Saturday, March 14, 2026
Home Blog Page 306

ಕಡಬದ್ವಯ ಸಂಸ್ಮರಣ ಯಕ್ಷಗಾನ ಪ್ರಶಸ್ತಿ – ಯಕ್ಷಗಾನ ಪ್ರದರ್ಶನ

ಕಡಬ ಸಂಸ್ಮರಣಾ ಸಮಿತಿಯ ಎರಡನೆಯ ವರ್ಷದ ‘ಕಡಬದ್ವಯ ಸಂಸ್ಮರಣ ಪ್ರಶಸ್ತಿ’ ಪ್ರದಾನ ಸಮಾರಂಭ ದಿನಾಂಕ 03.10.2021ರ ಆದಿತ್ಯವಾರ ಅಪರಾಹ್ನ ಸಮಯ 2ರಿಂದ ಸಂಜೆ ಘಂಟೆ 6.30ರ ವರೆಗೆ ನಡೆಯಲಿದೆ. ಈ ಕಾರ್ಯಕ್ರಮವು ಯಕ್ಷಗಾನ ಬಯಲಾಟ ಪ್ರದರ್ಶನದೊಂದಿಗೆ ಮೂಡಬಿದಿರೆಯ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ರಾಜಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದ ವಿವರ ಲಗತ್ತಿಸಲಾಗಿದೆ. 

ಶ್ರೀ ಹರಿಲೀಲಾ 75 – ಯಕ್ಷಜೋಡಿಗೆ ಗೌರವಾಭಿನಂದನೆ

ಯಕ್ಷಗಾನ ಇತಿಹಾಸ ಕಂಡ ಅಪರೂಪದ ಆದರೆ ಅಷ್ಟೇ ಅಪೂರ್ವವೂ ಆದ, ತೆಂಕುತಿಟ್ಟಿನ ಹಿರಿಯ ಮದ್ದಳೆಗಾರರಾದ ಶ್ರೀ ಹರಿನಾರಾಯಣ ಬೈಪಾಡಿತ್ತಾಯ ಮತ್ತು ಅವರ ಪತ್ನಿ ಖ್ಯಾತ ಭಾಗವತರಾದ ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ ಅವರ 75ನೇ ಹರೆಯದ ಸಂಭ್ರಮದಲ್ಲಿ ಅವರನ್ನು ಗೌರವಿಸಿ ಅಭಿನಂದಿಸುವ ಕಾರ್ಯಕ್ರಮ ‘ಶ್ರೀ ಹರಿಲೀಲಾ 75’ ಇದೆ ಬರುವ ನವಂಬರ್ 7, 2021ರ ಭಾನುವಾರದಂದು ಮೂಡಬಿದಿರೆಯ ಅಲಂಗಾರಿನ ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಅಭಿನಂದನಾ ಸಮಿತಿ ಮತ್ತು  ಬೈಪಾಡಿತ್ತಾಯ ದಂಪತಿಗಳ ಶಿಷ್ಯವೃಂದ ಮತ್ತು ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ. ದಿನಪೂರ್ತಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ವಿವರ ಲಗತ್ತಿಸಲಾಗಿದೆ. 

ಯಕ್ಷಪದ – 2

ಇದೊಂದು ಪದಬಂಧ. ಯಕ್ಷಗಾನದ ಜ್ಞಾನವನ್ನು ವೃದ್ಧಿಸಲು ಸಹಕಾರಿ. ಅದಕ್ಕಾಗಿ ಈ ಸಣ್ಣ ಪ್ರಯತ್ನ. ಈ ಪದಬಂಧವನ್ನು ತುಂಬಿಸಿ ಅಥವಾ ಸರಿಯಾದ ಉತ್ತರವನ್ನು ಶಬ್ದಗಳ ರೂಪದಲ್ಲಿ ಬರೆದು ನಮ್ಮ ವಾಟ್ಸಾಪ್ ಸಂಖ್ಯೆಗೆ ಎರಡು ದಿನಗಳೊಳಗೆ ಕಳುಹಿಸಿ. ಸರಿಯಾದ ಉತ್ತರವನ್ನು ಬರೆದ ಎಲ್ಲರ ಹೆಸರುಗಳನ್ನೂ ನಮ್ಮ ಮುಂದಿನ ಪದಬಂಧ ಲೇಖನದಲ್ಲಿ ಪ್ರಕಟಿಸಲಾಗುವುದು. ನಮ್ಮ ವಾಟ್ಸಾಪ್ ಸಂಖ್ಯೆ 9535618305

ಎಡದಿಂದ ಬಲಕ್ಕೆ:

1. ಶಿವನ ಮಗನ ಗೆಲುವು ಯಕ್ಷಗಾನ ಪ್ರಸಂಗವಾಗಿದೆ (6)

4. ಚಿಟ್ಟೆಯಂತೆ ನಾಟ್ಯ ಮಾಡುತ್ತಿದ್ದ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದ (3)

