ತೆಂಕುತಿಟ್ಟು ಯಕ್ಷಗಾನದ ಬಲಿಪ ಪರಂಪರೆಯ ಮೇರು ಭಾಗವತ ಶ್ರೀ ಬಲಿಪ ನಾರಾಯಣ ಭಾಗವತರಿಗೆ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವರ ಸನ್ನಿಧಿಯಲ್ಲಿ ಉಜಿರೆಯ ಯಕ್ಷಜನ ಸಭಾ ವತಿಯಿಂದ ಮೊದಲ ‘ಯಕ್ಷ ಜನಾರ್ದನ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗಿದೆ. ಇಂದಿನಿಂದ ಅಂದರೆ ದಿನಾಂಕ ೦೨. ೧೦. ೨೦೨೦ ರ ಶುಕ್ರವಾರದಿಂದ ನಡೆಯುತ್ತಿರುವ ಮೂರು ದಿನದ ತಾಳಮದ್ದಳೆ ‘ಯಕ್ಷೋತ್ಸವ’ದ ಮೊದಲ ದಿನವಾದ ಇಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಬಲಿಪ ಭಾಗವತರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ತಮ್ಮ ವೃತ್ತಿಬದುಕಿನಲ್ಲಿ ಹಲವಾರು ಪ್ರಶಸ್ತಿ ಸನ್ಮಾನಗಳನ್ನು ಪಡೆದ ಬಲಿಪ ನಾರಾಯಣ ಭಾಗವತರು ಈ ಚೊಚ್ಚಲ ‘ಯಕ್ಷ ಜನಾರ್ದನ ಪ್ರಶಸ್ತಿ’ಯನ್ನೂ ತಮ್ಮ ಮುಡಿಗೇರಿಸಿಕೊಂಡರು. ಉಜಿರೆಯ ಯಕ್ಷಜನ ಸಭಾದ ಗೌರವಾಧ್ಯಕ್ಷ ಶ್ರೀ ಶ್ರೀ ಶರತ್ ಪಡುವೆಟ್ನಾಯ, ಅಧ್ಯಕ್ಷ ಡಾ.ದಯಾಕರ್, ಉಪಾಧ್ಯಕ್ಷರಾದ ಭುಜಬಲಿ, ಕಾರ್ಯದರ್ಶಿ ಬಿ.ವಿ.ರಾವ್ ಮೊದಲಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಮಾಂತ್ರಿಕ ಶಿರೋಮಣಿ, ತಾಳಮದ್ದಳೆ ಅರ್ಥಧಾರಿ ಶ್ರೀ ಉಡುಪುಮೂಲೆ ಗೋಪಾಲಕೃಷ್ಣ ಭಟ್ ಅವರು ನಿಧನರಾಗಿದ್ದಾರೆ. ಅವರು ಇಂದು ಅಪರಾಹ್ನ ನಮ್ಮನ್ನಗಲಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ತಾಳಮದ್ದಳೆ ಕ್ಷೇತ್ರದಲ್ಲಿ ಅವರಿಗೆ ಒಳ್ಳೆಯ ಹೆಸರಿತ್ತು. ದೊಡ್ಡ ದೊಡ್ಡ ಕೂಟಗಳಲ್ಲಿಯೂ ತನ್ನ ವಾಕ್ಚಾತುರ್ಯದ ಸುಧೆಯನ್ನು ಉಣಿಸಿದವರು. ಈ ಕ್ಷೇತ್ರದಲ್ಲಿ ಅವರೊಬ್ಬ ಪ್ರಬುದ್ಧ ಅರ್ಥಧಾರಿ. ವಿದುರ, ಶಲ್ಯ, ಅಕ್ರೂರ, ವಿಭೀಷಣ ಮುಂತಾದ ಪಾತ್ರಗಳ ಒಳನೋಟಗಳನ್ನು ಚಿತ್ರಿಸುವಲ್ಲಿ ಎತ್ತಿದ ಕೈ. ಪ್ರಮುಖ ಕೂಟಗಳಲ್ಲಿ ಪ್ರಧಾನ ಪಾತ್ರಗಳಲ್ಲಿಯೂ ಎಷ್ಟೋ ಬಾರಿ ಕಾಣಿಸಿಕೊಂಡಿದ್ದರು. ಹವ್ಯಕ ಮನೆತನದ ಸಂಪ್ರದಾಯಸ್ಥ ಕುಟುಂಬಲ್ಲಿ ಜನಿಸಿದ್ದ ಉಡುಪುಮೂಲೆ ಗೋಪಾಲಕೃಷ್ಣ ಭಟ್ಟರ ವೃತ್ತಿ ಮಂತ್ರವಾದವೇ ಆಗಿದ್ದರೂ ಸಾಹಿತ್ಯ, ಸಂಗೀತ, ನೃತ್ಯ, ಯಕ್ಷಗಾನಗಳು ಅವರ ಸಮಾನಾಸಕ್ತಿಗಳೇ ಆಗಿದ್ದುವು. ಕೊಡೆಂಕಿರಿ ರಾಮ ಭಟ್ಟ ಮತ್ತು ಶ್ರೀಮತಿ ಸರಸ್ವತಿ ಅಮ್ಮ ಇವರ ಮೂವರು ಮಕ್ಕಳಲ್ಲಿ ಹಿರಿಯ ಮಗನಾಗಿ 1944 ನವೆಂಬರ್ 26ರಂದು ಜನಿಸಿದ ಉಡುಪುಮೂಲೆ ಅವರು ತಮ್ಮ ಶಾಲಾ ಶಿಕ್ಷಣವನ್ನು ಎಡನೀರಿನ ಸ್ವಾಮೀಜೀಸ್ ಹೈಸ್ಕೂಲಿನಲ್ಲಿ ಪೂರ್ತಿಗೊಳಿಸಿದರು. ಪದವಿ ಪಡೆದ ನಂತರ ಕೆಲವು ಖಾಸಗಿ ಶಾಲೆಗಳಲ್ಲಿ ತಾತ್ಕಾಲಿಕವಾಗಿ ಅಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದರು. ಅವರು ಕೆಲಸಮಯ ಭರತನಾಟ್ಯ ಮತ್ತು ಶಾಸ್ತ್ರೀಯ ಸಂಗೀತವನ್ನೂಕಲಿತಿದ್ದರೂ ಮತ್ತೆ ಮಂತ್ರವಾದದ ವೃತ್ತಿಯತ್ತ ವಾಲಿದ್ದರು. ಪರಂಪರೆಯಿಂದ ಬಂದ ಮಂತ್ರವಾದದ ವೃತ್ತಿ ಅವರ ಕೈ ಬಿಡಲಿಲ್ಲ. ಅದರಲ್ಲಿ ಅಪೂರ್ವ ಯಶಸ್ಸನ್ನು ಸಾಧಿಸಿದರು. ಹೆಚ್ಚಿನ ಸಾಧನೆಯನ್ನು ಮಾಡಿ ಪ್ರಸಿದ್ಧಿಯನ್ನು ಪಡೆದರು. ಎಷ್ಟೋ ವಾಸಿಯಾಗದ ಖಾಯಿಲೆಗಳನ್ನು ಗುಣಪಡಿಸಿದ ಕೀರ್ತಿಯು ಅವರಿಗೆ ಸಲ್ಲಬೇಕು. ನೆರೆಯ ರಾಜ್ಯಗಳಿಂದಲೂ ಜನರು ಅವರನ್ನು ಹುಡುಕಿಕೊಂಡು ಬಂದು ಅವರಲ್ಲಿ ಚಿಕಿತ್ಸೆಯನ್ನು ಪಡೆದು ಗುಣಮುಖರಾಗಿ ಹಿಂತಿರುಗಿದ್ದಾರೆ. ಎಷ್ಟೋ ಮಾನಸಿಕ ಖಾಯಿಲೆಗಳನ್ನೂ ಗುಣಪಡಿಸಿದ್ದಾರೆ. ಅವರ ಪುತ್ರ ಶ್ರೀ ರಾಘವೇಂದ್ರ ಅವರು ತಮ್ಮ ತಂದೆಯ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಉಡುಪುಮೂಲೆ ಗೋಪಾಲಕೃಷ್ಣ ಭಟ್ ತನ್ನ ವೃತ್ತಿಯೊಂದಿಗೆ ಪ್ರವೃತ್ತಿಗಳನ್ನೂ ಬಿಡಲಿಲ್ಲ. ಯಕ್ಷಗಾನದ ತಾಳಮದ್ದಳೆ ರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡುದು ಮಾತ್ರವಲ್ಲದೆ ತನ್ನ ನಿವಾಸದಲ್ಲಿಯೇ ಯಕ್ಷಗಾನ ಸಂಘದ ಮೂಲಕ ಅನೇಕ ಆಸಕ್ತರನ್ನು ತರಬೇತಿ ನೀಡಿ ತಾಳಮದ್ದಳೆ ಅರ್ಥಧಾರಿಗಳಾಗಿ ತಯಾರು ಮಾಡಿದ್ದಾರೆ. ಎಡನೀರು ಸ್ವಾಮೀಜಿಗಳಿಗೆ ಪ್ರಿಯ ಶಿಷ್ಯರಾಗಿ ಅವರ ಪ್ರೀತಿಗೆ ಪಾತ್ರರಾಗಿದ್ದ ಉಡುಪುಮೂಲೆಯವರು ಎಡನೀರು ಮಠದ ತಾಳಮದ್ದಳೆಗಳಲ್ಲಿ ಹೆಚ್ಚಾಗಿ ತಪ್ಪದೆ ಭಾಗವಹಿಸುತ್ತಿದ್ದರು. ಸಾಹಿತಿಯಾಗಿ ಅನೇಕ ಲೇಖನಗಳನ್ನು ಬರೆದಿದ್ದ ಉಡುಪುಮೂಲೆ ಗೋಪಾಲಕೃಷ್ಣ ಭಟ್ ಯಕ್ಷಗಾನ, ನಾಟಕಗಳ ನಿರ್ದೇಶನವನ್ನೂ ಮಾಡುತ್ತಿದ್ದರು. ಹೀಗೆ ಸಮಾಜಮುಖಿಯಾಗಿ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಅವರ ಅಗಲಿಕೆಯು ಕನ್ನಡ ನಾಡಿನ ಕಲಾ, ಸಾರಸ್ವತ ಲೋಕಕ್ಕೆ ಮಾತ್ರವಲ್ಲ ಭಾಷೆ, ಜಾತಿಗಳ ಭೇದವಿಲ್ಲದೆ ಅವರ ನೂರಾರು ಅಭಿಮಾನಿಗಳಿಗೂ ಅತೀವ ನೋವು ತಂದಿದೆ. ಭಗವಂತನು ಅವರ ಆತ್ಮಕ್ಕೆ ಸದ್ಗತಿಯನ್ನು ನೀಡಲಿ ಮತ್ತು ಎಲ್ಲರಿಗೂ ಅವರ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನುನೀಡಲಿ ಎಂದು ಕಳಕಳಿಯ ಪ್ರಾರ್ಥನೆ.
