ಯಕ್ಷಗಾನದ ಹಿರಿಯ ಅರ್ಥಧಾರಿ, ಪ್ರಗತಿಪರ ಕೃಷಿಕ ಕುತ್ಲೋಡಿ ವಾಸು ಶೆಟ್ಟಿ ( 1931 – 2021 ) ಜುಲೈ 26, 2021ರಂದು ಸಾಯಂಕಾಲ ಸಿದ್ಧಕಟ್ಟೆ ಸಮೀಪದ ತಮ್ಮ ಸ್ವಗೃಹದಲ್ಲಿ ನಿಧನರಾದರು. ಮೂಲತ: ಕೃಷಿಕರಾಗಿದ್ದ ಅವರು ಎಳವೆಯಿಂದಲೇ ಯಕ್ಷಗಾನದ ಅರ್ಥಗಾರಿಕೆಯಲ್ಲಿ ಪಳಗಿ ಪ್ರಸಿದ್ಧರ ಕೂಟಗಳಲ್ಲಿ ಭಾಗವಹಿಸಿ ಖ್ಯಾತರಾಗಿದ್ದರು. ಸ್ಥಳೀಯವಾಗಿ ಯಕ್ಷಗಾನ ಸಂಘಗಳನ್ನು ಸ್ಥಾಪಿಸಿ ಕಿರಿಯರಿಗೆ ಮಾರ್ಗದರ್ಶಕರಾಗಿದ್ದರು. ತಾಳಮದ್ದಳೆ ಕ್ಷೇತ್ರದ ಜನಪ್ರಿಯ ಅರ್ಥಧಾರಿ ಮತ್ತು ಹೆಸರಾಂತ ವೇಷಧಾರಿ ದಿ.ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟರು ಅವರನ್ನು ಗುರುವಾಗಿ ಪರಿಭಾವಿಸಿದ್ದರು. ಚೆನ್ನಪ್ಪ ಶೆಟ್ಟರ ಅಂತ್ಯಕ್ರಿಯೆಯಲ್ಲಿ ಅವರ ಉಭಯ ಗುರುಗಳಾದ ದಿ.ಶಿಮಂತೂರು ನಾರಾಯಣ ಶೆಟ್ಟರು ಹಾಗೂ ವಾಸು ಶೆಟ್ಟರು ಭಾಗವಹಿಸಿದ್ದು ವಿಶೇಷ.
ವಿಪುಲವಾದ ಪುರಾಣ ಜ್ಞಾನ ಹಾಗೂ ಯಕ್ಷಗಾನ ಪ್ರಸಂಗಗಳ ಸಮಗ್ರ ಮಾಹಿತಿ ಹೊಂದಿದ್ದ ವಾಸು ಶೆಟ್ಟರು ಭೀಷ್ಮ, ಕರ್ಣ, ಕೌರವ, ವಾಲಿ, ಮಾಗಧ, ರಾಮ, ಕೃಷ್ಣ ಇತ್ಯಾದಿ ಪಾತ್ರಗಳಲ್ಲಿ ಪ್ರಭುತ್ವ ಸಾಧಿಸಿದ್ದರು. ಹಾಗೆಯೇ ಹಳೆ ತಲೆಮಾರಿನ ಹಾಗೂ ಈಗಿನ ಅನೇಕ ಪ್ರಮುಖ ಕಲಾವಿದರ ಸಂಪರ್ಕದಲ್ಲಿದ್ದು ತಮ್ಮ ತೊಂಭತ್ತರ ಹರೆಯದಲ್ಲೂ ಕ್ರಿಯಾಶೀಲರಾಗಿದ್ದರು. ಇದೀಗ ಅಲ್ಪಕಾಲದ ಅಸ್ವಾಸ್ಥ್ಯದಿಂದ ವಯೋ ಸಹಜವಾಗಿ ಅಸು ನೀಗಿರುವ ಅವರು ಮಕ್ಕಳು, ಕುಟುಂಬಿಕರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಯಕ್ಷಾಂಗಣ ಸಂತಾಪ: ಯಕ್ಷಾಂಗಣ ಮಂಗಳೂರು ಆಯೋಜಿಸಿದ್ದ ಸಿದ್ಧಕಟ್ಟೆ ಸಂಸ್ಮರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಲ್ಲದೆ, ಸಪ್ತಾಹ ಕಲಾಪಗಳನ್ನು ಸದಾ ಪ್ರೋತ್ಸಾಹಿಸುತ್ತಿದ್ದ ಹಿರಿಯ ವಿದ್ವಾಂಸ ಕುತ್ಲೋಡಿ ವಾಸು ಶೆಟ್ಟರ ನಿಧನಕ್ಕೆ ಯಕ್ಷಾಂಗಣದ ಪದಾಧಿಕಾರಿಗಳು ಮತ್ತು ಕಲಾವಿದ ಬಳಗದ ಪರವಾಗಿ ಯಕ್ಷಾಂಗಣ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಸಂತಾಪ ಸೂಚಿಸಿದ್ದಾರೆ. ಹಿರಿಯ ಅರ್ಥಧಾರಿ ಡಾ.ಎಂ.ಪ್ರಭಾಕರ ಜೋಶಿ, ಯಕ್ಷ ಸಂಗಮದ ಸಂಘಟಕ ಶಾಂತಾರಾಮ ಕುಡ್ವ ಮೂಡಬಿದಿರೆ, ಮುಂಬಯಿ ಬಂಟರವಾಣಿಯ ಅಶೋಕ ಪಕ್ಕಳ, ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ ಮತ್ತು ವಿಶ್ವನಾಥ ಶೆಟ್ಟಿ ಅವರ ಕುಟುಂಬ ವರ್ಗದವರೂ ಶ್ರದ್ಧಾಂಜಲಿ ಸಮರ್ಪಿಸಿದ್ದಾರೆ.
ಸುಳ್ಯದ ‘ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ (ರಿ)’ ನೀಡುವ ಈ ವರ್ಷದ ‘ವನಜ ರಂಗಮನೆ’ ಪ್ರಶಸ್ತಿಗೆ ಖ್ಯಾತ ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ಶ್ರೀ ಜಬ್ಬಾರ್ ಸಮೋ ಅವರು ಆಯ್ಕೆಯಾಗಿದ್ದಾರೆ. 22.08.2021ರ ಆದಿತ್ಯವಾರ ಸುಳ್ಯದ ರಂಗಮನೆಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಶ್ರೀ ಬರೆ ಕೇಶವ ಭಟ್ಟರು ಯಕ್ಷಗಾನ ತಾಳಮದ್ದಳೆಯ ಹಿರಿಯ, ಶ್ರೇಷ್ಠ ಅರ್ಥಧಾರಿಗಳಲ್ಲೊಬ್ಬರು. ವಿಮರ್ಶಕ, ಲೇಖಕ, ಶ್ರೇಷ್ಠ ಅರ್ಥಧಾರಿಗಳಾದ ಡಾ. ಎಂ. ಪ್ರಭಾಕರ ಜೋಷಿ, ಶ್ರೀ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳಂತೆ ಯಕ್ಷಗಾನ ಕಲೆಯ ಬಗೆಗೆ ಅನುಭವಗಳನ್ನು ಹೊಂದಿ ಇದಮಿತ್ಥಂ ಎಂದು ಹೇಳಬಲ್ಲವರು. ಜೋಷಿ, ಶಾಸ್ತ್ರಿಗಳಂತೆ ಶೇಣಿ, ಸಾಮಗರ ಸಮಕಾಲೀನರಾಗಿ ಕೂಟಗಳಲ್ಲಿ ಭಾಗವಹಿಸಿ ಪಕ್ವರಾದವರು. ಗಂಭೀರ ಸ್ವಭಾವದವರಾದರೂ ಸರಳವಾಗಿ ಜೀವಿಸಿದವರು. ಧರಿಸಿದ ಉಡುಪುಗಳಂತೆ ಅಂತರಂಗವೂ ಸ್ವಚ್ಛ. ಮಗುವಿನಂತೆ ಮುಗ್ಧ ಮನಸ್ಸನ್ನು ಹೊಂದಿದ ಶ್ರೀ ಬರೆ ಕೇಶವ ಭಟ್ಟರು ಕಿರಿಯರಿಗೆ ಗುರುವಾಗಿಯೂ, ಸಮಾನ ವಯಸ್ಕರಿಗೆ ಅತ್ಯುತ್ತಮ ಮಿತ್ರರಾಗಿಯೂ ಸಲಹೆಗಳನ್ನು ಕೊಡಬಲ್ಲ, ಕೊಟ್ಟ ಶ್ರೇಷ್ಠ ವ್ಯಕ್ತಿತ್ವವನ್ನು ಹೊಂದಿ ಬದುಕಿದವರು. ಸಹ ಕಲಾವಿದರ ನಿರ್ವಹಣೆ ಮೆಚ್ಚುಗೆಯಾದರೆ ಪ್ರೋತ್ಸಾಹಿಸುವ, ತಪ್ಪಾದರೆ ನಯವಾಗಿ ಖಂಡಿಸುವ ಗುಣಗಳನ್ನು ಹೊಂದಿದವರು. ತಾನು ಕಾಣಿಸಿಕೊಳ್ಳಬೇಕೆಂಬ ಆಸೆಯೇ ಇಲ್ಲ. ತಾಳಮದ್ದಳೆ ಒಳ್ಳೆಯದಾಗಬೇಕೆಂಬ ತುಡಿತ ಮಾತ್ರ.
ಶ್ರೀ ಬರೆ ಕೇಶವ ಭಟ್ಟರು ಬಂಟ್ವಾಳ ತಾಲೂಕು ಕೈರಂಗಳ ಗ್ರಾಮದ ಬರೆ ಎಂಬಲ್ಲಿ 30-10-1941ರಂದು ಬರೆ ವೆಂಕಟ್ರಮಣ ಭಟ್ಟ ಮತ್ತು ಶ್ರೀಮತಿ ಗೌರಿ ದಂಪತಿಗಳ ಮಗನಾಗಿ ಜನಿಸಿದರು. ಕೈರಂಗಳ ಮತ್ತು ವಿಟ್ಲ ಶಾಲೆಗಳಲ್ಲಿ ಓದಿದ ಇವರದು ಕೃಷಿ ಕುಟುಂಬ. ನಂತರ ಮಂಗಳೂರು ಶಿಕ್ಷಕರ ತರಬೇತಿ ಕೇಂದ್ರದಲ್ಲಿ ವಿದ್ಯಾರ್ಜನೆ (TCH). ತರಬೇತು ಪೂರೈಸಿ ಮರಳಿದ ಇವರು ಕೈರಂಗಳ ಶಾಲೆಯಲ್ಲಿ 1 ವರ್ಷ, ಶಿರಂಕಲ್ಲು ಶಾಲೆಯಲ್ಲಿ 3 ವರ್ಷ, ನಂತರ ನಿರಂತರ 31 ವರ್ಷಗಳ ಕಾಲ ಅಡ್ಯನಡ್ಕ ಜನತಾ ವಿದ್ಯಾ ಸಂಸ್ಥೆಯಲ್ಲಿ ಅಧ್ಯಾಪಕನಾಗಿ ವಿದ್ಯಾರ್ಥಿಗಳಿಗೆ ವಿದ್ಯೆ ಎಂಬ ಅಮೃತವನ್ನು ನೀಡಿದರು. ಅವರ ಶಿಷ್ಯಂದಿರನೇಕರು ದೇಶ ವಿದೇಶಗಳಲ್ಲಿ ಉದ್ಯೋಗಿಗಳಾಗಿ ಇಂದು ದುಡಿಯುತ್ತಿದ್ದಾರೆ.
ಇವರ ಹುಟ್ಟೂರು ಕೈರಂಗಳವು. ಯಕ್ಷಗಾನಾಸಕ್ತರೇ ತುಂಬಿಕೊಂಡಿರುವ ಪ್ರದೇಶ. ಯಕ್ಷಗಾನ ಸಂಘವೂ ಕಾರ್ಯಾಚರಿಸುತ್ತಿತ್ತು. ಶ್ರೀ ಬರೆ ಕೇಶವ ಭಟ್ಟರಿಗೆ ಯಕ್ಷಗಾನವು ಹಿರಿಯರಿಂದ ಬಂದ ಬಳುವಳಿ. ಇವರ ಸಣ್ಣಜ್ಜ ಹವ್ಯಾಸೀ ಭಾಗವತರಾಗಿದ್ದರು. ಕೈರಂಗಳದಲ್ಲಿ ಪ್ರತೀ ಶನಿವಾರ ರಾತ್ರೆ ತಾಳಮದ್ದಳೆ ಕಾರ್ಯಕ್ರಮವೂ ನಡೆಯುತ್ತಿತ್ತು. ಯಕ್ಷಗಾನದತ್ತ ಆಸಕ್ತರಾದ ಶ್ರೀ ಬರೆಯವರು ಪ್ರಥಮ ಬಾರಿ ಕೈರಂಗಳ ಶಾಲೆಯ ಅಭ್ಯಾಸೀ ಕೂಟದಲ್ಲಿ ಅತಿಕಾಯ ಕಾಳಗ ಪ್ರಸಂಗದ ಅಂಗದನಾಗಿ ಅರ್ಥ ಹೇಳಿದ್ದರು. ಹಂತ ಹಂತವಾಗಿ ಬೆಳೆದ ಕೇಶವ ಭಟ್ಟರು ಅತಿಕಾಯನ ಪಾತ್ರವನ್ನು ನಿರ್ವಹಿಸುವ ಸಾಧಕರಾದರು.
