Monday, August 31, 2026
Home Blog Page 215

ಶಿವಮೊಗ್ಗ: ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಕೆ.ಎಸ್ ಈಶ್ವರಪ್ಪ ಎಚ್ಚರಿಕೆ – ವೀಡಿಯೊ 

ಶಿವಮೊಗ್ಗದಲ್ಲಿ  ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಕೆ.ಎಸ್ ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.

ಕಳೆದೆರೆಡು ದಿನಗಳಲ್ಲಿ ಶಿವಮೊಗ್ಗದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳ ಬಗ್ಗೆ ಅವರು ತಮ್ಮದೇ ಶೈಲಿಯ ಖಡಕ್ ಮಾತುಗಳಲ್ಲಿ ಎಚ್ಚರಿಸಿದ್ದಾರೆ.

“ಇಂತಹ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ತಮ್ಮ ಸಮುದಾಯದ ಯುವಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಸ್ಲಿಂ ಸಮುದಾಯದ ಹಿರಿಯ ಸದಸ್ಯರಲ್ಲಿ ನಾನು ವಿನಂತಿಸುತ್ತೇನೆ”,

“ಹಿಂದೂ ಸಮಾಜ ಉದಯಿಸಿದರೆ ಇಂತಹ ಚಟುವಟಿಕೆಗಳಿಗೆ ಉಳಿಗಾಲವಿಲ್ಲ. ಅಶಾಂತಿ ಸೃಷ್ಟಿಸುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಾರೆ” ಎಂದು ಚೂರಿ ಇರಿತ ಘಟನೆ ಕುರಿತು ಶಿವಮೊಗ್ಗ ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ನಾಳೆ (17.08.2022) ಶ್ರೀ ಎಡನೀರು ಮಠದಲ್ಲಿ ‘ಕನಕಾಂಗಿ ಕಲ್ಯಾಣ, ಭಾರ್ಗವ ವಿಜಯ’ ಎಂಬ ಯಕ್ಷಗಾನ ಪ್ರದರ್ಶನ

ನಾಳೆ 17.08.2022ರ ಬುಧವಾರ ಸಂಜೆ 6 ಘಂಟೆಗೆ ಶ್ರೀ ಎಡನೀರು ಮಠದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿ ಇವರಿಂದ  ‘ಕನಕಾಂಗಿ ಕಲ್ಯಾಣ, ಭಾರ್ಗವ ವಿಜಯ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. 

ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರ ದ್ವಿತೀಯ ಚಾತುರ್ಮಾಸ್ಯದ ಪ್ರಯುಕ್ತ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಈ ಯಕ್ಷಗಾನ ಪ್ರದರ್ಶನ ಜರಗಲಿದೆ.

ವಿವರಗಳಿಗೆ ಕಾರ್ಯಕ್ರಮದ ಕರಪತ್ರದ ಚಿತ್ರವನ್ನು ನೋಡಿ.   

ಕರಾಟೆ ಪಂದ್ಯಾಟದಲ್ಲಿ ಸನ್ಮಯ ಮತ್ತು ಪ್ರತೀಕ್ಷಾ ರಾಜ್ಯ ಮಟ್ಟಕ್ಕೆ ಆಯ್ಕೆ

ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಮಂಗಳೂರಿನ ಸಂತ ಆಗ್ನೆಸ್ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪ್ರತೀಕ್ಷಾ(ನೆಹರೂ ನಗರದ ಆನಂದ ಗೌಡ ಮತ್ತು ಸಾವಿತ್ರಿ ದಂಪತಿ ಪುತ್ರಿ) ಮತ್ತು ಸನ್ಮಯ (ಕನ್ಯಾನದ ಈಶ್ವರ ಪ್ರಸಾದ್ ಮತ್ತು ಮಧುರಾ ದಂಪತಿ ಪುತ್ರಿ) ಚಿನ್ನದ ಪದಕವನ್ನು ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಪ್ರಾಪ್ತಿ ಕೆ.ಎಸ್(ಬಲ್ನಾಡು ಗ್ರಾಮದ ಸೀತರಾಮ ಗೌಡ ಮತ್ತು ದೇವಿಕಾ ದಂಪತಿ ಪುತ್ರಿ) ಮತ್ತು ಪ್ರಥಮ ಪಿಯುಸಿ ಕಲಾ ವಿಭಾಗದ ಗಾನಶ್ರೀ (ನೆಹರೂನಗರದ ದೇವಪ್ಪ ಮತ್ತು ಮೀನಾಕ್ಷಿ ದಂಪತಿ ಪುತ್ರಿ) ಕಂಚಿನ ಪದಕವನ್ನು ಗಳಿಸಿದ್ದಾರೆ.

ಬಾಲಕರ ವಿಭಾಗದಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದ ರಿತೇಶ್ (ಕುರಿಯ ಗ್ರಾಮದ ಶೀನಪ್ಪ ಗೌಡ ಮತ್ತು ದೇವಿಕಾ ದಂಪತಿ ಪುತ್ರ) ಮತ್ತು ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಪವನ್ (ಕಡೇಶ್ವಾಲ್ಯದ ಜಯಪ್ರಕಾಶ್ ಮತ್ತು ಗಂಗಾ ಸರಿತಾ ದಂಪತಿ ಪುತ್ರ) ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.

ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ನಂದನ್‌ ಗೌಡ (ಕುಣಿಗಲ್ ನ ಶಿವಣ್ಣ ಬಿ. ಎಂ ಮತ್ತು ಶೋಭಾ ದಂಪತಿ ಪುತ್ರ), ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿನೀಶ್‌ಕುಮಾರ್ (ಹೆಗ್ಗದದೇವನಕೋಟೆಯ ಸುರೇಶ್ ಮತ್ತು ಮೀನಾಕ್ಷಿ ದಂಪತಿ ಪುತ್ರ) ಹಾಗೂ ಪ್ರಥಮ ಪಿಯುಸಿ ಕಲಾ ವಿಭಾಗದ ಅರುಣ್‌ಕುಮಾರ್(ಪುತ್ತೂರಿನ ರಮೇಶ ಎ ಎಂ ಮತ್ತು ಲಲಿತಾ ದಂಪತಿ ಪುತ್ರ) ಕಂಚಿನ ಪದಕವನ್ನು ಗಳಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

ರಕ್ಷಾ ಬಂಧನದಂದು ಸಹೋದರನನ್ನು ಭೇಟಿಯಾಗಿ ರಾಖಿ ಕಟ್ಟಲು ಹೋಗುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ

ರಕ್ಷಾ ಬಂಧನದಂದು ಸಹೋದರನನ್ನು ಭೇಟಿಯಾಗಿ ರಾಖಿ ಕಟ್ಟಲು ಹೋಗುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಅಮಾನವೀಯ ಘಟನೆ ವರದಿಯಾಗಿದೆ. ರಕ್ಷಾ ಬಂಧನದ ಶುಭ ಸಂದರ್ಭದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಆಘಾತಕಾರಿ ಘಟನೆ ಬಿಹಾರದ ಸಿವಾನ್‌ನಲ್ಲಿ ನಡೆದಿದೆ.

