Sunday, April 6, 2025
Home Blog Page 6

ಖ್ಯಾತ ಯಕ್ಷಗಾನ ಕಲಾವಿದ ನಿಧನ

ಚಿಕ್ಕಮಗಳೂರು ಜಿಲ್ಲೆಯ ಹಳುವಳ್ಳಿಯ ಯಕ್ಷಗಾನ ಕಲಾವಿದ ವಸಂತ ಭಟ್ (64 ವರ್ಷ) ಇಂದು (02.12.2024) ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು.

ಹಳುವಳ್ಳಿಯ ಪ್ರಸಿದ್ಧ ಸ್ತ್ರೀವೇಷಧಾರಿ ಕೃಷ್ಣಯ್ಯರ ಪುತ್ರರಾದ ಇವರು ಅಮೃತೇಶ್ವರೀ, ಬಾಳೆಹೊಳೆ ಹಾಗೂ ದೀರ್ಘಕಾಲ ಗುತ್ಯಮ್ಮ ಮೇಳದಲ್ಲಿ ವೇಷಧಾರಿಯಾಗಿ ಕಲಾಸೇವೆ ಗೈದಿದ್ದಾರೆ.

ದೇವೇಂದ್ರ, ಶತ್ರುಘ್ನ, ಕಮಲಭೂಪ, ಹಂಸಧ್ವಜ, ಬಲರಾಮ, ಮೊದಲಾದ ರಾಜ ವೇಷದೊಂದಿಗೆ ಬಣ್ಣದ ವೇಷ ಮಾಡಿ ಜನ ಮೆಚ್ಚುಗೆ ಗಳಿಸಿದ್ದರು.

ಪ್ರಕೃತ ಗುತ್ಯಮ್ಮ ಮೇಳದ ಕಲಾವಿದರಾಗಿದ್ದ ವಸಂತ ಭಟ್ ಓರ್ವ ಸರಳ ಸಜ್ಜನಿಕೆಯ ಕಲಾವಿದರಾಗಿದ್ದರು. ಸಂಸ್ಥೆಯ ಬಗ್ಗೆ ಅತೀವ ಗೌರವಾಧಾರಗಳನ್ನು ಹೊಂದಿದ್ದ ಇವರು ಪತ್ನಿ, ಈರ್ವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

ನಾಳೆ (03-12-2024) ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ

ನಾಳೆ (03-12-2024) ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ನಾಳೆ ಡಿಸೆಂಬರ್ 3 ರಂದು ಜಿಲ್ಲೆಯ ಎಲ್ಲಾ ಶಾಲೆ, ಪಿಯುಸಿ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.

ಫೆಂಗಲ್ ಚಂಡಮಾರುತ ಅಪ್ಪಳಿಸಿದ ಹಿನ್ನೆಲೆಯಲ್ಲಿ ಡಿಸೆಂಬರ್ 3 ರಂದು ಶಾಲಾ-ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಆದೇಶ ಹೊರಡಿಸಿದ್ದಾರೆ.

ಭಾರತೀಯ ಹವಾಮಾನ ಇಲಾಖೆ ಸೋಮವಾರ ಹೊರಡಿಸಿದ ಭಾರೀ ಮಳೆಯ ಮುನ್ಸೂಚನೆ ಮತ್ತು ಆರೆಂಜ್ ಅಲರ್ಟ್ ಎಚ್ಚರಿಕೆಯ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಯಿತು ಎಂದು ತಿಳಿದುಬಂದಿದೆ.


ಆದೇಶದ ಪ್ರಕಾರ, ಎಲ್ಲಾ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ಪದವಿ ಪೂರ್ವ ಕಾಲೇಜುಗಳಿಗೆ (12 ನೇ ತರಗತಿಯವರೆಗೆ) ಡಿಸೆಂಬರ್ 3 ಮಂಗಳವಾರ ರಜೆಯಿರುತ್ತದೆ ಎಂದು ತಿಳಿದುಬಂದಿದೆ.

ಕಾರಿಗೆ ಕಾರು ಢಿಕ್ಕಿ, ಆಮೇಲೆ ಮರಕ್ಕೆ ಗುದ್ದಿ ನುಜ್ಜುಗುಜ್ಜು – ತಂದೆ, ಮಗ ದಾರುಣ ಮೃತ್ಯು, ತಾಯಿ ಗಂಭೀರ

