Thursday, January 23, 2025
Home Blog Page 346

ಮೇಳಗಳ ಇಂದು/ನಾಳೆಯ ಯಕ್ಷಗಾನ ಪ್ರದರ್ಶನಗಳ ವಿವರ (02-12-2020)

ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ 
ಮೇಳಇಂದು/ದಿನಾಂಕಸ್ಥಳಪ್ರಸಂಗ
ಶ್ರೀ ಧರ್ಮಸ್ಥಳ ಮೇಳ02-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಪಾವಂಜೆ ಮೇಳ 02-12-2020ಪಾವಂಜೆ, ಹಳೆಯಂಗಡಿಮಾನಿಷಾದ 
ಶ್ರೀ ಬಪ್ಪನಾಡು ಮೇಳ02-12-2020ಮುಲ್ಕಿ ವೆಂಕಟರಮಣ ದೇವಸ್ಥಾನದಲ್ಲಿಯಕ್ಷಗಾನ ಬಯಲಾಟ
ಶ್ರೀ ತಳಕಲ ಮೇಳ02-12-2020ಶ್ರೀ ಕ್ಷೇತ್ರ ತಳಕಲದಲ್ಲಿಯಕ್ಷಗಾನ ಬಯಲಾಟ
 ನಾಳೆ/ದಿನಾಂಕ  
ಶ್ರೀ ಧರ್ಮಸ್ಥಳ ಮೇಳ03-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಪಾವಂಜೆ ಮೇಳ 03-12-2020ಶ್ರೀ ಮಹಾಗಣಪತಿ ದೇವಸ್ಥಾನ ಗಣೇಶಪುರತ್ರಿಜನ್ಮ ಮೋಕ್ಷ 
ಶ್ರೀ ಬಪ್ಪನಾಡು ಮೇಳ03-12-2020ಪಡುಪಣಂಬೂರು ಅರಮನೆ ಮುಂಭಾಗದಲ್ಲಿ ಯಕ್ಷಗಾನ ಬಯಲಾಟ
ಶ್ರೀ ತಳಕಲ ಮೇಳ03-12-2020ಶ್ರೀ ಕ್ಷೇತ್ರ ತಳಕಲದಲ್ಲಿಯಕ್ಷಗಾನ ಬಯಲಾಟ

ಯಕ್ಷಾಂಗಣದಿಂದ ರಾಜ್ಯೋತ್ಸವ ಕಲಾ ಸಂಭ್ರಮ – ತಾಳಮದ್ದಳೆ ಪರ್ವ- 2020

 ‘ಯಕ್ಷಗಾನ ನಮ್ಮ ನಾಡಿನ ಶ್ರೀಮಂತ ಕಲೆ; ಅದರ ಒಂದು ಪ್ರಕಾರವಾದ ತಾಳಮದ್ದಳೆ ಕನ್ನಡ ಭಾಷೆಯ ಪ್ರಬುದ್ಧತೆಯನ್ನು ಸಾರುತ್ತದೆ. ಇಂದು ಕನ್ನಡ ಸಾಹಿತ್ಯ – ಸಂಸ್ಕೃತಿ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿರುವ ಈ ಭಾಗದ ಸಾಹಿತಿ ಕಲಾವಿದರಿಗೆ ಮೂಲ ಪ್ರೇರಣೆಯೇ ಯಕ್ಷಗಾನ.  ಕರಾವಳಿಯಲ್ಲಿ ಕನ್ನಡದ ನಿಜವಾದ ಅಸ್ಮಿತೆ ಇರುವುದು ಯಕ್ಷಗಾನದಿಂದ’  ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಹೇಳಿದ್ದಾರೆ.   ‌

ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಇವರ ಆಶ್ರಯದಲ್ಲಿ ನವೆಂಬರ್ 29ರಂದು ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪಾರಿಜಾತ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಕಲಾಸಂಭ್ರಮದ ಅಂಗವಾಗಿ ಜರಗಿದ ‘ಯಕ್ಷಗಾನ ತಾಳಮದ್ದಳೆ ಪರ್ವ – 2020’ ಎಂಟನೇ ವರ್ಷದ ನುಡಿಹಬ್ಬದಲ್ಲಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಕೆ.ಸಿ.ನಾಯ್ಕ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.       

ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕ ಭಾಷಣಮಾಡಿ ‘ವೇದಿಕೆಯ ಮೇಲೆ ಪರಿಶುದ್ಧ ಕನ್ನಡ ಭಾಷೆಯಲ್ಲಿ ಮಾತನಾಡುವ ಏಕೈಕ ಕಲಾಮಾಧ್ಯಮ ಇದ್ದರೆ ಅದು ಯಕ್ಷಗಾನ ಮಾತ್ರ. ಆದ್ದರಿಂದ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ಯಕ್ಷಾಂಗಣ ಕಳೆದ ಏಳು ವರ್ಷಗಳಿಂದ ಕನ್ನಡ ನುಡಿಹಬ್ಬದ ರೂಪದಲ್ಲಿ ತಾಳಮದ್ದಳೆ ಸಪ್ತಾಹವನ್ನು ನವಂಬರ್ ತಿಂಗಳಲ್ಲಿ ನಡೆಸುತ್ತಾ ಬಂದಿದೆ. ಈ ವರ್ಷ ಕೋವಿಡ್ – 19 ಸಂಕಷ್ಟದಿಂದಾಗಿ ಅದನ್ನು ಒಂದು ದಿನಕ್ಕೆ ಸೀಮಿತಗೊಳಿಸಿ ತಾಳಮದ್ದಳೆ ಪರ್ವವನ್ನು ನಡೆಸಲಾಗುತ್ತಿದೆ’ ಎಂದರು. 

ಪ್ರಶಸ್ತಿ ಪ್ರದಾನ: ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರ ಜೀವಮಾನ ಸಾಧನೆಗಾಗಿ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ಮತ್ತು ಹಿರಿಯ ಯಕ್ಷಗಾನ ವೇಷದಾರಿ ಮತ್ತು ಮೇಳದ ಸಂಚಾಲಕ ಕೆ.ಎಚ್.ದಾಸಪ್ಪ ರೈ ಪುತ್ತೂರು ಅವರಿಗೆ 2019-20 ನೇ ಸಾಲಿನ ‘ಯಕ್ಷಾಂಗಣ ಗೌರವ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು. ಬ್ಯಾಂಕ್ ಆಫ್ ಬರೋಡ ಮಂಗಳೂರು ವಲಯದ ಮಹಾಪ್ರಬಂಧಕಿ ಸುಜಯ ಯು. ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಿದರು. 

ಇದೇ ಸಂದರ್ಭದಲ್ಲಿ ಇತ್ತೀಚೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹೊರನಾಡ ಕನ್ನಡಿಗ, ಉದ್ಯಮಿ ಮತ್ತು ಸಮಾಜಸೇವಕ ಕೆ.ಡಿ.ಶೆಟ್ಟಿ ಮುಂಬೈ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ಕೆ. ರವೀಂದ್ರ ರೈ ಕಲ್ಲಿಮಾರು, ನಿವೇದಿತಾ ಎನ್.ಶೆಟ್ಟಿ ಮತ್ತು ಸುಮಾ ಪ್ರಸಾದ್ ಸಮ್ಮಾನ ಫಲಕ ವಾಚಿಸಿದರು. ಸುಧಾಕರ ರಾವ್ ಪೇಜಾವರ ಅಭಿನಂದನಾ ನುಡಿ ಹೇಳಿದರು. ದಿ.ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಯಕ್ಷ ಪ್ರತಿಷ್ಠಾನದ ಅಧ್ಯಕ್ಷ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ, ಪ್ರತಿಷ್ಠಾನದ ವತಿಯಿಂದ ದಾಸಪ್ಪ ರೈ ಅವರಿಗೆ ಕಲಾ ಗೌರವ ನೀಡಿದರು.

ಹಿರಿಯರ ಸಂಸ್ಮರಣೆ :  ಯಕ್ಷಗಾನ ರಂಗದ ಹಿರಿಯ ಚೇತನಗಳಾದ ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ, ಎ.ಕೆ. ನಾರಾಯಣ ಶೆಟ್ಟಿ ಮತ್ತು ಎ.ಕೆ. ಮಹಾಬಲ ಶೆಟ್ಟಿ ಅವರ ಸಂಸ್ಮರಣೆಯೊಂದಿಗೆ ನುಡಿ ನಮನ ಸಲ್ಲಿಸಲಾಯಿತು.        ಮಹೇಶ್ ಮೋಟಾರ್ಸ್ ಮಾಲಕ ಎ.ಕೆ. ಜಯರಾಮ ಶೇಖ, ದ.ಕ.ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಪಮ್ಮಿ ಕೊಡಿಯಾಲಬೈಲ್,  ಪುಳಿಂಚ ಸೇವಾ ಟ್ರಸ್ಟ್ ಅಧ್ಯಕ್ಷ ನ್ಯಾಯವಾದಿ ಶ್ರೀಧರ ಶೆಟ್ಟಿ ಪುಳಿಂಚ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಲೀಲಾಕ್ಷ ಬಿ. ಕರ್ಕೇರ ಮತ್ತು ಕಲಾಸಂಘಟಕ ಕರ್ನೂರು ಮೋಹನ ರೈ ಮುಖ್ಯ ಅತಿಥಿಗಳಾಗಿದ್ದರು.           

ಯಕ್ಷಾಂಗಣದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು.  ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ನಿರೂಪಿಸಿದರು. ತುಳುವರ್ಲ್ಡ್ ಅಧ್ಯಕ್ಷ ರಾಜೇಶ್ ಕೃಷ್ಣ ಆಳ್ವ ವಂದಿಸಿದರು. ಯಕ್ಷಾಂಗಣದ ಪದಾಧಿಕಾರಿಗಳಾದ ಕರುಣಾಕರ ಶೆಟ್ಟಿ ಪಣಿಯೂರು, ಸುಂದರ ಶೆಟ್ಟಿ ಬೆಟ್ಟಂಪಾಡಿ, ಸಿದ್ಧಾರ್ಥ ಅಜ್ರಿ,  ಕೃಷ್ಣಪ್ಪಗೌಡ ಪಡ್ಡಂಬೈಲ್ ಹಾಗೂ ದೇವಳದ ಆಡಳಿತಾಧಿಕಾರಿ ಕೃಷ್ಣಕುಮಾರ್ ಉಪಸ್ಥಿತರಿದ್ದರು.

ತಾಳಮದ್ದಳೆ – ‘ಶ್ರೀಕೃಷ್ಣ ತಂತ್ರ – ಮಾರುತಿ ಪ್ರತಾಪ’ : ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ‘ಶ್ರೀ ಕೃಷ್ಣ ತಂತ್ರ – ಮಾರುತಿ ಪ್ರತಾಪ’ ಯಕ್ಷಗಾನ ತಾಳಮದ್ದಳೆ ಜರಗಿತು. ಡಾ.ಎಂ.ಪ್ರಭಾಕರ ಜೋಶಿ, ಭಾಸ್ಕರ ರೈ ಕುಕ್ಕುವಳ್ಳಿ, ಅಶೋಕ ಭಟ್ಟ ಉಜಿರೆ, ಕದ್ರಿ ನವನೀತ ಶೆಟ್ಟಿ, ರವಿ ಅಲೆವೂರಾಯ, ಉಮೇಶ ಆಚಾರ್ಯ ಗೇರುಕಟ್ಟೆ, ಹರೀಶ್ಚಂದ್ರ ನಾಯಗ ಅರ್ಥದಾರಿಗಳಾಗಿದ್ದರು. ಹರೀಶ್ ಶೆಟ್ಟಿ ಸೂಡಾ ಮತ್ತು ಪ್ರಶಾಂತ ರೈ ಪುತ್ತೂರು ಅವರ ಭಾಗವತಿಕೆಗೆ ರೋಹಿತ್ ಉಚ್ಚಿಲ್ ಹಾಗೂ ಮಯೂರ್ ನಾಯಗ ಹಿಮ್ಮೇಳದಲ್ಲಿ ಸಹಕರಿಸಿದರು.

ಹಿರಿಯ ಪೋಷಕ ಪಾತ್ರಧಾರಿ ಶ್ರೀ ಬಾಬು ಕುಲಾಲರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ 

ಹಿರಿಯ ಪೋಷಕ ಪಾತ್ರಧಾರಿ ಶ್ರೀ ಬಾಬು ಕುಲಾಲರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಯಕ್ಷಗಾನ ಕಲಾರಂಗ ಸಂಸ್ಥೆಯು ಹಿರಿಯ ಸಾಧಕರ ಸ್ಮರಣಾರ್ಥ ಮತ್ತು ಗೌರವಾರ್ಥ ನೀಡುವ ಪ್ರಶಸ್ತಿಗೆ ತೆಂಕು ಬಡಗಿನ ಈ ಹಿರಿಯ ಕಲಾವಿದ ಶ್ರೀ ಬಾಬು ಕುಲಾಲ್ ಆಯ್ಕೆಯಾಗಿದ್ದಾರೆ.

ಯಕ್ಷಗಾನವು ಒಂದು ಸಮಷ್ಟಿ ಕಲೆ. ಪ್ರದರ್ಶನವು ವಿಜಯಿಯಾಗಬೇಕಾದರೆ ಪ್ರಸಂಗದೊಳಗಣ ಎಲ್ಲಾ ಪಾತ್ರಗಳೂ ಬೇಕು ಮತ್ತು ಸರಿಯಾಗಿಯೇ ಇರಬೇಕು. ಒಂದು ಪಾತ್ರವನ್ನು ನಿರ್ವಹಿಸುವ ಕಲಾವಿದ ಅಪ್ರಬುದ್ಧನಾಗಿದ್ದರೆ ಆ ಭಾಗ ಪೇಲವವಾಗಿ ಪ್ರದರ್ಶನ ಕೆಟ್ಟು ಹೋಗುವುದನ್ನು ನಾವು ಗಮನಿಸಬಹುದು. ಹಾಗಾಗಿ ಯಕ್ಷಗಾನ ಕಲೆಯಲ್ಲಿ ದೊಡ್ಡ ಪಾತ್ರ, ಸಣ್ಣ ಪಾತ್ರ ಎಂಬ ವಿಂಗಡಣೆ ಇಲ್ಲ. ಮುಖ್ಯ ಪಾತ್ರಗಳು, ಪೋಷಕ ಪಾತ್ರಗಳು…. ಹೀಗೆ ಗುರುತಿಸುತ್ತಾರೆ.

ಹೆಸರೇ ಸೂಚಿಸುವಂತೆ ಮುಖ್ಯ ಪಾತ್ರಗಳನ್ನು ಈ ಪಾತ್ರಗಳು ಪೋಷಿಸುತ್ತವೆ. ಮುಖ್ಯ ಪಾತ್ರಗಳು ರಂಜಿಸುವುದು ಪೋಷಕ ಪಾತ್ರಗಳು ಸರಿಯಿದ್ದಾಗ ಮಾತ್ರ. ಮುಖ್ಯ ಪಾತ್ರಗಳು ರಂಗದಲ್ಲಿ ವಿಜೃಂಭಿಸಲು ಪೋಷಕ ಪಾತ್ರಗಳು ಕೊಂಡಿಯಾಗಿ ಸಹಕರಿಸುತ್ತವೆ. ಪೋಷಕ ಪಾತ್ರಧಾರಿಯೂ ಪ್ರಬುದ್ಧನಾಗಿದ್ದರೆ ಪ್ರದರ್ಶನವು ಕಳೆಯೇರಿ ರಂಜಿಸುವುದನ್ನೂ ಅಪ್ರಬುದ್ಧನಾಗಿದ್ದರೆ ಪ್ರದರ್ಶನವು ಕಳೆಗುಂದುವುದನ್ನೂ ಪೇಕ್ಷಕರು ಅನುಭವಿಸುತ್ತಾರೆ. ಹಾಗಾಗಿ ಯಕ್ಷಗಾನದ ಎಲ್ಲಾ ಪಾತ್ರಗಳೂ ಮುಖ್ಯವೇ ಹೌದು.