ಕೈರಂಗಳ ಯಕ್ಷಗಾನ ಸಂಘದ ಆಟದಲ್ಲಿ ಮೊತ್ತಮೊದಲು ನಾರದನಾಗಿ ರಂಗವೇರಿದ ಇವರು ಹೆಜ್ಜೆಗಾರಿಕೆ ಅಭ್ಯಸಿಸದಿದ್ದರೂ ಹಿರಣ್ಯಕಶ್ಯಪ, ಮಯೂರಧ್ವಜ ಮುಂತಾದ ಪಾತ್ರಗಳನ್ನು ನಿರ್ವಹಿಸಿದರು. ಕಲ್ಲಡ್ಕ ಮತ್ತು ನೆಟ್ಲ ಸಂಘದ ನೇತೃತ್ವದಲ್ಲಿ ನಡೆಯುತ್ತಿದ್ದ ಆಟಕೂಟಗಳಿಗೂ ಇವರು ಬೇಕೇ ಬೇಕು. ಇವರ ಅನುಭವಗಳು, ಪ್ರೀತಿಯನ್ನು ಅವರು ಕಳೆದುಕೊಳ್ಳಲು ಸಿದ್ಧರಿರಲಿಲ್ಲ. ಬರೆ ಕೇಶವ ಭಟ್ಟರು ಇಲ್ಲದ ಪ್ರದರ್ಶನಗಳನ್ನು ಅವರು ಒಪ್ಪುತ್ತಿರಲಿಲ್ಲ. ಬರಲೇಬೇಕು. ಅಡ್ಯನಡ್ಕ ಪರಿಸರದಲ್ಲಿ ಮತ್ತು ಇನ್ನೂ ಅನೇಕ ಕಡೆ ಇವರು ತಾಳಮದ್ದಳೆ ಕೂಟಗಳನ್ನು ಏರ್ಪಡಿಸುತ್ತಿದ್ದರು. ಬರೆಯವರು ಶ್ರೇಷ್ಠ ಸಂಘಟಕರೂ ಹೌದು. ಶ್ರೀ ಬರೆ ಕೇಶವ ಭಟ್ಟರು ತಾಳಮದ್ದಳೆ ಕ್ಷೇತ್ರದಲ್ಲಿ ಬೆಳೆಯಲು ಮೂಲ ಕಾರಣರು ಮುಳಿಯಾಲ ಕೃಷ್ಣ ಭಟ್ಟರು. ಇವರು ಹಳೇ ಕ್ರಮದ ಅರ್ಥಧಾರಿ ಎಂದು ಕೇಶವ ಭಟ್ಟರು ಹೇಳುತ್ತಾರೆ. ಅಡ್ಯನಡ್ಕ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ಮುಳಿಯಾಲ ಕೃಷ್ಣ ಭಟ್ಟರು ಬರೆಯವರನ್ನು ತಾಳಮದ್ದಳೆಗಳಿಗೆ ಕರೆದುಕೊಂಡು ಹೋಗುತ್ತಿದ್ದರಂತೆ (ಸಹೋದ್ಯೋಗಿಗಳು ಜತೆಯಾಗಿ ಸಾಗುತ್ತಿದ್ದರು). ಕೈರಂಗಳ ಸಂಘದ ನಿರ್ದೇಶಕರಾದ ನಾರಾಯಣ ಹೊಳ್ಳರಿಗೆ (ಭಾಗವತ ರಾಜಾರಾಮ ಹೊಳ್ಳರ ತಂದೆ) ಕಲಾವಿದರಲ್ಲಿ ಬಲು ಪ್ರೀತಿ. ಅವರು ಅರ್ಥಧಾರಿ ಅಲ್ಲದಿದ್ದರೂ ನನಗೆ ಅರ್ಥಗಾರಿಕೆಯನ್ನು ಕಲಿಸಿದರು. ಅಧ್ಯಾಪಕರಾದ ಕೈರಂಗಳ ಕೃಷ್ಣ ಸಫಲ್ಯರೂ ಹೇಳಿಕೊಟ್ಟರು. ಅಭ್ಯಾಸ ಮಾಡಿದೆ. ಬೆಳೆದು ಬೆಳೆದು ದೊಡ್ಡ ಕೂಟಗಳಿಗೂ ಆಹ್ವಾನ ಬಂತು.
ದೊಡ್ಡ ಸಾಮಗರು, ಶೇಣಿ, ದೇರಾಜೆ, ರಾಮದಾಸ ಸಾಮಗ, ಜೋಷಿ, ಮೂಡಂಬೈಲು, ವಾಸುದೇವ ಸಾಮಗ ಈ ಮೊದಲಾದ ಹಿರಿಯರೊಂದಿಗೂ, ಕಿರಿಯರೊಂದಿಗೂ ಅರ್ಥ ಹೇಳಿದೆ. ಇದು ಪೂರ್ವಜನ್ಮದ ಸುಕೃತ ಫಲದಿಂದ ಸಾಧ್ಯವಾಯಿತು ಎಂಬುದು ಬರೆ ಕೇಶವ ಭಟ್ಟರ ಅಭಿಪ್ರಾಯ. ಯಕ್ಷಗಾನ ಕಲಾವಿದನಾಗಲು ಭಾಗ್ಯ ಬೇಕು. ಪೂರ್ವಜನ್ಮದ ಪುಣ್ಯ ಬೇಕು. ಅದು ದೈವೀಕಲೆ. ಯಕ್ಷಗಾನದಲ್ಲಿ ಅನೇಕ ಉತ್ತಮ ವಿಚಾರಗಳಿವೆ. ಆ ಶ್ರೇಷ್ಠ ಕಲೆಯ ಒಂದು ಅಂಗವಾಗಿ ಕಾಣಿಸಿಕೊಳ್ಳಬೇಕಾದರೆ ಯೋಗ ಬೇಕು ಎಂಬ ಧ್ವನಿ ಬರೆ ಕೇಶವ ಭಟ್ಟರ ಮಾತು ಗಳಲ್ಲಿ ಅಡಗಿದೆ.
ಶ್ರೀ ಬರೆ ಕೇಶವ ಭಟ್ಟರಿಗೆ ಭಾವನಾತ್ಮಕ ಪಾತ್ರಗಳೆಂದರೆ ಬಲು ಇಷ್ಟ. ಸಹಕಲಾವಿದರೊಂದಿಗೆ ಹೊಂದಾಣಿಕೆಯಿಂದ ಪಾತ್ರಗಳನ್ನು ನಿರ್ವಹಿಸುತ್ತಾರೆ. ಬಾಹುಕನಾಗಿ ಪಾತ್ರವನ್ನು ಅನುಭವಿಸುವ ಸ್ವಭಾವ. ಹಾಗಾಗಿ ಭಾವನಾತ್ಮಕ ಸನ್ನಿವೇಶಗಳನ್ನು ನಿರ್ವಹಿಸುವಾಗ ಗದ್ಗದಿತರಾಗುತ್ತಾರೆ. ಇಂದ್ರಜಿತು ಕಾಳಗದ ಶ್ರೀರಾಮನಾಗಿ ಮಾಯಾಸೀತೆಯ ದೇಹವನ್ನು ಕಂಡು ನಿಜಸೀತೆಯೆಂದೇ ಭ್ರಮಿಸಿ 3 ಪದ್ಯಗಳಿಗೆ ಮಾತನಾಡುವ ರೀತಿ, ಹೆಂಡತಿಯನ್ನು ಕಳೆದುಕೊಂಡ ಗಂಡನ, ಆಕೆಯನ್ನು ರಕ್ಷಿಸಿಕೊಳ್ಳಲಾಗದ ಗಂಡನ ಸ್ಥಿತಿಯನ್ನು ಮನಮುಟ್ಟುವಂತೆ ಚಿತ್ರಿಸುತ್ತಾರೆ. ಇಂದ್ರಜಿತು ಕಾಳಗ ಪ್ರಸಂಗದಲ್ಲಿ ಬರುವ ಎಲ್ಲಾ ಪಾತ್ರಗಳನ್ನು ಇವರು ನಿರ್ವಹಿಸಿದ್ದರಂತೆ! ಅತಿಕಾಯ, ವಿದುರ, ಶ್ರೀಕೃಷ್ಣ, ದಶರಥ, ಶ್ರೀರಾಮ, ಭೀಷ್ಮ, ಮಯೂರಧ್ವಜ ಮೊದಲಾದ ಪಾತ್ರಗಳಲ್ಲಿ ಶ್ರೀಯುತರು ರಂಜಿಸಿದರು. ಅನುಭವಿಸಿ ಹೇಳುವ ಬರೆ ಕೇಶವ ಭಟ್ಟರು ತಾನು ನಿರ್ವಹಿಸಿದ ಪಾತ್ರವನ್ನು ಕಲ್ಪನೆಯಿಂದ ಅತ್ಯುತ್ತಮವಾಗಿ ಚಿತ್ರಿಸುತ್ತಿದ್ದರು. ಭೀಷ್ಮಪರ್ವದ ಭೀಷ್ಮನಾಗಿ ಶ್ರೀ ಮನೋಹರ, ಪದ್ಯಕ್ಕೆ ಚೆನ್ನಾಗಿ ಹೇಳಿ ಎನ್ನಯ ಕಂಠವ ಇರಿಯಲು ಚಿನುಮಯ ಚಕ್ರವ ಕೈಯೊಳು ಪಿಡಿದಿಹೆಯೊ ಪದ್ಯಕ್ಕೆ ಅರ್ಥವನ್ನು ಪೂರ್ತಿಗೊಳಿಸಿದ ದಾಖಲೆ ಇಲ್ಲವಂತೆ. ಗದ್ಗದಿತರಾಗಿ ಮಾತು ನಿಂತು ಹೋಗುತ್ತಿಂತೆ. ಇವರ ಅರ್ಥವನ್ನು ಕೇಳಿದ ಪ್ರೇಕ್ಷಕರು ಈಗಲೂ ಅದನ್ನು ನೆನಪಿಸುತ್ತಾರೆ. ಕಲಾವಿದನ ಸಂತೋಷಕ್ಕೆ ಇನ್ನೇನು ಬೇಕು? ಅವನ ಪಾತ್ರನಿರ್ವಹಣೆಗೆ ಸಂದ ಪ್ರಶಸ್ತಿಯಲ್ಲವೇ?
ಶ್ರೀರಾಮನಿರ್ಯಾಣ ಪ್ರಸಂಗದ ಶ್ರೀರಾಮ ಬರೆ ಕೇಶವ ಭಟ್ಟರ ಪ್ರೀತಿಯ, ಉಲ್ಲೇಖನೀಯ ಪಾತ್ರಗಳಲ್ಲೊಂದು. ಶ್ರೀರಾಮ ನಿರ್ಯಾಣದ ಶ್ರೀರಾಮನಾಗಿ- ಲಕ್ಷ್ಮಣ ಹೋದಾಗ ರಾಮನ ಅರ್ಧಭಾಗ ಹೋಯಿತು ಎಂಬ ಸಂದೇಶ! ಪಾದುಕಾ ಪ್ರಧಾನದ ಭರತನನ್ನು ಬೀಳ್ಕೊಟ್ಟ ಶ್ರೀರಾಮ, ಲಕ್ಷ್ಮಣನಿಗೆ ದೇಹಾಂತ್ಯ ಶಿಕ್ಷೆ ವಿಧಿಸುವ ಶ್ರೀರಾಮ ಪಾತ್ರಗಳು ಒಂದೇ ಆದರೂ ಸಂದರ್ಭಗಳೊಳಗಿನ ಅಂತರವನ್ನು ಇವರ ಅರ್ಥಗಾರಿಕೆಯಲ್ಲಿ ಕಾಣಬಹುದು. ಪಾದುಕಾಪ್ರದಾನ ಪ್ರಸಂಗದ ‘ಸುಮ್ಮಗಿರು ಭರತ ಬರುವ ಮರ್ಮವನ್ನು ಅರಿಯೆ ನೀನು, ಹೆಮ್ಮೆಗಾರನಲ್ಲಿ ಗುಣದಿ ನಮ್ಮ ಸಹಜನು’ ಮತ್ತು ‘ಬಂದೆಯಾ ಇನವಂಶ ವಾರಿಧಿಚಂದ್ರ’ ಪದ್ಯಗಳ ಅರ್ಥಗಾರಿಕೆಯು ಪೂರ್ತಿಯಾಗದೆ ಭಾವನೆಗಳ ಪ್ರವಾಹವೇ ಉಕ್ಕಿ ಹರಿಯುತ್ತಿತ್ತು. ಪಟ್ಟಾಭಿಷೇಕ ಪ್ರಸಂಗದಿಂದ ತೊಡಗಿ ನಿರ್ಯಾಣದ ವರೆಗಿನ ಶ್ರೀರಾಮನ ಪಾತ್ರವನ್ನು ಸಮರ್ಥ ರೀತಿಯಲ್ಲಿ ಕೆತ್ತಿ, ರೂಪಿಸಿ, ನಿರ್ವಹಿಸಿದ ಕಲಾವಿದರು ಬರೆ ಕೇಶವ ಭಟ್ಟರು.
ವಾಲಿಮೋಕ್ಷ ಪ್ರಸಂಗದ- ‘ವಾನರರಧಿಪನೆ ಕೇಳೆನ್ನ ಮಾತಾ’ ಮತ್ತು ‘ಮುಂದಿನ್ನು ಬದುಕ ಬೇಕೆಂಬ ಆಸೆ’ ಈ ಪದ್ಯಗಳ ಅರ್ಥಗಾರಿಕೆಯಲ್ಲೂ ಇವರು ನಿಜವಾಗಿ ಶ್ರೀರಾಮನೇ ಆಗುತ್ತಾರೆ. ಬರೆಯವರ ಮಾತುಗಳನ್ನು ಕೇಳುವುದಕ್ಕಾಗಿಯೇ ಪ್ರೇಕ್ಷಕರು ಕೂಟಗಳಿಗೆ ಬರುತ್ತಿದ್ದರು. ಮಲ್ಪೆ ಶ್ರೀ ವಾಸುದೇವ ಸಾಮಗರ ‘ಸಂಯಮಂ’ ತಂಡದಲ್ಲಿ ಆರು ವರ್ಷಗಳ ತಿರುಗಾಟವನ್ನೂ ನಡೆಸಿದ್ದರು. ‘‘ಬರೆಯವರು ಇದ್ದಾರಲ್ಲ; ಇನ್ನು ಇಬ್ಬರು ಸಾಕು ನಮ್ಮ ತಂಡಕ್ಕೆ’’- ಸಾಮಗರ ಈ ಮಾತುಗಳು ಬರೆ ಕೇಶವ ಭಟ್ಟರ ಸಾಮರ್ಥ್ಯ, ಪ್ರತಿಭೆಗೆ ಸಂದ ಗೌರವ.