ಕಾರಿಗೆ ಕಾರು ಢಿಕ್ಕಿಯಾಗಿ ಆಮೇಲೆ ಮರಕ್ಕೆ ಗುದ್ದಿ ನುಜ್ಜುಗುಜ್ಜಾದ ಘಟನೆಯಲ್ಲಿ ತಂದೆ, ಮಗ ದಾರುಣಬಾಗಿ ಮೃತ್ಯುವಶರಾಗಿದ್ದಾರೆ. ತಾಯಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಮೃತರಾದವರನ್ನು ತಂದೆ ರಾಕೇಶ್ (28), ಮಗ ಮೋಕ್ಷಿತ್‍ಗೌಡ (8) ಎಂದು ಗುರುತಿಸಲಾಗಿದೆ. ಈ ಭೀಕರ ಘಟನೆಯಲ್ಲಿ ರಾಕೇಶ್‍ನ ಪತ್ನಿ ಆಶಾ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಗಾಯಗೊಂಡಿರುವ ಆಶಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಾಸನದಲ್ಲಿ ಕಾರು ಬ್ರೇಕ್ ಫೇಲ್ ಆಗಿ ಮೊದಲು ಇನ್ನೊಂದು ಕಾರಿಗೆ ಢಿಕ್ಕಿ ಹೊಡೆದಿದೆ.ಕಾರಿಗೆ ಡಿಕ್ಕಿಯಾದ ಬಳಿಕ ಮರಕ್ಕೆ ಗುದ್ದಿ ಅಪ್ಪಚ್ಚಿಯಾದದ್ದರ ಪರಿಣಾಮ ತಂದೆ ಹಾಗೂ ಮಗ ನಿಧನರಾದ ದಾರುಣ ಘಟನೆ ಚನ್ನರಾಯಪಟ್ಟಣದ ಅಮಾನಿಕೆರೆ ಸಮೀಪ ನಡೆದಿದೆ.

ಕಾರು ಮರಕ್ಕೆ ಡಿಕ್ಕಿಯಾಗುವ ಮೊದಲೇ ಇನ್ನೊಂದು ಕಾರಿಗೆ ಡಿಕ್ಕಿಯಾಗಿದೆ ಎಂದು ಹೇಳಲಾಗುತ್ತಿದೆ ಬಳಿಕ ಮರಕ್ಕೆ ಡಿಕ್ಕಿಯಾಗಿ ಮುದ್ದೆಯಾಗಿದೆ. ಇದರಿಂದಾಗಿ ಇಬ್ಬರು ಸ್ಥಳದಲ್ಲೇ ಮೃತರಾಗಿದ್ದಾರೆ.

ಕುಟುಂಬ ಸದಸ್ಯರು ಕಾರಿನಲ್ಲಿ ಚನ್ನರಾಯಪಟ್ಟಣದಿಂದ ಶ್ರವಣೇರಿ ಗ್ರಾಮಕ್ಕೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.
ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.

ಕನ್ನಡ, ತೆಲುಗು ಕಿರುತೆರೆ ನಟಿ ಶೋಭಿತಾ ಆತ್ಮಹತ್ಯೆ

ಕಿರುತೆರೆ ನಟಿ ಶೋಭಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಚ್ಚಿಬೌಲಿ ಸಿಬ್ಲಾಕ್, ಶ್ರೀರಾಮ್ ನಗರ ಕಲನಿಯಲ್ಲಿರುವ ತನ್ನ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಸೇರಿದ ಸೋಭಿತಾ ಕನ್ನಡ ಹಾಗೂ ತೆಲುಗಿನಲ್ಲಿ ಹಲವು ಧಾರಾವಾಹಿಗಳನ್ನು ಮಾಡಿ ತೆಲುಗು ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ.

ಸೋಭಿತಾ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಪಡೆದ ಗಚ್ಚಿಬೌಲಿ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಬ್ರಹ್ಮಗಂಟು, ನಿಂತೇಳೆ ಧಾರಾವಾಹಿಗಳ ಮೂಲಕ ಜನಮನ್ನಣೆ ಗಳಿಸಿದ್ದ ಸೋಭಿತಾ ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆಕೆಯ ಆತ್ಮಹತ್ಯೆಗೆ ಕಾರಣಗಳು ತಿಳಿದುಬರಬೇಕಿದೆ.

ಧಾರಾವಾಹಿಗಳ ಮೂಲಕ ಕಿರುತೆರೆ ಲೋಕದಲ್ಲಿ ಉತ್ತಮ ಹೆಸರು ಗಳಿಸಿರುವ ಸೋಭಿತಾ ಪತಿ ಸುಧೀರ್ ಜೊತೆ ಶ್ರೀರಾಮನಗರ ಕಾಲೋನಿಯಲ್ಲಿ ವಾಸವಾಗಿದ್ದರು. ಮದುವೆ ನಂತರ ಶೋಭಿತಾ ಇಂಡಸ್ಟ್ರಿಯಿಂದ ದೂರ ಉಳಿದಿದ್ದರು.

ಧಾರಾವಾಹಿಗಳ ಹೊರತಾಗಿ, ಅವರು ಫಸ್ಟ್ ಡೇ ಫಸ್ಟ್ ಶೋ ಎಂಬ ತೆಲುಗು ಚಲನಚಿತ್ರದಲ್ಲಿ ನಟಿಸಿದ್ದಾರೆ. ಶೋಭಿತಾ ಆತ್ಮಹತ್ಯೆಗೆ ಕಾರಣಗಳು ಇನ್ನಷ್ಟೇ ಗೊತ್ತಾಗಬೇಕಿದೆ. ಮರಣೋತ್ತರ ಪರೀಕ್ಷೆಯ ನಂತರ ಆಕೆಯ ದೇಹವನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗುವುದು.

