ಪುರಾಣ ಕಾಲದಲ್ಲಿ ರಾಕ್ಷಸರು ಎಂಬ ವರ್ಗವು ಹೇಗಿದ್ದಿರಬಹುದು? ಅವರ ರೂಪವು ಯಾವ ರೀತಿಯದು? ದೇಹದ ಆಯ ಆಕಾರಗಳು ಹೇಗಿದ್ದಿರಬಹುದು? ಅವರ ವ್ಯವಹಾರಗಳೇನು? ಅವರಲ್ಲಿ ಅಡಗಿದ್ದ ಕ್ರೌರ್ಯದ ತೀವ್ರತೆ ಎಷ್ಟು ಆಳವಾಗಿತ್ತು? ಹೀಗೆಲ್ಲಾ ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ. ಗಂಡುಕಲೆ ಎನಿಸಿದ ಯಕ್ಷಗಾನದಲ್ಲಿ ರಾಕ್ಷಸರನ್ನು ಅವರ ಸ್ವಭಾವಕ್ಕನುಗುಣವಾಗಿಯೇ ಹಿರಿಯರು ಅತ್ಯುತ್ತಮವಾಗಿ ಚಿತ್ರಿಸಿರುತ್ತಾರೆ.
ಅವರು ರಾಕ್ಷಸರನ್ನು ತಮ್ಮ ಮನಸ್ಸಿನಲ್ಲಿ ಕಲ್ಪಿಸಿ ಅದಕ್ಕೆ ಆಕಾರವನ್ನು ನೀಡಿರುತ್ತಾರೆ. ಕವಿಯು ತನ್ನ ಕಲ್ಪನೆಗಳಿಗೆ ಆಕಾರವನ್ನು ನೀಡುತ್ತಾನೆ. ಕವಿಹೃದಯ ಉಳ್ಳವರಿಗೆ ಮಾತ್ರ ಇದು ಸಾಧ್ಯ. ಈ ಬಗೆಗೆ ಯೋಚಿಸುವಾಗ ಯಕ್ಷಗಾನದ ಭೀಷ್ಮ ಹರಿದಾಸ ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರ ಮಾತುಗಳು ನೆನಪಾಗದೆ ಇರದು. “ದೇವ, ದಾನವ, ಮಾನವಾದಿ ವೇಷ ವಿಧಾನಗಳಲ್ಲಿ ಯಕ್ಷಗಾನಿಗಳು ಅನುಸರಿಸಿ ಬಂದ ರೀತಿ ಅದ್ಭುತ ರಮ್ಯವಾದುದು. ಪ್ರಪಂಚದ ಯಾವ ಕಲಾವಿದನಿಗೂ ಹೊಳೆಯದ ವರ್ಣ ವಿಭಜನೆ, ವೇಷಭೂಷಣಗಳ ಕಲ್ಪನೆ ಇಲ್ಲಿದೆ. ಇದು ವಿಶಿಷ್ಟ ರೂಪದಿಂದ, ಶುಚಿರುಚಿಗಳಿಂದ, ಸ್ವಂತಿಕೆಯಿಂದಲೇ ರಂಜಿಸುತ್ತಿರುವುದು ಅಪರಾಧವೂ ಅಲ್ಲ. ಅಪವಾದವೂ ಅಲ್ಲ. ಇದನ್ನು ರೂಪಿಸಿದ ಅಜ್ಞಾತ ಶಿಲ್ಪಿಗಳಿಗೆ ಋಣಿಗಳಾಗಿರೋಣ” ಶ್ರೀ ಶೇಣಿಯವರ ಮಾತುಗಳು ಅದೆಷ್ಟು ಅರ್ಥಪೂರ್ಣವಾಗಿವೆ.
ಹೀಗೆ ಯಕ್ಷಗಾನದಲ್ಲಿ ಎಲ್ಲಾ ವೇಷಗಳಿಗೂ ಹಿರಿಯರು ಸ್ಪಷ್ಟ ಆಕಾರವನ್ನು ನೀಡಿರುತ್ತಾರೆ. ಕಲಾವಿದರು ಅದನ್ನು ಅನುಸರಿಸಿಯೇ ಸಾಗುತ್ತಾರೆ. ಯಕ್ಷಗಾನದಲ್ಲಿ ಬಣ್ಣದ ವೇಷಧಾರಿಗಳು ರಾತ್ರಿ ರಂಗದಲ್ಲಿ ರಾಕ್ಷಸರಾಗಿ ಅಬ್ಬರಿಸಿದ್ದಾರೆ. ಪಾತ್ರದ ಸ್ವಭಾವವನ್ನು ಅರಿತು ಅದಕ್ಕೆ ಉಚಿತವಾಗಿಯೇ ಅಭಿನಯಿಸಿದ್ದಾರೆ. ಪ್ರಹ್ಲಾದನ ಮೊಮ್ಮಗ ಬಲಿಯ ಪಾತ್ರವನ್ನು ಬಣ್ಣದ ವೇಷದವರೇ ಮಾಡಿದರೂ ಅವನು ಸಾತ್ವಿಕ, ಹರಿಭಕ್ತನೆಂದು ತಿಳಿದು ಅಭಿನಯಿಸುತ್ತಾರೆ. ಆದರೂ ಹೆಚ್ಚಿನ ಎಲ್ಲಾ ಬಣ್ಣದ ವೇಷಗಳೂ ತಾಮಸೀ ಗುಣವನ್ನೇ ಹೊಂದಿದೆ. ಹೀಗೆ ರಾತ್ರಿ ರಂಗಸ್ಥಳದಲ್ಲಿ ರಾಕ್ಷಸರಾಗಿ ಮೆರೆದ ಅನೇಕ ಬಣ್ಣದ ವೇಷಧಾರಿಗಳಲ್ಲಿ ಶ್ರೀ ಚಂದ್ರಗಿರಿ ಅಂಬು ಅವರೂ ಒಬ್ಬರು.
ತೆಂಕುತಿಟ್ಟಿನ ಪ್ರಸಿದ್ಧ ಬಣ್ಣದ ವೇಷಧಾರಿ ಶ್ರೀ ಚಂದ್ರಗಿರಿ ಅಂಬು ಅವರ ಹುಟ್ಟೂರು ಕಾಸರಗೋಡು, ಕಾಂಞಂಗಾಡಿನ ಆಜಾನೂರು ಗ್ರಾಮ. ಶ್ರೀ ಚೋಯಿ ಪಾಟಾಳಿ ಮತ್ತು ಶ್ರೀಮತಿ ಕುಂಞಮ್ಮ ಹೆಂಗ್ಸು ದಂಪತಿಗಳ ಪುತ್ರನಾಗಿ ಜನನ. ಓದಿದ್ದು ಕೇವಲ ಮೂರನೇ ತರಗತಿ ವರೆಗೆ. ಬಾಲ್ಯದಲ್ಲಿಯೇ ಯಕ್ಷಗಾನ ಕಲೆಯತ್ತ ಆಕರ್ಷಿತರಾಗಿದ್ದರು. ಮೇಳಕ್ಕೆ ಸೇರಿ ಯಕ್ಷಗಾನ ಪ್ರದರ್ಶನಗಳನ್ನು ನೋಡಿಯೇ ಕಲಿತವರು. ತನ್ನ ಹದಿಮೂರನೆಯ ವರ್ಷದಲ್ಲಿ ಕೊರಕ್ಕೋಡು ಮೇಳಕ್ಕೆ ಸೇರಿದ್ದರು. ಹದಿನಾರನೆಯ ವಯಸ್ಸು ಅಂದರೆ ತಿರುಗಾಟ ಆರಂಭಿಸಿ ಮೂರು ನಾಲ್ಕು ವರ್ಷಗಳಲ್ಲಿಯೇ ಪ್ರೇಕ್ಷಕರು ಗುರುತಿಸುವ ಹಂತಕ್ಕೆ ವೇಷಧಾರಿಯಾಗಿ ಬೆಳೆದಿದ್ದರು.
ಕಲಾ ಬದುಕಿನಲ್ಲಿ ಇವರದು ಕ್ಷಿಪ್ರ ಬೆಳವಣಿಗೆ. ಕೊರಕ್ಕೋಡು ಮೇಳದ ಬಳಿಕ ಕೂಡ್ಲು ಮನೆಯ ಯಜಮಾನರಾದ ಶ್ರೀ ಸದಾಶಿವ ಶ್ಯಾನುಭಾಗರ ಕಾಲದಲ್ಲಿ ಚಂದ್ರಗಿರಿ ಅಂಬು ಅವರು ಕೂಡ್ಲು ಮೇಳಕ್ಕೆ ಕೆಲಸಕ್ಕೆ ಸೇರಿದ್ದರು. ಊರಿಂದೂರಿಗೆ ಮೇಳದ ಪೆಟ್ಟಿಗೆಗಳನ್ನು ಹೊರುವ ಕೆಲಸ ಮಾಡಿದ್ದರು. ಸೂಕ್ಷ್ಮಮತಿಗಳಾದ ಶ್ಯಾನುಭಾಗರು ಅಂಬು ಅವರೊಳಗಿರುವ ಕಲಾವಿದನನ್ನು ಗುರುತಿಸಿದ್ದರು. ವೇಷಧಾರಿಗಳ ಗೈರುಹಾಜರಿಯಲ್ಲಿ ವೇಷ ಮಾಡಲು ಅವಕಾಶವಿತ್ತು ಪ್ರೋತ್ಸಾಹಿಸಿದ್ದರು.
ಮಾಂಬಾಡಿ ನಾರಾಯಣ ಭಾಗವತರ ನಿರ್ದೇಶನ, ಪ್ರೋತ್ಸಾಹ. ಬಣ್ಣದ ಅಯ್ಯಪ್ಪ ಅವರಿಂದ ಕಲಿಕೆ. ಬಳಿಕ ಕಟೀಲು ಮೇಳದಲ್ಲಿ ಹದಿನೆಂಟು ತಿರುಗಾಟ. ಬಳಿಕ ಹಲವು ವರ್ಷಗಳ ಕಾಲ ಕುಂಡಾವು (1), ಮುಲ್ಕಿ (9), ಕೂಡ್ಲು (5) ಮೇಳಗಳಲ್ಲಿ ವ್ಯವಸಾಯ. ಬಳಿಕ ನಿವೃತ್ತಿಯ ವರೆಗೂ ಶ್ರೀ ಧರ್ಮಸ್ಥಳ ಮೇಳದಲ್ಲಿ ಪ್ರಧಾನ ಬಣ್ಣದ ವೇಷಧಾರಿಯಾಗಿ ವ್ಯವಸಾಯ ಮಾಡಿರುತ್ತಾರೆ. ಚಂದ್ರಗಿರಿ ಅಂಬು ಮತ್ತು ಬಣ್ಣದ ಮಾಲಿಂಗ ಅವರುಗಳು ರಾವಣ – ಮೈರಾವಣ ಪಾತ್ರಗಳಲ್ಲಿ ಜತೆಯಾಗಿ ಅಭಿನಯಿಸಿ ಖ್ಯಾತಿಯನ್ನು ಗಳಿಸಿದ್ದರು.
ರಾವಣ, ಮಹಿರಾವಣ, ಕುಂಭಕರ್ಣ, ವೀರಭದ್ರ, ಶೂರಪದ್ಮ, ರುದ್ರಭೀಮ, ಕಿರಾತ, ವೀರಭದ್ರ, ತಾರಕಾಸುರ, ಶುಂಭ, ಪುರುಷಾಮೃಗ ಅಲ್ಲದೆ ಎಲ್ಲಾ ಹೆಣ್ಣು ಬಣ್ಣದ ಪಾತ್ರಗಳಲ್ಲೂ ಚಂದ್ರಗಿರಿ ಅಂಬು ಅವರು ಪ್ರಸಿದ್ಧಿಯನ್ನು ಪಡೆದಿದ್ದರು. ಸರಳ ನಿರಾಡಂಬರದ ಸಜ್ಜನ ವ್ಯಕ್ತಿಯಾಗಿ ಬದುಕಿದವರು. ರಾತ್ರಿ ರಂಗದಲ್ಲಿ ರಾಕ್ಷಸನಾಗಿ ಅಬ್ಬರಿಸಿದರೂ ನಿಜ ಬದುಕಿನಲ್ಲಿ ಸಾತ್ವಿಕರಾಗಿ ವ್ಯವಹರಿಸಿದವರು. ಸುಮಾರು ಅರುವತ್ತೆರಡು ವರ್ಷಗಳ ಕಲಾಸೇವೆಯನ್ನು ಮಾಡಿರುತ್ತಾರೆ.
ಮುಖವರ್ಣಿಕೆಯನ್ನು ಸಿದ್ಧಗೊಳಿಸುವಲ್ಲಿ ಇವರೊಬ್ಬ ಚತುರ ಚಿತ್ರಕಾರನಾಗಿದ್ದರು.1987ರ ಸುಮಾರಿಗೆ ಇವರು ವೃತ್ತಿ ಬದುಕಿಗೆ ವಿದಾಯ ಹೇಳಿದ್ದರು. ಚಂದ್ರಗಿರಿ ಅಂಬು ಅವರ ಪತ್ನಿ ಶ್ರೀಮತಿ ಕುಂಞಿಪ್ಪಾಟಿ . ನಿವೃತ್ತಿ ನಂತರ ಆಜಾನೂರು ಕೆಳಕ್ಕುಂಕರ ಮನೆಯಲ್ಲಿ ವಾಸವಾಗಿದ್ದರು. 1999 ನವೆಂಬರ್ 25ಕ್ಕೆ ಶ್ರೀ ಚಂದ್ರಗಿರಿ ಅಂಬು ಅವರು ಅವ್ಯಕ್ತ ಪ್ರಪಂಚವನ್ನು ಸೇರಿಕೊಂಡಿದ್ದರು. ಇದಕ್ಕೆ ನಾಲ್ಕು ದಿನ ಮೊದಲು ನವೆಂಬರ್ 21ರಂದು ಉಡುಪಿ ಯಕ್ಷಗಾನ ಕಲಾರಂಗದ ಪದಾಧಿಕಾರಿಗಳು ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರನ್ನು ಮುಂದಿಟ್ಟುಕೊಂಡು ಚಂದ್ರಗಿರಿ ಅಂಬು ಅವರ ನಿವಾಸಕ್ಕೆ ತೆರಳಿ ಪ್ರಸ್ತುತ ಸಾಲಿನ ಡಾ| ಬಿ.ಬಿ.ಶೆಟ್ಟಿ ಸ್ಮಾರಕ ಪ್ರಶಸ್ತಿಯನ್ನು ಅವರಿಗೆ ಅರ್ಪಿಸಿದ್ದರು.
