Friday, March 13, 2026
Home Blog Page 317

ಯಕ್ಷಕಲಾಕುಮುದ ಎಂ. ಕೆ. ರಮೇಶಾಚಾರ್ಯ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಆಲ್ಮನೆ ಗ್ರಾಮದ ಮಂಗಳಗಾರಿನಲ್ಲಿ ಕೃಷ್ಣಾಚಾರ್ ಮತ್ತು ರುಕ್ಮಿಣಿಯಮ್ಮ ದಂಪತಿಗಳ ಪುತ್ರನಾಗಿ 30-10-1949ರಲ್ಲಿ ಜನಿಸಿದ ಎಂ ಕೆ ರಮೇಶಾಚಾರ್ಯ ಯಕ್ಷಕಲಾದ್ರಿಯ ಸಾಧನಾಶಿಖರವನ್ನು ಏರಿ ವಿನಯಧ್ವಜವನ್ನು ಜೊತೆಗೇ ಹೊತ್ತೋಯ್ದು ತನಗಿಂತಲೂ ಎತ್ತರಕ್ಕೆ ಹಾರಿಸಿದ ಸುಜನ.
ಎಂ ಕೆ ಯವರ ಯಕ್ಷಬಾಲ್ಯ:
ತಂದೆ ಕೃಷ್ಣಾಚಾರ್ ಯಕ್ಷಗಾನ ಕಲಾವಿದ ಹಾಗು ಮೇಳವೊಂದರ ವ್ಯವಸ್ಥಾಪಕ. ತಂದೆಯ ಸೋದರ ನಾಗಪ್ಪಾಚಾರ್ ಉತ್ತಮ ಮದ್ದಲೆಗಾರ, ಅಣ್ಣ ನರಸಿಂಹಾಚಾರ್ (ನಾಗಪ್ಪಾಚಾರ್ ಅವರ ಮಗ)ಭಾಗವತರು ಮತ್ತು ಮದ್ದಲೆವಾದಕರು. ಎಳವೆಯಲ್ಲಿಯೇ  ಸಹಜವಾಗಿಯೇ ಇವರಿಗೆ ಯಕ್ಷಗಾನದ ಒಲವು ಮೂಡಿತು. ಮನೆಯ ಹಿರಿಯರಿಂದ ಒಂದಷ್ಟು ಕಲಿತು ಮಹಿಷಿ ಮೇಳದಲ್ಲಿ ಕೋಡಂಗಿ ವೇಷದಿಂದಲೇ ರಂಗಪ್ರವೇಶವಾಯಿತು. ಅಲ್ಲಿಂದ ಹಂತ ಹಂತವಾಗಿ ಬೆಳೆಯುತ್ತಾ ಬಂದರು. ಅನಂತರ ಶೃಂಗೇರಿ ಸಮೀಪದ ಕಿಗ್ಗ ಮೇಳ ಸೇರಿದರು. ಅಲ್ಲಿ ಗುಂಡುಮನೆ ರಾಮಯ್ಯ, ಹಳ್ಳದಾಚೆ ಪುಟ್ಟಶಾಮಯ್ಯ ಮತ್ತು ವೆಂಕಟರಮಣಯ್ಯ, ಕಿಗ್ಗ ಚಂದ್ರಶೇಖರ ಭಟ್ರು ಮೊದಲಾದವರಿಂದ ಸೂಕ್ತ ಮಾರ್ಗದರ್ಶನ ದೊರಕಿತು. ಅತಿ ಶೀಘ್ರಕಾಲದಲ್ಲಿಯೇ ವೇಷದ ಸ್ಥಾನದಲ್ಲಿ ಔನ್ನತ್ಯವನ್ನು ಸಾಧಿಸಿದರು. ಬಳಿಕ ಮಂದರ್ತಿ ಮೇಳ ಸೇರಿದರು. ಅಲ್ಲಿ ಗುರು ವೀರಭದ್ರನಾಯ್ಕರೇ ಗುರುಗಳಾಗಿ ದೊರಕಿದರು. ಪುಂಡು ವೇಷಗಳಾದ ಕುಶ-ಲವ-ಬಬ್ರುವಾಹನ ಮೊದಲಾದ ಪಾತ್ರಗಳನ್ನು ಮಾಡಿ ಹಿರಿಯ ಕಲಾವಿದರಿಂದಲೂ ಪ್ರೇಕ್ಷಕರಿಂದಲೂ ಮೆಚ್ಚುಗೆಗೆ ಪಾತ್ರರಾದರು. ಪೀಠಿಕೆ ಸ್ತ್ರೀವೇಷ, ರತಿ, ಕನಕಾಂಗಿ ಮೊದಲಾದ ಪಾತ್ರಮಾಡುತ್ತಾ ಸ್ತ್ರೀಪಾತ್ರದಲ್ಲಿಯೂ ಪರಿಣತಿಯನ್ನು ಪಡೆದರು. ಎಲ್ಲಾ ರೀತಿಯ ಪಾತ್ರಗಳನ್ನೂ ಮಾಡಬೇಕೆಂಬ ವೀರಭದ್ರನಾಯ್ಕರ ಮಾತನ್ನು ಈಗಲೂ ಸ್ಮರಿಸುತ್ತಾರೆ ಎಂ ಕೆ ಯವರು.

ಯಕ್ಷಕನ್ನಿಕೆ ರಮೇಶಾಚಾರ್ಯ:
1969ರಲ್ಲಿ ಧರ್ಮಸ್ಥಳ ಮೇಳಕ್ಕೆ ಸೇರಲು ಹೋದರು.  ರತ್ನವರ್ಮ ಹೆಗ್ಗಡೆಯವರಿಗೆ ಇವರ ತೆಂಕಿನ ನಾಟ್ಯ ಇನ್ನಷ್ಟು ಪಳಗಬೇಕೆಂದು ಅನ್ನಿಸಿತು. ಆಗ ಕುರಿಯ ವಿಠಲಶಾಸ್ತ್ರಿಗಳು ಇವನನ್ನು ನಾನು ಸ್ತ್ರೀವೇಷಕ್ಕೆ ಸಿದ್ದಪಡಿಸುತ್ತೇನೆಂದು ಹೇಳಿ ಮೇ 28, 1969ರಲ್ಲಿ ತನ್ನ ಮನೆಗೆ ಕರೆದುಕೊಂಡು ಹೋದರು. ಯಕ್ಷಗಾನ ಗುರುಕುಲವೆನಿಸಿದ ಕುರಿಯದಲ್ಲಿ ಮಳೆಗಾಲದಲ್ಲಿ ಅಭ್ಯಾಸ. ಕುರಿಯ ಶಾಸ್ತ್ರಿಗಳು ಊಟ ಬಟ್ಟೆ ಕೊಟ್ಟು ಮುಂದಿನ ತಿರುಗಾಟಕ್ಕೆ ಧರ್ಮಸ್ಥಳ ಮೇಳಕ್ಕೆ ಕರೆದುಕೊಂಡು ಹೋದರು. ಅಲ್ಲಿ ಮಹಾರಥಿ ಕರ್ಣದ ಕುಂತಿ, ಕ್ಷೇತ್ರ ಮಹಾತ್ಮೆಯ ಮಾಲತಿ, ನೇತ್ರಾವತಿ ಮೊದಲಾದ ಪಾತ್ರ ಮಾಡಿದರು. ಅಲ್ಲಿ ಕಡತೋಕ ಚಿಪ್ಪಾರು, ನಿಡ್ಲೆ, ಪುತ್ತೂರು ನಾರಾಯಣ ಹೆಗ್ಡೆ, ಎಂಪೆಕಟ್ಟೆ, ಕಡಬ ಶಾಂತಪ್ಪ, ಪಾತಾಳ ವೆಂಕಟರಮಣ ಭಟ್ರು, ಕುಂಬ್ಳೆ, ಗೋವಿಂದ ಭಟ್ಟರಂತಹ ಕಲಾವಿದರ ಒಡನಾಟ ಇವರನ್ನು ಮತ್ತಷ್ಟು ಪಳಗಿಸಿತು. ಮೂರು ವರ್ಷಗಳ ಕಾಲ ಧರ್ಮಸ್ಥಳ ಮೇಳದಲ್ಲಿ ತಿರುಗಾಟ ನೆಡೆಸಿದರು. 


ಅನಂತರ ವರದರಾಜ ಪೈಗಳ ಸುರತ್ಕಲ್ ಮೇಳ ಸೇರಿದರು. ಶೇಣಿ, ದೊಡ್ಡಸಾಮಗ, ತೆಕ್ಕಟ್ಟೆ, ಕೊಕ್ಕಡ ಮೊದಲಾದ ಯಕ್ಷದಿಗ್ಗಜರ ಸಂಗಮದ ಗಜಮೇಳವದು. ಅಲ್ಲಿ ಒಮ್ಮೆ  ಪಾರಿಜಾತದ ಸತ್ಯಭಾಮೆ ಮಾಡಬೇಕಾದ ಕಲಾವಿದ ಬಾರದೆ ಇದ್ದಾಗ ಸಖಿ ಮಾಡುವ ಇವರಲ್ಲಿ ಆ ಪಾತ್ರ ಮಾಡಿಸಿದರು ಅಗರಿಯವರು. ಅದು ಒಳ್ಳೆಯ ಕೀರ್ತಿಯನ್ನು ತಂದುಕೊಟ್ಟಿತು. ಅವರ ನಿಜವಾದ ಪ್ರತಿಭೆಯ ಅನಾವರಣವೂ ಆಯಿತು. ಇವರ ಲಾಲಿತ್ಯಪೂರ್ಣ ನಾಟ್ಯ, ಶ್ರುತಿಬದ್ಧ-ಕಾವ್ಯಾತ್ಮಕ-ಪಾತ್ರೋಚಿತ-ಪ್ರಸಂಗ,ಪುರಾಣಾಧಾರಿತ- ಅಸ್ಖಲಿತವಾದ ವಾಗ್ವೈಖರಿ, ಪಾತ್ರನಿರ್ವಹಣಾ ಕೌಶಲ ಮೊದಲಾದ ಗುಣಗಳಿಂದ ಶೇಣಿಯವರೊಟ್ಟಿಗೆ ಪಾತ್ರಮಾಡುವ ಯೋಗ ಲಭಿಸಿತು. ಅವರ ರಾವಣ-ಹರಿಶ್ಚಂದ್ರ-ವಾಲಿ-ನಳ-ವಿಷ್ಣುವರ್ಧನ-ಉದಯನ ಪಾತ್ರಗಳಿಗೆ ಮಂಡೋದರಿ-ಚಂದ್ರಮತಿ- ತಾರೆ- ದಮಯಂತಿ- ಶಾಂತಲೆ – ವಾಸವದತ್ತೆ ಮೊದಲಾದ ಪಾತ್ರಗಳನ್ನು ಮಾಡಿ ಶೇಣಿಯವರ ಮೆಚ್ಚುಗೆಗೂ ಪಾತ್ರರಾದರು. ತೆಕ್ಕಟ್ಟೆಯವರ ನಂದಿಶೆಟ್ಟಿ ಇವರ ಆಲೋಲಿಕೆ ಬಹಳ ಪ್ರಸಿದ್ಧಿ ಪಡೆದಿತ್ತು. ಶೇಣಿಯವರು ರಜೆಯಲ್ಲಿದ್ದಾಗ ಶನೀಶ್ವರ ಮಹಾತ್ಮೆಯಾದರೆ ಇವರದ್ದೇ ವಿಕ್ರಮಾದಿತ್ಯನ ಪಾತ್ರ. ಆಗ ಸತತ ಸ್ತ್ರೀವೇಷ ಮಾಡುತ್ತಿದ್ದರೂ ವಿಕ್ರಮನ ಪಾತ್ರ ಮಾಡುತ್ತಿದ್ದುದು ಇವರ ಪರಿಪೂರ್ಣತೆಗೊಂದು ಸಾಕ್ಷಿ. ಅಗರಿ,ಪದ್ಯಾಣ, ಅಡೂರು,ಕಡಬ ನಾರಾಯಣಾಚಾರ್ಯರ ಹಿಮ್ಮೇಳ ಮತ್ತು ಸಮರ್ಥ ಮುಮ್ಮೇಳ ಇವರ ಪಾತ್ರಪೋಷಣೆಗೆ ಮತ್ತಷ್ಟು ಸಹಕಾರಿಯಾಯಿತು. ಹೀಗೆ ಮೊದಲು 19ವರ್ಷ ಮತ್ತೆ 5 ವರ್ಷ ಒಟ್ಟು 24ವರ್ಷ ಸುರತ್ಕಲ್ ಮೇಳದ ತಿರುಗಾಟದಲ್ಲಿ ಯಕ್ಷಕನ್ನಿಕೆಯಾಗಿ ಕಲಾಭಿಮಾನಿಗಳ ಹೃದಯ ಸಿಂಹಾಸನ ಏರಿದರು.


