Monday, January 20, 2025
Home Blog Page 21

ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಂಸ್ಕೃತ ಪ್ರತಿಭಾ ಪುರಸ್ಕಾರ ಹಾಗೂ ಸಂಸ್ಕೃತೋತ್ಸವ ಕಾರ್ಯಕ್ರಮ

0

ಭಾಷೆ ಅಂದರೆ ಅದು ಹೃದಯ ಹೃದಯಗಳ ಸಂವಹನ. ಭಾವನೆಗಳ ಪರಸ್ಪರ ಪರಿಚಯಾತ್ಮಕ ವಿನಿಮಯಕ್ಕೆ ಭಾಷೆ ಅತ್ಯಂತ ಅವಶ್ಯ ಮಾರ್ಗ. ಸಂಸ್ಕೃತ ಜಗತ್ತಿನ ಅತ್ಯಂತ ಪ್ರಭಾವಶಾಲಿ ಭಾಷೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯ ಶ್ರೀ ಲಕ್ಷ್ಮೀಶ ಗಬ್ಲಡ್ಕ ಹೇಳಿದರು.

ಅವರು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಆಗಸ್ಟ್ 18ರಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಂಸ್ಕೃತ ಪ್ರತಿಭಾ ಪುರಸ್ಕಾರ ಹಾಗೂ ಸಂಸ್ಕೃತೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಸಂಸ್ಕೃತ ಭಾಷೆ ಒಂದು ಸೀಮಿತ ವರ್ಗದ ಭಾಷೆ ಎಂಬ ಆರೋಪ, ಅಪವಾದಗಳಿವೆ. ಆದರೆ ಈ ಅಪವಾದ ನಿರಾಧಾರ ಎಂಬುದಕ್ಕೆ ಸಂಸ್ಕೃತವನ್ನು ಕಲಿತ ಹಾಗೂ ಸಂಸ್ಕೃತಾಭ್ಯಾಸ ಮುಂದುವರಿಸುತ್ತಿರುವ ಎಲ್ಲಾ ಧರ್ಮಗಳ ಹಾಗೂ ಸಮಾಜದ ಎಲ್ಲಾ ವರ್ಗಗಳ ಮಕ್ಕಳೇ ಸಾಕ್ಷಿ ಎಂದೂ ಅವರು ಹೇಳಿದರು.

ದೀಪ ಬೆಳಗಿಸಿ ಉದ್ಘಾಟಿಸಿದ ಕಾಲೇಜಿನ ಪ್ರೌಢಶಾಲಾ ಮುಖ್ಯಸ್ಥರಾದ ಶ್ರೀ ಯಶವಂತ ರೈ ಮಾತನಾಡಿ ಭಾಷೆ ಸಂಸ್ಕಾರ ಮತ್ತು ಸಂಸ್ಕೃತಿಯ ಪ್ರತೀಕ. ಸಂಸ್ಕಾರಯುತ ಜೀವನ, ಆರೋಗ್ಯಕರ ಮನಸ್ಥಿತಿಯಿಂದ ನೆಮ್ಮದಿ ಸಿಗುತ್ತದೆ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಸಂಸ್ಕೃತ ಶಿಕ್ಷಕರ ಸಂಘದ ಗೌರವಾಧ್ಯಕ್ಷರಾದ ಶ್ರೀ ಪರಮೇಶ್ವರ ಹೆಗಡೆಯವರು ಅಧ್ಯಕ್ಷತೆ ವಹಿಸಿ, ಸಂಸ್ಕೃತ ಭಾಷೆಯ ಇತಿಹಾಸ, ಸಾಹಿತ್ಯಗಳನ್ನು ಉಲ್ಲೇಖಿಸಿ, ಸಂಸ್ಕೃತ ಅಧ್ಯಯನದ ಇಂದಿನ ಅವಶ್ಯಕತೆಗಳನ್ನು ತಿಳಿಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾಲೇಜು ಉಪ ಪ್ರಾಂಶುಪಾಲೆ ಶ್ರೀಮತಿ ರೇಖಾರಾಣಿಯವರು ಎಲ್ಲಾ ಭಾಷೆಗಳ ಮೂಲ ಸಂಸ್ಕೃತ. ಪ್ರತಿಯೊಂದು ಭಾಷೆಯ ಅತ್ಯಧಿಕ ಶಬ್ದ ಭಂಡಾರ ಸಂಸ್ಕೃತದಲ್ಲಿಯೇ ಇದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ 2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಅಂತಿಮ ಪರೀಕ್ಷೆಯಲ್ಲಿ ಪ್ರಥಮ ಭಾಷೆ ಸಂಸ್ಕೃತದಲ್ಲಿ 125, 124 ಅಂಕ ಮತ್ತು ತೃತೀಯ ಭಾಷೆ ಸಂಸ್ಕೃತದಲ್ಲಿ 100, 99 ಅಂಕ ಗಳಿಸಿದ ದಕ್ಷಿಣ ಕನ್ನಡ ಜಿಲ್ಲೆಯ 39 ಶಾಲೆಗಳ 270 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ, ಶಾಲು, ಸ್ಮರಣಿಕೆ ನೀಡಿ ಪ್ರತಿಭಾ ಪುರಸ್ಕಾರ ನಡೆಸಲಾಯಿತು.