1999ನೇ ಇಸವಿ ತನ್ನ 58ನೇ ವಯಸ್ಸಿನಲ್ಲಿ ವೃತ್ತಿ ಜೀವನದಿಂದ (ಅಧ್ಯಾಪಕ) ನಿವೃತ್ತರಾಗಿದ್ದರೂ ಕೂಟಗಳಲ್ಲಿ ಭಾಗವಹಿಸುತ್ತಿದ್ದರು. ಪ್ರಸ್ತುತ ವಯಸ್ಸು ಮತ್ತು ಆರೋಗ್ಯದ ಸಮಸ್ಯೆಯಿಂದಾಗಿ ಕೂಟಗಳಲ್ಲಿ ಕಲಾವಿದನಾಗಿ ಕಾಣಿಸಿಕೊಳ್ಳದಿದ್ದರೂ ಪ್ರೇಕ್ಷಕರಾಗಿ ಕಾಣಿಸಿಕೊಳ್ಳುತ್ತಾರೆ! ಇದು ಯಕ್ಷಗಾನ ಕಲೆಯ ಮೇಲೆ ಅವರಿಗಿರುವ ಗೌರವ, ಪ್ರೀತಿಯನ್ನು ತೋರಿಸುತ್ತದೆ. ಶೇಣಿ ಪ್ರಶಸ್ತಿ, ದೇರಾಜೆ ಪ್ರಶಸ್ತಿ, ಪುತ್ತೂರು ಯಕ್ಷಾಂಜನೇಯ ಪ್ರಶಸ್ತಿ, ಅಲ್ಲದೆ ಅನೇಕ ಸಂಘ-ಸಂಸ್ಥೆಗಳು ಬರೆ ಕೇಶವ ಭಟ್ಟರನ್ನು ಗುರುತಿಸಿ ಗೌರವಿಸಿವೆ. ಶ್ರೀಯುತರ ವಿದ್ಯೆ, ಅನುಭವಗಳು ಯಕ್ಷಗಾನಕ್ಕೆ ಕೊಡುಗೆಯೂ, ಕಲಾವಿದರಿಗೆ ಸ್ವೀಕಾರಾರ್ಹವೂ ಹೌದು.
ಅಧ್ಯಾಪಕನಾಗಿ, ಕಲಾವಿದನಾಗಿ ಮೆರೆದ ಇವರು ಸಾಂಸಾರಿಕವಾಗಿಯೂ ತೃಪ್ತರು. ಬಂಟ್ವಾಳ ತಾಲೂಕು ಇರಾ ಗ್ರಾಮದ ಸಣ್ಣಯಬೈಲು ಎಂಬಲ್ಲಿ ಪತ್ನಿ ಶ್ರೀಮತಿ ದುರ್ಗಾಪರಮೇಶ್ವರೀ ಮತ್ತು ಇಬ್ಬರು ಪುತ್ರರೊಂದಿಗೆ ವಾಸಿಸುತ್ತಿದ್ದಾರೆ. ಹಿರಿಯ ಪುತ್ರ ಶ್ರೀ ವೆಂಕಟೇಶ್ವರ ಮತ್ತು ಕಿರಿಯ ಪುತ್ರ ಶ್ರೀ ಸತ್ಯಶಂಕರ ಇಬ್ಬರೂ ಕೃಷಿಕರು. ಯಕ್ಷಗಾನ ಅಭ್ಯಾಸ ಮಾಡುವ ಕಿರಿಯರಿಗೆ ಸಂದೇಶವೇನು? ಎಂದು ಕೇಳಿದರೆ- ‘‘ಹತ್ತು ಓದಿ ಒಂದು ಹೇಳು. ಒಂದು ಓದಿ ಹತ್ತು ಹೇಳಲು ಹೋಗದಿರಿ. ಲೋಕದಲ್ಲಿ ಒಂದು ಓದಿ ಹತ್ತನ್ನು ಹೇಳುವವರು ಅಭಿವೃದ್ಧಿಯಾಗಲಾರರು’’! ಎಂಬ ಅತ್ಯುತ್ತಮ ಕಿವಿಮಾತನ್ನು ಹೇಳಿದರು.
ವಿಳಾಸ : ಬರೆ ಕೇಶವ ಭಟ್, ಸಣ್ಣಯಬೈಲು ಅಂಚೆ ಮತ್ತು ಗ್ರಾಮ : ಇರಾ, ಬಂಟ್ವಾಳ ತಾಲೂಕು, ದ. ಕ. ಮೊ. : 9449281771
ಯಕ್ಷಗಾನ ಮತ್ತು ತಾಳಮದ್ದಲೆ ಎಂತೆಂತಹವರನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುವುದಿಲ್ಲ. ಶೇಣಿ, ಸಾಮಗ ಸಹೋದರರು, ನಿವಣೆ ಗಣೇಶ ಭಟ್ಟ, ಹೊನ್ನಪ್ಪ ಗೋಕರ್ಣರಂತಹ ಹರಿದಾಸರನ್ನೂ ಆಕರ್ಷಿಸಿದಂತೆ ವೇ| ಬ್ರ| ಶ್ರೀ ಹಂದಲಸು ಲಕ್ಷ್ಮೀನಾರಾಯಣ ಭಟ್ಟರಂತಹ ಅತ್ಯಂತ ಮಡಿವಂತ, ಸಂಪ್ರದಾಯನಿಷ್ಠ, ತ್ರಿವೇದಿಗಳನ್ನೂ ಆಕರ್ಷಿಸಿದೆ.
ಲಕ್ಷ್ಮೀನಾರಾಯಣ ಭಟ್ಟರು ಜನಿಸಿದ್ದು ತೀರ್ಥಹಳ್ಳಿ ತಾಲೂಕಿನ ಗುಡ್ಡೇಕೇರಿ ಎಂಬ ಕುಗ್ರಾಮದಲ್ಲಿ (12-10-1939). ಬಾಲ್ಯದಲ್ಲಿಯೇ ತಂದೆ ತಾಯಿಗಳನ್ನು ಕಳೆದುಕೊಂಡ ಭಟ್ಟರು ಬೆಳೆದಿದ್ದ ಶೃಂಗೇರಿಯಲ್ಲಿ ವೇದಾಧ್ಯಯನ ಮಾಡಿ, ಆಗುಂಬೆಯ ಸಮೀಪದ ಹಂದಲಸು ಎಂಬ ಹಳ್ಳಿಯಲ್ಲಿ ಈಶ್ವರ ದೇವಸ್ಥಾನವೊಂದರ ಅರ್ಚಕರಾದರು. ಪೌರೋಹಿತ್ಯ ಹಾಗೂ ಜ್ಯೋತಿಷ್ಯವನ್ನೂ ವ್ಯಾಕರಣ, ಅಲಂಕಾರ, ಋಗ್ವೇದ, ಯಜುರ್ವೇದ, ಸಾಮವೇದಗಳನ್ನೂ, ಸಾಯಣ ಭಾಷ್ಯ ಸಹಿತ ಅಧ್ಯಯನ ಮಾಡಿದರು.
ಯಕ್ಷಗಾನಕ್ಕೆ ತ್ರಿವೇದಿಗಳ ಕೊಡುಗೆ ಅನನ್ಯ. ಅರ್ಥಧಾರಿಯಾಗಿ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಲ್ಲಿ ಖ್ಯಾತನಾಮ ರಾದರು. ಶೇಣಿ, ಸಾಮಗ ಸಹೋದರರು, ತೆಕ್ಕಟ್ಟೆ, ಪೆರ್ಲ, ಮೂಡಂಬೈಲು – ಮುಂತಾದವರೊಂದಿಗೆ ಅರ್ಥಧಾರಿಗಳಾಗಿ ಭಾಗವಹಿಸಿದ್ದರು. ಶ್ರುತಿಯ ಕೊರತೆಯಿಂದ ಅವರ ಕೆಲವು ಪಾತ್ರಗಳು ಬೆಳಕಿಗೆ ಬಾರದೆ ಉಳಿದವು. ಬಲಿ, ಜರಾಸಂಧ, ಹಿರಣ್ಯಕಶ್ಯಪ, ರಾವಣ, ಅಂಗದ, ಸಂಧಾನದ ಕೃಷ್ಣ – ಮುಂತಾದ ಪಾತ್ರಗಳ ಮೇಲೆ ಅವರ ಪ್ರಭುತ್ವ ಎಷ್ಟಿತ್ತೆಂದರೆ, ಆ ಪಾತ್ರಗಳ ವಿಶಿಷ್ಟ ಗುಣಗಳನ್ನು ಪ್ರಕಟಪಡಿಸುತ್ತಿದ್ದರು. ಪುರಾಣ ಕೃತಿಗಳಲ್ಲಿ ಬರುವ ಅತಿರಥ, ಮಹಾರಥ, ಅಶ್ವಲಕ್ಷಣ, ರಾಜರ ಧ್ವಜದ ಲಾಂಛನಗಳು, ಶಸ್ತ್ರಾಸ್ತ್ರಗಳ ಗುಣಲಕ್ಷಣಗಳು, ಅಶ್ವಮೇಧದ ಕುದುರೆಯ ಲಕ್ಷಣ, ಯಾಗದ ನಿಯಮಗಳು- ಇತ್ಯಾದಿಗಳ ಒಳನೋಟಗಳನ್ನು ನೀಡುತ್ತಿದ್ದರು.
ಕೇವಲ ಅರ್ಥಗಾರಿಕೆಗೆ ಸೀಮಿತವಾಗಿರಲಿಲ್ಲ, ತ್ರಿವೇದಿಗಳ ಯಕ್ಷಗಾನ ಪ್ರೇಮ. ಅವರು ಭಾಗವತಿಕೆಯನ್ನೂ ಕಲಿತಿದ್ದರು. ಹಂದಲಸಿನಲ್ಲಿರುವಾಗಲೇ ಸ್ಥಳೀಯ ಅರ್ಥಧಾರಿಗಳನ್ನೇ ಬಳಸಿಕೊಂಡು ರಾಮಾಯಣ, ಭಾರತಗಳ ಸಮಗ್ರ ಪ್ರಸಂಗಗಳನ್ನೂ ಬಳಸಿಕೊಂಡು ತಾಳಮದ್ದಲೆ ಮಾಡಿದ್ದರು. ಇದು ಪ್ರತಿ ಏಕಾದಶಿಯಂದು ನಡೆಯುತ್ತಿತ್ತು. ಒಮ್ಮೆ ಭಾಗವತರು ಬಾರದೆಯಿದ್ದಾಗ ಅವರೇ ಭಾಗವತಿಕೆ ಮಾಡಿ ಅರ್ಥವನ್ನೂ ಹೇಳಿದ್ದರು.
ಹಂದಲಸಿನಿಂದ ಬಾಳಗಾರಿಕೆ, ಅಲ್ಲಿಂದ ಸಾಗರಕ್ಕೆ, ಸಾಗರದಿಂದ ಶಿವಮೊಗ್ಗಕ್ಕೆ ಬಂದು ಅಲ್ಲಿಯೇ ನೆಲೆಸಿದ್ದ ಭಟ್ಟರು ಶಿವಮೊಗ್ಗದಲ್ಲಿಯೂ ತಾಳಮದ್ದಲೆ ಸಪ್ತಾಹವನ್ನು ಏರ್ಪಡಿಸುತ್ತಿದ್ದರು. ಅವರು ತಮ್ಮ ಕೊನೆಯ ಮೂರು ವರ್ಷಗಳಲ್ಲಿ ಮಹಾಭಾರತವನ್ನು ಆಯ್ಕೆ ಮಾಡಿಕೊಂಡಿದ್ದರು. ಇದಕ್ಕಾಗಿ ಅಗತ್ಯವಿರುವ ಪ್ರಸಂಗ ಕೃತಿಗಳನ್ನೂ ಸಂಗ್ರಹಿಸಿದ್ದರು. (‘ಪಾಂಡವ ಪ್ರಪಂಚ’-ಇತ್ಯಾದಿ) ಅವರು ಪೌರೋಹಿತ್ಯಕ್ಕಾಗಿ ಹೋದ ಮನೆಯ ಯಜಮಾನರಿಗೆ ಹೇಳಿ ತಾಳಮದ್ದಲೆಯನ್ನು ಸಂಘಟಿಸುತ್ತಿದ್ದರು. ಸಪ್ತಾಹಕ್ಕೆ ಆಹ್ವಾನಿತ ಕಲಾವಿದರಿಗೆ ಮನೆಯಲ್ಲಿ ಆತ್ಮೀಯ ಆತಿಥ್ಯವನ್ನು ನೀಡುವಲ್ಲಿ ಅವರ ಕುಟುಂಬದವರ ಪಾತ್ರವೂ ಉಲ್ಲೇಖನೀಯ.
ಪ್ರಾಯೋಜಕರು ಹಣವನ್ನು ನೀಡಿದ ತಕ್ಷಣ ತೆಮೆಮನೆ ರಾಮಮೂರ್ತಿ ಹಾಗೂ ನನ್ನನ್ನು ಕರೆದು ಹಣವನ್ನು ಎಣಿಸಲು ಹೇಳುತ್ತಿದ್ದರು. ಅವರೇ ಕಲಾವಿದರನ್ನು ಕರೆದು ಅವರಿಗೆ ಪ್ರಶಂಸಾತ್ಮಕವಾದ ಮಾತುಗಳನ್ನು ಹೇಳಿ ಸಂಭಾವನೆಯೊಂದಿಗೆ ಪಂಚೆ ಶಾಲುಗಳನ್ನು ನೀಡಿ ಗೌರವಿಸುತ್ತಿದ್ದರು. ಪ್ರತಿವರ್ಷ ಒಬ್ಬೊಬ್ಬ ಕಲಾವಿದರನ್ನು ಸಂಮಾನಿಸುತ್ತಿದ್ದರು. ಸಪ್ತಾಹದಲ್ಲಿ ಹಣ ಉಳಿದರೆ ಅದಕ್ಕೆ ತಮ್ಮ ಹಣವನ್ನು ಸೇರಿಸಿ ಒಂದು ತಾಳಮದ್ದಲೆಯನ್ನು ಸಂಘಟಿಸುತ್ತಿದ್ದರೆ ಹೊರತು ಉಳಿದ ಹಣವನ್ನು ತಮ್ಮ ಸ್ವಂತಕ್ಕಾಗಿ ಬಳಸಿಕೊಳ್ಳುತ್ತಿರಲಿಲ್ಲ.
