Wednesday, March 18, 2026
Home Blog Page 246

ಗುಂಡಿನ ದಾಳಿ – ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಸ್ಥಿತಿ ಗಂಭೀರ, ವೀಡಿಯೊ

ಗುಂಡಿನ ದಾಳಿಯಲ್ಲಿ ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ತೀವ್ರ ಗಾಯಗೊಂಡಿದ್ದಾರೆ. ಪಬ್ಲಿಕ್ ಬ್ರಾಡ್‌ಕಾಸ್ಟರ್ ಎನ್‌ಎಚ್‌ಕೆ ಪ್ರಕಾರ, ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಶುಕ್ರವಾರ ದಕ್ಷಿಣ ಜಪಾನ್‌ನಲ್ಲಿ ಪ್ರಚಾರ ಮಾಡುವಾಗ ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ.

ಜಪಾನ್‌ನ ಸುದೀರ್ಘ ಸೇವೆ ಸಲ್ಲಿಸಿದ ಪ್ರಧಾನ ಮಂತ್ರಿ ಅಬೆ ಅವರು ನಾರಾ ನಗರದಲ್ಲಿ ಭಾಷಣ ಮಾಡುತ್ತಿದ್ದಾಗ ಅವರು ಸುಮಾರು 11:30 ಗಂಟೆಗೆ (ಗುರುವಾರ ಭಾರತೀಯ ಕಾಲಮಾನ 10:30 ಗಂಟೆಗೆ ) ಗುಂಡು ಹಾರಿಸಿದರು.

NHK, ಸ್ಥಳೀಯ ಅಗ್ನಿಶಾಮಕ ಇಲಾಖೆಯನ್ನು ಉಲ್ಲೇಖಿಸಿ, ಅಬೆ “ಹೃದಯ ಸ್ತಂಭನ” ಸ್ಥಿತಿಯಲ್ಲಿದ್ದಾರೆ ಎಂದು ವರದಿ ಮಾಡಿದೆ. ಶಂಕಿತ ಶೂಟರ್ ಬಂಧಿತನಾಗಿರುವಂತೆ ತೋರುತ್ತಿದೆ ಎಂದು ಅದು ಹೇಳಿದೆ.

ಜಪಾನ್ ಸಂಸತ್ತಿನ ಮೇಲ್ಮನೆಗೆ ಭಾನುವಾರ ಚುನಾವಣೆ ನಡೆಯಲಿದೆ. 2020 ರಲ್ಲಿ ಕೆಳಗಿಳಿದ 67 ವರ್ಷದ ಅಬೆ, ಆಡಳಿತ ನಡೆಸುತ್ತಿರುವ ಲಿಬರಲ್ ಡೆಮಾಕ್ರಟಿಕ್ ಪಕ್ಷದ ಇತರ ಸದಸ್ಯರ ಪರವಾಗಿ ಪ್ರಚಾರ ನಡೆಸುತ್ತಿದ್ದರು ಆದರೆ ಸ್ವತಃ ಅಭ್ಯರ್ಥಿಯಲ್ಲ.

ಇಂದು ಯಕ್ಷಗಾನ ಪ್ರದರ್ಶನ – ಕೃಷ್ಣ ಕಾದಂಬಿನಿ

ಇಂದು ಜುಲೈ 8ರಂದು ‘ಕೃಷ್ಣ ಕಾದಂಬಿನಿ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಪೆರ್ಡೂರು ಮೇಳದವರಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಾಳೆ ದಿನಾಂಕ 08.07.2022 ರ ಶುಕ್ರವಾರ ನಡೆಯಲಿರುವ ಬಡಗುತಿಟ್ಟಿನ ಯಕ್ಷಗಾನ ಪ್ರದರ್ಶನ. 

ವಿವರಗಳಿಗೆ ಕರಪತ್ರ ನೋಡಿ 

‘ಐ ವಿಲ್ ಮಿಸ್ ಯು’: ಟೆನಿಸ್ ವೃತ್ತಿಜೀವನದ ಅಂತಿಮ ವಿಂಬಲ್ಡನ್ ಪಂದ್ಯದ ನಂತರ ಸಾನಿಯಾ ಮಿರ್ಜಾ ಭಾವುಕ

ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ತನ್ನ ಅಂತಿಮ ಪಂದ್ಯದ ನಂತರ, ಭಾವುಕರಾದ ಸಾನಿಯಾ ಮಿರ್ಜಾ ಅವರು ವಿಂಬಲ್ಡನ್‌ನಲ್ಲಿ ಆಡುವುದು ಹೇಗೆ ಗೌರವ ಎಂದು ವಿವರಿಸಿದರು.

ಬುಧವಾರ ನಡೆದ ವಿಂಬಲ್ಡನ್‌ನಲ್ಲಿ ನಡೆದ ಮಿಶ್ರ ಡಬಲ್ಸ್ ಸೆಮಿಫೈನಲ್‌ನಲ್ಲಿ ಭಾರತೀಯ ಟೆನಿಸ್ ಪಟು ಸಾನಿಯಾ ಮಿರ್ಜಾ ಹೃದಯವಿದ್ರಾವಕ ಸೋಲನ್ನು ಅನುಭವಿಸಿರಬಹುದು, ಆದರೆ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ನಡೆದ ತನ್ನ ಅಂತಿಮ ಪಂದ್ಯದ ಉತ್ಸಾಹಭರಿತ ಪಂದ್ಯದ ನಂತರ ಅವರು ಎಲ್ಲಾ ಅಭಿಮಾನಿಗಳ ಹೃದಯವನ್ನು ಗೆದ್ದರು.

ಅವರು ಮತ್ತು ಅವರ ಡಬಲ್ಸ್ ಜೊತೆಗಾರ ಮೇಟ್ ಪಾವಿಕ್ ಅವರು 6-4, 5-7, 4-6 ಸ್ಕೋರ್‌ಲೈನ್‌ನಿಂದ ನೀಲ್ ಸ್ಕುಪ್ಸ್ಕಿ ಮತ್ತು ಡೆಸಿರೇ ಕ್ರಾವ್‌ಜಿಕ್ ಜೋಡಿಯ ವಿರುದ್ಧ ಅಂತಿಮ ನಾಲ್ಕು ಘರ್ಷಣೆಯಲ್ಲಿ ಸೋತ ನಂತರ ಪಂದ್ಯಾವಳಿಯಿಂದ ನಿರ್ಗಮಿಸಿದರು.