ವಿಶೇಷ ಆಕರ್ಷಣೆಯಾಗಿ, ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಶಿಕ್ಷಕರಾದ ಶ್ರೀ ರಘು ಬಿಜೂರ್ ಇವರ ಉಸ್ತುವಾರಿಯಲ್ಲಿ, ಸಂಸ್ಕೃತೋತ್ಸವದ ಅಂಗವಾಗಿ ಮೂಡಬಿದಿರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಶ್ರೀ ಗಜಾನನ ಮರಾಠೆ, ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜು ಹಾಗೂ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿನಿಯರು ಸಂಸ್ಕೃತ ಗಾಯನ, ಸಂಸ್ಕೃತ ಹಾಡುಗಳಿಗೆ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವೆಂಕಟೇಶ್ ಪ್ರಸಾದ್ ಪುರಸ್ಕೃತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಬಿಳಿನೆಲೆ ಗೋಪಾಲಕೃಷ್ಣ ಪ್ರೌಢಶಾಲೆಯ ಸತ್ಯಶಂಕರ್ ಪ್ರಸ್ತಾವನೆಗೈದರು. ಮೂಡಬಿದಿರೆ ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯ ಶ್ರೀ ವೆಂಕಟರಮಣ ಕೆರೆಗದ್ದೆ ಸ್ವಾಗತಿಸಿ, ಸುರತ್ಕಲ್ ವಿದ್ಯಾದಾಯಿನಿ ಪ್ರೌಢಶಾಲೆಯ ಶ್ರೀ ದಿವಸ್ಪತಿ ವಂದಿಸಿದರು.

ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ಶ್ರೀಮತಿ ಪ್ರಮೀಳಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳಲ್ಲದೇ ಸುಮಾರು 500 ಕ್ಕೂ ಅಧಿಕ ಸಂಸ್ಕೃತಾಭಿಮಾನಿ ಪೋಷಕ ಬಂಧುಗಳು ಉಪಸ್ಥಿತರಿದ್ದರು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ವತಿಯಿಂದ ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಬಳಿಕ 2024-25ನೇ ಸಾಲಿಗೆ ಸಾಲಿಗೆ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಕೃತ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ರವಿಶಂಕರ್ ವಳಕ್ಕುಂಜ ಅವರು ಬರೆದ ಆರನೆಯ ಪುಸ್ತಕ ‘ಯಕ್ಷಗಾನ ವಾಚಿಕ ಸಮಾರಾಧನೆ ಭಾಗ – 2’ ಆಗಸ್ಟ್ 23ಕ್ಕೆ ಎಡನೀರು ಮಠದಲ್ಲಿ ಬಿಡುಗಡೆ

ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಶ್ರೀ ರವಿಶಂಕರ್ ವಳಕ್ಕುಂಜ ಅವರ ಆರನೆಯ ಕೃತಿ ‘ಯಕ್ಷಗಾನ ವಾಚಿಕ ಸಮಾರಾಧನೆ ಭಾಗ – 2’ ಆಗಸ್ಟ್ 23ಕ್ಕೆ ಎಡನೀರು ಮಠದಲ್ಲಿ ಬಿಡುಗಡೆಗೊಳ್ಳಲಿದೆ.

ಶ್ರೀ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳ ಚತುರ್ಥ ಚಾತುರ್ಮಾಸ್ಯದ ಅಂಗವಾಗಿ ಹಮ್ಮಿಕೊಂಡ ವಿವಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ದಿನಾಂಕ. 23.08.2024ನೇ ಶುಕ್ರವಾರ ಅಪರಾಹ್ನ 3 ಗಂಟೆಗೆ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ಅನಂತರ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ವಿವರಗಳಿಗೆ ಚಿತ್ರವನ್ನು ನೋಡಿ.

ರವಿಶಂಕರ್ ವಳಕ್ಕುಂಜ ಅವರ ಮೊದಲ ಐದು ಕೃತಿಗಳು.

1. ಯಕ್ಷಗಾನ ವಾಚಿಕ ಸಮಾರಾಧನೆ

  1. ಯಕ್ಷಗಾನ ಪ್ರಸಂಗ ದೃಶ್ಯಾವಳೀ
  2. ಯಕ್ಷಪಾತ್ರದೀಪಿಕಾ
  3. ಯಕ್ಷಗಾನ ಪ್ರಸಂಗ ದೃಶ್ಯಾವಳೀ – ಭಾಗ ೨
  4. ಯಕ್ಷಗಾನ ಪ್ರಸಂಗಗಳಲ್ಲಿ ನಾರದ

‘ರಕ್ಷಾಬಂಧನ’


‘ರಕ್ಷಾಬಂಧನ’ ಇದು ಭಾತೃತ್ವದ ಸಂದೇಶ ಸಾರುವ ಹಬ್ಬ ಈ ಸಂಭ್ರಮದ ಹಬ್ಬವನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಯಾದವಶ್ರೀ ಸಭಾಂಗಣದಲ್ಲಿ ದಿನಾಂಕ 20-08-2024 ರಂದು ಆಚರಿಸಲಾಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಾಗ್ಮಿ ಬಿ.ಗಣರಾಜ ಭಟ್ ಕೆದಿಲ, ಇವರು ಆಗಮಿಸಿದ್ದರು. ಭಾರತಮಾತೆಗೆ ಪುಷ್ಪಾರ್ಚನೆ ಗೈದು ರಕ್ಷೆಯನ್ನು ಕಟ್ಟಿ, ರಕ್ಷೆಯ ಮಹತ್ವ, ಮತ್ತು ರಕ್ಷಾ ಬಂಧನದ ಮಹತ್ವ ಅದರ ವಿಶೇಷತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ನುಡಿಗಳೊಂದಿಗೆ ಶುಭ ಹಾರೈಸಿದರು.

