ಕಲಾವಿದನಾಗಿ, ಸಂಘಟಕನಾಗಿ ಯಕ್ಷಗಾನದ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡು ಕೃಷಿ, ಶಿಕ್ಷಣ, ಸಹಕಾರ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಚಿರಪರಿಚಿತರಾದವರು ಕಜೆ ಈಶ್ವರ ಭಟ್ಟರು. ಅವರು 2019ರಲ್ಲಿ ತಮ್ಮ 89ರ ಹರೆಯದಲ್ಲಿ ನಮ್ಮನ್ನು ಅಗಲಿದ್ದಾರೆ. ಬೆಳ್ತಂಗಡಿ, ಪುತ್ತೂರು-ಉಪ್ಪಿನಂಗಡಿ ಪರಿಸರದ ಯಕ್ಷಗಾನ ಸಾಹಿತ್ಯ, ಸಹಕಾರಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟನೆಗಳಲ್ಲಿ ಕಜೆ ಈಶ್ವರ ಭಟ್ಟರು ಸಕ್ರಿಯರಾಗಿದ್ದವರು. ಸದಾ ಶ್ವೇತವಸ್ತ್ರ ಧಾರಿಯಾಗಿ ಹಸನ್ಮುಖಿಯಾಗಿ ಜನರ ಮಧ್ಯೆ ಬೆರೆಯುವ ಭಟ್ಟರು ತಾಲೂಕು, ಜಿಲ್ಲಾಮಟ್ಟದ ಸಂಘಗಳಲ್ಲಿ-ಸಂಸ್ಥೆಗಳಲ್ಲಿ ನಿರ್ದೇಶಕ, ಉಪಾಧ್ಯಕ್ಷ ಹಾಗೂ ಅಧ್ಯಕ್ಷರಾಗಿ ದುಡಿದಿದ್ದಾರೆ.
ಉಪ್ಪಿನಂಗಡಿ ಸಿ.ಎ. ಬ್ಯಾಂಕಿನ ಅಧ್ಯಕ್ಷರಾಗಿ 10 ವರ್ಷ, ಪುತ್ತೂರು ಜೇನು ಸಹಕಾರಿ ಸಂಘದ ಅಧ್ಯಕ್ಷ, ಮಂಗಳೂರು ಜನತಾ ಬಜಾರ್‍ನ ಉಪಾಧ್ಯಕ್ಷ, ಸ್ಕ್ಯಾಡ್ಸ್ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಭಟ್ಟರು ಉಪ್ಪಿನಂಗಡಿ ಸರಕಾರಿ ಪದವಿಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜುಗಳ ಅಭಿವೃದ್ಧಿ ಸಮಿತಿಯ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಉಪ್ಪಿನಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಭಟ್ಟರ ಸಾಧನೆಯು ಗಣನೀಯವಾದದ್ದು. ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಳದ ಮೊಕ್ತೇಸರ, ಶ್ರೀ ಕಾಳಿಕಾಂಬಾ ಯಕ್ಷಗಾನ ಸಂಘದ ರಜತೋತ್ಸವ ಮತ್ತು ಸಾರ್ವಜನಿಕ ಗಣೇಶೋತ್ಸವದ ರಜತ ವರ್ಷದ ಸಮಿತಿಯ ಗೌರವ ಅಧ್ಯಕ್ಷರಾಗಿ ಪರಿಸರದ ಸಾಮಾಜಿಕ ಸಂಘಟನೆಯಲ್ಲಿಯೂ ಸಕ್ರಿಯರು. ತನ್ನ ಸಂಘಟನಾ ಸಾಮರ್ಥ್ಯದಿಂದ ಬೆಂಗಳೂರಿನ ಅಖಿಲ ಭಾರತ ಹವ್ಯಕ ಮಹಾಸಭಾದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಕಜೆ ಗೋವಿಂದ ಭಟ್ಟ-ಸರಸ್ವತಿ ಅಮ್ಮ ದಂಪತಿಯ ಪುತ್ರನಾಗಿ 30.11.1930ರಲ್ಲಿ ಜನಿಸಿದ ಈಶ್ವರ ಭಟ್ಟರು ಪುತ್ತೂರು ಬೋರ್ಡ್ ಹೈಸ್ಕೂಲಿನಲ್ಲಿ ಮೆಟ್ರಿಕ್ ವಿದ್ಯಾಭ್ಯಾಸವನ್ನು ಪಡೆದಿದ್ದಾರೆ. ಖ್ಯಾತ ಅರ್ಥಧಾರಿ ದೇರಾಜೆ ಸೀತಾರಾಮಯ್ಯರ ಸಂಪರ್ಕದಿಂದ ಯಕ್ಷಗಾನ ತಾಳಮದ್ದಳೆ ಕ್ಷೇತ್ರವನ್ನು ಪ್ರವೇಶಿಸಿದ ಇವರು ಕೆದಿಲದ ಯಕ್ಷಗಾನ ಕಲಾವರ್ಧಿನಿ ಸಭಾದ ಪ್ರಧಾನ ಕಾರ್ಯದರ್ಶಿಯಾಗಿ ತಾಳಮದ್ದಳೆಯ ಅರ್ಥಧಾರಿಯಾಗಿ ಸಂಘವನ್ನು ಮುನ್ನಡೆಸಿದ್ದಾರೆ.
ಪೊಳಲಿ ಶಂಕರನಾರಾಯಣ ಶಾಸ್ತ್ರಿ, ಶೇಣಿ, ದೊಡ್ಡ ಸಾಮಗ, ದೇರಾಜೆ, ಮೂಡಂಬೈಲು, ಉಡುವೆಕೋಡಿ ಸುಬ್ಬಪ್ಪಯ್ಯರಂತಹ ಕಲಾವಿದರಿಂದ ನಿರಂತರ ತಾಳಮದ್ದಳೆಗಳ ಸಂಘಟನೆ. ವಿಧಾನ ಪರಿಷತ್ತು ಸದಸ್ಯರಾಗಿದ್ದ ಖ್ಯಾತ ವಕೀಲ ಕುಬಣೂರು ಬಾಲಕೃಷ್ಣ ರಾವ್ ನೇತೃತ್ವದಲ್ಲಿ ಮಂಡೆಚ್ಚ, ಶೇಣಿ, ದೇರಾಜೆ, ಪೆರ್ಲ, ಮಹಾಬಲ ನೋಂಡ, ಈಶ್ವರಪ್ಪಯ್ಯ ಮೊದಲಾದ ಕಲಾವಿದರೊಂದಿಗೆ ತಮಿಳುನಾಡಿನ ಮಧುರೈ, ಕಂಚಿಕಾಮಕೋಟಿಪೀಠ, ಬೆಂಗಳೂರಿನ ವಿಧಾನ ಸೌಧದ ಬಾಂಕ್ವೆಟ್ ಹಾಲ್‍ನಲ್ಲಿ ಜರಗಿದ ಅಪೂರ್ವ ತಾಳಮದ್ದಳೆಗಳಲ್ಲಿ ಕಜೆ ಈಶ್ವರ ಭಟ್ಟರು ಭಾಗಿಯಾಗಿದ್ದಾರೆ. ಧರ್ಮರಾಯ, ವಿದುರ, ತಾರೆ, ಹನುಮಂತ ಮುಂತಾದ ಪಾತ್ರಗಳ ನಿರ್ವಹಣೆಯಲ್ಲಿ ಭಟ್ಟರು ಸಿದ್ಧಹಸ್ತರಾಗಿದ್ದರು.
ಉಪ್ಪಿನಂಗಡಿಯ ಶ್ರೀ ಕಾಳಿಕಾಂಬಾ ಯಕ್ಷಗಾನ ಸಂಘದ ವಾರ್ಷಿಕೋತ್ಸವ, ರಜತ ಮಹೋತ್ಸವ ಸಮಾರಂಭಗಳಲ್ಲಿ ಶೇಣಿ, ರಾಮದಾಸ ಸಾಮಗ, ಪೆರ್ಲ, ಜೋಷಿ, ತೆಕ್ಕಟ್ಟೆ, ಕುಂಬ್ಳೆ ಸುಂದರ ರಾವ್, ಮೂಡಂಬೈಲು, ಪದ್ಯಾಣ, ಪುತ್ತಿಗೆ, ಅಮ್ಮಣ್ಣಾಯ, ಚಿಪ್ಪಾರು, ಕಡಬ ಮೊದಲಾದವರನ್ನು ಒಗ್ಗೂಡಿಸಿ ಉತ್ತಮ ತಾಳಮದ್ದಳೆಗಳನ್ನು ಸಂಘಟಿಸಿದ್ದಾರೆ.
ಉಪ್ಪಿನಂಗಡಿಯಲ್ಲಿ ಜರಗಿದ ಪುತ್ತೂರು ತಾಲೂಕಿನ 2ನೇ ಸಾಹಿತ್ಯ ಸಮ್ಮೇಳನದ ನೆನಪಿನಲ್ಲಿ “ಕನ್ನಡ ಸಂಗಮ”ವನ್ನು ಸ್ಥಾಪಿಸಿ ಪ್ರತಿ ವರ್ಷವು ಪ್ರಸಿದ್ಧ ಸಾಹಿತಿಗಳನ್ನು ಆಹ್ವಾನಿಸಿ ಸಾಹಿತ್ಯದ ಕಂಪನ್ನು ಹರಡಿದ್ದಾರೆ. ಇಳಂತಿಲದ ಅಂಡೆತಡ್ಕದಲ್ಲಿ ಜರಗಿದ ಬೆಳ್ತಂಗಡಿ ತಾಲೂಕು ಸಾಹಿತ್ಯ ಸಮ್ಮೇಳನದ ಸ್ಮರಣೆಗಾಗಿ ಕನ್ನಡ ಬಳಗವನ್ನು ಸ್ಥಾಪಿಸಿ ಗ್ರಾಮೀಣ ಪರಿಸರದಲ್ಲಿ ಶಾಲಾ ಮಕ್ಕಳಿಗಾಗಿ ಸಾಹಿತ್ಯ ಕಾರ್ಯಕ್ರಮಗಳನ್ನು ವಾರ್ಷಿಕವಾಗಿ ನಡೆಸುವಲ್ಲಿ ಪ್ರೇರಕರಾಗಿದ್ದಾರೆ.
ಕೈಬರಹದ ಸಾಹಿತ್ಯ ಪುರವಣಿಯನ್ನು ಬಹಳ ವರ್ಷಗಳ ಹಿಂದೆ ಪ್ರಕಟಿಸುವ ಮೂಲಕ ತನ್ನ ಸಾಹಿತ್ಯ ಪ್ರೀತಿಯನ್ನು ವ್ಯಕ್ತಪಡಿಸಿದ ಭಟ್ಟರು ಹಲವು ಸ್ಮರಣ ಸಂಚಿಕೆ, ಅಭಿನಂದನಾ ಗ್ರಂಥಗಳಲ್ಲಿ ಮೌಲಿಕ ಲೇಖನಗಳನ್ನು ಬರೆದಿದ್ದಾರೆ. ತನ್ನ ಹುಟ್ಟೂರು ಕಜೆಯನ್ನು ಬಿಟ್ಟು ಉಪ್ಪಿನಂಗಡಿ ನೇತ್ರಾವತಿ ನದಿ ತೀರದ ಎತ್ತರದ “ಕೇದಾರ”ದಲ್ಲಿ ವಾಸ್ತವ್ಯವಿದ್ದ ಈಶ್ವರ ಭಟ್ಟರು ಆದರ್ಶ ಕೃಷಿಕರಾಗಿಯೂ ಗಮನ ಸೆಳೆದಿದ್ದಾರೆ. ಹೈನುಗಾರಿಕೆ, ಅಡಿಕೆ, ಬಾಳೆ, ರಬ್ಬರ್, ವಿವಿಧ ಹೂವು ಹಣ್ಣುಗಳ ಕೃಷಿಯ ಮೂಲಕ ಸಾಧನೆ ಮಾಡಿದ್ದಾರೆ. ಇವರ ಕೃಷಿ ಕ್ಷೇತ್ರಕ್ಕೆ ವಿದ್ಯಾರ್ಥಿಗಳು, ರೈತರು ಭೇಟಿ ನೀಡಿ ಪ್ರಾತ್ಯಕ್ಷಿಕೆಯನ್ನು ಪಡೆದಿದ್ದಾರೆ.
ಪ್ರತಿ ವರ್ಷ ಡಿಸೆಂಬರ್ ಪ್ರಥಮ ಶನಿವಾರ ಕೇದಾರದಲ್ಲಿ ನಡೆಯುತ್ತಿದ್ದ ಸಾಯಿ ಭಜನೆ ಸರ್ವಧರ್ಮೀಯರು ಪಾಲ್ಗೊಳ್ಳುವಂತಹ ಒಂದು ಅಪೂರ್ವ ಕಾರ್ಯಕ್ರಮವಾಗಿತ್ತು. ಯಾವುದೇ ಕಾರ್ಯಕ್ರಮವಿರಲಿ ರುಚಿ-ಶುಚಿಯಾದ ಆತಿಥ್ಯಕ್ಕೆ ಕಜೆಯವರ ಮನೆ ಮಾದರಿ. ಮಡದಿ ಶ್ರೀಮತಿ ಇಂದಿರಾ ಪುತ್ರರಾದ ಡಾ| ಗೋವಿಂದ ಪ್ರಸಾದ್, ವಕೀಲ ಮಹೇಶ, ಮಗಳು ವೀಣಾ ಶಾಸ್ತ್ರಿ ಮತ್ತು ಅಪಾರ ಬಂಧು ಮತ್ತು ಸ್ನೇಹಿತರ ವಲಯದಲ್ಲಿ 89 ವರ್ಷಗಳ ಸಾರ್ಥಕ ಬದುಕು ಈಶ್ವರ ಭಟ್ಟರದು. ವಿವಿಧ ಆಯಾಮಗಳಲ್ಲಿ ಕ್ರಿಯಾಶೀಲರಾಗಿದ್ದ ಈಶ್ವರ ಭಟ್ಟರಿಗೆ ಹಲವಾರು ಸನ್ಮಾನ ಪುರಸ್ಕಾರಗಳು ಸಂದಿವೆ. 2017ರಲ್ಲಿ ಉಪ್ಪಿನಂಗಡಿಯಲ್ಲಿ ಶ್ರೀ ಕಾಳಿಕಾಂಬ ಯಕ್ಷಗಾನ ಸೇವಾ ಸಂಘ ಆಯೋಜಿಸಿದ ಶೇಣಿ ಶತಮಾನೋತ್ಸವ ಸಂಸ್ಮರಣೆಯ ಕಾರ್ಯಕ್ರಮದಲ್ಲಿ ಶೇಣಿ ಗೋಪಾಲ ಕೃಷ್ಣ ಚಾರಿಟೇಬಲ್ ಟ್ರಸ್ಟ್ “ಶೇಣಿ ಶತಮಾನೋತ್ಸವ ಪ್ರಶಸ್ತಿ”ಯನ್ನು ನೀಡಿ ಗೌರವಿಸಿದ್ದು ಇವರಿಗೆ ಸಂತಸವನ್ನು ನೀಡಿತ್ತು.ು
ಯಜ್ಞ ಎನ್ನುವುದು ತ್ಯಾಗಭೂಯಿಷ್ಟವಾದ ಒಂದು ಶ್ರೇಷ್ಠಕರ್ಮ. ಕಳೆದ ಅರುವತ್ತು ವರ್ಷಗಳಿಂದ ಇಂತಹ ಮಹಾನ್ ಕಾರ್ಯದಲ್ಲಿ ತೊಡಗಿಸಿಕೊಂಡು, ಕಟೀಲುತಾಯಿಗೆ ಸರ್ವ ಸಮರ್ಪಣಾ ಭಾವದಿಂದ ಯಕ್ಷಸೇವೆಯನ್ನು ನೀಡುತ್ತಾ ಬರುತ್ತಿರುವ ತ್ಯಾಗಿ ಮನೆತನ ದೆಪ್ಪುಣಿಗುತ್ತಿನ ಮನೆತನ. ಸೇವಾ ವರುಷಗಳ ಸಂಖ್ಯೆ ಅರುವತ್ತಾದರೂ ಸೇವೆಯ ಸಂಖ್ಯೆ ಶತಕವನ್ನು ದಾಟುತ್ತದೆ. ಈ ಸೇವೆಯ ಹಿಂದೆ ಅಹಂಕಾರ ಇಲ್ಲ, ಬಿಗುಮಾನ ಇಲ್ಲ. ಇರುವುದು ಕೇವಲ ಬಾಗುವಿಕೆ ಮಾತ್ರ. ಇದುವೇ ಈ ನಿರಂತರತೆಯ ಗುಟ್ಟು.