ವಿಂಬಲ್ಡನ್‌ನ ಅಂತಿಮ ಪಂದ್ಯದ ನಂತರ ಸಾನಿಯಾ ಮಿರ್ಜಾ ಭಾವನಾತ್ಮಕ ಟಿಪ್ಪಣಿಯನ್ನು ಬರೆದಿದ್ದಾರೆ. ಜುಲೈ 7 ರಂದು ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಗೆ ಕರೆದೊಯ್ದ ಸಾನಿಯಾ ಮಿರ್ಜಾ, ವಿಂಬಲ್ಡನ್‌ನಲ್ಲಿ ಆಡುವುದು ತನಗೆ ಹೇಗೆ ಗೌರವವಾಗಿದೆ ಎಂದು ವಿವರಿಸಿದರು, ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿನ ತನ್ನ ಘರ್ಷಣೆಯನ್ನು ಕಳೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಮಾಜಿ ಮಹಿಳಾ ಡಬಲ್ಸ್ ವಿಶ್ವ ನಂಬರ್ ಒನ್, “ನಾನು ವಿಂಬಲ್ಡನ್‌ಗೆ ಬರುವುದನ್ನು ಮತ್ತು ಸ್ಪರ್ಧಿಸುವುದನ್ನು ಕಳೆದುಕೊಳ್ಳಲಿದ್ದೇನೆ, ಆದರೆ ಇದು ಮುಂದುವರಿಯುವ ಸಮಯ ಎಂದು ನಾನು ಭಾವಿಸುತ್ತೇನೆ. ಮತ್ತು ನೀವು ಅದನ್ನು ಅರ್ಥಮಾಡಿಕೊಳ್ಳಬೇಕು ಮತ್ತು ವಿಷಯಗಳಿವೆ ಎಂದು ಒಪ್ಪಿಕೊಳ್ಳಬೇಕು. ಬಹುಶಃ ವರ್ಷಾಂತ್ಯ, ಬಹುಶಃ ನೀವು ನನ್ನನ್ನು ಕೇಳಿದರೆ ಯುಎಸ್ ಓಪನ್ ಇರಬಹುದು.” ಎಂದು ಸಾನಿಯಾ ಹೇಳಿದರು.

ಕಲಾವಿದ ಮೋಹನ ಶೆಟ್ಟಿಗಾರರಿಗೆ ಸಮ್ಮಾನ

ಹಿರಿಯ ಹಿಮ್ಮೇಳವಾದಕ ಮಿಜಾರು ಮೋಹನ ಶೆಟ್ಟಿಗಾರರು ಕಟೀಲು, ಕರ್ನಾಟಕ ಮೇಳವೂ ಸೇರಿದಂತೆ ಸುದೀರ್ಘ ಐದು ದಶಕಗಳ ಕಲಾ ಸೇವೆಗೈದಿದ್ದು ಈಗ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.

ವೃತ್ತಿಯಲ್ಲಿರುವಾಗಲೂ ಮಾಡುತ್ತಿದ್ದ ಕುಲಕಸುಬು ನೇಕಾರಿಕೆಯನ್ನು ಈಗಲೂ ಪತಿ-ಪತ್ನಿಯರಿಬ್ಬರೂ ದಿನದ ಒಂದಷ್ಟು ಹೊತ್ತು ಮಾಡುತ್ತಾರೆ.

ಕಟೀಲು ಮೇಳದಲ್ಲಿ ತಾವು ಎಳವೆಯಲ್ಲಿದ್ದಾಗ ಅನುಭವಿಸಿದ ಕರ್ಣಾನಂದಕರ ಹಿಮ್ಮೇಳದ ನೆನಪಿನಲ್ಲಿ ಅತ್ತೂರು ಉಡುಪ ಸಹೋದರ-ಸಹೋದರಿಯರ ಪರವಾಗಿ ರೂ. 20,000/- ನಗದು ಪುರಸ್ಕಾರವೂ ಸೇರಿದಂತೆ ಫಲವಸ್ತು ಅಭಿನಂದನಾ ಪತ್ರದೊಂದಿಗೆ ಶೆಟ್ಟಿಗಾರ್ ದಂಪತಿಗಳನ್ನು ಅವರ ಮನೆಯಲ್ಲಿ ಗೌರವಿಸಲಾಯಿತು.

ಕಲಾವಿದ-ಪ್ರೇಕ್ಷಕರ ನಡುವಿನ ಮಧುರ ಸಂಬಂಧಕ್ಕೆ ಇದು ಸಾಕ್ಷಿಯಾಯಿತು. ವೃದ್ಧ ದಂಪತಿಗಳು ತುಂಬಾ ಸಂತೋಷವನ್ನು ಅನುಭವಿಸಿದರು. ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್, ನಾರಾಯಣ ಎಂ. ಹೆಗಡೆ, ವಿದ್ಯಾಪ್ರಸಾದ, ಪ್ರಥ್ವಿ ಪ್ರಸಾದ ಉಪಸ್ಥಿತರಿದ್ದರು.

ಕುರುಕ್ಷೇತ್ರದ ವಧುವಿಗೆ ಸತೋಜ್ ನ (ಪಂಜಾಬ್) ವರ

ಕುರುಕ್ಷೇತ್ರದ ವಧು ಡಾ. ಗುರುಪ್ರೀತ್ ಕೌರ್ ಸತೋಜ್ ಎಂಬ ಊರಿನ (ಪಂಜಾಬ್) ವರ ಪಂಜಾಬ್ ಮುಖ್ಯಮಂತ್ರಿಯೂ ಆದ ಭಗವಂತ್ ಮಾನ್ ಅವರಿಗೆ ಮಾಲೆ ಹಾಕಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಗುರುವಾರ ತಮ್ಮ ಮನೆಯಲ್ಲಿ ಕುರುಕ್ಷೇತ್ರದ ವೈದ್ಯರೊಂದಿಗೆ ತಮ್ಮ ಮದುವೆಗೆ ವರನಾಗಿ ಮಾರ್ಪಟ್ಟಿದ್ದರು.

ಇದು ಸಾಮಾನ್ಯ ಜನಸಂದಣಿಯಿಲ್ಲದ ಖಾಸಗಿ ಸಮಾರಂಭವಾಗಿತ್ತು, ಕೆಲವು ವಿವರಗಳು ಲಭ್ಯವಿದ್ದರೂ, ದೂರದರ್ಶನ ಮತ್ತು ಟ್ವಿಟರ್‌ನಲ್ಲಿನ ದೃಶ್ಯಗಳು ಆನಂದ್ ಕರಾಜ್ ಸಮಾರಂಭದಲ್ಲಿ ಮನ್ ಮತ್ತು ಅವರ ವಧುವನ್ನು ತೋರಿಸಿದವು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಚಾಡಾ, ಎಎಪಿ ಸಂಸದ ಸಂಜಯ್ ಸಿಂಗ್ ಮತ್ತು ಇತರ ನಾಯಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕೇಜ್ರಿವಾಲ್ ಅವರು ಮಾನ್ ಅವರ ಕುಟುಂಬದ ಹಿರಿಯರ ಪಾತ್ರವನ್ನು ನಿರ್ವಹಿಸಿದರು ಮತ್ತು ಮದುವೆಯ ವಿಧಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

ಅಧಿಕಾರದಲ್ಲಿರುವಾಗಲೇ ವಿವಾಹವಾದ ರಾಜ್ಯದ ಮೊದಲ ಮುಖ್ಯಮಂತ್ರಿ 48 ವರ್ಷದ ಮಾನ್, ಹರಿಯಾಣದ ಕುರುಕ್ಷೇತ್ರದ ಪೆಹೋವಾದ ಡಾ ಗುರುಪ್ರೀತ್ ಕೌರ್ ಅವರನ್ನು ವಿವಾಹವಾಗಿದ್ದಾರೆ. ಇದು ಮಾನ್ ಅವರ ಎರಡನೇ ಮದುವೆಯಾಗಿದೆ. ಅವರು 2015 ರಲ್ಲಿ ತಮ್ಮ ಮೊದಲ ಹೆಂಡತಿಯಿಂದ ಬೇರ್ಪಟ್ಟರು – ಅವರಿಗೆ ಇಬ್ಬರು ಮಕ್ಕಳಿದ್ದಾರೆ, ಮಗಳು ಸೀರತ್ ಕೌರ್, 21, ಮತ್ತು ಮಗ ದಿಲ್ಶನ್, 17.

