ಉಡುಪಿ ಯಕ್ಷಗಾನ ಕಲಾರಂಗವು ಸಹೃದಯಿ ಕಲಾ ಪೋಷಕ ಮಟ್ಟಿ ಮುರಲೀಧರ ರಾವ್ ಮತ್ತು ಅರ್ಥಧಾರಿ, ಲೇಖಕ ಪೆರ್ಲ ಕೃಷ್ಣ ಭಟ್ ನೆನಪಿನಲ್ಲಿ ನೀಡುವ ಯಕ್ಷಗಾನ ಕಲಾರಂಗ ಪ್ರಶಸ್ತಿಗೆ ಅನುಕ್ರಮವಾಗಿ ಹಿರಿಯ ಅರ್ಥಧಾರಿ, ಪ್ರವಚನಕಾರ, ನಿವೃತ್ತ ಉಪನ್ಯಾಸಕ ಸಾಂತೂರು ಸದಾಶಿವ ರಾವ್ ಹಾಗೂ ಅರ್ಥಧಾರಿ, ಲೇಖಕ, ನಿವೃತ್ತ ಉಪನ್ಯಾಸಕ ಎಂ. ಎನ್. ಹೆಗಡೆ ಯಲ್ಲಾಪುರ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್ 25, ಶುಕ್ರವಾರ ಸಂಜೆ 5.00 ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. ಪರ್ಯಾಯ ಶ್ರೀ ಅದಮಾರು ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಿ ಅನುಗ್ರಹಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿಯು ರೂ 20,000/- ನಗದು ಪುರಸ್ಕಾರ ಸಹಿತ ಪ್ರಶಸ್ತಿ ಪರಿಕರಗಳನ್ನು ಒಳಗೊಂಡಿರುತ್ತದೆ.
ಅಮೇರಿಕಾದ ಯಕ್ಷಗಾನ ಕಲಾವೃಂದದ ಸದಸ್ಯರು ಚಕ್ರಮೈದಾನ ಕೃಷ್ಣ ಪೂಜಾರಿ, ಬಾಲಕೃಷ್ಣ ನಾಯಕ್, ಶಂಭಯ್ಯ ಕಂಜರ್ಪಣೆ ಹಾಗೂ ಕಲ್ಲಗುಡ್ಡೆ ಲಕ್ಷ್ಮಣ ಈ ನಾಲ್ವರು ಕಲಾವಿದರಿಗೆ ತಲಾ 25,000/- ರೂಪಾಯಿ ಆರ್ಥಿಕ ನೆರವು ನೀಡಿರುತ್ತಾರೆ.
ಕರೋನದ ಸಂಕಷ್ಟದ ಕಾಲದಲ್ಲಿ ಯಕ್ಷಗಾನ ವೃತ್ತಿ ಕಲಾವಿದರ ಕಷ್ಟವನ್ನರಿತು ದೊಡ್ಡಮೊತ್ತದ ನೆರವು ನೀಡಿದ, ಅಮೇರಿಕಾದಲ್ಲಿದ್ದು ನಾಡಿನ ಕಲೆಯ ಉಳಿವು ಬೆಳವಣಿಗೆಗೆ ಸದಾ ಚಿಂತಿಸುತ್ತಾ, ಕ್ರಿಯಾಶೀಲರಾಗಿರುವ ಕಲಾವೃಂದದ ಮಿತ್ರರನ್ನು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಅಭಿನಂದಿಸಿದರು.
ಉಡುಪಿಯ ಯಕ್ಷಗಾನ ಕಲಾರಂಗ ಯಕ್ಷ ವಿದ್ವಾಂಸರಿಗೆ ನೀಡುವ ತಲ್ಲೂರು ಕನಕ-ಅಣ್ಣಯ್ಯ ಶೆಟ್ಟಿ ಸ್ಮರಣೆಯಲ್ಲಿ ನೀಡುವ ಯಕ್ಷಗಾನ ಕಲಾರಂಗ ಪ್ರಶಸ್ತಿಗೆ ಛಾಂದಸ, ಪ್ರಸಂಗಕರ್ತ, ಕಲಾವಿದ ಶ್ರೀ ಗಣೇಶ ಕೊಲೆಕಾಡಿ ಆಯ್ಕೆಯಾಗಿದ್ದಾರೆಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು ಡಿಸೆಂಬರ್ 25, ಶುಕ್ರವಾರ ಸಂಜೆ 5.00 ಗಂಟೆಗೆ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಡೆಯಲಿದೆ. ಪರ್ಯಾಯ ಶ್ರೀ ಅದಮಾರು ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಿ ಅನುಗ್ರಹಿಸಲಿದ್ದಾರೆ. ಪ್ರಶಸ್ತಿಯು ರೂಪಾಯಿ 40,000 ನಗದು ಪುರಸ್ಕಾರ ಸಹಿತ ಪ್ರಶಸ್ತಿ ಪರಿಕರಗಳನ್ನೊಳಗೊಂಡಿರುತ್ತದೆ.
ಇಂದು ಯಕ್ಷಗಾನಕ್ಕಾಗಿ, ಕಲೆಯ ಪಾರಂಪರಿಕತೆಯ ಉಳಿವಿಗಾಗಿ ಪ್ರಾಮಾಣಿಕ ಪ್ರಯತ್ನ, ನಿರ್ದೇಶನಗಳನ್ನು ಮಾಡುವ ಕೆಲವು ಮಹನೀಯರುಗಳ ಸಾಲಿನಲ್ಲಿ ಯಕ್ಷಗಾನದ ನಡೆದಾಡುವ ವಿಶ್ವಕೋಶ, ಡಾ. ಕೆ. ಎಂ. ರಾಘವ ನಂಬಿಯಾರ್ ಮುಂಚೂಣಿಯಲ್ಲಿ ನಿಲ್ಲುತ್ತಾರೆ.
ಡಾ. ಕೆ. ಎಂ. ರಾಘವ ನಂಬಿಯಾರ್ ನಾಡಿನ ಒಬ್ಬ ಶ್ರೇಷ್ಠ ಚಿಂತಕ, ಯಕ್ಷಗಾನದ ಸರ್ವಾಂಗಗಳನ್ನೂ ಕರತಲಾಮಲಕ ಮಾಡಿಕೊಂಡ ಕಲಾ ಸವ್ಯಸಾಚಿ, ಜೊತೆಗೆ ಶ್ರೇಷ್ಠ ವಿಮರ್ಶಕ, ಹಲವಾರು ಸಂಶೋಧನೆಗಳನ್ನು ನಡೆಸಿದ ಕಲಾವಿಜ್ಞಾನಿ, ಮೌಲ್ಯಯುತ ಗ್ರಂಥಗಳನ್ನು ನೀಡಿದ ಲೇಖಕ, ಅವರ ಸಾಧನೆಗಳನ್ನು ಹೇಳಹೊರಟರೆ ಯಾವುದನ್ನು ಹೇಳುವುದು, ಯಾವುದನ್ನು ಬಿಡುವುದು ಎಂಬ ಜಿಜ್ಞಾಸೆ. ಇಷ್ಟೆಲ್ಲಾ ಸಾಧನೆಗಳನ್ನು ಮಾಡಲು ಅವರಿಗೆ ಬಾಲ್ಯದ ಪರಿಸರ ಎರಡು ನೆಲೆಯಿಂದ ಪ್ರೇರಣೆ ಕೊಟ್ಟಿದೆ. ಒಂದನೆಯದಾಗಿ ಅವರ ತಂದೆಯವರು ಕಾರ್ಕಳ ತಾಲೂಕಿನ ಪ್ರಸಿದ್ಧ ವೈದ್ಯರು. ನೀರೇಬೈಲೂರಿನಲ್ಲಿ 30 ವರ್ಷ ಅನೇಕ ಗ್ರಾಮಗಳಿಗೆ ಅವರು ಮನೆ ವೈದ್ಯರಾಗಿ ಕೆಲಸ ಮಾಡಿದವರು. ಆಮೇಲೆ 1958ರಲ್ಲಿ ಅವರು ತಮ್ಮ ವೃತ್ತಿಯನ್ನು ಕಾರ್ಕಳ ಪೇಟೆಗೆ ವರ್ಗಾಯಿಸಿದರು. ಅವರ ಮನೆಯ ಪರಿಸರ ಹೇಗಿತ್ತು ಅಂದರೆ ಅದು ಒಂದು ಪೌರಾಣಿಕ ಆವರಣವನ್ನು ಹೊಂದಿತ್ತು. ಕುಟುಂಬದ ಹಿನ್ನೆಲೆಯಲ್ಲಿ ಪುರಾಣಗಳ ಸಂಬಂಧ ತುಂಬಾ ಇತ್ತು. ಪುರಾಣ ಕಾವ್ಯಗಳನ್ನು ಓದುವುದು, ಭಗವದ್ಗೀತೆಯ ಪಾರಾಯಣ ಮೊದಲಾದ ಪೌರಾಣಿಕ, ಆಧ್ಯಾತ್ಮಿಕ ಸಂಬಂಧ ಡಾ. ನಂಬಿಯಾರರಿಗೆ ಮನೆಯಿಂದಲೇ ಬಂದಿತ್ತು. ಜೊತೆಗೆ ತಂದೆಯವರು ಸ್ವತಃ ವೈದ್ಯರಾದುದರಿಂದ ಆಯುರ್ವೇದದ ಸಂಬಂಧವೂ ಇತ್ತು.