6. ಜಾನಕಿಸುತ (2)

7. ಶ್ರೀಕೃಷ್ಣನ ಮಗನನ್ನು ಹೀಗೆ ಕರೆಯಬಹುದೆ? (5)

8. ಯಕ್ಷಗಾನ ಮತ್ತು ರಂಗಸ್ಥಳವನ್ನು ಕತ್ತರಿಸಿ ಸೇರಿಸಿ. (4)

11. ಸಂಧಾನದಲ್ಲಿ ಪಾಂಡವರಿಗೆ ಕೇಳಲ್ಪಟ್ಟ ಐದು ಗ್ರಾಮಗಳಲ್ಲಿ ಒಂದು (4)

12. ಅಜ್ಞಾತವಾಸದಲ್ಲಿ ಧರ್ಮರಾಯ ಬಲಗಡೆಯಿಂದ ಎಡಕ್ಕೆ ಬರುತ್ತಿದ್ದಾನೆ! (4)

15. ನಳ ದಮಯಂತಿಯರ ಪ್ರೇಮ ಪ್ರಕರಣದಲ್ಲಿ ಈ ಪಕ್ಷಿಯ ಪಾತ್ರವೂ ಇತ್ತಂತೆ. (2)

17. ಬಾಗಿಲ ದೂತರು ಅಥವಾ ಗೂಢಚಾರರು ಬಂದು ರಾಜನಲ್ಲಿ ___________ ಒಪ್ಪಿಸುವುದು (3)

19. ಯಕ್ಷಗಾನದಲ್ಲಿ ಹೆಚ್ಚಾಗಿ ಮಂತ್ರವಾದಿಯ ಪಾತ್ರಗಳು, ಇದನ್ನು ಬಿಡಿಸುತ್ತೇವೆ ಎಂದು ಹೇಳುತ್ತಾರೆ. (4)

20. ರಾಮನಾಮವನ್ನು ಹೊಂದಿದ ಯಕ್ಷಗಾನ ಕಲಾವಿದನ ಹೆಸರಿನ ಪೂರ್ವದಲ್ಲಿ ಬರುವ ಸ್ಥಳನಾಮ. ಜೊತೆಗೆ ಕಟ್ಟೆ ಸೇರಿಕೊಂಡಿದೆ. (4)

ಮೇಲಿನಿಂದ ಕೆಳಕ್ಕೆ:

1. ‘ಪಾರ್ತಿಸುಬ್ಬನ ಯಕ್ಷಗಾನಗಳು’ ಎಂಬ ಪುಸ್ತಕದ ಸಂಪಾದಕರು (7)

2. ಕರ್ಣನ ಹುಟ್ಟಿನ ರಹಸ್ಯ ಗೊತ್ತಿದ್ದವರು ಹೀಗೂ ಕರೆಯಬಹುದಲ್ಲ (4)

3. ಯಕ್ಷಗಾನದಲ್ಲಿ ದೇವದೇವತೆಯರು ಪ್ರತ್ಯಕ್ಷರಾದಾಗ ಉಳಿದ ಪಾತ್ರಗಳು ಹೀಗೆ ಜಯಕಾರ ಹಾಕುತ್ತಾರೆ (4)

4. ದೇವೇಂದ್ರನ ಪತ್ನಿ ಕೆಳಗಿನಿಂದ ಮೇಲೇರುತ್ತಿದ್ದಾಳಲ್ಲ! (2)

5. ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಈ ಪಾತ್ರ ಕೆಳಗಿಂದ ಮೇಲೆ ಬರುತ್ತಾ ಉಂಟು (4)

6. ತೆಂಕುತಿಟ್ಟು ಯಕ್ಷಗಾನದ ಪ್ರಸಿದ್ಧ ಮನೆತನ. ಜೊತೆಯಲ್ಲಿ ನಾಲ್ಕು ಕಾಲಿನ ಪ್ರಾಣಿಯೂ ಇದೆ. (3)

9. ಯಕ್ಷಗಾನದ ನಾಟ್ಯ ಮಾಡಲು ಇದು ಬೇಕೇ ಬೇಕು. (4)

10. ದೇವಲೋಕಕ್ಕೆ ಹೀಗೆ ಹೆಸರು (2)

11. ಚಿನ್ನದ ಬಣ್ಣದ ಜಿಂಕೆ ಸತ್ತರೆ ಅದನ್ನು ಹೀಗೆ ಮಾಡಿ ಧರಿಸುತ್ತೇನೆ ಎಂದು ಸೀತೆ ಹೇಳುತ್ತಾಳೆ. (3)

13. ಪರಮಾತ್ಮನ ಇನ್ನೊಂದು ಹೆಸರು (4)

14. ಮಥುರಾಧಿಪತಿ ಸತ್ತನೇ ? ಪ್ರಸಂಗದ ಹೆಸರು. (4)

