Saturday, March 14, 2026
Home Blog Page 311

ಮದ್ದಲೆಯ ನಾದ ಶಂಕರ

ರಂಗಸ್ಥಳಕ್ಕೆ ಪ್ರಮುಖ ಸ್ತ್ರೀ ವೇಷದ ಆಗಮನ ಆಗಷ್ಟೇ ಆಗಿದೆ. ಸುಲಲಿತವಾಗಿ ಹಾವಭಾವಕ್ಕೆ ತಕ್ಕಂತೆ ವೇಷಧಾರಿ ನರ್ತಿಸುತ್ತಿದ್ದಾರೆ. ಸುಂದರ ವಾದ ಪದ್ಯಕ್ಕೆ ತಕ್ಕುದಾದ ನರ್ತನ. ಕುಳಿತ ಜನಸ್ತೋಮ ಅದರೊಳಗೇ ತಲ್ಲೀನವಾಗಿ ಅದರ ಸವಿ ಆಸ್ವಾದಿಸುತ್ತಿದ್ದಾರೆ. ಭಾಗವತರ ಗಾಯನ. ವೇಷಧಾರಿಯ ನೃತ್ಯ. ಮತ್ತು ಅದಕ್ಕಿಂತ ಹೆಚ್ಚಾಗಿ ತಾಳಗಳ ಬೋಲ್‍ಗಳು ಸ್ಪಷ್ಟವಾಗಿ ಮತ್ತು ಅತ್ಯಂತ ಮಧುರವಾಗಿ ಮೂಡಿ ಬರುತ್ತಿರುವ ಮದ್ದಲೆಯ ನಾದವನ್ನು ಜನ ಕಿವಿದುಂಬಿಕೊಂಡು ವಾಹ್ ವಾಹ್ ಎನ್ನುತ್ತ ತಮ್ಮ ಹೃತ್ಕರ್ಣಗಳನ್ನೂ ತೆರೆದುಕೊಳ್ಳುತ್ತ ಕರತಾಡನ ಮಾಡುತ್ತಿದ್ದಾರೆ.


ಅದೆಲ್ಲದರ ಪರಿವೆಗೆ ಹೋಗದೆ ತನ್ನಷ್ಟಕ್ಕೆ ತಾನು ಮದ್ದಲೆಯ ಝೇಂಕಾರದಲಿ, ವಾದನದ ನಿರಂತರತೆ ಮತ್ತು ನೃತ್ಯದ ಹೆಜ್ಜೆ, ಶೈಲಿ, ನರ್ತನಕ್ಕೆ ಬೇಕಾಗುವ ಗತ್ತುಗಳನ್ನು ಗಮನಿಸುತ್ತ ತಲ್ಲೀನತೆಯಲಿ ಆ ಹಿರಿಯರು ಬೆರೆತಿದ್ದಾರೆ. ಅವರ ಆ ಶಿಸ್ತು ಯಾರಿಗಾದರೂ ಒಂದು ಬಗೆಯ ಉತ್ಸಾಹ ಮೂಡಿಸುವಂತಿದೆ. ಅವರೇ ಶಿಸ್ತು ಮುಡಿಯ `ನಾದ ಶಂಕರ’ ಶಂಕರ ಭಾಗವತರು. ಭಾಗವತರೆಂದರೆ ಹಾಡುವವರಲ್ಲ ಇವರದು ಮದ್ದಲೆಯ ಜೊತೆಗಿನ ಯಾನ…


ಶಂಕರ ಭಾಗವತರ ಹೆಸರು ಯಕ್ಷಗಾನ ಕ್ಷೇತ್ರದಲ್ಲಿ ಚಿರಪರಿಚಿತ. ತಮ್ಮ ಅದ್ಭುತ ಮದ್ದಲೆ ವಾದನದ ಮೂಲಕವೇ ತಮ್ಮನ್ನು ತಾವು ಗುರುತಿಸಿ ಕೊಂಡವರು. ಯಲ್ಲಾಪುರ ತಾಲೂಕಿನ ಶಿಸ್ತುಮುಡಿ ಗ್ರಾಮದಲ್ಲಿ ರಾಮಚಂದ್ರ ಭಾಗವತ ಹಾಗೂ ಕಮಲಾ ಭಾಗವತರ ಹಿರಿಯ ಮಗನಾಗಿ 1955ರಲ್ಲಿ ಜನಿಸಿದವರು ಶಂಕರ ಭಾಗವತರು. 7ನೇ ತರಗತಿಯ ವರೆಗೆ ಪ್ರಾಥಮಿಕ ಶಿಕ್ಷಣ ಪೂರೈಸುತ್ತಿರುವಂತೆಯೇ ಯಕ್ಷಗಾನದತ್ತ ಆಕರ್ಷಿತರಾದರು. ದುರ್ಗಪ್ಪ ಗುಡಿಗಾರ ಹಾಗೂ ತಿಮ್ಮಪ್ಪ ನಾಯ್ಕರಲ್ಲಿ ಉಡುಪಿಯ ಹಂಗಾರಕಟ್ಟೆ ಯಕ್ಷಗಾನ ಶಾಲೆಯಲ್ಲಿ ಮದ್ದಲೆ ಅಭ್ಯಾಸ ಮಾಡಿದರು. ಸಾಲಿಗ್ರಾಮ, ಅಮೃತೇಶ್ವರಿ ಮೇಳಗಳಲ್ಲಿ ಹೆಸರಾಂತ ಭಾಗವತರಾದ ಪ್ರಾಚಾರ್ಯ ನಾರ್ಣಪ್ಪ ಉಪ್ಪೂರರಿಗೆ, ಕಾಳಿಂಗ ನಾವುಡರಿಗೆ ಬಹಳಷ್ಟು ವರ್ಷ ಮದ್ದಲೆ ವಾದನದ ಸಾಥ್ ನೀಡಿದ ಅಪಾರ ಅನುಭವ ಉಳ್ಳವರು.


ಮರವಂತೆ ನರಸಿಂಹ ದಾಸರು, ಕಡತೋಕಾ ಮಂಜುನಾಥ ಭಾಗವತರು, ನೆಬ್ಬೂರು ನಾರಾಯಣ ಭಾಗವತರು, ಸುಬ್ರಹ್ಮಣ್ಯ ಧಾರೇಶ್ವರ ಭಾಗವತರು, ವಿದ್ವಾನ್ ಗಣಪತಿ ಭಟ್ಟರು, ಕೊಳಗಿ ಕೇಶವ ಹೆಗಡೆ ಭಾಗವತರು, ಅಲ್ಲದೇ ಇಂದು ಪ್ರಚಲಿತರಾಗಿರುವ ಬಹುತೇಕ ಎಲ್ಲಾ ಭಾಗವತರೊಂದಿಗೆ ತಮ್ಮ ವಾದನ ಸಹಕಾರವನ್ನು ನೀಡುತ್ತಿರುವ ಕಲಾವಿದರಿವರು. 40ಕ್ಕೂ ಮಿಕ್ಕಿದ ವರ್ಷಗಳ ಅನುಭವ ಈ ಯಕ್ಷ ರಂಗದಲ್ಲಿ ಇದೆ. ಜಿ.ಆರ್. ಹೆಗಡೆಯವರಲ್ಲಿ ತಬಲಾ ವಾದನವನ್ನೂ ಅಭ್ಯಾಸ ಮಾಡಿ ಅದರಲ್ಲಿಯೂ ಅನುಭವ ಗಳಿಸಿದ್ದಾರೆ.


ಯಕ್ಷಗಾನ ರಂಗದ ಹೆಸರಾಂತ ಕಲಾವಿದರಾದ ಕೆರೆಮನೆ ಶಿವರಾಮ ಹೆಗಡೆ, ಮೂರೂರು ದೇವರು ಹೆಗಡೆ, ಗುರು ವೀರಭದ್ರ ನಾಯಕ, ಪಿ. ವಿ. ಹಾಸ್ಯಗಾರ, ಶಂಭು ಹೆಗಡೆ ಕೆರೆಮನೆ, ಅನಂತ ಹೆಗಡೆ ಕೊಳಗಿ, ವೆಂಕಟೇಶ ರಾವ್ ಜಲವಳ್ಳಿ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಶ್ರೀಪಾದ ಹೆಗಡೆ ಹಡಿನಬಾಳ, ರಾಮಚಂದ್ರ ಹೆಗಡೆ ಕೊಂಡದಕುಳಿ, ಕೃಷ್ಣ ಯಾಜಿ ಬಳ್ಕೂರು, ಒಬ್ಬರೆ ಇಬ್ಬರೆ ಇಂದು ಯಕ್ಷಗಾನ ರಂಗದಲ್ಲಿ ಮಿಂಚು ತ್ತಿರುವ ಹಿರಿ ಕಿರಿಯ ಕಲಾವಿದರೆಲ್ಲರಿಗೆ ಮದ್ದಲೆ ನುಡಿಸಿದ್ದಾರೆ, ಕುಣಿಸಿದ್ದಾರೆ ಕುಣಿಸುತ್ತಿದ್ದಾರೆ.


ಇದೀಗ ವೃತ್ತಿ ಮೇಳದಿಂದ ನಿವೃತ್ತಿ ಪಡೆದಿದ್ದರೂ ಯಕ್ಷಗಾನದಲ್ಲಿ ಮದ್ದಲೆಯ ವಾದನ ನಿರಂತರವಾಗಿ ಸಾಗಿದೆ. ಶಿರಸಿಯಲ್ಲಿ ‘ನಾದ ಶಂಕರ’ ಎಂಬ ಸಂಸ್ಥೆಯನ್ನು ಸ್ಥಾಪಿಸಿರುವ ಇವರು ಅದರ ಮೂಲಕ ಮದ್ದಲೆ ಹಾಗೂ ಚಂಡೆವಾದನ ಕಲಿಕಾ ವರ್ಗ ನಡೆಸುವ ಕಾರ್ಯ ಕೈಗೊಳ್ಳುತ್ತಿದ್ದಾರೆ. ನಾಡಿನ ಅನೇಕ ಸಂಸ್ಥೆಗಳು ಇವರ ಸೇವೆಯನ್ನು ಗುರುತಿಸಿ ಸನ್ಮಾನಿಸಿವೆ. ಹಲವು ಬಾರಿ ವಿದೇಶ ಪ್ರವಾಸ ಮಾಡಿ ಅಲ್ಲಿಯೂ ತಮ್ಮ ಮದ್ದಲೆಯ ಸದ್ದನ್ನು ಮೊಳಗಿಸಿ ಬಂದಿದ್ದಾರೆ. ಸಂಗೀತ ಜೊತೆ ಮದ್ದಲೆಯ ನಾದವನ್ನೂ ಹೊರಡಿಸಿದ್ದಾರೆ. ಕೊಳಲು, ತಬಲಾ, ಮದ್ದಲೆ, ಭಾಗವತಿಕೆ, ಸಂಗೀತದ ಹಾಡುಗಳ ಒಳಗೊಂದ ಯಕ್ಷಗಾನ ಗಾಯನ ವಾದನ ವೈಭವ ನೂರಕ್ಕೂ ಅಧಿಕ ಕಾರ್ಯಕ್ರಮ ನಡೆದಿದೆ. ಈ ಮೂಲಕ ಹಿಂದುಸ್ತಾನಿ ಜೊತೆಗೂ ರಸಪಾಕ ಮಾಡಿದ್ದಾರೆ.


ಇವರ ಮದ್ದಲೆಯ ವಾದನದ ಯಕ್ಷಗಾನಗಳ ಸಾವಿರಕ್ಕೂ ಹೆಚ್ಚು ಸಿ.ಡಿ.ಗಳು ಪ್ರಕಟ ಗೊಂಡಿವೆ. ಸಿಂಗಾಪುರದಲ್ಲಿ ಸಿಂಗರ ಕಲಾರತ್ನ, ಹೈದರಾಬಾದಿನಲ್ಲಿ ಯಕ್ಷ ಚೂಡಾಮಣಿ, ಉಡುಪಿ ಯಕ್ಷಕಲಾ ರಂಗದ ಪ್ರಶಸ್ತಿ, ಶಿರಸಿಯ ಮದ್ದಲೆಯ ಮದನ ಸೇರಿದಂತೆ ನೂರಾರು ಬಿರುದು ನೀಡಿ ಸನ್ಮಾನಿಸಲಾಗಿದೆ.


ರಾಜ್ಯ, ಹೊರ ರಾಜ್ಯಗಳಲ್ಲದೇ ಅಮೇರಿಕಾ, ಸಿಂಗಾಪುರ, ದುಬೈ ಸೇರಿದಂತೆ ಅನೇಕ ಹೊರ ದೇಶಗಳಲ್ಲೂ ಪ್ರದರ್ಶನ ನೀಡಿದ್ದಾರೆ. ಪತ್ನಿ ವಿನೋದಾ, ಮಗ ದರ್ಶನ ಹಾಗೂ ಮಗಳು ಪೂಜಾ ಇವರೊಂದಿಗಿನ ಸುಖಮಯ ಸಂಸಾರ ಇವರದು.
ಇವರು ಯಕ್ಷಗಾನದ ಹಿಮ್ಮೇಳದಲ್ಲಿ ಕುಳಿತು ಮದ್ದಲೆ ನುಡಿಸಿದರೆ ಆ ನಾದದ ಸೊಗಸೇ ಬೇರೆ.


ಲೇಖಕಿ: ಗಾಯತ್ರೀ ರಾಘವೇಂದ್ರ, ಶಿರಸಿ
ಹುಲೇಮಳಗಿ ಕಟ್ಟಡ, ಚೌಕಿಮಠ, ಶಿರಸಿ ಉ.ಕ.

ಯಕ್ಷಗಾನ ಪರಂಪರೆಯ ಪ್ರತಿನಿಧಿ ಸಂಪಾಜೆ ಶೀನಪ್ಪ ರೈ ನಿಧನ

ಯಕ್ಷಗಾನ ಪರಂಪರೆಯ ಪ್ರತಿನಿಧಿ ಎಂದೇ ನೆಗಳ್ತೆಯನ್ನು ಪಡೆದ ಖ್ಯಾತ ಯಕ್ಷಗಾನ ವೇಷಧಾರಿ ಸಂಪಾಜೆ ಶೀನಪ್ಪ ರೈ ನಿಧನ ಹೊಂದಿದ್ದಾರೆ. ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಕೋರುತ್ತಾ ‘ಯಕ್ಷದೀಪ ಪತ್ರಿಕೆಯಲ್ಲಿ 2018ರಲ್ಲಿ ಪ್ರಕಟವಾದ ಲೇಖನವನ್ನು ಯಥಾವತ್ತಾಗಿ ಕೆಳಗೆ ಕೊಡುತ್ತಿದ್ದೇವೆ. 

ರಾಜ್ಯ ಪ್ರಶಸ್ತಿ ವಿಜೇತ ಸಂಪಾಜೆ ಶೀನಪ್ಪ ರೈಗಳು
                                2014, ನವಂಬರ್ ತಿಂಗಳ 1ನೇ ತಾರೀಕು ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಸಂಪಾಜೆ ವತಿಯಿಂದ ಕಲ್ಲುಗುಂಡಿಯಲ್ಲಿ ‘ಸಂಪಾಜೆ ಯಕ್ಷೋತ್ಸವ’ ನಡೆಯುತ್ತಿತ್ತು. ಸಂಪಾಜೆಯವರೇ ಆದ ಶ್ರೀ ಶೀನಪ್ಪ ರೈಗಳು ಅಂದು ಬೆಂಗಳೂರಿನಲ್ಲಿ ರಾಜ್ಯ ಪ್ರಶಸ್ತಿಯನ್ನು ಸ್ವೀಕರಿಸಿ ಕಲ್ಲುಗುಂಡಿಗೆ ಪ್ರದರ್ಶನದಲ್ಲಿ ಪಾಲುಗೊಳ್ಳಲೇ ಬೇಕೆಂಬ ನಿರ್ಧಾರದಿಂದ ಬಂದಿದ್ದರು. ಕಾರ್ಯಕ್ರಮದ ಪ್ರಾಯೋಜಕರು ಎಡನೀರು ಶ್ರೀಗಳ ಉಪಸ್ಥಿತಿಯಲ್ಲಿ, ಕಲಾಭಿಮಾನಿಗಳೆಲ್ಲರ ಸಮ್ಮುಖದಲ್ಲಿ ಶೀನಪ್ಪ ರೈಗಳನ್ನು ಗೌರವಿಸಿದರು. ಪ್ರೇಕ್ಷಕರು ಕರತಾಡನದಿಂದ ರೈಗಳನ್ನು ಅಭಿನಂದಿಸಿದರು. ಆನಂದಭಾಷ್ಪವನ್ನು ಸುರಿಸುತ್ತಾ, ಧನ್ಯತಾಭಾವದಿಂದ ಪ್ರೇಕ್ಷಕರಿಗೆ ತಲೆಬಾಗಿ ಶೀನಪ್ಪ ರೈಗಳು ನಮಸ್ಕರಿಸಿದ ದೃಶ್ಯವನ್ನು ನಾವೆಲ್ಲರೂ ನೋಡಿ ಆನಂದಿಸಿದವರು. 62ನೇ ವರುಷದ ತಿರುಗಾಟದ ಸಿದ್ಧತೆಯಲ್ಲಿರುವ ಈ ದಣಿವರಿಯದ ಕಲಾವಿದ ಅಭಿನಂದನೀಯರು. ರಂಗದಲ್ಲಿ ಈಗಲೂ ತರುಣನಂತೆ ಮಿಂಚುತ್ತಿದ್ದಾರೆ. ತಾನು ಸಾಗಿ  ಬಂದ ದಾರಿಯನ್ನೂ, ಸಹಕರಿಸಿ ಪ್ರೋತ್ಸಾಹಿಸಿದ ಮಹನೀಯರನ್ನೂ, ತನ್ನ ಏಳ್ಗೆಗೆ ಕಾರಣರಾದವರನ್ನೂ ಮರೆಯದೆ, ಕೃತಜ್ಞತಾಭಾವದಿಂದ ಸ್ಮರಿಸುವ ವಿನಯವಂತ ಕಲಾವಿದ ಇವರು.
1943ನೇ ಇಸವಿ, ಜೂನ್ 7ರಂದು (07-06-1943) ಸುಳ್ಯ ತಾಲೂಕು ಸಂಪಾಜೆ ಕೀಲಾರು ಸಮೀಪದ ಮಾದೇಪಾಲು ಎಂಬಲ್ಲಿ ರಾಮಣ್ಣ ರೈ ಕಾವೇರಿ ರೈ ದಂಪತಿಗಳಿಗೆ ಮಗನಾಗಿ ಶೀನಪ್ಪ ರೈಗಳು ಜನಿಸಿದರು. ಕಲ್ಲುಗುಂಡಿ ಶಾಲೆಯಲ್ಲಿ ನಾಲ್ಕನೇ ತರಗತಿಯವರೆಗೆ ಓದಿದವರು. ಇವರ ತಂದೆಯವರು ಕಲಾವಿದರಾಗಿದ್ದರು. ಮಗನು ಯಕ್ಷಗಾನ ಕಲಾವಿದನಾಗಬೇಕೆಂದು ಬಯಸಿದರು. ನಾನು ಯಕ್ಷಗಾನಕ್ಕೆ ಪಾದಾರ್ಪಣೆ ಮಾಡಲು ಅವರೇ ಕಾರಣರು. ಇದಕ್ಕೆ ಸಂಪೂರ್ಣ ಸಹಕಾರ ಮತ್ತು ಪ್ರೋತ್ಸಾಹವನ್ನು ನೀಡಿದವರು ಊರಿನ ಯಜಮಾನರಾದ ಡಾ. ಕೀಲಾರು ಗೋಪಾಲಕೃಷ್ಣಯ್ಯನವರು ಎಂದು ಶೀನಪ್ಪ ರೈಗಳು ಸಂತೋಷದಿಂದ ಹೇಳುತ್ತಾರೆ. ರೈಗಳಿಗೆ ಅರ್ಥಗಾರಿಕೆಗೆ ಅವರ ತಂದೆಯವರೇ ಗುರುಗಳು. ನಾಟ್ಯಾಭ್ಯಾಸವನ್ನು ಮಾಡಿದ್ದು       ಶ್ರೀ ಕುಂಬಳೆ ಕಣ್ಣನ್ ಅವರಿಂದ (ಕಾವು ಕಣ್ಣನ್). ನಾಟ್ಯಾಚಾರ್ಯ ಶ್ರೀ ಕೇಶವ ಮಾಸ್ತರರಿಂದ ಭರತನಾಟ್ಯದ ಹೆಜ್ಜೆಗಳನ್ನು ಶೀನಪ್ಪ ರೈಗಳು ಅಭ್ಯಸಿಸಿದ್ದರು. ಬಣ್ಣಗಾರಿಕೆ ಕಲಿತುದು ಶ್ರೀ ಬಣ್ಣದ ಕುಟ್ಯಪ್ಪು ಅವರಿಂದ. ಯಕ್ಷಗಾನಕ್ಕೆ ಪೂರಕವಾದ ವಿದ್ಯೆಗಳನ್ನು ಇವರೆಲ್ಲರಿಂದ ಕಲಿತು ಸಂಪಾಜೆ ಶೀನಪ್ಪ ರೈಗಳು ಹಂತ ಹಂತವಾಗಿ ಬೆಳೆಯುತ್ತಾ ಸಾಗಿಬಂದು ಶ್ರೇಷ್ಠ ಕಲಾವಿದರಾದವರು.