ಒಂದು ಕಾಲದಲ್ಲಿ ಕಲೆ ಸಾಹಿತ್ಯಗಳೆಲ್ಲ ರಾಜಾಶ್ರಯಕ್ಕೆ ಒಳಪಟ್ಟಿದ್ದವು. ಇಂದಿನ ಪ್ರಜಾಪ್ರಭುತ್ವದ ದಿನಗಳಲ್ಲಿ ಯಕ್ಷಗಾನದಂತಹ ಕಲೆಗಳಿಗೆ ಮಹಾಪೋಷಣೆ ದೊರಕುತ್ತಿರುವುದು ದೆಪ್ಪುಣಿ, ಕಲ್ಲಾಡಿಯಂತಹ ಮನೆತನಗಳಿಂದ. ಇಲ್ಲದೇ ಇದ್ದಲ್ಲಿ ರಾಜಮನೆತನಗಳು ಮರೆಯಾದ ಹಾಗೆ ಸಹಸ್ರಾರು ಕಲೆಗಳೂ ವಿನಾಶವಾಗಿ ಹೋಗುತ್ತಿದ್ದವೋ ಏನೋ. ಅವಿನಾಶಿಯಾದ ಈ ಕಲೆಗಳಿಗೆ ವರ್ತಮಾನ ಕಾಲದಲ್ಲಿ ಆಶ್ರಯ ತಾಣವಾಗಿ ದೇವರು ಆಯ್ದುಕೊಂಡದ್ದು ದೆಪ್ಪುಣಿಯಂತಹ ನೂರಾರು ಮನೆತನಗಳನ್ನು. ಸಂದ ಅರುವತ್ತು ವರುಷಗಳ ಮಹಾಯಜ್ಞದಲ್ಲಿ ಕರ್ತೃಗಳಾಗಿ ಸಾರ್ಥಕ್ಯತೆಯನ್ನು ಪಡಕೊಂಡ ತಲೆಗಳು ಅನೇಕ. ದೆಪ್ಪುಣಿಗುತ್ತು ಮತ್ತು ಕಟೀಲು ಮೇಳಗಳ ಅವಿನಾಭಾವ ಸಂಬಂಧ ಕೇವಲ ಅರುವತ್ತಕ್ಕೆ ಸೀಮಿತವಾಗುವುದಿಲ್ಲ, ಬದಲಾಗಿ 120 ವರ್ಷಗಳ ಇತಿಹಾಸಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ.
ಕೊಡೆತ್ತೂರುಗುತ್ತು ದಿ. ರಾಮಣ್ಣ ಶೆಟ್ರು 1880ರಿಂದ 1920ರ ತನಕ ಕಟೀಲು ದೇವಳದ ಮೊದಲ ಆಡಳಿತ ಮೊಕ್ತೇಸರರು. ಅವರು ದೆಪ್ಪುಣಿಗುತ್ತು ದೇವಕಿ ಶೆಟ್ಟಿಯವರನ್ನು ವಿವಾಹವಾಗಿ ದೆಪ್ಪುಣಿಗೇ ಸ್ಥಳಾಂತರಗೊಂಡರು. ಅಲ್ಲಿಯೇ ಕೊಡೆತ್ತೂರುಗುತ್ತಿನ ಮನೆಯನ್ನೇ ಹೋಲುವ ಗೃಹ ನಿರ್ಮಾಣ ಮಾಡಿದರು. ಯಕ್ಷಗಾನ ಕಲೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ರಾಮಣ್ಣ ಶೆಟ್ಟರು ತನ್ನ ಮನೆಯಲ್ಲಿ ಕಟೀಲು ಮೇಳದ ಸೇವೆಯನ್ನು ಆರಂಭಿಸಿದ್ದು ಮಾತ್ರವಲ್ಲದೆ, ಅದರ ಅಭಿವೃದ್ಧಿಗೂ, ಸ್ಥಿರತೆಗೂ ಕಾರಣೀಕರ್ತರೆನಿಸಿದರು. ಅವರೇ ಸ್ವತಃ ಮದ್ದಳೆವಾದಕರೂ ಆಗಿದ್ದರು. ಅವರ ಕಾಲದಲ್ಲಿ ಗುತ್ತಿನ ಮನೆಯಲ್ಲಿ 1 ತಿಂಗಳ ಪರ್ಯಂತ ಕಟೀಲು ಮೇಳದ ಆಟ ನಡೆಯುತ್ತಿತ್ತು. ರಾಮಾಯಣ, ಮಹಾಭಾರತಗಳು ಪ್ರದರ್ಶನಗೊಳ್ಳುತ್ತಿದ್ದವು.
ಆ ಕಾಲದಲ್ಲಿ ಮೇಳಕ್ಕೆ ಆಟಗಳೇ ಸಿಗದ ಕಾಲ. ಈ ದೃಷ್ಟಿಯಿಂದ ದೆಪ್ಪುಣಿಗುತ್ತಿನ ಕೊಡುಗೆ ಮರೆಯಲಾರದ್ದು, ಮರೆಯಬಾರದ್ದು. ಅದು ಕಲ್ಲಾಡಿ ಕೊರಗ ಶೆಟ್ರ ಕಾಲ. ಕಲ್ಲಾಡಿ ಮನೆತನಕ್ಕೂ, ದೆಪ್ಪುಣಿ ಮನೆತನಕ್ಕೂ ಸುಮಾರು ಮೂರು ತಲೆಮಾರಿನ ದೀರ್ಘವಾದ ನಂಟಿದೆ. ಹಾಗೇ ದೆಪ್ಪುಣಿ ಮನೆತನಕ್ಕೂ, ಆಸ್ರಣ್ಣ ಬಂಧುಗಳಿಗೂ ಇವರ ಕಾಲದಿಂದಲೇ ಬಾಂಧವ್ಯ ಬೆಳೆದುಕೊಂಡು ಬಂದಿದೆ. ವಿಶೇಷ ವ್ಯಕ್ತಿತ್ವದ ರಾಮಣ್ಣ-ದೇವಕಿ ಶೆಟ್ಟಿ ದಂಪತಿಗಳು ಇಂತಹ ಪರಂಪರೆಯನ್ನು ಹುಟ್ಟುಹಾಕಿ ಕೀರ್ತಿಶೇಷರಾದರು. ಈ ದಂಪತಿಗಳಿಗೆ ಮೂರು ಮಂದಿ ಮಕ್ಕಳು, ಚಂದ್ರಹಾಸ ಶೆಟ್ಟಿ, ಸದಾಶಿವ ಶೆಟ್ಟಿ, ಪದ್ಮನಾಭ ಶೆಟ್ಟಿ.
ರಾಮಣ್ಣ ಶೆಟ್ರ ಕಾಲಾ ನಂತರ ಅವರ ಭಾವ ದೆಪ್ಪುಣಿಗುತ್ತು ಕೋಚಣ್ಣ ಶೆಟ್ರು ಗುತ್ತಿನ ಮನೆಯಲ್ಲೇ ಈ ಸೇವೆಯನ್ನು ಮುಂದುವರಿಸಿಕೊಂಡು ಬಂದರು. ನಂತರ ಈ ಯಕ್ಷಸೇವೆಯನ್ನು ಮುಂದುವರೆಸಿಕೊಂಡು ಬಂದವರು ದೆಪ್ಪುಣಿಗುತ್ತು ಚಂದ್ರಹಾಸ ಶೆಟ್ಟರು. ಅವರು ದಿ. ಕಲ್ಲಾಡಿ ಕೊರಗ ಶೆಟ್ರು ಮತ್ತು ದಿ. ಗೋಪಾಲಕೃಷ್ಣ ಅಸ್ರಣ್ಣರು ಬಹಳ ಆತ್ಮೀಯರು. ಅವರು ಕಾವೂರು ದೇವಸ್ಥಾನದ ಎದುರಿನ ಗೋಪುರ ನಿರ್ಮಾಣ ಮಾಡಿಕೊಟ್ಟವರು. ಕಟೀಲು ಬ್ರಹ್ಮಕಲಶದ ನೇತೃತ್ವ ವಹಿಸಿದವರು. ಹಾಗೇ ದೇವಕಿ ಶೆಟ್ಟಿಯವರ ಬಗ್ಗೆ ಅಸ್ರಣ್ಣರಿಗೂ ಮಾತೃವತ್ ಪ್ರೇಮ. ಇಂದಿನ ಲಕ್ಷ್ಮೀನಾರಾಯಣ ಅಸ್ರಣ್ಣರನ್ನು ಎತ್ತಿ ಆಡಿಸಿದ ಪುಣ್ಯ ಕೈ ದೇವಕಿ ಶೆಟ್ಟಿಯವರದ್ದು. ಅವರ ನೇತೃತ್ವದಲ್ಲಿ ವರ್ಷದಲ್ಲಿ ಎರಡು ಆಟಗಳು ಪ್ರದರ್ಶನಗೊಳ್ಳುತ್ತಿದ್ದವು. ಅದರಲ್ಲಿ ಒಂದು ಆಟ ದೆಪ್ಪುಣಿಗುತ್ತು ರಾಮಣ್ಣ ಶೆಟ್ಟಿಯವರ ಕಾಲದಿಂದ ನಡೆಯುತ್ತಿದ್ದ ಪ್ರದರ್ಶನ ವೀಳ್ಯ ಇಲ್ಲದೆ ಸೇವಾರೂಪವಾಗಿ. ಮತ್ತೊಂದು ಚಂದ್ರಹಾಸ ಶೆಟ್ಟರೇ ಆರಂಭಿಸಿದ ಆಟ. ದಿ. ಚಂದ್ರಹಾಸ ಶೆಟ್ಟರ ಸ್ಮರಣಾರ್ಥ ಅವರ ಪತ್ನಿ ಕೊಡಿಯಾಲುಗುತ್ತು ವೇದಾವತಿ ಶೆಡ್ತಿಯವರು 1990ರಲ್ಲಿ ಎಕ್ಕಾರು ದ್ವಾರ ಕಟ್ಟಿಸಿದ್ದಾರೆ.
ದಿ. ದೆಪ್ಪುಣಿಗುತ್ತು ದೇವಕಿ ಶೆಟ್ಟಿಯವರು ಆಶ್ರಯ ನೀಡಿ ಬೆಳೆಸಿದ ಮತ್ತೊಂದು ಮಹಾನ್ ವ್ಯಕ್ತಿತ್ವ ದಿ. ನಾರಾಯಣ ಕಿಲ್ಲೆಯವರು. ಪುತ್ತೂರಿನ ಆಧುನಿಕ ಜನಕ ಎಂದೇ ಪ್ರಸಿದ್ಧರಾದ ಕಿಲ್ಲೆಯವರು ಅದ್ಭುತ ತಾಳಮದ್ದಳೆ ಅರ್ಥಧಾರಿಯೂ ಆಗಿದ್ದರು. ಕಿಲ್ಲೆಯವರು ದೇವಕಿ ಶೆಟ್ಟಿಯವರಿಗೆ ‘ಕಾಣಿಗೆ’ ಎಂಬ ಪುಸ್ತಕವನ್ನು ಅರ್ಪಿಸಿದ್ದರು. ಅಲ್ಲದೆ ಸನ್ಮಾನ ಮಾಡಲು ತೆಗೆದಿರಿಸಿದ್ದ ಶಾಲನ್ನು ದುರದೃಷ್ಟವಶಾತ್ ಅವರ ಪತ್ನಿ ಕಿಲ್ಲೆಯವರ ಮರಣಾ ನಂತರ ದೇವಕಿ ಶೆಟ್ಟಿಯವರ ಮರಣದ ಕಾಲಕ್ಕೆ ತಂದು ಹಸ್ತಾಂತರಿಸಿದ್ದರಂತೆ. ಹಾಗೆಯೇ ಉಪ್ಪಿನ ಸತ್ಯಾಗ್ರಹ ಸಮಯದಲ್ಲಿ ಒಂದು ಹಿಡಿ ಉಪ್ಪನ್ನು ಕೊಟ್ಟು ದೇವಕಿ ಶೆಟ್ಟಿಯವರು ಕಿಲ್ಲೆ ಯವರನ್ನು ಆಶೀರ್ವದಿಸಿದ್ದರಂತೆ.
ದೇವಕಿ ಶೆಟ್ಟಿಯವರ ಬಗ್ಗೆ ಕಾವೂರು ಮಹಾಲಿಂಗೇಶ್ವರ ದೇವಳದ ಈಗಿನ ಅರ್ಚಕ ರಾದ ಶ್ರೀನಿವಾಸ ಭಟ್ ಮತ್ತು ಅವರ ತಂದೆ ದಿ. ನಾರಾಯಣ ಭಟ್ ಬಹಳ ಗೌರವವನ್ನು ಹೊಂದಿದ್ದರು. ಹಾಗೆಯೇ ಕೊಂರ್ಗಿಬೈಲು ವಿಷ್ಣುಮೂರ್ತಿ ದೇವಳದ ಅರ್ಚಕರುಗಳಾದ ಮಯ್ಯರ ಮನೆತನಕ್ಕೂ ದೆಪ್ಪುಣಿಗೂ ಬಹಳ ಹತ್ತಿರದ ಸಂಬಂಧ.
ಮುಂದೆ ರಾಮಣ್ಣ ಶೆಟ್ರ ದ್ವಿತೀಯ ಪುತ್ರ ಸದಾಶಿವ ಶೆಟ್ಟರು 1960ರಲ್ಲಿ ವಾಸ್ತವ್ಯವನ್ನು ದೆಪ್ಪುಣಿಯಿಂದ ಬೋಂದೆಲ್‍ಗೆ ಬದಲಾಯಿಸಿದಾಗ, ಇಲ್ಲಿಯೇ ಯಕ್ಷಸೇವೆಯನ್ನು ಆರಂಭಿಸಿದರು. ಈ ಸೇವೆ ಈಗ ವಜ್ರಮಹೋತ್ಸವದ ಹೊಸ್ತಿಲಲ್ಲಿದೆ. ಅವರಿಗೆ ಕಂಬಳ ಮತ್ತು ಕೋಳಿ ಅಂಕವೆಂದರೆ ಬಹಳ ಆಸಕ್ತಿ. ಮುಗಿಪು ಮನೆಯಲ್ಲಿ ಕಂಬಳವನ್ನು ಆಯೋಜಿಸಿ ಯಶಸ್ವಿಯಾಗಿದ್ದರು. ಆಗ ಕಟೀಲಿನಲ್ಲಿ ಇದ್ದದ್ದು ಒಂದೇ ಮೇಳ. ಅವರಿಗೆ ಕಿಲ್ಲೆ, ಕಲ್ಲಾಡಿ ಕೊರಗ ಶೆಟ್ರು ಮತ್ತು ವಿಠಲ ಶೆಟ್ರ ಆತ್ಮೀಯ ಒಡನಾಟವೂ ಇತ್ತು. ಅವರು ಅನೇಕ ನ್ಯಾಯ ಪಂಚಾಯತಿಕೆಗಳನ್ನೂ ಮಾಡುತ್ತಿದ್ದರು. ಅವರಿಗೆ ಶ್ರೀಮಂತ ಗೆಳೆಯರೂ ಇದ್ದರು, ಹಾಗೆಯೇ ಬಡವರ ಆಶ್ರಯದಾತರೂ ಆಗಿದ್ದರು. ಇವರು 1944ರಲ್ಲಿ ಬೈಲುಮೂಡುಕೆರೆ ತ್ಯಾಂಪಣ್ಣ ನಾಯ್ಕ್ ಮತ್ತು ಶೆಡ್ಡೆ ಮೇಗಿನಮನೆ ಜಾನಕಿ ನಾಯ್ಕ್ ದಂಪತಿಗಳ ಮಗಳು ಗುಲಾಬಿ ಶೆಡ್ತಿಯವರನ್ನು ವಿವಾಹವಾದರು. ಸದಾಶಿವ ಶೆಟ್ಟರು ಹತ್ತು ವರ್ಷಗಳ ಕಾಲ ಸೇವೆಯನ್ನು ನಡೆಸಿ 1970ರ ಫೆಬ್ರವರಿ 11ರಂದು ಮರಣ ವನ್ನೈದಿದರು. ಶೆಡ್ಡೆ ಮೇಗಿನಮನೆ ಜಾನಕಿ ನಾಯ್ಕ್‍ರ ಸಹೋದರ ಶೆಡ್ಡೆ ಮೇಗಿನಮನೆ ಕೃಷ್ಣ ಮಲ್ಲಿ ಆಗಿನ ದಿನಗಳ ಹಿರಿಯ ಅರ್ಥಧಾರಿ ಹಾಗೂ ಪ್ರವಚನಕಾರರಾಗಿದ್ದರು. ಇವರು ಕಿಲ್ಲೆಯವರೊಂದಿಗೆ ಅನೇಕ ಕೂಟಗಳಲ್ಲಿ ಅರ್ಥ ಹೇಳಿದ್ದಾರೆ.
