ತೆಂಕುತಿಟ್ಟಿನ ಯಕ್ಷಗಾನದ ಬಣ್ಣದ ವೇಷಧಾರಿಗಳಿಗೆ ನೇಪಥ್ಯದಲ್ಲಿ ಮುಖವರ್ಣಿಕೆ, ವೇಷಭೂಷಣಗಳನ್ನು ಧರಿಸಿ ಸಿದ್ಧವಾಗಲು ಹೆಚ್ಚಿನ ಸಮಯವು ಬೇಕಾಗುತ್ತದೆ. ರಂಗಸ್ಥಳದಲ್ಲಿ ಇವರಿಗೆ ಕಡಿಮೆ ಅವಕಾಶಗಳು ಎಂದು ಇದರ ಅರ್ಥವಲ್ಲ. ಬಣ್ಣದ ವೇಷಗಳ ಕ್ರಮವೇ ಹಾಗೆ. ಕಡಿಮೆ ಅವಧಿಯಲ್ಲಿ ರಂಗದಲ್ಲಿ ವಿಜೃಂಭಿಸುವ ಅವಕಾಶಗಳು ಬಣ್ಣಕ್ಕೆ ಸಂಬಂಧಿಸಿದ ಎಲ್ಲಾ ಪಾತ್ರಗಳಿಗೂ ಇವೆ.
ಪರಂಪರೆಯ, ಸಂಪ್ರದಾಯ ಬದ್ಧತೆಯ ಮುಖವರ್ಣಿಕೆಯೊಂದಿಗೆ ಸಿದ್ಧವಾಗಲು ಕಲಾವಿದನಿಗೆ ಹೆಚ್ಚಿನ ಸಮಯವು ಬೇಕಾಗುತ್ತದೆ. ಬೆಳಗಿನ ಹೊತ್ತು ರಂಗವನ್ನು ಪ್ರವೇಶಿಸುವ ಪಾತ್ರಗಳಾದರೂ, ಕಲಾವಿದರು ಪ್ರಸಂಗದ ಆರಂಭಕ್ಕೇ ಮುಖವರ್ಣಿಕೆಗೆ ತೊಡಗುವುದನ್ನು ನಾವು ಕಾಣುತ್ತೇವೆ. ನಿಷ್ಠೆ ಮತ್ತು ಅರ್ಪಣಾ ಭಾವವುಳ್ಳ ಕಲಾವಿದರು ಈ ತೆರನಾಗಿಯೇ ಸಾಗಿ ಪ್ರಸಿದ್ಧರಾಗುತ್ತಾರೆ.
ಈಗೀಗ ಬಣ್ಣದ ವೇಷಗಳಿಗೆ ರಂಗದಲ್ಲಿ ಸರಿಯಾದ ಅವಕಾಶಗಳು ಸಿಗುತ್ತಿಲ್ಲವೆಂಬ ಕೂಗೂ ಇದೆ. ಇದಕ್ಕೆ ಕಾರಣಗಳು ಹಲವಿರಬಹುದು. ಇದು ವೇಗದ ಯುಗ. ಕಾಲಮಿತಿಯ ಪ್ರದರ್ಶನ ಎಂಬ ಒಂದು ಕಾರಣವೂ ಇರಬಹುದು. ಏನೇ ಇರಲಿ. ಯಕ್ಷಗಾನದಲ್ಲಿ ಬಣ್ಣದ ವೇಷಗಳಿಗೆ, ಪಾತ್ರಧಾರಿಗಳಿಗೆ ಸಿಗಬೇಕಾದ ಅವಕಾಶಗಳು ಸಿಗಲೇ ಬೇಕು. ಆ ವೇಷಗಳಿಗೆ ತನ್ನದೇ ಆದ ನಡೆ, ಗಾಂಭೀರ್ಯ, ರೀತಿಗಳಿವೆ. ಹಾಗಿದ್ದಲ್ಲಿ ಮಾತ್ರ ಬಣ್ಣದ ವೇಷಗಳ ನಿರ್ವಹಣೆಯನ್ನು ಪ್ರೇಕ್ಷಕರಿಗೆ ಸರಿಯಾಗಿ ಆಸ್ವಾದಿಸಲು ಸಾಧ್ಯ.
ಇಲ್ಲವಾದರೆ ಇದು ಚಂಡಮುಂಡರೋ? ಅಭಿಮನ್ಯುವೊ? ಎಂದು ಕಲಾಭಿಮಾನಿಗಳು ಪ್ರಶ್ನಿಸುವಂತಾದೀತು. ಹಾಗಾಗಬಾರದು. ಹಾಗಾಗಲಾರದು ಎಂದು ವಿಶ್ವಾಸವಿರಿಸೋಣ. ನಿಷ್ಠೆಯಿಂದ, ಸಂಪ್ರದಾಯಬದ್ಧವಾಗಿ ಸಿದ್ಧರಾಗಿ ರಂಗವೇರಿ ಅಭಿನಯಿಸಿ ಬಣ್ಣದ ವೇಷ ಎಂಬ ವಿಭಾಗವನ್ನು ಶ್ರೀಮಂತಗೊಳಿಸಿದ ಕಲಾವಿದರನೇಕರಿದ್ದಾರೆ. ಅಂತವರಲ್ಲಿ ಪಕಳಕುಂಜ ಶ್ರೀ ಕೃಷ್ಣ ನಾಯ್ಕರೂ ಒಬ್ಬರಾಗಿದ್ದರು. ಅನೇಕ ವರ್ಷಗಳ ಕಾಲ ತೆಂಕುತಿಟ್ಟು ಯಕ್ಷರಂಗದಲ್ಲಿ ಮೆರೆದು ಪ್ರಸ್ತುತ ಅಲೌಕಿಕ ಪ್ರಪಂಚವನ್ನು ಸೇರಿಕೊಂಡಿದ್ದಾರೆ.
ಬಣ್ಣದ ವೇಷಧಾರಿ ಶ್ರೀ ಪಕಳಕುಂಜ ಕೃಷ್ಣ ನಾಯ್ಕರ ಹುಟ್ಟೂರು ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಪಕಳಕುಂಜ.1935ರಲ್ಲಿ ಪಕಳಕುಂಜ ಶ್ರೀ ಚೋಮ ನಾಯ್ಕ ಮತ್ತು ಕಾವೇರಿ ದಂಪತಿಗಳ ಮಗನಾಗಿ ಜನನ. ಓದಿದ್ದು ಏಳನೇ ತರಗತಿ ವರೆಗೆ. ಅಡ್ಯನಡ್ಕ ಶಾಲೆಯಲ್ಲಿ. ಹೆಚ್ಚಿನ ವಿದ್ಯಾರ್ಜನೆಗೆ ಅವಕಾಶವಿರಲಿಲ್ಲ. ಬಡತನದ ಜತೆ ಬಹಳ ದೂರ ನಡೆದೇ ಶಾಲೆಗೆ ತೆರಳಬೇಕಿದ್ದ ಕಾಲವದು. ಎಳವೆಯಲ್ಲೇ ಯಕ್ಷಗಾನಾಸಕ್ತಿ ಇತ್ತು.
ಪರಿಸರದಲ್ಲಿ ನಡೆಯುತ್ತಿದ್ದ ತಾಳಮದ್ದಲೆಗಳಿಗೆ ಇವರು ಖಾಯಂ ಪ್ರೇಕ್ಷಕ. ಇದರಿಂದ ಕೃಷ್ಣ ನಾಯ್ಕರಿಗೆ ಅನುಕೂಲವೇ ಆಗಿತ್ತು. ಶಾಲೆ ಬಿಟ್ಟ ನಂತರ ತಾನೂ ಯಕ್ಷಗಾನ ಕಲಾವಿದನಾಗಬೇಕೆಂದು ಆಸೆಯಾಗಿತ್ತು. ಇವರ ಆಸೆಗೆ ಆಸರೆಯಾದವರು ತಲೆಂಗಳ ಶ್ರೀ ಶಂಭಟ್ಟರು. ಅವರ ಸೂಚನೆಯಂತೆ ಶ್ರೀ ಶೀನಪ್ಪ ಭಂಡಾರಿಗಳ ಸಂಚಾಲಕತ್ವದ ಬಳ್ಳಂಬೆಟ್ಟು ಮೇಳದಲ್ಲಿ ತಿರುಗಾಟ ಆರಂಭಿಸಿದ್ದರು. ಕೋಡಂಗಿ, ಬಾಲಗೋಪಾಲರಾಗಿ ಅಭಿನಯ. ಕಲಿಯದೇ ಮೇಳ ಸೇರಿದ ಕೃಷ್ಣ ನಾಯ್ಕರು ಕಲಿತರು. ಕಲಿತು ಬೆಳೆಯುತ್ತಾ ಸಾಗಿದರು.
ಖ್ಯಾತ ಕಲಾವಿದರಾದ ಅಳಿಕೆ ಮೋನು ಶೆಟ್ಟರು ಮತ್ತು ಅಳಿಕೆ ರಾಮಯ್ಯ ರೈಗಳಿಂದ ಹೆಜ್ಜೆಗಾರಿಕೆಯನ್ನು ಕಲಿತಿದ್ದರು. ಒಂದು ತಿಂಗಳು ಕೂಡ್ಲು ಮೇಳದಲ್ಲಿ ಕಲಾಸೇವೆ. ಬಳಿಕ ಕಟೀಲು ಮೇಳದಲ್ಲಿ ಕಲಾಸೇವೆ. ನಾಲ್ಕೈದು ವರ್ಷಗಳಲ್ಲಿ ಪೂರ್ವರಂಗ, ಪುಂಡುವೇಷ, ಹಂತಗಳನ್ನು ದಾಟಿ ಕಿರೀಟ ವೇಷಗಳನ್ನು ನಿರ್ವಹಿಸುವಷ್ಟು ಬೆಳೆದಿದ್ದರು. ಮೇಳದಲ್ಲಿ ಚಂದ್ರಗಿರಿ ಅಂಬು ಅವರ ಒಡನಾಟವು ಸಿಕ್ಕಿದ್ದು ಬಣ್ಣದ ವೇಷಗಳತ್ತ ಒಲವು ಮೂಡಲು ಕಾರಣವಾಗಿತ್ತು.
ಬಳಿಕ ಕೂಡ್ಲು ಮೇಳದಲ್ಲಿ ತಿರುಗಾಟ. ಈ ಸಂದರ್ಭದಲ್ಲಿ ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರ ಸಲಹೆ, ಪ್ರೋತ್ಸಾಹದಂತೆ ಬಣ್ಣದ ವೇಷಗಳತ್ತ ಗಮನ ಹರಿಸಿ ನಿರ್ವಹಿಸಲಾರಂಭಿಸಿದ್ದರು. ಮುಲ್ಕಿ ಮೇಳದಲ್ಲಿ ತಿರುಗಾಟ ನಡೆಸಿ ಬಳಿಕ ಶ್ರೀ ಧರ್ಮಸ್ಥಳ ಮೇಳಕ್ಕೆ ಎರಡನೇ ಬಣ್ಣದ ವೇಷಧಾರಿಯಾಗಿ ಸೇರ್ಪಡೆ. ಅಲ್ಲಿ ಒಂದನೇ ಬಣ್ಣದ ವೇಷಧಾರಿಯಾಗಿದ್ದ ಬಣ್ಣದ ಮಾಲಿಂಗನವರ ಒಡನಾಟವೂ ಸಿಕ್ಕಿತ್ತು. ಬಳಿಕ ಧರ್ಮಸ್ಥಳ ಮೇಳದಲ್ಲಿ ಒಂದನೇ ಬಣ್ಣದ ವೇಷಧಾರಿಯಾಗಿ ವ್ಯವಸಾಯ ಮಾಡಿದ್ದರು. ಬಣ್ಣದ ಕುಟ್ಯಪ್ಪು ಅವರಿಂದಲೂ ತರಬೇತಿಯನ್ನು ಪಡೆದಿದ್ದರು.
