ತೆಂಕು ತಿಟ್ಟಿನ ಹಿರಿಯ ವೇಷಧಾರಿ ಮಂಗಲ್ಪಾಡಿ ಮಹಾಬಲ ಶೆಟ್ಟಿ(76 ವರ್ಷ) 30-05-2021ರಂದು ನಿಧನ ಹೊಂದಿದರು. ಕಾಸರಗೋಡಿನ ಮಂಗಲ್ಪಾಡಿಯವರಾದ ಇವರು ಯಕ್ಷಗಾನ ಕೃಷಿಯೊಂದಿಗೆ ಕೃಷಿಯಲ್ಲು ಆಸಕ್ತರಾಗಿದ್ದರು. ಭಗವತಿ, ಮಲ್ಲ, ಮಧೂರು, ಬೆಳ್ಮಣ್ಣು, ಕಟೀಲು, ಸುಂಕದಕಟ್ಟೆ ಮೇಳಗಳಲ್ಲಿ ಮೂರುವರೆ ದಶಕಗಳ ಕಲಾಸೇವೆ ಮಾಡಿದ್ದರು. ಕನ್ನಡ -ತುಳು ಎರಡೂ ಭಾಷೆಗಳಲ್ಲಿ ಹಾಗೇ ಪೌರಾಣಿಕ -ಐತಿಹಾಸಿಕ ಪ್ರಸಂಗಗಳಲ್ಲಿ ಸಮರ್ಥವಾಗಿ ಪಾತ್ರ ನಿರ್ವಹಿಸುತ್ತಿದ್ದರು. ಮಂಗಲ್ಪಾಡಿ ಯಕ್ಷಭಾರತಿ ಸಂಘಟನೆಯಲ್ಲಿ ತೊಡಗಿಸಿ ಕೊಂಡಿದ್ದರು.
ಉಡುಪಿಯ ಯಕ್ಷಗಾನ ಕಲಾರಂಗ ಅವರಿಗೆ ಕೆ.ವಿಶ್ವಜ್ಞ ಶೆಟ್ಟಿ ನೆನಪಿನ ಪ್ರಶಸ್ತಿನೀಡಿ ಗೌರವಿಸಿತ್ತು. ಪಟ್ಲ ಫೌಂಡೇಶನ್, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್, ಬಂಜಾರ ಪ್ರಕಾಶ್ ಶೆಟ್ಟಿ ಪ್ರತಿಷ್ಠಾನದ ಪ್ರಶಸ್ತಿ ಸೇರಿದಂತೆ ಹಲಾವರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.ಅವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ ಗಂಗಾಧರ ರಾವ್ ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.
ಭರತನಾಟ್ಯ, ಆಕಾಶವಾಣಿ ಕಲಾವಿದೆ ಮಂಜುಳಾ ಸುಬ್ರಹ್ಮಣ್ಯ ಒಂದು ವಿಶಿಷ್ಟ ವಿನೂತನ ಪ್ರಯೋಗ ಮಾಡಿದ್ದಾರೆ. ಸುಮಧುರ ವಿರಹ ಪ್ರೇಮ ಗೀತೆಯೊಂದಕ್ಕೆ ತನ್ನ ಹಸ್ತ ಹಾಗೂ ಬೆರಳುಗಳ ಚಲನೆಯಿಂದಲೇ ಭಾವ (ನೃತ್ಯ) ಪ್ರಕಟಣೆ ಮಾಡಿದ್ದಾರೆ. ಬಹಳ ಸುಂದರವಾಗಿ ಹೃದಯವನ್ನು ತಟ್ಟುವ ಪ್ರಯತ್ನ. ಇದನ್ನು ಶಬ್ದಗಳಲ್ಲಿ ವಿವರಿಸುವುದು ಕಷ್ಟ. ನೀವೇ ಈ ವೀಡಿಯೊ ನೋಡಿ.