ಉಭಯ ತಿಟ್ಟುಗಳ ಪ್ರವೀಣ:
19ವರ್ಷಗಳ ದೀರ್ಘಕಾಲದ ಸುರತ್ಕಲ್ ಮೇಳದ ತಿರುಗಾಟದ ಬಳಿಕ ಬಡಗಿನತ್ತ ಮತ್ತೆ ಮುಖಮಾಡಿದರು ಎಂ ಕೆ ಯವರು. ಮುಂದಿನ ತಿರುಗಾಟಕ್ಕೆ ಸಾಲಿಗ್ರಾಮ ಮೇಳಕ್ಕೆ ಎಂದು ಕಾಳಿಂಗ ನಾವಡರು ಇದ್ದೇ ಮಾತಾಯಿತು. ಆದರೆ ಮೇಳ ತಿರುಗಾಟ ಆರಂಭವಾಗುವಾಗ ನಾವಡರೇ ಇರಲಿಲ್ಲ. ಆ ವರ್ಷ ಜಯಭೇರಿ ಪ್ರದರ್ಶನ ಮೇಳಕ್ಕೇ ಒಂದು ಚಾಲೆಂಜ್ ಆಗಿತ್ತು. ನಾವಡರು ದಿವಂಗತರಾದ ಬಳಿಕ ಅನೇಕರು ಮೇಳದ ಟೆಂಟ್ ಕಡೆಗೆ ತಲೆಹಾಕುವುದನ್ನೇ ಬಿಟ್ಟಿದ್ದರು.  ಶಬರಾಯ,ಯಾಜಿ, ಕೊಂಡದಕುಳಿ ಮೊದಲಾದ ಪ್ರಸಿದ್ಧ ಕಲಾವಿದರಿದ್ದರು. ಮೇಘಮಯೂರಿ, ಶೃಂಗ ಸಾರಂಗ ಎಂಬ ಪ್ರಸಂಗಗಳು ಯಶಸ್ವೀ ಪ್ರದರ್ಶನ ಕಾಣುವಲ್ಲಿ ಸ್ವಾರಸ್ಯಕರವಾದ ಸಂಭಾಷಣೆಯ ಮಾರ್ಗದರ್ಶನ ನೀಡುತ್ತ ಪಾತ್ರಧಾರಿಯಾಗಿಯೂ ಯಶಸ್ವಿಯಾದ ಎಂಕೆಯವರ ಕೊಡುಗೆ ಉಲ್ಲೇಖನೀಯ. ಪ್ರೇಮಪಲ್ಲವಿ ಎಂಬ ಪ್ರಸಂಗ ರಚಿಸಿ ಅದೂ ಉತ್ತಮ ಪ್ರದರ್ಶನ ಕಂಡಿತು. ಮತ್ತೆ ಐದು ವರ್ಷ ಸುರತ್ಕಲ್ ಮೇಳದ ತಿರುಗಾಟ. ಅನಂತರ ಪೆರ್ಡೂರು ಮೇಳದ ತಿರುಗಾಟದಲ್ಲಿ ಸಿದ್ದಕಟ್ಟೆ ಚೆನ್ನಪ್ಪ ಶೆಟ್ರು ಮತ್ತು ಇವರ ಜೋಡಿ ಸಾಮಾಜಿಕ ಪ್ರಸಂಗಗಳಲ್ಲಿಯೂ ಒಂದು ಪೌರಾಣಿಕ ಚೌಕಟ್ಟನ್ನು ಹಾಕಿಕೊಡುತ್ತಿತ್ತು. ಅನಂತರ ನೀಲಾವರ, ಸೀತೂರು, ತಳಕಲ, ಸುಂಕದಕಟ್ಟೆ ಮೊದಲಾದ ಮೇಳಗಳಲ್ಲಿ ತಿರುಗಾಟ. ಅತಿಥಿ ಕಲಾವಿದರಾಗಿ ಬಾಳೆಹೊಳೆ ಮೇಳ, ಹೊನ್ನವಳ್ಳಿ ಮೊದಲಾದ ಅನೇಕ ಸಂಘ ಸಂಸ್ಥೆಗಳಲ್ಲಿ ಪಾತ್ರಧಾರಿಯಾಗಿ, ಮಾರ್ಗದರ್ಶಕರಾಗಿ, ಪ್ರಾಚಾರ್ಯರಾಗಿ ಕಲಾಸೇವೆ ಮಾಡಿದರು.

ಎಂ ಕೆ ಯವರು ಮಾಡದ ಸ್ತ್ರೀವೇಷಗಳಿಲ್ಲ. ಪಾಪಣ್ಣವಿಜಯದ ಗುಣಸುಂದರಿಯ ಪಾತ್ರಕ್ಕೆ ಒಂದು ಅದ್ಭುತ ಮೆರಗು ನೀಡಿದವರು ಇವರು. ಭಿನ್ನ ಸ್ವಭಾವದ ಪಾತ್ರಗಳನ್ನು ಒಂದೇ ರಾತ್ರಿಯಲ್ಲಿ ಮಾಡಿ ಮೊದಲ ಪಾತ್ರ ಮಾಡಿದ್ದು ಇವರೆಯಾ? ಎನ್ನುವಷ್ಟರ ಮಟ್ಟಿಗೆ ಆ ವ್ಯತ್ಯಾಸ ಕಾಣುಸುತ್ತಿದ್ದರು. ಬ್ರಹ್ಮಕಪಾಲದ ಶಾರದೆ ಮಾಡಿ ಬೆಳಗಿನ ಜಾವ ಶಶಿಪ್ರಭೆ, ಯೋಜನಗಂಧಿ ಮಾಡಿ ಮೀನಾಕ್ಷಿ ಹೀಗೆ ಪಾತ್ರ ಭಾವವೈವಿಧ್ಯ ವೇಧ್ಯವಾಗುತ್ತದೆ ಅವರ ವೇಷಗಳಲ್ಲಿ. ಬೇಡರ ಕಣ್ಣಪ್ಪದ ರಾಣಿಯನ್ನು, ಪಂಚವಟಿಯ ಮಾಯಾಶೂರ್ಪಣಕಿಯನ್ನು ಎಷ್ಟು ಚೆನ್ನಾಗಿ ಮಾಡಬಲ್ಲರೋ ಅಷ್ಟೆ ಚೆನ್ನಾಗಿ ಚಂದ್ರಮತಿಯಾಗಿ, ಸುಭದ್ರೆಯಾಗಿ ಕರುಣಾರಸಾಮೃತವನ್ನು ಉಣ್ಣಿಸಬಲ್ಲರು. ಮಂಡೋದರಿ, ತಾರೆ, ಕೈಕಸೆಯಾಗಿ ನೀತಿಯ ತರಂಗಿಣಿಯನ್ನೇ ಹರಿಸಬಲ್ಲರು. ಶೇಣಿ, ತೆಕ್ಕಟ್ಟೆ, ರಾ.ಸಾಮಗ, ವಾ. ಸಾಮಗ, ಎಂ ಎಲ್ ಸಾಮಗ, ಕುಂಬ್ಳೆ, ಗೋವಿಂದಭಟ್ಟ, ಸಿದ್ದಕಟ್ಟೆ ದ್ವಯರು, ಯಾಜಿ, ಕೊಂಡದಕುಳಿ, ಜೋಗಿ, ಪೂಕಳ, ಉರಡ್ಕ, ಆರ್ಗೋಡು, ಜಲವಳ್ಳಿ ಮೊದಲಾದವರೊಂದಿಗೆ ಅವರ ಸಹಪಾತ್ರಗಳು ಅಮೋಘವಾದುದೆಂದು ಅನೇಕ ಕಲಾಭಿಮಾನಿಗಳ ಅಭಿಮತ. ಅವರ ಅನುಭವ ಅನುಪಮ. ಪೌರಾಣಿಕ ಪ್ರಸಂಗದ ಪಾತ್ರಗಳ ಮಾಹಿತಿಗಾಗಿ ಪೋನ್ ಮಾಡಿದವರಿಗೆ ತಾನು ಬ್ಯುಸಿ ಇದ್ದರೂ ಸಂತೋಷದಿಂದಲೇ ಅನುಭವವನ್ನು ದಾರೆ ಎರೆಯುತ್ತಾರೆ. 


ಶೇಣಿಯವರೊಂದಿಗಿನ ನಂಟು:
“ರಮೇಶನ ಸ್ತ್ರೀವೇಷದೊಂದಿಗೆ ವೇಷಮಾಡಿದಾಗ ಸದ್ಗೃಹಿಣಿಯೊಂದಿಗಿರುವ ಅನುಭವ ರಂಗದಲ್ಲಿ ಆಗುತ್ತದೆ” ಎಂದು ಒಂದು ಭಾಷಣದಲ್ಲಿ ಶೇಣಿಯವರೇ ಹೇಳುತ್ತಾರೆ. ಅದನ್ನು ಕೇಳಿ ನನಗೆ ಇನ್ಯಾವ ಪ್ರಶಸ್ತಿಯೂ ಬೇಡ. ಇದೇ ದೊಡ್ಡ ಪ್ರಶಸ್ತಿ ಎಂದು ಭಾವಿಸಿದ ಎಂಕೆ ಈಗಲೂ ಆ ಮಾತನ್ನು ಸ್ಮರಿಸುತ್ತಾರೆ. ಮಂಗಳೂರಿನ ಒಂದು ಆಟದಲ್ಲಿ ಶೇಣಿಯವರೊಂದಿಗೆ ಇವರಿಗೂ ಸನ್ಮಾನ ಮಾಡುತ್ತೇವೆಂದು ಸಂಘಟಕರು ಬಂದು ಕೇಳಿದಾಗ “ಅವರೊಂದಿಗೆ ಕುಳಿತು ಸನ್ಮಾನ ಸ್ವೀಕರಿಸಲು ನಾನು ಅರ್ಹನಲ್ಲ” ಎಂದು ನಿರಾಕರಿಸುತ್ತಾರೆ. ಸಂಘಟಕರು ಈ ವಿಷಯವನ್ನು ಶೇಣಿಯವರಲ್ಲಿ ತಿಳಿಸಿದಾಗ ಇವರನ್ನು ಕರೆದು “ವೇಷಮಾಡಿ ರಂಗದಲ್ಲಿ ನನ್ನ ಜೊತೆ ಕುಳಿತುಕೊಳ್ಳಲು ಆಗುತ್ತದೆ. ಸನ್ಮಾನಕ್ಕೆ ಯಾಕೆ ಆಗುವುದಿಲ್ಲ ” ಎಂದು ಹೇಳಿ ಅವರೊಂದಿಗೆ ಸನ್ಮಾನಕ್ಕೆ ಒಪ್ಪಿಸುತ್ತಾರೆ.  ಸುರತ್ಕಲ್ ಮೇಳದಲ್ಲಿ ಇದ್ದಾಗ ಇವರು ಒಂದುದಿನ ರಜೆ ಹಾಕಿ ಊರಿಗೆ ಹೊರಟರು. ಆದರೆ ಶೇಣಿಯವರು ಇವರು ರಜೆ ಹಾಕುವುದು ಬೇಡ ಎಂದರು. ಇವರು ಹೋಗಲೇ ಬೇಕೆಂದು ಹಠ ಹಿಡಿದರೂ ಶೇಣಿಯವರು ಒಪ್ಪಲಿಲ್ಲ. ಅದಕ್ಕೆ ಕಾರಣ ಅಂದಿನ ಅವರ ವಾಲಿಗೆ ಇವರ ತಾರೆಯೇ ಆಗಬೇಕೆಂಬ ಅಭಿಲಾಷೆಯಿಂದ. ಒಮ್ಮೆ ರಮೇಶಾಚಾರ್ಯರ ಸನ್ಮಾನ ಸಮಾರಂಭದ ಅಧ್ಯಕ್ಷರಾಗಿ ಆಗಮಿಸಿದ ಶೇಣಿಯವರು ತನಗೆ ನೀಡಿದ ಹಣವನ್ನೂ ಸಂಘಟಕರಿಗೆ ಹಿಂದಿರುಗಿಸಿದ್ದರು. ಅದು ರಮೇಶಾಚಾರ್ಯರ ಮೇಲಿನ ಪ್ರೀತಿಯಿಂದ.  ಹೀಗೆ ಶೇಣಿಯವರೊಂದಿಗೆ ಮಾಡಿದ ಪಾತ್ರಗಳನ್ನು ಸದಾ  ಸ್ಮರಿಸುತ್ತಾರೆ ಎಂಕೆ. ಇತ್ತೀಚೆಗಂತು ಶೇಣಿಯವರ ಸಂಸ್ಮರಣಾ ಭಾಷಣಕ್ಕೆ ಇವರಿಗೇ ಬೇಡಿಕೆ.

 ಅರ್ಥಧಾರಿಯಾಗಿ ರಮೇಶಾಚಾರ್ಯ:
ಎಲ್ಲಾ ಪ್ರಸಿದ್ಧ ಅರ್ಥಧಾರಿಗಳೊಂದಿಗೆ ಅರ್ಥಹೇಳಿದ ಇವರು ಸ್ತ್ರೀಪಾತ್ರದ ಅರ್ಥಗಾರಿಕೆಗೆ ಒಂದು ಮೇಲ್ಪಂಕ್ತಿಯನ್ನು ಹಾಕಿಕೊಟ್ಟವರಲ್ಲಿ ಪ್ರಮುಖರು. ಇವರ ಅರ್ಥಗಾರಿಕೆಯಲ್ಲಿ ಪಾತ್ರನೆಡೆ, ಸಾಹಿತ್ಯ, ಪಾತ್ರವರಿತು ಖಂಡನೆ-ಮಂಡನೆಯ ವಿವೇಚನೆ, ಕನ್ನಡ ಸಂಸ್ಕೃತ ಕಾವ್ಯಗಳ ಸೊಲ್ಲುಗಳು, ರಸವತ್ತಾದ ನಿರೂಪಣೆ, ಮಡದಿಯ ಪಾತ್ರವಾದರೆ ಪತಿಯ ಪಾತ್ರಧಾರಿಯನ್ನು ಮೀರದ ಔಚಿತ್ಯಪ್ರಜ್ಞೆ  ಮೊದಲಾದ ಅಂಶಗಳು ಉಲ್ಲೇಖನೀಯ. ಹವ್ಯಾಸಿ ಅರ್ಥಧಾರಿಗಳೊಂದಿಗೆ ಅರ್ಥ ಹೇಳುವಾಗಲೂ ಅವರು ಧೈರ್ಯದಿಂದ ಮಾತನಾಡುವಂತೆ ಮಾಡುವ ಇವರ ಚಾಕಚಕ್ಯತೆ ಅದ್ಬುತವಾದುದು. ಕ್ಯಾಸೆಟ್ಗಳಲ್ಲಂತೂ ಇವರ ಪಾತ್ರವಿಲ್ಲದೇ ಇರುತ್ತಿದ್ದುದು ತುಂಬಾ ವಿರಳ.


 ಪ್ರಸಂಗಕರ್ತ ರಮೇಶಾಚಾರ್ಯ:
60-65ಪ್ರಸಂಗಗಳ ಪದ್ಯರಚನೆ. ಬಿಡಿಪದ್ಯಗಳನ್ನು ಬರೆದು ಕೊಟ್ಟದ್ದು ಲೆಕ್ಕವೇ ಇಲ್ಲ ಬಿಡಿ. ಅನೇಕ ಕ್ಷೇತ್ರಮಹಾತ್ಮೆಗಳ ಪದ್ಯಗಳೆಲ್ಲ ಇವರಿಂದಲೇ ರಚಿತವಾದವು. ಇವರ ಪದ್ಯರಚನೆಯ ಶೈಲಿ ಸರಳ ಮತ್ತು ಸುಂದರ. ಕ್ಲಿಷ್ಟವಲ್ಲದ ಅರ್ಥಪೂರ್ಣ ಧ್ವನಿಯುಕ್ತವಾದ ಪದಬಳಕೆ. ನಡುಗನ್ನಡ- ಹೊಸಗನ್ನಡದ ಸೊಗಸಾದ ಸಮ್ಮಿಲನ. *ಸಮಗ್ರ ವಿಶ್ವಾಮಿತ್ರ, ಮಹಾಮಾತೆ ಕುಂತಿ, ಅನಸೂಯೋಪಖ್ಯಾನ, ಶ್ರೀಕೃಷ್ಣತುಲಾಭಾರ, ಶುಭೋದಯ(ವಾಮನಪುರಾಣಾಧಾರಿತ) ಮೊದಲಾದವು ಇವರ ಪೌರಾಣಿಕ ಪ್ರಸಂಗಗಳು.