ಹಬ್ಬ ಆಚರಿಸಲು ಬಾಲಕಿ ತನ್ನ ಸಹೋದರನ ಮನೆಗೆ ತೆರಳುತ್ತಿದ್ದಾಗ ಈ ಅಮಾನುಷ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಆರೋಪಿಗಳನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗದ ಕಾರಣ ಘಟನೆ ಸ್ಥಳೀಯ ಜನರಲ್ಲಿ ಆಘಾತ ಮತ್ತು ಆಕ್ರೋಶವನ್ನು ಉಂಟುಮಾಡಿದೆ.

ಮಾಹಿತಿಯ ಪ್ರಕಾರ, ಹುಡುಗಿ ತನ್ನ ಸಹೋದರನಿಗೆ ರಾಖಿ ಕಟ್ಟಲು ಹೊರಟಿದ್ದಳು. ಈ ವೇಳೆ ನಾಲ್ವರು ಆಕೆಯನ್ನು ಅಪಹರಿಸಿ ರಸ್ತೆ ಬದಿಯ ಪೊದೆಗೆ ಕರೆದೊಯ್ದಿದ್ದಾರೆ. ಬಾಲಕಿ ಕಿರುಚಾಡುತ್ತಲೇ ಆರೋಪಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆಕೆಯ ಕಿರುಚಾಟ ಕೇಳಿ ಕಾರನ್ನು ಚಲಾಯಿಸುತ್ತಿದ್ದ ದಾರಿ ಹೋಕನೊಬ್ಬ ಅಪರಾಧ ನಡೆದ ಸ್ಥಳಕ್ಕೆ ಬಂದು ಆರೋಪಿ ಪರಾರಿಯಾಗಿದ್ದಾನೆ.

ಚಾಲಕ ಬಾಲಕಿಗೆ ಸಹಾಯ ಮಾಡಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನೆಯಲ್ಲಿ ಸಂತ್ರಸ್ತೆಯ ಸ್ಥಿತಿ ಚಿಂತಾಜನಕವಾಗಿದ್ದು, ಆಕೆಗೆ ಗಾಯಗಳಾಗಿವೆ.

ಭಗವಾನ್ ಪುರ್ ಪೊಲೀಸ್ ಠಾಣಾಧಿಕಾರಿ ಪಂಕಜ್ ಕುಮಾರ್ ಪ್ರಕಾರ, ಪೊಲೀಸರು ಬಾಲಕಿಗೆ ವೈದ್ಯಕೀಯ ಚಿಕಿತ್ಸೆ ನೀಡಿದರು. ಸಂತ್ರಸ್ತೆಯ ಹೇಳಿಕೆಯ ಮೇರೆಗೆ ಪವನ್ ಕುಮಾರ್, ಅಂಕಿತ್ ಕುಮಾರ್, ಇಮಾಮುದ್ದೀನ್ ಮತ್ತು ದಿನೇಶ್ ಕುಮಾರ್ ವಿರುದ್ಧ ಶನಿವಾರ ಎಫ್‌ಐಆರ್ ದಾಖಲಿಸಲಾಗಿದೆ. ಈ ಪೈಕಿ ಒಬ್ಬನನ್ನು ಬಂಧಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಸಂತ್ರಸ್ತೆ ತನ್ನ ತಾಯಿಯ ಮಾವನ ಮನೆಯಲ್ಲಿ ವಾಸಿಸುತ್ತಾಳೆ. ಘಟನೆಯ ನಂತರ ಕುಟುಂಬ ಸದಸ್ಯರು ಆಘಾತಕ್ಕೊಳಗಾಗಿದ್ದು, ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ. ಗ್ರಾಮಸ್ಥರ ಪ್ರಕಾರ, ಇತ್ತೀಚಿನ ದಿನಗಳಲ್ಲಿ ನಿರ್ಜನ ರಸ್ತೆಗಳಲ್ಲಿ ಮಾದಕ ವ್ಯಸನಿಗಳು ಮತ್ತು ಮದ್ಯಪಾನ ಮಾಡುವವರ ಗುಂಪು ಇರುತ್ತದೆ.

ಅವರು ಶಾಲೆಗೆ ಹೋಗುವ ಹುಡುಗಿಯರು ಸೇರಿದಂತೆ ಯಾವುದೇ ಸಂದರ್ಶಕರಿಗೆ ಕಿರುಕುಳ ನೀಡಬಹುದು. ಆದರೆ ಆಡಳಿತ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಮದ್ಯಪಾನ ನಿಷೇಧದ ಬಳಿಕ ಯುವಜನತೆ ಮಾದಕ ವ್ಯಸನಕ್ಕೆ ಸಿಲುಕಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರನ್ನು ಭೇಟಿಯಾದ ಸೌರವ್ ಗಂಗೂಲಿ – ದಾದಾ ಭೇಟಿಯಿಂದ ದೀದಿ (ಮಮತಾ) ಎದೆಯಲ್ಲಿ ಢವಢವ

ಸೌರವ್ ಗಂಗೂಲಿ ದೆಹಲಿಯಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರನ್ನು ಭೇಟಿಯಾದರು, ರಾಜಕೀಯದಲ್ಲಿ ದಾದಾ ಇನ್ನಿಂಗ್ಸ್ ಬಗ್ಗೆ ದೊಡ್ಡ ಊಹಾಪೋಹ ಎದ್ದಿದೆ. ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಭಾರತದ ಕ್ರೀಡಾಪಟುಗಳನ್ನು ಸ್ವಾಗತಿಸಲು ಶುಕ್ರವಾರ ಮಧ್ಯಾಹ್ನ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ತಿಳಿದು ಬಂದಿದೆ.

ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಉಪಸ್ಥಿತರಿದ್ದರು. ಆ ಸಮಾರಂಭದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಉಪಸ್ಥಿತರಿದ್ದರು. 2021ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಮುನ್ನ ಸೌರವ್ ಗಂಗೂಲಿ ರಾಜಕೀಯ ಸೇರುವ ಬಗ್ಗೆ ಭಾರೀ ಊಹಾಪೋಹಗಳು ಎದ್ದಿದ್ದವು. ಸೌರವ್ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಅವರ ಸುತ್ತಲಿನ ರಾಜಕೀಯ ಊಹಾಪೋಹಗಳು ಇದ್ದಕ್ಕಿದ್ದಂತೆ ಕೊನೆಗೊಂಡಿತ್ತು.

2022 ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸೌರವ್ ಬಗ್ಗೆ ಮತ್ತೊಮ್ಮೆ ಊಹಾಪೋಹಗಳು ಹೆಚ್ಚುತ್ತಿವೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ರಾಜಧಾನಿ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಸಭೆಯ ಸುತ್ತ ರಾಜಧಾನಿಯ ರಾಜಕೀಯ ವಲಯದಲ್ಲಿ ಈಗ ಊಹಾಪೋಹಗಳು ಹೆಚ್ಚಾಗಿವೆ.

ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಭಾರತದ ಕ್ರೀಡಾಪಟುಗಳನ್ನು ಸ್ವಾಗತಿಸಲು ಶುಕ್ರವಾರ ಮಧ್ಯಾಹ್ನ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಶಾ ಉಪಸ್ಥಿತರಿದ್ದರು. ಆ ಕಾರ್ಯಕ್ರಮದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಉಪಸ್ಥಿತರಿದ್ದರು. ಅಷ್ಟೇ ಅಲ್ಲ, ಆ ಸಂದರ್ಭದಲ್ಲಿ ಸೌರವ್ ಮೋದಿ-ಶಾ ಜೊತೆ ಮಾತನಾಡಿದ್ದು ಕೂಡ ಗೊತ್ತಾಗಿದೆ.

ಪ್ರಸ್ತುತ ಸೌರವ್ ಐಸಿಸಿ ಅಧ್ಯಕ್ಷರಾಗುವ ರೇಸ್‌ನಲ್ಲಿದ್ದಾರೆ ಎಂಬುದನ್ನು ಗಮನಿಸಬೇಕು. ಈ ವಾತಾವರಣದಲ್ಲಿ ಸೌರವ್ ಮೋದಿ-ಶಾ ಜೊತೆಗಿನ ಮಾತುಕತೆಯ ವಿಷಯವು ಕ್ರಿಕೆಟ್ ಆಡಳಿತದ ವಿಷಯಕ್ಕೆ ಸಂಬಂಧಿಸಿರಬಹುದು ಎಂದು ನಂಬಲಾಗಿದೆ. ಅಲ್ಲಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕೂಡ ಉಪಸ್ಥಿತರಿದ್ದರು. ಭಾರತೀಯ ಕ್ರಿಕೆಟ್ ಆಡಳಿತದಲ್ಲಿ ಅನುರಾಗ್ ಸಾಕಷ್ಟು ಪ್ರಭಾವ ಹೊಂದಿದ್ದಾರೆ.

ಬಿಸಿಸಿಐನಲ್ಲಿ ಸೌರವ್ ಮತ್ತು ಅಮಿತ್ ಅವರ ಪುತ್ರ ಜೈ ಶಾ ಅವರ ಅವಧಿ ಈಗಾಗಲೇ ಮುಗಿದಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ಮಂಡಳಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಈ ವಾತಾವರಣದಲ್ಲಿ ಕ್ರಿಕೆಟ್ ಆಡಳಿತದ ಬಗ್ಗೆ ಬಿಜೆಪಿಯ ಉನ್ನತ ನಾಯಕರು ಸೌರವ್ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ವರದಿಯೊಂದು ಹೇಳುತ್ತದೆ. ಆದರೆ, ಈ ಬಗ್ಗೆ ಬಿಸಿಸಿಐ ಅಧ್ಯಕ್ಷರಾಗಲಿ, ಬಿಜೆಪಿಯಾಗಲಿ ಏನನ್ನೂ ಹೇಳಿಲ್ಲ. ಆದರೆ, ಸೌರವ್ ಬಿಸಿಸಿಐ ಅಧ್ಯಕ್ಷರಾಗಿ ಉಳಿದರೆ, ಅವರು ಐಸಿಸಿ ಅಧ್ಯಕ್ಷರಾಗಲು ಸಾಧ್ಯವಿಲ್ಲ.

ಅವರು ತಮ್ಮ ಅವಧಿಯ ಕೊನೆಯಲ್ಲಿ ಬಿಸಿಸಿಐ ಅಧ್ಯಕ್ಷರಾಗದಿದ್ದರೂ, ಅವರು ಐಸಿಸಿ ಮುಖ್ಯಸ್ಥರಾಗುವ ರೇಸ್‌ನಿಂದ ಹೊರಗುಳಿಯುತ್ತಾರೆ. ಈ ವಾತಾವರಣದಲ್ಲಿ, ಜಯ್ ಶಾ ಕೈಯಲ್ಲಿ ಅಧಿಕಾರದೊಂದಿಗೆ ಸೌರವ್ ಐಸಿಸಿಯಲ್ಲಿ ಏನು ಮಾಡುತ್ತಾರೆ ಎಂಬುದರ ಮೇಲೆ ಎಲ್ಲರ ಕಣ್ಣುಗಳು ಇವೆ.

