Saturday, March 14, 2026
Home Blog Page 304

ಶ್ರೀ ಕೋಳ್ಯೂರು ವೈಭವ

ಕೋಳ್ಯೂರು ಎಂಬುದು ಒಂದು ಊರಿನ ಹೆಸರು. ಆ ಹೆಸರನ್ನು ಕೇಳಿದ ಕೂಡಲೆ ಕೋಳ್ಯೂರು ರಾಮಚಂದ್ರರಾಯರು ಕಣ್ಣೆದುರು ಬರುತ್ತಾರೆ. ಮೋಹಿನಿಯಂಥ ಶೃಂಗಾರ ಪಾತ್ರದಿಂದ ತೊಡಗಿ, ಚಂದ್ರಮತಿ, ದಮಯಂತಿಯಂತಹ ಕರುಣರಸದ ಪಾತ್ರಗಳನ್ನು ಪ್ರಮೀಳೆ, ಶಶಿಪ್ರಭೆಯಂಥ ವೀರರಸದ ಪಾತ್ರಗಳನ್ನು ಮಾಡಿ, ತುಳು ತಿಟ್ಟಿನಲ್ಲಿ ಬೊಮ್ಮಕ್ಕೆ ನಾಗ್ವಕ್ಕೆಯಂಥ ವಿಭಿನ್ನ ಮನೋಧರ್ಮದ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿ ಜನಮಾನಸದಲ್ಲಿ ನಿರಂತರ ವಿಹರಿಸುತ್ತಿರುವ ಕೋಳ್ಯೂರು ರಾಮಚಂದ್ರರಾಯರಿಗೆ ಈಗ ನವತ್ಯಬ್ದ ಸಡಗರ.

ತೊಂಬತ್ತು ವರ್ಷದ ಜೀವಮಾನವೆಂದರೆ ಸರಳ ಸಂಗತಿಯಲ್ಲ. ಅವರು ತಮ್ಮ ಕಿಶೋರ ಹರೆಯದಲ್ಲಿ 60 ವರ್ಷದ ಹಿರಿಯ ಕಲಾವಿದರೊಂದಿಗೆ ಒಡನಾಡಿದ ಅನುಭವವನ್ನು ಸಮಗ್ರವಾಗಿ ನೋಡಿದರೆ ಕೋಳ್ಯೂರು ರಾಮಚಂದ್ರರಾಯರು ನಮ್ಮೊಂದಿಗೆ ನಡೆದಾಡುತ್ತಿರುವ 150 ವರ್ಷಗಳ ಇತಿಹಾಸದ ದಾಖಲೆ ಪುಸ್ತಕ. ಇಂಥ ಯಕ್ಷಗಾನದ ವಿಶ್ವಕೋಶವಾಗಿರುವ ಕೇಂದ್ರ ಸಂಗೀತ ನಾಟಕ ಆಕಾಡೆಮಿ ಪ್ರಶಸ್ತಿ ಪುರಸ್ಕೃತ, ಮಂಗಳೂರು ವಿ.ವಿ ಗೌರವ ಡಾಕ್ಟರೇಟ್ ಪದವಿ ಪಡೆದ ಕೋಳ್ಯೂರು ರಾಮಚಂದ್ರರಾಯರನ್ನು ನವತ್ಯಬ್ದ ಸಂಭ್ರಮದ ನಿಮಿತ್ತ ಸಮ್ಮಾನಿಸಬೇಕೆಂದು ಸಮಾಲೋಚಿಸುತ್ತಿದ್ದೆವು.

ಆಗ ಕೋಳ್ಯೂರು ಅವರ ಕುಟುಂಬದ ಪ್ರತಿನಿಧಿಯಾಗಿ ಅವರ ತೃತೀಯ ಪುತ್ರ ಶ್ರೀಧರ ರಾವ್‌ ಅವರು ನಮ್ಮನ್ನು ಸಂಪರ್ಕಿಸಿ ಅಭಿನಂದನ ಕಾರ್ಯಕ್ರಮದ ಸಂಪೂರ್ಣ ವೆಚ್ಚವನ್ನು ಮಕ್ಕಳಾದ ನಾವೆಲ್ಲ ಸೇರಿ ಭರಿಸುವುದಾಗಿ ಹೇಳಿದರು. ಹೀಗೆ ಇದರ ಪ್ರಾಯೋಜಕತ್ವ ವಹಿಸಿ ಸಂಸ್ಥೆಗೆ ದೊಡ್ಡ ಸಹಕಾರ ನೀಡಿರುತ್ತಾರೆ.


ಅಕ್ಟೋಬರ್ 14 ರಿಂದ ನವೆಂಬರ್ 14ರ ವರೆಗೆಒಂದು ತಿಂಗಳ ಪರ್ಯಾಂತ ಕಾರ್ಯಕ್ರಮ ಆಯೋಜಿಸಿದ್ದೇವೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪೂಜ್ಯ ಧರ್ಮಾಧಿಕಾರಿಗಳಿಂದ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಎಡನೀರು ಮಠಾಧೀಶರು ನಮಗೆ ಅನುಗ್ರಹ ಮಂತ್ರಾಕ್ಷತೆಯನ್ನು ನೀಡಿದ್ದಾರೆ. ಪ್ರತಿದಿನ ಒಬ್ಬೊಬ್ಬ ಮೇರುಕಲಾವಿದರ ನೆನಪಿಗೆ ಕಾರ್ಯಕ್ರಮವನ್ನು ಸಮರ್ಪಿಸಲಾಗುತ್ತಿದೆ. ದಿನಕ್ಕೊಬ್ಬರಂತೆ ಕಲಾಪೋಷಕರು, ಮೇಳದ ಯಜಮಾನರು, ಕೋಳ್ಯೂರು ಅವರ ಒಡನಾಡಿ ಕಲಾವಿದರು ಮುಖ್ಯ ಅಭ್ಯಾಗತರಾಗಿ ಪಾಲ್ಗೊಳ್ಳಲಿದ್ದಾರೆ. ಪ್ರತಿದಿನ ಕೋಳ್ಯೂರು ಮುಖ್ಯ ಭೂಮಿಕೆಯಲ್ಲಿರುವ ಆಖ್ಯಾನವನ್ನು ಪ್ರದರ್ಶಿಸಲಾಗುವುದು.

ನವಂಬರ್ 14 ರಂದು ಬೆಳಿಗ್ಗೆ 9 ಗಂಟೆಯಿಂದ ದಿನಪೂರ್ತಿ ನಡೆಯುವ ಕಾರ್ಯಕ್ರಮದಲ್ಲಿ ಪರ್ಯಾಯ ಮಠಾಧೀಶರಾದ ಶ್ರೀ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಮತ್ತು ಸೋದೆ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರ ದಿವ್ಯೋಪಸ್ಥಿತಿಯಲ್ಲಿ ಈ ಕಾರ್ಯಕ್ರಮಗಳು ಜರಗಲಿದೆ. ಹಿರಿಯ ಕಲಾವಿದ ಪೆರ್ವೋಡಿ ನಾರಾಯಣ ಭಟ್‌ ಕಾರ್ಯಕ್ರಮ ಉದ್ಘಾಟಿಸಲಿದ್ದು ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ಸೇರಿದಂತೆ ಅನೇಕ ಹಿರಿಯ ಕಲಾವಿದರು ಭಾಗವಹಿಸಲಿದ್ದಾರೆ.

ಸುಮಾರು 90 ಜನ ಸ್ತ್ರೀ ವೇಷಧಾರಿಗಳನ್ನು ಕೋಳ್ಯೂರು ರಾಮಚಂದ್ರರಾಯರು ಗೌರವಿಸಲಿದ್ದಾರೆ. ಹಿರಿಯ ವಿದ್ವಾಂಸರುಗಳಾದ ಲಕ್ಷ್ಮೀಶ ತೋಳ್ಪಾಡಿ, ಅರುವಕೊರಗಪ್ಪ ಶೆಟ್ಟಿ, ಎ. ಪಿ. ಮಾಲತಿ, ಮಂಟಪ ಪ್ರಭಾಕರಉಪಾಧ್ಯ, ಎಚ್.ಎಸ್. ಬಲ್ಲಾಳ್, ಪಿ.ಎಸ್. ಎಡಪಡಿತ್ತಾಯ, ಪದ್ಮಾ ಸುಬ್ರಹ್ಮಣ್ಯಂ, ವಿದ್ವಾನ್ ಪಪ್ಪು, ವೇಣುಗೋಪಾಲ್, ಕಲಾಮಂಡಲಂ ಗೋಪಿ, ರಾಜ್ ಕೆ. ಶೆಟ್ಟಿ, ಪೆರುವೋಡಿ ನಾರಾಯಣ ಭಟ್‌ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು.

ಇದೇ ಸಂದರ್ಭದಲ್ಲಿ ಕೋಳ್ಯೂರ್‌ರ ಕುರಿತಾದ ಗ್ರಂಥ ಪ್ರಕಟಣೆಗೊಳ್ಳಲಿದೆ. ಹಿರಿಯ ವಿದ್ವಾಂಸರ ಮತ್ತು ಯುವ ಕಲಾವಿದರ ಘೋಷ್ಠಿ ಸಂಪನ್ನಗೊಳ್ಳಲಿದೆ. ಕೊನೆಯಲ್ಲಿ ಕಥಕಳಿ-ಯಕ್ಷಗಾನ ಜುಗಲ್‌ಬಂದಿ ಕಲಾಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ. ಪ್ರತಿದಿನದ ಕಾರ್ಯಕ್ರಮಗಳು ಯೂ-ಟ್ಯೂಬ್ ಸ್ಟ್ರೀಮ್ ನಲ್ಲಿ ಪ್ರಸಾರಗೊಳ್ಳಲಿದೆ.

ಪತ್ರಿಕಾ ಗೋಷ್ಠಿಯಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಮ್. ಗಂಗಾಧರ ರಾವ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು, ಕಾರ್ಯದರ್ಶಿ ಮುರಲಿ ಕಡೆಕಾರ್ ವಿವರ ನೀಡಿದರು. ಸಂಸ್ಥೆಯಉಪಾಧ್ಯಕ್ಷರಾದ ಎಸ್. ವಿ ಭಟ್, ವಿ.ಜಿ. ಶೆಟ್ಟಿ, ಕೋಶಾಧಿಕಾರಿ ಮನೋಹರ ಕೆ., ಜತೆ ಕಾರ್ಯದರ್ಶಿ ನಾರಾಯಣ ಎಮ್. ಹೆಗಡೆ ಹಾಗೂ ಕೋಳ್ಯೂರರ ಸುಪುತ್ರ ಶ್ರೀಧರ ರಾವ್ ಮತ್ತು ಮೊಮ್ಮಗ ನಟರಾಜ ಗೋಪಾಡಿ ಉಪಸ್ಥಿತರಿದ್ದರು.

ನಗುಮೊಗದ ಅನುಭವಿ, ಸಜ್ಜನ ಕಲಾವಿದ – ಶ್ರೀ ವಾಮನ್ ಕುಮಾರ್ ವೇಣೂರು

ಶ್ರೀ ವಾಮನ್ ಕುಮಾರ್ ವೇಣೂರು ಅವರು ತೆಂಕುತಿಟ್ಟಿನ ಅನುಭವಿ ಕಲಾವಿದರು. ಸುಮಾರು ಮೂವತ್ತು ವರ್ಷಗಳಿಂದ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಸ್ತ್ರೀ ವೇಷ ಮತ್ತು ಪುಂಡುವೇಷಧಾರಿಯಾಗಿ ಕಲಾಭಿಮಾನಿಗಳಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಗುಮೊಗದ ಸರಳ, ಸಜ್ಜನ ಕಲಾವಿದರಿವರು. ಪ್ರಸ್ತುತ ಕಿಶನ್ ಹೆಗ್ಡೆ ಸಂಚಾಲಕತ್ವದ ಹಿರಿಯಡಕ ಮೇಳದಲ್ಲಿ ಕಲಾವಿದರಾಗಿ ಮತ್ತು ಪ್ರಬಂಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಶ್ರೀ ವಾಮನ ಕುಮಾರರು ಬೆಳ್ತಂಗಡಿ ತಾಲೂಕು ವೇಣೂರು ಗ್ರಾಮದ ಗೋಳಿತ್ಯಾರು ಎಂಬಲ್ಲಿ ಶ್ರೀ ಅಣ್ಣು ದೇವಾಡಿಗ ಮತ್ತು ಶ್ರೀಮತಿ ಮೋನಮ್ಮ ದಂಪತಿಗಳ ಪುತ್ರನಾಗಿ 1974 ಎಪ್ರಿಲ್ 18ರಂದು ಜನಿಸಿದರು. ಅವರ ಮನೆಯವರು (ಹಿರಿಯರಿಂದಲೂ) ವೇಣೂರು ಅಜಿಲ ಸೀಮೆಯ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಪದಾರ್ಥಿಗಳಾಗಿ ಸೇವೆ ಸಲ್ಲಿಸುತ್ತಾ ಬಂದವರು. ಇವರ ಅಣ್ಣನೂ ಮಹಾಲಿಂಗೇಶ್ವರ ದೇವರ ಸೇವೆ ಮಾಡಿದ್ದರು. ಪ್ರಸ್ತುತ ವಾಮನ ಕುಮಾರರ ಅಳಿಯ ಈ ಕಾಯಕವನ್ನು ನಡೆಸುತ್ತಿದ್ದಾರೆ.

