Saturday, March 14, 2026
Home Blog Page 309

“ಅಗರಿ ಶೈಲಿ’’ಯ ಅಪ್ರತಿಮ ಸಾಧಕ ರಘುರಾಮ ಭಾಗವತರು

ವರ್ತಮಾನ ಕಾಲದಲ್ಲಿ ತೆಂಕುತಿಟ್ಟಿನ ಅತೀ ಹಿರಿಯ ಭಾಗವತರು, ಹಿಂದಿನ ಹಾಗೂ ಈಗಿನ ಕಾಲದ ಭಾಗವತರ ನಡುವಿನ ಕೊಂಡಿಯಂತಿದ್ದ, ಅಗರಿ ಶೈಲಿ’’ಯ ಪ್ರವರ್ತಕ ಅಗರಿ ರಘುರಾಮ ಭಾಗವತರ ನಿಧನ ಯಕ್ಷರಂಗಕ್ಕೊಂದು ಅತೀ ದೊಡ್ಡ ನಷ್ಟ. ಅಗರಿ ಶೈಲಿ’’ಯ ಸಮರ್ಥ ಪ್ರತಿನಿಧಿಗಳಾದ ರಘುರಾಮ ಭಾಗವತರು ಎಲ್ಲಾ ಪ್ರಸಂಗಗಳ ನಡೆ ಅರಿತಿದ್ದ, ಹೊಸ ಪ್ರಸಂಗಗಳಿಗೆ ನಿರ್ದೇಶನ ನೀಡುತ್ತಿದ್ದ, ಪರಂಪರೆ ಹಾಗೂ ಸಂಗೀತ ಶೈಲಿ- ಎರಡನ್ನೂ ಅರಿತಿರುವ ಅಪರೂಪದ ಭಾಗವತರೆನಿಸಿಕೊಂಡಿದ್ದರು.


ನಿಧನದಲ್ಲೂ ಒಂದು ಪವಾಡ – ಸತ್ತು ಬದುಕಿದ ಅಗರಿ ರಘುರಾಮ ಭಾಗವತರು : ಹೌದು, ಇದೊಂದು ಪವಾಡ ಜರಗಿತ್ತು. ಭಾಗವತರು ನಿಧನರಾದುದು ಬೆಳಿಗ್ಗೆ 10.30ಕ್ಕೇ ಆದರೂ, ಅದರ 9 ಘಂಟೆಗಳ ಮೊದಲೇ, ಅಂದರೆ ರಾತ್ರಿ ಒಂದೂವರೆ ಘಂಟೆಗೇ ಕೆಲವು ವಾಟ್ಸಾಪ್ ವೇದಿಕೆಗಳಲ್ಲಿ ಅಗರಿ ರಘುರಾಮ ಭಾಗವತರು ಇನ್ನಿಲ್ಲ’’ ಎಂಬ ಸುದ್ದಿ ಹರಿದಾಡಲಾರಂಭಿಸಿತ್ತು. ನಾನೂ ಇದನ್ನು ಓದಿ ವಿಷಯ ದೃಢೀಕರಿಸದೇ ಜಾಲತಾಣಗಳಲ್ಲಿ ಪೋಸ್ಟ್ ಮಾಡಬೇಡಿ’’ ಎಂದು ರಾತ್ರಿಯೇ ಪ್ರತಿಕ್ರಿಯೆಯನ್ನೂ ಕೊಟ್ಟಿದ್ದೆ. ಆದರೆ ನಂತರ ನನಗೆ ತಿಳಿದದ್ದು ಈ ಪವಾಡ. ರಾತ್ರಿ ಸುಮಾರು 12.30ಕ್ಕೆ ರಘುರಾಮ ಭಾಗವತರ ಹೃದಯ ಬಡಿತ, ರಕ್ತದ ಒತ್ತಡ, ನಾಡಿಬಡಿತ ಎಲ್ಲವೂ ಸಂಪೂರ್ಣವಾಗಿ ಸ್ಥಬ್ದವಾಗಿತ್ತು. ವೈದ್ಯರೂ ಕ್ಷಮಿಸಿ, ಮುಗಿಯಿತು’’ ಎಂದಿದ್ದರು. ಕುಟುಂಬದ ಸದಸ್ಯರೆಲ್ಲರೂ ಆಸ್ಪತ್ರೆಗೆ ಬಂದೂ ಆಗಿತ್ತು. ಆದರೆ, ವಿಚಿತ್ರ ಎಂಬಂತೆ ಭಾಗವತರ ಹೃದಯ, ನಾಡಿ ಬಡಿತ, ರಕ್ತದ ಒತ್ತಡ ಪುನಃ ಆರಂಭವಾಯಿತು. ಇದೊಂದು ಪವಾಡವೇ ಸರಿ. ವೈದ್ಯರು ಪುನಃ ಶುಶ್ರೂಶೆ ನೀಡಲಾರಂಭಿಸಿದರು. ಉಸಿರಾಟವೂ ಪುನರಾರಂಭವಾಯಿತು. ಆದರೂ ಬೆಳಿಗ್ಗೆ 10.30ಕ್ಕೆ ನಿಧನರಾದರು. ವೈದ್ಯಕೀಯ ಕ್ಷೇತ್ರದಲ್ಲಿ ಇಂತಹ ಘಟನೆ ಎಷ್ಟೋ ಲಕ್ಷಕ್ಕೊಂದರಂತೆ ಜರಗುವುದುಂಟು.

ತೆಂಕು ತಿಟ್ಟಿನಲ್ಲಿ ಪ್ರಾತಃಸ್ಮರಣೀಯರು ಎನಿಸಿದ್ದ ಸುಪ್ರಸಿದ್ಧ ಭಾಗವತರು, ದಕ್ಷ ನಿರ್ದೇಶಕರು ದಿ. ಅಗರಿ ಶ್ರೀನಿವಾಸ ಭಾಗವತರು - ರುಕ್ಮಿಣಿ ಅಮ್ಮನವರ ಸುಪುತ್ರರಾಗಿ ಅಗರಿ ರಘುರಾಮರು 07.02.1935ರಂದು ಜನಿಸಿದರು. ಸುರತ್ಕಲ್ ವಿದ್ಯಾದಾಯಿನಿ ವಿದ್ಯಾ ಸಂಸ್ಥೆಯಲ್ಲಿ ಇಂಟರ್ ಮೀಡಿಯೆಟ್, ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ FA ವ್ಯಾಸಂಗ ಪೂರೈಸಿ ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆಯಲ್ಲಿ ನೌಕರಿಗೆ ಸೇರಿದರು. ತಂದೆಯವರಂತೆ ತಾನೂ ಭಾಗವತನಾಗಬೇಕೆಂಬ ಆಕಾಂಕ್ಷೆ ಬಾಲ್ಯದಲ್ಲೇ ಮೊಳಕೆ ಒಡೆದಿದ್ದ ಕಾರಣ, ತಮ್ಮ ತಂದೆಯವರನ್ನೇ ಗುರುವಾಗಿ ಸ್ವೀಕರಿಸಿ ಭಾಗವತಿಕೆಯ ಪಟ್ಟುಗಳನ್ನು ಕರಗತ ಮಾಡಿ ಕೊಂಡರು. ತಂದೆಯವರು ಹೇಳಿ ಕೊಟ್ಟದ್ದಕ್ಕಿಂತಲೂ ನೋಡಿಯೇ ಭಾಗವತಿಕೆ ಕಲಿತದ್ದು ಜಾಸ್ತಿ ಎನ್ನಬಹುದಾದರೂ, ತಂದೆಯವರ ಕಡು ನಿರ್ದೇಶನ, ಸಲಹೆಗಳ ಅನುಷ್ಠಾನದಿಂದಲೇ ಭಾಗವತರು’’ ಎನಿಸಿಕೊಂಡರು.

ಸರಕಾರಿ ನೌಕರಿಯಲ್ಲಿದ್ದರೂ, ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸಿ ಜನಪ್ರಿಯತೆ ಪಡೆದರು. ಆದರೂ ಮೇಳದ ಪೂರ್ಣಕಾಲಿಕ ತಿರುಗಾಟದ ಭಾಗವತರಾದುದು ಒಂದು ಆಕಸ್ಮಿಕ ಘಟನೆಯಿಂದಾಗಿ. ಸುಮಾರು 1965-66ರ ಕಾಲ. ಅಗರಿ ಶ್ರೀನಿವಾಸ ಭಾಗವತರು ಕಸ್ತೂರಿ ಪೈ ಸಹೋದರರ ಸುರತ್ಕಲ್ ಮೇಳದ ಪ್ರಧಾನ ಭಾಗವತರಾಗಿದ್ದ ಸಮಯವದು. ಮೇಳಗಳೊಳಗೇ ತೀವ್ರ ಪೈಪೋಟಿಯ ಕಾಲಘಟ್ಟವದು. ತುಳು ಪ್ರಸಂಗಗಳು ಯಕ್ಷರಂಗ ಪ್ರವೇಶದ ಪ್ರಾಥಮಿಕ ಹಂತದಲ್ಲಿತ್ತು. ಸುರತ್ಕಲ್ ಮೇಳಕ್ಕೂ ಉಳಿದ ಮೇಳಗಳಂತೆಯೇ ತುಳುನಾಡ ಸಿರಿ, ಕೋಟಿ ಚೆನ್ನಯ, ಕೋರ್ದಬ್ಬು ಬಾರಗ ಮುಂತಾದ ಪಾಡ್ದನ ಆಧರಿತ ಪ್ರಸಂಗಗಳಿಗೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ. ಪೈ ಸಹೋದರರು ಆದಷ್ಟು ಹೆಚ್ಚು ಪೌರಾಣಿಕ ಪ್ರಸಂಗಗಳನ್ನೇ ಪ್ರದರ್ಶಿಸಲು ಕಂಟ್ರಾಕ್ಟುದಾರರ ಮನ ಒಲಿಸುತ್ತಿದ್ದರೂ, ಕೆಲವೊಂದು ಕಡೆಗಳಲ್ಲಿ ತುಳು ಪ್ರಸಂಗವೇ ಬೇಕೆಂಬ ಬೇಡಿಕೆಯಿತ್ತು.

ಆದರೆ ಈ ಸಂದರ್ಭದಲ್ಲಿ ಪೈ ಸಹೋದರರಿಗೊಂದು ಸಂಕಷ್ಟ ಎದುರಾಯಿತು. ಮೇಳದ ಪ್ರಧಾನ ಭಾಗವತರಾದ ಅಗರಿಯವರು ತುಳುನಾಡ ಸಿರಿ’’ ತುಳು ಪ್ರಸಂಗವನ್ನು ಬರೆದಿದ್ದರೂ, ಅವರಿಗೆ ತುಳು ಪ್ರಸಂಗಗಳ ಬಗ್ಗೆ ಒಲವಿರಲಿಲ್ಲ. ತುಳು ಪ್ರಸಂಗಗಳು ಯಕ್ಷಗಾನದ ಮೌಲ್ಯಗಳನ್ನು ಉಳಿಸಿಕೊಳ್ಳಲಾರದು ಎಂಬ ಮನೋಭಾವ ಹೊಂದಿದ್ದರು. ಹಾಗಾಗಿ ತಾವು ತುಳು ಪ್ರಸಂಗಗಳಿಗೆ ಭಾಗವತಿಕೆ ಮಾಡಲಾರೆ ಎಂದು ಪೈ ಸಹೋದರರಲ್ಲಿ ಖಡಾ ಖಂಡಿತವಾಗಿ ತಿಳಿಸಿದರು. ಅಗರಿಯವರು ಕಟ್ಟುನಿಟ್ಟಿನ ಶಿಸ್ತಿನ ಭಾಗವತರು. ಒಮ್ಮೆ ಹೇಳಿದ ಮಾತು, ಅದೇ ಅಂತಿಮ. ಪೈಗಳು ಇಕ್ಕಟ್ಟಿಗೆ ಸಿಲುಕಿದರು. ಪ್ರಸಿದ್ಧಿಯ ತುತ್ತ ತುದಿಯಲ್ಲಿದ್ದ ಅಗರಿ ಶ್ರೀನಿವಾಸ ಭಾಗವತರು ಇಲ್ಲದಿದ್ದರೆ ಕಲೆಕ್ಷನ್‍ಗೆ ತೊಂದರೆ, ಹಾಗೆಂದು ತುಳು ಪ್ರಸಂಗ ಆಡಿಸದಿದ್ದರೆ ಕಂಟ್ರಾಕ್ಟುದಾರರನ್ನು ಕಳೆದುಕೊಳ್ಳುವ ಅಪಾಯ. ಕೊನೆಗೆ ಅಗರಿಯವರೇ ಪೈಗಳಿಗೆ ಒಂದು ಸಲಹೆ ಕೊಟ್ಟರು. ಪೌರಾಣಿಕ ಪ್ರಸಂಗಗಳಿಗೆ ತಾನೇ ಭಾಗವತಿಕೆ ಮಾಡುವುದು, ತುಳು ಪ್ರಸಂಗಗಳು ಇದ್ದ ದಿನ, ತನ್ನ ಭಾಗವತಿಕೆಯ ಪಡಿಯಚ್ಚಿನಂತಿರುವ ತನ್ನ ಮಗನಾದ ಅಗರಿ ರಘುರಾಮ ಭಾಗವತರನ್ನು ಬರ ಹೇಳುವುದು, ಆ ಮೂಲಕ ಅಗರಿ ಶ್ರೀನಿವಾಸ ಭಾಗವತರ ಕೊರತೆ ಕಾಣದಂತೆ ನಿಭಾಯಿಸುವುದು. ಹೀಗೆ ಆರು ತಿಂಗಳ ಕಾಲ ರಘುರಾಮರು ವೃತ್ತಿಗೆ ರಜೆ ಹಾಕಿ ಸುರತ್ಕಲ್ ಮೇಳದ ತಿರುಗಾಟ ನಡೆಸಿದರು.

ಮುಂದಿನ ವರ್ಷ ಅಗರಿಯವರು ಕೂಡ್ಲು ಮೇಳ ಸೇರಿದಾಗ, ರಘುರಾಮ ಭಾಗವತರು ಪೈಗಳ ಒತ್ತಾಯಕ್ಕೆ ಮಣಿದು, ತಾವು 9 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಸರಕಾರೀ ನೌಕರಿಗೆ ರಾಜೀನಾಮೆ ಕೊಟ್ಟು ಸುರತ್ಕಲ್ ಮೇಳಕ್ಕೆ ಪ್ರಧಾನ ಭಾಗವತರಾಗಬೇಕಾಯಿತು. ಹೀಗೆ ತೆಂಕು ತಿಟ್ಟಿಗೆ ಒಬ್ಬ ಪ್ರತಿಭಾವಂತ, ದಕ್ಷ ಭಾಗವತರ ಪ್ರವೇಶ, ಮುಂದೆ ಯಕ್ಷರಂಗಕ್ಕೆ ದೊಡ್ಡ ಲಾಭ ತಂದು ಕೊಟ್ಟಿತು. (ಆದರೆ ಇದರಿಂದಾಗಿ ಅಗರಿ ರಘುರಾಮ ಭಾಗವತರಿಗೆ ವೈಯುಕ್ತಿಕವಾಗಿ ನಷ್ಟವಾಯಿತು. ಏಕೆಂದರೆ, ರಘುರಾಮರು ಯಕ್ಷರಂಗ ಸೇರುವ ಕಾಲಕ್ಕೆ ಸರಕಾರೀ ನೌಕರಿಯ ಸಂಬಳ, ಭಾಗವತರ ಸಂಬಳಕ್ಕಿಂತಲೂ ಕಡಿಮೆಯೇ ಇದ್ದರೂ, ತದನಂತರ ವೇತನ ತುಂಬಾ ಹೆಚ್ಚಳವಾಯಿತಲ್ಲದೇ, ಸರಕಾರೀ ಸೌಲಭ್ಯಗಳಾದ ನಿವೃತ್ತಿ ವೇತನ, ಪಿ.ಎಫ್., ಇ.ಎಸ್.ಐ., ರಜಾವೇತನ ಹಾಗೂ ಇನ್ನಿತರ ಸರಕಾರೀ ಸೌಲಭ್ಯಗಳಿಂದ ವಂಚಿತರಾದರು. ಅದರಲ್ಲೂ ನಿವೃತ್ತಿ ವೇತನ ಕಳಕೊಂಡೆ ಎಂಬ ಬೇಸರವನ್ನು ಆ ಕಾಲದಲ್ಲಿ ನನ್ನಲ್ಲೂ ವ್ಯಕ್ತಪಡಿಸಿದ್ದರು.)

ಅಗರಿ ರಘುರಾಮ ಭಾಗವತರು ಶುದ್ಧ ಅಗರಿ ಶೈಲಿಯ, ಪರಂಪರೆಯ ಭಾಗವತರು. ತಮ್ಮ ತಂದೆಯವರಂತೆಯೇ ಆಶು ಕವಿಗಳು. ಹೆಚ್ಚಿನ ಎಲ್ಲಾ ಪ್ರಸಂಗಗಳ ಪದ್ಯ ಕಂಠಪಾಠವಿದ್ದ ಕಾರಣ ಪ್ರಸಂಗ ನೋಡದೇ ಪದ್ಯ ಹೇಳುವುದು ರಘುರಾಮರಿಗೆ ಸಿದ್ದಿಸಿತ್ತು. ಉತ್ತಮ ಸ್ಮರಣ ಶಕ್ತಿ, ಕವಿತಾ ಶಕ್ತಿ ಹೊಂದಿದ್ದು, ಛಂದಸ್ಸು, ರಾಗ-ತಾಳಗಳ ಕುರಿತು ಆಳವಾದ ಜ್ಞಾನ ಹೊಂದಿದ್ದರು. ರಘುರಾಮರು, ಈ ಮೊದಲೇ ಉಲ್ಲೇಖಿಸಿದಂತೆ, ಸುರತ್ಕಲ್ ಮೇಳ ಸೇರುವಾಗ ಹೊಸ ಪ್ರಸಂಗಗಳ ಪ್ರವೇಶದ ಕಾಲ. ಹೊಸ ಪ್ರಸಂಗಗಳಾದ ಕಾರಣ, ಇದರ ರಂಗ ನಡೆ, ಪಾತ್ರಚಿತ್ರಣ, ನಿರ್ದೇಶನ ಎಲ್ಲವೂ ಒಂದು ಸವಾಲಾಗಿ ರಘುರಾಮರ ಹೆಗಲಿಗೆ ಬಿತ್ತು. ರಘುರಾಮರು ಈ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿ ಪ್ರಸಂಗಗಳು ಯಶಸ್ವಿಯಾಗಲು ಕಾರಣರಾದರು.

ಈ ಅವಧಿಯಲ್ಲಿ ತುಳುನಾಡ ಸಿರಿ, ಶನೀಶ್ವರ ಮಹಾತ್ಮೆ, ಪಾಪಣ್ಣ ವಿಜಯ, ಸಾಧ್ವಿ ಸದಾರಮೆ, ತಿರುಪತಿ ಕ್ಷೇತ್ರ ಮಹಾತ್ಮೆ, ಬೇಡರ ಕಣ್ಣಪ್ಪ, ಚಂದ್ರಾವಳಿ ವಿಲಾಸ, ಬಪ್ಪನಾಡು ಕ್ಷೇತ್ರ ಮಹಾತ್ಮೆ, ಕೋಟಿ ಚೆನ್ನಯ, ಕೋರ್ದಬ್ಬು ಬಾರಗ, ಸತಿ ಶೀಲವತಿ, ಕಡುಗಲಿ ಕುಮಾರರಾಮ, ನಾಟ್ಯರಾಣಿ ಶಾಂತಲಾ, ಶೀಂತ್ರಿದ ಚೆನ್ನಕ್ಕೆ, ಬಲ್ಮೆದ ಭಟ್ರ್, ಸರ್ಪ ಸಂಕಲೆ, ರಾಜಾ ಯಯಾತಿ ಮುಂತಾದ ಪ್ರಸಂಗಗಳು ಸುರತ್ಕಲ್ ಮೇಳದಲ್ಲಿ ಜಯಭೇರಿ ಬಾರಿಸಲು ಅಗರಿಯವರ ಕೊಡುಗೆ ಅಪಾರವಾಗಿದೆ. ಸುರತ್ಕಲ್ ಮೇಳದಲ್ಲಿ ಪ್ರಾರಂಭದ ಕಾಲದಲ್ಲಿ ರಾತ್ರಿಯಿಡೀ ರಘುರಾಮ ಭಾಗವತರು ಒಬ್ಬರೇ ಭಾಗವತಿಕೆಯನ್ನು ಮಾಡುತ್ತಿದ್ದರು. ಮುಂದಕ್ಕೆ ಪದ್ಯಾಣ ಗಣಪತಿ ಭಟ್ಟರು ಸುರತ್ಕಲ್ ಮೇಳ ಸೇರಿ ರಘುರಾಮ ಭಾಗವತರಿಗೆ ಸಹಕಾರಿಯಾದರು.

ಅಗರಿ ರಘುರಾಮ ಭಾಗವತರ ಭಾಗವತಿಕೆಯು ಅಗರಿ ಶ್ರೀನಿವಾಸ ಭಾಗವತರದ್ದೇ ಶೈಲಿ. ದೊಡ್ಡ ಅಗರಿಯವರು ಕೋಪಿಷ್ಟ ಸ್ವಭಾವದವರಾದರೆ, ರಘುರಾಮರು ಅಷ್ಟೇ ಮೃದು ಸ್ವಭಾವ ಹೊಂದಿದ್ದು ಕಲಾವಿದರಲ್ಲಿ ಸ್ನೇಹಿತರಂತೆಯೇ ವರ್ತಿಸುವ ಸ್ವಭಾವದವರು. ಕಲಾವಿದರಿಗೆ ಹೇಳಿ ಕೊಡುವ, ತಿದ್ದುವ ಗುಣ ಹೊಂದಿದ್ದರು. ದೊಡ್ಡ ಸಾಮಗರು, ಶೇಣಿ, ತೆಕ್ಕಟ್ಟೆ, ರಾಮದಾಸ ಸಾಮಗ, ಕುಂಬ್ಳೆ, ಕೊಳ್ಯೂರು, ಗೋವಿಂದ ಭಟ್ಟ, ಜಲವಳ್ಳಿ, ವಾಸುದೇವ ಸಾಮಗ, ಶಿವರಾಮ ಜೋಗಿ, ಪೂಕಳ, ಕುಡ್ತಡ್ಕ, ಪಾತಾಳ, ವಿಟ್ಲ ಜೋಷಿ, ಎಂ.ಕೆ. ರಮೇಶಾಚಾರ್ಯ, ವೇಣೂರು ಸುಂದರಾಚಾರ್ಯ, ಕೊಕ್ಕಡ ಈಶ್ವರ ಭಟ್, ಮದವೂರು ಗಣಪತಿ ರಾವ್‍ರಂಥಹ ದಿಗ್ಗಜರನ್ನು ರಂಗದಲ್ಲಿ ಕುಣಿಸಿದವರು.

ವರದರಾಯ ಪೈಗಳು ಮೇಳದ ಯಜಮಾನರಾದರೂ, ರಘುರಾಮರಿಗೆ ಅತೀವವಾದ ಗೌರವ ನೀಡುತ್ತಿದ್ದಂತೆ, ಪೈಗಳೂ ರಘುರಾಮರಲ್ಲಿ ಅದೇ ರೀತಿಯಲ್ಲಿ ಇದ್ದವರು. ಸುರತ್ಕಲ್ ಮೇಳದ ಸ್ವಂತ ಪ್ರದರ್ಶನವಾದರೆ, ಟಿಕೇಟ್ ಕೌಂಟರ್ ತೆರೆಯುವಾಗ, ಪ್ರಥಮವಾಗಿ ರಘುರಾಮರೇ ಕೌಂಟರ್‍ನಲ್ಲಿ ಕುಳಿತು ಟಿಕೇಟ್ ನೀಡಬೇಕು. ಒಂದು ಘಂಟೆಯ ನಂತರವೇ ಪೈಗಳು ಕುಳಿತುಕೊಳ್ಳುವುದು. ಅಷ್ಟರ ಮಟ್ಟಿಗೆ ಭಾಗವತರ ಮೇಲೆ ಪೈಗಳಿಗೆ ಗೌರವ. ಮೇಳದ ಹಣಕಾಸಿನ ಲೆಕ್ಕಾಚಾರವನ್ನೂ ರಘುರಾಮರೇ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದರು. ಒಂದು ಕ್ಯಾಂಪ್‍ನಿಂದ ಇನ್ನೊಂದು ಕ್ಯಾಂಪ್‍ಗೆ ತೆರಳುವಾಗ ಕಲಾವಿದರಿಗೆ ಪ್ರತ್ಯೇಕವಾದ ವಾಹನ ವ್ಯವಸ್ಥೆ ಇದ್ದರೂ, ರಘುರಾಮರು ಪೈಗಳೇ ಚಲಾಯಿಸುವ ಜೀಪಿನಲ್ಲೇ ಇರಬೇಕು, ಪೈಗಳೊಂದಿಗೇ ಬೆಳಗ್ಗಿನ ಉಪಾಹಾರ ಸೇವಿಸಬೇಕು. ಅಷ್ಟರ ಮಟ್ಟಿಗೆ ಪೈಗಳಿಗೆ ರಘುರಾಮರ ಮೇಲಿರುವ ಗೌರವ. (ಆ ಕಾಲದಲ್ಲಿ ಶೇಣಿ, ತೆಕ್ಕಟ್ಟೆ ಆನಂದ ಮಾಸ್ತರ್, ಪದ್ಯಾಣ, ಮೇಳದ ಮೆನೇಜರ್ ಐತಪ್ಪ, ಕುಮಾರಗೌಡ ಅಥವಾ ಇನ್ನಾರಾದರೊಬ್ಬ ಕಲಾವಿದರು ಪೈಗಳ ಜೀಪಿನಲ್ಲೇ ಹೋಗುವುದು ವಾಡಿಕೆಯಾಗಿತ್ತು.)

ಸತ್ಯ ಹರಿಶ್ಚಂದ್ರ, ನಳದಮಯಂತಿ, ಶನೀಶ್ವರ ಮಹಾತ್ಮೆ ಮುಂತಾದ ಪೌರಾಣಿಕ ಪ್ರಸಂಗಗಳನ್ನು ಪ್ರಪ್ರಥಮವಾಗಿ ತುಳು ಭಾಷೆಯಲ್ಲಿ ಪ್ರದರ್ಶಿಸಲು ಯೋಚಿಸಿ, ಸೂಕ್ತ ನಿರ್ದೇಶನ ನೀಡಿ ಅದರಲ್ಲಿ ಯಶಸ್ವಿಯೂ ಆಗಿ, ಸುರತ್ಕಲ್ ಮೇಳದಲ್ಲಿ ಇದೊಂದು ಹೊಸತನದ ಪ್ರಯೋಗ ಎನಿಸಿತ್ತು. ರಘುರಾಮರ ಭಾಗವತಿಕೆ ಆಕರ್ಷಕವಾಗಿತ್ತು. ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಕಲಾವಿದರ ಮನೋಧರ್ಮವನ್ನರಿತು, ಪಾತ್ರಗಳ ಸಂದರ್ಭಕ್ಕನುಗುಣವಾಗಿ, ರಸೋತ್ಕರ್ಷವಾಗುವ ವಾತಾವರಣ ನಿರ್ಮಿಸುವಲ್ಲಿ ರಘುರಾಮರು ಪರಿಣತರಾಗಿದ್ದರು. ಸುರತ್ಕಲ್ ಮೇಳದಲ್ಲಿ ಜಯಭೇರಿ ಭಾರಿಸಿದರಾಜಾ ಯಯಾತಿ’’ಯ ಇಂದು ದೂರವಿರುವೆ | ಕುಡಿಯದೆ | ಬಂದರೆ ಬಳಿ ಬರುವೆ’’,ಇಂದಿನ ಜಲಕ್ರೀಡೆ | ಮನದಾನಂದವಾಯ್ತು ನೋಡೆ |, ಶನೀಶ್ವರ ಮಹಾತ್ಮೆಯ ಘೋಡಾ ಸುಂದರ್ ಹೈ’’, ನಳ ದಮಯಂತಿಯವರ ಕಾರ್ಕೋಟಕ ಕಚ್ಚಿದ ದೆಸೆಯಿಂ’’, ದೇವಿ ಮಹಾತ್ಮೆಯ ಯಾತಕೆ ಜನ್ಮವನಿತ್ತೆ’’,ಸಿಕ್ಕಿದಿರಿ ಕೈಯೊಳಗೆ’’ ಮುಂತಾದ ಪದ್ಯಗಳು ನಿತ್ಯ ನೂತನ ಹಾಗೂ ಒಮ್ಮೆ ಕೇಳಿದವರು ಮತ್ತೆಂದೂ ಮರೆಯಲಾಗದ ಅನುಭೂತಿ ನೀಡಿದ್ದವು. ಅಗರಿಯವರ ಈ ಶೈಲಿಯ ಭಾಗವತಿಕೆ ಕೇಳಲೆಂದೇ ಎಷ್ಟೋ ದೂರದ ಊರುಗಳಿಂದ ಪ್ರೇಕ್ಷಕರು ನೆರೆಯು ತ್ತಿದ್ದುದು ಈಗ ಇತಿಹಾಸ.