ನಂತರ 1992ರ ತನಕ ಈ ಆಟವನ್ನು ದಿ. ಸದಾಶಿವ ಶೆಟ್ರ ಭಾವ ಶೆಡ್ಡೆ ಮೇಗಿನಮನೆ ಜಯರಾಮ್ ನಾಯ್ಕ್‍ರವರು ಮುಂದುವರೆಸಿ ಕೊಂಡು ಬಂದರು. ಇವರು ಮೂಡುಶೆಡ್ಡೆ ಮಂಡಲ ಪಂಚಾಯತ್‍ನ ಅಧ್ಯಕ್ಷರಾಗಿದ್ದವರು ಮತ್ತು ಮೂಡುಶೆಡ್ಡೆಯ ಸಮಗ್ರ ಅಭಿವೃದ್ಧಿಯ ಹರಿಕಾರರು. ಇವರು ಒಂದು ದಶಕಗಳ ಕಾಲ ಕಾವೂರು ದೇವಳದ ಮೊಕ್ತೇಸರರಾಗಿದ್ದು ದೇವಳದ ಜೀರ್ಣೋದ್ಧಾರದ ರೂವಾರಿಯಾಗಿದ್ದರು. ಜಯರಾಮ್ ನಾಯ್ಕ್ ಮತ್ತು ವಿಠಲ ಶೆಟ್ರು ಆತ್ಮೀಯ ಒಡನಾಡಿಗಳಾಗಿದ್ದರು. ಖ್ಯಾತ ಸಂಗೀತ ವಿದ್ವಾನ್ ದಿ. ಬೆಳಿಂಜೆ ಮೈಂದಪ್ಪ ರೈಗಳ ಹಿರಿಯ ಮಗಳಾದ ತಲಪಾಡಿ ದೊಡ್ಡಮನೆ ಸುಮವಾಣಿಯವರನ್ನು ಇವರು ವಿವಾಹವಾಗಿದ್ದರು.
ಕಿರಿಯ ಮಗಳನ್ನು ಈಗಿನ ಮುಗಿಪು ರಾಮಣ್ಣ ಶೆಟ್ಟಿಯವರು ವಿವಾಹವಾದರು. ಮೈಂದಪ್ಪ ರೈಗಳು ಯಕ್ಷಗಾನಕ್ಕೆ ಸಂಗೀತವನ್ನು ಅಳವಡಿಸಿದ ಮೊದಲ ಶಕಪುರುಷ. ಅವರು ಪಿಟೀಲು ಕೃಷ್ಣರಾಯರಿಂದ ಸಂಗೀತಾಭ್ಯಾಸವನ್ನು ಮಾಡಿದವರು. ಅವರು ದಿ. ಮಂಡೆಚ್ಚರ ಗುರುಗಳೂ ಹೌದು. ಕುಂಡಾವು ಮೇಳದ ಆರಂಭ ಕಾಲದಲ್ಲಿ ಅದರ ಭಾಗವತರಾಗಿದ್ದವರು. ಹಾಗೆಯೇ ತನ್ನ 16ನೇ ವಯಸ್ಸಿನಲ್ಲಿಯೇ ಮೊದಲ ಬಾರಿಗೆ ಬಲಿಪ ನಾರಾಯಣ ಭಾಗವತರೊಂದಿಗೆ ಭಾಗವತಿಕೆ ಮಾಡಿದವರು. ಅವರ ಭಾಗವತಿಕೆಗೆ ನಾರಾಯಣಕಿಲ್ಲೆ, ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು ಅರ್ಥ ಹೇಳಿದ್ದಾರೆ. ಜಯರಾಮ್ ನಾಯ್ಕ್‍ರ ನೇತೃತ್ವದಲ್ಲಿ 1985ರಲ್ಲಿ ಬೆಳ್ಳಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಟೀಲಿನ ಮೂರು ಮೇಳಗಳ ಕೂಡಾಟದಲ್ಲಿ ‘ಸಮುದ್ರ ಮಥನ’ ಪ್ರಸಂಗ ಪ್ರದರ್ಶಿತವಾಯಿತು. ಈ ಆಟಕ್ಕೆ ಧರ್ಮಸ್ಥಳದಿಂದ ಆನೆ ತರಿಸಿದ್ದರಂತೆ.
ದೆಪ್ಪುಣಿಗುತ್ತು ಸದಾಶಿವ ಶೆಟ್ಟಿ – ಶೆಡ್ಡೆ ಮೇಗಿನಮನೆ ಗುಲಾಬಿ ಶೆಡ್ತಿಯವರ ಒಬ್ಬನೇ ಪುತ್ರ ಮುಗಿಪು ರಾಮಣ್ಣ ಶೆಟ್ಟಿ. ಇವರು ಕೊಡೆತ್ತೂರು ರಾಮಣ್ಣ ಶೆಟ್ಟರ ಒಬ್ಬರೇ ಮೊಮ್ಮಗ. ಅಜ್ಜ ಹಾಗೂ ಮೊಮ್ಮಗನಿಗೆ ಒಂದೇ ಹೆಸರು. ಇವರು ರಾಜ್ಯ ಮಟ್ಟದ ವಾಲಿಬಾಲ್ ಆಟಗಾರರಾಗಿದ್ದು, ಅತ್ತಾವರ ಫ್ರೆಂಡ್ಸ್ ಸರ್ಕಲ್ ತಂಡದ ನಾಯಕರೂ ಆಗಿದ್ದು ಅನೇಕ ಪ್ರಶಸ್ತಿಗಳನ್ನು ತನ್ನ ಬಗಲಿಗೆ ಹಾಕಿಕೊಂಡ ಸಾಧಕ. ನೆರೆಯ ರಾಜ್ಯ ಕೇರಳದಲ್ಲೂ ಅವರು ಆಟಗಾರನಾಗಿ ಹೆಸರುವಾಸಿಯಾಗಿದ್ದರು. 2006ರಲ್ಲಿ ಮಂಗಳ ಕ್ರೀಡಾಂಗಣದಲ್ಲಿ ನಡೆದ ‘ಕರ್ನಾಟಕ ವಾಲಿಬಾಲ್ ಅಸೋಸಿಯೇಶನ್ ಕಪ್’ ಪಂದ್ಯಾಟದ ಸಂದರ್ಭದಲ್ಲಿ ರಾಮಣ್ಣ ಶೆಟ್ಟರನ್ನು ಬಂಟ್ವಾಳದ ರಾಜೀವ ಗಾಂಧಿ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಫೌಂಡೇಶನ್ ನವರು ‘ಜೀವಮಾನ ಶ್ರೇಷ್ಠ ಸಾಧನಾ’ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. 1996ರಲ್ಲಿ ಕಾವೂರಿನ ಬ್ರಹ್ಮಕಲಶದ ಅಧ್ಯಕ್ಷರಾಗಿ ಸಮರ್ಥ ಮುಂದಾಳತ್ವ ವನ್ನು ನೀಡಿದ್ದಾರೆ. 1997ರಲ್ಲಿ ಆರಂಭವಾದ ಕಾವೂರಿನ ಮೊಸರುಕುಡಿಕೆಯ ಸ್ಥಾಪಕಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸಕ್ತ ಕಾವೂರು ದೇವಳದ ಆಡಳಿತ ಮೊಕ್ತೇಸರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಇವರು 1992ರಿಂದ ಯಕ್ಷಸೇವಾ ಪರಂಪರೆಯನ್ನು ಕಲ್ಲಾಡಿ ವಿಠಲ ಶೆಟ್ರ ಮಾರ್ಗದರ್ಶನದಲ್ಲಿ ಮುಂದುವರೆಸಿಕೊಂಡು ಬಂದರು. 1995ರಲ್ಲಿ ತಂದೆ ದಿ. ದೆಪ್ಪುಣಿಗುತ್ತು ಸದಾಶಿವ ಶೆಟ್ಟರ 25ನೇ ಪುಣ್ಯತಿಥಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಇದು ಬೋಂದೆಲ್‍ನ ಸೇವೆಗೆ 35ನೇ ವರ್ಷ. ಈ ಪ್ರಯುಕ್ತ ಕಲ್ಲಾಡಿ ವಿಠಲ ಶೆಟ್ಟರನ್ನು ಪೇಜಾವರ ಸ್ವಾಮಿಗಳ ಘನ ಉಪಸ್ಥಿತಿ-ಅನುಗ್ರಹ ಮಂತ್ರಾಕ್ಷತೆಯೊಂದಿಗೆ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣರ ಸಮಕ್ಷದಲ್ಲಿ ಸನ್ಮಾನಿಸಲಾಯಿತು. ಇದು ಅವರಿಗೆ ಸಂದ ಮೊದಲ ಸನ್ಮಾನವೂ ಹೌದು. ದಾಖಲೆಯೂ ಹೌದು. ಕಾರಣ ವಿಠಲ ಶೆಟ್ಟರು ಎಲ್ಲಿಯೂ ಸನ್ಮಾನಕ್ಕೆ ಒಪ್ಪಿಕೊಳ್ಳುತ್ತಲೇ ಇರಲಿಲ್ಲ. ವಿಧಾನಸಭಾ ಸದಸ್ಯ ಮತ್ತು ಕಲಾವಿದ ಕುಂಬ್ಳೆ ಸುಂದರ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಜತ ಸಂಭ್ರಮದಲ್ಲಿ ವಿದ್ವಾಂಸ ರಾಮದಾಸ ಸಾಮಗರು ತಮ್ಮ ಧನಿಗಳಿಗೆ ಅಭಿನಂದನಾ ಭಾಷಣವನ್ನು ನೆರವೇರಿಸಿದರು.
1997ರ ತನಕ ಈ ಸೇವೆ ಬೋಂದೆಲ್ ನಲ್ಲಿಯೇ ನಡೆಯಿತು. ನಂತರ ಈ ಸೇವೆ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ನಡೆದು ಕೊಂಡು ಬರುತ್ತಿದೆ. 2010ನೇ ಇಸವಿ ಈ ಯಕ್ಷ ಯಜ್ಞದ ಸುವರ್ಣ ಸಂಭ್ರಮಕ್ಕೆ ಸಾಕ್ಷಿಯಾಯಿತು. ಕಾವೂರು ದೇವಳದಲ್ಲಿ ನಡೆದ ಈ ಸ್ವರ್ಣಜಾತ್ರೆಯಲ್ಲಿ ದೆಪ್ಪುಣಿಗುತ್ತು ಸದಾಶಿವ ಶೆಟ್ಟಿ – ಶೆಡ್ಡೆ ಮೇಗಿನಮನೆ ಜಯರಾಮ್ ನಾಯ್ಕ್- ಕಲ್ಲಾಡಿ ವಿಠಲ ಶೆಟ್ಟರ ಸಂಸ್ಮರಣೆಯನ್ನು ನಡೆಸಲಾಯಿತು. ಉತ್ಸವದೋಪೇತವಾಗಿ ನಡೆದ ಕಾರ್ಯಕ್ರಮದಲ್ಲಿ ಯಜಮಾನರಾದ ಕಲ್ಲಾಡಿ ದೇವಿಪ್ರಸಾದ ಶೆಟ್ಟರಿಗೆ ಅದ್ದೂರಿ ಸನ್ಮಾನ, ಹಿರಿಯ ಕಲಾವಿದ ಸಾಧಕರಾದ ಕೋಳ್ಯೂರು ರಾಮಚಂದ್ರ ರಾವ್, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಸುಣ್ಣಂಬಳ ವಿಶ್ವೇಶ್ವರ ಭಟ್‍ರವರುಗಳಿಗೆ ಗೌರವಾರ್ಪಣೆ ನಡೆಯಿತು. ನಂತರ ದೇವಿಮಹಾತ್ಮೆ ಯಕ್ಷಗಾನ ಪ್ರದರ್ಶಿಸಲ್ಪಟ್ಟಿತು.
ಬಳಿಕ 2013ರಿಂದ 2017ರ ತನಕ ಮತ್ತೆ ಬೋಂದೆಲ್‍ನಲ್ಲಿಯೇ ಈ ಸೇವೆ ಮುಂದುವರಿಯಿತು. 2015, ಫೆಬ್ರವರಿ 16ರ ಸೇವೆಯಲ್ಲಿ ಕಟೀಲು ಮೇಳವೊಂದರಲ್ಲಿಯೇ ಅರ್ಚಕರಾಗಿ ಸ್ವರ್ಣತಿರುಗಾಟ ನಡೆಸಿದ ಕಾಂತಾವರ ಅನಂತರಾಮ ಭಟ್ಟರನ್ನು ಸನ್ಮಾನಿಸಲಾಯಿತು. 2015, ಮೇ 18ರಂದು ರಾಮಣ್ಣ ಶೆಟ್ಟಿ-ತಲಪಾಡಿ ದೊಡ್ಡಮನೆ ಶಂಕರಿ ಶೆಟ್ಟಿಯವರ ವೈವಾಹಿಕ ಜೀವನದ 35ನೇ ವರ್ಷದ ಸಂಭ್ರಮದ ಸಂದರ್ಭದಲ್ಲಿ ಹಿರಿಯ ಕಲಾವಿದ ಗಂಗಯ್ಯ ಶೆಟ್ಟರನ್ನು ಸನ್ಮಾನಿಸಲಾಯಿತು ಮತ್ತು ಕಟೀಲು ಮೇಳದ ಆಯ್ದ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಪ್ರದರ್ಶನ ನಡೆಯಿತು. 2017 ರಾಮಣ್ಣ ಶೆಟ್ರ ಮುಂದಾಳತ್ವಕ್ಕೆ ರಜತ ಸಂಭ್ರಮದ ವರ್ಷ. ಈ ಸೇವೆಯಾಟದಲ್ಲಿ ಈ ಸೇವೆಯೊಳಗಿನ ತನ್ನ ರಜತ ಸೇವೆಗೆ ಸುಣ್ಣಂಬಳ ವಿಶ್ವೇಶ್ವರ ಭಟ್ಟರನ್ನು ‘ಯಕ್ಷಾವ್ಯಯನಿಧಿ’ ಬಿರುದು ಪ್ರದಾನಿಸಿ ಗೌರವಿಸಲಾಯಿತು.
