Saturday, February 22, 2025
Home Blog Page 380

ಕೃಷಿಯಲ್ಲಿ ತೊಡಗಿಸಿಕೊಂಡ ರಕ್ತರಾತ್ರಿಯ ಅಶ್ವತ್ಥಾಮ ಖ್ಯಾತಿಯ ಗುಂಡಿಮಜಲು

ತೆಂಕುತಿಟ್ಟಿನ ಅತ್ಯುತ್ತಮ ಪುಂಡುವೇಷಧಾರಿಗಳಲ್ಲಿ ಗುಂಡಿಮಜಲು ಒಬ್ಬರು. ಮಿತ್ರರು, ಸಹಕಲಾವಿದರು, ಕಲಾಭಿಮಾನಿಗಳು ಇವರನ್ನು ಗುಂಡಿಮಜಲು ಗೋಪಣ್ಣ ಎಂದೇ ಕರೆದರೂ ಇವರ ಪೂರ್ತಿ ಹೆಸರು ಗುಂಡಿಮಜಲು ಗೋಪಾಲಕೃಷ್ಣ ಭಟ್. 1959 ನವೆಂಬರ್ 5ರಂದು ಬಂಟ್ವಾಳ ತಾಲೂಕು, ಬೋಳಂತೂರು ಗ್ರಾಮದ ಗುಂಡಿಮಜಲು ಎಂಬಲ್ಲಿ ಇವರ ಜನನ. ಗುಂಡಿಮಜಲು ಸುಬ್ರಾಯ ಭಟ್, ವೆಂಕಟೇಶ್ವರೀ ಅಮ್ಮ ದಂಪತಿಗಳ ಏಳು ಮಂದಿ ಪುತ್ರರಲ್ಲಿ ಇವರು 5ನೇಯವರು. ಪ್ರಾಥಮಿಕ ಮತ್ತು ಹೈಸ್ಕೂಲ್ ವಿದ್ಯಾಭ್ಯಾಸ ಸುರಿಬೈಲು ಮತ್ತು ಬೋಳಂತೂರು ಶಾಲೆಗಳಲ್ಲಿ. ಎಳವೆಯಲ್ಲೇ ಯಕ್ಷಗಾನಾಸಕ್ತಿ. ಬಹಳ ದೂರದ ವರೆಗೆ ನಡೆದುಕೊಂಡೇ ಸಾಗಿ ಆಟಗಳನ್ನು ನೋಡುತ್ತಿದ್ದರಂತೆ.

ಶಾಲಾ ವಿದ್ಯಾರ್ಥಿಯಾಗಿದ್ದಾಗ ವಿಟ್ಲ ರಾಮಯ್ಯ ರೈಗಳಿಂದ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಕಲಿತಿದ್ದರು. ನಂತರ ಶ್ರೀ ಧರ್ಮಸ್ಥಳ ಲಲಿತ ಕಲಾ ಕೇಂದ್ರದಲ್ಲಿ ಶ್ರೀ ಪಡ್ರೆ ಚಂದು ಅವರಿಂದ ನಾಟ್ಯ ಕಲಿತರು (ಎರಡನೇ ಬ್ಯಾಚ್). ಕೇಂದ್ರದಲ್ಲಿ ಗೇರುಕಟ್ಟೆ ಗಂಗಯ್ಯ ಶೆಟ್ಟಿ, ಉಮೇಶ ಹೆಬ್ಬಾರ್, ಬೆಳಾಲು ಲಕ್ಷ್ಮಣ ಗೌಡ ಮೊದಲಾದವರು ಇವರ ಸಹಪಾಠಿಗಳಾಗಿದ್ದರು. ನಾಟ್ಯಾರ್ಜನೆಯ ಬಳಿಕ ಸೊರ್ನಾಡು ವಿಶ್ವನಾಥ ಶೆಟ್ಟರ ಸಂಚಾಲಕತ್ವದ ಸೊರ್ನಾಡು ಮೇಳದಲ್ಲಿ 1 ವರುಷ ತಿರುಗಾಟ ನಡೆಸಿ, ಮತ್ತೆ ಕಟೀಲು ಮೇಳವನ್ನು ಸೇರಿಕೊಂಡರು.


ಶ್ರೀ ಬಲಿಪರು ಆಗ ಕಟೀಲು 2ನೇ ಮೇಳದ ಪ್ರಧಾನ ಭಾಗವತರಾಗಿದ್ದರು. ಕೋಡಂಗಿ, ಬಾಲಗೋಪಾಲರು, ಪೀಠಿಕಾ ಸ್ತ್ರೀವೇಷಗಳನ್ನು ಮಾಡುತ್ತಾ ಹಂತ ಹಂತವಾಗಿ ಬೆಳೆದು ಕಲಾವಿದನಾಗಿ ರೂಪುಗೊಂಡವರು ಶ್ರೀ ಗುಂಡಿಮಜಲು ಗೋಪಾಲಕೃಷ್ಣ ಭಟ್. ಪೆರುವಾಯಿ, ಅರುವ, ರೆಂಜಾಳ, ಶೀನಪ್ಪ ರೈ, ಮಂಕುಡೆ ಸಂಜೀವ ಶೆಟ್ಟಿ, ಕುಟ್ಯಪ್ಪು, ಕುಂಞಕಣ್ಣ ಮಣಿಯಾಣಿ ಮೊದಲಾದ ಶ್ರೇಷ್ಠ ಕಲಾವಿದರ ಒಡನಾಟವೂ ಇವರಿಗೆ ಸಿಕ್ಕಿತ್ತು. ಮಳೆಗಾಲ ಶ್ರೀ ಬಲಿಪ ನಾರಾಯಣ ಭಾಗವತರ ಮನೆಯಲ್ಲಿದ್ದು ಗುಂಡಿಮಜಲು ಅವರು ಪುರಾಣ ಪ್ರಸಂಗಗಳ ನಡೆ, ವೇಷಗಳ ಸ್ವಭಾವ, ಚಿತ್ರಣಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಬಲಿಪರು ನನ್ನನ್ನು ತಿದ್ದಿತೀಡಿದರು ಎಂದು ಗುಂಡಿಮಜಲು ಗೋಪಾಲ ಭಟ್ಟರು ಹೇಳುವ ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸುತ್ತಾರೆ.

ಬಲಿಪರ ಜತೆ 5 ವರ್ಷ ತಿರುಗಾಟ ನಡೆಸಿ, ಇರಾ ಗೋಪಾಲಕೃಷ್ಣ ಭಾಗವತರ ಜತೆ ಕಟೀಲು 1ನೇ ಮೇಳದಲ್ಲಿ 1 ವರ್ಷ ತಿರುಗಾಟ, ಮತ್ತೆ ಬಲಿಪರ ಜತೆ 6 ವರ್ಷ ಕಟೀಲು ಮೇಳದಲ್ಲಿ ಕಲಾಸೇವೆಯನ್ನು ಮಾಡಿದರು. ಮತ್ತೆ 3 ವರ್ಷ ಕುರಿಯ ಶ್ರೀ ಗಣಪತಿ ಶಾಸ್ತ್ರಿಯವರ ಜತೆ 3ನೇ ಮೇಳದಲ್ಲಿ ವ್ಯವಸಾಯ ಮಾಡಿದರು. ನಾನು ಕಲಾವಿದನಾಗಿ ಕಾಣಿಸಿಕೊಳ್ಳುವುದಕ್ಕೆ ಬಲಿಪ ಭಾಗವತರು ಮತ್ತು ಸಹಕಲಾವಿದರೇ ಕಾರಣರು. ಅವರೇ ನನ್ನನ್ನು ರಂಗದಲ್ಲಿ ಮೆರೆಯುವಂತೆ ಮಾಡಿದವರು ಎಂದು ಕೃತಜ್ಞತೆಯಿಂದ ಹೇಳುವ ಗುಂಡಿಮಜಲು, ಅಭಿಮನ್ಯು, ಚಂಡಮುಂಡರು, ಕುಶ, ಬಭ್ರುವಾಹನ ಮೊದಲಾದ ಪಾತ್ರಗಳನ್ನು ಮಾಡುತ್ತಾ ಪ್ರಸಿದ್ಧರಾದರು.

ಬಲಿಪ ನಾರಾಯಣ ಭಾಗವತರು ಬರೆದ ಪ್ರಸಂಗ- ರಕ್ತರಾತ್ರಿ (ಚಾಲ್ತಿಯಲ್ಲಿರಲಿಲ್ಲ) ಮೊದಲ ಪ್ರಯೋಗ ನಡೆದದ್ದು ಕಿನ್ನಿಗೋಳಿ ಬಸ್ ನಿಲ್ದಾಣದ ಸಮೀಪ. ಅಶ್ವತ್ಥಾಮನಾಗಿ ಕಾಣಿಸಿಕೊಂಡರು ಗುಂಡಿಮಜಲು ಗೋಪಾಲಣ್ಣ. ಆಗ ನೆಲದ ರಂಗಸ್ಥಳ. ಅಶ್ವತ್ಥಾಮನ ಪಾತ್ರಕ್ಕೊಂದು ರೂಪು ಕೊಟ್ಟು ಪ್ರಚಂಡನಾಗಿ ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡರು. ಸಂತೋಷಗೊಂಡ ಬಲಿಪ ಭಾಗವತರು ಇವನಿಂದ ಯಾವ ವೇಷವನ್ನೂ ಮಾಡಿಸಬಹುದು ಎಂದು ಹೇಳಿದರಂತೆ. ತೆಂಕಿನ ಪುಂಡುವೇಷಗಳಿಗೆ, ಕಲಾವಿದರಿಗೆ ಇವರೊಬ್ಬ ಮಾದರಿಯಾಗಬಲ್ಲ ಕಲಾವಿದ.

ಮೇಳದ ತಿರುಗಾಟದಿಂದ ನಿವೃತ್ತರಾಗಿ ಈಗ ಅತಿಥಿ ಕಲಾವಿದರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೃಷಿಕ ಕುಟುಂಬದಲ್ಲಿ ಜನಿಸಿದ ಗುಂಡಿಮಜಲು ಗೋಪಾಲಕೃಷ್ಣ ಭಟ್ಟರು ಉತ್ತಮ ಕೃಷಿಕರೂ ಹೌದು. ರಂಗಸ್ಥಳದಲ್ಲಿ ಕಸುಬು ಮಾಡಿದಂತೆ ತನ್ನ ಹೊಲ, ತೋಟಗಳಲ್ಲೂ ಚೆನ್ನಾಗಿ ದುಡಿಯುತ್ತಾರೆ. ಶ್ರಮಜೀವಿಯಾಗಿದ್ದಾರೆ. ಪತಿಯ ಮನವರಿತು ನಡೆಯುವ ಪತ್ನಿ ಶ್ರೀಮತಿ ಲತಾ ಗೋಪಾಲಕೃಷ್ಣ ಭಟ್ ಮತ್ತು ಪುತ್ರ ಸುಚೇತ್ ಅವರೊಂದಿಗೆ ಸುಖೀಸಂಸಾರ ಗುಂಡಿಮಜಲು ಅವರದು. (ಪುತ್ರ ಸುಚೇತ್ ಇಂಜಿನಿಯರಿಂಗ್ ವಿದ್ಯಾರ್ಥಿ). ಸಾಧಕರಾದ ಶ್ರೀ ಗುಂಡಿಮಜಲು ಅವರಿಗೆ ‘ಸರ್ಪಂಗಳ ಪ್ರಶಸ್ತಿ’ ಒಲಿಯಿತು ು