ಕೋವಿಡ್-19, ರಿಂದಾಗಿ ಕಲಾವಿದರ ಸಂಕಷ್ಟವನ್ನರಿತು ಕರ್ನಾಟಕ ಘನ ಸರಕಾರ ಆರ್ಥಿಕ ನೆರವನ್ನು ಘೋಷಿಸಿದ್ದು ಸಮಸ್ತ ಯಕ್ಷಗಾನ ಕಲಾವಿದರ ಪರವಾಗಿ ಸರಕಾರವನ್ನು ಅಭಿನಂದಿಸುತ್ತಿದ್ದೇವೆ. ಯಕ್ಷಗಾನ ಕರಾವಳಿ ಕರ್ನಾಟಕದ ಒಂದು ಅಪೂರ್ವ ಕಲಾ ಪ್ರಕಾರ. ವಿಶ್ವದಾದ್ಯಂತ ಕಲಾವಿವಿಮರ್ಶಕರು ಇದರ ಶ್ರೇಷ್ಠತೆಗೆ ಬೆರಗಾಗಿ ತಲೆಬಾಗಿರುತ್ತಾರೆ. ಇಂತಹ ಕಲೆಯನ್ನು ಉಳಿಸಿ ಬೆಳೆಸಿದವರು ಕಲಾವಿದರು. ಹೆಚ್ಚಿನ ಕಲಾವಿದರು 15ರ ಹರೆಯದಲ್ಲಿ ಮೇಳವನ್ನು ಸೇರಿ ಬಾಲಗೋಪಾಲದಿಂದ ಯಕ್ಷ ಶಿಕ್ಷಣವನ್ನು ಮೇಳದಲ್ಲಿ ಪಡೆಯುತ್ತಾ ಬೆಳೆದವರು. ಸರಕಾರದ ಈಗಿನ ನಿಬಂಧನೆ ಪ್ರಕಾರ ಕೋವಿಡ್-19 ನೆರವು ಪಡೆಯಲು 35 ವರ್ಷ ಕನಿಷ್ಠ ವಯಸ್ಸಾಗಿರಬೇಕಾಗಿದೆ. ಇದರಿಂದ 10 ರಿಂದ 20 ವರ್ಷ ಸೇವೆಗೈದ 40 ವೃತ್ತಿ ಮೇಳಗಳ ಸುಮಾರು 200 ಕಲಾವಿದರು ನೆರವಿನಿಂದ ವಂಚಿತರಾಗುತ್ತಾರೆ. ಇವರೆಲ್ಲಾ ನಿರಂತರ 6-7 ತಿಂಗಳು ರಾತ್ರಿಯಿಡೀ ವೇಷಮಾಡಿ ಕಲಾಸೇವೆ ಗೈದ ಪ್ರತಿಭಾನ್ವಿತ ಯುವ ಕಲಾವಿದರು. ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪ ಇವರಲ್ಲಿ ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀ ಅರವಿಂದ ಲಿಂಬಾವಳಿಯವರ ಮೂಲಕ ವಿನಂತಿ. ಕಲಾವಿದರ ಸಂಕಷ್ಟಕ್ಕೆ ಸ್ಪಂದಿಸುತ್ತಿರುವ ತಾವು ಈ ಸಹಾಯ ಪಡೆಯುವಲ್ಲಿರುವ ನಿಬಂಧನೆಯನ್ನು 35 ವರ್ಷದಿಂದ 25 ವರ್ಷಕ್ಕೆ ಇಳಿಸಿ ಪ್ರತಿಭಾವಂತ ಯುವ ಕಲಾವಿದರಿಗೂ (ಕನಿಷ್ಟ ಕರಾವಳಿ ಕರ್ನಾಟಕದ ವೃತ್ತಿ ಮೇಳದಲ್ಲಿ ಕಲಾಸೇವೆಗೈಯುತ್ತಿರುವ ಯಕ್ಷಗಾನ ಕಲಾವಿದರಿಗೆ) ಇದರ ಪ್ರಯೋಜನ ಸಿಗುವಂತೆ ಸಮಸ್ತ ಕಲಾಭಿಮಾನಿಗಳ ಪರವಾಗಿ ನಾವು ವಿನಂತಿಸಿಕೊಳ್ಳುತ್ತಿದ್ದೇವೆ.