ತನ್ನ ಕಲಾ ಬದುಕಿನುದ್ದಕ್ಕೂ ತಾನು ಧರಿಸಿದ ಪಾತ್ರಕ್ಕೆ ಕುಂದುಂಟಾಗದಂತೆ ಪಾತ್ರೋಚಿತವಾಗಿಯೇ ಅಭಿನಯಿಸಿದ್ದರು. ಮಳೆಗಾಲದಲ್ಲಿ ಮುಂಬಯಿ ಪ್ರದರ್ಶನಗಳಲ್ಲೂ ಭಾಗವಹಿಸಿದ್ದರು. ಗಲ್ಫ್ ರಾಜ್ಯ ಬಹರೈನ್ ನಲ್ಲಿ ನಡೆದ ಪ್ರದರ್ಶನಗಳಲ್ಲೂ ಅಭಿನಯಿಸಲು ಅವಕಾಶವಾಗಿತ್ತು. ಶ್ರೀ ಧರ್ಮಸ್ಥಳ ಮೇಳದಲ್ಲಿ ಹಲವು ವರ್ಷ ತಿರುಗಾಟ ನಡೆಸಿದ ಪಕಳಕುಂಜ ಕೃಷ್ಣ ನಾಯ್ಕರು ಹೃದಯ ಸಂಬಂಧೀ ಖಾಯಿಲೆಯಿಂದಾಗಿ ವೃತ್ತಿ ಬದುಕಿಗೆ ವಿದಾಯ ಹೇಳಿದ್ದರು. ಚೇತರಿಸಿಕೊಂಡ ಬಳಿಕ ಅನುಕೂಲವಾದಾಗ ಮತ್ತೆ ಕಲಾಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
ಕಲಾ ಬದುಕಿನುದ್ದಕ್ಕೂ ತಾರಕಾಸುರ, ಶೂರಪದ್ಮ, ಶುಂಭಾಸುರ, ರಾವಣ, ಎಲ್ಲ ಹೆಣ್ಣು ಬಣ್ಣಗಳು ಅಲ್ಲದೆ ಹಲವು ಪ್ರಸಂಗಗಳಲ್ಲಿ ಬರುವ ಕಿರಾತನ ವೇಷಗಳನ್ನೂ ನಿರ್ವಹಿಸಿ ಖ್ಯಾತಿಯನ್ನು ಗಳಿಸಿದರು. ಅನಿವಾರ್ಯವಾದರೆ ಮಾತುಗಾರಿಕೆಗೆ ಸಂಬಂಧಪಟ್ಟ ಕಿರೀಟ ವೇಷಗಳನ್ನು ಧರಿಸಲೂ ಕೃಷ್ಣ ನಾಯ್ಕರು ಹಿಂದೇಟು ಹಾಕಿದವರಲ್ಲ. ತೆಂಕುತಿಟ್ಟಿನ ಹೆಸರಾಂತ ಬಣ್ಣದ ವೇಷಧಾರಿಗಳಾದ ಇವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಡೋಗ್ರ ಪೂಜಾರಿ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕುರಿಯ ವಿಠಲ ಶಾಸ್ತ್ರಿ ಪ್ರಶಸ್ತಿ, ಶೇಣಿ ಪ್ರಶಸ್ತಿಗಳನ್ನು ಪಡೆದುದರ ಜೊತೆಗೆ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿರುತ್ತಾರೆ.
ಶ್ರೀಯುತರ ಪತ್ನಿ ಶ್ರೀಮತಿ ಯಮುನಾ. ಪಕಳಕುಂಜ ಕೃಷ್ಣ ನಾಯ್ಕ ದಂಪತಿಗಳಿಗೆ ಎಂಟು ಮಂದಿ ಮಕ್ಕಳು. (ಮೂರು ಗಂಡು, ಐದು ಹೆಣ್ಣು) ಉಡುಪಿಯಲ್ಲಿ ನಡೆದ ಯಕ್ಷಗಾನ ಕಮ್ಮಟದಲ್ಲಿ ಇವರ ಬಣ್ಣದ ವೇಷಗಳನ್ನು ದಾಖಲಿಸಿ ಸಂಗ್ರಹಿಸಿಡಲಾಗಿದೆ. ಒಟ್ಟು 48 ವರ್ಷಗಳ ಕಾಲ ವಿವಿಧ ಮೇಳಗಳಲ್ಲಿ ಸೇವೆ ಸಲ್ಲಿಸಿದ ಪಕಳಕುಂಜ ಕೃಷ್ಣ ನಾಯ್ಕರು ಸೆಪ್ಟೆಂಬರ್ 12, 2013ರಂದು ಇಹಲೋಕವನ್ನು ತ್ಯಜಿಸಿದ್ದರು.
ಅದೇಕೋ ಇಂದು ಈ ಸುದ್ದಿ ಅತಿ ಹೆಚ್ಚಾಗಿ ಅಂತರ್ಜಾಲದ ತಾಣಗಳಲ್ಲಿ ಮತ್ತು ಜನರ ಬಾಯಿಯಲ್ಲಿ ಇದೇ ಮಾತು. “ಇವತ್ತು ಕಟೀಲು ಮೇಳಗಳ ಆಟ ಸುರುವಂತೆ” ಎಂದು ಮಾತಾಡಿಕೊಳ್ಳುವವರು ಅನೇಕರು. ಇಂದಿನ ವರೆಗೆ ಕೇವಲ ನೇರ ಪ್ರಸಾರಗಳ ಮೂಲಕ ಯಕ್ಷಗಾನ ಪ್ರದರ್ಶನಗಳನ್ನು ವೀಕ್ಷಿಸುತ್ತಿದ್ದ ಜನರಿಗೆ ಇನ್ನು ತಮ್ಮ ತಮ್ಮ ಊರುಗಳಲ್ಲಿಯೋ ಅಥವಾ ಪಕ್ಕದ ಊರುಗಳಲ್ಲಿಯೋ ಪ್ರತ್ಯಕ್ಷವಾಗಿ ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಆಟ ನೋಡುವ ಅವಕಾಶ ಇದೀಗ ಒದಗಿ ಬಂದಿದೆ.
ಕಟೀಲು ಮೇಳಗಳ ಆಟವೆಂದರೆ ಜನರಿಗೆ ಒಂದು ರೀತಿಯ ಹಬ್ಬದ ಸಂಭ್ರಮ. ಅಲ್ಲಿ ಉತ್ಸವದ ವಾತಾವರಣವಿರುತ್ತದೆ. ತಮ್ಮೂರಿನ ಜಾತ್ರೆಯ ಹಾಗೆ. ಸ್ವತಃ ಕಟೀಲು ಶ್ರೀ ದುರ್ಗಾಪರಮೇಶ್ವರಿಯ ಸಾನ್ನಿಧ್ಯವೇ ತಮ್ಮ ಊರಿಗೆ ಆಗಮಿಸುತ್ತಿರುವ ಹಾಗೆ ಪುಳಕವನ್ನು ಅನುಭವಿಸುತ್ತಾರೆ.
ಸಮಾಜದ ಎಲ್ಲಾ ವರ್ಗದ ಭಕ್ತ, ಬಾಂಧವ ಮಹನೀಯರಿಗೂ, ಕಟೀಲಿನ ಶ್ರೀ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧ ಬೆಳೆದು ಬಂದಿದೆ. ಆದುದರಿಂದ ಕಟೀಲು ಮೇಳದ ಆಟ ನಡೆಯುವ ಸ್ಥಳಕ್ಕೆ ಆ ಊರಿನ ಪ್ರತಿಯೊಬ್ಬ ಆಸ್ತಿಕ ಬಂಧುಗಳ ಮನೆಯ ಸದಸ್ಯರೂ ತಪ್ಪದೆ ಭೇಟಿ ನೀಡಿ ಕಟೀಲು ದೇವಿಯ ಪ್ರಸಾದ ಸ್ವೀಕರಿಸಿ ಸ್ವಲ್ಪ ಹೊತ್ತಾದರೂ ಯಕ್ಷಗಾನ ಪ್ರದರ್ಶನ ನೋಡಿ ಆಮೇಲೆ ಮನೆಗೆ ಹಿಂತಿರುಗುತ್ತಾರೆ.
ಆದರೆ ಈ ವರ್ಷ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿದೆ. ಯಕ್ಷಗಾನ ಪ್ರದರ್ಶನಗಳ ದಿನಗಳಲ್ಲಿ ಹಬ್ಬದ ಸಂಭ್ರಮದಂತೆ ಮೈ ಮರೆಯುವ ಹಾಗಿಲ್ಲ. ಸ್ವಲ್ಪ ಮಟ್ಟಿಗಾದರೂ ತಮಗೆ ತಾವೇ ಕಡಿವಾಣ ಹಾಕಿಕೊಂಡು ಸರಕಾರದ ನೀತಿ ನಿಯಮಗಳನ್ನು ಪಾಲಿಸಿಕೊಂಡು ಯಕ್ಷಗಾನ ಪ್ರದರ್ಶನಗಳನ್ನು ನೋಡುವುದು ಕ್ಷೇಮ. ಆಟ ನೋಡುವ ಉತ್ಸಾಹದ ಭರದಲ್ಲಿ ಅಪರಿಚಿತರೊಂದಿಗೆ ಮುಕ್ತವಾಗಿ ಬೆರೆಯುವುದು, ಸುರಕ್ಷತಾ ಕ್ರಮಗಳನ್ನು ಪಾಲಿಸದೆ ಅಸಡ್ಡೆಯಿಂದ ವರ್ತಿಸುವುದು ಮೊದಲಾದುವುಗಳನ್ನು ಮಾಡುವುದು ಅಷ್ಟೇನೂ ಸಮಂಜಸವಾಗಿ ಕಾಣುವುದಿಲ್ಲ.
ಎಲ್ಲಕ್ಕಿಂತಲೂ ಮುಖ್ಯವಾಗಿ ಚೌಕಿಗೆ ಅಥವಾ ಬಣ್ಣದ ಮನೆಗೆ ಅನಗತ್ಯ ಭೇಟಿ ಕೊಡುವುದನ್ನು ತಪ್ಪಿಸಬೇಕಾದ ಅಗತ್ಯವಿದೆ. ತಮ್ಮ ಇಷ್ಟದ ವೇಷಧಾರಿಯನ್ನು ಮಾತನಾಡಿಸುವ ಬಯಕೆ ತಪ್ಪೇನೂ ಅಲ್ಲ. ಆದರೆ ಅದಕ್ಕೆ ಈ ದಿನಗಳು ಅಷ್ಟು ಸೂಕ್ತವಲ್ಲ. ಬಹುಶಃ ಸಾರ್ವಜನಿಕರಿಗೆ ಚೌಕಿಯ ಪ್ರವೇಶ ಇರಲಾರದು ಎಂದು ಕಾಣುತ್ತದೆ.
ಏನೇ ಇರಲಿ, ಅಂತೂ ಕಲಾಭಿಮಾನಿಗಳು ಸಂಭ್ರಮದಿಂದ ಕಾಯಿತ್ತಿದ್ದ ದಿನಗಳು ಬಂದಾಗಿದೆ. ಧರ್ಮಸ್ಥಳ ಸಹಿತ ಇತರ ಕೆಲವು ಮೇಳಗಳು ಪ್ರದರ್ಶನಗಳನ್ನು ಈಗಾಗಲೇ ಆರಂಭಿಸಿವೆ. ಕಟೀಲು ಮೇಳಗಳು ತಿರುಗಾಟಕ್ಕೆ ಹೊರತು ನಿಂತಿವೆ. ಬಹಳ ದಿನಗಳಿಂದ ದೂರ ಉಳಿದಿದ್ದ ಆಟದ ಸಂಭ್ರಮದ ವಾತಾವರಣದ ಆಸ್ವಾದನೆಗೆ ಸಮಯ ಒದಗಿ ಬಂದಿದೆ.
ಯಕ್ಷಗಾನದ ಕಲೆಯ ನಿನಾದ ಮತ್ತು ಅಬ್ಬರದ ಸದ್ದುಗಳಿಲ್ಲದೆ ಮೌನವಾಗಿದ್ದ ಜಗತ್ತು ಮತ್ತೆ ಚೆಂಡೆಯ ಸದ್ದಿನಿಂದ ಎಚ್ಛೆತ್ತುಕೊಳ್ಳಲಿದೆ. ಮಣ್ಣಿನ ಮಕ್ಕಳ ಸಂಭ್ರಮದ ನಿಶೆಯ ಓಡಾಟದಿಂದ ಪುಳಕಿತವಾಗುತ್ತಿದ್ದ ಮೈದಾನಗಳು ಮತ್ತು ಗದ್ದೆಗಳಲ್ಲಿ ಮತ್ತೆ ಕಲೆಯ ಕಂಪು ಪಸರಿಸಲಿದೆ. ರಂಗಸ್ಥಳಗಳು ಕಲಾವಿದರ ಹುಮ್ಮಸ್ಸಿನಿಂದ ದೂಳೆಬ್ಬಿಸಲಿದೆ. ಈ ತಿರುಗಾಟವು ಎಚ್ಚರಿಕೆಯ ಜೊತೆ ಉತ್ಸಾಹ, ಸಂಭ್ರಮಗಳಿಂದ ಎಲ್ಲ ಮೇಳಗಳಿಗೂ, ಎಲ್ಲ ಕಲಾವಿದರಿಗೂ, ಎಲ್ಲಾ ಜನರಿಗೂ ಸ್ಮರಣೀಯವಾಗಲಿ.
ಶೃತಿ ಲಯ ತಾಳಗಳಿಲ್ಲದೆ ಸಪ್ತ ಸ್ವರಗಳ ನಿನಾದವು ಕರ್ಣಾನಂದಕರವಾಗುವುದಿಲ್ಲ. ಚಂಡೆ ಮದ್ದಲೆಯು ಝೇಂಕರಿಸದೆ ಇದ್ದರೆ, ಸಂಗೀತದ ಆಲಾಪನೆ ಇಂಪಾಗುವುದಿಲ್ಲ. ಮದ್ದಲೆಯೊಂದಿಗೆ ಮಾತಾಡುವ ಶಕ್ತಿ ದಿವಂಗತ ತಿಮ್ಮಪ್ಪ ನಾಯ್ಕ ಬೇಳಂಜೆಯವರಿಗೆ ಇತ್ತಂತೆ. ಪ್ರಾಚಾರ್ಯ ನಾರಾಯಣ ಉಪ್ಪೂರರ ಒಡನಾಡಿಯಾಗಿ ಸುಮಾರು 13 ವರುಷಗಳ ಕಾಲ ತಿರುಗಾಟ ಮಾಡಿದ ಕೀರ್ತಿ ಶ್ರೀಯುತ ಬೇಳಂಜೆ ತಿಮ್ಮಪ್ಪ ನಾಯ್ಕರಿಗೆ ಇತ್ತು.