15. ಈ ರೂಪದ ದೇವರು ಹಿರಣ್ಯಾಕ್ಷನನ್ನು ಕೊಂದರು. (2)

16. ಇವರು ಖ್ಯಾತ ಅರ್ಥಧಾರಿ ಹೌದು. ಅವರ ಹೆಸರಿನ ಪೂರ್ವಪದ. ಇದರಲ್ಲಿ ಕಟ್ಟೆ ಇದೆ. (3)

18. ಪಂಡಿತರೆಂದೇ ಕರೆಸಿಕೊಂಡ ಅರ್ಥಧಾರಿಯ ಪೂರ್ವಾರ್ಧ. ಅದು ಅವರ ಊರಿನ ಹೆಸರು. (ಕೆಳಗಿನಿಂದ ಮೇಲಕ್ಕೆ) (2)


ಕಳೆದ ಯಕ್ಷಪದದ ಸರಿ ಉತ್ತರಗಳು:ಎಡದಿಂದ ಬಲಕ್ಕೆ: ಪೂರ್ವರಂಗ, ಕೆರೆಮನೆ, ಕೋದಂಡ, ಮೈರಾವಣ, ಮಕರಾಕ್ಷ, ಕೋಡಂಗಿ, ವಾದನ, ಮಂಗ, ಕುತ್ತು, ಸುರಪಾಲ, ಪಾರ್ತಿಸುಬ್ಬ, ಶಂತನು ಮೇಲಿನಿಂದ ಕೆಳಕ್ಕೆ: ವಿರಾಟಪರ್ವ, ಕೋರೆ, ಕೋಣ, ಯಕ್ಷಗಾನ ಮತ್ತು ನಾನು, ವಾಚಿಕ, ಕೋಡಗ, ಕೋಲುಳಿ ಸುಬ್ಬ, ಮಂದರ್ತಿ, ಕಪಾಲ, 

ಸರಿ ಉತ್ತರ ನೀಡಿದವರು:

1. ಶ್ರೀಮತಿ ಜ್ಯೋತಿ ಕೆ. ಭಟ್, ಅರಂಬೂರು, ಸುಳ್ಯ 

2. ಶ್ರೀ ಶಾಮ ಪ್ರಸಾದ್ ಪಟ್ಟಾಜೆ, ತುಮಕೂರು 

3. ಶ್ರೀಮತಿ ಜ್ಯೋತಿ ಎನ್. ಜಿ. ಹೊಸಹಿತ್ಲು 

ಹಿರಿಯ ಯಕ್ಷಗಾನ ಕಲಾವಿದ ಶ್ರೀ ಬಾಲಕೃಷ್ಣ ಭಟ್ ಕೂಟೇಲು ಅವರಿಗೆ ತಪಸ್ಯ ಕಲಾ ವೇದಿಕೆಯಿಂದ ಅಭಿನಂದನೆ

ಕಾಸರಗೋಡು: ತಪಸ್ಯ ಕಲಾವೇದಿಕೆಯ ‘ಉತ್ತರಾಡ ಕಿಳಿ’ ಎಂಬ  ವಿಶೇಷ ಕಾರ್ಯಕ್ರಮದ ಭಾಗವಾಗಿ ಹಿರಿಯ ಯಕ್ಷಗಾನ ಕಲಾವಿದ ಶ್ರೀ ಬಾಲಕೃಷ್ಣ ಭಟ್ ಕೂಟೇಲು ಅವರನ್ನು ಅವರ ನಿವಾಸಕ್ಕೆ ತೆರಳಿ ಅಭಿನಂದಿಸಲಾಯಿತು.
ಕೇರಳ ತಪಸ್ಯ ಕಲಾವೇದಿಕೆಯ ಕಾಸರಗೋಡು ಜಿಲ್ಲಾ ಘಟಕದಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.