ಲೇಖನ: ರವಿಶಂಕರ ವಳಕ್ಕುಂಜ

ಸಾಹಿತಿಯೂ ಅರ್ಥಧಾರಿಯೂ – ರಾಧಾಕೃಷ್ಣ ಕಲ್ಚಾರ್

ಓದಿದ್ದು ಕನ್ನಡ ಎಂ. ಎ , ಸ್ನಾತಕೋತ್ತರ ಪದವಿ. ವೃತ್ತಿ ಆರಂಭಿಸಿದ್ದು ಪತ್ರಕರ್ತನಾಗಿ. ಆಮೇಲೆ ವೃತ್ತಿಯಲ್ಲಿ ಔನ್ನತ್ಯವನ್ನು ಕಂಡದ್ದು ಸರಕಾರೀ ಕಾಲೇಜಿನ ಉಪನ್ಯಾಸಕನಾಗಿ. ಆದರೆ ಇದು ಅಷ್ಟಕ್ಕೇ ನಿಲ್ಲುವುದಿಲ್ಲ. ಪ್ರಮುಖ ಪತ್ರಿಕೆಯ ಅಂಕಣಕಾರರಾಗಿ, ಸಾಹಿತಿಯಾಗಿ,  ವಿಮರ್ಶಕನಾಗಿ ,  ಪ್ರವಚನ ಮತ್ತು ಭಾಷಣಕಾರರಾಗಿ ಹೀಗೆ  ಹತ್ತು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರಿವರು. ಆದರೆ ಇದೆಲ್ಲಕ್ಕಿಂತಲೂ ಹೆಚ್ಚು ಜನರಿಗೆ ಹತ್ತಿರವಾದದ್ದು ಯಕ್ಷಗಾನ ತಾಳಮದ್ದಳೆಯ ಪ್ರಮುಖ ಅರ್ಥಧಾರಿಯಾಗಿ. ಇಷ್ಟು ಹೇಳಿದ ಮೇಲೆ ಅವರ ಹೆಸರನ್ನು ಹೇಳುವ ಅಗತ್ಯವೇ ಇರುವುದಿಲ್ಲ. ಅವರು ಯಾರೆಂದು ಎಲ್ಲರೂ ಊಹಿಸಿರುತ್ತೀರಿ.  ಹಲವು ರಂಗಗಳಲ್ಲಿ ಪ್ರಭುತ್ವ ಸಾಧಿಸಿ ಅದರಲ್ಲಿ ಪ್ರಖ್ಯಾತಿಯನ್ನು ಪಡೆಯುವ ವ್ಯಕ್ತಿಗಳು ವಿರಳ. ಅಂತಹ ಮಹಾನುಭಾವರಲ್ಲೊಬ್ಬರು  ಶ್ರೀ ರಾಧಾಕೃಷ್ಣ ಕಲ್ಚಾರ್.                  
ಇವರನ್ನು ಪರಿಚಯ ಮಾಡಿಕೊಡುವ ಅಗತ್ಯ ಇಲ್ಲ .  ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಥಮ Rank ನೊಂದಿಗೆ ಕನ್ನಡ ಎಂ.ಎ. ಪದವಿಯನ್ನು ಗಳಿಸಿದವರು. ಪತ್ರಿಕಾ ಸಂಪಾದಕರೂ ಆದರು. ಆಮೇಲೆ ಸರಕಾರಿ ಉದ್ಯೋಗ ಕೈಬೀಸಿ ಕರೆಯಿತು. ಜೊತೆಗೆ ಸಾಹಿತಿಯಾಗಿ ಹಲವಾರು ಲೇಖನ ಅಂಕಣಗಳನ್ನು ಬರೆದು ಅಲ್ಲಿಯೂ ತನ್ನ ಛಾಪನ್ನು ಮೂಡಿಸಿದರು.     ‘ಕೂಡುಮನೆ’ ಎಂಬ ಕಾದಂಬರಿ, ‘ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ’ಯವರ ಬಗ್ಗೆ ಬರೆದ ಪರಿಚಯಾತ್ಮಕ ಗ್ರಂಥ, ‘ಅವರವರ ದಾರಿ’ ಎಂಬ ಕಥಾಸಂಕಲನ, ಪರಕಾಯ ಪ್ರವೇಶ, ಆಲೋಚನ ಇವುಗಳು ಇವರ ಪ್ರಕಟಿತ ಕೃತಿಗಳು.     

ತಾಳಮದ್ದಳೆ ರಂಗ ಕೈ ಬೀಸಿ ಕರೆದಾಗ ತಾನೊಲ್ಲೆ ಎನ್ನಲಿಲ್ಲ. ತಾಳಮದ್ದಳೆ ಕ್ಷೇತ್ರದಲ್ಲಿಯೂ ಸಕ್ರಿಯವಾಗಿ ಭಾಗವಹಿಸಲು ಮನಮಾಡಿದರು. ಮುಂದಿನದ್ದು ಇತಿಹಾಸ. ತಮಗೆಲ್ಲರಿಗೂ ಗೊತ್ತೇ ಇದೆ. ಮಾತಿಗಿಳಿದಾಗ ಎಷ್ಟೂ ಮಾತನಾಡುವ ಕಲ್ಚಾರರು ಕೆಲವೊಮ್ಮೆ ವಾಚಾಳಿಯಾಗಿ ಕಂಡರೂ ಕೆಲವೊಂದು ಪ್ರಶ್ನೆಗಳಿಗೆ ಚುಟುಕಾಗಿ ಉತ್ತರಿಸುವುದೂ ಉಂಟು. ಕೆಲವೊಮ್ಮೆ ನಗುವೇ ಉತ್ತರವಾಗಿಬಿಡುತ್ತದೆ.   ಉದ್ಯೋಗ ಅನಿವಾರ್ಯತೆ ಎದುರಾದಾಗ ಪತ್ರಿಕೆಯಲ್ಲಿ ಉಪಸಂಪಾದಕನಾಗಿ ಕೆಲಸ ಮಾಡಿದೆ ಎಂದು ಅವರು ಒಪ್ಪಿಕೊಳ್ಳುತ್ತಾರೆ.  ಒಂದೆರಡು ಪ್ರಸಿದ್ಧ ಪತ್ರಿಕೆಗಳಲ್ಲಿ ಉಪಸಂಪಾದಕನಾಗಿ ಕೆಲಸ ಮಾಡಿದ ನಂತರ  ಅರ್ಹತೆಯ ಆಧಾರದ ಮೇಲೆ ಸರಕಾರೀ ಉಪನ್ಯಾಸಕ ಹುದ್ದೆ ಕೈ ಬೀಸಿ ಕರೆಯಿತು.

ಸುಮಾರು ೨೧ ವರ್ಷಗಳ ಕಾಲ ಉಪನ್ಯಾಸಕನಾಗಿ ಸೇವೆ ಸಲ್ಲಿಸಿ ಆಮೇಲೆ ಸ್ವಯಂ ನಿವೃತ್ತಿ ಪಡೆದುಕೊಂಡರು.  ಯಕ್ಷಗಾನವನ್ನು  ಹವ್ಯಾಸವಾಗಿಯೇ ತೆಗೆದುಕೊಂಡಿದ್ದೇನೆಯೇ ಹೊರತು ಅದನ್ನೊಂದು ವೃತ್ತಿಯಾಗಿ ಭಾವಿಸಿರಲಿಲ್ಲ. ತಾಳಮದ್ದಳೆಯ ಭಾಗವಹಿಸುವಿಕೆಯಿಂದ ನನ್ನ ಉಪನ್ಯಾಸಕ ವೃತ್ತಿಗೆ ತೊಂದರೆಯಾಗದಂತೆ ನೋಡಿಕೊಂಡಿದ್ದೆ. ನಿವೃತ್ತಿಗೂ ತಾಳಮದ್ದಳೆಯ ಭಾಗವಹಿಸುವಿಕೆಗೂ ಸಂಬಂಧವಿಲ್ಲ. ಆದರೆ ನಿವೃತ್ತನಾದ ಮೇಲೆ ಹೆಚ್ಚು ಸ್ವತಂತ್ರನಾದುದರಿಂದ ತಾಳಮದ್ದಳೆಯ ಭಾಗವಹಿಸುವಿಕೆಗೆ ಅನುಕೂಲವಾದದ್ದು ಸತ್ಯ. ತಾಳಮದ್ದಳೆಯ ಅರ್ಥಗಾರಿಕೆ ತಾಳಮದ್ದಳೆಯ ತಿಳುವಳಿಕೆಗಳಿಂದ ಉಪನ್ಯಾಸಕ ವೃತ್ತಿಗೆ ತುಂಬಾ ಸಹಾಯವಾಯಿತು ಎಂದು ರಾಧಾಕೃಷ್ಣ ಕಲ್ಚಾರರು ಹೇಳುತ್ತಾರೆ.

ಪರಂಪರೆಯಿಂದ ಇವರ ಹಿರಿಯರಾರೂ ಕಲಾವಿದರಲ್ಲ. ಅದರೂ ಇವರಲ್ಲಿದ್ದ ಆಸಕ್ತಿ ಅವರೊನ್ನೊಬ್ಬ ತಾಳಮದ್ದಳೆಯ ಸಮರ್ಥ ಅರ್ಥಧಾರಿಯನ್ನಾಗಿ ರೂಪಿಸಿತು. ಒಂದೊಮ್ಮೆ ನಾನು ಅರ್ಥಧಾರಿ ಆಗದೆ ಇದ್ದಿದ್ದರೆ ಬಹುಶಃ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯನಾಗಿರುತ್ತಿದ್ದೆನೋ ಏನೋ? ಹಾಗೆಂದು ನಾನು ಬರವಣಿಗೆಯಿಂದ ವಿಮುಖನಾಗಿಲ್ಲ ಎಂದು ಹೇಳುವ ಕಲ್ಚಾರರು  ತುಷಾರದಲ್ಲಿ ‘ವಿಲಿಯ ಉಯ್ಯಾಲೆ’ ಉತ್ಥಾನ ಮಾಸಪತ್ರಿಕೆಯಲ್ಲಿ ‘ಪರಕಾಯ ಪ್ರವೇಶ’  ತರಂಗದಲ್ಲಿ ‘ಬಿಂಬ-ಪ್ರತಿಬಿಂಬ’ ಎಂಬ ಅಂಕಣ ಬರೆಯುತ್ತಿದ್ದಾರೆ.  ಸಾಂದರ್ಭಿಕವಾಗಿ ಹಲವು ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದಾರೆ.   ಯಕ್ಷಗಾನ ಪತ್ರಿಕೆಗಳಿಗೂ ಲೇಖನಗಳನ್ನು ಬರೆಯುತ್ತಿದ್ದಾರೆ.  ಯಕ್ಷಗಾನಕ್ಕೆ ಪ್ರತ್ಯೇಕ ಪಠ್ಯಪುಸ್ತಕ ರಚನೆ ಆಗಬೇಕೆಂಬ ಉದ್ದೇಶದಿಂದ ರಚನೆಯಾದ ಸಮಿತಿಯಲ್ಲಿ  ಪ್ರಾಥಮಿಕ ಮತ್ತು ಪ್ರೌಢ ಹಂತದ ಎರಡು ಸಮಿತಿಗಳು. ಅದರಲ್ಲಿ ಕಲ್ಚಾರರು ಪ್ರೌಢ ಹಂತದ ಸಮಿತಿಯ ಸದಸ್ಯ.  

” ನಾನು ಯಕ್ಷಗಾನಕ್ಕೆ ಪಾದಾರ್ಪಣೆ ಮಾಡುವ ಸಮಯದಲ್ಲಿ ಯಕ್ಷಗಾನಕ್ಕೆ ದೊಡ್ಡ ಪಾಠಶಾಲೆಯ ಹಾಗೆ ಇದ್ದುದೇ ಈ ಯಕ್ಷಗಾನದ ಸಂಘಗಳು. ನಾನು ಯಕ್ಷಗಾನ ಕಲಾವಿದನಾಗಿ ರೂಪುಗೊಳ್ಳಲು ಸಂಘಗಳ ಕೊಡುಗೆ ತುಂಬ ದೊಡ್ಡದು. ಈಗಲೂ ಒಂದು ಸಂಘದ ಸದಸ್ಯನಾಗಿಯೇ ಇದ್ದೇನೆ” ಎಂದು ರಾಧಾಕೃಷ್ಣ ಕಲ್ಚಾರರು ಎಂದು ವಿನಯದಿಂದ ನುಡಿಯುತ್ತಾರೆ.  ವೇದಿಕೆಗೆ ಒಪ್ಪುವ ಹಾಗೆ ಸಹಜವಾದ ಅಂಗಾಂಗ ಚಲನೆಗಳು, ಮುಖಭಾವಗಳು ಇತ್ಯಾದಿ ಅಭಿನಯಗಳು ಆಕರ್ಷಕವಾಗಿಯೇ ಇರುತ್ತವೆ. ಇಂತಹಾ ಅಭಿನಯಗಳು ವಿಪರೀತಕ್ಕೆ ಹೋಗದಂತೆ ತಾಳಮದ್ದಳೆ ಕಲಾವಿದರಲ್ಲಿ ಇರಬೇಕೆಂದು ಅವರ ಅಭಿಪ್ರಾಯ. 

‘ಅಗತ್ಯವಿದ್ದಲ್ಲಿ ವಾದ ಮಾಡಬೇಕು. ವಾದಕ್ಕಾಗಿ ವಾದವಲ್ಲ. ವಾದವೇ ಮುಖ್ಯವಲ್ಲ. ಆದರೆ ವಾದವೂ ಮುಖ್ಯವೇ. ವಾದವು ಪಾತ್ರದ ಒಂದು ಅಂಗವಾಗಿದ್ದರೆ ಮಾತ್ರ. ಭಾವುಕ ಸನ್ನಿವೇಶಗಳಿಗೆ ವಾದ ಬರುವುದಿಲ್ಲ. ಬಂತು ಅಂತಾದರೆ ಪಾತ್ರಶಿಲ್ಪವನ್ನು ಒಡೆದ ಹಾಗೆ’ ಎಂಬುದು ಕಲ್ಚಾರರ ಪ್ರಾಮಾಣಿಕ ಅನಿಸಿಕೆ. ಸ್ವಯಂ ನಿವೃತ್ತ್ತಿ ಯಾಕೆ ಪಡೆದಿರಿ ಎಂಬ ಪ್ರಶ್ನೆಗೆ  “ಸ್ವಯಂ ನಿವೃತ್ತಿ ಪಡೆಯಲು ಕಾರಣ ನನ್ನ ಸ್ವಾತಂತ್ರ್ಯ, ಸಮಯಗಳನ್ನು ಅನುಭವಿಸಲು. ಯಾಕೆಂದರೆ ನಿರ್ಬಂಧಗಳೊಳಗೆ ಬದುಕುವುದು ನನಗೆ ಪ್ರಿಯವಲ್ಲ.