ಶಾಲಾ ಕಾರ್ಯಕ್ರಮದಲ್ಲಿ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಭಾಸ್ಕರ್ ಗೌಡ ಉಪಸ್ಥಿತರಿದ್ದರು.

ನಾವೆಲ್ಲ ಹಿಂದು, ನಾವೆಲ್ಲ ಬಂಧು ನಾವೆಲ್ಲ ಒಂದು’ ಎಂಬ ನಮ್ಮೆಲ್ಲರನ್ನು ಬೆಸೆಯುವ ಸಹೋದರತ್ವ ಪ್ರತೀಕವಾಗಿರುವ ರಕ್ಷೆಯನ್ನು ವಿದ್ಯಾರ್ಥಿಗಳೆಲ್ಲರೂ ಪರಸ್ಪರ ಕಟ್ಟಿಕೊಂಡು ಸಂಭ್ರಮಿಸಿದರು.

ಶಿಕ್ಷಕಿ ಸವಿತಾ ರಕ್ಷಾಬಂಧನಾದ ಸಂದೇಶ ವಾಚಿಸಿದರು. ಕು.ಸುಪ್ರಜಾ ರಾವ್ ವೈಯಕ್ತಿಕ ಗೀತೆ ಹಾಡಿದರು. ಶಿಕ್ಷಕಿ ಕು.ಸ್ವಾತಿ ಕಾಮತ್ ಅತಿಥಿಗಳನ್ನು ಸ್ವಾಗತಿಸಿ,

ಶ್ರೀ ವೆಂಕಟೇಶ್ ಪ್ರಸಾದ್ ಧನ್ಯವಾದಗೈದರು. ಶ್ರೀಮತಿ ಶಿವಾನಿ ಗಣಪತಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಶಾಲೆಯ ಶಿಕ್ಷಕ ಶಿಕ್ಷಕೇತರ ಬಂಧುಗಳು ಸಹಕರಿಸಿದರು.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಕ್ರಿಯಾಕರ್ತೃ ಗೋಪಾಲಕೃಷ್ಣ ಭಟ್ (ಅಪ್ಪಚ್ಚಿ) ನಿಧನ

ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಕ್ರಿಯಾಕರ್ತೃ ಗೋಪಾಲಕೃಷ್ಣ ಭಟ್ (ಅಪ್ಪಚ್ಚಿ) ನಿಧನ ಹೊಂದಿದ್ದಾರೆ.

ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಸೇವೆಯ ಕ್ರಿಯಾಕರ್ತೃವಾಗಿ ಸೇವೆ ಸಲ್ಲಿಸುತ್ತಿದ್ದರು.

ನಿನ್ನೆ (19.08.2024) ದೇವಾಲಯದಲ್ಲಿ ತನ್ನ ಕರ್ತವ್ಯವನ್ನು ಪೂರೈಸಿದ್ದ ಅವರು ರಾತ್ರಿ ಎಂದಿನಂತೆ ಮಲಗಿದ್ದರು. ಆದರೆ ದುರದೃಷ್ಟವಶಾತ್ ಅವರು ಸುಮಾರು ಮಧ್ಯರಾತ್ರಿಯ ಹೊತ್ತಿನಲ್ಲಿ ಹೃದಯಾಘಾತದಿಂದ ನಿಧನರಾದರು.

ಸುಬ್ರಹ್ಮಣ್ಯದಲ್ಲಿಯೇ ವಾಸ್ತವ್ಯವಿದ್ದ ಅವರನ್ನು ಇಂದು (20.08.2024) ಮುಂಜಾನೆ ಸಹೋದ್ಯೋಗಿಗಳು ಎಬ್ಬಿಸಲು ಪ್ರಯತ್ನಿಸಿದಾಗ ಅವರು ಮೃತಪಟ್ಟಿರುವುದು ಅರಿವಿಗೆ ಬಂತು ಎಂದು ತಿಳಿದುಬಂದಿದೆ.

ಬೆಳ್ತಂಗಡಿ ತಾಲೂಕಿನ ಇಳಂತಿಲ ಸಮೀಪದ ನಿವಾಸಿಯಾಗಿದ್ದ ಅವರು ಸಹೋದ್ಯೋಗೀ ವಲಯದಲ್ಲಿ ಅಪ್ಪಚ್ಚಿ ಎಂದೇ ಗುರುತಿಸಲ್ಪಡುತ್ತಿದ್ದರು.

