Friday, January 24, 2025
Home Blog Page 343

ಸೂರಿಕುಮೇರಿ ಗೋವಿಂದ ಭಟ್ಟರ ‘ಯಕ್ಷೋಪಾಸನೆ’ ಮತ್ತು ‘ಸವ್ಯಸಾಚಿ’ – ತನ್ನ ವೇಷಭೂಷಣಕ್ಕೆ ಕೊರತೆ ಮಾಡಿಕೊಂಡು ಇನ್ನೊಬ್ಬರನ್ನು ಮೆರೆಯಿಸುವ ಗೋವಿಂದ ಭಟ್ಟರು

ಕೆ. ಗೋವಿಂದ ಭಟ್ (ಫೋಟೋ: ಶ್ರುತಿ ಭಟ್ ಬಂಡ್ಯಡ್ಕ, ಬೋಸ್ಟನ್,ಯು. ಎಸ್. ಎ.)

ಯಕ್ಷಗಾನವೆಂಬ ಥಳಕು ಬಳುಕಿನ ಬಣ್ಣದ ಲೋಕದಲ್ಲಿ ಸೂರಿಕುಮೇರಿ ಗೋವಿಂದ ಭಟ್ಟರು ಎಂಬ ಕೌತುಕ, ವೇಷ ಕಳಚಿ ಬಣ್ಣ ತೊಳೆದು ನಿಜ ವ್ಯಕ್ತಿಯಾದಾಗ ಎಲ್ಲರಿಗೂ ಸುಲಭದಲ್ಲಿ ಅರ್ಥ ಮಾಡಿಕೊಳ್ಳಲಾಗದ ವ್ಯಕ್ತಿರೂಪವಾಗಿ ಉಳಿಯುತ್ತಾರೆ. ಕೆಲವೊಮ್ಮೆ ಸ್ಥಿತಪ್ರಜ್ಞತೆ, ಇನ್ನು ಕೆಲವು ಸಂದರ್ಭಗಳಲ್ಲಿ ಕಾಡುವ ನಿರ್ಲಿಪ್ತತೆ ಮುಖದಲ್ಲಿ ಪ್ರತಿಫಲಿಸುವುದುಂಟು. ಕಾದ ಕಬ್ಬಿಣಕ್ಕೆ ಬಿದ್ದ ಪೆಟ್ಟುಗಳಂತೆ ಎಳವೆಯಲ್ಲಿ ನಲಿವಿಗಿಂತ ಹೆಚ್ಚಾಗಿ ಅನುಭವಿಸಿದ ಯಾತನೆಯ ಬದುಕನ್ನು ಸಹ್ಯವಾಗಿಸಿಕೊಂಡು ಪರಿಪಕ್ವವಾಗಿ ಹೇಗೆ ಬೇಕಾದರೂ ಉಪಯೋಗಿಸಬಲ್ಲ ಆಯುಧವಾಗಿದ್ದಾರೆ.

ಎಳವೆಯಲ್ಲಿ ಧರ್ಮಸ್ಥಳ ಮೇಳದ ಚೌಕಿಗೆ ಹೋಗಿದ್ದಾಗಲೆಲ್ಲಾ ವೇಷದ ಪೆಟ್ಟಿಗೆಯ ಮೇಲೆ ಕುಳಿತು ಕೆ. ಗೋವಿಂದ ಭಟ್ ಎಂಬ ಅದ್ಭುತವನ್ನು ಬೆರಗುಗಣ್ಣುಗಳಿಂದ ನೋಡುತ್ತಿದ್ದೆ. ಆಗಲೇ ನಮ್ಮ ದೃಷ್ಟಿಯಲ್ಲಿ ‘ಹೀರೋ’ ಆಗಿದ್ದ ವ್ಯಕ್ತಿತ್ವ. ಚಿಣ್ಣರಾಗಿದ್ದಾಗ ಕೆ. ಗೋವಿಂದ ಭಟ್ ಮತ್ತು ಎಂಪೆಕಟ್ಟೆ ರಾಮಯ್ಯ ರೈಗಳ ಪಾತ್ರಗಳನ್ನು ಬಹುವಾಗಿ ಇಷ್ಟಪಟ್ಟಿದ್ದೆ. ನಿಜವಾಗಿಯೂ ಪಾತ್ರಧಾರಿಯಾಗಿ ಗೋವಿಂದ ಭಟ್ಟರು ಪ್ರೇಕ್ಷಕರ ಮೇಲೆ ಬೀರುವ ಪ್ರಭಾವ ಬಹಳ ಗಾಢವಾದದ್ದು. ಆ ಪ್ರಭಾವ ಎಷ್ಟಿರುತ್ತದೆಂದರೆ ಅವರು ನಿರ್ವಹಿಸುವ ಪಾತ್ರಗಳಿಂದಾಚೆಗೆ ಯಕ್ಷಗಾನವೇ ಇಲ್ಲ ಎನ್ನುವಷ್ಟು.


ಕೆ. ಗೋವಿಂದ ಭಟ್ಟರ ಕುರಿತಾಗಿ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಸಂಪಾಜೆ ಇವರು ಪ್ರಕಾಶಿಸಿದ ಎರಡು ಪುಸ್ತಕಗಳು ಬಿಡುಗಡೆಯಾಗಿವೆ. ಮೊದಲನೆಯದು  ಡಾ. ಬಿ. ಪ್ರಭಾಕರ ಶಿಶಿಲ ಅವರು ಬರೆದ ಗೋವಿಂದ ಭಟ್ಟರ ಆತ್ಮಕಥೆ ‘ಯಕ್ಷೋಪಾಸನೆ’ ಹಾಗೂ ಇನ್ನೊಂದು ಹಿರಣ್ಯ ವೆಂಕಟೇಶ್ವರ ಭಟ್ಟ ಸಂಪಾದಕತ್ವದಲ್ಲಿ ಬಿಡುಗಡೆಗೊಂಡ ಸೂರಿಕುಮೇರಿ ಅವರ ಅಭಿನಂದನಾ ಗ್ರಂಥ ‘ಸವ್ಯಸಾಚಿ’.
ಮೊದಲನೆಯ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ 2008ರಲ್ಲಿ ಹೊರತಂದ ಪುಸ್ತಕ ‘ಯಕ್ಷೋಪಾಸನೆ’  ಡಾ. ಬಿ. ಪ್ರಭಾಕರ ಶಿಶಿಲರ ಅದ್ಭುತ ನಿರೂಪಣೆಯಿಂದ ಕೂಡಿದ್ದು ಪ್ರಾರಂಭದಿಂದ ಕೊನೆಯ ವರೆಗೂ ಓದಿಸಿಕೊಂಡು ಹೋಗುತ್ತದೆ. ಗ್ರಂಥದಲ್ಲಿ ಗೋವಿಂದ ಭಟ್ಟರ ಬಾಲ್ಯದಿಂದ ತೊಡಗಿ ಆ ಪುಸ್ತಕ ಪ್ರಕಟವಾಗುವ ವರೆಗಿನ ಅವರ ಜೀವನದ ವಿವಿಧ ಮಜಲುಗಳು, ಏಳುಬೀಳುಗಳನ್ನು ಸಮರ್ಥವಾಗಿ ನಿರೂಪಿಸಲಾಗಿದೆ. ಮೊದಲ ಭಾಗವು ಕರುಣರಸದ ಭಾವಾಭಿವ್ಯಕ್ತಿಯ ಧಾರೆಯಲ್ಲಿ ಮಿಂದು ತೋಯಿಸಿದರೂ ಮುಂದುವರಿದಂತೆ ಅವರ ಸಾಧನೆಗಳ ಅಲೆಯಲ್ಲಿ ನಾವೂ ತೇಲಾಡುವಂತೆ ಅನಿಸುತ್ತದೆ.


‘‘ಪಾತ್ರ ಯಾವುದೇ ಇರಲಿ, ತಕರಾರಿಲ್ಲದೆ ಕಲಾವಿದ ಒಪ್ಪಿಕೊಂಡರೆ ಕಲಾವಿದ ಬೆಳೆಯುತ್ತಾನೆ ಮತ್ತು ಪ್ರಯೋಗ ಯಶಸ್ವಿಯಾಗುತ್ತದೆ. ನಮ್ಮನ್ನು ನಾವು ಒಂದೆರಡು ಪಾತ್ರಗಳಿಗೆ ಮಾತ್ರ ಸೀಮಿತಗೊಳಿಸಿಕೊಂಡರೆ ಕಲಾಮಾಧ್ಯಮ ಸೊರಗುತ್ತದೆ. ಯಕ್ಷಗಾನವು ಒಂದು ಸಾಮುದಾಯಿಕ ಭಾವಾಭಿವ್ಯಕ್ತಿಯೇ ಹೊರತು ಏಕವ್ಯಕ್ತಿ ಪ್ರದರ್ಶನವಲ್ಲ. ಇಡೀ ತಂಡವಾಗಿ ಕಲಾವಿದರು ದುಡಿದರೆ ಎಂತಹ ಪ್ರಸಂಗವನ್ನಾದರೂ ಯಶಸ್ವಿಗೊಳಿಸಬಹುದು ಎಂಬುದು ನಾನು ಕಂಡುಕೊಂಡ ಸತ್ಯ.’’

ಗೋವಿಂದ ಭಟ್ಟರು ಈ ಮಾತಿನಂತೆಯೇ ನಡೆದುಕೊಂಡರು. ಅಗತ್ಯ ಬಿದ್ದಾಗ ಯಾವುದೇ ಪಾತ್ರವನ್ನು, ಎಷ್ಟೇ ಸಣ್ಣ ಪಾತ್ರವನ್ನಾದರೂ ನಿರ್ವಹಿಸಿದ ಉದಾಹರಣೆಗಳು ಕಣ್ಣಮುಂದೆ ಹೇರಳವಾಗಿವೆ.
ಇನ್ನೊಂದು ಪುಸ್ತಕ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದವರೇ ಹೊರತಂದ ಹಿರಣ್ಯ ವೆಂಕಟೇಶ್ವರ ಭಟ್ಟ ಸಂಪಾದಿತ ‘ಸವ್ಯಸಾಚಿ’. ಹೆಸರೇ ಹೇಳುವಂತೆ ಯಕ್ಷರಂಗದ ನಿಜ ಸವ್ಯಸಾಚಿಯ ಬಗ್ಗೆ ಕಲಾಪೋಷಕ ಹಾಗೂ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಟಿ. ಶ್ಯಾಮ್ ಭಟ್‍ರಿಂದ ಮೊದಲ್ಗೊಂಡು ಅನೇಕ ಗಣ್ಯರು ಬರೆದ ಅನಿಸಿಕೆಗಳಿವೆ.
ಟಿ. ಶ್ಯಾಮ್ ಭಟ್ ಅವರು ಈ ಪುಸ್ತಕದಲ್ಲಿ ‘‘ಅವರ ವೇಷಗಳು ರಂಗಸ್ಥಳವನ್ನು ತುಂಬಿ ಕೊಳ್ಳುವ ಪರಿ ಅನುಪಮವಾದುದು. ಗೋವಿಂದ ಭಟ್ಟರಿಗೆ ಗೋವಿಂದ ಭಟ್ಟರೇ ಸರಿ. ಯಾರ ಅನುಕರಣೆಯೂ ಇಲ್ಲದೆ, ಯಾರನ್ನೂ ಅನುಸರಿಸದೆ ತಮ್ಮದೇ ಆದ ಶೈಲಿಯಿಂದ ಮೆರೆದವರು…. ಸಾಮಾಜಿಕವಾದ ಕೆಲವು ವಿವಾದಗಳನ್ನು ಅವರು ಬಗೆಹರಿಸಿದ್ದಿದೆ. ಹೀಗೆ ಸಾಮಾಜಿಕ ಸೇವೆಗಳನ್ನು ಬಹುಕಾಲ ನಡೆಸಿದ್ದಾರೆ’’ ಎಂದು ಬರೆದಿದ್ದಾರೆ.


ಹೀಗೆ ಸಮಾಜಮುಖಿಯಾದ ಗೋವಿಂದ ಭಟ್ಟರು ಬಾಲ್ಯದಲ್ಲಿ ಬಡತನದ ಬೇಗೆಯಲ್ಲಿ ಬೆಂದು ಬಸವಳಿದಿದ್ದರೂ ಅದನ್ನೆಲ್ಲಾ ಮೆಟ್ಟಿ ನಿಂತು ಛಲದಿಂದ ಬದುಕಿ ಈಗ ಸುದೃಢವಾದ ಆರ್ಥಿಕ ಬದುಕನ್ನು ಕಂಡುಕೊಂಡವರು.
‘ಸವ್ಯಸಾಚಿ’ ಹೊತ್ತಗೆಯ ಒಂದು ಭಾಗದಲ್ಲಿ ಯಕ್ಷಗಾನ ಕಲಾವಿದ ಕೆ. ವಿಶ್ವೇಶ್ವರ ಭಟ್, ಸುಣ್ಣಂಬಳ ಅವರು ತಮ್ಮ ಗುರುಗಳ ಬಗ್ಗೆ ಹೀಗೆ ಹೇಳುತ್ತಾರೆ. ‘‘ಗುರುಗಳ ಗದಾಯುದ್ಧದ ಕೌರವನ ಪಾತ್ರ. ನನ್ನದು ಕರ್ಣಪರ್ವದ ಕರ್ಣ. ವೇಷಭೂಷಣ ಒದಗಿಸುವವರು ಒಂದು ಬಿಳಿ ಬಣ್ಣದ ಸೋಗೆವಲ್ಲಿಯನ್ನು ಮಾತ್ರ ತಂದಿದ್ದರು. ನಾನು ವೇಷಧರಿಸುವಾಗ ಅದನ್ನು ಅವರ ಕೌರವನ ಪಾತ್ರಕ್ಕಾಗಿ ತೆಗೆದಿಟ್ಟು ಬೇರೆ ಬಣ್ಣದ ಸೋಗೆವಲ್ಲಿ ಹಾಕಿದೆ. ಅದನ್ನು ನೋಡಿದ ಅವರು ಬಂದು ‘ನೀನು ಅದನ್ನು ಹಾಕು’ ಎಂದು ಹೇಳಿ ಮೊದಲು ನಾನು ಹಾಕಿದ ಸೋಗೆವಲ್ಲಿಯನ್ನು ತೆಗೆಸಿದ್ದು ಮಾತ್ರವಲ್ಲ ಅಂದು ಅವರು ಕೌರವನಿಗೆ ಬೇರೆ ಯಾವುದೋ ಒಂದು ಸೋಗೆವಲ್ಲಿ ಹಾಕಿದರು. ಹೀಗೆ ತನ್ನ ವೇಷಭೂಷಣಕ್ಕೆ  ಕೊರತೆ ಮಾಡಿಕೊಂಡು ಇನ್ನೊಬ್ಬರನ್ನು ಮೆರೆಯಿಸುವ ಎಷ್ಟು ಮಂದಿಗಳನ್ನು ನಾವಿಂದು ಕಾಣಬಹುದು?’’ ನಿಜವಾಗಿಯೂ ಅತಿಶಯೋಕ್ತಿಗಳಿಂದ ಕೂಡಿದ ಮಾತಲ್ಲ ಇದು. ಇಂತಹ ಎಷ್ಟೋ ಸಂದರ್ಭಗಳಲ್ಲಿ ಗೋವಿಂದ ಭಟ್ಟರನ್ನು ಹತ್ತಿರದಿಂದ ಬಲ್ಲವರು ಒಪ್ಪುವ ಮಾತೇ.