ಶ್ರೀಯುತ ಬಾಲಕೃಷ್ಣ ಭಟ್ ಕೂಟೇಲು ಅವರು ಮೂರು ದಶಕಗಳ ಕಾಲ ಯಕ್ಷಗಾನ ಮೇಳದ ಕಲಾವಿದರಾಗಿ ಸೇವೆಗೈದವರು.
ಕುಂಬಳೆ ಶ್ರೀ ಶೇಷಪ್ಪನವರು ನಡೆಸುತ್ತಿದ್ದ ಉಪ್ಪಳ ಶ್ರೀ ಭಗವತಿ ಮೇಳ, ಶ್ರೀ ಬಳ್ಳಂಬೆಟ್ಟು ಶೀನಪ್ಪ ಭಂಡಾರಿಯವರು ನಡೆಸುತ್ತಿದ್ದ ಆದಿ ಸುಬ್ರಹ್ಮಣ್ಯ ಮೇಳ, ಶ್ರೀ ಕುಬಣೂರು ಶ್ರೀಧರ ರಾವ್ ನಡೆಸುತ್ತಿದ್ದ ಕೂಡ್ಲು ಮೇಳ, ಬಜ್ಪೆ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿಗಳು ನಡೆಸುತ್ತಿದ್ದ ಅಂಬಿಕಾ ಅನ್ನಪೂರ್ಣೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ, ಬಜ್ಪೆ, ಸುಂಕದ ಕಟ್ಟೆ ಮೇಳ, ಶ್ರೀ ಕಲ್ಲಾಡಿ ವಿಠಲ ಶೆಟ್ಟಿಯವರು ನಡೆಸುತ್ತಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ, ಕಟೀಲು ಮೇಳ ಈ ಮುಂತಾದ ಮೇಳಗಳಲ್ಲಿ ಎಲ್ಲಾ ಕಥಾಪಾತ್ರಗಳನ್ನು ಮಾಡುತ್ತಿದ್ದ ಪ್ರತಿಭಾವಂತ ಕಲಾವಿದರಾಗಿದ್ದರು. ಎಲೆಮರೆಯ ಕಾಯಿಯಂತಿದ್ದ ಇವರನ್ನು ತಪಸ್ಯ ಕಲಾವೇದಿಕೆಯು ಗುರುತಿಸಿ ಅಭಿನಂದಿಸಿದೆ.


ತಪಸ್ಯ ಕಾಸರಗೋಡು ಜಿಲ್ಲಾ ಘಟಕದ ಉಪಾಧ್ಯಕ್ಷ ಶ್ರೀ ಸುರೇಂದ್ರ ಕಾರವಲ್, ಕಾರ್ಯಾಧ್ಯಕ್ಷ  ಶ್ರೀ ಬಾಲಚಂದ್ರ, ಪದಾಧಿಕಾರಿಗಳಾದ ಪ್ರೊ. ಎ ಶ್ರೀನಾಥ್,  ಯಕ್ಷಗಾನ ನಾಟ್ಯಗುರು ಶ್ರೀ ದಿವಾಣ ಶಿವಶಂಕರ ಭಟ್, ಡಾ.ರತ್ನಾಕರ ಮಲ್ಲಮೂಲೆ ಇವರನ್ನೊಳಗೊಂಡ  ತಂಡವು, ಬಾಲಕೃಷ್ಣ ಭಟ್ ಅವರು ಈಗ ವಾಸಿಸುವ ಅವರ ಸಹೋದರರಾದ ದಿ. ಶ್ರೀನಿವಾಸ ಭಟ್ ಅವರ, ಕಟ್ಟತ್ತಡ್ಕ ಸಮೀಪದ, ವಿಕಾಸ ನಗರದಲ್ಲಿರುವ ಶ್ರೀನಿವಾಸಕ್ಕೆ ತೆರಳಿ, ಬಾಲಕೃಷ್ಣ ಭಟ್ ಅವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ, ಗೌರವಕಾಣಿಕೆಯನ್ನು ಸಮರ್ಪಿಸಿದರು. 


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರೇಂದ್ರನ್ ಕಾರವಲ್ ವಹಿಸಿದರು. ದಿವಾಣ ಶಿವಶಂಕರ ಭಟ್ ಸನ್ಮಾನಿತರ ಪರಿಚಯ ಮಾಡಿದರು. ಬಾಲಚಂದ್ರನ್ ಹಾಗೂ ಪ್ರೊ. ಎ ಶ್ರೀನಾಥ್ ಬಾಲಕೃಷ್ಣ ಅವರ ಸಾಧನೆಗಳ ಬಗ್ಗೆ ಮಾತನಾಡಿದರು.ಡಾ.ರತ್ನಾಕರ ಮಲ್ಲಮೂಲೆ ಸ್ವಾಗತಿಸಿ, ಅಜಿತ್ ಭಟ್ ಕೂಟೇಲು ವಂದಿಸಿದರು.


ಮನೆಯ ಸದಸ್ಯರಾದ ಶ್ರೀಮತಿ ಪ್ರೇಮಲತಾ, ರಂಜಿತ್ ಕೂಟೇಲು ಉಪಸ್ಥಿತರಿದ್ದರು.

