Sunday, August 30, 2026
Home Blog Page 345

ದಿ| ಕಲ್ಲಾಡಿ ಕೊರಗ ಶೆಟ್ಟರ ಬಗ್ಗೆ ಮಹನೀಯರ ಮಾತುಗಳು (‘ಯಕ್ಷಕಲಾಕುಸುಮ’ ಎಂಬ ಕೃತಿಯಲ್ಲಿ)

“ಕಲ್ಲಾಡಿ ಕೊರಗ ಶೆಟ್ಟರು ಕಲಾವಿದರ ಕಷ್ಟವನ್ನು ಕಂಡವರು ಮತ್ತು ನೋವನ್ನು ಉಂಡವರೂ ಆಗಿದ್ದರು. ಶೆಟ್ಟರು ಮೇಳದ ದಾರ್ಶನಿಕ ಯಜಮಾನರು ಮಾತ್ರವಲ್ಲ ಯಜಮಾನ ಶಬ್ದದ ಜೀವಂತ ಪ್ರತಿರೂಪರು. ಅವರು ನಿಷ್ಠಾವಂತ ಧನಿಯಾಗಿ ಯಕ್ಷಗಾನದ ಧ್ವನಿಯಾಗಿದ್ದರು” – ದಿ| ಶೇಣಿ ಗೋಪಾಲಕೃಷ್ಣ ಭಟ್ 

“ಕಲ್ಲಾಡಿ ಕೊರಗ ಶೆಟ್ಟರ ಸ್ಮರಣೆಯಲ್ಲಿ ಯಾವನಿಗೆ ಮೈಯಲ್ಲಿ ನವಿರೇಳುವುದಿಲ್ಲವೋ ಅವನು, ಅವರು ದಿವಂಗತರಾದ ಮೇಲೆಯೇ ಹುಟ್ಟಿರಬೇಕು. ಯಕ್ಷಗಾನದ ಕಲ್ಪನೆ, ವ್ಯವಸ್ಥಾ ಚಾತುರ್ಯ, ವ್ಯವಸ್ಥಾಪಕನಲ್ಲಿರಬೇಕಾದ ಗಾಂಭೀರ್ಯಗಳು ಅವರಲ್ಲಿದ್ದುವು. ತೆಂಗಿನಕಾಯಿಯ ಹೊರಗೆ ಒರಟು, ಒಳಗೆ ಮಧುರೋದಕ ಹೇಗೋ, ಹಾಗೆಯೇ ಅವರ ವ್ಯಕ್ತಿತ್ವ ಎಂದು ನನ್ನ ಅನಿಸಿಕೆ” – ದಿ| ಮಲ್ಪೆ ರಾಮದಾಸ ಸಾಮಗ 

“ತೆಂಕುತಿಟ್ಟಿನಲ್ಲಿ ಡೇರೆ ಮೇಳಗಳ ಉಗಮ ಉಚ್ಛ್ರಾಯ ಕಾಲವೆನಿಸಿದ ೧೯೫೦-೧೯೯೦ರ ಅವಧಿಯ ಮೂಲ ಪ್ರವರ್ತಕರು ಕೊರಗ ಶೆಟ್ಟರು. ಅವರ ವ್ಯಕ್ತಿತ್ವವು ಯಕ್ಷಗಾನ ಕಲೆಯ ಚರಿತ್ರೆಯಲ್ಲಿ ಒಂದು ವರ್ಣಮಯ ಅಧ್ಯಾಯದ ವಸ್ತುವಾಗಿದೆ” – ಡಾ. ಎಂ. ಪ್ರಭಾಕರ ಜೋಶಿ

“ಎಲ್ಲಿಯ ವರೆಗೆ ಯಕ್ಷಗಾನ ಪ್ರದರ್ಶನವಿರುತ್ತದೋ ಅಲ್ಲಿಯ ತನಕ ಕೊರಗ ಶೆಟ್ಟರು ಮರೆಯಲಾಗದ ಮಹಾನುಭಾವರಾಗಿ ಉಳಿಯುತ್ತಾರೆ. ಯಕ್ಷಗಾನದಿಂದ ಕೊರಗ ಶೆಟ್ಟರಿಗೆ ಗೌರವ ಬಂತೋ ಅಥವಾ ಕೊರಗ ಶೆಟ್ಟರಿಂದಾಗಿ ಯಕ್ಷಗಾನಕ್ಕೆ ಗೌರವ ಬಂತೋ ಎಂದು ಪ್ರಶ್ನಿಸಿದರೆ ಎರಡೂ ಹೌದು ಎನ್ನುವುದೇ ಸರಿಯಾದ ಉತ್ತರವಾಗುತ್ತದೆ” – ಶ್ರೀ ಕುಂಬಳೆ ಸುಂದರ ರಾವ್ 

“ತೆಂಕಿನ ಯಕ್ಷಗಾನ ಕಲೆಯನ್ನೂ ಕಲಾವಿದರನ್ನೂ ಎತ್ತರಕ್ಕೇರಿಸಿದ ಯಜಮಾನ” – ಶ್ರೀ ಕೋಳ್ಯೂರು ರಾಮಚಂದ್ರ ರಾವ್

 “ಕಲಾವಿದರು ಸ್ವಾಭಿಮಾನದಿಂದ ಬದುಕುವ ಹಾಗೆ ಮಾಡಿದ ಕಲ್ಲಾಡಿ ಕೊರಗ ಶೆಟ್ಟರ ಸಾಧನೆಯು ಯಕ್ಷಗಾನದ ಇತಿಹಾಸದಲ್ಲಿ ಸ್ವರ್ಣಾಕ್ಷರಗಳಿಂದ ಬರೆದಿಡಬೇಕಾದ ಸಂಗತಿಯು” – ಶ್ರೀ ಏರ್ಯ ಲಕ್ಷ್ಮೀನಾರಾಯಣ ಆಳ್ವರು 

ಸಂಗ್ರಹ: ರವಿಶಂಕರ್ ವಳಕ್ಕುಂಜ 

ಮೂಡಲಪಾಯ ವಿಚಾರಸಂಕಿರಣ, ಯಕ್ಷಗಾನ ಪ್ರದರ್ಶನಗಳು ಮತ್ತು ಸಾಕ್ಷ್ಯಚಿತ್ರ ಬಿಡುಗಡೆ 

ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಹಾಗೂ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವುಗಳ ಸಹಯೋಗದಲ್ಲಿ  ಮೂಡಲಪಾಯ ವಿಚಾರಸಂಕಿರಣ, ಯಕ್ಷಗಾನ ಪ್ರದರ್ಶನಗಳು ಮತ್ತು ಸಾಕ್ಷ್ಯಚಿತ್ರ ಬಿಡುಗಡೆ ಸಮಾರಂಭ ನಡೆಯಲಿದೆ.

ಈ ಸಂದರ್ಭದಲ್ಲಿ ಹಿರಿಯ ಮೂಡಲಪಾಯ ಯಕ್ಷಗಾನ ಕಲಾವಿದರಾದ ಶ್ರೀ ಕಲ್ಮನೆ ಎ. ಎಸ್. ನಂಜಪ್ಪ ಇವರ ಸಾಕ್ಷ್ಯಚಿತ್ರ ಬಿಡುಗಡೆಯೂ ನಡೆಯಲಿದೆ.