ವಾಮನಕುಮಾರರು ಓದಿದ್ದು ವೇಣೂರು ವಿದ್ಯೋದಯ ಶಾಲೆಯಲ್ಲಿ. ಎಂಟನೇ ತರಗತಿ ವರೆಗೆ. ಇವರೂ ಮದ್ದಳೆಗಾರರಾದ ಕೊಂಕಣಾಜೆ ಚಂದ್ರಶೇಖರ ಭಟ್ಟರೂ ಶಾಲೆಯಲ್ಲಿ ಸಹಪಾಠಿಗಳಾಗಿದ್ದರು. ಬಾಲ್ಯದಲ್ಲೇ ಯಕ್ಷಗಾನಾಸಕ್ತರಾಗಿದ್ದರು. ವೇಣೂರಿನಲ್ಲಿ ಪ್ರತಿ ಮಂಗಳವಾರ ಮೇಳದ ಆಟ ನಡೆಯುತ್ತಿತ್ತು. (ವಾರದ ಸಂತೆಯ ದಿನ) ಅಲ್ಲದೆ ಬೇರೆ ದಿನಗಳಲ್ಲಿಯೂ ಪ್ರದರ್ಶನಗಳು ನಡೆಯುತ್ತಿತ್ತು. ಶಾಲಾ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಪ್ರದರ್ಶನ ನೋಡುವ ಅವಕಾಶ ಇತ್ತು.

ಪ್ರದರ್ಶನಗಳನ್ನು ನೋಡುತ್ತಾ ತಾನೂ ಕಲಾವಿದನಾಗಬೇಕೆಂಬ ಆಸೆ ಚಿಗುರೊಡೆದಿತ್ತು. ಪುಂಡುವೇಷ ಮತ್ತು ಸ್ತ್ರೀವೇಷಧಾರಿಯಾಗಬೇಕೆಂದು ಬಯಸಿದ್ದರು. ನಾಟ್ಯ ಕಲಿಯುವ ತೀರ್ಮಾನವನ್ನೂ ಮಾಡಿದರು. ಬಾವನಾದ ಶ್ರೀ ಜಗದೀಶ ದೇವಾಡಿಗರು (ಅಕ್ಕನ ಗಂಡ) ಇವರನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದರು. 1989ರಲ್ಲಿ ಲಲಿತ ಕಲಾ ಕೇಂದ್ರದ ವಿದ್ಯಾರ್ಥಿಯಾಗಿ ಕರ್ಗಲ್ಲು ಶ್ರೀ ವಿಶ್ವೇಶ್ವರ ಭಟ್ಟರಿಂದ ಯಕ್ಷಗಾನ ಹೆಜ್ಜೆಗಾರಿಕೆ ಕಲಿತರು.

ಜಾಹೀರಾತು 

ಕಲಿಕಾ ಕೇಂದ್ರದಲ್ಲಿ ಶಂಭಯ್ಯ ಭಟ್, ಮಹೇಶ ಮಣಿಯಾಣಿ. ಪಂಜ ಕಿರಣ್ ಕುಮಾರ್, ಸುಜಯ ಹೆಗ್ಡೆ ಕುತ್ಲೂರು ಇವರ ಸಹಪಾಠಿಗಳಾಗಿದ್ದರು. ಕಲಿಕಾ ಕೇಂದ್ರದ ಮೊದಲ ಪ್ರದರ್ಶನ ಪಂಚವಟಿ ಪ್ರಸಂಗದಲ್ಲಿ ಸೀತೆಯಾಗಿ ರಂಗಪ್ರವೇಶ. ಬಳಿಕ ರತಿಕಲ್ಯಾಣ ಪ್ರಸಂಗದ ಮನ್ಮಥ. ಬಾಲಲೀಲೆ ಪ್ರಸಂಗದ ಶ್ರೀಕೃಷ್ಣನಾಗಿ ಅಭಿನಯಿಸುವ ಅವಕಾಶವು ಸಿಕ್ಕಿತ್ತು. 

ಶ್ರೀ ವಾಮನ ಕುಮಾರರ ಮೊದಲ ತಿರುಗಾಟ ಶ್ರೀ ಧರ್ಮಸ್ಥಳ ಮೇಳದಲ್ಲಿ. ಕಲಿಕಾ ಕೇಂದ್ರದ ಸಹಪಾಠಿ ಪಂಜ ಕಿರಣ್ ಕುಮಾರರ ಜತೆ ಬಾಲಗೋಪಾಲರಾಗಿ ವ್ಯವಸಾಯ ಆರಂಭ. ಎರಡು ವರ್ಷಗಳ ಕಾಲ ಧರ್ಮಸ್ಥಳ ಮೇಳದಲ್ಲಿ. ಹಿರಿಯ ಹೆಸರಾಂತ ಕಲಾವಿದರ ಒಡನಾಟ ಕಲಿಕೆಗೆ ಅವಕಾಶವಾಗಿತ್ತು. ಅದು ನನ್ನ ಭಾಗ್ಯ ಎಂದು ವಾಮನಕುಮಾರರು ಹೇಳುತ್ತಾರೆ. ಬಳಿಕ ಮೇಳದ ತಿರುಗಾಟ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದರು.

ಭಾಗವತರಾದ ಪೆರುವಡಿ ಶ್ರೀ ಶ್ಯಾಮ ಭಟ್ಟರ ಕೇಳಿಕೆಯಂತೆ ಕದ್ರಿ ಮೇಳಕ್ಕೆ ಸೇರಿದ್ದರು. ಖ್ಯಾತ ಹಿರಿಯ ಕಲಾವಿದ ಡಿ. ಮನೋಹರ ಕುಮಾರರ ಸಂಚಾಲಕತ್ವದ ಕದ್ರಿ ಮೇಳದಲ್ಲಿ 4 ವರ್ಷಗಳ ವ್ಯವಸಾಯ ಮಾಡಿದ್ದರು. ಈ ಸಂದರ್ಭದಲ್ಲಿ ವಾಮನ ಕುಮಾರರ ವೇಷಗಳನ್ನು ರಂಗದಲ್ಲಿ ಮೆರೆಸಿದವರು ಶ್ರೀ ಮನೋಹರ ಕುಮಾರರು. ತಿರುಮಲೆತ ತೀರ್ಥ ಪ್ರಸಂಗದ ತೇಜಾಕ್ಷಿ ಪಾತ್ರ. ಕೇವಲ ಒಂದು ಪದ್ಯದ ಪಾತ್ರ. ತೇಜಾಕ್ಷನ ಪಾತ್ರ ನಿರ್ವಹಿಸುತ್ತಿದ್ದ ಡಿ. ಮನೋಹರ ಕುಮಾರರು ಅವಕಾಶಗಳನ್ನಿತ್ತು ವಾಮನ ಕುಮಾರರ ತೇಜಾಕ್ಷಿ ಪಾತ್ರವನ್ನು ಮೆರೆಸಿದ್ದರು. (ಅಣ್ಣ-ತಂಗಿ ಪಾತ್ರ)

ಡಿ.ಮನೋಹರ ಕುಮಾರರ ಜತೆ ಕೋಟಿ- ಚೆನ್ನಯ, ಕಾಂತಾಬಾರೆ ಬೂದಬಾರೆ ಮೊದಲಾದ ಜೋಡಿ ಪಾತ್ರಗಳಲ್ಲಿ ಮಿಂಚಲು ಅವಕಾಶವಾಗಿತ್ತು. ಈ ಸಂದರ್ಭ ಕೊಕ್ಕಡ ಈಶ್ವರ ಭಟ್ ,ಮತ್ತು ಬಂಟ್ವಾಳ ಜಯರಾಮ ಆಚಾರ್ಯರ ಒಡನಾಟ ಕಲಿಕೆಗೆ ಅನುಕೂಲವಾಗಿತ್ತು. ಗೆಜ್ಜೆದ ಪೂಜೆ ಪ್ರಸಂಗದಲ್ಲಿ ನಾಗನಾಗಿ ಅಭಿನಯಿಸಿ ಖ್ಯಾತರಾದ ಮನೋಹರಕುಮಾರರು ವಾಮನಕುಮಾರರ ರವಿವರ್ಮನ ಪಾತ್ರವೂ ರಂಜಿಸುವಂತೆ ಸಹಕರಿಸಿದ್ದರು.

ಪುರಾಣ ಪ್ರಸಂಗಗಳಲ್ಲಿ ಸಿದ್ದಕಟ್ಟೆ ಶ್ರೀ ವಿಶ್ವನಾಥ ಶೆಟ್ಟರ ನಿರ್ದೇಶನ, ಸಹಕಾರಗಳು ವಾಮನ ಕುಮಾರರಿಗೆ ದೊರಕಿತ್ತು. ಅವರ ಜತೆ, ಜತೆಪಾತ್ರಗಳಲ್ಲಿ ರಂಜಿಸಿದರು. (ವಿಷ್ಣು-ಸುದರ್ಶನ, ಶ್ರೀರಾಮ-ತರಣಿಸೇನ ಮೊದಲಾದವುಗಳು). ಕದ್ರಿ ಮೇಳದಲ್ಲಿ ನಾಲ್ಕು ವರ್ಷಗಳ ತಿರುಗಾಟ. ಬಳಿಕ ಶ್ರೀ ಕಿಶನ್ ಹೆಗ್ಡೆ ಅವರ ಸಂಚಾಲಕತ್ವದ ಮಂಗಳಾದೇವಿ ಮೇಳದಲ್ಲಿ. ಆರಂಭದಿಂದ ಕೊನೆ ತನಕ ಹದಿನೈದು ವರ್ಷ ಸದ್ರಿ ಮೇಳದಲ್ಲಿ ವ್ಯವಸಾಯ. ಖ್ಯಾತ ಕಲಾವಿದರ ಒಡನಾಟ ದೊರಕಿತ್ತು. ಖ್ಯಾತ ಪುಂಡುವೇಷಧಾರಿಯಾಗಿದ್ದ ಶ್ರೀ ಉದಯ ನಾವಡರೊಂದಿಗೆ ಜತೆ ವೇಷಗಳಲ್ಲಿ ರಂಜಿಸಿದ್ದರು.

ಬಾರ್ಕೂರ್ದ ಬಂಗಾರಿ ಪ್ರಸಂಗದಲ್ಲಿ ಉದಯ ನಾವಡರು ವೀರವರ್ಮನಾಗಿಯೂ, ವಾಮನ ಕುಮಾರರು ಕನಕವರ್ಮನಾಗಿಯೂ ಕೋಟಿ ಚೆನ್ನಯ ಪ್ರಸಂಗದಲ್ಲಿ ನಾವಡರು ಕೋಟಿ ಪಾತ್ರದಲ್ಲಿಯೂ ವಾಮನ ಕುಮಾರರು ಚೆನ್ನಯ ಪಾತ್ರದಲ್ಲೂ ಹೆಸರು ಗಳಿಸಿದ್ದರು. ಮಂಗಳಾದೇವಿ ಮೇಳದಲ್ಲಿ ಪದ್ಯಾಣ ಗಣಪತಿ ಭಟ್, ಪೊಲ್ಯ, ಶಬರಾಯರು, ಸತ್ಯನಾರಾಯಣ ಪುಣಿಂಚತ್ತಾಯ, ರವೀಂದ್ರ ಶೆಟ್ಟಿ, ಕಡಬ, ಉಪಾಧ್ಯಾಯರು, ಲಕ್ಷ್ಮೀಶ ಅಮ್ಮಣ್ಣಾಯ, ಪಡ್ರೆ ಶ್ರೀಧರ, ಪಡ್ರೆ ಆನಂದ, ದಾಸಪ್ಪ ರೈ, ಶಿವರಾಮ ಜೋಗಿ, ಕೊಳ್ತಿಗೆ, ಮನೋಹರ ಕುಮಾರ್, ರಾಧಾಕೃಷ್ಣ ನಾವಡ, ಅಂಬಾ ಪ್ರಸಾದ, ಸರಪಾಡಿ ಅಶೋಕ ಶೆಟ್ಟಿ, ಉದಯ ನಾವಡ, ಸಿದ್ದಕಟ್ಟೆ ಸದಾಶಿವ ಶೆಟ್ಟಿ, ಸೀತಾರಾಮ ಕುಮಾರ್, ಮವ್ವಾರು ಬಾಲಕೃಷ್ಣ, ವೇಣೂರು ಸದಾಶಿವ ಆಚಾರ್ಯ, ವೇಣೂರು ಸದಾಶಿವ ಕುಲಾಲ್ ಮೊದಲಾದವರ ಒಡನಾಟ ದೊರಕಿತ್ತು.

ಮಳೆಗಾಲದಲ್ಲಿ ಪುತ್ತೂರು ಶ್ರೀಧರ ಭಂಡಾರಿಗಳ ನೇತೃತ್ವದ ಪುತ್ತೂರು ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯಲ್ಲಿ ಹತ್ತು ವರ್ಷ ಕಲಾಸೇವೆ ಮಾಡುವ ಅವಕಾಶವಾಗಿತ್ತು.(2008ರಿಂದ ತೊಡಗಿ) ಶ್ರೀಧರ ಭಂಡಾರಿ ಅವರ ನಿರ್ದೇಶನದಲ್ಲಿ ಪುರಾಣ ಪ್ರಸಂಗಗಳ ಅನುಭವವನ್ನೂ ಪಡೆದುಕೊಂಡಿದ್ದರು. ಅಲ್ಲದೆ ಈ ತಂಡದಲ್ಲಿ ಖ್ಯಾತ ಕಲಾವಿದರ ಒಡನಾಟವೂ ಪುರಾಣ ಪ್ರಸಂಗಗಳಲ್ಲಿ ವೇಷ ಮಾಡಲು ಸಹಕಾರಿಯಾಗಿತ್ತು.