ಆದರೆ ನಿವೃತ್ತಿ ಪಡೆದ ಮೇಲೆ ತಾಳಮದ್ದಳೆಗಳಲ್ಲಿ ಭಾಗವಹಿಸುವಿಕೆ ಹೆಚ್ಚಾಗಿದೆ. ಭವಿಷ್ಯದಲ್ಲಿ ತಾಳಮದ್ದಳೆಗಳ ಭಾಗವಹಿಸುವಿಕೆ ಇಲ್ಲದಿದ್ದರೂ ನನ್ನ ಸಮಯವನ್ನು ಉಪಯುಕ್ತವಾಗಿಯೇ ಕಳೆಯಬಲ್ಲೆ ಎಂಬ ವಿಶ್ವಾಸವಿದೆ. ನಾನು ಉಪನ್ಯಾಸಕನಾಗಿ ಮುಂದುವರಿದಿದ್ದರೆ ಪ್ರಾಂಶುಪಾಲನಾಗಿ ಕೆಲಸ ಮಾಡಬೇಕಾಗುತ್ತಿತ್ತು. ಬೋಧನಾ ವೃತ್ತಿಗಿಂತ ಆಡಳಿತಾತ್ಮಕ ಹುದ್ದೆ ಆಕರ್ಷಕ ಅಂತ ಅನ್ನಿಸಲಿಲ್ಲ. ಆ ಕಾರಣವೂ ಸ್ವಯಂ ನಿವೃತ್ತಿ ಪಡೆಯಲು ಒಂದು ಹಿನ್ನೆಲೆಯಾಯಿತು” ಎಂದು ರಾಧಾಕೃಷ್ಣ ಕಲ್ಚಾರರು ಹೇಳುತ್ತಿದ್ದರು.    

ಶೇಣಿ ಗೋಪಾಲಕೃಷ್ಣ ಭಟ್ಟರಿಂದ ಪ್ರಭಾವಿತರಾಗಿದ್ದ ಕಲ್ಚಾರರು ತೆಕ್ಕಟ್ಟೆ ಆನಂದ ಮಾಸ್ತರ್ , ರಾಮದಾಸ ಸಾಮಗರನ್ನೂ ಮೆಚ್ಚಿಕೊಳ್ಳುತ್ತಾರೆ. ಅದಲ್ಲದೆ ನಾನೊಂದಿಗೆ ಒಡನಾಡಿದ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳು, ಪ್ರಭಾಕರ ಜೋಶಿಯವರು, ಕುಂಬಳೆಯವರು, ಶಂಭುಶರ್ಮರು ಮೊದಲಾದವರು  ತುಂಬಾ ಪ್ರೋತ್ಸಾಹಿಸಿದವರು. ಎಲ್ಲ ಹಿಂದಿನ ಕಲಾವಿದರಿಗೆ, ಅರ್ಥಧಾರಿಗಳಿಗೆ ಯಾವಾಗಲೂ ಕೃತಜ್ಞರಾಗಿರಬೇಕು. ನಾವು ಮಾತನಾಡುವುದಕ್ಕೆ ಇಂತಹಾ ಒಂದು ವೇದಿಕೆಯನ್ನು ತುಂಬಾ ಸುಸಜ್ಜಿತವಾಗಿ ಪರಿಷ್ಕರಿಸಿಕೊಟ್ಟವರು ಅವರು.

ಈಗ ನನ್ನ ಜೊತೆ ಒಡನಾಡುವ ಎಲ್ಲ ಅರ್ಥಧಾರಿಗಳನ್ನೂ ಇಷ್ಟಪಡುತ್ತೇನೆ ಎಂದು ಅವರ ಅಭಿಪ್ರಾಯ.   ಸ್ನಾತಕೋತ್ತರ ಪದವೀಧರರಾದ ಕಲ್ಚಾರರು ಕನ್ನಡ, ಸಾಹಿತ್ಯ, ಛಂದಸ್ಸುಗಳಲ್ಲಿ ತಮ್ಮ ಹಿಡಿತ, ಪ್ರಭುತ್ವವನ್ನು ಸಾಧಿಸಿದವರು. ಕೆಲವೇ ನಿಮಿಷಗಳಲ್ಲಿ ಭಾಮಿನಿ ಷಟ್ಪದಿಯಲ್ಲಿ ಪದ್ಯ ಹೊಸೆಯುವ ಸಾಮರ್ಥ್ಯ ಇವರ ಇನ್ನೊಂದು ವಿಶೇಷತೆ .  

ಪಾತ್ರಧಾರಿಯು ವಾದದಲ್ಲಿ ತಾನು ಸೋತಾದರೂ ಪಾತ್ರವನ್ನು ಗೆಲ್ಲಿಸುವುದೇ ಅವರ ದೊಡ್ಡತನ

ರಂಗದ ಉತ್ಸಾಹವೇ ಹಾಗೆ. ಅದಕ್ಕೆ ಸುತ್ತಮುತ್ತಲಿನ ಹುಮ್ಮಸ್ಸಿನ ವಾತಾವರಣವೂ ಪೂರಕವಾದರೆ ಮತ್ತೆ ಕೇಳಬೇಕೆ? ಉತ್ತಮ ಹಿಮ್ಮೇಳ, ಮಾತನಾಡುವ ಎದುರು ಪಾತ್ರಧಾರಿಗಳು, ಪ್ರೋತ್ಸಾಹಿಸುವ ಪ್ರೇಕ್ಷಕರು ಇವೆಲ್ಲಾ ಒದಗಿಬಂದರೆ ಕಲಾವಿದನಾದವನಿಗೆ ಎಲ್ಲಿಲ್ಲದ ಉತ್ಸಾಹ ಬಂದು ಬಿಡುತ್ತದೆ. ಆ ಉತ್ಸಾಹದ ಭರದಲ್ಲಿ ನಡೆಯುವ ಅಷ್ಟೇನೂ ಆರೋಗ್ಯಕರವಲ್ಲದ ಚರ್ಚೆ ಕೆಲವೊಮ್ಮೆ ಕಸಿವಿಸಿಯನ್ನುಂಟು ಮಾಡುವುದಂತೂ ಸತ್ಯ. ಆದ್ದರಿಂದ ಅತಿ ಉತ್ಸಾಹ ಮತ್ತು ಅತಿಯಾದ ಆತ್ಮವಿಶ್ವಾಸ ಕೆಲವೊಮ್ಮೆ ಮಾರಕವಾದಂತಹ ಫಲಿತಾಂಶಗಳನ್ನು ತಂದುಕೊಡುತ್ತದೆ ಎಂಬುದು ಅನುಭವವೇದ್ಯ.


ಪಾತ್ರಧಾರಿಗಳೇನೂ ಸರ್ವಜ್ಞರಲ್ಲ. ಎಲ್ಲರಿಗೂ ಎಲ್ಲಾ ವಿಷಯಗಳು ತಿಳಿದಿರಬೇಕೆಂದೇನೂ ಇಲ್ಲ. ಒಟ್ಟು ಪ್ರದರ್ಶನಗಳಲ್ಲಿ ಒದಗಿ ಬಂದ ಮಾನವ ಸಂಪನ್ಮೂಲಗಳಲ್ಲಿ ಅಥವಾ ಕಲಾವಿದರಲ್ಲಿ ‘The Best’ ಪಾತ್ರಧಾರಿಗಳನ್ನು ಗುರುತಿಸಿ ಉತ್ತಮ ಪಾತ್ರಗಳನ್ನು ಅವರಿಗೆ ನೀಡಲಾಗುತ್ತದೆ ಎನ್ನುವುದು ಸತ್ಯವಾದರೂ ಎಲ್ಲ ಸಂದರ್ಭಗಳನ್ನು ಈ ಅಲಿಖಿತ ನಿಯಮವನ್ನು ಪಾಲಿಸಲು ಹಲವಾರು ತೊಡಕುಗಳಿವೆ ಎಂಬುದನ್ನು ಎಲ್ಲರೂ ಒಪ್ಪಲೇಬೇಕು.


ಮೊದಲೇ ಹೇಳಿದಂತೆ ಯಾರೂ ಪರಿಪೂರ್ಣರಲ್ಲ ಎಂಬ ವಿಷಯವನ್ನು ಗಮನದಲ್ಲಿಟ್ಟು ವ್ಯವಹರಿಸಿದರೆ ಎಲ್ಲವೂ ಸುಗಮವಾಗಿ ನಡೆದುಕೊಂಡು ಹೋಗುತ್ತದೆ. ಆದರೆ ಕೃಷ್ಣನ ಪಾತ್ರಧಾರಿಯು ತನ್ನ ಪಾತ್ರಕ್ಕೆ ಸಂಬಂಧಪಟ್ಟ ಸಮಗ್ರ ಮಾಹಿತಿಗಳನ್ನೂ ಅಭ್ಯಸಿಸಿಯೇ ರಂಗಕ್ಕೆ ಬರಬೇಕೆ? ರಾವಣ, ವಾಲಿ, ಅರ್ಜುನ, ಭೀಮ ಪಾತ್ರಧಾರಿಗಳು ಪುರಾಣಗಳ ಇಂಚಿಂಚನ್ನೂ ಬಿಡದೆ ತನಗೆ ಸಂಬಂಧಪಟ್ಟ ಮಾಹಿತಿಗಳನ್ನು ಕಲೆಹಾಕಿ ಮನನ ಮಾಡಿಕೊಂಡೇ ವೇಷ ಮಾಡುತ್ತಾರೆಯೇ? ಈ ಪ್ರಶ್ನೆಗೆ ಉತ್ತರ ನಕಾರಾತ್ಮಕವೇ ಸರಿ. ಹಾಗಾಗಬೇಕಾದರೆ ವಿದ್ವಾಂಸರೇ ರಂಗದಲ್ಲಿ ವೇಷ ಮಾಡಬೇಕಷ್ಟೆ. ಅಷ್ಟಿಲ್ಲದಿದ್ದರು ಪ್ರಸಂಗಕ್ಕೆ ಅಗತ್ಯವಾದಷ್ಟು, ಪಾತ್ರಪೋಷಣೆಗೆ ಅಗತ್ಯವಿದ್ದಷ್ಟು ಅಧ್ಯಯನ ಮಾಡಿದರೂ ಸಾಕಾಗುತ್ತದೆ.


ಆದರೆ ಇಲ್ಲೊಂದು ಸೂಕ್ಷ್ಮ ಸಮಸ್ಯೆಯಿದೆ. ಎದುರು ಪಾತ್ರಧಾರಿ ತಿಳುವಳಿಕೆಯುಳ್ಳವನೂ ಸಹಪಾತ್ರಧಾರಿ ದುರ್ಬಲನೂ ಆಗಿದ್ದರೆ ಮತ್ತು ಅವರೊಳಗೆ ‘ಹೊಂದಾಣಿಕೆ’ ಇಲ್ಲದಿದ್ದರೆ ರಂಗದಲ್ಲಿ ‘ವಿಷಮ ಸನ್ನಿವೇಶ’ ಗಳುಂಟಾಗುತ್ತದೆ. ಬಣ್ಣದ ಮನೆಯ ಮುನಿಸು ರಂಗದಲ್ಲಿ ಪ್ರತಿಫಲಿತವಾಗುವ ಸಂದರ್ಭಗಳು ಎಷ್ಟೋ ಬಂದಿವೆ.


‘ನಾನು’ ಎಂಬ ಭಾವ ಪ್ರಕಟವಾಗಿ ಕೆಲವೊಮ್ಮೆ ಎದುರು ಪಾತ್ರಧಾರಿಯ ಬೌದ್ಧಿಕ ಸಾಮರ್ಥ್ಯವನ್ನು ತಿಳಿದೂ ತಿಳಿಯದಂತೆ ನಟಿಸಿ ಉತ್ತರಿಸಲು ಸಾಧ್ಯವಾಗದ ಪ್ರಶ್ನೆಗಳನ್ನು ಕೇಳುವುದು ಸಮಂಜಸವಲ್ಲ.


ನಿನ್ನ ದಶನಾಮಗಳನ್ನು ಹೇಳು ಎಂದೋ ಅಥವಾ ನಿನಗೆ ಹತ್ತು ಹೆಸರುಗಳು ಯಾವ ಕಾರಣಕ್ಕೆ ಬಂತು ಎಂದು ಅನಿರೀಕ್ಷಿತವಾಗಿ ಎದುರು ಪಾತ್ರಧಾರಿಯು ಅರ್ಜುನ ಪಾತ್ರಧಾರಿಯಲ್ಲಿ ಕೇಳಿದರೆ ಅಷ್ಟೆಲ್ಲವನ್ನೂ ತಿಳಿಯದ ಅರ್ಜುನ ಪಾತ್ರಧಾರಿಯು ಏನು ತಾನೇ ಮಾಡಬೇಕು? ಇಲ್ಲಿ ಪಾತ್ರಧಾರಿಯ ಜೊತೆಗೆ ಅರ್ಜುನನ ಪಾತ್ರವೂ ಸೋಲುತ್ತದೆ. ಅರ್ಜುನ ಹೆಸರು ಸ್ವತಃ ಅರ್ಜುನನಿಗೇ ತಿಳಿದಿಲ್ಲ ಎಂಬುದು ತೀರಾ ಹಾಸ್ಯಾಸ್ಪದವಾಗುತ್ತದೆ ಹಾಗೂ ಆ ರೀತಿಯ ಚಿತ್ರಣ ಇಡೀ ರಂಗದ ಸೋಲು ಎಂದೇ ಪ್ರತಿಬಿಂಬಿತವಾಗುತ್ತದೆ.