ಇವರ ಭೇಟಿಯ ನಿಜವಾದ ಉದ್ದೇಶ ಭವಿಷ್ಯದಲ್ಲಿ ನಮಗೆ ತಿಳಿದುಬರಲಿದೆ. ಆ ಉದ್ದೇಶ ಏನೇ ಇದ್ದರೂ ಈ ವಿಷಯ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ತಳಮಳ ಉಂಟುಮಾಡುವುದರಲ್ಲಿ ಯಾವುದೇ ಸಂದೇಹ ಇಲ್ಲ. ರಾಷ್ಟ್ರದ ಉನ್ನತ ನಾಯಕರ ಜೊತೆ ದಾದಾ ಭೇಟಿಯಿಂದ ದೀದಿ ಎದೆಯಲ್ಲಿ ದಡಬಡ ಶುರುವಾಗಿರಬಹುದು ಎಂಬುದು ಜನರ ಅನಿಸಿಕೆ.

ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ – ಡಾ. ಶ್ರೀಶ ಕುಮಾರ್ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಕಾರ್ಯಕ್ರಮ

ಪರಿಸರಕ್ಕೆ ಆಗುತ್ತಿರುವ ಹಾನಿಯನ್ನುಅರಿತು ಅದರ ಸಂರಕ್ಷಣೆಯ ಬಗ್ಗೆಯೂ ಆಲೋಚಿಸಬೇಕಾದಾದು ಅತ್ಯಗತ್ಯ.ಮಾನವ ಪರಿಸರದ ಶಿಶು. ಪರಿಸರವಿಲ್ಲದೆ ಮಾನವನ ಜೀವನಕ್ಕೆ ಯಾವುದೇ ಬೆಲೆಯಿರುವುದಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಪರಿಸರದ ಬಗ್ಗೆ ಕಾಳಜಿ ವಹಿಸಿ ಕಾಪಾಡಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದು ವಿವೇಕಾನಂದ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಡಾ. ಶ್ರೀಶ ಕುಮಾರ್ ಹೇಳಿದರು.


ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ಮತ್ತು ಇಕೋ ಕ್ಲಬ್ ವತಿಯಿಂದ ಆಯೋಜಿಸಲಾದ ಪರಿಸರ ಸಂರಕ್ಷಣೆಯಲ್ಲಿ ನಮ್ಮ ಹೊಣೆ ಎಂಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.


ಪ್ರಸ್ತುತ ಜಗತ್ತಿನಲ್ಲಿ ಮಾನವನು ಅಭಿವೃದ್ಧಿ ಎಂಬ ಹೆಸರಿನಲ್ಲಿ ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಇದರಿಂದ ಪ್ರಾಣಿಗಳ ಜೀವರಕ್ಷಣೆಗೆ ಹಾನಿಯುಂಟಾಗುತ್ತಿದೆ. ಜಲಮಾಲಿನ್ಯ, ವಾಯುಮಾಲಿನ್ಯ, ಮಣ್ಣಿನ ಮಾಲಿನ್ಯ, ಅರಣ್ಯನಾಶ ಹೀಗೆ ಹತ್ತು ಹಲವು ಸಮಸ್ಯೆಗಳು ಇಂದು ಪರಿಸರದಲ್ಲಿ ಉಂಟಾಗಿದೆ. ಇದಕ್ಕೆಲ್ಲ ಮೂಲ ಕಾರಣ ಅಧುನೀಕತೆ, ನಗರಗಳ ಬೆಳವಣಿಗೆ, ಹೆಚ್ಚುತ್ತಿರುವ ಕೈಗಾರಿಕೆಗಳು, ವಿಜ್ಞಾನ -ತಂತ್ರಜ್ಞಾನದ ಅಭಿವೃದ್ಧಿ ಎಂಬ ಹಲವು ಹೆಸರಿನಲ್ಲಿ ಮಾನವನು ಮಾಡುವ ಪರಿಸರ ನಾಶ.

ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯಪ್ರವೃತರಾಗಬೇಕು.ನಮ್ಮ ದೈನಂದಿನ ಜೀವನದಲ್ಲಿ ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಅದೇ ಪರಿಸರ ಉಳಿವಿಗೆ ಸಹಾಯಕವಾಗುತ್ತದೆ. ಹೀಗಾಗಿ ಸ್ವಚ್ಛ ಭಾರತಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು.ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಡಾ.ಕೆ.ಎನ್ ಸುಬ್ರಹ್ಮಣ್ಯ ಮಾತನಾಡಿ ನಾವು ಹುಟ್ಟಿದಾಗ ಕಂಡ ಪರಿಸರಕ್ಕೂ ಈಗ ನಾವು ಕಾಣುತ್ತಿರುವ ಪರಿಸರಕ್ಕೂ ಅಜಗಜಾಂತರ ವ್ಯತ್ಯಾಸ ಇದೆ.ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನದ ಆವಿಷ್ಕಾರದಿಂದ ಇಂದಿನ ಮಾನವನ ಜೀವನ ಹಾಗೂ ಚಟುವಟಿಕೆಗಳು ಅತ್ಯಂತ ಸಂಕೀರ್ಣವಾಗಿವೆ. ಈ ದೃಷ್ಟಿಯಲ್ಲಿ ಇಂದಿನ ಈ ಕಾರ್ಯಕ್ರಮ ಹಾಗೂ ಇದರ ಬಗ್ಗೆ ಅರಿವು  ಮೂಡಿಸುವುದು ಅತ್ಯಂತ ಮುಖ್ಯವಾಗಿದೆ ಎಂದರು.


ಕಾರ್ಯಕ್ರಮದಲ್ಲಿ ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದು, ಪಿಯುಸಿಯನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಪೂರೈಸಿ ಇದೀಗ ಭಾರತೀಯ ನೌಕಾಪಡೆಯಲ್ಲಿ ತರಬೇತಿ ಪಡೆದು, ಭಾರತೀಯ ನೌಕ ಸೇನೆಯಲ್ಲಿ ಸೇವೆ ಸಲ್ಲಿಸಲಿರುವ ಹಿರಿಯ ವಿದ್ಯಾರ್ಥಿಗಳಾದ ಹೃತಿಕ್ (ದೈಹಿಕ ಶಿಕ್ಷಣ ಶಿಕ್ಷಕ ಮೋನಪ್ಪ ಪಟ್ಟೆ ಮತ್ತು ಶ್ರೀಮತಿ ಹರಿಣಾಕ್ಷಿ ದಂಪತಿ ಪುತ್ರ) , ಚರಣ್ (ನಿವೃತ್ತ ಸೇನಾನಿ ಸಂಪ್ಯ ನಿವಾಸಿ ಜಯರಾಮ ಗೌಡ ಮತ್ತು ವಾರಿಜ ದಂಪತಿಗಳ ಪುತ್ರ) ಇವರನ್ನು ಸಂಸ್ಥೆಯ ವತಿಯಿಂದ ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಮಹೇಶ್ ನಿಟಿಲಾಪುರ, ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಮುರಳಿ ಪಿ.ಜಿ ಉಪಸ್ಥಿತರಿದ್ದರು. ಉಪನ್ಯಾಸಕಿ ದೀಕ್ಷಿತ ಕಾರ್ಯಕ್ರಮ ನಿರೂಪಿಸಿ ಅತಿಥಿಗಳನ್ನು ಸ್ವಾಗತಿಸಿ ಸ್ನೇಹ ವಂದಿಸಿದರು.