ದಿನಾಂಕ 24ನೇ ಫೆಬ್ರವರಿ 2021, ಬುಧವಾರ ಬೆಳಗ್ಗೆ 10.30 ಘಂಟೆಯಿಂದ ತುಮಕೂರು ಜಿಲ್ಲೆಯ ಅರಳಗುಪ್ಪೆಯ ಶ್ರೀ ಕಲ್ಲೇಶ್ವರಸ್ವಾಮಿ ಸಾರ್ವಜನಿಕ ಸಮುದಾಯ ಭವನದಲ್ಲಿ  ಕರ್ನಾಟಕ ಯಕ್ಷಗಾನ ಅಕಾಡೆಮಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಮುಂದಾಳತ್ವದಲ್ಲಿ ಕಾರ್ಯಕ್ರಮ ನಡೆಯಲಿರುವುದು.

ಕಾರ್ಯಕ್ರಮದ ಉದ್ಘಾಟನೆ, ಸಾಕ್ಷ್ಯಚಿತ್ರ ಬಿಡುಗಡೆ, ವಿಚಾರಗೋಷ್ಠಿ ಕಾರ್ಯಕ್ರಮಗಳ ನಂತರ ಮೂಡಲಪಾಯ ಯಕ್ಷಗಾನ ಪ್ರದರ್ಶನ ನಡೆಯಲಿರುವುದು.

ಕಾರ್ಯಕ್ರಮವು ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವಿಕೆಯ ಮೂಲಕ ಸರಕಾರದ ಕೋವಿಡ್-19 ನಿಯಮಗಳಂತೆ ನಡೆಯಲಿರುವುದು. ಕಾರ್ಯಕ್ರಮದ ವಿವರ ಈ ಕೆಳಗೆ ಲಗತ್ತಿಸಲಾಗಿದೆ. 

ಭೂಗತ ಪಾತಕಿ ರವಿ ಪೂಜಾರಿ ಮಾರ್ಚ್ 9 ರವರೆಗೆ ಮುಂಬೈ ಪೊಲೀಸರ ಕಸ್ಟಡಿಗೆ

ಭೂಗತ ಪಾತಕಿ ರವಿ ಪೂಜಾರಿಯನ್ನು ಮಾರ್ಚ್ 9 ರವರೆಗೆ ಮುಂಬೈ ಪೊಲೀಸರ ಕಸ್ಟಡಿಗೆ ನೀಡಲಾಗಿದೆ. ಮುಂಬೈ ಪೊಲೀಸರ ಅಪರಾಧ ವಿಭಾಗ ಭೂಗತ ಪಾತಕಿ ರವಿ ಪೂಜಾರಿ ಅವರನ್ನು ಕರ್ನಾಟಕದಿಂದ ವಶಕ್ಕೆ ಪಡೆದ ನಂತರ ಮಂಗಳವಾರ ವಿಶೇಷ ಎಂಸಿಒಸಿಎ ನ್ಯಾಯಾಲಯಕ್ಕೆ ಹಾಜರುಪಡಿಸಿತು.

ಪರಾರಿಯಾದ ಪಾತಕಿ ರವಿ ಪೂಜಾರಿ ಅವರನ್ನು ಮಂಗಳವಾರ ಬೆಳಿಗ್ಗೆ ಮುಂಬೈಗೆ ಕರೆತಂದಿದ್ದು, ಅವರನ್ನು ವಿಶೇಷ ಎಂಸಿಒಸಿಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ, ಅಲ್ಲಿ ಅವರಿಗೆ ಮಾರ್ಚ್ 9 ರವರೆಗೆ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.

ಒಂದು ವರ್ಷದ ಸುದೀರ್ಘ ಹೋರಾಟದ ನಂತರ, ಬೆಂಗಳೂರು ನ್ಯಾಯಾಲಯವು ಶನಿವಾರ ಹಸ್ತಾಂತರಿಸಿದ ಭೂಗತ ಪಾತಕಿ ಪೂಜಾರಿಯನ್ನು ಮುಂಬೈ ಪೊಲೀಸರ ಕಸ್ಟಡಿಗೆ ನೀಡಿತು. 1994 ರಿಂದ ಪರಾರಿಯಾಗಿದ್ದ 59 ವರ್ಷದ ಭೂಗತ ಪಾತಕಿ ಪೂಜಾರಿಯನ್ನು ಕಳೆದ ವರ್ಷ ಸೆನೆಗಲ್‌ನಿಂದ ಬಂಧಿಸಲಾಗಿತ್ತು.

2016 ರ ಗಜಾಲಿ ಹೋಟೆಲ್ ಗುಂಡಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಕರ್ನಾಟಕ ಜೈಲಿನಲ್ಲಿದ್ದ ದರೋಡೆಕೋರ ಪೂಜಾರಿ ಅವರ ವಶಕ್ಕೆ ಕೋರಿದ್ದರು. ಈಗ ಅವರನ್ನು ಮುಂಬೈ CP ಆವರಣದಲ್ಲಿ ಕಸ್ಟಡಿಯಲ್ಲಿ ಇಡಲಾಗುವುದು.

“ನವೀ ಮುಂಬೈ ಮತ್ತು ಥಾಣೆ ಹೊರತುಪಡಿಸಿ ಮುಂಬೈನಲ್ಲಿ ಸುಮಾರು 49 ಗಂಭೀರ ಅಪರಾಧಗಳು ದಾಖಲಾಗಿವೆ. ನಾವು ಒಂದು ವರ್ಷದಿಂದ ಆತನನ್ನು ವಶಕ್ಕೆ ಪಡೆಯಲು ಪ್ರಯತ್ನಿಸುತ್ತಿದ್ದೇವೆ ಮತ್ತು ಅಂತಿಮವಾಗಿ 2016 ರ ಗಜಾಲಿ ಹೋಟೆಲ್ ಗುಂಡಿನ ಪ್ರಕರಣದಲ್ಲಿ ಯಶಸ್ಸನ್ನು ಕಂಡಿದ್ದೇವೆ” ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಪೂಜಾರಿಯನ್ನು ಸೆನೆಗಲ್‌ನಿಂದ 2020 ರ ಫೆಬ್ರವರಿಯಲ್ಲಿ ಬೆಂಗಳೂರಿಗೆ ಹಸ್ತಾಂತರಿಸಲಾಯಿತು. ಕೊಲೆ ಮತ್ತು ಸುಲಿಗೆ ಮುಂತಾದ ಭೀಕರ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳು ಸೇರಿದಂತೆ ಮುಂಬೈನಲ್ಲಿ ಕೇವಲ 49 ಪ್ರಕರಣಗಳಲ್ಲಿ ಆತನನ್ನು ಬಯಸಲಾಗಿದೆ.

ದರೋಡೆಕೋರನ ವಶಕ್ಕೆ ಪಡೆಯಲು ಮುಂಬೈ ಪೊಲೀಸರ ಎರಡನೇ ಪ್ರಯತ್ನ ಇದಾಗಿದೆ. ಭಾರತೀಯ ಗುಪ್ತಚರ ಮೂಲಗಳ ಪ್ರಕಾರ, ರವಿ ಪೂಜಾರಿ ದಕ್ಷಿಣ ಆಫ್ರಿಕಾದ ದೂರದ ಹಳ್ಳಿಯೊಂದರಲ್ಲಿ ಬುರ್ಕಿನಾ ಫಾಸೊ ಪಾಸ್‌ಪೋರ್ಟ್ ಹೊಂದಿರುವ ಆಂಥೋನಿ ಫರ್ನಾಂಡಿಸ್ ಅವರ ಸುಳ್ಳು ಗುರುತಿನಡಿಯಲ್ಲಿ ತಲೆಮರೆಸಿಕೊಂಡಿದ್ದ.