ನಾನು ಯಕ್ಷಗಾನ ವಿದ್ಯೆಯನ್ನು ಮಾಂಬಾಡಿ ನಾರಾಯಣ ಭಾಗವತರಿಂದಲೂ, ಹಿರಿಯ ಕಲಾವಿದರ ಒಡನಾಟದಿಂದಲೂ ಕಲಿತೆನೆಂದು ಶ್ರೀ ಚಂದ್ರಗಿರಿ ಅಂಬು ಅವರು ಹೇಳುತ್ತಿದ್ದರು. ಶ್ರೀಯುತರ ಜೀವಿತಾವಧಿ 1912- 1999. ಇವರು 1999ರಲ್ಲಿ ತನ್ನ ಎಂಬತ್ತೇಳನೆಯ ವಯಸ್ಸಿನಲ್ಲಿ ನಿಧನರಾದರೆಂಬ ಮಾಹಿತಿ ಇರುವುದರಿಂದ ಇವರು 1912ರಲ್ಲಿ ಜನಿಸಿದರೆಂದು ನಿರ್ಣಯಿಸಬಹುದು.
ಶ್ರೀ ದೇವಿಮಹಾತ್ಮೆ ಪ್ರಸಂಗದಲ್ಲಿ ಬರುವ `ಮಹಿಷಾಸುರ’ ಪಾತ್ರ ಯಕ್ಷಗಾನ ಪ್ರೇಕ್ಷಕರನ್ನು ಹುಚ್ಚೆಬ್ಬಿಸುವಂಥಹುದು. ತನ್ನ ಪತಿಯಾದ ವಿದ್ಯುನ್ಮಾಲಿ ಯಕ್ಷರಾಜ ಪಿಂಗಳಾಕ್ಷನಿಂದ ಮಡಿದ ವಾರ್ತೆ ಕೇಳಿ ಮಾಲಿನಿಯು ತನ್ನ ಮಗನಾದ ಮಹಿಷಾಸುರನನ್ನು ಕರೆದಾಗ, ಸಭೆಯಿಂದಲೇ ಅಬ್ಬರದಿಂದ ಕೊಡುವ ಪ್ರವೇಶವನ್ನು ನೋಡಲೆಂದೇ ಬರುವ ಪ್ರೇಕ್ಷಕರು ಅಪಾರ. ಭೀಕರವಾದ, ಕೋಣವನ್ನೇ ಹೋಲುವ ಮುಖವರ್ಣಿಕೆ, ತಲೆಯ ಮೇಲೆರಡು ಉದ್ದ ಕೊಂಬು, ಕೈಯಲ್ಲಿ ದೊಂದಿ ಹಿಡಿದು ರಾಳದ ಪುಡಿ ಎರಚಿ, ಭೀಕರ ಬೆಂಕಿಯ ಜ್ವಾಲೆಯೊಂದಿಗೆ ಸಭಾ ಮಧ್ಯದಿಂದಲೇ ರಂಗಸ್ಥಳ ಪ್ರವೇಶಿಸುವ ಅಬ್ಬರ, ಬೈಹುಲ್ಲಿನ ರಾಶಿಗೆ ಬೆಂಕಿ ಕೊಟ್ಟು, ಜ್ವಾಲೆ ನಿರ್ಮಿಸುತ್ತಾ ಮಹಿಷನ ಹಿಂದೆ ‘ಸೂಟೆ’ ಹಿಡಿದ ಹತ್ತೈವತ್ತು ಯುವಕರ ಗುಂಪು – ಇವೆಲ್ಲಾ ವರ್ಣನಾತೀತ. ನೋಡಿದ ಪ್ರೇಕ್ಷಕರಿಗೆ ಮಾತ್ರ ನಿಲುಕುವ ನೋಟವಿದು.
‘ಶ್ರೀ ದೇವಿಮಹಾತ್ಮೆ’ ಪ್ರಸಂಗದ ಎಲ್ಲಾ ಪಾತ್ರಗಳೂ ಮಹತ್ವದ್ದೇ. ಅದರಲ್ಲೂ ಮಹಿಷಾಸುರ ಪಾತ್ರ ಯಕ್ಷಗಾನಪ್ರಿಯರಿಗೆ ರೋಮಾಂಚನ ಹುಟ್ಟಿಸುವಂಥಹದು. ಇದಕ್ಕೆ ಮುಖ್ಯ ಕಾರಣ, ತಲೆಯ ಮೇಲಿರುವ ನೀಳವಾದ ಕೋಡುಗಳು, ಕೋಣದಂತೆಯೇ ಅನುಕರಿಸುವ ಧ್ವನಿ ಹಾಗೂ ವಿಶಿಷ್ಠವಾದ ನಾಟ್ಯಪ್ರಸ್ತುತಿ. 1930ರಲ್ಲಿ ಕಾಸರಗೋಡಿನ ಕೊರಕ್ಕೋಡಿನಲ್ಲಿ ಏಳು ದಿನಗಳ ‘ಶ್ರೀ ದೇವಿಮಹಾತ್ಮೆ’ ಪ್ರಸಂಗ ಪ್ರಪ್ರಥಮವಾಗಿ ಪ್ರದರ್ಶನಗೊಂಡಾಗ ಮಹಿಷಾಸುರ ಪಾತ್ರದ ಮುಖವರ್ಣಿಕೆಯನ್ನು ಹೇಗೆ ಚಿತ್ರಿಸುವುದು ಎಂಬ ಕುತೂಹಲವಿತ್ತು.
ದಿತಿಪುತ್ರಿಯಾದ ಮಾಲಿನಿಯು ಮಹಿಷಿಯ (ಎಮ್ಮೆಯ) ರೂಪ ತಾಳಿ ಬ್ರಹ್ಮದೇವರ ಕುರಿತು ತಪಸ್ಸು ಮಾಡುತ್ತಾಳೆ. ಅವಳ ತಪೋಜ್ವಾಲೆಯಿಂದ ಅಲ್ಲೇ ಆಶ್ರಮದಲ್ಲಿ ತಪೋಮಗ್ನನಾಗಿದ್ದ ‘ಸುಪಾರ್ಶ್ವಕ’ ಎಂಬ ಋಷಿಗೆ ತಪೋಭಂಗವಾದಾಗ, ಮಾಲಿನಿಯು ಮಹಿಷಿ ರೂಪ ತಾಳಿದ ಕಾರಣ ಅವಳಿಗೆ ಹುಟ್ಟುವ ಮಗು ಕೋಣದ ರೂಪವೇ ತಾಳಲಿ ಎಂದು ಶಪಿಸುತ್ತಾನೆ. ಆ ಶಾಪವಾಕ್ಯದ ಫಲವೇ ಮಹಿಷಾಸುರನ ಜನನ. ಪ್ರಪ್ರಥಮ ಶ್ರೀ ದೇವಿಮಹಾತ್ಮೆಯಲ್ಲಿ ಮಹಿಷಾಸುರನ ಪಾತ್ರ ಮಾಡಿದವರು ಅಂದಿನ ಕಾಲದ ಸುಪ್ರಸಿದ್ಧ ಬಣ್ಣದ ವೇಷಧಾರಿಯಾಗಿದ್ದ ಬಣ್ಣದ ಕುಂಞ ಎಂಬವರು. ಕುಂಞರವರು ಬಣ್ಣಗಾರಿಕೆಯಲ್ಲಿ ಅದ್ಭುತವಾದ ಕಲ್ಪನೆ ಹೊಂದಿದ ಕಲಾವಿದರಾಗಿದ್ದರು. ಅವರು ಮುಖವು ಕೋಣದಂತೆಯೇ ಕಾಣಲು ವಿಶಿಷ್ಟ ಮುಖವರ್ಣಿಕೆ ಮಾಡಿದ್ದರಂತೆ. ಎರಡೂ ಕಿವಿಯ ಮೇಲೆ ದಪ್ಪವಾದ ರಟ್ಟಿನಿಂದ ಮಾಡಿದ ಉದ್ದವಾದ ಎರಡು ಕೊಂಬುಗಳನ್ನು ಮಾಡಿ ಅದನ್ನು ಕಪ್ಪುಬಟ್ಟೆಯಿಂದ ಮುಚ್ಚಿ ಕೊಂಬೇ ಹೌದು ಎನ್ನುವಂತೆ ರಚಿಸಿ, ಎರಡು ದೊಡ್ಡದಾದ ಕಿವಿ ಗಳನ್ನೂ ಧರಿಸಿದ್ದರಂತೆ. ಅದನ್ನು ನೋಡಿದವರು ಇಂದು ಯಾರೂ ಇರಲಿಕ್ಕಿಲ್ಲ.
ಅದರ ನಂತರ 1941ರಲ್ಲಿ ಕಿನ್ನಿಗೋಳಿಯಲ್ಲಿ ಕಟೀಲು ಮೇಳದವರಿಂದ ದ್ವಿತೀಯ ಪ್ರಯೋಗವಾಗಿ ಶ್ರೀ ದೇವಿಮಹಾತ್ಮೆ ಪ್ರಸಂಗ ಪ್ರದರ್ಶಿಸಲ್ಪಟ್ಟಿತು. ನಂತರವೂ ಎರಡು ಮೂರು ಭಾರಿ ಈ ಪ್ರಸಂಗ ಪ್ರದರ್ಶನವಾಗಿದೆ. ಆಗ ಹಿಂದಿನ ಸುಪ್ರಸಿದ್ಧ ಬಣ್ಣದ ವೇಷಧಾರಿಗಳಾಗಿದ್ದ ಕೋಲುಳಿ ಸುಬ್ಬ, ಕಾಸರಗೋಡು ಸುಬ್ಬಯ್ಯ ಶೆಟ್ಟಿ, ಬಣ್ಣದ ಅಯ್ಯಪ್ಪರಂಥವರೂ ಮಹಿಷಾಸುರ ಪಾತ್ರ ಮಾಡಿದ್ದರಂತೆ. ಆದರೆ ಸುಮಾರು 1960ರ ನಂತರ ಕಟೀಲು ಮೇಳದವರಿಂದ ಈ ಪ್ರಸಂಗವು ಪ್ರದರ್ಶನ ನೀಡಲಾರಂಭಿಸಿತು. ಈ ಕಾಲಘಟ್ಟದಲ್ಲಿ ಮಹಿಷಾಸುರನ ಪಾತ್ರವು ವಿಜೃಂಭಿಸಲಾರಂಭವಾದುದು ಬಣ್ಣದ ಕುಟ್ಯಪ್ಪುರವರಿಂದ. ಕುಟ್ಯಪ್ಪರು ಮಹಿಷಾಸುರ ಪಾತ್ರಕ್ಕೆ ಹೊಸ ಆಯಾಮ ನೀಡಿದರು. ಬಣ್ಣದ ಕುಂಞರವರ ಮೂಲ ಚಿತ್ರಣದ ಆಧಾರದಲ್ಲೇ ಸ್ವಲ್ಪ ತಮ್ಮ ಕಲ್ಪನೆಯ ಮೂಲಕ ಬದಲಾವಣೆ ತಂದರು. ಆದರೂ ಮಹಿಷಾಸುರ ಪಾತ್ರಕ್ಕೆ ಮೂಲಚಿತ್ರಣ ಕೊಟ್ಟವರು ಬಣ್ಣದ ಕುಂಞರವರೇ ಎಂಬುದು ನಿರ್ವಿವಾದ. ಇಂದಿಗೂ ಕೆಲವೊಂದು ಬದಲಾವಣೆ ಹೊರತು ಪಡಿಸಿದರೆ, ಮಹಿಷಾಸುರ ಪಾತ್ರವು ಬಣ್ಣದ ಕುಂಞರವರ ಮೂಲಚಿತ್ರಣದ ಆಧಾರದಲ್ಲೇ ರಚಿತವಾಗಿದೆ. ಇದನ್ನು ಡಾ. ಶೇಣಿ ಗೋಪಾಲಕೃಷ್ಣ ಭಟ್ ಸಹಿತ ಹಿರಿಯ ಯಕ್ಷಗಾನ ಕಲಾವಿದರೂ ಒಪ್ಪಿರುವ ವಿಷಯ. ಮಹಿಷಾಸುರ ಪಾತ್ರಚಿತ್ರಣದ ಕುರಿತಾಗಿ ಕೆಲವೊಂದು ಮಾಹಿತಿ ಒದಗಿಸಲು ಈ ಲೇಖನ.
ಮುಖವರ್ಣಿಕೆ : ಯಕ್ಷಗಾನದ ಯಾವುದೇ ಪಾತ್ರಗಳು ಗುರುತಿಸಲ್ಪಡುವುದು ಅದರ ಮುಖವರ್ಣಿಕೆಯ ಮೂಲಕ. ಮಹಿಷಾಸುರ ಪಾತ್ರದ ಮುಖವರ್ಣಿಕೆ ವಿಶಿಷ್ಠವಾಗಿದೆ. ಇಂದು ಶ್ರೀ ದೇವಿಮಹಾತ್ಮೆ ಪ್ರಸಂಗದಲ್ಲಿ ಮಹಿಷಾಸುರ ಪಾತ್ರ ಮಾಡುವವರು ಸಾಮಾನ್ಯವಾಗಿ ಒಂದನೇ (ಪ್ರಧಾನ) ಬಣ್ಣದ ವೇಷಧಾರಿ. ಆದರೆ ಯಕ್ಷಗಾನದ ಪರಂಪರೆಯ ಸ್ಥಾನಮಾನದ ಪ್ರಕಾರ ಒಂದನೇ ಬಣ್ಣದ ವೇಷಧಾರಿಯು ಮಾಡಬೇಕಾ ದುದು ‘ಶುಂಭಾಸುರ’ ಪಾತ್ರ. ಆದರೆ ಮಹಿಷಾಸುರ ಪಾತ್ರವು ಪ್ರೇಕ್ಷಕರ ಆಕರ್ಷಣೆಯ ಪಾತ್ರವಾದ ಕಾರಣ, ಬಹುಷಃ ಒಂದನೇ ಬಣ್ಣದ ವೇಷಧಾರಿಗೆ ನೀಡಿರಬಹುದು. ಇಂದು ಮಹಿಷಾಸುರ ಪಾತ್ರ ಬಣ್ಣದ ವೇಷಧಾರಿಗಳಿಗೆ ಪ್ರತಿಷ್ಠೆಯ ವಿಷಯವಾಗಿದೆ. ಈ ಪಾತ್ರಕ್ಕಾಗಿ ಕಲಾವಿದರೊಳಗೆ ಪೈಪೋಟಿಯೂ ನಡೆದಿರುವುದು, ಅದೇ ಕಾರಣದಿಂದ ಮೇಳ ಬಿಟ್ಟದ್ದು, ‘ರೊಟೇಷನ್’ ಆಧಾರದಲ್ಲಿ ಪಾತ್ರ ಹಂಚಿಕೆ ಎಲ್ಲವೂ ಮಹಿಷಾಸುರ ಪಾತ್ರದ ಹಿರಿಮೆಯನ್ನು ಸಾರುತ್ತಿದೆ.