ಬಿಗ್ ಬಾಸ್ ಏನಿದು ಹೀಗೆ? : ಮೂಡ್ ಇಲ್ಲದಿದ್ದರೆ 3 ದಿನ ಸ್ನಾನ ಮಾಡಲ್ಲ ಎಂದು ಹೇಳಿದ ಸೋನು ಗೌಡ, ವೀಕ್ಷಕರಿಗೆ ಮುಜುಗರ ತರಿಸಿದ ಮಾತು, ಕುಟುಂಬ ಸದಸ್ಯರು, ಮಕ್ಕಳು ಒಟ್ಟಿಗೆ ಕುಳಿತು ನೋಡಲು ಅಸಾಧ್ಯ ಎಂದು ಬಿಗ್ ಬಾಸ್ ವೀಕ್ಷಕರ ಅಸಾಮಾಧಾನ

ಕೆಲವೊಮ್ಮೆ ಬಿಗ್ ಬಾಸ್ ಮನೆ ಪ್ರಜ್ಞಾವಂತರಿಗೆ ಮುಜುಗರ ಹುಟ್ಟಿಸುವ ಘಟನೆಗಳಿಂದ ಜನರನ್ನು ಹುಬ್ಬೇರಿಸುವಂತೆ ಮಾಡುತ್ತದೆ. ಕೆಲವೊಮ್ಮೆ ಇದೆಲ್ಲಾ ಪೂರ್ವನಿಯೋಜಿತ ಚಿತ್ರೀಕರಣ (ಶೂಟಿಂಗ್ ) ಎಂದು ಅನಿಸುತ್ತದೆ. ಆದರೆ ಇದೆಲ್ಲದರ ನಡುವೆಯೂ ಬಿಗ್ ಬಾಸ್ ಜನಪ್ರಿಯತೆ ಮಾತ್ರ ಹೆಚ್ಚುತ್ತಾ ಹೋಗುತ್ತದೆ.

ಆದರೂ ಇತ್ತೀಚೆಗಿನ ಸೋನು ಗೌಡ ಅವರ ಹೇಳಿಕೆಗಳು ವೀಕ್ಷಕರಿಗೆ ಇರುಸುಮುರುಸನ್ನು ಉಂಟುಮಾಡಿದೆ.ಮೊನ್ನೆಯ ವೀಕ್ ಎಂಡ್ ಕಾರ್ಯಕ್ರಮದಲ್ಲಿ ನಟಿ ಸೋನು ಗೌಡ ಮೂಡ್ ಇಲ್ಲದಿದ್ದರೆ ಮೂರು ದಿನ ಸ್ನಾನ ಮಾಡುವುದಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಈ ಹೇಳಿಕೆಗಾಗಿ ಸೋನು ಶ್ರೀನಿವಾಸ್ ಗೌಡ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ ಮಾಡಲಾಗುತ್ತಿದೆ.

3 ದಿನಗಳಿಂದ ಸ್ನಾನ ಮಾಡಿಲ್ಲ ಎಂಬ ಸತ್ಯವನ್ನು ಸೋನು ಗೌಡ ಒಪ್ಪಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಕಿಚ್ಚ ಸುದೀಪ್ ಮೊದಲ ವಾರ ಪಂಚಾಯತಿ ನಡೆಸಿದ್ದಾರೆ. ಈ ವೇಳೆ ಹಲವು ವಿಷಯಗಳ ಚರ್ಚೆ ನಡೆದಿದೆ. ಈ ಸಂಚಿಕೆ ಬಹಳಷ್ಟು ತಮಾಷೆಯ ಪ್ರಸಂಗಗಳಿಗೆ ಸಾಕ್ಷಿಯಾಯಿತು. ಈ ರಿಯಾಲಿಟಿ ಶೋನಲ್ಲಿ ಸೋನು ಶ್ರೀನಿವಾಸ್ ಗೌಡ ಹೆಚ್ಚು ಫೇಮಸ್ ಆಗಿದ್ದಾರೆ.

ತಮ್ಮ ಮುಕ್ತ ಮಾತುಗಳಿಂದ ಗಮನ ಸೆಳೆಯುತ್ತಿದ್ದಾರೆ. ಹಲವು ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡರು. ಆ ಮೂಲಕ ಬಿಗ್ ಬಾಸ್ ಕನ್ನಡ ಒಟಿಟಿ ಸೋನು ಗೌಡ ಶೋನಲ್ಲಿ ಚರ್ಚೆಯಾಗುತ್ತಿದೆ. ಆಶ್ಚರ್ಯವೆಂದರೆ, ‘ಮೂಡ್ ಬರದಿದ್ದರೆ ಮೂರು ದಿನ ಸ್ನಾನ ಮಾಡುವುದಿಲ್ಲ’ ಎಂದರು. ಇದನ್ನು ಕೇಳಿ ಎಲ್ಲರೂ ಬಿದ್ದು ಬಿದ್ದು ನಕ್ಕರು.

