ದೆಹಲಿಯಲ್ಲಿ, ಅಕ್ಟೋಬರ್ 25 ರಿಂದ ಇಂಧನವನ್ನು ಖರೀದಿಸಲು ಪಿಯುಸಿ (Pollution Under Control) ಸರ್ಟಿಫಿಕೇಟ್ (ಮಾಲಿನ್ಯ ತಪಾಸಣೆ ಪ್ರಮಾಣಪತ್ರ) ಕಡ್ಡಾಯವಾಗಿದೆ.
ದೆಹಲಿ ಸಾರಿಗೆ ಇಲಾಖೆಯ ಪ್ರಕಾರ, 13 ಲಕ್ಷ ದ್ವಿಚಕ್ರ ವಾಹನಗಳು ಮತ್ತು ಮೂರು ಲಕ್ಷ ಕಾರುಗಳು ಸೇರಿದಂತೆ 17 ಲಕ್ಷಕ್ಕೂ ಹೆಚ್ಚು ವಾಹನಗಳನ್ನು ಜುಲೈ 2022 ರವರೆಗೆ ಮಾನ್ಯ ಪಿಯುಸಿ ಪ್ರಮಾಣಪತ್ರಗಳಿಲ್ಲದೆ ಓಡಿಸಲಾಗುತ್ತಿದೆ.
ಅಕ್ಟೋಬರ್ 25 ರಿಂದ ದೆಹಲಿಯ ಪೆಟ್ರೋಲ್ ಪಂಪ್‌ಗಳಲ್ಲಿ ಮಾನ್ಯವಾದ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರವನ್ನು ತೋರಿಸದೆ ವಾಹನ ಮಾಲೀಕರಿಗೆ ಇಂಧನವನ್ನು ನೀಡಲಾಗುವುದಿಲ್ಲ ಎಂದು ಪರಿಸರ ಸಚಿವ ಗೋಪಾಲ್ ರೈ ಇಂದು ಹೇಳಿದ್ದಾರೆ.
ಸೆಪ್ಟೆಂಬರ್ 29 ರಂದು ನಡೆದ ಪರಿಸರ, ಸಾರಿಗೆ ಮತ್ತು ಸಂಚಾರ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಯೋಜನೆ ವಿಧಾನಗಳು ಮತ್ತು ಅನುಷ್ಠಾನದ ಕುರಿತು ಚರ್ಚಿಸಲಾಯಿತು ಎಂದು ಅವರು ಹೇಳಿದರು.
“ದೆಹಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯಕ್ಕೆ ವಾಹನ ಹೊಗೆ ಹೊರಸೂಸುವಿಕೆ ಪ್ರಮುಖ ಕಾರಣವಾಗಿದೆ. ಇದನ್ನು ಕಡಿಮೆ ಮಾಡುವುದು ಅನಿವಾರ್ಯವಾಗಿದೆ ಆದ್ದರಿಂದ ಅಕ್ಟೋಬರ್ 25 ರಿಂದ ವಾಹನದ ಪಿಯುಸಿ ಪ್ರಮಾಣಪತ್ರವಿಲ್ಲದೆ ಪೆಟ್ರೋಲ್ ಪಂಪ್‌ಗಳಲ್ಲಿ ಪೆಟ್ರೋಲ್, ಡೀಸೆಲ್ ನೀಡಲಾಗುವುದಿಲ್ಲ ಎಂದು ನಿರ್ಧರಿಸಲಾಗಿದೆ” ಎಂದು ಶ್ರೀ ರೈ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ದೆಹಲಿ ಸಾರಿಗೆ ಇಲಾಖೆಯ ಪ್ರಕಾರ, ಜುಲೈ 2022 ರವರೆಗೆ 13 ಲಕ್ಷ ದ್ವಿಚಕ್ರ ವಾಹನಗಳು ಮತ್ತು ಮೂರು ಲಕ್ಷ ಕಾರುಗಳು ಸೇರಿದಂತೆ 17 ಲಕ್ಷಕ್ಕೂ ಹೆಚ್ಚು ವಾಹನಗಳು ಮಾನ್ಯವಾದ ಪಿಯುಸಿ ಪ್ರಮಾಣಪತ್ರಗಳಿಲ್ಲದೆ ಓಡುತ್ತಿವೆ.
ಮಾನ್ಯವಾದ ಪಿಯುಸಿ ಪ್ರಮಾಣಪತ್ರವಿಲ್ಲದೆ ಸಿಕ್ಕಿಬಿದ್ದರೆ, ವಾಹನ ಮಾಲೀಕರಿಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ₹ 10,000 ವರೆಗೆ ದಂಡ ಅಥವಾ ಮೋಟಾರು ವಾಹನ ಕಾಯ್ದೆಯ ಪ್ರಕಾರ ಎರಡನ್ನೂ ವಿಧಿಸಬಹುದು. ಎಲ್ಲಾ ಸರ್ಕಾರಿ ಇಲಾಖೆಗಳು ತಮ್ಮ ವಾಹನಗಳ ಪಿಯುಸಿ ಪ್ರಮಾಣಪತ್ರಗಳನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.
ಕೆ ಎಸ್ ಆರ್ ಟಿ ಸಿ ಐರಾವತ ಬಸ್ ಮತ್ತು ಟೆಂಪೋ ಪರಸ್ಪರ ಢಿಕ್ಕಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿ ಎಂಬಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಈ ಭೀಕರ ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿವೆ. ಬಸ್ ಕಾರವಾರದಿಂದ ಮಂಗಳೂರಿನ ಕಡೆಗೆ ಬರುತ್ತಿತ್ತು.
ಟೆಂಪೋ ಕೂಡಾ ಅದೇ ದಿಕ್ಕಿಗೆ ಹೋಗುತ್ತಿದ್ದರೂ ಡಿಕ್ಕಿ ಸಂಭವಿಸಿದೆ. ಟೆಂಪೋ ಹಿಂಬದಿಗೆ ಬಸ್ ಗುದ್ದಿದೆ ಎಂದು ಹೇಳಲಾಗುತ್ತಿದೆ. ಟೆಂಪೋ ಅಚಾನಕ್ ಆಗಿ ಬ್ರೇಕ್ ಹಾಕಿದ್ದರಿಂದ ಈ ಢಿಕ್ಕಿ ಸಂಭವಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಬಸ್ಸಿನಲ್ಲಿ 50 ಜನರು ಪ್ರಯಾಣಿಸುತ್ತಿದ್ದರು. ಬಸ್ ನ ಎದುರಿನ ಸೀಟಿನಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಗಾಯಾಳುಗಳು ಭಟ್ಕಳದ ಸರಕಾರೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಮುರುಡೇಶ್ವರ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.
ವಿಶ್ವಶಾಂತಿ ಗಾಗಿ ಪ್ರಥಮ ನೊಬೆಲ್ ಪ್ರಶಸ್ತಿ ಪಡೆದ ರೆಡ್ ಕ್ರಾಸ್ ಸಂಸ್ಥೆಯ ಸ್ಥಾಪಕರಾದ ಜೀನ್ ಹೆನ್ರಿ ಡ್ಯೂನಾಂಟ್ ಅವರ ಉದ್ದೇಶವನ್ನು ಅನುಷ್ಠಾನಗೊಳಿಸುವಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳು ಕಾರ್ಯೋನ್ಮುಖವಾಗಿದೆ. ಯುದ್ಧಕಾಲ, ನೈಸರ್ಗಿಕ ವಿಪತ್ತುಗಳು ಮತ್ತು ಮಾನವ ನಿರ್ಮಿತ ವಿಪತ್ತುಗಳ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆ ಪರಿಣಾಮಕಾರಿಯಾದ ಕ್ರಮಗಳಿಂದ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಿದೆ.
ಶಿಕ್ಷಣ ಸಂಸ್ಥೆಗಳಲ್ಲಿ ರೆಡ್ ಕ್ರಾಸ್ ಘಟಕಗಳನ್ನು ಸ್ಥಾಪಿಸುವ ಮೂಲಕ ಆರೋಗ್ಯ ,ಸೇವೆ ಮತ್ತು ಸ್ನೇಹ ಈ ಮೂರು ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳನ್ನು ಮಾನವೀಯ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿದೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ದಿವಾಕರ ಆಚಾರ್ಯ ಗೇರುಕಟ್ಟೆ ತಿಳಿಸಿದರು.
ಅಳದಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜೂನಿಯರ್ ರೆಡ್ ಕ್ರಾಸ್ ಘಟಕ ಮತ್ತು ಡ್ರಗ್ ವಿರೋಧಿ ಕ್ಲಬ್ ಗಳನ್ನು ಅವರು ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲರಾದ ಸನ್ನಿ ಕೆ.ಎಂ ಮಾತನಾಡಿ ವಿದ್ಯಾರ್ಥಿಗಳು ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ವ್ಯಕ್ತಿತ್ವ ವಿಕಸನವನ್ನು ಮಾಡಿಕೊಳ್ಳಲು ಅವಕಾಶವಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಪ್ರಥಮ ಬಾರಿಗೆ ಈ ಘಟಕಗಳನ್ನು ಉದ್ಘಾಟಿಸುತ್ತಿರುವುದು ವಿದ್ಯಾರ್ಥಿಗಳ ಹಿತಚಿಂತನೆಯಿಂದ ಎಂದು ಅವರು ತಿಳಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಸದಾನಂದ ಉಂಗಿಲಬೈಲು ಮತ್ತು ಘಟಕದ ನಾಯಕಿ ಅಶ್ವಿತಾ ಉಪಸ್ಥಿತರಿದ್ದು ಶುಭ ಹಾರೈಸಿದರು.
ರೆಡ್ ಕ್ರಾಸ್ ಘಟಕದ ಚಟುವಟಿಕೆಯ ಅಂಗವಾಗಿ ಪ್ರಥಮ ಚಿಕಿತ್ಸೆಯ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಘಟಕದ ಸಂಯೋಜಕರಾದ ಪ್ರಶಾಂತ ಕುಮಾರ್ ಮತ್ತು ವಿದ್ಯಾರ್ಥಿ ವಿಲಾಸ್ ಹೆಗ್ಡೆ ನಡೆಸಿಕೊಟ್ಟರು.