ಶ್ರೀಯುತರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಬೇಡರ ಕಣ್ಣಪ್ಪ, ರಾಜ್ಯ ತ್ಯಾಗ, ವೈಜಯಂತಿ ಪರಿಣಯ, ನರಕಾಸುರ ಮೋಕ್ಷ – ಎಡನೀರು ಮಠದಲ್ಲಿ ಪ್ರಸಿದ್ಧ ಕಲಾವಿದರಿಂದ ಅಮೋಘ ಯಕ್ಷಗಾನ ಪ್ರದರ್ಶನ

ಎಡನೀರು ಮಠದಲ್ಲಿ ಪ್ರಸಿದ್ಧ ಕಲಾವಿದರಿಂದ ಅಮೋಘ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ದಿನಾಂಕ 23.08.2024ನೇ ಶುಕ್ರವಾರ ಸಂಜೆ 4 ಗಂಟೆಯಿಂದ ಬ್ರಹ್ಮೈಕ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಮಹಾಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಾಗಿ

ಬೇಡರ ಕಣ್ಣಪ್ಪ, ರಾಜ್ಯ ತ್ಯಾಗ, ವೈಜಯಂತಿ ಪರಿಣಯ, ನರಕಾಸುರ ಮೋಕ್ಷ ಎಂಬ ಪ್ರಸಂಗಗಳ ಯಕ್ಷಗಾನ ಪ್ರದರ್ಶನ ಪ್ರಸಿದ್ಧ ಕಲಾವಿದರಿಂದ ನೆರವೇರಲಿದೆ.

ವಿವರಗಳಿಗೆ ಚಿತ್ರವನ್ನು ನೋಡಿ.

ಯಕ್ಷಗಾನ ಪ್ರದರ್ಶನ, ಕಥಕ್ಕಳಿ, ಶಾಸ್ತ್ರೀಯ ಸಂಗೀತ, ತಾಳಮದ್ದಳೆ, ಭಕ್ತಿಸಂಗೀತ ಎಲ್ಲವೂ ಒಂದೇ ವೇದಿಕೆಯಲ್ಲಿ

0

ಎಡನೀರು ಮಠದಲ್ಲಿ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳ ಚತುರ್ಥ ಚಾತುರ್ಮಾಸ್ಯದ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಆಗಸ್ಟ್ 2024ರ ದಿನಾಂಕ 17,18, 19 ಮತ್ತು 20 ರಂದು ಯಕ್ಷಗಾನ ಪ್ರದರ್ಶನ, ಕಥಕ್ಕಳಿ, ಶಾಸ್ತ್ರೀಯ ಸಂಗೀತ, ತಾಳಮದ್ದಳೆ, ಭಕ್ತಿಸಂಗೀತ ಕಾರ್ಯಕ್ರಮ ನಡೆಯಲಿದೆ.

ವಿವರಗಳಿಗೆ ಚಿತ್ರವನ್ನು ನೋಡಿ.

ಬೆಂಗಳೂರಿನ ಸಿನಿಮಾ ಥಿಯೇಟರ್ ಶೌಚಾಲಯದಲ್ಲಿ ಮೊಬೈಲ್‌ ಮೂಲಕ ಮಹಿಳೆಯರ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದ ಇಬ್ಬರು ಹುಡುಗರ ಬಂಧನ

ಬೆಂಗಳೂರಿನ ಸಿನಿಮಾ ಥಿಯೇಟರ್ ಶೌಚಾಲಯದಲ್ಲಿ ಮೊಬೈಲ್‌ ಮೂಲಕ ಮಹಿಳೆಯರ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದ ಇಬ್ಬರು ಹುಡುಗರನ್ನು ಬಂಧಿಸಲಾಗಿದೆ.

ಬೆಂಗಳೂರು: ನಗರದ ಸಿದ್ದಯ್ಯ ರಸ್ತೆಯ ಊರ್ವಶಿ ಥಿಯೇಟರ್‌ನಲ್ಲಿ ಶನಿವಾರ ಮಹಿಳೆಯೊಬ್ಬರು ಶೌಚಾಲಯ ಬಳಸುತ್ತಿರುವುದನ್ನು ವಿಡಿಯೋ ಮಾಡಿ ಇಬ್ಬರು ಅಪ್ರಾಪ್ತರು ಸಿಕ್ಕಿಬಿದ್ದಿದ್ದಾರೆ.

23 ವರ್ಷದ ಮಹಿಳೆ ಗಿರಿನಗರದ ನಿವಾಸಿಯಾಗಿದ್ದು, ಶನಿವಾರ ರಾತ್ರಿ 9.45 ರ ಪ್ರದರ್ಶನಕ್ಕಾಗಿ ತನ್ನ ಸ್ನೇಹಿತರೊಂದಿಗೆ ಭೀಮಾ ಕನ್ನಡ ಚಲನಚಿತ್ರವನ್ನು ವೀಕ್ಷಿಸಲು ಥಿಯೇಟರ್‌ಗೆ ಬಂದಿದ್ದರು. ಮಧ್ಯಂತರದಲ್ಲಿ ವಾಶ್‌ರೂಮ್ ಬಳಸಲು ಹೋದಾಗ ನೆಲದ ಮೇಲೆ ಕೈಯ ನೆರಳನ್ನು ಗಮನಿಸಿದ್ದೇನೆ ಎಂದು ಕಲಾಸಿಪಾಳ್ಯ ಪೊಲೀಸರಿಗೆ ತಿಳಿಸಿದ್ದಾಳೆ. ತಕ್ಷಣ ತಲೆಯೆತ್ತಿ ನೋಡಿದಾಗ ಯಾರೋ ಮೊಬೈಲ್ ಹಿಡಿದು ರೆಕಾರ್ಡಿಂಗ್ ಮಾಡುತ್ತಿದ್ದರು ಎಂದು ಆಕೆ ಹೇಳಿದ್ದಾಳೆ.