ರಘುರಾಮರು ಶೃಂಗಾರ, ಕರುಣ, ಶಾಂತ, ಹಾಸ್ಯರಸಗಳಲ್ಲಿ ಹಾಡುವಾಗ ಒಂದು ಅಲೌಕಿಕ ವಾತಾವರಣವೇ ಸೃಷ್ಟಿಯಾಗುತ್ತಿತ್ತು. ಸುರುಟಿ, ಮಧ್ಯಮಾವತಿ, ಶಂಕರಾಭರಣ, ಪೀಲು, ಹಿಂದೋಳ, ಅರಭಿ, ಪಂತುವರಾಳಿ, ಭೀಂಪಲಾಸ್, ಶಂಕರಾಭರಣ, ಮೋಹನ ರಾಗಗಳಲ್ಲಿ ಅಪಾರ ಸಿದ್ಧಿ ಹೊಂದಿದ್ದು, ಪ್ರೇಕ್ಷಕರೂ ಅತೀವವಾಗಿ ಮೆಚ್ಚುವ ಆಕರ್ಷಣೆಯಾಗಿತ್ತು. ಪ್ರೇಕ್ಷಕರೂ, ಭಾಗವತರಿಗೆ ತಮಗೆ ಬೇಕಾದ ರಾಗ ಹಾಡಬೇಕೆಂದು ಚೀಟಿಯನ್ನು ಭಾಗವತರಿಗೆ ಕಳಿಸಿ ಅಗರಿ ಶೈಲಿ’’ಯನ್ನು ಆಸ್ವಾದಿಸುತ್ತಿದ್ದರು. ರಂಗದ ನಡೆಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ರಘುರಾಮರು, ಈ ವಿಚಾರದಲ್ಲಿ ಮಾತ್ರ ತಮ್ಮ ತಂದೆಯವರಂತೆ, ಬಿಗು ನಿರ್ಧಾರ ತಾಳುತ್ತಿದ್ದರು. ಕಲಾವಿದರು ಪಾತ್ರದ ಔಚಿತ್ಯ ಮರೆತು ಅಭಿನಯಿಸಿದರೆ ಕೆರಳುತ್ತಿದ್ದರು. ನಂತರ ಚೌಕಿಯಲ್ಲಿ ಆ ಕಲಾವಿದರಿಗೆ ಪಾತ್ರದ ಚಿತ್ರಣ ಹೇಗಿರಬೇಕೆಂದು ಸೌಮ್ಯವಾಗಿಯೇ ಹೇಳಿ ಚೆನ್ನಾಗಿ ಮನದಟ್ಟು ಮಾಡಿಸುತ್ತಿದ್ದರು.

ಕಳೆದ ವರ್ಷ ಜುಲೈನಲ್ಲಿ ವರದರಾಯ ಪೈಯವರ ಪ್ರಥಮ ಸಂಸ್ಮರಣೆ ಯಂದು ರಘುರಾಮರುವರದರಾಯ ಪೈ ಪ್ರಶಸ್ತಿ’’ ಪಡೆದು ಸಂಮಾನಿತರಾಗಿದ್ದಾಗ ನಾನೂ ವೇದಿಕೆಯಲ್ಲಿ ಇದ್ದೆ. ಆಗ ನನ್ನೊಂದಿಗೆ ಮಾತಾಡುತ್ತಾ ಕುಡ್ವರೇ, ಭಾಗವತರು ಎಂದರೆ ಪುಸ್ತಕ ನೋಡದೇ ಪದ್ಯ ಹೇಳುವವ ಆದರೆ ಮಾತ್ರ ಆ ಸ್ಥಾನಕ್ಕೆ ಭೂಷಣ. ಸಂದರ್ಭೋಚಿತವಲ್ಲದ ಕಡೆ ಪದ್ಯಗಳನ್ನು ಆಲಾಪನೆಯ ಮೂಲಕ ಲಂಬಿಸುವುದು ಸರಿಯಲ್ಲ. ಪಾತ್ರಗಳ ಮನೋಭಾವವನ್ನು ಅರಿತು ಭಾಗವತರು ಅದೇ ಭಾವದಲ್ಲಿ ಪದ್ಯ ಹೇಳಿ ಅಭಿವ್ಯಕ್ತಿಗೊಳಿಸಿದರೆ, ವೇಷಧಾರಿಯಲ್ಲೂ ಆ ಭಾವ ಮೂಡಿ ಪ್ರಸಂಗ ಯಶಸ್ವಿಯಾಗುತ್ತದೆ’’ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಗರಿ ರಘುರಾಮ ಭಾಗವತರ ವಿದ್ವತ್ತನ್ನು ಲಕ್ಷಿಸಿ ನೂರಾರು ಕಡೆ ಸಂಮಾನ ನಡೆದಿವೆ. ವಿಟ್ಲ ಜೋಷಿ ಪ್ರಶಸ್ತಿ, ಕುರಿಯ ಪ್ರಶಸ್ತಿ, ಉಳ್ಳಾಲ ಶ್ರೀನಿವಾಸ ಮಲ್ಯ ಪ್ರಶಸ್ತಿ, ತ್ರಿಕಣ್ಣೇಶ್ವರ ಪ್ರಶಸ್ತಿ, ಪದ್ಯಾಣ ಪ್ರಶಸ್ತಿ, ಪೊಲ್ಯ ದೇಜಪ್ಪ ಶೆಟ್ಟಿ ಪ್ರಶಸ್ತಿ, ಜಗದಂಬಾ ಯಕ್ಷಗಾನ ಪ್ರಶಸ್ತಿ, ಮುಂಬೈ, ಕರಾವಳಿ ಯಕ್ಷಗಾನ ಪ್ರಶಸ್ತಿ, ಯಕ್ಷಲಹರಿ ಪ್ರಶಸ್ತಿಯಂಥಹ ಹಲವಾರು ಪ್ರಶಸ್ತಿ ಪಡೆದಿದ್ದಾರೆ.

2015ರಲ್ಲಿ ಮೂಡಬಿದಿರೆಯ ನನ್ನ ಸಂಚಾಲಕತ್ವದಯಕ್ಷಸಂಗಮ ಪ್ರಶಸ್ತಿ’’ಯನ್ನೂ ಸ್ವೀಕರಿಸಿದ್ದಾರೆ. ಅಂದು ಮೂಡಬಿದಿರೆಯಲ್ಲಿ ಭಾಗವತಿಕೆಯನ್ನೂ ಮಾಡಿ ಪ್ರೇಕ್ಷಕರನ್ನು ರಂಜಿಸಿದ್ದರು. ಅಂದು ನಾನು ಅವರಿಗೆ ಕರೆ ಮಾಡಿ ಸಂಮಾನ ಸ್ವೀಕರಿಸಬೇಕು ಎಂದಾಗ ಕುಡ್ವರೇ, ನನಗಿಂದು ನಿಮ್ಮ ಕರೆ ಕೇಳಿ ತುಂಬಾ ಸಂತೋಷವಾಯಿತು. ನೀವು ಸಂಮಾನ ಮಾಡುತ್ತೀರಿ ಎಂಬ ಸಂತೋಷ ಕ್ಕಿಂತಲೂ, ಇಷ್ಟು ವರ್ಷಗಳ ನಂತರವೂ ನೀವು ನನ್ನ ನೆನಪು ಉಳಿಸಿಕೊಂಡಿದ್ದೀರಲ್ಲಾ? ಅದೇ ನನಗೆ ದೊರೆತ ದೊಡ್ಡ ಸಂಮಾನ’’ ಎಂದಿದ್ದರು. 2006ರಿಂದ ತಮ್ಮ ಸಹೋದರರು ಹಾಗೂ ಮಕ್ಕಳ ಸಹಕಾರದಲ್ಲಿ ತಮ್ಮ ತಂದೆ ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣೆ ಕಾರ್ಯಕ್ರಮ ಹಾಗೂ ಅಗರಿ ಪ್ರಶಸ್ತಿ’’ಯನ್ನು ಪ್ರತೀವರ್ಷ ತಮ್ಮ ಪುತ್ರರ ಸಂಸ್ಥೆಯಾದ ಅಗರಿ ಎಂಟರ್ ಪ್ರೈಸಸ್’’ ಮೂಲಕ ನೀಡುವ ಸಂಪ್ರದಾಯ ಪ್ರಾರಂಭಿಸಿದ್ದರು.ಅಗರಿ ಶೈಲಿ’’ಯು ಮುಂದಿನ ಪೀಳಿಗೆಗೂ ಹರಿದು ಹೋಗಬೇಕು ಎಂಬ ಉದ್ದೇಶದಿಂದ, ಅಗರಿಶೈಲಿಯ ಭಾಗವತಿಕೆ ಹಾಡುವವರಿಗೆ, ಕಲಿಯುವವರಿಗೆ ಅಪಾರ ಪ್ರೋತ್ಸಾಹ ನೀಡುತ್ತಿದ್ದರು.
84 ವರ್ಷದ ಅಗರಿ ರಘುರಾಮ ಭಾಗವತರು 3 ಮಂದಿ ಸುಪುತ್ರರು ಅಗರಿ ರಾಘವೇಂದ್ರ ರಾವ್, ಶ್ರೀನಿವಾಸ ರಾವ್, ವಾದಿರಾಜ ರಾವ್ ಹಾಗೂ ಸುಪುತ್ರಿ ಶ್ರೀಮತಿ ಮಂಗಳಾ ಹಾಗೂ ಅಳಿಯ ಶೇಷಶಯನ ಕಾರಿಂಜೆ ಸಹೋದರರಾದ ಪ್ರಸಂಗಕರ್ತ ಅಗರಿ ಭಾಸ್ಕರ ರಾವ್, ಅಗರಿ ದಿನೇಶ್ ರಾವ್.
ಎಂ. ಶಾಂತರಾಮ ಕುಡ್ವ
ಮೂಡಬಿದಿರೆ


(ಸುಪ್ರಸಿದ್ಧ ಭಾಗವತರಾದ ಪದ್ಯಾಣ ಗಣಪತಿ ಭಟ್ಟರು ಸುರತ್ಕಲ್ ಮೇಳ ಸೇರಿದಾಗ, ಪದ್ಯಾಣರಿಗೆ ಉತ್ತಮ ಅವಕಾಶ ನೀಡಿ, ಅವರಿಗೆ ರಂಗನಡೆ ಹೇಳಿಕೊಟ್ಟು ತಮ್ಮ ಶಿಷ್ಯರಂತೆ ವ್ಯವಹರಿಸುತ್ತಿದ್ದರು. ಪದ್ಯಾಣರೂ ಸಹಾ ಅಗರಿಯವರ ಮೇಲೆ ಗುರು ಭಾವನೆ ಹೊಂದಿದ್ದು ಅಗರಿಯವರನ್ನು ಗುರುಗಳೇ’’ ಎಂದೇ ಸಂಬೋಧಿಸುತ್ತಿದ್ದರು. “ಅಗರಿಯವರೊಂದಿಗೆ 23 ವರ್ಷಗಳ ತಿರುಗಾಟ ಮಾಡಿದ ತೃಪ್ತಿ ನನಗಿದೆ. ನಾನು ಅಗರಿಯವರ ಭಾಗವತಿಕೆಯಿಂದ ಪ್ರಭಾವಿತ ನಾದವ. ಅಗರಿಯವರು ನನಗೆ ಗುರು ಸಮಾನರು. ನಾನು ಇಂದಿಗೂ ಆ ಪ್ರಭಾವ ದಿಂದ ಹೊರಬಂದಿಲ್ಲ. ಇಂದಿಗೂ ನನ್ನ ಭಾಗವತಿಕೆಯಲ್ಲಿ ಕನಿಷ್ಟ ಏಳೆಂಟು ಪದ್ಯ ಗಳನ್ನಾದರೂ ಅಗರಿ ಶೈಲಿ’’ಯಲ್ಲಿ ಹಾಡ ದಿದ್ದಲ್ಲಿ ನನಗೆ ಸಮಾಧಾನವಿಲ್ಲ. ಅದನ್ನು ಪ್ರೇಕ್ಷಕರೂ ಬಯಸುತ್ತಾರೆ. ಇಪ್ಪತ್ತು ವರ್ಷಗಳ ಹಿಂದಿನಿಂದಲೂ ಮೂಡಬಿದಿರೆಯ ಶಾಂತರಾಮ ಕುಡ್ವರು ನಾನು ಭಾಗವತಿಕೆ ಯಲ್ಲಿದ್ದರೆ, ಪ್ರತೀಸಲವೂ ಸಭೆಯಿಂದ ಅಗರಿ ಶೈಲಿಯ ಪದ್ಯ ಹೇಳಿ’’ ಎಂದು ಚೀಟಿ ಕಳಿಸು ತ್ತಿದ್ದರು. ನಂತರದ ದಿನಗಳಲ್ಲಿ ಕುಡ್ವರನ್ನು ಕಂಡ ಕೂಡಲೇ ನಾನು ಅಗರಿ ಶೈಲಿ’’ಯ ಹಾಡು ಹೇಳುತ್ತಿದ್ದೆ. ಅದು ಇಂದಿಗೂ ಮುಂದುವರಿದಿದೆ. ನಾವು ಪದ್ಯಾಣ ಪ್ರಶಸ್ತಿ’’ ಪ್ರಾರಂಭಿಸಿದಾಗ ಪ್ರಥಮ ಪ್ರಶಸ್ತಿಯನ್ನು ಯಾರಿಗೆ ನೀಡುವುದು ಎಂಬ ಪ್ರಶ್ನೆ ಬಂದಾಗ ಅಗರಿ ರಘುರಾಮ ಭಾಗವತರ ಹೊರತಾಗಿ ಬೇರೆ ಯಾವುದೇ ಆಯ್ಕೆ ನನ್ನ ಮುಂದೆ ಇರಲಿಲ್ಲ. ಪ್ರಥಮ “ಪದ್ಯಾಣ ಪ್ರಶಸ್ತಿ’’ ರಘುರಾಮ ಭಾಗವತರಿಗೆ ನೀಡಿದ್ದುದರಲ್ಲಿ ನನಗೆ ಅಪಾರ ತೃಪ್ತಿ ಹಾಗೂ ಅಭಿಮಾನವಿದೆ.’’ – ಪದ್ಯಾಣ ಗಣಪತಿ ಭಟ್)


(ಒಂದೆರಡು ವರ್ಷಗಳ ಹಿಂದೆ, ಯಾವುದೇ ಲಾಬಿ ನಡೆಸದೇ, ಅರ್ಜಿಯನ್ನೂ ಹಾಕದೇ ಕರ್ನಾಟಕ ರಾಜ್ಯೋತ್ಸವ’’ ಪ್ರಶಸ್ತಿಗೆ ಅಗರಿ ರಘುರಾಮ ಭಾಗವತರ ಹೆಸರು ಆಯ್ಕೆಯಾಗಿತ್ತು. ಸಂಬಂಧ ಪಟ್ಟ ಅಧಿಕಾರಿಗಳು ಫೋನ್ ಮೂಲಕ ಅಗರಿಯವರಿಗೆ ಈ ವಿಷಯವನ್ನೂ ತಿಳಿಸಿದ್ದರು. ಇದೊಂದು ಸರಿಯಾದ ಆಯ್ಕೆಯೂ ಆಗಿತ್ತು. ಅಗರಿಯವರೂ ಪ್ರಶಸ್ತಿ ಸ್ವೀಕರಿಸಲು ಬೆಂಗಳೂರಿಗೆ ಹೋಗಲು ಸಿದ್ಧತೆಯನ್ನೂ ನಡೆಸಿದ್ದರು. ಆದರೆ ಕೊನೆಯ ಘಳಿಗೆಯಲ್ಲಿಕಾಣದ ಕೈಗಳ ಕೈವಾಡ’’ದಿಂದ ಅಗರಿಯವರ ಹೆಸರಿನ ಬದಲು ಬೇರೊಬ್ಬ ಕಲಾವಿದರ ಹೆಸರು ಕಾಣಿಸಿಕೊಂಡಿತ್ತು. ಈ ನೋವು ಅಗರಿಯವರಿಗೆ ಕೊನೆಗಾಲದ ತನಕವೂ ಇತ್ತು. ನನ್ನಲ್ಲಿ ಮಾತಾಡುತ್ತಾ ಕುಡ್ವರೇ, ನಾನು ಸಂಮಾನ, ಪ್ರಶಸ್ತಿಯನ್ನು ಬೆಂಬತ್ತಿ ಹೋದವನಲ್ಲಾ. ಅದನ್ನು ಆಶಿಸುವವನೂ ಅಲ್ಲ. ಆದರೆ, ತಾನಾಗಿ ಅರಸಿ ಬಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಯಾರೋ ಪಡೆದರಲ್ಲಾ?’’ ಎಂದು ಕೆಲವು ಸಮಯದ ಹಿಂದೆ ನನ್ನಲ್ಲಿ ತನ್ನ ನೋವನ್ನು ತೋಡಿಕೊಂಡಿದ್ದರು. ಕಲಾವಿದರಿಗೆ ಅರ್ಹವಾಗಿ ಸಲ್ಲಬೇಕಾದ ಪ್ರಶಸ್ತಿಯನ್ನು ಅವರ ಜೀವಿತ ಕಾಲದಲ್ಲಿ ನೀಡಿದರೆ ಮಾತ್ರ ಆ ಪ್ರಶಸ್ತಿಗೆ ಮೌಲ್ಯ ಬರುವುದಲ್ಲವೇ? ಭಾಗವತರು ಹಾಡುವಾಗ ಪಾತ್ರದ ಭಾವನೆಗನುಗುಣವಾಗಿ ಹಾಡು ಹೇಳಬೇಕು ಎಂದು ನನ್ನಲ್ಲಿ ತಿಳಿಸಿದ್ದ (ಲೇಖನದಲ್ಲಿ ಉಲ್ಲೇಖಿಸಿದ್ದೇನೆ ನೋಡಿ) ಅಗರಿಯವರು ಅದಕ್ಕೊಂದು ಉದಾಹರಣೆಯನ್ನೂ ನೀಡಿದ್ದರು. ರಘುರಾಮರು ಪ್ರಾರಂಭದ ಕಾಲದಲ್ಲಿ ತಾಳಮದ್ದಳೆಯಲ್ಲಿ ಭಾಗವತಿಕೆ ಮಾಡಿದ ಸಂದರ್ಭ.ಕೃಷ್ಣ ಸಂಧಾನ’’ ಪ್ರಸಂಗ. ದಿ. ಅಗರಿ ಶ್ರೀನಿವಾಸ ಭಾಗವತರು ಭೀಮನ ಪಾತ್ರದಲ್ಲಿದ್ದರು (ಅಗರಿ ಶ್ರೀನಿವಾಸ ಭಾಗವತರು ಅಪರೂಪಕ್ಕೆ ಅರ್ಥವನ್ನೂ ಹೇಳುತ್ತಿದ್ದರು). ರಘುರಾಮರು ಭೀಮ – ದ್ರೌಪದಿಯ ಸಂಭಾಷಣೆಯ ಭೀಮನ ಪದ್ಯವನ್ನು ವಿಷಾದ ಭಾವದಲ್ಲಿ ಹಾಡಿದರು. (ಅಲ್ಲಿ ಭೀಮನಿಗಿರುವುದು ವೈರಾಗ್ಯ ಎನ್ನುವ ನೆಲೆಯಲ್ಲಿ) ಆದರೆ, ತಂದೆಯಾದ ಶ್ರೀನಿವಾಸ ಭಾಗವತರು ಆಕ್ಷೇಪಿಸಿ “ಆ ಪದ್ಯವನ್ನು ವಿಷಾದದಲ್ಲಿ ಹಾಡಿದರೆ ಭೀಮ ಹೇಗೆ ಅರ್ಥ ಹೇಳುವುದು? ಅಲ್ಲಿರುವುದು ವೈರಾಗ್ಯದ ಭಾವವಾದರೂ, ಅದು ಯಾರ ವೈರಾಗ್ಯ? ಭೀಮನದ್ದಲ್ಲವೇ? ಭೀಮನಲ್ಲಿ ವೈರಾಗ್ಯವೂ ವೀರರಸವೇ ಆಗಬೇಕು” ಎಂದು ತಿದ್ದಿದರಂತೆ.’’ ಇಂತಹ ಸೂಕ್ಷ್ಮಗಳು ಭಾಗವತರಿಗೆ ತಿಳಿದರೆ, ಪ್ರಸಂಗವು ಯಶಸ್ವಿಯಾಗುತ್ತದೆ’’ ಎಂಬುದು ಅಗರಿ ರಘುರಾಮ ಭಾಗವತರ ಅಭಿಪ್ರಾಯ. – ಎಂ. ಶಾಂತರಾಮ ಕುಡ್ವ, ಮೂಡಬಿದಿರೆ)

ಲೇಖಕ: ಎಂ. ಶಾಂತರಾಮ ಕುಡ್ವ, ಮೂಡಬಿದಿರೆ

ಪ್ರಜ್ಞಾದೀಪ್ತಿಯಾಗಿ ಬೆಳಗಿದ ವಿದ್ವಾನ್ ಕೊರ್ಗಿ ವೇಂಕಟೇಶ್ವರ ಉಪಾಧ್ಯಾಯರು.

ಮರೆಯಲಾಗದ ಮಹಾನುಭಾವರು

ಇವರ ಹೆಸರನ್ನು ನಾನು ವೆಂಕಟೇಶ್ವರ ಉಪಾಧ್ಯ ಎಂದೋ, ವೆಂಕಟೇಶ ಉಪಾಧ್ಯಾಯ ಎಂದೋ ಬರಯಲಾಗದು. ಅವರು ಹಾಗೆ ಬರೆಯುವ ಎರಡು ರೀತಿಯೂ ತಪ್ಪು ಎಂದು ಖಂಡಿತಾ ಅಸಮಾಧಾನಗೊಳ್ಳುವವರೇ ಎಂದು ನನಗೆ ಗೊತ್ತು! ಏಕೆಂದರೆ ಸಂಸ್ಕೃತದಲ್ಲಿ ಹ್ರಸ್ವಾಕ್ಷರ ಎ ಇಲ್ಲ!.ಅದು ವ್ಯಾಕರಣ ನಿಷ್ಠರಾದ ಅವರಿಗೆ ಅಪಚಾರ. ತೆಂಕು,ಬಡಗು ಉಭಯ ಪ್ರದೇಶಗಳಲ್ಲೂ ಅರ್ಥಧಾರಿಯಾಗಿ ವಿಜೃಂಭಿಸಿದವರು.ಪೌರೋಹಿತ್ಯ ಕ್ಷೇತ್ರದಲ್ಲಿ ಅಸಾಧಾರಣ ಸಾಧಕರು,.ಸಂಸ್ಕೃತ,ಕನ್ನಡ ಉಭಯ ಭಾಷೆಗಳಲ್ಲೂ ಸ್ನಾತಕೋತ್ತರ ಪದವಿಯ ಸಾಧಕರು. ಹಿಂದಿಯಲ್ಲಿ ರಾಷ್ಟ್ರಭಾಷೆ, ಬಿಎಡ್ ಮುಂತಾದ ಹಲವು ಉಪಾಧಿಗಳೆಲ್ಲವನ್ನೂ ಸ್ವಾಧ್ಯಾಯದಿಂದಲೇ ಸಾಧಿಸಿಕೊಂಡವರು. ಸಂಸ್ಕೃತ ಕಾಲೇಜಿನ ಶಿಕ್ಷಣವನ್ನುಳಿದು ಒಂದುದಿನವೂ’ ಸರ್ಟಿಫಿಕೇಟ್’ ಬೇಕಾಗುವ ಸರ್ಕಾರಿ ಶಾಲೆಗೆ ಹೋದವರೇ ಅಲ್ಲ!


     ಉಪಾಧ್ಯಾಯರು ಜನಿಸಿದ್ದು 1952ರ ಜುಲೈ ತಿಂಗಳಿನಲ್ಲಿ. ಉಡುಪಿ ಜಿಲ್ಲೆಯ ಸಿದ್ದಾಪುರದಲ್ಲಿ. ತಂದೆ ಕೊರ್ಗಿ ಸೂರ್ಯನಾರಾಯಣ ಉಪಾಧ್ಯಾಯರು ಶ್ರೇಷ್ಠ ಪ್ರಸಂಗ ಕರ್ತೃ, ಜ್ಯೋತಿಷಿ, ಅರ್ಚಕರು,ಪುರೋಹಿತರು. ವೈದಿಕ ವಿದ್ಯೆಗೂ ಕಲೆಗೂ’ ಎಣ್ಣೆ -ಸೀಗೆ’ಯಾಗಿದ್ದ ಕಾಲದಲ್ಲೂ ಎರಡಕ್ಕೂ ‘ಸೈ’ ಎನ್ನಿಸಿಕೊಂಡವರು. ಕೊರ್ಗಿ ಎಂಬುದು ತಂದೆಯವರ ಊರು ಅಷ್ಟೆ. ಇವರು ಹುಟ್ಟುವ ಮೊದಲೇ ಬಿಟ್ಟ ಊರು. ಆದರೂ ಅವರನ್ನದು ಬಿಡಲಿಲ್ಲ.! ( ಬಹು ಮಂದಿ ಕಲಾವಿದರ ಕಥೆ ಇದೇ. ಅವರಿಗಿಂತ ಅವರಿಲ್ಲದ ಅವರೂರು ಅವರಿಂದಾಗಿಯೇ ಸುಪ್ರಸಿದ್ಧವಾಗಿಬಿಡುತ್ತದೆ!). ತಂದೆ ತನಗೆ ತಿಳಿದಿರುವ ವೈದಿಕ ವಿದ್ಯೆಗಳನ್ನು ಕುಳಿತಲ್ಲಿ, ನಿಂತಲ್ಲಿ, ಸ್ನಾನಮಾಡುವಲ್ಲೂ ಕಲಿಸಿದರು. ವಿಶೇಷ ಅಧ್ಯಯನಕ್ಕಾಗಿ ಎಂಟನೇ ವರ್ಷದಲ್ಲೇ ಶೃಂಗೇರಿಗೆ ಕಳುಹಿಸಿದರು. ಅಲ್ಲಿ ಘನವಿದ್ವಾಂಸರಾದ ಸಾಮಗ ಸುಬ್ರಹ್ಮಣ್ಯ ಶಾಸ್ತ್ರಿಗಳ ಶಿಷ್ಯನಾಗಿ ಐದು ವರ್ಷ ಋಗ್ವೇದ ಅಧ್ಯಯನ ಮಾಡಿದರು. ಅಲ್ಲಿಂದ 1966-67 ರಲ್ಲಿ ಉಡುಪಿಗೆ ಬಂದರು. ಇಲ್ಲಿ ಯಜುರ್ವೇದ ಅಧ್ಯಯನ ಮಾಡಿದರು. ಮುಂದೆ ಸಂಸ್ಕೃತ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ಉಡುಪಿ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲರಾದ ಘನವಿದ್ವಾಂಸ ವ್ಯಾಕರಣ, ಅಲಂಕಾರ ಶಾಸ್ತ್ರ ಶಿರೊಇಮಣಿ ಕೆ ಹರಿದಾಸ ಉಪಾಧ್ಯಾಯರಿಂದ ವ್ಯಾಕರಣ, ಅಲಂಕಾರ ಶಿಕ್ಷಣ, ತರ್ಕ ಶಿರೋಮಣಿ ಕಾಪು ಹಯಗ್ರೀವ ಆಚಾರ್ಯರಿಂದ ತರ್ಕಶಾಸ್ತ್ರದ ಅಧ್ಯಯನ(ನ್ಯಾಯ ಶಾಸ್ತ್ರ) ,ಪಾದೂರು ವೆಂಕಟರಮಣ ಐತಾಳರಿಂದ ವ್ಯಾಕರಣದ ವಿಶೇಷ ಅಧ್ಯಯನ ನಡೆಸಿದರು.  ಆಗ ಉಡುಪಿಯ ಪೇಜಾವರ ಮಠ ಸಂಸ್ಕೃತ ವಿದ್ಯಾರ್ಥಿಗಳಿಗೆ ಆಶ್ರಯ ಸ್ಥಾನವಾಗಿತ್ತು.   ಅಲ್ಲಿರುವ ವಿದ್ಯಾರ್ಥಿಗಳಿಗೆ ಸಿನೇಮಾ ನೋಡುವುದು ನಿಷೇಧವಾಗಿತ್ತು. ಆದರೂ ವಿದ್ಯಾರ್ಥಿಗಳು ಮಠದ ಕಾಂಪೌಂಡ್ ಹತ್ತಿ ಹಾರಿ ಸಿನೇಮಾಕ್ಕೆ ಕದ್ದು ಹೋಗುತ್ತಿದ್ದರು (ನಾನೂ ಆಗ ಪೇಜಾವರ ಮಠದಲ್ಲಿದ್ದೆ). ವಿಷಯ ಶ್ರೀಗಳ ಗಮನಕ್ಕೆ ಬಂತು. ಇವರ ಆಸಕ್ತಿ ಗಮನಿಸಿ ಒಂದು ರಿಯಾಯಿತಿ   “ಉತ್ತಮವಾದ ಸಿನೇಮಾ ನೋಡಬಹುದು”. ಮಕ್ಕಳ ಬಾಯಾದ ವೇಂಕಟೇಶ್ವರ ಕೂಡಲೇ ಕೇಳಿಬಿಟ್ಟರು. “ಪಾತ್ರೆಯಲ್ಲಿಟ್ಟದ್ದು ಸಿಹಿ ತಿಂಡಿ ಎಂದು ತಿಳಿಯುವುದು ಅದನ್ನು ತಿಂದಮೇಲಲ್ಲವೆ?” ಸ್ವಾಮಿಗಳಿಗೂ ನಗು ಬಂತು. ತಿಂಗಳಿಗೆ ಒಂದು ಸಿನೇಮಾ ನೋಡಬಹುದು ಎಂದರು.


