನು ಅವನಿಂದ ಅರಗಿಸಿಕೊಳ್ಳಲಾಗಲಿಲ್ಲ.
ಸಾಧಾರಣವಾಗಿ ಮನೆಯ ಸಮೀಪ ಎಲ್ಲಿ ಇವನ ಮೇಳದ ಆಟವಿದ್ದರೂ ಅವಳು ತಪ್ಪದೇ ಹಾಜರಾಗುತ್ತಿದ್ದಳು. ಅದು ಕೂಡಾ ಮುಂದಿನ ಸಾಲಿನಲ್ಲೇ ಆಸೀನಳಾಗುತ್ತಿದ್ದಳು.

ಇವನದು ಯಾವಾಗಲೂ ಸ್ತ್ರೀಪಾತ್ರವಾದುದರಿಂದ ಇವನ ಪಾತ್ರದ ಒಳ್ಳೆಯ ವಿಮರ್ಶಕಿಯಾಗಿದ್ದಳು ಆತ. ಸ್ತ್ರೀ ಸಹಜವಾದ ಒನಪು ವಯ್ಯಾರಗಳು ಹಾಗೂ ಸ್ತ್ರೀಯ ಆಂಗಿಕ ಅಭಿನಯ ಹೇಗಿರಬೇಕು ಎಂಬುದರ ಬಗ್ಗೆ ಆತನಿಗೆ ಹಲವು ಮಾಹಿತಿಯನ್ನು ಕೊಡುವ ಗುರುವೂ ಆಗಿದ್ದಳವಳು. ಅಂತಹ ಅವಳು ಇಂದು ಯಾಕಿಲ್ಲ, ಮತ್ರವಲ್ಲ ನಿನ್ನೆ ಯಾಕೆ ಬರಲಿಲ್ಲ. ಈಚೆಗೆ ಎರಡು ಮೂರು ದಿನಗಳಿಂದ ಮನೆಯ ಹತ್ತಿರದ ಊರುಗಳಲ್ಲೇ ಬಯಲಾಟ ನಡೆಯುತ್ತಿದ್ದುದರಿಂದ ಆಕೆ ಬರಲೇ ಬೇಕಿತ್ತು. ಅದರೆ ಬರಲಿಲ್ಲ. ಮೊನ್ನೆಯ ಹುಸಿಮುನಿಸೇ ಕಾರಣವಾಗಿತ್ತೇ. 
ಛೇ. ಎಂತಹ ಅಭಾಸವಾಯ್ತು ಎಂದುಕೊಂಡ ಯೋಗಾನಂದ. ಹೃದಯಕ್ಕೆ ಹತ್ತಿರಳಾದವಳನ್ನು ತಾನು ಮೊನ್ನೆ ತಮಾಷೆಗಾಗಿ ರೇಗಿಸಲು ಹೋಗಬಾರದಿತ್ತು. ಆದರೂ ಅದನ್ನು ಆಕೆ ಇಷ್ಟು ಗಂಭೀರವಾಗಿ ತೆಗೆದುಕೊಳ್ಳುವಳೆಂದು ಎಣಿಸಿರಲಿಲ್ಲ. ಮನಸ್ಸು ಮೊನ್ನೆ ನಡೆದ ಘಟನೆಯ ಬಗ್ಗೆ ಮೆಲುಕು ಹಾಕತೊಡಗಿತು.

* * *
“ನಿನ್ನೆಯ ನನ್ನ ವೇಷ ಹೇಗಿತ್ತು.” ಎಂದ ಯೋಗಾನಂದ.
“ಪರವಾಗಿಲ್ಲ.. ಚೆನ್ನಾಗಿತ್ತು” ಆಕೆಯೆಂದಳು. 
“ಆದರೂ ಇನ್ನೂ ಚೆನ್ನಾಗಿ ಮಾಡಬಹುದಿತ್ತೇನೋ, ಅಲ್ವಾ?”
“ಅದು ಹೌದು, ಅಭಿನಯ ಚೆನ್ನಾಗಿತ್ತು… ನಿನಗೆ ಹಾಗನಿಸುವುದು ಸಹಜ, ಕಲಾವಿದ ಯವತ್ತೂ ಪರಿಪೂರ್ಣ ಆಗುವುದಿಲ್ಲ, ಹಾಗೆ ಭಾವಿಸಲೂ ಬಾರದು ಅಂತ ನೀನು ಹೇಳುತ್ತಿದ್ದೆಯಲ್ಲ, ಅದಕ್ಕೆ ಈ ಮಾತು ಅಲ್ವಾ?”
“ಮೇಕಪ್ ಹೇಗಿತ್ತು?”
“ಸುಪರ್.. ನಾನು ಹೇಳಿಕೊಟ್ಟದ್ದಲ್ವಾ… ಚೆನ್ನಾಗಿಲ್ಲದೆ ಇದ್ದೀತೇ ?”
“ಯಾವುದು ನೀನು ಹೇಳಿಕೊಟ್ಟದ್ದು?”
“ಅದೇ, ಮುಖದ ಹುಬ್ಬಿನ ಚಿತ್ರ, ಮುಖದ ಭಾವ, ಚಲನೆ ಇತ್ಯಾದಿ..”
ಯೋಗಾನಂದನಿಗೆ ಅವಳನ್ನು ರೇಗಿಸುವ ಮನಸ್ಸಾಯಿತು. ಅದಕ್ಕಾಗಿ ಕೋಪವನ್ನು ನಟಿಸುತ್ತಾ,
“ಏ ಹೋಗೇ.. ನಾನು ಅಭಿನಯ ಮತ್ತು ಬಣ್ಣಗಾರಿಕೆಯನ್ನು ನಮ್ಮ ಗುರುಗಳಲ್ಲಿ ಕಲಿತದ್ದು.. ನೀನೆಂತದ್ದು ಕಲಿಸುವುದು, ಯಕ್ಷಗಾನದ ಗಂಧ, ಗಾಳಿ ಗೊತ್ತಿಲ್ಲದವಳು..” ಎಂದ.