ಮಹಿಷಾಸುರ ಪಾತ್ರದ ಮುಖ ವರ್ಣಿಕೆಯು ‘ಹಸಿಬಣ್ಣ’ದ ಸಾಲಿಗೆ ಸೇರುವ ವಿಶಿಷ್ಟ ಪಾತ್ರ. ಹಸಿಬಣ್ಣ ಎಂದರೆ, ಮೂಲಬಣ್ಣದ (ಯಕ್ಷಗಾನ ಪರಿಭಾಷೆಯಲ್ಲಿ ಛಾಯಾಬಣ್ಣ) ಲೇಪನವಿಲ್ಲದೇ (Foundation) ನೇರವಾಗಿ ಮುಖವರ್ಣಿಕೆ ಬಳಿಯುವ ಪಾತ್ರಗಳು. ಮಹಿಷಾಸುರನ ಮುಖವರ್ಣಿಕೆ ಮಾಡುವಾಗ ಪ್ರಥಮವಾಗಿ ಹಣೆಗೆ ಪಟ್ಟಿ ಕಟ್ಟಿ ಬಿಳಿ ನಾಮ ಹಾಕುತ್ತಾರೆ. (ಸಾಮಾನ್ಯವಾಗಿ ಬಣ್ಣಗಾರಿಕೆ ಮಾಡುವಾಗ ಪ್ರಥಮವಾಗಿ ನಾಮ ಹಾಕಿ, ನಂತರ ಬಣ್ಣ ಬಳಿಯುವುದು ಸಂಪ್ರದಾಯ). ನಂತರ ಹಣೆಯಿಂದ ಆರಂಭಿಸಿ ಕೆಳಮುಖವಾಗಿ ಮೂಗಿನ ಬದಿಯಿಂದ ಬಿಳಿಬಣ್ಣದ ಗೆರೆಯನ್ನು ಮೀಸೆಗಿಂತ ಮೇಲೆ ವರೆಗೆ ತಂದು ಕಿವಿಯ ತನಕ ಎರಡೂ ಬದಿಯಲ್ಲಿ ಬರೆಯುವುದು ಪ್ರಾರಂಭಿಕ ಹಂತ. ಇದು ಸಾಮಾನ್ಯವಾಗಿ ಸರ್ಪದ ಆಕಾರದಲ್ಲಿ ಇರುತ್ತದೆ. ನಂತರ ಈ ಬಿಳಿ ವರ್ಣದ ಎರಡೂ ಬದಿಗಳಲ್ಲಿ ಕಪ್ಪು ಬಣ್ಣದ ಲೈನಿಂಗ್ ಕೊಡಲಾಗುತ್ತದೆ. ನಂತರ ಹಣೆಗೆ ನಾಮ ಇಟ್ಟು ಎರಡೂ ಕಣ್ಣಿನ ಸುತ್ತಲೂ ಕಪ್ಪು ಬಣ್ಣ ಹಚ್ಚುತ್ತಾರೆ.
ಈ ಕಪ್ಪು ಬಣ್ಣ ಹಾಗೂ ಪ್ರಾರಂಭದಲ್ಲಿ ಬಳಿದ ಬಿಳಿಬಣ್ಣದ ನಡುವೆ ಕಣ್ಣಿನ ಮೇಲ್ಮುಖದ ವರೆಗೆ ಛಾಯಾಬಣ್ಣ ಬಳಿಯುತ್ತಾರೆ. ಈಗ ಇದು ನೋಡುವಾಗ ಕೋಣದ ಕಣ್ಣುಗಳ ಹಾಗೇ ಚಿತ್ರಿತವಾಗುತ್ತದೆ. ಮುಖದ ಉಳಿದ ಭಾಗಗಳಲ್ಲಿ ಅಂದರೆ ಹಣೆ, ಮೂಗು, ಮೂಗಿನ ಬದಿಗಳಲ್ಲಿ, ತುಟಿಗೆ ಕಪ್ಪು ಬಣ್ಣ ಲೇಪಿಸುತ್ತಾರೆ. ಗದ್ದಭಾಗಕ್ಕೆ ಮೂಲಬಣ್ಣದ ಗೆರೆಗಳನ್ನು ಎಳೆಯುತ್ತಾರೆ. ಸಾಮಾನ್ಯವಾಗಿ ಮಹಿಷಾಸುರನ ಮುಖವರ್ಣಿಕೆಗೆ ಇತರ ರಾಕ್ಷಸ ಬಣ್ಣದ ವೇಷಗಳಂತೆ ಪಾತ್ರಗಳಂತೆ ಅಕ್ಕಿಹಿಟ್ಟಿನ ‘ಚುಟ್ಟಿ’ ಇಡುವ ಕ್ರಮವಿಲ್ಲ. ಕೆಲವು ವೇಷಧಾರಿಗಳು ಬಿಳಿಬಣ್ಣದಲ್ಲೇ ಚುಟ್ಟಿ ಇಡುತ್ತಾರೆ. (ಆದರೆ ಹಿಂದೆ ಕೆಲವು ಮಹಿಷಾಸುರ ವೇಷಧಾರಿ ಗಳು ಅಕ್ಕಿಹಿಟ್ಟಿನ ಚುಟ್ಟಿ ಇಟ್ಟದ್ದೂ ಇದೆ). ಹಣೆಯ ನಾಮ ಯಾವ ರೀತಿ ಎಂಬುದು ಕಲಾವಿದರ ಕಲ್ಪನೆಗೆ ಬಿಟ್ಟ ವಿಚಾರ. ಇದು ಬಣ್ಣದ ವೇಷಧಾರಿಗಳ ಕಲಾಪ್ರಜ್ಞೆಗೆ ಉತ್ತಮ ಉದಾಹರಣೆಯಾಗಿ ಗುರುತಿಸಿಕೊಳ್ಳುತ್ತದೆ. ಬಣ್ಣದ ಕುಟ್ಯಪ್ಪುರವರು ಹಣೆಯಲ್ಲಿ ಅರ್ಧಚಂದ್ರಾಕಾರದ ನಾಮ ಇಟ್ಟರೆ, ಬಣ್ಣದ ಮಾಲಿಂಗರು ಕಸ್ತೂರಿ ತಿಲಕದೊಂದಿಗೆ ಮೂರು ಅಡ್ಡ ನಾಮ ಇಡುತ್ತಿದ್ದರು. ತ್ರಿಶೂಲ, ಆಟೀನ್, ಉರುಟು ನಾಮ ಇಡುವ ಕ್ರಮವೂ ಇದೆ. ಇಲ್ಲಿಗೆ ಮುಖವರ್ಣಿಕೆಯು ಕೋಣ ನಂತೆಯೇ ಕಾಣುತ್ತದೆ.
ವೇಷಭೂಷಣ : ಯಕ್ಷಗಾನದ ಮಹಿಷಾಸುರ ಪಾತ್ರದಲ್ಲಿ ಮುಖವು ಮಾತ್ರ ಕೋಣನ ರೂಪ. ಮುಖದಿಂದ ಕೆಳಗೆ ಮನುಷ್ಯ ರೂಪ. ಹಾಗಾಗಿ ವೇಷಭೂಷಣವು ಉಳಿದ ಬಣ್ಣದ ರಾಕ್ಷಸ ಪಾತ್ರಗಳಂತೆಯೇ. ಆದರೆ ವಸ್ತ್ರಭೂಷಣ ಕಪ್ಪು ವರ್ಣದ್ದೇ ಆಗಬೇಕು. ಅಂಗಿ, ಚಲ್ಲಣ, ಬಾಲ್ ಮುಂಡು, ಸೋಗೆವಲ್ಲಿ, ಎದೆಪದಕ, ವೀರಕಸೆ (ವೀರಗಾಸೆ), ಭುಜಕೀರ್ತಿ (ಭುಜದಂಬೆ) – ಎಲ್ಲವೂ ಕಪ್ಪು ಬಣ್ಣದವು.
ಕೊಂಬು, ಕಿವಿ ಹಾಗೂ ಕಿರೀಟ : ಈ ಪ್ರಸಾಧನ ಮಹಿಷಾಸುರ ಪಾತ್ರದ ಮುಖ್ಯ ಅಂಶ. ಇದರ ನಂತರ ಮಾತ್ರ ಮಹಿಷಾಸುರನ ಪಾತ್ರ ಪೂರ್ಣಗೊಳ್ಳುವುದು. ಚಿಟ್ಟೆಪಟ್ಟಿ ಕಟ್ಟಿದ ನಂತರ ಕಿವಿಯ ಬಳಿ ಉದ್ದವಾದ ಎರಡು ಕೊಂಬು, ಕೊಂಬಿನ ಹತ್ತಿರ ದೊಡ್ಡ ಕಿವಿ ಕಟ್ಟುತ್ತಾರೆ. ಕಿವಿಯ ಬಳಿ ಓಲೆ ಧರಿಸಿ, ತಲೆಗೆ ಕೇಸರಿಯನ್ನು (ಕೂದಲು) ಕಟ್ಟುತ್ತಾರೆ. ಹಣೆಯಿಂದ ಮೇಲ್ಮುಖವಾಗಿ ‘ಎದೆ ಪದಕ’ ಕಟ್ಟುತ್ತಾರೆ. ಇದೇ ಮಹಿಷಾಸುರನ ಕಿರೀಟ. ಯಕ್ಷಗಾನದಲ್ಲಿ ಇತರ ರಾಕ್ಷಸ ಪಾತ್ರಗಳಿಗಿರುವಂತೆ, ಮಹಿಷಾಸುರ ಪಾತ್ರಕ್ಕೆ ಬೇರೆ ಕಿರೀಟ ಬಳಸುವ ಕ್ರಮವಿಲ್ಲ ಎಂಬುದನ್ನು ಗಮನಿಸಬೇಕಾದ ಅಂಶ.
ಕೊಂಬು ಕಟ್ಟುವ ಕ್ರಮ : ಹಿಂದಿನ ಕಾಲದಲ್ಲಿ ಮಹಿಷಾಸುರನ ಕೊಂಬು ಕಟ್ಟುವುದು ಎಂದರೆ ಪರಿಶ್ರಮದ ಕೆಲಸವಾಗಿತ್ತು. ದಪ್ಪವಾದ ರಟ್ಟು ಅಥವಾ ಶರ್ಟ್‍ನ ಕಾಲರ್‍ಗೆ ಬಳಸುತ್ತಿದ್ದ ‘ಬಾಂಟೆಕ್ಸ್’ನಂಥಹ ವಸ್ತು ಉಪಯೋಗಿಸಿ ಒಂದೂವರೆಯಿಂದ ಎರಡು ಅಡಿಗಳಷ್ಟು ಉದ್ದವಾದ ಕೊಂಬು ರಚಿಸುತ್ತಿದ್ದರು. ಈ ಕೊಂಬನ್ನು ಗಟ್ಟಿಯಾಗಿ ಕಟ್ಟಿ, ಚಿಟ್ಟೆಪಟ್ಟಿ ಕಟ್ಟಿದ ನೆತ್ತಿಯ ಮೇಲೆ ಏಳೆಂಟು ಸೀರೆಗಳ ಅಟ್ಟೆಯನ್ನು ಇಟ್ಟು ಅದನ್ನು ಜಟ್ಟಿಯಿಂದ ಕಟ್ಟಿ ಕಪ್ಪು ವಸ್ತ್ರದಿಂದ ಮುಚ್ಚುತ್ತಿದ್ದರು. ಶಿರೋಭಾಗವು ಕೋಣದ ಶಿರದಂತೆ ಎತ್ತರವಾಗಿ ಕಾಣಲು ಈ ವಿಧಾನ. ಈ ಕೊಂಬುಗಳು ಜಾರಿ ಬೀಳದಂತೆ ಚಿಟ್ಟೆಪಟ್ಟಿಯ ಬಳಿ ಕೊಂಬಿಗೆ ತಾಗಿ ಕೋಲಿನ ಸಣ್ಣ ತುಂಡು ಕಟ್ಟುತ್ತಿದ್ದರು. ದಪ್ಪವಾದ ರಟ್ಟಿನಿಂದ ಮಾಡಿದ ಎರಡು ದೊಡ್ಡ ಕಿವಿಗಳನ್ನು ಕಟ್ಟಿ ಕಿವಿಯೋಲೆ ಧರಿಸುತ್ತಿದ್ದರು. ಕೊಂಬಿನ ಬಳಿ ತಲಾ ಎರಡು ಕೇಸರಿ ಹಾಗೂ ಹಿಂದಲೆಯಲ್ಲಿ ಒಂದು ಕೇಸರಿಯಂತೆ ಐದು ಕೇಸರಿ ಕಟ್ಟಿ, ಎದೆಪದಕವನ್ನು ಹಣೆಯಿಂದ ಹಿಂದಕ್ಕೆ ಕಿರೀಟದ ಹಾಗೆ ಕಟ್ಟುತ್ತಿದ್ದರು. ದಪ್ಪವಾದ ಮೀಸೆಯನ್ನು ಕಟ್ಟಿ ಗದ್ದದ ಕೆಳಗೆ ಗಡ್ಡ ಕಟ್ಟುವುದು.
ಇಲ್ಲಿಗೆ ವೇಷವು ಕೋಣದಂತೇ ಕಂಡು ಮಹಿಷಾಸುರ ವೇಷ ಪೂರ್ಣವಾಗುತ್ತದೆ. ಈ ಹಂತ ಮುಟ್ಟುವಾಗ ಮಹಿಷಾಸುರ ಪಾತ್ರಧಾರಿಯ ತಲೆಯ ಮೇಲೆ ಸುಮಾರು 8 ಕಿಲೋದಷ್ಟು ಭಾರ ಬೀಳುತ್ತಿತ್ತು. ಇಷ್ಟೆಲ್ಲಾ ಮಾಡಬೇಕಾದರೆ, ಕಲಾವಿದನ ಪರಿಣತಿಯೊಂದಿಗೆ ಪರಿಣತ ರಂಗ ಸಹಾಯಕರ ಸೇವೆಯೂ ಅಗತ್ಯವಿತ್ತು. ಈ ಕೆಲಸಕ್ಕೆ ಸುಮಾರು ಅರ್ಧ ಘಂಟೆಗಳಾದರೂ ಬೇಕಿತ್ತು. ಈ ರೀತಿಯ ವೇಷಭೂಷಣದಿಂದಾಗಿ ಪಾತ್ರವು ಮಹಿಷ (ಕೋಣ) ನಂತೆಯೇ ಕಾಣಿಸುತ್ತದೆ.