ಮುಖ್ಯ ಪಾತ್ರಗಳನ್ನು ನಿರ್ವಹಿಸುವ ಕಲಾವಿದರು ತನ್ನ ಜತೆ ಪಾತ್ರಕ್ಕೆ ಇಂತಹಾ ಕಲಾವಿದನೇ ಬೇಕು ಎಂದು ಬೇಡಿಕೆ ಇಡುವುದನ್ನು ನಾವೆಲ್ಲಾ ಗಮನಿಸುತ್ತೇವೆ. ತನ್ನ ಪಾತ್ರ ಮತ್ತು ಒಟ್ಟು ಪ್ರದರ್ಶನ ಹಾಳಾಗಬಾರದೆಂಬ ಉದ್ದೇಶದಿಂದಲೇ ಹೀಗೆ ಹೇಳುತ್ತಾರೆ. ಕೆಲವೊಂದು ಸಂದರ್ಭಗಳಲ್ಲಿ ಇಂತಹಾ ಕೇಳಿಕೆಗಳಲ್ಲಿ ರಾಜಕೀಯವೂ ಅಡಗಿರಬಹುದು. ತನ್ನ ಆತ್ಮೀಯನಿಗೆ ಅವಕಾಶ ಕೊಡಿಸುವುದಕ್ಕಾಗಿ ಹೀಗೆ ಹೇಳಿದರೂ ಹೇಳಬಹುದು. ಅದು ನಮಗೆ ಇಲ್ಲಿ ಅಪ್ರಸ್ತುತ. ಇರಲಿ. ಯಕ್ಷಗಾನ ಪ್ರದರ್ಶನವು ಗೆಲ್ಲುವಲ್ಲಿ ಪೋಷಕ ಪಾತ್ರಗಳ, ಪಾತ್ರಧಾರಿಗಳ ಕೊಡುಗೆ ಹಿರಿದಾದುದು. ಅಂತ ಪೋಷಕ ಪಾತ್ರಧಾರಿಗಳಲ್ಲಿ ಶ್ರೀ ಬಾಬು ಕುಲಾಲರೂ ಒಬ್ಬರು.

ಪ್ರಸ್ತುತ ಕಟೀಲು 2ನೇ ಮೇಳದಲ್ಲಿ ಕಲಾಸವೆಯನ್ನು ಮಾಡುತ್ತಿದ್ದಾರೆ. ಶ್ರೀ ಬಾಬು ಕುಲಾಲ್ (ಬಸವ ಕುಲಾಲ್) ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹರ್ಕಾಡಿ ಗ್ರಾಮದ ಗಾವಳಿ ಎಂಬಲ್ಲಿ ವೆಂಕಟ ಕುಲಾಲ್ ಮತ್ತು ಸೂರಮ್ಮ ದಂಪತಿಗಳ ಮಗನಾಗಿ 1951 ಫೆಬ್ರವರಿ 8ರಂದು ಜನಿಸಿದರು. ಓದಿದ್ದು 5ನೇ ತರಗತಿ ವರೆಗೆ. ಹಳ್ಳಾಡಿ ಪ್ರಾಥಮಿಕ ಶಾಲೆಯಲ್ಲಿ.(ಗಾವಳಿ) ಯಕ್ಷಗಾನದ ಹಿನ್ನೆಲೆ ಇಲ್ಲದ ಕುಟುಂಬ ಇವರದು. ಹಿರಿಯರು ಕುಲ ಕಸುಬಿನಲ್ಲಿ ಆಸಕ್ತರಾಗಿದ್ದರು. (ಮಡಕೆ ತಯಾರಿಕೆ). ಆಟ ನೋಡುವ ಹವ್ಯಾಸ ಇತ್ತು. ಬಾಬು ಕುಲಾಲರಿಗೆ ಆಟ ನೋಡುವ ಆಸೆ. ಪರಿಸರದಲ್ಲಿ ನಡೆಯುತ್ತಿದ್ದ ಪ್ರದರ್ಶನಗಳನ್ನು ನೋಡುತ್ತಿದ್ದರು. ತಾನೂ ಕಲಾವಿದನಾಗಬೇಕೆಂಬ ಆಸೆ ಹುಟ್ಟಿಕೊಂಡಿತ್ತು.

ಆ ಕಾಲದ ಪ್ರಸಿದ್ಧ ಪುರುಷ ವೇಷಧಾರಿ ವಂಡಾರು ಬಸವರು ಇವರನ್ನು ನವರಾತ್ರಿ ಸಮಯದಲ್ಲಿ ನಡೆಯುವ ಕಲಾರಾಧನೆ ‘ಹೂವಿನ ಕೊಲು’ ಆಟಕ್ಕೆ ಕರೆದೊಯ್ದರು. ಇದು ಕಲಿಕಾಸಕ್ತರಿಗೆ ಅನುಕೂಲವಾಗಿತ್ತು. ಯಕ್ಷಗಾನದ ಸಣ್ಣ ಸಣ್ಣ ತುಣುಕುಗಳನ್ನು ಹೂವಿನ ಕೋಲು ಸೇವೆಯೊಳಗೆ ಪ್ರದರ್ಶಿಸುತ್ತಿದ್ದರು. ಒಂದು ರೀತಿ ಚಿಕ್ಕ ಮೇಳ ಇದ್ದಂತೆ. ವಂಡಾರು ಬಸವ ಅವರು ಖ್ಯಾತ ಸ್ತ್ರೀ ಪಾತ್ರಧಾರಿ ರಾಮ ನಾಯಿರಿ ಅವರ ಬಂಧುವಾಗಿದ್ದರು. ಹೂವಿನಕೋಲು ಪ್ರದರ್ಶನಗಳಲ್ಲಿ ಭಾಗವಹಿಸಿ ಬಾಬು ಕುಲಾಲರಿಗೆ ಯಕ್ಷಗಾನಾಸಕ್ತಿ ಹೆಚ್ಚಿತು. ಕಲಿತು ಕಲಾವಿದನಾಗಬೇಕೆಂಬ ಛಲವೂ ಹುಟ್ಟಿಕೊಂಡಿತು. ಹೂವಿನ ಕೋಲು ಕಾರ್ಯಕ್ರಮದ ನಡುವೆ ಬಿಡುವಿದ್ದಾಗ ನಾಟ್ಯಾಭ್ಯಾಸವನ್ನು ಮಾಡುತ್ತಿದ್ದರು.

1966ರಲ್ಲಿ ವಂಡಾರು ಬಸವ ಅವರು ಅಮೃತೇಶ್ವರೀ ಮೇಳಕ್ಕೆ ಕರೆದುಕೊಂಡು ಹೋಗಿದ್ದರು. ಬಾಲಗೋಪಾಲರ ವೇಷದಿಂದ ಆರಂಭ. ಅದು ಮೇಳದಲ್ಲಿ ಮೊದಲ ತಿರುಗಾಟ ಬಾಬು ಕುಲಾಲರದ್ದು. ಆಗ ಪ್ರಾಚಾರ್ಯ ಶ್ರೀ ನಾರ್ಣಪ್ಪ ಉಪ್ಪೂರರು ಭಾಗವತರಾಗಿದ್ದರು. ತಿಮ್ಮಪ್ಪ ಮದ್ದಳೆಗಾರರು, ಕೆಮ್ಮಣ್ಣು ಆನಂದ, ಮಾರ್ಗೋಳಿ ಗೋವಿಂದ ಸೇರಿಗಾರ್, ವಂಡಾರು ಬಸವ, ಪೆರ್ಡೂರು ರಾಮ, ನಾವುಂದ ಮಹಾಬಲ ಗಾಣಿಗ ಮೊದಲಾದ ಕಲಾವಿದರ ಒಡನಾಟವು ದೊರಕಿತ್ತು. ಆಗ ಅಮೃತೇಶ್ವರೀ ಮೇಳವು ಬಯಲಾಟಗಳನ್ನು ಮಾತ್ರ ನಡೆಸುತ್ತಿತ್ತು. 2 ವರ್ಷಗಳ ತಿರುಗಾಟದ ನಂತರ ಶ್ರೀ ನಾರ್ಣಪ್ಪ ಉಪ್ಪೂರರ ಮನೆಗೆ ತೆರಳಿ ಅವರ ಪುತ್ರ ಶ್ರೀ ದಾಮೋದರ ಉಪ್ಪೂರರಿಂದ ನಾಟ್ಯ ಕಲಿತರು. ಅವರು ಚೆನ್ನಾಗಿ ನಾಟ್ಯ ಹೇಳಿ ಕೊಡುತ್ತಿದ್ದರೆಂದು ಬಾಬು ಕುಲಾಲರು ಹೇಳುತ್ತಾರೆ.

ಹೀಗೆ ಅಮೃತೇಶ್ವರೀ ಮೇಳದಲ್ಲಿ 5 ವರ್ಷಗಳ ತಿರುಗಾಟ ನಡೆಸಿದರು. ಸಣ್ಣ ಪುಟ್ಟ ವೇಷಗಳನ್ನು ಮಾಡುತ್ತಾ ಪೋಷಕ ಪಾತ್ರಧಾರಿಯಾಗಿಯೇ ಬೆಳೆದರು. ಬಳಿಕ 2 ವರ್ಷ ಮಂದಾರ್ತಿ ಮೇಳದಲ್ಲಿ ತಿರುಗಾಟ( ಮಂದಾರ್ತಿ 1 ಮೇಳ ಇದ್ದ ಸಂದರ್ಭ). ಮತ್ತೆ 2 ವರ್ಷ ಮಾರಣಕಟ್ಟೆ ಮೇಳದಲ್ಲಿ. ಬಳಿಕ ಪುನಃ ಅಮೃತೇಶ್ವರೀ ಟೆಂಟಿನ ಮೇಳದಲ್ಲಿ 2 ವರ್ಷಗಳ ತಿರುಗಾಟ. ಈ ಸಂದರ್ಭದಲ್ಲಿ ಚಿಟ್ಟಾಣಿ, ಗೋಡೆ, ಕೋಟ ವೈಕುಂಠ, ವಾಸುದೇವ ಸಾಮಗ, ಕುಂಜಾಲು, ಕೊಳ್ತಿಗೆ ನಿರಾಯಣ ಗೌಡ, ಹೊಸಂಗಡಿ ರಾಜೀವ ಶೆಟ್ಟಿ ಮೊದಲಾದವರ ಒಡನಾಟವೂ ದೊರಕಿತ್ತು. ಬಳಿಕ ಸಾಲಿಗ್ರಾಮ ಮೇಳದಲ್ಲಿ 1 ವರ್ಷ, ಕಮಲಶಿಲೆ ಮೇಳದಲ್ಲಿ 2 ವರ್ಷ, ಹಾಲಾಡಿ ಮೇಳದಲ್ಲಿ 2 ವರ್ಷ, ಸೌಕೂರು ಮೇಳದಲ್ಲಿ 2 ವರ್ಷ ತಿರುಗಾಟ ನಡೆಸಿದ್ದರು.

ಸ್ತ್ರೀ ಪಾತ್ರಧಾರಿಯಾಗಿ ಗುರುತಿಸಿಕೊಂಡರೂ ಪುರುಷ ಪಾತ್ರಗಳಲ್ಲೂ ಎಲ್ಲರೂ ಮೆಚ್ಚುವಂತೆ ಅಭಿನಯಿಸುತ್ತಾರೆ ಬಾಬು ಕುಲಾಲರು. ಕುವಲೆ, ಸುಗರ್ಭೆ, ಮಾಯಾ ಪೂತನಿ, ಯಶೋದೆ, ಮಾಯಾ ಶೂರ್ಪನಖಿ, ಮಾಯಾ ಹಿಡಿಂಬೆ, ಪ್ರಭಾವತಿ, ಮೀನಾಕ್ಷಿ, ಸುದೇಷ್ಣೆ, ಶಚಿ, ದಿತಿ, ಧರ್ಮರಾಯ, ಈಶ್ವರ, ಬ್ರಹ್ಮ, ಪಾರ್ವತಿ ಮೊದಲಾದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ಯಾವ ಸಾತ್ವಿಕ ಪಾತ್ರಗಳನ್ನು ನೀಡಿದರೂ ಮಾಡಬಲ್ಲರು. ಸಹನೆ, ಸರಳತೆಯಿಂದ ಎಲ್ಲರಲ್ಲೂ ನಗುಮುಖದಿಂದಲೇ ವ್ಯವಹರಿಸುತ್ತಾರೆ. ಸಹಕಲಾವಿದರ ಮನವನ್ನು ಗೆದ್ದು ಎಲ್ಲರಿಗೂ ಬೇಕಾದವರಾಗಿ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಕಳೆದ 33 ವರ್ಷಗಳಿಂದ ಕಟೀಲು ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. ಕಟೀಲು 3ನೇ ಮೇಳ ಆರಂಭವಾದ ವರ್ಷ ಬಾಬು ಕುಲಾಲರು 2ನೇ ಮೇಳಕ್ಕೆ ಸೇರಿದ್ದರು. ನಿರಂತರ 33 ವರ್ಷಗಳ ಕಾಲ ಕಟೀಲು 2ನೇ ಮೇಳದಲ್ಲಿ ತಿರುಗಾಟ.

ಅತ್ಯುತ್ತಮ ಪೋಷಕ ಪಾತ್ರಧಾರಿ ಎಂದು ಗುರುತಿಸಿಕೊಂಡರೂ ಅಗತ್ಯ ಬಿದ್ದರೆ ಎಲ್ಲಾ ರೀತಿಯ ಪಾತ್ರಗಳನ್ನೂ ಮಾಡಬಲ್ಲ ಕಲಾವಿದ ಶ್ರೀ ಬಾಬು ಕುಲಾಲರು. ವೈವಾಹಿಕ ಬದುಕಿನಲ್ಲೂ ತೃಪ್ತರಿವರು. ಇಚ್ಛೆಯನ್ನರಿತು ನಡೆಯುವ ಸತಿ ಲಕ್ಷ್ಮಿ. ಬಾಬು ಕುಲಾಲ್, ಲಕ್ಷ್ಮಿ ದಂಪತಿಗಳಿಗೆ ಮೂವರು ಮಕ್ಕಳು. ಪುತ್ರಿ ಸುಶೀಲ ವಿವಾಹಿತೆ. ಹಿರಿಯ ಪುತ್ರ ಚಂದ್ರ ಉದ್ಯೋಗಿ, ವಿವಾಹಿತ. ಕಿರಿಯ ಪುತ್ರ ರಾಘವೇಂದ್ರ ಉದ್ಯೋಗಿ. ಶ್ರೀ ಬಾಬು ಕುಲಾಲರಿಂದ ಕಲಾಮಾತೆಯ ಸೇವೆಯು ನಿರಂತರವಾಗಿ ನಡೆಯುತ್ತಿರಲಿ. ಅವರಿಗೆ ದೇವರು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

ಲೇಖಕ: ರವಿಶಂಕರ್ ವಳಕ್ಕುಂಜ

ಪದ್ಯಾಣ ಜಯರಾಮ ಭಟ್ – ನಾದೋಪಾಸನೆಯ ಗುಂಗಿನಲ್ಲಿ 

0

ಪದ್ಯಾಣ ಜಯರಾಮ ಭಟ್ (ಫೋಟೋ: ರಾಧಾಕೃಷ್ಣ ರಾವ್. ಯು)

ಯಕ್ಷಗಾನ ಜಯರಾಮ ಭಟ್ಟರಿಗೆ ರಕ್ತಗತವಾಗಿ ಬಂದದ್ದು. ಕಲೆಯ ಬೀಡಾದ ಮನೆಯಲ್ಲಿ ಯಕ್ಷಗಾನ ತಾಳ ನಿನಾದಗಳು ಹುಟ್ಟಿನಿಂದಲೇ ಕಿವಿಗೆ ಕೇಳಿಸುತ್ತಿದ್ದುವು. ಹುಟ್ಟಿನಿಂದಲೇ ಮದ್ದಳೆಯ ಮತ್ತು ಚೆಂಡೆಯ ಪೆಟ್ಟುಗಳನ್ನು ಕೇಳಿಯೇ ಬೆಳೆದದ್ದು. ಸಹೋದರರಲ್ಲಿ ಭಾಗವತರಾದ ಪದ್ಯಾಣ ಗಣಪತಿ ಭಟ್ ಮಾತ್ರ ಶಾಸ್ತ್ರೀಯವಾಗಿ ಯಕ್ಷಗಾನ ಕಲಿತವರು. ಪದ್ಯಾಣ ಜಯರಾಮ ಭಟ್ಟರು ನೋಡಿ, ಕೇಳಿ, ಬಾರಿಸಿ ಕಲಿತವರು.

