ಯಕ್ಷಗಾನದ ಹಿರಿಯ ವೇಷಧಾರಿ, ಅರ್ಥಧಾರಿ, ಸಂಘಟಕ ಎಂ.ಆರ್.ವಾಸುದೇವ ಸಾಮಗ ಇಂದು (07-11-2020) ಬೆಳಗಿನ ಜಾವ 3.00 ಘಂಟೆಗೆ ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಮೀರಾ ಸಾಮಗ, ಪುತ್ರ ಪ್ರದೀಪ ಸಾಮಗ ಸಹಿತ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಮಲ್ಪೆ ರಾಮದಾಸ ಸಾಮಗ ನಾಗರತ್ನ ದಂಪತಿ ಸುಪುತ್ರರಾಗಿ ಜನಿಸಿದ ಅವರು 19ರ ಹರೆಯದಲ್ಲೆ ಯಕ್ಷಗಾನ ರಂಗ ಪ್ರವೇಶಿಸಿ ಐದು ದಶಕಗಳ ಕಾಲ ಅಮೃತೇಶ್ವರಿ, ಪೆರ್ಡೂರು, ಧರ್ಮಸ್ಥಳ, ಕದ್ರಿ, ಸಾಲಿಗ್ರಾಮ, ಶಿರಸಿ, ಸುರತ್ಕಲ್ ಮೇಳಗಳಲ್ಲಿ ಕಲಾಸೇವೆಗೈದಿದ್ದರು.
ತಾಳಮದ್ದಲೆ, ಅರ್ಥಧಾರಿಯಾಗಿ ಅಪಾರ ಸಿದ್ಧಿ-ಪ್ರಸಿದ್ಧಿ ಪಡೆದಿದ್ದರು.‘ಸಂಯಮಂ’ ಸಂಘಟನೆಯ ಮೂಲಕ ಕರ್ನಾಟಕದಾದ್ಯಂತ ತಾಳಮದ್ದಲೆ ಪರಿಚಯಿಸಿದ್ದರು. ತಾಳಮದ್ದಲೆಗೆ ಅನುಕೂಲವಾಗುವಂತೆ ತಾಳಮದ್ದಲೆಯ 80 ಪ್ರಸಂಗಗಳನ್ನು ಸಂಪಾದಿಸಿದ್ದರು. 30ಕ್ಕೂ ಹೆಚ್ಚು ಪ್ರಸಂಗಗಳಿಗೆ ಅರ್ಥ ಬರೆದು ಅದನ್ನು ಪ್ರಕಟಣೆಗೆ ಸಿದ್ಧಪಡಿಸುತ್ತಿದ್ದರು.
ಎರಡು ವರ್ಷದ ಹಿಂದೆ ಅವರ ಸುಪುತ್ರ ಡಾ.ಪ್ರದೀಪ್ ವಿ.ಸಾಮಗ ಅವರು ಸಪ್ತತಿ ಕಾರ್ಯಕ್ರಮವನ್ನು ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ದಿನ ಪೂರ್ತಿ ಕಾರ್ಯಕ್ರಮ ನಡೆಸಿ ಸಾಮಗಾಥೆ ಅಭಿನಂದನಾ ಗ್ರಂಥ ಪ್ರಕಟಿಸಿದ್ದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕಿಲಾರು ಗೋಪಾಲಕೃಷ್ಣಯ್ಯ ಪ್ರಶಸ್ತಿ, ಉಡುಪಿಯ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು.
ಅವರು ಪ್ರತೀ ವರ್ಷ ‘ಸಂಯಮಂ’ ತಿರುಗಾಟದ ನಂತರ ಒಬ್ಬ ಕಲಾವಿದನನ್ನು ಸಮ್ಮಾನಿಸುವ, ಸಂಘ ಸಂಸ್ಥೆಗಳಿಗೆ ‘ನಿಧಿ’ ಸಮರ್ಪಿಸುವ ಸತ್ಸಂಪ್ರದಾಯ ನಡೆಸಿಕೊಂಡು ಬಂದಿದ್ದರು. ಅವರ ಅಗಲಿಕೆಗೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತ ಪಡಿಸಿದ್ದಾರೆ.
ಯಕ್ಷಗಾನ ವೇಷಧಾರಿ, ಸಂಘಟಕ, ತಾಳಮದ್ದಳೆ ಅರ್ಥಧಾರಿ ಹೀಗೆ ಯಕ್ಷಗಾನದ ವಿವಿಧಂಗಗಳಲ್ಲಿ ತೊಡಗಿಸಿಕೊಂಡ ಎಂ.ಆರ್.ವಾಸುದೇವ ಸಾಮಗರು ಇಂದು ನಮ್ಮನ್ನಗಲಿದ್ದಾರೆ. ವಾಸುದೇವ ಸಾಮಗ ಎಂದ ಕೂಡಲೇ ನಮಗೆ ಫಕ್ಕನೆ ನೆನಪಾಗುವುದು ಅವರ ‘ಸಂಯಮಂ’ ಯಕ್ಷಗಾನ ತಾಳಮದ್ದಳೆ ತಂಡ. ಸಂಯಮಂ ಎಂದರೆ ‘ಸಂಚಾರಿ ಯಕ್ಷಗಾನ ಮಂಡಳಿ’.
ತನ್ನ ಅರ್ಥಗಾರಿಕೆಯಲ್ಲಿ ಸೃಜನಶೀಲತೆಯನ್ನು ಸೃಷ್ಟಿಸಿದ್ದ ವಾಸುದೇವ ಸಾಮಗರು ಸಂಯಮಂ ತಂಡ ಕಟ್ಟಿದ ಬಗ್ಗೆ ಅಂದೊಮ್ಮೆ ವಿವರಿಸಿದ್ದರು. ಕೆಲವೇ ಸಾವಿರಗಳನ್ನು ಸಂಪಾದಿಸಬೇಕಾದರೆ ಒಂದು ವರ್ಷದ ಕಾರ್ಪಣ್ಯದ ಬದುಕಿನ, ತಿರುಗಾಟ ಇವತ್ತಿನ ದಿನಗಳಲ್ಲಿ ಅಗತ್ಯವಿದೆಯೆ ಎಂಬ ಜಿಜ್ಞಾಸೆ ಅವರಿಗೆ ಕಾಡತೊಡಗಿತಂತೆ. ಇಷ್ಟು ಕಷ್ಟಪಡಬೇಕಾದ ಅಗತ್ಯವಿಲ್ಲ ಎಂಬ ಅವರ ಯೋಚನೆಯೇ ‘ಸಂಯಮಂ’ ಎಂಬ ತಂಡ ಪ್ರಾರಂಭವಾಗಲು ಕಾರಣವಾಯಿತು.
ಮೊದಲು ಪ್ರಾಯೋಗಿಕವಾಗಿ ಮೂವತ್ತು ವರ್ಷಗಳ ಹಿಂದೆಯೇ ಒಮ್ಮೆ ಈ ತಾಳಮದ್ದಳೆ ತಂಡವನ್ನು ಪ್ರಾರಂಭಿಸಿದ್ದರು. ಅನುಭವದ ಕೊರತೆಯಿಂದ ಆಗ ಯಶಸ್ವಿಯಾಗಿರಲಿಲ್ಲ. ಆದರೆ ಈ ‘ಸಂಯಮಂ’ ತಂಡದ ವ್ಯವಸ್ಥಿತ ನಿರಂತರ ತಿರುಗಾಟಕ್ಕೆ 15 ವರ್ಷಗಳ ಇತಿಹಾಸವಿದೆ. ಎಲ್ಲಿಯೂ ಎಡರುತೊಡರುಗಳಿಲ್ಲದ ಪಯಣ ಈ ತಂಡದ್ದು.