ಅವಳು ಪೆಚ್ಚಾದಳು. ಅವನು ಗಂಭೀರವಾಗಿ ಹೇಳಿದ್ದು ಎಂದು ಭಾವಿಸಿದಳು. ಯಾಕೆಂದರೆ ಈ ವರೆಗೆ ಆತನು ಅವಳನ್ನು ಹೀಗೆ ರೇಗಿಸಿದವನೇ ಅಲ್ಲ. 
“ಆಯ್ತು ಬಿಡೋ, ನೀನೇ ಹೇಳ್ತಿದ್ದೆಯಲ್ಲ, ರಂಗಸ್ಥಳದಲ್ಲಿ… ನಾವು ಹತ್ತಿದ ಏಣಿಯನ್ನು ಯವತ್ತೂ ಮರೆಯಬಾರದು, ಹತ್ತಿದ ಏಣಿಯನ್ನು ಕಾಲಿಂದ ಒದ್ದರೆ ಮತ್ತೆ ಇಳಿಯುವುದಕ್ಕೆ ಬೇಕಾಗುತ್ತದೆ… ಹಾಗೆ, ಹೀಗೆ ಅಂತ. ಈಗ ನೋಡಿದರೆ ಅದಕ್ಕೆ ತದ್ವಿರುದ್ಧ.”
“ನಾವು ರಂಗಸ್ಥಳದಲ್ಲಿ ಬಹಳಷ್ಟು ಹೇಳ್ತೇವೆ , ಅದನ್ನೆಲ್ಲಾ ನಿಜ ಜೀವನದಲ್ಲಿ ಮಾಡೋಕೆ ಆಗೋಲ್ಲಮ್ಮಾ…”
“ಇರಬಹುದು.. ಆದರೆ ಈಗ ಹೇಳಿದಂತಹ ವಿಷಯಗಳು ನಿಜ ಜೀವನದಲ್ಲಿಯೂ ಅನ್ವಯವಾಗುತ್ತದೆ. ಅದನ್ನೂ ಪಾಲಿಸುವ ಹೊಣೆಗಾರಿಕೆ ನಿಮ್ಮಂತಹಾ ಕಲಾವಿದರಿಗಿದೆ..” ಎಂದು ಕೋಪದಿಂದ ಬಿರಬಿರನೆ ನಡೆದವಳು ಮತ್ತೆ ಕಾಣಸಿಗಲಿಲ್ಲ.


ಯೋಗಾನಂದ ಪೆಚ್ಚಾದ. ಏನೋ ತಮಾಷೆ ಮಾಡಲು ಹೋಗಿ ಅವಳು ಇಷ್ಟು ಬೇಗ ಗಂಭೀರವಾಗಿ ತೆಗೆದುಕೊಳ್ಳುತ್ತಾಳೆ ಎಂದು ಭಾವಿಸಿರಲಿಲ್ಲ. ಅವಳು ಹೇಳಿದುದು ನಿಜವಾಗಿತ್ತು. ಯೋಗಾನಂದ ಅವಳಿಂದ ಬಹಳಷ್ಟು ಕಲಿತಿದ್ದ. ತನ್ನ ವೃತ್ತಿಜೀವನಕ್ಕೆ ಉಪಯೋಗವಾಗುವಂತಹಾ ಹಲವು ವಿಷಯಗಳು ಅವಳಿಂದ ಅವನಿಗೆ ದೊರಕಿತ್ತು. ತನ್ನಿಂದ ಕಿರಿಯವಳಾದರೂ ವಿದ್ಯಾವಂತೆ, ಹಾಗೂ ಬಹಳಷ್ಟು ಸೂಕ್ಷ್ಮಗ್ರಾಹಿಯಾಗಿದ್ದಳವಳು. ಏನೋ ಅವಳನ್ನು ಕೆಣಕುವ ಆಸೆಯಿಂದ ಅವಳ ಕೋಪಕ್ಕೆ ಗುರಿಯಾದೆನಲ್ಲ ಎಂದು ಹಪಹಪಿಸಿದ.

