ಗಣರಾಜ್ಯೋತ್ಸವದ ಪ್ರಯುಕ್ತ, ಬೆಂಗಳೂರಿನ ಯಕ್ಷ ಕಲಾ ಅಕಾಡೆಮಿಯು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. 72ನೇ ಗಣರಾಜ್ಯೋತ್ಸವದ ಪ್ರಯುಕ್ತ ಜನವರಿ 26ರಂದು ಯಕ್ಷ ಕಲಾ ಅಕಾಡೆಮಿಯ ಆವರಣದಲ್ಲಿ ” ಶ್ರೀ ರಾಮ ಪಟ್ಟಾಭಿಷೇಕ ” ಎಂಬ ಪೌರಾಣಿಕ ಪ್ರಸಂಗದ ತಾಳಮದ್ದಳೆಯನ್ನು ಸಂಸ್ಥೆಯ ಕಲಾವಿದರು ನಡೆಸಿಕೊಡಲಿದ್ದಾರೆ.
ಭಾಗವತಿಕೆಯಲ್ಲಿ, ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ, ಗುರು ಕೋಟ ಕೃಷ್ಣ ಮೂರ್ತಿ ತುಂಗ, ಹಾಗೂ ಕುಮಾರಿ ಚಿತ್ಕಲಾ ಕೆ. ತುಂಗ, ಮದ್ದಳೆಯಲ್ಲಿ ಚಿನ್ಮಯ್ ಅಂಬರಗೊಡ್ಲು, ರಾಘು ಶರ್ಮಾ, ಮುಮ್ಮೇಳದಲ್ಲಿ, ರವಿ ಮಡೋಡಿ, ಮನೋಜ್ ಭಟ್, ಆದಿತ್ಯ ಉಡುಪ, ಶಶಾಂಕ್ ಕಾಶಿ, ಪ್ರದೀಪ ಮಧ್ಯಸ್ಥ,ಆದಿತ್ಯ ಹೊಳ್ಳ, ಸುಹಾಸ ಕರಬ, ಸದಾಶಿವ ತುಂಗ, ಶ್ರೀ ನಿಧಿ ಎಂ.ಎಸ್., ವಾಸುದೇವ, ಶ್ರೀಮತಿ ಅರ್ಚನಾ, ಶ್ರೀಮತಿ ಚೇತನಾರವರು ಭಾಗವಹಿಸಲಿದ್ದಾರೆ ಎಂದು ಯಕ್ಷ ಕಲಾ ಅಕಾಡೆಮಿಯ ಕಾರ್ಯದರ್ಶಿ ಕೆ.ಅನಸೂಯಾರವರು ತಿಳಿಸಿದ್ದಾರೆ. ಸರಕಾರದ ಕೋವಿಡ್ ನಿಯಮಗಳನ್ನು ಅನುಸರಿಸಿ ಕಾರ್ಯಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರಂಗಸ್ಥಳ ಮಂಗಳೂರು ರಿ. ಅರ್ಪಿಸುವ ಮತ್ತು ಪೆರ್ಡೂರು ಮೇಳದವರಿಂದ ದಿನಾಂಕ 30 – 1 – 21 ನೇ ಶನಿವಾರ ರಾತ್ರಿ 7-00 ರಿಂದ (ಕಾಲ ಮಿತಿ) ಕದ್ರಿ ರಾಜಾಂಗಣದಲ್ಲಿ ಕಂಸ – ಕಂಸ – ಕಂಸ ( ಕಂಸ ಜನನ – ಕಂಸ ಧಿಗ್ವಿಜಯ – ಕಂಸ ವಧೆ ) ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ರಂಗಸ್ಥಳ ಮಂಗಳೂರು (ರಿ) ಇದರ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಈ ಕಾರ್ಯಕ್ರಮಕ್ಕೆ ಯಕ್ಷಗಾನ ಕಲಾಭಿಮಾನಿಗಳಿಗೆ ಸ್ವಾಗತ ಕೋರಿದ್ದಾರೆ. ಈ ಪ್ರದರ್ಶನಕ್ಕೆ ಉಚಿತ ಪ್ರವೇಶವಿರುವುದಾದರೂ ಸರಕಾರದ ನಿಯಮದಂತೆ ಸಾಮಾಜಿಕ ಅಂತರ ಮತ್ತು ಮಾಸ್ಕ್ ಕಡ್ಡಾಯ ಎಂದೂ ಸಂಘಟಕರು ತಿಳಿಸಿದ್ದಾರೆ.
ಒಬ್ಬಳು ತಾಯಿ ಹೆತ್ತ ಎಲ್ಲಾ ಮಕ್ಕಳೂ ಒಂದೇ ತೆರನಿರುವುದಿಲ್ಲ. ಇರಬೇಕೆಂಬ ನಿಯಮವೂ ಇಲ್ಲ. ಕೆಲವರಿಗೆ ಅವಕಾಶಗಳು ಹೆಚ್ಚು. ಕೆಲವರು ಅವಕಾಶವಿಲ್ಲದ ಪ್ರತಿಭೆಗಳಾಗಿಯೇ ಉಳಿಯುವುದುಂಟು. ಕೆಲವರು ಶ್ರೇಷ್ಠ ಕಲಾವಿದನೆಂದು ಪ್ರಸಿದ್ಧಿಯನ್ನು ಪಡೆಯುತ್ತಾರೆ. ಕೆಲವರು ಎಲೆಮರೆಯ ಕಾಯಿಯಾಗಿ ಉಳಿಯುತ್ತಾರೆ. ತುಂಬಾ ಎತ್ತರಕ್ಕೇರದಿದ್ದರೂ ತನಗೆ ಬಂದ ಪಾತ್ರವನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ತನ್ನ ಬೌದ್ಧಿಕ ಮಿತಿಯೊಳಗೆ ಆ ಪಾತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ಕಲಾವಿದನು ನೀಡಬಲ್ಲ. ಯಾವ ಪಾತ್ರ ಎನ್ನುವುದು ಮುಖ್ಯವಲ್ಲ ತಾನೆ? ಪಾತ್ರವನ್ನು ಹೇಗೆ ನಿರ್ವಹಿಸಿದ, ಎಷ್ಟು ಚೆನ್ನಾಗಿ ನಿರ್ವಹಿಸಿದ ಎಂಬುದು ನಿರ್ಣಯಕ್ಕಿರುವ ಮಾನದಂಡವಲ್ಲವೇ. ಕಲಾವಿದರೆಲ್ಲರೂ ಕಲಾಮಾತೆಯ ಸುಪುತ್ರರು. ಕಲಾಸೇವೆಯನ್ನು ಮಾಡುವವರು. ಪ್ರಾಮಾಣಿಕವಾಗಿ ದುಡಿದಾಗ ಆ ಕಲಾವಿದನು ಖಂಡಿತಾ ಗೌರವಿಸಲ್ಪಡುತ್ತಾನೆ. ಪ್ರಚಾರವನ್ನು ಬಯಸದೆ ಮಾಧ್ಯಮಗಳಿಂದ ದೂರ ಉಳಿದು ಪ್ರಾಮಾಣಿಕ ವಾಗಿ ಕಲಾಕೈಂಕರ್ಯವನ್ನು ನಡೆಸುವ ಕಲಾವಿದರನೇಕರಿದ್ದಾರೆ. ಅಂತಹವರಲ್ಲೊಬ್ಬರು ಬಾಲಕೃಷ್ಣ ಶೆಟ್ಟಿ ತಾರಿಯಡ್ಕ. ಪ್ರಸ್ತುತ ಕಟೀಲು ಮೇಳದ ಕಲಾವಿದ.