‘ಕೃಷ್ಣ ಸಂಧಾನ’ದಲ್ಲಿ ಪಾಂಡವರೈವರಿಗೆ ಗ್ರಾಮಗಳನ್ನು ಕೇಳುವ ಬಗ್ಗೆ ಉಲ್ಲೇಖಿಸುವ ಸಂದರ್ಭದಲ್ಲಿ ಕೂಡಾ ಈ ಐದು ಗ್ರಾಮಗಳ ಹೆಸರುಗಳನ್ನು ಕೇಳಿ ಎದುರು ಪಾತ್ರಧಾರಿಯನ್ನು ಪೇಚಿಗೆ ಸಿಲುಕಿಸಿದ ಘಟನೆಗಳೂ ನಡೆದಿದ್ದರೆ ಹಾಗೂ ಉದ್ದೇಶಪೂರ್ವಕವೂ ಆಗಿದ್ದರೆ ಅದು ಆಕ್ಷೇಪಾರ್ಹ. ಅಥವಾ ಎದುರು ಪಾತ್ರಧಾರಿಗಳಲ್ಲಿ ಆ ಪಾತ್ರವು ಧರಿಸುವ ಆಯುಧ, ರಥಗಳ ಹೆಸರುಗಳನ್ನು ಬೇಕೆಂದೇ ಪ್ರಶ್ನಿಸುವುದು. ಭೀಮನ ಗದೆಯ ಹೆಸರೋ, ರಾಮನ ಬಿಲ್ಲು, ರಾವಣನ ಖಡ್ಗ ಇತ್ಯಾದಿಗಳ ಹೆಸರುಗಳನ್ನು ಕೇಳಿ ಕೆಣಕುವುದು ಕೆಲವೊಮ್ಮೆ ರಂಗದಲ್ಲಿ ಕಂಡುಬರುವ ದೃಶ್ಯಗಳಾದರೂ ಈ ಎಲ್ಲಾ ಸಂದರ್ಭಗಳಲ್ಲಿ ಪಾತ್ರಧಾರಿ ವಾದದಲ್ಲಿ ಗೆದ್ದೆ ಎಂದು ಬೀಗಿದರೂ ಪಾತ್ರವು ಸೋಲುತ್ತದೆ. ಒಟ್ಟು ಕಥೆಯೇ ಹಾಸ್ಯಾಸ್ಪದವಾಗುತ್ತದೆ.

ಸಾಮಾನ್ಯವಾಗಿ ಎಲ್ಲಾ ಪಾತ್ರಧಾರಿಗಳಿಗೂ ಆಯುಧಗಳ, ರಥಗಳ, ನಾಮಾವಳಿಗಳ ಹೆಸರುಗಳು ತಿಳಿದಿರುವುದೇ ಆಗಿದ್ದರೂ ಬೇಕೆಂದೇ ಕೆಲವು ಇನ್ನಿತರ ಕ್ಲಿಷ್ಟಕರವಾದ ಪ್ರಶ್ನೆಗಳನ್ನು ಕೇಳುವುದು ಸಮಂಜಸವಲ್ಲ. ಯಾಕೆಂದರೆ ಸ್ವ ಸಾಮರ್ಥ್ಯವನ್ನು ಮೆರೆಸುವುದೇ ಮುಖ್ಯ ಉದ್ದೇಶವಾಗಿದ್ದರೆ ಅದಕ್ಕೆ ರಂಗವೇ ವೇದಿಕೆಯಲ್ಲ. ಅದಕ್ಕೆ ಬೇಕಾದರೆ ಯಾವುದೇ ಒಂದು ವಿಷಯದ ಮೇಲೆ ಚರ್ಚಾಸ್ಪರ್ಧೆಯನ್ನು ಏರ್ಪಡಿಸಬಹುದು.


“ನೀವು ರಾಮನ ಪಾತ್ರಧಾರಿಯನ್ನು ವಾದದಲ್ಲಿ ಸೋಲಿಸಿ. ಆದರೆ ರಾಮನ ಪಾತ್ರವನ್ನು ಸೋಲಿಸಬೇಡಿ.’’
ಇದರಿಂದ ಒಟ್ಟು ಪ್ರದರ್ಶನ ಮತ್ತು ರಂಗಕ್ರಿಯೆಗಳು ಸೋಲುತ್ತವೆ. ಪಾತ್ರಧಾರಿಯಾಗಿ ನೀವೂ ಗೆಲ್ಲಿ, ಜೊತೆಗೆ ಪಾತ್ರವನ್ನೂ ಗೆಲ್ಲಿಸುವುದರ ಜೊತೆಗೆ ಒಟ್ಟು ಪ್ರದರ್ಶನವನ್ನೂ ಗೆಲ್ಲಿಸಿದರೆ ಅದು ನೀವು ಈ ರಂಗಭೂಮಿಗೆ ಕೊಡುವ ದೊಡ್ಡ ಕೊಡುಗೆ.

ಬರಹ: ಯಕ್ಷರಸಿಕ, ಮಂಗಳೂರು 

ಮೌನವೆಂಬ ಅಪಾಯಕಾರಿ ವ್ಯಸನ 

ಸಪ್ತ ವ್ಯಸನಗಳಲ್ಲಿ ಒಂದನ್ನಾದರೂ ಪುರುಷನಾದವನು ಹೊಂದಿರಬೇಕೆಂದು ಕೆಲವೊಂದು ವರ್ಗದ ಜನರು ಆಡುವುದನ್ನು ಕೇಳಿದ್ದೇವೆ. ಈ ಮಾತುಗಳು ಪುರುಷರು ತಮ್ಮನ್ನು ತಾವು ಸಮರ್ಥಿಸಿಕೊಳ್ಳುವುದಕ್ಕಾಗಿ ಆಡಿದವುಗಳೇ ಆಗಿರಬಹುದೇನೋ. ಸಪ್ತ ವ್ಯಸನಗಳು ಎಂಬ ಪಟ್ಟಿಯಲ್ಲಿಲ್ಲದ ಇತರ ವ್ಯಸನಗಳೂ, ದೌರ್ಬಲ್ಯಗಳೂ ಸೇರಿದಂತೆ ಒಂದನ್ನಾದರೂ ಅಭ್ಯಾಸವಾಗಿ ಇಲ್ಲದವನು ಮನುಷ್ಯನಲ್ಲ ಎಂದೋ ಅಥವಾ ದೌರ್ಬಲ್ಯಗಳಿಲ್ಲದ ವ್ಯಕ್ತಿಗಳಿಲ್ಲ ಎಂದೋ ವಾದಿಸುವವರು ಹಲವಾರು ಜನರಿರಬಹುದು. ವ್ಯಸನಗಳಿಲ್ಲದ ವ್ಯಕ್ತಿಯನ್ನು ಹುಡುಕಿಕೊಡಿ ಎಂದು ಯಾರಾದರೂ ಹೇಳಿದರೆ ಅದು ಸಾವಿಲ್ಲದ ಮನೆಯ ಸಾಸಿವೆಕಾಳಿನಂತೆ ಎಂದು ಭಾವಿಸುವವರೂ ಇರಬಹುದು. ಯಾಕೆಂದರೆ ವ್ಯಸನ ಎಂಬ ಶಬ್ದದ ವ್ಯಾಖ್ಯಾನವನ್ನೇ ತಮಗೆ ತೋಚಿದಂತೆ ಬದಲಿಸಬಹುದು. ಕಾಲ ಬದಲಾಗಿದೆ ಸ್ವಾಮೀ.
ಯುವಜನತೆ ವ್ಯಸನಗಳ ದಾಸರಾಗುತ್ತಿದ್ದಾರೆ ಎಂದು ಆರೋಪಿಸುವ ಮಂದಿ ಮೌನಕ್ಕೆ ಜಾರುತ್ತಿದ್ದಾರೆ. ಮೌನ ವ್ಯಸನಿಗಳಾಗುತ್ತಿದ್ದಾರೆ. ಮೃಗಯಾಕ್ಕೆ ಸಿಲುಕಿ ಪಾಂಡು ಸಾವಿಗೆ ಶರಣಾದ. ದ್ಯೂತಕ್ಕೆ ಸಿಲುಕಿ ಪಾಂಡವರು ಇನ್ನಿಲ್ಲದ ಪಾಡುಪಟ್ಟರು. ನಳ ಮಹಾರಾಜನು ಬಾಹುಕನಾಗಿ ಬಸವಳಿದ. ಸ್ತ್ರೀ ವ್ಯಸನಕ್ಕೆ ಸಿಲುಕದ ಪುರುಷರ ಸಂಖ್ಯೆ ಹೇರಳ. ವ್ಯಸನಿಗಳಿಗೆ ಪುರಾಣಗಳಲ್ಲೇ ಹೇರಳ ನಿದರ್ಶನಗಳಿದ್ದರೂ ವರ್ತಮಾನ ಕಾಲದಲ್ಲಿ ವ್ಯಸನಗಳು ವ್ಯಸನಗಳಾಗಿ ಉಳಿದಿಲ್ಲ. ಬದಲಾಗಿ ಅದೊಂದು ಫ್ಯಾಶನ್ ಆಗಿದೆ. ಕಾಲ ಬದಲಾಗಿದೆ ಸ್ವಾಮೀ.
ದ್ಯೂತವು ಬೆಟ್ಟಿಂಗ್ ಆಗಿ ಮಾರ್ಪಟ್ಟಿದೆ. ಕ್ರಿಕೆಟ್‍ನಿಂದ ಮೊದಲ್ಗೊಂಡು ಕಂಬಳ, ಕೋಳಿಅಂಕಗಳೇ ಮೊದಲಾದುವುಗಳ ವರೆಗೆ ಇದೊಂದು ಸ್ಪರ್ಧೆಯಾಗಿ ಮಾರ್ಪಟ್ಟಿದೆ. ಇನ್ನು ರಾಜವ್ಯಸನಗಳ ದಾಸರಾಗಿ ದಾರುಣವಾಗಿ ಕೊಲ್ಲಲ್ಪಟ್ಟ, ಹಿಟ್ಲರ್, ಸದ್ದಾಂ ಹುಸೇನ್‍ರಂತಹಾ ಹಲವರು ಕಣ್ಣಮುಂದೆ ಹಾದುಹೋಗುತ್ತಾರೆ. ವರ್ತಮಾನ ಕಾಲದಲ್ಲಿ ಮೃಗಯಾ ಅಷ್ಟಾಗಿಲ್ಲದಿದ್ದರೂ ಅಲ್ಲಲ್ಲಿ ಅಂತಹಾ ವ್ಯಸನಗಳು ನಿದರ್ಶನಗಳು ಕಂಡುಬರುವುದುಂಟು. ಸಲ್ಮಾನ್ ಖಾನ್ ಎಂಬ ಶೋಕಿ ನಟನ ಉಲ್ಲೇಖ ಇಲ್ಲಿ ಸೂಕ್ತ. ಇನ್ನು ಮದಿರೆ ಮತ್ತು ಸ್ತ್ರೀ ಸಂಗದ ವಿಚಾರಕ್ಕೆ ಬಂದರೆ ಉದಾಹರಣೆ ಕೊಡುವುದೇ ಬೇಡ. ಇದು ಭಯಂಕರ ಪಿಡುಗು. ಬರೆಯಲು ಪುಟಗಳು ಸಾಲದು. ಇಲ್ಲೂ ನಮಗೆ ಮುಂಚೂಣಿಯಲ್ಲಿ ಕಾಣಸಿಗುವುದು ಸಿನಿಮಾ ನಟರ, ರಾಜಕಾರಣಿಗಳ ಹೆಸರುಗಳೇ ಆಗಿವೆ. ಮಾನವ ಜೀವಕೋಟಿಗಳ ಈ ಜಗತ್ತಿನಲ್ಲಿ ಒಳ್ಳೆಯ ವಿಚಾರಗಳಿಗಿಂತ ಕೆಟ್ಟ ವಿಚಾರಗಳು, ಹವ್ಯಾಸಗಳೇ ಮನುಷ್ಯನನ್ನು ಅತಿ ಬೇಗನೆ ಆಕರ್ಷಿಸುತ್ತವೆ ಎಂಬುದು ಸೋಜಿಗದ ವಿಷಯ.
ಜಗತ್ತು ಬದಲಾವಣೆಯಾಗುತ್ತಾ ಹೋಗುತ್ತದೆ, ಕೆಲವೊಂದು ವಿರೂಪಗಳು, ಕೆಲವೊಂದು ಅರೂಪಗಳು. ಅಂದು ಅಪರಾಧಿ ಪ್ರಪಂಚ ಸೀಮಿತವಾಗಿತ್ತು. ಇಂದು ಪಾತಕಲೋಕ ವಿಪರೀತ ವಿಶಾಲವಾಗಿದೆ. ಇದು ಬದಲಾವಣೆ, ಅಂದು ಮರದಿಂದ ಇಳಿಸಿದ ಕಳ್ಳು, ಸಾರಾಯಿ, ಇಂದು ಗಾಜಿನ ಮನೆಗಳಲ್ಲಿ ಬಣ್ಣ ಬಣ್ಣದ ದ್ರವಗಳ ಬಾಟಲಿಗಳು. ಅಂದು ಕದ್ದುಮುಚ್ಚಿ ಕಾಡು, ಪೊದೆಗಳ ನಡುವೆ ಬಯಕೆಯ ಪೂರೈಕೆ, ಇಂದು ಹೈ-ಟೆಕ್ ವೇಶ್ಯಾವಾಟಿಕೆಯಾಗಿ ಪರಿವರ್ತನೆಯಾಗಿದೆ. ಅಂದಿನ ಚುಟ್ಟಾ ಇಂದು ಸಿಗರೇಟ್ ಆಗಿದೆ. ಕಾಲ ಬದಲಾಗಿದೆ ಸ್ವಾಮೀ….
ಇಂದಿನ ವ್ಯಸನಿಗಳ ಲೋಕದಲ್ಲಿ ಸ್ತ್ರೀಯರ ಭಾಗವಹಿಸುವಿಕೆ ಅಚ್ಚರಿ ತರುವಷ್ಟು ಸುಧಾರಣೆಯಾಗಿದೆ! ಅಂದು ವ್ಯಸನಿಗಳನ್ನು ಆಕ್ಷೇಪಿಸುತ್ತಿದ್ದ ಮನೆಯ ಹೆಂಗಸರು ಇಂದು ಆತನ ಬಾಯಿಯ ಸಿಗರೇಟ್‍ಗೆ ತಾವೇ ಬೆಂಕಿ ಹಚ್ಚುತ್ತಾರೆ. ಮಾತ್ರವಲ್ಲ ಆತನಿಗಿಂತ ಮೊದಲು ತಾನೇ ಸಿಗರೇಟ್ ಸೇದುತ್ತಾಳೆ. ಹಲವಾರು ಪಟ್ಟಣಗಳಲ್ಲಿ ಗಂಡ-ಹೆಂಡತಿ ಒಟ್ಟಿಗೇ ಕುಳಿತು ಮದ್ಯಸೇವನೆ ಮಾಡುತ್ತಾರೆ. ಇನ್ನು ಲೇಡೀಸ್ ಬಾರ್, ಪಬ್‍ಗಳ ಕಥೆ ಕೇಳುವುದೇ ಬೇಡ. ಹೌದು ಕಾಲ ಬದಲಾಗಿದೆ ಸ್ವಾಮೀ.
ಹೀಗೆಯೇ ಒಳ್ಳೆಯ ವಿಚಾರಗಳು ಹಾಗೂ ಕೆಟ್ಟ ವಿಷಯಗಳು ಬದಲಾವಣೆಯನ್ನು ಹೊಂದುತ್ತಲೇ ಈ ಪ್ರಪಂಚ ಬೆಳೆದಿದೆ. ಆಡಳಿತದಲ್ಲಿ ಸುಧಾರಣೆಗಳು, ಕಾನೂನಿನಲ್ಲಿ ಬದಲಾವಣೆಗಳು ಆಗುತ್ತಲೇ ಇರುತ್ತವೆ.
ಬದಲಾವಣೆಗಳು, ವಿರೋಧಗಳು ಆಗಲೇ ಬೇಕು. ಇವೆರಡರ ಸಂಘರ್ಷಗಳೇ ಜೀವನ. ಆದರೆ ಕೆಟ್ಟ ಬದಲಾವಣೆಗಳ ಜೊತೆ ರಾಜಿಯಾಗುವ ಮೌನ ಮಾತ್ರ ಬೇಡ. ಈಗೀಗ ಎಲ್ಲಾ ಕ್ಷೇತ್ರಗಳಲ್ಲಿ ಏನೇನೋ ಬದಲಾವಣೆಗಳು, ಪ್ರಯೋಗಗಳು ನಡೆಯುತ್ತಲೇ ಇದೆ. ಕೆಟ್ಟದ್ದನ್ನು ಆಸ್ವಾದಿಸುವ, ಪ್ರೋತ್ಸಾಹಿಸುವ, ಚಪ್ಪಾಳೆ ಹೊಡೆಯುವ ಮಂದಿ ಹೆಚ್ಚಿದ್ದಾರೆ. ವಿದ್ವಾಂಸರ ಕಿವಿಮಾತು ಕೇಳಿಸುತ್ತಿಲ್ಲ.
ಹಿರಿಯರೂ, ಮಾರ್ಗದರ್ಶಕರೂ ಆದವರು ಸುಮ್ಮನಿರಲಾರದೆ ಆಕ್ಷೇಪಿಸಿ ಬುದ್ಧಿಮಾತುಗಳನ್ನು ಹೇಳಿದರೂ ಜನಪ್ರಿಯತೆಯ ವ್ಯಸನಿಗಳು ಅದನ್ನು ಕೇಳಿಸಿಕೊಳ್ಳುತ್ತಿಲ್ಲ. ಹೀಗಾದರೆ ಹಿರಿಯರು ನಮಗ್ಯಾಕೆ ಎಂದು ಕೈಚೆಲ್ಲಿ ಮೌನವಾಗಬಹುದು. ಇದು ಅತ್ಯಂತ ಅಪಾಯಕಾರಿ. ಏಕೆಂದರೆ ಮೌನವೂ ಒಂದು ವ್ಯಸನವೇ.