ಅದರಿಂದಲೂ ಮುಖ್ಯವಾಗಿ ಆ ಕಾಲದಲ್ಲಿ ಮನೋರಂಜನೆಯ ಮಾಧ್ಯಮವೂ ಯಕ್ಷಗಾನವೇ ಆಗಿತ್ತು. ಸಿನಿಮಾದ ಪರಿಚಯ ಆಗ ಅಷ್ಟಾಗಿ ಆಗಿರಲಿಲ್ಲ. ತಂದೆಯವರ ಜೊತೆಗೆ ಯಕ್ಷಗಾನ ಬಯಲಾಟಗಳಿಗೆ ಹೋಗುತ್ತಿದ್ದ ರಾಘವ ನಂಬಿಯಾರರಿಗೆ 8 ವರ್ಷಗಳಿದ್ದಾಗ ಮೂಲ್ಕಿ ಮೇಳದ ಆಟಗಳನ್ನು ನೋಡಿದ್ದ ನೆನಪು ಈಗಲೂ ಹಸಿರಾಗಿ ಕಣ್ಣಿಗೆ ಕಟ್ಟಿದಂತೆ ಆಗುತ್ತಿದೆಯಂತೆ. ಹೈಸ್ಕೂಲ್‍ಗೆ ಬಂದಾಗ ಆ ಅವಧಿಯಲ್ಲಿ ಅವರ ಶಾಲೆಯ ಹತ್ತಿರ ಕಾರ್ಕಳದ ವೆಂಕಟ್ರಮಣ ದೇವಸ್ಥಾನದ ಸಮೀಪ ಹವ್ಯಾಸೀ ಕಲಾವಿದರ ಸಂಘವಿತ್ತು. ಉತ್ತಮ ಕಲಾವಿದರಿದ್ದರು ಆ ಸಂಘದಲ್ಲಿ. ಹವ್ಯಾಸೀ ಕಲಾವಿದರಾಗಿದ್ದರೂ ಈಗಿನ ಕೆಲವು ವೃತ್ತಿಪರರಿಗಿಂತಲೂ ಉತ್ತಮ ಪ್ರದರ್ಶನ ನೀಡುತ್ತಿದ್ದರು. ತಾಳಮದ್ದಳೆಗಳನ್ನು ನೋಡುತ್ತಾ ಇರುವಾಗ ಒಮ್ಮೆ ಅವರ ಮಾಸ್ಟ್ರು ಶ್ರೀ ವಾಮನ ಪ್ರಭುಗಳು ಅರ್ಥ ಹೇಳುವಂತೆ ಪ್ರೇರೇಪಿಸಿದರು. ಅವರ ಪ್ರೋತ್ಸಾಹದಿಂದ ಆ ಸಂಘದ ಸದಸ್ಯನಾಗಿ ಸಕ್ರಿಯವಾಗಿ ಭಾಗವಹಿಸು ವುದಕ್ಕೆ ಪ್ರಾರಂಭಿಸಿದರು.
ಆಯುರ್ವೇದ ಕಲಿಯುವ ಉದ್ದೇಶದಿಂದ ಡಾ. ರಾಘವ ನಂಬಿಯಾರರು ಸಂಸ್ಕೃತವನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಆದರೆ ಕೆಲವು ಪ್ರತಿಕೂಲ ಕಾರಣಗಳಿಂದಾಗಿ ಅವರಿಗೆ ಆಯುರ್ವೇದ ಕಲಿಯಲಾಗಲಿಲ್ಲ. ಹೈಸ್ಕೂಲ್‍ನ ಅವಧಿಯಲ್ಲಿ ಯಕ್ಷಗಾನದ ಅರ್ಥಧಾರಿಯಾಗಿ ಅವರು ಗುರುತಿಸಿಕೊಂಡರು. ಕಾಲೇಜಿನಲ್ಲಿ ಪದವಿ ಶಿಕ್ಷಣ ಕಲಿಯುತ್ತಿರುವಾಗ ಕನ್ನಡ ಪಂಡಿತರು ಅವರಿಗೆ ನಾಟ್ಯಾಭ್ಯಾಸ ಮಾಡಿಸಿ ಮುದ್ದಣನ ‘ಕುಮಾರ ವಿಜಯ’ ಆಟ ಆಡಿಸಿದ್ದರಂತೆ. ಆ ಕಾಲದಲ್ಲಿ ಹರಿದಾಸರೆಲ್ಲಾ ಯಕ್ಷಗಾನ ರಂಗಕ್ಕೆ ಬಂದಿದ್ದುದ ರಿಂದ ಮಾತಿನ ಬಲದಿಂದ ರಂಗನಿರ್ಮಾಣ ಮಾಡುವ ಸೂಕ್ಷ್ಮತೆಯನ್ನು ತಿಳಿದುಕೊಳ್ಳಲು ಸಾಧ್ಯವಾಯಿತು ಎಂಬುದು ಡಾ. ನಂಬಿಯಾರರ ನಂಬಿಕೆ. ಇದೇ ಅವರ ‘ಕುಮಾರ ವಿಜಯ’ದ ತಂಡವನ್ನು ಮಂಗಳೂರು ಹಾಗೂ ಮೈಸೂರು ವಿಶ್ವವಿದ್ಯಾಲಯಗಳು ಕರೆಸಿಕೊಂಡು ಪ್ರದರ್ಶನಗಳನ್ನು ಏರ್ಪಡಿಸಿದ್ದರು. ಈ ತಂಡಕ್ಕೆ ಕೆಲವು ಪ್ರಶಸ್ತಿಗಳೂ ಬಂದುವು.
ಹೀಗೆ ತನ್ನ ಶೈಕ್ಷಣಿಕ ಕಾಲದಲ್ಲಿಯೇ ಯಕ್ಷಗಾನದಲ್ಲಿ ಪಳಗತೊಡಗಿದ್ದ ಡಾ. ರಾಘವ ನಂಬಿಯಾರರು ತನ್ನ ವಿದ್ಯಾರ್ಥಿ ದೆಸೆಯಲ್ಲಿಯೇ ಹಿಮ್ಮೇಳದಲ್ಲಿಯೂ ಕೈಚಳಕ ತೋರತೊಡಗಿದ್ದರು. ಭಾಗವತಿಕೆಯನ್ನೂ ಮಾಡು ತ್ತಿದ್ದರು. ಚೆಂಡೆ, ಮದ್ದಳೆಗಳನ್ನು ಬಾರಿಸುತ್ತಿದ್ದರು. ಅರ್ಥ ಹೇಳುವುದರ ಜೊತೆಗೆ, ಹಿಮ್ಮೇಳವನ್ನೂ ಕಲಿತುಕೊಂಡ ನಂಬಿಯಾರರಿಗೆ ದೊಡ್ಡ ಕಲಾವಿದರ ಒಡನಾಟ ದೊರೆಯಿತು. ಸಂಸ್ಕೃತ ಎಂ.ಎ. ಪದವೀಧರರಾದ ನಂಬಿಯಾರರು ಯಕ್ಷಗಾನಕ್ಕೆ ಅಮೂಲ್ಯ ಕೊಡುಗೆಯಾಗಿ ರಚಿಸಿದ ‘ಹಿಮ್ಮೇಳ’ ಎನ್ನುವ ಬೃಹತ್ ಸಂಶೋಧನಾ ಗ್ರಂಥಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ರಚಿಸಿದ ಪ್ರಸಂಗಗಳು : ಬಹು ಯಶಸ್ವೀ ಪ್ರಸಂಗಗಳಾದ ಚಕ್ರೇಶ್ವರ ಪರೀಕ್ಷಿತ, ಉತ್ತಮ ಸೌದಾಮಿನಿ, ವಜ್ರಧರ ವಿಲಾಸ, ಅಮರೇಂದ್ರ ಪದವಿಜಯಿ ಮೊದಲಾದವುಗಳು.
ಹಿಮ್ಮೇಳ’ ಸಂಶೋಧನಾ ಗ್ರಂಥ ಬಿಡುಗಡೆ ಸಮಾರಂಭ (ಎಡದಿಂದ ಬಲಕ್ಕೆ) ಡಾ. ಎಂ. ಪ್ರಭಾಕರ ಜೋಶಿ, ಹಿರಿಯಡಕ ಗೋಪಾಲ ರಾವ್, ಡಾ| ಬಸವರಾಜ ಮಲಿಶೆಟ್ಟಿ,ಕೆ. ಕೆ. ಪೈ, ಡಾ. ವಿವೇಕ್ ರೈ, ಕೆರೆಮನೆ ಶಂಭು ಹೆಗಡೆ, ಡಾ. ಯು. ಪಿ. ಉಪಾಧ್ಯಾಯ,ಇಡಗುಂಜಿ ಗಜಾನನ ಯಾಜಿ,ಡಾ. ಕೆ.ಎಂ.ರಾಘವ ನಂಬಿಯಾರ್, ಹಿಂದೆ ರಂಗಕರ್ಮಿ ಗುರುರಾಜ ಮಾರ್ಪಳ್ಳಿ
ಯಕ್ಷಗಾನ ಕಲಿಕೆ : ಗುರುಗಳಾಗಿ ಶ್ರೀ ವಾಮನ ಪ್ರಭು, ಬಿ. ಗೋಪಾಲಕೃಷ್ಣ ಕುರುಪ್, ಅಲ್ಲದೆ ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ನಿಡ್ಲೆ ನರಸಿಂಹ ಭಟ್, ದಿವಾಣ ಭೀಮ ಭಟ್, ಕೋಟೆಕಾರು ದೇರಣ್ಣ ರೈ ಇವರೆಲ್ಲರ ಒಡನಾಟದಿಂದಾಗಿ ಬಡಗಿನಲ್ಲಿ ನೀಲಾವರ ರಾಮಕೃಷ್ಣಯ್ಯ, ಕೋಟ ಮಹಾಬಲ ಕಾರಂತ, ಹಿರಿಯಡಕ ಗೋಪಾಲ ರಾವ್ ಇವರ ಮಾರ್ಗದರ್ಶನದಲ್ಲಿ ಅಭ್ಯಾಸ. ಹಾಗೂ ಬಲಿಪ ನಾರಾಯಣ ಭಾಗವತರು, ಅಗರಿ ಶ್ರೀನಿವಾಸ ಭಾಗವತರು, ನಾರಣಪ್ಪ ಉಪ್ಪೂರು, ಜಾನುವಾರುಕಟ್ಟೆ ಗೋಪಾಲಕೃಷ್ಣ ಕಾಮತ್, ಮರವಂತೆ ನರಸಿಂಹದಾಸ ಭಾಗವತರು ಇವರೆಲ್ಲರ ಹಾಡುಗಾರಿಕೆಯ ಪ್ರಭಾವ.
