Thursday, January 23, 2025
Home Blog Page 347

ಮೋಹನ ಬೈಪಡಿತ್ತಾಯ – ಯಕ್ಷಗಾನದ ಓರ್ವ ಸಮರ್ಥ ಹಿಮ್ಮೇಳ ಶಿಕ್ಷಕ (Mohana Baipadithaya)

ಅದು ಉಜಿರೆಯ ಕೇಂದ್ರ ಭಾಗ. ಶ್ರೀ ಜನಾರ್ದನ ಸ್ವಾಮಿಯ ದಿವ್ಯಸನ್ನಿಧಿ. ಶ್ರೀ ಜನಾರ್ದನ ಸ್ವಾಮಿ ದೇವಳದ ಎದುರುಭಾಗದ ಒಂದು ಕಟ್ಟಡದಲ್ಲಿ ಯಕ್ಷಗಾನ ಹಿಮ್ಮೇಳ ಕಲಿಕಾ ಕೇಂದ್ರವಿದೆ. ಅತ್ತಿತ್ತ ನೋಡುತ್ತಾ ಅಳುಕಿನಿಂದಲೇ ಒಳಪ್ರವೇಶಿಸಿದಾಗ ಆಕರ್ಷಕ ವ್ಯಕ್ತಿತ್ವದ ಮಹಾನುಭಾವರೊಬ್ಬರು ಚೆಂಡೆಯ ಕೋಲುಗಳಿಂದ ಎತ್ತರದ ಮರದ ಮಣೆಯೊಂದಕ್ಕೆ ತಾಳಗಳನ್ನು ಬಾರಿಸುತ್ತಾ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವುದನ್ನು ಕಾಣಬಹುದು. ಕಲಿಯುವವರ ಜೊತೆಗೆ ತಾನೂ ಒಬ್ಬ ಕಲಿಯುವವನಂತೆಯೇ ಕಾಣುತ್ತಾರೆ.

ಅವರೇ ಯಕ್ಷಗಾನದ ಶಾಸ್ತ್ರೀಯ ಹಿಮ್ಮೇಳ ವಾದಕ, ಭಾಗವತ, ಹಿಮ್ಮೇಳದ ಎಲ್ಲಾ ಅಂಗಗಳನ್ನೂ ಕರತಲಾಮಲಕ ಮಾಡಿಕೊಂಡ ಶ್ರೀ ಮೋಹನ ಬೈಪಾಡಿತ್ತಾಯರು.   ಶ್ರೀ ಮೋಹನ ಬೈಪಾಡಿತ್ತಾಯರು ಒಂದು ಕಾಲದಲ್ಲಿ ಅಂದರೆ 1980ರ ನಂತರ ಯಕ್ಷರಂಗಕ್ಕೆ ಬಹಳ ಪರಿಚಿತ ಹೆಸರು. ಯಕ್ಷರಂಗದ ಔನ್ನತ್ಯದ ಸಾಧನೆಯಲ್ಲಿರುವಾಗಲೇ ದಿಢೀರ್ ಬಂದೊದಗಿದ ಅಪಘಾತದ ಆಪತ್ತು ಅವರ ಜೀವನದ ದೊಡ್ಡ ತಿರುವು. ಈ ಅಪಘಾತ ಕಲಾಪ್ರದರ್ಶನದ ಸಾಧನೆಗೆ ತೊಡಕುಂಟುಮಾಡಿದರೂ ಅವರ ಮನೋಧೈರ್ಯ, ಛಲ ಅವರನ್ನು ಸಾಧನೆಯ ಹಾದಿಯಲ್ಲಿ ಮುನ್ನಡೆಯುವಂತೆ ಪ್ರೇರೇಪಿಸಿತು.

ಪ್ರದರ್ಶನಗಳಲ್ಲಿ ಭಾಗವಹಿಸದಿದ್ದರೇನಂತೆ, ಪ್ರದರ್ಶನಕ್ಕೆ ಪೂರಕವಾದ ಪ್ರತಿಭೆಗಳ ನಿರ್ಮಾಣದ ಸಾಹಸಕ್ಕೆ ಕೈ ಹಾಕಿದರು. ಅವರ ಪ್ರಯತ್ನದ ಫಲವೇ ನಮ್ಮ ಕಣ್ಣ ಮುಂದಿದೆ. ಯಕ್ಷರಂಗದಲ್ಲಿ ಅವರ ಶಿಷ್ಯಂದಿರು ಮಿಂಚುತ್ತಿದ್ದಾರೆ. ತೆರೆಮರೆಯಲ್ಲಿ ಅವರ ಕೈಂಕರ್ಯವನ್ನು ಜನ ಗುರುತಿಸಿದ್ದಾರೆ. ಮೋಹನ ಬೈಪಾಡಿತ್ತಾಯರು ನಡೆಸುತ್ತಿರುವ ಹಿಮ್ಮೇಳ ತರಗತಿಗಳಲ್ಲಿ ಹಲವಾರು ಯಕ್ಷಗಾನ ಕಲಾಸಕ್ತರೂ ಕಲಿಯುತ್ತಿದ್ದಾರೆ. ಅವರ ಗರಡಿಯಲ್ಲಿ ಹಲವರು ಪಳಗಿದ್ದಾರೆ. 

ರಾಮಕೃಷ್ಣ ಬೈಪಾಡಿತ್ತಾಯ ಮತ್ತು ಪದ್ಮಾವತಿ ಅಮ್ಮ ದಂಪತಿಯ ಮಗನಾಗಿ 1952ರಲ್ಲಿ ಕಡಬದಲ್ಲಿ ಜನಿಸಿದ ಮೋಹನ ಬೈಪಾಡಿತ್ತಾಯರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಡಬದಲ್ಲಿಯೂ, ಪ್ರೌಢಶಿಕ್ಷಣವನ್ನು ರಾಮಕುಂಜದಲ್ಲಿಯೂ, ಪದವಿಪೂರ್ವ ಶಿಕ್ಷಣ ಪೂರ್ಣಪ್ರಜ್ಞ ಕಾಲೇಜಿನಲ್ಲಿಯೂ ಪಡೆದರು. ಇವರ ಒಡಹುಟ್ಟಿದವರು ಹಿರಿಯ ಸಹೋದರ ಖ್ಯಾತ ಮದ್ದಳೆವಾದಕರಾದ ಶ್ರೀ ಹರಿನಾರಾಯಣ ಬೈಪಾಡಿತ್ತಾಯರ ಸಹಿತ ಮೂವರು ಸಹೋದರರು ಮತ್ತು ಇಬ್ಬರು ಸಹೋದರಿಯರು. ಮೋಹನ ಬೈಪಡಿತ್ತಾಯರ  ಧರ್ಮಪತ್ನಿ ಶ್ರೀಮತಿ ಲಲಿತಾ ಬೈಪಾಡಿತ್ತಾಯ, ಇಬ್ಬರು ಗಂಡುಮಕ್ಕಳು ಮತ್ತು ಓರ್ವ ಪುತ್ರಿ ಮಮತಾ ಮತ್ತು ಅಳಿಯ ಶ್ರೀ ರಾಘವೇಂದ್ರ ಕ್ಯಾಂಪ್ಕೋ ಸಂಸ್ಥೆಯಲ್ಲಿ ವ್ಯವಸ್ಥಾಪಕರು. 

 
ಕಾಲೇಜು ಶಿಕ್ಷಣ ನಿಲ್ಲಿಸಿದ ಸಮಯದಲ್ಲಿ ಮೋಹನ ಬೈಪಡಿತ್ತಾಯರ ಮನೆಯಲ್ಲಿ ಯಕ್ಷಗಾನದ ಕಂಪು ಹರಡತೊಡಗಿತ್ತು. ಅಣ್ಣ ಹರಿನಾರಾಯಣ ಬೈಪಾಡಿತ್ತಾಯರಿಗೆ ಯಕ್ಷಗಾನ ಕಲಿಸುವುದನ್ನು ನೋಡಿ ಅದರ ಬಗ್ಗೆ ಇವರಿಗೂ ಆಸಕ್ತಿ ಬೆಳೆಯಿತು. ಕಲಿಯಬೇಕೆಂಬ ಆಸಕ್ತಿಯಿದ್ದುದರಿಂದ ಅಣ್ಣನಿಗೆ ಕಲಿಸುವಾಗ ಅವರಷ್ಟಕ್ಕೆ ತಾಳಗಳ ಅಭ್ಯಾಸ ಮಾಡಿಕೊಂಡಿರುತ್ತಿದ್ದರು. ಅಣ್ಣನ ಕಲಿಕೆಯ ನಂತರ ಇವರ ಆಸಕ್ತಿಯನ್ನು ಕಂಡು ಅಣ್ಣ ಹರಿನಾರಾಯಣ ಬೈಪಡಿತ್ತಾಯರೇ ಮೋಹನ ಬೈಪಡಿತ್ತಾಯರಿಗೆ ಪ್ರಥಮ ಪಾಠ ಹೇಳಿಕೊಟ್ಟರು. ಆದುದರಿಂದ ಯಕ್ಷಗಾನಕ್ಕೆ ಅಣ್ಣನೇ ಇವರಿಗೆ ಮೊದಲ ಗುರು. 1968-69ರಲ್ಲಿ ಇವರು ಯಕ್ಷಗಾನ ಕಲಾ ವ್ಯವಸಾಯ ಪ್ರಾರಂಭಿಸಿದ್ದು. ಕಡಬದ ಗಣೇಶ ಯಕ್ಷಗಾನ ಸಂಘದಲ್ಲಿ ಹವ್ಯಾಸಿ ಕಲಾವಿದನಾಗಿಯೇ ಸುಮಾರು 10 ವರ್ಷ ಭಾಗವಹಿಸಿದ್ದರು. ಸ್ವಂತ ಜಾಗ, ಮನೆ ಇಲ್ಲದೆ ಬಡತನದಲ್ಲಿ ಬೆಳೆದಿದ್ದರೂ ಯಕ್ಷಗಾನದ ಆಸಕ್ತಿ ಮಾತ್ರ ಅವರನ್ನು ಸೆಳೆಯಿತು. ಯಕ್ಷಗಾನವನ್ನೇ ಜೀವನೋಪಾಯವನ್ನಾಗಿ ಮಾಡಿಕೊಂಡರು. ಅಣ್ಣ ತಮ್ಮಂದಿರಿಬ್ಬರೂ ಹವ್ಯಾಸಿ ಕಲಾವಿದರಾಗಿ, ಯಕ್ಷಗಾನ ತರಗತಿಗಳನ್ನೂ ಮಾಡುತ್ತಿದ್ದರು. ಇವರ ಅಣ್ಣ ಹರಿನಾರಾಯಣ ಬೈಪಾಡಿತ್ತಾಯರ ಯಕ್ಷಗಾನ ತರಗತಿ, ತರಬೇತಿಗಳಿಂದ ಹಲವು ಶಿಷ್ಯಂದಿರು ತಯಾರಾದರು.

ಕಡಬ ನಾರಾಯಣ ಆಚಾರ್ಯರಿಗೆ ಮೃದಂಗದ ಪಾಠ ಅಣ್ಣನಿಂದ ಮತ್ತು ಚೆಂಡೆಯ ಪಾಠ ಮೋಹನ ಬೈಪಾಡಿತ್ತಾಯರಿಂದಲೂ ಆಗಿತ್ತು. ಮೋಹನ ಬೈಪಡಿತ್ತಾಯರಿಗೆ ಯಕ್ಷಗಾನದ ಆಸಕ್ತಿ ಶಾಲಾ ದಿನಗಳಲ್ಲಿರುವಾಗಲೇ ಇತ್ತು. ಪಿ.ಯು.ಸಿ. ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ ನಂತರ ಯಕ್ಷಗಾನವೇ ಉಸಿರಾಯಿತು. ಆದಿಸುಬ್ರಹ್ಮಣ್ಯ ಮೇಳದಲ್ಲಿರುವಾಗಲೇ ಚೆಂಡೆ, ಮದ್ದಳೆ ಬಾರಿಸುತ್ತಿದ್ದರು. ಆಮೇಲೆ ಭಾಗವತಿಕೆಗೆ ಅಗತ್ಯ ಬಿದ್ದಾಗ ಜನ ಇವರನ್ನು ಭಾಗವತಿಕೆ ಮಾಡುವಂತೆ ಪ್ರೇರೇಪಿಸಿದರು.
 ನಂತರ ಸುಮಾರು 10 ವರ್ಷಗಳ ಕಾಲ ಹವ್ಯಾಸಿ ಕಲಾವಿದನಾಗಿಯೇ ಮುಂದುವರಿದರು. 

ಇವರಿಗೆ ಸುಮಾರು 25 ವರ್ಷಗಳ ನಂತರ ಮದುವೆಯ ಕೇಳಿಕೆ ಬಂತು. ಮದುವೆಗೂ ಮೊದಲು ಮೋಹನ ಬೈಪಡಿತ್ತಾಯರು ವೇಣೂರು ಮೇಳದಲ್ಲಿದ್ದರು. ಆಗ ಅದರಲ್ಲಿ ಶೀನಪ್ಪ ರೈ, ಕಾಂಚನ ಸಂಜೀವ ರೈ ಮೊದಲಾದವರಿದ್ದರು. ಮೊದಲ ತಿರುಗಾಟ ಮದ್ದಳೆಗಾರನಾಗಿ ಆ ಮೇಳದಲ್ಲಿ 4 ರೂಪಾಯಿ ಸಂಬಳಕ್ಕೆ ಆಯಿತು. ಆಗೆಲ್ಲಾ ಪೆಟ್ರೋಮ್ಯಾಕ್ಸ್ ಬೆಳಕಿನಲ್ಲಿ ಆಟದ ಪ್ರದರ್ಶನ ನಡೆಯುತ್ತಿತ್ತು. ಆಮೇಲೆ ಮೇಳದ ತಿರುಗಾಟ ನಿಲ್ಲಿಸಿದರು. ಹವ್ಯಾಸಿಯಾಗಿ ಮುಂದುವರಿಯುತ್ತಿರುವಾಗ ಮಾರ್ಪನಡ್ಕದಲ್ಲಿ ಆಟ ಆಯಿತು. ‘ತ್ರಿಜನ್ಮ ಮೋಕ್ಷ’ ಪ್ರಸಂಗದಲ್ಲಿ ಇವರು ಅನಿವಾರ್ಯವಾಗಿ ಪದ್ಯ ಹೇಳಬೇಕಾಯಿತು. ಅಲ್ಲಿ ಬೈಪಡಿತ್ತಾಯರಿಗೆ ಹುಡುಗಿ ಕೊಡಲು ಪ್ರಪೋಸ್ ಮಾಡಿದವರೂ ಆಟಕ್ಕೆ ಬಂದಿದ್ದರು. 

ಮದುವೆಯ ನಂತರ ಸುಬ್ರಹ್ಮಣ್ಯ ಮೇಳದಲ್ಲಿ ತಿರುಗಾಟ ಪ್ರಾರಂಭವಾಯಿತು. ನಾಲ್ಕು ವರ್ಷ ಸುಬ್ರಹ್ಮಣ್ಯ ಮೇಳದಲ್ಲಿದ್ದರು. ಇವರ ಪದ್ಯದ ಜೊತೆಗೆ ಕಿರಿಯ ಸಹೋದರ ಕೇಶವ ಬೈಪಾಡಿತ್ತಾಯ ಮದ್ದಳೆ ಬಾರಿಸುತ್ತಿದ್ದರು. ಹೀಗೆ ಒಂದೇ ಪ್ರದರ್ಶನದಲ್ಲಿ ಮದ್ದಳೆ, ಚೆಂಡೆ ಮತ್ತು ಭಾಗವತಿಕೆ ಈ ಮೂರನ್ನೂ ಪ್ರತಿದಿನ ಮಾಡುತ್ತಿದ್ದರು. ಅನಿವಾರ್ಯ ಕಾರಣಗಳಿಂದಾಗಿ ಆಮೇಲೆ ನಂದಾವರ ಮೇಳಕ್ಕೆ ಸೇರಿದರು. ಆ ಮೇಳದಲ್ಲಿ ಕುಬಣೂರು ಶ್ರೀಧರ ರಾಯರು ಮತ್ತು ಮೋಹನ ಬೈಪಡಿತ್ತಾಯರು ಭಾಗವತಿಕೆ ಮಾಡುತ್ತಿದ್ದರು. ಮೂರು ವರ್ಷ ಆ ಮೇಳದಲ್ಲಿದ್ದರು.  ಆಮೇಲೆ ಶೇಖರ್ ಶೆಟ್ಟಿ ಸಂಚಾಲಕತ್ವದ ಬಪ್ಪನಾಡು ಮೇಳದಲ್ಲಿ ಎರಡು ವರ್ಷ ತಿರುಗಾಟ.

ಆಮೇಲೆ 1987ರಲ್ಲಿ ಶೇಖರ ಶೆಟ್ಟಿಯವರ ಬೆಳ್ಮಣ್ ಮೇಳದ ಹಿಮ್ಮೇಳ ಕಲಾವಿದರೊಬ್ಬರು ರಜೆಯಲ್ಲಿದ್ದುದರಿಂದ ಬದಲಿ ಕಲಾವಿದರಾಗಿ ನಾಲ್ಕು ದಿನ ಭಾಗವಹಿಸಲು ಹೋಗಿದ್ದರು. ಮೇ 17ರಂದು ಆಟ ಮುಗಿಸಿ ಹಿಂತಿರುಗುವಾಗ ಇವರ ವಾಹನ ಅಪಘಾತಕ್ಕೀಡಾದದ್ದು ದುರಂತವೆಂದೇ ಹೇಳಬೇಕು. ಗಂಭೀರ ಸ್ಥಿತಿಯಲ್ಲಿದ್ದ ಮೋಹನ ಬೈಪಡಿತ್ತಾಯರು ಬದುಕಿ ಉಳಿದುದೇ ಪವಾಡವೆಂದು ಹೇಳಬೇಕು. ಆಮೇಲೆ ಒಂದು ವರ್ಷ ಆಸ್ಪತ್ರೆವಾಸದಲ್ಲಿದ್ದ ಅವರಿಗೆ  7 ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದರು. ಆಮೇಲೆ ಎರಡು ವರ್ಷ ಮನೆಯಲ್ಲಿದಯೇ ಇದ್ದರು. ಆ ಸಂದರ್ಭದಲ್ಲಿ ಇವರ ಜೊತೆಗಿದ್ದ ಶಿಷ್ಯಂದಿರಲ್ಲಿ ಒಬ್ಬರಾದ ಪದ್ಮನಾಭ ಉಪಾಧ್ಯಾಯ ಭಾಗಶಃ ಇವರಿಂದ ಹಿಮ್ಮೇಳವಾದನ ಮತ್ತು ಭಾಗವತಿಕೆ ಕಲಿತಿದ್ದರು.

ಆಮೇಲೆ ಒಂದೆರಡು ಮೇಳಗಳಲ್ಲಿ ಸ್ವಲ್ಪ ಕಾಲ ದುಡಿದು 1994ರಲ್ಲಿ ಮೇಳದ ಸಹವಾಸ ಸಾಕು ಎಂದು ತೀರ್ಮಾನಿಸಿ ಹಿಮ್ಮೇಳ ತರಗತಿಗಳನ್ನು ನಡೆಸಿ ಹಲವಾರು ಆಸಕ್ತರಿಗೆ ಯಕ್ಷಗಾನದ ಪಾಠ ಮಾಡತೊಡಗಿದರು. ಈ ನಡುವೆ 2002ರಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ಅವರ ಅನುಗ್ರಹದ ಮೇರೆಗೆ ಮುಂಬಯಿಗೆ ತೆರಳಿ ಅಲ್ಲಿನ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಕಾರ್ಯನಿಮಿತ್ತ ವಾಸ ಮಾಡತೊಡಗಿದರು. ಆ ಸಮಯದಲ್ಲಿಯೂ ಅಲ್ಲಿ ನೆರೊಲ್ ಶನಿಮಂದಿರ, ವಿಕ್ರೋಲಿ ಕನ್ನಡ ಸಂಘಗಳಲ್ಲಿ ಯಕ್ಷಗಾನ ಹಿಮ್ಮೇಳ ತರಬೇತಿ ಮತ್ತು ತರಗತಿಗಳನ್ನೂ ನಡೆಸಿದರು. ಅಲ್ಲಿನ ಶ್ರೀ ಗುರುನಾರಾಯಣ ಯಕ್ಷಗಾನ ಕಲಾಮಂಡಳಿ, ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿ, ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿ- ಮೊದಲಾದ ಸಂಘಗಳಲ್ಲಿ ಭಾಗವತರಾಗಿಯೂ ಸೇವೆ ಸಲ್ಲಿಸಿದರು.

ಒಂದೆರಡು ವರ್ಷಗಳ ನಂತರ ಮುಂಬಯಿಯಿಂದ ಮರಳಿ ಊರಿಗೆ ವಾಸ್ತವ್ಯ ಬದಲಾಯಿಸುವ ಆ ಸಮಯದಲ್ಲಿ ಅಲ್ಲಿನ ಅಭಿಮಾನಿಗಳು ಮತ್ತು ಶಿಷ್ಯವೃಂದದವರು ನಡೆಸಿದ ಬೀಳ್ಕೊಡುಗೆ ಅವಿಸ್ಮರಣೀಯ. ಆ ಅಭಿಮಾನಕ್ಕಾಗಿ ಮೋಹನ ಬೈಪಡಿತ್ತಾಯರು ಈಗಲೂ ಪ್ರತಿ ವರ್ಷ ಮುಂಬಯಿಗೆ ಹೋಗುತ್ತಿರುತ್ತಾರೆ.
“ಹೆಚ್ಚಾಗಿ ನಾನು ಕೆಲವು ವಿಷಯಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಈಗೀಗ ಯಕ್ಷಗಾನದ ಸರ್ವಾಂಗಗಳಲ್ಲಿಯೂ ಅನೇಕ ಬದಲಾವಣೆಗಳಾಗುತ್ತಾ ಉಂಟು. ಒಳ್ಳೆಯ ಹಾಡುಗಾರರೆಲ್ಲಾ ಭಾಗವತರಾಗಲು ಸಾಧ್ಯವಿಲ್ಲ. ಒಳ್ಳೆಯ ಹಾಡುಗಾರರು ನಮ್ಮಲ್ಲಿ ತುಂಬಾ ಮಂದಿ ಇದ್ದಾರೆ. ಆದರೆ ಭಾಗವತರಾಗಲು ಹೆಚ್ಚಿನ ಸಾಧನೆ ಅಗತ್ಯ. ಅಗರಿ, ಕಡತೋಕ ಮೊದಲಾದವರು ಉತ್ತಮ ನಿರ್ದೇಶನ ಸಾಮರ್ಥ್ಯವುಳ್ಳ ಭಾಗವತರು. ಶೇಣಿಯವರಂತಹಾ ಅದ್ಭುತ ಪಾಂಡಿತ್ಯವುಳ್ಳ ಕಲಾವಿದರಿಗೂ ನಿರ್ದೇಶಿಸಬಲ್ಲ ಸಾಮರ್ಥ್ಯ ಅಗರಿ ಭಾಗವತರಲ್ಲಿತ್ತು. ಹೊಸ ಆವಿಷ್ಕಾರ ಮತ್ತು ಬದಲಾವಣೆಗಳಿಗೆ ಸ್ವಾಗತ. ಆದರೆ ಚೌಕಟ್ಟು ಮೀರಕೂಡದು. ಕಡತೋಕ ಮಂಜುನಾಥ ಭಾಗವತರು ಮುಮ್ಮೇಳ ಕಲಾವಿದರ ಸಾಮರ್ಥ್ಯವನ್ನನುಸರಿಸಿ ಪದ್ಯದ ಆವರ್ತನವನ್ನು ಮಾಡುತ್ತಿದ್ದರು. ಇದು ಭಾಗವತರ ಸಾಮರ್ಥ್ಯ ಮತ್ತು ಜಾಣ್ಮೆ. ಈ ವಿಷಯದಲ್ಲಿ ಹೆಚ್ಚು ವಿಮರ್ಶೆ ಇಲ್ಲ. ಕೇಳಿದರೆ ಜನರಿಗೆ ಬೇಕಾದ್ದನ್ನು ನಾವು ಕೊಡ್ತೇವೆ ಎಂದು ಹೇಳುತ್ತಾರೆ. ಜನರು ಬೇಕು ಎಂದು ಚೌಕಿಯಲ್ಲಿ ಬಂದು ಹೇಳುವುದಿಲ್ಲ. ನಾವು ಕೊಟ್ಟ ಕಾರಣದಿಂದಲೇ ಅಲ್ಲವೇ ಜನರಿಗೆ ಗೊತ್ತಾಗುವುದು?” ಎಂದು ಮೋಹನ ಬೈಪಡಿತ್ತಾಯರು ಹೇಳುತ್ತಾರೆ. 