ಬಾಲಕೃಷ್ಣ ಶೆಟ್ಟಿ ಇವರು ಬಂಟ್ವಾಳ ತಾಲೂಕು ವಿಟ್ಲ ಪಡ್ನೂರು ಗ್ರಾಮದ ತಾರಿಯಡ್ಕ ಎಂಬಲ್ಲಿ ಕೊರಗಪ್ಪ ಶೆಟ್ಟಿ ಮತ್ತು ಮುತ್ತಕ್ಕ ದಂಪತಿಗಳಿಗೆ ಮಗನಾಗಿ 01-09-1963ರಲ್ಲಿ ಜನಿಸಿದರು. ಇವರದು ಬಡ ಕೃಷಿ ಕುಟುಂಬ. ಬಾಲಕೃಷ್ಣ ಶೆಟ್ಟರು ಕೊಡುಂಗಾಯಿ ಶಾಲೆಯಲ್ಲಿ 4ನೇ ತರಗತಿ ವರೇಗೆ ಓದಿದರು. ಬಡತನದಿಂದಾಗಿಯೆ ಶಾಲೆ ಬಿಡಬೇಕಾಯಿತು. ಓದನ್ನು ನಿಲ್ಲಿಸಿ ತಂದೆಗೆ ಕೃಷಿ ಕಾರ್ಯಗಳಲ್ಲಿ ಸಹಕರಿಸಿದರು. ಬಾಲಕೃಷ್ಣ ಶೆಟ್ಟರಿಗೆ ಯಕ್ಷಗಾನವೆಂದರೆ ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಬಲು ಇಷ್ಟ. ವಿಟ್ಲ, ಮಂಚಿ ಪರಿಸರದಲ್ಲಿ ನಡೆಯುತ್ತಿದ್ದ ಪ್ರದರ್ಶನಗಳನ್ನು ನೋಡುತ್ತಿದ್ದರು. ತಾಳಮದ್ದಳೆಗೂ ಹೋಗುತ್ತಿದ್ದರಂತೆ. ಸಹಜವಾಗಿ ಕಲಾವಿದನಾಗಬೇಕೆಂಬ ಆಸೆ ಮೂಡಿತು. ನಾಟ್ಯ ಕಲಿಯಬೇಕೆಂಬ ತುಡಿತವೂ ಹೆಚ್ಚಿತು.
1981ನೇ ಇಸವಿ ಧರ್ಮಸ್ಥಳ ಲಲಿತಕಲಾ ಕೇಂದ್ರಕ್ಕೆ ತೆರಳಿ ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ನಾಟ್ಯ ಕಲಿತರು. ಆಗ ಹಿಮ್ಮೇಳಕ್ಕೆ ಗುರುಗಳಾಗಿದ್ದವರು ನೆಡ್ಲೆ ನರಸಿಂಹ ಭಟ್ಟರು. ಕಟೀಲು ಮೇಳ 2 ಇದ್ದ ಸಂದರ್ಭ. 2ನೇ ಮೇಳದಲ್ಲಿ 1 ವರ್ಷ ಕಲಾವಿದನಾಗಿಯೂ ಚೌಕಿಸಹಾಯಕನಾಗಿಯೂ ಕೆಲಸ ಮಾಡಿದರು. ಮುಂದಿನ ವರ್ಷ 3ನೇ ಮೇಳ ಪ್ರಾರಂಭವಾದಾಗ ವೇಷಧಾರಿಯಾಗಿ ಸೇರಿಕೊಂಡರು. ಆಗ ಭಾಗವತರಾಗಿದ್ದವರು ಸರಪಾಡಿ ಶ್ರೀ ಶಂಕರನಾರಾಯಣ ಕಾರಂತರು. ಗೇರುಕಟ್ಟೆ, ಗುಡ್ಡಪ್ಪ ಗೌಡ, ಸಂಜೀವ ಚೌಟರು, ಪೇಜಾವರ ಸತ್ಯಾನಂದ ರಾವ್, ಕೃಷ್ಣಮೂಲ್ಯ, ಉಮೇಶ್ ಹೆಬ್ಬಾರ್, ನಾರಾಯಣ ಮಣಿಯಾಣಿ, ಕುತ್ಯಾಳ ಬಾಬು ರೈಗಳ ಒಡನಾಟ ಇವರಿಗೆ ಸಿಕ್ಕಿತು.
3ನೇ ಮೇಳದಲ್ಲಿ 1 ವರ್ಷ ತಿರುಗಾಟ ನಡೆಸಿ ನಂತರ 9 ವರ್ಷ 1ನೇ ಮೇಳದಲ್ಲಿ ಕಲಾಸೇವೆಯನ್ನು ಮಾಡಿದರು. ಭಾಗವತರಾಗಿದ್ದವರು ಇರಾ ಗೋಪಾಲಕೃಷ್ಣ ಭಾಗವತರು. 1ನೇ ಮೇಳದಲ್ಲಿ ಕೊರಗಪ್ಪ ನಾಯ್ಕ ಕಾಟುಕುಕ್ಕೆ, ಕುಂಞಣ್ಣ ಶೆಟ್ಟಿ, ಸಂಪಾಜೆ ಶೀನಪ್ಪ ರೈ, ಕುಷ್ಠ ಗಾಣಿಗ, ಸುಣ್ಣಂಬಳ, ಬೆಳ್ಳಾರೆ ಮಂಜುನಾಥ ಭಟ್, ಗುಂಡಿಮಜಲು, ಕೇಶವ ಶೆಟ್ಟಿಗಾರ್, ಮುಚ್ಚೂರು ಉಮೇಶ ಶೆಟ್ರು ಮೊದಲಾದವರೊಂದಿಗೆ ತಿರುಗಾಟ ನಡೆಸಿದ ಶ್ರೀ ಬಾಲಕೃಷ್ಣ ಶೆಟ್ರು ಕಳೆದ 25 ವರುಷಗಳಿಂದ ಕಟೀಲು 4ನೇ ಮೇಳದಲ್ಲಿ ಕಲಾಮಾತೆಯ ಸೇವೆಯನ್ನು ಮಾಡುತ್ತಿದ್ದಾರೆ.