2000 ರ ದಶಕದ ಆರಂಭದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಬಿಲ್ಡರ್‌ಗಳನ್ನು ಸುಲಿಗೆ ಮಾಡಲು ಪ್ರಾರಂಭಿಸಿದಾಗ ರವಿ ಪೂಜಾರಿಯ ಭೂಗತ ಜಗತ್ತಿನ ನಂಟು ಬಯಲಾಯಿತು.   

ಗುಜರಾತ್ ಸ್ಥಳೀಯ ಚುನಾವಣಾ ಫಲಿತಾಂಶಗಳು 2021 : ಬಿಜೆಪಿ ಅಮೋಘ ಮುನ್ನಡೆಯತ್ತ

ಪ್ರಮುಖ ನಗರಗಳಾದ ಅಹಮದಾಬಾದ್ ಮತ್ತು ವಡೋದರಾ ಸೇರಿದಂತೆ ಗುಜರಾತ್‌ನ ಆರು ಮಹಾನಗರ ಪಾಲಿಕೆಗಳಿಗೆ ನಡೆದ ಚುನಾವಣೆಯಲ್ಲಿ ಮತದಾನ ಎಣಿಕೆ ಮಂಗಳವಾರ ಆರಂಭವಾಯಿತು.

ಪ್ರಮುಖ ನಗರಗಳಾದ ಅಹಮದಾಬಾದ್ ಮತ್ತು ವಡೋದರಾ ಸೇರಿದಂತೆ ಗುಜರಾತ್‌ನ ಆರು ಮಹಾನಗರ ಪಾಲಿಕೆಗಳಿಗೆ ನಡೆದ ಚುನಾವಣೆಯಲ್ಲಿ ಮತದಾನ ಎಣಿಕೆ ಮಂಗಳವಾರ ಆರಂಭವಾಯಿತು.

ಇತ್ತೀಚೆಗಿನ ಫಲಿತಾಂಶ ಈ ರೀತಿ ಇದೆ

ಅಹಮದಾಬಾದ್: ಬಿಜೆಪಿ- 81, ಕಾಂಗ್ರೆಸ್ -15, ಇತರರು -2
ಸೂರತ್: ಬಿಜೆಪಿ -50, ಕಾಂಗ್ರೆಸ್ -10, ಇತರರು -19
ವಡೋದರಾ: ಬಿಜೆಪಿ -36, ಕಾಂಗ್ರೆಸ್ -9, ಇತರರು -0
ರಾಜ್‌ಕೋಟ್ಲ್: ಬಿಜೆಪಿ -48, ಕಾಂಗ್ರೆಸ್ -9, ಇತರರು -0
ಜಾಮ್‌ನಗರ: ಬಿಜೆಪಿ -23, ಕಾಂಗ್ರೆಸ್ -4, ಇತರರು -4
ಭಾವನಗರ: ಬಿಜೆಪಿ -30, ಕಾಂಗ್ರೆಸ್ -8, ಇತರರು -0

ಹೆರಿಗೆಯ ನಂತರದ ಖಿನ್ನತೆ ಅಥವಾ ಪ್ರಸವಾನಂತರದ ಖಿನ್ನತೆಯ ಬಗ್ಗೆ ಮಾನಸಿಕ ರೋಗಗಳ ತಜ್ಞೆ ಡಾ. ಸ್ನೇಹಾ ಏನು ಹೇಳುತ್ತಾರೆ ಎಂದು ತಿಳಿಯಲು ಈ ವೀಡಿಯೋ ನೋಡಿ

ಮನುಷ್ಯನ ಮಾನಸಿಕ ಖಿನ್ನತೆಗಳಲ್ಲಿ ಹಲವಾರು ವಿಧ.   ಅದರಲ್ಲಿ ಪ್ರಸವಾನಂತರದ ಖಿನ್ನತೆಯೂ ಒಳಗೊಂಡಿದೆ.

ಈ ಖಿನ್ನತೆಯ ಪರಿಣಾಮ ಏನು? ತಾಯಿ, ಮಗುವಿನ ಅರೋಗ್ಯ ಮತ್ತು ಭವಿಷ್ಯದ ಮೇಲೆ ಇದು ಹೇಗೆ ಪರಿಣಾಮ ಬೀರುತ್ತದೆ?

ಈ ಖಿನ್ನತೆಯ ಲಕ್ಷಣಗೆಳೇನು? ಎಷ್ಟು ಶೇಕಡಾ ಮಹಿಳೆಯರಲ್ಲಿ ಈ ಖಿನ್ನತೆ ಕಾಣಿಸಿಕೊಳ್ಳಬಹುದು?

ಇದರಿಂದ ಹೊರಬರುವುದು ಹೇಗೆ? ಪೂರ್ವಭಾವಿಯಾಗಿ ಇದನ್ನು ಅರಿತಿದ್ದರೆ ಸಂಭವನೀಯ ಅಪಾಯವನ್ನು ತಪ್ಪಿಸಬಹುದೇ? ಇದಕ್ಕೆ ಚಿಕಿತ್ಸೆ ಇದೆಯೇ?

ಈ ಎಲ್ಲ ವಿಚಾರಗಳ ಬಗ್ಗೆ ವಿಕ್ಟೋರಿಯಾ ಆಸ್ಪತ್ರೆಯ ಮಾನಸಿಕ ರೋಗಗಳ ತಜ್ಞರಾದ ಡಾ. ಸ್ನೇಹಾ ವಿ.ಜಿ  ಮಾಹಿತಿ ನೀಡಿದ್ದಾರೆ. ತಪ್ಪದೆ ಈ ವೀಡಿಯೋ ನೋಡಿ. 

ಮೇಳಗಳ ಇಂದಿನ ( 23.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ ( 23.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಕೊಪ್ಪ ಗಬ್ಬಾನೆ ದೇವಸ್ಥಾನದ ಆವರಣ – ಕಾಯಕಲ್ಪ

ಕಟೀಲು ಒಂದನೇ ಮೇಳ = ಕಾರಿಂಜ ಕ್ರಾಸ್, ವಗ್ಗ ಬಂಟ್ವಾಳ 

ಕಟೀಲು ಎರಡನೇ ಮೇಳ ==   ಶ್ರೀ ದುರ್ಗಾಪರಮೇಶ್ವರಿ ದೇವಿ ಮಂದಿರ ಬಾಚಕೆರೆ ಸರಪಾಡಿ ಬಂಟ್ವಾಳ 

ಕಟೀಲು ಮೂರನೇ ಮೇಳ= ಕಟೀಲು ಕ್ಷೇತ್ರ (೧)

