Friday, March 13, 2026
Home Blog Page 314

ಯಕ್ಷಗಾನ ಪ್ರಸಂಗಕರ್ತರ ಮೇಲೆ ಕುಮಾರವ್ಯಾಸನ ಪ್ರಭಾವ (ಭಾಗ – 3)

0

ಕುಮಾರವ್ಯಾಸ ಭಾರತ ಮತ್ತು ಯಕ್ಷಗಾನ ಪ್ರಸಂಗ ‘ದ್ರೌಪದೀ ಸ್ವಯಂವರ’ದ  ಇನ್ನೆರಡು ಪದ್ಯಗಳನ್ನು ಗಮನಿಸಿ.
ಕುಮಾರವ್ಯಾಸ ಭಾರತ:
ಕೊಂದು ದನುಜನ ಪೆಣನ ಬಂಡಿಯ
ಹಿಂದೆ ಬಂಧಿಸಿ ಪುರದ ಬಾಹೆಗೆ
ತಂದು ಬಿಟ್ಟನು ತನತನಗೆ ಜನ ಜಾಲ ಜೋಡಿಯಲಿ
ಬಂದು ಕಂಡುದು ಹೆಣನ ಭೂಸುರ
ರಿಂದು ಧನ್ಯರು ವಿಪ್ರಜಾತಿಗೆ
ಸಂದುದಿನ್ನಗ್ಗಳಿಕೆ ಯೆಂದುದು ನೆರೆದ ಪೌರಜನ

ಯಕ್ಷಗಾನ ಪ್ರಸಂಗ ‘ದ್ರೌಪದೀ ಸ್ವಯಂವರ’:
ಮಡುಹಿ ದೈತ್ಯನ ಹೆಣನ ಬಂಡಿಯ |
ಕಡೆಗೆ ಬಂಧಿಸಿ ತಂದು ಬಿಸುಟಿದ |
ನೊಡನೆ ಪುರಬಾಹೆಯಲಿ ಜನತತಿಯ್ಯದೆ ಬೆರಗಾಗಿ ||
ಎಡೆಬಿಡದೆ ನಡೆತಂದು ಕಾಣುತ |
ಪೊಡವಿಯಮರರು  ಧನ್ಯ ನಿನ್ನನು |
ಪಡೆದ ತಾಯಿ ಕೃತಾರ್ಥೆಯೆಂದರು ಭೀಮಸೇನನೊಳು||
ಈ  ಎರಡು  ಪದ್ಯಗಳ ಪೂರ್ವಾರ್ಧಗಳಲ್ಲಿ ಸಾಹಿತ್ಯದ ಆಂಶಿಕ ಹೋಲಿಕೆಯಿರುವುದನ್ನು ಗಮನಿಸಬಹುದು. ಇದು ಮೇಲೆ ಹೇಳಿದಂತೆ ಸಹಜವಾಗಿ ಬಂದಿರುವ ಹೋಲಿಕೆಯಾಗಿರಬಹುದು ಎಂದೆನಿಸುತ್ತದೆ.


ಕುಮಾರವ್ಯಾಸ ಭಾರತದ ಕಾವ್ಯ ಸೌಂದರ್ಯದಲ್ಲಿ ಶೃಂಗಾರ ರಸದ ಮುಖ್ಯ ವರ್ಣನೆಯ ಭಾಗ ಇರುವುದು ಆದಿಪರ್ವದ ದ್ರೌಪದೀ ಸ್ವಯಂವರದ ಸಂದರ್ಭದಲ್ಲಿ. ದ್ರೌಪದಿಯ ಸೌಂದರ್ಯ ಹಾಗೂ ಅವಳು ಶೃಂಗರಿಸಿಕೊಳ್ಳುವ ರೀತಿಯ ಅತಿ ಸುಂದರವಾದ ವರ್ಣನೆ ಈ ಭಾಗದಲ್ಲಿದೆ.
ದ್ರೌಪದೀ ಸ್ವಯಂವರದ ಸಂದರ್ಭದಲ್ಲಿ ರಾಜಾಧಿರಾಜರುಗಳಿಗೆ ಪಣವಾಗಿದ್ದ ಮತ್ಸ್ಯಯಂತ್ರವನ್ನು ಭೇದಿಸುವಲ್ಲಿ ಮಾಗಧ, ಶಿಶುಪಾಲ, ಮಾದ್ರೇಶ, ಕರ್ಣಾದಿಗಳು ಸೋತ ನಂತರ ಬಲರಾಮನು ಧನುವನ್ನು ಮುರಿದು ಮತ್ಸ್ಯಯಂತ್ರವನ್ನು ಭೇದಿಸುವನೆಂದು ಅತ್ಯುತ್ಸಾಹದಿಂದ ಮುಂದೆ ಬರುವ ಸಂದರ್ಭ ಕುಮಾರವ್ಯಾಸ ಭಾರತದಲ್ಲಿ ಹೀಗೆ ವರ್ಣಿಸಲಾಗಿದೆ.
ಕೃತಕ ಧನುವನು ಮುರಿದು ದ್ರುಪದನ |
ಸುತೆಯ ಮುಂದಲೆವಿಡಿದು ತಹೆನು |
ದ್ಭುತನಲಾ ಪಾಂಚಾಲನೆನು ತಿಳಿದನು ವರಾಸನವ ||

ಅದೇ ಸಂದರ್ಭ, ಯಕ್ಷಗಾನ ಪ್ರಸಂಗದ ಪ್ರತಿಯಲ್ಲಿ ಏಕತಾಳದಲ್ಲಿ ಹೀಗೆ ಪ್ರಸ್ತುತಿಪಡಿಸಲಾಗಿದೆ.
ಕೃತಕದ ಚಾಪವ ಮುರಿದು | ನೃಪ | ಸುತೆಯನು ಮುಂದಲೆವಿಡಿದು ಖತಿಯಿಂದೆಳೆತಹೆನೀಗ | ಲೆ | ನ್ನುತ ನೀಲಾಂಬರನಾಗ ||
ಮುಂದೆ ಇದೇ ಸಂದರ್ಭದ ಮುಂದುವರಿದ ಭಾಗದಲ್ಲಿ ಭೂಪಾಲರೆಲ್ಲರು ಧನುವ ಹೆದೆಯೇರಿಸಿ ಮತ್ಸ್ಯಯಂತ್ರವನ್ನು ಭೇದಿಸಲಾಗದೆ ಹಿಮ್ಮೆಟ್ಟುತ್ತಾರೆ. ಆಗ ಭೋಜನ, ದಕ್ಷಿಣಾದಿಗಳಿಗಾಗಿ ಬಂದ ವಿಪ್ರಸಂಕುಲವನ್ನು ಉದ್ದೇಶಿಸಿ ಧೃಷ್ಟದ್ಯುಮ್ನ ಸ್ವಯಂವರದ ಪಣವನ್ನು ಗೆಲ್ಲುವಲ್ಲಿ ಬ್ರಾಹ್ಮಣರೂ ಪ್ರಯತ್ನಿಸಬಹುದು ಎಂದು ಡಂಗುರ ಸಾರಿಸುತ್ತಾನೆ. ಆಗ ಬ್ರಾಹ್ಮಣರ ವೇಷದಲ್ಲಿ ಸಭೆಯಲ್ಲಿದ್ದ ಪಾಂಡವರಲ್ಲಿ ಮಧ್ಯಮನಾದ ಅರ್ಜುನನು ಧರ್ಮಜನ ಸೂಚನೆಯಂತೆ ಮೇಲೇಳುತ್ತಾನೆ. ಆಗ ವಿಪ್ರಸಂಕುಲವು ಆತನನ್ನು ವಿಧವಿಧವಾಗಿ ಕುಚೋದ್ಯದಿಂದ ಮಾತನಾಡಿಸುತ್ತಾರೆ.
ಕುಮಾರವ್ಯಾಸ ಭಾರತದಲ್ಲಿ,

ಏನು ಸಿದ್ಧಿಯುಪಾಧ್ಯರೆದ್ದಿರಿ
ದೇನು ಧನುವಿಂಗಲ್ಲವೇ ತಾ |
ನೇನು ಮನದಂಘವಣೆ ಬಯಸಿದಿರೇ ನಿತಂಬಿನಿಯ ||
ವೈನತೇಯನ ವಿಂಗಡಿಸಿದ ವಷ |
ವೇನು ಸದರವೊ ಹಾವಡಿಗರಿಗಿ |
ದೇನು ನಿಮ್ಮುತ್ಸಾಹವೆಂದುದು ಧೂರ್ತ ವಟುನಿಕರ ||
ಎಂದು ವರ್ಣಿಸಲ್ಪಟ್ಟಿರುವ ಸಂದರ್ಭವು ಯಕ್ಷಗಾನ ಪ್ರಸಂಗದಲ್ಲಿ ಭಾಮಿನಿಯ ಬದಲು ಅಷ್ಟತಾಳದಲ್ಲಿ ಹೇಳಲ್ಪಟ್ಟಿದೆ. ಅದು ಹೀಗೆ:

ಏನು ಸಿದ್ಧಿವುಪಾಧ್ಯರೆದ್ದಿರಿ ಮಝು |
ಹೀನ ಧನುವಿಂಗಲ್ಲದೇ ತಾ |
ನೇನು ಮನದಂಗವಣಿಯೊ |
ಮಾನಿನೀಮಣಿಯನು ಬಯಸಿದಿರೆ ಮ |
ಹಾನುಭಾವರು ತಾವಸಾಧ್ಯವ | ದೇನು ತಮಗೀ ಜಗದೊಳು ||
ಮೇಲಿನ ಎರಡೂ ಪದ್ಯಗಳನ್ನು ಗಮನಿಸಿದಾಗ ಕುಮಾರವ್ಯಾಸ ಹಾಗೂ ಯಕ್ಷಗಾನ ಪ್ರಸಂಗಕರ್ತರ ರಚನೆಗಳು ಅತೀವ ಸಾಮ್ಯತೆಯಿಂದ ಕೂಡಿದೆ ಎಂದು ನಿಸ್ಸಂಶಯವಾಗಿ ಹೇಳಬಹುದು. ಕನ್ನಡ ಸಾರಸ್ವತ ಲೋಕಕ್ಕೆ ಮಾತ್ರವಲ್ಲದೆ ಯಕ್ಷಗಾನ ಸಾಹಿತ್ಯಕ್ಕೂ ಕುಮಾರವ್ಯಾಸನ ಕೊಡುಗೆ ಅನನ್ಯವಾದದ್ದು. ಅಂತಹ ಸುಂದರ ಸುಲಲಿತವಾದ ಕೃತಿ ಅನ್ಯಾದೃಶ.
ಮುಂದಿನ ಪದ್ಯ ಕುಮಾರವ್ಯಾಸ ಭಾರತದಲ್ಲಿ
ಮದುವೆ ಬೇಕೇ ಶ್ರೋತ್ರೀಯ ಸ್ತೋ |
ವಂದಲಿ ಕನ್ಯಾರ್ಥಿಗಳು ನಾವೆಂ |
ಬುದು ನಿಜಾನ್ವಯ ವಿದ್ಯೆಯಲಿ ಕೊಡುವುದು ಪರೀಕ್ಷೆಗಳ |
ಮದುವೆಯಹುದಿದು ಸೌಖ್ಯ ಪುಣ್ಯ |
ಪ್ರದವು ಭೂದೇವರಿಗೆ ನೀ ನೆನೆ |
ದುದು ಭಗೀರಥ ಯತ್ನವೆಂಬುದು ಭೂಸುರವ್ರಾತ ||

ಎಂದು ಇದೆ. ಇದೇ ಪದ್ಯ ಯಕ್ಷಗಾನ ಪ್ರಸಂಗದಲ್ಲಿ ಮೊದಲಿನಂತೆಯೇ ಅಷ್ಟತಾಳದಲ್ಲಿ,
ಮದುವೆ ಬೇಕನೆ ಶ್ರೋತ್ರಿಯ ವಿಪ್ರವ |
ರ್ಗದಲಿ ಕನ್ಯಾರ್ಥಿಗಳು ನಾವೆಂ |
ದೊದಗಿರುವ ಕುಲವಿದ್ಯದಿ |
ಹೆದರದೀವುದು ನೀವು ಪರೀಕ್ಷೆಯ | ನಿದು
ಸುಖವು ನಿಮಗಲ್ಲದಿನ್ನಿರಿ |
ತಿದು ಭಗೀರಥ ಯತ್ನವು ||
ಎಂದು ರಚಿಸಲ್ಪಟ್ಟಿದೆ. ಇಲ್ಲಿ ಕೂಡಾ ಹೋಲಿಕೆಗಳನ್ನು ಗಮನಿಸಬಹುದು.
ಈ ಪಣ ಬ್ರಾಹ್ಮಣರಿಗೆ ಉಚಿತವಾದದ್ದಲ್ಲ ಎಂದು ಬ್ರಹ್ಮಸಭೆಯಲ್ಲಿ ತಾವು ತಾವೇ ಮಾತನಾಡುವ ಸನ್ನಿವೇಶಗಳನ್ನು ಕುಮಾರವ್ಯಾಸ ಕುತೂಹಲಕಾರಿಯಾಗಿ ತನ್ನ ಮುಂದಿನ ಪದ್ಯದಲ್ಲಿ ಚಿತ್ರಿಸುತ್ತಾನೆ.


ಕೆಲರು ಹೋಗದಿರೆಂದು ಜರೆದರು |
ಕೆಲರು ತಾನೇ ಬಲ್ಲೆನೆಂದರು |
ಕೆಲರು ನುಡಿದರು ವಿಪ್ರಸಭೆಗಪಹಾಸ್ಯವಹುದೆಂದು ||
ಕೆಲರು ತಪ್ಪೇನೆಂದು ಕಳೆದರು
ಕೆಲರು ಭದ್ರಾಕಾರನೀತಂ
ಗಳಕುವುದು ಧನು ಭಾಗ್ಯಮುಖನೆಂದುದು ಬುಧಸ್ತೋಮ ||
ದ್ರೌಪದೀ ಸ್ವಯಂವರ ಪ್ರಸಂಗ ಪುಸ್ತಕವೊಂದರಲ್ಲಿ ಇದೇ ಪದ್ಯವು ವಾರ್ಧಕ ಷಟ್ಪದಿಯಲ್ಲಿದೆ.
ಕೆಲರೆಂದರೆಲವೊ ಹೋಗದಿರೆನುತ ಮೇಣು ಕೆಲ |
ರೊಲಿದು ತಾನೇ ಬಲ್ಲೆನೆಂದರದರೊಳ್ ಕೆಲರು |
ಸಲೆ ವಿಪ್ರಕುಲಕಾದುದವಮಾನವೆಂದರ್ ಕೆಲರ್ ತಪ್ಪೇನೆಂದರು ||
ಕೆಲರು ಭದ್ರಾಂಗನುರು ಭಾಗ್ಯಮುಖನೀತ ನಿಂ |
ಗಳುಕುವುದು ಧನುವೆಂದು ಪೇಳುತಿಹ ಬ್ರಹ್ಮಸಭೆ |
ಯೊಳು ಮೆಲ್ಲ ಮೆಲ್ಲನೈತರುತಿರ್ದನೇನೆಂಬೆನಾ ಸವ್ಯಸಾಚಿಯಂದು ||
ಮೇಲಿನ ಎರಡೂ ಪದ್ಯಗಳೂ ಷಟ್ಪದಿಗಳಲ್ಲಿವೆ. ಕುಮಾರವ್ಯಾಸನದು ಭಾಮಿನಿಯೆಂದು ಎಲ್ಲರಿಗೂ ತಿಳಿದಿರುವ ವಿಚಾರವಾದರೆ ಯಕ್ಷಗಾನದ ಪದ್ಯ ವಾರ್ಧಕ ಷಟ್ಪದಿಯಲ್ಲಿದೆ. 

