Saturday, March 14, 2026
Home Blog Page 297

ಧಾರೇಶ್ವರರು ಮತ್ತೆ ಪೆರ್ಡೂರು ಮೇಳಕ್ಕೆ – ಇಲ್ಲಿದೆ ಅವರ ಜೊತೆಗಿನ ಆತ್ಮೀಯ ಸಂಭಾಷಣೆ

ಧಾರೇಶ್ವರರು ಮತ್ತೆ ಪೆರ್ಡೂರು ಮೇಳದಲ್ಲಿ ಪ್ರಧಾನ ಭಾಗವತರಾಗಿ ತಿರುಗಾಟ ನಡೆಸಲು ಸಜ್ಜಾಗಿದ್ದಾರೆ. ಈ ಹಿಂದೆ ಯಕ್ಷದೀಪದಲ್ಲಿ ಪ್ರಕಟವಾದ ಅವರ ಜೊತೆಗಿನ ಆತ್ಮೀಯ ಸಂಭಾಷಣೆಯನ್ನು ಮತ್ತೆ ನೀಡುತ್ತಿದ್ದೇವೆ. ಸಂದರ್ಶಕರು: ರಜನೀಶ ಹೊಳ್ಳ, ಕೆಂಪಿನಮಕ್ಕಿ

ಸುಬ್ರಹ್ಮಣ್ಯ ಧಾರೇಶ್ವರರ ಜೊತೆಗೊಂದು ಆತ್ಮೀಯ ಸಂವಾದ:

ಬಡಗುತಿಟ್ಟಿನ ಶ್ರೇಷ್ಠ, ಪ್ರಸಿದ್ಧ ಭಾಗವತರು ಸುಬ್ರಹ್ಮಣ್ಯ ಧಾರೇಶ್ವರ. ಈ ಹೆಸರು ಕೇಳಿದಾಕ್ಷಣವೇ ಇವರ ಇಂಪಾದ ದನಿ ನೆನಪಬುತ್ತಿಯಲ್ಲಿ ಹಾಡಲಾರಂಭಿಸುತ್ತದೆ. 1957 ಸೆಪ್ಟೆಂಬರ್ 5ರಂದು ಲಕ್ಷ್ಮೀನಾರಾಯಣ ಭಟ್ಟ- ಲಕ್ಷ್ಮೀ ದಂಪತಿಗಳ ಪುತ್ರರಾಗಿ ಗೋಕರ್ಣದಲ್ಲಿ ಜನಿಸಿದರು. ನಾಲ್ಕು ದಶಕಗಳಿಂದ ತನ್ನ ಇಂಪಾದ ಕಂಠದಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಸಾಧನೆಯ ಮೂಲಕ ಎತ್ತರೆತ್ತರಕ್ಕೆ ಬೆಳೆದರೂ ವಿನಯಸಂಪನ್ನರು. ಯಕ್ಷಗಾನದ ಸಾಂಪ್ರದಾಯಿಕ ರಾಗಗಳೊಂದಿಗೆ ಹೊಸ ರಾಗಗಳನ್ನು ತಂದ ಸ್ವರಸಂಯೋಜಕ. ಪೌರಾಣಿಕ, ಸಾಮಾಜಿಕ ಎರಡೂ ಪ್ರಸಂಗಗಳನ್ನು ಬಹಳ ಚೆನ್ನಾಗಿ ಆಡಿಸಬಲ್ಲ ಕೆಲವೇ ಭಾಗವತರಲ್ಲಿ ಓರ್ವರು. ಗುರುಗಳಾದ ನಾರಣಪ್ಪ ಉಪ್ಪೂರರನ್ನು ಸದಾ ಸ್ಮರಿಸುವ ಆದರ್ಶ ವ್ಯಕ್ತಿತ್ವ. ಈ ಸಂದರ್ಶನದಲ್ಲಿ ಪ್ರತಿ ಪ್ರಶ್ನೋತ್ತರದಲ್ಲಿ ಉಪ್ಪೂರರ ನೆನಪು ಮಾಡಿಕೊಳ್ಳದೆ ಮುಗಿಸಿದ್ದಿಲ್ಲ. ಅಂತಹ ಮೇರುಕಲಾವಿದರೊಂದಿಗೆ ಒಂದು ಆತ್ಮೀಯ ಸಂವಾದ ಇಲ್ಲಿದೆ.


ಪ್ರಶ್ನೆ : ಯಕ್ಷಗಾನದತ್ತ ನಿಮ್ಮ ಆಸಕ್ತಿಗೆ ಕಾರಣ ಯಾವುದು?
ಧಾರೇಶ್ವರ – ಕಾಳಿಂಗ ನಾವಡರ ಪದ್ಯ ಕಾರಣ. ಮೊದಲು ಯಕ್ಷಗಾನವೆಂದರೆ ನನಗೆ ಆಗುತ್ತಲೇ ಇರಲಿಲ್ಲ. ನಾಟಕ, ಭಜನೆ, ಹಿಂದುಸ್ಥಾನಿ ಸಂಗೀತದಲ್ಲಿ ಆಸಕ್ತಿ, ಪರಿಶ್ರಮವಿತ್ತು. ಶಂ. ಸಾಮಗ, ರಾ. ಸಾಮಗ, ವಾ. ಸಾಮಗ, ಭಾ. ಸಾಮಗ, ಹೊನ್ನಪ್ಪ ಗೋಕರ್ಣ, ಮಂಟಪ, ಕಾಳಿಂಗ ನಾವಡ, ಕಡತೋಕ ಕೃಷ್ಣ ಭಾಗವತರು ಮೊದಲಾದ ಮಹಾಕಲಾವಿದರಿದ್ದ ಮೊದಲಿನ ಪೆರ್ಡೂರು ಮೇಳವದು. ಕ್ಯಾಂಪ್ ಖಾಲಿ ಇದ್ದುದರಿಂದ ವಾ. ಸಾಮಗರು ನಮ್ಮ ಎಲೆಕ್ಟ್ರಿಕಲ್ ಅಂಗಡಿಗೆ ಬಂದರು. ನಮ್ಮ ಸೋದರಮಾವ ನಾಗೇಶ ಮಧ್ಯಸ್ಥರಲ್ಲಿ ಆಟದ ವ್ಯವಸ್ಥೆ ಬಗ್ಗೆ ಮಾತನಾಡಿದರು. ಸಿದ್ಧತೆಯ ಜವಾಬ್ದಾರಿ ನನ್ನ ಪಾಲಿಗೆ ಬಂತು. ನಡುರಾತ್ರಿ ಆಟದವರಿಗೆ ಚಹಾ ವ್ಯವಸ್ಥೆ ಮಾಡಿ ಟೆಂಟಿನ ಹೊರಗೆ ನಿಂತಿದ್ದೆವು. ಆಗ ನಾವಡರ ಪದ್ಯ ಕೇಳಿತು. ಆ ಪದ್ಯಗಳು ನಮ್ಮನ್ನು ಬೆಳಗಿನವರೆಗೂ ಆಟ ನೋಡಿಸಿದವು.

ವಿಜಯಶ್ರೀ ಪ್ರಸಂಗ. ಬೆಳಗಿನ ಜಾವದ ಹಿತವಾಯ್ತೆ ಪ್ರಿಯನೆ ಎಂಬ ಪದ್ಯ ತಲೆಯಲ್ಲಿ ಅಚ್ಚಾಯಿತು. ಸಂಗೀತ ಮೊದಲೇ ಗೊತ್ತಿದ್ದರಿಂದ ನಾವಡರ ಪದ್ಯ ಕೇಳಿ ಮತ್ತಷ್ಟು ಆಸಕ್ತಿ ಬೆಳೆಯಿತು. ಕೆಲವು ಆಟ ನೋಡಲು ಆರಂಭಿಸಿದೆ. ಕೆಲವೇ ಸಮಯದಲ್ಲಿ ನಮ್ಮ ಬ್ಯುಸಿನೆಸ್ ಸಹ ಲಾಸ್ ಆಯಿತು. ಆಗ ನನ್ನ 21ನೇ ವಯಸ್ಸಿನಲ್ಲಿ 1977-78ರಲ್ಲಿ ನನ್ನ ಸೋದರಮಾವ ನನ್ನನ್ನು ಕರೆದುಕೊಂಡು ಹೋಗಿ ಕೋಟ ಕೇಂದ್ರಕ್ಕೆ ಸೇರಿಸಿದರು. ಪ್ರವೇಶ ಪರೀಕ್ಷೆಯಲ್ಲಿ ಮಾರುತಿ ಪ್ರತಾಪದ ‘‘ಬಾರನ್ಯಾಕೆ ಮಾರಜನಕ ಸಾರ ಸಾಕ್ಷಿಯೇ’’ ಪದ್ಯ ಹೇಳಿದೆ. ತಾಳ ರಾಗಗಳ ಅರಿವಿಲ್ಲದಿದ್ದರೂ ಕೆಲವು ಆಟ ನೋಡಿ ನನಗೆ ಆ ಪದ್ಯ ಬಾಯಿಪಾಠವಾಗಿತ್ತು. ಹೀಗೆ ಕೋಟ ಕೇಂದ್ರದ ವಿದ್ಯಾರ್ಥಿಯಾದೆ.


ಪ್ರಶ್ನೆ : ನಿಮ್ಮ ಗುರುಗಳಾದ ಉಪ್ಪೂರರ ಬಗ್ಗೆ?

