Saturday, March 14, 2026
Home Blog Page 303

ಎಡನೀರು ಮಠದಲ್ಲಿ ‘ಶುಕ್ರನಂದನೆ’ ಯಕ್ಷಗಾನ ಪ್ರದರ್ಶನ

ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳ ಪೀಠಾರೋಹಣದ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ಎಡನೀರು ಮಠದಲ್ಲಿ ಹನುಮಗಿರಿ ಮೇಳದವರಿಂದ 17.10.2021, ಆದಿತ್ಯವಾರದಂದು ಮಧ್ಯಾಹ್ನ 2.30ಕ್ಕೆ ಸರಿಯಾಗಿ ‘ಶುಕ್ರನಂದನೆ’ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ. 

ಬಡಗುತಿಟ್ಟಿನ ಹಿರಿಯ ವೇಷಧಾರಿ ಅನಂತ ಕುಲಾಲ ನಿಧನ

ಬಡಗುತಿಟ್ಟಿನ ಹಿರಿಯ ವೇಷಧಾರಿ ಅನಂತ ಕುಲಾಲ (66 ವರ್ಷ) ಕಳೆದ ಆರು ತಿಂಗಳಿನಿಂದ ಅಸೌಖ್ಯದಲ್ಲಿದ್ದ ಇವರು ನಿನ್ನೆ (12-10-2021) ತಡರಾತ್ರಿ ಕುಂದಾಪುರ ತಾಲೂಕಿನ ಮೊಳಹಳ್ಳಿಯಲ್ಲಿ ನಿಧನ ಹೊಂದಿದರು.

ಇವರು ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಗುರು ವೀರಭದ್ರ ನಾಯಕರಲ್ಲಿ ಯಕ್ಷಗಾನ ಕುಣಿತ ಆಭ್ಯಾಸ ಮಾಡಿ, ಹಳ್ಳಾಡಿ ಮಂಜಯ್ಯ ಶೆಟ್ಟಿ ಮತ್ತು ಹಳ್ಳಾಡಿ ಕೃಷ್ಣರಲ್ಲಿ ಮಾತುಗಾರಿಕೆ, ರಂಗತಂತ್ರ ಕಲಿತು ಪ್ರೌಢ ಪುರುಷ ವೇಷಧಾರಿಯಾಗಿ ರೂಪುಗೊಂಡರು. ಅಮೃತೇಶ್ವರೀ, ಹಿರಿಯಡಕ, ಸಾಲಿಗ್ರಾಮ, ಪೆರ್ಡೂರು, ಹಾಲಾಡಿ, ಮಾರಣಕಟ್ಟೆ ಮೇಳಗಳಲ್ಲಿ ಸುಮಾರು ಐದು ದಶಕಗಳ ಕಾಲ ವೈವಿಧ್ಯಮಯ ವೇಷಗಳನ್ನು ಮಾಡುತ್ತಾ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು.

ಕೇವಲ ಮಾರಣಕಟ್ಟೆ ಮೇಳವೊಂದರಲ್ಲಿ ನಾಲ್ಕು ದಶಕಗಳ ಕಾಲ ಕಲಾಸೇವೆಗೈದಿದ್ದರು. ಕಳೆದ ವರ್ಷ ಯಕ್ಷಗಾನ ಕಲಾರಂಗವು ಡಾ. ಬಿ.ಬಿ. ಶೆಟ್ಟಿ ಸ್ಮರಣಾರ್ಥ‘ ಯಕ್ಷಗಾನ ಕಲಾರಂಗ ಪ್ರಶಸ್ತಿ’ ನೀಡಿ ಅವರನ್ನು ಸಮ್ಮಾನಿಸಿತ್ತು. ಕಳೆದ ತಿಂಗಳು ಎಮ್.ಎಮ್.ಹೆಗಡೆ ಪ್ರಶಸ್ತಿಯನ್ನು ಪಿ.ಕಿಶನ್ ಹೆಗ್ಡೆಯವರ ನೇತೃತ್ವದಲ್ಲಿ ಅವರ ಮನೆಯಲ್ಲೆ ನೀಡಿ ಗೌರವಿಸಲಾಗಿತ್ತು.

ಇವರು ಪತ್ನಿ, ನಾಲ್ವರು ಪುತ್ರರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಮ್. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್‌ ಗಾಢ ಸಂತಾಪ ವ್ಯಕ್ತ ಪಡಿಸಿದ್ದಾರೆ.

ಪ್ರತಿ ದಿನದ ಮುಖ್ಯ ಅತಿಥಿಗಳು – ‘ಶ್ರೀ ಕೋಳ್ಯೂರು ವೈಭವ’ದಲ್ಲಿ

ಪ್ರತೀ ದಿನ ಯೂ-ಟ್ಯೂಬ್‌ನಲ್ಲಿ ಪ್ರಸಾರಗೂಳ್ಳಲಿರುವ ‘ಶ್ರೀ ಕೋಳ್ಯೂರು ವೈಭವ’ದಲ್ಲಿ  ಪ್ರತಿ ದಿನದ ಮುಖ್ಯ ಅತಿಥಿಗಳ ಹೆಸರುಗಳು ಈ ರೀತಿ ಇವೆ. 

. ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳು, ಎಡನೀರು ಶ್ರೀಶಂಕರಾಚಾರ್ಯ ಮಹಾಸಂಸ್ಥಾನಮ್
• ಡಾ. ಟಿ. ಶ್ಯಾಮ ಭಟ್, ಯಕ್ಷಗಾನ ಮಹಾಪೋಷಕರು, ವಿಶ್ರಾಂತ ಐ.ಎ.ಎಸ್ ಅಧಿಕಾರಿಗಳು
• ವೇದಮೂರ್ತಿ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ
• ಡಾ. ಬಿ. ಎ. ವಿವೇಕ ರೈ
• ಬಲಿಪ ನಾರಾಯಣ ಭಾಗವತ
• ಡಾ. ಎಂ. ಮೋಹನ ಆಳ್ವ
• ಕುಂಬ್ಳೆ ಸುಂದರ ರಾವ್
• ಪ್ರೊ. ಅಮೃತ ಸೋಮೇಶ್ವರ
• ಶ್ರೀ ದೇವಿಪ್ರಸಾದ್ ಶೆಟ್ಟಿ
• ವೇದಮೂರ್ತಿ ಶ್ರೀಹರಿನಾರಾಯಣದಾಸ ಆಸ್ರಣ್ಣ
• ಸೂರಿಕುಮೇರಿ ಕೆ. ಗೋವಿಂದ ಭಟ್
• ಅಂಬಾತನಯ ಮುದ್ರಾಡಿ
• ಡಾ. ಎಂ. ಪ್ರಭಾಕರ ಜೋಶಿ
• ಶ್ರೀಮತಿ ಲೀಲಾವತಿ ಬೈಪಡಿತ್ತಾಯ
• ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ
• ಪಿ. ಕಿಶನ್ ಹೆಗ್ಡೆ
• ಪ್ರತಿಭಾ ಎಮ್. ಎಲ್. ಸಾಮಗ
• ಕೆರೆಮನೆ ಶಿವಾನಂದ ಹೆಗಡೆ
• ಶಿವರಾಮ ಜೋಗಿ ಬಿ. ಸಿ. ರೋಡ್
• ಪದ್ಯಾಣ ಶಂಕರನಾರಾಯಣ ಭಟ್
• ಗೋಪಾಲಕೃಷ್ಣ ಕುರುಪ್
• ಐರೋಡಿ ಗೋವಿಂದಪ್ಪ
• ಡಾ. ಆನಂದ ಹಾಸ್ಯಗಾರ
• ಮೂರ್ತಿ ದೇರಾಜೆ
• ಡಾ. ಪುರುಷೋತ್ತಮ ಬಿಳಿಮಲೆ
• ಈರೋಡಿ ಶಂಕರನಾರಾಯಣ ಭಟ್
• ಎಮ್. ಎಲ್. ಸಾಮಗ
• ಬನ್ನಂಜೆ ಸಂಜೀವ ಸುವರ್ಣ
• ಡಾ. ಭಾಸ್ಕರಾನಂದ ಕುಮಾರ್
• ಸುಣ್ಣಂಬಳ ವಿಶ್ವೇಶ್ವರ ಭಟ್
• ದಿನೇಶ ಅಮ್ಮಣ್ಣಾಯ

‘ಶ್ರೀ ಕೋಳ್ಯೂರು ವೈಭವ’ದಲ್ಲಿ ಪ್ರದರ್ಶನಗೊಳ್ಳಲಿರುವ ಪಾತ್ರ ವೈವಿಧ್ಯ

ಪ್ರತೀ ದಿನ ಯೂ-ಟ್ಯೂಬ್‌ನಲ್ಲಿ ಪ್ರಸಾರಗೂಳ್ಳಲಿರುವ ‘ಶ್ರೀ ಕೋಳ್ಯೂರು ವೈಭವ’ದಲ್ಲಿ ಪ್ರತಿದಿನ ಪ್ರಸ್ತುತಿಗೊಳ್ಳಲಿರುವ ಪಾತ್ರಗಳು ಈ ಕೆಳಗಿನಂತಿವೆ.  ಅಕ್ಟೋಬರ್ 14 ರಿಂದ ನವೆಂಬರ್ 14ರ ವರೆಗೆಒಂದು ತಿಂಗಳ ಪರ್ಯಾಂತ ಪ್ರತಿದಿನ ಕೋಳ್ಯೂರು ಮುಖ್ಯ ಭೂಮಿಕೆಯಲ್ಲಿರುವ ಆಖ್ಯಾನವನ್ನು ಪ್ರದರ್ಶಿಸಲಾಗುವುದು.
• ಭೀಷ್ಮ ವಿಜಯದಲ್ಲಿ ಅಂಬೆ
• ಶ್ರೀರಾಮ ಪಟ್ಟಾಭಿಷೇಕದಲ್ಲಿ ಕೈಕೇಯಿ
• ಮುದ್ರಿಕಾ ಪ್ರದಾನದಲ್ಲಿ ಸೀತೆ
• ದಾಕ್ಷಾಯಣಿ ದಹನದಲ್ಲಿ ದಾಕ್ಷಾಯಣಿ
• ರುಕ್ಮಾಂಗದ ಮೋಹಿನಿಯಲ್ಲಿ ಮೋಹಿನಿ
• ಸೀತಾ ಪರಿತ್ಯಾಗದಲ್ಲಿ ಸೀತೆ
• ಕರ್ಣ-ಕುಂತಿಯಲ್ಲಿ ಕುಂತಿ
• ಕೀಚಕ ವಧೆಯಲ್ಲಿ ಸೈರೇಂದ್ರಿ
• ವಿಶ್ವಾಮಿತ್ರ ಮೇನಕೆಯಲ್ಲಿ ಮೇನಕೆ
• ಮಹಾಸತಿ ಮಂಡೋದರಿಯಲ್ಲಿ ಮಂಡೋದರಿ
• ಚಂದ್ರಾವಳಿ ವಿಲಾಸದಲ್ಲಿ ಚಂದ್ರಾವಳಿ
• ಪ್ರಮೀಳಾರ್ಜುನಾದಲ್ಲಿ ಪ್ರಮೀಳೆ
• ನಳ ದಮಯಂತಿಯಲ್ಲಿ ದಮಯಂತಿ
• ಮಾಯಾ ಶೂರ್ಪನಖಿಯಲ್ಲಿ ಶೂರ್ಪನಖಿ
• ಶ್ರೀಕೃಷ್ಣ ಪಾರಿಜಾತದಲ್ಲಿ ಸತ್ಯಭಾಮೆ
• ರಾಧಾಕೃಷ್ಣದಲ್ಲಿ ರಾಧೆ
• ಸುಭದ್ರ ಸಂಧಾನದಲ್ಲಿ ಸುಭದ್ರೆ
• ಅಭಿಜ್ಜಾನ ಶಾಕುಂತಳೆಯಲ್ಲಿ ಶಾಕುಂತಳೆ
• ವಾಲಿ ಪತನದಲ್ಲಿ ತಾರೆ
• ದ್ರೌಪದಿ ವಸ್ತ್ರಾಪಹರಣದಲ್ಲಿ ದ್ರೌಪದಿ
• ಸತ್ಯ ಹರಿಶ್ಚಂದ್ರದಲ್ಲಿ ಚಂದ್ರಮತಿ  
• ದುರ್ವಾಸ ಅಜಮುಖಿಯಲ್ಲಿ ಅಜಮುಖಿ
• ಕಚದೇವಯಾನಿಯಲ್ಲಿ ದೇವಯಾನಿ
• ಭಕ್ತ ಪ್ರಹ್ಲಾದದಲ್ಲಿ ಕಯಾದು
• ಕಾಡಮಲ್ಲಿಗೆ
• ಪಟ್ಟದ ಪದ್ಮಲೆ
• ಆರ್‌ಆರ್ ಸಿ ಡೋಕ್ಯುಮೆಂಟ್