(ಮುಂದುವರಿಯುವುದು) 

ಹಾಸ್ಯ ಕಲಾವಿದ – ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರರು

ರಂಗಭೂಮಿ ಕಲೆಗಳಾದ ನಾಟಕ, ಚಿತ್ರರಂಗ ಮತ್ತು ಯಕ್ಷರಂಗದಲ್ಲಿ ಅಭಿನಯಿಸಿ, ಮಿಂಚುವ ಕಲಾವಿದರು ಪ್ರೇಕ್ಷಕರ ಮನದಾಳದಲ್ಲಿ ಅಚ್ಚಳಿಯದೆ ಉಳಿಯುತ್ತಾರೆ. ದೈನಂದಿನ ಜೀವನದಲ್ಲಿ ನೊಂದು, ಬೆಂದು ಮುದುಡಿದ ಜೀವಕ್ಕೆ ಒಂದಿಷ್ಟು ಸಂತೋಷದ ಸನ್ನಿವೇಶಗಳು ದೊರೆತಾಗ ‘‘ಹಾಲು ಜೇನು ಸವಿದಂತೆ’’, ಅದರಲ್ಲೂ ಹಾಸ್ಯ ಸನ್ನಿವೇಶಗಳನ್ನು ರಂಗದಲ್ಲಿ ಮೂಡಿಸಿ, ಜನರ ಮನಃಶುದ್ಧಿಗೊಳಿಸುವವನೇ ನಿಜವಾದ ಮನೋವೈದ್ಯ!
ಯಕ್ಷರಂಗಕ್ಕೇ ಬರೋಣ. ಇಲ್ಲಿ ಕಲಾವಿದ ನೊಬ್ಬ ತಲೆಗೊಂದು ದೊಡ್ಡ ಮುಂಡಾಸು, ಉದ್ದ ನಾಮ, ದಪ್ಪ ಮೀಸೆ, ಕಿವಿಗೆ ದೊಡ್ಡ ಓಲೆ (ಚಕ್ಕುಲಿ), ಉದ್ದ ಕೋಲು ಮತ್ತು ದೊಡ್ಡ ಹೊಟ್ಟೆ, ವೇಷಧರಿಸಿ, ರಂಗಪ್ರವೇಶಿಸಿ, ಹಾಸ್ಯನಗೆ ಬೀರುತ್ತಾ, ‘‘ಆಲಿಸಬೇಕು ಜೀಯಾ… ಲಾಲಿಸ ಬೇಕು…’’ ಎಂದು ಹಿಮ್ಮೇಳಕ್ಕೆ ಲಯಬದ್ಧವಾಗಿ ನರ್ತಿಸಿ, ಹಾಸ್ಯದ ಮಾತುಗಳನ್ನಾಡಿದಾಗ, ಹಾಸ್ಯ ಕಲಾವಿದ ತಾನೂ ನಗದೆ, ಪ್ರೇಕ್ಷಕರನ್ನು ನಕ್ಕುನಗಿಸಿ ನೀಡಿದ ಹಾಸ್ಯ ಸನ್ನಿವೇಶಗಳು ಹಾಗೂ ನಲ್ವತ್ತು ವರ್ಷಗಳ ಹಿಂದಿನ ಕಲಾಬದುಕಿನ ಒಂದು ಅವಲೋಕನ, ಏಳು-ಬೀಳಿನ ದಾರಿಯಲ್ಲಿ ಕಾಲ್ನಡಿಗೆಯಲ್ಲಿ ಸಾಗಿ ಕಲಾಸೇವೆ ಗೈದ ಕಲಾವಿದ, ಈಗ ವಿಶ್ರಾಂತ ಜೀವನ ನಡೆಸುತ್ತಿರುವ ‘‘ಕರ್ನಾಟಕ ಸರಕಾರದ 2013ನೇ ಸಾಲಿನ ರಾಜ್ಯ ಪ್ರಶಸ್ತಿ ಮತ್ತು ಕರ್ನಾಟಕ ಸರಕಾರದ ಮಾನ್ಯ ಕಾರ್ಮಿಕ ಸಚಿವರಾಗಿದ್ದ ಕೆ. ಅಮರನಾಥ ಶೆಟ್ಟಿ ಇವರಿಂದ ‘‘ಹಾಸ್ಯರಸಾಬ್ಧಿಭರತಪೂರ್ಣಚಂದ್ರ’’ ಬಿರುದು ಸ್ವೀಕರಿಸಿದ ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರರು ಕಟೀಲು ಮೇಳದಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ವೃತ್ತಿಜೀವನ ನಡೆಸಿ ಪ್ರಸ್ತುತ ಕೃಷ್ಣಾಪುರದಲ್ಲಿ ತನ್ನ ಮಗಳು-ಅಳಿಯನ ಜೊತೆ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಈ ಕಲಾವಿದರನ್ನು ಸಂದರ್ಶಿಸಿ, ಅವರತ್ತ ಪ್ರಶ್ನೆಗಳನ್ನೆಸೆದು, ಆಯ್ದವು ಗಳನ್ನು ಓದುಗರ ಮುಂದಿಟ್ಟಿದ್ದೇನೆ.
ಪ್ರಶ್ನೆ : ಮೇಳದ ಯಜಮಾನರು ಮತ್ತು ಭಾಗವತರ ನಂತರದ ಪ್ರಥಮ ಸ್ಥಾನ ಹಾಸ್ಯ ಕಲಾವಿದರಿಗಿದೆ ಎನ್ನುತ್ತಾರೆ, ಇದರ ಮಹತ್ತ್ವವೇನು?


ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರರು : ಹಾಸ್ಯಗಾರನಿಗೆ ವಿಧಾನ ಸಭಾಧ್ಯಕ್ಷರ ಸ್ಥಾನಮಾನದಷ್ಟು ಪ್ರಾಮುಖ್ಯತೆ ಗೌರವವಿದೆ. ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದು. ಕೇವಲ ಹಾಸ್ಯ ಪಾತ್ರಕ್ಕೇ ಸೀಮಿತವಾಗಿರದೆ, ಎಲ್ಲಾ ಪಾತ್ರಗಳ ರಂಗನಿರ್ವಹಣೆಗೆ ತಯಾರಿರಬೇಕು. ‘‘ಸಕಲ ಕಲಾ ಪಾಂಡಿತ್ಯ, ಪ್ರೌಢಿಮೆ ಇರಬೇಕು. ಒಂದು ವೇಳೆ ಯಾರಾದರೂ ಕಲಾವಿದರು ಬಾರದೇ ಇದ್ದ ಪಕ್ಷದಲ್ಲಿ ಆತನ ಪಾತ್ರ ಮಾಡುವ ಸಾಮರ್ಥ್ಯ ಹಾಸ್ಯ ಕಲಾವಿದನಿಗಿರಬೇಕು. ಸಹಕಲಾವಿದರು ಎದುರು-ಬದುರು ಕುಳಿತು ಬಣ್ಣಗಾರಿಕೆ ಮಾಡುವುದಾದರೆ, ಹಾಸ್ಯ ಕಲಾವಿದ ದೇವರ (ಚೌಕಿ) ಎದುರಿಗೇ ನೇರವಾಗಿ ಕುಳಿತು ಬಣ್ಣಗಾರಿಕೆ ಮಾಡುತ್ತಾನೆ. ಯಕ್ಷಗಾನದ ಪ್ರಾರಂಭದಿಂದ ಮಂಗಲದವರೇಗೆ ಏಳೆಂಟು ಪಾತ್ರಗಳನ್ನು ನಿರ್ವಹಿಸುವವನೇ ಹಾಸ್ಯಗಾರ!


ಪ್ರಶ್ನೆ: ನಿಮ್ಮ ಹಾಸ್ಯಪಾತ್ರಗಳ ಆಯ್ಕೆಯ ಸಂಕಲ್ಪ?
ನಾ. ಹಾ : ಎಳೆಯ ವಯಸ್ಸಿನಲ್ಲಿ ನಿರ್ವಹಿಸಿದ ಪ್ರಹ್ಲಾದ, ಮಾರ್ಕಾಂಡೇಯಾ, ರೋಹಿತಾಶ್ವ, ಮನ್ಮಥ ಮುಂತಾದ ಪಗಡಿವೇಷಗಳು- ದೇವಿ ಮಹಾತ್ಮೆಯ ಚಂಡ ಹಾಗೂ ಮುಂಡಾಸುರ ಪಾತ್ರಗಳು- ಬ್ರಹ್ಮ, ಬೃಹಸ್ಪತಿ, ಶುಕ್ರಾಚಾರ್ಯರಂತಹ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸುವ ಸಂದರ್ಭಗಳು ಇದ್ದರೂ ಹಾಸ್ಯ ಪ್ರಧಾನ ಪಾತ್ರಗಳಾದ- ಬಾಹುಕ, ಪಾಪಣ್ಣ, ಮಕರಂದ, ಬೈರಾಗಿ ಇತ್ಯಾದಿ ಪಾತ್ರಗಳು ಬಹಳ ಮನಮೆಚ್ಚುವ ಜನಪ್ರಿಯತೆಯ ಶಿಖರವನ್ನು ತಲುಪಿದ್ದುದರಿಂದ, ಅಂತಹ ಪಾತ್ರಲೋಲುಪತೆ ಮತ್ತು ಭಾವಪರವಶತೆಯ ಲೋಕಕ್ಕೆ ಕೊಂಡೊಯ್ದ ಪರಿಣಾಮ ಅಂತಹ ಪಾತ್ರನಿಷ್ಠೆ ಆರಂಭವಾಯಿತು.


ಪ್ರಶ್ನೆ : ನಿಮ್ಮ ಯಕ್ಷಕಲಿಕಾ ಗುರುಗಳು ಯಾರು? ಮತ್ತು ಯಾವ ಪಾತ್ರಗಳನ್ನು ನಿರ್ವಹಿಸಿದ್ದೀರಿ?
ನಾ. ಹಾ : ಪ್ರಾಥಮಿಕ- ಪೂಜ್ಯ ತೀರ್ಥರೂಪರು. ಗುರುಗಳಾಗಿ ದಿ| ಕುರಿಯ ವಿಠಲ ಶಾಸ್ತ್ರಿಗಳು. ದಿ| ಬಣ್ಣದ ಕುಟ್ಯಪ್ಪು. ದಿ| ಕುಂಞಬು ಹಾಸ್ಯ ಗಾರರು ಹಾಗೂ ಪೂಜ್ಯ ಜ್ಯೇಷ್ಠ ಸಹೋದರರು. ಅಲ್ಲದೆ ಕಾವು ಶ್ರೀಕಣ್ಣ, ಮಂಕುಡೆ ಸಂಜೀವ ಶೆಟ್ರು, ಗುಡ್ಡಪ್ಪ ಗೌಡರು, ಬಣ್ಣದ ಮಾಲಿಂಗ, ಪಡ್ರೆ ಚಂದು, ಪುತ್ತೂರು ನಾರಾಯಣ ಹೆಗಡೆ, ಉರ್ವ ಅಂಬು, ಬೋಳಾರ ನಾರಾಯಣ ಶೆಟ್ರು, ವೇದಮೂರ್ತಿ ವೆಂಕಟ್ರಮಣ ಭಟ್, ಪುತ್ತೂರು ಕೃಷ್ಣ ಭಟ್, ಕುಂಞರಾಮ ಮಣಿಯಾಣಿ, ದಿ| ಮಲ್ಪೆ ಶಂಕರನಾರಾಯಣ ಸಾಮಗರು, ದಿ| ಮಲ್ಪೆ ರಾಮದಾಸ ಸಾಮಗರು ಮುಂತಾದ ದಿಗ್ಗಜ ಯಕ್ಷತಾರೆಗಳೊಡನೆ ಪ್ರಾಮುಖ್ಯ ಪಾತ್ರ ನಿರ್ವಹಿಸಿರುತ್ತೇನೆ.


‘‘ಜನರ ಮಾನಸಿಕ ವಿಕಲ್ಪಗಳಿಗೆ ಹಾಸ್ಯಗಳು ಔಷಧಿಯಾಗಬಲ್ಲುದು ಮತ್ತು ಸೂಕ್ತ ಚಿಕಿತ್ಸೆ ಯಾಗಬಲ್ಲುದು’’ ಎಂಬ ಅಂಶಗಳೇ ನನ್ನ ಹಾಸ್ಯ ಪಾತ್ರಗಳ ಆಯ್ಕೆಯ ಸೂತ್ರವಾಗಿತ್ತು ಮತ್ತು ಯಕ್ಷಗಾನಪ್ರೇಮಿಗಳಿಗೆ ಹಾಸ್ಯದ ಔತಣ ಬಡಿಸುವುದು ನನ್ನ ಕರ್ತವ್ಯವೆಂದು ತಿಳಿದಿರುವೆ. ಹಲವಾರು ಪ್ರಸಿದ್ಧ ಪೌರಾಣಿಕ ಕಥಾಪ್ರಸಂಗಗಳಲ್ಲಿ ಬರುವ ವಿವಿಧ ಹಾಸ್ಯಪಾತ್ರಗಳಲ್ಲಿ ಪಾತ್ರ ನಿರ್ವಹಣೆ- ವಿಶೇಷವಾಗಿ ಪಾಪಣ್ಣ ವಿಜಯದ ಹಾಸ್ಯಪಾತ್ರ, ಶ್ರೀಕೃಷ್ಣ ವಿಜಯದ- ಮಕರಂದ, ಬಪ್ಪನಾಡು ಕ್ಷೇತ್ರ ಮಹಾತ್ಮ್ಯೆ- ಮುಸ್ಲಿಂ ಸಹೋದರನ ಪಾತ್ರ, ನಳದಮಯಂತಿ- ಬಾಹುಕ, ದಕ್ಷಾಧ್ವರದ- ಬ್ರಾಹ್ಮಣ, ದೇವಿಮಹಾತ್ಮ್ಯೆ- ದೂತ ಇತರ ಪ್ರಸಂಗಗಳಲ್ಲಿ- ನಾರದ, ಗೋಪಾಲಕರ ಪಾತ್ರ- ಇತ್ಯಾದಿ ನಿರ್ವಹಿಸಿರುತ್ತೇನೆ.


ಪ್ರಶ್ನೆ: ನಿಮ್ಮ ಯಕ್ಷಗಾನ ವ್ಯವಸಾಯದ ವಿವರ?
ನಾ. ಹಾ. : ಯಕ್ಷಗಾನ ಯಾತ್ರೆಯ ಆರು ದಶಕಗಳಲ್ಲಿ- ಸುಮಾರು ನಾಲ್ಕು ದಶಕಗಳಷ್ಟು ಕಾಲ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿ ದಶಾವತಾರ ಮೇಳದಲ್ಲಿ ಅವಿರತ ಸೇವೆ. ಪ್ರಥಮ ರಂಗಪ್ರವೇಶ ಕೂಡ್ಲು ಶ್ರೀ ಗೋಪಾಲಕೃಷ್ಣ ಮೇಳದಲ್ಲಿ. ಮುಂದೆ ಕ್ರಮವಾಗಿ- ಮೂಲ್ಕಿ ಮೇಳ, ಮುಚ್ಚೂರು, ಧರ್ಮಸ್ಥಳ, ಇರಾ ಶ್ರೀ ಸೋಮನಾಥೇಶ್ವರ ಮೇಳ, ಆದಿ ಸುಬ್ರಹ್ಮಣ್ಯ ಮೇಳ, ಸಾಲಿಗ್ರಾಮ ಶ್ರೀ ಗುರುನರಸಿಂಹ ಮೇಳ, ಸುಂಕದಕಟ್ಟೆ ಅಂಬಿಕಾ ಅನ್ನಪೂರ್ಣೇಶ್ವರಿ ಮೇಳ- ಈ ಮೇಳಗಳಲ್ಲಿ ಸಂಕ್ಷಿಪ್ತ ಅವಧಿಯ ಸೇವೆ ಸಲ್ಲಿಸಿರುತ್ತೇನೆ.


ಪ್ರಶ್ನೆ: ನಿಮ್ಮ ಕಲಾಪ್ರೌಢಿಮೆಗೆ ಸಂದ ಪ್ರಶಸ್ತಿ/ ಸನ್ಮಾನಗಳೇನು?
ನಾ. ಹಾ.: 1) ಬೋಳೂರು ದೋಗ್ರ ಪೂಜಾರಿ ಸ್ಮಾರಕ ಪ್ರಶಸ್ತಿ – 1992; 2) ಆಸ್ರಣ್ಣ ಪ್ರಶಸ್ತಿ – 2002; 3) ಯಕ್ಷಗಾನ ಕಲಾರಂಗ ಪ್ರಶಸ್ತಿ – 2009; 4) ಕರ್ನಾಟಕ ಸರ್ಕಾರದ 2013ನೇ ಸಾಲಿನ ರಾಜ್ಯ ಪ್ರಶಸ್ತಿ. ಅಲ್ಲದೆ ಪ್ರಮುಖವಾಗಿ ಸನ್ಮಾನಗಳು- ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ಯಕ್ಷಗಾನ ಬಯಲಾಟ ಸೇವಾ ಸಮಿತಿ, ಕೃಷ್ಣಾಪುರ, ಬೊಳ್ಳಾಜೆ; ಶಕ್ತಿನಗರ ವೀರಾಂಜನೇಯ ಸ್ವಾಮೀ; ಬಿಕರ್ನಕಟ್ಟೆ- ಶ್ರೀ ಬ್ರಾಹ್ಮರೀ ಯಕ್ಷಗಾನ ಮಂಡಳಿ; ಕಟೀಲು ಯಕ್ಷಗಾನ ಕಲಾಮಂಡಳಿ, ಪಣಂಬೂರು; ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ, ಕುರುಡುಪದವು; ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ; ಮಲ್ಲ ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿ, ಕಾಸರಗೋಡು; ದೆಹಲಿ ಕರ್ನಾಟಕ ಸಂಘ (ರಿ.), ನವದೆಹಲಿ; ಯಕ್ಷಕಲಾರಂಗ (ರಿ.), ಉಡುಪಿ; ಹೊರನಾಡು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರೀ ದೇವಾಲಯ; ದೇವಾಡಿಗರ ಸಂಘ, ದುಬಾೈ; ಶಿಕ್ಷಕ-ರಕ್ಷಕರ ಬಳಗ, ಬೇಲಾಡಿ; ಕಾಂತಾವರ ಮುಂತಾದ ಹತ್ತು ಹಲವಾರು ಸಂಘ-ಸಂಸ್ಥೆ ಗಳಿಂದ ಪುರಸ್ಕಾರ, ಸನ್ಮಾನಗಳು ದೊರೆತಿವೆ.