ಅಜ್ಜ ಪುಟ್ಟು ನಾರಾಯಣ ಭಾಗವತರು ದೊಡ್ಡ ಭಾಗವತರು. ತಂದೆ ಪದ್ಯಾಣ ತಿರುಮಲೇಶ್ವರ ಭಟ್ಟರು ಕೂಡಾ ಕಲಾವಿದರು. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಕಲಿಯುತ್ತಿರುವಾಗಲೇ ಜಯರಾಮ ಭಟ್ಟರು ಗಾಯಕನಾಗಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಆಗ ಭಾವಗೀತೆಗಳನ್ನು ಹಾಡುತ್ತಿದ್ದರು. ಪದವಿ ಶಿಕ್ಷಣವನ್ನು ಮುಗಿಸಿದ ಮೇಲೆ ಯಕ್ಷಗಾನದ ಎಲ್ಲಾ ವಿಭಾಗಗಳಲ್ಲಿ ಹೆಚ್ಚಿನ ಕಲಿಕೆಯನ್ನು ಹೊಂದಲು ಅವರಿಗೆ ಅನುಕೂಲವಾಯಿತು.

ಪ್ರಾಥಮಿಕ ಶಾಲೆಯಲ್ಲಿರುವಾಗಲೇ ಗಾತ್ರದಲ್ಲಿ ತನಗಿಂತಲೂ ದೊಡ್ಡದಾಗಿದ್ದ ಮದ್ದಳೆ ಯನ್ನು ಸರಾಗವಾಗಿ ಬಾರಿಸಲು ಪ್ರಾರಂಭಿಸಿದರು. ತಂದೆಯವರು ಇತರರಿಗೆ ಕಲಿಸುವುದನ್ನು ನೋಡಿ, ಅವರು ಬಾರಿಸುವುದನ್ನು ನೋಡಿ ಕಲಿಯಲು ಸುರುಮಾಡಿದ್ದ ಜಯರಾಮ ಭಟ್ಟರು ಕಾಲೇಜಿಗೆ ಬಂದಾಗ ಮದ್ದಳೆಯಲ್ಲಿ ಪಳಗಿದ್ದರು. ಕಾಲೇಜಿಗೆ ಹೋಗುತ್ತಿರುವಾಗಲೇ ಪ್ರಮುಖ ಭಾಗವತರ ಜತೆ ಮದ್ದಳೆಯ ಸಾಥ್ ನೀಡಿದ ಅನುಭವವಾಗಿತ್ತು. (ಮಂಡೆಚ್ಚರು ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್ ಅವರು ಮತ್ತು ಪದ್ಯಾಣ ಶಂಕರ ನಾರಾಯಣ ಭಟ್ಟರ ಜೊತೆಗೆ ಜಯರಾಮ ಭಟ್ಟರ ಮದ್ದಳೆವಾದನವನ್ನೂ ಮೆಚ್ಚಿಕೊಂಡಿದ್ದರು.)


‘‘ಅಗರಿ ದೊಡ್ಡ ಭಾಗವತರಿಗೆ, ಕಡತೋಕ, ಮಂಡೆಚ್ಚರು, ಅಗರಿ ರಘುರಾಮ ಭಾಗವತರೇ ಮೊದಲಾದವರ ಜೊತೆಗೂ ಮೃದಂಗ ವಾದನದಲ್ಲಿ ಸಹಕರಿಸಿದ್ದೇನೆ’’ ಎಂದು ಪದ್ಯಾಣ ಜಯರಾಮ ಭಟ್ಟರು ನೆನಪಿಸಿಕೊಳ್ಳುತ್ತಾರೆ.  ಇವರು ಪೂರ್ಣಾವಧಿ ಭಾಗವತನಾಗಿಯೇ ಕಲಾಸೇವೆ ಮಾಡುತ್ತಿದ್ದಾಗ ಎಂಟು ವರ್ಷಗಳ ಹಿಂದೆ ಆರೋಗ್ಯದ ತೊಂದರೆಯಿಂದಾಗಿ ವೈದ್ಯರ ಕಟು ನಿರ್ದೇಶನದಂತೆ ಭಾಗವತಿಕೆಯನ್ನು  ಬಿಟ್ಟರು. ಎರಡು ವರ್ಷ ಹಾಡಬಾರದು ಎಂಬುದಾಗಿ ವೈದ್ಯರು ತಾಕೀತು ಮಾಡಿದ್ದರು. ಆದರೆ ಮೃದಂಗ ಬಾರಿಸಲು ಅನುಮತಿಯೂ ಸಿಕ್ಕಿತು. ಹಾಗೆ ಎರಡು ವರ್ಷಕ್ಕೆ ಬಿಟ್ಟ ಭಾಗವತಿಕೆಯನ್ನು ಜಯರಾಮ ಭಟ್ಟರು ಮತ್ತೆಂದೂ ಮಾಡಲಿಲ್ಲ. ಹಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದರು. ಈಗ ಸಾ.ಪಾ.ಸಾ. ಹೇಳಲು ಕಷ್ಟವಾಗುತ್ತದೆ ಎನ್ನುತ್ತಾರೆ.

ಕದ್ರಿ ಮೇಳದಲ್ಲಿ 2 ವರ್ಷ, ಕುಂಟಾರು ಮೇಳದಲ್ಲಿ 2 ವರ್ಷ, ಕರ್ನಾಟಕ ಮೇಳದಲ್ಲಿ ಒಂದು ವರ್ಷ, ಹೀಗೆ ಐದು ವರ್ಷಗಳ ಕಾಲ ಭಾಗವತನಾಗಿಯೇ ಕಲಾಸೇವೆ ಮಾಡಿದ್ದರು. ಆಮೇಲೆ ಅನಿವಾರ್ಯ ವಾಗಿ ಮೃದಂಗವಾದಕನಾಗಿ ಮುಂದುವರಿದರು. ಚೆಂಡೆ ಬಾರಿಸುವುದು ಅಪರೂಪ. ಭಾಗವತಿಕೆಯಲ್ಲಿ ಸುಮಾರು ಒಂದು ವರ್ಷ ಪೂಜ್ಯ ಎಡನೀರು ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಗಳವರಿಂದ ಅನುಗ್ರಹವಾಯಿತು.  ಅವರ ಮಾರ್ಗದರ್ಶನದಲ್ಲಿ ಭಾಗವತಿಕೆಯನ್ನು ಅಭ್ಯಾಸ ಮಾಡಿದ್ದರು.

ಕಾಲೇಜಲ್ಲಿರುವಾಗ ಹಾಡುಗಾರನಾಗಿದ್ದುದು ಮತ್ತು ಸಂಗೀತದ ಬಗ್ಗೆ ಆಸಕ್ತಿಯಿದ್ದುದು ಮುಂದೆ ಇವರಿಗೆ ಭಾಗವತಿಕೆ ಕಲಿಯಲು ಪ್ರೇರಣೆಯಾಯಿತು. ಕೆಲವು ತಿಂಗಳುಗಳ ಕಾಲ ಶಾಸ್ತ್ರೀಯ ಸಂಗೀತವನ್ನೂ ಕಲಿತರು. ಅಂದು ಕಲಿತ ಸಂಗೀತದ ಜ್ಞಾನ ಕೆಲವೊಮ್ಮೆ ಇಂದಿಗೂ ಪ್ರಯೋಜನಕ್ಕೆ ಬರುತ್ತದೆಯಂತೆ. ಈಗಲೂ ಮೇಳಗಳಲ್ಲಿ ಭಾಗವತರು, ಕಲಾವಿದರು ರಾಗ, ತಾಳಗಳ ಬಗ್ಗೆ ಪದ್ಯಾಣ ಜಯರಾಮ ಭಟ್ಟರಲ್ಲಿ ಸಲಹೆಯನ್ನು ಕೇಳುವುದು, ಸಂಶಯವನ್ನು ನಿವಾರಿಸಿಕೊಳ್ಳುವುದು ಎಷ್ಟೋ ಬಾರಿ ನಡೆಯುತ್ತದೆ.

ಪದ್ಯಾಣ ಜಯರಾಮ ಭಟ್ – ಮಗಳು ಸುಜಯಾ – ಪತ್ನಿ ಸುಮಂಗಲಾ

                                       
19-11-1957ರಲ್ಲಿ ಜನಿಸಿದ ಶ್ರೀ ಪದ್ಯಾಣ ಜಯರಾಮ ಭಟ್ಟರು ಪಡೆದದ್ದು B.Com. ಪದವಿ. ತಂದೆ ಪದ್ಯಾಣ ತಿರುಮಲೇಶ್ವರ ಭಟ್, ತಾಯಿ ಸಾವಿತ್ರಮ್ಮ, ವಿವೇಕಾನಂದ ಕಾಲೇಜಿನಲ್ಲಿ B.Com. ಪದವಿ. ಪ್ರಾಥಮಿಕ ವಿದ್ಯಾಭ್ಯಾಸ ಕಲ್ಮಡ್ಕ ಶಾಲೆ ಮತ್ತೆ ಹೈಸ್ಕೂಲ್ ಬಾಳಿಲ ಶಾಲೆಗಳಲ್ಲಿ, ಮೃದಂಗವಾದನದ ಕಲಿಕೆ ಸ್ವಯಂ ನೋಡಿ, ಕೇಳಿ ಮತ್ತು ತಂದೆಯಿಂದ ಹಾಗೂ ಮುಂದೆ ಭಾಗವತಿಕೆ ಕಲಿಕೆ ಎಡನೀರು ಶ್ರೀಗಳಿಂದ ಒಂದು ವರ್ಷಗಳ ಕಾಲ. (ಪದ್ಯಾಣ ಶಂಕರನಾರಾಯಣ ಭಟ್ಟರು ಇವರ ಸಣ್ಣಜ್ಜನ ಮಗ. ಇವರಿಗೆ ಚಿಕ್ಕಪ್ಪನಾಗಬೇಕು.)
ಪತ್ನಿ : ಶ್ರೀಮತಿ ಸುಮಂಗಲಾ. ಮಗಳು : ಸುಜಯಾ – M.B.A. ಪದವೀಧರೆ. ಮಗಳು ಸುಜಯಾ ಯಕ್ಷಗಾನ ಕಲಾವಿದೆ, ಪುತ್ತೂರು ಶ್ರೀಧರ ಭಂಡಾರಿಯವರ ಶಿಷ್ಯೆ.‘ಯಕ್ಷಕೂಟ’ ಪುತ್ತೂರು ಮಕ್ಕಳ ತಂಡದಲ್ಲಿ ಸಕ್ರಿಯ ಸದಸ್ಯೆಯಾಗಿದ್ದರು. ಹಲವಾರು ವೇಷಗಳನ್ನು ನಿರ್ವಹಿಸಿದ್ದರು.


ಅನುಭವ : ಕರ್ನಾಟಕ ಮೇಳ ಒಂದು ವರ್ಷ, ಕದ್ರಿ ಮೇಳ 2 ವರ್ಷ, ಕುಂಟಾರು ಮೇಳ ಎರಡು ವರ್ಷಗಳ ಕಾಲ ಭಾಗವತರಾಗಿ ಸೇವೆ ಸಲ್ಲಿಸಿದ ಅನುಭವ. ಹೀಗೆ ಐದು ವರ್ಷ ಭಾಗವತರಾಗಿ ತಿರುಗಾಟ. ಆಮೇಲೆ ಮಂಗಳಾದೇವಿ ಮೇಳದಲ್ಲಿ ಎರಡು ವರ್ಷಗಳ ಕಾಲ ಭಾಗವತ ಮತ್ತು ಮದ್ದಳೆಗಾರರಾಗಿ ತಿರುಗಾಟ. ಆಮೇಲೆ ಎಡನೀರು ಮೇಳ ಮತ್ತು ಹೊಸನಗರ ಮೇಳಗಳಲ್ಲಿ ಸುಮಾರು 12 ವರ್ಷಗಳಿಗೂ ಹೆಚ್ಚಿನ ತಿರುಗಾಟದ ಅನುಭವ. ಪ್ರಸ್ತುತ ಹನುಮಗಿರಿ ಮೇಳದಲ್ಲಿ ಮುಖ್ಯ ಮದ್ದಳೆಗಾರನಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವಿದೇಶ ಪ್ರವಾಸ : ಕುವೈಟ್, ಸತತ ಎರಡು ವರ್ಷಗಳಲ್ಲಿ ಅಮೇರಿಕಾ ಪ್ರವಾಸ.
ಉದ್ಯಮಿಯಾಗಿ : ಹೋಟೆಲ್ ಉದ್ಯಮಿಯಾಗಿ ಮೂರು ವರ್ಷಗಳ ಅನುಭವ. ಬೆಂಗಳೂರಿನಲ್ಲಿ ಮೂರು ವರ್ಷಗಳ ಕಾಲ ಹೋಟೆಲ್ ನಡೆಸುತ್ತಿದ್ದರು. ಇದಕ್ಕೂ ಮೊದಲು 1985ರಿಂದ 1987ರ ವರೆಗೆ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದರು. ಅದಕ್ಕೂ ಮೊದಲು ಎಡನೀರು ಮಠದಲ್ಲಿ ಸ್ವಾಮೀಜಿಯವರ ಆಪ್ತನಾಗಿ ಕೆಲಸ ಮಾಡಿದ್ದರು.


ಬೆಳ್ಳಾರೆಯಲ್ಲಿ ಜರಗಿದ ಭಾರೀ ಜನಸ್ತೋಮ ಸೇರಿದ ಕರ್ನಾಟಕ ಮೇಳದ ಆಟವೊಂದರಲ್ಲಿ ಕುತೂಹಲಕಾರಿ ಪ್ರಸಂಗವೊಂದು ನಡೆಯಿತು. ಆ ದಿನದ ಆಟಕ್ಕೆ ಅನಿವಾರ್ಯ ಕಾರಣದಿಂದಾಗಿ ಶ್ರೀ ದಾಮೋದರ ಮಂಡೆಚ್ಚರು ರಜೆಯಲ್ಲಿದ್ದರು. ಯುವ ಭಾಗವತರಾಗಿದ್ದ ದಿನೇಶ ಅಮ್ಮಣ್ಣಾಯರು ಅಸೌಖ್ಯದಿಂದ ಬಳಲುತ್ತಿದ್ದರು. ಆ ದಿನ ಪದ್ಯಾಣ ಜಯರಾಮ ಭಟ್ಟರು ಆಟವೊಂದನ್ನು ಮುಗಿಸಿ ಹಗಲು ನಿದ್ರಿಸಿದ್ದರು. ಬೆಳ್ಳಾರೆ ಆಟದ ಸಂಘಟಕರು ಆ ದಿನ ಕಾರಲ್ಲಿ ಕಲ್ಮಡ್ಕದ ಪದ್ಯಾಣರ ಮನೆಗೆ ಹಾಜರ್. ಹೊಸ ಪ್ರಸಂಗ, ತುಳು ಪ್ರಸಂಗ ಬೇರೆ. ಪ್ರಾರಂಭದಲ್ಲಿ ಅಸಮ್ಮತಿ ಸೂಚಿಸಿದರೂ ಸಂಘಟಕರು ಅಸಹಾಯಕತೆ ತೋಡಿಕೊಂಡಾಗ ವಿಧಿಯಿಲ್ಲದೆ ಹೊರಟರು.