ಪುರಾಣ ಪ್ರಸಂಗದ ಹೆಚ್ಚಿನ ಎಲ್ಲಾ ಪುಂಡುವೇಷ ಮತ್ತು ಸ್ತ್ರೀ ಪಾತ್ರಗಳಲ್ಲಿ ವಾಮನ ಕುಮಾರರು ಅಭಿನಯಿಸಿದ್ದಾರೆ. ಚಂಡಮುಂಡರು, ಬಬ್ರುವಾಹನ, ವಿಷ್ಣು, ಶ್ರೀಕೃಷ್ಣ, ಭಾರ್ಗವ, ಶ್ರೀರಾಮ, ಲಕ್ಷ್ಮಣ, ಶ್ವೇತಕುಮಾರ, ತ್ರಿಲೋಕಸುಂದರಿ, ಪದ್ಮಾವತಿ, ಲಕ್ಷ್ಮಿ ಅಲ್ಲದೆ ಅನೇಕ ಶೃಂಗಾರಕ್ಕೆ ಸಂಬಂಧಿಸಿದ ಸ್ತ್ರೀ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶ್ವೇತಕುಮಾರ ಚರಿತ್ರೆ ಪ್ರಸಂಗದಲ್ಲಿ ಶ್ವೇತಕುಮಾರ, ತ್ರಿಲೋಕಸುಂದರಿ, ಸಿತಕೇತ, ರಂಭೆ ಈ ನಾಲ್ಕೂ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀನಿವಾಸ ಕಲ್ಯಾಣ ಪ್ರಸಂಗದಲ್ಲಿ ಕಿರಾತನ ಪಾತ್ರವನ್ನೂ, ಪದ್ಮಾವತಿಯ ಪಾತ್ರವನ್ನೂ ಮಾಡಬಲ್ಲರು.

ಭೃಗುಲಾಂಛನ ಪ್ರಸಂಗದಲ್ಲಿ ನಿಷ್ನು ಮತ್ತು ಲಕ್ಷ್ಮಿ ಪಾತ್ರಗಳನ್ನು ಮಾಡಿದ ಅನುಭವಿ. ಸುದರ್ಶನ ವಿಜಯ ಪ್ರಸಂಗದಲ್ಲಿ ವಿಷ್ಣು, ಲಕ್ಷ್ಮಿ, ಸುದರ್ಶನ ಎಂಬ ಮೂರೂ ಪಾತ್ರಗಳನ್ನು ಮಾಡಿರುತ್ತಾರೆ. ಇದು ವಾಮನಕುಮಾರರ ಪ್ರತಿಭಾ ಸಾಮರ್ಥ್ಯ. ಪುರಾಣ ಪ್ರಸಂಗಗಳ ಪರಿಪೂರ್ಣ ಅನುಭವ ದೊರೆಯಲು ಪುತ್ತೂರು ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯ ತಿರುಗಾಟ ಕಾರಣ ಎಂಬುದು ವಾಮನಕುಮಾರರ ಅಭಿಪ್ರಾಯ.

ಕಸೆ ಸ್ತ್ರೀ ವೇಷಗಳಲ್ಲೂ ವಾಮನ ಕುಮಾರರು ಕಾಣಿಸಿಕೊಂಡರು. ಮೀನಾಕ್ಷಿ, ಶಶಿಪ್ರಭೆ, ಭ್ರಮರಕುಂತಳೆ, ಪ್ರಮೀಳೆ, ಸ್ವಯಂಪ್ರಭೆ ಮೊದಲಾದ ಪಾತ್ರಗಳನ್ನೂ ನಿರ್ವಹಿಸಿದ್ದರು. ಶ್ರೀ ವಾಮನ ಕುಮಾರರು ಕಳೆದ ಎಂಟು ವರ್ಷಗಳಿಂದ ಹಿರಿಯಡಕ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಈಗ ಸದ್ರಿ ಮೇಳದ ಮ್ಯಾನೇಜರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಾಂಸಾರಿಕವಾಗಿಯೂ ಇವರು ತೃಪ್ತರು. ಇವರ ಪತ್ನಿ ಶ್ರೀಮತಿ ಆಶಾ ವಾಮನಕುಮಾರ್. ಗೃಹಣಿ. ಆಶಾ, ವಾಮನಕುಮಾರ್ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರಿ ಕುಮಾರಿ ವಂಶಿ ಎಂಟನೇ ತರಗತಿಯಲ್ಲಿ ಓದುತ್ತಿದ್ದಾಳೆ. ಪುತ್ರ ಮಾ| ಭುವನ 4ನೇ ತರಗತಿಯಲ್ಲಿ ಓದುತ್ತಿದ್ದಾನೆ. ವಾಮನಕುಮಾರರು ಮಕ್ಕಳಿಬ್ಬರಿಗೂ ಯಕ್ಷಗಾನ ಹೆಜ್ಜೆಗಾರಿಕೆ ಕಲಿಸಿದ್ದಾರೆ. ಮಕ್ಕಳು ಶಾಲಾ ಪ್ರದರ್ಶನಗಳಲ್ಲಿ ವೇಷ ಮಾಡಿರುತ್ತಾರೆ. ಮಕ್ಕಳಿಗೆ ಉಜ್ವಲ ಭವಿಷ್ಯವು ಸಿದ್ಧಿಸಲಿ. ಶ್ರೀ ವಾಮನಕುಮಾರರಿಂದ ಕಲಾ ಸೇವೆಯು ನಿರಂತರವಾಗಿ ನಡೆಯಲಿ. ಕಲಾ ಮಾತೆಯ ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು. 

ಲೇಖಕ: ರವಿಶಂಕರ್ ವಳಕ್ಕುಂಜ 

 

ಅನುಭವಿ ಸಹೃದಯಿ ಭಾಗವತ ಶ್ರೀನಿವಾಸ ಬಳ್ಳಮಂಜ

ಫೋಟೋ ಕೃಪೆ: ಶ್ರೀ ಮಧುಸೂದನ ಅಲೆವೂರಾಯ 

ಶ್ರೀ ಶ್ರೀನಿವಾಸ ಬಳ್ಳಮಂಜ ಅವರು ಕಟೀಲು ಮೇಳದ ಭಾಗವತರು. ಪ್ರಸ್ತುತ ಕಟೀಲು ನಾಲ್ಕನೇ ಮೇಳದಲ್ಲಿ ಪ್ರಧಾನ ಭಾಗವತರಾಗಿ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಯಕ್ಷಗಾನದಲ್ಲಿ ಭಾಗವತ ಸ್ಥಾನದ ಹೊಣೆಗಾರಿಕೆಯು ವಿಶಾಲವಾದುದು. ನಾಲ್ಕಾರು ಪದ್ಯಗಳನ್ನು ಹೇಳಿದವರು ಭಾಗವತರಾಗಲಾರರು. ಯಶಸ್ವಿ ಪ್ರದರ್ಶನಕ್ಕೆ ಬೇಕಾದ ಅಂಶಗಳನ್ನೆಲ್ಲಾ ಅವನು ತಿಳಿದಿರಬೇಕು.

ತೆಂಕು ತಿಟ್ಟಿನ ಹಿರಿಯ ಭಾಗವತರಾದ ಕುರಿಯ ಶ್ರೀ ಗಣಪತಿ ಶಾಸ್ತ್ರಿಗಳು ಪ್ರದರ್ಶನ ಮುಗಿದ ಮೇಲೆ ಆಟ ಹೇಗಾಗಿದೆ? ಎಂದು ಕೇಳುತ್ತಿದ್ದರು. ಪ್ರದರ್ಶನವು ಚೆನ್ನಾಗಿರಬೇಕೆಂಬ ತುಡಿತವು ಅವರಿಗಿತ್ತು. ಕಲಾವಿದರು ನಿಮ್ಮ ಪದ್ಯ ಚೆನ್ನಾಗಿತ್ತು ಎಂದು ಹೇಳಿದರೆ, ‘ನೀವು ಚೆನ್ನಾಗಿ ದುಡಿದಿರಿ,ಆದ ಕಾರಣ ನನ್ನ ಪದ್ಯ ಒಳ್ಳೆಯದಾಯಿತು” ಎಂದು ಹೇಳುತ್ತಿದ್ದರು. ಯಕ್ಷಗಾನವು ಸ್ವಪ್ರತಿಷ್ಠೆಗಾಗಿ ಇರುವ ವೇದಿಕೆಯಲ್ಲ, ಕಲಾವಿದರು ತಂಡವಾಗಿ ಮುನ್ನಡೆದು ಪ್ರದರ್ಶನದ ಗೆಲುವಿಗೆ ಕಾರಣರಾಗಬೇಕು ಎಂಬ ಸಂದೇಶವು ಇದರಲ್ಲಿದೆ.

“ಭಾಗವತನು ಯಶಸ್ವೀ ಪ್ರದರ್ಶನದ ಶ್ರೇಯಸ್ಸನ್ನು ಪಡೆಯುವುದರ ಜತೆಗೆ ಸೋಲಿನ ಹೊಣೆಯನ್ನೂ ಹೊರಬೇಕು. ಸೋಲಿಗಾಗಿ ಮತ್ತೊಬ್ಬರ ಕಡೆಗೆ ಬೆರಳು ತೋರಿಸಬಾರದು” ಇದು ಉಭಯ ತಿಟ್ಟುಗಳ ಖ್ಯಾತ ಭಾಗವತ ಕೀರ್ತಿಶೇಷ ಕಡತೋಕಾ ಮಂಜುನಾಥ ಭಾಗವತರ ಮಾತುಗಳು. ಇದರಿಂದ ಯಕ್ಷಗಾನದಲ್ಲಿ ಭಾಗವತನ ಸ್ಥಾನ, ಹೊಣೆಗಳೇನು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.

ಹೀಗೆ ಪ್ರದರ್ಶನಗಳ ಗೆಲುವಿಗಾಗಿಯೇ ಶ್ರಮಿಸಿದವರನೇಕರು. ಅಂತಹ ಹಿರಿಯರ ಆದರ್ಶವೇ ಉದಯೋನ್ಮುಖರಿಗೆ ಸ್ಪೂರ್ತಿಯಾಗುತ್ತದೆ. ಆಗಿರಬೇಕು. ಈ ವಿಚಾರಗಳಲ್ಲಿ ಶ್ರೀನಿವಾಸ ಬಳ್ಳಮಂಜ ಅವರನ್ನು ಅಭಿನಂದಿಸಲೇ ಬೇಕು. ಪ್ರದರ್ಶನವು ಉತ್ತಮವಾಗಿ ನಡೆಯಬೇಕೆಂಬ ತುಡಿತವುಳ್ಳ ಕಲಾವಿದರಿವರು. ಅದಕ್ಕಾಗಿ ಅವರು ಮಾಡುವ ಪೂರ್ವ ಸಿದ್ಧತೆಯನ್ನು ಮೆಚ್ಚಲೇ ಬೇಕು. ಸದಾ ಅಧ್ಯಯನಶೀಲರು. ಕಲಾವಿದರಿಗೆ ಹೀಗೆಯೇ ಸಾಗೋಣ ಎಂದು ಸೂಚಿಸಿಯೇ ರಂಗವೇರುತ್ತಾರೆ. 

ಶ್ರೀನಿವಾಸ ಬಳ್ಳಮಂಜ ಅವರ ಹುಟ್ಟೂರು ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮ. ಶ್ರೀ ಬಾಬು ಗೌಡ ಮತ್ತು ಶ್ರೀಮತಿ ಬೂದಮ್ಮ ದಂಪತಿಗಳಿಗೆ ಮಗನಾಗಿ 1976ನೇ ಇಸವಿಯಲ್ಲಿ ಜನನ. ಶ್ರೀ ಬಾಬು ಗೌಡರು ಉತ್ತಮ ಕೃಷಿಕರು. ಹತ್ತು ವರ್ಷಗಳ ಕಾಲ ಕಟೀಲು ಮೇಳದಲ್ಲಿ ನೇಪಥ್ಯ ಕಲಾವಿದರೂ ಆಗಿದ್ದರು. ಶ್ರೀನಿವಾಸರ ಅಣ್ಣ ಶ್ರೀ ಸಿದ್ದಪ್ಪ ಗೌಡರು ಕಟೀಲು ಮೇಳದಲ್ಲಿ 30 ವರ್ಷಗಳ ಕಾಲ ನೇಪಥ್ಯ ಕಲಾವಿದರಾಗಿದ್ದರು.

ಶ್ರೀನಿವಾಸ ಅವರಿಗೆ ಎಳವೆಯಲ್ಲೇ ಯಕ್ಷಗಾನಾಸಕ್ತಿ ಇತ್ತು. ತಂದೆ, ಅಣ್ಣನ ಜತೆ ಹೋಗಿ ಮೇಳದ ಪ್ರದರ್ಶನಗಳನ್ನು ನೋಡುತ್ತಿದ್ದರು. ಊರಲ್ಲಿ ನಡೆಯುವ ಇತರ ಪ್ರದರ್ಶನಗಳನ್ನೂ ನೋಡುತ್ತಿದ್ದರು. ಇವರಿಗೆ ಭಾಗವತಿಕೆಯಲ್ಲಿ ಅತಿಯಾದ ಆಸಕ್ತಿ.  ಭಾಗವತನಾಗಬೇಕೆಂಬ ಆಸೆಯು ಮೂಡಿತ್ತು. ವಿದ್ಯಾರ್ಜನೆ ಹತ್ತನೇ ತರಗತಿ ವರೆಗೆ ಸಾಗಿತ್ತು. ಒಂದನೇ ತರಗತಿಯಿಂದ ಏಳರ ವರೆಗೆ ಪಾಲಡ್ಕ ಸರಕಾರೀ ಶಾಲೆಯಲ್ಲಿ. ಎಂಟರಿಂದ ಹತ್ತರ ವರೆಗೆ ಗೇರುಕಟ್ಟೆ ಸರಕಾರೀ ಹೈಸ್ಕೂಲಿನಲ್ಲಿ.