ಅವಳು ಬೊಬ್ಬೆ ಹೊಡೆದಾಗ, ಇಣುಕಿ ನೋಡುತ್ತಿದ್ದ ಹುಡುಗರು ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅವಳು ಹೊರನಡೆದು ದುಷ್ಕರ್ಮಿಗಳಿಗಾಗಿ ಹುಡುಕಿದಳು, ವ್ಯರ್ಥವಾಯಿತು. ಚಿತ್ರಮಂದಿರದ ಸಿಬ್ಬಂದಿ ಹಾಗೂ ಪೊಲೀಸರಿಗೆ ದೂರು ನೀಡಿದ್ದಾಳೆ.

ಕಲಾಸಿಪಾಳ್ಯ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಇಬ್ಬರು ಬಾಲಕರು ಅನುಮಾನಾಸ್ಪದವಾಗಿ ಚಲಿಸುತ್ತಿರುವುದು ಕಂಡು ಬಂದಿದ್ದು, ಅವರು ತಪ್ಪಿಸಿಕೊಳ್ಳುವ ಆತುರದಲ್ಲಿದ್ದರು. ಅವರ ಚಿತ್ರಗಳನ್ನು ಪೊಲೀಸರು ಮತ್ತು ಥಿಯೇಟರ್ ಸಿಬ್ಬಂದಿ ನಡುವೆ ಪ್ರಸಾರ ಮಾಡಲಾಯಿತು.

ಚಲನಚಿತ್ರ ಮುಗಿದ ನಂತರ, ಪೊಲೀಸರು ಎಲ್ಲಾ ಬಾಗಿಲುಗಳಿಗೆ ಬೀಗ ಹಾಕಿದರು ಮತ್ತು ಪ್ರೇಕ್ಷಕರನ್ನು ಒಂದು ನಿರ್ಗಮನದ ಮೂಲಕ ಹೊರಗೆ ಬರುವಂತೆ ಮಾಡಿದರು. ಅವರು ಆರೋಪಿಗಳನ್ನು ಗುರುತಿಸಿ ಬಂಧಿಸಿದ್ದಾರೆ. ಒಬ್ಬ ಹುಡುಗ ಸಿಕ್ಕಿಬೀಳುವುದನ್ನು ತಪ್ಪಿಸಿಕೊಳ್ಳಲು ಒಳಗೆ ಜಾಕೆಟ್ ಧರಿಸಿದ್ದ ಎಂದು ಅಧಿಕಾರಿಯೊಬ್ಬರು ಹೇಳಿದರು, ಆದರೆ ಪೊಲೀಸರು ಅವನ ಕೈಯಲ್ಲಿ ಹಿಡಿದಿದ್ದ ಕ್ಯಾಪ್ ಸಹಾಯದಿಂದ ಅವನನ್ನು ಗುರುತಿಸಿದರು.


ಹುಡುಗರನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. “ಇಬ್ಬರಿಗೂ 14 ವರ್ಷ, ಶಾಲೆ ಬಿಟ್ಟ ಮಕ್ಕಳು, ಅಂಗಡಿಗಳಲ್ಲಿ ಕೂಲಿ ಕೆಲಸ ಮಾಡುತ್ತಾರೆ, ಜಯನಗರದವರು, ಮಹಿಳೆಯನ್ನು ಚಿತ್ರೀಕರಿಸಲು ಬಳಸುತ್ತಿದ್ದ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ, ಅವರು ವೀಡಿಯೊವನ್ನು ಅಳಿಸಿದ್ದಾರೆ, ಡೇಟಾವನ್ನು ಹಿಂಪಡೆಯಲು ಪೋನ್ ಅನ್ನು ವಿಧಿವಿಜ್ಞಾನಕ್ಕೆ ಕಳುಹಿಸಲಾಗುವುದು ”ಅಧಿಕಾರಿಯೊಬ್ಬರು ಹೇಳಿದರು.

ಈ ರಾಜ್ಯದ ಮಹಿಳೆಯರಿಗೆ ಸಿಗಲಿದೆ ಪಿರಿಯಡ್ ಲೀವ್, ಈ ಮುಟ್ಟಿನ ರಜೆಯಲ್ಲಿ ಸಂಬಳವೂ ಸಿಗುತ್ತದೆ!

ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ ಒಡಿಶಾದಲ್ಲಿ ವೇತನ ಸಹಿತ ಮುಟ್ಟಿನ ರಜೆ ಸಿಗಲಿದೆ.