ಆಟ ನಡೆಯುವ ಸ್ಥಳ ತಲುಪಿದಾಗ ಶ್ರೀ ದಿನೇಶ ಅಮ್ಮಣ್ಣಾಯರು ಅನಾರೋಗ್ಯದಲ್ಲಿದ್ದರೂ ಪದ್ಯ ಹೇಳುತ್ತಿದ್ದುದು ಕಂಡುಬಂತು. ದಿನೇಶ ಅಮ್ಮಣ್ಣಾಯರಿಗೆ ವಿಶ್ರಾಂತಿಯ ಅವಶ್ಯಕತೆ ಖಂಡಿತಾ ಇತ್ತು ಎಂದು ಮನಗಂಡ ಪದ್ಯಾಣ ಜಯರಾಮ ಭಟ್ಟರು ಆ ರಾತ್ರಿಯ ಆಟದಲ್ಲಿ ಭಾಗವತಿಕೆ ಮಾಡಿ ಆಟಕ್ಕೆ ಮತ್ತು ಪ್ರೇಕ್ಷಕರಿಗೆ ರಸಭಂಗವಾಗದಂತೆ ನೋಡಿಕೊಂಡರು. ಇದು ಒಂದು ಅಪೂರ್ವ ಅನುಭವ ಎಂದ ಜಯರಾಮ ಭಟ್ಟರು ನೆನಪಿಸಿಕೊಳ್ಳುತ್ತಾರೆ.


ಒಂದೆರಡು ದಿನಗಳ ನಂತರ ಜಯರಾಮ ಭಟ್ಟರನ್ನು ಭಾಗವತಿಕೆಗೆ ಕರೆಯಲು ಕರ್ನಾಟಕ ಮೇಳದ ಯಜಮಾನರು ಮನೆಗೆ ಜನ  ಕಳಿಸಿದರು. ಭಾಗವತ ದಿನೇಶ ಅಮ್ಮಣ್ಣಾಯರಿಗೆ ಅನಾರೋಗ್ಯದ ಕಾರಣದಿಂದ ಕೆಲವಾರು   ದಿನಗಳ ರಜೆ ಮಾಡಬೇಕಾಗಿ ಬಂತು. ಅದಕ್ಕಾಗಿ ಸುಮಾರು 15 ದಿನಗಳ ಕಾಲ ಪದ್ಯಾಣ ಜಯರಾಮ ಭಟ್ಟರು ಕರ್ನಾಟಕ ಮೇಳದಲ್ಲಿ ಪುನಃ ತಿರುಗಾಟ ಮಾಡಬೇಕಾಯಿತು.
‘‘ಆ 15 ದಿನಗಳ ಕಾಲ ಶ್ರೀ ದಾಮೋದರ ಮಂಡೆಚ್ಚರ ಜೊತೆಗೆ ಭಾಗವಹಿಸಿದ್ದು ಮತ್ತು ತಿರುಗಾಟ ಮಾಡಿದ್ದು ನನಗೆ ದೊಡ್ಡ ಲಾಭದ ಹಾಗೂ ಹೆಮ್ಮೆಯ ವಿಷಯ’’ ಎಂದು ಪದ್ಯಾಣ ಜಯರಾಮ ಭಟ್ಟರು ವಿನೀತಭಾವದಿಂದ ನುಡಿಯುತ್ತಾರೆ.

ಮೇಳಗಳ ಇಂದು/ನಾಳೆಯ ಯಕ್ಷಗಾನ ಪ್ರದರ್ಶನಗಳ ವಿವರ (01-12-2020)

ಮೇಳಗಳ ಇಂದು/ನಾಳೆಯ ಯಕ್ಷಗಾನ ಪ್ರದರ್ಶನಗಳ ವಿವರ 
ಮೇಳಇಂದು/ದಿನಾಂಕಸ್ಥಳಪ್ರಸಂಗ
ಶ್ರೀ ಧರ್ಮಸ್ಥಳ ಮೇಳ01-12-2020ಶ್ರೀ ಕ್ಷೇತ್ರದಲ್ಲಿ ಶ್ರೀ ಶನೀಶ್ವರ ಮಹಾತ್ಮೆ 
ಶ್ರೀ ಪಾವಂಜೆ ಮೇಳ 01-12-2020ಪಚ್ಚಿನಡ್ಕ, ಕಳ್ಳಿಗೆಶ್ರೀ ದೇವಿ ಮಹಾತ್ಮೆ
ಶ್ರೀ ಬಪ್ಪನಾಡು ಮೇಳ01-12-2020ಶ್ರೀ ಕ್ಷೇತ್ರದಲ್ಲಿಪಾಂಡವಾಶ್ವಮೇಧ
 ನಾಳೆ/ದಿನಾಂಕ  
ಶ್ರೀ ಧರ್ಮಸ್ಥಳ ಮೇಳ02-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಪಾವಂಜೆ ಮೇಳ 02-12-2020ಪಾವಂಜೆ, ಹಳೆಯಂಗಡಿಮಾನಿಷಾದ 
ಶ್ರೀ ಬಪ್ಪನಾಡು ಮೇಳ02-12-2020ಮುಲ್ಕಿ ವೆಂಕಟರಮಣ ದೇವಸ್ಥಾನದಲ್ಲಿ 

ಕೊಕ್ಕಡ ಈಶ್ವರ ಭಟ್ – ಉಭಯ ತಿಟ್ಟುಗಳಿಗೂ ಸೈ 

ಅರುವತ್ತು ವರ್ಷಗಳ ದುಡಿಮೆ ಎಂದರೆ ಅದೇನು ಸುಲಭದ ಕಾರ್ಯವಲ್ಲ. ಅದರಲ್ಲೂ ಯಕ್ಷಗಾನದಂತಹಾ ರಂಗಕ್ರಿಯೆಯಲ್ಲಿ ಕಲಾವಿದರು ಸದಾ ಚಲನಶೀಲರಾಗಿರಬೇಕಾಗುತ್ತದೆ. ವೇಷಧಾರಿಗಳಂತೂ ಯಾವತ್ತೂ ಚುರುಕಿನ ನಡೆಯುಳ್ಳವರಾಗಿರಬೇಕಾಗುತ್ತದೆ. ಒಂದು ದಿನ ಏನಾದರೂ ಅನಾರೋಗ್ಯದ ಕಾರಣದಿಂದಲೂ ಔದಾಸೀನ್ಯವನ್ನು ತೋರಿದರೂ ಆ ದಿನದ ಒಟ್ಟು ಪ್ರದರ್ಶನದಲ್ಲಿ ಅದೊಂದು ಕಪ್ಪುಚುಕ್ಕೆಯಾಗಿ ಪರಿಣಮಿಸಿ ಆತನ ವೈಫಲ್ಯವನ್ನು ಎತ್ತಿತೋರಿಸುತ್ತದೆ.

ವಯಸ್ಸು ಎಲ್ಲರಿಗೂ ಬಾಧಕವೇ. ಕಲಾವಿದನೂ ಇದಕ್ಕೆ ಹೊರತಲ್ಲ. ಆದರೆ ಹೆಚ್ಚಿನ ಕಲಾವಿದರು ವಯಸ್ಸನ್ನು ಮೀರಿದ ಎತ್ತರಕ್ಕೆ ಬೆಳೆದು ರಂಗದಲ್ಲಿ ವಿಜೃಂಭಿಸಿದವರಿದ್ದಾರೆ. ಹೌದು. ಕೊಕ್ಕಡ ಈಶ್ವರ ಭಟ್ಟರು ಪ್ರಸಿದ್ಧ ಸ್ತ್ರೀವೇಷಧಾರಿಯಾಗಿ ಅರುವತ್ತಕ್ಕೂ ಹೆಚ್ಚು ವರ್ಷಗಳ ಕಾಲ ರಂಗದಲ್ಲಿ ದುಡಿದವರು. ಅರುವತ್ತು ವರ್ಷಗಳನ್ನು ಯಕ್ಷಗಾನಕ್ಕೆಂದೇ ವಿನಿಯೋಗಿಸಿದರು ಎಂದರೆ ಅದೊಂದು ಅದ್ಭುತ ಸಾಧನೆಯೇ ಸರಿ.

 ಈಶ್ವರ ಭಟ್ಟರು ಜನಿಸಿದ್ದು ಅಡ್ಯನಡ್ಕ ಸಮೀಪದ ಕಡೆಂಗೋಡ್ಲು ಎಂಬ ಸ್ಥಳದಲ್ಲಿಯಾದರೂ ‘ಕೊಕ್ಕಡ ಈಶ್ವರ ಭಟ್’ ಎಂದೇ ಪ್ರಸಿದ್ಧಿಯನ್ನು ಪಡೆದವರು. ತಂದೆ ಮಹಾಲಿಂಗ ಭಟ್ ತಾಯಿ ಪರಮೇಶ್ವರೀ ಅಮ್ಮನವರ ಐದು ಗಂಡು, ಐದು ಹೆಣ್ಣುಮಕ್ಕಳಲ್ಲಿ ಓರ್ವರಾಗಿ ಜನಿಸಿದ ಈಶ್ವರ ಭಟ್ಟರದು ಹೋರಾಟದ ಜೀವನ. ಆ ಕಾಲದಲ್ಲಿ ಎಲ್ಲಾ ಮಕ್ಕಳಿಗೂ ಶಿಕ್ಷಣ ಕೊಡುವಷ್ಟು ಆರ್ಥಿಕ ಸ್ಥಿತಿ ಸದೃಢವಾಗಿರಲಿಲ್ಲ. ಆದುದರಿಂದ ಆರನೇ ತರಗತಿಗೆ ವಿದ್ಯೆಗೆ ವಿದಾಯ ಹೇಳಿದ ಈಶ್ವರ ಭಟ್ಟರು ಅಲ್ಲಿ ಇಲ್ಲಿ ಚಿಕ್ಕಪುಟ್ಟ ಕೆಲಸಗಳನ್ನು ಮಾಡುತ್ತಿದ್ದಾಗ ಅವರ ಜೀವನದ ತಿರುವೋ ಎಂಬಂತೆ ಅವರನ್ನು ಯಕ್ಷಗಾನ ರಂಗ ಕೈಬೀಸಿ ಕರೆಯಿತು.

ಅವರ ಅಕ್ಕನ ಗಂಡ ಭಾವನೇ ಆದ ಪೆರುವೋಡಿ ಕೃಷ್ಣ ಭಟ್ಟರು ಮೂಲ್ಕಿ ಮೇಳವನ್ನು ಮುನ್ನಡೆಸುತ್ತಿದ್ದ ಕಾಲ. ಭಾವನ ಪ್ರೀತಿಯ ಕರೆಗೆ ಓಗೊಟ್ಟ ಈಶ್ವರ ಭಟ್ಟರು ಯಕ್ಷಗಾನವೇ ತನ್ನ ಉಸಿರು ಎಂದು ನಿಶ್ಚೈಸಿ ತನ್ನ ಸಾಧನೆಯ ಹಾದಿಯಲ್ಲಿ ಒಂದೊಂದೇ ಮೆಟ್ಟಿಲನ್ನು ಏರತೊಡಗಿದರು. ಆ ಕಾಲದಲ್ಲಿ ಮೂಲ್ಕಿ ಮೇಳದಲ್ಲಿ ಸ್ತ್ರೀವೇಷಧಾರಿಯಾಗಿದ್ದ ಕುಡಾನ ಗೋಪಾಲಕೃಷ್ಣ ಭಟ್ಟರಲ್ಲಿ ನಾಟ್ಯಾಭ್ಯಾಸ ಮಾಡಿ ಪೂರ್ವರಂಗದ ವೇಷಗಳನ್ನು ಮಾಡುತ್ತಾ ರಂಗಾನುಭವವನ್ನು ಪಡೆಯ ತೊಡಗಿದರು. ಭರತನಾಟ್ಯದ ನಡೆಗಳನ್ನು ಬಲ್ಲ ಹಾಗೂ ಅದನ್ನು ರಂಗದಲ್ಲಿ ಪ್ರಯೋಗಿಸಬಲ್ಲ ಕೊಕ್ಕಡ ಈಶ್ವರ ಭಟ್ಟರು ಮೂಲ್ಕಿ ಮೇಳದಲ್ಲಿ ಸುಮಾರು ಐದಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ಆಮೇಲೆ ಸುರತ್ಕಲ್ ಮೇಳಕ್ಕೆ ಸೇರುತ್ತಾರೆ.

ಈ ಮೇಳಗಳಲ್ಲದೆ ಬಡಗಿನ ಇಡಗುಂಜಿ, ಶಿರಸಿ, ಸಾಲಿಗ್ರಾಮ ಮೇಳಗಳಲ್ಲಿಯೂ ವೇಷಧಾರಿಯಾಗಿ ತೆಂಕು-ಬಡಗಿನಲ್ಲಿ ಸಮಾನ ಪ್ರಭುತ್ವವನ್ನು ಸಾಧಿಸಿ ನಿಜಾರ್ಥದಲ್ಲಿ ಸವ್ಯಸಾಚಿಯಾದ ಕೀರ್ತಿ ಇವರಿಗೆ ಸಲ್ಲುತ್ತದೆ. ತನ್ನ ಒಡನಾಟದ ಹಿರಿಯ ಕಲಾವಿದರನ್ನು ಗೌರವದಿಂದ ಸ್ಮರಿಸುವ ಇವರು ಹಿರಿಯ ಕಲಾವಿದರ ಮಾರ್ಗದರ್ಶನ ಸಹಕಾರಗಳಿಗೆ ಯಾವತ್ತೂ ಕೃತಜ್ಞನಾಗಿದ್ದೇನೆ ಎಂದು ವಿನೀತಭಾವವನ್ನು ತೋರುತ್ತಾರೆ.


                     

ಸ್ತ್ರೀವೇಷಧಾರಿಯಾಗಿ ವಿವಿಧ ಮೇಳಗಳಲ್ಲಿ : ಕೊಕ್ಕಡ ಈಶ್ವರ ಭಟ್ಟರು ತೆಂಕುತಿಟ್ಟು ಹಾಗೂ ಬಡಗುತಿಟ್ಟಿನ ವೇಷಧಾರಿಯಾಗಿ ಸಮಾನ ಗೌರವವನ್ನು ಪಡೆದ ಕಲಾವಿದ. ಎರಡು ತಿಟ್ಟುಗಳ ಮೇಳಗಳಲ್ಲಿ ವೇಷಧಾರಿಯಾಗಿದ್ದರು. ಮೂಲ್ಕಿ ಮೇಳದಲ್ಲಿ ಐದು ವರ್ಷ, ಸುರತ್ಕಲ್ ಮೇಳದಲ್ಲಿ ಐದು ವರ್ಷ, ಇಡಗುಂಜಿ ಮೇಳದಲ್ಲಿ ಎರಡು ವರ್ಷ, ಪುನಃ ಸುರತ್ಕಲ್ ಮೇಳದಲ್ಲಿ ಹದಿನಾಲ್ಕು ವರ್ಷ ಸೇವೆ ಸಲ್ಲಿಸಿ, ನಂತರ ಸಾಲಿಗ್ರಾಮ, ಬಪ್ಪನಾಡು, ಶಿರಸಿ, ಕುಮಟಾ, ಕದ್ರಿ, ಕುಂಬ್ಳೆ, ಎಡನೀರು, ಬೆಳ್ಮಣ್ಣು ಮೇಳಗಳಲ್ಲಿ ವಿವಿಧ ಅವಧಿಗಳಲ್ಲಿ ಸ್ತ್ರೀವೇಷಧಾರಿಯಾಗಿ ಜನಮನ್ನಣೆಗೆ ಪಾತ್ರರಾಗಿ ಪೂರ್ಣಕಾಲಿಕ ಸೇವೆಯಿಂದ ನಿವೃತ್ತರಾಗಿದ್ದರೂ ಈಗಲೂ ಅಲ್ಲಲ್ಲಿ ಪ್ರದರ್ಶನಗಳಲ್ಲಿ ಭಾಗವಹಿಸುತ್ತಾ ತನ್ನ ಯಕ್ಷಜೀವನದ ಅರುವತ್ತು ವಸಂತಗಳನ್ನು ಪೂರೈಸಿದವರು.