ಕಲೆಯ ನೆಲೆ ಬೀಡಾದ ಕರಾವಳಿ ಜಿಲ್ಲೆ ಉಡುಪಿಯ ಸಮೀಪದ ಆಗುಂಬೆಯ ತಗ್ಗು ಪ್ರದೇಶ ಹೆಬ್ರಿ ತಾಲೂಕಿನ ಬೇಳೆಂಜೆ ಎಂಬ ಪುಟ್ಟ ಊರಿನ ಕುರಿಯ ನಾಯ್ಕ ಹಾಗು ಕಾಶಿ ಬಾಯಿಯವರ ಗರ್ಭಸಂಜಾತರಾಗಿ 29-02-1928ರಂದು ಬೇಳಂಜೆ ತಿಮ್ಮಪ್ಪ ನಾಯ್ಕರು ಜನಿಸಿದರು. ಬಡತನದ ನೆರಳಲ್ಲಿ ಬೆಳೆದು ಪೆರ್ಡೂರಿನಲ್ಲಿ 5ನೇ ತರಗತಿಯ ವರೆಗೆ ಕಲಿತು ಆಮೇಲೆ ವಿಧ್ಯಾಭ್ಯಾಸಕ್ಕೆ ತೀಲಾಂಜಲಿ ಇತ್ತು ನಂತರ ಕನ್ನಾರು ಗುರು ರಾಮಚಂದ್ರ ಸಮಾಂತರಲ್ಲಿ ಯಕ್ಷಗಾನದ ಪ್ರಾಥಮಿಕ ಹೆಜ್ಜೆಗಳನ್ನು ಕಲಿತು ತನ್ನ15ನೇ ವಯಸ್ಸಿನಲ್ಲಿ ಪೆರ್ಡೂರು ಮೇಳಕ್ಕೆ “ಹರೇ ರಮಣ ಗೋವಿಂದ…. ” ಬಾಲಗೋಪಾಲ ವೇಷಧಾರಿಯಾಗಿ ಸೇರ್ಪಡೆಗೊಂಡರು.
ನಂತರ ಮಾರಣಕಟ್ಟೆ ಮೇಳಕ್ಕೆ ಒತ್ತು ಮದ್ದಲೆಗಾರರಾಗಿ ಸೇರ್ಪಡೆಗೊಂಡರು. ವೀರಭಧ್ರ ನಾಯ್ಕ, ಮರವಂತೆ ನರಸಿಂಹ ಭಾಗವತರ ಹಿರಿಯಡ್ಕ ಗೋಪಾಲರಾಯರು, ಹುಂಚದಕಟ್ಟೆ ಶ್ರೀನಿವಾಸ ಆಚಾರ್ಯ ಮೊದಲಾದವರ ಒಡನಾಟದಿಂದ ಎರಡು ವರುಷ ತಿರುಗಾಟ ಮಾಡಿದರು. ವೀರಭದ್ರ ನಾಯಕರ ಯಜಮಾನಿಕೆಯಲ್ಲಿ ಕೊಲ್ಲೂರು ಮೇಳಕ್ಕೆ ಸೇರ್ಪಡೆಗೊಂಡಾಗ ಕುಂಜಾಲು ರಾಮಕೃಷ್ಣ, ಹೇರಂಜಾಲು ವೆಂಕಟರಮಣ ಗಾಣಿಗ, ತಿಮ್ಮಪ್ಪ ನಾಯ್ಕರ ಶಿಷ್ಯರಾದರು. ಮಂದಾರ್ತಿ ಮೇಳದಲ್ಲಿ ತಿರುಗಾಟ ಮಾಡಿದರು. ನಂತರ ತೆಂಕು-ಬಡಗು ತಿಟ್ಟಿನ ರಾಜರಾಜೇಶ್ವರೀ ಮೇಳದಲ್ಲಿ ಇದ್ದಾಗ ಮರವಂತೆ ನರಸಿಂಹ ಭಾಗವತರ ಒಡನಾಟದಿಂದ ಮೇಲೆ ಬಂದರು. ನಂತರ ಅಲ್ಲಿ ಆ ಸಮಯದಲ್ಲಿ ಪ್ರಾಚಾರ್ಯ ನಾರಾಯಣ ಉಪ್ಪೂರರೊಂದಿಗೆ ಬೆರೆತರು.
ಡಾ. ಶಿವರಾಮ ಕಾರಂತರ ಬ್ಯಾಲೆ 1959ರಲ್ಲಿ ಪುತ್ತೂರಿನಲ್ಲಿ ಪ್ರಾರಂಭವಾಯಿತು. ಅದರಲ್ಲಿ ಮದ್ದಲೆ ವಾದಕರಾಗಿ ದೆಹಲಿಯಲ್ಲಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ ಅವರ ಸಮ್ಮುಖದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ ಜವಾಹರ್ ನೆಹರು ಪ್ರಧಾನಿಯಾದ ಸಂದರ್ಭದಲ್ಲೂ ಸಹ ಎಚ್. ಅನಂತಕೃಷ್ಣ ಹಂದೆಯವರ ಮುಂದಾಳುತ್ವದಲ್ಲಿ ದೆಹಲಿಯಲ್ಲಿ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೀರ್ತಿ ಶ್ರೀಯುತರಿಗೆ ಸಲ್ಲುತ್ತದೆ.
ನಂತರ ಪಳ್ಳಿ ಶ್ರೀನಿವಾಸ ಹೆಗ್ಡೆಯವರ ಸಾರಥ್ಯದ ಸಾಲಿಗ್ರಾಮ ಮೇಳದಲ್ಲಿ ಪ್ರಧಾನ ಮದ್ದಲೆಗಾರನಾಗಿ ಪ್ರಾಚಾರ್ಯ ನಾರಾಯಣಪ್ಪ ಉಪ್ಪೂರ್, ಕೆಮ್ಮಣ್ಣು ಆನಂದರ ಸಾಥ್ ದೊರಕಿತು. ಮುಮ್ಮೇಳದಲ್ಲಿ ಕೆರೆಮನೆ ಶಂಭು ಹೆಗ್ಡೆ, ಕೆರೆಮನೆ ಮಹಾಬಲ ಹೆಗ್ಡೆ, ಗಜಾನನ ಹೆಗ್ಡೆ, ಹಾಗು ಶಿರಿಯಾರ ಮಂಜುನಾಯ್ಕರ ಒಡನಾಟದಲ್ಲಿ ಉತ್ತಮ ಮೇಳವಾಗಿ ಹೊರಹೊಮ್ಮಿತು. ಆಗ ಉಪ್ಪೂರರ ಒಡನಾಡಿಯಾಗಿ ಸುಮಾರು ವರುಷ ತಿರುಗಾಟ ಮಾಡಿದರು. ನಂತರ ಶ್ರೀಧರ ಹಂದೆಯವರ ಸಾರಥ್ಯದಲ್ಲಿ ಅಮೃತೇಶ್ವರಿ ಮೇಳ ಪ್ರಾರಂಭವಾಯಿತು. ಆಗ ನಾರಾಯಣ ಉಪ್ಪೂರ್, ಜೊತೆಯಾಗಿ, ಚಿಟ್ಟಾಣಿ, ಕೋಟ ವೈಕುಂಠ, ಎಂ.ಎ. ನಾಯಕ್, ಏಕ್ಟರ್ ಜೋಶಿ ಇಂತಹ ಘಟಾನುಘಟಿ ಕಲಾವಿದರನ್ನು ರಂಗದಲ್ಲಿ ಕುಣಿಸಿದ ಕೀರ್ತಿ ಶ್ರೀಯುತ ತಿಮ್ಮಪ್ಪ ನಾಯ್ಕರಿಗೆ ಸಲ್ಲುತ್ತದೆ.
ಅಮೃತ್ತೇಶ್ವರೀ ಮೇಳದಲ್ಲಿ ಪ್ರಾಚಾರ್ಯ ನಾರಾಯಣ ಉಪ್ಪೂರರೊಂದಿಗೆ ಸುಮಾರು ಹದಿಮೂರು ವರುಷಗಳ ಕಾಲ ಮದ್ದಳೆಗಾರರಾಗಿ ಸೇವೆ ಸಲ್ಲಿಸಿದರು. ಮದ್ದಲೆಯೊಂದಿಗೆ ಮಾತನಾಡುವ ತಿಮ್ಮಪ್ಪ ನಾಯ್ಕರು ಒಂದೊಂದು ಪೆಟ್ಟು ಅಷ್ಟು ಸೂಕ್ಷ್ಮ. ಒಮ್ಮೊಮ್ಮೆ ತಿಮ್ಮಪ್ಪ ನಾಯ್ಕರು ಬಂದು ರಂಗದಲ್ಲಿ ಭಾಗವತರಾಗಿ ಕುಳಿತು ಕೊಳ್ಳುತ್ತಿದ್ದರಂತೆ ಹಾಗು ಉಪ್ಪೂರರು ಮದ್ದಲೆ ನುಡಿಸುತ್ತಿದ್ದರಂತೆ. ಹೀಗೆ ರಂಗದಲ್ಲಿ ಏಕಲವ್ಯನಂತೆ, ತಾಳಮದ್ದಲೆ ಕ್ಷೇತ್ರದಲ್ಲಿಯೂ ಉತ್ತಮವಾದ ಸಾಧನೆಯನ್ನು ಮಾಡಿದ್ದಾರೆ. 1972ರಲ್ಲಿ ಐರೋಡಿ ಸದಾನಂದ ಹೆಬ್ಬಾರ್ ರ ನೇತೃತ್ವದಲ್ಲಿ ಹಂಗಾರಕಟ್ಟೆ ತರಬೇತಿ ಕೇಂದ್ರವನ್ನು ಸ್ಥಾಪಿಸಿದಾಗ ಕೀರ್ತಿಶೇಷ ಕಾಳಿಂಗ ನಾವುಡರು, ಶಂಕರ ಭಾಗವತ ಯಲ್ಲಾಪುರ, ಕರ್ಕಿ ಪರಮೇಶ್ವರ ಭಂಡಾರಿ, ರಾಮಕೃಷ್ಣ ಮಂದಾರ್ತಿ, ಹಳ್ಳಾಡಿ ಸುಬ್ರಯ್ಯ ಮಲ್ಯ, ಸುಬ್ರಮಣ್ಯ ಧಾರೇಶ್ವರ, ಮುಂತಾದ ಶಿಷ್ಯರನ್ನು ತಯಾರು ಮಾಡಿದ ಕೀರ್ತಿ ದಿವಂಗತ ತಿಮ್ಮಪ್ಪ ನಾಯ್ಕರಿಗೆ ಸಲ್ಲುತ್ತದೆ.
ಹಗಲಿರುಳೆನ್ನದೆ ಯಕ್ಷಗಾನ ಕ್ಷೇತ್ರದಲ್ಲಿ ಮುಂದುವರಿದ ಶ್ರೀಯುತರನ್ನು ಸರಕಾರವು ಗುರುತಿಸಲೇ ಇಲ್ಲ. ಯಾವ ಸನ್ಮಾನ, ಸವಲತ್ತುಗಳೂ, ಪ್ರಶಸ್ತಿಗಳೂ ಸಹ ಕೊಡಲ್ಪಡಲಿಲ್ಲ. “ಜಾತಸ್ಯ ಮರಣಂ ದ್ರುವಂ” ಎಂಬ ವೇದ ವಾಕ್ಯದಂತೆ ಕಾಲನ ಕರೆಗೆ ಹೋಗಲೇ ಬೇಕು. ಅಂತೆಯೇ 16-04-1976ರಲ್ಲಿ ಅಮೃತೇಶ್ವರೀ ಮೇಳದಲ್ಲಿ ಇರುವಾಗಲೇ ಭದ್ರಾವತಿಯಲ್ಲಿ ಹೃದಯಾಘಾತದಿಂದ ತನ್ನ 46ನೇ ವಯಸ್ಸಿನಲ್ಲಿ ವಿಷ್ಣುವಿನ ಪಾದ ಸೇರಿದರು.