‘ಬಿಗ್ ಬಾಸ್ ಕನ್ನಡ ಒಟಿಟಿ’ ಕಾರ್ಯಕ್ರಮದಲ್ಲಿ ಒಂದು ವಾರ ಕಳೆದಿದೆ. ವಾರದ ಪಂಚಾಯತಿಯಲ್ಲಿ ಸುದೀಪ್ ಸ್ಪರ್ಧಿಗಳಿಗೆ ಕೆಲವು ಪ್ರಶ್ನೆಗಳನ್ನು ಕೇಳಿದರು. ‘ಈ ಮನೆಯಲ್ಲಿ ತಮ್ಮ ವಸ್ತುಗಳನ್ನು ಯಾರು ಗಲೀಜು ಮಾಡುತ್ತಾರೆ?’ ಎಂದು ಕೇಳುತ್ತಿದ್ದಂತೆಯೇ ಹಲವರ ಹೆಸರುಗಳು ಹೊರಬಿದ್ದವು, ಈ ವೇಳೆ ಸ್ನಾನದ ಪ್ರಸ್ತಾಪವೂ ಆಯಿತು. ‘ಸೋನು ಗೌಡ ಸ್ನಾನ ಮಾಡುವುದಿಲ್ಲ’ ಎಂದು ಸನ್ಯಾ ಅಯ್ಯರ್ ಆರೋಪಿಸಿದ್ದಾರೆ.

‘ಹೌದು, ನಾನು ಇವತ್ತು ಸ್ನಾನ ಮಾಡಿಲ್ಲ’ ಎಂದು ಸುದೀಪ್ ಬಳಿ ಒಪ್ಪಿಕೊಂಡ ಸೋನು ಗೌಡ. ‘ಇಲ್ಲಿನ ಅನೇಕರು ಸ್ನಾನದ ಬಗ್ಗೆ ನಾಟಕ ಮಾಡುತ್ತಾರೆ. ಎಲ್ಲರೂ ಪ್ರತಿದಿನ ಸ್ನಾನ ಮಾಡುತ್ತಾರೆ. ಕೆಲವೊಮ್ಮೆ ನಮ್ಮ ಮನೆಯಲ್ಲಿ ಮೂಡ್ ಇರುವುದಿಲ್ಲ ಹಾಗಾಗಿ ಮೂರು ದಿನಕ್ಕೊಮ್ಮೆ ಸ್ನಾನ ಮಾಡುತ್ತೇವೆ ಎಂದು ಸೋನು ಹೇಳಿದ್ದಾರೆ. ಅವನ ಮಾತು ಕೇಳಿ ಎಲ್ಲರೂ ಜೋರಾಗಿ ನಕ್ಕರು.

ಸೋನು ಶ್ರೀನಿವಾಸ್ ಗೌಡ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ ಮಾಡಲಾಗುತ್ತಿದೆ. ಈ ವೇದಿಕೆಯಲ್ಲಿ ಅವಕಾಶ ಸಿಕ್ಕಿದೆ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದರು. ಮೊದಲ ವಾರದಲ್ಲೇ ಅವರು ಎಲಿಮಿನೇಟ್ ಆಗಬಹುದು ಎಂದು ಕೆಲವರು ಭವಿಷ್ಯ ನುಡಿದಿದ್ದರು. ಆದರೆ ವೀಕ್ಷಕರಿಂದ ಉತ್ತಮ ವೋಟ್ ಪಡೆದಿದ್ದರಿಂದ ಮೊದಲ ವಾರ ಸೇಫ್ ಆಗಿದ್ದಾರೆ. ಈಗ ಸ್ನಾನಕ್ಕೆ ಟ್ರೋಲ್ ಆಗುತ್ತಿದ್ದಾರೆ.

ಇದಲ್ಲದೆ ಬಿಗ್ ಬಾಸ್ ಮನೆಯಲ್ಲಿ ಸೋನು ಗೌಡ ಅವರು ತಮ್ಮದು ಎಂದು ಹೇಳಲಾಗುತ್ತಿದ್ದ ಮತ್ತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಅಶ್ಲೀಲ ವೀಡಿಯೋದ ಕುರಿತಾಗಿಯೂ ಮಾತಾಡಿದ್ದರು. ಸಿಗರೇಟ್ ಎಳೆಯುವ ಹವ್ಯಾಸದ ಕುರಿತಾಗಿಯೂ ಮಾತಾಡಿದ್ದರು.. ಈ ಎಲ್ಲಾ ಕಾರಣಗಳಿಂದ ಅವರು ಹೆಚ್ಚು ಟೀಕೆಗೆ ಗುರಿಯಾಗಿದ್ದರು.

ಮನೆಯ ಹರೆಯದ ಹೆಣ್ಣುಮಕ್ಕಳೊಡನೆ ಮತ್ತು ದೊಡ್ಡ ಮಕ್ಕಳೊಡನೆ ಕುಳಿತು ಬಿಗ್ ಬಾಸ್ ನೋಡುವ ಮೊದಲು ಇದನ್ನೆಲ್ಲಾ ಆಲೋಚಿಸಬೇಕಾಗುತ್ತದೆ ಎಂಬುದು ವೀಕ್ಷಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ವಿವಿಧೆಡೆಯಲ್ಲಿ ಸ್ವಾತಂತ್ರ್ಯೋತ್ಸವ

ಸ್ವಾತಂತ್ರ್ಯ ದಿನಾಚರಣೆ : ವಿದ್ಯೋದಯ ಸಮೂಹ ಸಂಸ್ಥೆಗಳು, ಉಡುಪಿ
ವಿದ್ಯೋದಯ ಟ್ರಸ್ಟ್(ರಿ.)ನ ಅಂಗಸಂಸ್ಥೆಗಳಲ್ಲಿ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು. ವಿದ್ಯೋದಯ ಪಬ್ಲಿಕ್ ಸ್ಕೂಲ್, ಶ್ರೀ ಅನಂತೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ,ವಿದ್ಯೋದಯ ವಿದ್ಯಾಲಯ, ಶ್ರೀಕೃಷ್ಣ ಶಿಶುಮಂದಿರಗಳ ಧ್ವಜಾರೋಹಣವನ್ನು ಪ್ರೊ. ಹೇರಂಜೆ ಕೃಷ್ಣ ಭಟ್, ನಿವೃತ್ತ ನಿರ್ದೇಶಕರು, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಇವರು ನೆರವೇರಿಸಿ ವಿದಾರ್ಥಿಗಳನ್ನುದ್ದೇಶಿಸಿ  ಸ್ವಾತಂತ್ರ್ಯದ ಮಹತ್ವವನ್ನು ತಿಳಿಸಿದರು.