ಯಕ್ಷ ಉತ್ಸವ – ಯಕ್ಷ ಗಾನವೈಭವ ಮತ್ತು ಯಕ್ಷಗಾನ ಪ್ರದರ್ಶನ

ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನ ಸುಂಕದಕಟ್ಟೆ, ಬಜ್ಪೆ ಇಲ್ಲಿ ದಿನಾಂಕ 13.10.2021ನೇ ಬುಧವಾರ ಬೆಳಗ್ಗೆ 10 ಘಂಟೆಯಿಂದ ‘ಯಕ್ಷ ಉತ್ಸವ’ ನಡೆಯಲಿದೆ.

ಈ ಕಾರ್ಯಕ್ರಮದ ಅಂಗವಾಗಿ  ಬೆಳಗ್ಗೆ 10 ಘಂಟೆಯಿಂದ 12.30ರ ವರೆಗೆ  ಯಕ್ಷ ಗಾನವೈಭವ ಮತ್ತು ಅಪರಾಹ್ನ 1.30ರಿಂದ  8.30ರ ವರೆಗೆ ಯಕ್ಷಗಾನ ಪ್ರದರ್ಶನ ನಡೆಯಲಿದೆ. 

ಒಡಿಯೂರು ಶ್ರೀಗಳಿಗೆ ಗುರುವಂದನೆ

ಷಷ್ಟ್ಯಬ್ದ ಸಂಭ್ರಮಕ್ಕೆ ಭಾಜನರಾದ ಒಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಅವರಿಗೆ ಎಸ್.ವಿ.ಟಿ ರಸ್ತೆಯ ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಅಧ್ಯಯನ ಕೇಂದ್ರ ವತಿಯಿಂದ ಗುರುವಂದನೆ ಜರಗಿತು. ಜ್ಞಾನವಾಹಿನಿ ೬ರ ಕಾಸರಗೋಡು ವಲಯ ಸಮಿತಿಯ ಸಮಾರೋಪ ಮತ್ತು ಕಾಸರಗೋಡು ಯಕ್ಷೋತ್ಸವದ ಪಂಚಮ ಕಾರ್ಯಕ್ರಮ ಪೇಟೆ ಶ್ರೀ ವೆಂಕಟ್ರಮಣ ದೇವಾಲಯದ ಶ್ರೀ ವ್ಯಾಸ ಮಂಟಪದಲ್ಲಿ ಜರಗಿದ ವೇಳೆ ಗುರುವಂದನೆ ನಡೆಸಲಾಯಿತು.

ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಗೌರವ ಸಲ್ಲಿಸಿದರು. ಷಷ್ಟ್ಯಬ್ದ ವಲಯ ಸಮಿತಿ ಅಧ್ಯಕ್ಷ ಕೆ. ಎನ್. ವೆಂಕಟ್ರಮಣ ಹೊಳ್ಳ ಅವರು ನೇತೃತ್ವ ವಹಿಸಿದ್ದರು. ತಂತ್ರಿವರ್ಯ ಬ್ರಹ್ಮಶ್ರೀ ಉಳಿತ್ತಾಯ ವಿಷ್ಣು ಅಸ್ರ, ಬ್ರಹ್ಮಶ್ರೀ ಕುಂಟಾರು ಶ್ರೀ ರವೀಶ ತಂತ್ರಿ, ನ್ಯಾಯವಾದಿ ಕೆ. ಶ್ರೀಕಾಂತ್ ಹರಿದಾಸ ಜಯಾನಂದ ಕುಮಾರಾ ಹೊಸದುರ್ಗ, ಶಿವರಾಮ ಕಾಸರಗೋಡು, ಕೆ.ಟಿ ಸುಬ್ರಹ್ಮಣ್ಯನ್ ಮೊದಲಾದವರು ಉಪಸ್ಥಿತರಿದ್ದರು.

ಕೆ. ಎನ್. ರಾಮಕೃಷ್ಣ ಹೊಳ್ಳ, ಕಿಶೋರ್ ಕುಮಾರ್ ಮೊದಲಾದವರು ಸಹಕರಿಸಿದವರು. ಷಷ್ಟ್ಯಬ್ದ ಸಮಿತಿ ಕೋಶಾಧಿಕಾರಿ ರಾಮಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ವಾರ್ಡ್ ಸದಸ್ಯೆ ಶ್ರೀಲತಾ ಟೀಚರ್ ಸನ್ಮಾನ ಪಾತ್ರ ವಾಚಿಸಿದರು. 