ಈಗಾಗಲೇ ಈ ಮನವಿಯನ್ನು ಮಾನ್ಯ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಉಡುಪಿ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಇವರಲ್ಲಿ ನೀಡಲಾಗಿದೆ ಎಂಬುದಾಗಿ ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಕುಕ್ಕಾಜೆ ಬೈಲು ನಿವಾಸಿ ನಿವೃತ್ತ ಅಧ್ಯಾಪಕ ಬಿ. ಚಂದ್ರಶೇಖರ ರಾವ್ (88 ವರ್ಷ) ಮೇ 27, 2021ರಂದು ನಿಧನ ಹೊಂದಿದರು. ಅವರು ಸಿದ್ಧಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿ, ಬಳಿಕ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಅವರು ಇಬ್ಬರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಯಕ್ಷಗಾನದ ಹಿರಿಯ ಅರ್ಥಧಾರಿಯಾಗಿದ್ದ ಅವರು ಯಕ್ಷಗಾನ ಕಲಾ ವಿಕಾಸ ಸಂಘ ಮಂಚಿ ಇದರ ಸ್ಥಾಪಕರಾಗಿ 30 ವರ್ಷ ತಾಳಮದ್ದಳೆಗಳನ್ನು ನಡೆಸಿಕೊಟ್ಟಿದ್ದಾರೆ. ಮಂಚಿ ಇರಾ ಸಾರ್ವಜನಿಕ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಸುದೀರ್ಘ 25 ವರ್ಷ ದುಡಿದಿದ್ದಾರೆ. ಇರಾ ಕುಂಡಾವು ಶ್ರೀ ಸೋಮನಾಥೇಶ್ವರ ದೇವಾಲಯ ಆಡಳಿತ ಮಂಡಳಿಯ ಸಲಹೆಗಾರರಾಗಿಯೂ ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು.
ಮಂಗಳೂರಿನ ಪೊಳಲಿ ಶಾಸ್ತ್ರಿ ಸ್ಮಾರಕ ಸಮಿತಿಯು ನಾಲ್ಕು ವರ್ಷಗಳ ಹಿಂದೆ ‘ಪೊಳಲಿ ಶಂಕರ ನಾರಾಯಣ ಶಾಸ್ತ್ರಿ ಪ್ರಶಸ್ತಿ’ ನೀಡಿ ಅವರನ್ನು ಗೌರವಿಸಿದೆ. ಉಡುಪಿಯ ಯಕ್ಷಗಾನ ಕಲಾರಂಗವು 2018ನೇ ಸಾಲಿನ ಮಟ್ಟಿ ಮುರಲೀಧರ ರಾವ್ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಸಂತಾಪ: ಚಂದ್ರಶೇಖರ ರಾಯರ ನಿಧನಕ್ಕೆ ಐದು ದಶಕಗಳ ಅವರ ನಿಕಟವರ್ತಿ ಹಾಗೂ ಪೊಳಲಿ ಶಾಸ್ತ್ರಿ ಸ್ಮಾರಕ ಸಮಿತಿಯ ಗೌರವ ಸಲಹೆಗಾರ ಡಾ.ಎಂ.