ಶ್ರೀ ಕೋಲ್ಯಾರು ರಾಜು ಶೆಟ್ಟರು ಬರೆದ ‘ ಯಕ್ಷಗಾನ ಪೀಠಿಕಾ ಸೌರಭ’ ಎಂಬ ಈ ಹೊತ್ತಗೆಯು ಪ್ರಕಟವಾಗಿ ಓದುಗರ ಕೈ ಸೇರಿದ್ದು ೧೯೯೬ರಲ್ಲಿ. ಕೋಲ್ಯಾರು ರಾಜು ಶೆಟ್ಟರು ಉದ್ಯಮಿಯಾಗಿ ಮುಂಬಯಿ ನಗರದಲ್ಲಿ ನೆಲೆಸಿದರೂ ಹುಟ್ಟೂರಿನ ಮತ್ತು ನಮ್ಮ ಹೆಮ್ಮೆಯ ಕಲೆ ಯಕ್ಷಗಾನದ ನಂಟನ್ನು ಬಿಟ್ಟವರಲ್ಲ. ಕಲಾವಿದರಾಗಿ, ತಾಳಮದ್ದಳೆ ಅರ್ಥಧಾರಿಯಾಗಿ, ಸಂಘಟಕರಾಗಿ ಹೀಗೆ ಯಕ್ಷಗಾನ ಕಲೆಯ ಸಂಬಂಧವಿರಿಸಿಕೊಂಡೇ ಬೆಳೆದವರು. ಮನೆಯವರೆಲ್ಲರೂ ಕಲಾಸಕ್ತರಾಗಿದ್ದುದು ಎಳವೆಯಲ್ಲಿ ತಾನೂ ಪ್ರದರ್ಶನಗಳನ್ನು ನೋಡುತ್ತಾ ಯಕ್ಷಗಾನ ಕಲೆಯತ್ತ ಆಕರ್ಷಿತರಾದುದು ಇದಕ್ಕೆ ಕಾರಣವಾಗಿರಬಹುದು. ಶ್ರೀಯುತರು ಉತ್ತಮ ಬರಹಗಾರರೂ ಹೌದು. ಕನ್ನಡ ಸಾಹಿತ್ಯಾಸಕ್ತರಾಗಿ ಕೋಲ್ಯಾರು ರಾಜು ಶೆಟ್ಟರು ಬರೆದ ಲೇಖನಗಳನ್ನು ನಾವೂ ಓದಿರುತ್ತೇವೆ. ಯಕ್ಷಗಾನ ಪೀಠಿಕಾ ಸೌರಭ ಎಂಬ ಕಿರು ಕೃತಿಯಲ್ಲಿ ಒಟ್ಟು ಎಂಭತ್ತಾರು ಪಾತ್ರಗಳ ಪೀಠಿಕಾ ಅರ್ಥಗಾರಿಕೆಯನ್ನು ಶ್ರೀ ಕೋಲ್ಯಾರು ರಾಜು ಶೆಟ್ಟರು ನೀಡಿರುತ್ತಾರೆ. ಇವುಗಳಲ್ಲಿ ಹೆಚ್ಚಿನವು ಸ್ವಯಂ ರಚಿತವಾದವುಗಳು. ಕೆಲವು ಪಾತ್ರಗಳ ಪೀಠಿಕೆಗಳನ್ನು ಕೆಲವು ಹಿರಿಯ ಕಲಾವಿದರ ಪೀಠಿಕೆ ಅರ್ಥಗಾರಿಕೆಯನ್ನು ಕೇಳಿ ನೆನಪಿನ ಆಧಾರದಿಂದ ಯಥಾವತ್ತಾಗಿ ನೀಡಿರುತ್ತಾರೆ. ಈ ವಿಚಾರವನ್ನು ‘ನನ್ನ ನುಡಿ’ ಎಂಬ ಲೇಖನದಲ್ಲಿ ಅವರು ತಿಳಿಸಿರುತ್ತಾರೆ. ಯಕ್ಷಗಾನವನ್ನು ಅತೀವವಾಗಿ ಪ್ರೀತಿಸುತ್ತಿದ್ದ ತಮ್ಮ ಮಾತೋಶ್ರೀ ಮೇಲ್ ಕೋಲ್ಯಾರು ಪಡುಮನೆ ದಿ| ಅಬ್ಬಕ್ಕ ಶೆಡ್ತಿಯವರನ್ನು ಈ ಪುಸ್ತಕದಲ್ಲಿ ಕೋಲ್ಯಾರು ರಾಜು ಶೆಟ್ಟರು ನೆನಪಿಸಿದ್ದಾರೆ. ಅಲ್ಲದೆ ಸಹಕರಿಸಿದ ಎಲ್ಲಾ ಮಹನೀಯರುಗಳನ್ನೂ ನೆನಪಿಸಿಕೊಂಡಿದ್ದಾರೆ.