ಭಾಗವತಿಕೆ ಮತ್ತು ಮೃದಂಗವನ್ನು ಕಲಿಸುವವರಿಗೆ ಅವರು ಕೇಳಿದ ವೇತನವನ್ನು ನೀಡಲು ಸಿದ್ಧರಾಗಿದ್ದರು. ಶಿವಮೊಗ್ಗದ ಶಂಕರಮಠದಲ್ಲಿ ವೇದ ಶಿಕ್ಷಣದ ಹೊಣೆ ಅವರೇ ಹೊತ್ತಿದ್ದರು. ತಮ್ಮ ಅರ್ಥಗಾರಿಕೆಯಲ್ಲಿ ಸಣ್ಣ ಸಣ್ಣ ದೃಷ್ಟಾಂತಗಳನ್ನು ಬಳಸಿಕೊಳ್ಳುತ್ತಿದ್ದರು. ಇವುಗಳನ್ನು ಒಂದು ಕೃತಿರೂಪದಲ್ಲಿ ಪ್ರಕಟಿಸಿದ್ದಾರೆ. ಕೆಲವರು ಅವರೊಂದಿಗೆ ಅರ್ಥವನ್ನು ಹೇಳಲು ಒಪ್ಪುತ್ತಿರಲಿಲ್ಲ. ನಿಸ್ರಾಣಿ ರಾಮಚಂದ್ರ ಹೆಗ್ಡೆಯವರ ಮಾತಿನಲ್ಲಿ ಹೇಳುವುದಾದರೆ, “ಒಂದು ಅಂಕದ ಪ್ರಶ್ನೆಗಳನ್ನೇ ಅವರು ಹೆಚ್ಚಾಗಿ ಕೇಳುತ್ತಿದ್ದ ರೀತಿ”. ಪಾಂಡವರ ಗೋತ್ರ, ಕೇಕಯದಿಂದ ಅಯೋಧ್ಯೆಗೆ ಬರಲು ಭರತನಿಗೆ ಎಷ್ಟು ದಿನ ಬೇಕಾಯಿತು – ಇತ್ಯಾದಿ.
ತ್ರಿವೇದಿಗಳು ಅರ್ಥಶೌಚವನ್ನೂ ಅನೃಣ್ಯವನ್ನೂ ಅನುಷ್ಠಾನವನ್ನೂ ಚಾಚೂ ತಪ್ಪದೇ ಪಾಲಿಸಿದವರು. ತಾಳಮದ್ದಲೆ, ಪೌರೋಹಿತ್ಯ, ಜ್ಯೋತಿಷ್ಯದಲ್ಲಿ ಯಾರು ಎಷ್ಟೇ ಕೊಟ್ಟರೂ ಸಂತೋಷದಿಂದ ಸ್ವೀಕರಿಸುತ್ತಿದ್ದರು. ಒಪ್ಪಿಕೊಂಡ ಸಣ್ಣ ಕಾರ್ಯಕ್ರಮಕ್ಕೆ ಬೇರೆಯವರನ್ನು ಕಳುಹಿಸಿ ತಾವು ಹೆಚ್ಚು ದಕ್ಷಿಣೆ ಸಿಗುವ ದೊಡ್ಡ ಕಾರ್ಯಕ್ರಮಕ್ಕೆ ಹೋದವರಲ್ಲ. ತಾವು ಅಧ್ಯಯನ ಮಾಡಿದ ಗ್ರಂಥಗಳಿಂದ ಮಾಡಿಕೊಂಡ ಟಿಪ್ಪಣಿಗಳನ್ನು ಗ್ರಂಥರೂಪದಲ್ಲಿ ತಂದರೆ ಆಸಕ್ತರಿಗೆ ಅತ್ಯಂತ ಉಪಯುಕ್ತವಾದ ಆಧಾರಗ್ರಂಥಗಳಾಗುತ್ತವೆ. ಅವುಗಳಿಂದ ಆಯ್ದ ಲೇಖನಗಳನ್ನು “ಧರ್ಮಚಿಂತನ” ಎಂದೂ, ಸುಭಾಷಿತಗಳನ್ನು “ಸಾಹಿತ್ಯ ಕೌಮುದಿ” ಎಂದೂ ಪ್ರಕಟಿಸಿದ್ದಾರೆ. ತಮಗೆ ಈ ಕೃತಿಗಳ ಮುದ್ರಣ ವೆಚ್ಚ ಮಾತ್ರವೇ ಸಾಕೆಂದು ಇವುಗಳ ಬೆಲೆ ಕೇವಲ ರೂ. 75-00 ನಿಗದಿಗೊಳಿಸಿದ್ದಾರೆ. ಶ್ರೀಯುತರಿಗೆ ಪೆರ್ಲ ಕೃಷ್ಣ ಭಟ್ಟ ಪ್ರಶಸ್ತಿ ಬಂದಿರುತ್ತದೆ.
ನಿರಾಡಂಬರ, ಸರಳ, ವಿನಮ್ರ ಸ್ವಭಾವದ ವೇ| ಬ್ರ| ಶ್ರೀ ಹಂದಲಸು ಲಕ್ಷ್ಮೀನಾರಾಯಣ ಭಟ್ಟರ ಇಬ್ಬರು ಗಂಡುಮಕ್ಕಳು ತಂದೆಯ ದಾರಿಯಲ್ಲಿಯೇ ಮುನ್ನಡೆಯುತ್ತಿದ್ದಾರೆ. ಹಿರಿಯ ಮಗ ವಿದ್ವಾನ್ ವಾಸುದೇವ ಭಟ್ಟರು ಉತ್ತಮ ಪ್ರವಚನಕಾರ, ಯಕ್ಷಗಾನ ಅರ್ಥಧಾರಿ, ಸಂಸ್ಕೃತ ವಿದ್ವಾಂಸ. ಎರಡನೆಯ ಮಗ ವಿದ್ವಾನ್ ರಾಘವೇಂದ್ರ ಭಟ್ಟರು ಸಂಸ್ಕೃತದಲ್ಲಿ ಎಂ. ಎ., ಎಂ.ಫಿಲ್. ಮಾಡಿ ಪೌರೋಹಿತ್ಯ ಹಾಗೂ ಜ್ಯೋತಿಷ್ಯದಲ್ಲಿ ತೊಡಗಿಕೊಂಡಿದ್ದಾರೆ. ಹಂದಲಸು ಭಟ್ಟರು ತಾ. 02-07-2016 ರಂದು ಶಿವಮೊಗ್ಗದಲ್ಲಿ ಸ್ವರ್ಗಸ್ಥರಾದರು. ು ಲೇಖಕ : ಡಾ| ಶಾಂತಾರಾಮ ಪ್ರಭು
‘ಯಕ್ಷಗಾನ ಕಲಾವಿದ ಪುರುಷೋತ್ತಮ ಪೂಂಜರು ಯಕ್ಷಗಾನ ರಂಗದ ಸವ್ಯಸಾಚಿಯಾಗಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅವರು ಬಳಿಕ ಹಿಮ್ಮೇಳ, ಮುಮ್ಮೇಳ ಹಾಗೂ ಪ್ರಸಂಗ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆಯೊಂದಿಗೆ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಯಕ್ಷಗಾನ ರಂಗಕ್ಕೆ ಇಂತಹ ಮಹಾನ್ ಕಲಾವಿದರ ಸೇವೆ ಇನ್ನಷ್ಟು ಅಗತ್ಯವಾಗಿದ್ದು, ಆದಷ್ಟು ಶೀಘ್ರದಲ್ಲಿ ಅವರು ಗುಣಮುಖರಾಗಿ ಯಕ್ಷಸೇವೆಯಲ್ಲಿ ತೊಡಗಿಸಿಕೊಳ್ಳುವಂತಾಗಲಿ’ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ಹೇಳಿದರು.
ಅವರು ಶನಿವಾರ ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಹಿರಿಯ ಯಕ್ಷಗಾನ ಕಲಾವಿದ ಹಾಗೂ ಯಕ್ಷಗಾನ ಅಧ್ಯಯನ ಕೇಂದ್ರ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾದ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರ ಚಿಕಿತ್ಸೆಗಾಗಿ 25 ಸಾವಿರ ರೂ ಚೆಕ್ಕು ವಿತರಿಸಿ ಮಾತನಾಡಿದರು. ‘ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಪುರುಷೋತ್ತಮ ಪೂಂಜ ಅವರ ನಡುವೆ ಅವಿನಾಭಾವ ಸಂಬಂಧ ಇದೆ. ಯಕ್ಷಮಂಗಳ ಪ್ರಶಸ್ತಿಯ ಆಯ್ಕೆ ಸಮಿತಿ ಸದಸ್ಯರಾಗಿದ್ದು ಯಕ್ಷಗಾನ ಕೇಂದ್ರದ ಎಲ್ಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಲಹೆ, ಮಾರ್ಗದರ್ಶನಗಳನ್ನು ನೀಡುತ್ತಿದ್ದಾರೆ ‘ ಎಂದರು.
ಶ್ರೇಷ್ಠ ಪ್ರಸಂಗಕರ್ತ: ಇದೇ ಸಂದರ್ಭದಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಹಾಗೂ ಅರ್ಥಧಾರಿ ಭಾಸ್ಕರ ರೈ ಕುಕ್ಕುವಳ್ಳಿ ಅವರು ಮಾತನಾಡಿ ‘ಪುರುಷೋತ್ತಮ ಪೂಂಜರು ಯಕ್ಷಗಾನದ ಹಿರಿಯ ಭಾಗವತರು ಮತ್ತು ಶ್ರೇಷ್ಠ ಪ್ರಸಂಗಕರ್ತರು. ಜೊತೆಗೆ ಯಕ್ಷಗಾನ ರಂಗದ ಸರ್ವಾಂಗಗಳನ್ನು ಬಲ್ಲ ಮಹಾನ್ ಕಲಾವಿದರಾಗಿದ್ದಾರೆ. ತನ್ನ ಮನೆಯನ್ನೇ ಗುರುಕುಲವಾಗಿಸಿ ನೂರಾರು ಶಿಷ್ಯರನ್ನು ರೂಪಿಸಿದ ಅಪೂರ್ವ ವಿದ್ವಾಂಸರು. ಅವರು ಶೀಘ್ರ ಗುಣಮುಖರಾಗಿ ಯಕ್ಷಗಾನ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವಂತಾಗಲಿ’ ಎಂದು ಹಾರೈಸಿದರು.
ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ. ಶ್ರೀಪತಿ ಕಲ್ಲೂರಾಯ ಸ್ವಾಗತಿಸಿ ಶುಭಾಶಂಸನೆಗೈದರು. ಈ ಸಂದರ್ಭದಲ್ಲಿ ಶೋಭಾ ಪುರುಷೋತ್ತಮ ಪೂಂಜ, ದೀವಿತ್ ಎಸ್.ಕೋಟ್ಯಾನ್, ಸತೀಶ್ ಕೊಣಾಜೆ, ಸ್ವಾತಿ ಎಸ್.ರಾವ್ ಮಯೂರ್ ನಾಯ್ಗ, ಕೀರ್ತನ್ ನಾಯ್ಗ ಉಪಸ್ಥಿತರಿದ್ದರು.
ಯಕ್ಷಗಾನ ಕಲಾರಂಗದಿಂದ ಆಯ್ದ ಮೇಳಗಳ 409 ಕಲಾವಿದರಿಗೆ ರೂ.1022500/-ವಿತರಣಾ ಕಾರ್ಯಕ್ರಮ ಸಂಸ್ಥೆಯ ಕಛೇರಿಯಲ್ಲಿ ಜರಗಿತು. ಶಾಸಕರಾದ ಕೆ.ರಘುಪತಿ ಭಟ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಕಲಾರಂಗವು ಸಮಾಜದ ವಿಶ್ವಾಸಾರ್ಹತೆಯನ್ನು ಸಂಪಾದಿಸಿದ್ದು ಸಂಸ್ಥೆಯ ಚಟುವಟಿಕೆಯೊಂದಿಗೆ ತಾನು ಸದಾ ಕೈ ಜೋಡಿಸುತ್ತೇನೆ ಎಂದು ನುಡಿದರು.
ಸಮಾರಂಭದ ಅಭ್ಯಾಗತರಾಗಿ ಭಾಗವಹಿಸಿದ್ದ ಪಣಂಬೂರು ವಾಸುದೇವ ಐತಾಳರು ಸಂಸ್ಥೆ ಬಹುಮುಖಿಯಾಗಿ ಕೆಲಸ ಮಾಡುತ್ತಿದೆ. ಕಳೆದ 20 ವರ್ಷಗಳಿಂದ ಈ ಸಂಸ್ಥೆಯ ಕಾರ್ಯಚಟುವಟಿಕೆಯನ್ನು ನೋಡಿ ಬೆರಗಾಗಿದ್ದೇನೆ ಎಂದರು. ಸಿ.ಎ. ಗಣೆಶ್ ಕಾಂಚನ್ ಅವರು ಅಭ್ಯಾಗತರಾಗಿ ಉಪಸ್ಥಿತರಿದ್ದರು.
ಸಾಂಕೇತಿಕವಾಗಿ ಸಾಲಿಗ್ರಾಮ ಮೇಳದ ಸ್ತ್ರೀ ವೇಷಧಾರಿ ಶಶಿಕಾಂತ ಶೆಟ್ಟಿ, ಬಪ್ಪನಾಡು ಮೇಳದ ಭಾಗವತ ಗಣೇಶ್‍ಕುಮಾರ್ ಹೆಬ್ರಿ, ಯಕ್ಷಶಿಕ್ಷಣದ ಗುರುಕೃಷ್ಣಮೂರ್ತಿ ಭಟ್ ಬಗ್ವಾಡಿಯವರಿಗೆ ಸಹಾಯಧನದ ಚೆಕ್ ವಿತರಿಸಲಾಯಿತು. ಚೆಕ್ ಸ್ವೀಕರಿಸಿದ ಕಲಾವಿದರು ಸಂಸ್ಥೆ ಕಲಾವಿದರ ಕುರಿತು ನಿರಂತರ ಮಾಡುತ್ತಾ ಬಂದ ಹಲವು ಕಾರ್ಯಕ್ರಮಗಳನ್ನು ಸ್ಮರಿಸಿಕೊಂಡರು. ಉಳಿದ ಕಲಾವಿದರಿಗೆ ನೆಫ್ಟ್ ಮೂಲಕ ಅವರ ಖಾತೆಗೆ ತಲಾ ರೂ.2500/- ರಂತೆ ವರ್ಗಾಯಿಸಲಾಯಿತು.
ಅಧ್ಯಕ್ಷ ಎಂ. ಗಂಗಾಧರರಾವ್ ಸ್ವಾಗತಿಸಿದರು. ಉಪಾಧ್ಯಕ್ಷರಾದ ಎಸ್. ವಿ.ಭಟ್, ವಿ.ಜಿ. ಶೆಟ್ಟಿ ಕೋಶಾಧಿಕಾರಿ ಮನೋಹರ್ ಕೆ. ಅಭ್ಯಾಗತರಿಗೆ ಶಾಲು ಹೊದೆಸಿ ಗೌರವಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಸಂಸ್ಥೆಗೆ ದಾನಿಗಳ ನಿರಂತರ ಪ್ರೋತ್ಸಾಹವನ್ನು ಮತ್ತು ಈ ಯೋಜನೆಗೆ ನೆರವು ನೀಡಿ ಸಹಕರಿಸಿದವರನ್ನು ಸ್ಮರಿಸಿ ಕಾರ್ಯಕ್ರಮ ನಿರ್ವಹಿಸಿದರು. ಜತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ವಂದಿಸಿದರು.