 ಶ್ರೀ  ಸಂಪಾಜೆ ಶೀನಪ್ಪ ರೈ
ತನ್ನ 13ನೇ ವಯಸ್ಸಿನಲ್ಲಿ ಇರಾ ಶ್ರೀ ಸೋಮ ನಾಥೇಶ್ವರ ಮೇಳದಲ್ಲಿ (ಕಲ್ಲಾಡಿ ಶ್ರೀ ಕೊರಗ ಶೆಟ್ಟರ ವ್ಯವಸ್ಥಾಪಕತ್ವ) ರಂಗಪ್ರವೇಶ ಮಾಡಿದ ರೈಗಳು ಸದ್ರಿ ಮೇಳದಲ್ಲಿ 4 ವರ್ಷ ತಿರುಗಾಟ ನಡೆಸಿದರು. ಆಗ ದಾಮೋದರ ಮಂಡೆಚ್ಚರು, ಕಾಸರಗೋಡು ವೆಂಕಟ್ರಮಣ, ಕಲ್ಲಡ್ಕ ಮಾಧವ ಶೆಟ್ರು, ಬಣ್ಣದ ಕುಟ್ಯಪ್ಪು ಮೊದಲಾದ ಪ್ರಸಿದ್ಧ ಕಲಾವಿದರ ಒಡನಾಟ ಸಿಕ್ಕಿತ್ತು. ನಂತರ 3 ವರ್ಷಗಳ ಕಾಲ ವೇಣೂರು ಮೇಳದಲ್ಲಿ ವ್ಯವಸಾಯ ಮಾಡಿದರು. ಅಲ್ಲಿ ಶ್ರೀ ಪುತ್ತಿಗೆ ತಿಮ್ಮಪ್ಪ ರೈಗಳು, ಕಾಂಚನ ಸಂಜೀವ ರೈ, ಪಾಂಡೇಶ್ವರ ಪದ್ಮನಾಭ ಕಾಮತ್, ಶ್ರೀಕಂಠ ಭಟ್ ಮೊದಲಾದವರೊಂದಿಗೆ ತಿರುಗಾಟ ನಡೆಸುವ ಭಾಗ್ಯ ರೈಗಳಿಗೆ ಸಿಕ್ಕಿತ್ತು. ಬಳಿಕ 2 ವರ್ಷಗಳ ತಿರುಗಾಟ ಇರುವೈಲು ಮೇಳದಲ್ಲಿ. ಮತ್ತೆ ತಿರುಗಾಟ ಸೌಕೂರು ಮೇಳದಲ್ಲಿ. ಆಗ ಸೌಕೂರು ಮೇಳ (ಬಡಗು) ಪುತ್ತಿಗೆ ತಿಮ್ಮಪ್ಪ ರೈಗಳ ವ್ಯವಸ್ಥಾಪಕತ್ವದಲ್ಲಿ ತಿರುಗಾಟ ನಡೆಸುತ್ತಿತ್ತು. ತೆಂಕಿನ ಪ್ರದರ್ಶನ. ಚೇವಾರು ಕಾಮತ್‍ರು, ಕಾಟುಕುಕ್ಕೆ ಕುಂಞರಾಮ ಮಣಿಯಾಣಿ, ತೊಕ್ಕೊಟ್ಟು ಲೋಕಯ್ಯ, ವಿಟ್ಲ ರಾಮಯ್ಯ ಶೆಟ್ರು ಮೊದಲಾದವರೊಂದಿಗೆ ರೈಗಳು ಕಲಾಮಾತೆಯ ಸೇವೆಯನ್ನು ಮಾಡಿದವರು. ನಂತರ ಚೌಡೇಶ್ವರೀ ಮೇಳದಲ್ಲಿ 2 ವರ್ಷ. ಅಲ್ಲಿ ದಾಸರಬೈಲು ಚನಿಯಪ್ಪ ನಾೈಕ, ಈಗ ಖ್ಯಾತ ಭಾಗವತರಾಗಿರುವ ಪದ್ಯಾಣ ಗಣಪತಿ ಭಟ್ಟರು ಜತೆಗಿದ್ದರು. ನಂತರ ನಿರಂತರ 33 ವರ್ಷಗಳ ತಿರುಗಾಟ ಕಲ್ಲಾಡಿ ವಿಠಲ ಶೆಟ್ಟರ ಸಂಚಾಲಕತ್ವದ ಕಟೀಲು ಮೇಳದಲ್ಲಿ. ಕೇದಗಡಿ ಗುಡ್ಡಪ್ಪ ಗೌಡರಿಂದ ರಂಗನಡೆಯನ್ನು ಅಭ್ಯಸಿಸಿ, ಕಲ್ಲಾಡಿ ವಿಠಲ ಶೆಟ್ಟರ ಸಹಕಾರ, ಪ್ರೋತ್ಸಾಹ ದಿಂದ, ಇರಾ ಗೋಪಾಲಕೃಷ್ಣ ಭಾಗವತರು, ಬಲಿಪರು, ಕುಬಣೂರು, ಪೂಂಜರಂತಹ ಶ್ರೇಷ್ಠ ಭಾಗವತರ ಜತೆ ಕಲಾವಿದನಾಗಿ ವ್ಯವಸಾಯ ನಡೆಸಿದವರು ಶ್ರೀ ಶೀನಪ್ಪ ರೈಗಳು. ಎಳವೆಯಿಂದಲೇ ಇವರಿಗೆ ಕಿರೀಟ ವೇಷದಲ್ಲೇ ಆಸಕ್ತಿ. ಹಾಗೆಂದು ಪುಂಡುವೇಷಗಳನ್ನು ಮಾಡದವರೇನೂ ಅಲ್ಲ. ಬ್ರಹ್ಮಕಪಾಲ ಪ್ರಸಂಗದಲ್ಲಿ ಬ್ರಹ್ಮನಾಗಿ (ಪಕಡಿ), ವಿರಾಟಪರ್ವದ ಕೀಚಕನಾಗಿಯೂ ಅಭಿನಯಿಸಿದ್ದನ್ನೂ ರೈಗಳು ನೆನಪಿಸುತ್ತಾರೆ. ಚೌಡೇಶ್ವರೀ ಮೇಳದಲ್ಲಿದ್ದಾಗ ಮೇನಕೆಯಾಗಿಯೂ ಅಭಿನಯಿಸಿದ್ದರಂತೆ. ಆದರೂ ರೈಗಳು ಕಲಾವಿದನಾಗಿ ಕಾಣಿಸಿಕೊಂಡದ್ದು ಕಟೀಲು ಮೇಳದಲ್ಲಿ ಎಂಬುದರಲ್ಲಿ ಎಲ್ಲರ ಸಹಮತವಿದೆ. ದೇವೇಂದ್ರ, ಅರ್ಜುನ, ಹಿರಣ್ಯಾಕ್ಷ, ಇಂದ್ರಜಿತು, ರಕ್ತಬೀಜ, ಭಾನುಕೋಪ, ಕಾರ್ತವೀರ್ಯ, ಕೌಂಡ್ಲಿಕ, ಶಿಶುಪಾಲ, ಮಕರಾಕ್ಷ, ಅರುಣಾಸುರ- ಮೊದಲಾದ ಪಾತ್ರಗಳಲ್ಲಿ ಸಂಪಾಜೆ ಶೀನಪ್ಪ ರೈಗಳು ವಿಜೃಂಭಿಸಿದರು.
ಪ್ರಸ್ತುತ 15 ವರ್ಷಗಳಿಂದ ಹೊಸನಗರ,ಎಡನೀರು,ಹನುಮಗಿರಿ ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ.
ಯಕ್ಷಗಾನ ಕಲಾವಿದನಾಗಿ ನೀವು ತೃಪ್ತರೇ? ಎಂಬ ಪ್ರಶ್ನೆಗೆ- ಕಲಾವಿದರ ಕಷ್ಟ, ಸಮಸ್ಯೆಗಳಿಗೆ ಸ್ಪಂದಿಸುವ ಯಜಮಾನರುಗಳ ಕೈಕೆಳಗೆ, ಉತ್ತಮ ಕಲಾವಿದರ ಒಡನಾಟದಲ್ಲಿ ದುಡಿಯುವ ಕಲಾವಿದನಿಗೆ ಅತೃಪ್ತಿ ಎಂಬುದು ಮೂಡಲಾರದು. ನನಗೆ ಆ ಭಾಗ್ಯ ಸಿದ್ಧಿಸಿದೆ. ಹಾಗಾಗಿ ನಾನು ಅತ್ಯಂತ ತೃಪ್ತನು ಎಂದು ರೈಗಳು ಉತ್ತರಿಸುತ್ತಾರೆ.
ರಾಜ್ಯೋತ್ಸವ ಪ್ರಶಸ್ತಿ ಬಂದಾಗ ಏನೆನಿಸಿತು? ಎಂಬ ಪ್ರಶ್ನೆಗೆ- ಇದು ಕಲಾಮಾತೆಯ ಅನುಗ್ರಹ. ಇಷ್ಟು ವರ್ಷಗಳ ಕಾಲ ಮಾಡಿದ ಸೇವೆಗೆ ಪ್ರತಿಫಲ ಸಿಕ್ಕಾಗ ಸಂತೋಷವಾಯಿತು. ನಾನು ಕಲಾಸೇವೆಯನ್ನು ಮಾಡುವಲ್ಲಿ ಸಹಕರಿಸಿ, ಪ್ರೋತ್ಸಾಹಿಸಿದವರೆಲ್ಲರೂ ಇದಕ್ಕೆ ಕಾರಣರು. ತಿರುಗಾಟದ ಆರಂಭಕ್ಕೆ ಮೊದಲು ಮತ್ತು ಕೊನೆಯಲ್ಲಿ ಈಗಲೂ ಕಟೀಲು ಕ್ಷೇತ್ರಕ್ಕೆ ಹೋಗುತ್ತೇನೆ. ನನ್ನ ಕಲಾಜೀವನದ 60ನೇ ವರ್ಷ ಕಟೀಲು ಮೇಳದ ಬಯಲಾಟವನ್ನು ನಡೆಸಿ (ಕಾಟಿಪಳ್ಳ ಮಹಾಗಣಪತಿ ದೇವಸ್ಥಾನದ ಬಳಿ) ಬಹು ಕಾಲದ ಕನಸನ್ನು ನನಸಾಗಿಸಿದ್ದೇನೆ.
ಹಿಂದಿನ ದಿನಗಳ ತಿರುಗಾಟಕ್ಕೂ, ಈಗಿನ ತಿರುಗಾಟಕ್ಕೂ ಅಂತರವೇನು? ಎಂಬ ಪ್ರಶ್ನೆಗೆ-
ಪರಿವರ್ತನೆ ಸಹಜ. ಮೊದಲು ನಡೆದೇ ತಿರುಗಾಟ. ಸರಂಜಾಮುಗಳನ್ನು ಎತ್ತಿನ ಗಾಡಿಯಲ್ಲಿ ಹೇರುತ್ತಿದ್ದರು. ವೇಣೂರು ಮೇಳದಲ್ಲಿ ಎರಡು ಎತ್ತಿನಗಾಡಿ ಇದ್ದ ನೆನಪು. ಅದರ ಹಿಂದೆಯೋ ಮುಂದೆಯೋ ಕಲಾವಿದರು ನಡೆದೇ ಸಾಗುತ್ತಿದ್ದರು. ಸರಿಯಾದ ಹೊತ್ತಿಗೆ ಸ್ನಾನ, ನಿದ್ರೆ, ಆಹಾರ ಸಿಗದೆ ಕಲಾವಿದರು ನಿಜವಾಗಿಯೂ ಬೇಕಾಗಿರುವ ಅವಶ್ಯಕತೆಗಳಿಂದ ವಂಚಿತರಾಗುತ್ತಿದ್ದರು. 1980ರ ಸುಮಾರಿಗೆ ಕಟೀಲು ಮೇಳಗಳಿಗೆ ಲಾರಿಯ ವ್ಯವಸ್ಥೆ ಬಂತು. ಈಗ ಹಾಗಲ್ಲ. ಪ್ರಾಯೋಜಕರು ಉತ್ತಮ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಕಲಾವಿದರು ವ್ಯಕ್ತಿತ್ವವನ್ನು ಉಳಿಸಿಕೊಂಡರೆ ಪ್ರತಿಫಲವೂ ಇದೆ. ಉತ್ತಮ ಜೀವನವೂ ಇದೆ.
ಕಿರಿಯ ಕಲಾವಿದರಿಗೆ ಸಂದೇಶವೇನು? : ಶಿಸ್ತಿನ ಜೀವನ ಅವಶ್ಯ. ಆರೋಗ್ಯವನ್ನು ನಿರಂತರ ಕಾಪಾಡಿಕೊಳ್ಳಬೇಕು. ಸತತ ಅಭ್ಯಾಸಿಯಾಗಿರಬೇಕು. ಮೊದಲು ಬಯಲಾಟ ಹಳ್ಳಿ ಪ್ರದೇಶದಲ್ಲಿ ಮಾತ್ರ ನಡೆಯುತ್ತಿತ್ತು. ಈಗ ಯಕ್ಷಗಾನದ ವ್ಯಾಪ್ತಿ ವಿಸ್ತರಣೆಯಾಗಿದೆ. ನಗರಗಳಲ್ಲೂ ಪ್ರದರ್ಶನಗಳು ನಡೆಯುತ್ತವೆ. ವಿದ್ಯಾವಂತ ಪ್ರೇಕ್ಷಕರು ಯಕ್ಷಗಾನದತ್ತ ಒಲವನ್ನು ಹರಿಸುತ್ತಿದ್ದಾರೆ. ಕಲಾವಿದನು ಕೇವಲ ಕುಣಿತ ಕಲಿತರೆ ಸಾಲದು. ವೇಷಕ್ಕೆ ಸರಿಯಾಗಿ ಮಾತುಗಾರಿಕೆ ಬೇಕು. ಪುರಾಣಜ್ಞಾನ, ಪ್ರಸಂಗದ ನಡೆಗಳನ್ನು ತಿಳಿಯಲೇಬೇಕು. ಆಲಸಿಯಾಗದೆ ಸತತ ಅಭ್ಯಾಸ ಮಾಡಿದರೆ ಮಾತ್ರ ಉತ್ತಮ ಕಲಾವಿದನಾಗಬಹುದು.
ಕಲಾಜೀವನದ ಯಶಸ್ಸಿಗೆ ಕಾರಣರಾದವರು ಹಲವರು. ಊರಿನ ಯಜಮಾನರಾದ ಡಾ. ಕೀಲಾರು ಗೋಪಾಲಕೃಷ್ಣಯ್ಯನವರು ಮತ್ತು ಶ್ರೀ ಟಿ. ಶ್ಯಾಮ ಭಟ್ಟರು. ಕಲ್ಲಾಡಿ ಶ್ರೀ ವಿಠಲ ಶೆಟ್ಟರು, ಅಲ್ಲದೆ ಅಗರಿ ಶ್ರೀನಿವಾಸ ಭಾಗವತರು, ಇರಾ ಗೋಪಾಲಕೃಷ್ಣ ಭಾಗವತರು, ಬಲಿಪ ನಾರಾಯಣ ಭಾಗವತರು, ನಿಡ್ಲೆ ನರಸಿಂಹ ಭಟ್ಟರು, ಕಾಸರಗೋಡು ವೆಂಕಟ್ರಮಣರವರು, ಬಣ್ಣದ ಕುಟ್ಯಪ್ಪು, ಕೇದಗಡಿ ಗುಡ್ಡಪ್ಪ ಗೌಡರು, ಕೆ. ಗೋವಿಂದ ಭಟ್ಟರು, ಕಲ್ಲಡ್ಕ ಮಾಧವ ಶೆಟ್ಟಿಯವರು ಮೊದಲಾದವರ ಸಹಕಾರವನ್ನು ಒಪ್ಪುವ ಸಹಕಲಾವಿದರೆಲ್ಲರ ಸಹಕಾರವನ್ನು ನೆನಪಿಸುವ, ಸಂಪಾಜೆ ಶೀನಪ್ಪ ರೈಗಳ ಸಹೋದರರಲ್ಲಿ ಚಂದ್ರಶೇಖರ ರೈಗಳು ಹವ್ಯಾಸೀ ಉತ್ತಮ ಕಲಾವಿದರು. ಗಂಗಾಧರ ರೈಗಳು ಹವ್ಯಾಸೀ ಮದ್ದಳೆಗಾರರು. ಇವರ ಸಹಕಾರವನ್ನೂ ಶೀನಪ್ಪ ರೈಗಳು ನೆನಪಿಸುತ್ತಾರೆ.
ಕುಟುಂಬ : ಪತ್ನಿ : ಗಿರಿಜಾವತಿ ರೈ. ಮಕ್ಕಳು : ಜಯರಾಮ, ರೇವತಿ, ರಜನಿ. ಪುತ್ರ ಜಯರಾಮ ಉದ್ಯೋಗಿ, ಉತ್ತಮ ಹವ್ಯಾಸೀ ಕಲಾವಿದ. ಶೀನಪ್ಪ ರೈಗಳ ಹೆಜ್ಜೆಗಾರಿಕೆಯ ಛಾಪನ್ನು ಇವರ ಹೆಜ್ಜೆಗಾರಿಕೆಯಲ್ಲೂ ನಮಗೆ ಕಾಣಬಹುದು.ು

ಲೇಖನ: ರವಿಶಂಕರ್ ವಳಕ್ಕುಂಜ 

ರಾಮ, ಕೃಷ್ಣ (ಕುಷ್ಟ) ನಾರಾಯಣ

ನನ್ನ ಬಾಲ್ಯದ ದಿನಗಳ ನೆನಪು ಇದು. ಊರಿಂದ ಊರಿಗೆ ಕಾಲ್ನಡಿಗೆಯಲ್ಲಿ ಮೇಳದ ಪೆಟ್ಟಿಗೆಯನ್ನು ಹೊತ್ತ ಹೊರೆಯಾಳುಗಳ ಶ್ರಮ, ಕಲಾವಿದನೂ ನಿರ್ದೇಶಕನೂ, ವ್ಯವಸ್ಥಾಪಕನೂ ಒಬ್ಬನೇ ಆಗಿರುವ ಮೇಳದ ಯಜಮಾನನ ತಾಳ್ಮೆ! ಇಂದು ಸ್ಮೃತಿಪಟಲದಲ್ಲಿ ಮರುಕಳಿಸಿದೆ.
ಶ್ರೀ ಮಂದಾರ್ತಿ ಮೇಳ ಒಂದೇ ಆಗಿದ್ದು, ಕೋಟ ಹದಿನಾಲ್ಕು ಗ್ರಾಮಗಳ ಸಂಚಾರವೂ ವಿರಳ. ಹರಕೆ, ಕಟ್ಟುಕಟ್ಟಳೆ, ಹತ್ತು ಸಮಸ್ತರ ಸ್ಥಳವಂದಿಗರ ಬಯಲಾಟದ ಕಾಲವದು. ಶ್ರೀ ಮಂದಾರ್ತಿ ಮೇಳದಲ್ಲಿ ಹಾರಾಡಿ ರಾಮ, ಕುಷ್ಟ, ನಾರಾಯಣರ ತ್ರಿಮೂರ್ತಿಗಳ ಜೋಡಣೆಯ ಅಚ್ಚುಕಟ್ಟು, ಹೊಂದಾಣಿಕೆ ಮರೆಯಬಾರದ ಘಟನಾವಳಿಗಳ ಗತವೈಭವವೇ.


ಸಾಲಿಗ್ರಾಮ-ಕಾರ್ಕಡ ಗ್ರಾಮದ ಮಣೆಗಾರರ ಮನೆ ಗಣಪಯ್ಯ ಉಪಾಧ್ಯರಿಗೆ ಶ್ರೀ ಮಂದಾರ್ತಿ ಮೇಳದ ಆಟ ಆಡಿಸುವ ಖಯಾಲಿ. ಅಂದು ಮುಂಜಾನೆಯೇ ಹಾರಾಡಿ ರಾಮ, ಕುಷ್ಟ, ನಾರಾಯಣ ಹಾಗೂ ಅರಾಟೆ ಮಂಜು ಮೊದಲಾದ ಕಲಾವಿದರು ಹೆಬ್ಬಾಗಿಲಿನಲ್ಲಿ ಹಾಜರ್! ಶ್ರೀಮತಿ ಮನೋರಮ ಉಪಾಧ್ಯರಿಗಂತೂ ಕಲಾವಿದರ ಆರೈಕೆ, ಉಪಚಾರ ಮಾಡುವ ಸಂಭ್ರಮ. ಬೆಳಿಗ್ಗಿನ ಇಡ್ಲಿ ಚಹದೊಡನೆ ನಿದ್ದೆಗೆಟ್ಟ ಕಲಾವಿದರನ್ನು ವಿಶ್ರಾಂತಿಗೆ ಈ ದಂಪತಿಗಳು ಬಿಡಲಾರರು. ಹಲವು ಊರುಗಳ ಆಟದ ಅನುಭವ, ಪಾತ್ರಪರಿಚಯ, ಪ್ರಸಂಗ ಹಂಚಿಕೆ ವಿಚಾರಗಳ ಸೋದಾಹರಣ ಚರ್ಚೆಯಲ್ಲಿಯೇ ನಿರತರಾಗುತ್ತ ಮಧ್ಯಾಹ್ನದ ಆರೋಗಣೆಯ ತಯಾರಿ ನಡೆಸುತ್ತಿದ್ದರು.


ರಾತ್ರಿ ಆಟಕ್ಕೆ ಪ್ರಸಂಗ ನಿಶ್ಚಯ ಮಾಡಲು ಕಲಾವಿದರೂ, ಮನೆಯವರೂ, ಪಕ್ಕದ ಅಭಿಮಾನಿಗಳೂ ಜಮಾಯಿಸುತ್ತಿದ್ದರು. ಹಾರಾಡಿ ರಾಮ, ಕುಷ್ಟ, ನಾರಾಯಣರು ಕ್ರಮವಾಗಿ ಮೂರೂ ಪ್ರಸಂಗಗಳಲ್ಲಿಯೂ ಎರಡನೆಯ ವೇಷ, ಪುರುಷವೇಷ, ಸ್ತ್ರೀವೇಷ ಮಾಡಿಯೇ ಮಣೆಗಾರ ಉಪಾಧ್ಯರ ಮನ ತಣಿಸಬೇಕಾಗಿತ್ತು. ಕಲಾವಿದರಿಗೆ ಹೆಬ್ಬಾಗಿಲು ಪ್ರವೇಶವನ್ನೂ ಪ್ರಧಾನ ವೇಷಗಳ ನಿರ್ವಹಣೆಯ ಹೊಣೆಯನ್ನೂ ಅಂದೇ ನಮ್ಮವರು ನೆರವೇರಿಸಿದ್ದರು!


ದೇವರ ಮುಡಿಗೆ ಹೂ ತಪ್ಪಿದರೂ ತಪ್ಪಬಹುದು! ಆದರೆ ಯಕ್ಷಗಾನ ಚೌಕಿಯಲ್ಲಿ ಮಲ್ಲಿಗೆ ಹೂ ತಪ್ಪುತ್ತಿರಲಿಲ್ಲ. ಗಣಪತಿ ಪೂಜೆಗೆ, ಶ್ರೀ ಅಮ್ಮನವರಿಗೆ ಏರಿಸಿದ ಹೂವನ್ನು ಅಂದು ಸ್ತ್ರೀಪಾತ್ರಧಾರಿಗಳು ಮುಡಿಯಲೇಬೇಕು. ಅಂದೇ ಇಲ್‍ಕಲ್ ಅಂಚಿನ ಹೊಸ ಸೀರೆ ‘ಬಾಲ ಗೋಪಾಲ’, ‘ಸ್ತ್ರೀಭೂಮಿಕೆ’ ನಿರ್ವಹಿಸುವವರಿಗೆ ನೀಡಬೇಕು. ಇಂಥಹ ವಿಷಯಗಳಲ್ಲಿ ತಮ್ಮ ಪ್ರೀತಿ, ಅಭಿಮಾನವನ್ನು ಮೌನವಾಗಿ ಮಂದಹಾಸದಿಂದಲೇ ಅನುಭವಿಸುತ್ತಿದ್ದರು. ಮಣೆಗಾರರ ಮನೆ, ಆಟಕ್ಕೆ ಹಾಗಾಗಿಯೇ ಮಣೆ! ಮನ್ನಣೆ!!


ಸಾಧಾರಣ ಪ್ರಧಾನ ಭಾಗವತರು ಮಧ್ಯರಾತ್ರಿ ಕಳೆದು ರಂಗಸ್ಥಳಕ್ಕೆ ಬರುವ ವಾಡಿಕೆ. ಆದರಣೀಯರೆಂತ ತಿಳಿದ ಕಲಾವಿದರು, ಭಾಗವತರು, ಹಿಮ್ಮೇಳದವರೂ ಜಾಗೃತರಾಗಿ ಉಪಾಧ್ಯರ ಮನೆ ಆಟವೆಂತಲೇ ‘ನಿಗಾ’ ತೆಗೆದುಕೊಂಡು ಕುಟುಂಬದ ಅಂತಃಕರಣಕ್ಕೆ ಮಿಡಿದು ನಗದೀಕರಿಸಿಕೊಳ್ಳುತ್ತಿದ್ದರು. ಸಮಯಕ್ಕಿಂತ ಮೊದಲೇ ಸನ್ನದ್ಧರಾಗಿ ಇಡೀ ಬಯಲಾಟದ ಇಪ್ಪತ್ತನಾಲ್ಕು ಗಂಟೆಗಳನ್ನು ಸದುಪಯೋಗ ಮಾಡಿಕೊಳ್ಳುತ್ತಿದ್ದರು.