ಯಾವುದೇ ಒಂದು ಯೋಜನೆಯು ಚೆನ್ನಾಗಿ ನಡೆಯಬೇಕಾದರೆ ಅದರ ಆರಂಭವು ಚೆನ್ನಾಗಿಯೇ ಇರಬೇಕು ಎಂಬ ಮಾತಿದೆ. ಮನೆಯು ಸುಂದರವಾಗಿ ನಿರ್ಮಾಣವಾಗಬೇಕಾದರೆ ಪಂಚಾಂಗವು ಸುದೃಢವಾಗಿರಬೇಕು. ಯಕ್ಷಗಾನ ಪ್ರದರ್ಶನಕ್ಕೆ ಪೀಠಿಕೆ ವೇಷವು ಪಂಚಾಂಗವಿದ್ದಂತೆ ಎಂದು ಹೇಳಿದರೆ ತಪ್ಪಾಗಲಾರದೆಂದು ಭಾವಿಸುತ್ತೇನೆ. ಪ್ರಸಂಗದ ಮೊದಲ ವೇಷವೇ ಪೀಠಿಕೆ ವೇಷವು. ಮೊದಲ ವೇಷವೇ ಸೋತರೆ ಪ್ರಸಂಗವು ಸೋಲುತ್ತದೆ ಎಂದರ್ಥ ಅಲ್ಲ. ಆದರೆ ಪ್ರದರ್ಶನವನ್ನು ಮತ್ತೆ ಗೆಲ್ಲಿಸಲು ಹಿಮ್ಮೇಳ, ಮುಮ್ಮೇಳ ಕಲಾವಿದರು ಮತ್ತೆ ಶ್ರಮಪಡಬೇಕಾಗುತ್ತದೆ. ಹಾಗಾಗಿ ಪೀಠಿಕೆ ವೇಷಗಳು ಗೆದ್ದರೆ ಇಡೀ ಪ್ರದರ್ಶನವು ಯಶಸ್ವಿಯಾಗಲು ಅನುಕೂಲವಾಗುತ್ತದೆ. ಪಾತ್ರದ ಸ್ವಭಾವಕ್ಕನುಗುಣವಾಗಿ, ಸಮಯದ ಮಿತಿಯೊಳಗೆ ಬಹಳ ಅಂದವಾಗಿ ಅಚ್ಚುಕಟ್ಟಾಗಿ ಪೀಠಿಕೆ ವೇಷದ ಮಾತುಗಾರಿಕೆ ಇದ್ದರೆ ಬಲು ಸೊಗಸು. ಆದುದರಿಂದ ಶ್ರೀ ಕೋಲ್ಯಾರು ರಾಜು ಶೆಟ್ಟರು ಬರೆದ ಈ ಯಕ್ಷಗಾನ ಪೀಠಿಕಾ ಸೌರಭ ಎಂಬ ಪುಸ್ತಕವು ಕಲಾಕ್ಷೇತ್ರಕ್ಕೆ ಒಂದು ಒಳ್ಳೆಯ ಕೊಡುಗೆಯಾಗಿದೆ. ಕಲಾಭ್ಯಾಸಿಗಳು ಇದರ ಉಪಯೋಗವನ್ನು ಪಡೆದುಕೊಂಡಿರುತ್ತಾರೆ ಎಂಬ ವಿಚಾರವು ಸಂತೋಷವನ್ನು ಕೊಡುತ್ತದೆ. ಇದು ಒಟ್ಟು ನೂರು ಪುಟಗಳುಳ್ಳ ಪುಸ್ತಕ. ಇದನ್ನು ಪೆರ್ಮುದೆ ನೇಮು ಶೆಟ್ಟಿ, ಜಾರಿಗೆಕಟ್ಟೆ ಇವರಿಗೆ ಅರ್ಪಿಸಲಾಗಿದೆ. ಖ್ಯಾತ ಯಕ್ಷಗಾನ ಸಂಘಟಕ ಶ್ರೀ ಎಚ್.ಬಿ.ಎಲ್.ರಾವ್ ಅವರು ಮುನ್ನುಡಿ ಲೇಖನವನ್ನು ಬರೆದಿರುತ್ತಾರೆ. ಶ್ರೀ ಶಿವರಾಮ್ ಜಿ ಶೆಟ್ಟಿ ಅವರು ಬರೆದ ಲೇಖನ ರೂಪದ ಶುಭಾಶಯ ಸಂದೇಶವನ್ನು ನೀಡಲಾಗಿದ್ದು ಪುಸ್ತಕದ ಕೊನೆಯಲ್ಲಿ ಕೋಲ್ಯಾರು ರಾಜು ಶೆಟ್ಟರು ಬರೆದ ‘ಕಾಲಗರ್ಭಕ್ಕೆ ಸೇರಿದ ಶಕಪುರುಷ – ಗುಂಡ್ಮಿ ಕಾಳಿಂಗ ನಾವಡ’ ಎಂಬ ಲೇಖನವನ್ನು ನೀಡಲಾಗಿದೆ. ಪುಸ್ತಕದ ಹೊರ ಆವರಣದಲ್ಲಿ ಬಡಗು ತಿಟ್ಟಿನ ಖ್ಯಾತ ಕಲಾವಿದ ನಗರ ಜಗನ್ನಾಥ ಶೆಟ್ಟರ ಲೇಖನವಿದೆ.
ಧರ್ಮಸ್ಥಳ ಲಲಿತ ಕಲಾ ಕೇಂದ್ರ (ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಕಲಾ ಸಂಘ):
ತೆಂಕುತಿಟ್ಟು ಯಕ್ಷಗಾನ ಕಲಿಕೆಗೂ ಸೂಕ್ತ ವ್ಯವಸ್ಥೆಗಳಿಲ್ಲದುದನ್ನು ಮನಗಂಡ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗಡೆಯವರು ತಮ್ಮ ತೀರ್ಥರೂಪರೂ ಹಿಂದಿನ ಧರ್ಮಾಧಿಕಾರಿಗಳೂ ಆದ ಶ್ರೀ ರತ್ನವರ್ಮ ಹೆಗಡೆಯವರ ಆಶಯದಂತೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಯಕ್ಷಗಾನಕ್ಕೊಂದು ಶಾಸ್ತ್ರೀಯ ಕಲಿಕಾ ಕೇಂದ್ರವನ್ನು ಒದಗಿಸುವ ಮಹತ್ತರವಾದ ಧೃಷ್ಟಿಯನ್ನಿರಿಸಿಕೊಂಡು 1972ರಲ್ಲಿ ‘ಲಲಿತ ಕಲಾ ಕೇಂದ್ರ’ವನ್ನು ಸ್ಥಾಪಿಸಿದರು. ಮೊದಲು ಮೇಳಕ್ಕೆ ಸೇರಿ ‘ಕೋಡಂಗಿ ವೇಷ’ಗಳನ್ನು ಮಾಡಿ ಹೆಜ್ಜೆ ಹೆಜ್ಜೆಗೂ ನಾಟ್ಯ ಕಲಿಯುತ್ತಾ ಔನ್ನತ್ಯವನ್ನು ಸಾಧಿಸುವುದು ಆಗಿನ ರಂಗ ಪದ್ಧತಿಯಾಗಿತ್ತು. ಈ ಅಲಿಖಿತ ನಿಯಮವನ್ನು ಸರಳೀಕರಿಸಲು ಪೂಜ್ಯ ಹೆಗಡೆಯವರು ತೆಂಕುತಿಟ್ಟಿಗೆ ಒಂದು ತರಬೇತಿ ಕೇಂದ್ರದ ಅವಶ್ಯಕತೆಯನ್ನು ಮನಗಂಡರು. ಮಳೆಗಾಲದ ಆರು ತಿಂಗಳುಗಳಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹಿಮ್ಮೇಳ ಮತ್ತು ಮುಮ್ಮೇಳಗಳನ್ನು ಕಲಿಸುವ ಯೋಜನೆ ಸಿದ್ಧವಾಯಿತು. ಮೊದಲ ವರ್ಷದ ಮುಮ್ಮೇಳ ಗುರುಗಳಾಗಿ ತೆಂಕುತಿಟ್ಟಿನ ಅದ್ವಿತೀಯ ಕಲಾವಿದರಾಗಿದ್ದ ಕುರಿಯ ವಿಠಲ ಶಾಸ್ತ್ರಿಗಳೂ ಹಿಮ್ಮೇಳಕ್ಕೆ ಮಾಂಬಾಡಿ ನಾರಾಯಣ ಭಾಗವತರೂ ಸಿದ್ಧರಾದರು.
ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಕಲಾ ಸಂಘ ಅಥವಾ ಲಲಿತ ಕಲಾ ಕೇಂದ್ರದಲ್ಲಿ ಯಶಸ್ವಿಯಾಗಿ ತರಬೇತಿ ಮುಗಿಸಿದ ಅನೇಕರು ಇಂದು ತೆಂಕುತಿಟ್ಟಿನಲ್ಲಿ ಅಗ್ರಗಣ್ಯ ಕಲಾವಿದರಾಗಿ ಮೆರೆಯುತ್ತಿದ್ದಾರೆ. ಆ ಕಾಲದಲ್ಲಿ ಒಂದು ಅತ್ಯುತ್ತಮ ತರಬೇತಿ ಕೇಂದ್ರವೆಂದು ಹೆಸರು ಗಳಿಸಿದ್ದ ಈ ಕೇಂದ್ರವು ಶಿಸ್ತಿನ ಶಿಕ್ಷಣಕ್ಕೆ ಹೆಸರುವಾಸಿಯಾಗಿತ್ತು. ಇಲ್ಲಿ ಗುರುಗಳಾಗಿದ್ದ ಪ್ರಸಿದ್ಧ ಕಲಾವಿದರಾದ ಕುರಿಯ ವಿಠಲ ಶಾಸ್ತ್ರಿ, ಮಾಂಬಾಡಿ ನಾರಾಯಣ ಭಾಗವತ, ಮಾಣಂಗಾಯಿ ಕೃಷ್ಣ ಭಟ್, ಕುಂಡಂಕುಳಿ ರಾಮಕೃಷ್ಣ ಮದ್ದಳೆಗಾರ, ಪಡ್ರೆ ಚಂದು, ನೆಡ್ಲೆ ನರಸಿಂಹ ಭಟ್, ಅಳಿಕೆ ರಾಮಯ್ಯ ರೈ, ಕೆ. ಗೋವಿಂದ ಭಟ್, ಕರ್ಗಲ್ಲು ವಿಶ್ವೇಶ್ವರ ಭಟ್, ಗೋಪಾಲಕೃಷ್ಣ ಕುರುಪ್, ಹರಿನಾರಾಯಣ ಬೈಪಾಡಿತ್ತಾಯ, ಲೀಲಾವತಿ ಬೈಪಾಡಿತ್ತಾಯ, ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ, ಪದ್ಮನಾಭ ಉಪಾಧ್ಯಾಯ, ತಾರಾನಾಥ ಬಲ್ಯಾಯ, ದಿವಾಣ ಶಿವಶಂಕರ ಭಟ್ ಮೊದಲಾದವರು ತಮ್ಮ ಶ್ರಮವನ್ನು ಧಾರೆಯೆರೆದು ಅನೇಕ ಕಲಾವಿದರನ್ನು ತಯಾರು ಮಾಡಿದ್ದರು.