ಹಿರಿಯ ಯಕ್ಷಗಾನ ಕಲಾವಿದ ಮಾನ್ಯ ತಿಮ್ಮಯ್ಯ ನಿಧನ

ಹಿರಿಯ ಯಕ್ಷಗಾನಾ ಕಲಾವಿದ ಮಾನ್ಯ ತಿಮ್ಮಯ್ಯ (93 ವರ್ಷ) ಇಂದು 09-09-2021 ರಂದು ಮುಂಜಾನೆ ಕಾಸರಗೋಡಿನ ಮಾನ್ಯದಲ್ಲಿ ನಿಧನ ಹೊಂದಿದರು. ಪುಂಡು ವೇಷ ಮತ್ತು ಸ್ತ್ರೀವೇಷದಲ್ಲಿ ವಿಶೇಷ ಪ್ರಸಿದ್ಧಿ ಪಡೆದ ಇವರು ಚೊಕ್ಕಾಡಿ, ಧರ್ಮಸ್ಥಳ, ಮಧೂರು, ಕದ್ರಿ, ಮುಲ್ಕಿ, ಉದ್ಯಾವರ ಸೇರಿದಂತೆ ಹತ್ತಾರು ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸಸಿಹಿತ್ಲು ಮೇಳದ ಯಜಮಾನರಾಗಿಯೂ ಕಾರ್ಯನಿರ್ವಹಿಸಿದ ಇವರು ಲಾಭ ನಷ್ಟದ ಲೆಕ್ಕ ಹಾಕದೆ ಯಕ್ಷಗಾನಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.

ಯಕ್ಷಗಾನ ಕಲಾರಂಗ ಸಂಸ್ಥೆಯು ತನ್ನ ಬೆಳ್ಳಿಹಬ್ಬದ ಸಂದರ್ಭದಲ್ಲಿ ಸಮ್ಮಾನಿಸಿ ಗೌರವಿಸಿದೆ. ಯಕ್ಷಗಾನ ಕಲಾರಂಗದ ಬಗ್ಗೆ ಅತೀವ ಅಭಿಮಾನ ಹೊಂದಿದ್ದ ಇವರು ಕಳೆದ ಮೂರು ವರ್ಷಗಳ ಹಿಂದೆ ಸಂಸ್ಥೆಯಲ್ಲಿ ತನ್ನ ಹೆಸರಿನ ಪ್ರಶಸ್ತಿಯನ್ನು ಸ್ಥಾಪಿಸಿದ್ದರು. ಮೃತರು ಬಂಧುಗಳು ಹಾಗೂ ಅಪಾರ ಯಕ್ಷಗಾನ ಅಭಿಮಾನಿಗಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

ಕಡಬ ಸಂಸ್ಮರಣಾ ಪ್ರಶಸ್ತಿ 2021 – ಮಿಜಾರು ಮೋಹನ ಶೆಟ್ಟಿಗಾರರಿಗೆ ಪ್ರಶಸ್ತಿ

ಶ್ರೀ ಕಡಬ ನಾರಾಯಣ ಆಚಾರ್ಯರದು ತೆಂಕುತಿಟ್ಟಿನ ಹಿಮ್ಮೇಳದ ಒಂದು ಪ್ರಖ್ಯಾತ ಹೆಸರು. ಸುಮಾರು 30ಕ್ಕೂ ಹೆಚ್ಚು ವರ್ಷಗಳ ಕಾಲ ಖ್ಯಾತ ಮದ್ದಳೆಗಾರರಾಗಿ ಯಕ್ಷಗಾನ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಗಳನ್ನು ಸಲ್ಲಿಸಿದವರು. ಅವರು ಅಸ್ತಂಗತರಾದ ನಂತರ ಅವರ ಸ್ಥಾನವನ್ನು ಸಮರ್ಥವಾಗಿ ತುಂಬಿದವರು ಅವರ ಸುಪುತ್ರರಾದ ಕಡಬ  ಶ್ರೀ ವಿನಯ ಆಚಾರ್ಯ. ಆದರೆ ವಿಧಿಲಿಖಿತವನ್ನು ತಪ್ಪಿಸುವವರಾರು? ಕಡಬ ವಿನಯ ಆಚಾರ್ಯರೂ ಯಕ್ಷರಂಗದ ಮದ್ದಳೆಗಾರರಾಗಿ ಸುಮಾರು 15 ವರ್ಷಗಳ ಕಾಲ ಸೇವೆ ಸಲ್ಲಿಸಿ ತಮ್ಮ ಪ್ರಸಿದ್ಧಿಯ ಉತ್ತುಂಗದಲ್ಲಿರುವಾಗಲೇ ಸಣ್ಣ ವಯಸ್ಸಿನಲ್ಲಿಯೇ ಈ ಲೋಕದ ಯಾತ್ರೆಯನ್ನು ಮುಗಿಸಿದರು.

ಶ್ರೀ ಕಡಬ ನಾರಾಯಣ ಆಚಾರ್ಯ ಮತ್ತು ಶ್ರೀ ಕಡಬ ವಿನಯ ಆಚಾರ್ಯರು ಯಕ್ಷಗಾನಕ್ಕೆ ಸಲ್ಲಿಸಿದ ಅಪೂರ್ವ ಸೇವೆಯನ್ನು ಮತ್ತು ಗಳಿಸಿದ ಕೀರ್ತಿಯನ್ನು ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಇವರಿಬ್ಬರ ಸ್ಮರಣಾರ್ಥ ಪ್ರತಿ ವರ್ಷವೂ ಯಕ್ಷಗಾನ ಕ್ಷೇತ್ರದಲ್ಲಿ ಅಪೂರ್ವ ಸಾಧನೆಯನ್ನು ಮಾಡಿದ ಕಲಾವಿದರನ್ನು ಗುರುತಿಸಿ ಅವರನ್ನು ಪ್ರಶಸ್ತಿಯ ಮೂಲಕ ಗೌರವಿಸಲಾಗುತ್ತಿದೆ.