ಉಚಿತ ಪುರಾಣ

ಈಗಿನ ಆಧುನಿಕ ಯುಗದಲ್ಲಿ ಜನರನ್ನು ಮರುಳು ಮಾಡೋದು ಅಷ್ಟು ಸುಲಭವಲ್ಲ. ಈಗಿನ ಜನರು ಬುದ್ಧಿವಂತರಿದ್ದ ಕಾರಣ ಅವರನ್ನು ಆಕರ್ಷಿಸಲು ಮೊದಲಿನಷ್ಟು ಸುಲಭವಲ್ಲ ಎಂದು ಸಮೀಕ್ಷೆಗಳಿಂದ ತಿಳಿದುಬಂದಿದೆ.
ಇದು ಜಾಹೀರಾತುಗಳ ಯುಗವೆಂದೇ ಪರಿಗಣಿತವಾಗಿದೆ. ವ್ಯಾಪಾರಿಗಳು ಅಥವಾ ಉದ್ದಿಮೆದಾರರು ಜನರನ್ನು ಆಕರ್ಷಿಸಲು ಬಹಳಷ್ಟು ಪಾಡು ಪಡಬೇಕಾಗುತ್ತದೆ. ಹೇರಳವಾದ ಜಾಹೀರಾತುಗಳು ನಮಗೆ ಕಾಣಸಿಗುತ್ತವೆ. ಅದು ವಾರ್ತಾ ಮಾಧ್ಯಮಗಳಲ್ಲಿ ಆಗಿರಬಹುದು ಅಥವಾ ದೃಶ್ಯಮಾಧ್ಯಮಗಳಲ್ಲೂ ಆಗಿರಬಹುದು. ಒಂದು ನಿಮಿಷ ಕಾರ್ಯಕ್ರಮವನ್ನು ನೀಡಿ ಎರಡು ನಿಮಿಷ ಜಾಹೀರಾತು ಕೊಡುವುದೇ ಕಂಡುಬರುತ್ತದೆ. ಹೇಗೆ ಬೇಕಾದರೂ ಸರಿ, ಜನರನ್ನು ಆಕರ್ಷಣೆ ಮಾಡುವುದು ಈಗ ಮುಖ್ಯ ಉದ್ದೇಶವಾಗಿರುತ್ತದೆ.
ಜಾಹೀರಾತುಗಳ ವಿಷಯ ಬಂದಾಗ ನಾವು ವಿಭಿನ್ನವಾದ ಜಾಹೀರಾತುಗಳನ್ನು ವೀಕ್ಷಿಸಬಹುದು ಅಥವಾ ಓದಬಹುದು. ಯಾವುದೇ ಮಾಧ್ಯಮಗಳಲ್ಲಿ ಆಗಿರಲಿ ಸತ್ಯದ ತಲೆಯ ಮೇಲೆ ಹೊಡೆದಂತೆ ಎಂಬ ಮಾತಿನಂತೆ ಕೆಲವು ಜಾಹೀರಾತುಗಳು ನಮಗೆ ಕಾಣಸಿಗುತ್ತವೆ. ಜಾಹೀರಾತುಗಳು ಕೆಲವೊಮ್ಮೆ ಮುಖ್ಯ ಕಾರ್ಯಕ್ರಮಗಳಿಗಿಂತಲೂ ಆಕರ್ಷಕವಾಗಿರುತ್ತದೆ. ಕಾರ್ಯಕ್ರಮಗಳನ್ನು ನೋಡುವ ಬದಲು ಜಾಹೀರಾತುಗಳನ್ನೇ ನೋಡುವ ಹಲವಾರು ಮಂದಿ ನಮಗೆ ಕಾಣಸಿಗುತ್ತಾರೆ.
ಇಂತಹ ಹತ್ತು ಹಲವು ಜಾಹೀರಾತುಗಳ ನಡುವೆ ಉಚಿತ ಜಾಹೀರಾತುಗಳು ನಮ್ಮ ಗಮನಸೆಳೆಯುತ್ತವೆ. ಮೊದಲಿಂದಲೂ ಜನರಿಗೆ ಯಾವುದಾದರೂ ಒಂದು ವಸ್ತು ಉಚಿತ ಸಿಗುತ್ತದೆ ಎನ್ನುವುದರಲ್ಲಿ ಬಹಳವಾದ ಆಸಕ್ತಿ. ವಸ್ತುವಿನ ಗುಣಮಟ್ಟ ಹೇಗೇ ಇರಲಿ ಒಬ್ಬ ವ್ಯಾಪಾರಿ ನಿಮಗೆ ಉಚಿತ ಕೊಡುತ್ತಾನೆ ಎಂದರೆ ಅದು ನಿಜವಾದ ಒಂದು ಆಕರ್ಷಣೆ ಎಂದೇ ಜನ ಭಾವಿಸುತ್ತಾರೆ. ಆದ್ದರಿಂದ ಒಂದಕ್ಕೊಂದು ಫ್ರೀ (ಒಂದಕ್ಕೆ ಒಂದು ಉಚಿತ) ಎನ್ನುವುದರಲ್ಲಿ, ಮೊದಲಿನ ಒಂದರಲ್ಲಿ ಉಚಿತದ ಬೆಲೆಯು ಕೂಡಾ ಅಡಗಿರುತ್ತದೆ ಎಂದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಆದ್ದರಿಂದ ಎಲ್ಲರೂ ಉಚಿತದ ಬೆನ್ನುಬೀಳುತ್ತಾರೆ. ಈ ಉಚಿತದ ಆಕರ್ಷಣೆ ಇತ್ತೀಚೆಗೆ ಹಲವಾರು ವರ್ಷಗಳಿಂದ ನಡೆದು ಬಂದದ್ದು. ಒಂದಕ್ಕೆ ಒಂದು ಉಚಿತ. ಇದು ಕೆಲವು ಕಂಪನಿಗಳ ಕೆಲವು ವ್ಯಾಪಾರಿಗಳ ಧ್ಯೇಯವಾಕ್ಯದಂತೆ ರಾರಾಜಿಸುತ್ತಿದೆ. ಆದ್ದರಿಂದ ಉಚಿತವನ್ನು ನಂಬಿಹೋಗುವ ಜನರು ಬೇರೇನನ್ನೂ ಯೋಚಿಸುವುದಿಲ್ಲ.
ಇಂದಿನ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಸಂದೇಶಗಳು ಹೇರಳವಾಗಿ ಕಾಣಸಿಗುತ್ತದೆ. ಈ ಸಂದೇಶವನ್ನು ಹತ್ತು ಜನರಿಗೆ ಹಂಚಿದಾಗ ನಿಮಗೆ ಇಂತಿಷ್ಟು ಉಚಿತವಾಗಿ ಇಂಟರ್ನೆಟ್ (ಅಂತರ್ಜಾಲ) ಡಾಟಾ ಫ್ರೀ ಎಂದೂ, ಇಷ್ಟು ಜಿಬಿ ಡಾಟ ಫ್ರೀ ಎಂದೂ ನಿಮಗೆ ಸಂದೇಶಗಳು ಬರುತ್ತದೆ. ಅಥವಾ ಇದನ್ನ ಇಂತಿಷ್ಟು ಜನರಿಗೆ ಹಂಚಿದಾಗ ಒಂದು ಸಂದೇಶಕ್ಕೆ ಹತ್ತು ಪೈಸೆಯಂತೆ ಎಂಬ ನಿಖರವಲ್ಲದ, ಸುಳ್ಳಾದ ಸಂದೇಶಗಳ ಹೇರಳವಾಗಿ ಬರುತ್ತವೆ. ಯಾರೋ ಒಂದು ವಿಕೃತಮನಸ್ಕರು ಇಂತಹ ಸಂದೇಶಗಳನ್ನು ಹರಿಯಬಿಟ್ಟು ಚಂದ ನೋಡುತ್ತಾ ಇರುತ್ತಾರೆ. ಇದನ್ನು ನಂಬಿದವ ಮೂರ್ಖ ಎಂದು ಹೇಳದೆ ವಿಧಿಯಿಲ್ಲ.
ದಿನವೂ ಬೆಳಿಗ್ಗೆ ಪೇಪರ್ ಹಾಕುವ ಹುಡುಗ ಹೇಳಿದ ವಿಷಯ ಏನೆಂದರೆ- ಸಾಧಾರಣವಾಗಿ ಕೆಲವೊಂದು ಹೊಸ ವಾರ್ತಾ ಪತ್ರಿಕೆಗಳು ಪ್ರಾರಂಭವಾಗುವಾಗ ಒಂದು ವಾರದಿಂದ ಹದಿನೈದು ದಿನಗಳವರೆಗೆ ಉಚಿತವಾಗಿ ಕೆಲವು ಪ್ರದೇಶಗಳಲ್ಲಿ ಮನೆಮನೆಗೆ ಪೇಪರ್ ಹಾಕಲು ಆದೇಶ ಮಾಡಿರುತ್ತಾರೆ. ಆದರೆ ಈ ಒಂದು ತಿಂಗಳ ಅವಧಿ ಅಥವಾ ಹದಿನೈದು ದಿನಗಳ ಅವಧಿ ಮುಗಿದ ನಂತರ ಪುನಃ ಪ್ರತಿನಿಧಿಗಳು ಹೋದಾಗ “ನೀವು ಹದಿನೈದು ದಿನಗಳ ಉಚಿತ ಕೊಟ್ಟಿದ್ದೀರಿ. ಇನ್ನೂ ಹದಿನೈದು ದಿನಗಳು ಮುಂದುವರಿಸಬಹುದಿತ್ತಲ್ಲ” ಎಂಬ ಉಚಿತ ಸಲಹೆ ಗಳು ಕೆಲವರಿಂದ ಬಂದದ್ದು ಉಂಟಂತೆ. ಸಾಧಾರಣವಾಗಿ ಒಂದು ಪತ್ರಿಕೆಯ ಮುದ್ರಣ ವೆಚ್ಚ ಅದರ ಮುಖಬೆಲೆಗಿಂತ ಹೆಚ್ಚಿರುತ್ತದೆ. ಮುದ್ರಣ ವೆಚ್ಚ ಮತ್ತು ಅದರ ಇತರ ಖರ್ಚುಗಳು, ಸಂಬಳ ಹಾಗೂ ಎಲ್ಲಾ ಖರ್ಚುಗಳು ಸೇರಿದಾಗ ಅದರ ಮುಖಬೆಲೆಗಿಂತ ಜಾಸ್ತಿ ಹೆಚ್ಚಾಗಿರುತ್ತದೆ. ಆದರೆ ಪತ್ರಿಕೆಗಳ ಮಾಲೀಕರು ಈ ನಷ್ಟವನ್ನು ಜಾಹೀರಾತುಗಳಲ್ಲಿ ತುಂಬಿಕೊಳ್ಳುತ್ತಾರೆ. ಸಾಮಾನ್ಯ ಜನರಲ್ಲಿ ಇಂತಹ ತಿಳುವಳಿಕೆಗಳು ಕಡಿಮೆ ಇರುತ್ತದೆ. ಅವರು ಉಚಿತ ಕೊಡುತ್ತಾರೆ ಎಂದು ಸಂತೋಷಗೊಳ್ಳುತ್ತಾರೆ, ಉಚಿತ ಕೊಡುವುದನ್ನು ನಿಲ್ಲಿಸಿದರು ಎಂದಾಗ ಬೇಸರಪಟ್ಟುಕೊಳ್ಳುತ್ತಾರೆ. ಅವರಿಗೆ ಇದರ ಪೂರ್ವಾಪರಗಳು, ಹಿನ್ನೆಲೆಗಳು ಏನು ತಿಳಿದಿರುವುದಿಲ್ಲ. ಆದ್ದರಿಂದ ಇದಕ್ಕೆ ಅವರನ್ನು ದೂರುವುದು ಅಷ್ಟು ಸಮಂಜಸ ಎನಿಸುವುದಿಲ್ಲ.
ಅಲ್ಲದೆ ಕೆಲವೊಂದು ಬಾರಿ ಅನಿವಾರ್ಯ ಸಂದರ್ಭಗಳು ಎದುರಾಗುತ್ತವೆ. ಯಾಕೆಂದರೆ ಹೇಗೆ ಸಾಹಿತಿಗಳು ಅಥವಾ ಲೇಖಕರು ಶ್ರೀಮಂತರಲ್ಲವೋ ಹಾಗೆಯೇ ಓದುಗರು ಕೂಡ ಶ್ರೀಮಂತರಾಗಿರುವುದಿಲ್ಲ. ಸಾಹಿತ್ಯಾಸಕ್ತರಿಗೆ ಓದಬೇಕೆಂದು ಆಸೆ ಇರುತ್ತದೆ. ಆದರೆ ಬೆಲೆ ಜಾಸ್ತಿ ಎಂದೆನಿಸಿದಾಗ ಪುಸ್ತಕಗಳನ್ನು ಖರೀದಿಸುವ ಶಕ್ತಿ, ಆರ್ಥಿಕ ದೃಢತೆ ಎಲ್ಲರಲ್ಲಿಯೂ ಇರುವುದಿಲ್ಲ. ಹೇಳಲು ಸುಲಭವಾಗಿ ಹೇಳಬಹುದು “ಖರೀದಿಸಿ ಓದಿ, ಕೊಂಡು ಓದಿ” ಎಂಬುದಾಗಿ. ಆದರೆ ನಾವು ಓದುಗನ ಶಕ್ತಿಯನ್ನು ಪರಿಗಣಿಸಬೇಕಾಗುತ್ತದೆ. ಗ್ರಂಥಾಲಯಗಳಲ್ಲಿಯೂ ಹೋಗಿ ಓದುತ್ತಾರೆ. ಅವರಿಗೆಲ್ಲ ಕೆಲವೊಮ್ಮೆ ನೀವು ಉಚಿತವಾಗಿ ಕೊಟ್ಟರೆ ಬಹಳ ಸಂತೋಷವಾಗುತ್ತದೆ. ಹಾಗೆಂದವರು ಉಚಿತವಾಗಿ ನಿಮ್ಮಲ್ಲಿ ಕೇಳುವುದಿಲ್ಲ. ಆದರೂ ಕೆಲವೊಮ್ಮೆ ಅವರ ಇಚ್ಛೆ ಅರಿತು ಅದನ್ನು ನೀಡಿದರೆ ಅವರು ಬಹಳ ಖುಷಿಪಟ್ಟುಕೊಳ್ಳುತ್ತಾರೆ. ಇಂತಹ ಸಂದರ್ಭಗಳು ವಿರಳ. ಆದರೂ ಇದೆಲ್ಲವೂ ಆಗಾಗ ಲೇಖಕನಿಗೆ ಎದುರಾಗುವ ಸಂದರ್ಭಗಳಾಗಿವೆ.
ಯಕ್ಷಗಾನದ ಓದುಗರು, ಯಕ್ಷಗಾನ ಪತ್ರಿಕೆಗಳನ್ನು ಅಥವಾ ಯಕ್ಷಗಾನವನ್ನು ಆಸ್ವಾದಿಸುವವರು ಬಹಳ ಸುಸಂಪನ್ನರು ಎನ್ನದೇ ಸಂತೋಷವಾಗುತ್ತದೆ. ಯಾಕೆಂದರೆ ಅನುಭವಗಳೇ ಅದಕ್ಕೆ ಸಾಕ್ಷಿ. ಯಕ್ಷಗಾನ ಪತ್ರಿಕೆಗಳ ಪ್ರಸರಣ ಸಂಖ್ಯೆ ಉಳಿದ ಪತ್ರಿಕೆಗಳಿಂದ ತುಂಬ ಕಡಿಮೆ ಇರುತ್ತದೆ ಎಂದು ಎಲ್ಲರಿಗೂ ತಿಳಿದ ವಿಚಾರ. ಎಲ್ಲರೂ ಹೇಳುವಾಗ ದೊಡ್ಡ ದೊಡ್ಡ ಸಂಖ್ಯೆಗಳನ್ನು ಹೇಳಬಹುದು. ಆದರೆ ಪ್ರಜ್ಞಾವಂತ ಜನರಿಗೆ ಅದರ, ಆ ಹೇಳಿಕೆಯ ಆಳ ಅಗಲದ ಅರಿವಿರುತ್ತದೆ.
ಯಕ್ಷಗಾನದ ನಿಜವಾದ ಅಭಿಮಾನಿಗಳು, ಯಕ್ಷಗಾನದ ಆಸಕ್ತಿಯುಳ್ಳ ಜನರೂ, ಯಕ್ಷಗಾನ ಪತ್ರಿಕೆಗಳ ಓದುಗರೂ ಬಹಳ ಪ್ರಜ್ಞಾವಂತರು. ಪತ್ರಿಕೆಯ ಬಗ್ಗೆ ಹೇಳುವುದಾದರೆ ಬಹಳಷ್ಟು ಸಿಹಿ ಅನುಭವಗಳೇ ಆಗಿವೆ. ಎದುರಿಗೆ ಸಿಕ್ಕಿದಾಗ ಮಹನೀಯರೊಬ್ಬರು ಪ್ರೀತಿಯಿಂದ ಗದರಿಸಿದ್ದೂ ಇತ್ತು. ಒಬ್ಬರಿಗೆ ನಿರಂತರ ಪತ್ರಿಕೆಯನ್ನು ಕಳುಹಿಸುತ್ತಾ ಇದ್ದೆವು. ಆದರೆ ಅವರಲ್ಲಿ ಚಂದಾ ಹಣದ ಬಗ್ಗೆ ಪ್ರಸ್ತಾಪ ಮಾಡಿರಲಿಲ್ಲ. ಅವರು ಒಂದು ದಿನ ಸಿಕ್ಕಾಗ “ಯಾಕೆ ಪತ್ರಿಕೆ ಮಾತ್ರ ಕಳುಹಿಸುತ್ತಿದ್ದೀರಿ, ಕಳಿಸಿದ ಬಗ್ಗೆ ಚಂದಾ ಹಣ ಕೇಳುವುದಿಲ್ಲ? ನಾವು ನೂರೆಂಟು ವ್ಯವಹಾರಗಳಲ್ಲಿ ನಿರತರಾಗಿರುತ್ತೇವೆ. ನಮಗೆ ಅದು ನೆನಪಿರೋದಿಲ್ಲ. ನೀವಾದರೂ ಕೇಳಬಾರದೆ, ಪತ್ರಿಕೆ ಸುಮ್ಮನೆ ಬರುತ್ತದೆಯೇ” ಎಂದು ಪ್ರೀತಿಯಿಂದ ಗದರಿಸಿ ಹಣವನ್ನು ನಮ್ಮ ಕೈಗಿಟ್ಟಿದ್ದರು.