ಕೊರೊನಾ ಕಾರಣದಿಂದ 2020-21ನೇ ಸಾಲಿನ ತಿರುಗಾಟದಲ್ಲಿ ಭಾಗಶಃ ಸಂಭಾವನೆ ಪಡೆದ 20 ಮೇಳಗಳ 410 ಕಲಾವಿದರಿಗೆ ಮತ್ತು ಯಕ್ಷಶಿಕ್ಷಣದ ಗುರುಗಳ ಖಾತೆಗೆತಲಾ 2,500/- ಮೊತ್ತದ ವಿತರಣಾ ಸಭೆ ದಿನಾಂಕ 16-07-2021 ಶುಕ್ರವಾರ ಪೂರ್ವಾಹ್ನ 11.00 ಗಂಟೆಗೆ ಯಕ್ಷಗಾನ ಕಲಾರಂಗದ ಕಚೇರಿಯಲ್ಲಿ ಜರಗಲಿದೆ. ಉಡುಪಿ ಶಾಸಕರಾದ ಶ್ರೀ ಕೆ.ರಘುಪತಿ ಭಟ್ ಸಭೆಯ ಅಧ್ಯಕ್ಷರಾಗಿ ಮತ್ತು ಅಭ್ಯಾಗತರಾಗಿ ಶ್ರೀ ಪಣಂಬೂರು ವಾಸುದೇವ ಐತಾಳ್, ಶ್ರೀಮತಿ ಮೀನಾ ವಿ. ಐತಾಳ್ ಹಾಗೂ ಸಿ.ಎ. ಗಣೇಶ್ ಕಾಂಚನ್ ಉಪಸ್ಥಿತರಿರುವರು ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಲಿಪ ನಾರಾಯಣ ಭಾಗವತರ ಬಗ್ಗೆ ಹೇಳಲು ಏನಿಲ್ಲ…? ಜೀವನವನ್ನೇ ಯಕ್ಷಗಾನಕ್ಕೆ ಮುಡುಪಾಗಿಟ್ಟವರು ಅವರು. ಅವರು ಉಸಿರಾಡುವ ಗಾಳಿ, ಸೇವಿಸುವ ನೀರು, ನಡೆದಾಡುವ ಮಣ್ಣು ಎಲ್ಲವೂ ಯಕ್ಷಗಾನವೆಂಬ ಅಪೂರ್ವ ಕಲೆಯ ಒಂದೊಂದು ಕಥೆಯನ್ನು ನಮಗೆ ಹೇಳಬಲ್ಲವು. ಹದವಾದ ಗಾಳಿಗೆ ಹಿತವಾಗಿ ತೂಗುತ್ತಿದ್ದ ಅವರ ಮನೆಯ ತೋಟದ ತೆಂಗಿನ ಗರಿಗಳು ಯಕ್ಷಗಾನದ ನಾಟ್ಯವಾಡುವಂತೆ ಭಾಸವಾಗುತ್ತಿದ್ದುವು. ಹತ್ತಿರದಲ್ಲೇ ಕೇಳುತ್ತಿದ್ದ ನೀರಿನ ಜುಳುಜುಳು ನಾದದಲ್ಲಿ ಬಲಿಪರ ಅಪೂರ್ವ ಮೋಹನ ರಾಗ ಲೀನವಾದಂತೆ ಕೇಳಿಸಿತು. ಸಮೀಪದಲ್ಲಿಯೇ ಇದ್ದ ಮನೆಗೆ ತಲುಪಿದಾಗ ಸ್ವತಃ ನಾನು ಯಾರನ್ನು ಮಾತನಾಡಿಸಲೆಂದು ಹೋಗಿದ್ದೆನೋ ಅವರದೇ ಅತ್ಮೀಯ ಸ್ವಾಗತ. ಅಂತಹಾ ಪ್ರಖ್ಯಾತರ, ವಿದ್ವಾಂಸರ, ಹಿರಿಯರ ಆದರದ ಬರಮಾಡಿಕೊಳ್ಳುವಿಕೆಗೆ ಶರಣಾದೆ. ಸರಳತೆ, ಮುಗ್ಧತೆಗೆ ಮನ ಮಾರುಹೋದೆ.
ನಾನು ಬರುವ ವಿಚಾರವನ್ನು ಅವರ ಕಿರಿಯ ಸುಪುತ್ರ ಶ್ರೀ ಬಲಿಪ ಪ್ರಸಾದರ ಮುಖಾಂತರ ಮೊದಲೇ ಅರಿತಿದ್ದುದರಿಂದ ನಿರೀಕ್ಷೆಯಲ್ಲೇ ಇದ್ದ ಹಾಗೆ ಮುಖಭಾವ ಹೇಳಿತು. ಉಭಯ ಕುಶಲೋಪರಿಯ ನಂತರ ಚಹಾ ತಿಂಡಿಯೂ ಆಯಿತು. ಪ್ರಥಮ ಭೇಟಿಯಾದರೂ ಬಹಳ ಬೇಗ ಅವರೊಡನೆ ಆತ್ಮೀಯರಾಗಲು ಸಾಧ್ಯವಾಯಿತು. ಅವರ ವ್ಯಕ್ತಿತ್ವದ ವಿಶೇಷತೆಯದು ಎಂದು ಅರಿತುಕೊಂಡೆ. ಅವರು ತಮ್ಮ “ಬಲಿಪ ನಾರಾಯಣ ಭಾಗವತ ಅಮೃತ ಭವನ”ಕ್ಕೆ ಕರೆದುಕೊಂಡು ಹೋದರು. ಆ ಹಾಲ್‍ನ ತುಂಬೆಲ್ಲಾ ಅವರ ಪ್ರಶಸ್ತಿಗಳು, ಸನ್ಮಾನಪತ್ರಗಳೇ ತುಂಬಿ ತುಳುಕುತ್ತಿದ್ದುವು. ಅಷ್ಟೊಂದು ಪ್ರಶಸ್ತಿಗಳು ಹಾಗೂ ಸನ್ಮಾನಪತ್ರಗಳು ಇದ್ದರೂ ಅದನ್ನು ವ್ಯವಸ್ಥಿತವಾಗಿ ಹಾಗೂ ಅಚ್ಚುಕಟ್ಟಾಗಿ, ಅಂದವಾಗಿ ಜೋಡಿಸಿಡಲಾಗಿತ್ತು. ಅವುಗಳನ್ನೆಲ್ಲಾ ನೋಡುತ್ತಾ ನೋಡುತ್ತಾ ನಾನು ಮೂಕವಿಸ್ಮಿತನಾಗಿ ಬಂದ ಕೆಲಸವನ್ನೇ ಮರೆತೆ. “ಇಲ್ಲಿ ಕುಳಿತುಕೊಂಡು ಆರಂಭಿಸೋಣವೆ?” ಎಂಬ ಅವರ ಮಾತು ನನ್ನನ್ನು ವಾಸ್ತವಲೋಕದತ್ತ ಎಳೆದು ತಂದಿತು. ಅವರಿಗೆ ವಿಧೇಯನಾಗಿ ಅಲ್ಲಿ ಕುಳಿತರೂ ಒಂದೊಂದೇ ಪ್ರಶ್ನೆಗಳನ್ನು ಅವರ ಮುಂದಿಟ್ಟೆ. ಅವರೂ ಅಷ್ಟೇ ಲೀಲಾಜಾಲವಾಗಿ ಉತ್ತರಿಸತೊಡಗಿದರು.
ಬಲಿಪ ನಾರಾಯಣ ಭಾಗವತರು ಫೋಟೋ: ಶ್ರೀ ಮಧುಸೂದನ ಅಲೆವೂರಾಯ
ಪ್ರಶ್ನೆ: ಬಲಿಪ ಎನ್ನುವುದು ನಿಮ್ಮ ಮನೆತನದ ಹೆಸರೋ ? ಹಾಗಿದ್ದರೆ ಆ ಹೆಸರು ನಿಮ್ಮ ಮನೆತನಕ್ಕೆ ಹೇಗೆ ಅಂಟಿಕೊಂಡಿತು ?
ಉತ್ತರ: ‘ಬಲಿಪ’ ಎನ್ನುವುದು ನಮ್ಮ ಮನೆತನಕ್ಕೆ ಬಂದ ಬಿರುದು ಅಥವಾ ಹೆಸರು. ನಿರ್ದಿಷ್ಟವಾಗಿ ಯಾವ ಕಾಲದಲ್ಲಿ ಆ ಹೆಸರು ಬಂತು ಎಂಬುದು ನನಗೆ ಗೊತ್ತಿಲ್ಲ. ಆ ಕಾಲದಲ್ಲಿ ತೀರ್ವೆ(ತೆರಿಗೆ) ಪಾವತಿಸಲಿಕ್ಕೆ ಹೋಗುವ ದಾರಿಯಲ್ಲಿ ಹುಲಿಯೊಂದು (ಬಲಿಪ್ಪ)ಎದುರಾದಾಗ ಅದನ್ನು ಕೊಂದು ಸಾಹಸ ಮೆರೆದು ಆ ಹುಲಿಯನ್ನು ಮಡಿಕೇರಿಯ ಅರಸರಿಗೆ ತೋರಿಸಿದಾಗ ಅವರು ಮೆಚ್ಚಿಕೊಂಡು ಇನ್ನು ನೀವು ತೀರ್ವೆ(ತೆರಿಗೆ) ಕಟ್ಟುವುದು ಬೇಡ ಎಂದು ತೀರ್ವೆಯನ್ನು ಮನ್ನಾ ಮಾಡಿದರಂತೆ. ಅಲ್ಲಿಂದ ನಮ್ಮ ಮನೆತನಕ್ಕೆ ಆ ಹೆಸರು ಬಂತು.
ಪ್ರಶ್ನೆ: ನಿಮ್ಮ ಬಾಲ್ಯದಲ್ಲಿ ನೀವು ಯಕ್ಷಗಾನಾಸಕ್ತಿಯನ್ನು ಗಳಿಸಿಕೊಂಡ ಬಗೆ ಹೇಗೆ ?
ಉತ್ತರ: ನಮ್ಮ ವಂಶದ ಒಂದು ಕವಲಿನಲ್ಲಿ ಕೃಷ್ಣ ಭಟ್ಟರು ಅಂತ ಇದ್ದರು. ಕೃಷ್ಣ ಭಟ್ಟರೆಂದರೆ ನನ್ನ ಅಜ್ಜ ಹಿರಿಯ ಬಲಿಪ ನಾರಾಯಣ ಭಾಗವತರ ಅಜ್ಜ. ಅವರ ನಂತರ ಅವರ ಮಗನಾದ ಮಾಧವ ಭಟ್ಟರು ಯಕ್ಷಗಾನ ಎಂಬ ಕಲೆಯನ್ನು ನಮ್ಮ ಕುಟುಂಬದಲ್ಲಿ ಮುಂದುವರಿಸಿಕೊಂಡು ಹೋಗುವುದಕ್ಕೋಸ್ಕರ ತಮ್ಮ ಮಗನಾದ ಹಿರಿಯ ಬಲಿಪ ನಾರಾಯಣ ಭಾಗವತರಿಗೆ ಅಂದರೆ ನನ್ನ ಅಜ್ಜನಿಗೆ ಭಾಗವತಿಕೆಯನ್ನು ಕಲಿಸಿದರು. ಅಮೇಲೆ ಅಜ್ಜನಿಂದ ತಂದೆಯವರಿಗೆ, ತಂದೆಯವರಿಂದ ನನಗೆ, ನನ್ನಿಂದ ನನ್ನ ಮಕ್ಕಳಿಗೆ ಹೀಗೆ ಮುಂದುವರಿಯುತ್ತಾ ಹೋಯಿತು ಕಲೆಯ ಸಂಬಂಧ.
ಪ್ರಶ್ನೆ: ಹಿರಿಯ ಬಲಿಪ ನಾರಾಯಣ ಭಾಗವತರ ಬಗ್ಗೆ ಪರಿಚಯಾತ್ಮಕವಾಗಿ ಒಂದೆರಡು ವಿವರಗಳನ್ನು ನೀಡಬಹುದೆ ?
ಉತ್ತರ: ನನ್ನ ಅಜ್ಜ ಹಿರಿಯ ಬಲಿಪ ನಾರಾಯಣ ಭಾಗವತರು. ಅವರ ಹೆಸರೇ ನನಗೆ ಇಟ್ಟದ್ದು. ಹಿರಿಯ ಬಲಿಪರು ಮೊದಲಿಗೆ ಬಣ್ಣದ ಮಾಲಿಂಗರ ಅಜ್ಜ, ಪಡ್ರೆ ಮೇಳ ನಡೆಸಿಕೊಂಡು ಬರುತ್ತಿದ್ದ ಮಾಲಿಂಗ ಪಾಟಾಳಿಯವರಲ್ಲಿ ಕಲಿತರು. ಮಾಲಿಂಗ ಪಾಟಾಳಿಯವರು ಪಡ್ರೆ ಮೇಳದ ಯಜಮಾನರು ಮಾತ್ರವಲ್ಲದೆ ಕಲಾವಿದರು ಕೂಡಾ ಆಗಿದ್ದರು. ಚೆಂಡೆ ಮದ್ದಳೆ, ನಾಟ್ಯಗಳಲ್ಲದೆ ವೇಷಭೂಷಣ ತಯಾರಿಸುವ ಕಲೆ ಕೂಡಾ ಮಾಲಿಂಗ ಪಾಟಾಳಿಯವರಿಗೆ ಕರಗತವಾಗಿತ್ತು. ಅಮೇಲೆ ಸರ್ವ ವಿದ್ಯಾ ವಿಶಾರದರಾಗಿದ್ದ ಕೂಡ್ಲು ಸುಬ್ರಾಯ ಶ್ಯಾನುಭಾಗರಲ್ಲಿ ಕಲಿತರು. ಭಾಗವತಿಕೆಯಲ್ಲದೆ ಅಜ್ಜ ನಾರಾಯಣ ಭಾಗವತರು ನಾಟ್ಯ, ಚೆಂಡೆ, ಹರಿಕಥೆ ಎಲ್ಲವನ್ನೂ ಮಾಡುತ್ತಿದ್ದರಂತೆ. ಜೀವನ ನಿರ್ವಹಣೆ ತುಂಬಾ ಕಷ್ಟ ಆಗ. ಸಂಸಾರ ನಿರ್ವಹಣೆಗಾಗಿ ವಿವಿಧ ಬಗೆಯ ವೃತ್ತಿಗಳನ್ನು ಮಾಡಬೇಕಾಗಿತ್ತು. ಅದರಲ್ಲೂ ನಮ್ಮಜ್ಜ ತುಂಬಾ ಗರ್ವಿಷ್ಠರು. ಅನ್ನಾಹಾರ, ನಿದ್ರೆ ಎಲ್ಲವನ್ನೂ ಬಿಟ್ಟು ಸತತವಾಗಿ ಯಕ್ಷಗಾನಾಭ್ಯಾಸವನ್ನೇ ಸಾಧನೆಯಿಂದ ಮಾಡಿದವರು.