          ತಂದೆಯ ಯಕ್ಷಗಾನದ ಗೀಳು ಮಗನ ಮೀಸೆಯೊಂದಿಗೇ ಚಿಗುರುತ್ತಿತ್ತು. ಅದಕ್ಕೆ ಉಡುಪಿಯ ನೀರು ಪೋಷಣೆ ಒದಗಿಸಿತು. ಆಗ ಪೇಜಾವರ ಮಠದ ಕೋಣೆಗಳಲ್ಲೂ ಸಂಸ್ಕೃತ ಕಾಲೇಜಿನ ವಿದ್ಯಾರ್ಥಿಗಳ ತಾಳಮದ್ದಲೆ ಹೊಡಿಹಾರತೊಡಗಿತು. ದೇವರು ನಾರಾಯಣ ಹೆಗಡೆ, ನರಹರಿಭಟ್, ನಿಟಿಲಾಪುರ ಕೃಷ್ಣಮೂರ್ತಿ, ಗಣಪಯ್ಯ ಹೊಳ್ಳ , ಬಾಲಕೃಷ್ಣ ಜೋಶಿ,( ಈ ಎಲ್ಲರೂ ಮುಂದೆ ಘನ ವಿದ್ವಾಂಸರೆಂದು ಖ್ಯಾತಿಯನ್ನು ಪಡೆದವರು) ಮುಂತಾದವರು  ತಾಳಮದ್ದಲೆ ಕಲಿಗಳಾಗತೊಡಗಿದರು. 


       ಒಮ್ಮೆ ತಂದೆಯೊಂದಿಗೆ ಸಿದ್ದಾಪುರದ ಕಡೆಗೆ ತಿರುಗಾಟದಲ್ಲಿದ್ದಾಗ ಬರೆಗುಂಡಿ ಪ್ರಾಂತದ ಓಟೆ ಬಚ್ಚಲು ಸಣ್ಣಯ್ಯನವರ ಮನೆಯಲ್ಲಿ ಜಾಗರವಿತ್ತು. ಇವರ ತಂದೆ ಆ ಪ್ರದೇಶದಲ್ಲಿ ಪ್ರಖ್ಯಾತ ಅರ್ಥಧಾರಿ . ಅಂದು ಪಂಚವಟಿ ವಾಲಿವಧೆ ಪ್ರಸಂಗ. ಸೂರ್ಯನಾರಾಯಣ ಉಪಾಧ್ಯಾಯರ ರಾಮ. ನಿಮ್ಮ ಮಗ ಅರ್ಥ ಹೇಳುತ್ತಾನೋ ಎಂದು ಕೇಳಿದರಂತೆ. ಅವರಿನ್ನೂ ಇವರ ಅರ್ಥ ಕೇಳಿಯೇ ಇರಲಿಲ್ಲ. ಹೇಳುತ್ತಾನಂತೆ ಎಂದರು. ಮಾರೀಚ ಬರೆದರು. ತಂದೆಯೇ ಕೇಳಿದರು .”ಮಾರೀಚ ನಾನು ಹೇಳುತ್ತೇನೆ ನೀನು ರಾಮ ಮಾಡುತ್ತೀಯೋ? ”  ಉಮೇದಿನಲ್ಲಿ  ಮಾಡುತ್ತೇನೆ ಎಂದರು. ಇಡೀ ರಾತ್ರಿ ರಾಮನ ಪಾತ್ರ ಮಾಡಿಯೇ ಬಿಟ್ಟರು. ಅಂದಿನ ಅವರ ಅರ್ಥಕ್ಕೆ ಆ ಪ್ರದೇಶದ ಖ್ಯಾತ ಅರ್ಥಧಾರಿ ಮಧೂರು ಪಟೇಲರ ಮೆಚ್ಚುಗೆಯೂ ದೊರೆಯಿತು. ಹೀಗೆ ರಾಮನಾಗಿ ತಾಳಮದ್ದಲೆ ರಂಗಪ್ರವೇಶಗೈದ ಉಪಾಧ್ಯಾಯರು ಹಿಂತಿರುಗಿ ನೋಡಲಿಲ್ಲ. ಉಡುಪಿ ಉಪಾಧ್ಯಾಯರಿಗೆ ವಿದ್ವತ್ತಿನ ಉಡುಪನ್ನು ತೊಡಿಸಿತು. ಸಂಸ್ಕೃತ ಕಾಲೇಜಿನಲ್ಲಿ ನ್ಯಾಯ ವಿದ್ವತ್ ಪಡೆಯುವ ಮೊದಲೇ ಹಲವಾರು ಆಟ ಕೂಟಗಳ ಮೂಲಕ ಪ್ರಸಿದ್ಧರಾದರು. ಉಡುಪಿ ವೆಂಕಟರಮಣ ದೇವಸ್ಥಾನದಲ್ಲಿ ದೊಡ್ಡ ಸೆಟ್ಟಿನ ತಾಳಮದ್ದಲೆ. ಭೀಷ್ಮಾರ್ಜುನ ಪ್ರಸಂಗ. ಅಂದು ವಿದ್ಯಾರ್ಥಿ ಉಪಾಧ್ಯಾಯರ ಭೀಮ . ಅಂದು ಶೇಣಿಯವರ ಕೃಷ್ಣ. ಹೀಗೆ ಹಿರಿಯರ ಕೂಟದಲ್ಲಿ ಶೇಣಿಯವರೊಂದಿಗೆ ಪ್ರಥಮ ಪ್ರವೇಶ. ಶಂಕರನಾರಾಯಣ ಸಾಮಗರ ಮೇಲೆ ಅಪಾರ ಭಕ್ತಿ. ಎಷ್ಟೆಂದರೆ ಒಮ್ಮೆ ಸಂಧಾನದ ಧರ್ಮರಾಯನ ಪಾತ್ರವನ್ನು ಪೂರ್ತಿಯಾಗಿ ಅವರದೇ,ಸ್ವರ,ಶೈಲಿಯಲ್ಲಿ ಹೇಳಿ ಮುಗಿಸಿದ್ದರು.! ರಾಮದಾಸ ಸಾಮಗರ ಬಗ್ಗೆಯೂ ಇದೇ ಬಗೆಯ ಗೌರವ. ಈ ಇಬ್ಬರು ಮಹನೀಯರೂ ಇವರ ಮನೆಗೆ ಸದಾ ಬರುತ್ತಿದ್ದರು.  ಕಟೀಲು ದೇವಳ ಪ್ರೌಢಶಾಲೆಯಲ್ಲಿ ಸಂಸ್ಕೃತ ಭಾಷಾ ಶಿಕ್ಷಕರಾಗಿ ನಿಯುಕ್ತರಾದ ಮೇಲೆ ಉಪಾಧ್ಯಾಯರಿಗೆ ಅವಕಾಶ  ತುಂಬಾ ಹೆಚ್ಚು ದೊರೆಯಿತು.

ಅಲ್ಲಿ ಆಗ ಮುಖ್ಯೋಪಾಧ್ಯಾಯರಾಗಿದ್ದ ಶ್ರೀ ವಾಸುದೇವ ಮುಗೇರಾಯರು ಯಕ್ಷಗಾನದ ಸರ್ವಾಂಗೀಣ ಪಾಂಡಿತ್ಯ ಉಳ್ಳವರು. ಅವರ ಆಪ್ತರು ಡಾ.ಎನ್ ನಾರಾಯಣ ಶೆಟ್ಟರು ಶಿಮಂತೂರು. ಈಗ ಉಪಾಧ್ಯಾಯರೂ ಸೇರಿ ವಿದ್ವಾಂಸತ್ರಯರ ಸಮ್ಮಿಲನವಾಯಿತು. ಅಲ್ಲಿ ಆಗ ಸ್ಥಾಪನೆಯಾದ ಭ್ರಾಮರಿ ಯಕ್ಷಗಾನ ಮಂಡಳಿ” ಮುಂದೆ ಹಲವು ಪ್ರಥಮಗಳ ಪ್ರಯೋಗಕ್ಕೆ ತೊಡಗಿತು. ಅದು ಉಪಾಧ್ಯಾಯರ ಚಿಂತನೆಯ ಪ್ರಯೋಗಗಳಿಗೆ ಸಹಕಾರಿಯಾಗಿತ್ತು. (ಡಾ.ಎನ್.ನಾರಾಯಣ ಶೆಟ್ಟರ ಯಕ್ಷಗಾನ ಛಂದೋಂಬುಧಿಗೆ ಶ್ರೀ ವಾಸುದೇವ ಮುಗೇರಾಯರ ಮತ್ತು ವೇಂಕಟೇಶ್ವರ ಉಪಾಧ್ಯಾಯರ ಚಿಂತನೆ ಸಲಹೆ,ಸೂಚನೆಗಳು , ಆಧಾರವಾಗಿತ್ತು). ಕಟೀಲು ತೆಂಕುತಿಟ್ಟಿನ ಯಕ್ಷಗಾನದ ತೌರು ಮನೆ. ಊರು,ಶಾಲೆ,ಜನ ಎಲ್ಲರೂ ಯಕ್ಷಗಾನವನ್ನೇ ಉಸಿರಾಡುವವರು. ಡಾ.ಭಾಸ್ಕರಾನಂದ ಕುಮಾರ್,(ಮಣಿಪಾಲದಲ್ಲಿ ಕೆ ಎಂ ಸಿಯ ಪ್ರಖ್ಯಾತ ವೈದ್ಯರು, ಸುಪ್ರಸಿದ್ದ ಹವ್ಯಾಸಿ ಯಕ್ಷಗಾನ ಕಲಾವಿದರು) , ಪುಚ್ಚಕರೆ ಕೃಷ್ಣ ಭಟ್, ಪು ಶ್ರೀನಿವಾಸ ಭಟ್ ,ಲಕ್ಷ್ಮೀನಾರಾಯಣ ಭಟ್, ಮುಂತಾದ ಪರಿಣತರ ಸಹಯೋಗದಿಂದ ರೂಪುಗೊಂಡ  ಭ್ರಾಮರಿ ಯಕ್ಷಗಾನ ಮಂಡಳಿ ತುಂಬಾ ಪ್ರಸಿದ್ಧವಾಗಿದ್ದ ಕಾಲ ಅದು. ಶಾಲಾ ವಿದ್ಯಾರ್ಥಿಗಳ ಯಕ್ಷಗಾನವೂ ಹಿರಿಯರಷ್ಟೇ ಪರಿಣತಿಯುಳ್ಳ ಪ್ರಯೋಗವಾಗುತ್ತಿತ್ತು. ಇವರ ನಿರ್ದೇಶನದ “ಚಂದ್ರಹಾಸ” ನಲವತ್ತಕ್ಕಿಂತಲೂ ಹೆಚ್ಚು ಪ್ರಯೋಗವಾಗಿತ್ತು. ಇದೇ ಸಂದರ್ಭದಲ್ಲಿ ವಾತಾಪೆ ಜೀರ್ಣೋಭವ, ಶ್ರೀರಾಮ ಪಟ್ಟಾಭಿಷೇಕ ಎಂಬೆರಡು ಸಂಸ್ಕೃತ ಯಕ್ಷಗಾನವನ್ನು ರಚಿಸಿದರು. ಅದನ್ನು ಸಹೋದರ ಶಂಕರನಾರಾಯಣ ಉಪಾಧ್ಯಾಯರು ಕನ್ನಡಕ್ಕೆ ಅನುವಾದಿಸಿದರು.

ಮಿತ್ರ, ಸಹಪಾಠಿ ವಿ.ನರಹರಿ ಭಟ್ಟರ “ಶ್ರೀಕೃಷ್ಣ ದೌತ್ಯಂ “ಸಂಸ್ಕೃತ ಯಕ್ಷಗಾನವನ್ನು( ಇದು ಸಂಸ್ಕೃತ ಭಾಷೆಯ ಮೊದಲ ಯಕ್ಷಗಾನ ಕೃತಿ) ಪ್ರಯೋಗಕ್ಕೆ ತಂದರು. ವಾತಾಪೆ ಜೀರ್ಣೋಭವ ದೂರದರ್ಶನದಲ್ಲಿ ಪ್ರಸಾರವಾಯಿತು. ತುಳುವಿನಲ್ಲಿ ನರಕಾಸುರ ವಧೆಯೂ ದೂರದರ್ಶನದಲ್ಲಿ ಪ್ರಸಾರವಾಯಿತು. ಉಪಾಧ್ಯಾಯರ ತೀರ್ಥರೂಪರು ಮುಕ್ಕಾಲು ಅಂಶ ಬರೆದಿದ್ದ ‘ಗುರುದ್ರೋಣ’ ಪ್ರಸಂಗವನ್ನು ಪೂರ್ಣಗೊಳಿಸಿ ಪ್ರಕಟಿಸಿದರು. ಮುಂದೆ ಅವರ ತಂದೆಯವರ ಇನ್ನೊಂದು ಕೃತಿ ‘ಬಾಲ ಘಟೋತ್ಕಚ’ವನ್ನೂ ಪ್ರಕಟಿಸಿದರು. ಡಾ.ಎನ್.ನಾರಾಯಣ ಶೆಟ್ಟರ ಕಟೀಲು ಕ್ಷೇತ್ರಮಹಾತ್ಮ್ಯೆಗೆ ಅರ್ಥ ಬರೆದು ಪ್ರಕಟಿಸಿದರು. ಆಕಾಶವಾಣಿ ಚಿಂತನ ಕಾರ್ಯಕ್ರಮದ ಸರಣಿಯೇ ಬಂತು. ಕಸ್ತೂರಿ ಮಾಸ ಪತ್ರಿಕೆಯಲ್ಲಿ ಶ್ರೀ ಪಾ ವೆಂ ಆಚಾರ್ಯರ ನಿಧನದ ನಂತರ ನಿಂತು ಹೋಗಿದ್ದ” ಪದಾರ್ಥ ಚಿಂತಾಮಣಿ” ಅಂಕಣವನ್ನ ಹಲವು ವರ್ಷಗಳ ಕಾಲ ಮುಂದುವರಿಸಿದ್ದರು.

    ಅರ್ಥಧಾರಿಯಾಗಿ ಪ್ರತ್ಯೇಕ ಶೈಲಿ, ದೃಷ್ಟಿ ಧೋರಣೆಗಳನ್ನು ಹೊಂದಿದ್ದ ಉಪಾಧ್ಯಾಯರ ಬಗ್ಗೆ ‘ಸದ್ಯದ ಹೊಸ ತಲೆಮಾರಿನ ಅರ್ಥಧಾರಿಗಳ ಪೈಕಿ ಅತಿ ದೊಡ್ಡ ವಿದ್ವಾಂಸರು’ ಎಂದು ಡಾ.ಎಂ.ಪ್ರಭಾಕರ ಜೋಶಿ ಹೇಳಿದ ಮಾತು ಅಕ್ಷರಶಃ ಸತ್ಯ. ಸ್ತ್ರೀ ಪಾತ್ರದಿಂದ ಖಲ ಪಾತ್ರದ ವರೆಗೆ ಸಮರ್ಥವಾಗಿ ನಿರ್ವಹಿಸಬಲ್ಲ ಇವರದು ಎದುರಾಳಿಯೂ, ಪ್ರೇಕ್ಷಕರೂ ಒಂದು ಕ್ಷಣವಾದರೂ ಆಲೋಚಿಸಿ ಅರ್ಥಮಾಡಿಕೊಳ್ಳಬೇಕಾದ ಮಾತುಗಾರಿಕೆ. ವಾಚ್ಯಕ್ಕಿಂತ ಧ್ವನಿಗೆ ಮಹತ್ವ ,ಚಿಂತನೆ ಪಾತ್ರದ ಸ್ವಭಾವಕ್ಕೆ ಹೊಂದಿ ಬರಬೇಕು ಎಂದು ನಂಬಿದವರು. ವಸಿಷ್ಠ-ವಿಶ್ವಾಮಿತ್ರರಲ್ಲಿ ಉಪನಿಷತ್ತಿನ ಲೋಕ,ಶ್ರೀಕೃಷ್ಣ ಮುತ್ಸದ್ಧಿಯಾಗಿ ಅಸಾಮಾನ್ಯನಾಗುವುದು,ದುರ್ಯೋಧನ ಮುತ್ಸದ್ದಿಯಾಗಿ ಅಸಾಮಾನ್ಯನಂತೆ ನಟಿಸುತ್ತಾ ಸಾಮಾನ್ಯನಾಗಿಯೇ ಉಳಿಯುವುದು,ಇವೆಲ್ಲ ಪುರಾಣಗಳ ನಿರಂತರ ಅಧ್ಯಯನದಲ್ಲಿ ಮೈದಾಳುತ್ತಿದ್ದವು.

ಸಮಗ್ರ ಸಂಸ್ಕೃತ ಸಾಹಿತ್ಯದ ಅಧ್ಯಯನ ಹಲವು ಬಾರಿ ತೀರಾ ಪಾಂಡಿತ್ಯದ ಗಡಸು ಎನ್ನಿಸುವುದೂ ಇತ್ತು. ಸಂಸ್ಕೃತ ಕಾವ್ಯ,ನಾಟಕಗಳ ಅಧ್ಯಯನದಿಂದ ಕನ್ನಡದ ಯಕ್ಷಗಾನ ತಾಳಮದ್ದಲೆಯ ಪಾತ್ರಗಳನ್ನು ಕಟ್ಟಿದವರಲ್ಲಿ ಉಪಾಧ್ಯಾಯರು ಪ್ರಮಖರು. ಮಾತು ಬೀಸು ನೋಟದ ವಿಸ್ತಾರವನ್ನು  ಮೈದುಂಬಿಸಿಕೊಂಡು ಹೊಸ ಹೊಸ ತರ್ಕಗಳನ್ನು ಕಟ್ಟಿಕೊಡುತ್ತಿತ್ತು. ಕೆಲವು ಬಾರಿ ಎಂತಹ ವಾದವನ್ನೂ ಅಡಿಮೇಲು ಮಾಡುವ ವಾಘ್ಝರಿ! .ಅವರನ್ನು ಕಟ್ಟುವುದು ಸುಲಭವಲ್ಲ ,ಅಸಾಧ್ಯವೂ. ಅನೇಕರು ಪ್ರಯತ್ನಿಸಿ ಸೋತುದೂ ಉಂಟು. ಒಮ್ಮೆ ಒಬ್ಬರು ಹಿರಿಯ ಕಲಾವಿದರೇ ಇವರು ಮುಂದೆ ಒಡ್ಡಬಹುದಾದ ಸಮಸ್ಯೆಗಳನ್ನು ಗ್ರಹಿಸಿ ನೀನು ಹೀಗೆ ಯೋಚಿಸಬಹುದು ಎಂದು ಮೊದಲೇ ಹೇಳಿ ಸಿಕ್ಕಿಸಲಿಕ್ಕೆ ನೋಡಿದರು. ಇವರೋ…ಮಹಾಪ್ರಚಂಡ ನಾನು ಹಾಗೆ ಯೋಚಿಸುವುದೇ ಇಲ್ಲ ಎಂದು ಬೇರೆಯೇ ಸ್ವರೂಪಕ್ಕೆ ತಿರುಗಿಸಿದರು. 

ಅಂಬೆ ದ್ರೌಪದಿ, ಮಂಥರೆ,ಕೈಕೆ ಮುಂತಾದ ಭಿನ್ನ ಸ್ವಭಾವಗಳ ಸ್ತ್ರೀ ಪಾತ್ರಗಳಿಂದ ತೊಡಗಿ ಮಹೋನ್ನತ ವ್ಯಕ್ತಿತ್ವದ ಭೀಷ್ಮಾಚಾರ್ಯರ ವರೆಗೆ ಆಯಾ ಪಾತ್ರಗಳ ಗತ್ತು ಗಾಂಭೀರ್ಯಗಳಿಂದ ಚಿತ್ರಿಸುತ್ತಿದ್ದರು. ಕನ್ನಡ ಸಂಸ್ಕೃತ ಭಾಷೆಗಳ ಸೊಗಸುಗಳನ್ನೆಲ್ಲ ಅರ್ಥದಲ್ಲಿ ತುಂಬಿಕೊಡುತ್ತಿದ್ದ ಉಪಾಧ್ಯಾಯರು ಸರಳ ಮಾತುಗಾರರಾಗಿರಲಿಲ್ಲ. ಭಾಷೆ ಸಹಜ ಸ್ಥಿತಿಯಿಂದ ಮೇಲೇರಿ ಪೌರಾಣಿಕ ಆವರಣವನ್ನು ನಿರ್ಮಿಸಬೇಕೆಂಬುದು ಇವರ ನಿಲುವು. ಪ್ರತ್ಯುತ್ಪನ್ನಮತಿತ್ವದಲ್ಲಿ ಅಸಾಧಾರಣ ಸಿದ್ಧಿ ಇವರಿಗಿತ್ತು .ಇವರ ಅತಿ ಮೆಚ್ಚಿನ ಪಾತ್ರ ಶ್ರೀರಾಮ, ಮತ್ತು ಸುಂದರವಾದ ಅರ್ಥ ಸಂಧಾನದ ಕೃಷ್ಣ. ಹವ್ಯಾಸಿಯಾಗಿ ಬಯಲಾಟದಲ್ಲೂ ಸಾಕಷ್ಟು ವೇಷಮಾಡಿದ್ದಾರೆ. ಇವರ ವಿದ್ವತ್ ಪ್ರಭೆಯಲ್ಲಿ ಅರಳಿದ ಎರಡು ಅಸಾಧಾರಣ ಪ್ರತಿಭೆಗಳು ದಿ. ಸಿದ್ದಕಟ್ಟೆ ಚನ್ನಪ್ಪ ಶೆಟ್ಟಿ, ವರ್ತಮಾನದ ಪ್ರಸಿದ್ಧ ಅರ್ಥಧಾರಿ ಶ್ರೀ ವಾಸುದೇವ ರಂಗ ಭಟ್ಟರು. ಇವರುಗಳಲ್ಲದೆ ಅನೇಕ ಪ್ರಸಿದ್ಧರು  ಅವರನ್ನು ಗುರುಗಳು ಎಂದೇ ಕರೆಯುತ್ತಿದ್ದುದನ್ನು ಕೇಳಿದ್ದೇನೆ. ಶ್ರೀಮತಿ ಕಮಲಾಕ್ಷಿ ಉಪಾಧ್ಯಾಯರು ಅವರ ಬದುಕನ್ನು ಅಕ್ಷರಶಃ ಹೊತ್ತು ನಡೆದ ಬಾಳ ಸಂಗಾತಿ. ಅವರೂ ಯಕ್ಷಗಾನದ ಅಭಿರುಚಿಯುಳ್ಳವರು.  ಲಲಿತಾ ಪಯಸ್ವಿನೀ, ಮಂಗಲಾ ಮನಸ್ವಿನೀ,ಇಬ್ಬರು ಹೆಣ್ಣು ಮಕ್ಕಳು.ಸಹೋದರ ಶಂಕರನಾರಾಯಣ ಉಪಾಧ್ಯಾಯ(ಕೆ.ಎಸ್ ಉಪಾಧ್ಯಾಯ)  ಬೆಂಗಳೂರಿನಲ್ಲಿ ನೆಲೆಯಾಗಿ ಆರ್ ಗಣೇಶರಂತಹ ವಿದ್ವಾಂಸರ ಆಪ್ತರೂ ಆಗಿ,ರಾಷ್ಟ್ರೋತ್ಥಾನ ಬಳಗದಲ್ಲಿ ಹೊಣೆಹೊತ್ತು ತೊಡಗಿಸಿಕೊಂಡಿದ್ದಾರೆ. ನಾಟಕ,ಸಾಹಿತ್ಯ ಮುಂತಾದ ಹಲವಾರು ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ವಿದ್ವಾಂಸರು.ಇನ್ನೊಬ್ಬ ಸಹೋದರ ಸೀತಾರಾಮ ಉಪಾಧ್ಯಾಯರು ಪೌರೋಹಿತ್ಯ,ಜ್ಯೋತಿಷ್ಯಗಳಲ್ಲಿ ನಿರಂತರ ನಿರತರು. 


  ಉಪಾಧ್ಯಾಯರಿಂದ ತುಂಬಾ ಉಪಕೃತನಾದವನು ನಾನು. ನನ್ನ ಪ್ರತಿಯೊಂದು ಪ್ರಸಂಗಗಳನ್ನೂ ಅಕ್ಷರ ಅಕ್ಷರ ಓದಿ ದೋಷಗಳನ್ನು ಗುರುತಿಸಿ ಹೇಳುತ್ತಿದ್ದರು. ಅವರು ತಾನೇ ಎಂದೂ ಸರಿಪಡಿಸುತ್ತಿರಲಿಲ್ಲ. ನನ್ನಿಂದಲೇ ಸರಿಮಾಡಿ ಎಂದು ಮಾಡಿಸುತ್ತಿದ್ದರು. ಇದರಿಂದ ಅವರಿಗೆ ತೋರಿಸುವಾಗಲೇ ನಾನು ಸಾಕಷ್ಟು ಗಮನಿಸುವುದನ್ನು, ಮತ್ತೆ ಮತ್ತೆ ಓದಿ ಸರಿಪಡಿಸಿಕೊಂಡು ಅವರ ಬಳಿ ಹೋಗುತ್ತಿದ್ದೆ. ನನ್ನ ಅವರ ಒಡನಾಟ ವಿದ್ಯಾರ್ಥಿದೆಸೆಯಿಂದ ತೊಡಗಿ ನಾಲ್ಕು ದಶಕ. ಇದೊಂದು ಸೌಭಾಗ್ಯ. 
    ವಾಸ್ತವದಲ್ಲಿ ವೇಂಕಟೇಶ್ವರ ಉಪಾಧ್ಯಾಯರದು ಪೌರೋಹಿತ್ಯಕ್ಕಾಗಿ ಸಿದ್ಧಗೊಂಡ ವ್ಯಕ್ತಿತ್ವ. ಯಕ್ಷಗಾನ ಎರಡನೆಯ ಆಸಕ್ತಿ. ಯಕ್ಷಗಾನಕ್ಕಿಂತ ಹತ್ತುಪಟ್ಟು ಪೌರೋಹಿತ್ಯದ ಸಿದ್ಧಿ ಅವರದ್ದು. ದಿ.ವೇ.ಮೂ ಬಾರ್ಕೂರು ಸುಬ್ರಾಯ ಬಾಯಿರಿಯವರ ಮಾರ್ಗದರ್ಶನದಲ್ಲಿ ಪಳಗಿದ ಇವರು ಹತ್ತಾರು ದೇವಸ್ಥಾನಗಳ ಪ್ರತಿಷ್ಠಾ ಕಾರ್ಯಗಳನ್ನು ನೆರವೇರಿಸಿದ್ದರು. ಶತಚಂಡೀಯಾಗ, ಸಹಸ್ರ ನಾರಿಕೇಲ ಗಣಪತಿ ಯಾಗಗಳ ಅಧ್ವರ್ಯುವಾಗಿ ,ಹಲವು ಸಂಹಿತಾ ಹೋಮಗಳ ಆರ್ತ್ವಿಜ್ಯವನ್ನೂ ವಹಿಸಿದ್ದರು. ಮಂತ್ರ-ತಂತ್ರಗಳಲ್ಲಿ ಸಿದ್ಧಿ -ಶುದ್ಧಿ ಇವರ ಸಾಧನೆ. ಆ ಕ್ಷೇತ್ರದಲ್ಲಿ ವಿಸ್ತಾರವಾದ ವಲಯವೂ ಅವರಿಗಿತ್ತು. ನೂರಾರು ಮಂದಿ ಶಿಷ್ಯರೂ ಇದ್ದರು. ಹಲವರು  ಅಂತೇವಾಸಿಗಾಳಾಗಿ ಅವರಮನೆಯಲ್ಲೇ ಇದ್ದು ಕಲಿತು ಪ್ರಸಿದ್ಧರಾದರು. ಮಹಾ ನಾರಾಯಣ ಉಪನಿಷತ್, ಗಣಪತಿ ಮಹಾನ್ಯಾಸ, ರುದ್ರಮಹಾನ್ಯಾಸ, ಪವಮಾನ(ಎರಡು ಭಾಗ) ಸಪ್ತಶತಿ( ಮೂರು ಭಾಗ) ,ಲಕ್ಷ್ಮೀನಾರಾಯಣ ಹೃದಯ, ಅಭಿಷೇಕಸೂಕ್ತಮಾಲಾ, ಮನೋರಥಸಿದ್ಧಿ ಸೂಕ್ತಾನಿ, ನಮಕಚಮಕಂ, ಮತ್ತು ಶಂಕರನಾರಾಯಣ ಸಹಸ್ರನಾಮ  ಈ ಹತ್ತು ಧ್ವನಿಸುರಳಿಗಳು ಇವರವು. ಅನೇಕ ಪೌರೋಹಿತ್ಯ ಪರವಾದ ಕೃತಿಗಳು ಪ್ರಕಟವಾಗಿವೆ. ಹತ್ತರ ಹಿರಿಮೆ,ಭಾಸಭಾಷಿತ, ಅಕ್ಷರ ಯಕ್ಷಗಾನ ಮೂರರ ಮಹಿಮೆ.ಮುಂತಾದ ಹತ್ತಾರು ಕೃತಿಗಳ ಲೇಖಕರೂ  ಆಗಿರುವ ಉಪಾಧ್ಯಾಯರು ಜಯದೇವ ಕವಿಯ ಗೀತಗೋವಿಂದ ಕಾವ್ಯವನ್ನು ಸುಪ್ರಸಿದ್ಧ ಭಾಗವತ ಸುಬ್ರಹ್ಮಣ್ಯ ಧಾರೇಶ್ವರರ ಹಾಡುಗಾರಿಕೆಯಲ್ಲಿ ಯಕ್ಷಗಾನ ಶೈಲಿಯಲ್ಲಿ ನಿರ್ದೇಶಿಸಿ ಪ್ರಕಟಿಸಿದ್ದರು.