ಪ್ರಭಾಕರ ಜೋಶಿ, ಕಾರ್ಯದರ್ಶಿ ನಿತ್ಯಾನಂದ ಕಾರಂತ ಪೊಳಲಿ, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪಕುಮಾರ್ ಕಲ್ಕೂರ, ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್, ಶ್ರೀಕೃಷ್ಣ ಯಕ್ಷ ಸಭಾದ ಸುಧಾಕರ ರಾವ್ ಪೇಜಾವರ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಏಳು ಜನ ಭಾಗವತರು ಒಂದೇ ಪದ್ಯವನ್ನು ಹಾಡಿದಾಗ – ಗಜಮುಖದವಗೆ ಗಣಪಗೆ. (ಶ್ರೀ ಕಡತೋಕಾ ಮಂಜುನಾಥ ಭಾಗವತ, ಶ್ರೀ ಬಲಿಪ ನಾರಾಯಣ ಭಾಗವತ, ಶ್ರೀ ದಿನೇಶ ಅಮ್ಮಣ್ಣಾಯ, ಶ್ರೀ ಪದ್ಯಾಣ ಗಣಪತಿ ಭಟ್, ಶ್ರೀ ಪುತ್ತಿಗೆ ರಘುರಾಮ ಹೊಳ್ಳ, ಶ್ರೀ ಪಟ್ಲ ಸತೀಶ ಶೆಟ್ಟಿ, ಶ್ರೀ ರಮೇಶ್ ಭಟ್ ಪುತ್ತೂರು) ವೀಡಿಯೊ ನೋಡಿ
ಕೈರಂಗಳ ಶ್ರೀ ಕೃಷ್ಣ ಮೂಲ್ಯ ಪ್ರಸ್ತುತ ಕಟೀಲು 3ನೇ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. 1980ರಿಂದ ತೊಡಗಿ, ಸುಮಾರು 37 ವರುಷಗಳಿಂದ ಕಲಾಸೇವೆಯನ್ನು ಮಾಡಿದ್ದಾರೆ. ಬಂಟ್ವಾಳ ತಾಲೂಕು ಕೈರಂಗಳ ಗ್ರಾಮದ ಆನೆಗುಂಡಿ ಎಂಬಲ್ಲಿ ಇವರ ಜನನ (13-02-1954). ತಂದೆ ಮಾರು ಮೂಲ್ಯ. ತಾಯಿ ಅಕ್ಕು ಮೂಲ್ಯೆದಿ.
ಕೈರಂಗಳ ಶಾಲೆಯಲ್ಲಿ 7ನೇ ತರಗತಿಯ ವರೇಗೆ ಓದಿದವರು. ಕೈರಂಗಳ ಎಂಬ ಊರು, ಶ್ರೀ ಗೋಪಾಲಕೃಷ್ಣ ದೇವರ ಸಾನ್ನಿಧ್ಯ. ಯಕ್ಷಗಾನಾಸಕ್ತರೇ ತುಂಬಿರುವ ವಿಚಾರ ನಮಗೆಲ್ಲರಿಗೂ ತಿಳಿದಿದೆ. ಅಲ್ಲಿ ‘ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ’ ಎಂಬ ಸಂಸ್ಥೆಯೂ ವ್ಯವಹರಿಸುತ್ತಿದೆ. ಶ್ರೀ ಆನೆಗುಂಡಿ ಗಣಪತಿ ಭಟ್ಟರೇ ಯಕ್ಷಗಾನ ಕಲಾವಿದನಾಗಲು ನನಗೆ ಪ್ರೇರಕರು. ಅವರ ಒತ್ತಾಯದಿಂದಲೇ ನಾನು ನಾಟ್ಯ ಕಲಿಯಲು ಅಭ್ಯಾಸ ಮಾಡಿದೆ. ಶ್ರೀ ಹೊಸಹಿತ್ಲು ಮಹಾಲಿಂಗ ಭಟ್ಟರಿಂದ ನಾಟ್ಯ ಕಲಿಯುವಂತಹ ಅವಕಾಶ ಸಿಕ್ಕಿತು. ಅವರು ಸಿಂಧು. ನಾವು ಕೇವಲ ಬಿಂದುಗಳು. ಅವರು ಹೇಳಿಕೊಟ್ಟದ್ದರಲ್ಲಿ ಒಂದೆರಡನ್ನಾದರೂ ಕಲಿತಿದ್ದೇನೆ ಎಂಬ ತೃಪ್ತಿ ಇದೆ ಎಂದು ಹೇಳಿ ಆ ಶ್ರೇಷ್ಠ ಕಲಾವಿದರಿಗೆ ಕೃಷ್ಣ ಮೂಲ್ಯರು ಗೌರವವನ್ನರ್ಪಿಸುತ್ತಾರೆ.