ಪ್ರಶ್ನೆ: ಅಜ್ಜನೇ ನಿಮಗೆ ಯಕ್ಷಗಾನದ ಮೂಲ ಪಾಠದ ಗುರುಗಳೇ ? ಅಥವಾ ಬೇರೆಯವರಿಂದಲೂ ನಿಮಗೆ ಪಾಠ ಆಗಿದೆಯೇ ?
ಉತ್ತರ: ನನಗೆ ಯಕ್ಷಗಾನದ ಬಾಲಪಾಠ ತಂದೆಯವರಾದ ಮಾಧವ ಭಟ್ಟರದ್ದು. ಭಾಗವತಿಕೆ ಅಥವಾ ಹಾಡುಗಾರಿಕೆಗೆ ಅಜ್ಜ ಮತ್ತು ತಂದೆಯವರಿಂದ ಪಾಠ ಆಯಿತು. ಯಕ್ಷಗಾನದ ರಂಗತಂತ್ರ,ರಂಗಮಾಹಿತಿಗಳನ್ನು ಕುದ್ರೆಕೋಡ್ಲು ರಾಮ ಭಟ್ಟರಿಂದ, ಅವರ ಒಡನಾಟದಿಂಡ ಕಲಿತೆ. ಅಮೇಲೆ ರಂಗಸ್ಥಳದ ಕ್ರಮಗಳು ಹಾಗೂ ಮಾಹಿತಿಗಳು ಮೊದಲಾದುವುಗಳ ಮಾಹಿತಿ ಅಗಲ್ಪಾಡಿ ಕುಂಞಿ ಕೃಷ್ಣ ಮಣಿಯಾಣಿಯವರಿಂದ ತಿಳಿಯಿತು. ರಂಗದ ನಡೆಗಳನ್ನು ಮತ್ತು ಕೆಲವು ಮಾಹಿತಿಗಳನ್ನು ಕುಂಬಳೆ ತಿಮ್ಮಪ್ಪು ಇವರಿಂದ ಕಲಿತೆ. ಇವರಿಗೆಲ್ಲಾ ಆರಂಭದ ನಡೆಯಿಂದ ಕೊನೆಯ ವರೆಗೂ ಎಲ್ಲಾ ಅಂದರೆ ಪ್ರತಿಯೊಂದು ಭಾಗಗಳೂ ಗೊತ್ತಿತ್ತು. ತಪ್ಪಿದ್ದಲ್ಲಿ ಮಾರನೆಯ ದಿನ ಹೇಳಿಕೊಡುತ್ತಿದ್ದರು. ಅಮೇಲೆ ಇನ್ನೂ ಹಲವು ಹಿರಿಯ ಕಲಾವಿದರ ಒಡನಾಟದಿಂದ ಕಲಿತಿದ್ದೇನೆ.
ಪ್ರಶ್ನೆ: ನೀವು ಭಾಗವತರಾದ ಹೊಸತರಲ್ಲಿ ರಂಗದಲ್ಲಿ ಮೂಲ ವ್ಯವಸ್ಥೆಗಳಾದ ವಿದ್ಯುಚ್ಛಕ್ತಿ, ಮೈಕ್‍ಗಳ ವ್ಯವಸ್ಥೆ ಇತ್ತೇ? ಅದಿಲ್ಲದೆಯೇ ನೀವು ಪದ್ಯ ಹೇಳಿದ್ದುಂಟೋ?
ಉತ್ತರ: ನಾನು ಮೇಳಕ್ಕೆ ಸೇರಿದ ಹೊಸತರಲ್ಲಿ ಮೈಕ್ ಇರಲಿಲ್ಲ. ಆದರೆ ಟೆಂಟ್ ಮೇಳಗಳಿಗೆ ಕರೆಂಟ್, ಮೈಕ್‍ನ ವ್ಯವಸ್ಥೆ ಆಗಿತ್ತು. ಏರು ಶೃತಿಯಲ್ಲಿ ಪದ್ಯ ಹೇಳುತ್ತಿದ್ದ ಕಾರಣ ಸಭೆಯ ಹಿಂದಿನ ವರೆಗೂ ಕೇಳುವುದಕ್ಕೇನೂ ಅಡ್ಡಿಯಿರಲಿಲ್ಲ. ಆಗ ವಿದ್ಯುಚ್ಛಕ್ತಿ ಇರಲಿಲ್ಲ. ಬದಲಿಗೆ ಪೆಟ್ರೋಮ್ಯಾಕ್ಸ್ ಇತ್ತು. ಅಗೆಲ್ಲಾ ಇಡೀ ಪ್ರಸಂಗದ ಪದ್ಯಗಳು ಬಾಯಿಪಾಠ ಬರಬೇಕಿತ್ತು. ಯಾಕೆಂದರೆ ವೇಷಗಳು ಅಂದರೆ ಪಾತ್ರಧಾರಿಗಳು ಪೆಟ್ರೋಮ್ಯಾಕ್ಸ್ ಬೆಳಕಿಗೆ ಅಡ್ಡವಾಗಿ ನಿಂತಾಗ ಓದಲು ಕಾಣುತ್ತಿರಲಿಲ್ಲ. ಆದ ಕಾರಣ ಪದ್ಯ ಬಾಯಿಪಾಠ ಅನಿವಾರ್ಯವಾಗಿತ್ತು. ಬರುತ್ತಿತ್ತು ಕೂಡಾ. ರಾತ್ರಿ ಹೇಳಬೇಕಾದ ಪದ್ಯಗಳನ್ನು ಹಗಲು ಉರು ಹೊಡೆಯುತ್ತಿದ್ದೆ. ಈಗ ತುಂಬಾ ಪದ್ಯಗಳು ಮರೆತುಹೋಗಿದೆ.
ಪ್ರಶ್ನೆ: ದೊಂದಿ ಬೆಳಕಿನ ಆಟದ ಬಗ್ಗೆ ತಿಳಿಸುತ್ತೀರಾ ? ಪ್ರಸ್ತುತ ದೊಂದಿ ಬೆಳಕಿನ ಆಟದ ಸಂಪೂರ್ಣ ಮಾಹಿತಿಯಿರುವವರಲ್ಲಿ ನೀವು ಕೂಡಾ ಒಬ್ಬರು ಎಂದು ಹೇಳುತ್ತಾರೆ….
ಉತ್ತರ: ನಾನು ರಂಗಕ್ಕೆ ಬರುವಾಗ ದೊಂದಿ ಬೆಳಕಿನ ಆಟಗಳು ಮರೆಯಾಗಿತ್ತು. ದೊಂದಿ ಬೆಳಕು ಹೋಗಿ ಪೆಟ್ರೋಮ್ಯಾಕ್ಸ್ ಬಂದಿತ್ತು. ಆ ಕಾಲಕ್ಕೆ ಬೇರೆ ವ್ಯವಸ್ಥೆಗಳು ಆಗಿಲ್ಲದ ಕಾರಣ ದೊಂದಿ ಬೆಳಕನ್ನು ಉಪಯೋಗಿಸುತ್ತಿದ್ದರೇ ವಿನಃ ಅದು ಉತ್ತಮವಾದದ್ದು, ಶ್ರೇಷ್ಟವಾದದ್ದು ಅಂತ ಅಲ್ಲ. ಕಾಲಕ್ಕನುಗುಣವಾಗಿ ಬದಲಾಗುತ್ತಾ ಹಾಗೂ ಸುಧಾರಣೆಯಾಗುತ್ತಾ ಇರುತ್ತವೆ ವ್ಯವಸ್ಥೆಗಳು. ದೊಂದಿಬೆಳಕು ಹೋಗಿ ಪೆಟ್ರೋಮ್ಯಕ್ಸ್ ಬಂತು. ಅಮೇಲೆ ವಿದ್ಯುಚ್ಛಕ್ತಿ ಬಂತು. ಇನ್ನೂ ಮುಂದಕ್ಕೆ ಇದಕ್ಕಿಂತ ಹೆಚ್ಚಿನದು ಏನಾದರೂ ಬರಬಹುದು.
ಪ್ರಶ್ನೆ: ಹಿರಿಯ ಬಲಿಪರು ಮೈಕ್ ಇಲ್ಲದೆಯೇ ಪದ್ಯ ಹೇಳುತ್ತಿದ್ದರಂತೆ. ಅದು ಎಲ್ಲರಿಗೂ ಕೇಳುವಂತಾಗಲು, ಆಗಿನ ಪ್ರೇಕ್ಷಕರಲ್ಲಿ ಮೌನವಾಗಿ ಆಲಿಸುವ, ಕೇಳುವ ಒಂದು ಶಿಸ್ತು ಇತ್ತು ಅಲ್ಲವೇ?
ಉತ್ತರ: ನನ್ನ ಅಜ್ಜನ ಯಕ್ಷಗಾನ ಕಲಾಸೇವೆಯ ಕೊನೆಯ ಹಂತದಲ್ಲಿ ಧ್ವನಿವರ್ಧಕದ ವ್ಯವಸ್ಥೆ ಆಗಿತ್ತು. ಆದರೆ ಅವರು ಮೈಕ್ ಬೇಡ ಎಂದು ನಿರಾಕರಿಸುತ್ತಾ ಅಸಮಾಧಾನ ತೋರುತ್ತಿದ್ದರು. ದ್ವನಿವರ್ಧಾಕಗಳು ಆಗಾಗ ಸ್ವಲ್ಪ ಸ್ವಲ್ಪ ಗೊರಗೊರನೆ ಶಬ್ದ ಬರುವುದು ಇತ್ಯಾದಿಗಳಿಂದ ಅವರಿಗೆ ಅದು ಸಹನೀಯವಾಗಿರಲಿಲ್ಲ ಎಂದು ತೋರುತ್ತದೆ. ಆ ಕಾಲದಲ್ಲಿ ಪದ್ಯ, ವೇಷ, ಕಥಾನುಸಾರ ನಿಶ್ಶಬ್ದವಾಗಿ ಕೇಳುವ ಆಸಕ್ತಿ ಸಭಿಕರಲ್ಲಿತ್ತು. ಮತ್ತೆ, ಮಕ್ಕಳು ಗಲಾಟೆ ಮಾಡುವುದು ಇದ್ದದ್ದೆ. ಅವರನ್ನು ಎದುರು ಕುಳಿತ ಹಿರಿಯರಾದ ಕೆಲವರು ಕೋಲು ಹಿಡಿದು ಹೆದರಿಸಿ ನಿಯಂತ್ರಿಸುತ್ತಿದ್ದರು. ಉಳಿದವರಲ್ಲಿ ಮೌನವಾಗಿ ಕೇಳುವ ಆಸಕ್ತಿ ಹೆಚ್ಚಾಗಿತ್ತು.
ಪ್ರಶ್ನೆ: ಯಕ್ಷಗಾನದಲ್ಲಿ ಇರುವ ‘ಚೌ’ ತಾಳದ ಬಗ್ಗೆ ಹೇಳಬಹುದೇ ?
ಉತ್ತರ: ಯಕ್ಷಗಾನದಲ್ಲಿ ತಾಳಗಳು ಧ್ರುವ, ಆದಿ, ಚೌ, ರೂಪಕ, ಅಷ್ಟ, ಏಕ, ಝಂಪೆ, ತ್ರಿವುಡೆ, ಕೋರೆ ತಾಳ ಅಥವಾ ತಿತ್ತಿತ್ತೈ ಹಾಗೂ ಮಟ್ಟೆ ತಾಳ. ಅಮೇಲೆ ಕೆಲವು ಉಪತಾಳಗಳೂ ಬಂದುವು. ಅಲ್ಲದೆ ಅಷ್ಟ, ಏಕ, ಝಂಪೆ, ತ್ರಿವುಡೆ ತಾಳಗಳ ತ್ವರಿತ ರೂಪಗಳೂ ಇವೆ. ಒಂದು ತಾಳದಿಂದ ಇನ್ನೊಂದು ತಾಳಕ್ಕೆ ರಂಗದ ಅನುಕೂಲಕ್ಕೆ ತಕ್ಕಂತೆ ಹೋಗುವ ಕ್ರಮವಿದೆ. ಚೌ ತಾಳವೊಂದನ್ನು ಬಿಟ್ಟು ಈಗ ಎಲ್ಲಾ ತಾಳಗಳೂ ಈಗ ಇವೆ. ಧ್ರುವ ತಾಳ ಈಗಲೂ ಇದೆ. ಆಟದ ಕೊನೆಯ ಭಾಗದಲ್ಲಿ ಆರತಿ ಮಾಡುವಾಗಿನ ಪದ್ಯವನ್ನು ಆ ತಾಳದಲ್ಲಿಯೇ ಹಾಡುವುದು. ಆದರೆ ಅದಕ್ಕೆ ಬಾರಿಸುವುದು ಮಾತ್ರ ತ್ರಿವುಡೆ ತಾಳದಲ್ಲಿ. ಆಗೆಲ್ಲಾ ತಾಳಕ್ಕೆ ಮಾತ್ರ ಒಂದು ವೇಗವಿತ್ತು. ತಾಳಕ್ಕೆ ಒಂದನೇ ಕಾಲ, ಎರಡನೇ ಕಾಲ, ಮೂರನೇ ಕಾಲ, ನಾಲ್ಕನೇ ಕಾಲ ಹೀಗೆ ಇತ್ತೇ ಹೊರತು ಮಾತ್ರಾಗಣಗಳಿಗೆ, ಮಾತ್ರಾಕಾಲದ ವೇಗ ಇಲ್ಲ.
“ಚೌ ತಾಳವೆಂಬುದು ನಿರ್ಲಕ್ಷ್ಯದಿಂದಾಗಿ ಕ್ರಮೇಣ ರಂಗದಿಂದ ಮರೆಯಾಗಿ ಹೋಯ್ತು. ಅಗರಿ ಶ್ರೀನಿವಾಸ ಭಾಗವತರು ಇರುವಾಗ ಚೌ ತಾಳದಲ್ಲಿ ಪದ್ಯ ಹೇಳುತ್ತಾ ಇದ್ದರು. ಅಳಿಕೆ ರಾಮಯ್ಯ ರೈಗಳೇ ಮೊದಲಾದವರು ಚೌ ತಾಳದ ಹೆಜ್ಜೆಗಾರಿಕೆಯನ್ನು ಅರಿತಿದ್ದರು ಮಾತ್ರವಲ್ಲ ನೃತ್ಯ ಮಾಡುತ್ತಿದ್ದರು ಕೂಡಾ. ಆ ನಂತರ ಮರೆಯಾಗಿ ಹೋಯಿತು.”