ಪ್ರಶಸ್ತಿ -ಸನ್ಮಾನಗಳು:
ಬಯಲಾಟ ಅಕಾಡೆಮಿ ಪ್ರಶಸ್ತಿ, ಬಂಗಾರಮಕ್ಕಿ ಜಾನಪದಶ್ರೀ ಪ್ರಶಸ್ತಿ, ಪಾತಾಳ ಪ್ರಶಸ್ತಿ, ಕೋಟ ವೈಕುಂಠ ಪ್ರಶಸ್ತಿ, ಅಜಾತಶತ್ರು ಪ್ರಶಸ್ತಿ, ಕಲ್ಕೂರು ಶೇಣಿ ಕಲೋತ್ಸವ ಪ್ರಶಸ್ತಿ, ಅಗರಿ ಪ್ರಶಸ್ತಿ  ಹೀಗೆ ದೊರೆತ ಪ್ರಶಸ್ತಿಗಳು ಹತ್ತು ಹಲವು. ಇನ್ನು ಸನ್ಮಾನಗಳು ಅಗಣಿತ. ಮನೆಯ ಒಂದು ಗೋಡೆಯ ತುಂಬಾ ಸನ್ಮಾನಪತ್ರಗಳೇ ತುಂಬಿವೆ. ಇವೆಲ್ಲ ಎಂ ಕೆ ಯವರ ಸಾಧನೆಗೆ ಸಾಕ್ಷಿಯಾಗಿವೆ.


ಕುಟುಂಬ:
ಇವರ ಪತ್ನಿ ಶ್ರೀಮತಿ ವಿಶಾಲಾಕ್ಷಿ. ಎಂ ಕೆ ಯವರ ಸಾಧನೆಗೆ ಬೆನ್ನೆಲುಬಾಗಿ ಮನೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಪತಿಯ ಪ್ರತಿಭಾ ದೀಪಕ್ಕೆ ತೈಲವಾದ ಸದ್ಗೃಹಿಣಿ. ಆಶಾಲತ ಮತ್ತು ಸರೋಜ ಎಂಬ ಇಬ್ಬರು ಹೆಣ್ಣುಮಕ್ಕಳು ಮದುವೆಯಾಗಿ ಒಳ್ಳೆಯ ಮನೆಸೇರಿ ಸಂತೃಪ್ತಿಯಿಂದ ಜೀವನ ನೆಡೆಸುತ್ತಿದ್ದಾರೆ. ಮಗ ಮನೋಜ್ ಯಕ್ಷಗಾನ ಕಲಾವಿದರಾಗದೇ ಇದ್ದರು ತಂದೆಯ ಸಾಧನೆಯ ಬಗ್ಗೆ ಹೆಮ್ಮೆ ಉಳ್ಳವರು. ಮಗಳಾಗಿ ಮಾವನನ್ನು ನೋಡಿಕೊಳ್ಳುತ್ತಿರುವ ಸೊಸೆ ಸರಿತಾ. ಈಶ್ವರಿ ಮತ್ತು ಪನ್ನಗ ಮೊಮ್ಮಕ್ಕಳು. ತಾಯಿ ರುಕ್ಮಿಣಮ್ಮ ಇತ್ತೀಚೆಗೆ ದಿವಂಗತರಾದರು. ಎಂ ಕೆ ಯವರ ತಮ್ಮ ಸತೀಶ್ ಮಂಗಳಗಾರು ಉತ್ತಮ ಯಕ್ಷಗಾನ ಕಲಾವಿದರಾಗಿದ್ದರು. ಎರಡು ದಶಕಗಳ ಹಿಂದೆಯೇ ವಿಧಿವಶರಾದ ನೋವು ಅಣ್ಣನಲ್ಲಿ ಇನ್ನೂ ಮಾಸಲಿಲ್ಲ.

ಇದೊಂದು ಅವರ ಕಿರು ಪರಿಚಯವಷ್ಟೆ. ಅವರ ಪ್ರತಿಭೆಯ ಪೂರ್ಣಪರಿಚಯಕ್ಕೆ ಪುಸ್ತಕವೇ ಬೇಕು. ಅಂತಹ ಒಂದು ಹೊತ್ತಗೆ ಸರಿ ಹೊತ್ತಿಗೆ ಬರಲಿ ಎಂದು ಆಶಿಸುತ್ತೇನೆ.
                                   

ಲೇಖಕ: ರಜನೀಶ ಹೊಳ್ಳ, ಕೆಂಪಿನಮಕ್ಕಿ.

ಗಡಿನಾಡ ಯಕ್ಷಗಾನ ಕಲಾವಿದರು ಕರ್ನಾಟಕದಿಂದ ಸಹಾಯಧನ ಕೇಳಿದರೆ ತಪ್ಪೇ?

ಇತ್ತೀಚೆಗೆ ಕರ್ನಾಟಕ ಸರಕಾರ ಕೊರೋನಾ ಸಂಕಷ್ಟದ ನಿಮಿತ್ತ ಯಕ್ಷಗಾನ ಕಲಾವಿದರಿಗೆ ಸಹಾಯಧನ ನೀಡುವ ಭರವಸೆ ನೀಡಿ ಆ ಸಲುವಾಗಿ ಕಲಾವಿದರು ಅರ್ಜಿ ಸಲ್ಲಿಸುವಂತೆ ತಿಳಿಸಿತ್ತು. ಅರ್ಜಿ ಸಲ್ಲಿಸುವ ಹಾಗೂ ಅದರ ಮುಂದಿನ ಪ್ರಕ್ರಿಯೆ ಈಗ ಚಾಲ್ತಿಯಲ್ಲಿದೆ. ಈ ನಡುವೆ ಗಡಿನಾಡು ಕಾಸರಗೋಡಿನ ಕಲಾವಿದರು ತಮ್ಮನ್ನೂ ಕರ್ನಾಟಕದ ಈ ಸವಲತ್ತಿನ ವ್ಯಾಪ್ತಿಯೊಳಗೆ ತರಬೇಕೆಂಬ ಮನವಿ ಸಲ್ಲಿಸಿದ್ದಾರೆ. ಯಾಕೆಂದರೆ ಹೆಚ್ಚಿನ ಗಡಿನಾಡಿನ ಯಕ್ಷಗಾನ ಕಲಾವಿದರೂ ಕಲಾಸೇವೆ ಮಾಡುತ್ತಿರುವುದು ಕರ್ನಾಟಕದ ಪ್ರದೇಶಗಳಲ್ಲಿ ಮತ್ತು ಕರ್ನಾಟಕ ರಾಜ್ಯಕ್ಕೆ ಸಂಬಂಧಪಟ್ಟ ಮೇಳಗಳಲ್ಲಿ. ಆದುದರಿಂದ ಅವರ ಈ ಕೇಳಿಕೆ ಸಾಧುವಾದುದೇ ಆಗಿರುತ್ತದೆ. 

1. ಹೆಚ್ಚಿನ ಕಲಾವಿದರು ಕಲಾಸೇವೆ ಮಾಡುತ್ತಿರುವುದು ಕರ್ನಾಟಕದಲ್ಲಿ. 

2. ಬಹುತೇಕ ಕಲಾವಿದರು ದುಡಿಯುತ್ತಿರುವ ಮೇಳಗಳು ಕರ್ನಾಟಕ ರಾಜ್ಯಕ್ಕೆ ಸೇರಿದವುಗಳು. 

3. ಅಂತಹಾ ಮೇಳಗಳ ಮಾಲಕತ್ವವೂ ಕರ್ನಾಟಕ ರಾಜ್ಯದ ಮಹನೀಯರಿಗೆ ಸೇರಿದುದಾಗಿದೆ.  

ಆದುದರಿಂದ ಕಾಸರಗೋಡಿನ ಕಲಾವಿದರು ಈ ಸಹಾಯಧನವನ್ನು ಅಪೇಕ್ಷೆಪಟ್ಟರೆ ಅದು ಅನುಚಿತವಾಗಲಾರದು. ಬದಲಾಗಿ ಈ ಸಂಕಷ್ಟ ಸಮಯದಲ್ಲಿ ಉಚಿತವೂ ಸಾಧುವೂ ಆಗಿರುತ್ತದೆ ಎಂದು ಕಲಾವಿದರ ಹಾಗೂ ಯಕ್ಷಾಭಿಮಾನಿಗಳ ಅಭಿಪ್ರಾಯವಾಗಿದೆ. 

ಕಪ್ಪೆಕೆರೆ ಸುಬ್ರಾಯ ಹೆಗಡೆ(ಕಪ್ಪೆಕೆರೆ ಸುಬ್ರಾಯ ಭಾಗವತ)

ಕಪ್ಪೆಕೆರೆ ಸುಬ್ರಾಯ ಹೆಗಡೆ(ಕಪ್ಪೆಕೆರೆ ಸುಬ್ರಾಯ ಭಾಗವತ) – ಸಂಕ್ಷಿಪ್ತ ಮಾಹಿತಿ

ಹೆಸರು:  ಕಪ್ಪೆಕೆರೆ ಸುಬ್ರಾಯ ಹೆಗಡೆ
ಜನನ:  1947

ಜನನ ಸ್ಥಳ:  ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಡಿನಬಾಳ    

ತಂದೆ ತಾಯಿ:  ತಂದೆ ಶ್ರೀ ಈಶ್ವರ ಹೆಗಡೆ. ತಾಯಿ ಶ್ರೀಮತಿ ಗೋಪಿ ಹೆಗಡೆ 

  ವಿದ್ಯಾಭ್ಯಾಸ: ಹತ್ತನೇ ತರಗತಿ 

ಯಕ್ಷಗಾನ ಗುರುಗಳು: ಕೆರೆಮನೆ ಮಹಾಬಲ ಹೆಗಡೆ, ಗಣಪತಿ ಹೆಗಡೆ. ಕಪ್ಪೆಕೆರೆ ಸುಬ್ರಾಯ ಭಾಗವತರದು  ಮೂಲತಃ ಯಕ್ಷಗಾನ ಕುಟುಂಬ. ಹಿರಿಯ ಸಹೋದರ ಕಪ್ಪೆಕೆರೆ ಮಹಾದೇವ ಹೆಗಡೆಯವರು ಪ್ರಸಿದ್ಧ ವೇಷಧಾರಿ. 

ಪ್ರೇರಣೆ: ಕೆರೆಮನೆ ಶಿವರಾಮ ಹೆಗಡೆ, ಮರವಂತೆ ನರಸಿಂಹ ದಾಸ, ನಾರ್ಣಪ್ಪ ಉಪ್ಪೂರರಿಂದ 

  ರಂಗಮಾಹಿತಿ ಮತ್ತು ಹೆಚ್ಚಿನ ಕಲಿಕೆ : ಕೆರೆಮನೆ ಶಿವರಾಮ ಹೆಗಡೆ, ಮರವಂತೆ ನರಸಿಂಹ ದಾಸ, ನಾರ್ಣಪ್ಪ ಉಪ್ಪೂರರಿಂದ 
ಅನುಭವ:  ಇಡಗುಂಜಿ, ಗುಂಡಬಾಳ, ಸಾಲಿಗ್ರಾಮ ಬಚ್ಚಗಾರು ಮತ್ತು ಅಮೃತೇಶ್ವರಿ ಮೇಳಗಳಲ್ಲಿ  ಸುಮಾರು 45 ವರ್ಷ ಕಲಾಸೇವೆ ಮಾಡಿದ್ದಾರೆ. ಇವರೊಬ್ಬ ಶ್ರೇಷ್ಟ ಬಾಗವತ ಮಾತ್ರವಲ್ಲದೆ ಸಮರ್ಥ  ಗುರುಗಳಾಗಿ ನೂರಾರು ಶಿಷ್ಯರನ್ನು ತಯಾರಿಸಿದ್ದಾರೆ.ಚಂಡೆ ಮದ್ದಳೆ ವಾದನ ವೇಷಗಾರಿಕೆಯಲ್ಲೂ ಪರಿಣತಿ ಪಡೆದು ಯಕ್ಷಗಾನದ ದಶಾವತಾರಿ ಎನಿಸಿಕೊಂಡಿದ್ದಾರೆ.  ವೇಷದಾರಿಯಾಗಿ ಅರ್ಜುನ, ಬಲರಾಮ, ನಾರದ ಮುಂತಾದ ಪಾತ್ರಗಳನ್ನು ನಿರ್ವಹಿಸಿ ಮುಮ್ಮೇಳ ಕಲಾವಿದನಾಗಿ ತನ್ನ ಸಾಮರ್ಥ್ಯವನ್ನು ಪ್ರಕಟಿಸಿದ್ದಾರೆ. 

ಗುರುಗಳಾಗಿ :  ಸಮರ್ಥ  ಗುರುಗಳಾಗಿ ನೂರಾರು ಶಿಷ್ಯರನ್ನು ತಯಾರು ಮಾಡಿದ್ದಾರೆ. 

ವಿಶೇಷತೆ: ಸುಬ್ರಾಯ ಬಾಗವತರ ತಾಳಗತಿಯಲ್ಲಿನ ಪರಿಶುದ್ದತೆ, ಲಯಬದ್ದತೆ.ಪ್ರಸಂಗದ ನೆಡೆ,ನಿರ್ದೇಶನ ಮುಂತಾದವುಗಳಿಂದ ಅವರ ಪ್ರತಿಭೆಯನ್ನು ಅಳೆಯಬಹುದು. ತಾನೊಬ್ಬ ಸಮರ್ಥ ಭಾಗವತ ಮಾತ್ರವಲ್ಲದೆ  ರಂಗನಿರ್ದೇಶಕನೆಂದು ತನ್ನ ಪ್ರದರ್ಶನಗಳಿಂದ ತೋರಿಸಿಕೊಟ್ಟಿದ್ದಾರೆ.  ಅಪಾರ ಪೌರಾಣಿಕ ಜ್ಞಾನವನ್ನು ಹೊಂದಿದ ಭಾಗವತ.