ಶ್ರೀ ಹರ್ಷೇಂದ್ರ ಕುಮಾರ್
ಈ ಎಲ್ಲಾ ಶ್ರಮದ ಹಿಂದೆ ಪೂಜ್ಯ ಶ್ರೀ ವೀರೇಂದ್ರ ಹೆಗಡೆಯವರ ಮತ್ತು ಶ್ರೀ ಹರ್ಷೇಂದ್ರ ಕುಮಾರ್ ಅವರ ನಿರಂತರ ಬೆಂಬಲ ಪ್ರೋತ್ಸಾಹಗಳಿದ್ದುವು. ಪೂಜ್ಯ ಹೆಗಡೆಯವರೂ ಶ್ರೀ ಹರ್ಷೇಂದ್ರ ಕುಮಾರ್ ಅವರೂ ಆಗಾಗ ಈ ಲಲಿತ ಕಲಾ ಕೇಂದ್ರಕ್ಕೆ ಭೇಟಿಕೊಟ್ಟು ವಿದ್ಯಾರ್ಥಿಗಳ ಕಲಿಯುವಿಕೆಯನ್ನು ನಿರಂತರ ಪರಿಶೀಲಿಸುತ್ತಿದ್ದರು. ನೆಡ್ಲೆ ನರಸಿಂಹ ಭಟ್, ಕೆ. ಗೋವಿಂದ ಭಟ್, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ ಅವರು ಜೊತೆಯಾಗಿ ವಿದ್ಯಾರ್ಥಿಗಳಿಗೆ ಕಲಿಸಲು ಪಠ್ಯಕ್ರಮವೊಂದನ್ನು ಸಿದ್ಧಪಡಿಸಿದರು. ಈ ಪಠ್ಯಕ್ರಮದ ಆಧಾರದಲ್ಲಿ ಲಲಿತ ಕಲಾ ಕೇಂದ್ರದಲ್ಲಿ ತೆಂಕುತಿಟ್ಟಿನ ಹಿಮ್ಮೇಳ ಮುಮ್ಮೇಳಗಳ ಶಿಕ್ಷಣ ಮುಂದುವರಿಯಿತು. ಹೀಗೆ ಒಂದು ಹಂತದಲ್ಲಿ ಏರುಗತಿಯಲ್ಲಿ ಸಾಗುತ್ತಿದ್ದ ಲಲಿತ ಕಲಾ ಕೇಂದ್ರಕ್ಕೆ ಕೆಲವು ವರ್ಷಗಳ ಹಿಂದೆ ಕಲಿಯುವ ಆಸಕ್ತ ವಿದ್ಯಾರ್ಥಿಗಳ ಕೊರತೆಯುಂಟಾಯಿತು. ಆ ಕಾಲದಲ್ಲಿ ಯಕ್ಷಗಾನದಿಂದ ಬರುವ ಆದಾಯ ಮತ್ತು ಜೀವನ ನಿರ್ವಹಣೆಯ ಮಟ್ಟವನ್ನು ಲೆಕ್ಕಹಾಕಿ ಹೆತ್ತವರು ತಮ್ಮ ಮಕ್ಕಳನ್ನು ಯಕ್ಷಗಾನ ಕಲಿಯುವುದಕ್ಕೆ ಪ್ರೇರಿಪಿಸದೆ ಇದ್ದುದೇ ಇದಕ್ಕೆ ಕಾರಣವಿರಬಹುದು. ಇದರ ಜೊತೆಗೆ ಹಲವಾರು ಯಕ್ಷಗಾನ ಕಲಾವಿದರು ಅಲ್ಲಲ್ಲಿ ತಮ್ಮ ತಮ್ಮ ಪ್ರದೇಶಗಳಲ್ಲಿ ಯಕ್ಷಗಾನ ತರಗತಿಗಳನ್ನು ಆರಂಭಿಸಿದ್ದೂ ಇನ್ನೊಂದು ಕಾರಣವಿರಬಹುದು. ಕಲಾಸಕ್ತರ ಕೊರತೆಯಿಂದ ಲಲಿತ ಕಲಾ ಕೇಂದ್ರದಲ್ಲಿ ಯಕ್ಷಗಾನ ಶಿಕ್ಷಣ ಮತ್ತು ತರಬೇತಿ ಮುಂದುವರಿಯದೆ ಇದ್ದುದು ತೆಂಕುತಿಟ್ಟು ಯಕ್ಷಗಾನಕ್ಕೆ ಆದ ಒಂದು ದೊಡ್ಡ ನಷ್ಟವೆಂದೇ ಹೇಳಬಹುದು. (ಮುಂದಿನ ಸಂಚಿಕೆ ಭಾಗ – 4ರಲ್ಲಿ ಮುಂದುವರಿಯುವುದು)
‘ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣ ಪ್ರಸಂಗ ಮಾಲಿಕೆ’ ಎಂಬ ಕೃತಿಯು ಯಕ್ಷಗಾನದ ಐದು ಪ್ರಸಂಗಗಳನ್ನು ಒಳಗೊಂಡಿದೆ. ಪ್ರಕಾಶಕರು ಪದವೀಧರ ಯಕ್ಷಗಾನ ಸಮಿತಿ, ಮುಂಬಯಿ. ಪ್ರಧಾನ ಸಂಪಾದಕರು ಶ್ರೀ ಎಚ್.ಬಿ.ಎಲ್. ರಾವ್ ಮುಂಬಯಿ. ಸಂಪಾದಕರು ಶ್ರೀ ಪು. ಶ್ರೀನಿವಾಸ ಭಟ್ ಕಟೀಲು ಅವರು. ಮುದ್ರಣಕ್ಕೆ ಸಹಕರಿಸಿದವರು ಭಾಗವತರಾದ ಶ್ರೀ ಕುಬಣೂರು ಶ್ರೀಧರ ರಾವ್. ಪದವೀಧರ ಯಕ್ಷಗಾನ ಸಮಿತಿಯ ಇಪ್ಪತ್ತಾರನೆಯ ಪ್ರಸಂಗ ಸಂಪುಟವಿದು. ಪ್ರಕಟಗೊಂಡದ್ದು 2008ನೇ ಇಸವಿಯಲ್ಲಿ. ಇದು ಒಟ್ಟು ನೂರಾ ಮೂವತ್ತೈದು ಪುಟಗಳಿಂದ ಕೂಡಿದ್ದು ಅವುಗಳೆಂದರೆ ಪ್ರಹ್ಲಾದ ಚರಿತ್ರೆ ( ಅಂಬಾತನಯ ಮುದ್ರಾಡಿ), ರುಧಿರ ಮೋಹಿನಿ (ಅಮೃತ ಸೋಮೇಶ್ವರ) ಶ್ರೀರಾಮ ಪಟ್ಟಾಭಿಷೇಕ ಮೂಲಕಾಸುರ ವಧೆ (ಅಜ್ಞಾತ ಕವಿ), ಧರ್ಮಗುಪ್ತ ವಿಜಯ (ದುಗ್ಗಪ್ಪಯ್ಯ), ಪಾಪಣ್ಣ ವಿಜಯ ಗುಣಸುಂದರಿ (ನಾರಾಯಣ ಭಟ್ಟ). 1972ರಲ್ಲಿ ಸ್ಥಾಪನೆಗೊಂಡ ಪದವೀಧರ ಯಕ್ಷಗಾನ ಸಮಿತಿಯು ಅದೇ ವರ್ಷ ಕಟೀಲು ಅಮ್ಮನವರ ಸನ್ನಿಧಿಯಲ್ಲಿ ಹನುಮದ್ವಿಲಾಸ ಎಂಬ ಪ್ರಸಂಗವನ್ನು ಪ್ರದರ್ಶಿಸಿದ್ದರಂತೆ. ಪ್ರದರ್ಶನವನ್ನು ನೋಡಿ ಮೆಚ್ಚಿಕೊಂಡ ಶ್ರೀ ಗೋಪಾಲಕೃಷ್ಣ ಆಸ್ರಣ್ಣರು ಶ್ರೀದೇವಿಯ ಸನ್ನಿಧಿಯಲ್ಲಿ ಪ್ರಸಾದ ನೀಡುವಾಗ ಪದವೀಧರ ಯಕ್ಷಗಾನ ಸಮಿತಿಯು ಬೆಳೆದು ಕೀರ್ತಿಯನ್ನು ಪಡೆಯಲಿ ಎಂದು ಆಶೀರ್ವದಿಸಿದ್ದರು. ಈ ಪ್ರಸಂಗ ಸಂಪುಟವನ್ನು ಪದವೀಧರ ಯಕ್ಷಗಾನ ಸಮಿತಿಯು ಶ್ರೀ ಗೋಪಾಲಕೃಷ್ಣ ಆಸ್ರಣ್ಣರಿಗೆ ಅರ್ಪಿಸಿತ್ತು. ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣ ಪ್ರಸಂಗ ಮಾಲಿಕೆ ಎಂಬ ಹೆಸರಿನಲ್ಲಿ ಈ ಪುಸ್ತಕವನ್ನು ಮುದ್ರಿಸಿ ಅವರನ್ನು ಗೌರವಿಸಿತ್ತು. ಶ್ರೀ ಎಚ್.ಬಿ.ಎಲ್. ರಾಯರು ‘ಪ್ರಸಂಗ ಓದುವ ಮೊದಲು’ ಎಂಬ ತಮ್ಮ ಲೇಖನದಲ್ಲಿ ಈ ವಿಚಾರವನ್ನು ತಿಳಿಸಿರುತ್ತಾರೆ. ಶ್ರೀರಾಮ ಪಟ್ಟಾಭಿಷೇಕ ಮೂಲಕಾಸುರ ವಧೆ, ಧರ್ಮಗುಪ್ತ ವಿಜಯ ಎಂಬ ಪ್ರಸಂಗಗಳ ಕುರಿತು ಶ್ರೀ ಪು. ಶ್ರೀನಿವಾಸ ಭಟ್ಟರು ಬರೆದ ಲೇಖನಗಳನ್ನು ನೀಡಲಾಗಿದೆ. ರುಧಿರ ಮೋಹಿನಿ ಪ್ರಸಂಗದ ಕವಿ ಶ್ರೀ ಅಮೃತ ಸೋಮೇಶ್ವರರು ‘ಅರಿಕೆ’ ಎಂಬ ಶೀರ್ಷಿಕೆಯಡಿ ಬರೆದ ಲೇಖನವನ್ನೂ ಪ್ರಸಂಗದ ಕಥಾಸಾರವನ್ನೂ ನೀಡಿರುತ್ತಾರೆ.