ಅವರು ರಂಗದಲ್ಲಿ ಪಾತ್ರವೇ ಆಗಿರುತ್ತಿದ್ದರು. ಪಾತ್ರ, ಸ್ವಭಾವಗಳನ್ನು ತನ್ನ ಮೇಲೆ ಆವಾಹಿಸಿಕೊಳ್ಳುತ್ತಿದ್ದ ರೀತಿ ಅನನ್ಯವಾದದ್ದು. ‘ಯಕ್ಷೋಪಾಸನೆ’ಯಲ್ಲಿ ಅವರೇ ಹೇಳುವಂತೆ ‘‘ದ್ರೌಪದಿ ವಸ್ತ್ರಾಪಹರಣದ ಉದ್ದೇಶ ಪ್ರತೀಕಾರ. ಆ ಪಾತ್ರವನ್ನು ನಾನು ನಿರ್ವಹಿಸುವಾಗ ಹಿಂದೆ ನನ್ನ ವೈಯುಕ್ತಿಕ ಜೀವನದಲ್ಲಾದ ಅಪಮಾನ ಗಳನ್ನು ನೆನಪಿಸಿಕೊಂಡು ಈಗ ಅದಕ್ಕೆ ಪರಿಮಾರ್ಜನೆ ಮಾಡುತ್ತಿದ್ದೇನೆ ಎಂದುಕೊಳ್ಳುತ್ತಿದ್ದೆ. ಕೌರವನ ಪಾತ್ರ ಸಹಜವಾಗಿ ಅಭಿವ್ಯಕ್ತಿಗೊಳ್ಳುತ್ತಿದ್ದರೆ, ಅದಕ್ಕೆ ಈ ಭಾವ ಕಾರಣ ವಾಗಿರಬೇಕು.’’ ಎಂತಹಾ ಮಾರ್ಮಿಕವಾದ ಮಾತು. ಅಷ್ಟೇ ಸತ್ಯವೂ ಕೂಡ. ‘ಯಕ್ಷೋಪಾಸನೆ’ ಮತ್ತು ‘ಸವ್ಯಸಾಚಿ’ ಎಂಬ ಈ ಎರಡೂ ಪುಸ್ತಕಗಳು ಕೂಡಾ ಮುಂದಿನ ಪೀಳಿಗೆಗೆ ಅಧ್ಯಯನ ಯೋಗ್ಯವೂ ಸಂಗ್ರಹಯೋಗ್ಯವೂ ಆಗಿವೆ.

ಲೇಖನ: ಮನಮೋಹನ್ ವಿ.ಎಸ್.  

ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ (13-12-2020)

ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ (13-12-2020)
ಮೇಳಇಂದು/ದಿನಾಂಕಸ್ಥಳ
ಶ್ರೀ ಧರ್ಮಸ್ಥಳ ಮೇಳ13-12-2020ಶ್ರೀ ಕ್ಷೇತ್ರದಲ್ಲಿ
ಕಟೀಲು ಒಂದನೇ ಮೇಳ13-12-2020ಅಡ್ಡೂರು
ಕಟೀಲು ಎರಡನೇ ಮೇಳ 13-12-2020 ಕಟೀಲು ಕ್ಷೇತ್ರದಲ್ಲಿ
ಕಟೀಲು ಮೂರನೇ ಮೇಳ13-12-2020ನಾರ್ಲ  ವಯಾ ಗಂಜಿಮಠ
ಕಟೀಲು ನಾಲ್ಕನೇ ಮೇಳ 13-12-2020ಕತ್ತಲ್ ಸಾರ್ ಶಾಲಾ ಬಳಿ 
ಕಟೀಲು ಐದನೇ ಮೇಳ 13-12-2020ಎಕ್ಕಾರು ಗುಡ್ಡೆಸಾನದ ಬಳಿ 
ಕಟೀಲು ಆರನೇ ಮೇಳ13-12-2020ಮೆಲ್ಕಾರ್  ಪಾಣೆಮಂಗಳೂರು
ಮಂದಾರ್ತಿ ಒಂದನೇ ಮೇಳ 13-12-2020ವಿನಾಯಕ ದೇವಸ್ಥಾನ,ಆನೆಗುಡ್ಡೆ,ಕುಂಭಾಶಿ 
ಮಂದಾರ್ತಿ ಎರಡನೇ ಮೇಳ 13-12-2020ಮಹಾಗಣಪತಿ ದೇವಸ್ಥಾನ, ಬಾರಾಳಿ 
ಮಂದಾರ್ತಿ ಮೂರನೇ ಮೇಳ 13-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ನಾಲ್ಕನೇ ಮೇಳ 13-12-2020ಶ್ರೀ ಕ್ಷೇತ್ರದಲ್ಲಿ  
ಮಂದಾರ್ತಿ ಐದನೇ ಮೇಳ 13-12-2020ಶ್ರೀ ಕ್ಷೇತ್ರದಲ್ಲಿ  
ಶ್ರೀ ಸುಂಕದಕಟ್ಟೆ ಮೇಳ 13-12-2020ಉಬೆಟ್ಟು ಶಾಲಾ ಬಳಿ – ಕೋಟಿ ಚೆನ್ನಯ್ಯ
ಶ್ರೀ ಮಾರಣಕಟ್ಟೆ ಮೇಳ ‘ಎ’13-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಬಿ’13-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಸಿ’13-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಪಾವಂಜೆ ಮೇಳ 13-12-2020ಶ್ರೀ ಕ್ಷೇತ್ರದಲ್ಲಿ – ಶ್ರೀ ದೇವಿ ಮಹಾತ್ಮೆ 
ಶ್ರೀ ಹಟ್ಟಿಯಂಗಡಿ ಮೇಳ13-12-2020ನಾಯ್ಕನಕಟ್ಟೆ – ದಿವ್ಯ ಸನ್ನಿಧಿ
ಕಮಲಶಿಲೆ ಮೇಳ ‘ಎ’13-12-2020ಕಮಲಶಿಲೆ ಶಾಲಾ ವಠಾರದಲ್ಲಿ 
ಕಮಲಶಿಲೆ ಮೇಳ ‘ಬಿ’13-12-2020ಹೊಸಂಗಡಿ 
ಶ್ರೀ ಬಪ್ಪನಾಡು ಮೇಳ13-12-2020ಬಂಗಾರ್ ಬಾಲೆ

ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ (12-12-2020)

ಮೇಳಇಂದು/ದಿನಾಂಕಸ್ಥಳ
ಶ್ರೀ ಧರ್ಮಸ್ಥಳ ಮೇಳ12-12-2020ಶ್ರೀ ಕ್ಷೇತ್ರದಲ್ಲಿ – ‘ರಂಭಾ ರೂಪರೇಖಾ’
ಕಟೀಲು ಒಂದನೇ ಮೇಳ12-12-2020ಉರ್ವಸ್ಟೋರ್ ಮೈದಾನ
ಕಟೀಲು ಎರಡನೇ ಮೇಳ 12-12-2020ಕರಿಯಂಗಳ, ವಯಾ ಪೊಳಲಿ
ಕಟೀಲು ಮೂರನೇ ಮೇಳ12-12-2020ಗುರುಪುರ ಕುಕ್ಕುದಕಟ್ಟೆ 
ಕಟೀಲು ನಾಲ್ಕನೇ ಮೇಳ 12-12-2020ಕೊಂಡೇಲಗುತ್ತು ಸೇವೆ, ವಯಾ ಕಟೀಲು
ಕಟೀಲು ಐದನೇ ಮೇಳ 12-12-2020ಕಟ್ಲ, ಸುರತ್ಕಲ್    
ಕಟೀಲು ಆರನೇ ಮೇಳ12-12-2020ಕೃಷ್ಣಾಪುರ, ಕಾಟಿಪಳ್ಳ 
ಮಂದಾರ್ತಿ ಒಂದನೇ ಮೇಳ 12-12-2020ಹೆಗ್ಗುಂಜೇ ದೊಡ್ಮನೆ, ಮಂದಾರ್ತಿ 
ಮಂದಾರ್ತಿ ಎರಡನೇ ಮೇಳ 12-12-2020ತೆಂಕಾಮನೆ, ನಡೂರು 
ಮಂದಾರ್ತಿ ಮೂರನೇ ಮೇಳ 12-12-2020ವಿಷ್ಣುಮೂರ್ತಿ ದೇವಸ್ಥಾನ, ಆರೂರು 
ಮಂದಾರ್ತಿ ನಾಲ್ಕನೇ ಮೇಳ 12-12-2020ಇರ್ಮಾಡಿಮನೆ, ಹಾವಂಜೆ 
ಮಂದಾರ್ತಿ ಐದನೇ ಮೇಳ 12-12-2020ಕೊಳ್ಕೆಬೈಲು, ಶಿರಿಯಾರ 
ಶ್ರೀ ಮಾರಣಕಟ್ಟೆ ಮೇಳ ‘ಎ’12-12-2020ಶ್ರೀ ಕ್ಷೇತ್ರದಲ್ಲಿ
ಶ್ರೀ ಮಾರಣಕಟ್ಟೆ ಮೇಳ ‘ಬಿ’12-12-2020ಶ್ರೀ ಕ್ಷೇತ್ರದಲ್ಲಿ
ಶ್ರೀ ಮಾರಣಕಟ್ಟೆ ಮೇಳ ‘ಸಿ’12-12-2020ಶ್ರೀ ಕ್ಷೇತ್ರದಲ್ಲಿ
ಶ್ರೀ ಪಾವಂಜೆ ಮೇಳ 12-12-2020ತೌಡುಗೋಳಿ – ‘ತ್ರಿಜನ್ಮ ಮೋಕ್ಷ’
ಶ್ರೀ ಹಟ್ಟಿಯಂಗಡಿ ಮೇಳ12-12-2020ಸಾಲಿಗ್ರಾಮ ಗೆಂಡಕೆರೆ
ಕಮಲಶಿಲೆ ಮೇಳ ‘ಎ’12-12-2020ಶೆಟ್ಟಿಪಾಲು 
ಕಮಲಶಿಲೆ ಮೇಳ ‘ಬಿ’12-12-2020ಬೇಳಂಜೆ, ಶಾನಡಿ 

ಜಾಹೀರಾತು

ದೈಹಿಕ ಹಾಗೂ ಮನೋವಿಕಾಸಕ್ಕಾಗಿ ಯಕ್ಷಗಾನ

ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವರ ಆಶ್ರಯದಲ್ಲಿ ದಿ-10/12/2020 ಗುರುವಾರದಂದು ನಾಟ್ಯ ಸಂಪದ (ರಿ.) ಸಂಸ್ಥೆಯ ಯಕ್ಷಗಾನ ತರಗತಿಗಳು ಪದ್ಮನಾಭ ನಗರದ ಶ್ರೀ ಪ್ರಸನ್ನಗಣಪತಿ ದೇವಾಲಯದಲ್ಲಿ ಉದ್ಘಾಟಿತಗೊಂಡವು.

ಗುರುಗಳಾದ ಶ್ರೀ ರವೀಶ ಹೆಗಡೆ ಸ್ವಾಗತಿಸಿದರು. ಅಕಾಡೆಮಿಯ ಸದಸ್ಯರಾದ ಶ್ರೀ ಶ್ರೀನಿವಾಸ ಸಾಸ್ತಾನ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸಭೆಯನ್ನುದ್ದೇಶಿಸಿ ಮಾತನಾಡಿ ಜೀವನದ ಉನ್ನತಿಗೆ ಕಲೆಯೆ ಆಧಾರ, ಹಾಗಾಗಿ ಯಾವುದಾದರು ಕಲೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕೆಂದು ನುಡಿದರು.

ಸೃಷ್ಠಿ ಕಲಾವಿದ್ಯಾಲಯದ ಅಧ್ಯಕ್ಷರಾದ ಶ್ರೀ ಛಾಯಾಪತಿ ಕಂಚೀಬೈಲ್‍ ಇವರು ಕಲಾಪೋಷಣೆ ನಮ್ಮ ನಿತ್ಯದ ಕಾಯಕವಾಗಬೇಕು, ಆಗ ಕಲೆಯೆ ನಮ್ಮನ್ನು ಪೋಷಿಸುತ್ತದೆ ಎಂಬ ಅಧ್ಯಕ್ಷ ನುಡಿಗಳೊಂದಿಗೆ ಹಾರೈಸಿದರು.

ಪೋಷಕರು ಮಕ್ಕಳ ಮಾನಸಿಕ ಹಾಗೂ ದೈಹಿಕ ದೃಢತೆಗೆ ಯಕ್ಷಗಾನ ಸಹಾಯಕಾರಿ ಎಂಬ ಮಾತುಗಳನ್ನಾಡಿದರು. ಶ್ರೀ ಕೃಷ್ಣಪ್ರಸಾದ್ ವಂದಿಸಿದರು. ಕುಮಾರಿ ಅನುಶ್ರೀ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳ ಹೆಜ್ಜೆಯ ಆರಂಭದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ರಂಗನಿಷ್ಠೆ, ಅರ್ಪಣಾಭಾವದ ಕಲಾವಿದ ದಿ| ಅಳಿಕೆ ಲಕ್ಷ್ಮಣ ಶೆಟ್ಟಿ 

‘ಅಳಿಕೆ’ ಎಂಬ ಶಬ್ದವು ಕೇಳಿದ ತಕ್ಷಣ ನೆನಪಾಗುವುದು ಅಲ್ಲಿನ ಶ್ರೀ ಸತ್ಯಸಾಯಿ ಲೋಕ ಸೇವಾ ಆಯೋಗದ ಶಿಕ್ಷಣ ಸಂಸ್ಥೆಗಳು. ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾದಾನವನ್ನು ಮಾಡಿ ಭವ್ಯ ಭಾರತದ ಭಾವೀ ಪ್ರಜೆಗಳನ್ನಾಗಿ ರೂಪಿಸುತ್ತಿರುವ ಸಂಸ್ಥೆಯಿದು. ನೆನಪಾಗುವುದು ಸಹಜ.