ಕೀರ್ತಿಶೇಷರಾದ ಬೇಳಂಜೆ ತಿಮ್ಮಪ್ಪ ನಾಯ್ಕರ ಮಡದಿ ವೇದಾವತಿ. ಹಾಗು ಮಕ್ಕಳಾದ ಭಾಗವತರಾದ ಶ್ರೀನಿವಾಸ ನಾಯ್ಕ, ಮಹಾಬಲ ನಾಯ್ಕ ಪುಂಡುವೇಷದಾರಿಯಾಗಿ, ಜಯಂತ ನಾಯ್ಕರವರು ಎಲೆಮರೆಯ ಸ್ತ್ರೀವೇಷಧಾರಿಯಾಗಿ ಯಕ್ಪಗಾನ ಕ್ಷೇತ್ರದಲ್ಲಿ ಮುಂದುವರಿಯುತ್ತಿದ್ದಾರೆ. ಇಂತಹ ಮಹಾನ್ ಚೇತನನನ್ನು ಕಳೆದುಕೊಂಡು ಯಕ್ಷಗಾನ ರಂಗ ಬಡವಾಗಿದೆ. ಇವರಿಗೆ ಸಲ್ಲಬೇಕಾದ ಗೌರವ ಸನ್ಮಾನಗಳು ಬಗ್ಗೆ ಹಾಗೂ ಇವರ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿ, ಕರ್ನಾಟಕ ಜಾನಪದ ಪರಿಷತ್ತು, ಗುರುತಿಸಲಿಲ್ಲ ಎಂಬುದು ನೋವಿನ ಸಂಗತಿಯಾಗಿದೆ. ಇಂತಹ ಈ ಮಹಾನ್ ಚೇತನನನ್ನು ಗುರುತಿಸಿ ಮರಣೋತ್ತರ ಪ್ರಶಸ್ತಿ ಸಿಗಲಿ ಎಂದು ಹಾರೈಸುತ್ತೇನೆ.
ಉದ್ಯಾವರ ಮಾಧವ ಆಚಾರ್ಯ ರಂಗ ನಿರ್ದೇಶಕ, ಕಥೆಗಾರ, ಕವಿ, ನಟ, ಪ್ರಸಿದ್ಧ ಗುಡ್ಡೆದ ಭೂತ ಧಾರಾವಾಹಿಯ ನಟ, ಉಡುಪಿಯ ಸಮೂಹ ಸಂಸ್ಥೆಯ ಸಂಸ್ಥಾಪಕ, ನಾಟಕ, ನೃತ್ಯರೂಪಕ ಮೂಲಕ ರಾಜ್ಯಾದ್ಯಂತ ಜನಮನ್ನಣೆ ಗಳಿಸಿದ ಸಾಧಕ.
ನಾಡಿನಾದ್ಯಂತ 50ಕ್ಕೂ ಹೆಚ್ಚು ನಾಟಕ, ನೃತ್ಯರೂಪಕಗಳಿಗೆ ನಿರ್ದೇಶನಗೈದ ಇವರು ರಾಜ್ಯ ರಾಜ್ಯೋತ್ಸವ, ರಂಗ ವಿಶಾರದ ಪ್ರಶಸ್ತಿಗೆ ಭಾಜನರಾಗಿದ್ದರು. ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಉಪನ್ಯಾಸಕರಾಗಿದ್ದ ಇವರು ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಇಂದು (07-12-2020) ಮಧ್ಯಾಹ್ನ ನಿಧನರಾದರು.ಇವರು ಪತ್ನಿ, ಓರ್ವ ಪುತ್ರ,ಮೂವರು ಪುತ್ರಿಯರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಯಕ್ಷಗಾನ ಕಲಾರಂಗದ ಸದಸ್ಯರಾಗಿದ್ದ ಇವರು ಯಕ್ಷಗಾನ ವೃತ್ತಿಕಲಾವಿದರಿಗಾಗಿ ಆರಂಭಗೊಂಡ ‘ಪ್ರೊ. ಬಿ. ವಿ. ಆಚಾರ್ಯ ಯಕ್ಷನಿಧಿ’ಯ ಆರಂಭ ಕಾಲದಲ್ಲಿ ವಿಶೇಷವಾಗಿ ಕಾರ್ಯನಿರ್ವಹಿಸಿದ್ದರು. 2004ರಲ್ಲಿ ಇವರ ನೇತೃತ್ವದಲ್ಲಿ ಯಕ್ಷಗಾನ ಕಲಾರಂಗದ ತಂಡ ಅಮೇರಿಕಾದಲ್ಲಿ ಜರುಗಿದ‘ಅಕ್ಕ ಸಮ್ಮೇಳನ’ದಲ್ಲಿ ಭಾಗವಹಿಸಿ ಅಮೇರಿಕದಾದ್ಯಂತ 11 ಕಡೆಗಳಲ್ಲಿ ಪ್ರದರ್ಶನ ನೀಡಿತ್ತು.
ಆಚಾರ್ಯರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.
ಈ ಬಾರಿಯ ಕಡಬ ಸಂಸ್ಮರಣಾ ಪ್ರಶಸ್ತಿಯನ್ನು ಖ್ಯಾತ ಹಿರಿಯ ಮದ್ದಳೆಗಾರರಾದ ಹರಿನಾರಾಯಣ ಬೈಪಾಡಿತ್ತಾಯ ಅವರಿಗೆ ನೀಡಿ ಗೌರವಿಸಲಾಗಿದೆ. ಕಡಬ ಸಂಸ್ಮರಣಾ ಸಮಿತಿಯ ಪ್ರಥಮ ಪ್ರಶಸ್ತಿ ಪ್ರದಾನ ಸಮಾರಂಭ ನಿನ್ನೆ ದಿನಾಂಕ 06.12.2020ರ ಆದಿತ್ಯವಾರ ನಡೆಯಿತು.
ಕಡಬ ನಾರಾಯಣ ಆಚಾರ್ಯರದು ತೆಂಕುತಿಟ್ಟಿನ ಹಿಮ್ಮೇಳದ ಒಂದು ಪ್ರಖ್ಯಾತ ಹೆಸರು. ಸುಮಾರು 30ಕ್ಕೂ ಹೆಚ್ಚು ವರ್ಷಗಳ ಕಾಲ ಖ್ಯಾತ ಮದ್ದಳೆಗಾರರಾಗಿ ಯಕ್ಷಗಾನ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಗಳನ್ನು ಸಲ್ಲಿಸಿದವರು. ಅವರು ಅಸ್ತಂಗತರಾದ ನಂತರ ಅವರ ಸ್ಥಾನವನ್ನು ಸಮರ್ಥವಾಗಿ ತುಂಬಿದವರು ಅವರ ಸುಪುತ್ರರಾದ ಕಡಬ ವಿನಯ ಆಚಾರ್ಯ.
ಆದರೆ ವಿಧಿಲಿಖಿತವನ್ನು ತಪ್ಪಿಸುವವರಾರು? ಕಡಬ ವಿನಯ ಆಚಾರ್ಯರೂ ಯಕ್ಷರಂಗದ ಮದ್ದಳೆಗಾರರಾಗಿ ಸುಮಾರು 15 ವರ್ಷಗಳ ಕಾಲ ಸೇವೆ ಸಲ್ಲಿಸಿ ತಮ್ಮ ಪ್ರಸಿದ್ಧಿಯ ಉತ್ತುಂಗದಲ್ಲಿರುವಾಗಲೇ ಸಣ್ಣ ವಯಸ್ಸಿನಲ್ಲಿಯೇ ಈ ಲೋಕದ ಯಾತ್ರೆಯನ್ನು ಮುಗಿಸಿದರು.
ಇವರೀರ್ವರ ಹೆಸರಿನಲ್ಲಿ ನೀಡಲಾಗುವ ಕಡಬ ಸಂಸ್ಮರಣಾ ಪ್ರಶಸ್ತಿಯು ಹಿರಿಯ ಖ್ಯಾತ ಮದ್ದಳೆಗಾರರಾದ ಶ್ರೀ ಹರಿನಾರಾಯಣ ಬೈಪಾಡಿತ್ತಾಯ ಅವರಿಗೆ ಅರ್ಹವಾಗಿಯೇ ಸಂದಿದೆ.
ಯಕ್ಷಗಾನದ, ತಾಳಮದ್ದಳೆಗಳ ಯಶಸ್ಸಿನ ಗಾಥೆಗಳಲ್ಲಿ ಭಾಗವತಿಕೆಯದು ಪ್ರಥಮ ಪಾತ್ರ, ಸುಶ್ರಾವ್ಯ ಭಾವ ಗಾಯನ, ಪಾತ್ರ ಸಂದರ್ಭೋಚಿತ ತಾಳಮೇಳ ಒಡಗೂಡಲು ಭಾಗವತರಿಗೆ ಉತ್ಕೃಷ್ಟವಾದ ಕಥಾಕಾವ್ಯ ಒದಗಿಬರಬೇಕು. ಯಕ್ಷಕಾವ್ಯರಚನೆ ಸರಳವಲ್ಲ.
ಕವಿಗೆ ಸಂಗೀತ, ತಾಳ, ನಾಟ್ಯ ಹಾಗೂ ಅಭಿನಯ ಪೂರಕ ಭಾವಗಳ ಸ್ಪಷ್ಟತೆ, ವೇದಿಕೆಯ ಹಾಗೂ ಕಥೆಯ ಪಾತ್ರವರ್ಗಗಳ ಸಂಪೂರ್ಣ ಪರಿಚಯವಿರಬೇಕು. ಈ ಸಕಲ ಕಲಾಜ್ಞಾನ ಸಮುಚ್ಛಯ ಕವಿಯ ಅಂತರಾಳದಲ್ಲಿ ಸಮಾಹಿತಗೊಂಡಾಗ ಯಕ್ಷಗಾನ ಕಾವ್ಯದ ಅನುರೂಪ ಕೃತಿ ಸಿದ್ಧಗೊಳುವುದು.
ಪದ್ಯಾಣ ಈಶ್ವರ ಭಟ್ಟ ಲಕ್ಷ್ಮೀ ಅಮ್ಮನವರ ಮಗನಾಗಿ ಬಂಟ್ವಾಳದ ಕರೋಪಾಡಿಯಲ್ಲಿ 21-10-1929 ರಂದು ಪದ್ಯಾಣ ವೆಂಕಟೇಶ್ವರ ಭಟ್ಟರ ಜನನ. ಪ್ರಾರಂಭಿಕ ಸಂಸ್ಕೃತ ಪಾಠ ಶ್ರೀ ಮಾಂಬಾಡಿ ಈಶ್ವರ ಜೋಯಿಸರಲ್ಲಿ ಹಾಗೂ ಉಡುಪಿಯ ಸಂಸ್ಕೃತ ಪಾಠಶಾಲೆಯಲ್ಲಿ ಪಡೆದು 1945ರಲ್ಲಿ ರಾಷ್ಟ್ರಭಾಷಾ ವಿಶಾರದಾ 1951ರಲ್ಲಿ ಹಿಂದಿ ಪ್ರಚಾರಕ ಪದವಿಗಳನ್ನು ಗಳಿಸಿ ಮದ್ರಾಸ್ ವಿಶ್ವವಿದ್ಯಾಲಯದ ಸಂಸೃತ ಸಾಹಿತ್ಯ ಶಿರೋಮಣಿಯಾದರು. 1960ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದ ಚಿನ್ನದ ಪದಕದೊಂದಿಗೆ ಕನ್ನಡ ಸಂಸ್ಕೃತ ವಿದ್ವಾನ್ ಪದವಿ ಪಡೆದು 1953ರಲ್ಲಿ ಕಮ್ಮಾಜೆಯ ಸಂಸ್ಕೃತ ಶಾಲೆಯಲ್ಲಿ ಅಧ್ಯಾಪನ ಪ್ರಾರಂಭಿಸಿ 1959ರಲ್ಲಿ ಕುರುಡಪದವು ಪ್ರಾಥಮಿಕ ಶಾಲಾ ಹಿಂದಿ ಅಧ್ಯಾಪಕರಾಗಿ ವೃತ್ತಿಜೀವನಕ್ಕೆ ತೊಡಗಿದರು.
26ವರ್ಷಗಳ ಅನನ್ಯ ಅಧ್ಯಾಪನ ವೃತ್ತಿ ನಡೆಸಿ 1985ರ ವಿಶ್ರಾಂತ ಜೀವನದಲ್ಲಿ ಕೃಷಿ, ತಾಳಮದ್ದಳೆ, ಬರವಣಿಗೆ, ಸಮಾಜಸೇವೆ, ನಾಟಕ, ಯಕ್ಷಗಾನ ಸಾಹಿತ್ಯ ರಚನೆಗಳಲ್ಲಿ ತಮ್ಮನ್ನು ತೊಡಗಿಸಿ ಅಮೋಘ ಸಾಧನೆಗಳಿಂದ ಹೆಸರುವಾಸಿಯಾದರು. ಅಭಿನಯ ಕಲೆಯಲ್ಲಿಯೂ ಇವರು ಸಾಕಷ್ಟು ಹೆಸರು ಮಾಡಿದ್ದರು.