ವಾಸುದೇವ ಸಾಮಗರ ತಂಡದ ಕಾರ್ಯಕ್ರಮಗಳು ಎಷ್ಟು ವ್ಯವಸ್ಥಿತವಾಗಿ ನಡೆಯುತ್ತಿತ್ತು ಎಂದರೆ ಕೇವಲ ದೂರವಾಣಿಯ ಮೂಲಕ 100ಕ್ಕೂ ಹೆಚ್ಚು ತಾಳಮದ್ದಳೆ ಕಾರ್ಯಕ್ರಮಗಳು ಮಳೆಗಾಲದಲ್ಲಿ ನಿಗದಿಯಾಗುತ್ತಿತ್ತು. ಅದರಲ್ಲೂ 50ಕ್ಕೂ ಹೆಚ್ಚು ಕಾರ್ಯಕ್ರಮಗಳು ಖಾಯಂ ನೆಲೆಯಲ್ಲಿ ಕಾಯ್ದಿರಿಸಲಾಗುತ್ತಿತ್ತು. ಅವರಿಗೆ ದಿನಾಂಕ ಮಾತ್ರ ನಿಗದಿ ಮಾಡುವ ಕೆಲಸ ಉಳಿದಿರುತ್ತಿತ್ತು.
ಯಕ್ಷಗಾನದ ವೈಭವೀಕರಣಕ್ಕಾಗಿ ಮಾತ್ರ ಇರುವ ತಂಡ ಇದು ಎಂದು ಸಾಮಗರು ಹೇಳುತ್ತಿದ್ದರು. ಅದಕ್ಕಾಗಿ ಸ್ಪಂದನಶೀಲ ಕಲಾವಿದರನ್ನು ಮಾತ್ರ ಸೇರಿಸಿ ‘ಸಂಯಮಂ’ ತಂಡದ ತಾಳಮದ್ದಳೆ ಕಾರ್ಯಕ್ರಮ ನಡೆಸುತ್ತಿದ್ದರು. ತಾಳಮದ್ದಳೆಯನ್ನು ಸ್ವಲ್ಪ Modify ಮಾಡಿ, ಶುಷ್ಕ ಪಾಂಡಿತ್ಯ ಪ್ರದರ್ಶನ ಮಾಡದೆ, Drama Sense ಇರುವ ಕಲಾವಿದರನ್ನು ಆರಿಸಿದ್ದರು.
ಸಂಯಮಂ ತಂಡದ ಕಾರ್ಯಕ್ರಮಗಳು ಎಷ್ಟು ಜನಪ್ರಿಯವಾಗಿದ್ದುವೆಂದರೆ ಕೇವಲ ಒಂದೊಂದು ಕಾರ್ಯಕ್ರಮಗಳಲ್ಲಿ ಅಷ್ಟಾಹ ಮತ್ತು ದಶಾಹಗಳು ಎಂದು ಕಾರ್ಯಕ್ರಮಗಳನ್ನು ಏರ್ಪಡಿಸುವವರು ಇದ್ದರು. (ಅಷ್ಟಾಹ = ಎಂಟು ದಿನಗಳ ನಿರಂತರ ಕಾರ್ಯಕ್ರಮ, ದಶಾಹ = ಹತ್ತು ದಿನಗಳ ನಿರಂತರ ಕಾರ್ಯಕ್ರಮ) . ಸಂಯಮಂ ತಂಡದಲ್ಲಿ ವಾಸುದೇವ ಸಾಮಗರ ಅರ್ಥಗಾರಿಕೆ ಭಾರೀ ಪ್ರಸಿದ್ಧಿಯನ್ನು ಪಡೆದಿತ್ತು. ಅವರದೇ ತಂಡದ ಕಾರ್ಯಕ್ರಮದಲ್ಲಿ ಅವರ ಉತ್ತರ ಕುಮಾರನ ಅರ್ಥಗಾರಿಕೆಯ ಒಂದು ಸಣ್ಣ ತುಣುಕಿನ ವೀಡಿಯೊ ನೋಡಿ.
ಈ ದಿನ ಪ್ರಶಸ್ತಿ ಸ್ವೀಕರಿಸುವವರು ಡಾ. ಆನಂದರಾಮ ಉಪಾಧ್ಯ, ಕೆ.ಸಿ.ನಾರಾಯಣ, ಡಾ. ಚಂದ್ರು ಕಾಳೇನಹಳ್ಳಿ(ಎಲ್ಲರೂ ಗೌರವ ಪ್ರಶಸ್ತಿ), ಬಿ. ರಾಜಣ್ಣ, ಎ.ಜಿ. ಅಶ್ವತ್ಥ ನಾರಾಯಣ(ಇಬ್ಬರೂ ಯಕ್ಷಸಿರಿ ಪ್ರಶಸ್ತಿ) ಮತ್ತು ಡಾ. ಚಿಕ್ಕಣ್ಣ ಯಣ್ಣೆಕಟ್ಟೆ (ಪುಸ್ತಕ ಬಹುಮಾನ).
ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಸಚಿವರಾದ ಸಿ.ಟಿ.ರವಿ, ಬಸವರಾಜ ಬೊಮ್ಮಾಯಿ, ಜೆ.ಸಿ. ಮಾಧುಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ, ಸಂಸದರಾದ ನಳಿನ್ ಕುಮಾರ್ ಕಟೀಲ್, ಬಿ.ವೈ. ರಾಘವೇಂದ್ರ, ಶಾಸಕರಾದ ಡಿ. ವೇದವ್ಯಾಸ ಕಾಮತ್, ಜ್ಯೋತಿ ಗಣೇಶ್, ಬಿ. ಎಂ. ಸುಕುಮಾರ ಶೆಟ್ಟಿಯವರಲ್ಲದೆ. ದಿವಾಕರ್ ಪಾಂಡೇಶ್ವರ್, ದಯಾನಂದ ಕತ್ತಲಸಾರ್, ರಾಜೇಶ್ ಜಿ, ಬಾ.ಹ.ರಮಾಕುಮಾರಿ, ನಿಜಲಿಂಗಪ್ಪ, ಹಾಗೂ ಎಂ.ಎ ಹೆಗಡೆ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.
ಮಂಗಳೂರು ಪಚ್ಚನಾಡಿ ಬೆಟ್ಟು ಮನೆಯ ಶ್ರೀಮತಿ ಲೋಲಮ್ಮಕ್ಕ ಅವರು ಕಲಾವಿದೆಯಲ್ಲ. ಆದರೂ ಆಟದ ಲೋಲಮ್ಮಕ್ಕ ಎಂದೇ ಕರೆಸಿಕೊಂಡಿದ್ದರು. ಕಟೀಲು ಕ್ಷೇತ್ರದ ಭಕ್ತೆಯಾಗಿ 1968ರಿಂದ ತೊಡಗಿ ನಿರಂತರವಾಗಿ ನಲುವತ್ತು ವರ್ಷಗಳ ಕಾಲ ಶ್ರೀ ಕಟೀಲು ಮೇಳದ ಹರಕೆ ಬಯಲಾಟವನ್ನು ನಡೆಸುತ್ತಾ ಬಂದಿದ್ದರು.