ಸದ್ರಿ ಮೇಳದಲ್ಲಿ ಪೂಂಜರು, ಕುಬಣೂರು, ಜೋಗಿ, ಶೀನಪ್ಪ ರೈ, ತೊಡಿಕಾನ, ಸುಬ್ರಾಯ ಹೊಳ್ಳರು, ವಿಷ್ಣುಶರ್ಮರು, ಕಾವು ಗಿರೀಶ, ಪೆರುವಾಯಿ, ಪೆರ್ಮುದೆ, ಉಮಾ ಮಹೇಶ್ವರ ಮೊದಲಾದವರೊಂದಿಗೆ ಕೊಡುಂಗಾಯಿ ಬಾಲಕೃಷ್ಣ ಶೆಟ್ಟರು ಕಲಾವಿದರಾಗಿ ಎಲ್ಲರ ಪ್ರೀತಿಗೆ ಪಾತ್ರರಾದರು. ಕೋಡಂಗಿ, ಬಾಲಗೋಪಾಲರು, ಮುಖ್ಯ ಸ್ತ್ರೀವೇಷ, ಪೀಠಿಕಾ ಸ್ತ್ರೀವೇಷಗಳನ್ನು (ಪೂರ್ವರಂಗ) ನಿರ್ವಹಿಸುತ್ತಾ ಹಂತ ಹಂತವಾಗಿ ಬೆಳೆದು ಕಲಾವಿದರಾದರು.
ಪುರಾಣಪ್ರಸಂಗಗಳ ಮಾಹಿತಿ ಇವರಿಗೆ ಅದ್ಭುತವಾದುದು. ಪ್ರಸಂಗ ನಡೆಗಳ ಬಗ್ಗೆ ಉತ್ತಮ ಮಾಹಿತಿಯಿರುವ ಅನುಭವೀ ಕಲಾವಿದರಿವರು. ಸ್ತ್ರೀವೇಷ, ಪುಂಡುವೇಷಗಳನ್ನು ನಿರ್ವಹಿಸುತ್ತಿದ್ದ ಇವರು ಈಗ ಕಿರೀಟ ವೇಷಧಾರಿ. ತನಗೆ ಬಂದ ಪಾತ್ರಗಳನ್ನು ನಿರ್ವಂಚನೆಯಿಂದ ನಿರ್ವಹಿಸುವ ಪ್ರಾಮಾಣಿಕ ಕಲಾವಿದರು. ಪ್ರಚಾರಪ್ರಿಯರಲ್ಲ. ತೆರೆದುಕೊಳ್ಳುವ ಸ್ವಭಾವ ಅಲ್ಲ. ಯಾವಾಗಲೂ ಮುಚ್ಚಿಕೊಳ್ಳುವ ಸ್ವಭಾವ. ತಾನಾಯಿತು ತನ್ನ ಕೆಲಸವಾಯಿತು ಎಂದು ವ್ಯವಹರಿಸುವವರು.
ಪತ್ನಿ ಶ್ರೇಯಾ, 1993ರಲ್ಲಿ ವಿವಾಹವಾದ ಬಾಲಕೃಷ್ಣ ಶೆಟ್ಟರು ಇಬ್ಬರು ಮಕ್ಕಳ ತಂದೆ. ಪುತ್ರಿ ಮಶೀಶಾ ಶೆಟ್ಟಿ ಪದವೀಧರೆ, ವಿವಾಹಿತೆ. ಪುತ್ರ ಯತಿನ್ ಪದವೀಧರ. ವಾಮಂಜೂರು ಲಿಂಗಮಾರು ಶಿವಣ್ಣ ಶೆಟ್ರ 50ನೇ ವರುಷದ ಬಯಲಾಟದ ಸಂದರ್ಭ ಮತ್ತು ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣೆ ಸಂದರ್ಭ ಶ್ರೀ ಕಟೀಲು ಪದ್ಮನಾಭ ಇವರಿಂದ ಸನ್ಮಾನಿತರಾದ ಶ್ರೀ ಬಾಲಕೃಷ್ಣ ಶೆಟ್ಟಿ ಕೊಡುಂಗಾಯಿ ಇವರಿಗೆ ಕಲಾಮಾತೆಯ ಅನುಗ್ರಹ ಸದಾ ಇರಲೆಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆ.
ಕೆ. ಜಿ. ಮಂಜುನಾಥ ಭಟ್ಟರು (ಬೆಳ್ಳಾರೆ ಮಂಜುನಾಥ ಭಟ್) ಪ್ರಸ್ತುತ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ಇದಿರು ವೇಷಧಾರಿ. ಕಲಾವಿದನಾಗಿ 44 ತಿರುಗಾಟಗಳನ್ನು ನಡೆಸಿದವರು. ಸುಳ್ಯ ತಾಲೂಕು ಬೆಳ್ಳಾರೆಯಲ್ಲಿ ಕುಂಞಹಿತ್ತಿಲು ಗೋವಿಂದ ಭಟ್ ಮತ್ತು ಸರಸ್ವತಿ ಅಮ್ಮ ದಂಪತಿಗಳಿಗೆ ಮಗನಾಗಿ 01-04-1960ರಲ್ಲಿ ಬೆಳ್ಳಾರೆ ಮಂಜುನಾಥ ಭಟ್ಟರು ಜನಿಸಿದರು. ಇವರದು ಪುರೋಹಿತ ಮನೆತನ. 8ನೇ ತರಗತಿಯ ವರೇಗೆ ಓದಿದ ಇವರು ಯಕ್ಷಗಾನದತ್ತ ಆಕರ್ಷಿತರಾದರು.
ಪ್ರಸಿದ್ಧ ಕಲಾವಿದರಾದ ಮಾಣಂಗಾಯಿ ಕೃಷ್ಣ ಭಟ್ಟರು ಇವರ ಬಂಧುಗಳೇ ಆಗಿದ್ದರು (ಅಜ್ಜ). ತಂದೆಯವರೂ ಯಕ್ಷಗಾನ ಕಲಾವಿದರಾಗಿದ್ದರು. ಅಣ್ಣ ಬೆಳ್ಳಾರೆ ಸೂರ್ಯನಾರಾಯಣ ಭಟ್ ಉತ್ತಮ ಅರ್ಥಧಾರಿಗಳೂ, ಸಂಘಟಕರೂ, ಶ್ರೇಷ್ಠ ಲೇಖಕರೂ ಆಗಿರುತ್ತಾರೆ. ಬೆಳ್ಳಾರೆಯ ಮನೆಯಲ್ಲಿ ವಾರಕ್ಕೊಂದು ತಾಳಮದ್ದಳೆ ನಡೆಯುತ್ತಿತ್ತು. ಬೆಳ್ಳಾರೆ ಆಸುಪಾಸಿನ ಮನೆಗಳಲ್ಲಿ ತಾಳಮದ್ದಳೆ ಕಾರ್ಯಕ್ರಮಗಳು ಆಗಾಗ ನಡೆಯುತ್ತಿತ್ತು. ಸಹಜವಾಗಿ ಮಂಜುನಾಥ ಭಟ್ಟರಿಗೆ ಕಲಾವಿದನಾಗಬೇಕೆಂಬ ಬಯಕೆ ಮೂಡಿತು. ತನ್ನ 14ನೇ ವಯಸ್ಸಿನಲ್ಲಿ ಯಕ್ಷಗಾನ ರಂಗಕ್ಕೆ ಪಾದಾರ್ಪಣೆ ಮಾಡಿದರು. ಕಲಾವಿದನಾಗಲು ಪ್ರೇರಣೆ ಸಿಕ್ಕಿದ್ದು ಹಿರಿಯರಿಂದ.