ರಾಮ-ಕೃಷ್ಣ-ನಾರಾಯಣರ ಹೆಸರು ಇಂದಿಗೂ ಜನರ ಬಾಯಲ್ಲಿ ದೇವರನಾಮದಂತೆ ಪ್ರತಿದಿನವೂ ನಲಿದಾಡುತ್ತಿದೆ. ಶಿರಿಯಾರ ಮಂಜು, ಚಂಡೆ ಕಿಟ್ಟು, ಶೇಷಗಿರಿ ಭಾಗವತರು, ಹಾಸ್ಯದ ಕೊರ್ಗು, ಉಡುಪಿ ಬಸವ, ಕೆಮ್ಮಣ್ಣು ಆನಂದ ಮುಂತಾದ ಅಸಂಖ್ಯ ಕಲಾತಪಸ್ವಿಗಳನ್ನು ಮರೆಯಲಾಗದು. ಅವರೆಲ್ಲರೂ ಪರಸ್ಪರ ರಂಗನಿರ್ದೇಶಕ ರಾಗಿಯೂ ಕೆಲಸ ಮಾಡಿದ್ದರು. ಮರುದಿನದ ಆಟ ನಿಶ್ಚಿತವಿಲ್ಲ! ನಾಳೆಯ ಚಿಂತೆ ನಾರಾಯಣ ಬಲ್ಲ. ಎಲ್ಲವನ್ನೂ ಮರೆತು ಯಕ್ಷಗಾನ ಕಲಾ ಸಂಪತ್ತನ್ನು ಮೆರೆಯಿಸಿದರು. ‘‘ಸಹೃದಯ ವೀಕ್ಷಕರು ರಂಗಸ್ಥಳದ ಮುಂಭಾಗದ ಚಪ್ಪರದಡಿ ಕುಳಿತರೆ ಕಲಾವಿದರಿಗೂ ಹುಮ್ಮಸ್ಸು ಬರುತ್ತದೆ. ನೀವು ತಿದ್ದಿ ತೀಡುವುದು ನಾವು ಬಯಸುವ ವಿಚಾರವೇ ಆಗಿದೆ. ನಾಳೆಯೂ ಹತ್ತಿರದಲ್ಲಿ ನಡೆಯುವ ಬಯಲಾಟಕ್ಕೆ ಕೂಡ ಬನ್ನಿ’’ ಅಂತ ಸಜ್ಜನ ಕಲಾವಿದರು ಕರೆಕೊಡುತ್ತಾರೆ.


ಮೇಳ, ಮೇಳಾವ, ಮೇಲ ಮುಂತಾದ ಶಬ್ದಗಳಿಗೆ ಸಂತೆ, ಜಾತ್ರೆ, ಉತ್ಸವಗಳೆಂಬ ಅರ್ಥವ್ಯಾಖ್ಯಾನಿಸಿದ್ದಾರಂತೆ. ಹತ್ತಿಪ್ಪತ್ತು ಜನರ ಸಂಗವೂ, ಅವರಾಡಿ ತೋರುವ ‘ಪ್ರಸಂಗ’ವೂ ಸರ್ವಸಂಗ ಪರಿತ್ಯಾಗಿಗಳಿಂದಲು ಮೆಚ್ಚುಗೆ ಪಡೆದಿವೆ! ಸಂಚಾರಿ ಮೇಳಗಳಿಂದ ಸದಾ ಕಲಾವೈಭವ ‘ಮೇಳ’ವಿಸಲಿ. ು

ಹೆಚ್. ಜನಾರ್ದನ ಹಂದೆ ಕೋಟ
ಅಧ್ಯಕ್ಷರು, ಕರ್ಣಾಟಕ ಯಕ್ಷಧಾಮ
‘ಸಿಯಾರಾ ವಿಸ್ಟಾ’, ಪ್ಲಾಟ್ ಎ-1
ಕೊಡಿಯಾಲಗುತ್ತು ಪಶ್ಚಿಮ
ಮಂಗಳೂರು-3,

ಭಾವದಲೆಯಲಿ ತೇಲಾಡಿಸಿದ ಭಾಗವತ ಕುಬಣೂರು ಶ್ರೀಧರ ರಾವ್

ಒಂದು ಪ್ರಸಿದ್ಧ ಭಾಗವತರುಗಳು ಮೇಳೈಸಿದ ಗಾನಸುಧೆಯ ರಸಧಾರೆ. ತೆಂಕುತಿಟ್ಟಿನ ಪ್ರಸಿದ್ಧ ಭಾಗವತರಲ್ಲಿ ಕೆಲವರು ಭಾಗವಹಿಸಿದ್ದ ಅಪೂರ್ವವಾದ ಕಾರ್ಯಕ್ರಮ. ಭಾಗವತರೊಬ್ಬರು ತಮ್ಮ ಸರದಿಯಲ್ಲಿ ದ್ರೌಪದಿ ವಸ್ತ್ರಾಪಹಾರದ “ಕರುಣದಿ ಕಾಯೋ ಗೋವಿಂದಾ…” ಹಾಡಲು ಪ್ರಾರಂಭಿಸಿದರು. ಪ್ರಥಮ ಚರಣದಲ್ಲಿಯೇ ಸಭೆಯನ್ನು ನಿಶ್ಶಬ್ದವಾಗಿಸಿ ಸಭಿಕರೆಲ್ಲರ ಚಿತ್ತವನ್ನು ತನ್ನ ವಶದಲ್ಲಿರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇವರು ಬೇರೆ ಯಾರೂ ಅಲ್ಲ. ತನ್ನ ಸಂಗೀತದ ಅನುಭವಗಳಿಂದ ದಿ| ದಾಮೋದರ ಮಂಡೆಚ್ಚರ ನಂತರ ಯಕ್ಷಗಾನದ ಹಾಡುಗಳ ಪರಂಪರೆಯ ಶೈಲಿಗೆ ಸಂಗೀತದ ಹೊಳಪನ್ನು ಕೊಟ್ಟ ದಿ| ಕುಬಣೂರು ಶ್ರೀಧರ ರಾವ್.


ಕುಬಣೂರು ಶ್ರೀಧರ ರಾವ್ ಇಂದು ನಮ್ಮೊಡನಿಲ್ಲ. ಯಾಕೋ ಈ ಸತ್ಯವನ್ನು ಮಾತ್ರ ಅರಗಿಸಿಕೊಳ್ಳಲಾಗುತ್ತಿಲ್ಲ. ದಿನಾಂಕ 17.09.2017ರ ರಾತ್ರಿ ತೀವ್ರ ಜ್ವರದಿಂದಾಗಿ ಅವರು ಬೆಂಗಳೂರಿನಲ್ಲಿ ನಿಧನ ಹೊಂದಿದರು.
ವರ್ಷಗಳ ಹಿಂದೆ ಇವರನ್ನು ಮಾತನಾಡಿಸಬೇಕೆಂದು ಬಹಳಷ್ಟು ಬಾರಿ ಅಂದುಕೊಂಡಿದ್ದೆ. ಆದರೆ ಅವರು ಸದಾ ಬಿಡುವಿಲ್ಲದ ಕಾರ್ಯಕ್ರಮ ಗಳು, ಅವರೇ ನಡೆಸುತ್ತಿದ್ದ ಮಾಸಪತ್ರಿಕೆಯ ಕೆಲಸ, ಮೇಳದ ಉದ್ಯೋಗಗಳಲ್ಲಿ ವ್ಯಸ್ತರಾಗಿರುತ್ತಿದ್ದುದರಿಂದ ಅವಕಾಶವಾಗಿರಲಿಲ್ಲ. ಆದರೆ ಒಂದು ದಿನ ಮೊದಲೇ ದಿನ ನಿಶ್ಚೈಸಿ ಅವರನ್ನು ಭೇಟಿಯಾಗಲು ಅವಕಾಶ ಸಿಕ್ಕಿತು. ಸಣ್ಣದೊಂದು ಸಂದರ್ಶನ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದಾಗ ಸಂತೋಷದಿಂದ ಒಪ್ಪಿಕೊಂಡಿದ್ದರು.


1956ರಲ್ಲಿ ಜನಿಸಿದ ಕುಬಣೂರು ಶ್ರೀಧರ ರಾವ್ ಮೂಲತಃ ಕೊಡಗು ಜಿಲ್ಲೆಯ ಭಾಗಮಂಡಲದವರು. ಒಂದೂವರೆ ವರ್ಷ ಇರುವಾಗಲೇ ತಾಯಿ ತೀರಿಹೋದ ಕಾರಣ ಕುಬಣೂರಿನ ಮಾವನ ಮನೆಯಲ್ಲಿ ಬೆಳೆಯಬೇಕಾಯಿತು. ಆದ ಕಾರಣ ಕುಬಣೂರು ಶ್ರೀಧರ ರಾವ್ ಅಂತ ಹೆಸರು ಬಂತು. ತಂದೆಯ ಹೆಸರು ಶ್ರೀ ಕೃಷ್ಣಯ್ಯ ಹಾಗೂ ತಾಯಿ ಶ್ರೀಮತಿ ರುಕ್ಮಿಣಿ. ಪ್ರಾಥಮಿಕ ವಿದ್ಯಾಭ್ಯಾಸ ಅಂದರೆ 7ನೇ ತರಗತಿಯ ವರೆಗೆ ಕುಬಣೂರು ಶಾಲೆಯಲ್ಲಿ ಆಯಿತು. ನಂತರ ಪ್ರೌಢಶಿಕ್ಷಣ ಮಂಗಲ್ಪಾಡಿ ಪ್ರೌಢಶಾಲೆಯಲ್ಲಿ ಹಾಗೂ ನಂತರ ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್‍ನಲ್ಲಿ ಡಿಪ್ಲೋಮಾ ಪದವಿಯನ್ನು ಪಡೆದರು.


ಪ್ರಾಥಮಿಕ ಶಿಕ್ಷಣವನ್ನು ಪಡೆಯುತ್ತಿರುವಾಗಲೇ ಕುಬಣೂರಿನಲ್ಲಿ ಯಕ್ಷಗಾನದ ಪರಿಸರವಿದ್ದ ಕಾರಣ ಆ ವಯಸ್ಸಿನಲ್ಲೆ ಶಾಲಾ ವಾರ್ಷಿಕೋತ್ಸವವೇ ಮೊದಲಾದ ಸಂದರ್ಭಗಳಲ್ಲೆಲ್ಲಾ ಯಕ್ಷಗಾನದಲ್ಲಿ ವೇಷಗಳನ್ನು ಮಾಡುತ್ತಿದ್ದರು. ರಾಜ್ಯಪ್ರಶಸ್ತಿ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರಾದ ಉಪ್ಪಳ ಕೃಷ್ಣ ಮಾಸ್ತರ್ ಹಾಗೂ ಆ ಕಾಲದ ಮೇಳದ ಕಲಾವಿದರಾದ ಬೇಕೂರು ಕೇಶವರಲ್ಲಿ ನಾಟ್ಯಾಭ್ಯಾಸವನ್ನು ಮಾಡಿದ್ದರು. ಶಾಲಾ ದಿನಗಳಲ್ಲಿಯೇ ಐ. ರಘು ಮಾಸ್ತರ್‍ರಿಂದ ಐದಾರು ವರ್ಷ ಕರ್ನಾಟಕ ಸಂಗೀತವನ್ನು ಅಭ್ಯಾಸ ಮಾಡಿ ಟಿ. ಗೋಪಾಲಕೃಷ್ಣ ಮಯ್ಯ ಹಾಗೂ ಮಾಂಬಾಡಿ ನಾರಾಯಣ ಭಟ್ಟರಲ್ಲಿ ಭಾಗವತಿಕೆಯನ್ನು ಅಭ್ಯಸಿಸಿದರು.


ಪ್ರಾರಂಭದಲ್ಲಿ ವಿಶ್ವಭಾರತಿ ಕಲಾಸಂಘದಿಂದ ಹಲವು ಕಡೆ ಪ್ರದರ್ಶನಗಳನ್ನು ನಡೆಸುತ್ತಿದ್ದುದು ಮಾತ್ರವಲ್ಲದೆ ಯಕ್ಷಗಾನದ ವೇಷಭೂಷಣಗಳನ್ನು ಕೂಡಾ ಯಕ್ಷಗಾನ ಸಂಘ ಸಂಸ್ಥೆಗಳಿಗೆ ಹಾಗೂ ಪ್ರದರ್ಶನಗಳಿಗೆ ಬಾಡಿಗೆಗೆ ಒದಗಿಸುತ್ತಾ ಇದ್ದರು. ಆಗ ಅವರ ಭಾಗಮಂಡಲದ ಆಸ್ತಿ ಪಾಲಾಗಿ ಸಿಕ್ಕಿತು ಹಾಗೂ ಇವರ ತಂದೆಯವರು ವಿಧಿವಶರಾದುದರಿಂದ ಮಂಗಳೂರಿನ ಖಾಸಗಿ ಸಂಸ್ಥೆಯ ಉದ್ಯೋಗವನ್ನು ಬಿಟ್ಟು ತೋಟ ನೋಡಿಕೊಳ್ಳಲು ಭಾಗಮಂಡಲದಲ್ಲಿ ನೆಲೆಸಬೇಕಾಗಿ ಬಂತು. ಏಲಕ್ಕಿ ತೋಟವಾದುದರಿಂದ ಮಳೆಗಾಲದಲ್ಲಿ ಮಾತ್ರ ಕೆಲಸವಿರುತ್ತಿತ್ತು.

ಮೊದಲು ಕೆಲಸದಲ್ಲಿದ್ದಾಗಲೂ ಕರ್ನೂರು ಕೊರಗಪ್ಪ ರೈಗಳ ಗೋಪಾಲಕೃಷ್ಣ ಕಲಾ ಸಂಪದ, ಪಡೀಲ್ ಇದರಲ್ಲಿ ಭಾಗವತನಾಗಿ ಹೋಗುತ್ತಿದ್ದರು. ಆಮೇಲೆ ಕುಂಬಳೆ ಶೇಷಪ್ಪನವರ ಅನಂತಾಡಿ ಮೇಳ ಹಾಗೂ ಉಪ್ಪಳ ಮೇಳಗಳಿಗೂ ಹವ್ಯಾಸೀ ಭಾಗವತನಾಗಿ ಹಾಡುತ್ತಿದ್ದರು. ಕುಬಣೂರು ಮನೆಯಲ್ಲಿ ಚೆಂಡೆ, ಮದ್ದಳೆಗಳು ಇದ್ದು ಅವುಗಳನ್ನು ಆಟಗಳಿಗೂ ಒದಗಿಸುತ್ತಿದ್ದರು. ಅಲ್ಲದೆ ಕುಬಣೂರು ಶ್ರೀಧರ ರಾವ್ ಹಲವಾರು ಹವ್ಯಾಸೀ ಸಂಸ್ಥೆಗಳಿಗೆ ಭಾಗವತಿಕೆಯನ್ನೂ ಮಾಡುತ್ತಿದ್ದರು.

ಅದೂ ಅಲ್ಲದೆ ಆ ಕಾಲದಲ್ಲಿ “ಜುಗಲ್ ಬಂದಿ” ಪ್ರಯೋಗವನ್ನು ಪ್ರಥಮ ಬಾರಿಗೆ ಪರಿಚಯಿಸಿದ ಶ್ರೇಯಸ್ಸು ಕುಬಣೂರು ಶ್ರೀಧರ ರಾವ್ ಅವರಿಗೆ ಸಲ್ಲುತ್ತದೆ. ಅದರಲ್ಲಿ ಪದ್ಯಾಣ ಶಂಕರನಾರಾಯಣ ಭಟ್ಟರು, ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ಚೆಂಡೆಗೆ ಮತ್ತು ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ಮದ್ದಳೆಗೆ ಇದ್ದು “ಬ್ರಹ್ಮಕಪಾಲ” ಎಂಬ ಪ್ರಸಂಗದಲ್ಲಿ ಇದನ್ನು ಪ್ರಪ್ರಥಮವಾಗಿ ಪ್ರಯೋಗ ಮಾಡಲಾಯಿತು. ಬಳಿಕ 1979ರಲ್ಲಿ ಕೂಡ್ಲು ಮೇಳವನ್ನು ಸಂಘಟಿಸಿದ್ದ ಕುಬಣೂರು ಅವರು ಅದರಲ್ಲಿ ದೊಡ್ಡ ಅಗರಿ ಭಾಗವತರು, ಕುದ್ರೆಕೋಡ್ಲು ರಾಮ ಭಟ್ಟರು, ಮಾಂಬಾಡಿಯವರು, ಶಂಕರನಾರಾಯಣ ಸಾಮಗರು, ಹೊಸಹಿತ್ಲು ಮಹಾಲಿಂಗ ಭಟ್ಟರು, ಪೆರುವೋಡಿ ನಾರಾಯಣ ಭಟ್ಟರು, ಕೋಡ್ಳ ಗಣಪತಿ ಭಟ್ಟರು, ಶಂಭು ಶರ್ಮ ಮೊದಲಾದ ಕಲಾವಿದರನ್ನು ಒಟ್ಟು ಸೇರಿಸಿದ್ದರು. ಕೇವಲ ಪೌರಾಣಿಕ ಪ್ರಸಂಗಗಳನ್ನು ಮಾತ್ರ ಸಂಯೋಜಿಸಿದ ಕಾರಣವೋ ಏನೋ, ಅದರಲ್ಲಿ ಆರ್ಥಿಕ ಮುಗ್ಗಟ್ಟು ಉಂಟಾಯಿತು.


ಆ ಸಮಯದಲ್ಲಿ ಅಂದರೆ 1981ರಲ್ಲಿ ಕರ್ನೂರು ಕೊರಗಪ್ಪ ರೈಗಳು ಕದ್ರಿ ಮೇಳವನ್ನು ಆರಂಭಿಸಿದರು. ಆಗ ಅವರ ಕೋರಿಕೆಯಂತೆ ಕದ್ರಿ ಮೇಳಕ್ಕೆ ಸೇರಿದರು. ಮರುವರ್ಷ ಗಣಪತಿ ಭಟ್ಟರ ನಂದಾವರ ಮೇಳ, ಅದರ ಮರುವರ್ಷ ಅರುವ ಮೇಳ, ಮತ್ತೆ ನಾಲ್ಕು ವರ್ಷ ಬಪ್ಪನಾಡು ಮೇಳಗಳ ತಿರುಗಾಟ. ನಂತರ ಪುನಃ ಕದ್ರಿ ಮೇಳಕ್ಕೆ ಕರೆಬಂದಾಗ ಅಲ್ಲಿ ದೊಡ್ಡ ಕಲಾವಿದರ ಗಡಣವೇ ಇತ್ತು. ರಾಮದಾಸ ಸಾಮಗರು, ಕೋಳ್ಯೂರು ರಾಮಚಂದ್ರ ರಾಯರು, ಚೆನ್ನಪ್ಪ ಶೆಟ್ಟರು, ವಿಶ್ವನಾಥ ಶೆಟ್ಟರು, ಸೀತಾರಾಮ ಕುಮಾರ್, ಬಂಟ್ವಾಳ ಜಯರಾಮ ಆಚಾರ್ಯ, ಮೊದಲಾದವರಿದ್ದರು. ನಂತರ ಕಾಂತಾವರ ಮೇಳಕ್ಕೆ, ಆಮೇಲೆ ಕಲ್ಲಾಡಿ ವಿಠಲ ಶೆಟ್ಟರು ಕಟೀಲು ಮೇಳಕ್ಕೆ ಆಹ್ವಾನಿಸಿದರು. ಹಾಗೆ ಕೊನೆಯ 27 ವರ್ಷಗಳಲ್ಲಿ ಕಟೀಲು ಮೇಳದಲ್ಲೇ ಪ್ರಧಾನ ಭಾಗವತರಾಗಿದ್ದರು.


ಬಪ್ಪನಾಡು ಮೇಳದಲ್ಲಿರುವಾಗ ದೇವೇಂದ್ರನ ಬಗ್ಗೆ ನೃತ್ಯರೂಪಕವೊಂದನ್ನು ಸಂಯೋಜಿಸಿದ್ದರು. ಆ ದೃಶ್ಯದಲ್ಲಿ ಮಾತುಗಳಿಲ್ಲ, ಬರಿಯ ನೃತ್ಯರೂಪಕ. ಕಟೀಲು ಮೇಳಕ್ಕೆ ಸೇರಿದ ನಂತರ ನಾಲ್ಕು ಕನ್ನಡ ಪ್ರಸಂಗಗಳನ್ನು ಬರೆದಿದ್ದ ಶ್ರೀಯುತರು (ದಾಶರಥಿ ದರ್ಶನ, ಮನುವಂಶವಾಹಿನಿ, ಸಾರ್ವಭೌಮ ಸಂಕರ್ಷಣ, ಮಹಾಸತಿ ಮಂದಾಕಿನಿ) ತುಳುವಿನಲ್ಲಿ ಪಟ್ಟದ ಮಣೆ ಎಂಬ ಒಂದು ಪ್ರಸಂಗವನ್ನೂ ಬರೆದಿದ್ದರು. ಅದಲ್ಲದೆ ಕೆಲವು ಸಣ್ಣ ಸಣ್ಣ ಪ್ರಸಂಗಗಳನ್ನೂ ಬರೆದಿದ್ದರು.


1995ರಲ್ಲಿ ‘ಯಕ್ಷಪ್ರಭಾ’ ಮಾಸಪತ್ರಿಕೆಯನ್ನು ಆರಂಭಿಸಿದ್ದರು. ಪತ್ರಿಕೆ ನಡೆಸಲು ಆರಂಭದಲ್ಲಿ ಬಹಳಷ್ಟು ಕಷ್ಟಪಟ್ಟಿದ್ದರು. ಈಗ ಅಲ್ಲಿಂದಲ್ಲಿಗೆ ನಡೆಯುತ್ತಾ ಉಂಟು ಅಂತ ಹೇಳುತ್ತಿದ್ದರು.