ಅಪಘಾತದ ನಂತರ ಕಲಾಪ್ರದರ್ಶನಗಳಲ್ಲಿ ಭಾಗವಹಿಸಲು ತುಂಬಾ ಕಷ್ಟವಾಗುತ್ತದೆ.  ಬೈಪಡಿತ್ತಾಯರು ಪ್ರದರ್ಶನಗಳ ಭಾಗವಹಿಸುವಿಕೆಯಿಂದ ವಿಮುಖನಾಗಲು ಇದೂ ಒಂದು ಕಾರಣ. ಈಗ ಎಲ್ಲೆಲ್ಲೂ ಹೊಸಗಾಳಿ, ಹೊಸತನದ ಆವಿಷ್ಕಾರಗಳು ನಡೆಯುತ್ತಿರುವುದರಿಂದ ಯಕ್ಷಗಾನ ಕಲಿತವರು ತಾನು ಕಲಿತ ಕೂಡಲೇ ಹೊಸ ಪ್ರಯೋಗಗಳಿಗೆ ತನ್ನನ್ನು ತಾನೇ ಒಡ್ಡಿಕೊಳ್ಳುವುದರಿಂದ ಅದಕ್ಕೆ ಹೊಂದಿಕೊಳ್ಳುವುದೂ ಕಷ್ಟವಾಗಬಹುದು. ಆದರೆ ಕಲಾಸೇವೆಗೆ ಅವಕಾಶವಿದ್ದೇ ಇದೆ. ಈಗ ಇವರು ಮಾಡುತ್ತಿರುವುದೂ ಕಲಾಸೇವೆಯೇ. ನೂರಾರು ಮಂದಿ ವಿದ್ಯಾರ್ಥಿಗಳಿಗೆ ಕಲೆಯನ್ನು ಹೇಳಿಕೊಟ್ಟಿದ್ದಾರೆ. 


“ಉಜಿರೆಯಲ್ಲಿ ತರಗತಿ ನಡೆಸಲು ಸ್ಥಳಾವಕಾಶ ನೀಡಿ ಸಹಕರಿಸಿದವರು ಶ್ರೀ ವಿಜಯರಾಘವ ಪಡ್ವೆಟ್ನಾಯರು. ಅವರ ಸಹಕಾರ ಮತ್ತು ಆಶೀರ್ವಾದದಿಂದಲೇ ಈ ತರಗತಿ ನಡೆಸಲು ಸಾಧ್ಯವಾಯಿತು. ಈಗ ಮೂರು ವರ್ಷಗಳಿಂದ ಅಂದರೆ 2015ರಿಂದ ಈ ತರಗತಿಯನ್ನು ನಡೆಸುತ್ತಿದ್ದೇನೆ. ರಮೇಶ್ ಭಟ್ ಪುತ್ತೂರು, ಜಗನ್ನಿವಾಸ ರಾವ್, ರಾಮಚಂದ್ರ ಅರ್ಬಿತ್ತಾಯ, ರಾಮಪ್ರಸಾದ ಕಲ್ಲೂರಾಯ, ಅಮೋಘ ಕುಂಟಿನಿ, ಶ್ರೀಶ ನಿಡ್ಲೆ, ಮಹೇಶ್ ಕನ್ಯಾಡಿ ಇವರಿಗೆಲ್ಲಾ ಹೇಳಿಕೊಟ್ಟಿದ್ದೇನೆ. ಅಲ್ಲದೆ ಕಡಬ ನಾರಾಯಣ ಆಚಾರ್ಯ, ಪದ್ಮನಾಭ ಉಪಾಧ್ಯಾಯ, ಕೃಷ್ಣಪ್ರಕಾಶ ಉಳಿತ್ತಾಯರಿಗೂ ನನ್ನ ಅನುಭವಗಳನ್ನು ಧಾರೆ ಎರೆದಿದ್ದೇನೆ. ಇವರಲ್ಲದೆ ಇನ್ನೂ ಹಲವಾರು ಮಂದಿ ಶಿಷ್ಯರು ಹವ್ಯಾಸಿ ರಂಗದಲ್ಲಿಯೂ ಮಿಂಚುತ್ತಿದ್ದಾರೆ” ಎಂದು ಬೈಪಡಿತ್ತಾಯರು ತಿಳಿಸಿದರು. 

ಅಣ್ಣ ಹರಿನಾರಾಯಣ ಬೈಪಾಡಿತ್ತಾಯ, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ಪದ್ಯಾಣ ಶಂಕರನಾರಾಯಣ ಭಟ್, ಕುದ್ರೆಕೋಡ್ಲು ರಾಮ ಭಟ್ ಹಾಗೂ ನನ್ನ ಹಿಂದಿನ ಹೆಚ್ಚಿನ ಎಲ್ಲಾ ಮದ್ದಳೆವಾದಕರನ್ನೂ ಮೆಚ್ಚುವ ಮೋಹನ ಬೈಪಾಡಿತ್ತಾಯರ ಒಡನಾಟದ ಕಲಾವಿದರು ದೇಲಂತಮಜಲು ಸುಬ್ರಹ್ಮಣ್ಯ ಭಟ್, ಪ್ರಭಾಕರ ಗೋರೆ, ಚೇವಾರು ಶಂಕರ ಕಾಮತ್, ಚೇವಾರು ರಾಮಕೃಷ್ಣ ಕಾರಂತ್, ಲಕ್ಷ್ಮೀಶ ಅಮ್ಮಣ್ಣಾಯರು, ಅಡೂರು ಗಣೇಶ್ ರಾವ್, ಪದ್ಮನಾಭ ಉಪಾಧ್ಯಾಯ ಹಾಗೂ ಪ್ರಸ್ತುತ ರಂಗದಲ್ಲಿರುವ ಹಲವು ಹಿಮ್ಮೇಳ ಕಲಾವಿದರು.
“1987ರಲ್ಲಿ ಬೆಳ್ಮಣ್ ಮೇಳದಲ್ಲಿದ್ದಾಗ ನಡೆದ ವಾಹನ ಅಪಘಾತ ನನ್ನ ಜೀವನದಲ್ಲಿ ಮುಖ್ಯ ತಿರುವು. 2002ರ ನಂತರ ನಾನು ಮುಂಬಯಿಯಲ್ಲಿ ಹಲವಾರು ಮಂದಿಗೆ ಹಿಮ್ಮೇಳ ತರಗತಿಯನ್ನು ನಡೆಸುತ್ತಿದ್ದೆ. ಮುಂಬಯಿಯಿಂದ ಮರಳುವಾಗ ಶಿಷ್ಯವೃಂದ ಮತ್ತು ಅಭಿಮಾನಿಗಳು ಬೀಳ್ಕೊಡುಗೆ ಸಮಾರಂಭದಲ್ಲಿ ಸತ್ಕರಿಸಿದ್ದು ಮರೆಯಲಾರದ ಘಟನೆ” ಎಂದು ಬೈಪಡಿತ್ತಾಯರು ಹೇಳುತ್ತಾರೆ. 

ಪ್ರಸ್ತುತ ಹಲವಾರು ವರ್ಷಗಳಿಂದ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನಕ್ಕೆ ಸೇರಿದ ಕಟ್ಟಡವೊಂದರಲ್ಲಿ ಯಕ್ಷಗಾನ ತರಗತಿಗಳನ್ನು ನಿರಂತರವಾಗಿ ನಡೆಸುತ್ತಲೇ ಇದ್ದಾರೆ. ಈ ಯಕ್ಷಗಾನ ತರಗತಿಯನ್ನು ನಡೆಸುವುದಕ್ಕೆ ದೇವಳದ ಧರ್ಮದರ್ಶಿ ಶ್ರೀ ವಿಜಯರಾಘವ ಪಡ್ವೆಟ್ನಾಯರ ಸಹಕಾರದಿಂದಲೇ ಸಾಧ್ಯ ವಾಯಿತು ಎಂದು ಮೋಹನ ಬೈಪಾಡಿತ್ತಾಯರು ಕೃತಜ್ಞತೆಯಿಂದ ಸ್ಮರಿಸುತ್ತಾರೆ.

ಪೀಠಿಕೆ ವೇಷಧಾರಿ, ಅಭಿನವ ದೇವೇಂದ್ರ ಶ್ರೀ ಜಯಾನಂದ ಸಂಪಾಜೆ 

ಶ್ರೀ ಜಯಾನಂದ ಸಂಪಾಜೆ ಅವರು ಅನೇಕ ಮೇಳಗಳಲ್ಲಿ ತಿರುಗಾಟ ಮಾಡಿದ ಅನುಭವಿ. ಪ್ರಸ್ತುತ ಹನುಮಗಿರಿ ಮೇಳದಲ್ಲಿ ವ್ಯವಸಾಯಿ. ಇವರು ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಸುಳ್ಯಕೋಡಿ ಎಂಬಲ್ಲಿ ೧೯೭೩ನೇ ಇಸವಿ ಡಿಸೆಂಬರ್ ೮ರಂದು ಶ್ರೀ ತಿಮ್ಮಯ್ಯ ಗೌಡ ಮತ್ತು ಲಕ್ಷ್ಮಿ ದಂಪತಿಗಳ ಪುತ್ರನಾಗಿ ಜನಿಸಿದರು. ೭ನೇ ಕ್ಲಾಸ್ ವರೆಗೆ ಕಲ್ಲುಗುಂಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪಿಯುಸಿ ತನಕ ಸಂಪಾಜೆ ಪದವಿಪೂರ್ವ ಕಾಲೇಜಿನಲ್ಲಿ ಓದಿದ್ದರು.

ಕಲ್ಲುಗುಂಡಿ ಪ್ರದೇಶ ಯಕ್ಷಗಾನದ ಆಡುಂಬೊಲ. ತೆಂಕು ಮತ್ತು ಬಡಗಿನ ಮೇಳಗಳ ಪ್ರದರ್ಶನಗಳು ನಡೆಯುತ್ತಿತ್ತು. ತೆಂಕಿನ ಮೇಳಗಳ ಪ್ರದರ್ಶನಗಳು ಅನಿವಾರ್ಯಕ್ಕೆ ರದ್ದಾದರೆ ಅಂದು ಕಲ್ಲುಗುಂಡಿಯಲ್ಲಿ ಆಟ ಇರುತ್ತಿತ್ತು. ಯಕ್ಷಗಾನ ಕಲೆಗೆ ಕೊರತೆಯಾಗಬಾರದೆಂಬ ಒಳ್ಳೆಯ ಮನಸಿನಿಂದ ಆಟ ಆಡಿಸುವ ಮಹನೀಯರಿದ್ದರು. ಯಕ್ಷಗಾನಾಸಕ್ತಿ ಅಷ್ಟು ತೀವ್ರವಾಗಿತ್ತು.

ಕಲ್ಲುಗುಂಡಿಗಳಲ್ಲಿ ಆಗುತ್ತಿದ್ದ ಆಟಗಳನ್ನು ನೋಡುವುದು, ನೆಲದಲ್ಲೇ ಕುಳಿತು ವೀಕ್ಷಣೆ, ಚೌಕಿಗೆ ಹೋಗಿ ಕಲಾವಿದರನ್ನು ನೋಡುವುದು, ಅವರಲ್ಲಿ ಮಾತನಾಡುವುದು. ಶಾಲೆಯಲ್ಲಿ ಪಾಠ ಕೇಳುವಾಗಲೂ ಆಟ ನೆನಪಾಗುವುದು, ಹತ್ತಾರು ದಿನಗಳ ವರೆಗೂ ಕಲಾವಿದರ ಮಾತು, ಅಭಿನಯಗಳನ್ನು ಮೆಲುಕು ಹಾಕುತ್ತಾ ಅಭಿನಯಿಸುವುದು, ಹೀಗೆ ಸಾಗಿತ್ತು ಜಯಾನಂದರ ಬಾಲ್ಯ ಜೀವನ. ಕಲಾವಿದನಾಗಬೇಕೆಂಬಾಸೆಯೂ ಆಗಿತ್ತು. 

ತಾಳಮದ್ದಳೆಯ ಖ್ಯಾತ ಅರ್ಥಧಾರಿ ಶ್ರೀ ಜಬ್ಬಾರ್ ಸಮೋ ಅವರ ಹುಟ್ಟೂರು ಸಂಪಾಜೆ. ಎಳವೆಯಲ್ಲೇ ಅವರು ಕಲಾಸಂಘಟಕರಾಗಿದ್ದರು. ‘ಯಕ್ಷಮಿತ್ರ ಬಳಗ’ ಎಂಬ ಸಂಸ್ಥೆಯನ್ನೂ ಸ್ಥಾಪಿಸಿದ್ದರು. ಬಣ್ಣದ ಮಹಾಲಿಂಗ, ಪ್ರಸ್ತುತ ಮಡಿಕೇರಿ ಆಕಾಶವಾಣಿಯ ಉದ್ಯೋಗಿ, ಭಾಗವತರೂ ಆದ ಶ್ರೀ ಸುಬ್ರಾಯ ಸಂಪಾಜೆ, ಜಬ್ಬಾರ್ ಸಮೋ ನೇತೃತ್ವದಲ್ಲಿ ಗಜಾನನ ಯಕ್ಷಗಾನ ಸಂಘವು ಸಕ್ರಿಯವಾಗಿತ್ತು. ಯಕ್ಷಮಿತ್ರ ಬಳಗದ ವತಿಯಿಂದ ನಿತ್ಯವೂ ತಾಳಮದ್ದಳೆ ನಡೆಯುತ್ತಿತ್ತು. ಶ್ರೀ ರಾಧಾಕೃಷ್ಣ ಕಲ್ಚಾರ್, ಶ್ರೀ ರಾಮಾ ಜೋಯಿಸ, ಶ್ರೀ ಹರೀಶ ಬಳಂತಿಮೊಗರು, ಶ್ರೀ ಗೋಪಾಲಕೃಷ್ಣ ಮಡಿಕೇರಿ, ಮೊದಲಾದವರು ತಾಳಮದ್ದಳೆಗಳಲ್ಲಿ ಭಾಗವಹಿಸಿ ಕಲಾಸೇವೆ ಮಾಡುತ್ತಿದ್ದರು.

ಜಯಾನಂದ ಅವರು ಇವರೆಲ್ಲರ ಸಂಭಾಷಣೆಗಳನ್ನು ಆಸಕ್ತಿಯಿಂದ ಕೇಳುತ್ತಿದ್ದರು. ಸಣ್ಣಪುಟ್ಟ ಪಾತ್ರಗಳನ್ನೂ ನಿರ್ವಹಿಸುವ ಅವಕಾಶಗಳೂ ಸಿಕ್ಕಿತ್ತು. ಅರ್ಥ ಹೇಳುತ್ತಿದ್ದರು. ಜಯಾನಂದ ಅವರು ಮಾತುಗಾರಿಕೆಯಲ್ಲಿ ಹಿಡಿತ ಸಾಧಿಸಲು ಇದು ಕಾರಣವಾಗಿರಬಹುದು. ಶ್ರೀ ಜಬ್ಬಾರ್ ಸಮೋ ಅವರ ಜತೆ ಕಾಸರಗೋಡಿನ ಶೇಣಿ (ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರ ಹುಟ್ಟೂರು) ವರೆಗೂ ಹೋಗಿ ತಾಳಮದ್ದಳೆ ಕೇಳಿ ಬಂದಿದ್ದರು. ಕಲ್ಲುಗುಂಡಿ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ಶ್ರೀ ಮಹಾಲಿಂಗ ಭಟ್ (ಅಜ್ಜಕಾನ, ಶೇಣಿಯವರ ಕುಟುಂಬಸ್ಥರು) ಪಾಠ ಮಾಡುವಾಗ ರಸವತ್ತಾಗಿ ಪುರಾಣದ ಕತೆಗಳನ್ನೂ ಹೇಳುತ್ತಿದ್ದರಂತೆ. ಅವರು ಯಕ್ಷಗಾನಾಸಕ್ತರೂ ಆಗಿದ್ದರು.

ಊರಿನವರೇ ಆದ ಬಣ್ಣದ ಮಹಾಲಿಂಗ, ಸಂಪಾಜೆ ಶೀನಪ್ಪ ರೈಗಳ ಒಡನಾಟವೂ ಸಿಕ್ಕಿತ್ತು. ಈ ಎಲ್ಲಾ ವಿಚಾರಗಳೂ ಜಯಾನಂದ ಸಂಪಾಜೆ ಅವರಲ್ಲಿದ್ದ ಯಕ್ಷಗಾನ ಆಸಕ್ತಿಯನ್ನು ಕೆರಳಿಸಿತು. ಕಲಾವಿದನಾಗಿ ಬೆಳೆಯಲು ಒಂದು ವೇದಿಕೆಯೂ ಆಗಿತ್ತು. ನಾಟ್ಯ ಕಲಿತು ವೇಷಧಾರಿಯಾಗಬೇಕೆಂಬ ಜಯಾನಂದ ಸಂಪಾಜೆ ಅವರ ಆಸೆ ಸಾಕಾರವಾಗುವ ಸಂದರ್ಭ ಒದಗಿತ್ತು. ಶ್ರೀ ಪರಮೇಶ್ವರ ಆಚಾರ್ಯರು ಕಲ್ಲುಗುಂಡಿಯ ಗಜಾನನ ಯಕ್ಷಗಾನ ಸಂಘದ ಆಶ್ರಯದಲ್ಲಿ ನಾಟ್ಯ ತರಬೇತಿ ನೀಡುತ್ತಿದ್ದರು. ಇವರು ಕಟೀಲು, ಬೆಳ್ಮಣ್ಣು, ಅರುವ ಮೊದಲಾದ ಮೇಳಗಳಲ್ಲಿ ತಿರುಗಾಟ ಮಾಡಿದ ಅನುಭವಿ. ಮಕ್ಕಳ ಬಡತನ, ಕಲಿಕಾಸಕ್ತಿಯನ್ನು ಗಮನಿಸಿ ಅವರು ಅರಸಿನಮಕ್ಕಿಯಿಂದ ಕಲ್ಲುಗುಂಡಿಗೆ ಬಂದು ಉಚಿತವಾಗಿ ನಾಟ್ಯ ಹೇಳಿಕೊಡುತ್ತಿದ್ದರಂತೆ.

ನಾಟ್ಯ ಕಲಿತ ಜಯಾನಂದ ಅವರು ಮೊಟ್ಟಮೊದಲು ಅರಸಿನಮಕ್ಕಿಯ ಕುಂಟಾಲ್ ಪಲ್ಕೆಯಲ್ಲಿ ಕಾರ್ತವೀರ್ಯಾರ್ಜುನ ಪ್ರಸಂಗದಲ್ಲಿ ಕಾರ್ತವೀರ್ಯನ ರಾಣಿಯರಲ್ಲಿ ಒಬ್ಬಳಾಗಿ ವೇಷಧರಿಸಿ ರಂಗಪ್ರವೇಶ ಮಾಡಿದರು. ವಿದ್ಯಾರ್ಥಿಯಾಗಿದ್ದಾಗ ಅವಕಾಶ ಸಿಕ್ಕಾಗ ವೇಷ ಮಾಡುತ್ತಿದ್ದರು. ಪಿಯುಸಿ ವಿದ್ಯಾರ್ಜನೆ ಬಳಿಕ ಮಡಿಕೇರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಐಟಿಐ ಮಾಡಿದ್ದರು. ಇದು ಎರಡು ವರ್ಷಗಳ ಕೋರ್ಸ್. ಆದರೆ ಇವರ ತೀವ್ರ ಯಕ್ಷಗಾನಾಸಕ್ತಿ ಮೇಳದ ತಿರುಗಾಟ ಮಾಡುವಲ್ಲಿ ಪರ್ಯಾಪ್ತವಾಗಿತ್ತು. ೧೯೯೨-೯೩ಕ್ಕೆ ಕಟೀಲು ೪ನೇ ಮೇಳ ಆರಂಭವಾಗಿತ್ತು. ಕಲ್ಲುಗುಂಡಿ ವೆಂಕಟೇಶ ಆಚಾರ್ಯರ ಸಹಕಾರದಿಂದ ಕಟೀಲು ಮೇಳ ಸೇರಿದ್ದರು. ಕಟೀಲು ೨ನೇ ಮೇಳದಲ್ಲಿ ತಿರುಗಾಟ. ಕುರಿಯ ಗಣಪತಿ ಶಾಸ್ತ್ರಿ,  ಪದ್ಯಾಣ ಶಂಕರನಾರಾಯಣ ಭಟ್, ಕೇದಗಡಿ ಗುಡ್ಡಪ್ಪ ಗೌಡ, ಪುಂಡರೀಕಾಕ್ಷ ಉಪಾಧ್ಯಾಯ, ಗಂಗಯ್ಯ ಶೆಟ್ಟಿ, ಬೆಳ್ಳಾರೆ ಮಂಜುನಾಥ ಭಟ್ ಮೊದಲಾದವರ ಒಡನಾಟ.

ಯಕ್ಷಗಾನದ ಬಗೆಗೆ ಹೆಚ್ಚು ತಿಳಿಯದ ಜಯಾನಂದರಿಗೆ ಇವರೆಲ್ಲರೂ ಹೇಳಿಕೊಟ್ಟು ಪ್ರೋತ್ಸಾಹಿಸಿದ್ದರು. ೨ ವರ್ಷ ತಿರುಗಾಟದ ಬಳಿಕ ೧ನೇ ಮೇಳಕ್ಕೆ. ೧ ವರ್ಷ ಕಲಾಸೇವೆ. ಬಳಿಕ ೨ನೇ ಮೇಳಕ್ಕೆ. ಬಲಿಪರು, ಪೆರುವಾಯಿ ನಾರಾಯಣ ಭಟ್, ಪೆರುವಾಯಿ ನಾರಾಯಣ ಶೆಟ್ಟಿ, ರಾಜೀವ ಶೆಟ್ಟಿ, ರೆಂಜಾಳ ಮೊದಲಾದವರ ಒಡನಾಟ. ಮತ್ತೆ ೧ನೇ ಮೇಳಕ್ಕೆ. ಪೂಂಜರು, ಸುಣ್ಣಂಬಳ, ಸುಬ್ರಾಯ ಹೊಳ್ಳ ಮೊದಲಾದ ಕಲಾವಿದರ ಒಡನಾಟ. ಸುಣ್ಣಂಬಳದವರು ವಿಷ್ಣು ಪಾತ್ರ ಮಾಡುತ್ತಿದ್ದಾಗ ಬ್ರಹ್ಮನಾಗಿ ಅಭಿನಯಿಸಿದ್ದು, ಸುಬ್ರಾಯ ಹೊಳ್ಳರೂ ಇವರೂ ಮಧು ಕೈಟಭರಾಗಿ ಜೊತೆಯಾದದ್ದು ಸಂಪಾಜೆ ಜಯಾನಂದರ ಮರೆಯಲಾಗದ ಅನುಭವವಾಗಿತ್ತು.