                         

ಪ್ರಶಸ್ತಿಗಳು : ಯಕ್ಷರಂಗದಲ್ಲಿ ಪ್ರೇಕ್ಷಕರ ಹೃದಯದಲ್ಲಿ ಸಂಚಲನ ಮೂಡಿಸಿದ ಕೊಕ್ಕಡ ಈಶ್ವರ ಭಟ್ಟರು ನಿಜಜೀವನದಲ್ಲಿ ಸರಳ, ಮೃದು, ಮಿತಭಾಷಿ. ತನ್ನ ಸಾಧನೆ, ಸಾಮರ್ಥ್ಯಗಳನ್ನು ಹೇಳಿಕೊಳ್ಳದ ಸಂಕೋಚ ಸ್ವಭಾವ ಅವರದು. ಅವರಿಗೆ ಬಂದ ಪ್ರಶಸ್ತಿಗಳು ಹಲವಾರು.


                      ಉಡುಪಿಯ ಯಕ್ಷಗಾನ ಕಲಾರಂಗ ಪ್ರಶಸ್ತಿ, ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸನ್ಮಾನ, ಶ್ರೀ ವೀರಾಂಜನೇಯ ಸ್ವಾಮಿ ಪ್ರತಿಷ್ಠಾನ ಕೋಡಪದವು, ಕುರಿಯ ವಿಠಲ ಶಾಸ್ತ್ರಿ ಪ್ರಶಸ್ತಿ, ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಶೇಣಿ ಸಂಸ್ಮರಣ ಪ್ರಶಸ್ತಿ, ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಮ್, ಎಡನೀರು ಮಠ ಸಂಮಾನ, ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ದ. ಕ. ಜಿಲ್ಲಾ ಯಕ್ಷ ಪ್ರತಿಷ್ಠಾನ, ಪಡ್ರೆ ಚಂದು ಸ್ಮಾರಕ ಪ್ರಶಸ್ತಿ ಹಾಗೂ ಹತ್ತು ಹಲವಾರು.

ಅನುಭವಿ ಪುಂಡುವೇಷಧಾರಿ ಪುಷ್ಪರಾಜ್ ಜೋಗಿ ನೆಲ್ಯಾಡಿ 

ಯಕ್ಷಗಾನವೆಂಬ ಸರ್ವಾಂಗ ಸುಂದರ, ಶ್ರೇಷ್ಠ ಕಲೆಯಲ್ಲಿ ಕಲಾವಿದರಾಗಿ ವ್ಯವಸಾಯ ಮಾಡುವವರನೇಕರು. ಯಕ್ಷಗಾನವನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದವರು ಇದ್ದಾರೆ. ಹವ್ಯಾಸವಾಗಿ ಸ್ವೀಕರಿಸಿದವರೂ ಇದ್ದಾರೆ. ಕಲಾಮಾತೆಗೆ ಇವರೆಲ್ಲರೂ ಮಕ್ಕಳು. ತಮಗೆ ಈ ಶ್ರೇಷ್ಠ ಕಲಾಪ್ರಾಕಾರದ ಒಂದು ಅಂಗವಾಗುವ ಅವಕಾಶ ಸಿಕ್ಕಿದೆ. ಕಲಾಮಾತೆಯ ಸೇವೆಯನ್ನು ಮಾಡುವ ಭಾಗ್ಯವು ಸಿಕ್ಕಿದೆ ಎಂದು ಹೆಮ್ಮೆಯಿಂದ ಹೇಳಬಹುದು. ಸಂತೋಷಪಡಬಹುದು.

ತೆಂಕುತಿಟ್ಟಿಗೆ ಸಂಬಂಧಿಸಿದಂತೆ ಯಕ್ಷಗಾನದಲ್ಲಿ ಹಾಸ್ಯ, ಪೀಠಿಕೆವೇಷ, ಎದುರುವೇಷ, ಪುಂಡುವೇಷ, ಸ್ತ್ರೀವೇಷ ಹೀಗೆ ವಿಭಾಗಗಳು. ಇಂದು ಪುಂಡುವೇಷಧಾರಿಗಳಾಗಿ, ವೃತ್ತಿ ಕಲಾವಿದರಾಗಿ ಮೇಳದ ತಿರುಗಾಟ ನಡೆಸುತ್ತಿರುವವರಲ್ಲೊಬ್ಬರು ಶ್ರೀ ಪುಷ್ಪರಾಜ್ ಜೋಗಿ ನೆಲ್ಯಾಡಿ. ಇವರು ಪ್ರಸ್ತುತ ಕಟೀಲು ಮೇಳದ ಕಲಾವಿದ. ಶ್ರೀ ಪುಷ್ಪರಾಜ್ ಜೋಗಿ ಅವರು ಪ್ರಸ್ತುತ ಕಟೀಲು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದರೂ ಅನೇಕ ಮೇಳಗಳಲ್ಲಿ ತಿರುಗಾಟ ನಡೆಸಿ ಅನುಭವವನ್ನು ಹೊಂದಿದವರು.

ಇವರು ಪುತ್ತೂರು ತಾಲೂಕಿನ ನೆಲ್ಯಾಡಿಯಲ್ಲಿ 1964ನೇ ಇಸವಿ ಜೂನ್ 7ರಂದು ಶ್ರೀ ಶಿವಪ್ಪ ಜೋಗಿ ಮತ್ತು ಶ್ರೀಮತಿ ರುಕ್ಮಿಣಿ ಅಮ್ಮ ದಂಪತಿಗಳ ಪುತ್ರನಾಗಿ ಜನಿಸಿದರು. ನೆಲ್ಯಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವರೆಗೆ ಓದಿದ್ದರು. ಓದು ಮುಂದುವರಿಸಲು ಅವಕಾಶವಿರಲಿಲ್ಲ. ಇವರ ತಂದೆ ಶಿವಪ್ಪ ಜೋಗಿ ಕೃಷಿಕರು. ತೆಂಕಿನ ಖ್ಯಾತ ಕಲಾವಿದ ಶ್ರೀ ಶಿವರಾಮ ಜೋಗಿ, ಪುಷ್ಪರಾಜ್ ಜೋಗಿ ಅವರ ದೊಡ್ಡಪ್ಪನ ಮಗ ಅಣ್ಣ. ಪುಷ್ಪರಾಜ್ ಅವರಿಗೆ ಎಳವೆಯಲ್ಲೇ ಯಕ್ಷಗಾನಾಸಕ್ತಿ ಇತ್ತು. ನೆಲ್ಯಾಡಿ ಪರಿಸರದಲ್ಲಿ ನಡೆಯುತ್ತಿರುವ ಪ್ರದರ್ಶನಗಳನ್ನು ನೋಡುತ್ತಿದ್ದರು.

ಕೊಕ್ಕಡ ಕೋರಿಜಾತ್ರೆಯಂದು ಸುರತ್ಕಲ್ ಮೇಳದ ಆಟ ವರ್ಷವೂ ನಡೆಯುತ್ತಿತ್ತು. ನೆಲ್ಯಾಡಿಯಿಂದ ಕೊಕ್ಕಡ ವರೆಗೆ ನಡೆದೇ ಹೋಗಿ ಆಟ ನೋಡುತ್ತಿದ್ದರು. ಹೀಗೆ ಆಟ ನೋಡಿಯೇ ಕಲಾವಿದನಾಗಬೇಕೆಂಬ ಆಸೆಯಾಗಿತ್ತು. ಸುರತ್ಕಲ್ ಮೇಳ ಶ್ರೇಷ್ಠ ಕಲಾವಿದರಿಂದ ಕೂಡಿದ ತಂಡವಾಗಿತ್ತು. ಕೊಕ್ಕಡ ಈಶ್ವರ ಭಟ್, ವೇಣೂರು ಸುಂದರ ಆಚಾರ್ಯ, ಎಂ.ಕೆ ರಮೇಶ ಆಚಾರ್ಯ, ಶಿವರಾಮ ಜೋಗಿ, ಪ್ರಕಾಶ್ ಚಂದ್ರ ರಾವ್ ಬಾಯಾರು, ಇವರ ಪಾತ್ರಗಳು ಪುಷ್ಪರಾಜರನ್ನು ಆಕರ್ಷಿಸಿದ್ದುವು. ಅಂದಿನ ದಿನ ಈ ಐವರು ಕಲಾವಿದರೂ ಪುಷ್ಪರಾಜರ ಪಾಲಿಗೆ ‘ಹೀರೋ’ಗಳಾಗಿದ್ದರು.

7ನೇ ತರಗತಿಯ ಓದಿನ ಬಳಿಕ ಪುಷ್ಪರಾಜರು ಮಂಗಳೂರಿನಲ್ಲಿ ಎರಡು ವರ್ಷ ಕಳೆದಿದ್ದರು. ಆಗಿನ್ನೂ ನಾಟ್ಯವೇ ಕಲಿತಿರದ ಇವರು ಮೇಳ ಸೇರುವ ಆಸೆಯಿಂದ ಶ್ರೀ ಕ್ಷೇತ್ರ ಕಟೀಲಿಗೆ ಹೋಗಿದ್ದರು. ಕಟೀಲು ಶ್ರೀ ಗೋಪಾಲಕೃಷ್ಣ ಅಸ್ರಣ್ಣರು ಇವರನ್ನು ಖ್ಯಾತ ಕಲಾವಿದ ಕಟೀಲು ಶ್ರೀನಿವಾಸ ರಾಯರ ಕೈಗೊಪ್ಪಿಸಿದ್ದರು. ಶ್ರೀನಿವಾಸರ ಜತೆ ಪುಷ್ಪರಾಜರು ಸುಂಕದಕಟ್ಟೆ ಮೇಳಕ್ಕೆ ಸೇರಿದರು. ನಾಟ್ಯದ ಕಲಿಯದ ಇವರಿಗೆ ತಿರುಗಾಟವಿಡೀ ಕೋಡಂಗಿ ಮತ್ತು ಸಣ್ಣಪುಟ್ಟ ಪಾತ್ರಗಳನ್ನು ಮಾಡುವ ಅವಕಾಶ ಸಿಕ್ಕಿತ್ತು.

ಪುಷ್ಪರಾಜ್ ಜೋಗಿಯವರು ಸಹ ಕಲಾವಿದರ ಸಲಹೆಯಂತೆ ನಾಟ್ಯ ಕಲಿಯಲು ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾ ಕೇಂದ್ರಕ್ಕೆ ತೆರಳಿದರು. ಗುರು, ಪ್ರಸಿದ್ಧ ವೇಷಧಾರಿ, ಶ್ರೀ ಪಡ್ರೆ ಚಂದು ಅವರ ಶಿಷ್ಯನಾಗಿ ನಾಟ್ಯ ಕಲಿತರು. ಲಲಿತ ಕಲಾ ಕೇಂದ್ರದಲ್ಲಿ ಸಂಘಟರಾಗಿ, ಕಲಾವಿದರಾಗಿ, ಭಾಷಣಕಾರರಾಗಿ ಈಗ ಪ್ರಸಿದ್ಧರಾದ ಸರಪಾಡಿ ಶ್ರೀ ಅಶೋಕ ಶೆಟ್ರು, ಕಟೀಲು ಮೇಳದ ಹಿರಿಯ ಕಲಾವಿದ ಶ್ರೀ ಅಪ್ಪಕುಂಞಿ ಮಣಿಯಾಣಿ ಇವರ ಸಹಪಾಠಿಗಳಾಗಿದ್ದರು. ನಾಟ್ಯ ಕಲಿತು ಅದೇ ವರ್ಷ ಸುಂಕದಕಟ್ಟೆ ಮೇಲಕ್ಕೆ. 3 ವರ್ಷ ತಿರುಗಾಟ. ಸಂಚಾಲಕರಾದ ಪಡ್ಡೋಡಿಗುತ್ತು ಸುಂದರ ಶೆಟ್ರಿಗೆ ಬಾಲಕಲಾವಿದನಾದ ಪುಷ್ಪರಾಜರ ವೇಷಗಳೆಂದರೆ ಬಲು ಇಷ್ಟವಾಗಿತ್ತು. ಅವಕಾಶಗಳನ್ನಿತ್ತು ಪ್ರೋತ್ಸಾಹಿಸಿದ್ದರು. ಸಹಕಲಾವಿದರುಗಳೆಲ್ಲರೂ ಸಹಕರಿಸಿದ್ದರು.

ಬಾಲಗೋಪಾಲರಿಂದ ತೊಡಗಿ ಬಾಲ ಅಯ್ಯಪ್ಪ, ಬಾಲಕೃಷ್ಣ, ಧ್ರುವ, ಮಾರ್ಕಂಡೇಯ, ಲಕ್ಷ್ಮಣ ಮೊದಲಾದ ವೇಷಗಳಲ್ಲಿ ಮಿಂಚಿದರು. ಪುಷ್ಪರಾಜ್ ಅವರ ಧ್ರುವನ ವೇಷವನ್ನು ನೋಡಿ ಸಂತೋಷಗೊಂಡ ಮಹನೀಯರೊಬ್ಬರು ವಾಚು (ಕೈಗಡಿಯಾರ) ಉಡುಗೊರೆ ನೀಡಿದ್ದರು. ಬೆಳೆಯುತ್ತಾ ವೃಷಸೇನ, ಬಬ್ರುವಾಹನ, ಅಭಿಮನ್ಯು ಮೊದಲಾದ ವೇಷಗಳನ್ನೂ ಮಾಡಿದ್ದರು. ಸ್ತ್ರೀ ವೇಷಗಳನ್ನೂ ನಿರ್ವಹಿಸಿದರು.(ಮೊದಲ ಸ್ತ್ರೀ ವೇಷ ತಿರುಪತಿ ಕ್ಷೇತ್ರ ಮಹಾತ್ಮೆ ಪ್ರಸಂಗದ ಲಕ್ಷ್ಮಿ). ಬಳಿಕ 4 ವರ್ಷಗಳ ಕಾಲ ಪುತ್ತೂರು ಶ್ರೀಧರ ಭಂಡಾರಿಗಳ ಸಂಚಾಲಕತ್ವದ ಪುತ್ತೂರು ಮೇಳದಲ್ಲಿ ಪುಂಡುವೇಷ, ಸ್ತ್ರೀ ವೇಷಧಾರಿಯಾಗಿ ತಿರುಗಾಟ. ಬಾಲೆ ನಾಗಮ್ಮ ಪ್ರಸಂಗದ ಕಸೆ ಸ್ತ್ರೀ ವೇಷವಾದ ದೇವಮ್ಮ ಎಂಬ ಪಾತ್ರ ಇವರಿಗೆ ಒಳ್ಳೆಯ ಹೆಸರನ್ನು ತಂದು ಕೊಟ್ಟಿತ್ತು.

ಬಳಿಕ 4 ವರ್ಷ ಅರುವ ನಾರಾಯಣ ಶೆಟ್ರ ಸಂಚಾಲಕತ್ವದ ಅರುವ ಮೇಳದಲ್ಲಿ ಕಲಾಸೇವೆ. ಅಭಿಮನ್ಯು, ಬಬ್ರುವಾಹನ, ಚಂದ್ರಮತಿ, ಗುಣಸುಂದರಿ, ದಮಯಂತಿ ಅಲ್ಲದೆ ತುಳು ಪ್ರಸಂಗಗಳಲ್ಲಿ ಅನೇಕ ಪಾತ್ರಗಳನ್ನೂ ನಿರ್ವಹಿಸುವ ಅವಕಾಶ ಸಿಕ್ಕಿತ್ತು. ಸುಂಕದಕಟ್ಟೆ ಮೇಳದಲ್ಲಿ ಮುಳಿಯಾಲ ಭೀಮ ಭಟ್ಟರೂ ಪುತ್ತೂರು ಮೇಳದಲ್ಲಿ ಮೂಡಬಿದಿರೆ ಮಾಧವ ಶೆಟ್ರೂ ಮಾತುಗಾರಿಕೆಯನ್ನು ಇವರಿಗೆ ಹೇಳಿಕೊಡುತ್ತಿದ್ದರು. ತದನಂತರ ಶ್ರೀ ದಾಸಪ್ಪ ರೈಗಳ ನೇತೃತ್ವದ ಕುಂಬಳೆ ಮೇಳದಲ್ಲಿ ಕಥಾನಾಯಕನ ಪಾತ್ರಗಳನ್ನೂ ಮಾಡುತ್ತಾ ವ್ಯವಸಾಯ. ಆಗ ಖ್ಯಾತ ಕಲಾವಿದ ಶ್ರೀ ಡಿ. ಮನೋಹರ ಕುಮಾರ್ ‘ಖಳನಾಯಕ’ ಪಾತ್ರಗಳನ್ನು ಮಾಡುತ್ತಿದ್ದರಂತೆ. ನಂತರ 1 ವರ್ಷ ಕುಬಣೂರು ಶ್ರೀಧರ ರಾಯರು ನಡೆಸುತ್ತಿದ್ದ ಪೇಜಾವರ ಮೇಳದಲ್ಲಿ 1 ತಿರುಗಾಟ. ಬಳಿಕ ಬಪ್ಪನಾಡು ಮತ್ತು ಕೂಡ್ಲು ಮೇಳದಲ್ಲಿ ತಲಾ 1 ವರ್ಷದ ವ್ಯವಸಾಯ.