30 ವರ್ಷದ ಗುರುಪ್ರೀತ್ ಕೌರ್ ಟ್ವಿಟ್ಟರ್‌ನಲ್ಲಿ ತಮ್ಮ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು ‘ದಿನ್ ಶಗ್ನಾ ದ ಚಾದ್ಯ (ಮದುವೆಯ ದಿನ ಬಂದಿದೆ)’ ಎಂದು ಬರೆದಿದ್ದಾರೆ. ಪಕ್ಷದ ಒಳಗಿನವರ ಪ್ರಕಾರ, ಸಿಖ್ ಸಂಪ್ರದಾಯಗಳ ಪ್ರಕಾರ ವಿವಾಹವು ಮನ್ ಅವರ ತಾಯಿ ಮತ್ತು ಸಹೋದರಿ ಮತ್ತು ಕೇಜ್ರಿವಾಲ್ ಮತ್ತು ಅವರ ಕುಟುಂಬ ಸೇರಿದಂತೆ ಕೆಲವೇ ಅತಿಥಿಗಳು ಭಾಗವಹಿಸಿದ್ದರು.

ಗುರುಪ್ರೀತ್ ಕೌರ್ 2018 ರಲ್ಲಿ ಹರಿಯಾಣದ ಖಾಸಗಿ ವಿಶ್ವವಿದ್ಯಾನಿಲಯದಲ್ಲಿ ತನ್ನ MBBS ಅನ್ನು ಪೂರ್ಣಗೊಳಿಸಿದರು. ಭಗವಂತ್ ಮಾನ್ ಅವರ ವಯಸ್ಸು 48 ಮತ್ತು ಡಾ. ಗುರುಪ್ರೀತ್ ಕೌರ್ ಅವರ ವಯಸ್ಸು 30.

ಬೆಳ್ಳಾರೆ ವಿಶ್ವನಾಥ ರೈ ನಿಧನ – ಯಕ್ಷಗಾನ ಕಲಾರಂಗ ಸಂತಾಪ

ಉಡುಪಿ : 35 ವರ್ಷ ಕರ್ನಾಟಕ ಮೇಳದ ತಿರುಗಾಟವೂ ಸೇರಿದಂತೆ ವಿವಿಧ ಮೇಳಗಳಲ್ಲಿ ಐದು ದಶಕಗಳ ಕಾಲ ಪುಂಡು ವೇಷಧಾರಿಯಾಗಿ, ಸ್ತ್ರೀ ವೇಷಧಾರಿಯಾಗಿ ಕಲಾಸೇವೆ ಗೈದ, ಕಾಡ ಮಲ್ಲಿಗೆ ಪ್ರಸಂಗದಲ್ಲಿ ‘ಮಲ್ಲಿಗೆ’ ಖ್ಯಾತಿಯ ಬೆಳ್ಳಾರೆ ವಿಶ್ವನಾಥ ರೈ ಇಂದು (07-07-2022) ರಾತ್ರಿ 2.30 ಗಂಟೆಗೆ ಸ್ವಗೃಹದಲ್ಲಿ ನಿಧನರಾದರು.

ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಅಪಾರ ಅಭಿಮಾನಿಗಳನ್ನು, ಶಿಷ್ಯರನ್ನು ಅಗಲಿದ್ದಾರೆ. ಯಕ್ಷಗಾನ ಕಲಾರಂಗವು ಏಳು ವರ್ಷಗಳ ಹಿಂದೆ ಪ್ರಶಸ್ತಿ ನೀಡಿ ಅವರನ್ನು ಗೌರವಿಸಿತ್ತು.

ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಮ್. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

ಸಹಸ್ರ ಕವಚ ಮೋಕ್ಷ – ಯಕ್ಷಗಾನ ಪ್ರದರ್ಶನ

ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದ ವಠಾರದಲ್ಲಿ ಒಂದು ಅಪರೂಪದ ಯಕ್ಷಗಾನ ಬಯಲಾಟ ಪ್ರದರ್ಶನವಿದೆ. ಪ್ರಸಂಗವೂ ಅಪರೂಪದ್ದೇ.

ಸಹಸ್ರ ಕವಚ ಮೋಕ್ಷ ಎಂಬ ಪ್ರಸಂಗವನ್ನು ನುರಿತ, ಪ್ರಸಿದ್ಧ ಕಲಾವಿದರು ಆಡಿ ತೋರಿಸಲಿದ್ದಾರೆ.

ದಿನಾಂಕ 17.07.2022ರ ಆದಿತ್ಯವಾರ ಕುಡುಪು ವಿವಿಧೋದ್ದೇಶ ಸಹಕಾರಿ ಸಂಘ (ನಿ) ಇದರ ರಜತ ಮಹೋತ್ಸವ ವರ್ಷಾಚರಣೆ ಪ್ರಯುಕ್ತ ಬೆಳಿಗ್ಗೆ ಘಂಟೆ 8.30ರಿಂದಲೇ ವಿವಿಧ ಕಾರ್ಯಕ್ರಮಗಳು ಆರಂಭವಾಗಲಿವೆ.

ಯಕ್ಷಗಾನ ಪ್ರದರ್ಶನ ಮದ್ಯಾಹ್ನ 2.30 ಘಂಟೆಗೆ ಆರಂಭವಾಗಲಿದೆ. ವಿವರಗಳಿಗೆ ಕರಪತ್ರದ ಚಿತ್ರವನ್ನು ನೋಡಿ 

ಆಪರೇಷನ್ ಥೀಯೇಟರ್ ನಲ್ಲಿ ಶಸ್ತ್ರಚಿಕಿತ್ಸೆಗೂ ಮೊದಲು ಧನ್ವಂತರಿ ಮಂತ್ರ – ವೈರಲ್ ವೀಡಿಯೊ

ಆಪರೇಷನ್ ಥೀಯೇಟರ್ ನಲ್ಲಿ ಶಸ್ತ್ರಚಿಕಿತ್ಸೆಗೂ ಮೊದಲು ವೈದ್ಯರ ಗುಂಪು ಹಸಿರು “ಶಸ್ತ್ರಚಿಕಿತ್ಸೆ” ಬಟ್ಟೆಗಳನ್ನು ಧರಿಸಿ ಧನ್ವಂತರಿ ಮಂತ್ರವನ್ನು ಪಠಿಸುವ ವೀಡಿಯೊ ವೈರಲ್ ಆಗುತ್ತಿದೆ. 8-10 ವೈದ್ಯರು ಮಂತ್ರ ಪಠಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಟ್ವಿಟರ್ ಖಾತೆ Sheetal Chopra ಅವರ ಮೂಲಕ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಇದು ಕರ್ನಾಟಕದ ಕುಮಾರೇಶ್ವರ ಆಸ್ಪತ್ರೆಯಿಂದ ಬಂದಿದೆ ಎಂದು ಹೇಳಲಾಗಿದೆ. ರೋಗಿಯ ಶಸ್ತ್ರಚಿಕಿತ್ಸೆಗೆ ಮುನ್ನ ವೈದ್ಯರು ಮಂತ್ರವನ್ನು ಪಠಿಸಿದ್ದಾರೆ ಎಂದು ವೀಡಿಯೊ ಹೇಳುತ್ತದೆ.  