೧ನೇ ಮೇಳದಲ್ಲಿ ೩ ವರ್ಷಗಳ ಕಲಾಸೇವೆ. ತಂದೆಯವರ ಮರಣದ ನಂತರ ಜಯಾನಂದ ಸಂಪಾಜೆ ಮೇಳದ ತಿರುಗಾಟ ನಿಲ್ಲಿಸಿದ್ದರು. ಬಳಿಕ ಆರಂಭಿಸಿದ ಹೋಟೆಲ್ ಉದ್ಯಮವೂ ಕೈಕೊಟ್ಟಿತ್ತು. ೩ ವರ್ಷಗಳ ಕಾಲ ಯಕ್ಷಗಾನದಿಂದ ದೂರವೇ ಉಳಿದಿದ್ದರು. ೨೦೦೧ನೇ ಇಸವಿ ಜನವರಿ ೧೯ರಂದು ಕಾಣಿಯೂರು ಶ್ರೀ ಚೆನ್ನಪ್ಪ ಮತ್ತು ಶ್ರೀಮತಿ ಲಕ್ಷ್ಮಿ ದಂಪತಿಗಳ ಪುತ್ರಿ ವಿಜಯಾ ಅವರನ್ನು ವಿವಾಹವಾಗಿ ಗೃಹಸ್ಥಾಶ್ರಮಿಯಾದರು. ಬಳಿಕ ಕುಂಟಾರು ಶ್ರೀ ರವೀಶ ತಂತ್ರಿಗಳ ಕುಂಟಾರು ಮೇಳದಲ್ಲಿ ೩ ವರ್ಷ ತುಳು ಮತ್ತು ಪುರಾಣ ಪ್ರಸಂಗಗಳಲ್ಲಿ ಅಭಿನಯಿಸಿದರು. ಬಳಿಕ ವರ್ಕಾಡಿ ಐತಪ್ಪ ಅವರ ಪುತ್ತೂರು ಮೇಳದಲ್ಲಿ ೧ ವರ್ಷ. ಮರಳಿ ಕಟೀಲು ಮೇಳಕ್ಕೆ. ೪ನೇ ಮೇಳದಲ್ಲಿ ೨ ವರ್ಷ ಮತ್ತು ೧ನೇ ಮೇಳದಲ್ಲಿ ೨ ವರ್ಷ ಪೀಠಿಕೆ ವೇಷಧಾರಿಯಾಗಿ ವ್ಯವಸಾಯ ಮಾಡಿದ್ದರು. ಈ ಹಂತದಲ್ಲಿ ಸಂಪಾಜೆ ಜಯಾನಂದ ಅವರು ನಾಟ್ಯ ಮತ್ತು ಮಾತುಗಾರಿಕೆಯಿಂದ ಪೀಠಿಕೆ ವೇಷಧಾರಿಯಾಗಿ ಗುರುತಿಸಿಕೊಂಡಿದ್ದರು.

ಬಳಿಕ ಹೊಸನಗರ ಮೇಳದಲ್ಲಿ ೮ ವರ್ಷ, ಎಡನೀರು ಮೇಳದಲ್ಲಿ ೧ ವರ್ಷ ತಿರುಗಾಟ ನಡೆಸಿ ಪ್ರಸ್ತುತ ೨ ವರ್ಷಗಳಿಂದ ಹನುಮಗಿರಿ ಮೇಳದ ಕಲಾವಿದನಾಗಿ ವ್ಯವಸಾಯ ಮಾಡುತ್ತಿದ್ದಾರೆ. ಶಾಲಾ ವಿದ್ಯಾರ್ಥಿಯಾಗಿದ್ದಾಗ ಯಕ್ಷಗಾನ ಮತ್ತು ಕಲಾವಿದರನ್ನು ಅತೀವ ಪ್ರೀತಿಸುತ್ತಿದ್ದ ಶ್ರೀ ದಾಮೋದರ ಮಾಸ್ತರ್ ಸಂಪಾಜೆ ಜಯಾನಂದರನ್ನು ಪ್ರೋತ್ಸಾಹಿಸಿದ್ದರು. ಶಿವಪ್ಪ ಆಚಾರ್ಯ, ಎಡ್ಪಣೆ ಕೃಷ್ಣಪ್ಪ ಪೂಜಾರಿ, ಕೊರಗಪ್ಪ ಮಣಿಯಾಣಿ ಇವರೂ ಸಹಕಾರ ನೀಡಿದ್ದರು. ಕಾಲೇಜು ಉಪಾನ್ಯಾಸಕರಾದ ಶ್ರೀ ಗೋಪಾಲ್ ಪೆರ್ಮುದೆ ಅವರು ಅರ್ಥಗಾರಿಕೆಯಲ್ಲಿ ಸಹಕರಿಸಿದ್ದರು.(ಗೋಪಾಲ್ ಪೆರ್ಮುದೆ ಅರ್ಥಧಾರಿಯೂ, ವೇಷಧಾರಿಯೂ ಆಗಿದ್ದರು.) ಹೊಸನಗರ, ಎಡನೀರು ಮತ್ತು ಹನುಮಗಿರಿ ಮೇಳದಲ್ಲಿ ಸರ್ವ ಕಲಾವಿದರೂ ಸಹಕರಿಸಿದ್ದಾರೆ. ಚೆನ್ನಪ್ಪ ಶೆಟ್ರು ನಮ್ಮಿಂದ ದೂರವಾದುದು ತುಂಬಲಾರದ ನಷ್ಟ. ಅವರು ಹೇಳಿಕೊಟ್ಟು ನನ್ನನ್ನು ತಿದ್ದಿದ್ದಾರೆ.

ನನ್ನನ್ನು ವ್ಯಕ್ತಿಯಾಗಿ ರೂಪಿಸಿದವರು, ಕಾಣಿಸಿಕೊಳ್ಳಲು ಕಾರಣರು ಡಾ. ಶ್ರೀ ಟಿ. ಶ್ಯಾಮ್ ಭಟ್ಟರು. ಬದುಕಿನ ಪುನರುತ್ಥಾನಕ್ಕೆ ಅವರು ಕಾರಣರು. ಕೇಳಿದ್ದನ್ನು ಇಲ್ಲ ಎಂದು ಹೇಳಿಲ್ಲ. ಅವರ ಮನೆಯ ಸದಸ್ಯನಂತೇ ನೋಡಿದ್ದಾರೆ. ಅವರು ಕಲಾವಿದರ ಪಾಲಿಗೆ ಕಲ್ಪವೃಕ್ಷ. ಇದು ಜಯಾನಂದ ಸಂಪಾಜೆ ಅವರ ಮನದ ಮಾತುಗಳು. ಸಂಪಾಜೆ ಜಯಾನಂದರು ಉತ್ತಮವಾಗಿ ಭಾಷಣ ಮಾಡಬಲ್ಲರು. ಕನ್ನಡ ಭಾಷೆಯಲ್ಲಿ ಉತ್ತಮ ಹಿಡಿತವಿದ್ದು ನಾಟ್ಯ ಮತ್ತು ಹಿತವಾದ ಮಾತುಗಳಿಂದ ಪೀಠಿಕೆ ವೇಷಗಳನ್ನು ಧರಿಸಿ ಕಲಾಸೇವೆ ಮಾಡುತ್ತಿದ್ದಾರೆ. ಹೆಚ್ಚಿನ ಎಲ್ಲಾ ಪ್ರಸಂಗಗಳಲ್ಲಿ ದೇವೇಂದ್ರನೇ ಮೊದಲಾದ ಪ್ರಸಂಗದ ಮೊದಲ ವೇಷಗಳು ಇವರಿಗೇ ಮೀಸಲು. ಹಾಗಾಗಿ ಕಲಾಭಿಮಾನಿಗಳಿಂದ ‘ಅಭಿನವ ದೇವೇಂದ್ರ’ ಎಂದು ಕರೆಸಿಕೊಂಡಿದ್ದಾರೆ. ಗೂನಡ್ಕದ ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಮತ್ತು ಮೈಸೂರಿನ ಕರಾವಳೀ ಯಕ್ಷಗಾನ ಕಲಿಕಾ ಕೇಂದ್ರದಲ್ಲಿ ಯಕ್ಷಗಾನ ನಾಟ್ಯ ಮತ್ತು ಸಂಭಾಷಣೆಗಳ ಬಗೆಗೆ ತರಬೇತಿಯನ್ನೂ ನೀಡುತ್ತಿದ್ದಾರೆ.

“ಯಕ್ಷಗಾನಕ್ಕೆ ನಾಟ್ಯವೇ ಮುಖ್ಯವಲ್ಲ. ಪ್ರೌಢ ಮಾತುಗಾರಿಕೆಯೂ ಬೇಕು. ಸಂಭಾಷಣೆಗಳು ಭಾವನಾತ್ಮಕವಾಗಿರಬೇಕು. ಅಭಿನಯ ಮತ್ತು ಮಾತುಗಳಲ್ಲಿ ರಸಸೃಷ್ಟಿಯಾಗಲೇ ಬೇಕು. ಅಭ್ಯಾಸಿಗಳು ಆ ನಿಟ್ಟಿನಲ್ಲಿ ಗಮನ ಹರಿಸಲೇ ಬೇಕು. ಆಧುನಿಕತೆಯ ಶೈಲಿಯಲ್ಲಿ ಯಕ್ಷಗಾನವನ್ನು ಪ್ರದರ್ಶಿಸಬಾರದು. ಹಿಮ್ಮೇಳ ಮತ್ತು ಮುಮ್ಮೇಳಗಳು ಒಂದಕ್ಕೊಂದು ಪೂರಕವಾಗಿರಬೇಕು. ಯಕ್ಷಗಾನದ ಪಾತ್ರಗಳ ವೇಗಕ್ಕೆ ಕಡಿವಾಣ ಹಾಕಬೇಕು. ಈಗ ಅಪಘಾತದ ವೇಗವಿರುವುದನ್ನು ಕಾಣಬಹುದು. ಫೋಟೋಗಳಿಗೆ ಫೋಸ್ ಕೊಟ್ಟವ ಕಲಾವಿದನಲ್ಲ. ಪಾತ್ರದ ಒಳಹೊಕ್ಕು ಆ ಪಾತ್ರವಾಗಿಯೇ ಅಭಿನಯಿಸಿದವ ಕಲಾವಿದ. ಕಲಾವಿದರ ಜತೆ ಪ್ರೇಕ್ಷಕನೂ ಪ್ರಬುದ್ಧನಾಗಿರಬೇಕು. ರಸಾಸ್ವಾದನೆ ಮಾಡುವ,  ಪ್ರತಿಭೆಯನ್ನು ನಿರ್ಣಯಿಸುವ ಪ್ರೇಕ್ಷಕರೇ ಯಕ್ಷಗಾನಕ್ಕೆ ಆಸ್ತಿ. ಅನಕ್ಷರಸ್ಥರಾಗಿದ್ದ ಹಿಂದಿನ ಕಾಲದ ಪ್ರೇಕ್ಷಕರು ಯಕ್ಷಗಾನವನ್ನು ಆಸ್ವಾದಿಸುವಲ್ಲಿ ಪ್ರಬುದ್ಧರಾಗಿದ್ದರು. ಆ ಅನುಭವ ನಮಗಾಗಿದೆ. ಪಾತ್ರವು ಮೇಳಯಿಸಬೇಕಾದರೆ ಪಾತ್ರಧಾರಿ ಪಾತ್ರದ ಒಳ ಹೊಕ್ಕರೆ ಸಾಲದು. ಪ್ರೇಕ್ಷಕನೂ ಆ ಪಾತ್ರದ ಒಳ ಹೋಗಿರಬೇಕು. ಪಾತ್ರಧಾರಿಗೆ ವಾದ ಮತ್ತು ಸಂವಾದದ ಅಂತರವು ತಿಳಿದಿರಬೇಕು. ವಾದ ಮಾಡುವಲ್ಲಿ ಸಂವಾದ ಮಾಡಿದರೆ, ಸಂವಾದ ಮಾಡುವಲ್ಲಿ ವಾದ ಮಾಡಿದರೆ ಪರಿಣಾಮ ಕೆಡುಕಾಗುತ್ತದೆ. ಕಲಾವಿದ ಕವಿಯ ಆಶಯವನ್ನು ಮೀರಿ ನಡೆಯಬಾರದು. ನಡೆದರೆ ಕವಿಯ ಆಶಯವು ಪ್ರಕಟವಾಗದೆ ಪ್ರಸಂಗವು ಸೋಲುವುದು” ಎಂಬ ನಿಲುಮೆಗಳನ್ನು ಹೊಂದಿರುವ ಸಂಪಾಜೆ ಜಯಾನಂದರು ಪಾವಂಜೆ ಯಕ್ಷಧ್ರುವ ಪ್ರಶಸ್ತಿ ಮತ್ತು ಅರಸು ಸಂಕಲ ಪ್ರಶಸ್ತಿಯನ್ನು ಪಡೆದಿರುತ್ತಾರೆ.

ಅಲ್ಲದೆ ಅನೇಕ ಕಡೆ ಸನ್ಮಾನಿತರಾಗಿದ್ದಾರೆ. ಅಭಿನವ ದೇವೇಂದ್ರ ಶ್ರೀ ಜಯಾನಂದ ಸಂಪಾಜೆ ಸಂಸಾರಿಕವಾಗಿಯೂ ತೃಪ್ತರು. ಜಯಾನಂದ ಮತ್ತು ವಿಜಯಾ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರಿ ಕು| ಭ್ರಾಮರೀ II PUC ವಿದ್ಯಾರ್ಥಿನಿ. ಪುತ್ರ ಮಾ| ನೈಋತ್ಯ I PUC ವಿದ್ಯಾರ್ಥಿ. ಮಕ್ಕಳಿಬ್ಬರ ಬಾಳು ಬಂಗಾರವಾಗಲಿ. ಸಂತಸದಿಂದ ಕೂಡಿರಲಿ. ಸಂಪಾಜೆ ಜಯಾನಂದರ ಕಲಾಸೇವೆಯು ನಿರಂತರವಾಗಿರಲಿ. ಕಲಾಮಾತೆಯ ಅನುಗ್ರಹ ಸದಾ ಇರಲಿ. ಕಲಾಭಿಮಾನಿಗಳ ಪರವಾಗಿ ಶುಭಹಾರೈಕೆಗಳು. 

ಲೇಖಕ: ರವಿಶಂಕರ್ ವಳಕ್ಕುಂಜ  

ಥೈಲ್ಯಾಂಡ್ ದೇಶದಲ್ಲಿ ರಾಮಾಯಣದ ಕಥೆ ಹೇಳುವ ನೃತ್ಯ ನಾಟಕ

ಥೈಲ್ಯಾಂಡ್ ದೇಶದಲ್ಲಿಯೂ ಭಾರತೀಯ ಪುರಾಣದ ಮಹಾ ಕಾವ್ಯಕ್ಕೆ ಸಂಬಂಧಪಟ್ಟಂತಹಾ ಕಲಾ ಪ್ರಕಾರವೊಂದು ಪ್ರಸಿದ್ಧಿಯನ್ನು ಪಡೆದಿದೆ ಎಂಬುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಆದರೆ ಇದು ನಿಜ. ಬಹುಶಃ ಥೈಲ್ಯಾಂಡ್ ನಾಗರಿಕರು ಬೌದ್ಧ ಮತದ ಅನುಯಾಯಿಗಳಾಗಿದ್ದುದು ಇದಕ್ಕೆ ಕಾರಣವಾಗಿರುವ ಸಾಧ್ಯತೆಯಿದೆ.

ಈ ದೇಶದ ಜನರಲ್ಲಿ 94% ಕ್ಕಿಂತಲೂ ಜನರು ಹೆಚ್ಚು ಬೌದ್ಧ ಮತಾನುಯಾಯಿಗಳು. ಖೋನ್ (Khon) ಥೈಲ್ಯಾಂಡ್‌ನ ನೃತ್ಯ ನಾಟಕ ಪ್ರಕಾರವಾಗಿದೆ. ಈ ನೃತ್ಯವನ್ನು ನಿರೂಪಕರು ಮತ್ತು ಸಾಂಪ್ರದಾಯಿಕ ಸಮೂಹದೊಂದಿಗೆ ಪುರುಷರು ರಾಜಮನೆತನದಲ್ಲಿ ಪ್ರದರ್ಶಿಸುತ್ತಾರೆ. ಸ್ತ್ರೀಯರು ಪ್ರದರ್ಶಿಸುವ ಈ ನೃತ್ಯ ನಾಟಕದ ಇನ್ನೊಂದು ಪ್ರಬೇಧವನ್ನು ಖೋನ್ ಫುಯಿಂಗ್  ಎಂದು ಕರೆಯಲಾಗುತ್ತದೆ. 

ಖೋನ್ ಥೈಲ್ಯಾಂಡ್ ಸಾಂಪ್ರದಾಯಿಕ ನೃತ್ಯವಾಗಿದ್ದು, ಇದು ಇಲ್ಲಿಯ ಅನೇಕ ಕಲೆಗಳನ್ನು ಸಮನ್ವಯಗೊಳಿಸುತ್ತದೆ. ಆದರೆ ಅದರ ಮೂಲ ಅಥವಾ ಉಗಮಸ್ಥಾನಕ್ಕೆ ಯಾವುದೇ ನಿಖರವಾದ ಪುರಾವೆಗಳಿಲ್ಲ ಎಂದು ಹೇಳಲಾಗುತ್ತದೆ.  ಆದರೆ ಇದನ್ನು ಥಾಯ್ ಸಾಹಿತ್ಯದ ಲಿಲಿಟ್ ಫ್ರಾ ಲೋ (ಸು. 1529) ನಲ್ಲಿ ಉಲ್ಲೇಖಿಸಲಾಗಿದೆ, ಇದನ್ನು ರಾಜ ನಾರೈ ಮಹಾರಾಜ್ ಯುಗದ ಮೊದಲು ಬರೆಯಲಾಗಿದೆ.

ರಂಗಭೂಮಿ ನಾಟಕಗಳ ಥಾಯ್ ಕಲೆ ಈಗಾಗಲೇ 17 ನೇ ಶತಮಾನದ ಹೊತ್ತಿಗೆ ಹೆಚ್ಚು ವಿಕಸನಗೊಂಡಿರಬೇಕು ಎಂದು ಐತಿಹಾಸಿಕ ಪುರಾವೆಗಳು ತೋರಿಸುತ್ತವೆ. ಅವರು ಕೋನ್ ಎಂದು ಕರೆಯುವುದು ಫಿಗರ್ ಡ್ಯಾನ್ಸ್, ಪಿಟೀಲು ಮತ್ತು ಇತರ ಕೆಲವು ವಾದ್ಯಗಳಿಗೆ. ನರ್ತಕರು ಮುಖವಾಡ ಹೊಂದಿದ್ದಾರೆ ಮತ್ತು ಶಸ್ತ್ರಸಜ್ಜಿತರಾಗಿದ್ದಾರೆ ಮತ್ತು ನೃತ್ಯಕ್ಕಿಂತ ಯುದ್ಧವನ್ನು ಪ್ರತಿನಿಧಿಸುವ ಹಾಗೆ ಭಾಸವಾಗುತ್ತದೆ. 

ಖೋನ್‌ನ ಮೂಲ ನಿಖರವಾಗಿ ತಿಳಿದಿಲ್ಲ. “ಖೋನ್” “ಕೋರಾ” ಅಥವಾ “ಖೋನ್” ಪದವು ಹಿಂದಿ ಚರ್ಮದಿಂದ ಮಾಡಿದ ಸಂಗೀತ ವಾದ್ಯದ ಹೆಸರು. ಇದರ ನೋಟ ಮತ್ತು ಆಕಾರವು ಡ್ರಮ್‌ಗೆ ಹೋಲುತ್ತದೆ. ಇದು ಜನಪ್ರಿಯವಾಗಿತ್ತು ಮತ್ತು ಸ್ಥಳೀಯ ಸಾಂಪ್ರದಾಯಿಕ ಪ್ರದರ್ಶನಗಳಿಗೆ ಬಳಸಲ್ಪಡುತ್ತಿತ್ತು. ಈ ಕಲೆಯು  ಇಂದು ಸ್ತ್ರೀ ಪಾತ್ರಗಳನ್ನು ನಿರ್ವಹಿಸುವ ಸ್ತ್ರೀ ಪಾತ್ರಧಾರಿಗಳನ್ನು ಒಳಗೊಂಡಿದೆ. ಈ ಹಿಂದೆ ಪುರುಷರು ಸ್ತ್ರೀ ಪಾತ್ರಗಳನ್ನು ನಿರ್ವಹಿಸುತ್ತಿದ್ದರು.  

ಖೋನ್ ಕಲಾಪ್ರಾಕಾರವು  ಮಹಾಕಾವ್ಯ ರಾಮಕೀನ್ (ಭಾರತೀಯ ಹಿಂದಿ ಮಹಾಕಾವ್ಯ ರಾಮಾಯಣದ ಥಾಯ್ ರೂಪಾಂತರ) ಕಥೆಗಳನ್ನು ಆಧರಿಸಿದೆ. ಥಾಯ್ ಸಾಹಿತ್ಯ ಮತ್ತು ನಾಟಕವು ಭಾರತೀಯ ಕಲೆ ಮತ್ತು ದಂತಕಥೆಯಿಂದ ಉತ್ತಮ ಸ್ಫೂರ್ತಿ ಪಡೆಯುತ್ತದೆ. ಖೋನ್ ರಾಮಾಕಿಯೆನ್ ಅನ್ನು ಮೂಲತಃ ಪುರುಷರು ಮಾತ್ರ ನಿರ್ವಹಿಸಬಹುದಾಗಿದೆ. ಮಹಿಳೆಯರು ದೇವರು ಮತ್ತು ದೇವತೆಗಳಾಗಿ ಮಾತ್ರ ಪ್ರದರ್ಶನ ನೀಡುತ್ತಿದ್ದರು.  ಹಿಂದೆ ಖೋನ್ ಅನ್ನು ರಾಜಮನೆತನದವರು ಮಾತ್ರ ನಡೆಸುತ್ತಿದ್ದರು.

ಥೈಲ್ಯಾಂಡ್ ‘ಖೋನ್ ‘ ವಾಸ್ತವಿಕ ನೃತ್ಯ ಚಲನೆಗಳನ್ನು ಒತ್ತಿಹೇಳುತ್ತದೆ, ವಿಶೇಷವಾಗಿ  ಇದು ಸೌಂದರ್ಯ ಮತ್ತು ಉತ್ತಮ ಕೋತಿ ತರಹದ ನೃತ್ಯ ಭಂಗಿಗಳ ಮೇಲೆ ಕೇಂದ್ರೀಕರಿಸುತ್ತದೆ. ಖೋನ್ ತರಬೇತಿಯನ್ನು ಬಹಳ ಚಿಕ್ಕ ವಯಸ್ಸಿನಲ್ಲಿಯೇ ಪ್ರಾರಂಭಿಸಲಾಗುತ್ತದೆ, ಇದರಿಂದಾಗಿ ಪ್ರದರ್ಶಕನು ಬ್ಯಾಕ್ ಫ್ಲಿಪ್‌ಗಳನ್ನು ಮಾಡಲು ಸಾಕಷ್ಟು ಹೊಂದಿಕೊಳ್ಳುತ್ತಾನೆ. ವಿಶೇಷವಾಗಿ ವಾನರ ಅಥವಾ ಅರಣ್ಯವಾಸಿಗಳ ಪಾತ್ರವನ್ನು ಮಾಡಲು ಸಾಕಷ್ಟು ತರಬೇತಿಯನ್ನು ಪಡೆಯಲಾಗುತ್ತದೆ. 