* * *
“ಧರಣಿಪಾಲಕ ಕೇಳು……” ಭಾಗವತರು ನಿಧಾನ ಝಂಪೆ ತಾಳದಲ್ಲಿ ಹಾಡಲು ಪ್ರಾರಂಭಿಸಿದ್ದರು. ಫಕ್ಕನೆ ಯೊಗಾನಂದನ ಯೋಚನಾಸರಣಿ ತುಂಡಾಯಿತು. ಹೋ.. ತನ್ನ ಪ್ರವೇಶಕ್ಕೆ ಸಮಯವಾಯಿತು. ಲಗುಬಗನೆ ಎದ್ದು ಸೀರೆ ಅಭರಣಗಳನ್ನು ತೆಗೆದು ಒಂದೊಂದಾಗಿ ಧರಿಸಲು ಆರಂಭಿಸಿದ. 
ಯಾಕೋ ಎಂದಿನ ಉಲ್ಲಾಸ ಇಂದಿರಲಿಲ್ಲ. ಯಾಂತ್ರಿಕವಾಗಿ ತನ್ನ ವೇಷಭೂಷಣಗಳನ್ನು ಧರಿಸಿಕೊಂಡ ಆತ ಪ್ರವೇಶಕ್ಕೆ ತಯಾರಾಗಿ ರಂಗಸ್ಥಳದ ಹಿಂಭಾಗದಲ್ಲಿ ನಿಂತ. ರಂಗದಲ್ಲಿದ್ದ ಪಾತ್ರಗಳೆಲ್ಲಾ ತಮ್ಮ ಪಾತ್ರದ ಒಂದು ಭಾಗವನ್ನು ಮುಗಿಸಿ ಪುನಃ ಚೌಕಿಗೆ ಮರಳಿದರು. ಭಾಗವತರ ಸೂಚನೆಯಂತೆ ಚಕ್ರತಾಳ ವಾದಕರು ರಂಗಸ್ಥಳದ ಪರದೆಯನ್ನು ಸರಿಸಿ ಮುಂದಿನ ಪಾತ್ರಧಾರಿ ಪ್ರವೇಶಕ್ಕೆ ಅನುವಾಗಿದ್ದಾರೆಯೇ ಎಂದು ಯೋಗಾನಂದ ನಿಂತುರುವುದನ್ನು ಖಚಿತಪಡಿಸಿಕೋಡರು.


ಭಾಗವತರು ಮುಂದಿನ ಪದ್ಯ ತೆಗೆದರು.. ತಮ್ಮ ಜಾಗಟೆಗೆ ಒಂದೆರಡು ಬಾರಿ ಟಕ.. ಟಕ ಎಂದು ಬಡಿದರು. ಅದು ಯೋಗಾನಂದನ ಪ್ರವೇಶಕ್ಕೆ ಸೂಚನೆ. ಎಂದಿನ ಲವಲವಿಕೆಯಿಂದ ಕೂಡಿರದ ಯೋಗಾನಂದನ ಅಂದಿನ ಪ್ರವೇಶ ಸ್ವತಃ ಆತನಿಗೆ ಅಭಾಸವೆಂದು ಅನಿಸಿತು. ಇವನೇಕೆ ಇಂದು ಹೀಗೆ ಎಂದು ಭಾಗವತರು ಪ್ರಶ್ನಾರ್ಥಕವಾಗಿ ಚೆಂಡೆ ಮದ್ದಳೆಗಾರರ ಮುಖ ನೋಡಿದರು. ಅವರು ಗೊತ್ತಿಲ್ಲವೆಂದು ತಲೆಯಾಡಿಸಿದರು. 
ಅದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದ ಯೋಗಾನಂದನ ದೃಷ್ಟಿ ಮಾತ್ರ ಸಭಿಕರ ಮುಂದಿನ ಸಾಲಿನಲ್ಲಿತ್ತು.

ಇಂದಾದರೂ ಅವಳು ಬಂದಿರಬಹುದು ಎಂಬ ಅಶಾಭಾವನೆ ಅವನಲ್ಲಿತ್ತು. ಅದರೆ ಅದು ಸುಳ್ಳಾಯಿತು. ಅವಳು ಇಂದೂ ಬಂದಿರಲಿಲ್ಲ. ಯಾಕೋ ರಂಗದಲ್ಲಿ ನರ್ತಿಸುವ ಉತ್ಸಾಹ ಚೈತನ್ಯಗಳಿರಲಿಲ್ಲ. ತನ್ನ ಪ್ರಾಣವಗಿದ್ದಳವಳು. ತನ್ನ ಜೀವದ ಜೀವವಾಗಿದ್ದಳು. ತನ್ನ ಮಾತುಗಳಿಗೆ ಕೋಪಿಸಿ ಬರದೆ ಉಳಿದಳಲ್ಲ. ಯಾಂತ್ರಿಕವಾಗಿ ಪಾತ್ರ ನಿರ್ವಹಿಸುತ್ತಿದ್ದವನನ್ನು ಭಾಗವತರು ಹಲವಾರು ಬಾರಿ ಎಚ್ಚರಿಸಬೇಕಾಯಿತು.