ಈ ಯಕ್ಷಯಜ್ಞದ ವಜ್ರಮಹೋತ್ಸವ 2020 ಫೆಬ್ರವರಿ 8ರಂದು ಕಾವೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ನಡೆಯಿತು. ಒಂದೂವರೆ ಶತಕದ ಈ ಸುದೀರ್ಘ ಕಟೀಲಮ್ಮನ ಯಕ್ಷಸೇವೆಯಲ್ಲಿ ಅನೇಕ ತಲೆಮಾರುಗಳು, ಕುಟುಂಬಗಳು ಕೃತಾರ್ಥತೆಯನ್ನು ಕಂಡಿವೆ. ಈ ಯಜ್ಞ ಮನಗಳನ್ನು – ಕುಟುಂಬಗಳನ್ನು ಕೂಡಿಸಿದೆ, ಮಣ್ಣನ್ನು ಪವಿತ್ರಗೊಳಿಸಿದೆ, ಕಲೆಯನ್ನು ಬೆಳೆಸಿದೆ – ಶ್ರೀಮಂತಗೊಳಿಸಿದೆ, ಸಾಧಕರನ್ನು ಗುರುತಿಸಿದೆ, ಕಲಾವಿದರಿಗೆ ಆಶ್ರಯವಾಗಿದೆ. ಒಂದು ಕಲಾಪೋಷಣೆಯ ಪುಣ್ಯಕರ್ಮ ಇದಕ್ಕಿಂತ ಹೆಚ್ಚಿನದ್ದೇನನ್ನು ಮಾಡುವುದಕ್ಕೆ ಸಾಧ್ಯ? ಗರಿಷ್ಟವಾದ ಸರ್ವವನ್ನೂ ಬೋಂದೆಲ್‍ನ ಮುಗಿಪು ಕುಟುಂಬ ಆ ಕಲಾಮಾತೆಯ ಪದಕ್ಕೆ ಸೇವಾರೂಪವಾಗಿ ಅರ್ಪಿಸಿದೆ. ಮುಗಿಪು ರಾಮಣ್ಣ ಶೆಟ್ಟಿ, ಅವರ ಮಕ್ಕಳು ಮತ್ತು ಕುಟುಂಬಸ್ಥರು ಈ ಪವಿತ್ರಕಾರ್ಯದಲ್ಲಿ ಪುಣ್ಯಸ್ನಾನ ಮಿಂದೆದ್ದಿದ್ದಾರೆ. ಈ ಸೇವೆ ಶತಕದ ಸಂಭ್ರಮವನ್ನು ಕಾಣಲಿ ಎಂದು ಹಾರೈಸುತ್ತಾ ಮುಗಿಪು ಕುಟುಂಬದ ಈ ಸರ್ವಸಮರ್ಪಣಾ ಭಾವಕ್ಕೆ ನಾಡಿನ ಎಲ್ಲಾ ಕಲಾಹೃದಯಗಳು ಮುಡಿಬಾಗಿ ವಂದಿಸುತ್ತವೆ. ು
ಶ್ರೀ ವಾಟೆಪಡ್ಪು ವಿಷ್ಣುಶರ್ಮರು ಪ್ರಸ್ತುತ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ನಗುಮೊಗದ ಶರ್ಮರು ಉತ್ತಮ ವೇಷಧಾರಿಯೂ ಹೌದು. ತಾಳಮದ್ದಳೆ ಅರ್ಥಧಾರಿಯೂ ಹೌದು. ನಾಟ್ಯ ಮತ್ತು ಮಾತುಗಾರಿಕೆ ಈ ಎರಡೂ ವಿಭಾಗಗಳಲ್ಲಿ ವಿಷ್ಣುಶರ್ಮರು ಪರಿಣತರು. ಸಾತ್ವಿಕ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುವ ಇವರು ಸಂಭಾಷಣಾ ಚತುರರಾಗಿ ಕಲಾಭಿಮಾನಿಗಳ ಮನ ಗೆದ್ದವರು. ಪುಂಡುವೇಷಧಾರಿಯಾದ ಶರ್ಮರು ಕಿರೀಟ ವೇಷಗಳನ್ನೂ ಚೆನ್ನಾಗಿ ನಿರ್ವಹಿಸಬಲ್ಲರು. ಅಗತ್ಯ ಬಿದ್ದರೆ ಸ್ತ್ರೀವೇಷಕ್ಕೂ ಸೈ.
ವಿಷ್ಣುಶರ್ಮ ಬಂಟ್ವಾಳ ತಾಲೂಕು ಮಾಣಿಲ ಗ್ರಾಮದ ವಾಟೆಪಡ್ಪು ಎಂಬಲ್ಲಿ 1967ನೇ ಇಸವಿ ಎಪ್ರಿಲ್ 6ರಂದು ತಲೆಂಗಳ ಸುಬ್ರಾಯ ಭಟ್ ಪರಮೇಶ್ವರೀ ಅಮ್ಮ ದಂಪತಿಗಳಿಗೆ ಮಗನಾಗಿ ಜನಿಸಿದರು. ಮೂರು ಮಂದಿ ಮಕ್ಕಳಲ್ಲಿ ಇವರೇ ಹಿರಿಯವರು. 7ನೇ ತರಗತಿಯ ವರೆಗೆ ಪೆರುವಾಯಿ ಶಾಲೆಯಲ್ಲಿ ಓದಿದ ಇವರು ಹೈಸ್ಕೂಲ್ ವಿದ್ಯಾಭ್ಯಾಸವನ್ನು ಕಾಯರ್‍ಕಟ್ಟೆ ಸರಕಾರಿ ಶಾಲೆಯಲ್ಲಿ ಪೂರೈಸಿದರು. ನಂತರ 2 ವರ್ಷ ಮನೆಯಲ್ಲೇ ಇದ್ದು ತಂದೆಯವರ ಜತೆ ಕೃಷಿಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಎಳವೆಯಲ್ಲೇ ಯಕ್ಷಗಾನಾಸಕ್ತಿ ಅತೀವವಾಗಿತ್ತು ಇವರಿಗೆ.
ಶಾಲಾ ವಿದ್ಯಾರ್ಥಿಯಾಗಿರುವಾಗ ಆಟ, ತಾಳಮದ್ದಳೆಗಳಿಗೆ ಹೋಗುವ ಹವ್ಯಾಸ ಇದ್ದದ್ದರಿಂದ ತಾನೂ ಕಲಾವಿದನಾಗಬೇಕೆಂಬ ಆಸೆ ಸಹಜವಾಗಿ ಮೂಡಿತು. 17ನೇ ವಯಸ್ಸಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾಕೇಂದ್ರಕ್ಕೆ ಸೇರಿದ ವಿಷ್ಣುಶರ್ಮರು ಶ್ರೀ ಕೆ. ಗೋವಿಂದ ಭಟ್ ಮತ್ತು ಕರ್ಗಲ್ಲು ಶ್ರೀ ವಿಶ್ವೇಶ್ವರ ಭಟ್ಟರಿಂದ ನಾಟ್ಯ ಕಲಿತರು. ಸುಂಕದಕಟ್ಟೆ ಮೇಳವನ್ನು ಸೇರಿ ಕೋಡಂಗಿ, ಬಾಲಗೋಪಾಲರು (ಪೂರ್ವರಂಗ) ಮೊದಲಾದ ವೇಷಗಳನ್ನು ಮಾಡುತ್ತಾ ಹಂತಹಂತವಾಗಿ ಬೆಳೆದು ಕಲಾವಿದರಾಗಿ ಕಾಣಿಸಿಕೊಂಡರು.
ಆಗ ಸುಂಕದಕಟ್ಟೆ ಮೇಳದಲ್ಲಿ ಪುತ್ತಿಗೆ ತಿಮ್ಮಪ್ಪ ರೈಗಳು, ಪದ್ಯಾಣ ಶಂಕರನಾರಾಯಣ ಭಟ್, ಕಟೀಲು ಶ್ರೀನಿವಾಸ ರಾವ್ (ಕಟೀಲು ಶೀನಯ್ಯಣ್ಣ), ತ್ರಿವಿಕ್ರಮ ಶೆಣೈ, ಮಂಜೇಶ್ವರ ಜನಾರ್ದನ ಜೋಗಿ, ಬೇತ ಕುಂಞ ಕುಲಾಲ್ ಮೊದಲಾದ ಹೆಸರಾಂತ ಕಲಾವಿದರ ಒಡನಾಟ ಇವರಿಗೆ ಸಿಕ್ಕಿತು. ಪ್ರಸ್ತುತ ಕಟೀಲು ಮೇಳದ ಕಲಾವಿದರಾದ ಹಳುವಳ್ಳಿ ಗಣೇಶ ಭಟ್, ಉಮಾಮಹೇಶ್ವರ ಭಟ್ ಸುಂಕದಕಟ್ಟೆ ಮೇಳದಲ್ಲಿ ಇವರಿಗೆ ಸಹಕಲಾವಿದರಾಗಿದ್ದರು.
ಪ್ರಸಂಗ ಮಾಹಿತಿ, ರಂಗನಡೆಗಳನ್ನು ಖ್ಯಾತ ಮದ್ಲೆಗಾರರಾದ ಪದ್ಯಾಣ ಶಂಕರನಾರಾಯಣ ಭಟ್ಟರಿಂದ ಅಭ್ಯಸಿಸಿ ಸದ್ರಿ ಮೇಳದಲ್ಲಿ ಸ್ತ್ರೀವೇಷ ಮತ್ತು ಪುರುಷ ವೇಷಗಳನ್ನು ನಿರ್ವಹಿಸಿದರು. ಮನ್ಮಥ, ವಿಷ್ಣು, ಶ್ರೀರಾಮ, ಶ್ವೇತಕುಮಾರ, ಚಂದ್ರಮತಿ, ದಮಯಂತಿ, ದ್ರೌಪದಿ ಅಲ್ಲದೆ ಕಸೆ ಸ್ತ್ರೀವೇಷಗಳನ್ನೂ ನಿರ್ವಹಿಸಿದ ಅನುಭವ ಇವರಿಗಿದೆ. ನಿರಂತರ 6 ವರ್ಷಗಳ ಕಾಲ ಸುಂಕದಕಟ್ಟೆ ಮೇಳದಲ್ಲಿ ಕಲಾಸೇವೆಯನ್ನು ಮಾಡಿದರು. ಯಕ್ಷಗಾನ ಜೀವನ ಸಾಗಿಸಲು ಕಷ್ಟ ಎಂಬ ತೀರ್ಮಾನಕ್ಕೆ ಬಂದು ಮೇಳದ ತಿರುಗಾಟವನ್ನು ನಿಲ್ಲಿಸಿದ ಶರ್ಮರು ನಂತರ 2 ವರ್ಷ ಮೊದಲಿನಂತೆ ಮನೆಯಲ್ಲಿ ಕೃಷಿಕಾರ್ಯದಲ್ಲಿ ನಿರತರಾದರು.
“ಕಟೀಲು ನಾಲ್ಕನೇ ಮೇಳ ಆರಂಭವಾದ ವರ್ಷ- ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್ಟರ ಅಪೇಕ್ಷೆಯಂತೆ ಕಟೀಲು ಮೇಳದಲ್ಲಿ ತಿರುಗಾಟ ನಡೆಸುವ ನಿರ್ಣಯಕ್ಕೆ ಬರಬೇಕಾಯಿತು. ನಿನಗೊಳ್ಳೆಯ ಭವಿಷ್ಯವಿದೆ. ಕಳೆದುಕೊಳ್ಳಬೇಡ. ಸಾಧನೆ ಮಾಡು. ಉತ್ತಮ ಕಲಾವಿದನಾಗುವೆ. ಮೇಳಕ್ಕೆ ಸೇರು ಎಂಬ ಅವರ ಮಾತುಗಳು ಈಗಲೂ ನೆನಪಿದೆ. ಅವರ ಮೇಲಿನ ಗೌರವದಿಂದ ಕಟೀಲು ಮೇಳಕ್ಕೆ ಸೇರಿದೆ. ಅಂದು ಜೀವನ ಸಾಗಿಸಲು ಕಷ್ಟ ಎಂದು ನಿರ್ಧರಿಸಿ ಮೇಳ ಬಿಟ್ಟೆ. ಈಗ ಯಕ್ಷಗಾನವೇ ನನ್ನ ಜೀವನಕ್ಕೆ ಆಧಾರವಾಗಿದೆ” ಎಂದು ವಿಷ್ಣುಶರ್ಮರು ಸಂತೋಷದಿಂದ ಹೇಳುತ್ತಾರೆ.
ನಿರಂತರವಾಗಿ 27 ವರ್ಷಗಳಿಂದ ಶರ್ಮರು ಕಟೀಲು ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. ಕುಬಣೂರು, ಪೂಂಜರು, ಮೋಹನ ಶೆಟ್ಟಿಗಾರ್, ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ, ಸಂಪಾಜೆ ಶೀನಪ್ಪ ರೈ, ಸಂಜೀವ ಚೌಟ, ಮಂಜೇಶ್ವರ ಜನಾರ್ದನ ಜೋಗಿ, ತೊಡಿಕಾನ ವಿಶ್ವನಾಥ ಗೌಡ, ಕಾವು ಗಿರೀಶ ಮೊದಲಾದವರ ಒಡನಾಟ, ಅನೇಕ ಕಿರಿಯ ಕಲಾವಿದರ ಪ್ರೀತಿಯನ್ನು ಗಳಿಸಿದ್ದೇನೆ ಎನ್ನುವ ಶರ್ಮರು ಹತ್ತು ವರುಷಗಳಿಂದ ತಾಳಮದ್ದಳೆಯಲ್ಲೂ ಬೇಡಿಕೆಯಿರುವ ಕಲಾವಿದ.
ಕಟೀಲು ಮೇಳದಲ್ಲಿ- ಶ್ರೀ ಕುರಿಯ ಗಣಪತಿ ಶಾಸ್ತ್ರಿಗಳು, ಕುಬಣೂರು ಶ್ರೀಧರ ರಾವ್, ಬೊಟ್ಟಿಕೆರೆ ಪುರುಷೋತ್ತಮ ಪೂಂಜರು, ಸುಣ್ಣಂಬಳ ವಿಶ್ವೇಶ್ವರ ಭಟ್ಟರು ಮಾರ್ಗದರ್ಶನ ಮಾಡಿದವರು. ಅವರುಗಳಿಂದಾಗಿಯೇ ಕಲಾಭಿಮಾನಿಗಳು ನನ್ನನ್ನು ಗುರುತಿಸುವಂತಾಯಿತು. ಇಷ್ಟಾದರೂ ಬೆಳೆದೆ. ಇಷ್ಟು ವ್ಯವಸಾಯ ಮಾಡಿದರೂ ಕಲಿತದ್ದು ಸಾಲದು ಎನಿಸುತ್ತಿದೆ. 32 ವರ್ಷಗಳ ವ್ಯವಸಾಯ ಮಾಡಿದೆ ಎನ್ನುವುದಕ್ಕಿಂತಲೂ ಅಷ್ಟು ಸಮಯ ಕಳೆದು ಹೋಯಿತಲ್ಲಾ, ಇನ್ನಷ್ಟು ಕಲಿಯಬಹುದಿತ್ತು. ಯಕ್ಷಗಾನಕ್ಕೆ ಕಲಿತಷ್ಟು ಕಡಿಮೆಯೇ. ಕಲಿತದ್ದು ಸಾಲದು ಎಂಬ ಭಾವನೆಯೇ ಇದೆ. ಪರಿಶ್ರಮ ಪಟ್ಟರೆ ಇನ್ನಷ್ಟು ಎತ್ತರಕ್ಕೇರಬಹುದಿತ್ತೇನೋ ಎಂದೆನಿಸುತ್ತಿದೆ.