ಕೃತಿಗಳು 1: ಸೌದಾಸ ಚರಿತೆ: ಕುಮಟಾದ ಯಕ್ಷಗಾನಕಾ ರ್ಯಾಲಯದಿಂದ ಪ್ರಕಟಿತ. ಈಗಲೂ ಈ ಪ್ರಸಂಗ ಚಾಲ್ತಿಯಲ್ಲಿದೆ. 2: ಕೋಳ್ಯೂರು ಕ್ಷೇತ್ರ ಮಹಾತ್ಮೆ::ಕೋಳ್ಯೂರು ಶ್ರೀ ಶಂಕರನಾರಾಯಣ ಸೇವಾ ಸಮಿತಿಯಿಂದ ಪ್ರಕಟಿತ ಕೃತಿ 3: ಶ್ರೀ ಧರ್ಮಸ್ಥಳ ಕ್ಷೇತ್ರಮಹಾತ್ಮೆ: ಕುರಿಯ ಶಾಸ್ತ್ರಿಯವರಿಂದ ಮಾಹಿತಿ ಪಡೆದು ಧರ್ಮದರ್ಶಿ ಶ್ರೀ ಮಂಜಯ್ಯ ಹೆಗಡೆಯವರ ಪ್ರೇರೇಪಣೆಯಿಂದ ರಚಿತ ಕೃತಿ ಮೂಂದೆ ರತ್ನವರ್ಮ ಹೆಗಡೆಯವರ ಮಾರ್ಗದರ್ಶನದಲ್ಲಿ ಬಯಲಾಟ ಪ್ರದರ್ಶಿಸ ತೊಡಗಿತು ಎಂದು ಹೇಳಲಾಗುತ್ತಿದೆ. ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಬಯಲಾಟವು ಈ ಪ್ರಸಂಗವನ್ನು ನಿರಂತರವಾಗಿ ಪ್ರದರ್ಶಿಸಿ ಯಶಸ್ವೀಗೊಳಿಸಿದೆ
4: ಅಶ್ವಿನೀ ವಿಜಯ (ವೀರ ವಿಶ್ವಲೆ) (ಅಪ್ರಕಟಿತ) ಆರೂರು ಲಕ್ಷ್ಮೀನಾರಾಯಣ ಸ್ಮಾರಕ ವೈದ್ಯಕೀಯ ಕಾಲೇಜು ಕೊಪ್ಪ ಇವರಿಂದ ಪ್ರೇರಣೆ ಹಾಗೂ ಪ್ರದರ್ಶನ 5: ಸತೀ ಸೀಮಂತಿನಿ (ಅಪ್ರಕಟಿತ) ವಿಧವಾದೋಷ ನಿವಾರಣಾ ವ್ರತನಿಷ್ಠೆ ವಸ್ತುವಿಶೇಷದ ಕೃತಿ. ಇವಲ್ಲದೆ ಸತ್ಯಹರಿಶ್ಚಂದ್ರ, ಮಾಗಧವಧೆ, ಚಂದ್ರಹಾಸ (ಪೌರಾಣಿಕ) ಬಲಿ-ವಾಮನ, ಸತ್ಯವಾನ-ಸಾವಿತ್ರಿ(ಗೀತ) ಭಾಗ್ಯಚಕ್ರ, (ಸಾಮಾಜಿಕ) ಗುರುಭಕ್ತಿ (ಏಕಾಂಕ)ನಾಟಕಗಳು ಹಾಗೂ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸುಪ್ರಭಾತ ಕೀರ್ತನೆಗಳು ಇವರ ಪ್ರಸಿದ್ಧ ರಚನೆಗಳು.
ಕುರಿಯ ವಿಠಲ ಶಾಸ್ತ್ರಿಯವರಿಗೆ ಆತ್ಮೀಯರಾಗಿದ್ದ ಈ ಆಶುಕವಿಯ ಹಾಡುಗಳನ್ನು ವೇಗವಾಗಿ ದಾಖಲಿಸಿ ಬರೆಯಲು ಮೂರು ಜನರನ್ನು ವಿನಂತಿಸಿ ಅವರ ಮೂಲಕ ಬ್ರಹ್ಮಕಪಾಲದಂತಹ ಕೃತಿಗಳ ರಚನೆಯಾಯಿತೆಂದು ಹಳೆತಲೆಮಾರಿನ ಪ್ರಸಿದ್ಧ ಕಲಾವಿದರ ಅಂಬೋಣ. ಸರಳಸಜ್ಜನ ಮೃದುಭಾಷಿಯೂ ಮಿತಭಾಷಿಯೂ ಆಗಿದ್ದ ಈ ಸಾಧಕರಿಗೆ ಹಲವು ಪುರಸ್ಕಾರ ಗೌರವಗಳು ಮುಡಿಗೇರಿದ್ದವು ಯಕ್ಷವಿಜಯ ಕಲಾಸಂಘ ಮಿತ್ತನಡ್ಕ, ಮಂಗಳೂರು ಹವ್ಯಕ ಸಭಾ, ದ ಕ ಸಾಹಿತ್ಯ ಪರಿಷತ್ತು ಮತ್ತು ನೀರ್ಪಾಜೆ ಭೀಮಭಟ್ಟ ಪ್ರತಿಷ್ಠಾನ, ಕನ್ಯಾನ, ಕುರಿಯ ವಿಠಲ ಶಾಸ್ರಿ ಸ್ಮಾರಕ ಪ್ರತಿಷ್ಠಾನಗಳು ಶ್ರೀಯುತರನ್ನು ಪ್ರಶಸ್ತಿಗಳೊಡನೆ ಗೌರವಿಸಿವೆ. ಬಹುಭಾಷಾ ಪಂಡಿತರಾದ ಈ ಶ್ವೇತವಸ್ತ್ರ ದಾರಿ ಕಲಾವಿದರ ಭಾಷಾಪ್ರೌಢಿಮೆ, ಛಂದೋಬದ್ಧತೆ, ತಜ್ಞ ಭಾವಸ್ಫುರತೆ, ವಿದ್ವತ್ಪೂರ್ಣ ರಚನಾ ಕುಶಲತೆಗಳು ರಚನೆಗಳನ್ನು ಅನನ್ಯವಾಗಿಸಿ ಉನ್ನತಿಗೇರಿಸಿವೆ.
ಡಾ ಪಾದೇಕಲ್ಲು ವಿಷ್ಣು ಭಟ್ಟ ಹಾಗೂ ಮುಳಿಯ ಶಂಕರ ಭಟ್ಟರ ಸಂಪಾದನೆಯ ದ ಕ ಜಿಲ್ಲಾ ಪಂಡಿತ ಪರಂಪರೆ ಬಿಂಬಿತ ಪಂಜಜೆ ಶಂಕರ ಭಟ್ಟ ಜನ್ಮಶತಮಾನೋತ್ಸವ ಗೌರವ ಗ್ರಂಥ ಗುರುಗೌರವ ಎಂಬ ಬೃಹತ್ ಗ್ರಂಥದಲ್ಲಿ ಶ್ರೀಮತಿ ವೀಣಾ ಕಜೆಯವರು ಈ ಸಾಹಿತಿಯ ಸಮಗ್ರ ಚಿತ್ರಣ ನೀಡಿ ದಾಖಲಿಸಿದ್ದಾರೆ ಶ್ರೀಪದ್ಯಾಣ ವೆಂಕಟೇಶ್ವರ ಭಟ್ಟರದು ಪತ್ನಿ ಮೂಕಾಂಬಿಕರವರೊಂದಿಗಿನ ಸುಖೀ ಜೀವನವಾಗಿತ್ತು ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಪ್ರೌಢಶಾಲಾ ಶಿಕ್ಷಕರಾಗಿ ವೃತ್ತಿಜೀವನ ನಡೆಸಿ ವಿಶ್ರಾಂತ ಕೃಷಿಬದುಕು ನಡೆಸುತ್ತಿರುವ ಶ್ರೀ ಸತೀಶ್ವರ ಭಟ್ಟರು ಹಾಗೂ ಶ್ರೀಮತಿ ವಿಜಯಲಕ್ಷ್ಮಿಯವರು ಪದ್ಯಾಣ ವೆಂಕಟೇಶ್ವರ ಭಟ್ಟರ ಮಕ್ಕಳು.
ಶ್ರೀ ಸತೀಶ ಭಟ್ಟರ ಪತ್ನಿ ಜಯಲಕ್ಷ್ಮಿ ಎಸ್ ಭಟ್ಟರು ಸಾಹಿತ್ಯ ಬರಹಗಳೊಂದಿಗೆ ಯೋಗ ಶಿಕ್ಷಕಿಯಾಗಿ ವೃತ್ತಿಪರರಾಗಿರುವ ಕವಯಿತ್ರಿ ಡಾ ಶ್ರೀಲತಾ ಪದ್ಯಾಣ (ಸಾಹಿತ್ಯ ವಂಶವಾಹಿಯಾಗಿರುವುದು ಗಮನಾರ್ಹ) ಹಾಗೂ ಶ್ರೀನಿಧಿ ಪದ್ಯಾಣ ಇವರ ಮಕ್ಕಳು ಪದ್ಯಾಣ ವೆಂಕಟೇಶ್ವರ ಭಟ್ಟರ ಪುತ್ರಿ, ಅಮೈ ಸುಬ್ರಹ್ಮಣ್ಯ ಭಟ್ಟರ ಪತ್ನಿಯಾಗಿ ಗೃಹ ನಿರ್ವಹಣೆ ಮಾಡುತ್ತಿರುವರು ಸೌಮ್ಯಶ್ರೀ ಮತ್ತು ಪ್ರಸನ್ನ ನಾರಾಯಣ ಇವರ ಮಕ್ಕಳು. ಶ್ರೀಯುತ ಪದ್ಯಾಣ ವೆಂಕಟೇಶ್ವರ ಭಟ್ಟರ ಕಲಾಸೇವೆ ಕಲಾಕೃತಿಗಳು ಚಿರಂತನವಾಗಿ ಬೆಳಗಿವೆ.
ತಮ್ಮ ಬಣ್ಣದ ವೇಷದ ಖ್ಯಾತಿಯಿಂದ ಬಣ್ಣದ ಕುಷ್ಟ ಎಂದೇ ಪರಿಚಿತರಾಗಿದ್ದ ಕೃಷ್ಣಯ್ಯ ಮಂಜಯ್ಯ ಶೆಟ್ಟಿ ಯಾನೆ ಕುಷ್ಟ ಗಾಣಿಗ ಇಂದು (6-12-2020) ಬೆಳಗಿನಜಾವ ಹೊನ್ನಾವರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ಪತ್ನಿ ಮತ್ತು ಐವರು ಪುತ್ರಿಯರನ್ನು ಅಗಲಿದ್ದಾರೆ.
ಕರ್ಕಿ, ಗುಂಡಬಾಳ, ಇಡಗುಂಜಿ, ಅಮೃತೇಶ್ವರೀ ಮೇಳಗಳಲ್ಲಿ ಐದು ದಶಕಗಳ ಕಲಾಸೇವೆಗೈದಿದ್ದರು. ಎಲ್ಲಾ ರೀತಿಯ ವೇಷಗಳನ್ನು ಮಾಡುತ್ತಿದ್ದ ಅವರು ಬಣ್ಣ ಮತ್ತು ಕಿರಾತ ವೇಷಗಳಲ್ಲಿವಿಶೇಷ ಸಿದ್ಧಿ ಪಡೆದಿದ್ದರು.
ಉಡುಪಿಯ ಯಕ್ಷಗಾನ ಕಲಾರಂಗ ಪ್ರಶಸ್ತಿಯೂ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು. ಅವರ ಅಗಲಿಕೆಗೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.
ಯಕ್ಷಗಾನ ತಾಳಮದ್ದಳೆ ಪ್ರಿಯರಿಗೆ ಶ್ರೀ ರಾಮ ಜೋಯಿಸ ಎಂಬ ಹೆಸರು ಚಿರ ಪರಿಚಿತ. ಸ್ವತಃ ಕಲಾವಿದನಾಗಿರುವುದರ ಜೊತೆಗೆ ಯಕ್ಷಗಾನ ಪ್ರದರ್ಶನ ಮತ್ತು ತಾಳಮದ್ದಳೆಗಳನ್ನು ಸಂಘಟಿಸುವುದರಲ್ಲಿ ನಿಪುಣ. ಆಟವಾಗಲೀ ಕೂಟವಾಗಲೀ ಪ್ರಸ್ತುತ ಸನ್ನಿವೇಶದಲ್ಲಿ ಸಂಘಟನೆ ಎನ್ನುವುದು ಬಹಳ ದೊಡ್ಡ ಸವಾಲು.
ಪ್ರಮುಖ ಕಲಾವಿದರ ಪಟ್ಟಿಯನ್ನು ನೋಡಿ ಅವರ ಅರ್ಥಗಾರಿಕೆಯನ್ನೋ ಅಥವಾ ವೇಷವನ್ನೋ ನೋಡಲು ಬರುವ ಜನರಿರುವಾಗ ಕೊನೆಯ ಕ್ಷಣದಲ್ಲಿ ಅನಿವಾರ್ಯವಾಗಿಯೋ ಅಥವಾ ಇನ್ನಿತರ ಕಾರಣಗಳಿಗಾಗಿಯೋ ಪ್ರಸಿದ್ಧ ಕಲಾವಿದರು ಪ್ರದರ್ಶನಗಳಿಗೆ ಕೊನೆಯ ಕ್ಷಣದಲ್ಲಿ ಅಲಭ್ಯರಾದಾಗ ಪ್ರೇಕ್ಷಕರ ಅಸಹನೆ, ಕೋಪ, ತಾಪಗಳಿಗೆ ಮೊದಲು ಬಲಿಯಾಗುವುದು ಸಂಘಟಕನೇ ಆಗಿರುತ್ತಾನೆ. ಆದುದರಿಂದ ಸಂಘಟನೆಯ ಜವಾಬ್ದಾರಿಯನ್ನು ವಹಿಸಿಕೊಂಡರೆ ಸಾಲದು. ಅದನ್ನು ಸಮರ್ಥವಾಗಿ ನಿಭಾಯಿಸುವುದು ಹೇಗೆಂದು ತಿಳಿದಿರಬೇಕು. ಇಂತಹಾ ಸಂದರ್ಭಗಳಲ್ಲಿ ನಾಜೂಕಾಗಿ ಬೆಣ್ಣೆಯಿಂದ ಕೂದಲು ತೆಗೆದಂತೆ ಪರಿಸ್ಥಿತಿಯನ್ನು ನಿರ್ವಹಿಸುವ ಹೊಣೆಗಾರಿಕೆ ಸಂಘಟನೆಯನ್ನು ಹೊತ್ತವನ ಜವಾಬ್ದಾರಿ.
