ಶೀಘ್ರ ಸಾಧಕರಿಗೆ ಆಯುಸ್ಸು ಕಡಿಮೆ. ಇದು ನನ್ನ ಮಾತಲ್ಲ. ಚರಿತ್ರೆಯ ಪುಟಗಳೇ ಈ ಮಾತನ್ನು ಸಾರಿ ಹೇಳುತ್ತವೆ. ನಮ್ಮ ಭವ್ಯ ಪುರಾಣ, ಇತಿಹಾಸಗಳ ಗ್ರಂಥಗಳ ಒಂದೊಂದೇ ಹಾಳೆಗಳನ್ನು ತಿರುವುತ್ತಾ ಹೋದಂತೆ ಈ ಮಾತಿಗೆ ಸಾಕಷ್ಟು ಪುರಾವೆಗಳು ದೊರಕುತ್ತವೆ. ಹಾಗೆಂದು ಎಲ್ಲರೂ ಹೀಗೆಂದು ಅರ್ಥವಲ್ಲ. ಆದರೆ ಪೂರಕವಾಗಿ ತುಂಬಾ ಉದಾಹರಣೆಗಳು ಸಿಗುತ್ತವೆ ಅಷ್ಟೇ.
ನಮಗೆಲ್ಲಾ ಅದರ್ಶಪ್ರಾಯರಾಗಿರುವ ಭರತಖಂಡದ ಜನರು ಕಂಡ ಮಹಾನ್ ಆಡಳಿತಗಾರ ಶ್ರೀ ಶಿವಾಜಿ ಮಹಾರಾಜರು ಬದುಕಿದ್ದು ಕೇವಲ ಐವತ್ತು ವರ್ಷಗಳು ಮಾತ್ರ. ಹಾಗೆಯೇ ಸ್ವಾಮಿ ವಿವೇಕಾನಂದ, ಸುಭಾಸ್‍ಚಂದ್ರ ಬೋಸ್, ಭಗತ್‍ಸಿಂಗ್, ಚಂದ್ರಶೇಖರ ಆಜಾದ್, ಅಡೋಲ್ಫ್ ಹಿಟ್ಲರ್, ರಾಜೀವ್ ಗಾಂಧಿ, ಪ್ರಮೋದ್ ಮಹಾಜನ್ ಹಾಗೂ ಇತ್ತೀಚೆಗೆ ನಿಧನರಾದ ಅನಂತಕುಮಾರ್ ಇವರೆಲ್ಲಾ ಸಣ್ಣ ವಯಸ್ಸಿನಲ್ಲೆ ಸಾಧನೆಯನ್ನು ಮಾಡಿ ಈ ಲೋಕದಿಂದ ಕಣ್ಮರೆಯಾದವರು. ನಾವು ಯುಗಾಂತರದಷ್ಟು ಹಿಂದಕ್ಕೆ ನೋಡಿದರೆ ಅಲ್ಲಿಯೂ ನಮಗೆ ಇಂತಹಾ ನಿದರ್ಶನಗಳು ಕಾಣಸಿಗುತ್ತವೆ. ಎಳೆಯ ಹರೆಯದಲ್ಲೆ ಅದ್ಭುತವನ್ನು ಸಾಧಿಸಿ ಅಕಾಲ ವೀರಸ್ವರ್ಗವನ್ನು ಪಡೆದ ಅಭಿಮನ್ಯುವಿನ ಕತೆ ನೆನಪಾಗುತ್ತದೆ.
ಇನ್ನು ಈ ಕಾಲಕ್ಕೆ ಬಂದರೆ ತನ್ನ 35ನೆಯ ವಯಸ್ಸಿನಲ್ಲಿಯೇ ಪ್ರಖ್ಯಾತರಾಗಿ ಕಾಲನ ಕರೆಗೆ ಓಗೊಟ್ಟ ಸಿನಿಮಾ ರಂಗದ ಖ್ಯಾತ ನಟ ಶಂಕರ್ ನಾಗ್ ಮನಸ್ಸನ್ನು ತುಂಬಾ ಕಾಡುತ್ತಾರೆ. ಅದರಂತೆ ಮಿನುಗು ತಾರೆ ಕಲ್ಪನಾ, ನಟಿ ಸೌಂದರ್ಯಾ, ದಿವ್ಯಾ ಭಾರತಿ- ಹೀಗೆ ಈ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಯಕ್ಷರಂಗದ ಬೆರಗು, ತನ್ನ ಅಪೂರ್ವ ಕಂಚಿನ ಕಂಠದಿಂದ ರಂಗವನ್ನು ಆಳಿದ ಜಿ.ಆರ್. ಕಾಳಿಂಗ ನಾವಡರ ಅಕಾಲ ಅಗಲಿಕೆಯ ನೋವು ಕೂಡಾ ಈ ಸಂದರ್ಭದಲ್ಲಿ ಮಾಸದ ನೆನಪಾಗಿ ಉಳಿದಿದೆ. ಅವರು ತನ್ನ 31ನೆಯ ವಯಸ್ಸಿನಲ್ಲೆ ನಮ್ಮನ್ನು ಬಿಟ್ಟು, ಯಕ್ಷರಂಗವನ್ನು ಬಡವಾಗಿಸಿ ಕೇವಲ ನೆನಪಾಗಿ ಉಳಿದು ಹೋದರು.
ವರ್ಷದ ಹಿಂದೆ ಇಹಲೋಕವನ್ನು ತ್ಯಜಿಸಿದ ಯಕ್ಷಗಾನದ ಖ್ಯಾತ ಮದ್ದಳೆಗಾರರಲ್ಲಿ ಒಬ್ಬರಾಗಿದ್ದ ಶ್ರೀ ಅಡೂರು ಗಣೇಶ್ ರಾವ್ ಕೂಡಾ ಅಕಾಲ ಮೃತ್ಯುವಶರಾದವರು. ಯಕ್ಷಗಾನ ಕಲಾ ಜಗತ್ತಿನಲ್ಲಿ ‘ಅಡೂರು ಗಣೇಶ್ ರಾವ್’ ಎಂಬ ಹೆಸರನ್ನು ಕೇಳದ ಯಕ್ಷಗಾನ ಪ್ರಿಯರು ಇರಲಿಕ್ಕಿಲ್ಲ. ಹಾಗೆ ನೋಡಿದರೆ ಸಾಯಬೇಕಾದ ವಯಸ್ಸು ಖಂಡಿತಾ ಅವರದಲ್ಲ. ಇಷ್ಟು ಸಣ್ಣ ಪ್ರಾಯದಲ್ಲೇ ಅಷ್ಟನ್ನೂ ಸಾಧಿಸಿ ಹೋದವರು.
‘ಛೇ… ಬದುಕಬೇಕಾಗಿತ್ತು ಅವರು. ಬಹಳಷ್ಟು ಅಪರಿಮಿತ ಕೊಡುಗೆಗಳು ಅವರಿಂದ ಯಕ್ಷಗಾನಕ್ಕೆ ಸಲ್ಲುವುದಿತ್ತು’ ಎಂದು ಅಭಿಪ್ರಾಯ ಸಾರ್ವತ್ರಿಕವಾಗಿ ಕೇಳಿಬರುತ್ತಾ ಉಂಟು. ಆದರೆ ಕಾಲನ ನಿರ್ಣಯಕ್ಕೆ ತಲೆಬಾಗದಿರುವುದುಂಟೇ? ಕೇವಲ ಮಧ್ಯವಯಸ್ಸಿನಲ್ಲೆ ಅಂದರೆ ತನ್ನ 50ರ ಹರೆಯದಲ್ಲೇ ತನ್ನ ಕಾಯವನ್ನು ಅಳಿದ ಅಡೂರು ಗಣೇಶ್ ರಾವ್ ಇನ್ನಿಲ್ಲ ಎಂಬ ವಾರ್ತೆ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಾಗ ಒಂದು ಕ್ಷಣ ಅಧೀರನಾದದ್ದು ಸತ್ಯ. ಈ ಜಗತ್ತಿನಲ್ಲಿ ಜೀವರಾಶಿಗಳಾಗಿ ಜನಿಸಿದ ಮೇಲೆ ಸಾವು ಕೂಡಾ ನಿರೀಕ್ಷಿತವೇ ಆಗಿರುವುದರಿಂದ ‘ಇಂದು ಅವರು, ನಾಳೆ ನಾವು… ಸಾವು ಯಾವ ವಯಸ್ಸಿನಲ್ಲಿಯೂ ಬರಬಹುದು’ ಎಂದು ಸಮಾಧಾನಪಟ್ಟುಕೊಳ್ಳುವುದೇ ನಮ್ಮ ಮುಂದಿರುವ ಏಕೈಕ ದಾರಿ ಎನ್ನದೆ ವಿಧಿಯಿಲ್ಲ.
ಗಣೇಶ ಎಂಬ ಬಾಲಕ ‘ಅಡೂರು ಗಣೇಶ್ ರಾವ್’ ಆಗಿ ರೂಪುಗೊಂಡದ್ದು : ಅಡೂರು, ಮಧೂರು, ಮುಜುಂಗಾವು, ಕುಂಬಳೆ ಎಂಬ ನಾಲ್ಕು ಪ್ರಸಿದ್ಧ ಕ್ಷೇತ್ರಗಳಿಂದ ಕಾಸರಗೋಡು ಜಿಲ್ಲೆಯನ್ನು ಗುರುತಿಸುತ್ತಾರೆ. ಈ ಪಟ್ಟಿಗೆ ಅನಂತಪುರ ಮತ್ತು ಮಲ್ಲ ದೇವಳಗಳನ್ನೂ ಸೇರಿಸಬಹುದು. ಈ ಹಿನ್ನೆಲೆಯಲ್ಲಿ ಅಡೂರು ಎಂಬ ಊರು ಇತಿಹಾಸ ಪ್ರಸಿದ್ಧವಾಗಿದೆ. ಕಾಸರಗೋಡಿನ ಅನೇಕ ಯಕ್ಷಗಾನದ ಮಹನೀಯರನ್ನು ಗುರುತಿಸುವಾಗ ಅಡೂರು ಎಂಬ ಊರು ಕೂಡಾ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಹಲವಾರು ಕಲಾವಿದರನ್ನು ಯಕ್ಷಗಾನಕ್ಕೆ ಪರಿಚಯಿಸಿದ ಕೀರ್ತಿ ಅಡೂರು ಎಂಬ ಊರಿಗೆ ಸಲ್ಲುತ್ತದೆ.
ಇಂತಹಾ ಐತಿಹಾಸಿಕವಾಗಿಯೂ ಕಲಾಪೋಷಕತ್ವದ ನೆಲೆಯಲ್ಲಿಯೂ ಪ್ರಸಿದ್ಧವಾದ ನಾಡಿನಲ್ಲಿ ಯಕ್ಷಗಾನದ ಕಂಪು ಪಸರಿಸಿದ ಕುಟುಂಬವೊಂದರಲ್ಲಿ ಗಂಡು ಮಗುವೊಂದರ ಜನನವಾಗುತ್ತದೆ. ತಂದೆ ಕೃಷ್ಣ ರಾವ್ ಮತ್ತು ತಾಯಿ ಪಾರ್ವತಿ ಅಮ್ಮ ದಂಪತಿ ತಮ್ಮ ಪುತ್ರನಿಗೆ ಗಣೇಶ ಎಂದು ಹೆಸರನ್ನಿಟ್ಟರು. ಕುಟುಂಬ ಪೂರ್ತಿ ಯಕ್ಷಗಾನದ ಕಲಾವಿದರೇ. ಅಡೂರು ಗಣೇಶರ ತಂದೆ ಕೃಷ್ಣ ರಾವ್ ಚೆಂಡೆವಾದಕರು. ಅಜ್ಜ (ತಂದೆಯ ಚಿಕ್ಕಪ್ಪ) ಕೂಡಾ ಮದ್ದಳೆವಾದಕರಾಗಿದ್ದವರು. ಹೀಗಾಗಿ ಬಾಲಕ ಗಣೇಶನಿಗೆ ಪ್ರಾಥಮಿಕ ಶಾಲಾ ವಿದ್ಯಾರ್ಥಿ ಯಾಗಿರುವಾಗಲೇ ಚೆಂಡೆ ಬಾರಿಸುವ ಬಗ್ಗೆ ಅತೀವ ಕುತೂಹಲವಿತ್ತು. ಆದ್ದರಿಂದ 1968ರಲ್ಲಿ ಜನಿಸಿದ್ದ ಗಣೇಶ ಯಕ್ಷಗಾನದ ಆಸಕ್ತಿಯಲ್ಲಿ ಶಾಲಾ ವಿದ್ಯಾಭ್ಯಾಸವನ್ನು 7ನೇ ತರಗತಿಗೆ ಮೊಟಕುಗೊಳಿಸಿದರೂ ಯಕ್ಷಗಾನವನ್ನು ತನ್ನ ಉಸಿರಾಗಿ ಸ್ವೀಕರಿಸಿದ್ದ.
ಚೆಂಡೆ ಬಾರಿಸುವುದು ಅವರ ಕುಲವೃತ್ತಿಯಾಗಿದ್ದುದು ಮತ್ತು ಅಜ್ಜ, ತಂದೆಯಾದಿಯಾಗಿ ಕುಟುಂಬದ ಎಲ್ಲರೂ ಚೆಂಡೆ, ಮದ್ದಳೆವಾದಕರಾದುದರಿಂದ ಸಹಜವಾಗಿಯೇ, ರಕ್ತಗತವಾಗಿಯೇ ಬೆಳೆದು ಬಂದ ಆಸಕ್ತಿ ಗಣೇಶನನ್ನು ಯಕ್ಷಗಾನ ಕಲಾವಿದನಾಗಿ ರೂಪಿಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿತು. ಚಿಕ್ಕಂದಿನಲ್ಲಿ ಕುತೂಹಲದಿಂದ ತಂದೆಯವರು ಇತರರಿಗೆ ಕಲಿಸುವುದನ್ನು ಆಸಕ್ತಿಭರಿತ ಕಣ್ಣುಗಳಿಂದ ನೋಡುತ್ತಿದ್ದರು. ಸಹಜವಾಗಿಯೇ ತಂದೆ ಮಗನ ಆಸಕ್ತಿಯನ್ನು ಗಮನಿಸಿದರು. ಮನೆಯಲ್ಲಿ ತಂದೆ ಕೃಷ್ಣ ರಾವ್ ಅವರಿಂದ ಚೆಂಡೆಯ ಪಾಠ ಸುರು ವಾಯಿತು. ಆಮೇಲೆ ಕಲಿಕೆಯ ಸ್ವಲ್ಪ ಭಾಗ ಅಜ್ಜ ಶಾಮ ಮದ್ದಲೆಗಾರರಿಂದ ಮತ್ತು ಕುಂಡಂಕುಳಿ ರಾಮಕೃಷ್ಣಯ್ಯನವರಿಂದ ಆಯಿತು. ತನ್ನ 9ನೆಯ ವಯಸ್ಸಿನಿಂದಲೇ ಚೆಂಡೆಯ ಬಡಿತದ ಪ್ರದರ್ಶನವನ್ನು ಆರಂಭಿಸಿದ್ದರು. ಹೀಗೆ ತನ್ನ 14ನೆಯ ವಯಸ್ಸಿನಲ್ಲಿ ಅಡೂರು ಗಣೇಶ್ ರಾವ್ ಅವರು ಮೇಳದ ಕಲಾವಿದನಾಗಿ ರೂಪುಗೊಳ್ಳುವ ನಿಟ್ಟಿನಲ್ಲಿ ಬೆಳೆಯತೊಡಗಿದರು.
ಮೊದಲ ಮೇಳದ ಪಯಣ : 1983ರಲ್ಲಿ ತನ್ನ 15ನೆಯ ವಯಸ್ಸಿನಲ್ಲಿ ಕಲಾಯಾನದ ಪಯಣವನ್ನು ಆರಂಭಿಸಿದ ಅಡೂರು ಗಣೇಶ್ ರಾವ್ ಮೊದಲಾಗಿ ಸೇರಿಕೊಂಡದ್ದು ಸುರತ್ಕಲ್ ಮೇಳಕ್ಕೆ. ಅಲ್ಲಿ ಒಂದು ವರ್ಷದ ಅನುಭವ ಪಡೆದರು. ಮುಂದಿನ ವರ್ಷ ಕಟೀಲು ಮೇಳದಲ್ಲಿ ತಿರುಗಾಟ ಆರಂಭಿಸಿದ ಅವರು ಅಲ್ಲಿ ಪಕ್ವತೆಯ ಅನುಭವ ಪಡೆದರು. ಕಟೀಲು ಮೇಳದಲ್ಲಿ ಮೊದಲ ವರ್ಷ ಚಕ್ರತಾಳ ಬಾರಿಸುತ್ತಿದ್ದರು. ಆ ವರ್ಷ ವೇಷಧಾರಿಯಾಗಿಯೂ ಗುರುತಿಸಲ್ಪಟ್ಟಿದ್ದರು. ಕಟೀಲು ಮೇಳದಲ್ಲಿ ಇರಾ ಗೋಪಾಲಕೃಷ್ಣ ಭಾಗವತರ ಜೊತೆ ತಿರುಗಾಟ ಮಾಡಿದ್ದರು. ಜೊತೆ ಜೊತೆಯಲ್ಲಿ ಇರಾ ಗೋಪಾಲಕೃಷ್ಣ ಭಾಗವತರಿಂದ ಮದ್ದಳೆಯನ್ನೂ ಅಭ್ಯಾಸ ಮಾಡಿದ್ದರು. ಕಟೀಲು ಮೇಳದಲ್ಲಿ ಎರಡು ವರ್ಷ ತಿರುಗಾಟ ಮಾಡಿದ ನಂತರ 5 ವರ್ಷಗಳ ಕಾಲ ಪುತ್ತೂರು ಮೇಳದಲ್ಲಿ ಸೇವೆ ಸಲ್ಲಿಸಿದ್ದರು. ಈ ನಡುವೆ ಕುಕ್ಕಿಲ ಶಂಕರ ಭಟ್ಟರಿಂದ ಶಾಸ್ತ್ರೀಯ ಸಂಗೀತದ ಮೃದಂಗವನ್ನೂ ಕಲಿತು ಕೊಂಡಿದ್ದರು. ಇದಾದ ಮೇಲೆ ಪುನಃ ಕಟೀಲು ಮೇಳಕ್ಕೆ ಸೇರಿದ್ದರು. ಅಲ್ಲಿ 6 ವರ್ಷ ಹಿಮ್ಮೇಳ ವಾದಕರಾಗಿದ್ದು ಮುಂದಿನ 1 ವರ್ಷ ಕದ್ರಿ ಮೇಳ ದಲ್ಲಿ ಕಲಾ ವ್ಯವಸಾಯ ಮಾಡಿದ್ದರು. ಆ ಬಳಿಕ ನಿರಂತರ 22 ವರ್ಷಗಳ ಕಾಲ ಧರ್ಮಸ್ಥಳ ಮೇಳವೊಂದರಲ್ಲಿಯೇ ಸೇವೆ ಸಲ್ಲಿಸಿದ್ದರು.
ಅಡೂರು ಗಣೇಶ್ ರಾವ್ ಮತ್ತು ಮೇಳನಿಷ್ಟೆ: ತನ್ನ ವೃತ್ತಿಜೀವನದ ಪೂರ್ವಾರ್ಧದ ಅನಿವಾರ್ಯ ಕಾರಣಗಳನ್ನು ಹೊರತುಪಡಿಸಿದರೆ ಅಡೂರು ಗಣೇಶರೆಂದೂ ಮೇಳಗಳನ್ನು ಆಗಾಗ ಬದಲಾಯಿಸಿದವರಲ್ಲ. ತನ್ನ ಜೀವನಕ್ಕೆ ಸ್ಥಿರತೆ ಬಂದ ಮೇಲೆ ಅಥವಾ ತಾನು ಸೆಟ್ಲ್ ಆದ ಮೇಲೆ ಸ್ಥಿರವಾಗಿ ಧರ್ಮಸ್ಥಳ ಮೇಳವೊಂದರಲ್ಲೇ 22 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಶ್ರೀ ಧರ್ಮಸ್ಥಳ ಮೇಳವನ್ನು ಕಲಾವಿದರ ನೆಚ್ಚಿನ ಮೇಳವೆಂದು ಅಡೂರು ಗಣೇಶ ರಾಯರು ಹೇಳುತ್ತಿದ್ದರು.