ಆಪ್ತೇಷ್ಟರಿಗೆಷ್ಟೇ  ಪ್ರಶ್ನೆ ಹಾಗೂ ಜಾತಕ ಫಲಗಳನ್ನು ಹೇಳುತ್ತಿದ್ದ ಉಪಾಧ್ಯಾಯರಿಗೆ ಜ್ಯೋತಿಷ ವಾಂಶಿಕ ವಿದ್ಯೆಯಾಗಿತ್ತು. ಹರಿಕತೆಯನ್ನು ವೃತ್ತಿಯಾಗಿ ಇಟ್ಟುಕೊಳ್ಳದಿದ್ದರೂ ಹತ್ತಾರು ಕಡೆ ವೃತ್ತಿಪರ ಹರಿದಾಸರೂ ಮೆಚ್ಚುವಂತೆ ನಡೆಸಿಕೊಟ್ಟದ್ದುಂಟು. ರಾಮಾಯಣ, ಭಗವದ್ಗೀತೆಗಳ ಪ್ರವಚನಗಳನ್ನು ಕೆಲವೆಡೆ ನಿರಂತರವಾಗಿ ನಡೆಸಿಕೊಟ್ಟಿದ್ದಾರೆ. ಪುರಾಣಗಳ ಘಟನೆಗಳನ್ನು ಸಮಕಾಲೀನ ಸಂದರ್ಭಕ್ಕೂ ಸಮೀಕರಿಸುವುದು,ವ್ಯಾಸ ವಾಲ್ಮೀಕಿಗಳ ಸಂಸ್ಕೃತ ಭಾಷೆಯ ಅರ್ಥ ಸೂಕ್ಷ್ಮವನ್ನು ತಿಳಿಸಿಕೊಡುವುದು ಇವರ ಪ್ರವಚನ ಶೈಲಿಯಾಗಿತ್ತು. ಅವರ ಪುರಾಣ ವ್ಯಾಖ್ಯಾನ ಸೂಕ್ಷ್ಮ ಚಿಂತನೆಗಳ ಗುಚ್ಛ.     

ಕಟೀಲಿನ ಅವರ ಮನೆಗೆ ಹೆಸರು “ಪ್ರಜ್ಞಾದೀಪ್ತಿ” ಅಲ್ಲಿಗೆ ನಿತ್ಯ ಜ್ಞಾನದಾಹಿಗಳು ಬಂದೇ ಬರುತ್ತಿದ್ದರು. ಬಂದವರು ಇವರ ಸಲಹೆಯ ನಿರೀಕ್ಷಿತರು. ಅವರಿಂದ ಪರಿಹಾರವೂ ಸಿಗುತ್ತಿತ್ತು. ಹೀಗೆ ಬರುವವರು ವೇದಾಂತ,ಯಕ್ಷಗಾನ,ಜ್ಯೋತಿಷ್ಯ,ವ್ಯಾಕರಣ,ಆಗಮ,ಪೌರೋಹಿತ್ಯ, ಯಾವಯಾವುದೋ ನೂರಾರು ಸಮಸ್ಯೆಗಳ ಜಿಜ್ಞಾಸುಗಳು ಬರುತ್ತಿದ್ದರು. ಡಾ.ಆರ್ .ಗಣೇಶರೊಂದಿಗೆ ನಿಕಟವಾದ ಸಂಪರ್ಕದಲ್ಲಿದ್ದ ಉಪಾಧ್ಯಾಯರು ಅವರ ಅವಧಾನಕ್ಕೆ ನಿಷೇಧಾಕ್ಷರಿಯಾಗಿ ಬಹಳ ತೊಡಕು ಕೊಡುತ್ತಿದ್ದರು! ಉಪಾಧ್ಯಾಯರಿದ್ದರೆ ನಿಷೇಧಾಕ್ಷರದ ಪದ್ಯ ಒಳ್ಳೆಯ ಕಾವ್ಯಗುಣದ ಪದ್ಯವಾಗುವುದೇ ಇಲ್ಲ ಎಂದು ಗಣೇಶರೇ  ಅವಧಾನದಲ್ಲೇ ಹೇಳುವುದನ್ನು ಕೇಳಿದ್ದೇನೆ. ಇವರು ಬಿಟ್ಟರಲ್ಲವೆ? ..!      

ಐವತ್ತರ ಅಂಚಿಗೆ ಸರಿದಾಗ ಅನಿರೀಕ್ಷಿತ ಅನಾರೋಗ್ಯ ತುಂಬಿದ ಮನದಲ್ಲಿ ತುಮುಲವನ್ನೆಬ್ಬಿಸಿತು. ಅವರನ್ನು ,ಹೃದಯ ಸಂಬಂಧಿ ಖಾಯಿಲೆ ಬಹುವಾಗಿ ದಣಿಸಿತು. ಅದರಲ್ಲೂ ಏಳೆಂಟು ವರ್ಷ ವೃತ್ತಿ ಪ್ರವೃತ್ತಿಗಳಿಂದ ದೂರಾಗದೆ ಹೊಯ್ದಾಡಿದರು. ತುಂಬಾ ತಲ್ಲಣಗೊಂಡರು. ಹೃದಯ ಸಂಬಂಧಿ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾದರು .ಗುಣಮುಖರಾಗಲೇ ಇಲ್ಲ.12-9 2011 ರಂದು ಐವತ್ತೊಂಬತ್ತರ ವಯಸ್ಸಿನಲ್ಲಿ ನಮ್ಮನ್ನಗಲಿದರು.ಅವರು ಅರ್ಥವನ್ನು ಪ್ರಾರಂಭಿಸಿದ್ದು ಪಂಚವಟಿಯ ರಾಮನಾಗಿ. ಕೊನೆಯ ಅರ್ಥವನ್ನು ಹೇಳಿದ್ದೂ ಅದೇ ಪ್ರಸಂಗದ ರಾಮನನ್ನು.. ಆ ಮಹಾ ಚೇತನಕ್ಕೆ ನಮಿಸಿ ವಿರಮಿಸುವೆ. 


   ಲೇಖಕ: ಶ್ರೀಧರ ಡಿ.ಎಸ್.  ಕಿನ್ನಿಗೋಳಿ

೨೦೧೧ ರಲ್ಲಿ ನನ್ನ ಪ್ರಸಂಗ ಮಾಲಿಕಾ ಪ್ರಥಮ ಸಂಪುಟ ಉಡುಪಿ ಯಕ್ಷಗಾನ ಕೇಂದ್ರದಿಂದ ಪ್ರಕಟವಾದಾಗ ವೇಂಕಟೇಶ್ವರ ಉಪಾಧ್ಯಾಯರಿಗೆ ಕೃತಿಯನ್ನು ಅರ್ಪಿಸಿ ಪದ್ಯ ನಮನವನ್ನು ಸಲ್ಲಿಸಿದ್ದೆ.ಅವರು ತೀರಿಕೊಂಡು ಕೇವಲ ಒಂದು ತಿಂಗಳಾಗಿತ್ತು. ಅದು ಹೀಗಿದೆ.

ಕೊರ್ಗಿ ವೇಂಕಟೇಶ್ವರ ಉಪಾಧ್ಯಾಯ         ( ೧೯೫೨-೨೦೧೧)            *ಕಂದ*   

ವಿದ್ವಜ್ಜನಸಂಮಾನ್ಯಂ|  ಅದ್ವೈತಂ ತೆಂಕು ಬಡಗಿನಾಟಂ ಕೂಟಂ||ಸದ್ವಿನಿಯೋಗಂ ಚಣಚಣ|ತದ್ವಚನಂ ಕೊರ್ಗಿ ವೇಂಕಟೇಶ್ವರ ನಿರುತಂ|| 
            *ವಾರ್ಧಕ*

ಶ್ರೀರಾಮನಿಂತೊಡಗಿದರ್ಥವಾದಿತ್ವ ಮ|ತ್ತಾರಾಮವಾಯ್ತದೇ ಪಾತ್ರದಿಂ,ದಶರಥಂ|ಕೌರವಂ ಕೃಷ್ಣ ಭೀಷ್ಮಂ ಪರಶುರಾಮ ದ್ರೋಣಾಚಾರ್ಯ ಕರ್ಣಾರ್ಜುನರ್||ನಾರಿದ್ರೌಪದಿಯಂಬೆ ಕೈಕೆ ಯೋಜನಗಂಧಿ|ಮಾರುತಿಯು ಸುಗ್ರೀವ ವಾಲಿ ರಾವಣ ಶುಕ್ರ|ವೈರೋಚನಿ ವಸಿಷ್ಠನತಿಕಾಯ ಕೌಶಿಕರ ಕಂಡರಿಸಿ ವಾಗ್ವಿಭವದಿಂ||       

*ಸಾಂಗತ್ಯ*

ನಿಂತಲ್ಲಿ ಕುಂತಲ್ಲಿ ಚಿಂತನ ಮಂಥನ|ಸಂತನ ಸಾಂತ್ವನ ಬದುಕು||ಎಂತೋ ತನ್ನೊಳಗಿನ ನೋವುಂಡು ನಗೆಯಲಿ|ಕಂತಿಸಿ ಬೆಳೆದಿಹಪರಕು|| 
        *ಕೇದಾರಗೌಳ ಅಷ್ಟ*’

ಹತ್ತರ ಹಿರಿಮೆಯು ‘ಭಾಸ ಭಾಷಿತ’ವನ್ನ|ಇತ್ತಿರಿ’ಪಂಚ ಪ್ರಪಂಚ’ವನು.||ಎತ್ತಿ ತೋರುತ್ತಲಿ’ಮೂರರ ಮಹಿಮೆ’ಯಮತ್ತೆ’ಅಕ್ಷರ ಯಕ್ಷಗಾನ’ವನು|| 
           *ಭಾಮಿನಿ*

ವೇದವಾರಿಧಿಯಾಗಮಜ್ಞ ಸು|ವಾದಿ ಛಂದೋವಿದ ಪ್ರವಾಚಕ|ಸಾಧನೆಯ ಶಬ್ದಾರ್ಥಸಿದ್ಧಿಯ ಶುದ್ಧ ಚಿಂತಕರೆ||ಹಾದಿಯರ್ಧಕೆ ನಿಲಿಸಿ ಪಯಣವ|ಗೈದ ವಿದ್ವನ್ಮಣಿಯುಪಾಧ್ಯರೆ|ಸಾಧಕರೆ ತವಸ್ಮೃತಿಗೆ ಕೃತಿಯರ್ಪಿಸುವೆ ತಲೆವಾಗಿ|| 

ಲೇಖಕ: ಶ್ರೀಧರ ಡಿ.ಎಸ್.  ಕಿನ್ನಿಗೋಳಿ.


ದೇರಾಜೆ ಸೀತಾರಾಮಯ್ಯ – ‘ಯಕ್ಷಲೋಕದ ರಸಋಷಿ’

                    ಶ್ರೀ ದೇರಾಜೆ ಸೀತಾರಾಮಯ್ಯನವರನ್ನು ನೋಡಿದ ನೆನಪಿಲ್ಲ. ಆದರೂ ಅವರ ಬಗೆಗೆ ನನ್ನ ಹಿರಿಯರು, ಹಿರಿಯ ಕಲಾಭಿಮಾನಿಗಳು ಆಡುವ ಮೆಚ್ಚುಗೆಯ ನುಡಿಗಳನ್ನು ಕೇಳಿದ್ದೇನೆ. ‘ರಸಋಷಿ’ ಎಂದೇ ಖ್ಯಾತರಾದ ಅವರು  ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಕಲಾವಿದನಾಗಿ ನಾನೂ ಅನುಭವಿಸಿದ್ದೇನೆ. ದೇರಾಜೆಯವರ ‘ಶ್ರೀರಾಮಚರಿತಾಮೃತಂ’ ಮತ್ತು ‘ಶ್ರೀಮನ್ಮಹಾಭಾರತ ಕಥಾಮೃತಂ’ ಎಂಬ ಶ್ರೇಷ್ಠ ಕೃತಿಗಳನ್ನು ಓದಿದ್ದೇನೆ. ಕಲಾವಿದನಾಗಿ ಬೆಳೆಯಲು ಅನುಕೂಲವಾಗಿದೆ. ಕಲಾವಿದರೆಲ್ಲರೂ ಮಾಹಿತಿಗಾಗಿ ಅವಲಂಬಿಸುವ ಕೃತಿಗಳಿವು.

ಬರಹದ ಮೌಲ್ಯ ನಿರ್ಣಯಿಸಲ್ಪಡುವುದು ಅದರ ಉಪಯೋಗದ ನೆಲೆಯಿಂದ. ಕಲಾವಿದರ ಬಳಿ ಇರುವ, ಇರಲೇಬೇಕಾದ ಎರಡು ಕೃತಿಗಳಿವು. ಅಲ್ಲದೆ ಓದಿನಲ್ಲಿ ಆಸಕ್ತಿ ಹೊಂದಿದ ಎಲ್ಲರ ಮನೆಗಳಲ್ಲೂ ಇರುವ ಪುಸ್ತಕಗಳಿವು. ರಾಮಾಯಣ ಮತ್ತು ಮಹಾಭಾರತ ಪುರಾಣಗಳ ಬಗ್ಗೆ ಮಾಹಿತಿ ಬೇಕಾದಾಗ ಈ ಎರಡು ಹೊತ್ತಗೆಗಳ ಮೊರೆ ಹೋಗುತ್ತಾರೆ. ಹಾಗಾಗಿ ದೇರಾಜೆ ರಾಮಾಯಣ ಮತ್ತು ದೇರಾಜೆ ಮಹಾಭಾರತ ಕೃತಿಗಳ ಮೌಲ್ಯವನ್ನು ಯಾರಿಂದಲೂ ಅಳೆಯಲಸಾಧ್ಯ. ವಾಲ್ಮೀಕಿ ರಾಮಾಯಣಕ್ಕೆ ಮತ್ತು ವ್ಯಾಸರ ಭಾರತಕ್ಕೆ ಅತ್ಯಂತ ಹತ್ತಿರವಾಗಿ, ಕನ್ನಡ ಸಾರಸ್ವತ ಲೋಕಕ್ಕೆ, ಯಕ್ಷಗಾನ ಸಾಹಿತ್ಯಕ್ಕೆ ಈ ಎರಡು ಗ್ರಂಥಗಳು ಅಮೂಲ್ಯ ಕೊಡುಗೆಗಳೆಂದು ಓದುಗರು ಈಗಾಗಲೇ ನಿರ್ಣಯಿಸಿರುತ್ತಾರೆ. ಇವುಗಳು ಯಕ್ಷಗಾನ ಕ್ಷೇತ್ರಕ್ಕೆ ಆಕರ ಗ್ರಂಥಗಳಾಗಿ ಪರಿಣಮಿಸಿದೆ.

ಸಾಮಾಜಿಕ, ಧಾರ್ಮಿಕ, ಸಾಹಿತ್ಯ, ಕಲಾಕ್ಷೇತ್ರಗಳಲ್ಲಿ ಸಾಹಸವನ್ನು ಮೆರೆದು ಖ್ಯಾತರಾಗಿ, ಭಾವೀ ಜನಾಂಗಕ್ಕೆ ಅನುಕೂಲವಾಗಲೆಂದೇ ತನ್ನ ಸಾಧನೆಗಳನ್ನು ಕೊಡುಗೆಗಳಾಗಿ ನೀಡಿ ಅಲೌಕಿಕ ಪ್ರಪಂಚವನ್ನು ಸೇರಿಕೊಂಡ ದೇರಾಜೆ ಸೀತಾರಾಮಯ್ಯನವರು ಸತ್ತೂ ಬದುಕಿಯೇ ಇದ್ದಾರೆ. ಕಾಯ ಅಳಿದರೂ ಕೀರ್ತಿವಂತರಾಗಿದ್ದಾರೆ. ಕಲಾಭಿಮಾನಿಗಳ, ಸಾಹಿತ್ಯಪ್ರೇಮಿಗಳ ಮಾನಸವೆಂಬ ಮಂದಿರದಲ್ಲಿ ಚಿರಸ್ಥಾಯಿಯಾಗಿ ನೆಲೆಸಿದ್ದಾರೆ.


ದೇರಾಜೆ ಶ್ರೀ ಸೀತಾರಾಮಯ್ಯನವರು ಜನಿಸಿದ್ದು 1914ನೇ ಇಸವಿ ನವೆಂಬರ್ 17ರಂದು. ಹುಟ್ಟೂರು ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಚೊಕ್ಕಾಡಿ. ಮಂಗಲ್ಪಾಡಿ ಕೃಷ್ಣಯ್ಯ ಮತ್ತು ಸುಬ್ಬಮ್ಮ ದಂಪತಿಗಳ ಪುತ್ರರಿವರು. ಮಂಗಲ್ಪಾಡಿ ಚೊಕ್ಕಾಡಿ ಸಮೀಪದ ಒಂದು ಊರು. ಕೃಷ್ಣಯ್ಯನವರು ತಾಳಮದ್ದಳೆ ಅರ್ಥಧಾರಿಗಳಾಗಿದ್ದರು. ಅಜ್ಜ ಗೋವಿಂದ ಭಟ್ಟರು(ತಾಯಿಯ ತಂದೆ) ಮತ್ತು ಸೋದರಮಾವ ಶಂಕರನಾರಾಯಣ ಭಟ್ಟರು ಕಲಾಸಕ್ತರೇ ಆಗಿದ್ದರು. ಇವರ ಪ್ರಭಾವ, ಪ್ರೋತ್ಸಾಹಗಳು ದೇರಾಜೆಯವರ ಯಕ್ಷಕಲಾ ಯಾತ್ರೆಗೆ ಭದ್ರಬುನಾದಿಯಾಗಿ ಪರಿಣಮಿಸಿತ್ತು. ದೇರಾಜೆಯವರು ಎಳವೆಯಲ್ಲೇ ಸಾಮಾಜಿಕ ಕಳಕಳಿ, ಮಾನವೀಯ ಮೌಲ್ಯಗಳ ಬಗ್ಗೆ ಅರಿವನ್ನು ಹೊಂದಿ ಬೆಳೆದವರು. ಕಷ್ಟದಲ್ಲಿದ್ದವರಿಗೆ ಸಹಾಯ ನೀಡಿ ಮಾನವೀಯತೆಯನ್ನು ಮೆರೆದ ಘಟನೆಗಳನೇಕ.

ಮನೆಯ ಹಿರಿಯರೂ, ಬಂಧುಗಳೂ ಯಕ್ಷಗಾನಾಸಕ್ತರು. ಹಾಗಾಗಿ ದೇರಾಜೆಯವರೂ ಸಹಜವಾಗಿ ಕಲಾಸಕ್ತಿಯನ್ನು ಮೈಗೂಡಿಸಿಕೊಂಡಿದ್ದರು. ಶಾಲಾ ವಿದ್ಯಾರ್ಥಿಯಾಗಿದ್ದಾಗ ಗುರು ಕೊಟ್ಟೆಕಾಯಿ ನಾರಾಯಣ ರಾಯರಿಂದ ನಾಟಕ ಮತ್ತು ಅಭಿನಯಗಳ ಬಗೆಗೆ ಮಾರ್ಗದರ್ಶನ ದೊರಕಿತ್ತು. ಅವರು ಕುಮಾರವ್ಯಾಸನ ಬಗೆಗೆ ಮಾಡುತ್ತಿದ್ದ ಪಾಠದಿಂದ ದೇರಾಜೆಯವರ ಸಾಹಿತ್ಯಾಸಕ್ತಿಯು ಕೆರಳಿತು. ಅಭಿನಯ, ಅರ್ಥಗಾರಿಕೆಯ ದಾರಿಯೂ ಗೋಚರಿಸಿತು. ಎಳವೆಯಲ್ಲೇ ತಂದೆಯವರನ್ನು ಕಳೆದುಕೊಂಡು, ಹೈಸ್ಕೂಲ್ ಓದುತ್ತಿರುವಾಗ ಅಣ್ಣ ಗಣಪಯ್ಯನವರನ್ನೂ ಕಳೆದುಕೊಂಡು ತನ್ನ 16ನೆಯ ವಯಸ್ಸಿಗೆ ಮನೆಯ ಜವಾಬ್ದಾರಿಯನ್ನು ಹೊತ್ತರು. ಆಗ ಭಾರತದಲ್ಲಿ ಬ್ರಿಟಿಷರ ಆಡಳಿತ. ಮನೆತನಕ್ಕೆ ಬಂದಿದ್ದ ಗ್ರಾಮದ ಪಟೇಲ ಹುದ್ದೆಯನ್ನೂ ನಿರ್ವಹಿಸಿದ್ದರು. ಆಡಳಿತದ ಕೈಗೊಂಬೆಯಾಗದೆ ಸಾಮಾಜಿಕ ಪ್ರಜ್ಞೆಯನ್ನು ಮೆರೆದಿದ್ದರು. ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಆರೋಗ್ಯಕರ, ಕಟ್ಟುನಿಟ್ಟಿನ ನಿಲುವುಗಳನ್ನು ಹೊಂದಿ ವ್ಯವಹರಿಸಿದ್ದರು. ಇದು ಹಲವರ ವಿರೋಧಕ್ಕೆ ಕಾರಣವಾದರೂ ನಾನು ಸರಿಯಾದ ಮಾರ್ಗದಲ್ಲಿ ಶ್ರಮಿಸಿದ್ದೇನೆ ಎಂಬ ತೃಪ್ತಿ ಅವರಿಗಿತ್ತು. ಕಾಲಾಂತರದಲ್ಲಿ ಸರಕಾರದ ಆಡಳಿತಾಧಿಕಾರಿಯಾಗಿ ಅವರ ನಿರ್ಣಯಗಳು ಪ್ರಶಂಸಿಸಲ್ಪಟ್ಟಿತ್ತು.


ದೇರಾಜೆಯವರು ತನ್ನ ಹದಿನೇಳನೆಯ ವಯಸ್ಸಿನಲ್ಲಿ ತಾಳಮದ್ದಳೆ ಅರ್ಥಗಾರಿಕೆಯನ್ನು ಆರಂಭಿಸಿದರು. ಮೊದಲ ಪಾತ್ರ ಉತ್ತರನ ಪೌರುಷದ ಗೋಪಾಲಕ. ಅಂದು ಉತ್ತರನ ಪಾತ್ರವನ್ನು ಗೋವಿಂದಯ್ಯನವರು ಹೇಳಿದ್ದರು. ಮುಂದೆ ಬೆಳೆಯುತ್ತಾ ದೇರಾಜೆಯವರು ಉತ್ತರಕುಮಾರನಾಗಿ ರಂಜಿಸಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಆ ಪಾತ್ರವನ್ನು ದೇರಾಜೆಯವರು ಅನನ್ಯವಾಗಿ ಚಿತ್ರಿಸಿದ್ದರು. ಭೀಮಗುಳಿ ಗೋವಿಂದಯ್ಯನವರು ಮತ್ತು ಕಾವಿನಮೂಲೆ ಶಿವರಾಮಯ್ಯನವರ ಪ್ರೋತ್ಸಾಹವೂ ಇವರಿಗಿತ್ತು. ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳತ್ತವೂ ಗಮನಹರಿಯಿತು.

ತೀರ್ಥರೂಪರಿಂದ ಆರಂಭವಾಗಿದ್ದ ಚೊಕ್ಕಾಡಿ ದೇವಳದ ನಿರ್ಮಾಣ ಕಾರ್ಯವನ್ನು ಮುಂದುವರಿಸಿ ಕರ್ಮಪುತ್ರರೆನಿಸಿಕೊಂಡರು. ಜತೆಯಲ್ಲಿ ಕಲಾಚಟುವಟಿಕೆಯತ್ತ ಗಮನ. ಆಟ, ಕೂಟಗಳೆರಡನ್ನೂ ನಡೆಸುತ್ತಿದ್ದರು. ಇವರ ಜತೆ ಹೆಗಲು ಕೊಟ್ಟು ಸಹಕರಿಸಿದವರು ಅಜ್ಜನಗದ್ದೆ ಗಣಪಯ್ಯ ಭಾಗವತರು. ಉಡುವೆಕೋಡಿ ನಾರಾಯಣಯ್ಯ, ಮೈಂದಪ್ಪ ರೈಗಳು, ಪನ್ನೆಗುತ್ತು ತ್ಯಾಂಪಣ್ಣ ಸೇಕರು, ಭೀಮಗುಳಿ ಗೋವಿಂದಯ್ಯ, ಪನ್ನೆ ಕಿಟ್ಟಣ್ಣ ರೈಗಳು, ನಾರಾಯಣ ಸೇಕರು. ‘ಚೊಕ್ಕಾಡಿ ಮೇಳ’ ಎಂಬ ಕಲಾತಂಡವು ಚಿಗುರೊಡೆಯಿತು. ನಿರಂತರ ಕಲಾಪ್ರದರ್ಶನಗಳು ನಡೆದವು. ಅದೇ ಸಮಯ ಕುರಿಯ ವೆಂಕಟರಮಣ ಶಾಸ್ತ್ರಿಗಳು ಕೋಳ್ಯೂರು ಯಕ್ಷಗಾನ ನಾಟಕ ಮಂಡಳಿಯನ್ನು ಸ್ಥಾಪಿಸಿದ್ದರು. ಕೋಳ್ಯೂರು ಕಂಪೆನಿ ಎಂದು ಪ್ರಸಿದ್ಧವಾಗಿದ್ದ ಈ ತಂಡದಲ್ಲಿ ಕುರಿಯ ವಿಠಲ ಶಾಸ್ತ್ರಿಗಳು ಅನೇಕ ಆವಿಷ್ಕಾರಗಳನ್ನೂ ಮಾಡಿದ್ದರು.

ದೇರಾಜೆಯವರು ಈ ತಂಡದಲ್ಲಿ ಅತಿಥಿ ಕಲಾವಿದರಾಗಿಯೂ ಭಾಗವಹಿಸಿದ್ದರು. ಈ ತಂಡದ ಚಟುವಟಿಕೆಯಿಂದ ಉತ್ತೇಜಿತರಾಗಿ ದೇರಾಜೆಯವರು ಚೊಕ್ಕಾಡಿ ಮೇಳವನ್ನು ‘ಶಾರದಾ ಪ್ರಸಾದಿತ ಯಕ್ಷಗಾನ ನಾಟಕ ಮಂಡಳಿ’ ಎಂದು ಹೆಸರಿಸಿ, ಮುನ್ನಡೆಸಿ ಹೊಸ ಪ್ರಯೋಗಗಳಿಗೆ ಮುನ್ನುಡಿ ಬರೆದರು. ರಂಗಮಂದಿರವೂ ಸಿದ್ಧವಾಯಿತು. ಎರಡು ಅಂತಸ್ತುಗಳ ರಂಗಸ್ಥಳ. ಹಿಂಬದಿಗೆ ನಾಟಕ ಶೈಲಿಯ ಸೀನ್ ಸೀನರಿ ಪರದೆಗಳು. ಹೀಗೆ ನಿರಂತರ ಪ್ರದರ್ಶನಗಳು ನಡೆಯುತ್ತಿತ್ತು. ಲೇಖಕರಾದ ಎಸ್. ಆರ್. ಚಂದ್ರ, ಕೊಳಂಬೆ ಪುಟ್ಟಣ್ಣ ಗೌಡರೂ ತಂಡದಲ್ಲಿದ್ದರು.

ನಟಸಾರ್ವಭೌಮ ಕುರಿಯ ವಿಠಲ ಶಾಸ್ತ್ರಿಗಳೂ, ಉಡುವೆಕೋಡಿ ನಾರಾಯಣಯ್ಯನವರು, ಭೀಮಗುಳಿ ಗೋವಿಂದಯ್ಯನವರೂ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಅಜ್ಜನಗದ್ದೆ ಗಣಪಯ್ಯನವರು ಭಾಗವತರು. ಮೈಂದಪ್ಪ ರೈಗಳು ಭಾಗವತರಾಗಿ, ವೇಷಧಾರಿಯಾಗಿಯೂ ಒದಗುತ್ತಿದ್ದರು. ದೇರಾಜೆ ಕೃಷ್ಣಯ್ಯ ಸೇರಿದಂತೆ (ದೇರಾಜೆಯವರ ಅಣ್ಣನ ಮಗ) ಕಿರಿಯರೂ ಅಭಿನಯಿಸಿದರು. ದೇರಾಜೆಯವರ ಆಪ್ತ ಪಾರೆ ಶಂಭಯ್ಯನವರು ಸಹಕರಿಸುತ್ತಿದ್ದರು. ತಂಡದ ಪ್ರದರ್ಶನವು ಊರ ಪರವೂರಿನ ಪ್ರೇಕ್ಷಕರಿಗೆ ಉತ್ಸವವಾಗಿ ಪರಿಣಮಿಸಿತ್ತು. ಇಷ್ಟಕ್ಕೆ ದೇರಾಜೆಯವರು ತೃಪ್ತರಾಗಲಿಲ್ಲ. ತಾಳಮದ್ದಳೆ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳನ್ನು ಮಾಡುತ್ತಾ ಮಾತಿನ ಜತೆ ಅಭಿನಯದಿಂದ ಪ್ರೇಕ್ಷಕರಲ್ಲಿ ರಸೋತ್ಪತ್ತಿಯಾಗುವಲ್ಲಿ ಶ್ರಮಿಸಿದರು. ನಾಟಕ ಕಂಪೆನಿಗಳಲ್ಲಿ ಇರುತ್ತಿದ್ದ ತಾಂತ್ರಿಕ ಅಂಶಗಳನ್ನೂ ತನ್ನ ತಂಡದಲ್ಲಿ ಅಳವಡಿಸಿಕೊಂಡರು.

ಹೀಗೆ ಚೊಕ್ಕಾಡಿ ಎಂಬ ಊರನ್ನು ಒಂದು ಸಾಂಸ್ಕೃತಿಕ ಕೇಂದ್ರವನ್ನಾಗಿ ಬೆಳೆಸಿದರು. ಮೊಳಹಳ್ಳಿ ಶಿವರಾಯರು ಡಾ| ಶಿವರಾಮ ಕಾರಂತರೂ ತಮ್ಮ ಕಾರ್ಯಕ್ರಮಗಳಿಗೆ ಚೊಕ್ಕಾಡಿಯನ್ನು ಕೇಂದ್ರವಾಗಿ ಆರಿಸಿದ್ದರು. ಹಿರಿಯ ಲೇಖಕ ತ.ರಾ.ಸು., ನೆಟ್ಟಾರು ಗೋಪಾಲಕೃಷ್ಣ, ಪೈಲೂರು ಶಿವರಾಮಯ್ಯ, ಕೊಳಂಬೆ ಪುಟ್ಟಣ್ಣ ಗೌಡ, ಎಸ್. ಆರ್. ಚಂದ್ರ, ಅಲ್ಲದೆ ಅನೇಕ ಹಿರಿಯ, ಕಿರಿಯ ಸಾಹಿತಿಗಳು, ಕಲಾವಿದರು ಚೊಕ್ಕಾಡಿಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ದೇರಾಜೆಯವರು ತಾಳಮದ್ದಳೆ, ನಾಟಕಗಳಲ್ಲಿ ತನಗಿದ್ದ ನಟನಾಕೌಶಲವನ್ನು ಸಹಕಲಾವಿದರಿಗೂ ತರಬೇತಿಯ ಮೂಲಕ ಧಾರೆ ಎರೆದ ಶ್ರೇಷ್ಠ ಕಲಾವಿದ.