ಪ್ರಶ್ನೆ : ನೀವು ಆರು ದಶಕಗಳಷ್ಟು ಕಾಲ ಕಲಾಸೇವೆಗೈದು ವಿಶೇಷ ಪಾಂಡಿತ್ಯ ಮತ್ತು ಅನುಭವಗಳನ್ನು ಪಡೆದಿದ್ದೀರಿ. ಆ ಹಿಂದಿನ ಕಲಾಬದುಕಿಗೂ ಇಂದಿನ ಕಲಾಬದುಕಿಗೂ ನಿಮ್ಮ ಅಭಿಪ್ರಾಯವೇನು?
ನಾ. ಹಾ.: ಅಜಗಜಾಂತರ. ಆ ಕಾಲದ ಕಷ್ಟದ ಬದುಕು ನಮ್ಮ ಮಕ್ಕಳಿಗೂ ಬೇಡ. ನನ್ನ ವಿರೋಧಿಗಳಿಗೂ ಬೇಡವೇ ಬೇಡ. ಆಟ ಆಡುವ ಸ್ಥಳಗಳಲ್ಲಿ ಸರಿಯಾಗಿ ವಿಶ್ರಾಂತಿ ಪಡೆಯಲು ಸ್ಥಳಾವಕಾಶವಿಲ್ಲದಿದ್ದುದರಿಂದ ಸ್ಮಶಾನದಲ್ಲಿ ಮಲಗಿದ್ದೂ ಇದೆ. ಮಲಗಿ ಏನೋ ಭಯವಾಗಿ ಎದ್ದುಬಿದ್ದು ಓಡಿದ್ದೂ ಇದೆ. ಮಧ್ಯಾಹ್ನದ ಊಟದ ವ್ಯವಸ್ಥೆಗಳೂ ಸರಿಯಾಗಿ ಇರುತ್ತಿರಲಿಲ್ಲ. ಆಟ ನಡೆಯುವ ಸ್ಥಳಕ್ಕೆ ಏಳೆಂಟು ಮೈಲುಗಳ ಕಾಲ್ನಡಿಗೆ, ಗುಡ್ಡದಾರಿಗಳು, ನಮ್ಮದು ಆಗಿನ ಸಾಹಸದ ಕಲಾಬದುಕು. ಮೇಳದಲ್ಲಿ ಅಡುಗೆಯವರ ಅವಸ್ಥೆ ಹೇಳಿ ಪ್ರಯೋಜನವಿಲ್ಲ. ಪಾತ್ರೆಪಗಡಿಗಳನ್ನು ಒಂದು ಬಿದಿರಿನ ಗಳೆ(ಕೋಲು)ಗೆ ಕಟ್ಟಿ, ಭುಜದಲ್ಲಿಟ್ಟು ಕೊಂಡು ಕಾಲ್ನಡಿಗೆಯ ಪಯಣ! ಬೇಕೇ ಈ ಬಣ್ಣದ ಬದುಕು ಎಂದೆನಿಸುತ್ತಿತ್ತು. ಆಗ ಆಟಕ್ಕೂ ಸೇವಾದಾರರು ಕಡಿಮೆ. ಈಗಿನ ಕಲಾಬದುಕು ಸ್ವರ್ಗ. ಆದರೂ ಯಾರಿಗೂ ತಾಳ್ಮೆ ಇಲ್ಲ. ಈಗ ಕಲೆ, ಸಂಸ್ಕೃತಿ, ಸಂಸ್ಕಾರ ಎಲ್ಲವೂ ಕಡಿಮೆಯೆ! ಎಲ್ಲಾ ವ್ಯಾಪಾರ ಮಯವಾಗಿದೆ, ಭಕ್ತಿಗೆ ಬೆಲೆ ಇಲ್ಲ, ಹಣಕ್ಕೆ ಮಾತ್ರ ಬೆಲೆ ಎಂಬಂತಾಗಿದೆ.


ಪ್ರಶ್ನೆ: ಈ ಕಾಲದಲ್ಲಿ ‘ಕಾಲಮಿತಿ’ ಯಕ್ಷಗಾನದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ನಾ. ಹಾ: ಈ ಪ್ರಶ್ನೆ ನನ್ನಲ್ಲಿ ಹಲವರು ಕೇಳಿದ್ದಿದೆ. ದಯವಿಟ್ಟು ನಾನು ಏನೂ ಹೇಳಲಾರೆ. ಇರಲಿ, ನನಗೀಗ 80 ವರ್ಷ, ಸುಧಾರಣೆ ತರಲು ನನ್ನಿಂದ ಸಾಧ್ಯವೆ? ‘‘ಕಾಲಾಯ ತಸ್ಮಯೇ ನಮಃ’’. ಶನಿದೇವರ ಪೂಜೆ, ಸತ್ಯನಾರಾಯಣ ದೇವರ ಪೂಜೆ ಇಂತಹ ಪೂಜೆಗಳಿಗೆ ಒಂದು ಧಾರ್ಮಿಕ ಪೂಜಾ ವಿಧಿವಿಧಾನಗಳಿದ್ದು, ಪ್ರಸಾದ ವಿತರಣೆಯಾಗುತ್ತದೆ. ಯಕ್ಷಗಾನಕ್ಕೂ ಒಂದು ಪರಂಪರೆ ಇದೆ. ಪ್ರಾತಃಕಾಲದಲ್ಲಿ ಕಥಾಪ್ರಸಂಗಕ್ಕೆ ಮಂಗಲ ಹಾಡಿ, ಸೇವಾದಾರರಿಗೆ, ಚೌಕಿ ಪೂಜೆಯ ನಂತರ ಪ್ರಸಾದ ವಿತರಣೆಯಾಗುತ್ತದೆ. ‘ಕಾಲಮಿತಿ’ ಹರಕೆಯ ಸೇವಾಟಕ್ಕೆ ಖಂಡಿತ ಸರಿಯಲ್ಲ. ಯಾರೂ ನಿದ್ದೆಗೆಡಲು ತಯಾರಿಲ್ಲ. ‘‘ಸುಖವನ್ನೇ ಬಯಸುವವ ಯಾವಾಗಲೂ ಕಷ್ಟಪಡಲಿಚ್ಛಿಸಲಾರ. ಆದರೆ, ಕಷ್ಟಪಟ್ಟವ ಕಷ್ಟಸುಖಗಳನ್ನು ಸಮಾನವಾಗಿ ಸ್ವೀಕರಿಸುವನು.’’


ಪ್ರಶ್ನೆ: ನಿಮ್ಮ ಆಗಿನ ಕಾಲದ ಸಂಬಳ / ಗೌರವಧನ ಎಷ್ಟಿತ್ತು?
ನಾ. ಹಾ: ‘ನಾವು ಸಂಬಳ ತಿಂದು ಬದುಕಿದವರಲ್ಲ, ಕೆಲಸಕ್ಕಾಗಿ ಬದುಕಿದವರು’. ಆಗ ಐದು ದಿನಕ್ಕೆ ಮೂರು ರೂಪಾೈ ಸಂಬಳ. ಕೆಲವು ಸಮಯದ ನಂತರ ಮೂರು ದಿನಕ್ಕೆ 300 ರೂಪಾೈ ಸಿಗುತ್ತಿತ್ತು. ಮೇಳ ಬಿಡುವ ಸಮಯಕ್ಕೆ ಆರು ತಿಂಗಳಿಗೆ ರೂಪಾೈ 25,000/- ಪಡೆದಿದ್ದೇನೆ.


ಎಂಬತ್ತರ ಇಳಿವಯಸ್ಸಿನ ಈ ಯಕ್ಷಕಲಾ ಭೀಷ್ಮಾಚಾರ್ಯರು ದಿನಾಂಕ 17-12-2016 ರಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ಬಯಲಾಟ ಸೇವಾ ಸಮಿತಿ, ಕೃಷ್ಣಾಪುರ- ಇದರ 50ನೇ ವರ್ಷದ ಸುವರ್ಣ ಮಹೋತ್ಸವ ಸೇವಾಟದಲ್ಲಿ ‘ಸುಗ್ರೀವ’ನಾಗಿ ಕಲಾಪಾಂಡಿತ್ಯ ಮೆರೆದಿದ್ದಾರೆ. ಕೇವಲ 3,000 ರೂಪಾೈ ಗೌರವಧನ ಸ್ವೀಕರಿಸುತ್ತಾ ಜೀವನ ನಿರ್ವಹಿಸುವ ಈ ಹಿರಿಯ ಕಲಾವಿದರನ್ನು ಸಂಘ-ಸಂಸ್ಥೆಗಳು ಪುರಸ್ಕರಿಸಿದರೆ ಅವರ ಕಲಾಪಾಂಡಿತ್ಯವನ್ನು ಇನ್ನಷ್ಟು ಗೌರವಿಸಿದಂತಾಗುತ್ತದೆ.
ಹುಟ್ಟಿದ ಊರು : ನೆಲ್ಲಿಕಟ್ಟೆ, ಕಾಸರಗೋಡು ತಾಲೂಕು, ಕೇರಳ ರಾಜ್ಯ
ತಂದೆ : ದಿ| ಕೃಷ್ಣ ಚೆಟ್ಟಿಯಾರ್; ತಾಯಿ : ದಿ| ಮಾನು
ಪ್ರಾಥಮಿಕ ವಿದ್ಯಾಭ್ಯಾಸ : ಎರ್ಪೆಕಟ್ಟೆ, ಕಲ್ಲಕಟ್ಟೆ ಶಾಲೆ
ಹೈಸ್ಕೂಲ್ ವಿದ್ಯಾಭ್ಯಾಸ : ನವಜೀವನ ಪ್ರೌಢಶಾಲೆ, ಪೆರಡಾಲ ಮತ್ತು ಎಡನೀರು ಪ್ರೌಢಶಾಲೆ, ಕಾಸರಗೋಡು
ವಿದ್ಯಾಭ್ಯಾಸ : ಎಂಟನೇ ತರಗತಿ.

ಸಂದರ್ಶನ : ರುಕ್ಮಯ್ಯ ಶೆಟ್ಟಿ ಬಿ.

ರುಕ್ಮಯ್ಯ ಶೆಟ್ಟಿ ಬಿ.
‘ದೇವಿಕೃಪಾ’, ಪಡ್ರೆ

ಕಲಾಪೋಷಕ ಕುಕ್ಕಿಕಟ್ಟೆ ಸುರೇಶ್ ನಿಧನ

ಕುಕ್ಕಿಕಟ್ಟೆಯ ನಿವಾಸಿ ಶ್ರೀಕಲಾ ವಾಣಿಜ್ಯ ಸಂಕೀರ್ಣದ ಮಾಲಕರಾದ ಸುರೇಶ್ (50 ವರ್ಷ) 22-06-2021ರಂದು ನಿಧನರಾದರು. ‘ಭ್ರಮರ’ ಕಾಂಟೀನ್ ನಡೆಸುತ್ತಾ ಪಾರಂಪರಿಕ ತಿಂಡಿ-ತಿನಿಸುಗಳನ್ನು ಮಾಡುವಲ್ಲಿ ವಿಶೇಷ ಪ್ರಾವೀಣ್ಯತೆಯನ್ನು ಹೊಂದಿದ್ದರು. ಕಳೆದ ನಾಲ್ಕು ವರ್ಷಗಳಿಂದ ಸ್ವಂತ ವೇಷಭೂಷಣ ಸಹಿತ ‘ಶ್ರೀಕಲಾ ಸಂಗಮ ಯಕ್ಷಗಾನ ಮಕ್ಕಳ ಮೇಳ’ವನ್ನು ಸ್ಥಾಪಿಸಿ ಎಳೆಯ ಮಕ್ಕಳಲ್ಲಿ ಯಕ್ಷಗಾನಾಸಕ್ತಿ ಮೂಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.

ಯಕ್ಷಗಾನ ಕಲೆಯನ್ನುಅತೀವ ಪ್ರೀತಿಸುತ್ತಿದ್ದ ಇವರು ಪ್ರತಿವರ್ಷ ವಿಶೇಷ ರೀತಿಯಲ್ಲಿ ಮೇಳದ ಯಕ್ಷಗಾನವನ್ನುಆಯೋಜಿಸುತ್ತಾ, ಅಂದು ಹಲವಾರು ಅಶಕ್ತರಿಗೆ, ಕಲಾವಿದರಿಗೆ, ಸಂಘ ಸಂಸ್ಥೆಗಳಿಗೆ, ಯಕ್ಷಗಾನ ಮಂಡಳಿಗಳಿಗೆಆರ್ಥಿಕ ನೆರವನ್ನು ನೀಡಿ ಪ್ರೋತ್ಸಾಹಿಸುತ್ತಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಬಂಧುಗಳನ್ನು ಅಗಲಿದ್ದಾರೆ. ಯಕ್ಷಗಾನ ಕಲಾರಂಗ (ರಿ.) ಉಡುಪಿ ಇದರ ಆಜೀವ ಸದಸ್ಯರಾಗಿದ್ದ ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

ಯಕ್ಷಗಾನ ಪ್ರಸಂಗಕರ್ತರ ಮೇಲೆ ಕುಮಾರವ್ಯಾಸನ ಪ್ರಭಾವ (ಭಾಗ – 2)

ಕುಮಾರವ್ಯಾಸನ ಭಾಮಿನಿಯ ಸೌಂದರ್ಯಕ್ಕೆ ಯಾರಾದರೂ ತಲೆದೂಗಲೇಬೇಕು. ಈ ಕಾವ್ಯ ಸೌಂದರ್ಯಕ್ಕೆ ಮನಸೋತೇ ಪ್ರಸಂಗಕರ್ತೃ ಇದನ್ನು ಹಾಗೆಯೇ ಬಳಸಿಕೊಳ್ಳಲು ನಿರ್ಧರಿಸಿರಬಹುದು ಎಂದು ತೋರುತ್ತದೆ. ಯಕ್ಷಗಾನ ಪ್ರಸಂಗಗಳಲ್ಲಿಯೂ ಕೂಡಾ ನಾವು ಕೆಲವು ಪ್ರಬೇಧಗಳನ್ನು ಗುರುತಿಸಬಹುದು. ಕೃತಿಕಾರನ ಕಾವ್ಯ ಸೃಷ್ಟಿಯ ಮನೋಭಿಲಾಷೆಗೆ ತಕ್ಕಂತೆ ರಚನಕಾರರು ಕೆಲವು ಸಂದರ್ಭಗಳನ್ನು ಮೊಟಕುಗೊಳಿಸಿರುತ್ತಾರೆ ಅಥವಾ ದೀರ್ಘಗೊಳಿಸಿರುತ್ತಾರೆ. ಯಕ್ಷಗಾನ ಪ್ರಸಂಗಗಳಲ್ಲಿ ಒಂದೇ ಪ್ರಸಂಗದ ಬೇರೆ ಬೇರೆ ಪ್ರಸಂಗಕರ್ತರ ಭಿನ್ನ ಪ್ರತಿಗಳನ್ನು ನಾವು ಕಾಣಬಹುದು.