1974-75ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಲಲಿತ ಕಲಾ ತರಬೇತಿ ಕೇಂದ್ರದಲ್ಲಿ ಶ್ರೀ ಪಡ್ರೆ ಚಂದು ಅವರ ಶಿಷ್ಯನಾಗಿ ನಾಟ್ಯವನ್ನು ಕಲಿತರು. ಮೊದಲು ಗೆಜ್ಜೆ ಕಟ್ಟಿ ವೇಷ ಮಾಡಿದ್ದು ಅಜ್ಜ ಮಾಣಂಗಾಯಿ ಕೃಷ್ಣ ಭಟ್ಟರ ನೇತೃತ್ವದಲ್ಲಿದ್ದ ಕೂಡ್ಲು ಶ್ರೀ ಗೋಪಾಲಕೃಷ್ಣ ದೇವರ ಮೇಳದಲ್ಲಿ (ಕುತ್ಯಾಳ). ಇದು ನನ್ನ ಸುಯೋಗ ಎಂದು ಬೆಳ್ಳಾರೆ ಮಂಜುನಾಥ ಭಟ್ಟರು ಹೇಳುತ್ತಾ ಆ ದಿನವನ್ನು ಇಂದಿಗೂ ನೆನಪಿಸುತ್ತಾರೆ. ನಂತರ ತಿರುಗಾಟ ಕಟೀಲು ಮೇಳದಲ್ಲಿ. ಆಸ್ರಣ್ಣ ಬಂಧುಗಳ ಆಶೀರ್ವಾದ, ಕಲ್ಲಾಡಿ ವಿಠಲ ಶೆಟ್ಟರು, ಪ್ರಸ್ತುತ ಸಂಚಾಲಕರಾದ ಕಲ್ಲಾಡಿ ದೇವೀಪ್ರಸಾದ ಶೆಟ್ಟರ ಪ್ರೋತ್ಸಾಹ, ಸಹಕಲಾವಿದರ, ಕಲಾಭಿಮಾನಿ ಗಳ ಪ್ರೋತ್ಸಾಹ, ಎಲ್ಲಕ್ಕಿಂತ ಹೆಚ್ಚು ಕಲಾಮಾತೆಯ ಅನುಗ್ರಹದಿಂದ ನಿರಂತರ ಕಟೀಲು ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದೇನೆ ಎಂಬುದು ಶ್ರೀ ಭಟ್ಟರ ಅಭಿಪ್ರಾಯ.
ಪೂರ್ವರಂಗದಲ್ಲಿ ಬಾಲಗೋಪಾಲರಾಗಿ, ಸ್ತ್ರೀವೇಷಧಾರಿಯಾಗಿ, ಪೀಠಿಕಾ ಸ್ತ್ರೀವೇಷ… ಹೀಗೆ ಎಲ್ಲಾ ವೇಷಗಳನ್ನೂ ಮಾಡಿರುತ್ತಾರೆ. ಪೂರ್ವರಂಗದ ಎಲ್ಲಾ ಪ್ರದರ್ಶನಗಳನ್ನೂ ಹೀಗೆಯೇ ಎಂದು ಹೇಳಬಲ್ಲ, ಮಾಡಬಲ್ಲ ಸಾಮರ್ಥ್ಯ ಇವರಿಗಿದೆ. ಹಂತ ಹಂತವಾಗಿ ಬೆಳೆಯುತ್ತಾ ಬಂದ ಬೆಳ್ಳಾರೆ ಮಂಜುನಾಥ ಭಟ್ಟರು ಈಗ ಮೇಳದ ಇದಿರು ವೇಷಧಾರಿ. ಎಲ್ಲಾ ವೇಷಗಳ ಮುಖವರ್ಣಿಕೆ ಹೀಗೆಯೇ ಇರಬೇಕು ಎಂದು ನಿಖರವಾಗಿ ಹೇಳಬಲ್ಲರು. ಅಲ್ಲದೆ ವೇಗವಾಗಿ ಮೇಕಪ್ ಮಾಡಿ ಗೆಜ್ಜೆ ಕಟ್ಟಿ ಸಿದ್ಧವಾಗುವ ಕಲೆ ಇವರಿಗೆ ಕರಗತವಾಗಿದೆ. ಪುರಾಣಜ್ಞಾನ, ಪ್ರಸಂಗಗಳ ನಡೆ ಬಗ್ಗೆ ಚೆನ್ನಾಗಿ ತಿಳಿದಿರುವ ಕಾರಣವೇ ಇವರೊಬ್ಬ ಸಂಪನ್ಮೂಲ ವ್ಯಕ್ತಿ.
ಚೌಕಿಯಲ್ಲಿ ಇವರಿದ್ದರೆ ಎಲ್ಲರಿಗೂ ಸಂತಸ. ಇವರಿಂದ ಸಲಹೆಗಳನ್ನು ಪಡೆದುಕೊಳ್ಳುತ್ತಾರೆ. ಅನನುಭವಿಗಳಿಗೆ ಅರ್ಥವಾಗುವಂತೆ ಚೆನ್ನಾಗಿ ಹೇಳಿಕೊಡಬಲ್ಲರು. ಹಾಗಾಗಿಯೇ ಬೆಳ್ಳಾರೆ ಮಂಜುನಾಥ ಭಟ್ಟರು ಮೇಳಕ್ಕೆ ಸಹಕಲಾವಿದರಿಗೆ ಆಸ್ತಿಯಾಗಿದ್ದಾರೆ. ಜಾಂಬವ, ವಾಲಿ, ಹಿರಣ್ಯಕಶ್ಯಪ, ಕಾರ್ತವೀರ್ಯ, ಕರ್ಣ, ರಕ್ತಬೀಜ, ಮಧು, ಕೈಟಭ, ದೇವೇಂದ್ರ, ಅರ್ಜುನ, ಅತಿಕಾಯ, ಭೀಷ್ಮ, ಕೌರವ ಮೊದಲಾದ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ.