“ಪತ್ರಿಕೆಯನ್ನು ಲಾಭಕ್ಕೋಸ್ಕರ ಮಾಡಿದ್ದಲ್ಲ. 8 ವರ್ಷಗಳಿಂದ ದಿ| ದಾಮೋದರ ಮಂಡೆಚ್ಚ ಪ್ರಶಸ್ತಿ ಸಮಿತಿಯ ಸಂಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅಗರಿ ಪ್ರಶಸ್ತಿ ಹಾಗೂ ಇತರ ಹಲವಾರು ಪ್ರಶಸ್ತಿ, ಸನ್ಮಾನಗಳು ಬಂದಿವೆ. ಆಮೇಲೆ ಕಲ್ಲಾಡಿ ವಿಠಲ ಶೆಟ್ಟರ ಜೀವನಚರಿತ್ರೆಯ ಬಗ್ಗೆ ಪ್ರಕಟವಾದ ಪುಸ್ತಕ “ಯಕ್ಷ ವಿಜಯ ವಿಠಲ”ದ ಸಂಪಾದಕನಾಗಿದ್ದೆ. ಮದುವೆಯಾದ ಬಳಿಕ ಭಾಗಮಂಡಲದ ಆಸ್ತಿಯನ್ನು ಮಾರಿ ಉಜಿರೆಯಲ್ಲಿ ಆಸ್ತಿ ಖರೀದಿಸಿ ಅಲ್ಲೇ ವಾಸ್ತವ್ಯ ಹೂಡಿದ್ದೇನೆ. ಇಬ್ಬರು ಮಕ್ಕಳಲ್ಲಿ ಮಗಳು ಶ್ರೀವಿದ್ಯಾ ಪತ್ರಿಕೋದ್ಯಮ ಪದವಿ ಪಡೆದು ಟಿವಿ9, ಈಟಿವಿಯಲ್ಲಿ ಕೆಲಸ ಮಾಡಿದ್ದಳು. ಅಳಿಯ ಸಿಂಗಾಪುರದಲ್ಲಿ ಸಾಫ್ಟ್‍ವೇರ್ ಉದ್ಯೋಗಿ. ಮಗ ಶ್ರೀಕಾಂತ ಕರ್ಣಾಟಕ ಬ್ಯಾಂಕ್ ನಲ್ಲಿ ಸಹಾಯಕ ಪ್ರಬಂಧಕನಾಗಿ ಸೇವೆ ಸಲ್ಲಿಸುತ್ತಿದ್ದಾನೆ. ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಶ್ರೀ ಭೀಮ ಭಟ್ಟರ ಮುಂಬೈ, ಮಹಾರಾಷ್ಟ್ರದ ಮಳೆಗಾಲದ ತಿರುಗಾಟಗಳು ಹಾಗೂ ಶ್ರೀ ನಿಡ್ಲೆ ಗೋವಿಂದ ಭಟ್ಟರ ಮಳೆಗಾಲದ ತಿರುಗಾಟದ ಪ್ರಾರಂಭದ ವರ್ಷಗಳಲ್ಲಿ ಭಾಗವಹಿಸಿದ್ದೆ. ಆಮೇಲೆ ಪತ್ರಿಕೆಯ ಸಂಪಾದಕನಾಗಿ ಜವಾಬ್ದಾರಿ ಹೆಚ್ಚಿದುದರಿಂದ ಅನಿವಾರ್ಯವಾಗಿ ಹೋಗಲಾಗಲಿಲ್ಲ. ಅಗರಿ ಶ್ರೀನಿವಾಸ ಭಾಗವತರ ಸಂಪುಟ ಹೊತ್ತಗೆಯನ್ನು ಸಂಸ್ಕರಿಸಿ ಮುದ್ರಿಸುವಲ್ಲಿ ಸಹಕರಿಸಿದ್ದೇನೆ. ತೆಂಕುತಿಟ್ಟಿನ ಯಕ್ಷಗಾನದ ಕಟೀಲು ಮೇಳದ ಪ್ರಸ್ತುತ ಕಲಾವಿದರಲ್ಲಿ ಅತೀ ಹಿರಿಯನೂ, ತೆಂಕುತಿಟ್ಟಿನ ವೃತ್ತಿಪರ ಹಿರಿಯ ಕಲಾವಿದರಲ್ಲಿ ನಾನೂ ಒಬ್ಬನೂ ಎಂದು ಹೇಳಲು ಸಂತೋಷಿಸುತ್ತೇನೆ… ‘‘ಕೌಟುಂಬಿಕ ಕಾರಣಗಳಿಂದ ಒಮ್ಮೆ ಬಿಟ್ಟುಹೋದ ಯಕ್ಷಗಾನ ರಂಗಕ್ಕೆ ಮರಳಿದುದರಲ್ಲಿ ನನಗೆ ಬೇಸರವಿಲ್ಲ. ನಾನು ಅದರಿಂದಾಗಿ ಹಾಳಾಗಲಿಲ್ಲ. ಆರ್ಥಿಕವಾಗಿ ಕೆಲವೊಂದು ಬಾರಿ ಸಂಕಷ್ಟ ಎದುರಿಸಿದ್ದರೂ ಬೇರೇನೂ ಇಲ್ಲ. ಈಗ ಆಸ್ತಿ ಮನೆ ಎಲ್ಲ ಮಾಡಿದ್ದೇನೆ. ಕಲಾಸೇವೆಯ ಆತ್ಮತೃಪ್ತಿ ಇದೆ. ಮಕ್ಕಳೆಲ್ಲಾ ಒಳ್ಳೆಯ ಉದ್ಯೋಗದಲ್ಲಿದ್ದಾರೆ. ಕಲೆಯಿಂದಾಗಿ ಸನ್ಮಾನ. ಪ್ರಶಸ್ತಿ, ಗೌರವ ಎಲ್ಲವೂ ಬಂದಿದೆ. ಎಲ್ಲವುಗಳಿಂದ ಮುಖ್ಯ ವಾಗಿ ಜನರ ಅಭಿಮಾನ ಪ್ರೀತಿಯನ್ನು ಸಂಪಾದಿಸಿದ್ದೇನೆ…” ಎಂದು ಅಂದು ಮನಬಿಚ್ಚಿ ಮಾತನಾಡಿದ್ದರು.


ಮುಂದೆ ಭಾಗವತರಾಗ ಬಯಸುವವರಿಗೆ ನನ್ನ ಸಂದೇಶ “ಹಾಡುವುದಕ್ಕಾಗಿ ಯಕ್ಷಗಾನವನ್ನು ಆರಿಸಿಕೊಳ್ಳಬೇಡಿ, ಯಕ್ಷಗಾನಕ್ಕಾಗಿ ಹಾಡಿ” ಎಂಬುದಾಗಿ ಅಂದು ಹೇಳಿದ್ದ ಅವರು ಯಕ್ಷಗಾನಕ್ಕಾಗಿಯೇ ಹಾಡಿದರು. ಯಕ್ಷಗಾನದಲ್ಲಿಯೇ ತಮ್ಮ ಸಾರ್ಥಕ ಬದುಕನ್ನು ಕಂಡವರು.

ಬರಹ: ಮನಮೋಹನ್. ವಿ.ಎಸ್   

ಕಂಚಿನ ಕಂಠದ ಹಿರಿಯ ಬಾಗವತ ಮತ್ಯಾಡಿ ನರಸಿಂಹ ಶೆಟ್ಟಿ

(ಬಡಗುತಿಟ್ಟಿನ ಕಂಚಿನ ಕಂಠದ ಹಿರಿಯ ಬಾಗವತ ಮತ್ಯಾಡಿ ನರಸಿಂಹ ಶೆಟ್ಟಿ (95 ವರ್ಷ) ನಿನ್ನೆ (10-07-2021) ಕುಂದಾಪುರದ ಮತ್ಯಾಡಿಯ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರ ಕುರಿತು  ಪ್ರೊ| ಎಸ್.ವಿ.ಉದಯಕುಮಾರ ಶೆಟ್ಟಿ, ಮಣಿಪಾಲ ಅವರು 2018ರಲ್ಲಿ ಯಕ್ಷದೀಪ ಪತ್ರಿಕೆಯಲ್ಲಿ ಬರೆದ ಲೇಖನ)
ಶ್ರೀ ಮಂದಾರ್ತಿದಶಾವತಾರಯಕ್ಷಗಾನ ಮೇಳದಲ್ಲಿ ಸುಮಾರು 50 ವರ್ಷ ಕಲಾಸೇವೆ ಮಾಡಿದ 92ರ ಇಳಿವಯಸ್ಸಿನ ಹಿರಿಯ ಬಾಗವತರು ಬಡಗುತಿಟ್ಟಿನ ರಂಗಸ್ಥಳವನ್ನು ತಮ್ಮಕಂಚಿನ ಕಂಠದಿಂದ ಆಡಿಸಿದ ಹಿರಿಯ ಬಾಗವತ ಮತ್ಯಾಡಿ ನರಸಿಂಹ ಶೆಟ್ಟರು


ಇದು ಸುಮಾರು ಆರು ದಶಕಗಳ ಹಿಂದಿನ ಮಾತು. ಹಂಗಾರಕಟ್ಟೆಯಲ್ಲಿ ಮಂದರ್ತಿ ಮತ್ತು ಅಮ್ರತೇಶ್ವರೀ ಮೇಳಗಳ ಜೋಡಾಟ ತೀವ್ರ ಪೈಪೋಟಿಯಿಂದ ನೆಡೆದಿತ್ತು. ಸೈಂದವ ವದೆ ಪ್ರಸಂಗದಲ್ಲಿ ಸಮಸಪ್ತಕರನ್ನು ಸದೆ ಬಡಿದ ಅರ್ಜುನನಾಗಿ ಬಡಗುತಿಟ್ತಿನ ದಂತಕಥೆ ಹಾರಾಡಿ ದಿ.ಕುಷ್ಟ ಗಾಣಿಗರು ತನ್ನ ಪಾಳಯಕ್ಕಾಗಿ ಹಿಂದಿರುಗುವಾಗ ಮಂಗಳಾಂಗಿನಿಯರು ಆರತಿಯೆತ್ತಿ ಸ್ವಾಗತಿಸುತ್ತಾರೆ. ಬಾಗವತರು ‘ರತುನದಾರತಿಯೆತ್ತಿ…………”ಪದವನ್ನು ಏರುದ್ವನಿಯಲ್ಲಿ ಹಾಡುತಿದ್ದಂತೆ. ಅಪಶಕುನದ ಛಾಯೆ ಗುರುತಿಸಿದ ಅರ್ಜುನ ಆರತಿ ತಟ್ಟೆಯನ್ನು ಬಲಗೈಯಿಂದ ಎತ್ತಿ ಹಾರಿಸಿದಾಗ ಬಾಗವತರ ಸನಿಹದಲ್ಲೇ ತಟ್ಟೆ ಬಿತ್ತಾದರೂ ಅದೇ ತಾದಾತ್ಮ್ಯ ಹೊಂದಿ ಬಾಗವತರು ಹಾಡುತಿದ್ದರು. ಇಂದೆಲ್ಲಾ ಇದು ಗತ ವೈಭವವಾಗಿ ಕಂಡರೂ ಅಂದಿನ ಇಂತಹ ರಸ ರೋಮಾಂಚನಗೊಳಿಸುವ ಘಟನೆಗಳ ಸರಮಾಲೆಯನ್ನೇ ನಮ್ಮೆದುರು ತೆರೆದಿಡುವ ಹಿರಿಯ ಸಂಪ್ರದಾಯದ ಶೈಲಿಯ ಬಾಗವತರು ನಮ್ಮ ನಡುವೆ ಇದ್ದ ಬಡಗಿನ ಅತ್ಯಂತ ಹಿರಿಯ ವಯಸ್ಸಿನ ಮತ್ಯಾಡಿ ನರಸಿಂಹ ಶೆಟ್ಟರು.


ಕುಂದಾಪುರ ತಾಲೂಕಿನ ಯಕ್ಷಗಾನದ ಆಡೊಂಬಲವಾದ ಹಳ್ಳಾಡಿ ಸಮೀಪ ಯಡಾಡಿ-ಮತ್ಯಾಡಿ ಗ್ರಾಮದಲ್ಲಿ 1927ರಲ್ಲಿ ರಾಮಣ್ಣ ಶೆಟ್ಟಿ ಮುತ್ತಕ್ಕ ಶೆಡ್ತಿ ದಂಪತಿಗಳ ಪುತ್ರನಾಗಿ ಮದ್ಯಮ ವರ್ಗದ ಬಂಟ ಕುಟುಂಬದಲ್ಲಿ ಜನಿಸಿದ ಇವರ ಒಲವು ಯಕ್ಷಗಾನದತ್ತ ತಿರುಗಿದ್ದು ಅನೀರೀಕ್ಷಿತ. ಯಕ್ಷಗಾನ ರಂಗದ ಮಹಾನ್‍ ಕಲಾವಿದರ ಹಾಗೆ ಇವರ ವಿದ್ಯಾಬ್ಯಾಸ ಅರ್ಧಕ್ಕೆ ನಿಂತರೂ ಬಡಗುತಿಟ್ಟಿನ ಯಕ್ಷ ಸಾಮ್ರಾಜ್ಯಕ್ಕೆ ಇವರು ಸೂತ್ರದಾರಿಯಾದರು. ಗುರು ನಾರ್ಣಪ್ಪ ಉಪ್ಪೂರರಲ್ಲಿ ಶುದ್ದ ಸಾಂಪ್ರದಾಯದ ರಾಗ-ತಾಳ. ಮಟ್ಟು-ದಸ್ತುಗಳ ಪರಿಚಯ ಮಾಡಿಕೊಂಡ ಇವರು ಪ್ರಥಮವಾಗಿ ಮಲ್ಪೆ ಸಮೀಪದ ಕೊಡವೂರು ಮೇಳದಲ್ಲಿ ತಾಳ ಹಿಡಿದರು.

ಮುಂದೆ ಬಯಲಾಟ ಮೇಳವಾಗಿದ್ದ ಪೆರ್ಡೂರು ಮೇಳ ಸೇರಿದ ಇವರು ಅಲ್ಲಿ ಬಾಗವತರಾಗಿದ್ದ ಗುಂಡ್ಮಿ ರಾಮಚಂದ್ರ ನಾವಡರಿಂದ ಕುಂಜಾಲು ಶೈಲಿಯ ಬಾಗವತಿಕೆ ಅಬ್ಯಾಸ ಮಾಡಿದರು. ಅವರಿಂದ ರಂಗತಂತ್ರ, ಆಟವಾಡಿಸುವ ಕಲೆ ಕರಗತ ಮಾಡಿಕೊಂಡ ಇವರು ಪುನಹ ತನ್ನ ಗುರುಗಳಿದ್ದ ಅಮೃತೇಶ್ವರೀ ಮೇಳಕ್ಕೆ ಸೇರಿದರು.ಇಲ್ಲಿ ಅವರ ಬಾಗವತಿಕೆಯ ಮಟ್ಟುಗಳು ಗಟ್ಟಿಗೊಂಡವು. ಬಳಿಕ ನೇರವಾಗಿ ಪ್ರಸಿದ್ದ ಬಯಲಾಟ ಮೇಳವಾದ ಮಂದಾರ್ತಿ ಮೇಳದಲ್ಲಿ ನಾಲ್ಕು ದಶಕಗಳಷ್ಟು ಕಾಲ ಸೇವೆ ಸಲ್ಲಿಸಿದ ಶೆಟ್ಟರು ಅಲ್ಲಿನ ನೆನಪುಗಳನ್ನು ಮೆಲುಕು ಹಾಕುತ್ತಾರೆ.

ಬಡಗುತಿಟ್ಟಿನ ಅವಿಸ್ಮರಣೀಯ ಕಲಾವಿದರಾದ ಹಾರಾಡಿ ರಾಮ ಗಾಣಿಗ, ಕುಷ್ಟ ಗಾಣಿಗ, ನಾರಾಯಣ ಗಾಣಿಗ ಕೊಕ್ಕರ್ಣೆ ನರಸಿಂಹ ಕಾಮತ್, ಕೊರ್ಗು ಹಾಸ್ಯಗಾರ ಉಡುಪಿ ಬಸವ ವೀರಭದ್ರ ನಾಯಕ್ ಹೀಗೆ ನಾವು ಕಾಣದ ಕೇಳದ ಮಹಾನ್‍ ಕಲಾವಿದರನ್ನು ರಂಗದಲ್ಲಿ ಕುಣಿಸಿದ ಕೀರ್ತಿ ಇವರಿಗಿದೆ. ಮೂರು ತಲೆಮಾರಿನ ಕಲಾವಿದರನ್ನು ರಂಗದಲ್ಲಿ ದೀಗಣ ಹಾಕಿಸಿದ ಇವರು ಅಂದಿನ ಹಾರಾಡಿ ತಿಟ್ಟಿನ ಜಾಪು-ಛಾಪು, ಮಟ್ಪಾಡಿ ತಿಟ್ಟಿನ ನರ್ತನ ಆಂಗಿಕ ಚಲನೆ ಈಗಿನವರಲ್ಲಿಲ್ಲ ಎಂದು ವ್ಯಥೆ ಪಡುತ್ತಾರೆ. ಇದು ಇಂದು ಆದುನೀಕರಣಗೊಂಡ ಯಕ್ಷಗಾನದ ಬಗ್ಗೆ ಬೇಸರದ ಬಾವವನ್ನು ಸೂಚಿಸುತ್ತದೆ.


ಹಲವಾರು ತಿರುಗಾಟವನ್ನು ರಾಮ ಗಾಣಿಗರ ಯಜಮಾನಿಕೆಯಲ್ಲಿ ನೆಡೆಸಿದ ಶೆಟ್ಟರು ತಮ್ಮ ಬಹುತೇಕ ತಿರುಗಾಟವನ್ನು ವಿದ್ಯುದ್ದೀಪವಿಲ್ಲದೆ ದೊಂದಿ ಬೆಳಕಿನಲ್ಲಿ, ದ್ವನಿವರ್ದಕವಿಲ್ಲದೆ ಕಳೆದವರು. ಇದೊಂದು ಕೊರತೆಯೋ ಲೋಪವೋ ಎಂದು ಆಗ ಅವರಿಗೆ ಅನಿಸಿದ್ದಿಲ್ಲ. ಸುಮಾರು 50 ಪೌರಾಣಿಕ ಪ್ರಸಂಗಗಳು ಕಂಠ ಪಾಠವಿರುವ ಇವರಿಗೆ ಸುದನ್ವಾರ್ಜುನ, ಮೈರಾವಣ ಕಾಳಗ, ಅತಿಕಾಯ, ಕರ್ಣಾರ್ಜುನ ಪ್ರಸಂಗವೆಂದರೆ ಅಚ್ಚುಮೆಚ್ಚು. ವೀರಭದ್ರ ನಾಯಕರ ಅತಿಕಾಯ, ಶಿರಿಯಾರ ಮಂಜು ನಾಯ್ಕರ ದೇವವ್ರತ, ಕೊರ್ಗು ಹಾಸ್ಯಗಾರರ ಬಾಹುಕ, ಹಳ್ಳಾಡಿ ಮಂಜಯ್ಯ ಶೆಟ್ಟರ ಋತುಪರ್ಣ, ಉಡುಪಿ ಬಸವನವರ ಚಿತ್ರಸೇನ, ಕೊಕ್ಕರ್ಣೆ ನರಸಿಂಹನವರ ಶಶಿಪ್ರಭೆ, ಹಾರಾಡಿ ರಾಮನವರ ಹಿರಣ್ಯಕಶ್ಯಪು, ಕರ್ಣ, ಜಾಂಬವ, ಕುಷ್ಟ ಗಾಣಿಗರ ಪುಷ್ಕಳ ಅರ್ಜುನ ನಾರಾಯಣ ಗಾಣಿಗರ ಕಯಾದು, ಕೃಷ್ಣ ಮುಂತಾದ ಪಾತ್ರಗಳನ್ನು ರಂಗದಲ್ಲಿ ಕುಣಿಸಿದ ತೃಪ್ತಿ ಇವರಿಗಿದೆ.


ಜೋಡಾಟದಲ್ಲಿಯೂ ನಿಷ್ಣಾತರಾದ ಇವರು ವಿಪರ್ಯಾಸವೆಂಬಂತೆ ತಮ್ಮಗುರು ಉಪ್ಪೂರರ ಎದುರಿಗೆ ಪದ್ಯ ಹೇಳಬೇಕಾಗಿ ಬಂದಿದ್ದು ವಿಶೇಷ ಅಲ್ಲಿಯೂ ಸಹ ಗುರುವಿನಿಂದ ಸೈ ಎಣಿಸಿಕೊಂಡ ಇವರು ಇಂದಿಗೂ ಸಹ ಎಲೆಮರೆಯ ಕಾಯಿಯಂತೆ ತಮ್ಮ ಕಂಠಸಿರಿಯನ್ನು  ವಿಕೃತಗೊಳಿಸದೆ ಲಯಬದ್ದವಾಗಿ ಹಾಡಬಲ್ಲರು. ಸರಿ ಸುಮಾರು ಅರ್ದ ಶತಮಾನಗಳ ಕಾಲ ಬಯಲುಗದ್ದೆಯ ನಾಲ್ಕು ಕಂಬದ ನಡುವೆ ಬಡಗುತಿಟ್ಟನ್ನು ಶ್ರೀಮಂತಗೊಳಿಸಿದ ಶೆಟ್ಟರ ಖಾಸಗಿ ಬದುಕು ಮಾತ್ರ ಶ್ರಿಮಂತವಾಗಲಿಲ್ಲ ಎನ್ನುವುದೆ ದೌರ್ಬಾಗ್ಯ.


ನರಸಿಂಹ ಶೆಟ್ಟರನ್ನು ಹುಡುಕಿಕೊಂಡು ಬಂದ ಸನ್ಮಾನ ಪ್ರಶಸ್ತಿಗಳು ಹಲವಾರು.ಉಡುಪಿ ಯಕ್ಷಗಾನಕಲಾರಂಗದಲ್ಲಿ ದಿ.ಉಪ್ಪೂರರ ಬಂದುಗಳು ಸ್ಥಾಪಿಸಿದ ಪ್ರಥಮ ವರ್ಷದ ಪ್ರಶಸ್ತಿ ಇವರಿಗೆ ಸಂದಿದೆ. ಸೀತಾನದಿ ಪ್ರಶಸ್ತಿ. ಕುಂದಾಪುರದ ಎಂ.ಎಂ.ಹೆಗ್ಡೆ ಪ್ರಶಸ್ತಿ. ಬಣ್ಣದ ಸಕ್ಕಟ್ಟು ಪ್ರತಿಷ್ಟಾನದ ಪ್ರಶಸ್ತಿ ಅಲ್ಲದೆ ಕಳೆದ ಸಾಲಿನ ಕರ್ನಾಟಕ ಜಾನಪದ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ, ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾನಿಲಯದ ದಯಾನಂದ ಪೈ ಸತೀಶ ಪೈ ಅದ್ಯಯನ ಪೀಠದ ವತಿಯಿಂದ ನೀಡಲ್ಪಡುವ ಪ್ರತಿಷ್ಟಿತ ಯಕ್ಷ ಮಂಗಳ ಪ್ರಶಸ್ತಿ ಇವರಿಗೆ ಸಂದಿದೆ.

ಲೇಖಕ: ಪ್ರೊ| ಎಸ್.ವಿ.ಉದಯಕುಮಾರ ಶೆಟ್ಟಿ,
ಮಣಿಪಾಲ, ಪೋನ್ 9449367729

ಅಪರೂಪದ ಪ್ರತಿಭಾ ಸಂಪನ್ನ ದಾಸರಬೈಲು ಚನಿಯ ಭಾಗವತರು

(ದಾಸರಬೈಲು ಚನಿಯ ಭಾಗವತರು ವಿಧಿವಶರಾದ ಸಂದರ್ಭದಲ್ಲಿ ಬರೆದ ಲೇಖನವಿದು)

ಯಕ್ಷಗಾನ ರಂಗದಲ್ಲಿ ಭಾಗವತನೇ ಸೂತ್ರಧಾರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವನು “ಭಾಗವತ”ನಾಗಿರಬೇಕೆಂಬುದು ಮುಖ್ಯ. ಯಕ್ಷಗಾನ ಕಲೆಗೆ ಆಧಾರಸ್ಥಂಭವಾಗಿರುವ “ಸಭಾಲಕ್ಷಣ”ದಲ್ಲಿ ಹೇಳಿರುವ “ಭಾಗವತ” ಪದಲಕ್ಷಣಗಳನ್ನೊಳಗೊಂಡು ಆಶುಕವಿತ್ವ, ಹಿಮ್ಮೇಳ ಮುಮ್ಮೇಳಗಳ ನಿಖರವಾದ ಜ್ಞಾನವಿದ್ದು ಬಿಳಿನಾಲ್ಕು, ಕಪ್ಪು ಮೂರರ ಶೃತಿಯಲ್ಲಿ ಹಾಡಬಲ್ಲ ಭಾಗವತನು ಸುಖಕರವಾದ ಕಂಠತ್ರಾಣವನ್ನೂ ಹೊಂದಿರಬೇಕು.

ಹೀಗೆ ಹಲವು ಅರ್ಹತೆಗಳಿಂದ ಕೂಡಿರಬೇಕಾದ “ನಿಜಭಾಗವತ”ರ ಸಂಖ್ಯೆ ಇಂದು ಇಳಿಮುಖವಾಗಿ ಪಾತ್ರಧಾರಿಗಳು ಮಾತ್ರವಲ್ಲ ವ್ಯವಸ್ಥಾಪಕರು ಕೂಡಾ ರಂಗ ನಿಯಂತ್ರಣದಲ್ಲಿ ಕಾಣಿಸಿಕೊಳ್ಳುವಂತಾಗಿದೆ. ಅರ್ಥಧಾರಿಗಳು, ವೇಷಧಾರಿಗಳು, ತಮ್ಮ ಕಾರ್ಯವ್ಯಾಪ್ತಿಯನ್ನು ಮೀರಿ ಆ ಪದ್ಯವನ್ನು ಬಿಡಿ, ಈ ಪದ್ಯವನ್ನು ಹೇಳಿ, ಅಲ್ಲಿ ಮೂರು ಮುಕ್ತಾಯ ಕೊಡಿ, ಅದಕ್ಕೆ ಬಿಡಿತ ಬೇಡ, ಇತ್ಯಾದಿ ಕಟ್ಟಪ್ಪಣೆಯೊಂದಿಗೆ “ಭಾಗವತ” ನನ್ನು ನಿಯಂತ್ರಿಸುವುದಕ್ಕೆ ತೊಡಗುತ್ತಿರುವುದು ಇತ್ತೀಚೆಗೆ ಅಧಿಕವಾಗಿ ಕಂಡುಬರುತ್ತಿರುವುದೂ ಒಂದು ಕಾರಣವಾಗಿ ಪ್ರಾಯಶಃ ಅದು ಹೊಸ ತಲೆಮಾರಿನ ಕೆಲವು ಭಾಗವತರ ಜವಾಬ್ದಾರಿಯುತ ಬೆಳವಣಿಗೆಗೆ ತೊಡಕಾಗುತ್ತಿದೆಯೆ? ಇದು ಗಮನಿಸಬೇಕಾದ ವಿಚಾರ.