ಮುಂದಿನ ವರ್ಷ ಕಟೀಲು 1ನೇ ಮೇಳಕ್ಕೆ 2ನೇ ಪುಂಡುವೇಷಧಾರಿಯಾಗಿ ಆಯ್ಕೆ. 4 ವರ್ಷಗಳ ಕಾಲ ವ್ಯವಸಾಯ. ಈ ಸಂದರ್ಭ ಕುಬಣೂರು ಶ್ರೀಧರ ರಾಯರು ಭಾಗವತರಾಗಿದ್ದರು. ಮದ್ದಳೆಗಾರ ಮಿಜಾರು ಮೋಹನ ಶೆಟ್ಟಿಗಾರ್, ಪುತ್ತೂರು ಕೃಷ್ಣ ಭಟ್, ಮುಂಗಿಲ ಕೃಷ್ಣ ಭಟ್, ಸಂಪಾಜೆ ಶೀನಪ್ಪ ರೈ, ಸುಣ್ಣಂಬಳ ವಿಶ್ವೇಶ್ವರ ಭಟ್, ಅಜಾರು ಉಮೇಶ ಶೆಟ್ಟಿ, ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್, ಮೊದಲಾದವರ ಒಡನಾಟದಲ್ಲಿ ತಿರುಗಾಟ ಮಾಡಿದ್ದರು. 1987ರಲ್ಲಿ ವಿವಾಹ. ವಿವಾಹದ ಬಳಿಕ ಮೇಳ ಬಿಟ್ಟು 9 ವರ್ಷ ಹುಟ್ಟೂರು ನೆಲ್ಯಾಡಿಯಲ್ಲಿ ದಿನಸಿ ವ್ಯಾಪಾರ ನಡೆಸಿದ್ದರು. ಬಳಿಕ ಮಂಗಳೂರಿಗೆ ಬಂದು ನೆಲೆಸಿದರು.(ವಾಮಂಜೂರು) ಪುಷ್ಪರಾಜ ಜೋಗಿಯವರ ಭಾವ (ಪತ್ನಿಯ ಅಣ್ಣ) ಮಂಗಳೂರಲ್ಲಿ ಉದ್ಯಮಿಯಾಗಿದ್ದು ಅವರಿಗೆ ಸಹಕಾರಿಯಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಬಳಿಕ ಮತ್ತೆ ಕಟೀಲು ಮೇಳಕ್ಕೆ. 1ನೇ ಮೇಳದಲ್ಲಿ 5 ವರ್ಷ, 6ನೇ ಮೇಳದಲ್ಲಿ 2 ವರ್ಷ, ಪ್ರಸ್ತುತ 2 ವರ್ಷಗಳಿಂದ 4ನೇ ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. ನೆಲ್ಯಾಡಿ ಶಾಲೆಯಲ್ಲಿ ಅನೇಕ ವಿದ್ಯಾರ್ಥಿಗಳಿಗೆ ನಾಟ್ಯ ತರಬೇತಿಯನ್ನು ನೀಡಿದ್ದಾರೆ. ಅಧ್ಯಾಪಕ, ಹವ್ಯಾಸೀ ಕಲಾವಿದ ಶ್ರೀ ಗುಡ್ಡಪ್ಪ ಬಲ್ಯರು ಸಹಕರಿಸಿದ್ದರು. ಕೊಕ್ಕಡ ಸಮೀಪದ ಪುತ್ತಿಗೆ ಶ್ರೀ ವಿಷ್ಣುಮೂರ್ತಿ ದೇವಳದಲ್ಲೂ ತರಬೇತಿ ನೀಡಿದ್ದರು. ಅಲ್ಲದೆ ಈ ಎರಡೂ ಕಡೆ ತನ್ನಿಂದ ಕಲಿತ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನಗಳನ್ನೂ ಏರ್ಪಡಿಸಿದ್ದರು. ಪುಷ್ಪರಾಜ್ ಜೋಗಿಯವರು ನೆಲ್ಯಾಡಿಯಲ್ಲಿರುವಾಗ ತಾಳಮದ್ದಲೆಗಳಲ್ಲೂ ಭಾಗವಹಿಸಿದ್ದರು. ಬಲ್ಯ ಪಡುಬೆಟ್ಟು ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಶ್ರೀ ಗೋಪಾಲಕೃಷ್ಣ ಶಗ್ರಿತ್ತಾಯ ಇವರ ಸಹಕಾರವೂ ಸಿಕ್ಕಿತ್ತು.(ಇವರು ತಾಳಮದ್ದಳೆ ಅರ್ಥಧಾರಿಯಾಗಿದ್ದರು.) 

ಶ್ರೀ ಪುಷ್ಪರಾಜ್ ಜೋಗಿಯವರು ವೃತ್ತಿ ಬದುಕಿನಲ್ಲಿಯೂ ಸಂಸಾರಿಕವಾಗಿಯೂ ತೃಪ್ತರು. ಪತ್ನಿ ಸಾವಿತ್ರಿ. ಪುಷ್ಪರಾಜ್, ಸಾವಿತ್ರಿ ದಂಪತಿಗಳಿಗೆ ಇಬ್ಬರು ಪುತ್ರರು. ಹಿರಿಯ ಪುತ್ರ ಸಾಗರ್ MSW ಮಾಡಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ. ಕಿರಿಯ ಪುತ್ರ ಸಂದೇಶ್ ಪದವಿ ಅಂತಿಮ ವರ್ಷದ ವಿದ್ಯಾರ್ಥಿ. ಅವನಿಗೆ ಉಜ್ವಲ ಭವಿಷ್ಯವಿರಲಿ. ಶ್ರೀ ಪುಷ್ಪರಾಜ್ ಶೆಟ್ಟಿಗಾರರಿಂದ ಇನ್ನಷ್ಟು ಕಲಾಸೇವೆ ನಡೆಯಲಿ. ಕಲಾಮಾತೆಯ ಅನುಗ್ರಹವು ಸದಾ ಇರಲಿ.

ಲೇಖಕ: ರವಿಶಂಕರ್ ವಳಕ್ಕುಂಜ 

ಫೋಟೋ: ರಾಧಾಕೃಷ್ಣ ಭಟ್,ಕೋಂಗೋಟ್ 

ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ 
ಮೇಳಇಂದು/ದಿನಾಂಕಸ್ಥಳಪ್ರಸಂಗ
ಶ್ರೀ ಧರ್ಮಸ್ಥಳ ಮೇಳ30-11-2020ಶ್ರೀ ಕ್ಷೇತ್ರದಲ್ಲಿ ಶ್ರೀ ಕೃಷ್ಣ ಲೀಲಾಮೃತಂ 
ಶ್ರೀ ಪಾವಂಜೆ ಮೇಳ 30-11-2020ಕದ್ರಿ ದೇವಸ್ಥಾನ, ಮಂಗಳೂರು ಶ್ರೀ ವೀರಾಂಜನೇಯ ವೈಭವ
ಶ್ರೀ ಮಲ್ಲ ಮೇಳ 30-11-2020ಶ್ರೀ ಕ್ಷೇತ್ರ ಮಲ್ಲದಲ್ಲಿಅಶ್ವಮೇಧ
 ನಾಳೆ/ದಿನಾಂಕ  
ಶ್ರೀ ಧರ್ಮಸ್ಥಳ ಮೇಳ01-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಪಾವಂಜೆ ಮೇಳ 01-12-2020ಪಚ್ಚಿನಡ್ಕ, ಕಳ್ಳಿಗೆಶ್ರೀ ದೇವಿ ಮಹಾತ್ಮೆ
ಶ್ರೀ ಮಲ್ಲ ಮೇಳ 01-12-2020ಶ್ರೀ ಕ್ಷೇತ್ರ ಮಲ್ಲದಲ್ಲಿ 

ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ 
ಮೇಳಇಂದು/ದಿನಾಂಕಸ್ಥಳಪ್ರಸಂಗ
ಶ್ರೀ ಧರ್ಮಸ್ಥಳ ಮೇಳ29-11-2020ಶ್ರೀ ಕ್ಷೇತ್ರದಲ್ಲಿಕನಕಾಂಗಿ ಕಲ್ಯಾಣ – ಅಗ್ರಪೂಜೆ
ಶ್ರೀ ಪಾವಂಜೆ ಮೇಳ 29-11-2020ಮಾರಿಗುಡಿ, ಕಾರ್ಕಳ   ಶ್ರೀ ಹರಿದರ್ಶನ 
 ನಾಳೆ/ದಿನಾಂಕ  
ಶ್ರೀ ಧರ್ಮಸ್ಥಳ ಮೇಳ30-11-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಪಾವಂಜೆ ಮೇಳ 30-11-2020ಕದ್ರಿ ದೇವಸ್ಥಾನ, ಮಂಗಳೂರು  

ಶಿವಮೊಗ್ಗದಲ್ಲಿ ಯಕ್ಷಗಾನದ ಕಂಪು – ಐನಬೈಲು ಶ್ರೀ ಪರಮೇಶ್ವರ ಹೆಗಡೆ 

ಐನಬೈಲು ಶ್ರೀ ಪರಮೇಶ್ವರ ಹೆಗಡೆಯವರು ಯಕ್ಷಗಾನದ ಬಡಗುತಿಟ್ಟಿನ ಅತ್ಯುತ್ತಮ ಕಲಾವಿದರಲ್ಲೊಬ್ಬರು. ಪ್ರಸ್ತುತ ಅನೇಕ ವರ್ಷಗಳಿಂದ ಶ್ರೇಷ್ಠ ತರಬೇತುದಾರರಾಗಿ ಗುರುತಿಸಿಕೊಂಡಿದ್ದಾರೆ. ಹಿಮ್ಮೇಳ ಮತ್ತು ಮುಮ್ಮೇಳದ ಕಲಾವಿದನಾಗಿ ಮೇಳಗಳಲ್ಲಿ ತಿರುಗಾಟ ನಡೆಸಿದವರು. ನಾಟ್ಯ, ರಂಗತಂತ್ರ, ಭಾಗವತಿಕೆಯನ್ನು ಸಮರ್ಥರಿಂದಲೇ ಅಭ್ಯಸಿಸಿ ಕಲಾ ಸೇವೆಯನ್ನು ಮಾಡಿದ ಕಲಾವಿದರಿವರು. ಖ್ಯಾತ ಭಾಗವತರಾದ ಕಡತೋಕಾ ಶ್ರೀ ಮಂಜುನಾಥ ಭಾಗವತರು,  ಐನಬೈಲು ಶ್ರೀ ಪರಮೇಶ್ವರ ಹೆಗಡೆಯವರ ಪ್ರತಿಭೆ, ಸಾಹಸವನ್ನು ಗುರುತಿಸಿ ‘ಆಲ್ರೌಂಡರ್ ಕಲಾವಿದ’ ಎಂದೇ ಕರೆಯುತ್ತಿದ್ದರಂತೆ.

ಯಕ್ಷಗಾನ ನಾಟ್ಯವನ್ನು ಶಿರಳಗಿ ಮಂಜುನಾಥ ಭಟ್ಟರಿಂದಲೂ ರಂಗತಂತ್ರವನ್ನು ಹೊಸ್ತೋಟ ಶ್ರೀ ಮಂಜುನಾಥ ಭಾಗವತರಿಂದಲೂ, ಭಾಗವತಿಕೆಯನ್ನು ಬಾಳೆಹದ್ದ ಕೃಷ್ಣ ಭಾಗವತರಿಂದಲೂ ಅಭ್ಯಸಿಸಿದ್ದರು. 2008ರಿಂದ ತೊಡಗಿ ಕಳೆದ ಹನ್ನೊಂದು ವರ್ಷಗಳಿಂದ ಶಿವಮೊಗ್ಗ ವಾಸಿಯಾಗಿ ಅಲ್ಲಿನ ಕಲಿಕಾಸಕ್ತರಿಗೆ ಯಕ್ಷಗಾನ ತರಬೇತಿಯನ್ನು ನೀಡುತ್ತಿದ್ದಾರೆ. ತೆರೆದು ಕಾಣಿಸಿಕೊಳ್ಳದೆ ಸದಾ ಮುಚ್ಚಿಕೊಳ್ಳುವ ಸ್ವಭಾವ ಇವರದು. ಹಾಗಾಗಿಯೇ ಪ್ರಚಾರದಿಂದ ದೂರ ಉಳಿದರೇನೋ ಎಂದೆನಿಸಿದರೆ ತಪ್ಪಾಗಲಾರದು. “ಅವರು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. ಪ್ರಚಾರವನ್ನು ಬಯಸದೆ, ಇದು ನನಗೆ ಕರ್ತವ್ಯ ಎಂಬಂತೆ ತೊಡಗಿಸಿಕೊಂಡಿದ್ದಾರೆ. ಉತ್ತಮ ಕಲಾವಿದನೂ ಹೌದು. ಗುರುವೂ ಹೌದು. ಅವರ ಬಗೆಗೆ ಬರೆಯಲೇ ಬೇಕು” ಇದು ಬಡಗುತಿಟ್ಟಿನ ಅನೇಕ ಕಲಾವಿದರು ನನ್ನೊಡನೆ ಹೇಳಿದ ಮಾತುಗಳು.

ಅವರ ಈ ನುಡಿಗಳೇ ಐನಬೈಲು ಶ್ರೀ ಪರಮೇಶ್ವರ ಹೆಗಡೆಯವರ ಪ್ರತಿಭೆ, ಪ್ರಯತ್ನಗಳಿಗೆ ಹಿಡಿದ ಕೈಗನ್ನಡಿ. ಇದು ಅವರಿಗೆ ಸಂದ ಶ್ರೇಷ್ಠ ಪ್ರಶಸ್ತಿಯೂ ಹೌದು. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ  ಐನಬೈಲು ಎಂಬುದು ಶ್ರೀ ಪರಮೇಶ್ವರ ಹೆಗಡೆಯವರ ಹುಟ್ಟೂರು. 1965ನೇ ಇಸವಿ ಫೆಬ್ರವರಿ 18ರಂದು ಐನಬೈಲು ಶ್ರೀ ಗಣಪತಿ ಹೆಗಡೆ ಮತ್ತು ಶ್ರೀಮತಿ ಸೌಭದ್ರೆ ದಂಪತಿಗಳ ಪುತ್ರನಾಗಿ ಜನನ. ಗಣಪತಿ ಹೆಗಡೆಯವರು ಕಲಾವಿದನಲ್ಲದಿದ್ದರೂ ಕಲಾಸಕ್ತರಾಗಿದ್ದರು. ಬಾಳೆಕಾಯಿ, ಹಲಸಿನಕಾಯಿ ತಿಂದು ಬದುಕನ್ನು ನಡೆಸುವಷ್ಟು ತೀವ್ರವಾಗಿತ್ತು ಬಡತನ. ಬಡತನದಲ್ಲೂ ಯಕ್ಷಗಾನಾಸಕ್ತಿ ಶ್ರೀಮಂತವಾಗಿತ್ತು. ದಿಂಬುಗಳನ್ನು ಸಾಲಾಗಿ ಇರಿಸಿ, ಅದರ ಮೇಲೆ ಹೊದಿಕೆ ಮುಚ್ಚಿ, ಪತ್ನಿಗೆ ಗೊತ್ತಾಗದಂತೆ ಯಕ್ಷಗಾನ ನೋಡಲು ತೆರಳುತ್ತಿದ್ದರಂತೆ. ಯಕ್ಷಗಾನ ಹಾಡುಗಾರಿಕೆ ಎಂದರೆ ಇವರಿಗೆ ಇಷ್ಟದ ವಿಚಾರ. ಭಾಗವತರ ಹಾಡುಗಳನ್ನು ಗಮನವಿಟ್ಟು ಕೇಳುತ್ತಿದ್ದರು.