ಕೈರಂಗಳ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಹಿಮ್ಮೇಳ ಗುರುಗಳಾಗಿದ್ದವರು ಶ್ರೀ ಆನೆಗುಂಡಿ ಗಣಪತಿ ಭಟ್ಟರು. ಖ್ಯಾತ ಭಾಗವತ, ಪ್ರಸಂಗಕರ್ತ, ನಿರ್ದೇಶಕ ಬೊಟ್ಟಿಕೆರೆ ಶ್ರೀ ಪುರುಷೋತ್ತಮ ಪೂಂಜರು ಇವರ ಶಿಷ್ಯರು. ಖ್ಯಾತ ಅರ್ಥಧಾರಿಗಳಾದ ಬರೆ ಶ್ರೀ ಕೇಶವ ಭಟ್ಟರೂ ಈ ಸಂಘದಲ್ಲಿ ಸಕ್ರಿಯರಾಗಿದ್ದರು. ಇವರೆಲ್ಲರೂ ಪ್ರತಿಫಲಾಪೇಕ್ಷೆ ಇಲ್ಲದೆ ಕಲಾಸೇವೆಯನ್ನು ಮಾಡುತ್ತಿದ್ದರಂತೆ. ಕಲಿಯುವ ಹಂತದಲ್ಲಿ ಇವರೆಲ್ಲರ ಪ್ರಭಾವವೂ ಕೃಷ್ಣ ಮೂಲ್ಯರ ಮೇಲೆ ಪರಿಣಾಮ ಬೀರಿತು.
ನಾಟ್ಯ ಕಲಿತ ಮೇಲೆ ಸಂಘದ ಪ್ರದರ್ಶನಗಳಲ್ಲಿ ವೇಷ ಮಾಡುತ್ತಾ, ಅಂಚೆ ಕಛೇರಿಯಲ್ಲಿ ಸಹಾಯಕನಾಗಿ, ಉಗ್ರಾಣಿ ಕೆಲಸ, ಕೂಲಿಕೆಲಸವನ್ನು ಮಾಡುತ್ತಾ 5 ವರ್ಷ ಗಳನ್ನು ಕಳೆದ ಕೈರಂಗಳ ಕೃಷ್ಣ ಮೂಲ್ಯರು 1980 ಕಟೀಲು ಮೇಳಕ್ಕೆ ಸೇರಿದರು. ಆಗ 2 ಮೇಳ ತಿರುಗಾಟ ನಡೆಸುತ್ತಿತ್ತು. 1ನೇ ಮೇಳದಲ್ಲಿ ಇರಾ ಗೋಪಾಲಕೃಷ್ಣ ಭಾಗವತರು, ನಿಡ್ಲೆ ನರಸಿಂಹ ಭಟ್ಟರು, ಪುತ್ತೂರು ಕೃಷ್ಣ ಭಟ್, ತ್ರಿವಿಕ್ರಮ ಶೆಣೈ, ಸಂಪಾಜೆ ಶೀನಪ್ಪ ರೈ, ಕುತ್ಯಾಳ ಬಾಬು ರೈಗಳಂತ ಶ್ರೇಷ್ಠ ಕಲಾವಿದರಿದ್ದುದು ಇವರ ಬೆಳವಣಿಗೆಗೆ ಪೂರಕವಾಯಿತು. ಕುತ್ಯಾಳ ಬಾಬು ರೈಗಳು ಮಾತುಗಾರಿಕೆ ಹೇಳಿಕೊಡುತ್ತಿದ್ದರಂತೆ.