ಫಸಲು ಬಿಡುವ ಕಾಲದ ಅಸ್ಸಾಂ ನ ‘ಬಿಹು ನೃತ್ಯ’ – ಫಲವತ್ತತೆಯ ಸಂಕೇತ (Bihu Dance of Assam)

ಅಗಾಧವಾದ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದ ಭಾರತದ ಕಲಾ ಪ್ರಕಾರಗಳು ಬೆರಗು ಹುಟ್ಟಿಸುವಂತದ್ದು. ಅದರಲ್ಲೂ ಭಾರತದ ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರ ಮೊದಲಾದ ಪ್ರದೇಶಗಳಲ್ಲಿ ವಿಭಿನ್ನ ಸಾಂಸ್ಕೃತಿಕ ವೈವಿಧ್ಯಗಳನ್ನು ಮತ್ತು ಜಾನಪದ ಕಲಾ ಪ್ರಾಕಾರಗಳನ್ನು ಕಾಣಬಹುದು.

ಅದರಲ್ಲಿ ಅಸ್ಸಾಂ ರಾಜ್ಯದ ಬಿಹು ನೃತ್ಯವು ಬಿಹು ಉತ್ಸವಕ್ಕೆ ಸಂಬಂಧಿಸಿದ ರಾಜ್ಯದ ಸ್ಥಳೀಯ ಜಾನಪದ ನೃತ್ಯವಾಗಿದೆ ಮತ್ತು ಅಸ್ಸಾಮೀಸ್ ಸಂಸ್ಕೃತಿಯ ಪ್ರಮುಖ ಭಾಗವಾಗಿದೆ. ಈ ನೃತ್ಯಪ್ರಕಾರವು ಗುಂಪು ನೃತ್ಯವಾಗಿದೆ ಮತ್ತು  ಒಂದು ಗುಂಪಿನಲ್ಲಿ ಪ್ರದರ್ಶನ ನೀಡಲಾಗುತ್ತದೆ.  ಬಿಹು ನೃತ್ಯದ ನರ್ತಕರು ಸಾಮಾನ್ಯವಾಗಿ ಯುವಕ-ಯುವತಿಯರು. ನೃತ್ಯ ಶೈಲಿಯು ಚುರುಕಾದ ಹೆಜ್ಜೆಗಳು ಮತ್ತು ತ್ವರಿತ ಕೈ ಚಲನೆಗಳಿಂದ ನಿರೂಪಿಸಲ್ಪಟ್ಟಿದೆ.

ನರ್ತಕರ ಸಾಂಪ್ರದಾಯಿಕ ವೇಷಭೂಷಣವು ವರ್ಣರಂಜಿತವಾಗಿದೆ ಮತ್ತು ಕೆಂಪು ಬಣ್ಣದ ಸುತ್ತ ಕೇಂದ್ರೀಕೃತವಾಗಿದೆ.  ನೃತ್ಯ ಪ್ರಕಾರದ ಮೂಲವು ಸ್ಪಷ್ಟವಾಗಿಲ್ಲ, ಆದರೂ ಅಸ್ಸಾಂನ ವೈವಿಧ್ಯಮಯ ಜನಾಂಗೀಯ ಗುಂಪುಗಳಾದ ಡಿಯೋರಿಸ್, ಸೋನೊವಾಲ್ ಕಚಾರಿಸ್, ಚುಟಿಯಾಸ್, ಬೊರೊಸ್, ಮಿಸ್ಸಿಂಗ್ಸ್, ರಭಾಸ್, ಮೊರನ್ ಮತ್ತು ಬೊರಾಹಿಸ್ ಇತರರ ಸಂಸ್ಕೃತಿಯಲ್ಲಿ ಜಾನಪದ ನೃತ್ಯ ಸಂಪ್ರದಾಯವು ಯಾವಾಗಲೂ ಬಹಳ ಮಹತ್ವದ್ದಾಗಿದೆ.   

ವಿದ್ವಾಂಸರ ಪ್ರಕಾರ, ಬಿಹು ನೃತ್ಯವು ಪ್ರಾಚೀನ ಆರಾಧನೆಗಳ ಮೂಲವನ್ನು ಹೊಂದಿದೆ.  ಸಸ್ಯಸಂಕುಲಗಳು ಫಲ ಬಿಡುವ ಸಮಯದಲ್ಲಿ ಹೆಚ್ಚಗಿ ಮಾಡುತ್ತಿದ್ದ ಈ  ಬಿಹು ನೃತ್ಯವು ಸಾಂಪ್ರದಾಯಿಕವಾಗಿ, ಸ್ಥಳೀಯ ಕೃಷಿ ಸಮುದಾಯಗಳು ಹೊರಾಂಗಣದಲ್ಲಿ, ಹೊಲಗಳು, ತೋಪುಗಳು, ಕಾಡುಗಳಲ್ಲಿ ಅಥವಾ ನದಿಗಳ ತೀರದಲ್ಲಿ, ವಿಶೇಷವಾಗಿ ಅಂಜೂರದ ಮರದ ಕೆಳಗೆ ನೃತ್ಯವನ್ನು ಪ್ರದರ್ಶಿಸುತ್ತಾರೆ.  ಬಿಹು ನೃತ್ಯದ ಆರಂಭಿಕ ಮಾಹಿತಿಗಳು 9 ನೇ ಶತಮಾನದ ಅಸ್ಸಾಂನ ತೇಜ್ಪುರ್ ಮತ್ತು ದಾರಂಗ್ ಜಿಲ್ಲೆಗಳಲ್ಲಿ ಕಂಡುಬರುವ ಶಿಲ್ಪಗಳಲ್ಲಿ ಕಂಡುಬರುತ್ತದೆ. ಬಿಹುವನ್ನು 14 ನೇ ಶತಮಾನದ ಚುಟಿಯಾ ಕಿಂಗ್ ಲಕ್ಷ್ಮೀನಾರಿಯನ್ ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ.  

ಪ್ರದರ್ಶನಕಾರರು, ಯುವಕ-ಯುವತಿಯರು ನಿಧಾನವಾಗಿ ಪ್ರದರ್ಶನ ಸ್ಥಳಕ್ಕೆ ಕಾಲಿಡುವುದರೊಂದಿಗೆ ನೃತ್ಯವು ಪ್ರಾರಂಭವಾಗುತ್ತದೆ.   ನಂತರ ಪುರುಷರು ಡ್ರಮ್ಸ್ (ವಿಶೇಷವಾಗಿ ಡಬಲ್-ಹೆಡೆಡ್ ಧೋಲ್), ಹಾರ್ನ್-ಪೈಪ್ ಮತ್ತು ಕೊಳಲುಗಳಂತಹ ಸಂಗೀತ ವಾದ್ಯಗಳನ್ನು ನುಡಿಸಲು ಪ್ರಾರಂಭಿಸುತ್ತಾರೆ. ಆದರೆ ಮಹಿಳೆಯರು ತಮ್ಮ ಕೈಗಳನ್ನು ಸೊಂಟದ ಮೇಲೆ ಇಟ್ಟು ತಲೆಕೆಳಗಾದ ತ್ರಿಕೋನ ಆಕಾರವನ್ನು ರೂಪಿಸುತ್ತಾರೆ. ನಂತರ ಮಹಿಳೆಯರು ಸೊಂಟದಿಂದ ಸ್ವಲ್ಪ ಮುಂದಕ್ಕೆ ಬಾಗುತ್ತಿರುವಾಗ ನಿಧಾನವಾಗಿ ಸಂಗೀತಕ್ಕೆ ತಕ್ಕಂತೆ ಚಲಿಸಲು ಪ್ರಾರಂಭಿಸುತ್ತಾರೆ.

ಕ್ರಮೇಣ, ಅವರು ಭುಜಗಳನ್ನು ತೆರೆದು ತಮ್ಮ ಕಾಲುಗಳನ್ನು ಸ್ವಲ್ಪ ದೂರದಲ್ಲಿ ಇರಿಸಿ, ಬಿಹು ನೃತ್ಯದಲ್ಲಿ ಬಳಸುವ ಮುಖ್ಯ ಭಂಗಿಯನ್ನು ಅಳವಡಿಸಿಕೊಳ್ಳುತ್ತಾರೆ. ಈ ಮಧ್ಯೆ ಪುರುಷರು ನುಡಿಸುವ ಸಂಗೀತವು ತಾತ್ಕಾಲಿಕ ಮತ್ತು ತೀವ್ರತೆಯನ್ನು ಹೆಚ್ಚಿಸುತ್ತದೆ, ಮಹಿಳೆಯರು ತಮ್ಮ ಎದೆಯನ್ನು ಮತ್ತು ಸೊಂಟವನ್ನು ರಾಗ ತಾಳಗಳಿಗೆ ಸರಿಯಾಗಿ ಕೆಳಮುಖವಾಗಿ ಬಳುಕಿಸುತ್ತಾ ನೃತ್ಯ ಮಾಡುತ್ತಾರೆ. ಕೆಲವು ಮಾರ್ಪಾಡುಗಳಲ್ಲಿ ಪುರುಷರು ಮತ್ತು ಮಹಿಳೆಯರು ಪರಸ್ಪರರ ಕುತ್ತಿಗೆ ಅಥವಾ ಸೊಂಟವನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಪರಸ್ಪರ ಎದುರಾಗಿರುವ ರೇಖೆಗಳನ್ನು ರೂಪಿಸುತ್ತಾರೆ. 

ಅಸ್ಸಾಮಿನ ಹೊಸ ವರ್ಷವನ್ನು ಆಚರಿಸುವ ರಾಷ್ಟ್ರೀಯ ಉತ್ಸವವಾದ ಬೋಹಾಗ್ ಬಿಹು ಹಬ್ಬದಿಂದ (ರಂಗಲಿ ಬಿಹು ಎಂದೂ ಕರೆಯುತ್ತಾರೆ) ಈ ನೃತ್ಯಕ್ಕೆ ಬಿಹು ನೃತ್ಯಎಂಬ ಹೆಸರು ಬಂದಿದೆ.  ಬಿಹು ನೃತ್ಯದ ಪ್ರದರ್ಶನವನ್ನು ಯುವಕ-ಯುವತಿಯರ ಗುಂಪುಗಳು ನಿರ್ವಹಿಸುತ್ತವೆ ಮತ್ತು ಹಿಂದಿನ ಕಾಲದಲ್ಲಿ ಇದು ಮುಖ್ಯವಾಗಿ ಪ್ರಣಯದ ನೃತ್ಯವಾಗಿ ಗುರುತಿಸಲ್ಪಡುತ್ತಿತ್ತು. ಸಸ್ಯಸಂಕುಲಗಳು ಫಲ ಬಿಡುವ ಸಮಯದಲ್ಲಿ ಹೆಚ್ಚಗಿ ಮಾಡುತ್ತಿದ್ದ ಈ  ಬಿಹು ನೃತ್ಯವು ಮಾನವನ ಸಂತಾನೋತ್ಪತ್ತಿಯನ್ನು ಪರೋಕ್ಷವಾಗಿ ಉಲ್ಲೇಖಿಸುತ್ತದೆ.

ನೃತ್ಯವು ಸ್ವಲ್ಪ ಮಟ್ಟಿಗೆ ಕಾಮ ಪ್ರಚೋದಕ ಸ್ವಭಾವವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಆದುದರಿಂದಲೇ ಬ್ರಿಟಿಷ್ ವಸಾಹತುಸಾಹಿ ಕಾಲದಲ್ಲಿ ಇದನ್ನು ಅವಗಣಿಸಲಾಯಿತು. ಆದರೆ ಈಗ ಇದು  ಇದು ಅಸ್ಸಾಮೀಸ್ ಸಾಂಸ್ಕೃತಿಕ ವೈಭವದ ಸಂಕೇತವಾಗಿದೆ.  ನಗರ ಕೇಂದ್ರಗಳಲ್ಲಿಯೂ ಈ ನೃತ್ಯವು ಈಗ ಜನಪ್ರಿಯತೆಯನ್ನು ಪಡೆಯುತ್ತಿದೆ.  1962 ರಲ್ಲಿ ಗುವಾಹಟಿಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವೊಂದರ ಒಂದು ವೇದಿಕೆಯಲ್ಲಿ ಬಿಹು ನೃತ್ಯವನ್ನು ಮೊದಲ ಬಾರಿಗೆ ಪ್ರದರ್ಶಿಸಲಾಯಿತು. ಈಗ ಅಸಾಮಿನಲ್ಲಿ ಈ ನೃತ್ಯ ಜನಪ್ರಿಯ ನೃತ್ಯ ಪ್ರಾಕಾರವಾಗಿ ಗುರುತಿಸಲ್ಪಡುತ್ತಿದೆ.

‘ಪಾತಾಳ ಪ್ರಶಸ್ತಿ’ಗೆ ದಶಕದ ಹೊಳಪು – ಉಪಾಯನ 

ಎಡನೀರು ಶ್ರೀ ಮಠದ ಅಭಿಮಾನಿಗಳೂ ಶಿಷ್ಯರೂ ಆಗಿರುವ ಯಕ್ಷಗಾನದ ಹಿರಿಯ ಖ್ಯಾತ ಸ್ತ್ರೀಪಾತ್ರಧಾರಿ ಶ್ರೀ ಪಾತಾಳ ವೆಂಕಟ್ರಮಣ ಭಟ್ಟರು ತನ್ನ ಕಲಾಸೇವೆಯ ನೆನಪಿಗಾಗಿ, ಎಡನೀರಿನಲ್ಲಿ ‘ಶ್ರೀ ಪಾತಾಳ ಯಕ್ಷ ಪ್ರತಿಷ್ಠಾನ’ವನ್ನು ರೂಪಿಸಿ ವರ್ಷಂಪ್ರತಿ ಹಿರಿಯ ಕಲಾವಿದರನ್ನು ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಕಲಾಭಿಮಾನಿಗಳಿಗೆಲ್ಲರಿಗೂ ತಿಳಿದಿರುವ ವಿಚಾರ.

ಪಾತಾಳ ಪ್ರಶಸ್ತಿಯ ದಶಮಾನೋತ್ಸವದ ಸಂದರ್ಭದಲ್ಲಿ ಉಪಾಯನ ಎಂಬ ಹೊತ್ತಗೆಯು ಪ್ರಕಟವಾಗಿತ್ತು. 2014ರಲ್ಲಿ ಪ್ರಕಟವಾದ ಈ ಪುಸ್ತಕದ ಪ್ರಕಾಶಕರು  ‘ಶ್ರೀ ಪಾತಾಳ ಯಕ್ಷ ಪ್ರತಿಷ್ಠಾನ’ ಎಡನೀರು. ಸಂಪಾದಕರು ಶ್ರೀ ನಾ. ಕಾರಂತ ಪೆರಾಜೆ. ಮೊದಲಿಗೆ ಎಡನೀರು ಮಠಾಧೀಶ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಅನುಗ್ರಹ ಸಂದೇಶವನ್ನು ನೀಡಲಾಗಿದೆ. 

‘ಶ್ರೀ ಪಾತಾಳ ಯಕ್ಷ ಪ್ರತಿಷ್ಠಾನ’ದ ಅಧ್ಯಕ್ಷರಾದ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಅವರು ‘ಶುಭ ಒಸಗೆ’ ಎಂಬ ತಮ್ಮ ಬರಹದಲ್ಲಿ ಅನಿಸಿಕೆಗಳನ್ನು ವ್ಯಕ್ತಪಡಿಸಿರುತ್ತಾರೆ. ಸಂಪಾದಕ ಶ್ರೀ ನಾ. ಕಾರಂತ ಅವರು ‘ಹತ್ತರ ಹಸಿತ’ ಎಂಬ ಶೀರ್ಷಿಕೆಯಡಿ ಲೇಖನವನ್ನು ಬರೆದಿರುತ್ತಾರೆ. ಬಳಿಕ ಡಾ. ಬಿ. ಎನ್. ಮಹಾಲಿಂಗ ಭಟ್ ಅವರು ಬರೆದ  ‘ಶ್ರೀ ಪಾತಾಳ ಯಕ್ಷ ಪ್ರತಿಷ್ಠಾನ-ದಶಕದ ಹಾದಿ’ ಎಂಬ ಲೇಖನವನ್ನು ನೀಡಲಾಗಿದೆ.

‘ಉಪಾಯನ’ ಎಂಬ ಈ ಪುಸ್ತಕದಲ್ಲಿ 2005ರಿಂದ ತೊಡಗಿ 2014ರ ವರೆಗೆ ಪಾತಾಳ ಪ್ರಶಸ್ತಿಯನ್ನು ಪಡೆದ ಹಿರಿಯ, ಖ್ಯಾತ ಕಲಾವಿದರ ಬಗೆಗೆ ಮಾಹಿತಿಗಳನ್ನು ನೀಡಲಾಗಿದೆ. ಪಾತಾಳ ಪ್ರಶಸ್ತಿಗೆ ಭಾಜನರಾದ ಕಲಾವಿದರು ಕಟೀಲು ಪುರುಷೋತ್ತಮ ಭಟ್, ಕಡಬ ಸಾಂತಪ್ಪ, ಪೆರುವಡಿ ನಾರಾಯಣ ಭಟ್, ಕೊಡಕ್ಕಲ್ಲು ಗೋಪಾಲಕೃಷ್ಣ ಭಟ್, ಕುಡಾನ ಗೋಪಾಲಕೃಷ್ಣ ಭಟ್, ಮಾರ್ಗೋಳಿ ಗೋವಿಂದ ಸೇರಿಗಾರ್, ಎಂ,ಕೆ.ರಮೇಶ ಆಚಾರ್ಯ, ಕೊಕ್ಕಡ ಈಶ್ವರ ಭಟ್, ವಿಠಲ ಮಾಸ್ತರ್ ಮತ್ತು ಭಾಸ್ಕರ ಜೋಶಿ ಶಿರಳಗಿ.

ಬಳಿಕ ‘ಯಕ್ಷ ಶಾಂತಲೆಯ ಅಂತರಂಗ’ ಮತ್ತು ‘ಅಂತರ್ಮುಖಿ ಪಾತಾಳ’ ಎಂಬ ಬರಹಗಳನ್ನು ನೀಡಲಾಗಿದೆ. ಬರೆದವರು ಶ್ರೀ ನಾ.ಕಾರಂತ ಪೆರಾಜೆ ಮತ್ತು ಶ್ರೀ ಮುಳಿಯ ಶಂಕರ ಭಟ್ ಅವರುಗಳು. 

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ 

ವಿದ್ವಾನ್ ವಳಕ್ಕುಂಜ ನರಸಿಂಹ ಭಟ್ಟರ ‘ಕಾಶ್ಮೀರ ಕಾಳಗ’

ಕವಿಹೃದಯ, ಕವಿಮನಸು, ಕವಿಸಮಯ- ಇವುಗಳೆಲ್ಲದರ ಬಗ್ಗೆ ಬಹಳಷ್ಟು ಕೇಳಿದ್ದೇವೆ. ಕೃತಿಯೊಂದನ್ನು ಹೊರತರುವುದು ಒಂಬತ್ತು ತಿಂಗಳು ಹೊತ್ತು ನೋವು ಅನುಭವಿಸಿ ಪ್ರಸವಿಸಿದಷ್ಟು ಪ್ರಯಾಸದ ಕೆಲಸ ಎಂದು ಹೇಳುವವರೂ ಇದ್ದಾರೆ. ಕೃತಿಯೊಂದು ಸುಂದರ ರೂಪ ಪಡೆಯಬೇಕಾದರೆ ‘ಕವಿ ಕಲ್ಪನೆ’ ಕೂಡಾ ಅಂದವಾದ ಉದ್ಯಾನವನದಲ್ಲಿ ವಿಹರಿಸಬೇಕಾಗುತ್ತದೆ.


      ಯಕ್ಷಗಾನ ನಿಂತಿರುವುದೇ ಪೌರಾಣಿಕ ಕಥೆಗಳ ಭದ್ರವಾದ ಅಡಿಪಾಯದ ಮೇಲೆ. ಹಾಗಂದ ಪುರಾಣೇತರ ಪ್ರಸಂಗಗಳು ಇಲ್ಲವೆಂದಲ್ಲ. ಈಗಂತೂ ಕಾಲ್ಪನಿಕ ಕಥೆಗಳದ್ದೇ ಸುಗ್ಗಿ. ಟೆಂಟ್ ಮೇಳಗಳಂತೂ ವರ್ಷಕ್ಕೊಂದು ಹೊಸ ಪ್ರಸಂಗದ ಕಥಾಹಂದರವನ್ನು ಹೆಣೆಯುತ್ತಿದೆ. ಹರಕೆ ಆಟದ ಮೇಳಗಳು ಮಾತ್ರ ತನ್ನ ಪೌರಾಣಿಕ ಪ್ರಸಂಗಗಳ ಇತಿಮಿತಿಯನ್ನು ದಾಟಿಲ್ಲವೆಂದು ಹೇಳಬಹುದು.


                   20ನೇ ಶತಮಾನದ ಉತ್ತರಾರ್ಧದಲ್ಲೇ ಹಲವು ಪೌರಾಣಿಕೇತರ ಪ್ರಸಂಗಗಳು ರಚನೆಯಾದುವು. ಸಿನಿಮಾ ಕತೆಗಳನ್ನಾಧರಿಸಿದ ಪ್ರಸಂಗಗಳು, ಕಾಲ್ಪನಿಕ ಪ್ರಸಂಗಗಳು, ಜನಜಾಗೃತಿಯ ಸಂದೇಶವನ್ನು ಸಾರುವ ಪ್ರಸಂಗಗಳು. ಹೀಗೆ ಹತ್ತು ಹಲವು ಪೌರಾಣಿಕೇತರ ಪ್ರಸಂಗಗಳಿಂದ ಬೇರೆಯೇ ಆಗಿ ನಿಲ್ಲುವ ಪ್ರಸಂಗವೊಂದಿದೆ. ಅದುವೇ ಭಾರತ್-ಪಾಕ್ ಯುದ್ಧವನ್ನಾಧರಿಸಿ ರಚನೆಯಾದ ‘ಕಾಶ್ಮೀರ-ಕಾಳಗ’. ದಿ| ವಿದ್ವಾನ್ ವಳಕ್ಕುಂಜ ನರಸಿಂಹ ಭಟ್ಟರ ಸುಂದರ ಪರಿಕಲ್ಪನೆಯಲ್ಲಿ ಮೂಡಿಬಂದ ಈ ಪ್ರಸಂಗ ಅದ್ಭುತವೆಂದೇ ಹೇಳಬಹುದು.