ಆದರೆ ಇಂದಿನ ಮಹಿಷಾಸುರ ಪಾತ್ರಕ್ಕೆ ಇಷ್ಟೆಲ್ಲಾ ಪರಿಶ್ರಮ ಬೇಕಿಲ್ಲ. ಈಗ ಕೊಂಬು ಕಟ್ಟುವ ಕೆಲಸವಿಲ್ಲ. ಈಗ ಮಹಿಷಾಸುರ ಪಾತ್ರಕ್ಕೆ ಬಳಸುವುದು ‘ರೆಡಿಮೇಡ್ ಟೊಪ್ಪಿ’ಯನ್ನು. ಕೇಸರಿ, ಕೊಂಬು, ಕಿವಿ ಹಾಗೂ ಎದೆಪದಕವನ್ನು ಈ ಟೊಪ್ಪಿ ಹೊಂದಿರುತ್ತದೆ. ಇದನ್ನು ತಲೆಗೆ ಕಟ್ಟಿದರೆ ಆಯಿತು. ಈಗ ಏಳೆಂಟು ಸೀರೆಗಳ ಅಟ್ಟೆಯನ್ನು ನೆತ್ತಿಯ ಮೇಲೆ ಕಟ್ಟಲಿಕ್ಕೂ ಇಲ್ಲ. ಈ ಕೆಲಸಕ್ಕೆ ಹೆಚ್ಚೆಂದರೆ ಏಳೆಂಟು ನಿಮಿಷಗಳ ಶ್ರಮ ಸಾಕು. ಈ ಟೊಪ್ಪಿ ಹೆಚ್ಚು ಭಾರವೂ ಇಲ್ಲ. ಹೆಚ್ಚೆಂದರೆ ಒಂದೂವರೆ ಕಿಲೋ ಭಾರವಿದ್ದೀತು. ಏಕೆಂದರೆ ಈಗಿನ ಕೊಂಬುಗಳು ಫಾಮ್, ಫೈಬರ್, ಪೀಲಿ ಅಥವಾ ದಪ್ಪ ಕ್ಯಾನ್ವಾಸ್ ಗಳಿಂದ ಮಾಡಿರುವುದು. ಹಿಂದಿನ ಕಾಲದಲ್ಲಿ ಕೇಸರಿಯು ಸೆಣಬಿನ ಅಥವಾ ಬೇರೆ ನಾರುಗಳಿಂದ ಮಾಡುತ್ತಿದ್ದ ಕಾರಣ, ಒಂದೊಂದು ಕೇಸರಿಯೇ ಅರ್ಧ ಕೆ.ಜಿ.ಯಷ್ಟಿತ್ತು. ಈಗಿನ ಕೇಸರಿ ಹಗುರ ವಸ್ತುವಿನಿಂದ ಮಾಡಿರುವುದು ಹಾಗೂ ಕೇವಲ ಎರಡು ಕೇಸರಿಯನ್ನು ಮಾತ್ರ ಕಟ್ಟುವುದು. ಹಾಗೆಂದು ಮಹಿಷಾಸುರ ಪಾತ್ರ ನಿರ್ವಹಿಸುವುದು ಸುಲಭದ ಕೆಲಸವಲ್ಲ.
ಮಹಿಷಾಸುರ ಪಾತ್ರ ರಂಗಸ್ಥಳ ಪ್ರವೇಶಿಸುವುದು ಸಭೆಯ ಮೂಲಕ. ಸಭೆಯಿಂದಲೇ ದೊಂದಿ ಹಿಡಿದು ರಾಳದ ಪುಡಿ ಎರಚುತ್ತಾ ಅಬ್ಬರದಿಂದ, ಅಟ್ಟಹಾಸದಿಂದ ಬರಲೇ ಸುಮಾರು 10ರಿಂದ 15 ನಿಮಿಷಗಳು ಬೇಕು. ರಂಗಸ್ಥಳವು ಇಪ್ಪತ್ತು ಮೀಟರ್‍ನಷ್ಟಿರುವಾಗ ಕೈಗಳೆರಡನ್ನೂ ನೆಲಕ್ಕೆ ಊರಿ ನಾಲ್ಕು ಕಾಲಿನಿಂದ ಬರಬೇಕು. ನಂತರ ರಂಗಸ್ಥಳ ಪ್ರವೇಶಿಸಿದ ಕೂಡಲೇ ಏರು ಪದ್ಯಗಳ ವೀರಾವೇಶ ತೋರ್ಪಡಿಸಬೇಕು. ಕೊಂಬುಗಳನ್ನು ಅಲುಗಾಡಿಸುತ್ತಾ ಮಹಿಷಾಸುರನದ್ದೇ ಆದ ವಿಶಿಷ್ಟ ನಾಟ್ಯ ಮಾಡಿ, ಸಂಭಾಷಣೆಯ ನಡುವೆ ಕೋಣದಂತೆ ‘ಗುಟುರು’ ಹಾಕಬೇಕು. ಸುಮಾರು ಒಂದೂವರೆ ಘಂಟೆಗಳ ಕಾಲ ರಂಗಸ್ಥಳದಲ್ಲೇ ಕಳೆಯಬೇಕು.
ಮಹಿಷಾಸುರ ಪಾತ್ರಕ್ಕೆ ಮೂಲ ಚಿತ್ರಣ ಕೊಟ್ಟವರು ಬಣ್ಣದ ಕುಂಞರು. ಹಾಗೆಯೇ ಹಲವಾರು ಸುಪ್ರಸಿದ್ಧ ಕಲಾವಿದರು ಮಹಿಷಾಸುರ ಪಾತ್ರಕ್ಕಾಗಿ ಹೆಸರು ಗಳಿಸಿದ್ದಾರೆ. ಅದರಲ್ಲಿ ಪ್ರಮುಖರು ಕಟೀಲು ಮೇಳದಲ್ಲಿದ್ದ ಬಣ್ಣದ ಕುಟ್ಯಪ್ಪು. ಬಣ್ಣದ ಕುಂಞರ ಮೂಲಚಿತ್ರಣಕ್ಕೆ ತಮ್ಮ ಸ್ವಂತ ಕಲ್ಪನೆಯನ್ನು ಸೇರಿಸಿ ಮಹಿಷಾಸುರ ಪಾತ್ರಕ್ಕೆ ಚಿತ್ರಣ ನೀಡಿದವರು. ಬಣ್ಣದ ಮಾಲಿಂಗ, ಚಂದ್ರಗಿರಿ ಅಂಬು, ಪಕಳಕುಂಞ ಕೃಷ್ಣ ನಾಯ್ಕ, ತ್ರಿವಿಕ್ರಮ ಶೆಣೈ, ಕರವೋಳು ದೇರಣ್ಣ ಶೆಟ್ಟಿ, ಪುಳಿಂಚ ರಾಮಯ್ಯ ಶೆಟ್ಟಿ, ಪುಂಜಾಲುಕಟ್ಟೆ ಧರ್ಣಪ್ಪ ಶೆಟ್ಟಿ, ತನಿಯಪ್ಪ ಗೌಡ, ಮೂಡಬಿದ್ರೆ ಮಾಧವ ಶೆಟ್ಟಿ ಮೊದಲಾದವರ ಮಹಿಷಾಸುರ ಪಾತ್ರವು ಜನರಿಂದ ಮೆಚ್ಚುಗೆ ಗಳಿಸಿದವುಗಳು. ಇತ್ತೀಚಿಗೆ ರಂಗಸ್ಥಳದಲ್ಲೇ ರಂಗೈಕ್ಯರಾದ ಗೇರುಕಟ್ಟೆ ಗಂಗಯ್ಯ ಶೆಟ್ಟರ ಮಹಿಷಾಸುರ ತುಂಬಾ ಪ್ರಸಿದ್ಧ. ಕುಟ್ಯಪ್ಪುರ ಪರಂಪರೆಯಲ್ಲೇ ಮಹಿಷಾಸುರ ಪಾತ್ರ ನಿರ್ವಹಿಸಿದವರು.
ಪ್ರಸ್ತುತ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್, ಧರ್ಮಸ್ಥಳ ಗೋಪಾಲ್ ಭಟ್, ಹರಿನಾರಾಯಣ ಭಟ್ ಎಡನೀರು, ಶಿವಪ್ರಸಾದ್ ಭಟ್ ಪೆರುವಾಜೆ, ಸತೀಶ್ ನೈನಾಡು, ಉಮೇಶ್ ಕುಪ್ಪೆಪದವು, ನಗ್ರಿ ಮಹಾಬಲ ರೈ, ಬಾಲಕೃಷ್ಣ ಮಿಜಾರು, ಸುರೇಶ ಕುಪ್ಪೆಪದವು, ಲಕ್ಷ್ಮಣ ಕೋಟ್ಯಾನ್, ಶಬರೀಶ ಮಾನ್ಯ, ಸುಬ್ರಾಯ ಪಾಟಾಳಿ, ಹರೀಶ್ ಮಣ್ಣಾಪು, ಶಶಿಕಿರಣ್ ಕಾವು, ಜಗದಾಭಿರಾಮ, ರವಿರಾಜ ಪನೆಯಾಲ, ಮನೀಶ್ ಪಾಟಾಳಿ, ಸಚಿನ್ ಪಾಟಾಳಿ, ರಾಮಕೃಷ್ಣ ನಂದಿಕೂರು ಮುಂತಾದವರು ಮಹಿಷಾಸುರ ಪಾತ್ರದಲ್ಲಿ ಸುಪ್ರಸಿದ್ಧರಾದವರು. ಮಹಿಳಾ ಕಲಾವಿದರೂ ಮಹಿಷಾಸುರ ಪಾತ್ರ ಮಾಡುವಲ್ಲಿ ಹಿಂದೆ ಬಿದ್ದಿಲ್ಲ. ಪ್ರಸಿದ್ಧ ಹವ್ಯಾಸೀ ಮಹಿಳಾ ಕಲಾವಿದರಾದ, 2016ರ ಸಾಲಿನಲ್ಲಿ ಯಕ್ಷಗಾನದ ಸಾಧನೆಗಾಗಿ ‘ಕಿತ್ತೂರ ರಾಣಿ ಚೆನ್ನಮ್ಮ’ ಪ್ರಶಸ್ತಿ ಪುರಸ್ಕೃತರಾದ ಸುರತ್ಕಲ್ ಕಾಟಿಪಳ್ಳದ ಶ್ರೀಮತಿ ಪೂರ್ಣಿಮಾ ಯತೀಶ್ ರೈಯವರು ಸುಮಾರು 200ಕ್ಕೂ ಹೆಚ್ಚು ಭಾರಿ ಮಹಿಷಾಸುರ ಪಾತ್ರ ಮಾಡಿ ಜನಮೆಚ್ಚುಗೆ ಗಳಿಸಿದ್ದಾರೆ. ದಿ. ಗಂಗಯ್ಯ ಶೆಟ್ಟರಿಂದಲೇ ‘ನನ್ನ ನಿರ್ವಹಣೆಯ ಮಟ್ಟದಲ್ಲೇ ಮಾಡಿದ್ದಿಯಲ್ಲ?’ ಎಂಬ ಪ್ರಶಂಸೆ ಗಳಿಸಿದ್ದಾರೆ. ಸಾಯಿಸುಮಾ, ರೇಶ್ಮಾ ಕಾರಂತರೂ ಒಂದೆರಡು ಭಾರಿ ಮಹಿಷಾಸುರ ಪಾತ್ರ ಮಾಡಿದ್ದಾರೆ
ಸುಪ್ರಸಿದ್ಧ ಭಾಗವತರಾದ ‘ರಂಗನಾಯಕ’ ಎನಿಸಿದ ಕುರಿಯ ಗಣಪತಿ ಶಾಸ್ತ್ರಿಯವರೂ, ತಮ್ಮ ಯೌವನದ ಕಾಲದಲ್ಲಿ ಮಹಿಷಾಸುರ ಪಾತ್ರದ ಮೂಲಕ ಮಿಂಚಿದ್ದನ್ನು ಈಗಲೂ ನೆನಪಿಸುವಂಥಹದು. ತಮ್ಮ ಅದ್ಭುತ ನಿರ್ವಹಣೆಯಿಂದ ಕುರಿಯರು ಮಹಿಷಾಸುರ ಪಾತ್ರದಲ್ಲಿ ಪ್ರಸಿದ್ಧರಾಗಿದ್ದರು. ಮಹಿಷಾಸುರ ಪಾತ್ರ ನಿರ್ವಹಣೆಯ ಬಗ್ಗೆ ಪಾತ್ರಧಾರಿಗಳ ಅನಿಸಿಕೆ :
ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ : ಸುಮಾರು 30 ವರ್ಷಗಳಿಂದ ಮಹಿಷಾಸುರ ಪಾತ್ರ ಮಾಡುತ್ತಿರುವ ಸದಾಶಿವ ಶೆಟ್ಟಿಗಾರ್ ಪ್ರಸ್ತುತ ಹನುಮಗಿರಿ ಮೇಳದ ಪ್ರಧಾನ ಬಣ್ಣದ ವೇಷಧಾರಿ. ಬಣ್ಣದ ವೇಷಗಳ ಕುರಿತು ಅಪಾರ ಜ್ಞಾನವುಳ್ಳ ಶೆಟ್ಟಿಗಾರ್‍ರು ಬಣ್ಣದ ಮಾಲಿಂಗರ ಶಿಷ್ಯ. ಬಣ್ಣದ ಮಾಲಿಂಗರೊಂದಿಗೇ ತಿರುಗಾಟ ಮಾಡಿದವರು. ಅವರ ಅನಿಸಿಕೆಯಂತೆ ‘‘ಹಿಂದಿನ ಮಹಿಷಾಸುರ ಪಾತ್ರ ನಿಧಾನ ಗತಿಯದ್ದಾಗಿತ್ತು. ಈಗಿನದ್ದು ಕ್ಷಿಪ್ರ ಗತಿಯದ್ದು. ಸಭೆಯಲ್ಲಿ ಅಟ್ಟಹಾಸ ತೋರಿದರೆ ಸಾಲದು. ಅದೇ ಕಸುವನ್ನು ರಂಗಸ್ಥಳದಲ್ಲಿಯೂ ತೋರಿಸಿದರೆ ಮಾತ್ರ ಪಾತ್ರಕ್ಕೆ ನ್ಯಾಯ ಒದಗಿಸಿ ದಂತಾಗುತ್ತದೆ. ರಂಗಸ್ಥಳ ಪ್ರವೇಶಿಸಿದ ಕೂಡಲೇ ಏರುಪದಗಳಿರುವ ಕಾರಣ, ಮೊದಲ ಪದ್ಯವನ್ನು ನಿಧಾನಗತಿಯಲ್ಲಿ ಕುಣಿದು, ಮುಂದಿನ ಪದ್ಯಗಳಿಗೆ ಹಂತಹಂತವಾಗಿ ಏರು ಕುಣಿತದೊಂದಿಗೆ ವೀರೋತ್ಕರ್ಷದ ನಿರ್ವಹಣೆ ತೋರಿದರೆ ಉತ್ತಮ’’
ಸತೀಶ್ ನೈನಾಡು : ಕಟೀಲು ನಾಲ್ಕನೇ ಮೇಳದ ಮಹಿಷಾಸುರ ಪಾತ್ರಧಾರಿಯಾದ ನೈನಾಡರು ಕೋಳ್ಯೂರು ರಾಮಚಂದ್ರ ರಾವ್‍ರವರ ಶಿಷ್ಯ. ಧರ್ಮಸ್ಥಳ ಗೋಪಾಲಭಟ್ಟರ ಶಿಷ್ಯರಾಗಿಯೂ ಬಣ್ಣದ ವೇಷಗಳ ನಡೆಯನ್ನು ಕರಗತ ಮಾಡಿಕೊಂಡವರು. ಮಹಿಷಾಸುರನ ಪಾತ್ರ ಮಾಡಿ 20 ವರ್ಷಗಳ ಅನುಭವ ಇರುವ ಇವರು ಮಹಿಷಾಸುರನ ಕೊಂಬು ರಚನೆಯಲ್ಲೂ ಪರಿಣತಿ ಹೊಂದಿದ್ದಾರೆ. ಅವರ ಅನಿಸಿಕೆ : ”ಮಹಿಷಾಸುರನ ಪ್ರವೇಶವು ಸಭೆಯಿಂದಲೇ ಆರಂಭವಾಗುವುದು ಸರಿಯೇ. ಆದರೂ ಹೆಚ್ಚು ಸಮಯವನ್ನು ಸಭೆಯಲ್ಲೇ ತೊಡಗಿಸುವುದು ಸರಿಯಲ್ಲ. ಮಾಲಿನಿಯು ಸೀರೆ ಬದಲಾಯಿಸಿ ಬರುವಷ್ಟರಲ್ಲಿ ಮಹಿಷಾಸುರ ರಂಗಸ್ಥಳ ತಲುಪಿದರೆ ಉತ್ತಮ. ಸಭೆಯಲ್ಲಿ ಮಾಡಿದ ಪ್ರಸ್ತುತಿಯು ಎಲ್ಲಾ ಪ್ರೇಕ್ಷಕರನ್ನು ತಲುಪುವುದಿಲ್ಲ. ಅದರ ಬದಲು ರಂಗಸ್ಥಳದಲ್ಲೇ ಬೇಕಾದಷ್ಟು ಕಸುಬು ಮಾಡುವ ಅವಕಾಶವಿದೆ. ಸಭೆಯಲ್ಲೇ ಹೆಚ್ಚಿನ ಸಮಯ ಕಳೆದರೆ, ರಂಗಸ್ಥಳದಲ್ಲಿ ಮಾಡುವ ಕೆಲಸದ ಸಮಯವೇ ಕಡಿತವಾಗುತ್ತದೆ. ಏಕೆಂದರೆ ಮಹಿಷವಧೆ ಇಂತಿಷ್ಟೇ ಸಮಯಕ್ಕೆ ಮುಗಿಯಬೇಕು ಎಂಬ ಮಿತಿಯಿದೆ. ನಂತರವೂ ತುಂಬಾ ಪಾತ್ರಗಳು ಬರಲಿಕ್ಕಿವೆಯಲ್ಲಾ?’’