ಅರ್ಥಗರ್ಭಿತ ಜಗತ್ತು 

ದೈನಂದಿನ ಚಟುವಟಿಕೆ, ಉದ್ಯೋಗದಿಂದ ಬೇಸತ್ತು ಅಥವಾ ಅದರಿಂದ ಸ್ವಲ್ಪಮಟ್ಟಿಗೆ ಬದಲಾವಣೆ ಬಯಸಿ ಜನರು ಕಲೆ, ಕ್ರೀಡೆ, ಇತ್ಯಾದಿಗಳತ್ತ ಆಕರ್ಷಿತರಾಗುವುದು ಅಥವಾ ಅದರಲ್ಲಿ ಭಾಗವಹಿಸುವುದು ಹಿಂದಿನಿಂದಲೂ ನಡೆದು ಬಂದ ಸಹಜ ಪ್ರಕ್ರಿಯೆ. ತಾನು ಸಾರ್ವಜನಿಕವಾಗಿ ಗುರುತಿಸಿಕೊಳ್ಳಬೇಕು ಅಥವಾ ಜನರು ತನ್ನನ್ನು ಗುರುತಿಸಿ ಗೌರವಿಸಬೇಕು ಎಂಬ ಮನೋಭಾವ ಪ್ರತಿಯೊಬ್ಬನಲ್ಲೂ ಇದೆ. ಆದರೆ ಈ ಹಂಬಲ ಅತಿರೇಕಕ್ಕೆ ಹೋದರೆ ಅಪಾಯಕಾರಿ. ಆದರೆ ಈ ಹುಚ್ಚು ಕೆಲವೊಮ್ಮೆ ನಿಯಂತ್ರಿಸಲಾಗದ ಮಟ್ಟಕ್ಕೆ ಬಂದುಬಿಡುತ್ತದೆ. ಆಗ ‘ನಾನೇ’ ಎಂಬ ಅಹಂಭಾವ ತಲೆಗಡರಿಬಿಡುತ್ತದೆ. ಆಮೇಲೆ ಅದರಿಂದ ಆ ವಿಷವರ್ತುಲದಿಂದ ಹೊರಬರಲಾರದ ಸ್ಥಿತಿ ಬಂದುಬಿಡುತ್ತದೆ.ಕೆಲವರಿಗೆ ಜನಪ್ರಿಯತೆಯ ಹುಚ್ಚು. ಇನ್ನು ಕೆಲವರಿಗೆ ಹಣ ಸಂಪಾದಿಸುವ ಹವ್ಯಾಸ. ಈ ಎರಡರಲ್ಲೂ ಬಹುಬೇಗನೆ ಯಶಸ್ಸು ಸಾಧಿಸಬೇಕಾದರೆ ಬದಲಾವಣೆ ಎಂಬ ಅಡ್ಡದಾರಿ ಹಿಡಿಯಬೇಕಾಗುತ್ತದೆ. ಆದ್ದರಿಂದ ಹಲವರು ತಾನು ಮಾಡುತ್ತಿರುವ ಕಾರ್ಯಕ್ಕೆ ಬದಲಾವಣೆ ಎಂಬ ಹಣೆಪಟ್ಟಿ ಕಟ್ಟಿ ಜನಪ್ರಿಯತೆ ಗಳಿಸಿ ಅದರಲ್ಲಿ ಅರ್ಥವನ್ನು ಹುಡುಕುತ್ತಾರೆ!