1992ರಲ್ಲಿ ಅದಿತಿಯವರನ್ನು ವಿವಾಹವಾದರು. ಇವರು ಪ್ರಸಿದ್ಧ ಕಲಾವಿದ ನಿಡ್ಲೆ ಗೋವಿಂದ ಭಟ್ಟರ ಸಹೋದರಿ. ಬೆಳ್ಳಾರೆ ಮಂಜುನಾಥ ಭಟ್ ದಂಪತಿಗಳಿಗೆ ಮೂವರು ಮಕ್ಕಳು. (ಒಂದು ಹೆಣ್ಣು ಮತ್ತು ಇಬ್ಬರು ಪುತ್ರರು). ಪುತ್ರಿ ಸಾಯಿಸುಮಾ ಸ್ನಾತಕೋತ್ತರ ಪದವೀಧರೆ. ಯಕ್ಷಗಾನ ಕಲಾವಿದೆ. ವಿವಾಹಿತೆ. ರಾಮಕುಂಜ ಕಾಲೇಜಿನಲ್ಲಿ ಉಪನ್ಯಾಸಕಿ. ಹಿರಿಯ ಪುತ್ರ ಶ್ರೀಹರಿಶರ್ಮ ಪದವೀಧರ. ಕಿರಿಯ ಪುತ್ರ ಶ್ರೀರಾಮ ಶರ್ಮ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿ. ನಿಡ್ಲೆ ನರಸಿಂಹ ಭಟ್ ಮತ್ತು ಇರಾ ಗೋಪಾಲಕೃಷ್ಣ ಭಾಗವತರು ನನ್ನನ್ನು ತಿದ್ದಿ ತೀಡಿದರು ಎನ್ನುವ ಬೆಳ್ಳಾರೆ ಮಂಜುನಾಥ ಭಟ್ಟರು ಕದ್ರಿ ವಿಷ್ಣು ಸ್ಮಾರಕ ಎಳೆಯರ ಬಳಗ ಕದ್ರಿ, ಚೊಕ್ಕಾಡಿ, ಶೇಣಿ, ಮಲ್ಲೂರು, ಕುಪ್ಪೆಪದವು, ತಲಕಳ, ಬಜಪೆ, ಬಂಟ್ವಾಳ ಮೊದಲಾದ ಕಡೆಗಳಲ್ಲಿ ನಾಟ್ಯ ತರಬೇತಿಯನ್ನೂ ನೀಡಿರುತ್ತಾರೆ. ಬೆಳ್ಳಾರೆ ಮಂಜುನಾಥ ಭಟ್ಟರು ಅನೇಕ ಸಂಘ-ಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ.
ಸ್ತ್ರೀವೇಷಗಳನ್ನೂ ಉತ್ತಮ ರೀತಿಯಲ್ಲಿ ನಿರ್ವಹಿಸಿದ ಶ್ರೀ ಉದಯ ನಾವಡ ಮಧೂರು ಇವರು ತೆಂಕುತಿಟ್ಟಿನ ಶ್ರೇಷ್ಠ ಪುಂಡುವೇಷಧಾರಿ. ಉದಯ ನಾವಡರು ಎಲ್ಲಾ ಹಂತಗಳನ್ನೂ ದಾಟಿಯೇ ಮುಂದೆ ಸಾಗಿದವರು. ಕಲಿಕೆಯಲ್ಲೂ ಅತೀವವಾದ ಆಸಕ್ತಿಯನ್ನು ತೋರಿದವರು. ನೃತ್ಯ, ಮಾತುಗಳೆಂಬ ಎರಡು ವಿಭಾಗಗಳಲ್ಲೂ ಹಿಡಿತವನ್ನು ಸಾಧಿಸಿ ಇನ್ನೇನು ಒಂದನೇ ಪುಂಡುವೇಷಧಾರಿಯಾಗಿ ಕಾಣಿಸಿ ಕೊಳ್ಳುತ್ತಾರೆ ಎನ್ನುವಾಗಲೇ ಉದಯ ನಾವಡರಿಗೆ ಅದೃಷ್ಟವು ಕೈಕೊಟ್ಟಿತ್ತು. ಆರೋಗ್ಯ ಸಮಸ್ಯೆಯು ಕಾಣಿಸಿಕೊಂಡು ಯಕ್ಷಗಾನದಿಂದ ದೂರವಾಗಲೇ ಬೇಕಾದ ಅನಿವಾರ್ಯತೆಗೆ ಸಿಲುಕಿದರು. ಸ್ವಯಂನಿವೃತ್ತಿಯನ್ನು ಘೋಷಿಸಿ ಕಲಾಬದುಕಿಗೆ ವಿದಾಯವನ್ನು ಹೇಳಿದರು.
ಆದರೂ ರಂಗನಟರಾಗಿ ಇದ್ದಷ್ಟು ಸಮಯ ಇವರು ಉತ್ಕೃಷ್ಟವಾದ ನಿರ್ವಹಣೆಯನ್ನೇ ತೋರಿದ್ದರು. ಸಂಘಟಕರ, ಕಲಾಭಿಮಾನಿಗಳ, ಸಹಕಲಾವಿದರ ಮೆಚ್ಚುಗೆಗೆ ಪಾತ್ರರಾಗಿದ್ದರು. ಉದಯ ನಾವಡರ ಮೈಕಟ್ಟು ಪುಂಡುವೇಷಗಳಿಗೆ ಹೇಳಿ ಮಾಡಿಸಿದಂತಿತ್ತು. ಸುಂದರ ರೂಪವೂ ಅವರಿಗೆ ವರದಾನವಾಗಿತ್ತು. ಇವರ ವೇಷಗಳು ರಂಗಪ್ರವೇಶವಾದಾಗಲೇ ಪ್ರೇಕ್ಷಕರು ಸ್ವೀಕರಿಸುತ್ತಿದ್ದರು, ಒಪ್ಪಿಕೊಳ್ಳುತ್ತಿದ್ದರು. ಮೊದಲ ನೋಟದಲ್ಲೇ ವೇಷ ಗೆಲ್ಲುತ್ತಿತ್ತು.
ಬಣ್ಣಗಾರಿಕೆ, ವೇಷಕಟ್ಟುವ ರೀತಿಗಳು ಅತ್ಯಂತ ಸೊಗಸಾಗಿ ಶಿಸ್ತುಬದ್ಧವಾಗಿರುತ್ತಿತ್ತು. ಮೈಬಿಟ್ಟು ಮಾಡುವ ವೇಷಗಳು, ಪಗಡಿ, ಕಸೆ ಸ್ತ್ರೀವೇಷಗಳು ಉದಯ ನಾವಡರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿತ್ತು. ಪಾತ್ರೋಚಿತವಾದ ನಾಟ್ಯ, ಮಾತುಗಳಿಂದ ಸರ್ವತ್ರ ಪ್ರಶಂಸೆಗೆ ಪಾತ್ರರಾಗಿದ್ದರು. ಕುಣಿತದಲ್ಲಿ ಅತೀವ ಆಸಕ್ತಿಯನ್ನು ತೋರಿದ್ದ ಉದಯ ನಾವಡರು ಲೆಕ್ಕಮಾಡಿ ಹಾರುತ್ತಾ ದಿನದಿನವೂ ಗಿರ್ಕಿ ಸಂಖ್ಯೆಯನ್ನು ಹೆಚ್ಚು ಮಾಡಲು ಪ್ರಯತ್ನಿಸುತ್ತಿದ್ದರಂತೆ. ಇವರು ಪದ್ಯಕ್ಕೆ ಕುಣಿಯಲು ಆರಂಭಿಸಿದಾಗ ಹೊರಗೆ ಹೋದ ಪ್ರೇಕ್ಷಕರು ಮರಳಿ ಬರುವಾಗಲೂ ಇವರು ಹಾರುತ್ತಿದ್ದುದನ್ನು ನೋಡಿ, ಮಾಣಿ ಇನ್ನೂ ಹಾರುತ್ತಾ ಇದ್ದಾನೆ! ಎನ್ನುತ್ತಿದ್ದರಂತೆ.