ಗುರುವಾರ ಕಟಕ್‌ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ನಂತರ ರಾಜ್ಯದ ಉಪ ಮುಖ್ಯಮಂತ್ರಿ ಪ್ರವತಿ ಪರಿದಾ ಈ ಘೋಷಣೆ ಮಾಡಿದ್ದಾರೆ. ಉಪ ಮುಖ್ಯಮಂತ್ರಿ ಪ್ರವತಿ ಪರಿದಾ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಸ್ತುವಾರಿ ಸಚಿವರೂ ಆಗಿದ್ದಾರೆ.

“ಈ ರಜೆಯು ಐಚ್ಛಿಕವಾಗಿರುತ್ತದೆ ಮತ್ತು ಮಹಿಳೆಯ ಆಯ್ಕೆಯನ್ನು ಅವಲಂಬಿಸಿ ಋತುಚಕ್ರದ ಮೊದಲ ಅಥವಾ ಎರಡನೇ ದಿನದಂದು ತೆಗೆದುಕೊಳ್ಳಬಹುದು” ಎಂದು ಅವರು ಹೇಳಿದರು. ಇದರೊಂದಿಗೆ ಉದ್ಯೋಗಸ್ಥ ಮಹಿಳೆಯರಿಗೆ ಋತುಚಕ್ರದ ರಜೆ ನೀಡುವ ಬಿಹಾರ ಸಾಲಿಗೆ ಒಡಿಶಾ ಸೇರಿಕೊಂಡಿದೆ.

ಒಡಿಶಾ ಸರ್ಕಾರದ ಈ ಉಪಕ್ರಮವು ಸಿಎಂ ಮೋಹನ್ ಮಾಝಿ ಸರ್ಕಾರದ 100 ದಿನಗಳ ಕ್ರಿಯಾ ಯೋಜನೆಯ ಭಾಗವಾಗಿದೆ. ಮಾಝಿ ಜೂನ್ 12 ರಂದು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು.

ಬಿಹಾರ ಮತ್ತು ಕೇರಳ ರಾಜ್ಯಗಳು ಮಾತ್ರ ಮುಟ್ಟಿನ ರಜಾದಿನಗಳ ಬಗ್ಗೆ ನೀತಿಗಳನ್ನು ಜಾರಿಗೆ ತಂದಿರುವ ಭಾರತೀಯ ರಾಜ್ಯಗಳಾಗಿವೆ. ಬಿಹಾರದಲ್ಲಿ, 1992 ರಿಂದ, ಮಹಿಳೆಯರಿಗೆ ಪ್ರತಿ ತಿಂಗಳು ವೇತನದೊಂದಿಗೆ ಎರಡು ದಿನಗಳ ಮುಟ್ಟಿನ ರಜೆ ನೀಡಲಾಗುತ್ತದೆ.

2023 ರಲ್ಲಿ, ಕೇರಳವು ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆಯನ್ನು ನೀಡಿತು.

ಆಸ್ಪತ್ರೆಯಿಂದ ಮನೆಗೆ ಹೋಗುವಾಗ ನರ್ಸ್ ಮೇಲೆ ಅತ್ಯಾಚಾರ ನಡೆಸಿ ಹತ್ಯೆ, 9 ದಿನಗಳ ನಂತರ ಶವ ಪತ್ತೆ

ಉತ್ತರಾಖಂಡದ ಖಾಸಗಿ ಆಸ್ಪತ್ರೆಯಿಂದ ಉತ್ತರ ಪ್ರದೇಶದ ಗಡಿ ಬಳಿಯ ತನ್ನ ಮನೆಗೆ ಹಿಂದಿರುಗುತ್ತಿದ್ದಾಗ ನರ್ಸ್ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಲಾಗಿದೆ.

ನರ್ಸ್ ಉತ್ತರ ಪ್ರದೇಶದ ಬಿಲಾಸ್‌ಪುರದ ಕಾಶಿಪುರ್ ರಸ್ತೆಯಲ್ಲಿರುವ ತನ್ನ ಬಾಡಿಗೆ ನಿವಾಸದಲ್ಲಿ ತನ್ನ 11 ವರ್ಷದ ಮಗಳೊಂದಿಗೆ ವಾಸಿಸುತ್ತಿದ್ದಳು.

ಮರುದಿನ, ಆಕೆಯ ಸಹೋದರಿ ಕಾಣೆಯಾದ ಬಗ್ಗೆ ದೂರು ನೀಡಿದರು. ಎಂಟು ದಿನಗಳ ನಂತರ ಆಗಸ್ಟ್ 8 ರಂದು, ಉತ್ತರ ಪ್ರದೇಶ ಪೊಲೀಸರು ದಿಬ್ದಿಬಾ ಗ್ರಾಮದ ಆಕೆಯ ಮನೆಯಿಂದ ಸುಮಾರು 1.5 ಕಿಮೀ ದೂರದಲ್ಲಿರುವ ಖಾಲಿ ಜಾಗದಲ್ಲಿ ಆಕೆಯ ಶವವನ್ನು ಪತ್ತೆ ಮಾಡಿದರು.

ಉತ್ತರ ಪ್ರದೇಶದ ಬರೇಲಿಯ ದಿನಗೂಲಿ ಕಾರ್ಮಿಕನಾಗಿದ್ದ ಆರೋಪಿ ಧರ್ಮೇಂದ್ರ ಎಂಬಾತನನ್ನು ಬುಧವಾರ ರಾಜಸ್ಥಾನದಿಂದ ಬಂಧಿಸಲಾಗಿದೆ.