ವಿದ್ಯೋದಯ ಪದವಿ ಪೂರ್ವ ಕಾಲೇಜು ಮತ್ತು ಶ್ರೀ ಅನಂತೇಶ್ವರ ಹಿರಿಯ ಪ್ರಾಥಮಿಕ ಶಾಲೆಗಳ ಧ್ವಜಾರೋಹಣವನ್ನುಕಾಲೇಜಿನ ನಿವೃತ್ತ ಪ್ರಾಂಶುಪಾಲ ಶ್ರೀ ಎ.ಎಲ್. ಛಾತ್ರ ನೆರವೇರಿಸಿದರು.


ಈ ಕಾರ್ಯಕ್ರಮದಲ್ಲಿ ವಿದ್ಯೋದಯ ಟ್ರಸ್ಟ್ ನ ಕಾರ್ಯಾಧ್ಯಕ್ಷರಾದ ಶ್ರೀ ಎನ್. ನಾಗರಾಜ್ ಬಲ್ಲಾಳ್, ಕಾರ್ಯದರ್ಶಿ ಶ್ರೀ ಕೆ. ಗಣೇಶ್‌ ರಾವ್, ಕೋಶಾಧಿಕಾರಿ ಶ್ರೀ ಪದ್ಮರಾಜ್‌ ಆಚಾರ್ಯ, ಟ್ರಸ್ಟ್ ಜೊತೆ ಕಾರ್ಯದರ್ಶಿ ಶ್ರೀಮತಿ ರೂಪಾ ಬಲ್ಲಾಳ್, ಸದಸ್ಯರುಗಳಾದ ಯು. ದಾಮೋದರ್ ಮತ್ತು ರಘುರಾಮ ಆಚಾರ್ಯ; ಎಲ್ಲಾ ಶಾಲಾ ಕಾಲೇಜುಗಳ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯಿನಿಯರು, ಮತ್ತು ಸಿಬ್ಬಂದಿವರ್ಗ ಭಾಗವಹಿಸಿದರು.

ಸ್ವಾತಂತ್ರ್ಯ ದಿನಾಚರಣೆ : ಓಂ ವಿಹಾರ, ಕುಂಜಿಬೆಟ್ಟು

ಪುರುಷೋತ್ತಮ ನಗರದ ಓಂ ವಿಹಾರ ವಸತಿ ಸಮುಚ್ಚಯದಲ್ಲಿ  ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. 

ನಿವೃತ್ತ ಸೇನಾನಿ ಶ್ರೀ ಬಾಲಚಂದ್ರ ಇವರ ನೇತೃತ್ವದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಳು ಶ್ರೀಮತಿ ವಾಣಿ ಬಾಲಚಂದ್ರ ಧ್ವಜಾರೋಹಣವನ್ನು ನೆರವೇರಿಸಿದರು.

ಸಿಂಡಿಕೇಟ್ ಬ್ಯಾಂಕ್‌ ನ ನಿವೃತ್ತ ವ್ಯವಸ್ಥಾಪನಾ ಅಧಿಕಾರಿ ಶ್ರೀ ಸಿ.ಕೆ. ಪೈ ಸ್ವಾತಂತ್ರ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮವನ್ನು ಶ್ರೀ ಸುಶೀರ್ ರಾವ್‌ ಕೊಡವೂರು ಮತ್ತು ಮಂಜುನಾಥ್ ನಿರ್ವಹಿಸಿದರು.

ವಿವೇಕಾನಂದ ವಿದ್ಯಾಸಂಸ್ಥೆಗಳು, ತೆಂಕಿಲ ಇಲ್ಲಿ 76ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ

0

ಸ್ವಾತಂತ್ರ್ಯ75ನೇ ಅಮೃತ ಮಹೋತ್ಸವದ ಈ ಸುಸಂದರ್ಭದಲ್ಲಿ ದೇಶ ಸೇವೆಗೆ ಬದ್ಧರಾಗಿ ದೇಶದ ಸ್ವಾತಂತ್ರ್ಯವನ್ನು ಉಳಿಸಿ ಬೆಳೆಸೋಣ ಎಂದು ಭಾರತೀಯ ಸೇನೆಯ ನಿವೃತ್ತ ಸೈನಿಕರಾದ ಶ್ರೀ ಕುಮಾರ್.ಕೆ.ಎ ಇವರು ಹೇಳಿದರು.

ಅವರು ದಿನಾಂಕ 15-08-2022ನೇ ಸೋಮವಾರದಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಮತ್ತು ವಿವೇಕಾನಂದ ಬಿ.ಎಡ್ ಕಾಲೇಜುಗಳ ಜಂಟಿ ಆಶ್ರಯದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ 76ನೇ ವರ್ಷದ ಸ್ವಾತಂತ್ರ್ಯಯ ದಿನಾಚರಣೆಯ ಸಂದರ್ಭದಲ್ಲಿ ಧ್ವಜಾರೋಹಣಗೈದು, ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಶಿವಪ್ರಕಾಶ್.ಎಂ, ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿ, ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿ0ದ “ಅಮೃತ ನಡಿಗೆ ದೇಶದ ಕಡೆಗೆ” ಎನ್ನುವ ಧ್ಯೇಯ ವಾಕ್ಯದೊಂದಿಗೆ ವಿವೇಕಾನಂದ ಸಮೂಹ ಶಿಕ್ಷಣ ಸಂಸ್ಥೆಗಳ 8000 ವಿದ್ಯಾರ್ಥಿಗಳ ಜಾಥಾದ ಮೂಲಕ ವಿವೇಕಾನಂದ ವಿದ್ಯಾವರ್ಧಕ ಸಂಘ ವಿನೂತನವಾಗಿ ಹಮ್ಮಿಕೊಂಡಿತ್ತು. ಇಂದು 75ನೇ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದು, ಮುಂದಿನ 25 ವರ್ಷದಲ್ಲಿ ಶತಮಾನೋತ್ಸವನ್ನು ಅಚರಿಸಲಿದ್ದೇವೆ. ಅಖಂಡವಾಗಿದ್ದ ಭಾರತ ಮತ್ತೆ ಭಾಗವಾಗದಿರಲಿ ಎಂದು ಹಾರೈಸಿದರು.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಮತ್ತು ವಿವೇಕಾನಂದ ಬಿ.ಎಡ್ ಕಾಲೇಜುಗಳ ಅಧ್ಯಕ್ಷರು, ಸಂಚಾಲಕರು, ಆಡಳಿತ ಮಂಡಳಿ ಸದಸ್ಯರು, ಶಿಕ್ಷಕ-ರಕ್ಷಕ ಸಂಘದ ಸದಸ್ಯರು, ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಕ, ಶಿಕ್ಷಕೇತರ ವೃಂದ ಹಾಗೂ ಪೋಷಕರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವಿವೇಕಾನಂದ ಬಿ.ಎಡ್ ಕಾಲೇಜಿನ ವಿದ್ಯಾರ್ಥಿಗಳು ರಚಿಸಿದ 75ಸ್ವಾತಂತ್ರ್ಯ ಹೋರಾಟಗಾರರ ಕುರಿತು ಲೇಖನವನ್ನು ಪುಸ್ತಕದ ಮೂಲಕ ಮುಖ್ಯ ಅತಿಥಿಗಳು ಬಿಡುಗಡೆ ಮಾಡಿದರು.