ಕಲಾವಿದನಾಗಿ ತಿರುಗಾಟ ನಡೆಸುವಲ್ಲಿ ತಂದೆ ತಾಯಿಯರ ಆಶೀರ್ವಾದವಿತ್ತು. ಸಹೋದರ ಗೋಪಾಲಕೃಷ್ಣ ಪ್ರಸಾದನ (ಜಿಂದಾಲ್ ಕಂಪೆನಿಯಲ್ಲಿ ಇಂಜಿನಿಯರ್) ಪ್ರೋತ್ಸಾಹ ಇತ್ತು. ಕಟೀಲು ದೇವಳದ ಆನುವಂಶಿಕ ಅರ್ಚಕರಾದ ಆಸ್ರಣ್ಣ ಬಂಧುಗಳ ಆಶೀರ್ವಾದ, ಕಲ್ಲಾಡಿ ಶ್ರೀ ವಿಠಲ ಶೆಟ್ಟರು ಮತ್ತು ಪ್ರಸ್ತುತ 6 ಮೇಳಗಳ ಸಂಚಾಲಕರಾದ ಶ್ರೀ ಕಲ್ಲಾಡಿ ದೇವೀಪ್ರಸಾದ ಶೆಟ್ಟರ ಸಹಕಾರ, ಪ್ರೋತ್ಸಾಹದಿಂದ 27 ವರುಷಗಳ ತಿರುಗಾಟ ನಡೆಸುವಂತಾಯಿತು. ಇದು ವಿಷ್ಣುಶರ್ಮರ ಮನದ ಮಾತು. ಪ್ರಸ್ತುತ ಬೆಳ್ತಂಗಡಿ ತಾಲೂಕು ಕೋಣಂದೂರು ಗ್ರಾಮದ ಪಣಕಜೆ ಎಂಬಲ್ಲಿ ವಾಸಿಸುತ್ತಿರುವ ವಿಷ್ಣುಶರ್ಮರ ಮನದ ಬಯಕೆಗಳನ್ನೆಲ್ಲಾ ಕಲಾಮಾತೆಯು ಅನುಗ್ರಹಿಸಲಿ ಕಲಾಭಿಮಾನಿಗಳಾದ ನಾವೆಲ್ಲರೂ ಹಾರೈಸೋಣ.
ಯಕ್ಷಗಾನದಲ್ಲಿ ತೆಂಕುತಿಟ್ಟಿಗೆ ಸಂಬಂಧಿಸಿದಂತೆ ಕೇಶಾವರೀ, ಭೀಮನ ಮುಡಿ ಮೊದಲಾದ ಕಿರೀಟಗಳಲ್ಲಿ ಬಣ್ಣದ ವೇಷಗಳು ಕಾಣಿಸಿಕೊಳ್ಳುತ್ತವೆ. ಹೆಣ್ಣುಬಣ್ಣಕ್ಕೆ ಅದರದ್ದೇ ಆದ ಕಿರೀಟವಿದೆ. ಹಿಂದಿನ ಕಾಲದಲ್ಲಿ ಹಿರಣ್ಯಕಶ್ಯಪ, ಕಂಸ ಮೊದಲಾದ ವೇಷಗಳನ್ನು ಕೇಶಾವರೀ ಕಿರೀಟದಲ್ಲಿ ಬಣ್ಣದ ವೇಷದವರೇ ಮಾಡುತ್ತಿದ್ದರಂತೆ. ಹೀಗೆ ಯಕ್ಷಗಾನ ಕಲೆಯ ಬಣ್ಣದ ವೇಷಗಳಲ್ಲಿ ಕಾಣಿಸಿಕೊಂಡು ಅಭಿನಯಿಸಿದರು ಅನೇಕರು. ದಾಸನಡ್ಕ ಶ್ರೀ ರಾಮ ಕುಲಾಲ್ ಅವರು ತೆಂಕುತಿಟ್ಟಿನ ಹಿರಿಯ ಬಣ್ಣದ ವೇಷಧಾರಿ. ವೃತ್ತಿ ಕಲಾವಿದರಾಗಿ ಕಲಾಸೇವೆಯನ್ನು ಮಾಡಿದವರು. ಒಟ್ಟು 52 ವರ್ಷಗಳ ಕಾಲ ಕಲಾಸೇವೆಯನ್ನು ಮಾಡಿ ಪ್ರಸ್ತುತ ಕಲಾಬದುಕಿನಿಂದ ನಿವೃತ್ತರಾಗಿದ್ದಾರೆ.
ದಾಸನಡ್ಕ ರಾಮ ಕುಲಾಲರು 1942ನೇ ಇಸವಿ ದಶಂಬರ 3ರಂದು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ, ಕುಡಾಲು ಮೇರ್ಕಳ ಗ್ರಾಮದ ಪೆರ್ಮುದೆ ಸಮೀಪದ ಬಾಯಾಡಿ ಎಂಬಲ್ಲಿ ಜನಿಸಿದರು. ತಂದೆ ಶ್ರೀ ಕುಂಞ ಮೂಲ್ಯ. ತಾಯಿ ಶ್ರೀಮತಿ ಅಪ್ಪು. ಪ್ರಸ್ತುತ ರಾಮ ಕುಲಾಲರು ಧರ್ಮತ್ತಡ್ಕದ ತೆಂಕಕರೆ ಮನೆಯಲ್ಲಿ ವಾಸವಾಗಿರುತ್ತಾರೆ. ಓದಿದ್ದು 6ನೇ ತರಗತಿವರೇಗೆ. 1ನೇ ತರಗತಿಯಿಂದ 3ರ ವರೇಗೆ ಹೇರೂರು ಶಾಲೆಯಲ್ಲಿ. 4ರಿಂದ 6ನೇ ತರಗತಿ ವರೇಗೆ ಚೇವಾರು ಶಾಲೆಯಲ್ಲಿ. ಶಾಲಾ ಬಾಲಕನಾಗಿದ್ದಾಗಲೇ ಯಕ್ಷಗಾನಾಸಕ್ತಿ. ಆಟಗಳನ್ನು ನೋಡುತ್ತಿದ್ದರು.
ಕೂಡ್ಲು ಮಕ್ಕಳ ಮೇಳದ ಆಟ-ಪ್ರಸಂಗ ಶ್ರೀಕೃಷ್ಣಲೀಲೆ ಕಂಸವಧೆ. ಪೆರ್ಮುದೆ ಪೆರಿಯಡ್ಕದಲ್ಲಿ ನಡೆದ ಈ ಆಟವನ್ನು ನೋಡಿ ತಾನೂ ಕಲಾವಿದನಾಗಬೇಕೆಂಬ ಆಸೆ ಹುಟ್ಟಿಕೊಂಡಿತ್ತು. ಶಾಲೆ ಬಿಟ್ಟ ನಂತರ ಯಕ್ಷಗಾನ ಕಲಾವಿದನಾಗುವ ಆಸೆಯನ್ನು ಹೊತ್ತು ಕಲಾಪ್ರಿಯನಾದ ಕೂಡ್ಲು ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಾನಕ್ಕೆ ತೆರಳಿದರು. ಆ ಕಾಲದ ಪ್ರಸಿದ್ಧ ಎದುರು ವೇಷಧಾರಿಯಾಗಿದ್ದ ಮಧೂರು ತಿಮ್ಮಪ್ಪನವರಿಂದ ನಾಟ್ಯ ಕಲಿತರು. ಕೂಡ್ಲು ದೇವಳದ ಆಡಳಿತದಾರರಾದ ಶ್ರೀ ಈಶ್ವರ ಶ್ಯಾನುಭಾಗರ ಸಲಹೆಯಂತೆ ಕೂಡ್ಲು ಮೇಳದಲ್ಲಿ ಮೊದಲ ತಿರುಗಾಟ. ಪೆರುವಡಿ ನಾರಾಯಣ ಭಟ್ಟರ ಸಂಚಾಲಕತ್ವ. ಕೊಕ್ಕಡ ಸುಬ್ರಾಯ ಆಚಾರ್ಯರು ಭಾಗವತರಾಗಿದ್ದರು.
ಮಾಳಂಗಾಯಿ ಕೃಷ್ಣ ಭಟ್, ಚಂದ್ರಗಿರಿ ಅಂಬು, ಪಕಳಕುಂಜ ಕೃಷ್ಣ ನಾೈಕ, ಏಕ್ಟರ್ ಜೋಷಿ, ಎಂಪೆಕಟ್ಟೆ ರಾಮಯ್ಯ ರೈ, ಕೂಡ್ಲು ನಾರಾಯಣ ಬಲ್ಯಾಯ ಮೊದಲಾದ ಕಲಾವಿದರೊಂದಿಗೆ ತಿರುಗಾಟ ನಡೆಸಿ, ಕಲಿಯುವ ಅವಕಾಶ ಸಿಕ್ಕಿತ್ತು. ಮುಂದಿನ ವರ್ಷ ಶ್ರೀ ಧರ್ಮಸ್ಥಳ ಮೇಳದಲ್ಲಿ 1 ವರ್ಷ (ಕುರಿಯ ವಿಠಲ ಶಾಸ್ತ್ರಿಗಳ ಜತೆ) ನಂತರ ಮೇಳದಲ್ಲಿ ಕೆಲವು ವರ್ಷಗಳ ತಿರುಗಾಟ. ತಿರುಗಾಟ ಪ್ರಥಮ ವರ್ಷ ಕೋಡಂಗಿ, ಬಾಲಗೋಪಾಲರು, ರಾಕ್ಷಸ ಬಲ… ಹೀಗೆ ಬೆಳೆಯುತ್ತಾ ಸಾಗಿದವರು ದಾಸನಡ್ಕ ರಾಮ ಕುಲಾಲ್. ಬಣ್ಣದ ವೇಷ ಮಾಡುವ ಸಾಮರ್ಥ್ಯವನ್ನೂ ಹೊಂದಿದ್ದರು.
ಈ ಸಂದರ್ಭದಲ್ಲಿ ಕೊಲ್ಲೂರು ಮೇಳದವರು ಬಣ್ಣದ ವೇಷಧಾರಿಗಳ ಅನ್ವೇಷಣೆಯಲ್ಲಿದ್ದರು. ರಾಮ ಕುಲಾಲರಿಗೆ ಅವಕಾಶವೂ ಸಿಕ್ಕಿತ್ತು. ಕೊಲ್ಲೂರು ಮೇಳಕ್ಕೆ 2ನೇ ಬಣ್ಣದ ವೇಷಧಾರಿಯಾಗಿ ಸೇರಿದರು. ಅಗರಿ ಶ್ರೀನಿವಾಸ ಭಾಗವತರಿದ್ದ ಮೇಳ. ದೊಡ್ಡ ಸಾಮಗರೂ ಇದ್ದರು. ಅವರೀರ್ವರೂ ರಾಮ ಕುಲಾಲರಿಗೆ ಹೇಳಿಕೊಡುತ್ತಿದ್ದರಂತೆ. ಆಗ ಕೊಳ್ತಿಗೆ ನಾರಾಯಣ ಗೌಡರು ರಾಮ ಕುಲಾಲರ ಸಹಕಲಾವಿದರಾಗಿದ್ದರು. ಬಳಿಕ ನಂದಾವರ ಮೇಳದಲ್ಲಿ ತುಳು ಪ್ರಸಂಗಗಳಲ್ಲಿ ವೇಷ ಮಾಡಿ ಅನುಭವಗಳನ್ನು ಗಳಿಸಿಕೊಂಡರು. ಪದ್ಮತಾಮರೆ ಪ್ರಸಂಗದ ಜಟ್ಟಿ ಮತ್ತು ಬಂಗರಸು ಅಲ್ಲದೆ ಕೋಟಿ, ಬುದ್ಧಿವಂತ, ಚಂದುಗಿಡಿ ಮೊದಲಾದ ವೇಷಗಳನ್ನು ಮಾಡುವ ಅವಕಾಶವೂ ಸಿಕ್ಕಿತ್ತು.
1991-92ರ ಸುಮಾರಿಗೆ ಕಟೀಲು ಮೇಳಕ್ಕೆ ಸೇರಿದೆನೆಂದು ರಾಮ ಕುಲಾಲರು ಹೇಳುತ್ತಾರೆ. ಕುರಿಯ ಗಣಪತಿ ಶಾಸ್ತ್ರಿಗಳು ಕರೆಸಿ ಮೇಳಕ್ಕೆ ಬರುವಂತೆ ಹೇಳಿದರಂತೆ. ದೇವೀಮಹಾತ್ಮ್ಯೆ ಪ್ರಸಂಗದಲ್ಲಿ ಶುಂಭಾಸುರ ಪಾತ್ರವನ್ನು ಮಾಡಲೆಂದೇ ಕರೆಸಿದ್ದರು. ‘‘ಅವರಿಂದಾಗಿಯೇ ನಾನು ಯಕ್ಷಗಾನದಲ್ಲಿ ಕಾಣಿಸಿಕೊಂಡೆ. ಪ್ರತಿಯೊಂದು ವೇಷಕ್ಕೂ ಹೇಳಿಕೊಟ್ಟು ತಯಾರು ಮಾಡುತ್ತಿದ್ದರು. ಜತೆಗೆ ಪದ್ಯಾಣ ಶಂಕರನಾರಾಯಣ ಭಟ್ಟರ ನಿರ್ದೇಶನವೂ ಇತ್ತು. ಗೇರುಕಟ್ಟೆ ಗಂಗಯ್ಯ ಶೆಟ್ಟರ ಸಹಕಾರವೂ ಇತ್ತು. ನಾನು ಕಟೀಲು ಮೇಳಕ್ಕೆ ಸೇರಿದ ವರ್ಷ ನೆಡ್ಲೆ ನರಸಿಂಹ ಭಟ್ರು, ದಿವಾಣ ಭೀಮ ಭಟ್ರೂ ಇದ್ದರು. ಅವರ ಜತೆ ತಿರುಗಾಟ ನಡೆಸುವ ಅವಕಾಶ ಸಿಕ್ಕಿದ್ದು ನನ್ನ ಪಾಲಿನ ಭಾಗ್ಯವೆಂದೇ ಭಾವಿಸುತ್ತೇನೆ.
ಮೇಳದ ಯಜಮಾನರಾದ ಕಲ್ಲಾಡಿ ವಿಠಲ ಶೆಟ್ಟರೂ, ಆಸ್ರಣ್ಣರೂ ಆಶೀರ್ವದಿಸಿ ಪ್ರೋತ್ಸಾಹಿಸಿದ್ದರು. ಅಲ್ಲದೆ ಅಡೂರು ಲಕ್ಷ್ಮೀನಾರಾಯಣ ರಾವ್ ಬೆಳ್ಳಾರೆ ಮಂಜುನಾಥ ಭಟ್, ಪುಂಡರೀಕಾಕ್ಷ ಉಪಾಧ್ಯಾಯ, ಕೈರಂಗಳ ಕೃಷ್ಣ ಮೂಲ್ಯ ಮೊದಲಾದವರ ಸಹಕಾರವೂ ಇತ್ತು. ಗೇರುಕಟ್ಟೆ ಗಂಗಯ್ಯ ಶೆಟ್ಟರ ರುದ್ರಭೀಮನಿಗೆ ದುಶ್ಶಾಸನನಾಗಿ ಅಭಿನಯಿಸಿದ್ದು ವಿಶೇಷ ಅನುಭವ. 23ನೇ ವಯಸ್ಸಿನಲ್ಲೇ ಮಹಿಷಾಸುರನ ಪಾತ್ರವನ್ನು ಮಾಡಿದ್ದೆ. ಕುರಿಯ ಗಣಪತಿ ಶಾಸ್ತ್ರಿಗಳು ನನ್ನಿಂದ ಮಾಡಿಸಿದ್ದರು. ಆದರೆ ನನಗೆ ಆ ವೇಷದಲ್ಲಿ ಆಸಕ್ತಿಯಿರಲಿಲ್ಲ. ಶುಂಭಾಸುರನೇ ಮೊದಲಾದ ಕೇಶಾವರೀ ವೇಷಗಳೇ ನನಗೆ ಇಷ್ಟವಾಗಿತ್ತು.’’ ಹೀಗೆ ಹೇಳುತ್ತಾ ಕಟೀಲು ಮೇಳದ ತನ್ನ ತಿರುಗಾಟದ ಅನುಭವಗಳನ್ನು ದಾಸನಡ್ಕ ರಾಮ ಕುಲಾಲರು ನೆನಪಿಸಿದ್ದರು.