ಕೆಲವೊಮ್ಮೆ ನಿರ್ದಿಷ್ಟ ಕವಿಯ ಒಂದು ಪ್ರತಿಯಲ್ಲಿದ್ದ ಕೆಲವು ಪದ್ಯಗಳು ಇನ್ನೊಂದು ಕವಿಯ ಅದೇ ಪ್ರಸಂಗದ ಪ್ರತಿಯಲ್ಲಿರದೆ ಬೇರೆ ಹೊಸತಾದ ಪದ್ಯಗಳನ್ನು ತನ್ನ ಮನೋಭಿವ್ಯಕ್ತಿಗೆ ತಕ್ಕಂತೆ ಹೊಸೆದಿರುವುದನ್ನು ಗಮನಿಸಬಹುದು. ಇದು ಕವಿ ಸ್ವಾತಂತ್ರ್ಯ. ಒಟ್ಟಾರೆ ಮೂಲ ಕಥೆಗೆ ಭಂಗ ಬರದಿದ್ದರೆ ಅಯಿತು. ಸಾಹಿತ್ಯ ಮತ್ತು ಪದ್ಯಗಳು ಅದು ಕವಿಯ ಸ್ವಾತಂತ್ರ್ಯ. ಹಾಗೆಂದು ಕಥೆಯನ್ನು ತಿರುಚಲು ಹೋಗಬಾರದು.
ನಾವು ನಮ್ಮ ಹಿಂದಿನ ತಲೆಮಾರಿನ ಹಲವಾರು ಹಿರಿಯರು ಹೇಳುವುದನ್ನು  ಕೇಳಿದ್ದೇವೆ. ಆಶುಕವಿಗಳಾಗಿದ್ದ ಕೆಲವು ಭಾಗವತರು ರಂಗದಲ್ಲೇ ಪದ್ಯಗಳನ್ನು ಹೊಸೆದು ಹಾಡುತ್ತಿದ್ದರಂತೆ. ಹಿರಿಯ ಅಗರಿ ಭಾಗವತರು ಇದರಲ್ಲಿ ಅಗ್ರಗಣ್ಯರೆಂದು ಕೇಳಿದ್ದೇವೆ. ಕಡತೋಕಾ ಮಂಜುನಾಥ ಭಾಗವತರು ಹಾಗೂ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಕೂಡಾ ಆಶುಕವಿತ್ವವನ್ನು ಮೈಗೂಡಿಸಿಕೊಂಡ ಪ್ರತಿಭಾವಂತರು.

ಮೇಲೆ ಹೇಳಿದಂತೆ ಪ್ರಸಂಗದ ವಿವಿಧ ಪ್ರತಿಗಳ ಪ್ರಸ್ತಾಪ ಯಾಕೆ ಬಂತೆಂದರೆ ಕೆಲವೊಂದು ಕೃತಿಕಾರರು ಕುಮಾರವ್ಯಾಸನನ್ನು ಹೆಚ್ಚಾಗಿ ಹಚ್ಚಿಕೊಂಡಂತೆ ಕಂಡರೂ ಮಿಕ್ಕುಳಿದವರು ಬೇಕಾದಲ್ಲಿ ಅಲ್ಲಲ್ಲಿ ಆತನಿಂದ ಪ್ರಭಾವಿತರಾಗಿರುವುದು ಕಂಡುಬರುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ನಾರಣಪ್ಪನ ಭಾಮಿನಿಯ ಸಾಹಿತ್ಯವನ್ನು ಭಾಮಿನಿಯಾಗಿ ಉಪಯೋಗಿಸದೆ ಇತರ ತಾಳಗಳ ಪದ್ಯಗಳಾಗಿ ಪಡಿಮೂಡಿಸಿದ್ದೂ ಆತನ ಪ್ರಭಾವಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ಆದರೂ ಭಾಮಿನಿಗೆ ಭಾಮಿನಿಯೇ ಸಾಟಿ. ಕೆಲವು ಭಾಗವತರಂತೂ ಭಾಮಿನಿಯನ್ನು ಹಾಡಲು ಬಹಳಷ್ಟು ಇಷ್ಟಪಡುತ್ತಾರೆ. ತಮ್ಮೆಲ್ಲಾ ಗಾನಪ್ರತಿಭೆಯನ್ನು, ಆಲಾಪನೆಯನ್ನು ಪ್ರದರ್ಶಿಸಲು ಭಾಮಿನಿಯು ಒಂದು ಮಾಧ್ಯಮವೆಂದು ಭಾವಿಸುವವರೂ ಇರಬಹುದು. ಆದರೆ ಆಲಾಪನೆಯ ಗುಂಗಿನಲ್ಲಿ, ಅದರಲ್ಲೇ ತಲ್ಲೀನನಾಗಿರುವ ಹಾಡುಗಾರ ರಂಗದಲ್ಲಿ ಸುಮ್ಮನೆ ನಿಂತಿರುವ ಪಾತ್ರಧಾರಿಯ ಅವಸ್ಥೆಯನ್ನು ಗಣನೆಗೆ ತೆಗೆದುಕೊಂಡಿರುವುದಿಲ್ಲ ಎಂಬ ವಾದವೂ ಇದೆ. ಅದೇನೇ ಇರಲಿ. ಆ ವಿಷಯ ಇಲ್ಲಿ ಅಪ್ರಸ್ತುತ.

ಪ್ರಸಂಗಕರ್ತರ ಕೃತಿಗಳು ಮತ್ತು ಭಿನ್ನ ಸ್ವರೂಪದ ಪ್ರತಿಗಳಿದ್ದರೂ ಎಲ್ಲಾ ಪ್ರಸಂಗಕಾರರಲ್ಲಿಯೂ ಪ್ರಭಾವ ಬೀರಿದ ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿಯ ಆದಿಪರ್ವದ ಪದ್ಯವೊಂದು ಹೀಗಿದೆ.
ಸಾಕಲಾರೆನು ಮಗನನಾತನ
ನೂಕುವೆನು ನಿಮ್ಮಸುರನೂಟಕೆ
ಸಾಕು ತನಗುಳಿದವರೆನಲ್ ದ್ವಿಜನದಕೆ ಬೆರಗಾಗಿ
ಸಾಕಲಾರದೆ ಮಗನನುರಿಯಲಿ
ನೂಕಿದವರುಂಟೇ ಮಹಾಸತಿ
ಯಾಕೆವಾಳತನಕ್ಕೆ ನಮಿಸಿದೆನೆನುತ ಕೈಮುಗಿದ

ಅರಗಿನ ಮನೆಯಿಂದ ಪಾರಾಗಿ ಘೋರ ಕಾನನದಲ್ಲಿ ಹಿಡಿಂಬೆಯ ಪ್ರಕರಣದ ನಂತರ ಪಾಂಡವರು ಕುಂತಿ ಸಮೇತರಾಗಿ ಏಕಚಕ್ರ ಎಂಬ ನಗರದಲ್ಲಿ ಬ್ರಾಹ್ಮಣ ವೇಷಧಾರಿಗಳಾಗಿ ವಿಪ್ರನೊಬ್ಬನ ಮನೆಯಲ್ಲಿ ಆಶ್ರಯ ಪಡೆದು ಭಿಕ್ಷಾಟನೆ ವೃತ್ತಿಯಿಂದ ಜೀವಿಸುತ್ತಿದ್ದರು. ಬಕಾಸುರನ ಉಪಟಳದಿಂದ ವ್ಯಾಕುಲಚಿತ್ತದಿಂದ ಶೋಕಸಾಗರದಲ್ಲಿ ಬೊಬ್ಬಿರಿಯುತ್ತಿದ್ದ ನೆರೆಮನೆಯ ಬ್ರಾಹ್ಮಣ ಕುಟುಂಬದವರನ್ನು ಸಮಾಧಾನಪಡಿಸುತ್ತಾ ಕುಂತಿದೇವಿಯು ಬಕಾಸುರನೆಡೆಗೆ ತನ್ನ ಮಗನನ್ನು ಕಳುಹಿಸುವೆನೆಂದು ಮೇಲಿನ ಮಾತನ್ನು ನುಡಿಯುವ ಸಂದರ್ಭದ ಪದ್ಯವಿದು.


ಇದೇ ಸಂದರ್ಭ ‘ದ್ರೌಪದೀ ಸ್ವಯಂವರ’ ಯಕ್ಷಗಾನ ಪ್ರಸಂಗದಲ್ಲಿ ಹೀಗೆ ಬಂದಿದೆ. ಅದೂ ಭಾಮಿನಿಯಲ್ಲಿದೆ.
“ಸಾಕಲಾರೆನು ಮಗನನೊಬ್ಬನ |
ಸಾಕು ತನಗುಳಿದವರು ನಾಳೆಗೆ |
ನೂಕಿ ಕಳೆದಪೆನವನನೆಂದಾ ಕುಂತಿ ಪೇಳಲ್ಕೆ ||
ಲೋಕದೊಳಗಿನ್ನೆಂತು ನಿರ್ದಯ |
ದಾಕೆರಿಹರೋ ಶಿವ ಶಿವೇಸು ಮ |
ಹಾ ಕಠಿನ ಮನವಿವಳದೆನುತಿಂತೆಂದನಾ ವಿಪ್ರ ||
ಈ ಸಂದರ್ಭದಲ್ಲಿ ಕುಮಾರವ್ಯಾಸ ಭಾರತದ ಪದ್ಯದ ಸಾಹಿತ್ಯದ ಭಾಗಶಃ ‘ದ್ರೌಪದೀ ಸ್ವಯಂವರ’ ಯಕ್ಷಗಾನ ಪ್ರಸಂಗದ ಪದ್ಯದಲ್ಲಿಯೂ ಬಂದಿದೆ. ಆದರೆ ಸ್ವಲ್ಪ ಭಾಗ ಅಷ್ಟೇ.


ಈಲ್ಲಿ ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಮೇಲಿನ ಪದ್ಯವು ಸಂಪೂರ್ಣ ಕುಮಾರವ್ಯಾಸನ ಸಾಹಿತ್ಯದ ಪ್ರಭಾವ ಎಂದು ಹೇಳಲಾಗದು. ಸ್ವಲ್ಪ ಹೋಲಿಕೆಯಿದೆ ಅಷ್ಟೇ. ಯಾಕೆಂದರೆ ಎಷ್ಟೋ ಸಂದರ್ಭಗಳಲ್ಲಿ  ಇಬ್ಬರು ಒಂದೇ ತೆರನಾದ ಆಲೋಚನಾ ಲಹರಿಗಳಿರುವ ಕವಿಗಳಿರುತ್ತಾರೆ. ಕಾಕತಾಳೀಯವಾಗಿ ಅವರಿಬ್ಬರ ಕೃತಿಗಳೂ, ರಚನೆಗಳೂ ಒಂದನ್ನೊಂದು ಹೋಲುತ್ತಿದ್ದರೆ ಅದು ಮತ್ತೊಬ್ಬರ     ಪ್ರಭಾವವೇ ಆಗಿರಬೇಕೆಂದೇನಿಲ್ಲ. ಅವರಿಬ್ಬರ ಕಾವ್ಯ ಶೈಲಿ ಒಂದೇ ತೆರನಾಗಿದೆ ಅಥವಾ ಅಕಾರಣವಾಗಿ ಹೋಲಿಕೆ ಉಂಟಾಗಿದೆ ಎಂದು ತಿಳಿದುಕೊಳ್ಳಬೇಕು. ಈ ಪದ್ಯಗಳನ್ನು ಹೋಲಿಸುವುದಾದರೆ ಒಂದನೇ ಸಾಲು ಬಹುತೇಕ ಒಂದೇ ರೀತಿಯದಾಗಿದೆ. ಕುಮಾರವ್ಯಾಸ ಭಾರತದ ಎರಡನೆಯ ಸಾಲು ಯಕ್ಷಗಾನ ಪ್ರಸಂಗದ ಮೂರನೆಯ ಸಾಲಿನಲ್ಲಿದೆ. ಅಲ್ಲಿನ ಮೂರನೆಯ ಸಾಲು ಇಲ್ಲಿಯ ಎರಡನೆಯ ಸಾಲಿನಲ್ಲಿದೆ. ಬಹುತೇಕ ಅಲ್ಲ ಭಾಗಶಃ ಬಂದಿದೆ.


ಆದಿಪರ್ವದ ಇದೇ ಸಂದರ್ಭದ ಇನ್ನೊಂದು ಭಾಮಿನಿ ಹೀಗಿದೆ.

ನಳನಳಿಪ ಬಹುವಿಧದ ಭಕ್ಷ್ಯಾ
ವಳಿಯ ಹೆಡಗೆಗಳೋರಣಿಸಿ ಮಂ
ಡಳಿಸಿ ಕೂಡಿದ ಹಾಲು ತುಪ್ಪದ ಹಲವು ಹರವಿಗಳ
ಬಳಸಿ ಮುಚ್ಚಿದ ವಿವಿಧ ಶಾಖಾ
ವಳಿಯ ಬೋನದ ಬಿಗಿದ ಕುನಿಕಿಲ
ಕಳವೆಯಕ್ಕಿಯ ಕೂಳರಾಶಿಯ ಬಂಡಿ ಜೋಡಿಸಿತು.

ಈ ಪದ್ಯದಲ್ಲಿ ಬಕಾಸುರನಿಗಾಗಿ ಬಂಡಿಯಲ್ಲಿ ವಿವಿಧ ಬಗೆಯ ಆಹಾರಗಳನ್ನು ಜೋಡಿಸಿದ ದೃಶ್ಯವನ್ನು ಕುಂತಿಯು ಕಂಡ ಸಂದರ್ಭದ ವರ್ಣನೆಯಿದೆ. ಇಲ್ಲಿ ಬಗೆಬಗೆಯ ಭಕ್ಷ್ಯಗಳೇ ಕಣ್ಣೆದುರು ಕಂಡಂತಾಗಿ ಓದುಗರ ಬಾಯಲ್ಲಿ ನೀರೂರಿಸುವುದರಲ್ಲಿ ಸಫಲನಾಗುತ್ತಾನೆ ಕುಮಾರವ್ಯಾಸ.
ಇನ್ನು ಯಕ್ಷಗಾನ ಪ್ರಸಂಗ ‘ದ್ರೌಪದೀ ಸ್ವಯಂವರ’ದ ಪ್ರತಿಯೊಂದರಲ್ಲಿ ಈ ಸಂದರ್ಭದ ವರ್ಣನೆ ಈ ರೀತಿ ಕಾಣಿಸುತ್ತದೆ. ಆದರೆ ಅದು ವಾರ್ಧಕ ಷಟ್ಪದಿಯಲ್ಲಿದೆ.
ನಳನಳಿಪ ವಿವಿಧ ಭಕ್ಷ್ಯಾವಳಿಯ ಹೆಡಿಗೆಗಳ |
ಬಳಸಿ  ತುಂಬಿದ  ತುಪ್ಪ ಪಾಲ್ಮೊಸರ ಹರವಿಗಳ |
ಕಳವೆಯಕ್ಕಿಯ ಕೂಳ ರಾಶಿಗಳ ಮುಚ್ಚಿರ್ದ ವಿವಿಧ ಶಾಕದ ರಚನೆಯ ||
ಚೆಲುವೆಸೆವ ಭಂಡಿಯೊಳ್ ಕಂಡು ಸಂತೋಷದಿಂ |
ಬಳಿಕಲಾ ಕುಂತಿ ಪವನಾತ್ಮಜನ ಪೊರೆಗೈದಿ |
ಸಲೆ ಸಕಲ ಸನ್ನಾಹವಾದುದೈ ಕಂದ ಕೇಳೆನುತ ಬಳಿಕಿಂತೆಂದಳು ||

  ವಿಭಿನ್ನ ಷಟ್ಪದಿಗಳಲ್ಲಿ ರಚಿಸಲ್ಪಟ್ಟಿದ್ದರೂ ವರ್ಣನೆ, ಸಾಹಿತ್ಯ, ಕಾವ್ಯ ಸೌಂದರ್ಯದಲ್ಲಿ ಬಹುತೇಕ ಸಾಮ್ಯತೆಯನ್ನು ಮೇಲಿನ ಪದ್ಯಗಳೆರಡರಲ್ಲಿ ನಾವು ಗುರುತಿಸಬಹುದು. ಈ ಯಕ್ಷಗಾನ ಪ್ರಸಂಗದ ಪದ್ಯ ರಚನೆಯ ಸಂದರ್ಭದಲ್ಲಿ, ಇಬ್ಬರು ಕೃತಿ ರಚನೆಕಾರರಲ್ಲಿರುವ ಸಾಮ್ಯತೆ, ಮೊದಲಿನ ಕವಿಯ ಸಾಹಿತ್ಯದ ಪ್ರಭಾವ, ಇವೆರಡೂ ಕೆಲಸ ಮಾಡಿರಬಹುದೆಂದು ತೋರುತ್ತಿದೆ.

(ಮುಂದುವರಿಯುವುದು) 

ಯಕ್ಷಾವತರಣದಲ್ಲಿ ರಂಜಿತಾ ಎಲ್ಲೂರು ಮತ್ತು ವಿಂದ್ಯಾ ಆಚಾರ್ಯ ಯಕ್ಷನೃತ್ಯ ವೈವಿಧ್ಯ

ಕುರಿಯ ಪ್ರತಿಷ್ಠಾನದ ಯಕ್ಷಾವತರಣದಲ್ಲಿ ಕುಮಾರಿ ರಂಜಿತಾ ಎಲ್ಲೂರು ಮತ್ತು ಕುಮಾರಿ ವಿಂದ್ಯಾ ಆಚಾರ್ಯ ಉಡುಪಿ ಯಕ್ಷನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದ ವೀಡಿಯೊ ಲಿಂಕ್ ಇಲ್ಲಿದೆ. 