ಸುಂದರಕೃಷ್ಣ ಮಧೂರು ಅವರಿಗೆ ಕಾಸರಗೋಡು ಯಕ್ಷೋತ್ಸವದ ಸನ್ಮಾನ: 

ಯಕ್ಷಗಾನದ ಹಿರಿಯ ಕಲಾವಿದ, ಅರ್ಥಧಾರಿ ಸುಂದರಕೃಷ್ಣ ಮಧೂರು ಅವರಿಗೆ ಕಾಸರಗೋಡು ಯಕ್ಷೋತ್ಸವ ಸನ್ಮಾನ ಜರಗಿತು. ಎಸ್.ವಿ.ಟಿ ರಸ್ತೆಯ  ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಅಧ್ಯಯನ ಕೇಂದ್ರ ಆಶ್ರಯದಲ್ಲಿ  ಜ್ಞಾನವಾಹಿನಿ 6ರ ಸರಣಿಯ ಕಾಸರಗೋಡು ವಲಯ ಸಮಿತಿಯ ಅಧ್ಯಕ್ಷ   ಕೆ. ಎನ್. ವೆಂಕಟ್ರಮಣ ಹೊಳ್ಳ ಅವರು ನೇತೃತ್ವದಲ್ಲಿ ಸನ್ಮಾನ ಜರಗಿತು. 

ಎಡನೀರು ಮಠಾಧೀಶ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಅಭಿನಂದಿಸಿದರು. ಒಡಿಯೂರು ಶ್ರೀ ಶ್ರೀ  ಗುರುದೇವಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು.  ವಲಯ ಸಮಿತಿ ಕೋಶಾಧಿಕಾರಿ ರಾಮಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. 

ತಂತ್ರಿವರ್ಯ ಬ್ರಹ್ಮಶ್ರೀ ಉಳಿತ್ತಾಯ ವಿಷ್ಣು ಅಸ್ರ, ಬ್ರಹ್ಮಶ್ರೀ ಕುಂಟಾರು ಶ್ರೀ ರವೀಶ ತಂತ್ರಿ, ನ್ಯಾಯವಾದಿ ಕೆ. ಶ್ರೀಕಾಂತ್ ಹರಿದಾಸ ಜಯಾನಂದ ಕುಮಾರಾ ಹೊಸದುರ್ಗ, ಶಿವರಾಮ ಕಾಸರಗೋಡು, ಕೆ.ಟಿ ಸುಬ್ರಹ್ಮಣ್ಯನ್ ಮೊದಲಾದವರು ಉಪಸ್ಥಿತರಿದ್ದರು. ಕೆ. ಎನ್. ರಾಮಕೃಷ್ಣ ಹೊಳ್ಳ, ಕಿಶೋರ್ ಕುಮಾರ್ ಮೊದಲಾದವರು ಸಹಕರಿಸಿದವರು. ಜಗದೀಶ ಕೂಡ್ಲು ಸನ್ಮಾನ ಪಾತ್ರ ವಾಚಿಸಿದರು. 

ಪದ್ಯಾಣ ಭಾಗವತರ ನಿಧನಕ್ಕೆ ಗಣ್ಯರ ಸಂತಾಪ

ಖ್ಯಾತ ಭಾಗವತ ಪದ್ಯಾಣ ಗಣಪತಿ ಭಟ್ಟರ ನಿಧಾನಕ್ಕೆ ಕರ್ನಾಟಕದ ಮುಖ್ಯಮಂತ್ರಿ ಸೇರಿದಂತೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಸಚಿವ ಅರವಿಂದ ಲಿಂಬಾವಳಿ ಇವರಲ್ಲಿ ಸೇರಿದ್ದಾರೆ. 

ಪದ್ಯಾಣ ಗಣಪತಿ ಭಟ್ ವಿಧಿವಶ – ಯಕ್ಷಗಾನ ಕಲಾರಂಗ ಸಂತಾಪ

ತೆಂಕುತಿಟ್ಟು ಯಕ್ಷಗಾನದ ಅಗ್ರಮಾನ್ಯ ಭಾಗವತರಾದ ಪದ್ಯಾಣ ಗಣಪತಿ ಭಟ್ಟರು66) ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು. ಅವರು ಪತ್ನಿ, ಇಬ್ಬರು ಪುತ್ರರು ಮತ್ತುಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಬಹುಬೇಗನೆ ಸಿದ್ಧಿಪ್ರಸಿದ್ಧಿ ಪಡೆದ ಅವರು ‘ಯಕ್ಷರತ್ನ’ ಬಿರುದಿಗೆ ಭಾಜನರಾಗಿದ್ದರು.

ಇವರಿಗೆ ಯಕ್ಷಗಾನ ಮನೆತನದ ಬಳುವಳಿ. ಅಜ್ಜ ಪುಟ್ಟು ನಾರಾಯಣರು ಪ್ರಸಿದ್ಧ ಭಾಗವತರಾಗಿದ್ದರು. ತಂದೆ ಹಿಮ್ಮೇಳವಾದಕರಾಗಿದ್ದರು. ಪದ್ಯಾಣ ಮನೆತನ ಸಾಕಷ್ಟು ಕಲಾವಿದರನ್ನು ಈ ಕ್ಷೇತ್ರಕ್ಕೆ ನೀಡಿದೆ. ಪದ್ಯಾಣತಿರುಮಲೇಶ್ವರಭಟ್- ಸಾವಿತ್ರಿ ದಂಪತಿಗಳ ಸುಪುತ್ರರಾಗಿ ಜನಿಸಿದ ಇವರಿಗೆ ಮನೆಯೇ ಮೊದಲ ಯಕ್ಷಗಾನ ಪಾಠಶಾಲೆಯಾಯಿತು. ಮಾಂಬಾಡಿ ನಾರಾಯಣ ಭಾಗವತರಲ್ಲಿ ಭಾಗವತಿಕೆ ಅಭ್ಯಾಸ ಮಾಡಿ ಹದಿನೈದರ ಹರೆಯದಲ್ಲೆ ಯಕ್ಷರಂಗ ಪ್ರವೇಶಿಸಿದರು.