ಧಾರೇಶ್ವರ – ಉಪ್ಪೂರು ಅಂದ್ರೆ ನನ್ನ ಪಾಲಿಗೆ ಸರ್ವಸ್ವ. A to Z. ನನಗೆ ಮತ್ತೊಂದು ಜನ್ಮಕೊಟ್ಟ ತಂದೆ, ಗುರು. ಗುರು ಎಂಬ ಶಬ್ದಕ್ಕೆ ಸರಿಯಾದ ಅರ್ಥವೇ ನನ್ನ ಜೀವನದಲ್ಲಿ ಉಪ್ಪೂರು. ಕೇಂದ್ರ ಆರಂಭವಾಗುವ ದಿನ ಅಲ್ಲಿ ಗಣಹೋಮ ಮಾಡುತ್ತಾರೆ. ಅದಕ್ಕೆ ಉಪ್ಪೂರರೇ ಕುಳಿತುಕೊಳ್ಳುವುದು. ನಾನು ಮೊದಲಿಗೆ ಹೋಗುವಾಗ ಕಂಡಿದ್ದು ಆ ದೃಶ್ಯವನ್ನು. ಅದು ಅನಂತರ ನನಗೆ ಅನ್ನಿಸುವುದು “ಪರಮ ಋಷಿಮಂಡಲದ ಮಧ್ಯದಿ ಮೆರೆವ ಯಜ್ಞೇಶ್ವರನ ಪ್ರಭೆಯೊಳು’’ ಆ ಪದ್ಯದ ಅರ್ಥ ನನಗೆ ಆವಾಗಲೇ ದೃಶ್ಯದಿಂದ ಆಗಿತ್ತು. ಅಂದು ಅವರನ್ನು ನೋಡುವಾಗಲೇ ತಾನಾಗಿಯೇ ಕೈಮುಗಿದು ಹೋಯಿತು, ತಲೆಬಾಗಿತು.


ಪ್ರಶ್ನೆ : ಭಾಗವತಿಕೆಯ ಆರಂಭದ ಹಂತಗಳು ಹೇಗಿದ್ದವು?
ಧಾರೇಶ್ವರ – ಆರಂಭದಲ್ಲಿ ಮೇಳಕ್ಕೆ ಅಧಿಕೃತ ಸಂಗೀತಗಾರನಾಗಿ ಸೇರುವ ಧೈರ್ಯವಿರಲಿಲ್ಲ. ನಾನು ಎಲೆಕ್ಟ್ರಿಷಿಯನ್ ಆಗಿ ಅಮೃತೇಶ್ವರಿ ಮೇಳಕ್ಕೆ ಸೇರಿದೆ. ದೇವರ ಸೇವೆಯ ದಿನ ‘‘ಒಂದಾದರೂ ಪದ್ಯ ಹೇಳುಕ್ಕೆ ಅಕ್ಕ’’ ಅಂತ ಉಪ್ಪೂರು ಕೇಳಿದರು. ದುರ್ಗಪ್ಪ ಗುಡಿಗಾರರಲ್ಲಿ ಗುರುಗಳು ಹೀಗೆ ಹೇಳಿದರು ಎಂದಾಗ ಅವರೇ ಮದ್ದಲೆಗೆ ಬರ್ತೇನೆ ಎಂದು ಧೈರ್ಯ ತುಂಬಿದರು. ರಂಗಸ್ಥಳದಲ್ಲಿ ತೆರೆಬಿಟ್ಟಿದ್ದರಿಂದ ಮುದದಿಂದ ಪದ್ಯವನ್ನು ಹೇಗೋ ಧೈರ್ಯ ಮಾಡಿ ಹೇಳಿದೆ. ಚೌಕಿಯಲ್ಲಿ ಗಣಪತಿಪೂಜೆ ಸರಿಯಾಗಿ ಆಗಬೇಕಿದ್ದರಿಂದ ಆ ಧೈರ್ಯ ಇರಲಿಲ್ಲ. ಹೀಗೆ ಆರಂಭವಾಗಿ ಕೆಲವು ವರ್ಷ ಕಳೆಯಿತು. ಗುರುಗಳಿಂದ ಕೇಂದ್ರದಲ್ಲೂ ಮೇಳದಲ್ಲೂ ಪಾಠವಾಗುತ್ತಿತ್ತು. ಹೀಗೆ ಪೀಠಿಕೆ ಸ್ತ್ರೀವೇಷದವರೆಗೆ ಪದ್ಯ ಹೇಳಿ, ಎಲೆಕ್ಟ್ರಿಷಿಯನ್ ಆಗಿ, ಹಗಲು ಮೈಕ್ ಅಡ್ವರ್ಟೈಸ್ ಮಾಡುತ್ತಿದ್ದೆ.


ಪ್ರಶ್ನೆ : ರಂಗತಂತ್ರಗಳನ್ನು ಪೌರಾಣಿಕ ಮತ್ತು ಸಾಮಾಜಿಕ ಪ್ರಸಂಗ ಗಳೆರಡರಲ್ಲೂ ಬಹಳ ಚೆನ್ನಾಗಿ ಅಳವಡಿಸುತ್ತೀರಿ? ಅದು ಹೇಗೆ ಸಾಧ್ಯ ವಾಯಿತು?
ಧಾರೇಶ್ವರ – ಮೊದಲು ನಮ್ಮ ಪದ್ಯ ಆದಮೇಲೆ ಆಟ ನೋಡಲೇ ಬೇಕಿತ್ತು. ಅಲ್ಲಿಯ ಸೂಕ್ಷ್ಮಗಳನ್ನು ಗಮನಿಸಿ ಬರೆದಿಟ್ಟುಕೊಳ್ಳುತ್ತಿದ್ದೆ. ಒಮ್ಮೆ ಅಲ್ಲಿಯೇ ಸ್ವಲ್ಪ ನಿದ್ರೆಗೆ ಜಾರಿದಾಗ ಗುರುಗಳು ತಾಳ ತೆಗೆದು ನನ್ನ ಕಡೆಗೆ ಎಸೆದರು. ಅದು ನನ್ನ ಹಣೆಗೆ ತಾಗಿ ಆದ ಗಾಯದ ಕಲೆ ಇನ್ನೂ ಇದೆ. ಅದಕ್ಕೆ ಕಾರಣ, ಅಂದಿನ ಕೀಚಕವಧೆಯ ಪ್ರಸಂಗದಲ್ಲಿ ದ್ರೌಪದಿ ಭೀಮನಲ್ಲಿ ಎರಡನೇ ಬಾರಿ ಬರುವ ದೃಶ್ಯವನ್ನು ಕೈಬಿಟ್ಟು ನೇರ ನಾಟ್ಯಶಾಲೆಗೆ ಕೀಚಕ ಬರುವ ದೃಶ್ಯವನ್ನೆ ತೆಗೆದುಕೊಂಡಿದ್ದರು. ಆ ರಂಗತಂತ್ರವನ್ನು ನಾನು ಗಮನಿಸಲಿಲ್ಲವೆಂದು ಗುರುಗಳು ಹಾಗೆ ಮಾಡಿದ್ದರು. ಆದರೆ ಅವರ ಶಿಷ್ಯವಾತ್ಸಲ್ಯ ಎಷ್ಟೆಂದರೆ ಮರುದಿನ ಬೆಳಿಗ್ಗೆ ಅವರೇ ಔಷಧ ನೀಡಿ ರಂಗತಂತ್ರದ ವಿಷಯವನ್ನು ಹೇಳಿ, ಭಾಗವತ ಸಮಯ ನೋಡಿಕೊಂಡು ಇಂತಹ ತಂತ್ರಗಳನ್ನು ಮಾಡಬೇಕಾಗುತ್ತದೆ ಎಂದರು. ಆ ಘಟನೆಯಿಂದ ಅದರ ಮಹತ್ತ್ವವರಿತು ಆ ಬಗ್ಗೆ ಗಮನಹರಿಸುವಂತಾಯಿತು. ನಾನು ಎಲೆಕ್ಟ್ರಿಷಿಯನ್ ಆದ ಕಾರಣ ಬೆಳಕನ್ನು ರಂಗದಲ್ಲಿ ಹೇಗೆ ಉಪಯೋಗಿಸಬೇಕೆಂಬ ತಂತ್ರಕ್ಕೆ ಸಹಕಾರಿಯಾಯಿತು.


ಪ್ರಶ್ನೆ : ಕಲಾವಿದನ ಸಾಮರ್ಥ್ಯ ಮತ್ತು ಮನವರಿತು ಕುಣಿಸುವುದರಲ್ಲಿ ನೀವು ಕುಶಲಮತಿಗಳು, ಅದರಿಂದ ಆದ ಅನ್ವೇಷಣೆಗಳನ್ನು ಉದಾಹರಿಸಬಹುದೇ?
ಧಾರೇಶ್ವರ – ಛಲದಂಕ ಚಕ್ರೇಶ್ವರ ಪ್ರಸಂಗದಲ್ಲಿ ಒಮ್ಮೆ ಚಿಟ್ಟಾಣಿಯವರು ಗದಾಪರ್ವದ ಅಂತಿಮಘಟ್ಟದ “ಕಪಟನಾಟಕ ರಂಗ ಗುಪಿತವೇನೋ ನಿನ್ನಂಗ” ಪದ್ಯಕ್ಕೆ ಅಭಿನಯಿಸುತ್ತಿದ್ದರು. ಅವರಿಗೆ ಒಂದು ಚಿಕ್ಕ ಗ್ಯಾಪ್ ಬೇಕು ಅಂತ ನನಗೂ ಅನಿಸಿತು. ಕೂಡಲೇ “ಎಲವೋ ಪಾತಕಿ” ಪದ್ಯವನ್ನು ಅದರಲ್ಲೇ ಜೋಡಿಸಿದೆ. ಕೃಷ್ಣನಾಗಿದ್ದ ಕಣ್ಣಿಯವರು ತಕ್ಷಣ ಹೆಜ್ಜೆ ಇಡುತ್ತಾ ರಂಗವನ್ನು ತುಂಬಿದರು. ಚಿಟ್ಟಾಣಿಯವರಿಗೂ ಸುಧಾರಿಸಿಕೊಳ್ಳಲು ಸಮಯ ಸಿಕ್ಕಿತು. ಸಂದರ್ಭಕ್ಕೆ ಸರಿಯಾದ ಒಂದು ಹೊಸ ಅನ್ವೇಷಣೆ ಹುಟ್ಟಿ ಅದನ್ನೇ ಅನುಸರಿಸುವಂತಾಯಿತು. ಹೀಗೆ ಅನೇಕ ಸನ್ನಿವೇಶಗಳು ಪ್ರೇಕ್ಷಕನ ಮನಮುಟ್ಟುವಲ್ಲಿ ಸಹಕಾರಿಯಾಗಿವೆ.