ಈ ರೀತಿಯ ಸಮಸ್ಯೆಗಳು ಹಾಗೂ ಸನ್ನಿವೇಶಗಳು ಉಂಟಾಗದಂತೆ ಎಚ್ಚರ ವಹಿಸುವ ಮತ್ತು ಸುಲಲಿತವಾಗಿ ನಿರ್ವಹಿಸುವ ಜಾಣ್ಮೆ ರಾಮ ಜೋಯಿಸರಲ್ಲಿದೆ. ಆದುದರಿಂದಲೇ ಅವರಿಂದು ತಾಳಮದ್ದಳೆಯ ಪ್ರಮುಖ ಸಂಘಟರಾಗಿ ಗುರುತಿಸಲ್ಪಟ್ಟಿದ್ದಾರೆ. ರಾಮ ಜೋಯಿಸರ ತಂದೆಯ ಹೆಸರು ವೆಂಕಟ್ರಮಣ ಜೋಯಿಸ್ ತಾಯಿ ಲಕ್ಷ್ಮಿ. ನೆಟ್ಟಾರು ಸರಕಾರೀ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಕಾಲೇಜು ವಿದ್ಯಾಭ್ಯಾಸ ಎಸ್. ಡಿ. ಎಂ ಉಜಿರೆ. ಕಾಲೇಜು ವಿದ್ಯಾಭ್ಯಾಸದ ನಂತರ ಉದ್ಯಮ ಕ್ಷೇತ್ರಕ್ಕೆ ಕಾಲಿರಿಸಿದರು. ಅವರು ಈಗ ಕ್ಲಾಸ್ 1 ವಿದ್ಯುತ್ ಗುತ್ತಿಗೆದಾರ , ಎಚ್ ಟಿ ಲೈನ್, ಟ್ರಾನ್ಸ್ ಫಾರ್ಮರ್, ಹೌಸ್ ವೈರಿಂಗ್ , ಕೃಷಿಗೆ ಸಂಬಂಧಿಸಿದ ವಿದ್ಯುತ್ ಸಂಪರ್ಕವೇ ಮೊದಲಾದ ಎಲೆಕ್ಟ್ರಿಕ್ ವಿಭಾಗದಲ್ಲಿ A to Z ಕೆಲಸಗಳನ್ನು ಮಾಡಿಸುವ ಎಲೆಕ್ಟ್ರಿಕಲ್ ಕಾಂಟ್ರಾಕ್ಟರ್. ಹುಟ್ಟಿದ್ದು ತಮ್ಮ ಬೆಳ್ಳಾರೆಯ ಮನೆಯಲ್ಲಿ.
“ಹವ್ಯಾಸೀ ತಾಳಮದ್ದಳೆಯಲ್ಲಿ ಹವ್ಯಾಸೀ ಅರ್ಥಧಾರಿ ನಾನು” ಬೆಳ್ಳಾರೆ ರಾಮ ಜೋಯಿಸರು ಯಕ್ಷಗಾನ ರಂಗದಲ್ಲಿ ತಮ್ಮ ಸ್ಥಾನದ ಬಗ್ಗೆ ಹೀಗೆ ವ್ಯಾಖ್ಯಾನಿಸುತ್ತಾರೆ. ಮೊದಲು ಆಟಗಳಲ್ಲಿ ವೇಷ ಮಾಡುತಿದ್ದರು. ಆಟದಲ್ಲಿ ಅವರ ಚಂದ್ರಹಾಸ ಪ್ರಸಂಗದ ಮದನನ ಪಾತ್ರವನ್ನು ಸುಣ್ಣಂಬಳ ವಿಶ್ವೇಶ್ವರ ಭಟ್ಟರೇ ಮೆಚ್ಚಿಕೊಂಡಿದ್ದರು. ಆದರೆ ಅವರ ಆಸಕ್ತಿಯ ಕ್ಷೇತ್ರ ಯಕ್ಷಗಾನ ತಾಳಮದ್ದಳೆ. ತಾಳಮದ್ದಳೆಯಲ್ಲಿ ಸತತವಾಗಿ ಭಾಗವಹಿಸುತ್ತಿದ್ದರು. ಅದರಲ್ಲೂ ತಾಳಮದ್ದಲೆಯನ್ನು ಸಂಘಟಿಸುವುದು ಇವರ ಮೆಚ್ಚಿನ ಹವ್ಯಾಸ. ಕ್ರಮೇಣ ವೇಷ ಕಳಚಿದ ಮೇಲೆ ಮುಖದ ಮೇಲೆ ಹಚ್ಚಿದ ಬಣ್ಣವು ಅಲರ್ಜಿಯಾಗುತ್ತಿದ್ದರಿಂದ ಹಾಗೂ ಬಣ್ಣವನ್ನು ತೆಗೆಯುವಲ್ಲಿ ಕಷ್ಟವಾಗುತ್ತಿದ್ದುದರಿಂದ ವೇಷ ಮಾಡುವುದನ್ನು ಬಿಟ್ಟರು.
ತಾಳಮದ್ದಳೆ ಸಂಘಟಿಸುವುದು ಇವರಿಗೆ ಅತ್ಯಂತ ಇಷ್ಟದ ವಿಷಯ. ಹೆಚ್ಚು ಹೆಚ್ಚು ತಾಳಮದ್ದಳೆ ನಡೆಯಬೇಕು. ಒಳ್ಳೆಯ ಕಲಾವಿದರು ಭಾಗವಹಿಸಿ ಒಟ್ಟಿನಲ್ಲಿ ತಾಳಮದ್ದಳೆ ಕಾರ್ಯಕ್ರಮ ಒಳ್ಳೆಯದಾಗಬೇಕು ಎಂದೇ ರಾಮ ಜೋಯಿಸರ ಅಭಿಪ್ರಾಯ ಹಾಗೂ ನಿಲುವು. ಹಾಗೂ ಈ ನಿಲುವಿಗೆ ಬದ್ಧವಾಗಿಯೇ ಅವರು ತಾಳಮದ್ದಳೆ ಕಾರ್ಯಕ್ರಮ ಸಂಘಟಿಸುತ್ತಾರೆ. ಸಂಘಟಕರಿಗೆ ಹಲವಾರು ವಿಚಾರಗಳು ತಿಳಿದಿರಬೇಕಾಗುತ್ತದೆ ಎಂದು ಅವರು ಹೇಳುತ್ತಾರೆ.
“ಯಾವ ಯಾವ ಕಲಾವಿದರಿಗೆ ಯಾವ ಪಾತ್ರವನ್ನು ನೀಡಿದರೆ ತಾಳಮದ್ದಳೆ ಯಶಸ್ವಿಯಾಗಬಹುದು ಎಂಬ ಜ್ಞಾನ ಸಂಘಟಕರಿಗೆ ಗೊತ್ತಿರಬೇಕಾಗುತ್ತದೆ. ಒಟ್ಟು ಪ್ರಸಂಗ ನಿರ್ಧರಿಸಿ ಕಲಾವಿದರನ್ನು ಆಯ್ಕೆ ಮಾಡುವುದಲ್ಲ. ಉದಾಹರಣೆಗೆ ಭೀಷ್ಮ ವಿಜಯ ಪ್ರಸಂಗದಲ್ಲಿ ಭೀಷ್ಮ ಪಾತ್ರಧಾರಿಯನ್ನು ಆಯ್ಕೆ ಮಾಡಿದ ಮೇಲೆ, ಭೀಷ್ಮನಿಗೆ ಪ್ರತಿಯಾಗಿ ಇನ್ನೊಬ್ಬರನ್ನು ಅಂಬೆ, ಸಾಳ್ವ, ಪರಶುರಾಮ, ಏಕಲವ್ಯ, ವೃದ್ಧ ಬ್ರಾಹ್ಮಣ ಪಾತ್ರಧಾರಿಗಳಾಗಿ ಆಯ್ಕೆ ಮಾಡುವಾಗ ಹಲವಾರು ಬಾರಿ ಯೋಚಿಸಬೇಕಾಗುತ್ತದೆ. ಈ ತಾಳಮದ್ದಳೆ ಯಶಸ್ವಿಯಾಗಬೇಕಾದರೆ ಭೀಷ್ಮ ಪಾತ್ರಧಾರಿಯ ಮನೋಧರ್ಮಕ್ಕೆ ಅನುಗುಣವಾಗಿ ಅರ್ಥ ಹೇಳುವ ಅಂಬೆ ಪಾತ್ರಧಾರಿ ಯಾರು ಎಂಬುದನ್ನು ನಿರ್ಧರಿಸುವುದು ಮುಖ್ಯವಾಗುತ್ತದೆ. ತಾಳಮದ್ದಳೆ ಸುಸೂತ್ರವಾಗಿ ರಂಜನೆಯನ್ನು ಕೊಡಬೇಕಾದರೆ ಭೀಷ್ಮ ಪಾತ್ರಧಾರಿಯ ಎದುರು ಅಂಬೆ ಯಾರು? ವೃದ್ಧ ಬ್ರಾಹ್ಮಣ ಯಾರು? ಸಾಳ್ವ ಯಾರು? ಪರಶುರಾಮ ಯಾರು? ಏಕಲವ್ಯ ಯಾರು ಎಂಬುದೂ ಮುಖ್ಯವಾಗುತ್ತದೆ. ಆದುದರಿಂದ ಕಲಾವಿದರ ಆಯ್ಕೆಯೂ ತಾಳಮದ್ದಳೆ ಸಂಘಟಕರ ದೊಡ್ಡ ಜವಾಬ್ದಾರಿ” ಎಂದು ರಾಮ ಜೋಯಿಸರು ಹೇಳುತ್ತಾರೆ.
ಈ ಎಲ್ಲಾ ವಿಚಾರಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದುದರಿಂದಲೇ ತಾಳಮದ್ದಳೆ ಕ್ಷೇತ್ರದಲ್ಲಿ ಸಂಘಟಕರಾಗಿಯೂ ಅರ್ಥಧಾರಿಯಾಗಿಯೂ ಶ್ರೀ ರಾಮ ಜೋಯಿಸರ ಹೆಸರು ಮೇಲ್ಪಂಕ್ತಿಯಲ್ಲಿ ನಿಲ್ಲುತ್ತದೆ. ಮುಖ್ಯ ಪಾತ್ರ ಮಾತ್ರವಲ್ಲದೆ ಅದರ ಎದುರು ಪಾತ್ರಗಳ ಆಯ್ಕೆ ಕೂಡ ಒಂದು ತಾಳಮದ್ದಳೆಯ ಯಶಸ್ಸಿನಲ್ಲಿ ಮಹತ್ತರವಾದ ಪರಿಣಾಮವನ್ನು ಉಂಟುಮಾಡುತ್ತದೆ. ಎಷ್ಟೋ ತಾಳಮದ್ದಲೆಗಳನ್ನು ಸಂಘಟಿಸಿದ ಕೀರ್ತಿ ರಾಮಾ ಜೋಯಿಸರಿಗೆ ಸಲ್ಲುತ್ತದೆ. ಯಕ್ಷಗಾನದ ದಂತಕತೆ ಶೇಣಿ ಗೋಪಾಲಕೃಷ್ಣ ಭಟ್ಟರು ಭಾಗವಹಿಸಿದ ತಾಳಮದ್ದಲೆಗಳನ್ನೂ ಸಂಘಟಿಸಿದ್ದರು. ಇವರ ಅರ್ಥಧಾರಿಗಳ ಆಯ್ಕೆಗೆ ಮತ್ತು ಸಂಘಟನಾ ಚತುರತೆಗೆ ಶೇಣಿಯವರೂ ಒಮ್ಮೆ ಮೆಚ್ಚಿಕೊಂಡು ತಲೆದೂಗಿದ್ದರು.
ತಾಳಮದ್ದಳೆ ಕ್ಷೇತ್ರದಲ್ಲಿಯೂ ಅಥವಾ ಯಾವುದೇ ಕ್ಷೇತ್ರದಲ್ಲಿಯೇ ಆಗಲಿ ಸಂಘಟನೆ ಎಂಬುದು ಒಂದು ದೊಡ್ಡ ಜವಾಬ್ದಾರಿಯ ಕೆಲಸ. ಸಮಯಕ್ಕೆ ಸರಿಯಾಗಿ ಅನಿವಾರ್ಯ ಕಾರಣದಿಂದಲೋ ಅಥವಾ ಇನ್ನಿತರ ಸಕಾರಾತ್ಮಕ ಮತ್ತು ನಕಾರಾತ್ಮಕ ಕಾರಣಗಳಿಂದಲೋ ಕಾರ್ಯಕ್ರಮಕ್ಕೆ ಕಲಾವಿದರು ಅಲಭ್ಯರಾದಾಗ ಸಂಘಟಕರಾದವರು ಇದರ ಹೊಣೆಯನ್ನು ಹೊತ್ತುಕೊಳ್ಳಬೇಕಾಗುತ್ತದೆ.