ಅಂತೂ ಇಂತೂ ತನ್ನ ಪಾತ್ರದ ಪ್ರಥಮ ಭಾಗವನ್ನು ನಿರ್ವಹಿಸಿ ಚೌಕಿಗೆ ಬಂದು ತನ್ನ ಸ್ಥಾನದತ್ತ ನಡೆಯುತ್ತಿದ್ದವನಿಗೆ ಅಚ್ಚರಿಯೋ ಅಚ್ಚರಿ..! ಅವಳಲ್ಲಿ… ನನ್ನ ಮನೋವ್ಯಾಕುಲಕ್ಕೆ ಕಾರಣಳಾದವಳು… ತನ್ನ ಪೆಟ್ಟಿಗೆಯ ಮೇಲೆ ಕುಳಿತು ಮಂದಹಾಸ ಬೀರುತ್ತಿದ್ದಳು. 
 ಅವಳ ಮುಖದಲ್ಲಿ ತುಂಟ ನಸುನಗೆ. ಅವನಿಗೆ ಸಂತೋಷವೇ ಸಂತೋಷ. ಎಲ್ಲವೂ ಮರೆತುಹೋಯಿತು. 
ನಿನ್ನೆ ಯಾಕೆ ಬರಲಿಲ್ಲ ಎಂದು ಅಕ್ಕರೆಯಿಂದ ವಿಚಾರಿಸಿದ. ಅವಳು ಕಾರಣ ಹೇಳಿದಳು. ‘ಹೋ.. ಹಾಗಾ..’ ಎಂದುಕೊಂಡ. ಅವಳಿಗೂ ಮುನಿಸೆಲ್ಲವೂ ದೂರವಾಯಿತು. ಇಬ್ಬರೂ ನಕ್ಕರು. ಆ ಕಡೆಯಿಂದ ಬರುತ್ತಿದ್ದ ಮದ್ದಳೆಗಾರರು
“ಏನು ಅಣ್ಣ ತಂಗಿ ಇಬ್ಬರೂ ನಗುತ್ತಿದ್ದೀರಿ…? ಏನು ವಿಶೇಷ ?” ಎಂದರು ಅವರೂ ನಗುವಿನಲ್ಲಿ ಭಾಗಿಯಾಗುತ್ತಾ.
ಅವರ ಮಾತು ಕೇಳಿ ಅಣ್ಣ ಮತ್ತು ತಂಗಿ ಇಬ್ಬರೂ ಮತ್ತೊಮ್ಮೆ ಜೋರಾಗಿ ನಕ್ಕರು. ಮದ್ದಳೆಗಾರರೂ ನಕ್ಕರು.

ಕಥೆ: – ಮನಮೋಹನ್. ವಿ. ಎಸ್

ಗಿರಕಿಗಳ ಸುತ್ತ – ಚಂದ್ರಶೇಖರ ಧರ್ಮಸ್ಥಳ (Chandrashekhara Dharmasthala) 

ಉತ್ತಮ ನಾಟ್ಯ, ಗಿರಕಿ ಹೊಡೆಯುವ ಕಲೆ, ಹಿತಮಿತವಾದ ಮಾತಿನ ಜತೆ, ರೂಪ ಮತ್ತು ವೇಷಕ್ಕೆ ಬೇಕಾದಂತೆ ದೇಹವೂ ಇದ್ದರೆ  ತೆಂಕು ತಿಟ್ಟು ಯಕ್ಷಗಾನದ ಪುಂಡುವೇಷಗಳಲ್ಲಿ ಕಲಾವಿದ ರಂಜಿಸುತ್ತಾನೆ ಎಂಬುದು ನಿಸ್ಸಂಶಯ. ಮಾತುಗಾರಿಕೆಯತ್ತ ಗಮನಹರಿಸಿ ಅಭ್ಯಸಿಸಿದರೆ ಒಂದನೇ ಪುಂಡುವೇಷಧಾರಿಯಾಗಲು ಅವಕಾಶಗಳೂ ಒದಗುತ್ತದೆ. 