ಕಲಾಭಿಮಾನಿಗಳೆಂದಾದರೆ ಅಳಿಕೆ ಎಂದು ಹೇಳಿದಾಕ್ಷಣ ಅಳಿಕೆ ಶ್ರೀ ರಾಮಯ್ಯ ರೈಗಳನ್ನೂ ಅಳಿಕೆ ಲಕ್ಶ್ಮಣ ಶೆಟ್ಟರನ್ನೂ ನೆನಪಾಗದೆ ಇರದು. ಈರ್ವರೂ ಖ್ಯಾತ ಕಲಾವಿದರಾಗಿ ತಾವು ಜನಿಸಿದ ಮಣ್ಣಿಗೆ ಕೀರ್ತಿಯನ್ನು ತಂದು ಕೊಟ್ಟವರು. ಉಭಯರೂ ಕನ್ನಡ ಮತ್ತು ತುಳು ಪ್ರಸಂಗಗಳಲ್ಲಿ ಅಭಿನಯಿಸಿ ಶ್ರೇಷ್ಠ ಕಲಾವಿದರಾಗಿ ರಂಗಸ್ಥಳದಲ್ಲಿ ಮಿಂಚಿದವರು. ಸಾಧಕರಾಗಿದ್ದ ಇವರುಗಳು ಜನಮಾನಸದಲ್ಲಿ ಶಾಶ್ವತರಾಗಿ ಸದಾ ಉಳಿಯುತ್ತಾರೆ.

ಇವರು ಗುರು ಶಿಷ್ಯರೂ ಹೌದು. ಅಳಿಕೆ ಲಕ್ಷ್ಮಣ ಶೆಟ್ಟರು ತಮ್ಮ ನಿರ್ವಹಣೆಯಿಂದ ಗುರುಗಳಾದ ಅಳಿಕೆ ಶ್ರೀ ರಾಮಯ್ಯ ರೈಗಳ ಮೆಚ್ಚುಗೆಗೂ ಪಾತ್ರರಾಗಿದ್ದರು. ಅಲ್ಲದೆ ತಮ್ಮ ವೃತ್ತಿ ಜೀವನದುದ್ದಕ್ಕೂ ಅಸಂಖ್ಯ ಅಭಿಮಾನಿಗಳ ಪ್ರೀತಿಗೆ, ಮೆಚ್ಚುಗೆಗೆ ಪಾತ್ರರಾಗಿದ್ದರು. ಅಳಿಕೆ ಲಕ್ಷ್ಮಣ ಶೆಟ್ಟರದ್ದು ಕೊರತೆಗಳಿಲ್ಲದ ಪರಿಪೂರ್ಣ ವೇಷಗಾರಿಕೆ ಎಂದು ಹೇಳಿದರೆ ತಪ್ಪಾಗಲಾರದು. ಪ್ರಸಿದ್ಧಿಗಾಗಿ ಹಂಬಲಿಸದೆ ಸಿಕ್ಕ ಪಾತ್ರಗಳಿಗೆ ತನ್ನ ಪ್ರತಿಭಾ ವ್ಯಾಪಾರದಿಂದ ರೂಪ ಕೊಟ್ಟು ಅಭಿನಯಿಸಿ ಪ್ರಸಿದ್ಧಿಯನ್ನು ಪಡೆದುಕೊಂಡವರು.

ಶ್ರೀಯುತರ ಜೀವಿತಾವಧಿ 1947 – 2008. ಅಳಿಕೆ ಗ್ರಾಮದ ಪುಳಿಂಚಾರು ಎಂಬಲ್ಲಿ ಶ್ರೀ ದೂಮಣ್ಣ ಶೆಟ್ಟಿ ಮತ್ತು ಶ್ರೀಮತಿ ಪೂವಕ್ಕ ದಂಪತಿಗಳ ಮಗನಾಗಿ ಜನನ. ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ 8ನೇ ತರಗತಿ ವರೆಗೆ ಓದಿದ್ದರು. ಬಾಲಕನಾಗಿದ್ದಾಗಲೇ ಯಕ್ಷಗಾನಾಸಕ್ತಿ ಇತ್ತು. ಶ್ರೀ ಅಳಿಕೆ ರಾಮಯ್ಯ ರೈಗಳವರಿಂದ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಅಭ್ಯಸಿಸಿ ತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ಕುಂಡಾವು ಮೇಳಕ್ಕೆ ಸೇರಿದ್ದರು. ಬಾಲಗೋಪಾಲರಿಂದ ತೊಡಗಿ ಹಂತ ಹಂತವಾಗಿ ಬೆಳೆಯುತ್ತಾ ಸಾಗಿದರಿವರು.

ದಿ| ಕಲ್ಲಾಡಿ ಕೊರಗ ಶೆಟ್ಟಿ, ದಿ| ಕಲ್ಲಾಡಿ ವಿಠಲ ಶೆಟ್ಟಿ, ಮತ್ತು ಶ್ರೀ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ ಹೀಗೆ ಕಲ್ಲಾಡಿ ಮನೆತನದ ಮೂವರು ಯಜಮಾನರುಗಳ ನೇತೃತ್ವದ ಕರ್ನಾಟಕ ಯಕ್ಷಗಾನ ನಾಟಕ ಸಭಾ, ಇರಾ ಮೇಳದಲ್ಲಿ ಒಟ್ಟು ನಲುವತ್ತು ವರ್ಷಗಳ ಕಾಲ ತಿರುಗಾಟ ನಡೆಸಿದ್ದರು ಅಳಿಕೆ ಲಕ್ಷ್ಮಣ ಶೆಟ್ಟರು. ಖ್ಯಾತ ಕಲಾವಿದರಾದ ದಾಮೋದರ ಮಂಡೆಚ್ಚ, ದಿನೇಶ ಅಮ್ಮಣ್ಣಾಯರ ಮಾರ್ಗದರ್ಶನವೂ ದೊರಕಿತ್ತು. ಶ್ರೇಷ್ಠ ಕಲಾವಿದರಾದ ಶ್ರೀ ರಾಮದಾಸ ಸಾಮಗ, ಅಳಿಕೆ ರಾಮಯ್ಯ ರೈ, ಮಿಜಾರು ಅಣ್ಣಪ್ಪ, ಬೋಳಾರ ನಾರಾಯಣ ಶೆಟ್ಟಿ, ಪುಳಿಂಚ ರಾಮಯ್ಯ ರೈ, ಕೊಳ್ಯೂರು ರಾಮಚಂದ್ರ ರಾವ್, ಅರುವ ಕೊರಗಪ್ಪ ಶೆಟ್ಟಿ ಮೊದಲಾದವರ ಜೊತೆ ಕಲಾಸೇವೆಯನ್ನು ಮಾಡುವ ಭಾಗ್ಯವು ಒದಗಿ ಬಂದಿತ್ತು.

ಅಲ್ಲದೆ ಬೆಳ್ಳಾರೆ ವಿಶ್ವನಾಥ ರೈ, ಸಂಜಯ್ ಕುಮಾರ್, ತೊಡಿಕಾನ ವಿಶ್ವನಾಥ ಗೌಡ, ಮಾಡಾವು ಕೊರಗಪ್ಪ ರೈ, ಮುಂಡಾಜೆ ಬಾಲಕೃಷ್ಣ ಶೆಟ್ಟಿ ಮೊದಲಾದವರ ಒಡನಾಟವೂ ದೊರಕಿತ್ತು. ಪುರಾಣ, ಐತಿಹಾಸಿಕ, ಕನ್ನಡ ಹಾಗೂ ತುಳು ಪ್ರಸಂಗಗಳಲ್ಲಿ ಅಭಿನಯಿಸಿ ಹೆಸರು ಪಡೆದಿರುತ್ತಾರೆ. ಶ್ರೀರಾಮ, ಶ್ರೀಕೃಷ್ಣ, ಭೀಷ್ಮ, ದಶರಥ, ನಳ, ಧರ್ಮರಾಯ ಮೊದಲಾದ ಸಾತ್ವಿಕ ಪಾತ್ರಗಳಲ್ಲಿ ಅಳಿಕೆ ಲಕ್ಷ್ಮಣ ಶೆಟ್ಟರದು ಅಮೋಘ ನಿರ್ವಹಣೆ.

ಜಾಹೀರಾತು

ತುಳು ಪ್ರಸಂಗಗಳಲ್ಲಿ ಕಾಡಮಲ್ಲಿಗೆಯ ಶಾಂತಕುಮಾರ, ಕೋಟಿ ಚೆನ್ನಯ ಪ್ರಸಂಗದ ಪೆರುಮಳ ಬಲ್ಲಾಳ, ಪಟ್ಟದ ಪದ್ಮಲೆ ಪ್ರಸಂಗದ ಮಂತ್ರಿ ಪದ್ಮಣ್ಣ ಮೊದಲಾದ ಪಾತ್ರಗಳಲ್ಲೂ ಹೆಸರು ಗಳಿಸಿರುತ್ತಾರೆ. ಅನಾರೋಗ್ಯದಿಂದ ಮೇಳದ ತಿರುಗಾಟಕ್ಕೆ ಸ್ವಯಂ ನಿವೃತ್ತಿ ಘೋಷಿಸಿದ ಶ್ರೀ ಅಳಿಕೆ ಲಕ್ಷ್ಮಣ ಶೆಟ್ಟರು 2008 ಜುಲೈ 27ರಂದು ಅವ್ಯಕ್ತ ಲೋಕವನ್ನು ಸೇರಿಕೊಂಡಿದ್ದರು.

“ಅಳಿಕೆ ಲಕ್ಷ್ಮಣ ಶೆಟ್ಟರು ಸದಾ ಅಧ್ಯಯನ ಶೀಲರು. ಪೂರ್ವಸಿದ್ಧತೆ ಮಾಡಿಯೇ ರಂಗವೇರುತ್ತಿದ್ದರು. ಅತ್ಯುತ್ತಮವಾಗಿ ಪಾತ್ರಗಳನ್ನು ಚಿತ್ರಿಸುತ್ತಿದ್ದರು”. ಇದು ಅವರ ಒಡನಾಡಿಗಳೂ ಕಲಾಭಿಮಾನಿಗಳೂ ಹೇಳುವ ಮಾತುಗಳು. ಇವರ ಕಲಾಸೇವೆಯನ್ನು ಗುರುತಿಸಿ ಬಂಟರ ಸಂಘ ಮುಂಬಯಿ, ದಿ| ಕಲ್ಲಾಡಿ ಕೊರಗ ಶೆಟ್ಟಿ ಮತ್ತು ದಿ| ಕಲ್ಲಾಡಿ ವಿಠಲ ಶೆಟ್ಟಿ ಯಕ್ಷ ಪ್ರತಿಷ್ಠಾನ ಇರಾ, ಪಡ್ರೆ ಚಂದು ಸ್ಮಾರಕ ಸಮಿತಿ ಪೆರ್ಲ, ಕರ್ನಾಟಕ ಮೇಳದ ಅಭಿಮಾನೀ ಬಳಗ ಮುಂಬೈ, ಲಿಯೋ ಕ್ಲಬ್ ಪುತ್ತೂರು, ರಾಗಸುಧಾ ಸಂಸ್ಥೆ ಪುತ್ತೂರು, ಅಳಿಕೆ ಯುವಕ ಮಂಡಲ, ಗೆಳೆಯರ ಬಳಗ ಬೈರಿಕಟ್ಟೆ ಮೊದಲಾದ ಸಂಸ್ಥೆಗಳು ಗೌರವಿಸಿವೆ.

ವೃತ್ತಿ ಜೀವನದಲ್ಲೂ, ಸಂಸಾರಿಕವಾಗಿಯೂ ಅಳಿಕೆ ಶ್ರೀ ಲಕ್ಷ್ಮಣ ಶೆಟ್ಟರು ತೃಪ್ತರಿದ್ದರು. ಪತ್ನಿ ಶ್ರೀಮತಿ ಲಕ್ಷ್ಮಿ. ಅಳಿಕೆ ಲಕ್ಷ್ಮಣ ಶೆಟ್ಟಿ ದಂಪತಿಗಳಿಗೆ ಮೂವರು ಮಕ್ಕಳು. ಹಿರಿಯ ಪುತ್ರ ಶ್ರೀಧರ ಶೆಟ್ಟಿ ಅವರು ಮುಂಬಯಿಯಲ್ಲಿ ಉದ್ಯೋಗಿಯಾಗಿದ್ದರು. ಪುತ್ರಿ ಜಯಂತಿ ವಿವಾಹಿತೆ, ಗೃಹಣಿ. ಕಿರಿಯ ಪುತ್ರ ಶ್ರೀ ಹರೀಶ್ ಶೆಟ್ಟಿ ಅವರು ಕಳೆದ ಇಪ್ಪತ್ತೇಳು ವರ್ಷಗಳಿಂದ ಇತಿಹಾಸ ಪ್ರಸಿದ್ಧ ಸೀಮೆ ದೇವಸ್ಥಾನ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಕಚೇರಿಯಲ್ಲಿ ಉದ್ಯೋಗಿ. ಪ್ರಸ್ತುತ ಆಳಿಕೆಯಲ್ಲಿ ವಾಸವಾಗಿರುತ್ತಾರೆ.

ಸ್ವಾಭಿಮಾನೀ ಶಿಸ್ತಿನ ಕಲಾವಿದರಾಗಿದ್ದ ಶ್ರೀ ಅಳಿಕೆ ಲಕ್ಷ್ಮಣ ಶೆಟ್ಟರಿಗೆ ನುಡಿ ನಮನಗಳು. ಅವರ ಮನೆಯವರಿಗೆ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂಬ ಹಾರೈಕೆಗಳು.