ಅಲ್ಲದೆ ಬಯಲಾಟದ ಸಂದರ್ಭದಲ್ಲಿ ಕಲಾಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಗೌರವಿಸುತ್ತಾ ಬಂದವರು. ತಮ್ಮ ದುಡಿಮೆಯ ಒಂದಂಶವನ್ನು ಯಕ್ಷಗಾನಕ್ಕಾಗಿ ವಿನಿಯೋಗಿಸಿದವರು. ದಾನಿಗಳಿಂದ ಸಂಗ್ರಹಿಸಿದ ಧನವನ್ನು ಯಕ್ಷಗಾನ ಸಂಬಂಧೀ ಚಟುವಟಿಕೆಗಳಿಗೆ ವಿನಿಯೋಗಿಸುತ್ತಿದ್ದರು. ಹಾಗಾಗಿ ಎಲ್ಲರೂ ಇವರನ್ನು ಆಟದ ಲೋಲಮ್ಮಕ್ಕ ಎಂದು ಹೇಳಿ ಗೌರವಿಸುತ್ತಿದ್ದರು. 2008ರಲ್ಲಿ ಇವರು ಕೀರ್ತಿಶೇಷರಾಗಿದ್ದರು. ಪ್ರಸ್ತುತ ಇವರ ಸೇವಾ ಚಟುವಟಿಕೆಗಳನ್ನು ಮಕ್ಕಳೂ ಮೊಮ್ಮಕ್ಕಳೂ ಮುಂದುವರಿಸಿಕೊಂಡು ಹೋಗುತ್ತಿರುವುದು ಸಂತೋಷದ ವಿಚಾರ.
ಬಂಧುಗಳ, ಅಭಿಮಾನಿಗಳ ಸಹಕಾರದಿಂದ ಲೋಲಮ್ಮ ಅವರ ಪುತ್ರ ಶ್ರೀ ರಾಮ ಅಮೀನ್ ಅವರು ‘ಕೀರ್ತಿಶೇಷ ಲೋಲಮ್ಮ ಪಚ್ಚನಾಡಿ ಪ್ರತಿಷ್ಠಾನ’ವನ್ನೂ ಸ್ಥಾಪಿಸಿರುತ್ತಾರೆ. ಆಟದ ಲೋಲಮ್ಮಕ್ಕ ಅವರ ಬದುಕು, ಸಾಧನೆಗಳ ಕುರಿತಾದ ಪುಸ್ತಕ ಇದು. ಪ್ರಕಾಶಕರು ‘ಕೀರ್ತಿಶೇಷ ಲೋಲಮ್ಮ ಪಚ್ಚನಾಡಿ ಪ್ರತಿಷ್ಠಾನ’. ಸಂಪಾದಕರು ಡಾ. ದಿನಕರ ಎಸ್. ಪಚ್ಚನಾಡಿ ಅವರು. ಇದು 2016ರಲ್ಲಿ ಪ್ರಕಟವಾಗಿತ್ತು. ಮೊದಲಾಗಿ ಕೊಲ್ಯ ಶ್ರೀ ಶ್ರೀ ರಮಾನಂದ ಸ್ವಾಮೀಜಿ ಮತ್ತು ಶ್ರೀ ಕ್ಷೇತ್ರ ಕಟೀಲಿನ ಶ್ರೀ ಕೆ. ಲಕ್ಷ್ಮೀನಾರಾಯಣ ಅಸ್ರಣ್ಣ ಇವರುಗಳ ಅನುಗ್ರಹ ಸಂದೇಶಗಳನ್ನು ನೀಡಲಾಗಿದೆ.
ಮುನ್ನುಡಿಯನ್ನು ಬರೆದವರು ಡಾ. ಪಿ. ಸಂಜೀವ ದಂಡಕೇರಿ ಅವರು. ಶ್ರೀ ಜಯಂತ ಅಮೀನ್ ಪಚ್ಚನಾಡಿ, ಶ್ರೀಮತಿ ದೇವಕಿ ಪಚ್ಚನಾಡಿ, ಶ್ರೀರಾಮ ಅಮೀನ್ ಪಚ್ಚನಾಡಿ ಅವರುಗಳ ಲೇಖನವನ್ನೂ ನೀಡಲಾಗಿದ್ದು ‘ಸಂಪಾದಕರ ನುಡಿ’ ಎಂಬ ಶೀರ್ಷಿಕೆಯಡಿ ಡಾ. ದಿನಕರ್ ಎಸ್. ಪಚ್ಚನಾಡಿ ಅವರು ಲೇಖನವನ್ನು ಬರೆದಿರುತ್ತಾರೆ. ಬಳಿಕ ಶ್ರೀಮತಿ ಅವರ ಲೋಲಮ್ಮ ಅವರ ಬದುಕು, ಸಾಧನೆ, ಕಲಾಸೇವೆಗಳ ಮಾಹಿತಿಗಳನ್ನು ನೀಡಲಾಗಿದೆ. (ಅನುಕ್ರಮಣಿಕೆ ಒಂದು)
ಬಳಿಕ ಅನುಕ್ರಮಣಿಕೆ ಎರಡರಲ್ಲಿ ಡಾ. ಎನ್. ನಾರಾಯಣ ಶೆಟ್ಟಿ, ಕುಂಬಳೆ ಸುಂದರ ರಾವ್, ಭಾಸ್ಕರ ರೈ ಕುಕ್ಕುವಳ್ಳಿ, ವಾಸುದೇವ ಕೊಟ್ಟಾರಿ, ನವನೀತ ಶೆಟ್ಟಿ ಕದ್ರಿ, ಚಂದ್ರಹಾಸ ಕೋಟೆಕಾರ್, ಕೆ. ಚಂದ್ರಶೇಖರ ಶೆಟ್ಟಿ, ವಿದ್ಯಾಧರ ಶೆಟ್ಟಿ ಪೊಸಕುರಾಲ್, ಶರತ್ ಕುಮಾರ್ ಕದ್ರಿ, ಜಿ. ಬಾಬಾ ಕಾಮತ್ ಪದವಿನಂಗಡಿ, ಪುರುಷೋತ್ತಮ ಕೊಟ್ಟಾರಿ, ಪ್ರಭಾಕರ ಕರ್ಕೇರ, ಶಿವಾನಂದ ಪೆರ್ಲಗುರಿ, ಶ್ರೀಮತಿ ತ್ರಿವೇಣಿ ಉದಯಪ್ರಕಾಶ್, ಶ್ರೀಮತಿ ಶೀಲಾಕ್ಷಿ ತಾರಾನಾಥ್ ಇವರುಗಳು ಆಟದ ಲೋಲಮ್ಮಕ್ಕನವರ ಬಗೆಗೆ ಬರೆದ ಲೇಖನಗಳಿವೆ. ಕಟೀಲು ಮೇಳದ ಸೇವಾಕರ್ತೆಯರಾಗಿದ್ದ ಶ್ರೀಮತಿ ಲೋಲಮ್ಮ (ಆಟದ ಲೋಲಮ್ಮಕ್ಕ) ಅವರ ಬದುಕಿನ ಕುರಿತಾದ ಪುಸ್ತಕವಿದು.