ಮಾರ್ಗದರ್ಶಕರು ಹಾಗೂ ಸಹಕಲಾವಿದ ರೊಂದಿಗೆ ಅಡೂರು: ಅಡೂರು ಗಣೇಶ್ ರಾವ್ ಅವರು ತನ್ನನ್ನು ಕಲಿಸಿ ಪ್ರೋತ್ಸಾಹಿಸಿದ ಇರಾ ಗೋಪಾಲಕೃಷ್ಣ ಭಾಗವತರು, ರಂಗಮಾಹಿತಿ ಮತ್ತು ನಡೆಗಳನ್ನು ಉಪದೇಶಿಸಿದ ನೆಡ್ಲೆ ನರಸಿಂಹ ಭಟ್, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ಪುತ್ತಿಗೆ ರಘುರಾಮ ಹೊಳ್ಳ, ದಿನೇಶ್ ಅಮ್ಮಣ್ಣಾಯ ಇವರನ್ನು ಆಗಾಗ ಉಲ್ಲೇಖಿಸುತ್ತಿದ್ದರು. ಅಡೂರು ಗಣೇಶ್ ರಾವ್ ಅವರು ಚೆಂಡೆ ಹಾಗೂ ಮದ್ದಳೆಗಳ ಸುಲ್ತಾನ್ ಮಾಡುವುದರಲ್ಲೂ (ಶ್ರುತಿಗೆ ತಕ್ಕಂತೆ ನಾದವನ್ನು ಹೊಂದಿಸುವುದು) ನಿಪುಣರಾಗಿದ್ದರು.
ಅಡೂರು ಮತ್ತು ಭಾಗವತಿಕೆ: ಅಡೂರು ಗಣೇಶ್ ರಾವ್ ಚೆಂಡೆಯ ಊರುಳಿಕೆಗಳಲ್ಲಿ, ಮದ್ದಲೆಯ ನುಡಿತಗಳಲ್ಲಿ ಮಾತ್ರ ನಿಪುಣರಲ್ಲ. ಅವರು ಭಾಗವತಿಕೆಯನ್ನೂ ಮಾಡಬಲ್ಲವರಾಗಿದ್ದರು. ಉತ್ತಮ ಶಾರೀರ ಹೊಂದಿರುವ ಅವರು ಧರ್ಮಸ್ಥಳ ಮೇಳದಲ್ಲಿ ಭಾಗವತರ ಅನುಪಸ್ಥಿತಿಯಲ್ಲಿ ಆಗಾಗ ಸಂಗೀತ ಭಾಗವತಿಕೆ ಮತ್ತು ಪ್ರಸಂಗ ಭಾಗವತಿಕೆಯನ್ನೂ ಮಾಡಿದ್ದಾರೆ. ಕೆಲವೊಂದು ಅನಿವಾರ್ಯತೆ ಎದುರಾದಾಗ ಬೆಳಗ್ಗಿನ ವರೆಗೂ ಹಾಡಿದ್ದುಂಟು ಎಂದು ಸ್ವತಃ ಅವರೇ ಹೇಳುತ್ತಿದ್ದರು.
ಭಾವನಾತ್ಮಕ ಅಡೂರು: ಯಕ್ಷಗಾನ ಕಲಾವಿದರಿಗೆ ಈಗ ಜೀವನ ನಿರ್ವಹಣೆಗೆ ಹೇಳಿಕೊಳ್ಳುವಂತಹಾ ಕಷ್ಟವೇನಿಲ್ಲ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ಅಡೂರು ಗಣೇಶ್ ರಾವ್ ಆಗಾಗ ತಮ್ಮ ಮನದಾಳದ ನೋವನ್ನು ಹೊರಹಾಕುತ್ತಿದ್ದರು. ಈಗಿನ ಅಭಿಮಾನಿ ಸಂಘಗಳ ಕಾಲಘಟ್ಟದಲ್ಲಿ ಹಿಮ್ಮೇಳವಾದಕರು ಕಳೆದು ಹೋಗುತ್ತಿದ್ದಾರೆ ಎಂಬುದು ಅವರ ಭಾವನೆಯಾಗಿತ್ತೆಂದು ತೋರುತ್ತದೆ. ಮುಮ್ಮೇಳ ಕಲಾವಿದರು ಮತ್ತು ಭಾಗವತರಿಗಿರುವಷ್ಟು ಮನ್ನಣೆ ಮದ್ದಳೆಗಾರರಿಗೆ ಸಿಗುತ್ತಿಲ್ಲವೆಂದು ಅವರು ವಿಷಾದಿಸುತ್ತಿದ್ದರು. “ಕಲಾವಿದನೊಬ್ಬ ಎಷ್ಟು ನಾಟ್ಯ ಮಾಡಿದ, ಎಷ್ಟು ಧೀಂಗಿಣ ಹಾರಿದ ಹಾಗೂ ಭಾಗವತರೊಬ್ಬರು ಎಷ್ಟು ಚೆನ್ನಾಗಿ ಹಾಡಿದರು ಎಂಬುದನ್ನು ಲೆಕ್ಕ ಹಾಕುತ್ತಾರೆಯೇ ವಿನಃ ಸಾಥ್ ನೀಡಿದ ವಾದಕರನ್ನು ಉಲ್ಲೇಖಿಸುವುದು ವಿರಳ” ಎಂಬ ಮಾತುಗಳು ಪ್ರಸ್ತುತ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಂತಿದೆ.
ಅದೇನೇ ಇರಲಿ. ಪೌರಾಣಿಕ ಪ್ರಸಂಗಗಳ ನಡೆ, ರಂಗಮಾಹಿತಿಗಳನ್ನು ಬಲ್ಲ ಅಪರೂಪದ ಹಿಮ್ಮೇಳವಾದಕ ಅಡೂರು ಗಣೇಶ್ ರಾವ್ ಓರ್ವ ಅಪರೂಪದ ಸಾಧಕ. ಕ್ಲಿಷ್ಟ ಪ್ರಸಂಗಗಳಾದ ದುಶ್ಶಾಸನ ವಧೆ, ಅಭಿಮನ್ಯು ಕಾಳಗ, ಕುಮಾರ ವಿಜಯ ಹಾಗೂ ತಾಮ್ರಧ್ವಜ ಕಾಳಗವೇ ಮೊದಲಾದ ಅಪೂರ್ವ ಪ್ರಸಂಗಗಳ ನುಡಿಸಾಣಿಕೆ ಯಲ್ಲೂ ನಿಪುಣರಾಗಿದ್ದ ಅವರ ಅಗಲಿಕೆ ಇಡೀ ಯಕ್ಷಗಾನ ರಂಗಕ್ಕಾದ ನಷ್ಟ. ಈ ಸಾವು ನ್ಯಾಯವಲ್ಲ. ಕೇವಲ 50 ವರ್ಷಗಳ ವಯಸ್ಸು. ಇನ್ನೂ 15 ಸಂವತ್ಸರಗಳ ಕಾಲ ಯಕ್ಷಗಾನದ ಹಿಮ್ಮೇಳದಲ್ಲಿ ಅದ್ವಿತೀಯರಾಗಿ ಮೆರೆಯಬಹುದಾಗಿದ್ದ ರತ್ನವೊಂದನ್ನು ಕಳೆದುಕೊಂಡಿದ್ದೇವೆ.
ನಾವು ಆಗಾಗ ಕೇರಳಕ್ಕೆ ಹೋಗುತ್ತಿದ್ದಾಗ ಅಡೂರು ಎಂಬ ಊರನ್ನು ದಾಟಿಯೇ ಹೋಗುವುದು. ಇತ್ತೀಚೆಗೆ ಹೋದಾಗ ಅಡೂರು ಎಂಬ ಹೆಸರಿನೊಂದಿಗೆ ತಳಕು ಹಾಕಿಕೊಂಡಿರುವ ಗಣೇಶ್ ರಾವ್ ನೆನಪಾದರು. ಅಡೂರಿನ ಸ್ವಚ್ಛಂದ ಗಾಳಿಯ ಸುಂಯ್ ಎನ್ನುವ ಸಂಗೀತದ ನಿನಾದದ ಜೊತೆ ದೂರದಲ್ಲೆಲ್ಲೋ ಶ್ರುತಿ, ಲಯಬದ್ಧವಾದ ಚೆಂಡೆಯ ಧ್ವನಿ ಕೇಳಿಬರುತ್ತಿರುವ ಹಾಗೆ ಅಪೂರ್ವವಾದ ಅನುಭವ. ಹೌದು… ಅದು ಅಡೂರು ಗಣೇಶ್ ರಾವ್ ಅವರ ಚೆಂಡೆಯ ನುಡಿತವೇ ಇರಬೇಕು.
ಆಚಾರ್ಯರೆ, ನಿಮಗೆ ಕೌರವ ಒಬ್ಬನ ಹಂಗಿರುವುದು. ಆದರೆ ನನಗೆ ಹಾಗಾ? ಇಡೀ ವಿಶ್ವದ ಹಂಗನ್ನೇ ಇಟ್ಟುಕೊಂಡಿದ್ದೇನೆ ನಾನು. ಇಡೀ ವಿಶ್ವದಲ್ಲಿ ಧರ್ಮ ಎನ್ನುವುದು ಶಾಶ್ವತವಾಗಿ ಸ್ಥಿರವಾಗಿ ನಡೆಯಬೇಕು. ಧರ್ಮಕ್ಕೆ ಲೋಪ ಬಂದಾಗ ವಿಶ್ವವೇ ನಾಶವಾಗುತ್ತದೆ. ಅಂತಹಾ ಧರ್ಮ ರಕ್ಷಣೆ ಮಾಡುವ ಹಂಗನ್ನಿಟ್ಟುಕೊಂಡ ನಾನು ಯಾವ ಕಾಲಕ್ಕೆ ಏನು ಮಾಡಬೇಕೋ ಅದನ್ನು ಮಾಡಿಯೇ ತೀರುತ್ತೇನೆ. ಈಗ ನೀವು ಹೇಳಿದ್ದೀರಲ್ಲ ಕೌರವನ ಅನ್ನ ಅಂತ. ಅಲ್ಲಿಯೂ ನೀವು ಸ್ವಲ್ಪ ವಿಮರ್ಶೆ ಮಾಡಬೇಕಾಗಿತ್ತು. ಕುರುಕುಲದ ಹಿರಿಯರು ನೀವು. ಹಿರಿಯರಾದ ನೀವು ಹಸ್ತಿನಾವತಿಯ ಯೋಗಕ್ಷೇಮವನ್ನು ನೋಡಿಕೊಳ್ತೇನೆ ಅಂತ ಮಾತು ಕೊಟ್ಟಿದ್ದೀರಿ, ಅದಕ್ಕಾಗಿ ಬಂದಿದ್ದೇನೆ ಅಂತ ಹೇಳ್ತಾ ಇದ್ದೀರಿ.
ಈ ಹಸ್ತಿನಾವತಿಯ ಸಿಂಹಾಸನ ನಿಮ್ಮ ಜೀವಿತ ಕಾಲದಲ್ಲಿ ಏನೇನು ಅವಸ್ಥೆಯನ್ನು ಅನುಭವಿಸಿತು ಎಂದು ಪ್ರತ್ಯಕ್ಷ ಕಂಡವರಲ್ಲವೇ ನೀವು? ಕೌರವನಂತಹವರು, ಅಭಿಷೇಕ ಆಗದಿದ್ದರೂ ಬೇರೆ ಯಾರೂ ಇಲ್ಲ ಎಂಬ ಸಂದರ್ಭವನ್ನು ನೋಡಿ ಸಿಂಹಾಸನ ತನ್ನದು ಎಂದು ಏರಿದವ. ಅವನಿಗೊಂದು ಸಂಸ್ಕಾರ ಇರಲಿಲ್ಲ. ಹಾಗೆ ಪಾಂಡುವಿನ ಮಕ್ಕಳಾದ ಧರ್ಮರಾಜಾದಿಗಳು ಬಂದರು. ನೀವು ಇದ್ದುಕೊಂಡೇ ಧರ್ಮರಾಜನಿಗೆ ಒಂದು ಯೌವರಾಜ್ಯಾಭಿಷೇಕ ಮಾಡಿದ್ದು ಅಂತ ನಾನು ಕೇಳಿದ್ದೇನೆ. ಅದನ್ನು ಎಲ್ಲಿ ಬಚ್ಚಿಟ್ಟಿದ್ದೀರಿ ಇವತ್ತು? ಧರ್ಮರಾಜನಿಗೆ ನೀಡಿದ ಯುವರಾಜನ ಅಧಿಕಾರ ಈಗ ಎಲ್ಲುಂಟು? ಅಂತಹಾ ಧರ್ಮರಾಜಾದಿಗಳು ದ್ರೌಪದಿ ಸ್ವಯಂವರ ನಂತರ ಪುನಃ ಕಾಣಿಸಿಕೊಂಡಾಗ ಅವರಿಗೆ ರಾಜ್ಯವನ್ನು ಭಾಗಮಾಡಿ ಇಂದ್ರಪ್ರಸ್ಥಕ್ಕೆ ಕಳುಹಿಸಿಕೊಟ್ಟರು. ಹಿರಿಯರಾದ ನೀವೆಲ್ಲಾ ಇದ್ದುಕೊಂಡೇ ‘ರಾಜ್ಯಾಧಿಕಾರದಲ್ಲಿ ನನ್ನ ಕೈವಾಡ ಇಲ್ಲ’ ಎಂದು ನೀವು ಹೇಳುವುದಾದರೆ ಈ ವರೆಗೆ ಇದೆಲ್ಲಾ ಏನು ಮಾಡಿದ್ದು ಮತ್ತೆ?
ಆದ್ದರಿಂದ ತಾರತಮ್ಯ ಜ್ಞಾನವನ್ನು ಚೆನ್ನಾಗಿ ಆಲೋಚನೆ ಮಾಡಿ ಹಸ್ತಿನಾವತಿಗೆ ಯಾವುದು ಉಚಿತ ಮತ್ತು ಯಾವುದು ಅನುಚಿತ ಎಂದು ತಿಳಿದು ಮಾಡಬೇಕಾದ್ದನ್ನು ನೀವು ಮಾಡಬೇಕಾಗಿತ್ತು. ಅದರಲ್ಲಿ ಏನೋ ಒಂದು ಲೋಪ ಬಂದಿದೆ. ಯಾಕೆಂದರೆ ನಿಮಗೆ ಧೃತರಾಷ್ಟ್ರನ ಮೇಲಿನ ದಾಕ್ಷಿಣ್ಯ, ಧೃತರಾಷ್ಟ್ರನಿಗೆ ಮಗನ ಮೇಲಿನ ವಾತ್ಸಲ್ಯ. ಈ ದಾಕ್ಷಿಣ್ಯಗಳು, ಈ ವಾತ್ಸಲ್ಯಗಳು ಎಲ್ಲಾ ಒಟ್ಟು ಸೇರಿ ಏನೋ ಒಂದು ದೊಡ್ಡ ಗೊಂದಲವಾಗಿ ಇವತ್ತು ಪರಿಣಾಮ ಹೀಗಾಗಿದೆ. ಅದಕ್ಕೆ ಮೆಲ್ಲನೆ ಅವಕಾಶವನ್ನು ಮಾಡಿಕೊಟ್ಟವರಲ್ಲಿ ಜ್ಞಾತವಾಗಿಯೂ ಅಜ್ಞಾತವಾಗಿಯೂ ನೀವೊಬ್ಬರು ನಿಶ್ಚಯವೇ. ಇವತ್ತು ಬಂದಿದ್ದೀರಿ ನೀವು. ಕೌರವನ ಸೇನಾಧಿಪತಿಯಾಗಿ ಬಂದಿದ್ದೀರಿ. ನಿಮ್ಮ ಮಾತಿನಂತೆ ನಾನು, ನನ್ನ ಭಕ್ತರೆಲ್ಲಾ ಸಮಾನರು ಎಂದು ತಿಳಿದುಕೊಂಡು ‘ನಮೇ ಭಕ್ತ ಪ್ರಣಶ್ಯತಿ’ ಎಂದು ಹೇಳಿದ್ದೇನಲ್ಲ ನಾನು. ಇವನೂ ಒಬ್ಬ ಭಕ್ತ, ಸರಿ ಜಯಿಸಲಿ ಭೀಷ್ಮ ಎಂದು ಹೇಳಿದರೆ ಪರಿಣಾಮ ಏನಾದೀತು? ಈ ಜಯ ಯಾರಿಗೆ? ನಿಮಗೋ? ವೈಯುಕ್ತಿಕವಾಗಿಯಾ? ಭೀಷ್ಮನಿಗೆ ಈ ಜಯದಿಂದ ಏನು ಕೀರ್ತಿ ಬರಲಿಕ್ಕುಂಟ? ರಾಜ್ಯ ಬರಲಿಕ್ಕುಂಟ, ಸಂಪತ್ತು ಬರಲಿಕ್ಕುಂಟ, ಅಧಿಕಾರ ಬರಲಿಕ್ಕುಂಟ? ಏನಿದ್ದರೂ ಕೌರವನಿಗೆ ಮಾತ್ರ. ಪರಿಣಾಮ ಏನಾಗುತ್ತದೆ?
ಪ್ರಪಂಚದಲ್ಲಿ ಯಾವುದು ದೌಷ್ಟ್ರ್ಯ ಉಂಟೋ, ಯಾವುದು ಅಧರ್ಮ ಉಂಟೋ, ಯಾವುದು ಅನಾಚಾರ ಉಂಟೋ, ಯಾವುದು ಅತ್ಯಂತ ಗರಿಹಿತವಾದ ವಿಚಾರವುಂಟೋ ಅದನ್ನು ಎತ್ತಿಹಿಡಿದಂತಹಾ ಕೌರವನನ್ನು ನಿಮ್ಮ ಜಯದ ಮೂಲಕ ನಾನು ಎತ್ತಿಹಿಡಿದೆ ಅಂತ ಆದರೆ ನನ್ನ ಧರ್ಮದ ಹಂಗು ಎಲ್ಲಿ ಉಳಿಯಿತು? ಆದ್ದರಿಂದ ‘ದುಷ್ಟ ಸುಯೋಧನನೊಡಗೊಂಡಿಹೆ’ ಎಂಬ ಈ ಆವರಣ ಉಂಟು. ಆ ಆವರಣ ಛೇದ ಆಗುವವರೆಗೆ ಏನೂ ಪಾವಿತ್ರ್ಯ ಇಲ್ಲಿ ಬರುವುದಿಲ್ಲ. ಏನು ಮಾಡೋಣ ಹೇಳಿ? ಒಂದು ಸುಂದರವಾದ ಹೂವು ಇಲ್ಲಿ ಅರಳಿದೆ. ಪೂಜೆಗೆ ಯೋಗ್ಯವಾದದ್ದು. ದೇವತಾರ್ಚನೆಗೆ ಆ ಹೂವನ್ನು ತೆಗೆದುಕೊಂಡು ಹೋಗಬೇಕು. ಆದರೆ ಅದು ಅರಳಿದ್ದು ಸ್ಮಶಾನದಲ್ಲಿ. ಹೆಣ ಸುಟ್ಟ ಜಾಗದಲ್ಲಿ ಅರಳಿಕೊಂಡಿದೆ. ದೇವತಾರ್ಚನೆಗೆ ಯೋಗ್ಯವಲ್ಲ. ಅಲ್ಲಿ ಅಮೃತವೇ ಸಿಕ್ಕಿದ್ದು. ಆದರೆ ಪಾತ್ರೆ ಮಾತ್ರ ಹೆಂಡದ ಪಾತ್ರೆಯಾಗಿ ಹೋಗಿದೆ. ಹೆಂಡದ ಪಾತ್ರೆಯಲ್ಲಿ ಬಂದ ಅಮೃತದಂತೆ, ಸ್ಮಶಾನದಲ್ಲಿ ಹುಟ್ಟಿದ ಕುಸುಮದಂತೆ ಇವತ್ತು ಭೀಷ್ಮನಂತಹಾ ಒಬ್ಬ ಭಕ್ತ ಬಂದು ಕೌರವನ ಸೇನಾಧಿಪತಿಯಾಗಿ ‘ನನಗೆ ಜಯವನ್ನು ಕರುಣಿಸು ದೇವರೇ’ ಎಂದು ಹೇಳಿದರೆ ದೇವರಾದವರು ಕರುಣಿಸಿಯಾರೆ?