ಉದಯ ನಾವಡರು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಧೂರು ಗ್ರಾಮದ ಬನ್ನೂರು ಎಂಬಲ್ಲಿ 1966ನೇ ಇಸವಿ ಮಾರ್ಚ್ 5ರಂದು ಬನ್ನೂರು ವಿಷ್ಣು ನಾವಡ ಮತ್ತು ಲೀಲಾವತಿ ದಂಪತಿಗಳಿಗೆ ಮಗನಾಗಿ ಜನಿಸಿದರು. ಕಲ್ಲಕಟ್ಟ ಶಾಲೆಯಲ್ಲಿ 6ನೇ ತರಗತಿವರೇಗೆ ಓದಿದ್ದರು. ವಿಷ್ಣು ನಾವಡರು ಯಕ್ಷಗಾನಪ್ರಿಯರು. ಪರಿಸರದಲ್ಲಿ ನಡೆಯುತ್ತಿದ್ದ ಪ್ರದರ್ಶನಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದರು. ಇವರಿಗೆ 5 ಮಂದಿ ಮಕ್ಕಳು (4 ಗಂಡು, ಒಬ್ಬಳು ಹೆಣ್ಣು). ಮಕ್ಕಳು ಯಕ್ಷಗಾನಾಸಕ್ತರಾಗಲು ವಿಷ್ಣು ನಾವಡರೇ ಕಾರಣರು. ಶಾಲಾ ವಾರ್ಷಿಕೋತ್ಸವದ ಪ್ರದರ್ಶನಕ್ಕಾಗಿ ಮರ್ಧಂಬೈಲು ಚಂದ್ರಶೇಖರ ರಾಯರಿಂದ ನಾಟ್ಯ ಕಲಿತ ಉದಯ ನಾವಡರು ಸೀತಾಪಹಾರ ಪ್ರಸಂಗದಲ್ಲಿ ವೇಷ ಮಾಡಿದ್ದರು.
ಶಾಲೆ ಬಿಟ್ಟ ನಂತರ ಪುತ್ತೂರು ತಾಲೂಕಿನ ಗೋಳಿತೊಟ್ಟು ಎಂಬಲ್ಲಿ ತನ್ನ ಸಣ್ಣಜ್ಜಿಯ ಮನೆಯಲ್ಲಿ ವಾಸವಾಗಿದ್ದರು. ವರ್ಷದ ನಂತರ ಮರಳಿ ಮನೆಗೆ. ಯಕ್ಷಗಾನ ಕಲಿಯುವ ಆಸಕ್ತಿ ಉಂಟಾಯಿತು. ಆಗ ಕೂಡ್ಲು ದೇವಸ್ಥಾನದಲ್ಲಿ ಕೂಡ್ಲು ನಾರಾಯಣ ಬಲ್ಯಾಯರು ತರಬೇತಿ ನೀಡುತ್ತಿದ್ದರು. ನಾಲ್ಕು ಮಂದಿ ನಾವಡ ಸಹೋದರರೂ ಇವರ ಬಂಧುಗಳಾದ ಗೋಪಾಲಕೃಷ್ಣ ನಾವಡರೂ (ಪ್ರಸ್ತುತ ಮದ್ದಳೆಗಾರರು) ನಾರಾಯಣ ಬಲ್ಯಾಯರಿಂದ ನಾಟ್ಯ ಕಲಿತರು.
ಉದಯ ನಾವಡರ ಅಣ್ಣ ರಾಧಾಕೃಷ್ಣ ನಾವಡರು ಎಲ್ಲರಿಗೂ ಪರಿಚಿತರು. ವಾಸುದೇವ ನಾವಡರು ಒಳ್ಳೆಯ ವೇಷಧಾರಿ ಯಾಗಿದ್ದರು. ಪ್ರಸ್ತುತ ಕಾಸರಗೋಡು ಮುಖ್ಯ ಅಂಚೆ ಕಛೇರಿಯಲ್ಲಿ ಉದ್ಯೋಗಿಯಾಗಿದ್ದಾರೆ. ನಾರಾಯಣ ನಾವಡರು ಕೇರಳದ ಮಲಪ್ಪುರಂ ಎಂಬಲ್ಲಿ ಕಾಲೇಜು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾಟ್ಯ ಕಲಿತ ನಂತರ ಉದಯ ನಾವಡರು ಗುರುಗಳ ಜತೆ ವೇಷ ಮಾಡುತ್ತಾ ಬೆಳೆದವರು. ಉಳಿಯ, ಕೋಟೂರಿನ ಸಂಘಗಳಲ್ಲಿ, ಮಲ್ಲ, ಉಪ್ಪಳ ಮೇಳದ ಪ್ರದರ್ಶನಗಳಲ್ಲಿ ಕಲಾಸೇವೆಯನ್ನು ಮಾಡಿದ್ದರು. ಬಾಲ ಗೋಪಾಲರು, ದೇವೇಂದ್ರನ ಬಲ, ಮಾರ್ಕಂಡೇಯ, ಧ್ರುವ, ಶ್ರೀಕೃಷ್ಣ, ಪ್ರಹ್ಲಾದ, ಷಣ್ಮುಖ, ಪರಶುರಾಮ, ಲಕ್ಷ್ಮಣ, ಬಬ್ರುವಾಹನ, ಕುಶಲವರು, ಚಂಡಮುಂಡರು ಮೊದಲಾದ ವೇಷಗಳಲ್ಲಿ ಮಿಂಚಿದರು. ಮೇಳದ ತಿರುಗಾಟದಲ್ಲಿ ಉದಯ ನಾವಡರಿಗೆ ಆಸಕ್ತಿ ಇರಲಿಲ್ಲ.