ಕಟೀಲು ನಾಲ್ಕನೇ ಮೇಳ  == ಕೊಲ್ಲಂಗೋಳಿಮನೆ ನಿಟ್ಟೆ ಪರಪ್ಪಾಡಿ, ಕಾರ್ಕಳ 

ಕಟೀಲು ಐದನೇ ಮೇಳ == ಅಲೆಕ್ಕಾಡಿ ಶಾಲಾ ವಠಾರ ವಯಾ ನಿಂತಿಕಲ್ಲು 

ಕಟೀಲು ಆರನೇ ಮೇಳ == ಸಾಯಿ ನಿವಾಸ, ಅಡ್ಲಿಮಜಲು ಕೆಮ್ಮಾಯಿ ಪುತ್ತೂರು 

ಮಂದಾರ್ತಿ ಒಂದನೇ ಮೇಳ  ==  ಕಂತುಗದ್ದೆ ಮೇಳಿಗೆ 

ಮಂದಾರ್ತಿ ಎರಡನೇ ಮೇಳ   ==   ತಗ್ಗರ್ಸೆ ಬೈಂದೂರು  

ಮಂದಾರ್ತಿ ಮೂರನೇ ಮೇಳ  ==   ಹಕ್ಕಲುಮನೆ ಕಕ್ಕುಂಜೆ 

ಮಂದಾರ್ತಿ ನಾಲ್ಕನೇ ಮೇಳ   ==  ಕೊಟ್ಟಕ್ಕಿ ರತ್ ಗೋಡು, ರಟ್ಟಾಡಿ  

ಮಂದಾರ್ತಿ    ಐದನೇ ಮೇಳ  ==  ನಾಯರ್ ಜೆಪ್ಪು, ತಾಳಿಪಾಡಿ ಐಕಳ ಕಿನ್ನಿಗೋಳಿ, ದ.ಕ 

ಶ್ರೀ ಹನುಮಗಿರಿ ಮೇಳ  ==  ಚಿತ್ರಪಾಡಿ, ಸಾಲಿಗ್ರಾಮ ಗಿರಿ ಮುತ್ತು ಪೌಲ್ಟ್ರಿ ಫಾರ್ಮ್ ಹತ್ತಿರ – ಗಜೇಂದ್ರ ಮೋಕ್ಷ,ಚಂದ್ರಾವಳಿ, ಮಾಯಾ ಮಾರುತೇಯ 

ಶ್ರೀ ಸಾಲಿಗ್ರಾಮ ಮೇಳ == ಮರವಂತೆ ಶ್ರೀ ಮಹಾ ಬೊಬ್ಬರ್ಯ ದೇವಸ್ಥಾನ – ಈಶ್ವರಿ ಪರಮೇಶ್ವರಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ನಾರ್ಕಳಿ ಕೆಳಾಮನೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಮೆತ್ಕಲ್ ಹಾರ್ಮಣ್

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಬಗ್ವಾಡಿ ಹೊಸಿಮನೆ 

ಶ್ರೀ ಪಾವಂಜೆ ಮೇಳ  ==  ಅಸೈಗೋಳಿ  – ಶ್ರೀ ದೇವಿ ಮಹಾತ್ಮೆ  (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ ==  ಶ್ರೀ ನಂದಿಕೇಶ್ವರ ದೇವಸ್ಥಾನ ಕೋಡಿ – ದಿವ್ಯ ಸನ್ನಿಧಿ 

ಕಮಲಶಿಲೆ ಮೇಳ ‘ಎ‘ = ಸಿದ್ದಾಪುರ 

ಕಮಲಶಿಲೆ ಮೇಳ ‘ಬಿ‘ == ಕೊಡ್ಲಾಡಿ 

ಶ್ರೀ ಬಪ್ಪನಾಡು ಮೇಳ == ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲ – ಬನಾತ ಬಂಗಾರ್ (ತುಳು)

ಶ್ರೀ ಸಸಿಹಿತ್ಲು ಭಗವತೀ ಮೇಳ == ಆದ್ಯಪಾಡಿ ಶಾಲಾ ವಠಾರ – ರಂಗಸ್ಥಳ (ಸಂಜೆ 6ರಿಂದ)

ಶ್ರೀ ಅಮೃತೇಶ್ವರೀ ಮೇಳ == ತಾಳಮಕ್ಕಿ, ಮಂಕಿ 

ಶ್ರೀ ಬೋಳಂಬಳ್ಳಿ ಮೇಳ== ಜಡ್ಕಲ್  

ಶ್ರೀ ಸೌಕೂರು ಮೇಳ == ಮುಳ್ಳುಗುಡ್ಡೆ – ಹಳನಾಡು ಕ್ಷೇತ್ರ ಮಹಾತ್ಮೆ 

ಶ್ರೀ ಹಾಲಾಡಿ ಮೇಳ == ಯಕ್ಷಿಮನೆ ವಠಾರ ಉಪ್ಪಿನಕುದ್ರು – ನೂತನ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ  == ಮುಡಿಪು ಮೂಳೂರು ಕೊರಗಜ್ಜ ಸಾನಿಧ್ಯ ವಠಾರ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಅಲೆವೂರು ಗುಡ್ಡೆಯಂಗಡಿ ಸಾರ್ವಜನಿಕ ಗಣೇಶೋತ್ಸವ ಸಂಕಲ್ಪ ಮಂದಿರ  – ಶ್ರೀ ದೇವಿ ಮಾಂಕಾಳಿ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಸ್ತಾನ ಐರೋಡಿ ಶ್ರೀ ಮಹಾಸ್ವಾಮಿ ಸನ್ನಿಧಿ 

ಶ್ರೀ ಹಿರಿಯಡಕ ಮೇಳ == ಕೆದೂರು ರೈಲ್ವೆ ಬ್ರಿಜ್ ಬಳಿ  – ಪವಿತ್ರ ಫಲ್ಗುಣಿ (ತೆಂಕುತಿಟ್ಟು ಕಾಲಮಿತಿ)

ಶ್ರೀ ಶನೀಶ್ವರ ಮೇಳ == ಶ್ರೀ ವಿಘ್ನೇಶ್ವರ ದೇವಸ್ಥಾನ ಕಾರ್ಕಡ 

ಶ್ರೀ ಸಿಗಂದೂರು ಮೇಳ == ಆರ್ಗ, ಸರಳ ಗ್ರಾಮ ಕೊಳಗೇರಿ 

ಶ್ರೀ ನೀಲಾವರ ಮೇಳ  == ಯಕ್ಷಿ ಕಲ್ಲುಕುಟ್ಟಿಗ ಮತ್ತು ಸಪರಿವಾರ ದೈವಸ್ಥಾನ ಗಾವಳಿ ಹಳ್ಳಾಡಿ  – ದೈವ ಮಂಟಪ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==  ಎಡೇಹಳ್ಳಿ ತೀರ್ಥಹಳ್ಳಿ 

ಶ್ರೀ ಮೇಗರವಳ್ಳಿ ಮೇಳ == ಶಿವಪುರ ನಾಗಬನ ಬಳಿ – ಕುಲದೈವ ಪಂಜುರ್ಲಿ 

ಪ್ರತಿಭಾವಂತ ಹಾಸ್ಯಗಾರ, ಯಕ್ಷರಂಗದ ಕಾಶೀಮಾಣಿ – ಮವ್ವಾರು ಬಾಲಕೃಷ್ಣ ಮಣಿಯಾಣಿ  

ಯಕ್ಷಗಾನದಲ್ಲಿ ಭಾಗವತನ ನಂತರದ ಸ್ಥಾನ ಹಾಸ್ಯಗಾರನಿಗೆ. ಬೆಳಗಿನವರೇಗೂ ಪ್ರಸಂಗವನ್ನು ಮುನ್ನಡೆಸಬಲ್ಲ ಚತುರತೆ ಅವನಿಗಿರಬೇಕು. ಎರಡನೇ ವೇಷಧಾರಿಯಾಗಿ ಚೌಕಿಗೆ ನಿರ್ದೇಶಕನಾಗಿ, ಸೇವಾಕರ್ತರಿಂದ ವೀಳ್ಯವನ್ನು ಪಡೆದು, ಪ್ರಸಂಗ ಮುಗಿಯುವ ತನಕವೂ ವ್ಯವಹರಿಸುತ್ತಾ ಕಾಣಿಸಿಕೊಳ್ಳುತ್ತಾನೆ.