        ಯುದ್ಧದ ನೈಜ ಚಿತ್ರಣವನ್ನು ಪ್ರತಿಬಿಂಬಿಸುತ್ತಾ ಓದುಗರಲ್ಲಿ ರೋಮಾಂಚನ ಉಂಟುಮಾಡಬಲ್ಲ ಸಾಮಥ್ರ್ಯ ಈ ಕಥಾನಕಕ್ಕಿದೆ ಎಂದು ಹೇಳಿದರೆ ಅತಿಶಯೋಕ್ತಿ ಆಗಲಾರದು. ವಳಕ್ಕುಂಜ ನರಸಿಂಹ ಭಟ್ಟರು ಈಗ ನಮ್ಮೊಡನಿಲ್ಲ. ಆದರೆ ಅವರು 1966ರಲ್ಲಿ ಬರೆದ ಈ ‘ಕಾಶ್ಮೀರ-ಕಾಳಗ’ ಎಂಬ ಯಕ್ಷಗಾನ ಪ್ರಸಂಗದ ಮುದ್ರಿತ ಪ್ರತಿಗಳೂ ಈಗ ದೊರೆಯಲಾರದು. ಆದರೆ ಅಂದು ಮುದ್ರಿತ ವಾದ ಪ್ರತಿಗಳು ಕೆಲವರು ಯಕ್ಷಾಭಿಮಾನಿಗಳಲ್ಲಿಯಾದರೂ ಉಳಿದುಕೊಂಡಿರಬಹುದು ಎಂಬ ಆಶಾವಾದವನ್ನು ವ್ಯಕ್ತಪಡಿಸುತ್ತಿದ್ದೇವೆ. ಆದರೆ ಈ ಪ್ರಸಂಗದ ಪ್ರತಿ ಈಗ ಅಂತರ್ಜಾಲದ ‘ಯಕ್ಷವಾಹಿನಿ’  ಪ್ರಸಂಗ ಮಾಹಿತಿ ಜಾಲತಾಣದಲ್ಲಿ ಲಭ್ಯವಿದೆ. 


                         ಶಿಕ್ಷಕ ವೃತ್ತಿ ಮತ್ತು ತಾಳಮದ್ದಳೆ ಅರ್ಥಧಾರಿಯಾಗಿ ಎರಡರಲ್ಲೂ ಸಮನ್ವಯತೆಯನ್ನು ಸಾಧಿಸುವುದರ ಜೊತೆಗೆ ವಿದ್ವಾನ್ ನರಸಿಂಹ ಭಟ್ಟರು ಪುರಾಣ ಪ್ರವಚನಗಳನ್ನು ನಡೆಸುತ್ತಿದ್ದರು. ಹಾಗೂ ಆ ಕಾಲದಲ್ಲಿ ಸ್ವಲ್ಪಮಟ್ಟಿಗೆ ಯಕ್ಷಗಾನ ಭಾಗವತರಾಗಿಯೂ ಗುರುತಿಸಿಕೊಂಡಿದ್ದರು.

ಕಲ್ಲಿಕೋಟೆ ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ. ಎ. ಪದವಿಯನ್ನು ಪಡೆದಿದ್ದ ಶ್ರೀಯುತರು ಸಂತ ಅಲೋಶಿಯಸ್ ಕಾಲೇಜು, ಮಂಗಳೂರು ಮತ್ತು ಕಾವೇರಿ ಕಾಲೇಜು, ಭಾಗಮಂಡಲ ಇಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.


       ಯಕ್ಷಗಾನ ಮತ್ತು ಶಿಕ್ಷಕ ವೃತ್ತಿ ಎರಡೂ ರಂಗಕ್ಕೂ ಇವರಿಂದ ಇನ್ನೂ ಹೆಚ್ಚಿನ ಸೇವೆ ಸಲ್ಲಬಹುದಿತ್ತು. ಆದರೆ ವಿಧಿಯಾಟ ಬೇರೆಯೇ ಇತ್ತು. ಶ್ರವಣಶಕ್ತಿ ಕುಂಠಿತಗೊಂಡು ತಾನು ಅತಿಯಾಗಿ ಪ್ರೀತಿಸುತ್ತಿದ್ದ ಯಕ್ಷಗಾನ ಮತ್ತು ಶಿಕ್ಷಕ ವೃತ್ತಿ ಎರಡರಿಂದ ಅಕಾಲದಲ್ಲಿಯೇ ದೂರ ಉಳಿಯಬೇಕಾಗಿ ಬಂದದ್ದು ವಿಪರ್ಯಾಸವೆಂದೇ ಹೇಳಬೇಕು. ಒಂದೆರಡು ವರ್ಷಗಳ ಕಾಲ ಪರ್ಕಿನ್‍ಸನ್ ಎಂಬ ಕಾಯಿಲೆಯಿಂದ ಬಳಲಿ 2008ರಲ್ಲಿ ಅವರು ನಿಧನ ಹೊಂದಿದರು.


      ‘ಕಾಶ್ಮೀರ ಕಾಳಗ’ ಪ್ರಸಂಗ ಮುಖ್ಯವಾಗಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಧಾನ ಮಂತ್ರಿಗಳಾಗಿದ್ದ ಸಮಯದಲ್ಲಿ ನಡೆದ ಭಾರತ್-ಪಾಕಿಸ್ತಾನ ಯುದ್ಧದ ಚಿತ್ರಣದ ಕಥಾನಕ. ಒಡ್ಡೋಲಗದ ಪದ್ಯ ಹೀಗಿದೆ. ಝಂಪೆತಾಳದಲ್ಲಿ,
ಉತ್ತರದಿಶಾಭಾಗ ಕೊತ್ತಿ ಮೆರೆಯುವ ಢಿಲ್ಲಿ | ಪತ್ತನದ ಲೋಕಸಭೆಯೊಳಗೆ || ಮತ್ತೆ ಶಾಸ್ತ್ರಿಗಳೊಂದು ದಿನ ಚವನ ಮುಖ್ಯರಿಂ | ದಿತ್ತರೋಲಗನ ಜಯವೆನಲೂ ||
   ಮುಂದಕ್ಕೆ ಯುದ್ಧ ನಿಶ್ಚಯವಾಗಲು, ಪಾಕಿಸ್ತಾನದಲ್ಲಿ ನಡೆಯುವ ವಿದ್ಯಮಾನಗಳ ಚಿತ್ರಣ ಈ ರೀತಿ ಇದೆ. ತ್ರಿವುಡೆ ತಾಳದಲ್ಲಿ,
ಇತ್ತಲಿಂತೀ ತೆರೆದೊಳಿರುತಿರೆ | ಲತ್ತರಾವಲ್ಪಿಂಡಿ ನಗರಿಯೊ | ಳಿತ್ತನೋಲಗ ಭುಟ್ಟೊ ಸಹಿತಲಿ | ಮತ್ತೆಯೂಬ ||
ಈ ಪ್ರಸಂಗದುದ್ದಕ್ಕೂ ನಮಗೆ ಕಾಣಸಿಗುವುದು ಅತ್ಯಪೂರ್ವ ಪದ್ಯರಚನಾ ಕೌಶಲ. ಛಂದಸ್ಸು, ತಾಳಗಳಿಗೆ ಧಕ್ಕೆಯಾಗದಂತೆ ಸುಂದರವಾಗಿ ಪದಗಳನ್ನು ಜೋಡಿಸಲಾಗಿದೆ. ಪಾಕಿಸ್ತಾನೀಯರ ಹೆಸರುಗಳನ್ನು ಕೆಲವು ಅಸ್ತ್ರಗಳಾದ ಬಾಂಬು, ಟ್ಯಾಂಕರ್ ಮುಂತಾದ ಶಬ್ದಗಳನ್ನು ಹೆಣೆದಿರುವ ರೀತಿ ಚಂದವೇ ಚಂದ.
ಇನ್ನು ಕೊನೆಯಲ್ಲಿ ಬರುವ ಮಂಗಳ ಪದ್ಯವಂತೂ ತುಂಬಾ ಚೆನ್ನಾಗಿದೆ.
ರಾಧಾಕೃಷ್ಣಗೆ, ರಾಷ್ಟ್ರಾಧ್ಯಕ್ಷಗೆ | ಮೇದಿನಿಯೊಳು ಶಾಂತಿ ಸ್ಥಾಪಕಗೆ | ಸಾದರದಿಂದ ಪ್ರಧಾನಿ ಶಾಸ್ತ್ರಿಗಳಿಂಗೆ | ಮೋದದಿಂದಲಿ ಯುದ್ಧ ಕಾದಿ ಗೆದ್ದವರಿಂಗೆ || ಮಂಗಳಂ ಜಯ ಮಂಗಳಂ || ಹೀಗೆ ಈ ಪದ್ಯ ಮುಂದುವರಿದು ಪ್ರಸಂಗ ಸಮಾಪ್ತಿಯಾಗುತ್ತದೆ.


                       ಒಟ್ಟಿನಲ್ಲಿ ಆ ಕಾಲದಲ್ಲೇ ಒಳ್ಳೆಯ ಒಂದು ಪುರಾಣೇತರ ಪ್ರಸಂಗ ರಚಿಸುವಲ್ಲಿ ವಿದ್ವಾನ್ ನರಸಿಂಹ ಭಟ್ಟರು ಯಶಸ್ವಿಯಾಗಿದ್ದರು. ಯಕ್ಷಗಾನದಲ್ಲಿ ವಾಚಿಕ ಎಂಬುದು ಮೊದಲೇ ಸಿದ್ಧಪಡಿಸಿದ ಪಾಠಾಕ್ಷರಗಳಲ್ಲದ ಕಾರಣ ಪ್ರದರ್ಶನದ ಸಂದರ್ಭದಲ್ಲಿ ಕಲಾವಿದರು ಹೇಗೆ ಜಾಗರೂಕರಾಗಿರಬೇಕೆಂಬುದನ್ನು ಲೇಖಕರು ತಮ್ಮ ಮುನ್ನುಡಿಯಲ್ಲಿ ಹೀಗೆ ಎಚ್ಚರಿಸಿದ್ದಾರೆ.


‘‘ಜೀವಂತ ವ್ಯಕ್ತಿಗಳ ಪ್ರವೇಶವು ಇಲ್ಲಿ ಮುಖ್ಯವಾಗಿರುವುದರಿಂದ ಅವರ ವ್ಯಕ್ತಿತ್ವಕ್ಕೆ ಭಂಗ ಬಾರದಂತೆ ಕಲಾವಿದರು ಪ್ರದರ್ಶಿಸಬೇಕೆಂದು ವಿನಯಪೂರ್ವಕ ವಿಜ್ಞಾಪಿಸಿಕೊಳ್ಳುತ್ತೇನೆ. ಭಾರತವು ಒಂದೇ ವ್ಯಕ್ತಿಯಾಗಿ, ಶಕ್ತಿಯಾಗಿ ಜಾಗೃತವಾಗುವಂತೆ ಜನರಲ್ಲಿ ಪ್ರಚೋದನೆಯುಂಟಾದರೆ ಈ ಕೃತಿಯ ಉದ್ದೇಶವು ಫಲಿಸುವುದು.’’
ಎಲ್ಲಿಯೂ ವಿವಾದಕ್ಕೆಡೆ ಮಾಡಿಕೊಡಬಾರದೆಂದು ಕಲಾವಿದರಲ್ಲಿ ನಯವಾಗಿ ಮತ್ತು ಅಷ್ಟೇ ಮಾರ್ಮಿಕವಾಗಿ ಬಿನ್ನವಿಸಿದ್ದಾರೆ. ಕೆಲವೊಮ್ಮೆ ಹಾಸ್ಯಾಸ್ಪದ ಸನ್ನಿವೇಶಗಳಲ್ಲಿ ಕಲಾವಿದರು ಸಂಭಾಷಣೆಯಲ್ಲಿ ಜಾಗರೂಕ ರಾಗಿರಬೇಕೆಂಬ ಸೂಚನೆ. ಒಟ್ಟಿನಲ್ಲಿ ಸುಂದರವಾದ ಒಂದು ಪ್ರಸಂಗ. ರಾಜಕೀಯವಾದ ಒಂದು ಘಟನೆಯನ್ನು ಹೆಣೆದು ಕಥಾರಚನೆ ಈಗ ಬಹಳ ಕಷ್ಟ. ಆದರೆ ಅಂದು ಅವರು ವಿವಾದಕ್ಕೆಡೆಯಾಗದಂತೆ ಪ್ರಸಂಗ ರಚಿಸಿದ್ದರು.

ಪೆರ್ನಡ್ಕ ಶ್ಯಾಮ ಭಟ್ – ಯಕ್ಷಗಾನ ಕಲಾವಿದ, ವೇಷಭೂಷಣ ಮತ್ತು ಬಣ್ಣಗಾರಿಕೆಯ ಕುಶಲಿಗ

ಯಕ್ಷಗಾನವೆಂಬುದು ಕರಾವಳಿ ಮತ್ತು ಮಲೆನಾಡಿನ ಎಷ್ಟೋ ಜನರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿ ಜನಪ್ರಿಯತೆಯನ್ನು ಹೊಂದಿದ್ದರೂ ಈ ಕಲೆಯಲ್ಲಿ ನೆಲೆ ಕಂಡು ಪ್ರಭುತ್ವವನ್ನು ಸಾಧಿಸಿದ ಹಾಗೂ ಪ್ರಚಾರವನ್ನು ಬಯಸದೆ ತಮ್ಮ ಕೆಲಸವನ್ನು ಮಾಡಿಕೊಂಡು ಹೋಗುವ ಅದೆಷ್ಟೋ ಕಲಾವಿದರೂ ಕಲಾಪೋಷಕರೂ ನಮ್ಮ ನಡುವೆ ಇದ್ದಾರೆ. ಇವರದು ಒಂದು ರೀತಿಯ ಮೌನ ತಪಸ್ಸು. ಪ್ರಚಾರ ಆಡಂಬರಗಳಿಲ್ಲದ ಕಲಾ ಕಾಯಕ. ಅಂತಹವರನ್ನು ಗುರುತಿಸುವ ಒಂದು ಸಣ್ಣ ಪ್ರಯತ್ನ ಇಲ್ಲಿದೆ.  

ಬಹುಶಃ ಪೆರ್ನಡ್ಕ ಶ್ರೀ ಶ್ಯಾಮ ಭಟ್ಟರ ಹೆಸರನ್ನು ತುಂಬಾ ಮಂದಿ ಕೇಳಿರಬಹುದು.  ಪೆರ್ನಡ್ಕ ಶ್ಯಾಮ ಭಟ್ ಅವರಿಗೆ ಕಲಾಸಕ್ತಿ ಮೊಳೆತುದು ಸಣ್ಣ ವಯಸ್ಸಿನಲ್ಲಿಯೇ ಆದರೂ ಅವರು ತಮ್ಮ ಮೂವತ್ತೈದರ ಹರೆಯವನ್ನು ದಾಟಿದ ಮೇಲೆಯೇ ಯಕ್ಷಗಾನದ ನಾಟ್ಯ ಕಲಿತವರು.  

ಶ್ರೀ ಭೀಮ ಭಟ್ ಮತ್ತು ಶ್ರೀಮತಿ ವೆಂಕಟೇಶ್ವರಿ ಅವರ ಪ್ರಥಮ ಪುತ್ರನಾಗಿ ಪೆರ್ನಡ್ಕದಲ್ಲಿ 1954 ಆಗಸ್ಟ್ 28ರಂದು ಜನಿಸಿದ ಪೆರ್ನಡ್ಕ ಶ್ಯಾಮ ಭಟ್ಟರು ನೀರ್ಪಾಜೆ, ಕನ್ಯಾನ ಮತ್ತು ಉಜಿರೆಗಳಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದರು. ಶ್ಯಾಮ ಭಟ್ಟರ ಅಜ್ಜ (ತಾಯಿಯ ತಂದೆ) ಮಾದಕಟ್ಟೆ ಕೃಷ್ಣ ಭಟ್ಟರು ತೆಂಕುತಿಟ್ಟು ಯಕ್ಷಗಾನದ ಭಾಗವತರಾಗಿದ್ದರು. ಒಟ್ಟು ಆರು ಮಂದಿ ಮಕ್ಕಳಲ್ಲಿ ಮೊದಲನೆಯವರಾದ ಶ್ಯಾಮ ಭಟ್ಟರಿಗೆ ನಾಲ್ಕು ಸಹೋದರಿಯರು. ಆಮೇಲೆ ಕೊನೆಯ ಸಹೋದರರಾದ ಶ್ರೀ ರಾಜಗೋಪಾಲ ಕನ್ಯಾನ ಅವರು ಯಕ್ಷಗಾನ ಕಲಾವಿದರೂ, ಸಾಹಿತಿಯೂ, ಯಕ್ಷಗಾನ ವಿಮರ್ಶಕರೂ, ಲೇಖಕರೂ, ಪ್ರಕಾಶಕರೂ, ಹಲವಾರು ಪುಸ್ತಕಗಳನ್ನು ಹೊರತಂದ ಸಂಪಾದಕರೂ ಆಗಿ ಗುರುತಿಸಲ್ಪಟ್ಟಿದ್ದಾರೆ.

ಪೆರ್ನಡ್ಕ ಶ್ಯಾಮ ಭಟ್ಟರಿಗೆ ಸಣ್ಣ ವಯಸ್ಸಿನಲ್ಲಿಯೇ ಆಟ ನೋಡುವ ಆಸಕ್ತಿಯಿತ್ತು. ಅತಿ ಸಣ್ಣ ವಯಸ್ಸಿನಲ್ಲಿಯೇ ಬಣ್ಣದ ಕುಟ್ಯಪ್ಪು ಅವರ ಬಣ್ಣದ ವೇಷಗಳನ್ನು ನೋಡಿ ಯಕ್ಷಗಾನ ಲೋಕದ ಅದ್ಭುತ ಮತ್ತು ಬೆಡಗನ್ನು ನೋಡಿ ಬೆರಗಾದರು. ಆಟ ನೋಡಿ ಆಸಕ್ತಿಯಿತ್ತೇ ವಿನಃ ಅದರಲ್ಲಿ ಭಾಗವಹಿಸುತ್ತೇನೆಂಬ ಕಲ್ಪನೆ ಅವರಿಗಿರಲಿಲ್ಲ. ಹೀಗೆ ಯಕ್ಷಗಾನದ ಆಸಕ್ತಿ ಬೆಳೆದು ಬಂತು. ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದ ಶ್ಯಾಮ ಭಟ್ಟರು ಉದ್ಯೋಗ ನಿಮಿತ್ತ ಬೆಂಗಳೂರು ನಗರವನ್ನು ಸೇರಿದ್ದರು.

ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳ ಕಾಲ ನೆಲೆಸಿದ್ದರು. ಕಂಪೆನಿಯ ಕೆಲಸ ಮತ್ತು ಜೀವನ ನಿರ್ವಹಣೆಗಳ ನಡುವೆ ಯಕ್ಷಗಾನವು ಆ ಕಾಲದಲ್ಲಿ ಅಷ್ಟಾಗಿ ಶ್ಯಾಮ ಭಟ್ಟರ ಮನಸ್ಸಿನಲ್ಲಿ ಆಕ್ರಮಿಸಲಿಲ್ಲ. ಆದರೆ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಬಡಗು ತಿಟ್ಟಿನ ಆಟಗಳನ್ನು ನೋಡಿ ಅದಕ್ಕೆ ಆಕರ್ಷಿತರಾದರು. ಚಿಟ್ಟಾಣಿ, ಕಾಳಿಂಗ ನಾವಡ ಮತ್ತು ಮಂಟಪ ಪ್ರಭಾಕರ ಉಪಾಧ್ಯಾಯರ ವೇಷಗಳಿಂದ ಆಕರ್ಷಿತರಾಗಿದ್ದರು. ಒಂದು ದಿನ ಬೆಂಗಳೂರಿನಲ್ಲಿ ನಡೆದ ತೆಂಕುತಿಟ್ಟಿನಲ್ಲಿ  ಪ್ರದರ್ಶನವೊಂದರಲ್ಲಿ ಬಣ್ಣದ ಮಹಾಲಿಂಗ ಅವರ ಭೀಮನ ವೇಷವನ್ನೂ ಬಣ್ಣಗಾರಿಕೆಯನ್ನೂ ಕಂಡು ಬೆರಗಾಗಿದ್ದರು.

ಬೆಂಗಳೂರಿನಲ್ಲಿ ಬಡಗು ಮತ್ತು ತೆಂಕು ತಿಟ್ಟುಗಳೆರಡರಲ್ಲೂ ಪರಂಪರೆ ಮತ್ತು ಆಧುನಿಕತೆಯ ಪ್ರದರ್ಶನಗಳಲ್ಲಿ ವ್ಯತ್ಯಾಸಗಳನ್ನು ಗುರುತಿಸಿದ್ದರು. ಕೆಲವು ವರ್ಷಗಳ ನಂತರ ಅಂದರೆ ತಮ್ಮ 35ನೆಯ ವಯಸ್ಸಿನಲ್ಲಿ ಶ್ಯಾಮ ಭಟ್ಟರು ಅನಿವಾರ್ಯವಾಗಿ ಉದ್ಯೋಗಕ್ಕೆ ರಾಜೀನಾಮೆ ನೀಡಿ ಊರಿನಲ್ಲಿ ಕೃಷಿ ಕಾರ್ಯಗಳನ್ನು ನೋಡಿಕೊಳ್ಳಲು ಬರಬೇಕಾಗಿ ಬಂತು. ಈ ನಂತರವೇ ಇವರ ನೈಜ ಯಕ್ಷಗಾನಾಸಕ್ತಿ ಅರಳತೊಡಗಿತು. ಕಲಾವಿದನಾಗಿ ತಮ್ಮ ಹೊಸ ಪಾತ್ರವನ್ನು ಪ್ರಕಟಪಡಿಸತೊಡಗಿದರು.

ನಾಟ್ಯ ಕಲಿಯಬೇಕೆಂಬ ಆಸಕ್ತಿ ಉತ್ಸಾಹಗಳು ಬಂದುವು. ಊರಿನ ನೀರ್ಪಾಜೆ ಶಾಲೆಯ ವಾರ್ಷಿಕೋತ್ಸವದ ಯಕ್ಷಗಾನ ಪ್ರದರ್ಶನಕ್ಕೋಸ್ಕರ ಪೊಳ್ಳಕಜೆ ಗೋಪಾಲಕೃಷ್ಣ ಭಟ್ ಅವರಿಂದ ಯಕ್ಷಗಾನದ ನಾಟ್ಯದ ಬಾಲಪಾಠ ಆರಂಭವಾಯಿತು. ಶಾಲಾ ವಾರ್ಷಿಕೋತ್ಸವದಲ್ಲಿ ಪ್ರಥಮ ಬಾರಿ ದೇವಿ ಮಹಾತ್ಮೆಯಲ್ಲಿ ಸುಗ್ರೀವನಾಗಿ ರಂಗ ಪ್ರವೇಶ ಮಾಡಿದರು. ಆಮೇಲೆ ಕುಡಾನ ಗೋಪಾಲಕೃಷ್ಣ ಭಟ್ಟರಿಂದ ಬಣ್ಣಗಾರಿಕೆಯನ್ನೂ ಬಾಯಾರು ರಮೇಶ ಶೆಟ್ಟಿಯವರಿಂದ ಹೆಚ್ಚಿನ ನಾಟ್ಯಾಭ್ಯಾಸವನ್ನೂ ಮಾಡಿದರು.

ಆಮೇಲೆ ಪೈವಳಿಕೆ ಗಣೇಶ ಕಲಾ ವೃಂದದ ಶ್ರೀ ದೇವಕಾನ ಕೃಷ್ಣ ಭಟ್ಟರ ತಂಡದಲ್ಲಿ ಹೆಚ್ಚಿನ ಬಣ್ಣಗಾರಿಕೆಯನ್ನು ಕಲಿಯಲು ತಿರುಗಾಟ ನಡೆಸಿದರು. ಅಲ್ಲಿ ಬಣ್ಣಗಾರಿಕೆಯ ಸಂಪೂರ್ಣ ಅನುಭವ ಅವರಿಗಾಯಿತು. ಯಕ್ಷಗಾನ ಪ್ರದರ್ಶನಗಳಿಗೆ ವೇಷಭೂಷಣಗಳನ್ನು ಒದಗಿಸುವ ದೇವಕಾನದವರ ತಂಡದವರಿಗೆ ಕೆಲವೊಮ್ಮೆ ದಿನವೊಂದರಲ್ಲಿ ಒಂದಕ್ಕಿಂತ ಹೆಚ್ಚು ಆಟಗಳಿದ್ದಲ್ಲಿ ಪ್ರಸಾಧನ ತಂಡದ ಮೇಲುಸ್ತುವಾರಿಯನ್ನು ನೋಡಿಕೊಳ್ಳಲು ಹೋಗುತ್ತಿದ್ದರು.