“ಚೌ ತಾಳದ ಬಾಯಿತಾಳ .. “ ತತ್ತಾ ದಿಂದತ್ತಾಂ ದಿಂದತ್ತಾಂ ತತ್ತಾ ದಿಂದತ್ತಾಂ” ಪದ ತೆಗೆಯುವಾಗ ಎರಡನೇ ಪೆಟ್ಟಿಗೆ ಪದ ತೆಗೆಯಬೇಕು. ಇನ್ನೊಂದು ರೀತಿಯಲ್ಲಿ ಕೂಡಾ ಹೇಳುತ್ತಾರೆ. “ತೋಂ ದಿಂದತ್ತಾಂ ದಿಂದತ್ತಾ ದಿಂದತ್ತಾ ದಿಂದತ್ತಾಂ” ಅಥವಾ ಮತ್ತೊಂದು ರೀತಿಯಲ್ಲಿ “ತತ್ತಾ ದಿಂದತ್ತಾಂ ದಿಂದತ್ತಾ ದಿಂದತ್ತಾ ದಿಂದತ್ತಾಂ” ಎಂದು ಕೂಡಾ ಹೇಳುತ್ತಾರೆ.
ಪ್ರಶ್ನೆ: ನೀವು ಸುಮಾರು ಮೂರು ತಲೆಮಾರಿನ ಕಲಾವಿದರಿಗೆ ಭಾಗವತಿಕೆ ಮಾಡಿದವರು. ಹಿಂದಿನ ತಲೆಮಾರಿನ ಕಲಾವಿದರಲ್ಲಿ ನೀವು ಕಾಣುವ ವಿಶೇಷತೆಗಳೇನು ?
ಉತ್ತರ: ನಾನು ಹಳೆಯ ವೇಷಧಾರಿಗಳನ್ನೆಲ್ಲಾ ಕುಣಿಸಿದ್ದೇನೆ. ಅವರಿಗೆಲ್ಲಾ ವೇಷದ ಬಗ್ಗೆ ಒಂದು ಭಕ್ತಿ ಇತ್ತು. ಶ್ರದ್ಧಾಭಕ್ತಿಗಳು ಇದ್ದುವು. ವೇಷದಲ್ಲಿ ಸ್ವಲ್ಪ ಏನಾದರೂ ತಪ್ಪಿದರೆ ಮರೆಯಲಾಗದ ಬೇಸರವಾಗುತ್ತಿತ್ತು ಅವರಿಗೆ. ಲೆಕ್ಕಾಚಾರದ ಮಾತುಗಾರಿಕೆಯಾಗಿದ್ದರೂ ಕಲೆಯ ಬಗ್ಗೆ ಅಪಾರ ಗೌರವವಿತ್ತು. ಮಾಡಿದ ತಪ್ಪನ್ನು ಕೇಳಿ ತಿಳಿದುಕೊಂಡು ಮರುದಿನಕ್ಕೆ ತಿದ್ದಿಕೊಳ್ಳುತ್ತಿದ್ದರು. ಮುಮ್ಮೇಳದವರಿಗೆ ಮಾತ್ರವಲ್ಲ, ಹಿಮ್ಮೇಳದವರಿಗೂ ಅಷ್ಟೇ. ಸಹಾಯಕರಿಗೂ ಹಾಗೆಯೇ, ತೆರೆ ಹಿಡಿಯುವಲ್ಲಿ ಏನಾದರೂ ವ್ಯತ್ಯಾಸ ಬಂದರೆ ಅವರಿಗೆಲ್ಲಾ ಅತೀವ ಪಶ್ಚಾತ್ತಾಪವಾಗುತ್ತಿತ್ತು. ನನ್ನಿಂದ ಹೀಗಾಯಿತಲ್ಲಾ ಎಂದು ಅತಿಯಾಗಿ ಬೇಸರಿಸಿಕೊಳ್ಳುತ್ತಿದ್ದರು.
ಪ್ರಶ್ನೆ: ನಿಮ್ಮ ವೃತ್ತಿಜೀವನದ ಆರಂಭದಲ್ಲಿ ಇದ್ದ “ಪೂರ್ವರಂಗ”ದ ಅವಧಿಯ ಬಗ್ಗೆ ತಿಳಿಸುತ್ತೀರಾ? ಪೂರ್ವರಂಗದಲ್ಲಿ ಯಾವೆಲ್ಲಾ ವಿಭಾಗಗಳಿದ್ದುವು ?
ಉತ್ತರ: ನನ್ನ ಯಕ್ಷಗಾನದ ವೃತ್ತಿಜೀವನದಲ್ಲಿ ಹೇಳುವುದಾದರೆ ‘ಪೂರ್ವರಂಗ’ ಈಗ ಬಹಳ ಕಡಿಮೆಯಾಗಿದೆ. ಯಾಕೆ ಅಂತ ಹೇಳಿದರೆ ಆ ದಿನಗಳಲ್ಲಿ ಆಟ ಆಡಿಸುವವರು ಯಾರಾದರೂ ದಾನಿಗಳ ಸಹಾಯದಿಂದ ಆಟ ಆಡಿಸುತ್ತಿದ್ದರು. ಯಕ್ಷನ ಸಂಚಾರ ಮಧ್ಯರಾತ್ರಿ ಸುಮಾರು ಒಂದು ಘಂಟೆಗೆ ಅಂತ ಹಿಂದಿನವರ ನಂಬಿಕೆ. ಆದ್ದರಿಂದ ಪೀಠಿಕೆ ಬಡಿಯುವಾಗಲೇ 12.30 ಆಗುತ್ತಿತ್ತು. ಆದುದರಿಂದ ಹೆಚ್ಚಾಗಿ ನೋಡುವ ಪೂರ್ವರಂಗವೇ ಮಧ್ಯರಾತ್ರಿಯ ವರೆಗೆ ಆಗುವಾಗ ಅವರಿಗೆ ಬೇಸರವಾಗುತ್ತಿತ್ತು. ಆದುದರಿಂದ ಆಟ ಆಡಿಸುವವರ ಸಂಖ್ಯೆ ಕಡಿಮೆಯಾಗಬಹುದೆಂಬ ಭಯದಿಂದ ಪೂರ್ವರಂಗವನ್ನು ಕಡಿತಗೊಳಿಸುತ್ತಾ ಬಂದು, ನಾನು ಈ ಯಕ್ಷಗಾನ ಕ್ಷೇತ್ರಕ್ಕೆ ಪ್ರವೇಶಿಸುವಾಗ 10.30 ಘಂಟೆಗೆ ಪೀಠಿಕೆ ಆಗಲು ಸುರುವಾಯಿತು. ಆಗ ಪ್ರಾರಂಭದ ಸಭಾಲಕ್ಷಣದ ಪದ್ಯಗಳೆಲ್ಲಾ ಇದ್ದುವು. ಅಮೇಲೆ ಶ್ಲೋಕಗಳನ್ನೆಲ್ಲಾ ಹೇಳಲಿಕ್ಕಿತ್ತು. ನಾನು ಕೂಡಾ ಹೇಳಿದವ. ಶ್ಲೋಕಗಳನ್ನು ಹೇಳಲು ಸುಮಾರು ಮುಕ್ಕಾಲರಿಂದ ಒಂದು ಘಂಟೆಯ ಅವಧಿ ಬೇಕಾಗುತ್ತಿತ್ತು. ಅಮೇಲೆ ನಿತ್ಯವೇಷ ಪ್ರವೇಶ, ದೇವರ ಪೂಜೆ, ಅದರ ನಂತರ ‘ಕಟ್ಟುಹಾಸ್ಯ’ ಅಂತ ಇತ್ತು. ಅದನ್ನು ಹಾಸ್ಯಗಾರರೇ ಮಾಡುವುದು. ಆಗ ವಿಟ್ಲ ಜೋಷಿಯವರು ಹೇಮರೆಡ್ಡಿ ಮಲ್ಲಮ್ಮ ಅಂತ ವೇಷ ಮಾಡುತ್ತಿದ್ದರು. ಇನ್ನು ಕೆಲವು ಹಾಸ್ಯಗಳಾದ ರಂಗಾರಂಗಿ, ಈರೋಡು ಸ್ವಾಮಿ, ಮಡಿವಾಳ ಮಡಿವಾಳ್ತಿ ಮೊದಲಾದ ಕಟ್ಟುಹಾಸ್ಯಗಳಿದ್ದುವು. ಅಮೇಲೆ ಮುಖ್ಯ ಸ್ತ್ರೀವೇಷ. ಅದು ಬಿಟ್ಟು ಮುಖ್ಯ ಸ್ತ್ರೀವೇಷ ನಿಜವಾಗಿ ಒಂದೇ ಆಗಬೇಕಾದ್ದು. ಈಗ ಎರಡು ಮಾಡ್ತಾರೆ. ಮೊದಲು ಒಂದೇ ಇತ್ತು. ಅಮೇಲೆ ಪೀಠಿಕೆ. ಪೀಠಿಕೆ ಸ್ತ್ರೀವೇಷಗಳು ನಾನು ಈ ರಂಗಕ್ಕೆ ಬರುವಾಗ ಇರಲಿಲ್ಲ. ಬರಿಯ ಪದ್ಯಗಳನ್ನು ಮಾತ್ರ ಹೇಳುತ್ತಿದ್ದರು. ಏಳೆಂಟು ಪದ್ಯಗಳನ್ನು ಮಾತ್ರ ಹೇಳುತ್ತಿದ್ದರು. ಅದರ ಮಧ್ಯದಲ್ಲಿ ‘ಅರ್ಧನಾರಿ’ ಅನ್ನುವ ವೇಷ ಇತ್ತು. ಅದು ಈಗ ಇಲ್ಲ. ಅಮೇಲೆ ‘ಷಣ್ಮುಖ ಸುಬ್ರಾಯ’ ಅಂತ ಇತ್ತು. ಅದು ಕೂಡಾ ಈಗ ಇಲ್ಲ. ಕೋಲಾಟ ಇತ್ತು. ಒಂದೆರಡು ಸಲ ನಾನು ಕೂಡ ಮಾಡಿಸಿದ್ದೇನೆ. ಕೆಲವು ವೇಷಗಳನ್ನು ಹೊತ್ತು ಕಳೆಯಲಿಕ್ಕಾಗಿ ಅಂದರೆ ಸಮಯದ ಹೊಂದಾಣಿಕೆಗಾಗಿ ಮಾಡುತ್ತಿದ್ದರು. ಕೆಲವರು ಮುಖ್ಯ ಪಾತ್ರಧಾರಿಗಳು ಮನೆಯಿಂದ ನಡೆದುಕೊಂಡೇ ಬರಬೇಕಾದ ಪರಿಸ್ಥಿತಿ ಬಂದಾಗ ಅಂತಹಾ ಸಂದರ್ಭಗಳಲ್ಲಿ ತಡವಾಗುವುದರಿಂದ ಕೆಲವು ವೇಷಗಳನ್ನೆಲ್ಲಾ ಸಂದರ್ಭೋಚಿತವಾಗಿ ಕೂಡಾ ಮಾಡುತ್ತಿದ್ದರು.
ಪ್ರಶ್ನೆ: ಮುಂದಿನ ಪೀಳಿಗೆಗೆ ಪೂರ್ವರಂಗ ಮರೆತುಹೋಗದಂತೆ ಮಾಡುವುದು ಹೇಗೆ ?
ಉತ್ತರ: ಮುಂದಿನ ಪೀಳಿಗೆಗೆ ‘ಪೂರ್ವರಂಗ’ದ ವಿಭಾಗವನ್ನು ರಂಗದಲ್ಲಿ ಪುನಃ ಪ್ರದರ್ಶನ ಮಾಡುವುದು ಕಷ್ಟ. ಆದ ಕಾರಣ ಮೊದಲು ಮಾಡುತ್ತಿದ್ದ ಹಾಗೆ ಪೂರ್ವರಂಗವನ್ನೇ ಮೊದಲು ಮಕ್ಕಳಿಗೆ ಅಥವಾ ಇತರ ಅಭ್ಯಾಸಿಗಳಿಗೆ ಕಲಿಸುವುದು ಉತ್ತಮ. ಅ ರೀತಿ ಮಾಡಿ ಉಳಿಸಿಕೊಳ್ಳಲು ಪ್ರಯತ್ನಿಸಬಹುದು. ರಂಗದಲ್ಲಿ ಇನ್ನು ಕಷ್ಟ. ಕಾಲಮಿತಿಯ ಆಟವನ್ನು ಪ್ರದರ್ಶಿಸುವಾಗ ಒಂದೊಂದು ದಿನ ಪೂರ್ವರಂಗವನ್ನು ಮಾತ್ರವೇ ಪ್ರದರ್ಶಿಸಿ ಅದರ ಪರಿಚಯ ಜನರಿಗಾಗುವಂತೆ ಮಾಡಬಹುದು.
ಪ್ರಶ್ನೆ: ಈಗ ಯಕ್ಷಗಾನ ರಂಗದಲ್ಲಿ ಮಾತ್ರವಲ್ಲ, ಎಲ್ಲಾ ರಂಗಗಳಲ್ಲಿಯೂ ಹೊಸತನದ ಸೃಷ್ಟಿಯಾಗುತ್ತಿದೆ. ಆದರೆ ಯಕ್ಷಗಾನದಲ್ಲಿ ಸ್ವಲ್ಪ ಹೆಚ್ಚೇ ಅನ್ನುವಷ್ಟು ಆಗಿದೆ. ಈ ಪರಂಪರೆಯನ್ನು ಉಳಿಸಲು ಮುಂದಿನ ಪೀಳಿಗೆಗೆ ನೀವು ಕೊಡುವ ಸಲಹೆಗಳೇನು?