ತಾನು ಮಾಡುತ್ತಿರುವ ಕೆಲಸಕ್ಕೆ `ಅರ್ಥ’ವನ್ನು ಹುಡುಕುತ್ತಾ ನಿಜವಾದ ಉದ್ದೇಶವನ್ನು ಮರೆತುಬಿಡುತ್ತಾರೆ. ಪರೋಕ್ಷವಾಗಿ ತಾನು ಮಾಡುತ್ತಿರುವ ಉದ್ಯೋಗದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಲು ವಿಫಲರಾಗುತ್ತಾರೆ.
ರಾಜಕೀಯ, ಶಿಕ್ಷಣ, ಮಾಧ್ಯಮ ಕಲೆ, ಕ್ರೀಡೆ, ಸಾರ್ವಜನಿಕ ಸೇವೆ ಹೀಗೆ ಹತ್ತು ಹಲವಾರು ರಂಗಗಳು ಈಗ ವ್ಯವಹಾರಮಯವಾಗಿದೆ. ಹಾಗೂ ವ್ಯಾಪಾರೀಕರಣಗೊಂಡಿವೆ. ಕೆಲವು ರಾಜಕೀಯ ಮುಂದಾಳುಗಳು ತಾವು ಜನರಿಂದ ಆರಿಸಿ ಬರಲು ಮಾಡಿದ ಖರ್ಚು-ವೆಚ್ಚಗಳನ್ನು ಭರಿಸಲು ಅಡ್ಡದಾರಿಯನ್ನು ಹಿಡಿಯುತ್ತಾರೆ. ಹಾಗೂ ಹಣದ ಸಂಪಾದನೆಯಲ್ಲಿರುವ ಸಿಹಿರುಚಿಯನ್ನು ಅನುಭವಿಸಿ ಮತ್ತು ಮತ್ತೂ ಹಣವನ್ನು ಅಕ್ರಮವಾಗಿ ಸಂಪಾದಿಸಲು ತೊಡಗುತ್ತಾರೆ.ಕೆಲವು ಶಿಕ್ಷಣ ಸಂಸ್ಥೆಗಳು ಲಕ್ಷ ಲಕ್ಷ ಶುಲ್ಕಗಳನ್ನು ವಸೂಲು ಮಾಡಿ ಹಣವನ್ನು ಗುಡ್ಡೆಹಾಕುತ್ತಿರುವುದು ಯಾರಿಗೂ ತಿಳಿಯದ ವಿಷಯವೇನಲ್ಲ. ಸಾರ್ವಜನಿಕ ಸೇವೆಗಳು, ಸರಕಾರಿ ಕಛೇರಿಗಳು, ಆಸ್ಪತ್ರೆಗಳು, ಎಲ್ಲವೂ ಈಗ ಕೇವಲ ಹಣ ಸಂಪಾದನೆಯ ಮಾರ್ಗವಾಗಿ ಪರಿವರ್ತಿತಗೊಂಡಿವೆ.ಹಾಗೆಂದು ಎಲ್ಲರೂ ಈ ರೀತಿ ಇರಬೇಕೆಂದೇನಿಲ್ಲ. ಹಣ ಸಂಪಾದನೆಯೂ ಇರಬೇಕು. ಸೇವೆಯ ಗುಣಮಟ್ಟವೂ ಸಮಾನಾಂತರವಾಗಿರಬೇಕು.

ಅಂತಹಾ ಕೆಲವು ಗುಣಾಗ್ರಣಿಗಳೂ ಇದ್ದಾರೆ. ರಾಜಕೀಯದಲ್ಲೂ ವ್ಯಾಪಾರ, ಕ್ರೀಡೆಯಲ್ಲೂ ವ್ಯಾಪಾರ, ಶಿಕ್ಷಣದಲ್ಲೂ ವ್ಯಾಪಾರ, ಸರಕಾರಿ ಮತ್ತು ಸಾರ್ವಜನಿಕ ಕಛೇರಿಗಳಲ್ಲೂ ವ್ಯಾಪಾರ- ಹೀಗೆ ಎಲ್ಲೆಂದರಲ್ಲೂ ವ್ಯಾಪಾರದ ಅರ್ಥ’ವನ್ನೇ ಕಾಣುವ ನಾವು ಯಾವುದರಲ್ಲೂ ನಿಜಾರ್ಥವನ್ನು ಕಾಣುವುದೇ ಇಲ್ಲ. ಇದು ಇಂದಿನ ಶೋಚನೀಯ ಪರಿಸ್ಥಿತಿ.ಎಲ್ಲ ರಂಗಕ್ಕೂ ಹಿಡಿದ ಪಿಡುಗು ಇಂದು ಕಲಾರಂಗಕ್ಕೂ ಹಿಡಿದಿದೆ. ಇದು ಒಮ್ಮೆ ಹಿಡಿದರೆ ಬಿಡುವ ಗ್ರಹಣವಲ್ಲ. ಪ್ರಜ್ಞಾವಂತ ಪ್ರೇಕ್ಷಕ ಈ ಗ್ರಹಣಕ್ಕೆ ಮೋಕ್ಷ ಯಾವಾಗ ಎಂದು ಕಾಯುತ್ತಿದ್ದಾನೆ. ನಾವೇ ತೋಡಿಕೊಂಡ ಗುಂಡಿಗೆ ನಾವೇ ಬೀಳುತ್ತಿದ್ದೇವೆ ಅಷ್ಟೆ.
ಈಚೆಗೆ ಯಕ್ಷಗಾನದ ಹಿರಿಯ ವಿದ್ವಾಂಸರೂ ಕಲಾಹಿತೈಷಿಗಳೂ ಆದ ಹಿರಿಯರೊಬ್ಬರು ಮಾತಾಡುತ್ತಾ ಈ ರೀತಿ ಹೇಳಿದರು. “ನಮಗೀಗ ಆತ್ಮವಿಮರ್ಶೆ ಮಾಡಿಕೊಳ್ಳುವ ಕಾಲ ಬಂದಿದೆ. ಯಕ್ಷಗಾನದಂತಹಾ ಪಾವಿತ್ರ್ಯತೆ ಹೊಂದಿದ ಕಲೆಯನ್ನು ವಿರೂಪಗೊಳಿಸಿ ಪ್ರದರ್ಶಿಸುವ ಪರಿಪಾಠವನ್ನು ಹೊರಗಿನವರಿಗೆ ತೋರಿಸಿಕೊಟ್ಟದ್ದು ಯಾರು? ನಾವೇ ಎಂಬುದರಲ್ಲಿ ಸಂದೇಹವಿದೆಯೇ? ದೀರ್ಘಾವಧಿಯ ಪ್ರದರ್ಶನಗಳಿಗೆ ಕತ್ತರಿ ಹಾಕಲಾಗಿದೆ. ಸಿನಿಮಾ ಹಾಡುಗಳು ಯಕ್ಷಗಾನದ ಜೊತೆಗೆ ಸಮ್ಮಿಳಿತಗೊಂಡಿವೆ. ಭಾವಗೀತೆಗಳೂ ಇವೆ. ಮುಮ್ಮೇಳ ಹಿಮ್ಮೇಳ ಎಲ್ಲ ವಿಭಾಗಗಳಲ್ಲೂ ವಿವಿಧ ರೀತಿಯ ಸರ್ಕಸ್‍ಗಳನ್ನು ನಾವು ಮಾಡುತ್ತಿದ್ದೇವೆ. ಬ್ಯಾಂಡ್, ವಾದ್ಯ, ವಾಲಗಗಳ ಸದ್ದು ಅಬ್ಬರಿಸತೊಡಗಿವೆ. ಸುಡುಮದ್ದುಗಳು ಸದ್ದುಮಾಡುತ್ತಿವೆ. ಸಿನಿಮಾ ಕತೆಗಳು ಯಕ್ಷಗಾನ ವೇದಿಕೆಯಲ್ಲಿ ರಾರಾಜಿಸತೊಡಗಿವೆ. ವಿವಿಧ ಸಿನಿಮಾ ನಟರ ಶೈಲಿಯ ಅನುಕರಣೆಯ ಹೆಜ್ಜೆಗಳ ನಡುವೆ ಯಕ್ಷಗಾನದ ನೈಜ ನಾಟ್ಯ ಮಾಯವಾಗಿದೆ.
ಹಲವು ಬಗೆಯ ವಿಚಿತ್ರ ರಾಗಾಲಾಪನೆಗಳ ಜೊತೆಗೆ ಚಿತ್ರ-ವಿಚಿತ್ರ ಭಂಗಿಯ ಕುಣಿತ ನಾಟ್ಯಗಳ ಭಾವಭಂಗಿಗಳು ರಂಗಪ್ರವೇಶ ಮಾಡಿವೆ. ರಾಗ ತಾಳ ನಾಟ್ಯಗಳು ಅತಿಯೆನ್ನಿಸುವಷ್ಟು ದೀರ್ಘವಾಗಿ ಸಂಭಾಷಣೆಯ ಅವಧಿ ತೀರಾ ಕುಂಠಿತವಾಗಿದೆ. ನೈಜ ಯಕ್ಷಗಾನ, ಪರಂಪರೆ ತಿಳಿದ ಕಲಾವಿದರಿದ್ದರೂ ಅದನ್ನು ಮುಂದಿನ ಪೀಳಿಗೆಗೆ ದಾಟಿಸುವ ಸಮರ್ಥ ಗುರುಗಳಿಲ್ಲ. ಇವೆಲ್ಲದರ ನಡುವೆ ಪ್ರಜ್ಞಾವಂತ ಪ್ರೇಕ್ಷಕ ಕಳೆದುಹೋಗುತ್ತಿದ್ದಾನೆ.’’ ಎಂದು ಹೇಳುತ್ತಾ ವಿಷಾದದ ನಿಟ್ಟುಸಿರುಬಿಟ್ಟರು. ಯಾಕೋ ಅವರ ಮಾತುಗಳೆಲ್ಲ ಆಗಾಗ ಮನಸ್ಸನ್ನು ಕಾಡುತ್ತಿದೆ.


ರಾಧಾ ಬಾರೇ….  ನಿನ್ನ ಪ್ರತಿರೂಪ ತೋರಿಸುವೆ ಇಲ್ಲಿ … 

ಮಂಜುಳಾ ಸುಬ್ರಹ್ಮಣ್ಯ … ಒಬ್ಬಳು ಬಹುಮುಖ ಪ್ರತಿಭಾವಂತೆ ಹಾಗೂ ಭರತನಾಟ್ಯ ಕಲಾವಿದೆ.  ಕನ್ನಡ ಎಂ.ಎ ಪದವೀಧರೆ, ದೂರದರ್ಶನದ ಬಿ ಗ್ರೇಡ್ ಕಲಾವಿದೆ(ಭರತನಾಟ್ಯ), ಆಕಾಶವಾಣಿ ಬಿ ಗ್ರೇಡ್ ಕಲಾವಿದೆ(ನಾಟಕ), ಕಳರಿ ಪಯಟ್ಟು ನಿಷ್ಣಾತೆ, ಹಲವಾರು ಲೇಖನಗಳನ್ನು ಬರೆದು ಪ್ರಕಟಿಸಿದ ಲೇಖಕಿ, ಆಕಾಶವಾಣಿ ಕಾರ್ಯಕ್ರಮ ನಿರೂಪಕಿ, ಭರತನಾಟ್ಯ ನೃತ್ಯ ಶಿಕ್ಷಕಿ, ಸದಾ ಹೊಸತನ್ನು ಅರಸುವ ಅನ್ವೇಷಕಿ ಹೀಗೆ ಒಬ್ಬೊಬ್ಬರಿಗೆ ಒಂದೊಂದು ತೆರನಾಗಿ ಮಂಜುಳಾ ಕಾಣಿಸಬಹುದು. ಆದರೆ ನನಗಿಲ್ಲಿ ರಾಧೆಯಾಗಿ ಕಂಡಳು.

ರಾಧಾ’ ಏಕವ್ಯಕ್ತಿ ಪ್ರದರ್ಶನದ ವಿಡಿಯೋ

ಅವರ ಬಗ್ಗೆ ಕೆಲವು ದಿನಗಳ ನಂತರ ವಿಸ್ತೃತವಾಗಿ ಬರೆಯುವೆ. ಈಗ ಅವರ ರಾಧೆಯ ಬಗ್ಗೆ ಮಾತ್ರ ಹೇಳುವೆ. ಕೆಲವು ದಿನಗಳ ಹಿಂದೆ ಮಂಜುಳಾಳ ರಾಧೆ ಎನ್ನುವ ಏಕ ವ್ಯಕ್ತಿ ಪ್ರದರ್ಶನದ ವಿಡಿಯೋ ತುಣುಕೊಂದನ್ನು ನೋಡಿದೆ. ಬಹಳ ಇಷ್ಟವಾಯಿತು. ಅದನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳೋಣ ಎಂದು ಅನಿಸಿತು. ನಾನು ಇಲ್ಲಿ ಅದನ್ನು ಶಬ್ದಗಳಲ್ಲಿ ವಿವರಿಸಹೊರಟರೆ ರಸಭಂಗವಾದೀತು. ರಾಧೆಯ ಹೃದಯದ ಧ್ವನಿ ಕೇಳಿಸದೇ ಹೋದೀತು. ಮೂಲ ಕಥೆಯ ಜಾಡನ್ನು ಕೆದಕಲು ಹೋಗದೆ ಇದನ್ನು ವೀಕ್ಷಿಸಿ. ಭರತನಾಟ್ಯದಲ್ಲಿ ರಾಧೆಯ ತುಡಿತ ಮಿಡಿತಗಳನ್ನು ಹೇಗೆ ಅಭಿವ್ಯಕ್ತಿಗೊಳಿಸಿದ್ದಾರೆ ಎಂಬುದನ್ನು ಈ ವಿಡಿಯೋ ನೋಡಿದಾಗ ತಿಳಿಯಬಹುದು. ರಂಗದ ಈ ರಾಧೆಯ ಯಶಸ್ಸಿಗೆ ರಂಗದ ಹಿಂದಿನ ಹಲವು ಕಲಾವಿದರು ಕಾರಣ ಎಂದು ಮಂಜುಳಾ ನಿರ್ವಂಚನೆಯಿಂದ ಹೇಳಿಕೊಳ್ಳುತ್ತಾರೆ. ಅಭಿನಂದನೆಗಳು ರಾಧೆ (ಮಂಜುಳಾ)…

ಚತುರ್ಭುಜನಾದ ಪ್ರಜ್ವಲ್ ಕುಮಾರ್ ಗುರುವಾಯನಕೆರೆ

ತನ್ನ ವಿಶಿಷ್ಟ ಶೈಲಿಯ ಮಾತುಗಾರಿಕೆಯಿಂದ ಮತ್ತು ನೃತ್ಯಗಳಿಂದ ಮನೆ ಮಾತಾಗಿರುವ  ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಗೃಹಸ್ಥಾಶ್ರಮಕ್ಕೆ ಕಾಲಿರಿಸಿದ್ದಾರೆ. ಅವರು ಇಂದು ಮಮತಾ ಅವರನ್ನು ವಿವಾಹವಾದರು. ಯಾವುದೇ ಪಾತ್ರಗಳನ್ನು ರಂಗದಲ್ಲಿ ಸುಲಲಿತವಾಗಿ ನಿರ್ವಹಿಸಬಲ್ಲ ಹೆಗ್ಗಳಿಕೆ ಇವರಿಗಿತ್ತು. 