ಯಕ್ಷಗಾನದಲ್ಲಿ ಅನೇಕ ಪ್ರಯೋಗಗಳನ್ನು ಮಾಡಿದ ಡಾ| ಶಿವರಾಮ ಕಾರಂತರಿಂದ ಹೊಗಳಿಸಿಕೊಂಡದ್ದು ದೇರಾಜೆಯವರ ಸಾಧನೆಗೆ, ಪ್ರತಿಭೆಗೆ ಸಂದ ಪ್ರಶಸ್ತಿಯೇ ಹೌದು. ‘‘ನಾನು ದೇರಾಜೆ ಸೀತಾರಾಮಯ್ಯ… ಚೊಕ್ಕಾಡಿಯ ಪರಿಸರ ನನ್ನನ್ನು ರೂಪಿಸಿದೆ’’. ಮನುಷ್ಯನು ಸಂಘಜೀವಿ. ಏಕಾಂಗಿಯಾಗಿ ಬದುಕಲಾರ. ಸಮಾಜದ ಜತೆಯಲ್ಲಿದ್ದೇ ಜೀವಿಸಬೇಕು ಎಂಬ ಧ್ವನಿಯು ದೇರಾಜೆಯವರ ಈ ಮಾತುಗಳಲ್ಲಿ ಅಡಗಿದೆ. ಇವರ ಸಾಹಸ, ಸಾಧನೆಯಿಂದ ಪರಿಸರದ ಜನರಂತೂ ಉತ್ತೇಜಿತರಾದುದು ಸತ್ಯ. ಅಲ್ಲಲ್ಲಿ ನಾಟಕ, ಯಕ್ಷಗಾನವೇ ಮೊದಲಾದ ಸಾಂಸ್ಕೃತಿಕ ಕಲಾತಂಡಗಳು ಹುಟ್ಟಿ ಬೆಳೆಯ ಲಾರಂಭಿಸಿದವು.

1946ರಲ್ಲಿ ಚೊಕ್ಕಾಡಿಯ ಶ್ರೀರಾಮ ದೇವಾಲಯದ ಕೆಲಸ ಪೂರ್ಣಗೊಂಡು ಪೂಜಾ ಕೈಂಕರ್ಯಗಳು ಆರಂಭವಾಗಿದ್ದವು. ತಾಳಮದ್ದಳೆ ಕ್ಷೇತ್ರದಲ್ಲಿ ದೇರಾಜೆಯವರು ಈ ಕಾಲಕ್ಕೆ ಪ್ರಸಿದ್ಧರೂ ಆಗಿದ್ದರು. ಆದರೆ ಆರ್ಥಿಕ ಸ್ಥಿತಿಯು ಹದಗೆಟ್ಟಿತ್ತು. ಅವರನ್ನು ಅರ್ಥೈಸಿ ಹೆಜ್ಜೆಹಾಕುವ ಮಂದಿಗಳೂ ಇರಲಿಲ್ಲ. ಕೆಲವೊಂದು ಘಟನೆಗಳಿಂದ ನೊಂದ ಅವರಿಗೆ ಒಂದು ರೀತಿಯ ಅತೃಪ್ತಿಯು ಕಾಡತೊಡಗಿತ್ತು. ಸಂಘರ್ಷಕ್ಕಿಂತ ಸಾಮರಸ್ಯವೇ ಒಳಿತೆಂಬ ಮನೋಭಾವ ಉಳ್ಳವರಾಗಿ ವಿರೋಧಿಗಳನ್ನು ಎದುರಿಸದೆ ಮತ್ತೊಬ್ಬರಲ್ಲಿ ದೂರದೆ ತನ್ನತನವನ್ನು ಮೆರೆದ ಸಜ್ಜನ ದೇರಾಜೆಯವರು. ದಿಗ್ಗಜ ರೊಂದಿಗೆ ತಾಳಮದ್ದಳೆಗಳಲ್ಲಿ ವಾಕ್ಚಾತುರ್ಯವನ್ನು ಪ್ರಕಟಿಸುತ್ತಾ ನಂತರದ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡರು. ಅನಿವಾರ್ಯವಾಗಿ ಚೊಕ್ಕಾಡಿಯನ್ನು ತೊರೆದು ಬೆಳ್ಳಾರೆ ಸಮೀಪದ ಗಟ್ಟಿಗಾರಿಗೆ ತನ್ನ ವಾಸ್ತವ್ಯವನ್ನು ಬದಲಾಯಿಸಿ ಬೆಳ್ಳಾರೆ ಗ್ರಾಮ ಪಂಚಾಯತಿನ ಅಧ್ಯಕ್ಷರೂ ಆದರು. ದೇರಾಜೆಯವರು ತಮ್ಮ ಜ್ಞಾನ, ಅನುಭವಗಳನ್ನು ಹಿರಿಯರು, ಕಿರಿಯರೆಂಬ ಭೇದವಿಲ್ಲದೆ ಹಂಚಿಕೊಳ್ಳುತ್ತಿದ್ದರು.


ದೇರಾಜೆಯವರು ಕೃಷಿಕರಾಗಿಯೂ ಪ್ರಸಿದ್ಧರು. ಜಪಾನ್ ಮಾದರಿಯ ಭತ್ತದ ಕೃಷಿಯನ್ನು ಮಾಡಿ ‘ಉತ್ತಮ ಕೃಷಿಕ’ ಪುರಸ್ಕಾರವನ್ನು ಪಡೆದರೂ ಸಾವಯವ ಕೃಷಿಯೇ ನಿಜವಾದ ಕೃಷಿ. ರಾಸಾಯನಿಕಗಳ ಬಳಕೆ ಮುಂದೊಂದು ದಿನ ಖಂಡಿತ ನಮ್ಮನ್ನು ತೊಂದರೆಗೀಡು ಮಾಡುತ್ತದೆ ಎಂದು ಎಚ್ಚರಿಸಿದ್ದರು. ಸರಿಯಾಗಿ ಸಾವಯವ ಕೃಷಿ ಮಾಡಿದರೆ ಅಡಿಕೆಗೆ ಔಷಧಿ ಸಿಂಪಡಿಸುವ ಅಗತ್ಯ ಬಾರದೆಂಬ ಸಂದೇಶವನ್ನು ಕೃಷಿಕರಿಗೆ ನೀಡುವ ಜತೆಗೇ ಸಾಹಿತ್ಯಕ್ಷೇತ್ರದಲ್ಲೂ ಕೃಷಿಕರಾಗಿ ಖ್ಯಾತರಾದರು. ಭೀಷ್ಮಾರ್ಜುನ, ಧರ್ಮದಾಸಿ ನಾಟಕಗಳನ್ನು ಬರೆದು ಪ್ರಕಟವೂ ಆಗಿತ್ತು. ಸಹಕಾರಿ ಬ್ಯಾಂಕ್ ಮತ್ತು ಪುತ್ತೂರು ತಾಲೂಕು ಮಾರ್ಕೆಟಿಂಗ್ ಸೊಸೈಟಿಯ ಅಧ್ಯಕ್ಷರಾಗಿಯೂ ಕೆಲಸ ಮಾಡುತ್ತಾ ಪ್ರಿಯದರ್ಶನಂ, ಯಕ್ಷಗಾನ ವಿವೇಚನೆ, ಸುಭದ್ರಾರ್ಜುನ ಮೊದಲಾದ ಕೃತಿಗಳನ್ನು ರಚಿಸಿದರು. ಶ್ರೀರಾಮಚರಿತಾಮೃತಂ ಎಂಬ ಮೇರುಕೃತಿಯೂ ಲೋಕಾರ್ಪಣೆ ಗೊಂಡಿತು (1959).

ಹಣದ ವಿಚಾರದಲ್ಲಿ ಧಾರಾಳಿ. ಮಿತಿಮೀರಿ ಖರ್ಚು ಮಾಡುತ್ತಿದ್ದರಂತೆ. ಆದರೆ ಸಾರ್ವಜನಿಕ ವಲಯದ ಹಣಕಾಸಿನ ವಿಚಾರದಲ್ಲಿ ಶಿಸ್ತಿನ ಸಿಪಾಯಿಯಾಗಿದ್ದರು. ಬೆಳ್ತಂಗಡಿಯಲ್ಲಿ ನೆಲೆಸಿದ ಮೇಲೂ ಹಲವಾರು ಸಂಘ-ಸಂಸ್ಥೆಗಳಲ್ಲಿ ದುಡಿದ ಅವರು ಕೃಷಿಕರ ಮತ್ತು ಕಲಾವಿದರ ಬಗೆಗೆ ಕಾಳಜಿ ಉಳ್ಳವರಾಗಿದ್ದರು. ಅಲ್ಲದೆ ಅವರ ಕಷ್ಟಗಳಿಗೆ ಸ್ಪಂದಿಸಿದ ನಿದರ್ಶನಗಳೂ ಇವೆ. 1974ರಲ್ಲಿ ಸಾಧನೆಯ ಪ್ರತೀಕವಾಗಿ ‘ರಸಋಷಿ’ ಅಭಿನಂದನ ಗ್ರಂಥವನ್ನು ದೇರಾಜೆಯವರಿಗೆ ಕಲಾಭಿಮಾನಿಗಳು ಅರ್ಪಿಸಿದ್ದರು. 1977ರಲ್ಲಿ ಇವರು ರಚಿಸಿದ ಶ್ರೀಮನ್ಮಹಾಭಾರತ ಗ್ರಂಥವೂ ಲೋಕಾರ್ಪಣೆಗೊಂಡಿತು. ನಂತರ ರಾಮರಾಜ್ಯದ ರೂವಾರಿ, ಕುರುಕ್ಷೇತ್ರಕ್ಕೊಂದು ಆಯೋಗ ಕೃತಿಗಳು ಪ್ರಕಟನೆಗೊಂಡವು. ಬೆಳ್ತಂಗಡಿಯಲ್ಲಿ ವಾಸವಾಗಿದ್ದ ಕಾಲದಲ್ಲೇ ಅವರ ಹೆಚ್ಚಿನ ಕೃತಿಗಳು ಪ್ರಕಟನೆಗೊಂಡವು. ತಾಳಮದ್ದಳೆ ಕ್ಷೇತ್ರದಲ್ಲೂ ವ್ಯವಸಾಯ ಮಾಡಿ ಖ್ಯಾತರಾದರು.

ಕೆಲವೇ ಪಾತ್ರಗಳಿಗೆ ತನ್ನನ್ನು ತಾನು ಸೀಮಿತಗೊಳಿಸದೆ ವೈವಿಧ್ಯಮಯ ಪಾತ್ರಗಳಲ್ಲಿ ರಂಜಿಸಿದರು. ಉತ್ತರಕುಮಾರ, ಗೋಪಾಲಕ, ಹನೂಮಂತ, ಸುಗ್ರೀವ, ಅಂಗದ ವಿಭೀಷಣ, ಅತಿಕಾಯ, ಪ್ರಹಸ್ತ, ರಾವಣ, ರಾಮ, ಭರತ, ದಶರಥ, ಹಂಸಧ್ವಜ, ಧರ್ಮರಾಯ, ಭೀಮ, ವಿದುರ, ಕೌರವ, ಕರ್ಣ, ಅರ್ಜುನ, ಕೃಷ್ಣ, ಭೀಷ್ಮ, ಸುಧನ್ವ ಅಲ್ಲದೆ ಶೂರ್ಪನಖಿ, ಮಂಥರೆ, ಪೂತನಿ ಮೊದಲಾದ ಸ್ತ್ರೀಪಾತ್ರಗಳನ್ನೂ ಮಾಡಿದ್ದಾರೆ. ನಾಟಕದಲ್ಲಿ ಮಕರಂದ ಮತ್ತು ಚಂದ್ರಾವಳೀ ವಿಲಾಸದ ಅತ್ತೆಯ ಪಾತ್ರವು ಪ್ರೇಕ್ಷಕರ ಮನಸೂರೆಗೊಂಡಿತ್ತು. ಅವರು ನಿವೃತ್ತರಾಗುವ ವರೇಗೆ ಉತ್ತರನ ಪಾತ್ರವನ್ನು ನಿರ್ವಹಿಸಲು ಕಲಾವಿದರು ಅಳುಕುತ್ತಿದ್ದರಂತೆ. ದೇರಾಜೆಯವರು ಉತ್ತರನ ಪಾತ್ರವನ್ನು ಆ ರೀತಿ ಚಿತ್ರಿಸಿದ್ದರು. ‘‘ಅರ್ಥ ಹೇಳುವುದೆಂದರೆ ಪ್ರತಿ ಕಾವ್ಯದ ಸೃಷ್ಟಿ. ದೇರಾಜೆಯವರು ಪ್ರತಿಯೊಂದು ಸಂದರ್ಭದಲ್ಲೂ ಇಂತಹ ಕಾವ್ಯವನ್ನು ಸೃಷ್ಟಿ ಮಾಡುತ್ತಿದ್ದ ಮಹಾನ್ ಕಲಾವಿದ’’. ಇದು ಯಕ್ಷಗಾನ ಭೀಷ್ಮ ಶೇಣಿ ಗೋಪಾಲಕೃಷ್ಣ ಭಟ್ಟರು ದೇರಾಜೆಯವರ ಬಗೆಗೆ ಆಡಿದ ಮೆಚ್ಚುಗೆ ನುಡಿಗಳು.


ಲೇಖಕ, ವಿಮರ್ಶಕ, ಅರ್ಥಧಾರಿ ಡಾ| ಎಂ. ಪ್ರಭಾಕರ ಜೋಷಿಯವರ ಅಭಿಪ್ರಾಯದಂತೆ- ‘‘ದೇರಾಜೆ ಅರ್ಥಗಾರಿಕೆಯು ಕನ್ನಡ ವಾಙ್ಮಯದ ಉನ್ನತ ಸಿದ್ಧಿಗಳಲ್ಲಿ ಒಂದು. ಅರ್ಥಗಾರಿಕೆಯ ನಿಜವಾದ ಯಶಸ್ಸಿಗೆ ಬೇಕಾದುದು ಅಂತಹ ದೊಡ್ಡ ಪಾಂಡಿತ್ಯ ಅಲ್ಲ, ‘ಕಲೆಗಾರಿಕೆ’ ಎಂದು ತೋರಿಸಿದ್ದು ದೇರಾಜೆಯವರ ಸಾಧನೆ’’.


ಹಿರಿಯ ತಾಳಮದ್ದಳೆ ಅರ್ಥಧಾರಿ ಶ್ರೀ ಉಡುವೆಕೋಡಿ ಸುಬ್ಬಪ್ಪಯ್ಯನವರು ದೇರಾಜೆಯವರ ಶಿಷ್ಯರು. ಶ್ರೀಯುತರು ದೇರಾಜೆಯವರ ಆದರ್ಶಗಳನ್ನು ಮೈಗೂಡಿಸಿಕೊಂಡೇ ಖ್ಯಾತರಾದರು. ದೇರಾಜೆಯವರು ರಚಿಸಿದ ಕೃತಿಗಳು ಅನೇಕ. ಅವರ ಬಗೆಗೆ ಪ್ರಕಟಿತವಾದ ಪುಸ್ತಕಗಳೂ ಹಲವು. ಕಲಾ, ಸಾಹಿತ್ಯ ಕ್ಷೇತ್ರದಲ್ಲಿ ಅಪೂರ್ವ ಸಾಧನೆಯನ್ನು ಮಾಡಿದ ದೇರಾಜೆಯವರಿಗೆ ಉನ್ನತ ಪ್ರಶಸ್ತಿಗಳು ದೊರಕದೇ ಇದ್ದುದು ಆಶ್ಚರ್ಯಕರವಾದ ವಿಚಾರ. ಆದರೂ ಅವರ ಕೊಡುಗೆಗಳನ್ನು ನಾವು ಬಳಸುತ್ತಿದ್ದೇವೆ. ಅವರನ್ನು ಸ್ಮರಿಸುತ್ತಿದ್ದೇವೆ. ಇದುವೇ ಅವರಿಗೆ ನೀಡುವ ಗೌರವವೆಂದು ಭಾವಿಸೋಣ. ದೇರಾಜೆಯವರನ್ನು ಕರೆಸುವುದಕ್ಕಾಗಿಯೇ ತಾಳಮದ್ದಳೆ ಏರ್ಪಡಿಸುವಷ್ಟು ಜನಪ್ರಿಯತೆಯು ಬೆಳೆದಿತ್ತು.

ಆಗಲೇ ನಿವೃತ್ತಿಯನ್ನೂ ಘೋಷಿಸಿದ್ದರು. ‘‘ನಾಡಿನಾದ್ಯಂತ ನನ್ನನ್ನು ಬಲ್ಲವರಿದ್ದರೆ, ಅಭಿಮಾನಿಗಳಿದ್ದರೆ ಅದು ಯಕ್ಷಗಾನ ಕಲಾಮಾತೆಯ ಅನುಗ್ರಹದಿಂದ. ಕರ್ತವ್ಯವನ್ನು ಶ್ರದ್ಧೆಯಿಂದ ಮಾಡಿದ್ದೇನೆ. ಹಳೆಯ ಮರವು ಕೊಳೆತು ಹೊಸ ಗಿಡಗಳಿಗೆ ಆಹಾರವಾಗಬೇಕು. ಇದು ಪ್ರಕೃತಿಯ ಧರ್ಮ. ಅಂತೆಯೇ ನಾನು ನಿವೃತ್ತನಾಗುತ್ತೇನೆ. ಸೀತಾರಾಮಯ್ಯ ಎಂಬವನೊಬ್ಬ ಇದ್ದ ಎಂಬ ನೆನಪು ನಿಮ್ಮ ಹೃದಯದಲ್ಲಿ ಇದ್ದರೆ ನಾನು ಧನ್ಯ’’ ಎಂದು ಹೇಳಿ ತನ್ನ ನಿವೃತ್ತಿಯ ಬಗೆಗೆ ಆ ಕಾಲದಲ್ಲಿ ಹುಟ್ಟಿಕೊಂಡ ತರ್ಕ, ಊಹಾಪೋಹಗಳಿಗೆ ತೆರೆ ಎಳೆದಿದ್ದರು. ಬೆಳ್ತಂಗಡಿಯಿಂದ ವಿಟ್ಲಕ್ಕೆ ಬಂದು ನೆಲೆಸಿದ ಇವರು ಭಾಗವಹಿಸಿದ ಕೊನೆಯ ತಾಳಮದ್ದಳೆ 1984 ಜುಲೈ 29ರಂದು ಮಂಗಳೂರಿನಲ್ಲಿ.
ಸಾರ್ವಜನಿಕ, ಸಾಮಾಜಿಕ ಕಾರ್ಯಕ್ರಮಗಳಲ್ಲೂ ಸಕ್ರಿಯರಾಗಿದ್ದ ದೇರಾಜೆ ಶ್ರೀ ಸೀತಾರಾಮಯ್ಯನವರನ್ನು ತಿಳಿಯದವರಿಲ್ಲ. ಅಂದಿನ ರಾಜಕೀಯ ನಾಯಕರುಗಳಿಗೆಲ್ಲಾ ದೇರಾಜೆಯವರು ಆಪ್ತರಾಗಿದ್ದರು. ಅವರ ಒಡನಾಟ, ಸ್ನೇಹವನ್ನು ಸ್ವಂತಕ್ಕಾಗಿ ಬಳಸದೆ, ಸಮಾಜದ ಹಿತಾಸಕ್ತಿಗಾಗಿಯೇ ಬಳಸಿಕೊಂಡರು. ಯಾರಲ್ಲೂ ಬೇಡದೆ ತನ್ನಲ್ಲಿದ್ದುದನ್ನು ಜನರಿಗೆ ನೀಡಿದರು.

ಅಪ್ಪಟ ಕಾಂಗ್ರೆಸಿಗನಾದರೂ ತುರ್ತುಪರಿಸ್ಥಿತಿಯನ್ನು ವಿರೋಧಿಸಿದವರು. ತಪ್ಪು ಮಾಡಿದರೆ ಆಪ್ತರನ್ನು ಖಂಡಿಸುವ, ಉತ್ತಮ ಕಾರ್ಯಗಳನ್ನು ಮಾಡಿದರೆ ವಿರೋಧಿಗಳಾದರೂ ಹಿಂದು ಮುಂದು ನೋಡದೆ ಪ್ರಶಂಸಿಸುವ ಗುಣ ದೇರಾಜೆಯವರಲ್ಲಿತ್ತು. ಸಮಯಸ್ಫೂರ್ತಿಯಿಂದ ಸ್ಫುರಿಸುತ್ತಿದ್ದ ಅವರ ಮಾತುಗಳು ತಾಳಮದ್ದಳೆಯ ಅರ್ಥಗಾರಿಕೆಯ ವಿಶೇಷತೆ. ಪ್ರತ್ಯುತ್ಪನ್ನಮತಿಯಾಗಿ, ವಾಕ್ಚಾತುರ್ಯದಿಂದ ಪಾತ್ರವನ್ನೂ, ದೃಶ್ಯವನ್ನೂ ಅದ್ಭುತವಾಗಿ ಚಿತ್ರಿಸುತ್ತಿದ್ದರೆ ಪಾತ್ರರಚನಾ ಕೌಶಲವು ಅನುಪಮವಾಗಿತ್ತು. ವಾಕ್ಚಾತುರ್ಯದ ಜತೆ ಹಾಸ್ಯಪ್ರಜ್ಞೆಯೂ ಅಪಾರವಾಗಿತ್ತು. ಅವರ ಸಹಕಲಾವಿದರಾಗಿದ್ದವರು, ಅವರ ಅರ್ಥಗಾರಿಕೆಯನ್ನು ಕೇಳಿದವರು ಅದನ್ನು ಉಲ್ಲೇಖಿಸಿ ದಾಖಲಿಸಿಯೂ ಇದ್ದಾರೆ. ನಿಜಜೀವನದಲ್ಲೂ ಹಾಗೆಯೇ, ತನ್ನನ್ನು ತಾನು ಹಾಸ್ಯ ಎಂಬ ವಿಷಯಕ್ಕೆ ವಸ್ತುವಾಗಿ ಒಡ್ಡಿಕೊಳ್ಳುತ್ತಿದ್ದರು. ಅಡಿಕೆ ಬೆಳೆಗಾರರಿಗಾಗಿ ‘ಕ್ಯಾಂಪ್ಕೋ’ ಸಂಸ್ಥೆಯನ್ನು ಆರಂಭಿಸುವಲ್ಲೂ ಇವರ ಪ್ರಯತ್ನವಿತ್ತು.


‘‘ದೇರಾಜೆಯವರಲ್ಲದಿದ್ರೆ ನಾನು ಕ್ಯಾಂಪ್ಕೋ ಸಂಸ್ಥೆ ಸ್ಥಾಪನೆಗೆ ಮನಸ್ಸು ಮಾಡುತ್ತಿರಲಿಲ್ಲ’’. ಇದು ವಾರಣಾಸಿ ಶ್ರೀ ಸುಬ್ರಾಯ ಭಟ್ಟರ ಮಾತುಗಳು. ಇವರಿಗೆ ಜ್ಯೋತಿಷಶಾಸ್ತ್ರದಲ್ಲಿ ಆಸಕ್ತಿಯೂ ಇತ್ತು. ಸಿಹಿತಿಂಡಿಗಳೆಂದರೆ ಪಂಚಪ್ರಾಣ. ಬೇಡುವಲ್ಲಿ ಸಂಕೋಚವೂ, ನೀಡುವಲ್ಲಿ ಧಾರಾಳಿಗರೂ ಆಗಿದ್ದರು. ಹೀಗೆ ಕಲಾವಿದನಾಗಿ, ಕವಿಯಾಗಿ, ನಿರ್ದೇಶಕನಾಗಿ, ಸಾಮಾಜಿಕ, ಧಾರ್ಮಿಕ ನಾಯಕನಾಗಿ ಸಮಾಜಕ್ಕೆ, ಯಕ್ಷಗಾನ ಕಲೆಗೆ ಬಹು ಉಪಯೋಗೀ ಕೊಡುಗೆಗಳನ್ನು ನೀಡಿ ದೇರಾಜೆಯವರು ಬದುಕನ್ನು ಸಾರ್ಥಕ ಪಡಿಸಿಕೊಂಡರು. 1984ನೇ ಇಸವಿ ಒಕ್ಟೋಬರ್ 5ರಂದು ಅಲೌಕಿಕ ಪ್ರಪಂಚವನ್ನು ಸೇರಿಕೊಂಡ ದೇರಾಜೆ ಸೀತಾರಾಮಯ್ಯ ಎಂಬ ಮಹಾನ್ ಚೇತನಕ್ಕೆ ನಮನಗಳು. ು

ಲೇಖಕ: ರವಿಶಂಕರ್ ವಳಕ್ಕುಂಜ

ಬಡಗುತಿಟ್ಟಿನ ಮೊದಲ ಮಹಿಳಾ ಯಕ್ಷಗಾನ ತಂಡ

ಕರಾವಳಿಯ ಬಡಗುತಿಟ್ಟಿನಲ್ಲಿ ಯಕ್ಷಗಾನ ಕೇವಲ ಗಂಡುಕಲೆಯೆಂಬತ್ತಿದ್ದ ಅಂದಿನ ಕಾಲದಲ್ಲಿ “ಅಕ್ಕಣಿಯಮ್ಮ”ರವರು ಬೆಂಗಳೂರಿನಲ್ಲಿ 1980 ರಲ್ಲಿ ಯಕ್ಷಗಾನ ಇತಿಹಾಸದಲ್ಲೇ “ಮೊದಲ ಮಹಿಳಾ ಯಕ್ಷಗಾನ” ತಂಡವನ್ನು ಕಟ್ಟಿದವರು ಮತ್ತು ಮಹಿಳಾ ಯಕ್ಷಗಾನವನ್ನು ಆಯೋಜಿಸಿದವರು, ಅಕ್ಕಣಿಯಮ್ಮನವರು ಕಾರ್ಕಡದ ಹೆಸರಾಂತ ನಾಗ ಪಾತ್ರಿಗಳಾಗಿದ್ದ “ಬೋಳಪ್ಪಯ್ಯ”ರ ಪಕ್ಕದ ಮನೆಯ ಅದ್ಯಾಪಕರಾಗಿದ್ದ ನಾಗಪ್ಪ ಉಪಾಧ್ಯರ ಮಗಳಾಗಿದ್ದು, ಕೋಟ ನರಸಿಂಹ ಉರಾಳರೊಂದಿಗೆ ಮದುವೆಯಾಗಿದ್ದರು, ನಂತರ ಬಹಳ ಎಳೆವೆಯಲ್ಲೇ ಪತಿಯನ್ನು ಕಳೆದುಕೊಂಡು ತಂದೆಯ ಮನೆಯಲ್ಲಿದ್ದು ಅಲ್ಲಿಂದ ಬೆಂಗಳೂರಿಗೆ ವಲಸೆ ಬಂದವರು.  

ಯಕ್ಷಗಾನದಲ್ಲಿ ಅಂದಿನ ಮೇರು ಕಲಾವಿದರಾದ ಹಾರಾಡಿ ರಾಮ ಗಾಣಿಗ, ಹಾರಾಡಿ ಕೃಷ್ಣ ಗಾಣಿಗ ,ಚಿಟ್ಟಾಣಿಯವರ ಅಭಿಮಾನಿಯಾಗಿದ್ದು, ಚಿಕ್ಕಂದಿನಿಂದಲೇ ವಿಪರೀತ ಆಸಕ್ತಿ ಇದ್ದುದರಿಂದ ಯಕ್ಷಗಾನದಲ್ಲಿ ಏನಾದರೂ ಹೊಸತನ ಸಾಧಿಸಬೇಕೆಂಬ ಅಭಿಲಾಷೆ ಹೊಂದಿದ್ದರು, ಅಂದಿನ ಕಾಲದಲ್ಲಿ ಯಕ್ಷಗಾನವೆಂದರೆ ಅದು ಕೇವಲ ಗಂಡುಕಲೆ ಎಂಬಂತಿದ್ದ ಸಾಮಾಜಿಕ ಜೀವನದಲ್ಲಿ ಅದರಲ್ಲೂ ಸಂಪ್ರದಾಯಸ್ಥ ಬ್ರಾಹ್ಮಣ  ಮನೆತನದನ ಹೆಣ್ಣು ಮಕ್ಕಳು ರಂಗಸ್ಥಳದಲ್ಲಿ ಕುಣಿಯುವುದೆಂದರೆ ಏನೋ ಒಂದು ಅಪವಾದವೆಂಬಂತೆ ಕಾಣುತಿದ್ದ ಅಂದಿನ ಕಾಲಘಟ್ಟದಲ್ಲಿ, ಬೆಂಗಳೂರಿನಲ್ಲಿ 1979ರಲ್ಲಿ ಕಪಿಲಾ ಥಿಯೇಟರ್ ನ ಎದುರಿನ ರಾಮಕೃಷ್ಣ ಲಂಚ್ ಹೋಂ ನ ಮೊದಲಮಹಡಿಯಲ್ಲಿ ಊರಿನ ಹಾಗು ಬೆಂಗಳೂರಿನ ಆಸಕ್ತ  ಮಹಿಳಾ ವಿಧ್ಯಾರ್ಥಿಗಳನ್ನು ಆಯ್ಕೆ ಮಾಡಿ , ಆಯ್ಕೆ ಮಾಡಿದ ವಿಧ್ಯಾರ್ಥಿನಿಯರು/ ಮಹಿಳಾ ಕಲಾವಿದೆರಿಗೆ ಯಕ್ಷಗಾನ ಗುರುಗಳಾದ ಶ್ರೀಯುತ. ಕೆ. ಸದಾನಂದ ಐತಾಳರಿಂದ ಉತ್ಕೃಷ್ಟಮಟ್ಟದ  ತರಬೇತಿ ನೀಡಿ ಗುಣಮಟ್ಟದ ಪ್ರದರ್ಶನವನ್ನು ನೀಡುತ್ತಿದ್ದರು. 