ಶ್ರೀ ಮಿಜಾರು ಮೋಹನ ಶೆಟ್ಟಿಗಾರ್

ಈ ಬಾರಿಯ ಕಡಬ ಸಂಸ್ಮರಣಾ ಪ್ರಶಸ್ತಿಯನ್ನು ಖ್ಯಾತ ಹಿರಿಯ ಮದ್ದಳೆಗಾರರಾದ ಶ್ರೀ ಮಿಜಾರು ಮೋಹನ ಶೆಟ್ಟಿಗಾರರಿಗೆ ನೀಡಿ ಗೌರವಿಸಲಾಗುವುದು. ಕಡಬ ಸಂಸ್ಮರಣಾ ಸಮಿತಿಯ ಎರಡನೆಯ ವರ್ಷದ ‘ಕಡಬದ್ವಯ ಸಂಸ್ಮರಣ ಪ್ರಶಸ್ತಿ’ ಪ್ರದಾನ ಸಮಾರಂಭ ದಿನಾಂಕ 03.10.2021ರ ಆದಿತ್ಯವಾರ ಅಪರಾಹ್ನ ಸಮಯ 2ರಿಂದ ಸಂಜೆ ಘಂಟೆ 6.30ರ ವರೆಗೆ ನಡೆಯಲಿದೆ. ಈ ಕಾರ್ಯಕ್ರಮವು ಯಕ್ಷಗಾನ ಬಯಲಾಟ ಪ್ರದರ್ಶನದೊಂದಿಗೆ ಮೂಡಬಿದಿರೆಯ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ರಾಜಾಂಗಣದಲ್ಲಿ ನಡೆಯಲಿದೆ. 

ಯಕ್ಷಗಾನ ಕಲಾರಂಗದ ಅರ್ಥಧಾರಿ ಪ್ರಶಸ್ತಿಗೆ ವಿದ್ವಾನ್‌ ಉಮಾಕಾಂತ್ ಭಟ್ ಮತ್ತು ಸುರತ್ಕಲ್ ವಾಸುದೇವ ರಾವ್‌ ಆಯ್ಕೆ

ಉಡುಪಿಯ ಯಕ್ಷಗಾನ ಕಲಾರಂಗ ಪೆರ್ಲ ಕೃಷ್ಣ ಭಟ್ ಮತ್ತು ಮಟ್ಟಿ ಮುರಲೀಧರ ರಾವ್ ನೆನಪಿನಲ್ಲಿ ತಾಳಮದ್ದಲೆ ಅರ್ಥಧಾರಿಗಳಿಗೆ ನೀಡುವ‘ ಯಕ್ಷಗಾನ ಕಲಾರಂಗ ಪ್ರಶಸ್ತಿ’ಗೆ ಅನುಕ್ರಮವಾಗಿ ವಿದ್ವಾನ್‌ ಉಮಕಾಂತ್ ಭಟ್ ಮತ್ತು ಸುರತ್ಕಲ್ ವಾಸುದೇವ ರಾವ್‌ ಆಯ್ಕೆಯಾಗಿದ್ದಾರೆ.

ಉಮಾಕಾಂತ್ ಭಟ್‌ ಇವರು ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರಾಗಿದ್ದು ಪ್ರಸಿದ್ಧ ಅರ್ಥಧಾರಿಯಾಗಿ ಮಾನಿತರು. ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ವಿಶೇಷ ಪಾಂಡಿತ್ಯ ಆಗಾಧ ಪುರಾಣ ಜ್ಞಾನ ಹೊಂದಿದವರು. ಪ್ರವಚನಕಾರರಾಗಿ ಪರಿಚಿತರು.


ನಿವೃತ್ತ ಅಧ್ಯಾಪಕರಾದ ಸುರತ್ಕಲ್ ವಾಸುದೇವ ರಾವ್‌ ಅರ್ಥಧಾರಿಯಾಗಿ, ಯಕ್ಷಗಾನ ನಿರ್ದೇಶಕರಾಗಿ ಸಾಧನೆಗೈದವರು. ಮಹಿಳಾ ತಾಳಮದ್ದಲೆ ಸಂಘಟನೆಯ ಸ್ಥಾಪಕರಾಗಿಯೂ ಗುರುತಿಸಲ್ಪಟ್ಟಿದ್ದಾರೆ. ಪ್ರಶಸ್ತಿಯು ಪ್ರಶಸ್ತಿ ಪತ್ರ ಮತ್ತು ತಲಾ 20000/- ರೂಪಾಯಿ ನಗದನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ ಶ್ರೀ ಕೃಷ್ಣ ಮಠ ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ ಸೆಪ್ಟೆಂಬರ್ 26, ಭಾನುವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಂಪನ್ನಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಮ್. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಕ್ಷಪದ – ಪ್ರಶ್ನೆಗೆ ಉತ್ತರಿಸುವವರಾರು?