ಕಟೀಲು ಮೇಳಕ್ಕೆ ಸೇರುವ ಮೊದಲು ಹಾಸ್ಯರತ್ನ ನಯನ ಕುಮಾರರು ನಡೆಸುತ್ತಿದ್ದ ಚೌಡೇಶ್ವರೀ ಮೇಳದಲ್ಲಿ ತಿರುಗಾಟ ನಡೆಸಿದ್ದರು. ಆಗ ನಾಟಕೀಯ ವೇಷಗಳನ್ನೂ ಮಾಡುತ್ತಿದ್ದರು. ಆಗ ರಾಮ ಕುಲಾಲರ ವಯಸ್ಸು 30. ಭಸ್ಮಾಸುರನಾಗಿ ಇವರ ಅಭಿನಯಕ್ಕೆ ಮೆಚ್ಚಿ ಸಭಿಕರು ನೋಟಿನ ಮಾಲೆಯನ್ನು ತೊಡಿಸಿದ ಘಟನೆಯನ್ನು ರಾಮ ಕುಲಾಲರು ನೆನಪಿಸಿದ್ದರು. ತನ್ನ 18ನೆಯ ವಯಸ್ಸಿನಲ್ಲಿ ಕುತ್ಯಾಳ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಗೆಜ್ಜೆಕಟ್ಟಿ ಕಲಾಬದುಕನ್ನು ಆರಂಭಿಸಿದ ದಾಸನಡ್ಕ ರಾಮ ಕುಲಾಲರು 52 ವರ್ಷಗಳ ಕಾಲ ಕಲಾವಿದನಾಗಿ ವ್ಯವಸಾಯ ಮಾಡಿರುತ್ತಾರೆ.
ಅನೇಕ ಸಂಘ-ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿವೆ. ಬಣ್ಣದ ಮಹಾಲಿಂಗ ಯಕ್ಷಪ್ರಶಸ್ತಿಯೂ ದೊರೆತಿದೆ. ಶುಂಭ, ಭಂಡಾಸುರ, ಶೂರಪದ್ಮ, ತಾರಕ, ರಾವಣ, ಕುಂಭಕರ್ಣ, ಶೂರ್ಪನಖಿ, ಪೂತನಿ, ಘಟೋತ್ಕಚ, ಮಹಿಷಾಸುರ, ಕಾಲಜಂಘ, ವಜ್ರದುಂಬಿ ಘೋರ ಗರುಡ, ಲವಣಾಸುರ ಮೊದಲಾದ ಪಾತ್ರಗಳಲ್ಲಿ ಮಿಂಚಿದ ಶ್ರೀ ರಾಮ ಕುಲಾಲರು 2011ರಲ್ಲಿ ಕಲಾಬದುಕಿಗೆ ವಿದಾಯ ಹೇಳಿದ್ದರು.
ನಮ್ಮ ಕರಾವಳಿಯ ಗಂಡು ಕಲೆ ಯಕ್ಷಗಾನ. ಯಕ್ಷಗಾನ ರಂಗದಲ್ಲಿ ಅನೇಕ ಯುವ ಕಲಾವಿದರು ನಮಗೆ ನೋಡಲು ಸಿಗುತ್ತಾರೆ ಅದರಲ್ಲಿ ಒಬ್ಬರು ಯುವ ಚಂಡೆ ಮದ್ದಳೆ ವಾದಕರು ಶ್ರವಣ್ ಕುಮಾರ್ ಕೊಳಂಬೆ. ಚಿಕ್ಕ ವಯಸ್ಸಿನಲ್ಲಿ ಯಕ್ಷಗಾನಕ್ಕೆ ಮನಸೋತು ಯಕ್ಷರಂಗಕ್ಕೆ ಅನೇಕ ಯುವ ಕಲಾವಿದರನ್ನು ಕೊಟ್ಟ ಯಕ್ಷರಂಗದ ಗುರು ಹರಿನಾರಾಯಣ ಬೈಪಾಡಿತ್ತಾಯ ಇವರಿಂದ ಚೆಂಡೆ ಹಾಗೂ ಮದ್ದಳೆ ಅಭ್ಯಾಸ ಮಾಡಿರುತ್ತಾರೆ.
ದಿನಾಂಕ 07.09.1989 ಸೆಪ್ಟೆಂಬರನಲ್ಲಿ ಇವರ ಜನನ. ತಂದೆ ದಿವಂಗತ ಪ್ರಭಾಕರ್ ರಾವ್ ಕೊಳಂಬೆ ಹಾಗೂ ತಾಯಿ ರಾಜೇಶ್ವರಿ ಪಿ. ಇವರ ತಂದೆ ಸ್ವತಃ ತಲಕಳ ದೇವಸ್ಥಾನದ ಹಾಗೂ ಮೇಳದ ಪೂಜೆಯವರು ಆಗಿದ್ದರು. ಅಲ್ಲದೆ ಕೊಳಂಬೆ ಪೋಸ್ಟ್ ನ ಪೋಸ್ಟ್ ಮಾಸ್ಟರ್ ಕೂಡ ಆಗಿದ್ದರು. ಇವರು ಕೂಡ ಭಾಗವತಿಗೆ , ಚೆಂಡೆ , ಮದ್ದಳೆ ನುಡಿಸುತ್ತಿದ್ದರು ಹಾಗೂ ಯಕ್ಷಗಾನದಲ್ಲಿ ವೇಷ ಕೂಡ ಮಾಡುತ್ತಿದ್ದರು. ಹೀಗೆ ಇವರ ಮನೆಯೇ ಒಂದು ಯಕ್ಷಗಾನದ ಪರಿಸರ.
ಆಟೋಮೊಬೈಲ್ ಡಿಪ್ಲೋಮಾ ಪದವಿಯನ್ನು ಪಡೆದಿರುವ ಇವರು ಮಂಗಳೂರಿನಲ್ಲಿ ಯುನೈಟೆಡ್ ಟೊಯೊಟಾ ಕಂಪೆನಿಯಲ್ಲಿ ಅಸಿಸ್ಟೆಂಟ್ ಮನೇಜರ್ ವೃತ್ತಿಯಲ್ಲಿ ಇದ್ದಾರೆ. ಇದರ ಜೊತೆಗೆ ಪೆನ್ಸಿಲ್ ಡ್ರಾಯಿಂಗ್ ನಲ್ಲಿ ಪರಿಣತರು. ಉತ್ತಮ ಹಾಡುಗಾರರು ಆದ ಇವರು ನಕ್ಷತ್ರ ಲೋಕ ಯೂಟ್ಯೂಬ್ ಚಾನೆಲ್ ನಲ್ಲಿ ನಡೆಯುವ ಕರಾವಳಿ ಗಾನ ಕೋಗಿಲೆ Season 1 ಇದರ ತೀರ್ಪುಗಾರರೂ ಆಗಿದ್ದರೆ. ರಾಜ್ಯದ ಹಲವಾರು ಕಡೆ ಹಲವಾರು ಕಾರ್ಯಕ್ರಮದಲ್ಲಿ ನಿರೂಪಣೆಯನ್ನು ಮಾಡಿರುವ ಇವರು ಒಂದು ಉತ್ತಮ ನಿರೂಪಕರು ಕೂಡ. ಹೀಗೆ ಇವರು ಒಬ್ಬರು ಬಹುಮುಖ ಪ್ರತಿಭೆ. ಇಷ್ಟೆಲ್ಲಾ ಇದ್ದರೂ ಶ್ರವಣ್ ಕುಮಾರ್ ಕೊಳಂಬೆಯವರಲ್ಲಿ ನಿಮಗೆ ಏನು ತುಂಬಾ ಇಷ್ಟ ಅಂತ ಕೇಳಿದ್ರೆ ಯಕ್ಷಗಾನ ಹಾಗೂ ಚೆಂಡೆ ಮದ್ದಳೆ ವಾದನ ಅಂತ ಹೇಳುತ್ತಾರೆ.
12.12.2018 ರಲ್ಲಿ ವಿದುಷಿ ರೂಪಶ್ರೀ ಇವರನ್ನು ವಿವಾಹ ಆಗಿ ಸುಂದರ ಸಂಸಾರ ನಡೆಸುತ್ತಿದ್ದಾರೆ. ಇವರ ಶ್ರೀಮತಿ ಶಾಸ್ತ್ರೀಯ ಸಂಗೀತದಲ್ಲಿ ಅನೇಕ ಸಾಧನೆಯನ್ನ ಮಾಡಿದ್ದು ಅನೇಕ ಟಿವಿ ಚಾನೆಲ್ ಗಳಲ್ಲಿ ಇವರ ಸಂಗೀತ ಕಾರ್ಯಕ್ರಮಗಳು ಪ್ರಸಾರವಾಗಿವೆ , ರಾಜ್ಯದ ಹಲವಾರು ಕಡೆ ಸಂಗೀತ ಕಾರ್ಯಕ್ರಗಳನ್ನು ನೀಡಿದ ಇವರಿಗೆ ಹಲವಾರು ಪ್ರಶಸ್ತಿಗಳು ದೊರೆತಿರುತ್ತದೆ, ಅಲ್ಲದೆ ಬಜ್ಪೆಯಲ್ಲಿ ಶಾಸ್ತ್ರೀಯ ಸಂಗೀತದ ತರಗತಿಯನ್ನು ಮಾಡುತ್ತ ಸಂಗೀತ ಕಲಿಯುವ ಸಾಕಷ್ಟು ವಿದ್ಯಾರ್ಥಿಗಳಿಗೆ ದಾರಿದೀಪವಾಗಿ ಇದ್ದಾರೆ. ಅಲ್ಲದೆ *ರೂಪಾಶ್ರವಣ್* ಕೊಳಂಬೆ ಎಂಬ ಆರ್ಕೆಸ್ಟ್ರಾ ತಂಡವನ್ನು ಕೂಡ ನಡೆಸುತ್ತಾ ಇದಾರೆ. ಶ್ರೀಯುತ ಶ್ರವಣ್ ಕುಮಾರ್ ಕೊಳಂಬೆ ಇವರ ಯಕ್ಷಗಾನ ಹಾಗೂ ಸಂಗೀತ ಕ್ಷತ್ರದಲ್ಲಿ ಇನಷ್ಟು ಸಾಧನೆ ಮಾಡಲಿ ಎಂದು ದೇವರಲ್ಲಿ ಪ್ರಾರ್ಥನೆ.
ವಾರ್ಧಕ : ಧರಣಿಯಂ ಪಾರ್ಥಿವರ್ ಸೋತಮೇಲರಿಗಳಂ ಧುರದೊಳಂ ಜೈಸಿಕೊಂಬುದು ಧರ್ಮಮೆಂದಾತ ಗರುಹೆನುತಲಾಪ್ತರೊಡನಾಲೋಚಿಸುತ ಹರಿಯ ತನ್ನೊಳಗೆ ಮಾಳ್ಪಮನದಿ | (22ರ ಪೂರ್ವಾರ್ಧ) ಪ್ರಸಂಗ ಪದ್ಯಗಳ ಆಧಾರದಿಂದ; ಧರ್ಮರಾಯನು ದ್ರುಪದ ಪುರೋಹಿತನನ್ನು ಹಸ್ತಿನಾವತಿಗೆ ಸಂಧಿಗಾಗಿ ಕಳುಹಿಸುತ್ತಾನೆ. ಕೃಷ್ಣನು ‘ವಿವೇಕಿಯೋರ್ವನನಟ್ಟಿ’ ಎಂದಷ್ಟೇ ಹೇಳಿದ್ದಾನೆ. ಹಸ್ತಿನಾವತಿಗೆ ಹೋದಂತಹ ದ್ರುಪದ ಪುರೋಹಿತರಿಗೆ ದುರ್ಯೋಧನನು ‘‘ಅರಿಗಳಂ ಧುರದೊಳಂ ಜೈಸಿಕೊಂಬುದು ಧರ್ಮವೆಂದಾತಗರುಹು’’ ಎಂದು ಹೇಳಿದ್ದಾನೆ. ದ್ರುಪದ ಪುರೋಹಿತನು ಹಿಂದಿರುಗಿ ಬಂದು ಧರ್ಮರಾಯನಲ್ಲಿ ದುರ್ಯೋಧನನ ಮಾತುಗಳನ್ನು ತಿಳಿಸಿದನೇ? ‘ಅರುಹು’ ಎಂಬುದಾಗಿ ವಾಚಕವಿರುವುದರಿಂದ ತಿಳಿಸಿರಬಹುದೆಂದು ಊಹಿಸಬಹುದು; ಆದರೆ ಪ್ರಸಂಗದಲ್ಲಿ ದ್ರುಪದ ಪುರೋಹಿತ ಹಿಂದಿರುಗಿ ಬಂದನೆಂದೂ; ತಿಳಿಸಿದನೆಂಬುದಕ್ಕೆ ಆಧಾರ ಸಾಲದು.
ನಮ್ಮ ಕೆಲವು ಯಕ್ಷಗಾನ ಕಲಾವಿದರು ಪ್ರಸಂಗಕ್ಕೆ ಅರ್ಥೈಸುವಾಗ ದ್ರುಪದ ಪುರೋಹಿತರೆಂದರೆ ‘ಶತಾನಂದ’ರೆಂದು ಹೇಳುತ್ತಲೇ ಬಂದಿದ್ದಾರೆ. ಇದಕ್ಕೆ ಎಲ್ಲಿದೆ ಆಧಾರ? ದೇರಾಜೆ ಸೀತಾರಾಮಯ್ಯನವರ ‘‘ಶ್ರೀಮನ್ಮಹಾಭಾರತ ಕಥಾಮೃತಂ’’ ಗದ್ಯಕಾವ್ಯದಲ್ಲಿ ‘ದ್ರುಪದ ರಾಜನು ಒಳ್ಳೆಯ ಮುಹೂರ್ತ ನೋಡಿ ತನ್ನ ಪುರೋಹಿತರಾದ ಶತಾನಂದರನ್ನು ಏಕಾಂತವಾಗಿ ಕರೆಸಿಕೊಂಡು ಧೃತರಾಷ್ಟ್ರನಲ್ಲಿಗೆ ಹೋಗಿ ಧರ್ಮಯುಕ್ತವಾದ ಹಿತವಾದಗಳನ್ನು ಹೇಳಿ, ಅವರ ಎಲ್ಲ ಪ್ರಮುಖ ವೀರರನ್ನು ದುರ್ಯೋಧನನ ಮಾರ್ಗದಿಂದ ತಿರುಗಿಸಬೇಕು ಎಂದು ಬರೆದಿದ್ದಾರೆ. (ಪುಟ 441-442) ದೇರಾಜೆಯವರು ಮತ್ತು ಮುಂದೆ ಹೋಗಿ ಶತಾನಂದರಲ್ಲಿ; ಅಲ್ಲಿದ್ದು ಬೇಹುಗಾರಿಕೆ ಮಾಡುವಂತೆ ಸೂಚಿಸಿದ್ದಾರೆ. (ಪ್ರಸಂಗದಲ್ಲಿ ದ್ರುಪದ ಪುರೋಹಿತರು ಹಿಂದಿರುಗಿ ಬಂದ ಸೂಚನೆ ಲಭಿಸದಿರುವುದಕ್ಕೆ ದೇರಾಜೆಯವರ ಸಮಾಧಾನ) ದೇರಾಜೆಯವರು ಬರೆದಿರುವ ಕೆಲವು ಅಂಶಗಳಿಗೆ ವ್ಯಾಸಭಾರತದ ಉದ್ಯೋಗಪರ್ವದ ಆರನೆಯ ಅಧ್ಯಾಯ ಆಧಾರ.