ಅಕ್ಕಣಿಯಮ್ಮನವರು ಯಕ್ಷಗಾನದಲ್ಲಿ ಪಾತ್ರ ಮಾಡಿದ್ದು ತೀರಾ ಅಪರೂಪ ಅವರ 1979 ರ  ಮೊದಲ ಬ್ಯಾಚ್ ನಲ್ಲಿ  ಮಿಸ್ ಇಂಡಿಯಾ ರೇಖಾ ಹಂದೆಯವರು ರಾಣಿ ಶಶಿಪ್ರಭೆ ಪಾತ್ರ ಮಾಡುತ್ತಿದ್ದರು . ಸ್ಥಳೀಯವಾಗಿ “ಅಕ್ಕಣಿಯಮ್ಮನ ಮೇಳ” ಎಂದೇ ಆಡುಮಾತಿನಲ್ಲಿ ಪ್ರಸಿದ್ದಿಯಾಗಿತ್ತು. 1983ರಲ್ಲಿ ಸಾಲಿಗ್ರಾಮದ ಕಾರ್ಕಡದಲ್ಲಿ 10 ಭಾರಿ ಟಿಕೇಟು ಪ್ರದರ್ಶನ ಆಯೋಜಿಸಿ ಭರ್ಜರಿ ಹೌಸ್ ಫುಲ್ ಕಲೆಕ್ಷನ್ ಗಳಿಸಿದ್ದರು. ನಂತರ ಹಲವಾರು ಕಡೆ ವಿಶೇಷ ಯಕ್ಷಗಾನ ಆಯೋಜನೆಯಲ್ಲಿ ಮೊದಲು ಅತಿಥಿ ಮಹಿಳಾ ಯಕ್ಷಕಲಾವಿದರಿಂದ ನಂತರ ಮೇಳದ ಕಲಾವಿದರಿಂದ ಪ್ರದರ್ಶನವಿರುತಿತ್ತು. 

1983-84ರಲ್ಲಿ ಶ್ರೀ ಅಮೃತೇಶ್ವರೀ ಮೇಳಕ್ಕೆ ಅತಿಥಿಕಲಾವಿದರಾಗಿ  ಇವರ ತಂಡದ ಸದಸ್ಯರು ಭಾಗವಹಿಸುತ್ತಿದ್ದರು ಅವರಲ್ಲಿ ಪ್ರಸಿದ್ಧ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ ಹೆಂಡತಿ ಸುಜಾತ ಧಾರೇಶ್ವರರೂ ಕೂಡಾ ಒಬ್ಬರು. 1982ರಲ್ಲಿ ಮುಂಬಯಿಯಲ್ಲಿ ಪ್ರದರ್ಶನನೀಡಿದ್ದರು. ನಂತರ ಚೆನೈಯಲ್ಲೂ ಕಾರ್ಯಕ್ರಮ ನೀಡಿ ಜನಮನ್ನಣೆ ಗಳಿಸಿದ್ದರು.  ಶಿರಸಿ,  ಸಿದ್ದಪುರ,  ಕುಮುಟ,  ಹೊನ್ನಾವರ,  ಉಡುಪಿ, ಕುಂದಾಪುರ, ಮಂಗಳೂರು, ಕಾಸರಗೋಡು ಕಡೆಗಳಲ್ಲಿಯೂ ಪ್ರದರ್ಶನ ನೀಡೀದ್ದರು. 1990ರಲ್ಲಿ ಅಕ್ಕಣಿಯಮ್ಮನ ಮರಣಾನಂತರ ಇವರ ತಂಡ ನಿಂತುಹೋಯಿತು.

ಸಂಗ್ರಹ: ಪ್ರವೀಣ್ ಡಿ. ಕಟೀಲ್

ಮಾಹಿತಿ: ಗುರು ಶ್ರಿಯುತ ಸದಾನಂದ ಐತಾಳ, ಸುಜಾತ ಧಾರೇಶ್ವರ.
ಚಿತ್ರಕೃಪೆ : ಎಸ್. ಗಣಪತಿ ಪೈ

ಹಿರಿಯ ಯಕ್ಷಗಾನ ಕಲಾವಿದ ವಿಶ್ವನಾಥ ಸ್ವಾಮೀಜಿ ಸುವರ್ಣನಾಡು ಅವರು ವಿಧಿವಶ

 ‌‌ಪ್ರಸಿದ್ದ ಯಕ್ಷಗಾನ ಕಲಾವಿದ ಸೊರ್ನಾಡು ವಿಶ್ವನಾಥ ಶೆಟ್ಟಿ (81), ಪ್ರಸ್ತುತ ವಿಶ್ವನಾಥ ಸ್ವಾಮಿಯವರು ನಿನ್ನೆ( ಆಗಸ್ಟ್ 1, 2021 ) ಬೆಳಗ್ಗೆ ಸೊರ್ನಾಡುವಿನ  ತಮ್ಮ ಸ್ವ ಆಶ್ರಮದಲ್ಲಿ ದೈವಾಧೀನರಾದರು. ( 2 ವರ್ಷ ಹಿಂದೆ ಬರೆದ ಪರಿಚಯ ಲೇಖನ ಕೆಳಗಿದೆ)

ಜಾಗತಿಕ ಬಂಟ ಪ್ರತಿಷ್ಠಾನ ಪ್ರಶಸ್ತಿಗೆ
ಯಕ್ಷತಪಸ್ವಿ ಸೊರ್ನಾಡು ವಿಶ್ವನಾಥ ಶೆಟ್ಟಿ

ಯಕ್ಷಗಾನ ಕಲೆಯನ್ನು ವೃತ್ತಿಯಾಗಿ ಅಥವಾ ಹವ್ಯಾಸವಾಗಿ ಬೆಳೆಸಿಕೊಂಡವರು ಹಲವರಿದ್ದಾರೆ. ಆದರೆ ಅವೆರಡನ್ನೂ ಬಿಟ್ಟು ಅಧ್ಯಾತ್ಮದ ಹಾದಿ ತುಳಿದವರು ವಿರಳ. ಅಂತಹ ವಿರಳಾತಿವಿರಳದಲ್ಲಿ ಸೊರ್ನಾಡು ವಿಶ್ವನಾಥ ಶೆಟ್ಟಿಯವರು ಪ್ರಮುಖರು. ಅವರಿಗೀಗ 79ರ ಹರೆಯ. ಬಂಟ್ವಾಳ ತಾಲೂಕಿನ ಸುವರ್ಣನಾಡು ಶ್ರೀ ದುರ್ಗಾಂಬಿಕಾ ಸಿದ್ಧೇಶ್ವರಿ ದೇವಸ್ಥಾನದ ಸ್ಥಾಪಕರಾಗಿ ವೈರಾಗ್ಯದ ಹಾದಿ ತುಳಿದ ಅವರೀಗ ವಿಶ್ವನಾಥ ಸ್ವಾಮಿಯಾಗಿ ಪ್ರಸಿದ್ಧರು.


ಕುಪ್ಪೆಪದವು ಸಮೀಪದ ಕೊಂಜಿಬೆಟ್ಟು ಗುತ್ತುಮನೆ ಬಿರ್ಮಣ್ಣ ಶೆಟ್ಟಿ ಮತ್ತು ಚೆನ್ನಮ್ಮ ದಂಪತಿಯ ಐದು ಮಕ್ಕಳಲ್ಲಿ ಒಬ್ಬರಾಗಿರುವ ವಿಶ್ವನಾಥ ಶೆಟ್ಟಿ ಅರಳ ಶಾಲೆಯಲ್ಲಿ ಒಂಭತ್ತನೇ ತರಗತಿ ವರೆಗೆ ವ್ಯಾಸಂಗ ಮಾಡಿದ್ದರು. ಅವರ ಹಿರಿಯಣ್ಣ ಮೂಲ್ಕಿಯ ಹೆಸರಾಂತ ವೈದ್ಯ ಮತ್ತು ಸಮಾಜ ಸೇವಕ ದಿ. ಡಾ. ಎಂ. ಬಾಬು ಶೆಟ್ಟಿ. ಅವರು ಲಯನ್ಸ್ ಜಿಲ್ಲಾ ಗವರ್ನರ್ ಆಗಿ ಸೇವೆಸಲ್ಲಿಸಿದವರು. ಎಳವೆಯಲ್ಲೇ ಅಧ್ಯಾತ್ಮದತ್ತ ಹೆಚ್ಚು ಒಲವಿದ್ದ ವಿಶ್ವನಾಥ ಶೆಟ್ಟರು ಯಕ್ಷಗಾನವನ್ನು ಹವ್ಯಾಸವಾಗಿ ಸ್ವೀಕರಿಸಿದ್ದರು. ಆರಂಭದಲ್ಲಿ ಎಂಕು ಭಾಗವತರಿಂದ ಚೆಂಡೆ-ಮದ್ದಳೆ ಅಭ್ಯಸಿಸಿದ ಅವರು ಮೂಡಬಿದ್ರೆ ವಾಸು ಅವರಿಂದ ಯಕ್ಷಗಾನದ ಕುಣಿತ ಹಾಗೂ ಕೂರ್ಯಾಳ ತಮ್ಮಯ್ಯ ಆಚಾರ್ಯ ಮತ್ತು ನಾಂಞ ಕಿಲ್ಲೆಯವರಿಂದ ಅರ್ಥಗಾರಿಕೆಯಲ್ಲಿ ತರಬೇತಿ ಹೊಂದಿದರು. ಅಲ್ಲದೆ ರಾಜನ್ ಅಯ್ಯರ್‍ರಿಂದ ತಾಂಡವ ನೃತ್ಯವನ್ನು ಕಲಿತರು. ಎರ್ಮಾಳಿನಲ್ಲಿ ಚಿಕ್ಕ ಜೀನಸು ಅಂಗಡಿ ತೆರೆದು ವ್ಯವಹಾರಕ್ಕೆ ಕಾಲಿಟ್ಟ ಅವರು ಮುಂದೆ ಬಿ.ಸಿ.ರೋಡ್, ಸೊರ್ನಾಡುಗಳಲ್ಲಿ ಚಿಕ್ಕಪುಟ್ಟ ವ್ಯಾಪಾರಗಳಲ್ಲಿ ತೊಡಗಿ ಅದರೊಂದಿಗೆ ಯಕ್ಷಗಾನ ಬಯಲಾಟಗಳನ್ನು ನಡೆಸಿಕೊಂಡು ಬಂದರು.


ಸೊರ್ನಾಡು ಶ್ರೀ ದುರ್ಗಾಂಬಿಕಾ ಮೇಳವನ್ನು ಕಟ್ಟಿ ಹಲವು ಕಲಾವಿದರಿಗೆ ಆಶ್ರಯವಿತ್ತ ವಿಶ್ವನಾಥ ಶೆಟ್ಟರು ಸ್ವತಃ ಉತ್ತಮ ಪುಂಡು ವೇಷಧಾರಿಯಾಗಿದ್ದರು. ಪ್ರಸಿದ್ಧ ಯಕ್ಷಗಾನ ಕಲಾವಿದ ದಿ| ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟರು ಆರಂಭದಲ್ಲಿ ಈ ಮೇಳದಲ್ಲಿದ್ದು ಅವರ ಗರಡಿಯಲ್ಲಿ ಪಳಗಿದವರು. ಖ್ಯಾತ ಹಾಸ್ಯಗಾರ ಬಂಟ್ವಾಳ ಜಯರಾಮ ಆಚಾರ್ಯರೂ ಅವರೊಂದಿಗಿದ್ದರು. ಹರಿಶ್ಚಂದ್ರ, ಹನೂಮಂತ, ಭಸ್ಮಾಸುರ, ಹಿರಣ್ಯಕಶ್ಯಪ ಇತ್ಯಾದಿ ಪಾತ್ರಗಳಲ್ಲಿ ವಿಶ್ವನಾಥ ಶೆಟ್ಟರು ಹೆಸರು ಮಾಡಿದ್ದರು. ತುಳು ಕೋಟಿ-ಚೆನ್ನಯ್ಯದ ಕೋಟಿಯ ಪಾತ್ರಕ್ಕೆ ದಿ| ಬೋಳಾರ ನಾರಾಯಣ ಶೆಟ್ಟರು ಅವರಿಗೆ ಪ್ರೇರಣೆ.


ಅಧ್ಯಾತ್ಮದ ಕಡೆಗಿನ ಸೆಳೆತದೊಂದಿಗೆ ಸದ್ದಿಲ್ಲದೆ ಮುಂಬಯಿ ಸೇರಿದ ವಿಶ್ವನಾಥ ಶೆಟ್ಟರು ಮಜಂಗಾಮ್‍ನ ಹೊಟೇಲ್ ಉದ್ಯಮಿ ಮುತ್ತಪ್ಪ ಶೆಟ್ಟರ ಸಹಕಾರದಿಂದ ಸದ್ಗುರು ನಿತ್ಯಾನಂದ ಸ್ವಾಮಿಯ ದರ್ಶನ ಪಡೆದು ಅವರಿತ್ತ ರುದ್ರಾಕ್ಷಿಮಣಿಯಿಂದ ಪ್ರಭಾವಿತರಾಗಿ ಊರಿಗೆ ಮರಳಿದರು. ವೈವಾಹಿಕ ಜೀವನಕ್ಕೆ ಕಾಲಿಟ್ಟು ಸಂಸಾರಿಯಾದರೂ ಬದಲಾದ ಪರಿಸ್ಥಿತಿಯಲ್ಲಿ ಸ್ವಾಮಿಯಾಗಿ ಸೊರ್ನಾಡಿನಲ್ಲಿ ಶ್ರೀ ದುರ್ಗಾಂಬಿಕಾ ಸಿದ್ದೇಶ್ವರಿ ದೇವಸ್ಥಾನವನ್ನು ನಿರ್ಮಿಸಿ ಇತ್ತೀಚೆಗೆ ಅದರ ಬ್ರಹ್ಮಕಲಶೋತ್ಸವವನ್ನು ನಡೆಸಿದರು. ಎಡನೀರು ಶ್ರೀ ಕೇಶವಾನಂದ ಭಾರತೀ ಶ್ರೀಪಾದರು ಅವರಿಗೆ ದೀಕ್ಷೆ ನೀಡಿದ್ದರು. ಅಂದಿನ ಸೊರ್ನಾಡು ಈಗ `ಶ್ರೀ ಕ್ಷೇತ್ರ ಸುವರ್ಣನಾಡು’ ಆಗಿ ಪ್ರಸಿದ್ಧಿ ಹೊಂದಿದೆ.


ತನ್ನ ಆಶ್ರಮದಲ್ಲಿ ಬಡ ಮಕ್ಕಳಿಗೆ ಆಶ್ರಯವಿತ್ತು ಭಜನೆ ಕಾರ್ಯಕ್ರಮದೊಂದಿಗೆ ಅವರ ಶಿಕ್ಷಣ ಹಾಗೂ ಉದ್ಯೋಗಕ್ಕೆ ಮಾರ್ಗದರ್ಶನವಿತ್ತಿರುವ ವಿಶ್ವನಾಥ ಸ್ವಾಮಿ ತನ್ನ ಯಕ್ಷಗಾನ ಸೇವೆಯನ್ನು ಈಗಲೂ ಕೈ ಬಿಡದೆ ಮುಂದುವರಿಸುತ್ತಿದ್ದಾರೆ. ಅವರ ಶ್ರೀ ದುರ್ಗಾಂಬಿಕಾ ಮೇಳ ಐದು ವರ್ಷ ಟೆಂಟ್ ಮೇಳವಾಗಿ ತಿರುಗಾಟ ಮಾಡಿ ಪ್ರಸ್ತುತ ಬಯಲಾಟ ಮೇಳವಾಗಿ ಪರಿವರ್ತನೆಗೊಂಡಿದೆ. ಅವರ ಯಕ್ಷಗಾನ ಸೇವೆಯನ್ನು ಪರಿಗಣಿಸಿ ಮಂಗಳೂರಿನ ಜಾಗತಿಕ ಬಂಟ ಪ್ರತಿಷ್ಠಾನವು ದಿ. ಡಿ.ಕೆ. ಚೌಟ ದತ್ತಿನಿಧಿಯಿಂದ ಪ್ರತಿವರ್ಷ ಹಿರಿಯ ಯಕ್ಷಗಾನ ಕಲಾವಿದರಿಗೆ ನೀಡುವ ‘ಬಂಟ ಪ್ರತಿಷ್ಠಾನ ಪ್ರಶಸ್ತಿ’ಗೆ 2018-19ನೇ ಸಾಲಿಗೆ ಯಕ್ಷತಪಸ್ವಿ ಸೊರ್ನಾಡು ವಿಶ್ವನಾಥ ಶೆಟ್ಟರನ್ನು ಆಯ್ಕೆ ಮಾಡಿತ್ತು.

ಲೇಖಕ: ಭಾಸ್ಕರ ರೈ ಕುಕ್ಕುವಳ್ಳಿ, `ವಿದ್ಯಾ’, ಕದ್ರಿ ಕಂಬಳ ರಸ್ತೆ, ಬಿಜೈ, ಮಂಗಳೂರು – 575 004.

ಯಕ್ಷಭೀಮ – ಮಾಣಂಗಾಯಿ ಕೃಷ್ಣ ಭಟ್ಟರು

ಹಲವಾರು ಮಂದಿ ಮಹನೀಯರ ತ್ಯಾಗದ ಫಲವಾಗಿ ಇಂದು ಯಕ್ಷಗಾನ ವೇಗೋತ್ಕರ್ಷವನ್ನು ಪಡೆದುಕೊಂಡಿದೆ. ಅಂತಹವರೆಲ್ಲಾ ಕೇವಲ ಯಕ್ಷಗಾನವನ್ನೇ ಉಸಿರಾಗಿಸಿಕೊಂಡವರು. ನಾಳೆಯ ಬದುಕಿಗೆ ಒಂದಷ್ಟು ಕೂಡಿಡಲಿಲ್ಲ. ಪರಿವಾರದ ಬಗ್ಗೆ ಅತಿಯಾದ ಚಿಂತೆ ಮಾಡಲಿಲ್ಲ. ತಮ್ಮ ಕನಸು ಮನಸುಗಳಲ್ಲಿಯೂ ಕೇವಲ ಯಕ್ಷಗಾನದ ಬಗ್ಗೆ ಮಾತ್ರ ಯೋಚಿಸಿದರು. ಆ ಯೋಚನೆಯಲ್ಲಿಯೇ ತಮ್ಮ ಪೂರ್ಣ ಆಯುಸ್ಸನ್ನು ಕಳೆದರು. ಹಾಗಾಗಿ ತಮ್ಮ ಬದುಕನ್ನು ಯಕ್ಷಗಾನ ಕಲೆಯ ಉತ್ಕರ್ಷೆಗಾಗಿಯೇ ಸವೆಸಿದ ಹಿರಿಯ ಕಲಾವಿದರುಗಳೆಲ್ಲಾ ನಮ್ಮ ಪಾಲಿಗೆ ವಂದನೀಯರು. ಪ್ರಾತಃಸ್ಮರಣೀಯರು. ಅವರು ಪಟ್ಟ ಕಷ್ಟ, ತ್ಯಾಗದ ಪರಿಣಾಮವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಹೀಗೆ ತಮ್ಮ ಬದುಕನ್ನು ಯಕ್ಷಗಾನ ಕಲೆಗಾಗಿಯೇ ಮುಡಿಪಾಗಿರಿಸಿದ ಖ್ಯಾತ ಕಲಾವಿದರಲ್ಲಿ ಪುತ್ತೂರು ಕೃಷ್ಣ ಭಟ್ಟರೂ (ಮಾಣಂಗಾಯಿ ಕೃಷ್ಣ ಭಟ್ಟರು) ಒಬ್ಬರು. ಯಕ್ಷಗಾನ ಕಲಾ ಕ್ಷೇತ್ರದಲ್ಲಿ ಪುತ್ತೂರು ಕೃಷ್ಣ ಭಟ್ಟರದ್ದು ಭೌಮ ಸಾಧನೆ.  ಮಾಣಂಗಾಯಿ ಕೃಷ್ಣ ಭಟ್ಟರ ಜೀವಿತಾವಧಿ 1904-1979. ಸುಮಾರು ಐವತ್ತೆಂಟಕ್ಕೂ ಹೆಚ್ಚಿನ ವರ್ಷಗಳ ಕಾಲ ಕಲಾಸೇವೆಯನ್ನು ಮಾಡಿರುತ್ತಾರೆ. 
ಸುಳ್ಯ ತಾಲೂಕಿನ ಪಂಬೆತ್ತಾಡಿ ಗ್ರಾಮದ ಭೀಮಗುಳಿ ವೆಂಕಟರಮಣಯ್ಯ ಮತ್ತು ದೇವಮ್ಮ ದಂಪತಿಗಳ ಪುತ್ರನಾಗಿ 1904 ಆಗಸ್ಟ್ 1ರಂದು  ಮಾಣಂಗಾಯಿ ಕೃಷ್ಣ ಭಟ್ಟರು ಈ ಲೋಕದ ಬೆಳಕನ್ನು ಕಂಡವರು. ಜನಿಸಿದ್ದು ಅಜ್ಜನ ಮನೆಯಲ್ಲಿ. ಕಾಸರಗೋಡು ತಾಲೂಕಿನ ಕಾರಡ್ಕ ಗ್ರಾಮದ  ಮಾಣಂಗಾಯಿ ಎಂಬಲ್ಲಿ. ಹಾಗಾಗಿ  ಮಾಣಂಗಾಯಿ ಕೃಷ್ಣ ಭಟ್ಟರೆಂದೇ ಕರೆಸಿಕೊಂಡಿದ್ದರು. ದಾಖಲೆಗಳ ಪ್ರಕಾರ ಇವರ ಹೆಸರು ಭೀಮಗುಳಿ ಕೃಷ್ಣಯ್ಯ ಎಂದು. ಇದು ಮನೆ ಅಜ್ಜನ ಹೆಸರು.  ಮಾಣಂಗಾಯಿ ಎಂಬ ಊರನ್ನು ಮಾಡಂಗಾಯಿ, ಮಾಳಂಗಾಯಿ ಎಂದು ಕರೆಯುವ ರೂಢಿಯೂ ಇದೆ. ತಂದೆ ಭೀಮಗುಳಿ ವೆಂಕಟರಮಣಯ್ಯ ಅವರು ತಾಳಮದ್ದಳೆ ಅರ್ಥಧಾರಿಯಾಗಿದ್ದರು. ಅಲ್ಲದೆ ಅಜ್ಜನಗದ್ದೆ ಗಣಪಯ್ಯ, ಮಂಗಲ್ಪಾಡಿ ಕೃಷ್ಣಯ್ಯ (ದೇರಾಜೆ ಸೀತಾರಾಮಯ್ಯನವರ ತೀರ್ಥರೂಪರು) ಅವರುಗಳು ಬಂಧುಗಳೇ ಆಗಿದ್ದರು.  ಮಾಣಂಗಾಯಿ ಕೃಷ್ಣ ಭಟ್ಟರ ತಾಯಿಯ ತಂದೆ (ಅಜ್ಜನ ಮನೆಯ ಅಜ್ಜ)  ಮಾಣಂಗಾಯಿ ವೆಂಕಟೇಶ್ವರ ಭಟ್ಟರು ಹತ್ತೊಂಬತ್ತನೆಯ ಶತಮಾನದ ಕೊನೆಯ ದಶಕಗಳಲ್ಲಿ ಖ್ಯಾತ ಕಲಾವಿದರಾಗಿ ಮೆರೆದವರು. ಇವರು ಕೂಡ್ಲು ಮೇಳದಲ್ಲಿ ತಿರುಗಾಟ ನಡೆಸಿದವರು.  ಮಾಣಂಗಾಯಿ ವೆಂಕಪ್ಪ ಭಟ್ಟರೆಂದೇ ಖ್ಯಾತರಾಗಿದ್ದರು. ಕೂಡ್ಲು ಶ್ಯಾನುಭಾಗರ ಮನೆಯವರಿಗೂ, ಕಲಾಸಕ್ತರಾಗಿದ್ದ ಪುಂಡೂರು ಪುಣಿಂಚತ್ತಾಯರ ಮನೆಯವರಿಗೂ ಇವರು ಆತ್ಮೀಯರಾಗಿದ್ದರು. 
ಮಾಣಂಗಾಯಿ ಕೃಷ್ಣ ಭಟ್ಟರಿಗೆ ಎಳವೆಯಲ್ಲಿಯೇ ಯಕ್ಷಗಾನಾಸಕ್ತಿ ಹುಟ್ಟಿಕೊಂಡಿತ್ತು. ತಂದೆ ತಾಯಿಯರ ಕಡೆಯಿಂದ ಅದು ರಕ್ತಗತವಾಗಿಯೇ ಬಂದಿತ್ತು. ಚೊಕ್ಕಾಡಿ ಮೇಳದ ಪ್ರದರ್ಶನಗಳನ್ನು ನೋಡುತ್ತಾ ಬೆಳೆದವರು. ಪ್ರದರ್ಶನಗಳನ್ನು ನೋಡಿ ಮನೆಗೆ ಬಂದು  ವಿಭೂತಿ, ಬಣ್ಣಗಳನ್ನು ಬಳಿದು ಅಡಿಕೆ ಹಾಳೆಯಿಂದ ತಯಾರಿಸಿದ ಪರಿಕರಗಳನ್ನು ಕಟ್ಟಿಕೊಂಡು ಕುಣಿಯುತ್ತಿದ್ದರಂತೆ. ಇವರ ಆಸಕ್ತಿಗೆ ತಂದೆ ವೆಂಕಟರಮಣಯ್ಯನವರು ಅಡ್ಡಿಪಡಿಸಿದವರಲ್ಲ. ಓದಿದ್ದು ಕಲ್ಮಡ್ಕ ಶಾಲೆಯಲ್ಲಿ. ಎರಡನೇ ತರಗತಿ ವರೆಗೆ ಮಾತ್ರ. ಕಾಟುಕುಕ್ಕೆ ಮಾಲಿಂಗ ರೈಗಳಿಂದ ನಾಟ್ಯಾಭ್ಯಾಸ. ಅಲ್ಲದೆ ಬಣ್ಣದ ನರಸಪ್ಪನವರಿಂದಲೂ ತರಬೇತಿಯನ್ನು ಪಡೆದಿದ್ದರು. 1918ರಲ್ಲಿ ತನ್ನ ಹದಿನಾಲ್ಕನೇ ವರ್ಷದಲ್ಲಿ ಧರ್ಮಸ್ಥಳ ಮೇಳಕ್ಕೆ. ಬಾಲಗೋಪಾಲನಾಗಿ ರಂಗಪ್ರವೇಶ. ಹಿರಿಯ ಕಲಾವಿದರ ನಿರ್ವಹಣೆಯನ್ನು ನೋಡಿ ಕಲಿತೇ ಬೆಳೆಯುತ್ತಾ ಸಾಗಿದರು. ಈ ಸಂದರ್ಭದಲ್ಲಿ ತೀರ್ಥರೂಪರ ಅಗಲುವಿಕೆ ಮತ್ತು ಇನ್ನಿತರ ಕಾರಣಗಳಿಂದ ಪುತ್ತೂರಿಗೆ ಬಂದು ನೆಲೆಸಿದ್ದರು. ಹೀಗೆ  ಮಾಣಂಗಾಯಿ ಕೃಷ್ಣ ಭಟ್ಟರು ಪುತ್ತೂರು ಕೃಷ್ಣ ಭಟ್ಟರೆಂದು ಕರೆಸಿಕೊಂಡರು. 1933ರಲ್ಲಿ ವಿವಾಹ. ಪರಮೇಶ್ವರಿ ಎಂಬವರು ಬಾಳಸಂಗಾತಿಯಾಗಿ ಬದುಕನ್ನು ಪ್ರವೇಶಿಸಿದ್ದರು. ಬಳಿಕ ಕೊರಕೋಡು ಮತ್ತು ಕಟೀಲು ಮೇಳಗಳಲ್ಲಿ ತಿರುಗಾಟ. ಆ ವೇಳೆಗಾಗಲೇ  ಮಾಣಂಗಾಯಿ ಕೃಷ್ಣ ಭಟ್ಟರು ಅಕ್ರೂರ, ಕರ್ಣ, ಭರತ, ವಲಲ, ಕೀಚಕ, ಶಕುನಿ ಮೊದಲಾದ ಪಾತ್ರಗಳಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದರು. ತನ್ನ ವೃತ್ತಿ ಜೀವನದಲ್ಲಿ ಒಮ್ಮೆಯೂ ಕುಸಿತವನ್ನು ಕಾಣದೆ ಬೆಳೆಯುತ್ತಾ ಸಾಗಿದ್ದರು. ಬಳಿಕ ಶ್ರೀ ಧರ್ಮಸ್ಥಳ ಮೇಳದಲ್ಲಿ ಅನೇಕ ವರ್ಷಗಳ ವ್ಯವಸಾಯ. 1937ರಿಂದ 1954ರ ವೆರೆಗೆ ವೃತ್ತಿ ಬದುಕಿಗೆ ಅನುಕೂಲವೆಂಬ ಕಾರಣಕ್ಕೆ ಮಂಗಳೂರಿನಲ್ಲಿ ನೆಲೆಸಿದ್ದರು. ಮಳೆಗಾಲದಲ್ಲಿ ಹರಿದಾಸರಾಗಿ ಹರಿಕಥೆಯನ್ನು ನಡೆಸುತ್ತಿದ್ದರು. ನಾಟ್ಯ ತರಬೇತಿಯನ್ನೂ ನೀಡುತ್ತಿದ್ದರು. ಶ್ರೀ ಕುಬಣೂರು ಬಾಲಕೃಷ್ಣ ರಾಯರು ನಡೆಸುತ್ತಿದ್ದ ಆಟ ಕೂಟಗಳಲ್ಲೂ ಇವರು ಭಾಗವಹಿಸುತ್ತಿದ್ದರು. 1954ರಲ್ಲಿ ಸಂಗೀತ ವಿದ್ವಾಂಸರಾಗಿದ್ದ ಕಾಂಚನ ವೆಂಕಟಸುಬ್ರಹ್ಮಣ್ಯಂ ಅವರ ನಿರ್ದೇಶನದಂತೆ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಯಕ್ಷಗಾನ ಮಂಡಳಿಯನ್ನು ಸ್ಥಾಪಿಸಿದ್ದರು.(ಕಾಂಚನ ಮೇಳ) 