1995ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತಕಲಾ ಕೇಂದ್ರಕ್ಕೆ ಹಿಮ್ಮೇಳ ಕಲಿಕೆಗಾಗಿ ಸೇರಿಕೊಂಡರು. ಶ್ರೀ ಹರಿನಾರಾಯಣ ಬೈಪಾಡಿತ್ತಾಯ ಮತ್ತು ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರಿಂದ ಭಾಗವತಿಕೆ ಅಭ್ಯಾಸ (ಬೈಪಾಡಿತ್ತಾಯ ದಂಪತಿಗಳು). ಬಳ್ಳಮಂಜ ಶ್ರೀನಿವಾಸರ ಮೊದಲ ತಿರುಗಾಟ ಕಟೀಲು ಮೂರನೆಯ ಮೇಳದಲ್ಲಿ. ಸಂಗೀತಗಾರನಾಗಿ. ರಂಗನಾಯಕ ಖ್ಯಾತಿಯ ಕುರಿಯ ಶ್ರೀ ಗಣಪತಿ ಶಾಸ್ತ್ರಿಗಳ ಜತೆಯಲ್ಲಿ. ಖ್ಯಾತ ಹಿಮ್ಮೇಳ ಕಲಾವಿದರಾದ ಪದ್ಯಾಣ ಶಂಕರನಾರಾಯಣ ಭಟ್ಟರೂ ಅಡೂರು ಗಣೇಶ ರಾಯರೂ ಜತೆಗಿದ್ದರು. ಗೇರುಕಟ್ಟೆ ಗಂಗಯ್ಯ ಶೆಟ್ಟರು, ಪುಂಡರೀಕಾಕ್ಷ ಉಪಾಧ್ಯಾಯರು, ಕೈರಂಗಳ ಕೃಷ್ಣ ಮೂಲ್ಯ ಮೊದಲಾದ ಕಲಾವಿದರ ಒಡನಾಟವೂ ದೊರಕಿತ್ತು.

ಜಾಹೀರಾತು 

ಕಲಿಕೆಗೆ ಇದು ಅತ್ಯಂತ ಸಹಕಾರಿಯಾಗಿತ್ತು. ಏಳು ವರ್ಷಗಳ ಕಾಲ ಸಂಗೀತಗಾರನಾಗಿ ಮೂರನೇ ಮೇಳದಲ್ಲಿ ತಿರುಗಾಟ. ಪೂರ್ವರಂಗಕ್ಕೆ ಪದ್ಯ ಹೇಳಿ ಬೆಳಗಿನ ವರೆಗೂ ಚಕ್ರತಾಳ ಬಾರಿಸುತ್ತಿದ್ದರು. ಪ್ರಸಂಗ ನಡೆ, ಆಟ ಆಡಿಸುವ ಕ್ರಮವನ್ನು ಅರಿಯಲು ಅವಕಾಶವಾಗಿತ್ತು.

ಬಳಿಕ ಏಳು ವರ್ಷಗಳ ಕಾಲ ಭಾಗವತನಾಗಿ ಸುಂಕದಕಟ್ಟೆ ಮೇಳದಲ್ಲಿ ಕಲಾಸೇವೆ. ತ್ರಿವಿಕ್ರಮ ಶೆಣೈ, ಚಿದಂಬರ ಬಾಬು, ಕರುಣಾಕರ ಶೆಟ್ಟಿಗಾರ್, ದಯಾನಂದ ಶೆಟ್ಟಿಗಾರ್ ಮೊದಲಾದ ಕಲಾವಿದರ ಒಡನಾಟ ದೊರಕಿತ್ತು. ಎಂಟು ವರ್ಷಗಳ ಕಾಲ ಸದ್ರಿ ಮೇಳದಲ್ಲಿ ಕಲಾಸೇವೆ. ಮತ್ತೆ ಕಟೀಲು ಮೇಳಕ್ಕೆ ಪುನರಾಗಮನ. ಒಂದನೇ ಮೇಳದಲ್ಲಿ ತಿರುಗಾಟ. ಅಭಿನವ ವಾಲ್ಮೀಕಿ ಬೊಟ್ಟಿಕೆರೆ ಶ್ರೀ ಪುರುಷೋತ್ತಮ ಪೂಂಜ ಮತ್ತು ಮಣಿಮುಂಡ ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿಗಳ ಜತೆ.

ಮತ್ತೆ ಕಟೀಲು 5ನೇ ಮೇಳದಲ್ಲಿ ಪಟ್ಲ ಶ್ರೀ ಸತೀಶ ಶೆಟ್ಟರ ಜತೆ ಕಲಾ ಸೇವೆ. ಬಳಿಕ ನಾಲ್ಕನೆಯ ಮೇಳಕ್ಕೆ. ಕಳೆದ ಎರಡು ವರ್ಷಗಳಿಂದ ಕಟೀಲು ನಾಲ್ಕನೇ ಮೇಳದ ಮುಖ್ಯ ಭಾಗವತರಾಗಿ ಕಲಾಸೇವೆ ಮಾಡುತ್ತಿದ್ದಾರೆ. ವರ್ಷವೂ ಹೊಸ ಹೊಸ ಪ್ರಸಂಗಗಳನ್ನು ಆಡಿಸಬೇಕೆಂಬ ಆಸಕ್ತಿ ತೋರುತ್ತಾರೆ. ಆ ನಿಟ್ಟಿನಲ್ಲಿ ಅತ್ಯುತ್ತಮವಾಗಿ ಪ್ರಯತ್ನಿಸುತ್ತಾರೆ. ಪ್ರಸ್ತುತ ಕೆಲವು ಕಡೆ ಹಿಮ್ಮೇಳ ತರಗತಿಗಳನ್ನೂ ನಡೆಸುತ್ತಿದ್ದಾರೆ.

ಉತ್ತಮ ಕೃಷಿಕರೂ ಆಗಿರುತ್ತಾರೆ. ಕಳೆದ ವರ್ಷ ಹೊಸತಾಗಿ ಮನೆಯನ್ನು ಕಟ್ಟಿಸಿ ‘ಯಕ್ಷ ವೈಭವ’ ಎಂದು ಹೆಸರಿಸಿದ್ದಾರೆ. ಶ್ರೀನಿವಾಸ ಬಳ್ಳಮಂಜ ಅವರ ಪತ್ನಿ ಶ್ರೀಮತಿ ಸವಿತ. ದಂಪತಿಗಳಿಗೆ ಮೂವರು ಮಕ್ಕಳು. ಮಾಸ್ಟರ್ ರಕ್ಷಿತ್ ಆರನೇ ತರಗತಿ ವಿದ್ಯಾರ್ಥಿ. ಮಾಸ್ಟರ್ ಮೋಕ್ಷಿತ್ ೩ನೇ ತರಗತಿ ವಿದ್ಯಾರ್ಥಿ. ಮಾಸ್ಟರ್ ಸನ್ವಿತ್ ಗೆ ನಾಲ್ಕು ವರ್ಷ ಪ್ರಾಯ. ಪತ್ನಿ ಮಕ್ಕಳೊಂದಿಗೆ ಸಂತೃಪ್ತ ಜೀವನ ಶ್ರೀನಿವಾಸ ಬಳ್ಳಮಂಜರದ್ದು. ಇವರಿಂದ ಇನ್ನಷ್ಟು ಕಲಾಸೇವೆಯು ನಡೆಯಲಿ. ಕಲಾಮಾತೆಯು ಸಕಲ ಭಾಗ್ಯಗಳನ್ನೂ ಕರುಣಿಸಲಿ ಎಂಬ ಹಾರೈಕೆಗಳು. 

ಲೇಖಕ: ರವಿಶಂಕರ್ ವಳಕ್ಕುಂಜ 

ಶ್ರೀ ಹರಿಲೀಲಾ 75 – ಬೈಪಾಡಿತ್ತಾಯ ದಂಪತಿಗಳ ಅಮೃತ ಮಹೋತ್ಸವ

ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ ಮತ್ತು ಶ್ರೀ ಹರಿನಾರಾಯಣ ಬೈಪಾಡಿತ್ತಾಯ ಇವರನ್ನು ಯಕ್ಷಗಾನ ಕಲಾಭಿಮಾನಿಗಳೆಲ್ಲರೂ ಬಲ್ಲರು. ಕಲಾ ಕ್ಷೇತ್ರದಲ್ಲಿ ಬೈಪಾಡಿತ್ತಾಯ ದಂಪತಿಗಳೆಂದೇ ಇವರು ಕರೆಸಿಕೊಂಡವರು. ಕಲಾವಿದರಾಗಿ, ತೆಂಕುತಿಟ್ಟು ಯಕ್ಷಗಾನ ಹಿಮ್ಮೇಳದ  ದಂಪತಿಗಳಾಗಿ ಯಕ್ಷಗಾನ ಕಲೆಗೆ ಇವರ ಕೊಡುಗೆಗಳು ಅನುಪಮವಾದುದು.

ತಾವು ಅಭ್ಯಸಿಸಿದ ಕಲಾವಿದ್ಯೆಯನ್ನು ಕಲಿಕಾಸಕ್ತರಿಗೆ ಹೇಳಿಕೊಟ್ಟು ಅನೇಕ ಶಿಷ್ಯರನ್ನು ಸಿದ್ಧಗೊಳಿಸಿ ಕಲಾ ಮಾತೆಯ ಮಡಿಲಿಗಿಕ್ಕಿದ ಕೀರ್ತಿ ಇವರಿಗಿದೆ. ಬೈಪಾಡಿತ್ತಾಯ ದಂಪತಿಗಳ ಅನೇಕ ಶಿಷ್ಯರು ಇಂದು ವೃತ್ತಿ ಕಲಾವಿದರಾಗಿ ತೆಂಕುತಿಟ್ಟಿನ ಮೇಳಗಳಲ್ಲಿ ರಂಜಿಸುತ್ತಿರುವುದು ಅತ್ಯಂತ ಸಂತೋಷವನ್ನು ನೀಡುವ ವಿಚಾರ.

ಶ್ರೀ ಹರಿನಾರಾಯಣ ಬೈಪಾಡಿತ್ತಾಯರು ಕಳೆದ ಆರು ದಶಕಗಳಿಂದ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಶ್ರೀಮತಿ ಲೀಲಾವತಿ ಹರಿನಾರಾಯಣ ಬೈಪಾಡಿತ್ತಾಯರು ಕಳೆದ ಐದು ದಶಕಗಳಿಂದ ಕಲಾಸೇವೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಬೈಪಾಡಿತ್ತಾಯ ದಂಪತಿಗಳು ಕಳೆದ ಐದು ದಶಕಗಳಿಂದ ಜತೆ ಜತೆಯಾಗಿ ಕಲಾಸೇವೆಯನ್ನು ಮಾಡುತ್ತಾ ಮುನ್ನಡೆದವರು. ಶ್ರೀ ಹರಿನಾರಾಯಣ ಬೈಪಾಡಿತ್ತಾಯರಿಗೆ ಈಗ ನಡೆಯುತ್ತಿರುವುದು 76ನೆಯ ವಯಸ್ಸು. (13. 11. 1946) ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರಿಗೆ 75ನೆಯ ವಯಸ್ಸು. (23. 05. 1947) ಇವರೊಳಗೆ ವಯಸ್ಸಿನ ಅಂತರ ಕೇವಲ ಆರು ತಿಂಗಳು.

ಜಾಹೀರಾತು 

ಬೈಪಾಡಿತ್ತಾಯ ಗುರು ದಂಪತಿಗಳು ಬದುಕಿನ ಎಪ್ಪತ್ತೈದು ವಸಂತಗಳನ್ನು ಕಂಡವರು. ನೋವು ನಲಿವುಗಳನ್ನೂ ಉಂಡವರು. ಕಷ್ಟ ಸುಖಗಳನ್ನು ಸಮನಾಗಿ ಸ್ವೀಕರಿಸಿ ಮುನ್ನಡೆದವರು. ಕರ್ತವ್ಯವನ್ನು ಮಾಡುವಾಗ ನೋವು ಗಣನೆಗೆ ಬಾರದು. ನಲಿವನ್ನು ಸಂಭ್ರಮಿಸಲು ಸಮಯವೆಲ್ಲಿ? ಯಕ್ಷಗಾನ ಕಲಾಸೇವೆಯು ತಮ್ಮ ಉಸಿರೆಂದೇ ಭಾವಿಸಿ ಬದುಕಿದವರು. ದಂಪತಿಗಳು ಜತೆಯಾಗಿಯೇ ಮೇಳಗಳಲ್ಲಿ ಕಲಾಸೇವೆಯನ್ನು ಮಾಡಿದವರು.

ಮೇಳದ ವ್ಯವಸಾಯವನ್ನು ನಿಲ್ಲಿಸಿದ ನಂತರ ಹಿಮ್ಮೇಳ ಗುರುಗಳಾಗಿ ಕಲಿಕಾಸಕ್ತರಿಗೆ ತರಬೇತಿ ನೀಡುತ್ತಾ ಬಂದಿರುತ್ತಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾ ಕೇಂದ್ರದ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದರು. ( ಶ್ರೀ ಹರಿನಾರಾಯಣ ಬೈಪಾಡಿತ್ತಾಯರು ಹನ್ನೆರಡು ವರ್ಷ ಮತ್ತು ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರು ಹತ್ತು ವರ್ಷ) ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ವತಿಯಿಂದ ನಡೆಯುತ್ತಿದ್ದ ತರಬೇತಿ ಕೇಂದ್ರದಲ್ಲೂ ಗುರುಗಳಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಮಂಗಳೂರು ಪರಿಸರದ ಅನೇಕ ಕಡೆ ತರಬೇತಿ ನೀಡಿದ್ದರು.