ತೆಂಕುತಿಟ್ಟಿನಲ್ಲಿ ಪ್ರಸಕ್ತ ಪುಂಡುವೇಷಧಾರಿಗಳಾಗಿ ಮಿಂಚುತ್ತಿರುವ ಅನೇಕ ಕಲಾವಿದರಲ್ಲಿ ಧರ್ಮಸ್ಥಳ ಮೇಳದ ಕಲಾವಿದ  ಶ್ರೀ ಚಂದ್ರಶೇಖರ ಧರ್ಮಸ್ಥಳ ಅವರೂ ಒಬ್ಬರು. ಸಾಧನೆಯ ಮೂಲಕ ಬಹುಬೇಡಿಕೆಯ ಪುಂಡುವೇಷಧಾರಿಯಾಗಿ ಬೆಳೆದು ಕಾಣಿಸಿಕೊಂಡವರು. ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ 1975ನೇ ಇಸವಿ ಸೆಪ್ಟಂಬರ್ 22ನೇ ತಾರೀಕಿನಂದು ಶ್ರೀ ಗುರುವಪ್ಪ ಪೂಜಾರಿ ಮತ್ತು ಶ್ರೀಮತಿ ನೀಲಮ್ಮ ದಂಪತಿಗಳ ಪುತ್ರನಾಗಿ ಜನನ. ಓದಿದ್ದು 5ನೇ ತರಗತಿ ವರೇಗೆ. 

ಬಾಲಕನಾಗಿದ್ದಾಗ ತಂದೆಯವರ ಜತೆ ಚಂದ್ರಶೇಖರ ಅವರೂ ಒಂದು ವರ್ಷ ಕುಲಕಸುಬನ್ನು ಮಾಡಿ ಆಮೇಲೆ  2 ವರ್ಷಗಳ ಕಾಲ ಹೋಟೆಲ್‍ನಲ್ಲಿ ಕೆಲಸ ಮಾಡಿದ್ದರು.  ಮಿತ್ರರೊಬ್ಬರು ಅಂಗಡಿ ಕೆಲಸ ಬಿಟ್ಟು ಯಕ್ಷಗಾನ ಸೇರುತ್ತೇನೆ ಎಂದಾಗ ಇವರಿಗೂ ಆಸಕ್ತಿ ಹುಟ್ಟಿ ನಾಟ್ಯ ಕಲಿಯಲು ನಿರ್ಧರಿಸಿದರು. 1990-91ರಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಲಲಿತಕಲಾ ಕೇಂದ್ರಕ್ಕೆ ಸೇರಿ ಕೋಳ್ಯೂರು ರಾಮಚಂದ್ರ ರಾವ್ ಮತ್ತು ತಾರಾನಾಥ ಬಲ್ಯಾಯ ವರ್ಕಾಡಿಯವರಿಂದ ನಾಟ್ಯ ಕಲಿತರು. ನಾಟ್ಯ ಕಲಿತು ಬಪ್ಪನಾಡು ಮೇಳಕ್ಕೆ ಸೇರಿ ಮೊದಲ ತಿರುಗಾಟ ಮಾಡಿದರು.

ಯಾಕೋ ಆಟ ಬೇಡ ಎಂದು ತೀರ್ಮಾನಿಸಿ ಮತ್ತೆ 2 ತಿಂಗಳು ಹೋಟೆಲ್ ಕೆಲಸ ಮಾಡಿದ್ದರು. ಆಗ ಕರ್ನಾಟಕ ಮೇಳದಿಂದ ಕರೆಬಂದಾಗ ನಿರಂತರ 11 ವರ್ಷಗಳ ಕಾಲ ಕರ್ನಾಟಕ ಮೇಳದಲ್ಲಿ ತಿರುಗಾಟ ಮಾಡಿದರು. ಮಳೆಗಾಲದ ಮುಂಬಯಿ ಪ್ರದರ್ಶನಗಳಲ್ಲೂ ಭಾಗವಹಿಸಿದರು. ಕೋಟಿ ಚೆನ್ನಯ ಪ್ರಸಂಗದಲ್ಲಿ ಬಾಲಕೋಟಿ ಮತ್ತು ಚೆನ್ನಯ್ಯರಾಗಿ, ದೇವಪೂಂಜ ಪ್ರತಾಪದಲ್ಲಿ ದೇವಪೂಂಜನಾಗಿ, ಕೋರ್ದಬ್ಬು ಬಾರಗ ಪ್ರಸಂಗದಲ್ಲಿ ಬಬ್ಬು ಪಾತ್ರದಲ್ಲಿ, ಮಹಾಂಕಾಳಿ ಅಪ್ಪೆ ಪ್ರಸಂಗದಲ್ಲಿ ಮಹಾಂಕಾಳಿ ಪಾತ್ರ, ಕಚ್ಚೂರ ಮಾಲ್ದಿ ಪ್ರಸಂಗದ ನಾಗರತಿ (ರಾಜಕುಮಾರಿ) ಪಾತ್ರ ಇವರಿಗೆ ಹೆಸರನ್ನು ತಂದುಕೊಟ್ಟಿತ್ತು. 