ಸ್ಪಷ್ಟವಾಗಿ ಹೇಳುತ್ತಾ ಇದ್ದೇನೆ. ಆ ಎಚ್ಚರಕ್ಕೋಸ್ಕರವೇ ನಿಮ್ಮಲ್ಲಿ ಇಷ್ಟು ದೀರ್ಘವಾಗಿ ಮಾತು ಬೆಳೆಸಿದ್ದು ನಾನು. ನೀವು ಏನೇನು ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡಿದ್ದೀರೋ ‘ಕರ್ತವ್ಯ ಪಾಲನೆಗಾಗಿ ಬಂದಿದ್ದೇನೆ. ಧರ್ಮವೋ ಅಧರ್ಮವೋ, ಪರಿಣಾಮ ಶುಭವೋ, ಅಶುಭವೋ, ಆ ಕಡೆಗೆ ದೃಷ್ಟಿ ನನ್ನದಿಲ್ಲ. ಕೌರವನ ಸೇನಾಧಿಪತಿಯಾಗಿ ಹೊಡೆದಾಡುವುದು ನನ್ನ ಪರಮ ಪಾವನವಾದ ಕರ್ತವ್ಯ’ ಎಂದು ಹೇಳಿಕೊಂಡು ಬಂದಿದ್ದೀರಲ್ಲ. ಅಲ್ಲೇ ಅಜ್ಞಾನ ಇರುವುದು. ಆದ್ದರಿಂದ ದುಷ್ಟ ಸುಯೋಧನನೊಡಗೊಂಡು, ಅವನ ಸೇನಾಧಿಪತಿಯಾದ ನಿಮ್ಮನ್ನು ಇಂದು ಧರ್ಮಪಕ್ಷಪಾತಿಗಳಾದ ನನ್ನ ಕೈಯ ಆಯುಧಗಳಾದ ಪಾಂಡವರಲ್ಲಿ ಈ ಅರ್ಜುನನಿಂದಾಗಿ ಮುಂದೆ ನಡೆಯುವ ಯುದ್ಧದಲ್ಲಿ ನಿಮ್ಮನ್ನು ಸೋಲಿಸಿ ‘ಅಧರ್ಮ ಸೋಲುತ್ತದೆ, ಜಯ ಗೆಲ್ಲುತ್ತದೆ ಎಂಬುದನ್ನು ಪ್ರಪಂಚಕ್ಕೆ ಮಾಡಿ ತೋರಿಸಬೇಕು ಅಂತ ಪ್ರತಿಜ್ಞೆ ಮಾಡಿದ್ದೇನೆ ನಾನು. ಯುದ್ಧ ಮಾಡುತ್ತೀರಾ ನೀವು?
ಇತ್ತ ಶೋಣಿತಪುರದಿ ದೈತ್ಯ ಕುಲ ಪುಂಗವನು ಮತ್ತೆ ಓಲಗದಲ್ಲಿ ಚಿತ್ತದುಮ್ಮಳದಿ ||
ಕುಲೋನ್ನತಿ ನಮಗೆ ಹುಟ್ಟಿನಿಂದಲೇ ಬಂದಿದೆ. ದೈತ್ಯಕುಲ. ಆದರೆ ಅಷ್ಟಕ್ಕೇ ವ್ಯಕ್ತಿಯಾದಂತಹ ನಾನು ನನ್ನ ಔನ್ನತ್ಯವನ್ನು ಬೌದ್ಧಿಕವಾಗಿ ಅಂಗೀಕರಿಸಲಿಲ್ಲ. ಸ್ವಪ್ರಯತ್ನದಿಂದ, ನನ್ನ ಸಾಧನೆಯಿಂದ ದೈತ್ಯಕುಲದಲ್ಲಿ ಉತ್ತುಂಗವಾದಂತಹ ಶ್ರೇಯಸ್ಸನ್ನು ಸಂಪಾದಿಸುವುದಕ್ಕಾಗಿ ದೈತ್ಯ ಕುಲದವನಾಗಿಯೂ ದೈತ್ಯ ಕುಲಪುಂಗವ ನಾಗಿಯೂ ತಲೆ ಎತ್ತಿದೆ. ಆವಾಗ ಹೇಗೆ? ಮಿಕ್ಕವರಿಗೆಲ್ಲಾ ಒಂದು ದಾರಿಯಾದರೆ ಮದ ಬಂದ ಆನೆಗೆ ಕಾಡಿನಲ್ಲಿ ಅದರದ್ದೇ ಆದ ಹಾದಿ. ನನ್ನ ಔನ್ನತ್ಯಕ್ಕೆ ಇದೇ ಸರಿ ಅಂತ ನಾನು ಹೋದದ್ದೇ ದಾರಿ, ನನಗೆ ಮಿಕ್ಕವರು ಹೋದ ಹಾದಿ ಅಲ್ಲ. ಇಷ್ಟು ಸಂಪಾದಿಸಿದ್ದೇನೆ. ಆದರೆ ಏನು ಮಾಡೋಣ? ಪರೋಕ್ಷವಾಗಿ ನನ್ನ ತಮ್ಮನನ್ನು ಕೊಲ್ಲುವುದರ ಮೂಲಕ ಆ ಹರಿ ಪಂಥಾಹ್ವಾನವನ್ನೇ ಕೊಟ್ಟ. ಅದೊಂದು ನೋವು ಸೇಡು ತೀರಿಸಲಾಗದೆ ಇದ್ದಂತಹಾ ಒಂದು ಕಳಕಳಿ. ಇದು ನನ್ನ ಹೊಟ್ಟೆಯಲ್ಲಿ ಉರಿಯುತ್ತಾ ಇತ್ತು.
ಆದರೆ ಆ ಉರಿ ನಂದಿ ಆನಂದದ ತಂಪು ಕೊಡುವುದಕ್ಕಾಗಿಯೇ ನನಗೊಬ್ಬ ಅಪರೂಪದ ಮಗ ಹುಟ್ಟಿದ. ಈ ಪುತ್ರೋತ್ಸವದಲ್ಲಿ ನನ್ನ ತಮ್ಮನನ್ನು ಕೊಂದಂತಹ ಹರಿಯನ್ನು ನಾನು ಮರೆತುಬಿಟ್ಟೆ. ಸ್ವಲ್ಪ ಕಾಲ ಮರೆತುಬಿಟ್ಟೆ. ಇನ್ನು ಮರೆಯುವುದೇ ಒಳ್ಳೆಯದು. ಯಾಕೆ? ಅವನನ್ನು ಮರೆಯುವುದಕ್ಕಾಗಿಯೇ ನನಗೊಬ್ಬ ಮಗ. ಇವನನ್ನು ಕಂಡಾವಾಗ ಅವನ ನೆನಪೇ ನನಗಿಲ್ಲದೆ ಹೋಗುತ್ತದೆ. ಇದು ನನ್ನದದ್ದಾದ ತಪಸ್ಸಿನ ಫಲ. ಈ ಹಿಂದೆ ನಾನು ಪುತ್ರವಂತನೇ. ಆದರೆ ಈ ಮಗನಿಂದ ನನ್ನ ಅಂತಃಕರಣದಲ್ಲಿ ಏನು ಅನುಭವವಾಯಿತೋ ಇದಕ್ಕೆ ಬೇರೆ ಶಬ್ದ ಸಿಕ್ಕದೆ ‘ಪ್ರಹ್ಲಾದ’ ಎಂದು ಹೆಸರಿಟ್ಟೆ. ಅಂದರೇನು? ಪ್ರಕರ್ಷೇಣ ಸಂತೋಷವನ್ನು ತಂದವ. ಈ ಮಗ ಹುಟ್ಟಿದ ಮೇಲೆ ಅವ ಯಾಕೆ ಬೇಗ ಬೆಳೆಯುವುದಿಲ್ಲ. ಅಂತಲೇ ನನ್ನ ಉತ್ಸಾಹ.
ಯಥಾರ್ಥಕ್ಕಾದರೆ ನಾನು ಬಿಟ್ಟುಹೋದ ಸ್ಥಾನವನ್ನು ತುಂಬಬೇಕಾಗಿದ್ದರೆ ಅವನೇ ಸರಿ. ವಯಸ್ಸಿನಲ್ಲಿ ಚಿಕ್ಕವನಾದರೇನು? ಆದಕಾರಣ ಅವಸರದಲ್ಲಿ ಐದನೇ ವಯಸ್ಸಿಗೆ ಉಪನಯನವನ್ನೂ ಮಾಡಿದೆ. ಹಾಗುಂಟು ಶಾಸ್ತ್ರದಲ್ಲಿ ಎಂದು ನಮ್ಮ ಗುರುಗಳು ಹೇಳಿದ್ದಾರೆ. ಅಂತಃಕರಣದ ಬೆಳವಣಿಗೆಯನ್ನು ನೋಡಿ ವಯಸ್ಸನ್ನು ನಿರ್ಣಯಿಸಬೇಕೇ ಹೊರತು ದೇಹದ ಬೆಳವಣಿಗೆಯನ್ನು ನೋಡಿ ಅಲ್ಲ. ಹಾಗಾಗಿ ಐದು ವರ್ಷದಲ್ಲೇ ಉಪನಯನ ಸಂಸ್ಕಾರವನ್ನು ಮಾಡಿ ವಿದ್ಯಾಭ್ಯಾಸಕ್ಕೆಂದು ಗುರುವಿಗೆ ಒಪ್ಪಿಸಿಬಿಟ್ಟಿದ್ದೇನೆ. ಮಾತೃದೇವೋಭವ, ಪಿತೃದೇವೋಭವ ಎಂದು ಮನೆಯಲ್ಲೇ ಅವನಿಗೆ ಪಾಠವಾಗಿದೆ. ಆಚಾರ್ಯ ದೇವೋಭವವಾಗಿ ನನ್ನ ಹಾಗೆ ಅವನಿಗೂ ಗೊತ್ತಾಗಬೇಕು. ಹೊರಗೆ ದೇವರಿಲ್ಲ. ಇದ್ದರೆ ನಾನೇ. ಅಹಂ ಬ್ರಹ್ಮಾಸ್ಮಿ ಎಂದು. ಹಾಗೆ ಹುಡುಗ ಹೋಗಿದ್ದಾನೆ.
ಹುಡುಗ ಹತ್ತಿರ ಇದ್ದರೆ ಅವನ ವಿದ್ಯೆಗೆ ಪೆಟ್ಟು ಬರುತ್ತದೆಯಲ್ಲ ಎಂದು ನಾನು ಕಳಿಸಿದೆ. ಹುಡುಗ ಇಲ್ಲದಿದ್ದರೆ ತುತ್ತು ಅನ್ನ ನನಗೆ ರುಚಿಸುವುದಿಲ್ಲ. ಅಂತೂ ನಾವು ಬಹಳ ಪ್ರೀತಿಯನ್ನು ಇರಿಸಿದರೂ ನಮಗೆ ನೋವೇ. ವಿರೋಧವನ್ನು ಸಾಧಿಸಿದರೂ ನೋವೇ. ನನ್ನ ಹಣೆಬರಹ ಹೀಗಾಯಿತಲ್ಲಾ. ಈ ಹುಡುಗ ಹುಟ್ಟುವಲ್ಲಿಯ ವರೆಗೆ ಹರಿ ದ್ವೇಷದಲ್ಲಿಯೇ ನಾನು ತಿಂದ ಅನ್ನ ನನಗೆ ರುಚಿಯಾಗಲಿಲ್ಲ. ಈಗ ಇಮ್ಮಡಿ ಮೋಹ ಈ ಬಾಲಕನಲ್ಲಿ ಆದ ದೆಸೆಯಿಂದ ಈಗಲೂ ಸುಖವಿಲ್ಲ. ಆದರೆ ಒಂದು, ನಾರಾಯಣನನ್ನು ಹುಡುಕಿದೆ. ಹುಡುಕಿದೆ. ಹುಡುಕಿದೆ. ಆದರೆ ಗೋಚರವಾಗಲಿಲ್ಲ. ನನ್ನ ಮಗನನ್ನು ನಾನು ಹುಡುಕುವುದಕ್ಕೇನುಂಟು? ಒಮ್ಮೆ ಕಾಣಬೇಕು ಮಗನನ್ನು. ‘ಮಗ ಬರಲಿ’ ಎಂದು ಹೇಳಿದರೆ ಬರುವುದಲ್ಲವೇ? ಬರ್ತಾನೆ. ಬರ್ತಾನೆ… ಆದ ಕಾರಣ ಗುರುಗಳಿಗೆ ಹೇಳಿ ಕಳುಹಿಸಿದ್ದೇನೆ. ಸಂದರ್ಭ ಇದ್ದರೆ ಒಂದು ಘಳಿಗೆ ನಮ್ಮ ಮಗ ಬಂದು ಹೋಗಲಿ. ಬಂದಾನು… ಬಂದಾನು… ನೋಡೋಣ.
63 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಅಂಬಲಪಾಡಿಯ ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾ ಮಂಡಳಿಯು ನಿರ್ಮಿಸುತ್ತಿರುವ ನೂತನ ರಂಗಮಂದಿರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ. ವೀರೆಂದ್ರ ಹೆಗ್ಗೆಡೆಯವರು ಪ್ರಸಾದ ರೂಪವಾಗಿ 5 ಲಕ್ಷ ರೂಪಾಯಿ ದೇಣಿಗೆಯನ್ನು ನೀಡಿ ಹರಸಿದ್ದಾರೆ. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಜಿಲ್ಲಾ ನಿರ್ದೇಶಕರಾದ ಶ್ರೀ ಬಿ. ಗಣೇಶ್‍ರವರು ಮಂಡಳಿಯ ಅಧ್ಯಕ್ಷ ಮುರಲಿ ಕಡೆಕಾರ್ ಅವರಿಗೆ ಡಿ.ಡಿ.ಯನ್ನು ದಿನಾಂಕ 06-01-2021ರಂದು ಹಸ್ತಾಂತರಿಸಿದರು.
ಈ ಸಮಯದಲ್ಲಿ ಗ್ರಾಮಾಭಿವೃದ್ಧಿಯೋಜನೆಯ ಅಂಬಲಪಾಡಿ ಒಕ್ಕೂಟದ ಅಧ್ಯಕ್ಷ ಪ್ರಕಾಶ್ ಆಚಾರ್, ಮೇಲ್ವಿಚಾರಕರಾದ ಜಯಕರ್, ಸಹಾಯಕಿ ಗೀತಾ ಪಾಲನ್, ಪಂಚಾಯತ್ ಸದಸ್ಯರಾದ ಹರೀಶ ಪಾಲನ್, ಯುವಕ ಮಂಡಲದ ಗೌರವ ಅಧ್ಯಕ್ಷ ಕೀರ್ತಿ ಶೆಟ್ಟಿ, ಅಂಬಲಪಾಡಿ ಲಕ್ಷ್ಮೀಜನಾರ್ದನ ಯಕ್ಷಗಾನ ಮಂಡಳಿಯ ನಾರಾಯಣ ಎಮ್. ಹೆಗಡೆ, ಕೆ. ಜೆ. ಗಣೇಶ, ಕೆ. ಅಜಿತ್‍ಕುಮಾರ್, ನಟರಾಜ ಉಪಾಧ್ಯ, ಪ್ರವೀಣ ಉಪಾಧ್ಯ, ಜಯ ಕೆ., ಪ್ರಣಿತ್ ಉಪಸ್ಥಿತರಿದ್ದರು. ಮಂಡಳಿ ಅಧ್ಯಕ್ಷ ಮುರಲಿ ಕಡೆಕಾರ್ ಸ್ವಾಗತಿಸಿ, ಕಾರ್ಯದರ್ಶಿ ಕೆ.ಜೆ. ಕೃಷ್ಣ ಧನ್ಯವಾದ ಸಮರ್ಪಿಸಿದರು.
ಯಶಸ್ವೀ ವ್ಯಕ್ತಿಗಳ ಸಾಧನೆಯೇನೂ ಅದ್ಭುತಗಳಿಂದ ಸಿದ್ಧಿಸಿದ್ದಲ್ಲ. ಪವಾಡ ನಡೆಸಿ ಜೀವನದಲ್ಲಿ ಯಶಸ್ಸು ಸಂಪಾದಿಸಲು ಸಾಧ್ಯವಿಲ್ಲ. ಜನಪ್ರಿಯತೆಯ ಹಿಂದಿನ ಶ್ರಮದ ಮಹತ್ವ ಅರಿಯಬೇಕಾದರೆ ದೀರ್ಘ ಯಶೋಗಾಥೆಗಳನ್ನು ತಿಳಿಯಬೇಕು. ಅಲ್ಲಿ ಪವಾಡಗಳಿರುವುದಿಲ್ಲ. ಕೇವಲ ಅದೃಷ್ಟವನ್ನೇ ನಂಬಿ ಕುಳಿತ ಕಾಯಕ ವಿರುವುದಿಲ್ಲ. ಪ್ರತಿಯೊಂದು ಯಶಸ್ಸಿನ ಕಣಕಣಗಳಲ್ಲಿಯೂ ಶ್ರಮದ ಬೆವರಿನ ವಾಸನೆಯಿರುತ್ತದೆ. ಕಷ್ಟಗಳ ಕಣ್ಣೀರಿನ ಬಿಂದುಗಳ ಚಿತ್ರಗಳಿರುತ್ತವೆ.
ಜನರು ಆರಾಧಿಸುವ, ಇಂದು ಉನ್ನತ ಸ್ಥಾನದಲ್ಲಿ ರಾರಾಜಿಸುತ್ತಿರುವವರೆಲ್ಲರೂ ನಿರಾಯಾಸವಾಗಿ ಆ ಸಾಧನೆಗಳನ್ನು ಸಿದ್ಧಿಸಿಕೊಂಡವರಲ್ಲ. ಕನಸುಗಳನ್ನು ನನಸಾಗಿಸುವಲ್ಲಿ ಅವರ ಆ ಛಲದ ಪಯಣ ಹಾಗೂ ಶ್ರಮ ಅವರನ್ನು ಅಷ್ಟು ಎತ್ತರಕ್ಕೇರಿಸಿದೆ.ಕೆಲವರಂತೂ ಬದುಕಿನುದ್ದಕ್ಕೂ ನಿರಂತರ ಹೋರಾಟಗಳನ್ನು ನಡೆಸಿದವರು. ಆ ಪಯಣದಲ್ಲಿ ಅನೇಕ ಎಡರುತೊಡರುಗಳನ್ನು, ಅವಹೇಳನ, ಟೀಕೆಗಳನ್ನು ಎದುರಿಸಿ ಮನಸ್ಸನ್ನು ಕಲ್ಲುಬಂಡೆಯನ್ನಾಗಿಸಿ ನಿರಂತರವಾಗಿ ಮಳೆ ಬಿಸಿಲುಗಳಿಗೆ ಮೈಯೊಡ್ಡಿ ನಿಂತರು, ಅವೆಲ್ಲವುಗಳನ್ನೂ ಮೀರಿ ನಿಂತು ಸಾಧನೆಯೇ ತಪಸ್ಸೆಂದು ಮುನ್ನುಗ್ಗಿ ನಡೆದವರ ಹಲವು ಉದಾಹರಣೆಗಳು ನಮ್ಮ ಮುಂದಿವೆ. ಅವರಲ್ಲೊಬ್ಬರು ತೋಟಿಮನೆ ಗಣಪತಿ ಹೆಗಡೆ.
ಸಂಘಟಕರ ಕಲಾವಿದ : ಸಾಧಾರಣವಾಗಿ ಯಕ್ಷಗಾನ ಕಲಾವಿದರು ಎದುರಿಸುವ ಮುಖ್ಯ ಆರೋಪವೊಂದಿದೆ. ಸಮಯಕ್ಕೆ ಕೈಕೊಡುವುದು ಹಲವರ ಅಭ್ಯಾಸವಾಗಿ ಬಿಟ್ಟಿದೆ ಎಂಬ ಮಾತು ಕಲಾವಲಯದಲ್ಲಿ ಪ್ರಚಲಿತವಿರುವ ಮಾತು. ಹಾಗೆಂದ ಮಾತ್ರಕ್ಕೆ ಎಲ್ಲರೂ ಆ ರೀತಿ ಎಂದು ತಿಳಿದುಕೊಳ್ಳಬಾರದು. ಆದರೆ ತೋಟಿಮನೆ ಗಣಪತಿ ಹೆಗಡೆಯವರದ್ದು ವಿಭಿನ್ನ ವ್ಯಕ್ತಿತ್ವ. ಕೊನೆಯ ಘಳಿಗೆಯಲ್ಲಿ ಯಾವುದೇ ಪ್ರದರ್ಶನಗಳಿಗೆ ಗೈರು ಹಾಜರಾದವರಲ್ಲ. ಪ್ರೇಕ್ಷಕರಿಗೆ ನಿರಾಸೆ ಮೂಡಿಸಿದವರಲ್ಲ. ಸಂಘಟಕರಿಗೂ ನೋವು ತಂದವರಲ್ಲ. ಯಾವುದೇ ಪಾತ್ರವಿರಲಿ ಅದನ್ನು ಸಮರ್ಥವಾಗಿ ನಿಭಾಯಿಸಿ ಪಾತ್ರಕ್ಕೆ ನ್ಯಾಯ ಒದಗಿಸುವ ಸಂಭಾವಿತ.