ಕಾರ್ಕಳ ಎಂಬ ತೆಂಕು-ಬಡಗುಗಳ ಸಂಗಮಸ್ಥಾನದಲ್ಲಿಯ ಪ್ರಯೋಜನವನ್ನು ಉಪಯೋಗಿಸಿಕೊಂಡ ಡಾ. ಕೆ. ಎಂ. ರಾಘವ ನಂಬಿಯಾರರು ತೆಂಕು-ಬಡಗುಗಳೆರಡರಲ್ಲೂ ಸಮಾನ ಆಸಕ್ತಿಯುಳ್ಳವರಾಗಿ ಸಂಶೋಧನೆ, ಕಲಾಕೃಷಿಯನ್ನು ಮಾಡಿದವರು. ಹಿರಿಯಡ್ಕ ಗೋಪಾಲ ರಾವ್, ನೀಲಾವರ ರಾಮಕೃಷ್ಣಯ್ಯ ಬಲಿಪರ ಹಾಗೂ ಅಗರಿ ಭಾಗವತರೇ ಮೊದಲಾದವರಿಂದ ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ಪ್ರಚೋದನೆಗೊಂಡವರು. ಅವರ ನಿಚ್ಚಳ ಪ್ರಭಾವ ಡಾ. ನಂಬಿಯಾರರ ಮೇಲಾದ ಪರಿಣಾಮವೋ ಏನೋ ಡಾ. ನಂಬಿಯಾರರು ಬಲಿಪ, ಅಗರಿಯವರಂತೆ ಹಾಡುತ್ತಾರೆ. ಡಾ. ರಾಘವ ನಂಬಿಯಾರರೇ ಹೇಳುವಂತೆ ತೆಂಕಿನಲ್ಲಿ ಅಗರಿ, ಬಲಿಪರಂತೆ ಹಾಡುವ ಅವರು ಬಡಗಿನಲ್ಲಿ ಜಾನುವಾರುಕಟ್ಟೆ, ಉಪ್ಪೂರರಿಂದ ಪ್ರಭಾವಿತರಾದವರು.
ರಚಿಸಿದ ಗ್ರಂಥಗಳು : ಹಿಮ್ಮೇಳ, ದೀವಟಿಗೆ, ರಂಗಸ್ಥಳದ ಬೆಳಕು, ದ್ರಾವಿಡ ನಾಡು-ನುಡಿ, ಮದ್ದಳೆಯ ಮಾಯಾಲೋಕ, ಯಾಜಿ ಭಾಗವತರು, ಚಿನ್ನದ ತಾಳ, ಮುಂದಲೆ, ವಿಲೋಕನ, ಆಶುವೈಖರಿ ಮೊದಲಾದುವುಗಳು. ಹಲವಾರು ಪ್ರಶಸ್ತಿ ಸನ್ಮಾನಗಳನ್ನು ಪಡೆದಿರುವ ಡಾ. ರಾಘವ ನಂಬಿಯಾರರೊಡನೆ ನಡೆಸಿದ ಸಣ್ಣ ಸಂದರ್ಶನ ಮತ್ತು ನಾವು ಅವರಿಗೆ ಕೇಳಿದ ಕೆಲವೇ ಪ್ರಶ್ನೆಗಳಿಗೆ ಅವರ ಉತ್ತರ. ಪ್ರಶ್ನೆ : ಬಾಲ್ಯದಲ್ಲಿಯೇ ಯಕ್ಷಗಾನದಿಂದ ಆಕರ್ಷಿತರಾಗಿದ್ದ ನಿಮ್ಮ ಬದುಕಿನಲ್ಲಿ ಸಂಪೂರ್ಣವಾಗಿ ಯಕ್ಷಗಾನದತ್ತ ಆಸಕ್ತಿ ಹೊಂದಲು ಪ್ರೇರೇಪಣೆ ಎಲ್ಲಿಂದ ದೊರೆಯಿತು? ಉತ್ತರ : ಮೊದಲಿಗೆ ನನ್ನ ಶಾಲಾದಿನಗಳಲ್ಲಿಯೇ ನನಗೆ ಯಕ್ಷಗಾನದ ಪ್ರಥಮ ಪಾಠವನ್ನು ಹೇಳಿದ ಶ್ರೀ ವಾಮನ ಪ್ರಭುಗಳು ಮೊದಲಾದವರಿಂದ ನನಗೆ ಇಲ್ಲಿ ಹೆಜ್ಜೆ ಊರಲು ಆಸಕ್ತಿಯುಂಟಾಯಿತು. ಹೈಸ್ಕೂಲ್ ದಿನಗಳಲ್ಲಿ ಡಾ. ಶಿವರಾಮ ಕಾರಂತರ ಯಕ್ಷಗಾನ ಬಯಲಾಟ ಪುಸ್ತಕವನ್ನು ಓದಿ ಆಕರ್ಷಿತರಾಗಿ ‘‘ಯಕ್ಷಗಾನ ಎಂದರೆ ಬರೀ ಟೈಮ್‍ಪಾಸ್ ಅಲ್ಲ, ಬಹಳ ಕಲಿಯಲಿಕ್ಕುಂಟು ಇದರಲ್ಲಿ’’ ಎಂಬ ಭಾವನೆ ಮೂಡಿತು. ಯಕ್ಷಗಾನವನ್ನು ಕಲಾದೃಷ್ಟಿಯಿಂದ ನೋಡಲು ಕಾರಂತರಿಂದ ಸಾಧ್ಯವಾಯಿತು. ಡಾ. ಶೇಣಿ ಗೋಪಾಲಕೃಷ್ಣ ಭಟ್ಟರು ನಮ್ಮನ್ನು ಬಹಳ ಆಕರ್ಷಿಸಿದ ಕಲಾವಿದರು. ಮಾತಿನಲ್ಲೇ ದೃಶ್ಯಗಳನ್ನು ಕಣ್ಣಮುಂದೆ ನಿಲ್ಲಿಸುವ ಮಹಾನ್ ಕಲಾವಿದ. ಆಮೇಲೆ ಅಳಿಕೆ ರಾಮಯ್ಯ ರೈಗಳ ಋತುಪರ್ಣ, ಬೋಳಾರರ ಕಂಸ, ಬೋಳಾರರ ಹಿರಣ್ಯಕಶಿಪು, ನಾಟಕರಂಗದ ರೀತಿಯಲ್ಲಿ ಮಾಡಿದರು. ಆದರೂ ಅದು ರಂಗದಲ್ಲಿ ಬಹಳ ಶಕ್ತಿಶಾಲಿಯಾಯಿತು. ಬರಿಯ ಯಕ್ಷಗಾನವಷ್ಟೇ ಅಲ್ಲ, ಇಡಿಯ ಕರ್ನಾಟಕದ ರಂಗಭೂಮಿಯನ್ನು ಹಾಗೂ ಸಿನಿಮಾವನ್ನು ನೋಡು ವಂತಹಾ ಆಸಕ್ತಿಯಿತ್ತು. ಆದರೆ ನಾನು ಯಕ್ಷಗಾನದ ಅರ್ಥಧಾರಿಯಾದ ಮೇಲೆ ಸಿನಿಮಾದ ಆಕರ್ಷಣೆಯೇ ಹೊರಟುಹೋಯ್ತು. ಸಿನಿಮಾದ ಹುಚ್ಚು ಬಿಡಿಸುವಷ್ಟು ಶಕ್ತಿ ಯಕ್ಷಗಾನಕ್ಕಿದೆ ಎಂದು ಇದರ ಅರ್ಥ. ಪದವಿ ಶಿಕ್ಷಣದ ಅನಂತರ ನಾನು 1971ರಲ್ಲಿ ‘ಉದಯವಾಣಿ’ಯಲ್ಲಿ ಉದ್ಯೋಗಿಯಾಗಿ ಸೇರಿಕೊಂಡೆ. ಮುಂದಕ್ಕೆ ಯಕ್ಷಗಾನದ ಸಂಶೋಧನಾ ಬರಹಗಳೊಂದಿಗೆ ಸಂಸ್ಕೃತದಲ್ಲಿ ಎಂ.ಎ. ಪದವಿ, ಯಕ್ಷಗಾನದಲ್ಲಿ ಡಾಕ್ಟರೇಟ್ ಪದವಿ ಎಲ್ಲಾ ಬಂದುವು.