1981ನೇ ಇಸವಿ ಕಟೀಲು 3ನೇ ಮೇಳ ಆರಂಭವಾದಾಗ ಕಲಾವಿದನಾಗಿ ಸೇರ್ಪಡೆಗೊಂಡರು. ಆಗ ಸರಪಾಡಿ ಶಂಕರನಾರಾಯಣ ಕಾರಂತರು ಭಾಗವತರಾಗಿದ್ದರು. ನಂತರ ಕುರಿಯ ಶ್ರೀ ಗಣಪತಿ ಶಾಸ್ತ್ರಿಗಳು, ನಿಡ್ಲೆ ನರಸಿಂಹ ಭಟ್ಟರು, ಮೋಹನ ಶೆಟ್ಟಿಗಾರರೂ ಮದ್ದಳೆಗಾರರಾಗಿದ್ದರು. ಕುರಿಯ ಗಣಪತಿ ಶಾಸ್ತ್ರಿಗಳು ಮತ್ತು ನಿಡ್ಲೆ ನರಸಿಂಹ ಭಟ್ಟರು ನನ್ನನ್ನು ತಿದ್ದಿ ತೀಡಿದರು. ನಾನಿಂದು ಕಲಾವಿದನಾಗಿ ಕಾಣಿಸಿಕೊಳ್ಳಲು ಅವರೇ ಕಾರಣರು. ಉಣ್ಣುವಾಗ ಅವರನ್ನು ನೆನಪಾಗುತ್ತದೆ. ನಂತರ ಪದ್ಯಾಣ ಶಂಕರನಾರಾಯಣ ಭಟ್, ಅಡೂರು ಗಣೇಶ ರಾವ್ ಅವರೂ ನನಗೆ ಮಾರ್ಗದರ್ಶಕರಾದರು ಎನ್ನುವ ಮೂಲಕ ಗೌರವವನ್ನು ಎಲ್ಲರಿಗೂ ಕೃಷ್ಣ ಮೂಲ್ಯರು ಸಲ್ಲಿಸುತ್ತಾರೆ. ಶ್ರೀ ಗುಡ್ಡಪ್ಪ ಗೌಡ, ಗೇರುಕಟ್ಟೆ ಗಂಗಯ್ಯ ಶೆಟ್ಟರೂ ನನಗೆ ಬಹಳಷ್ಟು ಹೇಳಿಕೊಟ್ಟವರು. ಅವರನ್ನು ಕಳೆದುಕೊಂಡ ನೋವಿದೆ ಎನ್ನುತ್ತಾರೆ.
ತೆಕ್ಕುಂಜೆ ಕೇಶವ ಭಟ್ಟರು ಅವರ ಅಕ್ರೂರ. Master Piece. ಹಾಗಾಗಿ ಅವರನ್ನು ಅಕ್ರೂರ ಮಾಸ್ಟರ್ ಎನ್ನುತ್ತಿದ್ದರಂತೆ. ಸಂಜಯ, ಅತಿಕಾಯ ಮೊದಲಾದ ಸಾತ್ವಿಕ ಪಾತ್ರಗಳನ್ನು ಮೆಚ್ಚುವಂತೆ ಮಾಡುತ್ತಿದ್ದರಂತೆ. ಇನ್ನಿಬ್ಬರು ವೆಂಕಪ್ಪ ಮಾಸ್ತರ್ ಮತ್ತು ಕೈರಂಗಳ ಕೃಷ್ಣ ಮಾಸ್ತರ್. ಈ ಮೂವರೂ ಕೈರಂಗಳ ಕೃಷ್ಣ ಮೂಲ್ಯರಿಗೆ ಮಾತುಗಾರಿಕೆಯನ್ನು ಹೇಳಿಕೊಟ್ಟಿದ್ದರಂತೆ.