ಉಪನ್ಯಾಸಕರಾದ ಶ್ರೀಮತಿ ಭಾರತಿ ಎಂ. ಯಲ್, ಶ್ರೀಮತಿ ಪಲ್ಲವಿ, ಹರೀಶ್ ರೈ ,ಪ್ರಕಾಶ್ ,ಜಯ ಪೂಜಾರಿ, ಸದಾನಂದ, ರಾಮಚಂದ್ರ, ಸುಭಾಷ್ ಚಂದ್ರ ಜೈನ್ ಕಾರ್ಯಕ್ರಮದ ಆಯೋಜನೆಗೆ ಸಹಕರಿಸಿದರು.
ಜೀವಶಾಸ್ತ್ರ ಉಪನ್ಯಾಸಕರಾದ ಪ್ರಶಾಂತ್ ಕುಮಾರ್ ಸ್ವಾಗತಿಸಿ ಕುಮಾರಿ ತನ್ವಿಟಾ ಪಿಂಟೋ ವಂದಿಸಿದರು. ವಿದ್ಯಾರ್ಥಿ ಆದರ್ಶ ಕಾರ್ಯಕ್ರಮ ನಿರೂಪಿಸಿದರು.
ಶ್ರೀ ಲವಕುಮಾರ್ ಐಲ ಅವರು ತೆಂಕುತಿಟ್ಟಿನ, ಶ್ರೀ ಹನುಮಗಿರಿ ಮೇಳದ ಮದ್ದಳೆಗಾರರು. ವೇಷಧಾರಿಯಾಗಿ ಯಕ್ಷಗಾನ ಕ್ಷೇತ್ರದಲ್ಲಿ ಕಾಣಿಸಿಕೊಂಡ ಇವರು ತಬಲಾವಾದಕರೂ ಆಗಿದ್ದರು. ಪ್ರಸ್ತುತ ಕಲಾಕಾರ್ಯಕ್ರಮಗಳಲ್ಲಿ ತಬಲಾ ವಾದನಕಾರನಾಗಿಯೂ, ಯಕ್ಷಗಾನ ಕಲೆಯಲ್ಲಿ ಮದ್ದಳೆಗಾರನಾಗಿಯೂ ವ್ಯವಸಾಯ ಮಾಡುತ್ತಿದ್ದಾರೆ. ಇವರು ತಬಲಾ ವಾದನವನ್ನು ನೋಡಿ ಕೇಳಿಯೇ ಕಲಿತವರು. ಬಳಿಕ ಅಭ್ಯಾಸ ಮಾಡುತ್ತಾ ತಬಲಾ ಬಾರಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದರು.
ತಬಲಾ ವಾದನಗಾರಿಕೆಯೇ ಯಕ್ಷಗಾನದಲ್ಲಿ ಮದ್ದಳೆಗಾರನಾಗಲು ಇವರಿಗೆ ಇದ್ದ ಮೂಲ ಬಂಡವಾಳ. ತಬಲ ಎಂಬ ವಾದ್ಯೋಪಕರಣವನ್ನು ನುಡಿಸುತ್ತಾ ಮದ್ದಳೆ ವಾದನಗಾರಿಕೆಯನ್ನು ಕಲಿತಿದ್ದರು. ಬಳಿಕ ಹಿರಿಯ ಅನುಭವೀ ಭಾಗವತರು ಮತ್ತು ಮದ್ದಳೆಗಾರರ ಜತೆ ವ್ಯವಸಾಯ ಮಾಡುತ್ತಾ ಅವರ ನಿರ್ದೇಶನದಿಂದ ಮದ್ದಳೆಗಾರಿಕೆಯಲ್ಲಿ ಅನುಭವವನ್ನು ಗಳಿಸಿಕೊಂಡರು. 2009ರಿಂದ ತೊಡಗಿ ಕಳೆದ ಹದಿನಾಲ್ಕು ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಕಲಾ ವಿದ್ಯೆಗಳನ್ನು ಕೇಳಿ ನೋಡಿಯೇ ಕಲಿತ ಸಾಧಕರಿವರು.
ಶ್ರೀ ಲವಕುಮಾರ್ ಇವರ ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಮಂಗಲ್ಪಾಡಿ ಗ್ರಾಮದ ಐಲ ಮಾಳಿಗೆಮನೆ. 1990 ಮಾರ್ಚ್ 2ರಂದು ಮಾಳಿಗೆಮನೆ ಶ್ರೀ ಚಂದ್ರಶೇಖರ ಆಚಾರ್ಯ ಮತ್ತು ಶ್ರೀಮತಿ ಶಶಿಕಲಾ ದಂಪತಿಗಳ ಪುತ್ರನಾಗಿ ಜನನ. ಇವರ ಮೂವರು ಮಕ್ಕಳಲ್ಲಿ ಲವಕುಮಾರ್ ಕೊನೆಯವರು. ಲವಕುಮಾರ್ ಅವರ ತಂದೆ ಶ್ರೀ ಚಂದ್ರಶೇಖರ ಆಚಾರ್ಯರು ಹರಿಕಥೆ, ಭಜನೆ ಕಾರ್ಯಕ್ರಮಗಳಲ್ಲಿ ತಬಲಾ ವಾದಕರಾಗಿದ್ದವರು. ಉಪ್ಪಳ ಶ್ರೀ ಕೃಷ್ಣ ಮಾಸ್ತರರು ಮಾಡುತ್ತಿದ್ದ ಹರಿಕಥೆಗೆ ಇವರು ತಬಲ ನುಡಿಸುತ್ತಿದ್ದರು.
ಲವಕುಮಾರ್ ಅವರ ಅಣ್ಣ ಶ್ರೀ ಮನೋಹರ ಆಚಾರ್ಯರು ತಬಲಾ ವಾದಕರು. ಇವರು ಕಾಸರಗೋಡು ಶ್ರೀಧರ ರೈಗಳ ಶಿಷ್ಯ. ಮನೋಹರ ಆಚಾರ್ಯರು ಯಕ್ಷಗಾನ ವೇಷಧಾರಿಯೂ ಆಗಿದ್ದರು. ಇವರು ಪ್ರಸ್ತುತ ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಉಪಾನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಲವಕುಮಾರರ ಅಕ್ಕ ಶ್ರೀಮತಿ ಮಲ್ಲಿಕಾ. ಇವರ ಪತಿ ಶ್ರೀ ಕಿಶೋರ್ ಪೆರ್ಲ. ಇವರು ಸುಗಮ ಸಂಗೀತದಲ್ಲಿ ಖ್ಯಾತ ಗಾಯಕರು. ಲವಕುಮಾರ್ ಅವರು ಓದಿದ್ದು ಪಿಯುಸಿ ವರೆಗೆ. ಏಳನೇ ತರಗತಿ ವರೆಗೆ ಐಲ ಶ್ರೀ ಶಾರದಾ ಬೋವಿ ಶಾಲೆಯಲ್ಲಿ. ಬಳಿಕ ಹತ್ತನೇ ತರಗತಿ ವರೆಗೆ ಮಂಗಲ್ಪಾಡಿ ಸರಕಾರೀ ಪ್ರಾಢಶಾಲೆಯಲ್ಲಿ. ಪಿಯುಸಿ ಓದಿದ್ದು ಬೇಕೂರು ಶಾಲೆಯಲ್ಲಿ. (ಪ್ಲಸ್ ಟು)
ಇವರಿಗೆ ಎಳವೆಯಲ್ಲಿಯೇ ಯಕ್ಷಗಾನಾಸಕ್ತಿ ಇತ್ತು. ಶಾಲಾ ಕಲೋತ್ಸವದಲ್ಲಿ ಯಕ್ಷಗಾನ ಪ್ರದರ್ಶನ ಸ್ಪರ್ಧೆಯೂ ಆಗ ನಡೆಯುತ್ತಿತ್ತು. ಮಂಗಲ್ಪಾಡಿ ಶಾಲೆಯ ವಿದ್ಯಾರ್ಥಿಗಳಿಗೆ ಆಗ ತರಬೇತಿ ನೀಡಿದವರು ಶ್ರೀರಾಮ ಸಾಲಿಯಾನ್. ಇವರು ಭಾಗವತರೂ ಆಗಿದ್ದರು. ಶ್ರೀಯುತರು ಯಕ್ಷಕಲಾ ಭಾರತಿ ಮಂಗಲ್ಪಾಡಿ ಈ ಸಂಸ್ಥೆಯಲ್ಲಿ ಸಕ್ರಿಯರಾಗಿದ್ದರು. ಶ್ರೀ ಲವಕುಮಾರರು ಇವರಿಂದ ನಾಟ್ಯ ಕಲಿತು ಕಲೋತ್ಸವದ ಸ್ಪರ್ಧೆ – ಏಕಾದಶೀ ದೇವಿ ಮಹಾತ್ಮೆ ಪ್ರಸಂಗದಲ್ಲಿ ಮುರಾಸುರನಾಗಿ ರಂಗಪ್ರವೇಶ ಮಾಡಿದ್ದರು.
ಇವರು ಐದು, ಆರನೇ ಕ್ಲಾಸಿನಲ್ಲಿರುವಾಗಲೇ ತಬಲಾ ನುಡಿಸುತ್ತಿದ್ದರು. ಇವರು ಕಲಿತು ನುಡಿಸಿದ್ದಲ್ಲ. ತಬಲಾ ನುಡಿಸುತ್ತಾ ಆ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ಇವರ ಅಣ್ಣ ಮನೋಹರ ಆಚಾರ್ಯರು ತಬಲಾ ನುಡಿಸುವುದನ್ನು ನೋಡಿ, ಕೇಳಿಯೇ ಕಲಿತಿದ್ದರು. ಮೊದಮೊದಲು ಭಜನಾ ಕಾರ್ಯಕ್ರಮಗಳಲ್ಲಿ ತಬಲಾ ನುಡಿಸಲು ತೊಡಗಿದ್ದರು. ಅಲ್ಲಲ್ಲಿ ಸಂಘ ಸಂಸ್ಥೆಗಳು ಆಯೋಜಿಸಿದ ಭಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಬೆಳೆದರು. ಜತೆಗೆ ಯಕ್ಷಗಾನ ವೇಷಧಾರಿಯಾಗಿಯೂ ಕಾಣಿಸಿಕೊಂಡಿದ್ದರು. ದೇವೇಂದ್ರ ಬಲ. ರಕ್ಕಸಬಲ. ಮಹಿಷಾಸುರ, ಅನುಸಾಲ್ವ, ವೃಷಕೇತ ಮೊದಲಾದ ವೇಷಗಳನ್ನು ಮಾಡಿದ್ದರು. ಒಂದೆರಡು ಬಾರಿ ಸ್ತ್ರೀವೇಷ ಮತ್ತು ಹಾಸ್ಯ ಪಾತ್ರಗಳನ್ನೂ ಮಾಡಿದ್ದರು.