“ಶಸ್ತ್ರಚಿಕಿತ್ಸೆಗೂ ಮೊದಲು ಕರ್ನಾಟಕದ ಕುಮಾರೇಶ್ವರ ಆಸ್ಪತ್ರೆಯಲ್ಲಿ ವೈದ್ಯರು ಧನ್ವಂತರಿ ಮಂತ್ರವನ್ನು ಜಪಿಸಿದರು. ಮಂತ್ರದ ಪ್ರಯೋಜನಗಳು- ಮಂತ್ರವನ್ನು ಪಠಿಸಿದಾಗ, ಅದರ ದೈವಿಕ ಶಕ್ತಿಗಳು ನಿಮ್ಮನ್ನು ಸ್ಪರ್ಶಿಸುತ್ತವೆ ಮತ್ತು ನಿಮ್ಮ ದೇಹ, ಮನಸ್ಸು ಮತ್ತು ಆತ್ಮದ ಮೇಲೆ ಗುಣಪಡಿಸುವ ಸ್ಪರ್ಶದೊಂದಿಗೆ ಕೆಲಸ ಮಾಡುತ್ತವೆ” ಎಂದು ಟ್ವೀಟ್ ನಲ್ಲಿ ಬರೆಯಲಾಗಿದೆ.

ಧನ್ವಂತರಿ ಮಂತ್ರವು ಹಿಂದೂ ಧರ್ಮದಲ್ಲಿ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ ಮತ್ತು ಆಯುರ್ವೇದ ಔಷಧದ ಪಿತಾಮಹ ಎಂದು ಪರಿಗಣಿಸಲ್ಪಟ್ಟ ಭಗವಾನ್ ಧನ್ವಂತರಿಗಾಗಿ. ಧನ್ವಂತರಿ ಮಂತ್ರವನ್ನು ಪಠಿಸುವುದರಿಂದ ಮಾನವನ ಕಷ್ಟಗಳನ್ನು ನಿವಾರಿಸುತ್ತದೆ ಮತ್ತು ಸಮೃದ್ಧಿಯನ್ನು ಉತ್ತೇಜಿಸುತ್ತದೆ ಎಂದು ನಂಬಲಾಗಿದೆ. ಹಿಂದೂ ಧರ್ಮದಲ್ಲಿ ಮಂತ್ರ ಪಠಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ.

ಮಂತ್ರ ಎಂಬ ಪದವು ಎರಡು ಪದಗಳಿಂದ ಬಂದಿದೆ: ಮನುಷ್ಯ ಅಂದರೆ ಮನಸ್ಸು ಮತ್ತು ತ್ರ ಅಂದರೆ ಬಿಡುಗಡೆ. ಮಂತ್ರವನ್ನು ಪಠಿಸುವುದರಿಂದ ಸ್ವಯಂ ಅರಿವು ಹೆಚ್ಚಾಗುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ, ಆಂತರಿಕ ಆತ್ಮಕ್ಕೆ ಶಾಂತತೆಯನ್ನು ನೀಡುತ್ತದೆ, ವ್ಯಕ್ತಿಯಲ್ಲಿ ಹೆಚ್ಚು ಸಕಾರಾತ್ಮಕ ದೃಷ್ಟಿಕೋನವನ್ನು ತರುತ್ತದೆ.

ಸಂಪ್ರದಾಯಗಳನ್ನು ಎತ್ತಿ ಹಿಡಿದ ವೈದ್ಯರಿಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಆಪರೇಷನ್ ಥಿಯೇಟರ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದು ಹೇಗೆ ಎಂದು ಹಲವರು ಪ್ರಶ್ನಿಸಿದ್ದಾರೆ.”ಮಂತ್ರದ ಪಠಣ ಒಳ್ಳೆಯದು ಆದರೆ ಈ ಆಪರೇಷನ್ ಥೀಯೇಟರ್ ನಲ್ಲಿ ವೀಡಿಯೊ ಮಾಡಿದ್ದು ತಪ್ಪು ಮತ್ತು ವೃತ್ತಿಪರ ನೀತಿಯಲ್ಲ” ಎಂದು ಮತ್ತೊಬ್ಬರು ಹೇಳುತ್ತಾರೆ.

ಪುತ್ತೂರು, ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶಾಲಾ ಮಂತ್ರಿಮಂಡಲದ ರಚನೆ

ವಿವೇಕಾನಂದ ಆಂಗ್ಲ    ಮಾಧ್ಯಮ ಶಾಲೆಯಲ್ಲಿ 2022-23ನೇ ಸಾಲಿನ ಪ್ರೌಢ ಶಾಲಾ ವಿಭಾಗದ  ಮಂತ್ರಿಮಂಡಲವನ್ನು ಜೂನ್ 2ರಂದು ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು.

ಶ್ರೀನಿಧಿ(10ನೇ ತರಗತಿ) ಶಾಲಾ ನಾಯಕನಾಗಿ, ಹಾಗೂ ಅನ್ನಿಕಾ(9ನೇ ತರಗತಿ) ಉಪನಾಯಕಿಯಾಗಿ ಯುಕ್ತಶ್ರೀ(10ನೇ ತರಗತಿ) ಕ್ರೀಡಾ ಮಂತ್ರಿಯಾಗಿ, ವಸುಧಾ.ಭಟ್ (10ನೇ ತರಗತಿ)  ಸಾಂಸ್ಕೃತಿಕ  ಮಂತ್ರಿಯಾಗಿ ಹಾಗೂ ನಿನಾದ್.ಜಿ.ರೈ(10ನೇ ತರಗತಿ) ವಿರೋಧಪಕ್ಷದ ನಾಯಕನಾಗಿ ಆಯ್ಕೆಯಾಗಿರುತ್ತಾರೆ.