ಹೀಗೆ ದೇವಕಾನ ಕೃಷ್ಣ ಭಟ್ಟರ ವೇಷಭೂಶಣ ಮತ್ತು ಪ್ರಸಾಧನ ತಂಡದಲ್ಲಿ ಪ್ರಸಾಧನ ಕಲಾವಿದರಾಗಿಯೂ ವೇಷಧಾರಿಯಾಗಿಯೂ ಹಲವಾರು ವರ್ಷಗಳ ಕಾಲ ಕಲಾಸೇವೆಯನ್ನು ಮಾಡಿದರು. ಪೆರ್ನಡ್ಕ ಶ್ಯಾಮ ಭಟ್ಟರು ಹೆಚ್ಚಾಗಿ ಸಾತ್ವಿಕ ಪಾತ್ರಗಳನ್ನೂ ನಿರ್ವಹಿಸುತ್ತಿದ್ದರು. ಹಂಸಧ್ವಜ, ಮಯೂರಧ್ವಜ, ಹಾಸ್ಯ, ದೇವೀಮಹಾತ್ಮೆಯ ದೇವಿ ಮೊದಲಾದ ಸ್ತ್ರೀ ಪಾತ್ರಗಳು, ಹಾಗೂ ಅನಿವಾರ್ಯ ಸಂದರ್ಭದಲ್ಲಿ ಯಾವುದೇ ವೇಷಗಳನ್ನು ಮಾಡಬಲ್ಲ ಕಲಾವಿದರು ಶ್ಯಾಮ ಭಟ್ಟರು.

ಹೆಚ್ಚಿನ ಕಿರೀಟ ವೇಷಗಳನ್ನು ನಿರ್ವಹಿಸಿದ ಅನುಭವ ಇರುವ ಇವರು ಎಷ್ಟೋ ಪ್ರದರ್ಶನಗಳಲ್ಲಿ ಕಲಾವಿದರ ಅನುಪಸ್ಥಿತಿಯಲ್ಲಿ ಅನಿವಾರ್ಯವಾಗಿ ಪ್ರಮುಖ ವೇಷಗಳನ್ನು ನಿರ್ವಹಿಸಿದ್ದಾರೆ. ವೇಷಧಾರಣೆಯಲ್ಲಿ ಹಾಗೂ ಬಣ್ಣಗಾರಿಕೆಯಲ್ಲಿರುವ ಹಲವಾರು ಸೂಕ್ಷ್ಮತೆಗಳನ್ನು ತಿಳಿಸುವ ಶ್ಯಾಮ ಭಟ್ಟರು ಆ ಕ್ಷೇತ್ರದಲ್ಲಿ ಕಲಾವಿದರು ಅನುಸರಿಸಬೇಕಾದ ಕ್ರಮಗಳನ್ನು ತಿಳಿ ಹೇಳುತ್ತಾರೆ. ವೇಷವು ಹಗುರವಾಗಬೇಕೆಂದು ಅನುಸರಿಸುವ ಕ್ರಮಗಳಿಂದ ಆಗಬಹುದಾದ ತೊಡಕುಗಳನ್ನೂ ವಿವರಿಸುತ್ತಾರೆ. ಅಲ್ಲದೆ ಕನ್ಯಾನದ ಶ್ರೀ ವೀರಾಂಜನೇಯ ಯಕ್ಷಗಾನ ಕಲಾಸಂಘ, ಶಿರಂಕಲ್ಲು ಇದರ ಸಂಚಾಲಕರಾಗಿ ಸುಮಾರು 10ರಿಂದ 12 ವರ್ಷಗಳ ಕಾಲ ಮುನ್ನಡೆಸಿ, ಮರೆತು ಹೋಗಿದ್ದ ಹಲವಾರು ಪ್ರಸಂಗಗಳನ್ನು ಪ್ರಯೋಗಿಸಿ, ತೆಂಕುತಿಟ್ಟಿನ ಪರಂಪರೆಯ ಆಟಗಳ ಪ್ರದರ್ಶನವನ್ನು ಏರ್ಪಡಿಸಿದ ಕೀರ್ತಿಯು ಇವರಿಗೆ ಸಲ್ಲುತ್ತದೆ.

ನೀರ್ಪಾಜೆ ಮತ್ತು ಕನ್ಯಾನದ ಶಾಲೆಗಳಲ್ಲಿ ನುರಿತ ಕಲಾವಿದರಿಂದ ಯಕ್ಷಗಾನದ ತರಗತಿಗಳನ್ನು ನಡೆಸಿ ಹಲವಾರು ಕಲಾವಿದರನ್ನು ತಯಾರು ಮಾಡಿದ್ದಾರೆ. ಇಲ್ಲಿ ಕಲಿತ ಕೆಲವು ಮಂದಿ ಕಲಾವಿದರು ಇಂದು ಮೇಳಗಳಲ್ಲಿ ತಿರುಗಾಟ ಮಾಡುತ್ತಿದ್ದಾರೆ. 

ಪತ್ನಿ ಶ್ರೀಮತಿ ಪಾರ್ವತಿ ಜೊತೆಯಲ್ಲಿ ಪೆರ್ನಡ್ಕದಲ್ಲಿ ವಾಸಿಸುತ್ತಿರುವ ಪೆರ್ನಡ್ಕ ಶ್ಯಾಮ ಭಟ್ಟರಿಗೆ ಇಬ್ಬರು ಪುತ್ರರು. ಮೊದಲ ಪುತ್ರ ಭೀಮ ಭಾರದ್ವಾಜ್ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಉಪನ್ಯಾಸಕ. ವೇಷಧಾರಿಯಾಗಿ ಮತ್ತು ಹಿಮ್ಮೇಳ ಮತ್ತು ಮುಮ್ಮೇಳದ ಕಲಾವಿದ. ಸೊಸೆ ಗಾಯತ್ರಿ.  ದ್ವಿತೀಯ ಪುತ್ರ ಹೃಷಿಕೇಷ ಯೋಗ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದುದು ಮಾತ್ರವಲ್ಲದೆ ಯಕ್ಷಗಾನ ವೇಷಧಾರಿಯಾಗಿಯೂ ಮುನ್ನಡೆಯುತ್ತಿದ್ದಾರೆ. ಶ್ಯಾಮ ಭಟ್ಟರು ಉತ್ತಮ ಲೇಖಕರೂ ಹೌದು. ಅವರು ಬರೆದ ಹಲವಾರು ಲೇಖನಗಳು ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಪ್ರಸ್ತುತ ಯಕ್ಷಗಾನ ತಿರುಗಾಟಗಳಿಂದ ದೂರ ಉಳಿದಿರುವ ಪೆರ್ನಡ್ಕ ಶ್ಯಾಮ ಭಟ್ಟರು ಕೃಷಿ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 

ಯಕ್ಷಗಾನ ವೇಷಧಾರಿ, ನೇಪಥ್ಯ ಕಲಾವಿದ ಶ್ರೀ ಪಿ. ರಾಮಣ್ಣ ಗೌಡ ಕಲ್ಮಡ್ಕ 

ಯಕ್ಷಗಾನದ ಯಶಸ್ವೀ ಪ್ರದರ್ಶನಗಳಿಗೆ ಕಲಾವಿದರ ಜತೆ ನೇಪಥ್ಯ ಕಲಾವಿದರೂ ಕಾರಣರಾಗುತ್ತಾರೆ. ಯಕ್ಷಗಾನ ಕಲೆಗೆ ಅವರ ಕೊಡುಗೆಗಳು ಅಪಾರವಾದುದು. ವೇಷಭೂಷಣಗಳ ನಿರ್ವಹಣೆ, ಮೇಕಪ್ ಮಾಡುವುದು, ವೇಷ ಕಟ್ಟಿ ಕಲಾವಿದರನ್ನು ರಂಗ ಪ್ರವೇಶಕ್ಕೆ ಸಿದ್ಧಗೊಳಿಸುವುದು, ಬಣ್ಣದ ಮನೆಯ ನಿರ್ವಹಣೆ, ರಂಗಸ್ಥಳಕ್ಕೆ ಬೇಕಾದ ಪರಿಕರಗಳನ್ನು ಒದಗಿಸಿಕೊಡುವುದು, ವೇಷಭೂಷಣಗಳ ತಯಾರಿಕೆ ಇತ್ಯಾದಿ ಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವ ಅವರನ್ನು ಕಲಾಭಿಮಾನಿಗಳು ಗುರುತಿಸಿ ಗೌರವಿಸುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ.

ಯಶಸ್ವೀ ಪ್ರದರ್ಶನಗಳಿಗೆ ರಂಗದಲ್ಲಿ ಕಲಾವಿದರು ಕಾರಣರಾದರೆ ಅದಕ್ಕೆ ತೆರೆಯ ಮರೆಯಲ್ಲಿ ನೇಪಥ್ಯ ಕಲಾವಿದರ ಕೊಡುಗೆಯೂ ಇರುತ್ತದೆ. ಅನೇಕ ನೇಪಥ್ಯ ಕಲಾವಿದರು ರಂಗದಲ್ಲಿ ಕಲಾವಿದರಾಗಿಯೂ ಕಾಣಿಸಿಕೊಂಡು ಯಶಸ್ವಿಯಾಗಿದ್ದಾರೆ. ಅಂತಹಾ ಕಲಾವಿದರಲ್ಲೊಬ್ಬರು  ಶ್ರೀ ಪಿ. ರಾಮಣ್ಣ ಗೌಡ ಕಲ್ಮಡ್ಕ. ಸುಮಾರು ಐವತ್ತು ವರ್ಷಗಳಿಂದ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಪ್ರಸ್ತುತ ಶ್ರೀ ಮಹಾಬಲ ಕಲ್ಮಡ್ಕ ಅವರ ನೇತೃತ್ವದ ‘ರಂಗ ಸುರಭಿ’ ಕಲ್ಮಡ್ಕ ಎಂಬ ತಂಡದಲ್ಲಿ ನೇಪಥ್ಯ ಕಲಾವಿದನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಕಲಾವಿದ, ನೇಪಥ್ಯ ಕಲಾವಿದ  ಶ್ರೀ ಪಿ. ರಾಮಣ್ಣ ಗೌಡ ಅವರು ಶ್ರೀ ಶಿವಣ್ಣ ಗೌಡ ಮತ್ತು ಶ್ರೀಮತಿ ಶಿವಮ್ಮ ದಂಪತಿಗಳ ಪುತ್ರರು. 1951ರಲ್ಲಿ ಸುಳ್ಯ ತಾಲೂಕು ಕಲ್ಮಡ್ಕ ಗ್ರಾಮದ ರಾಮತ್ತಿಕಾರಿ ಮನೆಯಲ್ಲಿ ಜನನ. ಕಲ್ಮಡ್ಕ ಮತ್ತು ಪಂಜ ಶಾಲೆಗಳಲ್ಲಿ 7ನೇ ತರಗತಿ ವರೆಗೆ ಓದಿದ್ದರು. ತಂದೆಯವರ ನಿಧನದ ಕಾರಣದಿಂದ ರಾಮಣ್ಣ ಗೌಡರಿಗೆ ಓದು ಮುಂದುವರಿಸಲು ಅನಾನುಕೂಲವಾಗಿತ್ತು. ಬಾಲ್ಯದಲ್ಲೇ ಯಕ್ಷಗಾನಾಸಕ್ತಿ ಇತ್ತು. ಮೇಳಗಳ ಮತ್ತು ಕಲ್ಮಡ್ಕದ ಸಂಗಮ ಕಲಾ ಸಂಘದ ಪ್ರದರ್ಶನಗಳನ್ನು ನೋಡುತ್ತಾ ಬೆಳೆದವರು.

ಸಂಗಮ ಕಲಾ ಸಂಘದ ರೂವಾರಿ ಕೆರೆಕೋಡಿ ಪಂಡಿತ ಗಣಪತಿ ಭಟ್ಟರ ಪ್ರೋತ್ಸಾಹದಿಂದ ಯಕ್ಷಗಾನ ಕ್ಷೇತ್ರಕ್ಕೆ ಕಾಲಿರಿಸುವಂತಾಗಿತ್ತು. ಕುಡ್ಪ ಶ್ರೀ ರಾಮಚಂದ್ರ ಹೆಗಡೆ ಅವರಿಂದ ನಾಟ್ಯ ಕಲಿಕೆ. ( ಭಾಗವತರಾದ ಶ್ರೀ ಪದ್ಯಾಣ ಗಣಪತಿ ಭಟ್ಟರ ಗೋಳ್ತಜೆ ಮನೆಯಲ್ಲಿ ನಾಟ್ಯ ಕಲಿಕೆ). ಕೊಲ್ಲೂರು ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ ದೇವೇಂದ್ರ ಬಲ ಮತ್ತು ಕಾಳಿಯಾಗಿ ರಂಗ ಪ್ರವೇಶ. ಬಳಿಕ ಸಂಘದ ಪ್ರದರ್ಶನಗಳಲ್ಲಿ ವೇಷ ಮಾಡುತ್ತಿದ್ದರು. ಪಟ್ಟಾಜೆ ವೈದ್ಯ ಗಣೇಶ ಭಟ್ಟರಿಂದ ಮಾತುಗಾರಿಕೆ ಮತ್ತು ಮೇಕಪ್ ಮಾಡುವ ಕ್ರಮವನ್ನೂ ಅಭ್ಯಾಸ ಮಾಡಿದ್ದರು.

ವೇಷಗಾರಿಕೆಯ ಜತೆಗೆ ಕಲ್ಮಡ್ಕ ಸಂಗಮ ಕಲಾ ಸಂಘದ ನೇಪಥ್ಯ ಕಲಾವಿದನಾಗಿಯೂ ತೊಡಗಿಸಿಕೊಂಡವರು ಶ್ರೀ ರಾಮಣ್ಣ ಗೌಡರು. ಪುಂಡು ವೇಷ, ಕಿರೀಟ ವೇಷಗಳನ್ನು ಮಾಡುತ್ತಾ ಹಾಸ್ಯಗಾರನಾಗಿ ಕಾಣಿಸಿಕೊಂಡಿದ್ದರು. ಪ್ರಾರಂಭದಲ್ಲಿ ಚೌಡೇಶ್ವರೀ ಮೇಳದಲ್ಲಿ ಒಂದು ವರ್ಷ ತಿರುಗಾಟ ನಡೆಸಿದ್ದರು. ಆಗ ಸದ್ರಿ ಮೇಳದಲ್ಲಿ ದಾಸರಬೈಲು ಚನಿಯ ನಾಯ್ಕ, ಪದ್ಯಾಣ ಗಣಪತಿ ಭಟ್, ನಯನ ಕುಮಾರ್, ಸಂಪಾಜೆ ಶೀನಪ್ಪ ರೈ ಮೊದಲಾದ ಕಲಾವಿದರಿದ್ದರು. ಬಳಿಕ ಕಲ್ಮಡ್ಕ ಸಂಘದ ಕಲಾವಿದನಾಗಿಯೇ ಕಾಣಿಸಿಕೊಂಡವರು.

ನೇಪಥ್ಯ ಕಲಾವಿದನಾಗಿ ತೆರಳಿದರೂ ಅನಿವಾರ್ಯವಾದರೆ ಪ್ರದರ್ಶನಗಳಲ್ಲಿ ವೇಷವನ್ನೂ ಮಾಡುವ ಶ್ರೀ ರಾಮಣ್ಣ ಗೌಡರು ಕಾರ್ಯಕ್ರಮ ಸಂಘಟಕರಿಗೆ ಆಪದ್ಬಾಂಧವನಾಗಿ ಒದಗುತ್ತಾರೆ. ಕಳೆದ ಎರಡು ವರ್ಷಗಳಿಂದ ವೇಷ ಮಾಡುವುದನ್ನು ನಿಲ್ಲಿಸಿ ನೇಪಥ್ಯ ಕಲಾವಿದನಾಗಿ ಮುಂದುವರಿಯುತ್ತಿದ್ದಾರೆ. ಶ್ರೀ ರಾಮಣ್ಣ ಗೌಡರಿದ್ದರೆ ಬಣ್ಣದ ಮನೆಯ ಸೊಬಗು ಎದ್ದು ಕಾಣುತ್ತದೆ. ಎಲ್ಲರನ್ನೂ ನಗು ನಗುತ್ತಾ ಮಾತನಾಡಿಸುತ್ತಾರೆ. ಚುರುಕಾಗಿ ಮೇಕಪ್ ಮಾಡಿ, ವೇಷ ಕಟ್ಟಿ ಕಲಾವಿದರಿಗೆ ನೆರವಾಗುತ್ತಾರೆ.

ಮೇಳಕ್ಕಿಂತಲೂ ಹವ್ಯಾಸಿ ಸಂಘ ಸಂಸ್ಥೆ ಮತ್ತು ಮಕ್ಕಳ ತಂಡದಲ್ಲಿ ನೇಪಥ್ಯ ಕಲಾವಿದನಾಗಿ ಸೇವೆ ಸಲ್ಲಿಸುವುದು ಕಷ್ಟ. ಇದಕ್ಕೆ ಕಾರಣವೇನೆಂದು ಎಲ್ಲರಿಗೂ ತಿಳಿದಿದೆ. ಸಹನೆ ಮತ್ತು ಪ್ರದರ್ಶನ ಮುಗಿಯುವ ವರೆಗೆ ಎಚ್ಚರದಿಂದ ಇರಬೇಕಾಗುತ್ತದೆ. ಮೈಮರೆಯುವಂತಿಲ್ಲ. ಈ ಎಲ್ಲಾ ಗುಣಗಳನ್ನು ಹೊಂದಿದ ಕಾರಣವೇ ಶ್ರೀ ರಾಮಣ್ಣ ಗೌಡರನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ.

ಇವರು ವೃತ್ತಿಯಲ್ಲಿಯೂ ಸಂಸಾರಿಕವಾಗಿಯೂ ತೃಪ್ತರು. 1994ರಲ್ಲಿ ಲಲಿತಾ ಅವರ ಜತೆ ವಿವಾಹ. ರಾಮಣ್ಣ ಗೌಡ ಮತ್ತು ಲಲಿತಾ ದಂಪತಿಗಳಿಗೆ ಮೂವರು ಮಕ್ಕಳು. ಹಿರಿಯ ಪುತ್ರ ಶ್ರೀ ವಾಸುದೇವ. ಮೆಸ್ಕಾಂ ಉದ್ಯೋಗಿ. ಪುತ್ರಿ ಕು| ವಂದನಾ. ಸುಳ್ಯ ಕೆ.ವಿ.ಜಿ ಆಸ್ಪತ್ರೆಯಲ್ಲಿ ಉದ್ಯೋಗಸ್ಥೆ. ಕಿರಿಯ ಪುತ್ರ ವಸಂತಕುಮಾರ. ಪದವಿ ವಿದ್ಯಾರ್ಥಿ. ಸರಳ, ಸಜ್ಜನ, ಅನುಭವೀ ಕಲಾವಿದ  ಶ್ರೀ ಪಿ. ರಾಮಣ್ಣ ಗೌಡರಿಗೆ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ.

ಲೇಖಕ: ರವಿಶಂಕರ್ ವಳಕ್ಕುಂಜ

 

ಕಾಳಿಂಗ ನಾವಡ ಪ್ರಶಸ್ತಿ – 2020

ಬೆಂಗಳೂರಿನ ಕಲಾಕದಂಬ ಆರ್ಟ್ ಸೆಂಟರ್ ಸಂಸ್ಥೆಯು ನೀಡುವ  ಕಾಳಿಂಗ ನಾವಡ ಪ್ರಶಸ್ತಿ 2020ರ ಕಾರ್ಯಕ್ರಮವು ಕಾಳಿಂಗ ನಾವಡರ ಮೂಲ ಮನೆಯಾದ ಗುಂಡ್ಮಿಯ ಭಾಗವತರ ಮನೆಯಲ್ಲಿ ಈ ದಿನ ಸಂಜೆ ಯಶಸ್ವಿಯಾಗಿ ನಡೆಯಿತು.

ಯಕ್ಷಗಾನದ ಹಿರಿಯ ಕಲಾವಿದರಾದ ಹಂದಟ್ಟು ಗೋವಿಂದ ಉರಾಳರು ಈ ಒಂದು ಪ್ರಶಸ್ತಿಗೆ ಭಾಜನರಾದರು. ಈ ಒಂದು ಸಮಾರಂಭದಲ್ಲಿ ಹಿರಿಯ ಪುರೋಹಿತರಾದ  ಶ್ರೀ ವೆಂಕಪ್ಪಯ್ಯ ಭಟ್ಟರು, ಕನ್ನಡ ಪ್ರಾಧ್ಯಾಪಕರಾದ ಡಾ.ಶ್ರೀಕಾಂತ್ ಸಿದ್ದಾಪುರ, ಯಕ್ಷಗಾನ ಭಾಗವತರಾದ ಶ್ರೀ ಸುರೇಂದ್ರ ಫಣಿಯೂರ್, ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ  ಕಾರ್ಯದರ್ಶಿಗಳಾದ ಶ್ರೀ ರಾಜಶೇಖರ ಹೆಬ್ಬಾರ್, ಕಾಳಿಂಗ ನಾವಡರ ಸಹೋದರ ಶ್ರೀ ಗಣಪಯ್ಯ ನಾವಡ, ಕಲಾಕದಂಬ ಆರ್ಟ್ ಸೆಂಟರ್ ನ ಅಂಬರೀಷ ಭಟ್ ಹಾಗೂ ಕಲಾಕದಂಬ ಆರ್ಟ್ ಸೆಂಟರ್ ನ ನಿರ್ದೇಶಕರಾದ ಡಾ.ರಾಧಾಕೃಷ್ಣ ಉರಾಳ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಸಭಾ ಕಾರ್ಯಕ್ರಮದ ನಂತರ ಲಂಬೋದರ ಹೆಗ್ಡೆ ಹಾಗೂ ಸುಜಯೀಂದ್ರ ಹಂದೆ ತಂಡದವರು ಯಕ್ಷ ಗಾನ ವೈಭವದ ಮೂಲಕ ಪ್ರೇಕ್ಷಕರ ಮನರಂಜಿಸಿದರು. ಈ ಸಂಪೂರ್ಣ ಕಾರ್ಯಕ್ರಮದ ನಿರ್ವಹಣೆಯನ್ನು ಮುರಳೀಧರ ನಾವಡ ಹಾಗೂ ವಿಶ್ವನಾಥ ಉರಾಳರು ಯಶಸ್ವಿಯಾಗಿ ನಿರ್ವಹಿಸಿದರು.

ಅಹುದೇ ಎನ್ನಯ ರಮಣ….