ಬೈಪಾಡಿತ್ತಾಯ ಗುರು ದಂಪತಿಗಳು ಬದುಕಿನ ಎಪ್ಪತ್ತೈದು ವಸಂತಗಳನ್ನು ಕಂಡ ಈ ಸಂದರ್ಭದಲ್ಲಿ ಶ್ರೀ ಹರಿಲೀಲಾ – 75 ಎಂಬ ಕಾರ್ಯಕ್ರಮದಡಿ ನಡೆಸಿ ಸಂಭ್ರಮಿಸಿ ಗೌರವಿಸಬೇಕೆಂದು ಅವರ ಶಿಷ್ಯಂದಿರೆಲ್ಲರೂ ನಿರ್ಧರಿಸಿರುವುದು ಅಭಿನಂದನೀಯವಾದುದು. ಗುರುದಂಪತಿಗಳನ್ನು ನಮಿಸಿ ಗೌರವಿಸುವ ಈ ಸತ್ಕಾರ್ಯವು ಕಲಾಮಾತೆಯ ಅನುಗ್ರಹದಿಂದ ಯಶಸ್ವಿಯಾಗಿ ಸುಂದರವಾಗಿ ನಡೆಯಲಿ. ಎಲ್ಲೆಡೆಯಿಂದ ಎಲ್ಲಾ ರೀತಿಯ ಸಹಕಾರಗಳು ಗುರು ದಂಪತಿಗಳ ಶಿಷ್ಯಂದಿರಿಗೆ ದೊರಕಲಿ. ಬೈಪಾಡಿತ್ತಾಯ ದಂಪತಿಗಳಿಗೆ ಸಕಲ ಭಾಗ್ಯಗಳನ್ನೂ ಶ್ರೀ ದೇವರು ಅನುಗ್ರಹಿಸಲಿ. ಅವರಿಂದ ಇನ್ನಷ್ಟು ಕಲಾಸೇವೆಯು ನಡೆಯುವಂತಾಗಲಿ.

ವೃತ್ತಿ ಕಲಾವಿದರುಗಳಾದ ಶ್ರೀ ಕಡಬ ರಾಮಚಂದ್ರ ರೈ, ಅಡೂರು ಲಕ್ಷ್ಮೀನಾರಾಯಣ ರಾವ್, ಅಡೂರು ಹರೀಶ್ ರಾವ್, ಶಂಕರ ಭಟ್ ಕಲ್ಮಡ್ಕ, ಆನಂದ ಗುಡಿಗಾರ್ ಕೆರ್ವಾಶೆ, ಕಿನಿಲಕೋಡಿ ಗಿರೀಶ ಭಟ್, ಕೊಂಕಣಾಜೆ ಚಂದ್ರಶೇಖರ ಭಟ್, ಬೊಳಿಂಜಡ್ಕ ಗುರುಪ್ರಸಾದ್, ಗಿರೀಶ್ ರೈ ಕಕ್ಕೆಪದವು ಮತ್ತು ಸೋಮಶೇಖರ ಭಟ್ ಕಾಶಿಪಟ್ನ, ರಾಜೇಶ್ ಆಚಾರ್ಯ  ಇವರು ಶ್ರೀ ಹರಿನಾರಾಯಣ ಬೈಪಾಡಿತ್ತಾಯರ ಶಿಷ್ಯಂದಿರು. ಕರುಣಾಕರ ಶೆಟ್ಟಿಗಾರ್ ಕಾಶಿಪಟ್ನ, ಶ್ರೀನಿವಾಸ ಬಳ್ಳಮಂಜ, ಮತ್ತು ಶ್ರೀಮತಿ ಶಾಲಿನಿ ಹೆಬ್ಬಾರ್ ಅವರು ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರ ಶಿಷ್ಯಂದಿರು. ಅಲ್ಲದೆ ಇನ್ನೂ ಅನೇಕ ಉದಯೋನ್ಮುಖರು ಬೈಪಾಡಿತ್ತಾಯ ದಂಪತಿಗಳ ಶಿಷ್ಯರಾಗಿ ಕಲಾಸೇವೆ ಮಾಡುತ್ತಿದ್ದಾರೆ. ದಿ| ಕಡಬ ನಾರಾಯಣ ಆಚಾರ್ಯರೂ ಬೈಪಾಡಿತ್ತಾಯರ ಶಿಷ್ಯರು. 

ಶ್ರೀ ಹರಿಲೀಲಾ-75 ಎಂಬ ಈ ಸತ್ಕಾರ್ಯವು ನವೆಂಬರ್ 7ರಂದು ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ನಡೆಯಲಿರುವುದು. ಶ್ರೀ ನಟರಾಜನ ಸನ್ನಿಧಿಯಲ್ಲಿ. ಹರನು ನಟರಾಜನೆಂದೇ ಖ್ಯಾತನು. ಯಕ್ಷಗಾನ ಕಲೆಗೆ ಸದಾ ಪ್ರೋತ್ಸಾಹ, ನೆರವನ್ನು ನೀಡುವ ಶ್ರೀ ಕ್ಷೇತ್ರದ ಆಡಳಿತವನ್ನು ಕಲಾಭಿಮಾನಿಗಳೆಲ್ಲರೂ ಪ್ರಶಂಸಿಸಲೇ ಬೇಕು. ಕಲಾಸೇವೆಯು ನಿರಂತರವಾಗಿ ನಡೆಯುವ ಪುಣ್ಯಕ್ಷೇತ್ರವಿದು.

ಜಾಹೀರಾತು 

ಬೆಳಗ್ಗೆ ದೀಪ ಪ್ರಜ್ವಲನದೊಂದಿಗೆ ಕಾರ್ಯಕ್ರಮವು ಆರಂಭವಾಗುತ್ತದೆ. ಬಳಿಕ ಕಿರಿಯ ಶಿಷ್ಯರಿಂದ ಸಭಾಲಕ್ಷಣ, ಪೂರ್ವರಂಗ ಪ್ರದರ್ಶನವಿದೆ. ತದನಂತರ ಸಂಪೂರ್ಣ ಮಹಿಳಾ ಹಿಮ್ಮೇಳದ ಯಕ್ಷ ನಾದೋತ್ಸವ, ವೃತ್ತಿಪರ ಶಿಷ್ಯರಿಂದ ಯಕ್ಷ ನಾದೋತ್ಸವ, ಶಿಷ್ಯರಿಂದ ಯಕ್ಷಗಾನ ಪ್ರದರ್ಶನ ನಡೆಯಲಿರುವುದು. ಅಪರಾಹ್ನ ಶ್ರೀ ಹರಿಲೀಲಾ ಯಕ್ಷಾಭಿನಂದನಂ- ಶಿಷ್ಯಾಭಿವಂದನಂ ಕಾರ್ಯಕ್ರಮ ನಡೆಯುತ್ತದೆ.

ಶ್ರೀ ಹರಿಲೀಲಾ-75 ಯಕ್ಷಗಾನ ಕಲಾಯಾನ ಹಾಗೂ ಯಕ್ಷಗಾನ ಲೀಲಾವಳಿ ಎಂಬ ಅಭಿನಂದನಾ ಗ್ರಂಥ ಪ್ರಕಟವಾಗಲಿದೆ. ಶ್ರೀ ಹರಿಲೀಲಾ ಯಕ್ಷಗಾನ ಪ್ರಶಸ್ತಿ – 2021ನ್ನು ಹಿರಿಯ ಮದ್ದಳೆಗಾರರಾದ ಶ್ರೀ ಲಕ್ಷ್ಮೀಶ ಅಮ್ಮಣ್ಣಾಯರಿಗೆ ನೀಡಿ ಗೌರವಿಸುವ ಕಾರ್ಯಕ್ರಮವು ನಡೆಯಲಿದೆ. ಅಲ್ಲದೆ ಈ ಪ್ರಶಸ್ತಿಯನ್ನು ಪ್ರತಿವರ್ಷವೂ ಸಾಧಕ ಹಿಮ್ಮೇಳ ಕಲಾವಿದರಿಗೆ ಡಿ.ಜಿ ಯಕ್ಷ ಫೌಂಡೇಶನ್ ವತಿಯಿಂದ ಪ್ರದಾನ ಮಾಡಲಾಗುವುದೆಂಬ ನಿರ್ಣಯವಾಗಿರುವುದು ಸಂತಸದ ವಿಚಾರ. ಈ ಸತ್ಕಾರ್ಯಕ್ಕೆ ಕಲಾಭಿಮಾನಿಗಳೆಲ್ಲರ ವತಿಯಿಂದ ಶುಭಾಶಯಗಳು. 

ಲೇಖಕ: ರವಿಶಂಕರ್ ವಳಕ್ಕುಂಜ 

 

ಅನುಭವಿ ಹಿರಿಯ ಕಲಾವಿದ ಬಾಯಾರು ಶ್ರೀ ರಘುನಾಥ ಶೆಟ್ಟಿ

ಯಾವುದೇ ಕ್ಷೇತ್ರದಲ್ಲಿ ಹಿರಿಯ ಅನುಭವಿಗಳು ಜತೆಗಿದ್ದರೆ ಕಿರಿಯರಿಗೆ, ಅಭ್ಯಾಸಿಗಳಿಗೆ ಅದರಿಂದ ಅನುಕೂಲವಾಗುತ್ತದೆ. ಹಿರಿಯರ ಅನುಭವ,ವಿದ್ಯೆಗಳನ್ನು ಪಡೆದು ಕಲಿಕಾಸಕ್ತರು ಮುನ್ನಡೆಯಲು ಅವಕಾಶವಾಗುತ್ತದೆ. ಅಧ್ಯಯನಕ್ಕೆ, ಮಾಹಿತಿ ಸಂಗ್ರಹಕ್ಕೆ, ಮುನ್ನಡೆಸುವುದಕ್ಕೆ ಹಿರಿಯ ಅನುಭವಿಗಳ ಉಪಸ್ಥಿತಿಯು ಇರಲೇಬೇಕು.

ಯಕ್ಷಗಾನ ಕಲಾ ಕ್ಷೇತ್ರದಲ್ಲಿ ಇಂದು ಅನೇಕ ಹಿರಿಯ ಅನುಭವಿ ಕಲಾವಿದರು ವ್ಯವಸಾಯ ಮಾಡುತ್ತಿದ್ದಾರೆ. ಶ್ರೀ ರಘುನಾಥ ಶೆಟ್ಟಿ ಬಾಯಾರು ಅವರು ತೆಂಕುತಿಟ್ಟಿನ ಹಿರಿಯ ಅನುಭವಿ ಕಲಾವಿದರು. ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದರು. 1964ರಿಂದ ಯಕ್ಷಗಾನ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. 

ಅನುಭವೀ ಕಲಾವಿದ ಶ್ರೀ ರಘುನಾಥ ಶೆಟ್ಟರ ಹುಟ್ಟೂರು ಕಾಸರಗೋಡು ಜಿಲ್ಲೆಯ ಬಾಯಾರು ಸಮೀಪದ ಕುಳ್ಯಾರು. 1950 ಜೂನ್ 6ರಂದು ಪೈವಳಿಕೆ ಶ್ರೀ ಐತಪ್ಪ ಶೆಟ್ಟಿ ಮತ್ತು ಶ್ರೀಮತಿ ಕಲ್ಯಾಣಿ ಶೆಟ್ಟಿ ದಂಪತಿಗಳ ಹಿರಿಯ ಮಗನಾಗಿ ಜನನ. ಪೈವಳಿಕೆ ಶ್ರೀ ಐತಪ್ಪ ಶೆಟ್ಟರನ್ನು ಕಲಾಭಿಮಾನಿಗಳೆಲ್ಲರೂ ತಿಳಿದಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ಖ್ಯಾತ ಸ್ತ್ರೀ ವೇಷಧಾರಿಯಾಗಿ ಮೆರೆದವರು.

ಜಾಹೀರಾತು 

ರಘುನಾಥ ಶೆಟ್ಟಿ ಬಾಯಾರು ಅವರು ಓದಿದ್ದು 6ನೇ ತರಗತಿ ವರೆಗೆ. ಬಾಯಾರು ಹೆದ್ದಾರಿ ಶಾಲೆಯಲ್ಲಿ. ಎಳವೆಯಲ್ಲಿ ಯಕ್ಷಗಾನಾಸಕ್ತಿ ಇತ್ತು. ತೀರ್ಥರೂಪರ ಜತೆ ತೆರಳಿ ಯಕ್ಷಗಾನ ಪ್ರದರ್ಶನಗಳನ್ನು ನೋಡುವ ಅವಕಾಶವೂ ಸಿಕ್ಕಿತ್ತು. ತೀರ್ಥರೂಪರಿಂದ ಯಕ್ಷಗಾನ ಹೆಜ್ಜೆಗಾರಿಕೆಯನ್ನೂ ಕಲಿತಿದ್ದರು. ಆದರೂ ಮೇಳದ ತಿರುಗಾಟ  ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದರು. ಎರಡು ವರ್ಷ ಟೈಲರಿಂಗ್ ಕೆಲಸ ಮಾಡಿದ್ದರು. ಬಳಿಕ ಯಕ್ಷಗಾನ ಕಲೆಯತ್ತ ಆಕರ್ಷಿತರಾಗಿ ಅದನ್ನೇ ವೃತ್ತಿಯಾಗಿ ಸ್ವೀಕರಿಸಿದರು. 