ಕಲ್ಬೇಲಿಯಾ ಎಂದರೆ ರಾಜಸ್ತಾನದ ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಒಂದು ಜನಾಂಗದ ಹೆಸರು. ಪರಿಶಿಷ್ಟ ಪಂಗಡಕ್ಕೆ ಸೇರಿದ ಇವರ ಸಾಂಪ್ರದಾಯಿಕ ಉದ್ಯೋಗವೆಂದರೆ ಹಾವುಗಳನ್ನು ಹಿಡಿಯುವುದು. ಮೊದಲೆಲ್ಲಾ ಹಾವಿನ ವಿಷದ ವ್ಯಾಪಾರವನ್ನೂ ಮಾಡುತ್ತಿದ್ದರು. ಆದರೆ ಹಾವನ್ನು ಕೊಲ್ಲುತ್ತಿರಲಿಲ್ಲ. ಅವರ ಈ ನೃತ್ಯವು ಕಲ್ಬೇಲಿಯಾ ನೃತ್ಯ ಎಂದು ಇಡೀ ಪ್ರಪಂಚದಲ್ಲಿಯೇ ಪ್ರಸಿದ್ಧಿಯನ್ನು ಪಡೆದಿದೆ. ಹಾವುಗಳೊಂದಿಗೆ ಜೀವನ ನಿರ್ವಹಣೆಯ ಸಂಬಂಧ ಹೊಂದಿದ ಇವರ ನೃತ್ಯ ಮತ್ತು ಅವರ ಸಮುದಾಯದ ವೇಷಭೂಷಣಗಳಲ್ಲಿ ಸರ್ಪಗಳ ಹೋಲಿಕೆಯಿದೆ. ಪುರುಷರು ಹಾವಿನ ವಿಷಗಳ ವ್ಯವಹಾರವನ್ನು ಮಾಡಿದರೆ ಮಹಿಳೆಯರು ಕಲ್ಬೇಲಿಯಾ ನೃತ್ಯವನ್ನು ಮಾಡಿ ಜೀವನ ಸಾಗಿಸುತ್ತಿದ್ದರು. ಹಳ್ಳಿಗಳ ಮನೆಗಳಲ್ಲಿ ಹಾವುಗಳು ಮನೆಯೊಳಗೆ ಪ್ರವೇಶ ಮಾಡಿದರೆ ಹಾವು ಹಿಡಿಯಲು ಈ ಜನಾಂಗದವರನ್ನು ಕರೆಯುತ್ತಿದ್ದರು. ಇವರು ಗಿಡಮೂಲಿಕೆಗಳ ಚಿಕಿತ್ಸೆಯನ್ನೂ ಬಲ್ಲವರಾದುದರಿಂದ ಆ ರೀತಿಯೂ ಜೀವನ ನಿರ್ವಹಣೆ ಮಾಡುತ್ತಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅನುಸಾರ ಹಾವುಗಳ ವ್ಯವಹಾರವನ್ನು ಮಾಡುವುದಕ್ಕೆ ನಿರ್ಬಂಧಗಳಿರುವುದರಿಂದ ಈಗ ಅವರು ಈ ವ್ಯಾಪಾರವನ್ನು ಬಿಟ್ಟು ಇತರ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೆಚ್ಚಾಗಿ ಮರುಭೂಮಿಯಲ್ಲಿ ಪ್ರದರ್ಶಿತವಾಗುವ ಕಲ್ಬೇಲಿಯಾ ನೃತ್ಯವು ಕಲ್ಬೇಲಿಯಾ ಜನಾಂಗದ ಸಂಸ್ಕೃತಿಯ ಒಂದು ಭಾಗವಾಗಿದೆ. ಈ ನೃತ್ಯವು ಸರ್ಪಗಳ ಚಲನವಲನವನ್ನು ಹೋಲುತ್ತದೆ.
ಈ ಜನಾಂಗದ ಹುಡುಗಿಯರು ಸರ್ಪಗಳಂತೆ ಬಾಗುತ್ತಾ ಬಳುಕುತ್ತಾ ಈ ನೃತ್ಯವನ್ನು ಮಾಡುತ್ತಾರೆ. ಕಲ್ಬೇಲಿಯಾ ನೃತ್ಯದ ಹಾಡುಗಳು ಪುರಾಣ ಮತ್ತು ಜಾನಪದ ಕಥೆಗಳನ್ನು ಆಧರಿಸಿದೆ. ಅತ್ಯಂತ ಸುಂದರವಾದ ನೃತ್ಯ. ರೋಮಾಂಚನಗೊಳಿಸುವ ಅಂಗಾಂಗ ಚಲನೆ ಇದರ ವೈಶಿಷ್ಟ್ಯ. ಆದರೆ ಖೇದಕರವಾದ ವಿಚಾರವೇನೆಂದರೆ ಈ ನೃತ್ಯಪ್ರಕಾರಕ್ಕೆ ಯಾವುದೇ ಪಠ್ಯಗಳೂ ಕೈಪಿಡಿಗಳೂ ಇಲ್ಲ. ತರಬೇತಿಯನ್ನು ಪಡೆಯಲು ಲಿಖಿತ ಟಿಪ್ಪಣಿಗಳೂ ಇಲ್ಲ. ಆದುದರಿಂದ ಈ ಸುಂದರ ನೃತ್ಯವನ್ನು ಪುನರುಜ್ಜೀವನಗೊಳಿಸಲು ಜಾಗತಿಕ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಭಾರತ ಸರಕಾರವೂ ಬಹಳ ಆಕರ್ಷಕವಾದ ಈ ಜಾನಪದ ನೃತ್ಯವನ್ನು ಉಳಿಸಲು ಕ್ರಮಗಳನ್ನು ಕೈಗೊಂಡಿದೆ. ವಿದೇಶಿಯರು ಈ ನೃತ್ಯಕ್ಕೆ ಮಾರುಹೋಗಿದ್ದಾರೆ. ರಷ್ಯಾ ಸೇರಿದಂತೆ ಅಸಂಖ್ಯಾತ ಮಹಿಳೆಯರು ಈ ನೃತ್ಯವನ್ನು ಕಲಿತು ಅದನ್ನು ಅದ್ಭುತವಾಗಿ ಪ್ರದರ್ಶನ ಮಾಡುತ್ತಾರೆ. ಯುನೆಸ್ಕೊ ಕೂಡ ಈ ನೃತ್ಯವನ್ನು ತನ್ನ ಅಮೂರ್ತ ಹಾಗೂ ಅಸ್ಪಷ್ಟ ಪರಂಪರೆಯ ಪಟ್ಟಿಗೆ ಸೇರಿಸಿದೆ.