ಪ್ರಶ್ನೆ : ಪರಂಪರೆಯ ಯಕ್ಷಗಾನದಿಂದ ಈಗಿನ ಕೆಲವು ಪ್ರದರ್ಶನಗಳು ಭಿನ್ನವಾದ ಹಾದಿಯನ್ನು ತುಳಿದಿದೆಯೆಂದು ನಿಮಗನ್ನಿಸುತ್ತಿದೆಯೇ? ಉತ್ತರ : ಯಕ್ಷಗಾನದ ಪರಂಪರೆಯೆಂಬುದು ಮುಖ್ಯವಾಗಿ ಯಕ್ಷಗಾನದ ವೇಷಗಳು, ವೇಷಗಳನ್ನು ಕುಣಿಸುವ ಹಾಡುಗಾರಿಕೆ, ಹಾಡುಗಾರಿಕೆಗೆ ಉತ್ತೇಜಕವಾಗಿ ಬಾರಿಸುವ ಹಿಮ್ಮೇಳ, ವಾಚಿಕಾಭಿನಯ ಈ ನಾಲ್ಕು ಕಂಬಗಳ ಮೇಲೆ ನಿಂತಿವೆ. ನಾನು ಯಕ್ಷಗಾನ ನೋಡಿದ ಮೊದಲನೇ ಆಟಕ್ಕೂ ಈಗಿನ ಕಾಲದ ಯಕ್ಷಗಾನಕ್ಕೂ ಬಹಳವಾದ ವ್ಯತ್ಯಾಸಗಳಿವೆ. ಆದರೆ ನಾನು ನೋಡಿದ ಮೊದಲನೇ ಆಟದ ಬಗ್ಗೆ ಹೇಳಬಾರದು. ಯಾಕೆಂದರೆ ಆಗಿನ ನಮ್ಮ ಯಕ್ಷಗಾನದ ಬಗೆಗಿನ ದೃಷ್ಟಿಕೋನಕ್ಕೂ ಈಗಿನ ದೃಷ್ಟಿಕೋನಕ್ಕೂ ವ್ಯತ್ಯಾಸವಿದೆ. ಆದರೆ ನೋಡಿದ ಮೊದಲನೇ ಆಟದ Impression, ಆ ಪ್ರದರ್ಶನ ನಮ್ಮ ಮೇಲೆ ಮಾಡಿದ ಪ್ರಭಾವ ಈಗಲೂ ಅಚ್ಚಳಿಯದೆ ಉಳಿದಿದೆ. ಉದಾಹರಣೆಗೆ ಕಾರ್ತವೀರ್ಯನು ಸಹಸ್ರಬಾಹುವಾಗಿನ ದೃಶ್ಯದ ಚಿತ್ರಣಗಳು ಅದ್ಭುತ, ಅಂತಹ ಚಿತ್ರಣಗಳು ಈಗೆಲ್ಲಿ? ಅಂತಹಾ ಅಮೋಘ ದೃಶ್ಯಾವಳಿ ಗಳೆಲ್ಲಾ ಮಾಯವಾಗಿ ಸಮತಲದಲ್ಲಿದ್ದ ರಂಗವು ಎತ್ತರದ ರಂಗಸ್ಥಳವಾಗಿ ಮಾರ್ಪಟ್ಟಿತು. ವೇದಿಕೆ ನಿರ್ಮಾಣವಾದ ನಂತರ ಹಿಮ್ಮೇಳಕ್ಕೆ ಮಂಚ ಅಥವಾ ಮೇಜು ಬಂತು. ಆಮೇಲೆ ಒಂದೊಂದಾಗಿ ಮಾರ್ಪಾಟಾಗಿ ಈಗ ಈ ಸ್ಥಿತಿಗೆ ಬಂದು ಮುಟ್ಟಿದ್ದೇವೆ. ದೀವಟಿಗೆ ಬೆಳಕಿನ ಆಟದ ವೀಕ್ಷಣೆ ನಿಯಮಿತ ಸಂಖ್ಯೆಯ ಜನರಿಗೆ ಮಾತ್ರ ಸಾಧ್ಯವಾದ್ದರಿಂದಲೋ ಏನೋ ಪೆಟ್ರೋಮ್ಯಾಕ್ಸ್ ಬಂತು. ಇನ್ನೂ ಮುಂದುವರಿದು ಮೈಕ್, ವಿದ್ಯುಚ್ಛಕ್ತಿಯ ವ್ಯವಸ್ಥೆ ಆಯಿತು. ಹೀಗೆ ದಶಕ ದಿಂದ ದಶಕಕ್ಕೆ ಈ ಕಲೆ ವಾಣಿಜ್ಯದ ದೃಷ್ಟಿಯಿಂದಲೂ ಬದಲಾವಣೆಗಳನ್ನು ಕಾಣುತ್ತಾ ಹೋಯಿತು. ಈ ಬದಲಾವಣೆಗಳು ವೇಷ ಭೂಷಣಗಳಲ್ಲಿಯೂ ನೃತ್ಯ, ಹಾಡುಗಾರಿಕೆಯಲ್ಲಿಯೂ ಆಯಿತು. ಪ್ರಶ್ನೆ : ನಾಟಕೀಯ ವೇಷಗಳನ್ನು ನಾವು ಒಪ್ಪಿಕೊಂಡು ಆಗಿಹೋಗಿದೆ. ನಾಟಕೀಯ ವೇಷಗಳು ಯಕ್ಷಗಾನಕ್ಕೆ ಅನಿವಾರ್ಯವೇ? ಉತ್ತರ : ನಾಟಕೀಯ ವೇಷ ಯಕ್ಷಗಾನಕ್ಕೆ ಅನಿವಾರ್ಯವೇನಲ್ಲ. ಯಕ್ಷಗಾನದ ಪ್ರತಿಯೊಂದು ವೇಷಕ್ಕೂ ನಿಗದಿತ ರೂಪ, ವೇಷಭೂಷಣಗಳಿವೆ. ಇದನ್ನು ಅರ್ಥಮಾಡಿಕೊಳ್ಳಲಿಲ್ಲ ಎಂದರೆ ಅದಕ್ಕೆ ಬೇರೊಬ್ಬರು ಜವಾಬ್ದಾರರಾಗುವುದಿಲ್ಲ. ಕಲಿಯುವುದು ಧರ್ಮ. ‘ಚಂದ’ ಆಗುವುದಿಲ್ಲ ಎಂದು ಹೇಳುತ್ತಾರೆ. ಈ ‘ಚಂದ’ ಎಂಬ ಶಬ್ದದ ವ್ಯಾಖ್ಯಾನವೇ ಇಲ್ಲಿ ತಪ್ಪು. ‘ಚಂದ’ ಎನ್ನುವುದು ಕಲೆಯ ಮಟ್ಟಿಗೆ ಹೇಳುವುದಾದರೆ ಮಾಡುವ ಕೆಲಸದ ಮೂಲಕ ನಿರ್ಣಯವಾಗುತ್ತದೆ. ಹಿರಣ್ಯಕಶಿಪುವಿನ ಕೇಸರಿತಟ್ಟಿಯ ವೇಷವು, ಬೀರುವ ಘನತೆ, ಗಾಂಭೀರ್ಯದ ಪ್ರಭಾವ ಅದೇ ಹಿರಣ್ಯಕಶಿಪುವಿನ ನಾಟಕದ ವೇಷ ಬೀರಬಲ್ಲುದೆ? ಯಕ್ಷಗಾನದ ಹಿರಣ್ಯಕಶಿಪು ಕೇಸರಿತಟ್ಟಿಯಲ್ಲಿಯೇ ಬರಬೇಕು. ಬಹಳ ಮುಖ್ಯವಾದ ಅಂಶವೇನೆಂದರೆ ನಾಟಕೀಯ ವೇಷಗಳೆಂದರೆ ಹೆಚ್ಚು ಹೆಚ್ಚು ಸಹಜ ರೂಪಕ್ಕೆ ತಂದ ಬಿಂಬಗಳು. ಸ್ವಲ್ಪ ಹಿಂದಿನ ಕಾಲದ ವಾಸ್ತವಿಕ ಬಿಂಬಗಳು. ಯಕ್ಷಗಾನದ್ದು ವಾಸ್ತವಿಕ ಬಿಂಬ ಅಲ್ಲ. ಸಾಂಕೇತಿಕ ಬಿಂಬ. ಒಂದೊಂದು ವೇಷದ ಪರಿಕರಗಳೂ, ಬಣ್ಣಗಳೂ, ಒಂದೊಂದು ಸಂಕೇತವನ್ನು ಸೂಚಿಸುತ್ತದೆ. ಯಕ್ಷಗಾನಕ್ಕೆ ಅದರದ್ದೇ ಆದ ಪಾತ್ರೋಚಿತ ಮೀಸೆ, ಗಡ್ಡಗಳಿವೆ. ಚಂದ ಕಾಣಬೇಕು ಅಂತ ತಮಗೆ ಬೇಕಾದಂತಹಾ ಮೀಸೆಗಳನ್ನು ಕಟ್ಟಿಕೊಳ್ಳುವುದಲ್ಲ.