ಪ್ರಸ್ತುತ ಅನೇಕ ಹಾಸ್ಯಗಾರರು ತಮ್ಮ ವಿಶಿಷ್ಠ ಅಭಿನಯಗಳಿಂದ, ತಮ್ಮದೇ ಕಲ್ಪನೆಯಿಂದ, ಪಾತ್ರಗಳಿಗೆ ಜೀವತುಂಬಿ ರಂಗದಲ್ಲಿ ಮೆರೆಯುತ್ತಿದ್ದಾರೆ. ಅವರಲ್ಲೊಬ್ಬರು. ಮವ್ವಾರು ಶ್ರೀ ಬಾಲಕೃಷ್ಣ ಮಣಿಯಾಣಿ.

ಕೇರಳ ರಾಜ್ಯದ ಕಾಸರಗೋಡು ತಾಲೂಕು, ನೀರ್ಚಾಲು ಗ್ರಾಮದ ಪೂವಾಳ ಎಂಬಲ್ಲಿ 1966ನೇ ಇಸವಿ ಎಪ್ರಿಲ್ 12ರಂದು ಕುಂಞರಾಮ ಮಣಿಯಾಣಿ ಮತ್ತು ನಾರಾಯಣಿ ದಂಪತಿಗಳಿಗೆ ಮಗನಾಗಿ ಬಾಲಕೃಷ್ಣ ಮಣಿಯಾಣಿಯವರು ಜನಿಸಿದರು. ಎಳವೆಯಲ್ಲೇ ತೀರ್ಥರೂಪರನ್ನು ಕಳೆದುಕೊಂಡ ಇವರು ಅಜ್ಜನ ಮನೆಯಲ್ಲೇ ಬೆಳೆದವರು.

ನಾರಂಪಾಡಿ ಫಾತಿಮಾ ಎ.ಎಲ್.ಪಿ. ಶಾಲೆಯಲ್ಲಿ ನಾಲ್ಕನೇ ತರಗತಿಯ ವರೇಗೆ ಓದಿದರು. ಇವರ ಚಿಕ್ಕಪ್ಪನಾದ ಅಪ್ಪಯ್ಯ ಮಣಿಯಾಣಿಯವರು ಆಗ ಮಾರ್ಪನಡ್ಕದಲ್ಲಿ ನಾಟ್ಯ ತರಗತಿಯನ್ನು ನಡೆಸುತ್ತಿದ್ದರು. (ಅಪ್ಪಯ್ಯ ಮಣಿಯಾಣಿಯವರು ಪ್ರಸ್ತುತ ಕಟೀಲು ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ). ಅವರಿಂದ ಯಕ್ಷಗಾನ ನಾಟ್ಯ ಕಲಿತು ಕಟೀಲು ಮೇಳದಲ್ಲಿ ತಿರುಗಾಟ ನಡೆಸಿದರು.

ಮುಂದಿನ ಮಳೆಗಾಲ ಶ್ರೀ ಧರ್ಮಸ್ಥಳ ಲಲಿತ ಕಲಾಕೇಂದ್ರಕ್ಕೆ ಸೇರಿ ಶ್ರೀ ಕೆ. ಗೋವಿಂದ ಭಟ್ಟರಿಂದ ನಾಟ್ಯವನ್ನು ಅಭ್ಯಸಿಸಿದರು. ಮುಂದಿನ 5 ವರುಷಗಳ ಕಾಲ ಕಟೀಲು ಮೇಳದಲ್ಲಿ ತಿರುಗಾಟ ನಡೆಸಿದರು.(ಕಟೀಲು 2 ಮೇಳ ಇದ್ದ ಸಂದರ್ಭ). ಆಗ ಇರಾ ಗೋಪಾಲಕೃಷ್ಣ ಭಾಗವತರು ನೆಡ್ಲೆ ನರಸಿಂಹ ಭಟ್ಟರು, ಕೇದಗಡು ಗುಡ್ಡಪ್ಪ ಗೌಡ ಮೊದಲಾದ ಶ್ರೇಷ್ಠ ಕಲಾವಿದರ ಒಡನಾಟ, ಪೂರ್ವರಂಗದಲ್ಲಿ, ಪ್ರಸಂಗದಲ್ಲಿ ತನಗೆ ಬಂದ ಪಾತ್ರಗಳನ್ನು ನಿಷ್ಠೆಯಿಂದ ಮಾಡುತ್ತಾ, ಹಂತ ಹಂತವಾಗಿ ಬೆಳೆಯುತ್ತಾ ಮವ್ವಾರು ಬಾಲಕೃಷ್ಣ ಮಣಿಯಾಣಿ ಕಲಾವಿದನಾಗಿ ಕಾಣಿಸಿಕೊಂಡರು.


                        ಬಳ್ಳಂಬೆಟ್ಟು ಶೀನಪ್ಪ ಭಂಡಾರಿಗಳ ಸಂಚಾಲಕತ್ವದ ಆದಿಸುಬ್ರಹ್ಮಣ್ಯ ಮೇಳದಲ್ಲಿ 6 ವರ್ಷ, ಪುತ್ತೂರು ಶ್ರೀಧರ ಭಂಡಾರಿಗಳ ಸಂಚಾಲಕತ್ವದ ಪುತ್ತೂರು ಮೇಳದಲ್ಲಿ ಮೂರು ವರ್ಷ, ಶ್ರೀ ರಾಧಾಕೃಷ್ಣ ನಾವಡರು ಸಂಚಾಲಕರಾಗಿದ್ದ ಮಧೂರು ಮೇಳದಲ್ಲಿ 3 ವರ್ಷ, ಶ್ರೀ ಡಿ. ಮನೋಹರ ಕುಮಾರ್ ಸಂಚಾಲಕತ್ವದ ಕದ್ರಿ ಮೇಳದಲ್ಲಿ 5 ವರ್ಷ, ಶ್ರೀ ಕಿಶನ್ ಕುಮಾರ್ ಹೆಗ್ಡೆಯವರ ನೇತೃತ್ವದ ಮಂಗಳಾದೇವಿ ಮೇಳದಲ್ಲಿ 7 ವರ್ಷಗಳ ಕಾಲ ಮವ್ವಾರು ಬಾಲಕೃಷ್ಣ ಮಣಿಯಾಣಿಯವರು ಕಲಾಸೇವೆಯನ್ನು ಮಾಡಿದರು. 14 ವರುಷ ಎಡನೀರು ಶ್ರೀ ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿ. ಪ್ರಸ್ತುತ ಕಟೀಲು ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ.
                             

ಕಟೀಲು ಮೇಳದಲ್ಲಿ ಪುರಾಣ ಪ್ರಸಂಗಗಳ ಜ್ಞಾನವನ್ನು ಪಡೆದಿದ್ದ ಇವರು ನಂತರ ಹೆಚ್ಚಾಗಿ ತುಳು ಪ್ರಸಂಗಗಳಲ್ಲೇ ಅಭಿನಯಿಸಿ ಪ್ರಸಿದ್ಧರಾದರು. ನಂತರ ಎಡನೀರು ಮೇಳದಲ್ಲಿ ತಿರುಗಾಟ ನಡೆಸಿದ್ದು ಪುರಾಣ ಪ್ರಸಂಗಗಳ ಜ್ಞಾನ ಪ್ರಸಂಗನಡೆಗಳನ್ನು ತಿಳಿಯಲು ಅನುಕೂಲವಾಯಿತು. ತಿರುಗಾಟ ನಡೆಸಿದ ಎಲ್ಲಾ ಮೇಳಗಳ ಸಂಚಾಲಕರ ಸಹಕಾರ ನನಗಿತ್ತು. ಹಿರಿಯ ಕಿರಿಯ ಸಹಕಲಾವಿದರೆಲ್ಲಾ ಸಹಕರಿಸಿದ್ದಾರೆ. ಪ್ರೀತಿಸಿದ್ದಾರೆ.