ಆದರೆ ಮಕ್ಕಳಿಗೆ ಭವಿಷ್ಯವಿದೆ. ಮೇಳಕ್ಕೆ ಕಳುಹಿಸಿ ಎಂದು ಊರವರು ವಿಷ್ಣು ನಾವಡರನ್ನು ಒತ್ತಾಯಿಸುತ್ತಿದ್ದರು. ತೀರ್ಥರೂಪರ ಒತ್ತಾಯದಂತೆ ಕುಬಣೂರು ಶ್ರೀಧರ ರಾಯರ ಸಂಚಾಲಕತ್ವದ ಕೂಡ್ಲು ಮೇಳಕ್ಕೆ ರಾಧಾಕೃಷ್ಣ ನಾವಡರೂ, ಉದಯ ನಾವಡರೂ ಸೇರಿದರು. ಮುಂದಿನ ವರ್ಷ ಇಬ್ಬರನ್ನೂ ಮಧೂರು ಗಣಪತಿ ರಾಯರು ಸುರತ್ಕಲ್ಲು ನವರಾತ್ರಿ ಯಕ್ಷಗಾನ ಪ್ರದರ್ಶನಗಳಿಗೆ ಕರೆದೊಯ್ದಿದ್ದರು. ಆ ವರ್ಷ ನಾವಡ ಸಹೋದರರಿಬ್ಬರೂ ಸುರತ್ಕಲ್ಲು ಮೇಳದಲ್ಲಿ ತಿರುಗಾಟ ನಡೆಸಿದರು. ಅಗರಿ, ಶೇಣಿ, ತೆಕ್ಕಟ್ಟೆ, ಕೊಕ್ಕಡ ಈಶ್ವರ ಭಟ್, ಎಂ. ಕೆ. ರಮೇಶ ಆಚಾರ್ಯ, ಬಣ್ಣದ ಮಹಾಲಿಂಗ, ಪ್ರಕಾಶ್‍ಚಂದ್ರ ಬಾಯಾರು ಮೊದಲಾದವರ ಒಡನಾಟ ಸಿಕ್ಕಿತ್ತು. ರಂಗದಲ್ಲಿ ಉದಯ ನಾವಡರಿಗೆ ಕುಣಿತಕ್ಕೆ ಪ್ರೋತ್ಸಾಹ ನೀಡಿದವರು ಪದ್ಯಾಣ ಶಂಕರನಾರಾಯಣ ಭಟ್ಟರು. ನನ್ನನ್ನು ಚೆನ್ನಾಗಿ ಹುರಿದುಂಬಿಸಿದರು. ನಾನು ಕುಣಿತದಲ್ಲಿ ರಂಜಿಸಲು ಅವರೇ ಕಾರಣರು ಎಂದು ಉದಯ ನಾವಡರು ಹೇಳುತ್ತಾರೆ.
ಮುಂದಿನ ವರ್ಷ ರಾಧಾಕೃಷ್ಣ ನಾವಡರು ಅನಿವಾರ್ಯವಾಗಿ ಪುತ್ತೂರು ಮೇಳಕ್ಕೆ ಸೇರಿದ್ದರು. ಅಣ್ಣ ತಮ್ಮಂದಿರು ಜತೆಯಾಗಿರಬೇಕೆಂಬ ತಂದೆಯವರ ಅಪೇಕ್ಷೆಯಂತೆ ಉದಯ ನಾವಡರೂ ಪುತ್ತೂರು ಮೇಳಕ್ಕೆ ಸೇರಿದ್ದರು. ಆ ವರ್ಷ ಸುರತ್ಕಲ್ಲು ಮೇಳದ ಆಟ ನೋಡಿದವರೆಲ್ಲಾ ಮೊದಲಿದ್ದ ಮಾಣಿ (ಉದಯ ನಾವಡ) ಎಲ್ಲಿದ್ದಾನೆ? ಅವನು ಮೇಳಕ್ಕೆ ಬೇಕು ಎಂದು ಸುರತ್ಕಲ್ಲು ಮೇಳದ ಯಜಮಾನರಲ್ಲಿ ಹೇಳಿದ್ದರಂತೆ. ಯಜಮಾನರ ಅಪೇಕ್ಷೆಯಂತೆ ನಾವಡ ಸಹೋದರರಿಬ್ಬರೂ ಸುರತ್ಕಲ್ಲು ಮೇಳ ಸೇರಿದರು. 2 ವರ್ಷದ ತಿರುಗಾಟದ ನಂತರ ಮೇಳ ಬೇಡವೆಂಬ ತೀರ್ಮಾನಕ್ಕೂ ಬಂದಿದ್ದರು.
ಅದೇ ವರ್ಷ ಶೇಖರ್ ಶೆಟ್ಟಿ ಬೆಳ್ಮಣ್ಣು ಅವರ ನೇತೃತ್ವದಲ್ಲಿ ಬಪ್ಪನಾಡು ಮೇಳ ಆರಂಭವಾಗಿತ್ತು. ಇಬ್ಬರೂ ಸದ್ರಿ ಮೇಳ ಸೇರಿ ಮೂವರು ಯಜಮಾನರ ಸಂಚಾಲಕತ್ವದಲ್ಲಿ (ಶೇಖರ ಶೆಟ್ರು, ಧರ್ಮಸ್ಥಳ ನಾರಾಯಣ ಕಂಮ್ತಿ, ಅಡ್ಯಾರು ಶಂಕರ ಆಳ್ವ) 6 ವರ್ಷಗಳ ಕಲಾಸೇವೆಯನ್ನು ಮಾಡಿದ್ದರು. ಟೆಂಟು, ಬಯಲಾಟ ಮೇಳಗಳಲ್ಲಿ ತುಳು, ಪೌರಾಣಿಕ ವೇಷಗಳನ್ನು ನಿರ್ವಹಿಸುತ್ತಿದ್ದರು. ನಂತರ ಉದಯ ನಾವಡರು ಶ್ರೀಧರ ಭಂಡಾರಿಗಳ ಕಾಂತಾವರ ಮೇಳದಲ್ಲಿ 1 ವರ್ಷ, ಗೋಣಿಬೀಡು ಸಂಜಯ ಕುಮಾರರ ಗಣೇಶಪುರ ಮೇಳದಲ್ಲಿ 1 ವರ್ಷ ತಿರುಗಾಟ ನಡೆಸಿದರು. ನಂತರ ಅಣ್ಣ ರಾಧಾಕೃಷ್ಣ ನಾವಡರ ಜತೆ ವೈ. ಕರುಣಾಕರ ಶೆಟ್ರ ಪೆರ್ಡೂರು ಮೇಳದಲ್ಲಿ ಕಲಸೇವೆ ಮಾಡಿದರು. ಆಗ ಧಾರೇಶ್ವರರು ಭಾಗವತರಾಗಿದ್ದರು.