ಪ್ರೌಢ ಶಾಲಾ ವಿಭಾಗ:


ಹಾಗೆಯೇ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ನಿರೀಕ್ಷಿತ್ ಹೆಗ್ಡೆ(7ನೇ ತರಗತಿ) ಶಾಲಾ ನಾಯಕನಾಗಿ, ಆರ್ಯನ್.ಸಿ.ಆರ್(7ನೇ ತರಗತಿ) ಉಪನಾಯಕನಾಗಿ, ಶಮನ್.ಎನ್(7ನೇ ತರಗತಿ) ಕ್ರೀಡಾಮಂತ್ರಿಯಾಗಿ, ನಿಶಿ(7ನೇ ತರಗತಿ) ಸಾಂಸ್ಕೃತಿಕ  ಮಂತ್ರಿಯಾಗಿ ಹಾಗೂ ಸಾನ್ವಿ ಎಸ್.ಪ್ರಭು(7ನೇ ತರಗತಿ) ವಿರೋಧಪಕ್ಷದ ನಾಯಕಿಯಾಗಿ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಪ್ರಾಥಮಿಕ ವಿಭಾಗ:

ಹಿರಿಯ ಯಕ್ಷಗಾನ ಕಲಾವಿದ, ಯಕ್ಷಗಾನದ ಕಲ್ಪನಾ – ಕಾಡ ‘ಮಲ್ಲಿಗೆ’ ಖ್ಯಾತಿಯ ಬೆಳ್ಳಾರೆ ವಿಶ್ವನಾಥ ರೈ ನಿಧನ

ಯಕ್ಷಗಾನ ಕ್ಷೇತ್ರ ಕಂಡ ಹಿರಿಯ ವೇಷಧಾರಿ ಬೆಳ್ಳಾರೆ ವಿಶ್ವನಾಥ  ಇಂದು ಬೆಳಗ್ಗೆ ನಿಧನರಾದರು. ಅವರಿಗೆ 71 ವರ್ಷ ವಯಸಾಗಿತ್ತು. ಇತ್ತೀಚೆಗಿನ ದಿನಗಳಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಇಹಲೋಕವನ್ನು ತ್ಯಜಿಸಿದರು. ಬೆಳ್ಳಾರೆ ವಿಶ್ವನಾಥ ರೈಯವರು ತನ್ನ ಕಲಾಯಾನದಲ್ಲಿ ಸಾಗಿಬಂದ ಹಾದಿ ದುರ್ಗಮವಾದದ್ದು. ಅದನ್ನು ದಾಟಿ ಬಂದು ಶ್ರೇಷ್ಠ ಕಲಾವಿದರ ಸಾಲಿನಲ್ಲಿ ಮೆರೆದುದು ಸಣ್ಣ ಸಾಧನೆಯೇನಲ್ಲ. ಅವರ ಕಲಾಜೀವನದ ಸಂಪೂರ್ಣ ಪರಿಚಯ ಇಲ್ಲಿದೆ. 

ಶ್ರೀ ಕೆ. ವಿಶ್ವನಾಥ ರೈಗಳು 28-02-1951 ರಂದು ಸುಳ್ಯ ತಾಲೂಕು ಬೆಳ್ಳಾರೆ ಸಮೀಪದ ಕಾವಿನಮೂಲೆ ಎಂಬಲ್ಲಿ ಸುಬ್ಬಯ್ಯ ರೈ ಮತ್ತು ಮಂಜಕ್ಕೆ ದಂಪತಿಗಳಿಗೆ ಮಗನಾಗಿ ಜನಿಸಿದರು. ಬೆಳ್ಳಾರೆ ಶಾಲೆಯಲ್ಲಿ 4ನೇ ತರಗತಿ ವರೆಗೆ ಓದಿದವರು. ತುಳುನಾಡಿನ ಜನರು ದೈವಭಕ್ತರು, ಭೂತಾರಾಧಕರೂ ಹೌದಷ್ಟೆ. ದೈವಗಳ ಕುಣಿತವನ್ನು ನೋಡಿ ಮನೆಗೆ ಬಂದು ವಿಶ್ವನಾಥ ರೈಗಳು ಹಾಗೇ ಕುಣಿಯುತ್ತಿದ್ದರಂತೆ. ಅದನ್ನು ನೋಡಿದ ಅವರ ತಾಯಿ ಹುಡುಗನಿಗೆ ಆಟದ ಹುಚ್ಚು ಜೋರಿದೆ ಎನ್ನುತ್ತಿದ್ದರಂತೆ.

ಶಾಲಾ ವಿದ್ಯಾರ್ಥಿಯಾಗಿರುವಾಗಲೇ ವಿಶ್ವನಾಥ ರೈಗಳು ಆ ಕಾಲದಲ್ಲಿ ಖ್ಯಾತ ಕಲಾವಿದರಾಗಿದ್ದ ಬೆಳ್ಳಾರೆ ಅಚ್ಯುತ ಮಣಿಯಾಣಿ (ಅಗಲ್ಪಾಡಿ)ಯವರಿಂದ ಯಕ್ಷಗಾನ ನಾಟ್ಯವನ್ನು ಕಲಿತರು. ತನ್ನ 9ನೇ ವರ್ಷದಲ್ಲಿ ರಂಗಪ್ರವೇಶ ಮಾಡಿ, ಕರ್ನಾಟಕ ಮೇಳದಲ್ಲಿ ಬಾಲಕಲಾವಿದನಾಗಿ ಕಲಾವ್ಯವಸಾಯವನ್ನು ಆರಂಭಿಸಿದರು. ಇವರಿಗೆ 10ನೇ ವರುಷ ಪೂರ್ತಿಯಾದಾಗ 4 ತಿಂಗಳ ಮೇಳದ ತಿರುಗಾಟವನ್ನೂ ಪೂರೈಸಿಯಾಗಿತ್ತು!

ಶ್ರೀ ಬೆಳ್ಳಾರೆ ವಿಶ್ವನಾಥ ರೈಗಳು ಕರ್ನಾಟಕ ಮೇಳದಲ್ಲಿ ಬಾಲಕಲಾವಿದನಾಗಿ ಕಳೆದ ದಿನಗಳನ್ನು ಈಗಲೂ ನೆನಪಿಸುತ್ತಾರೆ. ಶ್ರೀ ಕಲ್ಲಾಡಿ ವಿಠಲ ಶೆಟ್ಟರು ನನಗೆ ಅನ್ನದಾತರು. ಪ್ರಾಣದಾತರೂ ಹೌದು. ಚಿಕ್ಕ ಹುಡುಗನಾಗಿದ್ದಾಗ ಅನಾರೋಗ್ಯದಿಂದಾಗಿ ಕಂಕನಾಡಿ ಆಸ್ಪತ್ರೆಯಲ್ಲಿ 21 ದಿನ ಮಲಗಿದ್ದೆ. ಡಾ| ಮೋದಿಯವರಿಂದ ಚಿಕಿತ್ಸೆ ಕೊಡಿಸಿ, ವೇಷ ಮಾಡದಿದ್ದರೂ ಸಂಬಳವನ್ನು ನೀಡಿದರು. ನಾನು ಭರತನಾಟ್ಯವನ್ನು ಕಲಿಯಲೂ ಅವರೇ ಪ್ರೇರಕರು. ಯಾವತ್ತೂ ಮರೆಯಲಾರೆ ಎಂದು ರೈಗಳು ತನ್ನ ಯಜಮಾನರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಶ್ರೀ ಕೇಶವ ಮಾಸ್ತರರಿಂದಲೂ ಬೆಳ್ಳಾರೆಯವರು ನಾಟ್ಯ ಕಲಿತಿದ್ದರು.