ಹೋರಾಟದ ಬಾಲ್ಯ : ತೋಟಿಮನೆ ಗಣಪತಿ ಹೆಗಡೆಯವರ ಬಾಲ್ಯವು ಹಸನಾದ ಬದುಕಾಗಿರಲಿಲ್ಲ. ಕಡು ಬಡತನದ ಕಹಿಯನ್ನುಂಡ ಅವರು ಅದಕ್ಕಾಗಿ ವ್ಯಥೆಪಡಲಿಲ್ಲ. ಎಲ್ಲವೂ ವಿಧಿಲಿಖಿತ ನಿಯಮವೆಂದುಕೊಂಡು ಅದನ್ನು ಅನುಭವಿಸಿ ಸಾಧಿಸಿ ತೋರಿಸಿದವರು. ತೋಟಿಮನೆಯವರ ತಂದೆ ದಿ| ಗೋವಿಂದ ಹೆಗಡೆ ಮತ್ತು ತಾಯಿ ದಿ| ಮಹಾದೇವಿಯವರ ಆಸ್ತಿ, ಶ್ರೀಮಂತಿಕೆಗಳು ಕೈಬಿಟ್ಟು ಹೋಗಿದ್ದರೂ ಮನೆತನದ ಸಂಸ್ಕಾರ, ಹೃದಯವಂತಿಕೆಗಳು ಹಾಗೆಯೇ ಉಳಿದುಕೊಂಡಿದ್ದುವು. ಧನವಿಲ್ಲದೊಡೇನು? ಅತಿಥಿ ಸತ್ಕಾರದ ಮನವಿದ್ದೊಡೆ… ಎಂಬಂತೆ ಮನೆಗೆ ಬಂದವರಿಗೆ ಹೊಟ್ಟೆ ತುಂಬಾ ಬಡಿಸುವ ಔದಾರ್ಯವಿತ್ತು. ಇಂತಹಾ ಸುಮನಸರಾದ ಗೋವಿಂದ ಹೆಗಡೆ, ಮಹಾದೇವಿ ದಂಪತಿಗಳ ನಾಲ್ಕು ಮಂದಿ ಮಕ್ಕಳಲ್ಲಿ ತೋಟಿಮನೆ ಗಣಪತಿ ಎರಡನೆಯವರು. 14-07-1964ರಲ್ಲಿ ಹೊನ್ನಾವರ ತಾಲೂಕಿನ ನಗರೆ ಗ್ರಾಮದ ತೋಟಿಮನೆಯಲ್ಲಿ ಜನಿಸಿದ ಗಣಪತಿ ಹೆಗಡೆಯ ಅಣ್ಣ ಸತ್ಯನಾರಾಯಣ ಹೆಗಡೆ (ಹವ್ಯಾಸಿ ಕಲಾವಿದರು) ಮತ್ತು ಇಬ್ಬರು ತಂಗಿಯಂದಿರು.
ಅಣ್ಣ ಸತ್ಯನಾರಾಯಣ ಹೆಗಡೆಯವರು ವಿದ್ಯಾಭ್ಯಾಸದಲ್ಲಿ ಮುಂದಿದ್ದು ಪದವಿ ಶಿಕ್ಷಣವನ್ನು ಪೂರೈಸಿದ್ದರೂ ಗಣಪತಿ ಹೆಗಡೆಯವರಿಗೆ ಮಾತ್ರ ಓದು ಅಷ್ಟಾಗಿ ತಲೆಗೆ ಹತ್ತಲಿಲ್ಲ. ಶಾಲೆಯಲ್ಲಿ ಪುಂಡಾಟದ ಹುಡುಗನಾಗಿದ್ದ ಹಾಗೂ ನೋಡಲು ತಕ್ಕಮಟ್ಟಿಗೆ ಗಟ್ಟಿಮುಟ್ಟಾಗಿದ್ದ ತೋಟಿಮನೆಯ ಹುಡುಗನಿಗೆ ಓದಿನಲ್ಲಿ ಆಸಕ್ತಿಯಿರಲಿಲ್ಲ. ಅನ್ಯಾಯ, ತಪ್ಪುಗಳನ್ನು ವಿರೋಧಿಸುವ ಗುಣಗಳನ್ನು ಚಿಕ್ಕಂದಿನಲ್ಲಿಯೇ ಮೈಗೂಡಿಸಿದ್ದ ಗಣಪತಿ ಹೆಗಡೆ ಹಲವಾರು ಕೀಟಲೆ ಹುಡುಗರಿಗೆ ಪೆಟ್ಟಿನ ರುಚಿ ತೋರಿಸಿದ್ದರು. ಇದರಿಂದ ತನ್ನ ಶಾಲಾವಧಿಯುದ್ದಕ್ಕೂ ಪುಂಡಾಟದ ಹುಡುಗನೆಂದು ಗುರುತಿಸಲ್ಪಟ್ಟಿದ್ದರು. ಸಿನಿಮಾ ನಟ ವಿಷ್ಣುವರ್ಧನ್ ಅವರ ಅಭಿಮಾನಿಯಾಗಿದ್ದ ಅವರು ವಿಷ್ಣು ಅಭಿನಯದ ಚಿತ್ರಗಳನ್ನು ಹೆಚ್ಚಾಗಿ ನೋಡುತ್ತಿದ್ದರಂತೆ. ಅಂತೂ ಬಡತನದ ನಡುವೆಯೂ ತೋಟಿಮನೆ ಗಣಪತಿ ಹೆಗಡೆ ಯವರು ಕವಲಕ್ಕಿಯ ಸಂಯುಕ್ತ ಪದವಿಪೂರ್ವ ವಿದ್ಯಾಲಯದಲ್ಲಿ ಹತ್ತನೆ ತರಗತಿಯವರೆಗೆ ಓದಿದ್ದರು.
ಬಾಲ್ಯದಲ್ಲಿಯೇ ಮನೆಗೆಲಸವನ್ನೂ ಮಾಡಿ ಅನುಭವವಿದ್ದ ಇವರು ಅಡಿಕೆ ಮರದ ತುತ್ತತುದಿಯನ್ನೇರಿ ‘ಚೆಂಡೆ ಎಲೆ’ಯನ್ನು ಕೊೈದು ಅದರಿಂದ ಸಿಕ್ಕ ಅಲ್ಪ ಸ್ವಲ್ಪ ಹಣದಿಂದ ತನ್ನ ಶಾಲೆಯ ಫೀಸನ್ನು ಭರಿಸುತ್ತಿದ್ದರು. ಹೀಗೆ ಶ್ರಮಜೀವಿಯಾಗಿದ್ದ ಹುಡುಗ ಶಾಲೆಯ ವಿದ್ಯಾಭ್ಯಾಸವನ್ನು ಬಿಟ್ಟ ನಂತರವೂ ಮನೆಕೆಲಸ, ಕೃಷಿ ಕೆಲಸ, ಹಟ್ಟಿ, ತೋಟಗಳ ಗೊಬ್ಬರದ ಕೆಲಸಗಳೇ ಮೊದಲಾದ ಶ್ರಮದ ದುಡಿಮೆಯನ್ನು ಮೈಗೂಡಿಸಿಕೊಂಡ ತೋಟಿಮನೆಯವರಿಗೆ ಚಿಕ್ಕಂದಿನಲ್ಲಿಯೇ ಯಕ್ಷಗಾನದತ್ತ ಅತೀವ ಆಸಕ್ತಿಯಿತ್ತು. ಚಿಕ್ಕಂದಿನಲ್ಲಿಯೇ ಮನೆಯಿಂದ ನಾಲ್ಕು ಕಿಲೋಮೀಟರ್ ದೂರವಿರುವ ಗುಂಡಬಾಳಕ್ಕೆ ನಡೆದುಕೊಂಡೇ ಹೋಗಿ ಯಕ್ಷಗಾನ ನೋಡಿ ಬರುತ್ತಿದ್ದರು. ಹೀಗೆ ಯಕ್ಷಗಾನ ಪ್ರದರ್ಶನಗಳನ್ನು ನೋಡಿ ತಾವೂ ಕಲಾವಿದರಾಗಬೇಕೆಂಬ ಆಕಾಂಕ್ಷೆ ಚಿಗುರೊಡೆದಿತ್ತು.
ಮನೆಯವರ ಹಿನ್ನೆಲೆ ಯಕ್ಷಗಾನದ ಪರಂಪರೆಯದ್ದೇ ಆದರೂ ತೋಟಿಮನೆಯ ಹುಡುಗ ಗಣಪತಿ ಯಕ್ಷಗಾನದತ್ತ ಆಕರ್ಷಿತರಾಗುವುದು ಮನೆಯವರಿಗೆ ಇಷ್ಟವಿರಲಿಲ್ಲ. ತೋಟಿಮನೆಯವರ ತಂದೆ ಗೋವಿಂದ ಹೆಗಡೆ ಮತ್ತು ದೊಡ್ಡಪ್ಪ ಸುಬ್ರಾಯ ಹೆಗಡೆ ಹವ್ಯಾಸೀ ಕಲಾವಿದರಾಗಿದ್ದರು. ತಾಯಿಯ ತಂದೆ ಅಂದರೆ ಅಜ್ಜ ಗಣಪತಿ ಹೆಗಡೆ ಗೋಪಿಯವರು ಆ ಕಾಲದಲ್ಲಿ ಭಾಗವತಿಕೆಯಲ್ಲಿ ಹೆಸರು ಮಾಡಿದ್ದರು. ಹೀಗೆ ಕಲಾವಿದರ ಕುಟುಂಬದಲ್ಲಿ ಬೆಳೆದ ತೋಟಿಮನೆ ಗಣಪತಿಗೆ ಸಹಜವಾಗಿಯೇ ಯಕ್ಷಗಾನದ ನಂಟು, ಆಸಕ್ತಿ ಬೆಳೆಯಿತು. ಆದಕಾರಣ ಮನೆಯವರ ವಿರೋಧದ ನಡುವೆಯೂ ತಾನೂ ಯಕ್ಷಗಾನ ಕಲಾವಿದನಾಗಬೇಕೆಂಬ ತೋಟಿಮನೆಯವರ ತುಡಿತ ಯಕ್ಷಗಾನ ಕಲಿಯುವಂತೆ ಪ್ರೇರೇಪಿಸಿತು.
ಆ ಕಾಲದ ಸುಪ್ರಸಿದ್ಧ ಭಾಗವತರಾಗಿದ್ದ ಕಪ್ಪೆಕೆರೆ ಸುಬ್ರಾಯ ಹೆಗಡೆಯವರು ಕವಲಕ್ಕಿಯಲ್ಲಿ ಯಕ್ಷಗಾನ ತರಗತಿಯನ್ನು ನಡೆಸುತ್ತಿದ್ದರು. ಕಪ್ಪೆಕೆರೆಯವರು ತೋಟಿಮನೆಯವರ ಸಮೀಪದ ಬಂಧುವಾಗಿದ್ದರು. ಭಾಗವತರು ಇತರ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದುದನ್ನು ಆಸೆ ಹಾಗೂ ಆಸಕ್ತಿಯಿಂದ ಗಮನಿಸುತ್ತಿದ್ದ ತೋಟಿಮನೆ ಗಣಪತಿ ಹೆಗಡೆಯವರ ಕಣ್ಣುಗಳಿಗೆ ಏನೋ ಒಂದು ಆಶಾಕಿರಣದ ಮಿಂಚು ಗೋಚರಿಸಿತು. ಹುಡುಗನ ಕಣ್ಣಂಚಿನ ಮಿಂಚನ್ನು ಕಪ್ಪೆಕೆರೆ ಸುಬ್ರಾಯ ಹೆಗಡೆಯವರು ಗುರುತಿಸಿದರು. ಇವರ ಆಸಕ್ತಿಯನ್ನು ಕಂಡ ಅವರು ಶಿಷ್ಯನಾಗಿ ಸ್ವೀಕರಿಸಿದರು. ಒಂದೆರಡು ತಿಂಗಳುಗಳಲ್ಲಿ ತರಗತಿ ನಿಂತುಹೋದರೂ ಸುಬ್ರಾಯ ಹೆಗಡೆಯವರು ತೋಟಿಮನೆಯವರನ್ನು ತಮ್ಮ ಮನೆಯಲ್ಲಿಯೇ ಇರಿಸಿಕೊಂಡು ಕಲಿಸತೊಡಗಿದರು.
ಪ್ರಾರಂಭದಲ್ಲಿ ನಾಟ್ಯಗಾರಿಕೆಯ ಲಯ, ಹಿಡಿತವನ್ನು ಕಂಡುಕೊಳ್ಳಲು ಪ್ರಯತ್ನಪಟ್ಟ ತೋಟಿಮನೆಯ ಗಣಪತಿಯ ಕುಣಿತದ ಅಭ್ಯಾಸ ಆರಂಭವಾಯಿತು. ಆದರೆ ಇವರ ಕುಣಿತವನ್ನು ಅಭ್ಯಾಸ ವೀಕ್ಷಿಸಲು ಬರುತ್ತಿದ್ದ ಅಕ್ಕಪಕ್ಕದವರು ತಮಾಷೆ ಮಾಡುತ್ತಿದ್ದರು. ಇದರಿಂದ ಅವಮಾನಗೊಂಡ ಇವರು ನಾಟ್ಯ ಮಾಡುವುದನ್ನೇ ಬಿಟ್ಟರೂ ಆಗಲೇ ಒಂದು ವರ್ಷದ ಕಲಿಕೆಯನ್ನು ಪೂರೈಸಿದ್ದರು! ಆಮೇಲೆ ಚಿಟ್ಟಾಣಿ ನರಸಿಂಹ ಹೆಗಡೆಯವರ ಸಹಾಯದಿಂದ ಗುಂಡಬಾಳ ಮೇಳಕ್ಕೆ ಸೇರಿದರು. ಆಗ ಮೇಳಕ್ಕೆ ಸೇರಲು ಗೆಜ್ಜೆ ಮತ್ತು ವೇಷದ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಬೇಕಾಗಿತ್ತು. ಅಜ್ಜನ ಗೆಜ್ಜೆಗಳು ಹಾಗೂ ಹಳೆಯ ಕಲಾವಿದರ ಹಾಗೂ ಕಪ್ಪೆಕೇರಿ ಮಹಾದೇವ ಹೆಗಡೆಯವರ ಹಳೆಯ ವೇಷಭೂಷಣಗಳನ್ನು ಒಟ್ಟುಗೂಡಿಸಿಕೊಂಡು ಗುಂಡಬಾಳ ಮೇಳಕ್ಕೆ ಸೇರಿದರು.
ಆಗ ಕಪ್ಪೆಕೇರಿ ಸುಬ್ರಾಯ ಭಾಗವತರಿದ್ದ ಪಂಚಲಿಂಗೇಶ್ವರ ಮೇಳಕ್ಕೆ ಕರೆಬಂದು ಅಲ್ಲಿಗೆ ಸೇರಿದರು. ಪಂಚಲಿಂಗೇಶ್ವರ ಮೇಳದಲ್ಲಿ ಚಿಕ್ಕಪುಟ್ಟ ಪಾತ್ರಗಳು ಯಾವುದೇ ಇದ್ದರೂ ಎಲ್ಲವನ್ನೂ ನಿರ್ವಹಿಸಿದರು. ಉಳಿದ ಸಮಯದಲ್ಲಿ ಪ್ರಸಿದ್ಧ ಕಲಾವಿದರ ವೇಷಗಳನ್ನು ನೋಡಿ ಕಲಿಯುತ್ತಿದ್ದರೇ ವಿನಃ ವಿಶ್ರಾಂತಿ ಪಡೆಯುತ್ತಿರಲಿಲ್ಲ. ಆದರೂ ‘ನಾಟ್ಯಗಾರಿಕೆ ಚೆನ್ನಾಗಿಲ್ಲ’ ಎಂಬ ಹಿರಿಯ ಕಲಾವಿದರ ಮಾತಿಗೆ ಕಟ್ಟುಬಿದ್ದು ಪಂಚಲಿಂಗೇಶ್ವರ ಮೇಳದ ಆಡಳಿತ ವರ್ಗ ಮುಂದಿನ ವರ್ಷಕ್ಕೆ ತೋಟಿಮನೆಯವರನ್ನು ಉಳಿಸಿಕೊಳ್ಳಲಿಲ್ಲ.
ಆ ಕಾಲದಲ್ಲಿ ‘short temper’ ಎಂದು ಗುರುತಿಸಿಕೊಂಡಿದ್ದ ತೋಟಿಮನೆಯವರು ಇದರಿಂದ ಖಿನ್ನರಾದರು. ಛಲದಿಂದ ಮತ್ತೆ ಗುಂಡಬಾಳ ಮೇಳಕ್ಕೆ ಸೇರಿದರು. ಆ ವರ್ಷ ಕಪ್ಪೆಕೇರಿ ಸುಬ್ರಾಯ ಭಾಗವತರೂ ಗುಂಡಬಾಳ ಮೇಳಕ್ಕೆ ಸೇರಿದುದು ತೋಟಿಮನೆಯವರ ಪುಣ್ಯವೆಂದೇ ಹೇಳಬೇಕು. ರಾತ್ರಿ ಕುಣಿತ, ದುಡಿತ ಹಗಲು ಕಪ್ಪೆಕೇರಿ ಭಾಗವತರಿಂದ ಕಲಿಕೆ. ಹೀಗೆ ಪಳಗಿದ ತೋಟಿಮನೆಯವರು ನಾಟ್ಯದಲ್ಲಿ ಪ್ರಾವೀಣ್ಯತೆಯನ್ನು ಗಳಿಸಿಕೊಂಡರು. ಕಪ್ಪೆಕೇರಿ ಭಾಗವತರು ನೀಡುತ್ತಿದ್ದ ಬೇರೆ ಬೇರೆ ಪಾತ್ರಗಳನ್ನು ನಿರ್ವಹಿಸಿ ತೋಟಿಮನೆ ಗಣಪತಿ ಹೆಗಡೆಯವರು ಯಾವುದೇ ಪಾತ್ರಗಳನ್ನೂ ಲೀಲಾಜಾಲವಾಗಿ ನಿರ್ವಹಿಸುವಷ್ಟು ಪ್ರಬುದ್ಧತೆಯನ್ನು ಹೊಂದಿದರು. ಆ ಕಾಲದಲ್ಲಿ ಅವರ ಕೃಷ್ಣ, ಸುಧನ್ವ, ಸಾಲ್ವನೇ ಮೊದಲಾದ ನಾಯಕ, ಪ್ರತಿನಾಯಕ ಪಾತ್ರಗಳನ್ನು ಲೀಲಾಜಾಲವಾಗಿ ನಿರ್ವಹಿಸುವ ಕಲೆಯನ್ನು ಸಿದ್ಧಿಸಿದರು. ‘‘ಯಾವುದೇ ಪಾತ್ರವನ್ನು ಒಂದಿನಿತೂ ಕೊರತೆ ಯಾಗದಂತೆ ನಿರ್ವಹಿಸಲು ಹಾಗೂ ಆ ಸಾಮರ್ಥ್ಯವನ್ನು ನನ್ನಲ್ಲಿ ತುಂಬಿದವರು ಕಪ್ಪೆಕೇರಿ ಸುಬ್ರಾಯ ಭಾಗವತರು’’ ಎಂದು ತೋಟಿಮನೆ ಗಣಪತಿ ಹೆಗಡೆಯವರು ಕಪ್ಪೆಕೇರಿ ಸುಬ್ರಾಯ ಭಾಗವತರನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ.
ತೋಟಿಮನೆಯವರನ್ನು ಈ ಕಾಲದಲ್ಲಿ ಅವರ ನಾಯಕ ಪಾತ್ರದ ನಿರ್ವಹಣೆಗಾಗಿ ‘‘ಯಕ್ಷರಂಗದ ರಾಜಕುಮಾರ’’ ಎಂದೂ ಹಾಗೂ ನಾಯಕ, ಪ್ರತಿನಾಯಕ ಸೇರಿದಂತೆ ಎಲ್ಲಾ ಪಾತ್ರದ ನಿರ್ವಹಣೆಗಾಗಿ ‘‘ಯಕ್ಷರಂಗದ ಸವ್ಯಸಾಚಿ’’ ಎಂದು ಕಲಾಭಿಮಾನಿಗಳು ಕರೆಯುತ್ತಿದ್ದಾರೆ. ತೋಟಿಮನೆಯವರ ವೇಷಗಳನ್ನು ಹತ್ತಿರದಿಂದ ಗಮನಿಸುವವರಿಗೆ ಈ ಮಾತುಗಳಲ್ಲಿ ಉತ್ಪ್ರೇಕ್ಷೆಯಿಲ್ಲ ಎಂದು ಖಂಡಿತವಾಗಿಯೂ ಅನಿಸುತ್ತದೆ. ಹೀಗೆ ಬಾಲ್ಯದಿಂದ ತೊಡಗಿ ಒಂದು ಹೋರಾಟದ ಜೀವನವನ್ನೇ ರೂಢಿಯಾಗಿ ಹೋಗಿದ್ದ ತೋಟಿಮನೆಯವರು ಬಹುಬೇಗನೆ ತನ್ನ ಸಾಮರ್ಥ್ಯದಿಂದ ಯಕ್ಷರಂಗದಲ್ಲಿ ತನ್ನ ಛಾಪನ್ನು ಮೂಡಿಸುವತ್ತ ದಾಪುಗಾಲು ಹಾಕ ತೊಡಗಿದರು.