ಉಮೇಶ್ ಕುಪ್ಪೆಪದವು : ಗಂಗಯ್ಯ ಶೆಟ್ಟರ ಶಿಷ್ಯರಾದ ಉಮೇಶ್ ಕುಪ್ಪೆಪದವು ಮಹಿಷಾಸುರ ಪಾತ್ರದಲ್ಲಿ ತಮ್ಮದೇ ಆದ ಛಾಪು ಹೊಂದಿದವರು. ಯುವಜನರ ಮೆಚ್ಚುಗೆಯ ಮಹಿಷಾಸುರ ಪಾತ್ರ ಇವರದ್ದು. ರಂಗಸ್ಥಳದಲ್ಲಿ ಹುಡಿ ಹಾರಿಸುವ ಪ್ರಸ್ತುತಿಯ ಇವರು ಕಟೀಲು ಮೇಳದಲ್ಲಿ ಎಂಟು ವರ್ಷಗಳ ಕಾಲ ಮಹಿಷಾಸುರ ಪಾತ್ರ ಮಾಡಿದ ಅನುಭವಿಗಳು. ಪ್ರಸ್ತುತ ಕಟೀಲು ಮೇಳದಲ್ಲಿದ್ದಾರೆ. ಅವರ ಅನಿಸಿಕೆ :ನನ್ನ ಮಹಿಷಾಸುರ ಪಾತ್ರದ ನಿರ್ವಹಣೆಗೆ ಗುರುಗಳಾದ ಗಂಗಯ್ಯ ಶೆಟ್ಟರೇ ಆದರ್ಶ. ಸಭೆಯಲ್ಲಿ ತೋರುವಷ್ಟೇ ನಿರ್ವಹಣೆಯನ್ನು ರಂಗಸ್ಥಳದಲ್ಲೂ ನೀಡುತ್ತಿದ್ದೇನೆ. ಬೇಸಿಗೆ ಕಾಲದಲ್ಲೂ ಮಹಿಷಾಸುರ ನಿರ್ವಹಣೆ ಮಾಡುವಾಗ ನನಗೆ ಆಯಾಸ, ಸುಸ್ತು ಎಂದು ಇಷ್ಟರ ತನಕ ಅನಿಸಿದ್ದಿಲ್ಲ. ಇದಕ್ಕೆ ಶ್ರೀ ಭ್ರಮರಾಮಂಬಿಕೆಯ ಅನುಗ್ರಹ ಹಾಗೂ ಗುರುಗಳ ಆಶೀರ್ವಾದವೇ ಕಾರಣ’’ವೆಂದು ನನ್ನ ಅನಿಸಿಕೆಯಾಗಿದೆ. ಹವ್ಯಾಸಿ ಮಹಿಳಾ ಕಲಾವಿದೆ ಶ್ರೀಮತಿ ಪೂರ್ಣಿಮಾ ಯತೀಶ್ ರೈ : ಮಹಿಷಾಸುರ ಪಾತ್ರದ ಪ್ರಸ್ತುತಿಯಲ್ಲಿ ಪುರುಷ ಕಲಾವಿದರ ಸಮಾನ ರೀತಿಯ ನಿರ್ವಹಣೆ ತೋರುತ್ತಿರುವ ಶ್ರೀಮತಿ ಪೂರ್ಣಿಮಾರವರು 1995ರಿಂದಲೇ ಸುಮಾರು 200ಕ್ಕಿಂತಲೂ ಹೆಚ್ಚು ಭಾರಿ ಮಹಿಷಾಸುರ ಪಾತ್ರ ನಿರ್ವಹಿಸಿದ ಅನುಭವಿಗಳು. ಇವರು ರಮೇಶ್ ಶೆಟ್ಟಿ ಬಾಯಾರುರವರ ಶಿಷ್ಯೆ. ಅವರ ಅನಿಸಿಕೆ : “ಮಹಿಷಾಸುರ ಸಭೆಯಿಂದ ಪ್ರವೇಶ ಮಾಡುವ ಸನ್ನಿವೇಶ ನನಗೆ ಇಷ್ಟವಾದುದು. ಈ ಸಂದರ್ಭದಲ್ಲಿ ನನಗೆ ಇಷ್ಟರ ತನಕ ಆಯಾಸ ಎಂದು ತೋರಿದ್ದೇ ಇಲ್ಲ. ಆದರೂ ದೊಂದಿಗೆ ರಾಳದ ಹುಡಿ ಎರಚಿದಾಗ ಉಂಟಾಗುವ ಜ್ವಾಲೆಯಿಂದಾಗಿ ಕೆಲಕ್ಷಣ ಉರಿಯ ಅನುಭವವಾಗುತ್ತದೆ. ಆದರೆ ರಂಗಸ್ಥಳ ಪ್ರವೇಶಿಸಿದಾಕ್ಷಣ ಎಲ್ಲವೂ ಸರಿಯಾಗುತ್ತದೆ. ಮಹಿಷಾಸುರನ ಪ್ರಾರಂಭದ ಏರು ಪದ್ಯಗಳಿಗೆ ವಿಭಿನ್ನ ನಾಟ್ಯ ನೀಡುತ್ತಿದ್ದೇನೆ. ಇದಕ್ಕೆಲ್ಲಾ ಶ್ರೀದೇವರ ಕೃಪೆಯೇ ಕಾರಣ ಎಂದು ನನ್ನ ಅನಿಸಿಕೆ’’.
ಹತ್ತಿಪ್ಪತ್ತು ವರ್ಷಗಳ ಹಿಂದಿನ ತನಕ ಮಹಿಷಾಸುರ ಸಭೆಯಿಂದ ಬರುವಾಗ ಎದುರು ಸಾಲಿನಲ್ಲಿ ಕುಳಿತಿರುವ ಯಕ್ಷಗಾನದ ಸೇವಾ ಕರ್ತರು ಗಣ್ಯರ ಮೂಲಕ ಮಹಿಷಾಸುರ ಪಾತ್ರಧಾರಿಗೆ ಮಲ್ಲಿಗೆಯ ಮಾಲೆ ಹಾಕುವ ಸಂಪ್ರದಾಯವಿತ್ತು. ಇತ್ತೀಚೆಗೆ ಆ ಕ್ರಮವಿಲ್ಲ. ಮಹಿಷಾಸುರನ ವಧೆಯಾದಾಗ ಶಿರಚ್ಛೇದವಾಗಿದೆ ಎಂಬ ಸಂಕೇತವಾಗಿ ಮಹಿಷಾಸುರ ಪಾತ್ರಧಾರಿ ರಂಗಸ್ಥಳದಲ್ಲೇ ತನ್ನ ಕೊಂಬು, ಕಿವಿಗಳೊಂದಿಗೆ ಮೀಸೆ ಗಡ್ಡವನ್ನೂ ಕಳಚಿದಾಗ ಶ್ರೀದೇವಿ ಪಾತ್ರಧಾರಿಯು ತನ್ನ ಕೈಯಲ್ಲಿರುವ ತ್ರಿಶೂಲಕ್ಕೆ ಸಿಕ್ಕಿಸಿ ಸಿಂಹಕ್ಕೆ ಎಸೆಯುವ ದೃಶ್ಯವಿತ್ತು. ಈಗ ಟೊಪ್ಪಿಯನ್ನೇ ಕಳಚಿ ಕೊಡುವ ಕ್ರಮವಿದೆ. ಈ ಸನ್ನಿವೇಶಕ್ಕೆ ಕೆಲವಾರು ಕ್ಷಣಗಳು ಬೇಕಾಗುತ್ತದೆ. ಆದ ಕಾರಣ, ಪ್ರೇಕ್ಷಕರ ಗಮನ ಬೇರೆಡೆ ಹರಿಸಲು ಮಹಿಷಾಸುರ ಪಾತ್ರಧಾರಿಯು ಶ್ರೀದೇವಿಗೆ ಹೂವನ್ನು ಎಸೆಯುತ್ತಾರೆ. ಮಹಿಷಾಸುರ ವಧೆಯಿಂದ ದೇವತೆಗಳು ಸಂತುಷ್ಟರಾಗಿ ಪುಷ್ಪವೃಷ್ಟಿ ಮಾಡಿದರು ಎಂಬ ಸಂಕೇತವೂ ದೊರಕಿದಂತಾಗುತ್ತದೆ ಎಂಬುದೇ ಇದರ ಹಿನ್ನೆಲೆ. ು
ಎಂ.ಶಾಂತರಾಮ ಕುಡ್ವ, ಮೂಡಬಿದಿರೆ
ಪೂರಕ ಮಾಹಿತಿ : ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ , ಸತೀಶ್ ನೈನಾಡ್ , ಉಮೇಶ್ ಕುಪ್ಪೆಪದವು .
ಕರ್ನಾಟಕದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಕೆಯನ್ನು ಕಾಣುತ್ತಿದೆ. ಆದರೆ ದಕ್ಷಿಣ ಕನ್ನಡದಲ್ಲಿ ನಿನ್ನೆಗಿಂತ ಇಂದು ಏರಿಕೆಯಾಗಿದೆ. ಕರ್ನಾಟಕ ರಾಜ್ಯದಲ್ಲಿ (18.06.2021) ಕೊರೋನಾ ದೃಢಪಟ್ಟವರ ಅಂಕಿಸಂಖ್ಯೆಗಳ ವಿವರ ಇಲ್ಲಿದೆ.
ನಟಿ ರಶ್ಮಿಕಾ ಮಂದಣ್ಣ ಫೋಟೋ ಒಂದು ಈಗ ಭಾರೀ ಸುದ್ದಿ ಮಾಡುತ್ತಿದೆ. ನೇರಳೆ ಬಣ್ಣದ ಉಡುಗೆಯಲ್ಲಿ ಬಿಂದಾಸ್ ಫೋಸ್ ಕೊಟ್ಟಿರುವ ಈ ಫೋಟೋ ಕಂಡು ಆಕೆಯ ಅಭಿಮಾನಿಗಳು ಹುಚ್ಚಾಗಿದ್ದಾರೆ. ಈ ಫೋಟೋವನ್ನು ರಶ್ಮಿಕಾ ಮಂದಣ್ಣ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋವನ್ನು 36 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. 52 ಸಾವಿರ ಮಂದಿ ಕಾಮೆಂಟ್ ಮಾಡಿದ್ದಾರೆ. ಹಾಗಾದರೆ ಆ ಫೋಟೋ ಯಾವುದು ಎಂದು ನೋಡೋಣ ಬನ್ನಿ.
ಇತ್ತೀಚಿಗಿನ ಕೆಲವು ಸಿನಿಮಾಗಳಲ್ಲಿ ಯಕ್ಷಗಾನ ಕಲಾವಿದರನ್ನು ಹಾಗೂ ಯಕ್ಷಗಾನ ಹಿಮ್ಮೇಳ ಕಲಾವಿದರನ್ನು (ಭಾಗವತರನ್ನೂ ಸೇರಿಸಿ) ಬಳಸಿಕೊಳ್ಳುತ್ತಿರುವುದನ್ನು ಕಾಣುತ್ತಿದ್ದೇವೆ. ಹಿಂದೆ 1960-70, 1970-80ರ ದಶಕದಲ್ಲಿ ಈ ಪದ್ಧತಿ ಇರಲಿಲ್ಲವೆಂದೇ ಹೇಳಬಹುದು. ಇದಕ್ಕೆ ಕಾರಣ ಆ ಕಾಲದ ಸಿನಿಮಾ ನಿರ್ದೇಶಕರು, ಸಂಗೀತ ನಿರ್ದೇಶಕರು ತೆಲುಗು-ತಮಿಳು ಮೂಲದವರಾಗಿದ್ದರು.