ಪ್ರಶ್ನೆ : ಕಾಳಿಂಗ ನಾವಡ ಎಂಬ ಪ್ರತಿಭೆ ಬಡಗಿನಲ್ಲಿ ಸರ್ವಾಂತರ್ಯಾಮಿಯಾದ ಸಂದರ್ಭದಲ್ಲಿಯೇ ನೀವು ಪ್ರಸಿದ್ಧರಾದವರು. ಹೇಗದು ಸಾಧ್ಯವಾಯಿತು?
ಧಾರೇಶ್ವರ – ಅದು ನನಗೇ ಆಶ್ಚರ್ಯ. ಅವರೊಂದು ಸಮುದ್ರ, ಅಸೂಯೆ, ದ್ವೇಷಗಳಾವುದೂ ಇಲ್ಲದ ವ್ಯಕ್ತಿತ್ವ. ನನ್ನ ಬೆಳವಣಿಗೆಗೆ ಅವರೂ ಕಾರಣರು. ಹೇಗೆಂದರೆ, ಮಳೆಗಾಲದ ಬಾಂಬೆಯ ಆಟಕ್ಕೆ ನನ್ನನ್ನು ಕರೆದುಕೊಂಡು ಹೋಗಲು ಕೋಟ ಕೇಂದ್ರಕ್ಕೆ ಬಂದರು. ಆಗ ನಾನು ಕೇಂದ್ರದ ವಿದ್ಯಾರ್ಥಿಯಾಗಿಯೇ ಇದ್ದೆ. ಅವರೊಂದಿಗೆ ಮುಂಬಯಿಯ ಸಾಧುಶೆಟ್ರು, ಮೊಗವೀರ ಸಮಾಜದ ಪ್ರಮುಖರಾದ ಪುಂಡಲೀಕರವರು, ಕುಂದನ್, ಪ್ರೊ. ಅಧಿಕಾರಿ ಮೊದಲಾದವರು ಬಂದರು. ಉಪ್ಪೂರರು ನನ್ನನ್ನು ಚಹಾ ತರಿಸಲು ಕಳಿಸಿದರು. ಆಗ ಈ ಬಗ್ಗೆ ಉಪ್ಪೂರರಲ್ಲಿ ಮಾತಾಡಿದ್ದಾರೆ. ಗುರುಗಳು ಅಲ್ಲಿಯ ವ್ಯವಸ್ಥೆಯ ಬಗ್ಗೆ, ಪ್ರಸಂಗದ ಬಗ್ಗೆ, ಕಲಾವಿದರ ಬಗ್ಗೆ ಎಲ್ಲಾ ಮಾತನಾಡಿ ನನ್ನ ಯೋಗಕ್ಷೇಮದ ಬಗ್ಗೆ ಎಲ್ಲವನ್ನು ಮಾತನಾಡಿಯೇ ಒಪ್ಪಿಗೆ ಕೊಟ್ಟರು. ಅವರು ಹೊರಟು ಹೋದಮೇಲೆ ನನಗೆ ವಿಷಯ ತಿಳಿಸಿದರು. ಅಂದರೆ ಅವರಿಗೆ ಶಿಷ್ಯನನ್ನು ಕಳಿಸುವಾಗಲೂ ತಂದೆಗಿರಬೇಕಾದ ಜವಾಬ್ದಾರಿ. ಬಾಂಬೆಗೆ ಹೋದರೆ ನನ್ನಲ್ಲಿ ಪ್ರಸಂಗ ಪುಸ್ತಕ ಇರಲಿಲ್ಲ. ನಾವಡರಲ್ಲಿ ಕೇಳಿದಾಗ ಪುಸ್ತಕ ತರಲಿಲ್ಲ ಅಂದರು. ಅವರಿಗೆ ಎಲ್ಲಾ ಪದ್ಯವೂ ಕಂಠಸ್ಥವಾಗಿತ್ತು. ಆಮೇಲೆ ಅವರೇ ಗೋಪಾಲಾಚಾರ್ಯರಿಗೆ ಹೇಳಿದರು. ಅವರಿಗೂ ಸಹ ಪದ್ಯ ಬಾಯಿಪಾಠ. ಮಾತ್ರವಲ್ಲ ಯಾವ ಸೀನ್ ಎಷ್ಟು ಗಂಟೆಗೆ ಎಂಬುದನ್ನು ಕರಾರುವಾಕ್ಕಾಗಿ ಹೇಳಿದರು. ಪದ್ಯಗಳನ್ನು ಬರೆದು ಕೊಟ್ಟರು. ಹೀಗೆ ನನ್ನ ಪ್ರಸಿದ್ಧಿಯಲ್ಲಿ ನಾವಡರ ಪಾತ್ರವೂ ತುಂಬಾ ಮುಖ್ಯವಾದುದು.


ಪ್ರಶ್ನೆ : ದುರ್ಗಪ್ಪ ಗುಡಿಗಾರರ ಬಗ್ಗೆ?

ಧಾರೇಶ್ವರ – ಗುಡಿಗಾರ್ ನನ್ನ ಉಸಿರು. ಅದೊಂದು ಶಬ್ದ ಸಾಕು ಎನಿಸುತ್ತದೆ. (ಒಮ್ಮೆ ನಿಟ್ಟುಸಿರು ಬಿಟ್ಟು) ಆ ಉಸಿರು ದೂರವಾದ ಮೇಲೆ ಸ್ವಲ್ಪ ಡೋಲಾಯಮಾನವಾಯಿತು. ನನ್ನೆಲ್ಲಾ ಪದ್ಯಕ್ಕೂ ಅವರ ಸಾಥ್ ಅವಿಸ್ಮರಣೀಯ. ಅನೇಕ ಪ್ರಸಂಗದ ಕೆಲವು ಸನ್ನಿವೇಶಗಳಿಗೆ ಅವರ ಸಲಹೆ ಸಹಕಾರವಾಯಿತು. ಇಲ್ಲಿಗೆ ಬೇರೆ ಯಾವುದೋ ಬೇಕು. ಇಲ್ಲಿಗೆ ಈ ರಾಗ ಬೇಡ ಹೀಗೆ ಸಲಹೆ ನೀಡುತ್ತಿದ್ದ ಗುರುಸಮಾನರು. ಅವರಂತವರು ಲಕ್ಷಕ್ಕೊಬ್ಬರು.


ಪ್ರಶ್ನೆ : ಆಟ, ತಾಳಮದ್ದಲೆ, ಗಾನವೈಭವಗಳಲ್ಲಿ ಭಾಗವತಿಕೆಯ ವ್ಯತ್ಯಾಸವೇನು?
ಧಾರೇಶ್ವರ – ಆಟದಲ್ಲಿ ವೇಷಧಾರಿಯನ್ನು ನೋಡಿ, ಪ್ರಸಂಗಾವಧಾನತೆಯನ್ನು ಮೀರದಂತೆ ಭಾಗವತಿಕೆ ಇರಬೇಕು. ಉದಾಹರಣೆಗೆ ಸುಧನ್ವನ ಸೃಷ್ಟಿಗರ್ಜುನ ಪದ್ಯಕ್ಕೂ, ಅರ್ಜುನನ ಹುಡುಗ ನೀನು ಪದ್ಯಕ್ಕೂ ವ್ಯತ್ಯಾಸವಿದೆ. ಕೆಲವು ಕಡೆ ಸನ್ನಿವೇಶ ಕಳೆಕಟ್ಟಲು ಆ ಪ್ರಸಂಗದಲ್ಲಿಲ್ಲದ ಕಿಸೆಪದ್ಯಗಳ ಅಗತ್ಯವಿದೆ.
ತಾಳಮದ್ದಲೆ ಮಾತಿನಮಂಟಪ, ಅಲ್ಲಿ ಪದ್ಯಗಳ ಪುನರಾವರ್ತನೆಯು ಬೇಡ. ಕೆಲವು ಕಡೆ ಆರಂಭದ ಮುಕ್ತಾಯವೂ ಬೇಡ. (ಸಂಧಾನದ ನೋಡಿದೆಯಾ ವಿದುರ ಪದ್ಯ ಹೇಳಿ ತೋರಿಸಿದರು) ಆ ಸಮಯವನ್ನು ಅರ್ಥಧಾರಿಗೆ ನೀಡಬಹುದು.
ಗಾನವೈಭವ ಓಡಾಡಲು ದೊಡ್ಡ ಮೈದಾನ ಕೊಟ್ಟಂತೆ. ಪದ್ಯವನ್ನು ವಿಸ್ತರಿಸಬಹುದು, ಅನೇಕ ರಾಗಗಳನ್ನು ಅಳವಡಿಸಬಹುದು. ಹಿಮ್ಮೇಳ ವಾದಕರಿಗೆ ಸಾಕಷ್ಟು ಅವಕಾಶ. ಆದರೆ ಹಿಂದಿನವರು ಮಾಡಿಟ್ಟ ಪದ್ಯದ ವ್ಯವಸ್ಥೆಗಳನ್ನು ಮೀರಬಾರದು.
(ಒಂದೇ ಪದ್ಯವನ್ನು ಮೂರೂ ಸಂದರ್ಭದಲ್ಲಿ ಹೇಗೆ ಬಳಸಬೇಕೆಂಬುದನ್ನು ಹೇಳಿ ತೋರಿಸಿದರು)