ಚೌಡೇಶ್ವರಿ, ಕುಂಡಾವು, ಸುರತ್ಕಲ್, ಮಂಗಳಾದೇವಿ, ಎಡನೀರು,ಹೊಸನಗರ ಹಾಗೂ ಹನುಮಗಿರಿ ಮೇಳಗಳಲ್ಲಿ ಐದು ದಶಕಗಳ ಕಲಾಸೇವೆ ಗೈದಿರುತ್ತಾರೆ. ಕನ್ನಡ, ತುಳು ಎರಡೂ ಭಾಷೆಗಳಲ್ಲಿ ಸಮರ್ಥವಾಗಿ ಭಾಗವತಿಕೆ ಮಾಡಿ ಕಲಾರಸಿಕರ ಮನಗೆದ್ದಿದ್ದಾರೆ. ಸಂಗೀತ ಜ್ಞಾನವುಳ್ಳ ಪದ್ಯಾಣರು ಯಕ್ಷಗಾನದ ಪದ್ಯಗಳಿಗೆ ಹೊಸ ರಾಗ ಸಂಯೋಜನೆ ಮಾಡಿದ್ದಾರೆ.

ಶೇಣಿ ಗೋಪಾಲಕೃಷ್ಣ ಭಟ್ಟರ ನೆಚ್ಚಿನ ಭಾಗವತರು. 1500ಕ್ಕೂ ಹೆಚ್ಚು ಧ್ವನಿಸುರುಳಿಗಳಲ್ಲಿ 200ಕ್ಕೂ ಹೆಚ್ಚು ಯಕ್ಷಗಾನದ ವಿಡಿಯೋಗಳಲ್ಲಿ ಇವರ ಸಿರಿಕಂಠದ ಧ್ವನಿ ದಾಖಲಾಗಿದೆ. ಹೊರನಾಡುಗಳಲ್ಲಿ ಹೊರರಾಷ್ಟ್ರಗಳಲ್ಲಿ ಯಕ್ಷಗಾನ ಆಟಕೂಟಗಳಲ್ಲಿ ಭಾಗವಹಿಸಿ ಮಧುರ ಹಾಡುಗಳಿಂದ ಕಾರ್ಯಕ್ರಮ ಕಳೆಗಟ್ಟಿಸಿದ್ದಾರೆ. ಹಿಮ್ಮೇಳದ ಎಲ್ಲ ಅಂಗಗಳಲ್ಲಿ ಪರಿಣಿತರಾದ ಇವರು ಅನೇಕ ಶಿಷ್ಯರಿಗೆ ತರಬೇತಿ ನೀಡಿದ್ದಾರೆ. ಕನ್ನಡಿಕಟ್ಟೆಯಂತಹ ಯುವ ಭಾಗವತರು ಇವರ ಗರಡಿಯಲ್ಲಿ ಸಿದ್ಧಗೊಂಡಿದ್ದಾರೆ.

ನಿಡುಗಾಲದ ಯಕ್ಷಗಾನಕ್ಕೆ ಪುರಸ್ಕಾರ ರೂಪವಾಗಿ ಹಲವು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರು. ಉಡುಪಿಯ ಯಕ್ಷಗಾನ ಕಲಾರಂಗ ಅವರಿಗೆ ಮಲ್ಪೆ ಶಂಕರನಾರಾಯಣ ಸಾಮಗ ಪ್ರಶಸ್ತಿ ನೀಡಿ ಗೌರವಿಸಿತ್ತು. ಅವರ ನಿಧನಕ್ಕೆ ಸಂಸ್ಥೆಯಅಧ್ಯಕ್ಷ ಎಂ. ಗಂಗಾಧರ ರಾವ್ ಕಾರ್ಯದರ್ಶಿ ಮುರಲಿ ಕಡೆಕಾರ್‌ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.

ಅಕ್ಷರ ನಮನ- ಪದ್ಯಾಣ ಗಣಪತಿ ಭಟ್ಟರಿಗೆ ನುಡಿನಮನ

ಯಕ್ಷಲೋಕದ ತಾರೆ ಮಿನುಗಿ ಮರೆಯಾಯ್ತೇನು

ಸುತ್ತ ಪಸರಿಸಿದ ಬೆಳಕೆಲ್ಲ ತಿಮಿರವಾಗಿ

ದಶಕಗಳ ಕಾಲದಲಿ ಯಕ್ಷಲೋಕದಿ ಮೆರೆದ

ಅಗ್ರಗಣಿ ಪದ್ಯಾಣ ಗಣಪಣ್ಣ ಕಾಣದಾಗಿ.


ಭೌತಿಕದ ಈ ದೇಹ ತೊರೆದು ಸಾಗಿದರೇನು

ಶಾಶ್ವತದ ಸ್ಥಾನ ಜನರಮಾನಸದಲ್ಲಿ

ಅಪ್ರತಿಮ ಭಾಗವತರೆಂದು ಕೊಂಡಾಡುತಲಿ

ಗುಣಗಾನ ಗೈಯುತಿರೆ ಲೋಗರಿಲ್ಲಿ.


ಸಾಧನೆಯ ಮಾಡಿಹರು ಸನ್ಮಾನ ಪಡೆದಿಹರು

ಒಂದಲ್ಲ ಎರಡಲ್ಲ ಹಲವಾರು ಜಾಗದಲಿ

ಜನರೊಡನೆ ಒಡನಾಡಿ ಲಘುಹಾಸ್ಯದ ಮಾತು

ಮರೆಯಲಾರದ ಸತ್ಯ ಜೀವಂತವಾಗಿ.


ಖಾಲಿ ಮಾಡಿದಿರಲ್ಲ ನೀವಿದ್ದ ಜಾಗವನು

ಸರಿಸಾಟಿ ನಿಮಗ್ಯಾರು ನೀವೇ ಸಾಟಿ

ಸದ್ಗತಿಯು ನಿಮಗಿರಲಿ ದುಃಖ ಭರಿಸುವ ಶಕ್ತಿ

ಬಂಧುಗಳಿಗೆ ಮಿತ್ರರಿಗೆಲ್ಲ ಪ್ರಾಪ್ತವಾಗಿ.