ಲೇಖಕ: ರವಿಶಂಕರ್ ವಳಕ್ಕುಂಜ 

ಯಕ್ಷಗಾನದಲ್ಲಿ ಕರುಣಾರಸದ ಭಾವ ಪ್ರಕಟಣೆ – ಮಾನಸಿಕ ಒತ್ತಡಕ್ಕೆ ಹಾಸ್ಯ ಮಾತ್ರ ಔಷಧಿಯಲ್ಲ. ಮನಸಿನ ಕೊಳೆ ತೊಳೆದು ಹೋಗಲು ದುಃಖ ಸನ್ನಿವೇಶಗಳೂ ಪರಿಣಾಮಕಾರಿ 

ಹರಿಶ್ಚಂದ್ರನಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್ (ಫೋಟೋ: ನವೀನ ಕೃಷ್ಣ ಭಟ್ )

ಈಗಿನ ಸ್ಪರ್ಧಾತ್ಮಕ, ಒತ್ತಡದ ಜಗತ್ತಿನಿಂದ ಹೊರಬಂದು ಸ್ವಲ್ಪ ಮಟ್ಟಿಗಾದರೂ ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳಲು ಜನರು ಹಾಸ್ಯಭರಿತ ಕಲಾ ಪ್ರಾಕಾರಗಳ ಪ್ರದರ್ಶನಗಳನ್ನು ವೀಕ್ಷಿಸಿ ಆನಂದ, ನೆಮ್ಮದಿಯನ್ನು ಕಂಡುಕೊಳ್ಳಲು ಯತ್ನಿಸುವುದು ಕಂಡುಬರುತ್ತದೆ. ಆದರೆ ಜನರ ಈ ಮನೋಭಾವನೆಯನ್ನು ಹಲವಾರು ಕಲಾ ಪ್ರಕಾರಗಳು ನಗದೀಕರಿಸುತ್ತಿರುವುದು ಕಂಡುಬರುತ್ತದೆ. ಯಕ್ಷಗಾನವೂ ಇದಕ್ಕೆ ಹೊರತಾಗಿಲ್ಲ. ಕೀಳು ಮಟ್ಟದ ಹಾಸ್ಯದ ದೃಶ್ಯಗಳನ್ನು ಅಳವಡಿಸಿ ಜನರನ್ನು ನಗಿಸುವುದೇ ಇವರ ಉದ್ದೇಶವಾಗಿರುವಂತೆ ಕಂಡುಬರುತ್ತದೆ. ಆದರೆ ಮನಸ್ಸಿನ ಕೊಳೆ ತೊಳೆದುಹೋಗಲು ಕೇವಲ ಹಾಸ್ಯ ರಸದ ಆಸ್ವಾದನೆಯೊಂದೇ ಇರುವುದಲ್ಲ. ಕರುಣ ರಸವು ಮಾನವನ ಮನಸ್ಸಿನಲ್ಲಿ ಪರಿಣಾಮಕಾರಿ ಬದಲಾವಣೆಯನ್ನುಂಟುಮಾಡಬಹುದು. 

ವಿದ್ಯಾರ್ಥಿಯಾಗಿರುವಾಗ ಹೆಚ್ಚಿನವರೂ ಕೇಳಿರುವ, ಓದಿರುವ ಪದ್ಯ ‘ಗೋವಿನ ಹಾಡು’. ಈ ಹಾಡಿನಲ್ಲೇ ತಲ್ಲೀನತೆಯನ್ನು ಹೊಂದಿ ಅದೆಷ್ಟೋ ಜನರು ಎಷ್ಟೋ ಬಾರಿ ಕಣ್ಣೀರು ಹರಿಸಿರಬಹುದು ಎನ್ನುವುದನ್ನು ಊಹಿಸಲಸಾಧ್ಯ. ಹಾಡಿನಲ್ಲಿ ಅತ್ಯುತ್ತಮ ಸಂದೇಶವಿದೆ. ಶೋಕವೇ ಸ್ಥಾಯಿಭಾವವಾದ ಕರುಣೆಯ ಹೊನಲೇ ಇದೆ. ಎಲ್ಲರೂ ತಿಳಿಯಲೇಬೇಕಾದ ಜೀವನ ಸಂದೇಶಗಳಿವೆ.

ಅದಕ್ಕೇ ಈ ಹಾಡಿನ ಜನಪ್ರಿಯತೆ ಈಗಲೂ ಹೆಚ್ಚಾಗುತ್ತಲೇ ಇರುವುದು. ಈ ಹಾಡನ್ನು ಬಳಸಿಕೊಂಡವರೆಷ್ಟೋ ಮಂದಿ. ನಾಟಕಗಳಲ್ಲಿ, ನೃತ್ಯರೂಪಕಗಳಲ್ಲಿ, ಶಾಲಾ ಕಾಲೇಜುಗಳ ಮಕ್ಕಳ ನೃತ್ಯ ಕಾರ್ಯಕ್ರಮಗಳೇ ಮುಂತಾದ ಅಸಂಖ್ಯ ಕನ್ನಡಾಭಿಮಾನಿಗಳು ಒಂದಲ್ಲ ಒಂದು ರೀತಿಯಲ್ಲಿ ಈ ಹಾಡಿನಿಂದ ಪ್ರೇರಿತರಾದವರೇ.
ಯಕ್ಷಗಾನವೂ ಇದಕ್ಕೆ ಹೊರತಲ್ಲ. ಈ ಹಾಡಿನ ಕಥೆಯನ್ನು ಯಕ್ಷಗಾನದಲ್ಲೂ ಪ್ರಯೋಗ ಮಾಡಿದವರಿದ್ದಾರೆ. ಈ ಕಥೆಯ ಒಂದು ಯಕ್ಷಗಾನ ಧ್ವನಿಸುರುಳಿಯನ್ನೂ ಹೊರತರಲಾಗಿದೆ.


                       ಕೊನೆಗೆ ಸತ್ಯವೇ ಗೆಲ್ಲುವುದು ಎಂಬ ಸಂದೇಶದೊಂದಿಗೆ ಮುಕ್ತಾಯವಾಗುವ ಈ ಕಥೆಯಲ್ಲಿ ತಾಯಿ ಮಗುವಿನ ಮುಗ್ಧ ಪ್ರೇಮವಿದೆ. ತಬ್ಬಲಿಯನ್ನು ಓರಗೆಯವರು ಹೇಗೆ ನೋಡಿಕೊಳ್ಳಬೇಕೆಂಬ ಪಾಠವಿದೆ. ಅದೂ ಅಲ್ಲದೆ ನಮ್ಮ ಸಂಸ್ಕೃತಿಯ ಹಾಗೂ ಜೀವನದ ಅವಿಭಾಜ್ಯ ಅಂಗವಾದ ಗೋವಿನ ಪ್ರಾಮುಖ್ಯತೆಯನ್ನು ನಮಗೆ ತಿಳಿಹೇಳುವಂತಹ ಕಥೆ.

ಭೀಮ ದ್ರೌಪದಿಯರಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್ ಮತ್ತು ಶಶಿಕಾಂತ ಶೆಟ್ಟಿ ಕಾರ್ಕಳ (ಫೋಟೋ: ಮಂಜುನಾಥ್ ಬಾಯಿರಿ)


                       ನಮ್ಮ ಮನಸ್ಸನ್ನು ಇನ್ನಿಲ್ಲದಂತೆ ಕಾಡುವ ‘ಕರುಣ ರಸ’ದ ಬಗ್ಗೆ ಬರೆಯುವಾಗ ಈ ಕಥೆಯನ್ನು ಉಲ್ಲೇಖಿಸದೆ ಇರಲು ಸಾಧ್ಯವಿಲ್ಲವೆಂದೆನಿಸುತ್ತದೆ. ಅಳು ಅಥವಾ ಕಣ್ಣೀರು ಮನುಷ್ಯನ ಜೀವನದಲ್ಲಿ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಮಾನವನಿಗೆ ‘ನಗು’ ಹೇಗೆ ಶಕ್ತಿವರ್ಧಕ ಔಷಧಿಯೋ ಹಾಗೆಯೇ ಅಳು ಕೂಡಾ. ‘‘ಕಣ್ಣೀರು ಎಂಬುದು ಮನಸ್ಸಿನ ಕೊಳೆ, ಧೂಳು ತೆಗೆಯುವ ಸಾಧನ’’ ಎಂಬುದಾಗಿ ಜ್ಞಾನಿಗಳ ಮಾತು ಸತ್ಯವಾದದ್ದು.   ಈ ಎಲ್ಲಾ ಮಾತುಗಳ ಹಿನ್ನೆಲೆಯಲ್ಲಿ ಯಾವುದೇ ರಂಗಪ್ರದರ್ಶನಗಳಲ್ಲಿ ಕರುಣರಸವೆಂಬುದು ಅತೀವವಾದ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ನಾವೆಷ್ಟೋ ಬಾರಿ ಶ್ರೇಷ್ಠ ನಟರ ಕರುಣರಸದ ಅಭಿನಯಕ್ಕೆ ಕಣ್ಣೀರು ಸುರಿಸಿರಬಹುದು. (ಟಿ. ವಿ.ಯ ಎದುರು ಧಾರಾವಾಹಿ ನೋಡುತ್ತಾ ಕಣ್ಣೊರೆಸುವವರ ಸಹಿತ) ಸಿನಿಮಾ, ನಾಟಕಗಳನ್ನೊಳಗೊಂಡಂತೆ ರಂಗಕಲೆಗಳ ಅಭಿಮಾನಿಗಳಿಗೆ ಇವೆಲ್ಲವೂ ಅನುಭವ.

ಸಣ್ಣವನಿದ್ದಾಗ ಯಕ್ಷಗಾನ ನೋಡುತ್ತಾ ‘ನಳದಮಯಂತಿ’ ಪ್ರಸಂಗದಲ್ಲಿ ನಯನ ಕುಮಾರ್ ಅವರ ಬಾಹುಕ ಮತ್ತು ಕುಂಬಳೆ ಶ್ರೀಧರ ರಾವ್ ಅವರ ದಮಯಂತಿಯ ಸಂಭಾಷಣೆಯ ದೃಶ್ಯವನ್ನು ನೋಡುತ್ತಾ ಕಣ್ಣೀರು ಒರೆಸಿಕೊಳ್ಳುತ್ತಿದ್ದುದು ಈಗಲೂ ಹಚ್ಚಹಸಿರಾಗಿಯೇ ಇದೆ. ಪ್ರೇಕ್ಷಕರ ದೃಷ್ಟಿಕೋನದಿಂದ ಈ ರೀತಿಯಾದರೆ ನಟರ ಅಥವಾ ಕಲಾವಿದರ ನೆಲೆಯಲ್ಲಿ ನಿಂತು ನೋಡಿದರೆ, ಈ ಕರುಣರಸದ ಅಭಿನಯ ಹೇಗೆ? ಅನುಭವೀ ನಟರೊಬ್ಬರ ಪ್ರಕಾರ ಉಳಿದೆಲ್ಲಾ ರಸಗಳಿಂದ ಕರುಣರಸದ ಅಭಿನಯ ಕಷ್ಟವಂತೆ.
ಕಣ್ಣೀರಿನ ಅಭಿನಯ ಅಥವಾ ಅಳುವ ನಟನೆಯನ್ನು ಮಾಡಲು ಹಲವು ವಿಧಾನಗಳಿವೆಯಂತೆ. ಭಾವನಾತ್ಮಕ ಸನ್ನಿವೇಶಗಳಲ್ಲಿ ಕಣ್ಣೀರು ಸುರಿಸುವುದು ಹೇಗೆ ಎಂಬುದಕ್ಕೆ ಅನುಭವಿಗಳು ಕೆಲವು ವಿಧಾನಗಳನ್ನು ಉದಾಹರಣೆಯಾಗಿ ಕೊಡುತ್ತಾರೆ.


ಮೊದಲನೆಯದು ಆ ಪಾತ್ರದಲ್ಲಿ, ಸನ್ನಿವೇಶದಲ್ಲಿ ಸಂಪೂರ್ಣ ತನ್ಮಯತೆಯನ್ನು ಹೊಂದುವುದು. ಆ ಪಾತ್ರವೇ ತಾನಾಗುತ್ತೇನೋ ಎಂಬಂತೆ ಭಾವಿಸುವುದು. ಇದರಿಂದ ಮನಸ್ಸಿನಲ್ಲಿ ದುಃಖ, ನೋವುಗಳು ಮನೆಮಾಡಿ ಆ ಪಾತ್ರದಲ್ಲಿ ತಾನೇ ಒಳಗೊಳ್ಳುವ ಸಾಧ್ಯತೆಯಾದರೂ ಪ್ರತಿಬಾರಿ ಇದು ಕಷ್ಟಸಾಧ್ಯ.
                        ಎರಡನೆಯದು ನಟಿಸುವ ಸಂದರ್ಭದಲ್ಲಿ ನಿಮ್ಮ ಜೀವನದ ದುರ್ಘಟನೆಗಳ ಅಥವಾ ಅತಿ ನೋವಿನ ಸನ್ನಿವೇಶವನ್ನು ನೆನಪಿಸಿಕೊಳ್ಳುವುದು. ಅಥವಾ ನೀವು ನೋಡಿದ ನಿಮ್ಮ ಸಮೀಪದ ಬಂಧುಗಳ, ಸ್ನೇಹಿತರ ಜೀವನದಲ್ಲಿ ನಡೆದ ನೋವು, ದುರ್ಘಟನೆಗಳನ್ನು ಮೆಲುಕು ಹಾಕುವುದು.

ರಾಮ ಭಾರತರಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್ ಮತ್ತು ಸುಬ್ರಾಯ ಹೊಳ್ಳ ಕಾಸರಗೋಡು (ಫೋಟೋ: ಮಧುಸೂದನ ಅಲೆವೂರಾಯ) 


                    ಕರುಣಾಜನಕ, ಕಣ್ಣೀರನ್ನೂ ತರಿಸುವ ಕಥೆಗಳನ್ನು ನೆನಪಿಸಿಕೊಳ್ಳುವುದು, ದುಃಖದ ಹಾಡುಗಳನ್ನು ಕೇಳುವುದು ಇತ್ಯಾದಿಗಳು. ಇವುಗಳಲ್ಲದೆ ‘ನಗುವಂತೆ ನಟಿಸಿ ಕೃತಕ ವಸ್ತುಗಳ ಸಹಾಯದಿಂದ ಕಣ್ಣೀರು ಸುರಿಸಿದರೂ ‘ಅದು ಪ್ರೇಕ್ಷಕರಿಗೆ ಅಳುವಂತೆ ಭಾಸವಾಗುತ್ತದೆ. ಕಣ್ಣೀರು ತರಿಸುವ ಕೆಲವು ಸ್ಪ್ರೇಗಳ ಸಹಾಯ, ನೀರುಳ್ಳಿ ಮುಂತಾದುವುಗಳನ್ನು ಉಪಯೋಗಿಸಿಯೂ ಅಳುವ ದೃಶ್ಯಗಳಲ್ಲಿ ನಟಿಸಲಾಗುತ್ತದೆ. ಕೆಲವು ನಟರು ಈ ಸಂದರ್ಭದಲ್ಲಿ ಎಡೆಬಿಡದೆ ಆಕಳಿಸುವ ವಿಧಾನವನ್ನು ಅನುಸರಿಸುತ್ತಾರಂತೆ. ಈ ರೀತಿ ಮಾಡಿದಾಗ ಅವರ ಮುಖದಲ್ಲಿ ವ್ಯಥೆಯ ಭಾವ ಮೂಡುತ್ತದೆ ಎಂದು ಹೇಳುತ್ತಾರೆ.