ಪ್ರಶ್ನೆ : ಯಕ್ಷಗಾನದ ಹಾಡುಗಳಲ್ಲಿ ಛಂದೋಬದ್ಧತೆ, ಸಾಹಿತ್ಯ ಬಹು ಮುಖ್ಯವೆ? ಉತ್ತರ : ಪದ್ಯದಲ್ಲಿ ಹೇಗುಂಟೋ ಅಲ್ಲಿ ಇದ್ದ ಹಾಗೆ ಹೇಳಬೇಕು. ಪದ್ಯರಚನೆ ಮಾಡಿದ್ದು ತಾಳಕ್ಕೆ ಸರಿಯಾಗಿ. ಪದ್ಯದಲ್ಲಿ ಗೆರೆಹಾಕಿದ್ದು ತಾಳದ ಆವರ್ತನಕ್ಕೆ ಸರಿಯಾಗಿ. ತಾಳದ ಆವರ್ತನಕ್ಕೆ ಸರಿಯಾಗಿ ಏನೂ ತುಂಡಾಗದೆ ಹೇಳಲಿಕ್ಕೆ ಆಗುತ್ತದೆ. ಸ್ವಂತದ ರಾಗ ಸೇರಿಸಿ ಹೇಳಿ ಪದ್ಯದ ಶಬ್ದಗಳನ್ನು ತುಂಡು ಮಾಡುವುದೋ, ವ್ಯತ್ಯಾಸ ಮಾಡಿಯೋ ಹೇಳುವುದು ಸರಿಯಲ್ಲ. ಆದರೆ ಶಬ್ದಗಳ ಪ್ರತ್ಯಯವನ್ನು ಇಟ್ಟುಕೊಂಡು ತಾಳಕ್ಕೆ, ಆವರ್ತನಕ್ಕೆ ಅಪಚಾರ ಆಗದೆ ಹೇಳುವುದಾದರೆ ಬಿಡಿಸಿ ಹೇಳಬಹುದು. ವಿಭಕ್ತಿ ಪ್ರತ್ಯಯವನ್ನು ಬಿಡಿಸಿ ಹೇಳಬಾರದು. ಅಗರಿ ಭಾಗವತರ ಪದ್ಯದಲ್ಲಿ ಎಷ್ಟು ಸ್ಪಷ್ಟತೆಯಿತ್ತು ಅಂದರೆ ಅವರ ಪದ್ಯವನ್ನು ಕೇಳಿಯೇ ಕಲಿಯುವಷ್ಟು ಸ್ಪಷ್ಟವಾಗಿರುತ್ತಿತ್ತು. ಪ್ರಶ್ನೆ : ಯಕ್ಷಗಾನ ಕಲಿಯುವ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಶೈಕ್ಷಣಿಕವಾಗಿ ಪ್ರಯೋಜನವನ್ನು ಕೊಡಬಲ್ಲ ಯಕ್ಷಗಾನದ ಎಲ್ಲ ವಿಭಾಗಗಳ ಸಮಗ್ರ ಗ್ರಂಥದ ಅವಶ್ಯಕತೆ ಇದೆಯೇ? ಉತ್ತರ : ಈಗಾಗಲೇ ಯಕ್ಷಗಾನಕ್ಕೆ ಅನೇಕ ಗ್ರಂಥಗಳು ಇವೆ. ಅದರಲ್ಲಿ ಸುಸಂಬದ್ಧ ಹಾಗೂ ಸುಸಂಬದ್ಧವಲ್ಲದ ಗ್ರಂಥಗಳೂ ಇವೆ. ಈಗ ನಾವು ಮಾಡಬೇಕಾದ್ದು ಶೈಕ್ಷಣಿಕವಾಗಿ ಈಗಾಗಲೇ ಹೊರಬಂದಿರುವ ಗ್ರಂಥಗಳ ಹಾಗೂ ಎಲ್ಲ ವಿಚಾರಗಳ ಸಂಗ್ರಹ. ತಿಳಿದವರು ನಾಲ್ಕೈದು ಮಂದಿ ಸೇರಿಕೊಂಡು ಶಿವರಾಮ ಕಾರಂತ, ಮುಳಿಯ ತಿಮ್ಮಪ್ಪಯ್ಯನವರಿಂದ ತೊಡಗಿ ಇಲ್ಲಿಯ ವರೆಗೆ ಬಂದಿರುವ ಎಲ್ಲ ಸಾಹಿತ್ಯಗಳನ್ನು ಸಂಗ್ರಹಿಸಿ, ಪರಿಷ್ಕರಿಸಿದರೆ ಅದೇ ಒಂದು ಉತ್ತಮ ಶೈಕ್ಷಣಿಕ ಗ್ರಂಥವಾಗಬಲ್ಲದು. ಅದೇ ಶಾಸ್ತ್ರವಾಗಬಲ್ಲುದು. ಸುಸಂಬದ್ಧವನ್ನು ಸಂಗ್ರಹಿಸುವುದು ಮುಖ್ಯ. ಹಿಮ್ಮೇಳದ ಬಗ್ಗೆ ಗ್ರಂಥಗಳು ಬಂದಿವೆ. ನಾನೂ ಬರೆದಿದ್ದೇನೆ. ಆದರೆ ನಾಟ್ಯದ ಬಗ್ಗೆ ಬರೆದದ್ದು ವಿರಳ. ನಾಟ್ಯದ ಬಗ್ಗೆ ಅಷ್ಟು ಕೆಲಸ ಆಗಲಿಲ್ಲ. ಬರೆಯುವುದು ಸುಲಭವೂ ಅಲ್ಲ. ತೆಂಕು ಬಡಗಿನ ನಾಟ್ಯ ವ್ಯತ್ಯಾಸ ಯಾಕೆ? ವೇಷಭೂಷಣಗಳೇ ಕಾರಣ. ವೇಷಭೂಷಣಗಳ ವ್ಯತ್ಯಾಸದಿಂದಲೇ ನಾಟ್ಯಕ್ರಮ ಮತ್ತು ಹೆಜ್ಜೆಗಳಲ್ಲಿ ವ್ಯತ್ಯಾಸ ಎಂದು ತಿಳಿಯದೇ ಎರಡನ್ನೂ ಕಸಿ ಮಾಡಲು ಹೋಗಬಾರದು.
ಪ್ರಶ್ನೆ : ಯಕ್ಷಗಾನಕ್ಕೊಬ್ಬ ನಿರ್ದೇಶಕರು ಬೇಕು ಎಂಬ ಭಾವನೆ ಬರುವಂತಿದೆಯಲ್ಲ. ಉತ್ತರ : ಯಕ್ಷಗಾನದ ಎರಡೂ ತಿಟ್ಟುಗಳ ಬಗ್ಗೆ ಹೇಳುವುದಾದರೆ ಎಲ್ಲರಿಗೂ ಪ್ರಭಾವಿಯಾದ ಅನುಭವಿಗಳ ನಿರ್ದೇಶನದ ಕಟ್ಟುಪಾಡು ಬೇಕು. ಪ್ರತಿಯೊಬ್ಬರೂ ಸ್ವತಂತ್ರರು ಎಂಬಂತೆ ವರ್ತಿಸುವುದು ಸರಿಯಲ್ಲ. ಕಲೆಯಲ್ಲಿ ಆ ರೀತಿ ಇಲ್ಲ. ಅಲಿಖಿತ ಶಿಷ್ಟಾಚಾರಗಳು, ನಿಬಂಧನೆಗಳು ರಂಗಭೂಮಿಯಲ್ಲಿದೆ. ತಮ್ಮನ್ನು ಪ್ರಶ್ನಿಸುವವರು ಯಾರೂ ಇಲ್ಲ ಎಂದು ಖುಷಿ ಬಂದ ಹಾಗೆ ಮಾಡುವುದಲ್ಲ. ಆ ನಿಬಂಧನೆಗಳನ್ನು ಪಾಲಿಸುವವರ ಸಂಖ್ಯೆ ಕಡಿಮೆಯಾಗಿದೆ. ಯಾಕೆಂದರೆ ಅರಿವಿನ ಕೊರತೆ. ಎಲ್ಲವನ್ನೂ ಪ್ರೇಕ್ಷಕರ ತಲೆಗೆ ಹಾಕ್ತಾರೆ. ಪ್ರೇಕ್ಷಕರು ಏನು ತಾನೇ ಮಾಡಿಯಾರು. ‘‘ಈ ರೀತಿಯೇ ವೇಷಭೂಷಣ ಕಟ್ಟಿಕೋ’’ ಎಂದು ಪ್ರೇಕ್ಷಕರು ಯಾರಾದರೂ ಹೇಳು ತ್ತಾರೆಯೇ? ಮನೋರಂಜನೆಯನ್ನು, ಒಳ್ಳೆಯದನ್ನು ಸ್ವೀಕರಿಸುವುದು ಪ್ರೇಕ್ಷಕರ ಧರ್ಮ. ಪ್ರೇಕ್ಷಕರು ಚಪ್ಪಾಳೆ ತಟ್ಟಿದರು ಎಂದು ರಂಗದಲ್ಲಿ ತಾನು ಏನೂ ಮಾಡಬಹುದು ಎಂದು ಭಾವಿಸಿದರೆ ಹೇಗೆ? ತನ್ನನ್ನು ತಾನೇ ಶಿಸ್ತಿಗೆ ಒಳಪಡಿಸಿಕೊಳ್ಳಬೇಕು. ಆದ್ದರಿಂದ ನಿರ್ದೇಶಕರ/ಅನುಭವಿಗಳ ಮಾತನ್ನು ಕೇಳುವ ವಿನಯಶೀಲತೆ ಬೇಕು. ಪ್ರಶ್ನೆ : ‘ಹಿಮ್ಮೇಳ’ ಎಂಬ ಅತ್ಯಮೂಲ್ಯವಾದ ಗ್ರಂಥ ಯಕ್ಷಗಾನ ಕ್ಷೇತ್ರಕ್ಕೆ ನಿಮ್ಮ ಕೊಡುಗೆ. ಈ ಗ್ರಂಥದ ರಚನೆಯ ಪರಿಕಲ್ಪನೆ ಹೇಗೆ ಮೂಡಿತು? ಉತ್ತರ : ಯಕ್ಷಗಾನದ ಇತರ ವಿಷಯಗಳ ಬಗ್ಗೆ ಈಗಾಗಲೇ ಕೆಲವರು ಬರೆದಿದ್ದಾರೆ. ಆದರೆ ಹಿಮ್ಮೇಳದ ಬಗ್ಗೆ ಹಾಗೂ ಅದರ ಸ್ವರೂಪವನ್ನು ಗ್ರಹಿಸತಕ್ಕ ಅಂಶಗಳಿವೆ ಎಂಬ ಯೋಚನೆ ನನಗೆ ಬಂತು. ಅದುವರೆಗೆ ಹಿಮ್ಮೇಳದ ಬಗ್ಗೆ ಗ್ರಂಥ ರೂಪದಲ್ಲಿ ಕೆಲಸ ಮಾಡಿದವರಿಲ್ಲ. ಮುಖ್ಯವಾಗಿ ತಾಳ, ರಾಗ ಎಲ್ಲದರ ಬಗ್ಗೆ ಬರೆದಿದ್ದೇನೆ. ಹಿಮ್ಮೇಳ ಅಂದರೆ ಬರೀ ಹಿಮ್ಮೇಳದ ಕುರಿತು ಮಾತ್ರ ಅಲ್ಲ. ವಾದ್ಯಗಳ, ಸಲಕರಣೆಗಳ ರಚನೆ, ಸ್ವರೂಪಗಳ ವಿವರ ಕೂಡಾ ಇದೆ. ತಾಳ, ರಾಗಗಳ ವಿವರ, ಜಾಗಟೆ ಮಾಡಬೇಕಾದರೆ ಯಾವ ನಿಷ್ಪತ್ತಿಯಲ್ಲಿ ಲೋಹಗಳನ್ನು ಮಿಶ್ರ ಮಾಡಬೇಕು- ಮೊದಲಾದ ಸಮಗ್ರ ವಿವರಗಳಿವೆ.