ಶೀರ್ಷಿಕೆಯೇ ಸೂಚಿಸುವಂತೆ ಈ ಸಂಪುಟದಲ್ಲಿ ಏಳು ಯಕ್ಷಗಾನ ಪ್ರಸಂಗಗಳನ್ನು ನೀಡಲಾಗಿದೆ. ಎಲ್ಲವೂ ಪುರಾಣ ಪ್ರಸಂಗಗಳು. ಈ ಹೊತ್ತಗೆಯು ಪ್ರಕಟವಾದುದು 2012ನೇ ಇಸವಿ ಜುಲೈ 22ರಂದು. ಈ ಕೃತಿಯನ್ನು ಕೀರ್ತಿಶೇಷ ಶಿಕಾರಿಪುರ ಹರಿಹರೇಶ್ವರ ಅವರಿಗೆ ಅರ್ಪಿಸಲಾಗಿದ್ದು, ಶ್ರೀಯುತರು ವೈದಿಕರೂ ಜ್ಯೋತಿಷ್ಯರೂ ಆಗಿದ್ದು ಜತೆಗೆ ಸಾಹಿತ್ಯ, ಸಂಗೀತ, ಯಕ್ಷಗಾನಾಸಕ್ತರೂ ಆಗಿದ್ದರು. ಅವರ ಎರಡನೇ ಪುಣ್ಯತಿಥಿಯಂದು ಈ ಸಂಪುಟವು ಪ್ರಕಟವಾಗಿ ಓದುಗರ ಕೈ ಸೇರಿತ್ತು. ಯಕ್ಷಗಾನ ಪ್ರಿಯರಾಗಿದ್ದ ಹರಿಹರೇಶ್ವರರು ನೂರಕ್ಕೂ ಹೆಚ್ಚಿನ ಪ್ರಸಂಗ ಪುಸ್ತಕಗಳನ್ನು ಸಂಗ್ರಹಿಸಿ ಇರಿಸಿದ್ದರಂತೆ. ಇವುಗಳಲ್ಲಿ ಶ್ರೀ ಹರಿಹರೇಶ್ವರರಿಗೆ ಪ್ರಿಯವಾದ ಏಳು ಪ್ರಸಂಗಗಳನ್ನು ಆಯ್ಕೆಮಾಡಿ ಪುಸ್ತಕ ರೂಪದಲ್ಲಿ ಮುದ್ರಿಸಿ ಪ್ರಕಟಿಸಲಾಗಿತ್ತು. ಶ್ರೀ ಹರಿಹರೇಶ್ವರರು ಅಮೇರಿಕಾದಲ್ಲಿ ನೆಲೆಸಿರುವಾಗಲೂ ಅಲ್ಲಿ ಯಕ್ಷಗಾನ ಪ್ರದರ್ಶನಗಳು ನಡೆಯಲು ಕಾರಣರಾಗಿದ್ದರು. ‘ಅಮೆರಿಕ ಕನ್ನಡ’ ಎಂಬ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಯಕ್ಷಗಾನಕ್ಕೆ ವಿಶೇಷ ಪ್ರಾಶಸ್ತ್ಯವನ್ನು ನೀಡಿದ ಮಹನೀಯರಿವರು. ಈ ಎಲ್ಲಾ ವಿಚಾರಗಳನ್ನು ನಾಗಲಕ್ಷ್ಮಿ ಹರಿಹರೇಶ್ವರ ಮೈಸೂರು ಇವರು ‘ಪ್ರಸ್ತಾವನೆ’ ಎಂಬ ಲೇಖನದಡಿ ವಿವರವಾಗಿ ತಿಳಿಸಿರುತ್ತಾರೆ. ಈ ಪುಸ್ತಕದ ಸಂಪಾದಕರು ಶ್ರೀ ಜಿ.ಎನ್. ಅನಂತವರ್ಧನ ಅವರು. ಒಟ್ಟು ಇನ್ನೂರ ಐವತ್ತೆರಡು ಪುಟಗಳಿಂದ ಕೂಡಿದ ಪುಸ್ತಕ ಇದು. ಈ ಸಂಪುಟದಲ್ಲಿ ಗಣಪತಿ ಪ್ರತಾಪ ( ಉಜ್ರೆ ವಾಸುದೇವ ನಾಯ್ಕ) ನಾರದ ಪ್ರತಾಪ ( ಹೆಬ್ರಿ ಖಂಡಿಗೆ ಪದ್ಮನಾಭ ಜನ್ನೇರಿ), ಶಿವ ನಾಮ ಮಹಿಮೆ (ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್), ಅನಂತನ ವ್ರತ ಮಹಾತ್ಮೆ (ಪಂಡಿತರಿಂದ ಪರಿಶೋಧಿಸಲ್ಪಟ್ಟು ಪಾವಂಜೆ ಗುರುರಾಯರಿಂದ ಪ್ರಕಟಿತ), ಸಹದೇವ ದಿಗ್ವಿಜಯ (ಎಸ್. ಗಣಪಯ್ಯ ಶೆಟ್ಟಿ), ದ್ರೌಪದೀ ಪ್ರತಾಪ (ಕಡಂದಲೆ ಬಿ. ರಾಮರಾವ್) ಎಂಬ ಏಳು ಪೌರಾಣಿಕ ಪ್ರಸಂಗಗಳಿವೆ. ಎಲ್ಲಾ ಪ್ರಸಂಗಗಳ ಕಥಾಸಾರವನ್ನೂ ಪಾತ್ರಗಳ ವಿವರವನ್ನೂ ನೀಡಲಾಗಿದ್ದು ಇದರಿಂದ ಓದುಗರಿಗೆ ಕಲಾವಿದರಿಗೆ ಅನುಕೂಲವೇ ಆಗಲಿದೆ. ಆರ್ಥಿಕ ನೆರವನ್ನು ನೀಡಿದವರು ಶ್ರೀಮತಿ ನಾಗಲಕ್ಷ್ಮಿ ಹರಿಹರೇಶ್ವರ ಮತ್ತು ಶ್ರೀಮತಿ ವಿಜಯರಾಜ್ ಜೋಷಿ ಇವರುಗಳು. ಪುಸ್ತಕದ ಹೊರ ಆವರಣದಲ್ಲಿ ನಾಗಲಕ್ಷ್ಮಿ ಹರಿಹರೇಶ್ವರರು ಬರೆದ ‘ಪ್ರಸ್ತಾವನೆ’ ಲೇಖನದ ಮುಖ್ಯ ವಿಚಾರಗಳನ್ನು ನೀಡಲಾಗಿದೆ. ಈ ಪ್ರಸಂಗ ಸಂಪುಟದ ಪ್ರಕಾಶಕರು ನವಭಾರತೀ ಪ್ರಕಾಶನ, ಸರಸ್ವತಿಪುರಂ, ಮೈಸೂರು.
ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣಾ ಯಕ್ಷಗಾನ ಪ್ರಸಂಗ ಮಾಲಿಕೆ ಎಂಬ ಈ ಕೃತಿಯು ಪ್ರಕಟವಾಗಿ ಓದುಗರ ಕೈ ಸೇರಿದ್ದು 1998ರಲ್ಲಿ. ಪ್ರಕಾಶಕರು ಪದವೀಧರ ಯಕ್ಷಗಾನ ಸಮಿತಿ ಮುಂಬಯಿ. ಈ ಸಂಸ್ಥೆಯು ಪ್ರಕಟಿಸಿದ ಹದಿನೆಂಟನೇ ಪ್ರಸಂಗ ಸಂಪುಟವಿದು. ಸಂಪಾದಕರು ಶ್ರೀ ಎಚ್.ಬಿ.ಎಲ್.ರಾವ್ ಅವರು. ಶ್ರೀ ಭಾಸ್ಕರ ಹೊಸಬೆಟ್ಟು ಇದರ ಉಪಸಂಪಾದಕರು. ಈ ಕೃತಿಗೆ ಮುನ್ನುಡಿಯನ್ನು ಬರೆದವರು ಶ್ರೀ ತಾಳ್ತಜೆ ವಸಂತಕುಮಾರ ಅವರು. ಪದವೀಧರ ಯಕ್ಷಗಾನ ಸಮಿತಿ ಮುಂಬಯಿಯ ಯಕ್ಷಗಾನ ಕಲಾ ಸಂಬಂಧೀ ಚಟುವಟಿಕೆಗಳನ್ನು ಡಾ. ತಾಳ್ತಜೆ ವಸಂತಕುಮಾರರು ತಮ್ಮ ಮುನ್ನುಡಿ ಲೇಖನದಲ್ಲಿ ಶ್ಲಾಘಿಸಿದ್ದಾರೆ. ಶ್ರೀ ಎಚ್.ಬಿ.ಎಲ್.ರಾಯರು ತಮ್ಮ ಸಂಪದಕೀಯ ಬರಹದಲ್ಲಿ ಸಹಕರಿಸಿದ ಎಲ್ಲರನ್ನೂ ನೆನಪಿಸಿಕೊಂಡಿರುತ್ತಾರೆ.
ಇನ್ನೂರಕ್ಕೂ ಹೆಚ್ಚು ಪುಟಗಳಿಂದ ಕೂಡಿದ ಪುಸ್ತಕ ಇದು. ಒಟ್ಟು ಆರು ಪ್ರಸಂಗಗಳನ್ನು ನೀಡಲಾಗಿದೆ. ಶ್ರೀ ಗುರುನಾರಾಯಣಸ್ವಾಮಿ ಚರಿತ್ರೆ (ಅಗರಿ ಶ್ರೀನಿವಾಸ ಭಾಗವತ ವಿರಚಿತ), ಭುವನ ಭಾಗ್ಯ (ಅಮೃತ ಸೋಮೇಶ್ವರ ವಿರಚಿತ), ಸತ್ಯಂ ವದ-ಧರ್ಮಂ ಚರ (ಎಂ. ನಾರ್ಣಪ್ಪ ಉಪ್ಪೂರ), ಮಾತಂಗ ಕನ್ಯೆ (ಬಿ. ಪುರುಷೋತ್ತಮ ಪೂಂಜ) ರಾಜಕುಮಾರಿ ನಂದಿನಿ ಚರಿತೆ (ಭಾಸ್ಕರ ಹೊಸಬೆಟ್ಟು), ಶ್ರೀ ಸತ್ಯನಾರಾಯಣ ವ್ರತ ಮಹಾತ್ಮೆ (ವೇದಮೂರ್ತಿ ಮಧುಸೂದನ ಭಟ್ಟ, ಕಬ್ಬಿನಾಲೆ), ಆರು ಮಂದಿ ಕವಿಗಳ ಆರು ಪ್ರಸಂಗಗಳನ್ನು ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣಾ ಯಕ್ಷಗಾನ ಮಾಲಿಕೆ ಎಂಬ ಕೃತಿಯಾಗಿ ಮುದ್ರಿಸಲಾಗಿದ್ದು, ಇದು ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ಭಾಗವತರನ್ನು ನೆನಪಿಸಿ ಗೌರವಿಸಿದಂತಾಗಿದೆ.