ನಂತರ ನಾವಡ ಸಹೋದರರು ಕಿಶನ್ ಹೆಗ್ಡೆಯವರ ಸಾಲಿಗ್ರಾಮ ಮೇಳದಲ್ಲಿ ಶಬರಾಯರ ಭಾಗವತಿಕೆಯಲ್ಲಿ ಕಲಾಸೇವೆ ಮಾಡಿದರು. ಬಳಿಕ ಮಂಗಳಾದೇವಿ ಮೇಳದಲ್ಲಿ 3ನೇ ವರುಷದ ತಿರುಗಾಟ, ಮಾರ್ಚ್ ತಿಂಗಳಿನಲ್ಲಿ. ರಂಗದಲ್ಲಿ ಕುಣಿಯುತ್ತಿರುವಾಗ ತೀವ್ರ ಬೆನ್ನುನೋವು ಉದಯ ನಾವಡರನ್ನು ಕಾಡಿತು. ತಿರುಗಾಟ ಅಸಾಧ್ಯ ಎಂಬ ನಿರ್ಧಾರಕ್ಕೆ ಬಂದಿದ್ದರು. ಅದೇ ವರ್ಷ ಜನವರಿಯಲ್ಲಿ ಉದಯ ನಾವಡರು ವಿವಾಹವಾಗಿದ್ದರು. ಪತ್ನಿಯು ಸಾಂತ್ವನದ ನುಡಿಗಳಿಂದ ಆರೈಕೆ ಮಾಡಿದ್ದರು. ಅಣ್ಣಂದಿರು ಸಹಕರಿಸಿ, ಸಂತೈಸಿದ್ದರು. ಕಲಾವಿದರೂ, ಕಲಾಭಿಮಾನಿಗಳೂ ಉದಯ ನಾವಡರಿಗೆ ನೆರವಾಗಿದ್ದರು. ಮುಂದಿನ ಎರಡು ವರ್ಷಗಳ ಕಾಲ ಮನೆಯಲ್ಲಿದ್ದುಕೊಂಡು ಚಿಕಿತ್ಸೆ. ಮತ್ತೆ ಜೀವನೋಪಾಯಕ್ಕಾಗಿ ಮೇಳಕ್ಕೆ.
ಕುಣಿಯಲು ಅಸಾಧ್ಯವಾದ ಕಾರಣ ಸ್ತ್ರೀವೇಷ ಮಾತ್ರ ಮಾಡುತ್ತೇನೆಂಬ ಒಪ್ಪಂದದೊಂದಿಗೆ 4 ವರ್ಷಗಳ ತಿರುಗಾಟದ ನಂತರ, ಕುಂಟಾರು ಮೇಳದಲ್ಲಿ 1 ವರ್ಷ ವ್ಯವಸಾಯ. ಬೆನ್ನುನೋವಿನ ಸಮಸ್ಯೆಯಿಂದ ಇನ್ನು ತಿರುಗಾಟ ಅಸಾಧ್ಯ ಎಂಬ ನಿರ್ಧಾರಕ್ಕೆ ಉದಯ ನಾವಡರು ಬಂದಿದ್ದರು. ಮಾತ್ರವಲ್ಲ ಆ ನಿಟ್ಟಿನಲ್ಲಿ ದೃಢನಿರ್ಧಾರಕ್ಕೂ ಬಂದಿದ್ದರು. 2006ರಲ್ಲಿ ಕಲಾಬದುಕಿನಿಂದ ಸ್ವಯಂ ನಿವೃತ್ತಿಯನ್ನು ಹೊಂದಿ, ಬದುಕಿಗಾಗಿ ಬದಲಿ ಮಾರ್ಗವನ್ನರಸಿದರು. ಪ್ರಸ್ತುತ 12 ವರ್ಷಗಳಿಂದ ತನ್ನ ಭಾವ ಶ್ರೀ ಪಾರ್ಥಸಾರಥಿ ಹೊಳ್ಳರ ಜತೆ ಕಾಸರಗೋಡು, ಚಂದ್ರಗಿರಿ, ಕಾಂಞಂಗಾಡು ಭಾಗಗಳಲ್ಲಿ ಕೇಬಲ್ ನೆಟ್‍ವರ್ಕ್ ಉದ್ಯೋಗವನ್ನು ಮಾಡುತ್ತಿದ್ದಾರೆ.
ತನ್ನ ಕಷ್ಟಕಾಲಕ್ಕೆ ವಿವಿಧ ರೀತಿಗಳಲ್ಲಿ ಸ್ಪಂದಿಸಿ, ಸಹಕರಿಸಿದ ಕಲಾವಿದರು, ಕಲಾಭಿಮಾನಿಗಳು, ಸಂಘಟಕರು, ಸಂಘ-ಸಂಸ್ಥೆಗಳನ್ನೂ, ಸಹೋದರರನ್ನೂ, ಬಂಧುಗಳನ್ನೂ ಮರೆಯದೆ ಸದಾ ನೆನಪಿಸುತ್ತಾರೆ ಶ್ರೀ ಉದಯ ನಾವಡರು. ಉದಯ ನಾವಡರ ಪತ್ನಿ ಶ್ರೀಮತಿ ರಾಜೇಶ್ವರಿ ಗೃಹಿಣಿ. ಉದಯ ನಾವಡ ರಾಜೇಶ್ವರಿ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರಿ ಕು| ಸ್ವಾತಿ ಮಂಗಳೂರು ಯುನಿವರ್ಸಿಟಿ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿನಿ. ಪುತ್ರ ಕೃಷ್ಣಪ್ರಕಾಶ ನಾವಡ ಕಾಸರಗೋಡು ಬಿ.ಇ.ಎಂ. ಹೈಸ್ಕೂಲಿನ 9ನೇ ತರಗತಿ ವಿದ್ಯಾರ್ಥಿ. ಒಂದು ಕಾಲದಲ್ಲಿ ಉದಯ ನಾವಡರು ಶ್ರೇಷ್ಠ ಪುಂಡುವೇಷಧಾರಿಯಾಗಿ ಮೆರೆದಿದ್ದರು.
ಬಡಗುತಿಟ್ಟು ಕಲಾವಿದ ಸತೀಶ ಹೆಗಡೆ (56) ಅಣೆಗದ್ದೆ ನಿನ್ನೆ (20-01-2021) ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ಸಮೀಪ ಹುಂಚದವರಾದ ಸತೀಶ ಹೆಗಡೆ ನಾಗರಕೋಡಿಗೆ, ಕಮಲಶಿಲೆ, ಸಿಗಂಧೂರು, ಹಾಲಾಡಿ, ಗುತ್ಯಮ್ಮ, ಸೀತೂರು ಮೇಳಗಳಲ್ಲಿ ಮೂರುವರೆ ದಶಕಗಳ ಕಲಾಸೇವೆ ಗೈದಿದ್ದಾರೆ.
ಕಳೆದ ತಿರುಗಾಟವನ್ನು ಕಾರಣಗಿರಿ ಮೇಳದಲ್ಲಿ ಮಾಡಿದ್ದರು.ಕೌರವ, ರಾವಣ ಮಹಿಷಾಸುರ ಮೊದಲಾದ ಖಳ ಪಾತ್ರಗಳನ್ನು ಮನೋಜ್ಞವಾಗಿ ಮಾಡುತ್ತಿದ್ದರು. ಅವರ ನಿಧನಕ್ಕೆ ಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.