ಎಡನೀರು ಮಠಾಧೀಶರಾದ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮಿಗಳು ಆಶೀರ್ವದಿಸಿದ್ದಾರೆ. ಚಿಕ್ಕವನಿದ್ದಾಗ ಬಡತನವಿತ್ತು. ಹೊಟ್ಟೆಪಾಡಿಗಾಗಿ ಯಕ್ಷಗಾನಕ್ಕೆ ಸೇರಿದೆ. ಈಗ ಏನೂ ತೊಂದರೆಯಿಲ್ಲ. ಯಕ್ಷಗಾನ ನನಗೆ ಎಲ್ಲವನ್ನೂ ನೀಡಿದೆ. ಕಲಾಭಿಮಾನಿಗಳ ಹಾರೈಕೆಯೂ ಇದೆ. ಇನ್ನೇನು ಬೇಕು? ನಾನು ಸಂಪೂರ್ಣ ತೃಪ್ತ ಎಂದು ಹಾಸ್ಯಗಾರ ಶ್ರೀ ಮವ್ವಾರು ಬಾಲಕೃಷ್ಣ ಮಣಿಯಾಣಿಯವರು ಮನತುಂಬಿ ಹೇಳುತ್ತಾರೆ.
                               

ಮವ್ವಾರು ಶ್ರೀ ಬಾಲಕೃಷ್ಣ ಮಣಿಯಾಣಿಯವರಿಗೆ ಬೇಡರ ಕಣ್ಣಪ್ಪ ಪ್ರಸಂಗದ ಕಾಶಿಮಾಣಿಯ ಪಾತ್ರ ಪ್ರಸಿದ್ಧಿಯನ್ನು ತಂದುಕೊಟ್ಟಿತು. ಶ್ರೀ ದಿನೇಶ ಅಮ್ಮಣ್ಣಾಯರ ಹಾಡುಗಾರಿಕೆಯಲ್ಲಿ ಎಡನೀರು ಮೇಳದಲ್ಲಿ ಅವರು ರಂಜಿಸಿದರು. ಪೂಕಳ ಲಕ್ಷ್ಮೀನಾರಾಯಣ ಭಟ್, ರವಿರಾಜ್ ಪನೆಯಾಲ ಅವರ ಕೈಲಾಸ ಶಾಸ್ತ್ರಿ ಅಲ್ಲದೆ ಮಳೆಗಾಲದಲ್ಲಿ ಖ್ಯಾತ ಹಾಸ್ಯಗಾರರಾದ ಶ್ರೀ ಬಂಟ್ವಾಳ ಜಯರಾಮ ಆಚಾರ್ಯರ ಕೈಲಾಸ ಶಾಸ್ತ್ರಿ ಜತೆ ಮಣಿಯಾಣಿಯವರ ಕಾಶೀಮಾಣಿ ಪಾತ್ರ ರಂಜಿಸಿತ್ತು.

ಭಕ್ತ ಕುಚೇಲ ಪ್ರಸಂಗದ ಸುಧಾಮನ ಪಾತ್ರವೂ ಮವ್ವಾರು ಅವರಿಗೆ ಹೆಸರನ್ನು ತಂದುಕೊಟ್ಟಿತು. ಬೈರಾಗಿ, ವಿಜಯ, ದಾರುಕ, ಮಾಲಿನಿದೂತ ಮೊದಲಾದವು ಇವರಿಗೆ ಅತಿಪ್ರಿಯವಾದ ಪಾತ್ರಗಳು. ಮಳೆಗಾಲದಲ್ಲಿ ನಿಡ್ಲೆ ಗೋವಿಂದ ಭಟ್ಟರ ನೇತೃತ್ವದ ‘ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ’ ತಂಡದಲ್ಲಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಮೊದಲಾದ ರಾಜ್ಯಗಳಲ್ಲಿ ಭಾಗವಹಿಸಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ.

ಲೇಖಕ:
ರವಿಶಂಕರ್ ವಳಕ್ಕುಂಜ

ವರುಷವೈದು ಸಂದಾಯ್ತು ‘ಕಣ್ಣಿ’ ನೀ ನಮ್ಮ ಹೃದಯ ಬರಿದು ಮಾಡಿ… 

ಬಡಗು ತಿಟ್ಟು ರಂಗವನ್ನು ಮಾತ್ರವಲ್ಲದೆ ಪೂರ್ತಿ ಯಕ್ಷಗಾನ ರಂಗವನ್ನೆ ತನ್ನ ನಾವೀನ್ಯತೆಯ ಶೈಲಿಯಿಂದ ಆಕ್ರಮಿಸಿಕೊಂಡಿದ್ದ ಯಕ್ಷಗಾನ ಕಲಾವಿದ ಕಣ್ಣಿಮನೆ ಗಣಪತಿ ಭಟ್ ನಮನ್ನಗಲಿ ಮೊನ್ನೆ ಫೆಬ್ರವರಿ 18ಕ್ಕೆ ವರುಷ ಐದಾಯ್ತು.

ಹೌದು. 2016ನೇ ಇಸವಿಯ ಇದೇ ತಿಂಗಳಿನ ದಿನಾಂಕ 18ಕ್ಕೆ ಕಣ್ಣಿಮನೆ ಎಂಬ ಯಕ್ಷಲೋಕದ ಬೆರಗು ಇಡೀ ಯಕ್ಷಗಾನ ರಂಗವನ್ನು ದುಃಖಸಾಗರದಲ್ಲಿ ತೇಲಾಡಿಸಿ ಕಾಲನ ಕರೆಗೆ ಓಗೊಟ್ಟು ಅಸ್ತಂಗತರಾದರು. 

ಮೊದಲಿಗೆ ಗುಂಡಬಾಳ ಮೇಳದಲ್ಲಿ ಗೆಜ್ಜೆ ಕಟ್ಟಿದ ಅವರು ಮಂದಾರ್ತಿ, ಕೋಟ ಅಮೃತೇಶ್ವರಿ, ಸಾಲಿಗ್ರಾಮ, ಪೆರ್ಡೂರು ಮೇಳಗಳಲ್ಲಿ ವೃತ್ತಿ ಕಲಾವಿದನಾಗಿ ತನ್ನ ಪ್ರತಿಭೆಯಿಂದ ಜನಮಾನಸದಲ್ಲಿ ಅಚ್ಚಳಿಯದ ಸ್ಥಾನವನ್ನು ಪಡೆದಿದ್ದಾರೆ. ಕಣ್ಣಿಮನೆ ಗಣಪತಿ ಭಟ್ಟರಿದ್ದರೆ ಶ್ರೀಕೃಷ್ಣನ ಪಾತ್ರ ಅವರಿಗೆ ಕಟ್ಟಿಟ್ಟದ್ದು ಎನ್ನುವಷ್ಟು ಪ್ರಬುದ್ಧ ಪಾತ್ರಾಭಿನಯವನ್ನು ಶ್ರೀಕೃಷ್ಣನಾಗಿ ಅವರು ನಿರ್ವಹಿಸುತ್ತಿದ್ದವರು. 