                           ಈ ಮೇಲಿನ ಯಾವುದೇ ವಿಧಾನಗಳಿದ್ದರೂ ಯಕ್ಷಗಾನ ರಂಗದ ಕಲಾವಿದರಲ್ಲಿ ಇದಕ್ಕಿಂತ ಭಿನ್ನವಾದ ರೀತಿಯನ್ನು ಗಮನಿಸಬಹುದು. ತಾನೇ ಪಾತ್ರದಲ್ಲಿ ಲೀನವಾಗುವುದು ಅಥವಾ ಪಾತ್ರದಲ್ಲೇ ತಲ್ಲೀನತೆಯನ್ನು ಹೊಂದುವುದು ಮಾತ್ರವಲ್ಲದೆ ತನ್ನ ಸ್ವರಗಳ ಏರಿಳಿತ, ದುಃಖದ ಭಾವನೆಗಳ ಸಮ್ಮಿಶ್ರಣದ ಜೊತೆಗೆ ಮಾತುಗಳಿಂದಲೂ ಆರ್ದ್ರತೆ, ಆಂಗಿಕ ಅಭಿನಯಗಳಿಂದಲೂ ಕರುಣರಸವನ್ನು ಶ್ರೇಷ್ಠ ಮಟ್ಟದಲ್ಲಿ ಅಭಿವ್ಯಕ್ತಿಗೊಳಿಸುವ ಸಾಮರ್ಥ್ಯ ಹಲವಾರು ಯಕ್ಷಗಾನ ಕಲಾವಿದರಿಗಿದೆ. ಅಭಿಮನ್ಯು ಕಾಳಗದ ಸುಭದ್ರೆ, ಸತ್ಯಹರಿಶ್ಚಂದ್ರದ ಚಂದ್ರಮತಿ, ಲೋಹಿತಾಶ್ವ, ನಳದಮಯಂತಿಯ ಬಾಹುಕ, ದಮಯಂತಿ ಪಾತ್ರಗಳು, ಗುರುದಕ್ಷಿಣೆಯ ‘ಸಾಂದೀಪನಿ ಮಹರ್ಷಿ’, ಇಂತಹ ಕೆಲವು ಪಾತ್ರಗಳಲ್ಲಿ ಕರುಣರಸದ ಉತ್ತಮ ಅಭಿನಯ ಸಾಧ್ಯ. ಇವುಗಳೆಲ್ಲಾ ಕಣ್ಣೀರು ತರಿಸುವ ಪಾತ್ರಗಳು.


              ಇವುಗಳಲ್ಲದೆ ಕೃಷ್ಣಸಂಧಾನದ ಕರ್ಣನ ಮಾತುಗಳು, ಪಟ್ಟಾಭಿಷೇಕದ ದಶರಥನ ಪಾತ್ರ, ಸೀತಾಪರಿತ್ಯಾಗದ ದೃಶ್ಯಗಳು, ಇಂತಹ ಹಲವಾರು ಪಾತ್ರಗಳು ಕಲಾವಿದರ ಉತ್ತಮ ಅಭಿನಯದೊಂದಿಗೆ ಸಮ್ಮಿಳಿತವಾದರೆ ಪ್ರೇಕ್ಷಕರ ಹೃದಯದಲ್ಲಿ ಅಚ್ಚಳಿಯದ ಸ್ಥಾನವನ್ನು ಪಡೆಯುತ್ತದೆ.
                    ನಟನೆಯಲ್ಲಿ ಕಣ್ಣೀರು ಹರಿಸಲು ಎಷ್ಟೋ ವಿಧಾನಗಳಿರಬಹುದು. ಮಾನಸಿಕ ನೋವು, ದೈಹಿಕ ನೋವುಗಳನ್ನು ಅನುಭವಿಸುತ್ತಾ ಕಲಾವಿದರು ಕಣ್ಣೀರು ಹರಿಸಿರುವರೋ ಅಥವಾ ಇಲ್ಲವೇ ಎನ್ನುವುದು ಮುಖ್ಯವಲ್ಲ, ಬದಲಾಗಿ ಪ್ರೇಕ್ಷಕರನ್ನು ಕಣ್ಣೀರಿನ ಕಡಲಿನಲ್ಲಿ ತೇಲಾಡಿಸಿ ಅಳುವಂತೆ ಮಾಡುವುದೇ ಮುಖ್ಯವಾಗುತ್ತದೆ.

ಲೇಖನ: ಮನಮೋಹನ್ ವಿ.ಎಸ್ 

ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ (11-12-2020)

ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ (11-12-2020)
ಮೇಳಇಂದು/ದಿನಾಂಕಸ್ಥಳಪ್ರಸಂಗ
ಶ್ರೀ ಧರ್ಮಸ್ಥಳ ಮೇಳ11-12-2020ಶ್ರೀ ಕ್ಷೇತ್ರದಲ್ಲಿ 
ಕಟೀಲು ಒಂದನೇ ಮೇಳ11-12-2020ಕಟೀಲು ಕ್ಷೇತ್ರದಲ್ಲಿ  
ಕಟೀಲು ಎರಡನೇ ಮೇಳ 11-12-2020ಕದ್ರಿ ಕ್ಷೇತ್ರದ ರಾಜಾಂಗಣ  
ಕಟೀಲು ಮೂರನೇ ಮೇಳ11-12-2020ಕಟ್ಟದಪಡ್ಪು, ಬಡಕೊಟ್ಟು, ಬಂಟ್ವಾಳ 
ಕಟೀಲು ನಾಲ್ಕನೇ ಮೇಳ 11-12-2020ದುರ್ಗಾ ಕಾಂಪ್ಲೆಕ್ಸ್ ಬಳಿ, ಪಾವೂರು 
ಕಟೀಲು ಐದನೇ ಮೇಳ 11-12-2020ಕೊಡೆತ್ತೂರು ದೇವಸ್ಯಗುತ್ತು ಸೇವೆ    
ಕಟೀಲು ಆರನೇ ಮೇಳ11-12-2020ಸೂರಿಂಜೆ 
ಶ್ರೀ ಮಾರಣಕಟ್ಟೆ ಮೇಳ ‘ಎ’11-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಬಿ’11-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಸಿ’11-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಪಾವಂಜೆ ಮೇಳ 11-12-2020ಶ್ರೀ ಕ್ಷೇತ್ರದಲ್ಲಿಶಿವಪ್ರಭಾ ಪರಿಣಯ
ಶ್ರೀ ಹಟ್ಟಿಯಂಗಡಿ ಮೇಳ11-12-2020ಮಲ್ಯಾಡಿಯಲ್ಲಿ ದಿವ್ಯ ಸನ್ನಿಧಿ
ಕಮಲಶಿಲೆ ಮೇಳ ‘ಎ’11-12-2020ಕಾರೇಬೈಲುಎರಡೂ ಮೇಳದ ಕೂಡಾಟ
ಕಮಲಶಿಲೆ ಮೇಳ ‘ಬಿ’11-12-2020ಕಾರೇಬೈಲುಎರಡೂ ಮೇಳದ ಕೂಡಾಟ

ಗೋಡೆ ನಾರಾಯಣ ಹೆಗಡೆ ಇವರ ‘ಸಾಕ್ಷ್ಯಚಿತ್ರ ಬಿಡುಗಡೆ’, ‘ವಿಚಾರಸಂಕಿರಣ’ ‘ಪ್ರಾತ್ಯಕ್ಷಿಕೆ’ ಹಾಗೂ ‘ಯಕ್ಷಗಾನ ಕಾರ್ಯಕ್ರಮ’ – 12-12-2020ರಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ ಕಾರ್ಯಕ್ರಮ ವೈವಿಧ್ಯ  

ಕರ್ನಾಟಕ ಯಕ್ಷಗಾನ ಅಕಾಡೆಮಿಯು ದಿನಾಂಕ 12 ಡಿಸೆಂಬರ್ 2020ರಂದು ಗೋಡೆ ನಾರಾಯಣ ಹೆಗಡೆ ಇವರ ‘ಸಾಕ್ಷ್ಯಚಿತ್ರ ಬಿಡುಗಡೆ’, ‘ವಿಚಾರಸಂಕಿರಣ’, ‘ಪ್ರಾತ್ಯಕ್ಷಿಕೆ’ ಹಾಗೂ ‘ಯಕ್ಷಗಾನ ಕಾರ್ಯಕ್ರಮ’ವನ್ನು ಶ್ರೀ ಶಾರದಾಂಬ ದೇವಸ್ಥಾನ, ನಾಯ್ಕನಕೆರೆ, ಯಲ್ಲಾಪುರ  ಇಲ್ಲಿ ಹಮ್ಮಿಕೊಂಡಿದೆ.

ಈ ಕಾರ್ಯಕ್ರಮವು ಡಿಸೆಂಬರ್ 12 ಶನಿವಾರದಂದು ಬೆಳಿಗ್ಗೆ 10 ಘಂಟೆಗೆ ಆರಂಭವಾಗಲಿದೆ. ಸಚಿವರಾದ ಶ್ರೀ ಶಿವರಾಮ ಹೆಬ್ಬಾರರಿಂದ ಬೆಳಿಗ್ಗೆ 10 ಘಂಟೆಗೆ ಉದ್ಘಾಟನೆ ಮತ್ತು ಸಾಕ್ಷ್ಯಚಿತ್ರ ಬಿಡುಗಡೆ ಕಾರ್ಯಕ್ರಮ. 

ಈ ಕಾರ್ಯಕ್ರಮದ ನಂತರ ಶ್ರೀ ಗೋಡೆ ನಾರಾಯಣ ಹೆಗಡೆಯವರ ಬಗ್ಗೆ ವಿಚಾರ ಸಂಕಿರಣ ಮತ್ತು ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ. ಇದರ ನಂತರದ ಕಾರ್ಯಕ್ರಮವಾಗಿ ‘ಮಹಿಳಾ ಹಿಮ್ಮೇಳ’ದ  ಬಗ್ಗೆ ತೆಂಕು ಬಡಗಿನ ಪ್ರಾತ್ಯಕ್ಷಿಕೆ ನಡೆಯಲಿದೆ. ಈ ಕಾರ್ಯಕ್ರಮದ ಅಂಗವಾಗಿ ಕೊನೆಯಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.  

ಜಾಹೀರಾತು 

ಕೆರೆಗಳೂ ಕಥೆ ಹೇಳುತ್ತವೆ (ಸಣ್ಣಕಥೆ)

0


ಮಿತ ನಿಲುಗಡೆಯ ವೇಗದೂತ ಬಸ್ ವೇಗವಾಗಿ ಧಾವಿಸುತ್ತಿತ್ತು. ನಾನು ಕಿಟಿಕಿಯ ಪಕ್ಕ ಕುಳಿತಿದ್ದೆ. ಯಾವಾಗಲೂ ಪ್ರಯಾಣದ ಜೊತೆ ಪ್ರಕೃತಿಯ ಆಸ್ವಾದನೆಯೂ ನನಗಿಷ್ಟವಾದುದರಿಂದ ಕಿಟಿಕಿಯ ಪಕ್ಕದ ಆಸನವೇ ನನ್ನ ಮೊದಲ ಆಯ್ಕೆಯಾಗಿರುತ್ತಿತ್ತು. ಬಸ್ ಹೋಗುತ್ತಿದ್ದಂತೆ ರಸ್ತೆಯ ಬದಿಯಲ್ಲಿ ಕಾಣಸಿಗುತ್ತಿದ್ದ ಗುಡ್ಡ ಬೆಟ್ಟಗಳು , ಫಲವತ್ತಾದ ಕೃಷಿ ಭೂಮಿ, ತೋಟಗಳು ಅಪರೂಪಕ್ಕೆ ಮಿಂಚಿ ಮರೆಯಾಗುತ್ತಿದ್ದ ಕಾಡು ಪ್ರದೇಶ ಇವುಗಳನ್ನು ನೋಡುತ್ತಿರುವಾಗ ಒಂದು ಬಗೆಯ ಆತ್ಮತೃಪ್ತಿ ಮತ್ತು ಆನಂದ ಸಿಗುತ್ತಿತ್ತು. ಅದರಲ್ಲೂ ಹಚ್ಚ ಹಸುರಿನ ಕೃಷಿ ಭೂಮಿಯನ್ನು ನೋಡುವುದೇ ಮಹದಾನಂದ.

ಕೃಷಿ ಕ್ಷೇತ್ರದಲ್ಲಿ ಪರಿಣಿತನಾದುದರಿಂದ ಮತ್ತು ಓರ್ವ ಪ್ರಗತಿಪರ ಕೃಷಿಕನಾದುದರಿಂದ ತೋಟ, ಹೊಲಗದ್ದೆಗಳನ್ನು ಅವಲೋಕಿಸುವುದು ನನಗೆ ರೂಢಿಯಾಗಿತ್ತು. ಆ ದಿನ ಕೂಡ ಬಸ್ಸು ಸಾಗುತ್ತಿದ್ದಂತೆ ರಸ್ತೆ ಬದಿಯ ದೃಶ್ಯಗಳನ್ನೇ ಗಮನಿಸುತ್ತಿದ್ದೆ. ಆ ವರೆಗೆ ನಿರಾತಂಕವಾಗಿ ಪ್ರಯಾಣಿಸುತ್ತಿದ್ದ ನನಗೆ ಒಮ್ಮೆಲೇ ಕಿರಿಕಿರಿಯಾದ ಅನುಭವವಾಯಿತು. ನನ್ನ ಆಸನದ ಪಕ್ಕದಲ್ಲಿ ಕುಳಿತಿದ್ದವನ ತಲೆ ನನ್ನ ಭುಜದ ಮೇಲೆ ಕುಳಿತಿತ್ತು. ಬಹುಶ ಆ ಮಹಾನುಭಾವ ಮನೆಯಲ್ಲಿ ನಿದ್ದೆ ಮಾಡಿಲ್ಲವೇನೋ ಎಂದು ತೋರುತ್ತದೆ. ಇವರೂ ಒಂದು ತರಹದ ಭಯೋತ್ಪಾದಕರೇ. ಇನ್ನೊಬ್ಬರನ್ನು ನೆಮ್ಮದಿಯಾಗಿ ಪ್ರಯಾಣಿಸಲೂ ಬಿಡಲಾರರು. ಇವರಿಗೆ ಮಾತ್ರ ಗಾಢ ನಿದ್ದೆ. ಬೆಳದಂತೆ ಆಸರೆಯಾಗಲು ಇಂತಹವರಿಗೆ ಇನ್ನೊಬ್ಬರು ಬೇಕು. ಅವನನ್ನು ನಿರ್ದಯೆಯಿಂದ ಎಬ್ಬಿಸಿದೆ.