ಪ್ರಶ್ನೆ : ಚಿಟ್ಟಾಣಿ ಮತ್ತು ಶೇಣಿಯವರೊಂದಿಗಿನ ಒಡನಾಟದ ಬಗ್ಗೆ?
ಚಿಟ್ಟಾಣಿ ಮತ್ತು ಶೇಣಿಯವರಿಗೆ ಪದ್ಯ ಹೇಳಿದರೆ ಸುಮಾರಿಗೆ ಭಾಗವತ ಆದ ಹಾಗೆ ಅಂತ ಉಪ್ಪೂರು ಹಿಂದೊಮ್ಮೆ ಹೇಳಿದ ಮಾತು. ಚಿಟ್ಟಾಣಿಯವರ ಅಭಿನಯ, ಹೆಜ್ಜೆಗಾರಿಕೆಯ ವಿನ್ಯಾಸ, ಸೂಕ್ಷ್ಮಗಳನ್ನು ಅರಿತು ಪದ್ಯ ಹೇಳಲು ತುಂಬಾ ಜಾಗೃತ ಆಗಿರಬೇಕು. ಹಾಗೆಯೇ ಶೇಣಿಯವರ ತಾಳಮದ್ದಲೆಯಲ್ಲಿ ಪದ್ಯ ಹೇಳಲು ಸಹ. ಒಮ್ಮೆ ಕಾರ್ಕಳದಲ್ಲಿ ವಾಲಿವಧೆ ಪ್ರಸಂಗ. ಸಾಮಾನ್ಯವಾಗಿ “ಚಿತ್ತದಲ್ಲಿ ಶಂಕೆ ಬೇಡ” ಪದ್ಯವನ್ನು ವೀರರಸದಲ್ಲಿಯೇ ಹೇಳುವ ವಾಡಿಕೆ. ಆದರೆ ಆ ದಿನ ಶೇಣಿಯವರು ವಾಲಿಯಾಗಿ “ತಾರೆ! ಇನ್ನೂ ನಿನ್ನ ಪತಿಯ ವ್ಯಕ್ತಿತ್ವದ ಮೇಲೆ ಅನುಮಾನವೇನೇ? ಅಂತ ಕರುಣೆಯ ಛಾಯೆಯಲ್ಲಿ ಅರ್ಥವನ್ನು ಮುಂದಿನ ಪದ್ಯಕ್ಕಾಗಿ ನಿಲ್ಲಿಸಿದರು. ನನಗದು ಅನಿರೀಕ್ಷಿತ. ಯೋಚಿಸಲೂ ಅವಕಾಶ ಅಲ್ಲಿಲ್ಲ. ಅಂದು ಕರುಣಾರಸದಲ್ಲಿಯೇ ಆ ಪದ್ಯವನ್ನು ಹೇಳಿದೆ. ಅದಕ್ಕೆ ಅರ್ಥ ಹೇಳುವಾಗ ಶೇಣಿಯವರು ಇದು ವಾಲಿಯ ನಿಜವಾದ ಮನಸ್ಸು, ಅಷ್ಟು ಬೇಗ ನಿನಗೆ ಅರ್ಥವಾಯಿತಲ್ಲ. ಅಂತ ನನ್ನನ್ನು ತೋರಿಸಿದರು. ಮರುದಿನ ಕೇಂದ್ರಕ್ಕೆ ಉಪ್ಪೂರರಿಗೆ ಶೇಣಿಯವರ ಪತ್ರ. ಮತ್ತೊಂದು ಉತ್ತಮ ರತ್ನವನ್ನು ಕೊಡುತ್ತಿದ್ದೀರಿ, ಧನ್ಯವಾದಗಳು, ನಿಮ್ಮ ನಿಯಂತ್ರಣದಲ್ಲಿರಲಿ. ಹೀಗೆ ಇತ್ತು.


ಪ್ರಶ್ನೆ : ಕರ್ಣಾಟಕದಾದ್ಯಂತ ಯಕ್ಷಗಾನ ಕಲೆಯನ್ನು ಪಸರಿಸುವಲ್ಲಿ ಇರುವ ಸಾಧ್ಯತೆಗಳೇನು?
ಧಾರೇಶ್ವರ – ಕರ್ಣಾಟಕದ ಬೇರೆ ಬೇರೆ ಪ್ರದೇಶಗಳಿಗೆ ಹೋಗಿ ಅಲ್ಲಿಯ ಕಾಲೇಜು ವಿದ್ಯಾರ್ಥಿಗಳಿಗೆ ನಮ್ಮ ಯಕ್ಷಗಾನವನ್ನು ಪ್ರದರ್ಶಿಸಿ, ವೇಷಭೂಷಣ, ಬಣ್ಣಗಾರಿಕೆ ಇದರ ಬಗ್ಗೆ ಪರಿಚಯಿಸಿ, ಅವರನ್ನು ಪ್ರೇಕ್ಷಕರನ್ನಾಗಿಸಿ ಶಿಬಿರ ಪ್ರಾತ್ಯಕ್ಷಿಕೆಗಳ ಮೂಲಕ ಅವರು ವೇಷ ಮಾಡುವಂತೆ ಮಾಡಿ ಈ ಕಲೆಯನ್ನು ನಾಡಿನ ಉಸಿರಾಗಿಸಬೇಕಾಗಿದೆ. ಆ ನಿಟ್ಟಿನಲ್ಲಿ ನಮ್ಮ ಚಾರಿಟೆಬಲ್ ಟ್ರಸ್ಟ್ ಒಂದಷ್ಟು ಪ್ರಯತ್ನ ಮಾಡುತ್ತಿದೆ. ಸಂಪೂರ್ಣ ಕರ್ಣಾಟಕವನ್ನು ಪಸರಿಸುವ ಶ್ರೀಮಂತಿಕೆ ಈ ಕಲೆಗಿದೆ. ಅದಕ್ಕೆ ಬೇಕಾದ ಪ್ರಯತ್ನ ಅಗತ್ಯ.


ಪ್ರಶ್ನೆ : ಮೂಡುಬಿದಿರೆಯ ಆಳ್ವಾಸ್‍ನ ಯಕ್ಷಗಾನ ಡಿಪ್ಲೊಮಾ ಕೋರ್ಸ್‍ನಲ್ಲಿ ಗುರುಗಳಾಗಿದ್ದೀರಿ. ಡಾ| ಮೋಹನ್ ಆಳ್ವರ ಈ ಯೋಜನೆಯು ಹೇಗೆ ಯಕ್ಷಗಾನದ ಪ್ರಸಾರದಲ್ಲಿ ಸಹಕಾರಿ?
ಧಾರೇಶ್ವರ – ಸಮಗ್ರ ತೆಂಕು ಬಡಗು ಯಕ್ಷಪ್ರಪಂಚ ಅಭಿನಂದಿಸಬೇಕಾದ ವ್ಯಕ್ತಿ ಡಾ| ಎಂ. ಮೋಹನ ಆಳ್ವರು. ಶೈಕ್ಷಣಿಕ ಕ್ಷೇತ್ರದಲ್ಲಿ ಅವಿಭಾಜ್ಯ ಅಂಗವಾಗಿ ಯಕ್ಷಗಾನವನ್ನು ಬೆಳೆಸುವ ಯೋಜನೆ ಅವರದು. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದನ್ನು ವಿಸ್ತರಿಸುವಂತೆ ಮಾಡುವ ಯೋಜಿತ ಯೋಚನೆ ಅವರಲ್ಲಿದೆ. ಈ ಕೋರ್ಸ್‍ಗೆ ರಾಜ್ಯದ ನಾನಾ ಭಾಗಗಳಿಂದ ವಿದ್ಯಾರ್ಥಿಗಳು ಬಂದಿದ್ದಾರೆ. ಕೋರ್ಸ್ ಮುಗಿಸಿದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶದ ಬಗ್ಗೆಯೂ ಸ್ಪಷ್ಟ ಪರಿಕಲ್ಪನೆ ಅವರಲ್ಲಿದೆ. ಇದೊಂದು ಅಭೂತಪೂರ್ವವಾದ ಯೋಜನೆಯಾಗಿದೆ.


ಪ್ರಶ್ನೆ : ಪೆರ್ಡೂರು ಮೇಳದೊಂದಿಗಿನ ನಿಮ್ಮ ನಂಟು?
ಧಾರೇಶ್ವರ – ಪೆರ್ಡೂರು ಮೇಳದಲ್ಲಿನ 26 ವರ್ಷದ ತಿರುಗಾಟ ಸದಾ ಸ್ಮರಣೀಯ. ನನ್ನೆಲ್ಲ ನವ್ಯತೆಯ ಪ್ರಯೋಗಗಳಿಗೂ ಮೇಳದ ಯಜಮಾನರಾದ ಕರುಣಾಕರ ಶೆಟ್ರು ಸಂಪೂರ್ಣ ಸಹಕಾರ ನೀಡುತ್ತಿದ್ದರು. ಸೌಂಡ್ ಸಿಸ್ಟಮ್, ಲೈಟಿಂಗ್ಸ್, ಜನರೇಟರ್, ರಂಗಸ್ಥಳ ಮುಂತಾದವುಗಳ ಬಗ್ಗೆ ಇದರ ಅವಶ್ಯಕತೆ ಇದೆ ಎಂದಾಗ ಕೂಡಲೇ ವ್ಯವಸ್ಥೆ ಮಾಡುತ್ತಿದ್ದರು. ಇದರಿಂದ ಮೇಳದ ಪ್ರದರ್ಶನಗಳು ಯಶಸ್ವಿಯಾಗಲು ಸಾಧ್ಯವಾಯಿತು.


