ಕಲಾಸಂಗಮ ಚಾರಿಟೇಬಲ್ ಟ್ರಸ್ಟಿನ ಅಂಗಸಂಸ್ಥೆಯಾದ ಶ್ರೀ ಯಕ್ಷಗಾನ ಕಲಾಮೇಳ, ಶಿರಸಿಯು ತನ್ನ ಈ ವರ್ಷದ ತಿರುಗಾಟವನ್ನು ಆರಂಭಿಸಲು ಅಣಿಯಾಗಿದೆ. ಈ ವರ್ಷದ ಪ್ರಥಮ ಪ್ರದರ್ಶನ ‘ಮಾಳವಿಕಾ ಪರಿಣಯ’ ಎಂಬ ನೂತನ ಪ್ರಸಂಗದೊಂದಿಗೆ ದಿನಾಂಕ 05.12.2021ರ ಭಾನುವಾರದಂದು ಶಿರಸಿಯ ಲಯನ್ಸ್ ಸಭಾಂಗಣದಲ್ಲಿ (ಸಂಜೆ ಘಂಟೆ 5ರಿಂದ 10ರ ವರೆಗೆ) ಆರಂಭವಾಗಲಿದೆ ಎಂದು ಮೇಳದ ವ್ಯವಸ್ಥಾಪಕರೂ ಕಲಾಸಂಗಮ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷರೂ ಆಗಿರುವ ಶ್ರೀ ಕೇಶವ ಹೆಗಡೆ ಮಂಗಳೂರು (ನಾಗರಕುರ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವರ್ಷದ ಹೊಸ ಪ್ರಸಂಗ ‘ಮಾಳವಿಕಾ ಪರಿಣಯ’ ಎಂಬ ಕಥಾನಕವು ಮಹಾಕವಿ ಕಾಳಿದಾಸ ವಿರಚಿತ “ಮಾಳವಿಕಾಗ್ನಿಮಿತ್ರಮ್” ಎಂಬ ಸಂಸ್ಕೃತ ನಾಟಕದ ಕಥಾ ಭಾಗವಾಗಿದೆ. ಈ ಕತೆಯನ್ನು ಯಕ್ಷಗಾನಕ್ಕೆ ಅಳವಡಿಸಿದವರು ಶ್ರೀ ಕೇಶವ ಹೆಗಡೆ ಮಂಗಳೂರು (ನಾಗರಕುರ). ಪ್ರಸಂಗದ ಪದ್ಯ ರಚನೆಯನ್ನು ತೆಂಕು ಬಡಗಿನ ಕಲಾವಿದ ಎಂ.ಕೆ. ರಮೇಶ ಆಚಾರ್ಯ ಅವರು ಮಾಡಿದ್ದಾರೆ. ಶ್ರೀ ಯಕ್ಷಗಾನ ಕಲಾಮೇಳ, ಶಿರಸಿಯು ಉತ್ಸಾಹಿ ಕಲಾವಿದರನ್ನೊಳಗೊಂಡ ತಂಡವಾಗಿದೆ. ಶ್ರೀ ಕೇಶವ ಹೆಗಡೆ ಮಂಗಳೂರು ಅವರ ಸಾರಥ್ಯದಲ್ಲಿ ತಿರುಗಾಟಕ್ಕೆ ಹೊರಟು ನಿಂತಿರುವ ಮೇಳಕ್ಕೆ ಕಲಾಭಿಮಾನಿಗಳು ಶುಭ ಹಾರೈಸಿದ್ದಾರೆ.
ಇಂದು ಶ್ರೀ ಕ್ಷೇತ್ರ ಕಟೀಲಿನಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಆರೂ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ ಪ್ರಥಮ ಸೇವೆಯಾಟ ನಡೆಯುತ್ತಿದೆ. ಇದು ನಮ್ಮ ಕುಡ್ಲ ಚಾನೆಲಿನಲ್ಲಿ ನೇರ ಪ್ರಸಾರಗೊಳ್ಳುತ್ತಿದೆ. ಈ ಕಾರ್ಯಕ್ರಮದ ಯೂಟ್ಯೂಬ್ ಲಿಂಕ್ ಇಲ್ಲಿದೆ.