ಇವೆಲ್ಲದರ ನಡುವೆಯೂ ಮೆರೆದ ಸಮರ್ಥ ಭಾಗವತರಲ್ಲೊಬ್ಬರಾದ ದಿ| ದಾಸರಬೈಲು ಚನಿಯ ನಾಯ್ಕರು ಅಲ್ಲಿ ಮತ್ತೆ ತನ್ನದೇ ಆದ ಒಂದು ಪ್ರತ್ಯೇಕ ಸ್ಥಾನದಲ್ಲಿ ವಿಜೃಂಭಿಸುತ್ತಾರೆ. ನಾನು ತಿಳಿದಂತೆ ಹಾಗಿತ್ತು ಅವರ ಭಾಗವತ ಪ್ರತಿಭೆ. ಪ್ರತಿಭೆಗಿಂತ ಹೆಚ್ಚಿನ ಪ್ರಕಾಶಕ್ಕೆ ಒದ್ದಾಡುವ, ಚಡಪಡಿಸುವ, ಕಲಾವಿದರ ಸಂಖ್ಯೆಯೇ ಅಧಿಕವಾಗಿರುವ ಈ ಕಾಲಘಟ್ಟದಲ್ಲಿ ಚನಿಯ ಭಾಗವತರ ಹೆಸರು ಹಿಂದೆ ಬಿದ್ದುದರಲ್ಲಿ ಆಶ್ಚರ್ಯವಿಲ್ಲ. “ಎಲೆಮರೆಯ ಹಣ್ಣು” “ನಿರಾಡಂಬರ” “ಸರಳ” “ಸಜ್ಜನ” ಇತ್ಯಾದಿ ಶಬ್ದಗಳಿಗೆ ಯಕ್ಷಗಾನ ಕಲಾ ಭೂಮಿಕೆಯಲ್ಲಿ ಪರ್ಯಾಯವಾಗಿ ಚನಿಯ ನಾಯ್ಕರ ಹೆಸರನ್ನು ಬೆಟ್ಟುಮಾಡಿ ತೋರಿಸಬಹುದು.


ಮೋಹಕವಾದ ಚನಿಯ ಭಾಗವತರ ಹಾಡುಗಾರಿಕೆ ಭಾವತನ್ಮಯತೆಯಿಂದ ಕೂಡಿರುತಿತ್ತು. ಪಾತ್ರಧಾರಿಯಲ್ಲಿ ಅಡಗಿದ್ದ ಅಂತಃಸತ್ವವನ್ನು ಹೊರಗೆಳೆಯುವ ವಿಶೇಷವಾದ ಶಕ್ತಿ ಅವರ ಭಾಗವತಿಕೆಯಲ್ಲಿತ್ತು. ಅವರ ಹಾಡುಗಾರಿಕೆಯಲ್ಲಿ ಪ್ರೇಕ್ಷಕನಿಗೆ ಸಿಗುವ ಸುಖಾನುಭವವೇ ಬೇರೆ. “ಭಾಗವತ” ಸ್ಥಾನವನ್ನುಳಿಸಿಕೊಂಡು ಮೇಳಗಳಲ್ಲಿಯೂ ಹವ್ಯಾಸಿಯಾಗಿಯೂ ಸಂಚರಿಸಿದ ಚನಿಯ ಭಾಗವತರ ಕಲಾ ಸಂಸ್ಕಾರದ ಹರಹು ಸಣ್ಣದಲ್ಲ. ನ್ಯಾಯವಾಗಿ ಸಿಗಬೇಕಾಗಿದ್ದ ಸ್ಥಾನ ಗೌರವ ಅವಕಾಶಗಳಿಂದ ಅವರು ವಂಚಿತರಾಗಿದ್ದರೂ ನಿಜ ಕಲಾವಿದನಾಗಿದ್ದ ಅವರಿಗೆ ಅದರ ಗೊಡವೆಯೇ ಇರಲಿಲ್ಲ. ಇದು ಯಕ್ಷಗಾನ ರಂಗದ ದುರ್ವಿಧಿ ಎನ್ನದೆ ವಿಧಿಯಿಲ್ಲ. ಆ ಕಾರಣವೇ ಇಂದು ಅವರು ನಮ್ಮಿಂದ ಭೌತಿಕವಾಗಿ ದೂರವಾದರೂ ಅವರ ನೆನಪೆಂಬ ಸಾಮೀಪ್ಯಭಾವ ನಮ್ಮ ಚಿತ್ತದಲ್ಲಿ ಸದಾ ಉಳಿಯುವಂತಾಗಿದೆ.


ಭೀಷ್ಮಾರ್ಜುನ ಪ್ರಸಂಗದಲ್ಲಿ ಶ್ರೀಕೃಷ್ಣನು ಚಕ್ರಧಾರಿಯಾಗುವ ಸಂದರ್ಭದಲ್ಲಿ ಭೀಷ್ಮನಿಗೆ “ಅಕ್ಷಯಾತ್ಮಕ ಕೇಶವ” ಎಂಬ ಒಂದು ಪದ್ಯವಿದೆ. ಹೆಚ್ಚಾಗಿ ತಾಳಮದ್ದಳೆ ಕೂಟದ ಈ ಪ್ರಸಂಗದ ಈ ಪದ್ಯವನ್ನು ಹಲವಾರು ಭಾಗವತರು ಹಾಡುವುದನ್ನು ನಾನು ಕೇಳಿದ್ದೆ. ದಾಸರಬೈಲು ಚನಿಯ ಭಾಗವತರ ಪರಿಚಯವಾದಂದು ಪ್ರಥಮತಃ ಆ ಪದ್ಯವನ್ನು ಅವರ ಕಂಠಶ್ರೀಯಲ್ಲಿ ಕೇಳಿದಾಗ ಆರಂಭದಲ್ಲಿ ಒಂದೆರಡು ಪದ್ಯಗಳನ್ನು ಹೇಳಿ ಪ್ರೇಕ್ಷಕನಾಗಿ ಕುಳಿತಿದ್ದ ನನಗೆ ರೋಮಾಂಚನವಾಯಿತು. ಭಾವಸ್ಪಂದಿಯಾದ ಆ ಹಾಡಿನಲ್ಲಿ ಅಂತಹಾ ಒಂದು ಸೆಳೆತವಿತ್ತು. ಆ ಮೊದಲು ಮತ್ತು ಆ ಮತ್ತೆ ನಾನು ಕೇಳಿದ ಯಾವ ಭಾಗವತರ “ಅಕ್ಷಯಾತ್ಮಕ ಕೇಶವ”ವೂ ಚನಿಯ ಭಾಗವತರ ಆ ಪದ್ಯದ ಸ್ಥಾನಕ್ಕೆ ಮುಟ್ಟಲಿಲ್ಲ ಎಂಬುದು ಈಗಲೂ ನನ್ನ ಅನಿಸಿಕೆ.

“ಸಾಮ” ರಾಗದಲ್ಲಿ ಆ ಪದ್ಯವನ್ನು ಅವರು ಹಾಡುತ್ತಿದ್ದರು. ಮತ್ತೆ ಹಲವು ಬಾರಿ ಕೇಳಿದ್ದೇನೆ ಅವರ ಅಕ್ಷಯಾತ್ಮಕ. ಅದೇ ರಾಗ, ಅದೇ ಸಂಚಾರ, ಅದೇ ರೀತಿ. ಚನಿಯ ನಾಯ್ಕರ ವಿಶೇಷತೆ ಇರುವುದು ಅಲ್ಲೆ. ಅವರು ಒಂದು ಪ್ರಸಂಗದ ಆಟಕೂಟಗಳ ಭಾಗವತನಾಗಿ ಭಾಗವಹಿಸಬೇಕಿದ್ದರೆ ಪ್ರಸಂಗವನ್ನು ತನ್ನ ಹಸ್ತಪ್ರತಿಯಲ್ಲಿ ಸಿದ್ಧಗೊಳಿಸಿ, ರಾಗ, ತಾಳ, ಲಯವನ್ನು ನಿರ್ಣೈಸಿ ಗಟ್ಟಿಯದಾದ ಸಿದ್ಧತೆಯೊಂದಿಗೆ ರಂಗವನ್ನು ಏರುತ್ತಿದ್ದರು. ಅವರು ಹಾಗೆ ಒಂದು ಪ್ರಸಂಗವನ್ನು ‘ಸೆಟ್’ ಮಾಡಿ ಇಟ್ಟುಕೊಂಡರೆ ಮತ್ತೆ ಅದು ‘ಪರ್ಮನೆಂಟ್’. ಕಾಲಗತಿಗೆ ಹೊಂದಿ ನಾಯ್ಕರು ತಾಳ, ಲಯ ವ್ಯತ್ಯಾಸ ಮಾಡಿದರೂ ರಾಗವನ್ನು ವ್ಯತ್ಯಾಸ ಮಾಡುತ್ತಿರಲಿಲ್ಲ.

ಹೀಗೆ ನಿಯತ್ತಿನ ರಂಗ ಮರ್ಯಾದೆಗೆ ಬದ್ಧರಾಗಿದ್ದ ಚನಿಯ ಭಾಗವತರ ನೆನಪು ಎಂದೆಂದೂ ಮರೆಯಲಾರದ್ದು ಮತ್ತು ಮರೆಯಬಾರದ್ದು. ಅವರಿಗೆ ಚೆಂಡೆ ಮದ್ದಳೆಗೆ ಯಾರೂ ಆದೀತು. ಅಭ್ಯಾಸಿಗಳಾದರೂ ಸುಧಾರಿಸಿಯಾರು. ದೊಡ್ಡ ಮದ್ದಳೆಗಾರರು, ತಾಳ ಕಸರತ್ತು ಪ್ರವೀಣರು ಯಾರೇ ಆದರೂ ಅವರು ಅಧೀರರಾಗರು. ಕಾರಣ ಅವರ ತಾಳ, ಲಯ ಅಷ್ಟು ಗಟ್ಟಿ. ಹಿಂದೆ ಮುಂದೆ ಓಡುವ ಚೆಂಡೆಮದ್ದಳೆಯವರನ್ನು ಎಳೆದು ಸರಿದಾರಿಗೆ ಕೊಂಡು ಹೋಗುವ ಶ್ರಮ ಅವರ ಕ್ರಮ, ಹಿರಿಯ ಕಲಾವಿದರಿಗೆ ಕೊಡುವ ಗೌರವ ಇತ್ಯಾದಿ ಅನುಸರಣೀಯ ಗುಣಗಳ ಗಣಿಯಾಗಿದ್ದ ನಾಯ್ಕರ ನೆನಪು ತೆರೆಯುತ್ತಾ ಹೋದಂತೆ ಮೆರೆಯುತ್ತಾ ಹೋಗುತ್ತದೆ.

ನಮ್ಮ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ನಿಕಟವರ್ತಿಯಾಗಿ ಹೆಚ್ಚಿನ ಎಲ್ಲಾ ಕಾರ್ಯಕ್ರಮಗಳಲ್ಲಿ ನಮ್ಮ ತಂದೆಯವರ ಕಾಲದಿಂದಲೇ (ದಿ| ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್) ಭಾಗವಹಿಸುತ್ತಿದ್ದ ಅವರು ತಂದೆಯವರ ಹೆಚ್ಚಿನ ಪ್ರಸಂಗಗಳನ್ನು ರಂಗದಲ್ಲಿ ಆಡಿಸಿದವರು ಮತ್ತು ಅವರನ್ನು ಗುರುಭಾವದಿಂದ ಗೌರವಿಸುತ್ತಿದ್ದವರು. ನಮ್ಮ ಮನೆಯಲ್ಲಿ, ಕಲಾಮಂದಿರದಲ್ಲಿ ನಿತ್ಯ ಚೆಂಡೆಮದ್ದಳೆ ನಾದ ಮೊಳಗುತ್ತಿದ್ದ ಕಾಲವದು. ಭಾಗವತ ಚನಿಯ ನಾಯ್ಕರೂ ಒಂದೆರಡು ದಿನ ನಮ್ಮಲ್ಲಿ ಉಳಿದದ್ದಿದೆ. ಹಾಗಿತ್ತು ಅವರ ಕಲಾ-ಜೀವನ-ಕಲಾಪ್ರೇಮ. ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ವಿಶೇಷ ಪ್ರಶಂಸೆಗೆ ಪಾತ್ರರಾದ ಕೆಲವೇ ಮಂದಿ ಕಲಾವಿದರಲ್ಲಿ ಒಬ್ಬರಾದ ಚನಿಯ ನಾಯ್ಕರು ದಿ| ಕೀರಿಕ್ಕಾಡು ಸಂಸ್ಮರಣಾ ಸನ್ಮಾನದಲ್ಲಿ ಸನ್ಮಾನಿತರಾಗಿರುವುದು ನಮ್ಮ ಬನಾರಿ ಯಕ್ಷಗಾನ ಕಲಾಸಂಘಕ್ಕೆ ಸಂತೃಪ್ತಿಯನ್ನು ಕೊಟ್ಟಿದೆ.

ನನ್ನ ಅನುಭವದಂತೆ ಹೆಸರಾಂತ ಅರ್ಥಧಾರಿಗಳ ಮಡಿವಂತಿಕೆ, ಭಾಗವತರ ಜಾತಿ, ಬಾಹ್ಯ ಸೌಂದರ್ಯ, ತೀವ್ರ ಬಡತನ ಇತ್ಯಾದಿಗಳೆಲ್ಲ ಕಾರಣವಾಗಿಯೋ ಏನೋ ಚನಿಯ ಭಾಗವತರಲ್ಲಿ ಒಂದು ರೀತಿಯ ಹಿಂಜರಿಕೆ ಕಾಣುತ್ತಿತ್ತು. ದೊಡ್ಡಸೆಟ್ಟಿನ ಒಂದು ತಾಳಮದ್ದಳೆಯಲ್ಲಿ ಅವರು ಭಾಗವತರಾಗಿ ಭಾಗವಹಿಸಿದ್ದರು. ಸುಧನ್ವ ಕಾಳಗ ಪ್ರಸಂಗದ ಅಂದಿನ ಅವರ ಹಾಡು ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ಆ ಮತ್ತೆ ನಾವೊಮ್ಮೆ ಭೇಟಿಯಾದಾಗ ಅವರು (ನಮ್ಮ ಹವ್ಯಕ ಭಾಷೆ ಅವರಿಗೆ ಚೆನ್ನಾಗಿ ಬರುತ್ತಿತ್ತು) “ಅಣ್ಣಾ ಇನ್ನು ಎನ್ನ ಅಂದ್ರಾಣ ಹಾಂಗಿಪ್ಪ ದೊಡ್ಡ ಸೆಟ್ಟಿನ ತಾಳಮದ್ದಳೆಗೆ ಹೇಳೆಡಿ. ಸಣ್ಣ ಸೆಟ್ ಹೇಂಗಿಪ್ಪದೂ ಅಕ್ಕು ಬತ್ತೆ” ಎಂದಿದ್ದರು. ಆಗ ನನ್ನ ಮನಸ್ಸು ಆ ದೊಡ್ಡ ಸೆಟ್ಟಿನ! ಸುಧನ್ವ ಕಾಳಗವನ್ನು ಮೆಲುಕು ಹಾಕಿತು. ಅವರು ಹೇಳಿದ ಮಾತಿನ ಮರ್ಮವೂ ಅರ್ಥವಾಯಿತು.

ಹೌದು. ಅಂದು ಪೂರ್ವನಿಶ್ಚಯದಂತೆ ವೇದಿಕೆಯಲ್ಲಿ ನಡೆಯಬೇಕಾಗಿದ್ದ (ಕರಪತ್ರದಲ್ಲಿ ಮಾತ್ರವಲ್ಲ ಕಾರ್ಯಕ್ರಮದ ಅಂದಿನ ಪಾತ್ರವಿವರಣೆಯಲ್ಲಿ ಕೂಡ) ಸುಧನ್ವಕಾಳಗ ಮತ್ತು ರಾವಣ ವಧೆ ಪ್ರಸಂಗದಲ್ಲಿ ದೊಡ್ಡ ಅರ್ಥಧಾರಿಗಳ ಕೈಯ್ಯಾಡಿಸುವಿಕೆಯಿಂದ ಸುಧನ್ವ ಕಾಳಗ ಮಾತ್ರ ಬೆಳಗಾದ ಮೇಲೆ ಹೇಗೋ ಮುಕ್ತಾಯವಾಗಿತ್ತು. ಚನಿಯ ನಾಯ್ಕರ ಭಾಗವತಿಕೆಗೆ ಮತ್ತು ಒಂದಿಬ್ಬರು ಉದಯೋನ್ಮುಖ ಪ್ರತಿಭಾವಂತ ಅರ್ಥಧಾರಿಗಳ ಉತ್ಸಾಹಕ್ಕೆ ತಣ್ಣೀರೆರಚಿದ ಹಿರಿಯ ಅರ್ಥಧಾರಿಗಳೇ ಅದಕ್ಕೆ ಹೊಣೆಗಾರರೆಂಬ ಸತ್ಯತೆಯ ನೆನಪಾಯಿತು. ಇಂತಹಾ ಕಾರಣಗಳೇ ಕಾರಣವಾಗಿ ಚನಿಯ ಭಾಗವತರು ಮತ್ತೆ ಹೆಸರಾಂತ ದೊಡ್ಡ ಸೆಟ್ ನ ತಾಳಮದ್ದಳೆಯಲ್ಲಿ ಭಾಗವಹಿಸಲೇ ಇಲ್ಲ ಎಂಬುದು ನನ್ನ ನೆನಪು. ಆಮಂತ್ರಿಸಿದರೂ ನಯವಾಗಿ ತಿರಸ್ಕರಿಸಿ ಬಿಡುತ್ತಿದ್ದರು.

ಧರ್ಮಸ್ಥಳ ಮೇಳದಲ್ಲಿ ಆರಂಭದ ಸಂಗೀತಗಾರನಾಗಿಯೂ ಮತ್ತೆ ಮೊದಲ ಭಾಗದ ಭಾಗವತನಾಗಿಯೂ ಕಡತೋಕ ಭಾಗವತರೊಂದಿಗೆ ತಿರುಗಾಟ ಮಾಡಿದ ಚನಿಯ ನಾಯ್ಕರು ಚೌಡೇಶ್ವರಿ ಮೇಳದ ಭಾಗವತರಾಗಿ ಕೆಲವು ವರ್ಷ ವ್ಯವಸಾಯ ಮಾಡಿದವರು. ಹೆಚ್ಚಿನ ಕಾಲ ಹವ್ಯಾಸಿ ರಂಗದಲ್ಲಿಯೇ ಕಾಣಿಸಿಕೊಂಡ ದಾಸರಬೈಲು ಚನಿಯ ಭಾಗವತರು ತೆಂಕುತಿಟ್ಟು ಯಕ್ಷಗಾನ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಬಹಳ ದೊಡ್ಡದು. ಕೆಲವು ಮಂದಿ ಶಿಷ್ಯರನ್ನು ತಯಾರು ಮಾಡಿದ ಇವರಿಂದ ಪ್ರಭಾವಿತರಾದ ಕಲಾಗಡಣ ಸಣ್ಣದಲ್ಲ. ಅನಾರೋಗ್ಯದಿಂದ ಕಷ್ಟದಲ್ಲಿದ್ದ ತನ್ನ ಮಧ್ಯಪ್ರಾಯದಲ್ಲೇ ವಿಧಿವಶರಾದ ದಾಸರಬೈಲು ಚನಿಯ ನಾಯ್ಕರು ಬಾಳಿನಲ್ಲಿ ಸಾಕಷ್ಟು ಕಹಿಯನ್ನುಂಡು ಕಲಾರಂಗಕ್ಕೂ, ಪ್ರೇಕ್ಷಕರಿಗೂ ಸಿಹಿಯೂಟವನ್ನುಣಿಸಿದ ಅಪರೂಪದ ಪ್ರತಿಭಾಸಂಪನ್ನ ಕಲಾವಿದ.

ಲೇಖಕ: ಕೆ.ವಿಶ್ವವಿನೋದ ಬನಾರಿ
‘ಬನಸಿರಿ’ ದೇಲಂಪಾಡಿ
ಅಂಚೆ: ಪಂಜಿಕಲ್ಲು 671543
ಕಾಸರಗೋಡು ಜಿಲ್ಲೆ.

ಯಕ್ಷಗಾನದ ಹಿರಿಯ ಭಾಗವತ ಮತ್ಯಾಡಿ ನರಸಿಂಹ ಶೆಟ್ಟಿ ನಿಧನ

ಬಡಗುತಿಟ್ಟಿನ ಹಿರಿಯ ಭಾಗವತರಾದ ಮತ್ಯಾಡಿ ನರಸಿಂಹ ಶೆಟ್ಟಿ (95 ವರ್ಷ) ನಿನ್ನೆ (10-07-2021) ಕುಂದಾಪುರದ ಮತ್ಯಾಡಿಯ ಸ್ವಗೃಹದಲ್ಲಿ ನಿಧನ ಹೊಂದಿದರು. ದೀರ್ಘಕಾಲ ಮಂದಾರ್ತಿ ಮೇಳದಲ್ಲಿ ಕಲಾಸೇವೆಗೈದ ಇವರು ಕೊಡವೂರು, ಪೆರ್ಡೂರು, ಅಮೃತೇಶ್ವರೀ, ಮಂದಾರ್ತಿ, ಮಾರಣಕಟ್ಟೆ ಹಾಗೂ ಕಳುವಾಡಿ ಮೇಳಗಳಲ್ಲಿ ಒಟ್ಟು ಸುಮಾರು 45 ವರ್ಷಕ್ಕೂ ಹೆಚ್ಚು ವರ್ಷಗಳ ಕಾಲ ಯಕ್ಷಗಾನ ಭಾಗವತರಾಗಿದ್ದ ಇವರಿಗೆ 40ಕ್ಕೂ ಹೆಚ್ಚು ಪೌರಾಣಿಕ ಪ್ರಸಂಗಗಳು ಕಂಠಸ್ಥವಾಗಿದ್ದವು.