ನಾನು ಮತ್ತೆ ಕಿಟಿಕಿಯ ಹೊರಗೆ ದೃಷ್ಟಿ ಹಾಯಿಸಿದೆ. ಬಸ್ ಸ್ವಲ್ಪ ದೀರ್ಘವೇ ಅನ್ನಿಸಬಹುದಾದ ತಿರುವಿನಲ್ಲಿ ಸಂಚರಿಸುವಾಗ ಒಂದು ಅಡಿಕೆಯ ತೋಟ ನನ್ನನ್ನು ಬಹುವಾಗಿ ಆಕರ್ಷಿಸಿತು. ಬಹಳ ಸಮೃದ್ಧವಾದ ತೋಟ ಅದು. ನನ್ನ ತೋಟವೂ ಕೂಡಾ ಹೀಗೆಯೇ ಇದೆ ಎಂದು ಯೋಚಿಸಿದೆ. ತೋಟದ ಬದಿಯಲ್ಲಿ ರಸ್ತೆಗೆ ತಾಗಿಕೊಂಡಂತೆ ದೊಡ್ಡದಾದ ಕೆರೆಯೊಂದಿತ್ತು. ಈ ಕೆರೆಯನ್ನು ಮತ್ತು ತೋಟವನ್ನು ನಾನು ಆಗಾಗ ಗಮನಿಸುತ್ತಿದರೂ ಯಾಕೋ ಏನೋ ಇಂದು ಆ ಕೆರೆ ಮತ್ತು ತೋಟವನ್ನು ನೋಡುವುದರಲ್ಲಿ ಹೆಚ್ಚಿನ ಕುತೂಹಲವಿತ್ತು. ಇತ್ತೀಚಿಗೆ ದ್ವಿಚಕ್ರ ವಾಹನ ಸವಾರರಿಬ್ಬರೂ ವಾಹನ ಸಮೇತರಾಗಿ ಆ ಕೆರೆಯಲ್ಲಿ ಬಿದ್ದು ಮೃತಪಟ್ಟಿದ್ದರು. ಆದ್ದರಿಂದ ಬಸ್ಸಿನಲ್ಲಿದ್ದ ಎಲ್ಲರೂ ಆ ತಿರುವಿನಲ್ಲಿ ಎದ್ದು ನಿಂತು ಆ ಕೆರೆಯನ್ನು ಬಗ್ಗಿ ಬಗ್ಗಿ ನೋಡತೊಡಗಿದರು. ಬಹುಶಃ ಬಸ್ಸಿನ ಚಾಲಕ ಕೂಡ ವೇಗವನ್ನು ತಗ್ಗಿಸಿ ಅತ್ತ ದೃಷ್ಟಿ ಹಾಯಿಸಿದ. ಆ ಕೆರೆಯನ್ನು ನೋಡುತ್ತಿದ್ದಂತೆ ನನಗೆ ಯಾಕೋ ಮನಸ್ಸಿನಲ್ಲಿ ವಿಷಾದದ ಅಲೆಯೊಂದು ತೇಲಿ ಹೋದಂತಾಯಿತು. ಈ ಕೆರೆಯಲ್ಲಿ ಆಗಾಗ ಅವಘಡಗಳಾಗುತ್ತಿದ್ದರೂ ಕೆರೆಯನ್ನು ಇನ್ನೂ ಮುಚ್ಚಿರಲಿಲ್ಲ. ಬದಲಾಗಿ ಇತ್ತೀಚಿಗೆ ತಡೆಗೋಡೆಯನ್ನು ನಿರ್ಮಿಸಿದ್ದರು.


ಇಂತಹಾ ಬಾಯಿ ತೆರೆದ ಪ್ರತಿಯೊಂದು ಕೆರೆಗಳಿಗೂ ಒಂದೊಂದು ಕತೆಯಿರಬಹುದೇನೋ ಎಂದು ಅನಿಸಿತು. ನಮ್ಮ ತೋಟದ ಮಧ್ಯೆ ಇರುವ ನೀರು ತುಂಬಿ ತುಳುಕುತ್ತಿರುವ ‘ದೊಡ್ಡ ಕೆರೆ’ಯ ನೆನಪಾಯಿತು. ಕೂಡಲೇ ಘಟಿಸಬಾರದ ಘಟನೆಯೊಂದರ ಚಿತ್ರಣ ಮನದಲ್ಲಿ ಮೂಡಿ ಮನಸ್ಸು ಮುದುಡಿತು. ‘ಹಾಗಾಗಬಾರದಿತ್ತು ಎಂದು ನಾವು ಅಂದುಕೊಂಡರೂ ನಮ್ಮ ಮನುಷ್ಯ ಬಲವೊಂದನ್ನು ಮೀರಿದ ಶಕ್ತಿಯೊಂದರ ಸೆಳೆತಕ್ಕೆ ನಾವು ಒಳಗಾಗಲೇ ಬೇಕಲ್ಲ’ ಎಂದು ಸಮಾಧಾನಪಟ್ಟುಕೊಂಡೆ . ಕೆಲವೊಮ್ಮೆ ಅಗೋಚರ ಶಕ್ತಿಯೊಂದು ನಮ್ಮನ್ನು ಕಾಯುತ್ತದೆ ಎಂಬ ವಿಚಾರ ನಿಜವಿರಬಹುದೇನೋ ಎಂದು ಚಿಂತಿಸುತ್ತೇನೆ. ಇಲ್ಲದಿದ್ದರೆ ನಾವು ಬಾಲ್ಯದಲ್ಲಿ ಬಗ್ಗಿ ನೋಡಿದ ಬಾಯ್ದೆರೆದ, ಕಟ್ಟೆಗಳಿಲ್ಲದ ಬಾವಿಗಳೆಷ್ಟು ಇದ್ದುವು. ಆಗೆಲ್ಲಾ ಗುಡ್ಡಗಳಲ್ಲಿಯೂ ಬಾವಿಗಳಿತ್ತು. ಕೆಲವೊಂದು ಪಾಳು ಬಾವಿಗಳಾಗಿದ್ದರೂ ಅದಕ್ಕೆ ಯಾವುದೇ ತಡೆಗೋಡೆಗಳಿರಲಿಲ್ಲ.

ಪ್ರತಿಯೊಂದು ತೋಟಗಳಲ್ಲಿಯೂ ನೀರು ತುಂಬಿದ ಕೆರೆಗಳು ಈಗಲೂ ಇವೆ. ಚಿಕ್ಕಂದಿನಲ್ಲಿ ಹುಡುಗಾಟಿಕೆಯಿಂದ ಎಲ್ಲಾ ಕೆರೆ ಬಾವಿಗಳಿಗೂ ಬಗ್ಗಿ ನೋಡುವುದು ಅಭ್ಯಾಸವಾಗಿತ್ತು. ‘ಎಲ್ಲಿಯಾದರೂ ಕಾಲು ಜಾರಿ ಬಿದ್ದಿದ್ದರೆ’ ಎಂದು ಆಲೋಚಿಸಿದಾಗ ಈಗ ಮೈ ಜುಂ ಎನ್ನುತ್ತದೆ. ಆದರೆ ಆಗ ಏನೂ ಆಗಿರಲಿಲ್ಲ. ಈಗ ಮಾತ್ರ ನಮ್ಮ ಮಕ್ಕಳನ್ನು ಕೆರೆ ಬಾವಿಗಳ ಸಮೀಪಕ್ಕೆ ಹೋಗಲೂ ಬಿಡುವುದಿಲ್ಲ. ಆಗ ನಮಗಿಲ್ಲದ ಭಯ ಈಗ ಆವರಿಸುತ್ತದೆ. ನನಗೆ ಪ್ರಯಾಣದುದ್ದಕ್ಕೂ ಕೆರೆಗಳದ್ದೇ ನೆನಪು. ಮನೆಗೆ ತಲುಪಲು ಇನ್ನೂ ಒಂದು ಘಂಟೆಯ ಪ್ರಯಾಣವಿತ್ತು. ಯೋಚನೆಗಳ ಭಾರದಿಂದ ಮನಸ್ಸು ಬಾಗಿತ್ತು.


ಆ ಗ್ರಾಮದಲ್ಲಿ ಆಗ ದೊಡ್ಡ ತೋಟ ಎಂದರೆ ನಮ್ಮದೇ. ತೋಟದ ಮಧ್ಯೆ ದೊಡ್ಡದಾದ ಒಂದು ಕೆರೆಯಿತ್ತು. ದೊಡ್ಡದು ಎಂದರೆ ಅದು ಈಜುಕೊಳಕ್ಕಿಂತಲೂ ವಿಸ್ತಾರವಾದ ಕೆರೆಯಾಗಿತ್ತು. ತುಂಬು ನೀರಿನ
ಒರತೆಯಿರುವ ಕಾರಣದಿಂದ ನಮ್ಮ ಇಡಿಯ ತೋಟಕ್ಕಾಗುವಷ್ಟು ನೀರಿನ ಆಶ್ರಯ ಅದರಲ್ಲಿರುವ ವಿಶೇಷತೆ. ಮಳೆಗಾಲದಲ್ಲಿ ಕೆರೆಯಿಂದ ನೀರು ಉಕ್ಕಿ ಹೊರಹೋಗುತ್ತಿತ್ತು. ನಾನು ಮತ್ತು ಸುತ್ತುಮುತ್ತಲಿನ ಒಂದೆರಡು ಮನೆಯವರು ಬಿಡುವಿನ ಸಮಯದಲ್ಲಿ ಆ ಕೆರೆಯಲ್ಲಿ ಈಜಾಡುತ್ತಿದ್ದೆವು. ಹಳ್ಳಿಯವರೆಂದರೆ ಹಾಗೆಯೇ. ಈಜು ಮತ್ತು ಮರ ಹತ್ತುವ ಕಲೆ ರಕ್ತಗತವಾಗಿ ಬಂದಿರುತ್ತದೆ. ನಾನು ಮತ್ತು ನಮ್ಮ ನೆರೆಮನೆಯವನಾದ ರಮಣ ಇಬ್ಬರೂ ಈಜುವುದರಲ್ಲಿ ಎತ್ತಿದ ಕೈ. ಕೆರೆಯ ಈ ಬದಿಯಲ್ಲಿ ಮುಳುಗಿ ಆ ಬದಿಯಲ್ಲಿ ನೀರಿನಿಂದ ಏಳುತ್ತಿದ್ದೆವು. ಸಬ್ ಮೆರೀನ್ ಗಳಂತೆ ನೀರಿನ ಅಡಿಯಲ್ಲಿ ಸಂಚರಿಸುತ್ತಿದೆವು. ಆ ಕಾಲದಲ್ಲಿ ಎಷ್ಟೋ ಮುಳುಗುತ್ತಿದ್ದ ಜೀವಗಳನ್ನು ರಕ್ಷಿಸಿದ ಕೀರ್ತಿ ನಮ್ಮಿಬ್ಬರಿಗಿತ್ತು. ಊರಿಗೆ ಆಪತ್ಕಾಲಕ್ಕೆ ಒದಗಿದವರಾಗಿದ್ದರೂ ಕೊನೆಗೆ ಮಾತ್ರ ಒಂದು ವಿಷಾದ, ಒಂದು ಖೇದ ಶೇಷವಾಗಿಯೇ ಉಳಿಯಿತು.

ರಮಣ ಸಣ್ಣ ಮಟ್ಟಿನ ಕೃಷಿಕನಾದರೂ ಶ್ರೀಮಂತ, ಬಡವ ಎಂಬ ಭಿನ್ನತೆಯ ಅಂತರ ನಮ್ಮ ನಡುವೆ ಇರಲಿಲ್ಲ. ಒಂದೇ ರೀತಿಯ ವಿಚಾರಶೀಲತೆ, ಯೋಚನೆಗಳು ನಮ್ಮ ನಡುವೆ ಗಾಢವಾದ ಸ್ನೇಹವನ್ನು ಬೆಸೆದಿದ್ದುವು. ಚಿಕ್ಕಂದಿನಲ್ಲಿಯೇ ತಂದೆ ತಾಯಿಗಳನ್ನು ಕಳೆದುಕೊಂಡಿದ್ದ ರಮಣನಿಗೆ ಚೆಲುವೆಯಾದ ಹುಡುಗಿಯೊಬ್ಬಳೊಂದಿಗೆ ಮದುವೆಯಾಗಿತ್ತು. ರಮಣ ಮತ್ತು ಅವನ ಹೆಂಡತಿಗೆ ನಾನು ಮತ್ತು ನನ್ನ ಹೆಂಡತಿ ಅಣ್ಣ ಮತ್ತು ಅಕ್ಕನಾಗಿದ್ದೆವು. ಎರಡು ಮನೆಯವರೂ ಎಷ್ಟು ಆತ್ಮೀಯರಾಗಿದ್ದೆವು ಎಂದರೆ ನಾವಿಬ್ಬರೂ ಅಂದರೆ ನಾನು ಮತ್ತು ರಮಣ ಈಜಾಡುತ್ತಿದ್ದಾಗ ಅಕ್ಕ ತಂಗಿಯರಂತಿದ್ದ ಅವರಿಬ್ಬರೂ ಅದೇ ಕೆರೆಯ ಬದಿಯಲ್ಲಿ ಬಟ್ಟೆ ತೊಳೆಯುತ್ತಿದ್ದರು. ಆರ್ಥಿಕವಾಗಿ ಅನುಕೂಲತೆಯಿದ್ದರೂ ನಾವಾಗ ಬಟ್ಟೆ ತೊಳೆಯಲು ಕೆರೆಯ ಬದಿಯನ್ನೇ ಆಶ್ರಯಿಸುತ್ತಿದ್ದೆವು.