ಪ್ರಶ್ನೆ : ಧಾರೇಶ್ವರ ಚಾರಿಟೇಬಲ್ ಟ್ರಸ್ಟಿನ ಕಾರ್ಯ ಯೋಜನೆಯ ಬಗ್ಗೆ ತಿಳಿಸಿ?
ಧಾರೇಶ್ವರ – ವರ್ಷಕ್ಕೆ ನಲ್ವತ್ತು ನಲ್ವತೈದು ಆಟ, ಉಡುಪಿಯಲ್ಲೊಂದು ಅಷ್ಟಾಹ, ತಾಳಮದ್ದಲೆ ಸಪ್ತಾಹ ಇವೆಲ್ಲ ನಡೆಯುತ್ತಿವೆ. ಯಕ್ಷಗಾನಕ್ಕಾಗಿ ಹಿಂದೆ ತುಂಬಾ ಶ್ರಮಿಸಿದ, ಕೊಡುಗೆ ನೀಡಿದ ಕಲಾವಿದರನ್ನು ಗುರುತಿಸುವ ಅವರ ಕೊಡುಗೆಯ ಮಹತ್ತ್ವವನ್ನು ಸಾದರಪಡಿಸುವ ಯೋಜನೆ ಇದೆ.


ಪ್ರಶ್ನೆ : ನಿಮ್ಮ ಸುಪುತ್ರ ಕಾರ್ತಿಕ್ ಧಾರೇಶ್ವರರು ಹೇಗೆ ಯಕ್ಷಗಾನದಲ್ಲಿ ಸಕ್ರಿಯರಾಗಿದ್ದಾರೆ? ನಿಮ್ಮನ್ನು ಅವರಲ್ಲಿ ನೋಡುವ ನಿರೀಕ್ಷೆಯ ಕಣ್ಣುಗಳಿರಬಹುದು.
ಧಾರೇಶ್ವರ – ಅವನಿಗೆ ಸ್ವರ ಚೆನ್ನಾಗಿತ್ತು. ಶ್ರುತಿಜ್ಞಾನವಿದೆ. ಆದರೆ ಅವನ ಆಸಕ್ತಿ ಚಂಡೆಯಲ್ಲಿ. ಹವ್ಯಾಸಿ ಯಕ್ಷಗಾನ ಕಲಾವಿದನಾಗಿದ್ದಾನೆ.


ಪ್ರಶ್ನೆ : ನಿಮ್ಮ ಸಾಧನೆಯಲ್ಲಿ ನಿಮ್ಮ ಪತ್ನಿಯ ಪಾತ್ರ?
ಧಾರೇಶ್ವರ – ನನ್ನ ಸಾಧನೆಗೆ ಕಾರಣಳಾದವಳು ಪತ್ನಿ. ಅವಳು ಭರತನಾಟ್ಯ ಕಲಾವಿದೆ. ಕೆಲವು ಹೊಸಪ್ರಸಂಗಗಳ ನೃತ್ಯದ ಸೆಟ್ಟಿಂಗ್, ಡೈಲಾಗ್ ಸೆಟ್ಟಿಂಗಿಗೆ ಸಹಕಾರ ಅವಳಿಂದಲೇ. ಅನೇಕ ರಾಗದ ಬಗ್ಗೆಯೂ ಅಲ್ಲಿಗೆ ಆ ರೀತಿ ಹೇಳಬೇಕು ಇತ್ಯಾದಿ ಸಲಹೆ ನೀಡುತ್ತಾಳೆ. ಮನೆಯ ಸಂಪೂರ್ಣ ಜವಾಬ್ದಾರಿ ಅವಳದೇ. ನನಗೆ ಮನೆಯ ಸಮಸ್ಯೆ ಗೊತ್ತಿಲ್ಲ. ಅಷ್ಟು ಜವಾಬ್ದಾರಿ ಹೊತ್ತು ಸಹಕರಿಸಿದ್ದಾಳೆ.


ಸುಮಾರು ಮೂರು ತಾಸು ಆತ್ಮೀಯತೆಯಿಂದ ಅನೇಕ ವಿಚಾರಗಳನ್ನು ಹಂಚಿಕೊಂಡರು ಧಾರೇಶ್ವರರು. ಅದರಲ್ಲಿ ಕೆಲವು ಅಂಶಗಳನ್ನಷ್ಟೆ ಲೇಖನದಲ್ಲಿ ಬರೆದಿದ್ದೇನೆ. ಅವರ ಸಂದರ್ಶನದ ಸಮಯದಲ್ಲಿ ಸಹಕರಿಸಿದ ವಿದ್ವಾನ್ ಗಾಳಿಮನೆ ವಿನಾಯಕ ಭಟ್ಟರಿಗೂ, ಸುನಿಲ್ ಕುಮಾರ್ ಹೊಲಾಡು ಇವರಿಗೂ ಧನ್ಯವಾದಗಳನ್ನರ್ಪಿಸುತ್ತ ಧಾರೇಶ್ವರರವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ು

ಲೇಖಕ: ರಜನೀಶ ಹೊಳ್ಳ,
ಕೆಂಪಿನಮಕ್ಕಿ

ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ ಸಮಾರಂಭ ನವಂಬರ್ 28ಕ್ಕೆ

ಯಕ್ಷಗಾನ ಕಲಾರಂಗದ 2021ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ನವಂಬರ್ 28, ಭಾನುವಾರ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಅಪರಾಹ್ನ 3 ಗಂಟೆಗೆ ಜರಗಲಿದೆ. ಅದಮಾರು ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹಾಗೂ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಲಿರುವರು.

ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶ್ರೀ ಸುನಿಲ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ಉಡುಪಿ ಶಾಸಕ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿರುವರು. ಡಾ. ಎಂ. ಮೋಹನ ಆಳ್ವ ಹಾಗೂ ಚಂದ್ರಶೇಖರ ದಾಮ್ಲೆ ಅಭ್ಯಾಗತರಾಗಿ ಪಾಲುಗೊಳ್ಳಲಿರುವರು. 17 ಮಂದಿ ಹಿರಿಯ ಕಲಾವಿದರಿಗೆ ತಲಾ 20,000 ಮೊತ್ತವನ್ನೊಳಗೊಂಡ ಪ್ರಶಸ್ತಿ, 50 ಸಾವಿರ ಮೊತ್ತದ ಶ್ರೀ ವಿಶ್ವೇಶ ಪ್ರಶಸ್ತಿ ಆಳ್ವಾಸ್ ಕಾಲೇಜಿನ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರಕ್ಕೆ, ಯಕ್ಷಚೇತನ ಪ್ರಶಸ್ತಿ ಸಂಸ್ಥೆಯ ಹಿರಿಯ ಕಾರ್ಯಕರ್ತರಾದ, ಕೋಶಾಧಿಕಾರಿ ಮನೋಹರ ಕೆ. ಇವರಿಗೆ ಪ್ರದಾನ ಮಾಡಲಾಗುವುದು.

ಸಮಾರಂಭದ ಪೂರ್ವದಲ್ಲಿ ಅಪರಾಹ್ನ 1.30 ರಿಂದ ಆಳ್ವಾಸ್ ವಿದ್ಯಾರ್ಥಿಗಳಿಂದ ಸಾಯುಜ್ಯ ಸಂಗ್ರಾಮ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂಬುದಾಗಿ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.

ಮನೋಹರ್ ಕೆ. ಇವರಿಗೆ ಯಕ್ಷಚೇತನ ಪ್ರಶಸ್ತಿ

ಯಕ್ಷಗಾನ ಕಲಾರಂಗದ ಸಕ್ರಿಯ, ಹಿರಿಯ ಕಾರ್ಯಕರ್ತರಿಗಾಗಿ, ವಿಜಯ ಕುಮಾರ್ ಮುದ್ರಾಡಿಯವರು ಸ್ಥಾಪಿಸಿದ ಯಕ್ಷಚೇತನ ಪ್ರಶಸ್ತಿಯನ್ನು ಈ ಬಾರಿ ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಅಧಿಕಾರಿ, ಸಂಸ್ಥೆಯ ಕೋಶಾಧಿಕಾರಿ ಮನೋಹರ ಕೆ. ಇವರಿಗೆ ನೀಡಲಾಗುವುದು.

ನಿಡಂಬೂರು ಯುವಕ ಮಂಡಲ ಅಧ್ಯಕ್ಷರಾಗಿ, ಕುತ್ಪಾಡಿ ಯಕ್ಷಗಾನ ಮಂಡಳಿಯಲ್ಲಿ ವೇಷಧಾರಿಯಾಗಿ ಹಾಗೂ ಯಕ್ಷಗಾನ ಕಲಾರಂಗದಲ್ಲಿ ಕಳೆದ 7 ವರ್ಷಗಳಿಂದ ಸೇವೆ ಸಲ್ಲಿಸುತ್ತಿರವ ಮನೋಹರ ಕೆ. ಇವರಿಗೆ ನವಂಬರ್ 28, ಭಾನುವರ ರಾಜಾಂಗಣದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂಬುದಾಗಿ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.