ಯಕ್ಷಗಾನ ಕಲಾವಿದರಿಗೆ ಸಹಾಯಹಸ್ತ 

ಬೆಂಗಳೂರಿನ ಸರೋಜಿನಿ ದಾಮೋದರನ್ ಫೌಂಡೇಷನ್ ಕರೋನಾದ ಸಂಕಷ್ಟದ ಸಮಯದಲ್ಲಿ, ಯಕ್ಷಗಾನ ವೃತ್ತಿಪರ ಕಲಾವಿದರಿಗಾಗಿ ಒಂದು ಸಾವಿರ ರೂಪಾಯಿ ಮೊತ್ತದ ಆಹಾರ ಕಿಟ್ ಗಳನ್ನು ಮೊದಲ ಕಂತಾಗಿ ಕಳುಹಿಸಿದ್ದು, ಇದರಲ್ಲಿ ಮೊದಲ ಕಂತಿನ ಕಿಟ್ ನ್ನು ಕಾಸರಗೋಡಿನ ಯಕ್ಷಗಾನ ಕಲಾವಿದರಿಗೆ ನೀಡಲಾಗಿದೆ. ಇದರೊಂದಿಗೆ ಕಾಸರಗೋಡು ಕಲಾವಿದರಿಗೆ ಪಣಂಬೂರು ವಾಸುದೇವ ಐತಾಳರ ವತಿಯಿಂದ 5 ಕೆ.ಜಿ. ಸಾವಯವ ಕುಚ್ಚಲಕ್ಕಿ ವಿತರಿಸಲಾಗಿದೆ. ಉಳಿದ ಕಲಾವಿದರಿಗೆ ಮುಂದಿನ ದಿನಗಳಲ್ಲಿ ಕಿಟ್ ನೀಡಲಾಗುವುದು ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ  ಎಂ.ಗಂಗಾಧರ ರಾವ್‌ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ .

ಯಕ್ಷಗಾನ ಕಲಾರಂಗ (ರಿ.) ಉಡುಪಿ ಇವರ ಮುತುವರ್ಜಿಯಲ್ಲಿ ಸಂಗ್ರಹಿಸಿ ಆಹಾರ ಕಿಟ್ ನ್ನು ಗಡಿನಾಡು ಕಾಸರಗೋಡು ವಿಭಾಗಕ್ಕೆ ಪ್ರತಿಷ್ಠತ ಸಂಸ್ಥೆಯಾದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಮೂಲಕ ಶ್ರೀ ಸತೀಶ ಅಡಪರ ಸಂಕಬೈಲು ಮತ್ತು ರಾಧಾಕೃಷ್ಣ  ನಾವಡ ಮಧೂರು ಇವರ ನೇತೃತ್ವದಲ್ಲಿ 100 ಕ್ಕೂ ಹೆಚ್ಚು ವೃತ್ತಿ ಕಲಾವಿದರಿಗೆ ವಿತರಿಸಲಾಯಿತು.

ಗಡಿನಾಡು ಕಾಸರಗೋಡಿನ ವೃತ್ತಿ ಕಲಾವಿದರ ಸಂಕಷ್ಟಷ್ಟವನ್ನೂ ಇತ್ತೀಚೆಗೆ ಕರ್ನಾಟಕ ಸರಕಾರದ ಗಮನಕ್ಕೆ ತಂದಿರುತ್ತೇವೆ.  ಯಕ್ಷಗಾನ  ಕಲಾಂಗ (ರಿ.) ಉಡುಪಿ ಇವರ ಆಹಾರ ಕಿಟ್ ಯೋಜನೆಗೆ ಸಂತೋಷವಾಗಿದೆ. ಹಾಗು ಗಡಿನಾಡಿನ ಎಲ್ಲಾ ಯಕ್ಷಗಾನ ಕಲಾವಿದರ ಧ್ವನಿಯಾಗಿ ಯಕ್ಷಗಾನ ಕಲಾರಂಗಕ್ಕೆ ವಿಶೇಷ ಧನ್ಯವಾದಗಳನ್ನು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಸಲ್ಲಿಸಿದೆ. 

ಯಕ್ಷಗಾನ ಕಲೆಯಲ್ಲಿ ಗುರುವಿನ ಮಹತ್ವ

ನಮ್ಮ ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಹಾಸುಹೊಕ್ಕಾಗಿರುವ ಯಕ್ಷಗಾನ ಕಲೆಗೆ ಅದರದ್ದೇ ಆದ ಮಹತ್ವವಿದೆ. ಕಾರಣಿಕವಿದೆ. ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಜನಮಾನಸದಲ್ಲಿ ನೆಲೆಯೂರಿದ ಒಂದು ವಿಶಿಷ್ಟ ಕಲೆ ಯಕ್ಷಗಾನ. ಶತಮಾನಗಳ ಹಿಂದೆ ಕಾಸರಗೋಡಿನ ಪಾರ್ತಿಸುಬ್ಬನೇ ಯಕ್ಷಗಾನ ಪಿತಾಮಹನೆಂಬ ನಂಬಿಕೆ ನಮ್ಮದು. ತೀರಾ ಅವಿದ್ಯಾವಂತರ ಕಲೆ, ಜನಪದರ ಕಲೆ ಎಂದೆಲ್ಲಾ ಒಂದು ರೀತಿಯಾಗಿ ನೋಡುತ್ತಿದ್ದ ಯಕ್ಷಗಾನಕ್ಕೆ ಕೇರಳದ ಕಥಕ್ಕಳಿಯಿಂದ ಪ್ರೇರಿತರಾದ ಕುಂಬಳೆ ಪಾರ್ತಿಸುಬ್ಬನವರು ಸ್ಪಷ್ಟಚಿತ್ರಣ ಹಾಗೂ ಶುದ್ಧವಾದ ರೂಪವನ್ನು ಕೊಟ್ಟು ಹಲವಾರು ಪ್ರಸಂಗಗಳನ್ನು ರಚಿಸಿ ಯಕ್ಷಗಾನಕ್ಕೊಂದು ಅದ್ಭುತವಾದ ರೂಪುರೇಷೆಯನ್ನು ಕೊಟ್ಟರು.


ಮಲಯಾಳಂನ ‘ಗುರುನೆಲೆ ಇಲ್ಲೆಂಗಿ ಒರುನೆಲೆ ಇಲ್ಲ’ ಕನ್ನಡದ ಕವಿವಾಣಿ ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಮಾತುಗಳು ಗುರುವಿನ ಮಹತ್ವವನ್ನು ಸಾರಿ ಹೇಳುತ್ತವೆ. ಇದು ಇತರ ಕಲೆಗಳಾದ ಭರತನಾಟ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೂ ಅನ್ವಯವಾಗುತ್ತದೆ. ಇವೆಲ್ಲವೂ ಕೇವಲ ವಿದ್ಯೆಗಳಲ್ಲ; ದೇವತಾರಾಧನಾ ಕಲೆಗಳು; ದೈವೀ ಕಲೆಗಳು. ಇದನ್ನು ಗುರು ಮುಖೇನ ಕಲಿತರೇ ಸಿದ್ಧಿಸಲು ಸಾಧ್ಯ. ಯಕ್ಷಗಾನ, ಭರತನಾಟ್ಯ, ಶಾಸ್ತ್ರೀಯ ಸಂಗೀತ ಕಲಿಯುವವರು ಆರಂಭದಲ್ಲಿ ಆಯಾ ದೇವರಿಗೆ ನಮಿಸಿ ಗುರುಗಳಿಗೆ ವಂದಿಸಿ ಏಕಾಗ್ರಚಿತ್ತದಿಂದ ಕಲಿತು ಕೊನೆಯಲ್ಲಿ ಮತ್ತೆ ವಂದಿಸುತ್ತಾರೆ. ಶ್ರದ್ಧೆ, ನಿಷ್ಠೆ ಇದ್ದರಷ್ಟೆ ಇಂತಹ ಕಲೆಯು ಸಿದ್ಧಿಸಲು ಸಾಧ್ಯ.
ಈ ಕಲೆಯನ್ನು ಕಲಿಯಲು ಯಾವುದೇ ವಿದ್ಯಾರ್ಹತೆ ಬೇಕಾಗಿಲ್ಲ. ಜಾತಿ, ವಯೋಮಾನದ ಬಂಧನವೂ ಇಲ್ಲ. ಯಾರು ಯಾವಾಗ ಬೇಕಾದರೂ ಆಸಕ್ತಿ, ಭಕ್ತಿ ಮತ್ತು ನಿಷ್ಠೆಯಿಂದ ಸೂಕ್ತ ಗುರುವಿನ ಮೂಲಕ ಕಲಿತರೆ ಈ ಕಲೆ ಕರಗತವಾಗುವುದರಲ್ಲಿ ಸಂದೇಹವಿಲ್ಲ. ಈ ಕಲೆಯನ್ನು ಕರಗತ ಮಾಡಿಕೊಳ್ಳಲು ಅನೇಕ ವಿಭಾಗಗಳಿದ್ದು ಅವುಗಳ ಬಗ್ಗೆ ತಿಳಿಯೋಣ.


ಹಿಮ್ಮೇಳ:
ಮುಖ್ಯವಾಗಿ ಹಿಮ್ಮೇಳದಲ್ಲಿ ಭಾಗವತಿಕೆ, ಚಂಡೆ, ಮದ್ದಳೆ, ಚಕ್ರತಾಳವಿದ್ದು ಇದನ್ನು ಶ್ರುತಿ ಮತ್ತು ತಾಳಗಳಿಗೆ ಅನುಸಾರವಾಗಿ ಅಭ್ಯಸಿಸತಕ್ಕದ್ದು. ಭಾಗವತರು ಇಡೀಯಕ್ಷಗಾನ ಕಾರ್ಯಕ್ರಮದ ಸೂತ್ರಧಾರರು. ಅಂದರೆ ಭಾಗವತರೇ ಅಂದಿನ ಕಥಾನಕದ ಪಾತ್ರಧಾರಿಗಳ ಅಯ್ಕೆ ಮತ್ತು ಪದ್ಯಗಳನ್ನು ಆರಿಸಿ ಹಾಡುವವರು.


ಭಾಗವತರಿಗೆ ಶಾಸ್ತ್ರೀಯ ಸಂಗೀತದ ಜ್ಞಾನವಿದ್ದರೆ ಮತ್ತಷ್ಟು ಅನುಕೂಲ. ಸುಶ್ರಾವ್ಯ ಕಂಠಸಿರಿ, ಶ್ರುತಿಲಯಗಳ ಜ್ಞಾನ, ಪ್ರಸಂಗ, ಕಥೆಗಳ ಜ್ಞಾನ, ಅರ್ಥಧಾರಿಗಳನ್ನು ಸಂಭಾಳಿಸಿಕೊಂಡು ಹೋಗುವ ಚಾಕಚಕ್ಯತೆಯೂ ಅಗತ್ಯವಾಗಿದೆ. ಉತ್ತಮ ಗುರುವಿನಿಂದ ಕಲಿತ ಭಾಗವತರು ಯಕ್ಷಗಾನದ ಪ್ರಧಾನ ಕಲಾವಿದರು. ಇವರ ಜೊತೆಯಲ್ಲಿ ಚಂಡೆ-ಮದ್ದಳೆ ವಾದಕರೂ ಸಹ ಬಹುಮುಖ್ಯ ಕಲಾವಿದರು. ಸಾಮಾನ್ಯವಾಗಿ ಉತ್ತಮ ಗುರುವಿನ ಮೂಲಕ ಕಲಿತ ಚಂಡೆ-ಮದ್ದಳೆ ವಾದಕರು ಎರಡರಲ್ಲಿಯೂ ನಿಷ್ಣಾತರಾಗಿರುತ್ತಾರೆ. ಕೆಲವೊಮ್ಮೆ ಒಂದೇ ಉಪಕರಣದಲ್ಲಿ ಪ್ರಾವೀಣ್ಯತೆಯನ್ನು ಪಡೆಯುತ್ತಾರೆ. ಚಂಡೆ-ಮದ್ದಳೆವಾದಕರಿಗೆ ಚಂಡೆ-ಮದ್ದಳೆಗಳನ್ನು ಸುಸ್ಥಿತಿಯಲ್ಲಿಡುವುದು ಶ್ರುತಿಗೆ ತಕ್ಕಂತೆ ಸಿದ್ಧಗೊಳಿಸುವುದು ಬಹಳ ಕಠಿಣದಾಯಕ. ಹಾಗಾಗಿ ಇದಕ್ಕೆ ಸೂಕ್ತ ಗುರು ಮತ್ತು ಶಿಷ್ಯನ ಸಾಮರ್ಥ್ಯವನ್ನು ಒರೆಗೆ ಹಚ್ಚಿ ಕಲಾ ಪಕ್ವತೆಯನ್ನು ಪಡೆಯುವುದು ಅಷ್ಟು ಸುಲಭ ಸಾಧ್ಯವಲ್ಲ.


ಅರ್ಥಗಾರಿಕೆ:
ಇದು ಯಕ್ಷಗಾನದ ಇನ್ನೊಂದು ಪ್ರಮುಖ ವಿಭಾಗ. ಇದಕ್ಕೆ ಪ್ರಸಂಗದ ಹಾಡುಗಳ ಅಧ್ಯಯನ, ಪುರಾಣ ಗ್ರಂಥಗಳ ಅವಲೋಕನ, ಓದುವ, ಗ್ರಹಿಸುವ ಮನೋಭಾವನೆ ಅತ್ಯವಶ್ಯವಾಗಿದೆ. ಯಕ್ಷಗಾನವು ಈ ಮೊದಲೇ ಹೇಳಿದಂತೆ ಒಂದುದೈವೀ ಕಲೆ; ಅರಾಧನಾ ಕಲೆ. ಹಾಗಾಗಿ ಆ ಬಗ್ಗೆ ಹೆಚ್ಚಿನ ಭಕ್ತಿ ಶ್ರದ್ಧೆ ನಿಷ್ಠೆ ಇದ್ದರಷ್ಟೇ ಅರ್ಥಗಾರಿಕೆಯನ್ನು ಕರಗತಗೊಳಿಸಬಹುದು. ಅರ್ಥಗಾರಿಕೆಯಲ್ಲಿ ಎದುರಾಳಿ ಕಲಾವಿದರನ್ನು ಸಂಭಾಳಿಸಿಕೊಂಡು ಕಥೆಗೆ ಪೂರಕವಾಗಿ ಮಾತನಾಡುತ್ತಾ ಸಭಿಕರನ್ನು ರಂಜಿಸುತ್ತಾ ಮಾತನಾಡುವ ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಅಂಥ ಮಾತುಗಾರಿಕೆ ಚಾಕಚಕ್ಯತೆ ಕೆಲವೇ ಕಲಾವಿದರಿಗಷ್ಟೇ ಸಿದ್ಧಿಸಲು ಸಾಧ್ಯ. ಹಿಂದಿನ ಕಾಲದಲ್ಲಿ ಕೇವಲ ಎರಡು ಮೂರನೇ ಕ್ಲಾಸು ಕಲಿತವರೂ ಕೆಲವೊಮ್ಮೆ ಶಾಲೆಗೆ ಹೋಗದೇ ಇರುವ ಕಲಾವಿದರು ವಾಗ್ಮಿಗಳಾಗಿರುವುದನ್ನು ಕಂಡಿದ್ದೇವೆ. ಇದಕ್ಕೆ ಕಾರಣ ಅವರ ಗುರುಗಳೋ ಸಹವರ್ತಿ ಕಲಾವಿದರೋ ಆಗಿರುತ್ತಾರೆ. ಮಾತ್ರವಲ್ಲದೆ ಸಂಸ್ಕೃತ -ಕನ್ನಡ ಇತರೆ ಭಾಷೆಗಳಲ್ಲಿರುವ ಗ್ರಂಥಗಳ ಓದು ಅಧ್ಯಯನದಿಂದಲೂ ಅರ್ಥಗಾರಿಕೆಯ ಕಲೆ ಸಿದ್ಧಿಸಲು ಸಾಧ್ಯ.