ಪ್ರಶಸ್ತಿ/ಅಭಿನಂದನೆ/ಸನ್ಮಾನಗಳು: ಇವರಿಗೆ ಕರ್ನಾಟಕ ಯಕ್ಷಗಾನ ಬಯಲಾಟ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ,ಯಕ್ಷ ದೇಗುಲ ಪ್ರಶಸ್ತಿ, ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿಗಳಲ್ಲದೆ ಇನ್ನಿತರ ಹಲವಾರು ಸನ್ಮಾನ ಪ್ರಶಸ್ತಿಗಳು ದೊರೆತಿವೆ. 

ಕೀರ್ತಿಶೇಷ ಯಕ್ಷಗಾನ ಕಲಾವಿದರ ಸ್ಮರಣೆಯಲ್ಲಿ ‘ಯಕ್ಷಾನುಗ್ರಹ’ ವಾಟ್ಸಾಪ್ ಗ್ರೂಪ್ 

ಸದಾ ಏನಾದರೊಂದು ಸದ್ವಿಚಾರಗಳ ಚಟುವಟಿಕೆಯಲ್ಲಿ ಸುದ್ದಿ ಮಾಡುವ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ತನ್ನ ಕಲಾಪರ ಕಾರ್ಯಕ್ರಮಗಳನ್ನು ಮುಂದುವರಿಸುತ್ತಲೇ ಇದೆ. ಈ ಬಾರಿ ಕೊರೋನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಯಕ್ಷಗಾನ ಪ್ರದರ್ಶನಗಳು ಬೇಗನೆ ನಿಂತಿರಬಹುದು. ಆದರೆ ಪ್ರತಿಷ್ಠಾನ ಕಲೆಯ ಹೊರತು ಬೇರೇನನ್ನೂ ಯೋಚಿಸುವುದಿಲ್ಲ. ಈಗಾಗಲೇ ಸಿರಿಬಾಗಿಲು ಪ್ರತಿಷ್ಠಾನ ಹಲವಾರು ಕಲಾಸಂಬಂಧಿ ಮತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಡೆಸುತ್ತಾ ಇದೆ. 

ಇಂತಹಾ ಕಾರ್ಯಕ್ರಮಗಳಿಗೆ ಇದೀಗ ಇನ್ನೊಂದು ಸೇರ್ಪಡೆಯಾಗಿದೆ. ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯರು ನಿರ್ವಾಹಕರಾಗಿರುವ ‘ಯಕ್ಷಾನುಗ್ರಹ’ ಎಂಬ ವಾಟ್ಸಾಪ್ ಗ್ರೂಪ್ ಇದೀಗ ಇಂತಹುದೇ ಒಂದು ಚಟುವಟಿಕೆಯಲ್ಲಿ ತೊಡಗಿದೆ.  ಪ್ರತಿದಿನವೂ ತಿಟ್ಟುಗಳ ಭೇದವಿಲ್ಲದೆ, ಅಳಿದುಹೋದರೂ ಜನಮಾನಸದಲ್ಲಿ ಕೀರ್ತಿವಂತರಾಗಿ ನೆಲೆಸಿದ ಕಲಾವಿದರನ್ನು ದಿನಕ್ಕೊಬ್ಬರಂತೆ ಲೇಖನಗಳ ಮೂಲಕ ನೆನೆಯುವ ಸತ್ಕಾರ್ಯವನ್ನು ಈ ವಾಟ್ಸಾಪ್ ಗುಂಪು ಮಾಡುತ್ತಿದೆ. ಈಗಾಗಲೇ 11 ದಿನಗಳಲ್ಲಿ ಹನ್ನೊಂದು ಪ್ರಸಿದ್ಧ ಕಲಾವಿದರ ಲೇಖನಗಳು ಬಂದಿವೆ. ಎಲ್ಲಾ ಲೇಖನಗಳು ಉತ್ತಮ ವಿಚಾರಗಳನ್ನೊಳಗೊಂಡಿದ್ದುವು.

ಇಲ್ಲಿ ಮತ್ತೊಂದು ವಿಚಾರವನ್ನು ಗಮನಿಸಬೇಕು. ಈ ಗ್ರೂಪಿನ ಸದಸ್ಯರ ಹೆಸರುಗಳನ್ನೂ ಗಮನಿಸಿದಾಗ ಆಶ್ಚರ್ಯವಾಗುತ್ತದೆ.  ಕಲಾವಿದರು, ಪ್ರಸಂಗಕರ್ತರು, ವಿದ್ವಾಂಸರು ತುಂಬಿರುವ ಈ ಗುಂಪು ಸದ್ವಿಚಾರಗಳ ಚರ್ಚೆಯನ್ನೇ ನಡೆಸುತ್ತದೆ. ಈ ವರೆಗೆ ಪ್ರಸ್ತುತಗೊಂಡ ಲೇಖನಗಳು ವಾಸ್ತವತೆಯನ್ನು ಪ್ರತಿಬಿಂಬಿಸಿವೆ. ಆದರೆ ಲೇಖನಕ್ಕಿಂತಲೂ ಆಮೇಲೆ ನಡೆಯುವ ಅದರ ಮೇಲಿನ  ಅನಿಸಿಕೆಗಳು ಮತ್ತು ಚರ್ಚೆಗಳು ಇನ್ನೂ ಹೆಚ್ಚಿನ  ಕುತೂಹಲಕರವಾದ  ಮಾಹಿತಿಗಳನ್ನೊಳಗೊಂಡಿರುತ್ತವೆ. ಇದುವರೆಗೆ ಅಗರಿ, ದಾಸರಬೈಲು, ಅರಾಟೆ, ಪಕಳಕುಂಜ, ಚಿಪ್ಪಾರು, ಹೊಸ್ತೋಟ, ಹಿರಿಯ ಬಲಿಪ, ಕಡತೋಕ, ಕುರಿಯ, ಹೆರಿಯ ನಾಯ್ಕ್, ವೀರಭದ್ರ ನಾಯಕ್ ಮೊದಲಾದ ಗತಿಸಿಹೋದ ಪ್ರಸಿದ್ಧ ಕಲಾವಿದರ ಲೇಖನಗಳು ಬಂದಿರುತ್ತವೆ.

ಈಗಾಗಲೇ 11 ದಿನಗಳಲ್ಲಿ 11 ಕಲಾವಿದರ  ಸ್ವಾರಸ್ಯಕರ ವಿಚಾರಗಳನ್ನು ಆಸ್ವಾದಿಸಿದ ಗುಂಪಿನ ಸದಸ್ಯರು ಇಂದು ಹನ್ನೆರಡನೆಯ ಲೇಖನದ ನಿರೀಕ್ಷೆಯಲ್ಲಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಇದೊಂದು ಅತ್ಯುತ್ತಮ ವಾಟ್ಸಾಪ್ ಗ್ರೂಪ್ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನೂ ಹೆಚ್ಚಿನ ಚಟುವಟಿಕೆಗಳಿಂದ ಈ ಗುಂಪು ಕಾರ್ಯನಿರ್ವಹಿಸಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ರಸ ರಾಗ ಚಕ್ರವರ್ತಿ ಜಿ. ಆರ್. ಕಾಳಿಂಗ ನಾವುಡ

ಇಂದು ಯಕ್ಷಗಾನ ರಂಗದ ಧ್ರುವತಾರೆ ಎಂದು ಕಲಾರಸಿಕರ ಮನದಲ್ಲಿ ಸ್ಥಾಯಿಯಾಗಿ ನೆಲೆಯೂರಿರುವ ರಸ ರಾಗ ಚಕ್ರವರ್ತಿ ಜಿ.ಆರ್.ಕಾಳಿಂಗ ನಾವುಡರು ಜನ್ಮ ತಳೆದ ದಿನ .ನಾವುಡರ ಬಗ್ಗೆ ಹಲವು ವಿದ್ವಾಂಸರು ವಿಭಿನ್ನ ದೃಷ್ಟಿಕೋನದಲ್ಲಿ ಬರೆದಿದ್ದಾರೆ ಎಂಬುದು ಸತ್ಯ. ತುಂಬಿದ ಶರಧಿಯಿಂದ ಎಷ್ಟು ಜಲವನ್ನು ನಮಗೆ ದಕ್ಕಿಸಿಕೊಳ್ಳಬಹುದೋ ಅದು ನಮ್ಮ ಪ್ರಾಪ್ತಿ. ಹಾಗೆಯೇ ಅವರ ಅಪ್ಪಟ ಅಭಿಮಾನಿಯಾಗಿ ನಾನು ಸಹ ನನ್ನ ಬೊಗಸೆಗೆ ದಕ್ಕುವಷ್ಟನ್ನು ಪಡೆಯುವ ಪ್ರಾಮಾಣಿಕ ಯತ್ನಕ್ಕೆ ಕೈ ಇಕ್ಕುತ್ತೇನೆ ಎಂಬ ನಿಲುವಿನೊಂದಿಗೆ ನಾವುಡರೆಂಬ ತೇಜೋಪುಂಜ  ವ್ಯಕ್ತಿತ್ವವನ್ನು ಬಿಂಬಿಸಲು ಯತ್ನಿಸುತ್ತೇನೆ.


ಇತಿಹಾಸವನ್ನು ಎಲ್ಲರಿಂದಲೂ ಸೃಜಿಸಲು ಸಾಧ್ಯವಿಲ್ಲ, ಅದು ತನ್ನಷ್ಟಕ್ಕೆ ಪ್ರಕಾಶಕ್ಕೆ ಬರುತ್ತದೆಯಾದರೂ , ಕೆಲವೊಂದು ಅಸಾಮಾನ್ಯ ಸಾಧಕರು ಸಾಧನೆಯ ಬಲುಮೆಯಿಂದ ಇತಿಹಾಸವನ್ನು ಸೃಷ್ಟಿ ಮಾಡಬಲ್ಲರು.ಅದು ಕ್ರೀಡೆ, ಸಾಹಿತ್ಯ , ಕಲೆ ಎಂಬೀ ವಿಭಿನ್ನ ಪ್ರಕಾರವನ್ನು ಹೊಂದಿರಬಹುದು.  ಮನುಷ್ಯರ ಗುಣಸ್ವಭಾವಗಳು ಸರ್ವೇ ಸಾಧಾರಣವಾಗಿ ಸಾಮ್ಯತೆಯನ್ನು ಹೊಂದಿರುತ್ತದೆ ಎಂಬುದು ಶತಸಿದ್ಧ.  ಕೆಲವರು ಮಾತ್ರ ನಮ್ಮ ಊಹೆಗೂ ಮೀರಿದ ಅಸಾಮಾನ್ಯ ಸಾಧನೆಯನ್ನು ಈ ನೆಲದಲ್ಲಿ ಸ್ಥಾಯಿಯಾಗಿ ಸ್ಥಾಪಿಸಿ ಬಿಡುತ್ತಾರೆ. ಸಾಧಕರು  ಮತ್ತು ನೋಟಕರು ಇವೆರಡರ ನಡುವೆ ತೀರಾ ಕಿರಿದಾದ ಅಂತರವಿರಬಹುದು, ಆದರೆ ಸಾಧಕರ ಬಲುಮೆ ಎಂಬುದು ಅನೂಹ್ಯ ಅನುಭೂತಿಯನ್ನು ನೀಡುತ್ತದೆ . ಗಮನಿಸಬೇಕಾದ ವಿಚಾರವಿರುವುದು ಈ ನೆಲದಲ್ಲಿ ಅಳಿಸಲಾಗದ ಅಸದೃಶ ಪ್ರಭಾವವನ್ನು ಬೀರಿ ಇತಿಹಾಸ ನಿರ್ಮಿಸಿದ ಮಹಾನ್ ಸಾಧಕರ ಸಾಧನೆಯ ಕುರಿತಾಗಿ.

ಸಂವತ್ಸರಗಳು ಉರುಳಿದಂತೆ ಮತ್ತಷ್ಟು ಪ್ರಖರತೆಯನ್ನು ಪಡೆದು ಜನಮಾನಸಕ್ಕೆ ಆಪ್ತವಾಗುವ ಒಂದು ವಿಶಿಷ್ಟ ಸಂದರ್ಭ ಇಲ್ಲಿರುವ ಧನಾತ್ಮಕ ಅಂಶ. ಈ ದಿಸೆಯಲ್ಲಿ ನನ್ನ ಯೋಚನಾಲಹರಿಯನ್ನು ಹರಿಯಬಿಟ್ಟಾಗ ನನಗೆ ದೃಗ್ಗೋಚರವಾಗುವುದು ಒಂದು ವಿಶಿಷ್ಟ, ಅಸಾಮಾನ್ಯ , ಅನುಪಮ ವ್ಯಕ್ತಿತ್ವ. ವ್ಯಕ್ತಿತ್ವ ಎಂಬುದಕ್ಕಿಂತಲೂ ಒಂದು Phenomenon ಆಗಿ ದಟ್ಟ ಪ್ರಭಾವವನ್ನು ಬೀರಿದ ಮಹಾನ್ ಚೇತನ ರಸ ರಾಗ ಚಕ್ರವರ್ತಿ ಯಕ್ಷರಂಗದ ಧ್ರುವತಾರೆ ಭಾಗವತ ಗುಂಡ್ಮಿ ಕಾಳಿಂಗ ನಾವುಡರು. ಕಾಳಿಂಗ ನಾವುಡರ ಬಗ್ಗೆ ಹಲವು ವಿದ್ವಾಂಸರು  ವಿವಿಧ ಮಾಧ್ಯಮಗಳಲ್ಲಿ ತಮ್ಮ ಗ್ರಹಿಕೆಯ  ಆಳಕ್ಕಿಳಿದು ವಿಚಾರವನ್ನು ಮಂಡಿಸಿದ್ದಾರೆ ಎಂಬುದು ದಿಟವೇ.  ಮತ್ತನೇಕರ ಅಭಿಪ್ರಾಯದಲ್ಲಿ ನಾವುಡರ ವಿಷಯವನ್ನು ಹೊರತುಪಡಿಸಿ ಬೇರೆ ಏನಾದರೂ ಬರೆಯಬಹುದು ಎಂಬುದು. ಇದೂ ಒಂದು ವಾದವೇ. ಆದರೆ ನಾವು ಮನಗಾಣಬೇಕಾದ ವಿಷಯವೆಂದರೆ, ಕೆಲವೊಂದು ಘಟನೆ, ವಿದ್ಯಮಾನಗಳು ಚಿರಂತನವಾದ ಪ್ರಭಾವವನ್ನು ಜನಮಾನಸದಲ್ಲಿ ಬೀರುತ್ತವೆ. ಈ ಕಡೆಗೆ ಗಮನ ಹರಿಸಿದರೆ ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದ , ಪಾಪ್ ತಾರೆ ಮೈಕಲ್ ಜಾಕ್ಸನ್, ಡಿಗೋ ಮರಡೋನಾ , ವೀರಯೋಧ ನೆಪೋಲಿಯನ್ ಬೋನಪಾರ್ಟೆ . ಈ ಎಲ್ಲರೂ ಇತಿಹಾಸ ಪುರುಷರು. ಇತಿಹಾಸಕ್ಕೊಂದು ವ್ಯಾಖ್ಯಾನ ನೀಡಿದವರು . ಭಾಗವತ ಕಾಳಿಂಗ ನಾವುಡರನ್ನು ಅಭಿಮಾನದ ನೆಲೆಯಲ್ಲಿ ಇದೇ ರೀತಿಯಾಗಿ ಬಿಂಬಿಸುವುದು ಸೂಕ್ತವೆನಿಸುತ್ತದೆ . ಹಾಗಾಗಿ ಅವರು ಎಂದಿಗೂ ಪ್ರಸ್ತುತ.