ಎಸ್ಸೆಸ್ಸೆಲ್ಸಿ ಓದಿನ ಬಳಿಕ ತಬಲಾ ವಾದಕರಾಗಿ ಆರ್ಕೆಸ್ಟ್ರಾ ತಂಡದಲ್ಲೂ ಕಾಣಿಸಿಕೊಂಡರು. ಹೊಸಂಗಡಿಯ ಹಂಸಧ್ವನಿ ಆರ್ಕೆಷ್ಟ್ರಾ ತಂಡದಲ್ಲಿ ಶ್ರೀ ಲವಕುಮಾರರು ಸಕ್ರಿಯರಾಗಿದ್ದರು. ತಬಲಾ ವಾದನಗಾರನಾಗಿ ಇವರು ಹೊಳೆದು ಕಾಣಿಸಿಕೊಳ್ಳಲು ಶ್ರೀ ಅನಂತ ಪದ್ಮನಾಭಯ್ಯ ಐಲ ಇವರು ಕಾರಣರು. ಇವರು ಖ್ಯಾತ ಸ್ಯಾಕ್ಸೋಫೋನ್ ವಾದಕರು. ಅವರು ನಡೆಸುತ್ತಿದ್ದ ಕಚೇರಿಗಳಲ್ಲಿ ಶ್ರೀ ಲವಕುಮಾರರಿಗೆ ತಬಲಾ ನುಡಿಸಲು ಅವಕಾಶವಿತ್ತು ಪ್ರೋತ್ಸಾಹಿಸಿದ್ದರು. ಇವರ ಪ್ರತಿಭೆಯನ್ನು ಗುರುತಿಸಿದ ಶಿಕ್ಷಕ, ಖ್ಯಾತ ಯಕ್ಷಗಾನ ಕಲಾವಿದ, ಪ್ರಸಾಧನ ತಜ್ಞ ಶ್ರೀ ದೇವಕಾನ ಕೃಷ್ಣ ಭಟ್ಟರು ಯಕ್ಷಗಾನದಲ್ಲಿ ಮದ್ದಳೆಗಾರನಾಗಲು ಸಲಹೆ ನೀಡಿದ್ದರು. ತಬಲಾ ವಾದನದ ಜತೆ ಮದ್ದಳೆ ನುಡಿಸುವ ಕಲೆಯೂ ಸ್ವಲ್ಪ ಮಟ್ಟಿಗೆ ಕರಗತವಾಗಿತ್ತು. ಶ್ರೀ ದೇವಕಾನ ಕೃಷ್ಣ ಭಟ್ಟರ ಸೂಚನೆಯಂತೆ ಪ್ರದರ್ಶನಗಳಲ್ಲಿ ಮದ್ದಳೆ ಬಾರಿಸಲು ತೊಡಗಿದರು.
ಲವಕುಮಾರರು ಮದ್ದಳೆಗಾರರಾಗಿ ಮೊದಲು ತಿರುಗಾಟ ನಡೆಸಿದ್ದು ಕಟೀಲು ಮೇಳದಲ್ಲಿ. 2009ನೇ ಇಸವಿಯಲ್ಲಿ. ಕಟೀಲು ಎರಡನೇ ಮೇಳದಲ್ಲಿ. ಕಟೀಲು ಎರಡನೇ ಮೇಳದ ಭಾಗವತರಾಗಿದ್ದ ಪಟ್ಲ ಸತೀಶ ಶೆಟ್ಟರಿಗೆ ಇವರನ್ನು ಪರಿಚಯಿಸಿದ್ದು ಯಕ್ಷಗಾನ ಸಂಘಟಕ ಶ್ರೀ ಸತೀಶ ಅಡಪ ಸಂಕಬೈಲು ಅವರು. ಅವರಿಬ್ಬರ ಕರೆಯಂತೆ ಕಟೀಲು ಮೇಳ ಸೇರಿದ್ದರು. ಮದ್ದಳೆ ನುಡಿಸುವಲ್ಲಿ ಪ್ರೋತ್ಸಾಹದ ನುಡಿಗಳನ್ನು ಆಡಿ ಪಟ್ಲ ಸತೀಶ ಶೆಟ್ಟರು ಲವಕುಮಾರರಿಗೆ ಧೈರ್ಯ ತುಂಬಿದ್ದರು. ಅವರಿಂದ ನುಡಿಸುವಿಕೆಯ ಬಗೆಗೆ ನಿರ್ದೇಶನವೂ ದೊರೆತಿತ್ತು. ಹಿರಿಯ ಮದ್ದಳೆಗಾರ ಪೆರುವಾಯಿ ಶ್ರೀ ನಾರಾಯಣ ಭಟ್ಟರ ಸಹಕಾರ ನಿರ್ದೇಶನವೂ ದೊರಕಿತ್ತು. ಮೇಳದಲ್ಲಿ ಮದ್ದಳೆವಾದನವನ್ನು ಸರಿಯಾಗಿ ಕಲಿಯಲು ಅವಕಾಶವಾಗಿತ್ತು.
ಬಳಿಕ ಒಂದು ವರ್ಷ ಮೇಳ ಬಿಟ್ಟು ಕೇಬಲ್ ಆಪರೇಟರ್ ಆಗಿ ಕೆಲಸ ಮಾಡಿದ್ದರು. ಅನಿವಾರ್ಯ ಕಾರಣಗಳಿಂದ ಮತ್ತೆ ಕಟೀಲು ಮೇಳ ಸೇರುವ ಹಾಗಾಗಿತ್ತು. ಕಟೀಲು ಒಂದನೇ ಮೇಳದಲ್ಲಿ ಬೊಟ್ಟಿಕೆರೆ ಶ್ರೀ ಪುರುಷೋತ್ತಮ ಪೂಂಜರ ಜತೆ ನಾಲ್ಕು ತಿಂಗಳು ವ್ಯವಸಾಯ ಮಾಡಿದ್ದರು. ಮುಂದಿನ ವರ್ಷ ಕಟೀಲು ಐದನೇ ಮೇಳಕ್ಕೆ. ಪಟ್ಲ ಸತೀಶ ಶೆಟ್ಟರ ಜತೆ ವ್ಯವಸಾಯ. ಸದ್ರಿ ಮೇಳದಲ್ಲಿ ಮದ್ದಳೆಗಾರರಾದ ಮಣಿಮುಂಡ ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿ, ಪ್ರಶಾಂತ್ ಶೆಟ್ಟಿ ವಗೆನಾಡು, ಗುರುಪ್ರಸಾದ್ ಬೊಳಿಂಜಡ್ಕ ಇವರ ಒಡನಾಟವು ಸಿಕ್ಕಿತ್ತು.
ಒಂದು ವರ್ಷ ಐದನೇ ಮೇಳದಲ್ಲಿ ವ್ಯವಸಾಯ. ಬಳಿಕ ಮೇಳ ಬಿಟ್ಟು ಎರಡು ವರ್ಷ ಪುರೋಹಿತರ ಜತೆ ಪೌರೋಹಿತ್ಯ ಸಂಬಂಧೀ ಕೆಲಸ ಮಾಡಿದ್ದರು. ಜತೆಗೆ ಹವ್ಯಾಸೀ ಮದ್ದಳೆಗಾರನಾಗಿ ಸಂಘ ಸಂಸ್ಥೆಗಳ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಎಡನೀರು ಮೇಳಕ್ಕೆ ಸೇರುವ ಅವಕಾಶವಾಗಿತ್ತು. ಈಗಿನ ಪೀಠಾಧಿಪತಿಗಳಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಎಡನೀರು ಮೇಳ ಸೇರುವಂತೆ ಸೂಚನೆ ನೀಡಿದ್ದರು. ಮೂರು ವರ್ಷಗಳ ಕಾಲ ಎಡನೀರು ಮೇಳದಲ್ಲಿ ವ್ಯವಸಾಯ.
ಈ ಸಂದರ್ಭದಲ್ಲಿ ಪೀಠಾಧಿಪತಿಗಳಾಗಿದ್ದ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದರು ಮತ್ತು ಈಗಿನ ಪೀಠಾಧಿಪತಿಗಳಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರ ಸಹಕಾರ, ಪ್ರೋತ್ಸಾಹವು ದೊರೆತಿತ್ತು. ಎಲ್ಲಾ ವಿಚಾರಗಳಲ್ಲೂ ಅವರುಗಳು ಲವಕುಮಾರರನ್ನು ಆಧರಿಸಿ ಸಹಕರಿಸಿದ್ದರು. ಅನೇಕ ಕಛೇರಿಗಳಲ್ಲಿ ಹಿರಿಯ ಹಾಡುಗಾರರೊಂದಿಗೆ ತಬಲ ಬಾರಿಸಲು ಅವಕಾಶ ನೀಡಿದ್ದರು. ಹಿರಿಯ ಭಾಗವತರುಗಳಾದ ಶ್ರೀ ದಿನೇಶ ಅಮ್ಮಣ್ಣಾಯ, ಶ್ರೀ ಪುತ್ತಿಗೆ ರಘುರಾಮ ಹೊಳ್ಳ, ಶ್ರೀ ಪದ್ಯಾಣ ಗಣಪತಿ ಭಟ್, ಅವರ ಹಾಡುಗಾರಿಕೆಗೆ ಮದ್ದಳೆ ಬಾರಿಸಲು ಅವಕಾಶ ಮಾಡಿ ಕೊಟ್ಟಿದ್ದರು.