ಹೆಜ್ಜೆಗಾರಿಕೆ/ನೃತ್ಯ:
ಇದು ಯಕ್ಷಗಾನದ ಬಯಲಾಟ-ಟೆಂಟ್‍ ಆಟದ ಕಲಾವಿದರಿಗೆ ಮೀಸಲು. ಕಾರಣ ಹೆಜ್ಜೆಗಾರಿಕೆ-ನೃತ್ಯದಲ್ಲಿ ಸುಂದರವಾದ ಮುಖ ಸೌಂದರ್ಯ, ಅಂಗಸೌಷ್ಠವ ಅವಶ್ಯವಿದೆ. ಸಾಮಾನ್ಯವಾಗಿ ಯಕ್ಷಗಾನದಲ್ಲಿ ಬರುವ ಪಾತ್ರಧಾರಿಗಳಿಗೆ ನೃತ್ಯಾಭ್ಯಾಸದ ಜತೆಗೆ ಬಣ್ಣಗಾರಿಕೆ-ವೇಷಭೂಷಣದ ಬಗ್ಗೆಯೂ ಮಾಹಿತಿ ಬೇಕು. ಹೆಜ್ಜೆಗಾರಿಕೆ ನೃತ್ಯದಲ್ಲಿ ಪುಂಡುವೇಷ, ಸ್ತ್ರೀವೇಷ, ಬಣ್ಣದವೇಷ, ಹಾಸ್ಯವೇಷ ಹೀಗೆ ಒಂದೊಂದು ವೇಷಗಳಿಗೆ ತಕ್ಕಂತೆ ನೃತ್ಯವೂ ಸಹ ಬದಲಾಗಿದೆ. ಕೆಲವೊಮ್ಮೆ ಕಲಾವಿದನ ಆಸಕ್ತಿಗನುಗುಣವಾಗಿ ಪಾತ್ರಗಳ ಆಯ್ಕೆಗನುಗುಣವಾಗಿ ನೃತ್ಯಾಭ್ಯಾಸವನ್ನು ಮಾಡುತ್ತಾರೆ. ಕೆಲವು ಕಲಾವಿದರು ಎಲ್ಲ ವಿಭಾಗಗಳಲ್ಲಿಯೂ ಅಭಿನಯಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಸ್ತ್ರೀವೇಷ ಕಲಾವಿದರಿಗೆ ನೃತ್ಯದಲ್ಲಿ ಅಪರಿಮಿತವಾದ ಸಾಧನೆ ಬೇಕಾಗಿದೆ. ಅವರಿಗೆಗುರುವಿನ ಸೂಕ್ತ ಮಾರ್ಗದರ್ಶನ ಬೇಕೇಬೇಕು. ಬಣ್ಣದ ವೇಷವು ಬಣ್ಣಗಾರಿಕೆ ಮತ್ತು ವೇಷಭೂಷಣಗಳಿಂದಲೇ ರಂಗಸ್ಥಳದಲ್ಲಿ ಕಳೆಗಟ್ಟಬಹುದಾಗಿದೆ. ಅದೇ ರೀತಿ ಹಾಸ್ಯ ಪಾತ್ರದವರೂ ಅವರ ವಿಭಿನ್ನ ಹಾಸ್ಯ ಕುಣಿತದಿಂದ ಹಾವಭಾವದಿಂದ ಅವರ ಪಾತ್ರವನ್ನು ಆಕರ್ಷಣೀಯವಾಗಿಸಬಲ್ಲರು. ಆ ಮೂಲಕ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ಮುಳುಗಿಸಬಲ್ಲರು. (ಆಡುಮಾತಿನಲ್ಲಿ ಹೇಳುವುದಾದರೆ ರೈಸುವುದು) ಹೀಗೆ ಹೆಜ್ಜೆಗಾರಿಕೆ ರಂಗಸ್ಥಳದಲ್ಲಿ ಯಕ್ಷಗಾನ ಕಲಾವಿದರ ಪ್ರತಿಭೆಯನ್ನು ಅನಾವರಣಗೊಳಿಸುವ ಪ್ರಮುಖಅಂಶವಾಗಿದೆ.


ಯಕ್ಷಗಾನದ ಇನ್ನೊಂದು ವಿಭಾಗ ತಾಳಮದ್ದಳೆ:
ತಾಳಮದ್ದಳೆಯು ಸಂಭಾಷಣೆಯಿಂದಲೇ ಪ್ರೇಕ್ಷಕರನ್ನು ಹಿಡಿದಿಡುವ ಕಲೆ ಅರ್ಥಧಾರಿಗಳಿಗೆ ಬೇಕೇ ಬೇಕು. ಹಿರಿಯ ಅರ್ಥಧಾರಿಗಳು ಹೊಸ ಅರ್ಥಧಾರಿಗಳನ್ನು ಕಥೆಗೆ ಪೂರಕವಾಗಿ ವಾದವಿವಾದವನ್ನು ಮುನ್ನಡೆಸುತ್ತಾ ಭಾಗವತರ ಆಶಯಕ್ಕೆ ಸರಿಯಾಗಿ ಕೂಟವನ್ನು ರಂಜನೀಯವಾಗಿ ಮುಕ್ತಾಯಗೊಳಿಸಬೇಕು. ಕೆಲವೊಮ್ಮೆ ಹಿರಿಯ ಕಲಾವಿದರು ಎದುರಾಳಿಯನ್ನು ಮಣಿಸುವುದರಲ್ಲಿ ವಾದವಿವಾದವು ವಿಕೋಪಕ್ಕೆ ತಿರುಗಿ ಹೊಯ್ ಕೈ ಆಗಿರುವುದನ್ನೂ ಕಂಡಿದ್ದೇವೆ. ಇದು ಕಲಾಮಾತೆಗೆ ಎಸಗುವ ಅಪಚಾರವೆಂದೇ ಹೇಳಬಹುದು. ಕಲಾವಿದರು ಒಮ್ಮೆಗೆ ರೈಸಿದರೂ ಮುಂದೆ ಅವರ ಘನತೆ ಗೌರವಗಳು ಕುಸಿಯುವುದಂತೂ ಸತ್ಯ, ಕೆಲವು ದಶಕಗಳ ಹಿಂದಿನ ಕಲಾವಿದರು ಜಾಣ್ಮೆಯ ಮಾತುಗಳಿಂದ ವಿದ್ವತ್ತಿನಿಂದ ಇಡೀ ರಾತ್ರಿ ಬೆಳಗಿನ ಕಾರ್ಯಕ್ರಮವು ಎಲ್ಲಿಯೂ ಕಳಾಹೀನವಾಗದಂತೆ ಎಚ್ಚರಿಕೆಯಿಂದ ನಿಭಾಯಿಸುತ್ತಿದ್ದು ಕಲೆಗೆ ಸೂಕ್ತವಾದ ಮರ್ಯಾದೆಯನ್ನು ಸಲ್ಲಿಸುತ್ತಿದ್ದರು.


ನಮ್ಮ ಹಿಂದಿನ ತಲೆಮಾರಿನಲ್ಲಿ ಯಕ್ಷಗಾನವು ಒಂದು ಉತ್ತಮ ಮನೋರಂಜನಾ ಮಾಧ್ಯಮವಾಗಿತ್ತು. ರಾತ್ರಿ ಬೆಳಗಿನ ತನಕ ನಡೆಯುತ್ತಿದ್ದ ತಾಳಮದ್ದಳೆ-ಯಕ್ಷಗಾನ ಬಯಲಾಟಗಳು ಸಾವಿರಾರು ಪ್ರೇಕ್ಷಕರನ್ನು ಆಕರ್ಷಿಸುತ್ತಿದ್ದವು. ಇಂದು ವಿವಿಧದೃಶ್ಯ ಮಾಧ್ಯಮಗಳು, ಮೊಬೈಲು ವಾಟ್ಸಾಪ್‍ಗಳಿಂದ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವುದನ್ನು ಕಾಣುತ್ತೇವೆ. ಅದರಿಂದಾಗಿ ಕಾಲಮಿತಿ ಪ್ರದರ್ಶನಗಳು ಬಳಕೆಗೆ ಬಂದವು. ತಾಳಮದ್ದಳೆಗಳಂತೂ ಕೆಲವೇ ಘಂಟೆಗಳ ಮಿತಿಗೆ ಒಳಪಟ್ಟವು. ಇದರಿಂದಾಗಿ ಕಲಾವಿದರ ಕಲಾಭಿಜ್ಞತೆಗೆ ಅವಕಾಶಗಳು ಕಡಿಮೆಯಾದವು. ಸೀಮಿತ ಅವಧಿಯಲ್ಲಿ ಅವರ ಪ್ರತಿಭೆ ಅನಾವರಣ ಕುಂಠಿತಗೊಂಡಿತು.ಆ ಸಂದರ್ಭದಲ್ಲಿ ನಾ ಮೇಲು ತಾ ಮೇಲು ಭಾವನೆಗಳು ರೂಪುಗೊಳ್ಳಲು ಆರಂಭವಾದವೆಂದು ತೋರುತ್ತವೆ. ಕಲೆಯ ಬಗೆಗಿನ ಗೌರವ ಮಾನ್ಯತೆಗಳು ಇದರಿಂದಾಗಿ ಕುಸಿತವಾದವು. ಆದರೆ ಇದರ ಬಗ್ಗೆ ಕಿಂಚಿತ್ ಯೋಚಿಸಿದರೆ ಕಲಾಮಾತೆಗೆ ಸಲ್ಲುವ ಗೌರವ ಪೂಜ್ಯತೆ ಕಲಾವಿದರ ಗೌರವ ಘನತೆ ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ.


ಯಕ್ಷಗಾನದ ಎಲ್ಲ ವಿಭಾಗಗಳಿಗೂ ಶ್ರದ್ಧೆ ಪ್ರಾಮಾಣಿಕತೆಯಿಂದ ಉತ್ತಮ ಗುರುವಿನಿಂದ ಕಲಿತರೆ ಪ್ರಬುದ್ಧ ಕಲಾವಿದನಾಗುತ್ತಾನೆ ಎನ್ನಬಹುದು. ಇಂದು ಯಕ್ಷಗಾನ ಪಠ್ಯವೂ ಬಂದಿದೆ. ಯಕ್ಷಗಾನ ತರಗತಿಗಳು ಆರಂಭಗೊಂಡಿವೆ. ಯಕ್ಷಗಾನ ಕೇಂದ್ರಗಳು ಪೂರ್ಣಕಾಲಿಕ ತರಗತಿಗಳನ್ನು ನಡೆಸಿದ್ದು ನೋಂದಾಯಿತ ಸಂಸ್ಥೆಗಳಾಗಿವೆ. ಕೆಲವೆಡೆ ಬೇಸಿಗೆ ಶಿಬಿರಗಳೂ ನಡೆಯುತ್ತಿವೆ. ಬಾಲ್ಯದಿಂದಲೇ ಅಭ್ಯಾಸ ಮಾಡಿದರೆ ಪರಿಪೂರ್ಣ ಕಲಾವಿದರಾಗಬಹುದು. ಶಾಲೆ ಕಾಲೇಜುಗಳಲ್ಲಿ ವಾರ್ಷಿಕೋತ್ಷವ ಸಂದರ್ಭಗಳಲ್ಲಿ ಹಿರಿಯ ಕಲಾವಿದರಿಂದ ತರಬೇತಿ ಪಡೆದು ಪ್ರದರ್ಶನಗಳನ್ನು ನೀಡುತ್ತಿರುವುದನ್ನೂ ಕಾಣಬಹುದು. ಆದರೆ ಅದು ಅಲ್ಲಿಗೇ ಸೀಮಿತವಾಗದೆ ಪ್ರತಿಭಾವಂತ ಕಲಾವಿದರು ಮುಂದುವರಿದು ಉತ್ತಮ ಕಲಾವಿದರಾಗಿ ರೂಪುಗೊಳ್ಳಬೇಕಾಗಿದೆ.

ಈ ಹಿಂದೆಯೇ ಹೇಳಿದಂತೆ ಕಲೆಗೆ ಸರಿಯಾದ ಗೌರವ ಮಾನ್ಯತೆಗಳು ದೊರೆತು, ಗುರುಗಳಿಂದ ಕಲಿತ ವಿದ್ಯೆಯನ್ನು ಕೊನೆಯ ತನಕ ಉಳಿಸಿಕೊಂಡು ಮುಂದಿನ ತಲೆಮಾರುಗಳಿಗೆ ಹಸ್ತಾಂತರಿಸಿದರೆ,ಯಕ್ಷಗಾನಕ್ಕೆಅಂತಾರಾಷ್ಟ್ರೀಯ ಮಾನ್ಯತೆ ದೊರಕೀತು. ಇನ್ನಷ್ಟು ಹೊಸ ಕಲಾವಿದರು ರೂಪುಗೊಂಡು ಹಿಮ್ಮೇಳ ಮುಮ್ಮೇಳಗಳು ಪ್ರಭಾವಶಾಲಿಯಾಗಬೇಕಾದರೆ ಪಠ್ಯ ಪಠ್ಯೇತರ ಚಟುವಟಿಕೆಯೊಂದಿಗೆ ಉತ್ತಮ ಗುರು ಮಾರ್ಗದರ್ಶನ ಬೇಕೇ ಬೇಕು.
ಸಿರಿಗನ್ನಡಂ ಗೆಲ್ಗೆ ಯಕ್ಷಗಾನಂ ಬಾಳ್ಗೆ

ಶಂಕರ ಕುಳಮರ್ವ ವಿಟ್ಲ
(ಚರವಾಣಿ: 6362685049)

ಯಕ್ಷಬ್ರಹ್ಮ – ದಿ| ಅಗರಿ ಶ್ರೀನಿವಾಸ ಭಾಗವತರು (1906 – 1997)

ಭಾಗವತರ ಹಾಡನ್ನು ಅನುಸರಿಸಿ ಮುನ್ನಡೆಯುವುದು ಯಕ್ಷಗಾನದ ಉಳಿದ ಹಿಮ್ಮೇಳ ಮುಮ್ಮೇಳದ ಕಲಾವಿದರಿಗೆ ಕರ್ತವ್ಯ. ಭಾಗವತರು ಯಕ್ಷಗಾನದ ಒಂದನೇ ವೇಷಧಾರಿ. ಹಾಗಾಗಿ ತಂಡದಲ್ಲಿ ಅವರು ಪ್ರಬಲರಾಗಿರಬೇಕು. ಪ್ರದರ್ಶನದ ಗೆಲುವಿಗೂ ಸೋಲಿಗೂ ಹೊಣೆಗಾರರಾಗುತ್ತಾರೆ. ಭಾಗವತ ಎಂಬ ಸ್ಥಾನವು ಶ್ರೇಷ್ಠವಾದುದು. ಗೌರವಯುತವಾದುದು. ಹಾಗಾಗಿಯೇ ಕಲಾವಿದರು ರಂಗಪ್ರವೇಶ ಮಾಡುವಾಗ ಆ ಸ್ಥಾನಕ್ಕೆ ನಮಸ್ಕರಿಸುತ್ತಾರೆ. ಅಲ್ಲಿ ಅರ್ಹತೆಯನ್ನು ಹೊಂದಿಯೇ ಕುಳಿತರೆ ಚಂದ. ಸ್ಥಾನ ಮತ್ತು ಪ್ರದರ್ಶನಗಳ ಸೌಂದರ್ಯವು ಹೆಚ್ಚುವುದು.

ಹಲವು ಪದ್ಯಗಳನ್ನು ಹೇಳಿಯೋ, ನಾಲ್ಕಾರು ಪ್ರಸಂಗ ಆಡಿಸಿಯೋ ಭಾಗವತರು ಎನಿಸಿಕೊಳ್ಳಲಾರರು. ಪ್ರಸಂಗವನ್ನು ಮುನ್ನಡೆಸುವಲ್ಲಿ ನಿರ್ದೇಶನಾ ಸಾಮರ್ಥ್ಯ ಹೊಂದಿರಬೇಕು. ಪುರಾಣಜ್ಞಾನ, ಪ್ರಸಂಗಜ್ಞಾನ, ಪ್ರಸಂಗಗಳ ನಡೆಯ ಅರಿವು, ಅರ್ಥಜ್ಞಾನ, ಕಲಾವಿದನ ಸಾಮರ್ಥ್ಯವನ್ನು ಅರಿತು ನುಡಿಸುವ ಕಲೆಗಾರಿಕೆ ಮೊದಲಾದ ಗುಣಗಳು ಬೇಕು. ‘‘ಸ್ವರಮಾಧುರ್ಯವಿದ್ದರೆ ಸಾಲದು. ರಾಗ-ತಾಳ-ಲಯಜ್ಞಾನ, ನಾಟ್ಯಾನುಭವವನ್ನೂ ಹೊಂದಿರಬೇಕು. ನಟನ ಸಾಮರ್ಥ್ಯದ ಬಗ್ಗೆ ಅರಿವು ಇರಬೇಕು. ಪ್ರಸಂಗ ಪುಸ್ತಕದಲ್ಲಿ ಪದ್ಯಗಳು ತಪ್ಪಾಗಿದ್ದರೂ ಸರಿಮಾಡಿ ಹಾಡಲು ಗೊತ್ತಿರಬೇಕು. ಆತನು ರಂಗದ ನಿರ್ದೇಶಕ. ಕವಿತಾಶಕ್ತಿ ಇರಬೇಕು. ಅವರ ಹಾಡುಗಳು ನಟನಲ್ಲಿ ಭಾವೋತ್ಪತ್ತಿಗೆ ಕಾರಣವಾಗಬೇಕು. ನಿರ್ದೇಶನಾ ಸಾಮರ್ಥ್ಯವನ್ನು ಹೊಂದಿರಬೇಕು. ಈ ಗುಣಗಳನ್ನು ಹೊಂದಿರದವರು ಎಷ್ಟೇ ಸ್ವರವುಳ್ಳವ ರಾದರೂ ಪ್ರಯೋಜನವಿಲ್ಲ’’.