ಹಲವು ಮೇಳಗಳಲ್ಲಿ ಅನುಭವ : ತೋಟಿಮನೆ ಯವರು ಒಂದೇ ಮೇಳವನ್ನು ನೆಚ್ಚಿಕೊಳ್ಳದೆ ಹಲವು ಮೇಳಗಳಲ್ಲಿ ಪಾತ್ರ ನಿರ್ವಹಿಸಿದವರು. ಇದಕ್ಕೆ ಒಟ್ಟಾರೆ ವ್ಯವಸ್ಥೆಯಲ್ಲಿ ಇದ್ದ ಅನಿಶ್ಚಿತತೆ, ಹಾಗೂ ತೋಟಿಮನೆಯವರು ಎದುರಿಸಿ ಅನುಭವಿಸಿದ ಕಷ್ಟ-ಕಾರ್ಪಣ್ಯಗಳು, ಅವಮಾನಗಳು ಕಾರಣವೇ ಹೊರತು ಬೇರಾವ ಕಾರಣಗಳಲ್ಲ. ಗುಂಡಬಾಳ ಮೇಳದಿಂದ ಆರಂಭಗೊಂಡ ತೋಟಿಮನೆಯವರ ಕಲಾಸೇವೆ ಶ್ರೀ ಪಂಚಲಿಂಗೇಶ್ವರ ಮೇಳ, ನಂತರ ಪುನಃ ಗುಂಡಬಾಳ ಮೇಳ, ಆಮೇಲೆ ಶಿರಸಿಯ ಶ್ರೀ ಮಾರಿಕಾಂಬಾ ಮೇಳ, ಆಮೇಲೆ ಶ್ರೀ ಮಂದಾರ್ತಿ ಮೇಳ, ನಂತರ ಸಾಲಿಗ್ರಾಮ ಮೇಳ ಹಾಗೂ ಪ್ರಸ್ತುತ ಕೊಂಡದಕುಳಿ ರಾಮಚಂದ್ರ ಹೆಗಡೆಯವರ ಪೂರ್ಣಚಂದ್ರ ಮೇಳದಲ್ಲಿ ಹಾಗೂ ಇತರ ಮೇಳಗಳಲ್ಲಿಯೂ ಅತಿಥಿ ಕಲಾವಿದರಾಗಿ ಭಾಗವಹಿಸುತ್ತಿದ್ದಾರೆ.
ನಾಯಕ, ಪ್ರತಿನಾಯಕ ಪಾತ್ರಗಳು : ಈ ಮೊದಲೇ ಹೇಳಿದಂತೆ ತೋಟಿಮನೆ ಗಣಪತಿ ಹೆಗಡೆಯವರು ಎಂದೂ ಬಡಗುತಿಟ್ಟು ಯಕ್ಷಗಾನದ ಪರಂಪರೆಗೆ ಅನುಗುಣವಾಗಿ ಪಾತ್ರನಿರ್ವಹಿಸಿದವರು. ಅನಿವಾರ್ಯವಾಗಿ ಪೌರಾಣಿಕೇತರ ಪ್ರಸಂಗಗಳಲ್ಲಿ ಹಲವು ಪಾತ್ರಗಳನ್ನು ನಿರ್ವಹಿಸಿ ಯಶಸ್ವಿಯಾದರೂ ಅವರ ಒಲವು ಇದ್ದದ್ದು ಪೌರಾಣಿಕ ಪ್ರಸಂಗಗಳ ಕಡೆಗೆ. ಟೆಂಟ್ ಮೇಳಗಳಲ್ಲಿ ಹಲವು ಕಾಲ್ಪನಿಕ ಪ್ರಸಂಗಗಳನ್ನು ಕಲೆಕ್ಷನ್ ದೃಷ್ಟಿಯಿಂದ ಆಡಬೇಕಾದ ಅನಿವಾರ್ಯತೆ ಬಂದಾಗ ಆ ರೀತಿಯ ವ್ಯವಸ್ಥೆಯಿಂದ ವಿಮುಖರಾದದ್ದು ಅವರ ಬದ್ಧತೆಗೆ ಸಾಕ್ಷಿ. ಪೌರಾಣಿಕ ಪಾತ್ರಗಳಲ್ಲಿ ಹೆಚ್ಚಾಗಿ ಕೃಷ್ಣ, ವಿಷ್ಣು, ಸುಧನ್ವ ಮೊದಲಾದ ವೇಷಗಳು ಪ್ರಸಿದ್ಧಿಯನ್ನು ಪಡೆದುವು. ಸುಧನ್ವನ ವೇಷವಂತೂ ಅಗ್ರಪಂಕ್ತಿಯಲ್ಲಿ ನಿಲ್ಲುವ ಪಾತ್ರ. ಅಲ್ಲದೆ ರಾಮ, ಲಕ್ಷ್ಮಣ, ಹನುಮಂತ, ವಲಲ, ಭೀಮ, ಹರಿಶ್ಚಂದ್ರ ಪಾತ್ರಗಳಲ್ಲದೆ ರಾವಣ, ಶೃಂಗಾರ ರಾವಣ, ಕೌರವ, ಭಸ್ಮಾಸುರ, ಮಾಗಧ, ಬಲರಾಮ, ಸಾಲ್ವ, ಅಂಬೆ ಮೊದಲಾದ ಪಾತ್ರಗಳಲ್ಲಿ ವೈವಿಧ್ಯಮಯ ಅಭಿನಯ ನೀಡಿದವರು.
ಆಂಜನೇಯನ ವೇಷಧಾರಿಯಾಗಿ ಅತ್ಯುತ್ತಮ ಮುಖವರ್ಣಿಕೆಯಲ್ಲೂ ಶೋಭಿಸಿದವರು. ತೋಟಿಮನೆಯವರು ರೂಪಿಸಿದ ಪರಂಪರೆಯಲ್ಲಿ ಒಂದು ನವೀನ ಶೈಲಿಯು ಇಂದು ಬಹಳ ಜನಪ್ರಿಯತೆಯನ್ನು ಪಡೆದಿದೆ. ಒಂದು ಕಾಲದಲ್ಲಿ ತೋಟಿಯವರ ಸುಧನ್ವ ಪಾತ್ರಕ್ಕೆ ಬಹಳ ಬೇಡಿಕೆಯಿತ್ತು. ಇವರ ಕಲ್ಪನೆಯಲ್ಲಿ ಮೂಡಿದ ‘ತೋಟಿಮನೆ’ ಶೈಲಿಯನ್ನು ಇಂದು ಹಲವು ಯುವ ಕಲಾವಿದರು ಅನುಸರಿಸುತ್ತಿರುವುದು ಇವರು ಈ ರಂಗದಲ್ಲಿ ಸಾಧಿಸಿದ ಜನಪ್ರಿಯತೆಗೆ ಸಾಕ್ಷಿ. ಲಂಕಾದಹನದ ಹನುಮಂತ, ಪಟ್ಟಾಭಿಷೇಕದ ರಾಮ, ಚಂದ್ರಾವಳಿ ವಿಲಾಸದ ಕೃಷ್ಣ… ಹೀಗೆ ಎಲ್ಲ ಪಾತ್ರಗಳಲ್ಲಿ ತನ್ನದೇ ಆದ ಛಾಪನ್ನು, ವಿಶಿಷ್ಟತೆಯನ್ನು ಒಡಮೂಡಿಸಿದ್ದಾರೆ.
ಹಲವರು ಹಿರಿಯ ಕಲಾವಿದರ ಜೊತೆ ರಂಗದಲ್ಲಿ ನಿರ್ವಹಿಸಿದವರು ತೋಟಿಮನೆಯವರು. ರಾಮದಾಸ ಸಾಮಗ, ಕೆರೆಮನೆ ಶಂಭು ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ವಾಸುದೇವ ಸಾಮಗ, ಕೊಂಡದಕುಳಿ ರಾಮಚಂದ್ರ ಹೆಗಡೆ, ಬಳ್ಕೂರು ಕೃಷ್ಣಯಾಜಿ- ಹೀಗೆ ಇನ್ನೂ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಜೀವನವೆಂಬುದು ಹೂವಿನ ಹಾಸಿಗೆಯಲ್ಲ. ಮುಳ್ಳುಗಳು ತುಂಬಿದ ಕಡಿದಾದ ದಾರಿಯೂ ಆಗಿರಬಹುದು. ಕಲಾವಿದರ ಪಾಲಿಗಂತೂ ಈ ಮಾತು ಅಕ್ಷರಶಃ ಸತ್ಯ ಎಂಬ ಮಾತಿದೆ. ಅದರಲ್ಲೂ ತನ್ನ ಬಾಳ ಪಯಣದ ಪ್ರಾರಂಭದ ಹಂತದಲ್ಲಿ ಬಹಳಷ್ಟು ಎಡರು-ತೊಡರುಗಳನ್ನು ಎದುರಿಸಿದ ತೋಟಿಮನೆ ಗಣಪತಿ ಹೆಗಡೆ ಎಂಬ ಸಂಭಾವಿತ ಕಲಾವಿದ ತನ್ನ ಜೀವನದಲ್ಲಿ ಆಸರೆಯಾದ, ಪ್ರೇರಕರಾದ ಹಲವು ಮುಖಗಳನ್ನು ಮರೆಯುವುದಿಲ್ಲ. ತನ್ನನ್ನು ಕಲಾವಿದನಾಗಿ ರೂಪುಗೊಳಿಸುವಲ್ಲಿ ಅವಿರತ ಶ್ರಮಿಸಿದ ಕಪ್ಪೆಕೇರಿ ಸುಬ್ರಾಯ ಹೆಗಡೆ, ಗುಂಡಬಾಳ ಮೇಳಕ್ಕೆ ಸೇರಲು ಕಾರಣಕರ್ತರಾದ ನರಸಿಂಹ ಚಿಟ್ಟಾಣಿ ಹಾಗೂ ಆತ್ಮೀಯ ಅಣ್ಣನಂತಿರುವ ಕೊಂಡದಕುಳಿ ರಾಮಚಂದ್ರ ಹೆಗಡೆ- ಹೀಗೆ ತನ್ನ ಕಲಾಯಾನದಲ್ಲಿ ತನ್ನ ಉನ್ನತಿಯನ್ನು ಬಯಸಿದ ಎಲ್ಲರಿಗೂ ಕೃತಜ್ಞರಾಗಿದ್ದಾರೆ.
ತಾನಿನ್ನೂ ಈ ರಂಗದಲ್ಲಿ ಸಾಧಿಸುವುದಕ್ಕೆ ಬಹಳವಿದೆ ಎಂಬ ವಿನೀತಭಾವ ತೋಟಿಯವರನ್ನು ಪಕ್ವವಾಗಿಸಿದೆ. ಈಗಲೂ ತನಗೆ ಯಾವುದೇ ಪಾತ್ರ ಸಿಕ್ಕಿದರೂ ಅದಕ್ಕೆ ನ್ಯಾಯ ಸಲ್ಲಿಸುವ ಕೆಲವೇ ಕಲಾವಿದರಲ್ಲಿ ಇವರೂ ಒಬ್ಬರು. ಅದಕ್ಕೆ ಅವರು ಈಗಲೂ ಕಲಾವಿದ ದಿಗ್ಗಜರ ನಡುವೆ ಪೋಷಕ ಪಾತ್ರ ನೀಡಿದರೂ ಒಪ್ಪಿಕೊಳ್ಳಲು ಹಿಂದೇಟು ಹಾಕದಿರುವುದೇ ಸಾಕ್ಷಿ. ತೋಟಿಮನೆ ಗಣಪತಿ ಹೆಗಡೆಯವರು ದೇಶಾದ್ಯಂತ ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಹೊರನಾಡಿನ ಕನ್ನಡ ಸಂಘ ಹಾಗೂ ಯಕ್ಷಗಾನ ಕಲಾಸಂಘಗಳ ಆಹ್ವಾನದ ಮೇರೆಗೆ ದೇಶದ ಉದ್ದಗಲಕ್ಕೂ ಸಂಚರಿಸಿದ್ದಾರೆ. ಹೈದರಾಬಾದ್, ಉಜ್ಜೈನಿ, ದೆಹಲಿ, ಮುಂಬೈ ಮೊದಲಾದ ನಗರಗಳಲ್ಲಿ ಪ್ರದರ್ಶನಗಳಲ್ಲಿ ಭಾಗವಹಿಸಿ ಮೆಚ್ಚುಗೆ ಗಳಿಸಿದ್ದಾರೆ.
ಕೆಲವಾರು ವಿದೇಶ ಪ್ರವಾಸಗಳಲ್ಲೂ ಯಶಸ್ವಿಯಾಗಿ ಪಾತ್ರನಿರ್ವಹಿಸಿ ಅವರು ವಿದೇಶದಲ್ಲಿ ಉದ್ಯೋಗದಲ್ಲಿರುವ ಯಕ್ಷಗಾನ ಅಭಿಮಾನಿಗಳ ಮನಸ್ಸನ್ನು ಸಂತೋಷ ಗೊಳಿಸಿದ್ದಾರೆ. ದುಬೈ, ಅಬುಧಾಬಿ, ಸಿಂಗಾಪುರ ಪ್ರವಾಸಗಳಲ್ಲಿ ಭಾಗವಹಿಸಿದ ತೋಟಿಯವರು ಕೆನಡಾ ಪ್ರವಾಸ ಕೂಡಾ ಮಾಡಿದ್ದಾರೆ. ರೂಪದಲ್ಲೂ ಚೆಲುವಾಂಗ ಸುಂದರ ನಾಗಿರುವ ತೋಟಿಯವರಿಗೆ ಸಹಜವಾಗಿಯೇ ಅಭಿಮಾನಿಗಳು ಹಲವಾರು ಬಿರುದುಗಳನ್ನಿತ್ತು ಸನ್ಮಾನಿಸಿದ್ದಾರೆ. ಸವ್ಯಸಾಚಿ, ಯಕ್ಷಸುಂದರ, ರಂಗಸ್ಥಳದ ಯುವರಾಜ, ನಟನಾಚೆಲುವ, ನಟಪದ್ಮನೇಸರ- ಹೀಗೆ ಕೆಲವು ಬಿರುದುಗಳನ್ನು ಪಡೆದಿದ್ದಾರೆ.
ಪಡೆದ ಸನ್ಮಾನ ಪ್ರಶಸ್ತಿಗಳು ಹಲವಾರು. 2002ರಲ್ಲಿ ಬೆಂಗಳೂರಿನ ಕುವೆಂಪು ಕಲಾಕ್ಷೇತ್ರ ದಲ್ಲಿ ಸನ್ಮಾನ, 2002ರಲ್ಲಿ ಶ್ರೀ ರಾಮಚಂದ್ರಾಪುರ ಮಠದಲ್ಲಿ ಸನ್ಮಾನ ಹಾಗೂ ಅದೇ ವರ್ಷ ಶಿವಮೊಗ್ಗದಲ್ಲಿ ಸನ್ಮಾನ, 2003ರಲ್ಲಿ ಶಿವಮೊಗ್ಗ ಕುವೆಂಪು ಕಲಾಕ್ಷೇತ್ರದಲ್ಲಿ ಕಲ್ಯಾಣೋತ್ಸವ ಪ್ರಯುಕ್ತ ಸನ್ಮಾನ. ಅದೇ ವರ್ಷ ಪೂರ್ಣಚಂದ್ರ ಯಕ್ಷಗಾನ ಮಂಡಳಿ ಮತ್ತು ಪ್ರತಿಷ್ಠಾನ ವತಿಯಿಂದ ‘ಕೊಂಡದಕುಳಿ ರಾಮ ಹೆಗಡೆ’ ಪ್ರಶಸ್ತಿ 2003ರಲ್ಲಿ ಹೊನ್ನಾವರ ತಾಲೂಕು ಕನ್ನಡ ಪರಿಷತ್ತಿನವರಿಂದ ಸನ್ಮಾನ, 2004ರಲ್ಲಿ ಶ್ರೀ ರಾಮಚಂದ್ರಾಪುರ ಮಠ ಇವರಿಂದ ಸನ್ಮಾನ, 2008ರಲ್ಲಿ ತೋಟಿಮನೆ ಅಭಿಮಾನಿ ಬಳಗ, ಬೆಂಗಳೂರು ಇವರಿಂದ ಸನ್ಮಾನ. 2014ರಲ್ಲಿ ಆರ್. ಜಿ. ಭಟ್ಟ ಮಿತ್ರರಿಂದ ಹುಬ್ಬಳ್ಳಿಯಲ್ಲಿ ಸನ್ಮಾನ, ಅದೇ ವರ್ಷ ಶಿರಸಿಯಲ್ಲಿ ಯಕ್ಷಕಲ್ಯಾಣ ನಿಧಿ ಅವರಿಂದ ಸನ್ಮಾನ, 2016ರಲ್ಲಿ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವ ಮುನ್ವಾ ಇವರ ಸೇವಾ ಸಮಿತಿಯಿಂದ ಸನ್ಮಾನ- ಹೀಗೆ ಹಲವಾರು ಸನ್ಮಾನ, ಪ್ರಶಸ್ತಿ, ಬಿರುದುಗಳನ್ನು ತೋಟಿಮನೆ ಗಣಪತಿ ಹೆಗಡೆಯವರು ಪಡೆದಿದ್ದಾರೆ. ತೋಟಿಮನೆಯವರು ತಮ್ಮ ಯಕ್ಷಜೀವನ ಕಲಾಯಾನದ 25 ವಸಂತಗಳನ್ನು ಪೂರೈಸಿದ ಸಂದರ್ಭದಲ್ಲಿ ತೋಟಿಮನೆ ಎಂಬ ಊರಿನ ಜನರು ಹಾಗೂ ಅವರ ಅಸಂಖ್ಯ ಅಭಿಮಾನಿಗಳು ಸೇರಿ 2017ರಲ್ಲಿ ‘ತೋಟಿ ರಜತರಂಗ’ ಎಂಬ ವಿಶಿಷ್ಟ ಹಾಗೂ ಅಭೂತಪೂರ್ವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ತೋಟಿಮನೆ ಅಂದು-ಇಂದು : ಹೌದು. ತೋಟಿಮನೆ ಗಣಪತಿ ಹೆಗಡೆ ಬದಲಾಗಿದ್ದಾರೆಯೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಬಹುದು. ಆದರೆ ಬದಲಾಗಿದ್ದಾರೆ ಎನ್ನುವ ಬದಲು ಬಲಿತು ಪರಿಪಕ್ವವಾಗಿದ್ದಾರೆ ಎಂಬ ಮಾತು ಸಮಂಜಸವಾಗಬಹುದು. ಕಬ್ಬಿಣವೊಂದು ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಕೆಂಪಾಗಿ ಹಲವಾರು ಪೆಟ್ಟುಗಳನ್ನು ತಿಂದು ಹೇಗೆ ಸುಂದರವಾದ ಉಪಯೋಗೀ ಸಾಧನವಾಗಬಹುದೋ ಹಾಗೆಯೇ ತೋಟಿಯವರು ಬದಲಾಗಿದ್ದಾರೆ. ಎಳವೆಯಲ್ಲಿ ಸಹಿಸಿದ ಕಷ್ಟ, ಬಡತನ, ಅವಮಾನಗಳು ಅವರನ್ನು ತ್ಯಾಗಮಯಿ ಮತ್ತು ವಿನೀತರನ್ನಾಗಿಸಿದೆ. ತನ್ನ ಕುಟುಂಬದ ಬಗ್ಗೆ ಅತೀವ ಕಾಳಜಿಯಿರುವ ತೋಟಿ ಒಬ್ಬ ತ್ಯಾಗಮಯಿ ಜೀವಿ ಎಂದರೆ ತಪ್ಪಾಗಲಾರದು. ಅವಿವಾಹಿತನಾಗಿರುವ ತೋಟಿಯವರು ಕುಟುಂಬದ ಕಷ್ಟದ ದಿನಗಳಲ್ಲಿ ತನ್ನ ತಂದೆ, ತಾಯಿ, ಸಹೋದರಿಯರ ಏಳ್ಗೆಗಾಗಿಯೇ ಸದಾ ಯೋಚಿಸಿದರು.
ಬಾಲ್ಯದ ತೋಟಿಮನೆ ನಿಮಗೆ ಈಗ ಕಾಣಸಿಗಲಾರರು. ಯಶಸ್ಸು, ಜನಪ್ರಿಯತೆ ಅವರನ್ನು ವಿನೀತರನ್ನಾಗಿಸಿದೆ. ಪರಿಪಕ್ವವಾಗಿಸಿದೆ. ಹಿರಿಯರು ಮೂಗಿನ ಮೇಲೆ ಬೆರಳಿಡುವಷ್ಟು ‘‘ಅಂದಿನ ತೋಟಿ ಮಾಣಿ ಇವನೇನಾ…?’’ ಎಂದು ಉದ್ಗಾರ ಜೀವನದ ಮುಸ್ಸಂಜೆಯನ್ನು ಕಾಣುತ್ತಿರುವವರ ಬಾಯಿಯಿಂದ ಬಂದರೆ ಆಶ್ಚರ್ಯವೇನಿಲ್ಲ.