ಅವರಿಂದಾಗಿ ಬಲಿಪ ನಾರಾಯಣ ಭಾಗವತ ಕುರಿಯ ಶ್ರೀ ಗಣಪತಿ ಶಾಸ್ತ್ರಿ, ಶ್ರೀ ನಾರಾಯಣ ಶಬರಾಯ, ಶ್ರೀ ಸತ್ಯನಾರಾಯಣ ಪುಣಿಂಚತ್ತಾಯ ಅವರ ಹಾಡುಗಳಿಗೂ ಮದ್ದಳೆ ನುಡಿಸಲು ಅವಕಾಶವಾಗಿತ್ತು. ಮೇಳದಲ್ಲಿ ಶ್ರೀ ದಿನೇಶ ಅಮ್ಮಣ್ಣಾಯರು ಪ್ರೋತ್ಸಾಹದ ನುಡಿಗಳನ್ನು ಆಡಿ ಭಯವನ್ನು ದೂರ ಮಾಡಿದ್ದರು. ಹಿರಿಯ ಮದ್ದಳೆಗಾರ ದೇಲಂತಮಜಲು ಶ್ರೀ ಸುಬ್ರಹ್ಮಣ್ಯ ಭಟ್ಟರ ಸಹಕಾರ, ಪ್ರೋತ್ಸಾಹವೂ ಸಿಕ್ಕಿತ್ತು. ಶ್ರೀ ದಿನೇಶ ಅಮ್ಮಣ್ಣಾಯ ಮತ್ತು ದೇಲಂತಮಜಲು ಸುಬ್ರಹ್ಮಣ್ಯ ಭಟ್ಟರೊಂದಿಗಿನ ವ್ಯವಸಾಯವು ಮದ್ದಳೆವಾದನದಲ್ಲಿ ಲಯವನ್ನು ಕಂಡುಕೊಳ್ಳಲು ಕಾರಣವಾಯಿತೆಂದು ಲವಕುಮಾರರ ಅನುಭವದ ಮಾತು. ಇವರ ಒಡನಾಟವು ಮದ್ದಳೆಗಾರನಾಗಿ ಕಾಣಿಸಿಕೊಳ್ಳಲು ಕಾರಣವೂ ಆಗಿತ್ತು.
ಎಡನೀರು ಮೇಳದ ಬಳಿಕ ಮೂರು ವರ್ಷ ಬಪ್ಪನಾಡು ಮೇಳದಲ್ಲಿ ವ್ಯವಸಾಯ. ಇಲ್ಲಿ ಹೆಬ್ರಿ ಗಣೇಶ್ ಕುಮಾರ್, ಗಿರೀಶ್ ರೈ, ನೆಕ್ಕರೆಮೂಲೆ ಗಣೇಶ್ ಭಟ್, ಇವರ ಒಡನಾಟವು ದೊರೆತಿತ್ತು. ಕಳೆದ ವರ್ಷದಿಂದ ಲವಕುಮಾರ್ ಐಲ ಅವರು ಹನುಮಗಿರಿ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಮತ್ತು ಸಂಪಾಜೆ ಯಕ್ಷೋತ್ಸವದ ರೂವಾರಿ ಕಲಾಪೋಷಕರಾದ ಶ್ರೀ ಟಿ. ಶ್ಯಾಮ ಭಟ್ಟರ ಹೇಳಿಕೆಯಂತೆ ಹನುಮಗಿರಿ ಮೇಳದಲ್ಲಿ ವ್ಯವಸಾಯ ನಡೆಸುತ್ತಿದ್ದಾರೆ. ಕಲೆ ಮತ್ತು ಕಲಾವಿದರನ್ನು ಪ್ರೀತಿಸಿ ಗೌರವಿಸುವ ಶ್ರೀ ಟಿ. ಶ್ಯಾಮ ಭಟ್ಟರ ಪ್ರೋತ್ಸಾಹವು ವ್ಯವಸಾಯ ಮಾಡುವಲ್ಲಿ ಲವಕುಮಾರರಿಗೆ ದೊರೆತಿದೆ.
ಯಕ್ಷಗಾನ ಮದ್ದಳೆವಾದನದ ಜತೆ ಲವಕುಮಾರ್ ಐಲ ಅವರು ಉತ್ತಮ ತಬಲಾ, ಕೀಬೋರ್ಡ್ ಮತ್ತು ಹಾರ್ಮೋನಿಯಂ ವಾದಕರೂ ಹೌದು. ಇವರು ಬಹುಮುಖ ಪ್ರತಿಭೆ ಉಳ್ಳವರು. ತಮ್ಮ ಮನೆಯಲ್ಲಿಯೇ ‘ನಾದರಂಜಿನಿ’ ಎಂಬ ಆಡಿಯೋ ಸ್ಟುಡಿಯೋ ಸ್ಥಾಪಿಸಿ ಸಂಗೀತ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದಾರೆ. ಸ್ವತಃ ಸಂಗೀತ ನಿರ್ದೇಶನ, ರಾಗ ಸಂಯೋಜನೆಗಳನ್ನು ಮಾಡುವ ಇವರ ಸ್ಟುಡಿಯೋದಲ್ಲಿ ಈಗಾಗಲೇ ಹಲವಾರು ಧ್ವನಿಮುದ್ರಣಗಳು ಪೂರ್ಣಗೊಂಡು ಯಶಸ್ವಿಯಾಗಿವೆ.
ಮೊದಲು ವೇಷಧಾರಿಯಾಗಿದ್ದ, ಬಳಿಕ ತಬಲಾ ವಾದಕರಾಗಿದ್ದ ಶ್ರೀ ಲವಕುಮಾರ್ ಐಲ ಅವರು ಪ್ರಸ್ತುತ ಯಕ್ಷಗಾನದಲ್ಲಿ ಉತ್ತಮ ಮದ್ದಳೆಗಾರರಾಗಿ ವ್ಯವಸಾಯ ಮಾಡುತ್ತಿದ್ದಾರೆ. ಇವರ ಪತ್ನಿ ಶ್ರೀಮತಿ ಚಿತ್ರಾಕ್ಷಿ (2019ರಲ್ಲಿ ವಿವಾಹ) ಶ್ರೀ ಲವಕುಮಾರ್ ಐಲಾ ಅವರಿಗೆ ಶ್ರೀ ದೇವರ ಅನುಗ್ರಹವಿರಲಿ. ಶ್ರೀಮದೆಡನೀರು ಕ್ಷೇತ್ರದ ಒಡೆಯನಾದ ಶ್ರೀ ಗೋಪಾಲಕೃಷ್ಣನು ಅವರ ಮನೋಕಾಮನೆಗಳನ್ನು ಈಡೇರಿಸಲಿ. ಯಕ್ಷಗಾನ ಕಲಾಸೇವೆಯನ್ನು ಮಾಡುವಲ್ಲಿ ಕಲಾಮಾತೆಯ ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು.
ಪುತ್ತೂರು: ಕಾಲೇಜು ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದ ವಿದ್ಯಾರ್ಥಿಗಳಿಗೆ ಒಮ್ಮಿಂದೊಮ್ಮೆಗೆ ಆಶ್ಚರ್ಯ! ಇದೇನು? ಅಂತ ಅತ್ತಿತ್ತ ನೋಡುತ್ತಿರುವಾಗಲೇ ಸಾಲು ಸಾಲು ಹುಲಿಗಳು ವೇದಿಕೆಯನ್ನೇರಿ ಕುಣಿಯಲಾರಂಭಿಸಿದ್ದವು. ವೇದಿಕೆಯೊಂದರಲ್ಲೇ ಮೂವತ್ತಕ್ಕಿಂತಲೂ ಅಧಿಕ ಹುಲಿಗಳು ನರ್ತಿಸುವ ದೃಶ್ಯವನ್ನು ನೋಡುವ ಅಪೂರ್ವ ಅವಕಾಶವನ್ನು ನೆರೆದ ಸಾವಿರಾರು ಮಂದಿ ತಮ್ಮದಾಗಿಸಿಕೊಂಡರು.
ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತತಿರುವ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಶನಿವಾರ ವಾರ್ಷಿಕೋತ್ಸವ – ಮಾನಸೋಲ್ಲಾಸ 2022-23 ನಡೆಯುತ್ತಿದ್ದ ಮಧ್ಯೆಯಲ್ಲಿ ಈ ಹುಲಿಗಳ ಆಗಮನವಾಯಿತು.
ಪುತ್ತೂರಿನ ಕಲ್ಲೇಗ ಟೈಗರ್ಸ್ ತಂಡ ಪ್ರಸ್ತುತಿಯಲ್ಲಿ ಅನೇಕ ಮಂದಿ ಹುಲಿವೇಷಧಾರಿಗಳಾಗಿ ಪುತ್ತೂರಿಗರ ಮನರಂಜಿಸುತ್ತಿದ್ದಾರೆ. ಅದರ ಭಾಗವಾಗಿ ಆ ತಂಡದಿ0ದ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಸುಮಾರು ಅರ್ಧ ಗಂಟೆಯ ಹುಲಿನರ್ತನ ನಡೆಯಿತು. ಈ ‘ಪಿಲಿ ನಲಿಕೆ’ ಯುವಮನಸ್ಸುಗಳಲ್ಲಿ ತುಳುನಾಡಿನ ಸಂಸ್ಕೃತಿಯ ಬಾಗವನ್ನು ಅನಾವರಣಗೊಳಿಸಿತು.
ಕಪ್ಪು ಹುಲಿಗಳು, ಪಟ್ಟೆ ಹುಲಿಗಳು, ಚಿರತೆ ಬಣ್ಣದ ಹುಲಿಗಳು, ಅವುಗಳ ಜತೆಗೆ ಪುಟಾಣಿ ಹುಲಿಗಳು ಹಿಮ್ಮೇಳದ ಸದ್ದಿನ ಜತೆಗೆ ವೈಭವದ ಹೆಜ್ಜೆಯನ್ನಿರಿಸಿದವು. ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಮುಂಭಾಗದಲ್ಲಿ ನಿರ್ಮಿಸಲಾಗಿರುವ ಶ್ರೀ ಶಂಕರ ಸಭಾಭವನದ ಶ್ರೀ ಲಲಿತಾಂಬಿಕಾ ವೇದಿಕೆಯಲ್ಲಿ ಪಿಲಿ ನಲಿಕೆಯ ನಾನಾ ವೈವಿಧ್ಯಗಳು ತೆರೆದುಕೊಂಡು ವಿಶಿಷ್ಟ ಕ್ಷಣಕ್ಕೆ ಸಾಕ್ಷಿಯಾಯಿತು.
ಯುವ ಸಮೂಹವನ್ನು ‘ಪಿಲಿ ನಲಿಕೆ’ ಮೂಲಕ ರಂಜಿಸಿದ ಕಲ್ಲೇಗ ಟೈಗರ್ಸ್ ಅವರನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಗೌರವಿಸಿದರು.
ಪುತ್ತೂರು: ರಾಷ್ಟ್ರಭಕ್ತಿ ಹಾಗೂ ಚಿಂತನೆಯ ಮೂಲಕ ರಾಷ್ಟ್ರಭಕ್ತರಾಗುವ ಸಂಕಲ್ಪ ಮಾಡಬೇಕಾದ ಅವಶ್ಯಕತೆಯಿದೆ. ಬದಲಾವಣೆ ನಮ್ಮಿಂದ ಆದಾಗ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಭಾರತೀಯ ಸನಾತನ ಧರ್ಮವು ಸಂಸ್ಕೃತಿ ಹಾಗೂ ಜ್ಞಾನ ಪರಂಪರೆಯನ್ನು ಅರಿತು, ಅಳವಡಿಕೊಳ್ಳಬೇಕಾದ ಅಗತ್ಯತೆ ಇಂದಿನ ದಿನದಲ್ಲಿ ಅವಶ್ಯಕ ಎಂದು ಪತ್ರಕರ್ತ, ವಾಗ್ಮಿ ಉಡುಪಿಯ ಶ್ರೀಕಾಂತ್ ಶೆಟ್ಟಿ ಹೇಳಿದರು.
ಅವರು ನಟ್ಟೋಜ ಫೌಂಡೇಶನ್ ಟ್ರಸ್ಟ್ ನಡೆಸುತ್ತಿರುವ ನೆಲ್ಲಿಕಟ್ಟೆ, ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯ ಆವರಣದಲ್ಲಿರುವ ಶ್ರೀ ಶಂಕರ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ‘ಮಾನಸೋಲ್ಲಾಸ’- 2022-23 ಪ್ರತಿಭಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ವಿಚಾರಗಳೂ ಅರ್ಥ ಗರ್ಭಿತವಾಗಿದೆ. ಹಿರಿಯರಿಗೆ ಅಥವಾ ಮತ್ತೊಬ್ಬರ ಕಾಲಿಗೆ ನಮಸ್ಕರಿಸುವುದು ಮತ್ತೊಬ್ಬ ವ್ಯಕ್ತಿಯಲ್ಲಿರುವ ಚೈತನ್ಯಕ್ಕೆ ನಮಿಸುವುದಾಗಿದೆ. ಗುರುಕುಲ, ಶಾಲೆ, ವಿದ್ಯಾಲಯಯಗಳು ಪ್ರತಿಯೊಂದು ವಿಚಾರವನ್ನೂ ತಿಳಿಸುವ ಮೂಲಕ ವ್ಯಕ್ತಿಯಲ್ಲಿ ಸಂಸ್ಕಾರ ಮೂಡಿಸುವ ಕಾರ್ಯ ಮಾಡುತ್ತಿತ್ತು. ಆದರೆ ಪಾಶ್ಚಾತ್ಯ ದಾಳಿಯಿಂದ ಬಲಿಷ್ಠವಾದ ಭಾರತೀಯ ಸಂಸ್ಕೃತಿಯ ಮಹತ್ವ ಮರೆತು ಗುಲಾಮರಂತೆ ಬದುಕುತ್ತಿರುವುದು ಬೇಸರದ ಸಂಗತಿ ಎಂದರು.
ಪಾಶ್ಚಾತ್ಯ ಸಂಸ್ಕೃತಿಯಿ0ದ ಮಾನಸಿಕ ಗುಲಾಮರಾಗಿದ್ದು, ನಮ್ಮ ಶಕ್ತಿಯನ್ನು ಕೀಳಾಗಿ ಅಂದಾಜಿಸುತ್ತಿದ್ದೇವೆ. ಒಂದರ್ಥದಲ್ಲಿ ಸರ್ಕಸ್ ನಲ್ಲಿರುವ ಸಿಂಹಗಳ0ತೆ ಅಥವಾ ಕಟ್ಟಿ ಹಾಕಿದ ಆನೆಗಳಂತೆ ಆಗಿದ್ದೇವೆ. ದೇಶದ ಅಂತಃ ಸತ್ವವೇ ಅಡಗಿಹೋಗಿದೆ. ಇದನ್ನು ದೂರಗೊಳಿಸಿ ಜಗತ್ತಿನಲ್ಲೇ ಶಕ್ತಿ ಶಾಲಿಯಾಗಿ ಹೊರ ಹೊಮ್ಮಬೇಕಿದೆ ಎಂದರು.
ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಅಂಬಿಕಾ ವಿದ್ಯಾಲಯ ನೀಡುತ್ತಿರುವುದು ವಿದ್ಯರ್ಥಿಗಳಲ್ಲಿ ದೇಶಭಕ್ತಿಯ ಮೂಲಕ ದೇಶದ ಶಕ್ತಿಯಾಗಿ ರೂಪಿಸುತ್ತಿರುವುದು ಹೆಮ್ಮೆಯ ವಿಚಾರ. ಇಂದಿನ ದಿನಗಳಲ್ಲಿ ರಷ್ಯಾದಂತಹಾ ರಾಷ್ಟ್ರದಲ್ಲಿ ಭಗವದ್ಗೀತೆಯ ವಿಚಾರಗಳನ್ನು ಅರಿತುಕೊಳ್ಳುವ ಪ್ರಯತ್ನ ನಡೆಸುತ್ತಿರುವುದು ಭಾರತಕ್ಕೆ ಹೆಮ್ಮೆಯ ವಿಚಾರ ಎಂದು ತಿಳಿಸಿದರು.
ಸಮಾಜದಲ್ಲಿ ಹಲವಾರು ಸಮಸ್ಯೆಗಳು ತಾಂಡವವಾಡುತ್ತಿದ್ದು ನಾವು ದೇಶಕ್ಕಾಗಿ ಏನು ನೀಡಬಹುದು ಎಂಬ ಚಿಂತನ ಯುವ ಮನಸ್ಸುಗಳಲ್ಲಿ ಮೂಡಬೇಕು. ಭಗತ್ ಸಿಂಗ್‌ರ0ತಹಾ ಹೋರಾಟಗಾರರು ದೇಶಕ್ಕಾಗಿ ಬಲಿದಾನ ಮಾಡಿದ ಉದ್ದೇಶ ತಮ್ಮ ಬಲಿದಾನ ಇತರ ದೇಶಪ್ರೇಮಿಗಳ ಹೋರಾಟಕ್ಕೆ ಪ್ರೇರೇಪಣೆ ನೀಡುವುದಾಗಿತ್ತು. ಇಂದು ರಾಷ್ಟ್ರಭಕ್ತಿಯನ್ನು ಸಮಾಜ ಸೇವೆ, ರಾಷ್ಟ್ರಸೇವೆ ಮಾಡುವ ಮೂಲಕ ನಮ್ಮ ಕೊಡುಗೆ ನೀಡಬಹುದಾಗಿದೆ ಎಂದು ಶ್ರೀಕಾಂತ್ ಶೆಟ್ಟಿ ಹೇಳಿದರು.
ನಟ್ಟೋಜ ಫೌಂಡೇಶನ್ ಟ್ರಸ್ಟ್ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ರಾಷ್ಟ್ರದಲ್ಲಿ ವ್ಯಕ್ತಿಯನ್ನು ರೂಪಿಸುವ ಶಿಕ್ಷಣ ಬರಬೇಕಿದೆ. ಮಕ್ಕಳಲ್ಲಿ ಅಡಗಿರುವ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಹೊರತರುವ ನಿಟ್ಟಿನಲ್ಲಿ ಶಿಕ್ಷಣ ಪೂರಕವಾಗಿ ಕಾರ್ಯನಿರ್ವಹಿಸಬೇಕಾಗಿದೆ. ಮಕ್ಕಳಲ್ಲಿರುವ ಮಹಾನ್ ಕಲಾವಿದರನ್ನು, ಸಂಗೀತಗಾರರನ್ನು, ಸಾಧಕರನ್ನು ಗುರುತಿಸಿ ಅವರು ಶ್ರೇಷ್ಠರಾಗುವಂತೆ ಪ್ರೋತ್ಸಾಹಿಸಬೇಕಾದ ಅಗತ್ಯತೆಯಿದೆ ಎಂದರು.
ಶಿಕ್ಷಣ ಎಂದರೆ ಆತ್ಮ ಸಾಕ್ಷಾತ್ಕಾರವನ್ನು ಪಡೆಯುವುದು ಎಂಬುದಾಗಿದೆ. ಇಂದಿನ ದಿನಗಳಲ್ಲಿ ನೈತಿಕ ಶಿಕ್ಷಣದ ಮೂಲಕ ವಿದ್ಯಾರ್ಥಿಗಳನ್ನು ಬಲಿಷ್ಠಗೊಳಿಸಬೇಕಾಗಿದೆ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಮಾತ್ರ ತೊಡಗಿಕೊಳ್ಳದೆ, ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗುವಂತೆ ಪೋಷಕರು ಪ್ರೋತ್ಸಾಹಿಸಬೇಕಾದ ಅವಶ್ಯಕತೆಯಿದೆ ಎಂದು ಅವರು ಹೇಳಿದರು.
ಕೆ.ಸಿ.ಇ.ಟಿ.ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವರುಣ್ ಎಸ್., ಜೆ.ಇ.ಇ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿಶ್ವಜಿತ್ ಕೆ., ನೀಟ್ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಕೌಶಿಕ್ ರಾವ್, ಶ್ರೀವತ್ಸ ಎಂ.ಕೆ., ಅನುಷಾ ಎ.ಎಲ್. ಅವರನ್ನು ಗೌರವಿಸಲಾಯಿತು. ಸ್ಪರ್ಧೆಗಳಲ್ಲಿ ವಯಕ್ತಿಕ ವಿಭಾಗದಲ್ಲಿ ಬಪ್ಪಳಿಗೆ ಪಿಯು ಕಾಲೇಜಿನ ಶ್ರಾವ್ಯ, ನೆಲ್ಲಿಕಟ್ಟೆ ಪಿ.ಯು. ಕಾಲೇಜಿನ ವಿಧಾತ್ರಿ ಭಟ್, ಗುಂಪು ವಿಭಾಗದಲ್ಲಿ ಬಪ್ಪಳಿಗೆ ದ್ವಿತೀಯ ಬಿ.ಕಾಂ., ನೆಲ್ಲಿಕಟ್ಟೆ ಚರಕ ಪ್ರಥಮ ಪಿಯು ವಿದ್ಯಾರ್ಥಿಗಳು ಪಡೆದರು. ಶೈಕ್ಷಣಿಕ ಚಟುವಟಿಕೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು.