ಭಾಗವತರಲ್ಲಿರ ಬೇಕಾದ ಗುಣಗಳನ್ನು ಹಿರಿಯರು ಹೀಗೆ ಹೇಳಿದರು. ಹೀಗೆ ಹಾಡುಗಾರಿಕೆ ಯನ್ನು ತಪಸ್ಸೇ ಎಂದು ಸ್ವೀಕರಿಸಿ ಸತತ ಸಾಧನೆಯಿಂದ ಭಾಗವತರಾಗಿ, ಶ್ರೇಷ್ಠ ನಿರ್ದೇಶಕರಾಗಿ ಮೆರೆದವರನೇಕರಲ್ಲಿ ದಿ| ಅಗರಿ ಶ್ರೀನಿವಾಸ ಭಾಗವತರು ಪ್ರಮುಖ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರ ಭಾಗವತಿಕೆಗೆ ವೇಷ ಮಾಡುವ ಭಾಗ್ಯ ನನಗೆ ಒದಗಲಿಲ್ಲ. ಇಳಿವಯಸ್ಸಿನಲ್ಲಿ ಭಾಗವತರಾಗಿ ಪ್ರಸಂಗವನ್ನು ಮುನ್ನಡೆಸಿದ್ದನ್ನು ನಾನು ಚಿಕ್ಕ ಹುಡುಗನಾಗಿದ್ದಾಗ ನೋಡಿದ ನೆನಪು ಅಷ್ಟೆ. ಆದರೂ ಇಂದಿನ ಹಿರಿಯ ಕಲಾವಿದರೂ ಕಲಾಭಿಮಾನಿಗಳೂ ಅಗರಿಯವರ ಬಗೆಗೆ ಆಡುವ ಮಾತುಗಳಿಂದ ಅವರೊಂದು ಅಗಾಧ ಪ್ರತಿಭೆಯೆಂದು ತಿಳಿಯಲು ಸಾಧ್ಯ. ವೇಷಧಾರಿಯಾಗಿ, ಭಾಗವತರಾಗಿ, ಪ್ರಸಂಗಕರ್ತರಾಗಿ, ಆಶುಕವಿಯಾಗಿ ಅವರು ಪ್ರಸಿದ್ಧರು. ಹಾಗಾಗಿಯೇ ‘ಯಕ್ಷಬ್ರಹ್ಮ’ ಎಂದು ಖ್ಯಾತರಾದರು.


ಅಗರಿ ಶ್ರೀನಿವಾಸ ಭಾಗವತರು ಸುರತ್ಕಲ್ಲು ಸಮೀಪದ ಹೊಸಬೆಟ್ಟು ಎಂಬಲ್ಲಿ 1906ನೇ ಇಸವಿ ಮೇ 22ರಂದು ಇಡ್ಯ ತಿಮ್ಮಪ್ಪಯ್ಯ ಮತ್ತು ರಾಧಮ್ಮ ದಂಪತಿಗಳ ಪುತ್ರನಾಗಿ ಜನಿಸಿದರು. ಎಳವೆಯಲ್ಲೇ ತೀರ್ಥರೂಪರನ್ನು ಕಳೆದುಕೊಂಡ ಕಾರಣ ಅಜ್ಜನ ಮನೆಯ ಆಸರೆಯಲ್ಲಿ ಬೆಳೆಯಬೇಕಾಯಿತು. ಸುರತ್ಕಲ್ಲು ವಿದ್ಯಾದಾಯಿನೀ ಶಾಲೆಯಲ್ಲಿ ಏಳನೇ ತರಗತಿವರೇಗೆ ಓದು. ಆಗಲೇ ಅವರೊಳಗೆ ಕವಿಯೊಬ್ಬ ವಾಸವಾಗಿದ್ದ. ಸಣ್ಣ ಸಣ್ಣ ಕವನಗಳನ್ನು ರಚಿಸಿ ಹಾಡುತ್ತಿದ್ದರು. ಶಿಕ್ಷಕರಾದ ಶ್ರೀ ಸುಬ್ಬರಾವ್ ಅವರಿಂದ ‘‘ಪುಟ್ಟ ಕಬ್ಬಿಗ’’ ಎಂದು ಆಗಲೇ ಹೊಗಳಿಸಿಕೊಂಡಿದ್ದರು.

ಆಗ 1ನೇ ತರಗತಿಯಿಂದಲೇ ಸಂಸ್ಕೃತ ಕಲಿಯುವ ಪದ್ಧತಿ. ಓದಿದ್ದು 7ನೇ ತರಗತಿಯ ವರೇಗಾದರೂ ಸಂಸ್ಕೃತಜ್ಞಾನವನ್ನು ಗಳಿಸಿಕೊಂಡರು. ನಂತರ ಮಂಗಳೂರಿನಲ್ಲಿ ಸೋದರಮಾವನ ಜತೆಯಾಗಿ ಅಂಗಡಿಯೊಂದನ್ನು ತೆರೆದಿದ್ದರು. ಆಗ ನಾಟಕಾಸಕ್ತಿಯೂ ಬೆಳೆದಿತ್ತು. ಕವಿತಾಶಕ್ತಿಯು ರಕ್ತಗತವಾಗಿ ಬಂದುದರಿಂದ ಹಾಡುಗಾರಿಕೆಗೆ ಇದು ಅನುಕೂಲವೇ ಆಯಿತು. ಮಾವ ರಾಮರಾಯರು ಭಾಗವತರಾಗಿಯೂ, ಮದ್ದಳೆವಾದಕರಾಗಿಯೂ ಯಕ್ಷಗಾನದಲ್ಲಿ ಭಾಗವಹಿಸುತ್ತಿದ್ದರು. ಪಾವಂಜೆ ಲಕ್ಷ್ಮೀನಾರಾಯಣಪ್ಪಯ್ಯನವರು ಆ ಕಾಲದ ಶ್ರೇಷ್ಠ ಹರಿದಾಸರಾಗಿದ್ದರು. ಆಶುಕವಿಗಳೂ ಆಗಿದ್ದರು. ಅವರ ಹರಿಕಥೆಗಳನ್ನು ಕೇಳಲು ಅಗರಿಯವರು ಹೋಗುತ್ತಿದ್ದರು. ನಾರಾಯಣಪ್ಪಯ್ಯನವರ ಕವನ ರಚನಾ ಶಕ್ತಿಗೆ ಅಗರಿಯವರು ಮಾರು ಹೋಗಿದ್ದರು. ಇದು ಹಾಡುಗಾರರಾಗಲು ಅಗರಿಯವರಿಗೆ ಪ್ರೇರಣೆಯೂ ಆಯಿತು.

ಅಗರಿಯವರು ಮೊದಲು ತಿರುಗಾಟ ಮಾಡಿದ್ದು ನಾರಾವಿ ಮೇಳದಲ್ಲಿ. ಮುಂದೆ ಅಗರಿಯವರಿಗೆ ಬೆಳೆಯಲು ಕಲಾಮಾತೆಯು ಅವಕಾಶಗಳನ್ನು ಅನುಗ್ರಹಿಸಿದ್ದಳು. ನಾಟಕ ತಂಡವನ್ನು ರಚಿಸಿ ನಿರ್ದೇಶಕನಾಗಿ ನಟನಾಗಿ ಹಣ ಸಂಪಾದಿಸದಿದ್ದರೂ, ಅನುಭವ ಸಂಪತ್ತನ್ನು ಗಳಿಸಿದರು. ಸಮರ್ಥ ನಿರ್ದೇಶಕನಾಗಲು ಈ ಅನುಭವವು ವೇದಿಕೆಯಾಯಿತು. ಅಗರಿ ಶ್ರೀನಿವಾಸ ಭಾಗವತರು ಖ್ಯಾತ ಭಾಗವತ ಪುತ್ತಿಗೆ ರಾಮಕೃಷ್ಣ ಜೋಯಿಸರಿಂದ ಭಾಗವತಿಕೆ ಮತ್ತು ಕೂಡ್ಲು ಶಾನುಭಾಗರಿಂದ ಸಂಗೀತವನ್ನೂ ಕಲಿತರು. ಪ್ರತಿಭೆಯು ಬೆಳೆಯಲು ಇದೂ ಕಾರಣವಾಗಿತ್ತು. ಅನಿವಾರ್ಯ ಸಂದರ್ಭದಲ್ಲಿ ಕೀಚಕವಧೆ ಪ್ರಸಂಗವನ್ನು ಯಶಸ್ವಿಯಾಗಿ ಆಡಿಸಿ ಅಗರಿ ಶ್ರೀನಿವಾಸ ಭಾಗವತ ಎಂದು ಕರೆಸಿಕೊಂಡರು.

ಅಗರಿಯವರ ಅಣ್ಣ ಶಿವರಾಮ ರಾಯರೂ ಒಳ್ಳೆಯ ಹಾಡುಗಾರರಾಗಿದ್ದರು. ಮಂಗಳೂರಿನಿಂದ ಶ್ರೀ ಗುಣಪಾಲ ಶೆಟ್ಟರ ಆಶ್ರಯದಲ್ಲಿ ಅಗರಿ ಎಂಬಲ್ಲಿ ನೆಲೆಸಿದರು. (ಎಡಪದವು ಸಮೀಪದ ಊರು). ಅಗರಿಯಲ್ಲಿರುವಾಗಲೇ ಮೇಳದ ತಿರುಗಾಟವನ್ನು ಮಾಡಲು ಆರಂಭ. ಹಾಗಾಗಿಯೇ ಅಗರಿ ಎಂಬುದು ಇವರ ಹೆಸರಿನೊಂದಿಗೆ ಬೆಸೆದು ಶಾಶ್ವತವಾಯಿತು. ಅಲ್ಲಿರುವಾಗ ಅಗರಿಯವರು ಶಿಕ್ಷಕನಾಗಿಯೂ ಮಕ್ಕಳಿಗೆ ವಿದ್ಯಾದಾನ ಮಾಡಿದ್ದರು. ಕದ್ರಿ ಮೇಳದಲ್ಲಿರುವಾಗ ಮಂಗಳೂರಿನ ಕೊಡಿಯಾಲಗುತ್ತಿನ ಬಾಕಿಮಾರು ಗದ್ದೆಯಲ್ಲಿ ಇಪ್ಪತ್ತೆರಡು ದಿನಗಳ ಮಹಾಭಾರತ ಪ್ರಸಂಗಗಳ ಬಯಲಾಟ. ತನ್ನ ಕವಿತಾ ಶಕ್ತಿಯಿಂದ ಪದ್ಯಗಳನ್ನು ಸುಂದರವಾಗಿ ರಚಿಸಿ ಹಾಡಿ ಪ್ರದರ್ಶನಗಳನ್ನು ರಂಜಿಸುವಂತೆ ಮಾಡಿದರು. ಮುಂದಕ್ಕೆ ನಡೆದುದೆಲ್ಲಾ ಸಾಧನೆ, ಸಾಹಸವಾಗಿಯೇ ಕೊಂಡಾಡಲ್ಪಟ್ಟಿತು.

ಪ್ರಸಂಗ ರಚನೆಗೂ ಮುಂದಾದರು. ಅವರು ರಚಿಸಿದ ಒಟ್ಟು ಪ್ರಸಂಗಗಳು 26. ಅವುಗಳಲ್ಲಿ ಬ್ರಹ್ಮಕಪಾಲ, ದೇವೀಮಹಾತ್ಮ್ಯೆ, ಬಪ್ಪನಾಡು ಕ್ಷೇತ್ರ ಮಹಾತ್ಮ್ಯೆ, ವೆಂಕಟೇಶ್ವರ ಮಹಾತ್ಮ್ಯೆ, ತಿರುಪತಿ ಕ್ಷೇತ್ರ ಮಹಾತ್ಮ್ಯೆ, ಭಸ್ಮಾಸುರ ಮೋಹಿನಿ, ಮಹಾದೇವೀ ಲಲಿತೋಪಾಖ್ಯಾನ, ಸುಂದೋಪಸುಂದರ ಕಾಳಗ, ಅಂಧಕಾಸುರ ವಧೆ ಮೊದಲಾದವು ಅತ್ಯಧಿಕವಾಗಿ ಪ್ರದರ್ಶನಗೊಳ್ಳುತ್ತಿವೆ. ಧರ್ಮಸ್ಥಳ ಮೇಳದಲ್ಲಿದ್ದಾಗ ಶ್ರೀ ಮಂಜಯ್ಯ ಹೆಗ್ಡೆಯವರ ಸಲಹೆಯಂತೆ ಭರತೇಶ ವೈಭವ ಎಂಬ ಪ್ರಸಂಗವನ್ನೂ ಬರೆದರು. ಇವರು ಬರೆದ ಇನ್ನು ಕೆಲವು ಪ್ರಸಂಗಗಳ ಹಸ್ತಪ್ರತಿಗಳು ಲಭ್ಯವಾಗದೇ ಹೋಗಿತ್ತು. ತನ್ನಲ್ಲಿರುವ ಅಗಾಧವಾದ ಕವನ ರಚನಾ ಸಾಮರ್ಥ್ಯದಿಂದ ಪ್ರಸಂಗಗಳನ್ನು ರಚಿಸಿದರು.

ಅಗರಿಯವರ ಪ್ರಸಂಗಗಳ ಹಾಡುಗಳಲ್ಲಿರುವ ಸೌಂದರ್ಯವು ಅನುಪಮವಾದುದೆಂದು ವಿದ್ವಾಂಸರೂ ಕಲಾವಿದರೂ ಮೆಚ್ಚಿಕೊಂಡಿದ್ದಾರೆ. ಕದ್ರಿ, ಕೂಡ್ಲು, ಧರ್ಮಸ್ಥಳ, ಸುರತ್ಕಲ್ಲು ಮೊದಲಾದ ಮೇಳಗಳನ್ನು ಭಾಗವತರಾಗಿ ಮುನ್ನಡೆಸಿ, ಪ್ರಸಂಗಕರ್ತರಾಗಿಯೂ ಕಲಾಮಾತೆಯ ಸೇವೆಯನ್ನು ಮಾಡಿದರು. 1960ರಿಂದ ಮಂಗಳೂರಿನ ಬಲ್ಲಾಳರು ನೀಡಿದ ಕುಪ್ಪೆಪದವಿನ ಆರು ಎಕರೆ ಜಾಗದಲ್ಲಿ ವಾಸವಿದ್ದು ಕೃಷಿಕಾರ್ಯಗಳನ್ನೂ ಮಾಡಿದರು. ಕಟೀಲು ಶ್ರೀ ಭ್ರಮರಾಂಬೆಯ ಭಕ್ತರಾಗಿ ಅಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.

ಬಪ್ಪನಾಡು ಕ್ಷೇತ್ರ ಮಹಾತ್ಮ್ಯೆ ಪ್ರಸಂಗದಲ್ಲಿ, ಬೆಳಗಿನ ಹೊತ್ತು ಬಪ್ಪನೆಂಬೋರ್ವ ಮುಸಲ್ಮಾನ ವ್ಯಾಪಾರಿ ತಪ್ಪದೆ ಕುಲಧರ್ಮವ || ಒಪ್ಪುವ ಮೂಲಿಕಾ ಪುರವರದೊಳು ಮೆರೆದಿರ್ಪವೇಳ್ಯದಿ ಮುದದಿ || ಈ ಹಾಡಿಗೆ ಶೇಣಿಯವರು ಬಪ್ಪಬ್ಯಾರಿಯಾಗಿ ಪ್ರವೇಶ. ಬಪ್ಪಬ್ಯಾರಿ ಮತ್ತು ಭಾಗವತ ಅಗರಿಯವರ ಸಂಭಾಷಣೆಗಳು ಬೆಳಗಿನ ಹೊತ್ತಾದರೂ ಪ್ರೇಕ್ಷಕರನ್ನು ಹಿಡಿದಿಡುತ್ತಿತ್ತು. ಆ ಸನ್ನಿವೇಶದ ವೀಡಿಯೋ ತುಣುಕು ಈಗಲೂ ಇದೆ. ಅಲ್ಲದೆ ವಾಟ್ಸಾಪ್‍ಗಳಲ್ಲಿ ಹರಿದಾಡುತ್ತಿರುವಾಗ ಎಲ್ಲರೂ ನೋಡಿ ಆನಂದಿಸಿದ್ದಾರೆ. ಆಗ ವಿಟ್ಲ ಜೋಯಿಸರು ಉಸ್ಮಾನ್ ಬ್ಯಾರಿಯಾಗಿ ಅಭಿನಯಿಸಿದ್ದರು.