ಶ್ರೀ  ಮಾಣಂಗಾಯಿ ಕೃಷ್ಣ ಭಟ್ಟರು ತಿರುಗಾಟ ನಡೆಸಿದ ಮೇಳಗಳು: ಧರ್ಮಸ್ಥಳ, ಕಟೀಲು, ಕೂಡ್ಲು, ಕುಂಡಾವು, ಸುರತ್ಕಲ್, ಮುಲ್ಕಿ, ಕದ್ರಿ, ಮೂಡುಬಿದಿರೆ, ಕಾಪು, ಪೊಳಲಿ, ತಲಪಾಡಿ ಮೊದಲಾದವು. ಅಲ್ಲದೆ ತಾನೇ ಕಟ್ಟಿ ಬೆಳೆಸಿದ ಕಾಂಚನ ಮೇಳದಲ್ಲೂ ವ್ಯವಸಾಯ ಮಾಡಿದ್ದರು. ಎಳವೆಯಲ್ಲಿ ಶ್ರೀಯುತರು ಬಣ್ಣದ ನರಸಪ್ಪ, ಕೋಲುಳಿ ಸುಬ್ಬ, ಕುಂಬಳೆ ನರಸಿಂಹ ಮೊದಲಾದ ಹಿರಿತಲೆಮಾರಿನ ಕಲಾವಿದರನ್ನು ಮೆಚ್ಚಿಕೊಂಡಿದ್ದರು. ತನ್ನ ವೃತ್ತಿ ಜೀವನದುದ್ದಕ್ಕೂ ಅನೇಕ ಹಿರಿಯ ಹಿಮ್ಮೇಳ, ಮುಮ್ಮೇಳ ಕಲಾವಿದರೊಂದಿಗಿನ ಒಡನಾಟದಿಂದ, ತನ್ನ ಸ್ವಯಂ ಪ್ರತಿಭೆ  ಪ್ರಯತ್ನಗಳಿಂದ  ಮಾಣಂಗಾಯಿಯವರು ಕಲಾವಿದನಾಗಿ ಬೆಳೆದು ಖ್ಯಾತರಾದವರು. ಕಂಸ, ಇಂದ್ರಜಿತು, ಕರ್ಣ, ತಾಮ್ರಧ್ವಜ, ಕಾರ್ತವೀರ್ಯ, ಮಾಗಧ, ಭಸ್ಮಾಸುರ, ವಲಲ,ಅಕ್ರೂರ, ದುಷ್ಟಬುದ್ಧಿ, ಹನುಮಂತ, ಶಕುನಿ, ಭರತ, ಮಾಯಾ ಶೂರ್ಪನಖಿ, ಮಾಯಾ ಅಜಮುಖಿ, ವಾಲಿ  ಮಾಣಂಗಾಯಿಯವರು ಇಷ್ಟಡುವ ಪಾತ್ರಗಳು. ಜೋಡಾಟದಲ್ಲಿ ಅವರಿಗೆ ಸ್ಪರ್ಧಿಯಾಗಿದ್ದವರು ಶ್ರೀ ಕದ್ರಿ ವಿಷ್ಣು. ಕದ್ರಿ ವಿಷ್ಣು- ಮಾಣಂಗಾಯಿ ಜೋಡಿಯು ಜೋಡಾಟದಲ್ಲಿ ಪ್ರಸಿದ್ಧವಾಗಿತ್ತು. ಬ್ರಹ್ಮ ಕಪಾಲದ ಬ್ರಹ್ಮ, ಕೃಷ್ಣಾರ್ಜುನದ ಅರ್ಜುನ, ಚಂಡ ಮುಂಡರು, ಕಂಸ ವಧೆಯ ಕಂಸ, ಕರ್ಣ, ಭರತ, ಮಾಗಧ, ಮೊದಲಾದ ಪಾತ್ರಗಳಂತೂ ಇವರಿಗೆ ಅಪಾರ ಖ್ಯಾತಿಯನ್ನೂ ತಂದು ಕೊಟ್ಟವು. ರಂಗದಲ್ಲಿ ಖಳನಾಯಕನಾಗಿ ವಿಜೃಂಭಿಸಿದರೂ ನಿಜ ಬದುಕಿನಲ್ಲಿ ಸರಳ ಸಜ್ಜನರಾಗಿದ್ದರೆಂದು ಹಿರಿಯ ಕಲಾಭಿಮಾನಿಗಳು ಅವರ ಬಗೆಗೆ ತಿಳಿಸುತ್ತಾರೆ.  ಮಾಣಂಗಾಯಿ ಕೃಷ್ಣ ಭಟ್ಟರು ಮಾಡದ ಪಾತ್ರಗಳಿಲ್ಲ. ಮಾಡಿದ ಪಾತ್ರಗಳೆಲ್ಲಾ ಯಶಸ್ವಿಯಾಗಿ ಇವರಿಗೆ ಹೆಸರನ್ನು ತಂದು ಕೊಟ್ಟಿತ್ತು. ಇದು ಗಮನಿಸಬೇಕಾದ ವಿಷಯ. 1954ರಲ್ಲಿ ಪುಟ್ಟಪರ್ತಿಯಲ್ಲಿ ಬಳ್ಳಂಬೆಟ್ಟು ಶೀನಪ್ಪ ಭಂಡಾರಿಗಳ ತಂಡದ ಪ್ರದರ್ಶನ. ಕಂಸ ವಧೆ ಪ್ರಸಂಗ.  ಮಾಣಂಗಾಯಿಯವರ ಕಂಸ. ಶ್ರೀಧರ ಭಂಡಾರಿಗಳ ಬಾಲಕೃಷ್ಣ. ಪ್ರದರ್ಶನವನ್ನು ನೋಡಿ ಮೆಚ್ಚಿಕೊಂಡ ಶ್ರೀ  ಸಾಯಿಬಾಬಾ ಅವರು ಉಭಯರನ್ನೂ ಸನ್ಮಾನಿಸಿ ಗೌರವಿಸಿದ್ದರು. 
ಜ್ಯೋತಿಷ್ಯ, ಕೆತ್ತನೆ ಕೆಲಸಗಳಿಂದ ಮೂರ್ತಿ ನಿರ್ಮಿಸುವುದು ಇವರ ಹವ್ಯಾಸಗಳಾಗಿತ್ತು. ಅಲ್ಲದೆ ವಾಹನ ಚಾಲನೆಯಲ್ಲೂ ಆಸಕ್ತರಾಗಿದ್ದರು. ಕುರಿಯ ವಿಠಲ ಶಾಸ್ತ್ರಿ, ಕರ್ಗಲ್ಲು ಸುಬ್ಬಣ್ಣ ಭಟ್, ಕಡಂದೇಲು ಪುರುಷೋತ್ತಮ ಭಟ್, ಮಧೂರು ನಾರಾಯಣ ಹಾಸ್ಯಗಾರ, ಕದ್ರಿ ವಿಷ್ಣು, ವೇಣೂರು ವೆಂಕಟ್ರಮಣ, ಮೊದಲಾದವರ ಜತೆ ಜೋಡಿ ಪಾತ್ರಗಳಲ್ಲಿ ಅಭಿನಯಿಸಿ ಖ್ಯಾತರಾಗಿದ್ದರು. 
“ಕಣ್ಣುಗಳ ಮೂಲಕವೇ ಅನೇಕ ಭಾವಗಳನ್ನು ಪ್ರಕಟಿಸುತ್ತಿದರು. ನಾಟ್ಯದ ಮುಕ್ತಾಯಕ್ಕೆ ಚಂಗನೆ ನೆಗೆದು ತಾಳಕ್ಕೆ ಸರಿಯಾಗಿ ಸಿಂಹಾಸನವೇರುತ್ತಿದ್ದರು. ಯಾರಿಗೂ ಕರಗತವಾಗದ ಕಲೆಯು  ಮಾಣಂಗಾಯಿಯವರಿಗೆ ಸಿದ್ಧಿಯಾಗಿತ್ತು. ಕಂಸನಾಗಿ ಕನಸು ಕಾಣುವ ದೃಶ್ಯದಲ್ಲಿ ಅದ್ಭುತವಾಗಿ ಅಭಿನಯಿಸುತ್ತಿದ್ದರು” ಅವರ ವೇಷಗಳನ್ನು ನೋಡಿದ ಹಿರಿಯ ಕಲಾಭಿಮಾನಿಗಳ ಅನಿಸಿಕೆ ಇದು. ಹಾಸ್ಯಪಾತ್ರಗಳನ್ನೂ ನಿರ್ವಹಿಸಿದ ಪುತ್ತೂರು ಕೃಷ್ಣ ಭಟ್ಟರು ಪಾತ್ರ ಯಾವುದೇ ಇರಲಿ, ಸಣ್ಣ ದೊಡ್ಡದೆಂಬ ಭೇದವಿಲ್ಲದೆ ಅಭಿನಯಿಸಿದವರು. ವೇಷಭೂಷಣಗಳ ಚಿತ್ರವನ್ನೂ ವಿವಿಧ ಪಾತ್ರಗಳ ಮುಖವರ್ಣಿಕೆಯನ್ನೂ ಬರೆದಿರಿಸಿ ಮುಂದಿನ ಜನಾಂಗಕ್ಕೆ ನೀಡಿರುತ್ತಾರೆ. 1954ರ ನಂತರ ಕಾಂಚನದಲ್ಲಿ ನೆಲೆಸಿ ತಿರುಗಾಟದ ಜತೆ ಕೃಷಿ ಕಾಯಕವನ್ನು ನಡೆಸುತ್ತಾ ಬಂದ  ಮಾಣಂಗಾಯಿ ಕೃಷ್ಣ ಭಟ್ಟರು 1966ರಲ್ಲಿ  ವೃತ್ತಿರಂಗದಿಂದ ನಿವೃತ್ತರಾಗಿದ್ದರು. ಆದರೂ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ವೇಷ ಮಾಡಿದ್ದಾರೆ. ಕಲಾಸಕ್ತರಿಗೆ ತರಬೇತಿಯನ್ನೂ ನೀಡಿರುತ್ತಾರೆ. 1979 ಮಾರ್ಚ್ 29ರಂದು  ಪುತ್ತೂರು ಕೃಷ್ಣ ಭಟ್ಟರು ಕಲಾಮಾತೆಯ ಮಡಿಲನ್ನು ಸೇರಿಕೊಂಡಿದ್ದರು. 2004ರಲ್ಲಿ ‘ಯಕ್ಷಭೀಮನ ನೂರು ಹೆಜ್ಜೆಗಳು” ಪುತ್ತೂರು ಕೃಷ್ಣ ಭಟ್ಟರ ಸಂಸ್ಮರಣ ಗ್ರಂಥವು ಪ್ರಕಟವಾಗಿತ್ತು. ಇದರ ಸಂಪಾದಕರು ಡಾ. ಪಾದೇಕಲ್ಲು ವಿಷ್ಣು ಭಟ್ ಮತ್ತು ಶ್ರೀ ರಾಜಗೋಪಾಲ ಕನ್ಯಾನ. ಪ್ರಕಾಶಕರು  ಮಾಣಂಗಾಯಿ ಕೃಷ್ಣ ಭಟ್ಟರ ಮೊಮ್ಮಗ ಡಾ. ಕೃಷ್ಣಮೂರ್ತಿ ಪಂಜ ಅವರು. ಖ್ಯಾತ ಕಲಾವಿದ ದಿ| ಪುತ್ತೂರು (ಮಾಣಂಗಾಯಿ) ಕೃಷ್ಣ ಭಟ್ಟರಿಗೆ ನುಡಿನಮನಗಳು. 

ಲೇಖಕ: ರವಿಶಂಕರ್ ವಳಕ್ಕುಂಜ

 

ನಾಟ್ಯಾಚಾರ್ಯ ಶ್ರೀ ಪಡ್ರೆ ಚಂದು

ಕೀರ್ತಿಶೇಷ ಶ್ರೀ ಪಡ್ರೆ ಚಂದು ಅವರನ್ನು ಕಲಾಭಿಮಾನಿಗಳೆಲ್ಲಾ ಬಲ್ಲರು. ಶ್ರೀಯುತರು ತೆಂಕುತಿಟ್ಟು  ಯಕ್ಷಗಾನದ ಶ್ರೇಷ್ಠ ಕಲಾವಿದರೂ ಹೌದು,  ಗುರುಗಳೂ ಹೌದು. ಅನೇಕ ಶಿಷ್ಯಂದಿರನ್ನು ಸಿದ್ಧಗೊಳಿಸಿ ಕಲಾಮಾತೆಯ ಮಡಿಲಿಗಿಕ್ಕಿದ ಸಾಧಕರು. ಈಗ ಅವ್ಯಕ್ತ ಪ್ರಪಂಚದಲ್ಲಿರುವ  ಅವರು ಹಿರಿಯ ಅನುಭವೀ ವೇಷಧಾರಿಯಾಗಿ ರಂಗವನ್ನಾಳಿದ್ದರು, ಇದು ಮರ್ತ್ಯ ಲೋಕ. ಮೃತ್ಯುವು ಸಹಜವಾದುದರಿಂದ ಈ ಹೆಸರು. ಮೃತ್ಯುವಿಗೆ ವಶವಾಗತಕ್ಕವರು ಎಂಬರ್ಥದಲ್ಲಿ ಇಲ್ಲಿ ಜನಿಸಿದವರೆಲ್ಲಾ ಮರ್ತ್ಯರು. ಲೋಕನಿಯಮಗಳನ್ನು ಮುರಿದು ಮೆರೆಯಲು ಯಾರಿಗೂ ಸಾಧ್ಯವಿಲ್ಲ. ಆದರೂ ಬದುಕಿರುವಾಗ ಮಾಡಿದ ಸಾಧನೆಗಳು, ಸತ್ಕಾರ್ಯಗಳು ಅವರನ್ನು ಮತ್ತೆ ಮತ್ತೆ ನೆನಪಿಸುವಂತೆ ಮಾಡುತ್ತದೆ. ಇದುವೇ ಸತ್ತು ಬದುಕುವ ರೀತಿಯು. ಅವರು ಮರೆಯಲಾಗದ, ಮರೆಯಬಾರದ ಮಹಾನುಭಾವರಾಗಿ ಜನಮಾನಸದಲ್ಲಿ ಶಾಶ್ವತರಾಗಿ  ನೆಲೆಸುತ್ತಾರೆ. ಅಂತಹಾ ಶ್ರೇಷ್ಠ ಕಲಾವಿದರಲ್ಲೊಬ್ಬರು ಕೀರ್ತಿಶೇಷ ಶ್ರೀ ಪಡ್ರೆ  ಚಂದು  ಅವರು. 


ಪುಂಡುವೇಷಧಾರಿಯಾಗಿ ದೈವದತ್ತವಾದ ತನ್ನ ರೂಪ, ಸುಂದರವಾದ ನಾಟ್ಯ, ಹಿತಮಿತವಾದ ಮಾತುಗಳಿಂದ ಕಲಾಭಿಮಾನಿಗಳ ಮನಸೂರೆಗೊಂಡ ಕಲಾವಿದರಿವರು. ನಾಟ್ಯಾಚಾರ್ಯ, ನಾಟ್ಯವಿಶಾರದ ಎಂಬ ಬಿರುದುಗಳನ್ನು ಅರ್ಹತೆಯಿಂದಲೇ ಗಳಿಸಿಕೊಂಡು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದಿದ್ದಾರೆ. ಈಗ ಕೇರಳ ರಾಜ್ಯಕ್ಕೆ ಸೇರಿದ ಕಾಸರಗೋಡು ಜಿಲ್ಲೆಯ ಪೆರ್ಲ ಸಮೀಪದ ಪಡ್ರೆ ಶ್ರೀ ಚಂದು ಅವರ ಹುಟ್ಟೂರು. ಅವರು ಜನಿಸಿದ್ದು ಬಹುಶಃ 1919ರಲ್ಲಿ ಇರಬೇಕು. ನಿಖರವಾಗಿ ತಿಳಿದಿಲ್ಲ. ಶ್ರೀ ಕುಂಞ ಶೆಟ್ಟಿಗಾರ್ ಮತ್ತು ಶ್ರೀಮತಿ ಕೊರಪ್ಪಾಳು ದಂಪತಿಗಳ ಮಗನಾಗಿ ಜನನ. ಹಳ್ಳಿ ಪ್ರದೇಶ. ಅಲ್ಲಿಂದ ಕರ್ನಾಟಕ ಗಡಿಗೆ ಹೆಚ್ಚು ದೂರವಿಲ್ಲ. ಕೇವಲ ಐದಾರು ಕಿ.ಮೀ. ಇರಬಹುದು. ಎಳವೆಯಲ್ಲೇ ಯಕ್ಷಗಾನಾಸಕ್ತಿ ಇತ್ತು. ವಾಹನ ಸೌಕರ್ಯಗಳಿಲ್ಲದ ಕಾಲ. ನಡೆದುಕೊಂಡೇ ಸಾಗಿ ಆಟ ನೋಡುತ್ತಿದ್ದರು. ಇಚ್ಲಂಪಾಡಿ ಮತ್ತು ಕೊರಕ್ಕೋಡು ಮೇಳಗಳ ಪ್ರದರ್ಶನ. ಅಲ್ಲದೆ ಊರ ಪರವೂರ ಆಟಗಳನ್ನೂ ನೋಡುತ್ತಿದ್ದರು.

ಪಡ್ರೆ ಪರಿಸರದಲ್ಲಿ ನಡೆಯುತ್ತಿದ್ದ ತಾಳಮದ್ದಲೆಗೂ ಇವರು ಖಾಯಂ ಪ್ರೇಕ್ಷಕ. ಯಕ್ಷಗಾನಾಸಕ್ತಿ ಅಷ್ಟು ತೀವ್ರವಾಗಿತ್ತು. ತಾನೂ ಕಲಾವಿದನಾಗಬೇಕೆಂಬ ಆಸೆಯೂ ಸಹಜವಾಗಿ ಮೂಡಿತ್ತು.  ನಾಟ್ಯ ಕಲಿಯುವ ಮೊದಲೇ ತನ್ನ ಹನ್ನೆರಡನೇ ವಯಸ್ಸಿನಲ್ಲಿ ಚೊಕ್ಕಾಡಿ ಮೇಳಕ್ಕೆ ಸೇರಿದ್ದರು. ಅದೂ ಮನೆಯವರಿಗೆ ತಿಳಿಸದೇ! ಒಂದು ವರ್ಷ ತಿರುಗಾಟದ ಬಳಿಕ ಸ್ತ್ರೀ ಪಾತ್ರಧಾರಿ ಶ್ರೀ ಗಣಪತಿ ಭಟ್ಟರಿಂದ ನಾಟ್ಯ ಕಲಿಕೆ. ಕೊರಕ್ಕೋಡು ಮೇಳದಲ್ಲಿ ಒಂದು ವರ್ಷ ತಿರುಗಾಟ. ಬಳಿಕ ತನ್ನ ಗುರುಗಳ ಮೂಲಕ ಕಟೀಲು ಮೇಳಕ್ಕೆ ಸೇರ್ಪಡೆಗೊಂಡಿದ್ದರು. ಬಳಿಕ ಶ್ರೀ ಸದಾಶಿವ ಶಾನುಭೋಗರ ಕೂಡ್ಲು ಮೇಳದಲ್ಲಿ ತಿರುಗಾಟ. ಮತ್ತೆ ಮೂಲ್ಕಿ ಮತ್ತು ಧರ್ಮಸ್ಥಳ ಮೇಳದಲ್ಲಿ ಕಲಾಸೇವೆ. ಇದು ತಲಾ ಒಂದು ವರ್ಷ. ಅಲ್ಲದೆ ಪಡ್ರೆ ಜಟಾಧಾರೀ ಮೇಳ ಮತ್ತು ಕುಂಡಾವು ಮೇಳಗಳಲ್ಲೂ ತಿರುಗಾಟ ನಡೆಸಿದ್ದರು. ನಂತರ ಸುಮಾರು 50 ವರ್ಷಗಳ ಕಾಲ ಪಡ್ರೆ ಚಂದು ಅವರು ಕಟೀಲು ಮೇಳದಲ್ಲಿ ವ್ಯವಸಾಯ ಮಾಡಿದ್ದರಂತೆ. 

ತನ್ನ ವೃತ್ತಿ ಜೀವನದಲ್ಲಿ ಮವ್ವಾರು ಕಿಟ್ಟಣ್ಣ ಭಾಗವತರು, ಪುತ್ತಿಗೆ ರಾಮಕೃಷ್ಣ ಜೋಯಿಸರು, ಮಾಂಬಾಡಿ ನಾರಾಯಣ ಭಾಗವತರು, ಅಗರಿ ಶ್ರೀನಿವಾಸ ಭಾಗವತರು, ನೆಡ್ಲೆ ನರಸಿಂಹ ಭಟ್, ಇರಾ ಗೋಪಾಲಕೃಷ್ಣ ಭಾಗವತರು, ವೇಷಧಾರಿಗಳಾದ ಸುಬ್ರಾಯ ಹಾಸ್ಯಗಾರ, ಅಳಿಕೆ ಮೋನಪ್ಪ ಶೆಟ್ರು, ಕಾವು ಕಣ್ಣನ್, ನರ್ಸಪ್ಪಯ್ಯ, ಕದ್ರಿ ವಿಷ್ಣು, ಕುರಿಯ ವಿಠಲ ಶಾಸ್ತ್ರಿ, ಅಳಿಕೆ ರಾಮಯ್ಯ ರೈ, ಕಡಂದೇಲು ಪುರುಷೋತ್ತಮ ಭಟ್, ಬೋಳಾರ ನಾರಾಯಣ ಶೆಟ್ಟಿ, ಸ್ತ್ರೀ ವೇಷದ ಐತಪ್ಪ ಶೆಟ್ರು ಮೊದಲಾದ ಅನೇಕ ಶ್ರೇಷ್ಠ ಕಲಾವಿದರ ಒಡನಾಟವು ಪಡ್ರೆ ಚಂದು ಅವರಿಗೆ ದೊರಕಿತ್ತು. ಶ್ರದ್ಧೆಯಿಂದ ನೋಡುವುದು, ಕೇಳುವುದು, ಓದುವುದು ಹೀಗೆ ಸದಾ ಅಧ್ಯಯನದಿಂದ ಚಂದು ಅವರು ಬೆಳೆಯುತ್ತಾ ಸಾಗಿದವರು. ಜತೆಗೆ ಹಿರಿಯ ಶ್ರೇಷ್ಠ ಕಲಾವಿದರ ಒಡನಾಟ. ಮೇಲೆ ಹೇಳಿದ ಹೆಚ್ಚಿನ ಕಲಾವಿದರನ್ನೂ ನಾನು ನೋಡಿಲ್ಲ. ಆ ಭಾಗ್ಯ ನನಗಿಲ್ಲ. 

ಹಂತ ಹಂತವಾಗಿ ಬೆಳೆಯುತ್ತಾ ಸಾಗಿದ ಶ್ರೀ ಪಡ್ರೆ  ಚಂದು ಅವರು ಕೇಶಾವರೀ ಕಿರೀಟದ ವೇಷಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ರೀತಿಯ ಪಾತ್ರಗಳನ್ನೂ  ನಿರ್ವಹಿಸಿರುತ್ತಾರೆ. ಹಾಸ್ಯ ಪಾತ್ರಗಳನ್ನೂ ಮಾಡುತ್ತಿದ್ದರಂತೆ. ಪುಂಡು ವೇಷ, ಸ್ತ್ರೀ ವೇಷ, ಕಸೆ ಸ್ತ್ರೀ ವೇಷಗಳಲ್ಲಿ ಹೊಳೆದು ಕಾಣಿಸಿಕೊಂಡರು. ದೇವರ ಕೊಡುಗೆಯಾದ ರೂಪ, ಮುಗುಳುನಗೆ ಮತ್ತು ಅಂದವಾದ ಚುರುಕಿನ ನಾಟ್ಯಗಳಿಂದ ಅವರ ವೇಷಗಳು ಮೆರೆಯುತ್ತಿದ್ದುವು ಎಂದು ಹಿರಿಯ ಪ್ರೇಕ್ಷಕರು ಹೇಳುತ್ತಾರೆ. ಕಾವು ಕಣ್ಣನ್ ಅವರಿಂದ ಶ್ರೀಕೃಷ್ಣನ ಒಡ್ಡೋಲಗದ ಕ್ರಮವನ್ನು ಅಭ್ಯಸಿಸಿ, ಅಭಿನಯಿಸಿದರು. ಈ ಒಡ್ಡೋಲಗ ಎಂಬ ಪ್ರದರ್ಶನವು ಪಡ್ರೆ ಚಂದು ಅವರಿಗೆ ಖ್ಯಾತಿಯನ್ನೂ ತಂದು ಕೊಟ್ಟಿತ್ತು. ಹಿರಿಯ ಬಲಿಪ ನಾರಾಯಣ ಭಾಗವತರ ಒಡನಾಟ ಮತ್ತು ಮಾರ್ಗದರ್ಶನ, ಶ್ರೇಷ್ಠ ಕಲಾವಿದರೊಂದಿಗಿನ ತಿರುಗಾಟವೇ ನನ್ನ ಯಶಸ್ವೀ ಕಲಾಬದುಕಿಗೆ ಕಾರಣ ಎಂದು ಪಡ್ರೆ ಚಂದು ಅವರು ಹೇಳುತ್ತಿದ್ದರಂತೆ.

 
ಶ್ರೀ ಧರ್ಮಸ್ಥಳ ಲಲಿತ ಕಲಾ ಕೇಂದ್ರದ ಆರಂಭದಿಂದ ತೊಡಗಿ ಏಳು ವರ್ಷಗಳ ಕಾಲ ಕೇಂದ್ರದ ಗುರುವಾಗಿ ನಾಟ್ಯ ತರಬೇತಿಯನ್ನು ನೀಡಿದ್ದರು. ಇಲ್ಲೊಂದು ಗಮನಿಸಬೇಕಾದ ಅಂಶವಿದೆ. ಶ್ರೀ ಕ್ಷೇತ್ರ  ಧರ್ಮಸ್ಥಳದ ಲಲಿತ ಕಲಾ ಕೇಂದ್ರ. ಅಲ್ಲಿಗೆ ಗುರುಗಳಾಗಿ ಕಟೀಲು ಮೇಳದ ಕಲಾವಿದರು. ಅದೆಂತಹಾ ಅತ್ಯುತ್ತಮ ಸೌಹಾರ್ದತೆ. ಧರ್ಮಸ್ಥಳ ಕ್ಷೇತ್ರ ಮತ್ತು ಅಲ್ಲಿನ ಖಾವಂದರುಗಳ ಹೃದಯ ವೈಶಾಲ್ಯತೆಯನ್ನು ಇದು ತೆರೆದು ತೋರಿಸುತ್ತದೆ. ನಿಜ ಪ್ರತಿಭಾವಂತರನ್ನು ಗುರುತಿಸಿ ಅವಕಾಶ ನೀಡುವ ಅವರ ಶ್ರೇಷ್ಠ ಗುಣವು ಅಭಿನಂದನೀಯವಾದುದು. ಯಕ್ಷಗಾನ ಕ್ಷೇತ್ರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಕೊಡುಗೆಗಳು ಅನುಪಮವಾದುವು. ಶ್ರೀ ಪಡ್ರೆ ಚಂದು ಅವರ ಶಿಷ್ಯರನೇಕರು ಇಂದು ಕಲಾವಿದರಾಗಿ ಒಳ್ಳೆಯ ಹೆಸರನ್ನು ಗಳಿಸಿರುತ್ತಾರೆ.

 
ಶ್ರೀ ಪಡ್ರೆ ಚಂದು ಅವರು ತನ್ನ 9ನೆಯ ವಯಸ್ಸಿನಲ್ಲಿ ಗುರು ಶ್ರೀ ಗಣಪತಿ ಭಟ್ಟರ  ಜತೆ ತೆರಳಿ ಇರಾ ಎಂಬಲ್ಲಿ ವಾಸಿಸಿದ್ದರು. ಮತ್ತೆ ಹಿರಿಯ ಬಲಿಪರ ಹೇಳಿಕೆಯಂತೆ ವಿಟ್ಲ ಸಮೀಪದ ಓಡ್ನಾಳಕ್ಕೆ ಬಂದು ನೆಲೆಸಿದ್ದರು. ಪಡ್ರೆ ಚಂದು ಅವರ ಪತ್ನಿ ಶ್ರೀಮತಿ  ಭಾಗೀರಥಿ. ಪಡ್ರೆ ಚಂದು ದಂಪತಿಗಳಿಗೆ ಏಳು ಮಂದಿ ಮಕ್ಕಳು. (ಐದು ಗಂಡು ಮತ್ತು ಎರಡು ಹೆಣ್ಣು) 
ಗಂಡುಮಕ್ಕಳು: ಪಡ್ರೆ ಕುಮಾರ, ರಾಮ, ಕೃಷ್ಣ, ನಾರಾಯಣ, ಪದ್ಮನಾಭ. ಇವರಲ್ಲಿ ಪಡ್ರೆ ಕುಮಾರ ಅವರು ಕಟೀಲು ಮೇಳದ ಹಿರಿಯ ಕಲಾವಿದರು. ಕಳೆದ 58 ವರ್ಷಗಳಿಂದ ಕಲಾಸೇವೆ ಮಾಡುತ್ತಿದ್ದಾರೆ. ಪಡ್ರೆ ಚಂದು ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಜಯ ಮತ್ತು  ಅಂಬಿಕಾ.