ರಸ್ತೆ ಅಗಲ ಮಾಡಲು ಗುಡ್ಡ ಅಗೆಯುವಾಗ ಅಚ್ಚರಿಯ ದೃಶ್ಯ – ಬೆಚ್ಚಿಬಿದ್ದ ಜನರು


ಅಗೆಯುವಾಗ, ನಿಧಿ ನಿಕ್ಷೇಪಗಳು, ಪುರಾತನ ವಿಗ್ರಹಗಳು ಪತ್ತೆಯಾಗುವುದು ಸಹಜ. ಮತ್ತು ಕೆಲವೊಮ್ಮೆ ಅಸ್ಥಿಪಂಜರಗಳನ್ನು ಸಹ ನಾವು ನೋಡಿದ್ದೇವೆ. ಆದರೆ ಇಲ್ಲಿ ನಡೆದದ್ದೇ ಬೇರೆ.. ರಸ್ತೆ ಅಗೆಯುವಾಗ ಆಂಧ್ರಪ್ರದೇಶದ ವೈಎಸ್ಆರ್ ಜಿಲ್ಲೆಯಲ್ಲಿ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ.

ರಸ್ತೆ ನಿರ್ಮಾಣಕ್ಕಾಗಿ ಬೆಟ್ಟದ ಮಣ್ಣನ್ನು ಅಗೆಯುತ್ತಿದ್ದಾಗ ಬೃಹತ್ ಗುಹೆ ಪತ್ತೆಯಾಗಿದೆ. ಗುಹೆ ನೋಡಲು ಸ್ಥಳೀಯರು ಮುಗಿ ಬೀಳುತ್ತಿದ್ದಾರೆ. ಗುಹೆ ಎಷ್ಟು ಆಳವಾಗಿದೆ.. ಯಾವುದಾದರೂ ಪ್ರದೇಶಕ್ಕೆ ರಹಸ್ಯ ಮಾರ್ಗವಾಗಿದೆಯೇ, ಗುಹೆಯಲ್ಲಿ ಯಾವುದೇ ಐತಿಹಾಸಿಕ ಸ್ಮಾರಕಗಳಿವೆಯೇ ಎಂದು ತಿಳಿದುಬಂದಿಲ್ಲ.

ಆದರೆ ಏನಾದರೂ ಅನಾಹುತ ಸಂಭವಿಸಬಹುದೆಂಬ ಹೆದರಿಕೆಯಿಂದ ಸ್ಥಳೀಯರು ಆ ಗುಹೆಯೊಳಗೆ ಹೋಗಲಿಲ್ಲ.
ವೈಎಸ್ ಆರ್ ಜಿಲ್ಲೆಯ ಕೊಂಡಾಪುರಂ ಮಂಡಲದ ಮುಚ್ಚುಮರಿ ಗ್ರಾಮದ ಹೊರವಲಯದಲ್ಲಿ ಶಿವನ ದೇವಸ್ಥಾನವಿದೆ. ದೇವಾಲಯದ ಸಮೀಪವಿರುವ ಬೆಟ್ಟದಲ್ಲಿ ಒಂದು ಗುಹೆ ಪತ್ತೆಯಾಗಿದೆ.

ರಸ್ತೆಗಾಗಿ ಪಾಕ್ಲೇನ್‌ಗಳಿಂದ ಮಣ್ಣನ್ನು ಅಗೆಯುವಾಗ ಈ ಗುಹೆ ಪತ್ತೆಯಾಗಿದೆ ಎಂದು ಗ್ರಾಮಸ್ಥರು ವಿವರಿಸಿದರು. ಈ ಗುಹೆ ಬಹಳ ಉದ್ದ ಮತ್ತು ದೊಡ್ಡದು. ಗುಹೆ ತೆರೆದ ಪ್ರದೇಶವನ್ನು ಸ್ವಚ್ಛಗೊಳಿಸಲಾಯಿತು.

ಗುಹೆಯೊಳಗೆ ಕಲ್ಲನ್ನು ಎಸೆದರೆ ಬಹಳ ದೂರ ಹೋಗುತ್ತದೆ ಎಂದು ಹೇಳಲಾಗುತ್ತದೆ.  ಗುಹೆ ಎಷ್ಟು ಆಳದಲ್ಲಿದೆ ಎಂದು ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ.

ಈ ಗುಹೆಯನ್ನು ನೋಡಲು ಸುತ್ತಮುತ್ತಲಿನ ಹಳ್ಳಿಗಳಿಂದ ಅನೇಕ ಜನರು ಬರುತ್ತಾರೆ. ಪತ್ತೆಯಾದ ಗುಹೆಯು ಶಿವನ ದೇವಸ್ಥಾನದ ಬಳಿ ಇರುವುದರಿಂದ ಈ ಗುಹೆಯಲ್ಲಿ ಈಶ್ವರನ ಮೂರ್ತಿ ಇರಬಹುದು ಎಂದು ಗ್ರಾಮಸ್ಥರು ಹೇಳುತ್ತಾರೆ.