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಯಕ್ಷಗಾನ ಕಲಾರಂಗವು ಭಾಗವತ ನಾರ್ಣಪ್ಪ ಉಪ್ಪೂರರ ಸ್ಮರಣಾರ್ಥ ಪ್ರಥಮ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಮೃತರು ಮೂರು ಹೆಣ್ಣು ಹಾಗೂ ಓರ್ವ ಪುತ್ರ ಸೇರಿದಂತೆ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

ರಾಗ – ಭಾವಗಳಿಗೆ ಸ್ಪಂದಿಸಿ ನುಡಿಸುವ ಖ್ಯಾತ ಮೃದಂಗವಾದಕ ಅನಂತ ಪದ್ಮನಾಭ ಪಾಠಕ್

ಯಾವುದೇ ಕ್ಷೇತ್ರದಲ್ಲಿ ವೃತ್ತಿಪರತೆ ಹೆಚ್ಚಾದಷ್ಟೂ ಅದು ತನ್ನ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತದೆ. ಅದರಲ್ಲೂ ಯಕ್ಷಗಾನ ವಿಚಾರದಲ್ಲಿ ಕೇಳುವುದೇ ಬೇಡ. ಸಿದ್ಧಮಾದರಿಗೇ ಜೋತುಬೀಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೆಚ್ಚಿನ ಸಂಖ್ಯೆಯ ಕಲಾವಿದರಂತೂ ಕಣ್ಮುಚ್ಚಿ ಅನುಕರಿಸುವುದರಲ್ಲೇ ತೃಪ್ತಿಯನ್ನು ಪಡೆಯುತ್ತಿದ್ದಾರೆ. ಯಾವುದೇ ಹೊಸತನಕ್ಕೆ, ಪ್ರಯೋಗಶೀಲತೆಗೆ ತೆರೆದುಕೊಳ್ಳದ ಮನಸ್ಸಿನ ಕಲಾವಿದರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ತಥಾಕಥಿತ, ಚರ್ವಿತಚರ್ವಣ ವಿಷಯಕ್ಕೇ ಒಂದಿಷ್ಟು ಮಸಾಲೆ ಹಾಕಿ ಪ್ರೇಕ್ಷಕರನ್ನು ರಂಜಿಸುವ ಕಲಾವಿದರಿಗೆ ಕೊರತೆಯೇನೂ ಇಲ್ಲ. ಇವುಗಳ ಜತೆಗೆ ಯಕ್ಷಗಾನದ ಬೇಸಿಕ್ ಒಂದಿಷ್ಟನ್ನು ಕಲಿತುಕೊಂಡು, ಬಣ್ಣ ಹಚ್ಚಿ, ವೇಷ ತೊಟ್ಟು, ಫೇಸ್‍ಬುಕ್, ವಾಟ್ಸ್‍ಅಪ್, ದೂರದರ್ಶನ, ಪತ್ರಿಕೆ ಮುಂತಾದ ಮಾಧ್ಯಮಗಳ ಮೂಲಕ ಪ್ರಚಾರ ಗಿಟ್ಟಿಸುವ ತಂತ್ರಕ್ಕೆ ಮಿತಿಯೇ ಇಲ್ಲವಾಗಿದೆ. ಇದೊಂದು ಬಗೆಯ ಯಕ್ಷಗಾನ ಆಭಾಸ ಎನ್ನದೆ ಬೇರೆ ಹಾದಿಯಿಲ್ಲ. ಯಕ್ಷಗಾನದಲ್ಲಿ ಸಾಧನೆ ಮಾಡಿ ಹೆಸರು ಪಡೆಯಬೇಕು ಅನ್ನುವುದಕ್ಕಿಂತ ಪ್ರಚಾರ ಮಾಡಿ ಹೆಸರು ಪಡೆಯಬೇಕೆಂಬ ಹಪಹಪಿಕೆಯೇ ಎಲ್ಲೆಲ್ಲೂ ವಿಜೃಂಭಿಸುತ್ತಿದೆ.

ಇವೆಲ್ಲ ಅಪಸವ್ಯಗಳ ಮಧ್ಯದಲ್ಲಿ, ಜಿಡ್ಡುಗಟ್ಟಿದ ವಾತಾವರಣದಲ್ಲಿ ಯಕ್ಷಗಾನಕ್ಕೆ ತಾನೇನು ಕೊಡಬಲ್ಲೆ? ನೂತನ ಆವಿಷ್ಕಾರ ಮಾಡಬಲ್ಲೆ? ಕಲೆಯ ಸೌಂದರ್ಯ ಸಾಧನೆಗೆ, ರಸಾನುಭೂತಿಗೆ, ಭಾವ ಸಂವರ್ಧನಕ್ಕೆ ತಾನೇನು ಕಾಣಿಕೆ ನೀಡಬಲ್ಲೆ ಎಂದು ಯೋಚಿಸುವವರು ಇಲ್ಲದೆ ಇಲ್ಲ. ಖಂಡಿತಕ್ಕೂ ಇದ್ದಾರೆ. ಆದರೆ ಅವರ ಸಂಖ್ಯೆ ಕಡಿಮೆ. ಅಂಥಹವರಲ್ಲಿ ಖ್ಯಾತ ಮೃದಂಗವಾದಕ ಅನಂತ ಪದ್ಮನಾಭ ಪಾಠಕ್ ಒಬ್ಬರು.

ಸಂಕ್ಷಿಪ್ತವಾಗಿ ಎ.ಪಿ. ಪಾಠಕ್ ಎಂದೇ ಕರೆಯಲ್ಪಡುವ ಪಾಠಕರು ಯಕ್ಷಗಾನದ ಸರ್ವ ಅಂಗಗಳನ್ನೂ ಬಲ್ಲವರು. ಚಂಡೆ, ಮೃದಂಗ, ಭಾಗವತಿಕೆ, ನೃತ್ಯ- ಹೀಗೆ ಎಲ್ಲದರಲ್ಲೂ ಪ್ರವೇಶ ಇರುವರು. ಮುಖ್ಯವಾಗಿ ಮೃದಂಗ ವಾದನದಲ್ಲಿ ವಿಶೇಷ ಪ್ರಾವೀಣ್ಯ ಉಳ್ಳವರು; ಅದರಲ್ಲಿ ಸಿದ್ಧಿ-ಪ್ರಸಿದ್ಧಿಯನ್ನೂ ಪಡೆದವರು. ಪಾಠಕರ ಮೃದಂಗವಾದನ ಬಹು ಸೂಕ್ಷ್ಮವಾದುದು. ಅದು ಜಲಪಾತದಂತೆ ಭೋರ್ಗರೆಯುವ ರೀತಿಯದಲ್ಲ; ನದಿಯ ದಡಗಳನ್ನು ಕೊಚ್ಚಿಕೊಂಡು ಹೋಗುವ ನೀರಿನ ರೀತಿಯದಲ್ಲ. ಎರಡು ದಡಗಳ ಮಧ್ಯದಲ್ಲಿ ಕಣ್ಣಿಗೆ ಗೋಚರಿಸದೆ ರಭಸದಲ್ಲಿ, ವೇಗದಲ್ಲಿ ತುಂಬಿ ಹರಿಯುವ ನದಿಯ ನೀರಿನಂತಹದ್ದು. ಮುಂದಡಿಯಿಟ್ಟರೆ ಸೆಳೆದುಕೊಂಡು ಬಿಡುವಂಥಾದ್ದು. ಅಂದರೆ ನದಿಯಲ್ಲಿ ಹೆಜ್ಜೆಯಿಡುವವನಿಗೆ ಎಲ್ಲಿ ನೀರಿನ ಸುಳಿಯಿದೆ? ಕಲ್ಲುಬಂಡೆಗಳಿವೆ? ಜಲಚರಗಳಿವೆ? ಮುತ್ತುರತ್ನಗಳಿವೆ? ಎಂದು ಗೊತ್ತಿರಬೇಕಾಗುತ್ತದೆ.

ಅಂದರೆ ಪಾಠಕರ ಮೃದಂಗವಾದನದ ಕೌಶಲ, ಪಾಂಡಿತ್ಯ, ಚಮತ್ಕಾರ ಆಸ್ವಾದ್ಯವಾಗಬೇಕಾದರೆ ಅವನಿಗೆ ಮೃದಂಗ ವಾದನದ ವರ್ಣಮಾಲೆ ಅಷ್ಟಿಷ್ಟಾದರೂ ಗೊತ್ತಿರಬೇಕಾಗುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ- ಅವರದ್ದು ತನಗೆ ಗೊತ್ತಿರುವುದನ್ನು ಮೆರೆಸುವುದಕ್ಕಿಂತ ತನಗೆ ಗೊತ್ತಿರುವುದರಲ್ಲಿ ಹೊಸದನ್ನು ಕಾಣಿಸುವ, ಆವಿಷ್ಕರಿಸುವ ಪ್ರವೃತ್ತಿಯದು. ಹಾಲಿನಲ್ಲಿ ಬೆರೆತ ಸಕ್ಕರೆ ತಾನು ಕಾಣಿಸಿಕೊಳ್ಳದೆ ಹಾಲಿಗೆ ರುಚಿಯನ್ನೂ, ಮಾಧುರ್ಯವನ್ನೂ ಕೊಡುವಂತೆ ಪಾಠಕರದ್ದು ಪ್ರೇಕ್ಷಕರಿಗೆ ರಸಾನುಭವ ಮಾಡಿಸುವಂಥಾದ್ದು.

ಯಕ್ಷಗಾನ ಬಯಲಾಟದಲ್ಲಿ ಅಥವಾ ತಾಳಮದ್ದಳೆಯಲ್ಲಿ ಭಾಗವತ ಹಾಡಿದಂತೆಲ್ಲ ಆ ಹಾಡಿನ ತಾಳಗಳು ಮೃದಂಗ ಮತ್ತು ಚಂಡೆಯಲ್ಲಿ ಮೂಡಿ ವಿನ್ಯಾಸಗೊಳ್ಳುತ್ತವೆ. ಪರಿಣಾಮ ಕರುಣ, ವೀರ, ಶೃಂಗಾರಾದಿ ಯಾವುದಾದರೂ ಒಂದು ರಸ, ಭಾವ ಆವಿರ್ಭಾವಗೊಳ್ಳುತ್ತದೆ. ಪಾಠಕರಿಗೆ ಸರಿಯಾದ ಭಾಗವತ ಸಿಕ್ಕಿದರೆ, ಅವನು ರಸಜ್ಞನಾಗಿದ್ದರೆ ಅವರು ತಾಳಾನುಗುಣವಾಗಿ ಗಾನದೊಡನೆ ಮೃದಂಗವಾದನವನ್ನು ಬೆರೆಸಿ ರಸಾತ್ಮಕವಾಗಿ ಭಿನ್ನ ಭಿನ್ನ ಕೌಶಲಗಳನ್ನು ಬೀರಿ ರಸದ ಬುಗ್ಗೆಯನ್ನು ಹರಿಸಬಲ್ಲರು. ಹಾಡಿನ ತಾಳಗಳನ್ನು ಬಿಡಿ ಬಿಡಿಯಾಗಿ ವಿಂಗಡಿಸಿ ಗಣಿತಾನುಗುಣವಾಗಿ ಹಿಗ್ಗಿಸಿ ಕುಗ್ಗಿಸಿ ಮೊತ್ತದಲ್ಲಿ ಒಂದಾಗಿ ಹೊಂದಿಸಿ ಸಮರಸವಾಗಿ ಸ್ಫುರಿಸಬಲ್ಲರು. ಪದ್ಯಾನುಗತವಾದ ಕವಿ ಹೃದಯ, ಭಾವ, ರಸವಿಶೇಷವನ್ನು ಬಹು ಸುಂದರವಾಗಿ ಪ್ರಕಟಿಸಬಲ್ಲರು.

“ಮದ್ದಳೆ ಬಾರಿಸುವುದೆಂದರೆ ಭಾಗವತರಿಗೆ, ಹಿಮ್ಮೇಳಕ್ಕೆ, ನರ್ತನಕ್ಕೆ ಅಥವಾ ನೃತ್ತಕ್ಕೆ (ಕುಣಿತಕ್ಕೆ) ಬಾರಿಸುವುದು ಎಂದೇ ಬಹಳ ಮಂದಿಯ ಗ್ರಹಿಕೆ. ಅದು ಹೌದಾದರೂ ಮೃದಂಗವಾದಕನ ನಿಜ ಕಸುಬು ಸಾಕಾರಗೊಳ್ಳುವುದು ಪಾತ್ರಕ್ಕೆ ನುಡಿಸುವುದರಿಂದ, ಭಾವಕ್ಕೆ ಸ್ಪಂದಿಸುವುದರಿಂದ, ರಾಗಕ್ಕೆ ಅನುಸರಿಸುವುದರಿಂದ ಮತ್ತು ರಂಗ ಪರಿಣಾಮಕ್ಕೆ ಅನುನಯಿಸುವುದರಿಂದ” ಎಂದು ಮಂಟಪ ಪ್ರಭಾಕರ ಉಪಾಧ್ಯ ಹೇಳುತ್ತಾರೆ. ತಮ್ಮ ಏಕವ್ಯಕ್ತಿ ಪ್ರದರ್ಶನದಲ್ಲಿ ಮುಖ್ಯ ಮೃದಂಗಕಾರರಾಗಿದ್ದ ಪಾಠಕರ ಬಗ್ಗೆಯೇ ಹೇಳಿದ ಮಾತಿದು. ಪಾಠಕರು ಈ ಎಲ್ಲವನ್ನೂ ವೇದಿಕೆಯಲ್ಲಿ ಸಮರ್ಥವಾಗಿ ಸಾಕಾರಗೊಳಿಸಬಲ್ಲರು.


ಪಾಠಕರು ಯಕ್ಷಗಾನ ಪ್ರಪಂಚಕ್ಕೆ ದಕ್ಕುವಂತಾಗಿದ್ದು ಅವರ ಮನೆಯ ವಾತಾವರಣದಿಂದ. ಅವರ ತಂದೆ ಶ್ರೀಕಂಠ ಪಾಠಕರು ತಾಳಮದ್ದಳೆ ಅರ್ಥಧಾರಿಗಳಾಗಿದ್ದರು; ಕಲಾಪ್ರೇಮಿಗಳಾಗಿದ್ದರು. ಪಾಠಕರು ಜನ್ಮವೆತ್ತಿದ ಕಾರ್ಕಳ-ದುರ್ಗದ ಸುತ್ತ ಯಕ್ಷಗಾನ, ತಾಳಮದ್ದಳೆಗಳು ಜರುಗುತ್ತಲೇ ಇರುತ್ತಿದ್ದವು. ಪಾಠಕರ ತಾಯಿ ಗಿರಿಜಾ ಅವರ ತಂದೆ ನಾರಾಯಣ ಭಟ್ ಥಾಮನ್‍ಕರ್ ಸ್ವತಃ ಹಾರ್ಮೋನಿಯಂ ವಾದಕರಾಗಿದ್ದರು. “ಅಂಬಾ ಪ್ರಸಾದಿತ” ಎಂಬ ನಾಟಕ ಕಂಪನಿಯನ್ನು ನಡೆಸುತ್ತಿದ್ದರು. ಪಾಠಕರ ದೊಡ್ಡಪ್ಪ ವಿಶ್ವನಾಥ ಪಾಠಕರು ವಯೋಲಿನ್ ವಾದಕರಾಗಿದ್ದರು. ಇಂತಹ ಕಲೆಯ, ಸಾಂಸ್ಕೃತಿಕ ವಾತಾವರಣದಲ್ಲಿ ಎಣ್ಣೆಹೊಳೆ ಶ್ರೀನಿವಾಸ ನಾಯ್ಕ ಎಂಬವರು ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ಮನೆ ಮನೆಗೆ ಹೋಗಿ ಚಂಡೆ ಹಾಗೂ ಮೃದಂಗ ವಾದನವನ್ನು ಕಲಿಸುತ್ತಿದ್ದರು. ಬಾಲಕ ಅನಂತಪದ್ಮನಾಭನಿಗೂ ಮೃದಂಗದ ಒಂದಿಷ್ಟು ಪಾಠಗಳಾದವು. ಇವೆಲ್ಲವೂ ಅವರನ್ನು ಯಕ್ಷಗಾನ ಪ್ರಪಂಚಕ್ಕೆ ಪ್ರವೇಶಿಸುವಂತೆ ಮಾಡಿದವು.


ಹತ್ತನೆ ಇಯತ್ತೆಯವರೆಗೆ ಓದಿದ ಪಾಠಕರು 1985ರಲ್ಲಿ, ತಮ್ಮ ಹದಿನೇಳನೇ ವಯಸ್ಸಿನಲ್ಲಿ ಮೃದಂಗ ಕಲಿಯಲೆಂದು ಉಡುಪಿ ಯಕ್ಷಗಾನ ಕೇಂದ್ರಕ್ಕೆ ಸೇರಿದರು. ಆಗ ಭಾಗವತಿಕೆಗೆ ನೀಲಾವರ ಲಕ್ಷ್ಮೀನಾರಾಯಣಯ್ಯನವರು, ಮೃದಂಗಕ್ಕೆ ಮಹಾಬಲ ಕಾರಂತರು, ನೃತ್ಯಕ್ಕೆ ಸಂಜೀವ ಸುವರ್ಣರು ಬೋಧಕರಾಗಿ ಕೆಲಸ ಮಾಡುತ್ತಿದ್ದರು. 1985ರಿಂದ 86ರವರೆಗೆ ಒಂದು ವರ್ಷ ಮೃದಂಗ ವ್ಯಾಸಂಗ ಮಾಡಿದ ಪಾಠಕರು ಸಂಗೀತ ನಿರ್ದೇಶಕ, ಕಲಾಚಿಂತಕ ಗುರುರಾಜ ಮಾರ್ಪಳ್ಳಿಯವರ ಸಲಹೆ, ಮಾರ್ಗದರ್ಶನದಂತೆ ರಂಗತಾಲೀಮು ಅಭ್ಯಾಸಕ್ಕಾಗಿ “ನೀನಾಸಂ” ಸೇರಿದರು. ಅಲ್ಲಿ ಪಾಠಕರಿಗೆ ಖ್ಯಾತ ನಾಟಕ ನಿರ್ದೇಶಕ ಸುಬ್ಬಣ್ಣ, ಚಿದಂಬರ ರಾವ್ ಜಂಬೆ, ಅಕ್ಷರ ಮೊದಲಾದವರ ಒಡನಾಟ ಲಭಿಸಿತು. ಅಲ್ಲಿ ಅವರಿಗೆ ರಂಗತಂತ್ರದ ಅನೇಕ ಮರ್ಮಗಳು ತಿಳಿದವು. ರಂಗಭೂಮಿ ಎಂದರೆ ಏನು? ಡೈಲಾಗ್ ಡೆಲಿವರೆಗೆ ಸ್ಪಂದಿಸುವುದು ಹೇಗೆ? ಮೌನವೂ ಒಂದು ಭಾಷೆಯಾದಾಗ ಉಂಟಾಗುವ ಪರಿಣಾಮ ಏನು? ಎಂಬಿತ್ಯಾದಿ ರಂಗತಂತ್ರಗಳು ವೇದ್ಯ ವಾದವು.

ಇಲ್ಲಿ ನಾವು ಗಮನಿಸಬೇಕಾದ ಸಂಗತಿಯೆಂದರೆ- ಪಾಠಕರಿಗೆ ಕಲಿಕೆಯ ಆರಂಭದಲ್ಲೇ ಇತರ ಅನೇಕ ಮೃದಂಗಕಾರರಿಗೆ ಸಿಗದ ಸೌಲಭ್ಯ, ರಂಗಭೂಮಿ ಪರಿಚಯ ದೊರೆತವು. ಹಾಗಾಗಿಯೇ ಅವರು ಸಾಂಪ್ರದಾಯಿಕ ಮೃದಂಗಕಾರರಿಗಿಂತ ಭಿನ್ನವಾಗಿ ಯೋಚಿಸುವಂತೆ ಮಾಡಿದವು. ಇತರ ರಂಗಭೂಮಿಯ ಸಾಧ್ಯತೆಗಳನ್ನು ಯಕ್ಷಗಾನ ರಂಗಭೂಮಿಗೆ ಹೇಗೆ ಅಳವಡಿಸಬಹುದು ಎಂಬ ಯೋಚನೆಗೆ ಅವರು ಮುಂದಾದರು. ಅವೆಲ್ಲದರ ಫಲವಾಗಿಯೇ ಅವರ ಮೃದಂಗವಾದನದಲ್ಲಿ ಸೂಕ್ಷ್ಮ, ಕುಸುರಿ ಕೆಲಸಗಳು ಹೆಚ್ಚಾದವು. ನೂತನ ಆವಿಷ್ಕಾರಕ್ಕೆ ಬಾಗಿಲು ತೆರೆದವು. ರಸ-ಭಾವಗಳಿಗೆ ಸ್ಪಂದಿಸತೊಡಗಿದವು. ಹಿಮ್ಮೇಳದಲ್ಲಿ ಮೃದಂಗವಾದನ ಒಂದು ಮೇಳವಾಗಿ, ಕಲಾವಿದನಿಗೆ ಪೋಷಕವಾಗಿ, ಅವನ ಹೆಜ್ಜೆ, ಗತಿ, ಲಯಗಳಿಗೆ ಅನುವರ್ತಿಯಾಗಿ ಬರಬೇಕೆಂಬ ಸಿದ್ಧಾಂತಕ್ಕೆ ಅವರು ಬಂದರು. ಪಾಠಕರ ಮೃದಂಗವಾದನದಲ್ಲಿ ನಾವಿಂದು ನೋಡುತ್ತಿರುವುದು ಅದನ್ನೇ.


“ನೀನಾಸಂ”ಲ್ಲಿ ಒಂದು ವರ್ಷ ತರಬೇತಿ ಪಡೆದ ಪಾಠಕರು 1987ರಲ್ಲಿ “ಉಡುಪಿ ಯಕ್ಷಗಾನ ಕೇಂದ್ರ”ಕ್ಕೆ ಮೃದಂಗ ಶಿಕ್ಷಕರಾಗಿ ನೇಮಕಗೊಂಡರು. ಅಲ್ಲಿ ಒಂದು ವರ್ಷ ಕೆಲಸ ಮಾಡಿದ ಪಾಠಕರಿಗೆ 1988ರಲ್ಲಿ ಮತ್ತೊಂದು ಸುವರ್ಣಾವಕಾಶ ಪ್ರಾಪ್ತವಾಯಿತು. ಅದು ಕಡಲತೀರ ಭಾರ್ಗವ ಡಾ. ಶಿವರಾಮ ಕಾರಂತರ ಯಕ್ಷಗಾನ ಬ್ಯಾಲೆಯಲ್ಲಿ ಭಾಗವಹಿಸುವ ಸುಯೋಗ. ಆಗ ಕಾರಂತರು ಯಕ್ಷಗಾನಕ್ಕೆ ಒಂದಿಷ್ಟು ಸುಧಾರಣೆ ತರುವ ಕೆಲಸದಲ್ಲಿ ತೊಡಗಿದ್ದರು. ಯಕ್ಷಗಾನದಲ್ಲಿ ಇದ್ದ ಅನೇಕ ದೋಷಗಳನ್ನು ನೀಗಲು ಅವರು ಯತ್ನಿಸುತ್ತಿದ್ದರು. ನೃತ್ಯಲೇಖನವೆಂಬ ಹೆಸರಲ್ಲಿ ಜಲಕೇಳಿ, ಯುದ್ಧ, ಪ್ರಯಾಣ, ವನವಿಹಾರ ಮುಂತಾದುವಕ್ಕೆ ಹೊಸತನವನ್ನು ತಂದಿದ್ದರು. ವೇಷಭೂಷಣ, ಬಣ್ಣಗಾರಿಕೆಯಿಂದ ಹಿಡಿದು ಯಕ್ಷಗಾನದ ಹಿಮ್ಮೇಳ, ವಾದ್ಯಗಳವರೆಗೆ ಅವರು ವಿಚಿಕಿತ್ಸಕ ದೃಷ್ಟಿ ಹರಿಸಿದ್ದರು.