ನಮನವಿದು ಅಗಲಿರುವ ನಿಮ್ಮ ದಿವ್ಯಾತ್ಮಕ್ಕೆ

ಸೇರಿದಿರಿ ಶಿವಪಾದ ಜಗವ ತೊರೆದಿಲ್ಲಿ

ನಮನವಿದೊ ಮತ್ತೊಮ್ಮೆ ನಿಮ್ಮ ವ್ಯಕ್ತಿತ್ವಕ್ಕೆ

ಬರೆದಿಹೆನು ಸಾಲುಗಳ ಅಕ್ಷರದ ರೂಪದಲ್ಲಿ.

ಗೋಪಾಲಕೃಷ್ಣ ಭಟ್, ಮನವಳಿಕೆ


ಕವಿ: ಗೋಪಾಲಕೃಷ್ಣ ಭಟ್, ಮನವಳಿಕೆ.12.10.2021

(ನಮ್ಮನ್ನಗಲಿದ ಯಕ್ಷಲೋಕದ ಧ್ರುವತಾರೆ ಪದ್ಯಾಣ ಗಣಪತಿ ಭಟ್ಟರಿಗೆ ನುಡಿನಮನ).

ಖ್ಯಾತ ಯಕ್ಷಗಾನ ಭಾಗವತ ಗಾನಗಂಧರ್ವ ಪದ್ಯಾಣ ಗಣಪತಿ ಭಟ್ ಅಸ್ತಂಗತ

 
ತೆಂಕುತಿಟ್ಟು ಯಕ್ಷಗಾನದ ಖ್ಯಾತ ಭಾಗವತ ಗಾನಗಂಧರ್ವ ಪದ್ಯಾಣ ಗಣಪತಿ ಭಟ್ ಅವರು ಇಂದು ಬೆಳಿಗ್ಗೆ (12.102017, ಮಂಗಳವಾರ) ಅಸ್ತಂಗತರಾಗಿದ್ದಾರೆ. ನ್ಯುಮೋನಿಯಾ ಜ್ವರದಿಂದ ಬಳಲಿ ಚೇತರಿಸಿಕೊಂಡಿದ್ದ ಅವರು ಹೃದಯಾಘಾತದಿಂದ ನಿಧನರಾದರು.  ಜನಪ್ರಿಯ ಪದ್ಯಾಣ ಶೈಲಿಯ ಜನಕರಾಗಿದ್ದ ಅವರ ದಿಢೀರ್ ಅಗಲಿಕೆಯಿಂದ ಯಕ್ಷಗಾನಾಭಿಮಾನಿಗಳು ಮತ್ತು ಇಡೀ ಯಕ್ಷಲೋಕವೇ ದಿಗ್ಭ್ರಮೆಗೊಳಗಾಗಿದೆ. ಹಲವಾರು ಕಲಾಭಿಮಾನಿಗಳು ದುಃಖದ ಕಡಲಿನಲ್ಲಿ ಮುಳುಗಿದ್ದಾರೆ. ತೆಂಕುತಿಟ್ಟು ಯಕ್ಷಗಾನ ಭಾಗವತಿಕೆಗೆ ಹೊಸ ಆಯಾಮವನ್ನೇ ನೀಡಿದ, ದೇಶ ವಿದೇಶಗಳಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿದ ಪದ್ಯಾಣ ಗಣಪತಿ ಭಟ್ಟರಿಗೆ ಎಲ್ಲರೂ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದ್ದಾರೆ. 

ಪದ್ಯಾಣ ಗಣಪತಿ ಭಟ್ಟರ ಕಲಾಯಾನ: ಶ್ರೀ ಪದ್ಯಾಣ ಗಣಪತಿ ಭಟ್ಟರು 1955 ಜನವರಿ 21ರಂದು ಸುಳ್ಯ ತಾಲೂಕಿನ ಕಲ್ಮಡ್ಕದ ಸಮೀಪ ಗೋಳ್ತಜೆ ಎಂಬಲ್ಲಿ ಪದ್ಯಾಣ ತಿರುಮಲೇಶ್ವರ ಭಟ್, ಸಾವಿತ್ರಿ ಅಮ್ಮ ದಂಪತಿಗಳಿಗೆ ಮಗನಾಗಿ ಜನಿಸಿದರು. ಚಿಕ್ಕ ಮಗುವಾಗಿದ್ದಾಗ ಬಾಲಪೀಡೆ ಎಂಬ ರೋಗಕ್ಕೆ ತುತ್ತಾಗಿ ಕಾಲನಾಲಯದ ಬಳಿಯವರೆಗೂ ಸಾಗಿ ಮೃತ್ಯುವನ್ನು ಜಯಿಸಿ ಬಂದಿದ್ದರು. ಒಂದು ರೀತಿಯಲ್ಲಿ ಪುನರ್ಜನ್ಮ. ಕಲ್ಮಡ್ಕ ಸರಕಾರೀ ಶಾಲೆಯಲ್ಲಿ 7ನೇ ತರಗತಿ ವರೇಗೆ ಓದಿ ಬಾಳಿಲ ವಿದ್ಯಾಬೋಧಿನೀ ಶಾಲೆಗೆ ಸೇರಿದ್ದರು. ಶಾಲೆಯಲ್ಲಿ ಯಕ್ಷಗಾನ ತಂಡವು ಸಿದ್ಧವಾಗಿತ್ತು. ಶಾಲಾ ವಾರ್ಷಿಕೋತ್ಸವದ ಪ್ರದರ್ಶನ ಬಭ್ರುವಾಹನ ಕಾಳಗ ಪ್ರಸಂಗದಲ್ಲಿ ವೃಷಕೇತು ಪಾತ್ರವನ್ನು ಮಾಡಿದ್ದರು. 