ಉದಾಹರಣೆಗೆ ಜಿ. ಕೆ. ವೆಂಕಟೇಶ್, ಉಪೇಂದ್ರಕುಮಾರ್, ಟಿ. ಜಿ. ಲಿಂಗಪ್ಪ ಮೊದಲಾದವರು. ನಿರ್ದೇಶಕರಲ್ಲಿಯೂ ಕೆಲವರು ಈ ಕಾರಣಕ್ಕೇ ಯಕ್ಷಗಾನವನ್ನು ಬಳಸಿರಲಿಲ್ಲವೆಂದೇ ಹೇಳಬಹುದು. ಮಾತ್ರವಲ್ಲದೇ ಆ ಕಾಲದ ಸಿನಿಮಾಗಳೆಲ್ಲವೂ ಅಂದಿನ ಮದ್ರಾಸ್(ಇಂದಿನ ಚೆನ್ನೈ)ನಲ್ಲಿ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದುದು ಇನ್ನೊಂದು ಕಾರಣವೂ ಇರಬಹುದು. ಅವರೆಲ್ಲರಿಗೂ ಕರಾವಳಿಯ ಪರಿಚಯ ಇಲ್ಲದೆಯೋ ಅಥವಾ ಯಕ್ಷಗಾನ ಕಲೆಯ ಬಗ್ಗೆ ಮಾಹಿತಿ ಇಲ್ಲದಿರುವುದೂ ಸಹ ಇದಕ್ಕೆ ಕಾರಣವಿರಬಹುದು.
ಆದರೆ ಇತ್ತೀಚಿನ ದಶಕಗಳಲ್ಲಿ ಸಿನಿಮಾ ಹಾಗೂ ಸಿನಿಮಾ ಸಂಗೀತದಲ್ಲಿ ಯಕ್ಷಗಾನ ಬಳಕೆ ಮಾಡುತ್ತಿರುವುದು ಒಂದು ವಿಶೇಷವಾಗಿ ಕಾಣುತ್ತಿದ್ದೇವೆ. ಸುನೀಲ್‍ಕುಮಾರ್ ದೇಸಾಯಿ ಅವರ `ಪರ್ವ’ ಸಿನಿಮಾದಲ್ಲಿ ಬಡಗುತಿಟ್ಟಿನ ಇಡಗುಂಜಿ ಮೇಳವನ್ನು ಪೂರ್ಣವಾಗಿ ತೊಡಗಿಸಿಕೊಂಡದ್ದನ್ನು ಕಾಣಬಹುದು. ವಿಷ್ಣುವರ್ಧನ್ ನಾಯಕ ನಟನಾಗಿ, ಪ್ರೇಮಾ ನಾಯಕಿಯಾಗಿ ಅಭಿನಯಿಸಿದ ಈ ಸಿನಿಮಾದಲ್ಲಿ ಬಡಗುತಿಟ್ಟು ಯಕ್ಷಗಾನದ ಮೇರುಕಲಾವಿದ ಕೆರೆಮನೆ ಶಂಭು ಹೆಗಡೆಯವರ ಪ್ರಬುದ್ಧ ಅಭಿನಯ ಸಿನಿಮಾ ಕಲಾವಿದರಿಗಿಂತ ತಾನೇನೂ ಕಡಿಮೆಯಿಲ್ಲ ಎಂಬಂತೆ ನಟಿಸಿದ್ದು ಆ ಸಿನಿಮಾದ ಹೆಗ್ಗಳಿಕೆಯೂ ಆಗಿದೆ.
1962ರಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಚಿತ್ರದಲ್ಲಿ ಶ್ರೀ ಶಂಕರ್ ಸಿಂಗ್ ಅವರು(ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ತಂದೆ) ಯಕ್ಷಗಾನ ಪ್ರಸಂಗವನ್ನು ಸಿನಿಮಾದಲ್ಲಿ ಪ್ರಥಮವಾಗಿ ಬಳಸಿಕೊಂಡರು. ಪ್ರತಿಮಾದೇವಿ ನಾಯಕಿಯಾಗಿ ಅಭಿನಯಿಸಿದ್ದರು. ಇತ್ತೀಚಿಗಿನ ಎ. ಎಂ. ಆರ್. ರಮೇಶ್ ನಿರ್ದೇಶನದ ಮಿಂಚಿನ ಓಟ ಮತ್ತು ಇಂದ್ರಧನುಷ್ (ಸಂಗೀತ: ವಿ. ಮನೋಹರ್), ಗಾಳಿಪಟ (ಸಂಗೀತ: ವಿ. ಹರಿಕೃಷ್ಣ), ರಂಗಿತರಂಗ (ಸಂಗೀತ ಮತ್ತು ನಿರ್ದೇಶನ: ಅನೂಪ್ ಭಂಡಾರಿ), ಬಣ್ಣದ ವೇಷ, ನಮ್ಮೂರ ಮಂದಾರ ಹೂವೇ (ಇಳಯರಾಜ) ಸಿನಿಮಾಗಳಲ್ಲಿ ಸಹನರ್ತಕರಾಗಿ ಯಕ್ಷಗಾನ ವೇಷಗಳನ್ನು ಬಳಸಿಕೊಳ್ಳಲಾಗಿದೆ.
ಹಲವಾರು ತುಳು ಸಿನಿಮಾಗಳಲ್ಲೂ ಯಕ್ಷಗಾನ ಕಲಾವಿದರು ಮತ್ತು ಹಿಮ್ಮೇಳ ಕಲಾವಿದರನ್ನು ಬಳಸಲಾಗಿದೆ. ದಕ್ಷಿಣ ಕನ್ನಡದಲ್ಲಿ ತುಳುವೇ ಪ್ರಧಾನ ಭಾಷೆಯಾಗಿದ್ದು ಯಕ್ಷಗಾನದ ತವರೂರೆನಿಸಿದೆ. ಆನಂದ್ ಪಿ. ರಾಜ್ ಅವರು ನಿರ್ದೇಶಿಸಿದ ಕೋಟಿ ಚೆನ್ನಯ ಎರಡನೇ ಬಾರಿ ತುಳುವಿನಲ್ಲಿ ತಯಾರಾಗಿದ್ದು ಇದರಲ್ಲಿ ಪದ್ಯಾಣ ಗಣಪತಿ ಭಟ್ಟರಿಂದ ಯಕ್ಷಗಾನದ ಹಾಡುಗಳನ್ನು ರಚಿಸಿ ಹಾಡಿಸಿದ್ದೇನೆ. ನಂತರದ ದಿನಗಳಲ್ಲಿ ನಾನು (ವಿ. ಮನೋಹರ್) ಗುರುಕಿರಣ್, ಮಣಿಕಾಂತ್ ಕದ್ರಿ, ಗಿರಿಧರ್ ದಿವಾಣ ಮುಂತಾದವರು ದಕ್ಷಿಣ ಕನ್ನಡದವರೇ ಆಗಿದ್ದು ಯಕ್ಷಗಾನದ ಮೇಲೆ ವಿಶೇಷ ಆಸಕ್ತಿ ಮತ್ತು ಕಾಳಜಿ ಇರುವುದರಿಂದ ಸಿನಿಮಾಗಳಲ್ಲಿ ಯಕ್ಷಗಾನ ಕಲಾವಿದರು ಮತ್ತು ಭಾಗವತರನ್ನು ಬಳಸಿಕೊಂಡಿದ್ದೇವೆ.
ನನ್ನ ಸಿನಿಮಾಗಳಲ್ಲಿ ಭಾಗವತರಾದ ಶ್ರೀಮತಿ ಲೀಲಾವತಿ ಬೈಪಡಿತ್ತಾಯ, ಪದ್ಯಾಣ ಗಣಪತಿ ಭಟ್ಟ, ಪಟ್ಲ ಸತೀಶ ಶೆಟ್ಟಿ ಮೊದಲಾದವರ ಹಾಡುಗಾರಿಕೆಯನ್ನು ಬಳಸಿಕೊಂಡಿದ್ದೇನೆ. ಆದರೆ ಯಕ್ಷಗಾನ ಭಾಗವತಿಕೆಗೂ ಸಿನಿಮಾ ರಾಗ ಸಂಯೋಜನೆಗೂ ಯಾವುದೇ ರೀತಿಯಲ್ಲಿ ಹೊಂದಾಣಿಕೆಯಾಗದೇ ಇರುವುದರಿಂದ ಸಿನಿಮಾದ ಸನ್ನಿವೇಶಕ್ಕೆ ತಕ್ಕಂತೆ ಅವರ ಹಿಮ್ಮೇಳದೊಂದಿಗೆ ಗಾಯನವನ್ನು ಅವರ ಮನೋಧರ್ಮಕ್ಕನುಗುಣವಾಗಿ ಹಾಡಿಸಿದ್ದೇನೆ. ಕಾರಣ ಸಿನಿಮಾದಲ್ಲಿ ಬಳಸುವ ರಾಗ-ತಾಳಗಳೂ, ಪಲ್ಲವಿ-ಚರಣಗಳೂ ಯಕ್ಷಗಾನ ಹಾಡುಗಳಂತಿಲ್ಲವೆನ್ನಬಹುದು. ಮಾತ್ರವಲ್ಲದೇ ಯಕ್ಷಗಾನ ಕಲಾವಿದರು ಯಾರೂ ಸಿನಿಮಾ ಕಲಾವಿದರಾಗಲಿಲ್ಲ. ಭಾಗವತರೂ ಯಾವುದೇ ಸಿನಿಮಾ ಹಿನ್ನೆಲೆ ಗಾಯಕರೂ ಆಗಲಿಲ್ಲ. ಪೂರ್ಣ ಪ್ರಮಾಣದಲ್ಲಿ ಯಕ್ಷಗಾನವನ್ನು ಸಿನಿಮಾದಲ್ಲಿ ಬಳಸಲೂ ಬರುವುದಿಲ್ಲ. ಇದೆಲ್ಲವನ್ನು ಅವಲೋಕಿಸಿದರೆ ಕೇವಲ ನಮ್ಮ ಆಸಕ್ತಿಗೋಸ್ಕರ ಯಕ್ಷಗಾನವನ್ನು ಸಿನಿಮಾದಲ್ಲಿ ಬಳಸುತ್ತಿದ್ದೇವೆ ಎನ್ನಬಹುದು.
ಯಕ್ಷಗಾನದ ಭಾಷೆ: ಯಕ್ಷಗಾನಕ್ಕೆ ಭಾಷೆಯ ಪರಿಮಿತಿ ಇಲ್ಲವೆನ್ನಬಹುದು. ಶುದ್ಧ ಕನ್ನಡದಲ್ಲಿ ಸ್ಪಷ್ಟ ಉಚ್ಚಾರ ಹೊಂದಿದ ಯಕ್ಷಗಾನದ ಭಾಗವತಿಕೆಯೂ ಅರ್ಥಗಾರಿಕೆಯೂ ಕೇಳಲು ಅತ್ಯಂತ ಸೊಗಸು ಎನ್ನಬಹುದು. ಪ್ರಾಯೋಗಿಕವಾಗಿ ಇತ್ತೀಚಿಗಿನ ಹಲವಾರು ಭಾಷೆಗಳಲ್ಲಿ ಉದಾಹರಣೆಗೆ ಮಲಯಾಳಂ, ತುಳು, ಕುಂದಾಪುರ ಕನ್ನಡ, ಕೊಂಕಣಿ ಭಾಷೆಗಳಲ್ಲಿ ಯಕ್ಷಗಾನವು ಪ್ರಯೋಗಗೊಂಡಿದೆ. ಆದರೆ ಕನ್ನಡದಷ್ಟು ಪ್ರಭಾವಶಾಲಿಯಾಗಲಿಲ್ಲ ಎನ್ನುವುದು ವಿಶೇಷ.
ತುಳು ಯಕ್ಷಗಾನಗಳು ಪ್ರಸಿದ್ಧವಾಗಲು ಕಾರಣ ದಕ್ಷಿಣ ಕನ್ನಡದಲ್ಲಿ ಮಾತ್ರ ಚಾಲ್ತಿಯಲ್ಲಿರುವ ತುಳು ಭಾಷೆ. ತುಳು ಭಾಷೆಯಲ್ಲಿ ಪೌರಾಣಿಕವನ್ನು ಬಿಂಬಿಸಲು ಕಷ್ಟವೆನ್ನಬಹುದು. ಆದರೆ ತುಳುನಾಡಿನಲ್ಲಿರುವ ದೈವ ದೇವರು ಕಾರಣಿಕ ಪುರುಷರ ಕತೆಯನ್ನು ಧಾರಾಳವಾಗಿ ತುಳುವಿನಲ್ಲಿ ಬಳಸಿದ್ದಾರೆ. ಉದಾಹರಣೆಗೆ ಕೋಟಿ ಚೆನ್ನಯ, ಕಾಂತಬಾರೆ-ಬೂದಬಾರೆ, ದೇವಪೂಂಜ ಪ್ರತಾಪ, ಸತ್ಯದಪ್ಪೆ ಚೆನ್ನಮ್ಮ ಮುಂತಾದ ಪ್ರಸಂಗಗಳು ಜನಮಾನಸದಲ್ಲಿ ಇಂದಿಗೂ ಹಾಸುಹೊಕ್ಕಾಗಿರುವ ಯಕ್ಷಗಾನ ಕಥಾನಕಗಳು. ಹಾಗೆಯೇ ಸಾಮಾಜಿಕ ಕತೆ ಅಥವಾ ಸಿನಿಮಾ ಕತೆಗಳ ಯಕ್ಷಗಾನ ಪ್ರಸಂಗಗಳು ಮನೋರಂಜನೆಗೆ ಮಾತ್ರ ಸೀಮಿತವಾಗಿದೆಯೇ ವಿನಾ ಯಕ್ಷಗಾನಕ್ಕೇನೂ ಶಾಶ್ವತ ಕೊಡುಗೆಗಳಲ್ಲವೆನ್ನಬಹುದು.
ಯಕ್ಷಗಾನ ಒಂದು ಶ್ರೀಮಂತ ಕಲೆ. ಸಂಪೂರ್ಣ ಕಲೆ. ಅದರಲ್ಲಿ ಶಾಸ್ತ್ರೀಯ, ಲಘು ಸಂಗೀತವಿದೆ. ತಾಳವಿದೆ, ನಾಟ್ಯವಿದೆ, ಮಾತುಗಾರಿಕೆ ಇದೆ, ನವರಸ ಅಭಿನಯ ಇದೆ. ಅಮೋಘ ವೇಷಭೂಷಣಗಳಿವೆ. ಅಷ್ಟೇ ಅಲ್ಲ, ಪಾತ್ರಧಾರಿ, ಅರ್ಥಧಾರಿ, ಎಲ್ಲಾ ಪುರಾಣಗಳ ಅಧ್ಯಯನವನ್ನೂ ಮಾಡಿರುವ ಜ್ಞಾನಿ ಆಗಿರಲೇಬೇಕು! ಹಾಗಾಗಿ ಯಕ್ಷಗಾನಕ್ಕೆ ಅದರದ್ದೇ ಆದ ಮಹತ್ವವಿದೆ ಎಂಬುದು ನಾವು ಯಾವತ್ತೂ ಕಾಣಬಹುದಾದ ಸತ್ಯ.