ನಾವೆಲ್ಲ ತಿಳಿದಂತೆ ಯಕ್ಷಗಾನದಲ್ಲಿ ರಂಗದ ಸೂತ್ರಧಾರ (ನಿರ್ದೇಶಕ ) ನೆಂದರೆ ಭಾಗವತ. ಅದನ್ನವರು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂಬುದು ಸರ್ವವಿದಿತ . ಸಾಧಾರಣ 13 -14 ಈ  ವಯೋಮಾನದ ಬಾಲಕನಾಗಿರುವಾಗಲೇ ಭಾಗವತಿಕೆಯಲ್ಲಿ ಅಸಾಧಾರಣ ಪ್ರೌಢಿಮೆ ಕರಗತ ಮಾಡಿದ್ದರು ಎಂಬುದು ಆಶ್ಚರ್ಯಕರ ವಿಚಾರ. ಅತ್ಯಂತ ಉನ್ನತ ಕಂಠಶ್ರೀಯ ಭಾಗವತಿಕೆ, ಕರ್ಣಾನಂದಕರವಾಗಿ ಹೃದ್ಯವಾಗಿರುತ್ತಿತ್ತು. ಸಾಧಾರಣವಾಗಿ ಉನ್ನತ ಸ್ಥಾಯಿಯಲ್ಲಿ ಹಾಡುವ ಗಾಯಕನ ಗಾಯನ ಮಾಧುರ್ಯದಲ್ಲಿ ನಿರಂತರತೆ ಹೊಂದಿರುತ್ತದೆ ಎನ್ನಲು ಬರುವುದಿಲ್ಲ . ಆದರೆ ನಾವುಡರ ವಿಚಾರದಲ್ಲಿ ಹಾಗಲ್ಲ . ಅದೊಂದು ರಸಲೋಕದ ಸೃಷ್ಠಿ. ಗುಂಯ್ಗುಡುವ ಸ್ವರದ ಸಂಚಾರ . ಯಾವುದೇ ರಾಗವಿರಲಿ, ಅದರ  ರಸಸ್ಯಂದಿಯಾದ ಸಂಚಾರ ನಾವುಡರ ವಿಶಿಷ್ಟತೆ . ಸಾಹಿತ್ಯ ಸ್ಪಷ್ಟತೆ , ಅಸಾಧಾರಣ ತಾಳಲಯಗಳ ಸಮ್ಮಿಲನ. ಎತ್ತರದ ಪೀಠದಲ್ಲಿ ಕುಳಿತು ತಲೆತಗ್ಗಿಸಿ ಹಾಡಿದರೆ ಯಕ್ಷಲೋಕದ ಅನಾವರಣ. ಬಹುಶಃ ಯಾವ ಭಾಗವತನಿಗೂ ಸಿದ್ಧಿಸದ ಅಸಾಧಾರಣ ವಿಶಿಷ್ಟ ಪ್ರಾಪ್ತಿ . ಏನದು ಕರ್ಣ ಮಧುರ ಘಂಟಾರವ ಅಹಹ ಅಲ್ಲಲ್ಲ ಇನಿದನಿಯ ಕಲರವ ಎನ್ನಬಹುದಾದ, ವಿಮರ್ಶೆಯ ಮಜಲನ್ನು ಮೀರಿನಿಂತ ಮಹಾನ್ ಚೇತನ ಕಾಳಿಂಗ ನಾವುಡರು.  ನಾನು ಎಲ್ಲಾ ಯಕ್ಷಗಾನ ಭಾಗವತಿಕೆಗಳನ್ನು ಆಲಿಸುತ್ತೇನೆ. ಆದರೆ ಕಾಳಿಂಗ ನಾವಡರ ವಿಚಾರದಲ್ಲಿ ಹಾಗಲ್ಲ , ಪ್ರತಿಸಲ ಅವರ ಹಾಡುಗಳನ್ನು ಆಲಿಸುವಾಗಲೂ ಹೊಸದಾದ ಅನುಭವ . ಶೇಣಿ ಗೋಪಾಲಕೃಷ್ಣ ಭಟ್ಟರ ಅರ್ಥಗಾರಿಕೆಯನ್ನು ಆಲಿಸಿದಂತೆ . ಅವರೆಂತಹ ದೈತ್ಯಪ್ರತಿಭೆ ಯೆಂದರೆ ಕಲಾರಸಿಕರು ನಾವುಡರನ್ನು , ಅವರ ಕಂಠಸಿರಿಯನ್ನು ಒಪ್ಪಿಕೊಳ್ಳುವಲ್ಲಿ ತೆಂಕು-ಬಡಗು  ಎಂಬ ತಿಟ್ಟುಗಳನ್ನೇ ಮರೆತರು .ಇದು ಒಂದು  ಚರಿತ್ರಾರ್ಹ ಸಂಗತಿ. ಕಾಳಿಂಗ ನಾವುಡರ ಮಹತ್ವ ಅರಿಯಲು ನನ್ನದೇ ನಿದರ್ಶನವೊಂದಿದೆ.

ನಾವುಡರು ಸಾವಿರದ ಒಂಬೈನೂರ ತೊಂಬತ್ತನೇ ವರ್ಷದ ಮೇ ತಿಂಗಳ 27 ನೇ ತಾರೀಖಿನಂದು ಉಡುಪಿಯ ಸಮೀಪ ನಡೆದ ವಾಹನ ಅಪಘಾತದಲ್ಲಿ ಅಕಾಲ ಮರಣವನ್ನೆಯ್ದಿದರು. ಆಗೆಲ್ಲ ದಿನಪತ್ರಿಕೆಗಳನ್ನು ಬಿಟ್ಟರೆ ಈಗಿನಂತೆ ಮಾಧ್ಯಮಲೋಕ  ಉಛ್ರಾಯ ಸ್ಥಿತಿಯಲ್ಲಿರಲಿಲ್ಲ .
ಉದಯವಾಣಿ ದಿನಪತ್ರಿಕೆ ಮುಖಪುಟವನ್ನು ನಾನು ನೋಡುತ್ತೇನೆ , ನಾನು ಸ್ತಂಭೀಭೂತನಾಗಿ ಹೋದೆ . ನನ್ನ ಆರಾಧ್ಯ ದೇವರು ಎಂದು ನಿತ್ಯವೂ ಗುನುಗುನಿಸುತ್ತಿದ್ದ ಕಾಳಿಂಗ ನಾವುಡರು ಇನ್ನಿಲ್ಲ ಎಂಬ ವಾರ್ತೆ ಅಲ್ಲಿ ಕಂಡಿತು . ನನಗೆ ಏನು ಮಾಡಲೂ ತೋಚಲಿಲ್ಲ ಅಳುವುದನ್ನು ಬಿಟ್ಟು . ನನ್ನಲ್ಲಿ ಪರ್ಯಾಯ ವ್ಯವಸ್ಥೆ ಇರಲಿಲ್ಲ, ನಿರಂತರವಾಗಿ ದುಃಖಿಸುತ್ತಿದ್ದ ನನ್ನನ್ನು ಕಂಡು ನನ್ನ ಅಮ್ಮ ಹೇಳಿದರು ‘ಅಳಬೇಡ ಸಮಾಧಾನ ಮಾಡಿಕೋ ನಿನ್ನ ತಂದೆ ತೀರಿಹೋದಾಗಲೂ  ನೀನು ಇಷ್ಟು ಅತ್ತಿರಲಿಲ್ಲ’. ಆ ಮಾತು ಇಂದು ಕೂಡ ನನ್ನ ಕಿವಿಯಲ್ಲಿ ಗುಯ್ ಗುಡುತ್ತಿದೆ. ನಾವುಡರು ರಂಗದಲ್ಲಿ ತಾನೇ ವೇಷದಾರಿಯಾಗಿಯೂ ಕಾಣಿಸುತ್ತಿದ್ದರು ಎಂಬುದು ಗಮನಾರ್ಹ . ಉತ್ಕೃಷ್ಟ ಕಲಾವಿದನ ನೈಪುಣ್ಯವನ್ನು ರಂಗದಲ್ಲಿ ಎತ್ತಿ ತೋರಿಸುವಲ್ಲಿ ಅವರು ಹಾಡನ್ನು ಹಲವು ಬಾರಿ  ಹಾಡಿ  ಪಾತ್ರಧಾರಿಯ ಅಭಿನಯವನ್ನು ಮೇಲ್ಮೈಗೆ ತರುತ್ತಿದ್ದರು . ಇಂತಹ ವಿಶೇಷಣ ಹೊಂದಿದ ನಾವುಡರು ಇಂದು  ಜನ್ಮತಳೆದ ದಿನ. ಇಂದು ಅವರು ಬದುಕಿರುತ್ತಿದ್ದರೆ ಅವರಿಗೆ 62 ವರ್ಷ ತುಂಬಿರುತ್ತಿತ್ತು. ಇಂದಿಗೂ ಮುಂದೆಯೂ ಅವರೊಬ್ಬ ಅಸಾಧಾರಣ ಕಲಾವಿದರಾಗಿ ಕಂಡುಬರುತ್ತಿದ್ದರು ಎಂಬುದನ್ನು ನೆನೆಯುವಾಗ ಕೈ ನಡುಗಿ ಮಾತು ಮೂಕವಾಗುತ್ತದೆ. ಭಾಗವತಿಕೆಗೆ ತಾರಾಮೌಲ್ಯ (Star value)ತಂದುಕೊಟ್ಟ ಕಾಳಿಂಗ ನಾವುಡರಂತಹ ಕಲಾವಿದ ಯಕ್ಷಲೋಕಕ್ಕೆ ಬಹುಕಾಲ ದುರ್ಲಭ.

ಲೇಖಕ: ಶ್ರೀ ನಾರಾಯಣ ತೋರಣಗುಂಡಿ

ಯಕ್ಷರಂಗದ ಋತುಪರ್ಣ – ಪುತ್ತೂರು ನಾರಾಯಣ ಹೆಗ್ಡೆ  (Puttur Narayana Hegde)

ಪುತ್ತೂರು ನಾರಾಯಣ ಹೆಗ್ಡೆಯವರು ಉಪ್ಪಳಿಗೆ ಮನೆತನದ ಸುಬ್ರಾಯ ಹೆಗಡೆಯವರ ಪುತ್ರ. ಹಿರಿಯ ಅಣ್ಣ ದಾಸಪ್ಪ ಹೆಗಡೆ, ಆಮೇಲೆ ಶೇಷಮ್ಮ ಅಂತ ಇವರ ಅಕ್ಕ.ಇವರ ತಾಯಿ ಗರ್ಭಿಣಿಯಾಗಿರುವಾಗಲೇ ತಂದೆ ಸುಬ್ರಾಯ ಹೆಗಡೆಯವರು ತೀರಿ ಹೋಗಿದ್ದರು. ಇವರನ್ನು ಪ್ರಸವಿಸಿದ ನಂತರ ಮೂರೇ ತಿಂಗಳಲ್ಲಿ ತಾಯಿ ಕೂಡಾ ತೀರಿ ಹೋದರು. ಆಮೇಲೆ ಅಕ್ಕನ ಆರೈಕೆಯಲ್ಲೇ ಬೆಳೆದರು. ರಾಗಿಕುಮೇರಿ ಶಾಲೆಯಲ್ಲಿ ಮೂರನೇ ತರಗತಿಯವರೆಗೆ ವಿದ್ಯಾಭ್ಯಾಸ. ಬಿದಿರಿನ ಕೋಲು ಮಾಡಿ ಹೊೈಗೆಯಲ್ಲಿ ಗೆರೆಹಾಕಿ ಬರೆಯುವ ಪದ್ಧತಿಯಿತ್ತಂತೆ ಆಗ. ದನಗಳನ್ನು ಮೇಯಿಸುವ ಕೆಲಸ ಕೂಡಾ ಇತ್ತು. ಹಟ್ಟಿಯಲ್ಲೇ ಮಲಗಿಕೊಳ್ಳುವುದು. ಯಾಕೆಂದರೆ ಆಟಕ್ಕೆ ಹೋಗುವ ಚಪಲ. ಆಟ ನೋಡಿ ಬೆಳಿಗ್ಗೆ ಬೇಗನೇ ಬಂದು ಪುನಃ ಹಟ್ಟಿಯಲ್ಲೇ ಮಲಗಿಕೊಳ್ಳುವುದು. ಆಟಕ್ಕೆ ಹೋದದ್ದು ಮನೆಯವರಿಗೆ ತಿಳಿಯಬಾರದೆನ್ನುವ ಹೆದರಿಕೆಯಿಂದ.
ಯಾಕೋ ಏನೋ 13ನೇ ವಯಸ್ಸಿನಲ್ಲಿ ಮನೆಯವರೊಂದಿಗೆ ಮುನಿಸಿಕೊಂಡು ಮನೆಬಿಟ್ಟು ಮಂಗಳೂರಿಗೆ ಹೋಗಿ ಅಲ್ಲಿ ಬೇಕರಿಯೊಂದರಲ್ಲಿ ಕೆಲಸಕ್ಕೆ ಸೇರಿದರು. ಸೈಕಲಿನಲ್ಲಿ ಬ್ರೆಡ್ ತೆಗೆದುಕೊಂಡು ಹೋಗುವ ಕೆಲಸ. ಅಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದರು. ಪುನಃ ಅಲ್ಲಿಂದ ಬಂದು Forest Guard ಆಗಿ ಕೆಲಸ ಮಾಡಿದರು. ಶಿರಾಡಿ, ನಾರಾವಿ ಇತ್ಯಾದಿ ಕಡೆಗಳಲ್ಲಿ ಕೆಲಸ ಮಾಡಿದರು. ಆಟದ ಆಸಕ್ತಿಯಿಂದ ಆಟ-ಕೂಟಗಳನ್ನು ಬಿಡದೆ ನೋಡುತ್ತಿದ್ದರು.