ನಾಟ್ಯಾಚಾರ್ಯ ಶ್ರೀ ಪಡ್ರೆ ಚಂದು ಅವರ ಶಿಷ್ಯ ಗಡಣ ದೊಡ್ಡದು. ಶ್ರೀ ಧರ್ಮಸ್ಥಳ ಲಲಿತ ಕಲಾ ಕೇಂದ್ರದಲ್ಲಿ ಮೊದಲ ಏಳು ವರ್ಷ ಕಲಿತವರೆಲ್ಲಾ ಅವರ ಶಿಷ್ಯಂದಿರೇ ಆಗಿದ್ದಾರೆ. ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ, ಬೆಳ್ಳಾರೆ ಮಂಜುನಾಥ ಭಟ್, ಉಬರಡ್ಕ ಉಮೇಶ್ ಶೆಟ್ಟಿ, ಡಿ.ಮನೋಹರ ಕುಮಾರ್, ನಿಡ್ಲೆ ಗೋವಿಂದ ಭಟ್, ಗುಂಡಿಮಜಲು ಗೋಪಾಲ ಭಟ್, ಸಬ್ಬಣಕೋಡಿ ಸಹೋದರರು, ಮಾಡಾವು ಕೊರಗಪ್ಪ ರೈ, ವಸಂತ ಗೌಡ ಮೊದಲದವರೆಲ್ಲಾ ಪಡ್ರೆ ಚಂದು ಅವರಿಂದಲೇ ನಾಟ್ಯಾಭ್ಯಾಸ ಮಾಡಿದವರೆಂದು ನನ್ನ ನೆನಪು. ಪಡ್ರೆ  ಶ್ರೀ ಚಂದು ಅವರ ಶಿಷ್ಯ ಸಬ್ಬಣಕೋಡಿ ಶ್ರೀ ರಾಮ ಭಟ್ಟ ಅವರೂ ಯಕ್ಷಗಾನ ನಾಟ್ಯ ತರಬೇತುದಾರರು. ಅನೇಕ ಶಿಷ್ಯಂದಿರನ್ನು ಸಿದ್ಧಗೊಳಿಸಿದ್ದಾರೆ. ಅವರ ಶಿಷ್ಯಂದಿರೂ ಇಂದು ಅನೇಕ ಮೇಳಗಳಲ್ಲಿ ಕಲಾವಿದರಾಗಿ ಮಿಂಚುತ್ತಿದ್ದಾರೆ. ಅಲ್ಲದೆ ಸಬ್ಬಣಕೋಡಿ ರಾಮ ಭಟ್ಟರು ಪೆರ್ಲದಲ್ಲಿ ಶ್ರೀ ಪಡ್ರೆ ಚಂದು ಸ್ಮಾರಕ ಯಕ್ಷಗಾನ ಕೇಂದ್ರವನ್ನು ಸ್ಥಾಪಿಸಿ ಮುನ್ನಡೆಸುತ್ತಿದ್ದಾರೆ. ಕಲಿಕಾಸಕ್ತರಿಗೆ ತರಬೇತಿ ನೀಡುವುದರ ಮೂಲಕ ಗುರು ಪಡ್ರೆ ಚಂದು ಅವರನ್ನು ನೆನಪಿಸಿ ಗೌರವಿಸುತ್ತಿದ್ದಾರೆ. ಕಲಾವಿದರಾಗಿ, ನಾಟ್ಯಾಚಾರ್ಯರಾಗಿ ಯಕ್ಷಗಾನ ಕಲೆಗೆ ಶ್ರೇಷ್ಠ ಕೊಡುಗೆಗಳನ್ನು ನೀಡಿದ ಕೀರ್ತಿಶೇಷ ಶ್ರೀ ಪಡ್ರೆ ಚಂದು ಅವರಿಗೆ ನುಡಿನಮನಗಳು. 

ಲೇಖಕ: ರವಿಶಂಕರ್ ವಳಕ್ಕುಂಜ 


 

ಯಕ್ಷಗಾನ ಪ್ರಸಂಗ ರಚನಾ ಸ್ಪರ್ಧೆ

ಯಕ್ಷಸಿಂಚನ ಟ್ರಸ್ಟ್ (ರಿ),ಬೆಂಗಳೂರು ಇದರ ಹನ್ನೆರಡನೇ ವರ್ಷದ ವಾರ್ಷಿಕೋತ್ಸವದ  ಅಂಗವಾಗಿ ಯಕ್ಷಗಾನ ಸಾಹಿತ್ಯಾಸಕ್ತರಿಗಾಗಿ ವಿಶಿಷ್ಟವಾದ ಸ್ಪರ್ಧೆ. ಛಂದೋಬದ್ಧ ಪ್ರಸಂಗಕರ್ತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯಕ್ಷಗಾನ ಪ್ರಸಂಗ ರಚನಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆಯ  ಮೊದಲ ಬಹುಮಾನವು 10 ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿಪತ್ರ ಹಾಗೂ ಎರಡನೇ ಬಹುಮಾನವು 5 ಸಾವಿರ ನಗದು ಮತ್ತು ಪ್ರಶಸ್ತಿಪತ್ರವನ್ನು ಒಳಗೊಂಡಿರುತ್ತದೆ.
ಪ್ರಸಂಗ ರಚನಾ ಸ್ಪರ್ಧೆಯ ನಿಯಮಗಳು:
1. ಪ್ರಸಂಗವು ಪೌರಾಣಿಕ ಪ್ರಸಂಗವಾಗಿರಬೇಕು. ಕಥೆಯ ಎಳೆಯು ಯಾವುದಾದರೂ ಪುರಾಣಗಳಲ್ಲಿ ದಾಖಲಾಗಿರಬೇಕು.  ಸ್ಥಳ ಪುರಾಣ ಹಾಗೂ ಕ್ಷೇತ್ರ ಮಹಾತ್ಮೆಯ ಕಥೆಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ.  ಕಥೆಯ ಬಗ್ಗೆ ಹಾಗೂ ಬಳಸಿದ ಮೂಲದ ಬಗ್ಗೆ ನೋಂದಣಿ ಮಾಡಿಕೊಳ್ಳುವ ಸಮಯದಲ್ಲಿ ತಿಳಿಸಬೇಕು ಹಾಗೂ ಕಡ್ಡಾಯವಾಗಿ ಕೊನೆಗೆ ಅದೇ ಕಥೆಯ ಪ್ರಸಂಗವನ್ನು ಸ್ಪರ್ಧೆಗೆ ಕಳುಹಿಸಿಕೊಡಬೇಕು.
2. ಈಗಾಗಲೇ ಪ್ರಕಟನೆ/ಪ್ರದರ್ಶನಗೊಂಡ ಕೃತಿಗಳನ್ನು ಬಳಸುವಂತಿಲ್ಲ. 
3. ಸ್ಪರ್ಧೆಗೆ ವಯಸ್ಸಿನ ಮಿತಿ ಇರುವುದಿಲ್ಲ.
4. ಪ್ರಸಂಗ ರಚನೆಗೆ 4 ತಿಂಗಳುಗಳ ಕಾಲಾವಕಾಶ ನೀಡಲಾಗುತ್ತದೆ. ಸ್ಪರ್ಧೆಯು ಆಗಸ್ಟ್ 1, 2021 ರಿಂದ ಆರಂಭವಾಗಿ ನವೆಂಬರ್ 30, 2021 ಕ್ಕೆ ಮುಕ್ತಾಯಗೊಳ್ಳುತ್ತದೆ.  ಅಂಚೆ/Email ಮೂಲಕ ಪ್ರಸಂಗವನ್ನು ತಲುಪಿಸಬೇಕು. ತಡವಾಗಿ ಕಳಿಸಲ್ಪಡುವ ಪ್ರಸಂಗಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
5. ಪ್ರಸಂಗದ ಪದ್ಯಗಳನ್ನು ಪ್ರಸಂಗಕರ್ತರೇ ಸ್ವತಃ ರಚಿಸಿರಬೇಕು. ಬೇರೆ ಪ್ರಸಂಗಗಳಿಂದ ಪದ್ಯಗಳನ್ನು ಬಳಸಿದರೆ ಅಂತಹ ಪ್ರಸಂಗಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
6. ಪ್ರಸಂಗದಲ್ಲಿ ಪದ್ಯಗಳು 75ಕ್ಕಿಂತ ಕಡಿಮೆ ಇರಬಾರದು ಹಾಗೂ 3 ತಾಸಿನ ರಂಗಪ್ರಯೋಗಕ್ಕೆ ಸೂಕ್ತವಾಗುವಂತೆ ಇರಬೇಕು.
7. ಪ್ರಸಂಗದ ಪದ್ಯಗಳಲ್ಲಿ ಕವಿಯ ಹೆಸರನ್ನು/ಪರಿಚಯವನ್ನು ಗುರುತಿಸುವಂತೆ ಇರಬಾರದು (ಬೇಕಾದರೆ ಸ್ಪರ್ಧೆಯ ಅಂತಿಮ ತೀರ್ಪಿನ ನಂತರ ಅದನ್ನು ಸೇರಿಸಿಕೊಳ್ಳಬಹುದು).
8. ಸ್ಪರ್ಧೆಯ ತೀರ್ಪು ಪ್ರಸಂಗಕ್ಕೆ ಬಳಸಿದ ಸಾಹಿತ್ಯ, ಛಂದೋಬದ್ಧತೆ, ಬಳಕೆಯಾದ ಮಟ್ಟುಗಳು, ಪ್ರಯೋಗ ಸಾಧ್ಯತೆಗಳು, ಭಾಷಾಶುದ್ಧಿ ಮೊದಲಾದ ಅಂಶಗಳ ಮೇಲೆ ನಿರ್ಣಯವಾಗುತ್ತವೆ. ಇಲ್ಲಿ ತೀರ್ಪುಗಾರರ ನಿರ್ಣಯವೇ ಅಂತಿಮವಾಗಿರುತ್ತದೆ.
9. ಸ್ಪರ್ಧೆಗೆ ಕನಿಷ್ಠ ಪಕ್ಷ 3 ಜನ ಅಭ್ಯರ್ಥಿಗಳು ಇರಬೇಕು. ಅದಕ್ಕಿಂತ ಕಡಿಮೆಯಿದ್ದರೆ ಸ್ಪರ್ಧೆಯನ್ನು ಹಿಂಪಡೆಯಲಾಗುತ್ತದೆ.
10. ಉತ್ತಮ ಗುಣಮಟ್ಟದ ಪ್ರಸಂಗವನ್ನು ಯಕ್ಷಗಾನ ಪ್ರಸಂಗಕೋಶದಲ್ಲಿ ಪ್ರಕಟಿಸಲಾಗುತ್ತದೆ.
11. ನಿಮ್ಮ ಪ್ರಸಂಗವನ್ನು ಕೆಳಗೆ ತಿಳಿಸಿದ ಯಾವುದಾದಾರೊಂದು ವಿಧಾನದಲ್ಲಿ ನಮಗೆ ತಲುಪಿಸಬಹುದು :i] ಪ್ರಸಂಗವನ್ನು Baraha unicode fontನಲ್ಲಿ type ಮಾಡಿ, Microsoft word fileನ್ನು ಕಳುಹಿಸಬಹುದು.ii] ಸ್ಪಷ್ಟವಾದ/ಅಂದವಾಗಿ ಬರೆದ ಕೈಬರಹವನ್ನು scan ಮಾಡಿ, PDF ಕಳುಹಿಸಬಹುದು.iii] ಸ್ಪಷ್ಟವಾದ/ಅಂದವಾಗಿ ಬರೆದ ಕೈಬರಹವನ್ನು ಅಂಚೆ ಮೂಲಕ ಕಳುಹಿಸಬಹುದು.

ಪ್ರಸಂಗ ರಚನೆ ಮಾಡುವವರು ಸೆಪ್ಟಂಬರ್ 1ರ ಒಳಗೆ ಆಯೋಜಕರಲ್ಲಿ ನೋಂದಣಿ ಮಾಡಿಕೊಂಡಿರಬೇಕು.ಸ್ಪರ್ಧಿಗಳು ನೋಂದಣಿಗಾಗಿ ಹೆಸರು, ವಿಳಾಸ, ಯಕ್ಷಗಾನ/ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿನ ತಮ್ಮ ಅನುಭವ, ಮೊಬೈಲ್ ಸಂಖ್ಯೆ, ಆಯ್ದುಕೊಂಡ ಕಥೆ, ಅದರ ಪುರಾಣದ ಮೂಲ ಇತ್ಯಾದಿ ವಿವರಗಳನ್ನು ಈ ಕೆಳಗಿನ ವಿಳಾಸಕ್ಕೆ ಅಂಚೆ/email ಕಳುಹಿಸಬಹುದು:
ನಮ್ಮ Email: [email protected]
ನಮ್ಮ ವಿಳಾಸ:Yaksha Sinchana Trust(R), 117, Vaastu Greens, Kodipalya Main Road, Bangalore-560060
ಸಂಪರ್ಕ:ರವಿ ಮಡೋಡಿ: 9986384205,ಶಶಿರಾಜ ಸೋಮಯಾಜಿ: 9986363495
ಧನ್ಯವಾದಗಳೊಂದಿಗೆ,ಕಾರ್ಯದರ್ಶಿಯಕ್ಷಸಿಂಚನ ಟ್ರಸ್ಟ್, ಬೆಂಗಳೂರು

ಆಪ್ತ ಬರವಣಿಗೆಯ ಸೊಗಸಿನ ಪರಿಚಯ

 ಉಡುಪಿಯ ಸಾಂಸ್ಕೃತಿಕ ಸಾಮಾಜಿಕ ಅಧ್ವರ್ಯು ಮುರಲಿ ಕಡೆಕಾರ್ ಬಗ್ಗೆ ಪ್ರೊ| ಎಂ ನಾರಾಯಣ ಹೆಗಡೆಯವರು ಬರೆದ ವಿಶಿಷ್ಟ ಹೊತ್ತಗೆ.ನಾಡಿನ ಪ್ರಖ್ಯಾತ ಸಾಹಿತ್ಯ ಸಂಸ್ಕೃತಿಯ ಶ್ರೇಷ್ಠ ಸಂಸ್ಥೆ  ” ಕಾಂತಾವರ ಕನ್ನಡಸಂಘ” ತನ್ನ ನಾಡಿಗೆ ನಮಸ್ಕಾರ ಸರಣಿಯಲ್ಲಿ ಪ್ರಕಟಿಸಿದೆ.ಮುರಲಿ ಎಂದರೆ ಉಡುಪಿಯ ಯಕ್ಷಗಾನ ಕಲಾಸಂಘದ ಹೊಣೆಹೊತ್ತವರು ಎಂಬುದನ್ನು ಮಾತ್ರ ಬಲ್ಲವರು ಈ ಕೃತಿಯನ್ನು ಓದಿದಾಗ ಬೆರಗಾಗಲೇಬೇಕು.

ಮುರಲಿ  ಯಕ್ಷಗಾನ ಕಲಾರಂಗದ ಕಾರ್ಯದರ್ಶಿಯಾಗಿ, ನಿಟ್ಟೂರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ, ಅಂಬಲಪಾಡಿಯ ಲಕ್ಷ್ಮೀಜನಾರ್ದನ ಯಕ್ಷಗಾನ ಸಂಸ್ಥೆಯ ಅಧ್ಯಕ್ಷರಾಗಿ, ಯಕ್ಷಶಿಕ್ಷಣ ಟ್ರಷ್ಟ್ ನ ಕಾರ್ಯದರ್ಶಿಯಾಗಿ, ಪೂರ್ಣಪ್ರಜ್ಞ ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ, ಸುಪ್ರಸಿದ್ಧ ವಿದ್ಯಾಪೋಷಕ್ ವ್ಯವಸ್ಥೆಯ ಮುಂದಾಳಾಗಿ ಉಡುಪಿ ಶಾಸಕರ ಕೇದಾರೋತ್ಥಾನ ಟ್ರಷ್ಟ್ ಕಾರ್ಯದರ್ಶಿಯಗಿ ಏಕ ಕಾಲದಲ್ಲಿ ಎಲ್ಲವನ್ನೂ, ಕೋಟ್ಯಂತರ ರೂಪಾಯಿಗಳ ಮಹಾನ್ ಕಾರ್ಯಗಳನ್ನು ನಿಸ್ಪೃಹವಾಗಿ ಹೇಗೆ ಸಾಗಿಸುತ್ತಿದ್ದಾರೆ ಎಂಬುದನ್ನ ಸರಳವಾಗಿ ನಿರೂಪಿಸಿದ್ದಾರೆ.

ಮುರಲಿಯವರ ಅಚ್ಚುಕಟ್ಟಿನ ಕೆಲಸದ ಹಾಗೆ ಒಂದಕ್ಷರವೂ ವ್ಯರ್ಥವಾಗದ ಬರವಣಿಗೆ. ವ್ಯಕ್ತಿ ಪರಿಚಯದ ಅನುಪಮ ಮಾದರಿ.  ಕ್ರಿಯಾಶೀಲ ವ್ಯಕ್ತಿತ್ವಕ್ಕೆ ಮಾದರಿ ಎನ್ನಿಸುವ ಮುರಲಿಯವರ ಪರಿಚಯ ಎಲ್ಲರಿಗೂ ಆಗಬೇಕಿದ್ದರೆ ಈ ಕೃತಿಯನ್ನು ಓದಬೇಕು. ಅತ್ಯಂತ ಸರಳ ನಡೆನುಡಿಯ ಮುರಲಿಯವರ ಉತ್ತಮ ಪರಿಚಯ. ಮುರಲಿಯವರನ್ನು ಅಭಿನಂದಿಸುತ್ತಾ ಕೃತಿಕಾರ ಹೆಗಡೆಯವರ ಲೇಖನಿಗೆ ಇನ್ನು ನಿರಂತರ ಕೆಲಸವಿರಲಿ ಎಂದು ಹಾರೈಸುವೆ. ಈ ಗ್ರಂಥ ಪ್ರಕಟಣೆಗಾಗಿ ಕಾಂತಾವರ ಕನ್ನಡಸಂಘದ ಹಿರಿಯರಾದ ಡಾ.ನಾ ಮೊಗಸಾಲೆ, ಸಂಪಾದಕ ಡಾ.ಬಿ ಜನಾರ್ದನ ಭಟ್ಟರಿಗೆ ಅಭಿನಂದನೆಗಳು.     

ಬರಹ: ಶ್ರೀಧರ ಡಿ.ಎಸ್.  ಕಿನ್ನಿಗೋಳಿ.

ಯಕ್ಷಗಾನ ಕಲಾಪೋಷಕ ಹಾಗೂ ಜನಪ್ರಿಯ ಶಿಕ್ಷಕ – ಶ್ರೀ ಸುರೇಶ್ ರಾವ್ ಪಚ್ಚನಾಡಿ

ಬದುಕು ಎನ್ನುವುದು ಒಂದು ವ್ಯಕ್ತಿಯ ನಿರಂತರ ಹೋರಾಟ. ಆ ಹೋರಾಟದ ನಡುವೆ ತಿರುವುಗಳು, ಏರುಪೇರುಗಳು ಬರುತ್ತವೆ. ಆದರೆ ಅವೆಲ್ಲಾ ಜಂಜಡಗಳನ್ನು ಎದುರಿಸಿ ನಗು ನಗುತ್ತಾ ಬಾಳುವುದೇ ನಿಜವಾದ ಹುಟ್ಟಿನ ಸಾರ್ಥಕತೆ. ಇಂತಹಾ ಬಾಳ ಪಯಣವನ್ನು ಸುಂದರವಾಗಿ ನಡೆಸಿದ ನಮ್ಮೆಲ್ಲರ ಮೆಚ್ಚಿನ, ವಿದ್ಯಾರ್ಥಿಗಳ ಆರಾಧ್ಯದೈವ ಯಕ್ಷಕಲಾ ಪ್ರೋತ್ಸಾಹಕರಾಗಿದ್ದಂತಹಾ ಆದರ್ಶ ಶಿಕ್ಷಕ ಜನಮೆಚ್ಚಿದ ನಾಗರಿಕ ಶ್ರೀ ಸುರೇಶ್ ರಾವ್ ಪಚ್ಚನಾಡಿ. 

ಶ್ರೀಯುತರು 18 ಮಾರ್ಚ್ 1958ರಲ್ಲಿ ಗೋಪಾಲಕೃಷ್ಣಯ್ಯ ಹಾಗೂ ರುಕ್ಮಿಣಿಯಮ್ಮ ದಂಪತಿಗಳ ಕಿರಿಯ ಪುತ್ರನಾಗಿ ಪಚ್ಚನಾಡಿ ಕಾರಂತ ಮನೆತನದಲ್ಲಿ ಜನಿಸಿದರು. ಇವರಿಗೆ ಇಬ್ಬರು ಹಿರಿಯ ಸಹೋದರರು ಹಾಗೂ ಒಬ್ಬ ಸಹೋದರಿ. ಶ್ರೀಯುತರು ತನ್ನ ಶಿಕ್ಷಣವನ್ನು ಕ್ರಮವಾಗಿ ಸಂತ ಲಾರೆನ್ಸ್ ಹಿರಿಯ ಪ್ರಾಥಮಿಕ ಶಾಲೆ ಬೊಂದೇಲ್ ನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಕಟೀಲು ದುರ್ಗಾಪರಮೇಶ್ವರಿ ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣ, ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ, ಹಾಗೂ ಬಿಜೈ ಸರಕಾರಿ ತರಬೇತಿ (ಈಗಿನ DAIET) ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ತರಬೇತಿಯನ್ನು ಪೂರೈಸಿ 1978ಆಗಸ್ಟ್ 1ರಿಂದ ಶ್ರೀರಾಮಾಶ್ರಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕೊಂಚಾಡಿಯಲ್ಲಿ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿದರು.

ಅಪಾರ ಶಿಷ್ಯವರ್ಗವನ್ನು ಹೊಂದಿ ಶಿಕ್ಷಕ ವೃತ್ತಿಯಲ್ಲಿ ಸಾಧನೆಯನ್ನು ಮಾಡಿ ಮುಖ್ಯೋಪಾಧ್ಯಾಯರಾಗಿ ಭಡ್ತಿ ಹೊಂದಿ 40 ವರ್ಷಗಳ ಸೇವೆಯನ್ನು ಪೂರೈಸಿ 2018 ಮಾರ್ಚ್ 31ರಂದು ನಿವೃತ್ತಿ ಹೊಂದಿದರು. ಶ್ರೀಯುತರು ತನ್ನ ಸೇವಾವಧಿಯಲ್ಲಿ ಗುಣಮಟ್ಟದ ಶಿಕ್ಷಣದೊಂದಿಗೆ ನಾಟಕ, ಯಕ್ಷಗಾನ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡಿ ಅವರಲ್ಲಿದ್ದ ಪ್ರತಿಭೆಯನ್ನು ಬೆಳಕಿಗೆ ತಂದರು. ಕೆಲವು ಯಕ್ಷಗಾನದ ಪ್ರತಿಭೆಗಳಿಗೆ ಪ್ರೋತ್ಸಾಹಿಸಿ ಅವರಲ್ಲಿದ್ದ ಆಸಕ್ತಿಗೆ ನೀರೆರೆದು ಪೋಷಿಸಿದರು. ಶಾಲೆಯಲ್ಲಿ ಅಧ್ಯಾಪಕರ ಕೊರತೆಯಿದ್ದಾಗ ತನ್ನ ಅರ್ಧ ವೇತನವನ್ನು ನೀಡಿ ಅಧ್ಯಾಪಕರನ್ನು ನಿಯುಕ್ತಿಗೊಳಿಸಿ ಮಕ್ಕಳ ವಿದ್ಯಾಭ್ಯಾಸ ಸುಗಮವಾಗಿ ನಡೆಯುವಂತೆ ನೋಡಿಕೊಂಡರು. ಕೆಲವು ಬಡ ವಿದ್ಯಾರ್ಥಿಗಳಿಗೆ ತನ್ನದೇ ಖರ್ಚಿನಲ್ಲಿ ವಿದ್ಯಾಭ್ಯಾಸ ಕೊಡಿಸಿದರು. ಹೀಗೆ ತನ್ನ ಸೇವಾವಧಿಯಲ್ಲಿ ಕೆಲವು ಲಕ್ಷಗಳಷ್ಟು ಹಣವನ್ನು ಶಾಲಾ ವಿದ್ಯಾರ್ಥಿಗಳ ಏಳಿಗೆಗಾಗಿ ಮತ್ತು ಯಕ್ಷಗಾನದ ಸಲುವಾಗಿ ವ್ಯಯಿಸಿದ್ದಾರೆ. 

ನಿವೃತ್ತಿಯ ನಂತರ ಇದ್ದ ಅಲ್ಪಸ್ವಲ್ಪ ಭೂಮಿಯಲ್ಲಿ ಕೃಷಿ ಕಾಯಕದಲ್ಲಿ ನಿರತರಾಗಿದ್ದರು. ಇವರ ಧರ್ಮಪತ್ನಿ ಶ್ರೀಮತಿ ಚಂದ್ರಲೇಖಾ. ಮಗಳು ಶ್ರೀಮತಿ ರಶ್ಮಿ ನಾಗೇಶ್ ಬೆಂಗಳೂರಿನ ಸಾಫ್ಟ್ ವೇರ್ ಕಂಪೆನಿಯಲ್ಲಿ ಇಂಜಿನಿಯರ್. ಪುತ್ರ ಶೈಲೇಶ್ ರಾವ್ ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವುದು ಮಾತ್ರವಲ್ಲದೆ ಯಕ್ಷಗಾನದ ಹವ್ಯಾಸಿ ಮತ್ತು ಉದಯೋನ್ಮುಖ ಕಲಾವಿದ. ಸುರೇಶ ರಾವ್ ಪಚ್ಚನಾಡಿ ಅವರು ತನ್ನ ವಿಶ್ರಾಂತ ಜೀವನದಲ್ಲಿಯೂ ಸದಾ ಕಾರ್ಯಚಟುವಟಿಕೆಯಲ್ಲಿ ನಿರತರಾಗಿದ್ದರು. ಊರವರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾ ಸರಕಾರದ ಸವಲತ್ತುಗಳನ್ನು ಪಡೆಯುವಲ್ಲಿ ಬಡಜನರಿಗೆ ಸಹಕಾರಿಯಾಗುತ್ತಿದ್ದರು. ಬೆಂಕಿನಾಥೇಶ್ವರ ಮೇಳದಲ್ಲಿ ಅರ್ಚಕರಾಗಿ ಮೇಳದ ದೇವರ ಪೂಜೆಯ ಹೊಣೆಯನ್ನು ಹೊತ್ತುಕೊಂಡಿದ್ದರು. 

ಸುರೇಶ್ ರಾಯರ ಸೇವಾ ಕೈಂಕರ್ಯವನ್ನು ಗುರುತಿಸಿ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಶಕರ ಸಂಘ, ಮಂಗಳೂರು ಶಿಕ್ಷಕರ ಸಹಕಾರಿ ಕ್ರೆಡಿಟ್ ಸಹಕಾರಿ (ನಿ), ಪ್ರಣವ ಸೌಹಾರ್ದ ಸಹಕಾರಿ, ಶಿಕ್ಷಕರ ದಿನಾಚರಣೆ ಸಮಿತಿ, ಶ್ರೀರಾಮಾಶ್ರಮ ಶಾಲಾ ಶಿಕ್ಷಕ ರಕ್ಷಕ ಹಳೆ ವಿದ್ಯಾರ್ಥಿ ಸಂಘ, ಕೋಟ ಮಹಾಜನರು (ರಿ) ಮಂಗಳೂರು, ಮತ್ತು ಕೀರ್ತಿಶೇಷ ಲೋಲಮ್ಮ ಪಚ್ಚನಾಡಿ ಪ್ರತಿಷ್ಠಾನ (ರಿ) ಇವರ ವತಿಯಿಂದ ಪ್ರಶಸ್ತಿ ಸನ್ಮಾನಗಳು ದೊರೆತಿವೆ. ಸಾಧಕ ಹಾಗೂ ಕಲಾಸೇವಕರಾಗಿ ಜನಪ್ರಿಯರಾಗಿದ್ದ ಶ್ರೀ ಸುರೇಶ ರಾವ್ ಪಚ್ಚನಾಡಿ ೨೫.೦೨. ೨೦೨೧ರಂದು ಅವರು ರಸ್ತೆ ಅಫಘಾತವೊಂದರಲ್ಲಿ ಇಹಲೋಕವನ್ನು ಅಗಲಿದರು. ಅವರ ದಿವ್ಯಾತ್ಮಕ್ಕೆ ಪರಮಾತ್ಮನು ಸದ್ಗತಿಯನ್ನು ಕರುಣಿಸಲಿ ಎಂದು ಊರ ಹಾಗೂ ಪರವೂರ ಅವರ ಅಭಿಮಾನಿಗಳ  ಪರವಾಗಿ ಹಾರೈಕೆಗಳು. 

ಪೂರಕ ಮಾಹಿತಿ ಹಾಗೂ ಲೇಖನ: ಶೈಲೇಶ್ ರಾವ್