“ಆದರೆ ನಾನು ಸಂಘಟಿಸಿದ ಯಾವುದೇ ತಾಳಮದ್ದಳೆಗಳಲ್ಲಿ ಇಂತಹಾ ಯಾವುದೇ ಪ್ರಸಂಗಗಳು ನಡೆದಿಲ್ಲ. ಎಲ್ಲಾ ಕಲಾವಿದರೂ ಸಕಾರಾತ್ಮಕ ಧೋರಣೆಯಿಂದ ಸ್ಪಂದಿಸಿ ಭಾಗವಹಿಸುವುದರ ಮೂಲಕ ಸಹಕರಿಸಿದ್ದಾರೆ. ಇದು ನನ್ನ ಪೂರ್ವಜನ್ಮದ ಪುಣ್ಯವೆಂದೇ ಹೇಳಬೇಕು”. ಎಂದು ಜೋಯಿಸರು ಪ್ರತಿಕ್ರಯಿಸುತ್ತಾರೆ. ಆದರೆ ರಾಮ ಜೋಯಿಸರು ಹೇಳುವಂತೆ ಬರಿಯ ಪೂರ್ವಜನ್ಮದ ಪುಣ್ಯ ಮಾತ್ರದಿಂದಲೇ ಇದು ಸಾಧ್ಯವಾದುದಲ್ಲ. ಪುಣ್ಯದ ಜೊತೆಗೆ ಅವರ ಸಂಘಟನಾ ಕೌಶಲವೂ ಇಲ್ಲಿ ಕೆಲಸ ಮಾಡಿದೆ ಎಂದು ಅನಿಸುತ್ತದೆ. ಕೆಲವೊಮ್ಮೆ ಒಂದರ್ಧ ಘಂಟೆ ತಡವಾಗಿ ಆಗಮಿಸಬೇಕಾದ ಅನಿವಾರ್ಯತೆಯನ್ನು ಕಲಾವಿದರು ಕರೆ ಮಾಡಿ ತಿಳಿಸಿದಾಗ ಮೊದಲಿನ ಅರ್ಥಧಾರಿಯಲ್ಲಿ ಸ್ವಲ್ಪ ಧೀರ್ಘ ಮಾತಾಡುವಂತೆ ಕೇಳಿಕೊಂಡು ಹೊಂದಾಣಿಕೆಯಲ್ಲಿ ತಾಳಮದ್ದಲೆಯನ್ನು ನಡೆಸಿದ್ದೂ ಇದೆ. ಅದರ ಹೊರತಾಗಿ ಯಾವುದೇ ಕಲಾವಿದರು ಗೈರುಹಾಜರಾಗುವ ಪರಿಸ್ಥಿತಿ ಬಂದಿಲ್ಲ ಎಂದು ಅವರು ಹೇಳುತ್ತಾರೆ.
ರಾಮಾ ಜೋಯಿಸರು ಅರ್ಥಧಾರಿಯಾಗಿಯೂ ಈ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸಿದವರು. ತಮ್ಮ ವಿಶಿಷ್ಟ ಶೈಲಿಯ ಅರ್ಥಧಾರಿಕೆಯಿಂದ ಪ್ರೇಕ್ಷಕರ ಮನಸ್ಸನ್ನು ಬಹು ಬೇಗನೆ ತಮ್ಮತ್ತ ಸೆಳೆಯಬಲ್ಲವರು. ಮುಖ್ಯ ಪಾತ್ರಗಳಿಂದ ಹಿಡಿದು ಪೋಷಕ ಪಾತ್ರಗಳು, ಹಾಸ್ಯ ಪಾತ್ರಗಳೇ ಮೊದಲಾದ ಎಲ್ಲ ಪಾತ್ರಗಳ ಅರ್ಥವನ್ನು ಹೇಳಬಲ್ಲಂತಹ ಸಾಮರ್ಥ್ಯ ಅವರಿಗೆ ಇದೆ. ಮುಖ್ಯ ಪಾತ್ರಗಳ ಅರ್ಥವನ್ನು ಹೇಳಬಲ್ಲ ಪ್ರಸಿದ್ಧ ಅರ್ಥಧಾರಿಯೊಬ್ಬ ಒಂದೇ ಪದ್ಯವಿರುವ ಪಾತ್ರದ ಅರ್ಥವನ್ನು ಹೇಳುವುದನ್ನು ಕಾಣುವುದು ಇಂದಿನ ಕಾಲದಲ್ಲಿ ದುರ್ಲಭ. ಆದರೆ ಜೋಯಿಸರು ಯಾವುದೇ ಅರ್ಥವನ್ನು ಹೇಳಬಲ್ಲವರು. ಜಾಂಬವತಿ ಕಲ್ಯಾಣದಲ್ಲಿ ಜಾಂಬವ ಪಾತ್ರದ ಅರ್ಥವನ್ನೂ ಹೇಳುತ್ತಾರೆ. ಇನ್ನೊಮ್ಮೆ ಜಾಂಬವತಿ ಪಾತ್ರದ ಅರ್ಥವನ್ನೂ ಹೇಳುತ್ತಾರೆ. ಸಂಘಟಕನ ನೆಲೆಯಲ್ಲಿ ಅವರ ಈ ನಡೆ ಅವಶ್ಯಕ ಎಂದು ಕಂಡರೂ ತಾನು ಸಂಘಟಕನಾಗಿರದ ಎಷ್ಟೋ ತಾಳಮದ್ದಳೆಗಳಲ್ಲಿ ಮುಖ್ಯ ಪಾತ್ರವನ್ನು ಅವರು ಇತರ ಕಲಾವಿದರಿಗೆ ವಹಿಸುವಂತೆ ಸೂಚಿಸಿದ್ದೂ ಉಂಟು.
ಆದರೂ ಮುಖ್ಯ ಪಾತ್ರಗಳ ಅರ್ಥ ಹೇಳುವಷ್ಟು ತಾಳಮದ್ದಳೆ ಕ್ಷೇತ್ರದಲ್ಲಿ ತಾನಿನ್ನೂ ಬೆಳೆದಿಲ್ಲ ಎಂಬ ವಿನೀತ ಭಾವವನ್ನು ತೋರುವ ರಾಮ ಜೋಯಿಸರು “ಅರ್ಥಗಾರಿಕೆಯ ಅನುಭವದಿಂದಲೇ ಮುಖ್ಯ ಪಾತ್ರಗಳ ನಿರ್ವಹಣೆಯ ಮಟ್ಟಕ್ಕೆ ಕಲಾವಿದನೊಬ್ಬ ಏರಬೇಕು” ಎಂದು ಅಭಿಪ್ರಾಯ ಪಡುತ್ತಾರೆ. ಪೋಷಕ ಪಾತ್ರಗಳ ನಿರ್ವಹಣೆಗಾಗಿ ಎಲ್ಲಾ ಮುಖ್ಯ ಪಾತ್ರಧಾರಿಗಳಿಂದ ಪ್ರಶಂಸೆಯನ್ನು ಪಡೆದವರು. ಪ್ರೇಕ್ಷಕರಿಂದಲೂ ಮೆಚ್ಚುಗೆಯನ್ನು ಗಿಟ್ಟಿಸಿದವರು. ಆದರೂ ಅವರು ಪೋಷಕ ಪಾತ್ರಗಳು ಮಾತ್ರವಲ್ಲದೆ ಮುಖ್ಯ ಪಾತ್ರಗಳ ಅರ್ಥವನ್ನೂ ಹಲವಾರು ಕಡೆಗಳಲ್ಲಿ ಹೇಳಿದ್ದಾರೆ. ಹಾಗೂ ಅದರಲ್ಲಿ ಪರಿಣತಿಯನ್ನೂ ಪಡೆದಿದ್ದಾರೆ. ಸ್ವಭಾವತಃ ಹಾಸ್ಯ ಪ್ರವೃತ್ತಿಯವರಾದ ಇವರು ಹಾಸ್ಯ ಪಾತ್ರಗಳನ್ನು ಸುಲಲಿತವಾಗಿ ನಿರ್ವಹಿಸುತ್ತಾರೆ. ಹಾಸ್ಯ ಪಾತ್ರವನ್ನು ಎಷ್ಟು ವಿನೋದವಾಗಿ ಕಟ್ಟುತ್ತಾರೋ ಮುಖ್ಯಪಾತ್ರದಲ್ಲಿ ತದ್ವಿರುದ್ಧವಾಗಿ ಅಷ್ಟೇ ಗಂಭೀರತೆಯಿಂದ ಪಾತ್ರದರಮನೆಯನ್ನು ಕಟ್ಟಿಕೊಡುತ್ತಾರೆ.
ತಾಳಮದ್ದಳೆಯ ಸಂಘಟನೆಯಲ್ಲಿ ಏನಾದರೂ ಸವಾಲುಗಳಿವೆಯೇ ಎಂಬ ಪ್ರಶ್ನೆಗೆ “ತಾಳಮದ್ದಳೆ ಆಕಾಂಕ್ಷಿಗಳು ತಾಳಮದ್ದಳೆ ಆಗಬೇಕು ಎಂದು ನಮ್ಮನ್ನು ಸಂಪರ್ಕಿಸಿದಲ್ಲಿಂದ, ತೊಡಗಿದಲ್ಲಿಂದ ನಂತರ ಆ ತಾಳಮದ್ದಳೆ ಮುಗಿಯುವ ವರೆಗೂ ಸಂಘಟಕನಿಗೆ ಇದು ಒಂದು ಸವಾಲೇ ಆಗಿರುತ್ತದೆ” ಎಂದು ಅವರು ಉತ್ತರಿಸುತ್ತಾರೆ.
“ತಾಳಮದ್ದಲೆಯಲ್ಲಿಯೂ ಹಲವಾರು ಬದಲಾವಣೆಗಳಾಗಿವೆ. ಮೊದಲಿನ ತಾಳಮದ್ದಳೆ ಕೂಟಗಳಿಗೂ ಈಗಿನ ತಾಳಮದ್ದಳೆ ಕೂಟಗಳಿಗೂ ತುಂಬಾ ವ್ಯತ್ಯಾಸವಾಗಿದೆ ಎಂಬುದು ನಿಜ. ಯಕ್ಷಗಾನ ಕಾಲಮಿತಿಯ ಪ್ರದರ್ಶನದಂತೆ ತಾಳಮದ್ದಲೆಯಲ್ಲೂ ಸಮಯ ಹೃಸ್ವವಾಗಿದೆ. ಪರಸ್ಪರ ಪೂರಕ ಸಂಭಾಷಣೆಗಳು ಕಡಿಮೆಯಾಗಿವೆ. ವಾದ, ವಿವಾದ, ವಿರೋಧ, ಕುಟುಕುವುದು, ಎದುರು ಪಾತ್ರಧಾರಿಯಿಂದ ತಾನೇ ಮೇಲು ಎಂಬ ಭಾವ ಪ್ರೇಕ್ಷಕರಲ್ಲಿ ಉಂಟುಮಾಡುವುದಕ್ಕೆ ಪ್ರಯತ್ನಿಸುವುದು ಮೊದಲಾದುವುಗಳು ಈಗ ಹೆಚ್ಚಾಗಿವೆ. ಆದರೆ ಇದು ತಪ್ಪು ಎಂದೇನಲ್ಲ. ಇದರ ಜೊತೆಗೆ ಪೂರಕವಾದ ಚುಟುಕು ಸಂಭಾಷಣೆಗಳು ಇದ್ದರೆ ಚಂದ. ಟೇಬಲ್ ಟೆನಿಸ್ ಆಟದಂತೆ ವೇಗದ ಚುಟುಕು ಸಂಭಾಷಣೆಗಳು ಈಗ ಕಾಣಸಿಗುವುದು ಬಹಳ ಅಪರೂಪ. ತಾಳಮದ್ದಳೆ ಎಂದರೆ ಬರಿಯ ಚರ್ಚೆಯಲ್ಲ. ಪೂರ್ವ ಸಿದ್ಧತೆಯಿಲ್ಲದೆ ರಂಗದಲ್ಲಿ ಪ್ರತ್ಯಕ್ಷವಾಗುವ ಉತ್ತರ ಪ್ರತ್ಯುತ್ತರಗಳ ಚುಟುಕು ಸಂಭಾಷಣೆಗಳು ಈಗ ಈ ಕ್ಷೇತ್ರದಿಂದ ನಿಧಾನವಾಗಿ ಮಾಯವಾಗುತ್ತಾ ಇದೆ” ಎಂದು ಜೋಯಿಸರು ಬೇಸರ ವ್ಯಕ್ತಪಡಿಸುತ್ತಾರೆ.