ಶಿಷ್ಯೆ : ಪರಿವೃತೋ ವಿದ್ವಾನ್ ನೀತಿಶಾಸ್ತ್ರಾರ್ಥ ಕೋವಿದಃ ಪಾಂಡವನಾಂ ಹಿತಾರ್ಥಾಯ ಕೌರವಾನ್ ಪ್ರತಿಜನ್ಮಿವಾನ್ (6-19) ವ್ಯಾಸಭಾರತದಲ್ಲಿ ಮುಂದುವರಿದು ಇಪ್ಪತ್ತನೆಯ ಅಧ್ಯಾಯದಲ್ಲಿ ‘‘ದ್ರುಪದ ಪುರೋಹಿತಸ್ಯ ಕೌರವ ಸಭಾಯಾಂ ಭಾಷಣಮ್’’ ಎಂಬುದಾಗಿ ಇಪ್ಪತ್ತೊಂದು ಶ್ಲೋಕ ಛಂದಸ್ಸಿನಲ್ಲಿ ಅವನ ಮಾತುಗಳಿವೆ. ಅನಂತರ ಇಪ್ಪತ್ತೊಂದನೆಯ ಅಧ್ಯಾಯದಲ್ಲಿ ದ್ರುಪದ ಪುರೋಹಿತನ ಮಾತುಗಳನ್ನೊಪ್ಪಿದ ಭೀಷ್ಮರ ಮಾತುಗಳಿವೆ. ವ್ಯಾಸರಲ್ಲಿ ‘ದ್ರುಪದ ಪುರೋಹಿತ’ ಎಂಬ ವಾಚಕವಿದೆಯೇ ವಿನಾ ನಾಮನಿರ್ದೇಶವಿಲ್ಲ. ಮಹಾಭಾರತದ ಕತೆಗೆ ಸಂಬಂಧಿಸಿದ ಯಕ್ಷಗಾನದ ಹೆಚ್ಚಿನ ಪ್ರಸಂಗಗಳಿಗೆ ಕುಮಾರವ್ಯಾಸನ (ಕಾಲ ಸು. 1430) ‘ಕರ್ಣಾಟ ಭಾರತ ಕಥಾಮಂಜರಿ’ಯೇ ಮೂಲ ಆಕರ. ದ್ರುಪದ ಪುರೋಹಿತನ ನಾಮನಿರ್ದೇಶ ಕುಮಾರವ್ಯಾಸನಲ್ಲಿ ಇದೆಯೇ? ಹಸ್ತಿನಾವತಿಗೆ ರಾಯಭಾರಿಯಾಗಿ ಯಾರು ಯಾರನ್ನು ಕಳುಹಿಸಿದರು?
ಬಳಿಕ ಸುಮುಹೂರ್ತದಲಿ ಮತ್ಸ್ಯನ ಹೊಳಲ ಹೊರವಂಟುತ್ತರ ದಿಶಾ ವಳಯದಲಿ ರಚಿಸಿದರುಪಪ್ಲವ್ಯಾಖ್ಯಪುರವರವ ನೆಲನಗಲದಲಿ ಕಟ್ಟಿಕೇರಿಯ ನಳವಡಿಸಿದರು ನಿಖಿಳ ನೃಪರಿಗೆ ಬಳಿಯನಟ್ಟಿದನುತ್ತರೋತ್ತರವಾದುದಿವರುದಯ (ವಿ. ಪ. 10-44) ಅಭಿಮನ್ಯು-ಉತ್ತರೆಯರ ವಿವಾಹ ಕಾರ್ಯ ಇಲ್ಲಿ ನಡೆಯಿತು. ಮದುವೆಗೋಸುಗ ಬಂದೆವಾವಿ ನ್ನದರ ಮೇಲಣ ರಾಜಕಾರ್ಯದ ಹದನವಟ್ಟುವುದರುಹುವುದು ಬಹೆವಾವುಕರೆಸಿದಡೆ (ವಿ. ಪ. 10-12ರ ಪೂರ್ವಾರ್ಧ)
ಕಳುಹುವುದು ಶಿಷ್ಟರನು ಧರಣೀ ತಳವ ಬೇಡಿಸುವಲ್ಲಿ ಸಾಮವ ಬಳಸುವುದು ಭೀಷ್ಮಾದಿಗಳ ಕಟ್ಟುವುದು ವಿನಯದಲಿ ತಿಳಿವುದಾತನ ನೆಲೆಯಲ್ಲಿಂ ಬಳಿಕ ನಯವಿಲ್ಲೆಂದಡಾಹವ ದೊಳಗೆ ಕೈದೋರುವುದು ಮತವೆಂದನು ಮುರಧ್ವಂಸಿ (ಉ. ಪ. 1-5) ಕೂತುಕೊಂಡಿಹುದಿವದ ಮಕ್ಕಳ ನೋಡಲಾಗದು ಹೆಚ್ಚು ಕುಂದನು ನಾಡಬೇಡಲು ಬುದ್ಧಿವಂತರನಲ್ಲಿಗಟ್ಟುವುದು ಕೂಡೆ ಶೋಧಿಸಿ ಸೆಜ್ಜೆಯಲಿ ಮೈ ಗೂಡಿಯಾರೋಗಣೆಗಳಲಿ ಕೈ ಮಾಡಿ, ಬೆರಸಿಹುದೆಂದು ದ್ರುಪದ ವಿರಾಟರಿಗೆ ನುಡಿದ (ಉ. ಪ. 1-13)
ಹಸ್ತಿನಾವತಿಗೆ ‘ಕಳುಹುವುದು ಶಿಷ್ಟರನು’ ಅಥವಾ ‘‘ನಾಡಬೇಡಲು ಬುದ್ಧುವಂತರನಲ್ಲಿಗಟ್ಟುವುದು’’ ಎಂದು ಕೃಷ್ಣನ ಮಾತು; ದ್ರುಪದ ಪುರೋಹಿತನನ್ನು ಕಳುಹಿಸಬೇಕೆಂದು ಸ್ಪಷ್ಟವಾಗಿ ಹೇಳಿಲ್ಲ. ಎಂದು ಕಳುಹಿಸಿಕೊಂಡು ನಾರೀ ವೃಂದ ಯದುಕುಲಸಹಿತ ದೇವ ಮು ಕುಂದ ಬಿಜಯಂಗೈದು ಹೊಕ್ಕನು ದ್ವಾರಕಾಪುರವ ಒಂದು ದಿನದಾ ಲೋಚನೆಯ ನೆಲೆ ಯಿಂದ ಕರೆದು ಪುರೋಹಿತನ ನಲ ವಿಂದ ಕಳುಹಿದ ದ್ರುಪದನಾ ಕೌರವನ ಪಟ್ಟಣಕೆ (ಉ. ಪ. 1-14) ಕುಮಾರವ್ಯಾಸನ ಪ್ರಕಾರ ದ್ರುಪದನೇ ತನ್ನ ಪುರೋಹಿತನನ್ನು ಕೌರವನ ಪಟ್ಟಣಕ್ಕೆ ಕಳುಹಿಸಿದ್ದು; ಯಕ್ಷಗಾನ ಪ್ರಸಂಗದಂತೆ ಧರ್ಮರಾಯನು ದ್ರುಪದ ಪುರೋಹಿತನನ್ನು ಹಸ್ತಿನಾವತಿಗೆ ಹೋಗುವಂತೆ ಹೇಳಿದುದು. ಯಾರೇ ಕಳುಹಿಸಿದರೂ; ಕಳುಹಿಸಿದವನ ಹೆಸರನ್ನು ಸೂಚಿಸಿಲ್ಲ. ಹಸ್ತಿನಾವತಿಗೆ ಬಂದ ಪುರೋಹಿತನು-
ದ್ರುಪದ ರಾಜಪುರೋಹಿತನು ಕುರು ನೃಪನವಿತ್ತಲು ಬಂದು ಕಂಡನು ವಿಪುಳಮತಿ ಮಾತಾಡಿದನು ನಿಜ ರಾಜಕಾರಿಯವ ಕೃಪಣತನದಲಿ ಕೌರವನು ಗುರು ಕೃಪನ ಭೀಷ್ಮನ ಮತವನೊಲ್ಲದೆ ಚೌಪಳ ಕರ್ಣನ ಕೂಡೆ ನಿಶ್ಚೈಸಿದನು ಕಾಳಗವ (ಉ. ಪ. 2-31) ಕುಮಾರವ್ಯಾಸನ ಈ ಮಾತುಗಳಿಂದ ಕೌರವನ ಯುದ್ಧವನ್ನು ನಿಶ್ಚಯಿಸಿ ದ್ರುಪದ ಪುರೋಹಿತನಲ್ಲಿ ಹೇಳಿದನೆಂದು ತಿಳಿಯಬಹುದು. ಪುರೋಹಿತನು ಉಪಪ್ಲವ್ಯಕ್ಕೆ ಹಿಂದಿರುಗಿದನೆಂದು ಊಹಿಸಬಹುದು; ಆಧಾರ ಸಾಲದು.
ದ್ರುಪದ ಪುರೋಹಿತನ ಹೆಸರೇನು? ಗದುಗು ಭಾರತದ ಪ್ರಕಾರ; ಪಾಂಚಾಲೆಯ ವಿವಾಹದ ಅನಂತರ ಪಾಂಡವರು ವಧೂಸಮೇತರಾಗಿ ತಾವು ವಾಸ್ತವ್ಯವಿದ್ದ ಕುಂಭಕಾರನ ಮಂದಿರಕ್ಕೆ ಬಂದು ತಾಯಿ; ಕುಂತಿಯನ್ನು ಕಾಣುತ್ತಾರೆ. ಅಂದು ರಾತ್ರಿ ಅವರು ಪರಸ್ಪರ ವಿವಾಹ-ಯುದ್ಧದ ಕುರಿತು ಮಾತನಾಡುತ್ತಿರುತ್ತಾರೆ. ಇತ್ತ ದ್ರುಪದ ನಂದಿನಿಯ ಸಹೋದರನಾದ ಧೃಷ್ಟದ್ಯುಮ್ನನಿಗೆ ತನ್ನ ಸಹೋದರಿಯನ್ನು ಮದುವೆಯಾದವನು ಕ್ಷತ್ರಿಯನೋ; ವಿಪ್ರನೋ ಎಂಬ ಸಂದೇಹ ಬರುತ್ತದೆ. ಅದನ್ನು ಪರೀಕ್ಷಿಸುವುದಕ್ಕಾಗಿ ಆ ದಿನ ರಾತ್ರಿ ಅವನು ಪುರೋಹಿತನೊಡಗೂಡಿ ಕುಲಾಲ ಭವನದ ಹೊರಭಾಗದಲ್ಲಿದ್ದು ಅವರ ಮಾತುಗಳನ್ನು ಕೇಳುತ್ತಿರುತ್ತಾನೆ-
ಶ್ರೀ ಕಾರ್ತಿಕೇಯ ಕಲಾನಿಲಯ, ಕೋಟೂರು ಇದರ ಪ್ರಾರಂಭ ಕಾಲದಿಂದಲೂ ವೇಷಧಾರಿ ಹಾಗೂ ಹಿಮ್ಮೇಳವಾದಕರಾಗಿದ್ದವರು ಬಳ್ಳಮೂಲೆ ಈಶ್ವರ ಭಟ್ಟರು. ಅಂದಿನ ಪ್ರಸಿದ್ಧ ಕಲಾವಿದ ಹೊಸಹಿತ್ತಿಲು ಮಹಾಲಿಂಗ ಭಟ್ಟರಿಂದ ಯಕ್ಷಗಾನದ ಹೆಜ್ಜೆಯನ್ನೂ, ಪ್ರಸಿದ್ಧ ಹಿಮ್ಮೇಳ ವಾದಕರಾಗಿದ್ದ ಪುಂಡಿಕಾಯಿ ಕೃಷ್ಣ ಭಟ್ಟರಿಂದ ಹಿಮ್ಮೇಳವಾದನವನ್ನೂ ಅಭ್ಯಾಸ ಮಾಡಿ ಹಿರಿಯ ಯಕ್ಷಗಾನ ಕಲಾವಿದ, ನಿವೃತ್ತ ಅಧ್ಯಾಪಕರಾದ (ಚಿಕ್ಕಪ್ಪ) ಅಡ್ಕ ಗೋಪಾಲಕೃಷ್ಣ ಭಟ್ಟರ ನಿರ್ದೇಶನ ಹಾಗೂ ನೇತೃತ್ವದಲ್ಲಿ ಕೆಲವು ವರ್ಷಗಳ ಕಾಲ ವೇಷಧಾರಿಯಾಗಿಯೂ, ಶಾಲಾ ದಿನಗಳಿಂದ ಹಿಡಿದು 40-42 ವರ್ಷಗಳ ಕಾಲ ಹಿಮ್ಮೇಳ ವಾದಕರಾಗಿಯೂ ಮಿಂಚಿದ ಈಶ್ವರ ಭಟ್ಟರು ಕಾಸರಗೋಡಿನಿಂದ ತೊಡಗಿ ತಿರುವನಂತಪುರದ ವರೆಗೂ ಕಲಾನಿಲಯದ ಸದಸ್ಯರಿಂದ ಕನ್ನಡ ಹಾಗೂ ಮಲೆಯಾಳ ಭಾಷೆಗಳಲ್ಲಿ ಯಕ್ಷಗಾನ ಕಾರ್ಯಕ್ರಮಗಳು ನಡೆಯುತ್ತಿದ್ದಂತಹ ಸಂದರ್ಭಗಳಲ್ಲಿ ಎಲ್ಲಾ ಕಾರ್ಯಕ್ರಮಗಳಿಗೂ ಹಿಮ್ಮೇಳವಾದಕರಾಗಿ ಭಾಗವಹಿಸಿದ ಹೆಮ್ಮೆಯ ಕಲಾವಿದರಾಗಿದ್ದರು.
ಐದು ವರ್ಷಗಳ ಹಿಂದೆ ಸಮಾನಮನಸ್ಕ ಗೆಳೆಯರ ಜೊತೆ ಸೇರಿ ‘ಯಕ್ಷತೂಣೀರ ಸಂಪ್ರತಿಷ್ಠಾನ (ರಿ.), ಕೋಟೂರು’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಅದರ ಸ್ಥಾಪಕಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಮುಂದೆ ಇದೇ ಸಂಸ್ಥೆಯ ನೇತೃತ್ವದಲ್ಲಿ ಯಕ್ಷಗಾನ ಕಲಾವಿದರಾಗಿದ್ದ ಪೆರಡಂಜಿ ದಿ. ಗೋಪಾಲಕೃಷ್ಣ ಭಟ್ಟರ ಹಾಗೂ ಕಲಾಪೋಷಕರಾದ ವೇಣುಗೋಪಾಲ ತತ್ವಮಸಿ ಇವರ ಸಹಕಾರದಿಂದ ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಪ್ರಾರಂಭಗೊಂಡ ‘ಯಕ್ಷಬಳಗ ಮುಳಿಯಾರು’ ಇದರ ಬಾಲಕಲಾವಿದರಿಗೆ ಪ್ರಾರಂಭದಿಂದಲೂ ಅಡ್ಕ ಕೃಷ್ಣ ಭಟ್ಟರ ಜೊತೆಗೂಡಿ ನಾಟ್ಯತರಬೇತಿ ನೀಡುತ್ತಾ ಬಂದಿದ್ದರು. ಯಕ್ಷತೂಣೀರ ಹಾಗೂ ಯಕ್ಷಬಳಗದ ಎಲ್ಲಾ ಕಾರ್ಯಕ್ರಮಗಳಲ್ಲೂ ನಿರ್ದೇಶನದ ಜೊತೆ ಹಿಮ್ಮೇಳದಲ್ಲಿಯೂ ಕಾಣಿಸಿಕೊಂಡಿದ್ದರು. ಯಕ್ಷತೂಣೀರ ಸಂಪ್ರತಿಷ್ಠಾನದ ದಶಮಾನೋತ್ಸವ ಆಚರಣೆಯು ಇವರ ಕಲಾಜೀವನದ ಬಲುದೊಡ್ಡ ಆಸೆಯಾಗಿತ್ತು; ಆದರೆ ವಿಧಿಯ ಆಟ ಬೇರೆಯೇ ಆಗಿತ್ತು.