         ಈ ಯಕ್ಷಗಾನದ ಆಸಕ್ತಿಯಿಂದಾಗಿ ಮೇಳವೊಂದಕ್ಕೆ ಸೇರುವ ಸಂದರ್ಭವೊದಗಿತು. ಚಿಕ್ಕಪ್ಪ ದೇವಪ್ಪ ಹೆಗಡೆಯವರು ಇವರನ್ನು ಮೇಳಕ್ಕೆ ಸೇರಿಸಿದರು. ಪೆರ್ಣಂಕಿಲ ಮೇಳದಲ್ಲಿ ಪೆಟ್ಟಿಗೆ ಹೊರುವ ಕೆಲಸ. ಮೇಳದ ತಿರುಗಾಟದ ನಂತರ ಪುನಃ Guard  ಆಗಿ ಕೆಲಸಕ್ಕೆ  ಸೇರಿದರು. ಅರಣ್ಯ ರಕ್ಷಕರಾಗಿದ್ದಾಗ ಮರ ಕದ್ದು ಸಾಗಿಸುವವರ ಲಾರಿಯನ್ನು ಒಮ್ಮೆ ಹಿಡಿದರು. ಆಗ ಇವರಿಂದ ತಪ್ಪಿಸಿಕೊಳ್ಳಲೋಸುಗ ಮರಗಳ್ಳರು ಇವರ ತಲೆಗೆ ಮರದ ತುಂಡೊಂದರಿಂದ ಹೊಡೆದು ಓಡಿದರು. ಒಸರುವ ರಕ್ತಕ್ಕೆ ಬಟ್ಟೆಯ ತುಂಡೊಂದನ್ನು ಕಟ್ಟಿಕೊಂಡು ಮರಗಳ್ಳರ ಲಾರಿಯನ್ನು ತಾನೇ ಚಲಾಯಿಸಿಕೊಂಡು ಉಪ್ಪಿನಂಗಡಿಯ ಗೇಟ್ ಬಳಿ ನಿಲ್ಲಿಸಿದ ಅಪೂರ್ವ ಸಾಹಸಿ. ಅವರಿಗೆ Driving ಗೊತ್ತಿತ್ತು. ಆದರೆ ಆಮೇಲೆ ಮಾತ್ರ ಅವರು ಅರಣ್ಯ ರಕ್ಷಕರ ಕೆಲಸ ಮಾಡಲಿಲ್ಲ.


                  ಆ ನಂತರ ಮೂಲ್ಕಿ ಮೇಳಕ್ಕೆ ಸೇರಿದರು. ಆ ಮೊದಲು ಸಣ್ಣ ಸಣ್ಣ ಮೇಳಗಳಲ್ಲಿ ಕಿರು ಅವಧಿಯಲ್ಲಿ ಕೆಲಸ ಮಾಡಿದ ಅನುಭವ ಅವರಿಗಿತ್ತು. ಯಕ್ಷಗಾನದಲ್ಲಿ ಸಣ್ಣ ತಿಮ್ಮಪ್ಪು ಎಂಬವರ ಮಾರ್ಗದರ್ಶನ ಅವರಿಗಾಗಿತ್ತು. ಅವರ ವೇಷಗಳಲ್ಲಿ ಸಣ್ಣ ತಿಮ್ಮಪ್ಪು ಅವರ ಛಾಯೆಯಿತ್ತಂತೆ. ಆದರೆ ಕ್ರಮೇಣ ಮುಂದುವರಿಯುತ್ತಾ ಹೋದಂತೆ ಪುತ್ತೂರು ನಾರಾಯಣ ಹೆಗ್ಡೆಯವರು ತನ್ನದೇ ಸ್ವಂತ ಶೈಲಿಯನ್ನು ರೂಢಿಸಿಕೊಂಡು ಪ್ರಸಿದ್ಧಿ ಯನ್ನು ಪಡೆದರು. ಮೂಲ್ಕಿ ಮೇಳದಲ್ಲಿ ಸುಮಾರು ಏಳೆಂಟು ವರ್ಷಗಳಷ್ಟು ಕಾಲ ಕಲಾವಿದರಾಗಿ ಸೇವೆ ಸಲ್ಲಿಸಿದ್ದರು. ಕೆಲವು ಆಂತರಿಕ ಸಮಸ್ಯೆಗಳಿಂದಾಗಿ ಮೂಲ್ಕಿ ಮೇಳವನ್ನು ತ್ಯಜಿಸಬೇಕಾಗಿ ಬಂತು.


                ಕಸ್ತೂರಿ ಪೈಗಳ ಕರೆಯಂತೆ ಸುರತ್ಕಲ್ ಮೇಳವನ್ನು ಸೇರಿದರು. ಆಮೇಲೆ ಸುರತ್ಕಲ್ ಮೇಳದಲ್ಲಿ ನಾರಾಯಣ ಹೆಗ್ಡೆಯವರು ನಿರ್ವಹಿಸಿದ ಪಾತ್ರದಿಂದ ಪೂಜ್ಯ ಶ್ರೀ ಹೆಗ್ಗಡೆಯವರು ಪ್ರಭಾವಿತರಾಗಿ ಅವರನ್ನು  ಶ್ರೀ ಧರ್ಮಸ್ಥಳ ಮೇಳಕ್ಕೆ ಸೇರಿಸಿದರು.    ಅಲ್ಲಿಂದ ಸುಮಾರು ಮೂವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಧರ್ಮಸ್ಥಳ ಮೇಳವೊಂದರಲ್ಲಿ ಕೊನೆಯ ತನಕ ತಿರುಗಾಟ ನಡೆಸಿದರು.
                    ಮರುವರ್ಷ, ಒಬ್ಬೊಬ್ಬರಾಗಿ ಧರ್ಮಸ್ಥಳ ಮೇಳಕ್ಕೆ ಸೇರಿದರು. ಪಾತಾಳ ವೆಂಕಟ್ರಮಣ ಭಟ್, ಕುಂಬಳೆ ಸುಂದರ ರಾಯರು, ಗೋವಿಂದ ಭಟ್, ಎಂಪೆಕಟ್ಟೆ ರಾಮಯ್ಯ ರೈಗಳು ಮೊದಲಾದವರೆಲ್ಲಾ ಧರ್ಮಸ್ಥಳ ಮೇಳವನ್ನು ಸೇರಿದರು. ಕಲಾವಿದರಲ್ಲಿ ಧರ್ಮಸ್ಥಳ ಮೇಳದ ಧಣಿಗಳಾದ ಪೂಜ್ಯ ಹೆಗಡೆಯವರಿಗೆ ಬಹಳ ಪ್ರೀತಿ. ಈಗಲೂ ಅಷ್ಟೇ ಪ್ರೀತಿ-ವಿಶ್ವಾಸ ಇದೆ. ಅದನ್ನು ಕಲಾವಿದರು ಉಳಿಸಿಕೊಳ್ಳಬೇಕು. ಅರ್ಥಮಾಡಿಕೊಳ್ಳಬೇಕು. ಕಲಾವಿದರ ಬಗ್ಗೆ ಅತೀವ ಕಾಳಜಿ. ಮೇಳವನ್ನು ಕಾಲಮಿತಿ ಯಕ್ಷಗಾನಕ್ಕೊಳಪಡಿಸುವ ಮೊದಲು ಸುದೀರ್ಘವಾಗಿ ಚಿಂತಿಸಿದ್ದರು ಶ್ರೀ ವೀರೇಂದ್ರ ಹೆಗ್ಗಡೆ ಹಾಗೂ ಶ್ರೀ ಹರ್ಷೇಂದ್ರ ಕುಮಾರ್. ಮಧ್ಯರಾತ್ರಿ ಕಲಾವಿದರನ್ನು ಎಲ್ಲಿಗೆ ಕಳುಹಿಸುವುದು ಎನ್ನುವ ಚಿಂತೆ ಹಾಗೂ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಬಗ್ಗೆ ಅವರು ಬಹಳ ಚಿಂತಿಸಿದ್ದರು.


                    ಪಾತ್ರಚಿತ್ರಣ ಮತ್ತು ಶೈಲಿಯಲ್ಲಿ ಪುತ್ತೂರು ನಾರಾಯಣ ಹೆಗ್ಡೆಯವರ ಕ್ರಮವೇ ಬೇರೆಯಂತೆ ಕಾಣುತ್ತದೆ. ಪಾತ್ರೋಚಿತ ನಾಟ್ಯ ಮತ್ತು ಮಿತವಾದ ಮಾತುಗಳು. ನಾಟಕೀಯ ವೇಷಗಳಿಗೆ ಒಂದು ಚಿತ್ರಣ ಮತ್ತು ಜೀವ ಕೊಟ್ಟವರು ಎಂದು ಅವರನ್ನು ಜನರು ಗುರುತಿಸುತ್ತಾರೆ. ಅವರಿಗೋಸ್ಕರವೇ ನಾಟಕೀಯ ವೇಷ ಭೂಷಣಗಳು ತಯಾರಾಗಿ ಬರುತ್ತಿದ್ದುವು. ಇತ್ತೀಚಿನ ವರೆಗೂ ಅವರು ಉಪಯೋಗಿಸುತ್ತಿದ್ದ ವೇಷಭೂಷಣಗಳು ಇದ್ದುವಂತೆ.

                    ವಂಶವಾಹಿನಿ ಪ್ರಸಂಗದಲ್ಲಿ ಪೀಠಿಕೆ ವೇಷವಾದ ‘ಧ್ರುವಸಂಧಿ’ ಪಾತ್ರವನ್ನು ಅವರು ಮಾಡುತ್ತಿದ್ದರು. ಬೆಳಿಗ್ಗಿನ ವರೆಗೆ ಆ ಪಾತ್ರವನ್ನು ಅವರೊಬ್ಬರೇ ನಿಭಾಯಿಸುತ್ತಿದ್ದ ರೀತಿ ಅದ್ಭುತ. ಧ್ರುವಸಂಧಿ ಮಹಾರಾಜನು ತನ್ನ ರಾಣಿಯರಿಗೆ ತನ್ನ ವಂಶವಾಹಿನಿಯನ್ನು ಅಂದರೆ ತನ್ನ ವಂಶಜರ ಹೆಸರನ್ನು ಹೇಳುವ ರೀತಿ ಬಹಳ ಮನೋಜ್ಞವಾಗಿತ್ತು.
                    ‘ವಜ್ರದಷ್ಟು ಕಠಿಣ, ಹೂವಿನಷ್ಟು ಕೋಮಲ’ ಎಂಬ ಮಾತು ನಾರಾಯಣ ಹೆಗ್ಡೆಯವರಂತಹಾ ವ್ಯಕ್ತಿಗಳನ್ನು ನೋಡಿಯೇ ಹೇಳಿರಬಹುದು ಎಂದು ತೋರುತ್ತದೆ. ತಾನು ನಿರ್ವಹಿಸುತ್ತಿದ್ದ ಖಳನಾಯಕನ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಕಠೋರತೆಯ ಒಂದಂಶವನ್ನೂ ನಿಜಜೀವನದಲ್ಲಿ ತೋರಿಸದ ಮೃದುಹೃದಯಿ. ಅದೂ ಅಲ್ಲದೆ ಕಲಾವಿದನಾಗಿ ರಂಗದಲ್ಲಿ ತನ್ನನ್ನು ತಾನೇ ಶಿಸ್ತಿಗೆ ಒಳಪಡಿಸಿಕೊಂಡ ಅಪೂರ್ವ ನಟ. ತನ್ನ ಸಹಕಲಾವಿದರಿಂದಲೂ ಅದನ್ನೇ ಅಪೇಕ್ಷಿಸುತ್ತಿದ್ದರು. ಸಹಕಲಾವಿದರು, ಕಿರಿಯ ಕಲಾವಿದರು ರಂಗದಲ್ಲಿ ತಪ್ಪಿದರೆ ಸಹಿಸಿಕೊಳ್ಳುತ್ತಿರಲಿಲ್ಲ. ತಿದ್ದುತ್ತಿದ್ದರು. ಕೆಲವೊಮ್ಮೆ ಗದರುತ್ತಿದ್ದರು.


ಪುತ್ತೂರು ನಾರಾಯಣ ಹೆಗ್ಡೆಯವರು ಯಕ್ಷಗಾನಕ್ಕೆಂದೇ ಹುಟ್ಟಿದವರು. ಕರುಣರಸದಲ್ಲಿ, ಆಳಂಗದಲ್ಲಿ, ವೇಷಕಟ್ಟುವುದರಲ್ಲಿ ಕೂಡಾ ಅತಿ ನಿಪುಣತೆ, ಶ್ರದ್ಧೆ ಅವರಲ್ಲಿ ಎದ್ದು ಕಾಣುತ್ತದೆ. ಎಷ್ಟು ಬೇಕೋ ಅಷ್ಟೇ ಪಾತ್ರೋಚಿತವಾದ ಮಾತು ಅವರದು. ‘ಕೆತ್ತಲಿಕ್ಕಿಲ್ಲ, ಮೆತ್ತಲಿಕ್ಕಿಲ್ಲ’ ಎಂಬ ಮಾತು ಹೆಗ್ಡೆಯವರ ವೇಷಗಾರಿಕೆಯ ಬಗ್ಗೆ ಪ್ರಚಲಿತದಲ್ಲಿದೆ.