ಮತ್ತೊಂದು ಡಿಜಿಟಲ್‌ ಅರೆಸ್ಟ್ ಪ್ರಕರಣ – ಯುವತಿಯನ್ನು ವಿಡಿಯೋ ಕಾಲ್ ಮಾಡಿ ವಿವಸ್ತ್ರಗೊಳಿಸಿ ₹ 1.78 ಲಕ್ಷ ವಂಚನೆ

ದೇಶದಲ್ಲಿ ದಿನೇದಿನೇ ಡಿಜಿಟಲ್ ಅರೆಸ್ಟ್ ಪ್ರಕರಣಗಳು ಹೆಚ್ಚುತ್ತಿವೆ. ಡಿಜಿಟಲ್ ಅರೆಸ್ಟ್’ ಅಥವಾ ‘ವರ್ಚುವಲ್ ಅರೆಸ್ಟ್’ ಎಂದು ಯಾವುದೂ ಇಲ್ಲ ಎಂದು ಪೊಲೀಸರು ಹಲವಾರು ಬಾರಿ ಒತ್ತಿಹೇಳಿದರೂ ಜನರು ವಂಚನೆಗೊಳಗಾಗುವುದು ಕಡಿಮೆಯಾಗಿಲ್ಲ.

ಸೈಬರ್ ವಂಚನೆಯ ಮತ್ತೊಂದು ಆಘಾತಕಾರಿ ಪ್ರಕರಣ ಮುಂಬೈನಲ್ಲಿ ಬೆಳಕಿಗೆ ಬಂದಿದೆ. ಬೊರಿವಲಿ ಪೂರ್ವದಲ್ಲಿ ವಾಸಿಸುತ್ತಿರುವ ಮತ್ತು ಫಾರ್ಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ 26 ವರ್ಷದ ಮಹಿಳೆಯನ್ನು ಸೈಬರ್ ಅಪರಾಧಿಗಳು ವಿಡಿಯೋ ಕಾಲ್ ಮೂಲಕ ಬಟ್ಟೆ ತೆಗೆಯುವಂತೆ ಒತ್ತಾಯಿಸಿ ₹ 1.78 ಲಕ್ಷ ವಂಚಿಸಿದ್ದಾರೆ.

ಡಿಜಿಟಲ್ ಬಂಧನದ ಆಘಾತಕಾರಿ ಪ್ರಕರಣದಲ್ಲಿ, ಮುಂಬೈನಲ್ಲಿ 26 ವರ್ಷದ ಮಹಿಳೆಯೊಬ್ಬರನ್ನು ವೀಡಿಯೊ ಕರೆಯಲ್ಲಿ ಬಲವಂತವಾಗಿ ವಿವಸ್ತ್ರಗೊಳಿಸಲಾಯಿತು ಮತ್ತು ಮನಿ ಲಾಂಡರಿಂಗ್ ತನಿಖೆಯಲ್ಲಿ ಆಕೆಯ ಹೆಸರು ಬೆಳೆದಿದೆ ಎಂದು ಹೇಳುವ ವಂಚಕರು ₹ 1.7 ಲಕ್ಷವನ್ನು ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ದುಷ್ಕರ್ಮಿಗಳು ದೆಹಲಿ ಪೊಲೀಸ್ ಅಧಿಕಾರಿಗಳಂತೆ ನಟಿಸಿ ಮಹಿಳೆಯೊಂದಿಗೆ ಸಂಪರ್ಕ ಹೊಂದಿದ್ದಾರೆ. ನರೇಶ್ ಗೋಯಲ್‌ಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಆಕೆಯ ಹೆಸರು ಬಂದಿದೆ ಎಂದು ಅವರು ಮಹಿಳೆಗೆ ತಿಳಿಸಿದರು. ಕೂಡಲೇ ತನಿಖೆಗೆ ಸಹಕರಿಸಬೇಕು ಇಲ್ಲವಾದಲ್ಲಿ ಬಂಧಿಸುವುದಾಗಿ ಪುಂಡರು ಬೆದರಿಕೆ ಹಾಕಿದ್ದಾರೆ.

ಸಂಭಾಷಣೆಯು ನಂತರ ವೀಡಿಯೊ ಕರೆಗೆ ಸ್ಥಳಾಂತರಗೊಂಡಿತು ಮತ್ತು ಅವಳು ‘ಡಿಜಿಟಲ್ ಬಂಧನ’ದಲ್ಲಿದ್ದಾಳೆ ಎಂದು ತಿಳಿಸಲಾಯಿತು. ವಂಚಕರು ಮಹಿಳೆಯನ್ನು ವಿಚಾರಣೆಯನ್ನು ಮುಂದುವರಿಸಲು ಹೋಟೆಲ್ ಕೋಣೆಯನ್ನು ಕಾಯ್ದಿರಿಸುವಂತೆ ಕೇಳಿಕೊಂಡರು.