ಪ್ರಶ್ನೆ: ನೀವು ತಾಳಮದ್ದಳೆ ಅರ್ಥಗಾರಿಕೆಯಲ್ಲೂ ಗುರುತಿಸಿಕೊಂಡವರು. ಆದರೆ ಅರ್ಥಧಾರಿಯಾಗಿ ಮುಂದುವರಿಯದಿರಲು ಕಾರಣವೇನು?
ಉತ್ತರ : ಉದಯವಾಣಿ ಸೇರಿದ ಮೇಲೆ ನನ್ನ ‘‘ಬರವಣಿಗೆ ಮತ್ತು ಮಾತು’’ ಇವೆರಡೂ ಒಂದಕ್ಕೊಂದು ತದ್ವಿರುದ್ಧ ಧ್ರುವಗಳಂತೆ ಗೋಚರಿಸಿತು. ಪತ್ರಕರ್ತರಾಗಿರುವಾಗ ಬರಹವನ್ನು ತಿದ್ದಿ, ಬರೆಯುವಂತಹಾ ಅಭ್ಯಾಸ ಆಯ್ತು, ಆಲೋಚನೆ ಮಾಡಿ ಬರೆಯುವ ಕ್ರಮ ಮತ್ತು ಎಡೆಬಿಡದೆ ಮಾತನಾಡುವ ಅಂದರೆ ಹೇಳುತ್ತಾ ಹೋಗುವ ಕ್ರಮ ಇವುಗಳ ನಡುವೆ ನನಗೆ ಬೌದ್ಧಿಕವಾದ ತಡೆಯುಂಟಾಯಿತು ಎಂದು ತೋರುತ್ತದೆ. ಇದು ನನ್ನದೇ ವಿಶ್ಲೇಷಣೆ. ನನ್ನ ಮಾತಿನ ಓಘದಲ್ಲಿ ತಡೆಯುಂಟಾಯಿತು. ಅರ್ಥ ಹೇಳಲು ಕೂತಾಗ ಮಾತಿನ ವೇಗಕ್ಕೆ ತಡೆ ಉಂಟಾಯಿತು. ಇದನ್ನು ಸ್ವತಃ ಅರ್ಥಮಾಡಿ ಕೊಂಡ ನಾನು ತಾಳಮದ್ದಳೆ ರಂಗದಿಂದ ಹಿಂದೆ ಸರಿದೆ. ಆದರೆ ಭಾಗವತಿಕೆ, ಹಿಮ್ಮೇಳ, ನಿರ್ದೇಶನ ಇವುಗಳನ್ನು ಮುಂದುವರಿಸಿದೆ. ಆಗಾಗ ವೇಷವನ್ನು ಕೂಡಾ ಮಾಡಿದ್ದೇನೆ. ಒಂದು ವಿಶೇಷವಾದ ಸಂದರ್ಭದಲ್ಲಿ ಸ್ಥಳದಲ್ಲೇ ಪದ್ಯ ಬರೆಯುವ ಸಂದರ್ಭ ಒದಗಿಬಂತು. ಇಲ್ಲಿಂದ ನನಗೆ ಪದ್ಯ ಹಾಗೂ ಪ್ರಸಂಗ ಬರೆಯಲು ಪ್ರೇರೇಪಣೆ ಉಂಟಾಯಿತು. ಸಿನಿಮಾದಲ್ಲಿ ಬಂದ ಪೌರಾಣಿಕ ಕಥೆಯನ್ನು ನಾನು ಯಕ್ಷಗಾನ ಪ್ರಸಂಗ ಬರೆದೆ. ಅದುವೇ ಹಲವಾರು ಪ್ರದರ್ಶನಗಳನ್ನು ಕಂಡ ‘ಚಕ್ರೇಶ್ವರ ಪರೀಕ್ಷಿತ’. ಪ್ರಶ್ನೆ : ಕೊನೆಯದಾಗಿ ಯಕ್ಷಗಾನದ ಒಳಿತಿನ ದೃಷ್ಟಿಯಿಂದ ನಿಮ್ಮ ಕಿವಿಮಾತುಗಳೇನು? ಉತ್ತರ : ಮೊದಲಾಗಿ ಪಾತ್ರಾನುಸಾರೀ ಲಯ ಬೇಧಗಳನ್ನು ಅರ್ಥಮಾಡಿಕೊಳ್ಳಬೇಕು. ಯಕ್ಷಗಾನದ ನಾಟ್ಯಕ್ಕೆ ಅದರದ್ದೇ ಆದಂತಹಾ ಒಂದು ಕ್ರಮ ಇದೆ. ನಕುಲ, ಸಹದೇವ, ಅರ್ಜುನ, ಭೀಮ, ಧರ್ಮರಾಯರಿಗೆ ಬೇರೆ ಬೇರೆ ಕುಣಿತಗಳು, ದ್ರೌಪದಿ ಪ್ರಭಾವತಿಯಲ್ಲ, ಮಾಯಾ ಶೂರ್ಪನಖಿಯೂ ಅಲ್ಲ, ಪ್ರತಿಯೊಂದಕ್ಕೂ ಅದರದ್ದೇ ಆದ ಸ್ವರೂಪ ಇದೆ. ನೀವು ಪಾತಾಳ ವೆಂಕಟ್ರಮಣ ಭಟ್ಟರೋ ಅಥವಾ ಕೋಳ್ಯೂರು ರಾಮಚಂದ್ರ ರಾಯರತ್ರ ಕೇಳಿದ್ರೆ ವಿವರವಾಗಿ ಹೇಳ್ತಾರೆ. ಅವರೆಲ್ಲಾ ತಿಳಿದವರು. ಹಾಗಾಗಿ ಮೂಲ ಸಂಪ್ರದಾಯಗಳನ್ನು ಪುನಃ ತರುವುದು ಯಕ್ಷಗಾನವನ್ನು ಉಳಿಸುವಲ್ಲಿ ಮಾಡಬೇಕಾದ ಕೆಲಸ. ಕಲೆ ಸಂಪಾದನೆಗೋಸ್ಕರ ಇರುವುದಲ್ಲ. ಜೀವನೋಪಾಯಕ್ಕೆ ಬೇರೆ ದಾರಿ ನೋಡಬೇಕು. ಹಾಗೆಂದು ಯಕ್ಷಗಾನದಲ್ಲಿ ಮೊದಲಿನ ಪರಿಸ್ಥಿತಿ ಇಲ್ಲ. ಹಣ ಮಾಡುವುದೇ ಉದ್ದೇಶ ಅಲ್ಲ. ಆದ್ದರಿಂದ ಪ್ರತಿಯೊಬ್ಬರಲ್ಲೂ ಗಂಭೀರ ಕಲಿಕೆ ಆಗಬೇಕು. ಯಕ್ಷಗಾನದ ಶೈಕ್ಷಣಿಕ ಅರ್ಹತೆಯನ್ನು ರಂಗದಲ್ಲಿ ತೋರಿಸಬೇಕು.
ಡಾ. ನಂಬಿಯಾರರು ಹಲವಾರು ವಿಚಾರಗಳನ್ನು ಹೇಳಿದರು. ಅವರ ಮಾತುಗಳಲ್ಲಿ ಒಟ್ಟಾರೆ ವ್ಯವಸ್ಥೆಯ ಅಧಃಪತನ, ವಿಷಾದ, ಕೋಪ, ಅಸಹಾಯಕತೆ, ದೂರದೃಷ್ಟಿತ್ವ, ಸಲಹೆ-ಸೂಚನೆಗಳು, ಕೆಲವೊಂದು ಮೆಚ್ಚುಗೆಗಳೆಲ್ಲಾ ಬಂದುಹೋದುವು. ಹಾಗೆಂದು ತಾನೇನೂ ನಿರಾಶಾವಾದಿಯಲ್ಲ ಎಂದು ನಂಬಿಯಾರರು ಹೇಳುತ್ತಾರೆ. ‘‘ಯಾರು ಏನೇ ಹೇಳಲಿ, ನನ್ನ ಕೆಲಸ ನಾನು ಮಾಡುತ್ತಾ ಇರುತ್ತೇನೆ. ಅದರಿಂದ ರಂಗಕ್ಕೆ ಪ್ರಯೋಜನ ಆಗುವುದಾದರೆ ನನಗೆ ಅದರಿಂದ ದೊಡ್ಡ ಸಂತೋಷ ಬೇರೆ ಇಲ್ಲ. ದೀವಟಿಗೆ ಬೆಳಕಿನ ಆಟವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಅಂತಹ ಪ್ರಯೋಗಗಳನ್ನು ಪುನರುಜ್ಜೀವನಗೊಳಿಸಲು ಯತ್ನಿಸಿದೆ. ದೀವಟಿಗೆ ಬೆಳಕಿನ ಆಟದ ಪ್ರಯೋಗ ಮಾಡಿದೆ. ಎಲ್ಲರೂ ಮೆಚ್ಚಿ ಕೊಂಡರು. ನಂತರ ಈಗ ಕೆಲವರು ಅಂತಹುದೇ ಪ್ರಯೋಗ ಮಾಡಿದರು. ನನ್ನ ಕೆಲಸ ಸಾರ್ಥಕ ಆಯ್ತಲ್ಲ’’. ಇದು ಅವರ ಮನದಾಳದ ಮಾತುಗಳು.