ಉತ್ತರ: ಯಕ್ಷಗಾನದಲ್ಲಿ ಈಗ ಹೊಸತನ ಕಾಣುವುದು ನಿಜ. ಮೊದಲಿನ ಕಾಲದಲ್ಲಿ ಒಂದು ಶಿಸ್ತು ಇತ್ತು. ತನ್ನದೂ ಒಂದು ಸ್ವಂತ ಸೃಷ್ಟಿ ಮಾಡಹೊರಟು ಅದರಲ್ಲಿ ಯಶಸ್ವಿಯಾದರೂ ಅದು ಮತ್ತೊಬ್ಬನಿಗೂ ಬರೋದಿಲ್ಲ. ಪರಂಪರೆಯನ್ನು ಪ್ರೇಕ್ಷಕ ಯವತ್ತೂ ತಿರಸ್ಕರಿಸಲಿಲ್ಲ. ಹೊಸತನವೆಂಬುದು ಒಮ್ಮೆಗೆ ಯಶಸ್ಸು ಕಂಡರೂ ಸ್ಥಿರವಾಗಿ ಉಳಿಯುವುದಿಲ್ಲ.
ಪ್ರಶ್ನೆ: ಪರಂಪರೆಯ ಮೂಲ ಕಲೆಗೆ ಕಸಿ ಕಟ್ಟುವ ಕೆಲಸ ಮಾಡುವುದನ್ನು ಕಂಡಾಗ ಅಪಾರವಾದ ನೋವು ನಿಮ್ಮನ್ನು ಬಾಧಿಸುತ್ತಿರಬಹುದಲ್ಲವೇ?
ಉತ್ತರ: ಹೌದು. ಹಾಗೆ ಮಾಡುವುದು ಕಂಡಾಗ ಬೇಸರವಾಗುತ್ತದೆ. ಆದರೆ ನಾವು ಯಾರಲ್ಲಿ ಹೇಳುವುದು ? ಕೂಡಿದಷ್ಟು ನೋಡುವುದು, ಬರುವುದು ಅಷ್ಟೆ. ನಮ್ಮ ಬೇಸರ ನಮ್ಮಲ್ಲೇ ಇಟ್ಟುಕೊಳ್ಳುವುದು.
ಪ್ರಶ್ನೆ: ನಿಮ್ಮ ಹಿಂದಿನ ಭಾಗವತರಲ್ಲಿ ನೀವು ಯಾರನ್ನು ಇಷ್ಟಪಡುತ್ತೀರಿ?
ಉತ್ತರ: ಹಿಂದಿನವರಲ್ಲಿ ನನ್ನ ಅಜ್ಜ ಹಿರಿಯ ಬಲಿಪ ನಾರಾಯಣ ಭಾಗವತರು, ಪುತ್ತಿಗೆ ರಾಮಕೃಷ್ಣ ಜೋಯಿಸರು, ಅಗರಿ ಶ್ರೀನಿವಾಸ ಭಾಗವತರು.
ಪ್ರಶ್ನೆ: ಹಿಮ್ಮೇಳದಲ್ಲಿ ನಿಮ್ಮ ದೀರ್ಘಾವದಿಯ ಜೊತೆಗಾರರಾಗಿದ್ದವರು ಯಾರೆಲ್ಲಾ?
ಉತ್ತರ: ಕುದ್ರೆಕೋಡ್ಲು ರಾಮ ಭಟ್ಟರು, ನಿಡ್ಲೆ ನರಸಿಂಹ ಭಟ್ಟರು, ಕಾಸರಗೋಡು ವೆಂಕಟ್ರಮಣ, ಅಡೂರು ಶಿವ ಮದ್ದಳೆಗಾರರು, ರಾಮಕೃಷ್ಣ ಮದ್ದಳೆಗಾರರು ಹಾಗೂ ಇನ್ನೂ ಅನೇಕ ಕಲಾವಿದರು. ಸಂದರ್ಶನ ಮುಗಿಸಿದಾಗ ಏನೋ ಒಂದು ಆತ್ಮತೃಪ್ತಿ, ಸಮಾಧಾನ. ಕೆಲವೊಂದು ಅನಿರೀಕ್ಷಿತವಾಗಿ ಕೇಳಿದ ಪ್ರಶ್ನೆಗಳಿಗೆ ಅವರು ನಯವಾಗಿಯೇ “ಅದೆಲ್ಲಾ ಯಾಕೆ… ಬೇಡ” ಎಂದು ಹೇಳುತ್ತಾ ತಮ್ಮ ದೂರದೃಷ್ಟಿತ್ವಕ್ಕೆ ಸಾಕ್ಷಿಯಾದರು. ನನಗೂ ಅದು ಸರಿಯೆಂದು ಕಂಡಿತು.
ಹಿರಿಯ ಬಲಿಪ ನಾರಾಯಣ ಭಾಗವತರ ತಮ್ಮ ಶಂಕರ ಭಟ್ಟರ ಮಗ ಮಾಧವ ಭಟ್ಟ- ಸರಸ್ವತೀ ಅಮ್ಮ ದಂಪತಿಯ ಎಂಟು ಜನ ಮಕ್ಕಳಲ್ಲಿ ಮೊದಲನೆಯವರಾಗಿ 19-03-1938ರಲ್ಲಿ ಬಲಿಪ ನಾರಾಯಣ ಭಾಗವತರ ಜನನ. ದೊಡ್ಡಜ್ಜನಿಗೆ ಮಕ್ಕಳಿಲ್ಲದ ಕಾರಣ ಅವರ ಹೆಸರನ್ನೇ ಇವರಿಗೆ ನಾಮಕರಣ ಮಾಡಲಾಯಿತು. ಪೆರ್ಲ ಸತ್ಯನಾರಾಯಣ ಶಾಲೆಯಲ್ಲಿ ಶಿಕ್ಷಣವನ್ನು ಪಡೆದ ಬಲಿಪ ನಾರಾಯಣ ಭಾಗವತರು ಕಲಿತದ್ದು 7ನೇ ತರಗತಿಯ ವರೆಗಾದರೂ ಅವರ ಜೀವನಾನುಭವ ಅಪಾರವಾದದ್ದು. ಲೋಕಾನುಭವದ ಜೊತೆಗೆ ಮುಗ್ಧತೆಯೂ ಮೇಳೈಸಿ ಅವರೊಬ್ಬ ಆಕರ್ಷಕ ಗೌರವಾನ್ವಿತ ವಕ್ತಿಯಂತೆ ಕಾಣಿಸುತ್ತಾರೆ.
ಬಲಿಪ ನಾರಾಯಣ ಭಾಗವತರಿಗೆ ಸಿಕ್ಕಿದ ಸನ್ಮಾನ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಅಂದರೆ ಅದು ಅವರಿಗೇ ಲೆಕ್ಕಕ್ಕೆ ಸಿಗದಷ್ಟು…! ಯಾಕೆಂದರೆ ಅದನ್ನು ಜೋಪಾನವಾಗಿ ಇಟ್ಟುಕೊಳ್ಳಲು ಸೂಕ್ತ ಜಾಗದ ಕೊರತೆಯಿಂದ ಎಷ್ಟೋ ಸನ್ಮಾನಪತ್ರಗಳು ಗೆದ್ದಲು ತಿಂದು ನಾಶವಾಗಿವೆ ಎಂದು ಅವರೇ ಒಪ್ಪಿಕೊಳ್ಳುತ್ತಾರೆ. ಆದರೆ ಉಳಿದ ಇಷ್ಟೇ ಅವರ ಅನನ್ಯ ಕಲಾಜೀವನದ ಸಾಕ್ಷಿಯಾಗಿ ನಿಂತಿರುವಾಗ ಅಳಿದುದನ್ನೂ ಸೇರಿಸಿದರೆ ಎಷ್ಟಾಗಬಹುದು? ಊಹಿಸಿ. ಅದು ಅವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಬಹುದು. ಅದ್ಭುತ, ಅಮೋಘ ಎಂಬ ಪದಗಳೆಲ್ಲಾ ಯಕ್ಷಲೋಕದ ಸಾಧನೆಯ ಮೇರುಶಿಖರದ ಈ ವ್ಯಕ್ತಿತ್ವಕ್ಕೆ ಸಾಕ್ಷೀಭೂತವಾಗಿ ಅನ್ವರ್ಥನಾಮವಾಗಿ ನಿಲ್ಲುವುದು.
ಬಲಿಪರಿಗೆ ಸಿಕ್ಕ ಪ್ರಶಸ್ತಿಗಳು ಮತ್ತು ಸನ್ಮಾನಗಳು: ಸುಮಾರು ಇನ್ನೂರಕ್ಕೂ ಹೆಚ್ಚು(ನಾಶವಾದದ್ದು ಸೇರಿಸಿದರೆ ಇನ್ನೂ ಹೆಚ್ಚಾಗಬಹುದು) ಬಲಿಪರು ಬರೆದ ಪ್ರಸಂಗಗಳು: ನಾಗವಿಜಯ(ನಾಗ ಸಿರಿಕನ್ನೆ), ನಟಚರಿತ್ರೆ ಅಥವಾ ಆಟದೊಳಗಣ ಆಟ, ಭಸ್ಮಾಸುರ ಮೋಹಿನಿ, ಗಾಯತ್ರಿ ಮಹಾತ್ಮೆ, ಶಿವಪ್ರಭಾ ಪರಿಣಯ, ಗಜೇಂದ್ರ ಮೋಕ್ಷ, ಅಂಗತಾಪಹರ (ಗರುದೋದ್ಭವ), ಕಂತುಕಾವತಿ ಕಲ್ಯಾಣ, ನವಗ್ರಹ ಮಹಾತ್ಮೆ, ದೇವಾಂಗ ಮದನಿಕೆ(ಕಾಳಿಂದಿ ವಿವಾಹ), ಮತ್ಸ್ಯಾವತಾರ, ಯಶೋಮತಿ ಏಕಾವಳಿ, ಶಕಟಾಸುರಾದಿಗಳ ವಧೆ, ಅಜಾಮಿಳ ಚರಿತ್ರೆ, ಶ್ರೀಕೃಷ್ಣ ಕಾರುಣ್ಯ, ಮೂರೂವರೆ ರತ್ನ, ಮಹಾದಾನಿ ಶಿಬಿ ಚಕ್ರವರ್ತಿ, ಕಾಲನೇಮಿ ಕಾಳಗ, ರಂತಿ ದೇವೋಪಖ್ಯಾನ, ದಂಭೋದ್ಭವ, ಗುರುದಕ್ಷಿಣೆ, ಶ್ರೀಕೃಷ್ಣ ಗಾರುಡಿ, ಶ್ರವಣಕುಮಾರ ಚರಿತ್ರೆ, ಐದು ದಿನದ ಶ್ರೀದೇವಿ ಮಹಾತ್ಮೆ ಮತ್ತು ಶ್ರೀಕೃಷ್ಣ ತುಲಾಭಾರ ಪ್ರಕಟವಾಗದಿರುವ ಕೃತಿಗಳು: ಚಂದ್ರಕಲಾ ಪರಿಣಯ, ಧ್ರುವ ಚರಿತ್ರೆ, ಅಷ್ಮಾಂಗನೆಯರ ವಿವಾಹ, ಹಿರಣ್ಯಮಣಿ, ಪ್ರತಾಪನ ಪ್ರತಾಪ, ಗರುಡ ಗರ್ವಭಂಗ, ಚಿತ್ರವಿಚಿತ್ರ ಕಾಳಗ, ದಶರಥೋದ್ಭವ, ಚಂದ್ರಸೇನ ಚರಿತೆ, ಸೀಮಂತಮಣಿ ಸೀತಾರಮಣಿ, ತುಳಸಿ ಮಾಲತಿ ಧಾತ್ರಿ, ಹೀಗೆ ಹತ್ತು ಹಲವಾರು.
ಕುಟುಂಬ ವಿವರ: ಹೆಸರು: ಬಲಿಪ ನಾರಾಯಣ ಭಾಗವತರು ಪತ್ನಿ: ದಿ| ಜಯಲಕ್ಷ್ಮಿ ಜನನ: 19.03.1938 ಜನನ ಸ್ಥಳ: ಕಾಸರಗೋಡು ಜಿಲ್ಲೆಯ ಎಣ್ಮಕಜೆ ಗ್ರಾಮದ ಪಡ್ರೆ ಎಂಬಲ್ಲಿ ತಂದೆ ತಾಯಿ: ಶ್ರೀ ಬಲಿಪ ಮಾಧವ ಭಟ್ಟ ಮತ್ತು ಶ್ರೀಮತಿ ಸರಸ್ವತಿ ಅಮ್ಮ ಯಕ್ಷಗಾನ ಗುರುಗಳು: ಅಜ್ಜ ಹಿರಿಯ ಬಲಿಪ ನಾರಾಯಣ ಭಟ್ಟ ಮತ್ತು ತಂದೆ ಬಲಿಪ ಮಾಧವ ಭಟ್ಟ ರಂಗಮಾಹಿತಿ: ಆ ಕಾಲದ ಪ್ರಸಿಧ್ಧ ಮದ್ದಳೆಗಾರರಾದ ದಿ| ಕುದ್ರೆಕೋಡ್ಲು ರಾಮ ಭಟ್ಟ, ವೇಷಧಾರಿಗಳಾದ ದಿ| ಕುಂಬಳೆ ತಿಮ್ಮಪ್ಪ ಮತ್ತು ದಿ| ಅಗಲ್ಪಾಡಿ ಕುಂಞಿ ಕೃಷ್ಣ ಮಣಿಯಾಣಿ. ಅನುಭವ: 50 ವರ್ಷಕ್ಕೂ ಮೇಲ್ಪಟ್ಟು (ಕೂಡ್ಲು, ಕುಂಡಾವು, ರೆಂಜಾಳ, ಮೂಲ್ಕಿ, ಭಗವತಿ ಮೇಳಗಳಲ್ಲಿ ಅಲ್ಲದೆ ಕಟೀಲು ಮೇಳವೊಂದರಲ್ಲೇ 25 ವರ್ಷಕ್ಕೂ ಮೇಲ್ಪಟ್ಟು ತಿರುಗಾಟ ನಡೆಸಿದ್ದಾರೆ. ಮಕ್ಕಳು: ನಾಲ್ಕು ಜನ ಗಂಡುಮಕ್ಕಳು ( ಬಲಿಪ ಮಾಧವ ಭಟ್ಟ, ಹವ್ಯಾಸೀ ಭಾಗವತರಾದ ಬಲಿಪ ಶಿವಶಂಕರ ಭಟ್ಟ, ಬಲಿಪ ಶಶಿಧರ ಭಟ್ಟ, ಹಾಗೂ ಪ್ರಖ್ಯಾತ ಭಾಗವತರಾಗಿ ಪ್ರಸ್ತುತ ಕಟೀಲು ಮೇಳದಲ್ಲಿ ಭಾಗವತರಾಗಿ ಸೇವೆ ಸಲ್ಲಿಸುತ್ತಿರುವ ಬಲಿಪ ಪ್ರಸಾದ ಭಟ್ಟ)