ಒಮ್ಮೆ ಅವಳು ಹೋಟೆಲ್‌ಗೆ ಚೆಕ್ ಇನ್ ಮಾಡಿದ ನಂತರ, ಆಕೆಯ ಬ್ಯಾಂಕ್ ಖಾತೆಯ ವಿವರಗಳನ್ನು ಪರಿಶೀಲಿಸಲು ₹ 1,78,000 ಮೊತ್ತವನ್ನು ವರ್ಗಾವಣೆ ಮಾಡಬೇಕಾಗಿದೆ ಎಂದು ವಂಚಕರು ಹೇಳಿದರು. ದೇಹ ಪರಿಶೀಲನೆಯ ಅಗತ್ಯವಿದೆ ಎಂದು ಹೇಳುವ ಮೂಲಕ ಅವರು ವೀಡಿಯೊ ಕರೆ ಸಮಯದಲ್ಲಿ ಆಕೆಯನ್ನು ಬಟ್ಟೆ ಬಿಚ್ಚುವಂತೆ ಬೆದರಿಸಿ ವಿವಸ್ತ್ರಗೊಳಿಸಿದರು.

ಮಹಿಳೆ ಮೊತ್ತವನ್ನು ವರ್ಗಾಯಿಸಿದರು ಮತ್ತು ಹಗರಣಗಾರರ ಸೂಚನೆಗಳನ್ನು ಅನುಸರಿಸಿದರು. ಈ ಸಂಪೂರ್ಣ ಘಟನೆಯಿಂದ ಮಹಿಳೆ ತೀವ್ರವಾಗಿ ಹೆದರಿ ಪೊಲೀಸರಿಗೆ ದೂರು ನೀಡಿದ್ದಾಳೆ.  

ಮಹಿಳೆಯ ದೂರನ್ನು ದಹಿಸರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು, ನಂತರ ಅದನ್ನು ಅಂಧೇರಿ ಠಾಣೆಗೆ ವರ್ಗಾಯಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 319(2), 318(4), 204, 74, 78, 79, 351(2) ಮತ್ತು ಐಟಿ ಕಾಯ್ದೆಯ ಸೆಕ್ಷನ್ 66(ಎ) ಮತ್ತು 65(ಡಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ

ಸೈಬರ್ ಅಪರಾಧವನ್ನು ತಪ್ಪಿಸಲು, ಯಾವುದೇ ಅಪರಿಚಿತ ಕರೆ ಅಥವಾ ಸಂದೇಶವನ್ನು ನಂಬಬೇಡಿ. ಯಾರಾದರೂ ಪೊಲೀಸ್ ಅಥವಾ ಅಧಿಕಾರಿಯಂತೆ ನಟಿಸಿ ಹಣ ಕೇಳಿದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ.

ಡಿಜಿಟಲ್ ಬಂಧನದ ಬಗ್ಗೆ ಮಾಹಿತಿ:

‘ಡಿಜಿಟಲ್ ಅರೆಸ್ಟ್’ ಎಂಬುದು ಒಂದು ಹೊಸ ರೀತಿಯ ವಂಚನೆಯಾಗಿದ್ದು, ಇದರಲ್ಲಿ ವಂಚಕರು ಅವನು/ಅವಳು ‘ಡಿಜಿಟಲ್’ ಅಥವಾ ‘ವರ್ಚುವಲ್’ ಬಂಧನದಲ್ಲಿದ್ದಾರೆ ಮತ್ತು ವೀಡಿಯೊ ಅಥವಾ ಆಡಿಯೊ ಕರೆ ಮೂಲಕ ಅವರೊಂದಿಗೆ ಸಂಪರ್ಕದಲ್ಲಿರಬೇಕು ಎಂದು ತಿಳಿಸುತ್ತಾರೆ. ಅವರು ‘ಡಿಜಿಟಲ್ ಬಂಧನ’ದಲ್ಲಿದ್ದಾರೆ ಎಂದು ಅವನು/ಅವಳು ಬೇರೆಯವರಿಗೆ ಹೇಳಲು ಸಾಧ್ಯವಿಲ್ಲ ಮತ್ತು ಅವರು ಸೂಚನೆ ನೀಡುವ ವರೆಗೆ (ವಂಚಕರ ಖಾತೆಗಳಿಗೆ ಹಣವನ್ನು ವರ್ಗಾಯಿಸುವವರೆಗೆ) ಕಣ್ಗಾವಲು ಕೊನೆಗೊಳ್ಳುವುದಿಲ್ಲ ಎಂದು ಹೇಳುತ್ತಾರೆ. ‘ಡಿಜಿಟಲ್ ಅರೆಸ್ಟ್’ ಅಥವಾ ‘ವರ್ಚುವಲ್ ಅರೆಸ್ಟ್’ ಎಂದು ಯಾವುದೂ ಇಲ್ಲ ಎಂದು ಪೊಲೀಸರು ಹಲವಾರು ಬಾರಿ ಹೇಳಿದ್ದಾರೆ, ಆದರೂ ಜನರು ವಂಚನೆಗೊಳಗಾಗುವುದು ತಪ್ಫಿಲ್ಲ.

ಗ್ಯಾಸ್ ಸಿಲಿಂಡರ್ ಸ್ಫೋಟ – ಒಂದೇ ಮನೆಯ ನಾಲ್ಕು ಜನರಿಗೆ ಗಾಯ, 3 ಮನೆಗೆ ಬೆಂಕಿ

ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಒಂದೇ ಮನೆಯ ನಾಲ್ಕು ಜನರಿಗೆ ಗಾಯಗಳಾಗಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ 3 ಮನೆಗೆ ಬೆಂಕಿ ತಗುಲಿ ಅವುಗಳು ಭಾಗಶಃ ಸುಟ್ಟು ಹೋಗಿವೆ.