ಚಿಟ್ಟಾಣಿ ಅಭಿಮಾನಿ ಬಳಗ ಆಯೋಜಿಸಿದ ಚಿಟ್ಟಾಣಿ ಸಂಸ್ಮರಣಾ ಸಪ್ತಾಹವು 28-11-2021 ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಂಪನ್ನ ಗೊಂಡಿತು. ಪರ್ಯಾಯ ಶ್ರೀ ಅದಮಾರು ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮತ್ತು ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಉಡುಪಿ ಶಾಸಕರಾದ ಶ್ರೀ ಕೆ. ರಘುಪತಿ ಭಟ್, ಡಾ. ಎಂ. ಮೋಹನ ಆಳ್ವ, ಡಾ. ಚಂದ್ರಶೇಖರ ದಾಮ್ಲೆ, ಯು. ವಿಶ್ವನಾಥ ಶೆಣೈ, ಎಂ. ಗಂಗಾಧರ ರಾವ್, ಸುಬ್ರಹ್ಮಣ್ಯ ಚಿಟ್ಟಾಣಿ, ನಾರಾಯಣ ಎಂ. ಹೆಗಡೆ, ಮನೋಹರ ಕೆ. ಉಪಸ್ಥಿತರಿದ್ದರು. ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನೆಯ ನಂತರ ಸತ್ಯಹರಿಶ್ಚಂದ್ರ ಯಕ್ಷಗಾನ ಪ್ರದರ್ಶನಗೊಂಡಿತು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಇಂದಿನ(28.112021) ಯಕ್ಷಗಾನ ಪ್ರದರ್ಶನ ಶ್ರೀ ಕ್ಷೇತ್ರ ಧರ್ಮಸ್ಥಳದ ಯೂಟ್ಯೂಬ್ ಚಾನೆಲಿನಲ್ಲಿ ನೇರಪ್ರಸಾರ ಆಗುತ್ತಿದೆ. ಲಿಂಕ್ ಕೆಳಗಿದೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಇಂದಿನ(27.112021) ಯಕ್ಷಗಾನ ಪ್ರದರ್ಶನ ಶ್ರೀ ಕ್ಷೇತ್ರ ಧರ್ಮಸ್ಥಳದ ಯೂಟ್ಯೂಬ್ ಚಾನೆಲಿನಲ್ಲಿ ನೇರಪ್ರಸಾರ ಆಗುತ್ತಿದೆ. ಲಿಂಕ್ ಕೆಳಗಿದೆ.
ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಮಿತಿ ಆಯೋಜಿಸುತ್ತಿರುವ ‘ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ-12’ ಕಾರ್ಯಕ್ರಮ ಇದೆ ಬರುವ ಡಿಸೆಂಬರ್ 4 ಶನಿವಾರ ಮತ್ತು 5ರ ಆದಿತ್ಯವಾರದಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಗುಣವಂತೆಯಲ್ಲಿರುವ ‘ಯಕ್ಷಾಂಗಣ’ದಲ್ಲಿ ನಡೆಯಲಿದೆ ಎಂದು ಇಡಗುಂಜಿ ಮೇಳದ ನಿರ್ದೇಶಕರಾದ ಶ್ರೀ ಕೆರೆಮನೆ ಶಿವಾನಂದ ಹೆಗಡೆಯವರು ಹೇಳಿದ್ದಾರೆ.
ಈ ಎರಡು ದಿನಗಳ ನಾಟ್ಯೋತ್ಸವದಲ್ಲಿ ಕೆರೆಮನೆ ಶಿವರಾಮ ಹೆಗಡೆ ಮತ್ತು ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಪ್ರದಾನ, ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಮ್ಮಾನ ಮತ್ತು ವಿಚಾರ ಸಂಕಿರಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಉದ್ಘಾಟನಾ ಸಮಾರಂಭ ದಿನಾಂಕ 04.12.2021ರ ಶನಿವಾರ ಸಂಜೆ ಘಂಟೆ 5ರಿಂದ ನಡೆಯಲಿದೆ. ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿರುವ ಸಮಾರಂಭದ ಉದ್ಘಾಟನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷರೂ ದಕ್ಷಿಣ ಕನ್ನಡ ಸಂಸತ್ ಸದಸ್ಯರೂ ಆದ ಶ್ರೀ ನಳಿನ್ ಕುಮಾರ್ ಕಟೀಲು ಅವರು ನೆರವೇರಿಸಲಿರುವರು. ಸಮಾರಂಭದ ಅಧ್ಯಕ್ಷತೆಯನ್ನು ವಿಧಾನ ಸಭಾ ಸದಸ್ಯರಾದ ಶ್ರೀ ಸುನಿಲ್ ನಾಯ್ಕ ಅವರು ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯ ರಂಗಭೂಮಿ ಕಲಾವಿದೆಯಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಡಾ. ಬಿ.