ಇದೊಂದು ಪದಬಂಧ. ಯಕ್ಷಗಾನದ ಜ್ಞಾನವನ್ನು ವೃದ್ಧಿಸಲು ಸಹಕಾರಿ. ಅದಕ್ಕಾಗಿ ಈ ಸಣ್ಣ ಪ್ರಯತ್ನ. ಈ ಪದಬಂಧವನ್ನು ತುಂಬಿಸಿ ಅಥವಾ ಸರಿಯಾದ ಉತ್ತರವನ್ನು ಶಬ್ದಗಳ ರೂಪದಲ್ಲಿ ಬರೆದು ನಮ್ಮ ವಾಟ್ಸಾಪ್ ಸಂಖ್ಯೆಗೆ ಎರಡು ದಿನಗಳೊಳಗೆ ಕಳುಹಿಸಿ. ಸರಿಯಾದ ಉತ್ತರವನ್ನು ಬರೆದ ಎಲ್ಲರ ಹೆಸರುಗಳನ್ನೂ ನಮ್ಮ ಮುಂದಿನ ಪದಬಂಧ ಲೇಖನದಲ್ಲಿ ಪ್ರಕಟಿಸಲಾಗುವುದು. ನಮ್ಮ ವಾಟ್ಸಾಪ್ ಸಂಖ್ಯೆ 9535618305

ಎಡದಿಂದ ಬಲಕ್ಕೆ:

1. ಯಕ್ಷಗಾನ ಪ್ರದರ್ಶನದ ಪ್ರಸಂಗ ಪ್ರದರ್ಶನಕ್ಕೆ ಮೊದಲು ಇದನ್ನು ಪ್ರದರ್ಶಿಸಲಾಗುತ್ತದೆ(4)

3. ಅಪ್ಪ,ಮಗ,ಮೊಮ್ಮಗ, ಮರಿಮಗ ಹೀಗೆ ಎಲ್ಲರೂ ಯಕ್ಷಗಾನದಲ್ಲಿ ತೊಡಗಿಸಿಕೊಂಡ ಮನೆಯ ಸಮೀಪ ಕೊಳವೂ ಇದೆಯಲ್ಲ! (4)

5. ರಾಮನ ಕೈಯ ಆಯುಧ (3)

7. ‘ನನ್ನ ಲಂಕಾಧೀಶ್ವರ’ ಎಂದು ಇಂಗ್ಲೀಷಿನಲ್ಲಿ ಹೇಳಿದರೆ ಹನುಮಂತನಿಗೆ ಕೋಪ ಬಂದೀತು! (4)

8. ಇವನು ಸತ್ತಾಗ ರಾವಣನು ಕ್ಲೇಶ ತಾಳಿದನು (4)

11. ಪ್ರಸಂಗ ಆರಂಭವಾಗುವ ಮೊದಲಿನ ವೇಷಗಳಲ್ಲಿ ಇದೂ ಒಂದು. ಚಿತ್ರವಿಚಿತ್ರ ಉಡುಪು ಧರಿಸುವ ಜನರನ್ನು ಕೂಡಾ ಹೀಗೆ ಕರೆಯುತ್ತಾರೆ! (3)

12. ಇದೂ ಜೊತೆಗಿದ್ದರೆ ಗಾಯನ ಕಳೆಗಟ್ಟುತ್ತದೆ. (3)

13. ಆಂಜನೇಯನನ್ನು ಆತನ ವಿರೋಧಿಗಳು ಹೀಗೆ ಕರೆಯಬಹುದು – ಬಲದಿಂದ ಎಡಕ್ಕೆ (2)

16. ತೆಂಕುತಿಟ್ಟು ಯಕ್ಷಗಾನದಲ್ಲಿ ಏರುಪದ್ಯಕ್ಕೆ ಹಾರುವುದನ್ನು ಹೀಗೂ ಹೇಳಬಹುದಲ್ಲ ! (2)

17. ದೇವೇಂದ್ರನ ಮತ್ತೊಂದು ಹೆಸರು (4)

18. ಯಕ್ಷಗಾನದ ಜನಕ (4)

19. ಇವನು ಯೋಜನಗಂಧಿಯನ್ನು ಮೋಹಿಸದಿದ್ದರೆ ಮಹಾಭಾರತ ನಡೆಯುತ್ತಿತ್ತೇ? (3)

ಮೇಲಿನಿಂದ ಕೆಳಕ್ಕೆ:

2. ಪಾಂಡವರ ಅಜ್ಞಾತವಾಸದ ಕತೆಯನ್ನು ಮಹಾಭಾರತದ ಈ ಭಾಗದಲ್ಲಿ ಓದಬಹುದು. – ಕೆಳಗಿನಿಂದ ಮೇಲಕ್ಕೆ (5)

4. ತಿತ್ತಿತ್ತೈ ತಾಳಕ್ಕೆ ಹೀಗೂ ಹೇಳುತ್ತಾರೆ. –  ಕೆಳಗಿನಿಂದ ಮೇಲಕ್ಕೆ (2)

5. ಮಾಲಿನಿಯು ತಪಸ್ಸು ಮಾಡಿ ಈ ರೂಪದ ಮಗನನ್ನು ಪಡೆದಳು. (2)

6. ಶೇಣಿ ಗೋಪಾಲಕೃಷ್ಣ ಭಟ್ಟರ ಆತ್ಮಚರಿತ್ರೆ (8)

9. ಆಂಗಿಕದ ಜೊತೆಗೆ ಯಕ್ಷಗಾನದ ನಾಲ್ಕಂಗಗಳಲ್ಲಿ ಇದೂ ಒಂದು. – ಕೆಳಗಿನಿಂದ ಮೇಲಕ್ಕೆ (3)

10. ದಾಕ್ಷಾಯಣಿಯನ್ನು ಶಿವನಿಗೆ ಕೊಟ್ಟದ್ದು, ಕುಸುಮಮಾಲೆಯನ್ನು ಇವನಿಗೆ ಕೊಟ್ಟ ಹಾಗಾಯಿತೆಂದೇ ದಕ್ಷ ಹೇಳುತ್ತಾನೆ. (3)

11. ತೆಂಕುತಿಟ್ಟಿನ ಪ್ರಖ್ಯಾತ ಬಣ್ಣದ ವೇಷಧಾರಿ ಕೈಯಲ್ಲಿ ಕೋಲು ಹಿಡಿದುಕೊಂಡಂತೆ ಕಾಣಿಸುತ್ತಿದೆ! (5)

14. ಬಡಗುತಿಟ್ಟಿನ ಪ್ರಖ್ಯಾತ ಹರಕೆ ಮೇಳ (3)

15. ಶಿವನು ಇದನ್ನು ಹಿಡಿದುಕೊಂಡು ಭಿಕ್ಷೆ ಬೇಡಿದ ಎಂದು ಪುರಾಣಕಥೆ ನಮಗೆ ತಿಳಿಸುತ್ತದೆ (3)

ಕರ್ಗಲ್ಲು ವಿಶ್ವೇಶ್ವರ ಭಟ್‌ ಇವರಿಗೆ ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ಪ್ರಶಸ್ತಿ

ಉಡುಪಿಯ ಯಕ್ಷಗಾನ ಕಲಾರಂಗ ಯಕ್ಷಗಾನದಲ್ಲಿ ವಿಶಿಷ್ಟ ಸಾಧನೆಗೈದ ಸಾಧಕರಿಗೆ ನೀಡುವ ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ಸ್ಮರಣಾರ್ಥ ನೀಡುವ‘ ಯಕ್ಷಗಾನ ಕಲಾರಂಗ ಪ್ರಶಸ್ತಿ’ಗೆ ಯಕ್ಷಗಾನ ಗುರು ಕರ್ಗಲ್ಲು ವಿಶ್ವೇಶ್ವರ ಭಟ್‌ ಆಯ್ಕೆಯಗಿದ್ದಾರೆ. ತೆಂಕುತಿಟ್ಟಿನ ಕುಣಿತದ ಸೂಕ್ಷ್ಮವನ್ನು ಬಲ್ಲ, ಅದನ್ನು ಅಷ್ಟೇ ಪರಿಣಾಮಕಾರಿಯಾಗಿ ತನ್ನ ಶಿಷ್ಯರಿಗೆ ಧಾರೆಯೆರೆಯುತ್ತಿರುವ ಇವರದ್ದು ವಿಶೇಷ ಪ್ರತಿಭೆ. ಹನ್ನೆರಡು ವರ್ಷ ಮೇಳದ ತಿರುಗಾಟ ಮಾಡಿ 1986ರಿಂದ ಯಕ್ಷಗಾನ ಅಧ್ಯಯನ ಅಧ್ಯಾಪನಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡವರು. ಪ್ರಶಸ್ತಿಯು ಪ್ರಶಸ್ತಿ ಪತ್ರ ಮತ್ತು 40000/- ರೂಪಾಯಿ ನಗದನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ ಶ್ರೀಕೃಷ್ಣ ಮಠ ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ ಸೆಪ್ಟೆಂಬರ್ 26, ಭಾನುವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಂಪನ್ನಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷಎಮ್. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.