ಕುಡಿದ ಅಮಲಿನಲ್ಲಿದ್ದ ಧರ್ಮೇಂದ್ರ ಸಂತ್ರಸ್ತೆಯನ್ನು ನೋಡಿ ಆಕೆಯನ್ನು ಹಿಂಬಾಲಿಸಿ ಆಕೆ ತನ್ನ ಅಪಾರ್ಟ್‌ಮೆಂಟ್ ಕಟ್ಟಡಕ್ಕೆ ಪ್ರವೇಶಿಸಲು ಮುಂದಾದಾಗ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಗ ಕತ್ತಲಾಗುತ್ತಿದ್ದುದರಿಂದ ಜನಸಂಚಾರ ಇರಲಿಲ್ಲ. ಅವನು ಅವಳನ್ನು ಹತ್ತಿರದ ಪೊದೆಗಳಿಗೆ ಎಳೆದನು. ಆಕೆಯ ಸ್ಕಾರ್ಫ್ ಬಳಸಿ ಅತ್ಯಾಚಾರ ಎಸಗಿ ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆ” ಎಂದು ಉಧಮ್ ಸಿಂಗ್ ನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಟಿಸಿ ತಿಳಿಸಿದ್ದಾರೆ.

ಆಕೆಯ ಫೋನ್ ಮತ್ತು ಆಕೆಯ ಪರ್ಸ್‌ನಿಂದ 3,000 ರೂ.ಗಳನ್ನು ಕದ್ದಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕಳೆದ ವಾರ ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯದ ಸಮಯದಲ್ಲಿ 31 ವರ್ಷದ ಮಹಿಳಾ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಹತ್ಯೆಯ ಬಗ್ಗೆ ರಾಷ್ಟ್ರವ್ಯಾಪಿ ಆಕ್ರೋಶದ ನಡುವೆ ಈ ಪ್ರಕರಣ ನಡೆದಿದೆ ಎಂದು ಇಲ್ಲಿ ನೆನಪಿಸಿಕೊಳ್ಳಬಹುದು.

ತೆಂಕಣ ಶೈಲಿಯ ಹವ್ಯಕ ಯಕ್ಷಗಾನ ಕಲಾವಿದರು

ಶೀರ್ಷಿಕೆಯು ಸೂಚಿಸುವಂತೆ ತೆಂಕುತಿಟ್ಟು ಯಕ್ಷಗಾನದ ಕೀರ್ತಿಶೇಷ ಹವ್ಯಕ ಕಲಾವಿದರುಗಳ ಸಮಗ್ರ ಪರಿಚಯವು ಈ ಕೃತಿಯಲ್ಲಿದೆ. ಇದೊಂದು ಅಪೂರ್ವ ಸಂಗ್ರಹವು. ಇಷ್ಟು ಮಂದಿ ಕಲಾವಿದರ ವಿವರಗಳನ್ನು ಸಂಗ್ರಹಿಸುವುದು ಸುಲಭದ ಕಾರ್ಯವಲ್ಲ. ಇದೊಂದು ಮಹತ್ಸಾಧನೆಯೇ ಹೌದು. ನೋಡುವ ಕಣ್ಣುಗಳಿದ್ದರೆ ಸಾಧನೆಯು ಖಂಡಿತಾ ಕಾಣಿಸುತ್ತದೆ. ಮುಂದೆ ಮಾಹಿತಿ ಸಂಗ್ರಹ ಮಾಡುವವರಿಗೆ ಇದೊಂದು ಉಪಯೋಗೀ ಕೃತಿಯಾಗಿ ಪರಿಣಮಿಸುತ್ತದೆ. 

ಈ ಕೃತಿಯ ಲೇಖಕರು ಡಾ| ಶ್ರೀ ಉಪ್ಪಂಗಳ ಶಂಕರನಾರಾಯಣ ಭಟ್ಟರು. ಶ್ರೀಯುತರು ಕಾಸರಗೋಡು ಸರಕಾರೀ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರು. ಅಲ್ಲದೆ ಕೇರಳ ರಾಜ್ಯ ಕಾಲೇಜು ಮಟ್ಟದ ವಿದ್ಯಾಸಂಸ್ಥೆಗಳ ಉಪನಿರ್ದೇಶಕರಾಗಿಯೂ ನಿವೃತ್ತರು. ಸಾಹಿತ್ಯ ಕ್ಷೇತ್ರದಲ್ಲಿ ಇವರು ಅಪೂರ್ವ ಸಾಧಕರು. ಇವರು ರಚಿಸಿದ ಗ್ರಂಥಗಳು ಅನೇಕ.

ಕನ್ನಡ ಸಾಹಿತ್ಯ ಮತ್ತು ವ್ಯಾಕರಣದಲ್ಲಿ ಶ್ರೀಯುತರು ಘನ ವಿದ್ವಾಂಸರಾಗಿ ಓದುಗರಿಗೆ, ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಪರಿಚಿತರು. ಅನೇಕರು ಈ ವಿಚಾರದಲ್ಲಿ ಉಪ್ಪಂಗಳ ಶಂಕರನಾರಾಯಣ ಭಟ್ಟರ ಸಲಹೆಯನ್ನು ಪಡೆಯುತ್ತಾರೆ. ಇವರ ನಿರ್ದೇಶನದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದವರೂ ಇದ್ದಾರೆ. ಈ ಅಪೂರ್ವ ಪುಸ್ತಕವನ್ನು ಬರೆದು ಸಮಾಜಕ್ಕೆ ಕೊಡುಗೆಯಾಗಿ ನೀಡಿರುತ್ತಾರೆ. 