                            ಕಲಾಜೀವನದಲ್ಲಿ ನಿರ್ವಿವಾದದ ಪಾತ್ರಗಳು, ವೇಷಗಳು ಅವರ ವೈಶಿಷ್ಟ್ಯ. ಅವರು ರಂಗದಲ್ಲಿರುವ ವರೆಗೆ ಹಲವು ಪಾತ್ರಗಳು ಅವರಿಗೆ ಮೀಸಲಿಟ್ಟಂತಹವುಗಳು. ರಂಗದಲ್ಲಿ ನಿಷ್ಠುರತೆ ಇಲ್ಲ. ಒಂದೆರಡು ಪ್ರಸಂಗಗಳನ್ನು ಹೊರತುಪಡಿಸಿ ರಂಗದ ಹೊರಗೆ ಕೂಡಾ ನಿಷ್ಠುರತೆ, ವಿವಾದಗಳಿಲ್ಲ. ಚೌಕಿಯಲ್ಲೂ ಶಿಸ್ತು, ರಂಗದಲ್ಲೂ ಶಿಸ್ತು. ಅವರ ಪಾತ್ರ ಬೆಳಿಗ್ಗಿನ ಝಾವ 4 ಗಂಟೆಗೆ ಆದರೂ ಅವರು ರಾತ್ರಿ 8 ಗಂಟೆಗೆ ಮೊದಲೇ ಚೌಕಿಯಲ್ಲಿ ಹಾಜರಿರು ತ್ತಿದ್ದರು. ಹಾಗೆಂದು ಚೌಕಿಯಲ್ಲಿ ನಿದ್ರೆ ಮಾಡುವ ಅಭ್ಯಾಸವೂ ಇರಲಿಲ್ಲ.
                            ಸಭೆಯನ್ನು ನೋಡಿ ವೇಷ ಮಾಡುವ ಕ್ರಮ ಇಲ್ಲ. ಪ್ರೇಕ್ಷಕರ ಸಂಖ್ಯೆ ಕಡಿಮೆ ಇದ್ದರೂ ತನ್ನ ಪಾತ್ರದಲ್ಲಿ ಎಳ್ಳಿನಿತೂ ಕೊರತೆ ಬಾರದಂತೆ ನಿರ್ವಹಿಸುತ್ತಿದ್ದರು. ರಂಗದಲ್ಲಿ ಅವರ ಯಾವ ಪಾತ್ರವೂ ಅನುತ್ತೀರ್ಣತೆಯನ್ನು ಹೊಂದಲಿಲ್ಲ. ಕಟ್ಟಿದ ವೇಷಭೂಷಣಗಳು ಜಾರುವುದೋ, ಬೀಳುವುದೋ ಅತಿ ವಿರಳ. ಅವರ ಖಳಪಾತ್ರದ ಕಠೋರತೆಯಷ್ಟೇ ಕರುಣರಸದ ಪಾತ್ರಗಳೂ ಪ್ರಖ್ಯಾತ. ವೀರರಸದಂತೆ ಕರುಣರಸದಲ್ಲಿ  ಕೂಡಾ ಆರ್ತತೆಯಿರುತ್ತಿತ್ತು. ಋತುಪರ್ಣನ ಹತಾಶಭಾವ, ಕರ್ಣನ ರಥದ ಗಾಲಿಗಳು ಹೂತುಹೋದ ಸಂದರ್ಭದ ಚಿತ್ರಣ. ಅಂತಹಾ ಸಂದರ್ಭಗಳಲ್ಲೆಲ್ಲಾ ಅವರೇ ಪಾತ್ರವಾಗುತ್ತಿದ್ದರು. ಪಾತ್ರದಲ್ಲಿ ಅವರ Involvement ಅಷ್ಟಿತ್ತು.


                            ಎಷ್ಟು ಬರೆದರೂ ಮುಗಿಯದಷ್ಟು ಇರುವ ಅವರ ವಿಶೇಷತೆಗಳಲ್ಲೊಂದನ್ನು ಪ್ರಸ್ತಾಪ ಮಾಡದಿದ್ದರೆ ಈ ಲೇಖನ ಅಪೂರ್ಣವಾಗುತ್ತದೆ. ಶ್ರುತಿಯ ಗುಂಗಿನಲ್ಲಿ ಅರ್ಥ ಮುಗಿಸುವುದು ಇವರ ಇನ್ನೊಂದು ವೈಶಿಷ್ಟ್ಯ. ಸಾಧಾರಣವಾಗಿ ಭಾಗವತರು ಪದ್ಯ ಹೇಳಿದ ಸ್ವಲ್ಪ ಹೊತ್ತಿನ ವರೆಗೆ ಆ ಶ್ರುತಿಯ ಗುಂಗು ಗುಯ್‍ಗುಡುತ್ತಿರುತ್ತದೆ. ಆ ಶ್ರುತಿಯ ಗುಂಗಿನೊಳಗೇ ಆ ಪದ್ಯದ     ಅರ್ಥವನ್ನೆಲ್ಲಾ ಹೇಳಿ ಮುಗಿಸುವ ಅಪೂರ್ವ ಕಲೆ ಅವರಿಗೆ ಸಿದ್ಧಿಸಿತ್ತು. ಅವರ ಈ ವೈಶಿಷ್ಟ್ಯತೆಯನ್ನು ಸಮಯದ ಅಭಾವವಿರುವ ಸಂದರ್ಭಗಳಲ್ಲೆಲ್ಲಾ ಕಾಣಬಹುದಿತ್ತು.
                             ಪಾತ್ರದ ಸನ್ನಿವೇಶವನ್ನು ರಂಗದಲ್ಲಿ ನಿರ್ಮಾಣ ಮಾಡುವ ಮಹಾನ್ ನಟ. ಅಂದರೆ ತಾನೇ ಪಾತ್ರವಾಗಿ, ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುತ್ತಿದ್ದರು. ಸಾಂಸಾರಿಕ ಹಾಗೂ ಇತರ ಒತ್ತಡಗಳು, ಕಷ್ಟಗಳು ಎಷ್ಟೇ ಎದುರಾದರೂ ಅದರ ಪ್ರತಿಫಲನ ರಂಗದಲ್ಲಿ ಇರುತ್ತಿರಲಿಲ್ಲ.

ಧೀಮಂತ ವ್ಯಕ್ತಿತ್ವ : ಆಗಿನ ಕಾಲದಲ್ಲಿ ಸಾಧಾರಣವಾಗಿ ಮದುವೆ ಮುಂತಾದ ಸಂದರ್ಭಗಳಲ್ಲೆಲ್ಲಾ ಸಣ್ಣ ಸಣ್ಣ ಅಸಮಾಧಾನಗಳು, ಗಲಾಟೆ ಜಗಳಗಳು ಆಗುತ್ತಿದ್ದುದು ಮಾಮೂಲಿ. ತನಗೆ ಗೌರವ, ಮರ್ಯಾದೆ ಕೊಡಲಿಲ್ಲವೆಂದೋ ಅಥವಾ ಇನ್ಯಾವುದೋ ಕ್ಷುಲ್ಲಕ ಕಾರಣಗಳನ್ನು ಹಿಡಿದು ತಗಾದೆ ತೆಗೆಯುವವರು ಜಾಸ್ತಿ. ಗಂಡಿನ ಕಡೆಯವರಿಗಂತೂ ಹೆಣ್ಣಿನ ಕಡೆಯವರನ್ನು ಗೋಳಾಡಿಸಲು ಇದು ಒಂದು ಅಸ್ತ್ರವಾಗಿರುತ್ತಿತ್ತು. ಆದರೆ ಯಾವ ಸಮಾರಂಭಗಳಲ್ಲೆಲ್ಲಾ ಪುತ್ತೂರು ನಾರಾಯಣ ಹೆಗ್ಡೆಯವರ ಉಪಸ್ಥಿತಿಯಿರುತ್ತಿತ್ತೋ ಅಂತಹಾ ಸಮಾರಂಭಗಳಲ್ಲಿ, ಸ್ಥಳಗಳಲ್ಲಿ ಅಂತಹಾ ತಕರಾರುಗಳಿಗೆ ಆಸ್ಪದವಿರುತ್ತಿರಲಿಲ್ಲ. ಯಾರಾದರೂ ಅಂತಹಾ ಬಾಲಿಶ ವರ್ತನೆಗಳನ್ನು ತೋರಿದರೆ ‘ಏನೋ… ನಿಂದು…’ ಅಂತ ಇವರು ಸ್ವರ ತೆಗೆದರೆ ಸಾಕು ಗಲಾಟೆ ಮಾಡುವವರು ಹೆದರಿ ತಣ್ಣಗಾಗುತ್ತಿದ್ದರು. ಅಂತಹಾ ಧೀಮಂತ ಹಾಗೂ ಅಧಿಕಾರವಾಣಿಯಿಂದ ಮಾತನಾಡಬಲ್ಲವರಾಗಿದ್ದರು ಪುತ್ತೂರು ನಾರಾಯಣ ಹೆಗ್ಡೆಯವರು. ಅಂತಹಾ ಯಕ್ಷರಂಗ ಕಂಡ ಅಪೂರ್ವ ಸಂಪತ್ತು ಶ್ರೀ ಪುತ್ತೂರು ನಾರಾಯಣ ಹೆಗ್ಡೆಯವರು 1992ರಲ್ಲಿ ನಿಧನರಾದರು.

ಲೇಖನ: ಮನಮೋಹನ್. ವಿ. ಎಸ್.

ಛಾಯಾಚಿತ್ರ: ಗಿರೀಶ್ ಹೆಗ್ಡೆಯವರ ಸಂಗ್ರಹದಿಂದ

                                                                   

ಜಾಗ ಇದ್ದಲ್ಲಿ ತಮ್ಮ ವಾಹನಗಳನ್ನು ನುಗ್ಗಿಸುವವರು ಈ ವೀಡಿಯೋವನ್ನು  ನೋಡಲೇಬೇಕು 

ಯಾಕೋ ಈಗ ವೀಡಿಯೋ ತುಂಬಾ ಇಷ್ಟ ಆಯಿತು. ಸ್ವಲ್ಪ ಎಡೆ ಸಿಕ್ಕಿದರೂ ಸಾಕು. ತಮ್ಮ ವಾಹನವನ್ನು ನುಗ್ಗಿಸಿ ಟ್ರಾಫಿಕ್ ಜಾಮ್ ಉಂಟುಮಾಡುವವರಿಗೆ ಈ ದೃಶ್ಯ ಒಂದು ಪಾಠದಂತಿದೆ. ಇಲ್ಲಿ ರೈಲ್ವೆ ಕ್ರಾಸಿಂಗ್ ನಲ್ಲಿ ಅರ್ಧದಷ್ಟು ಭಾಗಕ್ಕೆ ಮಾತ್ರ ಗೇಟ್ ಹಾಕಿದ್ದರೂ ಶಿಸ್ತಿನ ಸಿಪಾಯಿಗಳಂತಿರುವ ನೆದರ್ಲ್ಯಾಂಡ್ ದೇಶದ ವಾಹನ ಚಾಲಕರು ಮೆಚ್ಚುಗೆಯಾಗುತ್ತಾರೆ.   ಈ ರೀತಿಯ ಶಿಸ್ತಿನ ಮನೋಭಾವವನ್ನು ಬೆಳೆಸಿಕೊಂಡರೆ ಸಂಭಾವ್ಯ ಅಫಘಾತಗಳನ್ನೂ ತಪ್ಪಿಸಬಹುದು.

ಹಿಮ್ಮೇಳ ಲೋಕದ ದಂತಕಥೆ- ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್

ಯಕ್ಷಗಾನ ಹಿಮ್ಮೇಳ ಲೋಕದ ದಂತಕಥೆ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಹೆಸರು ಯಕ್ಷಗಾನದ ಆಸಕ್ತರ ಹೃದಯದಲ್ಲಿ ನವಿರಾದ ಭಾವನೆಗಳನ್ನು ಎಬ್ಬಿಸುತ್ತದೆ. ಚೆಂಡೆಯ ಮಾಂತ್ರಿಕನೆಂದೇ ಖ್ಯಾತಿ ಗಳಿಸಿದ್ದ ಬಲ್ಲಾಳರು ಚೆಂಡೆ ಮದ್ದಲೆಗಳೆರಡರಲ್ಲಿಯೂ ಸಮಾನವಾದ ಪ್ರಭುತ್ವವನ್ನು ಗಳಿಸಿಕೊಂಡವರು. ಒಂದು ಕಾಲದಲ್ಲಿ ತೆಂಕುತಿಟ್ಟು ಹಿಮ್ಮೇಳವಾದನದ ಅಗ್ರಗಣ್ಯರಾಗಿ ಮೆರೆದ ಚಿಪ್ಪಾರು ಅವರದು ಹಿಮ್ಮೇಳವಾದನದಲ್ಲಿ ಅವಿಶ್ರಾಂತ ಮತ್ತು ಪ್ರಾಮಾಣಿಕ ದುಡಿಮೆ. ಅವರು ಈ ಕ್ಷೇತ್ರದಿಂದ ಗಳಿಸಿದ್ದು ಕಡಿಮೆಯಾದರೂ ತನ್ನ ಅಪಾರ ಜ್ಞಾನ,ಶ್ರಮ ಮತ್ತು ವಿದ್ಯೆಗಳನ್ನು ಈ ಕಲಾಕ್ಷೇತ್ರಕ್ಕೆ ಧಾರೆಯೆರೆದಿದ್ದಾರೆ. 

ಒಬ್ಬ ಹಿಮ್ಮೇಳವಾದಕನಿಗೆ ಏನೆಲ್ಲಾ ತಿಳಿದಿರಬೇಕು ಎಂಬ ಪ್ರಶ್ನೆಗೆ ಈ ಕಾಲಮಿತಿಯ ಪ್ರದರ್ಶನದ ಯುಗದಲ್ಲಿ ಉತ್ತರಿಸುವುದು ಅಷ್ಟೊಂದು ಸುಲಭವಲ್ಲ. ಆದರೆ ಕೀರ್ತಿಶೇಷರಾದ ಹಲವಾರು ಹಿಮ್ಮೇಳವಾದಕರು ಈ ಪ್ರಶ್ನೆಗೆ ಉತ್ತರವಾಗಿ ನಮ್ಮ ನೆನಪಿನಲ್ಲಿ ಉಳಿದುಬಿಡುತ್ತಾರೆ. ಆ ಕಾಲದಲ್ಲಿ ಕೇಳಿ ಬಾರಿಸುವುದರಿಂದ ತೊಡಗಿ ಮಂಗಳ ಪದ್ಯದ ವರೆಗೆ ಚೆಂಡೆ ಮದ್ದಳೆಗಳನ್ನು ಸರದಿಯಲ್ಲಿ ಅವಿಶ್ರಾಂತವಾಗಿ ಬಾರಿಸಿದ ಹಲವಾರು  ಮಹಾನುಭಾವರುಗಳ ಉದಾಹರಣೆಯೂ ಇದೆ. ಈ ರೀತಿಯ ತಮ್ಮ ವಿಶೇಷತೆಗಳಿಂದ ಕೆಲವು ಹಿರಿಯ ಕಲಾವಿದರನ್ನು ನಾವು ಇಂದಿಗೂ ಮರೆಯಲು ಸಾಧ್ಯವಿಲ್ಲ. ಇಂತಹಾ ಮರೆಯಲಾಗದ ಮಹಾನುಭಾವರಲ್ಲಿ ಖ್ಯಾತ ಹಿಮ್ಮೇಳ ಕಲಾವಿದ ಶ್ರೀ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರೂ ಒಬ್ಬರು. 