ಉಡುಪಿಯ ಚಿಟ್ಟಾಣಿ ಅಭಿಮಾನಿ ಬಳಗ ಕಳೆದ ಏಳು ವರ್ಷಗಳಿಂದ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಮತ್ತು ಟಿ. ವಿ.ರಾವ್ ಪ್ರಶಸ್ತಿ ಪ್ರದಾನ ಮಾಡುತ್ತಾ ಬಂದಿದೆ. ಈ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ನವಂಬರ್ 7, ಶನಿವಾರ ಸಂಜೆ 5.15 ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಂಪನ್ನಗೊಳ್ಳಲಿದೆ.ಪ್ರಶಸ್ತಿ ಸ್ವೀಕರಿಸಲಿರುವ ಈರ್ವರು ಕಲಾವಿದರ ಕಿರು ಪರಿಚಯ.
ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ – ಶ್ರೀ ವಿಷ್ಣು ಗಜಾನನ ಭಟ್ ಮೂರೂರು
ಇವರು ಬಡಗುತಿಟ್ಟಿನ ಪ್ರಸಿದ್ಧ ಸ್ತ್ರೀವೇಷಧಾರಿ.ಉತ್ತರ ಕನ್ನಡ ಜಿಲ್ಲೆಯ ಕುಮಟಾ ಸಮೀಪದ ಮೂರೂರಿನವರು. ಗಜಾನನ ಭಟ್-ಭಾಗೀರಥಿ ದಂಪತಿಯ ಸುಪುತ್ರರು.ಎಸ್. ಎಸ್. ಎಲ್.ಸಿ.ಅನಂತರ ಹದಿನಾರರ ಕಿರು ಹರೆಯದಲ್ಲೇ ಯಕ್ಷರಂಗ ಪ್ರವೇಶಿಸಿ ನಾಲ್ಕು ದಶಕಗಳ ಕಾಲ ಯಕ್ಷಲೋಕದ ಸ್ತ್ರೀ ಪಾತ್ರಗಳನ್ನು ಪರಿಣಾಮಕಾರಿಯಾಗಿ ಕಲಾ ರಸಿಕರಿಗೆ ದರ್ಶಿಸಿದವರು. ಯಕ್ಷಗಾನದ ಆರಂಭಿಕ ಪಾಠವನ್ನು ಮೂರೂರು ರಾಮ ಹೆಗಡೆಯವರಿಂದ ಪಡೆದರು. ಮುಂದೆ ಕರ್ಕಿ ಮೇಳದ ಪ್ರಸಿದ್ಧ ಕಲಾವಿದರಾದ ಪಿ. ವಿ. ಹಾಸ್ಯಗಾರರಲ್ಲಿ ಯಕ್ಷನಾಟ್ಯ ತರಬೇತಿ ಪಡೆದು ಶ್ರೇಷ್ಠ ಕಲಾವಿದರಾಗಿ ರೂಪುಗೊಂಡರು.
ಗುಂಡುಬಾಳ, ಅಮೃತೇಶ್ವರೀ, ಹಿರೆಮಹಾಲಿಂಗೇಶ್ವರ, ಶಿರಸಿ, ಪಂಚಲಿಂಗ, ಪೆರ್ಡೂರು, ಇಡಗುಂಜಿ, ಪೂರ್ಣಚಂದ್ರ ಮೇಳಗಳಲ್ಲಿ ಕಲಾಸೇವೆ ಗೈದಿರುತ್ತಾರೆ. ಪೌರಾಣಿಕ ಮತ್ತು ಕಾಲ್ಪನಿಕ ಪ್ರಸಂಗಗಳಲ್ಲಿ ಸ್ತ್ರೀ ಪಾತ್ರಗಳನ್ನು ಮನೋಜ್ಞವಾಗಿ ಚಿತ್ರಿಸಿ ಕಲಾರಸಿಕರ ಪ್ರೀತ್ಯಾದರಕ್ಕೆ ಪಾತ್ರರು. ಪಾತ್ರದ ಮನೋಧರ್ಮ ಅರಿತು ಅಭಿವ್ಯಕ್ತಿಸುವ ಕಲೆಯನ್ನು ಕರಗತ ಮಾಡಿಕೊಂಡವರು. ಗರತಿಯ ಪಾತ್ರ ನಿರ್ವಹಣೆಯಲ್ಲಂತೂ ವಿಶೇಷ ಸಿದ್ಧಿ-ಪ್ರಸಿದ್ಧಿ ಪಡೆದವರು. ಕರುಣರಸ ಪ್ರತಿಪಾದನೆಯಲ್ಲಿ ಅಸಾಧಾರಣ ಪ್ರತಿಭೆ ಮೆರೆದವರು. ದಾಕ್ಷಾಯಿಣಿ, ಸೀತೆ, ಅಂಬೆ, ಮಂಡೋದರಿ, ಮೇನಕೆ, ಚಂದ್ರಮತಿ, ದಮಯಂತಿ, ಪ್ರಭಾವತಿ, ಸಾವಿತ್ರಿ, ಶಕುಂತಲೆ ಹೀಗೆ ಪೌರಾಣಿಕ ಸ್ತ್ರೀ ಪಾತ್ರಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ. ಹದವರಿತ ಕುಣಿತ, ಭಾವಪೂರ್ಣ ಅಭಿನಯ, ಲಾಲಿತ್ಯಪೂರ್ಣ ಮಾತುಗಾರಿಕೆಯಿಂದ ಕಲಾರಸಿಕರ ಮನಗೆದ್ದಿದ್ದಾರೆ. ಪುರುಷ ಪಾತ್ರಗಳನ್ನೂ ಸಮರ್ಥವಾಗಿ ನಿರ್ವಹಿಸಿದ್ದಾರೆ. ತಾಳಮದ್ದಲೆ ಅರ್ಥಧಾರಿಯಾಗಿ ಅನೇಕ ಕೂಟಗಳಲ್ಲಿ ಭಾಗವಹಿಸಿದ್ದಾರೆ. ಉಡುಪಿ ಯಕ್ಷಗಾನ ಕಲಾರಂಗದ ಕೋಟ ವೈಕುಂಟ ಪ್ರಶಸ್ತಿಯೂ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಟಿ. ವಿ. ರಾವ್ ಪ್ರಶಸ್ತಿ – ಕೆ. ಅಜಿತ್‍ಕುಮಾರ್ ಅಂಬಲಪಾಡಿ
ವೇಷಧಾರಿ, ಹಿಮ್ಮೇಳ ವಾದಕ ಕಪ್ಪೆಟ್ಟು ಅಜಿತ್‍ಕುಮಾರ್ ಬಾಬು ಶೆಟ್ಟಿಗಾರ್ – ಭವಾನಿ ದಂಪತಿ ಸುಪುತ್ರರು. ಇವರಿಗೆ ಯಕ್ಷಗಾನ ತಂದೆಯಿಂದ ಬಂದ ಬಳುವಳಿ.ಬಾಬು ಶೆಟ್ಟಿಗಾರ್ ಯಕ್ಷಗಾನದ ಎಲ್ಲಾ ಅಂಗಗಳನ್ನು ಬಲ್ಲ ಕಲಾವಿದರಾಗಿದ್ದರು. ಅಜಿತರಿಗೆ ತಂದೆಯೇ ಯಕ್ಷಗಾನದ ಮೊದಲ ಗುರು. ಬಾಬು ಶೆಟ್ಟಿಗಾರ್ ಹಾಗೂ ಸಮಾನಾಸಕ್ತ ಸ್ನೇಹಿತರು ಸ್ಥಾಪಿಸಿ ಬೆಳೆಸಿದ ಅಂಬಲಪಾಡಿಯ ‘ಶ್ರೀಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾ ಮಂಡಳಿ’ ಅವರ ಕಲಿಕೆಗೂ ಕಲಿತ ಕಲೆಯನ್ನು ಪ್ರದರ್ಶಿಸುವುದಕ್ಕೂ ವೇದಿಕೆಯಾಯಿತು. ಅಲ್ಲಿ ಹಿರಿಯಡಕ ಗೋಪಾಲ ರಾಯರಿಂದ ಮದ್ದಳೆ ವಾದನ, ಕೆಮ್ಮಣ್ಣು ಆನಂದರಿಂದ ಚಂಡೆ ವಾದನ ತರಬೇತಿ ಪಡೆದರು. ಇವರ ಆಳಂಗ ಬಣ್ಣದ ವೇಷಕ್ಕೆ ತುಂಬಾ ಪೂರಕ. ಬಣ್ಣದ ವೇಷಗಳಲ್ಲದೆ ಮಂಡಳಿಯಲ್ಲಿ ಕಿರೀಟ, ಮುಂಡಾಸಿನ ವೇಷಗಳನ್ನೂ ನಿರ್ವಹಿಸಿದ್ದಾರೆ.