ಅದೇ ವರ್ಷ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಯಕ್ಷಗಾನ ಕಲಿಕಾ ಕೇಂದ್ರ ಆರಂಭವಾಗಿತ್ತು. ಯಕ್ಷಗಾನವು ಪದ್ಯಾಣ ಮನೆಯವರಿಗೆ  ರಕ್ತಗತವೇ ಆಗಿರುವ ವಿಚಾರ. ಗಣಪತಿ ಭಟ್ಟರು ಧರ್ಮಸ್ಥಳದತ್ತ ಸಾಗಿದರು. ಶ್ರೀ ಧರ್ಮಸ್ಥಳ ಯಕ್ಷಗಾನ ಲಲಿತ ಕಲಾ ತರಬೇತಿ ಕೇಂದ್ರದಲ್ಲಿ ಮಾಂಬಾಡಿ ನಾರಾಯಣ ಭಟ್ಟರ ಶಿಷ್ಯನಾಗಿ ಕಲಿಕೆಯತ್ತ ಗಮನಹರಿಸಿದರು. ತರಬೇತಿ ಮುಗಿದು ಮನೆಗೆ ತೆರಳುವಾಗ ಸಂದರ್ಶನದಲ್ಲಿ ಅನುತ್ತೀರ್ಣನಾಗಿದ್ದ ನೀನು ಮನೆಗೆ ಹೋಗಿದ್ದರೆ, ನಿನ್ನಂತಹ ಶಿಷ್ಯನನ್ನು ಕಳೆದುಕೊಳ್ಳುತ್ತಿದ್ದೆ. ನಿನಗೂ ನಷ್ಟವಾಗುತ್ತಿತ್ತು ಎಂದು ಮಾಂಬಾಡಿ ನಾರಾಯಣ ಭಾಗವತರು ಹೇಳಿದ್ದರಂತೆ.

ಧರ್ಮಸ್ಥಳ ಕಲಿಕಾ ಕೇಂದ್ರದಿಂದ ಮರಳಿದ ನಂತರ ಪದ್ಯಾಣ ಗಣಪತಿ ಭಟ್ಟರು ಕಲ್ಮಡ್ಕ ಪರಿಸರದಲ್ಲಿ ನಡೆಯುವ ಪ್ರದರ್ಶನಗಳಲ್ಲಿ ಭಾಗವಹಿಸಿದರು. ಭಾಗವತರಾದ ದಾಸರಬೈಲು ಚನಿಯ ನಾಯ್ಕರ ಒಡನಾಟ ರಂಗದೊಳಗೆ ಪ್ರತ್ಯಕ್ಷ ಕಲಿಕೆಗೆ ವೇದಿಕೆಯಾಯಿತು. 1972-73ರ ಕಾಲ ಚೌಡೇಶ್ವರೀ ಮೇಳದ ಪ್ರದರ್ಶನ,    ಪೆರಾಜೆ, ಪೆರ್ನಾಜೆ ಮೊದಲಾದ ಸ್ಥಳಗಳಲ್ಲಿ ನಡೆಯುತ್ತಿದ್ದ ಆಟಕೂಟಗಳಲ್ಲಿ ಭಾಗವಹಿಸಿದರು. ದಾಸರಬೈಲು ಚನಿಯ ನಾಯ್ಕರು ಪ್ರಸಂಗವನ್ನು ಮುನ್ನಡೆಸುತ್ತಿದ್ದ ಕ್ರಮವನ್ನು ನೋಡಿ ಕಲಿತರು. ಚನಿಯ ನಾಯ್ಕ, ಪ್ರಸಂಗಕರ್ತ ಮಧುಕುಮಾರ್ ಭಾಗವತರ ಹಾಡುಗಳಿಗೆ ಚೆಂಡೆ ಮದ್ದಳೆ ವಾದಕನಾಗಿಯೂ ಭಾಗವಹಿಸಿದರು.


ಮುಂದೆ ಶಂಕರ ಭಟ್ಟರ ‘ಟೂರಿಂಗೆ ಕ್ಯಾಂಪು’ ತಿರುಗಾಟ. ಭಾಗವತನಾಗಿ ಕಲಾಸೇವೆ. ಆ ತಂಡದಲ್ಲಿ ಶಿವರಾಮ ಜೋಗಿ, ಬಾಯಾರು ಪ್ರಕಾಶ್ಚಂದ್ರ ರಾವ್, ವೇಣೂರು ಸುಂದರ ಆಚಾರ್ಯ ಮೊದಲಾದ ಕಲಾವಿದರಿದ್ದರು. ಮುಂದಿನ ವರುಷ ಸುರತ್ಕಲ್ಲು ಮೇಳಕ್ಕೆ ಸಂಗೀತಗಾರರಾಗಿ ಬರಲು ಶಿವರಾಮ ಜೋಗಿಯವರು ಮತ್ತು ವೇಣೂರು ಸುಂದರ ಆಚಾರ್ಯರು ಆಹ್ವಾನಿಸಿದಾಗ ಗಣಪತಿ ಭಟ್ಟರು ಸಂತೋಷದಿಂದ ಒಪ್ಪಿಕೊಂಡಿದ್ದರು.


ನಾಟ್ಯರಾಣಿ ಶಾಂತಲೆ, ಪಾಪಣ್ಣ ವಿಜಯ, ಕಡುಗಲಿ ಕುಮಾರರಾಮ, ರಾಜಾ ಯಯಾತಿ, ಸತೀ ಶೀಲವತಿ, ತುಳುನಾಡ ಬಲಿಯೇಂದ್ರೆ ಪದ್ಯಾಣ ಗಣಪತಿ ಭಟ್ಟರಿಗೆ ತಾರಾಮೌಲ್ಯವನ್ನು ತಂದಿತ್ತವು. ಯಶಸ್ವೀ ಯಜಮಾನರಾದ ಕಸ್ತೂರಿ ಪೈಗಳ ಸುರತ್ಕಲ್ಲು ಮೇಳವು ಗಜಮೇಳವಾಗಿ ವಿಜೃಂಭಿಸುತ್ತಿತ್ತು. ಶೇಣಿ, ತೆಕ್ಕಟ್ಟೆ, ಅಗರಿ ರಘುರಾಮ ಭಾಗವತರು, ಜಲವಳ್ಳಿ ಅಲ್ಲದೆ ಅನೇಕ ಹಿರಿಯ ಕಲಾವಿದರ ಒಡನಾಟ ಇವರಿಗೆ ದೊರಕಿತು. ರಾಮದಾಸ ಸಾಮಗರ ಜತೆ ತಿರುಗಾಟವೂ ಇತ್ತು. ಶೇಣಿಯವರು ತಿದ್ದಿ ತೀಡಿದರು. ಅಗರಿ ರಘುರಾಮ ಭಾಗವತರು ಹೆಚ್ಚು ಹೆಚ್ಚು ಹಾಡಲು ಅವಕಾಶವಿತ್ತು ಗಣಪತಿ ಭಟ್ಟರ ಪ್ರತಿಭೆ ಬೆಳಗಲು ಕಾರಣರಾದರು. ಅಗರಿಯವರ ನಿವೃತ್ತಿಯ ನಂತರ ಪ್ರಧಾನ ಭಾಗವತರಾಗಿ ಸುರತ್ಕಲ್ಲು ಮೇಳವನ್ನು ಮುನ್ನಡೆಸಿದರು. 