ಅನಿಸಿಕೆ ಮತ್ತು ಅಭಿಪ್ರಾಯ : ಖ್ಯಾತ ಸಿನಿಮಾ ಸಂಗೀತ ನಿರ್ದೇಶಕ ವಿ. ಮನೋಹರ್
ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ ಇವರು ಆಯೋಜಿಸುತ್ತಿರುವ ತಾಳಮದ್ದಳೆ ಸಪ್ತಾಹದ ಕೊನೆಯ ತಾಳಮದ್ದಳೆ ಇಂದು ಶುಕ್ರವಾರ, 18.06.2021ರಂದು ರಾತ್ರಿ 7ರಿಂದ 9.30ರ ವರೆಗೆ ನಡೆಯಲಿದೆ. ನೇರಪ್ರಸಾರ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿದೆ. ನೇರಪ್ರಸಾರದ ಲಿಂಕ್ ಕೆಳಗಡೆ ಇದೆ.
ನಿನ್ನೆ ಗಂಗಾನದಿಯಲ್ಲಿ ತೇಲಿಬಂದ ಪೆಟ್ಟಿಗೆಯಲ್ಲಿ ನವಜಾತ ಶಿಶು ಪತ್ತೆಯಾಗಿದೆ. ಸ್ಥಳೀಯ ಮೀನುಗಾರನೋರ್ವ ತೇಲಿಹೋಗುತ್ತಿದ್ದ ಪೆಟ್ಟಿಗೆಯನ್ನು ಹಿಡಿದು ದಡಕ್ಕೆ ತಂದು ನೋಡಿದಾಗ ಅಚ್ಚರಿ ಕಾದಿತ್ತು. ಪೆಟ್ಟಿಗೆಯೊಳಗೆ 21 ದಿನಗಳ ಪ್ರಾಯದ ಹೆಣ್ಣುಮಗುವೊಂದಿತ್ತು. ಮಗುವಿನ ಜೊತೆಗೆ ಆ ಪೆಟ್ಟಿಗೆಯಲ್ಲಿ ಮಗುವಿನ ಜಾತಕ ಮತ್ತು 'ಗಂಗಾ ಮಗಳು' ಎಂಬ ಬರಹದ ಚೀಟಿಯೂ ಪತ್ತೆಯಾಗಿದೆ.
ಗಂಗಾಪುರದ ದಾದ್ರಿ ಘಾಟ್‌ನ ಉದ್ದಕ್ಕೂ ಗಂಗಾ ನದಿಯಲ್ಲಿ ತೇಲುತ್ತಿರುವ ಮರದ ಪೆಟ್ಟಿಗೆಯಲ್ಲಿದ್ದ ನವಜಾತ ಶಿಶುವನ್ನು ಸ್ಥಳೀಯ ದೋಣಿಗಾರ ಗುಲ್ಲು ಚೌಧರಿ ಪತ್ತೆ ಹಚ್ಚಿದ್ದು, ಬಾಲಕಿಯನ್ನು ಮನೆಗೆ ಕರೆದೊಯ್ದಿದ್ದಾನೆ. ಮಗುವಿನ ಹೊರತಾಗಿ, ಪೆಟ್ಟಿಗೆಯಲ್ಲಿ ದುರ್ಗಾ ದೇವಿಯ ಚಿತ್ರ, ಜಾತಕ ಮತ್ತು ಧೂಪದ್ರವ್ಯದ ತುಂಡುಗಳಿವೆ. ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದ ನಂತರ ಮಗುವನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಎಂ ಯೋಗಿ ಆದಿತ್ಯನಾಥ್ ದೋಣಿಗಾರನನ್ನು ಹೊಗಳಿದರು ಮತ್ತು ಮಗುವನ್ನು ಬೆಳೆಸಲು ಸರ್ಕಾರ ವ್ಯವಸ್ಥೆ ಮಾಡುತ್ತದೆ ಎಂದು ಹೇಳಿದರು.
ಸ್ಥಳೀಯ ದೋಣಿಗಾರ ಗುಲ್ಲು ಚೌಧರಿ ಇದು ಗಂಗಾ ನದಿಯಿಂದ ಉಡುಗೊರೆಯಾಗಿರುವುದರಿಂದ ಮಗುವನ್ನು ಬೆಳೆಸಲು ಬಯಸಿದೆ ಎಂದು ಹೇಳುತ್ತಾರೆ. ಶಿಶುವನ್ನು ಹೊತ್ತೊಯ್ಯುವ ಪೆಟ್ಟಿಗೆಯಲ್ಲಿ ದೇವರು ಮತ್ತು ದೇವತೆಗಳ ಚಿತ್ರಗಳಿವೆ ಮತ್ತು ಶಿಶುವಿನ ಜಾತಕವನ್ನು ಸಹ ಒಳಗೊಂಡಿತ್ತು ಎಂದು ದೋಣಿಗಾರ ಹೇಳಿದರು, ಹೆಣ್ಣು ಮಗುವನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಶಿಶು ವೈದ್ಯಕೀಯ ಪರೀಕ್ಷೆಯನ್ನು ನಡೆಸಲಿದ್ದು, ಪೋಷಕರನ್ನು ಹುಡುಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೋಣಿಗಾರನನ್ನು ಹೊಗಳಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಗುವನ್ನು ಬೆಳೆಸಲು ತಮ್ಮ ಸರ್ಕಾರ ವ್ಯವಸ್ಥೆ ಮಾಡಲಿದೆ ಎಂದು ಹೇಳಿದರು. ಈ ಘಟನೆಯು ನಮಗೆ ಮಹಾಭಾರತವನ್ನು ನೆನಪಿಸುತ್ತದೆ - ವೀಡಿಯೋ ನೋಡಿ
ಯಕ್ಷಗಾನದ ಹಳೆಯ ತಲೆಮಾರಿನವರಾದ ಅಣ್ಣಿ ಭಾಗವತರು, ಶಿವ ಮದ್ಲೆಗಾರರು ಮೊದಲಾದ ಪ್ರಸಿದ್ಧ ಯಕ್ಷಗಾನ ದಿಗ್ಗಜಗಳು ಜನಿಸಿದ ಪರಂಪರೆಯಲ್ಲಿಯೇ ರೂಪುಗೊಂಡ ಮಧೂರು ನಾರಾಯಣ ಹಾಸ್ಯಗಾರರು ಜನಮನದಲ್ಲಿ ಇಂದಿಗೂ ಒಂದು ವಿಶಿಷ್ಟವಾದ ಸ್ಥಾನವನ್ನು ಪಡೆದಿದ್ದಾರೆ. ಮಧೂರಿನ ಸುಬ್ಬರಾವ್-ರುಕ್ಮಿಣಿ ದಂಪತಿಗಳಿಗೆ ಸುಮಾರು 1908ನೇ ಇಸವಿಯಲ್ಲಿ ಜನಿಸಿದ ನಾರಾಯಣ ಹಾಸ್ಯಗಾರರು ಯಕ್ಷಗಾನ ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಪ್ರಾಥಮಿಕ ವಿದ್ಯಾಭ್ಯಾಸವನ್ನಷ್ಟೆ ಪಡೆದ ಇವರು ತಮ್ಮ ಸ್ವಸಾಮರ್ಥ್ಯದಿಂದ ಯಕ್ಷಗಾನದ ಕಥಾಮೃತಗಳನ್ನು ಮನನ ಮಾಡಿಕೊಂಡಿದ್ದರು.
ಯಕ್ಷಗಾನದ ಬಾಂದಳದಲ್ಲಿ ಮಿನುಗಿದ ಹಾಸ್ಯ ಪ್ರತಿಭೆಗಳು ಹಲವು. ಆದರೆ ಇದರಲ್ಲಿ ಧ್ರುವತಾರೆಯಂತೆ ಮಿನುಗುವ ಸಿದ್ಧಿ ಪಡೆದವರು ಬೆರಳೆಣಿಕೆಯ ಮಂದಿ. ಈ ದಿಶೆಯಲ್ಲಿ ಪರಂಪರೆಯ ಪರಿವೃತ್ತವನ್ನು ಮೀರದೆ ಮಿತಿಯರಿತು ಚತುರ ಮಾತುಗಳಿಂದಲೂ ಬಣ್ಣ, ವಿನ್ಯಾಸ, ನಾಟ್ಯ ಭಾವಾಭಿವ್ಯಕ್ತಿಗಳಿಂದಲೂ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುವ ಕಲೆಯಲ್ಲಿ ನಾರಾಯಣ ಹಾಸ್ಯಗಾರರು ಪರಿಣತರು. ನಗುವುದು ಸ್ವಾಭಾವಿಕವಲ್ಲದ ಈ ಯುಗದಲ್ಲಿ ಅನ್ಯರನ್ನು ನಗಿಸುವ ಕಲೆ ಸಿದ್ಧಿಸುವುದು ವಿರಳ. ನಕ್ಕು ನಗಿಸುವ ಕಲೆಗಿಂತ ತಾನು ನಗದೆ ಇತರರನ್ನು ನಗಿಸುವ ಕಲೆ ಸಂಜೀವಿನಿ ಇದ್ದ ಹಾಗೆ.
ಈಗಿನ ಕೆಲ ಹಾಸ್ಯಗಾರರು ತಮ್ಮ ಕೀಳ್ತರಗತಿಯ ಹಾಸ್ಯದಿಂದ ದ್ವಂದ್ವಾರ್ಥ ಮಾತುಗಳಿಂದ ಜನರನ್ನು ನಗಿಸುವುದನ್ನು ನಾವು ಕಂಡಿದ್ದೇವೆ. ಆದರೆ ಕೇವಲ ಪಾತ್ರಚಿತ್ರಣದಿಂದ ಸ್ವಾಭಾವಿಕವಾಗಿ ನಗೆಗಡಲಲ್ಲಿ ತೇಲಿಸುವ ಕಲೆ ಸಿದ್ಧಿಸಬೇಕಾದರೆ ಅದನ್ನು ಹುಟ್ಟಿನಿಂದಲೇ ರೂಢಿಸಿಕೊಳ್ಳಬೇಕು. ಹಾಸ್ಯಗಾರರು ಯಕ್ಷಗಾನದ ಹಲವು ಸ್ತರಗಳಲ್ಲಿ ದುಡಿದವರು. ಮೇಳದ ಯಜಮಾನನಾಗಿ, ಅನಿವಾರ್ಯ ಸಂದರ್ಭಗಳಲ್ಲಿ ಭಾಗವತರಾಗಿ ಮದ್ದಳೆಗಾರನಾಗಿ, ಪಾತ್ರಧಾರಿಯಾಗಿ, ಹೀಗೆ ವಿಭಿನ್ನ ಕಾರ್ಯವನ್ನು ಕೌಶಲದಿಂದ ನಡೆಸುವ ಕಲೆ ಅವರಿಗೆ ಸಿದ್ಧಿಸಿತ್ತು.
ಚತುರನಾದ ಶಿಲ್ಪಿಯ ಕೈಯಲ್ಲಿ ಸಿಕ್ಕಿದ ಕಲ್ಲು ಸುಂದರ ಮೂರ್ತಿಯಾಗಿ ರೂಪುಗೊಳ್ಳುವಂತೆ ಶ್ರೀಯುತರು ನಿರ್ವಹಿಸಿದಂತಹ ಹತ್ತು ಹಲವು ಪಾತ್ರಗಳು ಜನಮನದಲ್ಲಿ ಇಂದಿಗೂ ರಾರಾಜಿಸುತ್ತವೆ. ಇವರು ನಿರ್ವಹಿಸಿದ ಗಿರಿಜಾ ಕಲ್ಯಾಣದ ಬೈರಾಗಿಯಿರಲಿ, ಉತ್ತರನ ಪೌರುಷದ ಉತ್ತರ ಕುಮಾರನ ಪಾತ್ರವಿರಲಿ, ಅದರಲ್ಲಿ ಅವರದೇ ಆದ ಛಾಪನ್ನು ಒತ್ತಿದ್ದರು ಹಾಗೂ ಜನಮನವನ್ನು ಸೂರೆಗೊಂಡಿದ್ದರು. ಪುಂಡುವೇಷದಿಂದ ಹಿಡಿದು ಬಣ್ಣದ ವೇಷದ ವರೇಗಿನ ಯಾವುದೇ ಪಾತ್ರವನ್ನು ಲೀಲಾಜಾಲವಾಗಿ ಅಭಿನಯಿಸುವ ಇವರ ಅಭಿನಯಕಲೆ ಎಲ್ಲರನ್ನೂ ಸ್ಥಂಭೀಭೂತರನ್ನಾಗಿ ಮಾಡುತ್ತದೆ.
ಬರಿಯ ಮಾತಿನಿಂದಲ್ಲ ಹಾವಭಾವಗಳಿಂದ, ಬಣ್ಣ ವಿನ್ಯಾಸದಿಂದ ಇವರು ಪಾತ್ರಗಳಿಗೆ ಜೀವವನ್ನು ತುಂಬುತ್ತಿದ್ದರು. ಯಕ್ಷಗಾನದಲ್ಲಿ ಸಾಮಾನ್ಯವಾಗಿ ಹಾಸ್ಯಗಾರರು ಮಾಡುವ ಪಾತ್ರಗಳು ಕೆಲವು. ಆದರೆ ನಾರಾಯಣ ಹಾಸ್ಯಗಾರರು ಮಾಡುತ್ತಿದ್ದ ಪಾತ್ರಗಳು ಹಲವು. ದೇವಿಮಹಾತ್ಮೆಯಲ್ಲಿ ಮಾಡಾಂಗಾಯಿ ಕೃಷ್ಣ ಭಟ್ಟರು ಹಾಗೂ ನಾರಾಯಣ ಹಾಸ್ಯಗಾರರ ಚಂಡ-ಮುಂಡರ ಪಾತ್ರಾಭಿನಯ ಪ್ರಸಿದ್ಧಿಯನ್ನು ಪಡೆದಿತ್ತು. ಅದೇ ರೀತಿ ಶ್ರೀರಾಮ ಪಟ್ಟಾಭಿಷೇಕ ದಲ್ಲಿ ಮಂಥರೆಯಾಗಿ ಅಭಿನಯಿಸುವಾಗ “ನಾಳೆ ರಾಮಚಂದ್ರನಿಗೆ ಅಭಿಷೇಕವಂತೆ’’ ಎಂಬ ಪದ್ಯದ ಕೊನೆಯವರೇಗೂ ಅದನ್ನು ಆಲಿಸಿ ಕೇಳುವ ಭಂಗಿ ಮುಖದ ಅಭಿನಯ, ಕೈಕೆಯಲ್ಲಿಗೆ ಬರುವ, ಬಂದು ಮಾತಾಡುವ ದೃಶ್ಯ ಅನ್ಯಾದೃಶ.