ಬಾಯಾರು ರಘುನಾಥ ಶೆಟ್ಟರ ಮೊದಲ ತಿರುಗಾಟ 1964ರಲ್ಲಿ. ಕಲ್ಲಾಡಿ ಶ್ರೀ ವಿಠಲ ಶೆಟ್ಟರ ಸಂಚಾಲಕತ್ವದ ಕರ್ನಾಟಕ ಮೇಳ. ಆಗ ಸೀನ್ ಸೀನರಿ ಪ್ರದರ್ಶನಗಳು ರಂಜಿಸುತ್ತಿದ್ದ ಕಾಲ. ಬಾಲ ಕಲಾವಿದನಾಗಿ ತಿರುಗಾಟ. ತ್ರಿಜನ್ಮ ಮೋಕ್ಷ ಪ್ರಸಂಗದಲ್ಲಿ ಕೌಪೀನಧಾರಿಯಾಗಿ ಸನತ್ಕುಮಾರರ ವೇಷದಲ್ಲಿ ಕಾಣಿಸಿಕೊಂಡಿದ್ದರು. ಸನಕ, ಸನಂದನ, ಸತ್ಸುಜಾತ, ಸನತ್ಕುಮಾರರಾಗಿ ಪೆರುವಾಯಿ ನಾರಾಯಣ ಶೆಟ್ಟಿ, ಬೆಳ್ಳಾರೆ ವಿಶ್ವನಾಥ ರೈ, ಬಾಯಾರು ರಘುನಾಥ ಶೆಟ್ಟಿ, ಕೌಡೂರು ರಾಮಕೃಷ್ಣಯ್ಯ ಎಂಬ ನಾಲ್ಕು ಮಂದಿ ಬಾಲ ಕಲಾವಿದರು ಕೌಪೀನಧಾರಿಗಳಾಗಿ ರಂಗದಲ್ಲಿ ಕಾಣಿಸಿಕೊಂಡಿದ್ದರು.

ಆಗ ಕರ್ನಾಟಕ ಮೇಳವು ಖ್ಯಾತ ಕಲಾವಿದರಿರುವ ತಂಡವಾಗಿತ್ತು. ಪೂರ್ವರಂಗದಲ್ಲಿ ಬಾಲಗೋಪಾಲ ವೇಷದಿಂದ ತೊಡಗಿ, ಪ್ರಸಂಗದಲ್ಲಿ ತನಗೆ ದೊರೆತ ಚಿಕ್ಕ ವೇಷಗಳನ್ನು ಮಾಡುತ್ತಾ ಬೆಳೆದವರು ಶ್ರೀ ರಘುನಾಥ ಶೆಟ್ಟರು. ಮೂವತ್ತರೆಡು ವರ್ಷಗಳ ಕಲಾಸೇವೆ ಕರ್ನಾಟಕ ಮೇಳದಲ್ಲಿ. ಸ್ತ್ರೀ ವೇಷ, ಪುಂಡುವೇಷ, ಕಿರೀಟ ವೇಷಗಳನ್ನು ನಿರ್ವಹಿಸುತ್ತಾ ಅನುಭವವನ್ನು ಗಳಿಸಿಕೊಂಡಿದ್ದರು. ಪುರಾಣ ಮತ್ತು ತುಳು ಪ್ರಸಂಗಗಳಲ್ಲಿ ಸಮಾನವಾಗಿ ಕಾಣಿಸಿಕೊಂಡರು.

ಕರ್ನಾಟಕ ಮೇಳದ ತಿರುಗಾಟದ ಸಂದರ್ಭದಲ್ಲಿ ಕಲ್ಲಾಡಿ ವಿಠಲ ಶೆಟ್ಟರ ಸೂಚನೆಯಂತೆ ಮಳೆಗಾಲದಲ್ಲಿ ಅನೇಕ ಬಾಲ ಕಲಾವಿದರಿಗೆ ನಾಟ್ಯ ತರಬೇತಿಯನ್ನು ನೀಡಿದ್ದರು ಬಾಯಾರು ರಘುನಾಥ ಶೆಟ್ಟರು. ಕರ್ನಾಟಕ ಮೇಳದಲ್ಲಿ ಸತತ ಮೂವತ್ತರೆಡು ತಿರುಗಾಟದ ನಂತರ ಬಾಯಾರು ರಘುನಾಥ ಶೆಟ್ಟಿ ಅವರು ಹತ್ತು ವರ್ಷಗಳ ಕಾಲ ಸುಂಕದಕಟ್ಟೆ ಮೇಳದಲ್ಲಿ ವ್ಯವಸಾಯ ಮಾಡಿದ್ದರು. ಅಲ್ಲಿಯೂ ಪುರಾಣ ಮತ್ತು ತುಳು ಪ್ರಸಂಗಗಳಲ್ಲಿ ವೇಷ ಮಾಡಲು ಅವಕಾಶವಾಗಿತ್ತು.

ಕಳೆದ ಎಂಟು ವರ್ಷಗಳಿಂದ ಕಲ್ಲಾಡಿ ದೇವಿಪ್ರಸಾದ ಶೆಟ್ಟರ ಸಂಚಾಲಕತ್ವದ ಕಟೀಲು ಮೇಳದಲ್ಲಿ ಕಲಾಸೇವೆ ಮಾಡುತ್ತಿದ್ದಾರೆ. ಅಲ್ಲದೆ ಕಟೀಲು ಒಂದನೇ ಮೇಳದ ಪ್ರಬಂಧಕರಾಗಿಯೂ, ಕಲಾವಿದರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಕಲ್ಲಾಡಿ ಮನೆಯವರ, ಆಸ್ರಣ್ಣ ಬಂಧುಗಳ, ಸಹಕಲಾವಿದರ ಸಹಕಾರವನ್ನು ಸದಾ ನೆನಪಿಸುವ ಬಾಯಾರು ರಘುನಾಥ ಶೆಟ್ಟರು ಯಕ್ಷಗಾನ ವೇಷಭೂಷಣಗಳ ತಯಾರಿಕೆಯನ್ನೂ ಬಲ್ಲವರು. ಕಲ್ಲಾಡಿ ವಿಠಲ ಶೆಟ್ಟರ ಸೂಚನೆಯಂತೆ ಈ ವಿಚಾರದಲ್ಲಿ ತೊಡಗಿಸಿಕೊಂಡಿದ್ದರು. ಕಳೆದ ಇಪ್ಪತ್ತು ವರ್ಷಗಳಿಂದ ಈ ಕೆಲಸವನ್ನು ಮಾಡುತ್ತಿದ್ದಾರೆ. ಪ್ರಸ್ತುತ ಕಟೀಲು ಮೇಳದ ಸಂಚಾಲಕರಾದ ಕಲ್ಲಾಡಿ ಶ್ರೀ ದೇವಿಪ್ರಸಾದ ಶೆಟ್ಟರ ಸೂಚನೆಯಂತೆ ಮುನ್ನಡೆಯುತ್ತಿದ್ದಾರೆ.

ಜಾಹೀರಾತು 

ಬಾಯಾರು ರಘುನಾಥ ಶೆಟ್ಟರ ಐವರು ತಮ್ಮಂದಿರೂ ಯಕ್ಷಗಾನ ಕಲಾವಿದರು. ಬಾಯಾರು ರಮೇಶ ಶೆಟ್ಟಿ ಅವರು ಹವ್ಯಾಸಿ ಖ್ಯಾತ ಕಲಾವಿದರು. ಇವರು ಯಕ್ಷಗಾನದ ಹಿಮ್ಮೇಳ, ಮುಮ್ಮೇಳ ಕಲಾವಿದರಾಗಿ, ರಂಗ ಪ್ರಸಾಧನ ವಿಚಾರಗಳನ್ನೂ ಬಲ್ಲವರು. ಬಾಯಾರು ಶ್ರೀ ಜಗನ್ನಾಥ ಶೆಟ್ಟಿ ಅವರೂ ಕಲಾವಿದರು. ಬಾಯಾರು ಮೋಹನ ಶೆಟ್ಟಿ ಅವರು ಪ್ರಸ್ತುತ ಕಟೀಲು ಮೇಳದ ವೇಷಧಾರಿ. ಬಾಯಾರು ಶೇಖರ ಶೆಟ್ಟಿ ಅವರು ಅಧ್ಯಾಪಕರು. ಯಕ್ಷಗಾನ ಹಿಮ್ಮೇಳ, ಮುಮ್ಮೇಳ ಕಲಾವಿದರೂ ಆಗಿದ್ದಾರೆ. ಕಿರಿಯ ತಮ್ಮ ಬಾಯಾರು ಬಾಲಕೃಷ್ಣ ಶೆಟ್ಟಿ ಅವರು ಗಲ್ಫ್ ರಾಷ್ಟ್ರದಲ್ಲಿ ಉದ್ಯೋಗಿ. ಇವರೂ ಯಕ್ಷಗಾನ ವೇಷಧಾರಿ.

ಬಾಯಾರು ಶ್ರೀ ರಘುನಾಥ ಶೆಟ್ರ ಪತ್ನಿ ಶ್ರೀಮತಿ ಪುಷ್ಪ. ಶ್ರೀ ರಘುನಾಥ ಶೆಟ್ಟಿ – ಪುಷ್ಪ ದಂಪತಿಗಳಿಗೆ ಈರ್ವರು ಪುತ್ರಿಯರು. ಹಿರಿಯ ಪುತ್ರಿ ಶ್ರೀಮತಿ ಹೇಮಲತಾ. ಇವರ ಪತಿ ಶ್ರೀ ಅರುಣಕುಮಾರ ಶೆಟ್ಟಿ. ಇವರು ಕೃಷಿಕರು. ದ್ವಿತೀಯ ಪುತ್ರಿ ಶ್ರೀಮತಿ ಸುಮಲತಾ. ಇವರ ಪತಿ ಶ್ರೀ ಜಯಚಂದ್ರ ಶೆಟ್ಟಿ. ಇವರು ಕೃಷಿ ಮತ್ತು ಸ್ವಂತ ವ್ಯವಹಾರವನ್ನು ನಡೆಸುತ್ತಿದ್ದಾರೆ. ಹಿರಿಯ ಅನುಭವಿ ಕಲಾವಿದ ಶ್ರೀ ರಘುನಾಥ ಶೆಟ್ಟಿ ದಂಪತಿಗಳಿಗೆ, ಮನೆಯವರಿಗೆ ಶ್ರೀ ದೇವರು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ. ಇನ್ನಷ್ಟು ಕಲಾಸೇವೆಯನ್ನು ಮಾಡುವ ಅವಕಾಶವನ್ನು ನೀಡಲಿ ಎಂಬ ಹಾರೈಕೆಗಳು. 

ಲೇಖಕ: ರವಿಶಂಕರ್ ವಳಕ್ಕುಂಜ

ಹಿರಿಯ ಕಲಾವಿದ ಶ್ರೀ ಪಡ್ರೆ ಕುಮಾರ

ಶ್ರೀ ಪಡ್ರೆ ಕುಮಾರ ಇವರು ಪ್ರಸ್ತುತ ಕಟೀಲು ಮೇಳದ ಕಲಾವಿದರಾಗಿ ವ್ಯವಸಾಯ ಮಾಡುತ್ತಿದ್ದಾರೆ. ತೆಂಕುತಿಟ್ಟಿನ, ಕಟೀಲು ಮೇಳದ ಹಿರಿಯ ವೇಷಧಾರಿ. ಇವರೊಬ್ಬ ಸವ್ಯಸಾಚಿ ಕಲಾವಿದ. ಯಾವ ವೇಷವನ್ನೂ ಮಾಡಬಲ್ಲರು. ಇವರು ಶ್ರೀ ಪಡ್ರೆ ಚಂದು ಅವರ ಪುತ್ರ. ಶ್ರೀ ಪಡ್ರೆ ಚಂದು ಅವರನ್ನು ಕಲಾಭಿಮಾನಿಗಳೆಲ್ಲರೂ ಬಲ್ಲರು. 

ಶ್ರೀ ಪಡ್ರೆ ಚಂದು ಅವರ ಪುತ್ರ ಶ್ರೀ ಪಡ್ರೆ ಕುಮಾರ ಅವರು ಕಳೆದ 57 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಸರಳ, ಸಜ್ಜನ, ವಿನಯವಂತ ಹಿರಿಯ ಕಲಾವಿದ. ಪಡ್ರೆ ಕುಮಾರ ಅವರು ಬಂಟ್ವಾಳ ತಾಲೂಕು ವಿಟ್ಲಪಡ್ನೂರು ಗ್ರಾಮದ ಕೊಡುಂಗಾಯಿ ಸಮೀಪದ ನಡ್ಯಾಳ ಎಂಬಲ್ಲಿ ಶ್ರೀ ಪಡ್ರೆ ಚಂದು ಮತ್ತು ಭಾಗೀರಥಿ ದಂಪತಿಗಳ ಹಿರಿಯ ಮಗನಾಗಿ 1947ನೇ ಇಸವಿಯಂದು ಜನಿಸಿದರು.