ಕರ್ನಾಟಕ ಮೇಳದಲ್ಲಿ ಆಗ ಸೀನ್ ಸೀನರಿ ಪ್ರದರ್ಶನಗಳು ನಡೆಯುತ್ತಿತ್ತು. ಕಲ್ಲಾಡಿ ವಿಠಲ ಶೆಟ್ಟರ ಸಂಚಾಲಕತ್ವ. ಮೇಳವು ಕಿಕ್ಕಿರಿದ ಪ್ರೇಕ್ಷಕರಿಂದ ವಿಜೃಂಭಿಸುತ್ತಿದ್ದ ಕಾಲ. ಬೆಳ್ಳಾರೆಯವರು ಯಕ್ಷಗಾನ ಇತಿಹಾಸದಲ್ಲಿ ಮೊದಲ ಬಾರಿಗೆ ಕೌಪೀನಧಾರಿಯಾಗಿ ಹಲವು ಪಾತ್ರಗಳನ್ನು ನಿರ್ವಹಿಸಿದರು. ಸನತ್ಕುಮಾರರ ಪಾತ್ರಗಳಲ್ಲಿ (4 ಮಂದಿ) ಇವರೊಂದಿಗೆ ಕೌಪೀನಧಾರಿಯಾಗಿ ಕಾಣಿಸಿಕೊಂಡವರು ಪೆರುವಾಯಿ ನಾರಾಯಣ ಶೆಟ್ಟಿ, ಬಾಯಾರು ರಘುನಾಥ ಶೆಟ್ಟಿ ಮತ್ತು ಪದ್ಮನಾಭ ಶೆಟ್ಟಿ. ಬೆಳ್ಳಾರೆಯವರು ಕೌಪೀನಧಾರಿಯಾಗಿ ಅಭಿನಯಿಸಿದ ಪಾತ್ರಗಳು- ಕೋರ್ದಬ್ಬು ಬಾರಗ ಪ್ರಸಂಗದ ಬಬ್ಬು- ಕೋಳಿಗಳನ್ನು ಕಲ್ಲೆಸೆದು ಕೊಂದು ಮತ್ತೆ ಬದುಕಿಸುವ ಪಾತ್ರ. ಕಾಳಿಂಗ ಮರ್ಧನ ಪ್ರಸಂಗದ ಶ್ರೀಕೃಷ್ಣ. ತುಳುನಾಡ ಸಿರಿ ಪ್ರಸಂಗದ ಕುಮಾರ. ದುಷ್ಯಂತ ಚರಿತ್ರೆಯ ಸರ್ವದಮನ. ಆಗ ಅಳಿಕೆ ರಾಮಯ್ಯ ರೈಗಳು ದುಷ್ಯಂತನಾಗಿಯೂ, ಮಂಕುಡೆಯವರು ಶಕುಂತಳೆಯಾಗಿಯೂ ಅಭಿನಯಿಸುತ್ತಿದ್ದರು.

ನಾರಂಪಾಡಿ ಸುಬ್ಬಯ್ಯ ಶೆಟ್ರು ಪ್ರತಿ ವೇಷಕ್ಕೂ ಇವರಿಗೆ ಸಂಭಾಷಣೆಗಳನ್ನು ಬರೆದು ಕೊಡುತ್ತಿದ್ದರಂತೆ. ಬೋಳಾರ ನಾರಾಯಣ ಶೆಟ್ಟರು ಏ… ಬೆಳ್ಳಾರೆ ಇಲ್ಲಿ ಬಾ ಎಂದು ಕರೆದು ಕರೆದು ಕೆ. ವಿಶ್ವನಾಥ ರೈಗಳಿಗೆ ಬೆಳ್ಳಾರೆ ವಿಶ್ವನಾಥ ರೈ ಎಂಬ ಹೆಸರು ಖಾಯಂ ಆಯಿತು. ತುಳು ಪ್ರಸಂಗಗಳ ಜತೆ ಪುರಾಣ ಪ್ರಸಂಗಗಳ ಅನುಭವವನ್ನೂ ಕರ್ನಾಟಕ ಮೇಳದಲ್ಲಿ ರೈಗಳು ಪಡೆದು ಕೊಂಡರು. ಪ್ರಹ್ಲಾದ, ಲೋಹಿತಾಶ್ವ, ಶ್ರೀಕೃಷ್ಣ ಮೊದಲಾದ ಪಾತ್ರಗಳನ್ನು ಬಾಲಕಲಾವಿದನಾಗಿರುವಾಗ ಮಾಡುವ ಅವಕಾಶ ಸಿಕ್ಕಿತು. 6ನೇ ತಿರುಗಾಟಕ್ಕೆ ಮಂಗಳೂರು ನೆಹರೂ ಮೈದಾನದಲ್ಲಿ ಕರ್ನಾಟಕ ಮತ್ತು ಕಟೀಲು ಮೇಳಗಳ ನಡುವೆ ನಡೆದ ಜೋಡಾಟದಲ್ಲೂ ಭಾಗವಹಿಸಿದರು. ಬಭ್ರುವಾಹನ ಕಾಳಗದಲ್ಲಿ ಅರ್ಜುನನ ಬಲಗಳಲ್ಲಿ ಒಬ್ಬನಾಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ವಿಠಲ ಶೆಟ್ಟರ ಸಂಚಾಲಕತ್ವದ ಕರ್ನಾಟಕ ಮತ್ತು ಪೊಳಲಿ ರಾಜರಾಜೇಶ್ವರೀ ಮೇಳಗಳ ನಡುವೆ ನಡೆದ ಅನೇಕ ಜೋಡಾಟಗಳಲ್ಲೂ ರೈಗಳು ಭಾಗವಹಿಸಿದ್ದರು.


                     ಶ್ರೇಷ್ಠ ಭಾಗವತರಾದ ಶ್ರೀ ದಾಮೋದರ ಮಂಡೆಚ್ಚರು, ಕರ್ನಾಟಕ ಮೇಳದಲ್ಲಿ ಬಾಲ ಕಲಾವಿದನಾಗಿರುವಾಗ ಬೆಳ್ಳಾರೆಯವರನ್ನು ‘ಕಲ್ಪನಾ’ ಎಂದು ಕರೆಯುತ್ತಿದ್ದರಂತೆ. ಯಾಕೆಂದು ಕೇಳಿದರೆ, ಕಲ್ಪನಾಳ (ಖ್ಯಾತ ನಟಿ) ಮುಖಕ್ಕಿಂತಲೂ ಅಭಿನಯ ಚಂದ. ಹಾಗಾಗಿ ಕಲ್ಪನಾ ಎಂದು ಕರೆಯುವುದು ಎಂದು ಶ್ರೀ ಮಂಡೆಚ್ಚರು ಹೇಳುತ್ತಿದ್ದರಂತೆ. ಪರಮ ಸಾತ್ವಿಕರಾದ ಅವರು ದೇವರಿಗೆ ಸಮಾನರು ಎಂದು ಬೆಳ್ಳಾರೆಯವರು ಹೇಳುತ್ತಿದ್ದರು.