ಗ್ಯಾಸ್ ಸೋರಿಕೆಯಾಗಿ ಈ ಸಿಲಿಂಡರ್ ಸ್ಫೋಟಗೊಂಡಿವೆ ಎಂದು ಹೇಳಲಾಗುತ್ತಿದೆ. 3 ಮನೆಗಳಿಗೆ ಬೆಂಕಿ ತಗುಲಿದೆ. ಒಂದೇ ಕುಟುಂಬದ ನಾಲ್ಕು ಮಂದಿ ಗಾಯಗೊಂಡರು. ಈ ಘಟನೆ ನಡೆದದ್ದು ಡಿಜೆ ಹಳ್ಳಿಯ ಆನಂದ್ ಥಿಯೇಟರ್ ಸಮೀಪ.

ರೆಗ್ಯುಲೇಟರ್ ಹಳೆಯದಾಗಿದ್ದು ಡೇಟ್ ಬಾರ್ ಆಗಿತ್ತು ಎಂದು ತಿಳಿದುಬಂದಿದೆ. ಆದಕಾರಣ ಗ್ಯಾಸ್ ಲೀಕೇಜ್ ಆಗಿ ಶನಿವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಸ್ಫೋಟ ಸಂಭವಿಸಿತು ಎಂದು ಹೇಳಲಾಗುತ್ತಿದೆ.

ಡಿಜೆ ಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಸಿಲಿಂಡರ್ ಸ್ಫೋಟಗೊಂಡ ಘಟನೆಯಲ್ಲಿ ಪಾನಿಪುರಿ ವ್ಯಾಪಾರಿ ನಾಜೀರ್, ಅವರ ಪತ್ನಿ ಕುಲ್ಸುಮ್ ಹಾಗೂ ದಂಪತಿಗಳ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ವಿಕ್ಟೋರಿಯಾ ಆಸ್ಪತ್ರಗೆ ಸಾಗಿಸಲಾಯಿತು. ಸಿಲಿಂಡರ್ ಸ್ಫೋಟದ ತೀವ್ರತೆಗೆ ಮೂರು ಮನೆಗಳು ನೆಲಸಮವಾಗಿವೆ.

ಉಡುಪಿ ಕಿಶೋರ ಯಕ್ಷಗಾನ ಸಂಭ್ರಮ – 2024 ಉದ್ಘಾಟನೆ

ನವೆಂಬರ್ 30 ರಿಂದ ಡಿಸೆಂಬರ್ 14, 2024ರ ವರೆಗೆ ಉಡುಪಿ ಆಸುಪಾಸಿನ 27 ಪ್ರೌಢಶಾಲೆಗಳ ವಿದ್ಯಾರ್ಥಿಗಳಿಂದ ಪ್ರದರ್ಶನಗೊಳ್ಳಲಿರುವ ಕಿಶೋರ ಯಕ್ಷಗಾನ ಸಂಭ್ರಮ – 2024 ನ್ನು

ಇಂದು (30.11.2024) ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಜ್ಯೋತಿ ಬೆಳಗಿಸಿ, ಉದ್ಘಾಟಿಸಿ, ವಿಶ್ವದಾದ್ಯಂತ ಸಾವಿರಾರು ಮಂದಿ ನಲಿದ, ನರ್ತಿಸಿದ, ಹಾಡಿದ, ಕಲೆಯನ್ನು ಪ್ರದರ್ಶಿಸಿದ ಈ ವೇದಿಕೆಯಲ್ಲಿ ಮಕ್ಕಳು ಕುಣ ದಾಡುವುದು ಕೃಷ್ಣನಿಗೆ ಬಹಳ ಸಂತಸದ ವಿಚಾರ.

ಯಕ್ಷಶಿಕ್ಷಣ ಒಂದು ದೇಶಕ್ಕೆ ಮಾದರಿಯಾದಂತಹ ಸಂಸ್ಥೆ. ಈ ಅಭಿಯಾನ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.

ಅಂಬಲಪಾಡಿ ಧರ್ಮದರ್ಶಿಗಳಾದ ಡಾ. ನಿ. ಬೀ. ವಿಜಯ ಬಲ್ಲಾಳ, ಉಡುಪಿ ಮಾಜಿ ಶಾಸಕ ಕೆ. ರಘುಪತಿ ಭಟ್, ಕರ್ನಾಟಕ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಡಿ.ಡಿ.ಪಿ.ಐ ಕೆ. ಗಣಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಯಲ್ಲಮ್ಮ,

ಅಮೆರಿಕಾದ ಪಣಂಬೂರು ವಾಸುದೇವ ಐತಾಳ್, ಯು. ವಿಶ್ವನಾಥ ಶೆಣೈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು.