ಇದು ಪಾಠಕರಿಗೆ ತುಂಬಾ ಸಹಾಯಕವಾಯಿತು. ಸ್ವತಃ ಸಾಹಿತಿಯಾಗಿದ್ದ ಕಾರಂತರು ಯಕ್ಷಗಾನದಲ್ಲಿ ಸಾಹಿತ್ಯವನ್ನು ಹೇಗೆ ಬಳಸಬೇಕು ಎಂದು ಹೇಳುತ್ತಿದ್ದರು. ಅದು ಪದ್ಯವಿರಲಿ ಅಥವಾ ವಾದ್ಯಪರಿಕರಗಳಿರಲಿ ಎಲ್ಲದರ ಮೇಲೂ ಕಾರಂತರು ಬೆಳಕು ಹಾಯಿಸುತ್ತಿದ್ದರು. ಸುಮಾರು ಎಂಟು ವರ್ಷ ಅವರ ಜೊತೆಯಲ್ಲಿದ್ದ ಪಾಠಕರಿಗೆ ಕಾರಂತರೊಟ್ಟಿಗೆ ದಕ್ಷಿಣ ಅಮೇರಿಕಾಕ್ಕೂ ಹೋಗಿ ಪ್ರದರ್ಶನ ನೀಡುವ ಅವಕಾಶ ಬಂದೊದಗಿತು. ಇವೆಲ್ಲವೂ ಅವರ ಜ್ಞಾನಕ್ಷಿತಿಜವನ್ನು ವಿಸ್ತರಿಸಿದವು. ಇತರರಿಗೆ ಕಲಿಸುತ್ತಾ ತಾನೂ ಕಲಿತರು. ಅದೇ ಸಂದರ್ಭದಲ್ಲಿ ಕಾರಂತರಿಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಪದ್ಮಚರಣ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿದ್ದ ಖ್ಯಾತ ವಯೋಲಿನ್ ವಾದಕ ಎ.ವಿ. ಕೃಷ್ಣಮಾಚಾರರ ಒಡನಾಟ, ಸಾಹಚರ್ಯ ಒದಗಿಬಂತು. ಅವರ ಸಾನ್ನಿಧ್ಯ ಪಾಠಕರಿಗೆ ವಾದ್ಯ ಬಳಸುವಿಕೆ ಹಾಗೂ ನುಡಿಸುವಿಕೆಯಲ್ಲಿ ಹೆಚ್ಚಿನ ಪರಿಣತಿಯನ್ನೂ, ಸೂಕ್ಷ್ಮಸಂವೇದಿತೆಯನ್ನೂ ತಂದುಕೊಟ್ಟವು.


1995ರ ತನಕ ಕಾರಂತರೊಡನೆ ಇದ್ದ ಪಾಠಕರು ಆ ವರ್ಷದ ಕೊನೆಯಲ್ಲಿ ಕೆರೆಮನೆ ಮೇಳಕ್ಕೆ ಮೃದಂಗವಾದಕರಾಗಿ ಮತ್ತು ಕೆರೆಮನೆ ಯಕ್ಷಗಾನ ಶಾಲೆಗೆ ಮೃದಂಗ ಶಿಕ್ಷಕರಾಗಿ ನೇಮಕಗೊಂಡರು. ಅದೇ ವರ್ಷ (1995) ಪಿ.ಯು.ಸಿ. ತನಕ ಓದಿದ್ದ ಕಾರ್ಕಳದ ಸುಶಿಕ್ಷಿತ ಯುವತಿ ಸಂಧ್ಯಾ ಜೋಶಿಯವರೊಡನೆ ಪಾಠಕರಿಗೆ ವಿವಾಹವಾಯಿತು. ಮುಂದೆ ಸಂಧ್ಯಾ ಅವರು ಅನಿಮೇಷನ್ನಲ್ಲಿ ಡಿಪ್ಲೋಮಾ ಮಾಡಿ ಉದ್ಯೋಗಿಯೂ ಆದರು. ತನ್ಮಧ್ಯೆ ಕಾರ್ಕಳದಲ್ಲಿ ನೆಲೆಸಿದ್ದ ಪಾಠಕರಿಗೆ ಜೀವನ ಭದ್ರತೆಗಾಗಿ ಮೃದಂಗ ವಾದನದ ಹೊರತು ಏನಾದರೂ ಬೇರೆ ವೃತ್ತಿಯಲ್ಲಿ ತೊಡಗಿಕೊಳ್ಳಬೇಕೆಂಬ ತುಡಿತವುಂಟಾಯಿತು. ಕೆರೆಮನೆ ಶ್ರೀಮಯ ಯಕ್ಷಗಾನ ಕೇಂದ್ರಕ್ಕೆ ಸರಕಾರದಿಂದ ಸರಿಯಾಗಿ ಅನುದಾನ ಬರದಿರುವುದು, ಮೇಳದ ಕಡಿಮೆ ಸಂಬಳ ಹೀಗಾಗಿ ಪಾಠಕರು ಯಕ್ಷಗಾನವನ್ನೇ ನಂಬಿ ಜೀವನ ಸಾಗಿಸುವಂತಿರಲಿಲ್ಲ.

ಅಷ್ಟರಲ್ಲಿ ಯಕ್ಷಗಾನ ವಲಯದಲ್ಲಿ ಒಂದು ಹೊಸ ಶಕೆ ಆರಂಭವಾಗಿತ್ತು. ಶತಾವಧಾನಿ ಡಾ. ಆರ್. ಗಣೇಶ್ ಅವರ ನಿರ್ದೇಶನದಲ್ಲಿ ಮಂಟಪ ಪ್ರಭಾಕರ ಉಪಾಧ್ಯರ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನ ಹೆಸರು ಮಾಡತೊಡಗಿತ್ತು. ಕಲಾಕೃತಿಯೊಂದರ ಉತ್ಕರ್ಷಕ್ಕೆ ತಮ್ಮನ್ನು ಅರ್ಪಿಸಿಕೊಳ್ಳುವ, ನಿರ್ದೇಶನಕ್ಕೆ ಒಳಪಡುವ ಸಮಾನಮನಸ್ಕರ ಹಿಮ್ಮೇಳವೊಂದು ಮಂಟಪರಿಗೆ ಬೇಕಿತ್ತು. ಅದಕ್ಕೆ ದೊರೆತವರೇ ವಿದ್ವಾನ್ ಗಣಪತಿ ಭಟ್ಟರು, ಕೃಷ್ಣ ಯಾಜಿ ಇಡಗುಂಜಿ ಮತ್ತು ಅನಂತ ಪದ್ಮನಾಭ ಪಾಠಕರು. ನಿಜಕ್ಕೂ ಮಂಟಪರ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನ ಪಾಠಕರಿಗೆ ಹೊಸ ಅಧ್ಯಾಯವೊಂದನ್ನು ತೆರೆಯಿತು. ಗಣೇಶರ ಸಮರ್ಥ ನಿರ್ದೇಶನದಲ್ಲಿ ಏಕವ್ಯಕ್ತಿ ಯಕ್ಷಗಾನ ಒಂದು Classical programme ಅನ್ನುವ ಮಟ್ಟಿಗೆ ಜನಾದರ ಪಡೆಯಿತು.

ಇದರಲ್ಲಿ ನಿಮ್ಮ ಅನುಭವವೇನು ಅಂತ ಪಾಠಕರನ್ನು ಕೇಳಿದರೆ- “ಇದೊಂದು ನನ್ನ ಪಾಲಿನ ಸುಯೋಗ; ಒಳ್ಳೆಯ ಸಂಭಾವನೆ; ಸಾಮಾಜಿಕ ಮನ್ನಣೆ, ಗೌರವ ದೊರೆಯಿತು. ನಾನು ಕಲಿತ ಎಲ್ಲಾ ಮೃದಂಗ ಸೂಕ್ಷ್ಮಗಳನ್ನು ಹೊರಹಾಕಲು ಇದೊಂದು ಸೂಕ್ತ ವೇದಿಕೆಯಾಯಿತು. ಇಲ್ಲಿ ಮೇಳದಲ್ಲಿ ಬಾರಿಸಿದಂತೆ ಅಲ್ಲ. ಅಬ್ಬರ, ಗೌಜಿಗೆ ಅವಕಾಶವಿಲ್ಲ. ವ್ಯಕ್ತಿಪ್ರತಿಷ್ಠೆಗೆ ಮಣೆಯಲ್ಲ. ಉಳಿದವರು ಏನಾದರೂ ಆಗಲಿ. ತಾನು ಮಾತ್ರ ಕಾಣಿಸಿಕೊಂಡರಾಯಿತು ಎಂಬ ಚೀಪ್ ಮೆಂಟಾಲಿಟಿಗೆ ಆಸ್ಪದವಿಲ್ಲ. ಇಲ್ಲಿ ಭಾಗವಹಿಸುವ ಒಬ್ಬೊಬ್ಬನೂ ಒಂದೊಂದು ಪಾತ್ರವೇ ಆಗಿರುತ್ತಾನೆ. ಒಂದು ಕ್ಷಣದ ಅನವಧಾನ ಇಡೀ ಕಲಾಕೃತಿಯನ್ನೇ ಮಸುಕುಗೊಳಿಸೀತು! ಇದು ಸಮಷ್ಟಿ ಕಲೆಯಾಗಿರುವಂತೆ ವ್ಯಷ್ಟಿ ಕಲೆಯೂ ಹೌದು. ಇಡೀ ತಂಡ ಕಲೆಯ ಉತ್ಕರ್ಷಕ್ಕೆ, ರಸಾನುಭೂತಿಗೆ, ಭಾವಸೌಂದರ್ಯಕ್ಕೆ ದುಡಿಯಬೇಕಾಗುತ್ತದೆ” ಎಂದು ತಮ್ಮ ಅನುಭವವನ್ನು ಬಿಚ್ಚಿಡುತ್ತಾರೆ.

ಒಟ್ಟಿನಲ್ಲಿ ಏಕವ್ಯಕ್ತಿ ಯಕ್ಷಗಾನ ಪಾಠಕರಿಗೆ ಒಂದು ಹೊಸ ತಿರುವನ್ನು ನೀಡಿತು. ಅವರ ಮೃದಂಗವಾದನ ಚಾತುರ್ಯ, ಪಾಂಡಿತ್ಯ, ಸೂಕ್ಷ್ಮ ಕುಸುರಿ ಕೆಲಸ ನವನವೋನ್ಮೇಷಶಾಲಿಯಾಗಿ ಮೆರೆಯುವಂತೆ ಮಾಡಿದವು. ಮಂಟಪರ “ಮೋಹಮೇನಕೆ” ಯಕ್ಷಗಾನಕ್ಕೆ ಪಾಠಕರೇ ಭಾಗವತರಾಗಿ ಯಕ್ಷಗಾನ ವಲಯದಲ್ಲಿ ಹೊಸ ಸಂಚಲನ ಹುಟ್ಟುಹಾಕಿದರು. ಭಾಗವತಿಕೆಯಲ್ಲೂ ತನ್ನ ಗಟ್ಟಿತನವನ್ನು ತೋರಿಸಿದರು.
ಡಾ. ಆರ್. ಗಣೇಶ್ ಹೇಳುವಂತೆ “ಪಾಠಕ್ ಒಬ್ಬ ಅದ್ಭುತ ವ್ಯಕ್ತಿ; ಉಲ್ಲಾಸಭರಿತ ಮನುಷ್ಯ; ಕರ್ಮಕುಶಲೀ. ವಿನೋದಪ್ರಜ್ಞೆಯ ಆರೋಗ್ಯಕರ ಮನೋಭಾವದವ. ಮಾಡುವ ಕೆಲಸದಲ್ಲಿ ಸ್ವಲ್ಪವೂ ಉಪೇಕ್ಷೆಯಿಲ್ಲ. ಕಥೆ-ಕಾದಂಬರಿ ಓದಿಕೊಂಡವರು. ಮಾನವ ಸ್ವಭಾವ ಅರಿತಿರುವವರು. ಭಾಗವತರಿಗೆ, ನರ್ತಕರಿಗೆ ಎಲ್ಲಾ ವಿಧದಲ್ಲೂ ಒದಗಿ ಬರುವವರು. ಸ್ನೇಹವಲಯವನ್ನು ಸಂತೋಷವಾಗಿ ಇಡುವವರು.” ಹೀಗೆ ಅವರ ಗುಣಗಾನ ಮಾಡುತ್ತಾರೆ ಗಣೇಶ್.

ಪಾಠಕರ ಒಡನಾಟದಲ್ಲಿರುವವರಿಗೆಲ್ಲಾ ಇವು ಅನುಭವಕ್ಕೆ ಬಂದಿರುತ್ತವೆ. ಪಾಠಕರ ಹಿರಿಯ ಮಗಳು ಲಹರೀ ಸ್ನಾತಕಪೂರ್ವ ತರಗತಿಯಲ್ಲಿ ಓದುತ್ತಿದ್ದಾಳೆ. ಕಿರಿಯ ಮಗಳು ತನ್ಮಯೀ ಏಳನೇ ತರಗತಿಯಲ್ಲಿ ಓದುತ್ತಿದ್ದಾಳೆ. ಗಂಡನ ಬಗ್ಗೆ ಅಪಾರ ಗೌರವವಿರುವ, ವಿಚಾರಶೀಲೆ, ಸದ್ಗೃಹಣಿ ಸಂಧ್ಯಾ ಪಾಠಕರ ಹೆಮ್ಮೆಯ ಮಡದಿಯಾಗಿರುವಂತೆಯೇ ಪಾಠಕರ ಒಂದು ಶಕ್ತಿಯೂ ಹೌದು. ಪಾಠಕರ ಸಂಚಾರೀ ಜೀವನದಲ್ಲಿ ಮನೆಯ ಜವಾಬ್ದಾರಿಯೆಲ್ಲವೂ ಅವರದೇ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಪಾಠಕರು ಯಕ್ಷಗಾನ ಕ್ಲಾಸ್ ನಡೆಸುತ್ತಾ ತಮ್ಮ ಕ್ಷೇತ್ರವನ್ನು ವಿಸ್ತರಿಸಿಕೊಂಡಿದ್ದಾರೆ. ು

ಲೇಖಕ: ಗ. ನಾ. ಭಟ್ಟ
ಮೈಸೂರು

ಪುಂಡಿಕಾಯಿ ಕೃಷ್ಣ ಭಟ್

“ಸುಂದರವಾದ ಚೌಕಟ್ಟಿಗೆ ಚಿತ್ರವೇ ಇಲ್ಲ! ಹೌದು… ಸಂಪ್ರದಾಯದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುವ ಕಲಾವಿದರು ಹೇಗೆ ಚಿತ್ರವಿಲ್ಲದ ಚೌಕಟ್ಟು ಆಗ್ತಾರೆ ಎನ್ನುವುದಕ್ಕೆ ಪುಂಡಿಕಾಯಿ ದಿ| ಕೃಷ್ಣ ಭಟ್ಟರು ಪ್ರತ್ಯಕ್ಷ ಸಾಕ್ಷಿ”
30-10-1943ರಂದು ಶ್ರೀ ಅಚ್ಯುತ ಭಟ್ ಮತ್ತು ಸರಸ್ವತಿಯವರ ಪುತ್ರನಾಗಿ ಜನಿಸಿದವರೇ ಪುಂಡಿಕಾಯಿ ಕೃಷ್ಣ ಭಟ್ಟರು. ಎಲ್ಲಾ ಯಕ್ಷಗಾನ ಕಲಾವಿದರಂತೆ ಕಿತ್ತುತಿನ್ನುವ ಬಡತನವೇ ಶ್ರೀಯುತರ ಆಸ್ತಿ. ಹೇಳಿಕೊಳ್ಳುವ ವಿದ್ಯಾಭ್ಯಾಸ ಇಲ್ಲದಿದ್ದರೂ ಕಲೆಯ ಸೆಳೆತಕ್ಕೇನೂ ಕೊರತೆಯಿಲ್ಲ. ಆ ತುಡಿತಕ್ಕೆ ಬಡಿತದ ಗುರುತ್ವ ಸಿಕ್ಕಿದ್ದು ಮದ್ದಳೆಯ ದಂತಕಥೆ ದಿ| ಕುದ್ರೆಕೋಡ್ಳು ರಾಮಭಟ್ಟರು. ಗುರುಗಳ ಪೂರ್ಣಾಶೀರ್ವಾದವೇ ಅವರಿಗೆ ಸಂಪ್ರದಾಯದ ಭದ್ರ ಸುಂದರ ಚೌಕಟ್ಟು ಒದಗಿಸಿದ್ದು.

ತನ್ನ ಇಪ್ಪತ್ತೆರಡನೇ ವಯಸ್ಸಿನಲ್ಲೇ ತಿರುಗಾಟ ಪ್ರಾರಂಭಿಸಿದ ಶ್ರೀಯುತರು ಮೂಲ್ಕಿ, ಕಟೀಲು, ಕರ್ನಾಟಕ, ಕೊಲ್ಲೂರು, ಕದ್ರಿ, ಕೂಡ್ಳು, ಬಪ್ಪನಾಡು… ಅಂತಹ ಅಂದಿನ ಗಜಮೇಳಗಳಲ್ಲಿ ಮದ್ದಳೆಗಾರರಾಗಿ ಮಿಂಚತೊಡಗಿದರು. 2005ರ ತನಕವೂ ಅಂದರೆ ಸುಮಾರು 40 ವರ್ಷಗಳ ತಿರುಗಾಟದಲ್ಲಿ ಸಂಪಾದಿಸಿದ್ದು ಶೂನ್ಯ. ಬರಿಗೈದಾಸರಾಗಿ ಇರುವ ಅಂಗೈ ಅಗಲ ಭೂಮಿಯಲ್ಲಿ ಸಿಕ್ಕಿದ್ದರಲ್ಲಿ ತೃಪ್ತಿಪಟ್ಟು ಕೊನೆಗಾಲದಲ್ಲಿ ಅಸ್ತಮಾದಿಂದ ಬಳಲಿ 1-2-2012ರಂದು ಪತ್ನಿ ಶ್ರೀಮತಿ ಇಂದುಮತಿ, ಮಗ ರಾಜೇಂದ್ರ ಪ್ರಸಾದ್ (ಹವ್ಯಾಸಿ ಮದ್ದಳೆಗಾರ), ಮಗಳು ಶಾಂತಕುಮಾರಿಯನ್ನು ಅಗಲಿದರು. ಹಾಗಿದ್ದರೆ ಇವರೇಕೆ ಚಿತ್ರವಿಲ್ಲದೇ ಚೌಕಟ್ಟಿನಲ್ಲೇ ಉಳಿದರು? ಇದೊಂದು ಯಕ್ಷಪ್ರಶ್ನೆ. ಕೊನೆಗಳಿಗೆವರೆಗೂ ಯಕ್ಷಗಾನದ ಚೌಕಟ್ಟು ಬಿಡದಿದ್ದು ಕಾರಣವೇ? ಸ್ವಾಭಿಮಾನಿ ನಡವಳಿಕೆಯೇ? ಯಾರ ಮುಂದೆಯೂ, ಹಿಂದೆಯೂ ಬೀಸಣಿಗೆಯಾಗದಿದ್ದುದೇ?


ನನ್ನ ಅವರ ಒಡನಾಟ ಸುಮಾರು 15 ವರ್ಷಗಳದ್ದು. ಕಲಾವಿದನಾಗಿ ಅಲ್ಲ. ಕೇವಲ ಇಷ್ಟಾಚಾರ. ಗಣೇಶ ಕಲಾವೃಂದದ ವೇಷಭೂಷಣ ತಂಡದಲ್ಲಿ ನಾನೊಬ್ಬ ಹವ್ಯಾಸಿ ಪ್ರಸಾಧನ ಕಲಾವಿದ. ಅಂದು ವಿಟ್ಲದಿಂದ ಕಾಸರಗೋಡು ತನಕ ಹವ್ಯಾಸಿ ಆಟಗಳಲ್ಲಿ ಅವರ ಮದ್ದಳೆವಾದನ ಯಥೇಚ್ಛವಾಗಿ ಕೇಳಿದವ. ದೈಹಿಕವಾಗಿ ಆಗಲೇ ದುರ್ಬಲರಾಗಿದ್ದ ಅವರು ಬಣ್ಣದ ಮಾಲಿಂಗರಂತಹ ಕಲಾವಿದರಿದ್ದರೆ ಮಾತ್ರ ಚೆಂಡೆ ಹೆಗಲೇರಿಸುತ್ತಿದ್ದರು. ಬರಬರುತ್ತಾ ಅವರನ್ನು ನೋಡದಿದ್ದರೂ ಇಂದು ಪುಂಡಿಕಾಯಿ ನುಡಿತ ಎನ್ನುವಷ್ಟು ವೈಶಿಷ್ಟ್ಯ ಅವರ ವಾದನದಲ್ಲಿ ಕೇಳಿದವ.

ಹಾಗೆಂದು ಅವರಿಗೆ ಜೊತೆಯಾಗುತ್ತಿದ್ದವರಲ್ಲಿ ಹೊಸಬರೇ ಹೆಚ್ಚು. ಹಾಡುಗಾರಿಕೆ ದಾರಿ ತಪ್ಪಿದಾಗ ನಿರ್ಭಾವದಿಂದ ಸುಧಾರಿಸುತ್ತಾ ಚೌಕಿಯಲ್ಲಿ ಬಂದು, “ಎಂಥಾ ಪದ್ಯ ಮಾರಾಯಾ!” ಎನ್ನುತ್ತಿದ್ದರು. ಯಾವ ಅರ್ಥದಲ್ಲಿ ಎಂದರೆ, “ಹಾಡುಗಾರಿಕೆಯಲ್ಲಿ ಇಷ್ಟು ಕ್ರಮ ಉಂಟೆಂದು ನನಗೆ ಗೊತ್ತೇ ಇರಲಿಲ್ಲ. ನನ್ನ ಗುರುಗಳು ಇದನ್ನೆಲ್ಲಾ ಹೇಳಿಕೊಡಲೇ ಇಲ್ಲ. ನಾನು ಕೇಳಿದಷ್ಟರಲ್ಲಿ ಬಾರಿಸಿದ್ದೂ ಇಲ್ಲ ಗ್ರಹಚಾರ” ಎನ್ನುತ್ತಿದ್ದರು. ಈ ಕಾರಣಕ್ಕೆ ಇರಬೇಕು, ಕೊನೆ ತನಕವೂ ಎಲೆಮರೆಯ ಕಾಯಾಗಿ ಹೋದರು.


ಹಾಗೆಂದು ನವಕಲಾವಿದರಿಂದ ಸಲ್ಲದ ನಡವಳಿಕೆ ನಡೆದರೆ ಜಗಳವಾಡದೆ ಆ ಜಾಗವನ್ನೇ ಬಿಟ್ಟು ರಂಗದಿಂದ ಹೊರನಡೆದದ್ದೂ ಇದೆ. ಈ ಘಟನೆಗೆ ಲೇಖಕ ಪ್ರತ್ಯಕ್ಷ ಸಾಕ್ಷಿ. ನಮ್ಮ ಊರಿನ ಪರಿಸರದಲ್ಲಿ ಮೈರಾವಣ ಕಾಳಗ ಪ್ರಸಂಗ. ದಿ| ಬಣ್ಣದ ಮಾಲಿಂಗರ ಮೈರಾವಣ. ದಿ| ಪಕಳಕುಂಜ ಕೃಷ್ಣ ನಾಯ್ಕರ ರಾವಣ. ಮೊದಲು ಯಾವುದೋ ಸೌಮ್ಯ ಪದಕ್ಕೆ ಪುಂಡಿಕಾಯಿಯವರು ಚೆಂಡೆ ಕೆಳಗಿಟ್ಟು ಚೌಕಿಯಲ್ಲಿದ್ದರು. ಮೊದಲಿನ ಆಧುನಿಕ ಭಾಗವತರಿಗೆ ಬರೀ ಮದ್ದಳೆ ಸಾಕಾಗಲಿಲ್ಲ. ಇವರಿಗೆ ಕರೆಹೋಯಿತು.