ನಟ್ಟೋಜ ಫೌಂಡೇಶನ್ ಟ್ರಸ್ಟ್ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯರಾದ ಮಾಧವ ಭಟ್, ಸುರೇಶ್ ಶೆಟ್ಟಿ, ಡಾ.ಎಂ.ಎಸ್. ಶೆಣೈ, ಪ್ರಸನ್ನ ಭಟ್, ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷ ಶೈಲೇಶ್ ಎಂ., ಅಂಬಿಕಾ ಮಹಾವಿದ್ಯಾಲಯದ ಆಡಳಿತಾಧಿಕಾರಿ ಗಣೇಶ್ ಪ್ರಸಾದ್, ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಅಂಬಿಕಾ ಮಹಾವಿದ್ಯಾಲಯದ ಪ್ರಾಂಶುಪಾಲ ರಾಕೇಶ ಕುಮಾರ್ ಕಮ್ಮಜೆ, ಉಭಯ ಕಾಲೇಜುಗಳ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಆಕಾಶ್ ಜೆ.ರಾವ್, ಅರ್ಜುನ್ ಕುಡ್ವ, ಯಶು ಬಿ.ಕೆ., ಚಿದಂಬರ್ ಕೆ.ಜೆ. ಉಪಸ್ಥಿತರಿದ್ದರು.
ಶೈಕ್ಷಣಿಕ ಚಟುವಟಿಕೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಪಟ್ಟಿಯನ್ನು ಕೇಶವ ಕಿಶೋರ್ ವಾಚಿಸಿಸಿದರು. ಉಪನ್ಯಾಸಕರಾದ ಸತೀಶ್ ಹಾಗೂ ರಾಧಿಕಾ ಪ್ರಶಸ್ತಿ ವಿಜೇತರ ಪಟ್ಟಿ ವಾಚಿಸಿದರು.
ಎರಡು ವಾರಗಳ ಹಿಂದೆ ಬಿಡುಗಡೆಯಾದ ಸಿನಿಮಾದ ಯುವ ನಟಿ ಹೋಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ತಮಿಳಿನ ‘9 ತಿರುದರ್ಗಲ್’ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದ ನಟಿ ಆಕಾಂಕ್ಷಾ ಮೋಹನ್ ಕೆಲವು ಹಿಂದಿ ಚಿತ್ರಗಳಲ್ಲಿಯೂ ನಟಿಸಿದ್ದಾರೆ ಮತ್ತು ಮಾಡೆಲಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ.
ನಿನ್ನೆ ಮುಂಜಾನೆ (ಸೆಪ್ಟೆಂಬರ್ 30) ಆಕೆಯ ಶವ ಮುಂಬೈನ ವರ್ಸೋವಾದಲ್ಲಿ ಹೋಟೆಲ್ ಕೋಣೆಯಲ್ಲಿ ಪತ್ತೆಯಾಗಿದೆ. 30 ವರ್ಷದ ನಟಿ ಬುಧವಾರ ರಾತ್ರಿ 8 ಗಂಟೆಗೆ ಹೋಟೆಲ್‌ಗೆ ಚೆಕ್ ಇನ್ ಮಾಡಿ ಒಂದೆರಡು ದಿನಗಳ ಕಾಲ ಉಳಿದುಕೊಂಡಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ.
ಹಲವು ಗಂಟೆಗಳ ನಂತರ ಸಿಬ್ಬಂದಿ ಬಾಗಿಲು ತಟ್ಟಿದಾಗ ಆಕೆ ತನ್ನ ಕೊಠಡಿಯಿಂದ ಹೊರಬರದ ಮತ್ತು ಸ್ಪಂದಿಸದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯಿಂದ ಪೊಲೀಸರಿಗೆ ದೂರು ನೀಡಲಾಯಿತು.
ತನಿಖೆಯ ಸಮಯದಲ್ಲಿ ಆಕಾಂಕ್ಷಾ ಆತ್ಮಹತ್ಯೆ ಪತ್ರವೊಂದು ಪತ್ತೆಯಾಗಿದ್ದು, ಅದರಲ್ಲಿ ಆಕಾಂಕ್ಷಾ ಅವರು “‘ನನ್ನನ್ನು ಕ್ಷಮಿಸಿ. ಇದಕ್ಕೆ ಯಾರೂ ಕಾರಣರಲ್ಲ. ನಾನು ಸಂತೋಷವಾಗಿಲ್ಲ. ನನಗೆ ಶಾಂತಿ ಬೇಕು” ಎಂದು ಬರೆದಿದ್ದಾರೆ.
ಹದಿನೈದು ದಿನಗಳ ಹಿಂದಷ್ಟೇ ಆಕಾಂಕ್ಷಾ ಮೋಹನ್ ಮುಖ್ಯ ಭೂಮಿಕೆಯಲ್ಲಿದ್ದ ಹೊಸ ಹಿಂದಿ ಸಿನಿಮಾ ‘ಸಿಯಾ’ ಬಿಡುಗಡೆಯಾಗಿರುವುದು ಬೆಳಕಿಗೆ ಬಂದಿದೆ.
ನಗರದ ಲೋಖಂಡವಾಲಾ ಪ್ರದೇಶದ ಯಮುನಾ ನಗರ ಸೊಸೈಟಿಯಲ್ಲಿ ಒಂಟಿಯಾಗಿ ವಾಸವಿದ್ದ ಆಕೆ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿರಬಹುದು ಎನ್ನಲಾಗಿದೆ.
ಪಾಕಿಸ್ತಾನ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ (ಪಿಐಎ) ಶುಕ್ರವಾರ ತನ್ನ ಸಿಬ್ಬಂದಿಗೆ ಸರಿಯಾದ ಒಳ ಉಡುಪುಗಳನ್ನು ಧರಿಸುವುದನ್ನು ಒಳಗೊಂಡಂತೆ ಸರಿಯಾಗಿ ಧರಿಸುವಂತೆ ಸೂಚನೆಯನ್ನು ನೀಡಿದೆ. ಅಧಿಸೂಚನೆಯು ಹಿನ್ನಡೆಯನ್ನು ಉಂಟುಮಾಡಿತು, ಅದರ ನಂತರ ವಿಮಾನಯಾನ ಸಂಸ್ಥೆಗಳು ಮೆಮೊವನ್ನು ಹಿಂತೆಗೆದುಕೊಂಡವು.
ಗಗನಸಖಿಯರಿಗೆ PIA ತನ್ನ ಸಿಬ್ಬಂದಿಗೆ ಸಮವಸ್ತ್ರದ ಕೆಳಗೆ ಒಳ ಉಡುಪುಗಳನ್ನು ಧರಿಸುವುದು ಅತ್ಯಗತ್ಯ ಎಂದು ಹೇಳಿದೆ. ಈ ಆದೇಶ ಹಲವಾರು ಕಡೆಗಳಿಂದ ಭಾರೀ ಟೀಕೆಗೆ ಗುರಿಯಾಯಿತು, ವ್ಯಾಪಕ ಟೀಕೆಗಳಿಂದಾಗಿ ರಾಷ್ಟ್ರೀಯ ವಾಹಕವು ತಕ್ಷಣವೇ ಈ ಸೂಚನೆಯನ್ನು ಹಿಂತೆಗೆದುಕೊಂಡಿತು,
ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ (ಪಿಐಎ) ಶುಕ್ರವಾರ ತನ್ನ ‘ಉಡುಪು ಒಳ ಉಡುಪು’ ಡ್ರೆಸ್ ಕೋಡ್ ಹಿನ್ನಡೆಯನ್ನು ಉಂಟುಮಾಡಿದ ನಂತರ ಸ್ಪಷ್ಟೀಕರಣವನ್ನು ನೀಡಿದೆ. ಸಲಹೆಯೊಂದರಲ್ಲಿ, ಸಮವಸ್ತ್ರದ ಕೆಳಗೆ ಒಳ ಉಡುಪುಗಳನ್ನು ಧರಿಸುವುದು ಅತ್ಯಗತ್ಯ ಎಂದು ವಿಮಾನಯಾನ ಸಂಸ್ಥೆ ತನ್ನ ಕ್ಯಾಬಿನ್ ಸಿಬ್ಬಂದಿಗೆ ಸೂಚಿಸಿದೆ.
ಸರಿಯಾದ ಉಡುಪಿನ ಕೊರತೆಯು ಕಳಪೆ ಅನಿಸಿಕೆಗೆ ಕಾರಣವಾಗುತ್ತದೆ ಮತ್ತು ವಿಮಾನಯಾನ ಸಂಸ್ಥೆಯ ನಕಾರಾತ್ಮಕ ಚಿತ್ರಣವನ್ನು ಬಿಂಬಿಸುತ್ತದೆ ಎಂದು ವಿಮಾನಯಾನ ಸಂಸ್ಥೆಗಳು ಸೂಚಿಸಿವೆ. “ಕೆಲವು ಕ್ಯಾಬಿನ್ ಸಿಬ್ಬಂದಿಗಳು ಇಂಟರ್‌ಸಿಟಿ ಪ್ರಯಾಣ ಮಾಡುವಾಗ, ಹೋಟೆಲ್‌ಗಳಲ್ಲಿ ಉಳಿದುಕೊಳ್ಳುವಾಗ ಮತ್ತು ಹಲವಾರು ಸಾಕಾಣಿಕೆಗಳಿಗೆ ಭೇಟಿ ನೀಡುವಾಗ ಸಾಂದರ್ಭಿಕವಾದ ಉಡುಪು ಧರಿಸುತ್ತಾರೆ ಮತ್ತು ಒಳ ಉಡುಪು ಧರಿಸದೇ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಬಹಳ ಕಾಳಜಿಯಿಂದ ಗಮನಿಸಲಾಗಿದೆ.
ಅಂತಹ ಡ್ರೆಸ್ಸಿಂಗ್ ವೀಕ್ಷಕರ ಮೇಲೆ ಕೆಟ್ಟ ಪ್ರಭಾವವನ್ನು ಉಂಟುಮಾಡುತ್ತದೆ ಮತ್ತು ವ್ಯಕ್ತಿಯ ಮಾತ್ರವಲ್ಲದೆ ನಕಾರಾತ್ಮಕ ಚಿತ್ರಣವನ್ನು ಚಿತ್ರಿಸುತ್ತದೆ. ಪಾಕಿಸ್ತಾನ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ ಕ್ಯಾಬಿನ್ ಸಿಬ್ಬಂದಿಗೆ ಆಂತರಿಕ ಸೂಚನಾ ಮೆಮೊವನ್ನು ಕಳುಹಿಸಿದ್ದು, ಇದರಲ್ಲಿ ಸರಿಯಾದ ಒಳ ಉಡುಪುಗಳನ್ನು ಧರಿಸುವುದು ಕೂಡಾ ಒಳಗೊಂಡಿರುತ್ತದೆ ಎಂದು ಪಾಕಿಸ್ತಾನದ ಮಾಧ್ಯಮ ವರದಿ ಮಾಡಿದೆ.