ಹೆಚ್ಚಿನ ಪ್ರೇಕ್ಷಕರು ಸ್ಟಾರ್ ವ್ಯಾಲ್ಯೂ ಇರವ ಕಲಾವಿದರನ್ನೇ ಕೂಟಕ್ಕೆ ಅಪೇಕ್ಷೆಪಡುತ್ತಿರುವುದರಿಂದ ಕೆಲವು ಪ್ರತಿಭಾವಂತ ಅರ್ಥಧಾರಿಗಳು ಮುನ್ನೆಲೆಗೆ ಬಾರದೆ ಹಿನ್ನೆಲೆಯಲ್ಲಿಯೇ ಉಳಿದು ಕೊಂಡಿದ್ದಾರೆ ಎಂಬುದು ನೋವಿನ ವಿಚಾರ ಎನ್ನುವುದು ಅವರ ಅಭಿಪ್ರಾಯ. ಪ್ರಸ್ತುತ ತನ್ನ ಒಡನಾಡಿಗಳಲ್ಲಿ ಎಲ್ಲ ಪಾತ್ರಗಳಲ್ಲೂ ಸಮರ್ಥವಾಗಿ ಅರ್ಥ ಹೇಳುವವರಾದ ಸುಣ್ಣಂಬಳ ವಿಶ್ವೇಶ್ವರ ಭಟ್ ಮತ್ತು ವಾಸುದೇವ ರಂಗಾ ಭಟ್ ಅವರನ್ನು ಹೆಚ್ಚಾಗಿ ಮೆಚ್ಚಿಕೊಳ್ಳುವ ರಾಮ ಜೋಯಿಸರು ಇತರ ಪಾತ್ರಧಾರಿಗಳನ್ನು ಅತ್ಯಂತ ಸಮರ್ಥವಾಗಿ ಮಾತನಾಡಿಸುವ ಅರ್ಥಧಾರಿಯೆಂದು ಸರ್ಪಂಗಳ ಈಶ್ವರ ಭಟ್ಟರನ್ನು ಗುರುತಿಸುತ್ತಾರೆ.
ಆದರೆ ಅವರು ಹಿರಿಯರನ್ನು ಗುರುತಿಸುವುದನ್ನು ಮರೆಯುದಿಲ್ಲ. ಹಿರಿಯ ಕಲಾವಿದರಾದ ಶೇಣಿ, ಸಾಮಗ, ಪೆರ್ಲ, ತೆಕ್ಕಟ್ಟೆ, ಜೋಶಿ, ಮೂಡಂಬೈಲು, ಉಡುವೆಕೋಡಿ, ಕುಂಬಳೆ ಮೊದಲಾದವರನ್ನು ಇಷ್ಟಪಡುತ್ತಾರೆ.ರಾಮ ಜೋಯಿಸರು ಹೆಚ್ಚಿನೆಲ್ಲಾ ಕಲಾವಿದರೊಂದಿಗೆ ಅರ್ಥ ಹೇಳಿದ್ದಾರೆ. ಅದರಲ್ಲೂ ಶೇಣಿ, ಪೆರ್ಲ, ತೆಕ್ಕಟ್ಟೆ, ಕುಂಬಳೆ, ಜೋಶಿ, ಮೂಡಂಬೈಲು, ಉಡುವೆಕೋಡಿ, ಮೂಡಂಬೈಲು, ಬರೆ ಕೇಶವ ಭಟ್, ಶಂಭು ಶರ್ಮ, ಜಬ್ಬಾರ್ ಸಮೊ, ಅಶೋಕ ಭಟ್ ಉಜಿರೆ, ರಾಧಾಕೃಷ್ಣ ಕಲ್ಚಾರ್, ಹರೀಶ್ ಬಳಂತಿಮೊಗರು ಮೊದಲಾದವರೊಂದಿಗೆ ಕೂಟದ ವೇದಿಕೆ ಹಂಚಿಕೊಂಡ ಜೋಯಿಸರು ರಾಮದಾಸ ಸಾಮಗರ ಜೊತೆಗೆ ಹಲವಾರು ಕೂಟಗಳಲ್ಲಿ ಅರ್ಥ ಹೇಳಿದವರು. ರಾಮ ಜೋಯಿಸರ ಅರ್ಥಗಾರಿಕೆಯನ್ನು ರಾಮದಾಸ ಸಾಮಗರು ಮೆಚ್ಚಿ ಪ್ರಶಂಸಿಸಿದ್ದರು.
“ಹಿಂದಿನ ಹಾಸ್ಯಗಾರರಲ್ಲಿ ಜೋಶಿ, ವೇಣೂರು, ನಯನಕುಮಾರ್ ಅವರನ್ನು ಅತಿಯಾಗಿ ಇಷ್ಟಪಡುತ್ತೇನೆ. ಈಗ ಆಟ ಕೂಟಗಳೆರಡರಲ್ಲೂ ಪ್ರಸ್ತುತ ರಂಗದಲ್ಲಿ ನಾನು ಮೆಚ್ಚುವ ಇಬ್ಬರು ಹಾಸ್ಯಗಾರರು ಬಂಟ್ವಾಳ ಜಯರಾಮ ಆಚಾರ್ಯ ಮತ್ತು ರವಿಶಂಕರ ವಳಕ್ಕುಂಜ. ಬಂಟ್ವಾಳ ಜಯರಾಮ ಆಚಾರ್ಯರು ರಂಗದಲ್ಲಿ ಬಂದು ನಿಲ್ಲುವ ಶೈಲಿ, ಹಾಸ್ಯವನ್ನು ಉತ್ಪಾದಿಸುವ ಅವರ ಮುಖ, ಅವರ ಪ್ರತ್ಯುತ್ಪನ್ನಮತಿ ಸಾಮರ್ಥ್ಯಕ್ಕಾಗಿ ಅವರನ್ನು ಮೆಚ್ಚುತ್ತೇನೆ. ಪ್ರದರ್ಶನ ಕೆಡದಂತೆ ಕಾಪಾಡುವುದರಲ್ಲಿ ಹಾಸ್ಯಗಾರನಿಗೆ ವಿಶೇಷ ಜವಾಬ್ದಾರಿಯಿದೆ, ಯಕ್ಷಗಾನದ ಎಲ್ಲಾ ವಿಷಯಗಳೂ ತಿಳಿದಿರಬೇಕು. ಯಾರಾದರೂ ಮುಖ್ಯ ವೇಷಧಾರಿಯ ಅನುಪಸ್ಥಿತಿಯಲ್ಲಿ ಪ್ರದರ್ಶನವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಅಥವಾ ಕೆಡದಂತೆ ನಿರ್ದೇಶಿಸುವ ಸಾಮರ್ಥ್ಯ ಇರುವವರಲ್ಲಿ ರವಿಶಂಕರ್ ವಳಕ್ಕುಂಜ ಒಬ್ಬರು. ಕೇವಲ ಹಾಸ್ಯ ಮಾತ್ರವಲ್ಲದೆ ಪುರಾಣಜ್ಞಾನ, ಪ್ರಸಂಗ ನಡೆ ಮುಂತಾದ ಎಲ್ಲಾ ವಿಷಯಗಳನ್ನು ಕರತಲಾಮಲಕ ಮಾಡಿಕೊಂಡ ರವಿಶಂಕರ ವಳಕ್ಕುಂಜರನ್ನು ಮೆಚ್ಚುತ್ತೇನೆ”. ಇದು ಜೋಯಿಸರ ಮಾತುಗಳು.
ತಮ್ಮನ್ನು ತಾವು ಪೋಷಕ ಪಾತ್ರಧಾರಿ ಎಂದು ಹೇಳಿಕೊಂಡರೂ ರಾಮ ಜೋಯಿಸರು ಹೆಚ್ಚಿನ ಮುಖ್ಯ ಪಾತ್ರಗಳಲ್ಲಿಯೂ ಅರ್ಥ ಹೇಳಿದ್ದಾರೆ. ಹಲವಾರು ತಾಳಮದ್ದಳೆಗಳಲ್ಲಿ ಮುಖ್ಯಪಾತ್ರಗಳನ್ನು ನಿರ್ವಹಿಸಿ ಕೂಟ ಸುಸೂತ್ರವಾಗಿ ನಡೆಯುವಂತೆ ಮಾಡಿದ್ದಾರೆ. ಕರ್ಣ ಪರ್ವದ ಕರ್ಣ, ಕೃಷ್ಣಾರ್ಜುನದ ಅರ್ಜುನ, ದಾರುಕ, ಸುಭದ್ರೆ, ಬಲರಾಮ, ಈಶ್ವರ, ವಿದುರ, ಭೀಷ್ಮ, ಜಾಂಬವತಿ ಕಲ್ಯಾಣದ ಜಾಂಬವ ಹಾಗೂ ಹೆಚ್ಚಿನ ಎಲ್ಲಾ ಪೋಷಕ ಹಾಗೂ ಹಾಸ್ಯ ಪಾತ್ರಗಳ ಅರ್ಥವನ್ನು ಹೇಳಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ಹಲವಾರು ವರ್ಷಗಳ ಸೇವೆ ಸಲ್ಲಿಸಿದ ರಾಮ ಜೋಯಿಸರನ್ನು ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿದ್ದಾರೆ.
ತಾಳಮದ್ದಳೆಯಲ್ಲಿ ಜೋಯಿಸರಿಗೆ ಯಾರೂ ಗುರುಗಳು ಇಲ್ಲದಿದ್ದರೂ ತಾಳಮದ್ದಳೆಯ ದೊಡ್ಡ ಕೂಟಗಳಿಗೆ ತನ್ನನ್ನು ಪರಿಚಯಿಸಿದ್ದು ಭಾಗವತರಾದ ಪದ್ಯಾಣ ಗಣಪತಿ ಭಟ್ಟರೆಂದು ನೆನಪಿಸಿಕೊಳ್ಳುತ್ತಾರೆ. ತನಗೆ ಅಧ್ಯಯನಾಸಕ್ತಿ ಕಡಿಮೆ ಎಂದು ಅವರು ಹೇಳುಕೊಳ್ಳುತ್ತಾರೆ. ಅನುಭವದಿಂದಲೇ ಕಲಿತ ಅರ್ಥಧಾರಿ ಅವರು. ಗ್ರಂಥಗಳನ್ನು ಓದುವುದು ಕಡಿಮೆ. ಆದರೆ ಶೇಣಿ ಗೋಪಾಲಕೃಷ್ಣ ಭಟ್ಟರ ಅರ್ಥಗಾರಿಕೆಯನ್ನು ನೋಡಿ, ಕೇಳಿ ಅರ್ಥಗಾರಿಕೆಯ ತಾಂತ್ರಿಕ ಕೌಶಲಗಳನ್ನು ಕಲಿತರು. ಅವರ ಮೇಲೆ ಶೇಣಿಯವರು ಅಷ್ಟೊಂದು ಪ್ರಭಾವ ಬೀರಿದ್ದರು. ಶೇಣಿಯವರ ಎಲ್ಲಾ ಅರ್ಥಗಾರಿಕೆಯ ತುಣುಕುಗಳು ರಾಮ ಜೋಯಿಸರಿಗೆ ಚಿಕ್ಕಂದಿನಲ್ಲಿ ಬಾಯಿಪಾಠ ಬರುತ್ತಿತ್ತಂತೆ.
ರಾಮ ಜೋಯಿಸರ ಅತ್ಯಂತ ಇಷ್ಟದ ಭಾಗವತ ಪದ್ಯಾಣ ಗಣಪತಿ ಭಟ್, ಪುತ್ತಿಗೆ ರಘುರಾಮ ಹೊಳ್ಳ, ದಿನೇಶ ಅಮ್ಮಣ್ಣಾಯ, ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಮತ್ತು ಖ್ಯಾತ ಮದ್ದಳೆಗಾರ ಪದ್ಯಾಣ ಶಂಕರನಾರಾಯಣ ಭಟ್. ಇತರ ಭಾಗವತರಾದ ಜಯರಾಮ ಕುದ್ರೆತ್ತಾಯ, ದಾಸರಬೈಲು ಚನಿಯ ನಾಯ್ಕ,ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ, ರಮೇಶ ಭಟ್ ಪುತ್ತೂರು ಅವರನ್ನು ಮೆಚ್ಚುತ್ತಾರೆ. ಅರ್ಥಧಾರಿಗಳಲ್ಲಿ ಶೇಣಿ, ದೇರಾಜೆಯವರನ್ನು ಇಷ್ಟಪಡುತ್ತಾರೆ.
ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿಯವರಿಂದ “ರಾಮ ಜೋಯಿಸರು ಒಬ್ಬ ಕೌಶಲದ ಅರ್ಥಧಾರಿ” ಎಂದು ಪ್ರಶಂಸೆಯನ್ನು ಪಡೆದ ಶ್ರೀ ರಾಮ ಜೋಯಿಸ ಬೆಳ್ಳಾರೆ ಇವರು ಯಕ್ಷಗಾನ ಕ್ಷೇತ್ರ ಕಂಡ ಒಬ್ಬ ಅಪರೂಪದ ಕಲಾವಿದ ಎಂಬುದರಲ್ಲಿ ಎರಡು ಮಾತಿಲ್ಲ.