ಯಕ್ಷಗಾನಕ್ಕೊಂದು ತರಬೇತಿ ಸಂಸ್ಥೆಯೋ ಅಥವಾ ಶಿಕ್ಷಣ ಶಾಲೆಯೋ ಇಲ್ಲದ ಕೊರತೆಯನ್ನು ಹೋಗಲಾಡಿಸುವ ಪ್ರಯತ್ನವೋ ಎಂಬಂತೆ ಹಾಗೂ ಇದಕ್ಕೊಂದು ಶಾಶ್ವತ ಪರಿಹಾರವನ್ನು ರೂಪಿಸುವ ನಿಟ್ಟಿನಲ್ಲಿ ಯಕ್ಷಗಾನ ವಿದ್ವಾಂಸರಿಂದ ವ್ಯಾಪಕ ಚರ್ಚೆಗಳಾದುವು. ಸಮಾಲೋಚನೆಗಳನ್ನು ನಡೆಸಿದರು. ಅಲ್ಲಲ್ಲಿ ಯಕ್ಷಗಾನ ಕಲಿಕಾ ಕೇಂದ್ರಗಳು ಜನ್ಮ ತಾಳಿದುವು. ಇವೆಲ್ಲದರ ಫಲಶೃತಿಯೋ ಎಂಬಂತೆ ಡಾ. ಕೆ.ಶಿವರಾಮ ಕಾರಂತ ಮತ್ತು ಪ್ರೊ| ಕೆ.ಎಸ್. ಹರಿದಾಸ ಭಟ್ಟರ ಆಸಕ್ತಿಯಲ್ಲಿ ಹಾಗೂ ಇನ್ನಿತರ ಮಹನೀಯರ ಸಹಕಾರದಲ್ಲಿ ಹುಟ್ಟಿಕೊಂಡ ಸಂಸ್ಥೆಯೇ ಬಡಗು ತಿಟ್ಟು ಯಕ್ಷಗಾನದ ಕಲಿಕಾ ಕೇಂದ್ರವಾದ ‘ಯಕ್ಷಗಾನ ಕೇಂದ್ರ, ಉಡುಪಿ’. ಯಕ್ಷಗಾನ ಕೇಂದ್ರ ಷ್ಠಾಪನೆಯಾದದ್ದು 1971ರಲ್ಲಿ. ಆಗ ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ| ಕೆ.ಎಸ್. ಹರಿದಾಸ ಭಟ್ಟರ ಪ್ರಯತ್ನದಿಂದ ಅದೇ ಕಾಲೇಜಿನ ಹೊರಗಿನ ಕಟ್ಟಡವೊಂದರಲ್ಲಿ ‘ಯಕ್ಷಗಾನ ಕೇಂದ್ರ, ಉಡುಪಿ’ ಎಂಬ ಯಕ್ಷಗಾನ ತರಬೇತಿ ಶಾಲೆ ತಲೆಯೆತ್ತಿ ನಿಂತಿತು.
ಈ ಕೇಂದ್ರದ ಮೊದಲ ಗುರು ಮತ್ತು ಮುಖ್ಯಸ್ಥರಾಗಿದ್ದವರು ಬಡಗುತಿಟ್ಟು ಯಕ್ಷಗಾನದ ಖ್ಯಾತ ಕಲಾವಿದರಾಗಿದ್ದ ದಿ| ವೀರಭದ್ರ ನಾಯಕ್. ಕಲಾವಿದರಾಗಿ ನಲುವತ್ತಕ್ಕೂ ಹೆಚ್ಚು ತಿರುಗಾಟಗಳನ್ನು ನಡೆಸಿ ಯಕ್ಷಗಾನದಿಂದ ನಿವೃತ್ತರಾಗಿದ್ದವರು. ಹಿಮ್ಮೇಳ ಗುರುಗಳಾಗಿದ್ದವರು ಭಾಗವತರಾದ ದಿ| ನೀಲಾವರ ರಾಮಕೃಷ್ಣಯ್ಯ ಮತ್ತು ಮದ್ದಳೆಗಾರರಾದ ಹಿರಿಯಡಕ ಗೋಪಾಲ ರಾವ್. ಭಾರತ ಸರಕಾರದ ಸಂಸ್ಕೃತಿ ಇಲಾಖೆಯಿಂದ ತಿಂಗಳಿಗೆ ರೂಪಾಯಿ ಐನೂರರಂತೆ ಮುಖ್ಯಸ್ಥರಾದ ವೀರಭದ್ರ ನಾಯಕರಿಗೆ ಗೌರವಧನ ಲಭಿಸುತ್ತಿತ್ತು. ಹಿಮ್ಮೇಳ ಗುರುಗಳ ವೇತನವನ್ನು ಎಂ.ಜಿ.ಎಂ ಕಾಲೇಜು ಟ್ರಸ್ಟ್ ಪಾವತಿಸುತ್ತಿತ್ತು. ಪ್ರಾರಂಭದ ವರ್ಷಗಳಲ್ಲಿ 10 ವಿದ್ಯಾರ್ಥಿಗಳಿರುವ ಒಂದು ತಂಡವನ್ನು ತರಬೇತಿಗಾಗಿ ಆಯ್ಕೆ ಮಾಡಲಾಯಿತು. ಅವರಿಗೆ ಉಡುಪಿಯ ಶ್ರೀಕೃಷ್ಣ ಮಠದಿಂದ ಉಚಿತ ಆಹಾರ ವ್ಯವಸ್ಥೆಯನ್ನು ಮಾಡಲಾಯಿತು. ಕರ್ನಾಟಕ ಸರಕಾರದ ವತಿಯಿಂದ 10 ವಿದ್ಯಾರ್ಥಿಗಳಿಗೂ ವಿದ್ಯಾರ್ಥಿವೇತನ ಮಂಜೂರು ಮಾಡಲಾಯಿತು. ಡಾ. ಶಿವರಾಮ ಕಾರಂತರೂ ಕೇಂದ್ರದ ಯಕ್ಷಗಾನ ಗುರುಗಳೂ ಸೇರಿ ರಚಿಸಿದ ಯಕ್ಷಗಾನ ಪಠ್ಯದ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಆರಂಭವಾಯಿತು. ವರ್ಷದಿಂದ ವರ್ಷಕ್ಕೆ ಈ ಪಠ್ಯವು ಸುಧಾರಣೆಗೊಂಡು ಈಗ ಸುಧಾರಿತ ಪಠ್ಯವನ್ನು ಅನುಸರಿಸಲಾಗುತ್ತಿದೆ. ಸುಮಾರು 350 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ತರಬೇತಿಗೊಂಡು, ಕಲಿತು ವಿವಿಧ ಮೇಳಗಳಲ್ಲಿ ಹಾಗೂ ಹವ್ಯಾಸಿ ಕಲಾವಿದರಾಗಿ ಪ್ರದರ್ಶನ ನೀಡುತ್ತಿದ್ದಾರೆ. ಈ ಕೇಂದ್ರವು ವಿದೇಶಿಗರನ್ನು ಕೂಡ ಆಕರ್ಷಿಸಿದೆ. ಹಲವಾರು ವಿದೇಶಿ ಕಲಾಸಕ್ತ ವಿದ್ಯಾರ್ಥಿಗಳೂ ಇಲ್ಲಿ ಯಕ್ಷಗಾನವನ್ನು ಕಲಿತಿದ್ದಾರೆ ಇವರಲ್ಲಿ ಜರ್ಮನಿಯ ರಾಮಾ, ಆಸ್ಟ್ರೇಲಿಯಾದ ಜಾನ್ ಅಲೀ, ಅಮೆರಿಕಾದ ಶ್ರೀಮತಿ ಮಾರ್ಥಾ ಆಷ್ಟನ್, ಇಟಲಿಯ ಬ್ರೂನಾ ಸಿರಬೆಲ್ಲಾ ಸೇರಿದ್ದಾರೆ. ಈ ಕೇಂದ್ರದ ಕಾರ್ಯಚಟುವಟಿಕೆಗಳನ್ನು ನೋಡಿಕೊಳ್ಳಲು ಕಾರ್ಯಕಾರಿ ಸಮಿತಿ ಇದೆ. ಕೇಂದ್ರದ ನಿರ್ವಹಣೆಯಲ್ಲಿ ಹೆಚ್ಚಿನ ಕೊಡುಗೆ ಡಾ. ಶಿವರಾಮ ಕಾರಂತ ಮತ್ತು ಕೆ.ಎಸ್. ಹರಿದಾಸ ಭಟ್ಟರದು. ಕೇಂದ್ರದ ಯಶಸ್ಸಿಗೆ ಕಾರಣರಾದವರಲ್ಲಿ ಇಲ್ಲಿ ಗುರುಗಳಾಗಿ ವಿದ್ಯಾಧಾರೆಯೆರೆದ ವೀರಭದ್ರ ನಾಯಕ್, ನೀಲಾವರ ಲಕ್ಷ್ಮೀನಾರಾಯಣಯ್ಯ, ಮಹಾಬಲ ಕಾರಂತ್, ನೀಲಾವರ ರಾಮಕೃಷ್ಣಯ್ಯ, ಗೋರ್ಪಾಡಿ ವಿಠಲ ಕಾಮತ್, ಸಂಜೀವ ಸುವರ್ಣ ಮೊದಲಾದವರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಪ್ರಸ್ತುತ ಈ ತರಬೇತಿ ಕೇಂದ್ರದಲ್ಲಿ ಶ್ರೀ ಸಂಜೀವ ಸುವರ್ಣರು ಗುರುಗಳಾಗಿ ಮುನ್ನಡೆಸುತ್ತಿದ್ದಾರೆ. ಪ್ರಸ್ತುತ ಬಡಗು ತಿಟ್ಟು ಯಕ್ಷಗಾನದಲ್ಲಿ ಮುಂಚುತ್ತಿರುವ ಹಲವಾರು ಕಲಾವಿದರು ಯಕ್ಷಗಾನ ಕೇಂದ್ರ, ಉಡುಪಿಯ ವಿದ್ಯಾರ್ಥಿಗಳೇ ಆಗಿದ್ದಾರೆ ಎಂಬುದು ಗಮನಾರ್ಹ. (ಮುಂದಿನ ಸಂಚಿಕೆ ಭಾಗ – 3ರಲ್ಲಿ ಮುಂದುವರಿಯುವುದು)