ನನ್ನ ಹೆಂಡತಿಗೆ ಈಜು ಬರುತ್ತಿತ್ತು. ಮದುವೆಯಾದ ಹೊಸತರಲ್ಲಿ ನನ್ನ ಒತ್ತಾಯಕ್ಕೆ ಕಲಿತಿದ್ದಳು. ಆದರೆ ರಮಣನ ಹೆಂಡತಿಗೆ ಈಜು ಬರುತ್ತಿರಲಿಲ್ಲ. ರಮಣ ಎಷ್ಟೋ ಬಾರಿ ಅವಳನ್ನು ನೀರಿಗೆಳೆದು ಈಜು ಕಲಿಸಲು ಪ್ರಯತ್ನಪಟ್ಟಿದ್ದ. ಆದರೆ ಹರೆಯದ ತರುಣಿಯಾಗಿದ್ದ ಅವಳು ತೆರೆದ ಪ್ರದೇಶದಲ್ಲಿ ನೀರಿಗಿಳಿಯಲು ನಾಚಿಕೊಳ್ಳುತ್ತಿದ್ದಳು. ‘ನೀವಿಬ್ಬರೇ ಇರುವಾಗ ಕಲಿಸಿಕೊಡು’ ಎಂದು ನಾನೇ ರಮಣನಿಗೆ ಸಲಹೆ ನೀಡಿದ್ದೆ.
ಆ ದಿನ ಶನಿವಾರವಾಗಿತ್ತು. ನನ್ನ ಹೆಂಡತಿ ತವರು ಮನೆಗೆ ಹೋಗಿದ್ದಳು. ಮನೆಯಲ್ಲಿ ನಾನೊಬ್ಬನೇ ಇದ್ದೆ. ಎಂದಿನಂತೆ ಅಂದು ಕೂಡ ರಮಣನ ಪತ್ನಿ ಬಟ್ಟೆ ತೊಳೆಯಲು ಬಂದಿದ್ದಳು. ರಮಣನೂ ಈಜಾಡುತ್ತಿರುವ ಶಬ್ದ ಕೇಳಿಸುತ್ತಿತ್ತು. ನಾನು ಅಂದು ತೋಟಕ್ಕೆ ಇಳಿದಿರಲಿಲ್ಲ. ಮನೆಯ ಅಂಗಳದಲ್ಲಿಯೇ ಏನೋ ಕೆಲಸವಿದ್ದರಿಂದ ಮತ್ತು ಅವರಿಬ್ಬರ ಸರಸ ಸಲ್ಲಾಪಕ್ಕೆ, ನೀರಾಟಕ್ಕೆ ಭಂಗ ತರಬಾರದೆಂಬ ಉದ್ದೇಶದಿಂದ ನಾನು ಮನೆಯಲ್ಲಿಯೇ ಉಳಿದುಕೊಂಡಿದ್ದೆ.

ಸ್ವಲ್ಪ ಹೊತ್ತಿನಲ್ಲಿ ಕೆರೆಯ ಭಾಗದಿಂದ ಏನೋ ಗಡಿಬಿಡಿ, ಸದ್ದು ಕೇಳಿಸಿತು. ಏನೆಂದು ನೋಡುತ್ತಾ ಇರುವಾಗ ತೋಟದಲ್ಲಿದ್ದ ಕೆಲಸದ ವ್ಯಕ್ತಿ ಬೊಬ್ಬೆ ಹೊಡೆಯುತ್ತಾ ನನ್ನನ್ನು ಕರೆದ. ‘ಬೇಗ ಬನ್ನಿ, ಅಕ್ಕ ನೀರಿಗೆ ಬಿದ್ದಿದ್ದಾರೆ’ ಎಂದು ಹೇಳಿದವನ ಮಾತಿಗೆ ಬೆಚ್ಚಿ ಬಿದ್ದು ಒಮ್ಮೆಲೇ ಕೆರೆಯತ್ತ ಧಾವಿಸಿದೆ. ಆಗಲೇ ಅಲ್ಲಿ ನಮ್ಮ ಎರಡು ಕೆಲಸದವರೂ ತಲುಪಿ ನೀರಿಗೆ ಹಾರಿದ್ದರು. ರಮಣನೂ ನೀರಿಗೆ ಹಾರಿದ್ದ. ಅತೀವ ಭಯಗೊಂಡಿದ್ದ ಆತನನ್ನು ನಾನು ಮೇಲಕ್ಕೆಳೆದು ಕುಳಿತುಕೊಳ್ಳಲು ಹೇಳಿ ನಾನು ನೀರಿಗೆ ಹಾರಿ ಮುಳುಗಿ ಹುಡುಕಾಡಿದೆ. ಅದರ ಮೊದಲು ಇನ್ನೊಬ್ಬ ಕೆಲಸದವನಲ್ಲಿ ಪಕ್ಕದ ಮನೆಯವರನ್ನೆಲ್ಲ ಕೂಗಲು ಹೇಳಿದೆ. ಇಷ್ಟೆಲ್ಲಾ ಕ್ಷಣಾರ್ಧದಲ್ಲಿ ನಡೆದು ಹೋಯಿತು. ಅವನು ಬೊಬ್ಬೆ ಹೊಡೆಯುತ್ತಾ ಆ ಕಡೆಗೆ ಹೋದ. ರಮಣನೂ ನನ್ನೊಡನೆ ಮತ್ತೊಮ್ಮೆ ನೀರಿಗೆ ಜಿಗಿದ. ಅಷ್ಟರಲ್ಲಿ ಅಕ್ಕ ಪಕ್ಕದವರು ಹತ್ತಾರು ಜನರು ಅಲ್ಲಿ ಸೇರಿದ್ದರು. ನುರಿತ ಈಜುಗಾರರೆಲ್ಲರೂ ಸೇರಿ ಹುಡುಕಾಡಿದೆವು.

ಸುಸ್ತಾಗಿ ಭಯಬೀತನಾಗಿದ್ದ ರಮಣನನ್ನು ಇಬ್ಬರು ಹಿಡಿದುಕೊಂಡು ಕುಳ್ಳಿರಿಸಿದರು. ಅರ್ಧ ಘಂಟೆ ಕಳೆದರೂ ರಮಣನ ಪತ್ನಿಯನ್ನೂ ನೀರಿನೊಳಗಿನಿಂದ ಹೊರ ತೆಗೆಯಲಾಗಲಿಲ್ಲ. ಎಲ್ಲರೂ ಸುಸ್ತಾಗಿದ್ದರು. ನಾನು ಕೊನೆಯ ಪ್ರಯತ್ನವೆಂಬಂತೆ ಸರ್ವ ಶಕ್ತಿಯನ್ನೂ ಉಪಯೋಗಿಸಿ ನೀರಿನ ಆಳಕ್ಕೆ ಹೋದೆ. ಅಲ್ಲಿ ಕೆಸರಿನಲ್ಲಿ ಹುದುಗಿದ್ದ ಅವಳ ದೇಹ ಕೈಗೆ ತಾಗಿತು. ಕೂಡಲೇ ಎಳೆದು ಮೇಲೆ ತಂದೆ. ಅಷ್ಟರಲ್ಲಿ ಮತ್ತಿಬ್ಬರು ಸಹಾಯ ಮಾಡಿದರು. ಎಲ್ಲರೂ ಸೇರಿ ದೇಹವನ್ನು ಮೇಲೆ ತಂದು ಮಲಗಿಸಿದೆವು. ಆದರೆ ಏನೂ ಪ್ರಯೋಜನವಾಗಲಿಲ್ಲ. ಅವಳ ಪ್ರಾಣ ಪಕ್ಷಿ ಹಾರಿಹೋಗಿತ್ತು. ಅರ್ಧ ಘಂಟೆಗೂ ಹೆಚ್ಚು ನೀರಿನೊಳಗೆ ಮುಳುಗಿದ್ದವಳು ಬದುಕಿರುವುದಕ್ಕೆ ಹೇಗೆ ಸಾಧ್ಯ? ಅವಳ ಮೃತ ದೇಹವನ್ನು ಕಂಡೊಡನೆ ರಮಣನ ರೋದನ, ಪ್ರತಿಕ್ರಿಯೆಗಳನ್ನು ನೋಡುವುದಕ್ಕೆ ಅಸಾಧ್ಯವಾಗಿತ್ತು.

ನಾನು ಕೂಡ ದಿಗ್ಭ್ರಾಂತನಾಗಿ ಒಂದರೆಕ್ಷಣ ಕೆರೆಯ ಬದಿಯಲ್ಲೇ ಬಿದ್ದಿದ್ದೆನಾದರೂ ನನ್ನನ್ನು ಕರ್ತವ್ಯ ಕೈ ಬೀಸಿ ಕರೆಯುತ್ತಿತ್ತು. ಧೃತಿಗುಂದಿ ಸೋತು ರೋದಿಸುತ್ತಿದ್ದ ಸ್ನೇಹಿತನನ್ನು ಸಂತೈಸಿ ಸಮಾಧಾನಪಡಿಸಬೇಕಾಗಿತ್ತು. ಎಲ್ಲವನ್ನೂ ಅಣ್ಣನ ಸ್ಥಾನದಲ್ಲಿ ನಿಂತು ಮಾಡಿದೆ. ನನ್ನ ಶಕ್ತಿಮೀರಿ ಎಲ್ಲವನ್ನೂ ಮಾಡಿದೆನಾದರೂ ಸಾಂಸಾರಿಕ ಜೀವನದಲ್ಲಿ ನೋವನ್ನುಂಡು ಜುಗುಪ್ಸೆಗೊಂಡಿದ್ದ ರಮಣನ ಮನೋಸ್ಥಿತಿಯನ್ನು ತಿಳಿಯಾಗಿಸಲು ನಾನು ಶಕ್ತನಾಗಲಿಲ್ಲ. ನಾವಿಬ್ಬರೂ ಈಜಿನಲ್ಲಿ ನಿಸ್ಸೀಮರಾಗಿದ್ದರೂ ನಮ್ಮದೇ ಮನೆಯವರನ್ನೇ ಕಾಪಾಡಿ ಗೆಲುವು ಸಾಧಿಸಲಾಗಲಿಲ್ಲ.


ರಮಣ ಮಂಕಾಗಿದ್ದ. ಏನೋ ಆಲೋಚನೆ, ಎತ್ತಲೋ ನೋಟ, ಅನಿಯಮಿತ ಆಹಾರ ಸೇವನೆ ಹೀಗೆ ಅವನ ಜೀವನ ಅತಂತ್ರತೆಯತ್ತ ಸಾಗುವ ಲಕ್ಷಣಗಳು ಕಂಡುಬಂದುವು. ನಾನು ಬಲವಂತದಿಂದ ಅವನನ್ನು ನಮ್ಮ ಮನೆಗೆ ಊಟ, ತಿಂಡಿಗೆ ಕರೆದುಕೊಂಡು ಬರುತ್ತಿದ್ದೆ. ಯಾವಾಗಲೂ ಸಮಾಧಾನದ, ಬುದ್ಧಿಯ ಮಾತುಗಳನ್ನು ಹೇಳುತ್ತಿದ್ದೆ. ಆದರೆ ರಮಣ ಅವನ ಮನದನ್ನೆಯ ನೆನಪಲ್ಲಿ ಕೊರಗಿ ಕೃಶವಾಗತೊಡಗಿದ್ದ. ಅವಳನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ. ಕೆಲವೊಮ್ಮೆ ಮುಖ ಮುಚ್ಚಿಕೊಂಡು ಹತಾಶೆಯಿಂದ ರೋಧಿಸುತ್ತಿದ್ದ.


ಇದಾದ ಕೆಲವು ದಿನಗಳ ನಂತರ ರಮಣ ತಾನಿದ್ದ ಮನೆ ತೋಟವನ್ನು ಸ್ವಲ್ಪ ಸಮಯ ನನ್ನಲ್ಲಿ ನೋಡಿಕೊಳ್ಳಲು ಹೇಳಿ ಮನಶಾಂತಿಗಾಗಿ ತಾನು ಮೊದಲು ವಾಸಿಸುತ್ತಿದ್ದ ಊರಿಗೆ ಹೋಗುತ್ತೇನೆಂದು ಹೇಳಿ ಹೋದವನು ಮತ್ತೆ ಸಂಪರ್ಕಕ್ಕೆ ಸಿಗಲಿಲ್ಲ. ಎಲ್ಲಿ ಹೋಗಿರಬಹುದು ಎಂದು ಚಿಂತಿಸಿದೆ. ಕೊನೆಗೆ ಆತನ ಹುಟ್ಟೂರಿನಲ್ಲೇ ವಿಚಾರಿಸುವುದು ಸೂಕ್ತ ಎಂದು ಆ ದಿಸೆಯಲ್ಲಿ ಪ್ರಯತ್ನಿಸಿದೆ. ಆಮೇಲೆ ಆ ಊರಿನಲ್ಲಿ ವಿಚಾರಿಸಿದಾಗ ಅವನು ಅಲ್ಲಿಗೆ ಹೋಗದೆ ಬೇರೆಲ್ಲೋ ತೆರಳಿದ್ದಾನೆ ಎಂದು ತಿಳಿಯಿತು. ಆದರೆ ಎಲ್ಲಿದ್ದಾನೆ ಎಂದು ಗೊತ್ತಾಗಲಿಲ್ಲ. ಅವನ ಇರವನ್ನು ತಿಳಿಯಲು ಬಹಳಷ್ಟು ಪ್ರಯತ್ನಿಸಿದ್ದೆ. ಪ್ರಯೋಜನವಾಗಲಿಲ್ಲ.

ಹೀಗೆ ಹಲವಾರು ಯೋಚನೆಗಳ ಗುಂಗಿನಲ್ಲಿದ್ದ ನನಗೆ ಇಳಿಯುವ ನಿಲ್ದಾಣ ಬಂದದ್ದು ಅರಿವಾಗಲಿಲ್ಲ. ಬಸ್ ನಿರ್ವಾಹಕ ಕೂಗಿದಾಗ ಬೇಗನೆ ಎದ್ದು ಇಳಿದೆ. ಇಳಿದು ತೋಟ ದಾಟಿ ಮನೆಯತ್ತ ಬರುತ್ತಿರುವಾಗ ಅಚ್ಚರಿಯೊಂದು ಕಾದಿತ್ತು. ದೊಡ್ಡ ಕೆರೆಯ ಸಮೀಪ ಯಾರೋ ಕಾವಿ ವಸ್ತ್ರಧಾರಿಯೊಬ್ಬರು ಕುಳಿತಂತೆ ಅನಿಸಿತು. ಯಾರೆಂದು ತಿಳಿಯಲು ಹತ್ತಿರಕ್ಕೆ ಹೋದೆ. ಗಡ್ಡ ಬಿಟ್ಟ ಸನ್ಯಾಸಿ ಯಾರೆಂದು ತಿಳಿಯಿತು. ಆಶ್ಚರ್ಯ ದಿಗ್ಭ್ರಮೆಗಳಾದರೂ ತೋರಿಸಿಕೊಳ್ಳಲಿಲ್ಲ . ರಮಣ ವಿರಾಗಿಯಾಗಿದ್ದ. ಅವನನ್ನು ಅಪ್ಪಿಕೊಂಡು ಕಣ್ಣೀರಿಟ್ಟು ಮನೆಗೆ ಕರೆದುಕೊಂಡು ಬಂದೆ. ಇಬ್ಬರೂ ಸಂತೋಷದಿಂದ ಮಾತನಾಡುತ್ತ ಹೊಟ್ಟೆ ತುಂಬಾ ಉಂಡೆವು. ಅವನ ಮನೆಯ ಬೀಗದ ಕೈಯನ್ನು ಮರಳಿ ಅವನಿಗಿತ್ತೆ.