ಕರ್ನಾಟಕ ಮೇಳದಲ್ಲಿ ದಾಮೋದರ ಮಂಡೆಚ್ಚರು, ದಿನೇಶ ಅಮ್ಮಣ್ಣಾಯರು, ಕಾಸರಗೋಡು ವೆಂಕಟರಮಣ, ಬೋಳಾರ ನಾರಾಯಣ ಶೆಟ್ಟರು, ನಾರಂಪಾಡಿ ಸುಬ್ಬಯ್ಯ ಶೆಟ್ಟಿ, ಅಳಿಕೆ ರಾಮಯ್ಯ ರೈ, ರಾಮದಾಸ ಸಾಮಗರು, ಕೋಳ್ಯೂರು ರಾಮಚಂದ್ರ ರಾವ್, ಕ್ರಿಶ್ಚನ್ ಬಾಬು, ಎನ್. ಮಾಧವ ಶೆಟ್ಟಿ, ಮಂಕುಡೆ ಸಂಜೀವ ಶೆಟ್ಟಿ, ಮೂಡುಬಿದಿರೆ ಕೃಷ್ಣ ರಾವ್, ಕರ್ನೂರು ಕೊರಗಪ್ಪ ರೈ, ಅರುವ ಕೊರಗಪ್ಪ ಶೆಟ್ಟಿ, ಮಿಜಾರು ಅಣ್ಣಪ್ಪ ಹಾಸ್ಯಗಾರ, ಅಳಿಕೆ ಲಕ್ಷ್ಮಣ ಶೆಟ್ಟಿ, ತೊಡಿಕಾನ ವಿಶ್ವನಾಥ ಗೌಡ, ಸಂಜಯ ಕುಮಾರ್ ಮೊದಲಾದ ಕಲಾವಿದರ ಒಡನಾಡಿಯಾಗಿ ಕಲಾಸೇವೆ ಮಾಡಿದ ಬೆಳ್ಳಾರೆಯವರು, ಇವರೆಲ್ಲರೂ ನಾನು ಕಲಾವಿದನಾಗಿ ಬೆಳೆಯಲು ಕಾರಣರು ಎಂದು ಹೇಳುತ್ತಿದ್ದರು. 

ನಿರಂತರ 33 ವರ್ಷಗಳ ಕಾಲ ಕರ್ನಾಟಕ ಮೇಳದಲ್ಲಿ, ಬಳಿಕ 1 ವರ್ಷ ಮಧೂರು ಮೇಳದಲ್ಲಿ, ಮತ್ತೆರಡು ವರ್ಷ ಕರ್ನಾಟಕ ಮೇಳದಲ್ಲಿ ಮತ್ತೆ 5 ವರ್ಷ ಸುರತ್ಕಲ್ಲು ಮೇಳದಲ್ಲಿ ತಿರುಗಾಟ ನಡೆಸಿದರು. ನಂತರ ಡಿ. ಮನೋಹರ ಕುಮಾರ್ ಸಂಚಾಲಕತ್ವದ ಕದ್ರಿಯಲ್ಲಿ, ಬಳಿಕ ಬಪ್ಪನಾಡು ಕುಂಟಾರು, ಎಡನೀರು, ಕಟೀಲು (5 ವರ್ಷ) ಹೀಗೆ 58 ವರ್ಷಕ್ಕಿಂತಲೂ ಹೆಚ್ಚು ಕಾಲ ಇವರು ಕಲಾಸೇವೆಯನ್ನು ಮಾಡುತ್ತಾ ಬಂದಿರುತ್ತಾರೆ. ಸುರತ್ಕಲ್ಲು ಮೇಳದಲ್ಲಿ ಅಗರಿ ಭಾಗವತರು, ಶ್ರೀ ಶೇಣಿ, ತೆಕ್ಕಟ್ಟೆ ಮೊದಲಾದವರ ಒಡನಾಟ ವಿಶಿಷ್ಟ ಅನುಭವ ಎಂದು ಬೆಳ್ಳಾರೆ ವಿಶ್ವನಾಥ ರೈಗಳು ಹೇಳುತ್ತಿದ್ದರು. 


                               ಬೆಳ್ಳಾರೆ ವಿಶ್ವನಾಥ ರೈಗಳಿಗೆ ಪ್ರಸಿದ್ಧಿಯನ್ನು ತಂದುಕೊಟ್ಟ ಪಾತ್ರಗಳು : ಮತ್ತೂರ ಬೀರೆ ಪ್ರಸಂಗದ ಮತ್ತೂರೆ. ಬಿರುವ ಬೀರೆ ಬೊಳ್ಳ ಬೈದ್ಯೆ ಪ್ರಸಂಗದ ಬೊಳ್ಳ ಬೈದ್ಯೆ. ಕಾಂಚನಗಂಗೆಯ ಕಾಂಚನ, ಮಗಳೆನ ಮದಿಪು ಪ್ರಸಂಗದ ಗಂಗಾಂಬೆ ಮತ್ತು ಚಿನ್ನಾಂಬೆ ಪಾತ್ರಗಳು. ಅಕ್ಷಯಾಂಬರ ವಿಲಾಸದ ವಿಕರ್ಣ. ನಳದಮಯಂತಿ ಪ್ರಸಂಗದಲ್ಲಿ ದಮಯಂತಿ ಮತ್ತು ನಳ. ಹರಿಶ್ಚಂದ್ರ ಪ್ರಸಂಗದಲ್ಲಿ ಲೋಹಿತಾಶ್ವ ಮತ್ತು ಚಂದ್ರಮತಿ. ಕಾಡಮಲ್ಲಿಗೆ ಪ್ರಸಂಗದ ಮಲ್ಲಿಗೆ ಇವರಿಗೆ ಅಪಾರ ಖ್ಯಾತಿಯನ್ನು ತಂದುಕೊಟ್ಟಿತು. ಅರುವ ಕೊರಗಪ್ಪ ಶೆಟ್ರು ಮತ್ತು ಬೆಳ್ಳಾರೆ ಜೋಡಿ ಆ ಪ್ರಸಂಗದಲ್ಲಿ ಮೆರೆದ ವಿಚಾರ ಎಲ್ಲರಿಗೂ ತಿಳಿದಿದೆ. ಕದ್ರಿ ಮೇಳದಲ್ಲಿ ಡಿ. ಮನೋಹರ ಕುಮಾರ್ ಮತ್ತು ಬೆಳ್ಳಾರೆ ವಿಶ್ವನಾಥ ರೈ ಜೋಡಿ ಕೂಡಾ ಹಲವು ತುಳು ಪ್ರಸಂಗಗಳಲ್ಲಿ ರಂಜಿಸಿತ್ತು. ಬೆಳ್ಳಾರೆಯವರ ಮಲ್ಲಿಗೆ ಪಾತ್ರವನ್ನು ನೋಡಿದ ಖ್ಯಾತ ಕವಿಗಳಾದ ಕಯ್ಯಾರ ಕಿಞ್ಞಣ್ಣ ರೈಗಳವರು ಒಂದು ಪತ್ರವನ್ನು ಮತ್ತು 40 ರೂಪಾಯಿಗಳನ್ನು ಬೆಳ್ಳಾರೆಯವರ ಮನೆಗೆ ಕಳುಹಿಸಿ ಕೊಟ್ಟಿದ್ದರಂತೆ. ಆ ಪತ್ರವನ್ನು ಬೆಳ್ಳಾರೆ ವಿಶ್ವನಾಥ ರೈಗಳು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ.