PIA ಜನರಲ್ ಮ್ಯಾನೇಜರ್ ಫ್ಲೈಟ್ ಸರ್ವಿಸಸ್ ಅಮೀರ್ ಬಶೀರ್ ಕ್ಯಾಬಿನ್ ಸಿಬ್ಬಂದಿಗೆ “ಸರಿಯಾದ ಒಳ ಉಡುಪು” ಗಿಂತ ಔಪಚಾರಿಕ ಸರಳ ಬಟ್ಟೆಗಳನ್ನು “ಸರಿಯಾಗಿ ಧರಿಸುವಂತೆ” ಕೇಳಿದರು. ಹೊಸ ‘ಡ್ರೆಸ್ ಕೋಡ್’ ಅನ್ನು ಹೆಚ್ಚು ಟೀಕಿಸಲಾಯಿತು, ಈ ಒಳ ಉಡುಪಿನ ಆದೇಶ “ಅಸಮರ್ಪಕ” ಎಂದು ಕರೆದರು. ರಾಷ್ಟ್ರೀಯ ವಾಹಕವು ಸ್ವೀಕರಿಸಿದ ಹಿನ್ನಡೆಯಿಂದಾಗಿ ಹಾಗೂ ವ್ಯಾಪಕ ಟೀಕೆಗಳಿಂದಾಗಿ ಬುಲೆಟಿನ್ ಅನ್ನು ತಕ್ಷಣವೇ ಹಿಂತೆಗೆದುಕೊಂಡಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
“ನಾನು ವೈಯಕ್ತಿಕವಾಗಿ ವಿಷಾದಿಸುತ್ತೇನೆ ಮತ್ತು ಪ್ರಕಟಿಸಿದ ಪದಗಳ ಬದಲಿಗೆ ಈ ಸಂದರ್ಭದಲ್ಲಿ ಪದಗಳು ಹೆಚ್ಚು ಸುಸಂಸ್ಕೃತ ಮತ್ತು ಸೂಕ್ತವಾಗಿರಬಹುದೆಂದು ನನಗೆ ಸಂಪೂರ್ಣವಾಗಿ ಮನವರಿಕೆಯಾಗಿದೆ, ದುರದೃಷ್ಟವಶಾತ್, ಕಂಪನಿಯ ಮಾನನಷ್ಟಕ್ಕೆ ಟ್ರೋಲ್ ಮಾಡಲಾಗುತ್ತಿದೆ ಮತ್ತು ತಿರುಚಲಾಗುತ್ತಿದೆ” ಎಂದು PIA ಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಲಿಖಿತ ಸ್ಪಷ್ಟೀಕರಣದಲ್ಲಿ ತಿಳಿಸಿದ್ದಾರೆ.
ಮಂಗಳೂರು: ಜಾಗತಿಕ ಬಂಟ ಪ್ರತಿಷ್ಠಾನವು ಡಾ.ಡಿ.ಕೆ.ಚೌಟ ದತ್ತಿನಿಧಿಯಿಂದ ನೀಡುವ ವಾರ್ಷಿಕ ಪ್ರಶಸ್ತಿಗೆ ಹಿರಿಯ ಯಕ್ಷಗಾನ ವಿದ್ವಾಂಸ, ಪ್ರಸಂಗ ಕರ್ತ ಹಾಗೂ ನಿವೃತ್ತ ಶಿಕ್ಷಕ ಕಂದಾವರ ರಘುರಾಮ ಶೆಟ್ಟಿ ಆಯ್ಕೆಯಾಗಿದ್ದಾರೆ. ಪ್ರೊ.ಜಿ.ಆರ್.ರೈ, ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಪಳ್ಳಿ ಕಿಶನ್ ಹೆಗ್ಡೆ ಅವರನ್ನೊಳಗೊಂಡ ಆಯ್ಕೆ ಸಮಿತಿ ಶಿಫಾರಸಿನ ಮೇರೆಗೆ ಈ ಪ್ರಶಸ್ತಿ ನೀಡಲಾಗುವುದು ಎಂದು ಪ್ರತಿಷ್ಠಾನದ ಕಾರ್ಯದರ್ಶಿ ವೈ.ಸುಧೀರ್ ಕುಮಾರ್ ಶೆಟ್ಟಿ ಪ್ರಕಟಿಸಿದ್ದಾರೆ.
ಕಂದಾವರ ರಘುರಾಮ ಶೆಟ್ಟಿ:
ಕರ್ಕಿ ಸದಿಯಣ್ಣ ಶೆಟ್ಟಿ ಮತ್ತು ಕಂದಾವರ ಪುಟ್ಟಮ್ಮ ಶೆಟ್ಟಿ ದಂಪತಿಗೆ 1936 ಮಾರ್ಚ್12 ರಂದು ಜನಿಸಿದ ರಘುರಾಮ ಶೆಟ್ಟಿಯವರು ಕಂಡ್ಲೂರು ನೇತಾಜಿ ಹಿ.ಪ್ರಾ.ಶಾಲೆಯಲ್ಲಿ 35 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು. ಯಕ್ಷಗಾನ ಹಾಗೂ ನಾಟಕ ಕಲಾವಿದರಾಗಿ ಪ್ರಸಿದ್ಧರು. ಸುಮಾರು7 ನಾಟಕಗಳು, 37 ಯಕ್ಷಗಾನ ಪ್ರಸಂಗಗಳನ್ನು ಬರೆದಿದ್ದಾರೆ.
ಸತೀ ಸೀಮಂತಿನಿ, ವಸು ವರಾಂಗಿ, ಶ್ರೀ ದೇವಿ ಬನಶಂಕರಿ, ಚೆಲುವೆ ಚಿತ್ರಾವತಿ, ಶೂದ್ರ ತಪಸ್ವಿನಿ, ವಧು ಮಾಧವಿ, ನಾಗನಂದನೆ, ಮೊದಲಾದ ಅವರ ಜನಪ್ರಿಯ ಪ್ರಸಂಗಗಳನ್ನು ತೆಂಕು – ಬಡಗು ತಿಟ್ಟಿನ ಮೇಳಗಳು ಆಡಿವೆ.
ಕವಿ ಮುದ್ದಣ ಪ್ರಶಸ್ತಿ, ಸೀತಾನದಿ ಪ್ರಶಸ್ತಿ, ಯಕ್ಷ ಸಾಹಿತ್ಯ ಶ್ರೀ, ಪಟ್ಲ ಫೌಂಡೇಶನ್ ಪ್ರಶಸ್ತಿ, ಜಾನಪದ ಶ್ರೀ, ಕರಾವಳಿ ರತ್ನ, ಸಾಮಗ ಪ್ರಶಸ್ತಿ ಸೇರಿದಂತೆ ಇಪ್ಪತ್ತಕ್ಕೂ ಮಿಕ್ಕಿದ ಪ್ರಶಸ್ತಿಗಳನ್ನವರು ಪಡೆದಿದ್ದಾರೆ. ಅವರ ಜೀವನ ಸಾಧನೆ ಬಗ್ಗೆ ‘ಕೆಂದಾವರೆ’ ಎಂಬ ಅಭಿನಂದನ ಗ್ರಂಥ ಸಮರ್ಪಣೆಯಾಗಿದೆ.