ಸಾಂದರ್ಭಿಕ ಚಿತ್ರ

ಅವನು ಮತ್ತು ಇವನು ಒಳ್ಳೆಯ ವಯೋವೃದ್ಧ ಸ್ನೇಹಿತರು.
ಆಗಾಗ ಭೇಟಿಯಾಗುವುದಿತ್ತು.ಇಬ್ಬರೂ ಚರ್ಚಿಸದ ವಿಷಯಗಳಿಲ್ಲ. ಸಾಮಾನ್ಯ ವಿಷಯಗಳಿಂದ ಹಿಡಿದು ಸಾಹಿತ್ಯ, ಕಲೆ, ರಾಜಕೀಯ, ಕ್ರೀಡೆ ಹೀಗೆ ಎಷ್ಟೆಷ್ಟೋ ವಿಷಯಗಳು ಮಾತಿನ ನಡುವೆ ಬಂದು ಹೋಗುತ್ತಿತ್ತು, ನಿರರ್ಗಳ ಚರ್ಚೆ ಎಂದೂ ದಾರಿ ತಪ್ಪಿರಲಿಲ್ಲ. ಆದರೆ ಇಂದೇಕೋ ಇಬ್ಬರ ನಡುವೆ ಎಂದಿನ ಮಾತುಕತೆ ಇನ್ನೂ ಪ್ರಾರಂಭ ವಾಗಿರಲಿಲ್ಲ. ನಡುವೆ ಮೌನದ ಗೋಡೆ ಮನೆಮಾಡಿತ್ತು. ಎಷ್ಟು ಹೊತ್ತು ಅಂತ ಹೀಗೆ ಕುಳಿತಿರಬಲ್ಲರು… ಮೊದಲು ಅವನೇ ಮಾತಿಗೆ ತೊಡಗಿದ.


“ಏನಿವತ್ತು ಮೋಡ ಕವಿದ ಹಾಗಿದೆಯಲ್ಲಾ…” ಎಂದ ಅವನು ನಗುತ್ತಾ.  ಇವನು ಕೂಡಾ ಹಾರ್ದಿಕವಾಗಿ ನಗುತ್ತಾ “ಇದು ಚದುರುವ ಮೋಡಗಳು” ಎಂದ
“ಮಳೆ ಬಂದರೆ  ಕಷ್ಟ “ ಅವನೆಂದ.
“ಯಾರಿಗೆ ಕಷ್ಟ? ನನಗಂತೂ ಈ ಸೆಖೆಗೆ ಸಾಕಾಗಿದೆ ಮಾರಾಯ, ಒಮ್ಮೆಮಳೆ ಬಂದರೆ ಸಾಕು ಅಂತ
ಅನಿಸಿಬಿಟ್ಟಿದೆ”
“ನಿನಗೆ ಸಾಕಾಗಿದೆ ಎನ್ನುವುದು ನಿಜವಿರಬಹುದು. ಆದರೆ ಇಂದು ಮಳೆ ಬಂದರೆ ಬೇಸರಿಸುವವರು ತುಂಬಾ ಜನರಿರಬಹುದು”
“ಅದು ಯಾಕೆ ಹಾಗೆ?”
“ಇಷ್ಟೆಲ್ಲಾ ಖರ್ಚು ಮಾಡಿ ಯಕ್ಷಗಾನ ಬಯಲಾಟ ಕಾರ್ಯಕ್ರಮ ಇಟ್ಟುಕೊಂಡಿದ್ದಾರಲ್ಲಾ, ಕಲಾಭಿಮಾನಿಗಳಿಗೆ ಭ್ರಮ ನಿರಸನವಾದೀತು.”


“ಅದೂ ಹೌದಲ್ಲಾ.. ನಾನು ಆ ಬಗ್ಗೆ ಯೋಚಿಸಿರಲಿಲ್ಲ.”
“ನೀನು  ಯೋಚಿಸುವುದು ನಿನ್ನ ಸಾಹಿತ್ಯ ಮತ್ತು ನಿನ್ನ ಕಥಾಪಾತ್ರಗಳ ಬಗ್ಗೆ ಮಾತ್ರ ಬಿಡು..” ಅವನು ಛೇಡಿಸಿದ.
“ಹಾಗೇನಿಲ್ಲ ಮಾರಾಯ, ನನಗೂ ಯಕ್ಷಗಾನ ಎಂದರೆ ಇಷ್ಟ ಎಂದು ನಿನಗೆ ತಿಳಿದಿದೆಯಲ್ಲವೇ?” ಇವನೆಂದ
“ಯಕ್ಷಗಾನದ ವಿಷಯ ಬಂದುದು ಒಳ್ಳೆಯದಾಯಿತು ನೋಡು, ಇದಕ್ಕೆ ಸಂಬಂಧಪಟ್ಟದ್ದು. ಯಕ್ಷಗಾನಕ್ಕೆ ಸಂಬಂಧಿಸಿದ್ದು. ನಿನಗೆ ಒಂದು ಕುತೂಹಲಕರ  ಘಟನೆಯನ್ನು ಹೇಳಬೇಕೆಂದಿದ್ದೆ.  ಅದು ಈಗ ನೆನಪಾಯಿತು ನೋಡು”
ಇವನ  ಕುತೂಹಲ  ಹೆಚ್ಚಾಯಿತು.
“ನೀನು ಕೂಡಾ ಹಿಂದೆ ಖ್ಯಾತ ಯಕ್ಷಗಾನ ಕಲಾವಿದನಾಗಿದ್ದವನು ಅಲ್ವಾ… ಅದೇನು ಸತ್ಯ ಕಥೆಯೋ? ಅಲ್ಲ ಕಾಲ್ಪನಿಕವೋ?” ಎಂದ.
“ನಾನೇನು  ಪ್ರಸಂಗಕರ್ತನಲ್ಲ.. ಸತ್ಯವೋ, ಕಾಲ್ಪನಿಕವೋ ಎಂದು ಹೇಳಲಿಕ್ಕೆ ವಿಮರ್ಶಕನೂ ಅಲ್ಲ, ಯಾರೋ ಹೇಳಿದ್ರು, ನಿನಗೆ ಹೇಳೋಣ ಅನ್ನಿಸಿತು. ನೀನು ಎಷ್ಟಾದರೂ ಕತೆಗಾರ ಅಲ್ವಾ? ಸದ್ಯಕ್ಕೆ ಕೇವಲ ಕಥೆ ಅಂತ ತಿಳಿದುಕೋ” ಎಂದ ಅವನು.
ಇವನು “ಆಯ್ತು ಮಾರಾಯ ಮುದದಿಂದ ಹೇಳು” ಎಂದ ಆಸಕ್ತಿಯಿಂದ.
ಅವನು ಹೇಳತೊಡಗಿದ. ಇವನು ಕೇಳತೊಡಗಿದ.


*********************

‘ತಾದಿ ನದ್ದ ನಕ್ಕತ್ತಾಂ ಕತ್ತಾಂ ತ ತರಿಕಿಟ ಕಿಟತಕ’ ಏಕತಾಳದ ನಡೆಯನ್ನು ಕಲಿಸುತ್ತಿದ್ದ ಚರಣ್ ಆ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ.
ಕಾಲೇಜಿನ ವಾರ್ಷಿಕೋತ್ಸವಕ್ಕೆ ಇನ್ನೇನೂ ಕೆಲವೇ ದಿನಗಳು ಉಳಿದಿತ್ತು. ಅಷ್ಟರಲ್ಲಿ ಕಾರ್ಯಕ್ರಮಗಳಲ್ಲಿ ಯಕ್ಷಗಾನವನ್ನು ದಿಢೀರ್ ಸೇರ್ಪಡೆಗೊಳಿಸಲಾಗಿತ್ತು. ಆದರೆ ಯಕ್ಷಗಾನದ ನೃತ್ಯಾಭ್ಯಾಸ ಮಾಡಿದ ಒಂದೆರಡು ವಿದ್ಯಾರ್ಥಿಗಳು ಮಾತ್ರ ಅಲ್ಲಿದ್ದರು. ಅದೂ ಪ್ರಾಥಮಿಕ ಪಾಠ ಮಾತ್ರ ಆಗಿತ್ತು ಅವರಿಗೆ. ಮಿಕ್ಕುಳಿದವರಿಗೆ ಅಭ್ಯಾಸ ಮಾಡಿಸಬೇಕಲ್ಲ ಎಂದು ತಲೆ ಕೆರೆದುಕೊಂಡ ಸ್ವತಃ ಹವ್ಯಾಸೀ ಕಲಾವಿದರಾಗಿದ್ದ ಕನ್ನಡ ಉಪಾನ್ಯಾಸಕರು ಅದಕ್ಕೊಂದು ಸೂಕ್ತ ಕಲಾವಿದನ ಹುಡುಕಾಟವನ್ನು ನಡೆಸಿದರು. ಆಗ ಮೇಳದ ತಿರುಗಾಟದ ಸಮಯವಾದ್ದರಿಂದ ಜನ ಹೊಂದಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಅದೂ ಅಲ್ಲದೆ  ಮೇಳದ ಕಾರ್ಯಕ್ರಮಗಳು ದೂರ ದೂರದ ಊರುಗಳಿಗೆ ಬದಲಾವಣೆಯಾಗುತ್ತಾ ಇರುವಾಗ ಸಮಯದ ಹೊಂದಾಣಿಕೆಯೂ ಆಗಬೇಕಿತ್ತು. ಹಗಲು ಕಲಾವಿದರಿಗೆ ನಿದ್ರೆಯ ಸಮಯ, ರಾತ್ರಿ ಪ್ರದರ್ಶನದ ಸಮಯ. ಹಾಗಾಗಿ ಮುಸ್ಸಂಜೆಯ ಹೊತ್ತನ್ನು ನಿಗದಿಪಡಿಸಿದರೂ  ಅದರಲ್ಲಿ ಭಾಗವಹಿಸುವ ವಿದ್ಯಾರ್ಥಿನಿಯರನ್ನು ಹೊತ್ತು ಮೀರುವ ಮೊದಲೇ ಮನೆಗೆ ಕಳುಹಿಸಬೇಕಾದ ಅನಿವಾರ್ಯತೆಯೂ ಇತ್ತು.


ಅಂತೂ ಇಂತೂ ಈ ಸಂದಿಗ್ಧತೆಯ ಸಂಕಟದಲ್ಲಿರುವಾಗಲೇ   ಕನ್ನಡ ಉಪಾನ್ಯಾಸಕರಿಗೆ ಚರಣ್ ನೆನಪಿಗೆ ಬಂದುದು. ಈ ಕಾಲೇಜಿನಲ್ಲೇ ಕಲಿತವನಾದ್ದರಿಂದ ಅವನ ಪರಿಚಯ ಅವರಿಗೆ ಧಾರಾಳವಾಗಿತ್ತು. ತರಗತಿಯಲ್ಲಿ ಸ್ವಲ್ಪ ಕೀಟಲೆಯ ಸ್ವಭಾವದ ಹುಡುಗನಾಗಿದ್ದುದರಿಂದ ಎಲ್ಲಾ ಉಪಾನ್ಯಾಸಕರ ಒಂದು ಕಣ್ಣು ಅವನ ಮೇಲೆಯೇ ಇರುತ್ತಿತ್ತು. ಅದೂ ಅಲ್ಲದೆ ಅವನಿದ್ದ ಮೇಳಗಳ ಪ್ರದರ್ಶನಗಳಿಗೆ ಕೆಲವೊಮ್ಮೆ ಈ ಉಪಾನ್ಯಾಸಕರು ಹೋಗುವುದಿತ್ತು. ಆಗೆಲ್ಲಾ ಚರಣ್ ಧಾವಿಸಿ ಬಂದು ತನ್ನ ಗುರುಗಳಿಗೆ ಮುಂದಿನ ಸಾಲಿನಲ್ಲಿ ಆಸನದ ವ್ಯವಸ್ಥೆ ಮಾಡಿಸುವಲ್ಲಿ ನೆರವಾಗುತ್ತಿದ್ದ.
ಆಪತ್ಕಾಲಕ್ಕೆ ಸಿಕ್ಕಿದವನೇ ನಿಜವಾದ ಬಂಧು ಎಂಬಂತೆ ಚರಣ್ ಈ ಹೊತ್ತು ನೆನಪಾದದ್ದು ಒಳ್ಳೆಯದಾಯಿತು ಎಂದುಕೊಂಡರು ಉಪಾನ್ಯಾಸಕರು. ಕೂಡಲೇ ಅವನಿಗೆ ಕರೆ ಮಾಡಿ ತನ್ನ ಅಸಹಾಕತೆಯನ್ನು ತಿಳಿಸಿ ಈ ಕಡಿಮೆ ಸಮಯದಲ್ಲಿ ಆತನಿಂದ ಸಹಾಯವನ್ನು ಅಪೇಕ್ಷಿಸಿದರು. ಚರಣ್ ಸಂತೋಷದಿಂದ ಒಪ್ಪಿಕೊಂಡರೂ ದೂರದೂರಲ್ಲಿ ಪ್ರದರ್ಶನಗಳಿದ್ದರೆ ಬರಲು ಕಷ್ಟವಾಗಬಹುದೆಂದೂ ಅದರ ಬದಲು ಕಾಲೇಜಿಗೆ ದೂರವಿಲ್ಲದ ಸ್ಥಳಗಳಲ್ಲಿನ ಪ್ರದರ್ಶನದ ದಿನ ಅರ್ಧ ದಿನವಿಡೀ ನೃತ್ಯವನ್ನು ಕಲಿಸುವುದಾಗಿ  ಒಪ್ಪಿಕೊಂಡ. ಅದರಂತೆಯೇ ಮೊದಲೇ ದಿನಗಳನ್ನು ನಿಶ್ಚೈಸಿಕೊಂಡು ಚರಣ್ ಕಾಲೇಜಿಗೆ ಬಂದು ಹೋಗುತ್ತಿದ್ದ.


ಅಂದು ಆ ಸಣ್ಣ ಹಂತದ ಯಕ್ಷಗಾನ ತರಗತಿಯ ಮೊದಲ ದಿನ. ಕೆಲವು ಮಂದಿ ಹುಡುಗಿಯರೂ ಇದ್ದರು. ಚರಣ್‍ಗೆ ಸಂಕೋಚವಾಯ್ತು. ‘ಈ ಹುಡುಗಿಯರಿಗೆ ಹೇಗೆ ಕಲಿಸುವುದು’ ಎಂದುಕೊಂಡ ಮನಸ್ಸಿನಲ್ಲೇ.. ಅದೂ ಅಲ್ಲದೆ ಕೆಲವು ಹುಡುಗಿಯರ ತಮಾಶೆ ಮಾಡುವುದು ಮತ್ತು ಹಿಂದಿನಿಂದ ನಗುವ ಸ್ವಭಾವ ಆತನಿಗೆ ಹೊಸತಲ್ಲ. ತನ್ನ ಕಾಲೇಜಿನ ದಿನಗಳಲ್ಲಿಯೂ ಇದೇ ಸಂದರ್ಭಗಳನ್ನು ಎದುರಿಸಿದ್ದಾನಾದುದರಿಂದ ಹೇಗಪ್ಪಾ ಇವರನ್ನು ಸಂಭಾಳಿಸುವುದು ಎಂದುಕೊಂಡ. ‘ಇರಲಿ, ಹಾಗೇನಾದರೂ ತಂಟೆ, ತಕರಾರುಗಳಿದ್ದರೆ ಉಪಾನ್ಯಾಸಕರಲ್ಲೇ ಹೇಳಿಬಿಡುವುದು, ಇದು ನನ್ನಿಂದಾಗದ ಕೆಲಸ’ ಎಂದು ನಿಶ್ಚೈಸಿದ.

ಸಣ್ಣ ಪ್ರಸಂಗವಾದ್ದರಿಂದ ಅದರಲ್ಲಿ ಬರುವ ತಾಳಗಳನ್ನು ಮಾತ್ರ ಕಲಿಸಿದರೆ ಸಾಕು ಎಂದುಕೊಂಡ.  ಸಮಯದ ಅಭಾವವಿರುವುದರಿಂದ ನಾಟ್ಯ ವೈವಿಧ್ಯತೆಗಳು ಮತ್ತು ಚಾಲೂ ಕುಣಿತಗಳನ್ನು ಉಪಯೋಗಿಸದೆ ಬರಿಯ ಹಾಡಿನ ಭಾವಸಹಿತ ನಡೆ, ಬಿಡಿತ, ಮುಕ್ತಾಯಗಳನ್ನು ಕಲಿಸಿದರೆ ಸಾಕಲ್ಲವೆ ಎಂದು ಉಪಾನ್ಯಾಸಕರಲ್ಲಿ ಕೇಳಿದ. ಅವರು “ಧಾರಾಳ ಸಾಕು, ಎಲ್ಲಾ ತಾಳಗಳನ್ನು ಅಗತ್ಯ ಇಲ್ಲದಿದ್ದರೆ ಕಲಿಸುವುದು ಬೇಡ, ಅದು ಸಾಧ್ಯವೂ ಇಲ್ಲ ಈ ಕೆಲವು ದಿನಗಳಲ್ಲಿ. ಕೆಲವು ಸುಲಭದ ತಾಳಗಳಲ್ಲಿ ಮಾತ್ರ ಪದ್ಯ ಹೇಳಲು ಭಾಗವತರನ್ನು ಒಪ್ಪಿಸುವ” ಎಂದರು. ಚರಣ್‍ಗೆ ನಗು ಬಂತು. ಉಪಾನ್ಯಾಸಕರೂ ನಕ್ಕು “ಮತ್ತೇನು ಮಾಡುವುದು ಮಾರಾಯ” ಎಂದರು.
ಅಂದು ಮೊದಲ ದಿನ ಚರಣ್ ಪ್ರಾರಂಭದ ನಿರ್ದೇಶನಗಳನ್ನು ಹಾಗೂ ಕೆಲ ಮಾಹಿತಿಗಳನ್ನು ನೀಡಿ ಏಕತಾಳದ ನಡೆಯನ್ನು ಕಲಿಸತೊಡಗಿದ. ಸುಧನ್ವಾರ್ಜುನ  ಪ್ರಸಂಗವನ್ನು ಆಯ್ದು ಕೊಂಡಿದ್ದರಿಂದ ಅದರಲ್ಲಿ ಬರುವ ಪಾತ್ರಗಳನ್ನು ಹಾಗೂ ಪದ್ಯಗಳನ್ನು ಆ ಮೊದಲೇ ಭಾಗವತರೊಂದಿಗೆ ಕುಳಿತು ಚರ್ಚಿಸಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಒಡ್ಡೋಲಗದ ಪ್ರವೇಶವನ್ನೂ ಅದಕ್ಕೆ ಮೊದಲು ಹೇಳಿಕೊಡಬೇಕಾಗಿತ್ತು. ಅದಕ್ಕೂ ಮೊದಲು  ಏಕತಾಳದ ನಡೆ ಮತ್ತು ಬಿಡಿತದ ಬಗ್ಗೆ ವಿವರಿಸಿದ. ಹಾಗೂ ಬಾಯಿ ತಾಳದೊಂದಿಗೆ ಹೆಜ್ಜೆ ಹಾಕಿ ಅನುಸರಿಸಲು ಹೇಳಿದ. ಸುಧನ್ವ ಮತ್ತು ಪ್ರಭಾವತಿ ಪಾತ್ರ ಮಾಡುವವರು ಇಬ್ಬರೂ ಹುಡುಗಿಯರೇ ಆದ್ದರಿಂದ ಪಾತ್ರೋಚಿತ ಪ್ರಣಯ ದೃಶ್ಯಗಳಲ್ಲಿ ಅಭಿನಯಿಸಲು ಮುಜುಗರ ಪಡಬೇಕಿಲ್ಲ ಎಂದು ಚರಣ್ ಯೋಚಿಸಿದ.

ಎಲ್ಲರೂ ಏಕತಾಳದ ಬಾಯಿತಾಳವನ್ನು ಹೇಳುತ್ತಾ ಹೆಜ್ಜೆ ಹಾಕುತ್ತಿದ್ದರು. ಪ್ರಭಾವತಿಯ ಪಾತ್ರ
ಮಾಡಬೇಕಾದ ಹುಡುಗಿ ಕಿರಣ ಮಾತ್ರ ಮೊಬೈಲ್  ನೋಡುತ್ತಾ  ಅದರಲ್ಲೇ ತಲ್ಲೀನಳಾಗಿದ್ದಳು. ಚರಣ್‍ಗೆ  ಇದು ಸರಿಯೆನಿಸಲಿಲ್ಲ.  “ಕಿರಣ, ಇಲ್ಲಿ ಬನ್ನಿ” ಎಂದು ಕೂಗಿ ಕರೆದ. ಕೂಡಲೇ ಏನು ಎನ್ನುವಂತೆ ಹತ್ತಿರ ಬಂದಳು.
“ನೀವು ಕೂಡಾ ಕಲಿಯಿರಿ. ಇಲ್ಲದಿದ್ದರೆ  ಸಮಯಕ್ಕಾಗುವಾಗ ಗೊತ್ತಾಗುವುದಿಲ್ಲ” ಎಂದ.
“ಆದರೆ ನನಗೆ ಪ್ರಭಾವತಿಯ ಪಾತ್ರದ ಪದ್ಯಕ್ಕೆ ಮಾತ್ರ ಕಲಿಸಿ, ಇದೆಲ್ಲಾ ಯಾಕೆ?” ಎಂದಳು ಕಿರಣ
“ಇಲ್ಲ ಇದು ಏಕತಾಳದ ನಡೆ, ಎಲ್ಲಾ ಪಾತ್ರಕ್ಕೂ ಬೇಕಾಗುತ್ತದೆ. ಪ್ರಭಾವತಿಯ ಒಂದೆರಡು ಪದ್ಯಗಳು ಕೂಡಾ ಏಕತಾಳದಲ್ಲಿದೆ. ಅಲ್ಲದೆ ಎಲ್ಲವನ್ನೂ ನೋಡಿ ಕೊಂಡರೆ  ಒಳ್ಳೆಯದು, ಸಮಯ, ಸಂದರ್ಭ ಬಂದರೆ ಯಾವ ಪಾತ್ರವನ್ನು ಮಾಡಲು ಕೂಡಾ ತಯಾರಾಗಿರಬೇಕು. ಅಕಸ್ಮಾತ್ ಯಾರಾದರೂ ಅನಿವಾರ್ಯ
ಕಾರಣಗಳಿಂದಾಗಿ ಬರಲಾಗದಿದ್ದರೆ ಆಗ ಇನ್ನೊಬ್ಬರು ಮಾಡಲೇ ಬೇಕಾಗುತ್ತದೆ ಎಂದ”
“ಸರಿ” ಎಂದು ಅವರನ್ನು ಕೂಡಿಕೊಂಡಳು ಕಿರಣ. ಯಾಕೋ ಅವನ ಮಾತು ಇಷ್ಟವಾಯಿತು ಅವಳಿಗೆ.