                            ಪ್ರಮೀಳೆ, ಶಶಿಪ್ರಭೆ ಮೊದಲಾದ ಕಸೆ ಸ್ತ್ರೀವೇಷಗಳಲ್ಲೂ ರಂಜಿಸಿದ ಇವರು ಮಾನಿಷಾದ ಪ್ರಸಂಗದ ಸೀತೆ ಮೊದಲಾದ ಸ್ತ್ರೀಪಾತ್ರಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದರು. ಬಾಲ ಕಲಾವಿದನಾಗಿದ್ದಾಗ ಕುಶಲವರು, ಸೀತಾ ಕಲ್ಯಾಣದ ರಾಮಲಕ್ಷ್ಮಣರ ವೇಷಗಳಲ್ಲೂ ರಂಜಿಸಿದರು. ಕೆಲವೊಮ್ಮೆ ಕಲಾವಿದರು ತಾನು ನಿರೀಕ್ಷಿಸದ, ಮಾಡದೇ ಇದ್ದ ಪಾತ್ರವನ್ನೂ ಅನಿವಾರ್ಯವಾಗಿ ಮಾಡಬೇಕಾಗಿ ಬರುತ್ತದೆ. ಹರಿಶ್ಚಂದ್ರ ಪ್ರಸಂಗದಲ್ಲಿ ಶೇಣಿಯವರ ವಿಶ್ವಾಮಿತ್ರನಿಗೆ ವಸಿಷ್ಠನಾಗಿ, ಕಚದೇವಯಾನಿ ಪ್ರಸಂಗದಲ್ಲಿ ಶೇಣಿಯವರ ಶುಕ್ರಾಚಾರ್ಯನೊಂದಿಗೆ ಕಚನಾಗಿಯೂ ಬೆಳ್ಳಾರೆಯವರು ಅಭಿನಯಿಸಿದ್ದರು. ಶೇಣಿಯವರೇ ನನ್ನನ್ನು ಕರೆದು ವೇಷ ಮಾಡಲು ಹೇಳಿದರು. ನಾನು ಹೆದರಿದ್ದೆ. ಅದನ್ನು ತಿಳಿದ ಅವರು ಹೆದರಬೇಡ. ನಾನಿದ್ದೇನೆ. ವೇಷ ಮಾಡು ಎಂದರು. ಅಂದವಾಗಿ ಹೇಳಿಯೂ ಕೊಟ್ಟರು. ರಂಗದಲ್ಲಿ ತಾನು ಮೆರೆಯುತ್ತಾ ನನ್ನನ್ನೂ ಮೆರೆಸಿದರು. ಅಂದು ಮಂಟಪ ಪ್ರಭಾಕರ ಉಪಾಧ್ಯಾಯರು ದೇವಯಾನಿಯಾಗಿ ಅಭಿನಯಿಸಿದ್ದರು ಎಂದು ಬೆಳ್ಳಾರೆ ವಿಶ್ವನಾಥ ರೈಗಳು ಹೇಳುತ್ತಿದ್ದರು.


                    ಬೆಳ್ಳಾರೆಯವರು ಮೆರೆದ ಪಾತ್ರಗಳು ಅನೇಕ. ಪಟ್ಟದ ಪೆರುಮಳೆ ಪ್ರಸಂಗದ ಕೇಮರೆ. ಸಂಜಯ ಕುಮಾರರ ಜತೆ. ಅವರದು ಕೇಮರನ ಅಕ್ಕನ ಪಾತ್ರ. ಭಾವನಾತ್ಮಕ ಸನ್ನಿವೇಷ. ಶ್ರೀ ದಿನೇಶ ಅಮ್ಮಣ್ಣಾಯರ ಭಾಗವತಿಕೆಯಲ್ಲಿ ಪ್ರಸಂಗವು ಮೆರೆದಿತ್ತು. ಕಾಡಮಲ್ಲಿಗೆ – ಮಲ್ಲಿಗೆ. ಅರುವ ಕೊರಗಪ್ಪ ಶೆಟ್ರ ಬೀರಣ್ಣೆ. ತುಳುನಾಡ ಬಲಿಯೇಂದ್ರೆ – ವಾಮನ. (ಪೂಕಳದವರ ಬಲಿ ಮತ್ತು ಪುತ್ತಿಗೆ ಕುಮಾರ ಗೌಡರ ಶುಕ್ರಾಚಾರ್ಯ) ಕಡಲಕಾಮಿನಿ ಪ್ರಸಂಗದಲ್ಲಿ ಡಿ. ಮನೋಹರ ಕುಮಾರರೂ ಬೆಳ್ಳಾರೆಯವರೂ ಅಣ್ಣ ತಮ್ಮಂದಿರ ಪಾತ್ರಗಳಲ್ಲಿ ರಂಜಿಸಿದ್ದರು. ತಿರುಮಲೆದ ತೀರ್ಥ ಪ್ರಸಂಗದಲ್ಲಿ ಡಿ. ಮನೋಹರರು ಮತ್ತು ಬೆಳ್ಳಾರೆಯವರ ಅಮೋಘ ಅಭಿನಯ ನೀಡಿದ್ದರು. ಅನೇಕ ಸನ್ಮಾನ, ಪ್ರಶಸ್ತಿಗಳನ್ನು ಪಡೆದ ಬೆಳ್ಳಾರೆ ವಿಶ್ವನಾಥ ರೈಗಳ ಪತ್ನಿ ಕುಸುಮಾವತಿ, ಮಧುಚಂದ್ರ ಮತ್ತು ರವಿಚಂದ್ರ ಪುತ್ರರು. ಪುತ್ರಿ ಮಮತಾ.

ಬೆಳ್ಳಾರೆ ವಿಶ್ವನಾಥ ರೈಗಳು ಇಂದು ನಮ್ಮೊಂದಿಗಿಲ್ಲ ಎನ್ನುವುದು ನಂಬಲು ಕಷ್ಟಸಾಧ್ಯ. ಅವರ ಕುಟುಂಬಸ್ಥರಿಗೂ ಕಲಾಭಿಮಾನಿಗಳಿಗೂ ಅವರ ಅಗಲುವಿಕೆಯನ್ನು ಸಹಿಸುವ ಶಕ್ತಿಯನ್ನು ಕೊಡಲಿ ಎಂದು ದೇವರಲ್ಲಿ ಪ್ರಾರ್ಥಸುತ್ತೇನೆ. 

ಲೇಖನ : ರವಿಶಂಕರ್ ವಳಕ್ಕುಂಜ