ಪಡ್ರೆ ಕುಮಾರ ಅವರು ಓದಿದ್ದು 5ನೇ ತರಗತಿ ವರೆಗೆ. ಕೊಡುಂಗಾಯಿ ಶಾಲೆಯಲ್ಲಿ. ತೀರ್ಥರೂಪರು  ಕಲಾವಿದರಾಗಿದ್ದ ಕಾರಣ ಸಹಜವಾಗಿ ಯಕ್ಷಗಾನಾಸಕ್ತಿ ಇತ್ತು. ಆಟಗಳನ್ನು ನೋಡುತ್ತಿದ್ದರು. ಹಗಲು ಗೆಳೆಯರ ಜತೆ ಅಣಕು ಪ್ರದರ್ಶನಗಳೂ ನಡೆಯುತ್ತಿತ್ತು. ಅಡಿಕೆ ಮರದ ಹಾಳೆಗಳನ್ನು ಕತ್ತರಿಸಿ ಕತ್ತಿ ಮತ್ತು ಕಿರೀಟಗಳನ್ನು ಸಿದ್ಧಪಡಿಸಿ ಕುಣಿಯುತ್ತಿದ್ದರು. ಗುಡ್ಡ, ಗದ್ದೆ, ಮನೆಯಂಗಳಗಳೇ ವೇದಿಕೆಯಾಗುತ್ತಿತ್ತು.

ಪಡ್ರೆ ಚಂದು ಅವರು ಆಗ ಕುಂಡಾವು ಮೇಳದಲ್ಲಿದ್ದರು. ಮನೆಯಲ್ಲಿಯೇ ಇತರ ಕಲಾವಿದರಿಗೆ ಚಂದು ಅವರು ನಾಟ್ಯ ಕಲಿಸುತ್ತಿದ್ದಾಗ ಕುಮಾರ ಅವರು ನೋಡುತ್ತಿದ್ದರು. ನೋಡುತ್ತಾ ಅದನ್ನೇ ಮೆಲುಕು ಹಾಕುತ್ತಾ ಅಭ್ಯಸಿಸುತ್ತಿದ್ದರು. ತನ್ನ ತಂದೆಯ ಜತೆ ಕುಂಡಾವು ಮೇಳಕ್ಕೆ ಬಾಲಗೋಪಾಲನಾಗಿ ರಂಗಪ್ರವೇಶ. ಸ್ತ್ರೀ ವೇಷ ಮಾಡಲು ಇವರಿಗೆ ಆಸಕ್ತಿ ಇರಲಿಲ್ಲವಂತೆ. ಭಾಗವತರು ಸ್ತ್ರೀ ವೇಷ ಮಾಡಲು ಹೇಳುತ್ತಾರೆ ಎಂದು ಗೊತ್ತಾದರೆ ಕೂಡಲೇ ಇವರಿಗೆ ಹೊಟ್ಟೆ ನೋವು ಆರಂಭವಾಗುತ್ತಿತ್ತು! ಹೊಟ್ಟೆ ನೋವಿನ ಅಭಿನಯ ಮಾಡಿ ವೇಷ ತಪ್ಪಿಸಿಕೊಂಡದ್ದೂ ಉಂಟು. ತಿರುಗಾಟ ಹೊಸತು. ಹುಡುಗಾಟಿಕೆಯೂ ಇತ್ತು.

ಪಡ್ರೆ ಕುಮಾರರ ಕನ್ನಡ ಬರವಣಿಗೆ ಅತ್ಯಂತ ಚಂದ. ಅಕ್ಷರಗಳು ಸುಂದರವಾಗಿ ಸ್ಪಷ್ಟ. ಬರೆಯುವ ಕಲೆ ಕರಗತವಾಗಿತ್ತು. ಇದನ್ನು ಕಲ್ಲಾಡಿ ಕೊರಗ ಶೆಟ್ರು ಗಮನಿಸುತ್ತಿದ್ದರು. ಆಟದ ನೋಟೀಸ್, ವಾಲ್ ಪೋಸ್ಟ್ ವಗೈರೆಗಳನ್ನು ಬರೆಯಲು ಕುಮಾರ ಅವರಲ್ಲಿಯೇ ಹೇಳುತ್ತಿದ್ದರಂತೆ. ಕುಂಡಾವು ಮೇಳದಿಂದ ಕಟೀಲು ಮೇಳಕ್ಕೆ. 2 ತಿಂಗಳ ತಿರುಗಾಟದ ಬಳಿಕ ಯಜಮಾನರು ಕುಂಡಾವು ಮೇಳಕ್ಕೆ ಕಳುಹಿಸಿದರು. ಬಾಲಗೋಪಾಲರ ವೇಷ ಮಾಡಲು ಇವರ ಜತೆ ರಾಮ ನಾಯ್ಕ ಎಂಬ ಕಲಾವಿದರೂ ಹೋಗಿದ್ದರು. ಮತ್ತೆ ಪುನಃ ಕಟೀಲು ಮೇಳದಲ್ಲಿ ವ್ಯವಸಾಯ.

ಜಾಹೀರಾತು 

ಆಗ ವೇಷಧಾರಿಯಾಗಿದ್ದ ಪಡ್ರೆ ಚಂದು ಅವರಿಗೆ ಮೇಳದ ಮ್ಯಾನೇಜರ್ ಆಗಿ ಹೊಣೆಯೂ ಸಿಕ್ಕಿತ್ತು. ಯಜಮಾನರಾದ ಕಲ್ಲಾಡಿ ವಿಠಲ ಶೆಟ್ಟರೂ, ಪಡ್ರೆ ಚಂದು ಅವರೂ ಎಳೆಯ ಕಲಾವಿದರಿಗೆ ಹಗಲುಆಟ ಆಡಬಾರದು, ಓದಬೇಕು, ಕುಣಿಯಲು ಕಲಿಯಬೇಕು ಎಂಬ ಅಪ್ಪಣೆ ಕೊಟ್ಟಿದ್ದರು. ಆಗಾಗ ಎಚ್ಚರಿಸುತ್ತಲೂ ಇದ್ದರು. ಕುಮಾರ ಅವರು ಹಂತ ಹಂತವಾಗಿ ಕಲಾವಿದರಾಗಿ ಬೆಳೆಯುತ್ತಾ ಸಾಗಿದರು. ನಾಟ್ಯದಲ್ಲಿ ಹಿಡಿತವನ್ನೂ ಸಾಧಿಸಿದರು. ವಾಹನ ಸೌಕರ್ಯಗಳಿಲ್ಲದೆ ಸರಂಜಾಮುಗಳನ್ನು ಹೊತ್ತು ನಡೆದುಕೊಂಡೇ ಸಾಗುತ್ತಿದ್ದ ಕಾಲದಲ್ಲಿ ಕಲಾವಿದರಾಗಿ ಬೆಳೆದ ಕಾರಣ ಪಡ್ರೆ ಕುಮಾರರಿಗೆ ಕಷ್ಟದ ಬದುಕಿನ ಅರಿವಿದೆ.

ಕಟೀಲು ಎರಡನೇ ಮೇಳ ಆರಂಭವಾದಾಗ ಪಡ್ರೆ ಕುಮಾರ ಸದ್ರಿ ಮೇಳಕ್ಕೆ ಸೇರಿದ್ದರು. ಮ್ಯಾನೇಜರ್ ಆಗಿ ಹೊಣೆಯೂ ಬಂದಿತ್ತು. 3ನೇ ಮೇಳ ಆರಂಭವಾದಾಗ ಮತ್ತು 4ನೇ ಮೇಳ ಆರಂಭವಾದಾಗ ಆ ಮೇಳಗಳಲ್ಲಿ ಕಲಾವಿದನಾಗಿಯೂ, ವ್ಯವಸ್ಥಾಪಕನಾಗಿಯೂ ಕೆಲಸ ಮಾಡಿದ್ದಾರೆ. ಪ್ರಸ್ತುತ ನಾಲ್ಕು ವರ್ಷಗಳಿಂದ ಕಟೀಲು 3ನೇ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಪಡ್ರೆ ಕುಮಾರರಿಗೆ ಹೆಚ್ಚಿನ ಎಲ್ಲಾ ಹಿರಿಯ ಶ್ರೇಷ್ಠ ಕಲಾವಿದರೆಲ್ಲರ ಒಡನಾಟವಿದೆ. ಅವರೊಂದಿಗೆ ತಿರುಗಾಟ ಮಾಡಿದ ಕಾರಣದಿಂದ ಅನುಕೂಲವೂ ಆಗಿದೆ.

ಪುಂಡು ವೇಷ, ಕಿರೀಟ ವೇಷ ಅಲ್ಲದೆ ಹಾಸ್ಯ ಪಾತ್ರಗಳನ್ನೂ ಮಾಡಬಲ್ಲರು. ನಂದಿಶೆಟ್ಟಿ, ಕೊರವಂಜಿ, ಬಕುಳಾದೇವಿ ಮೊದಲಾದ ಪಾತ್ರಗಳನ್ನೂ ಚೆನ್ನಾಗಿ ನಿರ್ವಹಿಸುತ್ತಾರೆ. ಪಡ್ರೆ ಚಂದು ಅವರಂತೆ ಒಳ್ಳೆಯ ರೂಪ ಹುಟ್ಟಿನಿಂದಲೇ ಬಂದ ಕಾರಣ ವೇಷಗಳನ್ನೆಲ್ಲಾ ಮೊದಲ ನೋಟಕ್ಕೇ ಪ್ರೇಕ್ಷಕರು ಸ್ವೀಕರಿಸುತ್ತಾರೆ. ನಾಟ್ಯವೂ ಬಲು ಚಂದ. ಪಾತ್ರಕ್ಕೆ ಬೇಕಾಗುವಷ್ಟೇ ಹಿತಮಿತವಾದ ಮಾತುಗಳು. ತನ್ನನ್ನು ತಾನು ಉದ್ಘೋಷಿಸಿಕೊಳ್ಳರು.

“ನಾನು ಹೆಚ್ಚು ತಿಳಿದವನಲ್ಲ. ಕೊಟ್ಟ ಪಾತ್ರಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತಾಡಿ ವೇಷ ಮಾಡುವ ಅಭ್ಯಾಸವನ್ನು ಮೊದಲಿನಿಂದಲೂ ಬೆಳೆಸಿಕೊಂಡು ಬಂದಿದ್ದೇನೆ. ನಾನು ಒಳ್ಳೆಯ ಮಾತುಗಾರನಲ್ಲವೆಂದು ತಿಳಿದಿದೆ. ಮಾಡುವ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಕಲೆಗಿಂತ ಕಲಾವಿದ ದೊಡ್ಡವನಲ್ಲ. ಎಲ್ಲಕ್ಕಿಂತ ಹೆಚ್ಚು ನಾನೊಬ್ಬ ಯಕ್ಷಗಾನ ಕಲಾವಿದ ಎಂದು ಹೇಳುವ ಭಾಗ್ಯ ಸಿಕ್ಕಿದ್ದು ಸಂತೋಷದ ವಿಚಾರ” ಇದು ಪಡ್ರೆ  ಕುಮಾರರ ಅಭಿಪ್ರಾಯ. 

ಶ್ರೀರಾಮ, ಹನುಮಂತ, ಈಶ್ವರ ಮೊದಲಾದ ಪಾತ್ರಗಳು ಪಡ್ರೆ ಕುಮಾರರಿಗೆ ಅತ್ಯಂತ ಪ್ರಿಯವಾದವು. ಪಡ್ರೆ ಕುಮಾರರು ಬಣ್ಣ ಹಾಕಿ, ಈ ವೇಷಗಳನ್ನು ಧರಿಸಿ ನಿಂತರೆ ಸಾಕು. ಮತ್ತೂ ಮತ್ತೂ ನೋಡಬೇಕೆನಿಸುವಷ್ಟು ಅಂದವಾಗಿ ಕಾಣಿಸುತ್ತಾರೆ. ಬಣ್ಣ ಮತ್ತು ವೇಷಗಾರಿಕೆಯಲ್ಲಿ ಅವರು ರಾಜಿ ಮಾಡಿಕೊಳ್ಳಲಾರರು. ನಿಷ್ಠೆಯಿಂದ ಮಾಡುತ್ತಾರೆ. ಅಂದವಾದ ಕುಣಿತವೂ ಕರಗತವಾಗಿರುವ ಕಾರಣ ಇನ್ನೇನು ಬೇಕು ರಂಗದಲ್ಲಿ ಕಾಣಿಸಿಕೊಳ್ಳಲು? ಹಿತಮಿತ ಮಾತುಗಳಿದ್ದರೆ ಅಷ್ಟೇ ಸಾಕು. ಶ್ರೀ ಪಡ್ರೆ ಕುಮಾರ ಅವರು ಯಕ್ಷಗಾನ ವೇಷಭೂಷಣ ತಯಾರಿಕೆಯಲ್ಲಿ ಪಳಗಿದವರು. ಕಳೆದ ನಲವತ್ತು ವರುಷಗಳಿಂದ ಕಟೀಲು ಮೇಳದ ಯಕ್ಷಗಾನ ವೇಷಭೂಷಣ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುತ್ತಾರೆ.

ಕಟೀಲು ಮೇಳಕ್ಕೆ ಬಾಲಕನಾಗಿದ್ದಾಗ ಸೇರಿದ ಸಮಯ. ಪಡ್ರೆ ಕುಮಾರರು ಶ್ರೀ ಕ್ಷೇತ್ರ ಕಟೀಲಿನ ಆಶ್ರಯದಲ್ಲೇ ಎಂಟು ವರ್ಷಗಳನ್ನು ಕಳೆದಿದ್ದರು. ಸಾಂಸಾರಿಕವಾಗಿಯೂ ಇವರು ತೃಪ್ತರು. 1985ರಲ್ಲಿ ಸರಸ್ವತಿ (ವಿದ್ಯಾ) ಜತೆ ವಿವಾಹ. ಪಡ್ರೆ ಕುಮಾರ ಮತ್ತು ವಿದ್ಯಾ ದಂಪತಿಗಳಿಗೆ ಮೂವರು ಮಕ್ಕಳು. (ಇಬ್ಬರು ಹೆಣ್ಣುಮಕ್ಕಳು ಮತ್ತು ಓರ್ವ ಪುತ್ರ). ಹಿರಿಯ ಪುತ್ರಿ ಲಾವಣ್ಯ ವಿವಾಹಿತೆ. ಪುತ್ರ ಯೋಗೀಶ ಉದ್ಯೋಗಿ. ವಿವಾಹಿತ. ಕಿರಿಯ ಪುತ್ರಿ ವಿನುತ ವಿವಾಹಿತೆ. ಮೊಮ್ಮಕ್ಕಳು ಜನಿಸಿ ಪಡ್ರೆ  ಕುಮಾರಣ್ಣ ‘ಅಜ್ಜ’ ಎನಿಸಿಕೊಂಡಿದ್ದಾರೆ.