1997 ರಲ್ಲಿ ಪ್ರೊ.ಎಂ.ಎಲ್. ಸಾಮಗರ ನೇತೃತ್ವದ ತಂಡದೊಂದಿಗೆ ಕಲಾವಿದರಾಗಿ ಸಿಂಗಾಪುರ ಪ್ರವಾಸ ಮಾಡಿದ್ದಾರೆ. ಬೆಂಗಳೂರಿನ ‘ಶಂಕರ ಫೌಂಡೇಶನ್’ನ ಶ್ರೀಮತಿ ಲಕ್ಷ್ಮೀ ಹೆಗಡೆ ಗೋಪಿ ಮುಂದಾಳುತ್ವದ ನೃತ್ಯರೂಪಕ ತಂಡದೊಂದಿಗೆ ಅಮೆರಿಕಾ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ಪ್ರವಾಸ ನಡೆಸಿ ತಮ್ಮ ಚಂಡೆಯ ಅಬ್ಬರ ಮೊಳಗಿಸಿದ್ದಾರೆ.
ಪ್ರೊ.ಉದ್ಯಾವರ ಮಾಧವ ಆಚಾರ್ಯರ ‘ಸಮೂಹ ಉಡುಪಿ’ ಹಾಗೂ ಬೆಂಗಳೂರಿನ ‘ಯಕ್ಷದೇಗುಲ’, ‘ಕರ್ನಾಟಕ ಕಲಾದರ್ಶಿನಿ’ ತಂಡದ ಸದಸ್ಯರಾಗಿ ಹಲವು ಪ್ರದರ್ಶನಗಳಲ್ಲಿ ಭಾಗಿಯಾಗಿದ್ದಾರೆ. ದೆಹಲಿಯ ರಾಷ್ಟ್ರಪತಿ ಭವನವೂ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಕಲಾಪ್ರದರ್ಶನ ನೀಡಿದ್ದಾರೆ. ಉಡುಪಿಯ ಪ್ರತಿಷ್ಠಿತ ಸಾಂಸ್ಕøತಿಕ, ಸಾಮಾಜಿಕ ಸಂಘಟನೆಯಾದ ‘ಯಕ್ಷಗಾನಕಲಾರಂಗ’ದ ಸಕ್ರಿಯ ಸದಸ್ಯರು. ಅನೇಕ ಸಾಂಸ್ಕøತಿಕ ಕಲಾ ಕಾರ್ಯಕ್ರಮಗಳ ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಅಪ್ಪ, ಮಗಳು ಇಬ್ಬರೂ ಜೊತೆಯಾಗಿ ದೇಶಾದ್ಯಂತ ಹಲವಾರು ದ್ವಂದ್ವ ನುಡಿಸುವಿಕೆಯ ಸಂಗೀತ ಕಚೇರಿಯನ್ನು ನಡೆಸಿಕೊಟ್ಟಿದ್ದರು. ಮಗಳು ವಿಜಿ ಕೃಷ್ಣನ್ ಅವರಿಗೆ ತಂದೆ ಟಿ. ಎನ್. ಕೃಷ್ಣನ್ ಅವರೇ ಗುರುವಾಗಿದ್ದರು.
ತಂದೆ ಹಾಗೂ ಗುರು ಟಿ. ಎನ್. ಕೃಷ್ಣನ್ ಅವರೇ ನನ್ನ ಪಾಲಿಗೆ ಹೀರೋ ಆಗಿದ್ದರು ಎಂದು ಪುತ್ರಿ ವಿಜಿ ಕೃಷ್ಣನ್ ಭಾವುಕರಾಗಿ ನುಡಿಯುತ್ತಾರೆ. ಅವರು ಇಬ್ಬರೂ ಒಟ್ಟಿಗೆ ನಡೆಸಿದ್ದ ಪಿಟೀಲು ವಾದನ ಕಚೇರಿಯ ವೀಡೀಯೋ ಲಿಂಕ್ ಕೆಳಗಡೆ ಇದೆ.
ಕೂರ್ಮಾವತಾರದಲ್ಲಿ ಇವನಾಗಿದ್ದ ನನ್ನ ಚಿಪ್ಪು. ನೀನು ಇದನ್ನು ಒಪ್ಪು. ನರಸಿಂಹಾವತಾರದಲ್ಲಿ ಅವನು ನನ್ನ ನಖ, ಈಗ ನನ್ನ ಸಖ, ಒಪ್ಪದಿದ್ದರೆ ನಿನಗಿಲ್ಲ ಸುಖ. ಇಂತಹಾ ಪ್ರಾಸಬದ್ಧ ಮಾತುಗಳನ್ನು ಕೇಳಿದ ಯಕ್ಷರಸಿಕರು ಎಲ್ಲರೂ ಅವರು ಯಾರೆಂದು ಖಂಡಿತಾ ಊಹಿಸಬಹುದು.
ಯಾವುದೇ ಒಬ್ಬ ಪಾತ್ರಧಾರಿಯು ಪಾತ್ರವೊಂದರಲ್ಲಿ ಆತನು ಮೂಡಿಸಿದ ಶೈಲಿ ಚಿತ್ರಣಗಳನ್ನು ಆತನ ನಿವೃತ್ತಿಯ ನಂತರವೂ ಇತರ ಪಾತ್ರಧಾರಿಗಳು ಅನುಸರಿಸಿಕೊಂಡು ಹೋಗುತ್ತಾರೆ ಎಂದಾದರೆ ಅದು ಆ ಪಾತ್ರಧಾರಿಯ ದೊಡ್ಡ ಗೆಲುವು ಎಂದೇ ಅರ್ಥ. ಉದಾಹರಣೆಯಾಗಿ ಸುದರ್ಶನ ವಿಜಯ ಪ್ರಸಂಗದ ವಿಷ್ಣುವಿನ ಪಾತ್ರವೇ ಜ್ವಲಂತ ಸಾಕ್ಷಿ. ವಿಷ್ಣುವಾಗಿ ಕುಂಬಳೆ ಸುಂದರ ರಾಯರು ಕಟ್ಟಿದ ಪಾತ್ರಚಿತ್ರಣ ಈಗಲೂ ಹಾಗೆಯೇ ಇದೆ. ಅಲ್ಲಿ ಕುಂಬಳೆ ಸುಂದರ ರಾಯರು ಹೇಳುತ್ತಿದ್ದ ಪ್ರಾಸಬದ್ಧ ಮಾತುಗಳನ್ನು ಬೇರೆ ಕಲಾವಿದರು ಈಗಲೂ ಉಪಯೋಗಿಸುತ್ತಿದ್ದಾರೆ. ಇದು ಕುಂಬಳೆಯವರ ದೊಡ್ಡ ಗೆಲುವು.