ಮರುದಿನ ನಾನು ನನ್ನ ಎಂದಿನ ಕಾಯಕದಂತೆ ಬೆಳಿಗ್ಗೆ ಅಡಿಕೆ ಹೆಕ್ಕಲು ತೋಟಕ್ಕೆ ಹೋದೆ. ಅಡಿಕೆಯನ್ನು ಬುಟ್ಟಿಗಳಲ್ಲಿ ತುಂಬಿಸುತ್ತಾ ಆ ದೊಡ್ಡ ಕೆರೆಯ ಬಳಿ ಬಂದವನೇ ಬೆಚ್ಚಿಬಿದ್ದೆ. ಆ ಕೆರೆಯ ಮೆಟ್ಟಿಲುಗಳಲ್ಲಿ ರಮಣ ಕುಳಿತಿದ್ದ. ಕಾಲನ್ನು ನೀರಿನಲ್ಲಿ ಇಳಿಬಿಟ್ಟು ಕಣ್ಣುಮುಚ್ಚಿ ಏನನ್ನೋ ಧ್ಯಾನಿಸುತ್ತಿರುವಂತೆ ಕಾಣಿಸಿದ. ನಾನು ಆವಾಕ್ಕಾಗಿ ನಿಂತೆ. ನನ್ನ ಬರವು ಹಾಗೂ ಇರುವಿಕೆಯ ಸುಳಿವು ಒಂದಿನಿತೂ ಅವನಿಗೆ ಸಿಕ್ಕಿದ ಹಾಗೆ ತೋರಲಿಲ್ಲ. ನಾನು ಅವನ ತೀರಾ ಸಮೀಪಕ್ಕೆ ಬಂದು ಅವನ ಹೆಗಲ ಮೇಲೆ ಕೈ ಇಟ್ಟೆ. ಅಸ್ಪಷ್ಟವಾಗಿ ಅವನ ಹೆಂಡತಿಯ ಹೆಸರನ್ನು ಹೇಳುತ್ತಿದ್ದವನು ನನ್ನ ಸ್ಪರ್ಷದಿಂದ ಬೆಚ್ಚಿಬೀಳಲಿಲ್ಲ. ನಿಧಾನವಾಗಿ ತಿರುಗಿ ನನ್ನ ಮುಖವನ್ನು ದಿಟ್ಟಿಸಿದ. ಆ ನೋಟದಲ್ಲಿ ಒಂದು ರೀತಿಯ ನಿರ್ಲಿಪ್ತತೆಯಿತ್ತು.

ಅವನ ಸಮಾಧಿ ಸ್ಥಿತಿಗೆ ನಾನು ಭಂಗ ತಂದೆನೋ ಎಂಬ ಆತಂಕ ನನಗಾಯಿತು. ಆದರೆ ರಮಣ ಮಾತ್ರ ನನ್ನ ಮುಖವನ್ನೇ ನೋಡುತ್ತಿದ್ದ. ರಮಣ ಭಾವನೆಗಳ, ರಾಗ ದ್ವೇಷಗಳಿಂದ ದೂರ ಸರಿದು ವೈರಾಗ್ಯ ಸ್ಥಿತಿಯನ್ನು ತಲುಪಿದ್ದರೂ ಈಗ ಮಾತ್ರ ಯಾಕೋ ಏನೋ ಅವನ ಕಣ್ಣುಗಳಲ್ಲಿ ಕರುಣೆ ತುಂಬಿ ತುಳುಕಿದಂತೆ ಕಂಡಿತು. ಮೆಲ್ಲನೆ ಅವನನ್ನು ಎಬ್ಬಿಸಿದೆ. ರಮಣ ತನ್ನ ಪತ್ನಿ ಬಿದ್ದ ಜಾಗವನ್ನು ತೋರಿಸುತ್ತಾ ‘ಅವಳು ಈಗಲೂ ಅಲ್ಲಿಯೇ ಇದ್ದಾಳೆಯೇನೋ ಎಂದು ಅನಿಸುತ್ತದೆ. ಈ ನೀರನ್ನು ಮುಟ್ಟುವಾಗ ಅವಳು ಪಿಸುಗುಟ್ಟಿದಂತೆ ಭಾಸವಾಗುತ್ತದೆ.’ ಎಂದು ಹುಚ್ಚುಹುಚ್ಚಾಗಿ ಬಡಬಡಿಸತೊಡಗಿದ. ನಾನು ಅವನನ್ನು ಸಮಾಧಾನಪಡಿಸುತ್ತಾ ಬಲವಂತದಿಂದ ಅವನನ್ನು ಮನೆಗೆ ಕರೆದುಕೊಂಡು ಬಂದೆ.

ಅವನಿದ್ದಷ್ಟು ದಿನಗಳೂ ಯಾವಾಗಲೂ ಕೆರೆಯ ಬಳಿಯೇ ಕುಳಿತಿರುತ್ತಿದ್ದ. ಕೆರೆಯ ನೀರಲ್ಲಿ ಕಾಲಾಡಿಸುತ್ತ ಆನಂದವನ್ನು ಅನುಭವಿಸುವಂತೆ ಕಾಣುತ್ತಿದ್ದ. ಹುಚ್ಚು ಹುಚ್ಚಾಗಿ ಮಾತನಾಡುತಿದ್ದ. ಕೆರೆಯ ನೀರನ್ನು ಮುಟ್ಟಿದಾಗ ಅವಳೇ ಬಂದು ಪ್ರೀತಿಯಿಂದ ಮಾತನಾಡಿಸಿದಂತೆ ಆಗುತ್ತದೆ ಎಂದು ಕನವರಿಸುತ್ತಿದ್ದ. ಅವನ ಈ ರೀತಿಯ ಚರ್ಯೆಯನ್ನು ಕಂಡು ನನಗೆ ಭಯವಾಯಿತು. ರಮಣನ ಈ ರೀತಿಯ ವರ್ತನೆಗಳನ್ನೆಲ್ಲಾ ಕಂಡು ನನ್ನ ಮನಸ್ಸು ಬಹಳಷ್ಟು ದಿಗಿಲುಗೊಂಡಿತು. ಇವನು ಆಗಾಗ ಬಂದು ಈ ಕೆರೆಯ ಬದಿಯಲ್ಲಿ ಕುಳಿತು ಯೊಚಿಸುತ್ತಾ ತನ್ನನ್ನೇ ಮರೆತು ಅಪಾಯವನ್ನು ಆಹ್ವಾನಿಸಿಕೊಂಡರೆ? ಅಥವಾ ಪತ್ನಿಯ ಬಗ್ಗೆಯೇ ಯೋಚಿಸುತ್ತಾ ಇನ್ನೊಂದು ಆಕಸ್ಮಿಕ ಘಟನೆಗೆ ತನ್ನನ್ನು ಒಡ್ಡಿಕೊಂಡರೆ ಎಂಬ ಯೋಚನೆ ಬಂತು. ಈ ಒಂದು ಯೋಚನೆಯೇ ನನ್ನಲ್ಲಿ ನಡುಕವನ್ನು ಹುಟ್ಟಿಸಿತು.

ಪತ್ನಿಯ ಜೊತೆ ಇದನ್ನೇ ಹೇಳಿದಾಗ ಅವಳು ಈ ಕೆರೆಯನ್ನು ಮುಚ್ಚಿಸಿ ಬೇರೆ ಕೊಳವೆ ಬಾವಿಯನ್ನು ನಿರ್ಮಿಸೋಣ ಎಂದಳು. ಅವಳು ಕೊಟ್ಟ ಸಲಹೆಯಂತೆ ಈ ದೊಡ್ಡ ಕೆರೆಯನ್ನು ಮುಚ್ಚಿಸುವ ನಿರ್ಧಾರಕ್ಕೆ ಬಂದೆ. ಆದರೆ ಸ್ವಲ್ಪ ಹೊತ್ತು ಆಲೋಚಿಸಿದಾಗ ಈ ನಿರ್ಧಾರ ಎಷ್ಟು ಮೂರ್ಖತನದ್ದು ಎಂದು ಆಮೇಲೆ ಅರಿವಾಯಿತು. ನೀರಿನ ನಿಧಿಯಾಗಿದ್ದ ಈ ಕೆರೆ ನಮ್ಮ ತೋಟಕ್ಕೆ ಜೀವಾಳವಾಗಿತ್ತು. ಅದನ್ನು ಮುಚ್ಚಿಸಿದರೆ ನಮ್ಮ ಒಟ್ಟಾರೆ ಕೃಷಿಭೂಮಿಯ ಬೆಲೆ ಹಾಗೂ ಬೆಳೆ ಕುಸಿತವನ್ನು ಕಾಣಬಹುದು.

ಆಮೇಲೆ ನಾವಿಬ್ಬರೂ ನಮ್ಮ ನಿರ್ಧಾರವನ್ನು ಬದಲಾಯಿಸಿ ‘ಸಾಕಪ್ಪಾ ಈ ಕೆರೆಗಳ ಸಹವಾಸ’ ಎಂದು ತೀರ್ಮಾನವೊಂದಕ್ಕೆ ಬಂದೆವು. ನಮ್ಮ ಈ ನಿರ್ಧಾರಕ್ಕೆ ಪೂರಕವಾಗಿಯೋ ಎಂಬಂತೆ ಅದಕ್ಕೂ ಮೊದಲೇ ಒಂದೆರಡು ತಿಂಗಳಿನಲ್ಲಿಯೇ ರಮಣ ತನ್ನ ತೋಟ ಮತ್ತು ಮನೆಯನ್ನು ಮಾರಿ ‘ಆಗಾಗ ಬರುತ್ತೇನೆ’ ಎಂದು ನನ್ನಲ್ಲಿ ಹೇಳಿ ದೇಶ ಸಂಚಾರಕ್ಕೆ ಹೊರಟ. ಈಗಂತೂ ನನ್ನ ನಿರ್ಧಾರ ಗಟ್ಟಿಯಾಯಿತು. ಒಂದೆರಡು ದಿನಗಳಲ್ಲಿಯೇ ರಾಜ್ಯ ಹೆದ್ದಾರಿಯ ಪಕ್ಕದಲ್ಲಿದ್ದ ನನ್ನ ತೋಟದ ರಸ್ತೆ ಬದಿಯಲ್ಲಿ “ಜಾಗ ಮಾರಾಟಕ್ಕಿದೆ’‘ ಎಂಬ ನಾನು ಹಾಕಿದ ಫಲಕ ತೂಗಾಡತೊಡಗಿತು.

ಕಥೆ: ಮನಮೋಹನ್ ವಿ.ಎಸ್

ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ (10-12-2020)

ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ (10-12-2020)
ಮೇಳಇಂದು/ದಿನಾಂಕಸ್ಥಳಪ್ರಸಂಗ
ಶ್ರೀ ಧರ್ಮಸ್ಥಳ ಮೇಳ10-12-2020ಶ್ರೀ ಕ್ಷೇತ್ರದಲ್ಲಿ ಸುಲೋಚನ-ವಿರೋಚನ
ಕಟೀಲು ಒಂದನೇ ಮೇಳ10-12-2020ಶಾಂತಿ ಭವನ, ಬಜಪೆ ಬಸ್ ಸ್ಟಾಂಡ್ ಬಳಿ  
ಕಟೀಲು ಎರಡನೇ ಮೇಳ 10-12-2020ಶಿಬರೂರು 
ಕಟೀಲು ಮೂರನೇ ಮೇಳ10-12-2020ಕದ್ರಿ ಕ್ಷೇತ್ರದ ರಾಜಾಂಗಣ ಸಂಪೂರ್ಣ ರಾಮಾಯಣ
ಕಟೀಲು ನಾಲ್ಕನೇ ಮೇಳ 10-12-2020ಕೊಪ್ಪಲಮನೆ, ಪಂಜ, ಹಳೆಯಂಗಡಿ  
ಕಟೀಲು ಐದನೇ ಮೇಳ 10-12-2020ಕೆಮ್ರಾಲ್, ಕಿಲೆಂಜೂರು 
ಕಟೀಲು ಆರನೇ ಮೇಳ10-12-2020ಶ್ರೀ ಕ್ಷೇತ್ರ ಪೊಳಲಿ 
ಶ್ರೀ ಸುಂಕದಕಟ್ಟೆ ಮೇಳ 10-12-2020ಮರಕಡ, ಕೊರಂಟಾಡಿಶ್ರೀ ದೇವಿ ಮಹಾತ್ಮೆ
ಶ್ರೀ ಮಾರಣಕಟ್ಟೆ ಮೇಳ ‘ಎ’10-12-2020ಕೊಡೇರಿ ಗಂಗೆಬೈಲು  
ಶ್ರೀ ಮಾರಣಕಟ್ಟೆ ಮೇಳ ‘ಬಿ’10-12-2020ಆಲೂರು ಹಳ್ಳಿ, ಹಡಗಿನಮುಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಸಿ’10-12-2020ಆಲೂರು ತಾರಿಬೇರು, ಯಕ್ಷಿಬೆಟ್ಟು 
ಶ್ರೀ ಪಾವಂಜೆ ಮೇಳ 10-12-2020ಶ್ರೀಮಠ, ಬಾಳೆಕುದ್ರು, ಹಂಗಾರಕಟ್ಟೆ  ತ್ರಿಪುರ ಮಥನ
ಶ್ರೀ ಹಟ್ಟಿಯಂಗಡಿ ಮೇಳ10-12-2020ಶಿರೂರುದಿವ್ಯ ಸನ್ನಿಧಿ
ಕಮಲಶಿಲೆ ಮೇಳ ‘ಎ’10-12-2020ತೆಂಕಬೈಲು ಯಡಮೊಗೆ  ಗಿರಿಜಾ ಕಲ್ಯಾಣ 
ಕಮಲಶಿಲೆ ಮೇಳ ‘ಬಿ’10-12-2020ಕರಿಮನೆ ಶಾಲಾ ವಠಾರ