ಏನೋ ಆಕರ್ಷಣೆಯಿದೆ ಅವನ ಮಾತುಗಳಲ್ಲಿ. ಮತ್ತೆ ತಿರುಗಿ ನೋಡಿದಳು ಅವನನ್ನು. ಅವನು ಮಾತ್ರ ಹೆಜ್ಜೆ ಹಾಕಿ ತೋರಿಸುವುದರಲ್ಲಿ ಮಗ್ನನಾಗಿದ್ದ.
ಚರಣ್ ಆ ದಿನ ಕೆಲವು ತಾಳಗಳ ಒಂದೊಂದು ನಡೆ, ಬಿಡಿತ, ಮುಕ್ತಾಯಗಳ ಹೆಜ್ಜೆಗಾರಿಕೆಯನ್ನು ಹೇಳಿ ಕೊಟ್ಟು, ಅವುಗಳ ಬಾಯಿತಾಳವನ್ನು ಬರೆಸಿ ಮರುದಿನ ಸರಿಯಾಗಿ ಅಭ್ಯಾಸ ಮಾಡಿ ಬರುವಂತೆ ತಿಳಿಸಿದ. ಹಾಗೂ ಮರುದಿನ ತಾನು ಅವರವರ ಪದ್ಯಗಳಿಗೆ ನಾಟ್ಯವನ್ನು ಕಲಿಸಲು ಆರಂಭಿಸುವುದಾಗಿ ಹೇಳಿ ತನ್ನ ಆ ದಿನದ ಆಟದ ಕ್ಯಾಂಪ್‍ಗೆ ತೆರಳಿದ.
ಅವನು ಹೋದ ನಂತರವೂ ವಿದ್ಯಾರ್ಥಿಗಳು ಅಭ್ಯಾಸ ಮಾಡುವುದರಲ್ಲಿ ತಲ್ಲೀನರಾಗಿದ್ದರು. ಸ್ವಲ್ಪ ಮಟ್ಟಿಗೆ ಕನ್ನಡ ಉಪಾನ್ಯಾಸಕರೂ ಯಕ್ಷಗಾನದ ನಾಟ್ಯಾದಿ ಅಂಗಗಳನ್ನು ಬಲ್ಲವರಾಗಿದ್ದರಿಂದ ಅವರ ಮೇಲುಸ್ತುವಾರಿಯಲ್ಲಿ ಅಭ್ಯಾಸ ನಡೆಸಿದರು. ಕಿರಣಳಿಗೂ ನಾಟ್ಯದ ಸಣ್ಣ ಪಾಠ ಆಗಿತ್ತು. ಶಾಲೆಯಲ್ಲಿ ಕಲಿಯುತ್ತಿರುವಾಗ ಇದೇ ರೀತಿಯ ಸಂದರ್ಭದಲ್ಲಿ ಒಂದೆರಡು ತಾಳಗಳ ಪರಿಚಯ ಆಗಿತ್ತು. ಅದ್ದರಿಂದ ಒಮ್ಮೆ ಹೇಳಿದ್ದನ್ನು ಬಹಳ ಬೇಗ ಕಲಿತಿದ್ದಳು. ಅಲ್ಲದೆ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದುದರಿಂದ ನಾಟ್ಯದ ಲಯ ಕಂಡುಕೊಂಡಿದ್ದಳು.

ಕಿರಣ ಯಾಕೋ ಅವನ ಬಗ್ಗೆಯೇ ಅಲೋಚಿಸುತ್ತಿದ್ದಳು, ರಂಗದಲ್ಲಿ  ಅವನ  ವೇಷವನ್ನು ನೋಡಿದ್ದಳು.  ಉತ್ತಮ  ಪುಂಡುವೇಷಧಾರಿಯಾಗಿದ್ದ ಅವನಿಗೆ ಅಭಿಮಾನಿಗಳ ಸಂಖ್ಯೆ ಸ್ವಲ್ಪ ಹೆಚ್ಚೇ ಇದ್ದಿತು. ಅವಳಿಗೂ ಅವನ ವೇಷ ಇಷ್ಟವಾಗಿತ್ತು. ಆದರೆ ವೇಷ ಕಳಚಿದ ಮೇಲೆ ಇದೇ ಮೊದಲ ಸಾರಿ  ಮಾತನಾಡಿದ್ದಳು. ವೇಷದಲ್ಲಿ ಮಾತ್ರವಲ್ಲ, ಮಾಮೂಲಿ ಉಡುಪಿನಲ್ಲಿಯೂ ರೂಪವಂತ ಎಂದು ಕೊಂಡಳಾಕೆ. ಅಂತೂ ಅನ್ಯಮನಸ್ಕಳಾಗಿಯೇ ಆಕೆ ಆ ದಿನ ಮನೆಗೆ ತೆರಳಿದಳು.

ಮರುದಿನ ಹಿಂದಿನ ದಿನದ ಪಾಠದ ಅಭ್ಯಾಸವನ್ನು ಪರೀಕ್ಷಿಸಿ ತೃಪ್ತಿಪಟ್ಟು ಚರಣ್  ಮುಂದಿನ  ಅಭ್ಯಾಸಗಳನ್ನು ಮಾಡಿಸುತ್ತಾ  ಹೋದ. ಅರ್ಜುನನ ಒಡ್ಡೋಲಗದ ಸನ್ನಿವೇಶಗಳನ್ನು ಮೊಟಕುಗೊಳಿಸಿ  ಹಂಸದ್ವಜನ  “ಮಂತ್ರಿಗಳಿರ ಕೇಳಿರೀಗ…”  ಪದ್ಯವನ್ನು ಪಾತ್ರಧಾರಿಗೆ ಹೇಗೆ ಅಭಿನಯಿಸುವುದೆಂದು ತೋರಿಸಿದ. ಕಿರಣ ಮಾತ್ರ ಅವನ ನಾಟ್ಯದ ವೈಖರಿ, ಬೋಧನಾ ಸಾಮರ್ಥ್ಯಕ್ಕೆ ಬೆರಗಾಗಿದ್ದಳು. ಮುಂದೆ ಸುಧನ್ವನ ಪ್ರವೇಶ ಪದ್ಯಗಳಿಗೆ ಒಂದಷ್ಟು ಅಭ್ಯಾಸ ನಡೆಯಿತು. ಅಮೇಲೆ ಕಿರಣಳ ಸರದಿ. “ಸತಿಶಿರೋಮಣಿ ಪ್ರಭಾವತಿ ಸೊಬಗಿನಲಿ, ರತಿಯ ಸೋಲಿಪ ರೂಪಿನ..” ಕಿರಣ  ತನ್ನ  ಅವಕಾಶಕ್ಕಾಗಿ ಕಾಯುತ್ತಿದ್ದಳು. 

ಲಗುಬಗನೆ ಬಂದವಳನ್ನು ಚರಣ್ ನೋಡಿ ‘ಇವಳು ಥೇಟ್ ರತಿಯೆ’ ಎಂದುಕೊಂಡ. ಸುಧನ್ವ ಮತ್ತು ಪ್ರಭಾವತಿಯ ಸ್ವಲ್ಪ ಪದ್ಯಗಳಿಗೆ ಕತ್ತರಿ ಹಾಕಿದ ಚರಣ್ “ಕಳವಳಿಸಬೇಡ ಮನದಿ ಕುಂತಿಸುತಗಳುಕುವವನಲ್ಲ ರಣದಿ” ಪದ್ಯಕ್ಕೆ ತಾನೆ ನರ್ತಿಸಿ ತೋರಿಸಿದ. ರಂಗದಲ್ಲಿ ಆತನಿಗೆ ಎಷ್ಟೋ ಬಾರಿ ಸುದನ್ವನ ಪಾತ್ರ ಮಾಡಿದ ಅನುಭವ ಇತ್ತು. ಅವನ ಈ ಪರಿಯ ನೃತ್ಯದ ಸೊಬಗನ್ನು ನೋಡಿ ಕಿರಣ ತಾನು ಪ್ರಭಾವತಿಯಾದದ್ದಕ್ಕೆ ಬಹಳಷ್ಟು ಹಿಗ್ಗಿದಳು. ನಿಧಾನವಾಗಿ ತಾನು ಆತನಿಗೆ ಮನಸೋಲುತ್ತಿರುವೆನೆಂದಾಕೆ ಭಾವಿಸಿದಳು. ಆದರೆ ಇದ್ಯಾವುದರ ಅರಿವಿಲ್ಲದ ಚರಣ್ ಅವಳನ್ನು ಎಚ್ಚರಿಸಿ ಸುದನ್ವನ ಅಭಿನಯಕ್ಕೆ ಪ್ರಭಾವತಿಯ ಭಾವಪೂರ್ಣ ಪ್ರತಿಕ್ರಿಯೆ ಹೇಗಿರಬೇಕೆಂದು ಹೇಳಿಕೊಟ್ಟ. ಆದರೆ ಕಿರಣ ಮಾತ್ರ ಆತನೇ ಸುದನ್ವ ತಾನೇ ಪ್ರಭಾವತಿ ಎಂಬಂತೆ ಭಾವಿಸಿದಳು.


ಅಂತೂ ಇಂತೂ ಆ ಪ್ರಸಂಗ ಅಭ್ಯಾಸ ಪೂರ್ತಿ ಮುಗಿಯಿತು. ಆ ಅಭ್ಯಾಸದ ದಿನಗಳಲ್ಲಿ ಕಿರಣ ಮಾತ್ರ ಎಲ್ಲರಿಗಿಂತ ಮೊದಲೇ ಹಾಜರಾಗುತ್ತಿದ್ದಳು. ಅಲ್ಲದೆ ಅವನು ಹೇಳಿಕೊಟ್ಟ ನಡೆಗಳನ್ನು ಅಚ್ಚು ಕಟ್ಟಾಗಿ ನಿರ್ವಹಿಸಿ ಅವನ ಮೆಚ್ಚುಗೆಗೆ ಪಾತ್ರಳಾದಳು. ಕೆಲವೊಮ್ಮೆ ಬೇಕೆಂದೇ ಸಂಶಯಗಳನ್ನು  ವ್ಯಕ್ತಪಡಿಸಿ ಅವನ ಸಲಹೆಗಳನ್ನು ಕೇಳುತ್ತಿದ್ದಳು. ತನಗೆ ಅದರ ಬಗ್ಗೆ ಸಂಶಯವಿಲ್ಲದಿದ್ದರೂ ಅವನ ಸಾನ್ನಿಧ್ಯ  ಅವಳಿಗೆ ತೃಪ್ತಿ ತರುತ್ತಿದ್ದುದರಿಂದ ಹಾಗೆ ಮಾಡುತ್ತಿದ್ದಳು. ಆದರೆ ಇದರ ಬಗ್ಗೆ ಆತನೇನೂ ತಲೆ ಕೆಡಿಸಿಕೊಂಡಿರಲಿಲ್ಲ.


ವಾರ್ಷಿಕೋತ್ಸವದ ದಿನ ಬಂತು. ಕಾಲೇಜಿನಲ್ಲಿ ಸಂಭ್ರಮದ ವಾತಾವರಣ. ಕಿರಣ ಆ ದಿನ ಸಂಭ್ರಮದ ಸಡಗರದ ಶೃಂಗಾರದೊಂದಿಗೆ ಕಾಲೇಜಿಗೆ ಬಂದಳು. ಕಾರಣ ಆ ದಿನದ ಅವರ ಪ್ರದರ್ಶನಕ್ಕೆ ಚರಣ್ ಕೂಡಾ ಬರುತ್ತೇನೆಂದು ಹೇಳಿದ್ದ. ಕಾಲೇಜಿಗೆ ಬಂದವಳಿಗೆ ಮೊದಲು ಎದುರಾದದ್ದು ಹಂಸಧ್ವಜ ಪಾತ್ರಧಾರಿ ವಿನಯ್. ಇವಳನ್ನು ಕಂಡ ಕೂಡಲೇ
ವಿನಯ್ ಕರೆದ. “ಏನು?” ಎನ್ನುತ್ತ ಸಮೀಪಕ್ಕೆ ಬಂದಳು.
“ಇವತ್ತು ಸ್ವಾತಿ ಬರುವುದಿಲ್ಲ, ಅವಳಿಗೆ ಟೈಫಾಯಿಡ್ ಅಂತೆ, ಅಶೋಕ್ ಸರ್‍ಗೆ ಸುಧನ್ವ ಪಾತ್ರ ಯಾರು ಮಾಡುವುದು ಅಂತ ಚಿಂತೆ ಆಗಿತ್ತು. ಆದರೆ ಸಮಸ್ಯೆಗೆ ಪರಿಹಾರ ಸಿಕ್ಕಿತು” ಅಂದ.
“ಹೋ, ಹೌದಾ.. ಛೇ.. ಹಾಗಾದರೆ ಸುದನ್ವ ಯಾರು ಮಾಡ್ತಾರೆ? ಅಶೋಕ್ ಸರ್ ಮಾಡ್ತಾರ?”


“ ಅವರು ಸುದನ್ವ ಮಾಡಿದ್ರೆ ಪ್ರಭಾವತಿಗೆ ಕನ್ನಡ ಪಾಠ ಮಾಡ್ತಾರೆ ರಂಗಸ್ಥಳದಲ್ಲಿ.. ಅವರಲ್ಲ. ಅವರು ಚರಣ್ ಸರ್ ಗೆ  ಫೋನ್ ಮಾಡಿ ಅವರನ್ನು ಒಪ್ಪಿಸಿದ್ರು, ಚರಣ್ ಸರ್ ಒಪ್ಪಿದಾರಂತೆ. ಸುದನ್ವ ಮಾಡಿ ಅಮೇಲೆ ಮೇಳದ ಆಟಕ್ಕೆ ಹೋಗ್ತಾರಂತೆ”
ಕಿರಣಳ ಎದೆ ಢವ ಢವ ಹೊಡೆಯಲು ಆರಂಭಿಸಿತು. ಚರಣ್ ಮತ್ತು ತಾನು ಜೋಡಿಯಾಗಿ ರಂಗದಲ್ಲಿ ಆಡುವುದು… ನಿಜವಾಗಿಯೂ ತಾವಿಬ್ಬರೂ ಜೋಡಿಹಕ್ಕಿಗಳಾಗಿ ಜೀವನವೆಂಬ ರಂಗದಲ್ಲಿ ಹಾರಾಡುವುದು.. ಈ ಕಲ್ಪನೆಯೇ ಅವಳಿಗೆ ಅತೀವ ಸುಖವನ್ನು ಕೊಟ್ಟಿತು.
‘‘ಏನಾಯ್ತು?” ಅಂದ ವಿನಯ್.
“ಏನಿಲ್ಲ.. ಪಾಪ ಸ್ವಾತಿ ಹೇಗಿದ್ದಾಳೋ” ಎಂದು ಭಾವ ಮರೆಮಾಚಿದಳು
“ಹಾಗೇನೂ ತೊಂದರೆಯಿಲ್ಲವಂತೆ, ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದ್ದಾರಂತೆ”
“ಆಯ್ತು, ಹೋಗೋಣ, ತಯಾರಿ ಆಗ್ಬೇಕಲ್ವ”

ಅಂದು ಕಿರಣ ತಾನು ತಾನಾಗಿರಲಿಲ್ಲ. ಬಣ್ಣ ಹಚ್ಚುತ್ತಿರುವಾಗಲೂ ಏನೇನೋ ಮಧುರ ಪುಳಕಗಳು ಮೈ ತುಂಬಾ.. ನಡುವೆ ಚರಣ್ ಆಗಾಗ ಬಂದು ಕೆಲವು ಸೂಚನೆಗಳನ್ನು ಕೊಡುತ್ತಿದ್ದ. ವೇಷ ತಯಾರಾಗಿ ಪ್ರವೇಶದ ಮೊದಲು ರಂಗದಲ್ಲಿ ಯಾವ ರೀತಿ ಹೋಗಬೇಕು, ಹೇಗೆ ಹೆಜ್ಜೆ ಹಾಕಬೇಕು ಎಂಬುದರ ಬಗ್ಗೆ ವಿವರಿಸಿದ.
“ಜೀವನದಲ್ಲಿ ಕೂಡಾ ನಾವಿಬ್ಬರು ಜೊತೆಯಾಗಿ ಹೇಗೆ ಹೆಜ್ಜೆ ಹಾಕಬೇಕು ಎಂಬುದನ್ನು ಹೇಳು ರಮಣಾ” ಎಂದಳು ಆಕೆ ಮನಸ್ಸಿನಲ್ಲಿಯೇ.


   ಅಂದು ರಂಗದಲ್ಲಿ ಕಿರಣ ತಾನು ತಾನಾಗಿರಲಿಲ್ಲ. ಯಾವುದೋ ಭ್ರಮಾಧೀನ ಮಾದಕತೆಯ ಪ್ರಪಂಚದಲ್ಲಿ ತಾನಿರುವಂತೆ ಆಕೆಗೆ ಭಾಸವಾಗುತ್ತಿತ್ತು. ಚರಣ್ ಕೂಡಾ ಅವಳ ಸ್ಥಿತಿಯಲ್ಲಿನ ಬದಲಾವಣೆಯನ್ನು ಗಮನಿಸಿದ. ಅವನಿಗೂ ಅವಳ ಈ ನಡೆ ಅರ್ಥವಾಗಿತ್ತು. ಅವನ ಮನದಲ್ಲಿಯೂ ಸಂತಸ ಮಿಶ್ರಿತ ಅಚ್ಚರಿ. ಸುಧನ್ವನ ಜೊತೆಗಿನ ಸಂಭಾಷಣೆಯನ್ನು ಮುಗಿಸಿ ಜೊತೆಯಾಗಿ ರಂಗದಿಂದ ಜೊತೆಯಾಗಿ ನಿರ್ಗಮಿಸುವಾಗ
“ಅಹುದು.. ನೀನೇ ಎನ್ನಯ ರಮಣ” ಎಂದು ಅವನ ಕಿವಿಯಲ್ಲಿ ಉಸುರಿದಳು.


         ಬಬ್ರುವಾಹನ ಪ್ರಸಂಗದ ‘ಅಹುದೇ ಎನ್ನಯ ರಮಣ’ ಪದ್ಯವನ್ನು ಕಿವಿಯಲ್ಲಿ ಗುಟ್ಟಾಗಿ ಯಾಕೆ ಹೇಳಿದಳು ಎಂದು ಅವನಿಗೆ ಅರ್ಥವಾಗಿತ್ತು! ದಿಗ್ಭ್ರಮೆಯಿಂದ ಚೇತರಿಸಿಕೊಂಡ ಚರಣ್ ಸುದನ್ವನ ಮುಂದಿನ ಭಾಗದ ಅಭಿನಯಕ್ಕೆ ಪುನಃ ರಂಗಕ್ಕೆ ಪ್ರವೇಶಿಸಿದ. ಯುದ್ದದ ನಂತರ ಪ್ರಸಂಗ ಮುಕ್ತಾಯವಾಗಿ ಚೌಕಿಗೆ ಬಂದು ಸುತ್ತಲೂ ಕಣ್ಣು ಹಾಯಿಸಿದಾಗ ಕಿರಣ ಕಾಣಸಿಗಲಿಲ್ಲ. ತನ್ನ ಮುಖಾಮುಖಿ ಯಾಗುವುದನ್ನು ತಪ್ಪಿಸಿಕೊಂಡಿದ್ದಾಳೆ ಅಂದುಕೊಂಡ. ವಿನಯ್ ನನ್ನು ಕರೆದು ಅವಳ ಬಗ್ಗೆ ವಿಚಾರಿಸಿದ. “ಅವಳು ಮೈಗೆ ಹುಶಾರಿಲ್ಲ ಎಂದು ತಂದೆಯ ಜೊತೆಗೆ ಮನೆಗೆ ತೆರಳಿದ್ದಾಳೆ” ಎಂದವನು ಹೇಳಿದ.
ಚರಣ್‍ಗೆ ಏನೋ ಕಳೆದುಕೊಂಡ ಅನುಭವ. ಆದರೂ ಕರ್ತವ್ಯ ಎಚ್ಚರಿಸಿತು. ಮೇಳದ ಆಟಕ್ಕೆ ತಡವಾಗುತ್ತದೆ ಎಂದು ಕನ್ನಡ ಉಪಾನ್ಯಾಸಕರಾದ ಅಶೋಕ್‍ರ ಅನುಮತಿಯನ್ನು ಪಡೆದು ಮೇಳದ ಆಟಕ್ಕೆ ತೆರಳಿದ.
ಇದಾದ ನಂತರ ಹಲವು ಬಾರಿ ಚರಣ್ ಕಿರಣಳನ್ನು ಕಾಣಲೋಸುಗ ಏನಾದರೂ ನೆಪ ಮಾಡಿ ಕಾಲೇಜಿಗೆ ಬರುತ್ತಿದ್ದ.
ಒಂದೆರಡು ಬಾರಿ “ಅವಳಿಲ್ಲ, ರಜೆ” ಎಂಬ ಉತ್ತರ ಕೇಳಿ  ಕಂಗಾಲಾದ. ‘ಎಲ್ಲಿಗೆ ಹೋದಳು ಇವಳು. ನನ್ನಲ್ಲಿ ಬರಡಾಗಿ ಬತ್ತಿ ಹೋಗಿದ್ದ ಪ್ರೀತಿಯ ಸೆಲೆಯನ್ನು ಉಕ್ಕಿಸಿ ಅದು ಭೋರ್ಗೆರೆಯಲು ಪ್ರಾರಂಭವಾದಾಗ ತಾನು ಕಾಣದಾದಳಲ್ಲ, ಛೇ’ ಎಂದುಕೊಂಡ. ಮತ್ತೊಮ್ಮೆ ಪ್ರಯತ್ನಿಸೋಣ ಎಂದು ಅವಳಿದ್ದ ಕಾಲೇಜಿಗೆ ಬಂದಾಗ ಸಿಕ್ಕಿದ ಉತ್ತರ ಕೇಳಿ ಅವನಿಗೆ ದಿಕ್ಕೇ ತೋಚ ದಂತಾಗಿತ್ತು.
                   “ಅವಳ ಅಪ್ಪನಿಗೆ ಎಲ್ಲಿಗೋ ದೂರದೂರಿಗೆ ವರ್ಗವಾದ ಕಾರಣ ಅವಳು ಕಾಲೇಜಿನಿಂದ ವರ್ಗಾವಣಾ ಪತ್ರ ತೆಗೆದುಕೊಂಡು ಹೋಗಿದ್ದಾಳೆ” ಹುಚ್ಚನಂತಾದ ಅವನು ಈ ಯಕ್ಷಗಾನದಿಂದ ಅವಳು ಹತ್ತಿರವಾದಳು. ಇದರಲ್ಲಿದ್ದರೆ ನನಗೆ ಸದಾ ಅವಳು ನೆನಪಾಗುತ್ತಾಳೆ ಎಂದು ಮೇಳಕ್ಕೆ  ರಾಜೀನಾಮೆ ನೀಡಿ ಬೇರೊಂದು ಊರಿಗೆ ಉದ್ಯೋಗ ನಿಮಿತ್ತ ತೆರಳಿದ.

*   *   *******

ಇಷ್ಟು ಹೇಳಿ ಅವನು ನಿಲ್ಲಿಸಿದ.  ಇವನಿಗೆ  ರಸಭಂಗವಾದಂತೆನಿಸಿತು.
“ಇದೇನು ಅಪೂರ್ಣ ಕಥೆ?” ಎಂದ ಇವನು
“ಪೂರ್ಣವಾಯ್ತಲ್ಲ, ಇನ್ನೇನು ಬೇಕು?” ಎಂದ ಅವನು
“ಅಲ್ಲ ಕಿರಣ ಏನಾದಳು? ಚರಣ್ ಎಲ್ಲಿ ಹೋದ?” ಇವನು ಕೇಳಿದ.
“ಹೋ ಅದಾ.. ಅವಳು ಒಮ್ಮೆ ಚರಣ್ ಗೆ ಕಾಣಸಿಕ್ಕಿದ್ದಳು, ಪರಿಸ್ಥಿತಿಯ ಒತ್ತಡದಿಂದ ಅವಳು ಹಾಗೆ ಮಾಡಿದ್ದಂತೆ, ಚರಣ್ ಅವಳನ್ನು ಕ್ಷಮಿಸಿದ್ದಾನೆ. ಅವಳು ಈಗ ಅಜ್ಜಿಯಾಗಿದ್ದಾಳೆ, ಮೊಮ್ಮಕ್ಕಳೂ ಇದ್ದಾರೆ ಅವಳಿಗೆ” ಎಂದ ಅವನು.
“ಅದು ಸರಿ, ಅಂದು ಮೇಳ ಬಿಟ್ಟ ಚರಣ್ ಈಗೆಲ್ಲಿ?” ಎಂದ ಇವನು
“ ಇಲ್ಲಿಯೇ ಇದ್ದಾನೆ ನಿನ್ನೆದುರು… ಚರಣ್ ನಾನೇ ಕಣೋ” ಅವನೆಂದ ನಗುತ್ತಾ…
 ಇವನು ಬೆಚ್ಚಿಬಿದ್ದ.. ಮೌನ.. ಅಲ್ಲಿ ನೀರವ ಮೌನ ಅವರಿಸಿತ್ತು.