ತನ್ನದೇ ಆದ ಶೈಲಿಯಿಂದ ತನ್ನ ಕೇದಗೆ ಮುಂದಲೆಯನ್ನು ತಿರುಗಿಸುತ್ತಾ ನಾಟ್ಯ ಮಾಡುವ ಅವರ ಶೈಲಿ ಬಹಳ ಆಕರ್ಷಕ. ಕೇದಗೆ ಮುಂದಲೆಯನ್ನು ಪಕ್ಕಕ್ಕೆ ಮತ್ತು ಹಿಂದಕ್ಕೆ ಬಾಗಿಸುವ ಆ ಶೈಲಿ ‘ಕಣ್ಣಿ ಶೈಲಿ’ ಎಂದೇ ಪ್ರಸಿದ್ಧವಾಗಿದೆ. 

ಶ್ರೀಕೃಷ್ಣ, ನಾಗಶ್ರೀ ಪ್ರಸಂಗದ ಶಿಥಿಲ, ದೇವವೃತ, ಸಾಲ್ವ, ಕೀಚಕ, ಸುಧನ್ವ ಹೀಗೆ ಪುಂಡು ವೇಷ, ಪುರುಷ ವೇಷಗಳಲ್ಲಿ ಮಿಂಚಿ ಯಕ್ಷಗಾನ ಲೋಕದ ಅನಭಿಷಿಕ್ತ ದೊರೆಯಾಗಿದ್ದ ಅವರು ಅಕಾಲದಲ್ಲಿ ಮರೆಯಾದದ್ದು ಮಾತ್ರ ವಿಪರ್ಯಾಸವೆಂದೇ ಹೇಳಬೇಕು.

ಕೇವಲ ತನ್ನ 47ನೆಯ ವಯಸ್ಸಿನಲ್ಲಿಯೇ ಅಸ್ತಂಗತರಾದ ಅವರ ಬದುಕು ತನ್ನ ಯಕ್ಷಗಾನದ ಕುಣಿತದಂತೆ ವಿಶಿಷ್ಟತೆಯಿಂದ ಕೂಡಿದ್ದರೂ ಅಂತ್ಯ ಮಾತ್ರ ದುರಂತವಾಗಿತ್ತು. ಅಷ್ಟು ಸಣ್ಣ ವಯಸ್ಸಿನಲ್ಲಿಯೇ ಗಂಭೀರ ಕಾಯಿಲೆಗಳಿಗೆ ತುತ್ತಾದದ್ದು ಯಕ್ಷಗಾನಕ್ಕೊಂದು ತುಂಬಲಾರದ ನಷ್ಟ. 

ತನ್ನ ವಿಶಿಷ್ಟ ಶೈಲಿಯಿಂದ ಹಲವಾರು ಸಂಖ್ಯೆಯಲ್ಲಿ ಅಭಿಮಾನಿಗಳನ್ನು  ಪಡೆದುಕೊಂಡರೂ ಮತ್ತದೇ ವಿಶಿಷ್ಟ ಶೈಲಿಯು ಕೆಲವು ವಿಮರ್ಶಕರ ಟೀಕೆ ಟಿಪ್ಪಣಿಗಳಿಗೂ ಆಹಾರವಾಗಿತ್ತು. ಸಣ್ಣ ವಯಸ್ಸಿನಲ್ಲಿಯೇ ಸಾಧನೆಯನ್ನು ಮಾಡಿದ ವ್ಯಕ್ತಿಗಳಿಗೆ ಆಯಸ್ಸು ಕಡಿಮೆ ಎಂದು ಹೇಳುತ್ತಾರೆ.

ಇದಕ್ಕೆ ಉದಾಹರಣೆಯಾಗಿ ಹಲವಾರು ಪ್ರಸಿದ್ಧ ವ್ಯಕ್ತಿಗಳು ನಮ್ಮ ಕಣ್ಣ ಮುಂದೆ ಹಾದು ಹೋಗುತ್ತಾರೆ. ಕಣ್ಣಿಮನೆ ಗಣಪತಿ ಭಟ್ಟರೂ ಈ ಪಟ್ಟಿಗೆ ಸೇರುತ್ತಾರೆ. ಅವರಿಂದ ಇನ್ನೂ ಎಷ್ಟೆಷ್ಟೋ ಸಾಧನೆಗಳನ್ನು ಈ ಯಕ್ಷರಂಗ ನಿರೀಕ್ಷಿಸಿತ್ತು.

ಆದರೆ ಆ ನಿರೀಕ್ಷೆಗೆ ಸೊಪ್ಪು ಹಾಕದೆ ಅವರು ಹೋಗಿಯೇ ಬಿಟ್ಟರು. ಆದರೆ ಹೋಗುವ ಮುನ್ನ ಬಹಳಷ್ಟನ್ನು ಸಾಧಿಸಿದ್ದರು. ಮುಂದೆ ಇನ್ನೊಬ್ಬರು ಏರಲು ಅತಿಯಾದ ಶ್ರಮ ಪಡುವಷ್ಟು ಎತ್ತರವನ್ನು ಅವರು ತನ್ನ ಸಣ್ಣ ವಯಸ್ಸಿನಲ್ಲಿಯೇ ಏರಿದ್ದರು. 

ಪ್ರತಿದಿನವೂ ಅವರ ನೆನಪು ಕಲಾಪ್ರೇಮಿಗಳಿಗೆ ಆಗದೆ ಇರಲಾರದಾದರೂ ಫೆಬ್ರವರಿ 18 ಬಂದಾಗ ಯಾಕೋ ಮತ್ತೆ ಮತ್ತೆ ‘ಕಣ್ಣಿಮನೆ’ ಎಂಬ ಶಬ್ದ ಕಿವಿಗಳಲ್ಲಿ ಮಾರ್ದನಿಸುತ್ತದೆ. “ಕಣ್ಣಿ ನೀ ಯಾಕೆ ನಮ್ಮ ಹೃದಯ ಬರಿದು ಮಾಡಿ ಹೋಗಿಬಿಟ್ಟೆ” ಎಂದು ಮನಸ್ಸು ಚೀರಿ ಹೇಳುತ್ತದೆ. 

ಬರಹ: ಮನಮೋಹನ್ ವಿ.ಎಸ್ 

ಕೊರೋನಾ ಮತ್ತೊಮ್ಮೆ ಹರಡುವ ಭೀತಿ – ಐದು ರಾಜ್ಯಗಳಿಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಕೇಂದ್ರದ ಸೂಚನೆ 

ಈಗಾಗಲೇ ಕೆಲವು ರಾಜ್ಯಗಳಲ್ಲಿ ಕೊರೋನಾ ವೈರಸ್ ಭಾದಿತರ ಸಂಖ್ಯೆ ಗಣನೀಯವಾಗಿ ಇಳಿಯುತ್ತಿದೆ. ಕರ್ನಾಟಕ ರಾಜ್ಯದಲ್ಲಿಯೂ ಸೋಂಕಿತರ ಪ್ರಮಾಣ ಇಳಿಕೆಯಲ್ಲಿದೆ.