ಭಾರತೀಯ ರಂಗಕಲೆಗಳು ಒಂದು ಅತ್ಯದ್ಭುತ, ಸೋಜಿಗಗಳ ವರ್ತುಲ. ಇಲ್ಲಿ ಕಠಿಣ ಪರಿಶ್ರಮ, ಆಸಕ್ತಿ ಮತ್ತು ಸರಿಯಾದ ಮಾರ್ಗದರ್ಶನಗಳಿದ್ದರೆ ಮಾತ್ರ ವಿವಿಧ ಕಲಾಪ್ರಾಕಾರಗಳಲ್ಲಿ ಯಶಸ್ಸು ಸಾಧಿಸಿ ಜನಪ್ರಿಯರಾಗಬಹುದು ಎಂಬುದು ಮಹಾನ್ ಕಲಾವಿದರ ಯಶೋಗಾಥೆಗಳಿಂದ ತಿಳಿದುಬರುವ ಸತ್ಯ. ಕಲೆಯನ್ನು ಕರಗತ ಮಾಡಿಕೊಳ್ಳುವವರಿಗೆ ಬರಿಯ ಆಸಕ್ತಿ, ಅವಕಾಶಗಳಿದ್ದರೆ ಸಾಲದು. ಸೂಕ್ತ ಗುರುವಿನ ಮಾರ್ಗದರ್ಶನ ತರಬೇತಿಗಳೂ ಕಲಾವಿದನ ಕಲಾಬದುಕಿನಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತವೆ. ಎಷ್ಟೋ ವರ್ಷಗಳ ಹಿಂದಿನಿಂದಲೂ ಭರತನಾಟ್ಯವೇ ಮೊದಲಾದ ಹೆಚ್ಚಿನೆಲ್ಲಾ ರಂಗ ಕಲೆಗಳಲ್ಲಿ ಕಲಿತು ಪ್ರದರ್ಶನಕ್ಕೆ ಅಣಿಯಾಗಬೇಕಾದರೆ ಕೆಲವಾರು ವರ್ಷಗಳ ಕಾಲ ಆ ಕಲೆಯನ್ನು ಅಭ್ಯಸಿಸಿ ಕರಗತ ಮಾಡಿಕೊಳ್ಳಬೇಕಾಗುತ್ತಿತ್ತು. ಆದರೆ ಯಕ್ಷಗಾನ ಕಲೆಯು ಸ್ವಲ್ಪ ವ್ಯತ್ಯಸ್ತವಾದ ಹಾದಿಯನ್ನು ಹಿಡಿದಿರುವಂತೆ ನಮಗೆ ತೋರುತ್ತದೆ. ಹಲವು ಶತಮಾನಗಳಷ್ಟು ಹಿಂದೆ ಆವಿರ್ಭವಿಸಿ ಬೆಳೆದು ಬಂದ ಈ ಯಕ್ಷಗಾನ ಕಲೆಗೆ ಒಂದು ಶಾಸ್ತ್ರೀಯವಾದ ಲಿಖಿತ ನಿರ್ದೇಶನಗಳು ಆ ಕಾಲದಲ್ಲಿ ಇಲ್ಲದಿದ್ದುದು ಕಲಿಕೆಗೆ ಒಂದು ತೊಡಕಾಗಿತ್ತು. ಕೇವಲ ಅಲಿಖಿತವಾದ ಅಥವಾ ಬಾಯ್ದೆರೆಯಾದ ಟಿಪ್ಪಣಿಗಳು ಮತ್ತು ನಿರ್ದೇಶನಗಳಿಂದ ಈ ಕಲಾಪ್ರಕಾರ ಬೆಳೆದು ಬಂತು. ಸುಮಾರು ನಾಲ್ಕೈದು ದಶಕಗಳಷ್ಟು ಹಿಂದೆ ಮಳೆಗಾಲದಲ್ಲಿ ಯಕ್ಷಗಾನ ಪ್ರದರ್ಶನಗಳು ಆರಂಭವಾಗಿರಲಿಲ್ಲ. ಆದುದರಿಂದ ಆ ಕಾಲದಲ್ಲಿ ಕಲಿಕೆಗಾಗಿ ಅದೇ ಪ್ರಶಸ್ತ ಸಮಯವಾಗಿತ್ತು. ಹಿರಿಯ ಕಲಾವಿದರ ಮನೆಯಲ್ಲಿದ್ದುಕೊಂಡು ಸೇವಾ ನಿರತರಾಗಿ ಮೆಚ್ಚುಗೆ ಗಳಿಸಿ ಅವರಿಂದ ಕಲೆಯ ಪೂರ್ಣ ಪಾಠವನ್ನು ಹೇಳಿಸಿಕೊಳ್ಳಬೇಕಾಗಿತ್ತು.
ಆ ಕಾಲದಲ್ಲಿ ಮೇಳಗಳಲ್ಲಿ ಚೌಕಿಯ ಸಹಾಯಕನಾಗಿಯೋ ಅಥವಾ ಕೋಡಂಗಿ ಇನ್ನಿತರ ಪೂರ್ವರಂಗದ ಅಭ್ಯಾಸಿಗಳಾಗಿಯೋ ಮೇಳಗಳಿಗೆ ಸೇರಬೇಕಾಗಿತ್ತು. ಹಿರಿಯ ಕಲಾವಿದರಿಂದ ಕೇಳಿ ತಿಳಿದು, ಅವರ ವೇಷಗಳನ್ನು ನೋಡಿ ಕಲಿಯಬೇಕಾಗಿತ್ತು. ಚೌಕಿಯಲ್ಲಿ ಮತ್ತು ಹಗಲು ಹೊತ್ತು ಬಿಡಾರದಲ್ಲಿ ಸಂದರ್ಭ ದೊರೆತಾಗ ಅಭ್ಯಾಸಿಗಳಿಗೆ ಹಿರಿಯ ಕಲಾವಿದರು ಮತ್ತು ಭಾಗವತರಿಂದ ಯಕ್ಷಗಾನದ ಕಾಗುಣಿತದ ಪಾಠವಾಗುತ್ತಿತ್ತು. ರಾತ್ರಿಯ ಪ್ರದರ್ಶನಗಳಿಂದ ನಿದ್ರಾಹೀನತೆಯೂ ಭಾದಿಸುತ್ತಿದ್ದು, ಇದರಿಂದ ಗುರುಗಳ ಸಿಟ್ಟು, ಕೋಪತಾಪಗಳನ್ನು ಅನುಭವಿಸುವುದರ ಜೊತೆಗೆ ಹೊಡೆತವನ್ನೂ ಕಲಿಯುವ ಸಂದರ್ಭಗಳಲ್ಲಿ ತಿನ್ನಬೇಕಾಗುತ್ತಿತ್ತು. ತನ್ನ ವೇಷ ಮುಗಿದ ನಂತರ ನಿದ್ರಿಸುವ ಹಾಗಿರಲಿಲ್ಲ. ಯಾಕೆಂದರೆ ರಂಗಸ್ಥಳವೇ ಒಂದು ಕಲಿಯುವ ಪಾಠಶಾಲೆಯಾಗಿತ್ತು. ಯಕ್ಷಗಾನವು ಒಂದು ಆಕರ್ಷಣೀಯ ಕಲೆಯಾದರೂ ಕೊರತೆಯೊಂದು ಭಾದಿಸುತ್ತಿತ್ತು. ಅದುವೇ ತರಬೇತಿ ಮತ್ತು ಶಿಕ್ಷಣ. ಕಲಿಯುವ ಅಭ್ಯಾಸಿಗಳಿಗೆ ತರಬೇತಿಯ ಕೊರತೆ. ಉಳಿದ ಕೆಲವೊಂದು ಭಾರತೀಯ ರಂಗಕಲೆಗಳಿಗೆ ಹೋಲಿಸಿದರೆ ಯಕ್ಷಗಾನದ ಮಟ್ಟಿಗೆ ಇದೊಂದು ದೊಡ್ಡ ಕೊರತೆಯಾಗಿಯೇ ಉಳಿದಿತ್ತು. (ಮುಂದುವರಿಯುವುದು)