ಕೇಳುವಿಕೆ ಎಂಬ ಕ್ರಿಯೆಗಳಿಂದಲೇ ಯಕ್ಷಗಾನ ಹಾಡುಗಳು ಕಂಠಪಾಠವಾಗಿತ್ತು. ಭಾಗವತರಲ್ಲಿ ಕೇಳಿ ತಾಳ, ರಾಗಗಳ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಪ್ರಸಂಗ ಪುಸ್ತಕಗಳನ್ನು ಕೇಳಿ ತಂದು ಕೈ ಬರಹದಿಂದ ಸಿದ್ಧಪಡಿಸುತ್ತಿದ್ದರು! ಮಣ್ಣಿನಿಂದ ಗಣಪತಿ ಮೂರ್ತಿಗಳನ್ನು ಮಾಡುವ ಹವ್ಯಾಸವೂ ಇತ್ತು. ತಾನು ಯಕ್ಷಗಾನ ಕಲಾವಿದನಾಗಬೇಕೆಂಬ ಆಸೆಯಿದ್ದರೂ ಅದು ಕೈಗೂಡಿರಲಿಲ್ಲ. ಮಗನನ್ನು ಯಕ್ಷಗಾನ ಕಲಾವಿದನಾಗಲು ಪ್ರೇರೇಪಿಸಿ ಐನಬೈಲು ಗಣಪತಿ ಹೆಗಡೆಯವರು ಆ ನೋವನ್ನು ಕಳೆದುಕೊಂಡಿದ್ದರು.  ಐನಬೈಲು ಶ್ರೀ ಪರಮೇಶ್ವರ ಹೆಗಡೆಯವರು ಯಕ್ಷಗಾನಾಸಕ್ತರೇ ತುಂಬಿದ್ದ ಪರಿಸರದಲ್ಲಿ ಬೆಳೆದವರು. ಓದಿದ್ದು 7ನೇ ತರಗತಿ ವರೆಗೆ. ಐನಬೈಲು ಮತ್ತು ಬಾಳೆಕೊಪ್ಪ ಶಾಲೆಗಳಲ್ಲಿ. ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಆಟ ನೋಡುತ್ತಾ ಕಲಾಸಕ್ತಿಯನ್ನು ಬೆಳೆಸಿಕೊಂಡಿದ್ದರು.

ನಾಟ್ಯ ಕಲಿತು ವೇಷ ಮಾಡುವ ನಿರ್ಣಯ. ಮೇಳದ ಕಲಾವಿದ ಶಿರಳಗಿ ಮಂಜುನಾಥ ಭಟ್ಟರಿಂದ ಊರ ಕಲಿಕಾಸಕ್ತರೊಡನೆ ನಾಟ್ಯಾಭ್ಯಾಸ. 1975ರ ಸುಮಾರಿಗೆ ಇವರ ತಂದೆ ಐನಬೈಲು ಗಣಪತಿ ಹೆಗಡೆಯವರು ಮಹಾಗಣಪತಿ ಯಕ್ಷಗಾನ ಮಂಡಳಿ ಐನಬೈಲು ಎಂಬ ಮೇಳವನ್ನು ಸ್ಥಾಪಿಸಿದ್ದರು. ಈ ತಂಡದಲ್ಲಿ ಮೂರೂರು ಆರ್.ಎಂ.ಹೆಗಡೆ ಭಾಗವತರಾಗಿದ್ದರು. ಆ ಕಾಲದ ಸಮರ್ಥ ಭಾಗವತರಲ್ಲೊಬ್ಬರು. ಇವರು ನಾರ್ಣಪ್ಪ ಉಪ್ಪೂರರ ಶಿಷ್ಯ. ತಂದೆಯಿಂದ ಕಟ್ಟಲ್ಪಟ್ಟ ಈ ಮೇಳದಲ್ಲಿ ಮಗನಾದ ಪರಮೇಶ್ವರ ಹೆಗಡೆಯವರು ಬಾಲಗೋಪಾಲನಾಗಿ ರಂಗಪ್ರವೇಶ ಮಾಡಿ ಬಳಿಕ ಚಿತ್ರಕೇತ, ಚಿತ್ರವಾಹನ, ಧರ್ಮಾಂಗದ, ವೃಷಕೇತ, ಪ್ರದ್ಯುಮ್ನ ಮೊದಲಾದ ಪಾತ್ರಗಳನ್ನೂ ಮಾಡಿದ್ದರು. ಮೂರು ವರ್ಷಗಳ ಕಾಲ ಈ ಮೇಳವು ಪ್ರದರ್ಶನಗಳನ್ನು ನೀಡಿತ್ತು.

ಬಳಿಕ ಗಣಪತಿ ಹೆಗಡೆಯವರು ಮಗನನ್ನು ತರಬೇತಿಗಾಗಿ ಹೊಸ್ತೋಟ ಮಂಜುನಾಥ ಭಾಗವತರ ಬಳಿಗೆ ಕರೆದುಕೊಂಡು ಹೋಗಿ ತರಬೇತಿ ನೀಡಬೇಕೆಂದು ಕೇಳಿಕೊಂಡಿದ್ದರು (ಭಾಗವತಿಕೆಯ ತರಬೇತಿ) ಹೊಸ್ತೋಟದವರು ಪರಮೇಶ್ವರ ಹೆಗಡೆಯವರನ್ನು ಬಾಳೆಹದ್ದ ಕೃಷ್ಣ ಭಾಗವತ ಬಳಿಗೆ ಕರೆದೊಯ್ದು ಭಾಗವತಿಕೆ ಕಲಿಸಲು ಹೇಳಿದ್ದರು. ಬಾಳೆಹದ್ದ ಭಾಗವತರು ಕರ್ನಾಟಕ ಸಂಗೀತ ಅಭ್ಯಾಸ ಮಾಡಿದವರು. ವಯಲಿನ್ ಕೂಡಾ ತಿಳಿದವರು. ನೆಬ್ಬೂರು, ಕಡತೋಕ ಭಾಗವತರ ಜತೆ ವ್ಯವಸಾಯ ಮಾಡಿದವರು. ಲಯ ಸಾಮರ್ಥ್ಯ, ಹಾಡುಗಳಿಗೆ ರಾಗಗಳ ಆಯ್ಕೆ, ಸಾಹಿತ್ಯಜ್ಞಾನ ಉಳ್ಳವರಾಗಿ ಪ್ರಸಿದ್ಧರು. 2 ವರ್ಷಗಳ ಕಾಲ ಮನೆಯ ಸದಸ್ಯನಂತೆಯೇ ಇದ್ದು  ಐನಬೈಲು ಶ್ರೀ ಪರಮೇಶ್ವರ ಹೆಗಡೆಯವರು ಬಾಳೆಹದ್ದ ಕೃಷ್ಣ ಭಾಗವತರಿಂದ ಭಾಗವತಿಕೆಯನ್ನು ಕಲಿತರು. ಜತೆಗೆ ಸೋಂದಾದಲ್ಲಿ ಹೊಸ್ತೋಟ ಅವರಿಂದ ನಾಟ್ಯ ಕಲಿಕೆ.

ಹೊಸ್ತೋಟದವರ ಸೋಂದಾ ಮೇಳದಲ್ಲಿ ತಿರುಗಾಟ. ಗುರು ಬಾಳೆಹದ್ದ ಕೃಷ್ಣ ಭಾಗವತರ ಪುತ್ರ ಬಾಳೆಹದ್ದ ತಿಮ್ಮಪ್ಪ ಭಾಗವತರು ಮತ್ತು ಐನಬೈಲು ಅವರ ಭಾಗವತಿಕೆ.  ಐನಬೈಲು ಶ್ರೀ ಪರಮೇಶ್ವರ ಹೆಗಡೆಯವರು ಭಾಗವತಿಕೆ ಮಾಡಿ ವೇಷವನ್ನೂ ಮಾಡುತ್ತಿದ್ದರು. ಸದ್ರಿ ಮೇಳದಲ್ಲಿ ಒಟ್ಟು ಎಂಟು ತಿರುಗಾಟ. ಬಳಿಕ ಮೇಳ ತಿರುಗಾಟ ನಿಲ್ಲಿಸಿತ್ತು. ಮೇಳದ ಪ್ರದರ್ಶನಗಳಿಲ್ಲದ ಸಮಯ ಹವ್ಯಾಸೀ ತಂಡಗಳಲ್ಲಿ ಅತಿಥಿ ಕಲಾವಿದರಾಗಿ ಭಾಗವಹಿಸುತ್ತಿದ್ದರು. ತಾವು ನಡೆಸುತ್ತಿದ್ದ ತರಬೇತಿ ಕೇಂದ್ರಗಳಿಗೆಲ್ಲಾ ಹೊಸ್ತೋಟದವರು ಶಿಷ್ಯ ಐನಬೈಲು ಅವರನ್ನು ನಾಟ್ಯ ಹೇಳಿಕೊಡಲು ಕಳುಹಿಸುತ್ತಿದ್ದರು. ಇದು ಕೂಡಾ ಅನುಕೂಲವೇ ಆಗಿತ್ತು. ಎಲ್ಲಾ ಊರಿನ ಜನರ ಸಂಪರ್ಕಕ್ಕೆ ಅವಕಾಶವಾಗಿತ್ತು. ಹೆಚ್ಚಿನ ಎಲ್ಲಾ ತಂಡಗಳ ಪ್ರದರ್ಶನಗಳಲ್ಲಿ ಭಾಗವತರಾಗಿ ಕಾಣಿಸಿಕೊಂಡರು. ಮುಂದಿನ ದಿನಗಳಲ್ಲಿ ವೇಷ ಮಾಡುವುದನ್ನು ಬಿಟ್ಟು ಭಾಗವತರಾಗಿಯೇ ಮುಂದುವರಿದಿದ್ದರು.

1987ರಲ್ಲಿ ಪುರ್ಲೆ ಶ್ರೀ ರಾಮಚಂದ್ರ ಹೆಗಡೆಯವರ ಶಿರಸಿ ಮೇಳದಲ್ಲಿ ತಿರುಗಾಟ. ಸಂಗೀತಗಾರನಾಗಿ ಕಲಾಸೇವೆ. ನೆಬ್ಬೂರು, ಕಪ್ಪೆಕೆರೆ ಸುಬ್ರಾಯ ಭಾಗವತರು, ಕೆರೆಮನೆ ಮಹಾಬಲ ಹೆಗಡೆ, ಬಳ್ಕೂರು ಕೃಷ್ಣಯಾಜಿ, ಭಾಸ್ಕರ ಜೋಶಿ, ಕುಂಜಾಲು ರಾಮಕೃಷ್ಣ, ಕೊಂಡದಕುಳಿ ಮೊದಲಾದವರ ಒಡನಾಟವೂ ಸಿಕ್ಕಿತ್ತು. ಭಾಗವತಿಕೆ ಮಾಡಿ ಅನಿವಾರ್ಯಕ್ಕೆ ವೇಷಗಳನ್ನೂ ಮಾಡುತ್ತಿದ್ದರು. ಇದೇ ಸಮಯಕ್ಕೆ ಸದ್ರಿ ಮೇಳದಲ್ಲಿ ಕಣ್ಣಿಮನೆ ಮತ್ತು ಮೂರೂರು ರಮೇಶ ಭಂಡಾರಿ ಬಾಲಗೋಪಾಲರಾಗಿ ಯಕ್ಷಗಾನ ಕ್ಷೇತ್ರಕ್ಕೆ ಕಾಲಿರಿಸಿದ್ದರು. 1990ರಿಂದ ತರಬೇತಿ ನೀಡುವ ಕಾರ್ಯವನ್ನು ಐನಬೈಲು ಅವರು ಆರಂಭಿಸಿದ್ದರು. ಹಿಮ್ಮೇಳ ಮತ್ತು ಮುಮ್ಮೇಳಗಳ ತರಬೇತಿಯನ್ನು ನೀಡಿ ಒಂದು ಪರಿಪೂರ್ಣ ಪ್ರದರ್ಶನವನ್ನು ಕೊಡಿಸುವ ನಿಟ್ಟಿನಲ್ಲಿ ಸಾಗಿದರು. ಇದರಿಂದಾಗಿ ಹಲವಾರು ಕಡೆಗಳಿಂದ ಆಹ್ವಾನವೂ ಬಂದಿತ್ತು.

ಶಿರಸಿ ಮತ್ತು ಸಿದ್ಧಾಪುರದ ಇಪ್ಪತ್ತು ಕಡೆಗಳಲ್ಲಿ, ಹುಬ್ಬಳ್ಳಿ, ಬೆಳಗಾಂ, ಧಾರವಾಡ, ಅಂಕೋಲಗಳಲ್ಲಿ ಕಲಿಕಾಸಕ್ತರಿಗೆ ತರಬೇತಿ ನೀಡಿದರು. ಹುಬ್ಬಳ್ಳಿ ಮತ್ತು ಧಾರವಾಡಗಳಲ್ಲಿ ಯಕ್ಷಗಾನವನ್ನೇ ನೋಡಿರದ ಸ್ಥಳೀಯ ಮಕ್ಕಳೂ ಐನಬೈಲು ಅವರಿಂದ ಕಲಿತು ರಂಗಪ್ರವೇಶ ಮಾಡಿದ್ದರು! ಸುಮಾರು ಎರಡು ಸಾವಿರ ವಿದ್ಯಾರ್ಥಿಗಳು ಇವರಿಂದ ಯಕ್ಷಗಾನಾಭ್ಯಾಸ ಮಾಡಿದ್ದು ಅನೇಕರು ಒಳ್ಳೆಯ ಕಲಾವಿದರಾಗಿ ಹೆಸರು ಗಳಿಸಿದ್ದಾರೆ.ಸುಮಾರು ಐವತ್ತು ಸ್ಥಳಗಳಲ್ಲಿ ತರಬೇತಿ ನೀಡಿದ ಹಿರಿಮೆ ಇವರದು. ಐನಬೈಲು ಅವರು ಕೃಷಿಯಲ್ಲೂ ಆಸಕ್ತರು. ಅಡಿಕೆ ಕೃಷಿಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನೂ ಮಾಡಿದ ಅನುಭವಿ. ಗಾರೆ ಕೆಲಸ, ಗಣಪತಿ ಮೂರ್ತಿ ಮಾಡುವುದರಲ್ಲೂ ನಿಪುಣರು.