ಬೇರೆ ಬೇರೆ ಕ್ಷೇತ್ರಗಳಲ್ಲಿ ವ್ಯವಸಾಯವನ್ನು ಮಾಡುತ್ತಿದ್ದರೂ ಯಕ್ಷಗಾನ ಕಲೆಯತ್ತ ಆಕರ್ಷಿತರಾಗಿ, ಅದನ್ನು ಹವ್ಯಾಸವಾಗಿ ಸ್ವೀಕರಿಸಿದ ಅನೇಕ ಕಲಾವಿದರನ್ನು ನಾವಿಂದು ಕಾಣಬಹುದು. ಹವ್ಯಾಸೀ ಕಲಾವಿದರು ತಮಗೂ ಈ ಶ್ರೇಷ್ಠ ಕಲೆಯ ಒಂದು ಅಂಗವಾಗುವ ಭಾಗ್ಯ ಒದಗಿತೆಂದು ಸಂತೋಷಪಡುತ್ತಾರೆ. ಕೃಷಿಯನ್ನೇ ವೃತ್ತಿಯಾಗಿ ಸ್ವೀಕರಿಸಿದವರೂ ಯಕ್ಷಗಾನ ಕಲಾವಿದರಾಗಿದ್ದಾರೆ. ವೈದ್ಯರೂ ಇಂಜಿನಿಯರುಗಳೂ, ಸರಕಾರೀ ಉದ್ಯೋಗಿಗಳೂ ಹಿಮ್ಮೇಳ, ಮುಮ್ಮೇಳ ಕಲಾವಿದರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳೂ ಯಕ್ಷಗಾನವನ್ನು ಹವ್ಯಾಸವಾಗಿ ಸ್ವೀಕರಿಸಿದ್ದಾರೆ.
ಈ ನಾಡಿನ ಜನರಿಗೆ ಯಕ್ಷಗಾನವನ್ನು ದೂರವಿರಿಸಿ ಬದುಕಲು ಸಾಧ್ಯವಿಲ್ಲ. ಅಷ್ಟೊಂದು ಕರ್ಷಕ ಶಕ್ತಿಯುಳ್ಳ ಕಲೆ ಇದು. ಇಂದು ವೃತ್ತಿ ಕಲಾವಿದರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಹವ್ಯಾಸೀ ಕಲಾವಿದರಿದ್ದಾರೆ. ವೃತ್ತಿ ಕಲಾವಿದರಷ್ಟೇ ಪ್ರಬುದ್ಧರಾದ ಹವ್ಯಾಸೀ ಕಲಾವಿದರೂ ಇದ್ದಾರೆ. ಅಂತಹವರ ಪ್ರದರ್ಶನವನ್ನು ನೋಡುವಾಗ ಇವರು ಮೇಳದಲ್ಲಿ ತಿರುಗಾಟ ಮಾಡಬೇಕಿತ್ತು ಎಂದು ಅನಿಸುವುದು ಸಹಜ. ಬದುಕಿಗೆ ಬೇರೊಂದು ವೃತ್ತಿ ಇದ್ದರೂ ತಾನೂ ಕಲಾಮಾತೆಯ ಸೇವೆಯನ್ನು ಮಾಡಬೇಕೆಂಬ ಸದಭಿಲಾಷೆಯಿಂದಲೇ ಅವರು ತೊಡಗಿಸಿಕೊಳ್ಳುತ್ತಾರೆ.
ಶ್ರೀ ಉದಯ ಕಂಬಾರ್ ಅವರು ಯಕ್ಷಗಾನವನ್ನು ಹವ್ಯಾಸವಾಗಿ ಸ್ವೀಕರಿಸಿದವರು. ತೆಂಕುತಿಟ್ಟಿನ ಒಳ್ಳೆಯ ಮದ್ದಳೆಗಾರರು. ಅನಿವಾರ್ಯ ಸಂದರ್ಭದಲ್ಲಿ ಆಪದ್ಬಾಂಧವನಾಗಿ ಮೇಳಗಳಲ್ಲೂ ಕಾಣಿಸಿಕೊಳ್ಳುತ್ತಾರೆ. ವೃತ್ತಿಯಲ್ಲಿ ಫೋಟೋಗ್ರಾಫರ್. ನೀರ್ಚಾಲು ಮತ್ತು ಬದಿಯಡ್ಕದ ‘ವರ್ಣಾ ಸ್ಟುಡಿಯೋ’ದ ಮಾಲಕರು. ಉದಯ ಕಂಬಾರ್ ಅವರು ಶ್ರೀ ಸುಬ್ರಹ್ಮಣ್ಯ ಭಟ್ ಮತ್ತು ಶ್ರೀಮತಿ ಸುಮತಿ ದಂಪತಿಗಳ ಮೂವರು ಪುತ್ರರಲ್ಲಿ ಹಿರಿಯರು. ಕಾಸರಗೋಡಿನ ಪಟ್ಟಾಜೆ ಎಂಬಲ್ಲಿ (ಅಜ್ಜನಮನೆ) 1970 ಮೇ 25ರಂದು ಜನನ.
ಸುಬ್ರಹ್ಮಣ್ಯ ಭಟ್ ಅವರ ಮೂಲ ಮನೆ ಬಂಟ್ವಾಳ ತಾಲೂಕಿನ ಜಲ್ಲಿ ಎಂಬಲ್ಲಿ. ಎಳವೆಯಲ್ಲೇ ತಂದೆ ತಾಯಿಯರನ್ನು ಕಳೆದುಕೊಂಡ ಕಾರಣ ಕಂಬಾರಿನ ಅಜ್ಜನ ಮನೆಯಲ್ಲಿ ಸೋದರ ಮಾವಂದಿರ ಆಶ್ರಯದಲ್ಲೇ ಬೆಳೆದವರು. ಹಾಗಾಗಿ ಕಂಬಾರು ಸುಬ್ರಹ್ಮಣ್ಯ ಭಟ್ ಎಂದೇ ಕರೆಸಿಕೊಂಡರು. ಅವರ ಸೋದರ ಮಾವ ಶ್ರೀ ಬಾಲಕೃಷ್ಣ ಭಟ್ಟರು ಅಧ್ಯಾಪಕರು ಮತ್ತು ಕಂಬಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕರು. ಸೋದರ ಮಾವನಿಗೆ ಪೂಜಾ ಕಾರ್ಯದಲ್ಲಿ ಸಹಾಯಕರಾಗಿ ದುಡಿಯುತ್ತಾ ಸುಬ್ರಹ್ಮಣ್ಯ ಭಟ್ಟರು ಅಲ್ಲೇ ವಾಸವಾಗಿದ್ದರು.
ಉದಯ ಅವರು ಐದನೆಯ ವಯಸ್ಸಿನ ವರೆಗೆ ಕಂಬಾರಿನಲ್ಲೇ ಇದ್ದು ಒಂದನೇ ತರಗತಿಯನ್ನು ಅಂಗಡಿಮೊಗರು ಶಾಲೆಯಲ್ಲಿ ಪೂರೈಸಿದ್ದರು. ನಂತರ ಕಂಬಾರು ಸುಬ್ರಹ್ಮಣ್ಯ ಭಟ್ಟರು ನೀರ್ಚಾಲು ಸಮೀಪದ ಪಟ್ಟಾಜೆಗೆ ವಾಸ್ತವ್ಯವನ್ನು ಬದಲಿಸಿದ್ದರು. ಜೀವನ ನಿರ್ವಹಣೆಗಾಗಿ ಹೋಟೆಲನ್ನು ನಡೆಸುತ್ತಿದ್ದರು. ಕಷ್ಟದ ಜೀವನವಾದರೂ ಮಕ್ಕಳಿಗೆಲ್ಲಾ ವಿದ್ಯೆ ಕೊಡಿಸಿದ್ದರು. ಇವರು ಎಳವೆಯಲ್ಲೇ ಯಕ್ಷಗಾನಾಸಕ್ತರಾಗಿ ಕಲಾವಿದರೂ ಆಗಿದ್ದರು. ಧರ್ಮತ್ತಡ್ಕ, ಎಡಕ್ಕಾನ, ಚೇವಾರು ಪರಿಸರದಲ್ಲಿ ನಡೆಯುತ್ತಿದ್ದ ಆಟ ಕೂಟಗಳಲ್ಲಿ ಭಾಗವಹಿಸುತ್ತಿದ್ದರು. ಸಾತ್ವಿಕ ಪಾತ್ರಗಳನ್ನು ಚೆನ್ನಾಗಿ ಮಾಡುತ್ತಿದ್ದರು.
ಮಕ್ಕಳನ್ನೂ ಪ್ರದರ್ಶನಕ್ಕೆ ಕರೆದೊಯ್ಯುತ್ತಿದ್ದರು. ಮಗನಾದ ಉದಯನನ್ನು ಹೆಗಲಲ್ಲಿ ಕುಳ್ಳಿರಿಸಿ ಆಟಕ್ಕೆ ಕರೆದುಕೊಂಡು ಹೋಗುತ್ತಿದ್ದರಂತೆ ಸುಬ್ರಹ್ಮಣ್ಯ ಭಟ್ಟರು. ಹಾಗಾಗಿ ತಾನೂ ಯಕ್ಷಗಾನ ಕಲಾವಿದನಾಗಬೇಕೆಂಬ ಬಯಕೆಯು ಉದಯ ಅವರಿಗೆ ಮೂಡಿತ್ತು. 2ನೇ ತರಗತಿಯ ವರೆಗೆ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜಿನಲ್ಲಿ ಓದು. ಪಿಯುಸಿ ಯಿಂದ ಸ್ನಾತಕೋತ್ತರ ಪದವಿಯ ವರೆಗೆ ಕಾಸರಗೋಡು ಸರಕಾರೀ ಕಾಲೇಜಿನಲ್ಲಿ ವಿದ್ಯಾರ್ಜನೆ. (ಕನ್ನಡ ಎಂ.ಎ). 2ನೇ ಕ್ಲಾಸಿನಿಂದ ತೊಡಗಿ ನೀರ್ಚಾಲು ಪರಿಸರದಲ್ಲಿ ನಡೆಯುತ್ತಿದ್ದ ಕರ್ನಾಟಕ, ಸುರತ್ಕಲ್, ಧರ್ಮಸ್ಥಳ ಮೇಳಗಳ ಪ್ರದರ್ಶನಗಳನ್ನು ಬಿಡದೆ ನೋಡುತ್ತಿದ್ದರು.
ಪುಂಡು ವೇಷಧಾರಿಗಳು ಗಿರಕಿ ಹೊಡೆಯುವುದನ್ನು ನೋಡುವುದೆಂದರೆ ಬಲು ಇಷ್ಟವಾಗಿತ್ತು. ಆಟ ನೋಡಿ ಮನೆಗೆ ಬಂದು ಛಾಯಾಪ್ರದರ್ಶನ. ದೀಂಗಿಣ, ಗಿರಾಕಿ ಹೊಡೆಯುವುದು ಮಾಡುತ್ತಿದ್ದರು. ಚೆಂಡೆ ಮದ್ದಳೆ ಬಾರಿಸುವುದನ್ನೂ ಗಮನವಿಟ್ಟು ನೋಡುತ್ತಿದ್ದರು. ಕನ್ನಡ ಸಿನಿಮಾದ ಡಾ. ರಾಜಕುಮಾರ್ ಅವರು ಹಾಡಿದ ‘ಆರಾಧಿಸುವೆ ಮದನಾರಿ, ಆದರಿಸು ನೀ ದಯೆತೋರಿ’ ಹಾಡಿನ ಕೊನೆಗೆ ಬರುವ ಬಾಯಿತಾಳಗಳನ್ನು ಬಾಯಿಪಾಠ ಮಾಡಿ ಪ್ಲಾಸ್ಟಿಕ್ ಕೊಡಪಾನಕ್ಕೆ ಬಾರಿಸುತ್ತಿದ್ದರು. ಯಕ್ಷಗಾನ ಹಾಡುಗಳ ಬಾಯಿತಾಳಗಳನ್ನೂ ಬಾರಿಸುತ್ತಿದ್ದರು. ಆಗಲೇ ಉದಯ ಕಂಬಾರ್ ಅವರೊಳಗೆ ಮದ್ದಳೆಗಾರನೊಬ್ಬ ಅವ್ಯಕ್ತವಾಗಿದ್ದ.
ಅಧ್ಯಾಪಕ, ಕಲಾವಿದರಾದ ಸುಬ್ಬಯ್ಯ ಮಣಿಯಾಣಿ ಅವರ ನೇತೃತ್ವದಲ್ಲಿ ಖ್ಯಾತ ಭಾಗವತರಾದ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು ಆಗ ಮಾನ್ಯದಲ್ಲಿ ಹಿಮ್ಮೇಳ ತರಬೇತಿಯನ್ನು ನೀಡುತ್ತಿದ್ದರು. ಉದಯ ಕಂಬಾರ್ ಅವರು ಶ್ರೇಷ್ಠ ಗುರುಗಳಿಂದಲೇ ಚೆಂಡೆ ಮದ್ದಳೆ ವಾದನವನ್ನು ಅಭ್ಯಸಿಸಿದರು. ತರಬೇತಿ ಮುಗಿಸಿ ಶಾಸ್ತ್ರಿಗಳನ್ನು ಕರೆದುಕೊಂಡು ಪಟ್ಟಾಜೆ ಸಮೀಪದ ಚುಕ್ಕಿನಡ್ಕದ ತಮ್ಮ ಮನೆಗೆ ಬರುತ್ತಿದ್ದರು. ಉದಯ್ ಅವರ ತಮ್ಮ ಶ್ರೀ ಸುರೇಶ ಕಂಬಾರ್ ಅವರು ಉಂಡೆಮನೆ ಶ್ರೀಕೃಷ್ಣ ಭಟ್ಟರಿಂದ ನಾಟ್ಯ ಕಲಿತು ಮನೆಯಲ್ಲಿ ಅಭ್ಯಾಸ ಮಾಡುವಾಗ ಅವರ ಜತೆಯೂ ಕುಣಿದು ನಾಟ್ಯವನ್ನೂ ಕಲಿತುಕೊಂಡಿದ್ದರು.
ಮಾನ್ಯದಲ್ಲಿ ಶ್ರೀ ರಾಘವೇಂದ್ರ ಕಲಾಸಂಘದ ಪ್ರದರ್ಶನದಲ್ಲಿ ಮೊತ್ತ ಮೊದಲು ಮದ್ದಳೆ ಬಾರಿಸುವ ಮೂಲಕ ರಂಗವೇರಿದ್ದರು. ಅಂದು ಅಡೂರು ಸುಬ್ರಾಯ ಅವರು ಚೆಂಡೆ ಬಾರಿಸಿದ್ದರು. ಗುರುಗಳಾದ ಶಾಸ್ತ್ರಿಗಳು ಭಾಗವತರಾಗಿ ಇದ್ದುದು ಅನುಕೂಲವೇ ಆಗಿತ್ತು. ಮತ್ತೆ ಶಾಲಾ ವಿದ್ಯಾರ್ಥಿಯಾಗಿ ನಿರಂತರ ಪ್ರದರ್ಶನಗಳಲ್ಲಿ ಭಾಗವಹಿಸುತ್ತಾ ಬೆಳೆದರು. ಅಲ್ಲದೆ ಮಾಂಬಾಡಿ ಶ್ರೀ ಸುಬ್ರಹ್ಮಣ್ಯ ಭಟ್ಟರಿಂದಲೂ ಹಿಮ್ಮೇಳ ಅಭ್ಯಾಸ ಮಾಡಿದರು. ಪಿಯುಸಿ ವಿದ್ಯಾರ್ಥಿಯಾಗಿರುವಾಗ ಪುಂಡೂರು ಶ್ರೀ ಕೃಷ್ಣರಾಜ ಪುಣಿಂಚತ್ತಾಯರಿಂದ ಶಾಸ್ತ್ರೀಯ ಸಂಗೀತ ಮೃದಂಗವನ್ನೂ ಅಭ್ಯಸಿಸಿದರು. ನಿರಂತರ ನಾಲ್ಕು ವರ್ಷಗಳ ಕಲಿಕೆ. ಅದು ಯಕ್ಷಗಾನಕ್ಕೆ ಅನುಕೂಲವೇ ಆಗಿತ್ತು.
ಪದವಿ ಪ್ರಥಮ ವರ್ಷದಿಂದ ಹವ್ಯಾಸೀ ಕಲಾವಿದನಾಗಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಗುರುಗಳಾದ ತೆಂಕಬೈಲು ಶಾಸ್ತ್ರಿಗಳು, ದಾಸರಬೈಲು ಚನಿಯ ನಾಯ್ಕ ಮೊದಲಾದ ಭಾಗವತರೊಂದಿಗೆ ಕಲಾಸೇವೆ ಮಾಡುವ ಆಗಲೇ ದೊರೆತಿತ್ತು. ಮೇಳದ ಆಟದಲ್ಲಿಯೂ ವೃತ್ತಿ ಕಲಾವಿದರು ಕರೆದು ಚೆಂಡೆ ಮದ್ದಳೆ ಬಾರಿಸಲು ಅವಕಾಶ ಕೊಡುತ್ತಿದ್ದರು. ಇದು ಬೆಳವಣಿಗೆಗೆ ಸಹಕಾರಿಯೂ ಆಗಿತ್ತು. ವೃತ್ತಿ ಕಲಾವಿದರಾದ ಕೂಡ್ಲು ನಾರಾಯಣ ಬಲ್ಯಾಯ, ಕೂಡ್ಲು ಆನಂದ, ರಾಧಾಕೃಷ್ಣ ನಾವಡ, ಸುಬ್ರಾಯ ಹೊಳ್ಳ, ಉದಯ ನಾವಡರ ವೇಷಗಳಿಗೆ ಮಳೆಗಾಲದಲ್ಲಿ ಬಾರಿಸುವ ಅವಕಾಶ ಹೆಚ್ಚಾಗಿ ದೊರಕಿತ್ತು. ಮದ್ದಳೆಗಾರ ಶ್ರೀ ಗೋಪಾಲಕೃಷ್ಣ ನಾವಡ ಮಧೂರು ಮತ್ತು ಉದಯ ಕಂಬಾರು ಅವರು ಜತೆಯಾಗಿ ಆಟ ಕೂಟಗಳಲ್ಲಿ ಚೆಡೆ ಮದ್ದಳೆ ನುಡಿಸುತ್ತಿದ್ದರು.
ವಿದ್ಯಾರ್ಥಿಯಾಗಿರುವಾಗ ಕಲ್ಲಕಟ್ಟ ಶಾಲೆಯಲ್ಲಿ ಸುಬ್ರಹ್ಮಣ್ಯೇಶ್ವರ ಕಲಾಸಂಘದ ಪ್ರದರ್ಶನ ವೀರವರ್ಮ ಕಾಳಗದ ಹನುಮಂತನಾಗಿ ರಂಗಪ್ರವೇಶ. ನಂತರ ಅನೇಕ ಬಾರಿ ವೇಷ ಮಾಡಿದ್ದರು. ಅಲ್ಲದೆ ಮಲ್ಲ ಮತ್ತು ಉಪ್ಪಳ ಮೇಳಗಳಲ್ಲಿ ವ್ಯವಸಾಯ ಮಾಡಿದ್ದರು. ಮನೆಯಲ್ಲಿ ಬಡತನವಿತ್ತು. ಯಕ್ಷಗಾನದ ಸಂಪಾದನೆಯಿಂದಲೇ ಉದಯ ಕಂಬಾರು ಅವರು ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪೂರೈಸಿದ್ದರು! ಯಕ್ಷಗಾನದ ಸಂಪಾದನೆಯಿಂದ ಬದುಕಲು ಸಾಧ್ಯವಿಲ್ಲ ಎನ್ನುವವರಿಗೆ ಉದಯ ಅವರ ಸಾಧನೆಯೇ ಉತ್ತರವಾಗಲಿ. ಪ್ರತಿಭಾವಂತರಿಗೆ, ನಿಷ್ಠಾವಂತರಿಗೆ, ನೈತಿಕವಾಗಿ ಬಲಿಷ್ಠರಾದವರಿಗೆ ಯಾವತ್ತೂ ಅವಕಾಶವಿರುತ್ತದೆ. ಪ್ರತಿಫಲವೂ ಇರುತ್ತದೆ.