ಕುಂಬಳೆ ಸುಂದರ ರಾವ್ ಅವರ ಭರತಾಗಮನದ ಭರತ, ವಿರಾಟ ಪರ್ವದ ಉತ್ತರ ಕುಮಾರ ಮೊದಲಾದುವುಗಳೆಲ್ಲಾ ಅವರಿಗೇ ಹೇಳಿ ಮಾಡಿಸಿದ ಪಾತ್ರಗಳು. ಕೃಷ್ಣ ಸಂಧಾನದ ಕರ್ಣ, ಕರ್ಣಪರ್ವದ ಕರ್ಣ, ಮಹಾಬ್ರಾಹ್ಮಣದಲ್ಲಿ ವಿಶ್ವಾಮಿತ್ರ (ವಿಶ್ವಾಮಿತ್ರ-ಮೇನಕೆ) ಸಮುದ್ರಮಥನದ ವಿಷ್ಣು, ದಕ್ಷಯಜ್ಞದ ಈಶ್ವರ ವಿವಿಧ ಪ್ರಸಂಗಗಳಲ್ಲಿ, ಭೀಷ್ಮ, ಕೃಷ್ಣ, ರಾಮ, ವಿಷ್ಣು, ಚ್ಯವನ, ಪರೀಕ್ಷಿತ, ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆಯ ಗೋವಿಂದ ದೀಕ್ಷಿತರ ಪಾತ್ರ ಇವರಿಗೆ ಬಹಳಷ್ಟು ಪ್ರಸಿದ್ಧಿಯನ್ನು ತಂದುಕೊಟ್ಟಿದೆ. ತ್ರಿಪುರ ಮಥನದ ‘ಚಾರ್ವಾಕ’ ಪಾತ್ರ ನಿರ್ವಹಣೆಯಂತೂ ಅದ್ಭುತ.
ಕುಂಬಳೆ ಸುಂದರ ರಾವ್ ಅವರ ಕುಟುಂಬದ ವೃತ್ತಿ ಮಗ್ಗ ನೇಯುವುದು ಮತ್ತು ಬಟ್ಟೆಯ ವ್ಯಾಪಾರ. ಮನೆಮಾತು ಮಲೆಯಾಳ. ಎಳವೆಯಲ್ಲೇ ವಿದ್ಯಾಭ್ಯಾಸಕ್ಕೆ ತಿಲಾಂಜಲಿ, ಯಕ್ಷಗಾನದ ಆಸಕ್ತಿ ಸೆಳೆಯಿತು. ಕೆಲಸಕ್ಕೆ ಬಾರದವನೆಂಬ ಭಾವನೆ ಅಪ್ಪನಲ್ಲಿದ್ದರೂ ಅಮ್ಮನ ಪ್ರೀತಿಯಿತ್ತು. ಶಾಲೆಯಲ್ಲಿ ಓದಿದ್ದು ಕಡಿಮೆಯಾದರೂ ಕುಂಬಳೆ ಸುಂದರ ರಾಯರು ಕನ್ನಡ, ಮಲಯಾಳ, ತುಳು, ಸಂಸ್ಕೃತ, ಹವ್ಯಕ, ತಮಿಳು ಭಾಷೆಗಳಲ್ಲಿ ಪಾಂಡಿತ್ಯವನ್ನು ಹೊಂದಿದ್ದರು.
ತಂದೆಯ ಬಟ್ಟೆ ಮಿಲ್ ಇರುವ ಕುಂಬಳೆ ಸಮೀಪದ ನಾಯ್ಕಾಪು ಎಂಬಲ್ಲಿ ನಡೆಯುತ್ತಿದ್ದ ತಾಳಮದ್ದಲೆಯನ್ನು ನೋಡಿ ಅರ್ಥ ಹೇಳುತ್ತಾ ಆಸಕ್ತಿ ಬೆಳೆಸಿಕೊಂಡ ಕುಂಬಳೆಯವರಿಗೆ ಚಿಕ್ಕಂದಿನಲ್ಲಿಯೇ ಯಕ್ಷಗಾನದ ಆಸಕ್ತಿ ಅತೀವವಾಗಿತ್ತು. ಕುಂಬಳೆ ಸುಂದರ ರಾಯರ ತಂದೆಯ ಮಗ್ಗದ ಕೆಲಸ ಅಲ್ಲಿ ನಡೆಯುತ್ತಿತ್ತು. ಅಲ್ಲಿ ಪ್ರತಿ ವಾರವೂ ತಾಳಮದ್ದಳೆ ನಡೆಯುತ್ತಿತ್ತು. ಅವರು ಶಾಲೆ ಬಿಟ್ಟ ನಂತರ ಅಲ್ಲಿ ಹೋಗಿ ಕುಳಿತುಕೊಳ್ಳುತ್ತಿದ್ದರು. ಒಂದು ದಿನ ಅಲ್ಲಿದ್ದ ಬೋನಂತಾಯ ಶಂಭಟ್ಟರು ಎನ್ನುವವರು ‘‘ಒಂದು ಅರ್ಥ ಹೇಳೋ ಸುಂದರಾ’’ ಎಂದು ಕುಂಬಳೆಯವರಲ್ಲಿ ದೂತನ ಅರ್ಥ ಹೇಳಿಸಿದರು.
ಆಮೇಲೆ ಸಂಬಂಧಿಕರೂ ನೆರೆಯವರೂ ಆದ ಬಣ್ಣದ ಕುಟ್ಯಪ್ಪು ಅವರ ಕಾಳಜಿಯಿಂದ ಮೇಳದಲ್ಲಿ ವೇಷ ಮಾಡತೊಡಗಿದರು. ಆಟಕ್ಕಿಂತ ತಾಳಮದ್ದಳೆಗೇ ಹೆಚ್ಚು ಒಗ್ಗುವವನು ಎಂದು ಭಾವಿಸಿದ ಸುಂದರ ರಾಯರು ಮಳೆಗಾಲದಲ್ಲಿ ನಡೆಯುತ್ತಿದ್ದ ತಾಳಮದ್ದಳೆಗಳಲ್ಲಿ ಶೇಣಿಯವರು, ವೆಂಕಪ್ಪ ಶೆಟ್ಟಿಯವರು, ಸಾಮಗರೇ ಮೊದಲಾದವರಿದ್ದ ಕೂಟಗಳಲ್ಲಿ ಸಣ್ಣ ಸಣ್ಣ ಪಾತ್ರಗಳಲ್ಲಿ ಅರ್ಥ ಹೇಳಲು ಪ್ರಾರಂಭಿಸಿ ತಾಳಮದ್ದಳೆ ಕೂಟಗಳಿಗೆ ಅನಿವಾರ್ಯ ಸದಸ್ಯರಾದರು.