ಕೌಟುಂಬಿಕ ಸಂತೋಷ ಎಂದರೆ ಇದುವೇ ತಾನೇ. ಮಕ್ಕಳು ಮೊಮ್ಮಕ್ಕಳೊಂದಿಗೆ ಬದುಕುವುದೆಂದರೆ ಅದೊಂದು ಅವರ್ಣನೀಯ ಆನಂದಕ್ಕೆ ಕಾರಣವಾಗುತ್ತದೆ. ಪ್ರಸ್ತುತ ಪತ್ನಿ ಮಗ ಮತ್ತು ಸೊಸೆ ಇವರೊಂದಿಗೆ ಕಟೀಲು ಸಮೀಪದ ಅಜಾರು ಎಂಬಲ್ಲಿ ವಾಸಿಸುತ್ತಿದ್ದಾರೆ. ಪಡ್ರೆ ಕುಮಾರ ಅವರಿಂದ ಇನ್ನಷ್ಟು ಕಲಾ ಸೇವೆ ನಡೆಯಲಿ. ಅವರಿಗೆ ಸಕಲ ಭಾಗ್ಯಗಳನ್ನೂ ಕಲಾಮಾತೆಯು ಅನುಗ್ರಹಿಸಲಿ ಎಂಬ ಹಾರೈಕೆಗಳು. 

ಲೇಖಕ: ರವಿಶಂಕರ್ ವಳಕ್ಕುಂಜ 

‘ಮರೆಯಲಾಗದ ಮಹಾನುಭಾವರು’ ಲೇಖನಗಳ ಗ್ರಂಥ ರೂಪ – ಸಮಾಲೋಚನಾ ಸಭೆ

ಯಕ್ಷಗಾನ ಕ್ಷೇತ್ರದಲ್ಲಿ ಹಲವಾರು ಮೌಲ್ಯಯುತ ಚಟುವಟಿಕೆಯ ಮೂಲಕ ಸಂಚಲನ ಮೂಡಿಸುತ್ತಿರುವ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ,(ರಿ.) ಕಾಸರಗೋಡು ಇದರ ನೇತೃತ್ವದ ಯಕ್ಷಾನುಗ್ರಹ ವಾಟ್ಸಾಪ್ ಬಳಗ ಕಳೆದ ಮೇ ತಿಂಗಳಿಂದ, ಲಾಕ್ ಡೌನ್ ಸಮಯದಲ್ಲಿ ವಾಟ್ಸಾಪ್ ಮಾದ್ಯಮದ ಸದ್ಬಳಕೆ ಎಂದು ಆರಂಭಿಸಿದ ಮರೆಯಲಾಗದ ಮಹಾನುಭಾವರು, ಕೀರ್ತಿಶೇಷ ಯಕ್ಷಗಾನ ಕಲಾವಿದರ ಸಂಸ್ಮರಣೆಯ ಲೇಖನಗಳನ್ನು ಗ್ರಂಥ ರೂಪದಲ್ಲಿ ಪ್ರಕಟಿಸುವ ಉದ್ದೇಶದ ಸಮಾಲೋಚನಾ ಸಭೆಯು ಶ್ರೀ ಮಾಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಆಲಂಗಾರು, ಮೂಡುಬಿದರೆಯಲ್ಲಿ ನಡೆಯಿತು.

ಗೌರವ ಸದಸ್ಯರಾದ ಶ್ರೀ ಶ್ರೀಧರ ಡಿ ಯಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯ ಭಟ್ ಅವರು ಉಪಸ್ಥಿತರಿದ್ದರು. ಪುಸ್ತಕ ಪ್ರಕಟಣೆಯ ಬಗ್ಗೆ ಹಲವು ಮಹತ್ವದ ತೀರ್ಮಾನ ಮಾಡಲಾಯಿತು. ಮುಂದಿನ ಪೀಳಿಗೆಗೆ ಧಾಖಲೆ ಯಾಗಿರುವ ಮಹತ್ ಗ್ರಂಥದಲ್ಲಿ 150 ಕ್ಕೂ ಹೆಚ್ಚು ಕೀರ್ತಿಶೇಷ ಕಲಾವಿದರ ಸಂಪೂರ್ಣ ವಿವರ ಲಭ್ಯವಿರುತ್ತದೆ.

ಯಕ್ಷಾನುಗ್ರಹ ವಾಟ್ಸಾಪ್ ಬಳಗ ಸದಸ್ಯರಾದ ಶ್ರೀ ವಿ. ರಾಘವೇಂದ್ರ ಉಡುಪ ನೇರಳೆಕಟ್ಟೆ ,ಕುಂದಾಪುರ ಇವರು ಸಂಪೂರ್ಣ ಲೇಖನಗಳನ್ನು ಸಂಗ್ರಹಿಸಿಟ್ಟಿರುತ್ತಾರೆ. ಸಮಾಲೋಚನಾ ಸಭೆಯಲ್ಲಿ ಬಳಗದ ಸದಸ್ಯರುಗಳಾದ ವಿಠಲ ಕಾಮತ್ ಉಪ್ಪಿನಕುದ್ರು, ಮುರಳಿ ಸಾಲಿಗ್ರಾಮ, ಯಸ್. ಯನ್.ಭಟ್ ಬಾಯಾರು, ಪ್ರಶಾಂತ್ ಹೊಳ್ಳ, ನಿಟ್ಟೆ, ಪ್ರೋ. ಸದಾಶಿವ ಶೆಟ್ಟಿಗಾರ್ ಕಿನ್ನಿಗೊಳಿ, ಸದಾಶಿವ ರಾವ್ ನೆಲ್ಲಿಮಾರ್, ಪತ್ರಕರ್ತ ಅವಿನಾಶ್ ಬೈಪಡಿತ್ತಾಯ, ಡಾ.ಶ್ರುತಕೀರ್ತಿರಾಜ್ ಉಜಿರೆ, ಚಂದ್ರಶೇಖರ ಭಟ್ ಕೊಂಕಣಾಜೆ, ಗಣರಾಜ ಭಟ್, ಪ್ರತಿಷ್ಠಾನದ ರಾಮಕೃಷ್ಣ ಮಯ್ಯ ಸಿರಿಬಾಗಿಲು ಉಪಸ್ಥಿತರಿದ್ದರು.

ಮುಂದಿನ ಮೇ ತಿಂಗಳಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದ ಲೊಕಾರ್ಪಣೆಯ ಸಂಧರ್ಭದಲ್ಲಿ ಗ್ರಂಥ ಬಿಡುಗಡೆ ಮಾಡಲು ತೀರ್ಮಾನಿಸಲಾಯಿತು.

ಸರ್ಪಂಗಳ ಯಕ್ಷೋತ್ಸವ ದಶಮಾನೋತ್ಸವ ಸಂಭ್ರಮ ನಾಳೆ (01.10.2021)

ಕಲಾಪೋಷಕ ಸರ್ಪಂಗಳ ಸುಬ್ರಹ್ಮಣ್ಯ ಭಟ್ ಸಂಸ್ಮರಣಾ ಪ್ರಯುಕ್ತ ನಡೆಯುವ ಸರ್ಪಂಗಳ ಯಕ್ಷೋತ್ಸವ ಈ ವರ್ಷ ದಶಮಾನೋತ್ಸವ ಸಂಭ್ರಮವನ್ನು ಕಾಣುತ್ತಿದೆ. ಈ  ಸರ್ಪಂಗಳ ಯಕ್ಷೋತ್ಸವ ದಶಮಾನೋತ್ಸವ ಸಂಭ್ರಮವು ನಾಳೆ ದಿನಾಂಕ  01.10.2021ರಂದು ಸಂಜೆ 6 ಘಂಟೆಯಿಂದ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ  ಕಲಾಪೋಷಕ ಸರ್ಪಂಗಳ ಸುಬ್ರಹ್ಮಣ್ಯ ಭಟ್ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಮತ್ತು ಯಕ್ಷಗಾನ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮದ ವಿವರ ಲಗತ್ತಿಸಲಾಗಿದೆ. 

ತಾಳಮದ್ದಲೆ – ಇತಿಹಾಸ ಮತ್ತು ವರ್ತಮಾನ – ಶ್ರೀಧರ ಡಿ. ಎಸ್.‌ ಅವರ ಉಪನ್ಯಾಸ

ಪ್ರಸಂಗ ಕವಿ, ತಾಳಮದ್ದಲೆ ಅರ್ಥದಾರಿ, ಯಕ್ಷಗಾನ ವಿದ್ವಾಂಸ, ಕಾದಂಬರಿಕಾರ, ಲೇಖಕರಾದ ಶ್ರೀಧರ ಡಿ. ಎಸ್.‌ ಅವರು ಯಕ್ಷವಾಹಿನಿ (ರಿ) ಬೆಂಗಳೂರು ಇವರು ಯಕ್ಷದೀವಿಗೆ (ರಿ) ತುಮಕೂರು ಇವರ ಸಹಯೋಗದಲ್ಲಿ ನಡೆದ ಯಕ್ಷಗಾನ ಸಂಶೋಧನೆಯ ಸಿಂಹಾವಲೋಕನಾ ಸರಣಿಯ ಪ್ರಯುಕ್ತ ನೀಡಿದ ಉಪನ್ಯಾಸದ ವೀಡಿಯೊ ಲಿಂಕ್ 

ಶಿಕ್ಷಣದೊಂದಿಗೆ ಯಕ್ಷಗಾನ ವಸತಿ ಶಾಲೆ 2021-2022

ಕಳೆದ ೫೦ ವರ್ಷಗಳಿಂದ ಯಕ್ಷಗಾನ ತರಬೇತಿಯನ್ನು ನಡೆಸುತ್ತಾ ಬಂದ, ಯಕ್ಷಗಾನ ಪ್ರಪಂಚಕ್ಕೆ 2600 ಕ್ಕೂ ಮಿಕ್ಕಿ ಕಲಾವಿದರನ್ನು ನೀಡಿರುವ, ಯಕ್ಷಗಾನ ಚಿಂತಕ, ರಾಷೃಪ್ರಶಸ್ತಿ ಪುರಸ್ಕೃತ ಮುಖ್ಯೋಪಾದ್ಯಾಯ ದಿವಂಗತ ಐರೋಡಿ ಸದಾನಂದ ಹೆಬ್ಬಾರರಿಂದ ಸ್ಥಾಪಿಸಲ್ಪಟ್ಟ, ಪ್ರಾಚಾರ್ಯ ನಾರ್ಣಪ್ಪ ಉಪ್ಪೂರರು ಪ್ರಾಚಾರ್ಯರಾಗಿದ್ದ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಇವರು ಶಾಲಾ ಬಾಲಕರಿಗಾಗಿ ಗುರುಕುಲ ಪದ್ದತಿಯಂತೆ ವಸತಿ ಶಾಲೆಯನ್ನು ಕಳೆದ ಹತ್ತು ವರ್ಷಗಳಿಂದ ನಡೆಸುತ್ತಿದ್ದಾರೆ.

ಶಿಕ್ಷಣದೊಂದಿಗೆ ಯಕ್ಷಗಾನ ಎಂಬ ಧ್ಯೇಯದೊಂದಿಗೆ ಪ್ರಾರಂಭವಾಗಿರುವ ಈ ವಸತಿ ಶಾಲೆಯಲ್ಲಿ ಆರನೆಯ ತರಗತಿಯಿಂದ ಹತ್ತನೆಯ ತರಗತಿಯ ತನಕದ ಬಾಲಕರಿಗೆ ಪ್ರವೇಶ ನೀಡಲಾಗುವುದು. ಅವಕಾಶ ಪಡೆದ ಬಾಲಕರಿಗೆ ಹತ್ತಿರದ ಶಾಲೆಯಲ್ಲಿ ಶಿಕ್ಷಣ ನೀಡಲಾಗುವುದಲ್ಲದೇ ಉಚಿತ ಊಟ, ಉಪಹಾರ, ವಸತಿಯ ವ್ಯವಸ್ಥೆ,ಯಕ್ಷ ಶಿಕ್ಷಣದ ವ್ಯವಸ್ಥೆ ಮಾಡಲಾಗುವುದು.

ಗುರುಕುಲ ಪದ್ದತಿಯಂತೆ ನಡೆಸಲುದ್ದೇಶಿಸುವ ಈ ಶಾಲೆಗೆ ಸೇರಬಯಸುವವರು ಅಕ್ಟೋಬರ್ ತಿಂಗಳ 15ರ ಒಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗಿದ್ದು, ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ -ಅಂಚೆ: ಐರೋಡಿ 576226, ಉಡುಪಿ ತಾಲೂಕು ಮತ್ತು ಜಿಲ್ಲೆ ದೂರವಾಣಿ 9880605610 ಯನ್ನು ಸಂಪರ್ಕಿಸಲು ಕೇಳಿಕೊಳ್ಳಲಾಗಿದೆ ಎಂಬ ಪ್ರಕಟಣೆಯನ್ನು ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ನೀಡಿರುತ್ತಾರೆ.