“ಈ ಸೌಮ್ಯ ಸನ್ನಿವೇಶಕ್ಕೆ ಯಾಕಪ್ಪಾ ಚೆಂಡೆ?” ಎಂದಿದ್ದೇ ತಡ, ಮತ್ತೊಬ್ಬ ಚೆಂಡೆಯವರು ಬಂದು ಬಾರಿಸಲಾರಂಭಿಸಿದರು. ಆ ಭಾಗ ಮುಗಿದು ಬಣ್ಣದ ಮಾಲಿಂಗರ ಮೈರಾವಣ ಪ್ರವೇಶಕ್ಕಾಯಿತು. ಮದ್ದಳೆ (ಚೆಂಡೆ)ಗಾರರು ಉತ್ಸಾಹದಿಂದಲೇ ಬಾರಿಸಲಾರಂಭಿಸಿದರು. ಕೇಳಿದ ಮಾಲಿಂಗಜ್ಜ ಚೌಕಿಯಲ್ಲಿ ನಿಂತಲ್ಲಿಂದಲೇ ಅಬ್ಬರಿಸಿದರು. “ಏರಿಯೇ ಅವು ಚೆಂಡೆದಾಯೆ? ಪುಂಡಿಕಾಯಿದಾರ್ ಓಲುಲ್ಲೇರ್? ಲೆಪ್ಪುಲೇ” ಚೌಕಿಯಲ್ಲಿ ಅವರಿರಲಿಲ್ಲ. ಹುಡುಕಿದ್ದೇ ಬಂತು. ಇವರು ಬಸ್‍ಸ್ಟ್ಯಾಂಡಿನಲ್ಲೇ ನಿಂತಿದ್ದರು. “ಭಾಗವತರು ಕರೀತಿದ್ದಾರಂತೆ. ಬರಬೇಕಂತೆ” ಎಂದಿದ್ದಕ್ಕೆ, “ಸೌಮ್ಯ ಪದ್ಯಕ್ಕೆ ಚೆಂಡೆ ಬೇಕಾದರೆ ಬಣ್ಣದ ವೇಷಕ್ಕೆ ಮದ್ದಳೆಯೇ ಸಾಕು” ಎನ್ನುತ್ತಾ ನಡೆದೇ ಬಿಟ್ಟರು. ಅಸಂಬದ್ಧ ಕಂಡರೆ ಮೌನವಾಗಿ ರೋದಿಸುತ್ತಿದ್ದರು ಎಂಬುದಕ್ಕೆ ಈ ಪ್ರಕರಣ.


ಇನ್ನೊಮ್ಮೆ ನಮ್ಮದೇ ತಂಡದ ಆಟ. ಹೊಸ ಉತ್ಸಾಹಿ ಭಾಗವತರೊಬ್ಬರು ಯಾವುದೋ ಕ್ರಮದಲ್ಲಿ ಪದ್ಯ ಹೇಳಲಾರಂಭಿಸಿದರು. ಇವರು ತನ್ನ ಕನ್ನಡಕವನ್ನು ಮೂಗಿನ ಮೇಲೆ ಜಾರಿಸಿ ಬರೀಛಾಪಿನಲ್ಲಿ ಪದ್ಯ ಮುಗಿಸುವಂತೆ ಮಾಡಿದರು. ಚೌಕಿಯಲ್ಲಿ, “ಎಂತದ್ದು ಮಾರಾಯ್ರೇ? ಈ ಕ್ರಮದ ಪದ್ಯವೂ ಉಂಟೋ? ನನಗೆ ತಾಳವೇ ಗೊತ್ತಾಗ್ಲಿಲ್ಲ. ಇವರಿಗೆ ಒಳ್ಳೆ ಭವಿಷ್ಯವಿದೆ. ಮದ್ದಳೆಗೆ ಆಚೆಯವರನ್ನು ಕಳುಹಿಸಿ ಆಯ್ತಾ?” ಎನ್ನುತ್ತಾ ಚೌಕಿಯಲ್ಲಿ ಕುಳಿತೇ ಬೆಳಗು ಮಾಡಿದರು. ಈ ಎರಡು ಉದಾಹರಣೆಗಳು ಸಂಪ್ರದಾಯದ ಬಗ್ಗೆ ಅವರಿಗಿರುವ ನಿಷ್ಠೆಯನ್ನು ಹೇಳುವುದಕ್ಕಾಗಿ ಮಾತ್ರ.


ಇವರ ಪಠ್ಯಕ್ರಮವೂ ವೈಶಿಷ್ಟ್ಯಪೂರ್ಣವಾಗಿತ್ತು. ನಮ್ಮ ಮನೆಯಲ್ಲಿ ನನ್ನ ಮಗನಿಗೆ ಮದ್ದಳೆ ಪಾಠಕ್ಕೆ ಕನ್ಯಾನದಿಂದ 3 ಕಿ.ಮೀ. ದೂರವನ್ನು ಏದುಸಿರು ಬಿಡುತ್ತಾ ನಡೆದೇ ಬರುತ್ತಿದ್ದರು. ತಪ್ಪಿಯೂ ವಾಹನಕ್ಕಾಗಿ ಕರೆಮಾಡಿದವರಲ್ಲ. ಬಂದೊಡನೆ ಪಾಠ ಶುರು. ತಪ್ಪಿದರೆ, ಹುಡುಗ ಎಂದು ನೋಡದೆ, “ಎಲ್ಲಿಗೆ ಅವಸರ? ಕೆಲಸ ಇದ್ದರೆ ಮುಗಿಸಿ ಬಾ” ಎಂದು ನಯವಾಗಿ ಗದರಿಸಿ ಸರಿಯಾಗುವ ತನಕ ಬಿಡುತ್ತಿರಲಿಲ್ಲ. ಆರು ತಿಂಗಳಲ್ಲಿ ಎಲ್ಲಾ ತಾಳ, ಮಟ್ಟುಗಳನ್ನು ತಿಳಿಸಿ ನೀನು ಕಲಿತದ್ದು ಯಕ್ಷಗಾನದ ಮದ್ದಳೆ ಚೆಂಡೆ. ಇಂಗ್ಲಿಷ್ ಪೆಟ್ಟು ಹಾಕುವುದು ನಿನ್ನಿಷ್ಟ” ಎಂದು ಆಶೀರ್ವದಿಸಿದ್ದರು.

ಬೆನ್ನ ಹಿಂದೆ ಮದ್ದಳೆ ಇಟ್ಟು ಹೇಳಿಕೊಡುವ ಕ್ರಮ ಅವರಲ್ಲಿತ್ತು. ಅವರಿಂದ ಕಲಿತ ಶಿಷ್ಯರು ಅನೇಕರು. ಬಹುಮಂದಿ ಈಗಾಗಲೇ ಉತ್ತಮ ಹೆಸರು ಗಳಿಸುತ್ತಿದ್ದಾರೆ ಎಂಬುದೂ ಸತ್ಯ. ಉದಾ: ಶ್ರೀಕೃಷ್ಣ ಪ್ರಕಾಶ ಉಳಿತ್ತಾಯ, ಶ್ರೀಧರ, ಆನಂದ ಪಡ್ರೆ ಮೊದಲಾದವರು. ಅವರ ಶಿಷ್ಯರ ವಾದನಗಳು ಕೇಳಿದೊಡನೆ, ಇದು ಪುಂಡಿಕಾಯಿ ಶೈಲಿ ಎಂದು ಹೇಳುವಷ್ಟು ಪ್ರಖರತೆ ಅದರಲ್ಲಿತ್ತು… ಇದೆ….
ಅಂದಿನ ಕಾಲದ ಮಹಾನ್ ಭಾಗವತರಾದ ಇರಾ ಭಾಗವತರು, ಅಗರಿಯವರು, ಶ್ರೀ ಬಲಿಪರು, ಮಂಡೆಚ್ಚರನ್ನು ಬಹುವಾಗಿ ಮೆಚ್ಚಿಕೊಳ್ಳುತ್ತಿದ್ದರು.

ಹೊಸತನದ ಹುಚ್ಚಿನಲ್ಲಿ ಕೊಚ್ಚಿಹೋಗುತ್ತಿರುವ ಹಾಡುಗಾರಿಕೆಯನ್ನು ಕೇಳಿ ಮರುಗುತ್ತಿದ್ದರು. ಕಸುಬು ಎಂಬ ಹೆಸರಲ್ಲಿ ವಿಕೃತ, ರಂಗಕ್ಕೊಪ್ಪದ ಶೈಲಿಯನ್ನು ಅವರು ಟೀಕಿಸಲಿಲ್ಲ. ಹಾಗೆಂದು ಹೊಂದಾಣಿಕೆಯನ್ನು ಮಾಡಿಕೊಂಡವರಲ್ಲ. ಸಂಭಾವನೆಗಾಗಿ ಪೀಡಿಸಿದವರಲ್ಲ. ಆಟ ಮುಗಿದೊಡನೆ ಕವರಿಗೆ ಕಾಯದೇ ಹೊರಟೇ ಬಿಡುವಷ್ಟು ಸ್ವಾಭಿಮಾನಿ.


ಸಿಕ್ಕಿ ಸಿಕ್ಕಿದವರಿಗೆ ಸಲ್ಲುವ ಸನ್ಮಾನಗಳನ್ನು ಕಂಡಾಗ ಶ್ರೀಯುತರಿಗೆ ಒಲಿದದ್ದು ಬಹಳ ಕಡಿಮೆ ಎನಿಸುತ್ತದೆ. ಅದುವೇ ಚೌಕಟ್ಟಿಗೆ ಚಿತ್ರವಿಲ್ಲ. ಮುಂದಾದರೂ ಸತ್ಪಾತ್ರರನ್ನು ಗುರುತಿಸುವ ಕೆಲಸ ಖಂಡಿತ ಆಗಬೇಕು. ಇಂತವರನ್ನು ಪರಿಚಯಿಸುವ ‘ಯಕ್ಷದೀಪ’ದ ಸತ್ಕಾರ್ಯಕ್ಕೆ ನಮೋ ನಮಃ.

ಲೇಖಕರ ವಿಳಾಸ :
ಶ್ಯಾಮ ಭಟ್ಟ ಪೆರ್ನಡ್ಕ
ಪೆರ್ನಡ್ಕ ಮನೆ, ಕನ್ಯಾನ ಅಂಚೆ
ಬಂಟ್ವಾಳ ತಾಲೂಕು, ದ. ಕ., 574 279

ಮೊ. : +919141589368

ನಾಕದಲ್ಲೊಂದು ಪಾಕ

(ಯಕ್ಷಗಾನಕ್ಕಾಗಿ ತಮ್ಮ ಜೀವನವನ್ನೇ ಸವೆಸಿದ, ಮುಡಿಪಾಗಿಟ್ಟ ಕಲೆಯ ದಂತಕಥೆಗಳಾದ ಅಗಲಿದ ಹಿರಿಯ ಕಲಾವಿದರನ್ನು ಈ ಲೇಖನದ ಮೂಲಕ ನೆನಪಿಸಿ ಅವರಿಗೆ ಗೌರವವನ್ನರ್ಪಿಸುತ್ತಿದ್ದೇವೆ)


ಅದು ದೇವಲೋಕ. ಅಲ್ಲಿ ದೇವಸಭೆಯಲ್ಲಿ ಎಂದಿನಂತೆ ದೇವೇಂದ್ರ ತ್ರಿವಿಷ್ಟಪದಲ್ಲಿ ಕುಳಿತಿದ್ದಾನೆ. ಚಿತ್ರಸೇನನ ಗಾಯನ, ರಂಬಾದಿ ತರುಣಿಯರ ನರ್ತನ, ಸುರಪನ ಮೊಗದಲ್ಲಿ ಹೊಳಪಿಲ್ಲ, ಬೃಹಸ್ಪತಿಗೆ ಚಿಂತೆ. ಯಾಕೆ ಹೀಗೆ ಎಂದು ದೇವಗುರುಗಳ ಪ್ರಶ್ನೆ. ಏನೆಂದು ಹೇಳಲಿ. ಗುರುಗಳೇ, ಮಾನವ ಲೋಕದಲ್ಲಿ ಈಗ ಕಲಿಯುಗ ಮೊದಲ ಮೂರು ಯುಗದ ಹಾಗೆ ಈಗ ಅಲ್ಲಿಗೆ ಹೋಗುವ ಹಾಗಿಲ್ಲ. ಎಲ್ಲಿಗೂ ಹೋಗುವ ಹಾಗಿಲ್ಲ. ನಾವು ಪರೋಕ್ಷಪ್ರಿಯರು. ಆದರೂ, ಪ್ರತ್ಯಕ್ಷವಾಗಿ ಮಾನವರ ಕಾರ್ಯವೈಖರಿ ನೋಡಬೇಕೆಂಬ ಬಯಕೆ. ಚಿತ್ರಸೇನನ ಗಾಯನ, ಅಪ್ಸರೆಯರ ನರ್ತನ ಇದನ್ನೆ ನೋಡಿ, ನೋಡಿ ಸಾಧನಾಶೀಲ ಮಾನವರ ವಿಶೇಷತೆಯನ್ನು ನೋಡಬೇಕೆಂಬ ಬಯಕೆ ಏನು ಮಾಡಲಿ, ಗುರುಗಳೇ.


ಗುರುಗಳು ಯೋಚಿಸುತ್ತಾರೆ. ಏನು ಉಪಾಯ, ತಟ್ಟನೆ ಹೊಳೆಯುತ್ತದೆ. ಕೂಡಲೇ ದೇವೇಂದ್ರನಲ್ಲಿ “ಸುರಪ ಅದಕ್ಕೆ ಇಷ್ಟೊಂದು ಚಿಂತೆಯೆ. ಇಲ್ಲಿಯೆ ವ್ಯವಸ್ಥೆ ಮಾಡುತ್ತೇನೆ” ಎಂದು ಗುರುಗಳು ಅಂದಾಗ, “ಹೌದೇ ಹೇಗೆ ಗುರುಗಳೇ” ಎಂದು ಸುರಪ ಆಶ್ಚರ್ಯದಲ್ಲಿ ಕೇಳುತ್ತಾನೆ. ಈ ಕಲಿಯುಗದಲ್ಲಿ ಮತ್ರ್ಯಲೋಕದಲ್ಲಿ ಅತ್ಯಂತ ಪ್ರಸಿದ್ಧವಾಗಿರುವ ಮನೋರಂಜನೆಯ, ಬೌದ್ಧಿಕ ಬೆಳವಣಿಗೆ ಹೊಂದುವ ಮತ್ತು ಪುರಾಣ ಜ್ಞಾನ ಸಿಗುವ ತಾಳಮದ್ದಳೆ ಎನ್ನುವ ಹೆಸರಿನಿಂದ ಕರೆಯಲ್ಪಡುವ ಒಂದು ಪ್ರಯೋಗ ಇದೆ. ಅದನ್ನೇ ಇಲ್ಲಿ ನಾವು ಮಾಡಿಸಿದರಾಯಿತು.

ಅದು ಹೇಗೆ ಸಾಧ್ಯ ಗುರುಗಳೇ? ಇಲ್ಲಿ ಅದನ್ನು ಯಾರು ಮಾಡುವುದು, ಎಂದಾಗ ಗುರುಗಳು ಸ್ವರ್ಗದಲ್ಲಿರುವ ತೆಂಕುತಿಟ್ಟಿನ ಹಿರಿಯ ಸಂಘಟಕರು- 1. ಕೆ.ವಿ. ಮುಚ್ಚಿನ್ನಾಯರು, 2. ಕುಬಣೂರು ಬಾಲಕೃಷ್ಣರಾಯರು.  3. ರಮಾನಾಥ ರಾವ್ ತಡಂಬೈಲು ಇವರನ್ನೇ ಕರೆದು ತಕ್ಷಣ ಒಂದು ತಾಳಮದ್ದಳೆ ಇಲ್ಲಿ ಆಗಬೇಕೆಂದು ಹೇಳುತ್ತಾರೆ. ಅವರು ಮೂವರು ಒಂದಾದ ಮೇಲೆ ಕೇಳಬೇಕೆ, ಪ್ರಸಂಗ, ಕಲಾವಿದರು ಮತ್ತು ಪಾತ್ರವಿತರಣೆ, ಎಲ್ಲವೂ ಸುಗಮವಾಗಿ ನಡೆಯಿತು. ಸಮಯದ ಮಿತಿ ಬೇಡವೆಂದು ದೇವೇಂದ್ರನ ಹೇಳಿಕೆ.


ಪಾರ್ಥ ಸಾರಥ್ಯ
ಭಾಗವತರು – ಸರ್ವಶ್ರೀ ಹಿರಿಯ ಅಜ್ಜ ಬಲಿಪ ನಾರಾಯಣ ಭಾಗವತರು
ಮತ್ತು ಪದ್ಯಾಣ ಪುಟ್ಟುನಾರಾಯಣ ಭಾಗವತರು.
ಮದ್ದಳೆ – ದಿವಾಣ ಭೀಮ ಭಟ್ ಮತ್ತು
ಪದ್ಯಾಣ ತಿರುಮಲೇಶ್ವರ ಭಟ್
ಚೆಂಡೆ – ನಿಡ್ಲೆ ನರಸಿಂಹ ಭಟ್
ಪಾತ್ರ ಪರಿಚಯ
ಶ್ರೀಕೃಷ್ಣ – ವಿದ್ವಾನ್ ಕಾಂತ ರೈ
ಕೌರವ – ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್
ಅರ್ಜುನ – ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ
ಬಲರಾಮ – ತೆಕ್ಕಟ್ಟೆ ಆನಂದ ಮಾಸ್ತರ್
ಪ್ರಸಂಗ : ಅನಲಾನಿಲ – ಸಂವಾದ
ಭಾಗವತರು – ಅಗರಿ ಶ್ರೀನಿವಾಸ ಭಾಗವತರು ಮತ್ತು
ಭಾಗವತ ಜಿ.ಆರ್. ಕಾಳಿಂಗ ನಾವುಡ
ಮದ್ದಳೆ – ಕಾಸರಗೋಡು ವೆಂಕಟ್ರಮಣ ಮತ್ತು ದುರ್ಗಪ್ಪ ಗುಡಿಗಾರ
ಪಾತ್ರ ಪರಿಚಯ
ಧರ್ಮರಾಯ – ಕುಬಣೂರು ಬಾಲಕೃಷ್ಣ ರಾವ್
ಭೀಮ – ಹರಿದಾಸ್ ಮಲ್ಪೆ ರಾಮದಾಸ ಸಾಮಗ
ದ್ರೌಪದಿ – ಮಾರೂರು ಮಂಜುನಾಥ ಭಂಡಾರಿ
ಶ್ರೀಕೃಷ್ಣ – ಸತ್ಯಮೂರ್ತಿ ದೇರಾಜೆ
ಪ್ರಸಂಗ – ವಿದುರಾತಿಥ್ಯ – ಶ್ರೀ ಕೃಷ್ಣ ಸಂಧಾನ
ಭಾಗವತರು – ದಾಮೋದರ ಮಂಡೆಚ್ಚ ಮತ್ತು
ಕಡತೋಕ ಮಂಜುನಾಥ ಭಾಗವತರು
ಮದ್ದಳೆ – ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್
ಚೆಂಡೆ – ತಲೆಂಗಳ ಗೋಪಾಲಕೃಷ್ಣ ಭಟ್
ಪಾತ್ರ ಪರಿಚಯ
ಶ್ರೀಕೃಷ್ಣ – ಹರಿದಾಸ ಮಲ್ಪೆ
ಶಂಕರನಾರಾಯಣ ಸಾಮಗ
ವಿದುರ – ರಸಋಷಿ
ದೇರಾಜೆ ಸೀತಾರಾಮಯ್ಯ
ಕೌರವ – ಹರಿದಾಸ ಡಾ. ಶೇಣಿ ಗೋಪಾಲಕೃಷ್ಣ ಭಟ್
ಅಜ್ಜ ಬಲಿಪ ನಾರಾಯಣ ಭಾಗವತರ ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಯಕ್ಷಗಾನದ ಗುರುಗಳಾದ ಮಾಂಬಾಡಿ ನಾರಾಯಣ ಭಾಗವತರು ದೀಪೋಜ್ವಲನಗೈದರು.  ಕೆ. ವಿ. ಮುಚ್ಚಿನ್ನಾಯರು ಸ್ವಾಗತ ನೀಡಿದರು. ರಮಾನಾಥರಾಯರು ಪಾತ್ರ ಪರಿಚಯ ಮಾಡಿದರು.


ತಾಳಮದ್ದಳೆ ಆರಂಭವಾಗಿ ಸ್ವಲ್ಪ ಹೊತ್ತಿನಲ್ಲಿ ಎಲ್ಲಾ ದೇವತೆಗಳೂ ಅಲ್ಲಿ ಒಂದು ಸೇರಿದರು. ತಾಳಮದ್ದಳೆ ಬಿರುಸಾಗತೊಡಗಿತು.    ಬಿಡುಗಣ್ಣರು ಮೈಯೆಲ್ಲಾ ಕಿವಿಯಾಗಿ ತಾಳಮದ್ದಳೆ ಕೇಳತೊಡಗಿದರು. ಕೃತ, ತ್ರೇತಾ, ದ್ವಾಪರವನ್ನೆ ವಾದಕ್ಕೆ ಬಳಸಿಕೊಂಡು ಅರ್ಥ ಹೇಳುವ ವೈಖರಿಗೆ ದೇವತೆಗಳೇ ಬೆರಗಾದರು. ಒಬ್ಬೊಬ್ಬ ಭಾಗವತರ ಒಂದೊಂದು ಶೈಲಿಯೂ ದೇವತೆಗಳನ್ನು ಸಂಮೋಹನಗೊಳಿಸಿತು.

ವನವಾಸದ ಅವಧಿಯಲ್ಲಿ ಅರ್ಜುನ ದೇವಲೋಕಕ್ಕೆ ಹೋದದ್ದು ಸರಿಯೇ ಎನ್ನುವ ವಿಷಯವನ್ನು ಹಿಡಿದು ವಾದವನ್ನು ಮಂಡಿಸುತ್ತಾ ಹೋದ ಶೇಣಿಯವರ ಕೌರವನ ಅರ್ಥವನ್ನು ಕೇಳಿದ ದೇವೇಂದ್ರನೇ ಬೆರಗಾದ, ಅದಕ್ಕೆ ಸರಿಯಾದ ಸಮರ್ಥನೆಯನ್ನು ದೊಡ್ಡ ಸಾಮಗರು ಶ್ರೀಕೃಷ್ಣನಾಗಿ ಉತ್ತರಿಸಿದಾಗ ದೇವೇಂದ್ರ ನಿಟ್ಟುಸಿರು ಬಿಟ್ಟ. ಅದ್ಭುತವಾದ ಕಾರ್ಯಕ್ರಮವನ್ನು ನೋಡಿ ಕೇಳಿದ ದೇವತೆಗಳು ಒಟ್ಟಾಗಿ ಕರತಾಡನಗೈದರು.      

ಎಲ್ಲಾ ಕಲಾವಿದರಿಗೆ, ಮಹಾತ್ಮಗಾಂಧಿ, ಸುಭಾಶ್ಚಂದ್ರ ಬೋಸ್, ಲಾಲ್‍ಬಹದ್ದೂರ್ ಶಾಸ್ತ್ರಿ, ರವೀಂದ್ರನಾಥ ಟಾಗೋರ್, ಡಾ| ಎ.ಪಿ.ಜೆ. ಅಬ್ದುಲ್ ಕಲಾಂ, ರತ್ನವರ್ಮ ಹೆಗ್ಗಡೆ, ವೆಂಕಪ್ಪ ಶೆಟ್ಟಿ, ಪೊಳಲಿ ಶಂಕರನಾರಾಯಣ ಶಾಸ್ತ್ರಿ, ಕುರಿಯ ವಿಠಲ ಶಾಸ್ತ್ರಿ ಈ ಎಲ್ಲಾ ಹಿರಿಯರು ಶಾಲು ಹಾಕಿ, ಗೌರವಿಸಿದರು. ತಿಂಗಳಿಗೊಂದು ಇಂತಹ ಕಾರ್ಯಕ್ರಮ ನಡೆಸುವುದೆಂದು ದೇವಸಭೆಯಲ್ಲಿ ನಿರ್ಣಯಿಸಲಾಯಿತು. ಈ ಬಗೆಯ ನಾಕದಲ್ಲಾದ ಹೊಸ ಪಾಕಕ್ಕೆ ಪಾಕಶಾಸನನೇ ಬೆರಗಾದ. ು

ಲೇಖಕ:  ರಾಮ ಜೋಯಿಸ ಬೆಳ್ಳಾರೆ, ಯಕ್ಷಗಾನ ಸಂಘಟಕ, ಅರ್ಥಧಾರಿ