ಜಯಶ್ರೀ ಅವರಿಗೆ “ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ – 2020” ಪ್ರದಾನ ಮಾಡಲಾಗುವುದು. ಬಳಿಕ “ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಮ್ಮಾನ” ಕಾರ್ಯಕ್ರಮದಲ್ಲಿ, ಡಾ. ಪಾದೇಕಲ್ಲು ವಿಷ್ಣು ಭಟ್, ಶ್ರೀ ದಯಾನಂದ ಬಳೇಗಾರ್, ಶ್ರೀ ಸೂರ್ಯನಾರಾಯಣ ಪಂಜಾಜೆ, ಶ್ರೀ ಗುಂಡಿಬೈಲು ಸುಬ್ರಾಯ ಭಟ್ (ಮರಣೋತ್ತರ) ಸನ್ಮಾನಿತರಾಗಲಿರುವರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮೊದಲಿಗೆ ಸಾಗರದ ಶ್ರೀ ಕಣ್ಣೇಶ್ವರ ಜಾನಪದ ಕಲಾಸಂಘದವರಿಂದ ಡೊಳ್ಳುಕುಣಿತ ಕಾರ್ಯಕ್ರಮ ನಡೆಯಲಿದೆ. ಬಳಿಕ ಬೆಂಗಳೂರಿನ ನಾಟ್ಯ ನಿನಾದ ಅಕಾಡೆಮಿಯ ಶ್ರೀಮತಿ ಧರಣಿ ಟಿ. ಕಶ್ಯಪ ತಂಡದವರಿಂದ ‘ಮಂಡೋದರಿ ಕಲ್ಯಾಣ’ ಎಂಬ ಕೂಚಿಪುಡಿ ನೃತ್ಯನಾಟಕ ನಡೆಯಲಿದೆ. ನಂತರ ಬೆಂಗಳೂರಿನ ಸ್ಪಂದನ ತಂಡದವರಿಂದ ‘ಲಕ್ಷಾಪತಿ ರಾಜನ ಕತೆ’ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.
ಎರಡನೇ ದಿನದ ಪೂರ್ವ ಸ್ಮರಣೆ ಗೋಷ್ಠಿಯಲ್ಲಿ ಪ್ರೊ| ಎಂ. ಎ. ಹೆಗಡೆ, ಶಿರಸಿ ಇವರ ಸಂಸ್ಮರಣ ಕಾರ್ಯಕ್ರಮ ನಡೆಯಲಿದೆ. ಡಾ. ಎಂ. ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸುವ ಈ ಸಂಸ್ಮರಣಾ ಸಮಾರಂಭದ ಉಪನ್ಯಾಸಕರಾಗಿ ವಿದ್ವಾನ್ ಶ್ರೀ ಉಮಾಕಾಂತ್ ಭಟ್ ಕೆರೆಕೈ ಮತ್ತು ಶ್ರೀ ದಿವಾಕರ ಹೆಗಡೆ ಅವರು ಭಾಗವಹಿಸಲಿದ್ದಾರೆ.
ಎರಡನೇ ದಿನ, ದಿನಾಂಕ 05.12.2021ರ ಆದಿತ್ಯವಾರದಂದು ಸಂಜೆ 5 ಘಂಟೆಗೆ ಆರಂಭವಾಗಲಿರುವ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ವಿಧಾನಸಭೆಯ ಸಭಾಪತಿಗಳಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ವಹಿಸಲಿದ್ದಾರೆ ಉ.ಕ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ್ ಅವರು ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ಭಾಷಣವನ್ನು ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ ಶ್ರೀ ಸುಬ್ರಾಯ ಭಾಗವತ ಕಪ್ಪೆಕರೆ ಅವರಿಗೆ “ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ-2020” ಪ್ರದಾನ ಮಾಡಲಾಗುವುದು. ಬಳಿಕ “ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಮ್ಮಾನ” ಕಾರ್ಯಕ್ರಮದಲ್ಲಿ, ಶ್ರೀ ಎಲ್.ಆರ್ ಭಟ್ಟ, ತೆಪ್ಪ ಶಿರಸಿ, ಶ್ರೀ ರಾಜೀವ ಶೆಟ್ಟಿ ಹೊಸಂಗಡಿ, ಶ್ರೀ ಸುಮುಖಾನಂದ ಜಲವಳ್ಳಿ, ಶ್ರೀ ಕೃಷ್ಣ ಭಂಡಾರಿ ಗುಣವಂತೆ, ಶ್ರೀ ಮಂಜುನಾಥ ಭಂಡಾರಿ ಕರ್ಕಿ ಇವರನ್ನು ಸನ್ಮಾನಿಸಲಾಗುವುದು.