ಕರ್ನಾಟಕ ಮೇಳವು ತಿರುಗಾಟವನ್ನು ನಿಲ್ಲಿಸಿದ ನಂತರ ಕಿಶನ್ ಹೆಗ್ಡೆಯವರ ಸಂಚಾಲಕತ್ವದ ಸಾಲಿಗ್ರಾಮ ಮೇಳದಲ್ಲಿ ತಿರುಗಾಟ. ಬಳಿಕ ಪುತ್ತೂರು ಮೇಳದಲ್ಲಿ 1 ವರ್ಷ ತಿರುಗಾಟ ಮಾಡಿದರು. ಮುಂದೆ ಎಡನೀರು ಮೇಳದ ತಿರುಗಾಟದಲ್ಲಿ ಚಂದ್ರಶೇಖರರ ವೇಷವನ್ನು ಧರ್ಮಸ್ಥಳದ ಖಾವಂದರು ನೋಡಿ ಅವರನ್ನು ಧರ್ಮಸ್ಥಳ ಮೇಳಕ್ಕೆ ಸೇರಿಸಿದ್ದರು. 

2008ರಿಂದ ತೊಡಗಿ ಇಂದಿನವರೆಗೂ ಧರ್ಮಸ್ಥಳ ಮೇಳದಲ್ಲಿ ವ್ಯವಸಾಯ ಮಾಡುತ್ತಾ ಬಂದಿದ್ದಾರೆ.  ಧರ್ಮಸ್ಥಳ ಮೇಳದ ಕಲಾವಿದ ಎಂದು ಹೇಳಿಕೊಳ್ಳುವಾಗ ಹೆಮ್ಮೆಯಾಗುತ್ತದೆ ಎನ್ನುವ ಚಂದ್ರಶೇಖರರಿಗೆ ಅಭಿಮನ್ಯು, ಸುದರ್ಶನ, ಅಶ್ವತ್ಥಾಮ, ಭಾರ್ಗವ, ಲಕ್ಷ್ಮಣ, ಚಂಡಮುಂಡರು, ಬಭ್ರುವಾಹನ ಮೊದಲಾದ ಪಾತ್ರಗಳು ಮತ್ತು  ಕಿರೀಟ ವೇಷಗಳಲ್ಲಿ ಹಿರಣ್ಯಾಕ್ಷ, ಇಂದ್ರಜಿತು, ಶಿಶುಪಾಲ ಮೊದಲಾದ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಬಲ್ಲವರಾದರೂ ಇವರಿಗೆ ಪುಂಡುವೇಷಗಳಲ್ಲಿ ಹೆಚ್ಚು ಆಸಕ್ತಿ. 

ತನ್ನ 25ನೇ ತಿರುಗಾಟದ ಸಂಭ್ರಮವನ್ನು ಮಂಗಳೂರು ಸರಕಾರೀ ಕಾಲೇಜು ಮೈದಾನದಲ್ಲಿ ‘ರಜತಚಂದ್ರ’ ಎಂಬ ಕಾರ್ಯಕ್ರಮ ಮಾಡಿ ಆಚರಿಸಿದ್ದರು. ಕಲಾಭಿಮಾನಿಗಳೆಲ್ಲರೂ ಸಹಕರಿಸಿ ಸ್ಪಂದಿಸಿದ್ದಾರೆ ಎನ್ನುವ ಚಂದ್ರಶೇಖರರಿಗೆ ಮನೆಯವರ ಸಹಕಾರದಿಂದ ಇನ್ನಷ್ಟು ಕಾಲ ಯಕ್ಷಗಾನದಲ್ಲಿ ಮುಂದುವರಿಯುವ ಆಸೆ ಇದೆ. 

ಶ್ರೀ ಚಂದ್ರಶೇಖರ ಧರ್ಮಸ್ಥಳ ಅವರು ಅನೇಕ ಸಂಘ-ಸಂಸ್ಥೆಗಳಿಂದ ಸನ್ಮಾನಿತರೂ ಆಗಿದ್ದಾರೆ. ಭಾರತದ ನಾನಾ ಕಡೆ ಅಲ್ಲದೆ ಬಹ್ರೈನ್, ಮಸ್ಕತ್, ಕುವೈಟ್, ದುಬಾಯಿ, ಲಂಡನ್, ಅಮೇರಿಕಾದಲ್ಲಿ ನಡೆದ ಪ್ರದರ್ಶನಗಳಲ್ಲೂ ಭಾಗವಹಿಸಿದ್ದಾರೆ.

ಲೇಖಕ: ರವಿಶಂಕರ್ ವಳಕ್ಕುಂಜ 

ಯಕ್ಷಗಾನಕ್ಕೆ ಡೇರೆ ಮೇಳಗಳು ಬಂದದ್ದು ಹೇಗೆ ? (ಮಹನೀಯರ ಮಹಾ ನುಡಿ-ಭಾಗ 7)

(ಡಾ. ಶೇಣಿ ಗೋಪಾಲಕೃಷ್ಣ ಭಟ್ – ‘ಯಕ್ಷಗಾನ ಮತ್ತು ನಾನು’ ಎಂಬ ತಮ್ಮ ಆತ್ಮಚರಿತ್ರೆಯಲ್ಲಿ – 1981)  
ಯಕ್ಷಗಾನದಲ್ಲಿ ಬಯಲಾಟ ಮತ್ತು ತಾಳಮದ್ದಳೆ ಎಂಬ ಎರಡು ಪ್ರಾಕಾರಗಳು ಮೊದಲಿನಿಂದಲೂ ರೂಡಿಯಲ್ಲಿ ಬೆಳೆದು ಬಂದದ್ದವಾದರೂ ‘ಯಕ್ಷಗಾನ ನಾಟಕ’ ಎಂಬ ಮೂರನೆಯದೊಂದು ಪ್ರಾಕಾರವನ್ನು ಸೃಷ್ಟಿಸಿದವರು ಕುರಿಯ ವೆಂಕಟರಮಣ ಶಾಸ್ತ್ರಿ ಎಂಬವರು.