ಗುಹನ ಪಾತ್ರದಲ್ಲಿ ಬಣ್ಣಗಳಿಂದ ಮೈಯೆಲ್ಲಾ ಶ್ರೀರಾಮ, ರಘುರಾಮ, ಜಯರಾಮ, ಸೀತಾರಾಮ ಮುಂತಾದ ರಾಮನ ಹೆಸರನ್ನು ಬರೆದು ರಂಗಸ್ಥಳಕ್ಕೆ ಬರುವ ದೃಶ್ಯ ನೋಡಲು ಬಲು ಸುಂದರವಾಗಿತ್ತಂತೆ. ಶ್ವೇತಕುಮಾರ ಚರಿತ್ರೆಯಲ್ಲಿನ ಪ್ರೇತದ ಪಾತ್ರವನ್ನು ತನ್ನ ಬಣ್ಣಗಾರಿಕೆಯ ವಿನ್ಯಾಸದಿಂದ ಬಲು ಸೊಗಸಾಗಿ ಅಭಿನಯಿಸುತ್ತಿದ್ದರು. ಇವರ ಒಡನಾಡಿಗಳಾಗಿ ಅಳಕೆ ರಾಮಯ್ಯ ರೈ, ಅಳಕೆ ಮಾದಪ್ಪ ಶೆಟ್ಟಿ, ಕೂಡ್ಲು ದೂಮ ಪ್ಪ, ಸುಬ್ಬಯ್ಯ ಶೆಟ್ಟಿ (ವಾಲಿಖ್ಯಾತಿ) ಮಾಡಾಂಗಾಯಿ ಕೃಷ್ಣ ಭಟ್ಟರು, ಶೇಣಿ, ಸಾಮಗರೂ ಇದ್ದರು. ಇವರ ತಮ್ಮ ಮಧೂರು ಗಣಪತಿ ರಾವ್ ಕೂಡಾ ಪ್ರಸಿದ್ಧ ಕಲಾವಿದರಾಗಲು ಪಳಗಿದ್ದು ಅಣ್ಣನ ಗರಡಿಯಲ್ಲೆ. 1973ರಲ್ಲಿ ತಮ್ಮ ಸ್ವಲ್ಪ ಸಮಯದ ಅಸೌಖ್ಯದಿಂದ ಇವರು ತಮ್ಮ ಕಲಾಯಾತ್ರೆಯನ್ನು ಮುಗಿಸಿದರು. ು
ಮಾನವ ಉದ್ಯೋಗ ನಿಮಿತ್ತನಾಗಿದ್ದರೆ ಆತನ ಕರ್ತವ್ಯದಲ್ಲಿ ನಿರತನಾಗಿದ್ದು ಇತರ ಯಾವುದೇ ಕೆಲಸಗಳಿಗೆ ಸಮಯವಿಲ್ಲ ಎನ್ನುವವರೇ ಹೆಚ್ಚು. ಇಂದಿನ ಒತ್ತಡದ ಜೀವನದ ನಡುವೆ ಹವ್ಯಾಸಕ್ಕಾಗಿ ಯಾವುದಾದರೂ ಕಲೆಯನ್ನು ಅಸ್ವಾದಿಸುವುದರಲ್ಲಿ ಅಥವಾ ಕಲಾವಿದನಾಗುವುದರಲ್ಲಿ ತಲ್ಲೀನರಾಗುತ್ತಿರುವವರ ಸಂಖ್ಯೆ ಬಹಳ ವಿರಳ. ಸಂಗೀತ, ಯಕ್ಷಗಾನ, ಹರಿಕಥೆಗಳಂತಹ ಕಲೆಗಳಲ್ಲಿ ತೊಡಗಿಕೊಳ್ಳುವವರು ಹಾಗೂ ಸಹೃದಯ ಕಲಾಸಕ್ತರೂ ಕಡಿಮೆಯಾಗುವುದನ್ನು ಕಾರ್ಯಕ್ರಮಗಳಲ್ಲಿ ಕಾಣುತ್ತಿದ್ದೇವೆ. ಇಂದಿನ ಎಲೆಕ್ಟ್ರಾನಿಕ್ ಯುಗದ ಆಧುನಿಕ ಜಗತ್ತಿನಲ್ಲಿ ಮನಸೆಳೆಯುವ ಅನೇಕ ಇತರೆ ಮಾಧ್ಯಮಗಳಾದ ಟಿ.ವಿ., ಮೊಬೈಲು, ವಾಟ್ಸಾಪ್, ಇಂಟರ್‍ನೆಟ್‍ಗಳ ಪರಿಣಾಮ ಇತರ ಹವ್ಯಾಸಗಳಲ್ಲಿ ತೊಡಗಿಕೊಳ್ಳುವವರ ಸಂಖ್ಯೆ ಕಡಿಮೆಯಾಗಲು ಕಾರಣವಿರಲೂಬಹುದು. ಆದರೆ ಇದಕ್ಕಿಂತ ಭಿನ್ನವಾಗಿ ಇಲ್ಲೊಬ್ಬರು ಒಂದು ವಿಶೇಷ ಹವ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರೇ ಶ್ರೀಯುತ ಶಿಮ್ಲಡ್ಕ ಗೋಪಾಲಕೃಷ್ಣ ಭಟ್ಟರು.
ಮೂಲತಃ ಕೃಷಿಕರಾಗಿದ್ದ ಇವರು ಡಾಬರ್‍ಮನ್, ಬಾಕ್ಸರ್, ಆಲ್ಸೇಶಿಯನ್ ತಳಿಯ ನಾಯಿಗಳ ಸಾಕುವಿಕೆ ಹಾಗೂ ಅವುಗಳನ್ನು ತರಬೇತುಗೊಳಿಸುವುದರಲ್ಲೂ ತೊಡಗಿಸಿ ಕೊಂಡಿದ್ದವರು. ಅನೇಕ ಪ್ರದರ್ಶನಗಳಲ್ಲಿ ಇವರು ಸಾಕಿದ ನಾಯಿಗಳು ಬಹುಮಾನಗಳನ್ನೂ ಪಡೆದಿವೆ.
ಅಷ್ಟು ಮಾತ್ರವಲ್ಲದೆ ಯಕ್ಷಗಾನ ಕಲಾವಿದರೂ ಆಗಿರುವ ಇವರು ಹಲವು ತಾಳಮದ್ದಲೆ ಕೂಟಗಳಲ್ಲಿ ಅರ್ಥಗಾರಿಕೆಯನ್ನು ಮಾಡಿದ ಅನುಭವವನ್ನೂ ಹೊಂದಿದ್ದಾರೆ. ಇವರ ತಂದೆ ದಿ. ಶಿಮ್ಲಡ್ಕ ಶಂಭಟ್ಟರು ಖ್ಯಾತ ಅರ್ಥಧಾರಿ ಗಳಾಗಿದ್ದು, 50-60ರ ದಶಕದಲ್ಲಿ ರಾಕ್ಷಸ ಹಾಗೂ ಗಂಭೀರ ಪಾತ್ರಗಳ ಮೂಲಕ ಹೆಸರುವಾಸಿಯಾಗಿದ್ದವರು.
ಪ್ರಸ್ತುತ ಶ್ರೀ ಗೋಪಾಲಕೃಷ್ಣ ಭಟ್ಟರು ತಮ್ಮ 77ರ ಇಳಿವಯಸ್ಸಿನಲ್ಲಿ ಒಂದು ಉತ್ತಮ ಹವ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅದುವೇ ಚೆಂಡೆ ವಾದನದ ಕೋಲುಗಳ ತಯಾರಿಕೆ. ಇದು ಯಕ್ಷಲೋಕಕ್ಕೆ ಇವರ ಕೊಡುಗೆ ಎಂದರೂ ತಪ್ಪಾಗಲಾರದು. ಇದರೊಂದಿಗೆ ಜಾಗಟೆ ಕೋಲುಗಳನ್ನೂ ಇವರು ತಯಾರಿಸುತ್ತಿದ್ದಾರೆ. ಇಷ್ಟೇ ಆದರೆ ಇದರಲ್ಲೇನು ವಿಶೇಷ ಎಂಬ ಭಾವ ಮೂಡಲೂಬಹುದು. ಆದರೆ ಇವರು ಈ ಕೋಲುಗಳನ್ನು ತಯಾರಿಸುತ್ತಿರುವುದು ಯಂತ್ರಗಳ ಸಹಾಯವಿಲ್ಲದೆ ಕೈಯಿಂದಲೇ ಎನ್ನುವುದು ಇವರ ವಿಶೇಷತೆ; ಅಂದರೆ ಕತ್ತಿ, ಚೂರಿ ಹಾಗೂ ಪಾಲಿಷ್ ಪೇಪರ್‍ಗಳನ್ನು ಬಳಸಿ ಈ ಕೋಲುಗಳನ್ನು ತಯಾರಿಸುತ್ತಿರುವ ಇವರು ತಮ್ಮ ಬಿಡುವಿನ ಸಮಯದಲ್ಲಿ ಅತ್ಯಂತ ತಾಳ್ಮೆ ಹಾಗೂ ಶ್ರದ್ಧೆಯಿಂದ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ.
ಕೋಲುಗಳನ್ನು ತಯಾರಿಸಲು ದಾಸವಾಳ, ಪೇರಳೆ, ರೆಂಜೆ, ಅಕೇಶಿಯಾ, ಮಂದಾರ, ಹಲಸು ಮುಂತಾದವುಗಳ ರೆಂಬೆಗಳನ್ನು ಆಯ್ದು ಅದನ್ನು ಬೇಕಾದ ಆಕಾರಕ್ಕೆ ಕತ್ತರಿಸುತ್ತಾರೆ. ನಂತರ ಅದನ್ನು ನಯ ಹಾಗೂ ನುಣುಪಾಗಿಸಲು ಇವರಿಗೆ ಕನಿಷ್ಠ 7-8 ತಾಸುಗಳೇ ಬೇಕಾಗುತ್ತವೆ.
ಅಳಿಯ ಚೆಂಡೆ ತರಗತಿಗೆ ಹೋಗಲು ಪ್ರಾರಂಭಿಸಿದಾಗ ಇಟ್ಟ ಬೇಡಿಕೆಯಂತೆ ಚೆಂಡೆ ವಾದನದ ಕೋಲುಗಳ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರು ಕಲಾವಿದರ ಬೇಡಿಕೆಗೆ ಅನುಗುಣವಾಗಿ ಅದರಲ್ಲೂ ಚೆಂಡೆಯನ್ನು ಕಲಿಯುವವರಿಗಾಗಿ 9 ಇಂಚು, 12 ಇಂಚು ಉದ್ದದ ಕೋಲುಗಳನ್ನು ತಯಾರಿಸಿ ಕೊಡುತ್ತಿದ್ದಾರೆ. ಹಿಂದೊಮ್ಮೆ ಖ್ಯಾತ ಯಕ್ಷಗಾನ ಚೆಂಡೆವಾದಕರಲ್ಲೊಬ್ಬರಾದ ದಿ. ಕುದ್ರೆಕೂಡ್ಲು ರಾಮಭಟ್ಟರು ದಾಸವಾಳದ ರೆಂಬೆಯ ಕೋಲುಗಳಿಂದ ತಯಾರಿಸಲಾದ ಕೋಲುಗಳು ಹಗುರವಾಗಿದ್ದು ಚೆಂಡೆ ಬಾರಿಸಲು, ಉರುಳಿಕೆಗಳ ಮೂಲಕ ತಾಳ ಲಯಗಳನ್ನು ಕಂಡುಕೊಳ್ಳಲು ಸೂಕ್ತವಾಗಿವೆ ಎಂದು ಹೇಳಿದ ಮಾತುಗಳನ್ನು ಆಧರಿಸಿ ತಯಾರಿಕೆಯ ಕಾಯಕದಲ್ಲಿ ತೊಡಗಿಸಿಕೊಂಡ ಇವರು ಇಂದು ಸುಮಾರು 40-50 ಜೊತೆ ಕೋಲುಗಳನ್ನು ತಯಾರುಮಾಡಿ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಈ ಕೋಲುಗಳಿಗೆ 300ರಿಂದ 400 ರೂಪಾಯಿ ಕ್ರಯ ಹೇಳುವ ಇವರಿಗೆ ಈ ಕೋಲುಗಳ ಮೂಲಕ ಸಂಪಾದನೆ ಬಹಳವಿಲ್ಲ. ಈ ಮೌಲ್ಯ ತನ್ನ ಸಂತೋಷಕ್ಕಾಗಿ ಈ ಕಾಯಕದಲ್ಲಿ ತೊಡಗಿಕೊಂಡಿರುವ ಇವರ ತಯಾರಿಕೆಗೆ ಸಲ್ಲುವ ಗೌರವಧನವೇ ಹೊರತು ಶ್ರಮಕ್ಕೆ ತಕ್ಕ ಮೌಲ್ಯವಲ್ಲ.
ಪ್ರಸ್ತುತ ವಿಟ್ಲದ ಬಸವಗುಡಿಯ ಸಮೀಪ ನೆಲೆಸಿರುವ ಶ್ರೀಯುತರದು ಪತ್ನಿ ಶ್ರೀಮತಿ ಸುಶೀಲ, ಮಗಳು ಮೈತ್ರಿ ಭಟ್ಟ, ಅಳಿಯ ಶ್ರೀ ರವಿಶಂಕರ ಕುಳಮರ್ವ ಹಾಗೂ ಮೊಮ್ಮಕ್ಕಳಾದ ಮಹಿಮಾ ಮತ್ತು ಮನಸ್ವಿಯವರೊಂದಿಗೆ ಸಂತೃಪ್ತ ಜೀವನ. ಕಲಾವಿದರ ಸಲಹೆ ಸೂಚನೆಗಳನ್ನು ಸ್ವೀಕರಿಸಿ ಅವುಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುವ ಇವರು ಲಭ್ಯವಿದ್ದರೆ ನೀಲಗಿರಿ ಮರದ ಕೋಲನ್ನೂ ತಯಾರಿಸಬಹುದು ಎನ್ನುತ್ತಿದ್ದು, ಈಗಲೂ ಕೆಲವೊಮ್ಮೆ ತಾಳಮದ್ದಳೆ ಅರ್ಥಧಾರಿಯಾಗಿ ಭಾಗವಹಿಸುತ್ತಿದ್ದಾರೆ. ಕೃಷಿಕರಾಗಿದ್ದಾಗ ಬೆಳ್ತಂಗಡಿ, ಗುರುವಾಯನಕೆರೆ, ನಾಳ ಸುತ್ತಮುತ್ತ ಬಿಡುವಿಲ್ಲದ ಅರ್ಥಧಾರಿಯಾಗಿದ್ದ ಇವರು ಪ್ರಸ್ತುತ ಚೆಂಡೆಕೋಲು ತಯಾರಿಕೆಯ ಮೂಲಕ ಯಕ್ಷಮಾತೆಗೆ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇಂತಹ ಅಪರೂಪದ ಕಾಯಕದಲ್ಲಿ ತೊಡಗಿ ಕೊಂಡಿರುವ ಶ್ರೀಯುತರ ಈ ಸೇವೆ ಯಕ್ಷಮಾತೆಯ ಮಕುಟಮಣಿಯಾಗಲಿ ಎಂದು ಹಾರೈಸೋಣ…. (ಸಂಪರ್ಕಕ್ಕಾಗಿ : 9483286958)