ಡಾ. ರಾಘವ ನಂಬಿಯಾರರ ಕಲ್ಪನೆ. ಪ್ರಾಚೀನ ರೂಪದ ದೀವಟಿಗೆ ಬೆಳಕಿನ ಆಟ. ಬೆಳಕು ರಂಗದತ್ತ ಮಾತ್ರವೇ ಪ್ರತಿಫಲನಗೊಳ್ಳುವುದರಿಂದ ಪ್ರೇಕ್ಷಕರು ಏಕಾಗ್ರತೆಯಿಂದ ರಂಗದತ್ತ ಮಾತ್ರವೇ ನೋಡುತ್ತಾರೆ. (ಭಾಗವತರಾಗಿ ಡಾ. ಕೆ. ಎಮ್. ರಾಘವ ನಂಬಿಯಾರರು, ರಾಮನಾಗಿ ಭಾಸ್ಕರ ಪಡುಬಿದ್ರಿ, ಮಾಯಾ ಶೂರ್ಪನಖಿಯಾಗಿ ಅಂಬಾಪ್ರಸಾದ ಪಾತಾಳ.)
ಲೇಖನ: ಮನಮೋಹನ್. ವಿ. ಎಸ್. ಫೋಟೋ ಕೃಪೆ : ಡಾ. ರಾಘವ ನಂಬಿಯಾರ್
ತೆಂಕುತಿಟ್ಟು ಯಕ್ಷಗಾನದಲ್ಲಿ ‘ಬಣ್ಣದ ವೇಷ’ ಎಂಬುದು ಒಂದು ಪ್ರಮುಖವಾದ ವಿಭಾಗವು. ಹಿರಿಯ ತಲೆಮಾರಿನ ಅನೇಕ ಕಲಾವಿದರು ಬಣ್ಣದ ವೇಷಧಾರಿಗಳಾಗಿ ರಂಗದಲ್ಲಿ ವಿಜೃಂಭಿಸಿ ಈ ವಿಭಾಗವನ್ನು ಬಲಿಷ್ಠಗೊಳಿಸಿ ಅಲೌಕಿಕ ಪ್ರಪಂಚವನ್ನು ಸೇರಿಕೊಂಡಿರುತ್ತಾರೆ.
ವಿದ್ವಾಂಸರೂ ಹಿರಿಯ ಕಲಾವಿದರೂ ಬರೆದ ಪುಸ್ತಕಗಳಿಂದಷ್ಟೇ ನಮಗೆ ಅಂತಹಾ ಕಲಾವಿದರ ವಿಚಾರಗಳನ್ನು ತಿಳಿಯಬಹುದು. ಕೋಲುಳಿ ಸುಬ್ಬ, ಬಣ್ಣದ ಕುಂಞ, ಒತ್ತೆಕಿವಿ ಸುಬ್ಬ, ಬಣ್ಣದ ನರಸಪ್ಪಯ್ಯ, ಅಯ್ಯಪ್ಪ ಕುಂಞಣ್ಣ ಅಡ್ಯಂತಾಯ, ಹಂದಿ ತಿಮ್ಮಪ್ಪು ಮೊದಲಾದ ಅನೇಕ ಬಣ್ಣದ ವೇಷಧಾರಿಗಳು ಬಹಳ ಹಿಂದಿನವರು.
ಕಲಾವಿದರಾಗಿದ್ದ ಅಳಿಕೆ ರಾಮಯ್ಯ ರೈ ಅವರು ತಮ್ಮ ಆತ್ಮಕಥನದಲ್ಲಿ ಕೋಲುಳಿ ಸುಬ್ಬನವರ ಬಗ್ಗೆ ಈ ರೀತಿ ಅಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ. “ಬಣ್ಣದ ವೇಷದ ಸುಬ್ಬ ಕೋಲುಳಿ ಸುಬ್ಬನೆಂದೇ ಪ್ರಖ್ಯಾತ. ಇವನದು ಈಡು ಜೋಡಿಲ್ಲದ ಬಣ್ಣದ ವೇಷಗಾರಿಕೆ. ಅಪ್ರತಿಮ ವಾಗ್ವಾದ ನಿಪುಣ. ಇವನ ಮುಖದ ಚಿಟ್ಟಿ, ಬಣ್ಣದ ವೇಷದ ಅಟ್ಟಹಾಸಕ್ಕೆ ಹೆದರಿ ಮೂರ್ಛೆ ಹೋದವರೂ ಲೆಕ್ಕವಿಲ್ಲದಷ್ಟು ಮಂದಿ. ಕೆಲವೆಡೆಗಳಲ್ಲಿ ಮಕ್ಕಳೂ, ಹೆಂಗಸರೂ ಹೆದರಿಕೊಳ್ಳದಂತೆ ಸುಬ್ಬನ ವೇಷ ಬರುವುದೆಂದು ಮುನ್ನಚ್ಚರಿಕೆ ಕೊಡುವ ಸಂಪ್ರದಾಯವಿತ್ತು. ನನ್ನ ಜೀವಮಾನದಲ್ಲಿ ಇಂತಹಾ ಮನಸ್ಸಿನಿಂದ ಮಾಯದ ಬಣ್ಣದ ವೇಷವನ್ನು ನೋಡಿಲ್ಲವೆಂದು ಪ್ರಾಂಜಲವಾಗಿ ಹೇಳುವೆ”.
ಬಣ್ಣದ ವೇಷಗಳಲ್ಲಿ ಹಿಂದಿನ ಹಿಂದಿನ ತಲೆಮಾರಿನ ಕಲಾವಿದರು ಸಾಧಕರಾಗಿ ಮೆರೆದಿದ್ದರು ಎಂಬುದಕ್ಕೆ ಅಳಿಕೆ ರಾಮಯ್ಯ ರೈಗಳ ಈ ಮಾತುಗಳೇ ಸಾಕ್ಷಿ. ಅವರ ಮುಂದಿನ ತಲೆಮಾರಿನ ಅನೇಕ ಕಲಾವಿದರೂ ಬಣ್ಣದ ವೇಷಧಾರಿಗಳಾಗಿ ಮೆರೆದು ಖ್ಯಾತರಾದರು. ಅಂತಹವರಲ್ಲಿ ಶ್ರೀ ಬಣ್ಣದ ಮಹಾಲಿಂಗನವರೂ ಪ್ರಮುಖರು. ಪ್ರಸಿದ್ಧ ಬಣ್ಣದ ವೇಷಧಾರಿಯಾಗಿ ಮೆರೆದ ಬಣ್ಣದ ಮಾಲಿಂಗ ಅವರು ಕಾಸರಗೋಡು ತಾಲೂಕಿನ ಆದೂರು ಗ್ರಾಮದ ಚೆನ್ನಂಗೊಡು ಎಂಬಲ್ಲಿ ಶ್ರೀ ಮಾಲಿಂಗ ಪಾಟಾಳಿ ಮತ್ತು ಶ್ರೀಮತಿ ಸುಬ್ಬಮ್ಮ ದಂಪತಿಗಳ ಮಗನಾಗಿ 1913ರಲ್ಲಿ ಜನಿಸಿದರು.
ಬಾಲ್ಯದಲ್ಲಿ ಬಡತನವಿತ್ತು. ಓದಿದ್ದು ಕೇವಲ ಒಂದನೇ ತರಗತಿ ವರೆಗೆ ಮಾತ್ರ. ಯಕ್ಷಗಾನವು ಹಿರಿಯರಿಂದ ರಕ್ತಗತವಾಗಿ, ಬಳುವಳಿಯಾಗಿ ಬಂದಿತ್ತು. ಅಜ್ಜ ಚಲ್ಯ ಶಂಕರರು ಯಕ್ಷಗಾನ ಭಾಗವತರಾಗಿದ್ದರು. ಮೇಲೆ ತಿಳಿಸಿದ ಮಹಾನ್ ಬಣ್ಣದ ವೇಷಧಾರಿ ಕೋಲುಳಿ ಸುಬ್ಬ ಇವರ ಮಾವ. ಅಲ್ಲದೆ ಆ ಕಾಲದಲ್ಲಿ ಗಾಣಿಗ ಸಮಾಜದ ಅನೇಕ ಕಲಾವಿದರು ಯಕ್ಷಗಾನ ಬಣ್ಣದ ವಿಭಾಗದಲ್ಲಿ ಮೆರೆದವರೇ ಆಗಿದ್ದರು. ಬಣ್ಣದ ಕುಂಞ, ಒತ್ತೆಕಿವಿ ಸುಬ್ಬ, ದೊಡ್ಡ ತಿಮ್ಮಪ್ಪ ಇವರೆಲ್ಲಾ ಮಾಲಿಂಗ ಅವರ ಬಂಧುಗಳೇ ಆಗಿದ್ದರು. ಹಾಗಾಗಿ ಬಾಲ್ಯದಲ್ಲಿಯೇ ಯಕ್ಷಗಾನಾಸಕ್ತಿಯು ಮೊಳೆತು ಬೆಳೆದಿತ್ತು. ಕಲಿತು ಮೇಲಕ್ಕೆ ಹೋದುದಲ್ಲ. ಮೇಳಕ್ಕೆ ಹೋಗಿ ಕಲಿತವರು.