ರಾಜಕೀಯದಲ್ಲಿ ಕುಂಬಳೆಯವರಿಗೆ ಯಾವುದೇ ಆಕಾಂಕ್ಷೆಯಿರಲಿಲ್ಲ. ಕೇವಲ ಭಾಷಣಗಾರನಾಗಿ ರಾಜಕೀಯದಲ್ಲಿದ್ದರು. ಪ್ರಚಾರ ಭಾಷಣಕ್ಕಾಗಿ ಕರೆಯುತ್ತಿದ್ದರು. ಆದರೆ ಒಂದು ಅನಿರೀಕ್ಷಿತ ಸಂದರ್ಭದಲ್ಲಿ ಚುನಾವಣೆಗೆ ಸ್ಪರ್ಧಿಸಲು ಒತ್ತಾಯದ ಕರೆಬಂತು. ಸ್ಪರ್ಧಿಸಿ ಗೆದ್ದು ಶಾಸಕರಾದರು. ಶಾಸಕನಾದ ಮೇಲೆಯೂ ಯಕ್ಷಗಾನದ ವೇಷ ಮಾಡಿದ್ದಾರೆ. ತಾಳಮದ್ದಳೆಯಲ್ಲೂ ಭಾಗವಹಿಸಿದ್ದಾರೆ. ಧರ್ಮಸ್ಥಳ ಮೇಳದಲ್ಲಿ ಚೌಕಿಯಲ್ಲಿ ಅವರ ವೇಷದ ಪೆಟ್ಟಿಗೆ ಶಾಸಕನಾದ ಮೇಲೂ ಹಾಗೆಯೇ ಇತ್ತಂತೆ.
ಕುಂಬಳೆ ಸುಂದರರಾಯರು ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಯಕ್ಷಗಾನಕ್ಕೆ ತೆಂಕು, ಬಡಗು ಮಾತ್ರವಲ್ಲ ಉಳಿದ ಜಾನಪದ ಕಲೆಗಳಿಗೆ ಎಲ್ಲಾ ಸೇರಿ ಕೇವಲ 12 ಲಕ್ಷ ವಾರ್ಷಿಕ ಅನುದಾನವಿತ್ತು.ಅಷ್ಟು ಸಣ್ಣ ಮೊತ್ತದಲ್ಲಿ ಯಕ್ಷಗಾನಕ್ಕೆ ಅಂತಹಾ ದೊಡ್ಡ ಕೊಡುಗೆಗಳನ್ನು ಕೊಡಲಾಗಲಿಲ್ಲ ಎಂದು ಕುಂಬಳೆಯವರು ಬೇಸರ ವ್ಯಕ್ತಪಡಿಸುತ್ತಾರೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷಗಾನ ಪ್ರೇಕ್ಷಕರಿಂದ ಸ್ವಚ್ಛತೆಗೆ ತೊಂದರೆಯಾಗುತ್ತದೆ ಎಂಬ ನೆಪವೊಡ್ಡಿ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿದ್ದರು.
ಇದರಿಂದ ಕೆರಳಿದ ಕುಂಬಳೆಯವರು ಸದನದ ಬಾವಿಗಿಳಿದು ಧರಣಿ ನಡೆಸಿ ಅನಂತರ ಮುಖ್ಯಮಂತ್ರಿ ಜೆ. ಎಚ್. ಪಟೇಲ್ ಮಧ್ಯಸ್ಥಿಕೆಯಲ್ಲಿ ಪುನಃ ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅನುಮತಿ ದೊರಕಿಸಿಕೊಟ್ಟಿದ್ದರು.
“ಅವರಿಗೆ ಪ್ರಾಸ ಬಿಟ್ಟು ಏನು ಗೊತ್ತಿದೆ” ಎಂಬ ಟೀಕೆಗಳಿಗೆ ಉತ್ತರವಾಗಿಯೋ ಎಂಬಂತೆ ಹಠಕ್ಕೆ ಬಿದ್ದ ಅವರು ಒಂದು ಕೂಡಾ ಪ್ರಾಸವನ್ನು ಹೇಳದೆ ಎರಡು ವರ್ಷ ತಿರುಗಾಟ ಮಾಡಿದ್ದರು. ತನ್ನನ್ನು ಅನುಕರಿಸುವವರ ಬಗ್ಗೆ ಅವರು ಹೀಗೆ ಹೇಳುತ್ತಾರೆ.
“ಒಬ್ಬರಂತೆ ಇನ್ನೊಬ್ಬ ಕಲಾವಿದರು ಮಾಡಬೇಕು ಅಂತೇನೂ ಇಲ್ಲ. ಮಾಡಬಾರದು ಅಂತ ಕೂಡಾ ಇಲ್ಲ. ನನಗೆ ಶೃಂಗಾರ ಕರುಣ ಇಷ್ಟ. ವೀರರಸದ ಅಭಿನಯಕ್ಕೆ ನನ್ನ ನೃತ್ಯದ ಭಾಗದ ಕೊರತೆಯಿಂದಾಗಿ ತೊಡಕುಂಟಾಗುತ್ತದೆ. ವಿವೇಕ ಇದ್ದರೆ ಸರಿಯಾದ ಅನುಕರಣೆ ಇರುತ್ತದೆ. ಸುಂದರ ರಾಯರು ಹಾಗೆ ಮಾಡ್ತಾರೆ ಅಂತ ಕೆಲವರು ಎಡಗೈಯನ್ನೇ ಮುಂದೆ ಮಾಡ್ತಾರೆ. ನನಗೆ ಎಡಗೈ ಅಭ್ಯಾಸಬಲ, ಎಡಗೈಯಲ್ಲಿ ಬರೆಯುವುದು.
ಆದ್ದರಿಂದ ರಂಗದಲ್ಲೂ ಅಭ್ಯಾಸದಿಂದ ಎಡಗೈ ಮುಂದೆ ಬರುತ್ತದೆ. ಅದೂ ಒಂದು ಅಭಿನಯ ಎಂದು ತಿಳಿದುಕೊಂಡು ಅನುಕರಿಸುತ್ತಾರೆ. ಒಳ್ಳೆಯದಾದ್ರೆ ಅನುಕರಣೆ ಸರಿ. ಅವರು ಮಾಡ್ತಾರೆ, ನಾನೂ ಮಾಡಿಬಿಡ್ತೇನೆ ಅಂತ ಏನೇನೋ ಮಾಡುವುದಕ್ಕಿಂತ ಮಾಡದಿರುವುದೇ ಉತ್ತಮ” ಎಂದು ಕುಂಬಳೆ ಸುಂದರ ರಾಯರು ಮಾರ್ಮಿಕವಾಗಿ ನುಡಿದಿದ್ದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಸಂಯೋಜಿಸಿದ ಪ್ರತಿದಿನದ ಕಾರ್ಯಕ್ರಮವಾದ ಯಕ್ಷಗಾನ ಕಲಾವಿದರೊಂದಿಗೆ ಮಾತುಕತೆಯ ಮಾತಿನ ಮಂಟಪದ ಕಾರ್ಯಕ್ರಮದಲ್ಲಿ ಇಂದು ಅಂದರೆ ನವೆಂಬರ್ 3ರಂದು ಮಂಗಳವಾರ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಶ್ರೀ ಗುಂಡಿಮಜಲು ಗೋಪಾಲಕೃಷ್ಣ ಭಟ್ ಅವರೊಂದಿಗೆ ಮಾತುಕತೆ ನಡೆಯಲಿದೆ.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರೂ, ಯಕ್ಷಗಾನ ಕಲಾವಿದೆಯೂ ಉಪನ್ಯಾಸಕರೂ ಆದ ಶ್ರೀಮತಿ ಆರತಿ ಪಟ್ರಮೆಯವರು ಕಾರ್ಯಕ್ರಮವನ್ನು ಸಂಯೋಜಿಸಿ ಮಾತುಕತೆಯನ್ನು ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮ ಫೇಸ್ಬುಕ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ.