ಆದರೆ ದೇಶದ ಕೆಲವು ರಾಜ್ಯಗಳಲ್ಲಿ ದ್ವಿತೀಯ ಹಂತದ ಕೊರೋನಾ ಅಲೆ ಹರಡುತ್ತಲಿದ್ದು ಕೇಂದ್ರ ಸರಕಾರ ಆ ರಾಜ್ಯಗಳಿಗೆ ತೀವ್ರ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ಕಟ್ಟಿನಿಟ್ಟಿನ ಸೂಚನೆಯನ್ನು ನೀಡಿದೆ. 

ಜಮ್ಮು ಕಾಶ್ಮೀರವು ಪ್ರವಾಸಿಗರು ಹೆಚ್ಚಾಗಿ ಬರುವ ತಾಣವಾಗಿದ್ದು ಅಲ್ಲಿ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ಕೇಂದ್ರ ಸರಕಾರ ಎಚ್ಚರಿಸಿದೆ.

ಆರ್ಟಿಪಿಆರ್ ಪರೀಕ್ಷೆಗಳನ್ನು ಹೆಚ್ಚಿಸುವಂತೆಯೂ ಕೇಂದ್ರವು ರಾಜ್ಯ ಸರಕಾರಗಳಿಗೆ ಸುತ್ತೋಲೆ ಹೊರಡಿಸಿದೆ. 

ಮಹಾರಾಷ್ಟ್ರ, ಪಂಜಾಬ್, ಕೇರಳ, ಛತ್ತೀಸ್ ಗಢ ಮತ್ತು ಮಧ್ಯಪ್ರದೇಶ ರಾಜ್ಯಗಳನ್ನು ಗುರುತಿಸಿದ ಕೇಂದ್ರವು ಈ ರಾಜ್ಯಗಳಿಗೆ ಎಚ್ಚರ ವಹಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಎಚ್ಚರಿಸಿದೆ.

ಈ ರಾಜ್ಯಗಳ ನೆರೆ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಒಡಿಸ್ಸಾ,ಗುಜರಾತ್ ರಾಜ್ಯಗಳಲ್ಲೂ ಎಚ್ಚರ ವಹಿಸುವಂತೆ ಕೇಂದ್ರ ಸೂಚಿಸಿದೆ. 

ಭಾಗವತ ಪೂಂಜರ ಚಿಕಿತ್ಸೆಗೆ ನೆರವು – ಅಜೆಕಾರು ಕಲಾಭಿಮಾನಿ ಬಳಗ ನೇತೃತ್ವದಲ್ಲಿ ರೂ.1 ಲಕ್ಷ ನಿಧಿ ಸಮರ್ಪಣೆ

ಯಕ್ಷಗಾನದ ಸವ್ಯಸಾಚಿ ‘ಮಾನಿಷಾದ’ ಖ್ಯಾತಿಯ ಪ್ರಸಂಗಕರ್ತೃ, ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಕಳೆದ ಕೆಲವು ತಿಂಗಳಿಂದ Myelodysplasia ಎಂಬ ರಕ್ತ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅವರ ಶುಶ್ರೂಷೆಗಾಗಿ azacytidine + venetoclax ಎಂಬ ಔಷಧಿಗೆ 6 ತಿಂಗಳ ಚಿಕಿತ್ಸೆಯ ಒಟ್ಟು ವೆಚ್ಚ 35 ರಿಂದ 40 ಲಕ್ಷದವರೆಗೆ ತಗಲುವುದೆಂಬ ವೈದ್ಯರ ಸೂಚನೆಯಿರುವುದರಿಂದ ಅವರ ಕುಟುಂಬ ಆರ್ಥಿಕ ಸಹಾಯಕ್ಕಾಗಿ ಕಲಾಭಿಮಾನಿಗಳನ್ನು ವಿನಂತಿಸಿದೆ.           

ತೀರಾ ಇತ್ತೀಚಿನವರೆಗೂ ಕಟೀಲು ಮೇಳದ ಪ್ರಧಾನ ಭಾಗವತರಾಗಿ ತಿರುಗಾಟ ನಡೆಸಿರುವ ಪುರುಷೋತ್ತಮ ಪೂಂಜರ ಪ್ರಸಕ್ತ ಸ್ಥಿತಿಯನ್ನು ಗಮನಿಸಿ ಅವರ  ಚಿಕಿತ್ಸೆಗಾಗಿ  ಮುಂಬಯಿ ಅಜೆಕಾರು ಕಲಾಭಿಮಾನಿ ಬಳಗವು ಮೊದಲ ಹಂತದಲ್ಲಿ  ರೂ. 1 ಲಕ್ಷದ  ನಿಧಿಯನ್ನು ಹಸ್ತಾಂತರಿಸಿದೆ.

ಈ ನಿಧಿಗೆ ಮುಂಬೈಯ ಕಲಾ ಪೋಷಕರಾದ ಉದ್ಯಮಿ ರವೀಂದ್ರನಾಥ ಭಂಡಾರಿ, ಸಿಎ ಸುರೆಂದ್ರ ಶೆಟ್ಟಿ, ಸತೀಶ್ ಶೆಟ್ಟಿ ಕೊಟ್ರಾಡಿ, ಬಾಬು ಶೆಟ್ಟಿ ಪೆರಾರ, ಆನಂದ ಬಂಗೇರ ಬಜಪೆ, ಜಗದೀಶ್ ಶೆಟ್ಟಿ ಶಿವಪುರ, ಸುರೇಶ ಶೆಟ್ಟಿ ಕಡಂದಲೆ, ಅಜಿತ್ ಶೆಟ್ಟಿ ಕೊಟ್ರಾಡಿ, ಅಜೆಕಾರು ಕಲಾಭಿಮಾನಿ ಬಳಗದ ಅಜೆಕಾರು ಬಾಲಕೃಷ್ಣ ಶೆಟ್ಟಿ, ವಸಾಯಿ ಜೀವದಾನಿ ಯಕ್ಷಕಲಾ ವೇದಿಕೆಯ ಅಧ್ಯಕ್ಷ ಮಂಜುನಾಥ ಶೆಟ್ಟಿ ಕೊಡ್ಲಾಡಿ ಮತ್ತು ಪದಾಧಿಕಾರಿಗಳು ದೇಣಿಗೆ ನೀಡಿ ಸಹಕರಿಸಿದ್ದಾರೆ.         

ಮುಂಬಯಿ ಕಲಾಭಿಮಾನಿಗಳಿಂದ ಸಂಗ್ರಹವಾದ ಒಟ್ಟು ಹಣವನ್ನು ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಇತ್ತೀಚೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪುರುಷೋತ್ತಮ ಪೂಂಜರಿಗೆ ನೀಡಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದಾರೆ.

ಈ ಸಂದರ್ಭದಲ್ಲಿ ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಮುಂಬಯಿ ಉದ್ಯಮಿಗಳಾದ ಆನಂದ ಬಂಗೇರ ಬಜ್ಪೆ ಮತ್ತು ಅಜಿತ್ ಶೆಟ್ಟಿ ಕೊಟ್ರಾಡಿ ಉಪಸ್ಥಿತರಿದ್ದರು.       

(ಪುರುಷೋತ್ತಮ ಪೂಂಜರ ಚಿಕಿತ್ಸೆಗೆ ನೆರವು ನೀಡಲಿಚ್ಛಿಸುವ ಕಲಾಭಿಮಾನಿಗಳು ಮತ್ತು ದಾನಿಗಳು Parikshith Poonja a/c no. 343901507425 IFSC : ICIC 0003439 Google pay no. 8197256366 ಇದಕ್ಕೆ ಸಂಪರ್ಕಿಸಲು ಕೋರಲಾಗಿದೆ.)