ಶೇಣಿಯವರಿಗೆ ಬಡಗಿನ ಶ್ರೇಷ್ಠ ಭಾಗವತರಾಗಿದ್ದ ಜಿ. ಆರ್. ಕಾಳಿಂಗ ನಾವಡ ಮತ್ತು ತೆಂಕಿನ ಶ್ರೇಷ್ಠ ಭಾಗವತರಾಗಿದ್ದ ಶ್ರೀ ದಾಮೋದರ ಮಂಡೆಚ್ಚರೆಂದರೆ ಅಚ್ಚುಮೆಚ್ಚು. ಕಾಳಿಂಗ ನಾವಡರಿಂದ ಪ್ರಶಂಸಿಸಲ್ಪಟ್ಟವರು ಪದ್ಯಾಣ ಗಣಪತಿ ಭಟ್ಟರು. ದಾಮೋದರ ಮಂಡೆಚ್ಚರು ಅವ್ಯಕ್ತ ಲೋಕವನ್ನು ಸೇರಿಕೊಂಡ ಮೇಲೆ ಆಟ, ಕೂಟಗಳಿಗೆ ಶೇಣಿಯವರು ಪದ್ಯಾಣರನ್ನೇ ಆಯ್ಕೆ ಮಾಡುತ್ತಿದ್ದರಂತೆ. ಇದು ಪದ್ಯಾಣ ಗಣಪತಿ ಭಟ್ಟರ ಪ್ರತಿಭೆಗೆ ಸಂದ ಗೌರವ. ಶೇಣಿ, ತೆಕ್ಕಟ್ಟೆ, ಅಗರಿ ರಘುರಾಮ ಭಾಗವತ ಮೊದಲಾದ ಶ್ರೇಷ್ಠ ಕಲಾವಿದರ ಒಡನಾಟದಿಂದ ಪಕ್ವರಾಗಿ ಶ್ರೀ ಪದ್ಯಾಣ ಗಣಪತಿ ಭಟ್ಟರು ರಂಗದಲ್ಲಿ ವಿಜೃಂಭಿಸಿದರು. ಸುರತ್ಕಲ್, ಮಂಗಳಾದೇವಿ, ಹೊಸನಗರ ಮೇಳಗಳಲ್ಲಿ ತಿರುಗಾಟ ನಡೆಸಿ ಕೊನೆಯ ಕೆಲವು ವರ್ಷಗಳಲ್ಲಿ  ಶ್ರೀ ಹನುಮಗಿರಿ ಮೇಳದಲ್ಲಿ ಕಲಾಸೇವೆಯನ್ನು ನಡೆಸುತ್ತಿದ್ದರು. 


 ‘‘ರಂಗವನ್ನು ಆಳುವ ಜಾಣ್ಮೆ ಪದ್ಯಾಣರಲ್ಲಿ ಮೈತುಂಬಿದೆ. ಅವರು ರಂಗದಲ್ಲಿದ್ದಷ್ಟು ಹೊತ್ತು ರಂಗದ ಎಲ್ಲಾ ಸೂಕ್ಷ್ಮ ಸಂಗತಿಗಳು ಅವರಿಗೆ ಶರಣಾಗುವ ಅವ್ಯಕ್ತ ಸಂಗತಿಯೊಂದು ಗೋಚರವಾಗುವುದು ಪದ್ಯಾಣರ ದೀರ್ಘಕಾಲದ ಅನುಭವದ ಪರಿಪಕ್ವ ಫಲವಾಗಿದೆ’’. ಸಂಪಾಜೆ ಯಕ್ಷೋತ್ಸವದ ರೂವಾರಿ, ಕಲಾಪೋಷಕ ಡಾ. ಟಿ. ಶ್ಯಾಮ್ ಭಟ್ಟರು ಆಟಕೂಟಗಳಲ್ಲಿ ಭಾಗವತರಾಗಿ ಪದ್ಯಾಣ ಗಣಪತಿ ಭಟ್ಟರ ಪ್ರಸಂಗವನ್ನು ಮುನ್ನಡೆಸಿದ ರೀತಿಯನ್ನು ನೋಡಿ, ಅನುಭವಿಸಿ ಹೇಳಿದ ಮಾತಿದು. 

ಪದ್ಯಾಣ ಗಣಪತಿ ಭಟ್ಟರ ನಿಧನ ಯಕ್ಷಗಾನ ಕ್ಷೇತ್ರಕ್ಕೊಂದು ತುಂಬಲಾರದ ನಷ್ಟ. ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಅವರ ಅಗಲುವಿಕೆಯನ್ನು ಸಹಿಸುವ ಶಕ್ತಿಯನ್ನು ಆ ಭಗವಂತನು ಅವರ ಕುಟುಂಬ, ಬಂಧುಮಿತ್ರರಿಗೂ, ಅಪಾರ ಸಂಖ್ಯೆಯ ಕಲಾಭಿಮಾನಿಗಳಿಗೂ ನೀಡಲಿ ಎಂದು ಪ್ರಾರ್ಥಿಸೋಣ.