ಉದಯ ಕಂಬಾರು ಚಿಪ್ಪಾರು ಶ್ರೀ ಕೃಷ್ಣಯ್ಯ ಬಲ್ಲಾಳರ ಅಭಿಮಾನಿ. ರಘುರಾಮ ಹೊಳ್ಳರು, ದಿನೇಶ ಅಮ್ಮಣ್ಣಾಯರು, ಪದ್ಯಾಣ ಗಣಪತಿ ಭಟ್ಟರು, ರಾಮಕೃಷ್ಣ ಮಯ್ಯರು, ಚಿಪ್ಪಾರು, ದೇಲಂತಮಜಲು, ಅಡೂರು ಗಣೇಶ ರಾಯರೇ ಮೊದಲಾದ ಕಲಾವಿದರು ಮೇಳದ ಪ್ರದರ್ಶನಗಳಲ್ಲೂ ಭಾಗವಹಿಸುವ ಅವಕಾಶವನ್ನಿತ್ತು ಪ್ರೋತ್ಸಾಹಿಸಿದ್ದರು. ಎಂ. ಎ. ಪೂರೈಸಿದ ಮೇಲೆ ಬಿ. ಎಡ್. ಮಾಡಬೇಕೆಂಬ ಆಸೆ ಇದ್ದರೂ ಅವಕಾಶ ಸಿಕ್ಕಿರಲಿಲ್ಲ. (1992ರಲ್ಲಿ). ಮುಂದೇನು ಎಂದು ಯೋಚಿಸುತ್ತಿದ್ದರು. ಆಗ ಬದಿಯಡ್ಕದಲ್ಲಿ ಇವರ ದೊಡ್ಡಮ್ಮನ ಮಗ ಶ್ರೀ ಬಾಲಸುಬ್ರಹ್ಮಣ್ಯ ಬೊಳುಂಬು ಅವರು ಸ್ಟುಡಿಯೋ ನಡೆಸುತ್ತಿದ್ದರು. (ಶಿಲ್ಪಾ ಸ್ಟುಡಿಯೋ). ಛಾಯಾಚಿತ್ರಗಾರಿಕೆಯಲ್ಲಿ ಒಳ್ಳೆಯ ಹೆಸರನ್ನು ಪಡೆದವರು. ನನ್ನ ಜತೆ ಸಹಾಯಕನಾಗಿ ಬಾ ಎಂದಾಗ ಉದಯ ಅವರು ಒಪ್ಪಿದ್ದರು. ಆಸಕ್ತಿ ಇದ್ದು ಹೋದದ್ದಲ್ಲ. ಆದರೆ ಹೋದ ಮೇಲೆ ಆಸಕ್ತಿಯಿಂದ ಕೆಲಸ ಮಾಡಿದ್ದರು. ಇದುವೇ ಅವರ ಬದುಕಿನ ಮಹತ್ತರ ತಿರುವು.
ಬದಿಯಡ್ಕದ ಶಿಲ್ಪಾ ಸ್ಟುಡಿಯೋದಲ್ಲಿ ಅಣ್ಣನ ಜತೆ ದುಡಿಮೆ. ಅಣ್ಣನ ಸಹಕಾರದಿಂದ ಬಹುಬೇಗನೆ ಕಲಿತಿದ್ದರು. ಐದು ವರ್ಷದ ಅನುಭವವನ್ನು ಆರು ತಿಂಗಳಿನಲ್ಲೇ ಗಳಿಸಿದ್ದರು. ಸರಕಾರೀ ಉದ್ಯೋಗದ ಗೋಜಿಗೆ ಹೋಗದೆ ಫೋಟೋಗ್ರಫಿಯನ್ನು ವೃತ್ತಿಯಾಗಿಯೂ ಯಕ್ಷಗಾನವನ್ನು ಹವ್ಯಾಸವಾಗಿಯೂ ಸ್ವೀಕರಿಸಿದರು. ಅಣ್ಣ ಶ್ರೀ ಬಾಲಸುಬ್ರಹ್ಮಣ್ಯ ಭಟ್ಟರ ಸಲಹೆಯಂತೆ ಪೆರ್ಲ ಅನುಪಮಾ ಸ್ಟುಡಿಯೋದ ಶ್ರೀಕೃಷ್ಣ ಅವರ ಜತೆ ಎಂಟು ತಿಂಗಳ ಕಾಲ ದುಡಿಮೆ. ಅವರ ಸಾಕಾರ ಪ್ರೋತ್ಸಾಹವೂ ಸಿಕ್ಕಿತ್ತು. ಬಳಿಕ ಕಾಸರಗೋಡಿನ ಲಾವಣ್ಯ ಸ್ಟುಡಿಯೋದಲ್ಲಿ ದುಡಿಯುತ್ತಿರುವಾಗ ಕಣ್ಣೂರು ವಿಶ್ವವಿದ್ಯಾನಿಲಯದ ಬಿ.ಎಡ್ ಕೋರ್ಸ್ ಗೆ ಪ್ರವೇಶ ಸಿಕ್ಕಿದರೂ ಹೋಗದೆ ಫೋಟೋಗ್ರಫಿಯಲ್ಲೇ ಮುಂದುವರಿಯುವ ನಿರ್ಣಯವನ್ನು ಮಾಡಿದ್ದರು.
1994ರಲ್ಲಿ ಉದಯ ಕಂಬಾರು ಅವರು ಸ್ಟುಡಿಯೋ ಒಂದರ ಮಾಲಕರಾಗಿದ್ದರು. ನೀರ್ಚಾಲಿನಲ್ಲಿ ವರ್ಣಾ ಸ್ಟುಡಿಯೋ ತೆರೆದು ಫೋಟೋಗ್ರಫಿ ಉದ್ಯಮವನ್ನು ಆರಂಭಿಸಿದ್ದರು. ಸುಮಾರು ಒಂದು ಲಕ್ಷ ರೂಪಾಯಿಗಳ ಬಂಡವಾಳ. ಅಷ್ಟು ಹಣ ಇವರ ಕೈಯಲ್ಲಿ ಇರಲಿಲ್ಲ. ಮಗನ ತಳಮಳವನ್ನು ಗಮನಿಸಿದ ಸುಮತಿ ಅಮ್ಮ ತನ್ನಲ್ಲಿದ್ದ ಚಿನ್ನದ ಆಭರಣವನ್ನು ನೀಡಿ ಒಳ್ಳೆಯದಾಗಲಿ ಎಂದು ಆಶೀರ್ವದಿಸಿದ್ದರು. ಮತ್ತೊಂದೇ ವರ್ಷದಲ್ಲಿ ಪಡೆದುಕೊಂಡ ಆಭರಣವನ್ನಲ್ಲದೆ ಅಮ್ಮನ ಬೇಕು ಬೇಡಗಳನ್ನೆಲ್ಲಾ ಪೂರೈಸಿ ಕಾಲಿಗೆರಗಿದ್ದರು. 2001ರಲ್ಲಿ ಬದಿಯಡ್ಕದಲ್ಲಿ ವರ್ಣಾ ಸ್ಟುಡಿಯೋದ ಬ್ರಾಂಚ್ ತೆರೆದಿದ್ದರು. ಈಗ ಉದಯ ಕಂಬಾರ್ ಎಂಬ ಮದ್ದಳೆಗಾರ ಎರಡು ಸ್ಟುಡಿಯೋದ ಮಾಲಕರು.
ಕಳೆದ 25 ವರ್ಷಗಳಿಂದ ಛಾಯಾಚಿತ್ರಗ್ರಾಹಕರಾಗಿ, ಸಮಾರಂಭಗಳ ವೀಡಿಯೋಗ್ರಾಫರ್ ಆಗಿ, ಮದ್ದಳೆಗಾರರಾಗಿ ಎಲ್ಲರಿಗೂ ಬೇಕಾದವರಾಗಿ ಪ್ರಸಿದ್ಧರಾಗಿದ್ದಾರೆ. 2010ರಿಂದ ತೊಡಗಿ ಎಡನೀರು ಮಠಾಧೀಶರು ಎಡನೀರು ಮೇಳದ ಪ್ರದರ್ಶನಗಳಲ್ಲಿ ಭಾಗವಹಿಸುವ ಅವಕಾಶ ನೀಡಿ ಹರಸಿದ್ದರು. ಎಡನೀರು ಶ್ರೀಗಳವರ ಭಾಗವತಿಕೆಗೆ ಚೆಂಡೆ ಮದ್ದಳೆ ಬಾರಿಸುವ ಅವಕಾಶವೂ ಸಿಕ್ಕಿತ್ತು. ಭಾಗವತರಾದ ದಿನೇಶ ಅಮ್ಮಣ್ಣಾಯ, ದೇಲಂತಮಜಲು ಮತ್ತು ಮೇಳದ ಸರ್ವ ಕಲಾವಿದರೂ ಪ್ರೋತ್ಸಾಹಿಸಿದ್ದರು. ತಾನು ಸಂಪಾದಿಸುತ್ತಾ ಸಹೋದರರಿಗೂ ಸಹಕರಿಸಿ ಅವರಿಬ್ಬರಿಂದಲೂ ಪ್ರೀತಿಯನ್ನೂ ಗೌರವವನ್ನೂ ಪಡೆದುಕೊಂಡಿದ್ದಾರೆ.
ಹಿರಿಯ ತಮ್ಮ ಶ್ರೀಪತಿ ಕಂಬಾರ್ ಟೆಕ್ಸ್ ಟೈಲ್ಸ್ ವ್ಯವಹಾರ ಮತ್ತು ಟೈಲರಿಂಗ್ ನಡೆಸುತ್ತಿದ್ದಾರೆ. (ಶೃತಿನ್ ಟೆಕ್ಸ್ ಟೈಲ್ಸ್ ನೀರ್ಚಾಲು). ಕಿರಿಯ ತಮ್ಮ ಶ್ರೀ ಸುರೇಶ್ ಕಂಬಾರ್ ಕಲಾಸಕ್ತ. ಯಕ್ಷಗಾನ ಕಲಾವಿದ. ಶಾಸ್ತ್ರೀಯ ಸಂಗೀತ ಕಲಿತಿದ್ದಾರೆ. ಒಳ್ಳೆಯ ಹಾಡುಗಾರ. ಬೆಂಗಳೂರಿನಲ್ಲಿ ಉದ್ಯೋಗಿ. ಸಾಫ್ಟ್ ವೆರ್ ಇಂಜಿನಿಯರ್. 1998ರಲ್ಲಿ ಉದಯ್ ಕಂಬಾರ್ ಅವರು ಮಧುಮತಿ ಅವರನ್ನು ವಿವಾಹವಾದರು. ವಿವಾಹದ ಬಳಿಕ ಮಡದಿಯನ್ನು ಮಾಯಿಪ್ಪಾಡಿಯ ಶಿಕ್ಷಕರ ತರಬೇತಿ ಕೇಂದ್ರಕ್ಕೆ ಕಳಿಸಿ ವಿದ್ಯೆ ಕೊಡಿಸಿದ್ದರು. (ಟಿಟಿಸಿ) ಮಧುಮತಿ ಅವರು ಈಗ ಕಿಳಿಂಗಾರು ಪ್ರಾಥಮಿಕ ಶಾಲೆಯ ಅಧ್ಯಾಪಿಕೆ. ಉದಯ್ ಕಂಬಾರ್ ಮತ್ತು ಮಧುಮತಿ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರ ಚಿಂತನ್ ಕಂಬಾರು. ಬೆಂಗಳೂರು ಜೈನ್ ಯೂನಿವರ್ಸಿಟಿಯಲ್ಲಿ ಬಿ.ಟೆಕ್ ಓದುತ್ತಿದ್ದು ಪುತ್ರಿ ಚಿನ್ಮಯಿ ಕಂಬಾರ್ ನೀರ್ಚಾಲ್ ಶಾಲೆಯಲ್ಲಿ 6ನೇ ತರಗತಿ ವಿದ್ಯಾರ್ಥಿನಿ.
ಎಲ್ಲಾ ಹಿರಿಯ, ಕಿರಿಯ ಕಲಾವಿದರ ಪ್ರೀತಿಗೆ ಪಾತ್ರರಾದ ಕಂಬಾರು ಉದಯಣ್ಣ ಹೆಚ್ಚಿನ ಎಲ್ಲಾ ಭಾಗವತರ ಹಾಡುಗಳಿಗೆ ಮದ್ದಳೆ ಬಾರಿಸುವ ಅವಕಾಶವನ್ನು ಹೊಂದಿದ ಅನುಭವಿಯಾಗಿದ್ದಾರೆ. ಕಳೆದ ವರ್ಷ ಕಟೀಲು 2ನೇ ಮೇಳದಲ್ಲಿ ಪ್ರಸಾದ್ ಬಲಿಪ ಮತ್ತು ಪ್ರಫುಲ್ಲಚಂದ್ರ ನೆಲ್ಯಾಡಿ ಅವರ ಜತೆ ತಿರುಗಾಟವನ್ನೂ ಮಾಡಿರುತ್ತಾರೆ. ಪ್ರಸ್ತುತ ಕೇರಳ ಛಾಯಾಚಿತ್ರಗಾರರ ಸಂಘ, ಕಾಸರಗೋಡು ಜಿಲ್ಲೆಯ ಬದಿಯಡ್ಕ ಯೂನಿಟ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚಿಗೆ ಮಾನ್ಯ ಸಮೀಪ ಹೊಸ ಮನೆಯನ್ನೂ ಹೊಂದಿ ಅಲ್ಲಿ ವಾಸಿಸುತ್ತಿದ್ದಾರೆ.
ಬದುಕಿನುದ್ದಕ್ಕೂ ಹೋರಾಟ, ಬಡತನ. ಅನುಭವ, ಅವಿರತವಾದ ಪರಿಶ್ರಮ, ಜತೆಗೆ ಯಕ್ಷಗಾನವು ಉದಯ ಕಂಬಾರು ಅವರನ್ನು ಸಮಾಜದಲ್ಲಿ ವ್ಯಕ್ತಿಯಾಗಿ ರೂಪಿಸಿತ್ತು. ಕಷ್ಟದ ಬದುಕನ್ನು ನಡೆಸಿದರೂ ದೇಹಕ್ಕೆ ಆಯಾಸವಿದ್ದಾಗಲೂ ಯಕ್ಷಗಾನವನ್ನು ದೂರ ಮಾಡದೆ ಆ ಕಲೆಯ ಒಂದು ಅಂಗವಾಗಿಯೇ ಬೆಳೆದು ಬಂದಿದ್ದಾರೆ. ಶ್ರಮಜೀವಿಯಾಗಿ, ಸಾಧನೆಯನ್ನು ಮಾಡಿದ ದೆಸೆಯಿಂದಲೇ ವೃತ್ತಿಯಲ್ಲೂ, ಹವ್ಯಾಸವಾಗಿ ಸ್ವೀಕರಿಸಿದ ಯಕ್ಷಗಾನದಲ್ಲೂ ಎಲ್ಲರ ಮನ್ನಣೆಗೆ ಪಾತ್ರರಾಗಿದ್ದಾರೆ. ಮದ್ದಳೆಗಾರ ಶ್ರೀ ಉದಯ ಕಂಬಾರು ಅವರಿಂದ ಯಕ್ಷಗಾನ ಕಲಾಮಾತೆಯ ಸೇವೆಯು ನಿರಂತರವಾಗಿರಲಿ. ಕಲಾಮಾತೆಯ ಅನುಗ್ರಹವು ಸದಾ ಇರಲಿ. ಮನದ ಬಯಕೆಗಳನ್ನೆಲ್ಲಾ ಶ್ರೀದೇವರ ಅನುಗ್ರಹದಿಂದ ಹೊಂದುವಂತಾಗಲಿ.
ಯಕ್ಷಗಾನ ರಂಗಕ್ಕೋಸ್ಕರ ಹಾಗೂ ಅದರ ಏಳಿಗೆಗೋಸ್ಕರ ದುಡಿದವರು ಹಲವರಿದ್ದಾರೆ. ಆ ರಂಗದಿಂದ ತಾನು ಗಳಿಸಿದ ಒಂದಂಶವನ್ನು ಅದೇ ಕಲೆಯ ಅಭಿವೃದ್ಧಿಗೋಸ್ಕರ ವಿನಿಯೋಗಿಸುವವರೂ ಇದ್ದಾರೆ. ಅಂತಹವರಲ್ಲಿ ಒಬ್ಬರು ಭಾಗವತರಾದ ಶ್ರೀ ಸಿರಿಬಾಗಿಲು ರಾಮಕೃಷ್ಣ ಮಯ್ಯ. ತನ್ನನ್ನು ಪೋಷಿಸಿದ ಯಕ್ಷಗಾನವನ್ನು ಉಳಿಸಿ ಬೆಳೆಸುವುದಕ್ಕೋಸ್ಕರ ವಿಶಿಷ್ಟವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುಂದಿನ ಪೀಳಿಗೆಗೋಸ್ಕರ ಯಕ್ಷಗಾನ ಕಲೆಯ ಸೊಗಸು-ಸೊಗಡುಗಳನ್ನು ಸ್ಥಿರವಾಗಿ ಉಳಿಸುವಂತೆ ಮಾಡುವ ಮಹತ್ಕಾರ್ಯ, ಮಹಾ ಪ್ರಯತ್ನಗಳನ್ನು ಹಲವಾರು ಮಹನೀಯರ ಸಹಕಾರದಿಂದ ಮಾಡುತ್ತಿರುವ ಮಹಾನುಭಾವ.
ಒಕ್ಟೋಬರ್ 25, 1967ರಲ್ಲಿ ಕಾಸರಗೋಡು ಜಿಲ್ಲೆಯ ಮಾಯಿಪ್ಪಾಡಿ ಸಮೀಪದ ಸಿರಿಬಾಗಿಲು ವೆಂಕಪ್ಪಯ್ಯ ಮತ್ತು ಪಾರ್ವತಿ ಅಮ್ಮ ದಂಪತಿಗಳಿಗೆ ಪುತ್ರರಾಗಿ ಜನಿಸಿದ ಸಿರಿಬಾಗಿಲು ರಾಮಕೃಷ್ಣ ಮಯ್ಯರು ಪರಂಪರೆಯಿಂದಲೇ ಯಕ್ಷಗಾನದ ಗಂಧವನ್ನು ಆಸ್ವಾದಿಸುತ್ತಾ ಬಂದವರು.
ತಂದೆ ಶ್ರೀ ಸಿರಿಬಾಗಿಲು ವೆಂಕಪ್ಪಯ್ಯನವರು ಆ ಕಾಲದಲ್ಲಿ ಉತ್ತಮ ಸಾಹಿತ್ಯಾತ್ಮಕ ಚಟುವಟಿಕೆಗಳಿಂದ ಗುರುತಿಸಿಕೊಂಡವರು ಆದರೆ ದುರದೃಷ್ಟವಶಾತ್ ಎಳವೆಯಲ್ಲೇ ತಂದೆಯನ್ನು ಕಳೆದುಕೊಂಡರು. ರಾಮಕೃಷ್ಣ ಮಯ್ಯರ ತಂದೆ ಹಾಗೂ ತಾಯಿಯ ವಂಶಸ್ಥರು ಯಕ್ಷಗಾನದಲ್ಲಿ ಖ್ಯಾತನಾಮರೇ ಆಗಿದ್ದರು. ಅದರಲ್ಲೂ ಇವರ ಅಜ್ಜ (ತಾಯಿಯ ತಂದೆ) ಪುತ್ತಿಗೆ ಜೋಯಿಸರೆಂದೇ ಪ್ರಖ್ಯಾತರಾದ ಪುತ್ತಿಗೆ ರಾಮಕೃಷ್ಣ ಜೋಯಿಸರು, ಸೋದರಮಾವನಾದ ಖ್ಯಾತ ಭಾಗವತರಾದ ‘ಭಾಗವತಹಂಸ’ ಬಿರುದಾಂಕಿತ ಪುತ್ತಿಗೆ ರಘುರಾಮ ಹೊಳ್ಳರು ತೆಂಕುತಿಟ್ಟಿನ ಮೇರುಕಲಾವಿದರು. ಪದವಿಪೂರ್ವ ಶಿಕ್ಷಣವನ್ನು ಪೂರ್ತಿಗೊಳಿಸಿದ ಬಳಿಕ ತನ್ನ ಸೋದರಮಾವ ಪುತ್ತಿಗೆ ರಘುರಾಮ ಹೊಳ್ಳರ ಸೂಚನೆಯಂತೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಲ್ಲಿ ಭಾಗವತಿಕೆಯನ್ನು ಅಭ್ಯಾಸ ಮಾಡಿದರು.