ಕಾರ್ಯದರ್ಶಿ ಮುರಲಿ ಕಡೆಕಾರ್ ನಿರ್ವಹಿಸಿದರು. ಯಕ್ಷಶಿಕ್ಷಣ ಟ್ರಸ್ಟ್ ವಿಶ್ವಸ್ಥರಾದ ನಾರಾಯಣ ಎಂ. ಹೆಗಡೆ ಧನ್ಯವಾದ ಸಮರ್ಪಿಸಿದರು.

ಸಮಾರಂಭದ ಬಳಿಕ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳಿಂದ ನರಸಿಂಹ ತುಂಗರ ನಿರ್ದೇಶನದಲ್ಲಿ ಶಶಿಪ್ರಭಾ ಪರಿಣಯ ಸೊಗಸಾಗಿ ಪ್ರಸ್ತುತಗೊಂಡಿತು.

ಬೆಂಗಳೂರಿನಲ್ಲಿ ಅಸ್ಸಾಂ ಯುವತಿ ಮಾಯಾ ಗೊಗೊಯ್ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ – ಕೊಲೆ ಮಾಡಿದ ಬಳಿಕ ಅದೇ ಹಗ್ಗದಿಂದ ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ಆರವ್ ಹನೋಯ್

0

ಅಸ್ಸಾಂ ಮೂಲದ ವ್ಲಾಗರ್ ಮಾಯಾ ಗೊಗೊಯ್ (19) ಕೊಲೆ ಮಾಡಿರುವುದಾಗಿ ಕಣ್ಣೂರು ಮೂಲದ ಆರವ್ ಹನೋಯ್ ಒಪ್ಪಿಕೊಂಡಿದ್ದಾನೆ. 21 ವರ್ಷದ ಆರವ್ ಕಣ್ಣೂರಿನ ತೊಟ್ಟಾ ನಿವಾಸಿ.

ಬೆಂಗಳೂರಿನ ಇಂದಿರಾನಗರ ಎರಡನೇ ಹಂತದ ರಾಯಲ್ ಲಿವಿಂಗ್ಸ್ ಅಪಾರ್ಟ್‌ಮೆಂಟ್‌ನಲ್ಲಿ ಮಂಗಳವಾರ ಮಾಯಾ ಕೊಲೆಯಾಗಿ ಪತ್ತೆಯಾಗಿದ್ದಾಳೆ. ಆರವ್ ನು ಮಾಯಾ ಅವರೊಂದಿಗೆ ಅಪಾರ್ಟ್‌ಮೆಂಟ್‌ನಲ್ಲಿ ಜಗಳವಾಡಿದರು ಮತ್ತು ಕೊಲೆಯ ನಂತರ ಆತ್ಮಹತ್ಯೆಗೆ ಯತ್ನಿಸಿದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.

ಆರವ್ ಆನ್‌ಲೈನ್‌ನಲ್ಲಿ ಹಗ್ಗ ಮತ್ತು ಚಾಕು ಖರೀದಿಸಿ ಇಟ್ಟುಕೊಂಡಿದ್ದ. ಅಪಾರ್ಟ್‌ಮೆಂಟ್ ತಲುಪಿದ ಬಳಿಕ ಇಬ್ಬರ ನಡುವೆ ವಾಗ್ವಾದ ನಡೆದಿದೆ. ನಂತರ, ಆರವ್ ಮಾಯಾಳ ಕುತ್ತಿಗೆಗೆ ಹಗ್ಗವನ್ನು ಕಟ್ಟಿ ಅವಳನ್ನು ಕೊಂದನು. ಆಕೆಯ ಸಾವನ್ನು ಖಚಿತಪಡಿಸಿಕೊಳ್ಳಲು ಅವನು ಅವಳನ್ನು ಚಾಕುವಿನಿಂದ ಇರಿದಿದ್ದಾನೆ.

ನಂತರ ಕೋಣೆಯಲ್ಲಿ ಫ್ಯಾನ್‌ಗೆ ಬಿಗಿದು ಮಾಯಾಳನ್ನು ಕೊಂದ ಹಗ್ಗವನ್ನೇ ಬಳಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅದು ಫಲಕಾರಿಯಾಗದ ಕಾರಣ ಪ್ರಯತ್ನವನ್ನು ಕೈಬಿಟ್ಟೆ ಎಂದು ಯುವಕ ತನ್ನ ಹೇಳಿಕೆಯನ್ನೂ ನೀಡಿದ್ದಾನೆ.

ಇಬ್ಬರೂ ಡೇಟಿಂಗ್ ಅಪ್ಲಿಕೇಶನ್ ಮೂಲಕ ಸ್ನೇಹಿತರಾಗಿದ್ದರು. ಮಾಯಾಗೆ ಬೇರೆಯವರ ಜೊತೆ ಸಂಬಂಧವಿದೆ ಎಂಬ ಶಂಕೆ ಕೊಲೆಗೆ ಕಾರಣವಾಗಿತ್ತು. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ.