ಬಂಟ ಪ್ರತಿಷ್ಠಾನ ಪ್ರಶಸ್ತಿಯು ರೂ.25,000/- ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಇದೇ ಅಕ್ಟೋಬರ್ 8 ರಂದುಮಂಗಳೂರಿನಲ್ಲಿ ಜಾಗತಿಕ ಬಂಟ ಪ್ರತಿಷ್ಠಾನದ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗುವ 26 ನೇ ಮಹಾಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಸುಧೀರ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಪುತ್ತೂರು: ಪಂಪನಿ0ದ ಇಂದಿನವರೆಗೆ ಜಗತ್ತಿನಾದ್ಯಂತ ಕನ್ನಡದ ಕಂಪು- ಇಂಪು ಪಸರಿಸಿದೆ. ಇದೀಗ ತಾಲೂಕು ಮಟ್ಟದಲ್ಲಿಯೂ ಸಾಹಿತ್ಯ ಸಮ್ಮೇಳನಗಳನ್ನು ಹಮ್ಮಿಕೊಳ್ಳುವ ಮೂಲಕ ಸಾಹಿತ್ಯವನ್ನು ಉಳಿಸಿ ಬೆಳೆಸಲು ಕ್ರಮಕೈಗೊಳ್ಳುವ ಅಗತ್ಯತೆ ಹೆಚ್ಚಾಗಿದೆ ಮಕ್ಕಳಲ್ಲಿ ಸಾಹಿತ್ಯ ಪರಂಪರೆ ಮೂಡಿಸಲು ಇಂತಹಾ ಕಾರ್ಯಕ್ರಮ ಅತ್ಯವಶ್ಯಕ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಸಿ.ಬಿ.ಎಸ್.ಸಿ. ವಿದ್ಯಾಲಯದ ಆವರಣದಲ್ಲಿರುವ ಶ್ರೀ ಶಂಕರ ಸಭಾಭವನದಲ್ಲಿರುವ ಲಲಿತಾಂಬಿಕಾ ವೇದಿಕೆಯಲ್ಲಿ 21ನೇ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಬಾಲವನದಲ್ಲಿ ವಾಚನಾಲಯ: ಕನ್ನಡದಲ್ಲಿ ೮ ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ ಇಂದು ಯಾವ ಹಂತಕ್ಕೆ ತಲುಪಿದೆ ಎಂಬ ಅವಲೋಕನ ನಡೆಸಬೇಕಾಗಿದೆ, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಾಹಿತ್ಯಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ. ಪುತ್ತೂರಿನ ಬಾಲವನದಲ್ಲಿ ಬೃಹತ್ ವಾಚನಾಲಯ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಶಾಲೆಗಳು ಪಾರಂಪರಿಕ ಕಟ್ಟಡ: ತಾಲೂಕಿನ ಕನ್ನಡ ಶಾಲೆಗಳ ಅಭಿವೃದ್ಧಿಗೆ 5 ಕೋಟಿಗೂ ಹೆಚ್ಚು ಅನುದಾನ ನೀಡುವ ಮೂಲಕ ಕನ್ನಡ ಶಾಲೆಗಳ ಉಳಿವಿಗೆ ಕ್ರಮ ಕೈಗೊಳ್ಳಲಾಗಿದೆ. 75 ಕೊಠಡಿಗಳನ್ನೂ ಆರ್.ಸಿ.ಸಿ. ಮಾಡಲು ಅನುದಾನ ಬಿಡುಗಡೆ ಮಾಡಲಾಗಿದೆ. ಕೊಂಬೆಟ್ಟಿನ ಪದವಿಪೂರ್ವ ಕಾಲೇಜನ್ನು ಪಾರಂಪರಿಕ ಕಟ್ಟಡವೆಂದು ಪರಿಗಣಿಸಿ ನವೀಕರಣ ಕೆಲಸ ಮಾಡಲಾಗುವುದು. 100 ವರ್ಷಕ್ಕೂ ಅಧಿಕ ವರ್ಷದ ಶಾಲೆ, ಕಾಲೇಜುಗಳನ್ನೂ ಪಾರಂಪರಿಕ ಕಟ್ಟಡದ ಮಾನ್ಯತೆ ನೀಡಿ ನವೀಕರಣ ಮಾಡಲಾಗುವುದು. ಪ್ರಶಸ್ತಿ ನೀಡುವ ಸಂದರ್ಭ ಕನ್ನಡದ ಅಭಿವೃದ್ಧಿಗೆ ಶ್ರಮಿಸುವವರಿಗೆ ಪರಿಗಣಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಸಾಹಿತ್ಯ ಎಲ್ಲ ಮೌಲ್ಯಗಳ ತಾಯಿ: ಸಮಾರೋಪ ಭಾಷಣ ಮಾಡಿದ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ವರದರಾಜ ಚಂದ್ರಗಿರಿ, ಕನ್ನಡ ಭಾಷೆಯ ಕುರಿತು ಕನ್ನಡ ಶಿಕ್ಷಕರು ಹಾಗೂ ಉಪನ್ಯಾಸಕರು ಮಾತನಾಡುವುದಲ್ಲ. ಇತರರೂ ಕನ್ನಡದ ಪರವಾಗಿ ಧ್ವನಿಯೆತ್ತಬೇಕಾದ ಅಗತ್ಯತೆಯಿದೆ. ಇಂದಿನ ದಿನಗಳಲ್ಲಿ ಉದ್ಯಮಿಗಳು, ವೈದ್ಯ ವೃತ್ತಿಯಲ್ಲಿರುವವರೂ ಪುಸ್ತಕ ಬರೆಯುವ ಮೂಲಕ ಸಾಹಿತ್ಯದ ಕುರಿತು ಒಲವು ಮೂಡಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಕನ್ನಡ ಕೇವಲ ಸಂವಹನ ಭಾಷೆಯಲ್ಲ, ಇದು ಜನರೊಂದಿಗೆ ಬೆರತು ಹೋಗಿದೆ. ಸಾಹಿತ್ಯದಲ್ಲಿ ತೊಡಗಿಕೊಳ್ಳುವ ಮೂಲಕ ಉತ್ತಮ ವ್ಯಕ್ತಿತ್ವವನ್ನೂ ನಾವು ರೂಪಿಸಿಕೊಳ್ಳಬಹುದಾಗಿದೆ. ಸಾಹಿತ್ಯ ಎಲ್ಲ ಮೌಲ್ಯಗಳ ತಾಯಿಯಾಗಿದೆ. ಆಧುನಿಕ ಜಗತ್ತಿನಲ್ಲಿ ಆಂಡ್ರಾಯ್ಡ್ ಫೋನ್ ಮೊದಲಾದವುಗಳಿಂದ ಜಗತ್ತಿನ ಎಲ್ಲಾ ಭಾಷೆಗಳೂ ತಮ್ಮ ಭಾಷೆಯನ್ನು ಉಳಿಸಿಕೊಳ್ಳುವ ಸವಾಲು ಎದುರಿಸುತ್ತಿದೆ ಎಂದರು.
ಪುಸ್ತಕ ಕೊಡುಗೆ: ಸಮ್ಮೇಳನಾಧ್ಯಕ್ಷ ಡಾ. ಶ್ರೀಧರ್ ಹೆಚ್.ಜಿ. ಮಾತನಾಡಿ, ಪುತ್ತೂರಿನಲ್ಲಿ ನಡೆದಿರುವ ಈ ಬಾರಿಯ ಸಾಹಿಯತ್ಯ ಸಮ್ಮೇಳನವನ್ನು ವಿಶೇಷವಾಗಿ ಯುವ ಜನತೆಯನ್ನು ಗುರಿಯಾಗಿಟ್ಟುಕೊಂಡು ರೂಪಿಸಲಾಗಿತ್ತು. ಅದ್ದರಿಂದಲೇ ‘ಸಾಹಿತ್ಯದ ನಡಿಗೆ ಯುವ ಜನತೆಗೆಯ ಕಡೆಗೆ’ ಎಂಬ ಘೋಷ ವಾಕ್ಯದೊಂದಿಗೆ ಯುವ ಜನತೆ ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗಿದೆ ಎಂದರಲ್ಲದೆ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾ ವಿದ್ಯಾಲಯದ ಗ್ರಂಥಾಲಯಕ್ಕೆ ಕಾರ್ಯಕ್ರಮದ ನೆನಪಿಗಾಗಿ ಸಾಹಿತ್ಯ ಸಂಬ0ಧಿತ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.
ಇಂದಿನ ಕಾಲಘಟ್ಟದಲ್ಲಿ ಮಕ್ಕಳ ಸಾಹಿತ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಮಕ್ಕಳ ಮನಸ್ಸಿನ ನೇರಕ್ಕೆ ಇಳಿದು ಬರೆಯಬೇಕಾದ ಅಗತ್ಯತೆಯಿದೆ. ಇದರಿಂದ ಮಕ್ಕಳನ್ನು ತಲುಪಲು ಸಾಧ್ಯವಾಗುತ್ತದೆ. ಕಾವ್ಯ ರಚನೆಯ ಸಂದರ್ಭದಲ್ಲಿ ಕಾವ್ಯ ಸಪ್ಪೆಯಾಗಿರಬಾರದು, ಕಾವ್ಯದ ಒಂದೊ0ದು ಧ್ವನಿ ನೀಡಿದಾಗ ಓದುಗರನ್ನು ತಲುಪಲು ಸಾಧ್ಯ ಎಂದರು.
ಪುತ್ತೂರು ನಗರಸಭೆ ಆಯುಕ್ತ ಮಧು ಎಸ್. ಮನೋಹರ್ ಮಾತನಾಡಿ, ಸರಕಾರಿ ಕಚೇರಿಗಳಿಗೆ ಆಗಮಿಸಿದಾಗ ಕನ್ನಡದ ಮಹಿಮೆ ಅರ್ಥವಾಯಿತು. ಕನ್ನಡ ಅದರಲ್ಲಿರುವ ಅಕ್ಷರಗಳಷ್ಟೇ ಅರ್ಥಪೂರ್ಣವಾದ ಭಾಷೆಯಾಗಿದೆ. ಸಾಹಿತಿಗಳು ಈಗಾಗಲೇ ತಿಳಿಸಿರುವ ವಿಚಾರಗಳನ್ನು ಮುಂದಿನ ಪೀಳಿಗೆಗೂ ತಿಳಿಸಬೇಕಾಗಿದೆ ಎಂದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ.ಸಾ.ಪ ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ಸಾಹಿತ್ಯ ಸಮ್ಮೇಳನದಲ್ಲಿ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಪಾಲ್ಗೊಂಡಿದ್ದು, ಜಿಲ್ಲೆಯಾದ್ಯಂತ ಯುವ ಸಮೂಹ ಸಮ್ಮೇಳನಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲಾಗುವುದು. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸದಸ್ಯತ್ವ ಪಡೆದವರ ಸಂಖ್ಯೆ ಕಡಿಮೆಯಾಗಿದ್ದು, ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದರು.
ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಸಂಚಾಲಕ ರಾಜಶ್ರೀ ಎಸ್. ನಟ್ಟೋಜ ದಂಪತಿ ಸಮ್ಮೇಳನಾಧ್ಯಕ್ಷ ಡಾ. ಶ್ರೀಧರ್ ಹೆಚ್. ಜಿ. ದಂಪತಿಯನ್ನು ಗೌರವಿಸಿದರು. ವೇದಿಕೆಯಲ್ಲಿ ಜಿಲ್ಲಾ ಕ.ಸಾ.ಪ ಗೌರವ ಕೋಶಾಧ್ಯಕ್ಷ ಐತ್ತಪ್ಪ ನಾಯ್ಕ್ ಬಿ, ಕ.ಸಾ.ಪ ಉಳ್ಳಾಲ ಘಟಕದ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ, ತಾಲೂಕು ಕ.ಸಾ.ಪ ಗೌರವ ಕಾರ್ಯದರ್ಶಿ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಗೌರವ ಕೋಶಾಧ್ಯಕ್ಷ ಡಾ.ಹರ್ಷಕುಮಾರ್ ರೈ, ಸದಸ್ಯರಾದ ಆಶಾ ಬೆಳ್ಳಾರೆ, ಕುಂಬ್ರ ದುರ್ಗಾಪ್ರಸಾದ್ ರೈ, ಕುಸುಮ್ ರಾಜ್, ಡಾ.ವಿಜಯ ಕುಮಾರ್ ಮೊಳೆಯಾರ, ಹಾಜಿ ಅಬೂಬಕ್ಕರ್ ಆರ್ಲಪದವು, ಬಾಬು ಎಂ, ಯಶಸ್ವಿನಿ, ಯು.ಎಲ್.ಉದಯಕುಮಾರ್, ಶಾಂತಾ ಪುತ್ತೂರು ಮತ್ತಿತರರು ಉಪಸ್ಥಿತರಿದ್ದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಸುರೇಶ ಶೆಟ್ಟಿ ಸ್ವಾಗತಿಸಿದರು. ಕ.ಸಾ.ಪ ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ ನಾಯಕ್ ವಂದಿಸಿದರು. ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಕಾರ್ಯಕ್ರಮ ನಿರ್ವಹಿಸಿದರು. ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯ ಶಿಕ್ಷಕಿ ಮಲ್ಲಿಕಾ ಸ್ವರಚಿತ ಕವನ ವಾಚಿಸಿದರು.