ಧರ್ಮಸ್ಥಳ ಮೇಳದಲ್ಲಿ ಮೊದಲ ವರುಷ ಬಾಲಗೋಪಾಲನಾಗಿ ಮತ್ತು ಪ್ರಸಂಗಗಳಲ್ಲಿ ಬರುವ ಇನ್ನಿತರ ವೇಷಗಳನ್ನು ಮಾಡುತ್ತಾ ನಿರಂತರ 5 ವರ್ಷಗಳ ಕಾಲ ಲಲಿತ ಕಲಾ ಕೇಂದ್ರಕ್ಕೆ ಹೋಗಿ ಅಭ್ಯಾಸಿಗಳ ಜತೆ ಕುಣಿಯುವುದರ ಜತೆಗೆ ಹೇಳಿಕೊಡುತ್ತಿದ್ದರು. ಕಟೀಲು ಮೇಳದಲ್ಲಿ 1 ವರ್ಷ. ಬಳಿಕ ಕುಂಟಾರು ಮೇಳದಲ್ಲಿ 2 ವರ್ಷ. ಎಡನೀರು ಮೇಳದಲ್ಲಿ ಪ್ರಜ್ವಲ್ ಅವರು 2 ವರ್ಷ, ನಂತರ 12 ವರ್ಷಗಳ ಕಾಲ ಹೊಸನಗರ ಮೇಳದಲ್ಲಿ. ಮತ್ತೆ 1 ವರ್ಷ ಎಡನೀರು ಮೇಳ. ಪ್ರಸ್ತುತ 3 ವರ್ಷಗಳಿಂದ ಹನುಮಗಿರಿ ಮೇಳದಲ್ಲಿ ಕೆಲಸ ಮಾಡುತ್ತಿದ್ದಾರೆ. 

ಸ್ವರ ಸಾಮ್ರಾಜ್ಯದ ಒಡೆಯ – ಎಸ್. ಪಿ. ಬಾಲಸುಬ್ರಹ್ಮಣ್ಯಂ ಹಾಡುಗಳ ನೋಡಲೇಬೇಕಾದ ವೀಡಿಯೊ 

ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ಹೆಸರು ಕೇಳದವರಿಲ್ಲ. ಸಂಗೀತ ಎಲ್ಲಿಯ ವರೆಗೆ ಇರುತ್ತದೋ ಅಲ್ಲಿಯ ವರೆಗೆ   ಎಸ್. ಪಿ.ಬಿ. ಹೆಸರು ಇದ್ದೇ ಇರುತ್ತದೆ. ಅವರೊಬ್ಬ ಗಾಯನ ಲೋಕದ ಜೀವಂತ ದಂತಕತೆ. ಅವರು ಭಾರತದ ಹೆಚ್ಚಿನ ಎಲ್ಲ ಭಾಷೆಗಳಲ್ಲಿ ಹಾಡಿ ಹಾಡುಗಳ ಸಂಖ್ಯೆಯಲ್ಲಿ ದಾಖಲೆಯನ್ನು ನಿರ್ಮಿಸಿದ್ದರೂ ಹಾಡುಗಳ ಸಂಖ್ಯೆಗಿಂತಲೂ ಅವರ ಮಧುರ ಸ್ವರದ ಇಂಪುಗಳ ಕಂಪನ್ನು ಹೊರಸೂಸುವ ಕಂಠಕ್ಕೆ ಶರಣುಹೋಗದ ಸಂಗೀತ ಪ್ರೇಮಿಯಿಲ್ಲ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರು ಎಸ್. ಜಾನಕಿ ಜೊತೆಯಲ್ಲಿ ಹಾಡಿದ ಅಪೂರ್ವ ಹಾಡುಗಳ ಸಂಗ್ರಹ ಸರಿಗಮ ಸೌತ್ ಯು ಟ್ಯೂಬ್ ಚಾನೆಲ್ ನವರ ವೀಡಿಯೋದಲ್ಲಿದೆ. ಈ ವೀಡಿಯೋದ ಲಿಂಕ್ ಕೆಳಗಡೆ ಇದೆ.    

ಕನ್ನಡದಲ್ಲಂತೂ ಅವರು ಹಾಡಿದ ಅಸಂಖ್ಯಾತ ಮಧುರ ಹಾಡುಗಳು ಇಂದು ಎಲ್ಲರ ಬಾಯಿಯಲ್ಲೂ ಗುಣುಗುಟ್ಟುತ್ತಾ ಇರುತ್ತವೆ. ಅವರೆಂದರೆ ಜೀವವನ್ನೇ ಬಿಡುವ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಅಂತಹಾ ಸಂಗೀತ ಸಾಮ್ರಾಜ್ಯದ ಅನಭಿಷಿಕ್ತ ದೊರೆ ಇಂದು ಕೊರೊನದಿಂದ ಅಸೌಖ್ಯಪೀಡಿತರಾಗಿ ಆಸ್ಪತ್ರೆ ಸೇರಿದ್ದಾರೆ. ಸುಮಾರು ದಿನಗಳಿಂದಲೂ ವೆಂಟಿಲೇಟರ್ ಅಳವಡಿಕೆಯೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದ ಅವರ ಪರಿಸ್ಥಿತಿ ಒಮ್ಮೆ ಗಂಭೀರ ಹಾಗೂ ಚಿಂತಾಜನಕ ಸ್ಥಿತಿಗೆ ತಲುಪಿತ್ತು. ಆದರೆ ಆಶಾದಾಯಕ ಹಾಗೂ ಸಂತೋಷದ ಸುದ್ದಿಗಾಗಿ ಜನರೆಲ್ಲರೂ ಪ್ರತಿಕ್ಷಣವೂ ಪ್ರಾರ್ಥಿಸುತ್ತಿದ್ದಾರೆ.    

ಹೌದು.  ಎಸ್. ಪಿ. ಬಾಲಸುಬ್ರಹ್ಮಣ್ಯಂ ಕೊರೋನಾ ಪರೀಕ್ಷೆಯಲ್ಲಿ ಗೆದ್ದು ಬರಲಿ.  ಶೀಘ್ರವೇ ಅವರು ಚೇತರಿಸಿಕೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸಲಿ. ಮತ್ತೆ ಸಂಗೀತ ಪ್ರೇಮಿಗಳು ಅವರು ಹಾಡುವುದನ್ನು ಶೀಘ್ರವಾಗಿ ಕಾಣುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥನೆ. 

ಕಲಾವಿದರು ಈಗೇನು ಮಾಡುತ್ತಿದ್ದಾರೆ?

ಕೊರೋನಾ ವ್ಯಾಪಕವಾಗಿ ಹಬ್ಬುತ್ತಿದೆ ಮತ್ತು ಅದರ ಪರಿಣಾಮವಾಗಿ ಎಲ್ಲೆಲ್ಲೂ ಸಾಮಾಜಿಕ ಅಂತರ ಮತ್ತು ಮುಕ್ತ ಸಂಚಾರಕ್ಕೆ ನಿರ್ಬಂಧಗಳಿರುವುದು ಎಲ್ಲಿರಿಗೂ ತಿಳಿಯದ ವಿಚಾರವೇನಲ್ಲ. ಮದುವೆ, ಮುಂಜಿ , ಜಾತ್ರೆ, ಸಮಾರಂಭಗಳಿಗೆ ನಿರ್ಬಂಧ ವಿಧಿಸಲಾಗಿದೆ. 50 ಜನರಿಗಿಂತ ಹೆಚ್ಚಾಗಿ ಗುಂಪಾಗಿ ಒಟ್ಟು ಸೇರುವುದನ್ನು ನಿಷೇಧಿಸಲಾಗಿದೆ. ಆದುದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುತ್ತಿಲ್ಲ.  

ಅದರಂತೆ ನಮ್ಮ ದೇಶದ ಶ್ರೀಮಂತ ಕಲಾ ವಿಭಾಗವೂ ಬಡವಾಗಿದೆ. ಯಾವುದೇ ಕಲಾ ಸಂಬಂಧಿತ ಪ್ರದರ್ಶನಗಳು ನಡೆಯುತ್ತಿಲ್ಲ. ನರ್ತಿಸುವ ಕಾಲುಗಳು ಸ್ತಬ್ಧವಾಗಿವೆ. ವಾದನದ ಕರಗಳು ಯಾಕೋ ಚುರುಕಾಗಿ ಚಲಿಸುತ್ತಿಲ್ಲ. ಹಾಡುವ ಬಾಯಿಗಳಿಂದ ಸ್ವರಗಳು ಕೇಳಿಸುತ್ತಿಲ್ಲ. ಅಭಿನಯದ ಅಂಗಾಂಗಗಳು ಭಾವನೆಗಳನ್ನು ಸ್ಪುರಿಸುತ್ತಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ಕಲಾವಿದರು ಪ್ರದರ್ಶನಗಳಿಲ್ಲದೆ ನೀರಿನಿಂದ ತೆಗೆದ ಮೀನಿನಂತೆ ಚಡಪಡಿಸುತ್ತಿದ್ದಾರೆ.  

ಮಧುರವಾಗಿ ಉಲಿಯುವ ಕೋಗಿಲೆಗೆ ಹಾಡಬೇಡವೆಂದರೆ ಹೇಗೆ? ನರ್ತಿಸುವ ನವಿಲಿಗೆ ನಾಟ್ಯವಾಡಬೇಡವೆಂದರೆ ಅದು ಕೇಳೀತೆ? ಹಾಗೆಯೇ ಆಗಿದೆ ಕಲಾವಿದರ ಬದುಕು. ನಿಂತ ನೀರಿನಂತೆ ಮನಸು ಕಾದ ಕಾವಲಿಯಂತೆ ಚುರುಗುಟ್ಟುತ್ತಾ ಇದೆ.      

ಅದು ಯಕ್ಷಗಾನವಿರಲಿ, ಸಂಗೀತವಿರಲಿ, ಭಾರತನಾಟ್ಯವಿರಲಿ, ನಾಟಕಗಳಿರಲಿ  ಕಲಾವಿದರಲ್ಲಿ ಕೆಲವರು  ನೇರ ಪ್ರಸಾರದ ಅಂದರೆ online ಪ್ರದರ್ಶನಗಳನ್ನು ನೆಚ್ಚಿಕೊಂಡಿದ್ದಾರೆ. ಹಾಗಾದರೂ ತಮ್ಮ ಸಮಯವನ್ನು ಕಲಾಕ್ಷೇತ್ರದಲ್ಲಿ ತೊಡಗಿಸಿಕೊಂಡು ನೆಮ್ಮದಿಯನ್ನು ಕಂಡುಕೊಳ್ಳುತ್ತಿದ್ದಾರೆ. ಆದರೆ ಈ ಭಾಗ್ಯ ಹೆಚ್ಚಿನ ಕಲಾವಿದರಿಗೆ ದೊರಕುವುದಿಲ್ಲ ಎಂಬುದು ಖೇದಕರ ವಿಚಾರ.      

ಅದಿರಲಿ. ಈಗ ಈ ಸಂಕಷ್ಟದಲ್ಲಿ ಕಲಾವಿದರು ಏನು ಮಾಡುತ್ತಿರಬಹುದು ಎಂಬ ಯೋಚನೆ ಕಲಾಪ್ರೇಮಿಗಳಿಗೆ ಬರುವುದು ಸಹಜವೇ. ಕೆಲವು ಕಲಾವಿದರು ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವರು ಸ್ವಂತ ಉದ್ಯೋಗಗಳನ್ನು ಪ್ರಾರಂಭಿಸಿರಬಹುದು. ಇನ್ನು ಕೆಲವರು ಕೂಲಿ ಕೆಲಸ ಅಥವಾ ಮೇಸ್ತ್ರಿ ಕೆಲಸಗಳಿಗೆ ಹೋಗುವವರೂ ಇದ್ದಾರೆ. ಇನ್ನು ಕೆಲವರು online ಮುಖಾಂತರ ತರಗತಿಗಳನ್ನೂ ನಡೆಸುತ್ತಿದ್ದಾರೆ.    

ಹಾಗಾದರೆ ಯಾರು ಯಾರು ಏನೇನು ಮಾಡುತ್ತಿದ್ದಾರೆ ಎಂಬುದನ್ನು ಮುಂದಿನ ಸುದ್ದಿಗಳಲ್ಲಿ ತಿಳಿಸಲು ಪ್ರಯತ್ನಿಸುತ್ತೇವೆ. ಅಲ್ಲಿಯ ವರೆಗೂ ಒಂದು ಸಣ್ಣ ವಿರಾಮ.