ವಿಚಾರಣೆ ವೇಳೆ ಆರವ್ ತೀವ್ರ ಖಿನ್ನತೆಯ ಲಕ್ಷಣಗಳನ್ನು ತೋರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೋವೈದ್ಯರ ಸೇವೆಯನ್ನು ಪಡೆದ ನಂತರವಷ್ಟೇ ವಿಚಾರಣೆ ಮುಂದುವರಿಯಲಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಿಂದ ಪರಾರಿಯಾಗಿದ್ದ ಆರವ್ ಮೊದಲು ಉತ್ತರ ಕರ್ನಾಟಕದ ರಾಯಚೂರಿಗೆ ಹೋಗಿದ್ದ. ಅಲ್ಲಿ ಒಂದು ದಿನ ತಂಗಿದ್ದ ಅವನು ಮಧ್ಯಪ್ರದೇಶಕ್ಕೆ ಪ್ರಯಾಣಿಸಿದ. ನಂತರ ಅಲ್ಲಿಂದ ವಾರಣಾಸಿಗೆ ಹೋದ.

ಅಲ್ಲಿಂದ ಕಣ್ಣೂರಿನ ತೊಟ್ಟಡದ ಮನೆಗೆ ತನ್ನ ಅಜ್ಜನಿಗೆ ಕರೆ ಮಾಡಿ ಮಾತನಾಡಿದರು. ಶರಣಾಗಲು ಅಜ್ಜನ ಮನವಿಗೆ ಒಪ್ಪಿದ ಆರವ್ ಪೊಲೀಸರಿಗೆ ಕರೆ ಮಾಡಿ ಶರಣಾಗುವುದಾಗಿ ತಿಳಿಸಿದ್ದಾನೆ.

ಬೆಂಗಳೂರಿಗೆ ಹಿಂತಿರುಗುವಂತೆ ಪೊಲೀಸರು ಕೇಳಿಕೊಂಡ ನಂತರ, ಆರವ್‌ನನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದರು.

ಮಾಯಾ ಮತ್ತು ಆರವ್ 23 ರ ಸಂಜೆ ಕೊಠಡಿಯೊಂದರಲ್ಲಿ ರೂಮ್ ಪಡೆದಿದ್ದರು. ಕೊಲೆ ಮಾಡಿದ ನಂತರ ಎರಡು ದಿನಗಳ ಕಾಲ ಅಂದರೆ ಭಾನುವಾರ ಮತ್ತು ಸೋಮವಾರ ಕೊಠಡಿಯಲ್ಲಿ ಕಳೆದ ಆರವ್ ಮಂಗಳವಾರ ಬೆಳಗ್ಗೆ 8 ಗಂಟೆಯ ನಂತರ ಹೊರಟು ಹೋಗಿದ್ದಾನೆ.

ಕೊಠಡಿಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ನೌಕರರು ಮತ್ತೊಂದು ಕೀ ಬಳಸಿ ತೆರೆದು ನೋಡಿದಾಗ ಯುವತಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಧರ್ಮಸ್ಥಳ ವಸ್ತು ಪ್ರದರ್ಶನ ಮಂಟಪದಲ್ಲಿ ತಾಳಮದ್ದಳೆ

0

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ರಾಜ್ಯಮಟ್ಟದ ವಸ್ತು ಪ್ರದರ್ಶನ ಮಂಟಪದಲ್ಲಿ ಪುತ್ತೂರು ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ವಿಂಶತಿ ಸಂಭ್ರಮದ 15ನೇ ಸರಣಿ ತಾಳಮದ್ದಳೆ “ಶರಸೇತುಬಂಧ’ ಜರಗಿತು.

ಭಾಗವತರಾಗಿ ಮುರಳೀಕೃಷ್ಣ ಶಾಸ್ತ್ರಿ ತೆಂಕಬೈಲು ಹಾಗೂ ಚೆಂಡೆ, ಮದ್ದಲೆಗಳಲ್ಲಿ ಪಿ.ಟಿ. ಜಯರಾಮ್ ಭಟ್,ಪಿ.ಜಿ.ಜಗನ್ನಿವಾಸ ರಾವ್ ಪ್ರದರ್ಶನ ನೀಡಿದರು.

ಮುಮ್ಮೇಳದಲ್ಲಿ, ಶುಭಾ ಅಡಿಗ (ಹನೂಮಂತ), ಪ್ರೇಮಲತಾರಾವ್(ಶ್ರೀ ರಾಮ), ಕಿಶೋರಿ ದುಗ್ಗಪ್ಪ ನಡುಗಲ್ಲು (ಅರ್ಜುನ), ಹರಿಣಾಕ್ಷಿ .ಜೆ.ಶೆಟ್ಟಿ (ವೃದ್ಧ ಬ್ರಾಹ್ಮಣ) ಭಾಗವಹಿಸಿದ್ದರು.

ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು.

ಜಮಾ ಉಗ್ರಾಣದ ನಿವೃತ್ತ ಮುತ್ಸದ್ದಿ ಶ್ರೀ ಭುಜಬಲಿ ಧರ್ಮಸ್ಥಳ ಕಲಾವಿದರನ್ನು ಗೌರವಿಸಿದರು.

ನಮ್ಮ ವಾಟ್ಸಪ್‌ ಗ್ರೂಪ್‌ಗೆ ಸೇರಿರಿ