ಮಾಡಾವು ಕೊರಗಪ್ಪ ರೈಗಳಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ

ಮಾಡಾವು ಕೊರಗಪ್ಪ ರೈಗಳು ಈ ಬಾರಿಯ ಯಕ್ಷಗಾನ ಕಲಾರಂಗ ಕೊಡಮಾಡುವ ಬಿ. ಜಗಜ್ಜೀವನ್‌ದಾಸ್ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮಾಡಾವು ಶ್ರೀ ಕೊರಗಪ್ಪ ರೈಗಳು ತೆಂಕುತಿಟ್ಟಿನ ವಿವಿಧ ಮೇಳಗಳಲ್ಲಿ ವ್ಯವಸಾಯವನ್ನು ಮಾಡಿ ಅನುಭವವನ್ನು ಹೊಂದಿದವರು. 2021-22ನೇ ಸಾಲಿನದು ಪ್ರಾಯಶಃ ಇವರ 40ನೇ ತಿರುಗಾಟ. ಯಕ್ಷಗಾನದ ಪುಂಡುವೇಷಧಾರಿಯಾಗಿ ತನ್ನನ್ನು ತಾನು ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.    

ಶ್ರೀ ಕೊರಗಪ್ಪ ರೈಯವರು ಪುತ್ತೂರು ತಾಲೂಕು ಕೈಯ್ಯೂರು ಗ್ರಾಮದ ಸನಂಗಳ ಎಂಬಲ್ಲಿ 1955ನೇ ಇಸವಿ ಡಿಸೆಂಬರ್ 26ರಂದು ಜನಿಸಿದರು.  ತಂದೆ ಮಹಾಬಲ ರೈ. ತಾಯಿ ಶ್ರೀಮತಿ ಕಮಲಾ. ಇವರದು ಕೃಷಿಕ ಕುಟುಂಬ.  ಕೈಯ್ಯೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯ ವರೆಗೆ ಓದಿದ್ದರು.

ಮೊದಲ ತಿರುಗಾಟ 1972ರಿಂದ. ಕಲ್ಲಾಡಿ ವಿಠಲ ಶೆಟ್ಟರ ಸಂಚಾಲಕತ್ವದ ಕರ್ನಾಟಕ ಮೇಳದಲ್ಲಿ. ಕರ್ನಾಟಕ ಮೇಳದಲ್ಲಿ ಐದು ವರ್ಷಗಳ ತಿರುಗಾಟ. ಆ ಬಳಿಕ ಮುಂಬೈಯಲ್ಲಿ ಕೆಲವು ವರ್ಷಗಳ ಕಾಲ ಉದ್ಯೋಗಿಯಾಗಿದ್ದರು. ಮಾಡಾವು ಕೊರಗಪ್ಪ ರೈಗಳು 1984ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಹೇಮಾವತಿ ಜತೆ ವಿವಾಹ. ವಿವಾಹದ ಬಳಿಕ ಮುಂಬಯಿಗೆ ಗುಡ್ ಬೈ ಹೇಳಿ ಊರಿಗೆ ಮರಳಿದ್ದರು.

ಆ ಹೊತ್ತಿಗೆ ಶೇಖರ ಶೆಟ್ರು ಮುಂಬಯಿಯಿಂದ ಊರಿಗೆ ಮರಳಿದ್ದರು. ಅವರ ಸಂಚಾಲಕತ್ವದ ಬಪ್ಪನಾಡು ಮೇಳದಲ್ಲಿ 2 ವರ್ಷ ತಿರುಗಾಟ, ನಂತರ ಶೇಖರ ಶೆಟ್ರು  ಬೆಳ್ಮಣ್ ಮೇಳ ಆರಂಭಿಸಿದ್ದರು. 1987-88ರಲ್ಲಿ ಕದ್ರಿ ಮೇಳದಲ್ಲಿ ತಿರುಗಾಟ. ಕರ್ನೂರು ಕೊರಗಪ್ಪ ರೈಗಳ ಸಂಚಾಲಕತ್ವ, ಕದ್ರಿ ಮೇಳದಲ್ಲಿ ಎರಡು ತಿರುಗಾಟ. ಬಳಿಕ ಒಂದು ವರ್ಷ ಪುತ್ತೂರು ಶ್ರೀಧರ ಭಂಡಾರಿಗಳ ಕಾಂತಾವರ ಮೇಳದಲ್ಲಿ ತಿರುಗಾಟ. ಬಳಿಕ ಮೇಳದ ತಿರುಗಾಟ ನಿಲ್ಲಿಸಿ ಒಂದು ವರ್ಷ ಮನೆಯಲ್ಲಿಯೇ ಇದ್ದರು.

1993ರಲ್ಲಿ ಭಾಗವತರಾದ ಕುಬಣೂರು ಶ್ರೀಧರ ರಾಯರ ಬೇಡಿಕೆಯಂತೆ ಕೊರಗಪ್ಪ ರೈಗಳು ಕಟೀಲು ಮೇಳಕ್ಕೆ ಸೇರಿದ್ದರು.  ಕಟೀಲು ನಾಲ್ಕನೇ ಮೇಳ ಆರಂಭವಾದಾಗ ಆ ಮೇಳಕ್ಕೆ. ನಿರಂತರ 28 ವರ್ಷಗಳಿಂದ ಅದೇ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಇವರು ಹಂತ ಹಂತವಾಗಿ ಮೇಲೇರಿಯೇ ಕಲಾವಿದನಾಗಿ ಗಟ್ಟಿಗರಾದವರು. ಪೂರ್ವರಂಗದಲ್ಲಿ ಬಾಲಗೋಪಾಲನಿಂದ ತೊಡಗಿ ನಿಧಾನವಾಗಿ, ದೃಢವಾಗಿ ಬೆಳೆದೇ ಈ ಎತ್ತರವನ್ನು ಏರಿದವರು.

ಬಾಲಲೀಲೆಯ ಶ್ರೀಕೃಷ್ಣ, ಮಾರ್ಕಂಡೇಯ, ಸರ್ವದಮನ, ಧ್ರುವ,ಪ್ರಹ್ಲಾದ, ಲಕ್ಷ್ಮಣ, ಸಿತಕೇತ, ಸುದರ್ಶನ, ಬಬ್ರುವಾಹನ, ಪರಶುರಾಮ, ಅಭಿಮನ್ಯು ಹೀಗೆ ಪುಂಡುವೇಷಕ್ಕೆ ಸಂಬಂಧಿಸಿದ ಎಲ್ಲಾ ಪಾತ್ರಗಳನ್ನು ಮಾಡಿದ್ದಾರೆ. ಪ್ರಸ್ತುತ ಅನೇಕ ವರ್ಷಗಳ ಕಾಲ ದೇವಿ ಮಹಾತ್ಮೆಯ ಬ್ರಹ್ಮ, ಚಂಡ ಮುಂಡರಾಗಿ ಅಭಿನಯಿಸಿದ್ದರು. ಈಗ ಶ್ರೀಕೃಷ್ಣ, ವಿಷ್ಣು ಮೊದಲಾದ ಮಾತುಗಾರಿಕೆ ಪ್ರಧಾನವಾದ ವೇಷಗಳನ್ನು ಮಾಡುತ್ತಾರೆ. ಕೊರಗಪ್ಪ ರೈಗಳು ಹಾಸ್ಯರಸಕ್ಕೆ ಸಂಬಂಧಿಸಿ ಕೆಲವು ಪಾತ್ರಗಳನ್ನೂ ಚೆನ್ನಾಗಿ ಮಾಡುತ್ತಾರೆ. ಶಿವಪ್ರಭ ಪರಿಣಯದ ಚಂದ್ರದ್ಯುಮ್ನ, ಯಶೋಮತಿ ಏಕಾವಳೀ ಪ್ರಸಂಗದ ವೀರಕೀರ್ತಿ, ಚಂದ್ರಹಾಸ ಪ್ರಸಂಗದ ಮದನ ಮೊದಲಾದ ಪಾತ್ರಗಳಿಗೆ ತನ್ನದೇ ಶೈಲಿಯಲ್ಲಿ ಕಲ್ಪನೆಯಿಂದ ಜೀವ ತುಂಬಿದ್ದಾರೆ. 

ಮಾಡಾವು ಕೊರಗಪ್ಪ ರೈಗಳನ್ನು ಅನೇಕ ಸಂಸ್ಥೆಗಳು ಸನ್ಮಾನಿಸಿವೆ. ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ಒಟ್ಟು ಮೇಳದ ತಿರುಗಾಟ 38. ಆದರೂ ಯಕ್ಷಗಾನ ಕ್ಷೇತ್ರದಲ್ಲಿ 48 ವರ್ಷಗಳ ಅನುಭವಿ ಇವರು. ಅಳಿಕೆ ಪ್ರಶಸ್ತಿ, ಕದ್ರಿ ವಿಷ್ಣು ಪ್ರಶಸ್ತಿಯನ್ನು ಪಡೆದುದಲ್ಲದೆ ಕಟೀಲು ಶ್ರೀ ಗೋಪಾಲಕೃಷ್ಣ ಅಸ್ರಣ್ಣರ ಸಂಸ್ಮರಣೆಯ ರಜತ ಮಹೋತ್ಸವದ ಸಂದರ್ಭದಲ್ಲಿ ಸನ್ಮಾನಿತರಾಗಿದ್ದಾರೆ.

ಕಳೆದ ವರ್ಷ ಮುಂಬಯಿಯಲ್ಲಿ ಸ್ವರ್ಗೀಯ ಶ್ರೀ ಶೇಖರ್ ಶೆಟ್ಟಿ  ಬೆಳ್ಮಣ್ ಸಂಸ್ಮರಣಾ ಸಮಿತಿಯವರೂ ಸನ್ಮಾನಿಸಿರುತ್ತಾರೆ. ಮಾಡಾವು ಕೊರಗಪ್ಪ ರೈಗಳಿಗೆ ಯಕ್ಷಗಾನ ಕಲಾರಂಗದ ಈ ಬಿ. ಜಗಜ್ಜೀವನ್‌ದಾಸ್ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ ಅರ್ಹವಾಗಿಯೇ ಸಂದಿದೆ. 