‘ತೆಂಕಣ ಶೈಲಿಯ ಹವ್ಯಕ ಯಕ್ಷಗಾನ ಕಲಾವಿದರು’ ಎಂಬ ಈ ಕೃತಿಯ ಪ್ರಕಾಶಕರು ಶ್ರೀರಾಮ ಪ್ರಕಾಶನ ಮಂಡ್ಯ. ಇದು 2019ರಲ್ಲಿ ಓದುಗರ ಕೈಸೇರಿತ್ತು. ನಾನ್ನೂರ ಎಂಟು ಪುಟಗಳ ಈ ಕೃತಿಯ ಬೆಲೆ ರೂಪಾಯಿ ನಾನ್ನೂರ ಐವತ್ತು ಮಾತ್ರ. ಈ ಕೃತಿಯಲ್ಲಿ ಮೊದಲಿಗೆ ಮಧೂರು ಶ್ರೀ ಮಹಾಗಣಪತಿ, ಕಣಿಪುರ ಶ್ರೀ ಗೋಪಾಲಕೃಷ್ಣ, ಕುಂಬಳೆ ಮೇಳದ ಮರದ ಗಣಪತಿ, ಕೂಡ್ಲು ಮೇಳದ ಶ್ರೀ ಗೋಪಾಲಕೃಷ್ಣ ದೇವರ ಚಿತ್ರಪಟಗಳಿವೆ. ಪ್ರೊ. ಎಂ.ಎ ಹೆಗಡೆ ಅವರು ಬರೆದ ‘ಉಪ್ಪಂಗಳರ ಮನೆಯಂಗಳದಲ್ಲಿ’ ಎಂಬ ಲೇಖನವಿದೆ. ಶ್ರೀ ಎಂ. ಸಿ ಅಚ್ಯುತಾನಂದ ಅವರ ‘ಪ್ರಕಾಶಕರ ಮಾತು’ ಎಂಬ ಬರಹವಿದೆ.

ಲೇಖಕರು ‘ವಕ್ತವ್ಯ’ ಎಂಬ ಶೀರ್ಷಿಕೆಯಡಿ ತಮ್ಮ ಅನಿಸಿಕೆಗಳನ್ನು ತಿಳಿಸಿರುತ್ತಾರೆ. ಅಧ್ಯಾಯ ಒಂದರಲ್ಲಿ ದಶಾವತಾರ ಮೇಳಗಳ ವಿವರಗಳಿವೆ. ಅಧ್ಯಾಯ ಎರಡರಲ್ಲಿ ಹವ್ಯಕ ಹಿಮ್ಮೇಳ ಕಲಾವಿದರ ಪರಿಚಯವಿದೆ. ಅಧ್ಯಾಯ ಮೂರರಲ್ಲಿ ಮುಮ್ಮೇಳ ಕಲಾವಿದರ ವಿವರಗಳಿವೆ. ಇದರಲ್ಲಿ ಬಣ್ಣ, ಸ್ತ್ರೀ, ಪುಂಡು, ಪೀಠಿಕೆ, ಇದಿರು ವೇಷ, ಹಾಸ್ಯಗಾರರು ಎಂದು ಬೇರೆಬೇರೆಯಾಗಿ ಕಲಾವಿದರ ವಿವರಗಳಿವೆ.

ಅಧ್ಯಾಯ ನಾಲ್ಕರಲ್ಲಿ ತಾಳಮದ್ದಳೆ ಅರ್ಥಧಾರಿಗಳ ಮತ್ತು ಅಧ್ಯಾಯ ಐದರಲ್ಲಿ ಪ್ರಸಂಗಕರ್ತರ, ಲಿಪಿಕಾರರ ವಿವರಗಳಿವೆ. ಅಧ್ಯಾಯ ಆರರಲ್ಲಿ ಯಕ್ಷಗಾನ ಸಂಘ ಸಂಸ್ಥೆಗಳ ಪರಿಚಯವನ್ನು ನೀಡಿರುತ್ತಾರೆ. ಈ ಕೃತಿ ಬೇಕಾದವರು ಪ್ರಕಾಶಕರನ್ನು ಸಂಪರ್ಕಿಸಬಹುದು. 

ವಿಳಾಸ: ಶ್ರೀರಾಮ ಪ್ರಕಾಶನ, # 893/D, 3rd Cross, Eastern extension, Near Cheluvayya Park, Neharunagara, Mandya – 574401 Mobile: 9448930173

ಲೇಖಕರ (ಉಪ್ಪಂಗಳ ಶಂಕರನಾರಾಯಣ ಭಟ್ಟ) ಮೊಬೈಲ್ ಸಂಖ್ಯೆ : 9447469561

ಬರಹ : ರವಿಶಂಕರ್ ವಳಕ್ಕುಂಜ