ಸುಮಾರು ಹತ್ತು ವರ್ಷಗಳ ಕಾಲ ಕೇರಳದ ಹಲವಾರು ಶಾಲೆಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಯಕ್ಷಗಾನದ ಹೆಜ್ಜೆಗಳನ್ನು ಕಲಿಸಿ, ಅವರನ್ನು ಕೇರಳ ಶಾಲಾ ಯುವಜನೋತ್ಸವದ ಯಕ್ಷಗಾನ ಸ್ಪರ್ಧೆಗಳ ವೇದಿಕೆಗಳಲ್ಲಿ ಭಾಗವಹಿಸುವಂತೆ ಮಾಡಿ ಬಹುಮಾನವನ್ನು ಪಡೆಯುವಂತೆ ಮಾಡಿದ ಸಮರ್ಥ ಯಕ್ಷಗಾನ ನಿರ್ದೇಶಕರೂ, ಕೆಲವು ಸ್ಪರ್ಧೆಗಳಿಗೆ ತೀರ್ಪುಗಾರರೂ ಆಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ ಶ್ರೀ ಕಾರ್ತಿಕೇಯ ಕಲಾನಿಲಯದ ಸದಸ್ಯರನ್ನೊಡಗೂಡಿಕೊಂಡು ಕೇರಳದ ‘ಕಲಾಮಂಡಲಂ’ ಸಹಿತ ಹಲವೆಡೆ ಮಲೆಯಾಳ ಯಕ್ಷಗಾನ ಪ್ರದರ್ಶನಗಳನ್ನೂ ಸಂಘಟಿಸಿದ ಸಂಘಟಕರಾಗಿಯೂ ತಮ್ಮೊಳಗೆ ಅಡಗಿದ್ದ ಪ್ರತಿಭೆಯನ್ನು ತೋರ್ಪಡಿಸಿದ್ದರು.
ಮಂಗಳೂರು, ತ್ರಿಶ್ಶೂರು, ಕಲ್ಲಿಕೋಟೆ, ಕಣ್ಣೂರು ಮುಂತಾದ ಆಕಾಶವಾಣಿ ಕೇಂದ್ರಗಳ ಯಕ್ಷಗಾನ ಕಾರ್ಯಕ್ರಮಗಳಲ್ಲಿ ಮಾತ್ರವಲ್ಲದೆ ಬೆಂಗಳೂರು ದೂರದರ್ಶನದಲ್ಲಿ ಪ್ರಸಾರವಾದ ದಿ. ಉಪ್ಪಳ ಕೃಷ್ಣ ಮಾಸ್ತರರ ಯಕ್ಷಗಾನ ತಂಡಕ್ಕೆ ಹಿಮ್ಮೇಳವಾದಕರಾಗಿ ತಮ್ಮ ಕಲಾನೈಪುಣ್ಯವನ್ನು ಹೊರಹೊಮ್ಮಿಸಿದ್ದರು. ಅಲ್ಲದೆ ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಬೊಂಬೆಯಾಟ ಸಂಘದ ಕಾರ್ಯಕ್ರಮಗಳಿಗೂ ಹಿಮ್ಮೇಳವಾದನದಲ್ಲಿ ಸಹಕಾರವನ್ನು ನೀಡಿದ್ದರು. ‘ನಿಲಾವರಿಯಾದೆ’ ಎಂಬ ಮಲೆಯಾಳಂ ಸಿನಿಮಾದಲ್ಲೂ ಹಿಮ್ಮೇಳ ವಾದಕರಾಗಿಯೇ ಕಾಣಿಸಿಕೊಂಡಿದ್ದರು. ಸಹೋದರ ಗೋವಿಂದ ಬಳ್ಳಮೂಲೆಯವರ ನೇತೃತ್ವದಲ್ಲಿ ‘ವರ್ಣ ಧ್ವನಿಸುರುಳಿ’ಯ ಮೂಲಕ ಬಿಡುಗಡೆಗೊಂಡ ಕೆಲವು ಹವ್ಯಕ ಹಾಗೂ ಕನ್ನಡ ಭಾಷೆಗಳ ಯಕ್ಷಗಾನ ಕ್ಯಾಸೆಟ್‍ಗಳಲ್ಲಿ ಯಕ್ಷಗಾನದ ‘ಭೀಷ್ಮಾಚಾರ್ಯ’ ದಿ. ಶೇಣಿ ಗೋಪಾಲಕೃಷ್ಣ ಭಟ್ಟರನ್ನೊಳಗೊಂಡ ತಂಡದಲ್ಲಿ ಹಿಮ್ಮೇಳದಲ್ಲಿ ಭಾಗವಹಿಸಿದ್ದರು.
ಯಕ್ಷಗಾನದ ಧ್ರುವತಾರೆಗಳೆಂದೇ ಪರಿಗಣಿಸಲ್ಪಟ್ಟ ಬಣ್ಣದ ವೇಷಧಾರಿಗಳಾದ ದಿ. ಬಣ್ಣದ (ಗಾಂಧಿ) ಮಾಲಿಂಗ, ದಿ. ಚಂದ್ರಗಿರಿ ಅಂಬು ಮುಂತಾದ ಧೀಮಂತ ಕಲಾವಿದರ ನಾಟ್ಯ, ಅಭಿನಯಕ್ಕೆ ಚೆಂಡೆಯ ಸಾಥಿ ನೀಡಿ ಆ ಹಿರಿಯರಿಂದ ‘ಮಾಣಿ ಅಡ್ಡಿಯಿಲ್ಲೆ’ ಎಂದು ಹೊಗಳಿಸಿಕೊಳ್ಳುವುದು ಸಾಮಾನ್ಯವೇ! ರಾಧಾಕೃಷ್ಣ ನಾವಡ ಮಧೂರು, ಸುಬ್ರಾಯ ಹೊಳ್ಳ ಕಾಸರಗೋಡು, ಮಾನ್ಯ ಸಂತೋಷ್ ಕುಮಾರರಂತಹ ಚುರುಕಿನ ವೇಷಧಾರಿಗಳಿಂದಲೂ ‘ಈಶ್ವರ ಭಟ್ರ ಕೈ ಒಳ್ಳೆದುಂಟು’ ಎಂದು ಮೆಚ್ಚುಗೆ ಪಡೆದವರು. ಪ್ರಸಿದ್ಧ ವೇಷಧಾರಿಗಳಾದ ನಿಡ್ಲೆ ಗೋವಿಂದ ಭಟ್, ತಂತ್ರಿ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ, ಉಬರಡ್ಕ ಉಮೇಶ ಶೆಟ್ಟಿ, ಭಾಗಮಂಡಲ ಮಹಾಬಲೇಶ್ವರ ಭಟ್, ಸಬ್ಬಣಕೋಡಿ ರಾಮ ಭಟ್ ಮೊದಲಾದವರ ಹೆಜ್ಜೆಗಳಿಗೆ ಚೆಂಡೆಯನ್ನು ನುಡಿಸಿದ ಅನುಭವ ಈಶ್ವರ ಭಟ್ಟರದ್ದು. ತೆರೆಮರೆಯಲ್ಲಿದ್ದ ಅನೇಕ ವೃತ್ತಿಪರ ಹಾಗೂ ಹವ್ಯಾಸೀ ಕಲಾವಿದರಿಗೆ ತನ್ನ ನೇತೃತ್ವದಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಪ್ರಮುಖ ಪಾತ್ರಗಳನ್ನು ನೀಡಿ ತಮ್ಮ ಪ್ರತಿಭೆಗಳನ್ನು ತೋರ್ಪಡಿಸುವ ಅವಕಾಶ ಒದಗಿಸಿದ ಕೀರ್ತಿ ಇವರದ್ದು.
ಯಕ್ಷಗಾನ ಕಲಾವಿದ ಹಾಗೂ ನಿವೃತ್ತ ಅಧ್ಯಾಪಕರಾದ ಚಂದ್ರಶೇಖರ ಭಟ್ ಆದೂರು ಇವರ ನೇತೃತ್ವದಲ್ಲಿದ್ದ ಆದೂರು ಶ್ರೀ ಪಂಚಲಿಂಗೇಶ್ವರ ಯಕ್ಷಗಾನ ಕಲಾಸಂಘದ ಹಿಮ್ಮೇಳವಾದಕರಾಗಿ, ಯಕ್ಷಗಾನ ಕಲಾವಿದ ಹಾಗೂ ನಿವೃತ್ತ ಅಧ್ಯಾಪಕರಾದ ಯಂ. ಸುಬ್ರಹ್ಮಣ್ಯ ಭಟ್ (ಮಾವ) ಇವರಿಂದ ರೂಪೀಕರಣಗೊಂಡ ಪುಂಡೂರು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ಹಿಮ್ಮೇಳವಾದಕರಾಗಿ, ಪ್ರಶಸ್ತ ಕಲಾವಿದ ದಿ. ಉಪ್ಪಳ ಕೃಷ್ಣ ಮಾಸ್ತರ್ ಅವರ ನಿರ್ದೇಶನದಲ್ಲಿ ಹುಟ್ಟಿಕೊಂಡ ಮಹಿಳಾ ಯಕ್ಷಗಾನ ತಂಡಗಳ ಖಾಯಂ ಹಿಮ್ಮೇಳವಾದಕರಾಗಿಯೂ ಕೇರಳ ಮೊದಲ್ಗೊಂಡು ತಮಿಳುನಾಡು, ಕರ್ನಾಟಕಗಳಲ್ಲೂ ಭಾಗವಹಿಸಿದ ಕೀರ್ತಿ ಇವರದು. ಈಗ ಬೆಂಗಳೂರಿನಲ್ಲಿ ವಾಸವಾಗಿದ್ದು ಅಲ್ಲಿ ಹಲವಾರು ಯಕ್ಷಗಾನ ಕಾರ್ಯಕ್ರಮಗಳಲ್ಲಿ ಮದ್ದಳೆವಾದಕರಾಗಿ ಭಾಗವಹಿಸುತ್ತಿರುವ ಗಿರೀಶ್ ಪರಂಗೋಡು (ಭಾವ) ಇವರ ಶಿಷ್ಯನಾಗಿದ್ದಾರೆ.
ಹಲವು ವರ್ಷಗಳ ಹಿಂದೆಯೇ ಎಡನೀರು ಮಠಾಧೀಶರಾದ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಸ್ವರಮಾಧುರ್ಯಕ್ಕೆ ಚೆಂಡೆಯ ನಾದ ನುಡಿಸುವ ಸುಯೋಗವೂ ಇವರಿಗೆ ಲಭಿಸಿತ್ತು. ಶ್ರೀ ಕುಪ್ಪಂಗಾನ ಗೋಪಾಲಕೃಷ್ಣ ಭಟ್ಟ, ಶ್ರೀ ಸತೀಶ ಪುಣಿಚಿತ್ತಾಯ ಪೆರ್ಲ, ಶ್ರೀ ತೆಂಕಬೈಲು ಮುರಳೀಕೃಷ್ಣ ಶಾಸ್ತ್ರಿ, ಶ್ರೀ ಮನೋಹರ ಬಲ್ಲಾಳ್ ಅಡ್ವಳ, ತಲ್ಪಣಾಜೆ ಸಹೋದರರಾದ ಶ್ರೀ ಶಿವಶಂಕರ ಭಟ್ಟ, ಶ್ರೀ ವೆಂಕಟ್ರಮಣ ಭಟ್ಟರ ಮೆಚ್ಚಿನ ಹಿಮ್ಮೇಳ ಸಾಥಿ-ಈಶ್ವರ ಭಟ್ಟರಾಗಿದ್ದರು. ಹಿಂದಿನ ಪ್ರಸಿದ್ಧ ಭಾಗವತರುಗಳಾಗಿದ್ದ ದಿ. ದಾಸರಬೈಲು ಚನಿಯ ನಾಯ್ಕರಿಂದ ತೊಡಗಿ ವರ್ತಮಾನ ಕಾಲದ ಪ್ರಸಿದ್ಧ ವೃತ್ತಿಪರ ಭಾಗವತರುಗಳಾದ ಶ್ರೀ ಬಲಿಪ ನಾರಾಯಣ ಭಾಗವತರು, ಶ್ರೀ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ, ಶ್ರೀ ಪುತ್ತಿಗೆ ರಘುರಾಮ ಹೊಳ್ಳ, ಶ್ರೀ ಪದ್ಯಾಣ ಗಣಪತಿ ಭಟ್, ಶ್ರೀ ಪುಂಡಿಕಾೈ ಗೋಪಾಲಕೃಷ್ಣ ಭಟ್, ಶ್ರೀ ರಾಮಕೃಷ್ಣ ಮಯ್ಯ ಸಿರಿಬಾಗಿಲು ಮೊದಲಾದವರು ಕೂಡಾ ಈಶ್ವರ ಭಟ್ಟರನ್ನು ಮೆಚ್ಚಿದವರೇ.
ಅದೇ ರೀತಿಯಲ್ಲಿ ‘ಯಕ್ಷಭಾರತಿ ನೀರ್ಚಾಲು’, ಇವರ ತಂಡದೊಂದಿಗೆ ಕಾಸರಗೋಡು ಸುತ್ತಮುತ್ತಲ್ಲದೆ ಕರ್ನಾಟಕದಲ್ಲೂ ಯಕ್ಷಗಾನ ಕೂಟಗಳಿಗೆ ಚೆಂಡೆವಾದಕರಾಗಿ ಭಾಗವಹಿಸಿದ್ದರು. ‘ಬೊಡ್ಡಜ್ಜ ಯಕ್ಷಗಾನ ಸಂಘ, ಮಧೂರು’ ಇತ್ಯಾದಿ ಹತ್ತು ಹಲವು ಯಕ್ಷಗಾನ ಸಂಘ – ಸಂಸ್ಥೆಗಳ ಆಟ-ಕೂಟಗಳಿಗೆ ಹಿಮ್ಮೇಳವಾದಕರಾಗಿ ಸಹಕರಿಸಿರುವ ಶ್ರೀಯುತರು ಎರಡು ವರ್ಷಗಳ ಹಿಂದೆ ಕೊಲ್ಲಂಗಾನ ಶ್ರೀ ನಿಲಯ ಶ್ರೀ ದುರ್ಗಾ ಪರಮೇಶ್ವರಿ ಸನ್ನಿಧಿಯಿಂದ ನೀಡಲಾಗುವ ‘ಪಟ್ಟಾಜೆ ಪ್ರಶಸ್ತಿ’ಗೂ (ಪ್ರಸಿದ್ಧ ಯಕ್ಷಗಾನ ಅರ್ಥಧಾರಿ ದಿ. ಪಟ್ಟಾಜೆ ವೆಂಕಟ್ರಮಣ ಭಟ್ಟರ ಸ್ಮರಣಾರ್ಥ) ಪಾತ್ರರಾಗಿದ್ದರು.
ಇವರ ಕಲಾಪರವಾದ ಎಲ್ಲಾ ಚಟುವಟಿಕೆ ಗಳಿಗೂ ಬೆನ್ನೆಲುಬಾಗಿ ನಿಂತು ನಿರಂತರ ಪ್ರೋತ್ಸಾಹವನ್ನು ನೀಡಿದವರು ಇವರ ಧರ್ಮಪತ್ನಿ ಶ್ರೀಮತಿ ರಾಜೇಶ್ವರಿ ಈಶ್ವರ ಭಟ್. ದಿ. ಬಳ್ಳಮೂಲೆ ಕೇಶವ ಭಟ್ ಹಾಗೂ ದಿ. ದೇವಕಿ ಅಮ್ಮ ದಂಪತಿಗಳ ದ್ವಿತೀಯ ಸುಪುತ್ರರಾಗಿ ತಾ. 28-11-1961ರಲ್ಲಿ ಜನಿಸಿದ ಈಶ್ವರ ಭಟ್ಟರು ಒಂದು ವರ್ಷದ ಹಿಂದೆ ಕೋಟೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಮ್ಮನ್ನಗಲಿ ವಿಧಿವಶ ರಾದುದು ನಂಬಲಸದಳ ಹಾಗೂ ಅಸಹನೀಯ. ು
ಲೇಖಕ: ಕೃಷ್ಣ ಭಟ್ ಅಡ್ಕ ಹಿಮ್ಮೇಳವಾದಕ, ಯಕ್ಷಗಾನ ಕಲಾವಿದ ನಿವೃತ್ತ ಅಧ್ಯಾಪಕ, ಯಕ್ಷತೂಣೀರ ಸಂಪ್ರತಿಷ್ಠಾನ (ರಿ.), ಕೋಟೂರು