ಅಕ್ಷಯಾಂಬರ, ಗಿರಿಜಾಕಲ್ಯಾಣ – ಧರ್ಮಸ್ಥಳ ಮೇಳದ ಆಟ Live (21.11.2021)

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಇಂದಿನ(21.112021) ಯಕ್ಷಗಾನ ಪ್ರದರ್ಶನ ಶ್ರೀ ಕ್ಷೇತ್ರ ಧರ್ಮಸ್ಥಳದ ಯೂಟ್ಯೂಬ್ ಚಾನೆಲಿನಲ್ಲಿ ನೇರಪ್ರಸಾರ ಆಗುತ್ತಿದೆ. ಲಿಂಕ್ ಕೆಳಗಿದೆ. 

ಸಮಾಜಸ್ಪಂದಿಯಾದಾಗ ಮಾತ್ರ ಕಲೆಯ ಉಳಿವು-ಡಾ.ಸದಾನಂದ ಮಯ್ಯ

ಕಲೆ ಹಾಗೂ ಕಲಾವಿದರು ದೇಶಾದ್ಯಂತ ನಡೆಯುವ ವಿದ್ಯಮಾನಗಳಿಗೆ ಸ್ಪಂದಿಸುತ್ತ ತನ್ನ ಕೊಡುಗೆಯನ್ನು ಕೊಡುವುದೂ ಕೂಡಾ ಅತ್ಯವಶ್ಯ. ಇತ್ತೀಚೆಗೆ ಗಂಗೆಯ ಶುದ್ಧೀಕರಣದ ಮಾತು ದೇಶಾದ್ಯಂತ ಕೇಳುವಂತಾದ್ದು, ಆ ಪ್ರಯತ್ನವೂ ನಡೆಯುತ್ತಿರುವುದು, ಅದಕ್ಕೆ ಸರಿಯಾಗಿ ದೇವನದಿ ಗಂಗೆಯನ್ನು ಭುವಿಗೆ ತರುವಲ್ಲಿ ಭಗೀರಥ ಶ್ರಮ ಎಂತಾದ್ದು. ಅದರ ಪಾವಿತ್ರ್ಯತೆಯನ್ನು ಕಾಪಾಡಿ ಕೊಳ್ಳುವುದು ಕೂಡ ನಮ್ಮ ಜವಾಬ್ದಾರಿ ಈ ಅಂಶಗಳೆಲ್ಲವನ್ನೂ ಪ್ರೇರೆಪಿಸುವಂತೆ ಮಾಡುವಲ್ಲಿ ಗಂಗಾವತರಣ ಶುದ್ಧೀಕರಣ ಯಕ್ಷಪ್ರಸಂಗವಾಗಿ ರಂಗಸ್ಥಳದಲ್ಲಿ ಯಶಸ್ವೀಯಾಗಿ ಮೂಡಿಬಂದಿದೆ ಎಂದು ಕಲಾ ಪೋಷಕರು ಹಾಗೂ ಮಯ್ಯಾಸ್ ಬೆವರೇಜಸ್ ಮತ್ತು ಫುಡ್ ಪ್ರೊಡಕ್ಟ್ ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಪಿ. ಸದಾನಂದ ಮಯ್ಯರು ಹೇಳಿದರು.


ಕಲಾಕದಂಬ ಆರ್ಟ್ ಸೆಂಟರ್ ಸಂಯೋಜನೆಯಲ್ಲಿ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ನೆರವಿನೊಂದಿಗೆ ಬೆಂಗಳೂರಿನ ಚಿಕ್ಕಲ್ಲಸಂದ್ರದ ಶ್ರೀ ಸಿದ್ಧಿಗಣಪತಿ ದೇವಾಲಯದ ಮನೋರಂಜಿನಿ ಸಭಾಂಗಣದಲ್ಲಿ ನಿನ್ನೆ ಸಂಜೆ (20.11.2021) ಡಾ ರಾಧಾಕೃಷ್ಣ ಉರಾಳರ ನಿರ್ದೇಶನದಲ್ಲಿ ಪ್ರದರ್ಶಿಸಿದ ಯಕ್ಷಗಾನ “ಗಂಗಾವತರಣ” ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತಾಡಿದ ಅವರು ಸಮಕಾಲೀನ ಬದಲಾವಣೆಗೆ ಯಾವುದು ಹೊಂದಿಕೊಳ್ಳುವುದೋ ಅದು ದೀರ್ಘ ಕಾಲ ಉಳಿಯುವುದಕ್ಕೆ ಸಾಧ್ಯ. ಯಕ್ಷಗಾನ ಕಲೆಯು ಕೂಡಾ ಕಳೆದಾರು ಶತಮಾನಗಳಿಂದ ಪ್ರದರ್ಶನಗೊಳ್ಳುತ್ತಲೇ ಬದಲಾವಣೆಗಳನ್ನು ಕಾಣುತ್ತ ಕಾಣುತ್ತ ಪ್ರೇಕ್ಷಕರನ್ನು ಮುಟ್ಟುವಲ್ಲಿ ತನ್ನದಾದೊಂದು ಶಕ್ತಿಯೇನೆಂದು ತೋರಿದೆ.

ಇಂದಿನ ಯುವ ಪೀಳಿಗೆ ಹಾಗೂ ಮುಂದಿನ ಜನಾಂಗದಲ್ಲೂ ಈ ಒಂದು ಕಲೆಯ ಬಗ್ಗೆ ಆಸಕ್ತಿಯನ್ನು ಕಾಪಾಡಿಕೊಳ್ಳುವ ಪ್ರಯತ್ನಗಳೂ ಕೂಡ ಆಗ ಬೇಕಿದೆ ಆ ನಿಟ್ಟಿನಲ್ಲಿ ಕಲಾಕದಂಬ ಸಂಸ್ಥೆ ತನ್ನ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.


ಯಕ್ಷಗಾನದ ಉಳಿವು ಇಂತಹ ಸಂಘ ಸಂಸ್ಥೆಗಳಿಂದ ಆಗ ಬೇಕಾಗಿದೆ. ಹೇಗೆ ನಾವು ತರಕಾರಿ ಹಾಗೂ ತಿನ್ನುವ ಪದಾರ್ಥಗಳನ್ನು ಕೆಡದಂತೆ ರಕ್ಷಣೆ ಮಾಡುತ್ತೇವೆಯೋ ಹಾಗೆ ನಮ್ಮ ನಾಡಿನ ಈ ಕಲೆಯು ಅಳಿಯದಂತೆ ಉಳಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ಮಕ್ಕಳಲ್ಲಿ ಈ ಒಂದು ಕಲಾಸಕ್ತಿಯನ್ನು ಬೆಳೆಸುವಲ್ಲಿ ಪೋಷಕರು ಆಸಕ್ತಿವಹಿಸುವುದು ತುಂಬಾ ಮುಖ್ಯವಾಗಿದೆ ಎಂದು ಯಕ್ಷಗಾನ ಪೋಷಕರು, ಕಲಾವಿದರು ಆದ ಶ್ರೀ ಜನಾರ್ಧನ ಹಂದೆ ತಮ್ಮ ಕಾಳಜಿಯ ನುಡಿಗಳನ್ನಾಡಿದರು.


ರಾಮೋಹಳ್ಳಿಯ ಆರೂಢ ಆಶ್ರಮದ ಶ್ರೀ ಆರೂಢ ಭಾರತಿ ಸ್ವಾಮೀಜಿಯವರು, ಶ್ರೀ ಸಿದ್ಧಿಗಣಪತಿ ದೇವಾಲಯ ಸಮಿತಿಯ ಅಧ್ಯಕ್ಷರಾದ ಶ್ರೀ ಸಚ್ಚಿದಾನಂದಮೂರ್ತಿ ವೇದಿಕಯಲ್ಲಿ ಉಪಸ್ಥಿತರಿದ್ದು ಶುಭಕೋರಿದರು. ಮುರಳೀಧರ ನಾವಡ ನಿರೂಪಣೆ ಮಾಡಿದರು. ವಿಶ್ವನಾಥ ಉರಾಳ, ರಾಜೇಶ್ ಆಚಾರ್ಯ ನೇಪಥ್ಯ ನಿರ್ವಹಣೆಯಲ್ಲಿದ್ದರು.

ಶಾಪಗ್ರಸ್ಥ ಸಗರ ಪುತ್ರರ ಪಾಪ ತೊಳೆದು, ಶುದ್ಧೀಕರಿಸಿ ಮೋಕ್ಷ ಕರುಣಿಸಿದ ಗಂಗೆಯನ್ನು ಸಂಪೂರ್ಣ ಶುದ್ಧೀಕರಿಸುವುದರ ಜೊತೆಗೆ ಇಡೀ ವ್ಯವಸ್ಥೆಯ ಶುದ್ಧೀಕರಣವೂ ಕೂಡಾ ಆಗಬೇಕಾದ್ದು ಮುಖ್ಯ ಅಲ್ಲದೇ ಸಮಾಜದ ಕೆಟ್ಟ ಮನಸುಗಳ ಶುದ್ಧೀಕರಣವಾದರೆ “ಗಂಗಾವತರಣ” ಅರ್ಥಪೂರ್ಣ ಆಗುವುದಕ್ಕೆ ಸಾಧ್ಯ ಎಂಬುದನ್ನು ರಂಗದಲ್ಲಿ ಭಾಗವಹಿಸಿದ ಕಲಾಕದಂಬ ಆರ್ಟ್ ಸೆಂಟರ್ ಕಲಾವಿದರಾದ ಸುಬ್ರಾಯ ಹೆಬ್ಬಾರ್, ನಾರಾಯಣ ಹೆಬ್ಬಾರ್,ಮನೋಜ್, ಡಾ. ರಾಧಾಕೃಷ್ಣ ಉರಾಳ,ಅಂಬರೀಷ ಭಟ್ಟ,ರವೀಶ್ ಹೆಗಡೆ,ಭರತ್ ಪರ್ಕಳ,ಅಜಿತ್ ಕಾರಂತ್,ಆದಿತ್ಯ ಹಾಲ್ಕೋಡ್,ಪ್ರಜ್ವಲ್ ಪರ್ಕಳ ಹಾಗೂ ಪೂಜಾ ಆಚಾರ್ಯ ಮೊದಲಾದ ಕಲಾವಿದರು ನಿರೂಪಿಸಿದರು.

‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ಪ್ರಕಟ

ಪ್ರತೀ ವರ್ಷ ಸಂಸ್ಥೆಯು ಹಿರಿಯ ಸಾಧಕರ ಸ್ಮರಣಾರ್ಥ ಮತ್ತು ಗೌರವಾರ್ಥ ನೀಡುವ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಗೆ ತೆಂಕು ಬಡಗಿನ ಈ ಕೆಳಗಿನ 17 ಹಿರಿಯ ಕಲಾವಿದರು ಆಯ್ಕೆಯಾಗಿದ್ದಾರೆ.


ಡಾ. ಬಿ.ಬಿ. ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ : ಸುರೇಂದ್ರ ಆಲೂರು, ಕುಂದಾಪುರ
ಪ್ರೊ. ಬಿ.ವಿ. ಆಚಾರ್ಯ ಸ್ಮರಣಾರ್ಥ ಪ್ರಶಸ್ತಿ : ಶಾಂತಾರಾಮ ಆಚಾರಿ, ಬ್ರಹ್ಮಾವರ
ನಿಟ್ಟೂರು ಸುಂದರ ಶೆಟ್ಟಿ- ಮಹೇಶ ಡಿ. ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ : ಸದಾಶಿವ ಕುಲಾಲ, ವೇಣೂರು
ಬಿ. ಜಗಜ್ಜೀವನ್‌ದಾಸ್ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ : ಕೊರಗಪ್ಪ ರೈ, ಮಾಡಾವು
ಕೆ. ವಿಶ್ವಜ್ಞ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ : ಕೃಷ್ಣ ಜಿ. ನಾಯ್ಕ್, ಬೇಡ್ಕಣಿ
ಕುತ್ಪಾಡಿ ಆನಂದ ಗಾಣಿಗ ಸ್ಮರಣಾರ್ಥ ಪ್ರಶಸ್ತಿ : ದಿನಕರ ಗೋಖಲೆ, ಬೆಳ್ತಂಗಡಿ
ಭಾಗವತ ನಾರ್ಣಪ್ಪ ಉಪ್ಪೂರ ಸ್ಮರಣಾರ್ಥ ಪ್ರಶಸ್ತಿ : ನಾರಾಯಣ ಶಬರಾಯ ಜಿ. ಎ., ಉಡುಪಿ
ದಶಾವತಾರಿ ಮಾರ್ವಿರಾಮಕೃಷ್ಣ ಹೆಬ್ಬಾರ್-ಭಾಗವತ ವಾದಿರಾಜ ಹೆಬ್ಬಾರ್ ಸ್ಮರಣಾರ್ಥ ಪ್ರಶಸ್ತಿ : ಬಿ. ಜನಾರ್ದನ ಗುಡಿಗಾರ, ಬೆಳ್ತಂಗಡಿ
ಶಿರಿಯಾರ ಮಂಜು ನಾಯ್ಕ್ ಸ್ಮರಣಾರ್ಥ ಪ್ರಶಸ್ತಿ : ಕೊಂಡದಕುಳಿ ರಾಮಚಂದ್ರ ಹೆಗಡೆ, ಕುಂಭಾಶಿ
ಕೋಟ ವೈಕುಂಠ ಸ್ಮರಣಾರ್ಥ ಪ್ರಶಸ್ತಿ : ಕೃಷ್ಣ ಮೊಗವೀರ, ಮೊಳಹಳ್ಳಿ
ಪಡಾರು ನರಸಿಂಹ ಶಾಸ್ತ್ರಿ ಸ್ಮರಣಾರ್ಥ ಪ್ರಶಸ್ತಿ : ಬೋಳ್ಗೆರೆ ಗಜಾನನ ಭಂಡಾರಿ, ಹೊನ್ನಾವರ
ಕಡಿಯಾಳಿ ಸುಬ್ರಾಯ ಉಪಾಧ್ಯ ಸ್ಮರಣಾರ್ಥ ಪ್ರಶಸ್ತಿ : ವಿಶ್ವೇಶ್ವರ ರಾವ್, ಕಟೀಲು
ಮಲ್ಪೆ ಶಂಕರನಾರಾಯಣ ಸಾಮಗ ಸ್ಮರಣಾರ್ಥ ಪ್ರಶಸ್ತಿ : ನಿಟ್ಟೂರು ಸುಬ್ರಹ್ಮಣ್ಯ ಭಟ್, ಹೊಸನಗರ
ಐರೋಡಿ ರಾಮಗಾಣಿಗ ಸ್ಮರಣಾರ್ಥ ಪ್ರಶಸ್ತಿ : ಎ. ಸದಾನಂದ ಶೆಣೈ, ಕಮಲಶಿಲೆ
ಎಮ್. ತಿಮ್ಮಯ್ಯ ಸ್ಮರಣಾರ್ಥ ಪ್ರಶಸ್ತಿ : ಅಪ್ಪಕುಂಞ ಮಣಿಯಾಣಿ, ಕಾಸರಗೋಡು
ಶ್ರೀ ಕೋಳ್ಯೂರು ರಾಮಚಂದ್ರರಾವ್ ಗೌರವಾರ್ಥ ಪ್ರಶಸ್ತಿ : ರಾಜೀವ ಶೆಟ್ಟಿ, ಹೊಸಂಗಡಿ
ಶ್ರೀಮತಿ ಪ್ರಭಾವತಿ ವಿ. ಶೆಣೈ, ಶ್ರೀ ಯು. ವಿಶ್ವನಾಥ ಶೆಣೈ ಗೌರವಾರ್ಥ ಪ್ರಶಸ್ತಿ : ಬಾಲಕೃಷ್ಣ ಶೆಟ್ಟಿ, ಮುಂಡಾಜೆ

ಪ್ರಶಸ್ತಿ ಪ್ರದಾನ ಸಮಾರಂಭ ನವೆಂಬರ್ 28 ಭಾನುವಾರ ಅಪರಾಹ್ನ 3 ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. ಪ್ರತಿಯೊಂದು ಪ್ರಶಸ್ತಿಯು 20,000 ನಗದು ಪುರಸ್ಕಾರ ಸಹಿತ ಪ್ರಶಸ್ತಿ ಪರಿಕರಗಳನ್ನೊಳಗೊಂಡಿರುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.

ನೀವಣೆ ಗಣೇಶ ಭಟ್ ನಿಧನ

ಹಿರಿಯ ವಿದ್ವಾಂಸ ನೀವಣೆ ಗಣೇಶ ಭಟ್ (80) 17.11.2021ರಂದು ರಾತ್ರಿ ಹುಬ್ಬಳ್ಳಿಯ ಮಗಳ ಮನೆಯಲ್ಲಿ ನಿಧನ ಹೊಂದಿದರು. ಅವರು ಪುತ್ರಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ. ಪ್ರಸಿದ್ಧ ಪ್ರವಚನಕಾರ ಆಗಿದ್ದ ನೀವಣೆಯವರು ನೂರಾರು ಭಾಗವತ ಸಪ್ತಾಹ ಮಾಡಿದ್ದರು.

ಹರಿದಾಸರಾಗಿ, ಯಕ್ಷಗಾನ ಅರ್ಥಧಾರಿಯಾಗಿ, ಹವ್ಯಾಸಿ ವೇಷಧಾರಿಯಾಗಿ ಸಾಧನೆ ಮಾಡಿದ್ದರು. ಹಲವು ಉಪಯುಕ್ತ ಪುಸ್ತಕಗಳನ್ನು ಬರೆದಿದ್ದಾರೆ. ಉಡುಪಿಯ ಯಕ್ಷಗಾನ ಕಲಾರಂಗ ಎರಡು ವರ್ಷದ ಹಿಂದೆ ಅವರಿಗೆ ಪೆರ್ಲ ಕೃಷ್ಣ ಭಟ್ ಪ್ರಶಸ್ತಿ ನೀಡಿ ಗೌರವಿಸಿತ್ತು. ಅವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.

ಕೊಲ್ಲಂಗಾನ ಮೇಳದ ತಿರುಗಾಟ ಆರಂಭ


ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿ,ಶ್ರೀ ಕ್ಷೇತ್ರ ಕೊಲ್ಲಂಗಾನ,

ಮೇಳದ 24ನೇ ವರ್ಷದ ತಿರುಗಾಟವು ಇದೇ ಬರುವ ನವಂಬರ್- 19- 2021ನೇ ಶುಕ್ರವಾರ, ತುಲಾ ಮಾಸ ಕಾರ್ತಿಕ ಹುಣ್ಣಿಮೆಯ ಶುಭ ದಿನದಂದು ಶ್ರೀ ಚಕ್ರ ಪೂಜೆಯೊಂದಿಗೆ ಪ್ರಾರಂಭವಾಗಲಿದೆ..

ತಾ. 19-11-2021- ಪ್ರಸಂಗ: ಅಶ್ವಮೇಧ
ತಾ.20-11-2021- ಸಂಜೆ 7ಕ್ಕೆ ಸರಿಯಾಗಿ
ಪ್ರಸಂಗ: ಗಂಧರ್ವ ಕನ್ನಿಕೆ

ಸ್ಥಳ:: ಶ್ರೀ ಕ್ಷೇತ್ರ ಕೊಲ್ಲಂಗಾನ