2020ನೇ ನವೆಂಬರ್ 3ರಂದು ಮಂಗಳವಾರ ಸಂಜೆ ಘಂಟೆ 6.30ರಿಂದ 7.30ರ ವರೆಗೆ ಈ ಕಾರ್ಯಕ್ರಮ ಮೂಡಿಬರಲಿದೆ. ಮಾತಿನ ಮಂಟಪ ಕಾರ್ಯಕ್ರಮದಲ್ಲಿ ಪ್ರತಿದಿನ ಬೇರೆ ಬೇರೆ ಯಕ್ಷಗಾನ ಕಲಾವಿದರೊಂದಿಗೆ ಮಾತುಕತೆ ನಡೆಯಲಿದೆ. ಲಿಂಕ್ ಕೆಳಗಡೆ ಇದೆ.
ಶೀರ್ಷಿಕೆಯೇ ಸೂಚಿಸುವಂತೆ ಇದು ಬಡಗು ತಿಟ್ಟು ಶ್ರೇಷ್ಠ ಕಲಾವಿದರಾಗಿ ಮೆರೆದ ಹಾರಾಡಿ ಮನೆತನದ ಶ್ರೀ ಹಾರಾಡಿ ರಾಮ ಗಾಣಿಗರ ಕುರಿತಾಗಿ ಪ್ರಕಟವಾದ ಪುಸ್ತಕವು. ಪ್ರಕಾಶಕರು ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ಜಿಲ್ಲೆ. ಲೇಖಕರು ಶ್ರೀ ಎಚ್. ಶ್ರೀಧರ ಹಂದೆಯವರು.
ಶ್ರೀ ಹಾರಾಡಿ ರಾಮ ಗಾಣಿಗರ ಬದುಕಿನ ಅವಧಿ 1902-1968. ಹಾರಾಡಿ ಸುಬ್ಬು ಗಾಣಿಗ ಮತ್ತು ಶ್ರೀಮತಿ ಕೊಲ್ಲು ದಂಪತಿಗಳ ಪುತ್ರನಾಗಿ ಜನನ. ಹಿರಿಯರೆಲ್ಲಾ ಕಲಾವಿದರೇ ಆಗಿದ್ದರು. ರಕ್ತಗತವಾಗಿಯೇ ಇದ್ದುದರಿಂದ ಎಳವೆಯಲ್ಲೇ ಯಕ್ಷಗಾನಾಸಕ್ತರಾಗಿದ್ದರು. ಹದಿನಾಲ್ಕನೇ ವಯಸ್ಸಿನಲ್ಲಿ ರಂಗಪ್ರವೇಶ. 1916ರಲ್ಲಿ ಮಾರಣಕಟ್ಟೆ ಮೇಳದ ಬಾಲಕಲಾವಿದನಾಗಿ. 45 ವರ್ಷಗಳ ಕಾಲ ಮಂದಾರ್ತಿ ಮೇಳದಲ್ಲಿ ತಿರುಗಾಟ ನಡೆಸಿದ್ದರು.
ಅಲ್ಲದೆ ಸೌಕೂರು, ಅಮೃತೇಶ್ವರೀ, ವರಂಗ ಮೇಳಗಳಲ್ಲೂ ತಿರುಗಾಟ ಮಾಡಿದ್ದರು. ತನ್ನ ಶ್ರೇಷ್ಠ ಅಭಿನಯ, ಮಾತುಗಾರಿಕೆಯಿಂದ ಹಾರಾಡಿ ತಿಟ್ಟಿನ ಕೀರ್ತಿಯನ್ನು ಮೆರೆಸಿದ ಕಲಾವಿದರಿವರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಯೋಜನೆಯಂತೆ ಈ ಕಿರು ಪುಸ್ತಕವು ಓದುಗರ ಕೈ ಸೇರಿದೆ. ಉಡುಪಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀ ನೀಲಾವರ ಸುರೇಂದ್ರ ಅಡಿಗ ಅವರು ‘ಓದುವ ಮುನ್ನ’ ಎಂಬ ಶೀರ್ಷಿಕೆಯಡಿ ಲೇಖನವನ್ನು ಬರೆದಿರುತ್ತಾರೆ.
ಹಾರಾಡಿ ರಾಮ ಗಾಣಿಗರ ಹುಟ್ಟು, ಬದುಕು, ಕಲಾಜೀವನದ ಬಗೆಗೆ ಸಾಕಷ್ಟು ಮಾಹಿತಿಗಳನ್ನು ಈ ಪುಸ್ತಕದಲ್ಲಿ ಶ್ರೀ ಎಚ್. ಶ್ರೀಧರ ಹಂದೆಯವರು ನೀಡಿರುತ್ತಾರೆ. 1962ರಲ್ಲಿ ರಾಜ್ಯ ಪ್ರಶಸ್ತಿ, 1964ರಲ್ಲಿ ರಾಷ್ಟ್ರ ಪ್ರಶಸ್ತಿಗಳನ್ನು ಪಡೆದ ಹಾರಾಡಿ ರಾಮ ಗಾಣಿಗರ ಬಗೆಗೆ ಈ ಹಿಂದೆ ಎರಡು ಗ್ರಂಥಗಳು ಪ್ರಕಟವಾಗಿವೆ. ಅವುಗಳು 1) ಕೆ.ಮೋಹನ್ ರಾವ್ ನಿರ್ದೇಶಿತ ಯಕ್ಷದೇಗುಲವು ಹೊರತಂದ ‘ಯಕ್ಷಲೋಕದ ಕೋಲ್ಮಿಂಚು’ 2) ಕಂದಾವರ ರಘುರಾಮ ಶೆಟ್ಟಿ ಅವರ ಸಂಪಾದಕತ್ವದಲ್ಲಿ ಶ್ರೀ ಕ್ಷೇತ್ರ ಮಂದಾರ್ತಿ ಅವರು ಪ್ರಕಟಿಸಿದ ‘ಹಾರಾಡಿ ರಾಮ ಗಾಣಿಗರು’ ಎಂಬ ಪುಸ್ತಕಗಳು.
ಈ ವಿಚಾರವನ್ನು ಲೇಖಕರಾದ ಶ್ರೀ ಎಚ್. ಶ್ರೀಧರ ಹಂದೆಯವರು ತಮ್ಮ ಬರಹದಲ್ಲಿ ತಿಳಿಸಿರುತ್ತಾರೆ. ‘ರಂಗಸ್ಥಳ ರಾಜ ಹಾರಾಡಿ ರಾಮ ಗಾಣಿಗ’ ಎಂಬ ಈ ಪುಸ್ತಕವು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಸಂಭ್ರಮದ ಸಂದರ್ಭ ಪ್ರಕಟವಾಗಿತ್ತು. ಉಡುಪಿ ಜಿಲ್ಲೆಯ ಹಿರಿಯ ಸಾಧಕರು ಎಂಬ ವಿಚಾರದಡಿ ಈ ಹೊತ್ತಗೆಯು ಪ್ರಕಟವಾಗಿತ್ತು.