ಚೆಂಡೆಯ ಮಾಂತ್ರಿಕನೆಂದೇ ಬಿರುದಾಂಕಿತ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ಬಹಳಷ್ಟು ಕಲಾವಿದರು, ಯಕ್ಷಗಾನಾಭಿಗಳಲ್ಲಿ ತಮ್ಮ ಪ್ರಭಾವವನ್ನು ಬೀರಿದವರು. ಮೊದಲೇ ಹೇಳಿದಂತೆ ‘ಹಿಮ್ಮೇಳವಾದಕನಿಗೆ ಏನೆಲ್ಲಾ ತಿಳಿದಿರಬೇಕು’ ಎಂಬ ಪ್ರಶ್ನೆಗೆ ಉತ್ತರವೋ ಎಂಬಂತೆ ಅದಕ್ಕಿಂತಲೂ ಮಿಗಿಲೆನಿಸುವಷ್ಟು ಸಾಧಿಸಿ ತೋರಿಸಿ ಮಾದರಿಯಾದವರು. ಈ ಮಾತನ್ನು ಯಾಕೆ ಹೇಳಿದೆನೆಂದರೆ ಬಲ್ಲಾಳರಿಗಿದ್ದ ಪ್ರಸಂಗ ಮಾಹಿತಿ ಮತ್ತು ನಡೆಯ ತಿಳುವಳಿಕೆ ಹಿಮ್ಮೇಳ ಕಲಾವಿದರಲ್ಲಿ ಕಾಣಸಿಗುವುದು ಅಪರೂಪ. ಕೆಲವೇ ಕೆಲವು ಹಿಮ್ಮೇಳ ಕಲಾವಿದರು ಆ ಸಾಲಿನಲ್ಲಿ ನಿಲ್ಲುತ್ತಾರೆ. 

ಚಿಪ್ಪಾರು ವಿಶೇಷತೆ: ಪ್ರಸಂಗ ನಡೆಯ ಬಗ್ಗೆ ಕೃಷ್ಣಯ್ಯ ಬಲ್ಲಾಳರಿಗೆ ಅಪಾರ ತಿಳುವಳಿಕೆಯಿತ್ತು. ಮುಖ್ಯ ಭಾಗವತರ ಅನುಪಸ್ಥಿತಿಯಲ್ಲಿ, ತಾವು ಚೆಂಡೆವಾದಕರಾಗಿದ್ದುಕೊಂಡು ಕಿರಿಯ ಭಾಗವತರಿಗೆ ಮಾರ್ಗದರ್ಶಕರಾಗಿ ಬಲ್ಲಾಳರು ಬೆಳಗ್ಗಿನ ವರೆಗೆ ಪ್ರಸಂಗವನ್ನು ಮುನ್ನಡೆಸಿದ ಹಲವಾರು ಉದಾಹರಣೆಗಳಿವೆ! ಚಿಪ್ಪಾರು ಅವರು ಜತೆಗಿದ್ದರೆ ಭಾಗವತರಿಗೂ ಆನೆಬಲ ಬಂದಂತೆ ಆಗುತ್ತಿತ್ತಂತೆ. ಆದುದರಿಂದ ಅವರು ಯಕ್ಷಗಾನಕ್ಕೆ ಮಾತ್ರವಲ್ಲದೆ ಕಲಾವಿದರಿಗೂ ಸಂಪನ್ಮೂಲ ವ್ಯಕ್ತಿಯಾಗಿದ್ದರು. 

ಒಂದು ದಿನ ಖ್ಯಾತ ಭಾಗವತರಾದ ಶ್ರೀ ದಿನೇಶ ಅಮ್ಮಣ್ಣಾಯರು ಮಾತಿನ ಮಧ್ಯೆ ಹೀಗೆ ಹೇಳಿದ್ದರು. “ಒಂದು ಪದ್ಯವನ್ನು ಒಂದು ರಾಗದಲ್ಲಿ ಅಷ್ಟತಾಳದಲ್ಲಿ ಹಾಡಿದರೆ ಪುನಃ ಎರಡನೇ ಪದ್ಯ ರೂಪಕತಾಳದಲ್ಲಿ- ಹೀಗೆ ಮೂರು, ನಾಲ್ಕು ಪದ್ಯಗಳನ್ನು ಅದೇ ರಾಗದಲ್ಲಿ ಅಂದರೆ ರಾಗವನ್ನು ಬದಲಾಯಿಸದೆ ಒಮ್ಮೆ ಅಷ್ಟ, ಒಮ್ಮೆ ತ್ರಿವುಡೆ, ಒಮ್ಮೆ ರೂಪಕ- ಹೀಗೆ ತಾಳಗಳನ್ನು ಬದಲಾಯಿಸಿ ಹಾಡುವ ಕ್ರಮ/ಪದ್ಧತಿ ಉಂಟು ಅಂತ ಒಮ್ಮೆ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ನನ್ನಲ್ಲಿ ಹೇಳಿದ್ದರು. ಬಲ್ಲಾಳರು ತುಂಬಾ ತಿಳಿದವರು. ಅವರಲ್ಲಿ ಸಂಶಯಗಳನ್ನು ಕೇಳಿದರೆ ಅದರ ಬಗ್ಗೆ ಮಾಹಿತಿ ಕೊಡುತ್ತಿದ್ದರು. ತುಂಬಾ ಹೇಳುತ್ತಿದ್ದರು. ಆದರೆ ಈಗಿನವರಲ್ಲಿ ಯಾರಲ್ಲಿಯೂ ಕೇಳಿ ತಿಳಿಯುವ ಕ್ರಮ ಇಲ್ಲ ಎಂಬ ಖೇದವನ್ನು ಕೂಡಾ ಶ್ರೀ ಬಲ್ಲಾಳರು ವ್ಯಕ್ತಪಡಿಸಿದ್ದರು” ಎಂದು ದಿನೇಶ ಅಮ್ಮಣ್ಣಾಯರು ಆ ದಿನ ನನ್ನೊಡನೆ ಹೇಳಿದ್ದುದು ಈ ಲೇಖನವನ್ನು ಬರೆಯುವ ಸಂದರ್ಭದಲ್ಲಿ ನೆನಪಾಗುತ್ತಾ ಇದೆ. 

ಬಲ್ಲಾಳರ ವಿಶಿಷ್ಟ ಉರುಳಿಕೆ: ಬಲ್ಲಾಳರು ತಮ್ಮ ಅತ್ಯಾಕರ್ಷಕ ಉರುಳಿಕೆಗೆ ಹೆಸರುವಾಸಿ. ಆ ಉರಳಿಕೆಯಲ್ಲೂ ಒಂದು ವೈಶಿಷ್ಟ್ಯತೆಯಿತ್ತು. ತನ್ನ ಎರಡೂ  ಕೈಗಳ ಮಾಣಿಕಟ್ಟಿನಿಂದ ಕೆಳಗೆ ಮಾತ್ರ ಚಲಿನೆಯಿರುತ್ತಿದ್ದ ಅವರ ಚೆಂಡೆಯ ಉರುಳಿಕೆಗಳು ಅತ್ಯಪೂರ್ವ. ಒಟ್ಟಾರೆ ಅವರ ಚೆಂಡೆವಾದನದಲ್ಲಿಯೂ ಕೈಗಳ ಅನಗತ್ಯ ಚಲನೆ ಇರುತ್ತಿರಲಿಲ್ಲ. ನಾನು ಅವರ ಹಲವಾರು ಪ್ರದರ್ಶನಗಳನ್ನು ನೋಡಿದ್ದೇನೆ. ಎಂತಹಾ ಏರುಪದ್ಯಗಳಾದರೂ ಎದೆಯ ಮಟ್ಟದಿಂದ ಅವರ ಕೈ ಮೇಲೆ ಹೋದದ್ದನ್ನು ಕಾಣಲಿಲ್ಲ. ವೃಥಾ ಶ್ರಮವನ್ನು ಉಪಯೋಗಿಸದೆ ಚೆಂಡೆಯಂತಹಾ ವಾದ್ಯದಿಂದ ಏರು ನಾದವನ್ನು ಹೊರಡಿಸುವುದು ಹೇಗೆ ಎಂಬುದು ಚಿಪ್ಪಾರು ಅವರನ್ನು ನೋಡಿ ಕಲಿಯಬೇಕು. ಆದರೆ ಚಿಪ್ಪಾರು ಅವರೇ ಹೇಳುವಂತೆ ಈಗಿನವರಲ್ಲಿ ಕೇಳಿ ತಿಳಿಯುವ ಕ್ರಮ ಇಲ್ಲದ ಕಾರಣ ಕೆಲವೊಂದು ವೈಶಿಷ್ಟ್ಯತೆಗಳು ಅವರ ಜೊತೆಗೆ ಮರೆಯಾದುವೇನೋ ಎಂದೆನಿಸುತ್ತದೆ. 

ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಸಂಕ್ಷಿಪ್ತ ಪರಿಚಯ: ಬಲ್ಲಾಳರು ಜನಿಸಿದ್ದು 1928 ಏಪ್ರಿಲ್ 24ರಂದು. ಗಡಿನಾಡು ಕಾಸರಗೋಡು ಜಿಲ್ಲೆಯ ಬಾಯಾರು ಸಮೀಪದ ಚಿಪ್ಪಾರು ಇವರ ಹುಟ್ಟೂರು. ತಂದೆ ಮರಿಯಯ್ಯ ಬಲ್ಲಾಳ್. ತಂದೆಯ ಹೆಸರನ್ನೇ ಕೃಷ್ಣಯ್ಯ ಬಲ್ಲಾಳರು ತಮ್ಮ ಮಗನಿಗೆ ಇರಿಸಿದ್ದಾರೆ. 6ನೆಯ ತರಗತಿಗೆ ವಿದ್ಯಾಭ್ಯಾಸಕ್ಕೆ ತಿಲಾಂಜಲಿಯಿತ್ತು ವಿದ್ವಾನ್ ಕೇಶವ ಭಟ್ಟರಲ್ಲಿ ಮೃದಂಗ ಕಲಿಯಲು ಪ್ರಾರಂಭಿಸಿದರು. ಮುಂದಿನ ದಿನಗಳಲ್ಲಿ ಮಾಂಬಾಡಿ ನಾರಾಯಣ ಭಾಗವತರಲ್ಲಿ ಅಭ್ಯಾಸ ಮಾಡಿದರು. ವಿದ್ವಾನ್ ಬಾಬು ರೈಗಳಿಂದ ಶಾಸ್ತ್ರೀಯ ಸಂಗೀತದ ಮೃದಂಗವಾದನವನ್ನೂ ಕಲಿತ ಬಲ್ಲಾಳರು ಕುದ್ರೆಕೊಡ್ಲು ರಾಮ ಭಟ್ಟರಿಂದ ಮೃದಂಗವಾದನದ ಬಗ್ಗೆ ಕಲಿತರು. ನಿಡ್ಲೆ ನರಸಿಂಹ ಭಟ್ಟರಿಂದ ಅಭ್ಯಾಸ ಮಾಡಿದ್ದು ಮಾತ್ರವಲ್ಲದೆ ಅವರ ಜೊತೆ ಕಲಾವಿದರಾಗಿ ಅನೇಕ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಧರ್ಮಸ್ಥಳ ಮೇಳಕ್ಕೆ ಮದ್ದಳೆವಾದಕರಾಗಿ ಸೇರಿದ ಮೇಲೆ ಚಿಪ್ಪಾರು ಅವರು ಹಿಂತುರುಗಿ ನೋಡಲೇ ಇಲ್ಲ. ಸುಮಾರು 40 ವರ್ಷಗಳಿಗೂ ಮಿಕ್ಕಿ ಧರ್ಮಸ್ಥಳ ಮೇಳದಲ್ಲಿ ಹಿರಿಯ ಹಾಗೂ ಕಿರಿಯ ಕಲಾವಿದರೊಂದಿಗೆ ಸೇವೆ ಸಲ್ಲಿಸಿದ್ದಾರೆ. ಅಗರಿ, ಮಂಡೆಚ್ಚ, ಬಲಿಪ, ಕಡತೋಕ, ಇರಾ, ಪುತ್ತಿಗೆ, ಪದ್ಯಾಣ, ಅಮ್ಮಣ್ಣಾಯ, ಸಿರಿಬಾಗಿಲು ಮೊದಲಾದ ಭಾಗವತರೊಂದಿಗೆ ಹಿಮ್ಮೇಳವಾದಕರಾಗಿ ವೇದಿಕೆ ಹಂಚಿಕೊಂಡ ಸಾತ್ವಿಕ ಗುಣದ ಕಲಾವಿದರಾಗಿದ್ದ ಚಿಪ್ಪಾರು ಅವರ ಚೆಂಡೆವಾದನಕ್ಕೆ ಮನಸೋಲದ ಪ್ರೇಕ್ಷಕರಿಲ್ಲ. 80ರ ಇಳಿವಯಸ್ಸಿನಲ್ಲಿಯೂ ಚೆಂಡೆ ಬಾರಿಸುತ್ತಿದ್ದರು. ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಕೇರಳ ಸಂಗೀತ ಅಕಾಡೆಮಿ ಪ್ರಶಸ್ತಿ, ಶೇಣಿ ಪ್ರಶಸ್ತಿಯೇ ಮೊದಲಾದ ಪ್ರಶಸ್ತಿಗಳನ್ನು ಪಡೆದ ಶ್ರೀ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ಏಪ್ರಿಲ್ 27, 2009ರಂದು ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಯಕ್ಷಗಾನ ಪ್ರದರ್ಶನದ ಸಂದರ್ಭದಲ್ಲಿಯೇ ಹೃದಯಾಘಾತದಿಂದ ನಿಧನರಾದರು. 
(ಲೇಖನ: ಮನಮೋಹನ್ ವಿ.ಎಸ್) (ಮರೆಯಲಾಗದ ಮಹಾನುಭಾವರು-ಯಕ್ಷಾನುಗ್ರಹ ವಾಟ್ಸಾಪ್ ಬಳಗಕ್ಕೆ ಬರೆದ ಲೇಖನ)