ಸಂಜೆ 6.30ರ ನಂತರ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀಮತಿ ಜ್ಯೋತಿ ಹೆಗಡೆ ಶಿರಸಿ ಇವರಿಂದ ರುದ್ರವೀಣೆ ವಾದನ ನಡೆಯಲಿದೆ, ಶ್ರೀ ಗುರುಮೂರ್ತಿ ವೈದ್ಯ ಬೆಂಗಳೂರು ಇವರಿಂದ ಪಖಾವಾಜ್ ನಲ್ಲಿ ಸಹಕರಿಸಲಿದ್ದಾರೆ. ಬಳಿಕ ಶ್ರೀ ಕರಿವೆಲ್ಲೂರ್ ರತ್ನಕುಮಾರ್ ಮತ್ತು ತಂಡದವರಿಂದ ‘ಓಟ್ಟಂ ತುಳ್ಳಾಲ್ ಮತ್ತು ಶೀತಂಕನ್ ತುಳ್ಳಾಲ್’ ನೃತ್ಯ ಕಾರ್ಯಕ್ರಮ ನಡೆಯಲಿದೆ. ಆಮೇಲೆ ಉಡುಪಿಯ ನೃತ್ಯನಿಕೇತನ ಕೊಡವೂರು, ಇದರ ಕಲಾವಿದರಿಂದ ‘ನಾರಸಿಂಹ’ ಎಂಬ ನೃತ್ಯರೂಪಕ ಕಾರ್ಯಕ್ರಮ ನಡೆಯಲಿದೆ.
ಶ್ರೀಕೃಷ್ಣ ಮಠ ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ ಚಿಟ್ಟಾಣಿ ಅಭಿಮಾನಿ ಬಳಗ ಉಡುಪಿ 2008 ರಿಂದ ನಡೆಸಿಕೊಂಡು ಬಂದ ಚಿಟ್ಟಾಣಿ ಯಕ್ಷಗಾನ ಸಪ್ತಾಹ ನಾಳೆ 28-11-2021ರಿಂದ ಆರಂಭವಾಗಿ 04-12-2021ರ ವರೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಂಪನ್ನಗೊಳ್ಳಲಿದೆ.
ಪರ್ಯಾಯ ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ. ವೀರಾಂಜನೇಯ ಯಕ್ಷಮಿತ್ರ ಮಂಡಳಿ ಮತ್ತು ಅತಿಥಿ ಕಲಾವಿದರ ಸಹಯೋಗದಲ್ಲಿ ಅನುಕ್ರಮವಾಗಿ ಸತ್ಯಹರೀಶ್ಚಂದ್ರ, ಪ್ರಮಿಳಾರ್ಜುನ-ಬಭ್ರುವಾಹನ, ಚಿತ್ರಾಕ್ಷಿ ಕಲ್ಯಾಣ, ಶೂರ್ಪನಖಾ ವಿವಾಹ-ಪೌಂಡ್ರಕ ವಧೆ, ಶ್ರೀದೇವಿ ಬನಶಂಕರಿ, ಯಕ್ಷಲೋಕ ವಿಜಯ ಮತ್ತು ಪೃಥುಯಜ್ಞ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ.
ಆರ‍್ಗೋಡು ಮೋಹನದಾಸ ಶೆಣೈ
ಮೂಕಾಂಬಿಕಾ ವಾರಂಬಳ್ಳಿ
ಪ್ರತೀ ದಿನ ಸಂಜೆ 6.30 ಗಂಟೆಗೆ ಪ್ರದರ್ಶನ ಆರಂಭವಾಗುತ್ತದೆ. ದಿನಾಂಕ 04.12.2021ರಂದು ಪ್ರಶಸ್ತಿ ಪ್ರದಾನ ನಡೆಯಲಿದ್ದು ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿಯನ್ನು ಹಿರಿಯ ಕಲಾವಿದ ಆರ‍್ಗೋಡು ಮೋಹನದಾಸ ಶೆಣೈ ಅವರಿಗೆ, ಟಿ. ವಿ. ರಾವ್ ಪ್ರಶಸ್ತಿಯನ್ನು ಹವ್ಯಾಸಿ ಕಲಾವಿದೆ ಮೂಕಾಂಬಿಕಾ ವಾರಂಬಳ್ಳಿಯವರಿಗೆ ಪ್ರದಾನ ಮಾಡಲಾಗುವುದೆಂದು ಅಭಿಮಾನಿ ಬಳಗದ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಕಾರ್ಯದರ್ಶಿ ಎಂ. ಗೋಪಿಕೃಷ್ಣ ರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಇಂದಿನ(26.112021) ಯಕ್ಷಗಾನ ಪ್ರದರ್ಶನ ಶ್ರೀ ಕ್ಷೇತ್ರ ಧರ್ಮಸ್ಥಳದ ಯೂಟ್ಯೂಬ್ ಚಾನೆಲಿನಲ್ಲಿ ನೇರಪ್ರಸಾರ ಆಗುತ್ತಿದೆ. ಲಿಂಕ್ ಕೆಳಗಿದೆ.