ಮುಂದಿನ ದಿನಗಳಲ್ಲಿ ಯಕ್ಷಗಾನ ವ್ಯವಸಾಯದಿಂದ ತನ್ನನ್ನೂ ರಂಗವನ್ನೂ ಮೆರೆಸಿದ ವಿಠಲ ಶಾಸ್ತ್ರಿಗಳ ತಂದೆಯವರಾದ ಅವರು ಅಭಿಜಾತ ಕಲಾವಿದರಿದ್ದುದರಿಂದ ರಂಗ ವೈಭವಗಳೊಂದಿಗೆ, ದೊಡ್ಡ ನಾಟಕ ಕಂಪೆನಿಯವರಂತೆ ವಿವಿಧ ಪರಿಕರಗಳ ಸಂಗ್ರಹಣದಿಂದ, ಬೇರೆ ಬೇರೆ ಕಡೆಗಳಲ್ಲಿ ಹಂಗಾಮಿ ಥಿಯೇಟರುಗಳನ್ನು ರಚಿಸಿ, ಕಲಾವಿದರ ದೊಡ್ಡ ಗುಂಪೊಂದನ್ನು ಕಟ್ಟಿಕೊಂಡು ಯಕ್ಷಗಾನ ನಾಟಕಗಳನ್ನಾಡುತ್ತಿದ್ದರು. ಒಮ್ಮೆ ಕಾಸರಗೋಡಿನಲ್ಲಿಯೂ ‘ಮೊಕ್ಕಾಂ’ ಮಾಡಿಕೊಂಡು ತಮ್ಮ ನಾಟಕಗಳನ್ನು ಪ್ರದರ್ಶಿಸುತ್ತಿದ್ದಾಗ ಪ್ರಹ್ಲಾದ ಚರಿತ್ರೆಯನ್ನು ಅಭಿನಯಿಸಿದ್ದರು.

ಕಿಕ್ಕಿರಿದ ಪ್ರೇಕ್ಷಕರ ಸಮೂಹದಲ್ಲಿ ಒಬ್ಬನಾಗಿ ಕುಳಿತ ನಾನು ವಿಶೇಷ ಕುತೂಹಲದಿಂದ ಆ ಪ್ರಸಂಗವನ್ನು ನೋಡಿದೆ. ಹಿರಿಯ ಶಾಸ್ತ್ರಿಗಳ ಹಿರಣ್ಯಕಶ್ಯಪು, ಕಿರಿಯ ಶಾಸ್ತ್ರಿಗಳ ಪ್ರಹ್ಲಾದನೂ, ಕಾಡೂರು ರಾಮ ಭಟ್ಟರ ಹಿರಣ್ಯಾಕ್ಷನ ಪಾತ್ರವೂ ನನ್ನಲ್ಲಿ ಅದ್ಭುತ ಪರಿಣಾಮವನ್ನುಂಟುಮಾಡಿದುವು. ಯಕ್ಷಗಾನ ವೇಷಧಾರಿಗಳಲ್ಲಿ ಆಗ ದೊಡ್ಡ ಹೆಸರಾಗಿದ್ದ ಹೊಸಹಿತ್ತಿಲು ಗಣಪತಿ ಭಟ್ಟರು ದೇವೇಂದ್ರನಾಗಿಯೂ ಇತರ ಕೆಲವು ಹೊಸ ಮುಖಗಳು ವಿವಿಧ ಪಾತ್ರಗಳಲ್ಲಿಯೂ ಕಾಣಿಸಿಕೊಂಡಿದ್ದರು.