ಕೈರಂಗಳ ಕೃಷ್ಣ ಮೂಲ್ಯರಿಗೆ ಸಾತ್ವಿಕ ಪಾತ್ರಗಳೆಂದರೆ ಬಲು ಇಷ್ಟ. ಭಾವನಾತ್ಮಕ ಪಾತ್ರಗಳಲ್ಲಿ ಇವರು ಚೆನ್ನಾಗಿ ಅಭಿನಯಿಸುತ್ತಾರೆ. ಪುಂಡುವೇಷಗಳನ್ನಲ್ಲದೆ ಕಿರೀಟ, ನಾಟಕೀಯ ವೇಷಗಳನ್ನು ಚೆನ್ನಾಗಿ ಮಾಡಬಲ್ಲರು. 1ನೇ ಮೇಳದಲ್ಲಿರುವಾಗ ಈಶ್ವರ, ಸುಪಾರ್ಶ್ವಕ, ಮತ್ತೆ ದೇವೀ ಪ್ರತ್ಯಕ್ಷ ಈಶ್ವರ, ಮತ್ತೆ ಧೂಮ್ರಾಕ್ಷನ ಪಾತ್ರಗಳನ್ನು ನಿರ್ವಹಿಸಿದ್ದರು. ಬ್ರಹ್ಮ, ವಿಷ್ಣು, ಶ್ರೀಕೃಷ್ಣ, ಶ್ರೀರಾಮ, ಶ್ವೇತಕುಮಾರ ಅಲ್ಲದೆ ಅರ್ಜುನ, ದೇವೇಂದ್ರ, ಪರೀಕ್ಷಿತ ಮೊದಲಾದ ಕಿರೀಟ ವೇಷಗಳನ್ನೂ, ಹಿರಣ್ಯಕಶ್ಯಪ, ರಾವಣ, ವಿಕ್ರಮಾದಿತ್ಯ, ನಳ, ಹರಿಶ್ಚಂದ್ರ, ಶ್ರೀರಾಮ ಮೊದಲಾದ ನಾಟಕೀಯ ಪಾತ್ರಗಳನ್ನೂ ಕೈರಂಗಳ ಕೃಷ್ಣ ಮೂಲ್ಯರು ನಿರ್ವಹಿಸಿದ್ದಾರೆ.
ಆಸ್ರಣ್ಣ ಬಂಧುಗಳ ಆಶೀರ್ವಾದ, ಕಲ್ಲಾಡಿ ಯಜಮಾನರುಗಳ ಪ್ರೋತ್ಸಾಹ, ಕಲಾವಿದರ, ಕಲಾಭಿಮಾನಿಗಳ ಸಹಕಾರದಿಂದ ಇವು ಸಾಧ್ಯವಾಯಿತು ಎನ್ನುವ ಕೃಷ್ಣ ಮೂಲ್ಯರು ಕಲಾವಿದನಾಗಿಯೂ, ಸಾಂಸಾರಿಕವಾಗಿಯೂ ತೃಪ್ತರು. ಪತ್ನಿ ಲೀಲಾವತೀ ಮತ್ತು 3 ಮಂದಿ ಮಕ್ಕಳು (2 ಗಂಡು, 1 ಹೆಣ್ಣು) ಹಿರಿಯ ಪುತ್ರ ಕಿರಣ್‍ರಾಜ್ Civil Diploma ಮಾಡಿ ಉದ್ಯೋಗಿ. ಕಿರಿಯ ಪುತ್ರ ಕಿಶನ್‍ರಾಜ್ B.Com ಪದವೀಧರ. ಪುತ್ರಿ ದೇವಿಕಲಾ B.Sc. ಪದವೀಧರೆ.