ವಿವೇಕಾನಂದ ಬಿ.ಎಡ್ ಶಿಕ್ಷಕ ವಿದ್ಯಾರ್ಥಿನಿಯರು ವಂದೇಮಾತರಂ ಮತ್ತು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಗೂ ಧ್ವಜಗೀತೆಯನ್ನು ಹಾಡಿದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ಶ್ರೀ ರವಿನಾರಾಯಣ.ಎಂ ಸ್ವಾಗತಿಸಿ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸಂಧ್ಯಾ ವಂದಿಸಿ, ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ವಾಣಿಶ್ರೀ.ಎನ್ ಕಾರ್ಯಕ್ರಮ ನಿರೂಪಿಸಿದರು.

ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ದೀಪಕ್ ಇವರು ದೇಶಭಕ್ತಿಯ ಘೋಷಣೆಗಳನ್ನು ಹಾಕಿದರು. ಶಾಲೆಯ ಎನ್.ಸಿ.ಸಿ ಹಾಗೂ ಸ್ಕೌಟ್ಸ್ ವಿದ್ಯಾರ್ಥಿಗಳು ಅತಿಥಿಗಳಿಗೆ ಗೌರವ ಸಲ್ಲಿಸಿದ್ದರು. ದೈಹಿಕ ಶಿಕ್ಷಣ ಶಿಕ್ಷಕರು ಸಹಕರಿಸಿದರು.

ಸಿರಿಬಾಗಿಲಿನಲ್ಲಿ ಸಾಹಿತ್ಯ ವೈಭವ – ತಾಯಿ ಭಾರತಿಗೆ ಕಾವ್ಯದಾರತಿ

ಸಿರಿಬಾಗಿಲು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದಂಗವಾಗಿ ಕಲಾ ಸಾಂಸ್ಕೃತಿಕ ಸಾಹಿತ್ಯ ವೈಭವ ಯಶಸ್ವಿಯಾಗಿ ಜರಗಿತು.

ಪ್ರತಿಷ್ಠಾನದ ನೂತನ ಸಾಂಸ್ಕೃತಿಕ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಸರಗೋಡಿನ ಹಿರಿಯ ಕಿರಿಯ ಕವಿಗಳು ‘ ತಾಯಿ ಭಾರತಿಗೆ ಕಾವ್ಯದಾರತಿ ‘ ಬೆಳಗಿದರು.


ಹಿರಿಯ ಕವಿ, ಪತ್ರಕರ್ತ, ಸಂಘಟಕ ರಾಧಾಕೃಷ್ಣ.ಕೆ. ಉಳಿಯತ್ತಡ್ಕ ಅವರ ಅಧ್ಯಕ್ಷತೆಯಲ್ಲಿ ಮಧೂರು ಗ್ರಾಮ ಪಂಚಾಯತು ಅಧ್ಯಕ್ಷ ಗೋಪಾಲಕೃಷ್ಣ ಕೂಡ್ಲು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನ್ಯಾಯವಾದಿ ಪದ್ಮನಾಭ ಹೊಳ್ಳ ಮುಖ್ಯ ಅತಿಥಿಯಾಗಿ ಭಾಗವಹಿಸಿ ದೇಶ ರಕ್ಷಣೆಯ ಕುರಿತಾದ ಕವನ ವಾಚಿಸಿ ಕಾವ್ಯದ ಸಾರ್ವಕಾಲಿಕ ಮೌಲ್ಯದ ಬಗ್ಗೆ ಮಾತನಾಡಿದರು.

ವಿ.ಬಿ. ಕುಳಮರ್ವ ,ಬಾಲ ಮಧುರಕಾನನ, ನರಸಿಂಹ ಭಟ್ ಏತಡ್ಕ, ಪ್ರಭಾವತಿ ಕೆದಿಲಾಯ, ಪ್ರಮೀಳಾ ಚುಳ್ಳಿಕಾನ, ನಿರ್ಮಲಾ ಶೇಷಪ್ಪ ಖಂಡಿಗೆ, ವಿರಾಜ್ ಅಡೂರು, ವನಜಾಕ್ಷಿ ಚೆಂಬ್ರಕಾನ, ಶ್ರಧ್ಧಾ ಹೊಳ್ಳ , ಚಂದ್ರಕಲಾ ನೀರಾಳ , ಸುಭಾಷ್ ಪೆರ್ಲ ಸ್ವರಚಿತ ಕವನಗಳನ್ನು ವಾಚಿಸಿದರು.

ಪ್ರತಿಷ್ಠಾನದ ಅಧ್ಯಕ್ಷ ಸಿರಿಬಾಗಿಲು ರಾಮಕೃಷ್ಣ ಮಯ್ಯ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ವನಜಾಕ್ಷಿ ಚೆಂಬ್ರಕಾನ ಕಾರ್ಯಕ್ರಮ ನಿರೂಪಿಸಿದರು.

ಭಾಗವಹಿಸಿದ ಕವಿಗಳಿಗೆ ಸ್ಮರಣಿಕೆ, ಪ್ರಮಾಣ ಪತ್ರವನ್ನು ಪ್ರತಿಷ್ಠಾನದ ಅಧ್ಯಕ್ಷರು ನೀಡಿ ಗೌರವಿಸಿದರು.