ಪ್ರಾರಂಭದಲ್ಲಿ ಮೂರು ವರ್ಷಗಳ ಕಾಲ ಕಟೀಲು ಮೇಳದಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದ ನಂತರ ಬಪ್ಪನಾಡು ಮೇಳದಲ್ಲಿ ಒಂದು ವರ್ಷ ತಿರುಗಾಟ ನಡೆಸಿದರು. ಆ ನಂತರ ಕಳೆದ 30 ವರ್ಷಗಳಿಗಿಂತಲೂ ಹೆಚ್ಚು ನಿರಂತರವಾಗಿ ಶ್ರೀ ಧರ್ಮಸ್ಥಳ ಮೇಳದಲ್ಲಿ ಭಾಗವತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸೋದರಮಾವ ಪುತ್ತಿಗೆ ರಘುರಾಮ ಹೊಳ್ಳರ ನೆರಳಿನಲ್ಲೇ ಭಾಗವತರಾಗಿದ್ದು ಅವರದೇ ಶೈಲಿಯಲ್ಲಿ ಪಳಗಿದರೂ ಪ್ರತ್ಯೇಕವಾಗಿ ಗುರುತಿಸುವ ಶಾರೀರ ಮತ್ತು ಶೈಲಿಯನ್ನು ಕರಗತ ಮಾಡಿಕೊಂಡವರು. ಮಾಧುರ್ಯದಿಂದ ಕೂಡಿದ ಸ್ವರ ಇವರ ವಿಶೇಷತೆಗಳಲ್ಲೊಂದು. ಹಲವಾರು ಪ್ರಸಂಗಗಳನ್ನು ಪ್ರಸಂಗ ಪುಸ್ತಕಗಳಿಲ್ಲದೆ ಆಡಿಸಬಲ್ಲ ಸಾಮರ್ಥ್ಯವಿರುವ ಶ್ರೀ ಮಯ್ಯರಿಗೆ ಹೆಚ್ಚಿನ ಪದ್ಯಗಳು ಕಂಠಪಾಠ.
ಯಾವುದೇ ಪೌರಾಣಿಕ ಪ್ರಸಂಗವನ್ನು ಆಡಿಸುವ ಸಾಮರ್ಥ್ಯ, ಪರಂಪರೆಯನ್ನು ನಿರ್ಲಕ್ಷಿಸದ ಕಲೆಯ ಮೇಲಿನ ಕಾಳಜಿ ಹಾಗೂ ಅತಿರೇಕ, ಸರ್ಕಸ್‍ಗಳಿಲ್ಲದ ಎಲ್ಲರಿಗೂ ಸಹ್ಯವಾಗುವ ಭಾಗವತಿಕೆಗಳಿಂದ ಹಿರಿಯ ತಲೆಮಾರಿನಿಂದ ಹಿಡಿದು ಯುವ ಪ್ರೇಕ್ಷಕರೆಲ್ಲರ ಅಭಿಮಾನವನ್ನು ಗಳಿಸಿಕೊಂಡ ಕೆಲವೇ ಕಲಾವಿದರಲ್ಲಿ ಸಿರಿಬಾಗಿಲು ರಾಮಕೃಷ್ಣ ಮಯ್ಯರು ಮುಂಚೂಣಿಯಲ್ಲಿ ನಿಲ್ಲುವವರ ಸಾಲಿಗೆ ಸೇರುತ್ತಾರೆ. ಈ ಎಲ್ಲ ಕಾರಣಗಳಿಂದ ಮಯ್ಯರು ಇಷ್ಟವಾಗುತ್ತಾರೆ. ಕುಟುಂಬವು ಕಲಾಸೇವೆಯೊಂದಿಗೆ ಸಾಮಾಜಿಕ ಸೇವೆಗಳಲ್ಲಿಯೂ ತೊಡಗಿಕೊಂಡಿದೆ ಎಂಬುದಕ್ಕೆ ರಾಮಕೃಷ್ಣ ಮಯ್ಯರ ಧರ್ಮಪತ್ನಿ ಶ್ರೀಮತಿ ಸುಮಿತ್ರಾ ಮಯ್ಯರೇ ಸಾಕ್ಷಿ. ಗ್ರಾಮ ಪಂಚಾಯತ್ ಸದಸ್ಯೆಯಾಗಿರುವ ಶ್ರೀಮತಿ ಸುಮಿತ್ರಾ ಆರ್. ಮಯ್ಯ ತಾನು ಸ್ವತಃ ಯಕ್ಷಗಾನ ಕಲಾವಿದೆಯಾಗಿರುವುದರ ಜೊತೆಗೆ ಜನಪರ ಕಾಳಜಿಯುಳ್ಳ ಮಹಿಳೆಯಾಗಿ ಅನೇಕ ಅಭಿವೃದ್ಧಿಪರ ಕೆಲಸಗಳನ್ನು ಮಾಡಿದ್ದಾರೆ. ಗಂಡನ ಕಲಾಸೇವೆಯನ್ನು ಪ್ರೋತ್ಸಾಹಿಸುತ್ತಾ, ಕುಟುಂಬ ನಿರ್ವಹಣೆಯ ಜೊತೆಗೆ, ಸಮಾಜಸೇವೆಯ ಕಾರ್ಯವನ್ನು ಕೈಗೊಂಡು ಮುನ್ನಡೆಸುವ ಸದ್ಗೃಹಿಣಿ. ಮಕ್ಕಳಾದ ಶ್ರೀಮುಖ ಮತ್ತು ಶ್ರೀರಾಜ್ ವಿದ್ಯಾಭ್ಯಾಸದ ನಡುವೆಯೂ ಈಗಾಗಲೇ ಯಕ್ಷಗಾನದ ವೇಷಧಾರಿಗಳಾಗಿ ತಮ್ಮ ಕಲಾಸಕ್ತಿ, ಹುಮ್ಮಸ್ಸನ್ನು ತೋರಿಸುತ್ತಿದ್ದಾರೆ.
ರಾಮಕೃಷ್ಣ ಮಯ್ಯರು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ನಿಡ್ಲೆ ಇದರಲ್ಲಿ ಸುಮಾರು 25ಕ್ಕಿಂತಲೂ ಹೆಚ್ಚು ಮಳೆಗಾಲದ ತಿರುಗಾಟವನ್ನೂ ಮಾಡಿದ್ದಾರೆ. ಸದಾ ಹಸನ್ಮುಖಿ, ವಿವಾದಗಳಿಂದ ಮಾರು ದೂರವೇ ಉಳಿಯುವ ಕಲಾವಿದರಲ್ಲಿ ಒಬ್ಬರು, ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ಸುಮಧುರ ಕಂಠಸಿರಿಯಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ ಮಯ್ಯರು ತಮ್ಮ ಕಲಾಜೀವನದ ಉನ್ನತಿಗೆ ಮೂಲಕಾರಣರಾದವರನ್ನು ನೆನಪಿಸಿಕೊಳ್ಳುತ್ತಾರೆ. ‘‘ಧರ್ಮಸ್ಥಳದ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾಗಿರುವ ಶ್ರೀ ವೀರೇಂದ್ರ ಹೆಗ್ಗಡೆಯವರು ಹಾಗೂ ಶ್ರೀ ಹರ್ಷೇಂದ್ರ ಕುಮಾರ್ ಅವರ ಆಶೀರ್ವಾದವೇ ನನಗೆ ಹಾಗೂ ಶ್ರೀ ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನಕ್ಕೆ ಶ್ರೀರಕ್ಷೆ’’ ಎಂದು ವಿನೀತರಾಗಿ ನುಡಿಯುತ್ತಾರೆ.
ರಾಮಕೃಷ್ಣ ಮಯ್ಯರ ಸಾಧನೆಗೆ ಹಲವಾರು ಪ್ರಶಸ್ತಿ, ಸನ್ಮಾನಗಳು ಸಂದಿವೆ. ದಾವಣಗೆರೆಯ ಶ್ರೀ ಭಾಗವತ ಪ್ರತಿಷ್ಠಾನ, ಶ್ರೀ ಶಾರದಾ ಸಂಗೀತ ಮತ್ತು ನೃತ್ಯ ವಿದ್ಯಾಲಯವು ‘ಯಕ್ಷಲೋಕ ಗಾನವಿಹಾರಿ’ ಎಂಬ ಬಿರುದನ್ನು ನೀಡಿ ಗೌರವಿಸಿದೆ. ಹೈದರಾಬಾದ್‍ನ ಕರ್ನಾಟಕ ಕರಾವಳಿ ಮೈತ್ರಿ ಸಂಘವು ‘ಗಾನಗಂಧರ್ವ’ ಬಿರುದು ಹಾಗೂ ಮೈಸೂರು ಚಾಮುಂಡಿಪುರದ ಚೆಂಡೆ ಕಲಾಸಂಘವು ‘ಕರ್ನಾಟಕ ಭಾಗವತ ಸಿರಿ’ ಬಿರುದುಗಳನ್ನು ನೀಡಿ ಸನ್ಮಾನಿಸಿವೆ. ಬಹರೈನ್ ಕನ್ನಡ ಸಂಘ, ಕೇರಳ, ಕರ್ನಾಟಕ ಮೊದಲಾದ ರಾಜ್ಯಗಳ ಕಲಾಸಂಘ ಸಂಸ್ಥೆಗಳು ಪ್ರಶಸ್ತಿ, ಸನ್ಮಾನಗಳನ್ನು ನೀಡಿ ಗೌರವಿಸಿವೆ.
ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ರಂಗಪ್ರಸಂಗ: ಗಡಿನಾಡಿನ ಸಾಹಿತಿ, ಸಂಶೋಧಕರಲ್ಲಿ ಓರ್ವರಾದ ಸಿರಿಬಾಗಿಲು ವೆಂಕಪ್ಪಯ್ಯನವರ ಸ್ಮರಣಾರ್ಥ ತನ್ನ ತೀರ್ಥರೂಪರ ಹೆಸರಿನಲ್ಲಿಯೇ ‘‘ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ’’ವನ್ನು ರಾಮಕೃಷ್ಣ ಮಯ್ಯರು ಸ್ಥಾಪಿಸಿದರು. ಈ ಪ್ರತಿಷ್ಠಾನದ ಮೂಲಕ ಸಾಹಿತ್ಯ ಲೋಕಕ್ಕೆ ಮತ್ತು ಯಕ್ಷಗಾನ ಕಲೆಗೆ ಸಂಬಂಧಪಟ್ಟಂತೆ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ. ಸಾಹಿತಿ ಸಿರಿಬಾಗಿಲು ವೆಂಕಪ್ಪಯ್ಯನವರ ಸಮಗ್ರ ಬರಹಗಳ ಪುಸ್ತಕ ‘ಸಿರಿಬಾಗಿಲು’ ಎಂಬ ಗ್ರಂಥವನ್ನು ಪ್ರಕಟಿಸಿದ್ದಾರೆ. ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರತಿವರ್ಷವೂ ‘ಸಿರಿಬಾಗಿಲು’ ವೆಂಕಪ್ಪಯ್ಯ ಸ್ಮಾರಕ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಅಲ್ಲದೆ ಪ್ರತಿಷ್ಠಾನವು ಹಿರಿಯ ಕಲಾವಿದ ಹಾಗೂ ಸಂಶೋಧಕ ದೇಶಮಂಗಲ ಕೃಷ್ಣ ಕಾರಂತರ ಜನ್ಮಶತಮಾನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದೆ. ಆ ತಾಳಮದ್ದಳೆ ಸರಣಿ ಕಾರ್ಯಕ್ರಮವನ್ನು ನಡೆಸಿದೆ. ಅದೂ ಅಲ್ಲದೆ ‘ಯಕ್ಷ ಶ್ರೀಕರ’ ಎಂಬ ತಾಳಮದ್ದಳೆ ಸರಣಿಯನ್ನು ಕಾಸರಗೋಡು ಶ್ರೀ ವೆಂಕಟ್ರಮಣ ದೇವಳದಲ್ಲಿ ವರ್ಷವಿಡಿ ನಡೆಸಿದೆ. ‘ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ’ದ ವತಿಯಿಂದ ನಡೆಯುತ್ತಿರುವ ಅಪೂರ್ವವೂ ಅಪರೂಪವೂ ಆದ ವಿಶಿಷ್ಟವಾದ ಕಾರ್ಯಕ್ರಮವೇ ‘ರಂಗಪ್ರಸಂಗ’. ಈ ಕಾರ್ಯಕ್ರಮದ ರೂವಾರಿಗಳಾದ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ರಾಮಕೃಷ್ಣ ಮಯ್ಯರು ತನ್ನ ಹಲವಾರು ವರ್ಷಗಳ ಚಿಂತನೆಗೆ ಕಾರ್ಯರೂಪ ನೀಡಿದ್ದಾರೆ.
ರಂಗಪ್ರಸಂಗದ ವಿವಿಧ ಪ್ರದರ್ಶನಗಳು
ರಂಗಪ್ರಸಂಗದಲ್ಲಿ, ಮಾಯವಾಗುತ್ತಿರುವ ಯಕ್ಷಗಾನ ಕಲೆಯ ಸಾಂಪ್ರದಾಯಕತೆಗೆ ಮರುಜೀವ ನೀಡಿ ರಂಗದಲ್ಲಿ ಪ್ರದರ್ಶಿಸುವುದು ಮತ್ತು ಅದರ ದಾಖಲೀಕರಣವೂ ಒಳಗೊಂಡಿದೆ. ಪೂರ್ವರಂಗ, ರಂಗ ಮಾಹಿತಿ, ಬಣ್ಣಗಾರಿಕೆ, ಒಡ್ಡೋಲಗ ಕ್ರಮಗಳು, ಹಿಮ್ಮೇಳ ಇತ್ಯಾದಿ ಯಕ್ಷಗಾನದ ಹಲವಾರು ಅಂಗಗಳ ಪರಂಪರೆಯನ್ನು ಅಭ್ಯಾಸಿಗಳಿಗೆ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಅದರ ಪ್ರದರ್ಶನ ಮತ್ತು ದಾಖಲೀಕರಣವನ್ನು ‘ರಂಗಪ್ರಸಂಗ’ ಎಂಬ ಕಾರ್ಯಕ್ರಮದಡಿಯಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ. ವಿವಿಧೆಡೆಗಳಲ್ಲಿ ಈಗಾಗಲೇ ರಂಗಪ್ರಸಂಗದ ಐದು ಭಾಗಗಳು ಅಥವಾ ಪ್ರದರ್ಶನಗಳು ಆಗಿವೆ. ರಂಗಪ್ರಸಂಗದ ಆರನೇ ಭಾಗದ ಪ್ರದರ್ಶನದ ತಯಾರಿಯಲ್ಲಿದ್ದಾರೆ. ಸಿರಿಬಾಗಿಲು ರಾಮಕೃಷ್ಣ ಮಯ್ಯರ ಅದ್ಭುತ ಕಲ್ಪನೆ ಹಾಗೂ ಯಕ್ಷರಂಗಕ್ಕೆ ಮುಂದೊಂದು ದಿನ ಅಮೂಲ್ಯವಾದ ಕೊಡುಗೆಯಾಗುವುದರಲ್ಲಿ ಎಳ್ಳಿನಿತೂ ಸಂಶಯವಿಲ್ಲ.
ರಂಗಪ್ರಸಂಗದ ಯಶಸ್ಸಿನಿಂದ ಪ್ರೇರಿತವೋ ಎಂಬಂತೆ ತಾಳಮದ್ದಳೆಗೆ ಸಂಬಂಧಪಟ್ಟಂತೆ ಅರ್ಥಾಂತರಂಗ ಎಂಬ ಕಾರ್ಯಕ್ರಮವನ್ನು ‘ಪ್ರತಿಷ್ಠಾನ’ ಆಯೋಜಿಸಿತು. ತಾಳಮದ್ದಳೆಯ ಮೂಲಸ್ವರೂಪ, ಪಾತ್ರೋಚಿತ ಅರ್ಥಗಾರಿಕೆ ಹೇಗಿರಬೇಕು ಎಂಬ ಕಲ್ಪನೆ, ಅರ್ಥಗಾರಿಕೆಯ ಸಮಯಾವಕಾಶ, ಪೋಷಕ ಪಾತ್ರದ ಅರ್ಥಗಾರಿಕೆ, ಮುಖ್ಯ ಪಾತ್ರಗಳ ಅರ್ಥಗಾರಿಕೆ ಮುಂತಾದುವುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅರ್ಥಾಂತ ರಂಗವನ್ನು ಶ್ರೀ ರಾಧಾಕೃಷ್ಣ ಕಲ್ಚಾರ್ ಅವರ ನಿರ್ದೇಶನದಲ್ಲಿ ಆರಂಭ ಮಾಡಿದರು. ರಂಗಪ್ರಸಂಗ ಮತ್ತು ಅರ್ಥಾಂತರಂಗ ಯಕ್ಷಗಾನಾಧ್ಯಯನ ಮತ್ತು Ph.D ಮಾಡುವವರಿಗೆ ತುಂಬಾ ಸಹಕಾರಿಯಾಗಲಿದೆ ಎನ್ನುವುದರಲ್ಲಿ ಸಂಶಯವಿಲ್ಲ.
ಸಿರಿಬಾಗಿಲು ರಾಮಕೃಷ್ಣ ಮಯ್ಯ-50 ಮತ್ತು ಸುವರ್ಣ ಯಕ್ಷಗಾನಾರ್ಚನೆ: ಅಕ್ಟೋಬರ್ 25, 2017ರಂದು ಸಿರಿಬಾಗಿಲು ಶ್ರೀ ರಾಮಕೃಷ್ಣ ಮಯ್ಯರ 50ನೇ ಜನ್ಮದಿನ. ಈ ದಿನವನ್ನು ಅವರು ಅತಿ ವಿಶಿಷ್ಠವಾಗಿ ಆಚರಿಸಿದ್ದರು. ಬಹುಶಃ ಮಯ್ಯರಿಗೆ ಹಾಗೂ ಯಕ್ಷಾಭಿಮಾನಿಗಳಿಗೆ ಈ ದಿನ ಮರೆಯಲಾರದ ದಿನ. ಆ ದಿನವನ್ನು ಅವರು ಕೂಡ್ಲು ಎಂಬಲ್ಲಿರುವ ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವರಿಗೆ ‘ಸುವರ್ಣ ಯಕ್ಷಗಾನಾರ್ಚನೆ’ ನಡೆಸುವುದರ ಮೂಲಕ ಸ್ಮರಣೀಯವಾಗಿಸಿದ್ದರು. ಮಯ್ಯರ ಗುರುಗಳಾದ ಶ್ರೀ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಉದ್ಘಾಟಿಸಿದ್ದ ಈ ಕಾರ್ಯಕ್ರಮದಲ್ಲಿ ಸಿರಿಬಾಗಿಲು ರಾಮಕೃಷ್ಣ ಮಯ್ಯರು ಒಟ್ಟು 50 ಕವಿಗಳ ಪರಿಚಯ ವಿವರಗಳ ಸಹಿತ 50 ಮಟ್ಟುಗಳ ಯಕ್ಷಗಾನ ಪದ್ಯಗಳನ್ನು ಹಾಡಿ ‘‘ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನ’’ದಲ್ಲಿ ಸುವರ್ಣ ಯಕ್ಷಗಾನಾರ್ಚನೆ ನಡೆಸಿದ್ದರು. ಈ ಸುವರ್ಣ ಯಕ್ಷಗಾನಾರ್ಚನೆಯ ಸಮಗ್ರ ನಿರ್ದೇಶನ ಮತ್ತು ನಿರೂಪಣೆಯನ್ನು ಯಕ್ಷಗಾನ ವಿದ್ವಾಂಸ ಮತ್ತು ಸಾಹಿತಿ ಶ್ರೀಧರ್ ಡಿ.ಎಸ್. ನಿರ್ವಹಿಸಿದ್ದರು.
ಸಿರಿಬಾಗಿಲಿನಲ್ಲಿ ನಿರ್ಮಾಣಗೊಳ್ಳುತ್ತಿರುವ ‘ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನ’ ಭಾಗವತ ರಾಮಕೃಷ್ಣ ಮಯ್ಯರ ಕನಸಿನ ಕೂಸು. ಹಲವಾರು ಸಂಘ, ಸಂಸ್ಥೆಗಳ ಮಹನೀಯರ, ಕಲಾಪೋಷಕರ ಸಹಕಾರದಿಂದ ಈ ಮಹತ್ತರವಾದ ಕಾರ್ಯವನ್ನು ಮಯ್ಯರು ಕೈಗೆತ್ತಿಕೊಂಡಿದ್ದಾರೆ. ಈ ಬೃಹತ್ ಕಟ್ಟಡದ ಕಾಮಗಾರಿಯು ಭರದಿಂದ ನಡೆಯುತ್ತಿದೆ. ಇನ್ನೂ ಹೆಚ್ಚಿನ ಮೂಲಗಳಿಂದ ಹಲವಿಧದ ಸಹಕಾರ ಮತ್ತು ನೆರವು ದೊರೆಯುವುದರ ಜೊತೆಗೆ ಸರಕಾರದ ಸಹಾಯಧನವೂ ಹರಿದುಬರುವ ನಿರೀಕ್ಷೆಯಿದೆ.