ತನ್ನ 9ನೇ ವಯಸ್ಸಿನಲ್ಲಿ ಕೊರಕ್ಕೋಡು ಮೇಳಕ್ಕೆ ಸೇರ್ಪಡೆ. ಸಣ್ಣ ಪುಟ್ಟ ಕೆಲಸಗಳನ್ನೂ, ಹಿರಿಯ ಕಲಾವಿದರ ಸೇವೆಯನ್ನೂ ಮಾಡುತ್ತಾ ಯಕ್ಷಗಾನವನ್ನು ಕಲಿತರು. ಮೇಳದ ಬದುಕಿಗೆ ಹೊಂದಿಕೊಂಡರು. ಕೋಡಂಗಿಯಿಂದ ತೊಡಗಿ, ಬಾಲಗೋಪಾಲ ಹೀಗೆ ಪೂರ್ವರಂಗದ ಎಲ್ಲಾ ವೇಷಗಳನ್ನೂ ಮಾಡುತ್ತಿದ್ದರು. ಮಂಜಪ್ಪ ಹಾಸ್ಯಗಾರರಿಂದ ನಾಟ್ಯಾಭ್ಯಾಸ. ಅಲ್ಲದೆ ಕಾಸರಗೋಡು ಸುಬ್ಬಯ್ಯ ಶೆಟ್ಟರಿಂದಲೂ ಕಲಿತಿದ್ದರಂತೆ. ತನ್ನ ವೇಷವಾದ ಮೇಲೆ ನಿದ್ರಿಸದೆ ಬೆಳಗಿನ ವರೆಗೂ ಆಟ ನೋಡುತ್ತಾ ಕಲಿತರು. ಸ್ತ್ರೀ ಪಾತ್ರಗಳನ್ನೂ ತಿರುಗಾಟದಲ್ಲಿ ನಿರ್ವಹಿಸಿದ್ದರು.
ಎಲ್ಲಾ ಬಣ್ಣಕ್ಕೆ ಸಂಬಂಧಿಸಿದ ಎಲ್ಲಾ ವೇಷಗಳ ಮುಖವರ್ಣಿಕೆ ಬಗೆಗೆ ಅಪಾರವಾದ ಜ್ಞಾನವನ್ನು ಹೊಂದಿದ್ದರು. ಕೊರೊಕ್ಕೋಡು ಮೇಳದಲ್ಲಿ ಎರಡು ತಿರುಗಾಟ. ಬಳಿಕ ಕೂಡ್ಲು ಮೇಳದಲ್ಲಿ ಐದು ತಿರುಗಾಟ. ಭಾಗವತರಾದ ಪುತ್ತಿಗೆ ರಾಮಕೃಷ್ಣ ಜೋಯಿಸರ ನಿರ್ದೇಶನ, ಪ್ರೋತ್ಸಾಹ. ಒಂದನೇ ಬಣ್ಣದ ವೇಷಧಾರಿ ಸುಬ್ಬಯ್ಯ ಶೆಟ್ಟರಿಂದ ಕಲಿಕೆ. ಮೂರನೇ ಬಣ್ಣದ ವೇಷಧಾರಿಯಾಗಿ ತಿರುಗಾಟ ಆರಂಭಿಸಿ ಎರಡನೇ ಬಣ್ಣದ ವೇಷಧಾರಿಯಾಗಿ ಭಡ್ತಿ ಹೊಂದಿದ್ದರು.
ಮತ್ತೆ ಮುಲ್ಕಿ, ಕದ್ರಿ ಧರ್ಮಸ್ಥಳ, ಸುರತ್ಕಲ್, ನಿಟ್ಟೆ, ವೇಣೂರು ಮೇಳಗಳಲ್ಲಿ ವ್ಯವಸಾಯ. ಬಳಿಕ ಕಟೀಲು ಮೇಳದಲ್ಲಿ ಕೊನೆವರೆಗೂ ತಿರುಗಾಟ ನಡೆಸಿದ್ದರು. ತನ್ನ ಸುದೀರ್ಘ ಕಲಾ ಬದುಕಿನಲ್ಲಿ ಅಪಾರ ಅನುಭವಗಳನ್ನು ಗಳಿಸಿ, ಯಕ್ಷಗಾನ ಬಣ್ಣದ ವೇಷಗಳ ಬಗೆಗೆ ಓರ್ವ ಸಮರ್ಥ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಬಣ್ಣದ ವೇಷಗಳಿಗೆ ಬೇಕಾದ ಆಳಂಗವನ್ನು ಹೊಂದಿದ ಶ್ರೀ ಮಾಲಿಂಗ ಅವರ ಅಟ್ಟಹಾಸ, ತೆರೆಕ್ಲಾಸ್, ಒಡ್ಡೋಲಗ ವೈಭವ, ನಡೆ ಎಲ್ಲವೂ ಅಚ್ಚುಕಟ್ಟು ಮತ್ತು ಶಿಸ್ತಿನಿಂದ ಕೂಡಿರುತ್ತಿದ್ದುವು. ಬಣ್ಣಕ್ಕೆ ಸಂಬಂಧಿಸಿದ ಎಲ್ಲಾ ವೇಷಗಳಲ್ಲೂ ಮಾಲಿಂಗನವರು ಹೆಸರನ್ನು ಗಳಿಸಿದ್ದಾರೆ.
ಮಹಿಷಾಸುರ, ರುದ್ರ ಭೀಮ, ವೀರಭದ್ರ, ಪುರುಷಾಮೃಗ, ಕುಂಭಕರ್ಣ, ನರಕಾಸುರ, ಬಾಣಾಸುರ, ಮೈರಾವಣ, ಹಿಡಿಂಬ, ಶೂರ್ಪನಖಿ, ಪೂತನಿ ಮೊದಲಾದ ವೇಷಗಳು ಪ್ರಸಿದ್ಧಿಯನ್ನು ನೀಡಿದ್ದುವು. ಕುರಿಯ ವಿಠಲ ಶಾಸ್ತ್ರಿಗಳ ಈಶ್ವರನಿಗೆ ವೀರಭದ್ರ, ಶೇಣಿಯವರ ರಾವಣನಿಗೆ ಕುಂಭಕರ್ಣನಾಗಿ ಇವರ ಅಭಿನಯವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಪಾತ್ರೋಚಿತವಾದ ಮಾತುಗಾರಿಕೆಯಲ್ಲಿ ಬಣ್ಣದ ಮಹಾಲಿಂಗನವರು ಪಳಗಿದ ಕಲಾವಿದ. ಶಶಿಪ್ರಭಾ ಪರಿಣಯ ಪ್ರಸಂಗದ ಘೋರರೂಪಿಯ ವೇಷವೂ ಜನಮೆಚ್ಚುಗೆಗೆ ಪಾತ್ರವಾಗಿತ್ತು. ಬಣ್ಣದ ವೇಷಧಾರಿಗಳೇ ನಿರ್ವಹಿಸುವ ಕಿರಾತ, ವೀರವರ್ಮ ಮೊದಲಾದ ವೇಷಗಳನ್ನೂ ಮಾಲಿಂಗನವರು ಅತ್ಯುತ್ತಮವಾಗಿ ಚಿತ್ರಿಸುತ್ತಿದ್ದರು.
ಶ್ರೀಯುತರ ಹೆಸರಿನಲ್ಲಿ ‘ಬಣ್ಣದ ಮಹಾಲಿಂಗ ಪ್ರತಿಷ್ಠಾನ’ ಪುತ್ತೂರು ಎಂಬ ಸಂಸ್ಥೆಯು ಕಾರ್ಯಾಚರಿಸುತ್ತಿದ್ದು ಯಕ್ಷಗಾನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ವರ್ಷವೂ ಸಾಧಕರಿಗೆ ಬಣ್ಣದ ಮಹಾಲಿಂಗ ಪ್ರಶಸ್ತಿಯನ್ನು ನೀಡುತ್ತಾ ಬರುತ್ತಿದ್ದಾರೆ. ಈ ಪ್ರಶಸ್ತಿಯನ್ನು ಮೊತ್ತ ಮೊದಲು ಪಡೆದವರು ಬಣ್ಣದ ಮಾಲಿಂಗ ಅವರ ಶಿಷ್ಯರೇ ಆದ ಸಿದ್ದಕಟ್ಟೆ ಶ್ರೀ ಸದಾಶಿವ ಶೆಟ್ಟಿಗಾರ್ ಅವರು. ಬಣ್ಣದ ಮಾಲಿಂಗ ಅವರ ಪುತ್ರ ಶ್ರೀ ಬಣ್ಣದ ಸುಬ್ರಾಯ ಅವರು ತೆಂಕುತಿಟ್ಟಿನ ಅನುಭವೀ ಬಣ್ಣದ ವೇಷಧಾರಿ. ಕಟೀಲು ಮೇಳದಲ್ಲಿ ತಿರುಗಾಟ ನಡೆಸುತ್ತಿರುವುದು ಸಂತೋಷದ ವಿಚಾರ.