ಬಲಿಪ ನಾರಾಯಣ ಭಾಗವತರು(ಹಿರಿಯ) ಹಾಡುಗಾರರಾಗಿಯೂ, ಕುದ್ರೆಕೋಡ್ಲು ರಾಮ ಭಟ್ಟರು ಮದ್ದಳೆಗಾರರಾಗಿಯೂ ಇದ್ದುದರಿಂದ ಹಿಮ್ಮೇಳಕ್ಕೆ ಪೂರ್ಣ ಕಳೆ ತುಂಬಿ ಕರ್ಣಾನಂದಕರವಾಗಿತ್ತು. ಯಕ್ಷಗಾನದ ಈ ಪ್ರಕಾರವೂ ಜನಪ್ರಿಯವಾಗಬಲ್ಲುದೆಂಬುದನ್ನು ಅನುಭವದಿಂದ ನಾನಂದು ಕಂಡುಕೊಂಡೆ. ಹೀಗೆ ಜನಪ್ರಿಯನಾಗಿ ಮುಂದೆಯೂ ಈ ಪ್ರಕಾರವು ಬೆಳೆದು ಬರಬಹುದಾಗಿತ್ತಾದರೂ ಏಕೋ ವೆಂಕಟರಮಣ ಶಾಸ್ತ್ರಿಯವರು ತಮ್ಮ ಕಂಪೆನಿಯನ್ನು ಮುಚ್ಚಿದರು.

ಆದರೆ ಅವರ ಸ್ಪೂರ್ತಿಯು ಸ್ವಲ್ಪ ಸಮಯದಲ್ಲೇ ವಿಠಲ ಶಾಸ್ತ್ರಿಗಳನ್ನು ಯಕ್ಷಗಾನದ ಬಯಲಾಟದ ರಂಗಸ್ಥಳಕ್ಕೆ ಬರುವಂತೆ ಮಾಡಿತು. ಇದಕ್ಕಿಂತಲೂ ಪ್ರಾಮುಖ್ಯವಾದ ಕೊಡುಗೆಯೊಂದು ಈ ನಾಟಕ ಪ್ರಾಕಾರದಿಂದ ಯಕ್ಷಗಾನ ಮೇಳದ ಸಂಚಾಲಕರಿಗೆ ದೊರೆಯಿತೆಂದು ಹೇಳಬೇಕು.

ಬಯಲಾಟಗಳಿಗೆ ಡೇರೆಯನ್ನು ರಚಿಸಿ, ಪ್ರೇಕ್ಷಕರು ಟಿಕೇಟಿನ ಮೂಲಕ ಪ್ರವೇಶಿಸಿ, ಆರಾಮವಾಗಿ ತಂತಮ್ಮ ಆಸನಗಳಲ್ಲಿ ಕುಳಿತು ನೋಡುವ ಸೌಲಭ್ಯವನ್ನೊದಗಿಸಿದರೆ ಆಡುವವರಿಗೂ, ನೋಡುವವರಿಗೂ ಅನುಕೂಲತೆ ಹೆಚ್ಚಬಹುದೆಂಬ ವಿಶ್ವಾಸವಿಟ್ಟು, ಬಹು ಕಾಲದಿಂದಲೂ ಯಕ್ಷಗಾನ ಮೇಳದ ಸಂಚಾಲಕರಾಗಿದ್ದ ಕಲ್ಲಾಡಿ ಕೊರಗ ಶೆಟ್ಟರು ಮೊದಲಿಗೆ ಇದನ್ನು ಬಳಕೆಗೆ ತಂದರು. ಇತಿಮಿತಿಯ ರಂಗಶೃಂಗಾರದಿಂದ ಅವರು ತೊಡಗಿದ ಈ ಪದ್ಧತಿಯು ಈ ದಿನಗಳಲ್ಲಿ ಎಲ್ಲ ಮೇಳದ ಸಂಚಾಲಕರಿಗೂ ದೊಡ್ಡ ದೇಣಿಗೆಯಾಗಿ ಬೆಳೆದಿದೆ.

ಅಲ್ಲದೆ ಹೋದರೆ ದಿನಕ್ಕೊಬ್ಬನಂತೆ ಬಯಲಾಟದ ಖರ್ಚು ವೆಚ್ಚಗಳನ್ನು ವಹಿಸಿ ಆಟದ ವೀಳ್ಯದ ಮೊತ್ತವನ್ನು ಕೊಡುವ ದಾತೃಗಳನ್ನು ಹುಡುಕಿ, ಅವರ ಕೈಯಳತೆಗನುಸರಿಸಿ, ಸಂಚಾಲಕನೂ ತನ್ನ ಕೈಗಳನ್ನು ಚಾಚಬೇಕಾಗಿದ್ದ ಪರಿಸ್ಥಿತಿಯು ಇಂದಿಗೂ ಉಳಿಯುತ್ತಿತ್ತು. ಅನಾಥಾಶ್ರಮದಲ್ಲಿ ಬೆಳೆಯುತ್ತಿದ್ದವನು ತನ್ನದೇ ಮನೆಯಲ್ಲಿ ಸ್ವಂತ ಸಂಪಾದನೆಯಿಂದ ಬದುಕುವಾಗ ಸಿಕ್ಕುವ ತೃಪ್ತಿಯಂತೆ ಎಲ್ಲ ಸಂಚಾಲಕರ ಸಹಿತ ಇಡೀ ಕೂಟದವರಿಗೆ ಈ ಮಾರ್ಗದರ್ಶನ ನೆಮ್ಮದಿಯನ್ನೂ ಭರವಸೆಯನ್ನೂ ತಂದಿದೆ.