ಐನಬೈಲು ಪರಮೇಶ್ವರ ಹೆಗಡೆಯವರು ಶಿವಮೊಗ್ಗಕ್ಕೆ ತೆರಳಿದ್ದು 2008ರಲ್ಲಿ.  ಐನಬೈಲು ಶ್ರೀ ಪರಮೇಶ್ವರ ಹೆಗಡೆಯವರು ಶಿವಮೊಗ್ಗಕ್ಕೆ ತೆರಳಲು ಕಾರಣರು ಹಲವರು. ತ್ರಿವೇದಿ ಶ್ರೀ ಎಲ್. ಎನ್. ಭಟ್, ಅವರೇ ಕರೆದುಕೊಂಡು ಹೋದುದು. ಆ ಕಾಲದಲ್ಲಿ ಊರಿಂದ ಸಾಗಿ ಶಿವಮೊಗ್ಗದಲ್ಲಿ ನೆಲೆಸಿದ ಮಹನೀಯರ ತಂಡವೊಂದಿತ್ತು. ಅವರು ಯಕ್ಷಗಾನ ಕಾರ್ಯಕ್ರಮಗಳನ್ನು ಅಲ್ಲಿ ಸಂಘಟಿಸುತ್ತಿದ್ದರು. ನಗರದಲ್ಲಿ ಯಕ್ಷಗಾನದ ಕಂಪನ್ನು ಪಸರಿಸಲು ಪರಮಾವಧಿ ಶ್ರಮಿಸುತ್ತಿದ್ದರು. ಇವರಲ್ಲಿ ಹಂದಲಸು ಲಕ್ಷ್ಮೀನಾರಾಯಣ ಭಟ್ ತ್ರಿವೇದಿ, ವೈದ್ಯರಾದ ಮಂಟಪ ರತ್ನಾಕರ ಉಪಾಧ್ಯ, ಪ್ರೊ| ಲಕ್ಷ್ಮೀನಾರಾಯಣ ಕಾಶಿ ಪ್ರಮುಖರು. ಹಂದಲಸು ಲಕ್ಷ್ಮೀನಾರಾಯಣ ಭಟ್ಟರು ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲೂ ಸಕ್ರಿಯರು. ಎಲ್ಲಾ ಕಾರ್ಯಕ್ರಮಗಳಿಗೂ ಅವರು ಶಿವಮೊಗ್ಗದ ಜನತೆಗೆ ಬೇಕೇ ಬೇಕು.

ಇವರೆಲ್ಲರೂ ಶಿವಮೊಗ್ಗದಲ್ಲಿ ಯಕ್ಷಗಾನದ ಬೆಳವಣಿಗೆಗೆ ಕಾರಣರು. ತೆಂಕು, ಬಡಗು ಎಂಬ ಬೇಧವಿಲ್ಲದೆ ಪ್ರದರ್ಶನಗಳನ್ನು ಆಯೋಜಿಸುತ್ತಿದ್ದರು. ಮುಮ್ಮೇಳಕ್ಕೆ ಜನ ಇದ್ದರೂ ಹಿಮ್ಮೇಳಕ್ಕೆ ಕಲಾವಿದರಿರಲಿಲ್ಲ. ಕಲಾವಿದರನ್ನು ಸಿದ್ಧಗೊಳಿಸಲೆಂದೇ  ಐನಬೈಲು ಪರಮೇಶ್ವರ ಹೆಗಡೆಯವರನ್ನು ಇವರೆಲ್ಲರೂ ಶಿವಮೊಗ್ಗಕ್ಕೆ ಕರೆಸಿಕೊಂಡರು. ವಾಸ್ತವ್ಯಕ್ಕೆ ಅರ್ಚಕರಾದ ಅ.ಪ. ರಾಮ ಭಟ್ಟ ವ್ಯವಸ್ಥೆ ಮಾಡಿದ್ದರು. ಇವರು ಕಲಾಪ್ರೇಮಿಗಳು. ಯಕ್ಷಗಾನಾಸಕ್ತರು. ಪ್ರಾರಂಭದ ವರ್ಷ ವಾರಕ್ಕೆ ಎರಡು ತರಗತಿಗಳನ್ನು ನಡೆಸುತ್ತಿದ್ದರು. ಎರಡನೇ ವರ್ಷ ವಾರಕ್ಕೆ ನಾಲ್ಕು ದಿನಗಳಾಗಿ ವೃದ್ಧಿಯನ್ನು ಹೊಂದಿತ್ತು. ಮೂರನೇ ವರ್ಷ ನಿರಂತರ ತರಗತಿಗಳು ನಡೆಯಲಾರಂಭಿಸಿತು.

ಐನಬೈಲು ಪರಮಣ್ಣ ಶಿವಮೊಗ್ಗ ಜನತೆಗೆ, ಕಲಾಪ್ರೇಮಿಗಳಿಗೆ ವರುಷವೊಂದರಲ್ಲೇ ಆತ್ಮೀಯರಾಗಿಬಿಟ್ಟಿದ್ದರು. ಹೌದು. ಅವರು ಸ್ನೇಹಜೀವಿ. ಈ ಸಂದರ್ಭಗಳಲ್ಲಿ ಶಿರಸಿ ಭಾಗದ ತಾಳಮದ್ದಳೆಗಳಲ್ಲೂ ನೆಬ್ಬೂರು ಭಾಗವತರ ಜತೆ ಭಾಗವಹಿಸುತ್ತಿದ್ದರು. ಕಡತೋಕರಂತೆ ನೆಬ್ಬೂರರೂ ಇವರನ್ನು ‘ಏನೋ ಆಲ್ರೌಂಡರ್’ ಎಂದು ಕರೆಯುತ್ತಿದ್ದರಂತೆ. 2010ರಲ್ಲಿ ಐನಬೈಲು ಪರಮೇಶ್ವರ ಹೆಗಡೆ ಸಕುಟುಂಬಿಕರಾಗಿ ಶಿವಮೊಗ್ಗದಲ್ಲಿ ನೆಲೆಸಿದ್ದರು. ಶಿವಮೊಗ್ಗವೇ ಅವರ ಕಾರ್ಯಕ್ಷೇತ್ರವಾಯಿತು. 1988ರಲ್ಲಿ ತ್ರಿವೇಣಿ ಜತೆ ವಿವಾಹ. ಇವರು ಭೀಮನಹಳ್ಳಿ ನಾರಾಯಣ ಹೆಗಡೆ ಮತ್ತು ಶಾರದಾ ದಂಪತಿಗಳ ಸುಪುತ್ರಿ. ಇವರೆಲ್ಲರೂ ಕಲಾಪ್ರಿಯರೂ ಯಕ್ಷಗಾನಾಸಕ್ತರೂ ಆಗಿದ್ದಾರೆ.

ಶಿವಮೊಗ್ಗದಲ್ಲಿ ಹಿಮ್ಮೇಳ,ಮುಮ್ಮೇಳ ತರಗತಿಗಳನ್ನು ನಡೆಸಿ ಅನೇಕ ಕಲಾವಿದರನ್ನು ಸಿದ್ಧಗೊಳಿಸಿ ಯಕ್ಷ ಕಲಾ ಮಾತೆಯ ಮಡಿಲಿಗಿಕ್ಕಿದ್ದಾರೆ. “ಶಿಷ್ಯರ ಬಂಧುಗಳೆಲ್ಲಾ ಯಕ್ಷಗಾನ ನೋಡಲು ಬರಲಾರಂಭಿಸಿದರು. ಮಕ್ಕಳನ್ನು ಕಳುಹಿಸಿ ನಾಟ್ಯ ಹೇಳಿ ಕೊಡಲು ಕೇಳಿಕೊಂಡರು. ನಾನು ನನ್ನ ಕರ್ತವ್ಯವನ್ನು ಮಾಡಿದೆ” ಇದು ಐನಬೈಲು ಅವರ ಮನದಾಳದ ಮಾತುಗಳು. “ಯಕ್ಷಗಾನ ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಿತು. ಬೇರೆ ಕಡೆಗೆ ಗಮನ ಕೊಡದೆ ಉತ್ತಮ ವಿಚಾರಧಾರೆಗಳತ್ತ ಗಮನ ನೀಡುವಂತಾಯಿತು. ಬಿಡುವಿನ ಸಮಯವು ಹಾಳಾಗದೆ ಸದುಪಯೋಗವಾಯಿತು” ಇದು ಕಲಿಕಾಸಕ್ತ ವಿದ್ಯಾರ್ಥಿಗಳ ಅಭಿಪ್ರಾಯ. ಶಿವಮೊಗ್ಗದ ಶಾಲಾ ಕಾಲೇಜುಗಳಲ್ಲೂ ತರಗತಿಗಳನ್ನು  ಐನಬೈಲು ಪರಮೇಶ್ವರ ಹೆಗಡೆಯವರು ನಡೆಸಿದರು.

ಶಾರದಾ ದೇವಿ ಅಂಧ ವಿಕಾಸ ಕೇಂದ್ರದ(ಶಿವಮೊಗ್ಗ) ಅಂಧ ವಿದ್ಯಾರ್ಥಿಗಳಿಗೂ ಯಕ್ಷಗಾನ ಕಲಿಸಿದರು. ತರಬೇತಿ ನೀಡಿ ಪ್ರದರ್ಶನಕ್ಕೆ ಸಿದ್ಧಗೊಳಿಸಿದರು. ಇವರಿಂದ ತರಬೇತಿ ಹೊಂದಿದ ಈ ತಂಡ 150ಕ್ಕೂ ಮಿಕ್ಕಿದ ಪ್ರದರ್ಶನಗಳನ್ನು ನೀಡಿದೆ. ಈ ಸಂಸ್ಥೆಯ ಮಕ್ಕಳಿಗೆ ಯಕ್ಷಗಾನಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡ ಶ್ರೀ ಹೊಸ್ತೋಟ ಮಂಜುನಾಥ ಭಾಗವತರೂ ತರಬೇತಿಯನ್ನು ನೀಡಿದ್ದರು. ಮಾತು ಬಾರದ, ಕಿವಿ ಕೇಳಿಸದ ಮಕ್ಕಳಿಗೆ ತರಬೇತಿ ನೀಡಿ ಅವರಿಂದ ಪ್ರದರ್ಶನಗಳನ್ನು ಏರ್ಪಡಿಸಿದ್ದು ಗುರು ಶಿಷ್ಯರಾದ ಹೊಸ್ತೋಟ ಮತ್ತು ಐನಬೈಲು ಅವರ ಸಾಹಸದ ಪ್ರತೀಕ. ಈ ಕಾರ್ಯ ಅಷ್ಟು ಸುಲಭವಲ್ಲ.  

ಐನಬೈಲು ಪರಮೇಶ್ವರ ಹೆಗಡೆಯವರು ಯಕ್ಷಗಾನ ತರಬೇತಿ ನೀಡಿದ ಶಾಲಾ ವಿದ್ಯಾರ್ಥಿಗಳ ಹೆತ್ತವರು, ಪೋಷಕರು ಮತ್ತು ಅಧ್ಯಾಪಕರು ತಮ್ಮ ಅನುಭವಗಳನ್ನು ಈ ರೀತಿಯಾಗಿ ಹಂಚಿಕೊಳ್ಳುತ್ತಾರೆ. “ಯಕ್ಷಗಾನ ಆರಂಭವಾದ ಮೇಲೆ ಸಾಮಾನ್ಯ ಹುಡುಗರೂ ಬುದ್ಧಿವಂತರಾಗಿದ್ದಾರೆ. ಒಳ್ಳೆಯ ಅಂಕಗಳನ್ನು ಗಳಿಸಿ ತೇರ್ಗಡೆಯಾಗಿದ್ದಾರೆ. ಶಾಲೆಯಲ್ಲಿ ನೀಡಿದ ಪಾಠವನ್ನು ಕಂಠಪಾಠ ಮಾಡಲು ಕಷ್ಟ ಪಡುತ್ತಾರೆ. ಆದರೆ ಯಕ್ಷಗಾನದ ಹಾಡು ಮತ್ತು ಸಂಭಾಷಣೆಗಳನ್ನು ಬಹುಬೇಗನೆ ಬಾಯಿಪಾಠ ಮಾಡುತ್ತಾರೆ. ಯಕ್ಷಗಾನದ ವಿಚಾರಗಳನ್ನು ಪಟಾಪಟ್ ಗ್ರಹಿಸುತ್ತಾರೆ! ಯಕ್ಷಗಾನ ಕಲೆಯಲ್ಲಿರುವ ಕರ್ಷಕ ಶಕ್ತಿಗೆ ನಾವು ಚಕಿತರಾಗಿದ್ದೇವೆ” 

“ಯಕ್ಷಗಾನ ವಿದ್ಯೆಯನ್ನು ಕಲಿಕಾಸಕ್ತರಿಗೆ ನೀಡುವ ಅಧ್ಯಾಪಕನೂ ಯೋಚಿಸಬೇಕು. ಧನಾಪೇಕ್ಷಿಯಾಗಿ ವಿದ್ಯೆ ಹೇಳಿಕೊಡಬಾರದು. ವಿದ್ಯೆಯ ಬಗ್ಗೆಯೇ ಯೋಚಿಸಬೇಕು. ಪಡೆಯುವ ಆಸೆ ಮಾಡಿದರೆ ಕೊಡುವಲ್ಲಿ ಕಡಿಮೆಯಾಗುತ್ತದೆ. ವಿದ್ಯೆ ಹೇಳುವ ಕಡೆಗೇ ಗಮನವಿದ್ದರೆ, ಪ್ರೀತಿ, ಗೌರವ, ಸಂಪತ್ತು ತನ್ನಿಂದ ತಾನೇ ಒದಗಿ ಬರುತ್ತದೆ”.  ಇದು  ಐನಬೈಲು ಪರಮೇಶ್ವರ ಹೆಗಡೆಯವರ ಅನುಭವದ ಮಾತುಗಳು. 2014ರಲ್ಲಿ ಮಾನವ ಸಹಜವಾಗಿ ಅನಾರೋಗ್ಯಕ್ಕೆ ತುತ್ತಾದರೂ, ಕಲಾಭಿಮಾನಿಗಳ, ಶಿಷ್ಯಂದಿರ ಸಹಕಾರ ಶುಶ್ರೂಷೆಯಿಂದ ಚೇತರಿಸಿಕೊಂಡಿದ್ದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಕೂಡಾ ಸ್ಪಂದಿಸಿ ಸಹಾಯ ನೀಡಿದ್ದರು. ಈಗ ಸಕ್ರಿಯವಾಗಿ ಯಕ್ಷಗಾನ ಕ್ಷೇತ್ರದಲ್ಲಿ ತರಬೇತಿ ನೀಡುತ್ತಾ ಶಿವಮೊಗ್ಗದಲ್ಲಿ ಕಲೆಯ ಕಂಪನ್ನು ಪಸರಿಸುತ್ತಿದ್ದಾರೆ.

ಐನಬೈಲು ಪರಮೇಶ್ವರ ಹೆಗಡೆ, ತ್ರಿವೇಣಿ ದಂಪತಿಗಳಿಗೆ ಇಬ್ಬರು ಮಕ್ಕಳು. ಹಿರಿಯ ಪುತ್ರ ರವೀಶ ಹೆಗಡೆ. ಸಂಸ್ಕೃತ ಸ್ನಾತಕೋತ್ತರ ಪದವೀಧರ. ಬೆಂಗಳೂರಲ್ಲಿ ಪ್ರಾಧ್ಯಾಪಕರು. ಯಕ್ಷಗಾನ, ನಾಟಕ ಕಲಾವಿದರೂ ಹೌದು. ದ್ವಿತೀಯ ಪುತ್ರ ಹರೀಶ್ ಹೆಗಡೆ ಬಿ.ಕಾಮ್ ಪದವೀಧರ. ಶಿವಮೊಗ್ಗದಲ್ಲಿ ಉದ್ಯೋಗಿ. ಪುತ್ರಿ ಕೀರ್ತಿ ವಿವಾಹಿತೆ. ಇಷ್ಟೊಂದು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರೂ ತಾನು ಯಕ್ಷಗುರು ಅಲ್ಲ. ಕೇವಲ ತರಬೇತುದಾರ, ಅಧ್ಯಾಪಕ ಎಂದು ಹೇಳುವ  ಐನಬೈಲು ಶ್ರೀ ಪರಮೇಶ್ವರ ಹೆಗಡೆ  ಅವರಿಂದ ಬಹಳಷ್ಟು ಕಲಾಸೇವೆಯು ನಡೆಯಲಿ. ಕಲಾಮಾತೆಯು ಆರೋಗ್ಯವೇ ಮೊದಲಾದ ಸಕಲ ಭಾಗ್ಯಗಳನ್ನೂ ಅನುಗ್ರಹಿಸಿ ಪೊರೆಯಲಿ ಎಂಬ ಹಾರೈಕೆಗಳು.

ಲೇಖಕ:ರವಿಶಂಕರ್ ವಳಕ್ಕುಂಜ