ಕಟೀಲು ಒಂದನೇ ಮೇಳದಲ್ಲಿ ನಾನು ತಿರುಗಾಟ ಆರಂಭ ಮಾಡಿದಾಗ (1998-99) ಖ್ಯಾತ ಸ್ತ್ರೀಪಾತ್ರಧಾರಿ, ರಾಜ್ಯ ಪ್ರಶಸ್ತಿ ವಿಜೇತ ಡಾ| ಕೋಳ್ಯೂರು ರಾಮಚಂದ್ರ ರಾಯರು ಅಗರಿಯವರ ಬಗೆಗೆ ಹೇಳುತ್ತಿದ್ದ ಗೌರವದ ನುಡಿಗಳು ಈಗಲೂ ನೆನಪಿದೆ. ಅಲ್ಲದೆ ಅಗರಿಯವರು ಕೋಳ್ಯೂರು ಅವರಿಗೆ ಹೀಗೆ ಉಪದೇಶಿಸಿದ್ದರಂತೆ- ‘‘ರಂಗದಲ್ಲಿ ಯಾವಾಗಲೂ ಉದಾಸೀನನಾಗಬೇಡ. ಪಾತ್ರಗೌರವಗಳನ್ನು ಮರೆತು ಮಾತನಾಡಬೇಡ. ಆಡುವ ಮಾತುಗಳನ್ನು ಭಾವಪೂರ್ಣವಾಗಿ ಆಡು. ಅವಿದ್ಯಾವಂತರ ಚಪ್ಪಾಳೆಗೆ ಮರುಳಾಗದೆ ವಿದ್ವಾಂಸನೊಬ್ಬನ ಮೆಚ್ಚುಗೆಗೆ ಪಾತ್ರನಾಗು.’’ ಕಲಿಕಾಸಕ್ತರಲ್ಲಿ ಅದೆಂತಹ ಪ್ರೀತಿ, ಕಾಳಜಿ ಅಗರಿಯವರಿಗೆ!

ಪದವೀಧರ ಯಕ್ಷಗಾನ ಸಮಿತಿ ಮುಂಬೈ, ಕನ್ನಡ ಸಾಹಿತ್ಯ ಪರಿಷತ್ ಮಹಾರಾಷ್ಟ್ರ ಈ ಸಂಸ್ಥೆಗಳು ಅಗರಿಯವರ ಪ್ರಸಂಗಗಳನ್ನು ಸಂಪುಟಗಳಾಗಿ ಪ್ರಕಟಿಸಿವೆ. 1972ರಲ್ಲಿ ಮಂಗಳೂರು ಪುರಭವನದಲ್ಲಿ ಸಾರ್ವಜನಿಕ ಸನ್ಮಾನ, ಕಟೀಲು ಭ್ರಾಮರೀ ಸಂಘದ ಸನ್ಮಾನ, 1988ರಲ್ಲಿ ಬೆಳ್ತಂಗಡಿಯಲ್ಲಿ ಕಲಾಪೋಷಕ ಶ್ರೀ ಕೆ. ವಿ. ಮುಚ್ಚಿನ್ನಾಯರಿಂದ ಸನ್ಮಾನ ಮತ್ತು ‘ಯಕ್ಷಬ್ರಹ್ಮ’ ಅಭಿನಂದನಾ ಗ್ರಂಥ ಸಮರ್ಪಣೆ ಹೀಗೆ ಅನೇಕ ಸಂಘ-ಸಂಸ್ಥೆಗಳು, ಸಂಘಟಕರು ಅಗರಿ ಭಾಗವತರನ್ನು ಗೌರವಿಸಿರುತ್ತಾರೆ. ಹಿರಿಯರೂ, ಅವರ ಸಮಕಾಲೀನ ಕಲಾವಿದರಿಂದಲೂ ಮೆಚ್ಚುಗೆಯನ್ನು ಪಡೆದರು.

‘ಯಕ್ಷಗಾನ ಆಟದಲ್ಲಿ ಭಾಗವತರೇ ಸೂತ್ರಧಾರಿಗಳು ಎಂಬ ವಾಸ್ತವಿಕ ಸತ್ಯವನ್ನು ನಾನು ಸಾಕ್ಷಾತ್ತಾಗಿ ಅನುಭವಿಸಿದ್ದು ಅಗರಿಯವರ ಭಾಗವತಿಕೆಯಲ್ಲಿ’ ಎಂದು ಮಲ್ಪೆ ಶಂಕರನಾರಾಯಣ ಸಾಮಗರೂ, ‘ಧನಕನಕಾದಿಗಳನ್ನು ಸಂಪಾದಿಸುವಷ್ಟು ಸುಲಭವಲ್ಲ ಜನಮನಗಳನ್ನು ಸಂಪಾದಿಸುವುದೆಂಬ ಅನುಭವವುಳ್ಳ ಅಗರಿಯವರ ಶ್ರೀಮಂತಿಕೆಗೆ ತಲೆಬಾಗದಿರದು’ ಎಂದು ಶೇಣಿ ಗೋಪಾಲಕೃಷ್ಣ ಭಟ್ಟರೂ, ‘ಅಗರಿಯವರು ಯಕ್ಷಗಾನದ ಸೀಮಾಪುರುಷರೆಂದು’ ಶಿಮಂತೂರು ನಾರಾಯಣ ಶೆಟ್ಟರೂ, ‘ಅಗರಿ ಅವರಂತೆ ಭಾವವನ್ನು ಪರಿಣಾಮಕಾರಿಯಾಗಿ ತಲುಪಿಸಿದ ಭಾಗವತರು ಇನ್ನೊಬ್ಬರಿಲ್ಲ’ ಎಂದು ಡಾ| ಕೆ. ಎಂ. ನಂಬಿಯಾರರೂ, ‘ಅವರ ದಾರಿಗೆ ಅವರೇ ಮೀಸಲು. ಅದನ್ನು ಯಾರಾದರೂ ಅನುಕರಿಸಲು ಮುಂದಾದರೆ ಅದು ಅವರಿಗೇ ಕೇಡು. ಏಕೆಂದರೆ ಅಗರಿ ಅಗರಿಯೆ! ಅವರಿಗೆ ನಮಸ್ಕರಿಸುವುದೇ ನಮ್ಮ ಭಾಗದ ಕಾಯಕ’ ಎಂದು ದಾಮೋದರ ಮಂಡೆಚ್ಚರೂ, ‘ಅಗರಿಯವರಂತಹ ಕಲಾವಿದರನ್ನು ಪಡೆದು ಯಕ್ಷಗಾನ ಮಾತೆ ಸತ್ಪುತ್ರವತಿಯಾದಳು’ ಎಂದು ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳೂ, ‘ಪ್ರಸಂಗ ಕಳೆಯೇರುವುದು ಭಾಗವತರಿಂದ ಎಂಬ ಮಾತು ಅಗರಿಯವರು ಇದ್ದಲ್ಲಿ ನೂರಕ್ಕೆ ನೂರು ಸತ್ಯ’ ಎಂದು ಅಳಿಕೆ ರಾಮಯ್ಯ ರೈಗಳೂ, ‘ತನ್ನ ಎಲ್ಲಾ ಭೌತಿಕ, ಬೌದ್ಧಿಕ ಸಾಧ್ಯತೆಗಳನ್ನು ಕೇವಲ ಯಕ್ಷಗಾನಕ್ಕೆ ದುಡಿಸಿಕೊಂಡ ಅಗರಿ ಆಚಾರ್ಯರಾಗಬೇಕಿತ್ತು. ಒಬ್ಬ ಅಗರಿಯವರಿಂದ ಶಿಷ್ಯತ್ವೇನ ನೂರಾರು ಗರಿಗಳು ಮೂಡಬೇಕಿತ್ತು’ ಎಂದು ಕೊರ್ಗಿ ವೆಂಕಟೇಶ ಉಪಾಧ್ಯಾಯರೂ ‘ಅಗರಿಯವರೊಂದಿಗೆ ಹಿಮ್ಮೇಳ ನುಡಿಸುತ್ತಿರುವಾಗ ಕೇಳಿಯೇ ಗಿರಿಜಾ ಕಲ್ಯಾಣ, ಬ್ರಹ್ಮಕಪಾಲ, ಶಕುಂತಲಾ ಪರಿಣಯ ಮೊದಲಾದ ಪ್ರಸಂಗಗಳು ನನಗೆ ಬಾಯಿಪಾಠವಾದವು. ಇನ್ನುಳಿದ ಯಾವ ಭಾಗವತರ ಒಡನಾಟದಲ್ಲೂ ಹೀಗಾಗಿಲ್ಲ’ ಎಂದು ನೆಡ್ಲೆ ನರಸಿಂಹ ಭಟ್ಟರೂ ‘ಅಗರಿ ಭಾಗವತರು ನನ್ನನ್ನು ಹಾಸ್ಯಪಾತ್ರಕ್ಕೆ ಬೇಕು ಬೇಕಾದಂತೆ ತಿದ್ದಿ ಪಳಗಿಸಿದರು’ ಎಂದು ರಸಿಕರತ್ನ ವಿಟ್ಲ ಜೋಯಿಸರೂ ‘ಅಗರಿಯವರ ಹಾಡುಗಾರಿಕೆ ಶ್ರಾವಕ ವರ್ಗಕ್ಕೊಂದು ಹಬ್ಬ. ಕೇಳುವಾಗ ಅಸ್ತಿತ್ವವನ್ನೇ ಮರೆತು ಭಾವಪರವಶರಾಗುತ್ತೇವೆ’ ಎಂದು ಕಡತೋಕಾ ಮಂಜುನಾಥ ಭಾಗವತರೂ ಅಗರಿಯವರ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಪ್ರಸಂಗ ರಚನೆಯಲ್ಲಿ ವಿದ್ವಾಂಸರಾದ ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳ ಸಲಹೆ ಸಹಕಾರಗಳಿದ್ದುದನ್ನು ಅಗರಿ ಶ್ರೀನಿವಾಸ ಭಾಗವತರು ನೆನಪಿಸುತ್ತಿದ್ದರು. ವನಿತೆ ಮತ್ತು ಕವಿತೆಗಳು ಒಲಿದು ಬರಬೇಕು ಎಂಬಂತೆ ಕವಿತಾ ರಚನೆಯಲಿ ತಾನಾಗಿ ಒಲಿದುದರಿಂದ ಅಗರಿಯವರು ಪ್ರಸಂಗಕರ್ತರಾಗಿಯೂ, ಭಾಗವತರಾಗಿಯೂ, ಮೆರೆದರು. ಕುರಿಯ ವಿಠಲ ಶಾಸ್ತ್ರಿಗಳಿಂದ ತೊಡಗಿ ಅಗರಿಯವರು ನಿವೃತ್ತ ರಾಗುವ ವರೇಗೆ ಅನೇಕ ಕಲಾವಿದರು ಅವರ ಗರಡಿಯಲ್ಲಿ ಕಲಾಸೇವೆಯನ್ನು ಮಾಡಿದರು. ಯಕ್ಷಗಾನ ಕ್ಷೇತ್ರದಿಂದ ನಿವೃತ್ತರಾದರೂ ಆತ್ಮೀಯರು ಕರೆದರೆ ಭಜನಾ ಕಾರ್ಯಕ್ರಮಗಳಿಗೆ ಹೋಗುತ್ತಿದ್ದರಂತೆ.

ಎಲ್ಲರೊಡನೆ ಬೆರೆಯುತ್ತಿದ್ದ ಅಗರಿಯವರು ಅಲಂಕಾರಪ್ರಿಯರಾಗಿಲ್ಲ. ಸರಳವಾಗಿ ಸಾಮಾನ್ಯರಂತೆ ಬದುಕಿದ್ದರು. ಆರೋಗ್ಯವಂತರಾಗಿ ಬದುಕಿನುದ್ದಕ್ಕೂ ಔಷಧೋಪಚಾರಗಳಿಂದ ಬಹಳ ದೂರ ಉಳಿದಿದ್ದರು. 1997ನೇ ಇಸವಿ, ತನ್ನ 91ನೆಯ ವಯಸ್ಸಿನಲ್ಲಿ ಅಗರಿಯವರು ಅಮರರಾದರು. ದಿ| ಅಗರಿ ಶ್ರೀನಿವಾಸ ಭಾಗವತರಿಗೆ ನಮನಗಳು. ದಿ| ಅಗರಿ ಶ್ರೀನಿವಾಸ ಭಾಗವತರ ಕುಟುಂಬದವರೆಲ್ಲಾ ಯಕ್ಷಗಾನ ನಂಟನ್ನು ಬಿಡದೆ ಉಳಿಸಿಕೊಂಡುದನ್ನೂ ನಾವು ಗಮನಿಸಬಹುದು. ಅವರ ಹಿರಿಪುತ್ರ ಇತ್ತೀಚೆಗೆ ಇಹಲೋಕವನ್ನು ತ್ಯಜಿಸಿದ ಅಗರಿ ರಘುರಾಮ ರಾಯರು ವಿದ್ಯಾವಂತರು. ಸರಕಾರೀ ಉದ್ಯೋಗದ ಜತೆ ಭಾಗವತಿಕೆಯನ್ನೂ ಮಾಡುತ್ತಿದ್ದರು. ಅಗರಿ ಶೈಲಿಯನ್ನು ಮುಂದುವರಿಸಿ ಅದರ ಕೀರ್ತಿಗೆ ಕಾರಣರಾದರು.

ತೀರ್ಥರೂಪರ ನಂತರ ಅನೇಕ ವರ್ಷಗಳ ಕಾಲ ಸುರತ್ಕಲ್ಲು ಮೇಳವನ್ನು ಮುನ್ನಡೆಸಿ ಸಮರ್ಥ ಭಾಗವತರೆಂದು ಖ್ಯಾತರಾದರು. ಬೇಡಿಕೆಯಲ್ಲಿರುವಾಗಲೇ ನಿವೃತ್ತರಾಗಿ ‘ಅಗರಿ ಎಂಟರ್‍ಪ್ರೈಸಸ್’ ಎಂಬ ಇಲೆಕ್ಟ್ರೋನಿಕ್ಸ್ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಆರಂಭಿಸಿ ಉದ್ಯಮಿಯಾಗಿ ಪ್ರಸಿದ್ಧರಾಗಿದ್ದರು. ಮಂಗಳೂರು, ಸುರತ್ಕಲ್ಲು, ಎಡಪದವು, ಮೂಡುಬಿದಿರೆ ಮೊದಲಾದೆಡೆ ಈ ಸಂಸ್ಥೆಯ ಕೇಂದ್ರಗಳು ಕಾರ್ಯಾಚರಿಸುತ್ತಿವೆ. ಭಾಗವತರಾದ ಶ್ರೀ ಪದ್ಯಾಣ ಗಣಪತಿ ಭಟ್ಟರು ಅಗರಿ ರಘುರಾಮ ಭಾಗವತರನ್ನು ಗುರುಗಳೆಂದು ಹೇಳಿ ಗೌರವಿಸುತ್ತಾರೆ. ಸುರತ್ಕಲ್ಲು ಮೇಳದಲ್ಲಿ ಒಡನಾಡಿಗಳಾಗಿ ಅನೇಕ ತಿರುಗಾಟ ಮಾಡಿದ್ದರು.

ಅಗರಿ ರಘುರಾಮ ಭಾಗವತರ ತಮ್ಮ ಅಗರಿ ಭಾಸ್ಕರರಾಯರು ಲೇಖಕನಾಗಿ ಪ್ರಸಂಗಕರ್ತರಾಗಿ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಬರೆದ ಪ್ರಸಂಗಗಳಲ್ಲಿ ಹತ್ತು ಪ್ರಸಂಗಗಳು ಇತ್ತೀಚೆಗೆ ‘ಯಕ್ಷಗಾನ ಪ್ರಸಂಗ ದಶಕ’ ಎಂಬ ಸಂಪುಟವಾಗಿ ಪ್ರಕಟಣೆಗೊಂಡಿದೆ. ಅಗರಿ ರಘುರಾಮ ಭಾಗವತರ ಪುತ್ರರಾದ ಅಗರಿ ರಾಘವೇಂದ್ರ ರಾವ್ ಮತ್ತು ಅಗರಿ ವಾದಿರಾಜ ರಾವ್ ಇಬ್ಬರೂ ಯಕ್ಷಗಾನಾಸಕ್ತರು. ‘ಅಗರಿ ಎಂಟರ್‍ಪ್ರೈಸಸ್’ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಕಲಾಚಟುವಟಿಕೆಗಳನ್ನು ಪ್ರೋತ್ಸಾಹಿಸಿ, ಸಹಕರಿಸಿ, ಭಾಗವಹಿಸುವ ಗುಣವನ್ನು ಹೊಂದಿದವರು. ಅಂಟಿದ ಯಕ್ಷಗಾನದ ನಂಟನ್ನು ನಿರಂತರ ವಾಗಿ ಮುಂದುವರಿಸುತ್ತಿರುವ ಕಲಾಪ್ರಿಯ ಅಗರಿ ಕುಟುಂಬಕ್ಕೆ ಶುಭಾಶಯಗಳು. ಕಲಾಮಾತೆಯ ಅನುಗ್ರಹವು ನಿರಂತರ ವಾಗಿರಲಿ. ು

ಲೇಖಕ: ರವಿಶಂಕರ್ ವಳಕ್ಕುಂಜ